Tuesday, November 10, 2015

ಬಿಟ್ಟೂ ಬಿಡದೆ ಕಾಡುವ "ಎಷ್ಟು ಕಾಡತಾವ ಕಬ್ಬಕ್ಕೀ..."

ಈ ಸಂಕಲನದ ಎರಡೂ ಕತೆಗಳಿಗೆ ಸಮಾನವಾದ ಒಂದು ನೆಲೆಯಿದೆ. ವಿಮರ್ಶೆ, ತರ್ಕ ಮತ್ತು ಜಿಜ್ಞಾಸೆಗೆ ವಾಸ್ತವ ಬದುಕನ್ನು, ಅನುಭವವನ್ನು ಒಡ್ಡಿ ವಿಶ್ಲೇಷಣೆ ಮಾಡುವುದನ್ನು ನಿವಾರಿಸುವ ನೆಲೆ. ಬದುಕು ದೊಡ್ಡದು, ಅನುಭವ ದೊಡ್ಡದು, ಅದನ್ನು ಕತೆಯಾಗಿಸುವ, ಪ್ರಕಟಿಸುವ, ವಿಮರ್ಶಿಸಿ ತಮ್ಮ ವಿಮರ್ಶಾ ಹತಾರುಗಳನ್ನು ಫಳಫಳ ಬೆಳಗಿಸಿ ಪಾಂಡಿತ್ಯ ಮೆರೆಯುವುದು ಸಣ್ಣದು ಎನ್ನುವುದನ್ನು ಪ್ರಕಟವಾಗಿಯೇ ಹೇಳಿ ಅಥವಾ ಲೇವಡಿ ಮಾಡಿ ಮೊದಲಿಗೇ ಒಂದು ಬಗೆಯ ಕವಚ ಧಾರಣೆ ಮಾಡಿಕೊಂಡೇ ಹೊರಡುವುದು ಇದರ ಪದ್ಧತಿ. ಅದನ್ನು ಇಲ್ಲಿನ ಎರಡು ಕತೆಗಳೂ ಮಾಡುತ್ತದೆ. ಕಥನದ ತಂತ್ರವಾಗಿ ಮಾಡುತ್ತದೆಯೇ ಅಥವಾ ಸಹಜವಾಗಿ ಕತೆಗಾರನ ನಿಲುವಿನ ಅಂಶವಾಗಿ ಮಾಡುತ್ತದೆಯೇ ಎನ್ನುವುದು ಪ್ರಶ್ನೆ.

ಸಂಕಲನದ ಮೊದಲ ಕತೆ "ಮತ್ತೊಬ್ಬ ಮಾಯಿ" ಕತೆಗೆ ನೇರವಾಗಿ ಪಾಟೀಲರ "ಮಾಯಿಯ ಮುಖಗಳು" ಮತ್ತು "ದೇಸಗತಿ" ಸಂಕಲನದ ಕತೆಗಳೊಂದಿಗೆ ಸಂಬಂಧವಿದೆ. ಇಲ್ಲ ಎಂದುಕೊಂಡೂ ಓದಬಹುದಾದ ಕತೆ ಎಂಬ ಕಾರಣಕ್ಕೆ ಅದನ್ನು ಬಿಟ್ಟೇ ನೋಡಬಹುದು. ಆದರೆ ಈ ಕತೆಗೆ ಚಿತ್ತಾಲರ "ಕತೆಯಾದಳು ಹುಡುಗಿ" ಮತ್ತು "ನೀವೇ ಬರೆಯಬೇಕಿದ್ದ ಕತೆ" ಕತೆಗಳೊಂದಿಗೂ ಒಂದು ನಂಟಿದೆ. ಒಂದು ಕತೆಯೊಂದಿಗಿರುವ ನಂಟು ಕಥಾನಕಕ್ಕೂ ಸಲ್ಲುತ್ತದೆ. ಎರಡೂ ಕತೆಗಳಲ್ಲಿ ಚಿತ್ತಾಲರು ಕೂಡಾ ಮೇಲೆ ಹೇಳಿದಂಥ ಒಂದು ನೆಲೆಯನ್ನು ದುಡಿಸಿಕೊಂಡಿದ್ದಾರೆ.

ಇದೇ ರೀತಿ ಈ ಸಂಕಲನದ ಎರಡೂ ಕತೆಗಳಿಗೆ ಸಮಾನವಾದ ಇನ್ನೊಂದು ಅಂಶವೂ ಇದೆ. ಇದನ್ನು ಹೀಗೆ ವಿವರಿಸುತ್ತೇನೆ. ಇನ್ನೊಂದು ಬಗೆಯವರಿದ್ದಾರೆ. ಇವರು ‘ನಾನು ಹೇಳುತ್ತಿರುವುದು ನಿಜಕ್ಕೂ ನಡೆದದ್ದು, ಇದರಲ್ಲಿ ಒಂದಕ್ಷರವೂ ಸುಳ್ಳು ಅಥವಾ ನಡೆಯದೇ ಇದ್ದುದು ಇಲ್ಲ’ ಎಂದು ಒತ್ತಿ ಒತ್ತಿ ಹೇಳಿ "ನೀವು ವಿಮರ್ಶೆ ಮಾಡಲು ಇದೇನೂ ಕಟ್ಟುಕತೆಯಲ್ಲ, ಗೊತ್ತಾಯ್ತಲ್ಲ! ಇದೆಲ್ಲ ನಡೆದದ್ದೇ ಹೀಗೆ! ಹೋಗಿ ಯಾರನ್ನ ಬೇಕಾದ್ರೂ ಕೇಳಿ ಬೇಕಾದ್ರೆ! " ಎಂದು ಅಪರೋಕ್ಷ ಬೆದರಿಕೆ ಹಾಕುವವರು. ತಮಾಷೆ ಎಂದರೆ ಹಾಗೆ ಹೇಳುವವರೂ ಕೂಡ ತಾವು ಬರೆದುದನ್ನು ‘ಕತೆ’ ಇಲ್ಲವೇ ‘ಕಾದಂಬರಿ’ ಎಂದು ಹೇಳಿಕೊಳ್ಳಲು ಇಷ್ಟಪಡುತ್ತಾರೆಯೇ ಹೊರತು ಇದು ‘ಆತ್ಮಕಥನ’ವೆಂದೋ, ಒಂದು ‘ಅನುಭವ ಕಥನ’ ಎಂದೋ ಹೇಳಿಕೊಂಡು ನೇರ ನಿರೂಪಣೆಗೆ ಇಳಿಯುವುದಿಲ್ಲ. ಸ್ವಲ್ಪ ಕೆಣಕಿದರೆ ಫಾರ್ಮೇಟ್ ಎನ್ನುವುದೆಲ್ಲ ಒಂದು ಭ್ರಮೆ, ಇವತ್ತು ಫಾರ್ಮೆಟ್ ಎನ್ನುವುದೇ ಇಲ್ಲ ಎಂದು ದಬಾಯಿಸಿ ಫಾರ್ಮೆಟ್ ಬಗ್ಗೆ ನಿಷ್ಠೆಯಿಂದ ಮಾತನಾಡುತ್ತಿರುವ ನೀವೇ ಯಾವ ಹಳೆಗಾಲದ ಗುಗ್ಗುಗಳೋ ಎಂದು ನಿಮಗೇ ಅನಿಸಬೇಕು ಹಾಗೆ ಘರ್ಜಿಸಿಬಿಡುತ್ತಾರೆ. ಆದಾಗ್ಯೂ, ತಮ್ಮ ಕತೆ/ಕಾದಂಬರಿಗೆ ‘ಇದು ಫಾರ್ಮೆಟ್ಟಿನ ಹಂಗಿಲ್ಲದ ಕೃತಿ’ ಎನ್ನುವ ಅಥವಾ ತಮ್ಮದು ‘ನುಡಿಚಿತ್ರ’, ತಮ್ಮದು ‘ಹರಟೆ ಅಲ್ಲ, ಇದು ಕರಟೆ’ ಅಥವಾ ‘ಸೃಜನಶೀಲ ಸಂಕಥನ’ ಎಂದೋ ಇನ್ನೇನೋ ಎಂದೆಲ್ಲ ಹೇಳಿಕೊಳ್ಳದೆ ತಮ್ಮದು ಸಾದಾ ಕಥಾಸಂಕಲನವೇ, ಅಪ್ಪಟ ಕಾದಂಬರಿಯೇ ಎಂದು ಸ್ಪಷ್ಟವಾಗಿ ಹಾಕಿಕೊಳ್ಳುವುದು ವಿಚಿತ್ರ. ಎಷ್ಟೇ ವಾಸ್ತವವಾಗಿ ನಡೆದದ್ದು ಮತ್ತು ಒಂದಿಷ್ಟೂ ‘ಕೈಯಿಂದ ಹಾಕಿದ್ದು’ ಇಲ್ಲದ ವರದಿಗಾರನ ನಿಷ್ಠೆಯಿಂದ ತೊಳೆದಿಟ್ಟ ವಿವರಗಳೇ ಇದ್ದರೂ ಅದನ್ನು ನೀವು ಕತೆ ಎಂದು ಹೇಳಲು ಹೊರಟಾಗಲೇ ಕತೆಗಾರಿಕೆಯ ಕಸುಬು ಒಪ್ಪಿಕೊಂಡಿರುವುದರಿಂದ ನೀವೇ ವಹಿಸಿಕೊಂಡ ನಿಮ್ಮದೆ ಕಸುಬಿಗೆ ನಿಷ್ಠೆಯಿಂದಿರುವಿರಾದಲ್ಲಿ, ಆ ಕಸುಬಿನ ಬಗ್ಗೆ ಮಾತನಾಡಲು ಓದುಗರಿಗೆ (ವಿಮರ್ಶಕರು ಓದುಗರೇ) ಬಿಡಿ. ವಿಮರ್ಶೆಯಲ್ಲಿ ಇರುವಷ್ಟೇ ಕೃತಕವಾದದ್ದು ಕತೆಗಾರನ ‘ಕತೆಗಾರಿಕೆ’ಯ ಹತಾರಗಳಲ್ಲೂ ಇರುವುದರಿಂದ ಒಬ್ಬರು ಇನ್ನೊಬ್ಬರನ್ನು ದೂರುವುದು ಮೂರನೆಯವರಿಗೆ ಅಸಹ್ಯವಾಗಿ ಕಾಣುವುದಷ್ಟೇ ಸಾಧನೆ! ಹೀಗೆ ಈ ಸಂಕಲನದ ಎರಡೂ ಕತೆಗಳು ತಾವು ವಿಮರ್ಶಾತೀತ ಎಂದುಕೊಳ್ಳಲು ಅಥವಾ ಕತೆ ವಿಮರ್ಶೆಯಿಂದ ಸ್ವತಂತ್ರವಾದ ಅಸ್ತಿತ್ವವನ್ನು ಹೊಂದಿರುವುದರಿಂದ ಅದಕ್ಕೆ ವಿಮರ್ಶೆಯ ಹಂಗಿರುವುದಿಲ್ಲ ಎಂದುಕೊಳ್ಳುವುದಕ್ಕೂ ಕಾರಣವಿಲ್ಲ. ಸಂಕೀರ್ಣವಾದ ಬಂಧವುಳ್ಳ ಯಾವುದೂ ಓದಿನ ನಂತರದ ಚರ್ಚೆ, ಜಿಜ್ಞಾಸೆ, ಕೊನೆಯ ಪಕ್ಷ ಆ ಕೃತಿಯ ಕುರಿತ ಕೆಲಕ್ಷಣದ ಚಿಂತನೆ ಇಲ್ಲದೇ ಪರಿಪೂರ್ಣವಾಗುವುದಿಲ್ಲ. ಹೀಗೆ ಓದಿ ಹಾಗೆ ಮರೆಯಬಹುದಾದ ಬರಹಗಳ ವಿಚಾರ ಬೇರೆ.

ಇಲ್ಲೇ ವಿವರಿಸಬಹುದಾದ ಮತ್ತೊಂದು ಮಾತಿದೆ. ಇತ್ತೀಚೆಗೆ ತೀರಿಕೊಂಡ ಅಮೆರಿಕದ ಪ್ರಖ್ಯಾತ ಕಾದಂಬರಿಕಾರ ಡಾಕ್ಟರೊವ್ ತನ್ನ ಕಾದಂಬರಿಗಳನ್ನು ಕಟ್ಟುತ್ತಿದ್ದ ಬಗೆ ಅತ್ಯಂತ ವಿವಾದಾತ್ಮಕವಾದದ್ದು. ಈತ ಜೀವಂತ ವ್ಯಕ್ತಿಗಳನ್ನೂ, ಚರಿತ್ರೆಯ ವ್ಯಕ್ತಿಗಳನ್ನೂ ಬಳಸಿಕೊಂಡು, ಅವರ ಬದುಕಿನಲ್ಲಿ ನಡೆಯದೇ ಇದ್ದ ಘಟನೆಗಳನ್ನೂ ನಡೆದ ಹಾಗೆಯೇ ನಿರೂಪಿಸುತ್ತ ಚರಿತ್ರೆ ಯಾವುದು, ಕಲ್ಪನೆ ಯಾವುದು ಎಂದು ಗೊತ್ತಾಗದ ಹಾಗೆ ಬರೆದು ವಿವಾದ ಸೃಷ್ಟಿಸಿದ್ದ! ಈ ಬಗ್ಗೆ, ಈ ವಿಧಾನದ ಬಗ್ಗೆ ಸಾಕಷ್ಟು ಚರ್ಚೆ, ವಾಗ್ವಾದ ಎಲ್ಲ ನಡೆದಿತ್ತಂತೆ. ಈತ ಒಂದೆಡೆ ಎಲ್ಲಾ ಇತಿಹಾಸಕಾರರು ಬರೆದಿದ್ದೂ ಫಿಕ್ಷನ್ನೇ ಹೊರತು ಇನ್ನೇನಲ್ಲ ಎಂಬ ಅರ್ಥಪೂರ್ಣವಾದ ಹೇಳಿಕೆಯನ್ನಿತ್ತಿದ್ದಾನೆ. ಫ್ಯಾಕ್ಟ್ ಎಂದು ನಾವು ಕರೆಯುವುದನ್ನು ಬರಹಕ್ಕೆ ಇಳಿಸುವ ಹಂತದಲ್ಲಿಯೇ ಅದು ಫಿಕ್ಷನ್ ಆಗಿ ಬಿಡುತ್ತದೆ ಎಂದು ಮತ್ತೂ ಒಬ್ಬಾತ, ಹಿರಿಯ ವಿದ್ವಾಂಸ ಹೇಳಿದ್ದು, ನನಗೀಗ ಆತನ ಹೆಸರು ಮರೆತಿದೆ. ಇತ್ತೀಚೆಗೆ ಎಸ್. ದಿವಾಕರ್ ಅವರ ಬಳಿ ಮಾತನಾಡುತ್ತಿದ್ದಾಗ ಅವರೂ ಈ ಫ್ಯಾಕ್ಟ್ ಮತ್ತು ಫಿಕ್ಷನ್ ನಮ್ಮ ಕನ್ನಡ ಸಾಹಿತ್ಯವನ್ನು ಕಾಡಿ-ಕದಡಿ-ಹಿಂಡಿರುವ ವೈಚಿತ್ರ್ಯದ ಬಗ್ಗೆ ಅತ್ಯಂತ ಕುತೂಹಲಕರವಾದ ಕೆಲವೊಂದು ಸಂಗತಿಗಳನ್ನು ಹೇಳಿದ್ದರು. ಈ ವಿಚಾರವಾಗಿಯೇ ಒಂದು ಪ್ರಬಂಧ ಬರೆಯಬೇಕು ಎಂದು ನಾನು ಅವರನ್ನು ಕಾಡುತ್ತಿರುವುದರಿಂದ ಆ ಬಗ್ಗೆ ಇಲ್ಲಿ ವಿವರಗಳು ಬೇಡ. ಅನುಭವ ನಿಷ್ಠೆಯ ಅತಿರೇಕಗಳಿರಬಹುದು ಇವೆಲ್ಲ. ಹಾಗೆಯೇ ಕೆ ವಿ ಅಕ್ಷರ ಅವರು ತಮ್ಮ ಒಂದು ಉಪನ್ಯಾಸದಲ್ಲಿ ವಿವರಿಸಿದ ಎರಡಲುಗಿನ ಶಬ್ದ "ಅರ್ಥದ ಅಹಂಕಾರ" ಕೂಡ ಇಂಥ ನೆಲೆಯನ್ನು ಹೊಂದಿದ್ದೂ ಅದನ್ನೂ ಆಸಕ್ತರು ಗಮನಿಸಬಹುದು. ಆ ಉಪನ್ಯಾಸ ಚುಕ್ಕುಬುಕ್ಕು ತಾಣದಲ್ಲಿ ಕೇಳಲು ಲಭ್ಯವಿದೆ. ಅದೇನಿದ್ದರೂ ಅನುಭವವೊಂದು ಕತೆಯಾಗುವ, ಕತೆಮಾಡುವ, ಕತೆ ಬರೆಯುವ, ಹೇಳಿಕೊಳ್ಳುವ ಮತ್ತು ತದನಂತರ ಅದನ್ನು ಓದುವ/ಕೇಳುವ ಪ್ರಕ್ರಿಯೆಯಲ್ಲಿ ಅಸಹಜವಾದದ್ದು ಇದೆ ಮತ್ತು ಅದು ಕತೆಗಾರನಿಗೂ, ಓದುಗನಿಗೂ ಗೊತ್ತಿದೆ. ಯಾವ ಹಕ್ಕಿಯೂ, ಪ್ರಾಣಿಯೂ ಮಾಡದ ಕಿತಾಪತಿಯಿದು!

ಇನ್ನು ಮೂರನೆಯದು, ಒಂದು ಕಥಾವಸ್ತು ಧರ್ಮ, ಸ್ತ್ರೀಮತ, ರಾಜಕೀಯ ಅಥವಾ ಅಂಥ ‘ಇವತ್ತಿನ ಬಿಕ್ಕಟ್ಟಿನ ಸಮಾಜದಲ್ಲಿ ಸೂಕ್ಷ್ಮವಿಚಾರ’ಗಳಾಗಿ ಬಿಟ್ಟಿರುವ ಸಂಗತಿಯ ಸುತ್ತ ಇರುವಾಗ ಕತೆಗಾರ ವಹಿಸುವ ಕೆಲವೊಂದು ಪ್ರಜ್ಞಾಪೂರ್ವಕ ಜಾಗೃತೆಗಳು ಕತೆಯ ಆಕೃತಿ, ಆಶಯ ಮತ್ತು ಕಥನದ ಚೌಕಟ್ಟನ್ನು ನಿರ್ದೇಶಿಸುವ ಪ್ರಮಾಣ. ಇಲ್ಲಿ ಈ ಕತೆ ಎಷ್ಟರಮಟ್ಟಿಗೆ ಮೂಢನಂಬಿಕೆಯನ್ನು ಪೋಷಿಸುತ್ತದೆ ಮತ್ತು ಎಷ್ಟರಮಟ್ಟಿಗೆ ಅದನ್ನು ನೆಗೇಟ್ ಮಾಡುತ್ತದೆ ಎನ್ನುವ ಸಮಕಾಲೀನ ಸೂಕ್ಷ್ಮಗಳಿಗೆ ಕತೆಗಾರ ಎಚ್ಚರವಹಿಸುತ್ತ ಹೂಡುವ ತಂತ್ರಗಳು ಈ ದೃಷ್ಟಿಯಿಂದ ಮುಖ್ಯವಾಗುತ್ತವೆ. ಈ ಸಂಕಲನದ "ಎಷ್ಟು ಕಾಡತಾವ ಕಬ್ಬಕ್ಕೀ..." ಕತೆಯಲ್ಲಿ ರಾಘವೇಂದ್ರ ಪಾಟೀಲರು ಭೀಮಶಿಯ ಪುನರ್ಜನ್ಮದ ವೃತ್ತಾಂತವನ್ನು ನಿಜ ಎಂದು ಸ್ವೀಕರಿಸ ಬೇಕಾದ ನೆಲೆಯ ವಿವರಗಳನ್ನು ತರುತ್ತಾರೆಯೇ, ನಿಜವೂ ಆಗಿರಬಹುದಾದ, ಸುಳ್ಳೂ ಆಗಿರಬಹುದಾದ ನೆಲೆಯಲ್ಲೇ ತೂಗಿಸುತ್ತ ಉಳಿಸುತ್ತಾರೆಯೇ ಅಥವಾ ಪೂರ್ತಾ ಒಂದು ಬಗೆಯ ಮಾನಸಿಕ ವಿಭ್ರಾಂತಿಯಲ್ಲದೆ ಇನ್ನೇನೂ ಅಲ್ಲ ಎನ್ನುವ ನೆಲೆಯಲ್ಲಿ ಕೈಬಿಡುತ್ತಾರೆಯೇ ಎನ್ನುವುದು ಇಲ್ಲಿ ಮುಖ್ಯವಾಗುವ ಪ್ರಶ್ನೆ. (ಈ ಕುರಿತು ಅವರು ಅನುಬಂಧದಲ್ಲಿ ವಿವರಿಸಿದ್ದಾರೆ) ಮುಖ್ಯವಾಗ ಬೇಕಾದ ಪ್ರಶ್ನೆಯೇನೂ ಅಲ್ಲ ಎನ್ನುವ ಅಂಶವನ್ನು ಗಮನಿಸಿಯೂ ಹೇಳುವ ಮಾತಿದು. ಇಲ್ಲಿಯೇ ನಮಗೆ ಕೆ ವಿ ಅಕ್ಷರ ಅವರ "ಅರ್ಥದ ಅಹಂಕಾರ"ದ ಕಬಂಧ ಬಾಹುಗಳ ಆತಂಕ ಹುಟ್ಟುವುದೂ. ನನ್ನ ಇಡೀ ಬರಹ ಈ "ಅರ್ಥದ ಅಹಂಕಾರ"ದಿಂದ ಹುಟ್ಟಿರಬಹುದೇ ಎಂಬ ಸಂಶಯ ಇರಿಸಿಕೊಂಡೇ ನನ್ನ ಮಾತುಗಳನ್ನು ಆಡುತ್ತಿದ್ದೇನೆ, ಕಂಡುಕೊಳ್ಳುವುದಕ್ಕಾದರೂ ಆಡಬೇಕಿದೆ!

"ಮತ್ತೊಬ್ಬ ಮಾಯಿ" ಕತೆಯಲ್ಲಿ ಎದೆ ಕಲಕುವ ಕೇಂದ್ರವಿದೆ. ಅದು ಇನ್ನೊಂದು ಜೀವದ ಅತ್ಯಂತ ಸೂಕ್ಷ್ಮವಾದ ಸಂವೇದನೆಗಳನ್ನು ನಿರ್ದೇಶಿಸಲು, ನಿಯಂತ್ರಿಸಲು, ಪ್ರಚೋದಿಸಲು ನಮಗೆ ತಿಳಿದೋ ತಿಳಿಯದೆಯೋ ನಾವು ಮಾಡುವ ಪ್ರಯತ್ನಗಳು ಮಾನವೀಯ ನೆಲೆಯನ್ನು ಮೀರುವ ಸಾಧ್ಯತೆಯೊಂದರ ಕಡೆ ಅದು ಬೆಟ್ಟು ಮಾಡುತ್ತದೆ. ಇದು ನಾವೆಲ್ಲ ಸೂಕ್ಷ್ಮಜ್ಞ ಸಂವೇದನೆಗಳನ್ನು ಕಳೆದುಕೊಳ್ಳುತ್ತ, ಹಾಗೆ ಕಳೆದುಕೊಳ್ಳುವುದೇ ಪ್ರಬುದ್ಧತೆ ಅಥವಾ ಒಂದು ಫಿಟ್ ಅನಿಮಲ್ ಆಗುವ ಹಾದಿ ಎಂದು ತಿಳಿದುಕೊಂಡಿರುವುದನ್ನು ಪ್ರಶ್ನಿಸುವ ಕತೆ. ಒಂದರ್ಥದಲ್ಲಿ ಹೊಚ್ಚ ಹೊಸದೇನನ್ನೂ ಹೇಳದ ಅದೇ ಹಳೆಯ ಕತೆಯಿದು ಎಂದು ನಮಗನ್ನಿಸುತ್ತಿರುವ ಹೊತ್ತಿಗೇ, ಹಾಗನ್ನಿಸುತ್ತಿರುವುದನ್ನೇ ಪ್ರಶ್ನಿಸುವ ಆತ್ಮವುಳ್ಳ, ಸತ್ವವುಳ್ಳ ಕತೆ ಕೂಡ.

"ಎಷ್ಟು ಕಾಡತಾವ ಕಬ್ಬಕ್ಕೀ..." ಈಗಾಗಲೇ ಚುಕ್ಕುಬುಕ್ಕು ತಾಣದಲ್ಲಿ ಪ್ರಕಟವಾಗಿ ("ಪುನರ್ಭವ" ಎಂಬ ಹೆಸರಿನಲ್ಲಿ), ಸಾಕಷ್ಟು ಚರ್ಚೆಗೆ ಒಳಗಾದ ಕತೆ. ಒಂದು ಹಂತದ ವರೆಗೆ ಮಾಂತ್ರಿಕ ವಾಸ್ತವದ ಆಯಾಮದಲ್ಲೇ ಸಾಗುವ ಲಕ್ಷಣಗಳನ್ನು ತೋರಿದ ಕತೆ ಅದೇ ಲಯದಲ್ಲಿ ಮುಂದುವರಿಯುವ ಉದ್ದೇಶವೇನೂ ತನಗಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುವಂತೆ ಇದೊಂದು "ಆಶ್ಚರ್ಯಕರ-ಆದರೂ ನಂಬಲೇ ಬೇಕಾದ" ವಿದ್ಯಮಾನ ಎಂಬ ನೆಲೆಯಲ್ಲೇ ಸ್ಥಾಪಿಸಿ ಅಂಥ ಆಯಾಮದ ಕೋನದಲ್ಲಿಯೇ ನಾವು ಬದುಕನ್ನು, ಅದು ನಮ್ಮ ಮುಖಕ್ಕೆ ಒಗೆಯುವ ಪ್ರಶ್ನೆಗಳನ್ನು ಬನ್ನಿ, ಇದನ್ನು ಎದುರಿಸಿ ಎನ್ನುತ್ತದೆ. ಹಾಗೆ ಓದುಗನನ್ನು ಕೈಬಿಟ್ಟ ಘಳಿಗೆಯಲ್ಲಿ ಅವನು ಕಂಗಾಲಾಗುತ್ತಲೇ ಓಹ್, ಎಂಥ ಅದ್ಭುತ ಕತೆಯಿದು ಎನ್ನುವ ಭ್ರಮೆಗೆ ಬೀಳುತ್ತಾನಾದರೂ ಕತ್ತಲೆಗೆ ಕಣ್ಣು ಹೊಂದಿಸಿಕೊಂಡು ಕನಿಷ್ಟ ತಡಕಾಡುವ ಸ್ಥಿತಿಗೆ ಬಂದ ಮೇಲೆ ತಡಕಾಡಲು ಕತೆಗಾರರು ಏನನ್ನೂ ಉಳಿಸಿಲ್ಲ ಎನ್ನುವುದನ್ನೂ ಕಂಡುಕೊಂಡು ಸ್ವಲ್ಪ ಪೆಚ್ಚಾಗುತ್ತಾನೆ ಕೂಡ!

ಕೊನೆಗೂ ಈ ಸುದೀರ್ಘ ಕತೆ "ಇಂಥ ಎಲ್ಲಾ ಚರ್ಚೆಗಳೂ ಸಾಗಿದಂತೆ ಕ್ರಮೇಣ ಅಮೂರ್ತವೂ ಅಸಂಗತವೂ ಆಗುತ್ತ ಕೊನೆಗೊಳ್ಳತ್ತವೆಯೋ ಏನೋ!" ಎಂಬ ಅದೇ ಹಳಸಲು ರಾಗವನ್ನೇ ಮತ್ತೊಮ್ಮೆ ಮೀಂಟುವ ಸಿದ್ಧ ಮಾದರಿಯ ನೆಲೆಯನ್ನಷ್ಟೇ ತಲುಪುವುದು ಸಾಧ್ಯವಾಗುತ್ತದೆಯೇ ಹೊರತು ಷೇಕ್ಸ್‌ಪಿಯರನ ಮ್ಯಾಕ್‌ಬೆಥ್ ಬಳಸಿಕೊಳ್ಳುವ ಮಿಥ್, ಡಿಗಸ್‌ಕರ್ ತಳವಾರ ಬಸವಂತನ ಮಗನ ಭಯಕ್ಕೆ ಸೂಚಿಸುವ ಪರಿಹಾರೋಪಾಯ - ಇವೆರಡರ ಜೊತೆ ಅನುಸಂಧಾನಕ್ಕೆ ಯೋಗ್ಯವಾದ ಮೂರನೆಯ ಒಂದು ಆಯಾಮವನ್ನು ಒಡ್ಡುವುದಕ್ಕೆ ಅದಕ್ಕೆ ಸಾಧ್ಯವಾಗಿಲ್ಲ.

ಭೀಮಶೀಯದು ಬರಿಯ ವಿಭ್ರಾಂತಿಯಲ್ಲ ಎಂಬಂತೆ ಕತೆಗಾರರು ಓದುಗನಿಗೆ ಒಡ್ಡುವ ಅತಿಯಾದ ವಿವರಗಳೇ ಇಲ್ಲಿನ ಪ್ರಮುಖ ತೊಡಕು ಎನ್ನುವಾಗ ನಾನು ಒಂದು ವಿಧದಲ್ಲಿ ಕತೆಗೆ ಒಂದು ಪೂರ್ವಾಗ್ರಹ ಪೀಡಿತ ಆಯಾಮವನ್ನು ಹೇರುವ ನಿಲುವನ್ನು ತೆಗೆದುಕೊಂಡಂತಾಗುತ್ತದೆ ಎಂಬ ಅರಿವು ಮತ್ತು ಅಳುಕು ಇರಿಸಿಕೊಂಡೇ ಇದನ್ನು ಹೇಳುತ್ತಿದ್ದೇನೆ. ಒಂದು ಹಂತದಲ್ಲಿ ಅದು ವಿಭ್ರಾಂತಿ ಎಂದೇ ಸಾಧಿಸುವ ಉಮೇದಿನಲ್ಲಿದ್ದಂತೆ ಕಾಣುವ ಸಂಭಾಷಣೆಯ ಓಘ ಬಹುಬೇಗ ಅದನ್ನು ಬಿಟ್ಟುಕೊಡುತ್ತದೆ. ಮುಂದೆ ಜೈನರಲ್ಲಿ ಪುನರ್ಜನ್ಮದ ನಂಬಿಕೆಯಿಲ್ಲ ಎನ್ನುವ ಹುಂಬ ವಾದ ಪ್ರತ್ಯಕ್ಷವಾಗುವ ಘಟ್ಟದಲ್ಲಿ ಅದೆಲ್ಲ ಅಗತ್ಯವೇ ಇರಲಿಲ್ಲವೆನ್ನುವಷ್ಟು ಕತೆ ಬೇರೆಯೇ ನೆಲೆಯಲ್ಲಿ ಮುಂದುವರಿದಾಗಿರುತ್ತದೆ. ಭೀಮಶೀಯದು ನಿಜಕ್ಕೂ ನಂಬಲಸಾಧ್ಯವಾದ, ಆದರೆ ವಿವರಗಳು ‘ಮ್ಯಾಚ್’ ಆಗುವುದರಿಂದ ನಂಬಲೇ ಬೇಕಾದ ವಿಸ್ಮಯಕಾರಕ ಸತ್ಯ ಎನ್ನುವುದೇ ಆದಲ್ಲಿ ಕತೆಯ ಉದ್ದೇಶ ಸೀಮಿತವಾದ ನೆಲೆಯದ್ದು. ಕತೆಯ ಕೊನೆಯ ಸಾಲಿಗಷ್ಟೇ ಬದ್ಧವಾದದ್ದು.

ಹಾಗಲ್ಲ, ಅದು ಕೇವಲ ವಿಭ್ರಾಂತಿ ಎನ್ನುವ ನಿಲುವಿನಿಂದ ನೋಡಿದರೆ ಆಗ ಹಿಂಸೆಯ ವಿರುದ್ಧ ಭೀಮಶೀಯ ಸುಪ್ತ ಮನಸ್ಸು ಹೂಡಿದ ಒಂದು ಯೋಜಿತ ಹೋರಾಟ ಇದು ಎಂದಾಗುವ ಸಾಧ್ಯತೆಯಿತ್ತು. ಪುನರ್ಜನ್ಮದ ಪರಿಕಲ್ಪನೆಯೇ ಒಂದು ವಿಭ್ರಾಂತಿ ಮತ್ತು ಈ ಭ್ರಾಂತಿಯ ತರ್ಕಬದ್ಧ ವಿವರಣೆ ನಾವು ಭಾವಿಸಿದ ರೀತಿಯಲ್ಲಿರದೇ ಅದನ್ನು ಬೇರೆಯೇ ನೆಲೆಯಲ್ಲಿ ವಿವರಿಸಲು ಕೂಡ ಸಾಧ್ಯವಿದ್ದೀತು ಎನ್ನುವ ನಂಬಿಕೆ ನನ್ನದು. ಇಂಥ ವ್ಯಕ್ತಿಗತ ನಂಬಿಕೆಗಳು ಕತೆಗಾರರ ನಿಲುವಿನೊಂದಿಗೆ ಹೊಂದಿಕೊಳ್ಳದೇ ಇರುವುದು ಕೃತಿಯೊಂದರ ವಿಮರ್ಶೆಗೆ ತೊಡಕಾಗಬಾರದು ಎನ್ನುವ ಕಾರಣಕ್ಕೆ ಆ ನೆಲೆಯ ಚರ್ಚೆಯನ್ನು ಇಲ್ಲಿ ಮುಂದುವರಿಸುವುದು ಸರಿಯೂ ಅಲ್ಲ. ಮನುಷ್ಯನ ಮೆದುಳು ಏನನ್ನಾದರೂ ಗ್ರಹಿಸುವ ಒಂದು ಪ್ರಕ್ರಿಯೆಯ ಕುರಿತೇ ನಡೆಯುತ್ತಿರುವ ಇತ್ತೀಚಿನ ಸಂಶೋಧನೆಗಳು ಇಂಥ ಭ್ರಮೆಯನ್ನು ಕೂಡ ಅದು ಕೇವಲ ಭ್ರಮೆಯಲ್ಲ ಎನ್ನುವ ನಿಟ್ಟಿನಲ್ಲೇ ವಿವರಿಸುವಷ್ಟು ಮುಂದುವರಿದಿರುವುದು ನಿಜವೇ. (ಆಸಕ್ತರು ದಯವಿಟ್ಟು Micho Kaku ಬರೆದ ಇತ್ತೀಚಿನ ಕೃತಿ Future of Mind ಗಮನಿಸಬಹುದು.)

ಕೊನೆಗೂ ನಾವು ಯಾವುದಕ್ಕೆ ಅಂಟಿಕೊಂಡು ನಿಲ್ಲಲು ಬಯಸುತ್ತೇವೆ ಎನ್ನುವಲ್ಲಿ ಅದರ ಸಾಧಕ ಬಾಧಕಗಳೇನು ಎಂಬ ವಿವೇಚನೆ ಮತ್ತು ಹಾಗೆ ಮಾಡುವುದರಿಂದ ಸಾಧಿಸುವುದೇನು ಎಂಬ ತರ್ಕ ಮುಖ್ಯವಾಗಬೇಕು. ಧಾರ್ಮಿಕ ನಂಬುಗೆಯೊಂದು ಜನ್ಮಾಂತರಕ್ಕೂ ನೆಚ್ಚಿಕೊಂಡೇ ಬರುತ್ತದೆ ಮತ್ತು ಕುರುಡಾಗಿ ಅದರ ಆಚರಣೆಯನ್ನು ಸಾಧಿಸುವುದಕ್ಕೆ ಉಳಿದುದೆಲ್ಲವನ್ನೂ (ಸಂಬಂಧ/ಕೌಟುಂಬಿಕ ವ್ಯವಸ್ಥೆ/ಭಾವನಾತ್ಮಕ ಸಂವೇದನೆಗಳು) ಮೆಟ್ಟಿನಿಲ್ಲಲು ಉದ್ಯುಕ್ತವಾಗುತ್ತದೆ ಎನ್ನುವಲ್ಲಿಯೇ ಭೀಮಶೀಯಲ್ಲಿ ಮುಖ್ಯವಾಗಬೇಕಿದ್ದುದು ಮುಖ್ಯವಾಗದೇ, ಮೊಂಡುತನವಷ್ಟೇ ಮುಂದುವರಿದಿದೆ ಎನ್ನುವುದಕ್ಕೆ ಸೂಚನೆ. ಇಂಥದ್ದರ ಮುಂದುವರಿಕೆ, ಅದು ಪುನರ್ಜನ್ಮದಿಂದಲೇ ಆಗಲೊಲ್ಲದೇಕೆ, ಆಗುವುದು ವಿಕಾಸದ ಹಾದಿಯನ್ನಂತೂ ಸೂಚಿಸುತ್ತಿಲ್ಲ ಅಲ್ಲವೆ? ಕತೆಯ ಬಗ್ಗೆಯೂ ಅನಿಸುವ ಮಾತಿದು. ಆದರೆ ಪಾಟೀಲರು ಮೂಗನೊಬ್ಬನ ಸಂವೇದನೆಗಳಿಗೆ ಮಾತು ನೀಡುವುದಕ್ಕಷ್ಟೇ ಒಂದು ಹೊಸ ಜನ್ಮದ ಪರಿಕಲ್ಪನೆಯನ್ನು ಬಳಸಿಕೊಂಡೆನೇ ಹೊರತು ಪುನರ್ಜನ್ಮದ ಕುರಿತಾದ ಜಿಜ್ಞಾಸೆಗಳೊಂದೂ ತಮಗೆ ಮುಖ್ಯವಾಗಿಲ್ಲ ಎಂದಿದ್ದಾರೆ. ಒಪ್ಪಬಹುದಾದ ಮಾತೇ. ಕತೆಗಾರ ತಾನು ಹೇಳಬೇಕಾದುದನ್ನು ಹೇಳಲು ಯಾವೆಲ್ಲ ಬಗೆಯ ಅನುಕೂಲಗಳನ್ನು ದುಡಿಸಿಕೊಂಡರೂ ಅದನ್ನು ತರ್ಕಕ್ಕೊಡ್ಡಿ, ವಾಸ್ತವದ ಅಥವಾ ಸಂಭಾವ್ಯ ಪರಿಕಲ್ಪನೆಗಳ ಮೂಸೆಯಲ್ಲಿಟ್ಟು ತೂಗಬೇಕಾದುದಿಲ್ಲ. ಆದರೆ ಹಾಗೆ ದುಡಿಸಿಕೊಂಡು ಸಾಧಿಸಿದ್ದೇನೆ ಎಂಬ ಅಂಶ ಮುಖ್ಯವಾಗುತ್ತದೆ, ಮೊದಲಿಗೇ ಕತೆಗಾರ ವಹಿಸಿರುವ ಎಲ್ಲ ಮುನ್ನೆಚ್ಚರಿಕೆ ಅಥವಾ ಮಾನವೀಯ ನೆಲೆಯಿಂದ, ಎದೆಕಲಕಿದ ವಿದ್ಯಮಾನವನ್ನಷ್ಟೇ ಕತೆಗಾರಿಕೆಯ, ಕಲೆಯ ಕಸುಬುದಾರಿಕೆಯ ಗಿಲ್ಮಿಟ್ ಇಲ್ಲದೇನೆ ಹೇಳಲು ಹೊರಟಿದ್ದಷ್ಟೇ ಎಂಬ ನೆಲೆಯನ್ನು ಗಮನಿಸಿಯೂ ಇದೆಲ್ಲ ಮುಖ್ಯವಾಗುತ್ತದೆ.

ಸಾಹಿತ್ಯದಿಂದ ನಾವು ಮನುಷ್ಯರಾಗುವ ಪ್ರಯತ್ನಕ್ಕೆ ಇಂಬು ದೊರೆಯುತ್ತ ಬಂದಿದೆ, ನಾವು ಹೆಚ್ಚು ಹೆಚ್ಚು ಮನುಷ್ಯರಾಗಲು ಸಾಧ್ಯವಾಗಿದೆ ಎನ್ನುವುದು ನಿಜವಾಗಿರುವಾಗಲೂ, ಚಿತ್ತಾಲ, ಪಾಟೀಲ, ಜಯಂತ ಪ್ರಧಾನವಾಗಿ ಇದನ್ನೇ ಮಾಡುತ್ತ ಬಂದಿದ್ದಾರೆಂಬುದು ನಿಜವಾಗಿರುವಾಗಲೂ, ಬರಹಗಾರರೂ, ಓದುಗರೂ ಹೆಚ್ಚು ಹೆಚ್ಚು ಸಂವೇದನಾಶೀಲರಾಗಿರುವಾಗಲೂ ನಮ್ಮ ಸುತ್ತ ಇಷ್ಟೊಂದು ಹಿಂಸೆ, ದೌರ್ಜನ್ಯ, ಅನ್ಯಾಯಗಳು ಕೂಡ ಇರುವುದು ಫ್ಯಾಕ್ಟ್. ಫಿಕ್ಷನ್ ಅಲ್ಲ. ರೈತರ ಆತ್ಮಹತ್ಯೆಗೆ ಗ್ರಾಮೀಣ ಪರಿಸರ ಸಾಹಿತ್ಯದಿಂದ ದೂರವಾಗುತ್ತಿರುವುದೂ ಒಂದು ಕಾರಣ ಎಂದು ಇತ್ತೀಚೆಗೆ ಎಚ್ಚೆಸ್ವಿಯವರು ಹೇಳಿದರೆಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಕೆ ವಿ ತಿರುಮಲೇಶರು ಹಿಂದೊಮ್ಮೆ ಹೊಲದಲ್ಲಿ ದುಡಿದು ಬೆಳೆ ತೆಗೆವ ರೈತನ ಕಾಯಕದಷ್ಟು ಸಾಹಿತಿಯ ಕಾಯಕ ದೊಡ್ಡದಲ್ಲ ಎಂಬರ್ಥದ ಮಾತನ್ನಾಡಿದ್ದರು. ನಾವು ಒಂದಿಷ್ಟು ಮಂದಿ ಬರೆಯುವುದು, ಪ್ರಕಟಿಸುವುದು, ಪ್ರಚಾರಕ್ಕೆ ಹಾತೊರೆಯುವುದು, ಪ್ರಶಸ್ತಿ-ಸನ್ಮಾನ-ಸತ್ಕಾರ ಬೇಕು ಎಂದೆಲ್ಲ ಲಾಬಿ ನಡೆಸುವುದು-ನಮ್ಮ ಪರವಾಗಿ ನಡೆಸಲು ಮುಂದಾಗುವವರನ್ನು ತಡೆಯದಿರುವುದು, ಅವೆಲ್ಲ ಸಿಕ್ಕಾಗ ಸಂತೋಷದಿಂದಲೇ ಒಪ್ಪಿಕೊಂಡು ಸ್ವೀಕರಿಸುವುದು, ವಿಮರ್ಶೆಗೆ ಕಾಯುವುದು, ಯಾರೋ ಕೆಲವು ನಿರ್ದಿಷ್ಟ ವ್ಯಕ್ತಿಗಳ ಪ್ರತಿಕ್ರಿಯೆಗೆ ಇನ್ನಿಲ್ಲದ ಮಹತ್ವ ನೀಡಿ ಮನಸ್ಸು ಮುದುಡಿಸಿಕೊಳ್ಳುವುದೋ-ಹಿರಿಹಿರಿ ಹಿಗ್ಗುವುದೋ ಮಾಡುವುದು - ಮುಂತಾದ ಚಟುವಟಿಕೆಯಲ್ಲಿ ಅಷ್ಟಿಷ್ಟಾದರೂ ತೊಡಗಿಕೊಂಡಿರುವಾಗಲೇ ಇದೆಲ್ಲ ಏನೂ ಇಲ್ಲದೆ ಬದುಕುವವರು ತುಂಬ ಮಂದಿ ಇಲ್ಲವೆ? ಮತ್ತು ಅವರೆಲ್ಲ ಸುಖವಾಗಿಲ್ಲ ಎನ್ನಲು ಸಾಧ್ಯವೆ? ಹಾಗೆಯೇ ಸಾಹಿತ್ಯದ ಅಭಿರುಚಿ, ಬಳಕೆ ಎಲ್ಲವೂ ಸಮೃದ್ಧಿಕಾಲದ ಮಾತಾಯಿತು ಎನಿಸುವುದಿಲ್ಲವೆ? "...........our best songs are those that tell us of our saddest tales" ಎಂಬ ಡಾ.ಪ್ರಭಾಕರ ಮ.ನಿಂಬರಗಿಯವರು "ಸ್ಪಂದನ" ದಲ್ಲಿ ಕೋಟ್ ಮಾಡಿರುವ ಮಾತುಗಳನ್ನು ಒಪ್ಪಿಯೂ ಈ saddest tales ಅಥವಾ ಈ songs ಕೊನೆಗೂ ತಲುಪುವುದು ತಲುಪಬೇಕಾದ ಅಗತ್ಯ ಇರುವವರನ್ನಾಗಿರದೇ, ತಲುಪುವ ಮುನ್ನವೇ ತಿಳಿದಿರುವ ಮತ್ತು ತಿಳಿದೂ ಏನೂ ಬದಲಾಗದೇ ಉಳಿದಿರುವ ಮಂದಿಯನ್ನೇ ಎನ್ನುವುದು ನಮ್ಮ ಕಾಲದ ಕಠೋರ ಸತ್ಯಗಳಲ್ಲಿ ಒಂದು ಮತ್ತು ಮುಖ್ಯವಾದದ್ದು. ಹೀಗಾಗಿಯೋ ಏನೋ, ಚಿತ್ತಾಲರಾದಿಯಾಗಿ ಕತೆಯ ಕಸಬುದಾರಿಕೆಯ ಕೃತಕತೆಯನ್ನು ಹಂಗಿಸಿ, ನಿಂದಿಸಿ ತೊಡಗುವುದೂ ಕತೆಗಾರನ ಗಿಮ್ಮಿಕ್ ಆಗಿ ಕಾಣುವ, ಕ್ಲೀಷೆ ಎನಿಸುವ ಸ್ಥಿತಿಯೊಂದನ್ನು ನಾವು ತಲುಪಿದ್ದೇವೆ ಎನಿಸುತ್ತದೆ.

(ಈ ಲೇಖನದ ಆಯ್ದ ಭಾಗ ಸಂಕಥನ ತ್ರೈಮಾಸಿಕದ ಎರಡನೇ ಸಂಚಿಕೆಯಲ್ಲಿ ಪ್ರಕಟವಾಗಿದೆ)

No comments: