Tuesday, November 10, 2015

ಜಯಂತ್ ಕಾಯ್ಕಿಣಿ ಕವಿತೆಗಳು

ಜಯಂತ್ ಕಾಯ್ಕಿಣಿ ಏನು ಅಂತ ಕೇಳಿದ್ರೆ, ಅವರು ನನಗೆ ಸದಾ ನಗು, ಸಾಗರದಂತೆ ಎಲ್ಲರಿಗೂ ಮುಕ್ತವಾಗಿ ದಕ್ಕುವ ಪ್ರೀತಿ, ತಮಾಷೆಯ ಮಾತು, ಅಲ್ಲಲ್ಲಿ ರೂಪಕಗಳನ್ನೊದಗಿಸುತ್ತ ಕಾಣಿಸುವ ಪನ್, ಇದರಲ್ಲೇ ನಮ್ಮನಮ್ಮ ಸಣ್ಣತನ, ದ್ವೇಷ, ಕ್ಷುದ್ರತೆಯ ಬಗ್ಗೆ ಹೀಗೆ ನುಸುಳಿ ಹಾಗೆ ಮರೆಯಾಗುವ ವಿಷಾದ ಮತ್ತು ‘ಬರಿ - ಬರಿ’ ಎನ್ನುತ್ತಲೇ ಇರುವ ಒಂದು ಸ್ಫೂರ್ತಿ. ಅದ್ಭುತವಾದ ಮತ್ತು ಅಷ್ಟೇ ವಿಶಿಷ್ಟವಾದ ಒಂದು ಗ್ರಹಿಕೆಯ ವಿಧಾನ ಅವರದ್ದು. ಇದು ನನಗಿನ್ನೂ ಅರ್ಥವಾಗಿಲ್ಲ. ಅಂಥ ಇನ್ನೊಬ್ಬರನ್ನು ನಾನು ಕಂಡಿಲ್ಲ. ಅವರಲ್ಲಿ ಅದ್ಯಾವ ಬಗೆಯ ವಿಶಿಷ್ಟ ಕ್ಯಾಮರಾ ಇದೆಯೋ ದೇವರೇ ಬಲ್ಲ. ಆ ಕ್ಯಾಮರಾ ಕೇವಲ ದೃಶ್ಯವನ್ನಷ್ಟೇ ಸೆರೆ ಹಿಡಿಯದೆ, ದೃಶ್ಯದ ಸದ್ದು, ಲಯ, ಸಂವೇದನೆ, ವಾಸನೆ ಮತ್ತು ಜೀವಂತಿಕೆಯನ್ನೂ ಸೇರಿ ಸೆರೆ ಹಿಡಿಯುತ್ತದೆ ಎನ್ನುವುದು ವಿಶೇಷ. ಇದು ಒಂದು ಲೆವೆಲ್. ಇನ್ನೊಂದು ಅದ್ಭುತ ಮತ್ತು ವಿಶಿಷ್ಟವಾದ ಶಕ್ತಿ ಎಂದರೆ ಅವರ ಭಾಷೆ ಮತ್ತು ಅದರ ರೂಪಕ ಶಕ್ತಿ. ಎಂಥ ಸಾಮಾನ್ಯ, ಸಾಧಾರಣ ವಿಷಯವೂ ಅವರ ಭಾಷೆಯಲ್ಲಿ ಪಡೆದುಕೊಳ್ಳುವ ಹೊಳಪು, ತೇಜಸ್ಸು ಮತ್ತು ತಾಜಾತನ ಏನಿದೆ, ಅದೂ ಕೂಡ ತುಂಬ ಅಪರೂಪದ್ದು, ನಾನಂತೂ ಇನ್ಯಾರಲ್ಲಿಯೂ ಕಾಣದೇ ಇರುವಂಥಾದ್ದು.

ಇದು ಎಲ್ಲರಿಗೂ ಗೊತ್ತಿರುವ, ಮತ್ತೆ ಮತ್ತೆ ಉಲ್ಲೇಖಿಸಲ್ಪಟ್ಟಿರುವ ಸಂಗತಿ. ರವಿ ಬೆಳಗೆರೆಯವರು ಒಂದು ಕಡೆ "ಜಯಂತ್ ಬಲುದೊಡ್ಡ ಭಾವಜೀವಿ. ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಹೇಳಬಲ್ಲ ಸೂಕ್ಷ್ಮ ಕಲೆಗಾರ..." ಎಂದಿದ್ದಾರೆ. ಬಹುಶಃ ಇದಕ್ಕಿಂತ ಚೆನ್ನಾಗಿ ಮತ್ತು ಪರಿಪೂರ್ಣವಾಗಿ ಜಯಂತರ ಗ್ರಹಿಕೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯಗಳನ್ನು ವಿವರಿಸುವ ಮಾತು ಇರಲಾರದು. ಇವತ್ತು ಇಲ್ಲಿ ಜಯಂತರ ರೂಪಕಗಳು, ಪ್ರತಿಮಾ ವಿಧಾನ ಮತ್ತು ಭಾಷೆಯ ಬಗ್ಗೆ ನಾನು ಮಾತನಾಡುತ್ತಿಲ್ಲ. ಹಾಗೆಯೇ ಜಯಂತರು ಸಿನಿಮಾಗಳಿಗಾಗಿ ಬರೆದ ಕವಿತೆಗಳನ್ನು ಕೂಡ ಈ ಮಾತುಕತೆಯ ವ್ಯಾಪ್ತಿಯ ಒಳಗೆ ತೆಗೆದುಕೊಳ್ಳುತ್ತಿಲ್ಲ. ಇದನ್ನು ಹೊರತು ಪಡಿಸಿ ಜಯಂತರ ಕವಿತೆಗಳನ್ನು ಓದುತ್ತ ಹೋದಂತೆ ಮುಖ್ಯ ಎನಿಸಿದ ಕೆಲವು ಸಂಗತಿಗಳನ್ನಷ್ಟೇ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನ್ನುವುದು ನನ್ನ ಉದ್ದೇಶ. ಇದರ ಜೊತೆಗೆ ಸಾಂದರ್ಭಿಕವಾದ ಒಂದೆರಡು ಜಿಜ್ಞಾಸೆಗಳನ್ನು ಕೂಡ ನಿಮ್ಮ ಜೊತೆ ಹೇಳಿಕೊಳ್ಳುವ ಉದ್ದೇಶವಿದೆ. ಜಯಂತರ ಕವನಗಳ ಮರು ಓದು ಅದಕ್ಕೊಂದು ನೆಪವಾಗಿದ್ದು ಈ ವಿಚಾರಗಳ ಚರ್ಚೆ, ಮನನ ನಿಮ್ಮೊಳಗೆ ನಡೆದರೆ ಒಳ್ಳೆಯದು ಎನಿಸುತ್ತದೆ.

*****

ಕವಿತೆಗಳ ಬಗ್ಗೆ ಮಾತನಾಡುವ ಮುನ್ನ ಹೇಳಬೇಕಾದ ಕೆಲವು ಮಾತುಗಳಿವೆ. ಮೊದಲಿಗೆ ಕವಿತೆಗಳ ಬಗ್ಗೆ ಮಾತನಾಡುವುದೇ ಒಂದರ್ಥದಲ್ಲಿ ಸ್ವಲ್ಪ ಅಸಹಜವಾದ ಪ್ರಕ್ರಿಯೆ. ಇದು ಸೀಮಿತ ಅರ್ಥದಲ್ಲಿ. ಇದನ್ನು ಬಹುಷಃ ನಾನು ವಿವರಿಸಬೇಕಾದರೆ ಮಾತನ್ನು ಬೇರೆ ಕಡೆಯಿಂದ ಆರಂಭಿಸಬೇಕಾಗುತ್ತದೆ. (ದಯವಿಟ್ಟು ಗಮನಿಸಿ: ಈ ಭಾಗ ಬೇರೆ ಲೇಖನದಲ್ಲಿಯೂ ಬಂದಿದೆ)

ಆಗಸ್ಟ್ 2012ರ ಕೆರವಾನ್ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದನ್ನು ಬರೆದವರು ಅಂಜುಂ ಹಸನ್ ಎನ್ನುವವರು. ಈಕೆ ಕವಿ, ಕಾದಂಬರಿಕಾರರು ಮತ್ತು ವಿಮರ್ಶಕಿ ಎನ್ನಬಹುದಾದ ಪುಸ್ತಕಗಳ ಬಗ್ಗೆ ಬರೆಯುವ ಪ್ರಬಂಧಕಾರರು. ಈಗ ಸದ್ಯಕ್ಕೆ ಕ್ಯಾರವಾನ್ ಪತ್ರಿಕೆಯ ಪುಸ್ತಕ ವಿಭಾಗದ ಸಂಪಾದಕಿ ಆಗಿದ್ದಾರೆ. ಇವರು ತಮ್ಮ ಲೇಖನವನ್ನು ಮಿಲನ್ ಕುಂದೇರಾನ ಒಂದು ಪ್ರಸಿದ್ಧ ಕಾದಂಬರಿ "ಲೈಫ್ ಈಸ್ ಎಲ್ಸ್ ವೇರ್" ನಿಂದ ಸುರುಮಾಡುತ್ತಾರೆ. ನಿಮಗೆ ನೆನಪಿರಬಹುದಾದಂತೆ ಈ ಕಾದಂಬರಿ ಒಬ್ಬ ಯುವ ಕವಿಯ ಕುರಿತಾಗಿದೆ. ಮಿಲನ್ ಕುಂದೇರಾನ ಎಲ್ಲ ಕಾದಂಬರಿಗಳಲ್ಲಾಗುವಂತೆ ಇಲ್ಲಿಯೂ ಹಲವು ಪದರಗಳ ಒಂದು ಹಂದರವಿದೆ. ನಾನು ಇಲ್ಲಿ ಇವತ್ತಿನ ಸಂದರ್ಭಕ್ಕೆ ಬೇಕಾದ ಹಾಗೆ ಯಾವುದೋ ಒಂದು ಅಂಶವನ್ನೇ ಎತ್ತಿಕೊಂಡು ಮಾತನಾಡುತ್ತಿದ್ದೇನೆ ಎಂದ ಮಾತ್ರಕ್ಕೆ ಕುಂದೇರಾ ಈ ಕಾದಂಬರಿಯಲ್ಲಿ ಹೇಳ್ತಾ ಇರೋದು ಇಷ್ಟೇ ಅಂತ ಅಲ್ಲ. ಒಬ್ಬ ಕವಿ ಮತ್ತು ಅವನ ಕವಿತ್ವದ ನಡುವೆ ನಾವು ಕಾಣಬಹುದಾದ ಒಂದು ಬೆಳವಣಿಗೆ, ಪಲ್ಲಟ ಇತ್ಯಾದಿ ಎಲ್ಲ ಏನೇನಿವೆ, ಅವುಗಳಿಗೂ ಅವನ ಪರ್ಸನಾಲಿಟಿ ಅಂತೀವಲ್ಲ, ವ್ಯಕ್ತಿತ್ವ, ಅದರ ವಿಕಾಸದ ಒಂದು ಪ್ರಕ್ರಿಯೆಗೂ ಒಂದು ಅವಿನಾಭಾವ ಸಂಬಂಧ ಇದೆ ಅಂತ ಹೇಳ್ತಾ ಮಿಲನ್ ಕುಂದೇರಾ ಈ ಕಾದಂಬರಿಯಲ್ಲಿ ಒಂದು ವಿಧದ ವಿಚಾರಗಳ ಮಂಡನೆ ಮಾಡ್ತಾನೆ ಅನ್ನೋದು ಕಾದಂಬರಿಯ ಒಂದು ಪ್ರಮುಖ ಪದರ. ಮಿಲನ್ ಕುಂದೇರಾನ ಈ ಕಾದಂಬರಿ 1969ರಲ್ಲಿ ಬರೆದಿದ್ದು. ಮೊದಲಿಗೆ ಇದರ ಹೆಸರು “ದ ಏಜ್ ಆಫ್ ಲಿರಿಕ್ಸ್” ಎಂದೇನೋ ಆಗುವುದಿತ್ತಂತೆ.

ತುಂಬ ಸರಳಗೊಳಿಸಿ ಹೇಳುವುದಾದರೆ, ಕವಿಭಾವವೆಂಬುದು ಒಂದು ಅಪ್ರಬುದ್ಧ ಮನಸ್ಸಿನ ಘಟ್ಟ ಎನ್ನುವುದು ಇಲ್ಲಿನ ಮಂಡನೆ. ಇದು ಸಾಕಷ್ಟು ಗಹನವಾದ ಪ್ರಶ್ನೆಯೇ. ಕುಂದೇರಾ ತನ್ನ “The Curtain” ಕೃತಿಯಲ್ಲಿ ಈ ಕುರಿತು ಹೆಚ್ಚು ವಿವರವಾದ ಮಾತುಗಳನ್ನು ಬರೆದಿದ್ದಾನೆ. ಮತ್ತೆ ಇದೆಲ್ಲ ಅಂಜುಂ ಹಸನ್ ಅವರ ಲೇಖನದಿಂದಲೇ ತೊಡಗಿದ್ದು ಅನ್ನೋದನ್ನ ನೆನಪಿಸ್ತೇನೆ. ಮೊದಲು ಆತ ಹೆಗೆಲ್‌ನ ಮಾತುಗಳನ್ನು ಉದ್ಧರಿಸುತ್ತಾನೆ:

“The content of lyric poetry, Hegel says, is the poet himself; he gives voice to his inner world so as to stir in his audience the feelings, the states of mind he experiences. And even if the poet treats `objective' themes, external to his own life, "the great lyric poet will very quickly move away from them and end up drawing the portrait of himself" ("stellt sich selber dar") (The Curtain: Page 88)

.................
..................
.....................

“I have long seen youth as the lyrical age, that is, the age when the individual, focused almost exclusively on himself, is unable to see, to comprehend, to judge clearly the world around him. If we start with that hypothesis (necessarily schematic, but which, as a schema, I find accurate), then to pass from immaturity to maturity is to move beyond the lyrical attitude.

“If I imagine the genesis of a novelist in the form of an exemplary tale, a `myth', that genesis looks to me like a conversion story: Saul becoming Paul; the novelist being born from the ruins of his lyrical world.
(The Curtain: Pages 88-89)

ಬರಹಗಾರ ಸ್ವ-ಕೇಂದ್ರಿತನಾಗಿದ್ದಾಗ ಕವಿತೆ ಅವನ ಮೆಚ್ಚಿನದ್ದಾಗುತ್ತದೆ ಮತ್ತು ಕ್ರಮೇಣ ಅವನು ಜಗತ್ತಿನ ಕೇಂದ್ರ ತಾನಲ್ಲ, ತಾನು ಎಂಬುದೇ ಮುಖ್ಯವಾದ ಮುದ್ದೆಯಲ್ಲ, ತಾನು ಒಂದು ಸಮಾಜದ ಸಣ್ಣ ಅಂಶ ಎಂಬ ಅರಿವು ಹೆಚ್ಚಿದಂತೆಲ್ಲ ಕವಿತೆಯಿಂದ ಹೆಚ್ಚು ಪ್ರಬುದ್ಧವಾದ (!?) ಪ್ರಕಾರಗಳಿಗೆ ಅಂದರೆ ಗದ್ಯ,ಕತೆ-ಕಾದಂಬರಿಗಳಿಗೆ ಸರಿಯುತ್ತಾನೆ ಎಂಬ ನಿಲುವು ಸರಿಯೆ?

ನಿಮಗೆಲ್ಲ ಗೊತ್ತಿರುವಂತೆ ಕವಿತೆ ಎಂಬುದು ಒಂದು (format) ಪ್ರಕಾರವಾಗಿ ಮತ್ತು ಒಂದು (content) ಲಯವಾಗಿ ಗದ್ಯದಲ್ಲೂ ಇರುವ ವಸ್ತು. ಅದು ಕವಿಯ ವ್ಯಕ್ತಿತ್ವ ಬೆಳವಣಿಗೆಯೊಂದಿಗೆ ತಳುಕು ಹಾಕಿ ನೋಡುವುದು ಎಷ್ಟು ಸರಿ ಎಂಬುದು ಪ್ರಶ್ನೆ. ಮಿಲನ್ ಕುಂದೇರಾ ಇದನ್ನು ಇತಿಹಾಸದೊಂದಿಗೆ ಸಮೀಕರಿಸಿ ಹೇಳುತ್ತಿರುವುದಾದರೂ, ಪ್ರಸ್ತುತ “ಲೈಫ್ ಈಸ್ ಎಲ್ಸ್‌ವೇರ್” ಕಾದಂಬರಿಯ ಕೇಂದ್ರಪಾತ್ರ ಜೆರೊಮಿಲ್‌ನ ಕಾಲ, ಇಪ್ಪತ್ತನೆಯ ಶತಮಾನದ ಮೊದಲರ್ಧದವರೆಗಿನ ಕಾಲಾವಧಿಯ ಕವಿಗಳ ಕುರಿತಾಗಿಯಷ್ಟೇ ಎಂದುಕೊಂಡರೂ (ಕಾದಂಬರಿಯ ಮೊದಲ ಹೆಸರನ್ನು ನೆನೆಯಿರಿ) ಪ್ರಶ್ನೆಯನ್ನು ಇವತ್ತಿಗೂ ಎತ್ತಬಹುದು ಎಂದು ತಿಳಿಯುತ್ತೇನೆ. ನವೋದಯ ಕವಿಗಳನ್ನೇ ಮನಸ್ಸಲ್ಲಿಟ್ಟುಕೊಂಡು ಇದನ್ನು ನೋಡುವುದು ಸಾಧ್ಯವಿದೆಯಾದರೂ ಇವತ್ತಿಗೂ ಇದು ಪ್ರಸ್ತುತ ಹೇಗೋ ಹಾಗೇನೆ.

ನಿಮಗೆಲ್ಲ ನೆನಪಿರುವಂತೆ ಡಾ||ಯು.ಆರ್.ಅನಂತಮೂರ್ತಿಯವರು ಎಸ್ ಎಲ್ ಭೈರಪ್ಪನವರ ವಿವಾದಾತ್ಮಕ ಕಾದಂಬರಿ “ಆವರಣ”ದ ಬಗ್ಗೆ ಮಾತನಾಡುತ್ತ ಭೈರಪ್ಪನವರ ಕಾದಂಬರಿಯಲ್ಲಿ ಪೊಯೆಟ್ರಿಯಿಲ್ಲ, ‘there is absolutely no poetry’ ಎಂದಿದ್ದರು. ಕವಿಮನಸ್ಸು ಎಂದು ನಾವು ಹೇಳುವಾಗ ಭಾವುಕತೆ, ಸೂಕ್ಷ್ಮಸಂವೇದಿ ಮನಸ್ಸು ಎಂಬುದನ್ನು ಸಮೀಕರಿಸುವುದೇ ಇಲ್ಲ ಎಂದೇನಲ್ಲ. ಅದರೆ ಕವಿಮನಸ್ಸು ಎಂಬುದು ಅಷ್ಟೇ ಅಲ್ಲ ಅಲ್ಲವೆ? ಇಸಂಗಳ ಹಿಂದೆಯೇ ಬಹುದೂರ ಹೋಗಿ ಸಿಲೆಬಸ್ ಬದ್ಧ ಕವಿತೆಗಳನ್ನು ಬರೆದವರು ಆಮೇಲೆ ಎಲ್ಲಿಗೆ ಸಂದರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ರಮ್ಯವಾದ ಜಗತ್ತನ್ನೇ ಕುರಿತು ಹಾಡುತ್ತಿರುವ ಕವಿತೆಗಳು, ಭಾವತೀವೃತೆಯನ್ನೇ ನೆಚ್ಚಿದ ಭಾವ-ಗೀತೆಗಳು ಮತ್ತು ಆನಂತರದ ಬಂಡಾಯ, ದಲಿತ ಕವನಗಳು ಎಲ್ಲವನ್ನೂ ಮನಸ್ಸಿಗೆ ತಂದುಕೊಂಡು ಈ ಪ್ರಶ್ನೆಯನ್ನು ನೋಡಬಹುದು. ನಮ್ಮ ಜಾನಪದ ಗೀತೆಗಳು, ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ ಮುಂತಾದವರ ವಚನಗಳು, ದಾಸರ ಕೀರ್ತನೆಗಳು ಕೂಡಾ ನಮ್ಮ ಮನಸ್ಸಿಗೆ ಇಲ್ಲಿ ಬರಬೇಕು. ಮತ್ತು ಮಹಾನ್ ಕಾವ್ಯಗಳನ್ನು ಬರೆದ ಪಂಪಾದಿ ಕವಿಗಳನ್ನು ನೆನೆಯದೇ ಈ ಪ್ರಶ್ನೆಯನ್ನು ಮುಖಾಮುಖಿಯಾಗುವುದಕ್ಕೆ ಆಗಲ್ಲ. ಸ್ವಕೇಂದ್ರಿತ, ಭಾವುಕ ಮತ್ತು ಅಪ್ರಬುದ್ಧ ಬರಹಗಾರ ಸುರುಮಾಡುವುದೇ ಕವಿತೆಗಳಿಂದ ಎನ್ನುವುದಾದರೆ ಸ್ವಂತದ ನೋವುಗಳನ್ನೇ ಕತೆಯಾಗಿಸಿ ಬರೆದ ಉದಯೋನ್ಮುಖ ಮತ್ತು ಅದರಲ್ಲೆ ಅಸ್ತೋನ್ಮುಖರೂ ಆದ ಕತೆಗಾರರನ್ನು ಎಲ್ಲಿಡುವುದು!

ಈ ವಿಚಾರದ ಚರ್ಚೆಯನ್ನು ಅದರ ಅತ್ಯಂತ ಶಿಖರಪ್ರಾಯ ತರ್ಕಕ್ಕೊಡ್ಡಿದವರು ಎ.ಕೆ.ರಾಮಾನುಜನ್. ಆಸಕ್ತರು ಅವರ “ಕನ್ನಡಿಗಳೆ ಕಿಟಕಿಗಳಾಗಿರುವಲ್ಲಿ” ಎಂಬ ಪ್ರಬಂಧದ ಅಹಂ ಮತ್ತು ಪುರಂ ಪ್ರಮೇಯಗಳನ್ನು ಗಮನಿಸಬಹುದು. ನಮ್ಮಲ್ಲಿ ನವೋದಯದಿಂದ ಸರಿದು ನವ್ಯಕಾವ್ಯದ ಕಾಲ ಬಂದಾಗ, ಸಮೂಹ/ಸಮಷ್ಠಿಯಿಂದ ವ್ಯಕ್ತಿ ವಿಶಿಷ್ಟ ಪ್ರಜ್ಞೆ ಮಹತ್ವ ಪಡೆಯಿತು ಎನ್ನುವ ವಾದದ ಅರಿವು ಎಲ್ಲರಿಗೂ ಇದೆ. ಬೇಂದ್ರೆಯವರ ‘ನಾನು’ (ಗಮನಿಸಿ: ಕೀರಂ ನಾಗರಾಜ ಅವರ “ಮತ್ತೆ ಮತ್ತೆ ಬೇಂದ್ರೆ” (ಅಕ್ಷರ ರೂಪ: ಅಕ್ಷತಾ)) ಮತ್ತು ನವ್ಯದವರ ‘ನಾನು’; ಬೇಂದ್ರೆಯವರು ಕನ್ನಡಿಸುವ ವಿಶ್ವಪ್ರಜ್ಞೆ ಮತ್ತು ನವ್ಯರ ಕನ್ನಡಪ್ರಜ್ಞೆ ಮುಂತಾಗಿ ತೌಲನಿಕ ಅಧ್ಯಯನ ಕೂಡ ಇಲ್ಲಿ ಸಾಧ್ಯವಿದೆ. ಅದಕ್ಕಿಂತ ಮುಖ್ಯವಾಗಿ ವ್ಯಕ್ತಿಯ ಅಂತರಂಗದ ಶೋಧ, ಮನಸ್ಸಿನ ತುಮುಲ, ದ್ವಂದ್ವಗಳಿಗೆ ಅಕ್ಷರ ರೂಪ ಕೊಡುವ ತುರ್ತು, ವ್ಯಕ್ತಿಯ ದೈನಂದಿನದ ಕ್ಷುದ್ರತೆಯನ್ನು ಚಿತ್ರಿಸುವ ಮತ್ತು ಹಾಗೆ ಚಿತ್ರಿಸಿ ಬದುಕಿನ ಅರ್ಥವನ್ನು ಶೋಧಿಸುವ ಉತ್ಸಾಹ ಹೆಚ್ಚಿದ್ದು ಈ ಕಾಲದಲ್ಲಿಯೇ. ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ತಾನು ಕಾಣುತ್ತ ಸ್ವಕೇಂದ್ರಿತನಾಗಿ, ಸಮರ್ಥಿಸಿಕೊಳ್ಳುವಲ್ಲಿ ತನ್ನಲ್ಲೇ ವಿಶ್ವ/ಸಮಾಜ/ಸಮಷ್ಠಿಯಿರುವುದಲ್ಲವೇ ಎಂಬ ವಾದವನ್ನೂ ಹೂಡಿ ನಿಂತ ನವ್ಯಕವಿ ಕ್ರಮೇಣ ತನ್ನ ಕನ್ನಡಿಯನ್ನು ಕಿಟಕಿಯನ್ನಾಗಿಸಿಕೊಂಡು ಹೊರಜಗತ್ತನ್ನು ತನ್ನೊಳಗು ಮಾಡಿಕೊಂಡು ಮಾಗಿದ್ದು ಈಗ ಇತಿಹಾಸ. ಆದರೆ ಈ ಹಂತದಲ್ಲಿ ಕವಿಯೊಬ್ಬ ಕಾದಂಬರಿಕಾರನಾಗಿ ಪರಿವರ್ತಿತನಾದನೆ ಎನ್ನುವುದು ಪ್ರಶ್ನೆ.

ಪ್ರಜಾವಾಣಿಗಾಗಿ ನಡೆಸಿದ ಅಂಜುಂ ಹಸನ್ ಅವರ ಸಂದರ್ಶನದಲ್ಲಿ ಅವರನ್ನು ಈ ಕುರಿತಾಗಿಯೇ ಕೇಳಿದಾಗ ಅವರು ನೀಡಿದ ಉತ್ತರ ಮೇಲಿನ ಹೆಗೆಲ್-ಕುಂದೇರಾ ಪ್ರಮೇಯದ ಪ್ರತಿಪಾದನೆಯಂತೆಯೇ ಇರುವುದನ್ನು ಗಮನಿಸಿ:

“ಹೆಚ್ಚಿನ ಹೊಸ ಬರಹಗಾರರ ಹಾಗೆ ನಾನೂ ಕವನಗಳಿಂದ ಬರವಣಿಗೇನ ಸುರು ಮಾಡಿದೆ. ನಾನು ನನ್ನ ಹದಿಹರಯದ ದಿನಗಳನ್ನು ಶಿಲ್ಲಾಂಗಿನ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಕಳೆದೆ. ನನ್ನ ತಂದೆಯವ್ರು ಯೂನಿವರ್ಸಿಟೀಲಿ ಪ್ರೊಫೆಸರ್ ಆಗಿದ್ರು. ನನ್ನ ಸುತ್ತಮುತ್ತ ಇದ್ದ ಅನೇಕ ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲ ಕವನ ಬರೀತಾ ಇದ್ರು. ಕವನದಲ್ಲಿ ನನ್ನ ಆರಂಭಿಕ ಆಸಕ್ತಿಯನ್ನ ಬಹುಷಃ ನಾನು ಆಗಲೇ ಕಂಡುಕೊಂಡಿರಬೇಕು ಅನಿಸುತ್ತೆ. ಆನಂತರದ ಬೆಳವಣಿಗೆಯಾಗಿ ಕತೆ-ಕಾದಂಬರಿಗಳಲ್ಲಿನ ಆಸಕ್ತಿಯನ್ನ ಕೆಲವು ವರ್ಷಗಳ ಹಿಂದೆ ಮಿಲನ್ ಕುಂದೇರಾನ ಒಂದು ಪ್ರಬಂಧ ಓದಿದಾಗ ಅರ್ಥ ಮಾಡಿಕೊಂಡೆ. ಅವನು ಹೆಗೆಲ್‍ನ್ನ ಕೋಟ್ ಮಾಡಿ ಹೇಳ್ತಾನೆ, ಒಂದು ಕವನದ ಭಾವ ಏನಿದೆ ಆ ಕವಿ ಅದೇ ಆಗಿರುತ್ತಾನೆ ಅಂತ. ಅದು ಭಾವನಾತ್ಮಕ ನಿಲುವು, ಸ್ವ-ಭಾವದ ಅಭಿವ್ಯಕ್ತಿ. ಯಾವಾಗ ನಮಗೆ ಈ ಜಗತ್ತಿನೊಂದಿಗೆ ನಮ್ಮ ಭಾವನೆಗಳನ್ನ ಮೀರಿದ್ದು, ಸ್ವಂತದ್ದನ್ನು ಮೀರಿದ್ದು ಇದೆ ಅನ್ನುವ ಅರಿವಾಗುತ್ತೋ ಆಗ ನಾವು ಕಾದಂಬರಿಯ ಮನೋಭಾವದತ್ತ ಹೊರಳುತ್ತೇವೆ, "ಕಾವ್ಯದ ಭಾವಜಗತ್ತಿನ ಪಳೆಯುಳಿಕೆಗಳಿಂದ ಕಾದಂಬರಿಕಾರನ ಜನ್ಮವಾಗುತ್ತದೆ". ಹಾಗೆ ನಾನು ಮತ್ತೆ ಆಗಾಗ ಕವನಗಳನ್ನು ಬರೆಯಲೂ ಬಹುದು, ಇಲ್ಲವೆಂದಲ್ಲ. ಆದರೆ ಒಂದು ಮನೋಧರ್ಮದ ನೆಲೆಯಿಂದ ಹೇಳುವುದಾದರೆ ನಾನು ಅದನ್ನು ಆಗಲೇ ದಾಟಿ ಬಂದಿದ್ದೇನೆ ಅನಿಸುತ್ತದೆ.”

*****

ಇಷ್ಟನ್ನು ಹೇಳಿದ ಮೇಲೆ ಕವಿತೆ ಭಾವ ಜಗತ್ತಿಗೆ ಸಂಬಂಧ ಪಟ್ಟಿದ್ದು, ಭಾವನೆಗಳು ಕ್ಷಣಭಂಗುರವಾದವು, ಆಕಾಶದಲ್ಲಿ ತೇಲುತ್ತ ಸಾಗಿ ಹೋಗುವ ಮೋಡಗಳ ಹಾಗೆ, ಇವೆ ಎಂದರೆ ಇದ್ದವು, ಇಲ್ಲ ಎಂದರೆ ಈಗ ಇಲ್ಲ, ಹಾಗಾಗಿ ಅವುಗಳ ಬಗ್ಗೆ ಮಾತನಾಡಲು ಪ್ರಮಾಣ ಅನ್ನೋದು ಇರುವುದಿಲ್ಲ ಎನ್ನುವುದು ಸ್ಪಷ್ಟ. ಒಬ್ಬ ಪ್ರೇಮಿಯ ಪ್ರೀತಿ ಎಷ್ಟು ಆಳವಾದದ್ದು ಅಥವಾ ಮಗುವನ್ನು ಕಳೆದುಕೊಂಡ ತಾಯಿಯ ನೋವಿನ ತೀವ್ರತೆ ಎಷ್ಟು ಎಂದೆಲ್ಲ ಯಾರೂ ಅಳತೆ ತೆಗೆದು ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗೆ ಕವಿತೆ ಉದ್ದೀಪಿಸುವ ಭಾವ ಒಂದು ಸೂಕ್ಷ್ಮ ಸಂವೇದನಾ ವಲಯಕ್ಕೆ ಸೇರಿದ್ದು. ಕವಿತೆಗಳು ಒಂಥರಾ ಖಾಸಗಿ ಗುಟ್ಟುಗಳಿದ್ದ ಹಾಗೆ, ಪಿಸುಮಾತಿನ ಹಾಗೆ. ಅದನ್ನು ಓದಿದಾಗ ಅಥವಾ ಕೇಳಿಸಿಕೊಂಡಾಗ ನಿಮಗೆ ಅದು ದಕ್ಕಿದರೆ ದಕ್ಕಿತು, ಇಲ್ಲ ಎಂದಾದರೆ ಇಲ್ಲ ಅಷ್ಟೆ. ಕೆ ವಿ ಸುಬ್ಬಣ್ಣನವರು ಹೇಳಿದ ಹಾಗೆ ಅದು ನಿಮಗೆ ಅರ್ಥವಾಗಬೇಕಾದ್ದಿಲ್ಲ, ಅನುಭವ ಆದರೆ ಸಾಕು. ಸುಬ್ಬಣ್ಣನವರು ಹೇಳಿದ್ದು ನಾಟಕದ ಬಗ್ಗೆ, ಕವಿತೆಗೂ ಅದು ಅನ್ವಯಿಸುತ್ತದೆ. ಹಾಗೆ ಕವಿತೆಯನ್ನು ಓದಿದಾಗ ನಿಮಗೆ ಅದೇ ಅನುಭವ ಆದರೆ ಆಗಬೇಕು, ಆಗಲಿಲ್ಲ ಎಂದಾದರೆ ಅದನ್ನು ಅಲ್ಲಿಗೇ ಬಿಟ್ಟುಬಿಡುವುದು ಒಳ್ಳೆಯದು. ಅದರಲ್ಲಿ ಅರ್ಥ ಹುಡುಕುವುದಕ್ಕೇನೂ ಇಲ್ಲ. ಹಾಗಾಗಿ ಇಲ್ಲಿ ಕವನಗಳ ವಿಶ್ಲೇಷಣೆ ನಡೆಸುವುದಿಲ್ಲ ನಾನು. ಹಾಗೆ ಅದನ್ನ ಬಟಾಬಯಲಿನಲ್ಲಿಟ್ಟು ಹರಾಜಿಗೆ ನಿಂತವರು ಉದ್ದ ಅಗಲ ತೂಕ ಉಪಯೋಗ ಎಲ್ಲ ವಿವರಿಸಿದ ಹಾಗೆ ವಿವರಿಸೋದು ಒಂಥರಾ ಅನಿಸುತ್ತದೆ. ಇದೇ ಕಾರಣಕ್ಕೆ ಬಹುಷಃ ಒಬ್ಬ ವ್ಯಕ್ತಿಯ ಅಂತರಂಗಕ್ಕೆ ನೇರವಾದ ಪ್ರವೇಶವನ್ನು ಒದಗಿಸಬಹುದಾದ್ದು ಕೂಡ ಕವಿತೆಯೇ. ಹಾಗಾಗಿ ಬಹುಷಃ ಈ ಕವನಗಳಲ್ಲಿಯೇ ನಮಗೆ ಜಯಂತ್ ನೇರವಾಗಿ ಅರ್ಥವಾಗುವುದು, ದಕ್ಕುವುದು ಸಾಧ್ಯ ಎನಿಸುತ್ತದೆ.

ಆದರೆ ಈ ಮಾತು ಕೂಡ ಸೀಮಿತ ಅರ್ಥದ್ದು, ಸೀಮಿತ ವ್ಯಾಪ್ತಿಯದ್ದು. ಅಡಿಗರ ಬಗ್ಗೆ, ಬೇಂದ್ರೆ ಬಗ್ಗೆ, ಎಚ್ ಎಸ್ ಶಿವಪ್ರಕಾಶ್, ಕೆ ವಿ ತಿರುಮಲೇಶ್, ರಾಮಾನುಜನ್, ಗಂಗಾಧರ ಚಿತ್ತಾಲ ಮುಂತಾದವರ ಕವನಗಳಿಗೆ ಬಹುಷಃ ಒಂದಿಷ್ಟು ವಿಶ್ಲೇಷಣೆ, ಬಿಡಿಸಿ ಹೇಳುವವರು ಬೇಕು ಎನಿಸುತ್ತದೆ. ಆದರೆ ಜಯಂತರ ಕವನಗಳು, ನವ್ಯಘಟ್ಟದ ಒಂದಿಷ್ಟು ಕವನಗಳನ್ನು ಬಿಟ್ಟರೆ, ನೇರವಾಗಿ ಅರ್ಥವಾಗುತ್ತವೆ, ಅನುಭವವಾಗುತ್ತವೆ. ಅವು ಸರಳವಾಗಿವೆ ಮತ್ತು ತಿಣುಕದೇ ಮನಸ್ಸಿಗಿಳಿಯುತ್ತವೆ. ಹೀಗೆ ಹೇಳಿದ ಮೇಲೆ ಜಯಂತರ ಕವಿತೆಗಳ ಬಗ್ಗೆ ಹೇಗೆ, ಯಾವ ನೆಲೆಯಿಂದ ಮಾತನಾಡಬೇಕು, ಮಾತನಾಡಲು ಸಾಧ್ಯ ಎನ್ನುವ ಬಗ್ಗೆಯೇ ಯೋಚಿಸಬೇಕಾಗುತ್ತದೆ. 


ತುಂಬ ಅಕೆಡಮಿಕ್ ಆಗಿ ಹಲವು ನೆಲೆಗಳನ್ನಿಟ್ಟುಕೊಂಡು ಜಯಂತರ ಕವಿತೆಗಳನ್ನ ವಿಭಾಗಿಸಿ ಮಾತನಾಡೋದಾದ್ರೆ ಬಹುಷಃ ಹೀಗೆಲ್ಲ ಮಾತನಾಡಬಹುದು ಅನಿಸುತ್ತದೆ:

ಜಯಂತ್ ಕಾಯ್ಕಿಣಿ ಕವಿತೆಗಳಲ್ಲಿ ರಾಜಕೀಯ ಪ್ರಜ್ಞೆ
ಸ್ತ್ರೀಸಂವೇದನೆ
ಸಮಕಾಲೀನ ಸ್ಪಂದನ
ನವ್ಯ-ನವೋದಯ-ದಲಿತ-ಬಂಡಾಯ ಸಂವೇದನೆಗಳು
ಸಾಂಕೇತಿಕತೆ ಮತ್ತು ಸಂದೇಶ
ಜಯಂತರ ಪ್ರತಿಮಾ ವಿಧಾನ
ಜಯಂತರ ಜೀವನದೃಷ್ಟಿ
ಜಯಂತರ ಕಾವ್ಯದ ಮೇಲೆ ಎಕೆರಾ, ಚಿತ್ತಾಲ ಮತ್ತು ತಿರುಮಲೇಶರ ಪ್ರಭಾವಗಳು
ಜಯಂತರ ಕವಿತೆಗಳಲ್ಲಿ ಪುನರಾವರ್ತನೆಯಾಗುವ ಚಿತ್ರಗಳು
ಇವತ್ತಿನ ಸಂದರ್ಭದಲ್ಲಿ ಜಯಂತರ ಕವಿತೆಗಳ ರಿಲವನ್ಸ್ ಏನು ಮತ್ತು ಏಕೆ
ಜಯಂತರ ಕಾವ್ಯ ಮತ್ತು ಪುರಾಣ/ಮಿಥ್ ಜೊತೆಗಿನ ಸಂಬಂಧ
ಜಯಂತರ ಕಾವ್ಯ ನಡೆದು ಬಂದ ದಾರಿ - ಐದು ಸಂಕಲನಗಳು
ಜಯಂತರ ಕವಿತೆಗಳು ಮತ್ತು ಕತೆ/ಪ್ರಬಂಧಗಳ ನಡುವಿನ ತೌಲನಿಕ ಅಧ್ಯಯನ
ಜಯಂತರ ಕವಿತೆಗಳಲ್ಲಿ ನಗರ ಪ್ರಜ್ಞೆ

.....ಹೀಗೇ ಮತ್ತಷ್ಟು ಟಾಪಿಕ್ಸ್ ಇಟ್ಟುಕೊಂಡು ನೋಡುತ್ತಾ ಹೋಗಬಹುದೇನೊ. ಆದರೆ ಇದು ಎಷ್ಟೇ ವಿಶಾಲ ವ್ಯಾಪ್ತಿಯಲ್ಲಿ ನಡೆದರೂ ಸರಳವಾಗಿ ನೋಡುವ ಒಂದು ದೃಷ್ಟಿಯನ್ನು ಕುರುಡಾಗಿಸುತ್ತದೆ ಮಾತ್ರವಲ್ಲ, ಒಂದು ಸಲಕ್ಕೆ ಒಂದೇ ವಿಚಾರದತ್ತ ಗಮನ ಕೇಂದ್ರೀಕರಿಸೋದ್ರಿಂದ ನಾವೆ ನಮ್ಮ ಕಣ್ಣಿಗೆ ಪಟ್ಟಿಕಟ್ಟಿಕೊಂಡ ಒಂದು ಭಾವನೆಯನ್ನೂ ತರುತ್ತದೆ. ನನಗೆ ಈ ಮಾದರಿಯಲ್ಲಿ ಅಷ್ಟು ಒಲವು ಇಲ್ಲ.

ಇನ್ನು ಕೆಲವು ಕವಿತೆಗಳನ್ನ ಆರಿಸಿಕೊಂಡು, ಅವುಗಳನ್ನ ಓದಿ, ಸ್ವಲ್ಪ ಅವುಗಳ ಬಗ್ಗೆಯೇ ಮಾತನಾಡಿ ಮುಗಿಸಬಹುದು. ಸೇಫ್ ಆದ, ಸುಲಭವೂ ಆದ ಒಂದು ಮಾರ್ಗ ಇದು.

ಒಟ್ಟಾರೆಯಾಗಿ ಕಾವ್ಯ-ಕವನ ಅಥವಾ ಕಾವ್ಯೋದ್ಯೋಗ ಅಂತ ಏನು ಹೇಳುತ್ತಾರೆ, ಅದರ ಬಗ್ಗೆ ಮತ್ತು ಜಯಂತರ ಬಗ್ಗೆ, ಸ್ವತಃ ಜಯಂತ್ ತಮ್ಮ ಮಾತುಕತೆಗಳಲ್ಲಿ, ಸಂದರ್ಶನಗಳಲ್ಲಿ ಕವಿತೆಗಳ ಬಗ್ಗೆ ಬರವಣಿಗೆಯ ಬಗ್ಗೆ ಹೇಳಿರುವ ಮಾತುಗಳನ್ನು ಇಟ್ಟುಕೊಂಡು, ಜಯಂತರ ಕವಿತೆಗಳ ಬಗ್ಗೆ ಜಿ ಎಸ್ ಅಮೂರ್, ಸಿ ಎನ್ ರಾಮಚಂದ್ರನ್ ಮುಂತಾದ ವಿಮರ್ಶಕರು ಹೇಳಿರುವ ಮಾತುಗಳನ್ನು ಇಟ್ಟುಕೊಂಡು ಅಷ್ಟಿಷ್ಟು ಮಾತನಾಡುವುದು ಕೂಡ ಸಾಧ್ಯ. ಒಂದು ಕಡೆ ಜಯಂತರು ಅನುಭವ ಅನುಭಾವವಾಗುವುದು ಕಾವ್ಯ ಎನ್ನುತ್ತಾರೆ. ಇನ್ನೊಂದು ಕಡೆ ಸಾಹಿತ್ಯ ಎಂದರೆ ವಿಚಾರವನ್ನು ಅಥವಾ ಅರ್ಥವನ್ನು ಅನುಭವವಾಗಿಸುವ ಒಂದು ನಮ್ರ ಯತ್ನ ಎಂದು ಸುಮಾರಾಗಿ ಹೇಳಬಹುದೇನೋ ಎನ್ನುತ್ತಾರೆ. ಹೀಗೆ...

ನಾನು ಇಂಥ ಯಾವುದೇ ಅಜೆಂಡಾ ಇಟ್ಟುಕೊಳ್ಳದೆ, ಸುಮ್ಮನೆ ಖುಶಿಗಾಗಿ ಈ ಕವಿತೆಗಳನ್ನ ಓದುತ್ತ ಹೋದೆ. ಅಲ್ಲಲ್ಲಿ ನನಗೆ ಕುತೂಹಲಕರ ಅನಿಸಿದ ಟಿಪ್ಪಣಿಗಳನ್ನ ಮಾಡಿಕೊಂಡೆ, ಗುರುತು ಹಾಕಿಕೊಂಡೆ. ಅವುಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುತ್ತ ಮೇಲೆ ಹೇಳಿದ ಎಲ್ಲವೂ ಅದರಲ್ಲಿ ಸೇರಿಕೊಂಡು ಬಂದರೂ ಬರಬಹುದು, ಬರದಿದ್ದರೆ ನಷ್ಟವಿಲ್ಲ. ಪ್ರಮುಖವಾಗಿ ಜಯಂತರ ಕವಿತೆಗಳಲ್ಲಿ ಈ ನಾನು ಅಥವಾ ಕನ್ನಡಿ-ಕಿಟಕಿ ಘಟ್ಟ, ನವ್ಯಘಟ್ಟದ ಪ್ರಭಾವ ಮತ್ತು ಒತ್ತಡಗಳು ಹುಟ್ಟಿಸಿದ ಕವಿತೆಗಳು, ಅಸಹನೆ, ಪ್ರತಿರೋಧ ದಾಖಲಾಗಿರುವಂಥ ಕವಿತೆಗಳು, ರಾಜಕೀಯ ಮತ್ತು ವಿಡಂಬನೆ ಪ್ರಧಾನವಾಗಿ ಕಾಣಿಸಿಕೊಂಡಂಥ ಕವಿತೆಗಳು, ಕಥನ ಮತ್ತು ನುಡಿಚಿತ್ರದ ಆಕೃತಿಯತ್ತ ಹೊರಳಿದ ಘಟ್ಟದಲ್ಲಿ ಜಯಂತರಿಂದ ಬಂದ ಕವಿತೆಗಳು, ಜಯಂತರಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಸೂಕ್ಷ್ಮ ಸಂವೇದನೆಯನ್ನು ಉದ್ದೀಪಿಸುವ ಕೆಲವು ನುಡಿಗಟ್ಟುಗಳು ಮತ್ತು ಅವು ಹುಟ್ಟಿಸುವ ಜಿಜ್ಞಾಸೆ - ಇಷ್ಟು ಇವತ್ತಿನ ಮಾತುಕತೆಯ ಒಟ್ಟಾರೆ ಹಂದರ ಎನ್ನುವುದನ್ನು ಗುರುತಿಸಿಕೊಂಡಿದ್ದೇನೆ.

*****

ರಂಗದಿಂದೊಂದಿಷ್ಟು ದೂರ ಜಯಂತರ ಮೊದಲ ಕವನ ಸಂಕಲನ. ಜಯಂತರ ಆರಂಭಿಕ ಕವಿತೆಗಳಲ್ಲಿಯೂ ಸಹಜವಾಗಿಯೇ ನಾನು, ಆತ್ಮನಿವೇದನೆ, ಕಿಟಕಿ-ಕನ್ನಡಿ ದ್ವಂದ್ವಗಳು ಕಂಡುಬರುತ್ತವೆ. ಕನ್ನಡಿ ಎನ್ನುವ ಹೆಸರಿನ ಒಂದು ಕವಿತೆ ಓದುತ್ತೇನೆ:

ಕನ್ನಡಿ
ನಮ್ಮ ಮನೆಯ ಕನ್ನಡಿ
ಯಲಿ ಮಾತ್ರ ನನಗೆ ನಾ ಚಂದ
ಉಳಿದಲ್ಲಿ ಪ್ರೇತ ನರಪೇತಲ
ಊದಿಕೊಂಡ ಗಲ್ಲ
ಚಿಂತೆ ತುರಿಸುವ ಮೂಗು
ಆಸೆ ಇಂಗಿದ ಕಣ್ಣು ತುಟಿ ಕಿವಿ ಥೇಟು ಮಳ್ಳ
ನ ರೂಪ ಇವೆಲ್ಲ
ಅತೀ ಠಾಕು ಠೀಕಾಗಿ
ಚದುರಿಕೊಂಡು ಕೂಡ್ರುತ್ತವೆ
ನಮ್ಮೀ ಕನ್ನಡಿಯಲ್ಲಿ
ನನಗೆ ನನ್ನನ್ನೇ ಮರೆಸುತ್ತವೆ

ಮೊನ್ನೆ ಕಟ್ಟು ಕಳಚಿತ್ತದರದು
ರಿಪೇರಿಸಿ ತಿರುಗಿ ತಂದಾಗ
ಏನೋ ಬದಲಾವಣೆ ಅಷ್ಟಷ್ಟು ಇಷ್ಟಿಷ್ಟು
ತೂಕ ತಪ್ಪಿದ ಸ್ವಭಾವ
ಇಲ್ಲಾಗದವುಗಳೆಲ್ಲ ಅಲ್ಲಾದಂತೆ
ಕೆಟ್ಟವ ಒಮ್ಮೆಗೇ ಸಾಧುವಾದಂತೆ
ಕೊನೆಗೆ ನಿರಾತಂಕ ನನ್ನ
ಅಕ್ಷರಸ್ಥ ಬದುಕು
ಶಬ್ದಗಳಲ್ಲಿ ಒಣಗಿದಂತೆ
ಕನ್ನಡಿಯ ಅದ್ಭುತ ಡೊಂಬರಾಟ ಗೊತ್ತಿದ್ದೂ ನಿಲುಕದ ಮಿಥ್ಯ ಪರಿಪಾಠ

ನನಗೂ ಹೆದರಿಕೆಯಿಲ್ಲ ಸೋಗಿನ ವ್ಯಕ್ತಿತ್ವಕ್ಕೆ
ಒಂದೇ ಕಳವಳವೆಂದರೆ ಆಗಾಗ
ನಮ್ಮ ಕೆಲಸದ ನಾಗಿ ಸಂಜೆ ಆರರ ಅಪ್ಪ
ಪ್ರಿನ್ಸಿಪಾಲರು ಮತ್ತು ದೇವಸ್ಥಾನದ ಭಟ್ಟ
ಹೀಗೆ ಇವರೆಲ್ಲ ಒಳಗೆ ಸೇರಿಕೊಂಡು ಗುಂಪಾಗಿ
ನನ್ನನ್ನೇ ಅಳಿಸತೊಡಗುತ್ತಾರೆ

ಆಗ ಆ ನಾನು
ತಡೆಯಲಾರದೆ ಗಬಕ್ಕನೆ ಹೊರಬಂದು
ಈ ನನ್ನನ್ನು ತಬ್ಬಿಕೊಳ್ಳುತ್ತೇನೆ
ತಪ್ಪಾಯಿತು ತಪ್ಪಾಯಿತು ಅನ್ನುತ್ತೇನೆ
ಅತ್ತು ಅತ್ತು ಅಸತ್ಯವಾಗುತ್ತೇನೆ

ಆದರೂ ಈ ಕನ್ನಡಿ ಅಲ್ಲೇ
ಮತ್ತು ನಾನಿಲ್ಲೇ ಇರಬೇಕು ಅದೇ ನನಗೆ ಇಷ್ಟ
ಏಕೆಂದರೆ ಅದರ ಕಣ್ಣು ತಪ್ಪಿಸಿಕೊಂಡು
ನಾನು ಬದುಕುವುದು
ತುಂಬಾ ತುಂಬಾ ಕಷ್ಟ

ಇದರ ಜೊತೆಗೇ  ಅಧಿಕಾರ (9) ಚಕ್ರವ್ಯೂಹ (29) ಕವಿತೆಗಳನ್ನು ನಾವಿಲ್ಲಿ ಗಮನಿಸಬಹುದು. ನೀನಾಗಲು (24) ಕವಿತೆಯನ್ನು ಗಮನಿಸಿದರೆ ಕವಿ-ಕವಿತ್ವ ಮತ್ತು ವ್ಯಕ್ತಿತ್ವದ ಸಂಬಂಧದ ಬಗ್ಗೆ ನಾವು ಈ ಹಿಂದೆ ಚರ್ಚಿಸಿದ್ದರ ಒಂದು ಸೂಕ್ಷ್ಮ ಹೊಳೆಯುತ್ತದೆ. ಮುಂದೆಯೂ ಜಯಂತರು ಕನ್ನಡಿ-ಕಿಟಕಿ ಪ್ರತಿಮೆಗಳನ್ನಿರಿಸಿಕೊಂಡು ಕವಿತೆ ಬರೆದಿದ್ದಿದೆ.

ಕೋಟಿತೀರ್ಥ ಸಂಕಲನದ ಗುರುತು (62), ನನ್ನ ನೆನಪು(68) ಕಂಡ ಕಣ್ಣಿನಲ್ಲಿ (90), ನನಗೇನೆನ್ನಲಿ (95), ಸದ್ಯ(96), ಆರೋಪ ಅಲ್ಲ ಅಹವಾಲು(97) ಮುಂತಾದವು ಇದೇ ನೆಲೆಯಲ್ಲಿ ಬರುತ್ತವೆ. ನನ್ನ ನೆನಪು ಕವಿತೆಯಲ್ಲಿ ಕೊನೆಯಲ್ಲಿ ಬರುವ ಸಾಲುಗಳನ್ನು ಗಮನಿಸಿ:

ಅರ್ಥ: ಇದೆಲ್ಲದರ ಮಧ್ಯ ನನಗೆ
ನನ್ನ ನೆನಪೇ ಆಗುವುದಿಲ್ಲ!
ಸದ್ಯ ಕನ್ನಡಿಯಲಿ ಕಂಡಿದ್ದು
ನೆನಪಲ್ಲವಲ್ಲ.

ಕಂಡ ಕಣ್ಣಿನಲ್ಲಿ ಕೂಡ ಈ ಬಗೆಯ ಕವಿತೆಯೇ. ಇಲ್ಲಿ ಕನ್ನಡಿಯ ಬದಲಾಗಿ ಎದುರಿನ ವ್ಯಕ್ತಿಯ ಕಣ್ಣಿನಲ್ಲಿ ಕಂಡ ಬಿಂಬ ಆ ಕೆಲಸವನ್ನು ಮಾಡುತ್ತಿದೆ.

ರಾಜ ರಸ್ತೆಗೆ ಬಂದೆ
ನಾನಿರಲಿಲ್ಲ!
ಇದ್ದಿರಬಹುದು ಅಲ್ಲೇ ಆ ಮೃದು ಹುಡುಗಿಯ ಕಣ್ಣಲ್ಲೇ
- ರಾತ್ರೆ ರೆಪ್ಪೆಗಳಡಿಗೆ ಹಗಲು
ಕನಸುಗಳ ತುರಿಸುತ್ತ ಶರ್ಟುಗಳ ಜತೆ
ವೋಟುಗಳ ಜತೆ ಕೆಮಿಸ್ಟ್ರಿಯ ಜತೆ ಮತ್ತು ಹಸಿ ಹಸಿ
ಭತ್ತದ ಬೀಜಗಳ ಜತೆ ಕಣ್ಣು ಮುಚ್ಚಾಲೆಯಾಡುತ್ತ
ಮತ್ತು ಮೆತ್ತಗೆ ಕೇವಲ ಕಣ್ಣೇ
ಆಗುತ್ತ........

ನನಗೇನೆನ್ನಲಿ? ಕವಿತೆ ಕೂಡ ಬಹಳ ಮುಖ್ಯವಾದದ್ದು. ಇದನ್ನು ಜಯಂತರ ಸ್ವರ ಕವಿತೆಯ ಜೊತೆಗೂ ಇಟ್ಟು ಗಮನಿಸುವ ಅಗತ್ಯವಿದೆ. ಇಲ್ಲಿ ಜಯಂತರು

ನಾನೊಬ್ಬನೇ ಇಲ್ಲಿ ಇಷ್ಟು ದೂರ ಬಂದು ಕೂತು
ಶಬ್ದವ್ಯಸನಿಯಾದೆನಲ್ಲ

ಎಂದು ಮುಗಿಸುತ್ತಾರೆ. ನಮಗೆ ಗೊತ್ತು, ಜಯಂತ್ ಒಬ್ಬ ಮಾಂತ್ರಿಕ ಶಬ್ದಸಂಪತ್ತಿನ ಕಲೆಗಾರ ಎನ್ನುವುದು. ಆದರೆ ಅದೇ ಜಯಂತರಿಗೆ ಈ ಶಬ್ದ, ಅಕ್ಷರಲೋಕದ ಮಾಯಕತೆ ಒಂದು ಮಿತಿಯೂ ಆಗಬಹುದೆನ್ನುವ ಪ್ರಜ್ಞೆ, ಒಳ ಅರಿವು ಇತ್ತು ಎನ್ನುವುದು ಗಮನಾರ್ಹವಾದ ಸಂಗತಿ. ಜಯಂತರ ಸ್ವರ ಕವಿತೆಯನ್ನು ಗಮನಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ.

ಸ್ವರ
ಬಿಟ್ಟ ನಿಟ್ಟುಸಿರ
ಸ್ವರ ಸಮ್ಮಿಳಿಸಿ ಸಂ
ಯೋಜಿಸಿ ಮಿಡಿ ಮಿಡಿ
ದು - ಹೂ ಹಾ
ರ ತರಂಗ ಮೀಟುವ
ಕೊಳಲೇ
ನಿನ್ನ ದನಿಯೊಡಲ ಬೇರು
ಬಿಟ್ಟಿರುವುದು ಇಲ್ಲೇ
ಈ ನನ್ನ ಗಟ್ಟಿಗಂಟಲ
ಒಳಪೆಟ್ಟಿಗೆಯಲ್ಲೇ
ಆದರೆ
ನನ್ನೊಳ ಅಬದ್ಧ ದನಿ
ಅಪಶ್ರುತಿಯ ಹದಗೆಟ್ಟ
ಬೇಸರ ಬೇಸುರ
ರಕ್ತತಾರಕಗಳ
ಚೆನ್ನಾಗಿ ಬಲ್ಲ ನನಗೆ ಕೊಳಲೇ
ನನ್ನಿಂದೇ ನೀ ಚಿಮ್ಮಿಸಿರುವ
ಈ ಶ್ರುತಿಬದ್ಧ ಸುಸಂಗತ ಸ್ವರ
ರಾಗ ಸ್ಪಷ್ಟಗತಿ ಶಿಸ್ತನ್ನು
ನಂಬಲೇ ಆಗುತ್ತಿಲ್ಲ!

ಅಂತೆಯೇ ಅನಿಸುತ್ತವೆ
ಅವು ನಿನ್ನವೇ
ಅಯ್ಯೊ ನನ್ನವಲ್ಲ!

ಇಲ್ಲಿ ಗಮನಿಸಬೇಕಾದ್ದು, ಕವಿಗೆ ತನ್ನ ಸ್ವರ ಮತ್ತು ಕೊಳಲಿನ ಸ್ವರ, ಅದು ತನ್ನದೇ ಉಸಿರಿನಿಂದ ಹುಟ್ಟಿದ ಮಾಧುರ್ಯವಾಗಿದ್ದಾಗಲೂ ಎರಡೂ ಬೇರೆ ಬೇರೆ ಎನಿಸುತ್ತದೆ ಮಾತ್ರವಲ್ಲ, ಅದು ತನ್ನದಲ್ಲವೇ ಅಲ್ಲ ಎಂದೂ ಅನಿಸುತ್ತದೆ. ಕವಿ-ಕವಿತ್ವ ಮತ್ತು ಒಬ್ಬ ಸಾಮಾನ್ಯ ಮನುಷ್ಯನೂ ಆಗಿರುವ ಕವಿ - ನಡುವೆ ಒಂದು ಅಂತರವಿದೆ ಎಂಬ ಅರಿವಿನಿಂದ ಹುಟ್ಟಿದ ಕವಿತೆಯಿದು. ಹಾಗಾಗಿ ಜಯಂತರಿಗೆ ಭಾಷೆಯ ಮಧುರ ಶಬ್ದಗಳು, ರೂಪಕಗಳು ಮತ್ತು ಅವು ಹುಟ್ಟಿಸುವ ಸಂವೇದನೆಯ ಪ್ರಾಮಾಣಿಕತೆಯ ಬಗ್ಗೆ ಸ್ಪಷ್ಟವಾದ ಒಂದು ಪ್ರಜ್ಞೆ, ಅರಿವು ಇದ್ದೇ ಇತ್ತು. ಲಿಪಿ (ನೀಲಿಮಳೆ -90) ಎಂಬ ಒಂದು ಕವನದಲ್ಲಿ ಲಿಪಿ ಎಂಬುದು ಒಂದು ಇರುವೆಯಾಗಿ, ಅದರ ಕಾಲಿಗಂಟಿದ ರಕ್ತ ಕಾಗದದ ತುಂಬ ಹರಿವ ಪರಿಕಲ್ಪನೆಯ ಚಿತ್ರವೂ ನಮಗೆ ಸಿಗುತ್ತದೆ. ಈ ವಿಚಾರ ಒಂದು ವೈರುಧ್ಯವಾಗಿ ಬರಹಗಾರರಲ್ಲಿ ಹೇಗೆ ಕಾಣಿಸಿಕೊಳ್ಳುವುದು ಸಾಧ್ಯವಿದೆ ಎಂಬ ಬಗ್ಗೆ ಮುಂದೆ ಮಾತನಾಡುತ್ತೇನೆ. ಈಗ ಇಲ್ಲಿಯೇ ನಾವು ಗಮನಿಸಬೇಕಾಗಿರುವ ಇನ್ನೊಂದು ಕವಿತೆ ಅರ್ಥ. ಇದು ರಂಗದಿಂದೊಂದಿಷ್ಟು ದೂರ ಸಂಕಲನದಲ್ಲಿದೆ.

ಅರ್ಥ
ನಿನ್ನ
ಮೈತುಂಬ
ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ
ಗಳ ಮುಳ್ಳು ಚುಚ್ಚಿ
ಅರ್ಥಕ್ಕಾಗಿ ಕಾದು ಕೂತೆ
ಏನೂ ಹೊರಡಲಿಲ್ಲ
ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು
ನಿನ್ನ
ಬೋಳು ಮೈ ತೊಳೆದು
ಚೊಕ್ಕ ಒರೆಸಿ
ಹಗುರಾಗಿ ಮೀಟಿದೆ
ಹೌದೆ ಕವಿತಾ!!
ಒಮ್ಮೆಗೇ ಹೊಳೆದು ಹೋಯಿತು ಅರ್ಥ

ನಿನ್ನದೆ
ಅಥವಾ
ನನ್ನದೆ?

ಇದೇ ರೀತಿ ಜಯಂತರ ಕೋಟಿತೀರ್ಥ ಸಂಕಲನದ ಇನ್ನೆರಡು ಕವಿತೆಗಳು ಕೂಡಾ ಈ ನಾನು ಎಂಬ ಸಂದಿಗ್ಧವನ್ನು ಕುರಿತು ಹಾಡುತ್ತಿವೆ. ಸದ್ಯ ಕವಿತೆಯಲ್ಲಿ ಅವರು ಬಸ್ಸಿನಲ್ಲಿ ಹೋಗುತ್ತ ಒಂದು ಹೆಣವನ್ನು ಕಾಣುತ್ತಾರೆ. ಅಲ್ಲಿ ಜನ ಮುಕುರಿಕೊಂಡಿರುತ್ತಾರೆ. ಬಸ್ಸು ಮುಂದೆ ಮುಂದೆ ಸಾಗಿದಂತೆಲ್ಲ ಕವಿಗೆ ಆ ಶವ ತನ್ನದೇ ಇರಬಹುದೇ ಎಂಬ ಅನುಮಾನ ಹುಟ್ಟಿ, ಕ್ರಮೇಣ ಅದು ಬೆಳೆದು ಕೊನೆಗೆ ಧಡಕ್ಕನೇ ಬಸ್ಸಿನಿಂದಿಳಿದು ಓಡುತ್ತಲೇ ಹೆಣ ಇದ್ದಲ್ಲಿಗೆ ಬಂದು ಬಿಡುತ್ತಾನೆ. ಅಲ್ಲಿ ಆ ಹೊತ್ತಿಗೆ ಹೆಣಕ್ಕೆ ಬೆಳ್ಳನೆಯ ಹೊದಿಕೆ ಮುಚ್ಚಿರುತ್ತಾರೆ ಮತ್ತು ಹಾಗಾಗಿ ಕವಿ ಒಮ್ಮೆಗೇ ನಿರಾಳತೆಯನ್ನು ಅನುಭವಿಸುತ್ತ ಶೇಂಗಾ ತಿಂದು ಬೇರೆ ಬಸ್ಸು ಹಿಡಿಯುತ್ತಾನೆ. ಆರೋಪ ಅಲ್ಲ ಅಹವಾಲು ಕವಿತೆಯಲ್ಲಿಯೂ ಕೂಡ ಕವಿ ತನ್ನ ಕವಿತ್ವ, ಕವಿತೆಯ ನಿರರ್ಥಕತೆಯ ಬಗ್ಗೆ ಮಾತನಾಡುತ್ತ ಈಗ ನಾನು ನನ್ನ ದನಿ ನನಗೇ ಕೇಳಿಸುತ್ತಿಲ್ಲ ಎಂದು ಅರಚಿದರೆ ಅದು ನಿಮಗೆ ಕೇಳಿಸುತ್ತದೆಯೇ ಎಂದು ಪ್ರಶ್ನಿಸುತ್ತಾನೆ ಮಾತ್ರವಲ್ಲ ಕೇಳಿಸಿದರೂ ಅದೇನೂ ಆರೋಪವಾಗಲಾರದು, ಕೇವಲ ಅಹವಾಲು ಅಷ್ಟೇ ಎನ್ನುತ್ತಾನೆ.

ನಿಮಗೆಲ್ಲ ತಿಳಿದೇ ಇರುವಂತೆ ಈ ನಾನು ಎನ್ನುವುದು ಪರಾಕಾಷ್ಠೆಗೆ ತಲುಪಿದ್ದು ಕೂಡ ನವ್ಯಘಟ್ಟದಲ್ಲಿಯೇ. ಹಾಗಾಗಿ ರಂಗದಿಂದೊಂದಿಷ್ಟು ದೂರ ಮತ್ತು ಕೋಟಿತೀರ್ಥ ಸಂಕಲನದ ಕವಿತೆಗಳು ನಮಗೆ ನಾನು ಪರಿಕಲ್ಪನೆಯ ಬಗೆಗಿನ ಕವಿತೆಗಳನ್ನು ಕೊಡುವಂತೆಯೇ ನವ್ಯ ಪರಂಪರೆಗೆ ಸೇರುವ ಕವಿತೆಗಳನ್ನೂ ಕೊಡುತ್ತವೆ. ಕೆಲವೊಮ್ಮೆ ಎರಡೂ ಒಂದೇ ಕವಿತೆಯಲ್ಲಿ ನಮಗೆ ಅವು ಕಾಣುತ್ತವೆ. ಹಾಗಾಗಿ ಈ ಸಂಕಲನ (ರಂಗದಿಂದೊಂದಿಷ್ಟು ದೂರ) ದಲ್ಲಿ ಸೂಕ್ಷ್ಮವಾಗಿ ಮತ್ತೆ ಮುಂದಿನ ಸಂಕಲನದಲ್ಲಿ ಸ್ವಲ್ಪ ಢಾಳಾಗಿಯೇ ಜಯಂತರು ಸಮಕಾಲೀನ ನವ್ಯ ಕಾವ್ಯದ ಪ್ರಭಾವಕ್ಕೆ ಒಳಗಾಗಿದ್ದು, ಒಳಗಾಗಲು ಪ್ರಯತ್ನಿಸುವುದು ಕಂಡು ಬರುತ್ತದೆ. ಬಿದಿರು ಎನ್ನುವ ಕವನದ ಈ ಒಂದೆರಡು ಪ್ಯಾರಾ ಗಮನಿಸಿದರೇ ನಿಮಗಿದು ಕಣ್ಣಿಗೆ ಕಟ್ಟುತ್ತದೆ.

ಸಾವಿರದ ಅಲಗುಗಳ ಜೀವನದ
ಕೆಚ್ಚು ಪರಂಪರೆಯ ಹುಚ್ಚು
ತಿದಿಯಾರಿ ಹೊಗೆಯೆದ್ದ
ಯಜ್ಞಕುಂಡ - ಪ್ರೇಮಿ ಅರೆಬರೆ
ದಿಟ್ಟ ಪ್ರೇಮಪತ್ರ - ಅರ್ಧಕ್ಕೇ
ತಡೆಹಿಡಿದ ಸ್ವಪ್ನಸ್ಖಲನ.
....................
.......................

ಇಡಿಯ ಜೀವನದಲ್ಲೆ ಒಮ್ಮೆ ಹೂವಿನ ಕಾಲ
ಮೂಲಭೂತಗಳಲ್ಲಿ ಹುತ್ತಗಟ್ಟುತ್ತದೆ
ಒರಲೆ ಇರುವೆ ಸುತ್ತುತ್ತವೆ ಆದರೂ
ನೇರ ನಿಗುರುವ ವೃದ್ಧಿ
ನೇರ ನೋಟದ ಸಿದ್ಧಿ
ಬಾನನ್ನೆ ಸೀಳಿಟ್ಟು ಊರ್ಧ್ವಮುಖ ಚಕ್ಕಂದ
ಫಳಫಳಿತ ಆಸೆಗಳ ಗಟ್ಟಿ ಉಕ್ಕಂದ

ಇಲ್ಲಿಯೇ ದಿನ ಮತ್ತೂ ಮತ್ತೊಂದು (ಕೋಟಿತೀರ್ಥ) ಕವನವನ್ನು ಕೂಡ ಗಮನಿಸಬಹುದು. ಇಲ್ಲಿ ರಾತ್ರಿಹೊತ್ತು ಕಿಟಕಿಯಿಂದ ಹೊರ ನೋಡಿದರೆ ತುಳಿಯುವವರಿಲ್ಲದೆ ಅಸಂಖ್ಯ ದನಿಯಲ್ಲಿ ಚೀರುವ ರಸ್ತೆಗಳಿವೆ. ಮುಳ್ಳಿನ ನಿಂಬೆಹಣ್ಣೊಂದು ಪರ್ವತದಿಂದ ಉರುಳುರುಳಿ ಬಂದು ಕಣ್ಣಲ್ಲಿ ಬೀಳುತ್ತದೆ. ಜಾತ್ರೆಗೆ ಬಂದ ನಾಟಕ, ಜಾದೂ ಟೆಂಟುಗಳು ಹೋಗಿ ಬೋಳಾದ ಬಯಲು ಕಂಡು ಅಳು ಬರುವಂತಾಗುತ್ತದೆ. ಇಷ್ಟಾದ ಮೇಲೆ ಪುಟ್ಟ ಹುಡುಗನೊಬ್ಬ

ಬೇಲೆಯಲ್ಲಿ ದೊಡ್ಡ ಹುಡುಗರು ನನ್ನ
ಆಟಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ
ನಮ್ಮ ಮನೆಯಲ್ಲಿ ಗಣಪತಿ ಇಡುತ್ತಿರಲಿಲ್ಲ
ಶಿವರಾತ್ರಿಯಲ್ಲಿ ಬಂದುಳಿಯಲು ನಮಗೆ
ಸಂಬಂಧಿಕರೇ ಇರಲಿಲ್ಲ
ಇವನು ಮನೆಯಲ್ಲಿ ಮೀನು ತಿಂತಾನೆ
ಅಂತ ದೋಸ್ತರು
ದೂರ ಸರಿದು ನಕ್ಕರು ನಕ್ಕಿದ್ದಳು ಸರಸ್ವತಿಯೂ

ಎಂದೆಲ್ಲ ಮುಗ್ಧವಾಗಿ ದೂರಿಕೊಳ್ಳುತ್ತಾನೆ. ಆದರೆ ಮರುಕ್ಷಣವೇ ಅಮ್ಮ ಅಪ್ಪಂದಿರ ತೋಳು ತಪ್ಪಿ ತೊಟ್ಟಿಲು ಧಕ್ಕನೆ ಕುಸಿದು ಬೀಳುತ್ತದೆ. ಬಿಸಿಲಿಗೆ ಒಣಗಿ ನಾರುತ್ತಿದ್ದ ಗಟಾರ ಮಳೆಯ ನೀರಿಗೆ ಕೆಂಪಗೆ ಹರಿಯುತ್ತದೆ. ಅದರಲ್ಲಿ ಅವನ ಸ್ಲೇಟು, ಬಳಪ, ನವಿಲುಗರಿಗಳು ಕೊಚ್ಚಿ ಹೋಗುತ್ತವೆ.

ಮುಂದಿನ ಪಾರಾದಲ್ಲಿ ಇಸ್ತ್ರಿ, ವ್ಯಾಕರಣ, ಸೆಂಟಿಮೀಟರು, ಪದ್ಮಭೂಷಣಗಳ ನಡುವೆ ಛಿದ್ರ-ವಿಚ್ಛಿದ್ರ ಕಲ್ಪನೆಗಳು, ಚಿತ್ರಗಳು ಒಂದರ ಹಿಂದೊಂದರಂತೆ ಬರುತ್ತವೆ. ಅಲ್ಲಿ ಹೆಣ ಕಾಯುವ ಮೈಲಿಗಲ್ಲುಗಳು, ಕತ್ತಲಲ್ಲಿ ಮಿಕಿಮಿಕಿ ನಿಂತ ಪೋಸ್ಟರುಗಳು, ಜೀವನೋತ್ಸಾಹ ತಾರಕಕ್ಕೇರಿದ ಕಾಮಿನಿಯರು, ಫ್ರಿಜ್ಜಿನಲ್ಲಿಟ್ಟ ಸತ್ಯನಾರಾಯಣ ಪ್ರಸಾದ, ಗೋಕುಲಾಷ್ಟಮಿಯ ಅರಿಷಿಣ ಕುಂಕುಮ, ಸಂಭೋಗ ಎಲ್ಲವೂ ಬರುತ್ತವೆ. ಇವತ್ತು ಹೇಳದೇ ಹೋದರೆ ಇದು ಜಯಂತರ ಕವಿತೆಯಾ ಎಂದು ಕೇಳುವಂತಿದೆ ಇದು!

ಯೌವನದಲ್ಲಿ ಕಮ್ಯುನಿಸ್ಟ್ ಆಗದಿದ್ದವ ಮತ್ತು ನಲವತ್ತರ ನಂತರವೂ ಕಮ್ಯುನಿಸ್ಟ್ ಆಗಿಯೇ ಉಳಿದರೆ ಅಂಥವನು ಮನುಷ್ಯನೇ ಅಲ್ಲ ಎನ್ನುವ ತಮಾಷೆಯ ಮಾತಿದೆ. ಜಯಂತರ ಕವನಗಳಲ್ಲಿ ಆಯ್ದ ಕೆಲವೇ ಕೆಲವು ಕಡೆ ವ್ಯಕ್ತಿಗತ ಲೋಪದೋಷಗಳತ್ತ ಅವರ ಅಸಹನೆ ಇಣುಕುವುದು ಕಾಣಲು ಸಿಗುತ್ತದೆ. ಉಳಿದಂತೆ ಜಯಂತ್ ಮಹಾ ಜನವ್ಯಾಮೋಹಿ. ಅವರಿಗೆ ಎಲ್ಲರಲ್ಲೂ ಪ್ರೀತಿ, ಸ್ನೇಹ ಭಾವ. ಯಾರನ್ನೂ ದ್ವೇಷಿಸಲಾರದ, ನಗು ಮತ್ತು ಪ್ರೀತಿಯೇ ಗುಣವೆನ್ನಬಹುದಾದ ವ್ಯಕ್ತಿ ಜಯಂತ್. ಇಂಥ ಜಯಂತ್ ಕೂಡ ಸಿಡುಕಿದಂತೆ, ಅಸಹನೆಗೆ ಪಕ್ಕಾದಂತೆ ಬರೆದಿರುವುದು ಇದೆ. ಕೋಟಿತೀರ್ಥ ಸಂಕಲನದ ಗುರುತು (62), ಹೀಗೊಂದೂರು (83), ನೇರಿಳೆ ಬಣ್ಣದ ಶಾಯಿ(105), ನೀಲಿಮಳೆ ಸಂಕಲನದ ಹಳಿಗಳ ಮೇಲೆ (89) ಕರೆ (93), ಕಾಗೆಮುಟ್ಟಿ (94) ಗಮನಿಸಬಹುದು. ಹೀಗೊಂದೂರು ಕವಿತೆಯಲ್ಲಿ ಸಿಗುವ ಒಂದು ಊರಿನ ಚಿತ್ರ ಭೀಕರವಾಗಿದೆ. ಆ ಊರು ಇದ್ದಕ್ಕಿದ್ದಂತೆ ಸರ್ವನಾಶವಾಗಿ ಅಲ್ಲಿ ಪ್ರೇತಗಳು ಚಪ್ಪಾಳೆ ತಟ್ಟಿ ಕುಣಿದಾಡುತ್ತವೆ. ಹಾಗೆಯೇ ಕರೆ ಕವಿತೆಯಲ್ಲಿ ಬರುವ ಒಬ್ಬ ಮುದುಕು ಇವತ್ತು ನಾವು ದಿನ ಬೆಳಗಾದರೆ ಕೇಳುವ ದೌರ್ಜನ್ಯ, ಅನಾಚಾರಗಳ ನೆರಳಿನಲ್ಲಿ ಬೆಚ್ಚಿ ಬೀಳುವಂಥ ಚಿತ್ರವೊಂದನ್ನು ಕಟ್ಟಿಕೊಡುತ್ತಿದೆ.

ಕರೆ
ಶಿಶುಗಳುತ್ತ ಈ ಶಹರದ ಗದ್ದೆಗಳಲ್ಲಿ ನಡೆವಾಗ ರಾತ್ರಿ
ದೂರ ಚಂಡೆಯ ದನಿಯೊಂದೆ ದಾರಿ
ನೀರು ಬೆಳಕಲ್ಲಿ ತೊಯ್ದ ಪೊದೆ ಕಾಡು ಕಿಟಕಿ
ಬಟ್ಟೆ ಮೇಲೆ ಬರೆದಂಥ ಮೂಕಿಚಿತ್ರಗಳ ಸೀನರಿ. ಹೌದು
ಕಪ್ಪು ಬಿಳುಪು ಎರಡೇ ಬಣ್ಣ ರಾತ್ರಿಗೆ

ದಾರಿಯಲ್ಲಿ ಕೊಳಗಳು, ಲೈಫ್‌ಬಾಯ್ ಹಿಡಿದು ಅವುಗಳಲ್ಲಿ
ಮುಳುಗೇಳುವ ಮುದಿಗಂಡಸರು, ಮನೆಯಿಲ್ಲ
ಮಠವಿಲ್ಲ, ದಂಡೆಯ ಮೇಲಿಟ್ಟಿರುವ ವಾಚು ಬಟ್ಟೆ ಕೈಚೀಲ.
ವಾಚಿನ ಡೈಲಿಗೆ ಬೆಮರ ಕಲೆ.
ಈ ಮುದಿಯ ಎಂಥ ಹದಿ ಚೆಲುವೆಯಲ್ಲೂ
ಮಗಳನ್ನು ಕಾಣಲಾರ. ಕಾರಣ ಹಾಗಂದರೇನು ಅವಗೆ
ಮಗಳಿಲ್ಲ. ಅವನ ಕಣ್ಣುಗಳಲ್ಲಿ ಬೆಳ್ಳಿರೆಪ್ಪೆಗಳ ಜತೆಗೇ
ಒಂದು ಬಗೆಯ ಅನಾಥ ಹಸಿವು.
ಅದನ್ನು ಮಾರಲು ಆತ ಸಿದ್ಧ.

ಆದರೆ ಮೊದಲಿಗನಾಗಲ್ಲ. ಒಬ್ಬನೇ ಅಲ್ಲ.
ತನ್ನೆಲ್ಲ ರೋಮಗಳನ್ನಡವಿಡುತ್ತೇನೆಂದು ಮುಂದೆ ಬಂದರೆ ಆತ
ಸಹಿ ಎಲ್ಲಿ ಮಾಡಬೇಕು
ಗರಾಜಿನ ಕಾರುಗೂಡುಗಳ ಮೈಧೂಳಿನಲ್ಲೋ
ಸತ್ತ ಚಿಟ್ಟೆಯ ರೆಕ್ಕೆಹುಡಿಯ ಮೇಲೋ ಅಥವಾ
ಒಲೆಯೆದುರು ಧಳಧಳ ಬೆವರುಮಣಿ ಹೊಳೆವ
ತನ್ನದೇ ಹೊಂಬಣ್ಣದ ಕಿಬ್ಬೊಟ್ಟೆಯ ಮೇಲೋ

ಈ ಮುದಿಯ ಕೊಳದಿಂದೆದ್ದು ಬರುವದನ್ನೇ
ನೋಡಲು ಅವಿತು ಕಾದವರೆಲ್ಲ ಈಗ ನಿದ್ರಾವಶ.
ಎಲ್ಲರ ನೆತ್ತಿಯ ಮೇಲೂ ತಿರುಗುತ್ತಿವೆ ಸ್ತಬ್ಧ ಅಗೋಚರ ಬುಗುರಿಗಳು

ವಿಗ್ರಹದಂತೆದ್ದು ತೊಟ್ಟಿಕ್ಕುತ್ತ ಈಗ ಈತ ದಂಡೆಗೆ
ಬರಬೇಕು ಒದ್ದೆಮೈಯಲ್ಲಿ ಬಗ್ಗಿ ಎತ್ತಿಕೊಳ್ಳಬೇಕು
ಬಾಯಲ್ಲಿ ಬೀಡಿ ಕಚ್ಚಿ ಇನ್ನೇನು
ಕಡ್ಡಿ ಗೀರುವ ಮುನ್ನ
ಅಳುಕಿ ಅಲ್ಲಾಡುವುದು ಸರ್ವಸ್ವ
ಕತ್ತಲಿಗೆ ಪೂರ ಬಂದಂತೆ

ಕಾಗೆಮುಟ್ಟಿ ಕೂಡ ಮನುಷ್ಯನ ಒಡಕಿನ ಸ್ವಭಾವವನ್ನು ಎತ್ತಿ ಆಡುವಂಥ ಕವಿತೆ. ಮನುಷ್ಯನ ಈವಿಲ್ ಬಗ್ಗೆ ಸಾಕಷ್ಟು ಅಲಿಪ್ತರಂತಿರುವ ಜಯಂತ್ ತಮ್ಮ ಕೆಲವೇ ಕೆಲವು ಕೈಬೆರಳೆಣಿಕೆಯ ಕವಿತೆಗಳಲ್ಲಿ ಅವುಗಳ ಬಗ್ಗೆ ತುಂಬ ಕಹಿಯಾಗಿಯೇ ಪ್ರತಿಕ್ರಿಯಿಸಿರುವುದು ಕಂಡು ಬರುವುದು ಕುತೂಹಲಕರವಾಗಿದೆ.

ಹಳಿಗಳ ಮೇಲೆ
ಹಳಿಯ ಮೇಲೆ ಕೂತಿದ್ದಾಳೆ ಅವಳು ತುಂಡು
ವಸ್ತ್ರದಲ್ಲಿ ಕಬ್ಬಿಣದ ಬಾಲ್ದಿಯಿಂದ ನೀರೆರೆಯುತ್ತ ತಲೆಗೆ
ತಿಕ್ಕುತ್ತ ತುಂಡು ಅವಯವ ಸುರಿಯುವ ಮಳೆಯಲ್ಲಿ.
ಎರಡೂ ಕಡೆ ಸದ್ದಿಲ್ಲದೆ ಬಂದು ಗಕ್ಕನೆ ನಿಂತಿವೆ
ಜನದಟ್ಟಣೆಯ ಧಡೂತಿ ರೈಲುಗಳು ಡಬ್ಬಿ ತುಂಬ
ಕಂಬಿ ಹಿಡಿದು ಕೋಳಕ್ಕೆ ಜೋತ ಕೈಗಳು

ಎತ್ತಿದ ಅವಳ ಕಂಕುಳಿಂದ ಹೊರಬಿದ್ದಿವೆ ಹುಲಿಮರಿ
ಅತ್ತಿತ್ತ ಸುಳಿದು ನೆಕ್ಕುತ್ತ ಅವಳ ಬಡ ತೊಡೆಯ
ಕಾಯುತ್ತಿವೆ. ಸಣ್ಣ ಡಬ್ಬಗಳಲ್ಲಿ ಪರ್ಜನ್ಯ ಹಿಡಿದು
ಇದೇ ಹಳಿಗುಂಟ ಕೂತಿದ್ದಾರೆ ಗಂಡಸರು ತಲೆ ಎತ್ತಿ
ಉರಿವ ಮರ್ಮಾಂಗಗಳ ಹಿರಿದು

ಹಳಿಗಳಲ್ಲಿ ಧ್ವನಿ ಇಲ್ಲ. ಬದಲಿಗೆ ಚಕ್ರಗಳ ಮೇಲೆ ಕಾದು ನಿಂತ
ಪಟ್ಟಣದ ನಿರ್ಲಜ್ಜ ಕಂಪನ. ಸಹಸ್ರಾರು ಮೈಲು ಓಡುತ್ತ
ಬಂದು ಹೆಸರು ಮರೆತು ನಿಂತವರ ಎದೆಗೆ
ಗೋಪುರದ ಗಡಿಯಾರ ಢಣಢಣ ಗುಂಡಿಕ್ಕಿದಂತೆ.
ಇವರ ಪ್ರಾಂತ ಎಲ್ಲಿ ಕಾಲ ಎಲ್ಲಿ. ಮುಂಡು ಕೊಡವಿ ಎದ್ದವರು
ಹೀಗೇ ಈ ಇವಳ ತುಂಡು ಮೊಲೆಯಷ್ಟೇ ಹಗುರಾಗಿ
ತಲೆ ಕೊಡುವರು ಹಳಿಗೆ

ಮಳೆಗೆ ವಿದ್ಯುತ್ ತಂತಿಯ ಕಾಗೆ ತೊಟ್ಟು ತೊಟ್ಟಾಗಿ
ಕರಗಿ ಉರಿವ ಕಣ್ಣಿಗೆ ಇಳಿದ ಕಾಡಿಗೆ.
ಕೈಕಾಲು ಅಲ್ಲಾಡದೆ ಸೆಟೆದು ಛತ್ರಿಯಂತೆ ಒತ್ತಿ ನಿಂತ ದೇಹಗಳ
ಡಬ್ಬಿಯ ಹೊರಗೆ ಹುಲಿಮರಿಗಳು ಓಡಿವೆ ಹಳಿಯುದ್ದಕ್ಕೂ
ಮೂಸುತ್ತ ನರವಾಸನೆ.
ಚಲಿಸುವಂತಿಲ್ಲ ಏನೂ ಈಗ
ಇವಳ ಅಭ್ಯಂಜನ ಮುಗಿವ ತನಕ. ಮುಗಿಯಿತೋ
ಘಮಘಮಿಸುವ ಅವಳನ್ನು ಹಳಿಗಳ ಮೇಲೇ ಮಲಗಿಸಿ
ಒಬ್ಬೊಬ್ಬರಾಗಿ ಎಲ್ಲರೂ ಹರಿದು ಹೋಗುವ ತನಕ.

ಕಥನದತ್ತ ಜಯಂತರು ವಾಲಿದ ಸಂದರ್ಭ ಕೊಂಚ ಕುತೂಹಲಕರ. ಆರಂಭಿಕ ನಾನು-ಕನ್ನಡಿ-ಕಿಟಕಿ ಹಂತದ ಕವಿತೆಗಳಿಂದ ಅಡಿಗ-ರಾಮಾನುಜನ್-ತಿರುಮಲೇಶ್-ಚಿತ್ತಾಲ ಪ್ರಭಾವದ ಹಂತವನ್ನು ಹಾದು ಜಯಂತರು ಚಲಿಸಿದ್ದು ಕಥನದ ಕಡೆಗೇ ಎನ್ನುವುದು ಅವರ ಕವನಗಳಲ್ಲೂ ಕಾಣುತ್ತದೆ. ರಂಗದಿಂದೊಂದಿಷ್ಟು ದೂರ ಸಂಕಲನದ ಪುಟ 36ರ ಅಪ್ಪನ ಚಪ್ಪಲಿ ಪ್ರಸಂಗವನ್ನು ಜಯಂತರ ತೆರೆದಷ್ಟೇ ಬಾಗಿಲು ಕತೆಯೊಂದಿಗೆ ಓದುವುದು ಸಾಧ್ಯವಿದೆ. ಶ್ರಾವಣ ಮಧ್ಯಾಹ್ನ ಸಂಕಲನದ ಸೇಬು (8) ಗಾಳಿ ಮರದ ನೆಳಲು ಕತೆಯೊಂದಿಗೆ ತಳುಕು ಹಾಕಿಕೊಳ್ಳುವಂತಿದೆ. ಯಾವುದೋ ತೀರದಲ್ಲಿ (ನೀಲಿಮಳೆ - 99) ಕವನ ಚಿತ್ತಾಲರ ಕತೆಗಳ ಒಂದು ಪಾತ್ರದಂತಿದ್ದರೆ, ಆ ಕಿಟಕಿ (ನೀಲಿಮಳೆ - 86) ವಿವೇಕ್ ಶಾನಭಾಗರ ಕಾರಣ ಕತೆಯ ಜೊತೆಗಾರನಂತಿದೆ. ದೀಪವಿಲ್ಲದ ಟ್ರಕ್ಕು (ನೀಲಿಮಳೆ - 113) ಕವನದಲ್ಲಿ ಬರುವ ವಿವರಗಳು ತೂಫಾನ್ ಮೇಲ್ ಮತ್ತು ಚಾರ್ ಮಿನಾರ್ ಕತೆಗಳೊಂದಿಗೆ ನೆನಪಾಗುತ್ತವೆ. ಇದು ಶಿಶುಕಾಶಿ (119) ಕವನವನ್ನು ಓದುವಾಗ ಜಯಂತರ ಮಧುಬಾಲಾ ಕತೆ ನೆನಪಾಗದೇ ಇರುವುದು ಸಾಧ್ಯವಿಲ್ಲ. ಮಧುಬಾಲಾ ಕತೆಗೆ ಒಂದು ಜಿಲೇಬಿ ಸಂಕಲನದ ಸುಂದರಿಯರ ಮುಡಿಗೆ (46) ಕವನದ ನಂಟೂ ಇದೆ. ಹಾಗೆಯೇ ಪಟ (ನೀಲಿಮಳೆ - 28) ಕವನವನ್ನೋದುವಾಗ ಎರಡು ಕಡೆ ವಿನಾಕಾರಣ ಟಿಕ್ ಟಿಕ್ ಗೆಳೆಯ ಮತ್ತು ಸೇವಂತಿ ಹೂವಿನ ಟ್ರಕ್ಕು ಕತೆಗಳ ನೆನಪು ಕಾಡುತ್ತದೆ. ಒಂದು ಸರೀ ಕಡ್ಡಿಗಾಗಿ (ನೀಲಿಮಳೆ -31) ಕವನದಲ್ಲಿ ಬರುವ ಯಾರೋ ಮರೆತ ಫ್ಲಾಸ್ಕು ಎಂಬ ಮಾತು ಒಪೆರಾ ಹೌಸ್ ಕತೆಯನ್ನು ನೆನಪಿಸುತ್ತದೆ. ಹಾಗೆಯೇ ಶ್ರಾವಣ ಮಧ್ಯಾಹ್ನ ಸಂಕಲನದ ಎಕ್ಸ್‌ಟ್ರಾ ಚಟ್ನಿ (54), ಒಂದು ಜಿಲೇಬಿ ಸಂಕಲನದ ಪೋರ (35), ಅವನೇ ಇಲ್ಲ ಅಂದರೆ...(37), ಒಂದು ಜಿಲೇಬಿ(44) ಕತೆಗಳು ಜಯಂತರ ಕಣ್ಮರೆಯ ಕಾಡು ಕತೆಯ ಛೋಟೋವಿನ ನೆನಪನ್ನು ಮೇಲಿಂದ ಮೇಲೆ ತರುತ್ತವೆ. ಬಹುಶಃ ಕೋಟಿತೀರ್ಥ ಸಂಕಲನದ ಅಜ್ಜೀ ಕವಿತೆ (49) ಯಿಂದಲೇ ಈ ಒಂದು ಕಥನದತ್ತ ವಾಲುವ ಪ್ರಕ್ರಿಯೆ ತೊಡಗಿತ್ತೇನೋ ಎನಿಸಿದರೂ ಆರಂಭಿಕ ಕವನಗಳ ಮೇಲೆ ನವ್ಯರ ಪ್ರಭಾವ ಮತ್ತು ಒತ್ತಡ ಹೆಚ್ಚಿದ್ದು ಶ್ರಾವಣ ಮಧ್ಯಾಹ್ನ-ನೀಲಿಮಳೆ ಬರುವ ಹೊತ್ತಿಗಷ್ಟೇ ಜಯಂತರು ತಮಗೆ ಸಹಜಧರ್ಮವಾದ ಕಥನ/ನುಡಿಚಿತ್ರದಂಥ ಮಾದರಿಗೆ ಹೊರಳಿಕೊಂಡರು ಎನ್ನುವುದು ಸೂಕ್ತವಾದೀತು. ಈಚೆಗಿನ ಯಾವುದೇ ಕವಿತೆಯನ್ನು ಓದಿದರೂ ಜಯಂತ್ ಅಲ್ಲಿ ನಮ್ಮ ದೈನಂದಿನ ಬದುಕಿನ ಒಂದು ಸಾಮಾನ್ಯ ವಿದ್ಯಮಾನವನ್ನು ಅದಕ್ಕೆ ಸಂಬಂಧಿಸಿದ ಸೂಕ್ಷ್ಮಸಂವೇದನೆಗಳೊಂದಿಗೇ ಒಂದು ಕಥನದ ಮಾದರಿಯಲ್ಲಿ ಕಟ್ಟಿಕೊಡುತ್ತಿರುವುದು ಕಂಡುಬರುತ್ತದೆ. ಜಯಂತರ ಅಥವಾ ಇನ್ನಿತರ ಯಾವುದೇ ಕತೆಗಾರರ ಕತೆಗಳೊಂದಿಗೆ ಅವು ತಳುಕು ಹಾಕಿಕೊಳ್ಳುತ್ತವೆಯೋ ಇಲ್ಲವೋ ಅದು ಬೇರೆ ಪ್ರಶ್ನೆ. ಜಯಂತರ ಕವಿತೆ ನಮ್ಮಲ್ಲಿ ಉದ್ದೀಪಿಸುವ ಒಂದು ಕಥಾನಕವಂತೂ ಅವರವರ ಭಾವಕ್ಕೆ, ಅವರವರ ಜೀವಕ್ಕೆ ನಿಲುಕುವುದು ಸತ್ಯ.

ಇವತ್ತು ಮತ್ತೆ ಓದುವಾಗ ಕೋಟಿತೀರ್ಥದ ಕವಿತೆಗಳು ನಮಗೆ ಕೊಂಚ ಭಾರ ಎನಿಸುತ್ತವೆ. ಈಗ ನೋಡಿದರೆ ಇವುಗಳಲ್ಲಿ ಜಯಂತತನ ಇಲ್ಲ ಎನಿಸುತ್ತದೆ. ಆಗ ಬಹುಷಃ ಹೀಗೆ ಅನಿಸಲು ಕಾರಣಗಳಿರಲಿಲ್ಲ ಎನ್ನುವುದು ಅಷ್ಟೇ ನಿಜ. ಇದಕ್ಕೆ ನಾನು ಕಂಡುಕೊಂಡ ಕಾರಣ, ಆಗ ಜಯಂತರಿಗಿದ್ದ ನವ್ಯಕಾವ್ಯದ ಪ್ರಭಾವಕ್ಕೆ ತೆತ್ತುಕೊಳ್ಳಬೇಕಾದ ಒತ್ತಡ ಮತ್ತು ನಾನು-ಕನ್ನಡಿಯಂಥ ಕಂಫರ್ಟ್ ಝೋನಿನಿಂದ ಮುಕ್ತವಾಗಬೇಕಾದ ಒತ್ತಡಗಳೇ. ಇಲ್ಲಿ ನಾವು ಈಗಾಗಲೇ ಗಮನಿಸಿದ ಕವನ ಸ್ವರ (ಕೋಟಿತೀರ್ಥ - 57) ಮುಖ್ಯವಾಗುತ್ತದೆ. ಇಲ್ಲಿ ಕೊಳಲು ಹೊರಡಿಸುವ ನಾದ, ಅದರ ಸ್ವರ, ಭಾವ, ಲಯ ಎಲ್ಲ ನುಡಿಸುವವನದ್ದಾಗಿದ್ದರೂ ಮಾಧುರ್ಯ ತನ್ನದಲ್ಲ, ತನ್ನದಾಗದೇ ತನಗೆ ಅನ್ಯವಾಗಿಯೇ ಉಳಿಯುವ ವಸ್ತು ಎಂಬ ಪ್ರಜ್ಞೆ ಕೊಳಲು ಊದುವವನನ್ನು ಕಾಡುವ ವಿದ್ಯಮಾನವಿದೆ. ಇದು ತುಂಬ ಆಳವಾದದ್ದು. ಭಾಷೆಯ ಬಗ್ಗೆ, ಅಕ್ಷರದ ಬಗ್ಗೆ, ಪದಗ್ರಹಣದ ಬಗ್ಗೆ ಜಯಂತ್ ಅವರಿಗೆ ಮೋಹವೂ ಇದೆ ಆ ಮೋಹವನ್ನು ಸಾಕ್ಷೀ ಪ್ರಜ್ಞೆಯಿಂದ ಕಾಣಬಲ್ಲ ನೆಲೆಯೂ ಒಂದಿದೆ. ಇದನ್ನು ನಾವು ಅವರ ಹಲವಾರು ಕವನಗಳಲ್ಲಿ ಕಾಣಬಹುದು. ಒಂದು ಜಿಲೇಬಿಯ ಕೊನೇಶಬ್ದ (50) ಗಮನಿಸಿ. ಈ ಕವಿತೆ ನಾವು ಮೊದಲು ಚರ್ಚಿಸಿದ ಕನ್ನಡಿ-ಕಿಟಕಿ ವಿಚಾರದ ಒಂದು ಹೊಸ ಮಜಲು ಜಯಂತರಲ್ಲಿ ಕಂಡು ಬರುತ್ತಿರುವುದರ ರೂಪಕವಾಗಿಯೂ ಮುಖ್ಯವಾಗುತ್ತದೆ. ಹಾಗೆಯೇ ಭಾಷೆಯ ಬಗ್ಗೆ ಜಯಂತರ ಎಚ್ಚರದ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ.

ಕೊನೇಶಬ್ದ
ಕವಿತೆಯ ಕೊನೇ ಶಬ್ದ ಎಲ್ಲೋ ನೋಡುತಿದೆ
ಕಿಟಕಿ ಸೀಟಿನ ಮಗುವಿನಂತೆ
ಅದಕೆ ಒಳಗಿದ್ದೂ ಹೊರಗೆ ನೋಡುವ ಭಾಗ್ಯವಿದೆ

ಕೆಲವರು ಅನ್ನುತ್ತಾರೆ ಅಲ್ಲೇ ಮುಗಿಯುವುದು ಎಲ್ಲ
ಅಥವಾ ಅಲ್ಲಿಂದಲೇ ಆರಂಭ
ಪೂರ್ಣಗೊಳಿಸಲಾಗದು ಕವಿತೆಯನ್ನು
ಕಠೋರವಾಗಿ ತ್ಯಜಿಸಿ ಮುಂದರಿಯಬೇಕು
ಪರ್ವತಾರೋಹಿಗಳು ಕೈಲಾಗದ ಸಹಯಾತ್ರಿಯನ್ನು
ಹಿಂದೆ ಬಿಟ್ಟಂತೆ

ಬಾಡಿಗೆಗೆ ಬಂದ ಶಬ್ದಗಳು
ತಮ್ಮ ಕೆಲಸ ತಾವು ಮಾಡಿಕೊಂಡು ಸುಮ್ಮನಿದ್ದರೆ ಚೆನ್ನು
ತುಂಬ ದೂರ ನಡೆದು ಬಂದಿವೆ ಅವು
ನಾಲಿಗೆಯ ಮೇಲೆ
ಹಳೆಯ ತಿರುವುಗಳನ್ನು ಹೊಸ ಕನಸಿನಲ್ಲಿ ಕಂಡಿವೆ
ಬಾವಿಯಲ್ಲಿ ಬಿದ್ದ ಕೊಡದಂತೆ
ಯುಗಾಂತರಗಳ ನಂತರ ಮನಸಿನಲ್ಲಿ ಎದ್ದಿವೆ

ಸಿಕ್ಕಂತೆ ನೀರವ ತೀರದಲ್ಲೊಂದು ಸಂಜೆ ಬೆಳಕಿನ ಚಿಪ್ಪು
ಅಥವ ಸಂತೆಯ ಮರುದಿನ ಬಯಲಲ್ಲಿ
ಒಂಟಿ ಬೇಬಿ ಶೂಸು
ಸಿಗುತ್ತವೆ ಶಬ್ದ ಕೆಲವರಿಗೆ

ಗುಜರಿ ಅಂಗಡಿಯ ಅನಾಥ ಕನ್ನಡಿಯಂತೆ
ಬಾ ಮುಖ ನೋಡಿಕೋ ಎನ್ನುತ್ತವೆ
ಕೆಲವಂತೂ ಚಹಾದಲ್ಲಿ ಕೈತಪ್ಪಿ ಮುಳುಗಿ
ತಳ ಸೇರಿದ ಬಿಸ್ಕೀಟಿನಂತೆ
ಇದ್ದ ಹಾಗೇ ಊದಿಕೊಂಡು ಭಯ ಹುಟ್ಟಿಸುತ್ತವೆ.

ನತದೃಷ್ಟ ಶಬ್ದಗಳಷ್ಟೆ ಕವಿತೆಯ
ತಲೆಬರಹವಾಗುತ್ತವೆ
ಕೈದಿಯ ಕೊರಳಿನ ಸ್ಲೇಟಿನ ನಂಬರಿನಂತೆ

ಕವಿತೆಯ ಒಳಗೇ ಸೀದಾ ಬಂದು ಕೂತ ಶಬ್ದಕ್ಕೋ
ಅದರದೇ ಅಲ್ಪ ಮುಕ್ತಿಯ ಭ್ರಮೆ
ಏಕೆಂದರೆ ತಕ್ಷಣ ಅದು ಯಾರ ಕಣ್ಣಿಗೂ ಬೀಳುವುದಿಲ್ಲ
ಅಥವಾ ಮುಂದಿನ ಸಾಲಿಗೆ ಜಿಗಿಯಲೇ ಬೇಕು
ಅಂತ ಕಾನೇನೇನಿಲ್ಲ ಬಿದ್ದು ಕಾಲು ಮುರಕೊಂಡರೂ
ನಿಶ್ಶಬ್ದದ ಪ್ರಪಾತದಲ್ಲಿ ಕೂಗು ಬೇಗ ಮೇಲೆ ಬರುವುದಿಲ್ಲ

ಇಷ್ಟಾಗಿ ಕವಿತೆ ಯಾರದು
ಕವಿಯದಂತೂ ಖಂಡಿತ ಅಲ್ಲ
ಹಾಗಿದ್ದರೆ ಖಂಡಿತ ಹೀಗೆ ಅವ
ಪೇಟೆಯಲ್ಲಿ ಬಿಟ್ಟು ಹೋಗುತ್ತಿರಲಿಲ್ಲ

ಆದರೆ ಎಲ್ಲೋ ನೋಡುತ್ತಿರುವ
ಕವಿತೆಯ ಕೊನೇ ಶಬ್ದ ಮಾತ್ರ ಹೇಗೆ
ಶಾಲೆಗೆ ಮೊದಲ ದಿನ ನೂಕಲ್ಪಡುತ್ತಿರುವ ಶಿಶುವಿನಂತೆ
ತನ್ನೆರಡೂ ಪುಟಾಣಿ ಕೈಗಳಿಂದ ಬಿಗಿದು
ಅವಚಿಕೊಂಡಿದೆ ಕವಿತೆಯ ಕೊರಳನ್ನು
ಮರಣ ಭಯದಲ್ಲಿ

ಇದೇ ರೀತಿ ನಿವೇದನೆ(ಕೋಟಿತೀರ್ಥ - 93) ಯಲ್ಲಿ "ನಾನು ಹಟ ಹಿಡಿಯುತ್ತೇನೆ, ನನಗೆ ಕವಿತೆಗಳನ್ನೆಲ್ಲ ಕಳಚಿಟ್ಟು ಬಂದ ನೀನು ಬೇಕು" ಎಂಬ ಮಾತು ಬರುತ್ತದೆ. ಕವಿ ತನ್ನ ಕವಿತೆಯನ್ನು ಬಿಟ್ಟು ಬರಬೇಕು ಎನ್ನುವ ಒತ್ತಾಯದಲ್ಲೂ ಭಾಷೆ ಮತ್ತು ಶಬ್ದ ಅವನಿಂದ ಅನ್ಯವಾಗಿರಬಹುದೆಂಬ ಅನುಮಾನಗಳಿವೆ.

ಶ್ರಾವಣ ಮಧ್ಯಾಹ್ನದ ನಂತರದ ಘಟ್ಟದಲ್ಲಿ ಜಯಂತ್ ತಮ್ಮದೇ ಆದ ಒಂದು ಲಯ ಮತ್ತು ಹದ (ಜಯಂತ್ ಅವರದೇ ಭಾಷೆಯಲ್ಲಿ ಹೇಳುವುದಾದರೆ - ಲೈನ್ ಎಂಡ್ ಲೆಂಗ್ತ್ ) ಕಂಡುಕೊಂಡರು ಎನ್ನಬಹುದು. ಸ್ವಲ್ಪಮಟ್ಟಿಗೆ ಕಥನದ ಬೆನ್ನು ಹತ್ತಿ, ಬಹು ಮಟ್ಟಿಗೆ ನುಡಿಚಿತ್ರದ ಹೆಗಲೇರಿದ ಈ ಕವಿತೆಗಳು ಒಂದು ಜಿಲೇಬಿ ಸಂಕಲನದ ಹೊತ್ತಿಗೆ ಹೊಸದಾದ ಒಂದು ಮಜಲಿಗೇರಿದಂತೆ ಕಂಡುಬರುತ್ತದೆ.

ಕೆ ಸತ್ಯನಾರಾಯಣರ ಈಚಿನ ಕತೆಯೊಂದರಲ್ಲಿ ಕತೆಯಾಗುತ್ತಿರುವ ಒಂದು ನೋವಿನ, ಸಂಕಟದ, ನತದೃಷ್ಟ ಬದುಕಿನ ಬಗ್ಗೆ ಕತೆಗಾರ ಅಥವಾ ನಿರೂಪಕನ ಕಕ್ಕುಲಾತಿ ಯಾವ ನೆಲೆಯದ್ದು ಎಂಬ ಪ್ರಶ್ನೆಯೇಳುತ್ತದೆ. ಯಶವಂತ ಚಿತ್ತಾಲರ ನೀವೇ ಬರೆಯಬೇಕಿದ್ದ ಕತೆ ಅಥವಾ ಕತೆಯಾದಳು ಹುಡುಗಿ ಕತೆಯಲ್ಲಿಯೂ ಒಂದು ಜೀವದ ನೋವು, ಸಂಕಟ ಕೇವಲ ರಂಜಕ ಕಥನಕ್ಕೆ ಕಾರಣವಾಗುವಂಥದ್ದಲ್ಲ, ಹೃದ್ಯವಾಗಬೇಕಾದ್ದು ಎಂಬ ಭಾವ ಮತ್ತೆ ಮತ್ತೆ ಮಂಚೂಣಿಗೆ ಬರುತ್ತದೆ. ಈಚೆಗೆ ಪ್ರಕಟವಾದ ರಾಘವೇಂದ್ರ ಪಾಟೀಲರ ಎಷ್ಟು ಕಾಡತಾವ ಕಬ್ಬಕ್ಕೀ ಸಂಕಲನದ ಎರಡೂ ಕತೆಗಳಲ್ಲಿ ಬರುವ ಡಿಗಸ್ಕರ್ ಮಾಸ್ತರರು ಮತ್ತೆ ಮತ್ತೆ ಕತೆಗಾರ/ನಿರೂಪಕನ ಉದ್ದೇಶ, ಕಕ್ಕುಲಾತಿ ಮತ್ತು ಸಂವೇದನೆಗೆ ಸಾಣೆ ಹಿಡಿಯುತ್ತಲೇ ಇರುತ್ತಾರೆ. ಇಲ್ಲಿ ನನಗೆ ದಕ್ಷಿಣಾ ಆಫ್ರಿಕಾದ ಫೋಟೋಗ್ರಾಫರ್ ಕೆವಿನ್ ಕಾರ್ಟರ್ ಅನಿವಾರ್ಯವಾಗಿ ನೆನಪಾಗುತ್ತಾನೆ. ಈತ 1993ರಲ್ಲಿ ದಕ್ಷಿಣ ಸೂಡಾನಿಗೆ ಭೇಟಿಕೊಟ್ಟು ಸಾಹಸಪಟ್ಟು ಕೆಲವು ಚಿತ್ರಗಳನ್ನು ಸೆರೆ ಹಿಡಿಯುತ್ತಾನೆ. ಅವುಗಳಲ್ಲಿ ಪುಲಿಟ್ಜರ್ ಬಹುಮಾನ ಪಡೆದ ಚಿತ್ರವಂತೂ ಜಗದ್ವಿಖ್ಯಾತ. ಮೂಳೆಚಕ್ಕಳವಾಗಿರುವ ಕರಿಗೂಸೊಂದು ತೆವಳುತ್ತಾ ಫುಡ್ ಸೆಂಟರ್ ಕಡೆಗೆ ಚಲಿಸುತ್ತಿರುವ ಈ ಚಿತ್ರವನ್ನು ನೀವೆಲ್ಲರೂ ನೋಡಿಯೇ ಇರುತ್ತೀರಿ. ಆ ಮಗುನಿನ ತೀರ ಸನಿಹದಲ್ಲೇ ರಣಹದ್ದೊಂದು ಕಾದಿರುತ್ತದೆ. ಈ ಚಿತ್ರಕ್ಕೆ 1994ರಲ್ಲಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಬಂತು. ಪ್ರಶಸ್ತಿ ಬಂದ ಕೆಲವೇ ಸಮಯದಲ್ಲಿ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹಸಿವು, ಬಾಯಾರಿಕೆಯಿಂದ ಕಂಗಾಲಾಗಿ ಈಗಲೋ ಇನ್ನೊಂದು ಕ್ಷಣದಲ್ಲೋ ಸಾಯಲಿದ್ದ ಆ ಕೂಸಿಗೆ ಕನಿಷ್ಠ ನೀರನ್ನಾದರೂ ಕುಡಿಯಲು ಕೊಡುವುದನ್ನು ಬಿಟ್ಟು ಅದರ ಫೋಟೋ ತೆಗೆದ ತನ್ನ ಬಗ್ಗೆ ತನಗೇ ಅಸಹ್ಯವೆನಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಸಾಹಿತಿ, ಕಲಾವಿದರ ಕಕ್ಕುಲಾತಿಯ ಪರಾಕಾಷ್ಠೆಯಿರುವುದು ಕೊನೆಗೂ ಒಂದು ಕಲಾಕೃತಿಯ ನಿರ್ಮಾಣದಲ್ಲಿಯೇ? ಅದಕ್ಕೆ ಮನ್ನಣೆ, ಪ್ರಶಸ್ತಿ ಮತ್ತೊಂದು ಸಿಗಲಿ ಎಂದು ಲಾಬಿ ನಡೆಸುತ್ತ, ವಿಮರ್ಶಕರ ಬೆನ್ನು ಹಿಡಿಯುತ್ತ ಇರುವಾಗಲೂ ತಮ್ಮ ಸಂವೇದನೆಗಳ ಬಗ್ಗೆ ತಾವೇ ಹೇಳಿಕೊಳ್ಳುವುದು ಮತ್ತು ಇದಕ್ಕಾಗಿ ವಿಮರ್ಶಕರನ್ನು ತಮಗೆ ಬೇಕಾದ ಕಡೆ ಬೇಕಾದ ಹಾಗೆ ಕೀಳುಗೈಯುವುದು ಡಬ್ಬಲ್ ಸ್ಟ್ಯಾಂಡರ್ಡ್ ಆಗದೆ? ಇದು ಜಿಜ್ಞಾಸೆ. ಕುಟುಂಬದಲ್ಲಿ ಘಟಿಸಿದ ಒಂದು ಸಾವನ್ನು ಕೂಡ ಕತೆಯಾಗಿಸುವುದು ಹೇಗೆ ಎಂಬ ಪ್ರಶ್ನೆಯೊಂದಿಗೆ ಎದುರಿಸುವಷ್ಟು ನಾವು ಕತೆಗಾರರಾಗುವುದು ಮುಖ್ಯವೇ ಅಥವಾ ಅದಕ್ಕಿಂತ ‘ಕೇವಲ ಮನುಷ್ಯ’ರಾಗಿ ಉಳಿಯುವುದು ಒಳ್ಳೆಯದೇ ಎನಿಸುವುದು ಇಲ್ಲಿ.

ಆಸ್ಪತ್ರೆ, ವಾರ್ಡುಗಳು, ಡಾಕ್ಟರ್, ನರ್ಸ್, ಆಪರೇಶನ್, ರಕ್ತ, ಬ್ಯಾಂಡೇಜು, ಹೆರಿಗೆ ವಾರ್ಡು, ಬಾಣಂತಿ, ರಿಮಾಂಡ್ ಹೋಮ್ ಮಕ್ಕಳು (ಜಯಂತರ ಪ್ರಶಸ್ತಿ ವಿಜೇತ ತ್ರಿವಳಿ ಕಥಾಸಂಕಲನಕ್ಕೆ ಒದಗಿದ ಮುಖಪುಟದ ಚಿತ್ರವನ್ನು ಕೂಡ ಇಲ್ಲಿ ಸ್ಮರಿಸಬಹುದು. ಜಯಂತರ ಮಾತುಗಳಿವು: "ಮುಂಬಯಿಯ ರೇ ರೋಡ್ ಸ್ಟೇಶನ್ನಿನ ಪ್ಲಾಟ್‌ಫಾರ್ಮಿನ ಮೇಲೆ, ಸಂದಣಿಯ ನಡುವೆಯೇ ನಡೆಯುತ್ತಿದ್ದ ಬೀದಿಮಕ್ಕಳ ತರಗತಿಯೊಂದರ ಪ್ರಾರ್ಥನೆಯಿದು. ಪ್ರಾರ್ಥನೆಯೋ, ರೋದನವೋ ತಿಳಿಯದ ಮುಚ್ಚಿದ ಕಂಗಳ ಮಕ್ಕಳ ಈ ಚಿತ್ರದ ಆರ್ತತೆ ಶಬ್ದಗಳಿಗೆ ಮೀರಿದ್ದು. ಮುಂಬಯಿಯ ಟೈಮ್ಸ್ ಆಫ್ ಇಂಡಿಯಾದ ಹಾಳೆಯಿಂದ ನಾನೆಂದೋ ಕತ್ತರಿಸಿಟ್ಟುಕೊಂಡಿದ್ದ ಈ ಮಾಸಲು ಚಿತ್ರವನ್ನು ಈ ಪುಟಗಳ ಪ್ರಾರ್ಥನೆಯಾಗಿ ಸಂಯೋಜಿಸಿಕೊಟ್ಟ ಕಲೆಗಾರ ಗೆಳೆಯ ಶ್ರೀಪಾದ್‌ಗೆ ಋಣಿಯಾಗಿದ್ದೇನೆ."), ಒದ್ದರೂ ಏಳಲಾರದಷ್ಟು ನಿದ್ದೆ ಹೋದ ಚಾಕರಿ ಹೋಟಲು ಮಾಣಿಗಳು, ಗರ್ಭಪಾತ ಮಾಡಿಸಿಕೊಂಡ ಬೇಬಿ, ಟ್ರಕ್ಕುಗಳು, ಹಾಲ್ಟಿಂಗ್ ಬಸ್ಸು, ತಗಡಿನ ಲೋಕಲ್ಲು, ಡಿಪೊ, ಅದರ ಡ್ರೈವರು-ಕಂಡಕ್ಟರು ಇಲ್ಲಿ ಮತ್ತೆ ಮತ್ತೆ ಎದುರಾಗುವ ಜಗತ್ತು. ಒಂದು ಜಿಲೇಬಿಯ ಒಂದು ಸರೀ ಕಡ್ಡಿಗಾಗಿ (31) ಮತ್ತು ನೀಲಿಮಳೆ ಸಂಕಲನದ ಟಿಕ್ ಟಿಕ್ ಗೆಳತಿ (72) ಕವನಗಳನ್ನು ಒಟ್ಟಿಗೇ ಓದಿದರೆ ಜಯಂತ್ ಇಂಥ ಜಗತ್ತಿಗೆ ಸಂದ ಜೀವಗಳ ಬಗ್ಗೆ ಎಂಥ ಒಂದು ಕಕ್ಕುಲಾತಿ ಇರಿಸಿಕೊಂಡಿದ್ದರು ಎನ್ನುವುದು ಅರ್ಥವಾಗುತ್ತದೆ. ಈ ಪ್ರಾಮಾಣಿಕವಾದ ಒಂದು ಸಂವೇದನೆಯೇ ಅವರ ಅದ್ಭುತ ಕತೆ ಚಾರ್‌ಮಿನಾರ್‌ಗೆ ಕಾರಣವಾಗಿದ್ದು ಎಲ್ಲರಿಗೂ ಗೊತ್ತು.

ಬೀಗ ಹಾಕಿ ಹೋದ ಒಂಟಿ ಕೋಣೆಯ ಬದುಕಿಗೆ ಮರಳುವ ಏಕಾಂಗಿ ಆ ತನ್ನ ಕೋಣೆ ತಾನಿಲ್ಲದಾಗ ಏನೆಲ್ಲ ಕಂಡಿರಬಹುದು ಎಂಬ ವಸ್ತುವೂ ಜಯಂತರ ಎರಡು ಮೂರು ಕವನಗಳಲ್ಲಿ ಮರುಕಳಿಸಿದೆ. ಮನೆ ಖಾಲಿ ಮಾಡಿ ಇನ್ನೆಲ್ಲಿಗೋ ಹೋಗುವವರ ಸಾಮಾನು ಸರಂಜಾಮು ಕಾಣಿಸುವ ಒಂದು ಬದುಕು, ಹಳೇ ಸಾಮಾನಿಗೆ ಇರುವ ಸ್ಮೃತಿಶಕ್ತಿ ಅಥವಾ ವಾಸನೆ, ಕತ್ತಲೆಯ ಒಂದು ಆತ್ಮಗತ ಇವೆಲ್ಲ ಕೂಡ ಜಯಂತರಿಗೆ ಬಹುಮುಖ್ಯ ವಿದ್ಯಮಾನ, ಅವರ ವಿಸ್ಮಯ, ಕುತೂಹಲ ಕೆರಳಿಸುವ ವಿಚಾರ. ಜಯಂತರ ಹೊಸ್ತಿಲು ಎಂಬ ಒಂದು ಕತೆ ಇಂಥ ಹಳೇ ಸಾಮಾನಿನ ಅಂಗಡಿಯ ಕುರಿತಾಗಿಯೇ ಇದೆ. ಶ್ರಾವಣ ಮಧ್ಯಾಹ್ನದ ನನ್ನ ಕತ್ತಲು (17), ಮಾಗಿ(61), ಒಂದು ಜಿಲೇಬಿಯ ಕಾಣದ ಹನಿ (21), ಶ್ರಾವಣ ಮಧ್ಯಾಹ್ನದ ಕರೆಯೋಲೆಗಳು (25) ಇಲ್ಲಿ ಗಮನಿಸಬಹುದಾದ ಕವಿತೆಗಳು.

ನೀಲಿ ಮಳೆ ಸಂಕಲನವನ್ನು ಸಿ ಎನ್ನಾರ್ ಜಯಂತರ ಅತ್ಯುತ್ತಮ ಕವನ ಸಂಕಲನ ಎಂದು ಕರೆದಿದ್ದಾರೆ. ಈ ಸಂಕಲನದಲ್ಲಿ ಜಯಂತರ ಕವನದ ಎಲ್ಲ ಬಗೆಯ ಪ್ರಯತ್ನಗಳೂ ಕಾಣಲು ಸಿಗುವುದು ಒಂದು ವಿಶೇಷ. ನುಡಿಚಿತ್ರ, ಕಥನ, ವಿಡಂಬನೆ, ರಾಜಕೀಯ ನೆಲೆಯ ಕವನಗಳು ಕೂಡ ಇಲ್ಲಿವೆ. ಬಹುಷಃ ಜಯಂತರ ರಾಜಕೀಯ ನೆಲೆಯ ಅಪರೂಪದ ಒಂದೆರಡು ಕೈಬೆರಳೆಣಿಕೆಯ ಕವನಗಳಲ್ಲಿ ಲಿಪಿ (90), ಗಾಯ (100), ಕಿರಣವೊಂದು ಜಾರಿ (111) ಇಲ್ಲಿ ಕಾಣಲು ಸಿಗುತ್ತವೆ. ಒಂದು ಜಿಲೇಬಿ ಸಂಕಲನದ ದೇಹಾಂತರ (23) ಕೂಡ ಇಲ್ಲಿ ಉಲ್ಲೇಖನೀಯ.


ಕಿರಣವೊಂದು ಜಾರಿ
ಯಾಕವರು ಒಬ್ಬರೇ ಮಾತಾಡುವರು
ಬಚ್ಚಲಲ್ಲಿ ಏಣಿಯಲ್ಲಿ ತಮ್ಮಷ್ಟಕ್ಕೆ ತಾವೇ
ಪೋಸ್ಟರು ಹರಿದ ಗೋಡೆಯೆದುರು ಪೇಟೆಯಲ್ಲಿ
ಸರಕ್ಕನೆ ಕಿರಣವೊಂದು ಜಾರಿದಂತೆ

ಹುಡುಕಿ ಎಳೆದು ಕಿತ್ತು ಬಿಟ್ಟರೆ ಒಂದು ಬಿಳಿ ಕೂದಲು
ಹತ್ತು ಏಳುತ್ತವೆ ಹಿಂದೆ
ಸರೀಕರು ಕೊಳ್ಳುತ್ತಾರೆ ಭೂಮಿ ಕಟ್ಟುತ್ತಾರೆ ಮನೆ
ಟ್ರಕ್ಕುಗಟ್ಟಲೆ ರೇತಿ ಮಣ್ಣು ಬೀದಿಯಲ್ಲಿ

ಅಮೃತಶಿಲೆ ಕಚೇರಿಗಳ ದೊಡ್ಡ ಕಂಬಗಳ ಹಿಂದೆ
ಮೂಕ ಬೆರಳಭಿನಯ, ಅವರಿಂದ ಹೇಳಿಸಿ, ಆಗುತ್ತೆ ಕೆಲಸ.
ಅರೆ ನಿನ್ನೆಯೇ ಯಾಕೆ ಬರ್ಲಿಲ್ಲ, ಅಡ್ಮಿಶನ್ ಕೊಡಿಸ್ಬೋದಾಗಿತ್ತು.
ಯಾರವನು ಹುಡುಗ ಶಾಲೆಯ ತಿಪ್ಪೆಯ ಬಳಿ ನಿಂತವ
ಕಸ ಕಡ್ಡಿ ಕಾಗದ ಹೆಕ್ಕುತ್ತಲೇ ನೆರೆದ ಪಾಲಕರ
ಎದೆಗೂಡಿಗೆ ಕೈ ಇಕ್ಕಿ ಕಂಗೆಡಿಸಿದವ

ಕೇಳುತ್ತಿವೆ ಸಂಬಂಧದಲ್ಲಿ ರಕ್ತದ ಕಲೆ ತೊಳೆಯುವ ಸದ್ದು.
ಚಿಕ್ಕಮ್ಮನ ನಾದಿನಿಯ ತಮ್ಮ
ದೂರದ ರೈಲಿಂದಿಳಿದು ಬಂದವನೇ ಶಹರವನ್ನು ಕೇಳುವ
ಏನು ಬೇಕು ನನಗೆ ಏನು ಬೇಕು ನನಗೆ
ಪಾರ್ಕಿನಿಂದ ಮಂದಿ ಬಲೂನು ಮಕ್ಕಳೊಡನೆ ಮರಳುವಾಗ
ಸಂಜೆಯೆದುರು ಮಂಡಿಯೂರಿ ಅಂಗಲಾಚುವನು
ಏನು ಬೇಕು ನನಗೆ

ನಿದ್ದೆಯಲಿ ಮೈಯಿಡೀ ಹರಿಯುವದು ಚೂರಿ
ರಕ್ತದ ಒಳ ಚರಂಡಿಗಳಲ್ಲಿ
ಹಗಲಿಗೆ ಹೊಸ ಹುಡುಗಿಯನ್ನು ತಯಾರು ಮಾಡಿ
ಸಿಪ್ಪೆ ಸುಲಿದು ಕುಡಿಮೊಲೆಯ ತಿರುಪಿ ನಿಲ್ಲಿಸಿದ್ದಾರೆ ಚೌಕದಲ್ಲಿ
ಬೇಬೀ ಎಂದು ಯಾರೋ ಕೂಗಿದ ಭಾಸವೆ
ಕಿಪ್ಪೊಟ್ಟೆ ನೋವಿಗೆ ನೇವರಿಸುವ ಕೈ
ಜಾರುತ್ತಿದೆಯೆ ಲಂಗದೊಳಗೆ.

ಗಾಳಿಯ ಪಿಸುನುಡಿಗೂ ಹಣದ ದುರ್ಗಂಧ
ತೊಳೆಯದ ಬಟ್ಟೆಗಳ ಮುಸುರೆ ಪಾತ್ರಗಳ ಬೆಟ್ಟ
ರಾಶಿ ಶಿಶುಗಳ ಬದಿಗೆ.
ಬರ್ಥ್‌ಸರ್ಟಿಫಿಕೇಟು ತರಲೋ ಎಂಬಂತೆ ನಸುಕಿಗೇ
ಎದ್ದು ಮನೆಬಿಟ್ಟು ಹೋಗಿದ್ದಾರೆ ಮಕ್ಕಳು
ಹಳದಿಗಟ್ಟಿದ ಮಗುವ ಎದೆಗವಚಿ ಆಯಿ ಮಳೆಯಲ್ಲಿ
ಓಡುತ್ತಿದ್ದಾಳೆ ಆಸ್ಪತ್ರೆಯಿಂದ ಆಸ್ಪತ್ರೆಗೆ

ಅವರು ಮಾತಾಡುತ್ತಲೇ ಇರುವರು ಒಬ್ಬರೇ
ಅಖಂಡ ರಾತ್ರಿಯ ಜತೆ
ಶ್ವಾಸಗಳ ಪೂರವನ್ನೆ ತರುವ ಸಮುದ್ರಗಾಳಿಯ ಜತೆ
ಮಣ್ಣಿನೊಳಗಿನ ಮರಗಳಂತೆ

ಒಂದು ಜಿಲೇಬಿ ಸಂಕಲನ ಜಯಂತರ ಇದುವರೆಗಿನ ಪ್ರಕಟಿತ ಕವನ ಸಂಕಲನಗಳಲ್ಲಿ ಕೊನೆಯದು. ಎಲ್ಲೋ ಮಳೆಯಾಗಿದೆ ಎನ್ನುವ ಒಂದು ಸಂಕಲನ, ಜಯಂತರ ಸಿನಿಮಾ ಹಾಡುಗಳದ್ದು ಮತ್ತು ಇನ್ನೂ ಒಂದು ಸಂಕಲನ ಇದೆ, ಹೆಸರು ನೆನಪಾಗ್ತಿಲ್ಲ, ಅವಿನಾಶ್ ಕಾಮತ್ ಅದನ್ನ ಸಂಕಲಿಸಿ ಪ್ರಕಟಿಸಿದ್ದಾರೆ, ಅದೂ ಸಿನಿಮಾ ಹಾಡುಗಳದ್ದು - ಎರಡನ್ನೂ ಇವತ್ತಿನ ಅವಲೋಕನದಿಂದ ಹೊರಗಿಟ್ಟಿದ್ದೇನೆ.

ಸಾಮಾನ್ಯವಾಗಿ ಉಪದೇಶ ನೀಡುವುದು, ಸಂದೇಶ ಕೊಡುವುದು ಮಾಡದ ಮತ್ತು ಇಷ್ಟಪಡದ ಜಯಂತರ ಎರಡು ಕವಿತೆಗಳಲ್ಲಿ ಅವರ ಆಧ್ಯಾತ್ಮ ಅಥವಾ ಹಿತವಚನ ನುಸುಳಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಅವು ಹೂಭಾಸ (ಒಂದು ಜಿಲೇಬಿ -18) ಮತ್ತು ಇಷ್ಟು ಇಷ್ಟೆಂದೇಕೆ (ಕೋಟಿತೀರ್ಥ- 84) ಎಂಬ ಹೆಸರಿನ ಎರಡು ಕವಿತೆಗಳು.

ಜಯಂತರ ಮಾತುಗಳಲ್ಲಿ ಸದಾ ತಮಾಷೆ, ಪನ್ ಇದ್ದೇ ಇರುತ್ತದೆ. ಆದರೆ ಕವಿತೆಗಳಲ್ಲಿ ಅವು ಅಷ್ಟಾಗಿ ಕಾಣಿಸಿಕೊಂಡಿಲ್ಲ ಎನ್ನಬಹುದೇನೊ. ಇಲ್ಲಿಯೇ ಗಮನಿಸಬೇಕಾದ ಒಂದು ಸಂಗತಿಯೆಂದರೆ, ಭಾಷೆ ಜಯಂತರಿಗೆ ಒಲಿದಿದೆ. ಅವರು ಯಾವ ಒಂದು ಸಾಮಾನ್ಯ ಸಂಗತಿಯ ಬಗ್ಗೆ ಮಾತನಾಡತೊಡಗಿದರೂ ಕ್ಷಣಗಳಲ್ಲೇ ಅದು ಅದರದೇ ಆದ ಒಂದು ಆಕರ್ಷಣೆಯನ್ನು ಪಡೆದುಕೊಳ್ಳುತ್ತದೆ. ಇದು ವರವೂ ಹೌದು ಶಾಪವೂ ಹೌದು. ಈ ಸಾಮರ್ಥ್ಯವಿರುವ ಕಲೆಗಾರನೊಬ್ಬ ಏನನ್ನು ಹೇಳಿದರೂ ಅದೊಂದು ಕಲಾಕೃತಿಯೇ ಆಗಿ ಬಿಡುವುದು ಅದೃಷ್ಟ ಮತ್ತು ಅಪಾಯ. ಬಹುಷಃ ಈ ಕಾರಣಕ್ಕೋ ಏನೋ ಜಯಂತ್ ತಮಾಷೆಯ ಕವಿತೆಗಳನ್ನು, ವಿಡಂಬನೆಯೇ ಪ್ರಧಾನವಾಗುಳ್ಳ ಕವಿತೆಗಳನ್ನು ಬರೆದಿದ್ದು ಅಪರೂಪವೆನ್ನಿಸುವಷ್ಟು ಕಡಿಮೆ. ರುಚಿಗೆ ತಕ್ಕಷ್ಟು ಎಂಬಂತೆ ಏತನ್ಮಧ್ಯೆ (ರಂಗದಿಂದೊಂದಿಷ್ಟು ದೂರ - 64) ಮತ್ತು ಸಣ್ಣ ಸೊಲ್ಲು (ನೀಲಿಮಳೆ - 42) ಕವಿತೆಗಳನ್ನು ಇಲ್ಲಿ ಗಮನಿಸಬಹುದು. ಹಾಗೆಯೇ ಒಂದು ಜಿಲೇಬಿ ಸಂಕಲನದ ವಾಕ್‌ಮನ್ (26) ಕವಿತೆಯೂ ಮುಖ್ಯವಾದದ್ದು.

ಜಯಂತ್ ಅವರು ಕವಿತೆಯ ಬಗ್ಗೆಯೇ ಕವಿತೆ ಬರೆದಿರುವುದಿದೆ. ಅವು ಸಾಹಿತ್ಯ, ಭಾಷೆ, ಕವಿತ್ವ ಮತ್ತು ಇವುಗಳ ಶಕ್ತಿ ಮತ್ತು ಮಿತಿಗಳನ್ನು ಮನಗಾಣಿಸುವಷ್ಟು ಅರ್ಥಪೂರ್ಣವಾದ ಕವಿತೆಗಳು. ನೀನಾಗಲು (ರಂಗದಿಂದೊಂದಿಷ್ಟು ದೂರ - 24), ಅರ್ಥ (ರಂಗದಿಂದೊಂದಿಷ್ಟು ದೂರ -25), ಅನುಭವ ಇಲ್ಲದ ಕವಿತೆ (ರಂಗದಿಂದೊಂದಿಷ್ಟು ದೂರ - 27), ಒಂದು ಚರಮಗೀತೆ ( ಕೋಟಿತೀರ್ಥ-74), ದೃಶ್ಯ (ಕೋಟಿತೀರ್ಥ - 115), ಮರದ ತೊಟ್ಟಿಲಲ್ಲಿ (ಶ್ರಾವಣ ಮಧ್ಯಾಹ್ನ - 63), ಕೊನೇಶಬ್ದ - (ಒಂದು ಜಿಲೇಬಿ - 50) ಇಲ್ಲಿ ಗಮನಿಸಬೇಕಾದ ರಚನೆಗಳು.

(ಕಾಂತಾವರದ ಕನ್ನಡ ಸಂಘದಲ್ಲಿ ಉಪನ್ಯಾಸ ನೀಡುವುದಕ್ಕಾಗಿ ಸಿದ್ಧಪಡಿಸಿದ ಲೇಖನ. ಇದನ್ನಾಧರಿಸಿದ ಮಾತುಕತೆ ನವೆಂಬರ್ 8ರಂದು ಕಾಂತಾವರದಲ್ಲಿ ನಡೆಯಿತು.)

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ವಿವೇಕ್ ನಾರಾಯಣನ್:ಸಂಘರ್ಷಮಯ ಕಾಲದ ಆತ್ಮಸಂಕೀರ್ಣತೆಯಲ್ಲೇ ಅಸ್ಮಿತೆಯ ಶೋಧ

ವಿವೇಕ್ ನಾರಾಯಣನ್ ಅವರ ಕವನಗಳನ್ನು, ಅದರಲ್ಲಿಯೂ ಅವರ ಎರಡನೆಯ ಸಂಕಲನ, “ಲೈಫ್ ಎಂಡ್ ಟೈಮ್ಸ್ ಆಫ್ ಮಿಸ್ಟರ್ ಎಸ್” ನ ಕವನಗಳನ್ನು ಪ್ರವೇಶಿಸುವುದಕ್ಕೂ ಮುನ್ನ ಹೇಳಬೇಕಾದುದು ಸ್ವಲ್ಪ ಹೆಚ್ಚೇ ಇರುವಂತಿದೆ.

ಮೊದಲಿಗೆ, ಕೆರವಾನ್ ಪತ್ರಿಕೆಯಲ್ಲಿ (ಆಗಸ್ಟ್ 2012) ಒಂದು ಲೇಖನ ಕಣ್ಣಿಗೆ ಬಿತ್ತು. ಅದನ್ನು ಬರೆದವರು ಕೂಡ ಭಾರತೀಯ ಇಂಗ್ಲೀಷ್ ಬರಹಗಾರ್ತಿಯಾಗಿರುವವರೇ. ಅಂಜುಂ ಹಸನ್ ಪ್ರಸ್ತುತ ಕೆರವಾನ್ ಪತ್ರಿಕೆಯ ಪುಸ್ತಕ ವಿಭಾಗದ ಸಂಪಾದಕರು. ಬೆಂಗಳೂರನ್ನೇ ಕೇಂದ್ರವಾಗಿರಿಸಿಕೊಂಡಿರುವ ಒಂದು ಕಾದಂಬರಿ “ನೇತಿ ನೇತಿ” ಮತ್ತು “ಲ್ಯುನಾಟಿಕ್ ಇನ್ ಮೈ ಹೆಡ್”, “ಡಿಫಿಕಲ್ಟ್ ಪ್ಲೆಶರ್ಸ್” ಎಂಬ ಒಂದು ಕಥಾಸಂಕಲನ ಹಾಗೂ “ಸ್ಟ್ರೀಟ್ ಆನ್ ದ ಹಿಲ್” ಎಂಬ ಕವನ ಸಂಕಲನ ಇವರ ಕೃತಿಗಳು. ತಮ್ಮ ವಿಸ್ತೃತ ಪ್ರಬಂಧಗಳಲ್ಲಿ ಆಳವಾದ ಅಧ್ಯಯನ ಮತ್ತು ತನ್ಮಯತೆ ಮೆರೆಯುವ ಇವರ ಬರಹಗಳು ಗಮನಾರ್ಹ. ಪ್ರಸ್ತುತ ಲೇಖನವನ್ನು ಆಸಕ್ತರು ಇಲ್ಲಿ ಗಮನಿಸಬಹುದಾಗಿದೆ: http://www.caravanmagazine.in/books/going-nowhere-always
ಅಂಜುಂ ಹಸನ್ ಅವರ ಲೇಖನ ಮೊದಲಿಗೆ ಮಿಲನ್ ಕುಂದೇರಾನ ಪ್ರಸಿದ್ಧ ಕಾದಂಬರಿ “ಲೈಫ್ ಈಸ್ ಎಲ್ಸ್‌ವೇರ್” ನ ಉಲ್ಲೇಖದಿಂದ ತೊಡಗುತ್ತದೆ. ಮಿಲನ್ ಕುಂದೇರಾನ ಎಲ್ಲ ಕಾದಂಬರಿಗಳಲ್ಲಾಗುವಂತೆ ಇಲ್ಲಿಯೂ ಹಲವು ಪದರಗಳ ಒಂದು ಹಂದರವಿದೆ. ಒಬ್ಬ ಕವಿ ಮತ್ತು ಅವನ ಕವಿತ್ವದ ನಡುವೆ ಅವನ ವ್ಯಕ್ತಿತ್ವದ ವಿಕಸನದ ಪ್ರಕ್ರಿಯೆಗೂ ಒಂದು ಅವಿನಾಭಾವ ಸಂಬಂಧ ಇದೆ ಎಂದು ನಂಬುವ ಮಿಲನ್ ಕುಂದೇರಾನ ವಿಚಾರಗಳ ಮಂಡನೆ ಕಾದಂಬರಿಯ ಒಂದಾನೊಂದು ಪ್ರಮುಖ ಪದರ. ಮಿಲನ್ ಕುಂದೇರಾನ ಈ ಕಾದಂಬರಿ 1969ರಲ್ಲಿ ಬರೆದಿದ್ದು. ಮೊದಲಿಗೆ ಇದರ ಹೆಸರು “ದ ಏಜ್ ಆಫ್ ಲಿರಿಕ್ಸ್” ಎಂದೇನೋ ಆಗುವುದಿತ್ತಂತೆ.

ತುಂಬ ಸರಳಗೊಳಿಸಿ ಹೇಳುವುದಾದರೆ, ಕವಿಭಾವವೆಂಬುದು ಒಂದು ಅಪ್ರಬುದ್ಧ ಮನಸ್ಸಿನ ಘಟ್ಟ ಎನ್ನುವುದು ಇಲ್ಲಿನ ಮಂಡನೆ. ಇದು ಸಾಕಷ್ಟು ಗಹನವಾದ ಪ್ರಶ್ನೆಯೇ. ಕುಂದೇರಾ ತನ್ನ “The Curtain” ಕೃತಿಯಲ್ಲಿ ಈ ಕುರಿತು ಹೆಚ್ಚು ವಿವರವಾದ ಮಾತುಗಳನ್ನು ಬರೆದಿದ್ದಾನೆ. ಮೊದಲು ಆತ ಹೆಗೆಲ್‌ನ ಮಾತುಗಳನ್ನು ಉದ್ಧರಿಸುತ್ತಾನೆ:

“The content of lyric poetry, Hegel says, is the poet himself; he gives voice to his inner world so as to stir in his audience the feelings, the states of mind he experiences. And even if the poet treats `objective' themes, external to his own life, "the great lyric poet will very quickly move away from them and end up drawing the portrait of himself" ("stellt sich selber dar") (The Curtain: Page 88)
.................
..................
.....................

“I have long seen youth as the lyrical age, that is, the age when the individual, focused almost exclusively on himself, is unable to see, to comprehend, to judge clearly the world around him. If we start with that hypothesis (necessarily schematic, but which, as a schema, I find accurate), then to pass from immaturity to maturity is to move beyond the lyrical attitude.
“If I imagine the genesis of a novelist in the form of an exemplary tale, a `myth', that genesis looks to me like a conversion story: Saul becoming Paul; the novelist being born from the ruins of his lyrical world.
(The Curtain: Pages 88-89)

ಬರಹಗಾರ ಸ್ವ-ಕೇಂದ್ರಿತನಾಗಿದ್ದಾಗ ಕವಿತೆ ಅವನ ಮೆಚ್ಚಿನದ್ದಾಗುತ್ತದೆ ಮತ್ತು ಕ್ರಮೇಣ ಅವನು ಜಗತ್ತಿನ ಕೇಂದ್ರ ತಾನಲ್ಲ, ತಾನು ಎಂಬುದೇ ಮುಖ್ಯವಾದ ಮುದ್ದೆಯಲ್ಲ, ತಾನು ಒಂದು ಸಮಾಜದ ಸಣ್ಣ ಅಂಶ ಎಂಬ ಅರಿವು ಹೆಚ್ಚಿದಂತೆಲ್ಲ ಕವಿತೆಯಿಂದ ಹೆಚ್ಚು ಪ್ರಬುದ್ಧವಾದ (!?) ಪ್ರಕಾರಗಳಿಗೆ ಅಂದರೆ ಗದ್ಯ,ಕತೆ-ಕಾದಂಬರಿಗಳಿಗೆ ಸರಿಯುತ್ತಾನೆ ಎಂಬ ನಿಲುವು ಸರಿಯೆ?

ನಿಮಗೆಲ್ಲ ಗೊತ್ತಿರುವಂತೆ ಕವಿತೆ ಎಂಬುದು ಒಂದು (format) ಪ್ರಕಾರವಾಗಿ ಮತ್ತು ಒಂದು (content) ಲಯವಾಗಿ ಗದ್ಯದಲ್ಲೂ ಇರುವ ವಸ್ತು. ಅದು ಕವಿಯ ವ್ಯಕ್ತಿತ್ವ ಬೆಳವಣಿಗೆಯೊಂದಿಗೆ ತಳುಕು ಹಾಕಿ ನೋಡುವುದು ಎಷ್ಟು ಸರಿ ಎಂಬುದು ಪ್ರಶ್ನೆ. ಮಿಲನ್ ಕುಂದೇರಾ ಇದನ್ನು ಇತಿಹಾಸದೊಂದಿಗೆ ಸಮೀಕರಿಸಿ ಹೇಳುತ್ತಿರುವುದಾದರೂ, ಪ್ರಸ್ತುತ “ಲೈಫ್ ಈಸ್ ಎಲ್ಸ್‌ವೇರ್” ಕಾದಂಬರಿಯ ಕೇಂದ್ರಪಾತ್ರ ಜೆರೊಮಿಲ್‌ನ ಕಾಲ, ಇಪ್ಪತ್ತನೆಯ ಶತಮಾನದ ಮೊದಲರ್ಧದವರೆಗಿನ ಕಾಲಾವಧಿಯ ಕವಿಗಳ ಕುರಿತಾಗಿಯಷ್ಟೇ ಎಂದುಕೊಂಡರೂ (ಕಾದಂಬರಿಯ ಮೊದಲ ಹೆಸರನ್ನು ನೆನೆಯಿರಿ) ಪ್ರಶ್ನೆಯನ್ನು ಇವತ್ತಿಗೂ ಎತ್ತಬಹುದು ಎಂದು ತಿಳಿಯುತ್ತೇನೆ.

ನಿಮಗೆಲ್ಲ ನೆನಪಿರುವಂತೆ ಡಾ||ಯು.ಆರ್.ಅನಂತಮೂರ್ತಿಯವರು ಎಸ್ ಎಲ್ ಭೈರಪ್ಪನವರ ವಿವಾದಾತ್ಮಕ ಕಾದಂಬರಿ “ಆವರಣ”ದ ಬಗ್ಗೆ ಮಾತನಾಡುತ್ತ ಭೈರಪ್ಪನವರ ಕಾದಂಬರಿಯಲ್ಲಿ ಪೊಯೆಟ್ರಿಯಿಲ್ಲ, ‘there is absolutely no poetry’ ಎಂದಿದ್ದರು. ಕವಿಮನಸ್ಸು ಎಂದು ನಾವು ಹೇಳುವಾಗ ಭಾವುಕತೆ, ಸೂಕ್ಷ್ಮಸಂವೇದಿ ಮನಸ್ಸು ಎಂಬುದನ್ನು ಸಮೀಕರಿಸುವುದೇ ಇಲ್ಲ ಎಂದೇನಲ್ಲ. ಅದರೆ ಕವಿಮನಸ್ಸು ಎಂಬುದು ಅಷ್ಟೇ ಅಲ್ಲ ಅಲ್ಲವೆ? ಇಸಂಗಳ ಹಿಂದೆಯೇ ಬಹುದೂರ ಹೋಗಿ ಸಿಲೆಬಸ್ ಬದ್ಧ ಕವಿತೆಗಳನ್ನು ಬರೆದವರು ಆಮೇಲೆ ಎಲ್ಲಿಗೆ ಸಂದರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ರಮ್ಯವಾದ ಜಗತ್ತನ್ನೇ ಕುರಿತು ಹಾಡುತ್ತಿರುವ ಕವಿತೆಗಳು, ಭಾವತೀವೃತೆಯನ್ನೇ ನೆಚ್ಚಿದ ಭಾವ-ಗೀತೆಗಳು ಮತ್ತು ಆನಂತರದ ಬಂಡಾಯ, ದಲಿತ ಕವನಗಳು ಎಲ್ಲವನ್ನೂ ಮನಸ್ಸಿಗೆ ತಂದುಕೊಂಡು ಈ ಪ್ರಶ್ನೆಯನ್ನು ನೋಡಬಹುದು. ನಮ್ಮ ಜಾನಪದ ಗೀತೆಗಳು, ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ ಮುಂತಾದವರ ವಚನಗಳು, ದಾಸರ ಕೀರ್ತನೆಗಳು ಕೂಡಾ ನಮ್ಮ ಮನಸ್ಸಿಗೆ ಇಲ್ಲಿ ಬರಬೇಕು. ಮತ್ತು ಮಹಾನ್ ಕಾವ್ಯಗಳನ್ನು ಬರೆದ ಪಂಪಾದಿ ಕವಿಗಳನ್ನು ನೆನೆಯದೇ ಪ್ರಶ್ನೆಯನ್ನು ಮುಖಾಮುಖಿಯಾಗುವುದಕ್ಕಾದೀತೆ? ಸ್ವಕೇಂದ್ರಿತ, ಭಾವುಕ ಮತ್ತು ಅಪ್ರಬುದ್ಧ ಬರಹಗಾರ ಸುರುಮಾಡುವುದೇ ಕವಿತೆಗಳಿಂದ ಎನ್ನುವುದಾದರೆ ಸ್ವಂತದ ನೋವುಗಳನ್ನೇ ಕತೆಯಾಗಿಸಿ ಬರೆದ ಉದಯೋನ್ಮುಖ ಮತ್ತು ಅದರಲ್ಲೆ ಅಸ್ತೋನ್ಮುಖರೂ ಆದ ಕತೆಗಾರರನ್ನು ಎಲ್ಲಿಡುವುದು!

ಈ ವಿಚಾರದ ಚರ್ಚೆಯನ್ನು ಅದರ ಅತ್ಯಂತ ಶಿಖರಪ್ರಾಯ ತರ್ಕಕ್ಕೊಡ್ಡಿದವರು ಎ.ಕೆ.ರಾಮಾನುಜನ್. ಆಸಕ್ತರು ಅವರ “ಕನ್ನಡಿಗಳೆ ಕಿಟಕಿಗಳಾಗಿರುವಲ್ಲಿ” ಎಂಬ ಪ್ರಬಂಧದ ಅಹಂ ಮತ್ತು ಪುರಂ ಪ್ರಮೇಯಗಳನ್ನು ಗಮನಿಸಬಹುದು. ನಮ್ಮಲ್ಲಿ ನವೋದಯದಿಂದ ಸರಿದು ನವ್ಯಕಾವ್ಯದ ಕಾಲ ಬಂದಾಗ, ಸಮೂಹ/ಸಮಷ್ಠಿಯಿಂದ ವ್ಯಕ್ತಿ ವಿಶಿಷ್ಟ ಪ್ರಜ್ಞೆ ಮಹತ್ವ ಪಡೆಯಿತು ಎನ್ನುವ ವಾದದ ಅರಿವು ಎಲ್ಲರಿಗೂ ಇದೆ. ಬೇಂದ್ರೆಯವರ ‘ನಾನು’ (ಗಮನಿಸಿ: ಕೀರಂ ನಾಗರಾಜ ಅವರ “ಮತ್ತೆ ಮತ್ತೆ ಬೇಂದ್ರೆ” (ಅಕ್ಷರ ರೂಪ: ಅಕ್ಷತಾ)) ಮತ್ತು ನವ್ಯದವರ ‘ನಾನು’; ಬೇಂದ್ರೆಯವರ ಕನ್ನಡಿಸುವ ವಿಶ್ವಪ್ರಜ್ಞೆ ಮತ್ತು ನವ್ಯರ ಕನ್ನಡಪ್ರಜ್ಞೆ ಮುಂತಾಗಿ ತೌಲನಿಕ ಅಧ್ಯಯನ ಕೂಡ ಇಲ್ಲಿ ಸಾಧ್ಯವಿದೆ. ಅದಕ್ಕಿಂತ ಮುಖ್ಯವಾಗಿ ವ್ಯಕ್ತಿಯ ಅಂತರಂಗದ ಶೋಧ, ಮನಸ್ಸಿನ ತುಮುಲ, ದ್ವಂದ್ವಗಳಿಗೆ ಅಕ್ಷರ ರೂಪ ಕೊಡುವ ತುರ್ತು, ವ್ಯಕ್ತಿಯ ದೈನಂದಿನದ ಕ್ಷುದ್ರತೆಯನ್ನು ಚಿತ್ರಿಸುವ ಮತ್ತು ಹಾಗೆ ಚಿತ್ರಿಸಿ ಬದುಕಿನ ಅರ್ಥವನ್ನು ಶೋಧಿಸುವ ಉತ್ಸಾಹ ಹೆಚ್ಚಿದ್ದು ಈ ಕಾಲದಲ್ಲಿಯೇ. ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ತಾನು ಕಾಣುತ್ತ ಸ್ವಕೇಂದ್ರಿತನಾಗಿ, ಸಮರ್ಥಿಸಿಕೊಳ್ಳುವಲ್ಲಿ ತನ್ನಲ್ಲೇ ವಿಶ್ವ/ಸಮಾಜ/ಸಮಷ್ಠಿಯಿರುವುದಲ್ಲವೇ ಎಂಬ ವಾದವನ್ನೂ ಹೂಡಿ ನಿಂತ ನವ್ಯಕವಿ ಕ್ರಮೇಣ ತನ್ನ ಕನ್ನಡಿಯನ್ನು ಕಿಟಕಿಯನ್ನಾಗಿಸಿಕೊಂಡು ಹೊರಜಗತ್ತನ್ನು ತನ್ನೊಳಗು ಮಾಡಿಕೊಂಡು ಮಾಗಿದ್ದು ಈಗ ಇತಿಹಾಸ. ಆದರೆ ಈ ಹಂತದಲ್ಲಿ ಕವಿಯೊಬ್ಬ ಕಾದಂಬರಿಕಾರನಾಗಿ ಪರಿವರ್ತಿತನಾದನೆ ಎನ್ನುವುದು ಪ್ರಶ್ನೆ.

ಪ್ರಜಾವಾಣಿಗಾಗಿ ನಡೆಸಿದ ಅಂಜುಂ ಹಸನ್ ಅವರ ಸಂದರ್ಶನದಲ್ಲಿ ಅವರನ್ನು ಈ ಕುರಿತಾಗಿಯೇ ಕೇಳಿದಾಗ ಅವರು ನೀಡಿದ ಉತ್ತರ ಮೇಲಿನ ಹೆಗೆಲ್-ಕುಂದೇರಾ ಪ್ರಮೇಯದ ಪ್ರತಿಪಾದನೆಯಂತೆಯೇ ಇರುವುದನ್ನು ಗಮನಿಸಿ:

“ಹೆಚ್ಚಿನ ಹೊಸ ಬರಹಗಾರರ ಹಾಗೆ ನಾನೂ ಕವನಗಳಿಂದ ಬರವಣಿಗೇನ ಸುರು ಮಾಡಿದೆ. ನಾನು ನನ್ನ ಹದಿಹರಯದ ದಿನಗಳನ್ನು ಶಿಲ್ಲಾಂಗಿನ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಕಳೆದೆ. ನನ್ನ ತಂದೆಯವ್ರು ಯೂನಿವರ್ಸಿಟೀಲಿ ಪ್ರೊಫೆಸರ್ ಆಗಿದ್ರು. ನನ್ನ ಸುತ್ತಮುತ್ತ ಇದ್ದ ಅನೇಕ ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲ ಕವನ ಬರೀತಾ ಇದ್ರು. ಕವನದಲ್ಲಿ ನನ್ನ ಆರಂಭಿಕ ಆಸಕ್ತಿಯನ್ನ ಬಹುಷಃ ನಾನು ಆಗಲೇ ಕಂಡುಕೊಂಡಿರಬೇಕು ಅನಿಸುತ್ತೆ. ಆನಂತರದ ಬೆಳವಣಿಗೆಯಾಗಿ ಕತೆ-ಕಾದಂಬರಿಗಳಲ್ಲಿನ ಆಸಕ್ತಿಯನ್ನ ಕೆಲವು ವರ್ಷಗಳ ಹಿಂದೆ ಮಿಲನ್ ಕುಂದೇರಾನ ಒಂದು ಪ್ರಬಂಧ ಓದಿದಾಗ ಅರ್ಥ ಮಾಡಿಕೊಂಡೆ. ಅವನು ಹೆಗೆಲ್‍ನ್ನ ಕೋಟ್ ಮಾಡಿ ಹೇಳ್ತಾನೆ, ಒಂದು ಕವನದ ಭಾವ ಏನಿದೆ ಆ ಕವಿ ಅದೇ ಆಗಿರುತ್ತಾನೆ ಅಂತ. ಅದು ಭಾವನಾತ್ಮಕ ನಿಲುವು, ಸ್ವ-ಭಾವದ ಅಭಿವ್ಯಕ್ತಿ. ಯಾವಾಗ ನಮಗೆ ಈ ಜಗತ್ತಿನೊಂದಿಗೆ ನಮ್ಮ ಭಾವನೆಗಳನ್ನ ಮೀರಿದ್ದು, ಸ್ವಂತದ್ದನ್ನು ಮೀರಿದ್ದು ಇದೆ ಅನ್ನುವ ಅರಿವಾಗುತ್ತೋ ಆಗ ನಾವು ಕಾದಂಬರಿಯ ಮನೋಭಾವದತ್ತ ಹೊರಳುತ್ತೇವೆ, "ಕಾವ್ಯದ ಭಾವಜಗತ್ತಿನ ಪಳೆಯುಳಿಕೆಗಳಿಂದ ಕಾದಂಬರಿಕಾರನ ಜನ್ಮವಾಗುತ್ತದೆ". ಹಾಗೆ ನಾನು ಮತ್ತೆ ಆಗಾಗ ಕವನಗಳನ್ನು ಬರೆಯಲೂ ಬಹುದು, ಇಲ್ಲವೆಂದಲ್ಲ. ಆದರೆ ಒಂದು ಮನೋಧರ್ಮದ ನೆಲೆಯಿಂದ ಹೇಳುವುದಾದರೆ ನಾನು ಅದನ್ನು ಆಗಲೇ ದಾಟಿ ಬಂದಿದ್ದೇನೆ ಅನಿಸುತ್ತದೆ.”
*******
ಇದಿಷ್ಟು ಪೂರ್ವಭಾವಿ ಪೀಠಿಕೆ ಇಲ್ಲಿ ವಿವೇಕ್ ನಾರಾಯಣನ್ ಅವರ ಕವಿತೆಗಳ ಬಗ್ಗೆ ಮಾತನಾಡುವಾಗ ಯಾಕೆ ಅಗತ್ಯವಾಗುತ್ತದೆ ಎನ್ನುವುದು ಮತ್ತಷ್ಟು ಕುತೂಹಲಕರ.

ನಾವೆಲ್ಲ ಸಾಮಾನ್ಯವಾಗಿ ನಿರೀಕ್ಷಿಸುವಂತೆ ಕವನಗಳು ಭಾವ ಪ್ರಧಾನ ಅಥವಾ ಅಲ್ಲಿ ಕಾಣುವುದು ಸಂವೇದನೆಗಳೊಂದಿಗೆ ಕಾವ್ಯದ ಒಡನಾಟ. ಆದರೆ ವಿವೇಕ್ ನಾರಾಯಣನ್ ಕವನಗಳು ಈ ಸರಳ ತತ್ವಕ್ಕೆ ಅಪವಾದದಂತಿವೆ. ಅವು ಅನೇಕ ಕಡೆ ಭಾವವನ್ನು ಬಿಟ್ಟುಕೊಟ್ಟು ತತ್ವದೊಂದಿಗೆ ಕಾಳಗಕ್ಕಿಳಿಯುವಂತೆ ಕಾಣುವ ಸಂವೇದನೆಗಳನ್ನು ಹೊಂದಿವೆ. ಮಿಸ್ಟರ್ ಎಸ್ ಅಥವಾ ಸುಬ್ರಮಣಿಯಮ್‌ನ ಸಂಘರ್ಷ ತನ್ನ ವರ್ತಮಾನದೊಂದಿಗಿದೆ. ಅದು ಅನಿವಾರ್ಯವಾಗಿ ಪೊಲಿಟಿಕಲ್ ಕೂಡ ಆಗಿದೆ ಮತ್ತು ಆ ವರ್ತಮಾನದಲ್ಲಿ ಅವನು ಇನ್ನೇನು ಛಿದ್ರಗೊಂಡ ಸ್ಥಿತಿಯಲ್ಲಿದ್ದಾನೆ. ಈ ಪರಿಸ್ಥಿತಿಯ ಚಿತ್ರವೊಂದನ್ನು ಅವನು ನಮಗೆ ಕಟ್ಟಿಕೊಡುತ್ತಲೇ ಅದರಿಂದ ಹೊರದಾರಿಯೊಂದನ್ನು ಹುಡುಕುತ್ತಿದ್ದಾನೆ ಮತ್ತು ನಿಶ್ಚಯವಾಗಿ ಇದು ಕಲ್ಪಿತ ಸ್ಥಿತಿಯೆಂಬುದನ್ನು ಹೇಳುತ್ತ ಓದುಗರನ್ನು ಕೆಣಕುತ್ತಿದ್ದಾನೆ. ಇಲ್ಲಿಯೇ ಗಮನಿಸಿಕೊಳ್ಳಬೇಕಾದ ಒಂದು ಸಂಗತಿಯಿದೆ. ಕವಯಿತ್ರಿ ಅಥೆನಾ ಕಶ್ಯಪ್ (ಇವರೂ ಗಮನಾರ್ಹ ಭಾರತೀಯ ಇಂಗ್ಲೀಷ್ ಕವಿ, “ಕ್ರಾಸಿಂಗ್ ದ ಬ್ಲ್ಯಾಕ್ ವಾಟರ್ಸ್” ಇವರ ಪ್ರಖ್ಯಾತ ಕವನ ಸಂಕಲನ) ನಡೆಸಿದ ವಿವೇಕ್ ನಾರಾಯಣನ್ ಅವರ ಒಂದು ಸಂದರ್ಶನದಲ್ಲಿ ಕವಿತೆ ಕೇವಲ ಹೊಳಹುಗಳನ್ನು ಕಾಣಿಸುತ್ತ ಹೋಗಬೇಕೆ ಅಥವಾ ಅದು “ಹೇಳುವುದು ಕಡಿಮೆಯಾಗಲಿ, ಕಾಣಿಸುವುದು ಹೆಚ್ಚಾಗಲಿ” ಕ್ರಮ ಅನುಸರಿಸಬೇಕೆ ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಹೊಳಹುಗಳನ್ನು ಕಾಣಿಸುವುದು ಮುಖ್ಯವೆಂದೇ ತಿಳಿಯುವ ವಿವೇಕ್ ನಾರಾಯಣನ್ ಹೇಗೆ ತಮ್ಮ ಕವನಗಳಲ್ಲಿ ಈ ಎರಡು ಕ್ರಮಗಳ ನಡುವೆ ಅನುಸಂಧಾನ ನಡೆಸುತ್ತ ಹೋಗುತ್ತಾರೆಂಬುದನ್ನು ಸ್ವತಃ ವಿವರಿಸಲು ಕೇಳಿಕೊಳ್ಳುತ್ತಾರೆ.

ವಿವೇಕ್ ನಾರಾಯಣನ್ ಕವಿತೆಯೊಂದು ಈ ಎರಡರ ಅನುಸಂಧಾನದಲ್ಲಿಯೇ ರೂಪುಗೊಳ್ಳುವುದಾದರೂ ಮುಖ್ಯವಾಗಿ ಅದು ಪ್ರಾಮಾಣಿಕವಾಗಿರಬೇಕಾದುದೇ ಅಗತ್ಯ ಎನ್ನುತ್ತಾರೆ. ಹುಬ್ಬುಗಂಟಿಕ್ಕುವಂತೆ ಮಾಡುವ ಹೊಳಹುಗಳ ಕವಿತೆ ಇವತ್ತು ಹಿನ್ನೆಲೆಗೆ ಸರಿದಿದೆಯಾದರೂ ತಾನು ಸುಬ್ರಮಣಿಯನ್ ಕಂಡುಕೊಳ್ಳುತ್ತ ಹೋದ ಹಾದಿಯಲ್ಲೇ ಸಾಗಬೇಕಿರುವುದು ತನಗೆ ಅನಿವಾರ್ಯವೆನ್ನುತ್ತಾರೆ! ಅದಕ್ಕಾಗಿಯೇ ತಾವು ಪ್ರಬಂಧದ ಸ್ವರೂಪಕ್ಕೆ ಹೊರಳಬೇಕಾಗಿ ಬಂದಲ್ಲಿ ಅದಕ್ಕೂ, ಗದ್ಯ ಬೇಕಾದಲ್ಲಿ ಗದ್ಯವಿವರಣೆಗೂ ಚಾಚಿಕೊಳ್ಳುತ್ತಲೇ ಸಾಗಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಹಾಗೆ ಅವರ ಕಾವ್ಯ ಗದ್ಯ-ಪದ್ಯ ಗಡಿಯನ್ನು ಎಗ್ಗಿಲ್ಲದೆ ಹಾಯ್ದು ನಿಲ್ಲುತ್ತವೆ ಕೂಡ. ಅಂದರೆ ಅದೊಂದು ಚಂಪೂಕಾವ್ಯದ ಮಾದರಿಯೆಂದೇನಲ್ಲ. ನೀವು ಎಸ್ ದಿವಾಕರ್ ಅವರ “ಆತ್ಮಚರಿತ್ರೆಯ ಕೊನೆಯ ಪುಟ” ಕವನ ಸಂಕಲನ ಗಮನಿಸಿದ್ದರೆ ಅಲ್ಲಿ ಅವರ ಒಂದು ಕತೆಯೂ ಸೇರಿಕೊಂಡಿರುವುದನ್ನು ಕಾಣುತ್ತೀರಿ! ಅದು ಕವನ ಮತ್ತು ಸಣ್ಣಕತೆ ಎರಡೂ ಆಗಿದೆ. ಹಾಗೆಯೇ ವಿವೇಕ್ ನಾರಾಯಣನ್ ಸಂಕಲನದಲ್ಲಿ ಅಲ್ಲಲ್ಲಿ ಗದ್ಯದಂತೆ ಕಾಣುವ ಪುಟಗಳು ಸಿಗುತ್ತವೆ. ಒಂದೇ ಸಾಲಿನ ರಚನೆಗಳೂ ಸಿಗುತ್ತವೆ. ಅಪ್ಪಟ ಕವನಗಳೂ ಸಿಗುತ್ತವೆ.
ಬಹಳ ಸ್ಪಷ್ಟವಾಗಿಯೇ ಬುದ್ಧಿ-ಭಾವಗಳ ಮುಖಾಮುಖಿ, ಸಂಘರ್ಷ ಮತ್ತು ಒಡನಾಟ ಎಲ್ಲವೂ ಕಾವ್ಯವಾಗುತ್ತಿರುವಾಗಲೇ ವಿವೇಕ್ ಭಾಷೆಯನ್ನು ಇನ್ನಿಲ್ಲದಂತೆ ದುಡಿಸಿಕೊಳ್ಳುತ್ತಾರೆ. ಒಂದರ್ಥದಲ್ಲಿ ಭಾಷೆಯನ್ನು ಹೀಗೆ ದುಡಿಸಿಕೊಂಡು ತಾವು ಏನನ್ನಾದರೂ ಮಾಡುವುದು ಸಾಧ್ಯವಾದೀತೇ ಎಂಬ ಹಂಬಲದಲ್ಲಿಯೇ ಈ ಕವನಗಳನ್ನು ಬರೆದಿರುವುದಾಗಿ ಕೂಡ ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮತ್ತೆ ಮುಂದೆ ಸ್ವಲ್ಪ ಚರ್ಚಿಸಬಹುದು.

ಇಷ್ಟರ ಜೊತೆಗೆ ಅವರು ಚರಿತ್ರೆ, ಪುರಾಣ ಮತ್ತು ಭೂತಕಾಲದ ಝಿಗ್-ಝಾಗ್ ಜೋಡಣೆಯ(ಅರೇಂಜ್‌ಮೆಂಟ್) ಮೂಲಕ ಆಧುನಿಕ ಮನುಷ್ಯನ, ಅತ್ಯಗತ್ಯವಾಗಿ ರಾಜಕೀಯ ನೆಲೆಯುಳ್ಳವನಾಗಿರುವ ಆಧುನಿಕ ಮನುಷ್ಯನ ಗೊಂದಲಮಯ ವರ್ತಮಾನವೊಂದನ್ನು ಸೃಷ್ಟಿಸುತ್ತಾರೆ ಹಾಗೂ ಹಾಗೆ ಸೃಷ್ಟಿಸುವ ಮೂಲಕವೇ ಅವನ ಅಸ್ಮಿತೆಯ ಗುಜರಿಯಾದ ಸ್ಥಿತಿಯನ್ನೂ, ಹೊಸ ಮರುಹುಟ್ಟಿನ ಸಾಧ್ಯತೆಯನ್ನೂ ಏಕಕಾಲಕ್ಕೆ ಶೋಧಕ್ಕೊಡ್ಡುತ್ತಾರೆ. ಇಲ್ಲಿ ನಮಗೆ ಡಾ||ಯು.ಆರ್.ಅನಂತಮೂರ್ತಿಯವರೊಮ್ಮೆ ಭಾರತೀಯ ಪ್ರಜ್ಞೆ ಏಕಕಾಲಕ್ಕೆ ಹಲವು ಕಾಲಗಳನ್ನು ಒಟ್ಟಿಗೇ ಬದುಕುತ್ತಿರುತ್ತದೆ ಎಂದಿದ್ದು ನೆನಪಾಗುತ್ತದೆ. ಅವನು ಪುರಾಣ (ರಾಮಾಯಣ, ಮಹಾಭಾರತ), ಚರಿತ್ರೆ (ಬಾಬರ್, ಟಿಪ್ಪು, ಕೃಷ್ಣದೇವರಾಯ, ಅಶೋಕ,ವಿಶ್ವೇಶ್ವರಯ್ಯ, ಗಾಂಧಿ) ಮತ್ತು ವರ್ತಮಾನ (ರೈತರ ಆತ್ಮಹತ್ಯೆ, ಮೋದಿ, ಕೈಯಲ್ಲಿರುವ ಸಂಕಥನ) ಗಳನ್ನು ಏಕಕಾಲಕ್ಕೆ ತನ್ನ ವರ್ತಮಾನದ ಪ್ರಜ್ಞೆಯಾಗಿಸಿಕೊಂಡೇ ಇರುತ್ತಾನೆ. ಇದು ಸಹಜವಾಗಿಯೇ ಆಧುನಿಕ ಮನುಷ್ಯನ ಆತ್ಮದ ಗೊಂದಲವಾಗಿದೆ ಅಥವಾ ಸಂಕೀರ್ಣತೆಯಾಗಿದೆ. ಇದರಿಂದ ಅವನಿಗೆ ಮುಕ್ತಿಯಿಲ್ಲ, ಇದೊಂದು ಕಲ್ಪಿತ ಸ್ಥಿತಿಯಾಗಿರುವ ಸಾಧ್ಯತೆಯಿದ್ದೂ ಅವನ ಅಸ್ಮಿತೆಯ ಶೋಧ ಅಂಥ ಒಂದು ಅತಂತ್ರ ಸ್ಥಿತಿಯಲ್ಲಿಯೇ ನಡೆಯಬೇಕಾಗಿರುವುದನ್ನು ಇಲ್ಲಿನ ಕವನಗಳು ಮತ್ತೆ ಮತ್ತೆ ಮನದಟ್ಟು ಮಾಡುವ ಪರಿ ಅನನ್ಯವಾಗಿದೆ.

ವಿವೇಕ್ ನಾರಾಯಣನ್ ತಮ್ಮ ರಚನೆಗಳ ಹಿಂದೆ ತಮ್ಮನ್ನು ಕಾಡಿದ ವರ್ತಮಾನದ ಸಂಕೀರ್ಣ ಸ್ಥಿತಿಯನ್ನು ಸ್ಪಷ್ಟವಾಗಿಯೇ ಗುರುತಿಸಿದ್ದಾರೆ. ಇತಿಹಾಸದ ಹಿಂಸೆ, ಸಮಾಜದ ಮೇಲ್ವರ್ಗದ ಸಂಘರ್ಷಗಳು, ಗತದ ಗೊಂದಲಗಳು, ನಂಬಿಕೆಗಳ ಅನಿವಾರ್ಯತೆ ಮತ್ತು ಅಸಾಧ್ಯವಾಗಿರುವ ಅದರ ಗೋಳುಗಳು, ಮನುಷ್ಯ ಸ್ವತಃ ಕಾಲದೊಂದಿಗೆ ಹೆಜ್ಜೆಹಾಕುವಲ್ಲಿ ಸೋತು ಅನುಭವಿಸುವ ಜಂಜಡಗಳು, ಹೊಸತರ ಮುಖಾಮುಖಿ ಅವನನ್ನು ಕಂಗಾಲಾಗಿಸುವ ಪರಿ , ಸಾಂಸಾರಿಕ ಮತ್ತು ವೈಯಕ್ತಿಕ ತುಮುಲ, ತಲ್ಲಣಗಳು – ಹೀಗೆ ಅವರು ಕೆಲವನ್ನು ಪಟ್ಟಿ ಮಾಡುತ್ತಾರೆ. ತಮ್ಮ ಕವನಗಳಲ್ಲಿ ಹಲವನ್ನು ತೆರೆದಿಡುತ್ತಾರೆ. ಇನ್ನೊಂದೆಡೆ ಇತಿಹಾಸ ಮತ್ತು ಗತ (ಹಿಸ್ಟರಿ ಮತ್ತು ಪಾಸ್ಟ್) ಎರಡೂ ಬೇರೆ ಎನ್ನುವುದನ್ನೂ ಅವರು ವಿವರಿಸಿದ್ದಾರೆ. ಈ ಪ್ರಜ್ಞೆ ಆಧುನಿಕ ಮನುಷ್ಯನ ಸಂಘರ್ಷಗಳನ್ನು ಸ್ಪಷ್ಟವಾಗಿ ಗುರುತಿಸುವುದಕ್ಕೆ ಅತ್ಯಗತ್ಯ.

ಇದೆಲ್ಲದರ ಜೊತೆಗೆ ವಿವೇಕ್ ನಾರಾಯಣನ್ ಕವಿತೆಗಳನ್ನು ಗಟ್ಟಿಯಾಗಿ ಓದುವುದಕ್ಕೂ ಮಹತ್ವ ನೀಡುವ ಕವಿ. ಕವಿತೆಯೊಂದು ಶ್ರಾವ್ಯವೂ ಅಲ್ಲದ, ವಾಚ್ಯವೂ ಅಲ್ಲದ ಆದರೆ ಎರಡರ ನಡುವಿನ ತಲ್ಲಣಗಳನ್ನು ಅನುಸಂಧಾನಗೊಳಿಸುವ ಒಂದು ವಿಧಾನದ ಶೋಧದಲ್ಲಿಯೇ ಇರುವಂಥ ಪ್ರಕಾರ ಎನ್ನುತ್ತಾರೆ ಅವರು. ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಹಾಗೆ ಯಾವುದೇ ಒಂದು ಕವಿತೆಯನ್ನು ಗಟ್ಟಿಯಾಗಿ ಓದಲು ಸಾಧ್ಯವಿಲ್ಲ. ಕೆಲವೊಂದು ಕವಿತೆಗಳನ್ನು ಸದ್ದು ಕೂಡ ಮಾಡದೆ ಮನದಲ್ಲೇ ಮತ್ತೆ ಮತ್ತೆ ಗುನುಗಿಕೊಂಡೇ ಅನುಭವಿಸಿ, ಅರ್ಥಮಾಡಿಕೊಂಡು ಅನುಸಂಧಾನ ನಡೆಸಬೇಕಾಗುತ್ತದೆ. ಅವುಗಳನ್ನು ಗಟ್ಟಿಯಾಗಿ ಘೋಷವಾಕ್ಯಗಳಂತೆ ಉದ್ಘೋಷಿಸಿದ್ದೇ ಅವುಗಳ sanctity (ಪಾವಿತ್ರ್ಯ ಎನ್ನುವುದು ಕ್ಲೀಷೆ) ಹೊರಟು ಹೋಗುತ್ತದೆ. ಪಿಸುನುಡಿಯನ್ನು ಪಿಸುನುಡಿದಾಗಲೇ ಅದು ಪರಿಣಾಮಕಾರಿ ಹೇಗೋ ಹಾಗೆ. ಕಹಳೆ ಊದಬೇಕಾದಲ್ಲಿ ಕೊಳಲು ಊದಲು ಬರುವುದಿಲ್ಲ. ಹಾಗೆಯೇ ಗಟ್ಟಿಯಾಗಿಯೇ ಓದಬೇಕಾದ ಕವನಗಳು ಕೂಡ ಇವೆ. ನಾನು ಒಟ್ಟು ಮೂರು ಕವಿತೆಗಳನ್ನು ವಿವೇಕ್ ನಾರಾಯಣನ್ ಸ್ವತಃ ಓದಿದ್ದನ್ನು ಕೇಳಿಸಿಕೊಂಡಿದ್ದೇನೆ. ತೆಹಲ್ಕಾ ವೀಡಿಯೋ ಸರಣಿಗಳಲ್ಲಿರುವ ಈ ಚಿತ್ರಿಕೆಯನ್ನು ನೀವೂ ಯೂಟ್ಯೂಬ್ ಮೂಲಕ ಪಡೆದು ಕೇಳಿಸಿಕೊಳ್ಳಬಹುದು. ಕೇಳುತ್ತ ನನಗೆ ವಿವೇಕ್ ನಾರಾಯಣನ್ ಧ್ವನಿ ಎಲ್ಲಿ ಏರುತ್ತದೆ, ಉದ್ವೇಗವನ್ನು ನಟಿಸುತ್ತದೆ, ತಣ್ಣಗಾಗುತ್ತದೆ, Pause ಕಂಡುಕೊಳ್ಳುತ್ತದೆ ಎನ್ನುವುದೆಲ್ಲ ಮುಖ್ಯವಾಯಿತು. ಕೇಳುವಾಗ ನಾನು ಟೆಕ್ಸ್ಟ್ ಎದುರಿಗೇ ಇಟ್ಟುಕೊಂಡಿದ್ದೆ. ಈ ಕವಿತೆಗಳಲ್ಲೂ ಧ್ವನಿಶಕ್ತಿಯಿರುವ ಶಬ್ದಗಳಿವೆ, ಅವುಗಳು ಒಂದಕ್ಕಿಂತ ಹೆಚ್ಚಿನ ಮತ್ತು ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚು ಆಳದ ಸಂವೇದನೆಗಳಿರುವ ಶಬ್ದಗಳು. ಬಿಡುಬೀಸು ಓದಿನಲ್ಲಿ ಅವು ಓದುತ್ತಿರುವ ವಿವೇಕ್ ನಾರಾಯಣ್‌ಗೆ ದಕ್ಕಿದಂತೆ ಕೇಳುವ ನಮಗೆ ದಕ್ಕುವುದಿಲ್ಲ. ಇದು ಕೇವಲ ಭಾಷೆಯ ಸಮಸ್ಯೆಯೂ ಅಲ್ಲ. ವಿವೇಕ್ ನಾರಾಯಣನ್ ತಾವು ಕವನ ಓದುವಾಗ, ಓದುವ ಕೆಲವೇ ಕಾಲ ಮೊದಲು, ಓದುತ್ತ ಇರುವಾಗ ಮತ್ತು ಓದಿ ಮುಗಿಸಿದ ಬಳಿಕ ತಮಗಾಗುವ ಮಾನಸಿಕ ತುಮುಲ-ತಲ್ಲಣ ಅಥವಾ ಅನುಭವದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಕವಿತೆಯೊಂದನ್ನು ಓದುತ್ತ ಇರುವಾಗ ಕೂಡ ತಾವು ಅದನ್ನು ಯಾರದೋ ಎಂಬಂತೆ ಆಸ್ವಾದಿಸಬಲ್ಲ, ಹೊಸ ಹೊಳಹು ಕಂಡುಕೊಳ್ಳಬಲ್ಲ, ಹೊಸ ಹಾದಿಯಲ್ಲಿ ಸಾಗುವ ಉತ್ಸಾಹ ಪಡೆಯಬಲ್ಲ ಮತ್ತು ಓದಿ ಮುಗಿಸಿದ್ದೇ ಖಾಲಿತನವನ್ನೂ, ಕೊಂಚ ನಾಚಿಕೆಯನ್ನೂ, ತಾನು ಹೀಗೆಲ್ಲ ಬರೆದಿದ್ದರ ಬಗ್ಗೆ ಕಿರಿಕಿರಿಯನ್ನೂ ಒಟ್ಟಿಗೇ ಅನುಭವಿಸುವ ಮನುಷ್ಯ ಈ ಕವಿ. ಹಾಗಾಗಿ ನನಗೆ ಈ ಓದು ಅಷ್ಟೇನೂ ಕೊಡಲಿಲ್ಲ ಎಂದೇ ಹೇಳಬೇಕು. ನಾನೇ ಓದಿಕೊಂಡಾಗ ಅವುಗಳಿಂದ ದಕ್ಕಿದ್ದು ಹೆಚ್ಚು.

ಈ ಘಟ್ಟದ ಕವಿಯಾಗಿ ಈ ವಿವೇಕ್ ನಾರಾಯಣನ್ ಮೇಲೆ ಹೇಳಿದ ಮಿಲನ್ ಕುಂದೇರಾ, ಹೆಗೆಲ್ ಅಥವಾ ಕನ್ನಡಿ ಮತ್ತು ಕಿಟಕಿಯ ಸಿದ್ಧಾಂತವನ್ನು ಮುಖಾಮುಖಿಯಾಗುವ ನೆಲೆಗಳು ನಿಜಕ್ಕೂ ಅಧ್ಯಯನಯೋಗ್ಯ. ಇದಕ್ಕೆ ಬಹುಶಃ ನಮಗೆ ವಿವೇಕ್ ನಾರಾಯಣ್‌ಗಿಂತ ಸಮೃದ್ಧವಾದ ಇನ್ನೊಂದು ಉದಾಹರಣೆ ಸಿಗಲಾರದೇನೊ!

*******

ಈ ಸಂಕಲನ ಒಂದು ಸರಣಿ ಕವನಗಳ ಗುಚ್ಛ. ಇಲ್ಲಿರುವುದೆಲ್ಲಾ ಸುಬ್ರಮಣಿಯನ್ ಕುರಿತ ಕಥನ ಅಥವಾ ಸುಬ್ರಮಣಿಯನ್ ಸ್ವಗತ. ಆದರೆ ಈ ಕವನಗಳಲ್ಲಿ ಒಂದು ನಿರ್ದಿಷ್ಟ ಅನುಕ್ರಮಣಿಕೆ ಇದೆಯೇ ಎಂದರೆ ಅದೂ ಕಲ್ಪಿತ ಅನುಕ್ರಮಣಿಕೆಯಷ್ಟೇ ಎನ್ನಬೇಕು. ಏಕೆಂದರೆ, ಒಂದು ನಿರ್ದಿಷ್ಟ ಕ್ರಮವಿಲ್ಲದೇ ರಚಿಸಿದ ತಮ್ಮ ಹಲವಾರು ರಚನೆಗಳಲ್ಲಿ ಕೆಲವನ್ನಷ್ಟೇ ಉಳಿಸಿಕೊಂಡು, ಕೆಲವು ಕವನಗಳ ಕೇವಲ ಒಂದು ಸಾಲನ್ನಷ್ಟೇ ಉಳಿಸಿಕೊಂಡು, ತದನಂತರ ತಾವೇ ಒಂದು ಅನುಕ್ರಮಣಿಕೆಯನ್ನು ಕಂಡುಕೊಂಡು ಇವುಗಳನ್ನು ಜೋಡಿಸಲಾಗಿದೆಯೇ ಹೊರತು ಕಥನ ಸ್ವಾಭಾವಿಕವಾದ ಅಥವಾ ಪೂರ್ವನಿಧಾರಿತ ಅನುಕ್ರಮಣಿಕೆಯೇನೂ ಇಲ್ಲಿಲ್ಲ. ಈ ಆಯ್ಕೆಯಲ್ಲಿ ಅವರಿಗೆ ತಮ್ಮ ಕವನಗಳಲ್ಲಿ ಇರಬೇಕಾದ ಜೀವಂತಿಕೆಯೇ ಮಾನದಂಡ. ಹಾಗಾಗಿಯೇ, ಮೊದಲ ಕವನದ ನಿಜವಾದ ಅರ್ಥ, ಆಳ ನಮಗೆ ಸ್ಫುರಿಸುವುದು ಬಹುಶಃ ಸಿಲಪ್ಪಾದಿಕಾರಂ ಕವನ ಓದಿದಾಗಲೇ. ಅಥವಾ ಎರಡನೆಯ ಕವನದ (ಬದಲಾದ ಎಕ್ಸೆಂಟ್) ಅರ್ಥವ್ಯಾಪ್ತಿ ಅರಿವಿಗಿಳಿಯುವುದು ಸುಬ್ರಮಣಿಯನ್ ತನ್ನ ತಂದೆಯೊಂದಿಗೆ ಮಾತನಾಡಿದಂತಿರುವ “ಫಾದರ್ ಆಫ್ ಮಿಸ್ಟರ್ ಎಸ್” ಕವನ ಓದಿದಾಗಲೇ ಎನ್ನಬಹುದು. ಅಥವಾ ಸಮಗ್ರವಾಗಿ ಈ ಸಂಕಲನದ ಕವನಗಳನ್ನು ಗ್ರಹಿಸಿದ ನಂತರವೇ ನಮಗೆ ಇಲ್ಲಿನ ಕವನಗಳು ಒಂದೊಂದಾಗಿ ದಕ್ಕುತ್ತವೆ ಎಂದರೂ ಸರಿಯೇ. ವಿವೇಕ್ ನಾರಾಯಣನ್ ಅವರದೇ ಮಾತುಗಳಲ್ಲಿ ಹೇಳುವುದಾದರೆ, ‘ಇಲ್ಲೊಂದು ಬಗೆಯ ಕಥಾನಕ ಬಿಚ್ಚಿಕೊಳ್ಳುತ್ತ ಹೋಗುತ್ತದೆ; ಇಲ್ಲಿ ಹೆಚ್ಚು ವಕ್ರವಾದ, ವಿಡಂಬನಾತ್ಮಕವಾದ, ತೀಕ್ಷ್ಣಮತಿಯ ಧ್ವನಿಯತ್ತ ಹೊರಳಿದ, ಏಕಕಾಲಕ್ಕೆ ಭಾವುಕವೂ ಬೌದ್ಧಿಕವೂ ಆದ ಸ್ಫೋಟವಿದೆ’. ಉದಾಹರಣೆಗೆ ಸುಬ್ರಮಣಿಯನ್ ಆಕ್ಸೆಂಟ್ ಕುರಿತ ಟಿಪ್ಪಣಿ ಕವನ ಗಮನಿಸಿ.

ಸರಳವಾದ, ತುಸು ವಿವಾದಾತ್ಮಕ ಸತ್ಯವೆಂದರೆ
ಇದೇ
ಅವನ ಆಕ್ಸೆಂಟ್ ಬದಲಾಯಿತು
ಸೂಕ್ಷ್ಮವಾಗಿ ಅದರ ಸ್ವರಲಯ ವಿನ್ಯಾಸವನ್ನೆಲ್ಲ ಗಮನಿಸಿದರೆ
ಧ್ವನಿಪೆಟ್ಟಿಗೆಯ ಪದರಗಳಲ್ಲಿ ಹಾಯ್ದುಬರುವ ಗಾಳಿಯ ಸದ್ದು ನಿಮಗೆ ಕೇಳಿಸಿದ್ದೇ ಆದರೆ
ಅದು
ನಿರಂತರ ಪ್ರಯತ್ನ, ಪುನರಾವಲೋಕನ, ಪ್ರಯತ್ನ ಮತ್ತು ಪ್ರಯತ್ನ
ಆಕ್ಸೆಂಟ್ ಒಂದು ಪ್ರಶ್ನಾತೀತ ಕೇಂದ್ರವಾಗುಳಿದಿದೆಯೆಂದಲ್ಲ
ಅದೊಂದು ಬಯಕೆ
ಎಂಬ ಸಂಗತಿಯಲ್ಲಿ ನಿಮಗೆ ಹೊಸ ನಂಬಿಕೆಯೊಂದು ಮೊಳೆಯುವುದು ಸಾಧ್ಯ.
ಮೌನದ ಕಣಿವೆಯೊಳಗಿಂದೆದ್ದು ಅಸ್ಮಿತೆಯ ಬಯಕೆಯುಕ್ಕಿ ಹರಿವೊಲು
ಯಾವ ಖಾತ್ರಿಯೂ ಇಲ್ಲದಲೆ ಫಲದಪೇಕ್ಷೆ ಬಿಟ್ಟೇ ದಿಟ್ಟತನದಿ
ಹೊಂದಿಸಿಕೊಂಡ ಹಿಂದಿನೆಲ್ಲ ನಿರ್ಣಯಗಳೂ
ಹೇಗೆ ಮತ್ತು ಯಾವಾಗ ಮತ್ತು ಈ ಅರಳುವಿಕೆಯಲ್ಲೆ ಕಾಲ ದಡ್ಡುಗಟ್ಟಿತೆ
ಇಲ್ಲಾ ಬಳುಕಿ ಬಾಗಿತೆ ಎಂಬೆಲ್ಲದರ ಶೋಧ
ವೇ ಇದು, ಆಕ್ಸೆಂಟ್

ಅಂದರೆ, ಇಲ್ಲಿ ಉಚ್ಚಾರದ ಶೈಲಿ (ಆಕ್ಸೆಂಟ್) ಬದಲಾಗಿದ್ದು ಪ್ರಯತ್ನಪೂರ್ವಕ ಮತ್ತು ಅದೇ ಆತನ ಅಸ್ಮಿತೆಯ ಶೋಧದ ಒಂದಾನೊಂದು ಹಾದಿ ಕೂಡ ಆಗಿತ್ತು ಏಕೆ ಮತ್ತು ಹೇಗೆ ಎನ್ನುವುದು ತಿಳಿಯಲು ನಾವು ಅವನ ಗತವನ್ನು ನೋಡಬೇಕಾಗಿದೆ. ಗತ ಮತ್ತು ಚರಿತ್ರೆ ಬೇರೆ ಬೇರೆ ಎನ್ನುವ ವಿವೇಕ್ ನಾರಾಯಣನ್ ಅವರ ಸುಬ್ರಮಣಿಯನ್‌ಗೆ ಇವೆರಡರಿಂದಲೂ ಬಿಡುಗಡೆಯೇನಿಲ್ಲ ಎನ್ನುವುದನ್ನು ಈ ಹಿಂದೆಯೇ ಗಮನಿಸಿದ್ದೇವೆ.
ಕಾಲ ಮತ್ತು ದೇಶ ಎರಡು ಮಾತ್ರವಲ್ಲದೆ ಸ್ಪೇಸ್ ಕೂಡ ಕೆಲವೊಮ್ಮೆ ನಿರಾಕಾರ-ನಿರ್ಲಿಪ್ತ-ನಿರ್ಗುಣಕ್ಕೆ ಎಳಸುವುದು ಇಲ್ಲಿನ ಮತ್ತೊಂದು ವಿಶೇಷ. ಅಂದರೆ ಇಲ್ಲಿ ಇದ್ದಕ್ಕಿದ್ದಂತೆ ನಿರೂಪಕ ಮತ್ತು ನಿರೂಪಿತ ಒಬ್ಬರೇ ಆಗುವುದು ಅಥವಾ ಆ ಇಬ್ಬರೂ ಕಲ್ಪನೆಯಿರಬಹುದೆಂಬಂತೆ ಸರಿದು ಬಿಡುವುದು ಜರುಗುತ್ತದೆ. ಉದಾಹರಣೆಗೆ, ತಾನು ಸ್ವತಃ ಗುಜರಿಯಂಗಡಿಯ ವಸ್ತುವಾಗಿದ್ದು ಆ ಸ್ಥಿತಿಯ ಒಟ್ಟು ಆರು ಮಾದರಿಗಳನ್ನು ವಿವರಿಸುವ ಆರು ಕವನಗಳು ಈ ಸಂಕಲನದಲ್ಲಿದ್ದು ಅವುಗಳಲ್ಲಿ ಮೊದಲನೆಯದನ್ನು ಗಮನಿಸಿದರೆ ಇದು ತಿಳಿಯುತ್ತದೆ.

ಒಂದು ದಿನ
ಒಂದಲ್ಲಾ ಒಂದು ದಿನ, ಅವನು ಈ ಕೊಳೆತು
ನಾರುವ ಪ್ರೇತಾವಸ್ಥೆಯಿಂದೆದ್ದು
ಸಂಪನ್ನನಾಗಿ ದಿವ್ಯನಾದಾನು.
ಈ ರೂಪಾಂತರದ ಘಳಿಗೆಯಲ್ಲೇ ಜಗತ್ತಿನ್ನೂ
ಹೊಟ್ಟು ಹೊಟ್ಟಿ ಹುಟ್ಟಿಬರುವ ಸನ್ನದ್ಧಿಯಲ್ಲಿಹುದು
ಅದೂ, ಅದರ ಕುರುಡು ಮೂತಿಗೆ ಎದುರಾಗಿ, ಕ್ಷಣ ನಿಂತು,
ತನಗೇ ತಾನೊಂದು ನಸುನಗೆಯ ಎಸೆದು ಹಾಯ್
ನುಡಿದು ದಾಟಲು
ಕಂಪನದ ನಟ್ಟನಡುವೆಯೇ ಅವನೆದ್ದು ಬಂದರೂ ಬಂದನೇ.
ಒಂದಲ್ಲಾ ಒಂದು ದಿನ, ಮಿಂಚಿ ಮರೆಯಾದ ಬೆಳಕಿನಂತೆ
ತಾನಿದೀಗ ಬಿಸಿಬಿಸಿಯಾಗಿ ಬರೆಯುತ್ತಿರುವುದರ
ಅರ್ಥ ಅವನು ಅರಿತಾನು
ಪ್ರಭೆಗೂ ಪ್ರತೀ ಬಿಂಬಕ್ಕೂ ನಡುವಿನದ ಕಂಡೂ
ಕಾಣಲು ಗುಂಡಿಗೆಗೆ ಬಲಬಂದು
ಶ್ರದ್ಧೆಯೆಂಬುದು ಸದ್ದುಗದ್ದಲವಲ್ಲ, ಸುದ್ದಿಯಲ್ಲ
ಮತ್ತದು
ಮತ್ತದೇ ಹೊಸತೊಂದರ ಸುರುವಾತು ಕೂಡ
ಆದೀತು ಎಂದು
ಆದಾನು.

ಇಲ್ಲಿ ಅವನು ಯಾರು, ನಾನು ಯಾರು, ಇದೀಗ ಇದನ್ನೇ ಬಿಸಿಬಿಸಿಯಾಗಿ ಬರೆಯುತ್ತಿರುವವನು ಯಾರು! ತಿಳಿಯುವವನು ಯಾರು, ತಿಳಿಯುವುದೇನನ್ನು ಮತ್ತು ಆಗುವುದು ಏನು!

ಮೊದಲೇ ಹೇಳಿರುವಂತೆ ವಿವೇಕ್ ನಾರಾಯಣನ್ ಪದಗಳೊಂದಿಗೆ ಆಟವಾಡುವ ಕವಿ. ವಿವೇಕ್ ನಾರಾಯಣನ್ ಹೇಳುವಂತೆ ‘ಇದು ಜಗತ್ತಿಗೆ ನಮ್ಮನ್ನು ನಾವು ಭಾಷೆಯ ಮೂಲಕ ಪ್ರದರ್ಶಿಸಿಕೊಂಡು ಬಂದಿರುವಲ್ಲಿ ಇರುವ ಮಿತಿಗಳೇನಿವೆ, ಅವುಗಳನ್ನು ಭಾಷೆಯ ಮೂಲಕವೇ ಮೀರುವ ಒಂದು ಯತ್ನ ಮತ್ತು ಈ ಯತ್ನ ಕವಿಯ ರಚನೆಗಳಲ್ಲಿ ಅಷ್ಟೇನೂ ಪ್ರಜ್ಞಾಪೂರ್ವಕವಾಗಿ ನಡೆಯುವುದಿಲ್ಲ.’ ಅವರ ಕವಿತೆಯ ಸಾಲುಗಳಲ್ಲಿ ನಡುನಡುವೆ ಗ್ಯಾಪ್, ಅರ್ಧ ಸಾಲು, ತುಂಡು ಪದಪುಂಜ ಎಲ್ಲ ಸಿಗುತ್ತವೆ. ಹಾಗಾಗಿ ತುಂಡು ತುಂಡು ಭಾವವನ್ನು ಯಾವ ಇನ್ನೊಂದು (ಮುಂದಿನ ಅಥವಾ ಹಿಂದಿನ) ತುಂಡಿನೊಂದಿಗೆ ಸೇರಿಸಿಕೊಂಡು ಒಂದು ಮಾಡಿಕೊಳ್ಳುವಿರೋ ನಿಮಗೇ ಬಿಟ್ಟಿದ್ದು. ಅಥವಾ, ವಿವೇಕ್ ನಾರಾಯಣನ್ ಸ್ವತಃ ಓದುವಾಗ ಕೊಡುವ ಹೊಸದೇ ಆದ pause ಗಳನ್ನು ಕಂಡು ನಿಮಗೆ ಬೇಕಾದಂತೆ ತುಂಡು ಮಾಡಿಕೊಂಡು ಓದಿದರೂ ಸರಿಯೇ. ಅಕ್ಷರ ಪದಗಳಿಗಿಲ್ಲದ ownership ಕವಿತೆಗೇಕೆ ಎನ್ನುವ ವಿವೇಕ್ ನಾರಾಯಣನ್ ನಮಗೆ ಅಂಥ ಒಂದು ಸ್ವಾತಂತ್ರ್ಯವನ್ನು ಆಗಲೇ ಕೊಟ್ಟುಬಿಟ್ಟಿದ್ದಾರೆಂದುಕೊಳ್ಳಬಹುದು! ಹಾಗಾಗಿ ಇಲ್ಲಿನ ಅನುವಾದ ತೀರಾ ಖಾಸಗಿ ಅನುವಾದ ಎಂದು ಭಿಡೆಯಿಲ್ಲದೇ ಹೇಳಬಲ್ಲೆ. ಹೀಗೆ ನಿಮ್ಮ ನಿಮ್ಮ ಅನುವಾದವನ್ನು ನೀವು ನೀವೇ ಮಾಡಿಕೊಳ್ಳುವುದು ಕೂಡ ಅಗತ್ಯವೆಂದು ಸೂಚಿಸಬಲ್ಲೆ!

“ಇದೀಗದ ವರ್ತಮಾನದೊಂದಿಗೆ ನಾಲ್ಕು ಹೆಜ್ಜೆ”
ಎದ್ದೇಳುವ ಜಟಾಪಟಿಯಲ್ಲೇ
ಇಬ್ಬನಿ ಕವಿದ ಮುಂಜಾವಿನೊಳಹೊಕ್ಕು
ಥಟ್ಟನೆ ಒಬ್ಬಂಟಿ ತಾನೆಂಬ ಗೊತ್ತಿರುವ ಹಳೇ ಸತ್ಯಕ್ಕೆ
ಢಿಕ್ಕಿ ಹೊಡೆದಂತೆ ನೆನಪುಗಳ ಮಂಕು
ಅಪರಾಹ್ನದ ಇಳಿಬಿಸಿಲ ಮಾತು ಬೇರೆ
ಹಠ ಹಿಡಿದು ಕೂತ ಮನದ ಮಂಕು
ಮೆದುಳಿನೊಳಗೆ ಎಬ್ಬಿಸಿದ ಗದ್ದಲದಲ್ಲಿ
ಅಲ್ಲ, ಇದೆಲ್ಲ ಒಂದು ಕನಸೆಂದೇ ಬಗೆದರೆ
ನಷ್ಟವೇನಿದೆ?
ಆ ನಿರ್ಜೀವ ಅಪರಾಹ್ನ ಅವನ ಹೆಜ್ಜೆಗಳು
ಖುಶಿ ಮತ್ತು
ಈ ಕವನದ ಮುಂಜಾನೆಯಲ್ಲವನು ಎದ್ದಾಗ
ಕೂಡ ಖುಶಿ ಮತ್ತು ಒಬ್ಬಂಟಿ
ಎದ್ದು ಹಾಲು ಕಾಯಿಸಿ, ಗೀಸರಿನ ಸ್ವಿಚ್ಚು ಅದುಮಿ
ಈ ಒಂದಕ್ಕಿಂತ ಹೆಚ್ಚಿನ ಖುಷಿಗಳನ್ನೆಲ್ಲ
ಒಂದಕ್ಕೊಂದು ಕೂಡಿ ಕಳೆದು
ಲೆಕ್ಕ ಹಾಕಿದರೆ ಮೊತ್ತದಲ್ಲಿ ಮಾತ್ರ ಮತ್ತದೇ ಬೇಸರ:
ಇಲ್ಲಿಗೇ ಇನ್ನೇನು ಬಂದು ಒಕ್ಕರಿಸುವ ಅಪರಾಹ್ನ
ಇನ್ನೇನು ಇಲ್ಲಿಂದಲೇ ಮರೆಯಾಗೋ ಅದೇನೊ
ಮರುಜೀವ ಪಡೆದುಕೊಂಡಂತೆ ಸುತ್ತುವ ಫ್ಯಾನು
ಅದನ್ನತ್ತತ್ತ ದೂಡಿದ ಅವನ ಕೋಟು
ಬಯಕೆ ಸೊರಗುವುದು ಕಣ್ಣಿಗೆ ರಾಚುವಂತೆ
ಸುಡುಸುಡು ಬೇಸಗೆ ಸಾಯುತ್ತಿದೆ.
ಅಂಚಿನಲ್ಲಿ ಆಯತಪ್ಪಿ ಬಿದ್ದು ಹೋಗುವ ಅತಂತ್ರ
ಹಕ್ಕಿಯಂತೆ ಹಿಂಜಿಹೋದ ಒಂಟಿ
ಮನುಷ್ಯನ ಆತ್ಮಹತ್ಯೆ
ಸುಬ್ರಮಣಿಯನ್ ಕೂಡ
ಸರಣಿ ಸರಣಿಯಾದ ಈ ಎಲ್ಲದರ
ಮರ್ಮ ಬೇಧಿಸಲಾರ (ಹೇಳಬೇಕೆಂದರೆ,
ಗೆಳೆಯನೊಬ್ಬ ಹೇಳಿದಂತೆ, ನನ್ನ ಇಷ್ಟದ ಸಿನಿಮಾ;
ಒಂದೆಂದರೆ, ಅದು ಸುರುವಾಗಲೇ ಇಲ್ಲ ಯಾವತ್ತೂ)

ಏರಿಯಾ ಆಫ್ ಮಿಸ್ಟರ್ ಎಸ್ ಕೂಡ ನಮಗೆ ಸುಬ್ರಮಣಿಯನ್‌ನ ವರ್ತಮಾನವನ್ನು ತೆರೆದು ತೋರಿಸುವ, ಅವನ ನಾರುತ್ತಿರುವ ಸ್ಥಿತಿಗೆ ರೂಪಕಗಳನ್ನೊದಗಿಸುವ ಒಂದು ಕವಿತೆ. ಈ ಚಿತ್ರವನ್ನು ಹೆಚ್ಚು ಆಳವಾಗಿ ಮತ್ತು ಅರ್ಥಪೂರ್ಣವಾಗಿ ತೆರೆದಿರಿಸುವುದು ಸಿಲಪ್ಪಾದಿಕಾರಮ್ ಕವಿತೆಯೇ. ಇಲ್ಲಿ ಒಂದು ಹಂತದ ವಿವರಗಳು ಸುಬ್ರಮಣಿಯನ್ ಇರುವ ರಸ್ತೆಯ ವಿದ್ಯಮಾನಗಳನ್ನು, ಗದ್ದಲವನ್ನು, ಅವನಿಗೆ ಮದುವೆಯಾಗದ, ಮಕ್ಕಳಿಲ್ಲದ ಒಬ್ಬಂಟಿ ಸ್ಥಿತಿಯನ್ನು, ಕೈಯಲ್ಲಿರುವ ಪೆನ್ನನ್ನು, ರಿಜಿಸ್ಟ್ರಿ ದಾಖಲಾತಿಗಳಿಲ್ಲದ ಅತಂತ್ರ ಸ್ಥಿತಿಯನ್ನು, ಹಾಗಿದ್ದೂ ಅನಿವಾರ್ಯವಾಗಿ ಅವನ ಅಸ್ತಿತ್ವಕ್ಕೆ ರಾಜಕೀಯ ನೆಲೆಯೂ ಇರುವುದನ್ನು, ಅವನ ದೇಹ ಒಂದು ಆರ್ಗ್ಯಾನಿಕ್, ಸಿಂಥೆಟಿಕ್ ವ್ಯವಸ್ಥೆಯಷ್ಟೇ ಆಗಿರುವುದನ್ನು, ಅವನ ಲ್ಯಾಪ್‍ಟಾಪ್‌ನೊಳಗಿನ ಡಾಟಾವನ್ನು ನೆನಪಿಸುತ್ತ ಸಾಗಿದರೆ ಇನ್ನೊಂದು ಸ್ತರದಲ್ಲಿ ಈ ಕವನ ಪ್ರಾಚೀನ ತಮಿಳು ಕಾವ್ಯವೊಂದರ ಪಾತ್ರ ಕನ್ನಗಿ ಮತ್ತವಳ ಕತೆಯ ನೆರಳನ್ನು ಸೆರಗಿನಂತೆ ತನ್ನುದ್ದಕ್ಕೂ ಹಾಸಿಕೊಂಡೇ ಸಾಗುತ್ತದೆ. ಆ ಕತೆ ಕುತೂಹಲಕರವಾಗಿದೆ. ಅನ್ಯಾಯವಾಗಿ, ದುಡುಕಿನಿಂದಾಗಿ ತನ್ನ ಗಂಡನನ್ನು ಕಳ್ಳ ಎಂದು ತೀರ್ಮಾನಿಸಿ, ಮರಣದಂಡನೆಗೆ ಗುರಿಪಡಿಸಿದ ಒಂದು ಊರನ್ನೇ ತನ್ನ ಸಿಟ್ಟಿನಿಂದ (ಎಡ ಸ್ತನವನ್ನೇ ಕಿತ್ತೆಸೆದು) ಸುಟ್ಟು ಹಾಕಿದ ಕನ್ನಗಿ ಎಂಬಾಕೆಯ ಕತೆಯದು. ಇಲ್ಲಿಯೂ ಸುಬ್ರಮಣಿಯನ್ ತನ್ನೊಳಗೆ ಕನ್ನಗಿತನದ ಒಂದು ಸಿಟ್ಟು ಬುಸುಗುಡುತ್ತಿದೆ ಎನ್ನುವುದನ್ನು ಕಂಡುಕೊಂಡಿದ್ದಾನೆ. ಆದರೆ ಅದರ ಮೂಲ ಆತನಿಗೆ ಅರಿಯದ್ದು. ಹಾಗೆಯೇ ಅವನ ಸಿಟ್ಟು ಕಣ್ಣೆದುರು ಇರುವ ಯಾವುದೇ ಒಂದು ನಗರದ್ದಲ್ಲ. “ಇಲ್ಲದ ನಗರ”ವನ್ನು ಸುಟ್ಟು ಹಾಕಲೇ ಎನಿಸುತ್ತಿದೆ ಎನ್ನುತ್ತಾನವನು! ಕಣ್ಮಣಿಯಾದ ಕನ್ನಗಿಯ ಕೈಯಲ್ಲಿ ಅವಳದೇ ಎಡಮೊಲೆಯಿದ್ದರೆ ಸುಬ್ರಮಣಿಯನ್ ಕೈಯಲ್ಲಿ ಪೆನ್ನು, ಪೆನ್ಮಣಿಯಿದೆ! ಕನ್ನಗಿಯೂ ಊರನ್ನು ಪ್ರವೇಶಿಸಿದವಳಲ್ಲ, ಊರನ್ನು ಕಂಡವಳಲ್ಲ. ಸುಬ್ರಮಣಿಯನ್ ತರವೇ ರಿಜಿಸ್ತ್ರಿಯಲ್ಲಿ ಹೆಸರು ಎಂಟ್ರಿ ಮಾಡಿಸಿಕೊಂಡವಳಲ್ಲ. ಗಂಡನನ್ನು ಊರೊಳಗೆ ಕಳುಹಿಸಿ ತಾನು ಹೊರಗೇ ಕಾದು ನಿಂತವಳು ಅವಳು. ಇಲ್ಲಿ ಸುಬ್ರಮಣಿಯನ್ ಊರೊಳಗಿದ್ದೂ ಹೊರಗಿನವನಾಗಿಯೇ ಉಳಿದವ. ತಮಿಳು ಮೂಲದ ವಿವೇಕ್ ನಾರಾಯಣನ್ ಭಾರತೀಯರಾಗಿದ್ದೂ ಬೆಳೆದಿದ್ದು ಜಾಂಬಿಯಾ, ಅಮೆರಿಕಾ, ದಕ್ಷಿಣ ಆಫ್ರಿಕಾಗಳಲ್ಲಿ. ಈ ಶತಮಾನದ ಸುರುವಿನಲ್ಲಿ ಭಾರತಕ್ಕೆ ಮರಳಿದ ವಿವೇಕ್ ನಾರಾಯಣನ್ ಕೂಡ ಸಹಜವಾಗಿಯೇ “ನಿಮ್ಮೊಡನಿದ್ದೂ ನಿಮ್ಮೊಳಗಾಗದೆ” ಈ ಔಟ್ ಸೈಡರ್ ಭಾವವನ್ನು ಕಟ್ಟಿಕೊಂಡೇ ಇದ್ದಿರಬಹುದು. ಆದಾಗ್ಯೂ ಆಧುನಿಕ ಮನುಷ್ಯ ತನ್ನೂರಿನಲ್ಲೂ ಔಟ್ ಸೈಡರೇ ಎಂಬ ಅರಿವು ಕೂಡ ವಿವೇಕ್ ನಾರಾಯಣನ್ ಅವರಿಗಿದೆ.

ನಮ್ಮಲ್ಲಿ ಜಯಂತ್ ಕಾಯ್ಕಿಣಿ, ಯಶವಂತ ಚಿತ್ತಾಲ ಪ್ರಮುಖವಾಗಿ ಮುಂಬಯಿಯ ನಗರ ಜೀವನವನ್ನು ತಮ್ಮ ಕತೆ,ಕಾದಂಬರಿಗಳಲ್ಲಿ ಚಿತ್ರಿಸುತ್ತಾರೆ ಎನ್ನುತ್ತಲೇ ಬಂದಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು. ಈ ಲೇಖಕರ ಮುಂಬಯಿಗೂ ನಿಜವಾದ ಮುಂಬಯಿಗೂ ನಡುವೆ ಒಂದು ಗ್ಯಾಪ್ ಇರುವುದನ್ನೂ ನಾವು ಕಾಣಬಹುದಾದರೆ, ಅದು ವಿವೇಕ್ ನಾರಾಯಣನ್ ಅವರು ಹೇಳುವ “a situation-specific universal address” ಕೂಡ ಆಗಿರುವ ಸಾಧ್ಯತೆಯೊಂದನ್ನು ನಮಗೆ ತೆರೆಯುತ್ತದೆ. ಅಂದರೆ, ಚಿತ್ತಾಲರ ಮುಂಬಯಿ, ಕಾಯ್ಕಿಣಿಯವರ ಮುಂಬಯಿ ಮಹಾರಾಷ್ಟ್ರದ ಮುಂಬಯಿ ಮಾತ್ರವೇ ಆಗಿರದೆ ಅದು ನಮ್ಮ ನಿಮ್ಮ ಮುಂಬಯಿ ಕೂಡ ಆಗುತ್ತದೆ, ನಾವು ನೀವು ಕಂಡಿರದ ಮುಂಬಯಿ ನಮನಮಗೆ ನಾವು ನಾವು ಇರುವಲ್ಲಿಯೇ ಸಾಕಾರಗೊಳ್ಳುವುದು ಸಾಧ್ಯವಾಗುತ್ತದೆ ಹಾಗೂ ಬೆಂಗಳೂರಿನಲ್ಲೋ, ಚೆನ್ನೈಯಲ್ಲಿಯೋ ಅದೇ ಮುಂಬಯಿಯನ್ನು ಕಂಡುಕೊಳ್ಳುವುದೂ ಸಾಧ್ಯವಾಗುತ್ತದೆ. ಈ ಅರ್ಥದಲ್ಲಿ ವಿವೇಕ್ ನಾರಾಯಣನ್ ತಮ್ಮ ಕವನಗಳ ನೆಲ ಮದ್ರಾಸಿನ ಬಳಿಯ ಒಂದು ಪಟ್ಟಣವಾಗಿದ್ದೂ ಸಾರ್ವತ್ರಿಕ ನೆಲೆಗೆ ಚಾಚಿಕೊಳ್ಳುವ ಒಂದು ಪಟ್ಟಣ ಅಥವಾ ಊರು ಎನ್ನುತ್ತಾರೆ.

ವಿವೇಕ್ ನಾರಾಯಣನ್ ರಚನೆಗಳ ವೈಶಿಷ್ಟ್ಯವನ್ನು ಗುರುತಿಸಿಯೂ ಅವು ಅರಿವಿನ ಆಳ, ವಿಸ್ತಾರಗಳನ್ನು ಹೆಚ್ಚಿಸಿಕೊಳ್ಳುವ ಶೋಧಕ್ಕೇ ಸೀಮಿತವಾಗಿ ಉಳಿಯುವುದನ್ನು ಒಪ್ಪಿಕೊಳ್ಳಲೇ ಬೇಕು. ಇದು ಕಾಲ-ದೇಶ ಪ್ರಜ್ಞೆಯಲ್ಲೇ ಘಟಿಸುವಾಗಲೂ ಇಲ್ಲಿ ಕೇಂದ್ರ ವ್ಯಕ್ತಿಯೇ. ಅಷ್ಟರಮಟ್ಟಿಗೆ ಕನ್ನಡಿ ಮತ್ತು ಕಿಟಕಿಗಳ ನಡುವಿನ ಸಂಬಂಧ ಒಂದು ಹೊಸತೇ ಮಜಲನ್ನು ಕಂಡುಕೊಂಡಿರುವುದನ್ನು ಇಲ್ಲಿ ಗುರುತಿಸುವುದು ಸಾಧ್ಯ. ಇದು ವಿವೇಕ್ ನಾರಾಯಣನ್ ಕವಿತೆಗಳ ಅನನ್ಯ ವೈಶಿಷ್ಟ್ಯ.

(ಸಂಕಥನ ತ್ರೈಮಾಸಿಕದ ಎರಡನೇ ಸಂಚಿಕೆಗಾಗಿ ಬರೆದ ಲೇಖನ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಟ್ಟೂ ಬಿಡದೆ ಕಾಡುವ "ಎಷ್ಟು ಕಾಡತಾವ ಕಬ್ಬಕ್ಕೀ..."

ಈ ಸಂಕಲನದ ಎರಡೂ ಕತೆಗಳಿಗೆ ಸಮಾನವಾದ ಒಂದು ನೆಲೆಯಿದೆ. ವಿಮರ್ಶೆ, ತರ್ಕ ಮತ್ತು ಜಿಜ್ಞಾಸೆಗೆ ವಾಸ್ತವ ಬದುಕನ್ನು, ಅನುಭವವನ್ನು ಒಡ್ಡಿ ವಿಶ್ಲೇಷಣೆ ಮಾಡುವುದನ್ನು ನಿವಾರಿಸುವ ನೆಲೆ. ಬದುಕು ದೊಡ್ಡದು, ಅನುಭವ ದೊಡ್ಡದು, ಅದನ್ನು ಕತೆಯಾಗಿಸುವ, ಪ್ರಕಟಿಸುವ, ವಿಮರ್ಶಿಸಿ ತಮ್ಮ ವಿಮರ್ಶಾ ಹತಾರುಗಳನ್ನು ಫಳಫಳ ಬೆಳಗಿಸಿ ಪಾಂಡಿತ್ಯ ಮೆರೆಯುವುದು ಸಣ್ಣದು ಎನ್ನುವುದನ್ನು ಪ್ರಕಟವಾಗಿಯೇ ಹೇಳಿ ಅಥವಾ ಲೇವಡಿ ಮಾಡಿ ಮೊದಲಿಗೇ ಒಂದು ಬಗೆಯ ಕವಚ ಧಾರಣೆ ಮಾಡಿಕೊಂಡೇ ಹೊರಡುವುದು ಇದರ ಪದ್ಧತಿ. ಅದನ್ನು ಇಲ್ಲಿನ ಎರಡು ಕತೆಗಳೂ ಮಾಡುತ್ತದೆ. ಕಥನದ ತಂತ್ರವಾಗಿ ಮಾಡುತ್ತದೆಯೇ ಅಥವಾ ಸಹಜವಾಗಿ ಕತೆಗಾರನ ನಿಲುವಿನ ಅಂಶವಾಗಿ ಮಾಡುತ್ತದೆಯೇ ಎನ್ನುವುದು ಪ್ರಶ್ನೆ.

ಸಂಕಲನದ ಮೊದಲ ಕತೆ "ಮತ್ತೊಬ್ಬ ಮಾಯಿ" ಕತೆಗೆ ನೇರವಾಗಿ ಪಾಟೀಲರ "ಮಾಯಿಯ ಮುಖಗಳು" ಮತ್ತು "ದೇಸಗತಿ" ಸಂಕಲನದ ಕತೆಗಳೊಂದಿಗೆ ಸಂಬಂಧವಿದೆ. ಇಲ್ಲ ಎಂದುಕೊಂಡೂ ಓದಬಹುದಾದ ಕತೆ ಎಂಬ ಕಾರಣಕ್ಕೆ ಅದನ್ನು ಬಿಟ್ಟೇ ನೋಡಬಹುದು. ಆದರೆ ಈ ಕತೆಗೆ ಚಿತ್ತಾಲರ "ಕತೆಯಾದಳು ಹುಡುಗಿ" ಮತ್ತು "ನೀವೇ ಬರೆಯಬೇಕಿದ್ದ ಕತೆ" ಕತೆಗಳೊಂದಿಗೂ ಒಂದು ನಂಟಿದೆ. ಒಂದು ಕತೆಯೊಂದಿಗಿರುವ ನಂಟು ಕಥಾನಕಕ್ಕೂ ಸಲ್ಲುತ್ತದೆ. ಎರಡೂ ಕತೆಗಳಲ್ಲಿ ಚಿತ್ತಾಲರು ಕೂಡಾ ಮೇಲೆ ಹೇಳಿದಂಥ ಒಂದು ನೆಲೆಯನ್ನು ದುಡಿಸಿಕೊಂಡಿದ್ದಾರೆ.

ಇದೇ ರೀತಿ ಈ ಸಂಕಲನದ ಎರಡೂ ಕತೆಗಳಿಗೆ ಸಮಾನವಾದ ಇನ್ನೊಂದು ಅಂಶವೂ ಇದೆ. ಇದನ್ನು ಹೀಗೆ ವಿವರಿಸುತ್ತೇನೆ. ಇನ್ನೊಂದು ಬಗೆಯವರಿದ್ದಾರೆ. ಇವರು ‘ನಾನು ಹೇಳುತ್ತಿರುವುದು ನಿಜಕ್ಕೂ ನಡೆದದ್ದು, ಇದರಲ್ಲಿ ಒಂದಕ್ಷರವೂ ಸುಳ್ಳು ಅಥವಾ ನಡೆಯದೇ ಇದ್ದುದು ಇಲ್ಲ’ ಎಂದು ಒತ್ತಿ ಒತ್ತಿ ಹೇಳಿ "ನೀವು ವಿಮರ್ಶೆ ಮಾಡಲು ಇದೇನೂ ಕಟ್ಟುಕತೆಯಲ್ಲ, ಗೊತ್ತಾಯ್ತಲ್ಲ! ಇದೆಲ್ಲ ನಡೆದದ್ದೇ ಹೀಗೆ! ಹೋಗಿ ಯಾರನ್ನ ಬೇಕಾದ್ರೂ ಕೇಳಿ ಬೇಕಾದ್ರೆ! " ಎಂದು ಅಪರೋಕ್ಷ ಬೆದರಿಕೆ ಹಾಕುವವರು. ತಮಾಷೆ ಎಂದರೆ ಹಾಗೆ ಹೇಳುವವರೂ ಕೂಡ ತಾವು ಬರೆದುದನ್ನು ‘ಕತೆ’ ಇಲ್ಲವೇ ‘ಕಾದಂಬರಿ’ ಎಂದು ಹೇಳಿಕೊಳ್ಳಲು ಇಷ್ಟಪಡುತ್ತಾರೆಯೇ ಹೊರತು ಇದು ‘ಆತ್ಮಕಥನ’ವೆಂದೋ, ಒಂದು ‘ಅನುಭವ ಕಥನ’ ಎಂದೋ ಹೇಳಿಕೊಂಡು ನೇರ ನಿರೂಪಣೆಗೆ ಇಳಿಯುವುದಿಲ್ಲ. ಸ್ವಲ್ಪ ಕೆಣಕಿದರೆ ಫಾರ್ಮೇಟ್ ಎನ್ನುವುದೆಲ್ಲ ಒಂದು ಭ್ರಮೆ, ಇವತ್ತು ಫಾರ್ಮೆಟ್ ಎನ್ನುವುದೇ ಇಲ್ಲ ಎಂದು ದಬಾಯಿಸಿ ಫಾರ್ಮೆಟ್ ಬಗ್ಗೆ ನಿಷ್ಠೆಯಿಂದ ಮಾತನಾಡುತ್ತಿರುವ ನೀವೇ ಯಾವ ಹಳೆಗಾಲದ ಗುಗ್ಗುಗಳೋ ಎಂದು ನಿಮಗೇ ಅನಿಸಬೇಕು ಹಾಗೆ ಘರ್ಜಿಸಿಬಿಡುತ್ತಾರೆ. ಆದಾಗ್ಯೂ, ತಮ್ಮ ಕತೆ/ಕಾದಂಬರಿಗೆ ‘ಇದು ಫಾರ್ಮೆಟ್ಟಿನ ಹಂಗಿಲ್ಲದ ಕೃತಿ’ ಎನ್ನುವ ಅಥವಾ ತಮ್ಮದು ‘ನುಡಿಚಿತ್ರ’, ತಮ್ಮದು ‘ಹರಟೆ ಅಲ್ಲ, ಇದು ಕರಟೆ’ ಅಥವಾ ‘ಸೃಜನಶೀಲ ಸಂಕಥನ’ ಎಂದೋ ಇನ್ನೇನೋ ಎಂದೆಲ್ಲ ಹೇಳಿಕೊಳ್ಳದೆ ತಮ್ಮದು ಸಾದಾ ಕಥಾಸಂಕಲನವೇ, ಅಪ್ಪಟ ಕಾದಂಬರಿಯೇ ಎಂದು ಸ್ಪಷ್ಟವಾಗಿ ಹಾಕಿಕೊಳ್ಳುವುದು ವಿಚಿತ್ರ. ಎಷ್ಟೇ ವಾಸ್ತವವಾಗಿ ನಡೆದದ್ದು ಮತ್ತು ಒಂದಿಷ್ಟೂ ‘ಕೈಯಿಂದ ಹಾಕಿದ್ದು’ ಇಲ್ಲದ ವರದಿಗಾರನ ನಿಷ್ಠೆಯಿಂದ ತೊಳೆದಿಟ್ಟ ವಿವರಗಳೇ ಇದ್ದರೂ ಅದನ್ನು ನೀವು ಕತೆ ಎಂದು ಹೇಳಲು ಹೊರಟಾಗಲೇ ಕತೆಗಾರಿಕೆಯ ಕಸುಬು ಒಪ್ಪಿಕೊಂಡಿರುವುದರಿಂದ ನೀವೇ ವಹಿಸಿಕೊಂಡ ನಿಮ್ಮದೆ ಕಸುಬಿಗೆ ನಿಷ್ಠೆಯಿಂದಿರುವಿರಾದಲ್ಲಿ, ಆ ಕಸುಬಿನ ಬಗ್ಗೆ ಮಾತನಾಡಲು ಓದುಗರಿಗೆ (ವಿಮರ್ಶಕರು ಓದುಗರೇ) ಬಿಡಿ. ವಿಮರ್ಶೆಯಲ್ಲಿ ಇರುವಷ್ಟೇ ಕೃತಕವಾದದ್ದು ಕತೆಗಾರನ ‘ಕತೆಗಾರಿಕೆ’ಯ ಹತಾರಗಳಲ್ಲೂ ಇರುವುದರಿಂದ ಒಬ್ಬರು ಇನ್ನೊಬ್ಬರನ್ನು ದೂರುವುದು ಮೂರನೆಯವರಿಗೆ ಅಸಹ್ಯವಾಗಿ ಕಾಣುವುದಷ್ಟೇ ಸಾಧನೆ! ಹೀಗೆ ಈ ಸಂಕಲನದ ಎರಡೂ ಕತೆಗಳು ತಾವು ವಿಮರ್ಶಾತೀತ ಎಂದುಕೊಳ್ಳಲು ಅಥವಾ ಕತೆ ವಿಮರ್ಶೆಯಿಂದ ಸ್ವತಂತ್ರವಾದ ಅಸ್ತಿತ್ವವನ್ನು ಹೊಂದಿರುವುದರಿಂದ ಅದಕ್ಕೆ ವಿಮರ್ಶೆಯ ಹಂಗಿರುವುದಿಲ್ಲ ಎಂದುಕೊಳ್ಳುವುದಕ್ಕೂ ಕಾರಣವಿಲ್ಲ. ಸಂಕೀರ್ಣವಾದ ಬಂಧವುಳ್ಳ ಯಾವುದೂ ಓದಿನ ನಂತರದ ಚರ್ಚೆ, ಜಿಜ್ಞಾಸೆ, ಕೊನೆಯ ಪಕ್ಷ ಆ ಕೃತಿಯ ಕುರಿತ ಕೆಲಕ್ಷಣದ ಚಿಂತನೆ ಇಲ್ಲದೇ ಪರಿಪೂರ್ಣವಾಗುವುದಿಲ್ಲ. ಹೀಗೆ ಓದಿ ಹಾಗೆ ಮರೆಯಬಹುದಾದ ಬರಹಗಳ ವಿಚಾರ ಬೇರೆ.

ಇಲ್ಲೇ ವಿವರಿಸಬಹುದಾದ ಮತ್ತೊಂದು ಮಾತಿದೆ. ಇತ್ತೀಚೆಗೆ ತೀರಿಕೊಂಡ ಅಮೆರಿಕದ ಪ್ರಖ್ಯಾತ ಕಾದಂಬರಿಕಾರ ಡಾಕ್ಟರೊವ್ ತನ್ನ ಕಾದಂಬರಿಗಳನ್ನು ಕಟ್ಟುತ್ತಿದ್ದ ಬಗೆ ಅತ್ಯಂತ ವಿವಾದಾತ್ಮಕವಾದದ್ದು. ಈತ ಜೀವಂತ ವ್ಯಕ್ತಿಗಳನ್ನೂ, ಚರಿತ್ರೆಯ ವ್ಯಕ್ತಿಗಳನ್ನೂ ಬಳಸಿಕೊಂಡು, ಅವರ ಬದುಕಿನಲ್ಲಿ ನಡೆಯದೇ ಇದ್ದ ಘಟನೆಗಳನ್ನೂ ನಡೆದ ಹಾಗೆಯೇ ನಿರೂಪಿಸುತ್ತ ಚರಿತ್ರೆ ಯಾವುದು, ಕಲ್ಪನೆ ಯಾವುದು ಎಂದು ಗೊತ್ತಾಗದ ಹಾಗೆ ಬರೆದು ವಿವಾದ ಸೃಷ್ಟಿಸಿದ್ದ! ಈ ಬಗ್ಗೆ, ಈ ವಿಧಾನದ ಬಗ್ಗೆ ಸಾಕಷ್ಟು ಚರ್ಚೆ, ವಾಗ್ವಾದ ಎಲ್ಲ ನಡೆದಿತ್ತಂತೆ. ಈತ ಒಂದೆಡೆ ಎಲ್ಲಾ ಇತಿಹಾಸಕಾರರು ಬರೆದಿದ್ದೂ ಫಿಕ್ಷನ್ನೇ ಹೊರತು ಇನ್ನೇನಲ್ಲ ಎಂಬ ಅರ್ಥಪೂರ್ಣವಾದ ಹೇಳಿಕೆಯನ್ನಿತ್ತಿದ್ದಾನೆ. ಫ್ಯಾಕ್ಟ್ ಎಂದು ನಾವು ಕರೆಯುವುದನ್ನು ಬರಹಕ್ಕೆ ಇಳಿಸುವ ಹಂತದಲ್ಲಿಯೇ ಅದು ಫಿಕ್ಷನ್ ಆಗಿ ಬಿಡುತ್ತದೆ ಎಂದು ಮತ್ತೂ ಒಬ್ಬಾತ, ಹಿರಿಯ ವಿದ್ವಾಂಸ ಹೇಳಿದ್ದು, ನನಗೀಗ ಆತನ ಹೆಸರು ಮರೆತಿದೆ. ಇತ್ತೀಚೆಗೆ ಎಸ್. ದಿವಾಕರ್ ಅವರ ಬಳಿ ಮಾತನಾಡುತ್ತಿದ್ದಾಗ ಅವರೂ ಈ ಫ್ಯಾಕ್ಟ್ ಮತ್ತು ಫಿಕ್ಷನ್ ನಮ್ಮ ಕನ್ನಡ ಸಾಹಿತ್ಯವನ್ನು ಕಾಡಿ-ಕದಡಿ-ಹಿಂಡಿರುವ ವೈಚಿತ್ರ್ಯದ ಬಗ್ಗೆ ಅತ್ಯಂತ ಕುತೂಹಲಕರವಾದ ಕೆಲವೊಂದು ಸಂಗತಿಗಳನ್ನು ಹೇಳಿದ್ದರು. ಈ ವಿಚಾರವಾಗಿಯೇ ಒಂದು ಪ್ರಬಂಧ ಬರೆಯಬೇಕು ಎಂದು ನಾನು ಅವರನ್ನು ಕಾಡುತ್ತಿರುವುದರಿಂದ ಆ ಬಗ್ಗೆ ಇಲ್ಲಿ ವಿವರಗಳು ಬೇಡ. ಅನುಭವ ನಿಷ್ಠೆಯ ಅತಿರೇಕಗಳಿರಬಹುದು ಇವೆಲ್ಲ. ಹಾಗೆಯೇ ಕೆ ವಿ ಅಕ್ಷರ ಅವರು ತಮ್ಮ ಒಂದು ಉಪನ್ಯಾಸದಲ್ಲಿ ವಿವರಿಸಿದ ಎರಡಲುಗಿನ ಶಬ್ದ "ಅರ್ಥದ ಅಹಂಕಾರ" ಕೂಡ ಇಂಥ ನೆಲೆಯನ್ನು ಹೊಂದಿದ್ದೂ ಅದನ್ನೂ ಆಸಕ್ತರು ಗಮನಿಸಬಹುದು. ಆ ಉಪನ್ಯಾಸ ಚುಕ್ಕುಬುಕ್ಕು ತಾಣದಲ್ಲಿ ಕೇಳಲು ಲಭ್ಯವಿದೆ. ಅದೇನಿದ್ದರೂ ಅನುಭವವೊಂದು ಕತೆಯಾಗುವ, ಕತೆಮಾಡುವ, ಕತೆ ಬರೆಯುವ, ಹೇಳಿಕೊಳ್ಳುವ ಮತ್ತು ತದನಂತರ ಅದನ್ನು ಓದುವ/ಕೇಳುವ ಪ್ರಕ್ರಿಯೆಯಲ್ಲಿ ಅಸಹಜವಾದದ್ದು ಇದೆ ಮತ್ತು ಅದು ಕತೆಗಾರನಿಗೂ, ಓದುಗನಿಗೂ ಗೊತ್ತಿದೆ. ಯಾವ ಹಕ್ಕಿಯೂ, ಪ್ರಾಣಿಯೂ ಮಾಡದ ಕಿತಾಪತಿಯಿದು!

ಇನ್ನು ಮೂರನೆಯದು, ಒಂದು ಕಥಾವಸ್ತು ಧರ್ಮ, ಸ್ತ್ರೀಮತ, ರಾಜಕೀಯ ಅಥವಾ ಅಂಥ ‘ಇವತ್ತಿನ ಬಿಕ್ಕಟ್ಟಿನ ಸಮಾಜದಲ್ಲಿ ಸೂಕ್ಷ್ಮವಿಚಾರ’ಗಳಾಗಿ ಬಿಟ್ಟಿರುವ ಸಂಗತಿಯ ಸುತ್ತ ಇರುವಾಗ ಕತೆಗಾರ ವಹಿಸುವ ಕೆಲವೊಂದು ಪ್ರಜ್ಞಾಪೂರ್ವಕ ಜಾಗೃತೆಗಳು ಕತೆಯ ಆಕೃತಿ, ಆಶಯ ಮತ್ತು ಕಥನದ ಚೌಕಟ್ಟನ್ನು ನಿರ್ದೇಶಿಸುವ ಪ್ರಮಾಣ. ಇಲ್ಲಿ ಈ ಕತೆ ಎಷ್ಟರಮಟ್ಟಿಗೆ ಮೂಢನಂಬಿಕೆಯನ್ನು ಪೋಷಿಸುತ್ತದೆ ಮತ್ತು ಎಷ್ಟರಮಟ್ಟಿಗೆ ಅದನ್ನು ನೆಗೇಟ್ ಮಾಡುತ್ತದೆ ಎನ್ನುವ ಸಮಕಾಲೀನ ಸೂಕ್ಷ್ಮಗಳಿಗೆ ಕತೆಗಾರ ಎಚ್ಚರವಹಿಸುತ್ತ ಹೂಡುವ ತಂತ್ರಗಳು ಈ ದೃಷ್ಟಿಯಿಂದ ಮುಖ್ಯವಾಗುತ್ತವೆ. ಈ ಸಂಕಲನದ "ಎಷ್ಟು ಕಾಡತಾವ ಕಬ್ಬಕ್ಕೀ..." ಕತೆಯಲ್ಲಿ ರಾಘವೇಂದ್ರ ಪಾಟೀಲರು ಭೀಮಶಿಯ ಪುನರ್ಜನ್ಮದ ವೃತ್ತಾಂತವನ್ನು ನಿಜ ಎಂದು ಸ್ವೀಕರಿಸ ಬೇಕಾದ ನೆಲೆಯ ವಿವರಗಳನ್ನು ತರುತ್ತಾರೆಯೇ, ನಿಜವೂ ಆಗಿರಬಹುದಾದ, ಸುಳ್ಳೂ ಆಗಿರಬಹುದಾದ ನೆಲೆಯಲ್ಲೇ ತೂಗಿಸುತ್ತ ಉಳಿಸುತ್ತಾರೆಯೇ ಅಥವಾ ಪೂರ್ತಾ ಒಂದು ಬಗೆಯ ಮಾನಸಿಕ ವಿಭ್ರಾಂತಿಯಲ್ಲದೆ ಇನ್ನೇನೂ ಅಲ್ಲ ಎನ್ನುವ ನೆಲೆಯಲ್ಲಿ ಕೈಬಿಡುತ್ತಾರೆಯೇ ಎನ್ನುವುದು ಇಲ್ಲಿ ಮುಖ್ಯವಾಗುವ ಪ್ರಶ್ನೆ. (ಈ ಕುರಿತು ಅವರು ಅನುಬಂಧದಲ್ಲಿ ವಿವರಿಸಿದ್ದಾರೆ) ಮುಖ್ಯವಾಗ ಬೇಕಾದ ಪ್ರಶ್ನೆಯೇನೂ ಅಲ್ಲ ಎನ್ನುವ ಅಂಶವನ್ನು ಗಮನಿಸಿಯೂ ಹೇಳುವ ಮಾತಿದು. ಇಲ್ಲಿಯೇ ನಮಗೆ ಕೆ ವಿ ಅಕ್ಷರ ಅವರ "ಅರ್ಥದ ಅಹಂಕಾರ"ದ ಕಬಂಧ ಬಾಹುಗಳ ಆತಂಕ ಹುಟ್ಟುವುದೂ. ನನ್ನ ಇಡೀ ಬರಹ ಈ "ಅರ್ಥದ ಅಹಂಕಾರ"ದಿಂದ ಹುಟ್ಟಿರಬಹುದೇ ಎಂಬ ಸಂಶಯ ಇರಿಸಿಕೊಂಡೇ ನನ್ನ ಮಾತುಗಳನ್ನು ಆಡುತ್ತಿದ್ದೇನೆ, ಕಂಡುಕೊಳ್ಳುವುದಕ್ಕಾದರೂ ಆಡಬೇಕಿದೆ!

"ಮತ್ತೊಬ್ಬ ಮಾಯಿ" ಕತೆಯಲ್ಲಿ ಎದೆ ಕಲಕುವ ಕೇಂದ್ರವಿದೆ. ಅದು ಇನ್ನೊಂದು ಜೀವದ ಅತ್ಯಂತ ಸೂಕ್ಷ್ಮವಾದ ಸಂವೇದನೆಗಳನ್ನು ನಿರ್ದೇಶಿಸಲು, ನಿಯಂತ್ರಿಸಲು, ಪ್ರಚೋದಿಸಲು ನಮಗೆ ತಿಳಿದೋ ತಿಳಿಯದೆಯೋ ನಾವು ಮಾಡುವ ಪ್ರಯತ್ನಗಳು ಮಾನವೀಯ ನೆಲೆಯನ್ನು ಮೀರುವ ಸಾಧ್ಯತೆಯೊಂದರ ಕಡೆ ಅದು ಬೆಟ್ಟು ಮಾಡುತ್ತದೆ. ಇದು ನಾವೆಲ್ಲ ಸೂಕ್ಷ್ಮಜ್ಞ ಸಂವೇದನೆಗಳನ್ನು ಕಳೆದುಕೊಳ್ಳುತ್ತ, ಹಾಗೆ ಕಳೆದುಕೊಳ್ಳುವುದೇ ಪ್ರಬುದ್ಧತೆ ಅಥವಾ ಒಂದು ಫಿಟ್ ಅನಿಮಲ್ ಆಗುವ ಹಾದಿ ಎಂದು ತಿಳಿದುಕೊಂಡಿರುವುದನ್ನು ಪ್ರಶ್ನಿಸುವ ಕತೆ. ಒಂದರ್ಥದಲ್ಲಿ ಹೊಚ್ಚ ಹೊಸದೇನನ್ನೂ ಹೇಳದ ಅದೇ ಹಳೆಯ ಕತೆಯಿದು ಎಂದು ನಮಗನ್ನಿಸುತ್ತಿರುವ ಹೊತ್ತಿಗೇ, ಹಾಗನ್ನಿಸುತ್ತಿರುವುದನ್ನೇ ಪ್ರಶ್ನಿಸುವ ಆತ್ಮವುಳ್ಳ, ಸತ್ವವುಳ್ಳ ಕತೆ ಕೂಡ.

"ಎಷ್ಟು ಕಾಡತಾವ ಕಬ್ಬಕ್ಕೀ..." ಈಗಾಗಲೇ ಚುಕ್ಕುಬುಕ್ಕು ತಾಣದಲ್ಲಿ ಪ್ರಕಟವಾಗಿ ("ಪುನರ್ಭವ" ಎಂಬ ಹೆಸರಿನಲ್ಲಿ), ಸಾಕಷ್ಟು ಚರ್ಚೆಗೆ ಒಳಗಾದ ಕತೆ. ಒಂದು ಹಂತದ ವರೆಗೆ ಮಾಂತ್ರಿಕ ವಾಸ್ತವದ ಆಯಾಮದಲ್ಲೇ ಸಾಗುವ ಲಕ್ಷಣಗಳನ್ನು ತೋರಿದ ಕತೆ ಅದೇ ಲಯದಲ್ಲಿ ಮುಂದುವರಿಯುವ ಉದ್ದೇಶವೇನೂ ತನಗಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುವಂತೆ ಇದೊಂದು "ಆಶ್ಚರ್ಯಕರ-ಆದರೂ ನಂಬಲೇ ಬೇಕಾದ" ವಿದ್ಯಮಾನ ಎಂಬ ನೆಲೆಯಲ್ಲೇ ಸ್ಥಾಪಿಸಿ ಅಂಥ ಆಯಾಮದ ಕೋನದಲ್ಲಿಯೇ ನಾವು ಬದುಕನ್ನು, ಅದು ನಮ್ಮ ಮುಖಕ್ಕೆ ಒಗೆಯುವ ಪ್ರಶ್ನೆಗಳನ್ನು ಬನ್ನಿ, ಇದನ್ನು ಎದುರಿಸಿ ಎನ್ನುತ್ತದೆ. ಹಾಗೆ ಓದುಗನನ್ನು ಕೈಬಿಟ್ಟ ಘಳಿಗೆಯಲ್ಲಿ ಅವನು ಕಂಗಾಲಾಗುತ್ತಲೇ ಓಹ್, ಎಂಥ ಅದ್ಭುತ ಕತೆಯಿದು ಎನ್ನುವ ಭ್ರಮೆಗೆ ಬೀಳುತ್ತಾನಾದರೂ ಕತ್ತಲೆಗೆ ಕಣ್ಣು ಹೊಂದಿಸಿಕೊಂಡು ಕನಿಷ್ಟ ತಡಕಾಡುವ ಸ್ಥಿತಿಗೆ ಬಂದ ಮೇಲೆ ತಡಕಾಡಲು ಕತೆಗಾರರು ಏನನ್ನೂ ಉಳಿಸಿಲ್ಲ ಎನ್ನುವುದನ್ನೂ ಕಂಡುಕೊಂಡು ಸ್ವಲ್ಪ ಪೆಚ್ಚಾಗುತ್ತಾನೆ ಕೂಡ!

ಕೊನೆಗೂ ಈ ಸುದೀರ್ಘ ಕತೆ "ಇಂಥ ಎಲ್ಲಾ ಚರ್ಚೆಗಳೂ ಸಾಗಿದಂತೆ ಕ್ರಮೇಣ ಅಮೂರ್ತವೂ ಅಸಂಗತವೂ ಆಗುತ್ತ ಕೊನೆಗೊಳ್ಳತ್ತವೆಯೋ ಏನೋ!" ಎಂಬ ಅದೇ ಹಳಸಲು ರಾಗವನ್ನೇ ಮತ್ತೊಮ್ಮೆ ಮೀಂಟುವ ಸಿದ್ಧ ಮಾದರಿಯ ನೆಲೆಯನ್ನಷ್ಟೇ ತಲುಪುವುದು ಸಾಧ್ಯವಾಗುತ್ತದೆಯೇ ಹೊರತು ಷೇಕ್ಸ್‌ಪಿಯರನ ಮ್ಯಾಕ್‌ಬೆಥ್ ಬಳಸಿಕೊಳ್ಳುವ ಮಿಥ್, ಡಿಗಸ್‌ಕರ್ ತಳವಾರ ಬಸವಂತನ ಮಗನ ಭಯಕ್ಕೆ ಸೂಚಿಸುವ ಪರಿಹಾರೋಪಾಯ - ಇವೆರಡರ ಜೊತೆ ಅನುಸಂಧಾನಕ್ಕೆ ಯೋಗ್ಯವಾದ ಮೂರನೆಯ ಒಂದು ಆಯಾಮವನ್ನು ಒಡ್ಡುವುದಕ್ಕೆ ಅದಕ್ಕೆ ಸಾಧ್ಯವಾಗಿಲ್ಲ.

ಭೀಮಶೀಯದು ಬರಿಯ ವಿಭ್ರಾಂತಿಯಲ್ಲ ಎಂಬಂತೆ ಕತೆಗಾರರು ಓದುಗನಿಗೆ ಒಡ್ಡುವ ಅತಿಯಾದ ವಿವರಗಳೇ ಇಲ್ಲಿನ ಪ್ರಮುಖ ತೊಡಕು ಎನ್ನುವಾಗ ನಾನು ಒಂದು ವಿಧದಲ್ಲಿ ಕತೆಗೆ ಒಂದು ಪೂರ್ವಾಗ್ರಹ ಪೀಡಿತ ಆಯಾಮವನ್ನು ಹೇರುವ ನಿಲುವನ್ನು ತೆಗೆದುಕೊಂಡಂತಾಗುತ್ತದೆ ಎಂಬ ಅರಿವು ಮತ್ತು ಅಳುಕು ಇರಿಸಿಕೊಂಡೇ ಇದನ್ನು ಹೇಳುತ್ತಿದ್ದೇನೆ. ಒಂದು ಹಂತದಲ್ಲಿ ಅದು ವಿಭ್ರಾಂತಿ ಎಂದೇ ಸಾಧಿಸುವ ಉಮೇದಿನಲ್ಲಿದ್ದಂತೆ ಕಾಣುವ ಸಂಭಾಷಣೆಯ ಓಘ ಬಹುಬೇಗ ಅದನ್ನು ಬಿಟ್ಟುಕೊಡುತ್ತದೆ. ಮುಂದೆ ಜೈನರಲ್ಲಿ ಪುನರ್ಜನ್ಮದ ನಂಬಿಕೆಯಿಲ್ಲ ಎನ್ನುವ ಹುಂಬ ವಾದ ಪ್ರತ್ಯಕ್ಷವಾಗುವ ಘಟ್ಟದಲ್ಲಿ ಅದೆಲ್ಲ ಅಗತ್ಯವೇ ಇರಲಿಲ್ಲವೆನ್ನುವಷ್ಟು ಕತೆ ಬೇರೆಯೇ ನೆಲೆಯಲ್ಲಿ ಮುಂದುವರಿದಾಗಿರುತ್ತದೆ. ಭೀಮಶೀಯದು ನಿಜಕ್ಕೂ ನಂಬಲಸಾಧ್ಯವಾದ, ಆದರೆ ವಿವರಗಳು ‘ಮ್ಯಾಚ್’ ಆಗುವುದರಿಂದ ನಂಬಲೇ ಬೇಕಾದ ವಿಸ್ಮಯಕಾರಕ ಸತ್ಯ ಎನ್ನುವುದೇ ಆದಲ್ಲಿ ಕತೆಯ ಉದ್ದೇಶ ಸೀಮಿತವಾದ ನೆಲೆಯದ್ದು. ಕತೆಯ ಕೊನೆಯ ಸಾಲಿಗಷ್ಟೇ ಬದ್ಧವಾದದ್ದು.

ಹಾಗಲ್ಲ, ಅದು ಕೇವಲ ವಿಭ್ರಾಂತಿ ಎನ್ನುವ ನಿಲುವಿನಿಂದ ನೋಡಿದರೆ ಆಗ ಹಿಂಸೆಯ ವಿರುದ್ಧ ಭೀಮಶೀಯ ಸುಪ್ತ ಮನಸ್ಸು ಹೂಡಿದ ಒಂದು ಯೋಜಿತ ಹೋರಾಟ ಇದು ಎಂದಾಗುವ ಸಾಧ್ಯತೆಯಿತ್ತು. ಪುನರ್ಜನ್ಮದ ಪರಿಕಲ್ಪನೆಯೇ ಒಂದು ವಿಭ್ರಾಂತಿ ಮತ್ತು ಈ ಭ್ರಾಂತಿಯ ತರ್ಕಬದ್ಧ ವಿವರಣೆ ನಾವು ಭಾವಿಸಿದ ರೀತಿಯಲ್ಲಿರದೇ ಅದನ್ನು ಬೇರೆಯೇ ನೆಲೆಯಲ್ಲಿ ವಿವರಿಸಲು ಕೂಡ ಸಾಧ್ಯವಿದ್ದೀತು ಎನ್ನುವ ನಂಬಿಕೆ ನನ್ನದು. ಇಂಥ ವ್ಯಕ್ತಿಗತ ನಂಬಿಕೆಗಳು ಕತೆಗಾರರ ನಿಲುವಿನೊಂದಿಗೆ ಹೊಂದಿಕೊಳ್ಳದೇ ಇರುವುದು ಕೃತಿಯೊಂದರ ವಿಮರ್ಶೆಗೆ ತೊಡಕಾಗಬಾರದು ಎನ್ನುವ ಕಾರಣಕ್ಕೆ ಆ ನೆಲೆಯ ಚರ್ಚೆಯನ್ನು ಇಲ್ಲಿ ಮುಂದುವರಿಸುವುದು ಸರಿಯೂ ಅಲ್ಲ. ಮನುಷ್ಯನ ಮೆದುಳು ಏನನ್ನಾದರೂ ಗ್ರಹಿಸುವ ಒಂದು ಪ್ರಕ್ರಿಯೆಯ ಕುರಿತೇ ನಡೆಯುತ್ತಿರುವ ಇತ್ತೀಚಿನ ಸಂಶೋಧನೆಗಳು ಇಂಥ ಭ್ರಮೆಯನ್ನು ಕೂಡ ಅದು ಕೇವಲ ಭ್ರಮೆಯಲ್ಲ ಎನ್ನುವ ನಿಟ್ಟಿನಲ್ಲೇ ವಿವರಿಸುವಷ್ಟು ಮುಂದುವರಿದಿರುವುದು ನಿಜವೇ. (ಆಸಕ್ತರು ದಯವಿಟ್ಟು Micho Kaku ಬರೆದ ಇತ್ತೀಚಿನ ಕೃತಿ Future of Mind ಗಮನಿಸಬಹುದು.)

ಕೊನೆಗೂ ನಾವು ಯಾವುದಕ್ಕೆ ಅಂಟಿಕೊಂಡು ನಿಲ್ಲಲು ಬಯಸುತ್ತೇವೆ ಎನ್ನುವಲ್ಲಿ ಅದರ ಸಾಧಕ ಬಾಧಕಗಳೇನು ಎಂಬ ವಿವೇಚನೆ ಮತ್ತು ಹಾಗೆ ಮಾಡುವುದರಿಂದ ಸಾಧಿಸುವುದೇನು ಎಂಬ ತರ್ಕ ಮುಖ್ಯವಾಗಬೇಕು. ಧಾರ್ಮಿಕ ನಂಬುಗೆಯೊಂದು ಜನ್ಮಾಂತರಕ್ಕೂ ನೆಚ್ಚಿಕೊಂಡೇ ಬರುತ್ತದೆ ಮತ್ತು ಕುರುಡಾಗಿ ಅದರ ಆಚರಣೆಯನ್ನು ಸಾಧಿಸುವುದಕ್ಕೆ ಉಳಿದುದೆಲ್ಲವನ್ನೂ (ಸಂಬಂಧ/ಕೌಟುಂಬಿಕ ವ್ಯವಸ್ಥೆ/ಭಾವನಾತ್ಮಕ ಸಂವೇದನೆಗಳು) ಮೆಟ್ಟಿನಿಲ್ಲಲು ಉದ್ಯುಕ್ತವಾಗುತ್ತದೆ ಎನ್ನುವಲ್ಲಿಯೇ ಭೀಮಶೀಯಲ್ಲಿ ಮುಖ್ಯವಾಗಬೇಕಿದ್ದುದು ಮುಖ್ಯವಾಗದೇ, ಮೊಂಡುತನವಷ್ಟೇ ಮುಂದುವರಿದಿದೆ ಎನ್ನುವುದಕ್ಕೆ ಸೂಚನೆ. ಇಂಥದ್ದರ ಮುಂದುವರಿಕೆ, ಅದು ಪುನರ್ಜನ್ಮದಿಂದಲೇ ಆಗಲೊಲ್ಲದೇಕೆ, ಆಗುವುದು ವಿಕಾಸದ ಹಾದಿಯನ್ನಂತೂ ಸೂಚಿಸುತ್ತಿಲ್ಲ ಅಲ್ಲವೆ? ಕತೆಯ ಬಗ್ಗೆಯೂ ಅನಿಸುವ ಮಾತಿದು. ಆದರೆ ಪಾಟೀಲರು ಮೂಗನೊಬ್ಬನ ಸಂವೇದನೆಗಳಿಗೆ ಮಾತು ನೀಡುವುದಕ್ಕಷ್ಟೇ ಒಂದು ಹೊಸ ಜನ್ಮದ ಪರಿಕಲ್ಪನೆಯನ್ನು ಬಳಸಿಕೊಂಡೆನೇ ಹೊರತು ಪುನರ್ಜನ್ಮದ ಕುರಿತಾದ ಜಿಜ್ಞಾಸೆಗಳೊಂದೂ ತಮಗೆ ಮುಖ್ಯವಾಗಿಲ್ಲ ಎಂದಿದ್ದಾರೆ. ಒಪ್ಪಬಹುದಾದ ಮಾತೇ. ಕತೆಗಾರ ತಾನು ಹೇಳಬೇಕಾದುದನ್ನು ಹೇಳಲು ಯಾವೆಲ್ಲ ಬಗೆಯ ಅನುಕೂಲಗಳನ್ನು ದುಡಿಸಿಕೊಂಡರೂ ಅದನ್ನು ತರ್ಕಕ್ಕೊಡ್ಡಿ, ವಾಸ್ತವದ ಅಥವಾ ಸಂಭಾವ್ಯ ಪರಿಕಲ್ಪನೆಗಳ ಮೂಸೆಯಲ್ಲಿಟ್ಟು ತೂಗಬೇಕಾದುದಿಲ್ಲ. ಆದರೆ ಹಾಗೆ ದುಡಿಸಿಕೊಂಡು ಸಾಧಿಸಿದ್ದೇನೆ ಎಂಬ ಅಂಶ ಮುಖ್ಯವಾಗುತ್ತದೆ, ಮೊದಲಿಗೇ ಕತೆಗಾರ ವಹಿಸಿರುವ ಎಲ್ಲ ಮುನ್ನೆಚ್ಚರಿಕೆ ಅಥವಾ ಮಾನವೀಯ ನೆಲೆಯಿಂದ, ಎದೆಕಲಕಿದ ವಿದ್ಯಮಾನವನ್ನಷ್ಟೇ ಕತೆಗಾರಿಕೆಯ, ಕಲೆಯ ಕಸುಬುದಾರಿಕೆಯ ಗಿಲ್ಮಿಟ್ ಇಲ್ಲದೇನೆ ಹೇಳಲು ಹೊರಟಿದ್ದಷ್ಟೇ ಎಂಬ ನೆಲೆಯನ್ನು ಗಮನಿಸಿಯೂ ಇದೆಲ್ಲ ಮುಖ್ಯವಾಗುತ್ತದೆ.

ಸಾಹಿತ್ಯದಿಂದ ನಾವು ಮನುಷ್ಯರಾಗುವ ಪ್ರಯತ್ನಕ್ಕೆ ಇಂಬು ದೊರೆಯುತ್ತ ಬಂದಿದೆ, ನಾವು ಹೆಚ್ಚು ಹೆಚ್ಚು ಮನುಷ್ಯರಾಗಲು ಸಾಧ್ಯವಾಗಿದೆ ಎನ್ನುವುದು ನಿಜವಾಗಿರುವಾಗಲೂ, ಚಿತ್ತಾಲ, ಪಾಟೀಲ, ಜಯಂತ ಪ್ರಧಾನವಾಗಿ ಇದನ್ನೇ ಮಾಡುತ್ತ ಬಂದಿದ್ದಾರೆಂಬುದು ನಿಜವಾಗಿರುವಾಗಲೂ, ಬರಹಗಾರರೂ, ಓದುಗರೂ ಹೆಚ್ಚು ಹೆಚ್ಚು ಸಂವೇದನಾಶೀಲರಾಗಿರುವಾಗಲೂ ನಮ್ಮ ಸುತ್ತ ಇಷ್ಟೊಂದು ಹಿಂಸೆ, ದೌರ್ಜನ್ಯ, ಅನ್ಯಾಯಗಳು ಕೂಡ ಇರುವುದು ಫ್ಯಾಕ್ಟ್. ಫಿಕ್ಷನ್ ಅಲ್ಲ. ರೈತರ ಆತ್ಮಹತ್ಯೆಗೆ ಗ್ರಾಮೀಣ ಪರಿಸರ ಸಾಹಿತ್ಯದಿಂದ ದೂರವಾಗುತ್ತಿರುವುದೂ ಒಂದು ಕಾರಣ ಎಂದು ಇತ್ತೀಚೆಗೆ ಎಚ್ಚೆಸ್ವಿಯವರು ಹೇಳಿದರೆಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಕೆ ವಿ ತಿರುಮಲೇಶರು ಹಿಂದೊಮ್ಮೆ ಹೊಲದಲ್ಲಿ ದುಡಿದು ಬೆಳೆ ತೆಗೆವ ರೈತನ ಕಾಯಕದಷ್ಟು ಸಾಹಿತಿಯ ಕಾಯಕ ದೊಡ್ಡದಲ್ಲ ಎಂಬರ್ಥದ ಮಾತನ್ನಾಡಿದ್ದರು. ನಾವು ಒಂದಿಷ್ಟು ಮಂದಿ ಬರೆಯುವುದು, ಪ್ರಕಟಿಸುವುದು, ಪ್ರಚಾರಕ್ಕೆ ಹಾತೊರೆಯುವುದು, ಪ್ರಶಸ್ತಿ-ಸನ್ಮಾನ-ಸತ್ಕಾರ ಬೇಕು ಎಂದೆಲ್ಲ ಲಾಬಿ ನಡೆಸುವುದು-ನಮ್ಮ ಪರವಾಗಿ ನಡೆಸಲು ಮುಂದಾಗುವವರನ್ನು ತಡೆಯದಿರುವುದು, ಅವೆಲ್ಲ ಸಿಕ್ಕಾಗ ಸಂತೋಷದಿಂದಲೇ ಒಪ್ಪಿಕೊಂಡು ಸ್ವೀಕರಿಸುವುದು, ವಿಮರ್ಶೆಗೆ ಕಾಯುವುದು, ಯಾರೋ ಕೆಲವು ನಿರ್ದಿಷ್ಟ ವ್ಯಕ್ತಿಗಳ ಪ್ರತಿಕ್ರಿಯೆಗೆ ಇನ್ನಿಲ್ಲದ ಮಹತ್ವ ನೀಡಿ ಮನಸ್ಸು ಮುದುಡಿಸಿಕೊಳ್ಳುವುದೋ-ಹಿರಿಹಿರಿ ಹಿಗ್ಗುವುದೋ ಮಾಡುವುದು - ಮುಂತಾದ ಚಟುವಟಿಕೆಯಲ್ಲಿ ಅಷ್ಟಿಷ್ಟಾದರೂ ತೊಡಗಿಕೊಂಡಿರುವಾಗಲೇ ಇದೆಲ್ಲ ಏನೂ ಇಲ್ಲದೆ ಬದುಕುವವರು ತುಂಬ ಮಂದಿ ಇಲ್ಲವೆ? ಮತ್ತು ಅವರೆಲ್ಲ ಸುಖವಾಗಿಲ್ಲ ಎನ್ನಲು ಸಾಧ್ಯವೆ? ಹಾಗೆಯೇ ಸಾಹಿತ್ಯದ ಅಭಿರುಚಿ, ಬಳಕೆ ಎಲ್ಲವೂ ಸಮೃದ್ಧಿಕಾಲದ ಮಾತಾಯಿತು ಎನಿಸುವುದಿಲ್ಲವೆ? "...........our best songs are those that tell us of our saddest tales" ಎಂಬ ಡಾ.ಪ್ರಭಾಕರ ಮ.ನಿಂಬರಗಿಯವರು "ಸ್ಪಂದನ" ದಲ್ಲಿ ಕೋಟ್ ಮಾಡಿರುವ ಮಾತುಗಳನ್ನು ಒಪ್ಪಿಯೂ ಈ saddest tales ಅಥವಾ ಈ songs ಕೊನೆಗೂ ತಲುಪುವುದು ತಲುಪಬೇಕಾದ ಅಗತ್ಯ ಇರುವವರನ್ನಾಗಿರದೇ, ತಲುಪುವ ಮುನ್ನವೇ ತಿಳಿದಿರುವ ಮತ್ತು ತಿಳಿದೂ ಏನೂ ಬದಲಾಗದೇ ಉಳಿದಿರುವ ಮಂದಿಯನ್ನೇ ಎನ್ನುವುದು ನಮ್ಮ ಕಾಲದ ಕಠೋರ ಸತ್ಯಗಳಲ್ಲಿ ಒಂದು ಮತ್ತು ಮುಖ್ಯವಾದದ್ದು. ಹೀಗಾಗಿಯೋ ಏನೋ, ಚಿತ್ತಾಲರಾದಿಯಾಗಿ ಕತೆಯ ಕಸಬುದಾರಿಕೆಯ ಕೃತಕತೆಯನ್ನು ಹಂಗಿಸಿ, ನಿಂದಿಸಿ ತೊಡಗುವುದೂ ಕತೆಗಾರನ ಗಿಮ್ಮಿಕ್ ಆಗಿ ಕಾಣುವ, ಕ್ಲೀಷೆ ಎನಿಸುವ ಸ್ಥಿತಿಯೊಂದನ್ನು ನಾವು ತಲುಪಿದ್ದೇವೆ ಎನಿಸುತ್ತದೆ.

(ಈ ಲೇಖನದ ಆಯ್ದ ಭಾಗ ಸಂಕಥನ ತ್ರೈಮಾಸಿಕದ ಎರಡನೇ ಸಂಚಿಕೆಯಲ್ಲಿ ಪ್ರಕಟವಾಗಿದೆ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ