Tuesday, November 10, 2015

ವಿವೇಕ್ ನಾರಾಯಣನ್:ಸಂಘರ್ಷಮಯ ಕಾಲದ ಆತ್ಮಸಂಕೀರ್ಣತೆಯಲ್ಲೇ ಅಸ್ಮಿತೆಯ ಶೋಧ

ವಿವೇಕ್ ನಾರಾಯಣನ್ ಅವರ ಕವನಗಳನ್ನು, ಅದರಲ್ಲಿಯೂ ಅವರ ಎರಡನೆಯ ಸಂಕಲನ, “ಲೈಫ್ ಎಂಡ್ ಟೈಮ್ಸ್ ಆಫ್ ಮಿಸ್ಟರ್ ಎಸ್” ನ ಕವನಗಳನ್ನು ಪ್ರವೇಶಿಸುವುದಕ್ಕೂ ಮುನ್ನ ಹೇಳಬೇಕಾದುದು ಸ್ವಲ್ಪ ಹೆಚ್ಚೇ ಇರುವಂತಿದೆ.

ಮೊದಲಿಗೆ, ಕೆರವಾನ್ ಪತ್ರಿಕೆಯಲ್ಲಿ (ಆಗಸ್ಟ್ 2012) ಒಂದು ಲೇಖನ ಕಣ್ಣಿಗೆ ಬಿತ್ತು. ಅದನ್ನು ಬರೆದವರು ಕೂಡ ಭಾರತೀಯ ಇಂಗ್ಲೀಷ್ ಬರಹಗಾರ್ತಿಯಾಗಿರುವವರೇ. ಅಂಜುಂ ಹಸನ್ ಪ್ರಸ್ತುತ ಕೆರವಾನ್ ಪತ್ರಿಕೆಯ ಪುಸ್ತಕ ವಿಭಾಗದ ಸಂಪಾದಕರು. ಬೆಂಗಳೂರನ್ನೇ ಕೇಂದ್ರವಾಗಿರಿಸಿಕೊಂಡಿರುವ ಒಂದು ಕಾದಂಬರಿ “ನೇತಿ ನೇತಿ” ಮತ್ತು “ಲ್ಯುನಾಟಿಕ್ ಇನ್ ಮೈ ಹೆಡ್”, “ಡಿಫಿಕಲ್ಟ್ ಪ್ಲೆಶರ್ಸ್” ಎಂಬ ಒಂದು ಕಥಾಸಂಕಲನ ಹಾಗೂ “ಸ್ಟ್ರೀಟ್ ಆನ್ ದ ಹಿಲ್” ಎಂಬ ಕವನ ಸಂಕಲನ ಇವರ ಕೃತಿಗಳು. ತಮ್ಮ ವಿಸ್ತೃತ ಪ್ರಬಂಧಗಳಲ್ಲಿ ಆಳವಾದ ಅಧ್ಯಯನ ಮತ್ತು ತನ್ಮಯತೆ ಮೆರೆಯುವ ಇವರ ಬರಹಗಳು ಗಮನಾರ್ಹ. ಪ್ರಸ್ತುತ ಲೇಖನವನ್ನು ಆಸಕ್ತರು ಇಲ್ಲಿ ಗಮನಿಸಬಹುದಾಗಿದೆ: http://www.caravanmagazine.in/books/going-nowhere-always
ಅಂಜುಂ ಹಸನ್ ಅವರ ಲೇಖನ ಮೊದಲಿಗೆ ಮಿಲನ್ ಕುಂದೇರಾನ ಪ್ರಸಿದ್ಧ ಕಾದಂಬರಿ “ಲೈಫ್ ಈಸ್ ಎಲ್ಸ್‌ವೇರ್” ನ ಉಲ್ಲೇಖದಿಂದ ತೊಡಗುತ್ತದೆ. ಮಿಲನ್ ಕುಂದೇರಾನ ಎಲ್ಲ ಕಾದಂಬರಿಗಳಲ್ಲಾಗುವಂತೆ ಇಲ್ಲಿಯೂ ಹಲವು ಪದರಗಳ ಒಂದು ಹಂದರವಿದೆ. ಒಬ್ಬ ಕವಿ ಮತ್ತು ಅವನ ಕವಿತ್ವದ ನಡುವೆ ಅವನ ವ್ಯಕ್ತಿತ್ವದ ವಿಕಸನದ ಪ್ರಕ್ರಿಯೆಗೂ ಒಂದು ಅವಿನಾಭಾವ ಸಂಬಂಧ ಇದೆ ಎಂದು ನಂಬುವ ಮಿಲನ್ ಕುಂದೇರಾನ ವಿಚಾರಗಳ ಮಂಡನೆ ಕಾದಂಬರಿಯ ಒಂದಾನೊಂದು ಪ್ರಮುಖ ಪದರ. ಮಿಲನ್ ಕುಂದೇರಾನ ಈ ಕಾದಂಬರಿ 1969ರಲ್ಲಿ ಬರೆದಿದ್ದು. ಮೊದಲಿಗೆ ಇದರ ಹೆಸರು “ದ ಏಜ್ ಆಫ್ ಲಿರಿಕ್ಸ್” ಎಂದೇನೋ ಆಗುವುದಿತ್ತಂತೆ.

ತುಂಬ ಸರಳಗೊಳಿಸಿ ಹೇಳುವುದಾದರೆ, ಕವಿಭಾವವೆಂಬುದು ಒಂದು ಅಪ್ರಬುದ್ಧ ಮನಸ್ಸಿನ ಘಟ್ಟ ಎನ್ನುವುದು ಇಲ್ಲಿನ ಮಂಡನೆ. ಇದು ಸಾಕಷ್ಟು ಗಹನವಾದ ಪ್ರಶ್ನೆಯೇ. ಕುಂದೇರಾ ತನ್ನ “The Curtain” ಕೃತಿಯಲ್ಲಿ ಈ ಕುರಿತು ಹೆಚ್ಚು ವಿವರವಾದ ಮಾತುಗಳನ್ನು ಬರೆದಿದ್ದಾನೆ. ಮೊದಲು ಆತ ಹೆಗೆಲ್‌ನ ಮಾತುಗಳನ್ನು ಉದ್ಧರಿಸುತ್ತಾನೆ:

“The content of lyric poetry, Hegel says, is the poet himself; he gives voice to his inner world so as to stir in his audience the feelings, the states of mind he experiences. And even if the poet treats `objective' themes, external to his own life, "the great lyric poet will very quickly move away from them and end up drawing the portrait of himself" ("stellt sich selber dar") (The Curtain: Page 88)
.................
..................
.....................

“I have long seen youth as the lyrical age, that is, the age when the individual, focused almost exclusively on himself, is unable to see, to comprehend, to judge clearly the world around him. If we start with that hypothesis (necessarily schematic, but which, as a schema, I find accurate), then to pass from immaturity to maturity is to move beyond the lyrical attitude.
“If I imagine the genesis of a novelist in the form of an exemplary tale, a `myth', that genesis looks to me like a conversion story: Saul becoming Paul; the novelist being born from the ruins of his lyrical world.
(The Curtain: Pages 88-89)

ಬರಹಗಾರ ಸ್ವ-ಕೇಂದ್ರಿತನಾಗಿದ್ದಾಗ ಕವಿತೆ ಅವನ ಮೆಚ್ಚಿನದ್ದಾಗುತ್ತದೆ ಮತ್ತು ಕ್ರಮೇಣ ಅವನು ಜಗತ್ತಿನ ಕೇಂದ್ರ ತಾನಲ್ಲ, ತಾನು ಎಂಬುದೇ ಮುಖ್ಯವಾದ ಮುದ್ದೆಯಲ್ಲ, ತಾನು ಒಂದು ಸಮಾಜದ ಸಣ್ಣ ಅಂಶ ಎಂಬ ಅರಿವು ಹೆಚ್ಚಿದಂತೆಲ್ಲ ಕವಿತೆಯಿಂದ ಹೆಚ್ಚು ಪ್ರಬುದ್ಧವಾದ (!?) ಪ್ರಕಾರಗಳಿಗೆ ಅಂದರೆ ಗದ್ಯ,ಕತೆ-ಕಾದಂಬರಿಗಳಿಗೆ ಸರಿಯುತ್ತಾನೆ ಎಂಬ ನಿಲುವು ಸರಿಯೆ?

ನಿಮಗೆಲ್ಲ ಗೊತ್ತಿರುವಂತೆ ಕವಿತೆ ಎಂಬುದು ಒಂದು (format) ಪ್ರಕಾರವಾಗಿ ಮತ್ತು ಒಂದು (content) ಲಯವಾಗಿ ಗದ್ಯದಲ್ಲೂ ಇರುವ ವಸ್ತು. ಅದು ಕವಿಯ ವ್ಯಕ್ತಿತ್ವ ಬೆಳವಣಿಗೆಯೊಂದಿಗೆ ತಳುಕು ಹಾಕಿ ನೋಡುವುದು ಎಷ್ಟು ಸರಿ ಎಂಬುದು ಪ್ರಶ್ನೆ. ಮಿಲನ್ ಕುಂದೇರಾ ಇದನ್ನು ಇತಿಹಾಸದೊಂದಿಗೆ ಸಮೀಕರಿಸಿ ಹೇಳುತ್ತಿರುವುದಾದರೂ, ಪ್ರಸ್ತುತ “ಲೈಫ್ ಈಸ್ ಎಲ್ಸ್‌ವೇರ್” ಕಾದಂಬರಿಯ ಕೇಂದ್ರಪಾತ್ರ ಜೆರೊಮಿಲ್‌ನ ಕಾಲ, ಇಪ್ಪತ್ತನೆಯ ಶತಮಾನದ ಮೊದಲರ್ಧದವರೆಗಿನ ಕಾಲಾವಧಿಯ ಕವಿಗಳ ಕುರಿತಾಗಿಯಷ್ಟೇ ಎಂದುಕೊಂಡರೂ (ಕಾದಂಬರಿಯ ಮೊದಲ ಹೆಸರನ್ನು ನೆನೆಯಿರಿ) ಪ್ರಶ್ನೆಯನ್ನು ಇವತ್ತಿಗೂ ಎತ್ತಬಹುದು ಎಂದು ತಿಳಿಯುತ್ತೇನೆ.

ನಿಮಗೆಲ್ಲ ನೆನಪಿರುವಂತೆ ಡಾ||ಯು.ಆರ್.ಅನಂತಮೂರ್ತಿಯವರು ಎಸ್ ಎಲ್ ಭೈರಪ್ಪನವರ ವಿವಾದಾತ್ಮಕ ಕಾದಂಬರಿ “ಆವರಣ”ದ ಬಗ್ಗೆ ಮಾತನಾಡುತ್ತ ಭೈರಪ್ಪನವರ ಕಾದಂಬರಿಯಲ್ಲಿ ಪೊಯೆಟ್ರಿಯಿಲ್ಲ, ‘there is absolutely no poetry’ ಎಂದಿದ್ದರು. ಕವಿಮನಸ್ಸು ಎಂದು ನಾವು ಹೇಳುವಾಗ ಭಾವುಕತೆ, ಸೂಕ್ಷ್ಮಸಂವೇದಿ ಮನಸ್ಸು ಎಂಬುದನ್ನು ಸಮೀಕರಿಸುವುದೇ ಇಲ್ಲ ಎಂದೇನಲ್ಲ. ಅದರೆ ಕವಿಮನಸ್ಸು ಎಂಬುದು ಅಷ್ಟೇ ಅಲ್ಲ ಅಲ್ಲವೆ? ಇಸಂಗಳ ಹಿಂದೆಯೇ ಬಹುದೂರ ಹೋಗಿ ಸಿಲೆಬಸ್ ಬದ್ಧ ಕವಿತೆಗಳನ್ನು ಬರೆದವರು ಆಮೇಲೆ ಎಲ್ಲಿಗೆ ಸಂದರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ರಮ್ಯವಾದ ಜಗತ್ತನ್ನೇ ಕುರಿತು ಹಾಡುತ್ತಿರುವ ಕವಿತೆಗಳು, ಭಾವತೀವೃತೆಯನ್ನೇ ನೆಚ್ಚಿದ ಭಾವ-ಗೀತೆಗಳು ಮತ್ತು ಆನಂತರದ ಬಂಡಾಯ, ದಲಿತ ಕವನಗಳು ಎಲ್ಲವನ್ನೂ ಮನಸ್ಸಿಗೆ ತಂದುಕೊಂಡು ಈ ಪ್ರಶ್ನೆಯನ್ನು ನೋಡಬಹುದು. ನಮ್ಮ ಜಾನಪದ ಗೀತೆಗಳು, ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ ಮುಂತಾದವರ ವಚನಗಳು, ದಾಸರ ಕೀರ್ತನೆಗಳು ಕೂಡಾ ನಮ್ಮ ಮನಸ್ಸಿಗೆ ಇಲ್ಲಿ ಬರಬೇಕು. ಮತ್ತು ಮಹಾನ್ ಕಾವ್ಯಗಳನ್ನು ಬರೆದ ಪಂಪಾದಿ ಕವಿಗಳನ್ನು ನೆನೆಯದೇ ಪ್ರಶ್ನೆಯನ್ನು ಮುಖಾಮುಖಿಯಾಗುವುದಕ್ಕಾದೀತೆ? ಸ್ವಕೇಂದ್ರಿತ, ಭಾವುಕ ಮತ್ತು ಅಪ್ರಬುದ್ಧ ಬರಹಗಾರ ಸುರುಮಾಡುವುದೇ ಕವಿತೆಗಳಿಂದ ಎನ್ನುವುದಾದರೆ ಸ್ವಂತದ ನೋವುಗಳನ್ನೇ ಕತೆಯಾಗಿಸಿ ಬರೆದ ಉದಯೋನ್ಮುಖ ಮತ್ತು ಅದರಲ್ಲೆ ಅಸ್ತೋನ್ಮುಖರೂ ಆದ ಕತೆಗಾರರನ್ನು ಎಲ್ಲಿಡುವುದು!

ಈ ವಿಚಾರದ ಚರ್ಚೆಯನ್ನು ಅದರ ಅತ್ಯಂತ ಶಿಖರಪ್ರಾಯ ತರ್ಕಕ್ಕೊಡ್ಡಿದವರು ಎ.ಕೆ.ರಾಮಾನುಜನ್. ಆಸಕ್ತರು ಅವರ “ಕನ್ನಡಿಗಳೆ ಕಿಟಕಿಗಳಾಗಿರುವಲ್ಲಿ” ಎಂಬ ಪ್ರಬಂಧದ ಅಹಂ ಮತ್ತು ಪುರಂ ಪ್ರಮೇಯಗಳನ್ನು ಗಮನಿಸಬಹುದು. ನಮ್ಮಲ್ಲಿ ನವೋದಯದಿಂದ ಸರಿದು ನವ್ಯಕಾವ್ಯದ ಕಾಲ ಬಂದಾಗ, ಸಮೂಹ/ಸಮಷ್ಠಿಯಿಂದ ವ್ಯಕ್ತಿ ವಿಶಿಷ್ಟ ಪ್ರಜ್ಞೆ ಮಹತ್ವ ಪಡೆಯಿತು ಎನ್ನುವ ವಾದದ ಅರಿವು ಎಲ್ಲರಿಗೂ ಇದೆ. ಬೇಂದ್ರೆಯವರ ‘ನಾನು’ (ಗಮನಿಸಿ: ಕೀರಂ ನಾಗರಾಜ ಅವರ “ಮತ್ತೆ ಮತ್ತೆ ಬೇಂದ್ರೆ” (ಅಕ್ಷರ ರೂಪ: ಅಕ್ಷತಾ)) ಮತ್ತು ನವ್ಯದವರ ‘ನಾನು’; ಬೇಂದ್ರೆಯವರ ಕನ್ನಡಿಸುವ ವಿಶ್ವಪ್ರಜ್ಞೆ ಮತ್ತು ನವ್ಯರ ಕನ್ನಡಪ್ರಜ್ಞೆ ಮುಂತಾಗಿ ತೌಲನಿಕ ಅಧ್ಯಯನ ಕೂಡ ಇಲ್ಲಿ ಸಾಧ್ಯವಿದೆ. ಅದಕ್ಕಿಂತ ಮುಖ್ಯವಾಗಿ ವ್ಯಕ್ತಿಯ ಅಂತರಂಗದ ಶೋಧ, ಮನಸ್ಸಿನ ತುಮುಲ, ದ್ವಂದ್ವಗಳಿಗೆ ಅಕ್ಷರ ರೂಪ ಕೊಡುವ ತುರ್ತು, ವ್ಯಕ್ತಿಯ ದೈನಂದಿನದ ಕ್ಷುದ್ರತೆಯನ್ನು ಚಿತ್ರಿಸುವ ಮತ್ತು ಹಾಗೆ ಚಿತ್ರಿಸಿ ಬದುಕಿನ ಅರ್ಥವನ್ನು ಶೋಧಿಸುವ ಉತ್ಸಾಹ ಹೆಚ್ಚಿದ್ದು ಈ ಕಾಲದಲ್ಲಿಯೇ. ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ತಾನು ಕಾಣುತ್ತ ಸ್ವಕೇಂದ್ರಿತನಾಗಿ, ಸಮರ್ಥಿಸಿಕೊಳ್ಳುವಲ್ಲಿ ತನ್ನಲ್ಲೇ ವಿಶ್ವ/ಸಮಾಜ/ಸಮಷ್ಠಿಯಿರುವುದಲ್ಲವೇ ಎಂಬ ವಾದವನ್ನೂ ಹೂಡಿ ನಿಂತ ನವ್ಯಕವಿ ಕ್ರಮೇಣ ತನ್ನ ಕನ್ನಡಿಯನ್ನು ಕಿಟಕಿಯನ್ನಾಗಿಸಿಕೊಂಡು ಹೊರಜಗತ್ತನ್ನು ತನ್ನೊಳಗು ಮಾಡಿಕೊಂಡು ಮಾಗಿದ್ದು ಈಗ ಇತಿಹಾಸ. ಆದರೆ ಈ ಹಂತದಲ್ಲಿ ಕವಿಯೊಬ್ಬ ಕಾದಂಬರಿಕಾರನಾಗಿ ಪರಿವರ್ತಿತನಾದನೆ ಎನ್ನುವುದು ಪ್ರಶ್ನೆ.

ಪ್ರಜಾವಾಣಿಗಾಗಿ ನಡೆಸಿದ ಅಂಜುಂ ಹಸನ್ ಅವರ ಸಂದರ್ಶನದಲ್ಲಿ ಅವರನ್ನು ಈ ಕುರಿತಾಗಿಯೇ ಕೇಳಿದಾಗ ಅವರು ನೀಡಿದ ಉತ್ತರ ಮೇಲಿನ ಹೆಗೆಲ್-ಕುಂದೇರಾ ಪ್ರಮೇಯದ ಪ್ರತಿಪಾದನೆಯಂತೆಯೇ ಇರುವುದನ್ನು ಗಮನಿಸಿ:

“ಹೆಚ್ಚಿನ ಹೊಸ ಬರಹಗಾರರ ಹಾಗೆ ನಾನೂ ಕವನಗಳಿಂದ ಬರವಣಿಗೇನ ಸುರು ಮಾಡಿದೆ. ನಾನು ನನ್ನ ಹದಿಹರಯದ ದಿನಗಳನ್ನು ಶಿಲ್ಲಾಂಗಿನ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಕಳೆದೆ. ನನ್ನ ತಂದೆಯವ್ರು ಯೂನಿವರ್ಸಿಟೀಲಿ ಪ್ರೊಫೆಸರ್ ಆಗಿದ್ರು. ನನ್ನ ಸುತ್ತಮುತ್ತ ಇದ್ದ ಅನೇಕ ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲ ಕವನ ಬರೀತಾ ಇದ್ರು. ಕವನದಲ್ಲಿ ನನ್ನ ಆರಂಭಿಕ ಆಸಕ್ತಿಯನ್ನ ಬಹುಷಃ ನಾನು ಆಗಲೇ ಕಂಡುಕೊಂಡಿರಬೇಕು ಅನಿಸುತ್ತೆ. ಆನಂತರದ ಬೆಳವಣಿಗೆಯಾಗಿ ಕತೆ-ಕಾದಂಬರಿಗಳಲ್ಲಿನ ಆಸಕ್ತಿಯನ್ನ ಕೆಲವು ವರ್ಷಗಳ ಹಿಂದೆ ಮಿಲನ್ ಕುಂದೇರಾನ ಒಂದು ಪ್ರಬಂಧ ಓದಿದಾಗ ಅರ್ಥ ಮಾಡಿಕೊಂಡೆ. ಅವನು ಹೆಗೆಲ್‍ನ್ನ ಕೋಟ್ ಮಾಡಿ ಹೇಳ್ತಾನೆ, ಒಂದು ಕವನದ ಭಾವ ಏನಿದೆ ಆ ಕವಿ ಅದೇ ಆಗಿರುತ್ತಾನೆ ಅಂತ. ಅದು ಭಾವನಾತ್ಮಕ ನಿಲುವು, ಸ್ವ-ಭಾವದ ಅಭಿವ್ಯಕ್ತಿ. ಯಾವಾಗ ನಮಗೆ ಈ ಜಗತ್ತಿನೊಂದಿಗೆ ನಮ್ಮ ಭಾವನೆಗಳನ್ನ ಮೀರಿದ್ದು, ಸ್ವಂತದ್ದನ್ನು ಮೀರಿದ್ದು ಇದೆ ಅನ್ನುವ ಅರಿವಾಗುತ್ತೋ ಆಗ ನಾವು ಕಾದಂಬರಿಯ ಮನೋಭಾವದತ್ತ ಹೊರಳುತ್ತೇವೆ, "ಕಾವ್ಯದ ಭಾವಜಗತ್ತಿನ ಪಳೆಯುಳಿಕೆಗಳಿಂದ ಕಾದಂಬರಿಕಾರನ ಜನ್ಮವಾಗುತ್ತದೆ". ಹಾಗೆ ನಾನು ಮತ್ತೆ ಆಗಾಗ ಕವನಗಳನ್ನು ಬರೆಯಲೂ ಬಹುದು, ಇಲ್ಲವೆಂದಲ್ಲ. ಆದರೆ ಒಂದು ಮನೋಧರ್ಮದ ನೆಲೆಯಿಂದ ಹೇಳುವುದಾದರೆ ನಾನು ಅದನ್ನು ಆಗಲೇ ದಾಟಿ ಬಂದಿದ್ದೇನೆ ಅನಿಸುತ್ತದೆ.”
*******
ಇದಿಷ್ಟು ಪೂರ್ವಭಾವಿ ಪೀಠಿಕೆ ಇಲ್ಲಿ ವಿವೇಕ್ ನಾರಾಯಣನ್ ಅವರ ಕವಿತೆಗಳ ಬಗ್ಗೆ ಮಾತನಾಡುವಾಗ ಯಾಕೆ ಅಗತ್ಯವಾಗುತ್ತದೆ ಎನ್ನುವುದು ಮತ್ತಷ್ಟು ಕುತೂಹಲಕರ.

ನಾವೆಲ್ಲ ಸಾಮಾನ್ಯವಾಗಿ ನಿರೀಕ್ಷಿಸುವಂತೆ ಕವನಗಳು ಭಾವ ಪ್ರಧಾನ ಅಥವಾ ಅಲ್ಲಿ ಕಾಣುವುದು ಸಂವೇದನೆಗಳೊಂದಿಗೆ ಕಾವ್ಯದ ಒಡನಾಟ. ಆದರೆ ವಿವೇಕ್ ನಾರಾಯಣನ್ ಕವನಗಳು ಈ ಸರಳ ತತ್ವಕ್ಕೆ ಅಪವಾದದಂತಿವೆ. ಅವು ಅನೇಕ ಕಡೆ ಭಾವವನ್ನು ಬಿಟ್ಟುಕೊಟ್ಟು ತತ್ವದೊಂದಿಗೆ ಕಾಳಗಕ್ಕಿಳಿಯುವಂತೆ ಕಾಣುವ ಸಂವೇದನೆಗಳನ್ನು ಹೊಂದಿವೆ. ಮಿಸ್ಟರ್ ಎಸ್ ಅಥವಾ ಸುಬ್ರಮಣಿಯಮ್‌ನ ಸಂಘರ್ಷ ತನ್ನ ವರ್ತಮಾನದೊಂದಿಗಿದೆ. ಅದು ಅನಿವಾರ್ಯವಾಗಿ ಪೊಲಿಟಿಕಲ್ ಕೂಡ ಆಗಿದೆ ಮತ್ತು ಆ ವರ್ತಮಾನದಲ್ಲಿ ಅವನು ಇನ್ನೇನು ಛಿದ್ರಗೊಂಡ ಸ್ಥಿತಿಯಲ್ಲಿದ್ದಾನೆ. ಈ ಪರಿಸ್ಥಿತಿಯ ಚಿತ್ರವೊಂದನ್ನು ಅವನು ನಮಗೆ ಕಟ್ಟಿಕೊಡುತ್ತಲೇ ಅದರಿಂದ ಹೊರದಾರಿಯೊಂದನ್ನು ಹುಡುಕುತ್ತಿದ್ದಾನೆ ಮತ್ತು ನಿಶ್ಚಯವಾಗಿ ಇದು ಕಲ್ಪಿತ ಸ್ಥಿತಿಯೆಂಬುದನ್ನು ಹೇಳುತ್ತ ಓದುಗರನ್ನು ಕೆಣಕುತ್ತಿದ್ದಾನೆ. ಇಲ್ಲಿಯೇ ಗಮನಿಸಿಕೊಳ್ಳಬೇಕಾದ ಒಂದು ಸಂಗತಿಯಿದೆ. ಕವಯಿತ್ರಿ ಅಥೆನಾ ಕಶ್ಯಪ್ (ಇವರೂ ಗಮನಾರ್ಹ ಭಾರತೀಯ ಇಂಗ್ಲೀಷ್ ಕವಿ, “ಕ್ರಾಸಿಂಗ್ ದ ಬ್ಲ್ಯಾಕ್ ವಾಟರ್ಸ್” ಇವರ ಪ್ರಖ್ಯಾತ ಕವನ ಸಂಕಲನ) ನಡೆಸಿದ ವಿವೇಕ್ ನಾರಾಯಣನ್ ಅವರ ಒಂದು ಸಂದರ್ಶನದಲ್ಲಿ ಕವಿತೆ ಕೇವಲ ಹೊಳಹುಗಳನ್ನು ಕಾಣಿಸುತ್ತ ಹೋಗಬೇಕೆ ಅಥವಾ ಅದು “ಹೇಳುವುದು ಕಡಿಮೆಯಾಗಲಿ, ಕಾಣಿಸುವುದು ಹೆಚ್ಚಾಗಲಿ” ಕ್ರಮ ಅನುಸರಿಸಬೇಕೆ ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಹೊಳಹುಗಳನ್ನು ಕಾಣಿಸುವುದು ಮುಖ್ಯವೆಂದೇ ತಿಳಿಯುವ ವಿವೇಕ್ ನಾರಾಯಣನ್ ಹೇಗೆ ತಮ್ಮ ಕವನಗಳಲ್ಲಿ ಈ ಎರಡು ಕ್ರಮಗಳ ನಡುವೆ ಅನುಸಂಧಾನ ನಡೆಸುತ್ತ ಹೋಗುತ್ತಾರೆಂಬುದನ್ನು ಸ್ವತಃ ವಿವರಿಸಲು ಕೇಳಿಕೊಳ್ಳುತ್ತಾರೆ.

ವಿವೇಕ್ ನಾರಾಯಣನ್ ಕವಿತೆಯೊಂದು ಈ ಎರಡರ ಅನುಸಂಧಾನದಲ್ಲಿಯೇ ರೂಪುಗೊಳ್ಳುವುದಾದರೂ ಮುಖ್ಯವಾಗಿ ಅದು ಪ್ರಾಮಾಣಿಕವಾಗಿರಬೇಕಾದುದೇ ಅಗತ್ಯ ಎನ್ನುತ್ತಾರೆ. ಹುಬ್ಬುಗಂಟಿಕ್ಕುವಂತೆ ಮಾಡುವ ಹೊಳಹುಗಳ ಕವಿತೆ ಇವತ್ತು ಹಿನ್ನೆಲೆಗೆ ಸರಿದಿದೆಯಾದರೂ ತಾನು ಸುಬ್ರಮಣಿಯನ್ ಕಂಡುಕೊಳ್ಳುತ್ತ ಹೋದ ಹಾದಿಯಲ್ಲೇ ಸಾಗಬೇಕಿರುವುದು ತನಗೆ ಅನಿವಾರ್ಯವೆನ್ನುತ್ತಾರೆ! ಅದಕ್ಕಾಗಿಯೇ ತಾವು ಪ್ರಬಂಧದ ಸ್ವರೂಪಕ್ಕೆ ಹೊರಳಬೇಕಾಗಿ ಬಂದಲ್ಲಿ ಅದಕ್ಕೂ, ಗದ್ಯ ಬೇಕಾದಲ್ಲಿ ಗದ್ಯವಿವರಣೆಗೂ ಚಾಚಿಕೊಳ್ಳುತ್ತಲೇ ಸಾಗಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಹಾಗೆ ಅವರ ಕಾವ್ಯ ಗದ್ಯ-ಪದ್ಯ ಗಡಿಯನ್ನು ಎಗ್ಗಿಲ್ಲದೆ ಹಾಯ್ದು ನಿಲ್ಲುತ್ತವೆ ಕೂಡ. ಅಂದರೆ ಅದೊಂದು ಚಂಪೂಕಾವ್ಯದ ಮಾದರಿಯೆಂದೇನಲ್ಲ. ನೀವು ಎಸ್ ದಿವಾಕರ್ ಅವರ “ಆತ್ಮಚರಿತ್ರೆಯ ಕೊನೆಯ ಪುಟ” ಕವನ ಸಂಕಲನ ಗಮನಿಸಿದ್ದರೆ ಅಲ್ಲಿ ಅವರ ಒಂದು ಕತೆಯೂ ಸೇರಿಕೊಂಡಿರುವುದನ್ನು ಕಾಣುತ್ತೀರಿ! ಅದು ಕವನ ಮತ್ತು ಸಣ್ಣಕತೆ ಎರಡೂ ಆಗಿದೆ. ಹಾಗೆಯೇ ವಿವೇಕ್ ನಾರಾಯಣನ್ ಸಂಕಲನದಲ್ಲಿ ಅಲ್ಲಲ್ಲಿ ಗದ್ಯದಂತೆ ಕಾಣುವ ಪುಟಗಳು ಸಿಗುತ್ತವೆ. ಒಂದೇ ಸಾಲಿನ ರಚನೆಗಳೂ ಸಿಗುತ್ತವೆ. ಅಪ್ಪಟ ಕವನಗಳೂ ಸಿಗುತ್ತವೆ.
ಬಹಳ ಸ್ಪಷ್ಟವಾಗಿಯೇ ಬುದ್ಧಿ-ಭಾವಗಳ ಮುಖಾಮುಖಿ, ಸಂಘರ್ಷ ಮತ್ತು ಒಡನಾಟ ಎಲ್ಲವೂ ಕಾವ್ಯವಾಗುತ್ತಿರುವಾಗಲೇ ವಿವೇಕ್ ಭಾಷೆಯನ್ನು ಇನ್ನಿಲ್ಲದಂತೆ ದುಡಿಸಿಕೊಳ್ಳುತ್ತಾರೆ. ಒಂದರ್ಥದಲ್ಲಿ ಭಾಷೆಯನ್ನು ಹೀಗೆ ದುಡಿಸಿಕೊಂಡು ತಾವು ಏನನ್ನಾದರೂ ಮಾಡುವುದು ಸಾಧ್ಯವಾದೀತೇ ಎಂಬ ಹಂಬಲದಲ್ಲಿಯೇ ಈ ಕವನಗಳನ್ನು ಬರೆದಿರುವುದಾಗಿ ಕೂಡ ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮತ್ತೆ ಮುಂದೆ ಸ್ವಲ್ಪ ಚರ್ಚಿಸಬಹುದು.

ಇಷ್ಟರ ಜೊತೆಗೆ ಅವರು ಚರಿತ್ರೆ, ಪುರಾಣ ಮತ್ತು ಭೂತಕಾಲದ ಝಿಗ್-ಝಾಗ್ ಜೋಡಣೆಯ(ಅರೇಂಜ್‌ಮೆಂಟ್) ಮೂಲಕ ಆಧುನಿಕ ಮನುಷ್ಯನ, ಅತ್ಯಗತ್ಯವಾಗಿ ರಾಜಕೀಯ ನೆಲೆಯುಳ್ಳವನಾಗಿರುವ ಆಧುನಿಕ ಮನುಷ್ಯನ ಗೊಂದಲಮಯ ವರ್ತಮಾನವೊಂದನ್ನು ಸೃಷ್ಟಿಸುತ್ತಾರೆ ಹಾಗೂ ಹಾಗೆ ಸೃಷ್ಟಿಸುವ ಮೂಲಕವೇ ಅವನ ಅಸ್ಮಿತೆಯ ಗುಜರಿಯಾದ ಸ್ಥಿತಿಯನ್ನೂ, ಹೊಸ ಮರುಹುಟ್ಟಿನ ಸಾಧ್ಯತೆಯನ್ನೂ ಏಕಕಾಲಕ್ಕೆ ಶೋಧಕ್ಕೊಡ್ಡುತ್ತಾರೆ. ಇಲ್ಲಿ ನಮಗೆ ಡಾ||ಯು.ಆರ್.ಅನಂತಮೂರ್ತಿಯವರೊಮ್ಮೆ ಭಾರತೀಯ ಪ್ರಜ್ಞೆ ಏಕಕಾಲಕ್ಕೆ ಹಲವು ಕಾಲಗಳನ್ನು ಒಟ್ಟಿಗೇ ಬದುಕುತ್ತಿರುತ್ತದೆ ಎಂದಿದ್ದು ನೆನಪಾಗುತ್ತದೆ. ಅವನು ಪುರಾಣ (ರಾಮಾಯಣ, ಮಹಾಭಾರತ), ಚರಿತ್ರೆ (ಬಾಬರ್, ಟಿಪ್ಪು, ಕೃಷ್ಣದೇವರಾಯ, ಅಶೋಕ,ವಿಶ್ವೇಶ್ವರಯ್ಯ, ಗಾಂಧಿ) ಮತ್ತು ವರ್ತಮಾನ (ರೈತರ ಆತ್ಮಹತ್ಯೆ, ಮೋದಿ, ಕೈಯಲ್ಲಿರುವ ಸಂಕಥನ) ಗಳನ್ನು ಏಕಕಾಲಕ್ಕೆ ತನ್ನ ವರ್ತಮಾನದ ಪ್ರಜ್ಞೆಯಾಗಿಸಿಕೊಂಡೇ ಇರುತ್ತಾನೆ. ಇದು ಸಹಜವಾಗಿಯೇ ಆಧುನಿಕ ಮನುಷ್ಯನ ಆತ್ಮದ ಗೊಂದಲವಾಗಿದೆ ಅಥವಾ ಸಂಕೀರ್ಣತೆಯಾಗಿದೆ. ಇದರಿಂದ ಅವನಿಗೆ ಮುಕ್ತಿಯಿಲ್ಲ, ಇದೊಂದು ಕಲ್ಪಿತ ಸ್ಥಿತಿಯಾಗಿರುವ ಸಾಧ್ಯತೆಯಿದ್ದೂ ಅವನ ಅಸ್ಮಿತೆಯ ಶೋಧ ಅಂಥ ಒಂದು ಅತಂತ್ರ ಸ್ಥಿತಿಯಲ್ಲಿಯೇ ನಡೆಯಬೇಕಾಗಿರುವುದನ್ನು ಇಲ್ಲಿನ ಕವನಗಳು ಮತ್ತೆ ಮತ್ತೆ ಮನದಟ್ಟು ಮಾಡುವ ಪರಿ ಅನನ್ಯವಾಗಿದೆ.

ವಿವೇಕ್ ನಾರಾಯಣನ್ ತಮ್ಮ ರಚನೆಗಳ ಹಿಂದೆ ತಮ್ಮನ್ನು ಕಾಡಿದ ವರ್ತಮಾನದ ಸಂಕೀರ್ಣ ಸ್ಥಿತಿಯನ್ನು ಸ್ಪಷ್ಟವಾಗಿಯೇ ಗುರುತಿಸಿದ್ದಾರೆ. ಇತಿಹಾಸದ ಹಿಂಸೆ, ಸಮಾಜದ ಮೇಲ್ವರ್ಗದ ಸಂಘರ್ಷಗಳು, ಗತದ ಗೊಂದಲಗಳು, ನಂಬಿಕೆಗಳ ಅನಿವಾರ್ಯತೆ ಮತ್ತು ಅಸಾಧ್ಯವಾಗಿರುವ ಅದರ ಗೋಳುಗಳು, ಮನುಷ್ಯ ಸ್ವತಃ ಕಾಲದೊಂದಿಗೆ ಹೆಜ್ಜೆಹಾಕುವಲ್ಲಿ ಸೋತು ಅನುಭವಿಸುವ ಜಂಜಡಗಳು, ಹೊಸತರ ಮುಖಾಮುಖಿ ಅವನನ್ನು ಕಂಗಾಲಾಗಿಸುವ ಪರಿ , ಸಾಂಸಾರಿಕ ಮತ್ತು ವೈಯಕ್ತಿಕ ತುಮುಲ, ತಲ್ಲಣಗಳು – ಹೀಗೆ ಅವರು ಕೆಲವನ್ನು ಪಟ್ಟಿ ಮಾಡುತ್ತಾರೆ. ತಮ್ಮ ಕವನಗಳಲ್ಲಿ ಹಲವನ್ನು ತೆರೆದಿಡುತ್ತಾರೆ. ಇನ್ನೊಂದೆಡೆ ಇತಿಹಾಸ ಮತ್ತು ಗತ (ಹಿಸ್ಟರಿ ಮತ್ತು ಪಾಸ್ಟ್) ಎರಡೂ ಬೇರೆ ಎನ್ನುವುದನ್ನೂ ಅವರು ವಿವರಿಸಿದ್ದಾರೆ. ಈ ಪ್ರಜ್ಞೆ ಆಧುನಿಕ ಮನುಷ್ಯನ ಸಂಘರ್ಷಗಳನ್ನು ಸ್ಪಷ್ಟವಾಗಿ ಗುರುತಿಸುವುದಕ್ಕೆ ಅತ್ಯಗತ್ಯ.

ಇದೆಲ್ಲದರ ಜೊತೆಗೆ ವಿವೇಕ್ ನಾರಾಯಣನ್ ಕವಿತೆಗಳನ್ನು ಗಟ್ಟಿಯಾಗಿ ಓದುವುದಕ್ಕೂ ಮಹತ್ವ ನೀಡುವ ಕವಿ. ಕವಿತೆಯೊಂದು ಶ್ರಾವ್ಯವೂ ಅಲ್ಲದ, ವಾಚ್ಯವೂ ಅಲ್ಲದ ಆದರೆ ಎರಡರ ನಡುವಿನ ತಲ್ಲಣಗಳನ್ನು ಅನುಸಂಧಾನಗೊಳಿಸುವ ಒಂದು ವಿಧಾನದ ಶೋಧದಲ್ಲಿಯೇ ಇರುವಂಥ ಪ್ರಕಾರ ಎನ್ನುತ್ತಾರೆ ಅವರು. ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಹಾಗೆ ಯಾವುದೇ ಒಂದು ಕವಿತೆಯನ್ನು ಗಟ್ಟಿಯಾಗಿ ಓದಲು ಸಾಧ್ಯವಿಲ್ಲ. ಕೆಲವೊಂದು ಕವಿತೆಗಳನ್ನು ಸದ್ದು ಕೂಡ ಮಾಡದೆ ಮನದಲ್ಲೇ ಮತ್ತೆ ಮತ್ತೆ ಗುನುಗಿಕೊಂಡೇ ಅನುಭವಿಸಿ, ಅರ್ಥಮಾಡಿಕೊಂಡು ಅನುಸಂಧಾನ ನಡೆಸಬೇಕಾಗುತ್ತದೆ. ಅವುಗಳನ್ನು ಗಟ್ಟಿಯಾಗಿ ಘೋಷವಾಕ್ಯಗಳಂತೆ ಉದ್ಘೋಷಿಸಿದ್ದೇ ಅವುಗಳ sanctity (ಪಾವಿತ್ರ್ಯ ಎನ್ನುವುದು ಕ್ಲೀಷೆ) ಹೊರಟು ಹೋಗುತ್ತದೆ. ಪಿಸುನುಡಿಯನ್ನು ಪಿಸುನುಡಿದಾಗಲೇ ಅದು ಪರಿಣಾಮಕಾರಿ ಹೇಗೋ ಹಾಗೆ. ಕಹಳೆ ಊದಬೇಕಾದಲ್ಲಿ ಕೊಳಲು ಊದಲು ಬರುವುದಿಲ್ಲ. ಹಾಗೆಯೇ ಗಟ್ಟಿಯಾಗಿಯೇ ಓದಬೇಕಾದ ಕವನಗಳು ಕೂಡ ಇವೆ. ನಾನು ಒಟ್ಟು ಮೂರು ಕವಿತೆಗಳನ್ನು ವಿವೇಕ್ ನಾರಾಯಣನ್ ಸ್ವತಃ ಓದಿದ್ದನ್ನು ಕೇಳಿಸಿಕೊಂಡಿದ್ದೇನೆ. ತೆಹಲ್ಕಾ ವೀಡಿಯೋ ಸರಣಿಗಳಲ್ಲಿರುವ ಈ ಚಿತ್ರಿಕೆಯನ್ನು ನೀವೂ ಯೂಟ್ಯೂಬ್ ಮೂಲಕ ಪಡೆದು ಕೇಳಿಸಿಕೊಳ್ಳಬಹುದು. ಕೇಳುತ್ತ ನನಗೆ ವಿವೇಕ್ ನಾರಾಯಣನ್ ಧ್ವನಿ ಎಲ್ಲಿ ಏರುತ್ತದೆ, ಉದ್ವೇಗವನ್ನು ನಟಿಸುತ್ತದೆ, ತಣ್ಣಗಾಗುತ್ತದೆ, Pause ಕಂಡುಕೊಳ್ಳುತ್ತದೆ ಎನ್ನುವುದೆಲ್ಲ ಮುಖ್ಯವಾಯಿತು. ಕೇಳುವಾಗ ನಾನು ಟೆಕ್ಸ್ಟ್ ಎದುರಿಗೇ ಇಟ್ಟುಕೊಂಡಿದ್ದೆ. ಈ ಕವಿತೆಗಳಲ್ಲೂ ಧ್ವನಿಶಕ್ತಿಯಿರುವ ಶಬ್ದಗಳಿವೆ, ಅವುಗಳು ಒಂದಕ್ಕಿಂತ ಹೆಚ್ಚಿನ ಮತ್ತು ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚು ಆಳದ ಸಂವೇದನೆಗಳಿರುವ ಶಬ್ದಗಳು. ಬಿಡುಬೀಸು ಓದಿನಲ್ಲಿ ಅವು ಓದುತ್ತಿರುವ ವಿವೇಕ್ ನಾರಾಯಣ್‌ಗೆ ದಕ್ಕಿದಂತೆ ಕೇಳುವ ನಮಗೆ ದಕ್ಕುವುದಿಲ್ಲ. ಇದು ಕೇವಲ ಭಾಷೆಯ ಸಮಸ್ಯೆಯೂ ಅಲ್ಲ. ವಿವೇಕ್ ನಾರಾಯಣನ್ ತಾವು ಕವನ ಓದುವಾಗ, ಓದುವ ಕೆಲವೇ ಕಾಲ ಮೊದಲು, ಓದುತ್ತ ಇರುವಾಗ ಮತ್ತು ಓದಿ ಮುಗಿಸಿದ ಬಳಿಕ ತಮಗಾಗುವ ಮಾನಸಿಕ ತುಮುಲ-ತಲ್ಲಣ ಅಥವಾ ಅನುಭವದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಕವಿತೆಯೊಂದನ್ನು ಓದುತ್ತ ಇರುವಾಗ ಕೂಡ ತಾವು ಅದನ್ನು ಯಾರದೋ ಎಂಬಂತೆ ಆಸ್ವಾದಿಸಬಲ್ಲ, ಹೊಸ ಹೊಳಹು ಕಂಡುಕೊಳ್ಳಬಲ್ಲ, ಹೊಸ ಹಾದಿಯಲ್ಲಿ ಸಾಗುವ ಉತ್ಸಾಹ ಪಡೆಯಬಲ್ಲ ಮತ್ತು ಓದಿ ಮುಗಿಸಿದ್ದೇ ಖಾಲಿತನವನ್ನೂ, ಕೊಂಚ ನಾಚಿಕೆಯನ್ನೂ, ತಾನು ಹೀಗೆಲ್ಲ ಬರೆದಿದ್ದರ ಬಗ್ಗೆ ಕಿರಿಕಿರಿಯನ್ನೂ ಒಟ್ಟಿಗೇ ಅನುಭವಿಸುವ ಮನುಷ್ಯ ಈ ಕವಿ. ಹಾಗಾಗಿ ನನಗೆ ಈ ಓದು ಅಷ್ಟೇನೂ ಕೊಡಲಿಲ್ಲ ಎಂದೇ ಹೇಳಬೇಕು. ನಾನೇ ಓದಿಕೊಂಡಾಗ ಅವುಗಳಿಂದ ದಕ್ಕಿದ್ದು ಹೆಚ್ಚು.

ಈ ಘಟ್ಟದ ಕವಿಯಾಗಿ ಈ ವಿವೇಕ್ ನಾರಾಯಣನ್ ಮೇಲೆ ಹೇಳಿದ ಮಿಲನ್ ಕುಂದೇರಾ, ಹೆಗೆಲ್ ಅಥವಾ ಕನ್ನಡಿ ಮತ್ತು ಕಿಟಕಿಯ ಸಿದ್ಧಾಂತವನ್ನು ಮುಖಾಮುಖಿಯಾಗುವ ನೆಲೆಗಳು ನಿಜಕ್ಕೂ ಅಧ್ಯಯನಯೋಗ್ಯ. ಇದಕ್ಕೆ ಬಹುಶಃ ನಮಗೆ ವಿವೇಕ್ ನಾರಾಯಣ್‌ಗಿಂತ ಸಮೃದ್ಧವಾದ ಇನ್ನೊಂದು ಉದಾಹರಣೆ ಸಿಗಲಾರದೇನೊ!

*******

ಈ ಸಂಕಲನ ಒಂದು ಸರಣಿ ಕವನಗಳ ಗುಚ್ಛ. ಇಲ್ಲಿರುವುದೆಲ್ಲಾ ಸುಬ್ರಮಣಿಯನ್ ಕುರಿತ ಕಥನ ಅಥವಾ ಸುಬ್ರಮಣಿಯನ್ ಸ್ವಗತ. ಆದರೆ ಈ ಕವನಗಳಲ್ಲಿ ಒಂದು ನಿರ್ದಿಷ್ಟ ಅನುಕ್ರಮಣಿಕೆ ಇದೆಯೇ ಎಂದರೆ ಅದೂ ಕಲ್ಪಿತ ಅನುಕ್ರಮಣಿಕೆಯಷ್ಟೇ ಎನ್ನಬೇಕು. ಏಕೆಂದರೆ, ಒಂದು ನಿರ್ದಿಷ್ಟ ಕ್ರಮವಿಲ್ಲದೇ ರಚಿಸಿದ ತಮ್ಮ ಹಲವಾರು ರಚನೆಗಳಲ್ಲಿ ಕೆಲವನ್ನಷ್ಟೇ ಉಳಿಸಿಕೊಂಡು, ಕೆಲವು ಕವನಗಳ ಕೇವಲ ಒಂದು ಸಾಲನ್ನಷ್ಟೇ ಉಳಿಸಿಕೊಂಡು, ತದನಂತರ ತಾವೇ ಒಂದು ಅನುಕ್ರಮಣಿಕೆಯನ್ನು ಕಂಡುಕೊಂಡು ಇವುಗಳನ್ನು ಜೋಡಿಸಲಾಗಿದೆಯೇ ಹೊರತು ಕಥನ ಸ್ವಾಭಾವಿಕವಾದ ಅಥವಾ ಪೂರ್ವನಿಧಾರಿತ ಅನುಕ್ರಮಣಿಕೆಯೇನೂ ಇಲ್ಲಿಲ್ಲ. ಈ ಆಯ್ಕೆಯಲ್ಲಿ ಅವರಿಗೆ ತಮ್ಮ ಕವನಗಳಲ್ಲಿ ಇರಬೇಕಾದ ಜೀವಂತಿಕೆಯೇ ಮಾನದಂಡ. ಹಾಗಾಗಿಯೇ, ಮೊದಲ ಕವನದ ನಿಜವಾದ ಅರ್ಥ, ಆಳ ನಮಗೆ ಸ್ಫುರಿಸುವುದು ಬಹುಶಃ ಸಿಲಪ್ಪಾದಿಕಾರಂ ಕವನ ಓದಿದಾಗಲೇ. ಅಥವಾ ಎರಡನೆಯ ಕವನದ (ಬದಲಾದ ಎಕ್ಸೆಂಟ್) ಅರ್ಥವ್ಯಾಪ್ತಿ ಅರಿವಿಗಿಳಿಯುವುದು ಸುಬ್ರಮಣಿಯನ್ ತನ್ನ ತಂದೆಯೊಂದಿಗೆ ಮಾತನಾಡಿದಂತಿರುವ “ಫಾದರ್ ಆಫ್ ಮಿಸ್ಟರ್ ಎಸ್” ಕವನ ಓದಿದಾಗಲೇ ಎನ್ನಬಹುದು. ಅಥವಾ ಸಮಗ್ರವಾಗಿ ಈ ಸಂಕಲನದ ಕವನಗಳನ್ನು ಗ್ರಹಿಸಿದ ನಂತರವೇ ನಮಗೆ ಇಲ್ಲಿನ ಕವನಗಳು ಒಂದೊಂದಾಗಿ ದಕ್ಕುತ್ತವೆ ಎಂದರೂ ಸರಿಯೇ. ವಿವೇಕ್ ನಾರಾಯಣನ್ ಅವರದೇ ಮಾತುಗಳಲ್ಲಿ ಹೇಳುವುದಾದರೆ, ‘ಇಲ್ಲೊಂದು ಬಗೆಯ ಕಥಾನಕ ಬಿಚ್ಚಿಕೊಳ್ಳುತ್ತ ಹೋಗುತ್ತದೆ; ಇಲ್ಲಿ ಹೆಚ್ಚು ವಕ್ರವಾದ, ವಿಡಂಬನಾತ್ಮಕವಾದ, ತೀಕ್ಷ್ಣಮತಿಯ ಧ್ವನಿಯತ್ತ ಹೊರಳಿದ, ಏಕಕಾಲಕ್ಕೆ ಭಾವುಕವೂ ಬೌದ್ಧಿಕವೂ ಆದ ಸ್ಫೋಟವಿದೆ’. ಉದಾಹರಣೆಗೆ ಸುಬ್ರಮಣಿಯನ್ ಆಕ್ಸೆಂಟ್ ಕುರಿತ ಟಿಪ್ಪಣಿ ಕವನ ಗಮನಿಸಿ.

ಸರಳವಾದ, ತುಸು ವಿವಾದಾತ್ಮಕ ಸತ್ಯವೆಂದರೆ
ಇದೇ
ಅವನ ಆಕ್ಸೆಂಟ್ ಬದಲಾಯಿತು
ಸೂಕ್ಷ್ಮವಾಗಿ ಅದರ ಸ್ವರಲಯ ವಿನ್ಯಾಸವನ್ನೆಲ್ಲ ಗಮನಿಸಿದರೆ
ಧ್ವನಿಪೆಟ್ಟಿಗೆಯ ಪದರಗಳಲ್ಲಿ ಹಾಯ್ದುಬರುವ ಗಾಳಿಯ ಸದ್ದು ನಿಮಗೆ ಕೇಳಿಸಿದ್ದೇ ಆದರೆ
ಅದು
ನಿರಂತರ ಪ್ರಯತ್ನ, ಪುನರಾವಲೋಕನ, ಪ್ರಯತ್ನ ಮತ್ತು ಪ್ರಯತ್ನ
ಆಕ್ಸೆಂಟ್ ಒಂದು ಪ್ರಶ್ನಾತೀತ ಕೇಂದ್ರವಾಗುಳಿದಿದೆಯೆಂದಲ್ಲ
ಅದೊಂದು ಬಯಕೆ
ಎಂಬ ಸಂಗತಿಯಲ್ಲಿ ನಿಮಗೆ ಹೊಸ ನಂಬಿಕೆಯೊಂದು ಮೊಳೆಯುವುದು ಸಾಧ್ಯ.
ಮೌನದ ಕಣಿವೆಯೊಳಗಿಂದೆದ್ದು ಅಸ್ಮಿತೆಯ ಬಯಕೆಯುಕ್ಕಿ ಹರಿವೊಲು
ಯಾವ ಖಾತ್ರಿಯೂ ಇಲ್ಲದಲೆ ಫಲದಪೇಕ್ಷೆ ಬಿಟ್ಟೇ ದಿಟ್ಟತನದಿ
ಹೊಂದಿಸಿಕೊಂಡ ಹಿಂದಿನೆಲ್ಲ ನಿರ್ಣಯಗಳೂ
ಹೇಗೆ ಮತ್ತು ಯಾವಾಗ ಮತ್ತು ಈ ಅರಳುವಿಕೆಯಲ್ಲೆ ಕಾಲ ದಡ್ಡುಗಟ್ಟಿತೆ
ಇಲ್ಲಾ ಬಳುಕಿ ಬಾಗಿತೆ ಎಂಬೆಲ್ಲದರ ಶೋಧ
ವೇ ಇದು, ಆಕ್ಸೆಂಟ್

ಅಂದರೆ, ಇಲ್ಲಿ ಉಚ್ಚಾರದ ಶೈಲಿ (ಆಕ್ಸೆಂಟ್) ಬದಲಾಗಿದ್ದು ಪ್ರಯತ್ನಪೂರ್ವಕ ಮತ್ತು ಅದೇ ಆತನ ಅಸ್ಮಿತೆಯ ಶೋಧದ ಒಂದಾನೊಂದು ಹಾದಿ ಕೂಡ ಆಗಿತ್ತು ಏಕೆ ಮತ್ತು ಹೇಗೆ ಎನ್ನುವುದು ತಿಳಿಯಲು ನಾವು ಅವನ ಗತವನ್ನು ನೋಡಬೇಕಾಗಿದೆ. ಗತ ಮತ್ತು ಚರಿತ್ರೆ ಬೇರೆ ಬೇರೆ ಎನ್ನುವ ವಿವೇಕ್ ನಾರಾಯಣನ್ ಅವರ ಸುಬ್ರಮಣಿಯನ್‌ಗೆ ಇವೆರಡರಿಂದಲೂ ಬಿಡುಗಡೆಯೇನಿಲ್ಲ ಎನ್ನುವುದನ್ನು ಈ ಹಿಂದೆಯೇ ಗಮನಿಸಿದ್ದೇವೆ.
ಕಾಲ ಮತ್ತು ದೇಶ ಎರಡು ಮಾತ್ರವಲ್ಲದೆ ಸ್ಪೇಸ್ ಕೂಡ ಕೆಲವೊಮ್ಮೆ ನಿರಾಕಾರ-ನಿರ್ಲಿಪ್ತ-ನಿರ್ಗುಣಕ್ಕೆ ಎಳಸುವುದು ಇಲ್ಲಿನ ಮತ್ತೊಂದು ವಿಶೇಷ. ಅಂದರೆ ಇಲ್ಲಿ ಇದ್ದಕ್ಕಿದ್ದಂತೆ ನಿರೂಪಕ ಮತ್ತು ನಿರೂಪಿತ ಒಬ್ಬರೇ ಆಗುವುದು ಅಥವಾ ಆ ಇಬ್ಬರೂ ಕಲ್ಪನೆಯಿರಬಹುದೆಂಬಂತೆ ಸರಿದು ಬಿಡುವುದು ಜರುಗುತ್ತದೆ. ಉದಾಹರಣೆಗೆ, ತಾನು ಸ್ವತಃ ಗುಜರಿಯಂಗಡಿಯ ವಸ್ತುವಾಗಿದ್ದು ಆ ಸ್ಥಿತಿಯ ಒಟ್ಟು ಆರು ಮಾದರಿಗಳನ್ನು ವಿವರಿಸುವ ಆರು ಕವನಗಳು ಈ ಸಂಕಲನದಲ್ಲಿದ್ದು ಅವುಗಳಲ್ಲಿ ಮೊದಲನೆಯದನ್ನು ಗಮನಿಸಿದರೆ ಇದು ತಿಳಿಯುತ್ತದೆ.

ಒಂದು ದಿನ
ಒಂದಲ್ಲಾ ಒಂದು ದಿನ, ಅವನು ಈ ಕೊಳೆತು
ನಾರುವ ಪ್ರೇತಾವಸ್ಥೆಯಿಂದೆದ್ದು
ಸಂಪನ್ನನಾಗಿ ದಿವ್ಯನಾದಾನು.
ಈ ರೂಪಾಂತರದ ಘಳಿಗೆಯಲ್ಲೇ ಜಗತ್ತಿನ್ನೂ
ಹೊಟ್ಟು ಹೊಟ್ಟಿ ಹುಟ್ಟಿಬರುವ ಸನ್ನದ್ಧಿಯಲ್ಲಿಹುದು
ಅದೂ, ಅದರ ಕುರುಡು ಮೂತಿಗೆ ಎದುರಾಗಿ, ಕ್ಷಣ ನಿಂತು,
ತನಗೇ ತಾನೊಂದು ನಸುನಗೆಯ ಎಸೆದು ಹಾಯ್
ನುಡಿದು ದಾಟಲು
ಕಂಪನದ ನಟ್ಟನಡುವೆಯೇ ಅವನೆದ್ದು ಬಂದರೂ ಬಂದನೇ.
ಒಂದಲ್ಲಾ ಒಂದು ದಿನ, ಮಿಂಚಿ ಮರೆಯಾದ ಬೆಳಕಿನಂತೆ
ತಾನಿದೀಗ ಬಿಸಿಬಿಸಿಯಾಗಿ ಬರೆಯುತ್ತಿರುವುದರ
ಅರ್ಥ ಅವನು ಅರಿತಾನು
ಪ್ರಭೆಗೂ ಪ್ರತೀ ಬಿಂಬಕ್ಕೂ ನಡುವಿನದ ಕಂಡೂ
ಕಾಣಲು ಗುಂಡಿಗೆಗೆ ಬಲಬಂದು
ಶ್ರದ್ಧೆಯೆಂಬುದು ಸದ್ದುಗದ್ದಲವಲ್ಲ, ಸುದ್ದಿಯಲ್ಲ
ಮತ್ತದು
ಮತ್ತದೇ ಹೊಸತೊಂದರ ಸುರುವಾತು ಕೂಡ
ಆದೀತು ಎಂದು
ಆದಾನು.

ಇಲ್ಲಿ ಅವನು ಯಾರು, ನಾನು ಯಾರು, ಇದೀಗ ಇದನ್ನೇ ಬಿಸಿಬಿಸಿಯಾಗಿ ಬರೆಯುತ್ತಿರುವವನು ಯಾರು! ತಿಳಿಯುವವನು ಯಾರು, ತಿಳಿಯುವುದೇನನ್ನು ಮತ್ತು ಆಗುವುದು ಏನು!

ಮೊದಲೇ ಹೇಳಿರುವಂತೆ ವಿವೇಕ್ ನಾರಾಯಣನ್ ಪದಗಳೊಂದಿಗೆ ಆಟವಾಡುವ ಕವಿ. ವಿವೇಕ್ ನಾರಾಯಣನ್ ಹೇಳುವಂತೆ ‘ಇದು ಜಗತ್ತಿಗೆ ನಮ್ಮನ್ನು ನಾವು ಭಾಷೆಯ ಮೂಲಕ ಪ್ರದರ್ಶಿಸಿಕೊಂಡು ಬಂದಿರುವಲ್ಲಿ ಇರುವ ಮಿತಿಗಳೇನಿವೆ, ಅವುಗಳನ್ನು ಭಾಷೆಯ ಮೂಲಕವೇ ಮೀರುವ ಒಂದು ಯತ್ನ ಮತ್ತು ಈ ಯತ್ನ ಕವಿಯ ರಚನೆಗಳಲ್ಲಿ ಅಷ್ಟೇನೂ ಪ್ರಜ್ಞಾಪೂರ್ವಕವಾಗಿ ನಡೆಯುವುದಿಲ್ಲ.’ ಅವರ ಕವಿತೆಯ ಸಾಲುಗಳಲ್ಲಿ ನಡುನಡುವೆ ಗ್ಯಾಪ್, ಅರ್ಧ ಸಾಲು, ತುಂಡು ಪದಪುಂಜ ಎಲ್ಲ ಸಿಗುತ್ತವೆ. ಹಾಗಾಗಿ ತುಂಡು ತುಂಡು ಭಾವವನ್ನು ಯಾವ ಇನ್ನೊಂದು (ಮುಂದಿನ ಅಥವಾ ಹಿಂದಿನ) ತುಂಡಿನೊಂದಿಗೆ ಸೇರಿಸಿಕೊಂಡು ಒಂದು ಮಾಡಿಕೊಳ್ಳುವಿರೋ ನಿಮಗೇ ಬಿಟ್ಟಿದ್ದು. ಅಥವಾ, ವಿವೇಕ್ ನಾರಾಯಣನ್ ಸ್ವತಃ ಓದುವಾಗ ಕೊಡುವ ಹೊಸದೇ ಆದ pause ಗಳನ್ನು ಕಂಡು ನಿಮಗೆ ಬೇಕಾದಂತೆ ತುಂಡು ಮಾಡಿಕೊಂಡು ಓದಿದರೂ ಸರಿಯೇ. ಅಕ್ಷರ ಪದಗಳಿಗಿಲ್ಲದ ownership ಕವಿತೆಗೇಕೆ ಎನ್ನುವ ವಿವೇಕ್ ನಾರಾಯಣನ್ ನಮಗೆ ಅಂಥ ಒಂದು ಸ್ವಾತಂತ್ರ್ಯವನ್ನು ಆಗಲೇ ಕೊಟ್ಟುಬಿಟ್ಟಿದ್ದಾರೆಂದುಕೊಳ್ಳಬಹುದು! ಹಾಗಾಗಿ ಇಲ್ಲಿನ ಅನುವಾದ ತೀರಾ ಖಾಸಗಿ ಅನುವಾದ ಎಂದು ಭಿಡೆಯಿಲ್ಲದೇ ಹೇಳಬಲ್ಲೆ. ಹೀಗೆ ನಿಮ್ಮ ನಿಮ್ಮ ಅನುವಾದವನ್ನು ನೀವು ನೀವೇ ಮಾಡಿಕೊಳ್ಳುವುದು ಕೂಡ ಅಗತ್ಯವೆಂದು ಸೂಚಿಸಬಲ್ಲೆ!

“ಇದೀಗದ ವರ್ತಮಾನದೊಂದಿಗೆ ನಾಲ್ಕು ಹೆಜ್ಜೆ”
ಎದ್ದೇಳುವ ಜಟಾಪಟಿಯಲ್ಲೇ
ಇಬ್ಬನಿ ಕವಿದ ಮುಂಜಾವಿನೊಳಹೊಕ್ಕು
ಥಟ್ಟನೆ ಒಬ್ಬಂಟಿ ತಾನೆಂಬ ಗೊತ್ತಿರುವ ಹಳೇ ಸತ್ಯಕ್ಕೆ
ಢಿಕ್ಕಿ ಹೊಡೆದಂತೆ ನೆನಪುಗಳ ಮಂಕು
ಅಪರಾಹ್ನದ ಇಳಿಬಿಸಿಲ ಮಾತು ಬೇರೆ
ಹಠ ಹಿಡಿದು ಕೂತ ಮನದ ಮಂಕು
ಮೆದುಳಿನೊಳಗೆ ಎಬ್ಬಿಸಿದ ಗದ್ದಲದಲ್ಲಿ
ಅಲ್ಲ, ಇದೆಲ್ಲ ಒಂದು ಕನಸೆಂದೇ ಬಗೆದರೆ
ನಷ್ಟವೇನಿದೆ?
ಆ ನಿರ್ಜೀವ ಅಪರಾಹ್ನ ಅವನ ಹೆಜ್ಜೆಗಳು
ಖುಶಿ ಮತ್ತು
ಈ ಕವನದ ಮುಂಜಾನೆಯಲ್ಲವನು ಎದ್ದಾಗ
ಕೂಡ ಖುಶಿ ಮತ್ತು ಒಬ್ಬಂಟಿ
ಎದ್ದು ಹಾಲು ಕಾಯಿಸಿ, ಗೀಸರಿನ ಸ್ವಿಚ್ಚು ಅದುಮಿ
ಈ ಒಂದಕ್ಕಿಂತ ಹೆಚ್ಚಿನ ಖುಷಿಗಳನ್ನೆಲ್ಲ
ಒಂದಕ್ಕೊಂದು ಕೂಡಿ ಕಳೆದು
ಲೆಕ್ಕ ಹಾಕಿದರೆ ಮೊತ್ತದಲ್ಲಿ ಮಾತ್ರ ಮತ್ತದೇ ಬೇಸರ:
ಇಲ್ಲಿಗೇ ಇನ್ನೇನು ಬಂದು ಒಕ್ಕರಿಸುವ ಅಪರಾಹ್ನ
ಇನ್ನೇನು ಇಲ್ಲಿಂದಲೇ ಮರೆಯಾಗೋ ಅದೇನೊ
ಮರುಜೀವ ಪಡೆದುಕೊಂಡಂತೆ ಸುತ್ತುವ ಫ್ಯಾನು
ಅದನ್ನತ್ತತ್ತ ದೂಡಿದ ಅವನ ಕೋಟು
ಬಯಕೆ ಸೊರಗುವುದು ಕಣ್ಣಿಗೆ ರಾಚುವಂತೆ
ಸುಡುಸುಡು ಬೇಸಗೆ ಸಾಯುತ್ತಿದೆ.
ಅಂಚಿನಲ್ಲಿ ಆಯತಪ್ಪಿ ಬಿದ್ದು ಹೋಗುವ ಅತಂತ್ರ
ಹಕ್ಕಿಯಂತೆ ಹಿಂಜಿಹೋದ ಒಂಟಿ
ಮನುಷ್ಯನ ಆತ್ಮಹತ್ಯೆ
ಸುಬ್ರಮಣಿಯನ್ ಕೂಡ
ಸರಣಿ ಸರಣಿಯಾದ ಈ ಎಲ್ಲದರ
ಮರ್ಮ ಬೇಧಿಸಲಾರ (ಹೇಳಬೇಕೆಂದರೆ,
ಗೆಳೆಯನೊಬ್ಬ ಹೇಳಿದಂತೆ, ನನ್ನ ಇಷ್ಟದ ಸಿನಿಮಾ;
ಒಂದೆಂದರೆ, ಅದು ಸುರುವಾಗಲೇ ಇಲ್ಲ ಯಾವತ್ತೂ)

ಏರಿಯಾ ಆಫ್ ಮಿಸ್ಟರ್ ಎಸ್ ಕೂಡ ನಮಗೆ ಸುಬ್ರಮಣಿಯನ್‌ನ ವರ್ತಮಾನವನ್ನು ತೆರೆದು ತೋರಿಸುವ, ಅವನ ನಾರುತ್ತಿರುವ ಸ್ಥಿತಿಗೆ ರೂಪಕಗಳನ್ನೊದಗಿಸುವ ಒಂದು ಕವಿತೆ. ಈ ಚಿತ್ರವನ್ನು ಹೆಚ್ಚು ಆಳವಾಗಿ ಮತ್ತು ಅರ್ಥಪೂರ್ಣವಾಗಿ ತೆರೆದಿರಿಸುವುದು ಸಿಲಪ್ಪಾದಿಕಾರಮ್ ಕವಿತೆಯೇ. ಇಲ್ಲಿ ಒಂದು ಹಂತದ ವಿವರಗಳು ಸುಬ್ರಮಣಿಯನ್ ಇರುವ ರಸ್ತೆಯ ವಿದ್ಯಮಾನಗಳನ್ನು, ಗದ್ದಲವನ್ನು, ಅವನಿಗೆ ಮದುವೆಯಾಗದ, ಮಕ್ಕಳಿಲ್ಲದ ಒಬ್ಬಂಟಿ ಸ್ಥಿತಿಯನ್ನು, ಕೈಯಲ್ಲಿರುವ ಪೆನ್ನನ್ನು, ರಿಜಿಸ್ಟ್ರಿ ದಾಖಲಾತಿಗಳಿಲ್ಲದ ಅತಂತ್ರ ಸ್ಥಿತಿಯನ್ನು, ಹಾಗಿದ್ದೂ ಅನಿವಾರ್ಯವಾಗಿ ಅವನ ಅಸ್ತಿತ್ವಕ್ಕೆ ರಾಜಕೀಯ ನೆಲೆಯೂ ಇರುವುದನ್ನು, ಅವನ ದೇಹ ಒಂದು ಆರ್ಗ್ಯಾನಿಕ್, ಸಿಂಥೆಟಿಕ್ ವ್ಯವಸ್ಥೆಯಷ್ಟೇ ಆಗಿರುವುದನ್ನು, ಅವನ ಲ್ಯಾಪ್‍ಟಾಪ್‌ನೊಳಗಿನ ಡಾಟಾವನ್ನು ನೆನಪಿಸುತ್ತ ಸಾಗಿದರೆ ಇನ್ನೊಂದು ಸ್ತರದಲ್ಲಿ ಈ ಕವನ ಪ್ರಾಚೀನ ತಮಿಳು ಕಾವ್ಯವೊಂದರ ಪಾತ್ರ ಕನ್ನಗಿ ಮತ್ತವಳ ಕತೆಯ ನೆರಳನ್ನು ಸೆರಗಿನಂತೆ ತನ್ನುದ್ದಕ್ಕೂ ಹಾಸಿಕೊಂಡೇ ಸಾಗುತ್ತದೆ. ಆ ಕತೆ ಕುತೂಹಲಕರವಾಗಿದೆ. ಅನ್ಯಾಯವಾಗಿ, ದುಡುಕಿನಿಂದಾಗಿ ತನ್ನ ಗಂಡನನ್ನು ಕಳ್ಳ ಎಂದು ತೀರ್ಮಾನಿಸಿ, ಮರಣದಂಡನೆಗೆ ಗುರಿಪಡಿಸಿದ ಒಂದು ಊರನ್ನೇ ತನ್ನ ಸಿಟ್ಟಿನಿಂದ (ಎಡ ಸ್ತನವನ್ನೇ ಕಿತ್ತೆಸೆದು) ಸುಟ್ಟು ಹಾಕಿದ ಕನ್ನಗಿ ಎಂಬಾಕೆಯ ಕತೆಯದು. ಇಲ್ಲಿಯೂ ಸುಬ್ರಮಣಿಯನ್ ತನ್ನೊಳಗೆ ಕನ್ನಗಿತನದ ಒಂದು ಸಿಟ್ಟು ಬುಸುಗುಡುತ್ತಿದೆ ಎನ್ನುವುದನ್ನು ಕಂಡುಕೊಂಡಿದ್ದಾನೆ. ಆದರೆ ಅದರ ಮೂಲ ಆತನಿಗೆ ಅರಿಯದ್ದು. ಹಾಗೆಯೇ ಅವನ ಸಿಟ್ಟು ಕಣ್ಣೆದುರು ಇರುವ ಯಾವುದೇ ಒಂದು ನಗರದ್ದಲ್ಲ. “ಇಲ್ಲದ ನಗರ”ವನ್ನು ಸುಟ್ಟು ಹಾಕಲೇ ಎನಿಸುತ್ತಿದೆ ಎನ್ನುತ್ತಾನವನು! ಕಣ್ಮಣಿಯಾದ ಕನ್ನಗಿಯ ಕೈಯಲ್ಲಿ ಅವಳದೇ ಎಡಮೊಲೆಯಿದ್ದರೆ ಸುಬ್ರಮಣಿಯನ್ ಕೈಯಲ್ಲಿ ಪೆನ್ನು, ಪೆನ್ಮಣಿಯಿದೆ! ಕನ್ನಗಿಯೂ ಊರನ್ನು ಪ್ರವೇಶಿಸಿದವಳಲ್ಲ, ಊರನ್ನು ಕಂಡವಳಲ್ಲ. ಸುಬ್ರಮಣಿಯನ್ ತರವೇ ರಿಜಿಸ್ತ್ರಿಯಲ್ಲಿ ಹೆಸರು ಎಂಟ್ರಿ ಮಾಡಿಸಿಕೊಂಡವಳಲ್ಲ. ಗಂಡನನ್ನು ಊರೊಳಗೆ ಕಳುಹಿಸಿ ತಾನು ಹೊರಗೇ ಕಾದು ನಿಂತವಳು ಅವಳು. ಇಲ್ಲಿ ಸುಬ್ರಮಣಿಯನ್ ಊರೊಳಗಿದ್ದೂ ಹೊರಗಿನವನಾಗಿಯೇ ಉಳಿದವ. ತಮಿಳು ಮೂಲದ ವಿವೇಕ್ ನಾರಾಯಣನ್ ಭಾರತೀಯರಾಗಿದ್ದೂ ಬೆಳೆದಿದ್ದು ಜಾಂಬಿಯಾ, ಅಮೆರಿಕಾ, ದಕ್ಷಿಣ ಆಫ್ರಿಕಾಗಳಲ್ಲಿ. ಈ ಶತಮಾನದ ಸುರುವಿನಲ್ಲಿ ಭಾರತಕ್ಕೆ ಮರಳಿದ ವಿವೇಕ್ ನಾರಾಯಣನ್ ಕೂಡ ಸಹಜವಾಗಿಯೇ “ನಿಮ್ಮೊಡನಿದ್ದೂ ನಿಮ್ಮೊಳಗಾಗದೆ” ಈ ಔಟ್ ಸೈಡರ್ ಭಾವವನ್ನು ಕಟ್ಟಿಕೊಂಡೇ ಇದ್ದಿರಬಹುದು. ಆದಾಗ್ಯೂ ಆಧುನಿಕ ಮನುಷ್ಯ ತನ್ನೂರಿನಲ್ಲೂ ಔಟ್ ಸೈಡರೇ ಎಂಬ ಅರಿವು ಕೂಡ ವಿವೇಕ್ ನಾರಾಯಣನ್ ಅವರಿಗಿದೆ.

ನಮ್ಮಲ್ಲಿ ಜಯಂತ್ ಕಾಯ್ಕಿಣಿ, ಯಶವಂತ ಚಿತ್ತಾಲ ಪ್ರಮುಖವಾಗಿ ಮುಂಬಯಿಯ ನಗರ ಜೀವನವನ್ನು ತಮ್ಮ ಕತೆ,ಕಾದಂಬರಿಗಳಲ್ಲಿ ಚಿತ್ರಿಸುತ್ತಾರೆ ಎನ್ನುತ್ತಲೇ ಬಂದಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು. ಈ ಲೇಖಕರ ಮುಂಬಯಿಗೂ ನಿಜವಾದ ಮುಂಬಯಿಗೂ ನಡುವೆ ಒಂದು ಗ್ಯಾಪ್ ಇರುವುದನ್ನೂ ನಾವು ಕಾಣಬಹುದಾದರೆ, ಅದು ವಿವೇಕ್ ನಾರಾಯಣನ್ ಅವರು ಹೇಳುವ “a situation-specific universal address” ಕೂಡ ಆಗಿರುವ ಸಾಧ್ಯತೆಯೊಂದನ್ನು ನಮಗೆ ತೆರೆಯುತ್ತದೆ. ಅಂದರೆ, ಚಿತ್ತಾಲರ ಮುಂಬಯಿ, ಕಾಯ್ಕಿಣಿಯವರ ಮುಂಬಯಿ ಮಹಾರಾಷ್ಟ್ರದ ಮುಂಬಯಿ ಮಾತ್ರವೇ ಆಗಿರದೆ ಅದು ನಮ್ಮ ನಿಮ್ಮ ಮುಂಬಯಿ ಕೂಡ ಆಗುತ್ತದೆ, ನಾವು ನೀವು ಕಂಡಿರದ ಮುಂಬಯಿ ನಮನಮಗೆ ನಾವು ನಾವು ಇರುವಲ್ಲಿಯೇ ಸಾಕಾರಗೊಳ್ಳುವುದು ಸಾಧ್ಯವಾಗುತ್ತದೆ ಹಾಗೂ ಬೆಂಗಳೂರಿನಲ್ಲೋ, ಚೆನ್ನೈಯಲ್ಲಿಯೋ ಅದೇ ಮುಂಬಯಿಯನ್ನು ಕಂಡುಕೊಳ್ಳುವುದೂ ಸಾಧ್ಯವಾಗುತ್ತದೆ. ಈ ಅರ್ಥದಲ್ಲಿ ವಿವೇಕ್ ನಾರಾಯಣನ್ ತಮ್ಮ ಕವನಗಳ ನೆಲ ಮದ್ರಾಸಿನ ಬಳಿಯ ಒಂದು ಪಟ್ಟಣವಾಗಿದ್ದೂ ಸಾರ್ವತ್ರಿಕ ನೆಲೆಗೆ ಚಾಚಿಕೊಳ್ಳುವ ಒಂದು ಪಟ್ಟಣ ಅಥವಾ ಊರು ಎನ್ನುತ್ತಾರೆ.

ವಿವೇಕ್ ನಾರಾಯಣನ್ ರಚನೆಗಳ ವೈಶಿಷ್ಟ್ಯವನ್ನು ಗುರುತಿಸಿಯೂ ಅವು ಅರಿವಿನ ಆಳ, ವಿಸ್ತಾರಗಳನ್ನು ಹೆಚ್ಚಿಸಿಕೊಳ್ಳುವ ಶೋಧಕ್ಕೇ ಸೀಮಿತವಾಗಿ ಉಳಿಯುವುದನ್ನು ಒಪ್ಪಿಕೊಳ್ಳಲೇ ಬೇಕು. ಇದು ಕಾಲ-ದೇಶ ಪ್ರಜ್ಞೆಯಲ್ಲೇ ಘಟಿಸುವಾಗಲೂ ಇಲ್ಲಿ ಕೇಂದ್ರ ವ್ಯಕ್ತಿಯೇ. ಅಷ್ಟರಮಟ್ಟಿಗೆ ಕನ್ನಡಿ ಮತ್ತು ಕಿಟಕಿಗಳ ನಡುವಿನ ಸಂಬಂಧ ಒಂದು ಹೊಸತೇ ಮಜಲನ್ನು ಕಂಡುಕೊಂಡಿರುವುದನ್ನು ಇಲ್ಲಿ ಗುರುತಿಸುವುದು ಸಾಧ್ಯ. ಇದು ವಿವೇಕ್ ನಾರಾಯಣನ್ ಕವಿತೆಗಳ ಅನನ್ಯ ವೈಶಿಷ್ಟ್ಯ.

(ಸಂಕಥನ ತ್ರೈಮಾಸಿಕದ ಎರಡನೇ ಸಂಚಿಕೆಗಾಗಿ ಬರೆದ ಲೇಖನ)

No comments: