Tuesday, March 1, 2016

ಎಳೆಯ ಕಾದಂಬರಿಕಾರನೊಬ್ಬನ ನಿವೇದನೆ

ಉಂಬರ್ಟೊ ಇಕೊ ತಮ್ಮ ಕಾದಂಬರಿಗಳಿಂದ, ಕಥನೇತರ ಬರವಣಿಗೆಗಳಿಂದ ಪ್ರಖ್ಯಾತರಾಗಿರುವ, ಮೂಲತಃ ಮಧ್ಯಯುಗೀನ ಚರಿತ್ರೆಯಲ್ಲಿ ಅತೀವ ಆಸಕ್ತಿ ತಳೆದಂಥ, ಅಪೂರ್ವ ಪ್ರಾಚೀನ ಕೃತಿಗಳ ಸಂಗ್ರಹದ ಹವ್ಯಾಸವುಳ್ಳಂಥ ವ್ಯಕ್ತಿ. ತಮ್ಮ ಐವತ್ತನೇ ವಯಸ್ಸಿನಲ್ಲಿ ಮೊದಲ ಕಾದಂಬರಿ, `ದ ನೇಮ್ ಆಫ್ ದ ರೋಸ್’ (1980) ಬರೆದ ಉಂಬರ್ಟೊ, 2011ರಲ್ಲಿ ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ಬರೆದ ಕೃತಿಯ ಹೆಸರು `ಕನ್‌ಫೆಶನ್ಸ್ ಆಫ್ ಅ ಯಂಗ್ ನಾವೆಲಿಸ್ಟ್’! ಈ ಎಳೇ ಕಾದಂಬರಿಕಾರನ ಮನೋಗತವನ್ನು ನಾಲ್ಕು ಸುದೀರ್ಘ ಉಪನ್ಯಾಸಗಳಲ್ಲಿ ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ್ದು ಅವುಗಳನ್ನು `ಆಲಿಸುವ’ ಅವಕಾಶ ನಮಗೆ ಸಿಗುವಂತಾಗಿದೆ. ಇಲ್ಲಿನ `ಎಡದಿಂದ ಬಲಕ್ಕೆ ಬರೆವ ಪರಿಕ್ರಮ’, `ಲೇಖಕ-ಲೇಖನ ಮತ್ತು ಅವಲೋಕನ’, `ಕಲ್ಪಿತವಾಸ್ತವದ ಕೆಲವು ಪಾತ್ರಗಳ ಕುರಿತು’ ಮತ್ತು `ನನ್ನ ಪಟ್ಟಿಗಳು’ ಎಂಬ ನಾಲ್ಕು ಪ್ರಬಂಧಗಳು ಅತ್ಯಂತ ಕುತೂಹಲಕರ ವಸ್ತು ವಿನ್ಯಾಸ ಹೊಂದಿದ್ದು ಕೆಲವು ಅಪೂರ್ವ ಸಂಗತಿಗಳನ್ನು ಗಮನಿಸುತ್ತ ಹೋಗುವ ಬಗೆ ವಿನೂತನವಾಗಿದೆ. ಬರಹಗಾರರಿಗೆ ಹೇಗೋ ಓದುಗರಿಗೂ ಇವು ಚಿಂತನ ಮಂಥನಕ್ಕೆ ಸಾಕಷ್ಟು ಗ್ರಾಸ ಒದಗಿಸುವಂತಿವೆ ಎನ್ನುವುದೇ ಈ ಕೃತಿಯ ಹೆಚ್ಚುಗಾರಿಕೆ.

ನಮ್ಮಲ್ಲಿ ಜಯಂತ ಕಾಯ್ಕಿಣಿ ಒಂದೆಡೆ ಹೇಳುತ್ತಾರೆ, ನಿಮಗೆ ಈಗಾಗಲೇ ಗೊತ್ತಿರುವ ಕತೆಯನ್ನೇನು ಬರೆಯುವುದು, ಗೊತ್ತಿಲ್ಲದೇ ಇರುವ ಕತೆಯನ್ನು ಬರೆಯತೊಡಗಿ ಅಂತ. ತಾನು ಪ್ರತೀ ಕತೆಯನ್ನು ಕಣ್ಣೆದುರಿನ ಖಾಲೀ ಹಾಳೆಯಷ್ಟೇ ಶೂನ್ಯದಿಂದ ತೊಡಗುತ್ತೇನೆ, ಏನನ್ನು ಬರೆಯಲಿದ್ದೇನೆ ಎಂಬುದನ್ನು ಪ್ಲ್ಯಾನ್ ಮಾಡಿರುವುದಿಲ್ಲ ಎಂದೂ ಅವರು ಹೇಳುತ್ತಾರೆ. ಜಯಂತರ ಕತೆಗಳ ಹಿನ್ನೆಲೆಯಲ್ಲಿ ಈ ಮಾತನ್ನು ಒರೆಗೆ ಹಚ್ಚುವ ಉದ್ದೇಶ ಇಲ್ಲಿ ನನಗಿಲ್ಲ. ಉಂಬರ್ಟೊ ತಮ್ಮ ಬರವಣಿಗೆಯ ಒಂದು ಪ್ರಮುಖ ಗುಣವನ್ನು ಗುರುತಿಸಿಕೊಳ್ಳುತ್ತ ಹೇಳಿರುವ ಮಾತುಗಳಲ್ಲಿರುವ ಸಾಮ್ಯದತ್ತ ನನ್ನ ಗಮನವಿದೆ. ಉಂಬರ್ಟೊ ತಮ್ಮ ಡಾಕ್ಟರೇಟ್ ಪ್ರಬಂಧದ ಅನುಭವವನ್ನು ಹೇಳಿಕೊಳ್ಳುವ ಸಂದರ್ಭವನ್ನು ಇಲ್ಲಿ ಗಮನಿಸಬಹುದು. ಈ ಪ್ರಬಂಧವನ್ನೋದಿದ ಉಂಬರ್ಟೊ ಅವರ ಪರೀಕ್ಷಕರಲ್ಲೊಬ್ಬರು "ಒಬ್ಬ ಪ್ರಬುದ್ಧ ವಿದ್ವಾಂಸ ಒಂದು ಸಂಶೋಧನೆಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡಾಗ ಸಹಜವಾಗಿಯೇ ತನ್ನ ಪ್ರತಿಯೊಂದು ಪ್ರಯತ್ನದಲ್ಲೂ ಎಡವುತ್ತ, ತಡವುತ್ತ ಯಶಸ್ಸಿನತ್ತ ಸಾಗಬೇಕಾಗುತ್ತದೆ; ಹೊಸ ಹೊಸ ಪ್ರಮೇಯಗಳನ್ನು ತನ್ನ ಮುಂದಿಟ್ಟುಕೊಂಡು ಸತ್ಯ ಶೋಧಿಸಬೇಕಾಗುತ್ತದೆ. ಆ ಮಾರ್ಗದಲ್ಲಿ ಅಂಥ ಹಲವು ಪ್ರಮೇಯಗಳನ್ನು ಬಿಟ್ಟುಕೊಡಬೇಕಾಗುತ್ತದೆ, ಹೊಸದವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಆದರೆ ತನ್ನೆಲ್ಲಾ ಸಂಶೋಧನೆಯ ಕಟ್ಟಕೊನೆಯಲ್ಲಿ ಆತ ಈ ಎಲ್ಲಾ ಪ್ರಾಣಾಯಾಮಗಳ ಫಲಶ್ರುತಿಯನ್ನು ಜೀರ್ಣಿಸಿಕೊಂಡಿರುತ್ತಾನೆ ಮತ್ತು ಆತ ಕೇವಲ ತಾನು ಕಂಡುಕೊಂಡ ಸತ್ಯಗಳನ್ನು, ಅಂತಿಮ ಫಲಿತಾಂಶವನ್ನು ಪ್ರಕಟಿಸುತ್ತಾನೆ. ಅದಕ್ಕೆ ಬದಲಾಗಿ, ನಿಮ್ಮ ಸಂಶೋಧನಾ ಪ್ರಬಂಧವು ಒಂದು ಪತ್ತೇದಾರಿ ಕಾದಂಬರಿಯೋ ಎಂಬಂತೆ ವಿವರಿಸಲ್ಪಡುತ್ತದೆ." ಎಂದರಂತೆ. ಇದನ್ನು ಸ್ನೇಹಪೂರ್ವಕವಾಗಿ ಮತ್ತು ಎಲ್ಲಾ ಸಂಶೋಧನಾ ಪ್ರಬಂಧಗಳೂ ಇರಬೇಕಾದುದು ಹೀಗೆಯೇ ಎಂಬ ಧಾಟಿಯಲ್ಲೇ ಹೇಳಿದ್ದಾಗಿತ್ತು ಎನ್ನುತ್ತಾರೆ ಉಂಬರ್ಟೊ. ಮುಂದಿನ ತಮ್ಮ ಸಂಶೋಧನಾ ಪ್ರಕಟನೆಗಳಲ್ಲೂ, ಸಾಹಿತ್ಯಿಕ ಬರವಣಿಗೆಗಳಲ್ಲೂ ತಾವು ಇದೇ ಬಗೆಯಲ್ಲಿ ಮುಂದುವರಿದಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ.

ಒಮ್ಮೆ ತಮ್ಮ ಸಾಹಿತ್ಯಗರ್ಭಧಾರಣೆ ಖಚಿತವಾದದ್ದೇ, ತಮ್ಮ ಮುಂದಿನ ಕಾರ್ಯಚಟುವಟಿಕೆ ಏನು, ಅದು ಯಾವ ಬಗೆಯದ್ದಾಗಿರುತ್ತದೆ ಎಂಬ ತಮ್ಮದೇ ಪ್ರಶ್ನೆಗೆ ಉತ್ತರಿಸುತ್ತ ದಾಖಲೆಗಳನ್ನು ಒಟ್ಟುಗೂಡಿಸುತ್ತೇನೆ, ಆಯಾ ಸ್ಥಳಗಳಿಗೆ ಭೇಟಿ ನೀಡುತ್ತೇನೆ, ನಕ್ಷೆಗಳನ್ನು ಬಿಡಿಸುತ್ತೇನೆ, ಕಟ್ಟಡಗಳ ವಿನ್ಯಾಸ, ಅಥವಾ ಒಂದು ಹಡಗಿನದ್ದಾಗಿರಬಹುದು, ಕಟ್ಟೋಣದ ವಿವರಗಳನ್ನು ಸ್ಪಷ್ಟಪಡಿಸಿಕೊಳ್ಳುತ್ತೇನೆ, ತನ್ನ ಕಾದಂಬರಿಯ ಒಂದೊಂದೂ ಪಾತ್ರಗಳ ಮುಖಚರ್ಯೆ ಹೇಗಿರುತ್ತದೆ ಎಂದು ತಿಳಿದುಕೊಳ್ಳುವಂಥ ಚಿತ್ರಗಳನ್ನು ಬಿಡಿಸುತ್ತೇನೆ ಎನ್ನುತ್ತಾರೆ. ಇವುಗಳಲ್ಲಿ ಕೇವಲ ಸ್ಥಳ ಭೇಟಿಯ ವಿವರಕ್ಕೆ ಬಂದರೂ, ಒಂದು ಸ್ಥಳ ತನ್ನ ಕಾದಂಬರಿಯಲ್ಲಿ ಹೇಗೆ ಬರುತ್ತದೆ, ಅದು ಬರುವ ದಿನಮಾನದ ವೇಳೆ ಯಾವುದು, ರಾತ್ರಿಯಾದರೆ ರಾತ್ರಿ, ಮಟಮಟ ಮಧ್ಯಾಹ್ನವಾದರೆ ಮಧ್ಯಾಹ್ನ ಆ ಸ್ಥಳ ಹೇಗಿರುತ್ತದೆ, ಅಲ್ಲಿನ ಚಲನವಲನ, ಜನಜೀವನ, ಸದ್ದುಗದ್ದಲ, ವಾಸನೆ ಇತ್ಯಾದಿ, ಸೂರ್ಯ ಎತ್ತಕಡೆಯಿಂದ ಎತ್ತ ವಾಲುತ್ತಾನೆ, ಎಲ್ಲಿ ನೆರಳಿರುತ್ತದೆ, ಎಲ್ಲಿ ಕತ್ತಲು, ಮಳೆಗಾಲವಾದರೆ ಅದರ ಚಿತ್ರ ಹೇಗಿದೆ - ಹೀಗೆ ವಿವರಗಳನ್ನು ಕಲೆಹಾಕುತ್ತಾರೆ ಉಂಬರ್ಟೊ. ಇದನ್ನು ತಮ್ಮದೇ ಕಾದಂಬರಿಯ ಸನ್ನಿವೇಶದ ನೆರಳಿನಲ್ಲಿ ವಿವರವಾಗಿಯೇ ವಿವರಿಸಿದ್ದಾರೆ ಕೂಡ. ರಾತ್ರಿಪಾಳಿಯ ಗಸ್ತಿನ ಪೋಲೀಸ್ ಪೇದೆ ಹಾದು ಹೋಗುವ ನಿಖರ ಸಮಯವನ್ನು ಕೂಡ ಅವರು ನೋಟ್ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಅಲ್ಲಿ ಒಂದು ಪಾತ್ರ ಅಡಗಿಕೊಳ್ಳಬೇಕಾಗಿ ಬಂದರೆ, ಆ ಸ್ಥಳದ ಸೂಕ್ಷ್ಮಾತಿಸೂಕ್ಷ್ಮ ವಿವರ ತಿಳಿಯದೇ ಇದ್ದರೆ ತಮಗದನ್ನು ಯಥಾವತ್ ಕಟ್ಟಿಕೊಡುವುದು ಸಾಧ್ಯವಾಗದು ಎಂಬುದು ಅವರ ಮಾತಿನ ತಾತ್ಪರ್ಯ. ಈ ಬಗೆಯ ಅಥೆಂಟಿಸಿಟಿಯಿಂದ ಕೃತಿಗೆ ತೂಕಬರುವುದೇ, ಬರೆಯುವ ತಮ್ಮ ಪ್ರಾಮಾಣಿಕತೆ ತಮಗೆ ಮತ್ತೂ ಹೆಚ್ಚಿನ ಪುಷ್ಟಿಯನ್ನೊದಗಿಸುವುದೇ, ಇದೆಲ್ಲ ಓದುಗನ ಮನಸ್ಸಿನ ಮೇಲೆ ಪರಿಣಾಮ ಬೀರಬಹುದಾದ ಒಂದು ಆಯಾಮ ಇರಬಹುದೇ ಎಂಬೆಲ್ಲ ಜಿಜ್ಞಾಸೆ ನಮಗೆ ಬಿಟ್ಟಿದ್ದು. ಉಂಬರ್ಟೊ ಅವರ ಕನ್‌ವಿಕ್ಷನ್ ಇದು ಅಷ್ಟೆ. ನಟನೊಬ್ಬ ಸಿನೆಮಾ ಒಂದರಲ್ಲಿ ನಟಿಸುವಾಗ ಆಭರಣಗಳ ಒಂದು ಪೆಟ್ಟಿಗೆಯನ್ನು ಹಿಡಿದಿರಬೇಕಾಗಿ ಬಂದಲ್ಲಿ, ಚಿತ್ರದಲ್ಲಿ ಆತ ಎಂದೂ ಆ ಪೆಟ್ಟಿಗೆಯನ್ನು ತೆರೆಯುವ ದೃಶ್ಯ ಇಲ್ಲದಿದ್ದಾಗ್ಯೂ ಪೆಟ್ಟಿಗೆಯೊಳಗೆ ನಿಜವಾದ ಆಭರಣಗಳೇ ಇರಬೇಕಾದ್ದು ಅತ್ಯಗತ್ಯ, ಇಲ್ಲವಾದಲ್ಲಿ ನಟನಾಗಿ ತನ್ನ ತನ್ಮಯತೆ ಪರಿಪೂರ್ಣವಾಗಿರಲಾರದು ಎಂದು ತಿಳಿಯುತ್ತಿದ್ದ ನಟ Luchino Visconti ಯನ್ನು ಇಲ್ಲಿ ಅವರು ನೆನೆಯುತ್ತಾರೆ. ಪುಟ್ಟಣ್ಣ ಕಣಗಾಲ್ ಒಮ್ಮೆ ತಮ್ಮ ಒಂದು ಚಿತ್ರದಲ್ಲಿ, ಚಿತ್ರೀಕರಣಕ್ಕೂ ಮುನ್ನ ದೇವರ ಕೋಣೆಯಲ್ಲಿ ಬೆಳ್ಳಿಯ ಪೂಜಾಪಾತ್ರೆಗಳಿರಬೇಕು ಎಂದು, ಚಿತ್ರದಲ್ಲಿ ಅವುಗಳಿಗೆ ಕೆಲಸವೇನೂ ಇಲ್ಲದಿದ್ದರೂ ಹಠ ಹಿಡಿದಿದ್ದರು ಎಂದು ಕೇಳಿದ್ದೇನೆ. ಇಂಥ ಸೂಕ್ಷ್ಮ ವಿವರಗಳ ಅಥೆಂಟಿಸಿಟಿ ಇವತ್ತಿನ ಗ್ರಾಫಿಕ್ ತಂತ್ರಜ್ಞಾನದ ದಿನಗಳಿಗೆ ಒಗ್ಗುವ ಮಾತಲ್ಲದಿದ್ದರೂ ಅದರ ಹಿಂದಿನ ಒಂದು ಕನ್ವಿಕ್ಷನ್ ಗಮನಾರ್ಹವಾದದ್ದೇ.

ಬರವಣಿಗೆಯೆಂಬುದು ಒಂದು ಲ್ಯಾಟಿನ್ ನಾಣ್ನುಡಿಗೆ ಅನುಗುಣವಾಗಿರುತ್ತದೆ ಎನ್ನುತ್ತ ಗದ್ಯ ಬರೆಯುವಾಗ ವಸ್ತುವಿಗೆ ನೆಚ್ಚಿಕೊಂಡಿರು, ಪದಗಳು ತನ್ನಿಂತಾನೇ ಬರುತ್ತವೆ; ಪದ್ಯ ಬರೆಯುವಾಗ ಪದಕ್ಕೆ ನೆಚ್ಚಿಕೊಂಡಿರು, ವಸ್ತು ತನ್ನಿಂತಾನೇ ಒದಗುವುದು ಎನ್ನುತ್ತಾರೆ. ಕವಿ ಭಾವ ಪ್ರತಿಮಾ ಪುನರ್ ಸೃಷ್ಟಿಯ ಕಡೆಗೆ ಗಮನ ಕೊಡುವಲ್ಲಿ ದೇಶ-ಕಾಲ ಪ್ರಜ್ಞೆಯನ್ನು ದಕ್ಕಿಸಿಕೊಳ್ಳುವ ವಿಚಾರಕ್ಕೆ ಬಂದರೆ ಉಂಬರ್ಟೊ ಅತ್ಯಂತ ನಿಖರವಾದ ಮತ್ತು ಶಿಸ್ತಿನ ನಿಯಮಪಾಲಕ ಎಂದೇ ಹೇಳಬೇಕು. ಉಂಬರ್ಟೊ ಅವರ ಹೆಚ್ಚಿನ ಕಾದಂಬರಿಗಳೂ ಮಧ್ಯಯುಗೀನ ಚರಿತ್ರೆಯೊಂದಿಗಿನ ಯಾವುದೋ ಒಂದಕ್ಕೆ ಹೇಗೋ ತಳುಕು ಹಾಕಿಕೊಂಡಿರುತ್ತವೆ ಎಂಬುದೂ ಇಲ್ಲಿ ಗಮನಾರ್ಹವಾದ ಅಂಶವೇ. ಆಯಾ ಕಾಲದ ಭಾಷೆ, ಜೀವನ ಮೌಲ್ಯ, ಆಹಾರ ಪದ್ಧತಿ, ಸಮಯಾನುಸಂಧಾನ, ದೈನಂದಿನದಲ್ಲಿ ಮಹತ್ವ ಪಡೆದುಕೊಂಡಿದ್ದ ಸಂಗತಿಗಳು, ಆಯಾ ಪಾತ್ರಗಳ ತಕ್ಷಣದ ಜಗತ್ತಿನಲ್ಲಿನ ಸಮಕಾಲೀನ ವಿದ್ಯಮಾನಗಳು ಎಲ್ಲದರ ಅಧ್ಯಯನ ಅವರಿಗೆ ಮುಖ್ಯವೆನಿಸಿದೆ. ತಾನು ಎಂದೂ ನೋಡದಿರುವ ಒಂದು ಚಿತ್ರವನ್ನೊ, ಪ್ರತಿಮೆಯನ್ನೊ ಕೂಡ ಓದುಗನೊಬ್ಬನಿಗೆ ಇದೀಗ ಅದು ತನ್ನ ಕಣ್ಣಮುಂದೆಯೇ ಇದೆಯೋ ಎಂಬಂತೆ ಕಾಣಿಸುವ, ಸೂಕ್ಷ್ಮ ವಿವರಗಳಲ್ಲಿ ಕಟ್ಟಿಕೊಡುವ, ಕ್ಲಾಸಿಕ್ ಎನ್ನಬಹುದಾದ ಒಂದು ಸಾಹಿತ್ಯ ಪ್ರಬೇಧ, ekphrasis ಬಗ್ಗೆ ಹೇಳುತ್ತ 1712 ರಲ್ಲಿ Joseph Addison ಬರೆದ `ದ ಪ್ಲೆಷರ್ಸ್ ಆಫ್ ಇಮ್ಯಾಜಿನೇಶನ್’ ಕೃತಿಯ ಮಾತನ್ನು ಅವರಿಲ್ಲಿ ಉಲ್ಲೇಖಿಸುತ್ತಾರೆ.

"ಪದಗಳನ್ನು ನೀವು ಸಮರ್ಪಕವಾಗಿ ಆಯ್ದುಕೊಂಡಾಗ, ಅವುಗಳಿಗೆ ಒಂದು ವಿಶೇಷ ಶಕ್ತಿ ಪ್ರಾಪ್ತವಾಗಿ ಬಿಡುತ್ತದೆ. ಹಾಗಾದಾಗ, ವಿವರಗಳು, ವಸ್ತುಶಃ ಅದನ್ನು ಕಂಡಾಗ ನೀಡಬಹುದಾದ ಅನುಭವಕ್ಕಿಂತ ಹೆಚ್ಚಿನ ಜೀವಂತ ಅನುಭವವನ್ನು ದಕ್ಕಿಸುವಷ್ಟು ಸಶಕ್ತವಾಗಿ ಬಿಡುತ್ತವೆ." ಮಾತು ಮಂತ್ರವಾಗುವ ಈ ವಿದ್ಯಮಾನವನ್ನು ಕನ್ನಡದಲ್ಲಿಯೂ ಹಲವರು ವಿವರಿಸಿದ್ದಿದೆ. ಇಂಥ ವಿಚಾರಗಳು ನಮಗೆ ಭರ್ತೃಹರಿಯಿಂದಲೂ ಒದಗಿ ಬಂದಿವೆ.

ಡಬಲ್ ಕೋಡಿಂಗ್ ಎಂಬುದು ಉಂಬರ್ಟೊ ವಿವರಿಸುವ ಇನ್ನೊಂದು ಅತ್ಯಂತ ಮಹತ್ವದ ಅಂಶ. ಇದು ಪನ್ ಅಥವಾ ಚತುರೋಕ್ತಿಗೆ ಸಮಾನವಾದದ್ದಾದರೂ ಅದಷ್ಟೇ ಅಲ್ಲ. ಎಲ್ಲಾ ಕಲೆಯೂ (Art is to Connect) "ಪರಸ್ಪರ ತಂತುಗಳನ್ನು ಬೆಸೆಯುತ್ತ ಸಾಗುವಂಥಾದ್ದು" ಎನ್ನುವ ಹಿನ್ನೆಲೆಯದ್ದು. ಕೆ ವಿ ತಿರುಮಲೇಶರು ಒಮ್ಮೆ ತಮ್ಮ ಒಂದು ಕವನವನ್ನು ಓದುತ್ತ, ಇದು ಅರ್ಥವಾಗಬೇಕಾದರೆ ಇದನ್ನು ಯಾವ ಹಿನ್ನೆಲೆಯಲ್ಲಿ ಬರೆದೆ, ಇಲ್ಲಿ ಬಳಸಿದ ಪದಗಳ ಚಾರಿತ್ರಿಕ ಮರ್ಮವೇನು ಎಂಬುದೆಲ್ಲ ಗೊತ್ತಿರಲೇ ಬೇಕಾಗುತ್ತದೆ; ಅದನ್ನೆಲ್ಲ ಅಡಿಟಿಪ್ಪಣಿಯಾಗಿಯೋ, ಪೂರಕ ಪಠವನ್ನಾಗಿಯೋ ಕೊಡುವುದು ಯಾಕೊ ಮನಸ್ಸಿಗೆ ಬರಲಿಲ್ಲ. ಹೀಗಾದಾಗ ಓದುಗನಲ್ಲಿ ಇದಕ್ಕೆ ಬೇಕಾದ ಪೂರ್ವಸಿದ್ಧತೆಯೊಂದು ಇಲ್ಲದೇ, ಬರೆದಿದ್ದು ಅವನನ್ನು ತಲುಪುವುದೇ ಅನುಮಾನವಾಗುತ್ತದೆ ಎಂದಿದ್ದರು. (ನಿರಂಜನ ಪ್ರಶಸ್ತಿಯನ್ನು ಸ್ವೀಕರಿಸುತ್ತ, ಪುತ್ತೂರಿನಲ್ಲಿ.) ಅಡಿಗರ ಎಷ್ಟೋ ಕವಿತೆಗಳನ್ನು ಅರಿಯಲು ನಮ್ಮ ಮಹಾಕಾವ್ಯದ ಪಾತ್ರಪರಿಚಯ ಇರಬೇಕಾಗುತ್ತದೆ. ಅನುವಾದಗಳಲ್ಲಿ ಅಡಿಗರಂಥ ಲೇಖಕರನ್ನು ಓದುವವರಿಗೆ ಇದು ದೊಡ್ಡ ಸಮಸ್ಯೆಯನ್ನೇ ಒಡ್ಡುತ್ತದೆ. ಉದಾಹರಣೆಗೆ "ಕ್ರೌಂಚ ವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು" ಎಂಬ ಪದಪ್ರಯೋಗ. ಅಥವಾ, "....ಚಿಪ್ಪೊಡೆದು | ಬರಲಿ ಪರಿಪೂರ್ಣಾವತಾರಿ ವಿನತಾ ಪುತ್ರ-| ಗಾಳಿ ಕಡೆಯಲು ಸೆಟೆದ ಬೆಳ್ಳಿ ಮಂತು,| ನಿನ್ನ ತೊಡೆಹೊರೆ ಕೆಳಗೆ ಮೆತ್ತೆ -ಸಡಿಲು." ಅಡಿಗರನ್ನು ಡಾ||ಯು.ಆರ್.ಅನಂತಮೂರ್ತಿ, ಬೇಂದ್ರೆಯವರನ್ನು ಕುರ್ತುಕೋಟಿಯಂಥವರು ನಮಗೆ ತೆರೆದು ತೋರದೇ ಇದ್ದಿದ್ದರೆ ಬಹುಶಃ ಸಾಮಾನ್ಯ ಓದುಗರು ನಾವೇ ನಾವಾಗಿ ದಕ್ಕಿಸಿಕೊಳ್ಳುತ್ತಿದ್ದುದು ನಿಶ್ಚಯವಾಗಿ ಕಡಿಮೆಯಾಗಿರುತ್ತಿತ್ತು. ಇಂಥ ಡಬಲ್ ಕೋಡಿಂಗನ್ನು ಬಹುವಾಗಿ ಇಷ್ಟಪಡುವ ಮತ್ತು ಬಳಸುವ ಉಂಬರ್ಟೊ ಇದರ ಮಹತ್ವ, ಇದನ್ನು ದಕ್ಕಿಸಿಕೊಳ್ಳಲಾರದೇ ಹೋದವರೂ ಕಳೆದುಕೊಳ್ಳದ ಆಯಾಮ ಎರಡನ್ನೂ ವಿವರಿಸಿರುವುದು ಗಮನಾರ್ಹವಾಗಿದೆ. ಕೊನೆಗೂ ಇದು ಓದುಗನ ಜಾಣ್ಮೆ ಮತ್ತು ಆತ ಲೇಖಕನಲ್ಲಿರಿಸಿದ ವಿಶ್ವಾಸಕ್ಕೆ ಗೌರವವನ್ನರ್ಪಿಸುವ ಒಂದಾನೊಂದು ವಿಧಾನವಷ್ಟೇ ಆಗಿದೆ ಎನ್ನುತ್ತಾರೆ ಉಂಬರ್ಟೊ!

ಲೇಖಕನ ಮನೋಗತ (ನಿರ್ದಿಷ್ಟ ಬರಹದ ಪ್ರಾಮಾಣಿಕ ಉದ್ದೇಶ), ಓದುಗನ ಮನೋಗತ (ನಿರ್ದಿಷ್ಟ ಬರಹದಿಂದ (ಓದಿನಿಂದ) ಅವನಲ್ಲಿ ಉದ್ದೀಪ್ತವಾದ ನಿರೀಕ್ಷೆ), ಪಠ್ಯದ ಮನೋಗತ (ನಿರ್ದಿಷ್ಟ ಬರಹ ನಿರ್ದಿಷ್ಟ ಸಂದರ್ಭದಲ್ಲಿ ಸ್ಫುರಿಸುವ ಸಹಜ ಅರ್ಥ) - ಈ ಮೂರರ ನಡುವಿನ ಅಂತರದ ಕುರಿತೇ ಉಂಬರ್ಟೊ ವಿವರಿಸಿದ್ದಾರೆ. ತಮ್ಮದೇ ಕೃತಿಗೆ ಬಂದ ವಿಮರ್ಶೆ, ಹುಟ್ಟಿಕೊಂಡ ಹೊಸ ಅರ್ಥಗಳು, ಕಾಕತಾಳೀಯವಾಗಿ ಹೊಂದಿಕೊಂಡು ಕೃತಿಗೆ ಅನಿರೀಕ್ಷಿತ ಹೊಳಪು, ಆಯಾಮ ದೊರಕಿಸಿದ ವಿದ್ಯಮಾನಗಳು ಹೀಗೆ, ಒಂದು ಕೃತಿಗೆ ಅದರ ಕರ್ತೃ ಉದ್ದೇಶಪೂರ್ವಕವಾಗಿ ಒದಗಿಸುವ ಅರ್ಥಸಾಧ್ಯತೆಗಳು (ಅರ್ಥಗಳಲ್ಲ), ಓದುಗ ತನ್ನ ಅನುಭವ, ಸಂವೇದನೆ ಮತ್ತು ಗ್ರಹಿಕೆಗಳಿಗನುಗುಣವಾಗಿ ಆರೋಪಿಸುವ ಅರ್ಥಸಾಧ್ಯತೆಗಳು ಮತ್ತು ದೇಶ-ಕಾಲ ಸಂದರ್ಭಗಳಿಗನುಗುಣವಾಗಿ ಕೃತಿಯೊಂದಕ್ಕೆ ಒದಗಿಬರುವ ಹೊಸ ಹೊಸ ಅರ್ಥಸಾಧ್ಯತೆಗಳು ಸೇರಿ ಒಟ್ಟಾರೆ ಕೃತಿಯ ಘನತೆ ಹೆಚ್ಚುವ ಒಂದು ಸಂಭವನೀಯತೆಯ ಕುರಿತೇ ವಿವರಿಸುತ್ತ ವಿಮರ್ಶೆ ಅಥವಾ ಕೃತಿಯೊಂದರ ಅವಲೋಕನದ ಇತಿಮಿತಿಗಳತ್ತ ಅವರಿಲ್ಲಿ ಬೊಟ್ಟು ಮಾಡುತ್ತಾರೆ.

ಇದುವರೆಗೂ ಎಲ್ಲಿಯೂ ಒಬ್ಬ ವಿಮರ್ಶಕನ ಒಟ್ಟು ವಿಮರ್ಶೆಯನ್ನು ತೌಲನಿಕವಾಗಿಟ್ಟುಕೊಂಡು ಆತ ವಸ್ತುನಿಷ್ಠವಾಗಿ ಬರೆದಿದ್ದಾನೆಯೇ, ವ್ಯಕ್ತಿನಿಷ್ಠವಾಗಿ ಬರೆದಿದ್ದಾನೆಯೇ, ತನ್ನ ವಿಮರ್ಶೆಯಲ್ಲಿ ಕಾಲಾಂತರದಲ್ಲಿ ಆತ ಪಟ್ಟಿ ಮಾಡಿದ "ಇಲ್ಲಗಳು" ಮತ್ತು "ಇದೆಗಳು" ಮಾದರಿಯ ಎಲ್ಲ ಸಾಮಾನ್ಯ ಮಾನದಂಡಗಳು ಎಷ್ಟರ ಮಟ್ಟಿಗೆ ಸಮಾನ ಬಳಕೆಗೆ ಒಳಪಟ್ಟಿವೆ, ಆತ ಬಳಸುತ್ತ ಬಂದ ಮಾನದಂಡಗಳು ಬೇರೆ ಬೇರೆ ಒತ್ತಡ/ಪ್ರಭಾವಗಳಿಗೆ ಮತ್ತು ತನ್ನದೇ ಸಾಮರ್ಥ್ಯದ ಮಿತಿಗಳಿಗೆ ಎಷ್ಟರಮಟ್ಟಿಗೆ ಪಕ್ಕಾಗಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ, ಯಾವುದೇ ನಿರ್ದಿಷ್ಟ ದೇಶ-ಕಾಲದಲ್ಲಿ ಏಕಸೂತ್ರಕ್ಕನುಗುಣವಾಗಿ ಇವು ಸಮಾನ ಪಾತಳಿಯ ಕೃತಿಗಳೆಂದು ವಿಂಗಡಿಸಲಾಗದಂಥ ಒಂದು ಪರಿಸ್ಥಿತಿ ಸಹಜವಾಗಿಯೇ ಇರುತ್ತ, ವಿಮರ್ಶಕನ ವಿಮರ್ಶನ ಪ್ರಕ್ರಿಯೆಯಲ್ಲಿನ ವ್ಯತ್ಯಸ್ಥ ಮನೋಧರ್ಮವನ್ನು ಗುರುತಿಸುವುದು ಮತ್ತು ಕ್ವಾಂಟಿಫೈ ಮಾಡುವುದು, ದಾಖಲಿಸುವುದು ಹೇಗೆ ಎಂಬ ಬಗ್ಗೆ ನಮ್ಮಲ್ಲಿ ಚರ್ಚೆ, ಜಿಜ್ಞಾಸೆ ನಡೆದುದೇ ಇಲ್ಲ. ಆದರೆ ಅದರ ಅಗತ್ಯ ತೀವ್ರವಾಗಿಯೇ ಇದೆ ಎನ್ನುವುದನ್ನು ಎಲ್ಲರೂ ಒಪ್ಪುತ್ತೇವೆ. ಇಂಥದ್ದರ ಗೈರಿನಲ್ಲಿಯೇ ವಿಮರ್ಶಕರು, ಬಹುಮಾನ/ಪ್ರಶಸ್ತಿ ವಿಜೇತರನ್ನು ನಿರ್ಧರಿಸುವವರು ಸದಾ ಟೀಕೆಗೆ, ತಿರಸ್ಕಾರಕ್ಕೆ (ಹೆಚ್ಚಾಗಿ ತೆರೆಮರೆಯಲ್ಲಿ) ಗುರಿಯಾಗುತ್ತಿರುವುದೂ ಸುಳ್ಳಲ್ಲ. ಹೊಸಬರಿಗೆ ಒಂದು, ನುರಿತವರಿಗೆ ಒಂದು, ಮುನ್ನುಡಿ/ಬೆನ್ನುಡಿಗೆ ಒಂದು, ವಿಮರ್ಶೆಗೆ ಒಂದು, ಪ್ರಶಸ್ತಿ-ಬಹುಮಾನದ ಪ್ರಶ್ನೆ ಬಂದಾಗ ಒಂದು, ಇತರೆ ಸಂದರ್ಭಕ್ಕೆ (ಅಭಿನಂದನೆ/ಸನ್ಮಾನ) ಇನ್ನೊಂದು, ತನ್ನ ಭಾಷೆಯ ಚೌಕಟ್ಟಿನೊಳಗಿನ ಸ್ಪರ್ಧೆಗೆ ಒಂದು, ಬೇರೆ ಭಾಷೆಗಳೊಂದಿಗೆ ಸ್ಪರ್ಧೆಗೆ ನಿಂತಾಗ ಇನ್ನೊಂದು, ಪುರುಷವರ್ಗಕ್ಕೊಂದು, ಸ್ತ್ರೀವರ್ಗಕ್ಕೊಂದು, ಜಾತಿಬದ್ಧ ನೀತಿ, ಜಿಲ್ಲಾವಾರು ನೀತಿ, ದಲಿತ-ಬ್ರಾಹ್ಮಣ ನೀತಿ ಇಂಥವು ಸಾವಿರ ನಮ್ಮ ವಿಮರ್ಶಕರಲ್ಲಿ ಹಲವರನ್ನು ಹೆಬ್ಬಾವಿನಂತೆ ಸುತ್ತಿಕೊಂಡಿರುವುದು ತೀರ ಸುಳ್ಳಲ್ಲ. ವ್ಯಕ್ತಿಗತ ಪರಿಚಯ, ಸ್ನೇಹ - ಸಂಬಂಧ, ಕೊಟ್ಟು ತಗೊಂಡ ಋಣಾನುಬಂಧದ ಸಂಬಂಧ ಕೂಡ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದೂ ಸುಳ್ಳಲ್ಲ. ಇವುಗಳಲ್ಲಿ ಹೆಚ್ಚಿನವುಗಳನ್ನು ನಾವೆಲ್ಲ ಒಪ್ಪಿಕೊಂಡು, ಸ್ವೀಕರಿಸಿ, ಅದೆಲ್ಲ ಇದ್ದದ್ದೇ ಎಂದು ಮಾನ್ಯತೆ ನೀಡಿರುವುದು ಕೂಡ ಅಷ್ಟೇ ಸತ್ಯ. ಇಂಥ ದರಿದ್ರ ಸ್ಥಿತಿಯಲ್ಲಿ ವಿಮರ್ಶೆ ತನ್ನ ಗುಣಗೌರವವನ್ನೆಲ್ಲ ಕಳೆದುಕೊಂಡಿರಬೇಕಾದರೆ ಉಂಬರ್ಟೊ ಬರೆದ ಸಂವಹನ-ಗ್ರಹಿಕೆ-ಸ್ಪಂದನ-ಅವಲೋಕನ (Conception-Communication-Perception-Analysis) ಪ್ರಕ್ರಿಯೆಯಲ್ಲಿ ಕಂಡುಬರುವ ಅಂತರವನ್ನು ಅರ್ಥಮಾಡಿಕೊಳ್ಳುವುದು ವಿಮರ್ಶೆಯ ಅಗತ್ಯವಲ್ಲ. ಬರಹಗಾರ ಮತ್ತು ಸಾಮಾನ್ಯ ಓದುಗನ ಅಗತ್ಯ ಅಷ್ಟೇ. ಆದರೆ ಇಲ್ಲೇ ಏಳುವ ವಿಮರ್ಶೆಯ ಕುರಿತ ಜಿಜ್ಞಾಸೆ ಮಾತ್ರ ವಿಮರ್ಶೆಯಲ್ಲಿ ಗಂಭೀರ ಆಸಕ್ತಿಯುಳ್ಳವರಿಗೆ, ಅದರ ಫಲಾನುಭವಿಗಳಿಗೆ ಮತ್ತು ಮುಖ್ಯವಾಗಿ ಅದರ ಬಲಿಪಶುಗಳಿಗೆ ಮಹತ್ವದ ಪ್ರಶ್ನೆ ಆಗಿದೆ.

ತದನಂತರ ಉಂಬರ್ಟೊ ಮುಖ್ಯವಾಗಿ ಹೊರಳಿದ್ದು ಕೆಲವು ಕಾದಂಬರಿಗಳ ಪಾತ್ರಗಳ ಸಾತತ್ಯವನ್ನು ಅರಿಯುವುದರತ್ತ. ಅಂದರೆ ಅನ್ನಾ ಕರೆನಿನಾ ಇದ್ದಳೆ, ಇಲ್ಲವೆ, ಇರುವುದು ಅನ್ನುವುದಕ್ಕೆ (ಈ ಮಿಥ್ಯಾಜಗತ್ತಿನಲ್ಲಿ) ಏನರ್ಥ, ಇಲ್ಲಾ ಎನ್ನುವುದಾದರೆ ಒಬ್ಬ ತನ್ಮಯಿ ಓದುಗನ ಭಾವಕೋಶದ ತಲ್ಲಣಗಳಿಗೇನರ್ಥ ಇತ್ಯಾದಿ. ಇದನ್ನು ಉಂಬರ್ಟೊ ಹಂತ ಹಂತವಾಗಿ ಮಾಡುವ ರೀತಿ ಅನನ್ಯವಾಗಿದೆ. ಅನ್ನಾ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಳೆ? ಮಾಡಿದ್ದು ಸರಿಯೆ, ಅವಳ ಆತ್ಮಹತ್ಯೆಗೆ ಸಾಕ್ಷಿ ಇದೆಯೆ, ಅದು ಸುಳ್ಳಿರಬಹುದಲ್ಲವೆ, ಟಾಲ್‌ಸ್ಟಾಯ್ ಬೇಕಂತಲೇ ಅಂಥ ಒಂದು ತಿರುವು ಕೊಟ್ಟಿರಬಾರದೇಕೆ, ಅವಳು ಮತ್ತೂ ಬದುಕಿರಬಹುದಲ್ಲವೆ...ಹೀಗೆ. ನೀವು ಎಸ್ ದಿವಾಕರ್ ಅವರ `ಚೋಮ’ ಹೆಸರಿನ ಕತೆಯನ್ನು ಓದಿದ್ದರೆ ಇದೆಲ್ಲ ಸರಳವಾಗಿ ಅರ್ಥವಾಗುತ್ತದೆ. `ಚೋಮನದುಡಿ’ಯ ವಿವಿಧ ಹಂತಗಳಲ್ಲಿ ದಿವಾಕರ್ ಕತೆಯನ್ನು ಅದರ ಪ್ರಕಟಿತ ಕೃತಿಯ ಸ್ಥಾಪಿತ ನೆಲೆಯಿಂದ ಬೇರೆ ದಿಕ್ಕಿಗೆ ಹರಿಯಬಿಟ್ಟು ಹಾಗಾಗಿದ್ದರೆ, ಹೀಗಾಗಿದ್ದರೆ ಎಂದೆಲ್ಲ `ಚೋಮನದುಡಿ’ಯ ಹಲವಾರು ಆವೃತ್ತಿಗಳನ್ನು (ಸಾಧ್ಯತೆಗಳನ್ನು) ನಮ್ಮೆದುರು ತೆರೆದಿಟ್ಟು ನಮ್ಮನ್ನು ದಂಗಾಗಿಸುತ್ತಾರೆ! ದಿವಾಕರ್ ಅವರು `ಭಾರತೀಪುರ’ದ ಜಗದೀಶನ ಮೇಲೂ ಒಂದು ಕತೆ ಬರೆದಿದ್ದಾರೆ. ಇದೆಲ್ಲ ಒಂದು ಬಗೆಯಲ್ಲಿ ಕಲ್ಪಿತ ಜಗತ್ತಿನ ಪಾತ್ರ, ಪರಿಸರದೊಂದಿಗೆ ತನ್ಮಯರಾಗಿ ಅವರನ್ನೆಲ್ಲ ನಿಜವೆಂದೇ ಅನುಭವಿಸುವ ಪರಿ. ಈ ಕಲ್ಪಿತ ವಾಸ್ತವ ಹಲವಾರು ಪ್ರಶ್ನೆಗಳನ್ನು, ಜಿಜ್ಞಾಸೆಗಳನ್ನು, ಸವಾಲನ್ನು, ಸಮಸ್ಯೆಯನ್ನು, ಕಿರಿಕಿರಿಯನ್ನು, ಖುಶಿಯನ್ನು, ಅಲ್ಲಿಗೇ ಹೋಗಿ ಇದ್ದು ಬಿಡಬೇಕೆಂಬಂಥ ಮೋಹವನ್ನು ಹುಟ್ಟಿಸುತ್ತಿರುತ್ತದೆ. ಅವುಗಳಿಗೆಲ್ಲ ಎದೆಗೊಟ್ಟು ಮೀರಿ ನಿಲ್ಲುವುದಕ್ಕೆ ಕಾಲಾವಕಾಶವೂ ಬೇಕಾಗುತ್ತದೆ. ಜೊತೆಗೇ ಅದೆಲ್ಲ ಕಲ್ಪನೆಯ ಜಗತ್ತು ಎಂಬ ಅರಿವು ಮತ್ತು ವಾಸ್ತವದೊಂದಿಗೆ ಹೊಂದಿರುವ ನಂಟಿನ ಅಂಟಿನ ಬಗ್ಗೆ ಒಂದು ಮೂಲೆಯ ಆಸೆ ಎರಡೂ ಜೀವಂತವಾಗಿರುತ್ತವೆ.

ಮತ್ತೆ ನಮ್ಮಲ್ಲಿ ಚಾರಿತ್ರಿಕ, ಪೌರಾಣಿಕ ಪಾತ್ರಗಳೆಲ್ಲ ಇವೆಯಲ್ಲ. ಶ್ರೀರಾಮ ನಿಜಕ್ಕೂ ಇದ್ದನೆ, ಕಲ್ಪನೆಯೆ ಎಂಬಲ್ಲಿಂದ ಹಿಡಿದು, ಟಿಪ್ಪೂ ಮತಾಂಧನಿದ್ದನೆ ಅಥವಾ ಪರಮತಸಹಿಷ್ಣುವಾಗಿದ್ದನೆ ಎಂಬಂಥ ಜಿಜ್ಞಾಸೆಗಳೂ ಸಾಕಷ್ಟಿವೆ. ಡಾ||ಯು.ಆರ್.ಅನಂತಮೂರ್ತಿಯವರೇ ಹೇಳಿರುವಂತೆ ಭಾರತೀಯ ಸಮಾಜ ಏಕಕಾಲಕ್ಕೆ ಹಲವು ಸಂಸ್ಕೃತಿ/ಕಾಲಧರ್ಮಗಳನ್ನು ಬದುಕುತ್ತಿರುವ ಸಮಾಜವೇ. ಜೊತೆಗೇ ವಿನ್‌ಸ್ಟನ್ ಚರ್ಚಿಲ್ ಮತ್ತು ಗಾಂಧಿ ಕಾಲ್ಪನಿಕ ಪಾತ್ರಗಳೆಂದೂ ಶೆರ್ಲಾಕ್ ಹೋಮ್ಸ್ ನಿಜಕ್ಕೂ ಇದ್ದನೆಂದೂ ಬ್ರಿಟನ್ನಿನ ಹದಿಹರಯದವರಲ್ಲಿ ಹಲವರು ನಂಬಿದ್ದರು ಎಂಬ ವಿಚಾರವನ್ನೂ ಉಂಬರ್ಟೊ ಉಲ್ಲೇಖಿಸುತ್ತಾರೆ. ಮುಂದಿನ ತಲೆಮಾರು ಗಾಂಧಿಯಂಥ ಒಬ್ಬ ವ್ಯಕ್ತಿ ಬದುಕಿದ್ದ ಎಂಬುದನ್ನು ನಂಬುವುದಿಲ್ಲ ಎಂದು ಐನ್‌ಸ್ಟೀನ್ ಬಹುಹಿಂದೆಯೇ ಹೇಳಿದ್ದು ನಮ್ಮ ಕಾಲದಲ್ಲೇ ನಿಜವಾಗುತ್ತಿದೆ!

ಕಳೆದ ವರ್ಷ(2015) ತೀರಿಕೊಂಡ ಅಮೆರಿಕನ್ ಕಾದಂಬರಿಕಾರ E L Doctorow ಬಗ್ಗೆ ನೀವು ಕೇಳಿರುತ್ತೀರಿ. ಈತ ಐತಿಹಾಸಿಕ ವ್ಯಕ್ತಿಗಳನ್ನು ತನ್ನ ಕೃತಿಗಳೊಳಗೆ ಎಳೆತಂದು ಅವರನ್ನು ಇತಿಹಾಸದ ವಾಸ್ತವಿಕ ವಿವರಗಳ ಜೊತೆ ಜೊತೆಗೇ, ತನ್ನ ಕಲ್ಪನೆಯನ್ನೂ ಹರಿಯಬಿಟ್ಟು, ಅವರನ್ನು, ಅವರು ಎದುರಿಸಿದ ಸನ್ನಿವೇಶಗಳನ್ನು ತನಗೆ ಬೇಕಾದಂತೆ ಚಿತ್ರಿಸುತ್ತ ಓದುಗರಲ್ಲಿ ಯಾವುದು ನಿಜ ಮತ್ತು ಯಾವುದು ಸುಳ್ಳು ಎಂಬ ಪ್ರಶ್ನೆ ಬಗೆಹರಿಯದಂತೆ ಮಾಡಿಡುತ್ತಿದ್ದರು! ತಮ್ಮನ್ನು ಪ್ರಶ್ನಿಸಿದವರಿಗೆ, ಎಲ್ಲಾ ಇತಿಹಾಸವೂ ಫಿಕ್ಷನ್ನೇ ಎಂದು ಹೇಳುತ್ತಿದ್ದರಂತೆ. ಎಷ್ಟು ನಿಜವಲ್ಲವೆ? ಒಬ್ಬ ವ್ಯಕ್ತಿ ಸತ್ತ ತಕ್ಷಣವೇ ಆತ ಫಿಕ್ಷನ್ ಆಗಿ ಬಿಡುವ, ವಾಸ್ತವಕ್ಕಿಂತ ಹೆಚ್ಚು ದಂತಕತೆಗಳು, ಕಲ್ಪನೆಗಳು, ರೊಮಾಂಟಿಸಂ ಬೆರಕೆಯಾಗಿಬಿಡುವುದರ ದುಷ್ಪರಿಣಾಮಗಳು ಕೂಡ ನಮ್ಮ ಕಣ್ಣೆದುರಿಗೇ ಇವೆಯಲ್ಲವೆ? ವಾಸ್ತವ ಎಂದುಕೊಂಡಿದ್ದನ್ನು ಅಕ್ಷರಕ್ಕಿಳಿಸಿದ ಕ್ಷಣದಲ್ಲೇ ಅದು Fact ನಿಂದ ಕಳಚಿಕೊಂಡು Fiction ಆಗಿ ಬಿಡುತ್ತದೆ ಎಂಬ ನಿಲುವನ್ನು ಪ್ರತಿಪಾದಿಸಿದವರಲ್ಲಿ ಡಾಕ್ಟರೊವ್ ಮೊದಲಿಗರಲ್ಲ, ಕೊನೆಯವರೂ ಅಲ್ಲ. ಆಸಕ್ತರು Joanne Brown ಅವರ "Historical Fiction or Fictionalized History? Problems for Writers of Historical Novels for Young Adults." ಪ್ರಬಂಧವನ್ನು ಗಮನಿಸಬಹುದು.

ಉಂಬರ್ಟೊ ಇಲ್ಲಿ ನಮಗೆ ಒಂದು ಪ್ರಮೇಯವನ್ನು ಮಂಡಿಸಿ ಈ ಪಾತ್ರಪ್ರಪಂಚದ ವೈಚಿತ್ರ್ಯವನ್ನು ಮನಗಾಣಿಸುತ್ತಾರೆ. ಒಂದು ವಸ್ತುವಿನ ಗುಣಲಕ್ಷಣಗಳನ್ನು ಸೂಚಿಸಲು ಮೊದಲಿಗೆ ಕೇವಲ ಕೆಲವು ಸ್ಯಾಂಪಲ್ಲುಗಳನ್ನು ಒಬ್ಬ ವಿಜ್ಞಾನಿ ಪರೀಕ್ಷೆಗೊಳಪಡಿಸಿದರೂ, ಒಮ್ಮೆ ಆತ ಸಾಮಾನ್ಯ ಗುಣಲಕ್ಷಣಗಳು ಎಂದು ಘೋಷಿಸಿದ್ದು ಸಹಜವಾಗಿಯೇ ಆ ವಸ್ತುವಿನ ಇಡೀ ಗುಂಪಿಗೆ ಸಲ್ಲುವ ಮಾತಾಗಿ ನಿಲ್ಲುತ್ತದೆ, ಸ್ವೀಕರಿಸಲ್ಪಡುತ್ತದೆ. ಇದೇ ರೀತಿ ಘೋಷಿತ ಗುಣಲಕ್ಷಣಗಳ ವಿಚಾರವನ್ನು ನಾವು ವ್ಯಕ್ತಿಗಳಿಗೆ ಅನ್ವಯಿಸುವಾಗ ಈಗ ಭೂಮಿಯ ಮೇಲಿಲ್ಲದ ವ್ಯಕ್ತಿಯ ಬಗ್ಗೆ ಅದು ಉಂಟು ಮಾಡುವ ಪರಿಣಾಮ ಮತ್ತು ಇನ್ನೂ ಜೀವಂತವಾಗಿರುವ ವ್ಯಕ್ತಿಯ ಬಗ್ಗೆ ಅದು ಉಂಟು ಮಾಡುವ ಪರಿಣಾಮ ಎರಡೂ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಟಿಪ್ಪೂ ಧರ್ಮಾಂಧನಾಗಿದ್ದನೆ, ಇಲ್ಲವೆ ಎಂಬ ಪ್ರಶ್ನೆ ತೆಗೆದುಕೊಂಡರೆ, ಈ ಮಾತಿನ ನಿಜವಾದ ಮರ್ಮ ಅರಿಯಲು ನಾವು ಟೈಮ್ ಮಶೀನಿನಲ್ಲಿ ಕೂತು ಟಿಪ್ಪುವಿನ ಕಾಲಕ್ಕೆ ಮರಳಿ ಆತನ ರೀತಿ ನೀತಿ ಗಮನಿಸಿ ಒಂದು ಸ್ವತಂತ್ರ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ. ಆತನ ಬಗ್ಗೆ ಬಂದಿರುವ ಇತಿಹಾಸವನ್ನೆಲ್ಲ ಓದಿದರೆ ಅದು ಫಿಕ್ಷನ್ ಎಂಬುದು ಮನವರಿಕೆಯಾಗುತ್ತದೆ, ಅಷ್ಟೆ. ಆದರೆ, ಟಿಪ್ಪೂ ಸತ್ತ ದಿನಾಂಕದ ಬಗ್ಗೆ ಅಂಥಾ ವಿವಾದ ಇರಲು ಸಾಧ್ಯವಿಲ್ಲ; ಇದ್ದರೆ ತಿದ್ದಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಬದಲಾಗಿ, ಈಗ ನಮ್ಮೆದುರು ಇರುವ ಒಬ್ಬ ವ್ಯಕ್ತಿಯ ಬಗ್ಗೆ ಏನಾದರೂ ಹೇಳಿದರೆ ನೀವು ಅದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ ತಿಳಿದುಕೊಳ್ಳಲು ಇರುವ ಅವಕಾಶ ಹೆಚ್ಚು. ಎಂ ಎಂ ಕಲಬುರ್ಗಿಯವರು ಎಂಥ ವ್ಯಕ್ತಿಯಾಗಿದ್ದರು, ನಿಜಕ್ಕೂ ಅವರ ಕೊಲೆ ನಡೆಯಿತೆ ಎನ್ನುವ ವಿಚಾರ ನಮಗೆ ಗೊತ್ತಿದೆ ಅಥವಾ ಗೊತ್ತು ಮಾಡಿಕೊಳ್ಳಲು ಸಾಧ್ಯ. ಇದನ್ನೇ ಶಿವರಾಮ ಕಾರಂತರ ಚೋಮನಿಗೆ ಅನ್ವಯಿಸಿ ನೋಡಿದರೆ ಚೋಮ ಎಂಥವನಾಗಿದ್ದ, ಅವನ ವ್ಯಕ್ತಿತ್ವ ಎಂಥದ್ದು, ಅವನು ಹೃದಯಾಘಾತದಿಂದ ಸತ್ತನೆ ಅಥವಾ ಆತ್ಮಹತ್ಯೆ ಮಾಡಿಕೊಂಡನೆ ಎಂಬ ಬಗ್ಗೆ ಹೇಳುವುದು ಸಾಧ್ಯವಿದೆಯೆ? ಕಾರಂತರ ಮನೋಭೂಮಿಕೆಯನ್ನು ಹೊಕ್ಕು, ಚೋಮ ಎಂಬವನು ಬದುಕಿದ್ದ ಮತ್ತು ಒಂದು ನಿರ್ದಿಷ್ಟ ದೇಶ-ಕಾಲದಲ್ಲಿ ಅಂಥ ಘಟನೆಗಳು ನಿಜಕ್ಕೂ ನಡೆದವು ಎಂದು ಪರಿಭಾವಿಸಿ ನೋಡಿದಲ್ಲಿ ಮಾತ್ರ ಅದು ಸಾಧ್ಯ. ಅದಕ್ಕೆ ಒಂದು ವಿಧದ ತನ್ಮಯತೆ ಬೇಕಾಗುತ್ತದೆ. ಅದು ಸಿದ್ಧಿಸಿದಾಗ, ಸಿದ್ಧಿಸಿದ್ದಷ್ಟು ಹೊತ್ತು ಚೋಮ ನಿಜ ಮತ್ತು ಅವನ ಸಾವಿಗೆ ನಾವು ಕಣ್ಣೀರು ಮಿಡಿಯಬಹುದು. ಇದೊಂದು ತರದ ಹಗಲುಗನಸು ಕಂಡಂತೆ. ಕನಸು ಮುಗಿದದ್ದೇ ಓಹ್! ಚೋಮ ಸತ್ತಿದ್ದು ಒಂದು ಕನಸು ಎಂದು ಅರಿವಾಗಿ ಸಮಾಧಾನ ಮೂಡಬಹುದು ಮತ್ತು ಇನ್ನೂ ಒಂದಿಷ್ಟು ಕಾಲ ನಾವು ಚೋಮನಿಗಾಗಿ ಮರುಗುತ್ತಲೇ ಇರಬಹುದು ಕೂಡ. ಆದರೆ ಆಗ ನಮಗೆ ಅರಿವಾಗಿರುತ್ತದೆ, ಚೋಮ ಕಾದಂಬರಿಯಲ್ಲಿ ನಿಜ ಮತ್ತು ಸದ್ಯದಲ್ಲಿ ಅಲ್ಲ ಎಂಬ ಒಂದು ಸತ್ಯ. ಆದರೂ ಆಗಲೂ ನಾವು ಎಸ್ ದಿವಾಕರರಂತೆ ಹಾಗಾಗದೆ ಹೀಗಾಗಿದ್ದರೆ, ಚೋಮನ ಮಗಳು ಅತ್ಯಾಚಾರಕ್ಕೊಳಗಾಗದೇ ಇರುತ್ತಿದ್ದರೆ, ಅವನ ಮಗ ಸಾಯದೇ ಉಳಿಯುತ್ತಿದ್ದರೆ ಇತ್ಯಾದಿ ಕಲ್ಪನೆಗಳನ್ನು ಹರಿಯಬಿಟ್ಟು ಗಂಭೀರವಾಗಿಯೇ ಚೋಮನ ಬದುಕು ಹಳಿತಪ್ಪಿದ್ದೆಲ್ಲಿ ಎಂದು ತಲೆಕೆಡಿಸಿಕೊಳ್ಳುವುದಕ್ಕೂ ಅವಕಾಶವಿದ್ದೇ ಇದೆ! ಇದಕ್ಕೆ ಬೇಕಾಗುವ ತನ್ಮಯತೆ, ಪಾತ್ರದಲ್ಲಿ, ಪಾತ್ರದ ದೇಶ-ಕಾಲದಲ್ಲಿ ತಾವೂ ಸೇರಿಕೊಳ್ಳುವ ಸಾಮರ್ಥ್ಯ ಇಬ್ಬಗೆಯದು. ನಮ್ಮದೇ ಬದುಕಿನಲ್ಲಿ ನಾವು ತೆಗೆದುಕೊಂಡ ನಿರ್ಧಾರ, ಇಟ್ಟ ಹೆಜ್ಜೆ, ಬದುಕಿದ ರೀತಿ ನಮಗೆ ಸರಿಯಲ್ಲ ಅನಿಸುವ ಹಾಗೆ, ಇವಾನ್ ಇಲಿಚ್ಯ ತನಗೆ ಮತ್ತೊಂದು ಅವಕಾಶ ಸಿಕ್ಕಿದರೆ ತಾನು ಇದುವರೆಗೆ ಬದುಕಿದ್ದಕ್ಕಿಂತ ಭಿನ್ನವಾಗಿ ಬದುಕುತ್ತಿದ್ದೆ ಎಂದು ತನ್ನ ಮರಣಶಯ್ಯೆಯಲ್ಲಿ ಅಂದುಕೊಳ್ಳುವಂತೆ ನಾವು, ನಾವು ಓದಿದ ಪಾತ್ರಗಳ ಬದುಕಿನ ಕುರಿತು ಯೋಚಿಸುವಾಗ ನಮ್ಮ ಬದುಕಿನ ಕುರಿತೂ, ನಮ್ಮ ಬದುಕಿನ ಕುರಿತು ಯೋಚಿಸುವಾಗ ಈ ಪಾತ್ರಗಳ ಬದುಕಿನ ಕುರಿತೂ ಚಿಂತಿಸುತ್ತಿರುತ್ತೇವೆ ಅನಿಸದೆ? ಯಶಸ್ವಿ ಕಾಲ್ಪನಿಕ ಪಾತ್ರಗಳು ವಾಸ್ತವಿಕ ಬದುಕಿನ ಪಾತ್ರಗಳಾಗುವ ಅನನ್ಯ ಉದಾಹರಣೆಗಳು ಇವು ಎನ್ನುತ್ತಾರೆ ಉಂಬರ್ಟೊ.

ಒಟ್ಟಿನಲ್ಲಿ ಈ ಕೃತಿಯಲ್ಲಿ ನಮಗೆ ಸಿಗುವ ಉಪನ್ಯಾಸಗಳು ಬರವಣಿಗೆಯ ಒಳಮರ್ಮಗಳನ್ನು, ಅದರ ಕಷ್ಟಗಳನ್ನು, ಒಬ್ಬ ಬರಹಗಾರನಿಗಿರಬೇಕಾದ ಪರಿಶ್ರಮವನ್ನು ಕುರಿತು ಹೇಳುತ್ತಿರುವಾಗಲೇ ಬರವಣಿಗೆಯ ಮಟ್ಟು-ಪಟ್ಟುಗಳ ಕುರಿತೂ ಸಾಕಷ್ಟು ಒಳನೋಟಗಳನ್ನು, ಅಭ್ಯಾಸಯೋಗ್ಯ ಗುಟ್ಟುಗಳನ್ನೂ ತಿಳಿಸಿಕೊಡುವಂತಿದೆ. ಅಷ್ಟು ಮಾತ್ರವಲ್ಲ ನಾವೆಲ್ಲ ತುಂಬ ಪ್ರೀತಿಸುವ ಒಬ್ಬ ಲೇಖಕನ ಬರೆವ ಬದುಕಿನ (Making of a Novel?)ಕೆಲವು ಖಾಸಗಿ ಚಿತ್ರಗಳನ್ನೂ ಒದಗಿಸುವ ಅಪೂರ್ವ ಆಕರ್ಷಣೆಯನ್ನೂ ಹೊಂದಿದೆ.

(ಈ ಲೇಖನದ ಆಯ್ದ ಭಾಗ ವಿಶ್ವವಾಣಿಯ ಸಾಪ್ತಾಹಿಕ ಪುರವಣಿ ‘ವಿರಾಮ’ ದಲ್ಲಿ ಪ್ರಕಟವಾಗಿದೆ)

No comments: