Saturday, December 31, 2016

ಗಾಳಿ ಹೆಜ್ಜೆ ಹಿಡಿದ ಸುಗಂಧ!

ಅವನು ಮುದ್ದು ಮುದ್ದಾದ ಹುಡುಗ. ‘ನನ್ನ ಅಪ್ಪ, ತುಂಬ ಸಾಧು ಮನುಷ್ಯ’ ಎಂದ. ಮರು ಮಾತಿಗೇ ‘ಅವರೀಗ ಇಲ್ಲ’ ಎಂದ! ಇನ್ನೂ ಏಳನೆಯ ಕ್ಲಾಸಿನ ಹುಡುಗ ಇದೇನು ಹೇಳುತ್ತಾನಪ್ಪ ಎಂದರೆ ಮತ್ತೊಮ್ಮೆ ‘ಆದರೆ ಅವರು ಸಾಧು ಮನುಷ್ಯ’ ಎಂದ. ‘ನನ್ನನ್ನು ಹತ್ತಿರ ಕರೆದರು, ತಂಟೆ ಗಿಂಟೆ ಮಾಡಬೇಡ, ಚೆನ್ನಾಗಿ ಓದು, ಒಳ್ಳೆಯ ವಿದ್ಯಾಬುದ್ಧಿ ಕಲಿ, ನಾನಿನ್ನು ಇರುವುದಿಲ್ಲ, ನನ್ನದು ಮುಗಿಯಿತು ಎಂದರು. ತಂಗಿಯನ್ನ ಕರೆದರು. ಅವಳಿಗೂ ಹೇಳಿದರು. ಮತ್ತೆ ಅಮ್ಮನನ್ನು ಕರೆದರು.ಈ ಜನ್ಮದಲ್ಲಿ ಇಷ್ಟೇ ನಮ್ಮದು. ಮುಂದಿನ ಜನ್ಮದಲ್ಲಿ ಸಿಗ್ತೇನೆ ಎಂದರು. ನನ್ನಪ್ಪ ತುಂಬ ಸಾಧು , ಅವರೀಗ ಇಲ್ಲ.’ ಎಂದ. ನಗುನಗುತ್ತಲೇ ಇಷ್ಟನ್ನು ಹೇಳಿ ವೇದಿಕೆ ಇಳಿದು ಹೋದ ಈ ಮುದ್ದು ಹುಡುಗನ ಹೆಸರು ಖ್ಯಾತಿ ಸತೀಶ್ ನಾಯಕ್. ಪಕ್ಕದಲ್ಲೇ ಕೂತವರನ್ನು ಕೇಳಿದೆ, ಹುಡುಗನ ತಂದೆ ಇದ್ದಾರಲ್ವೇ. ‘ಇಲ್ಲ ಇಲ್ಲ, ತೀರಿಕೊಂಡಿದ್ದಾರೆ’ ಎನ್ನುವ ಉತ್ತರ ಬಂತು.

ಗೋವಾದ ಎಂಡ್ರಿಯಾ ಮಿನೇಜಸ್ ಎನ್ನುವ, ಕಣ್ಣುಗಳಲ್ಲೇ ನಕ್ಷತ್ರಗಳನ್ನಿರಿಸಿಕೊಂಡಂತಿರುವ ಕಪ್ಪು ಹುಡುಗಿ ಬಂದವಳೇ ‘ನನ್ನ ಹೊಡೆಯ ಬೇಡಿ, ನನ್ನ ಹೊಡೆಯಬೇಡಿ’ ಎನ್ನತೊಡಗಿದಳು. ‘ನಿಮಗೆ ತಿನ್ನಲು ಕೊಡುವೆ, ಕುಡಿಯಲು ಕೊಡುವೆ; ನನ್ನ ಹೊಡೆಯ ಬೇಡಿ, ನನ್ನ ಹೊಡೆಯಬೇಡಿ. ಮಳೆಯೇ ಬರಲಿ, ಬಿಸಿಲೇ ಬರಲಿ, ನಿಮ್ಮ ನಾ ಕಾಯುವೆ; ನನ್ನ ಹೊಡೆಯ ಬೇಡಿ, ನನ್ನ ಹೊಡೆಯಬೇಡಿ. ನಿಲ್ಲಲು ಮನೆ ಕೊಡುವೆ, ಅಡುಗೆಗೆ ಬೆಂಕಿ ಕೊಡುವೆ; ನನ್ನ ಹೊಡೆಯ ಬೇಡಿ, ನನ್ನ ಹೊಡೆಯಬೇಡಿ. ಏನು ಕೇಳಿದರೂ ಕೊಟ್ಟು ಬಿಡುವೆ, ನನ್ನ ಹೊಡೆಯಬೇಡಿ, ನನ್ನ ಹೊಡೆಯಬೇಡಿ’ ಎಂದು ಚಟಚಟನೆ ಹೇಳಿ ಹೊರಟು ಹೋದಳು. ಗೋವಾ ಸರಕಾರ ತೆಂಗಿನ ಮರ ಕಡಿಯಲು ಪೂರ್ವಾನುಮತಿ ಪಡೆಯುವ ಅಗತ್ಯವನ್ನು ತೆಗೆದು ಹಾಕಿದ ಸಂದರ್ಭದಲ್ಲಿ ಅಲವತ್ತುಕೊಳ್ಳುವ ತೆಂಗಿನ ಮರದ ಹಾಡಿದು.

ಹಸಿವಲ್ಲೇ ಬಿಸಿಲಿಗೆ ಕೂತು ಕರಟಿ ಬೆಂಡಾದವರು ಅಷ್ಟಿರಲು
ಅವರ ಹಸಿವಿನ ಬೆಂಕಿ ಆರದೆ ನನ್ನ ಹೆಣ ಸುಡಬೇಡಿ;
ತುಂಡು ಬಟ್ಟೆಗಾಗಿ ತಹತಹಿಸುತ್ತಿರುವವರು ಅಷ್ಟಿರಲು
ನನ್ನ ಹೆಣ ಹೊದಿಸಲು ಹೊಸ ಬಟ್ಟೆಯೊಂದ ತರಬೇಡಿ;
ಜೀವ ನಳನಳಿಸಿ ಅರಳಿ ಓಲಾಡುವ ಹೂವನ್ನು
ಸತ್ತ ದೇಹದ ಮೇಲೆ ಸುರಿಯಲೆಂದೆ ಹಾಗೆ ಕಿತ್ತು ತರಬೇಡಿ;
ಇಲ್ಲಿ ಮನುಷ್ಯ ಹಸಿದಿರಲು ಅಲ್ಲಿ ಕಾಗೆಗೆ ಪಿಂಡ ಇಡಬೇಡಿ;


ಎನ್ನುತ್ತಲೇ ‘ತನ್ನ ಸಾವಿನ ನಂತರ’ದ ಕವಿತೆ ಬರೆದ ಕವಿ ರಾಜೈ ಪವಾರ್ ಅವರ ಭಾವಲಹರಿ ಇಲ್ಲಿ ಹರಿಸಿದ್ದು ಇನ್ನೊಂದು ನಕ್ಷತ್ರ, ಅಲ್ಕಾ ಪವಿತ್ರಾ ಲುವಿಸ್.


ಆಮೇಲೆ ಒಬ್ಬೊಬ್ಬರೆ ಬರತೊಡಗಿದರು. ಏನದು ಹಾವ ಭಾವ, ಧ್ವನಿಯ ಏರಿಳಿತ, ಕಣ್ಣುಗಳ ಕೊಂಕು-ಬಿಂಕಗಳ ಭಾವಸಂಗಮ, ಬೊಗಸೆಯಲ್ಲೇ ಕಡಲ ನೀರನ್ನೆಲ್ಲ ನುಂಗಿ ಆಪೋಶನ ತೆಗೆದುಕೊಳ್ಳುವ ಅದಮ್ಯ ಉತ್ಸಾಹ!

ಇವಳು ನಿಂತ ಭಂಗಿಗೇ ಸಭೆ ಬೆಕ್ಕಸ ಬೆರಗಾಗಿ ನೋಡುತ್ತಿರಬೇಕಾದರೆ ಸುರು ಹಚ್ಚಿಕೊಂಡೇ ಬಿಟ್ಟಳು.

‘ಅಪ್ಪ, ನನಗೆ ನೀನೇ ಹೇಳಿದ್ದಲ್ಲವೆ ಅಪ್ಪ, ಬಾಯ್ಮುಚ್ಚಿಕೊಂಡಿರು, ಬಾಯ್ಮುಚ್ಚಿಕೊಂಡಿರು ಅಂತ?
ಎಷ್ಟೊಂದು ಪ್ರಶ್ನೆ ಕೇಳುತ್ತಿ, ಎಷ್ಟು ಬಾಯಿ ಮಾಡ್ತೀ, ಇದೆಲ್ಲ ನಡೆಯುತ್ತೇನೆ ನಿನ್ನ ಗಂಡನ ಮನೇಲಿ, ನಡೆಯುತ್ತಾ!
ಎಂದು ಕೇಳಿದ್ದೆ ನೀನು, ಅಪ್ಪ. ಹೌದು, ಆವತ್ತಿನಿಂದಲೇ ಇದೆಲ್ಲ ಸುರುವಾಯ್ತು ಅಪ್ಪ, ಆವತ್ತಿನಿಂದ್ಲೇ, ನನಗೆ ನೆನಪಿದೆ.
ನಾನು ಬಾಯ್ಮುಚ್ಚಿಕೊಂಡೇ ಇದ್ದೇನಪ್ಪ, ಆವತ್ತಿಂದ್ಲೂ ಬಾಯ್ಮುಚ್ಚಿಕೊಂಡೇ ಇದ್ದೇನೆ.
ನೀನು ಬದುಕೆಲ್ಲಾ ರಕ್ತ ಬಸಿದು ಚಿನ್ನ ಸೋಸಿ ಕೊಟ್ಟಿದ್ದೆಲ್ಲ ಕಾಲಕಸವೆಂದು ಹೀನೈಸಿ
ಆಡಿಕೊಂಡಾಗಲೂ, ನಾನು ಬಾಯ್ಮುಚ್ಚಿಕೊಂಡೇ ಇದ್ದೇನಪ್ಪ. ನೀನೇ ಹೇಳಿದ್ದಲ್ವೇನಪ್ಪ?
ಅವರಿವರ ನಾಲಗೆಯ ತೆವಲಿಗೆ ತವರು ತಗುಲಿಕೊಂಡು ಹಗುರ ಮಾತಾದಾಗ ಕೂಡ
ಅಪ್ಪ, ನಾನು ಬಾಯ್ಮುಚ್ಚಿಕೊಂಡೇ ಇದ್ದೇನಪ್ಪ. ನೀನೇ ಹೇಳಿದ್ದಲ್ವೇನಪ್ಪ, ಬಾಯ್ಮುಚ್ಚಿಕೊಂಡಿರು ಅಂತ?
ಒಂದೊಂದು ಅಪಮಾನದ ಗುಟುಕನ್ನೂ ಬಾಯ್ಮುಚ್ಚಿಕೊಂಡು ನುಂಗಿ ಸಹಿಸಿದ್ದೇನಪ್ಪ.

ನೀನೇ ಹೇಳಿದ್ದಲ್ವೇನಪ್ಪ, ಬಾಯ್ಮುಚ್ಚಿಕೊಂಡಿರು ಅಂತ? ಅಪ್ಪ?
ಎರಡನೆಯದೂ ಹೆಣ್ಣಾದಾಗ ಅವನು ಹೇಗೆಲ್ಲ ಹಾರಾಡಿದ್ದ ಗೊತ್ತೇನಪ್ಪ.
ಕಷ್ಟದಲ್ಲಿ ಸುಖದಲ್ಲಿ ನಿನ್ನ ಜೊತೆಗಿರುವೇನೆಂದು ವಾಗ್ದಾನವಿತ್ತ ನಿನ್ನ ಅಳಿಯ!
ನನಗಿಲ್ಲಿ ನಿಲ್ಲುವುದಿತ್ತಪ್ಪ, ನಿನ್ನ ಮಗಳು ಮನೆ ನಡೆಸಿದಳೆಂದು ಸಮಾಜಕ್ಕೆ ತೋರಿಸುವುದಿತ್ತಪ್ಪ.
ಅಷ್ಟೆಲ್ಲ ಸಂಭ್ರಮದಿಂದ, ವಿಜೃಂಭಣೆಯಿಂದ ನೀನೇ ನನ್ನ ಇಲ್ಲಿಗೆ ಕಳಿಸಿದ್ದಲ್ವೇನಪ್ಪ!
ನೀನೇ ಹೇಳಿದ್ದು ಅಪ್ಪ. ಹೌದು ನೀನೇ ಹೇಳಿದ್ದು ಅಪ್ಪ, ಬಾಯ್ಮುಚ್ಚಿಕೊಂಡಿರಬೇಕು ಅಂತ.
ಬಾಯ್ಮುಚ್ಚಿಕೊಂಡು ಮುಚ್ಚಿಕೊಂಡು ನನಗೀಗ ನನ್ನದೇ ಧ್ವನಿ ಮರೆತೇ ಹೋಗಿದೆಯಪ್ಪ.
ಸುಮ್ಮನಿದ್ದೂ ಇದ್ದೂ ನನಗೆ ಮಾತು ಬರುತ್ತಿತ್ತು ಎನ್ನುವುದೇ ಮರೆತಿದೆ ಅಪ್ಪ.
ನೀನೇ ಹೇಳಿದ್ದಲ್ವೇನಪ್ಪ, ಬಾಯ್ಮುಚ್ಚಿಕೊಂಡಿರಬೇಕು ಅಂತ?
ಆದರೆ ಅಪ್ಪ, ನಿನಗೆ ಗೊತ್ತೇನಪ್ಪ, ನಾನು ನನ್ನ ಮಕ್ಕಳಿಗೆ ಹಾಗೆ ಹೇಳಿಲ್ಲಪ್ಪ.
ಯಾವತ್ತೂ ಅವರಿಗೆ ಬಾಯ್ಮುಚ್ಚಿಕೊಂಡಿರಲು ಕಲಿಸಲ್ಲ ಅಪ್ಪ.
ಅನ್ಯಾಯ ಕಂಡಾಗೆಲ್ಲ ಬಾಯ್ಬಿಟ್ಟು ಪ್ರತಿಭಟಿಸಲು ಕಲಿಸಿದ್ದೇನಪ್ಪ.
ಮತ್ತು ಅವರ ಧ್ವನಿಯಲ್ಲಿ ನನಗೆ ನನ್ನದೇ ಸ್ವರ ಕೇಳಿಸುತ್ತಿದೆಯಪ್ಪ.
ಅವರಲ್ಲಿ ನಾನು ಧ್ವನಿಯಾಗಿದ್ದೇನಪ್ಪ.
ಮತ್ತು ಅವರು ಎಂದಿಗೂ ಬಾಯ್ಮುಚ್ಚಿಕೊಂಡಿರುವುದಿಲ್ಲ ಅಪ್ಪ.....’

ಈ ಹುಡುಗಿ ಸುಶ್ಮಿತಾ ಪೈ ಕಾನೆ. ನೊಂದು ಬೆಂದವಳ ನೋವನ್ನೆಲ್ಲ ಉಸಿರಲ್ಲೇ ಬಿಸುಸುಯ್ದು ಸುಡುವಂತೆ, ನಿಮ್ಮ ಜೊತೆಗೇ ನೇರಾನೇರ ಮಾತಿಗೆ ನಿಂತಂತೆ ಕವಿತೆ ಓದಿದ ಈ ಪರಿ ಅದ್ಭುತ. ಮತ್ತೆ ಬಂದವಳು ಸುಪ್ರಿಯಾ ಕಾಣಕೋಣಕರ್. ಈಕೆಯ ಚೂಪುಗಣ್ಣುಗಳ ಉರಿಗೆ ಮತ್ತೆ ಸಭೆ ಸ್ತಬ್ಧ! ತನ್ನ ಹಣೆತುಂಬ ಹೆಣ್ಣು ಹೀನ ಎಂದು ಸಾರುವ ಪದಕಗಳ ಪಟ್ಟಿ ಕಟ್ಟಿದ ಸಮಾಜವನ್ನು ಇನ್ನಿಲ್ಲದಂತೆ ಹರಿತ ಮಾತುಗಳಲ್ಲಿ ಕತ್ತರಿಸಿದ ಈಕೆಯ ಕವನ, ಅದರ ವಾಚನ ಕೊನೆಯ ಫಲಿತಾಂಶ ಬಂದಾಗ ಮೊದಲ ಸ್ಥಾನದಲ್ಲಿತ್ತು! ಕವಿ ಮೆಲ್ವಿನ್ ರೊಡ್ರಿಗಸ್ ಅವರ ‘ಎರಡನೆಯ ಅಧ್ಯಾಯ’ ಕವಿತೆಯನ್ನು ಎಡ್ಲಿನ್ ಜೆ ಡಿಸೋಜಾ ಓದಿದ ಬಗೆ ಹೇಗಿತ್ತೆಂದರೆ ಬಹುಶಃ ಈ ಕವಿತೆಯನ್ನು ಹೀಗಲ್ಲದೆ ಬೇರೆ ರೀತಿ ಓದುವುದು ಸಾಧ್ಯವೇ ಇಲ್ಲವೇನೊ ಎಂಬಂತೆ. ಸ್ವತಃ ಕವಿಯೇ ಇದನ್ನು ಹಾಳೆಯ ಮೇಲೆ ಬರೆಯುತ್ತ, ತಮ್ಮ ಮೌನದನಿಯಲ್ಲಿ ಆಲಿಸಿದ್ದು ಇದೇ ಲಯದಲ್ಲಿ ಇತ್ತೆ, ಅನುಮಾನ!

‘ವಾರೆಂ, ಉದಕಾ ಆನಿ ಉಜ್ಯಾಮಧೆಂ’ ಅಂದರೆ ಗಾಳಿ ನೀರು ಮತ್ತು ಅಗ್ನಿಯ ನಡುವೆ. ಕವಿತೆ ಬರೆದವರು ರೋಹನ್ ಅಡ್ಕಬಾರೆ. ಈ ಕವಿತೆಯೇ ಎಷ್ಟು ಸುಂದರವಾಗಿದೆ ನೋಡಿ:

ನಾನು ನಿನ್ನಲ್ಲಿ ಅನುರಕ್ತನೆಂದು
ಗಾಳಿಯ ಬಳಿ ಹೇಳ ಹೋಗಲು
ನಿನ್ನ ಮೊಗವೆನಗೆ ಅಡ್ಡಬಂತೆ!
ನೀನು ಹೊಗೆಯೆಂದು ನನಗಾಗ ತಿಳಿಯದೇ ಹೋಯ್ತಲ್ಲೆ!!

ನಾನು ನಿನ್ನಲ್ಲಿ ಅನುರಕ್ತನೆಂದು
ನೀರ ಬಳಿ ಉಸುರ ಹೋದರೆ
ನಿನ್ನ ಗಲ್ಲ ಬಂತೆ ನಮ್ಮ ನಡುವೆ!
ನೀನು ಸಕ್ಕರೆಯೆಂದು ನನಗಾಗ ತಿಳಿಯದೇ ಹೋಯ್ತಲ್ಲೆ!!


ನಾನು ನಿನ್ನಲ್ಲಿ ಅನುರಕ್ತನೆಂದು
ಬೆಂಕಿಯ ಬಳಿ ಮಾತೆತ್ತಲು
ನಿನ್ನ ತುಟಿಯೆದುರು ಬರಬೇಕೆ!
ನೀನು ಕರ್ಪೂರವೆಂದು ನನಗಾಗ ತಿಳಿಯದೇ ಹೋಯ್ತಲ್ಲೆ!!

ಒಂದೇ ಸಮ ಗಾಳಿ ನೀರು ಮತ್ತು ಬೆಂಕಿಯಲ್ಲಿ
ಪಟಪಟನೆ ತಪತಪನೆ ಕೊತಕೊತನೆ
ಕುಸಿಯುತಿರೆ ಕೈಗೆ ಸಿಗದಿರು ಗೆಳತಿ
ನೀನಿಲ್ಲದ ನನ್ನ ಅರೆಹುಚ್ಚನೆಂದು ಓಲೈಸುತಿಹ
ಈ ಮಣ್ಣಸಂಗದಲ್ಲೆ ನಾನು ಸುಖವಾಗಿಹೆನು ನಲ್ಲೆ
ಮಣ್ಣಲ್ಲೆ ನಾನು ಸುಖವಾಗಿಹೆನು ನಲ್ಲೆ!!!

ಓದಿ ಮುಗಿಸಿದ ರೋಹನ್ ಕಂಗಳು ಹನಿಗೂಡಿದ್ದವು.

*****

ಇತ್ತೀಚೆಗೆ ಭೇಟಿಯಾದ ಹಿರಿಯ ಕವಿಯೊಬ್ಬರು ಮಾತನಾಡುತ್ತ ಕನ್ನಡದಲ್ಲೇನು, ಅಂತರ್ರಾಷ್ಟ್ರೀಯ ಮಟ್ಟದಲ್ಲೂ ತೀರಾ ಸೊರಗುತ್ತಿರುವ ಪ್ರಕಾರವೆಂದರೆ ಕವಿತೆಯೇ ಎಂದಿದ್ದರು. ಆದರೆ ತಲೆಯಾಡಿಸುತ್ತಿದ್ದರೂ ನನಗೇಕೊ ಅದು ಸುಳ್ಳು ಎನಿಸುತ್ತಿತ್ತು. ಸಾಹಿತ್ಯ ರಚನೆಯ ಆದಿಕಾಲದಿಂದಲೂ ಮೊದಲು ಮನುಷ್ಯ ಒಲಿದಿದ್ದು ಕಾವ್ಯಕ್ಕೆ, ಕವಿತೆಗೆ, ಕವನಕ್ಕೆ. ಗದ್ಯಕ್ಕೆ ಅವನು ಹೊರಳಿದ್ದು ಆಮೇಲೆಯೇ. ಅಪವಾದಗಳಂತೆ ಕಾಣುವ ನಮ್ಮ ತೇಜಸ್ವಿ, ವಿವೇಕ ಶಾನಭಾಗ ಕೂಡ ಮೊದಲಿಗೆ ಕವಿತೆಗಳನ್ನೇ ಬರೆದಿದ್ದರು. ಬಸವಣ್ಣ, ಅಲ್ಲಮ, ಅಕ್ಕ ಎಲ್ಲರೂ ಬರೆದಿದ್ದು ಕವಿತೆಗಳನ್ನೇ. ದಾಸರು ಹಾಡಿದ್ದು ಕವಿತೆಗಳನ್ನೇ. ನಮ್ಮ ಜಾನಪದ ಕವಿತೆಗಳಿಗೆ ಸರಿಸಾಟಿಯುಂಟೆ? ಇವತ್ತಿಗೂ ಹರೆಯದಾ ಬಲೆಯೊಳಗೆ ಬಿದ್ಹಾಂಗ ಇರುವ ತುಂಟ ಹುಡುಗ್ಯಾರೆಲ್ಲ ಕವಿತೆಯನ್ನೇ ನೆನೆಯುತ್ತಾರೆ. ನಮ್ಮೆಲ್ಲರ ಮೊದಲ ಪ್ರೇಮಪತ್ರಗಳೂ ಅತ್ತ ಕವಿತೆಯಾಗದೆ ಇತ್ತ ಗದ್ಯವಾಗದೆ ಒದ್ದಾಡುತ್ತಲೇ ಇರುವುದು ಸುಳ್ಳೆ! ಬಹುಶಃ ಕವಿತೆ ಎನ್ನುವುದು ನಮ್ಮೆದೆಯೊಳಗೆ ಸದಾ ರೆಕ್ಕೆ ಫಡಫಡಿಸುತ್ತಲೇ ಇರುವ ಚಿಟ್ಟೆಯಂತೆ. ಕೆಲವರಲ್ಲಿ ಅದಿನ್ನೂ ಕಂಬಳಿ ಹುಳುವಾಗಿಯೇ ತೆವಳುತ್ತಿರಬಹುದಾದರೂ ಅದರ ವಿಕಾಸವಾಗುವುದು ಕವಿತೆಯಾಗಿಯೇ.


ಆದರೆ ಕವಿತೆಯನ್ನು ಓದುವವರು ಕಡಿಮೆ, ಅದಕ್ಕೆ ತೆರೆದುಕೊಂಡವರು ಕಡಿಮೆ ಎಂದರೆ ಒಪ್ಪಬಹುದು. ಅದಕ್ಕೆ ಕಾರಣಗಳಿವೆ. ಬಹುಶಃ ನಮಗೆ ನಿತ್ಯ ಪೇಪರ್ ಓದುವುದು, ಸಾಪ್ತಾಹಿಕಗಳ ಕತೆ, ಲೇಖನ ಓದುವುದು ಗೊತ್ತಿದ್ದಷ್ಟು ಕವಿತೆ ಓದುವ ಬಗೆ ಗೊತ್ತಿಲ್ಲ! ಇಷ್ಟು ಪುಟ್ಟದಾಗಿರುವ ಕವಿತೆಯನ್ನು ಸರ್ರೆಂದು ಓದಿ ಮುಗಿಸಲು ಬರುವುದಿಲ್ಲ! ಹಾಗೆ ಓದಿದರೆ ಏನೂ ದಕ್ಕುವುದಿಲ್ಲ!! ಜನ ಇಲ್ಲಿಗೆ ಕಂಗಾಲಾಗುತ್ತಾರೆ. ಕವಿತೆಯ ಸಹವಾಸವೇ ಬೇಡ ಎಂದುಕೊಳ್ಳುತ್ತಾರೆ. ಹಿಂದಿ ಕವಿ ಪ್ರಸೂನ್ ಜೋಶಿ ಹೇಳಿದ ಮಾತುಗಳಿವು : "ಗದ್ಯ ಆಲಸಿಗಳಿಗೆ. ಕಾವ್ಯ ಯಾರಿಗೆಂದರೆ ಸಮೃದ್ಧ ಪ್ರತಿಮಾಲೋಕವುಳ್ಳವರಿಗೆ. ಅದು ಬಫೆ ಇದ್ದ ಹಾಗೆ. ನೀವೇ ಹುಡುಕಿಕೊಳ್ಳಬೇಕು. ಯಾರೂ ನಿಮ್ಮ ತಟ್ಟೆಗೇ, ನಿಮಗೆ ಬೇಕಾದ್ದನ್ನೇ ತಂದು ಬಡಿಸುವವರಿಲ್ಲ ಅಲ್ಲಿ. ನೋವೆಂದರೆ ಕಾವ್ಯವನ್ನು ಆಸ್ವಾದಿಸುವ ಸಂವೇದನೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ."
ನಿಜಕ್ಕೂ ಕವಿತೆ ಓದಬೇಕು ಹೇಗೆ? ನಮಗಾಗಿ ಓದುವುದು ಹೇಗೆ, ಎಲ್ಲರಿಗಾಗಿ ಓದುವುದು ಹೇಗೆ? ಕೆಲವೇ ಕೆಲವು ಮೆಲುದನಿಯಲ್ಲಿ ಗುನುಗಬಹುದಾದ, ಕೆಲವೇ ಕೆಲವು ಗಟ್ಟಿಧ್ವನಿಯಲ್ಲಿ ಹಾಡಬಹುದಾದ, ಕೆಲವೇ ಕೆಲವು ಬೊಬ್ಬಿಟ್ಟು ಕೂಗಿ ಹೇಳಬಹುದಾದ ಕವಿತೆಗಳನ್ನು ಬಿಟ್ಟರೆ ಹೆಚ್ಚಿನ ಕವಿತೆಗಳನ್ನು ಸ್ವರಕೊಟ್ಟು ಸದ್ದು ಮಾಡಿ ಹಾಡಲಾಗದು, ಓದಲಾಗದು. ಅವುಗಳನ್ನು ನಿಮ್ಮದೇ ಮೌನದಲ್ಲಿ ಪಿಸುನುಡಿಯನ್ನು ಕೇಳಿಸಿಕೊಂಡಂತೆ ನಿಮ್ಮ ‘ಆತ್ಮನ ಮೊರೆ ಕೇಳಿದಂತೆ’ ಕೇಳಿಸಿಕೊಳ್ಳಬೇಕಿದೆ. ಅದಕ್ಕೆ ಮಹಾಧ್ಯಾನದ - ವ್ಯವಧಾನದ ಅಗತ್ಯವಿದೆ. ಆಗಷ್ಟೇ ಬುದ್ಧನ ಮೊಗದ ಶಾಂತಿಯಂತೆ ಮನಸ್ಸಿಗೊಲಿವ ಈ ಅದ್ಭುತದ ಕವಿತೆಗಳನ್ನು ನಿಜಕ್ಕೂ ಓದುವುದು ಹೇಗೆ? ಇದು ಈ ಕಾಲದ ಒಂದು ಸಮಸ್ಯೆ, ನಿಜಕ್ಕೂ ಯಕ್ಷಪ್ರಶ್ನೆ.

ಮತ್ತೆ ಪ್ರಸೂನ್ ಜೋಶಿಯ ಮಾತುಗಳಲ್ಲೇ ಹೇಳುವುದಾದರೆ, "ಜನಕ್ಕೆ ಹೇಳದೇ ಉಳಿದಿರುವುದರ ಜೊತೆ ಹೆಚ್ಚು ನಂಟು. ಹಾಡೊಂದನ್ನು ಬರೆಯುವಾಗ ನೀವು ಒಂದು ವೃತ್ತವನ್ನು ಪೂರ್ಣಗೊಳಿಸುತ್ತೀರಿ, ನಿಮಗೆ ಹೇಳಬೇಕಿರುವ ಎಲ್ಲವನ್ನೂ ಹೇಳುತ್ತೀರಿ. ಆದರೆ ಸೃಜನಶೀಲತೆಯ ಹೆಚ್ಚುಗಾರಿಕೆ ಎಂದರೆ ನೀವು ಬರೇ ಚುಕ್ಕಿಯನ್ನಿಟ್ಟಾಗಲೂ ಜನ ವೃತ್ತವನ್ನು ನೋಡುವುದು ಸಾಧ್ಯವಾಗಬೇಕು. ಕೇಳುಗರೂ ಭಾಗವಹಿಸುವುದಕ್ಕೆ ನೀವು ಬಿಟ್ಟಾಗ ಅವರು ಆ ಕಲ್ಪನೆಯನ್ನು ಪೂರ್ತಿಗೊಳಿಸುತ್ತಾರೆ." (ಹೇಳಿರುವುದರ ಮೂಲಕ ಹೇಳದೇ ಇರುವುದನ್ನೂ ಕಾಣಿಸುವುದು ಕಾವ್ಯ - ಜಯಂತ ಕಾಯ್ಕಿಣಿ).
ಬೇಂದ್ರೆಯವರ ಕವಿತೆಗಳನ್ನು ಓದುವಷ್ಟೇ ನನಗೆ ಅವುಗಳ ಬಗ್ಗೆ ಕುರ್ತಕೋಟಿ, ಅನಂತಮೂರ್ತಿ, ಆನಂದ ಝಂಜರವಾಡ, ಅಮೂರ, ಮುಗಳಿ, ವಿಜಯಶಂಕರ ಮುಂತಾದವರೆಲ್ಲ ಬರೆದಿರುವುದನ್ನು ಓದುವುದೂ ಇಷ್ಟ; ಕೀರಂ ಅವರು ಆಡುವುದನ್ನು ಕೇಳಲು ಇಷ್ಟ. ಒಬ್ಬೊಬ್ಬರೂ ಬೇಂದ್ರೆ ಬಗ್ಗೆ ಹೇಳಿದಷ್ಟೂ ಹೇಳದಿರುವುದು ಉಳಿದೇ ಉಳಿಯುತ್ತದೆ! ಅಂಥ ಕವಿತೆಗಳನ್ನು ಓದುವುದು ಹೇಗೆ! ಇದು ನನ್ನನ್ನು ಕೊರೆಯುತ್ತಲೇ ಇತ್ತು. ಯಾರಾದರೂ ಅರ್ಥವತ್ತಾಗಿ ಇವುಗಳನ್ನೆಲ್ಲಾ ವಿವರಿಸುತ್ತ ಓದುವವರು ಇದ್ದರೆ ಎಂದು ಬಯಸುತ್ತಿದ್ದುದೂ ಇತ್ತು.

ನಾನು ಇದುವರೆಗೂ ಹೇಳಿದ್ದು ಕನ್ನಡದ ಕವಿತೆಗಳ ಬಗ್ಗೆ. ನಮಗೆ ಲಿಪಿ ಇದೆ, ಅದ್ಭುತವಾದ ಕಾವ್ಯ ಪರಂಪರೆಯಿದೆ, ಜನ್ಮವಿಡೀ ಓದಿಕೊಂಡು ಸುಖವಾಗಿರಲು ಬೇಕಾದಷ್ಟು ಕವಿತೆಗಳಿವೆ. ಆದರೆ ಇಲ್ಲಿ ಹೇಳುತ್ತಿರುವ ಕೊಂಕಣಿ ಭಾಷೆಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಲಿಪಿ, ಐವತ್ತು ಅರವತ್ತು ಕಿಲೊಮೀಟರಿನಾಚೆ ಅದೇ ವಸ್ತುವಿಗೆ ಜನ ಬಳಸುವ ಶಬ್ದಗಳು ಬೇರೆ, ಉಚ್ಛಾರ ಕ್ರಮ ಬೇರೆ, ರಾಗ ಬೇರೆ ಲಯ ಬೇರೆ! ಕೊಂಕಣಿಯ ಶಬ್ದ ಸಂಪತ್ತು ಅಗಾಧವಾಗಿದ್ದೂ ದಿನಬಳಕೆಗಷ್ಟೇ ಅದನ್ನು ಬಳಸುವ ಮಂದಿಗೆ ಗೊತ್ತಿರುವುದು ದೊಡ್ಡ ಸೊನ್ನೆ! ಮರಗಿಡಗಳ, ಹೂವುಗಳ, ಆಟಗಳ, ಪಾತ್ರೆಪಗಡಿಗಳ, ಸಂಬಂಧಗಳ, ವಸ್ತುಗಳ ಹೆಸರು ಕನ್ನಡದ ಎರವಲು. ಅಂದರೆ ಇಲ್ಲಿದ್ದ ಸವಾಲು ದೊಡ್ಡದು. ಆದರೆ ಕ್ರಿಶ್ಚಿಯನ್ ಸಮಾಜದಲ್ಲಿ ಪರಿಸ್ಥಿತಿ ಇಷ್ಟು ಹದಗೆಟ್ಟಿಲ್ಲ. ಅವರಲ್ಲಿ ಇವತ್ತಿಗೂ ಶಬ್ದಭಂಡಾರ ಸಾಕಷ್ಟು ಶ್ರೀಮಂತವಾಗಿದೆ, ಬಳಕೆಯಲ್ಲಿ ಎರವಲು ತೀರ ಕನಿಷ್ಠ ಪ್ರಮಾಣದಲ್ಲಿದೆ ಮಾತ್ರವಲ್ಲ ಕವಿತೆಗಳು, ನಾಟಕಗಳು, ಪುಸ್ತಕಗಳು, ಪತ್ರಿಕೆಗಳು ಸಮೃದ್ಧವಾಗಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ ಮೆಲ್ವಿನ್ ರೊಡ್ರಿಗಸ್ ತರದ ಮಂದಿ, ಅಂಥ ಮಂದಿಯ ಬೆನ್ನಿಗೆ ನಿಲ್ಲುವ ಮಂದಿ ತುಂಬಿದ್ದಾರೆ.

ತಮ್ಮ ‘ಪ್ರಕೃತಿಚೊ ಪಾಸ್’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರ ಪಡೆದಿರುವ ಮೆಲ್ವಿನ್ ರೊಡ್ರಿಗಸ್ ಹತ್ತಾರು ವರ್ಷಗಳ ಹಿಂದಿನಿಂದಲೂ ಕೊಂಕಣಿ ಕವಿತೆಗಳನ್ನು ಬರೆಯುತ್ತ, ಕವಿಗಳನ್ನು ಪೊರೆಯುತ್ತ ಬಂದವರು. ಕವಿತಾ ಟ್ರಸ್ಟ್ ಸ್ಥಾಪಿಸಿ ತಾವು ದುಡಿದಿದ್ದನ್ನೂ, ತಮ್ಮಂಥ ಸಮಾನ ಮನಸ್ಕ ಯುವಕರ ದೇಣಿಗೆಯನ್ನೂ ಸುರಿದು ಸದ್ದಿಲ್ಲದೇ ಸಾಹಿತ್ಯ ಪರಿಚಾರಿಕೆ ಮಾಡಿದವರು. ಯುವಕವಿಗಳನ್ನೆಲ್ಲ ಸೇರಿಸಿಕೊಂಡು ಇವರು ಕವಿತಾ ವಾಚನ, ಕವಿತೆಗಳ ಹಬ್ಬ ಎಂದೆಲ್ಲ ಕಾರ್ಯಕ್ರಮ ನಡೆಸುತ್ತಾ ಬಂದರು. ಕವಿತೆಗಳಿಗಾಗಿಯೇ ವೆಬ್ ಸೈಟ್ ತೆರೆದರು. ತಾವು ಬರೆಯುತ್ತಲೇ ಮತ್ತಷ್ಟು ಮಂದಿ ಬರೆಯುವವರ ಉದಯಕ್ಕೆ, ಬೆಳವಣಿಗೆಗೆ, ಉತ್ಸಾಹಕ್ಕೆ ಕಾರಣರಾದರು. ಕೊಂಕಣಿ ಪುಸ್ತಕಗಳನ್ನು ನಿಯಮಿತವಾಗಿ ಪ್ರಕಟಿಸಿದರು. ವಿದೇಶದಲ್ಲಿದ್ದರೂ ಇವರೂ, ಇವರ ಪತ್ನಿ ಎವ್ರೆಲ್ ರೊಡ್ರಿಗಸ್ ಸೇರಿಕೊಂಡು ನಮ್ಮ ರಹಮತ್ ತರೀಕೆರೆ, ವೈದೇಹಿ, ಜಯಂತ್ ಕಾಯ್ಕಿಣಿ, ವಿವೇಕ್ ಶಾನಭಾಗ, ಗುಲ್ಜಾರ್, ಅಶೋಕ್ ವಾಜಪೇಯಿ, ಜೆರ್ರಿಪಿಂಟೊ, ಅರುಂಧತಿ ಸುಬ್ರಹ್ಮಣ್ಯಮ್, ಕೇಕಿ ದಾರುವಾಲ ಮುಂತಾದ ಕವಿ, ಬರಹಗಾರರನ್ನೂ ಆಗಾಗ ಮಂಗಳೂರಿಗೆ ಕರೆಸಿಕೊಂಡು ಕವನ ಓದುವ ಯಾತ್ರೆ ಹಮ್ಮಿಕೊಂಡೇ ಕವಿತೆಯ ಜಾತ್ರೆ ಎಬ್ಬಿಸಿದವರು. ಆಗೆಲ್ಲ ನನಗೆ ಈ ಯುವಕನ ಉತ್ಸಾಹ, ಅರ್ಪಣಾ ಮನೋಭಾವ, ನಿಸ್ವಾರ್ಥ ಮನೋಧರ್ಮಗಳನ್ನು ಕಂಡು ಇಂಥವನ್ನೆಲ್ಲ ನಂಬಲಾರದೆ ಏನಿದೆಲ್ಲ ಎನಿಸಿತ್ತು. ಆದರೆ ಮೊನ್ನೆ ವಿಶ್ವಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ಇವರು ಹಮ್ಮಿಕೊಂಡ ಕವಿತಾ ವಾಚನದ ಅಂತಿಮ ಸುತ್ತಿನ ಸ್ಪರ್ಧಾಕಣದಲ್ಲೇ ಇವರ ಜೊತೆ ಕುಳಿತು ಮಾತನಾಡುತ್ತ ನಿಮಗಿದೆಲ್ಲ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ಇದೆಲ್ಲ ಥಟ್ಟನೆ ಆಗಿದ್ದಲ್ಲ ಮಹರಾಯ, ಸುರುವಾತಿನಲ್ಲಿ ಇದೆಲ್ಲ ಹೇಗಿತ್ತು ಎಂದರೆ ನೀನು ನಂಬಲಿಕ್ಕಿಲ್ಲ ಎಂದರು. ಹತ್ತು ವರ್ಷಗಳ ಹಿಂದೆ ಕವಿತಾ ರಚನೆಯ ಸ್ಪರ್ಧೆ ಸುರುಮಾಡಿದಾಗ ಅಂಥ ಪ್ರತಿಸ್ಪಂದನವೇನು ಇರಲಿಲ್ಲ. ಪುಟ್ಟ ಮಕ್ಕಳ ಕವಿತಾ ವಾಚನಕ್ಕೆ ಇದೀಗ ಇನ್ನೂ ಮೂರರ ಶೈಶವ. ಯುವಕರ ಸ್ಪರ್ಧೆಗೆ ಆರರ ಹರೆಯ. ಹದಿನೈದು ಮಂದಿ ಕಿರಿಯರು, ಇಪ್ಪತ್ತೈದು ಮಂದಿ ಯುವ-ಮಕ್ಕಳು ಕೊಂಕಣಿಯ ಶ್ರೇಷ್ಠ ಕವಿತೆಗಳನ್ನು ಪ್ರಸ್ತುತ ಪಡಿಸಿದ ರೀತಿಗೆ ದಂಗಾದೆ. ಇವರು ಬಳಸುವ ಸಮಯ ಕಾಯಲು ಒಬ್ಬರು, ಕಳಿಸಿದ ಪಠ್ಯಕ್ಕೆ ನಿಷ್ಠರಾಗಿದ್ದಾರೆಯೇ ಇಲ್ಲವೇ ಗಮನಿಸಲು ಒಬ್ಬರು, ದೇಹಭಾಷೆಯನ್ನು ಗಮನಿಸಲು ನಾಟಕರಂಗದ ಒಬ್ಬರು, ಧ್ವನಿಯ ಏರಿಳಿತ ಗಮನಿಸಲು ಆಕಾಶವಾಣಿಯ ಒಬ್ಬರು, ಕವಿತೆಯನ್ನು ಎಷ್ಟರಮಟ್ಟಿಗೆ ತಮ್ಮದನ್ನಾಗಿಸಿಕೊಂಡಿದ್ದಾರೆ, ಅದರ ಭಾವ, ಧ್ವನಿ, ಅರ್ಥ ಎಷ್ಟರಮಟ್ಟಿಗೆ ಇವರಿಗೆ ದಕ್ಕಿದೆ ಎನ್ನುವುದನ್ನು ಗಮನಿಸಲು ಒಬ್ಬರು, ಒಟ್ಟಾರೆ ಪ್ರಸ್ತುತಿ ಎಷ್ಟು ಪರಿಣಾಮಕಾರಿಯಾಗಿದೆ ಎಂದು ಪರೀಕ್ಷಿಸಲು ಒಬ್ಬರು - ಹೀಗೆ ಏಳು ಮಂದಿ ತೀರ್ಪುಗಾರರು. ಎಲ್ಲರೂ ಕೊಂಕಣಿಯ ಕವಿಗಳು, ಮಾಧ್ಯಮಗಳಲ್ಲಿ ಕಾರ್ಯಕ್ರಮ ನಿರ್ವಹಿಸಿದವರು, ನಟಿಸಿದವರು, ಪತ್ರಕರ್ತರು ಅಥವಾ ಪ್ರಾಧ್ಯಾಪಕರು. ಈ ಮಕ್ಕಳು ಸ್ಪರ್ಧೆಗೆ ತಲಾ ಮೂರು ಕವಿತೆಗಳನ್ನು ಆಯ್ದು ಕಳಿಸಬೇಕಾಗುತ್ತದೆ. ಅಂದರೆ ಮೊದಲ ಹಂತದ ಸ್ಪರ್ಧಿಗಳಾದ ಇನ್ನೂರೈವತ್ತು ಮಂದಿ ಒಟ್ಟು ಏಳುನೂರ ಐವತ್ತು ಕವಿತೆಗಳನ್ನು ಆಯ್ದಿದ್ದಾರೆ, ಓದಿದ್ದಾರೆ, ಅರ್ಥ ಮಾಡಿಕೊಂಡು ನಟನೆ-ಹಾವ-ಭಾವ-ಧ್ವನಿ ಮತ್ತು ಭಾವದೊಂದಿಗೆ ಪ್ರಸ್ತುತಪಡಿಸಲು ಕಲಿತಿದ್ದಾರೆ. ಕೊನೆಯ ಸುತ್ತಿನ ಈ ನಲ್ವತ್ತು ಮಕ್ಕಳನ್ನು ನೋಡಿದರೆ ಸುಮ್ಮನೇ ಎರಡೂವರೆ ಗಂಟೆ ಕೂತಿದ್ದಕ್ಕೇ ನಲವತ್ತು ಅದ್ಭುತ ಕವಿತೆಗಳನ್ನು ನಮಗೆಲ್ಲ ದಕ್ಕಿಸಿಬಿಟ್ಟರು! ಕೆಲವು ಮಂದಿ ತಮ್ಮ ಸ್ವಂತ ರಚನೆಗಳನ್ನು ಓದಿದ್ದರೂ (ಸ್ವಂತ ರಚನೆ ಓದಲು ನಿರ್ಬಂಧವಿಲ್ಲ) ಅವು ಉಳಿದವರ ಮಟ್ಟದಲ್ಲೇ ಇದ್ದವು, ಗೆಲ್ಲಬೇಕಲ್ಲ!
ಹಲವಾರು ಭಾಷಾವಾರು ಪ್ರಾಂತ್ಯಗಳಲ್ಲಿ ಹಂಚಿ ಹೋಗಿ, ಏಕರೂಪದ ಲಿಪಿಯಾಗಲಿ, ಉಚ್ಛಾರವಾಗಲಿ ಇಲ್ಲದ, ವಾಚಿಕ ನೆಲೆಯಲ್ಲೇ ನೆಲೆಗಟ್ಟಿಗೊಳಿಸಿಕೊಳ್ಳಬೇಕಾದ ಕೊಂಕಣಿಯಂಥ ಭಾಷೆಗೆ ಇದು ಅನಿವಾರ್ಯವಾದರೆ ಕನ್ನಡ ಇದರಿಂದ ಕಲಿಯುವುದಿದೆ, ವಿಶೇಷತಃ ಕವಿತೆಗಳನ್ನು ಓದುವವರಿಲ್ಲದ ಈ ದಿನಗಳಲ್ಲಿ. ತಮ್ಮ ತಮ್ಮದೇ ಸಾಧಾರಣ ಕವಿತೆಗಳನ್ನು ಓದುವ ಕಾಟಾಚಾರದ ಕವಿಗೋಷ್ಠಿಗಳಿಗಿಂತ ಇದು ತೀರ ಭಿನ್ನ. ಭಾಗವಹಿಸಿದ ಮಕ್ಕಳಲ್ಲಿ ಗೋವಾದಿಂದ ಬಂದವರು ಹೆಚ್ಚು. ಇವರ ಊಟ, ವಸತಿ, ಬಂದು ಹೋಗುವ ವ್ಯವಸ್ಥೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಮಾತ್ರವಲ್ಲ ಹೆಚ್ಚಿನವರ ತಂದೆ ತಾಯಿ ಕೂಡ ತಮ್ಮ ತಮ್ಮ ಮಕ್ಕಳೊಂದಿಗೆ ಬಂದಿದ್ದರು ಎನ್ನುವುದು ಗಮನಾರ್ಹ. ಇದೆಲ್ಲದರಿಂದ ಏನಾಗುತ್ತದೆ ನೋಡಿ, ಒಂದು ಕುಟುಂಬವೇ ಸಾಹಿತ್ಯದತ್ತ, ಕವಿತೆಗಳತ್ತ ಗಮನ ಕೊಡುತ್ತದೆ. ಒಂದು ಸ್ಪರ್ಧೆ ಇಷ್ಟು ಮಹತ್ವ ಪಡೆದುಕೊಳ್ಳುವುದು ಸಾಧಾರಣ ಸಂಗತಿ ಅಲ್ಲ. ಆದರೆ ಇದೆಲ್ಲ ಇವತ್ತು ಭಾಷೆಯ ಬಗ್ಗೆ ಮಾತನಾಡುವವರಿಂದ, ರಟ್ಟೆಯೇರಿಸುವವರಿಂದ ಆಗುತ್ತಿಲ್ಲ, ಮೆಲ್ವಿನ್ ಥರದ ಯುವಕರು ತಮ್ಮ ಪಾಡಿಗೆ ತಾವು ಮಾಡುತ್ತಲೇ ಇದ್ದಾರೆ, ದಶಕದಿಂದ! ಹೀಗೆ ವರ್ಷಕ್ಕೆ ಇನ್ನೂರರಿಂದ ಮುನ್ನೂರು ಮಕ್ಕಳಿಂದ ಕವಿತೆ ಬರೆಸುವ ಕೆಲಸ ಮಾಡುತ್ತ ಇದೀಗ ಹತ್ತು ವರ್ಷ ಪೂರೈಸಿದ ಕವಿತಾ ಟ್ರಸ್ಟ್ ಇದುವರೆಗೆ ಎರಡು ಸಾವಿರದಷ್ಟು ಕವಿತೆಗಳನ್ನು ಬರೆಸಿದೆ. ಆರನೆಯ ವರ್ಷದ ಹಿರಿಯ ಮಕ್ಕಳ ಕವಿತಾ ವಾಚನ ಸ್ಪರ್ಧೆಯಂತೂ ಪ್ರತಿವರ್ಷ ಸಾವಿರದಷ್ಟು ಅತ್ಯುತ್ತಮ ಕವಿತೆಗಳ ಅಧ್ಯಯನ, ಕಂಠಪಾಠಕ್ಕೆ ಕಾರಣವಾಗಿದೆ. ಚಿಕ್ಕಮಕ್ಕಳ ಅಭಿರುಚಿ ತಿದ್ದಿದೆ, ಪ್ರೋತ್ಸಾಹಿಸಿದೆ.
ತುಂಬ ಹಿಂದೆ ಎಸ್ ದಿವಾಕರ್ ಸಂಯೋಜಿಸಿದ್ದ ಬೇಂದ್ರೆ ಕವಿತೆಗಳ ಒಂದು ವಾಚನ ಕಾರ್ಯಕ್ರಮ ನಿಮ್ಮ ನೆನಪಿನಲ್ಲಿ ಹಸಿರಾಗಿರಬಹುದು. ಕನ್ನಡದ ದಿಗ್ಗಜರೆಲ್ಲ ಬಂದು ಒಂದೊಂದು ಕವಿತೆಯನ್ನು ಓದಿ, ಆ ಕವಿತೆಯೊಂದಿಗಿನ ತಮ್ಮತಮ್ಮ ಅನುಬಂಧವನ್ನು ಒಂದೆರಡು ಮಾತುಗಳಲ್ಲಿ ವಿವರಿಸಿದ ಒಂದು ಮಾಯಕದ ರಾತ್ರಿಯದು. ಆದರೆ ಅಂಥ ಒಂದು ಅದ್ಭುತ ಕಾರ್ಯಕ್ರಮ ನಮ್ಮಲ್ಲಿ ಯಾವುದೇ ಪರಂಪರೆಗೆ ಕಾರಣವಾಗಲೇ ಇಲ್ಲ. ಆದರೆ ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ಮಕ್ಕಳು ಅದನ್ನು ಸಾಧಿಸುತ್ತಾರೆ. ಕವಿತೆಗಳೊಂದಿಗೆ ಅನುಸಂಧಾನ ನಡೆಸಿ ಬಂದ ಈ ಮಕ್ಕಳ ಹೊಳೆವ ಕಂಗಳ ಚೈತನ್ಯವೇ ಅದನ್ನು ಸಾರಿ ಸಾರಿ ಹೇಳುತ್ತಿತ್ತು.

(ಪ್ರಜಾವಾಣಿ ಸಾಪ್ತಾಹಿಕ ‘ಮುಕ್ತಛಂದ’ದಲ್ಲಿ ಪ್ರಕಟಿತ)


ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, December 28, 2016

ಕೆ ಎಸ್ ನರಸಿಂಹ ಸ್ವಾಮಿಯವರ `ಏನ ಬೇಡಲಿ?'

ಮೈಸೂರ ಮಲ್ಲಿಗೆ ಸಂಕಲನ ಪ್ರೇಮಭಾವದ ಕವಿತೆಗಳಿಗೆ ಹೆಸರಾದದ್ದು. ಅದಕ್ಕೆ ಅಪವಾದವೆಂಬಂತಿರುವ ಈ ಸಂಕಲನದ ಒಂದು ಕವಿತೆ “ಏನ ಬೇಡಲಿ?” ಇದು ತುಂಬ ಸರಳವಾಗಿರುವ, ಕೆ ಎಸ್ ನರಸಿಂಹ ಸ್ವಾಮಿಯವರ ದೇವರು - ಮಾನವ ಸಂಬಂಧದ ಕುರಿತ ನೀತಿ - ನಿಲುವುಗಳನ್ನಷ್ಟೇ ಸ್ಪಷ್ಟಪಡಿಸುವ ಒಂದು ಕವಿತೆ. ಪ್ರೇಮಕವಿ, ದಾಂಪತ್ಯಕವಿ ಎಂದೆಲ್ಲ ಹೊಗಳಿಸಿಕೊಳ್ಳುತ್ತಲೇ ನವ್ಯದ ಪರಾಕಾಷ್ಠೆಯ ದಿನಗಳಲ್ಲಿ ಸಾಕಷ್ಟು ಟೀಕೆ, ಕಟುವಿಮರ್ಶೆಗೂ ತುತ್ತಾದ ಕವಿ ಮುಂದೆ ಕಾಲಧರ್ಮಕ್ಕೂ ವಯೋಧರ್ಮಕ್ಕೂ ಅನುಗುಣವಾಗಿ ಭಾವದೊಂದಿಗೆ ವೈಚಾರಿಕತೆಯನ್ನು ರೂಢಿಸಿಕೊಂಡಿದ್ದನ್ನು ಎಲ್ಲರೂ ಬಲ್ಲರು. ಆದರೆ "ತೆರೆದ ಬಾಗಿಲು" ಸಂಕಲನದಿಂದ ಎಲ್ಲರೂ ಗಮನಿಸಿದ ಈ ಬದಲಾವಣೆಯ ಬೀಜಗಳು ಇಲ್ಲಿಯೇ ಇದ್ದವು ಎನ್ನುವುದನ್ನು ಸೂಚಿಸುವ ಕವಿತೆ ಕೂಡ ಇದೇ ಆಗಿರುವುದು ಇದರ ಒಂದು ವಿಶೇಷ. ಈ ಕವಿತೆಯೊಂದಿಗೆ ನಾವು ಈ ಸಂಕಲನದಲ್ಲಿಯೇ ಗಮನಿಸಬಹುದಾದ ಇನ್ನೊಂದು ಕವಿತೆ "ರಂಗನಾಥನ ಕಂಡು".


"ಏನ ಬೇಡಲಿ?" ಕವಿತೆಯನ್ನು ನೇರವಾಗಿ ಪ್ರವೇಶಿಸಿದರೆ ಆರಂಭದಲ್ಲಿಯೇ ಕವಿ ದೇವರೊಂದಿಗಿನ ತನ್ನ ಸಂಬಂಧವನ್ನು ಮೊದಲೇ ಸ್ಪಷ್ಟಪಡಿಸಿಕೊಳ್ಳುವುದು ಕಾಣುತ್ತದೆ. ತಾನು ನಿನ್ನ ಮಾಯೆಗೆ ಅಂಜುವುದೂ ಇಲ್ಲ, ಹೆದರಿ ನಡುಗುವುದೂ ಇಲ್ಲ ಎನ್ನುತ್ತಲೇ ನಡುಗಿ ಬಾಡೆನು ಎಂದು ಹೇಳಿಬಿಡುತ್ತಾನೆ. ಇದು ತನ್ನ ಬದುಕು ತನ್ನದು ಎಂಬ ಸ್ಪಷ್ಟ ಪ್ರಜ್ಞೆ. ಐಹಿಕದ ಬದುಕಿನಲ್ಲಿ ದೇವ-ದೈವದ ಮೂಗುತೂರಿಸುವಿಕೆಯ ಬಗ್ಗೆ ಕವಿಗೆ ಅಸಮಾಧಾನವಿದೆ. ಈ ಅಸಮಾಧಾನ ಏಕಪ್ರಕಾರವಾಗಿ ಕವಿಯಲ್ಲಿ ಮುಂದುವರಿಯುತ್ತಲೇ ಬಂದಿರುವುದನ್ನು ನೋಡಿದರೆ ಇದು ಬಹಳ ಗಟ್ಟಿಯಾದ ಚಿಂತನ ಮಂಥನದಿಂದ ಪ್ರಾಪ್ತವಾಗಿರುವಂಥ ಒಂದು ಜೀವನದೃಷ್ಟಿ ಮತ್ತು ಇದು ದೃಢವಾದದ್ದು ಎಂಬುದು ವೇದ್ಯವಾಗುತ್ತದೆ. ಇಷ್ಟು ಮಾತ್ರವಲ್ಲ, ಕೊನೆ ತನಕ ಕೆ ಎಸ್ ನರಸಿಂಹಸ್ವಾಮಿಯವರು ತಮ್ಮ ಕವಿತೆ, ಮಾತು ಮತ್ತು ನಡವಳಿಕೆಯಲ್ಲಿ ಯಾವುದೇ ದ್ವಂದ್ವವನ್ನು, ಗೊಂದಲವನ್ನು ವ್ಯಕ್ತಪಡಿಸದೇ ಇರುವುದು ಕೂಡ ಗಮನಾರ್ಹವಾದ ಒಂದು ಸಂಗತಿಯಾಗಿದೆ. 1942ರಲ್ಲಿ ಬಂದ "ಮೈಸೂರ ಮಲ್ಲಿಗೆ", 1958 ರಲ್ಲಿ ಬಂದ "ಶಿಲಾಲತೆ", 1976 ರಲ್ಲಿ ಬಂದ "ತೆರೆದ ಬಾಗಿಲು", 2001ರಲ್ಲಿ ಬಂದ "ಕೈಮರದ ನೆಳಲಲ್ಲಿ" ಎಲ್ಲ ಕಡೆ ನಮಗೆ ಕಾಣಸಿಗುವ ಜೀವನದೃಷ್ಟಿ ಇದುವೇ ಆಗಿರುವುದು ಇಲ್ಲಿ ಉಲ್ಲೇಖನೀಯ.


ನೀನು ಕಡೆದಂತಲ್ಲ ನಾನಿರುವುದು:
ನೀನು ನುಡಿದಂತಲ್ಲ ನಾನಿರುವುದು:
ಬಿಡುವಿಲ್ಲದಂತೆ ದುಡಿಯುವೆನು:
ಆಗಾಗ ಬಂದು ನೋಡುವೆನು...."
(ಸಂಭವಾಮಿ ಯುಗೇ ಯುಗೇ, ಶಿಲಾಲತೆ)

ದೇವನಿಗೆ ಹೆದರಿ ಬಾಡುವುದಿಲ್ಲ ಸರಿ; ಆದರೆ ಅವನ ಇಚ್ಛೆಯೊಂದಿದೆ ಎನ್ನುವುದನ್ನು ಕವಿ ನಿರಾಕರಿಸುತ್ತಿಲ್ಲ. ಮಾತ್ರವಲ್ಲ ತಾನು ಅದಕ್ಕೆ ತಕ್ಕಂತೆ ಆಡುವುದಿಲ್ಲ ಎಂದೂ ಹೇಳುತ್ತಿಲ್ಲ ಕವಿ. ಬಂಡಾಯವೇನಿಲ್ಲ, ಅಥವಾ ದೈವದ, ಅತಿರಿಕ್ತ ಶಕ್ತಿಯೊಂದರ ಸಾರಾಸಗಟು ನಿರಾಕರಣೆಯೇನಿಲ್ಲ. ಆದರೆ ದೈವದ ಮಾಯೆಯ ಕುರಿತಾದ ಅಂಜಿಕೆ, ಭಯ, ನಡುಕ ಮುಂತಾದ ಋಣಾತ್ಮಕ ಧೋರಣೆಗಳು ತನ್ನಲ್ಲಿ ಇಲ್ಲ ಎನ್ನುವುದಷ್ಟೇ ಇಲ್ಲಿನ ಮರ್ಮ. 

"ಯಾವುದೋ ಶಕ್ತಿ ನಮ್ಮನು ಆಳುತಿದೆ| ಆಗುವುದು ಆಗುತಿದೆ,
ಹೋಗುವುದು ಹೋಗುತಿದೆ| ನಂಬಿಕೆಯ ಮೇಲೆ ನಿಂತಿದೆ ಜಗತ್ತು"
(ಕೈಮರದ ನೆಳಲಲ್ಲಿ)

ಮುಂದೆ ಸ್ವಲ್ಪ ಗಹನವಾದ ಪ್ರಶ್ನೆಯಿದೆ, ಅದು ಮುಕ್ತಿಯದ್ದು. ಮುಕ್ತಿಯ ಪರಿಕಲ್ಪನೆಯ ಬಗ್ಗೆ ಕವಿಗಿರುವ ಗ್ರಹಿಕೆ “ತನ್ನನ್ನು ತಾನು ತಿಳಿದುಕೊಳ್ಳುವುದು”. ಹಾಗಾಗಿಯೇ ಕವಿ ಅದನ್ನು ಹೊರತಾದ ಪರಿಕಲ್ಪನೆಯನ್ನು ಪ್ರಶ್ನಿಸುತ್ತಿದ್ದಾನೆ. ಇಲ್ಲಿಯೂ ಕವಿಯ ನಿರಾಕರಣೆಯಿರುವುದು ಸಾವಿನ ಭಯದ್ದು, ಹೇಡಿತನದ್ದು ಹೊರತು ಮುಕ್ತಿಯದ್ದಲ್ಲ. ದೇವನ ಉದ್ದೇಶ ಕೂಡ ಮಂದಿ ಮುಕ್ತಿಯ ಆಸೆಯಿಂದ ಸದಾ ಕಾಲ ಅಂಜಿ ತನ್ನಡಿಯಲ್ಲಿ ಅಡಗಿಕೊಂಡಿರಬೇಕು ಎನ್ನುವುದಲ್ಲ ಎಂಬುದು ಕವಿಗೆ ಸ್ಪಷ್ಟವಿದೆ. ತನ್ನನ್ನು ತಾನು ಅರಿತುಕೊಳ್ಳುವ ಹಾದಿಯಲ್ಲಿ ಸಾಗುವುದೇ ಮುಕ್ತಿಪಥ ಎಂಬುದೂ ಕವಿಗೆ ಸ್ಪಷ್ಟವಿದೆ. ಇಲ್ಲಿ ಇಹವನ್ನು ಪರದೊಂದಿಗೆ ಜೋಡಿಸುವ ಜೀವನದೃಷ್ಟಿಯಲ್ಲ ಇದು ಎನ್ನುವುದನ್ನು ನಾವು ಕಂಡುಕೊಳ್ಳುವುದು ಮುಖ್ಯ. ಕವಿಗೆ ಪರದಲ್ಲಿ ಯಾವ ವಿಶ್ವಾಸವೂ ಇಲ್ಲ, ಅದರ ಬಗ್ಗೆ ಯಾವ ಯೋಚನೆಯೂ ಇಲ್ಲ. ಕವಿಯ ಕಾಳಜಿಯೇನಿದ್ದರೂ ಅದು ಇಹದ್ದು, ಸದ್ಯದ್ದು.

ಈ ಶಕ್ತಿಯೇನಿದೆ, ತನ್ನನ್ನು ತಾನು ಅರಿತುಕೊಳ್ಳುವುದಕ್ಕೆ ಬೇಕಾದ ಶಕ್ತಿ, ಬುದ್ಧಿಶಕ್ತಿ ಎಂದಿಟ್ಟುಕೊಳ್ಳೋಣ, ಅದನ್ನು ನಮಗೆ ಆ ದೇವನು ಇತ್ತಿದ್ದಾನೆ. ಹಾಗೆಯೇ ಅವನು ಬಳ್ಳಿಯನ್ನು ಬೆಳೆಸಿಕೊಳ್ಳಲು ನೀರೂ ಎರೆದಿದ್ದಾನೆ. ಅಂದರೆ ಬಾಡೆನು ಎಂದು ಕವಿ ಮೊದಲಿಗೇ ಹೇಳಿದ್ದು ಈ ಭರವಸೆಯಿಂದಲೇ. ಬೆಳೆಯುವುದಕ್ಕೆ, ಅರಳುವುದಕ್ಕೆ ಅವನು ನೀರೆರೆದಿರುವಾಗ ಬಾಡುವ, ಬಾಡಿಸುವ ಭಯ, ಅಂಜಿಕೆ, ನಡುಕ ತನ್ನಲ್ಲಿ ಇಲ್ಲ. ಆದರೆ ಬಳ್ಳಿಗೆ ಬರಿಯ ನೀರು ಸಾಕೆ?

ಬರಿಯ ನೀರಲ್ಲ, ಬೆಳಕನ್ನೂ ನೀಡುತ್ತಾನೆ ಅವನು. ಗಾಳಿಯನ್ನೂ ಇತ್ತಿದ್ದಾನೆ ಅವನು. ಬೆಳಕು ಇಲ್ಲಿ ಜ್ಞಾನರವಿಯ ರೂಪದಲ್ಲಿ ಬಂದಿದೆ. ಈ ಬೆಳಕಿನಿಂದ ನಾವು ನಮ್ಮದೇ ಎದೆಯನ್ನು ನೋಡಿಕೊಳ್ಳಬಹುದಾಗಿದೆ. ಎದೆಯನ್ನು ನೋಡಿಕೊಳ್ಳುವುದು ಎಂದರೆ ನಮ್ಮನ್ನು ನಾವು ಅರಿತುಕೊಳ್ಳುವುದು ಎಂದು ಯಾರಿಗಾದರೂ ತಿಳಿಯುತ್ತದೆ. ಇನ್ನು ಗಾಳಿ ಎನ್ನುವುದು ಅದೇ ಜ್ಞಾನರವಿಯ ರಶ್ಮಿಯಂತೆ, ಗೀತೆ. ಈ ಗೀತೆಯನ್ನು ಕೊಟ್ಟಿರುವುದು ಕೊಳಲೊಳೂದಿಕೊಳ್ಳಲು. ಕೊಳಲಲ್ಲಿ ಊದುವುದು ಗಾಳಿಯನ್ನೇ. ಆದರೆ ಇಲ್ಲಿ ಕೊಳಲು ಯಾವುದು? ಅದು ದೇಹವೆಂಬ ಬಿದಿರು. ಇದರ ರಂಧ್ರಗಳಲ್ಲಿ ಗಾಳಿ ಉಸಿರಾಗಿ ಊದಿಕೊಂಡಾಗಲೇ ಬದುಕಿನ ನಾದ ಹೊರಹೊಮ್ಮುತ್ತದೆ. ಈ ಕೊಳಲಿನ ಪರಿಕಲ್ಪನೆ ಕೆ ಎಸ್ ನರಸಿಂಹ ಸ್ವಾಮಿಯವರ "ಶ್ರೀಕೃಷ್ಣನಂತೊಂದು ಮುಗಿಲು" (ಇರುವಂತಿಗೆ) ಕವಿತೆಯಲ್ಲಿಯೂ ಇದೆ. 

ಗಾಳಿ, ಬೆಳಕು, ನೀರು ಕೊಟ್ಟು ಬಳ್ಳಿಯನ್ನು ಹಬ್ಬಿಸಿರುವಾಗ ಅದು ಮಾಯೆಗೆ, ಸಾವಿಗೆ ಅಂಜಿ ಬಾಡಬೇಕೇಕೆ, ಬೆಳೆಯಬೇಕಲ್ಲವೆ? ಅದಕ್ಕೆಂದೇ ಜಗತ್ತು ಕೊಡಲ್ಪಟ್ಟಿದೆ. ಅಲ್ಲಿಗೆ ಮಣ್ಣು ಕೂಡ ದಕ್ಕಿತು. ಊರಿಕೊಳ್ಳಬಹುದಲ್ಲವೆ? ಇನ್ನೇನಾದರೂ ಬೇಡಿಕೆಯಿದೆಯೇ ಎಂದರೆ ಇಲ್ಲ. ಎಲ್ಲವನ್ನೂ ಕೊಟ್ಟಿದ್ದಾನವನು, ಜಗವನ್ನೇ ಬಿಟ್ಟುಕೊಟ್ಟಿದ್ದಾನೆ. ಕೊಟ್ಟಿದ್ದಲ್ಲ, ಬಿಟ್ಟುಕೊಟ್ಟಿದ್ದು. ಇನ್ನೂ ಅವನನ್ನು ಕಾಡುವುದಕ್ಕೇನಿದೆ? ಅಂದರೆ, ಈ ಜಗತ್ತು ಆ ದೇವನಿಂದ ಅಷ್ಟರಮಟ್ಟಿಗೆ ಸ್ವತಂತ್ರವಾಗಿಯೇ ಇದೆ ಎಂಬುದು ಕವಿಯ ನಂಬಿಕೆಯಾಗಿದೆ. ಜಗವನ್ನು ಅವನು ತನಗೆಂದೇ ಬಿಟ್ಟಿದ್ದಾನೆ, ಕೊಡುವುದನ್ನೆಲ್ಲ ಕೊಟ್ಟು. ಅವನ ಇಚ್ಛೆಗೆ ಅಡ್ಡಿ ಮಾಡದ ಹಾಗೆ, ನಮ್ಮನ್ನು ನಾವು ಅರಿತುಕೊಳ್ಳುತ್ತ ಬದುಕುವುದಷ್ಟೇ ನಮ್ಮ ಕರ್ತವ್ಯ. ಇನ್ನೂ ಇನ್ನೂ ಅವನನ್ನು ಅದು ಕೊಡು, ಇದು ಕೊಡು ಎಂದು ಕಾಡುವುದಕ್ಕೆ ಕವಿ ತಯಾರಿಲ್ಲ. ದೇವನಿಂದ ಜಗತ್ತು ಸ್ವತಂತ್ರವಾಗಿ ಇದೆ, ಇರಬೇಕು ಎಂಬುದು ಅವರ ನಂಬಿಕೆ. ತಾನೂ ದೇವನಿಂದ ಸ್ವತಂತ್ರವಾಗಿಯೇ ಇರುತ್ತೇನೆಂಬುದು ಕವಿಯ ನಿಲುವು.

ನಿನ್ನ ಹಂಗಿಲ್ಲದೆ ನಾ ಬಾಳುವುದ ಕಲಿಸು;
ನೊಂದು ಮಾಗಲಿ ಜೀವ ಎಂದು ಹರಸು;
ನಿನ್ನ ಕುರಿಯದ ನನ್ನ ದಾರಿಗೆಡರನು ನಿಲಿಸು;
ನಡೆದಂತೆ ದಾರಿಯನು ಬಿಚ್ಚಿ ಬೆಳೆಸು.
(ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ, ಶಿಲಾಲತೆ)

ಮೈಸೂರ ಮಲ್ಲಿಗೆ ಸಂಕಲನದಲ್ಲಿ ದೇವರು, ದೈವ, ಸಾವು ಮತ್ತು ಮುಕ್ತಿಯಂಥ ಪರಿಕಲ್ಪನೆಯ ಏಕೈಕ ಕವನ ಇದೆಂಬುದು ಸರಿಯೇ. ಆದರೆ ಇದೇ ಸಂಕಲನದ "ರಂಗನಾಥನ ಕಂಡು" ಕವಿತೆಯನ್ನು ಗಮನಿಸಿದರೆ ಅಲ್ಲಿಯೂ ದೇವರು, ಆರಾಧನೆ, ಬದುಕು ಕುರಿತ ಉಜ್ವಲವಾದ ವಿಚಾರಗಳಿರುವುದನ್ನು ಕಾಣುತ್ತೇವೆ. "ರಂಗನಾಥನ ಕಂಡು" ಕವಿತೆ ಸರಿಸುಮಾರು ಒಂದೇ ಕಾಲಘಟ್ಟದಲ್ಲಿ ಬಂದಿರುವುದರಿಂದ ಕವಿಗೆ ದೇವರು ಮತ್ತು ಆಧ್ಯಾತ್ಮದ ಬಗ್ಗೆ ಆಗ ಇದ್ದ ವಿಚಾರಗಳನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಳ್ಳುವಲ್ಲಿ ಅದು ಹೆಚ್ಚು ನೆರವು ನೀಡುವಂಥ ಕವನ.

ಕಲ್ಲುದೇವರು ಮಲಗಿ ಕನಸ ಕಾಂಬುದ ಕಂಡೆ ಎನ್ನುವ ಸಾಲುಗಳಲ್ಲಿ ಸಾಕಷ್ಟು ಕಠೋರತೆಯಿದೆ. ಕಲ್ಲುದೇವರು, ಮಲಗಿ ಕನಸು ಕಾಂಬುದು ಎರಡೂ ಆತನ ನಿರ್ಲಿಪ್ತಿಯನ್ನೂ ನಿರ್ಲಕ್ಷ್ಯವನ್ನೂ ಎತ್ತಿ ತೋರುವಂತಿದೆ. ಅವನನ್ನು ಏಳು ಎನ್ನುವ ಧೈರ್ಯ ಕವಿಗಿಲ್ಲ. ಅಲ್ಲದೆ, "`ಏಳು ಏಳೆನ್ನರಸ’ ಎಂಬ ರೋದನಕ್ಕೆಲ್ಲ| ಕರಿಕಲ್ಲ ಸೂಕ್ಷ್ಮತರ ಕಿರುನಗೆಯೆ ಉತ್ತರ"! ರೋದನಕ್ಕೂ ಅವನು ಸ್ಪಂದಿಸದ ಕಲ್ಲು. ಜಗತ್ತು ನಡೆದಿದೆ, "ಅವನ ಕರುಣಾದೀಪದೆಡೆಗೆ ನಡುಗಿ." ಅಂದರೆ ದೇವರ ಕುರಿತಾಗಿ ನಾವು ಎಲ್ಲರಲ್ಲಿ ಬಿತ್ತಿರುವುದು ಭಕ್ತಿಯನ್ನಲ್ಲ, ಭಯವನ್ನು, ನಡುಕವನ್ನು. ಅವನೂ ಹಾಗೆಯೇ, ಒಂದೇ ಹೆಜ್ಜೆಯಲ್ಲಿ ಭೂಮಿಯನ್ನೇ ತುಂಬಿಬಿಟ್ಟವನು ಮತ್ತೆ. ಈ ವಾಮನ-ದಾನವ ಪರಿಕಲ್ಪನೆ ದೀಪದ ಮಲ್ಲಿ ಸಂಕಲನದ "ದೇವರ ಹೆಜ್ಜೆ" ಕವನದಲ್ಲಿಯೂ ಮರುಕಳಿಸಿದೆ. "ತುಳಿದ ಆ ಹೆಜ್ಜೆ, ಮತ್ತೊಮ್ಮೆ ಈ ಭೂಮಿಯಲಿ| ಕಂಗೊಳಿಸಿ ಬದುಕ ಹರಸಿತೆ, ಇಲ್ಲ. ..." ಹೀಗಾಗಿ ಕವಿ ಶ್ರೀರಂಗನಾಥನಲ್ಲಿ ಬೇಡಿಕೊಳ್ಳುವುದಿಷ್ಟೇ, ಇಹದ ಮಂದಿ ಬದುಕಿಗೆ ಅಣಿಯಾಗಿ ಚಲಿಸುತ್ತಿರುವಾಗ, ಅವರಿಗೆ ದಾರಿ ಸಿಕ್ಕುವ ತನಕ, ಬೆಳಕು ಹರಿಯುವ ತನಕ ನೀನು ಮಲಗಿ ನಿದ್ರಿಸು ಪ್ರಭುವೆ ಎಂದು! ಅಂದರೆ ಈ ದೇವರು ಮಲಗಿ ನಿದ್ರಿಸುತ್ತಿದ್ದರೇ ಜಗತ್ತಿಗೆ ಕ್ಷೇಮ! ಎದ್ದರೆ ಅವನು ತುಳಿಯುತ್ತಾನೆ ಎನ್ನುವ ಭಯ ಇಲ್ಲಿದೆ.

ಇಂಥ ವಿಚಾರಗಳ ಬಗ್ಗೆ ಕೆ ಎಸ್ ನರಸಿಂಹಸ್ವಾಮಿಯವರು ಮುಂದೆಯೂ ಹಲವಾರು ಕವನಗಳಲ್ಲಿ ಉಲ್ಲೇಖಿಸಿದ್ದಿದೆ. ಈ ಬಗ್ಗೆ ಅವರು ಮಾತನಾಡಿರುವುದೂ ಇದೆ. ಸ್ಥೂಲವಾಗಿ ನರಸಿಂಹಸ್ವಾಮಿಯವರು ಪರಕ್ಕಿಂತ ಹೆಚ್ಚು ಐಹಿಕವನ್ನು, ಅರ್ಚನೆಗಿಂತ ಹೆಚ್ಚು ಕಾಯಕವನ್ನು, ಯಾಚನೆಗಿಂತ ಹೆಚ್ಚು ಸ್ವಾನುಭೂತಿ, ಆತ್ಮಾನುಸಂಧಾನವನ್ನು ನಂಬಿದವರು. ಇಹ ಅವರಿಗೆ ಮಾಯೆಯಲ್ಲ, ಭ್ರಾಂತಿಯಲ್ಲ, ಕಳಚಿಕೊಳ್ಳತಕ್ಕ ವಸ್ತುವಲ್ಲ. ಒಂದೊಮ್ಮೆ ಅದೇ ಹೌದು ಎಂದಾದರೆ, ತಮಗೆ ಅದೇ ಇರಲಿ ಎನ್ನುತ್ತಾರವರು! ಶಿಲಾಲತೆ ಸಂಕಲನದ "ನನ್ನ ನೆಲೆ" ಕವಿತೆಯನ್ನು ಗಮನಿಸಿದರೂ ಇದೇ ಅಂಶ ಸ್ಪಷ್ಟವಾಗುತ್ತದೆ.

ಯಾವುದು ನಿಜವೊ ಯಾವುದು ಗುಣವೊ
ಅದಾಗಲಿ ನನ್ನ ಗುರು;
ಯಾವುದು ಮಾನವಲೋಕದ ಋಣವೊ
ಅದಾಗಲಿ ನನ್ನುಸಿರು;

ಯಾವುದಿಹವೊ `ಬಂಧನ’ವೊ `ಭ್ರಾಂತಿ’ಯೊ
ಅದಾಗಲಿ ನನ್ನ ನೆಲೆ;
ಯಾವುದನಾದಿ ಸೃಷ್ಟಿಕಾಂತಿಯೊ
ಅದಾಗಲಿ ನನ್ನ ದೊರೆ

ಮಾಯೆಯ ಭಯ, ಸಾವಿನ ಭಯ ಎರಡರ ಹಿನ್ನೆಲೆಯಲ್ಲಿ ನಮಗೆ ದೈವದ ಭಯ ಎನ್ನುವುದು ಕವಿಯ ನಂಬುಗೆಯಿರುವಂತೆ ಕಾಣುತ್ತದೆ. ಮಾಯೆಯನ್ನು ಅವರು ಅಂಗೀಕರಿಸಿದರೆ ಸಾವನ್ನು ಒಂದರ್ಥದಲ್ಲಿ ನಿರಾಕರಿಸಿದವರು. "ಸಾವನ್ನು ಕುರಿತು ಯೋಚನೆ ಮಾಡಿದರೆ ಏನೂ ಕೆಲಸ ಮಾಡೋಕೇ ಆಗೋಲ್ಲ. ಅದನ್ನು ignore ಮಾಡಿಕೊಂಡೇ ಮುಂದಕ್ಕೆ ಹೋಗಬೇಕು ಬದುಕಿನಲ್ಲಿ" (ಸಮಗ್ರ ವಾಙ್ಮಯ: ಸಂಪುಟ ಮೂರು, ನುಡಿಮಲ್ಲಿಗೆ ವಿಭಾಗ - ಪುಟ ೨೪೯) "ನಾವು ಬದುಕುವ ತನಕ ನೆನೆಯಬಾರದು ಸಾವ| ಎಲ್ಲವನು ಸಹಿಸುವುದು ನಮ್ಮ ಜೀವ" (ಕೈಮರದ ನೆಳಲಲ್ಲಿ) ಹೇಳುವುದು ಇದನ್ನೇ. ಬಹುಶಃ "ತೆರೆದ ಬಾಗಿಲು" ಕವಿತೆಯಲ್ಲಿ ಕೆ ಎಸ್ ನರಸಿಂಹಸ್ವಾಮಿಯವರು ಸಾವಿನ ಕುರಿತಾದ ತಮ್ಮ ನಿಲುವನ್ನು ಅತ್ಯಂತ ಸ್ಪಷ್ಟಗೊಳಿಸಿದ್ದಾರೆನ್ನಬಹುದು. "ಹೀಗಾಯಿತು", "ಬಾಳು ಸಾವು" ಕವಿತೆಗಳಲ್ಲಿ ಕೂಡ ಸಾವಿನ ಕುರಿತ ಚಿಂತನೆಯಿದೆ. ಸಾವಿನ ಕುರಿತ ಚಿಂತನೆಯಿಂದ ಬದುಕಿನ ನಿರಾಕರಣೆಯಾಗುತ್ತದೆ, ಇಹದ ನಿರಾಕರಣೆಯಾಗುತ್ತದೆ. ಅದು ಜೀವವಿರೋಧಿ, ಜೀವನವಿಮುಖಿಯಾದ ಧೋರಣೆ, ಅದು ಕೂಡದು ಎನ್ನುವುದು ಕವಿಗೆ ಸ್ಪಷ್ಟ. ಬದುಕಿನಲ್ಲಿ ನೋವಿದೆ, ಕಹಿಯಿದೆ ಎಲ್ಲ ಸರಿ. ಜೀವನದ ಕರಾಳ ಮುಖ ಕೂಡ ಅವರ ಕವಿತೆಗಳಲ್ಲಿ ಬಂದಿರುವುದಿದೆ. "ಕೈಮರದ ನೆಳಲಲ್ಲಿ" ಇದಕ್ಕೊಂದು ಉತ್ತಮ ಉದಾಹರಣೆ ಎನ್ನಬಹುದು. ಆದರೆ ಅದೆಲ್ಲ ಇದ್ದೂ ಕವಿಯ ಆಯ್ಕೆ ಬದುಕು ಮತ್ತು ಇಹ ಎಂಬುದು ಗಮನಾರ್ಹ. "ಕೈಮರದ ನೆಳಲಲ್ಲಿ" ಕೂಡ ಅವರ ನಿಲುವು ಅದೇ.

ಇಹದ ಪರಿಮಳವಿರದ ಹಾದಿ ಹಿಡಿದು
ಬದುಕು ದುರ್ಬಲವಾಯಿತು
ಕವಿತೆ ನೀರಸವಾಯಿತು (ಬೆಳಗಿನ ಮಂಜು)

ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ,ದೇಶ ಕುಲಕರ್ಣಿ ಮತ್ತು ವೆಂಕಟೇಶ ಮೂರ್ತಿಯವರು ಕೆ ಎಸ್ ನರಸಿಂಹಸ್ವಾಮಿಯವರೊಡನೆ ನಡೆಸಿದ ಸುದೀರ್ಘ ಮಾತುಕತೆಯಲ್ಲಿ ಬರುವ ಇದೇ ಕೃತಿಯ "ಈ ವಸುಂಧರೆಯ ಮಗ ನಾನು" ಅಧ್ಯಾಯದಲ್ಲಿ ದೇವರು, ಆಧ್ಯಾತ್ಮ ಕುರಿತಂತೆ ಅವರು ವಿವರವಾಗಿ ಮಾತನಾಡಿದ್ದಾರೆ. ದೇವರು ಇದ್ದಾನೆ ಅಥವಾ ಇಲ್ಲ ಎಂಬ ಪ್ರಶ್ನೆ ಅವರಿಗೆ ಮುಖ್ಯ ಎಂದಾಗಲೀ, ಅದರೊಂದಿಗೆ ಗುದ್ದಾಡುವುದು ಮುಖ್ಯವೆಂದಾಗಲೀ ಅನಿಸಿಲ್ಲ. ಇದ್ದರೂ ಇಲ್ಲದಿದ್ದರೂ ಅದರಿಂದ ನಾವು ಇಲ್ಲಿ ಬದುಕಬೇಕಾದ ಹಾದಿ ಭಿನ್ನವಾಗದು (`ಇಹನೋ ಇಲ್ಲವೋ ಅವನು’ ಎನುವ ಸಂಶಯವೇಕೆ? ಇರಲಿ, ಇಲ್ಲದೆ ಇರಲಿ, ದಾರಿಯೊಂದೇ! (ಬೆಳಗಿನ ಮಂಜು, ಶಿಲಾಲತೆ) ಎಂದು ದೃಢವಾಗಿ ನಂಬಿದವರು ಅವರು. ಡಾ. ಕೆ. ಶಿವರಾಮ ಕಾರಂತರು ಕೂಡ ಇಂಥ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ಬದುಕು ಪಡೆದುದಾಗಿದೆ, ಅದನ್ನು ಸರಿಯಾದ ರೀತಿ ಬದುಕುವುದು ಮುಖ್ಯ ಎಂದು ಹೇಳುತ್ತ ಬಂದ ಇನ್ನೊಬ್ಬ ಹಿರಿಯ ವ್ಯಕ್ತಿ.
"ಯಾವುದೋ ಶಕ್ತಿ ನಮ್ಮನು ಆಳುತಿದೆ| ಆಗುವುದು ಆಗುತಿದೆ,
ಹೋಗುವುದು ಹೋಗುತಿದೆ| ನಂಬಿಕೆಯ ಮೇಲೆ ನಿಂತಿದೆ ಜಗತ್ತು"
(ಕೈಮರದ ನೆಳಲಲ್ಲಿ)

ಈ ಯಾವುದೋ ಶಕ್ತಿಯನ್ನು ಕೆ ಎಸ್ ನರಸಿಂಹಸ್ವಾಮಿಯವರು ಪ್ರಕೃತಿಯಲ್ಲಿ, ಭೂಮಿಯಲ್ಲಿ ಕಂಡುಕೊಂಡರೆಂದೇ ಹೇಳಬೇಕು. "ನೆಲವೇ ದೇವರೆಂದು ನಂಬಿ ನುಡಿಯುವವರು ನರಸಿಂಹಸ್ವಾಮಿ" ಎಂದು ರಾಮಚಂದ್ರ ಶರ್ಮ ಅವರು ಹೇಳಿರುವುದು ಇಲ್ಲಿ ಉಲ್ಲೇಖನೀಯ. `ತೆರೆದ ಬಾಗಿಲು’ ಸಂಕಲನದ "ಕುಂಕುಮ ಭೂಮಿ", ದೀಪದ ಮಲ್ಲಿ ಸಂಕಲನದ "ಭೂಮಿಗೀತ", "ಐರಾವತ" ಮುಂತಾದ ಕವಿತೆಗಳಲ್ಲಿ ಈ ಅಂಶ ನಮಗೆ ಸ್ಪಷ್ಟವಾಗುತ್ತದೆ. ಹೀಗೆ ತಾಯಿಯಾದ ಭೂಮಿಯನ್ನು ನೆಚ್ಚಿ, ತಂದೆಯಾದ ದೇವನಿಂದ ಸ್ವತಂತ್ರನಾಗಿ ಬದುಕುವ ಹಾದಿಯನ್ನು ಅವರು ಪ್ರತಿಪಾದಿಸಿರುವುದು "ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ" (ಶಿಲಾಲತೆ) ಕವಿತೆಯಲ್ಲಿ ಸ್ಪಷ್ಟವಾಗುತ್ತದೆ.

ಬಂದ ಬಾಗಿಲು ಮಣ್ಣು; ಬಿಡುವ ಬಾಗಿಲು ಮಣ್ಣು
ನಡುವೆ ಕಾಪಾಡುವುದು ತಾಯ ಕಣ್ಣು
ಈ ಕಣ್ಣ ಸೆರೆಯ ಕಲ್‌ಕೋಟೆಯೆಲ್ಲಾ ಹೊನ್ನು;
ನನ್ನ ಕೈ ಬಿಡುವುದೇ ನಿನಗೆ ಚೆನ್ನು.

ಹೀಗೆ ಕವಿಯ ಬದ್ಧತೆಯಿರುವುದೆಲ್ಲಾ ಭೂಮಿಗೆ, ಬದುಕಿಗೆ, ಇಹಕ್ಕೆ. ಸಾವಿನ ಕುರಿತ ಚಿಂತೆಯಾಗಲಿ, ಭಯವಾಗಲಿ, ಅದರ ಜೊತೆಗೆ ಕುಣಿಕೆ ಹಾಕಿಕೊಂಡ ಮುಕ್ತಿಯಾಗಲಿ ಕವಿಗೆ ಬೇಕಿಲ್ಲ. ಕವಿಗೆ ಮುಕ್ತಿಯೆಂಬುದು ಕೂಡ ಇಹದ ಬದುಕು ಕೊಡುವ ಅರಿವಿನಿಂದ ಬರಬೇಕಿದೆ. ತನ್ನನ್ನು ತಾನು ಅರಿಯುವುದಕ್ಕೆ ಯಾವುದು ಹೆಚ್ಚು ಸಹಕಾರಿ ಎಂಬ ಬಗ್ಗೆ ಕವಿಯಲ್ಲಿ ದ್ವಂದ್ವಗಳಿಲ್ಲ. 

ಇಷ್ಟು ಮಾತ್ರಕ್ಕೆ ಕೆ ಎಸ್ ನರಸಿಂಹಸ್ವಾಮಿಯವರು ದೇವರನ್ನು, ದೈವತ್ವವನ್ನು ನಿರಾಕರಿಸಿದರು ಎಂದು ತಿಳಿಯಬೇಕಾಗಿಯೇ ಇಲ್ಲ. ಒಂದರ್ಥದಲ್ಲಿ ಹೀಗೆ ಬದುಕಿಗೆ, ಇಹಕ್ಕೆ ನಿಷ್ಠರಾಗಿ ಬದುಕುವುದೇ ಅವನ ಇಚ್ಛೆ ಎಂಬುದು ಅವರ ನಿಲುವಾಗಿತ್ತೆನ್ನಬಹುದು. ಇದೊಂದು ರೀತಿ ಜಗತ್ತು ನನ್ನದು, ದೇವನ ಕೆಲಸ ಮುಗಿದಿದೆ, ಇನ್ನುಳಿದಿರುವುದು ನನ್ನದು ಎಂಬ ಪ್ರಜ್ಞೆ. ಹೇಗೆ ಮತ್ತೆ ಮತ್ತೆ ಇಲ್ಲಿನ ಮನುಷ್ಯ ಅದುಕೊಡು ಇದುಕೊಡು ಎಂದು ದೇವನನ್ನು ಕರೆಯುವುದು ಅವರಿಗೆ ಸರಿಯೆನ್ನಿಸುವುದಿಲ್ಲವೋ ಹಾಗೆಯೇ ಇಲ್ಲಿನ ಸ್ವತಂತ್ರ ಬದುಕಿಗೆ ಮತ್ತೆ ಮತ್ತೆ ದೇವನ ಪ್ರವೇಶವಾಗುವುದು ಕೂಡ ಅವರಿಗೆ ಇಷ್ಟವಿಲ್ಲ. 

ತುಳಿದ ಆ ಹೆಜ್ಜೆ, ಮತ್ತೊಮ್ಮೆ ಈ ಭೂಮಿಯಲಿ
ಕಂಗೊಳಿಸಿ ಬದುಕ ಹರಸಿತೆ, ಇಲ್ಲ. ...
...........
...............
ಸೆರೆ ತುಳಿತ ಹಿಂಸೆ - ಪಾವನವಲ್ಲ. ಗೆಲ್ಲುವ ಹೆಜ್ಜೆ
ರಾಜಬೀದಿಗಳಲ್ಲಿ ಬಾರದಿದೆ. ಧರ್ಮವೆಲ್ಲ
ಅಲ್ಪಯುಕ್ತಿಗಳಿಂದ ತನ್ನನ್ನೆ ತಾನಿರಿಯುತ್ತಿದೆ.
(ದೇವರ ಹೆಜ್ಜೆ, ದೀಪದ ಮಲ್ಲಿ)

"ರಂಗನಾಥನ ಕಂಡು" (ಮೈಸೂರ ಮಲ್ಲಿಗೆ) ಕವಿತೆಯಲ್ಲಿಯೂ ಇದೇ ಭಾವ ಇರುವುದನ್ನು ಕಾಣಬಹುದು. ಅಲ್ಲಿ ಅವನಿಗೆ ಅವರು ಮಲಗಿಯೇ ಇರು ಎನ್ನುತ್ತಾರೆ! ಕವಿಗೆ ದೇವರ ಪ್ರವೇಶದ ಬಗ್ಗೆ, ಅವತಾರದ ಬಗ್ಗೆ ಅವ್ಯಕ್ತವಾದ ಭಯವೇ ಇದೆ.

ಇದು ನಾವು ಕೆ ಎಸ್ ನರಸಿಂಹಸ್ವಾಮಿಯವರ ಕಾಲ, ವ್ಯಕ್ತಿತ್ವ ಮತ್ತು ಸಮಕಾಲೀನ ಸಾಂಸ್ಕೃತಿಕ ಪರಂಪರೆಗನುಗುಣವಾಗಿ ಅರ್ಥಮಾಡಿಕೊಳ್ಳುವ ಬಗೆಯಾಯಿತು. ಅದಕ್ಕೆ ನಮಗೆ ಅವರ ಮೈಸೂರ ಮಲ್ಲಿಗೆ ಸಂಕಲನದ "ಏನ ಬೇಡಲಿ?" ಕವಿತೆ ಮತ್ತು ಅವರದೇ ಇತರ ಕವಿತೆಗಳು ನೆರವಾದವು. ಆದರೆ ನಾವು ಇವತ್ತು ನಮ್ಮದೇ ಕಾಲ, ನಮ್ಮ ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ಒತ್ತಡದ ನಡುವೆ ಹೇಗೆ ಕಾಣುತ್ತೇವೆ ಎನ್ನುವ ಒಂದು ಪ್ರಶ್ನೆಯೂ ಇದೆ. ದೇವ-ದೈವದ ಜೊತೆ ಮನುಷ್ಯನ ಸಂಬಂಧ ಕೂಡ ಇವತ್ತು ಬದಲಾಗಿದೆ. ಧರ್ಮ, ದೇವರು ಮತ್ತು ಸನಾತನ ಮೌಲ್ಯಗಳು ವ್ಯಕ್ತಿಗತವಾಗಿದ್ದು, ಅದು ಅವನ ಅಂತರಂಗದ ಉನ್ನತಿಗೆ, ಆತ್ಮಸಂಸ್ಕಾರಕ್ಕೆ, ಜ್ಞಾನಸಂಪಾದನೆಗೆ (ಮುಕ್ತಿ ಎಂದು ಸೂಚ್ಯವಾಗಿಸಿದ್ದಾದರೆ) ಹಾದಿಯಾಗಿದ್ದ ಕಾಲ ಇವತ್ತು ಇಲ್ಲ. ಇಷ್ಟರಮಟ್ಟಿಗೆ ಅದು ಕೆ ಎಸ್ ನರಸಿಂಹಸ್ವಾಮಿಯವರು ಒಪ್ಪಿದ್ದ ಮಾರ್ಗವೇ ಆಗಿತ್ತು. ಅವರು ಒಪ್ಪದೇ ಇದ್ದ ಭಾಗ ಇಹವನ್ನು ನಿರಾಕರಿಸುವ ಅದರ ಋಣಾತ್ಮಕ, ಜೀವವಿಮುಖಿ ನಿಲುವು, ಇಹದ ಬದುಕನ್ನು ಕೆಡಿಸಬಲ್ಲ ಮಟ್ಟಕ್ಕೆ ಆವರಿಸಬಹುದಾದ ಧಾರ್ಮಿಕ ಕಟ್ಟುಕಟ್ಟಳೆಯ ಹೇರಿಕೆ. ಉಳಿದಂತೆ ನಂಬುಗೆ, ಸ್ವೀಕೃತಿ ಎರಡರ ಕುರಿತೂ ಅವರ ತಕರಾರಿರಲಿಲ್ಲ. ಇವತ್ತು ಯಾವುದನ್ನು ಕೆ ಎಸ್ ನರಸಿಂಹಸ್ವಾಮಿಯವರು ಒಪ್ಪಿಕೊಂಡಿದ್ದರೋ ಅದು ಜನಜೀವನದಿಂದಲೇ ಕಣ್ಮರೆಯಾಗಿದ್ದರೆ ಅವರು ಒಪ್ಪದೇ ಇದ್ದ, ನಿರಾಕರಿಸಿದ್ದ ಮತ್ತು ಒಳಗೊಳಗೇ ಹೆದರಿದ್ದ ಸಂಗತಿಗಳು ವೈಭವೀಕರಿಸಲ್ಪಟ್ಟಿವೆ. ಇದನ್ನು ಸ್ವಲ್ಪ ವಿವರಿಸಬೇಕು.

ಈಗ ದೇವರು, ಧರ್ಮ ಮತ್ತು ಸನಾತನ ಮೌಲ್ಯಗಳು ವ್ಯಕ್ತಿಗತವಾಗಿರದೇ ಸಾಮಾಜಿಕ ವಿದ್ಯಮಾನಗಳಾಗಿವೆ. ಅದು ಅಂತರಂಗಕ್ಕೆ ಸಂಬಂಧಪಟ್ಟ, ವ್ಯಕ್ತಿ-ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಸಂಗತಿಯಾಗಿ ಉಳಿದೇ ಇಲ್ಲ. ಅದು ಇವತ್ತು ಸಾಮಾಜಿಕ, ರಾಜಕೀಯ, ಆರ್ಥಿಕ ಆಯಾಮಗಳನ್ನೆಲ್ಲ ಪಡೆದುಕೊಂಡು ಗಟ್ಟಿದನಿಯ ಘೋಷಣೆಯಾಗಿದೆ, ವರ್ಗಸಂಘರ್ಷಕ್ಕೆ, ಅಂತರ್ರಾಷ್ಟ್ರೀಯ ನೆಲೆಯಲ್ಲಿ ವಿಭಜನೆಗೆ ಒಂದು ಕಾರಣವನ್ನೊದಗಿಸಬಲ್ಲ ವಸ್ತುವಾಗಿದೆ. ನೀಲಾಂಜನದ ಬೆಳಕಿನಲ್ಲಿ ಅಸ್ಪಷ್ಟವಾಗಿ ಕಂಡ ಕಣ್ಣಿನೊಳಗೆ ತನ್ನದೇ ಮೂರ್ತಿಯನ್ನಿರಿಸಿ ಆತ್ಮಾನುಸಂಧಾನ ನಡೆಸಬಹುದಾಗಿದ್ದ ತೀರ ಖಾಸಗಿತನದ ಪರಂಪರೆಯಿಂದ ನಾವು ಅರ್ಥಹೀನ ರಿಚ್ಯುಯಲ್‌ಗಳ, ಲೌಡ್ ಸ್ಪೀಕರ್-ಮೈಕುಸೆಟ್ಟುಗಳ ಆರ್ಭಟದ, ಪ್ರದರ್ಶನಪ್ರಿಯತೆ ಮತ್ತು ಕೊಳ್ಳುಬಾಕತನವನ್ನಷ್ಟೇ ಪೋಷಿಸುವ ಜಾತ್ರೆಗಳ ಒಂದು ಧರ್ಮ, ಆಧ್ಯಾತ್ಮ, ದೇವರ ಪರಿಕಲ್ಪನೆಯತ್ತ ಹೊರಳಿದ್ದೇವೆ. ಸಹಜವಾಗಿಯೇ ವೈದಿಕ ಪುರೋಹಿತಶಾಹಿಯ ಬಿಗಿಮುಷ್ಠಿಯಲ್ಲಿದ್ದ ಧಾರ್ಮಿಕತೆ ಸಮಾಜದ ಕೆಳಸ್ತರದವರ ಸೊತ್ತಾಗಿದೆ. ಈ ಪಲ್ಲಟಕ್ಕೆ ಏನು ಕಾರಣ ಎನ್ನುವುದು ಸಮಾಜಶಾಸ್ತ್ರೀಯ ಸಂಶೋಧನೆಗೆ ತಕ್ಕ ವಿಷಯವಾದೀತೆ ಹೊರತು ಇಲ್ಲಿನ ಚರ್ಚೆಯ ವ್ಯಾಪ್ತಿಗೆ ಹೊರಗಿನ ವಿಚಾರ. ಆದರೆ ಇದರಿಂದಾಗಿ ಏನಾಯಿತು ಎಂದರೆ ಧರ್ಮವೆಂಬುದು, ಭಕ್ತಿಯೆಂಬುದು, ಸನಾತನ ಪರಂಪರೆಯೆಂಬುದು ಒಂದು ಪ್ರದರ್ಶನಕ್ಕೆ ಒಗ್ಗುವ ವಸ್ತುವಾಯಿತು. ಕೆಲವೊಂದು ಪ್ರದರ್ಶನಸಾಧ್ಯ ಸಾಂಕೇತಿಕ ವಸ್ತು/ಆಚರಣೆಗಳೇ ಅದು ಎಂಬ ಒಂದು ಧಾರ್ಮಿಕ/ಸಾಂಸ್ಕೃತಿಕ ವಿಸ್ಮೃತಿಗೆ ನಾವು ಒಳಗಾದೆವು. ಇದನ್ನು ಇನ್ನೂ ಹೆಚ್ಚು ವಿವರಿಸುವ ಅಗತ್ಯವಿಲ್ಲ. 

ಪರಿಣಾಮದಲ್ಲಿ, ಇವತ್ತಿಗೂ ಕೆ ಎಸ್ ನರಸಿಂಹಸ್ವಾಮಿಯವರದೇ ಮನೋಧರ್ಮದಿಂದ ತನ್ನನ್ನು ತಾನು ಅರಿಯುವ ಪಥ ಈ ಬದುಕಿನ ಸತ್ವ ಎಂದು ತಿಳಿದ ಮಂದಿಗೆ ಕೂಡ ದೇವರು, ಧರ್ಮ ಮತ್ತು ಪರಂಪರೆ ಎಂಬ ವಿಚಾರ ಭಯಕ್ಕೆ, ನಡುಕಕ್ಕೆ ಮತ್ತು "ಬದುಕಿನ ಬಳ್ಳಿ" ಬಾಡುವುದಕ್ಕೆ ಕಾರಣವಾಗಬಹುದಾದ "ಅಪಾಯಕಾರಿ" ವಸ್ತುಗಳು ಎಂಬ ಭಯ ಇರುವಂತಾಗಿದ್ದು ಮಾತ್ರ ವಿಪರ್ಯಾಸವೇ ಎನ್ನಬೇಕು. ನರಸಿಂಹಸ್ವಾಮಿಯವರಿಗೆ ಇವಕ್ಕೆಲ್ಲ ಪರ್ಯಾಯವಾಗಿ ವಸುಂಧರೆಯಾದರೂ ಇದ್ದಳು. ನಮಗೆ ಪ್ರಕೃತಿ, ಪರಿಸರ, ವಸುಂಧರೆ ಯಾರೂ ಇಲ್ಲ ಎನ್ನುವುದು ಕೂಡ ನಮ್ಮ ಕಾಲದ ಇನ್ನೊಂದು ವಿಪರ್ಯಾಸ. ಇಲ್ಲಿ ನಿಂತು ನೋಡಿದರೆ ನಮಗೆ ಕೆ ಎಸ್ ನರಸಿಂಹಸ್ವಾಮಿಯವರ ನಿಲುವು ಅರ್ಥವಾಗುತ್ತದೆ. ಅವರು ದೇವ-ದೈವ, ಮೃತ್ಯುಪ್ರಜ್ಞೆ ಮತ್ತು ಜೀವನವಿಮುಖಿ ಧೋರಣೆಗಳ ಆಧ್ಯಾತ್ಮವನ್ನು ನಿರಾಕರಿಸಿದ ನೆಲೆ, ಅವು ಬದುಕನ್ನು ಆವರಿಸುವ ಬಗ್ಗೆ ಹೆದರಿದ ನೆಲೆ ಅರ್ಥವಾಗುತ್ತದೆ. ಅವರ ಭಯ ಆಗಲೂ ವ್ಯಕ್ತಿಗತ ನೆಲೆಯದ್ದೇ ಆಗಿತ್ತು. ಆದರೆ ಇವತ್ತು ಹೇಗೆ ಅವೆಲ್ಲ ವ್ಯಕ್ತಿಗತ ನೆಲೆ ಕಳಚಿಕೊಂಡು ಸಾಮಾಜಿಕವಾಗಿ ನಿಂತವೋ ಹಾಗೆಯೇ, ಆ ಭಯ ಕೂಡ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಆಯಾಮಗಳನ್ನು ಪಡೆದುಕೊಂಡು ನಮ್ಮ ಸಂಕೀರ್ಣ ವರ್ತಮಾನದೊಂದಿಗೆ ದೈತ್ಯಾಕಾರವಾಗಿ ಬೆಳೆದಿರುವುದು ಕಾಣುತ್ತೇವೆ. ಈಗ ಹಿಂದಿರುಗಿ ನೋಡುತ್ತ ನನಗೆ ಕೆ ಎಸ್ ನರಸಿಂಹಸ್ವಾಮಿಯವರ ಭಯ, ಅಂಜಿಕೆ ಮತ್ತು ನಡುಕವನ್ನು ಪ್ರೊಫೆಟಿಕ್ ಆಗಿ ನೋಡಲು ಇಷ್ಟ; ಯಾಕೆಂದರೆ, ವ್ಯಕ್ತಿಗತ ನೆಲೆಯಲ್ಲಿ ಆ ಯಾವತ್ತೂ ಭಯ, ಅಂಜಿಕೆ ಮತ್ತು ನಡುಕ, ಮಾಯೆ ಮತ್ತು ಮೃತ್ಯುವಿನ ಕುರಿತೇ ಆಗಿರಲೊಲ್ಲದೇಕೆ, ಅಷ್ಟು ಅಪೀಲಿಂಗ್ ಅನಿಸಿರಲಿಲ್ಲ. ಇವತ್ತು ತೀರ ನನ್ನದೇ ಭಯದ ಕುರಿತು ಅವರು ಹೇಳುತ್ತಿದ್ದಾರೆ ಎನಿಸುತ್ತಿರುವುದು ನಿಜ!

ಏನ ಬೇಡಲಿ?

ದೇವ, ನಿನ್ನ ಮಾಯೆಗಂಜಿ
ನಡುಗಿ ಬಾಡೆನು;
ನಿನ್ನ ಇಚ್ಛೆಯಂತೆ ನಡೆವೆ-
ನಡ್ಡಿ ಮಾಡೆನು.

ಮುಕ್ತಿ! ಮುಕ್ತಿ! - ನನ್ನ ನಾನು
ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
ಅಡಗಿಕೊಳ್ವುದೋ?

ಶಕ್ತಿಯಿತ್ತೆ ಮುಕ್ತಿಯನ್ನು
ಗಳಿಸಿಕೊಳ್ಳಲು;
ನೀರನೆರೆದೆ ಬಳ್ಳಿಯನು
ಬೆಳೆಸಿಕೊಳ್ಳಲು;

ಜ್ಞಾನರವಿಯನಿತ್ತೆ ಎದೆಯ
ನೋಡಿಕೊಳ್ಳಲು;
ಗೀತೆಯನ್ನು ಕೊಟ್ಟೆ ಕೊಳಲೊ-
ಳೂದಿಕೊಳ್ಳಲು.

ಎಲ್ಲವನ್ನು ಕೊಟ್ಟಿರುವೆ;
ಏನ ಬೇಡಲಿ!
ಜಗವನೆನಗೆ ಬಿಟ್ಟಿರುವೆ,
ಏಕೆ ಕಾಡಲಿ!


(ಕನ್ನಡದ ಪ್ರಮುಖ ವಿಮರ್ಶಕ ಎಸ್ ಆರ್ ವಿಜಯಶಂಕರ್ ಅವರು ಸಂಪಾದಿಸಲಿದ್ದ ಕೆ ಎಸ್ ನ ಅವರ ಕವಿತೆಗಳ ಮರು ಓದಿನ ಟಿಪ್ಪಣಿಗಳ ಒಂದು ಸಂಕಲನಕ್ಕಾಗಿ ಅವರೇ ಸೂಚಿಸಿದ "ಏನ ಬೇಡಲಿ?" ಕವಿತೆಯ ಬಗ್ಗೆ ಬರೆದ ಟಿಪ್ಪಣಿ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, December 27, 2016

ಕನ್ನಡ ಕನ್ನಡವ ಕನ್ನಡಿಸುತಿರಲಿ ಸದಾ...

ನಮ್ಮಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ವಿವಾದಗಳು ತೊಡಗಿದಾಗ ಅಥವಾ ಬೆಳಗಾವಿಯಲ್ಲಿಯೊ, ಬೆಂಗಳೂರಿನಲ್ಲೊ ಮರಾಠಿ ಭಾಷಿಕರ, ತಮಿಳರ ಜೊತೆ ಗಡಿ ಅಥವಾ ಭಾಷೆಗೆ ಸಂಬಂಧಿಸಿದಂತೆ ಏನಾದರೂ ತಕರಾರು ಎದ್ದಾಗ ಬಂದ್, ಮುಷ್ಕರ, ಗಲಾಟೆ ಎಲ್ಲ ಆಗುತ್ತಲ್ಲ, ಅದು ಇಡೀ ಕರ್ನಾಟಕದ ತುಂಬ ಏಕಪ್ರಕಾರ ಆಗುವುದಿಲ್ಲ. ಉದಾಹರಣೆಗೆ ಇಂಥ ಯಾವತ್ತೂ ಸಂದರ್ಭಗಳನ್ನು ಬಿಡಿ, ಪಕ್ಕದ ಕಾಸರಗೋಡು ಕರ್ನಾಟಕಕ್ಕೇ ಸೇರಬೇಕು ಎಂಬ ಬಗ್ಗೆ ನಡೆಯುವ ಗದ್ದಲದಲ್ಲಿ ಕೂಡಾ ನಾನು ವಾಸವಾಗಿರುವ ಕರಾವಳಿಯ ಜಿಲ್ಲೆಗಳು ಭಾಗವಹಿಸಿದ್ದು ಅಷ್ಟಕ್ಕಷ್ಟೇ. ನಮ್ಮಲ್ಲಿ ಹೆಚ್ಚಿನವರು ಮನೆಯಲ್ಲಿ, ಸಂತೆಯಲ್ಲಿ ಎಲ್ಲ ಕಡೆ ಕನ್ನಡವೂ ಸೇರಿದಂತೆ ತುಳು, ಕೊಂಕಣಿ, ಬ್ಯಾರಿ, ಉರ್ದು, ಮಲಯಾಳಂ, ಇಂಗ್ಲೀಷ್ ಮಾತನಾಡುತ್ತೇವೆ. ಮೆಡಿಕಲ್ ಇತ್ಯಾದಿ ಕಲಿಯಲು ಬಂದ ವಿದ್ಯಾರ್ಥಿಗಳಿಂದಾಗಿ ಹಿಂದಿ ಸಾಮಾನ್ಯವಾಗಿದೆ. ಈಚೆಗೆ ವಲಸೆ ಬಂದಿರುವ ಕೂಲಿ ಕಾರ್ಮಿಕರು, ಪಾನಿಪೂರಿ ಮಾರುವ, ಬೀದಿಬದಿ ಚೂಡಿದಾರ ತೂಗುಹಾಕಿದ, ಸೆಲೂನುಗಳಲ್ಲಿ ಸೇರಿಕೊಂಡ ಮತ್ತು ಸಣ್ಣಪುಟ್ಟ ಬೀದಿವ್ಯಾಪಾರದ ಮಂದಿ ಕೂಡ ಹೆಚ್ಚಿದ್ದು ಅವರಿಂದಾಗಿ ಉತ್ತರ ಕರ್ನಾಟಕದ ಕನ್ನಡ, ಉತ್ತರ ಭಾರತದ ಹಿಂದಿಯನ್ನು ಹೋಲುವ ಇತರ ಭಾಷೆಗಳು ಕೂಡ ಆಗಾಗ ಕಿವಿಗೆ ಬೀಳುತ್ತವೆ. ಮುವ್ವತ್ತು ವರ್ಷಗಳಿಂದ ನೋಡುತ್ತಿದ್ದೇನೆ, ಕರಾವಳಿ ಪ್ರದೇಶದ ಬಗ್ಗೆ ಯಾರು ಏನೇ ಹೇಳಲಿ, ಇಲ್ಲಿಯೂ ಹರಿಯುತ್ತಿರುವ, ಜನಸಾಮಾನ್ಯರಲ್ಲಿ ಮಿಡಿಯುತ್ತಿರುವ ಸಮಾನ ತಂತುವೇನಿದೆ, ಅದು ಕನ್ನಡತನದ್ದೇ, ಕನ್ನಡದ್ದೇ. ನಾನು ಕರಾವಳಿಯ ಉದಾಹರಣೆ ನೀಡಿದೆ. ಆದರೆ ಕಾವೇರಿಗೆ ಸಂಬಂಧಿಸಿದಂತೆ ಕರ್ನಾಟಕದ ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಆಸುಪಾಸಿನ ಕೆಲವು ಜಿಲ್ಲೆಗಳನ್ನು ಬಿಟ್ಟರೆ, ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ ಇವುಗಳೊಂದಿಗೆ ಬೆಳಗಾವಿಯನ್ನೂ ಸೇರಿಸಿಕೊಂಡು ನೋಡಿದರೆ, ಈ ಜಿಲ್ಲೆಗಳು ಸ್ಪಂದಿಸುವ ಮಟ್ಟದಲ್ಲಿ, ಅಷ್ಟೇ ತೀವ್ರವಾಗಿ ಕರ್ನಾಟಕದ ಬೇರೆ ಯಾವುದೇ ಜಿಲ್ಲೆಯೂ ಸ್ಪಂದಿಸಿರುವುದಿಲ್ಲ. ಇದನ್ನು ಎಲ್ಲರೂ ಬಲ್ಲರು. ಆದರೆ ಒಪ್ಪಿಕೊಳ್ಳುವುದು ಬಿಡುವುದು ಅವರವರ ಕಾರಣಕ್ಕೆ ವ್ಯತ್ಯಾಸವಾಗಬಹುದು, ಅದು ಬೇರೆ ಸಂಗತಿ. ಹೀಗಿದ್ದೂ ಕನ್ನಡದ ಬಗ್ಗೆ, ನಮ್ಮೆಲ್ಲರ ಆಳದ ಒಂದು ಭಾವನಾತ್ಮಕ ಸಂವೇದನೆಯ ಬಗ್ಗೆ ಯಾವುದೇ ಅನುಮಾನಕ್ಕೆ ಕಾರಣವಿಲ್ಲ. ಇದನ್ನು ಮೇಲ್ನೋಟಕ್ಕೆ ಕಂಡುಕೊಳ್ಳಲು ನಾವು ವಿಫಲರಾದರೆ ಅದು ನಮ್ಮ ವೈಫಲ್ಯವೇ ಹೊರತು ವಸ್ತುಸ್ಥಿತಿಯದ್ದಲ್ಲ. ಆಳವಾಗಿ ನೋಡಬಲ್ಲವರಿಗೆ ಇದು ಗೊತ್ತಿರುವ ಸತ್ಯ.

ಜನಸಾಮಾನ್ಯನೊಬ್ಬನಿಗೆ ಕನ್ನಡ, ಕರ್ನಾಟಕ ಎಂದರೆ ಇವತ್ತು ಕನ್ನಡ ಭಾಷೆಯನ್ನೇ ಮಾತನಾಡುವುದು, ಕನ್ನಡದ್ದನ್ನೇ ಓದುವುದು, ಕನ್ನಡ ಸಿನಿಮಾಗಳನ್ನೇ ನೋಡುವುದು, ಕನ್ನಡ ಚಾನೆಲ್ಲನ್ನೇ ನೋಡುವುದು, ಕಾವೇರಿ, ಮರಾಠಿ, ಹಿಂದಿ ಹೇರಿಕೆ, ತಮಿಳರ ಅಬ್ಬರ ಎಂದಾಗಲೆಲ್ಲ ಕುದಿಯುವುದು - ಆಗಿ ಉಳಿದಿಲ್ಲ. ಹಾಗೆ ಉಳಿಯದೆಯೂ ಅವನು ಅಪ್ಪಟ ಕನ್ನಡಿಗನೇ, ಕರ್ನಾಟಕದ ಬಗ್ಗೆ ಅಭಿಮಾನ, ಹೆಮ್ಮೆ, ಪ್ರೀತಿ ಎಲ್ಲ ಇರುವವನೇ. ಅವನು ಕರ್ನಾಟಕದೊಳಗೇ ಇರಬೇಕಾಗಿಯೂ ಇಲ್ಲ, ಕರ್ನಾಟಕದಲ್ಲೇ ವರ್ಷಾನುಗಟ್ಟಲೆ ಇದ್ದೂ ಇಲ್ಲೇ ಹುಟ್ಟಿ ಬೆಳೆದವನಾಗಿರಬೇಕಾಗಿಯೂ ಇಲ್ಲ. ಅವನಿಗೆ ಇವತ್ತಿಗೂ ಕನ್ನಡ ಬರದಿದ್ದರೂ ಅದು ದೊಡ್ಡ ಸಂಗತಿ ಅನಿಸಬೇಕಾಗಿಯೇ ಇಲ್ಲ. ಇಲ್ಲಿರುವ ಏಳೆಂಟು ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಲ್ಲಿ ದುಡಿಯುವ ಉತ್ತರ ಭಾರತದ ಅನೇಕ ಎಳೆಯ ವೈದ್ಯರು ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ, ಕನ್ನಡದಲ್ಲೇ ಮಾತನಾಡಲು ಹಾತೊರೆಯುತ್ತಾರೆ. ಇಲ್ಲಿನವರೇ ಆದ ನರ್ಸುಗಳು ಒಂದಿಷ್ಟೂ ತಡವರಿಸದೆ ಮಲಯಾಳಂ, ತಮಿಳು ಮಾತನಾಡುತ್ತಾರೆ. ಅದು ಅವರಿಗೆ ವೃತ್ತಿಜೀವನದ ಅನಿವಾರ್ಯವೂ ಆಗಿದೆ. ಈ ನೆಲದ ಕಲೆಯಾದ ಯಕ್ಷಗಾನಕ್ಕೆ ಬಂದರೆ ತೆಂಕು ಬಡಗು ಎರಡೂ ತಿಟ್ಟಿನ ಪ್ರಸಂಗಗಳೆಲ್ಲ ಇದ್ದಿದ್ದು ಕನ್ನಡದಲ್ಲಿಯೇ, ತುಳುವಿನಲ್ಲಲ್ಲ. ತುಳು ಪ್ರಸಂಗಗಳು ಈಚಿನವು. ತುಳುವಿನಲ್ಲೇ ಇರುವ ಯಕ್ಷಗಾನದ ಪದಗಳು ಅದಕ್ಕೂ ನಂತರದವು. (ಆಸಕ್ತರು ಪುರುಷೋತ್ತಮ ಬಿಳಿಮಲೆಯವರ ‘ಜನಸಂಸ್ಕೃತಿ’ ಕೃತಿಯ ‘ಕಲೆ ಮತ್ತು ಬದಲಾವಣೆ: ಯಕ್ಷಗಾನದ ಉದಾಹರಣೆ’ ಲೇಖನವನ್ನು ಗಮನಿಸಬಹುದು) ಈ ನೆಲದಲ್ಲಿ ಮಾತ್ರವೇ ಕಾಣಸಿಗುವ ತಾಳಮದ್ದಲೆ ಎಂಬ ಪ್ರಕಾರವಂತೂ ಕನ್ನಡದಲ್ಲೇ ಇದ್ದು, ಯಕ್ಷಗಾನದ ಭಿನ್ನ ಆವೃತ್ತಿಗಳು ದೇಶದ ಹಲವೆಡೆ ಇದ್ದರೂ ಈ ತಾಳಮದ್ದಲೆ ಎಂಬುದು ಕರಾವಳಿಯಲ್ಲಿ ಮತ್ತು ಕನ್ನಡದಲ್ಲಿ ಮಾತ್ರ ಯಾಕೆ ಬೆಳೆದು ಬಂತು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿವೆ. (ಆಸಕ್ತರು ಡಾ.ಪಾದೇಕಲ್ಲು ವಿಷ್ಣು ಭಟ್ಟ ಹಾಗೂ ಡಾ.ಎಂ.ಪ್ರಭಾಕರ ಜೋಶಿಯವರ ಜಂಟಿ ಸಂಪಾದಕತ್ವದ ‘ವಾಚಿಕ’ ಕೃತಿಯನ್ನು ಗಮನಿಸಬಹುದು.) ಪಾಡ್ದನಗಳು ತುಳು-ಕನ್ನಡ ಎರಡೂ ಭಾಷೆಯಲ್ಲಿ ಸಿಗುತ್ತವೆ. ಇನ್ನು ಕೊಣ್ಕಿ ಎನ್ನುವ ವಿಶಿಷ್ಟ ಕುಣಿತ-ಗಾಯನ ಕಥನ ಇರುವುದು ಕನ್ನಡದಲ್ಲಿ ಮಾತ್ರ. ಜಾನಪದದ ಮಾತಂತಿರಲಿ, ಇಲ್ಲಿನ ತುಳು, ಕೊಂಕಣಿ, ಕೊಡವ, ಬ್ಯಾರಿ ಭಾಷೆಯ ಸಾಹಿತ್ಯ ಬಳಸುತ್ತಿರುವ ಲಿಪಿ ಕನ್ನಡದ್ದೇ. ಕೋಲಾರದ ತೆಲುಗರು ಕೂಡ ಕನ್ನಡ ಲಿಪಿಯನ್ನೇ ಬಳಸುತ್ತಿದ್ದರೆಂದು ಕೇಳಿದ್ದೇನೆ. ಅದೇ ರೀತಿ ಅಂತರ್ಜಾಲದಲ್ಲಿ, ಸೆಲ್‌ಫೋನುಗಳಲ್ಲಿ ಹಲವರು ಇವತ್ತಿಗೂ ಕನ್ನಡ ಮಾತಿಗೆ ಇಂಗ್ಲೀಷ್ ಲಿಪಿಯನ್ನೇ ಬಳಸುವ ಪರಿಪಾಠವನ್ನೂ ಇಟ್ಟುಕೊಂಡಿದ್ದಾರೆ. ಇದು ಇವತ್ತಿನ ಕನ್ನಡತನ. ಇದನ್ನು ನಾವು ಒಪ್ಪಿಕೊಳ್ಳಬೇಕಿದೆ, ಸ್ವೀಕರಿಸಬೇಕಿದೆ.

ನಮ್ಮ ರಾಜ್ಯದಲ್ಲೇ ಇವತ್ತು ಜನಸಮುದಾಯದಲ್ಲಿ ಬಳಸಲ್ಪಡುತ್ತಿರುವ ಕನ್ನಡ ಎಷ್ಟೊಂದು ಸಮೃದ್ಧವೂ ವೈವಿಧ್ಯಮಯವೂ ಆಗಿದೆ ಎಂದರೆ ಪ್ರತಿಯೊಂದು ಕನ್ನಡವೂ ಭಿನ್ನ ಮತ್ತು ಅಷ್ಟೇ ಚಂದ. ಧಾರವಾಡ ಕನ್ನಡ, ಉತ್ತರ ಕರ್ನಾಟಕದ ಕನ್ನಡ, ಕುಂದಾಪುರ ಕನ್ನಡ, ಹವ್ಯಕ ಕನ್ನಡ, ಮಂಡ್ಯ ಕನ್ನಡ ಎಂದೆಲ್ಲ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಐವತ್ತು ಅರವತ್ತು ಕಿಲೊಮೀಟರ್ ಅಂತರದಲ್ಲೇ ಕನ್ನಡದ ಲಯ ವಿನ್ಯಾಸ ಬದಲಾಗಿರುತ್ತದೆ! ನಮ್ಮ ಪತ್ರಿಕೆಗಳು ಆಗಾಗ ಈ ಎಲ್ಲ ಭಾಷೆಯ ಸೊಗಡನ್ನು ನಮಗೆ ಅಷ್ಟಿಷ್ಟು ದಕ್ಕಿಸಿದ್ದರಿಂದಲೇ ನಮಗೆ ಈ ಎಲ್ಲ ಭಾಷೆಗಳೂ ಪ್ರಿಯವೇ, ಇಷ್ಟವೇ. ಗ್ರಾಂಥಿಕ ಕನ್ನಡದಲ್ಲಿ ಕ್ರಿಯಾಪದ ಕೊನೆಯಲ್ಲಿ ಬಂದರೆ ಧಾರವಾಡ ಮತ್ತು ಉತ್ತರ ಕರ್ನಾಟಕದ ನುಡಿಯಲ್ಲಿ ಕ್ರಿಯಾಪದ ತನ್ನ ಜಾಗ ಬದಲಿಸಿ ಆರಂಭದಲ್ಲೊ ನಡುವಿನಲ್ಲೊ ಕೂತದ್ದೇ ಭಾಷೆಗೆ ಒಂದು ಕಾವ್ಯದ ಲಯ ದಕ್ಕಿಬಿಡುತ್ತದೆ. ಆಡುಭಾಷೆಯ ಸಾಹಿತ್ಯ ಓದುವುದಕ್ಕೆ ತುಸು ಕಷ್ಟ ಎನಿಸಿದರೂ ಒಮ್ಮೆ ಅದರ ಲಯಕ್ಕೆ ಮನಸ್ಸು ಒಗ್ಗಿದ್ದೇ ಅದು ನಮ್ಮದೇ ಆಗಿಬಿಡುತ್ತದೆ. ಇದು ನಿಜವಾದ ಕನ್ನಡ ಭಾಷೆಯ ಶಕ್ತಿ. ಇಲ್ಲದಿದ್ದರೆ ನಮಗೆ ಬೇಂದ್ರೆ, ದೇವನೂರು ಮಹದೇವ, ಸಿದ್ಧಲಿಂಗ ಪಟ್ಟಣಶೆಟ್ಟಿ, ಕುಂವೀ, ಗೀತಾ ನಾಗಭೂಷಣ ಎಲ್ಲ ದಕ್ಕುವುದಿತ್ತೆ?

ದಕ್ಷಿಣಕನ್ನಡದಲ್ಲೇ ಯಕ್ಷಗಾನದ ಪಾತ್ರಗಳು ಆಡುವ ಕನ್ನಡವೇ ಬೇರೆ. ಈಚೆಗೆ ಏಡ್ಸ್ ಬಗ್ಗೆ ಪ್ರಸಂಗ ಬಂದಾಗ ಯಕ್ಷಗಾನದ ಭಾಷೆಯನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಸಣ್ಣ ಗದ್ದಲವೆದ್ದಿತು. ಹಾಗೆಯೇ ನಾವು ಸಿನಿಮಾಗಳಲ್ಲಿ ಕೇಳುವ ಮಂಗಳೂರು ಕನ್ನಡ ಎನ್ನುವುದೊಂದು ವಾಸ್ತವವಾಗಿ ಅಸ್ತಿತ್ವದಲ್ಲೇ ಇಲ್ಲ. ತುಳು ಅಥವಾ ಕೊಂಕಣಿ ಲಯದಲ್ಲಿಯೇ ಕನ್ನಡ ಮಾತನಾಡುವಾಗ ಆಗುವ ಆಭಾಸವೇ ಮಂಗಳೂರು ಕನ್ನಡ ಎಂದು ಸಾರ್ವತ್ರಿಕವಾಗಿ ಸಿನಿಮಾಗಳಲ್ಲಿ ಬಳಸಲ್ಪಟ್ಟಿದೆ ಅಷ್ಟೇ. ಯಾವ ಉಡುಪಿ ಅಡುಗೆ ಭಟ್ಟರೂ ‘ಪ್ರೀತಿ ವಾತ್ಸಲ್ಯ’ ಸಿನಿಮಾದ ದಿನೇಶ್ ಬಳಸುವ ಲಯದಲ್ಲಿ "ನಾವು ಗಟ್ಟದ ತಗ್ಗಿನವರು, ಗೊತ್ತಾಯಿತಲ್ಲ!" ಬಳಸುವುದಿಲ್ಲ. ಅಥವಾ ಲವ್ ಮಾಡಿ ನೋಡು ಸಿನಿಮಾದ ಕಾಶೀನಾಥರಂತೆ "ನಾನು ಮಂಗಳೂರು ಮಂಜುನಾಥ , ಗೊತ್ತುಂಟಲ್ಲ" ಎನ್ನುವುದಿಲ್ಲ. ಆದರೆ ಸಿನಿಮಾದ ಸೃಷ್ಟಿಯಾದ ಈ ಮಂಗಳೂರು ಕನ್ನಡವನ್ನು ನಾವು ಮಂಗಳೂರಿನವರೇ ತಮಾಷೆಗೆ ಬಳಸಿ ಖುಶಿ ಪಡುತ್ತೇವೆ ಎನ್ನುವುದು ಬೇರೆ ವಿಷಯ!

ಪಿ ಲಂಕೇಶರ ಒಂದು ಪುಟ್ಟ ಕತೆಯಿದೆ, ‘ಡಿಸೋಜಾನ ‘ಊವಿನ’ ವೃತ್ತಿ’ ಎಂದು ಅದರ ಹೆಸರು. ಆರೆಸ್ಸೆಸ್ಸಿನ ಮುದುಕ ಶೇಷಗಿರಿಯವರು ಹೂವು ಮಾರಲು ಹೊರಟ ಡಿಸೋಜಾಗೆ ‘ನಿನ್ನ ಇಂಗ್ಲೀಷೆಲ್ಲ ತಲೆಹರಟೆ, ವೃತ್ತಿಗೆ ತಕ್ಕಂತೆ ಭಾಷೆ ಇರಬೇಕು ಕಣಯ್ಯ’ ಎಂದು ನೀಡುವ ಉಪದೇಶದ ಕತೆಯಿದು. ನಮ್ಮ ಸಾಮಾನ್ಯ ಜನ ಭಾಷೆಯನ್ನು ಉಪಯೋಗಿಸುವುದು ಯಾರನ್ನೂ ಮೆಚ್ಚಿಸುವುದಕ್ಕಲ್ಲ. ಅದು ಅವನಿಗೆ ಉಸಿರಾಡಿದಂತೆ, ಬದುಕುವ ಅನಿವಾರ್ಯ ಅಗತ್ಯವಾಗಿ ಬೇಕು ಅಷ್ಟೇ. ತಾನು ಹೇಳಬೇಕೆಂದಿರುವುದು ಎದುರಿನ ವ್ಯಕ್ತಿಗೆ ತಲುಪುವುದು ಮುಖ್ಯವೇ ಹೊರತು ಅದಕ್ಕೆ ತಾನು ಬಳಸುವ ಭಾಷೆ ಕನ್ನಡವೇ, ತಮಿಳೇ, ಇಂಗ್ಲೀಷೇ ಎನ್ನುವುದು ಮುಖ್ಯವಾಗುವುದೇ ಇಲ್ಲ. ಇವೆಲ್ಲದರ ಬೆರಕೆ ಕೂಡಾ ಅವನಿಗೆ ನಿಷಿದ್ಧವಲ್ಲ. ಹೀಗೆಯೇ ಸಾಮಾನ್ಯರ ನಡುವೆ ನಮ್ಮ ಭಾಷೆ ಮುಕ್ತವಾಗಿ ‘ಕೊಟ್ಟು-ತಗೊಂಡು’ ಶ್ರೀಮಂತವಾಗುತ್ತ ಬಂದಿದ್ದು ಎನ್ನುವುದನ್ನು ಮರೆಯಬಾರದು. ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿಗೆ ಬಹಳ ಮುಕ್ತವಾಗಿ, ಎಲ್ಲಾ ಭಾಷೆಯ ಶಬ್ದಗಳನ್ನು ಸೇರಿಸಿಕೊಳ್ಳುತ್ತಿದ್ದಾರಂತೆ ಎಂಬ ಬಗ್ಗೆ ಆಶ್ಚರ್ಯಪಡುವುದಕ್ಕೇನೂ ಕಾರಣವಿಲ್ಲ. ಈ ಕೆಲಸವನ್ನು ಶತಶತಮಾನಗಳಿಂದ ನಮ್ಮ ಸಂತೆಮಾರ್ಕೆಟ್ಟು, ಹಿತ್ತಲು, ‘ಕಟ್ಟೆಪಟ್ಟಾಂಗ’ದ ಅರಳಿಮರದ ಕಟ್ಟೆ, ಕ್ರಿಕೆಟ್, ಗೋಲಿ ಆಡಿದ ಗದ್ದೆಗಳು ಮಾಡುತ್ತಲೇ ಬಂದಿವೆ. ಆ ಶಬ್ದಗಳೆಲ್ಲ ಇವತ್ತು ಕನ್ನಡದೊಳಗೆ ಹೇಗೆ ಸೇರಿಕೊಂಡು ಬಿಟ್ಟಿವೆ ಎಂದರೆ ಇನ್ನು ಅವುಗಳನ್ನು ಗುರುತಿಸಿ ಬೇರ್ಪಡಿಸುವುದೇ ಆಗದ ಮಾತು. ನಾವು ಆಡುವ ಗೋಲಿ ಆಟವೊಂದಕ್ಕೆ ‘ಬೆಂದ’ ಎನ್ನುತ್ತಿದ್ದೆವು. ಅದರಲ್ಲಿ ಸಮಾನ ಅಂತರದಿಂದ ಆದರೆ ಬೇರೆಯೇ ಕಡೆಯಿಂದ ಹೊಡೆಯುವ ಮುನ್ನ ಕೋನ ಬದಲಿಸಿಕೊಳ್ಳುವುದಕ್ಕೆ ಕೂಚ್ ಮತ್ತು ಸರ್ಫೀಟ್ ಎನ್ನುತ್ತಿದ್ದೆವು. ಎದುರಿನ ಪಕ್ಷದವರು ಮೊದಲೇ "ಕೂಚ್ ನೈ ಸರ್ಫೀಟ್ ನೈ" ಎಂದು ಡಿಕ್ಲೇರ್ ಮಾಡಿಬಿಟ್ಟರೆ ಇಂಥ ಅನುಕೂಲಕ್ಕೆ ನಿಷೇಧ ಬೀಳುತ್ತಿತ್ತು! ಸಿಮೆಂಟಿನ ಗೋಲಿಗೆ ಮಾರ್ಗೋಲಿ ಎನ್ನುತ್ತಿದ್ದೆವು. ಮಣ್ಣಿನಲ್ಲಿ ಒಂದು ಚೌಕ ಬರೆದು ಅದರ ನಾಲ್ಕೂ ಗೆರೆಗಳ ಮೇಲಿರಿಸಿದ ಗೋಲಿಗೆ ಹೊಡೆದು ಅಲ್ಲಿಂದ ಅದನ್ನು ಎಬ್ಬಿಸುವ ಆಟ ಅದು, ಬೆಂದ. ಅಕಸ್ಮಾತ್ ನಮ್ಮ ಗೋಲಿ ಆ ಚೌಕದೊಳಗೆ ಕೂತರೆ ಅದೇ ‘ಬೆಂದ’! ಏನರ್ಥ ಆ ಶಬ್ದಕ್ಕೆ?! ನಮ್ಮ ಕರ್ನಾಟಕದ ಊರುಗಳ, ಆ ಊರಿನಲ್ಲೇ ಮಾರಿಗೊಂದರಂತೆ ಇರುವ ಬಸ್ ಸ್ಟಾಪುಗಳ ಹೆಸರುಗಳನ್ನು ಗಮನಿಸಿದರೇ ಸಾಕು ಎಂಥೆಂಥ ಕತೆಗಳು ಕೇಳಿಸುತ್ತವೆ!

ಎರಡು ವರ್ಷಗಳ ಹಿಂದೆ ಟಿ ಕೆ ದಯಾನಂದ ಅವರ ಕಥಾಸಂಕಲನ ‘ರೆಕ್ಕೆಹಾವು’ ಬಂತು. ಮತ್ತೆ ಇಲ್ಲಿ ನಮಗೆ ಸಿಗುವ ಜಗತ್ತು ಕೂಡ ‘ರಸ್ತೆ ನಕ್ಷತ್ರ’ಗಳದ್ದೇ. ಅಲ್ಲಿ ಬರುವ ಮೋಟುಬೀಡಿ ತೋಪಮ್ಮ, ಡೈನೋಸಾರ್ ತಾತ ಎಂದು ಕರೆಯಲ್ಪಡುವ ಮಚ್ಚನುಮ, ಟಕಾಟಿಕಿ ಶಂಕ್ರ, ಗಂಟೇಸಾಬರು, ಕುಟ್ರಪ್ಪ, ಪಾಪಾತ್ತಿ, ಪುರ್ರ, ಬುಲೆಟ್‍ಮಾಮ, ವಾಚ್‌ಮನ್ ಪಂಗಾಳಿ, ಡ್ರೈವರ್ ಟೋಬಿ, ಬೇಬಿಸಾಬರು, ಸೆಂಟ್ ಹನ್ಮಂತ, ಉಂತೂರವ್ವ ಒಬ್ಬೊಬ್ಬರೂ ಕಥಾಸರಿತ್ಸಾಗರರೇ! ನಮ್ಮಲ್ಲಿ ಶ್ರೀಕೃಷ್ಣ ಆಲನಹಳ್ಳಿ ಹೀಗೆ ಮಾತಿಗೆ ತೊಡಗಿದರೆ ಪುಂಖಾನುಪುಂಖ ಕತೆಗಳನ್ನು ಹೇಳಬಲ್ಲವರಾಗಿದ್ದರಂತೆ. ಹಾಗೆಂದೇ ಲಂಕೇಶರಂಥ ಸಂಪಾದಕರು ಆಲನಹಳ್ಳಿಗೆ ಬರೆಯಲಿರುವ ಕಾದಂಬರಿಗೆ ಸಂಭಾವನೆ ಕೊಡುತ್ತಿದ್ದರಂತೆ! ಹೀಗೆ ಅಡ್ವಾನ್ಸ್ ತೆಗೆದುಕೊಂಡು ಬರೆದ ಇನ್ನೊಬ್ಬ ಕನ್ನಡ ಕತೆ-ಕಾದಂಬರಿಕಾರ ಇರಲಿಕ್ಕಿಲ್ಲ. ಸ್ವತಃ ಲಂಕೇಶ್‌ಗೆ ಆ ಶಕ್ತಿ ಇತ್ತು. ಅವರು ಬರೆದ ಕತೆಗಳನ್ನು ಗಮನಿಸಿದರೆ ಅವರು ಕತೆ ಕಟ್ಟುತ್ತಿದ್ದಾರೆಂಬುದು ಗೊತ್ತೇ ಆಗದ ಹಾಗೆ ಕತೆಯೊಂದನ್ನು ಹೇಳಿ ಮುಗಿಸುವ ಶಕ್ತಿ ಹೊಂದಿದ್ದರು ಎನ್ನುವುದು ಅರಿವಾಗುತ್ತದೆ. ಅವರು ಎಲ್ಲಿಂದಲೋ ಬಂದವರು ಸಿನಿಮಾಕ್ಕೆ ಬರೆದ ಹಾಡುಗಳು ಈಗಲೂ ಅಲ್ಲಲ್ಲಿ ಭಾವಗೀತೆಗಳಂತೆ ಹಾಡಿಗೆ ದಕ್ಕುತ್ತಿವೆ. ಅವು ಜಾನಪದ ಹಾಡುಗಳೋ ಎಂಬಂತೆ ಹಾಡಲ್ಪಡುತ್ತವೆ! ಉಳಿದಂತೆ ತೇಜಸ್ವಿ, ದೇವನೂರ ಮಹದೇವ, ಈಚಿನವರಲ್ಲಿ ಅಬ್ದುಲ್ ರಶೀದ್. ತಡವಾಗಿ (ಕತೆ) ಬರೆಯತೊಡಗಿದ ಶ್ರೀನಿವಾಸ ವೈದ್ಯರು. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿದು ಬರುವ ಸಂಗತಿ ಎಂದರೆ ಇವರೆಲ್ಲರೂ ಸಾಮಾನ್ಯ ಜನರೊಂದಿಗಿನ ತಮ್ಮ ಸಹಜ ಸಂಪರ್ಕವನ್ನು ಕಡಿದುಕೊಳ್ಳದೆ, ಅದನ್ನು ಮುಖ್ಯ ಎಂದು ಅರಿತುಕೊಂಡು, ಉಳಿಸಿಕೊಂಡು ಬಂದವರು ಎನ್ನುವುದು. ಹಾಗಾಗಿಯೇ ಇವರ ಭಾಷೆಯಲ್ಲಿ ಆ ತಾಜಾತನ, ಹೊಸತನ ಎಲ್ಲ ಇವೆ. ಆದರೆ ಇದೆಲ್ಲ ಗತಕಾಲಕ್ಕೆ ಸೇರಿಹೋದಂತಿರುವುದು ಸುಳ್ಳಲ್ಲ.

ಇವತ್ತು ಇದಕ್ಕೆ ನಮ್ಮದೇ ಉದಾಹರಣೆ ಕೊಡುವುದಾದರೆ ಅತ್ಯಂತ ಸೂಕ್ತವಾದದ್ದು ಯೋಗರಾಜ್ ಭಟ್ ಅವರ ಸಿನಿಮಾ ಹಾಡುಗಳು! ಯೋಗರಾಜ್ ಭಟ್ಟರ ಹಾಡುಗಳಾದರೂ ತಟ್ಟನೇ ಮಾಸ್ ಅಪೀಲ್ ಪಡೆದುಕೊಂಡು ಜನಪ್ರಿಯವಾಗಲು ಅವು ಜನಸಾಮಾನ್ಯರು ದೈನಂದಿನ ವ್ಯವಹಾರದಲ್ಲಿ ಬಳಸುವ ಭಾಷೆಯಲ್ಲಿರುವುದೂ ಒಂದು ಕಾರಣ. ಇವರ ಪ್ರತಿಭೆಯ ಆಳ ತಿಳಿಯಲು ‘ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ’ ಹಾಡನ್ನು ನೆನಪಿಸಿಕೊಂಡರೆ ಸಾಕು. ಈ ಹಾಡನ್ನು ಕೇಳುತ್ತ ಕಣ್ಣೀರಿಡದವರು ಕಡಿಮೆ. ಇದರೊಂದಿಗೆ ಯೋಗರಾಜ್ ಭಟ್ಟರು ಬಳಸುವ ವಿಟ್ ಮತ್ತು ಪನ್ ಸೇರಿದ್ದೇ ‘ಭಯಂಕರ’ ಹಿಟ್ ಆಗತೊಡಗಿದ ಅವರ ಹಾಡುಗಳ ಎದುರು ಜಯಂತ್ ಕಾಯ್ಕಿಣಿಯವರ ಮಾಧುರ್ಯ ಕೂಡ ದೃಢವಾಗಿ ನಿಂತಿದ್ದನ್ನು ಸೂಕ್ಷ್ಮವಾಗಿಯೇ ಗಮನಿಸಬೇಕು. ಜಯಂತರ ಭಾಷೆಯ ನಿಜವಾದ ಉಸಿರು ಇರುವುದು ಅವರ ಸಂವೇದನೆಗಳ ಜೀವಂತಿಕೆ ಮತ್ತು ಪ್ರಾಮಾಣಿಕತೆಯಲ್ಲಿಯೇ. ಅರವತ್ತರ ಚಿರಯುವಕ ಜಯಂತ್ ಬರೆವ ಯುಗಳ ಗೀತೆಗಳಲ್ಲಿ ಐವತ್ತರ ಸನಿಹವಿರುವ ನನ್ನಂಥವರು ನಮ್ಮನಮ್ಮ ಮೊದಲ ಪ್ರೇಮಗೀತೆಗಳ ಹಿಂದಿದ್ದ ಸಂವೇದನೆಯನ್ನು ಗುರುತಿಸಿಕೊಂಡರೆ, ಈಗಿನ ಕಾಲೇಜು ಯುವಕ ಯುವತಿಯರು ಸರಿಯಾದ ಶಬ್ದ ಕೈಗೆ ಹತ್ತದೇ ತಮ್ಮ ಮನಸ್ಸು ಹೃದಯಗಳ ತುಂಬ ಸಿಕ್ಕಿ ಹಾಕಿಕೊಂಡಂತೆ ಹಿಂಸಿಸುತ್ತಿದ್ದ ಭಾವ ಇದೇ ಅಲ್ಲವೆ ಎಂದು ದಂಗಾಗುತ್ತಾರೆ! ಇಲ್ಲಿಯೇ ನಮಗೆ ಭಾಷೆಯ ಸಹಜ ಗುಣ ಮತ್ತು ಅದನ್ನು ಬಳಸುವವನ ಸಹಜ ಗುಣ ಎರಡೂ ಎಷ್ಟು ಮುಖ್ಯ ಎನ್ನುವುದರ ಹೊಳಹು ಸಿಗಬಹುದಾದ್ದು.

ಕನ್ನಡದ ಪರಂಪರೆ ಹಾಗೂ ಕನ್ನಡಿಗರ ಸಹಿಷ್ಣುತೆ ಮುಂತಾದ ಸದ್ಗುಣಗಳನ್ನು ಹೇಳಲು ಉಪಯೋಗಿಸುವ ‘ಕನ್ನಡದ ಮನ್ಸಸ್ಸು’ ಎನ್ನುವ ನುಡಿಗಟ್ಟಿನ ಬಗ್ಗೆ ಮಾತನಾಡುತ್ತ ನಾಡಿನ ಪ್ರಮುಖ ಚಿಂತಕ ಜಿ ರಾಜಶೇಖರ್ ಈ ಕನ್ನಡದ ಮನಸ್ಸು ಬೆಂಗಾಡಾಗಿ ಬದಲುತ್ತಿರುವುದರ ಬಗ್ಗೆ ಅತೀವ ಖೇದ ವ್ಯಕ್ತಪಡಿಸುತ್ತಾರೆ. ನಾವು ಮತ್ತು ‘ಅನ್ಯರು’ ಎಂದು ಗುರುತಿಸಲು ಬಳಸಲ್ಪಡುತ್ತಿರುವ ಧರ್ಮ, ಜಾತಿ, ರಾಜ್ಯ, ಭಾಷೆ ಮತ್ತು ಮನೋಧರ್ಮವನ್ನೇ ಅವರು ಪ್ರಶ್ನಿಸುತ್ತಾರೆ. (ಜಿ ರಾಜಶೇಖರ್: ಲೇಖಕನಾಗಿ ನನ್ನ ತಲ್ಲಣಗಳು: ಸಂ: ಶೂದ್ರ ಶ್ರೀನಿವಾಸ್). ನಮ್ಮ ಗಡಿನಾಡು ಪ್ರದೇಶದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಸಮಸ್ಯೆಯಾಗಿದೆ. ಹೊರರಾಜ್ಯಗಳಲ್ಲಿರುವ ಕನ್ನಡಿಗರಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವುದಕ್ಕೆ ಇರುವ ಅವಕಾಶಗಳನ್ನು ಆಗಾಗ ಮೊಟಕುಗೊಳಿಸಲಾಗುತ್ತಿದೆ. ನಮ್ಮ ರಾಜ್ಯದೊಳಗೇ ಸರಕಾರೀ ಶಾಲೆಗಳು, ಎಲ್ಲಿ ಕನ್ನಡ ಮಾಧ್ಯಮವೇ ಇವತ್ತಿಗೂ ಉಳಿದಿದೆಯೊ, ಅವು ಒಂದೊಂದಾಗಿ ಮುಚ್ಚಲ್ಪಡುತ್ತಿವೆ. ನಮ್ಮ ರಾಜ್ಯದ ಪ್ರತಿಭಾನ್ವಿತರು ವಿದೇಶಿ ನೌಕರಿಯತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಅಂಥವರು ಹೆಚ್ಚು ಹೆಚ್ಚಾಗಿ ಅಲ್ಲಿಯೇ ನೆಲೆಯಾಗುತ್ತಾರೆ. ನಮ್ಮ ರಾಜ್ಯದಲ್ಲಿ ಹೊರರಾಜ್ಯದ ಮಂದಿ ಹೆಚ್ಚುತ್ತಿದ್ದಾರೆ. ಇವರು ಕನ್ನಡ ಕಲಿಯುವ ಅನಿವಾರ್ಯ ಇಲ್ಲದಿರುವುದರಿಂದ ಕನ್ನಡದ ಮಂದಿಗಿಂತ ಇವರೇ ಹೆಚ್ಚುತ್ತಿದ್ದಾರೆ. ಕನ್ನಡ ಅಳಿಯುತ್ತಿರುವ ಭಾಷೆ ಎನ್ನುವ ಆತಂಕ ಬೇರೆ ಇದೆ. ಇದಕ್ಕೆ ಇಲ್ಲಿ ಹೇಳಿರುವ ‘ಪರಭಾಷಾ ಆಕ್ರಮಣ’ದ ಕಾರಣಗಳಲ್ಲದೆ ನಮ್ಮಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಾ ಹೋಗುತ್ತಿರುವುದು ಮತ್ತು ಸ್ವತಃ ನಾವು ಬಳಸುತ್ತಿರುವ ಕನ್ನಡ ಕೂಡ ಶುದ್ಧವಾಗಿಲ್ಲದೇ ಇರುವುದು ಸಹ ಕಾರಣ ಎಂದು ಕೆ ವಿ ನಾರಾಯಣ ಅವರು ಗುರುತಿಸುತ್ತಾರೆ. ಉಳಿದವರ ಮಾತಂತಿರಲಿ, ನಮ್ಮ ಅನೇಕ ಉದಯೋನ್ಮುಖ ಸಾಹಿತಿಗಳ ಬರವಣಿಗೆಯೇ ತಪ್ಪುಗಳ ತಿಪ್ಪೆಯಂತಿರುತ್ತದೆ ಎನ್ನುವುದು ಈಚೆಗೆ ನನ್ನ ಗಮನಕ್ಕೆ ಬಂದು ಸಂಪಾದಕರೊಬ್ಬರ ಬಳಿ ಇಂಥವರ ಬರಹವನ್ನೂ ಪ್ರಕಟಿಸುತ್ತೀರಲ್ಲ, ನೀವು ತಪ್ಪಾಗಿ ಬರೆಯುವವರಿಗೆ ಪ್ರೋತ್ಸಾಹ ನೀಡಿದಂತಾಗದೆ, ಸಾಹಿತಿ ಎನಿಸಿಕೊಳ್ಳಲು ಬಯಸುವವರೇ ತಪ್ಪು ತಪ್ಪು ಕನ್ನಡ ಬರೆಯುವುದಾದರೆ ಕನ್ನಡ ಉಳಿಸಿ ಎಂದು ಇನ್ಯಾರಲ್ಲಿ ಮೊರೆಯಿಡುತ್ತೀರಿ ಎಂದು ಕೇಳಿದೆ. ನಮಗೆ ಬರುವ ಲೇಖನಗಳಲ್ಲಿ ನೂರಕ್ಕೆ ತೊಂಬತ್ತೈದರಷ್ಟು ಹೀಗೇ ಇರುತ್ತವೆ, ಅದರಲ್ಲಿ ಹೊಸಬರು ಹಳಬರು ಅಂತೇನಿಲ್ಲ, ತುಂಬ ತಪ್ಪುಗಳಿವೆಯಲ್ಲ ಸರ್ ಎಂದರೆ ನೀವೇ ಸ್ವಲ್ಪ ಸರಿಮಾಡ್ಕೊಳ್ಳಿ ಎನ್ನುವವರೇ ಎಲ್ಲರೂ. ಏನು ಮಾಡ್ತೀರಿ ಎಂದು ನನ್ನನ್ನೇ ಕೇಳಿದರು.

ಈಚೆಗೆ ಓರಿಯೆಂಟ್ ಬ್ಲ್ಯಾಕ್‌ಸ್ವಾನ್ ಸಂಸ್ಥೆಯು ಒಂದು ಪುಸ್ತಕ ಪ್ರಕಟಿಸಿತು. ಅದರ ಹೆಸರು Impure Languages. ಭಾಷೆಯ ಬದಲಾವಣೆಯ ಪ್ರಕ್ರಿಯೆಯ ಕುರಿತಾಗಿ ಒಟ್ಟು ಹದಿನಾಲ್ಕು ಮಂದಿ ವಿದ್ವಾಂಸರು, ಚಿಂತಕರು ಸೇರಿ ಬರೆದ ಪ್ರಬಂಧಗಳಿರುವ ಈ ಕೃತಿಯನ್ನು ಸಂಪಾದಿಸಿದವರು ದೆಹಲಿ ಯೂನಿವರ್ಸಿಟಿಯ ಭಾಷಾವಿಜ್ಞಾನ ವಿಭಾಗದ ನಿವೃತ್ತ ಪ್ರೊಫೆಸರ್ ರಮಾಕಾಂತ್ ಅಗ್ನಿಹೋಗ್ರಿ, ಯೂನಿವರ್ಸಿಟಿ ಆಫ್ ಹ್ಯಾಂಬರ್ಗ್‌ನ ಪ್ರೊಫೆಸರ್ ಕ್ಲಾಡಿಯಾ ಬೆನಥೀನ್ (ಬರ್ಲಿನ್) ಮತ್ತು ಪ್ರೊಫೆಸರ್ ತಾತಿಯಾನಾ ಒರಾನ್ಸ್‌ಕಯಾ (ರಷ್ಯಾ). ಈ ಕೃತಿಯಲ್ಲಿ ಹಿಂದಿ-ಇಂಗ್ಲೀಷ್ ಹೈಬ್ರಿಡಿಟಿ ಕುರಿತೇ ಮೂರು ಪ್ರಬಂಧಗಳಿವೆ. ಇದು ಸರಿಸುಮಾರು ನಮ್ಮ ಸಲ್ಮಾನ್ ರಶ್ದಿ ತನ್ನ ಮಿಡ್ ನೈಟ್ ಚಿಲ್ಡ್ರನ್ ಕಾದಂಬರಿ ಬರೆವ ಹೊತ್ತಿಗೆ ಬಳಸತೊಡಗಿದ ‘ಚಟ್ನಿಫಿಕೇಶನ್’ ಕುರಿತಾಗಿಯೇ ಇದೆ.

2005ರ ಹೊತ್ತಿಗೇ ಕೆ ವಿ ನಾರಾಯಣ ಅವರು ತನ್ನ ‘ನಮ್ಮೊಡನೆ ನಮ್ಮ ನುಡಿ’ ಎಂಬ ಕೃತಿಯಲ್ಲಿ ಭಾಷೆಯ ಚಟ್ನಿಫಿಕೇಶನ್ ಕುರಿತು ಆಳವಾದ ಅಧ್ಯಯನ ನಡೆಸಿದ್ದರು. ‘ನಮ್ಮ ಭಾಷೆ ನಿಜವಾಗಿಯೂ ನಮ್ಮದೆ?’ ‘ಭಾಷೆಯಲ್ಲಿ ಬದಲಾವಣೆ’, ‘ಭಾಷಾ ವೈವಿಧ್ಯವನ್ನೇಕೆ ಕಾಯ್ದುಕೊಳ್ಳಬೇಕು’ ಮುಂತಾದ ಪ್ರಬಂಧಗಳಲ್ಲಿ ಅವರು ವಿವರವಾಗಿ ಈ ಕುರಿತು ಚರ್ಚಿಸಿದ್ದಾರೆ. ಕನ್ನಡ ಜಗತ್ತು ಅರ್ಧಶತಮಾನ ಕೃತಿಯಲ್ಲಿಯೂ ಕೂಡ ಭಾಷೆಯ ಪರಿವರ್ತನಾಶೀಲ ಗುಣದ ಬಗ್ಗೆ ವಿವರಿಸಿದ್ದಾರೆ.

"ಹೀಗಲ್ಲದೆ ಭಾಷೆ ನಿರಂತರ ಪರಿವರ್ತನೆಯನ್ನು ಹೊಂದುವುದರಿಂದ ತಟ್ಟನೇ ಅದರಲ್ಲಾಗುವ ಬದಲಾವಣೆಗಳು ಗೋಚರಿಸದಿದ್ದರೂ ಎಷ್ಟೋ ಶತಮಾನಗಳ ನಂತರ ಮೂಲಭಾಷೆಯ ಲಕ್ಷಣಗಳು ಸಂಪೂರ್ಣ ಬೇರೆ ಎಂಬಂತೆ ಆಗಿಬಿಡುತ್ತವೆ. ಇಂತಹ ಪ್ರಸಂಗಗಳನ್ನು ಯಾರೂ ಭಾಷಾನಾಶ ಎನ್ನುವುದಿಲ್ಲ. ಕನ್ನಡವು ಹೀಗೆ ನಿರಂತರವಾಗಿ ಬದಲಾಗುತ್ತಿದೆ. ಆ ಬದಲಾವಣೆಯ ಪರಿಣಾಮವಾಗಿ ಮುಂದೆಯೂ ಕನ್ನಡ ಇದ್ದೇ ಇರುತ್ತದೆ. ಮೊದಲೇ ಹೇಳಿದಂತೆ ಅದು ಗುರುತು ಹಿಡಿಯಲು ಸಾಧ್ಯವಾಗದಷ್ಟು ಬೇರೆಯ ಆಕಾರವನ್ನು ಪಡೆಯಬಹುದು. ಹೀಗೆ ಮೂಲ ಆಕಾರ ಕಳೆದು ಹೋಗುವುದಕ್ಕೆ ಆತಂಕ ವ್ಯಕ್ತಪಡಿಸುವುದು ಅಷ್ಟೇನು ಸರಿಯಾದ ಪ್ರತಿಕ್ರಿಯೆಯಲ್ಲ. ಏಕೆಂದರೆ ಒಂದು ಭಾಷೆ ಹೀಗೆ ಬೇರೆ ಬೇರೆ ಆಕಾರಗಳನ್ನು ಪಡೆಯುವುದು ಅದರ ಜೈವಿಕತೆಯ ಲಕ್ಷಣವಾಗಿದೆ."
(ಕೆ ವಿ ನಾರಾಯಣ: ಕನ್ನಡ ಜಗತ್ತು ಅರ್ಧ ಶತಮಾನ 2007)

ಹೀಗೆ ಒಂದು ಕಡೆ ಕನ್ನಡ ತನ್ನದನ್ನು ಅಷ್ಟಿಷ್ಟು ಕಳೆದುಕೊಳ್ಳುತ್ತ ಇದೆ ಮತ್ತು ಇನ್ನೊಂದೆಡೆ ಅನ್ಯವನ್ನು ತನ್ನದನ್ನಾಗಿಸಿಕೊಂಡು ಬೆಳೆಯುತ್ತಲೂ ಇದೆ. ಇದು ಸಹಜ ಪ್ರಕ್ರಿಯೆಯೇ ಇರಬಹುದು. ಆದರೆ, ಯಾವುದನ್ನು ಕಳೆದುಕೊಳ್ಳಬೇಕು ಮತ್ತು ಯಾವುದನ್ನು ಉಳಿಸಿಕೊಳ್ಳಬೇಕು ಎನ್ನುವ ಬಗ್ಗೆ ಒಂದು ವಿವೇಕ, ವಿವೇಚನೆ ಬೇಕೆನಿಸುತ್ತದೆ. ಇವತ್ತು ಹಳೆಗನ್ನಡ, ನಡುಗನ್ನಡ ಮೂಲೆಗುಂಪಾಗುತ್ತಿದೆ. ಆ ಭಾಷೆಯ ಮಹತ್ವದ ಕೃತಿಗಳು ಆಧುನಿಕ ಕನ್ನಡದಲ್ಲಿ ಮರುಹುಟ್ಟು ಪಡೆಯಲಿಲ್ಲ. ಕನ್ನಡ ಮಾತನಾಡುವ ನಮ್ಮ ಮಕ್ಕಳಿಗೆ ಕೂಡ ಕನ್ನಡದ ಲಿಪಿ ದೂರವಾಗುತ್ತಿದೆ. ಇದು ಬೇಸರದ ಸಂಗತಿ. ಒಂದು ವೈಯಕ್ತಿಕ ಅನುಭವದೊಂದಿಗೆ ಇದನ್ನು ಹೇಳುತ್ತೇನೆ.

ನಿಮಗೆಲ್ಲ ಗೊತ್ತಿರಬಹುದು, ಕೇಂದ್ರ ಸಾಹಿತ್ಯ ಅಕಾಡಮಿ ಕೊಂಕಣಿ ಕೃತಿಗಳನ್ನು ಪರಿಶೀಲಿಸಬೇಕಾದರೆ ಅವು ದೇವನಾಗರಿ ಲಿಪಿಯಲ್ಲೇ ಇರಬೇಕಾದ್ದು ಅನಿವಾರ್ಯ. ಕೆಲವು ವರ್ಷಗಳ ಹಿಂದೆ ಕೊಂಕಣಿಯನ್ನು ಶಾಲೆಗಳಲ್ಲಿ ಕಲಿಸುವುದು ಇತ್ಯಾದಿ ಸುರುವಾದಾಗ ಲಿಪಿ ಯಾವುದಿರಬೇಕು ಎನ್ನುವ ಬಗ್ಗೆ ಸಾರಸ್ವತ ಕೊಂಕಣಿಗರಲ್ಲೂ ಕ್ರಿಶ್ಚಿಯನ್ ಕೊಂಕಣಿಗರಲ್ಲೂ ಮತಭೇದ ಕಂಡುಬಂತು. ಮಂಗಳೂರಿನ ಕ್ರಿಶ್ಚಿಯನ್ ಕೊಂಕಣಿಗರು ಕನ್ನಡ ಲಿಪಿಯಲ್ಲಿ ವಿಪುಲವಾದ ಸಾಹಿತ್ಯ ರಚಿಸಿದ್ದಾರೆ. ಸಾರಸ್ವತ ಕೊಂಕಣಿಗರ ಲಿಖಿತ ಸಾಹಿತ್ಯ ಪ್ರಮಾಣದಲ್ಲಿ ಅಷ್ಟಿಲ್ಲ. ಅಂದರೆ, ಕರ್ನಾಟಕದ ಒಟ್ಟಾರೆ ಕೊಂಕಣಿ ಸಾಹಿತ್ಯ ಇರುವುದು ಕನ್ನಡ ಲಿಪಿಯಲ್ಲಿ. ಕೊಂಕಣಿಗೆ ಇದ್ದುದರಲ್ಲಿ ಮೂಲ ಲಿಪಿ ಎಂದರೆ ದೇವನಾಗರಿಯೇ. ಆದರೆ ಕರ್ನಾಟಕದಲ್ಲಂತೂ ಅದಕ್ಕೆ ಗಿರಾಕಿಗಳು ಇರಲಿಕ್ಕಿಲ್ಲ. ಹಾಗಾಗಿ ಕನ್ನಡ ಲಿಪಿ ಇರಲಿ ಎಂದು ಕೆಲವರು, ಕಲಿಕೆಯ ಹಂತಕ್ಕೆ ಬಂದಿರುವಾಗ ದೇವನಾಗರಿ ಅಳವಡಿಸಿಕೊಳ್ಳುವುದೇ ಸೂಕ್ತ ಎಂದು ಕೆಲವರು ಪಟ್ಟು ಹಿಡಿದರು. ಇದೇ ಸಮಸ್ಯೆ ತುಳುವಿಗೂ ಇದೆ. ತುಳು ಭಾಷೆ ಅಕಾಡೆಮಿಕ್ ಆಗುವಾಗ ಅದಕ್ಕೆ ತನ್ನದೇ ಲಿಪಿ ಇದೆ ಎನ್ನುವವರು ಅದನ್ನೇಕೆ ಬಿಡಬೇಕು ಎನ್ನುವ ಪ್ರಶ್ನೆ ಇಲ್ಲವೆ? ತನ್ನದೇ ಲಿಪಿಯನ್ನು ಬಿಟ್ಟುಕೊಟ್ಟು ಅದೇಕೆ ಕನ್ನಡವನ್ನು ಆತುಕೊಳ್ಳಬೇಕು? ಆದರೆ ಸದ್ಯಕ್ಕೆ ತುಳು ಭಾಷಾ ಸಾಹಿತ್ಯ ಇರುವುದು ಕನ್ನಡದ ಲಿಪಿಯಲ್ಲೇ ಅಲ್ಲವೆ? ಇಲ್ಲಿ ಹುಟ್ಟಿಕೊಳ್ಳುವ ಗೊಂದಲವನ್ನು ಸೂಕ್ಷ್ಮವಾಗಿ ಗಮನಿಸಿ. ಇಂಗ್ಲೀಷ್ ಫಾಂಟ್ ಬಳಸಿ ಕನ್ನಡ ಬರೆಯುವುದನ್ನು ಕಂಡಾಗಲೆಲ್ಲ ಮನಸ್ಸು ತೊಳೆಸುತ್ತದೆ.

ನಾನು ಗೋವಾಕ್ಕೆ ಹೋದಾಗ ಅಲ್ಲಿನ ಜನಸಾಮಾನ್ಯರು ಆಡುವ ಕೊಂಕಣಿ ನನಗೆ, ಕರ್ನಾಟಕದವರಿಗೆ ಅರ್ಥವಾಗುವುದು ಅಷ್ಟಕ್ಕಷ್ಟೆ. ಕೊಚ್ಚಿಯವರು ಆಡುವ ಕೊಂಕಣಿ ನನಗೆ ತುಂಬ ಇಷ್ಟ. ಅವರದ್ದು ಧಾರವಾಡದ ಕನ್ನಡದಂಥ ಕೊಂಕಣಿ. ಕ್ರಿಯಾಪದದ ಸ್ಥಾನ ಸದಾ ಪಲ್ಲಟದ್ದು. ಆದರೆ ಅದೂ ಪೂರ್ತಿಯಾಗಿ ದಕ್ಕುವುದಿಲ್ಲ. ಇನ್ನು ದೇವನಾಗರಿ ಲಿಪಿಯ ಏನನ್ನೂ ನಾನು ಓದಲಾರೆ. ಹೋಗಲಿ ಎಂದರೆ ಈಚೆಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಗೆಳೆಯ ಮೆಲ್ವಿನ್ ರೊಡ್ರಿಗಸ್ ಅವರ ಪುರಸ್ಕೃತ ಕೃತಿಯ (ದ್ವಿಭಾಷಿ) ಕವನಗಳನ್ನು ಓದಲು ಹೋದರೆ, ಕನ್ನಡ ಲಿಪಿಯಲ್ಲಿರುವ ಕೊಂಕಣಿ ಕವಿತೆಯನ್ನಾದರೂ ಓದುವುದು ನನಗೆ ಸಾಧ್ಯವಾಗಲೇ ಇಲ್ಲ. ಮೆಲ್ವಿನ್ ರೊಡ್ರಿಗಸ್ ಅವರೇ ಮುಂದೆ ನಿಂತು ಇಲ್ಲಿನ ‘ಕವಿತಾ ಟ್ರಸ್ಟ್’ ಮೂಲಕ ಬಹುಭಾಷಾ ಕವಿಗೋಷ್ಠಿ, ಕೊಂಕಣಿ ಕವಿಗೋಷ್ಠಿ ಎಲ್ಲ ನಡೆಸುತ್ತಿರುತ್ತಾರೆ. ಇಲ್ಲಿಗೆ ಜಯಂತ್ ಕಾಯ್ಕಿಣಿ, ವಿವೇಕ್ ಶಾನಭಾಗ ಎಲ್ಲ ಬಂದಿದ್ದೂ ಇದೆ. ಆದರೆ ನನಗೆ ಕ್ರಿಶ್ಚಿಯನ್ ಕೊಂಕಣಿ ಆಡಲು ಚೆನ್ನಾಗಿಯೇ ಬರುತ್ತದಾದರೂ ಆ ಕವಿತೆಗಳು ದಕ್ಕಲಿಲ್ಲ. ಅಂದರೆ ಲಿಪಿಯಷ್ಟೇ ವಾಚನ ಕೂಡ ಅಪರಿಚಿತವಾದಂತೆ ಅನಿಸಿತು. ಇವರ ಪತ್ರಿಕೆಗಳ ಗದ್ಯವನ್ನು ಓದುವುದೂ ಕಷ್ಟಸಾಧ್ಯ ಎನಿಸುತ್ತದೆ. ಇದು ಕೊಂಕಣಿಯ ಒಳಗೇನೆ ಆಗುತ್ತಿರುವುದು ಎನ್ನುವುದನ್ನು ಗಮನಿಸಿ.

ಅದು ಹೋಗಲಿ ಎಂದರೆ ಈಚೆಗೆ ಕಾಸರಗೋಡು ಚಿನ್ನಾ ಅವರು ಕನ್ನಡದ ಮಹತ್ವದ ಮುವ್ವತ್ತು ಕತೆಗಳನ್ನು ಕೊಂಕಣಿಗೆ ಅನುವಾದಿಸಿದರು. ಗೋವಾದಿಂದ ಕೊಚ್ಚಿಯ ವರೆಗೆ ಇರುವ ಕೊಂಕಣಿ ಆಡುಮಾತು ಒಂದೇ ಆಗಿ ಉಳಿದಿಲ್ಲ. ಹೀಗಿರುತ್ತ ಕನ್ನಡದ ಕತೆಗಳ ಅನುವಾದದ ಕಷ್ಟಗಳ ಬಗ್ಗೆ ಕೂಡ ಚಿನ್ನಾ ಹೇಳಿಕೊಂಡಿದ್ದರು. ಜಯಂತರ ಕತೆಗಳೂ ಕೊಂಕಣಿಗೆ ಬಂದವು. ಎಲ್ಲ ಕನ್ನಡ ಲಿಪಿಯಲ್ಲೇ. ಕನ್ನಡ ಲಿಪಿ ಓದಬಲ್ಲ ಕೊಂಕಣಿ ಕನ್ನಡಿಗ ಅವುಗಳನ್ನು ಕೊಂಕಣಿಯಲ್ಲಿ ಓದಿಯಾನು ಅನಿಸುತ್ತಾ? ನನಗೇನೋ ಅನುಮಾನವೇ. ಆದರೆ ಜಯಂತ್ ಅವರು ಈ ಬಗ್ಗೆ ಬೇರೆಯೇ ಹೇಳಿದರು. ಕೆಲವೊಂದು ಸಂವೇದನೆಗಳು, ಅವನ್ನು ಕೊಂಕಣಿಯಲ್ಲಿ ಕೇಳುವಾಗಲೇ ತಮಗೆ ನಿಜ ಅನಿಸ್ತು ಎನ್ನುತ್ತಾರೆ ಅವರು. ಈ ಕೊಂಕಣಿ ಕತೆಗಳನ್ನು ದೇವನಾಗರಿ ಬಳಸುವ ಗೋವನ್ನರು ಓದಲಾರರು, ಕೇರಳದ ಕೊಂಕಣಿಗರೂ ಓದಲಾರರು. ಇದನ್ನೇಕೆ ಹೇಳಿದೆನೆಂದರೆ, ಯಾವುದೇ ಭಾಷೆ ಲಿಪಿ ಕಳೆದುಕೊಂಡಿತು ಎಂದರೆ ಅರ್ಧ ಸತ್ತಂತೆಯೇ. ಒಂದು ಭಾಷೆಯ ಆಡುನುಡಿಗಳು, ಪದಸಂಪತ್ತು ಅದಕ್ಕೆ ನೇರವಾಗಿ ಸಂಬಂಧಿಸಿದವರಿಗೇ ಅಪರಿಚಿತವಾಗುತ್ತಿವೆ ಎಂದರೆ ಎಲ್ಲವೂ ಮುಗಿದಂತೆಯೆ.

ಇದೆಲ್ಲವನ್ನೂ ಯಾಕೆ ಹೇಳುತ್ತಿದ್ದೇನೆಂದರೆ, ಕೊಂಕಣಿ ಅಥವಾ ತುಳುವಿಗೆ, ಇಂಥವೇ ಇನ್ನಷ್ಟು ಭಾಷೆಗಳಿಗೆ, ಅವುಗಳ ಆಡುಮಾತು ಮತ್ತು ಲಿಪಿ ಎರಡೂ ಸೇರಿದಂತೆ ಇವತ್ತು ಬಂದಿರುವ ಪರಿಸ್ಥಿತಿಗೆ ಕಾರಣಗಳೇನು ಎಂದು ನಾವು ಯೋಚಿಸಬೇಕಿದೆ. ಸರ್ವೈವಲ್ ಆಫ್ ದ ಫಿಟ್ಟೆಸ್ಟ್ - ಇದ್ದೇ ಇದೆ. ಆದರೆ, ಒಂದು ಭಾಷೆಯ ಕಸುವನ್ನು ನಿರ್ಧರಿಸುವಂಥ, ಬೇರೆ ಬೇರೆ ವಿಧಾನಗಳ ಮೂಲಕ ನಾವು ಉಳಿಸಿಕೊಳ್ಳಬೇಕಾದ ಮತ್ತು ಕಳೆದುಕೊಳ್ಳಬಾರದ ಅಂಶಗಳು ನಮಗೆ ಸ್ಪಷ್ಟವಾಗಿ ಕಾಣುವುದು ಅಗತ್ಯ. ತುಂಬ ಸಮಯದ ಹಿಂದೆ ವಿಜಯರಾಜ್ ಕನ್ನಂತ ಎನ್ನುವ ಒಬ್ಬರು ಗೆಳೆಯರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕುಂದಾಪುರ ಆಸುಪಾಸಿನ ಹೂವು, ಗಿಡ, ಮರ, ಹಳೆಯ ದಿನಬಳಕೆಯ ವಸ್ತುಗಳು, ಚಿಕ್ಕವರಿರುವಾಗ ಕಾಡುಹಾಡಿ ಅಲೆದು ತಿನ್ನುತ್ತಿದ್ದ ಹಣ್ಣುಗಳು, ವೇಷಗಳು, ಆಡುತ್ತಿದ್ದ ಆಟಗಳು, ಕೆಲವೊಂದು ಆಚರಣೆ ಇತ್ಯಾದಿಗಳ ಚಿತ್ರ ಹಾಕಿ ಅವುಗಳಿಗೆ ಸಂಬಂಧಿಸಿದ ನಮ್ಮ ನೆನಪುಗಳನ್ನು ಅರಳಿಸುತ್ತಾ ಹೋದರು. ಸೈಕಲಿನ ರೋಲ್ ಮೇಲೆ ಮಕ್ಕಳಿಗೆಂದೇ ಹಾಕುತ್ತಿದ್ದ ಪುಟ್ಟ ಸೀಟು ಈಗೆಲ್ಲಿ ಕಾಣಸಿಗುತ್ತದೆ? ಆದರೆ ನೆನಪುಗಳಿಗೊಂದು ಜಗತ್ತಿಲ್ಲವೆ? ಆ ಜಗತ್ತಿಗೊಂದು ಜೀವವಿಲ್ಲವೆ? ನಾವು ಸಾವನ್ನು ಗೆಲ್ಲುವುದು ಸಾಧ್ಯವಿದ್ದರೆ ಅದು ನೆನಪುಗಳ ಮೂಲಕ ಮಾತ್ರ. ಬದುಕಿಗೆ ಮರೆವು, ನಿದ್ದೆ ಎಷ್ಟು ಮುಖ್ಯವೋ, ಎಚ್ಚರ ಮತ್ತು ನೆನಪುಗಳನ್ನು ಜೀವಂತವಾಗಿರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ನಿಜವಾಗಿ ಇರುವುದು ಆಯ್ಕೆಯ ಪ್ರಶ್ನೆ. ಕನ್ನಂತರು ಆವತ್ತು ಮಾಡಿದ ಕೆಲಸ ನಿಜಕ್ಕೂ ಅವರೇ ಕಲ್ಪಿಸಿದ್ದಕ್ಕಿಂತಲೂ ದೊಡ್ಡ ವ್ಯಾಪ್ತಿಯದ್ದಾಗಿತ್ತು. ಯಾಕೊ ಎಲ್ಲ ನಡುವಿನಲ್ಲೇ ನಿಂತ ನೆನಪು. ಒಂದು ಭಾಷೆ ಅನಿವಾರ್ಯವಾಗಿ ಇವೆಲ್ಲದರೊಂದಿಗೆ ಸಂಬಂಧದ ಹೆಣಿಗೆ ಹಾಕಿಕೊಂಡೇ ಇರುತ್ತದೆ. ಯಾವ ಒಂದು ಅಂಶವೂ ಒಂದಿಲ್ಲದೇ ಇನ್ನೊಂದು ಉಳಿದು ಬರಲಾರದು. ಯಾವುದೋ ಒಂದನ್ನು ಕಳೆದುಕೊಂಡಾಗ ಅದಕ್ಕೆ ಸಂಬಂಧಿಸಿದ ಎಷ್ಟೋ ಅಗೋಚರ ಸಂಗತಿಗಳನ್ನೂ ಕಳೆದುಕೊಂಡಿರುತ್ತೇವೆ. ಭೌತಿಕವಾಗಿ ಕಳೆದು ಕೊಂಡವುಗಳನ್ನು ಮಾನಸಿಕವಾಗಿ ಜೀವಂತವಾಗಿರಿಸುವುದು ಪ್ರೀತಿ ಮಾತ್ರ. ಅದೊಂದು ಇದ್ದರೆ ನಾವು ಯಾವತ್ತೂ ಯಾವುದನ್ನೂ ಕಳೆದುಕೊಳ್ಳುವುದೇ ಇಲ್ಲ.

(ಈ ಲೇಖನ ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟಿತ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, December 26, 2016

ಹಣತೆಯ ಬೆಳಕು...

ನನ್ನ ಅಮ್ಮನಿಗೆ ಮಾನಸಿಕ ಅಸ್ವಾಸ್ಥ್ಯ ಇತ್ತು. ನನ್ನ ಹುಟ್ಟಿನೊಂದಿಗೆ ಅದು ಸುರುವಾಯಿತು. ಮುಂದಿನ ಮುವ್ವತ್ತಾರು ವರ್ಷಕಾಲ ಆಕೆ ತನ್ನ ಬದುಕನ್ನು ಕೊನೆಗಾಣಿಸಿಕೊಳ್ಳುವ ಹಲವಾರು ಪ್ರಯತ್ನಗಳನ್ನು ನಡೆಸಿದರು. ಇದನ್ನೆಲ್ಲ ಸೇರಿಸಿ ನಾನೊಂದು ಕಾದಂಬರಿ ಬರೆದೆ. 2012 ರಲ್ಲಿ ರವಿ ಸಿಂಗ್ ಅವರು ಅದನ್ನು ಪ್ರಕಟಿಸಿದರು, ಅದರ ಹೆಸರು, Em and the Big Hoom. ಮುಂದೆ ಕೃತಿ ಬಿಡುಗಡೆಗೆ ಸಂಬಂಧಿಸಿದಂತೆ ನಡೆದ ಒಂದು ವಾಚನ ಕಾರ್ಯಕ್ರಮದಲ್ಲ್ಲಿ, ನಾನು ನನ್ನ ಗೆಳೆಯ ಎಂದುಕೊಂಡಿದ್ದ ಪತ್ರಕರ್ತರೊಬ್ಬರು ಎದ್ದು ನಿಂತು ಒಂದು ಪ್ರಶ್ನೆ ಕೇಳಿದರು. "ನಿಮಗೆ ನಿಮ್ಮ ತಾಯಿ ಮತ್ತು ಆಕೆಯ ಬದುಕನ್ನು ಹೀಗೆ ಉಪಯೋಗಿಸಿಕೊಂಡೆ, ಇಂಥ ಒಂದು ಒಳ್ಳೆಯ ಕಾದಂಬರಿ ಬರೆಯೋದಿಕ್ಕೆ, ಇದು ತಪ್ಪು ಅಂತ ಅನಿಸುವುದಿಲ್ಲವೆ?"

ಆ ಕ್ಷಣ ಹೇಗೋ ಸಾವರಿಸಿಕೊಂಡೆ. ಆ ಸಂಜೆಯ ಉಳಿದ ಅವಧಿಯನ್ನು ಕಣ್ಣೀರು ಹಾಕುತ್ತ ಅಥವಾ ಸಿಟ್ಟಿನಿಂದ ಕುದಿಯುತ್ತ ಕಳೆಯಲಿಲ್ಲ ಬಿಡಿ. ಆದರೆ ನನ್ನ ಬದುಕಿನ ಅತ್ಯಂತ ಕಷ್ಟದ ಮಗ್ಗುಲು ಬೆನ್ನ ಹಿಂದೆಯೇ ಇತ್ತು.

ನಾನೇನೂ ಹತಾಶನಾಗಿರಲಿಲ್ಲ.

ಮುಂದಿನ ಕೆಲವು ತಿಂಗಳು ಕಾದಂಬರಿಯ ವಾಚನ ಇತ್ಯಾದಿ ಚೆನ್ನಾಗಿಯೇ ನಡೆಯಿತಾದರೂ ಅದರ ಜೊತೆಗಿನ ಈ ಪ್ರಶ್ನೋತ್ತರದ ಅವಧಿ ಇರುತ್ತಲ್ಲ, ಅದು ನನಗೆ ನಾನು ಈ ಕಾದಂಬರಿ ಬರೆದು ಇದೇನನ್ನು ಹಂಚಿಕೊಂಡೆ ಅಂತ ಮತ್ತೆಮತ್ತೆ ಯೋಚಿಸುವಂತೆ ಮಾಡಿತ್ತು. ನನ್ನ ಸಹೋದ್ಯೋಗಿಯೊಬ್ಬರ ಜೊತೆ "ನನಗೆ ಇದೆಲ್ಲ ಏನಾಗ್ತಿದೆ ಅಂತಲೇ ಗೊತ್ತಾಗ್ತಿಲ್ಲ. ಈ ವಾಚನ, ಪ್ರಶ್ನೋತ್ತರ ಎಲ್ಲ ಒಂಥರಾ ಎನ್‌ಕೌಂಟರ್ ಗುಂಪುಗಳಾಗ್ತಿವೆಯಾ ಅನಿಸ್ತಿದೆ. ಕಳೆದ ಸಲ ಏನಾಯ್ತೆಂದರೆ, ಒಬ್ಬ ಹೆಂಗಸು ತನ್ನ ತಮ್ಮನ್ನ ಹೇಗೆ ಎಲ್ಲರೂ ಸೇರಿ ಒಂದು ಕೋಣೆಯಲ್ಲಿ ಐದು ವರ್ಷ ಕಾಲ ಕೂಡಿ ಹಾಕಿದ್ದೆವು ಎನ್ನುವುದನ್ನ ವಿವರಿಸ್ತಿದ್ದರು. ಅವನು ತನ್ನ ಜೊತೆ ದೇವರು ಮಾತಾಡ್ತಿದ್ದಾನೆ ಅಂತಿದ್ನಂತೆ ಅಷ್ಟೆ. ಏನಾಗ್ತಿದೆ ಅಂತ ಅರ್ಥ ಮಾಡಿಕೊಂಡು ಕೊನೆಗೂ ಅವನ್ನ ಮಾನಸಿಕ ತಜ್ಞರ ಹತ್ತಿರ ಕರ್ಕೊಂಡು ಹೋಗೋಕೆ ತುಂಬ ಕಾಲ ತಗೊಂಡ್ವಿ ಅಂದ್ರು." ಎಂದೆಲ್ಲ ಹೇಳಿಕೊಂಡೆ.
ನಾನು ಸುಮ್ಮನೆ ಕೊಚ್ಚಿಕೊಳ್ಳುತ್ತಾ ಇದ್ದೇನೆ ಎಂಬಂತೆ ಅವರು ನಕ್ಕು ಸುಮ್ಮನಾದಾಗ ನನಗೇ ಒಂಥರಾ ಆಯ್ತು.

"ಇದನ್ನೆಲ್ಲ ಹೇಗೆ ಸಂಭಾಳಿಸಬೇಕೊ ಗೊತ್ತಾಗ್ತಿಲ್ಲ ನಂಗೆ. ಏನು ಮಾಡ್ಬೇಕೊ ತೋಚುವುದಿಲ್ಲ" ಎಂದೆ.

"ಬಹುಶಃ ನೀನು ಸುಮ್ಮನೆ ಕೇಳಿಸಿಕೊ ಬೇಕು" ಎಂದರು ಅವರು.

ಕೆಲವು ದಿನಗಳ ನಂತರ ಅವರು ನನಗೊಂದು ಈಮೇಲ್ ಕಳಿಸಿದರು. ಅದರಲ್ಲಿ ಅವರು ನಾನು ಅಂಥ ಕತೆಗಳನ್ನೆಲ್ಲ ಒಟ್ಟು ಮಾಡಿ ಒಂದು ಪುಸ್ತಕ - ಎ ಬುಕ್ ಆಫ್ ಲೈಟ್ - ಅವರದೇ ಶಬ್ದ ಅದು, ರಚಿಸಬೇಕು, ಅದು ಭಾರತದ ಮಧ್ಯಮವರ್ಗದ ಕುಟುಂಬಗಳಲ್ಲಿ ತುಂಬಿಕೊಂಡ ಇಂಥ ಬದುಕಿನ ಕತ್ತಲೆಯನ್ನು ತೊಲಗಿಸಿ ಒಂದಿಷ್ಟು ನೆಮ್ಮದಿಯ ಬೆಳಕನ್ನು ಕೊಡುವಂತಾಗಬೇಕು ಎಂದಿದ್ದರು.

ಅದೇ ಸಂಜೆ ಪರ್ವಾನಾ ನೂರಾನಿ ಫೋನ್ ಮಾಡಿ ತಾವು Em..ಓದಿದ್ದಾಗಿಯೂ, ಕಷ್ಟಪಟ್ಟು ನನ್ನ ನಂಬರ್ ಹುಡುಕಿ ತೆಗೆದು ಕಾಲ್ ಮಾಡಿದ್ದಾಗಿಯೂ ಹೇಳಿದರು ಮಾತ್ರವಲ್ಲ ತಮ್ಮ ತಾಯಿಯೊಂದಿಗಿನ ತಮ್ಮದೇ ಅನುಭವವನ್ನು ಕಾದಂಬರಿ ತಮಗೆ ನೆನಪಿಸಿತೆಂದೂ ಹೇಳಿಕೊಂಡರು. ಇಬ್ಬರ ಕತೆಯೂ ಸರಿಸುಮಾರು ಒಂದೇ ಆಗಿತ್ತು. ಅದೇ ಗಾಯಗಳು, ಅದೇ ನೋವು. ಅದೇ ತಲ್ಲಣ, ಅದೇ ಆತಂಕ ಮತ್ತು ಅವೇ ವಾರ್ಡುಗಳು, ಹೊಸ ಮೆಡಿಸಿನ್ ಏನಾದರೂ ಸಿಗಬಹುದಾ ಎನ್ನುವ ಅದೇ ಅದೇ ಪರದಾಟ, ಅವೇ ಅವೇ ಹತಾಶ ಹಂಬಲಗಳು, ನಿರೀಕ್ಷೆಗಳು. ಮತ್ತೆ, ಇದೆಲ್ಲದರಿಂದ ಒಮ್ಮೆಗೇ ಮುಕ್ತರಾಗಿ ಬಿಡುವ ಒತ್ತಡ. ನಾನು ಪರ್ವಾನಾ ಅವರ ಬಳಿ ಅದನ್ನೆಲ್ಲ ಬರೆಯಬಹುದೇ ಎಂದು ಕೇಳಿದೆ. ಅವರು ತಕ್ಷಣವೇ ಒಪ್ಪಿಕೊಂಡಿದ್ದು ನನಗೆ ಶುಭಸೂಚನೆಯಾಗಿ ಕಂಡಿತು. ಹಾಗೆ ಆವತ್ತು ಬುಕ್ ಆಫ್ ಲೈಟ್‌ನ ಮೊದಲ ಹಣತೆಯನ್ನು ಹಚ್ಚಿದಂತಾಗಿತ್ತು.

ಮುಂದಿನ ಒಂದೆರಡು ವರ್ಷಗಳ ಕಾಲ ನಾನು ನನಗೆ ತಿಳಿದ, ತಮ್ಮ ಪ್ರೀತಿಪಾತ್ರರ ವಿಷಯದಲ್ಲಿ ಇಂಥವೇ ಸಮಸ್ಯೆಯ ಸುಳಿಗೆ ಸಿಲುಕಿ ನಲುಗಿದ ಹಲವಾರು ಮಂದಿಗೆ ಈಮೇಲುಗಳನ್ನು ಕಳಿಸುತ್ತಲೇ ಇದ್ದೆ. ಇದು ಕಷ್ಟದ ಕೆಲಸ ಎಂಬುದು ನನಗೆ ಗೊತ್ತಿತ್ತು; ಕೆಲವೊಮ್ಮೆ ಇದು ತೀರ ಹಸಿಗಾಯದ ಮೇಲೆಯೇ ಉಗುರು ನೆಟ್ಟಂತೆ ಇರುತ್ತಿತ್ತು. ಕೆಲವೊಮ್ಮೆ ತಮ್ಮ ಹತಾಶ ಕ್ಷಣದಲ್ಲಿ, ನನ್ನ ಬಳಿ ಏನಾದರೂ ಉಪಶಮನ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿ ನನ್ನನ್ನು ಸಂಪರ್ಕಿಸಿದಾಗ ನನಗೆ ‘ಸಮಸ್ಯೆ’ ಏನೆಂಬುದು ತಿಳಿದು ಬಂದಿತ್ತು. ಇದು Em...ಪ್ರಕಟವಾಗುವುದಕ್ಕೂ ಮೊದಲೇ ಹೀಗೆ ಆಗಿದ್ದಿದೆ. ಅದು ಹೇಗೆಂದರೆ, ನಾನು ಯಾವತ್ತೂ ಸಾಧ್ಯವಿದ್ದ ಮಟ್ಟಿಗೆ ನನ್ನ ಅಮ್ಮನಿಗೆ ಮಾನಸಿಕ ಅಸ್ವಾಸ್ಥ್ಯವಿದೆ ಎಂಬ ಸಂಗತಿಯನ್ನು ಯಾವುದೇ ಮುಚ್ಚುಮರೆಯಿಲ್ಲದೇ ಹೇಳುತ್ತಿದ್ದೆ. ನನಗೆ ನಾನು ಬದ್ಧನಾಗಿ, ಅಮ್ಮನಿಗೆ ಬದ್ಧನಾಗಿ ಮತ್ತು ನಮ್ಮಿಬ್ಬರ ಬಾಂಧವ್ಯಕ್ಕೆ ಬದ್ಧನಾಗಿ ವಿಧಿಸಿಕೊಂಡಿದ್ದದು. ಅದು ನನ್ನಮ್ಮನಿಗೆ ಡಯಾಬಿಟೀಸ್ ಇದೆ ಎಂದು ಹೇಳುವಷ್ಟೇ ಸರಳ ಮತ್ತು ನೇರವಾಗಿರಬೇಕು ಎಂಬುದು. ಯಾಕೆಂದರೆ, ಕೊನೆಗೂ ಇದು ಜೈವಿಕ ಕೆಮಿಕಲ್ಸುಗಳ, ರಕ್ತದ ಅಸಮತೋಲನದ ವಿದ್ಯಮಾನ; ನ್ಯೂರಾನ್‌ಗಳ ಅಸಮರ್ಪಕತೆ ಅಷ್ಟೇ. ಇದು ನಿಮಗೆ ತೀರಾ ಸರಳವಾಗಿ ರೂಪಿಸಿಕೊಂಡ ಜೈವಿಕಸಂಕಲ್ಪವೊಂದನ್ನು ಸುಮ್ಮನೇ ಆರೋಪಿಸಿಕೊಂಡಿದ್ದು ಎಂದು ಅನಿಸಿದರೆ ನಾನು ಹೇಳುವುದಿಷ್ಟೇ; ನಾವೆಲ್ಲರೂ ನಮ್ಮನ್ನು ಕಿತ್ತು ತಿನ್ನುವ ನೋವಿಗೆ ಪ್ರತಿಯಾಗಿ ನಮ್ಮ ನಮ್ಮದೇ ಒಂದು ಪ್ರತಿ ಅಸ್ತ್ರವನ್ನು ರೂಪಿಸಿಕೊಳ್ಳಬೇಕು, ಮತ್ತು ಇದು ನನ್ನ ಪ್ರತ್ಯಸ್ತ್ರ.

ನನ್ನೊಂದಿಗೆ ಮಾತನಾಡಿದ ಕೆಲವೊಬ್ಬರು ಮರೆಯಲಾಗದಂಥ ಕತೆಗಳನ್ನು ಹೇಳಿಕೊಂಡಿದ್ದಾರೆ. ಮಾನಸಿಕ ಸಮಸ್ಯೆಗಳಿದ್ದ ಓರ್ವ ಹಿರಿಯ ವೈದ್ಯ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿ, ಅಲ್ಲಿನ ಒಂದು ಪುಟ್ಟ ಸಮುದಾಯದೊಂದಿಗೆ ಬೆರೆತು ಬದುಕತೊಡಗಿದರು. ಆ ಊರು ಅವರನ್ನು ಎಷ್ಟೊಂದು ಪ್ರೀತಿಯಿಂದ ನೋಡಿಕೊಂಡಿತೆಂದರೆ, ಆ ಇಡೀ ಊರು ಅವರೊಂದಿಗೆ ನಿಂತಿದ್ದರಿಂದ ಅವರು ಅಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸುವುದು ಕೂಡ ಸಾಧ್ಯವಾಯಿತು. ಒಬ್ಬ ಅಜ್ಜಿ, ಮುದ್ದಾಗಿಯೂ, ವ್ಯಗ್ರವಾಗಿಯೂ ಎಂಥೆಂಥಾ ಚಿತ್ರವಿಚಿತ್ರ ಕತೆಗಳನ್ನೆಲ್ಲ ಹೇಳುತ್ತಿತ್ತೆಂದರೆ ಅದನ್ನು ಕೇಳಿ ಕೇಳಿಯೇ ಅವಳ ಮೊಮ್ಮಕ್ಕಳು ಸೃಜನಾತ್ಮಕವಾಗಿ ಬದಲಾದರು. ಆ ಕತೆಗಳು ಅವರನ್ನು ಎಷ್ಟೆಲ್ಲ ಕಾಡತೊಡಗಿದವೆಂದರೆ ಅವರಲ್ಲಿ ಆ ಕತೆಗಳು ಸೃಜನಶೀಲ, ರಚನಾತ್ಮಕ ತುಡಿತಗಳನ್ನೆಬ್ಬಿಸಿದ್ದವು. ಅಣ್ಣ ತಂಗಿಯರ ಒಂದು ಕುಟುಂಬದಲ್ಲಿ ಇಬ್ಬರಿಗೂ ಸಮಸ್ಯೆಯಿದ್ದು, ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಬೇಕಾಯಿತು.... ಆದರೆ ಈ ಯಾವ ಕತೆಗಳೂ ಈ ಸಂಕಲನದಲ್ಲಿಲ್ಲ. ತಮ್ಮ ಅಜ್ಜನ ಮಾನಸಿಕ ಕಾಯಿಲೆಯನ್ನು ಸಾರ್ವಜನಿಕ ವಿಷಯವಾಗಿಸಲು ಒಲ್ಲದ ಕುಟುಂಬದ ಎಳೆಯ ತಲೆಮಾರು ಒಂದು ಕತೆಯನ್ನು ಮುಂದೆ ಸಾಗಲು ಬಿಡಲಿಲ್ಲ. ಇನ್ನೊಂದು ಪ್ರಸಂಗದಲ್ಲಿ ಕುಟುಂಬದ ಯಾರೊಬ್ಬರೂ ಸಹಕರಿಸದೇ ಹೋದುದರಿಂದ ಹಾಗೂ ಅಜ್ಜಿಯ ಕುರಿತಂತೆ ಕೇವಲ ಮಹಿಳೆಯೊಬ್ಬರ ಮಸುಕಾದ ನೆನಪುಗಳಲ್ಲೆ ಎಲ್ಲವೂ ಮುಗಿದದ್ದರಿಂದ ಅದನ್ನು ಕೈಬಿಡಬೇಕಾಯಿತು. ಮೂರನೆಯದು ಚೆನ್ನಾಗಿಯೇ ಸುರುವಾದರೂ ಮುಂದೆ ಅದನ್ನು ಬರೆಯುತ್ತಿದ್ದ ವ್ಯಕ್ತಿ ಈಮೇಲುಗಳಿಗೆ ಪ್ರತಿಕ್ರಿಯಿಸುವುದನ್ನೇ ಬಿಟ್ಟುಬಿಟ್ಟರು.

ನೆನಪುಗಳು ಏನೆಲ್ಲವನ್ನು ಹೊತ್ತು ತರಬಹುದೋ, ಆ ನೋವು ಮನುಷ್ಯನನ್ನು ಏನೆಲ್ಲ ಮಾಡಬಹುದೋ ಅದರ ಎದುರು ನಾವು ಹೂಡುವ ಪ್ರತ್ಯಸ್ತ್ರಗಳಲ್ಲಿ ಇದೂ ಒಂದು ಎಂದು ತಿಳಿದು ನಾನು ಸುಮ್ಮನಾದೆ. ಅವರ ನಿರ್ಧಾರವನ್ನು ನಾನು ಗೌರವದಿಂದ ಒಪ್ಪಿಕೊಂಡಿದ್ದೇನೆ.

ಉಳಿದವರು ನೇರವಾಗಿಯೇ ನಿರಾಕರಿಸಿದರು. ನಾನು ಅವರನ್ನೂ ದೂರಲಾರೆ. ನಾವು ನಮ್ಮನಮ್ಮ ಕತೆಗಳಿಗೆ ನಾವು ನಾವೇ ಆಕಾರವೊಂದನ್ನು ಕೊಟ್ಟುಕೊಳ್ಳಬೇಕಿದೆ ಮತ್ತು ನಾವಿದನ್ನು ಹೇಳುವುದರ ಮೂಲಕ ಮಾಡುವಷ್ಟೇ ಹೇಳದೇ ಇರುವುದರ ಮೂಲಕವೂ ಮಾಡುತ್ತಿರುತ್ತೇವೆ. ನನ್ನ ಕತೆಯ ಲೇಖಕನಾಗಿದ್ದುಕೊಂಡು ನಾನು ಯಾವುದರೊಂದಿಗೆ ಹೊಂದಿಕೊಂಡಿದ್ದೇನೆ ಮತ್ತು ಯಾವುದರೊಂದಿಗೆ ಹೊಂದಿಕೊಂಡಿಲ್ಲ ಎನ್ನುವುದನ್ನು ನಾನು ಮಾತ್ರ ನಿರ್ಧರಿಸಬಲ್ಲೆ.

ಹಾಗಾಗಿ ಈ ಕತೆಗಳನ್ನು ತಿದ್ದುವಾಗಲು ಕೂಡ ನಾನು ಎಚ್ಚರದ ಹೆಜ್ಜೆಗಳನ್ನಿರಿಸಿದ್ದೇನೆ. ಇವರಲ್ಲಿ ಕೆಲವರು ನನ್ನ ಸ್ನೇಹಿತರು. ತಮ್ಮ ಒಡಹುಟ್ಟಿದವರು ಕತ್ತಿ ಹಿಡಿದು ಓಡಿಸಿಕೊಂಡು ಬಂದಾರು, ಅಮ್ಮ ಎಲ್ಲಿ ಬಾವಿಗೆ ಹಾರಿಕೊಂಡಳೋ ಎಂದು ಕಂಗಾಲಾಗಿ ಅವಳನ್ನು ತಡೆಯಲು ದಿಕ್ಕೆಟ್ಟು ಓಡುವಂತೆ ಆದೀತು ಎಂದೆಲ್ಲ ಹೇಳಿಯೇ ತಮ್ಮ ತಮ್ಮ ಕತೆಯನ್ನು ಹಂಚಿಕೊಂಡವರು. ಕೆಲವೊಮ್ಮೆ ಅವರು ಬರೆದಿದ್ದರಲ್ಲಿ ಇಂಥವೇ ಸಂದರ್ಭದ ವಿವರಗಳು ತಪ್ಪಿಹೋಗಿವೆ. ‘ನೀವು ಮಾತನಾಡುತ್ತ ನಿಮ್ಮ ತಂದೆ ನಿಮ್ಮ ತಂಗಿಯನ್ನು ಮಚ್ಚು ಹಿಡಿದುಕೊಂಡು ಬೆನ್ನಟ್ಟಿದ ಸಂದರ್ಭದ ಬಗ್ಗೆ ಹೇಳಿದ್ದಿರಿ, ಅದನ್ನು ಇಲ್ಲಿ ಸೇರಿಸಬೇಕಿತ್ತೆ?’ ಎಂದು ಕೇಳಲೆ ಅನಿಸಿದ್ದಿದೆ. ಅವರು ಹೇಳಿದ ಮಾತನ್ನು ಅವರಿಗೆ ಹೀಗೆ ನೆನಪಿಸುವುದರಿಂದ ಅವರಲ್ಲುಂಟಾಗುವ ಒತ್ತಡವನ್ನು ನಮ್ಮ ಸಂಬಂಧ ತಾಳಿಕೊಂಡೀತೇ ಎಂದು ಕ್ಷಣಕಾಲ ಯೋಚಿಸಿ ಹಾಗೆ ಕೇಳಲು ಮುಂದಾಗುತ್ತೇನೆ. ಹೆಚ್ಚಾಗಿ ಮಂದಿ ತಾವು ಏನೆಲ್ಲವನ್ನು ಹೇಳಿಬಿಟ್ಟಿದ್ದೇವೆಂದು ತಿಳಿದು ಆಘಾತಕ್ಕೊಳಗಾಗುತ್ತಾರೆ; ಅಥವಾ, ಬಹುಶಃ ತಾವು ಏನೆಲ್ಲವನ್ನು ನೆನಪಿಸಿಕೊಂಡಿದ್ದೇವೆಂದು ತಿಳಿದು ಆಗುವ ಆಘಾತವೇ ಅದಕ್ಕಿಂತಲೂ ಹೆಚ್ಚಿನದಿರಬೇಕು.

ತಮ್ಮ ಕತೆಯನ್ನು ಇಲ್ಲಿ ಹೇಳಿಕೊಂಡಿರುವವರ ಬಗ್ಗೆ ನನಗೆ ಅಗಾಧ ಗೌರವವಿದೆ. ನೋವಿನ, ಪಾಪಪ್ರಜ್ಞೆಯ ಮತ್ತು ತೀವ್ರ ಅಸಹಾಯಕ ಸ್ಥಿತಿಯೊಂದರ ಗೂಡಿನ ಕಗ್ಗತ್ತಲನ್ನು ಅಷ್ಟಿಷ್ಟಾದರೂ ತೊಡೆದು ಹಾಕುವ ಹಣತೆಯೊಂದನ್ನು ಎತ್ತಿ ಹಿಡಿದ ಧೀರರು ಇವರು. ಏಕೆಂದರೆ, ಮನಸ್ಸಿನ ಈ ಎಲ್ಲ ಧಿಮಿಕಿಟಗಳು ನಡೆಯುವುದು ನಮ್ಮ ನಮ್ಮ ಸಂಸಾರವೆಂಬ ರಂಗಭೂಮಿಯ ಒಳಗಷ್ಟೇ. ಕತೆ ಕಾದಂಬರಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಾವು ಹೇಗೆ ಒಬ್ಬ ನೊಂದ ವ್ಯಕ್ತಿ ತನ್ನ ಕುಟುಂಬದ ಮಡಿಲಿಗೆ ಮರಳುತ್ತಾನೆ ಎನ್ನುವುದನ್ನು ನೋಡುತ್ತೇವೆ. ಅಲ್ಲಿ ಅವನನ್ನು ಪ್ರೀತಿ ಮತ್ತು ಅಕ್ಕರೆಯೊಂದಿಗೆ ಎಲ್ಲರೂ ಸುತ್ತುವರಿದು ನಿಲ್ಲುತ್ತಾರೆ ಮತ್ತು ಮನಸ್ಸಿಗಾದ ಗಾಯಗಳನ್ನು ಮಾಯುವಂತೆ ಮಾಡಲು ಬೇಕಾದ್ದು ಅಲ್ಲಿರುತ್ತದೆ. ಆದರೆ ನಿಮ್ಮ ಹೆತ್ತಮ್ಮನೇ ನಿಮ್ಮನ್ನು ಇರಿದಲ್ಲೇ ಇರಿಯುತ್ತ ಮತ್ತು ಮರುಕ್ಷಣ ಇನ್ನಿಲ್ಲದ ಪ್ರೀತಿಯಲ್ಲಿ ಪೊರೆಯುತ್ತ ಇರುವುದಾದರೆ, ನಿಮ್ಮ ಪ್ರೀತಿಯ ತಂದೆಯೇ ಎಲ್ಲರಿಂದ ತೊರೆಯಲ್ಪಟ್ಟವರಂತೆ, ದೂರಾಗಿಬಿಟ್ಟಂತೆ ಕಂಡರೆ, ನೀವೆಂದೂ ಸಮೀಪಿಸಲಾಗದ ಕತ್ತಲ ಗೋಪುರದಲ್ಲಿರುವಂತೆ ಕಂಡರೆ? ಕೌರವರೂ ಪಾಂಡವರೂ ಒಂದೇ ಮನೆಯೊಳಗೆ ಇದ್ದುಬಿಟ್ಟರೆ? ನಿಮಗೆಲ್ಲಿ ನೆಲೆ ಆಮೇಲೆ?

ಹಾಗೆ ನೋಡಿದರೆ,ಎಲ್ಲವೂ ಸರಿಯಾಗಿರುವ ಮನೆ ಎಂಬುದೊಂದು ಭ್ರಾಂತಿ ಎನ್ನುವುದು ನಿಜವೇ. ನಮ್ಮ ಬದುಕಿನ ಎಲ್ಲ ಬಗೆಯ ತೀವ್ರ ಸಂವೇದನೆಗಳ ರಂಗಸ್ಥಳವೇ ಅದಾಗಿರುತ್ತ ಅಲ್ಲಿ ಎಲ್ಲವೂ ಸರಿಯಾಗಿ ಇರಲು ಹೇಗೆ ಸಾಧ್ಯ? ಇಲ್ಲಿ ನಮ್ಮ ಬಗ್ಗೆ ಚೆನ್ನಾಗಿ ತಿಳಿದುಕೊಂಡವರಿದ್ದಾರೆ; ನಮ್ಮನ್ನು ಯಾವುದರಿಂದ ಕಾಪಾಡಬೇಕೆಂದು ಯಾರೂ ಹೇಳದೇನೇ ಅವರು ಬಲ್ಲರು. ಮತ್ತು ಅವರಿಗೆ ಯಾವಾಗ ನಮ್ಮನ್ನು ನೋಯಿಸುವ ಬಯಕೆಯಾಗುವುದೆಂದೂ ಅವರು ಬಲ್ಲರು. ನಮ್ಮ ಅತ್ಯಂತ ದುರ್ಬಲ ಅಂಗ ಯಾವುದೆಂದೂ ಅವರು ಬಲ್ಲರು. ನಮಗೆಲ್ಲರಿಗೂ ಗೊತ್ತಿದೆ, ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಸಂಸಾರವೆಂಬುದು ಒಂದು ಮಾನವೀಯ ಸಂಸ್ಥೆಯಾಗಿರುವುದರಿಂದಲೇ ಅದರಲ್ಲಿ ದೌರ್ಬಲ್ಯಗಳಿವೆ ಎಂಬುದು ತಿಳಿಯುತ್ತದೆ. ನೀನಿಲ್ಲದೇ ನಾನು ಹೇಗಿರಲಿ ಎಂದು ಯೋಚಿಸಿದಷ್ಟೇ ಇಂಥವನೊಂ(ಳೊಂ)ದಿಗೆ ಹೇಗಪ್ಪಾ ಎಂದು ಕೂಡ ಯೋಚಿಸಿದವರೇ ಎಲ್ಲರೂ.

ಆದರೆ ಇದ್ದಕ್ಕಿದ್ದಂತೆ ಸಮಸ್ಯೆಯಾಗಿ ಬಿಟ್ಟ ಒಬ್ಬನೇ ವ್ಯಕ್ತಿಯತ್ತ ಇಡೀ ಕುಟುಂಬದ ಗಮನ ಕೇಂದ್ರೀಕರಿಸಲ್ಪಡಬೇಕಾಗಿ ಬಂದಾಗ ಹೇಗಿರುತ್ತದೆ? ಮನೆಯ ಯಾರೊ ಒಬ್ಬರು ಆತ್ಮಹತ್ಯೆ ಮಾಡಿಕೊಂಡು ಬಿಟ್ಟರೆ? ಉಳಿದವರೆಲ್ಲ ಆ ಶೂನ್ಯವನ್ನು ಸಹಿಸಬೇಕು ಹೇಗೆ? ಪ್ರೀತಿ ಮತ್ತು ಅನುಬಂಧದ ಪ್ರತಿಯೊಂದು ನಡೆಯನ್ನೂ ಪರಿಹಾಸ್ಯ ಮಾಡುತ್ತಲೇ ಉಳಿಯುವ ಆ ವ್ಯಕ್ತಿಯ ನೆರಳು ಹೇಗೆ ಕಾಡಬಹುದು ಅವರನ್ನೆಲ್ಲ? ಯಾರೋ ಒಬ್ಬ ವ್ಯಕ್ತಿಯನ್ನು ಅಡ್ಮಿಟ್ ಮಾಡಬೇಕಾಗಿ ಬಂದರೆ? ಅದು ಹೇಗೆ ಇದನ್ನೆಲ್ಲ ನಿರ್ವಹಿಸುತ್ತದೆ?

ಎಲ್ಲವನ್ನೂ ಮಾಡಿ ಮುಗಿಸಿದ ಮೇಲೆ ಮತ್ತೆ ಅದರ ಕುರಿತಾಗಿ ಮಾತನಾಡಬೇಕಾಗಿ ಬಂದರೆ ಅದು ಹೇಗಿರುತ್ತದೆ? ಅಥವಾ ಯಾಕೆ ಮತ್ತೆ ಅದನ್ನೆಲ್ಲ ನೆನಪಿಸಿಕೊಳ್ಳಬೇಕು?

ಈ ‘ಯಾಕೆ’ ಎನ್ನುವ ಶಬ್ದಕ್ಕೆ ನನ್ನಲ್ಲಿ ಉತ್ತರವಿಲ್ಲ. Em.... ಬರೆದ ನಂತರದಲ್ಲಿ ಹಲವಾರು ಬಾರಿ ನಾನೆದುರಿಸಿದ ಪ್ರಶ್ನೆಯದು. ಎಲ್ಲವನ್ನೂ ಹೊರಗೆ ಹಾಕಿ ಮುಕ್ತವಾಗುವುದು. ‘ಈಗ ಅಯ್ಯಬ್ಬ ಎನಿಸುತ್ತದೆಯೆ? ಭೂತಕಾಲದಿಂದ ಒಮ್ಮೆಗೆ ಕಳಚಿಕೊಂಡು ಇನ್ನಾದರೂ ಮುಂದೆ ಸಾಗಬಹುದು ಅನಿಸುತ್ತಾ ಈಗ?’ ಇದಕ್ಕೆ ಹೇಗೆಂದು ಉತ್ತರಿಸಬೇಕು, ನನಗೆ ಗೊತ್ತಾಗುತ್ತಿರಲಿಲ್ಲ. ಈಗಲೂ ನನಗೆ ಗೊತ್ತಿಲ್ಲ. ಬದಲಿಗೆ ಏನೋ ಒಂದು ಉತ್ತರ ಎಂದು ಆಡುವುದು ಸುಲಭ ಇತ್ತು; ಆದರೆ ಅದು ಕೇವಲ ಪೊಳ್ಳು ಭರವಸೆಯನ್ನು ನೆಚ್ಚಿದ ಹಾಗೆ. ಉತ್ತರಿಸುವುದೇ ಆದಲ್ಲಿ ಏನೆಂದು ಹೇಳಬಹುದಿತ್ತು ನಾನು? ಸೋಮವಾರ ‘ಹೌದು’ ಎಂದರೆ ಮಂಗಳವಾರ ‘ಇಲ್ಲ’ ಎನ್ನಲೆ, ಬುಧವಾರ ‘ ಬಹುಶಃ, ಈ ಕಳಚಿಕೊಳ್ಳುವುದು ಎಂದರೆ ಏನು ಎನ್ನುವ ಬಗ್ಗೆ ಸ್ಪಷ್ಟ ಇದ್ದರೆ...’ ಎನ್ನುತ್ತಿದ್ದೆನೆ? ಗುರುವಾರ ಬಹುಶಃ ‘ನಿಮಗೇನಾದರೂ ತಲೆಕೆಟ್ಟಿದೆಯೆ?’ ಎಂದು ಬಿಟ್ಟು ಶುಕ್ರವಾರ ‘ಕಲೆಯ ಕೆಲಸ ಕಲಾವಿದನ ನೋವು ನಿವಾರಿಸುವುದಲ್ಲ, ಬದಲಿಗೆ ಜಗತ್ತಿನ ನೋವು ಉಪಶಮನಗೊಳಿಸುವುದು’; ಮತ್ತು ಶನಿವಾರ ‘ಹೌದು, ಕೆಲವೊಮ್ಮೆ ಹೌದೆನಿಸುತ್ತೆ. ಆದರೆ ನಿಜ ಹೇಳಬೇಕೆಂದರೆ ಇಲ್ಲ ಎಂದೇ ಹೇಳಬೇಕು. ಹೀಗೇ ಎಂದು ಹೇಳುವಷ್ಟು ನನಗೇನೂ ಗೊತ್ತಾಗುತ್ತಿಲ್ಲ ಆ ಬಗ್ಗೆ’ ಎನ್ನುತ್ತಿದ್ದೆನೆ? ಮತ್ತೆ ಭಾನುವಾರ ನನಗೇ ನಾನು ಬಿಡುವು ಕೊಟ್ಟುಕೊಂಡು ಬೇರೆಯವರ ಪ್ರಶ್ನೆಗಳಿಗೆ ಉತ್ತರಿಸುವುದಿರಲಿ, ನನಗೇ ನಾನು ಏನನ್ನೂ ಹೇಳಿಕೊಳ್ಳಲು ನಿರಾಕರಿಸುತ್ತಿದ್ದೆನೇನೊ.

ಒಂದು ವಿಧದ ಉತ್ತರ ಎನ್ನುವಂತೆ ನಾನು ಕೊಡಬಹುದಾದ್ದು ಈ ಒಂದು ಚಿತ್ರಣವನ್ನಷ್ಟೇ. ನೀವು ಒಂದು ಬಹುದೂರ ಸಾಗಬೇಕಾದ ಗುಡ್ದ ಹತ್ತುತ್ತಿದ್ದೀರಿ. ನಿಮ್ಮ ಬೆನ್ನ ಮೇಲಿನ ಬ್ಯಾಗು ನಿಮ್ಮ ಭುಜ ಸೆಳೆಯುತ್ತಿದೆ. ಬಿಗಿ ಹಿಡಿದ ಬ್ಯಾಗಿನ ಪಟ್ಟಿಗಳಿಂದ ನಿಮ್ಮ ಹಸ್ತಗಳನ್ನೀಚೆ ತೆಗೆಯುತ್ತೀರಿ. ಬ್ಯಾಗನ್ನು ಬೆನ್ನಿನಿಂದ ಇಳಿಸಿ ಬೇರೆಡೆ ಸರಿಸುತ್ತೀರಿ. ಒಂದು ಕ್ಷಣ ಭಾರ ಇಳಿಸಿದ ನೆಮ್ಮದಿಯಿಂದ ಉಸ್ಸಪ್ಪ ಎನಿಸುತ್ತದೆ. ಆದರೆ ಕೆಲವೇ ಹೊತ್ತಿನಲ್ಲಿ ಬ್ಯಾಗಿನ ಭಾರ ಇನ್ನೆಲ್ಲೊ ಅನುಭವಕ್ಕೆ ಬರತೊಡಗುತ್ತದೆ. ಕೈಗಳನ್ನು ಭಾರ ಸೆಳೆಯತೊಡಗುತ್ತದೆ. ಅಂದ ಮಾತ್ರಕ್ಕೆ ಬದುಕಿನ ಪ್ರತಿ ಕ್ಷಣವೂ ನೀವು ಇದರಲ್ಲೇ ಮುಳುಗಿರುತ್ತೀರಿ ಎಂದೇನಲ್ಲ. ಆಗಾಗ ನೀವು ಭಾರವನ್ನು ಇಳಿಸಿಬಿಟ್ಟು ಮನಸ್ಸು ದೇಹ ಹಗುರಾಗಿ ಕುಣಿವ ಹೆಜ್ಜೆಯಾಡಿಸಬಹುದು. ಆಗ ಅಷ್ಟು ಹೊತ್ತು ನೀವು ಗಾಳಿಯಲ್ಲೇ ತೇಲಬಹುದು. ಭಾರ ಮತ್ತೆ ನಿಮ್ಮ ಬೆನ್ನ ಮೇಲೇರುವುದು, ಸದ್ಯಕ್ಕಂತೂ ನೀವು ತೇಲುತ್ತೀರಿ.

ಆದರೆ ಒಂದು ಮಾತನ್ನಂತೂ ನಾನು ಖಚಿತವಾಗಿ ಹೇಳಬಲ್ಲೆ, ಈ ಕುರಿತು ಮಾತೇ ಆಡದಿರುವುದರಿಂದೇನೂ ಅದು ಹೆಚ್ಚು ಸಹನೀಯ ಅಥವಾ ಸುರಳೀತವಂತೂ ಆಗುವುದಿಲ್ಲ.

‘ಹೇಗೆ’ ಎನ್ನುವ ಕುರಿತು ಹೇಳುವುದಾದರೆ, ನೀವಿಲ್ಲಿ ಈ ಸಂಕಲನದಲ್ಲಿನ ಇಬ್ಬರು ಲೇಖಕರು ನಿರೂಪಣೆಯ ತಂತ್ರ ಬಳಸಿಕೊಂಡಿರುವುದನ್ನು ಕಾಣುತ್ತೀರಿ. ಅವರು ಒಂದು ಕಾಲ್ಪನಿಕ ಕತೆಯನ್ನು ಹೇಳುತ್ತಿರುವರೋ ಎಂಬಂತೆ ಎಲ್ಲವನ್ನೂ ಹೇಳಿದ್ದಾರೆ. ಒಂದು ಕಥಾನಕದಲ್ಲಿ ಎಲ್ಲವನ್ನೂ ಮೂರನೆಯ ವ್ಯಕ್ತಿಯೊಬ್ಬ ನಿರೂಪಿಸುತ್ತಿರುವಂತೆ ಬಂದರೆ ಇನ್ನೊಂದು ವಿಭ್ರಾಂತ ಮನಸ್ಸು ತನ್ನ ಮನೋಗತವನ್ನು ತೆರೆದಿಡುತ್ತಿದೆಯೊ ಎಂಬಂತೆ. ‘ಇದೆಲ್ಲ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವ ಉಪಾಯಗಳಲ್ಲವೆ?’ ಎಂದು ನೀವು ಕೇಳಬಹುದು. ಆದರೆ ಎಲ್ಲಾ ಬರವಣಿಗೆಗೂ ಒಂದು ಮಟ್ಟದ ಅಂತರ ಅನಿವಾರ್ಯ. ಕೆಲವೊಂದು ಮೇಲ್ನೋಟಕ್ಕೇ ಗೋಚರಿಸುತ್ತವೆ. ಕೆಲವು ನಿಧಾನವಾಗಿ, ಬರವಣಿಗೆಯ ಧ್ವನಿಯಾಗಿ ಹುದುಗಿರುತ್ತವೆ: ಉದಾಹರಣೆಗೆ ವ್ಯಂಗ್ಯ ಅಥವಾ ವಿಡಂಬನೆ. ನೀವು ಒಂದು ಕನಿಷ್ಠ ಅಂತರವನ್ನು ಕಾಯ್ದುಕೊಳ್ಳದೇ ಹೋದರೆ ನಿಮಗದನ್ನು ಹೇಳುವುದೇ ಅಸಾಧ್ಯವಾಗಿ ಬಿಡುತ್ತದೆ. ಪ್ರತಿಯೊಬ್ಬರಿಗೂ ಅವರವರದೇ ಆದ ಒಂದು ಅಂತರ, ಅವರವರದೇ ಆದ ಒಂದು ತಂತ್ರ.

ಈ ಪುಸ್ತಕದಲ್ಲಿನ ಕತೆಗಳು ನಿಮಗೆ ಯಾವುದೇ ಪರಿಹಾರಗಳನ್ನು, ಉತ್ತರಗಳನ್ನು ಒದಗಿಸುವ ಉದ್ದೇಶ ಹೊಂದಿಲ್ಲ. ಅವು ಏನು ನಡೆಯಿತು ಎನ್ನುವುದನ್ನು ಹೇಳುತ್ತಿವೆ, ಅದನ್ನು ಹೇಗೆ ನಿಭಾಯಿಸಿದೆವು ಎನ್ನುವುದನ್ನು ಹೇಳುತ್ತವೆ. ಏನು ಮಾಡಿದೆವೊ, ಅದನ್ನು ಹೇಗೆ ಮಾಡಿದೆವೊ ಅದನ್ನು ನೀವು ಒಪ್ಪಿಕೊಳ್ಳದೇ ಇರಬಹುದು. ಅದು ಸಹಜವೇ. ನನ್ನಮ್ಮನಿಗೆ ಸೌಖ್ಯವಿಲ್ಲದಾಗ ನಮ್ಮ ಕುಟುಂಬದ ಬಂಧು ಬಾಂಧವರು ಮತ್ತು ಸ್ನೇಹಿತರಿಂದ ಸದಾ ಸಲಹೆಗಳ ಮಹಾಪೂರವೇ ಹರಿದು ಬರುತ್ತಿತ್ತು. ಅವುಗಳಲ್ಲಿ ಕೆಲವು ತುಂಬ ಸಹಾಯಕವಾಗಿದ್ದವು. ಹೊಸ ಹೊಸ ಪರಿಹಾರೋಪಾಯಗಳ ಕುರಿತಂತೆ ಅಲ್ಲಿ ಇಲ್ಲಿ ಪ್ರಕಟವಾದ ಲೇಖನಗಳ, ಪತ್ರಿಕೆಗಳ ಕಟಿಂಗ್ಸ್, ವೈದ್ಯರ ಹೆಸರುಗಳು; ಕೆಲವು ಹಾಗಿರಲಿಲ್ಲ - ಏನೇನೋ ಹುಡಿ ಮತ್ತೊಂದು ಕೊಡುವ, ವಿಶೇಷ ಶಕ್ತಿಸಂಪನ್ನರ, ಎಂಥ ಸಮಸ್ಯೆಯನ್ನಾದರೂ ಪರಿಹರಿಸಬಲ್ಲವರ ಹೆಸರುಗಳು; ‘ಇದ್ಯಾವುದನ್ನೂ’ ಗಂಭೀರವಾಗಿ ತೆಗೆದುಕೊಳ್ಳಬೇಡಿ, ಯಾಕೆಂದರೆ ‘ಇದೆಲ್ಲ ಸುಮ್ಮನೇ ಉದಾಸೀನ ನಟಿಸೋದಷ್ಟೇ, ಎರಡು ದಿನ ಹೊಟ್ಟೆಗೆ ಏನೇನೂ ಕೊಡದೆ ನೋಡಿ, ಹೇಗೆ ಹಸಿವು ಅವರನ್ನ ತಟಕ್ಕನೆ ಸರಿದಾರಿಗೆ ತರುತ್ತೆ ಅಂತ’ ಎಂಬ ಸಲಹೆ. ಇದೆಲ್ಲ ಸುಮ್ಮನೆ ಕಿರಿಕಿರಿಯನ್ನಷ್ಟೇ ಹೆಚ್ಚಿಸುತ್ತಾ ಇತ್ತು. ಯಾಕೆಂದರೆ ನಾವಿದನ್ನೆಲ್ಲ ಪ್ರತಿದಿನ ಎಂಬಂತೆ ಅನುಭವಿಸುತ್ತ ಇರುವಾಗ ನಮಗೆ ನಾವೆಲ್ಲೆಲ್ಲಿ ಏನೇನು ತಪ್ಪು ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಸತತವಾದ ಮಾತುಗಳನ್ನೂ ಕೇಳಿಸಿಕೊಳ್ಳುತ್ತ ಇರುವುದು ಸಾಕಾಗಿತ್ತು.

ನಮಗೇ ಅದೆಲ್ಲ ಚೆನ್ನಾಗಿಯೇ ಗೊತ್ತಿತ್ತು.

ನಿಮ್ಮಮ್ಮ ಮತ್ತೊಮ್ಮೆ ತನ್ನನ್ನೆ ತಾನು ಮುಗಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದಾಗಲೇ ಅದು ಸ್ಪಷ್ಟ, ಅವಳು ಸಹಿಸಲಾಗದ್ದು ಏನೋ ಮಾಡಿದ್ದೇವೆ. ಒಂದು ಹಂತದಲ್ಲಿ ನೀವು ವೈಪರೀತ್ಯಗಳನ್ನು ಏನು ಮಾಡಿದರೂ ತಡೆಯುವುದಕ್ಕೆ ಸಾಧ್ಯವಿಲ್ಲ ಎನ್ನುವುದು ನಿಮಗೀಗಾಗಲೇ ಗೊತ್ತಾಗಿರುತ್ತದೆ. ಅಲ್ಲದೆ, ಬಿಟ್ಟುಕೊಡುವುದಕ್ಕೂ ಮುನ್ನ ಸಾಧ್ಯವಿರುವ ಎಲ್ಲ ಬಗೆಯಲ್ಲಿ ಸ್ವತಃ ಅವಳೇ ಎಷ್ಟೊಂದು ಪ್ರಯತ್ನಿಸಿರಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಸಾಧ್ಯವಾದಲ್ಲಿ, ಅದರ ಎದುರು ನಿಮ್ಮ ಪ್ರಯತ್ನ ಏನೇನೂ ಅಲ್ಲ ಎನ್ನುವುದೂ ನಿಮಗೆ ಗೊತ್ತಾಗಿರುತ್ತದೆ. ನಿಮಗಿದೆಲ್ಲ ಅರ್ಥವಾಗುತ್ತದೆ. ಎಷ್ಟೋ ಸಲ ಸುಮ್ಮನೇ ಪಕ್ಕದಲ್ಲಿ ಕೂತು, ನಿಮಗೆ ಮಾತನಾಡಬೇಕು ಅನಿಸಿದಾಗಷ್ಟೇ ಕೇಳಿಸಿಕೊಂಡು, ನಿಮಗೆ ಮೌನವಾಗಿರಬೇಕೆನಿಸಿದಾಗ ಹಾಗಿರಲು ಬಿಟ್ಟು, ನಿಮ್ಮ ಮೌನದಲ್ಲೇ ನಿಮ್ಮನ್ನು ನೀವು ಸಂಭಾಳಿಸಿಕೊಳ್ಳಲು ಅನುವು ಮಾಡಿಕೊಡುವ ಸಾಂಗತ್ಯಕ್ಕಿಂತ ಹೆಚ್ಚಿನದು ಏನೂ ಇಲ್ಲವೇನೊ ಅನಿಸುತ್ತದೆ.

ಅಂಥ ಸ್ನೇಹಿತರು, ಬಂಧುಗಳು ಇದ್ದರು ಎನ್ನುವುದೇ ದೊಡ್ಡ ಸಮಾಧಾನ. ಸೂಕ್ಷ್ಮವಾದ ಸಂವೇದನೆಯಿಂದಲೇ ಮತ್ತು ಅಂತರಂಗದ ಮಾತಾಗಿ ಅವರು ಏನನ್ನಾದರೂ ಹೇಳುವ ಅಥವಾ ಮೌನವಹಿಸುವ ಕೆಲಸ ಮಾಡಿದ್ದರು. ದೂರವೇ ಉಳಿದುಬಿಟ್ಟ ಕೆಲವರೂ ಇದ್ದರು. ಒಮ್ಮೊಮ್ಮೆ ಅದು ನೋವು ನೀಡುತ್ತದೆ. ಆದರೆ, ಕಾಲಾಂತರದಲ್ಲಿ ನೋಡಿದರೆ ಬಹುಶಃ ಅದೇ ಸರಿಯೇನೊ. ಕೇವಲ ಕರ್ತವ್ಯದ ದೃಷ್ಟಿಯಿಂದಷ್ಟೇ ನೋಡಲು ಬರುವ, ಅನ್ಯಥಾ ಮೈಲಿಗಟ್ಟಲೆ ದೂರವೇ ಉಳಿಯಲು ಬಯಸುವ ಅಂಥವರು ತಮಗೆ ಅಸಹನೀಯವೆನಿಸುವ ವಾತಾವರಣದಲ್ಲಿ ಮತ್ತಷ್ಟು ಅಸಹನೀಯ ವಾತಾವರಣ ಸೃಷ್ಟಿಸುವುದಕ್ಕಿಂತ ದೂರವಿರುವುದೇ ಮೇಲು. ಮಾನಸಿಕ ಅಸ್ವಾಸ್ಥ್ಯದ ವಿದ್ಯಮಾನಗಳು ನೋಡಲು ಕೇಳಲು ತುಂಬ ಕುತೂಹಲಕರವಾಗಿರುತ್ತವೆ ಎನ್ನುವಂಥ ಒಂದು ಕೀಳು ಮಟ್ಟದ ಯೋಚನೆಗಳಿರುವ ಮಂದಿಯ ಪ್ರಶ್ನೆಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯ ಯಾರಿಗೂ ಇದ್ದಿರುವುದಿಲ್ಲ. ‘ಆಕೆ ಹೇಗೆ ಎಲ್ಲ ಮಾಡ್ಕೋತಾರೆ?’ ಮತ್ತು ‘ಆಗ ನೀವೆಲ್ಲ ಎಲ್ಲಿ ಇದ್ರಪ್ಪ!’ ಮತ್ತು ‘ಓಹ್! ಮತ್ತೆ ಅದನ್ನೆಲ್ಲ ಯಾರು ಚೊಕ್ಕ ಮಾಡಿದ್ದು ಆಮೇಲೆ? ಎಂಥಾ ಕರ್ಮಕಾಂಡ ಅಲ್ವಾ!’ ಹೌದು,ಅದೆಲ್ಲವೂ ತುಂಬ ಕಷ್ಟದ್ದೇ. ಆದರೆ ಇಂಥ ಪ್ರಶ್ನೆಗಳಿಗೆಲ್ಲ ಉತ್ತರಿಸುವ ಅನಿವಾರ್ಯತೆಯಲ್ಲಿ ಕೇವಲ ವರದಿ ನೀಡುವವರ ನಿರ್ಲಿಪ್ತ ಧರ್ತಿಯಲ್ಲಿ ಏನೇನೋ ಉತ್ತರಿಸುವ ನಮ್ಮದೇ ನಾಟಕೀಯ ವರ್ತನೆಯಿದೆಯಲ್ಲ, ಅದು ಇನ್ನೂ ದರಿದ್ರಸ್ಥಿತಿ. ‘ಅಯ್ಯೊ, ಅದು ಒಂದೆರಡು ಮಿನಿಟು ಬೇರೆ ಕಡೆ ಮನಸ್ಸು ಕೊಟ್ರೆ, ಅಥ್ವಾ ಸ್ವಲ್ಪ ಅತ್ತ ಹೋಗಿ ಇತ್ತ ಬರುವಷ್ಟರಲ್ಲಿ ಆಗಿ ಹೋಗಿರುತ್ತೆ ನೋಡಿ,’ ಎನ್ನುತ್ತೀರಿ. ‘ಎಲ್ಲರೂ ಮಲಗಿ ಬಿಟ್ಟಿದ್ದೆವು’ ಎನ್ನುತ್ತೀರಿ, ಪಾಪಪ್ರಜ್ಞೆಯನ್ನು ಮುಚ್ಚಿಕೊಳ್ಳುವ ಭಾವದಲ್ಲಿ. ಶಾಂತವಾಗಿ ‘ನಾವೇ ಎಲ್ಲ ಸ್ವಚ್ಛಗೊಳಿಸಿದ್ವಿ’ ಎನ್ನುತ್ತೀರಿ. ಮತ್ತೆ ಇದನ್ನೆಲ್ಲ ಇನ್ಯಾರಿಗೋ ವಿವರಿಸಬೇಕಾದುದಕ್ಕೆ ನಿಮ್ಮನ್ನೇ ನೀವು ಹಳಿದುಕೊಳ್ಳುತ್ತೀರಿ, ನಿಜವೇ. ಆದರೆ ಈ ಸ್ಥಿತಿಯಲ್ಲಿ ಸಹಜ ಮಂದಿಯ ಜೊತೆ ಸಹಜವಾಗಿಯೇ ಇರುವುದು ಚೆನ್ನಾಗಿರುತ್ತದೆ. ಆಮೇಲೆ ಖಡಕ್ಕಾದ ಉತ್ತರಗಳೂ ಮನಸ್ಸಿಗೆ ಬರುತ್ತವೆ, ನಿಜ. ಆದರೆ ನಿಮ್ಮನ್ನೇ ನೀವು ಹಿಂಸಿಸಿಕೊಳ್ಳುವುದಕ್ಕಿಂತ ಹೆಚ್ಚು ಖಡಕ್ಕಾದುದು ಬೇರೆ ಯಾವುದೂ ಇರಲಿಕ್ಕಿಲ್ಲ.

ಈ ಪುಸ್ತಕದಲ್ಲಿ ನೈತಿಕ ಪಾಠಗಳೇನೂ ಇಲ್ಲ. ಅಥವಾ ಕೊನೆಗೊಮ್ಮೆ ಎಲ್ಲವೂ ಸರಿಯಾಗಿ ಚೆನ್ನಾಗಿ ಮುಗಿಯಿತು ಎನ್ನುವಂಥ ಸುಲಲಿತ ಕತೆಗಳೂ ಇಲ್ಲಿಲ್ಲ. ನೀವು ಕೇಳಬಯಸುವ ಪ್ರಶ್ನೆಗಳು ಕೊನೆಗೂ ಉಳಿಯುತ್ತವೆ. ಲೈಂಗಿಕವಾದ ಅತಿರೇಕದ ವರ್ತನೆಗಳನ್ನು ನೀವು ಹೇಗೆ ನಿಭಾಯಿಸಿದಿರಿ? ನಿಮ್ಮ ತಂದೆ ಈಗ ಎಲ್ಲಿರಬಹುದು ಅಂತ ಅನಿಸುತ್ತೆ? ನಿಮ್ಮ ತಾಯಿಯನ್ನ ನೀವು ಎಂದಾದರೂ ಕ್ಷಮಿಸ್ತೀರಾ? ಅವಳು ಬೇರೆಯವರನ್ನ ಮದುವೆಯಾದ್ಲಾ ಆಮೇಲೆ? ಈ ನಿರೂಪಣೆಗಳ ನೈಜತೆ, ಪ್ರಾಮಾಣಿಕತೆ, ವಿವರಗಳ ವಾಸ್ತವಿಕತೆಯ ಬಗ್ಗೆ ನಿಮಗೆ ನಿಮ್ಮ ಪ್ರಶ್ನೆಗಳೇ ಆಧಾರವನ್ನೊದಗಿಸಬೇಕು. ಜೀವನವೆಂದರೆ ಹಾಗೆಯೇ ಇರುತ್ತದೆ. ಅದು ಸದಾ ಗಂಟುಬಿಚ್ಚಿದ ಕುಚ್ಚುಗಳಂತೆ. ಸವಾಲುಗಳ ಗೊಂಚಲಿನಂತೆ. ಭಯ ಹುಟ್ಟಿಸುವಂತೆ. ನಮ್ಮಲ್ಲಿರುವುದನ್ನೆಲ್ಲಾ ಸೇರಿ ಮತ್ತೂ ಮತ್ತೂ ಕೊಟ್ಟುಬಿಡು ಎಂದು ಆಗ್ರಹಪಡಿಸುವಂತೆ.

ಹಂಚಿಕೊಳ್ಳಲು ಬಯಸುವ ಒಂದು ಕತೆ ನಿಮ್ಮಲ್ಲಿಯೂ ಇದ್ದರೆ ದಯವಿಟ್ಟು ನನಗೆ assignments.for.jerry@gmail.com ವಿಳಾಸಕ್ಕೆ ಬರೆಯಿರಿ. ನಿಮ್ಮಲ್ಲೊಂದು ಕತೆಯಿದೆ ಮತ್ತು ನೀವದನ್ನು ಹಂಚಿಕೊಳ್ಳಲು ಬಯಸುವುದಿಲ್ಲವಾದಾಗ್ಯೂ ದಾಖಲಿಸಲು ಬಯಸಿದಲ್ಲಿ ಅದನ್ನು ಅಕ್ಷರ ರೂಪಕ್ಕಿಳಿಸಿ, ಧ್ವನಿಮುದ್ರಿಸಿ, ಚಿತ್ರಿಸಿ, ಪೇಂಟಿಂಗ್‌ನ ರೂಪಕೊಡಿ, ಯಾವುದಾದರೊಂದು ಬಗೆಯಲ್ಲಿ ಅದಕ್ಕೊಂದು ರೂಪ, ಆಕೃತಿ ನೀಡಿ. ಅದರಿಂದ ಏನೋ ಪರಿಹಾರ ಸಿಗುತ್ತದೆ ಎಂದೇನೂ ನಾನು ಹೇಳುತ್ತಿಲ್ಲ, ಆದರೆ ಅದು ನಿಮಗೆ ಕೆಟ್ಟದ್ದನ್ನಂತೂ ಮಾಡುವುದಿಲ್ಲ.

ನಿಮಗೆ ಒಳಿತಾಗಲಿ ಎಂದು ಹಾರೈಸುತ್ತೇನೆ. ಕೊನೆಗೂ ನಾವು ನಾವಾಗಿಯೇ ಮಾಡಬೇಕಾದ ಒಂದು ನಿರ್ಧಾರವೆಂದರೆ ಬೆಳಕಿನತ್ತ ಮೊಗಮಾಡುವುದು.

- ಜೆರ್ರಿ ಪಿಂಟೊ

(ಖ್ಯಾತ ಕವಿ, ಕಾದಂಬರಿಕಾರ ಜೆರ್ರಿ ಪಿಂಟೊ ಅವರ A Book of Light ಕೃತಿಯ ಮುನ್ನುಡಿಯ ಅನುವಾದ. ಈ ಕೃತಿಯನ್ನು ಇನ್ಯಾವುದೇ ರೀತಿಯಲ್ಲಿ ಪರಿಚಯಿಸುವುದು ಕಷ್ಟ! ಈ ಲೇಖನ ಪ್ರಜಾವಾಣಿ ಸಾಪ್ತಾಹಿಕ ಮುಕ್ತಛಂದದಲ್ಲಿ ಪ್ರಕಟಿತ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, December 25, 2016

ನಿಮ್ಮೊಡನಿದ್ದೂ ನಿಮ್ಮಂತಾಗದೆ

"ಇಲ್ಲಿ ನಾವು ಕಾಣುವ, ಗದ್ಯ ಮುಖೇನವೂ ವಿವರಿಸಬಹುದಾಗಿದ್ದ ಪರಿಕಲ್ಪನೆಗಳನ್ನು ಕಾವ್ಯವಾಗಿ ಪ್ರಸ್ತುತಪಡಿಸಿರುವುದೇ ಒಂದು ಸೂಚನೆಯಂತಿದೆ. ಇಲ್ಲಿನ ಭಾಷೆಯನ್ನು - ಪ್ರತಿಶಬ್ದ, ಶಬ್ದಗಳ ನಡುವೆ ಉದ್ದೇಶಪೂರ್ವಕ ಕಾಯ್ದುಕೊಂಡ ಅಂತರ, ಪ್ರತಿಸಾಲನ್ನು ಒಡೆದ ವಿನ್ಯಾಸವೂ ಸೇರಿದಂತೆ - ಭಾಷೆಯನ್ನು ಬಳಸಿರುವ ರೀತಿ ಓದುಗ ಇಲ್ಲಿನ ಪ್ರತಿಯೊಂದೂ ಏನನ್ನೋ ಹೇಳುತ್ತಿದೆ ಎಂಬ ಎಚ್ಚರದಿಂದ ಇದನ್ನು ಗಮನಿಸಬೇಕೆಂದು ಸೂಚಿಸುವಂತಿದೆ. ಒಬ್ಬ ನಿಪುಣ ಕುಶಲಿಯ ನುರಿತ ಹದವನ್ನು ಕಾಯ್ದುಕೊಂಡು ನಾರಾಯಣನ್ ತಮ್ಮ ಓದುಗರೊಂದಿಗೆ ತೊಡಗುವ ಈ ಪಯಣದಲ್ಲಿ ‘ಇತಿಹಾಸವು ವರ್ತಮಾನದೊಂದಿಗೆ ಜೀವಂತವಾಗಿದ್ದು ಉಸಿರಾಡುತ್ತಿರಬೇಕೇ ಹೊರತು ಅದು ಸತ್ತ ದೇಹವನ್ನು ಕಾದಿರಿಸಿದಂತೆ ರಕ್ಷಿಸಲ್ಪಡಬೇಕಾದ ವಸ್ತುವಲ್ಲ’; ‘ಭಾಷೆ ಮತ್ತು ಕವಿತೆ ನಿತ್ಯಕುತೂಹಲಿಯೂ, ಜಾಗೃತವೂ ಆದ ಮನಸ್ಸಿಗೆ ಒಂದು ಕೀಲಿಗೈಯಿದ್ದಂತೆ’ - ಎಂಬಂಥ ಒಳನೋಟಗಳನ್ನು ಹೇಳದೇನೆ ಕಾಣಿಸುತ್ತಾ ಹೋಗುತ್ತಾರೆ."

ಈ ಮಾತುಗಳನ್ನು ವಿವೇಕ್ ನಾರಾಯಣನ್ ಅವರ ಕವಿತೆಗಳ ಬಗ್ಗೆ ಬರೆದಿದ್ದು, ಸರಿಯೇ. ಆದರೆ ಇದು ಯಾರ ಬಗ್ಗೆ ಎನ್ನುವುದಕ್ಕಿಂತ ಹೆಚ್ಚು ಆಸಕ್ತಿ ಹುಟ್ಟಿಸಿದ್ದು ಈ ಮಾತುಗಳನ್ನು ಬರೆದ ವ್ಯಕ್ತಿ ಯಾರಿರಬಹುದೆಂಬ ಕುತೂಹಲವೇ! ಹಾಗೆ ಸಿಕ್ಕಿದವರು ಅಥೆನಾ ಕಶ್ಯಪ್. ಸ್ವತಃ ಕವಿ. ಇದುವರೆಗೆ ಪ್ರಕಟವಾಗಿರುವುದು ಒಂದೇ ಒಂದು ಕವನ ಸಂಕಲನವಾದಾಗ್ಯೂ ಅದರಿಂದಲೇ ಸಾಕಷ್ಟು ಖ್ಯಾತರಾದವರು. ಸಂಕಲನದ ಹೆಸರು "ಕ್ರಾಸಿಂಗ್ ಬ್ಲ್ಯಾಕ್ ವಾಟರ್ಸ್". ಹದಿನೆಂಟರ ಹರಯದಲ್ಲೇ ಭಾರತದಿಂದ ಅಮೆರಿಕೆಗೆ ವಲಸೆ ಹೋದ ಇವರು ಎಂಎ ಪದವಿ ಪಡೆದಿದ್ದು, ಕಾವ್ಯದ ಕುರಿತು ಎಂ ಎಫ್ ಎ ಇತ್ಯಾದಿ ಮಾಡಿದ್ದೆಲ್ಲ ಅಲ್ಲಿಯೇ. ಸ್ಯಾನ್ಫ್ರಾನ್ಸಿಸ್ಕೊದಲ್ಲೇ ಉದ್ಯೋಗ ಹಿಡಿದ ಇವರ ಕವನ ಸಂಕಲವನ್ನು ಪ್ರಕಟಿಸಿರುವುದು ಕೂಡ ಸ್ಟೀಫನ್ ಎಫ್ ಆಸ್ಟಿನ್ ಸ್ಟೇಟ್ ಯೂನಿವರ್ಸಿಟಿ ಪ್ರೆಸ್. ಇವರ ಎರಡನೆಯ ಕವನ ಸಂಕಲನ "ಸೀತಾ ಆಫ್ ದಿ ಅರ್ಥ್ ಯಂಡ್ ಫಾರೆಸ್ಟ್ಸ್" ಕೂಡ ಪ್ರಕಟಿಸುವ ನಿರೀಕ್ಷೆಯಲ್ಲಿ ಎಸ್ಸೆಫ್ಎ ಪ್ರೆಸ್ ಇದೆ. ಅಲ್ಲಿ ಇಲ್ಲಿ ಓದಿದ ಇವರ ಒಂದೆರಡು ಕವಿತೆಗಳು, ಅವುಗಳ ಕುರಿತ ಚರ್ಚೆ ಎಲ್ಲವೂ ಇವರ ಕವಿತೆಗಳನ್ನು ಓದಬೇಕೆಂಬ ಒತ್ತಡ ಹೆಚ್ಚಿಸುತ್ತಲೇ ಇತ್ತು. ಇದೆಲ್ಲಕ್ಕಿಂತ ಮುಖ್ಯವೆನಿಸಿದ್ದು ನಮ್ಮ ಬೆಂಗಳೂರಿನೊಂದಿಗೆ ಇವರಿಗಿರುವ ನಂಟು! ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ದೇಶ ಬಿಟ್ಟು ಅಮೆರಿಕಕ್ಕೆ ತೆರಳುವವರೆಗೆ ಈಕೆ ಬೆಳೆದಿದ್ದು, ಕಲಿತಿದ್ದು ಎಲ್ಲ ಬೆಂಗಳೂರಿನಲ್ಲಿಯೇ.

ಇಲ್ಲಿ ಹುಟ್ಟಿ, ಬಾಲ್ಯದ ಅಪೂರ್ವ ಸ್ಮೃತಿಯನ್ನೆಲ್ಲ ತಮ್ಮ ವ್ಯಕ್ತಿತ್ವದ ಭಾಗವಾಗಿಸಿಕೊಂಡು ಬೆಳೆದು, ಹುಟ್ಟಿದೂರು, ಭಾಷೆ, ದೇಶ ಎಲ್ಲವನ್ನೂ ಬಿಟ್ಟು ಇನ್ನೆಲ್ಲೊ ಬೇರುಗಳನ್ನಿಳಿಸಿ, ಹಾಗೆ ಅಲ್ಲಿಂದ ಕಿತ್ತು ತಂದ ಜೀವದೃವ್ಯವನ್ನು ಇಲ್ಲಿ ಜೀವಂತಗೊಳಿಸಿಕೊಳ್ಳಲು ಬಯಸುವ ಎಲ್ಲರನ್ನೂ ಕಾಡುವ ಒಂದು ತಂತು ಸದಾ ಕಾಲ ಅಲ್ಲಿಗೂ ಇಲ್ಲಿಗೂ ಒಂದು ನಂಟು ಬೆಸೆಯುತ್ತಲೇ, ಜೀವಂತಿಕೆಯಿಂದ ತುಡಿಯುತ್ತಲೇ ಇರುತ್ತದೆ. ಅಥೆನಾ ಕಶ್ಯಪರ ಕವಿತೆಗಳಲ್ಲಿ ಬಹುಮುಖ್ಯವಾಗಿ ನಾವು ಕಾಣುವ ಎಳೆ ಇದುವೇ ಎನ್ನುವುದು ನಿಜ. ಆದರೆ ಈ ಬಗೆಯ ಒಂದು ‘ಅನ್ಯ ಪ್ರಜ್ಞೆ’ ಹಲವು ಸ್ತರಗಳಲ್ಲಿ ನಮ್ಮನ್ನು ಕಾಡಬಹುದಾದ ಹತ್ತು ಹಲವು ಆಯಾಮಗಳಿವೆ ಎನ್ನುವುದು ಕೂಡ ಇವೇ ಕವಿತೆಗಳ ನೆಲೆಯಲ್ಲಿ ನಿಜ. ಅಂದರೆ, ಊರು-ಪರವೂರು, ದೇಶ-ಪರದೇಶಗಳಷ್ಟೇ ಈ ಅನ್ಯ ಪ್ರಜ್ಞೆಗೆ ಕಾರಣವಾಗಬೇಕಿಲ್ಲ. ಒಂದು ನಾಯಿ ಕೂಡ ತನ್ನದು ಎನ್ನುವ ಪ್ರದೇಶಕ್ಕೆ ಗಡಿರೇಖೆಗಳನ್ನಿರಿಸಿಕೊಂಡು ಸ್ವಸ್ಥಭಾವ ತಾಳುತ್ತದೆ, ಅಲ್ಲಿಗೆ ಬೇರೆ ನಾಯಿಯ ಪ್ರವೇಶವನ್ನು ಪ್ರತಿರೋಧಿಸುತ್ತದೆ. ಹಾಗೆಯೇ ಮನುಷ್ಯ ದೇಹವು ಕೂಡ ಬೇರೊಂದು ದೇಹವನ್ನು ತೀರ ಸನಿಹಕ್ಕೆ ಬಿಟ್ಟುಕೊಳ್ಳುವ ಮುನ್ನ ಪ್ರತಿರೋಧವನ್ನೊಡ್ಡುವುದೋ, ಹಿತವನ್ನು ಕಾಣುವುದೋ ಮಾಡುತ್ತಿರುತ್ತದೆ. ಮನಸ್ಸು ಅನುಭವಿಸುವ ಅನ್ಯಪ್ರಜ್ಞೆಗೆ ಕೂಡ ಹಲವು ಹತ್ತು ಕಾರಣಗಳಿರಲು ಸಾಧ್ಯ. ಇದೊಂದು ಭೌತಿಕವೂ ಅಲ್ಲದ ಅಮೂರ್ತವೂ ಅಲ್ಲದ ವಿಸಂಗತಿ ಎನ್ನುವುದಂತೂ ಅಥೆನಾ ಕಶ್ಯಪರ ಕವಿತೆಗಳ ಓದಿನಿಂದ ಮನನವಾಗುತ್ತ ಹೋಗುತ್ತದೆ.

ಮನುಷ್ಯನ ಗಡಿರೇಖೆಗಳು ಯಾವುವು? ದೇಹ ಒಂದು ಗಡಿ. ಅದನ್ನು ಮೀರಿದಾಗ ಅವನು ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ ಎನ್ನುವುದು ನಮ್ಮ ನಂಬಿಕೆ. ಮನಸ್ಸು ಒಂದು ಗಡಿಯಾದರೂ ಅದನ್ನು ದಾಟಿದವರು ಇದ್ದಾರೋ ಇಲ್ಲವೊ! ಬೃಹದಾರಣ್ಯಕ ಉಪನಿಷತ್ತು ದಾಟುವುದನ್ನು ನಿಷೇಧಿಸುವ ಒಂದು ವಿಧಾಯಕವನ್ನು ಹೇಳುತ್ತದೆ. ಅದು ಗಡಿ ದಾಟುವ ಬಗ್ಗೆ, ದಾಟಿದವರ ಬಗ್ಗೆ ಇರುವಂತೆಯೇ ಸಾಗರವನ್ನು ದಾಟುವ ಕುರಿತೂ ಇದೆ ಎನ್ನುವುದಾದರೆ "ಕ್ರಾಸಿಂಗ್ ಬ್ಲ್ಯಾಕ್ ವಾಟರ್ಸ್" ಸಂಕಲನದ ಕವಿತೆಗಳಿಗೆ ಆ ನಿಟ್ಟಿನ ಅರ್ಥದ ಗಡಿಗಳ ಹಂಗೂ ಇದೆ! ಹಾಗೆ ಅಥೆನಾ ಹಿರಿಯರು ದೇಶ
ವಿಭಜನೆಯ ತಲ್ಲಣವನ್ನು ಕಂಡವರು, ಲಾಹೋರನ್ನು ತ್ಯಜಿಸಿ ಬಂದವರು. ಮುಂದೆ ಅವಕಾಶವನ್ನರಸಿ ವಿದೇಶಕ್ಕೆ ಹಾರಿ ಹೋದವರು. ಇಪ್ಪತ್ತೊಂದನೆಯ ಶತಮಾನದ ಜಾಗತಿಕ ಗ್ರಾಮದ ಪರಿಕಲ್ಪನೆಯಲ್ಲಿ ವಲಸೆ, ದೇಶಿ-ಪರದೇಶಿ ಪರಿಕಲ್ಪನೆಗಳೇ ಅರ್ಥ ಕಳೆದುಕೊಂಡಿವೆ ಎನ್ನುವುದು ಅವರಿಗೆ ಗೊತ್ತು. ಆದರೆ ನಿಸಾರರ ಕವಿತೆಯ ಭಾವ ಯಾವತ್ತಿಗೂ ಪ್ರಸ್ತುತವಾಗಿಯೇ ಉಳಿದುಬಿಟ್ಟಿರುವುದನ್ನು ಕೂಡ ಕಂಡುಕೊಂಡವರು!

ನಾವು ಖಾಯಂ ಆಗಿ ಕಳೆದುಕೊಂಡ ನಮ್ಮ ಪ್ರೀತಿಪಾತ್ರರ ಕುರಿತ ತೀವ್ರವಾದ ಹಂಬಲ, ಒಂದು ಕಾಲಾವಧಿಗೂ ಮೀರಿ ಅಷ್ಟು ಅಪೇಕ್ಷಿತವೂ ಅಲ್ಲ, ಅದು ಜೀವನ್ಮುಖಿಯಾದುದೂ ಅಲ್ಲ ಎನ್ನುವುದು ಸರ್ವವಿದಿತ. ಇಲ್ಲಿನ ಕೆಲವು ಕವಿತೆಗಳು ಅಂಥ ಹಂಬಲ, ನೆನಪುಗಳ ಭಾವುಕತೆಯಲ್ಲಿ ಅದ್ದಿದಂತಿವೆ. ಅಥೆನಾ ಕಶ್ಯಪ್ ತಮ್ಮ ಒಂಬತ್ತನೆಯ ವಯಸ್ಸಿನಲ್ಲಿ ತಮ್ಮ ಮುವ್ವತೂಂಬತ್ತರ ತಂದೆಯನ್ನು ಕಳೆದುಕೊಂಡವರು. ತಂದೆಯ ಕುರಿತ ಹಂಬಲ ಇಂದಿಗೂ ಜೀವಂತವಾಗಿ ಅವರ ಕವಿತೆಗಳಲ್ಲಿ ಉಸಿರಾಡುತ್ತಿದೆ.

ಕವಿತೆಗಳು, ಅಲ್ಲಿನ ಶಬ್ದ, ಅಕ್ಷರ, ಭಾಷೆ ಇವೆಲ್ಲವೂ ಅರ್ಥದ ಗಡಿರೇಖೆಗಳನ್ನು ಮೀರಿ ನಿಂತರೆ ಚೆನ್ನ. ಹಾಗಾಗಿ ಅಥೆನ್ನಾರ ವ್ಯಕ್ತಿಗತ ಬದುಕಿನ ಯಾವೆಲ್ಲ ಅಂಶಗಳು ಈ ಕವಿತೆಗಳಿಗೆ ಪ್ರೇರಣೆಯನ್ನೊದಗಿಸಿವೆಯೋ ಆ ಅಂಶಗಳನ್ನು ತಿಳಿದೂ, ಈ ಕವಿತೆಗಳನ್ನು ಓದುವಾಗ ಅವುಗಳನ್ನು ಮರೆಯುವುದು ಅವಶ್ಯ. ಆಗಲೇ ನಮಗೆ ಕವಿತೆಗಳು ಎಲ್ಲ ಬಗೆಯ ಗಡಿಯೊಳಗಿನ ಮತ್ತು ಹೊರಗಿನ ಎರಡೂ ಹೊಳಹುಗಳನ್ನು ಒದಗಿಸಲು ಸಾಧ್ಯ. ನಮ್ಮ ಪ್ರೀತಿಯ ಕವಿ ಕೆ ವಿ ತಿರುಮಲೇಶರ ಮಾತುಗಳು ಇಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತದೆ.

".....‘ಕವಿತೆಯಾಗು’ ಅನ್ನುವ ಪದವನ್ನು ನಾನು ಒಂದು ಪ್ರಕ್ರಿಯೆಯಾಗಿ ಇಲ್ಲಿ ಬಳಸಿದ್ದೇನೆ; ಯಾಕೆಂದರೆ, ಕವಿತೆ ಪ್ರತಿಯೊಂದು ಸಲವೂ ಕವಿತೆ ‘ಆಗಬೇಕಿದೆ.’ ಅದೊಂದು ಸಿದ್ಧವಸ್ತುವಲ್ಲ..........ಕವಿತೆಯಾಗುವ ಸಂದರ್ಭವನ್ನು ಪ್ರತಿಬಾರಿಯೂ ಬದಲಿಸುತ್ತ ಹೋಗುವುದರಿಂದ ಮಾತ್ರವೆ ಇದು ಸಾಧ್ಯ. - ಬದಲಿಸುವುದೆಂದರೆ ಹೊಸದಾಗಿಸುವುದು. ಕವಿತೆಯ ಸಾಮಾಜಿಕ ಸಂದರ್ಭ ಹೀಗಿರುತ್ತದೆ ಎಂದು ನಾನು ತಿಳಿದುಕೊಂಡಿದ್ದೇನೆ. ಆದ್ದರಿಂದಲೇ ಅದು ಯಾವುದಕ್ಕೂ ಕಮಿಟೆಡ್ ಅರ್ಥಾತ್ ಬದ್ಧವಾಗಿರದೆ ಸ್ವತಂತ್ರವಾಗಿರಲು ಯತ್ನಿಸುವುದು. ಸ್ವಾತಂತ್ರ್ಯದ ಕುರಿತಾದ ಬದ್ಧತೆ ಮಾತ್ರವೇ ಅದಕ್ಕಿರುವ ಬದ್ಧತೆ.......ಮಿಗುವುದೆಂದರೆ ಬರೀ ಮಿಗುವುದೇ ಅಂದುಕೊಳ್ಳೋಣ. ಅಂದರೆ ನಮಗೆ ದಕ್ಕಿಯೂ, ಇನ್ನೂ ಇದೆಯೆಂಬ ಭಾವನೆ." ("ಕಾವ್ಯಕಾರಣ" ಪುಟ ೧೮-೧೯)

ಟೆಕ್ಸಾಸ್ನ ಎ ಯಂಡ್ ಎಮ್ ಯೂನಿವರ್ಸಿಟಿ ಪ್ರೆಸ್ ನಡೆಸಿದ ಸಂದರ್ಶನವೊಂದರಲ್ಲಿ ಅಥೆನಾ ತಮ್ಮ ಕವಿತೆಗಳ ಹಿಂದಿನ ಪ್ರೇರಣೆಗಳನ್ನು ವಿವರಿಸಿದ್ದಾರೆ.

"ನನಗೆ ಬೇರೆ ಬೇರೆ ಬಗೆಯ ಗಡಿಗಳ ಬಗ್ಗೆ ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳುವುದರಲ್ಲಿಯೂ ತುಂಬ ಆಸಕ್ತಿಯಿದೆ. ರಾಷ್ಟ್ರೀಯ ಗಡಿಗಳು, ಸ್ವಂತ ಮತ್ತು ಬೇರೆಯವರ ನಡುವಿನ ಗಡಿಗಳು, ಭೌಗೋಳಿಕವಾದ ಗಡಿಗಳು, ಬದುಕು ಮತ್ತು ಸಾವಿನ ನಡುವಿನ ಗಡಿ ಮತ್ತು ಕವನ ಮತ್ತು ಪುಟದ ನಡುವಿನವು. ನಾನು ಬದುಕು ಮತ್ತು ಸಾವಿನ ನಡುವಿನ ಗಡಿಗಳನ್ನು ಶೋಧಿಸುತ್ತಲೇ ವಾಸ್ತವ ಮತ್ತು ಕಲ್ಪನೆ/ಕಟ್ಟುಕತೆ/ಕಲೆಗಳ ನಡುವಿನ ಗಡಿಗಳನ್ನೂ ಶೋಧಿಸಿದ್ದೇನೆ. ಒಂದಿಷ್ಟು ಕವಿತೆಗಳು ಪದ್ಯ ಮತ್ತು ಗದ್ಯದ ನಡುವೆ, ಕೆಲವೊಂದು ಹಾಳೆಯಲ್ಲಿ ಚದುರಿಸಿದ ಪದಗಳ ನಡುವೆ, ಸಾಲೊಂದರ ಪಾರಮ್ಯವನ್ನು ಪ್ರಶ್ನಿಸುತ್ತ, ಪಾರಂಪರಿಕ ಕವಿತೆಯ ಪರಿಕಲ್ಪನೆಯನ್ನು ಅಲ್ಲಗಳೆಯುತ್ತ ಹುಟ್ಟಿವೆ.”

ಇಲ್ಲಿ ಕನ್ನಡಕ್ಕೆ ತಂದ ಕೆಲವು ಕವಿತೆಗಳಿವೆ. ಇವುಗಳನ್ನು ಅನುವಾದಿಸುವಲ್ಲಿ ನಾನು ತೋರಿರಬಹುದಾದ ಅಸಾಮರ್ಥ್ಯವೇ ಅವುಗಳನ್ನು ಮೂಲದಲ್ಲಿ ಓದುವ ಒತ್ತಡ ನಿರ್ಮಿಸಿದರೂ ಸಾಕು ಎಂಬ ಹುಂಬತನದಿಂದಲೇ ಇವನ್ನೆಲ್ಲ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಇಲ್ಲಿನ ಮೊದಲ ಕವಿತೆಯೇ ಸಂಕಲನದ ಹೆಸರಿನದು. ಈಗಾಗಲೇ ಹೇಳಿರುವಂತೆ ಅಥೆನ್ನಾ ಅವರ ಬಹುಹಿಂದೆಯೇ ಸಿದ್ಧವಾಗಿದ್ದೂ ಮತ್ತೆ ಮತ್ತೆ ತಿದ್ದಿಸಿಕೊಳ್ಳುತ್ತಿರುವ ಎರಡನೆಯ ಕವಿತಾ ಸಂಕಲನದ ಹೆಸರು "ಸೀತಾ ಆಫ್ ದಿ ಅರ್ಥ್ ಯಂಡ್ ಫಾರೆಸ್ಟ್ಸ್" ಉಸುರುವ ಭಾವದಲ್ಲಿ ನೋಡಿದರೆ ಇಲ್ಲಿಯೂ ಸೀತೆಯ ನೆರಳಿರುವುದು ಕಾಣಿಸುತ್ತದೆ. ಸೀತೆಯೂ ಕಡಲು ದಾಟಿದವಳೇ. ಅಷ್ಟೇಕೆ, ಅವಳು ಅಗ್ನಿಯನ್ನೂ ಹಾಯ್ದವಳು, ಕಾಡನ್ನೂ ಹಾಯ್ದವಳು. ಒಂದರ್ಥದಲ್ಲಿ ಭುವಿಯನ್ನೂ ಹಾಯ್ದವಳು! ಹಾಗೆಯೇ ಇಲ್ಲಿನ ಸಾಲುಗಳಲ್ಲಿ ನಮಗೆ ಹೊಸಿಲು ದಾಟಿದ ಹೆಣ್ಣುಮಗಳ ಉಸಿರೂ ಕೇಳಿಸುತ್ತದೆ. ಅದು ನಮ್ಮ ಸುಬ್ಬಮ್ಮ ಹೆಗ್ಗಡಿತಿ, ಕಾರಂತರ ಸುನಾಲಿನಿ, ಟಾಲ್ಸ್ಟಾಯ್ನ ಅನ್ನಾ, ಲಾರೆನ್ಸ್ನ ಲೇಡಿ ಚ್ಯಾಟರ್ಲಿ, ಇಬ್ಸನ್ನ ಸೂಸನ್ - ಹೀಗೆ ಯಾರು ಕೂಡ ಆಗಬಹುದು!

ನೀರಗಡಿಗಳ ದಾಟಿ...


ಒಂದೊಮ್ಮೆ ಹೊಸಿಲು ದಾಟಿದ್ದೇ
ಕರಗಿ ನೀರಾದಳವಳು ನಿಲಲಾರದೆ ನಿಂತಲ್ಲಿ

ಹರವಿ ಹರಿದಳು ವರುಷಗಳಾಚೆ ವರ್ಷಾ
ಧಾರೆ ಧಾರಿಣಿಯ ಮೇಲೆ ಗಂಗೆ

ಹಿಮಾಲಯದ ಗುಪ್ತ ಗುಹಾಂತರದ ಗುಂಜನ
ಬಯಲ ನೇವರಿಸಿ ಸವರಿ ಸಲಹಿದ ಗಂಗಾಂಜನ

ಮತ್ತೀಗ ಕಡಲ ಹಾಯುವ ಘಳಿಗೆ
ನಿಶ್ಶಕ್ತ ನಿತ್ರಾಣ ಸುಯ್ಯುವಳು ಸುಳಿಯಾಗಿ

ಬೀಜಗಳ, ಹಲ್ಲುಗಳ, ತಲೆಗೂದಲ ಜಾಲ
ಕಳಚಿ ಬೀಳುತ್ತ ಸ್ವತಂತ್ರವಾದವಳ

ಹೋಗಗೊಡಿ ಹರಿಯಗೊಡಿ ಕಳಚಿ ಎಲ್ಲ ಬೇಡಿ
ಮುಕ್ತ ತಾರೆಗಳ ಸುಪ್ತ ಗುರುತ್ವದಾಗಸದಡಿ


ಹುಕ್ಕಾ
(ದೇಶ ವಿಭಜನೆಯ ಹಿನ್ನೆಲೆಯಲ್ಲಿ)

ಅವನಿಗೇನೂ ಅನಿಸುತ್ತಿಲ್ಲ
ಅಥವಾ
ಮಾತಿಗೆ ನಿಲುಕದಷ್ಟು
ಮಾತು ಮೂಕವಾಗುವಷ್ಟು
ಅಷ್ಟು

ಹೊಸಗಡಿಯ ಉದ್ದಕ್ಕೂ
ಹಾಯ್ದ ಆ ಭೀಕರ ತಾಂಡವ
ಇಂಚು ಇಂಚಾಗಿ ಎರಡೂ ಕಡೆ
ಸಮಾನಾಂತರ ಹೆಜ್ಜೆ
ಹೆಜ್ಜೆಗೊಂದರಂತೆ ಉರುಳಿದ ದೇಹ
ಸಮಾನಾಂತರದ ಅಂತರ
ಒಂದು ಶಬ್ದ, ಒಂದು ಇರಿತ

ಅವನ ದಿಟ್ಟಿನೋಟದ ತುಂಬ ನೀರು
ಒಂದೊಂದು ಬೊಬ್ಬುಳಿಯೂ ಒಂದೊಂದು
ಲೋಕ, ಅವನು ಸೃಷ್ಟಿಕರ್ತ
ಸೀಪುತ್ತ ಉಗುಳುತ್ತ
ಸೀಪುತ್ತ ಉಗುಳುತ್ತ
ನಳಿಗೆಯ ಬಾಯಿಂದ ಬೊಬ್ಬುಳಿ ಬೊಬ್ಬುಳಿ


ಹಿಮಗಿರಿಯ ಕಂದರದಿಂದ ಎದ್ದು ಬಂದವನು

ಲಾಸೆಂಜಲೀಸಿನ ನನ್ನ ಕೋಣೆಯೊಳಗೆ ಮೆಲ್ಲನೆ ಅಡಿಯಿಟ್ಟ ತಾತ
ಹಿಮಗಿರಿಯ ಕೆಸರು ಮೆತ್ತಿದ ಎರಡು ಬೇರುಗಳ ಕಟ್ಟು ತಂದಿದ್ದಾನೆ.
ತುಂಬ ತಡವಾಯ್ತು ಕ್ಷಮಿಸು ಪುಟ್ಟಿ, ರಾತ್ರಿ, ಕತ್ತಲ ದಾರಿ ದೂರ ಎನ್ನುತ್ತಾನೆ.
ಲಾಹೋರಿನಲ್ಲಿ ಅವನು ಕಟ್ಟಿದ ಕುಟುಂಬದ ಮನೆಯಿನ್ನೂ ನಿಂತಿದೆ
ಆದರದರೊಳಗೀಗ ನಮ್ಮವರಿಲ್ಲ, ನೆರೆಹೊರೆಯ ಮಂದಿ ಹೂಡಿದ್ದಾರೆ ಒಲೆ
ಯೂನಿವರ್ಸಿಟಿಯಲ್ಲಿ ಅವನೇ ಕಟ್ಟಿ ಬೆಳೆಸಿದ ಬಾಟನಿ ಲ್ಯಾಬಿನಲ್ಲೆಲ್ಲೂ
ಅವನ ಹೆಸರೂ ಇಲ್ಲ. ಅವನು ಕಲಿಸಿದ ಮಕ್ಕಳೆಲ್ಲ ವಯಸ್ಸಾಗಿದ್ದಾರೀಗ -
ಒಬ್ಬರಿಗೂ ಸಿಗಲಿಲ್ಲ ಗುರುತು. ಅವನಿಗೂ ಕಣ್ಣಿನ ಸಮಸ್ಯೆ
ಎಲ್ಲವೂ ಅರ್ಧರ್ಧ ಕಾಣುತ್ತೆ - ಕಲಿಸಿದ ಮಕ್ಕಳು, ಗೋಡೆ ಮೇಲಿನ
ಭಾರತದ ನಕ್ಷೆ. ಅದು ಬಿಡಿ, ಇದೇ ಊರಿನ ಗುಡಿ, ಸೀರೆಯಂಗಡಿ, ಹಾದಿ ಬೀದಿಯ
ಹೆಸರು ಎಲ್ಲ ಎಲ್ಲೋ ಕಳೆಯುತ್ತಿದೆ. ಹಿಮಗಿರಿಯ ನೆನಪೊಂದೇ ಇನ್ನೂ ಮಾಸದೆ
ಅವನ ಊರಿಂದ ಅದನ್ನೇರಿದ ನೆನಪೊಂದೇ ಇನ್ನೂ ಮಾಸದೆ ಬೆಚ್ಚಗಿದೆ.
ಸುಸ್ತಾಗಿದೆ ಅವನಿಗೆ. ಆಸರೆಯಾಗಲು ಆಸೆಯಾಗಿದೆ ನನಗೆ. ಆದರೆ ನಾನೂ
ಈ ನಗರದ ಹೊಳೆವ ಬಲ್ಬುಗಳ ಹೊಳೆಯಲ್ಲಿ ಮಸುಕಾಗಿ ಮಿಣುಕುತ್ತಿದ್ದೇನೆ.
ನಮ್ಮವರೆಲ್ಲ ಹೊಲದಲ್ಲಿ ಚೆಲ್ಲಿದ ಕಾಳುಗಳಂತೆ ಎಲ್ಲೆಲ್ಲೊ ಹಂಚಿ ಹೋದರು;
ಕಳೆದುಹೋದ ಗಿರಿಕಂದರಗಳಲ್ಲಿ ಒಬ್ಬರನ್ನೊಬ್ಬರು ಅರಸುತ್ತ, ತಮ್ಮನ್ನೇ ತಾವು
ಹುಡುಕುತ್ತ. ಹಾಗೋ ಎನ್ನುತ್ತಾನೆ ತಾತ ಅರೆಗಣ್ಣ ಕತ್ತಲಲ್ಲಿ ತಡಕಾಡುತ್ತ.
ಮತ್ತೆ, ಸತ್ತ ಬೇರುಗಳ ಕೈಯಾಡಿಸುತ್ತ ಅವನು ಮರೆಯಾಗುತ್ತಾನೆ.

ಸ್ವಪ್ನಗಿರಿ

ಲಾಹೋರಿನ ನೆಲದಲ್ಲಿ
ತಾತ ನೆಟ್ಟ ಅಷ್ಟೆಲ್ಲ
ಬೀಜಗಳಲ್ಲಿ
ಕೇವಲ ಮರಗಳಷ್ಟೇ
ಉಳಿದಿವೆ
ಓಲಾಡುತ್ತ.ವಿಭಜನೆಯ ಗಾಥೆ

ನಿನ್ನ ಕಳೆದುಕೊಂಡೆನೆಂದುಕೊಂಡೆ
ಇಷ್ಟುಕಾಲ
ಈ ಮುವ್ವತ್ತು ವರ್ಷಗಳ ಸುದೀರ್ಘ ಹಂಬಲದ
ಕೊನೆಗೆ
ಮತ್ತೆ ನಿನ್ನ ಮುಖ ನೋಡುತ್ತಿದ್ದೇನೆ.
ಆ ಕಂದು ಕಂಗಳು, ಹಣೆಯ ಮೇಲಿನ ಮುಂಗುರುಳು
ನಿನ್ನ ಆ ನಗು. ಮತ್ತಿದು, ಈ ಲಾಹೋರಿಗೆ ಹೋಗುವ,
ಮನೆಯನ್ನು ನೋಡುವ ಅವಕಾಶ.
ತುಂಬ ಆಸೆ ಇಟ್ಕೋಬೇಡಿ ಎಂದ ಪಪ್ಪ.
ಅದೇನೂ ಈಗ ನಮ್ಮನೆ ಅಲ್ಲ.
ಆದರೆ ನನಗೆ ಅದೇ ಗುಲ್ಮೊಹರ್ ಮರಗಳ ಸಾಲಲ್ಲಿ
ನಿಧಾನ ತೇಲುತ್ತ ಸುಳಿಸುಳಿಯಾಗಿ ಉದುರಿದ
ಅಬೋಲಿ ಬಣ್ಣದ ಹೂಹಾದಿಯಲ್ಲಿ ಕಂಡಿದ್ದು ನಮ್ಮನೆಯೇ.
ಮನೆಯ ಕದ ತೆರೆದ ಹೆಂಗಸಿಗೆ
ನಮ್ಮದೇ ಪ್ರಾಯ. ನಾವಿಲ್ಲೇ ಇದ್ದವರು....
ಭಾಗ ಆಗೋಕೂ ಮೊದಲು. ಮುಗುಳ್ನಗು.
ನಿಮ್ಮನ್ನೆ ಕಾಯ್ತಿದ್ದೆ, ಬನ್ನಿ, ಒಳ ಬನ್ನಿ.

ಮನೆಯೊಳಗೆ ಅವೇ ಮೇಜು ಕುರ್ಚಿಗಳು
ನಿನ್ನಜ್ಜನ ಮೆಚ್ಚಿನ ಸಾಗವಾನಿಯ ಟೀಪಾಯಿ,
ತಿಳಿಹಸಿರು ಸೋಫಾ ಮತ್ತದರ ಕೆತ್ತನೆಯ ಮಾಟ.
ನೋಡಬಹುದೆ ನಾವು...?
ಅಯ್ಯೊ, ದಯವಿಟ್ಟು ಬನ್ನಿ, ಇದು ನಿಮ್ಮದೇ ಮನೆ.
ಕಾರಿಡಾರಿನ ಗುಂಟ ನಡೆಯುತ್ತೇನೆ. ಮುಂಬಯಿಯಲ್ಲು
ಇದೇ ನಡಿಗೆ ನಡೆದ ನೆನಪು ಗಾಢ ಕನಸಿನ ಹಾದಿಯಲ್ಲಿ
ಇಷ್ಟೇ, ನಿನ್ನ ಕೋಣೆ, ಅಡುಗೆಮನೆಯಲ್ಲ, ಅಲ್ಲಿ ಬಾಲ್ಕನಿಯಲ್ಲಿ
ಈಗಿಲ್ಲಿ ಅಡುಗೆಮನೆಯೊಳಗೆ ವಲಸೆ ಬಂದ ಹಕ್ಕಿಯಂತೆ
ಅಕ್ಕಿ,ಗೋಧಿ,ಸಾಸಿವೆ, ಮೆಣಸುಗಳ ಇಟ್ಟ ಜಾಗವ ತಡಕಾಡಿ
ವೆ ಕೈಗಳು.

ಅವೆಲ್ಲವೂ ಇವೆಯಿಲ್ಲಿ ಹಾಗೆಯೇ, ಮತ್ತೆ
ಈ ಹೆಂಗಸೂ ನಮ್ಮಂತಿದ್ದಾಳೆ, ಮಾತು ನಮ್ಮಂತೆ.
ಏನಾಭಾವದ ಅಚ್ಛೆ
ಮೇಲ್ಗಡೆ ಹೋಗಲಾ...
ದಯವಿಟ್ಟು, ಇದು ನಿಮ್ಮ ಮನೆ.

ಮೆಟ್ಟಿಲುಗಳನೇರಿ ನಡೆದೆ. ಇಲ್ಲಿನ್ನೂ ಗಾಳಿ ಮಿಸುಕುತ್ತಿದೆ.
ನಿನ್ನಪ್ಪ ಈಗಷ್ಟೇ ಸರಿಯಿನ್ನು ನಾವೆಲ್ಲ ಹೊರಡಬೇಕು ಎಂದಂತೆ.
ಮುದ್ದು ಸುನಿಲನ್ನ ಕೊಂದಿದ್ದರವರು ಸಂತೆ ಮಾರ್ಕೆಟ್ಟಿನಲ್ಲಿ
ಅವನ ಆಯಾ ಜೊತೆಗೇನೆ. ಮೂರೇ ದಿನ ಮೊದಲು ಇದೇ
ಬೀದೀಲಿ ಮನೆಯೊಂದು ಹೊತ್ತಿ ಉರಿದಿತ್ತು. ಎಲ್ಲ ಅಲ್ಲಿ ಇಲ್ಲಿ
ಕೇಳಿದ್ದು, ಕತೆಗಳು. ಆಮೇಲೆ ಬಂತು ನಮ್ಮದೇ ಬಾಗಿಲಿಗೆ
ಭಯದ ಕಂಬಳಿ ಹೊದ್ದು
ಮುದುರಿ ಕೂತೆವು ಮೂಲೆಯಲ್ಲಿ
ಅಜ್ಜ ಈ ಗೋಡೆ, ಮೇಜು,ಟೀಪಾಯಿ,ನೆಲವನ್ನೆಲ್ಲ
ಮುಟ್ಟಿ ನೇವರಿಸಿ ಅರಸಿದರು, ಸುಮ್ಮನೇ ಮನೆತುಂಬ ಓಡಾಡಿ
ನಲವತ್ತು ವರ್ಷ ಹಿಡಿದಿತ್ತು ಈ ಮನೆಯ ಸಾಕಾರಕ್ಕೆ
ಏನೂ ತಗೋಬೇಡಿ, ನಿನ್ನಪ್ಪನ ದನಿ.
ಹಣ, ಒಡವೆ, ಒಂದು ಜೊತೆ ಬಟ್ಟೆ ಅಷ್ಟೇ.

ನಿನ್ನ ಹಾಸುಗೆಯೀಗಲೂ ಅಲ್ಲೇ ಕಿಟಕಿಯ ಪಕ್ಕ ಇದೆ
ಆದರೆ ಗೋಡೆ ಖಾಲಿ - ನೀನೀಗ ಇಲ್ಲ!
ಓ ನನ್ನ ಮುದ್ದು ಮಗನೆ, ಓಹ್! ಬರೇ ಹನ್ನೆರಡು
ವರ್ಷ ನಿನ್ನ ಋಣವಿತ್ತು ಭೂಮಿಗೆ. ಆದರೂ ಈ ಗೋಡೆಯ
ಮೇಲೆ ನೀನು ಸದಾ ನಗುವ ಮೊಗದ ಒಂದು ಚಿತ್ರವಿತ್ತು
ಈಗ ಅದೂ ಇಲ್ಲ, ನೀನಿಲ್ಲವಾದೆ ನಿಜವಾಗಿಯೂ ಈಗಿಲ್ಲ
ಉದ್ದುದ್ದ ದಿನಗಳು ಸುದೀರ್ಘ ರಾತ್ರಿಗಳು
ನೀನಿಲ್ಲಿ ಹೀಗೆ ಇದ್ದಿ ಸುರಕ್ಷಿತ ಎಂಬ ಭಾವವೊಂದಿತ್ತು ಅಲ್ಲಿ ನನ್ನಲ್ಲಿ
ಮುಚ್ಚಿದ ಬಾಗಿಲುಗಳಾಚೆ ನಿನ್ನದೇ ಕೋಣೆಯ ಗೋಡೆಯಲ್ಲಿ
ನಿನ್ನಪ್ಪ ಮೊದಲೇ ಹೇಳಿದ್ದರು ನನಗೆ
ಹರಿದೊಗೆದ ಜಗತ್ತಿನ ಹಾಳೆಯನ್ನೆಂತು ನೋಡಲಿ ನಾನು
ಈ ಭೂಮಿ, ಜನ, ಮಗನನ್ನು ಕಳೆದುಕೊಂಡ ಒಬ್ಬ ತಾಯಿ
ಓ ನನ್ನ ಮಗೂ! ಕುಸಿಯುತ್ತೇನೆ ಮೆಟ್ಟಿಲ ಬಳಿ.

ನಿಲ್ಲಿ, ಏನವಸರ, ಟೀಯನ್ನಾದರೂ ಕುಡಿವರಂತೆ
ಇಲ್ಲ, ಪಪ್ಪ ಬೇಡವೆಂದರು.
ಫ್ಲೈಟಿಗೆ ತಡವಾಗುವುದು, ಹೋಗಬೇಕು.

ಅವಳು ಒಂದು ಪ್ಯಾಕೆಟ್ ತುರುಕುತ್ತಾಳೆ ಮಡಿಲಿಗೆ
ಹಾದಿಯ ಕೊನೆಯಲ್ಲಿ ಕಾದಿದೆ ಟ್ಯಾಕ್ಸಿ
ಅಲ್ಲಿ ಸದಾ ಕಾಯುತ್ತಿರುವ ಟ್ಯಾಕ್ಸಿಯೊಂದು ಇದ್ದೇ ಇರುವುದು
ಕೊನೆಯಲ್ಲಿ. ಪಾದಗಳಡಿ ಹೂವಿನ ಮೃದು ಮಿಸುಕು
ಹಾದಿಯ ತುಂಬ ಅಬೋಲಿಯ ಪಾದಗಳ ಹಚ್ಚೆ
ಹಳದಿಗಟ್ಟಿದ ಹಾಳೆಗಳಿಂದ ನಾನು ಕಳಚಿಕೊಳ್ಳುವೆ
ಹೆಡ್ಲೈಟುಗಳಲ್ಲಿ ಇನ್ನೂ ಉಳಿದ ಆಕ್ರಂದನ....

ಸುಟ್ಟು ಕರಕಲಾದ ದೇಹಗಳ ರೈಲ್ವೇ ಬೋಗಿಗಳು
ನಿರಾಶ್ರಿತರ ರಕ್ತದಿಂದ ತುಂಬಿ ಹರಿದ ನದಿಗಳು
ರಾವಲ್ಪಿಂಡಿಯಲ್ಲಿ ಸಾವಿರಾರು ಮಂದಿಯ ಮಾರಣಹೋಮ

ಕೊನೆಯಲ್ಲಿ ಒಂದು ಕ್ಯಾನ್ವಾಸ್
ಇಷ್ಟೆಲ್ಲ ವರ್ಷ
ಬಿಡಿಸುತ್ತೇನೆ ಮೆಲ್ಲಗೆ
ಸೋಕಿವೆ ನಿನ್ನ ನಸುಗಂದು ಬೆಳ್ಳಿಗೂದಲು
ಆ ನಿನ್ನ ಕಣ್ಣುಗಳ ಮಿಂಚು, ಗುಲಾಬಿ ತುಟಿ
ಪುಟ್ಟ ಭುಜ, ಕಿರಿದಾದ ಎದೆ
ಯಿನ್ನೂ ಏರಿಳಿಯುತಿದೆ!
ಮೆತ್ತಗೆ ಹಿಡಿದೆತ್ತುವೆ ನಿನ್ನ
ನಗುತಿರುವೆ ನೀನು,
ಸುರಿದಂತೆ ಮೇಲಿಂದ ಹೂಮಳೆ


ಕವಿತೆ ಎಲ್ಲಿ

ಗಂಟೆಯಿಂದ ಹೀಗೇ
ಕೈಲಿ ಟೀ ಹಿಡಿದು
ಪದವೊಂದಕ್ಕೆಡವಿ
ಅದೆ ಎದ್ದು ಪರ್ವತವಾಗಿ
ಅದನೇರ ಹೊರಟಿದ್ದೆ
ಕೈ ಜಾರಿ ಹೋಗಿ
ಎಲ್ಲಿ ಎಲ್ಲಿ ಅದೆಲ್ಲಿ
ಕಣ್ಣಲ್ಲಿ ಕಣ್ಣಿಟ್ಟು ನೋಡು
ಪುಟ್ಟ ಶಂಖವ ಎತ್ತಿ ಕೈಲಿಟ್ಟು
ನೋಡಿದಂತೆ
ಕವಿತೆಯು ಅದರ ಅರ್ಥಕ್ಕಿಂತ ದೊಡ್ಡದು
ಪ್ರಶ್ನೆಯೆದುರು ಸದಾ ಮೀರಿಯೇ ನಿಲುವುದು
ಅದು ತೆರೆವ ಆಕಾಶ ಮುಚ್ಚಲಾಗದು ಕತ್ತಲು
ಕವಿತೆ ಅತೃಪ್ತ ಸಂತ
ಅವಿಶ್ರಾಂತ

ಶೂನ್ಯ ತಲೆಮಾರು

ಕನಿಷ್ಠ ಒಂದು ಸಲ ಸತ್ತಿದ್ದೇವೆ
ಹುಟ್ಟಿದ್ದೇವೆ ಮತ್ತೆ
ಅಥೆನ್ನಾಳಂತೆ ಅಯೋನಿಜರಾಗಿ

ನಮ್ಮ ಭೂತ ಅನಾಥ, ಭವಿಷ್ಯ ಪರಭಾರೆ
ಯಾರು ಆಗಿದ್ದೆವು ಆಗಲಿದ್ದೇವೆ ಯಾರಿಗೆ ಏನು

ನಿಮ್ಮೊಳಗಾಗುವಾಸೆ ಅನ್ಯವಾಗುಳಿವ ಬಯಕೆ
ಅಲ್ಲಿಗೇ ಬಿಟ್ಟುಬಂದಲ್ಲಿಗೇ ತುಯ್ಯುವ ನೆನಕೆ

ಸತ್ತು ಮರೆಯಾದವರ ಜೊತೆ ನಿರಂತರವಿದೆ ಮಾತುಕತೆ
ಮನದಲ್ಲೆ ಇನ್ನೂ ಆಡಿದೆ ಬದುಕಿನುಸಿರು
ಬಿಟ್ಟುಬಂದ ಆ ದಿನದಿಂದೇನೇನೇನೂ ಬದಲಾಗಿಲ್ಲ ನಮ್ಮದೀದಿನ

ಎಷ್ಟು ನಾಲಗೆ ನಮಗೆ, ಪುಟಿವುದು ಕಾರಂಜಿಯಂತೆ ಹಿಂಗ್ಲೀಷ್
ಕಂಗ್ಲೀಷ್ ಡಾಟ್ಕಾಂ ಡ್ಯಾಶ್ ಎಸ್ಸೆಮ್ಮೆಸ್ ಝಟ್ಫಟ್ ಫಟಾಫಟ್

ಉಕ್ಕೇರುವ ಕಡಲು, ನಮ್ಮ ತಾಂಡವ ನೃತ್ಯ
ಕಠಿಣ ಹೃದಯ, ನಿಶ್ಶಕ್ತ ಜಾಗೃತಿಯ ಪಥಮಾರ್ಗ

ಮೃಗ ವಿ ನಯನಿ

ಈ ಎಲ್ಲ ಮರಗಳೂ ಉಳಿಯುತ್ತವೆ ಇಲ್ಲಿ ಪುಸ್ತಕಗಳಾಗಿ
ತೆರೆವ ಒಂದೊಂದು ಪುಟಗಳು ಮಂದಾನಲವ ಬೀಸಿ

ಮನದಲ್ಲಿ ಫಡಫಡಿಸಿ ರೆಕ್ಕೆ ಪದಗಳು ಮರ್ಮರ ಸಂಚಲಿಸಿ
ತಿಕ್ಕಿ ತೀಡಿ ತೂರಾಡಿ ರೆಂಬೆ ಓಲಾಡಿ ಕೊಂಬೆ ಮೆಲ್ಲನೇ ಬೇರಿಳಿಸಿ

ಬೆಳೆದು ಕಾಡುಗಳಾಗಿ ಕಾನನ ತಂತಂನನನ ಪುಸ್ತಕಗಳಾಗಿ

ಕನಸೊಳಗಿಂದ ಕರಿಮೋಡವೊಂದು ಸರಿದು ಹೋದಂತೆ
ಕೊನೆಯ ಕಾಡುಕೋಣ ಕಾಡೊಳಗೆ ಕಣ್ಮರೆ

ಇನ್ನು ಕಾಡುಗಳೇಕೆ ನಮಗೆ, ನಮ್ಮ ನವನವೀನ ಮೃಗೀಯ
ಪಿಪಾಸೆಗಳೆಲ್ಲ ಇಲ್ಲೆ ನರನಾಡಿಗಿಳಿದು ದೇಹದೊಳಗರಳುತಿವೆ

ಮನದೊಳಗೆ ಸುಳಿಯುತಿವೆ, ಅಳಿದುಳಿದ ಜಗವೆಲ್ಲ
ಇಲ್ಲೆ ನಮ್ಮೊಳಗೆ ಮನದೊಳಗೆ ಕೈಯಳತೆಯೊಳಗೇ ಬಿದ್ದಿವೆ

ಈಗಿನ್ನು ಹಾದಿಬೀದಿ ರಸ್ತೆಗಳನೆಲ್ಲ ಒಂದಿಂಚೂ ಬಿಡದೆ
ಮೂಸಿಮೂಸಿ ಅರಸಬೇಕು ಕೊಲ್ಲುವುದಕ್ಕೇನಾದರೂ
ಈಗ ಬೇಕೇಬೇಕು. ಇಲ್ಲಾಂದ್ರೆ ಜೀವಂತಿಕೆಯ ಕುರುಹಾಗಿ
ಪುಟಪುಟನೆ ಪುಟಗಟ್ಟಲೆ ಅಲೆದಾಡಬೇಕುLuv-A-JAVA Cafeಯ ಒಂದು ಪೇಂಟಿಂಗ್


ಹಿಂದಿನ ಆ ಗೋಡೆ ಮೇಲಿನ ಪೇಂಟಿಂಗ್
ಇಡೀ ಕೋಣೆ ತುಂಬ ತುಂಬಿಕೊಂಡಿದೆ
ಆ ಬೆಲ್ಲಿಡ್ಯಾನ್ಸರಿನ ಸ್ಕರ್ಟ್ ಇಡೀ ಕೋಣೆಗೆ
ಹರಡಿಕೊಂಡಿದೆ, ಬಿಚ್ಚಿ ನೆರಿಗೆ ನೆರಿಗೆಯಾಗಿ
ಡೊಳ್ಳುಹೊಟ್ಟೆಯ ಹುಕ್ಕಾವಾಲರು ಫ್ರೇಮಿನಿಂದ
ಹೊರಗುಕ್ಕುವಷ್ಟು ಚಾಚಿಕೊಂಡಿದ್ದಾರೆ ಸುತ್ತಲೂ
ಪೇಂಟಿಂಗ್ ಒಳ ಹೋಗಲು ಒಂದಿಂಚು ಸಂದುಕಟ್ಟಿಲ್ಲ
ಅಷ್ಟೂ ಭರ್ತಿ, ಚಿನ್ನದ ಬಣ್ಣದ ಅದರ ಕಟ್ಟು ಕೂಡಾ
ಬಿಟ್ಟುಕೊಳ್ತಿಲ್ಲ ಯಾರನ್ನೂ ಒಳಗೆ.
ಕ್ಯಾಶಿಯರನ ರೇಡಿಯೋ ವಟಗುಟ್ಟುತ್ತಲೇ ಇದೆ
ಸೂಯಿಸೈಡ್ ಬಾಂಬರಿನ ದೈನಂದಿನ ಬಲಿಯ ಲೆಕ್ಕ
ರಕ್ತ ಮಾಂಸ, ಮೂಳೆಗಳೆಲ್ಲ ಚಿಂದಿಯಾದ ಚಿತ್ರ ಕತೆ
ಆ ಮಿನುಮಿನುಗುವ ಬೆಳಕಿನ ಧಾರೆ ಎಲ್ಲೆಲ್ಲೂ ಹಾಸಿದ ರತ್ನಗಂಬಳಿ
ವೈಭವದ ರೇಶ್ಮೆಯ ತೆರೆತೆರೆ
ಎದ್ದು ಕೊಡವಿ ಬಿಡ್ತೇನೆ ಒಮ್ಮೆ ಎನಿಸುವುದು.

ಮರಳಿ ಮನೆಗೆ


ಸೂಟುಕೇಸುಗಳು ತಯಾರು, ಅವನು ಕಾಯ್ತಿದಾನೆ
ಮರಳಲು ಮನೆಗೆ - ಆ ಸುಮಧುರ ಪರಿಮಳ

ದ ತಾಜಾ ಜಂಬೂನೇರಳೆ ಬಣ್ಣ
ದ ನಾಲಗೆ, ಹಲ್ಲು, ಕೈಬಾಯಿ ಎಲ್ಲ ಜಾಂಬಳಿ

ಇಟ್ಟಲ್ಲೇ ಕರಗಿ ನಾಲಗೆಯಲ್ಲೆ ರುಚಿನಿಲ್ಲುವ
ಅಮ್ಮನಡುಗೆ
ತಂಗಿ ಮೀನಾ

ಹೇಳಿದ್ದು, ನಿಧಾನ ನಿಧಾನ
ಅವನಿಗೆ. ನೀ ತುಂಬಾ ಗಡಿ
ಬಿಡಿ ಮಾಡ್ತಿದೀ

ಅಪ್ಪ ಮಾತ್ರ "ನೀನು ಚೆನ್ನಾಗಿ
ಕಲಿತು ಮುಂದೆ ಬರದೇ ಇದ್ರೆ

ಹಿಂದೆ ಬಿದ್ದು ಬಿಡ್ತೀ
ನಮ್ಮ ಹಾಗೇ ಆಗ್ತೀ"

ತುಂಬ ದೂರ ಹೋಗಿ ಬಿಟ್ನಾ ಅವನು
ಅವನಿಗಿಂತ್ಲೂ ದೂರ ಹೊರಟ್ನೇ....

ವರ್ಷಗಳೇ ಜರ್ರೆಂದು ಜಾರಿ
ನಮ್ಮ ಮಧ್ಯೆ - ಮಾ, ಪಾ, ಮೀ ನಾ

ಒಂದೆಡೆ
ಮತ್ತವನು
ಆ ಕಡೆ
ಜೊತೆಗೆ

ಒಂದು ದೊಡ್ಡ ಬಂಗ್ಲೆ, ಕಾರು, ತೇಲುದೋಣಿ
ಮತ್ತೊಂದಿಷ್ಟು ಖಾಲಿ ಸೂಟುಕೇಸುಗಳು

ಒಂಟಿ, ಮನೆ

ಆ ನನ್ನ ಕೋಣೆ
ಕರೆಯುತ್ತಲೇ ಇದೆ ನನ್ನ

ಜಗುಲಿಗುಂಟ ತೆರೆದಿದೆ ಹಾದಿ
ಅಲ್ಲಿ ಅಮ್ಮ (ನ ಬದಲಿಗೆ ಒಂದು ಉಂಡಾಡಿ ಬೆಕ್ಕು)

ನನ್ನ ಹದಿಮೂರನೇ ಬರ್ತ್ಡೇಗೆ
ನೀ ಕೊಟ್ಟ, ನಾ ಕಳೆದ ಪೆನ್ನು

ಕಾರ್ಖಾನೆಯಿಂದ ಹೊರಬಿದ್ದ ಕೆಟ್ಟ ಹಾಲು
ಭುವಿಯ ಮೊಲೆ ಕುಡಿವ ಕಡಲ ಕಡು ಮೊರೆತ

ಮಳೆನೀರು ರಾಚುತ್ತಿರುವ ಕಿಡಕಿ
ಯ ಸದ್ದಿನಲ್ಲಿ ಕೇಳಿಸಿದಂತಿರುವ ನನ್ನದೇ ಹೆಸರು

ಆಟದ ಗನ್ನು ಹಿಡಿದು ಆಡುತ್ತಿದ್ದ ನೀನು
ಬದನೆ ಬಾರ್ತು ಬೆಂದ ಹಸಿ ಪರಿಮಳ

ಮುಂಬಯಿ, ಹೆಡ್ಲಿ, ಲಾಸೆಂಜಲೀಸ್, ಸ್ಯಾನ್ಫ್ರಾನ್ಸಿಸ್ಕೊ
ಹೆಸರುಗಳಲ್ಲಿ ಕರಗುತ್ತಿರುವ ನಮ್ಮದೇ ಗತ-ಭೂತ

ಕಭೀಕಭೀ ಮೆರೆ ದಿಲ್ ಮೆ
ಖಯಾಲ ಆತಾ ಹೇ....

ಹೊರ ಹೋಗುವ
ಮತ್ತೆ
ಹಿಂದಿರುಗುವ

ಭರವಸೆ ಹುಟ್ಟಿಸಿದ್ದ ಆ ಸ್ನೇಹ
ಕಡುಬಣ್ಣ, 101, ದಕ್ಷಿಣ, ರೂಟ್ ನಂ.89

ನಿನ್ನ ಕೊನೆಯ ಅಪ್ಪುಗೆಯ ಬಿಸುಪು
ತುಂಬಿದ ಗುಹೆ, ಅನೂಹ್ಯ ಅಮೂರ್ತ

ಯೋಚನೆಗಳ ಕವಾಟ ಪಟಪಟ
ಮನದ ಉಯ್ಯಾಲೆ ತಟವಟಅಸ್ಪೃಶ್ಯರು

1. ತನ್ನ ಚರ್ಮವ ಕಳಚಿಟ್ಟು ದೇಹದ ಬಣ್ಣದ
ಮೊಸಾಯಿಕ್ನಂಥ ಗೋಡೆಯನ್ನುಟ್ಟವನು
ಶೇವಿಂಗಿಗೆ ಹೊಸಬಣ್ಣವನ್ನು ಬಳಿಯೆ ತಯಾರು

2. ರಬ್ಬರ್ ಸ್ಲಿಪ್ಪರುಗಳಲ್ಲಿ ಅವಳು ಚರಪರ ನಡೆದಾಡಿದಂತೆಲ್ಲ
ಕೊಳೆತ ತರಕಾರಿಗಳು ಅವಳ ಕಾಲನ್ನು ಹದವಾಗಿ ರಸಸೀರಿ ತೊಳೆದಿವೆ

3. ಡ್ರೈನೇಜು ಪೈಪುಗಳ ರಾಗತಾನಪಲ್ಲವಿ ಬಲ್ಲವನ
ಕೈಬೆರಳುಗಳು ಇದೀಗ ಕಟ್ಟಿಕೊಂಡ
ಮಲದ ಕಗ್ಗಂಟು ಬಿಡಿಸಿ ಪೈಪಿನಗುಂಟ ಎಲ್ಲ ನಿರಾಳ

4. ನೊಂದವರ ವಿದಾಯದ ಬಳಿಕ
ಸತ್ತದೇಹದ ಬಳಿ ಉಳಿದ
ಅವನೊಬ್ಬನೇ
ಜೊತೆಗಾರ

5. ಹಗಲು ಇರುಳಿನ ನಡುವೆ ಹರಿದಾಡುವ
ನೆರಳುಗಳು ಎಲ್ಲರೂ.
ನೆಲವ ಸೋಕುವ ಗುಂಡಿಗೆ
ಇಲ್ಲ ಇಲ್ಲಿ ಯಾವ ನೆರಳಿಗೂ.


ಇಲ್ಲಿನ ಕವಿತೆಗಳಿಂದ ತೀರ ಭಿನ್ನವಾದ ಆಶಯ, ಆಕೃತಿ ಎರಡೂ ಇರುವ ಇತರ ಹಲವಾರು ಕವನ ಗಳು ಈ ಸಂಕಲನ ದಲ್ಲಿವೆ. ಅವುಗಳನ್ನು ಪೂರ್ತಿಯಾಗಿ ಒಂದು ಗುಕ್ಕಿನಲ್ಲಿ ಓದುವುದು ಚೆನ್ನಾಗಿರುತ್ತದೆ. ಅಥೆನಾ ಇಲ್ಲಿ ಬರೆದಿರುವ ಬಹು ಮಹತ್ವದ ಗೊಂಡೆಗಂಟುಗಳ (knots) ಕುರಿತ ಯಾವುದೇ ಕವನವನ್ನು ನಾನು ಅನುವಾದಿಸಿಲ್ಲ. ಹಾಗೆಯೇ ಅವರು ಪಂಕ್ತಿ ವಿನ್ಯಾಸವನ್ನು ಸಂಯೋಜಿಸಿ, ಕವಿತೆ ಮತ್ತು ಅದು ನಿಂತ ಹಾಳೆಯ ನಡುವಿನ ಅನುಸಂಧಾನವನ್ನು ಶೋಧಿಸುವ ಉದ್ದೇಶದಿಂದಲೇ ಬರೆದ ಕವಿತೆಗಳನ್ನು ನನ್ನ ಭಾಷೆಯಲ್ಲಿ ಪುನರ್ರಚಿಸುವ ಸಾಹಸಕ್ಕೂ ಕೈ ಹಾಕಿಲ್ಲ. ಕವಿಯೊಬ್ಬನ ಹೃದಯಕ್ಕೆ ನೇರ ಪ್ರವೇಶಿಕೆಯನ್ನೊದಗಿಸುವ ಕವಿತೆಗಳ ವಿಚಾರದಲ್ಲಿ ಸದಾ ಕಾಲ ‘ಮಿಗು’ವ ಸಂಗತಿಗಳೇ ಹೆಚ್ಚು. ಹಾಗೆ ಯಾವ ಕವಿಯ ಪರಿಚಯವೂ ಎಂದೂ ಸಮಗ್ರವಾಗುವುದು ಸಾಧ್ಯವಿಲ್ಲ. ಹೀಗೆ ಅದು ಸದಾ ಒಡ್ಡುವ ಸವಾಲು ಮತ್ತು ನೀಡುವ ಆಹ್ವಾನವೇ ಅದರ ಆಕರ್ಷಣೆ ಮತ್ತು ಸೌಂದರ್ಯ ಕೂಡ.
(ಈ ಲೇಖನ ಪ್ರಜಾವಾಣಿ ಸಾಪ್ತಾಹಿಕ ಮುಕ್ತಛಂದದಲ್ಲಿ ಪ್ರಕಟಿತ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, December 24, 2016

ಓದು ಎಂಬುದು ಲಕ್ಷುರಿ

ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಲೇಖನವೊಂದರಲ್ಲಿ ಓದುವ ಪ್ರಕ್ರಿಯೆಯ ಬಗ್ಗೆ ಬಂದ ಒಂದು ಲೇಖನದಲ್ಲಿ ಪ್ರದೀಪ್ ಸೆಬಾಸ್ಟಿಯೆನ್ ಹೇಳುತ್ತಾರೆ, ಸದ್ಯಕ್ಕೆ ನಮಗೆ ನಮ್ಮದೇ ಒಂದು ಖಾಸಗಿ ಏಕಾಂತಕ್ಕೆ ಮರಳ ಬೇಕೆಂದರೆ ಉಳಿದಿರುವ ಕೆಲವೇ ಕೆಲವು ಉಪಾಯಗಳಲ್ಲಿ ಓದು ಒಂದು. ಈ ಜಗತ್ತಿನ ಜಂಜಾಟಗಳಿಂದ ಸ್ವಲ್ಪ ಹೊತ್ತಿನ ಮಟ್ಟಿಗಾದರೂ ಮುಕ್ತರಾಗಿ ನಮ್ಮೊಳಗೆ ನಾವು ಸೇರಿಕೊಳ್ಳುವ, ನಮ್ಮನ್ನು ನಾವು ಪಡೆದುಕೊಳ್ಳುವ ಒಂದು ಹಾದಿ ಅದು. ಓದು ನಮ್ಮನ್ನೇ ನಮಗೆ ದಕ್ಕಿಸಬಲ್ಲ ಒಂದು ಅದ್ಭುತ ದಾರಿ ಎನ್ನುವುದು ಅವರ ಬಹುಮುಖ್ಯ ಮಾತು.

ಕಳೆದ ಶತಮಾನದ ಕೊನೆ ಕೊನೆಯ ತನಕ ಓದುವುದು ಎಂದರೆ ಅದು ಕಾದಂಬರಿಗಳನ್ನೋ, ಸುಧಾ, ತರಂಗ, ಪ್ರಜಾಮತದಂಥ ಪತ್ರಿಕೆಗಳನ್ನೋ ಎಂತಲೇ ತಿಳಿಯಲಾಗುತ್ತಿತ್ತು. ಆ ನಂತರ ಇದ್ದಕ್ಕಿದ್ದಂತೆ ಸಂಜೆ ಪತ್ರಿಕೆಗಳ ಭರಾಟೆ, ಒಂದಕ್ಕಿಂತ ಹೆಚ್ಚಿನ ದಿನಪತ್ರಿಕೆಗಳ ಭರಾಟೆ ತೊಡಗಿತು. ಅಪರಾಧ ಕುರಿತ ಸುದ್ಧಿ, ವದಂತಿಗಳ ಕಡೆಗೆ ವಿಪರೀತ ಆಸಕ್ತಿ ಹೆಚ್ಚಿ ರಾಜಕೀಯ ಹಗರಣಗಳನ್ನೇ ಕೇಂದ್ರವಾಗಿರಿಸಿಕೊಂಡು ಬರುತ್ತಿದ್ದರೂ ಸಾಹಿತ್ಯಕ್ಕೆ ಅವಕಾಶ ನೀಡಿದ್ದ ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರು ಸೇರಿದಂತೆ ಜ್ವಾಲಾಮುಖಿ, ಅಮೃತದಂಥ ಪತ್ರಿಕೆಗಳ ಸ್ಥಾನವನ್ನು ಕ್ರಮೇಣ ಸ್ಥಳೀಯ ಲಫಡಾಗಳ, ಕೊಲೆ, ಅತ್ಯಾಚಾರಗಳ ಕುರಿತ ಅಂತೆಕಂತೆಗಳನ್ನೂ ರೋಚಕವಾಗಿ ವರದಿ ಮಾಡುವ ಸಂಜೆ ಪತ್ರಿಕೆಗಳ ಅಬ್ಬರ ಆವರಿಸಿಕೊಂಡಿತು. ಟೀವಿ ಚಾನೆಲ್ಲುಗಳ ಸಂಖ್ಯೆಯೂ ವೃದ್ಧಿಸಿದ್ದು ಸರಿಸುಮಾರು ಇದೇ ಕಾಲದಲ್ಲಿ. ಚಾನೆಲ್ಲುಗಳು ಕೂಡ ಕ್ರೈಂಟೈಮ್, ಕ್ರೈಂಸ್ಟೋರಿ ಎಂದೆಲ್ಲ ರೋಚಕ ವರದಿಗಳಿಗೆ ಸಮಯ ಮೀಸಲಿಡುವುದು ಅನಿವಾರ್ಯವಾಯಿತು. ಇದರ ಜೊತೆ ಪುನರ್ಜನ್ಮ, ಅತೀಂದ್ರಿಯ ಲೋಕ, ಕಲ್ಪನಾತೀತ ವಿದ್ಯಮಾನಗಳು ಸೇರಿಕೊಂಡವು. ವದಂತಿ, ಕಲ್ಪನೆ, ಮೂಢನಂಬಿಕೆ ಮತ್ತು ವಾಸ್ತವಗಳ ಒಂದು ಕಲಸುಮೇಲೋಗರವೇ ಪುಂಖಾನುಪುಂಖ ಬರತೊಡಗಿದ್ದು ಹೀಗೆ. ಅಷ್ಟೇಕೆ, ಅರ್ಧಗಂಟೆ ಕಾಲ ಟೀವಿ ವಾಹಿನಿಗಳು ಪ್ರಸರಿಸುತ್ತಿದ್ದ ವಾರ್ತೆಗಳ ಸ್ವರೂಪವೇ ಬದಲಾಗಿ ಅದರಲ್ಲಿ ಹೆಚ್ಚು ಹೆಚ್ಚು ಸಾಮಾನ್ಯ ಜನರ ನಾಪತ್ತೆ, ಕೊಲೆ, ವೈವಾಹಿಕ ಲಫಡಾ, ಓಡಿ ಹೋಗಿದ್ದು, ಕಾಣೆಯಾಗಿದ್ದು, ಹೆಂಡತಿಯನ್ನು ಬಿಟ್ಟಿದ್ದು, ಸುಟ್ಟಿದ್ದು, ವಾಮಾಚಾರ, ಮಠ-ಸ್ವಾಮಿಗಳ ಹಗರಣಗಳೇ ಪ್ರಧಾನವಾಯಿತು. ಪತ್ರಿಕೆಗಳಲ್ಲಿ ಧಾರಾವಾಹಿಗಳು, ಸಣ್ಣಕತೆಗಳು ಕ್ರಮೇಣ ಸಣ್ಣಗಾದವು ಇಲ್ಲವೇ ಮಾಯವಾದವು.


ತದನಂತರ ಸ್ಮಾರ್ಟ್ ಫೋನುಗಳ ಅಲೆ ತೊಡಗಿದ್ದು. ಈಗಂತೂ ಫೇಸ್ ಬುಕ್, ವ್ಯಾಟ್ಸಪ್ ತರದ ಸಾಮಾಜಿಕ ಜಾಲತಾಣಗಳು, ವರ್ತುಲಗಳು ಬಹು ಜನಪ್ರಿಯ. ಯುವ ಜನಾಂಗವನ್ನು ಇನ್ನಿಲ್ಲದಂತೆ ಕಾಡುವ ಆತ್ಮರತಿಯ ಪೋಷಣೆ ಮತ್ತು ಅಸ್ಮಿತೆಯ ಹುಡುಕಾಟದಂಥ ಪ್ರಮುಖ ತುಡಿತಗಳಿಗೆ ಇಲ್ಲಿ ವಿಪುಲ ಅವಕಾಶ. ಇಲ್ಲಿ ಕವಿಗಳು, ಚಿತ್ರಕಾರರು, ಛಾಯಾಚಿತ್ರಕಾರರು, ವರದಿಗಾರರು, ಹಾಡುಗಾರರು, ಸಾಮಾಜಿಕ, ರಾಜಕೀಯ, ಆರ್ಥಿಕ ಮುಂತಾದ ಜ್ವಲಂತ ಸಮಸ್ಯೆಗಳ ವಿಶ್ಲೇಷಕರು, ಕ್ರಾಂತಿಕಾರರು, ಅಭಿಮತ ಸಂಗ್ರಾಹಕರು, ಉಪನ್ಯಾಸಕರು ಹುಟ್ಟಿಕೊಳ್ಳುವ ಬಗೆಯನ್ನು ಕಾಣುವುದು ಸಾಧ್ಯವಿರುವಂತೆಯೇ ಪ್ರಧಾನ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುವವರು, ಅಲ್ಲಿ ವಿಫಲವಾದವರು, ಅಲ್ಲಿ ಪ್ರವೇಶವೇ ಸಿಗದ ಹಂತದಲ್ಲಿರುವವರು, ಅಲ್ಲಿ ಗಟ್ಟಿಗೊಳ್ಳಲು ಇಲ್ಲಿ ವೇದಿಕೆ ನಿರ್ಮಿಸಿಕೊಳ್ಳುತ್ತಿರುವವರು ಕೂಡ ಕಾಣಸಿಗುತ್ತಾರೆ. ಆದರೆ ಇಲ್ಲಿಯೂ ಮಹಾಪೂರದ ಸಮಸ್ಯೆಯಿದೆ. ಯಾರೊಬ್ಬರಿಗೂ ಹೆಚ್ಚು ಹೊತ್ತು ವೇದಿಕೆಯ ಮೇಲೆ ನಿಂತಿರಲು ಅವಕಾಶವಿಲ್ಲ. ಹಾಗಾಗಿ ಇಲ್ಲಿ ಬಿಕರಿಯಾಗುವ ಸರಕೂ ಸ್ಥಾಯಿಯಾಗುವ ಗುಣಮಟ್ಟದ್ದಲ್ಲ, ಅದು ಕೇವಲ ಈ ಕ್ಷಣಕ್ಕೆ ಸಲ್ಲಬೇಕಾದ್ದು, ಚಲನಶೀಲ ಜಗತ್ತಿನ ಸಂಚಾರೀ ಭಾವದ ಅಭಿವ್ಯಕ್ತಿಯ ಮಟ್ಟದಲ್ಲೇ ಇರುತ್ತದೆ ಎನ್ನುವ ಆರೋಪ ತೀರ ಹುರುಳಿಲ್ಲದ್ದೂ ಅಲ್ಲ.

ಸುಮಾರು ದಶಕದ ಹಿಂದೆ ಡಾ||ಭಾಸ್ಕರ ಚಂದಾವರ್ಕರ್, ಸಂಗೀತ ಎಂಬ ಅದ್ಭುತವಾದ ಒಂದು ಸೃಜನಶೀಲ ಕಲೆ ಹೇಗೆ ಕ್ಯಾಸೆಟ್ಟುಗಳಲ್ಲಿ, ಸೀಡಿಗಳಲ್ಲಿ ಜಡವಾಗುತ್ತ ಹೋಯಿತು, ಸಂಗೀತ ಕಚೇರಿಗಳು ಹೇಗೆ ತೆರೆಮರೆಗೆ ಸರಿಯತೊಡಗಿದವು ಎಂದೆಲ್ಲ ವಿವರಿಸುತ್ತಲೇ ಮ್ಯೂಸಿಕ್ ಚಾನೆಲ್ಲುಗಳಿಂದ ಹೇಗೆ ಇವತ್ತು ಸಂಗೀತವೆಂಬುದು ಕೇವಲ "ಕೇಳುವ" ಕಲಾಮಾಧ್ಯಮವಾಗಿ ಉಳಿದೇ ಇಲ್ಲ ಎನ್ನುವುದನ್ನು ವಿವರಿಸಿದ್ದರು. "ಸಾಧ್ಯವಾದಷ್ಟೂ ಕಡಿಮೆ ಬಟ್ಟೆ ತೊಟ್ಟ ನೃತ್ಯಗಾತಿಯರು, ಜಗಮಗಿಸುವ, ಸದಾ ಅಕರಾಳ ವಿಕರಾಳ ಚಲಿಸುವ ಬಣ್ಣಬಣ್ಣದ ಸ್ಪಾಟ್ಲೈಟುಗಳು, ಕಣ್ಣು ನೋಡಿ ಮನಸ್ಸು ಗ್ರಹಿಸುವ ಮೊದಲೇ ತೆರೆಯಿಂದ ಚಕಚಕನೆ ಮಾಯವಾಗುವ ಶಾಟ್ಗಳು, ದೇಹವನ್ನು ಚಿತ್ರವಿಚಿತ್ರವಾಗಿ ಕುಲುಕಿಸುವ ಪ್ರಚೋದನಕಾರಿ ನೃತ್ಯದ ಒಂದು ಮಾಯಾಲೋಕದ ದೃಶ್ಯಗಳಲ್ಲಿ ದಿನದ ಇಪ್ಪತ್ತನಾಲ್ಕು ತಾಸೂ ಬಿತ್ತರಗೊಳ್ಳುತ್ತಲೇ ಇರುವುದೆಲ್ಲ ಸಂಗೀತ. ಇದು ಈ ಚಾನೆಲ್ಲುಗಳ ಸಂಗೀತದ ವ್ಯಾಖ್ಯಾನ." ಚಂದಾವರ್ಕರ್ ಮುಂದೆ ಹೇಗೆ ಇಂಥ ಸಂಗೀತ ಮನಸ್ಸಿನ ಏಕಾಗ್ರತೆಯ ಸಾಮರ್ಥ್ಯವನ್ನೂ ಛಿದ್ರವಿಚ್ಛಿದ್ರಗೊಳಿಸಬಲ್ಲ ಪರಿಣಾಮಕಾರತ್ವ ಹೊಂದಿರುತ್ತದೆ ಎನ್ನುವುದನ್ನು ವಿವರಿಸಿದ್ದರು.

ಸಂಗೀತದ ಕುರಿತಂತೆ ಚಂದಾವರ್ಕರ್ ಅವರು ಆಡಿದ ಮಾತು ಬದಲಾದ ಸ್ವರೂಪದ ಓದಿಗೆ ಕೂಡ ಅನ್ವಯಿಸುತ್ತದೆ. ಬರಬರುತ್ತ ಪತ್ರಿಕೆಗಳಲ್ಲಿ ಕತೆಗಳ ಗಾತ್ರ ಚಿಕ್ಕದಾಗುವುದು, ಹೆಚ್ಚೇನೂ ಆಳವಿಲ್ಲದ, ಆತ್ಮವಿಲ್ಲದ ಬರಹಗಳೇ ಓದುಗರಿಗೆ ಇಷ್ಟವಾಗುವುದು, ಸೀಮಿತ ಅವಧಿಯ ಯಕ್ಷಗಾನ ಬಯಲಾಟಗಳು ಜನಪ್ರಿಯವಾಗುವುದು, ಸಿನಿಮಾಗಳ ಅವಧಿ ಕಡಿತಗೊಳ್ಳುವುದು, ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಹೆಚ್ಚು ಜನಾಕರ್ಷಕವಾಗುವುದು, ಓದಿನಲ್ಲೂ ಕಣ್ಣಾಡಿಸುವುದು, ನೋಡುವುದು ಎಂಬ ಬಗೆ ಹುಟ್ಟಿಕೊಳ್ಳುವುದು ಎಲ್ಲವೂ ಆಧುನಿಕ ಮನುಷ್ಯನ ಸಮಯದ ಅಭಾವವನ್ನಷ್ಟೇ ಸೂಚಿಸುತ್ತಿಲ್ಲ. ಸುದೀರ್ಘಾವಧಿಯ ವರೆಗೆ ಅವನು ಯಾವುದೇ ಒಂದು ಸಂಗತಿಗೆ ಅಂಟಿಕೊಳ್ಳಲಾರ ಎನ್ನುವುದನ್ನೂ, ಅವನ ಏಕಾಗ್ರತೆ ಅಷ್ಟರಮಟ್ಟಿಗೆ ಛಿದ್ರಗೊಂಡಿರುವುದನ್ನೂ ಸೂಚಿಸುತ್ತಲೇ ಅವನ ಸಹನೆ, ವಿವೇಚನೆ ಮತ್ತು ಸ್ಥಿಮಿತದ ಬಗ್ಗೆಯೂ ಬೊಟ್ಟು ಮಾಡುತ್ತದೆ.

ಒಂದು ಕಾಲಕ್ಕೆ ಸಮಾಜದ ಎಲ್ಲ ವರ್ಗಕ್ಕೂ ಓದು ಮುಕ್ತವಾಗಿರಲಿಲ್ಲ. ಓದು ಬರಹ ಬಲ್ಲವರಿಗೂ ಅದು ಬೇರೆ ಬೇರೆ ಕಾರಣಗಳಿಂದ ದುರ್ಲಭವಾಗಿತ್ತು. ಸಿನಿಮಾ, ಯಕ್ಷಗಾನ, ತಾಳಮದ್ದಲೆ, ನಾಟಕ, ಹರಿಕಥೆ, ರೇಡಿಯೋ, ಟೀವಿ ಎಲ್ಲ ಇರುವಾಗಲೂ ಓದು ತನ್ನ ಮಹತ್ವ ಉಳಿಸಿಕೊಂಡಿತ್ತು. ಮತ್ತು ಆ ಓದು ಪುರಾಣ, ಕಾವ್ಯ, ಕತೆ-ಕಾದಂಬರಿಗಳ ಚೌಕಟ್ಟಿನಲ್ಲಿತ್ತು. ಈ ಯಾವತ್ತೂ ಪರ್ಯಾಯಗಳು ಮನುಷ್ಯನ ಏಕಾಗ್ರತೆಯ ಮೇಲೆ ಇವತ್ತಿನ ಮಾಹಿತಿ/ವಿಚಾರ/ರಂಜನೆ ಎಲ್ಲದರ ಬಾಹುಳ್ಯ ಉಂಟುಮಾಡಿದಂಥ ಪ್ರಹಾರ ಮಾಡಿರಲಿಲ್ಲ ಎನ್ನುವುದು ಬಹುಮುಖ್ಯ ಅಂಶ. ಇವತ್ತಿನ ಸ್ಮಾರ್ಟ್ಫೋನ್, , ಟ್ಯಾಬ್ಲೆಟ್ ಮೂಲಕ ಸಿಗುವ ಫೇಸ್ಬುಕ್, ವ್ಯಾಟ್ಸಪ್ ಮಾದರಿಯ ಹಲವು ಹತ್ತು ಸಾಮಾಜಿಕ ಜಾಲತಾಣಗಳು, ಇಲೆಕ್ಟ್ರಾನಿಕ್ ಮಾಧ್ಯಮದ ಹೊಸಬಗೆಯ ಆಟಗಳು, ಸದಾ ಇಯರ್ ಪ್ಲಗ್ ಸಿಕ್ಕಿಸಿಕೊಂಡು ಯುವತಲೆಮಾರು ಕೇಳುವ ಸಂಗೀತ ಎಲ್ಲವೂ ಒಂದು ಕೇಂದ್ರ ಸಂವೇದನೆಗೆ ಅವನ ಭಾವಕೋಶವನ್ನು ಒತ್ತಟ್ಟುಗೊಳಿಸಿ ಒಂದು ಅನುಭವ ನೀಡುವುದಕ್ಕೆ ಬದಲಾಗಿ ವಿಭಿನ್ನ ಸಂವೇದನೆಗಳ, ಪರಸ್ಪರ ಸಂಬಂಧರಹಿತ ಅನುಭವದ ಬೇಕಾಬಿಟ್ಟಿ ಸಂಚಾರಕ್ಕೆ ಹೆಚ್ಚು ಒತ್ತು ಕೊಡುತ್ತಿರುವಂತೆ ಇವೆ. ಅಂಥ ಮಲ್ಟಿಶಿಫ್ಟ್ ಅವನಿಗೂ ಇಷ್ಟ ಮತ್ತು ಅವನಿಗೆ ಲಭ್ಯವಿರುವ ಮಾರ್ಗೋಪಾಯಗಳು ಇದಕ್ಕೆ ಪೂರಕವಾಗಿವೆ. ಇದಕ್ಕೆ ಸಮಾನಾಂತರವಾಗಿ ಯುವ ತಲೆಮಾರು ಇರಿಸಿಕೊಂಡಿರುವ ಮೌಲ್ಯಗಳು ಮತ್ತು ಅವರ ಸಾಧನೆಯ ಗುರಿ, ಅವರು ಆರಿಸಿಕೊಂಡ ಕ್ರಿಯಾಕ್ಷೇತ್ರ - ಇವೆಲ್ಲವೂ ಸೇರಿ ಪರಂಪರಾನುಗತ ಓದುವ ಒಂದು ಪ್ರಕ್ರಿಯೆಯನ್ನು ಔಟ್ಡೇಟೆಡ್ ಮಾಡಿಬಿಟ್ಟಂತಿದೆ. ಓದು ಇದೆ, ಆದರೆ ಅದರ ಸ್ವರೂಪ ಎಷ್ಟು ಬದಲಾಗಿದೆ ಎಂದರೆ ಅದನ್ನು ಓದು ಎಂದು ಕರೆಯಬೇಕೇ ತಿಳಿಯುತ್ತಿಲ್ಲ.

ಇವತ್ತಿನ ತಲೆಮಾರು ಸಾಹಿತ್ಯದ ಓದಿನಿಂದ ಆಘಾತಕಾರಿ ಮಟ್ಟದಲ್ಲಿ ವಿಮಖವಾಗಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಈ ಮಾತಿಗೆ ಇಂಗ್ಲೀಷ್ ಭಾಷೆಯ ಯಂಗ್ ಅಡಲ್ಟ್ ನಾವೆಲ್ಸ್ ಎಂದು ಕರೆಯಲ್ಪಡುವ ಪ್ರಕಾರದ ಸಾಹಿತ್ಯ ಹಾಗೂ ಥ್ರಿಲ್ಲರ್ಸ್ ಎಂದು ವರ್ಗೀಕರಿಸಲ್ಪಡುವ ಕಾದಂಬರಿಗಳು ಅಪವಾದವಾಗಿ ಉಳಿದಿವೆ ಮತ್ತು ಈಗಲೂ ಈ ಪ್ರಕಾರದ ಕತೆ-ಕಾದಂಬರಿಗಳಿಗೆ ಸಮಾಜದ ಇಲೈಟ್ ವರ್ಗದ ಯುವ ಜನಾಂಗ ಉತ್ಸಾಹದಿಂದಲೇ ತೆರೆದುಕೊಂಡಿದೆ. ಆದರೆ ಈ ಓದಿನಿಂದ ಯುವಜನಾಂಗಕ್ಕೆ ಏನು ದಕ್ಕುತ್ತದೆ ಎನ್ನುವ ಪ್ರಶ್ನೆಗಿಂತಲೂ ನಮ್ಮ ಸ್ಥಳೀಯ ಭಾಷೆ, ಸಂಸ್ಕೃತಿ, ಸಂವೇದನೆಗಳು ಮತ್ತು ಪರಂಪರೆಯ ದೃಷ್ಟಿಯಿಂದ ಅದು ನಿರುಪಯುಕ್ತ ಎನ್ನುವ ಅಂಶ ಗಮನಾರ್ಹವಾದುದು. ಉಳಿದಂತೆ ಪತ್ರಿಕೆಗಳ ಓದು, ಪ್ರಧಾನವಾಗಿ ಅಂಕಣಗಳದ್ದು, ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಗೆಳೆಯ ಗೆಳತಿಯರ ಕತೆ-ಕವನ-ಲಹರಿಯ ಬರಹಗಳು, ಸ್ಮಾರ್ಟ್ಫೋನ್ ಮೂಲಕ ಹರಿದಾಡುವ ಜೋಕುಗಳು, ಆಡಿಯೋ ವಿಶುವಲ್ ಕಥಾನಕಗಳು, ಶಾರ್ಟ್ಫಿಲ್ಮ್ಗಳು, ಬ್ಲಾಗ್ ಬರಹಗಳು ಈ ತಲೆಮಾರಿನ ಓದು ರೂಪಿಸುತ್ತಿದೆ. ಇಲ್ಲಿಯೂ ಓದಿನಲ್ಲಿ ಕಣ್ಣಾಡಿಸುವ ಓದು, ಗಮನವಿಟ್ಟು ಓದುವ ಓದು ಮತ್ತು ದಪ್ಪಕ್ಷರದ ಮುಖ್ಯಾಂಶಗಳ ಓದು ಎಂಬೆಲ್ಲ ಬಗೆಗಳಿವೆ! ಇವತ್ತಿನ ಹತ್ತು ಮಂದಿ ಓದುಗರಲ್ಲಿ ಒಂಭತ್ತು ಮಂದಿ ಸ್ವತಃ ಬರಹಗಾರ ಕೂಡ ಆಗಿರುತ್ತಾನೆ ಮತ್ತು ಅವನು ಕ್ರಮೇಣ ಓದು ತನ್ನ ಸ್ವಂತ ಬರವಣಿಗೆಗೆ ಮಾರಕ ಎನ್ನುವುದನ್ನು ಕಂಡುಕೊಳ್ಳುತ್ತಾನೆ. ಇದರಿಂದ ಹತ್ತರಲ್ಲಿ ಒಬ್ಬನಷ್ಟೇ ಉಳಿದುಕೊಳ್ಳುವ(!) ಸಂಭವ ಹೆಚ್ಚು. ಅಲ್ಲದೆ ಇವತ್ತು ಹಣ ತರಬಲ್ಲ ಸರಕಿಗೆ ಇರುವ ಬೇಡಿಕೆ, ಪ್ರಚಾರ ಮತ್ತು ಮಹತ್ವ ಅವನ ಕಣ್ಣು ಕುಕ್ಕುವುದಕ್ಕೆ ಹೆಚ್ಚೇನೂ ಸಮಯ ಹಿಡಿಯುವುದಿಲ್ಲ. ಹೀಗಾಗಿ ಕನ್ನಡದಲ್ಲಿ ಬರೆಯುವುದು ಕನ್ನಡವನ್ನು ಓದುವುದು ಎರಡೂ ಕೂಡ ಔಟ್ಡೇಟೆಡ್ ಆಗುವುದು ಸಹಜವಾಗಿದೆ.

ಕನ್ನಡದಲ್ಲಿ ತಪ್ಪಿಲ್ಲದೆ ಒಂದು ವಾಕ್ಯ ರಚಿಸುವ ಸ್ಥಿತಿಯಲ್ಲಿಲ್ಲದ ಕಾಲೇಜು ಯುವಕ ಯುವತಿಯರನ್ನು ಕಾಣುವಾಗ ಗಾಭರಿಯಾಗುತ್ತದೆ. ತರಗತಿಯಿಂದ ಹೊರಗೆ ಬರುತ್ತಲೇ ಈ ತಲೆಮಾರು ಎಲ್ಲಿಂದಲೋ ಸ್ಮಾರ್ಟ್ ಫೋನ್ ಹೊರತೆಗೆಯುತ್ತಾರೆ. ತದನಂತರ ಸುತ್ತಲಿನ ಜಗತ್ತಿನ ಯಾವುದೇ ವಿದ್ಯಮಾನವೂ ಇವರ ಗಮನಕ್ಕೆ ಬರುವುದೇ ಸಾಧ್ಯವಿಲ್ಲದಷ್ಟು ಅದರಲ್ಲೇ ತಲ್ಲೀನರಾಗಿ ಬಿಡುತ್ತಾರೆ. ಈಗೀಗ ಬಸ್ಸು ರೈಲುಗಳಲ್ಲೂ ಕಿಟಕಿ ಪಕ್ಕದ ಸೀಟು ಬೇಕೇ ಬೇಕೆಂದು ಹಠ ಹಿಡಿಯುವವರಿಲ್ಲ. ಅವರಿಗೆ ಹೊರಗೆ ನೋಡುವುದೇನೂ ಇಲ್ಲ! ತಮ್ಮೊಳಗು ನೋಡಿಕೊಳ್ಳುವುದೂ ಇಲ್ಲ. ಇರುವುದೆಲ್ಲಾ ಅಂಗೈಯಲ್ಲೇ ಇದೆ! ಇವರ ಕಣ್ಣು, ಕಿವಿ, ಮನಸ್ಸು - ಇವುಗಳ ಆರೋಗ್ಯದ ಗತಿಯೇನು? ಇಯರ್ ಪ್ಲಗ್ ಉಪಯೋಗ ಒಂದು ಮಿತಿಯಾಚೆ ತೀರ ಕೆಟ್ಟದು. ಸ್ಮಾರ್ಟ್ ಫೋನಿನ ತೆರೆಯನ್ನು ದೀರ್ಘಕಾಲದ ತನಕ ನೋಡುತ್ತಿರುವುದು, ಅದನ್ನು ಓದುವುದಕ್ಕೆ ಬಳಸುವುದು ಅಪಾಯಕಾರಿ. ಅಂತರ್ಜಾಲ ಸಂಪರ್ಕದ ವೇಗ ಮತ್ತು ತೆರೆಯ ಮೇಲೆ ಕಾಣ ಬಯಸುವ ಮಾಹಿತಿ ಡೌನ್ಲೋಡ್ ಆಗುವ ತನಕ ಅನುಭವಿಸುವ ಉದ್ವೇಗ, ಕಾತರ, ನಿರೀಕ್ಷೆ ಆರೋಗ್ಯಕ್ಕೆ ಮಾರಕ. ಈ ಬಗೆಯ ಬ್ರೌಸಿಂಗ್ ಏಕಾಗ್ರತೆಯ ಸಾಮರ್ಥ್ಯವನ್ನು ಕೊಲ್ಲುವಷ್ಟು ಸಂಚಾರೀ ನೆಲೆಯಲ್ಲಿಯೇ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯದೇ ಇರದು.

ಇದರಿಂದಾಗಿ ಏನಾಗುತ್ತದೆಂದರೆ, ಸುಮಾರು ಇನ್ನೂರು-ಇನ್ನೂರೈವತ್ತು ಪುಟಗಳ ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು, ಯಾವುದೇ ಬಗೆಯ ಅಡಚಣೆಗಳಿಲ್ಲದೆ ದೀರ್ಘಕಾಲ ಓದುವ ಕಲ್ಪನೆಯೇ ಈ ಜನಾಂಗಕ್ಕೆ ಅಸಾಧ್ಯವಾಗಿ ಬಿಡುತ್ತದೆ. ಎರಡು ಮೂರು ನಿಮಿಷಕ್ಕೊಮ್ಮೆ ವ್ಯಾಟ್ಸಪ್/ಫೇಸ್ ಬುಕ್/ಟ್ವಿಟ್ಟರ್/ಸ್ಕೈಪ್ ಇತ್ಯಾದಿ ಗಮನಿಸಬೇಕೆನಿಸುತ್ತದೆ. ಅಥವಾ ಕರೆ ಬರುತ್ತದೆ. ಇಲ್ಲವೇ ಟೀವಿಯಲ್ಲಿ ಯಾವುದೋ ಕಾರ್ಯಕ್ರಮವಿದೆ. ಮತ್ತೆ ಮಾಡುವುದಕ್ಕೆ ಕೆಲಸವಾದರೂ ಎಷ್ಟಿಲ್ಲ! ದಿನದ 24 ಗಂಟೆಗಳೂ ಎದ್ದೇ ಕೂತರೂ ಮುಗಿಸಲಾರದಷ್ಟು! ದಿನಪತ್ರಿಕೆ ಓದುವುದಕ್ಕೂ ಸಮಯವಿಲ್ಲದ ಪರಿಸ್ಥಿತಿ ಇದೆ ಇವತ್ತು. ಪಠ್ಯಕ್ರಮವನ್ನು ಅನುಸರಿಸಬೇಕು, ಇತರೇ ಚಟುವಟಿಕೆ (ಕ್ರೀಡೆ/ಸಂಗೀತ/ನಾಟ್ಯ/ಕಲೆ/ಪ್ರಾಜೆಕ್ಟ್/ಟ್ಯೂಶನ್/ಅರೆಕಾಲಿಕ ಕೋರ್ಸು)ಗಳಿಗೆ ಸಮಯ ಮೀಸಲಿಡಬೇಕು. ಟ್ರಾಫಿಕ್ ಸಮಸ್ಯೆ ಸಾಕಷ್ಟು ಸಮಯ ತಿನ್ನುತ್ತದೆ. ಆಹಾರ, ನಿದ್ದೆ, ಕಂಪ್ಯೂಟರ್, ಬಟ್ಟೆಬರೆ ಮತ್ತು ಇತರ ಅಂದಚಂದದತ್ತ ಗಮನಹರಿಸಲು, ಖರೀದಿಗೆ, ಸ್ಮಾರ್ಟ್ ಫೋನ್ ಹೊರತಾಗಿ ಸ್ನೇಹಿತರ ಜೊತೆ ನಡೆಸುವ ಮಾತುಕತೆ - ಹೀಗೆ ಸಮಯ ಯಾವುದಕ್ಕೂ ಸಾಲದು. ಇಲ್ಲಿ ಪಠ್ಯಕ್ರಮದ ಓದೇ ಸೊರಗುತ್ತಿದೆ. ಹಳೆಯ ಪ್ರಶ್ನೆಪತ್ರಿಕೆಗಳಿಗೆ ತಯಾರಾಗುವುದಕ್ಕೇ ಸಮಯವಿಲ್ಲ ಎಂದಾದ ಮೇಲೆ ನೋಟ್ಸ್ ಮತ್ತು ಟೆಕ್ಸ್ಟ್ ಬುಕ್ಸ್ ಯಾರು ಗಮನಿಸುತ್ತಾರೆ! ಇಷ್ಟರ ಮೇಲೆ ಸಾಹಿತ್ಯದ ಓದು! ಎಂಥ ಲಕ್ಷುರಿಯದು!!

ಅಮೆರಿಕೆಗೆ ಹೋಗಿ ಬಂದ ಜಯಂತ ಕಾಯ್ಕಿಣಿಯವರು ಹೇಳಿದ ಒಂದು ಮಾತಂತೂ ನಾನು ಮರೆಯಲಾರದ್ದು. "ನನಗೆ ಅಲ್ಲಿ ವಿಶೇಷವಾಗಿ ಕಾಣಿಸಿದ್ದು ಆ ಜನ ಸ್ವಲ್ಪ ಪುರುಸೊತ್ತು ಸಿಕ್ಕಿದರೂ ತಕ್ಷಣ ಬ್ಯಾಗಿನಿಂದ ಒಂದು ಪುಸ್ತಕ ಹೊರತೆಗೆದು ಓದುವ ಹುಮ್ಮಸ್ಸು ಹೊಂದಿರುವುದೇ! ಎಲ್ಲಿಯೇ ನೋಡು, ಜನರ ಕೈಯಲ್ಲಿ ಪುಸ್ತಕ ಇದೆ. ನಮ್ಮಲ್ಲಿ ಇದನ್ನು ಕಾಣುವುದು ಕಷ್ಟ." ಇದನ್ನೇ ನಾನು ಅಮೆರಿಕೆಯಲ್ಲಿ ನೆಲೆಸಿರುವ ವೈದ್ಯ, ಕತೆ-ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆಯವರ ಬಳಿ ಹೇಳಿದಾಗ ಅವರು "ಇದೇನು ಬಿಡಿ, ನೀವು ಯುರೋಪಿಯನ್ ಕಂಟ್ರೀಸ್ ನೋಡಬೇಕು. ಟ್ಯಾಕ್ಸಿ ಡ್ರೈವರ್ ಜೊತೆ ನೀವು ಕಾಫ್ಕಾ ಬಗ್ಗೆ ಗಂಭೀರವಾದ ಚರ್ಚೆ ನಡೆಸಬಹುದು!" ಎಂದಿದ್ದರು. ಈಗಲೂ ಗುಡ್ ರೀಡ್ಸ್, ಬುಕ್ ಬ್ಲಬ್, ಶೆಲ್ಫಾರಿ ಮುಂತಾದ ಯಾವುದೇ ಒಂದು ಪುಸ್ತಕ ಮತ್ತು ಓದಿಗೆ ಮೀಸಲಾದ ಅಂತರ್ಜಾಲ ತಾಣವನ್ನು ತೆರೆದು ನೋಡಿ. ಈ ಮಂದಿಯ ಓದಿನ ಹಸಿವು ಮತ್ತು ಅವರು ಪುಸ್ತಕಗಳ ಬಗ್ಗೆ ಮಾತನಾಡಲು ತೋರಿಸುವ ಉತ್ಸಾಹ ನೋಡಿದರೆ ಹೊಟ್ಟೆಕಿಚ್ಚಾಗುತ್ತದೆ. ಪಾಶ್ಚಾತ್ಯ ಅನುಕರಣೆಯ ನಮ್ಮ ಮಿತಿಗಳು ಕಣ್ಣಿಗೆ ಕಟ್ಟುವುದು ಕೂಡ ಇಲ್ಲಿಯೇ.

ಇಲ್ಲಿ ನಾವು ಭಾಷೆಯ ಅಳಿವು-ಉಳಿವು ಮತ್ತು ಕ್ಷೀಣಿಸುತ್ತಿರುವ ಓದು ಮುಂತಾಗಿ ಚರ್ಚಿಸುತ್ತಿರುವಾಗಲೇ ಅಲ್ಲಿ ಓದುವ ಹೊಸ ಹೊಸ ವಿಧಾನಗಳ ಬಗ್ಗೆ ಶೋಧನೆ, ಚರ್ಚೆ ನಡೆಯುತ್ತಿರುವುದು ಕೂಡ ತಮಾಷೆಯಾಗಿದೆ. ಇತ್ತೀಚೆಗೆ ತೀರಿಕೊಂಡ Eco Umberto ಮತ್ತು Jean-Claude Carriere ನಡೆಸಿದ ಸುದೀರ್ಘ ಸಂವಾದ ಪುಸ್ತಕ ರೂಪದಲ್ಲಿ ಬಂದಿದ್ದು ಅದರ ಹೆಸರು This is Not the End of the Book! ಮುನ್ನೂರಕ್ಕೂ ಹೆಚ್ಚು ಪುಟಗಳ ಈ ಕೃತಿಯಲ್ಲಿ ಚರ್ಚಿಸಲಾದ ಮಹತ್ವದ ಅಂಶವೆಂದರೆ ಬದಲಾಗುತ್ತಿರುವ ಆಧುನಿಕ ಮನುಷ್ಯನ ಓದಿನ ಶೈಲಿ ಮತ್ತು ಮುದ್ರಿತ ಪುಸ್ತಕದ ಮೇಲೆ ಅದೆಲ್ಲದರಿಂದಾಗಬಹುದಾದ ಪರಿಣಾಮಗಳು! ಅಂದರೆ ಇವತ್ತು ಇ-ರೀಡರ್ಗಳು, ಆಡಿಬಲ್ ಪುಸ್ತಕಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವುದನ್ನು ಗಮನಿಸಿ ಕ್ರಮೇಣ ಮುದ್ರಿತ ಪುಸ್ತಕಗಳು ಕಣ್ಮರೆಯಾಗಬಹುದೇ ಎಂಬುದು ಇಲ್ಲಿನ ಚರ್ಚೆಯ ವಸ್ತು. ಉಂಬರ್ಟೊ ಸ್ವತಃ ಅಪೂರ್ವ ದುರ್ಲಭ ಕೃತಿಗಳ ಸಂಗ್ರಾಹಕರಾಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ನಮ್ಮ ದೇಶದಲ್ಲಿ ಇ-ರೀಡರ್ಗಳು ಜನಪ್ರಿಯವಾಗುತ್ತಿರುವ ಸುದ್ದಿಯಿದೆ. ಕೇಳು ಪುಸ್ತಕಗಳೂ ಅಪರೂಪಕ್ಕೆಂಬಂತೆ ದನಿ ಹೊರಡಿಸಿವೆ. ಏನಿಲ್ಲವೆಂದರೂ ನಿಮ್ಮ ಆಸಕ್ತಿಯ ಸಾವಿರಾರು ಇಂಗ್ಲೀಷ್ ಕೃತಿಗಳನ್ನು ಪುಕ್ಕಟೆಯಾಗಿ ಅಂತರ್ಜಾಲದಿಂದ ಡೌನ್ಲೋಡ್ ಮಾಡಿಕೊಳ್ಳುವುದು ಇವತ್ತು ಸಾಧ್ಯವಿದೆ ಎನ್ನುವುದು ಕೂಡ ನಿಜ. ಆದರೆ ಇವನ್ನೆಲ್ಲ ಓದುವುದು ನಮ್ಮ ಆಯುರ್ಮಾನದಲ್ಲಿ ಸಾಧ್ಯವಿದೆಯೆ ಎಂಬ ಪ್ರಶ್ನೆ ಮಾತ್ರ ಉಳಿಯುತ್ತದೆ. ಆಯ್ದು ಓದುವ ಸಮಸ್ಯೆ ಓದುಗರದ್ದಾದರೆ, ಓದುಗರೇ ಕ್ಷೀಣಿಸುತ್ತಿರುವ ಸಮಸ್ಯೆ ಬರಹಗಾರರದ್ದು, ಪ್ರಕಾಶಕರದ್ದು.

ಒಂದೆರಡು ವರ್ಷಗಳ ಹಿಂದೆ ಚುಕ್ಕುಬುಕ್ಕು ಅಂತರ್ಜಾಲ ತಾಣದಲ್ಲಿ ನಡೆಸಿದ ಒಂದು ಪ್ರಶ್ನೋತ್ತರದಲ್ಲಿ ವರ್ಷವೊಂದಕ್ಕೆ ಎಷ್ಟು ಪುಸ್ತಕಗಳನ್ನು ಓದುತ್ತೀರಿ ಎಂದು ಕೇಳಲಾಗಿತ್ತು. ಎಷ್ಟು ಎನ್ನುವಾಗಲೇ ಎಂಥವು ಎನ್ನುವ ಅಂಶವೂ ಮಹತ್ವದ್ದಾಗುತ್ತದೆ. ಆರಾನ್ ಪಮುಕ್ ಪ್ರಕಾರ ಬಹಳಷ್ಟು ಲೇಖಕರ, ಬಹಳಷ್ಟು ಕೃತಿಗಳನ್ನು ಓದಬೇಕಾದ ಅಗತ್ಯವೇನಿಲ್ಲ. ಅತ್ಯಂತ ಮಹತ್ವದ ದಸ್ತಾವಸ್ಕಿ, ನಬಕೋವ್, ಥಾಮಸ್ ಮನ್ ಥರದವರನ್ನು ಪೂರ್ತಿಯಾಗಿ ಮತ್ತು ಗಂಭೀರವಾಗಿ ಓದಿಕೊಂಡರೆ ಅದೇ ಸಾಕಷ್ಟು. ಆದರೆ ಅದಾದರೂ ಸಾಧ್ಯವೆ? ದಸ್ತಾವಸ್ಕಿಯನ್ನು ಪೂರ್ತಿಯಾಗಿ ಓದಲು ಒಂದು ಜೀವಮಾನವೇ ಮುಡುಪಾಗಿಡಬೇಕು ಎನ್ನುವ ಭಯ ಸಹಜವಾಗಿಯೇ ಹಲವರಿಗಿದೆ. ಸರಕಾರವೇನಾದರೂ ಓದುವುದು ಕಂಪಲ್ಸರಿ ಎಂದು ಕಾನೂನು ಮಾಡಿದರೆ ವಿ ಕೃ ಗೋಕಾಕರ ಭಾರತ ಸಿಂಧೂರಶ್ಮಿಯನ್ನು ಓದಲೇ ಬೇಕಾದೀತು ಎಂದು ಯಾರೋ ತಮಾಷೆ ಮಾಡಿದ್ದು ನೆನಪಾಗುತ್ತದೆ! ಎಸ್. ದಿವಾಕರ್ ಒಂದೆಡೆ "ಅರೇಬಿಯನ್ ನೈಟ್ಸ್ ಕತೆಗಳನ್ನು ಯಾರೂ ಪೂರ್ತಿಯಾಗಿ ಓದಿರುವುದಿಲ್ಲ, ಅಕಸ್ಮಾತ್ ಓದಿದರೆ ಅವರು ಬದುಕಿ ಉಳಿಯುವುದಿಲ್ಲ!" ಎನ್ನುವ ಪಮುಕ್ನ ಮಾತನ್ನೇ ಉಲ್ಲೇಖಿಸುತ್ತ ಹೇಳುತ್ತಾರೆ, ಭಯ ಪಡುವ ಅಗತ್ಯವೇನಿಲ್ಲ, ಸಾಯುವುದಂತೂ ತಪ್ಪುವುದಿಲ್ಲ; ಹಾಗಾಗಿ ಓದಿಯೇ ಸಾಯುವುದು ಮೇಲು!

ಇಲ್ಲಿಯೇ ಪ್ರದೀಪ್ ಸೆಬಾಸ್ಟಿಯನ್ ಹೇಳಿರುವ ಮಾತುಗಳು ಬಹಳ ಮುಖ್ಯ ಎನಿಸುವುದು. ನಾವು ನಮ್ಮೊಂದಿಗೆ ಕಳೆಯುವ ಕ್ಷಣಗಳು ಬಹು ಮುಖ್ಯ. ಅದು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ, ಮನಸ್ಸಿನ ಆರೋಗ್ಯಕ್ಕೆ, ಸಂಬಂಧಗಳನ್ನು ನಿರ್ವಹಿಸುವಲ್ಲಿ, ಮನಸ್ಸಿನ ಶಾಂತಿಗೆ ಮತ್ತು ಏಕಾಗ್ರತೆಗೆ ಅತ್ಯಂತ ಆವಶ್ಯಕವಾದ ಒಂದು ಪ್ರಕ್ರಿಯೆ. ಪ್ರತಿಯೊಬ್ಬರಿಗೂ ಇತರರೊಂದಿಗೆ ಮಾತನಾಡುವುದು ಇರುವಂತೆಯೇ ತಮ್ಮೊಂದಿಗೇ ತಾವು ಪ್ರಾಮಾಣಿಕವಾದ ಧ್ವನಿಯಲ್ಲಿ ಮಾತನಾಡುವುದು ಇದ್ದೇ ಇರುತ್ತದೆ. ಈ ಮಾತುಗಳು ಇನ್ಯಾರಿಗೋ ಕೇಳುವುದಕ್ಕಾಗಿ ಇರುವುದಿಲ್ಲ. ಹಾಗಾಗಿಯೇ ಅದರಲ್ಲಿ ಯಾವುದೇ ನಾಟಕೀಯತೆ, ಪ್ರದರ್ಶನದ ಗೀಳು ಇರುವುದಿಲ್ಲ. ಅವು ಪ್ರಾಮಾಣಿಕವಾದ ಪಿಸುದನಿಯ ನುಡಿಗಳು. ಧ್ಯಾನದಂತೆ, ಪ್ರೀತಿ ಮಾಡಿದಂತೆ, ಏಕಾಂತದಲ್ಲಿ ನಮ್ಮ ಅತ್ಯಂತ ಆತ್ಮೀಯ ಗೆಳೆಯನೊಂದಿಗೆ ಮೌನವಾಗಿ ಕುಳಿತಂತೆ ಇರುವ ಅತ್ಯಂತ ವೈಯಕ್ತಿಕ, ಖಾಸಗಿ ಕ್ಷಣಗಳು. ಹಾಗಿದ್ದೂ ಇದಕ್ಕೆ ಆ ಯಾವ ಸಮೀಕರಣವೂ ಹೋಲಿಕೆಯಾಗದು, ಪರ್ಯಾಯವಾಗದು. ಓದುವ, ಓದಿನಲ್ಲಿ ನಮ್ಮನ್ನೇ ನಾವು ಕಳೆದುಹೋಗುವ, ಹಾಗೆ ಕಳೆದುಕೊಂಡೇ ನಮ್ಮನ್ನು ನಾವು ಮರಳಿ ಪಡೆಯುವ ಸುಖಕ್ಕೆ ಓದು ಮತ್ತು ಓದು ಒಂದೇ ಮಾರ್ಗ. ಅದಕ್ಕೆ ಪರ್ಯಾಯವೂ ಇಲ್ಲ, ಪರಿಹಾರವೂ ಇಲ್ಲ. ಮನಸ್ಸು, ಮನುಷ್ಯ ಮತ್ತು ಬದುಕನ್ನು ಅರಿಯುವುದಕ್ಕೆ ತೆರೆದಿರುವ ಹಲವು ಮಾರ್ಗಗಳಲ್ಲಿ ಓದು ಒಂದು ಮತ್ತು ಬಹುಮುಖ್ಯವೂ, ಸುಲಭ ಲಭ್ಯವೂ ಆದ ಒಂದು ಮಾರ್ಗ. ಇದರ ಕುರಿತ ಅಲಕ್ಷ್ಯವೇ ಇವತ್ತು ಅನಗತ್ಯ ವಿವಾದಗಳು, ಮುಕ್ತ ಚರ್ಚೆ ಮತ್ತು ಸಂವಾದ ಸಾಧ್ಯವಿಲ್ಲದಂಥ ಡೆಡ್ ಲಾಕ್ಗಳು, ಸ್ಥೂಲವಾಗಿ ನಮ್ಮ ಸಮಾಜದಲ್ಲಿ ಮತ್ತು ಸೂಕ್ಷ್ಮವಾಗಿ ನಮ್ಮ ನಮ್ಮ ಮನೆ-ಮನಗಳಲ್ಲಿ ಉಂಟಾಗಿರುವ ಬಿರುಕುಗಳಿಗೆ, ಒಡಕುಗಳಿಗೆ ಕಾರಣ. ಇದನ್ನು ಪರಿಹರಿಸಿಕೊಳ್ಳದೇ ಮಾನವ ಜನಾಂಗ ಸಾಧಿಸುವ ಯಾವುದೇ ಪ್ರಗತಿಯೂ ಅರ್ಥಪೂರ್ಣವೆನ್ನಿಸಿಕೊಳ್ಳುವುದು ಸಾಧ್ಯವಾಗದು.

(ಈ ಲೇಖನ ಪ್ರಜಾವಾಣಿ ಸಾಪ್ತಾಹಿಕ ಮುಕ್ತಛಂದದಲ್ಲಿ ಪ್ರಕಟಿತ)

ಚಿತ್ರಗಳು : ಅಂತರ್ಜಾಲದ ವಿವಿಧ ತಾಣಗಳಿಂದ, ಕೃತಜ್ಞತಾ ಪೂರ್ವಕ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ