Saturday, September 19, 2015

ಹುಸಿಯ ಕಾಣಿರೋ ನಮ್ಮೊಳಗಿನ ಹುಸಿಯ..

ನಗು, ಮರೆವು ಮತ್ತು ತಮಾಷೆ ಮಿಲನ್ ಕುಂದೇರಾಗೆ ಬದುಕಿನ ಅತ್ಯಂತ ಗಮನಾರ್ಹ ಸಂಗತಿಗಳು. ಇದರ ಜೊತೆ ಅಥವಾ ಈ ಮೂರೂ ಅಂಶಗಳಲ್ಲೇ ಇರುವ ಇವಕ್ಕಿಂತ ಗಮನಾರ್ಹವಾದ ಅಂಶ ‘ಗಮನಾರ್ಹವಲ್ಲದ್ದು’! ಗಮನಾರ್ಹವಲ್ಲದ್ದರ ಹಬ್ಬ ಎಂದು ಅನುವಾದಿಸಬಹುದಾದ ಕುಂದೇರಾನ ಹೊಸ ಕಾದಂಬರಿ The Festival of Insignificance ಸುಮಾರು ನೂರು ಪುಟಗಳ ಒಂದು ಪುಟ್ಟ ಕಾದಂಬರಿ. ಎಂದಿನಂತೆ ಪುಟ್ಟಪುಟ್ಟ ಅಧ್ಯಾಯಗಳು, ಸಂಭಾಷಣೆ, ಭಾರವಾಗದ ಭಾಷೆಯಲ್ಲಿ ಸುಲಲಿತವಾಗಿ ಸಾಗುವ, ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತಲೇ ಸಾತತ್ಯವನ್ನುಳಿಸಿಕೊಂಡು ಇದೆ ಎಂದು ಭ್ರಮಿಸಬಹುದಾದ ಒಂದು ಗಮ್ಯದತ್ತ ಯಾವುದೇ ಧಾವಂತವಿಲ್ಲದ ನಡಿಗೆಯಲ್ಲಿ ಸಾಗುತ್ತ, ಸಾಗುತ್ತಲೇ ಮುಗಿದು ಬಿಡುವ ಕಾದಂಬರಿಗಳ ಸಾಲಿಗೇ ಇದೂ ಸೇರುತ್ತದೆ. ಸರಳವಾಗಿ Life is Elsewhere!

The Book of Laughter and Forgetting, The Joke, Laughable Loves, The Unbearable Lightness of Being, Ignorance, Slowness ನಂಥ ಹೆಸರುಗಳೇ ಮಿಲನ್ ಕುಂದೇರಾ ಬದುಕನ್ನು ಗಮನಿಸುವ, ಗ್ರಹಿಸುವ, ನಿರೂಪಿಸುವ ಕ್ರಮದ ಬಗ್ಗೆ ಹೇಳುತ್ತವೆ, ನೀವು ಈ ಕಾದಂಬರಿಗಳನ್ನು ಓದಿದ್ದರೆ ಮಾತ್ರ! ಏಕೆಂದರೆ, ಕುಂದೇರಾ ಕಾದಂಬರಿಗಳು ಯಾವತ್ತೂ, ಓದಿ ಮುಗಿಸಿದ ಬಳಿಕವೂ, "ಇಷ್ಟೇ" ಆಗಿರುವುದಿಲ್ಲ. ಅಂದ ಮಾತ್ರಕ್ಕೆ ಅವು ಸದಾ ನಿಮ್ಮನ್ನು ಕಾಡುತ್ತ ಉಳಿಯುವುದಿಲ್ಲ ಕೂಡ. ಮತ್ತೆ ಏಕೆಂದರೆ, ಅವು ಹೇಳುತ್ತಿರುವುದು ಸುಲಭವಾಗಿ ಮರೆವೆಯಾಗುವ, ನಾವು ನಿರ್ಲಕ್ಷಿಸುವ, ನಗಣ್ಯವೆಂದು ತಿಳಿದು ಅವಗಣಿಸುವ ಬದುಕಿನ ಅತ್ಯಂತ ಸೂಕ್ಷ್ಮ ಮತ್ತು ಮಹತ್ವದ ಅಂಶಗಳನ್ನು ಎಂಬ ಕಾರಣಕ್ಕೇ. ತುಂಬ Insignificant ಆದ ಸಂಗತಿಗಳೇ ಕೆಲವೊಮ್ಮೆ ಅತ್ಯಂತ ಆಪ್ತವಾದ, ಅತ್ಯಂತ ಸಂವೇದನಾತ್ಮಕವಾದ, ಅತ್ಯಂತ ಮೂಲಭೂತವಾದ ಬದುಕಿನ ಸತ್ಯಗಳನ್ನು ತಮ್ಮ ಗರ್ಭದಲ್ಲಡಗಿಸಿಕೊಂಡಿರುತ್ತವಾದರೂ ಅವುಗಳು ಸುಪ್ತವಾಗಿಯೇ ಉಳಿಯುವ ಗುಣವಿಶೇಷವನ್ನೂ ಪಡೆದಿರುವುದು ಒಂದು ಚೋದ್ಯ. ಹಾಗಾಗಿಯೇ, ದರ್ಶನಗಳು, ಒಳನೋಟಗಳು, ಕಾಣ್ಕೆ ಎಂಬ ಮಾತುಗಳೆಲ್ಲ ಮುಖ್ಯವಾಗಿ ಬಿಡುತ್ತವೆ, ಅವುಗಳನ್ನು ನಮಗೆ ಇನ್ಯಾರೋ ಆಗಾಗ ನೆನಪಿಸುತ್ತಿರಬೇಕಾಗುತ್ತದೆ. ವಿವೇಕಾನಂದರು ಹೇಳಿದಂತೆ, ಯಾವ ಜ್ಞಾನವೂ ನಮಗೆ ಹೊರಗಿನಿಂದ ಬರುವುದಿಲ್ಲ; ಎಲ್ಲವೂ ನಮ್ಮೊಳಗೇ, ಒಂದು ಕತ್ತಲ ಕೋಣೆಯಲ್ಲಿ ದಾಸ್ತಾನು ಮಾಡಿಟ್ಟ ವಸ್ತುಗಳಂತೆ ಬಿದ್ದಿರುತ್ತವೆ. ಗುರು ಎಂಬಾತ ಅವುಗಳ ಮೇಲೆ ಬೆಳಕು ಹಾಯಿಸುವ ಒಂದು ಟಾರ್ಚ್ ಇದ್ದಂತೆ. ಬೆಳಕು ಅವುಗಳ ಮೇಲೆ ಬಿದ್ದಾಗಷ್ಟೇ ನಮಗೆ ಅವು ಅಲ್ಲಿರುವುದು ಅರಿವಿಗೆ ಬರುತ್ತದೆ ಮತ್ತು ಅದೇ ಜ್ಞಾನ! ಎಲ್ಲ ಶ್ರೇಷ್ಠ ಸಾಹಿತಿಗಳೂ ನಮಗೆ ಈ ಬಗೆಯಲ್ಲಿ ಒಳನೋಟಗಳನ್ನು ದಕ್ಕಿಸಿದರು, ದರ್ಶನ ತೆರೆದರು, ಕಾಣ್ಕೆ ಕಾಣಿಸಿದರು ಎನ್ನಬಹುದು. ಮಿಲನ್ ಕುಂದೇರಾ ಮಾಡುತ್ತಿರುವುದು ಅದನ್ನೇ, ವಿಶಿಷ್ಟವಾಗಿ, ಕಾದಂಬರಿ ಎಂಬ ಪ್ರಕಾರವನ್ನು ಅದರ ಇತಿಮಿತಿಗಳಾಚೆ ವಿಸ್ತರಿಸುವುದರ ಮೂಲಕ. ಅಂಥ ಇನ್ನೂ ಕೆಲವು ಟೈಟಲ್‌ಗಳು Immortality, Identity, Farewell Waltz !

ಹೆಣ್ಣಿನ ದೇಹದಲ್ಲಿ ಅವಳ ಮೊಲೆಗಳು, ಯೋನಿ ಮತ್ತು ನಿತಂಬ - ಇವು ಮೂರು ಅವಳ ಆಕರ್ಷಣೆಯ ಕೇಂದ್ರಗಳು, ಲೈಂಗಿಕ ತೃಷೆಯನ್ನು ಉದ್ದೀಪಿಸುವ ಭಾಗಗಳು. ಈ ಮೂರು ಕೇಂದ್ರಗಳಿಗೆ ಈ ಶತಮಾನದ ಆದಿಯಲ್ಲಿ ಹೊಸತೊಂದು ಸೇರ್ಪಡೆಯಾಗಿದ್ದು ಈಗೀಗ ಹುಡುಗಿಯರು ಎಲ್ಲೆಂದರಲ್ಲಿ ಅದನ್ನು ಪ್ರದರ್ಶಿಸುತ್ತಿದ್ದಾರೆ. ಹೌದು, ಅದು ಅವಳ ದೇಹದ ಕೇಂದ್ರವೂ ಆಗಿರುವ ಹೊಕ್ಕುಳು. ಇದು ಲೈಂಗಿಕಾಸಕ್ತಿಯನ್ನು ಕೆರಳಿಸಬಲ್ಲ ಒಂದು ಕೇಂದ್ರವಾಗಿ ಪರಿವರ್ತನೆಗೊಂಡ, ವಾಸ್ತವವಾಗಿ ಮಾತೃತ್ವದ ಸಂಕೇತವಷ್ಟೇ ಆಗಿದ್ದ ಅಂಗ. ಅಲ್ಲದೆ, ಹೆಣ್ಣಿನ ದೇಹದ ಉಳಿದ ಮೂರೂ ಕೇಂದ್ರಗಳೂ ವ್ಯಕ್ತಿ-ವಿಶಿಷ್ಟ identy ಹೊಂದಿದ್ದರೆ ಈ ಒಂದು ಅಂಗ ಮಾತ್ರ ಯಾವುದೇ ಅಸ್ಮಿತೆಯಿಲ್ಲದ, ಹೊಕ್ಕುಳಿನ ಮೂಲಕವೇ ನೀವು ನಿಮ್ಮವಳನ್ನು ಗುರುತಿಸುವುದು ಸಾಧ್ಯವಿಲ್ಲದಂಥಾ ಒಂದು ಅಂಗ! so, ಈ ಹೊಕ್ಕುಳು ತೋರಿಸುವ ಹೊಸ ಶತಮಾನವು ಒಂದು ಬಗೆಯ ಸಮಷ್ಟಿ ಪ್ರಜ್ಞೆಯನ್ನು ಸೂಚಿಸುತ್ತಿದೆ. ಇಲ್ಲಿ ಪ್ರೇಮದಲ್ಲಿ, ಕಾಮದಲ್ಲಿ ವೈಯಕ್ತಿಕತೆ ಅಮುಖ್ಯವಾಗುತ್ತ ಹೋಗುತ್ತಿದೆಯೆ?

ಈವ್ ಎಂಬಾಕೆಯ ಒಂದು ಪುಟ್ಟ ತಪ್ಪಿನಿಂದಾಗಿ ಹೊಕ್ಕುಳಿಲ್ಲದ ಅವಳ ದೇಹದಿಂದ ಒಂದು ಹೊಕ್ಕುಳ ಬಳ್ಳಿಯೂ, ಆ ಹೊಕ್ಕುಳ ಬಳ್ಳಿಯಂತೆಯೇ ಹೊರಟ ಇನ್ನೊಂದು ಬಳ್ಳಿಯಲ್ಲಿ ಗಂಡು ದೇಹದ ಲಿಂಗಕ್ಕಂಟಿಕೊಂಡ ಪುರುಷ ದೇಹವೂ ಕಾಣಿಸಿಕೊಂಡು, ಭೂಮಿಯ ಮೇಲಿನ ಎಲ್ಲಾ ದೇಹಗಳನ್ನು ಒಂದರೊಂದಿಗೊಂದು ಬೆಸೆಯುವಂಥ ಹಲವಾರು ಬಳ್ಳಿಗಳದ್ದೇ ಆದ ಒಂದು ಬೃಹತ್ ವೃಕ್ಷವೇ ನಿರ್ಮಾಣಗೊಂಡಿತು! (ಹಿಂದೂ ಪುರಾಣದ ಬೃಹತ್ ವೃಕ್ಷದ ಕಲ್ಪನೆಯನ್ನು ಸಮೀಕರಿಸಿ ನೋಡಬಹುದು!) ಅಂದರೆ, ultimately, ಈ ಜಗತ್ತಿನ ಪ್ರತಿಯೊಂದು ಜೀವಿಯೂ ಹೇಗೋ ಎಂತೋ ಇನ್ನೊಂದು ಜೀವಿಯೊಂದಿಗೆ ಪರಸ್ಪರ ಬೆಸೆದುಕೊಂಡೇ ಇದೆ ಮತ್ತು ಒಂದನ್ನು ಬಿಟ್ಟು ಇನ್ನೊಂದು ಇರುವುದು ಸಾಧ್ಯವೇ ಇಲ್ಲ. ಈ ಸಮಷ್ಟಿ ಪ್ರಜ್ಞೆಯನ್ನು ಹೊಸ ಶತಮಾನದ ಹೊಕ್ಕುಳ ಪ್ರದರ್ಶನ ಸಾಂಕೇತಿಸುತ್ತಿದೆಯೆ?

ಈಗ, ಯಾವ ಜೀವಿಯೂ ಈ ಭೂಮಿಗೆ ಅರ್ಜಿ ಸಲ್ಲಿಸಿ ಬಂದಿಲ್ಲ. ಅದು ಯಾವುದೇ ಲಿಂಗ, ಯಾವುದೇ ನಿರ್ದಿಷ್ಟ ತಂದೆ-ತಾಯಿ, ಜಾತಿ, ಭಾಷೆ, ಧರ್ಮ, ದೇಶ, ಕಾಲಮಾನ, ದೇಹ - ಹೊಂದಿರಲು ಪೂರ್ವಭಾವಿಯಾಗಿ ಬಯಸುವುದು ಸಾಧ್ಯವಿಲ್ಲ. ಅಂದರೆ, ಜೀವಿಯೊಂದರ ಹುಟ್ಟಿಗೆ ಅದರ ತಂದೆ-ತಾಯಿ ಮಾತ್ರ ಜವಾಬ್ದಾರರೇ, ಅಥವಾ, ಹುಟ್ಟಿದ ಬಳಿಕ ಸ್ವತಂತ್ರ(?!)ವಾಗುವ ಮಗು ಕೂಡ ಜವಾಬ್ದಾರವೆ, ಇದರ ವಾರಸಿಕೆ ಹೇಗೆ, ಏನು? ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಗಂಡು ಮತ್ತು ಹೆಣ್ಣು ಇಬ್ಬರಲ್ಲಿ ಯಾರು ಭಾವೀ ಸಂತಾನದ ಅಸ್ತಿತ್ವವನ್ನು ನಿರ್ಣಯಿಸುವವರು? ಗರ್ಭಪಾತ ಅಥವಾ ಗರ್ಭಧಾರಣೆಯನ್ನು ತಡೆಯುವ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಚರ್ಚಿಸುವುದಾದರೆ ಹುಟ್ಟು ಎಂಬುದು ಏನು? ಹುಟ್ಟು ಎಂಬುದನ್ನು ಸಾಮಾನ್ಯವಾಗಿ ಕಾಣದೆ, ಗಾಂಧಿ, ಬುದ್ಧ, ಏಸು, ಮದರ್ ಥೆರೆಸಾ, ಐನ್‌ಸ್ಟೀನ್, ಹಿಟ್ಲರ್, ವಿವೇಕಾನಂದ, ಶಂಕರಾಚಾರ್ಯ - ಮುಂತಾದವರ ಹುಟ್ಟನ್ನೂ ಮನಸ್ಸಿನಲ್ಲಿಟ್ಟುಕೊಂಡು ಯೋಚಿಸಬಹುದು. ಅಥವಾ, ಕ್ಯಾನ್ಸರ್, ಟ್ಯೂಮರ್, ಹೃದಯಾಘಾತದಂಥ ಮರಣಾಂತಿಕ ಕಾಯಿಲೆಯಿಂದ ಸಾವನ್ನು ಎದುರು ನೋಡುತ್ತಿರುವ ವ್ಯಕ್ತಿಯಾಗಿಯೋ, ಅಂಥ ವ್ಯಕ್ತಿಯ ಆತ್ಮೀಯ ವ್ಯಕ್ತಿಯಾಗಿಯೋ, ನಾವೇ ಅಂಥ ಸ್ಥಿತಿಯಲ್ಲಿದ್ದೇವೆಂದುಕೊಂಡೋ ನೋಡಬಹುದು. ಇದೀಗ ಸತ್ತ ಆತ್ಮೀಯರ ನೆನಪಿನಲ್ಲಿ ಕಾಣಬಹುದು. ಒಟ್ಟಾರೆ ಹುಟ್ಟನ್ನು ಸಾವಿನ ನೆರಳಿನಲ್ಲಿ ನೋಡುವಾಗ ನಮಗೇನೆನಿಸುತ್ತದೆ ಎನ್ನುವುದು ಮುಖ್ಯ. ವ್ಯಕ್ತಿ ವಿಶಿಷ್ಟ ಪ್ರಜ್ಞೆ ಇಲ್ಲಿಯೂ ತೆಳ್ಳಗಾಗುತ್ತದೆಯೆ?

ಮತ್ತು ಬದುಕಿನಲ್ಲಿ ಸಂತೋಷವಾಗಿರುವುದು ಬಹುಮುಖ್ಯ. ನಗು, ಹಗುರವಾದ ಮನಸ್ಸು, ನೆಮ್ಮದಿ ಎಲ್ಲ ಮುಖ್ಯ. ಅದಕ್ಕಾಗಿ ಪ್ರೇಮ ಮುಖ್ಯ. ಸ್ನೇಹ, ಸಂಬಂಧ, ಹಂಚಿಕೊಳ್ಳುವುದು, ಒಳ್ಳೆಯ ಮನಸ್ಥಿತಿಯಲ್ಲಿ ಇರುವುದು ಮುಖ್ಯ. ಆದರೆ ಒಳ್ಳೆಯ ಮನಸ್ಥಿತಿಯಲ್ಲಿ ಇರುವುದಕ್ಕೆ ಏನು ಮಾಡಬೇಕು? ಅದು ನಮಗೆ ಒಂದು ಒಗಟಿನಂತಿರುತ್ತದೆ. Hegel ಒಂದೆಡೆ `the true humor is inconceivable without an infinite good mood' ಎಂದಿದ್ದಾನಂತೆ. ಗೇಲಿಯಲ್ಲ, ವಿಡಂಬನೆಯಲ್ಲ, ವ್ಯಂಗ್ಯವಲ್ಲ. ಶುದ್ಧ ಹಾಸ್ಯದ ನಗು ಸಾಧ್ಯವಾಗಲು ಸ್ವಸ್ಥ ಮನಸ್ಸು ಬೇಕು. ಏನಿದು ಸ್ವಸ್ಥ ಮನಸ್ಸು ಎಂದರೆ? ಬೇಂದ್ರೆಯವರು ಒಮ್ಮೆ ಡಾ||ಯು ಆರ್ ಅನಂತಮೂರ್ತಿಯವರಿಗೆ ನೀನು ಅಸ್ವಸ್ಥ ಇದ್ದೀಯ ಎಂದಿದ್ದರಂತೆ. ಅದಕ್ಕೆ ಅನಂತಮೂರ್ತಿಯವರು ಎಲ್ಲಾ ಸಾಹಿತಿಗಳೂ ಒಂದರ್ಥದಲ್ಲಿ ಅಸ್ವಸ್ಥರೇ ಅಲ್ಲವೇ ಸರ್ ಎಂದರಂತೆ. ಬೇಂದ್ರೆಯವರು ಅದಕ್ಕೆ ಅದು ಸರಿ, ಆದರೆ ನೀನು ಅಸ್ವಸ್ಥ ಇದ್ದೀಯ ಎಂದರಂತೆ! ಕಾರ್ನಾಡರು ಅಸ್ವಸ್ಥ ಎಂದರೆ restless ಎಂಬರ್ಥ ಎನ್ನುತ್ತಾರೆ. (ಗಮನಿಸಿ: ಪ್ರಜಾವಾಣಿ ದೀಪಾವಳಿ ವಿಶೇಷಾಂಕವೊಂದರಲ್ಲಿ ಪ್ರಕಟವಾದ ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ದೇವನೂರ ಮಹದೇವ - ಇವರೊಂದಿಗೆ ಜಯಂತ್ ಕಾಯ್ಕಿಣಿ ಮತ್ತು ವಿವೇಕ್ ಶಾನಭಾಗ ಭಾಗವಹಿಸಿದ್ದ ಬಹು ಅಪರೂಪದ ಸಂದರ್ಶನ.) ಮನಸ್ಸು ಸ್ವಸ್ಥವಾಗಿರುವುದು ಎಂದರೆ ಏನೆಂದು ವಿವರಿಸಲು ಸಾಧ್ಯವಿಲ್ಲ. ಆದರೆ ನಮ್ಮ ನಗುವಿನ ಆರೋಗ್ಯದಿಂದ ಅದನ್ನು ಕಂಡುಕೊಳ್ಳಲು ಸಾಧ್ಯವಿದೆ! ಎಲ್ಲದರಲ್ಲಿರುವ ಹುಸಿಯನ್ನು ವ್ಯಂಗ್ಯವಿಲ್ಲದೆ, ಗೇಲಿಯಿಲ್ಲದೆ, ವಿಡಂಬನೆಯ ಅಹಂಕಾರವಿಲ್ಲದೇನೆ ಕಾಣುವುದು ಸಾಧ್ಯವಾಗುವುದಾದರೆ, ಕಂಡು ನಗುವುದು ಸಾಧ್ಯವಾದರೆ ಒಳ್ಳೆಯದು. ಕೆಲವೊಮ್ಮೆ ಸುಳ್ಳು ಹೇಳುವುದು ಕೂಡ, ನಾಟಕ ಮಾಡುವುದು ಕೂಡ ಎಲ್ಲದರಲ್ಲಿರುವ ಹುಸಿಯನ್ನು ನಮಗೆ ಕಾಣಿಸಲು ಶಕ್ತವಾಗುತ್ತದೆ. ನಾಟಕಗಳು ನಮಗೆ ನೀಡುವ ಅತಿದೊಡ್ಡ ಕೊಡುಗೆ ಇದೇನೆ ಅನಿಸುತ್ತದೆ. ಒಟ್ಟಾರೆ ಎಲ್ಲದರಲ್ಲಿರುವ ಹುಸಿಯನ್ನು ಕಾಣುವುದು ಸ್ವಸ್ಥ ನಗುವಿಗೆ, ಒಳ್ಳೆಯ ಮನಸ್ಥಿತಿಗೆ ನಮ್ಮನ್ನು ಒಯ್ಯುತ್ತದೆ.

ಎಲ್ಲದರಲ್ಲಿರುವ ಹುಸಿಯನ್ನು ಕಾಣಬಲ್ಲೆವಾದರೆ ಸುಳ್ಳು ಎಂಬುದು, ನಾಟಕ ಎಂಬುದು ಬೇರೆಯೇ ತರ ಕಾಣಬಹುದಲ್ಲವೆ? ಉದಾಹರಣೆ ಕೊಡುವುದಾದರೆ, ಈ ಮಾನವ ಹಕ್ಕುಗಳ ಪ್ರತಿಪಾದಕರನ್ನು ಅಥವಾ ಹೋರಾಟಗಾರರನ್ನು ತೆಗೆದುಕೊಳ್ಳಿ. ಮನುಷ್ಯ ಹಕ್ಕುಗಳೊಂದಿಗೆ ಹುಟ್ಟುವುದಿಲ್ಲ ಎನ್ನುವುದನ್ನು ಈಗಾಗಲೇ ಕಂಡಿದ್ದೇವೆ! ಅವನಿಗೆ ಸಾಯುವುದಕ್ಕೂ ಹಕ್ಕು ಇದೆ ಎಂದುಕೊಳ್ಳಬೇಡಿ. ರಸ್ತೆಯಲ್ಲಿ ನಿಮಗೆ ಅಡ್ಡ ಹಾಯುವವರ ಮೇಲೂ ಯಾವುದೇ ಹಕ್ಕಿಲ್ಲದ, ಕೆಂಪು-ಹಸಿರು-ಹಳದಿ ದೀಪಗಳಿಗನುಗುಣವಾಗಿ ಚಲಿಸುವ ಮನುಷ್ಯನ ಹಕ್ಕುಗಳು ಎಂದರೇನು? ಅದರಲ್ಲಿರುವ ತಮಾಷೆಯನ್ನು ಕಾಣಬಲ್ಲೆವಾದರೆ ಒಟ್ಟು ಬದುಕಿನ ರೀತಿಯಲ್ಲೇ ಇರುವ ಹುಸಿಯೆಲ್ಲವೂ ಕಾಣಿಸತೊಡಗುತ್ತದೆ. ಇನ್ನೊಂದು ಉದಾಹರಣೆ ತೆಗೆದುಕೊಳ್ಳಿ. ನೀವು ಅರ್ಥವಾಗದ, ಕಬ್ಬಿಣದ ಕಡಲೆಯಂಥ ಗಹನವಾದ ವಿಚಾರಗಳಿರುವ ಸಾಹಿತ್ಯವನ್ನೇಕೆ ಬರೆಯಬೇಕು, ಅರ್ಥವಾಗುವಂತೆ ಬರೆಯಿರಿ, ಲಘುವಾಗಿ ಬರೆಯಿರಿ, ಸರಳವಾಗಿ ಬರೆಯಿರಿ. ಜನಪ್ರಿಯ ಸಾಹಿತ್ಯ ಯಾಕೆ ಮಾನ್ಯವಲ್ಲ ಎಂದು ತಿಳಿಯುತ್ತೀರಿ? ಜಗ್ಗೇಶನ ಸಿನಿಮಾಗಳು ಕಾಸರವಳ್ಳಿಯವರ ಸಿನಿಮಾಗಳಿಗಿಂತ ಶ್ರೇಷ್ಟ ಎಂದೇಕೆ ಹೇಳುತ್ತೀರಿ? ಆಳದಲ್ಲಿ ಕಾಸರವಳ್ಳಿಯವರು ಬಯಸುವುದನ್ನೇ ಜಗ್ಗೇಶ್ ಸಿನಿಮಾಗಳ ನಿರ್ದೇಶಕ/ನಿರ್ಮಾಪಕರೂ ಬಯಸುತ್ತಿರುವುದಲ್ಲವೆ? ಡಿ ಆರ್ ನಾಗರಾಜ ಬರೆಯುವುದೂ, ಸಾಯಿಸುತೆಯವರು ಬರೆಯುವುದೂ ತಮ್ಮನ್ನು ಸಾಧ್ಯವಾದಷ್ಟೂ ಹೆಚ್ಚು ಮಂದಿ ಓದಲಿ ಅಂತಲೇ ಅಲ್ಲವೆ?! ಎರಡರ ನಡುವೆ ಒಂದು ತಮಾಷೆಯಿದೆ. ಒಬ್ಬರು ಗಹನತೆಯ ಮಹಲನ್ನೇರಿ ನಿಂತು ಶ್ರೇಷ್ಟವೆನಿಸಿಕೊಳ್ಳಲು ಹಂಬಲಿಸುತ್ತಿದ್ದರೆ ಇನ್ನೊಬ್ಬರು ಬಹುಮತದ ಜನಬಲದ ಹಮ್ಮಿನಲ್ಲಿ ಮೆರೆಯುತ್ತಿರುವುದು ಕಾಣಿಸುವುದಿಲ್ಲವೆ?

ಅತ್ಯಂತ ಗಂಭೀರವಾದದ್ದು, ಗಹನವಾದದ್ದು, ಮುಖ್ಯವಾದದ್ದು, ವಿಶಿಷ್ಟವಾದದ್ದು ಎಂದುಕೊಂಡಿರುವುದೂ, ಸರಳವಾದದ್ದು, ಸಾಮಾನ್ಯರಿಗೆ ಇಷ್ಟವಾದದ್ದು, ಜನಪ್ರಿಯವಾದದ್ದು, ಜನಮನ್ನಣೆಗಳಿಸಿದ್ದು ಎನ್ನುವುದೆಲ್ಲವೂ ಸಮಾನವಾಗಿ ನಕ್ಕುಬಿಡಬಹುದಾದ ಹುಸಿಯೇ; ಎರಡೂ ನಾಟಕವೇ; ಎರಡೂ ಸುಳ್ಳೇ - ಒಂದು ನಿರ್ದಿಷ್ಟ ನೆಲೆಯಲ್ಲಿ ನಿಂತು ನೋಡುವುದು ಸಾಧ್ಯವಾಗುವುದಾದರೆ. ಅದು ಸ್ಮಶಾನದಲ್ಲಿ ನಿಂತು ನೋಡುವಾಗ, ತೊಟ್ಟಿಲಲ್ಲಿರುವ ಮಗುವಾಗಿ ನೋಡುವಾಗ, ಕಾಯಿಲೆಬಿದ್ದು ನಾಳೆಯೋ ನಾಡಿದ್ದೋ ಸಾಯುತ್ತೇನೆಂದಾಗ ನೋಡುವಾಗ, ನಿರ್ಮಮವಾಗಿ ನೋಡುವಾಗ ಬಹುಷಃ ಸಾಧ್ಯ.

ಹುಡುಗಿಯರನ್ನು ಸೆಳೆಯಲು ಅತ್ಯಂತ ಜಾಣ ಜೋಕುಗಳನ್ನು ಹೇಳುವುದು ಅಥವಾ ಗಮನಾರ್ಹವಲ್ಲದ ಒಬ್ಬ ವ್ಯಕ್ತಿಯಾಗಿ ಉಳಿದು ಬಿಡುವುದು - ಎರಡರಲ್ಲಿ ಯಶಸ್ವಿಯಾಗುವ ತಂತ್ರ ಯಾವುದು? ಇವರ ನಡುವೆ ಜನಪ್ರಿಯ ಸಾಹಿತಿಗಳಂತೆ ಅಥವಾ ಜಗ್ಗೇಶ್ ಸಿನಿಮಾದಲ್ಲಿರುವಂತೆ (ಎರಡರ ಸಮೀಕರಣವಿಲ್ಲ ಇಲ್ಲಿ ಮಾರಾಯ!) ಎಲ್ಲರಿಗೂ ಥಟ್ಟನೇ ಅರ್ಥವಂತೂ ಆಗುವ ಜೋಕುಗಳನ್ನು ಹೇಳುವ ಒಂದು ಮಾರ್ಗವೂ ಇರುತ್ತದೆ. ಹಾಗಾದರೆ ಮೂರರಲ್ಲಿ ಯಶಸ್ವಿಯಾಗುವ ತಂತ್ರ ಯಾವುದು? ಈಗ ಬನ್ನಿ, ಸ್ಟಾಲಿನ್ ಮಾದರಿಯೊಂದನ್ನು ನೋಡೋಣ.

Kant ಬಗ್ಗೆ ಸಾಕಷ್ಟು ಕೇಳಿದ್ದೇವೆ, ಕೆಲವರು ಓದಿಕೊಂಡಿದ್ದೀರಿ ಕೂಡ. ಸ್ಟಾಲಿನ್ ಪ್ರಕಾರ ಆತನ ಮಹತ್ವದ ತತ್ವ, ನಮ್ಮ ಪ್ರತಿಯೊಂದು ನಡೆಯ ಹಿಂದೆಯೂ ಒಂದು ನಿರ್ದಿಷ್ಟ ಉದ್ದೇಶ ಇದ್ದಿರುತ್ತದೆ. ಸ್ವಲ್ಪ prophetic ಆಗಿ ಹೇಳುವುದು ಒಳ್ಳೆಯದು. ಈ ಜಗತ್ತಿನಲ್ಲಿ ಹಿಂದೆ ನಡೆದಿರುವುದು, ಈಗ ನಡೆಯುತ್ತಿರುವುದೂ, ಮುಂದೆ ನಡೆಯಲಿರುವುದೂ ದೈವಸಂಕಲ್ಪವೇ ಆಗಿದೆ! (ಥತ್!) ಮತ್ತೀಗ, Schopenhauer ವಿಚಾರಗಳಿಗೆ ಬನ್ನಿ. ಅವನೇ ಸತ್ಯಕ್ಕೆ ಹೆಚ್ಚು ಸನಿಹ ಬಂದಿದ್ದವನು, ಸ್ಟಾಲಿನ್ ಪ್ರಕಾರ. ಅವನ ಮಹತ್ವದ ತತ್ವವೇನಿತ್ತು, ಜಗತ್ತು ಒಂದು ಅಭಿವ್ಯಕ್ತಿ ಮತ್ತು ಅಭೀಪ್ಸೆ. ಮತ್ತೀಗ ಇದನ್ನೂ prophetic ಆಗಿ ಹೇಳಬೇಕು. ಒಂದು ಸಮಷ್ಟಿಯ ಪ್ರಾರ್ಥನೆ, ಹಾರೈಕೆ, ಆಸೆ ಅಥವಾ ಅಭೀಪ್ಸೆಯಂತೆ ಈ ಜಗತ್ತು ಪರಿವರ್ತನೆಯಾಗುತ್ತದೆ ಮತ್ತು ಹಾಗೆಯೇ (ಕಾಣಿಸುತ್ತದೆ) ಆಗುತ್ತದೆ! ಹಾಗಾದರೆ, ಸ್ಟಾಲಿನ್ನನ ವೈಯಕ್ತಿಕ ಅಭೀಪ್ಸೆ, ಆಸೆಯಂತೆ ಯಾಕೆ ಜಗತ್ತು (ಸೀಮಿತ ಅರ್ಥದಲ್ಲಿ) ಪರಿವರ್ತನೆಯಾಗುವುದು ಸಾಧ್ಯವಾಯಿತು ಎಂಬ ಪ್ರಶ್ನೆಯಿದೆ. ಅದೇಕೆಂದರೆ, ಅವನು ತನ್ನ ವೈಯಕ್ತಿಕ ಅಭೀಪ್ಸೆ, ಆಸೆಯನ್ನು ಸಾಮೂಹಿಕಗೊಳಿಸುವಲ್ಲಿ, ಅದನ್ನೇ ಸಮಷ್ಟಿಯ ಆಸೆ, ಅಭೀಪ್ಸೆ, ಆಕಾಂಕ್ಷೆಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದುದರಿಂದಲೇ ಹೊರತು ಇನ್ನೇನಲ್ಲ. ಹಾಗಾದರೆ ಒಂದು ಹಂತದಲ್ಲಿ ಅವನೇಕೆ ಅಯಶಸ್ವಿಯಾದ, ಅವನೇಕೆ ವಿಲನ್ ಆದ, ಯಾಕೆ ಎಲ್ಲರೂ ಅವನನ್ನು ದ್ವೇಷಿಸತೊಡಗಿದರು? ಯಾಕೆಂದರೆ, ಯಾವ ಸಮಷ್ಟಿಯನ್ನು ಅವನು ಒಂದು ಹಂತದವರೆಗೆ ಸಮ್ಮೋಹನಕ್ಕೊಳಪಡಿಸಿದ್ದನೋ ಅದೇ ಸಮಷ್ಟಿ ಅವನ ವಿರುದ್ಧ ಯೋಚಿಸುವುದು ಸಾಧ್ಯವಾದುದರಿಂದಲೇ ಹೊರತು ಇನ್ನೇನಲ್ಲ!!

ಹುಡುಗಿಯರನ್ನು ಸೆಳೆಯಲು ಅತ್ಯಂತ ಜಾಣ ಜೋಕುಗಳನ್ನು ಹೇಳುವುದು ಅಥವಾ ಗಮನಾರ್ಹವಲ್ಲದ ಒಬ್ಬ ವ್ಯಕ್ತಿಯಾಗಿ ಉಳಿದು ಬಿಡುವುದು - ಎರಡರಲ್ಲಿ ಯಶಸ್ವಿಯಾಗುವ ತಂತ್ರ ಯಾವುದು? ಇವರ ನಡುವೆ ಜನಪ್ರಿಯ ಸಾಹಿತಿಗಳಂತೆ ಅಥವಾ ಜಗ್ಗೇಶ್ ಸಿನಿಮಾದಲ್ಲಿರುವಂತೆ (ಎರಡರ ಸಮೀಕರಣವಿಲ್ಲ ಇಲ್ಲಿ ಮಾರಾಯ!) ಎಲ್ಲರಿಗೂ ಥಟ್ಟನೇ ಅರ್ಥವಂತೂ ಆಗುವ ಜೋಕುಗಳನ್ನು ಹೇಳುವ ಒಂದು ಮಾರ್ಗವೂ ಇರುತ್ತದೆ. ಹಾಗಾದರೆ ಮೂರರಲ್ಲಿ ಯಶಸ್ವಿಯಾಗುವ ತಂತ್ರ ಯಾವುದು? ಹೌದು, ಹಿಂದೊಮ್ಮೆ ಓದಿರುವುದನ್ನೇ ನೀವೀಗ ಪುನಃ ಓದುತ್ತಿರುವಿರಿ. ವೈಯಕ್ತಿಕತೆ ಮತ್ತು ಸಮಷ್ಟಿ ಪ್ರಜ್ಞೆ ಹೇಗೆ ಕೆಲಸ ಮಾಡುತ್ತಿರುತ್ತದೆ ಎನ್ನುವುದನ್ನು ಅರಿಯುವುದೇನೂ ಅಷ್ಟು ಸುಲಭವಲ್ಲ. ಪಂಡಿತ ತಾರಾನಾಥರ ಕುರಿತು ಜಯಂತರ ಒಂದು ಪ್ರಶ್ನೆಗೆ ಉತ್ತರಿಸುತ್ತ ರಾಜೀವ ತಾರಾನಾಥರು ಆಡಿದ ಒಂದು ಮಾತನ್ನು ಇಲ್ಲಿ ಹೀಗೇ, ಸುಮ್ಮನೇ ಕೋಟ್ ಮಾಡುವ ಮನಸ್ಸಾಗುತ್ತದೆ.

"ಎಲಿಯಟ್ ಎಲ್ಲೋ ಒಂದು ಕಡೆ ಹೇಳಿದ್ದರು, "each time deserves its poetry." ಇದನ್ನು ನಾನು ಸರಿಯಾಗಿ ಕೋಟ್ ಮಾಡ್ತಾ ಇಲ್ಲ. ಆದರೆ ಸ್ವಲ್ಪ ತಿರುಗಿಸಿ, "we remember what we deserve and we don't remember what is the best." ನಾವು ಯಾವ ಸ್ಥಿತಿಯಲ್ಲಿದ್ದೀವೋ, ಎಷ್ಟು ಕೆಟ್ಟಿದ್ದೀವೋ, ಅದಕ್ಕೇ ನಮ್ಮ ಉತ್ಸವ ಮೂರ್ತಿಗಳನ್ನು ತಯಾರು ಮಾಡಿರ್ತೀವಿ. ನಮ್ಮ ನೆನಪಿನ ಮೂರ್ತಿಗಳನ್ನು ಯಾವ ಸ್ಥಿತಿಗೆ ಅಂತಂದ್ರೆ ಆ ಸ್ಥಿತಿಗೆ ತಕ್ಕ ಹಾಗೆ ಮಾಡೋದು ನಾವು..."
(ರಾಗಮಾಲಾ ಪುಸ್ತಕ ಮಾಲಿಕೆಯಲ್ಲಿ 5ನೆಯ ಕೃತಿಯಾಗಿ ಹೊರಬಂದಿರುವ, ಶೈಲಜ ಹಾಗೂ ಟಿ ಎಸ್ ವೇಣುಗೋಪಾಲ್ ಸಂಪಾದಿಸಿ ಅನುವಾದಿಸಿರುವ "ವಾದಿ ಸಂವಾದಿ" ಪುಟ 138).

ಹಾಗಾದರೆ ಬದುಕಿನಲ್ಲಿ ಗಂಭೀರವಾದದ್ದು, ಗಹನವಾದದ್ದು, ಮಹತ್ವದ್ದು ಏನಿಲ್ಲವೆ ಎಂಬ ಪ್ರಶ್ನೆಯಿದೆ, ಕಾದಂಬರಿಯ ಹೊರಗೆ. ಇದೆ, ಇದ್ದೇ ಇದೆ. ಆದರೆ ಎಲ್ಲದರೊಳಗಿನ ಹುಸಿಯ ಕಾಣಲಾರೆವಾದರೆ, ಗಂಭೀರವಾದದ್ದು, ಗಹನವಾದದ್ದು, ಮಹತ್ವದ್ದು ಎಂದುಕೊಂಡು ನಾವೆಷ್ಟು ಮೋಸ ಹೋಗುವುದು ಸಾಧ್ಯವೋ ಅಷ್ಟೇ, ಸರಳವಾದದ್ದು, ನೇರವಾದದ್ದು, ಜನಪ್ರಿಯವಾದದ್ದು, ಜನಮನ್ನಣೆಯದ್ದು ಎಂಬ ಭ್ರಮೆಯಿಂದಲೂ ಮೋಸ ಹೋಗುತ್ತಲೇ ಇರುತ್ತೇವೆ. ಸಖತ್ ಅರ್ಜೆಂಟು ಉಚ್ಚೆ ಬರುತ್ತಿರುವಾಗ ಅದನ್ನು ಎಲ್ಲಾದರೂ ಹೊಯ್ದು ಬಿಡುವುದಷ್ಟೇ ಮುಖ್ಯವಾಗುತ್ತದೆ ಎಂದು ಹೇಳಿದರೆ ಆ ಎಲ್ಲಾದರೂ ಎಂಬ ಶಬ್ದ ಬಹಳ ಮುಖ್ಯ ಮತ್ತು ಅಷ್ಟೇ ಅಮುಖ್ಯ ಕೂಡಾ ಆಗಿರುವಂಥಾದ್ದು ಎನ್ನುವುದು ಸಾಂದರ್ಭಿಕ ನಿಜ.

ಮಿಲನ್ ಕುಂದೇರಾನ The Festival of Insignificance ಓದಿ, ಯಾಕೆಂದರೆ ಅದು ನಿಮಗೆ ಬೇರೆಯೇ ಆಗಿ ಕಾಣುವುದು ಸಾಧ್ಯವಿದೆ. ಅಲ್ಲದೆ ಅವರವರ ಹಬ್ಬ ಅವರವರೇ ಮಾಡಿದರೆ ಚೆನ್ನ! ಆದರೆ ಹಬ್ಬದ ಸಂಭ್ರಮವನ್ನಂತೂ ಎಲ್ಲರಿಗೂ ಹಂಚಿ. ಆಗಲೇ ಅದು ಮತ್ತಷ್ಟು ಚೆನ್ನ. ಆದರೆ ಸಂಭ್ರಮವನ್ನು ಹಂಚುವುದಕ್ಕೆ ಲೌಡ್ ಸ್ಪೀಕರ್ ಬೇಡ, ಮನುಷ್ಯ ಮಾಡುವ ಪ್ರತಿಯೊಂದರಲ್ಲೂ ಇರುವ ಹಾಸ್ಯಾಸ್ಪದ ರೀತಿಗಳಲ್ಲಿ ಅದು ಒಂದು!
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ