Tuesday, March 1, 2016

ನಿಂತು ಹೋದ ತಿಗರಿಯ ಚಕ್ರ

ಆವಿಗೆ ಕಾದಂಬರಿ ಮೂಲತಃ ಕೊಂಕಣಿ ಲೇಖಕ ಮಹಾಬಳೇಶ್ವರ ಸೈಲ್ ಅವರ ಹಾವಠಣ ಎಂಬ ಕಾದಂಬರಿಯ (ಶಾ.ಮಂ.ಕೃಷ್ಣರಾಯರ) ಅನುವಾದ. ಇದು ಕರ್ನಾಟಕ-ಗೋವಾ ಗಡಿಭಾಗದ ಕುಂಬಾರರ ಬದುಕಿನಲ್ಲಿ ಅಲ್ಯುಮಿನಿಯಂ, ಸ್ಟೀಲ್ ಮತ್ತು ಪ್ಲಾಸ್ಟಿಕ್ ಪಾತ್ರೆ ಪಗಡಿಗಳ ಸುರಳೀತ ಬಳಕೆ ಹೆಚ್ಚುತ್ತ ಬಂದಂತೆಲ್ಲ ಉಂಟಾದ ಸ್ಥಿತ್ಯಂತರ ಮತ್ತು ಪಲ್ಲಟಗಳನ್ನು ಚಿತ್ರಿಸುವ ಕಾದಂಬರಿ. ಇಲ್ಲಿ ಒಂದೇ ಕೇರಿಯಲ್ಲಿ ಕುಂಬಾರರ ಒಂದಷ್ಟು ಕುಟುಂಬಗಳು ಜೊತೆಯಾಗಿ, ಒಂದೇ ಕುಟುಂಬವೋ ಎಂಬಂತೆ ಬದುಕುತ್ತ ಬಂದಿವೆ. ಒಂದೊಂದು ಮನೆಯಲ್ಲೂ ಲೋಕಾಚಾರಕ್ಕೆ ಹೊಂದಿಕೊಂಡಂತೆ ಏನಾದರೂ ಒಂದೊಂದು ಸಮಸ್ಯೆಯಿದ್ದೇ ಇದೆ. ಸ್ವಾಭಾವಿಕವಾಗಿ ಇವರು ಬಡವರು. ಇವರ ವೃತ್ತಿ ಕುಂಬಾರಿಕೆ. ಆ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿವೆ. ಮಣ್ಣಿನ ಲಭ್ಯತೆ, ಮಳೆಗಾಲವೊಡ್ಡವ ಸವಾಲುಗಳು, ವ್ಯಾಪಾರದ ಉಬ್ಬರ-ಇಳಿತಗಳು ಇದ್ದಿದ್ದೇ. ಇದರ ಜೊತೆಗೆ ಮನೆಯೊಳಗೆ ಮೈನೆರೆದ ಹುಡುಗಿಯರು, `ಹೊರಗಿನ’ ಹುಡುಗಿಯರ ಪ್ರೇಮಕ್ಕೆ ಬೀಳುವ ಹುಡುಗರು, ನೈತಿಕ ಆಯಾಮ ಪಡೆಯುವ ವಿವಾಹೇತರ ಸಂಬಂಧದ ಸೆರಗು ಹಿಡಿದ/ಹಾಸಿದ ಗಂಡಸರು, ಹೆಂಗಸರು, ಕುಂಬಾರಿಕೆ ಬಿಟ್ಟು ಶಿಕ್ಷಣ-ಉದ್ಯೋಗ ಎಂದು ಊರುಬಿಟ್ಟು ಹೊರಡುವ ಹುಡುಗರು, ಕುಂಬಾರಿಕೆಯ ಹೊರತು ಅನ್ಯ ಜೀವನೋಪಾಯಕ್ಕೆ ಹೊರಳಿಕೊಳ್ಳುವ ಸಾಧ್ಯತೆಯನ್ನು ಕಳೆದುಕೊಂಡ ನಡುವಯಸ್ಸಿನವರು, ನಿಂತ ನೆಲೆ, ವೃತ್ತಿಗೆ ಅವಶ್ಯವಾದ ಮಣ್ಣು ಕಸಿಯಲು ಹಾತೊರೆವ ಶಕ್ತಿಗಳು ಇವರ ಬದುಕಿನ ಹೊಸ ಸವಾಲುಗಳು. ಇವೆಲ್ಲಕ್ಕೆ ಕಲಶವಿಟ್ಟಂತೆ ಇವರ ವೃತ್ತಿಯ ಬುಡಕ್ಕೇ ಕೊಡಲಿ ಪೆಟ್ಟು ನೀಡುವ, ಸುಲಭ ಬೆಲೆಗೆ ಲಭ್ಯವಾಗುವ ಅಲ್ಯುಮಿನಿಯಂ, ಸ್ಟೀಲ್, ಪಿಂಗಾಣಿ ಮತ್ತು ಪ್ಲಾಸ್ಟಿಕ್ ಪಾತ್ರೆಪಗಡಿಗಳ ವ್ಯಾಪಕ ಬಳಕೆಯಿಂದ ಒಂದು ವೃತ್ತಿ ಮತ್ತು ತಲೆಮಾರು ಅವನತಿಯ ಹಾದಿ ಹಿಡಿದ ಚಿತ್ರ ಇಲ್ಲಿನ ಕೇಂದ್ರಬಿಂದು.

ಹೀಗೆ ಇದು ಒಂದು ಕಾದಂಬರಿಯ ಚೌಕಟ್ಟಿಗೆ ಸರಳವಾಗಿ ಒಗ್ಗದ ವಸ್ತುವೆಂಬುದು ಮೇಲ್ನೋಟಕ್ಕೇ ಅರಿವಾಗುತ್ತದೆ. ಸಹಜವಾಗಿಯೇ ಕಾದಂಬರಿಕಾರರು ಒಂದು ಸಮುದಾಯವನ್ನೇ ಒಟ್ಟಾರೆಯಾಗಿ ತಮ್ಮ ವ್ಯಾಪ್ತಿಯಲ್ಲಿರಿಸಿಕೊಂಡು ಕಥಾನಕವನ್ನು ವಿಸ್ತರಿಸಬೇಕಾದ ಅನಿವಾರ್ಯ ಇಲ್ಲಿಯದು. ಹಾಗಾಗಿ ಇಲ್ಲಿ ಏಕಕಾಲಕ್ಕೆ ಹಲವು ಕುಟುಂಬಗಳ ವಿಭಿನ್ನ ಆಯಾಮದ ಸಮಸ್ಯೆಗಳತ್ತ ಅವರ ಗಮನ ಹರಿಯುತ್ತಿರಬೇಕಾಗಿದೆ. ಬಡತನ, ಕೌಟುಂಬಿಕ ಸಮಸ್ಯೆ, ವೃತ್ತಿಬದುಕಿನ ಸವಾಲುಗಳು, ಹೊಸದಾಗಿ ಎದುರಾದ ಆಣೆಕಟ್ಟು, ಪ್ಲಾಸ್ಟಿಕ್ ಇತ್ಯಾದಿ ಸವಾಲುಗಳು ಬದುಕನ್ನು ಸಂಕಷ್ಟಕ್ಕೀಡಾಗಿಸಿದ ಪರಿಸ್ಥಿತಿ - ಇಷ್ಟನ್ನಿಟ್ಟುಕೊಂಡು ಸಂಭ್ರಮಿಸಲು ಹೆಚ್ಚೇನೂ ಇಲ್ಲದ ಒಂದು ಊರು-ಕೇರಿಯಲ್ಲಿ ಕಥಾನಕದ ಓಘಕ್ಕೆ ಭಂಗ ಬರದಂತೆ ಹಾಸ್ಯ, ಹಬ್ಬ, ಜಾತ್ರೆ, ರಾಜಕೀಯ, ಸಣ್ಣತನ, ಭಾವನಾತ್ಮಕ ಬಂಧ ಎಲ್ಲವನ್ನೂ ನವಿರಾಗಿ ಸ್ಪರ್ಶಿಸುತ್ತ ಸೈಲ್ ಅವರು ಚಿತ್ರಿಸಿರುವ ಬದುಕು ಗಹನವಾಗಿದೆ, ಸೂಕ್ಷ್ಮಸಂವೇದಿಯಾಗಿದೆ ಮತ್ತು ಮನಕಲಕವಂಥದ್ದೂ ಆಗಿದೆ. ಇಲ್ಲಿ ನಿರಾಶಾವಾದವಿಲ್ಲ. ಬದುಕುವ ಛಲವಿದೆ, ಕೈಚೆಲ್ಲಿ ಕೂರುವ ಹತಾಶೆಯಿಲ್ಲ. ಕಾಲದ ತಾಳಕ್ಕೆ ತಕ್ಕಂತೆ ಹೊಸ ಬಗೆಯ ಬದುಕಿಗೆ ಹೊರಳಿಕೊಳ್ಳುವ ಜೀವಂತಿಕೆಯಿದೆ. ಆದರೆ ಇದೆಲ್ಲ ಸುಲಭವೂ ಅಲ್ಲ, ಸಹಜವೂ ಅಲ್ಲ. ಮನೆಯ ಒಂದು ಎಳೆ ಚಿಗುರು ಊರು-ಕೇರಿ ಬಿಟ್ಟು ಪಟ್ಟಣಕ್ಕೆ ವಲಸೆ ಹೋಯಿತೆಂದರೆ ಇಲ್ಲಿ ಉಳಿದವರ ಒಂದು ಊರುಗೋಲು ಕಿತ್ತು ಹಾಕಿದಂತೆಯೇ. ಹೊಸ ಹಾದಿ ಹುಡುಕಿ ಹೊರಹೋದವರ ದಶಕಗಳ ಹೋರಾಟ ಫಲಪ್ರದವಾಗುವ ಹೊತ್ತಿಗೆ ಒಂದು ತಲೆಮಾರು ಅಳಿದು ಹೊಸ ತಲೆಮಾರು ತಲೆಯೆತ್ತುವುದು ಕಾಲಧರ್ಮ. ಈ ಸಂಕ್ರಮಣ ಘಟ್ಟದ ಅನಿವಾರ್ಯ ಬಲಿಪಶುಗಳು ಅವರು. ಇದನ್ನೆಲ್ಲ ಸೂಕ್ಷ್ಮವಾಗಿ ಗ್ರಹಿಸಿರುವ ಸೈಲ್ ಅವರು ಮೂರು ತಲೆಮಾರಿನತ್ತ ತಮ್ಮ ಗಮನವನ್ನು ಏಕತ್ರ ಹರಿಸಿದ್ದಾರೆ. ಅಕಾಲದಲ್ಲಿ ವಿಧವೆಯವರಾದವರು, ಗತಿಗೋತ್ರವಿಲ್ಲದ ವೃದ್ಧರು, ಬದುಕು-ಭವಿಷ್ಯದ ಬಗ್ಗೆ ಗಂಭೀರ ತರ್ಕ ಸಾಧ್ಯವಿಲ್ಲದ ವಯಸ್ಸಿನ ಮಕ್ಕಳು ಮತ್ತು ನಿಟ್ಟುಸಿರಿನ ಹರಿಕಾರರಾದ ನಡುವಯಸ್ಸಿನ ಅತಂತ್ರರು ಇಲ್ಲಿ ಓದುಗರೆದುರು ಸಾಲಾಗಿ ನಿಲ್ಲುತ್ತಾರೆ.

ಒಬ್ಬ ಸೃಜನಶೀಲ ಲೇಖಕನಿಗೆ ಎದುರಾಗುವ ಸವಾಲು ಇದೆಲ್ಲ ಕೆಲವೊಮ್ಮೆ ಡಾಕ್ಯುಮೆಂಟರಿಯಾಗುವ, ಬಿಡಿಬಿಡಿ ಕಥಾನಕಗಳಾಗಿ ನಿಲ್ಲುವ, ಏಕಸೂತ್ರವನ್ನು ಕಳೆದುಕೊಂಡಂತಾಗುವ ಸಮಸ್ಯೆ. ಎಷ್ಟೋ ಕಡೆ ತಾನು ಚಿತ್ರಿಸುತ್ತಿರುವ ಸಮಸ್ಯೆಯ ಮೂಲ ಯಾವುದು ಎಂಬುದು ಸ್ಪಷ್ಟವಾಗದ, ಬದುಕಿನ ಸಂಕೀರ್ಣತೆಗೆ ಕಾರಣ ವೃತ್ತಿಯೇ, ಬಡತನವೇ, ಮಾರುಕಟ್ಟೆಯ ಪಲ್ಲಟಗಳೇ ಎಂದು ಬೊಟ್ಟು ಮಾಡಿ ಹೇಳಲಾಗದ ಸ್ಥಿತಿ ಎದುರಾಗುವುದೇ. ಹಾಗಾಗದೇ ಹೋದಲ್ಲಿ ಎಲ್ಲವೂ ಸಿದ್ಧಮಾದರಿಯ ಸಿಲೆಬಸ್ ಆಧಾರಿತ ಚಿತ್ರಗಳಾಗಿ ಬಿಡುವ ಅಪಾಯವಿತ್ತು. ಸೈಲ್ ಅವರ ನುರಿತ ಕೈಗಳಲ್ಲಿ ಹಾಗಾಗುವುದಿಲ್ಲ ಎನ್ನುವುದು ಗಮನಾರ್ಹ. ಹಾಗಾಗಿಯೇ ಇದು ಕೇವಲ ಒಂದು ವೃತ್ತಿಯ, ಸಮುದಾಯದ ಪತನದ ಅವನತಿಯ ಕತೆಯಷ್ಟೇ ಆಗದೆ ಒಟ್ಟು ಒಂದು ನಿರ್ದಿಷ್ಟ ಸ್ಥಿತಿಗೆ ಬಿದ್ದ ಮನುಷ್ಯನ ಬದುಕಿನ ಕತೆಯಾಗಿಯೇ ಉಳಿಯುತ್ತದೆ.

ಅನುವಾದ ಅಷ್ಟೇನೂ ಖುಶಿಕೊಡುವುದಿಲ್ಲ. ತಪ್ಪುಗಳು ಸಾಕಷ್ಟು ಉಳಿದಿವೆ ಎಂದರೆ ಎಲ್ಲೋ ಕಾರಕೂನಿ ಅನುವಾದ ಮಾತ್ರ ಸಾಧ್ಯವಾಗಿದೆ ಎನಿಸುವುದು ಸಹಜ. ಈ ಕಥನದ ಒಂದು ಬಗೆಯ ಜಡ ಧ್ವನಿಗೆ ಕಾರಣ ಅಂಥ ಅನುವಾದದ ನಿರುತ್ಸಾಹವೇ ಇರಬಹುದೇನೊ ಎನಿಸಿದ್ದು ಬಾಯಜಾ ಪ್ರಕರಣದ ನಿರೂಪಣೆಯಲ್ಲಿ. ಈ ಬಾಯಜಾ ಸೀತಾರಾಮನ ಹೆಂಡತಿ. ಸೀತಾರಾಮ ಲಂಪಟ, ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅವಳೂ ಮೊದ್ದು, ದಢೂತಿ. ಘನಶ್ಯಾಮನ ಆಶ್ರಯಕ್ಕೆ ಹಠ ಹಿಡಿದು ಬಂದು ಬೀಳುವ ಈ ಕುಟುಂಬ ಬಹುಬೇಗ ಒಡೆದು ಸೀತಾರಾಮ ಇನ್ನೆಲ್ಲೊ ಇನ್ಯಾರನ್ನೋ ಇಟ್ಟುಕೊಂಡು ಬಾಯಜಾಳನ್ನು ಬಿಟ್ಟೇ ಬಿಡುತ್ತಾನೆ. ಹೇಳುವವರು ಕೇಳುವವರಿಲ್ಲದ ಬಾಯಜಾಳನ್ನು ಬೇಕಾದಂತೆ ಬಳಸಿಕೊಳ್ಳುವ ಇಡೀ ಊರು ತನ್ನ ತೆವಲು ತೀರಿಸಿಕೊಳ್ಳುತ್ತದೆ. ಬಾಯಜಾಗೆ ಅದು ಬೇಕಿತ್ತೇ, ಬೇಡವಿತ್ತೇ, ಆ ಮಟ್ಟದ ಮೊದ್ದು ಅವಳಾಗಿದ್ದಳೇ ಎನ್ನುವುದಕ್ಕಿಂತ ಅದನ್ನು ಊರಿನ ಪ್ರಬುದ್ಧರು, ಹೆಂಗಸರು ಸ್ವೀಕರಿಸುವ ರೀತಿ ವಿಶಿಷ್ಟವಾಗಿದೆ. ಅವರೆಲ್ಲ ಸ್ವಲ್ಪ ಅನುಕಂಪದಿಂದ, ಸ್ವಲ್ಪ ಸಿಟ್ಟಿನಿಂದ, ಸ್ವಲ್ಪ ಅಸಹಾಯಕತೆಯಿಂದ ಇದನ್ನು ಗಮನಿಸುತ್ತಲೇ ತಮ್ಮ ಮನೆಯಲ್ಲಿ ಇಂಥದ್ದು ಸಂಭವಿಸದಿರಲಿ ದೇವರೇ ಎಂದು ಎಚ್ಚರವಹಿಸುತ್ತ ದಿನಗಳೆಯುತ್ತಾರೆ. ಇದ್ದಕ್ಕಿದ್ದಂತೆ ತಿರಿದು ತಿನ್ನುತ್ತಿದ್ದ ಒಬ್ಬ ಹಣ್ಣುಹಣ್ಣು ಮುದುಕಿ ಈಕೆಯ ರಕ್ಷಣೆಗೆ ನಿಂತು, ಈಕೆಯ ಗುಡಿಸಲಿಗೆ ನುಗ್ಗುತ್ತಿದ್ದ ಗಂಡಸರನ್ನೆಲ್ಲ ದೊಣ್ಣೆ ಹಿಡಿದು ಓಡಿಸತೊಡಗುತ್ತಾಳೆ. ಬಾಯಜಾಳ ಮುಗ್ಧತೆ ಅಥವಾ ಮೊದ್ದುತನದಲ್ಲೂ ತನ್ನ ಗಂಡ ಯಾಕೆ ತನ್ನನ್ನು ಹೀಗೆ ಬಿಟ್ಟು ಹೋಗಿದ್ದು, ಅದರಿಂದಲ್ಲವೇ ಹೀಗೆಲ್ಲ ಆಗಿದ್ದು ಎಂಬ ಪರಿಜ್ಞಾನವಿದೆ. ಜನರಲ್ಲೂ ಅವಳೂ ಹೆಣ್ಣಲ್ಲವೇ, ಅವಳಲ್ಲೂ ಬೇಕು ಬೇಡ ಆಸೆಗಳಿಲ್ಲವೇ ಎಂಬ ಪ್ರಜ್ಞೆಯಿದೆ. ಆದರೆ ನೈತಿಕ ನೆಲೆಯಲ್ಲಿ ಇದನ್ನು ಯಾರೂ ಒಪ್ಪುವುದಿಲ್ಲ ಮತ್ತು ತೆವಲಿನ ನೆಲೆಯಲ್ಲಿ ಹೀಗೆ ಸುಲಭವಾಗಿ ಸಿಗುವ ಹೆಣ್ಣು ಎಲ್ಲರಿಗೂ ಬೇಕು! ಇದಕ್ಕೆಲ್ಲ ಒಂದು ಅಂತ್ಯ ವಿಶಿಷ್ಟ ರೀತಿಯಲ್ಲಿ ಒದಗುತ್ತದೆ. ಅದು ಸಾಂಕೇತಿಕವಾಗಿಯೂ ಇದೆ, ರೌದ್ರವಾಗಿಯೂ ಇದೆ.

ಇದನ್ನು ಓದುತ್ತ, ಇಡೀ ಕಾದಂಬರಿಯಲ್ಲಿ ಸೈಲ್ ಅವರು ಇಂಥ ಇನ್ನಷ್ಟು ರೂಪಕಗಳನ್ನು ಜೋಡಿಸುತ್ತ ಬಂದಿದ್ದರೆ ಎಂಬ ಅನುಮಾನ ಕಾಡತೊಡಗುತ್ತದೆ. ಸೈಲ್ ಅವರ ನಿರೂಪಣೆಯಲ್ಲಿ ಒಂದು ಹೊಸತನವಿದೆ. ಅವರು ಒಂದು ನಿರ್ದಿಷ್ಟ ಘಟನೆಯಲ್ಲಿ ಒಂದು ಪಾತ್ರದ ವರ್ತನೆಯನ್ನು ಚಿತ್ರಿಸುತ್ತಲೇ ಅವನು ಅಥವಾ ಅವಳು ಆ ರೀತಿ ವರ್ತಿಸಲು ಇರುವ ಒಂದು ಹಿನ್ನೆಲೆಯನ್ನು ಕಥಾನಕಕ್ಕೆ ಜೋಡಿಸುತ್ತಾರೆ. ಅದು ಹಿಂದೆಂದೋ ನಡೆದ ಇನ್ನೊಂದು ಘಟನೆ. ಅದು ಈ ಕಥಾನಕದ ಚೌಕಟ್ಟಿನ ಇನ್ಯಾವುದೋ ಒಂದು ಪಾತ್ರವನ್ನು ಕೂಡ ನಮಗೆ ಮತ್ತಷ್ಟು ನಿಕಟಗೊಳಿಸುವ ವಿವರಗಳನ್ನು ಒದಗಿಸುತ್ತ ಹೋಗುತ್ತದೆ. ಹೀಗೆ ಇಲ್ಲಿನ ಒಂದು ಅಂತರ್ ಸಂಬಂಧವನ್ನು ವಿವರಿಸುತ್ತಲೇ ಸೈಲ್ ಅವರು ದುಡಿಸಿಕೊಂಡ ಉದ್ದೇಶ ಕೇವಲ ಕುಂಬಾರರ ವೃತ್ತಿ ಬದುಕಿನ ಅವನತಿಯನ್ನು ಚಿತ್ರಿಸುವುದಷ್ಟೇ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇಂಥ ಇನ್ನಷ್ಟು ಸಂದರ್ಭ, ಸನ್ನಿವೇಶಗಳನ್ನಿಲ್ಲಿ ಉದಾಹರಿಸಬಹುದು. ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಬರುವಂಥದೇ (ಪಾರೋತಿ-ಸರಸೋತಿ)ಅತ್ತೆ ಸೊಸೆಯರ ಒಂದು ಜುಗಲ್ಬಂದಿ ಇಲ್ಲಿದೆ. ಸೀತವ್ವ ಮತ್ತು ತಾರಾ ಆ ಅತ್ತೆ ಸೊಸೆಯರು. ಸೀತವ್ವ ಮತ್ತು ತಾರಾ ಇಬ್ಬರೂ ವಿಧವೆಯರು. ತಾರಾಳ ಮಗ, ಸೀತವ್ವನ ಮೊಮ್ಮಗ ವಸಂತ. ಅವನಿಗೆ ಹದಿನಾರು-ಹದಿನೇಳು ಎನ್ನುವಾಗ ಅವನು ಶೀಲಾ ಜೊತೆ ಗೋವೆಗೆ ಹೊರಡಬೇಕಾಗುತ್ತದೆ, ಹೊಟ್ಟೆಪಾಡು ಅರಸಿ. ಈ ಸೀತವ್ವ ಮಹಾ ದಿಟ್ಟೆ. ಇವಳ ದಿಟ್ಟತನದ ಹಲವು ಕತೆಗಳು ಇಲ್ಲಿವೆ. ಶೀಲಾ ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತ ಕುಂಬಾರರ ಸಖಾರಾಮನನ್ನು ಪ್ರೀತಿಸಿ ಮದುವೆಯಾದಾಕೆ. ಸೀತವ್ವ ಮತ್ತು ಶೀಲಾ ಇಬ್ಬರಲ್ಲೂ ಕೆಲವೊಂದು ಸಾಮ್ಯತೆಗಳಿವೆ. ಬಹುಶಃ ಕುಂಬಾರರಲ್ಲಿ ಅತ್ಯಂತ ವಿವೇಚನಾಯುತವಾದ ನಿರ್ಧಾರಗಳನ್ನು ಕೈಗೊಳ್ಳುವ ವ್ಯಕ್ತಿ ಈ ಸೀತವ್ವನೇ ಎಂದರೆ ತಪ್ಪಾಗಲಾರದು. ಈಕೆ ಸ್ಪಷ್ಟವಾಗಿ ತಮ್ಮ ವೃತ್ತಿಬಾಂಧವರ ಭವಿಷ್ಯದ ದಿನಗಳನ್ನು ಮುಂಗಾಣಬಲ್ಲಳು. ಸೊಸೆಯ ಹತಾಶೆಯನ್ನು ಅರ್ಥಮಾಡಿಕೊಂಡೂ ಅದನ್ನು ಒಪ್ಪಲಾರಳು. ಈಕೆಯ ಜೀವನಾಸಕ್ತಿ ಮತ್ತು ಅದಮ್ಯ ಜೀವನೋತ್ಸಾಹ ಬೆರಗು ಹುಟ್ಟಿಸುವಂಥಾದ್ದು. ಕಾದಂಬರಿಯ ಕೊನೆಯಲ್ಲಿ ಇದೇ ಸೀತವ್ವ ತನ್ನ ಮೊಮ್ಮಗನ ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿ, ಮೊಮ್ಮಗಳ ಮದುವೆಯ ಕನಸಿನಲ್ಲಿ, ಸಾವು ಇನ್ನೇನು ಬಂದು ಹೊಸ್ತಿಲಿನಾಚೆ ಕಾದು ಕೂತಿರಬಹುದೇ ಎಂಬ ಆತಂಕದಲ್ಲಿ ಕಳೆಯುವ ದಿನಗಳ ಅತ್ಯಂತ ನವಿರಾದ ಒಂದು ಚಿತ್ರವಿದೆ. ಜೀವನದ ಕೊನೆಯ ಘಟ್ಟದಲ್ಲಿ ಈ ಭಯ ಮತ್ತು ಆತಂಕಗಳ ಕರಾಳ ನೆರಳು ಒಂದೆಡೆ, ಇನ್ನೂ ಬದುಕಬೇಕು, ಮಕ್ಕಳ, ಮೊಮ್ಮಕ್ಕಳ ಬದುಕು ಅರಳುವುದನ್ನು ತಾನು ಕಣ್ಣಾರೆ ಕಾಣಬೇಕು ಎಂಬ ಆಸೆ ಇನ್ನೊಂದೆಡೆ. ಇವೆರಡರ ನಡುವಿನ ಒಂದು ಯುದ್ಧ ಹುಟ್ಟಿಸುವ ವಿಷಣ್ಣಭಾವವೇನಿದೆ, ಅದನ್ನು ಬಲ್ಲವರೇ ಬಲ್ಲರು. ಸೈಲ್ ಅವರು ಅದನ್ನು ಇಲ್ಲಿನ ಒಂದು ಅಧ್ಯಾಯದಲ್ಲಿ ಚಿತ್ರಿಸಿರುವ ಬಗೆ ಕೂಡ ರೂಪಕಶಕ್ತಿಯದು, ಕಾವ್ಯಾತ್ಮಕವಾದುದು.

ಹಾಗೆಯೇ ಇಡೀ ಕುಂಬಾರ ಕೇರಿಗೆ ತಾಯಿಯಂತೆ ಇದ್ದ, ಸದಾ ತನ್ನ ನೆರಳಿನ ಮಡಿಲನ್ನು ಎಲ್ಲರಿಗೂ ತೆರೆದಿಟ್ಟ ಬೃಹತ್ ಮಾವಿನ ಮರವನ್ನು ಹಣಕ್ಕೆ ಮಾರುವ ದುರ್ಧರ ನಿರ್ಧಾರಕ್ಕೆ ಬರುವ ಸಂದರ್ಭವೂ ಮಹತ್ವದ್ದು. ವಿವರಗಳು, ನಿರೂಪಣೆ ಎಲ್ಲವೂ ಅನುವಾದದಲ್ಲಿ ಬಂದಿದ್ದೂ ಏನೋ ಒಂದು ನಿರುತ್ಸಾಹ, ಜಡತ್ವ ಉಳಿದುಬಿಟ್ಟಿರುವಂತಿದೆ. ಮೂಲವನ್ನು ಓದದೇ ಹೇಳಲಾಗದ ಮಾತಾದರೂ ಇಂಥ ಒಂದು ಭಾವ ಕಾಡುತ್ತದೆ ಎಂಬುದು ನಿಜ. ಆವಿಗೆ ಎಂದರೆ ಕುಂಬಾರರು ಹಲವು ಹತ್ತು ಒಣಗಿದ ಮಡಕೆಗಳನ್ನಿಟ್ಟು ಸುಡುವ ಕುಲುಮೆಯಂಥದು. ಮುಖಪುಟದಲ್ಲಿ ನಾವು ಕಾಣುವಂಥ ಒಲೆಯಲ್ಲ. ಅನುವಾದಕ್ಕೆ ಇದು ಸಾಂಕೇತಿಕತೆಯನ್ನೊದಗಿಸುತ್ತಿದೆಯೆ!

ಕುಂಬಾರರ ವೃತ್ತಿ ಮತ್ತು ಬದುಕಿನ ಸ್ಥಿತ್ಯಂತರವನ್ನು ಕಾಣಿಸುವ ಒಂದು ಸಿನಿಮಾ ಕನ್ನಡದಲ್ಲೂ ಬಂದಿದೆ. ಪಿ.ಆರ್.ರಾಮದಾಸ ನಾಯ್ಡು ಅವರ ಪ್ರವಾಹ ಚಲನಚಿತ್ರ ಕುಂಬಾರರ ಬದುಕು ಪ್ರವಾಹಕ್ಕೆದುರಾಗಿ ಈಜುವುದಕ್ಕೆ ಸಮನಾದ ಹಂತಕ್ಕೆ ತಲುಪಿದ್ದು ಮತ್ತು ಅವರು ಬೇರೆ ಜೀವನ ವ್ಯಾಪ್ತಿಯತ್ತ ಹೊರಳಿಕೊಂಡಿದ್ದು - ಈ ಸಂಕ್ರಮಣ ಘಟ್ಟದ ದಾರುಣತೆಯನ್ನು ಚಿತ್ರಿಸುತ್ತದೆ. ಆದರೆ ಆವಿಗೆ ಕಾದಂಬರಿಯ ಮಹತ್ವಾಕಾಂಕ್ಷೆಯಾಗಲಿ, ಆಳ-ವಿಸ್ತಾರಗಳಾಗಲಿ ಆ ಚಲನಚಿತ್ರಕ್ಕಿಲ್ಲದಿದ್ದರೂ ಅದು ಕೂಡ ಸಾಕಷ್ಟು ಪರಿಣಾಮಕಾರಿಯಾಗಿಯೇ ಸಮಸ್ಯೆಯನ್ನು ಮಂಡಿಸುತ್ತದೆ ಎನ್ನುವುದು ನಿಜ. ನಿರೂಪಣೆ/ಪ್ರಸ್ತುತಿಯ ಎರಡು ವಿಭಿನ್ನ ವಿಧಾನಗಳಿಗಾಗಿ ಇದನ್ನು ಗಮನಿಸಿಕೊಳ್ಳಬಹುದಾಗಿದೆ.

(ಈ ಲೇಖನದ ಆಯ್ದ ಭಾಗ ವಿಶ್ವವಾಣಿಯ ಸಾಪ್ತಾಹಿಕ ಪುರವಣಿ ‘ವಿರಾಮ’ದಲ್ಲಿಯೂ, ಕನ್ನಡ ಕನೆಕ್ಟ್ ಅಂತರ್ಜಾಲ ಪತ್ರಿಕೆಯಲ್ಲಿಯೂ ಪ್ರಕಟವಾಗಿದೆ)

No comments: