Tuesday, March 1, 2016

ಸಮೃದ್ಧ ಕಥಾಜಗತ್ತೊಂದನ್ನು ಕಟ್ಟುವ ಕತೆಗಳು

ಈ ಸಂಕಲನದ ಒಟ್ಟು ಹನ್ನೆರಡು ಕತೆಗಳಲ್ಲಿ ಕೆಲವೊಂದು ಸಾಮಾನ್ಯ ಅಂಶಗಳಿದ್ದು ಈ ಕತೆಗಳನ್ನು ಒಟ್ಟಾಗಿ ಓದುವಾಗ ಆಗುವ ಒಂದು ವಿಶಿಷ್ಟ ಅನುಭವಕ್ಕೆ ಅವು ಬಹುಮಟ್ಟಿಗೆ ಕಾರಣವಾಗಿವೆ. ಅವುಗಳಲ್ಲಿ ಮೊದಲನೆಯದು ಇಲ್ಲಿನ ಹೆಚ್ಚಿನ ಕತೆಗಳಲ್ಲಿ ಬರುವ ಪಾತ್ರ ಪ್ರಪಂಚದಲ್ಲಿನ ಸಾಮ್ಯತೆ. ಅದು ಉಡುಪಿ-ದಕ್ಷಿಣಕನ್ನಡ ಜಿಲ್ಲೆಯ ಕೊಂಚ ಒಳನಾಡಿಗೆ ಸೇರಿದ ಯಾವುದಾದರೊಂದು ಪುಟ್ಟ ಊರು. ಕೃಷಿಕರು, ಗೇಣಿಗೆ ಭೂಮಿ ಪಡೆದ ಒಕ್ಕಲುಗಳು, ಅಂಗಡಿ ಅಥವಾ ಹೋಟೇಲು ಇಟ್ಟು ಸಂಸಾರ ತೂಗಿಸುವ ಗಂಡಸರು, ಊರನ್ನು ನಡೆಸಿಕೊಂಡು ಹೋಗುವ ಪಟೇಲರು-ಶಾನುಭಾಗರು, ಬೀಡಿ ಕಟ್ಟಿ ಬದುಕಿಗೆ ಆಧಾರ ಮಾಡಿಕೊಂಡ ಹೆಣ್ಣುಗಳು, ಸಂಸಾರದಲ್ಲಿ ಆರ್ಥಿಕವಾಗಿಯೂ, ಕೌಟುಂಬಿಕವಾಗಿಯೂ ಗಂಡಿಗಿಂತ ಹೆಚ್ಚು ಸಮರ್ಥರೂ, ಮುಂದಾಲೋಚನೆಯುಳ್ಳವರೂ ಆದ ಹೆಂಡಿರು, ತಮ್ಮನ ಯಶಸ್ಸನ್ನೂ ಸೋಲನ್ನೂ ಬಳಸಿಕೊಳ್ಳುವ ಅಣ್ಣಂದಿರು ಮತ್ತು ಹಿರಿಯ ಜೀವದ ಬಗ್ಗೆ ಮಮಕಾರದಿಂದ ಮಿಡಿಯುವ ಯುವ ತಲೆಮಾರು - ಇಲ್ಲಿನ ಪಾತ್ರಪ್ರಪಂಚದ ಒಟ್ಟಾರೆ ಲಕ್ಷಣವೆಂದರೆ ತಪ್ಪಾಗಲಾರದು.

ಇನ್ನು ಎರಡನೆಯದು ಇಲ್ಲಿ ಅನುಬೆಳ್ಳೆಯವರು ಬಳಸುವ ಭಾಷೆಯ, ನುಡಿಕಟ್ಟಿನ ದೇಸೀತನ. ಅವರಿಗೇ ವಿಶಿಷ್ಟವಾದ ಒಂದು ಭಾಷೆಯ ಹದವನ್ನು ಅವರು ಕಂಡುಕೊಂಡಂತಿದೆ. ಅದರಲ್ಲಿ ಈ ಭಾಗದ ಜನ ತಮ್ಮ ದೈನಂದಿನ ಆಗುಹೋಗುಗಳಲ್ಲಿ ಬಳಸುವ, ಬಹುಷಃ ತುಳು-ಕನ್ನಡ ಎರಡರ ಹದವಾದ ಒಂದು ಮಿಶ್ರಣದಂತಿರುವ, ಬೇರೆ ಭಾಗದ ಕನ್ನಡಿಗರಿಗೆ ಎಲ್ಲಿಯೂ ಕಷ್ಟಕೊಡದೆ ಆಪ್ತವಾಗುವ ಒಂದು ಭಾಷೆಯಿದು. ಈ ಭಾಷೆಯನ್ನು ಬಳಸಿದ್ದರಿಂದಲೇ ಈ ಕತೆಗಳಿಗೆ ಒಂದು ಬಗೆಯಾದ ಅಥೆಂಟಿಕ್ ಆದ ವಾತಾವರಣ ನಿರ್ಮಾಣಗೊಂಡು ಬಿಡುತ್ತದೆ ಮತ್ತು ಇದು ಇಲ್ಲಿನ ಬಹುತೇಕ ಎಲ್ಲಾ ಕತೆಗಳಲ್ಲೂ ಮರುಕಳಿಕೆಯಾಗುವುದರಿಂದ ನಾವು ಕತೆಗಳನ್ನು ಓದುತ್ತಿರುವಾಗಲೇ ಕಾದಂಬರಿಯೊಂದನ್ನು ಓದುತ್ತಿರುವ ಅನುಭವಕ್ಕೂ ಕಾರಣವಾಗುತ್ತದೆ. ಬಹುಷಃ ಈ ನೆಲೆಯ ಒಂದು ಕಾದಂಬರಿಯನ್ನೂ ನಾವು ಅನುಬೆಳ್ಳೆಯವರಿಂದ ನಿರೀಕ್ಷಿಸಬಹುದೇನೋ ಎನಿಸುತ್ತದೆ.

ಮೂರನೆಯದು ಇಲ್ಲಿನ ಕಥಾನಕಗಳ ಆಕೃತಿಯ ಕುರಿತಾದ ವೈಶಿಷ್ಟ್ಯ. ಇಲ್ಲಿನ ಹೆಚ್ಚಿನ ಕತೆಗಳಿಗೆ ನಾವು ಸಾಮಾನ್ಯವಾಗಿ ನಿರೀಕ್ಷಿಸುವಂಥ ಒಂದು ಪಂಚಿಂಗ್ ಎಂಡ್ ಎನ್ನುವುದಿಲ್ಲ. ಮುಕ್ತಾಯದಲ್ಲಿ ಓದುಗನಿಗೆ ಶಾಕ್ ಕೊಡುವ, ಯಾವುದೋ ಒಂದು ವಿಶಿಷ್ಟ ಅರ್ಥದ ಛಾಪು ನೀಡುವ, ಇಷ್ಟು ಹೊತ್ತು ‘ನಾನು ಹೇಳಲು (ಹೊಳೆಯಿಸಲು) ಹೊರಟಿದ್ದು ಇದನ್ನೇ’ ಎಂದು ಮನಗಾಣಿಸುವ ಪೂರ್ವ ನಿರ್ಧಾರಿತ ಉದ್ದೇಶದಿಂದ ಒಂದು ನಿರ್ದಿಷ್ಟ ಗಮ್ಯವನ್ನು ಅರಸಿ ಹೊರಟ ಕತೆಗಳಲ್ಲ ಇವು. ಬದುಕಿನ ಒಂದು ನಿಟ್ಟಿನ ನೋಟವನ್ನಷ್ಟೇ ದಯಪಾಲಿಸುತ್ತ ಇದು ಮುಂದುವರಿಯಲಿದೆ ಎನ್ನುವಂಥ ಒಂದು ಧಾಟಿಯಲ್ಲೇ ಇಲ್ಲಿನ ಬಹುತೇಕ ಕತೆಗಳು ಮುಗಿದು ಬಿಡುತ್ತವೆ. ಕೆಲವೊಮ್ಮೆ ಇನ್ನೊಂದು ಕತೆಯಲ್ಲಿ ಹಿಂದಿನ ಯಾವುದೋ ಕತೆಯ ಪಾತ್ರಗಳೋ, ಅವುಗಳನ್ನು ಹೋಲುವ ಛಾಯೆಗಳೋ ಎದುರಾಗುವುದೂ ಇದೆ. ಇದರಿಂದಾಗಿಯೂ ಈ ಓದು ಒಂದು ಕಥಾಜಗತ್ತಿನಲ್ಲಿ ಒಂದಷ್ಟು ಹೊತ್ತು ಓಡಾಡಿ ಬಂದ ಅನುಭವವನ್ನು ನೀಡುತ್ತದೆ.

ನಾಲ್ಕನೆಯದು ಅನುಬೆಳ್ಳೆಯವರಿಗೆ ಗೃಹಿಣಿಯರ ಮತ್ತು ಊರ ಕೃಷಿಕರ ಬದುಕಿನ ಸೂಕ್ಷ್ಮ ವಿವರಗಳ ಬಗ್ಗೆ ಇರುವ ಸಮಾನ ಆಸಕ್ತಿ ಮತ್ತು ಜ್ಞಾನ ಇಲ್ಲಿನ ಕತೆಗಳಲ್ಲಿ ಮೈತಳೆದಿರುವುದು. ಅಡುಗೆಮನೆಯ ಕೆಲಸ-ತಾಪತ್ರಯಗಳು, ಗಂಡಸರ ಕೃಷಿ, ಉದ್ಯಮದ ಸೋಲು-ಗೆಲುವುಗಳು, ಕಾಯಿಲೆ ಬಿದ್ದ ಹಿರಿಯರ ಶುಶ್ರೂಷೆ, ಮಕ್ಕಳಾಗದ, ಮದುವೆಯಾಗದ ನೋವು, ಸಂಬಂಧಿಕರಲ್ಲಿ ಯಾರದೋ ಸಾವು - ಇವೆಲ್ಲವೂ ಅತ್ತೆ-ಸೊಸೆ, ಗಂಡ-ಹೆಂಡತಿ, ಅಪ್ಪ-ಮಗಳು ಮುಂತಾದ ಸಂಬಂಧಗಳ ನಡುವೆ ಕಂಡೂ ಕಾಣದಂತೆ ಬೀರುವ ಪ್ರಭಾವವನ್ನು ಮತ್ತು ಅದರಾಚೆಗೂ ಈ ಸಂಬಂಧಗಳಲ್ಲಿ ಸುಪ್ತವಾಗಿ ಮಿಡಿಯುವ ತಂತುಗಳನ್ನು ಅನುಬೆಳ್ಳೆಯವರು ಸೊಗಸಾಗಿ ತಮ್ಮ ಕತೆಗಳಲ್ಲಿ ತರಬಲ್ಲವರು.

‘ಋಣಮುಕ್ತಿ’ ಕತೆಯ ಪ್ರಾಮಾಣಿಕ್ ಮತ್ತು ಹೃದಯಿ ದಂಪತಿಗಳ ಅನ್ಯೋನ್ಯತೆ ಮತ್ತು ಬದುಕಿನ ವಿವರಗಳು ತುಂಬ ನೈಜವಾಗಿವೆ. ಆದರೆ ಕತೆ ನೆಚ್ಚಿಕೊಂಡಿರುವುದು ಭಾವುಕತೆಯನ್ನೇ ಆಗಿರುವುದರಿಂದ ಈ ಪಾತ್ರಗಳ ಹೆಸರುಗಳಂತೆಯೇ ಇಲ್ಲಿನ ಸಂಭಾಷಣೆ ಕೊಂಚ ಡ್ರಮಾಟಿಕ್ ಆಗಿದೆ. ‘ಸುಡುಗಾಡ ಕಾಯ’ ಕತೆಯಲ್ಲಿಯೂ ಚೀತಕ್ಕನ ಬಾಯಿಂದ ಮಾತುಗಳನ್ನು ಹೊರಡಿಸುವುದಕ್ಕೆಂದೇ ಹೆಣ ಸುಡಲು ಬಂದಾತನ ಬಾಯಲ್ಲಿ ಕತೆಗಾರರೇ ಆಡಿಸುವ ಕೆಲವು ಮಾತುಗಳು ಸಂದರ್ಭಕ್ಕೆ ಅಷ್ಟೊಂದು ಹೊಂದಾಣಿಕೆಯಾಗುವುದಿಲ್ಲ ಎಂದು ಅನಿಸದಿರದು. ಆದರೆ ಇವೆರಡು ಕತೆಗಳನ್ನು ಬಿಟ್ಟರೆ ಉಳಿದ ಎಲ್ಲಾ ಕತೆಗಳೂ ವಾಸ್ತವಕ್ಕೆ ಹೆಚ್ಚು ನೆಚ್ಚಿಕೊಂಡು ನಿಲ್ಲುವಂಥವು. ‘ಸೋಲು ಗೆಲುವಾಗದೆ’, ‘ಪಯಣದ ಕೊನೆ’ ಮತ್ತು ‘ಅಸ್ತಿತ್ವ’ ಕತೆಗಳಲ್ಲಿ ಅಣ್ಣ ತಮ್ಮಂದಿರ ನಡುವಣ ಆಸ್ತಿ ವಿಚಾರದ ಗೊಂದಲ ಸಾಮಾನ್ಯ ಅಂಶವಾಗಿ ಕಂಡುಬಂದರೂ ಪ್ರತಿಯೊಂದು ಕತೆಯೂ ತನ್ನ ದಟ್ಟವಾದ ವಿವರಗಳು ಮತ್ತು ವಿಭಿನ್ನ ಕಥಾನಕದಿಂದಾಗಿ ಬೇರೆಯಾಗಿ ನಿಲ್ಲುತ್ತದೆ. ‘ಸೋಲು ಗೆಲುವಾಗದೆ’ ಕತೆಯ ಗೋಪಾಲಯ್ಯ ತಾನೇ ಗದ್ದೆಗಳನ್ನು ಗೇಣಿಗೆ ಕೊಟ್ಟು ಕಷ್ಟಕ್ಕೆ ಸಿಲುಕಿದರೆ ‘ಅಸ್ತಿತ್ವ’ ಕತೆಯ ವಿಠಲ ಗೇಣಿಗೆ ಭೂಮಿ ಪಡೆದೂ ಕಷ್ಟಕ್ಕೆ ಬಿದ್ದವನು. ಅಲ್ಲದೆ ಇಲ್ಲಿ ಅಣ್ಣ ತಮ್ಮಂದಿರ ಬದಲಾಗಿ ಅಕ್ಕ ತಂಗಿಯರ ಆಸ್ತಿ ಹಿಸ್ಸೆಯ ಸಮಸ್ಯೆಯಿದೆ. ‘ಪಯಣದ ಕೊನೆ’ ಕತೆಯಂತೂ ಮೂರು ತಲೆಮಾರಿನ ಗೋಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಹರಹು ಹೊಂದಿರುವ ಕತೆ. ಹೀಗಾಗಿಯೂ ಇಲ್ಲಿ ಮದುವೆಗೆ ಬೆಳೆದು ನಿಂತ ಹೆಣ್ಣುಮಕ್ಕಳ ಸಮಸ್ಯೆ, ದಾಂಪತ್ಯದ ಸಿಕ್ಕುಗಳು, ಉಳ್ಳವರ ದರ್ಪ, ಇಲ್ಲದವರ ಬವಣೆ ಎಲ್ಲವೂ ಕತೆಯ ಚೌಕಟ್ಟಿನೊಳಗೆ ಸೇರಿಕೊಳ್ಳುತ್ತ ಒಂದು ಊರು-ಬದುಕು ಹೆಚ್ಚು ಮುಖ್ಯವಾಗುತ್ತ ಕಥಾನಕಕ್ಕಿಂತ ನಿರೂಪಣೆಯ ಲಯ, ವಿವರಗಳ ದಟ್ಟಣೆ ಮತ್ತು ನೈಜತೆ ಹೆಚ್ಚು ಆಪ್ತವಾಗುತ್ತ ಹೋಗುತ್ತದೆ.

‘ಸತ್ಯವೆಂಬ ಸುಳ್ಳು’ ಒಂದು ವಿಶಿಷ್ಟವಾದ ವಸ್ತುವನ್ನು ಹೊಂದಿರುವ ಕತೆ. ಇಲ್ಲಿಯೂ ಕಥಾನಕದ ಬೆಳವಣಿಗೆ, ಕುತೂಹಲವನ್ನು ಒಡೆಯುವ ಕ್ಲೈಮ್ಯಾಕ್ಸ್ ಇಲ್ಲ. ಆದರೆ ಸ್ಕೆಚೀ ಆಗಿಯೇ ಕಾಣಿಸಿಕೊಳ್ಳುವ ಒಂದು ವಿಶಿಷ್ಟ ಪಾತ್ರದ ವಿವರಗಳು ಓದುಗನಲ್ಲಿ ಹುಟ್ಟಿಸಬಹುದಾದ ಕೌತುಕ ಮತ್ತು ಒಗಟನ್ನು ಒಡೆಯುವ ತವಕ - ಇವನ್ನು ಅವನಿಗೇ ಕಾಣಿಸುವಂಥ ತಂತ್ರವನ್ನು ಈ ಕತೆ ದುಡಿಸಿಕೊಳ್ಳುತ್ತಿದೆ. ‘ಮದುವೆಯೆಂಬ ಕನಸು ವಾಸ್ತವ’ ಹಾಗೂ ‘ಕಾರಣ ಬೇಕಾಗಿಲ್ಲ’ ಎರಡೂ ಕತೆಗಳು ಕೂಡ ನಾನು ಮೇಲೆ ಹೇಳಿದಂಥ ಒಂದು ಊರು-ಬದುಕು ಮತ್ತು ಕಥಾಜಗತ್ತನ್ನು ಮತ್ತಷ್ಟು ಶ್ರೀಮಂತಗೊಳಿಸುವ ಮತ್ತು ತನ್ನದೇ ಆದ ಸ್ವತಂತ್ರ ಕಥಾನಕವನ್ನೂ ಹೊಂದಿರುವ ಕತೆಗಳು. ಒಂದು ಮನೆಯ ಹೊರಜಗತ್ತನ್ನು ನಿರ್ಮಿಸಿಕೊಡುವ ವಿವರಗಳ ಶ್ರೀಮಂತಿಕೆಯನ್ನು ಹೊಂದಿದ್ದರೆ ಇನ್ನೊಂದು ಮನೆಯ ಒಳಜಗತ್ತನ್ನು ಕಟ್ಟಿಕೊಡುವ ವಿವರಗಳನ್ನು ಹೊಂದಿದೆ. ‘ಅಜ್ಜಿಯ ಶಾರ್ಧ’ ಕತೆಯನ್ನು ಗಮನಿಸಿದರೂ ಇದೇ ಅಂಶ ವೇದ್ಯವಾಗುತ್ತದೆ. ಇಲ್ಲಿಯೂ ವಿಶೇಷವಾದ ಕಥಾನಕದ ಚೌಕಟ್ಟು ಎದ್ದು ಕಾಣುವಂತಿಲ್ಲ. ಆದರೆ ಪುಟ್ಟ ಊರೊಂದರ ಜೀವನಕ್ರಮದ ವಿವರಗಳು ದಟ್ಟವಾಗಿ ಹರಡಿಕೊಂಡಿವೆ. ಹಾಗೆಯೇ ‘ಸೋಲು ಗೆಲುವಾಗದೆ’, ‘ಪಯಣದ ಕೊನೆ’ ಮತ್ತು ‘ಅಸ್ತಿತ್ವ’ ಕತೆಗಳಲ್ಲಿ ಬರುವ ಅದೇ ಅಣ್ಣ ತಮ್ಮಂದಿರು ಇಲ್ಲಿಯೂ ಮುಂದುವರಿದಿದ್ದಾರೆಯೇ ಎನಿಸಿದರೂ ಅಚ್ಚರಿಯಿಲ್ಲ. ಈ ಕತೆ ಒಂದು ಊರಿನ ಎಷ್ಟೆಲ್ಲ ಆಯಾಮಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆಯೆಂಬುದೇ ಅಚ್ಚರಿಯನ್ನು ಹುಟ್ಟಿಸುವಂತಿದೆ. ‘ಕಲ್ಲಲಾಂಬು’ ಕತೆ ಕೊಂಚ ಲಘುಧಾಟಿಯನ್ನು ನೆಚ್ಚಿಕೊಂಡು ಸಾಗಿದರೂ ಜಾತಿ, ಅದಕ್ಕೆ ಹೊಂದಿಕೊಂಡ ಆಹಾರ ಪದ್ಧತಿ ಮತ್ತು ಆಧುನಿಕತೆಯ ಎದುರು ಈ ಗೆರೆಗಳೆಲ್ಲ ಅಳಿಸಿ ಹೋಗುತ್ತಿರುವುದು ಕೂಡ ಕತೆಯ ಚೌಕಟ್ಟಿನಲ್ಲೇ ಅತ್ಯಂತ ಸಹಜವಾಗಿ ಬಂದಿದೆ. ಪಮ್ಮಟ್ಟು ಹೇಳುವ ಹಕ್ಕಿಯ ಕತೆ ಕೂಡ ಕತೆಯ ಆಕರ್ಷಕ ಅಂಶಗಳಲ್ಲಿ ಒಂದು.

‘ದಾರಿಯಲ್ಲದ ದಾರಿ’ ಕತೆಯ ಬಾಜು ಒಂದು ಪ್ರಾತಿನಿಧಿಕ ಪಾತ್ರ. ಬದುಕಿನ ಯಶಸ್ಸು ಎಂದು ನಾವು ಪರಿಗಣಿಸುವ ಭೌತಿಕ ಜೀವನಮಟ್ಟಕ್ಕೆ ಏರಲಾಗದೇ ಹೋದ ಮತ್ತು ಸಮಾಜ ಯಾವ ಸ್ತರದಲ್ಲಿಯೂ ಸ್ವೀಕರಿಸಲು ಸಿದ್ಧವಿಲ್ಲದ ನಿಷ್ಪಾಪಿ ಜೀವಗಳು ಎಲ್ಲ ಊರಿನಲ್ಲಿಯೂ ಇದ್ದೇ ಇರುತ್ತವೆ. ಇಂಥ ಒಂದು ಪಾತ್ರವನ್ನು ಅನುಬೆಳ್ಳೆಯವರು ಇಲ್ಲಿ ಸಮೃದ್ಧವಾಗಿ ಚಿತ್ರಿಸಿದ್ದಾರೆ. ‘ಅಂತಃಸಾಕ್ಷಿ’ ಬಹುಷಃ ಹೆಚ್ಚು ಕೌತುಕದ ನಡೆಗಳಿರುವ, ಸಾವೊಂದರ ನಿಗೂಢತೆಯನ್ನು ತನ್ನ ಒಡಲಲ್ಲಿರಿಸಿಕೊಂಡಿರುವ ಕತೆಯಾದರೂ ಕಥಾನಕದ ಗಮ್ಯ ಮಾತ್ರ ಈ ಕೌತುಕವನ್ನು ಒಡೆಯುವುದಲ್ಲ. ಒಂದು ವಿಧದಲ್ಲಿ ಇದು ಕೂಡ ‘ಸತ್ಯವೆಂಬ ಸುಳ್ಳು’ ಕತೆಯ ಹಾಗೆ ಸತ್ಯ ಮತ್ತು ಸುಳ್ಳುಗಳ, ನ್ಯಾಯ ಮತ್ತು ಅನ್ಯಾಯಗಳ ನಡುವಿನ ತೆಳುವಾದ ಗೆರೆಯ ಜಾಡುಗಳನ್ನು ಅರಸುವುದರಲ್ಲಿಯೇ ರಮಿಸುವ ಕತೆ.

ಸಂಕಲನದ ಅತ್ಯಂತ ಸಮೃದ್ಧವಾದ ಕತೆ ‘ಅಸ್ತಿತ್ವ’. ಈ ಕತೆಯ ವಿಠಲ, ಪ್ರಮೀಳ, ರಮಣಿ, ದೆಚ್ಚ, ಪಟೇಲರು, ಶಾನುಭೋಗರು - ಹೀಗೆ ಎಲ್ಲಾ ಪಾತ್ರಗಳೂ, ಆಯಾ ಪಾತ್ರಗಳ ಹಿನ್ನೆಲೆಯೂ ಬಹಳ ಸುಪುಷ್ಟವಾದ ಆರೈಕೆ ಪಡೆದಿವೆ. ಹೀಗಾಗಿ ಕತೆಯ ಒಡಲು ಸಮೃದ್ಧವಾಗಿ ಮೂಡಿದೆ ಮಾತ್ರವಲ್ಲ ಕಥಾನಕವೂ ಗಟ್ಟಿಯಾಗಿದ್ದು ಬದುಕಿನ ವಿವಿಧ ಆಯಾಮಗಳತ್ತ ಯಾವುದೇ ನಿರ್ಧಾರಗಳಿಲ್ಲದ ನೋಟವೊಂದನ್ನು ಅತ್ಯಂತ ಸಹಜವಾಗಿ ದೊರಕಿಸುತ್ತ ಹೋಗುತ್ತದೆ.

ಕೇವಲ ಕತೆಗಾಗಿ ಕತೆಯಾಗದೆ, ಮನೋರಂಜನೆಯೊಂದೇ ಉದ್ದೇಶವಾಗಿರದ ಮಹತ್ವಾಕಾಂಕ್ಷಿ ಬರಹಗಳಾಗಿದ್ದೂ, ನುರಿತ ಕತೆಗಾರರಲ್ಲೂ ಇವತ್ತು ಕಾಣಲು ಸಿಗದಂಥ, ಜೀವನಾನುಭವದಿಂದಲೂ, ಸೂಕ್ಷ್ಮ ಅವಲೋಕನದಿಂದಲೂ ದಕ್ಕಿದ ಅನೇಕ ಉತ್ತಮ ಅಂಶಗಳನ್ನು ಮೈಗೂಡಿಸಿಕೊಂಡು ಇಲ್ಲಿನ ಕತೆಗಳು ನಳನಳಿಸುತ್ತಿದ್ದರೂ ಪ್ರಸ್ತುತ ಕನ್ನಡದ ಸಣ್ಣಕತೆಯ ಪ್ರಕಾರ ಪ್ರಯತ್ನಿಸಿ ಬಿಟ್ಟ ಹತ್ತು ಹಲವು ಪ್ರಯೋಗಗಳ ಹಿನ್ನೆಲೆಯಲ್ಲಿ ಈ ಎಲ್ಲ ಕತೆಗಳಲ್ಲಿ ಒಂದು ಕೊರತೆ ಕಾಣುತ್ತದೆ. ಅದು, ಈ ಕತೆಗಳಲ್ಲಿ ಎಲ್ಲವೂ ಸದ್ದಿನಲ್ಲಿ ಹುಟ್ಟಿ ಸದ್ದಿನಲ್ಲಿಯೇ ಮುಗಿಯುತ್ತದೆ. subtle ಎಂದು ನಾವು ಕರೆಯುವ, ಕೇವಲ ಸಂವೇದನೆಗಳಲ್ಲಷ್ಟೇ ಒಬ್ಬರಿಂದ ಇನ್ನೊಬ್ಬರನ್ನು ತಲುಪಬಲ್ಲ ಸೂಕ್ಷ್ಮಗಳು ಈ ಕತೆಗಳ ಒಡಲಿನಿಂದ ಮೂಡುತ್ತಿಲ್ಲ. ಇಲ್ಲಿನ ವಿವರಗಳು ಭೌತಿಕ ಜಗತ್ತನ್ನು ನಿರ್ಮಿಸಿಕೊಡುವಷ್ಟು ಸಲೀಸಾಗಿ ಮಾತುಗಳಾಗಲೀ, ಪಾತ್ರ ನಿರ್ಮಿತಿಯಾಗಲಿ, ಸನ್ನಿವೇಶದ ಪರಿಕಲ್ಪನೆಯಲ್ಲಾಗಲೀ, ಒಂದು ಭಾವಲೋಕವನ್ನು ನಿರ್ಮಿಸಿಕೊಡುತ್ತಿಲ್ಲ. ಪ್ರೀತಿ, ದುಃಖ ಮುಂತಾದ ಭಾವನೆಗಳು ಇಲ್ಲಿವೆ, ಅದಲ್ಲ. ಇಲ್ಲಿನ ‘ದಾರಿಯಲ್ಲದ ದಾರಿ’ ಕತೆಯ ಬಾಜು ಓದುಗನಲ್ಲಿ ಹುಟ್ಟಿಸುವಂಥದೇ ತಲ್ಲಣಗಳನ್ನು ಇಲ್ಲಿನ ಬೇರೆ ಬೇರೆ ಕತೆಗಳ ಪಾತ್ರಗಳು ಕೂಡ ಹುಟ್ಟಿಸುವಲ್ಲಿ ಸಫಲವಾಗುತ್ತಿಲ್ಲ ಎಂದರೆ ನಾನು ಹೇಳುತ್ತಿರುವುದೇನನ್ನು ಎನ್ನುವುದು ಅರ್ಥವಾದೀತು. ಈ ಅಂಶದತ್ತ ಅನುಬೆಳ್ಳೆಯವರು ಕೊಂಚ ಗಮನ ಹರಿಸಿದರೆ ಕನ್ನಡಕ್ಕೊಬ್ಬ ಮಹತ್ವದ ಕತೆಗಾರ ದೊರಕಿದಂತಾಗುವುದರಲ್ಲಿ ಸಂಶಯವಿಲ್ಲ.

(ಈ ಲೇಖನ ಕನ್ನಡ ಕನೆಕ್ಟ್ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ)

No comments: