Saturday, May 21, 2016

ಸೀತಾಪುರದಲ್ಲಿ ಗಾಂಧೀಜಿ ಮತ್ತು ಸನ್ನಿಧಿಯಲ್ಲಿ ಸೀತಾಪುರ

ಮೂರನೆಯ ಸಂಕಲನ - ಸೀತಾಪುರದಲ್ಲಿ ಗಾಂಧೀಜಿ

22. ಸೀತಾಪುರದಲ್ಲಿ ಗಾಂಧೀಜಿ - ಕುಪ್ಪಣ್ಣಯ್ಯನವರ ಮನೆಯ ಸತ್ಯನಾರಾಯಣ ಪೂಜೆ- ವೆಂಕಟದಾಸಭಟ್ಟನಿಗೆ ಸಿಕ್ಕ ಸುದ್ದಿ - ಶಾಂತಮ್ಮನ ಚರ್ಮದ ಬಣ್ಣ ಬದಲಾಗುವ ಸಮಸ್ಯೆ - ಬರುವುದಿಲ್ಲ ಎಂದು ಕೊನೆಯ ಘಳಿಗೆಯಲ್ಲಿ ಹೊರಡುವ ಶಾಂತಮ್ಮ - ರೇಗದ ವೆಂಕಟದಾಸಭಟ್ಟ ತೋರುವ ಸಹನೆ. ಘಟನೆಯ ಹಿನ್ನೆಲೆ: ಸೀತಾಪುರಕ್ಕೆ ಬಂದ ಗ್ರಾಮಸೇವಕ ಅಶ್ಚತ್ಥನಾರಾಯಣರಾವ್ - ಸಂಜೆಯ ಪಟ್ಟಾಂಗದ ಕಟ್ಟೆ - ಕತೆಗಾರ - ಬಿದ್ದು ಹೋದ ಶಾಲಾಕಟ್ಟಡ - ಪತ್ರಿಕೆಯ ವರದಿ - ಕಂಟ್ರಾಕ್ಟರ್ ನಾಗಪ್ಪನ ಮೇಲೆ ದೂರು - ಗ್ರಾಮಸೇವಕನಿಗೆ ಗೂಸಾ - ಕೋರ್ಟುಕೇಸು - ಕುಪ್ಪಣ್ಣಯ್ಯನ ಸಿದ್ಧಾಂತ - ಪಂಚಾಯತ್ ಅಧ್ಯಕ್ಷ ಶೀನಪ್ಪನ ನಿಲುವು - ರಾಜಿ ಪಂಚಾಯಿತಿಗೆ ವಿರೋಧ - ಗ್ರಾಮಸೇವಕರ ವರ್ಗಾವಣೆ - ನಾಗಪ್ಪನ ಕ್ಷಮಾಯಾಚನೆ - ಕೇಸು ಹಿಂದಕ್ಕೆ ಪಡೆದ ಗ್ರಾಮಸೇವಕ. ಸತ್ಯನಾರಾಯಣಪೂಜೆಯ ಹಾದಿಯಲ್ಲೇ ಭೇಟಿಯಾಗುವ ಗ್ರಾಮಸೇವಕ ಮತ್ತು ವೆಂಕಟದಾಸಭಟ್ಟ - ಕುಪ್ಪಣ್ಣಯ್ಯ ಬಾಬ್ಭಟ್ರಿಗೆ ಕೊಟ್ಟಿದ್ದ ಸಾಲ ಹಿಂದಕ್ಕೆ ಬರುವುದು - ಇದರಲ್ಲಿ ನಾಗಪ್ಪನ ಕೈವಾಡವಿರುವುದು.
23. ನುಗ್ಗೆಗಿಡ - ಕೃಷಿಯಿಂದ ರೈತರು ವಿಮುಖವಾಗುತ್ತಿರುವ ಬಗೆಗಿನ ಮಾತುಕತೆ - ಮಾಧ್ವರು ತಿನ್ನಬಾರದ ಬಸಳೆ,ತೊಂಡೆ,ಸೋರೆ ಮತ್ತು ನುಗ್ಗೆಯ ಕುರಿತು ಚರ್ಚೆ - ಕಾರ್ಕಳ ಮಾರುಕಟ್ಟೆಯಲ್ಲಿ ಸೀತಾರಾಮಾಚಾರ್ಯರಿಗೆ ಬೇಕಾದ ನೂರು ನುಗ್ಗೇಕೋಡು ಮತ್ತು ಹದಿನೈದು ಕೇಜಿ ಬದನೆಕಾಯಿಯ ತಲಾಶು - ಹಾಲಪ್ಪನ ಅಸಹಾಯಕತೆ - ಹಸನಬ್ಬ-ಹಸದುಲ್ಲಾ ಭೇಟಿ - ಹಸದುಲ್ಲಾ ಮಗನ ಸರ್ಪಸುತ್ತಿನ ಕಾಯಿಲೆ - ದಾಸಣ್ಣ ಭಟ್ರ ಹೆಂಡತಿ ಪ್ರೇಮಕ್ಕನ ಪ್ರಸ್ತಾಪ - ಎಷ್ಟು ದಾಸಣ್ಣಗಳು - ಎಷ್ಟು ಪ್ರೇಮಕ್ಕಗಳು - ಹಳ್ಳಿ ವೈದ್ಯಕ್ಕೆ ಮುನ್ನ ಫ್ಯಾಮಿಲಿ ಡಾಕ್ಟ್ರು ಶಂಕರಭಟ್ಟರ ಸಲಹೆ ಪಡೆದುಕೊಳ್ಳುವ ಹಸನಬ್ಬ - ಹೋಟೆಲಿಗೆ ಬಾಗಿಲು ಹಾಕಿ ಐವತ್ತು ರೂಪಾಯಿ ನಷ್ಟ ಮಾಡಿಕೊಳ್ಳಲು ತಯಾರಾಗುವ ಕುಪ್ಪಣ್ಣಯ್ಯ - ಹಣ ಮುಟ್ಟದ ಪ್ರೇಮಕ್ಕ, ಗಿಫ್ಟ್ ತಗೊಳ್ಳದ ಕುಪ್ಪಣ್ಣಯ್ಯ - ದಾಸಣ್ಣನ ಮನೆ - ಪಟ್ಟಾಂಗ - ದನ ಮಾರಿದ ಪ್ರಕರಣ - ಪ್ರೇಮಕ್ಕನ ರೌದ್ರಾವತಾರ - ಪ್ರೀತಿಯ ದನ ಕಳೆದುಕೊಂಡೂ ಕಾಯಿಲೆಗೆ ಮದ್ದುಕೊಡುವ ಔದಾರ್ಯ.
24. ದನಕರು - ಗ್ರಾಮಪಂಚಾಯತ್ ಚುನಾವಣೆ - ಕುಪ್ಪಣ್ಣಯ್ಯನ ಸಾಮಾಜಿಕ ಕ್ರಿಯಾಶೀಲತೆ - ಶೇಕಬ್ಬ - ಶಂಕರನ ಕೋಪ - ತಿಮ್ಮಪ್ಪಶೆಟ್ರ ಭೇಟಿ - ಚಂಗಪ್ಪ-ನಿಂಗಪ್ಪನ ಕರಾಮತ್ತು ಕುರಿತ ಮಾಹಿತಿ - ಗೋಹತ್ಯೆ ನಿಷೇಧ ಕಾಯಿದೆ ಮತ್ತು ಮುಸಲ್ಮಾನ್ ಅಭ್ಯರ್ಥಿಯ ವಿರುದ್ಧ ಅದರ ಬಳಕೆ - ಮನೆಮನೆಗೆ ದನಕರು - ಕುಪ್ಪಣ್ಣಯ್ಯನ ಲಾಜಿಕ್ - ಅರ್ಚಕ ರಾಮಭಟ್ಟರ ಹಿತವಚನ - ಕುಪ್ಪಣ್ಣಯ್ಯನ ವಾದ - ಚುನಾವಣಾ ಗೆಲುವು - ಕುಪ್ಪಣ್ಣಯ್ಯನ ಹೋಟೆಲ್ ಮೇಲೆ ಕಲ್ಲೆಸೆದು ಚಂಗಪ್ಪನ ಮೇಲೆ ಆರೋಪ ಬರುವಂತೆ ಮಾಡುವ ನಿಂಗಪ್ಪನ ಮಂದಿ - ಎರಡೂ ತಂಡದವರಿಗೆ ಇಲ್ಲದ ಪ್ರಾಮಾಣಿಕ ಕಾಳಜಿ - ಊರು ಬಿಡಲು ಸಿದ್ಧನಾಗುವ ಕುಪ್ಪಣ್ಣಯ್ಯ - ಇಡೀ ಚುನಾವಣಾ ಪ್ರಹಸನ ಕುಪ್ಪಣ್ಣಯ್ಯನ ಹಗಲುಗನಸು ಎಂಬ ಅಂತ್ಯ.

25. ಸುಣ್ಣ ಎದ್ದು ಹೋದ ಗೋಡೆ - ಅಣ್ಣ ದೂಮಪ್ಪ ಮಾಸ್ಟ್ರು - ತಮ್ಮ ತಿಮ್ಮಪ್ಪ - ದೂಮಪ್ಪ ಮಾಸ್ಟ್ರು ಊರಿನಲ್ಲಿ ಶಾಲೆ ತೆರೆಯಲು ಅನುಭವಿಸಿದ ಕಷ್ಟನಷ್ಟಗಳು - ತಿಮ್ಮಪ್ಪನ ಸಣ್ಣತನ - ಅಣ್ಣನ ಮೇಲಿನ ದ್ವೇಷ, ಜಿದ್ದು - ಆಸ್ತಿ ಪಾಲಿನ ಕತೆ - ಅಣ್ಣನ ಆಸ್ತಿ ಮಾರಾಟದ ಕತೆ - ಮಗನ ಓದು,ಮದುವೆ ಕತೆ - ಅಗ್ರಜ ಪದ ಬಳಕೆ ಕುರಿತ ಜಿಜ್ಞಾಸೆ - ಐವತ್ತು ವರ್ಷ ಪೂರೈಸಿದ ಶಾಲೆಯ ಸುವರ್ಣಮಹೋತ್ಸವದ ಸಂದರ್ಭ - ಶಾಲೆಗೆ ಇಳಿಮುಖವಾಗುತ್ತಿರುವ ಹಾಜರಿ - ಇಂಗ್ಲೀಷ್ ಮೀಡಿಯಂ ಶಾಲೆಗೆ ಹೆಚ್ಚಿದ ಬೇಡಿಕೆ - ಹೈಸ್ಕೂಲು ಮೇಷ್ಟ್ರಾದಿಯಾಗಿ ಎಲ್ಲರ ನಿರುತ್ಸಾಹ - ಕುಪ್ಪಣ್ಣಯ್ಯನ ಯಕ್ಷಗಾನದ ಹುಚ್ಚು - ಮುಂಬಯಿಯಿಂದ ಬಂದ ರಂಜಿತ್ ಶೆಟ್ಟಿಯ ಪತ್ರ - ಫ್ಲ್ಯಾಶ್ ಬ್ಯಾಕ್ ಕತೆ: ಬೆರ್ಮಣ್ಣ ಕೊಟ್ಟ ಸಾಲದ ಮರುಪಾವತಿಯ ಕುತ್ತು - ದೊಡ್ಡಕ್ಕನಿಂದ ಸಕಾಲದಲ್ಲಿ ಒದಗಿದ ದಡ್ಡು. ದಡ್ಡು (ದೊಡ್ಡಕ್ಕ) ಮಗ ರಂಜಿತ್ ಶೆಟ್ಟಿ - ಸಭೆ ಮುಗಿಯುವ ಮೊದಲೇ ಮಾತನಾಡುತ್ತಿದ್ದ ದೂಮಪ್ಪ ಮಾಸ್ಟ್ರು ಕುಸಿದುಬಿದ್ದು ಕೊನೆಯುಸಿರೆಳೆಯುವುದು - ಶಾಲೆಯ ಭವಿಷ್ಯ ಅತಂತ್ರವಾಗಿಯೇ ಉಳಿಯುವುದು.
26. ಒದ್ದೆಯಾದ ಆಕಾಶ - ಸುಂದರರಾಯರು ಮತ್ತು ಚಂದ್ರಮ್ಮ ದಂಪತಿಗಳು - ಕೊರಗಶೆಟ್ಟಿಯ ವೈಕುಂಠ ಸಮಾರಾಧನೆಯ ಕಾಗದ - ಫಲಿಮಾರು ಮಠದ ಒಕ್ಕಲು ಕೊರಗಶೆಟ್ಟಿ - ಭೂಮಸೂದೆ - ಕೊರಗಶೆಟ್ಟಿಯ ಪ್ರಾಮಾಣಿಕತೆ ಮತ್ತು ನಿಷ್ಠೆ - ವೈದ್ಯೆ ಅಪ್ಪಿ - ಕೊರಗಶೆಟ್ಟರ ಜಿಪುಣತನ - ದೊಡ್ಡ ಮಗಳು ಕರ್ಗಿಯ ಜ್ವರ - ಟೈಫಾಯಿಡ್ ಎಂದ ಡಾಕ್ಟರು - ಅರ್ಚಕ ರಾಮಭಟ್ಟರ ತಿಲಹೋಮ ಮತ್ತು ಸಮುದ್ರಸ್ನಾನದ ಸಲಹೆ - ಕರ್ಗಿಯ ಚೇತರಿಕೆ - ಸಮುದ್ರದಂಡೆಯಲ್ಲಿ ತಿಲಹೋಮ ಮಾಡ ಹೋಗಿ ಮೋಸಹೋದ ಕೊರಗಶೆಟ್ಟರು - ಹತ್ತು ಸಾವಿರ ಮೌಲ್ಯದ ಚಿನ್ನ ಲಪಟಾಯಿಸಿದ ಮುದುಕ - ಐದು ವರ್ಷದ ಅಂತರ - ಕಾರ್ಕಳ ಪೇಟೆಗೆ ನಿಯಮಿತ ಭೇಟಿ - ನಸ್ಯದ ವಿಚಾರ - ವಿಪರೀತ ಜನಸಂದಣಿಯ ಬಸ್ಸು - ಸೀಟುಕೊಟ್ಟ ಮುಸ್ಲಿಂ ಗ್ರಹಸ್ಥ - ಕೊರಗ ಶೆಟ್ರ ಚೀಲ ಸೇರುವ ಆತನ ಪ್ಲಾಸ್ಟಿಕ್ ಚೀಲ ಸುತ್ತಿದ್ದ ಪುಟ್ಟ ಕಟ್ಟು - ಎಲ್ಲೋ ತಿಳಿಯದ ಹಾಗೆ ಇಳಿದು ಹೋದ ಆ ಅಪರಿಚಿತ - ಕಟ್ಟಿನಲ್ಲಿರುವ ಹತ್ತು ಸಾವಿರ ನಗದು - ಕುಪ್ಪಣ್ಣಯ್ಯನ ಸಲಹೆ - ಹೆಂಡತಿಯ ಮಾತು - ಮುಖ್ಯೋಪಾಧ್ಯಾಯ ಸುಂದರರಾಯರ ಜೊತೆ ಪೋಲೀಸ್ ಸ್ಟೇಶನ್ನಿನ ಅನುಭವ - ತಿರುಪತಿ ವೆಂಕಟರಮಣನ ಹುಂಡಿ - ಶಾಲೆಯಲ್ಲಿ ಅನಾಮಿಕ ದತ್ತಿನಿಧಿ - ಕೊರಗಶೆಟ್ಟಿಯ ನಿಧನಾನಂತರವೂ ಅವರ ಆಸೆಯಂತೆ ಹೆಸರು ಹೇಳದಿರಲು ಕುಪ್ಪಣ್ಣಯ್ಯನ ಸಲಹೆ.
27. ಭೂಮಿ ಮತ್ತು ಆಕಾಶ - ಕುಂಟಲಪಾಡಿಯ ಕಿಟ್ಟಣ್ಣ - ಅವನ ಗಿಡುಗನಂಥ ಕೋಳಿ - ದುಬೈಯಿಂದ ಬರಲಿದ್ದ ಕಿಟ್ಟಣ್ಣನ ಹಿರಿಯ ಮಗ ಸತೀಶ - ವಿಮಾನದ ಹಾದಿ ಕಾಯುವ ಕಿಟ್ಟಣ್ಣನ ತಾಯಿ ಬಾಗಿಯಕ್ಕ - ಅವನಿಗಿಷ್ಟವಾದ ಗುಜ್ಜೆ, ಬಲ್ಯಾರು ಮೀನನ್ನು ಸಂಗ್ರಹಿಸುವುದು, ವಿಮಾನದ ಹಾದಿ ಕಾಯುವುದು - ಫೋನಿಗಾಗಿ ಕಾಯುವುದು - ದುರಂತದ ವಿಷಯ ಸ್ಫೋಟಗೊಂಡು ಸುಖದ ನಿರೀಕ್ಷೆಯು ದುಃಖಕ್ಕೆ ತಿರುಗುವುದು - ಉಸ್ಮಾನ್ ಬ್ಯಾರಿ, ನತ್ತಲಾಬಾಯಿಯಂಥ ನೆರೆಯವರು ಒದಗುವುದು - ಮುಂದಿನ ವಿವರಗಳು, ಊರಿನ ಸ್ಪಂದನ, ವಿದೇಶಕ್ಕೆ ದುಡಿಯ ಹೋಗುವವರ ಮನೋಧರ್ಮದಲ್ಲಾದ ಸೂಕ್ಷ್ಮ ಪಲ್ಲಟ.
28. ಮಳೆಯ ನೀರು ಮತ್ತೆ ಸಮುದ್ರಕ್ಕೆ - ಬಿಡಿಯಾಗಿ ಸಿಗರೇಟು ಮಾರಲಾರದ ಬಾಳುಭಟ್ರ ತಾಪತ್ರಯ - ಶೀನಶೆಟ್ರ ತಕರಾರು - ಅತ್ಯಂತ ಸ್ಥಿತಿವಂತ ಚೀಂಕ್ರಶೆಟ್ರ ಗತ್ತು,ಗೈರತ್ತು, ಪ್ರಭಾವದ ವಿವರ - ಅವರ ಮಗ ರಮೇಶನ ಬಂಡಾಯ - ಅಂತರ್ಜಾತೀ ವಿವಾಹ - ಚೀಂಕ್ರಶೆಟ್ರ ಹಠ - ಅಂತಕ್ಕೆಯ ತಾಯಿಕರುಳು - ವಕೀಲ ನಾಗೇಶ ರೈ ನಿಲುವು - ಚೀಂಕ್ರ ಶೆಟ್ರ ಮರಣ - ರಮೇಶನ ಮಗಳು ರೇಶ್ಮಾ ಪ್ರೇಮ ಪ್ರಕರಣ - ರಮೇಶನ ದ್ವಂದ್ವ - ಅಂತಕ್ಕೆಯ ಪರಿಹಾರ.
29. ಅದು ಅದೂ ಅಲ್ಲ, ಇದು ಇದೂ ಅಲ್ಲ! - ದಾಸಣ್ಣಾಚಾರ್ಯರ ಕೋರ್ಟ್ ಸೋಲು - ವಕೀಲ ಚಂದ್ರಸ್ವಾಮಿಯ ಮೇಲೆ ಆಕ್ರೋಶ - ಸುಬ್ಬಣ್ಣಯ್ಯನ ಕತೆ - ಬರೇ ಎರಡೆಕೆರೆ ಹೊಲದ ಎಣ್ಣೆ ನಾರ್ಣಪ್ಪ - ಗುಣವಾಗದ ಹೆಂಡತಿಯ ಉಬ್ಬಸ - ಮೋಂಟಣ್ಣನ ಮಗ ಧರ್ಮಣ್ಣನೊಂದಿಗೆ ಮಗಳು ಸೀತಾ ಮದುವೆ - ಆರಂಭದಿಂದಲೂ ತಗ್ಗಿ ನಡೆಯತೊಡಗಿದ ನಾರ್ಣಪ್ಪ - ಮೋಂಟಣ್ಣನಿಂದ ನಾರ್ಣಪ್ಪನ ವೈದ್ಯಕೀಯದ ಹೀಯಾಳಿಕೆ - ಒಕ್ಕಲೊಬ್ಬನಿಂದ ತಿಳಿದು ಬರುವ ಬಾಬು ಹುಳುಕು - ಬಾಣಂತಿಯನ್ನು ಮರಳಿ ಗಂಡನ ಮನೆಗೆ ಕಳಿಸದ ನಾರ್ಣಪ್ಪ - ಮಗನಿಗೆ ಬೇರೆ ಸಂಬಂಧ ಬೆಳೆಸಿದ ಮೋಂಟಣ್ಣ - ಎರಡನೆಯ ಮದುವೆ ಕಾನೂನು ಬಾಹಿರ ಎಂದು ಕೇಸು ಹಾಕಿದ ನಾರ್ಣಪ್ಪ - ಕೋರ್ಟಿಗೆ ಹಾಜರಾಗದ ಬಾಬು - ಮೆಡಿಕಲ್ ಸರ್ಟಿಫಿಕೇಟ್ ಅನಿವಾರ್ಯವಾದದ್ದು - ಸರ್ಟಿಫಿಕೇಟ್ ಕೊಟ್ಟು ವೈದ್ಯಾಧಿಕಾರಿ ತಿಮ್ಮಪ್ಪಯ್ಯ ಪೇಚಿಗೆ ಬಿದ್ದಿದ್ದು - ಮದ್ರಾಸ್ ಸರಕಾರದ ಗ್ರಾಮೀಣ ಆಸ್ಪತ್ರೆಯ ರೀತಿ ರಿವಾಚು - ತಿಮ್ಮಪ್ಪಯ್ಯ ಬಚಾವಾಗಿದ್ದು - ಬಾಬುವಿಗಾದ ಶಿಕ್ಷೆ ಮತ್ತು ಆತನ ಮುಗ್ಧತೆ - ಸುಬ್ಬಣ್ಣಯ್ಯನ ಜಾಣ್ಮೆ.
30. ಚಾರಣ - ಸಾದು ಶೆಟ್ಟರಿಗೆ ತಪ್ಪಿದ ಬಸ್ಸು - ಕುಪ್ಪಣ್ಣಯ್ಯನಿಂದ ತಿಳಿದ ಹೊಸ ತಹಶೀಲ್ದಾರರ ಪರಿಚಯ - ದಂಬೆಕೋಡಿ ಶೀನಪ್ಪಯ್ಯನ ಹಿರಿಯ ಮಗ ನರ್ಸಪ್ಪಯ್ಯನ ಮಗ - ಪೇದೆಗೆ ಹತ್ತು ರೂಪಾಯಿ ಕೊಟ್ಟು ತಹಶೀಲ್ದಾರರ ದರ್ಶನ ಪಡೆಯುವ ಕಿವಿಮಾತು - ತಹಶೀಲ್ದಾರರು ತೋರುವ ಔದಾರ್ಯ, ನೀಡುವ ಸಹಕಾರ - ಸೀತಾಪುರಕ್ಕೆ ಆಹ್ವಾನ. ಕುಮಾರಚಂದ್ರ-ಸರಸ್ವತಿ ದಾಂಪತ್ಯ - ಸರಸ್ವತಿಯ ಪಿಎಚ್‌ಡಿ ಪ್ರಬಂಧ - ಮಾತೃಪ್ರಧಾನ ವ್ಯವಸ್ಥೆಯುಳ್ಳ ಅವಿಭಜಿತ ದಕ್ಷಿಣಕನ್ನಡದಲ್ಲಿ ಇಪ್ಪತ್ತನೇ ಶತಮಾನದಲ್ಲಿ ಸ್ತ್ರೀಯರು ತಲೆಯೆತ್ತಿ ನಿಲ್ಲಲು ಇದ್ದ ಸವಾಲುಗಳು - ಹಿನ್ನೆಲೆಯ ಕತೆ: ತುಂಬೆ ಮತ್ತು ತೋಮರ ಶೀನಪ್ಪಯ್ಯನಲ್ಲಿ ಕೆಲಸ ಬಿಟ್ಟು ಅಹಮ್ಮದ್ ಬ್ಯಾರಿಯ ಕೆಲಸಕ್ಕೆ ಸೇರಿದ ಪ್ರಕರಣ - ಅಹಮ್ಮದ್ ಬ್ಯಾರಿಗೆ ತೋಟ ಗೇಣಿಗೆ ಕೊಡಲು ಒಪ್ಪದ ಶೀನಪ್ಪಯ್ಯ - ತುಂಬಕ್ಕೆಗೆ ಹೊಂಚು ಹಾಕುವುದು - ತುಂಬಕ್ಕೆಯ ವಿಚಿತ್ರ ಆತ್ಮರಕ್ಷಣೆಯ ಕ್ರಮ - ಕಮಲಕ್ಕನಿಗೆ ತಿಳಿಸುವುದು - ನರ್ಸಪ್ಪಯ್ಯ(ಮಗ)ನ ಹೆಂಡತಿಯ ಮೇಲೇ ಕಣ್ಣು ಹಾಕಿ ಆತ ಮನೆಬಿಟ್ಟು ನಡೆದ ಕತೆ. ತುಂಬಕ್ಕ ಸರಸ್ವತಿಯರ ಭೇಟಿ - ಸಾಧುಶೆಟ್ಟರಿಗೆ ತಮ್ಮ ತಾಯಿಯ ಮಹತ್ವ ಅರಿವಾಗುವುದು.

ನಾಲ್ಕನೆಯ ಸಂಕಲನ - ಸನ್ನಿಧಿಯಲ್ಲಿ ಸೀತಾಪುರ
ಇಲ್ಲಿಯ ವರೆಗಿನ ಈ ಮೂರೂ ಸಂಕಲನದಲ್ಲಿ ನಾವು ಕಾಣುವ ಕತೆಗಳೇ ಒಂದು ತರದವಾದರೆ ನಾಲ್ಕನೆಯ ಸಂಕಲನದ ಕತೆಗಳದ್ದೇ ಬೇರೆ ಲಯ. ಇವುಗಳನ್ನು ನಾ ಮೊಗಸಾಲೆಯವರು ಕಥಾ ಪ್ರಸಂಗಗಳು ಎಂದೇ ಕರೆದಿದ್ದಾರೆ. ಮಾತ್ರವಲ್ಲ, ಇಲ್ಲಿನ ಹೆಚ್ಚಿನ ಕತೆಗಳಿಗೆ ಅಲ್ಲಮನ ಸೊಲ್ಲುಗಳಿಗೆ ತಕ್ಕುದಾದ ಚೌಕಟ್ಟು ಒದಗಿಸಲು ಯತ್ನಿಸಿದಂತೆಯೂ ಕಾಣುತ್ತದೆ. ಕೆಲವು ಕತೆಗಳು ಇಂಥ ಹಂಗಿಲ್ಲದೇ ಹುಟ್ಟಿದವು. ಇನ್ನುಳಿದವು ಈ ಸೊಲ್ಲುಗಳಿಂದಾಗಿಯೇ ಹುಟ್ಟಿಕೊಂಡವು ಎನ್ನಬಹುದು. ಈ ವಿಚಾರವನ್ನು ಅವಗಣಿಸಿ ನೋಡಿದರೂ ಬಹುಮುಖ್ಯವಾಗಿ ಇಲ್ಲಿನ ಪ್ರಸಂಗಗಳಿಗೆ ಒಂದು ಕತೆಯ ಆಕೃತಿ ಅಥವಾ ಚೌಕಟ್ಟು ಒದಗಿಸುವ ಪ್ರಯತ್ನ ಮಾಡಿಲ್ಲದಿರುವುದು ವಿಶೇಷ. ಮೂಲ ಕಥಾನಕದ ಅಂತ್ಯವೇನಾಯಿತು ಎಂಬ ವಿಚಾರವೇ ಗೌಣವೆಂಬಂತೆ ಇಲ್ಲಿನ ಪ್ರಸಂಗಗಳು ನಿರೂಪಿತವಾಗಿವೆ. ಇವು ಸಣ್ಣಕಥಾ ಪ್ರಕಾರಕ್ಕೆ ಒಗ್ಗುವ ರಚನೆಗಳೇ ಅಥವಾ ಪ್ರಸಂಗಗಳು ಎಂದರೆ ಕತೆಗಳಿಂದ ಭಿನ್ನವೆ, ಭಿನ್ನ ಎಂದಾದರೆ ಹೇಗೆ ಭಿನ್ನ ಎಂಬ ಪ್ರಶ್ನೆಗಳನ್ನು ಬೆಳೆಸದೆ, ಮೂಲಭೂತವಾಗಿ ಇವು ನಾ ಮೊಗಸಾಲೆಯವರ ಕತೆಗಳ ಅಂತಃಸ್ಸತ್ವವನ್ನೂ, ಅವರಿಗೆ ಒಗ್ಗಿದ ನಿರೂಪಣಾ ಮಾದರಿಯನ್ನೂ ಅರಿಯಲು ಇವು ಸಹಾಯಕವಾಗುತ್ತವೆ ಎಂಬ ಅಂಶವನ್ನಷ್ಟೇ ಗಮನಿಸಬಹುದು.

ಈ ಸಂಕಲನದ ಇನ್ನೊಂದು ವಿಶೇಷತೆಯೇನೆಂದರೆ, ಇಲ್ಲಿನ ಮೂರು ಕತೆಗಳು (ಭಾಗ ಎರಡು) ನಾ ಮೊಗಸಾಲೆಯವರ ಕತೆಗಳ ತವರಾದ ಸೀತಾಪುರವನ್ನು ಬಿಟ್ಟು ಹೊರಗೆ ನಡೆಯುವ ಪ್ರಸಂಗಗಳಾಗಿರುವುದು. ಒಂದು ಗ್ರಾಮೀಣ ಪರಿಸರದಲ್ಲೇ ತಮ್ಮ ಕತೆಗಳನ್ನು ಮತ್ತು ಪಾತ್ರಗಳನ್ನು ಕಟೆದಿರಿಸುತ್ತ ಬಂದ ಮೊಗಸಾಲೆಯವರು ಮೊದಲ ಬಾರಿಗೆ ನಗರದ ಪರಿಸರಕ್ಕೆ ಅವೇ ಪಾತ್ರಗಳನ್ನು ಕರೆದೊಯ್ಯುತ್ತಾರೆ ಮತ್ತು ಅಲ್ಲಿಂದ ಕತೆಗಳನ್ನು ಹೇಳಿಸುತ್ತಾರೆ. ಇಷ್ಟು ಮಾತ್ರವಲ್ಲ, ಈ ಮೂರೂ ಕತೆಗಳು ಒಂದರ್ಥದಲ್ಲಿ ಮನಸ್ಸಿನ ತುಮುಲ, ದ್ವಂದ್ವ ಮತ್ತು ಹಪಹಪಿಗಳ ತಲ್ಲಣವನ್ನು ಕುರಿತಿರುವುದು ಕೂಡ ಮೊಗಸಾಲೆಯವರ ಒಟ್ಟು ಕಥಾವಸ್ತು, ನಿರೂಪಣೆಯ ವಿಧಾನ ಮತ್ತು ಸಮಾಜಮುಖೀ ಧೋರಣೆಯ ಹಿನ್ನೆಲೆಯಲ್ಲಿ ವಿಶೇಷವಾದ ಒಂದು ಪಲ್ಲಟವನ್ನು ದಾಖಲಿಸುತ್ತಿವೆ.
31. ಪದವನರ್ಪಿಸಬಹುದಲ್ಲದೆ - ಗೋವಿಂದ ಮಾಸ್ತ್ರ ಅಧಿಕಾರಗ್ರಹಣ ಮತ್ತು ಕುಪ್ಪಣ್ಣಯ್ಯನಿಗೆ ಬಂದ ಉಪನಯನದ ಆಮಂತ್ರಣ ಪತ್ರ - ಬೊಗ್ರಗೌಡನಿಗೆ ವಿಷಯ ವಿವರಿಸಿ ಹೇಳುವ ಮೂಲಕ ವಿಷಯದ ಗುರುತ್ವವನ್ನು ಓದುಗರಿಗೆ ತಿಳಿಸುವ ಯತ್ನ - ಹೆಂಡತಿಯೊಂದಿಗಿನ ಚರ್ಚೆಯ ಮೂಲಕ ಸರಸ-ವಿರಸ, ಕೌಟುಂಬಿಕ ಸಂಬಂಧಗಳ ಸೂಕ್ಷ್ಮಸಂವೇದನೆಗಳು ಮತ್ತು ಆಯ್ಕೆಯ ಚರ್ಚೆ - ಸೀತಾಪುರದ ಹೈಸ್ಕೂಲಿನ ಚರಿತ್ರೆ, ವೆಂಕಪ್ಪಮಾಸ್ಟ್ರ ಕುರ್ಚಿಯ ಚರಿತ್ರೆ, ಗೋವಿಂದಯ್ಯ ಮಾಸ್ಟ್ರನ್ನು ಕಾಡಿದ ಜಾತೀಯತೆ, ಹಾಲಿ ಮುಖ್ಯೋಪಾಧ್ಯಾಯ ಅಂತೋನಿ ಡಿಸೋಜರಿಗೆ ಕುರ್ಚಿಯಲ್ಲಿ ಕೂರುವ ನಿರ್ಧಾರವನ್ನು ಕಾರ್ಯರೂಪಕ್ಕಿಳಿಸಲಾಗದೇ ಹೋಗುವುದು - ಜಲಜಮ್ಮನವರ ಬದಲಾದ ನಿರ್ಧಾರ. ಕೊನೆಗೂ ಗೋವಿಂದಯ್ಯ ಕುರ್ಚಿಯಲ್ಲಿ ಕುಳಿತರೇ ಇಲ್ಲವೇ ಎಂಬ ಪ್ರಶ್ನೆ ಕತೆಯ ಚೌಕಟ್ಟಿನಿಂದ ಹೊರಗೆ ಉಳಿಯುವುದು.
32. ಗುಹೇಶ್ವರನೆಂಬ ಅಪ್ರಮಾಣ - ದೇಜಪ್ಪ ಮಾಸ್ಟ್ರು ಕುಪ್ಪಣ್ಣಯ್ಯ ಭೇಟಿ. ತೋಟಕ್ಕೆ ದಾಳಿಯಿಡುವ ಮಂಗಗಳ ಸಮಸ್ಯೆ ಕುರಿತ ಚರ್ಚೆ. ಮಾಳದ ಹಿರಿಯರು ಸೂಚಿಸುವ ಮುಸುವನ ಪರಿಹಾರ. ಕುಪ್ಪಣ್ಣಯ್ಯ ಬಿಟ್ಟುಕೊಟ್ಟ ಕೋಟಿಮೂಲೆ ಭೀಮ ಭಟ್ಟರ ಕೇಪಿನ ಕೋವಿಯ ಗುಟ್ಟು. ಉಪನಿಷತ್ತು ಮತ್ತು ಹೊಟ್ಟೆಯಲ್ಲಿ ಹುಟ್ಟುವ ಜ್ಞಾನದ ಜಿಜ್ಞಾಸೆ. ಮಂಗಗಳನ್ನು ಕೊಲ್ಲಿಸುವ ಯೋಚನೆಯ ಬಗ್ಗೆ ಹಿಂಜರಿಯುವ ದೇಜಪ್ಪ ಮಾಸ್ಟ್ರು - ಆ ಕುರಿತ ಮತ್ತಷ್ಟು ಚರ್ಚೆ. ಮರುದಿನ ಮಂಗ ಉಪಟಳ ನೀಡಿದಾಗ ಬದಲಾಗುವ ದೇಜಪ್ಪ ಮಾಸ್ಟ್ರ ನಿಲುವು - ಕೊಲ್ಲಿಸಲು ತಯಾರಾಗುವಾಗ ಹೆಂಡತಿ ಲಕ್ಷ್ಮಿಯಕ್ಕನ ಸುಪ್ತ ವಿರೋಧ, ಹಿತವಚನ - ಗಂಡನನ್ನು ತಡೆಹಿಡಿಯುವ ಉಪಾಯಗಳು. ಕುಪ್ಪಣ್ಣಯ್ಯನ ಹಿಂಜರಿಕೆ. ಭೀಮಭಟ್ಟರ ಹೆಂಡತಿಯ ಪ್ರವರ, ಕೃಷಿ ಕೆಲಸಕ್ಕೆ ಹೊರಟ ಸಮಯ ಹಾಳಾಗುತ್ತಿರುವುದರ ಬಗ್ಗೆ ಭೀಮಭಟ್ಟರ ಆತಂಕ - ಮಂಗಗಳನ್ನು ಕೊಲ್ಲಿಸುವ ವಿಚಾರದಲ್ಲಿ ಭೀಮಭಟ್ಟರ ಲಾ ಪಾಯಿಂಟು ಮತ್ತು ಹಿಂಜರಿಕೆ. ಮಾದ ಹೊತ್ತು ತಂದ ಗುಪ್ತ ಸಂದೇಶ ಮತ್ತು ಭೀಮಭಟ್ಟರ ಸಹಕಾರದ ಆಶ್ವಾಸನೆ - ಭೀಮಭಟ್ಟರ ಎಸ್ಸೆಮ್ಮೆಸ್ಸಿಗೆ ಓಕೆ ಮಾಡಲು ಪಾಡುಪಟ್ಟ ದೇಜಪ್ಪ ಮಾಸ್ಟ್ರು ಮತ್ತು ಅದರಿಂದಾಗಿ ಹೆಂಡತಿ ಕೈಗೆ ಸಿಕ್ಕಿಹಾಕಿಕೊಳ್ಳುವುದು. ಹೆಂಡತಿ ಕೈಯಲ್ಲಿ ಹೈರಾಣಾದ ಮಾಸ್ಟ್ರು - ಮನೆಯ ಸೂರಿನ ಮೇಲೆ ಕೂತು ಹೆಂಚು ಒಡೆದು ಹಲ್ಲು ಕಿಸಿದ ಮಂಗ - ಮಾಸ್ಟ್ರು ಮತ್ತು ಹೆಂಡತಿಯ ದೃಷ್ಟಿಯುದ್ಧ. ಕೊನೆಗೂ ಮಂಗನನ್ನು ಕೊಂದರೇ ಬಿಟ್ಟುಬಿಟ್ಟರೇ ಎಂಬ ಪ್ರಶ್ನೆ ಕತೆಯ ಚೌಕಟ್ಟಿನಿಂದ ಹೊರಗೇ ಉಳಿದುಬಿಡುವುದು.
33. ಇನ್ನು ಮುಂದೆ ಶಬ್ದ ಇಲ್ಲ - ಕುಪ್ಪಣ್ಣಯ್ಯನ ಸಾಂಬಾರಿನ ರಹಸ್ಯ - ಕಾರ್ಕಳದಿಂದ ಬೇಚ ಪೂಜಾರಿ ತಂದ ಎರಡು ಪ್ಯಾಕೆಟು ಹಿಂಗು - ಜೊತೆಗೆ ಬಂದ ಬೆಟ್ಟು ವೆಂಕಟದಾಸು ಅವರ ಅಜ್ಜನ ಕವಲಿನವರು - ಪಂಚಭಟ್ರ ಮೊಮ್ಮಗ ಎಂಬ ಗುರುತು - ಬೆಟ್ಟು ವೆಂಕಟದಾಸ ಭಟ್ಟರಿಗೂ ಪುಟ್ಟಣ್ಣಯ್ಯನವರ ಕುಟುಂಬಕ್ಕೂ ಅನ್ನ ನೀರಿಲ್ಲದೆ ಎರಡು ತಲೆಮಾರು ಕಳೆದ ಕತೆ - ಜೋಯಿಷ ನಾಗನಾರಾಯಣ ಭಟ್ಟನ ಚರಿತ್ರೆ - ಅವರಿಂದ ಸಿಕ್ಕಿದ ಆಶ್ಲೇಷ ಬಲಿಯ ಸಂಕಲ್ಪದ ಪ್ರೇರಣೆ - ಕುಪ್ಪಣ್ಣಯ್ಯ ದಂಪತಿಗಳ ನಡುವೆ ನಾಗನಾರಾಯಣ ಭಟ್ಟನ ತಂದೆಯ ಎರಡನೆಯ ಸಂಬಂಧದ ಕುರಿತ ವಾಗ್ವಾದ - ಒಡೆದ ಕುಟುಂಬ ಒಂದಾಗಲು ನಾಗಾರಾಧನೆಯ ಅಗತ್ಯವಿದೆಯೆ, ಹಾಗೆಯೇ ಆಗಲು ಬಾರದೆ ಎಂಬ ಜಿಜ್ಞಾಸೆ. ನಾರಾಯಣ ಭಟ್ಟ ನಾಗನಾರಾಯಣ ಭಟ್ಟನಾದ ಕತೆ - ಹೀಗೆ ಸಂಪಾದಿಸಿದ ಹಣದ ದರ್ಬಾರು ಹೇಗಿರುತ್ತದೆ ಎಂಬ ವಿಚಾರ - ಸೊಪ್ಪು ತಂದು ಹಾಕುವ ಕಮಲಳಿಂದ ತಿಳಿದುಬಂದ ಇಟ್ಟುಕೊಂಡವಳ ಔದಾರ್ಯದ ಕತೆ. ಕೊನೆಗೂ ಪುಟ್ಟಣ್ಣಯ್ಯ ಆಶ್ಲೇಷ ಬಲಿ ಪೂಜೆ ಮಾಡಿಸಿದನೆ ಎಂಬ ಪ್ರಶ್ನೆ ಕತೆಯ ಚೌಕಟ್ಟಿನಿಂದ ಹೊರಗೇ ಉಳಿದು ಬಿಡುವುದು.
34. ಗುಹೇಶ್ವರನೆಂಬ ಬಯಲು - ಆಧುನಿಕ ಕನ್ನಡ ಸಾಹಿತ್ಯದ ಪಾಠ ಮಾಡಲು ಹಳೆಗಾಲದ ಕನ್ನಡ ಮೇಸ್ಟ್ರು ಸುಬ್ಬಣ್ಣನವರಿಗೆ ಇರುವ ಕಷ್ಟಗಳು - ಹಳೆಗನ್ನಡ ಕಾವ್ಯಭಾಗಗಳನ್ನು ನವ್ಯೋತ್ತರ ದಲಿತ ಬಂಡಾಯ ಸಾಹಿತ್ಯ ಆಕ್ರಮಿಸುತ್ತಿರುವುದರ ಕುರಿತ ಕಳವಳ - ರಾಮ ಕಾರಂತರ ಓದಿನ ವಿಸ್ತಾರ/ಆಸಕ್ತಿ - ಸುಬ್ಬಣ್ಣ ಮೇಸ್ಟ್ರ ಕೊಡೆ ಪುರಾಣ - ಅಪರಿಚಿತ ಸಾಧು ಕುಪ್ಪಣ್ಣಯ್ಯನವರ ಹೋಟೆಲಿಗೆ ಬಂದುದು - ಅಲ್ಲಮನ ವಚನಗಳ ಅಂತರಾರ್ಥ - ಅಸ್ತಿತ್ವವಿಲ್ಲದ ಹಸಿವು, ದೇಹದ ಹಸಿವು ಮತ್ತು ಮನಸ್ಸಿನ ಹಸಿವು - ಕಾರಂತರ ದ್ವೈತಾದ್ವೈತದ ಸಂದಿಗ್ಧ - ಸಾಧು ಹೇಳುವ "ತಾಯಿ ಬಂಜೆಯಾದಲ್ಲದೆ ಶಿಶುಗತವಾಗದು" ವಚನ ಮತ್ತು ಅದರ ಅಂತರಾರ್ಥದ ಚರ್ಚೆ - ಮುಂದೆ ಸುಬ್ಬಣ್ಣ ಮಾಸ್ಟ್ರಿಗೆ ಎದುರಾಗುವ ಅಲ್ಲಮನ ವಚನ ಮತ್ತು ಅದರರ್ಥದ ಸಮಸ್ಯೆ - ಡಾ ನಟರಾಜ ಬೂದಾಳು ಅವರು ನೀಡುವ ಉಪನ್ಯಾಸ - ಅದಕ್ಕೆ ಹಾಜರಾದ ಸಾಧು, ಕಂಡು ಕಾಣುತ್ತಿರುವಂತೆಯೇ ಎಲ್ಲಿಗೆ ಹೋದನೆಂದೇ ತಿಳಿಯದಂತಾಗುವುದು. ಇಲ್ಲಿಯೂ ನಿರ್ದಿಷ್ಟ ಚೌಕಟ್ಟು ಇಲ್ಲದೇ ಇರುವುದು ಗಮನಿಸಬಹುದು.
35. ಹರಿವ ನದಿಗೆ ಮೈಯೆಲ್ಲಾ ಕಾಲು - ವೈದ್ಯಾಧಿಕಾರಿ ಸುಬ್ಬರಾಯರು ಸೀತಾಪುರದ ನಿವಾಸಿಯಾಗಿದ್ದು - ದೇವರು ದಿಂಡಿರಲ್ಲಿ ಅಷ್ಟು ನಂಬಿಕೆಯಿಲ್ಲದ ಕುಪ್ಪಣ್ಣಯ್ಯನವರ ಮನೆಯ ವಾರ್ಷಿಕ ಸತ್ಯನಾರಾಯಣ ಪೂಜೆ - ಅಲ್ಲಿ ಭೇಟಿಯಾಗುವ “ತುಂಡು ವಕೀಲ” ಬೆಟ್ಟು ವೆಂಕಟದಾಸಭಟ್ಟರು ಮತ್ತು ಸುಬ್ಬರಾಯರು - ಮುಖ್ಯಮಂತ್ರಿ ಬಂಗಾರಪ್ಪನವರು ಮದ್ರಾಸ್ ಸರಕಾರದ, ಹೈದ್ರಾಬಾದ್ ಕರ್ನಾಟಕ ಭಾಗದ ಮತ್ತು ಮುಂಬೈ ಕರ್ನಾಟಕ ಪ್ರಾಂತ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯಾಧಿಕಾರಿಗಳನ್ನು ಸರ್ಕಾರಿ ನೌಕರರಾಗಿ ಪರಿಗಣಿಸಿ ಪಿಂಚಣಿ ನೀಡುವ ನಿರ್ಧಾರಕ್ಕೆ ಅಂಕಿತ ಹಾಕಿದ ವಿವರ - ಅಷ್ಟರಲ್ಲಾಗಲೇ ನಿವೃತ್ತರಾಗಿದ್ದ ಸುಬ್ಬರಾಯರು ಪಿಂಚಣಿ ಮತ್ತು ಅರಿಯರ್ಸ್ ಪಡೆದುಕೊಳ್ಳಲು ಪ್ರಯತ್ನಿಸುವುದರಲ್ಲೇ ಲಂಚ ತೆತ್ತು, ಮೋಸಕ್ಕೊಳಗಾಗಿ, ಶೋಷಿಸಲ್ಪಟ್ಟು ಹೈರಾಣಾದ ವಿವರಗಳು - ಕುಪ್ಪಣ್ಣಯ್ಯನ ಪ್ರತಿಸ್ಪಂದನ - ಚಾರ್ಟರ್ಡ್ ಅಕೌಂಟೆಂಟ್ ಗೋರೆ ಮತ್ತು ಹಾಲಿ ವೈದ್ಯಾಧಿಕಾರಿ ಲಠ್ಠೆಯವರ ನಡುವೆ ಸಿಲುಕಿ ಮತ್ತೆ ಐದು ಸಾವಿರ ಕಳೆದುಕೊಂಡು ಮೋಸ ಹೋಗುವ ಸುಬ್ಬರಾಯರು. ಭ್ರಷ್ಟ ವ್ಯವಸ್ಥೆಯಡಿ ಸರ್ಕಾರಿ ಯೋಜನೆಗಳು ಹಾದಿ ತಪ್ಪುವ ಒಂದು ಅನುಭವ ಕಥನದಂಥ ಪ್ರಸಂಗ.
36. ಭಾಷೆ ಎಂಬುದು ಪ್ರಾಣಘಾತುಕ - ವೆಂಕಪ್ಪಯ್ಯ ಆಡಬಾರದಿದ್ದ ಮಾತು - ಭಾಷೆಯ (ಮಾತಿನ) ಸಾಮರ್ಥ್ಯದ ಸೋಜಿಗ - ಬಾಳುಭಟ್ಟರ ಅನಗತ್ಯ ಕುತೂಹಲ - ಇಡೀ ಸೀತಾಪುರವನ್ನೇ ಕೈಯಲ್ಲಿರಿಸಿಕೊಂಡಿರುವ ಮಾಲಿಂಗಣ್ಣನ ಮರ್ಜಿ - ದಾಸುಭಟ್ರ ಮೂಲಕ ಸಾಂತ್ವನ ಮತ್ತು ನಡೆದ ಸಂಗತಿಯ ವಿವರ ಎರಡನ್ನೂ ಪಡೆದ ಬಾಳುಭಟ್ಟರು ಮತ್ತು ಓದುಗರು. ಘಟನೆಯ ಹಿನ್ನೆಲೆ: ವೆಂಕಪ್ಪಯ್ಯನ ಯಕ್ಷಗಾನದ ಪ್ರೌಢಿಮೆ, ಖ್ಯಾತಿ - ಶಂಭಟ್ಟರಿಗೆ ಅಡುಗೆಗೆ ಜನ ಬೇಕೆಂದಾಗ ವೆಂಕಪ್ಪಯ್ಯನನ್ನು ಹೊಂದಿಸಿಕೊಟ್ಟ ಅರ್ಚಕ ಅಪ್ಪಣ್ಣಭಟ್ಟರು - ವೆಂಕಪ್ಪಯ್ಯ ಮತ್ತು ಶಂಭಟ್ಟರ ಅರ್ಧದಷ್ಟು ವಯಸ್ಸಿನ ಎರಡನೆಯ ಹೆಂಡತಿ ಸರಸ್ವತಿ ನಡುವಿನ ಸಂಬಂಧ - ಶಂಭಟ್ಟರು ಸಂಕಪ್ಪ ಹೆಗ್ಡೆಯವರೊಂದಿಗೆ ಸೇರಿಕೊಂಡು ಆರಂಭಿಸಿದ ಸಹಕಾರಿ ಸಂಘ (ಬ್ಯಾಂಕು) - ವೆಂಕಪ್ಪಯ್ಯನ ಹಾಡುಗಾರಿಕೆಗೆ ಸರಸ್ವತಿಯ ಮದ್ದಲೆಯ ಸಾಥ್ - ಸರಸ್ವತಿ ಹೆತ್ತ ಮೂರು ಮಕ್ಕಳು, ಮೊದಲನೆಯವ ಮಾಲಿಂಗಣ್ಣ - ಸರಸ್ವತಿಯ ನಿಧನ - ಶಂಭಟ್ಟರ ಮೂರನೆಯ ಮದುವೆ ಮತ್ತು ಮನೆಯಿಂದ ಹೊರಹೋದ ವೆಂಕಪ್ಪಯ್ಯ - ಶಂಭಟ್ಟರ ನೋವು, ಕೊನೆಗೂ ಮೂಲೆಮನೆ ಒಕ್ಕಲಾಗಿ ನೆಲೆಯಾದ ವೆಂಕಪ್ಪಯ್ಯ - ಶಂಭಟ್ಟರ ನಿಧನ, ಮಾಲಿಂಗಣ್ಣನ ಕಾರುಬಾರು, ಸೊಸೈಟಿಯ ವ್ಯವಹಾರದಲ್ಲಿ ಹಿಡಿತ - ಕುಪ್ಪಣ್ಣಯ್ಯನ ಹೋಟೆಲಿನಲ್ಲಿ ಮಾಲಿಂಗಣ್ಣನಿಗೆ ಮೀಸಲು ಟೇಬಲ್ಲು ಹುಟ್ಟಿಕೊಂಡುದು - ಟೇಬಲ್ಲಿನ ವಿಚಾರದಲ್ಲೇ ಮಾಲಿಂಗಣ್ಣನಿಗೂ ವೆಂಕಪ್ಪಯ್ಯನಿಗೂ ಹುಟ್ಟಿದ ತಕರಾರು - ನಾನೇ ನಿನ್ನ ನಿಜವಾದ ಅಪ್ಪ ಎಂದ ವೆಂಕಪ್ಪಯ್ಯ - ತಿಂಗಳ ಬಳಿಕ ಮಗ ಬುದ್ಧಿ ಕಲಿತಿದ್ದು - ಕುಪ್ಪಣ್ಣಯ್ಯನ ನಿರ್ಲಿಪ್ತಿ.
37. ಬೆಟ್ಟದ ನೆಲ್ಲಿ ಮತ್ತು ಕಡಲಿನ ಉಪ್ಪು - ಬೆಟ್ಟು ವೆಂಕಟದಾಸರ ಪುಣೆ ಪ್ರಯಾಣ - ಇನ್ಫೋಸಿಸ್ ಉದ್ಯೋಗಿ ಮಗ ರಮೇಶಚಂದ್ರನ ಮನೆ - ಕುಪ್ಪಣ್ಣಯ್ಯನ ಸೊಸೆ ಸರೋಜ ಇರುವ ಊರು - ಪುಣೆಯ ಫ್ಲ್ಯಾಟಿನಲ್ಲಿ ಬಂಧನದ ಅನುಭವ - ಸರೋಜಾ ಮನೆಗೆ ಹೊರಡುವ ದಾಸುಭಟ್ಟರು - ಪರಸ್ಪರರ ಮನೆಗೆ ಊಟ ಇತ್ಯಾದಿಗಳಿಗೆ ಭೇಟಿಕೊಟ್ಟು ಮಾಡುವ ಪರಿಪಾಠ ಕಡಿಮೆಯಾಗುತ್ತಿರುವ ಆಧುನಿಕ ಶಿಷ್ಟಾಚಾರದ ಹಿನ್ನೆಲೆಯಲ್ಲಿ ಅಚ್ಚರಿಹುಟ್ಟಿಸುವ ದಾಸುಭಟ್ಟ - ಸರೋಜಾರ ಹೊಕ್ಕುಬಳಕೆಯ ಸಹಜ ಆಪ್ತಭಾವ - ದಿನಾ ಸರೋಜಾ ಮನೆಗೆ ಹೋಗಿ ಬರುವ ದಾಸುಭಟ್ಟರು ಮತ್ತು ಇದನ್ನು ಇಷ್ಟಪಡದ ಹೆಂಡತಿ,ಮಗ, ಸೊಸೆ - ಒಂದು ದಿನ ಹೋಗದುಳಿದ ಭಟ್ಟರು ಮತ್ತು ಸರೋಜಾಳ ಆತಂಕ - ಮತ್ತೆ ದಿನನಿತ್ಯದ ಭೇಟಿ, ಸುಧಾಕರನ ಅಜ್ಜ ಸುಬ್ರಾಯಭಟ್ಟರ ಮನೆಗೆ ಭೇಟಿ - ಸುಬ್ರಾಯಭಟ್ಟರ ಮಗ ಲಕ್ಷ್ಮಣರಾಯರ ಸೊಸೆ ರೇಶ್ಮಾ ಕತೆ - ಸೀತಾಪುರದ ಮಾಣಿಬೆಟ್ಟಿನ ರೊಡ್ರಿಗಸ್ ಕುಟುಂಬದ ಹೆಣ್ಣು ಎಂಬ ಸತ್ಯ - ಸೀತಾಪುರದಲ್ಲಿ ಆ ಮನೆ ಹುಡುಕಿ ತೆಗೆಯುವ ಕುಪ್ಪಣ್ಣಯ್ಯ ಮತ್ತು ವೆಂಕಟದಾಸ ಭಟ್ಟರು - ಫ್ರಾನ್ಸಿಸ್ ರೊಡ್ರಿಗಸ್ಸರ ನಿರಾಸಕ್ತಿ - ಅಜ್ಜಿ ಪೀನಾ ಬಾಯಿ ನೀಡುವ ವಿವರ, ಸಾಲಿಗ್ರಾಮದ ಕರಂಡಕದ ಕತೆ - ದಾಸುಭಟ್ರು ಪುಣೆಗೆ ಬರೆದ ಪತ್ರ - ಸುಬ್ರಾಯ ಭಟ್ಟರ ನಿಧನ ವಾರ್ತೆ ಹೊತ್ತ ಲಕ್ಷ್ಮಣರಾಯರ ಪ್ರತ್ಯುತ್ತರ - ಜನ್ಮಜನ್ಮಾಂತರದ ಸಂಬಂಧದ ತಾತ್ವಿಕತೆ ಕಾಣುವ ದಾಸುಭಟ್ಟರು.
38. ಗುಹೇಶ್ವರನೆಂಬುದಿಲ್ಲಾಗಿ ಬಯಲೆಂಬುದಿಲ್ಲ - ತುಕ್ರೊಟ್ಟು ಶೀನ ಬಂಗೇರರ ಅರವತ್ತನೇ ಹುಟ್ಟುಹಬ್ಬ - ಬಂಗೇರರ ಭಾವ ಮಾಂಕು. ಶೀನ ಬಂಗೇರರ ಜೀವನ ಚರಿತ್ರೆ: ಗ್ರಾಮದ ಶ್ಯಾನಭಾಗರಲ್ಲಿ ವರ್ಷಪೂರ್ತಿ ದುಡಿದು ಎರಡು ಎಕರೆ ದರ್ಕಾಸ್ತು ಮಾಡಿಕೊಂಡ ಜಾಗ ತುಕ್ರನ ಬೆಟ್ಟು - ತುಕ್ರೊಟ್ಟು - ಕೇಶವ ಪೈಗಳ ಔದಾರ್ಯದ ಬಲೆ - ಕೊನೆಯ ಮಗನ ಕಲಿಕೆ - ಸೀತಾಪುರಕ್ಕೇ ಮಾಸ್ತರನಾಗಿ ಬಂದುದು - ತುಕ್ರನ ಸಾವು - ಮಕ್ಕಳಲ್ಲಿ ಪಾಲು, ತುಕ್ರೊಟ್ಟಿನಲ್ಲಿ ನೆಲೆಯಾದ ಕುಟ್ಟಿ - ತುಕ್ರೊಟ್ಟು ಮಾಸ್ಟ್ರು - ನಾಲ್ಕು ಹೆಣ್ಣು, ಒಂದು ಗಂಡು - ಶ್ರೀನಿವಾಸ, ಶೀನ ಸಭ್ಯನಾಗಲಿಲ್ಲ - ಬೀಡಿ ಸೇದಿದ್ದಕ್ಕೆ ಹೊಡೆದು ಹೊರಹಾಕಿದ್ದು - ತಾಯಿ ಸೇಸಿ ಮೊದಲ ಮಗಳು ಲಚ್ಚುಮಿಯ ಮನೆಗೆ ಸೇರಿಸುವುದು, ಲಚ್ಚುಮಿಯ ಗಂಡನ ಮುಂಬೈ ಹೋಟೆಲು ಸೇರಿ ಮೇಲೆ ಬರುವ ಶೀನ - ಮಾಸ್ಟ್ರ ಪಶ್ಚಾತ್ತಾಪ. ಶೀನ ಬಂಗೇರರ ಕಾಲ - ಹುಟ್ಟಿದ ಹಬ್ಬದ ದಿನ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಮತ್ತು ಯಕ್ಷಗಾನ ಬಯಲಾಟ ಆಡಿಸುವ ಕ್ರಮ - ಯಾಚಕರಿಗೆ ನಾಯಿಯ ಮೊಲೆಹಾಲು - ಯಕ್ಷಗಾನಕ್ಕೆ ಜನಸಾಗರ - ಶೀನ ಬಂಗೇರ ದಂಪತಿಗಳಿಗೆ ಸನ್ಮಾನ - ವ್ಯಂಗ್ಯ - ಬಂಗೇರರಿಗೆ ಪಕ್ಷವಾತ - ಬದಲಾದ ಹೆಂಡತಿ, ಚಿಂತಿತನಾದ ಮಾಂಕು. ಜ್ಯೋತಿಷ್ಯದ ಮೊರೆಹೋದ ಮಾಂಕು - ಮೂಡಬಿದ್ರೆಯ ಅವಧೂತ - ರಾಮನಕಟ್ಟೆಯ ತಾಯಿ - ಶೀನ ಬಂಗೇರರಿಗೆ ಹೆಂಡತಿ ಮಕ್ಕಳ ನಡವಳಿಕೆಯಿಂದಾದ ಭ್ರಮನಿರಸನ, ವೈರಾಗ್ಯ. ಸಹಾಯಕಿ ರೇಶ್ಮಾ ಹೇಳಿದ ನಿರ್ಮಲಾ ಕಾಮತ್ ಅವರ ಹಿಂದಿನ ಕತೆ - ಸೀತಾಪುರಕ್ಕೂ ಹೋಗದೆ, ಮುಂಬಯಿಗೂ ಹೋಗದೆ ದೇಶಾಂತರ ಹೋದ ಶೀನ ಬಂಗೇರ - ಮಾಂಕುವಿನ ಹುಡುಕಾಟ, ಹೆಂಡತಿಯ ನಿರ್ಲಕ್ಷ್ಯ. ಕುಪ್ಪಣ್ಣಯ್ಯನ ಒಂದು ಭೇಟಿ - ಕುಡಿಯದ ಒಂದು ಕಪ್ ಕಾಫಿಯ ಹಣವನ್ನು ಮುರಿದುಕೊಂಡು ಶೀನ ಬಂಗೇರ ಕೊಟ್ಟ ಹಣದ ಚಿಲ್ಲರೆ ಕುಪ್ಪಣ್ಣಯ್ಯನಿಗೆ ಕೊಡುವ ಹೋಟೇಲಿಗ - ಕುಪ್ಪಣ್ಣಯ್ಯನನ್ನು ಕಾಡುವ ಮುಕ್ತಿಯ ಪ್ರಶ್ನೆ.
39. ಅಪರಿಮಿತ ಕತ್ತಲೆಯೊಳಗೆ ವಿಪರೀತ ಬೆಳಕನಿಕ್ಕಿದೊಡೆ - ಜಟ್ಟಿಪಳ್ಳದ ಕಂಬಳ - ಸಂಕಪ್ಪ ಮಾಡರ ಜಟ್ಟಿಪಳ್ಳದ ಅನಾಥ ಜಮೀನು - ಅದರ ಉಸ್ತುವಾರಿಗೆ ಬಂದ ಬಿಡುಒಕ್ಕಲು ರಾಮಯ್ಯ - ಹಗಲಿರುಳು ಜೀವ ತೇದು ತೋಟ ಬೆಳೆಸಿದ ರಾಮಯ್ಯ - ಫಲ ಬೇಡಲು ಬಂದ ಧನಿ ಸಂಕಪ್ಪ ಮಾಡ - ಮಗ ಡೊಂಬಯ್ಯ ಸಂಕಪ್ಪ ಮಾಡರ ಅಳಿಯ ಬಾಲಕೃಷ್ಣನ ಗೋವಾದ ಹೋಟೆಲು ಕೆಲಸಕ್ಕೆ ಸೇರಿದ್ದು - ಭೂಮಸೂದೆ - ಎರಡು ಸಾವಿರ ಕೊಟ್ಟು ಡಿಕ್ಲರೇಶನ್ ಹಾಕದಂತೆ ತಡೆಯಲು ಡೊಂಬಯ್ಯನನ್ನು ಊರಿಗೆ ಕಳಿಸಿದ ಬಾಲಕೃಷ್ಣ - ಊರು ಬಿಟ್ಟು ಪರಾರಿಯಾದ ಡೊಂಬಯ್ಯ - ಸಂಕಪ್ಪ ಮಾಡ ಮತ್ತು ಬಾಲಕೃಷ್ಣರ ದಾಳಿ - ರಾಮಯ್ಯ ಮತ್ತು ಗಿರಿಜರ ಮೇಲೆ ದಬ್ಬಾಳಿಕೆ - ಡೊಂಬಯ್ಯನ ಮೇಲೆ ಕಳವಿನ ಆರೋಪ - ಸಂಕಪ್ಪ ಮಾಡರಿಗೆ ಬಾಳಭಟ್ಟರೊಂದಿಗಿನ ವ್ಯವಹಾರ - ಗಿರಿಜ ಬೆಂಡೋಲೆ ಅಡವಿರಿಸಿ ಬಾಳುಭಟ್ಟರಿಂದ ಎರಡು ಸಾವಿರ ಕೊಡಿಸಲು ಮುಂದಾಗಿದ್ದು - ಅನ್ಯಾಯ ತಡೆದ ಕುಪ್ಪಣ್ಣಯ್ಯನ ಜಾಣತನ. ಎಷ್ಟೋ ವರ್ಷಗಳ ನಂತರ ಮುಂದುವರಿಯುವ ಕತೆ - ಸಾಧುಸೇರಿಗಾರ ಮತ್ತು ರಾಮಯ್ಯನ ಸ್ನೇಹ - ಕೋಳಿ ಅಂಕದ ನಂಟು - ಕಂಬಳದ ಒಳಸುಳಿಗಳು - ಡೊಂಬಯ್ಯನ ತೈನಾತಿಯಾದ ಸಾಧು ಸೇರಿಗಾರ - ಸೀತಾಪುರದ ರಥಬೀದಿಗೆ ಸ್ವಾಗತಗೋಪುರ ಕಟ್ಟಿ ಹೆಗ್ಡೆಯಾದ ಡೊಂಬಯ್ಯ - ಎದ್ದು ನಿಂತ ಮೂರು ಮಾಳಿಗೆಯ ಬಂಗ್ಲೆ - ಕಂಬಳದ ಶೋಕಿ, ಇಂಡಿಕಾ ಕಾರಿನಲ್ಲೇ ಓಡಾಡುವ ಸಾಧುಶೆಟ್ಟಿ - ಗೋವಾದ ಹೋಟೆಲಿನಲ್ಲಿ ಜೊತೆಗೇ ವೈಟರ್ ಆಗಿದ್ದ ಹೊಸಂಗಡಿಯ ಬಚ್ಚಿರೆ ಬಾಬುನ ಸ್ನೇಹಭಾವ - ಧನಮದದ ಡೊಂಬಯ್ಯ ಸ್ನೇಹಿತನಿಗೆ ಮಾಡುವ ಅವಮಾನ.

ಹೀಗೆ ನಾ ಮೊಗಸಾಲೆಯವರು ಪ್ರತಿಯೊಂದು ಕತೆಗೂ ಆರಿಸಿಕೊಂಡ ವಸ್ತು ವಿಭಿನ್ನ, ಹಲವು ಆಯಾಮಗಳದ್ದು ಮತ್ತು ಬದುಕಿನಿಂದ ನೇರವಾಗಿ ಎತ್ತಿಕೊಂಡಿದ್ದು ಎನ್ನುವುದು ಸ್ಪಷ್ಟ. ಅವರ ನಿರೂಪಣಾ ವಿಧಾನ ಹೀಗಾಗಿಯೇ ಎಲ್ಲವನ್ನೂ ಒಳಗು ಮಾಡಿಕೊಂಡು ಸಾಗುವಂಥಾದ್ದು. ಆದಾಗ್ಯೂ ಅಲ್ಲಿ ಅನ್ಯವಾಗಿಯೇ ಉಳಿದು ಬಿಡುವ ವಿಚಾರಗಳು, ಸಂಗತಿಗಳು ಇದ್ದೇ ಇರುತ್ತವೆ. ಸಾಕಷ್ಟು ಫಿಲ್ಟರಿಂಗ್ ಇದ್ದೂ ಇವು ಜೀವಂತಿಕೆಯನ್ನು, ತಾಜಾತನವನ್ನು ಮತ್ತು ಸಹಜತೆಯನ್ನು ಉಳಿಸಿಕೊಂಡಿರುವುದರಿಂದಲೇ ಈ ನಿರೂಪಣೆಗೆ ಒಂದು ಆಪ್ತಭಾವ ಒದಗಿದೆ, ಕಥಾನಕಕ್ಕೆ ಅಥೆಂಟಿಕ್ ಎನ್ನಬಹುದಾದ ಸ್ಪರ್ಶ ಸಿಕ್ಕಿದೆ. ಓದು ಸರಾಗ, ಭಾರವಿಲ್ಲದ್ದು ಮತ್ತು ಹಿತಾನುಭವವನ್ನೂ ನೀಡುವಂಥಾದ್ದು. ವಿಶ್ಲೇಷಣೆ, ಚಿಂತನೆ ಮತ್ತು ಜಿಜ್ಞಾಸೆಗೆ ವಿಶೇಷ ಒತ್ತು ಇಲ್ಲದಿದ್ದರೂ ಒಂದು ಜೀವನ ಕ್ರಮದ ಮೌಲ್ಯಗಳು, ಪಾತ್ರಗಳು, ಒಟ್ಟಾರೆ ಪರಿಸರ ಓದಿನಾಚೆಗೂ ಹಿಡಿಸುವ ಗುಂಗು ಮತ್ತು ರುಚಿ ನಿಶ್ಚಯವಾಗಿಯೂ ಅನನ್ಯವಾದದ್ದು, ಮತ್ತಷ್ಟು ಬೇಕು ಎನಿಸುವಂಥಾದ್ದು. ನಾ ಮೊಗಸಾಲೆಯವರ ಕತೆಗಳನ್ನು ಓದಿದ ಬಳಿಕ ನೆನಪಾಗುವ ಕತೆಗಾರರು ಮಾಸ್ತಿ ಮತ್ತು ಗೊರೂರು. ಮಾಸ್ತಿಯವರ ಜೀವನದೃಷ್ಟಿ, ಗೊರೂರು ಅವರ ನಿರೂಪಣೆಯ ಹಿಂದಣ ಭಾವ ಇಲ್ಲಿ ಎದ್ದು ಕಾಣುವಂತಿದೆ.

ನಾಲ್ಕನೆಯ ಸಂಕಲನದ ಎರಡನೆಯ ಭಾಗದ ಕತೆಗಳು ವಸ್ತು, ವಿನ್ಯಾಸ ಮತ್ತು ವೈಶಿಷ್ಟ್ಯದಲ್ಲಿ ತೀರ ಭಿನ್ನವಾದ ರಚನೆಗಳಾಗಿದ್ದು ಅವುಗಳನ್ನು ಈ ಮೇಲಿನ ವಿಶ್ಲೇಷಣೆಯಿಂದ ಹೊರಗಿಡುವುದು ಸೂಕ್ತ ಎನಿಸುತ್ತದೆ. ಹಾಗಾಗಿ ಅವುಗಳನ್ನು ಬೇರೆಯಾಗಿಯೇ ಅವಲೋಕಿಸಲಾಗಿದೆ.

ಮನದ ಮುಂದಿನ ಮಾಯೆ - ಸದಾನಂದ ರಾಯರ ಇನ್‌ಫ್ಯಾಚುವೇಶನ್ ಇಲ್ಲಿನ ವಸ್ತು. ನಿರೂಪಣೆ ನೇರ ಮತ್ತು ಮನಸ್ಸಿನ ತುಮುಲಗಳನ್ನು ಹಿಡಿದಿಡಲು ಬಳಸಲ್ಪಡುವ ಭೌತಿಕ ವಿವರಗಳು. ವಯಸ್ಸಾದ ವ್ಯಕ್ತಿ ತೀರ ಸಣ್ಣಪ್ರಾಯದ ಹುಡುಗಿಯಲ್ಲಿ ಅನುರಕ್ತಿಯ ಭಾವವನ್ನು ಆರೋಪಿಸಿಕೊಂಡು ಹುಟ್ಟಿಸಿಕೊಳ್ಳುವ ನಿರೀಕ್ಷೆಗಳು, ದ್ವಂದ್ವ-ತುಮುಲಗಳು, ಭ್ರಮನಿರಸನ ಅಥವಾ ಅಕ್ರಮ ಸಂಬಂಧ - ಇವು ಕನ್ನಡದ ಸಣ್ಣಕತೆಗೆ ಹೊಸದಲ್ಲ. ಆದರೆ ನಾ ಮೊಗಸಾಲೆಯವರ ಕಥನ ವಿನ್ಯಾಸಕ್ಕೆ ತೀರ ಹೊಸದು ಮತ್ತು ಈ ವಸ್ತುವನ್ನು ಅವರು ನಿಭಾಯಿಸುವ ರೀತಿ ಕೂಡ ತೀರ ವಿಶಿಷ್ಟವಾಗಿದೆ. ಈ ಸಂಕಲನಕ್ಕೆ ಮುನ್ನುಡಿ ಬರೆದಿರುವ ಡಾ. ವಾಸುದೇವ ಶೆಟ್ಟಿಯವರು ಗ್ರಹಿಸುವ ಒಂದು ಅಂಶ ಇಡೀ ಕತೆಯ ಗುರುತ್ವವನ್ನು ನಿರ್ಧರಿಸುವಲ್ಲಿ ಬಹಳ ಉಪಯುಕ್ತವಾಗಿದೆ.

"ರಾಯರ ಆಹ್ವಾನವನ್ನು ಗೀತಾ ಮೊದಲೇ ಒಪ್ಪಿಕೊಂಡು ಬಿಟ್ಟಿದ್ದರೆ? ಅವಳ ತಿರಸ್ಕಾರದಿಂದ ಅಪಮಾನಿತರಾಗಿ, ತಾವು ಸಂಭಾವಿತರೆಂದು ತೋರಿಸಿಕೊಳ್ಳಲು ರಾಯರು ಕತೆಯ ತಂತ್ರ ಹೂಡಿದರು ಎಂದು ಅನುಮಾನಿಸುವುದಕ್ಕೆ ಸಾಕಷ್ಟು ಅವಕಾಶಗಳು ಕತೆಯಲ್ಲಿದೆ. ಹೀಗಾಗಿ ಕಾವ್ಯದ ಭಾಷೆ, ದೇಹದ ಭಾಷೆ ಎಂಬುದೆಲ್ಲ ಸಾಚ ಅಲ್ಲ ಎನಿಸಿಬಿಡುತ್ತದೆ."

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು - ಅಲ್ಲಮನ ಸಂಶೋಧನಾ ಕೇಂದ್ರದಲ್ಲಿ ಸೋತ ಹಿಂದೂ ಮುಸ್ಲಿಂ ಪ್ರೇಮ, ಗೆದ್ದ ಹಿಂದೂ ಮುಸ್ಲಿಂ ಬಾಂಧವ್ಯ ಎಂದು ಸಂಕ್ಷೇಪಿಸಬಹುದಾದ ಈ ಕತೆ ಕೂಡ ಹಲವಾರು ಸೂಕ್ಷ್ಮ ಎಳೆಗಳನ್ನು ತನ್ನ ಒಡಲಿನಲ್ಲಿರಿಸಿಕೊಂಡಿರುವಂಥಾದ್ದೇ. ಆದರೆ ಆ ಎಳೆಗಳಿಗೆ ಸೂಕ್ತ ಪೋಷಣೆ ಒದಗಿಸಲಾರದ ಚೌಕಟ್ಟು ಈ ಕತೆಯದ್ದು. ಹಾಗಾಗಿ ಈ ಕತೆಯ ಹಲವು ಪಾತ್ರಗಳ ಆಂತರಿಕ ತುಮುಲಗಳು, ದುಗುಡ-ದುಮ್ಮಾನಗಳು ಸುಪ್ತವಾಗಿಯೇ ಉಳಿದುಬಿಡುತ್ತವೆ. ಮೂಲತಃ ವಿಫಲವಾಗುವ ಒಂದು ಪ್ರೇಮ ಇಲ್ಲಿದೆ. ಹಾಗೆಯೇ ಅವರು ಬೇಡ, ಇವರು ಬೇಡ ಎಂದು ಮನೆಗೆಲಸಕ್ಕೆ ಬಂದವರನ್ನೆಲ್ಲಾ ನಿರಾಕರಿಸುತ್ತಲೇ ಬಂದವರು ಕೊನೆಗೂ ಮುಸಲ್ಮಾನರ ಹುಡುಗಿಯೊಬ್ಬಳನ್ನು ಅವಳು ಮುಸಲ್ಮಾನಳೆಂದು ತಿಳಿದ ಮೇಲೂ ಸ್ವೀಕರಿಸುವುದಿದೆಯಲ್ಲಾ, ಅದರ ನೆಲೆ ಬೆಲೆಗಳಷ್ಟೇ ಕತೆಯಲ್ಲಿ ಮುಖ್ಯವಾಗುತ್ತದೆ. ಆದಾಗ್ಯೂ ಇತರೆಲ್ಲ ವಿವರಗಳ ಭರಾಟೆಯಲ್ಲಿ ಈ ಪ್ರಕ್ರಿಯೆಯ ಸೂಕ್ಷ್ಮ ಸಂವೇದನೆಗಳು ಹೆಚ್ಚಿನ ಪೋಷಣೆ ಪಡೆದಿಲ್ಲ ಎನಿಸುತ್ತದೆ.
ನೆಲ ಮುಗಿಲುಗಳ ನಡುವೆ - ಈ ಕತೆಯಲ್ಲಿ ದೈಹಿಕ ಪಾವಿತ್ರ್ಯ ಮತ್ತು ಮಾನಸಿಕ ಪ್ರೇಮ ಭಾವ ಎರಡನ್ನೂ ನಿಕಶಕ್ಕೊಡ್ಡುವ ಒಂದು ವಿದ್ಯಮಾನವಿದೆ. ರಮಾನಾಥ ಪ್ರೀತಿಸಿದ ಹುಡುಗಿ ಅವನಿಯ ನಡತೆ ಸರಿಯಿಲ್ಲ ಎನ್ನುವ ಮಾತಿಗೆ ಅವಳ ಲೈಂಗಿಕ ಸಂಬಂಧಗಳೇ ಸಾಕ್ಷಿಯಾದಾಗ್ಯೂ, ದೈಹಿಕ ಪಾವಿತ್ರ್ಯವೆಂಬುದು ಲೈಂಗಿಕತೆಯಿಂದ ಕೆಟ್ಟುಬಿಡುವುದಿಲ್ಲ ಎಂಬ ಒಂದು ನೆಲೆಯಿಂದ ನೋಡಿದರೆ ರಮಾನಾಥನದ್ದು ಶುದ್ಧ ಅಮರಪ್ರೇಮವೆಂದೇ ಹೇಳಬೇಕಾಗುತ್ತದೆ. ಇಲ್ಲಿ ರಮಾನಾಥ ತಾನೊಬ್ಬ ಮಂದಕಾಮಿ ಎಂಬ ಸಮರ್ಥನೆಯನ್ನೂ ಅವನಿಯ ನಡತೆಗೆ ಒದಗಿಸುತ್ತಿರುವುದು ಹೆಚ್ಚುವರಿ ಅತಿರೇಕದಂತೆ ಕಂಡರೆ ಅಚ್ಚರಿಯೇನಿಲ್ಲ. ಲಿವ್-ಇನ್ ಸಂಬಂಧಗಳು, ಮುಕ್ತ ಕಾಮ, ಸಲಿಂಗ ಕಾಮ, ಸಲಿಂಗಿಗಳ ವಿವಾಹ ಮುಂತಾದ ವಿಚಾರಗಳು ಚರ್ಚೆಗೆ, ಆಚರಣೆಗೆ ಬರುತ್ತಿರುವ ದಿನಗಳಲ್ಲಿ ಈ ಕತೆ ಹೆಚ್ಚು ಪ್ರಸ್ತುತ. ಆದರೆ ಇಲ್ಲಿನ ಜಿಜ್ಞಾಸೆಗೆ ಕೇವಲ ಮಂದಕಾಮದ ಕಾರಣ ಅಥವಾ ಸೈಕಾಲಜಿಯ ಸಾಧ್ಯತೆ ಎಂಬ ಷರಾ ಬೇಕಿಲ್ಲ.

ಸಂಕಲನದ ಕೊನೆಯ ಮೂರು ಕತೆಗಳು ಮಹತ್ವದ ಪ್ರಶ್ನೆಗಳನ್ನು ತಮ್ಮ ಗರ್ಭದಲ್ಲಿರಿಸಿಕೊಂಡಿದ್ದು ನಾ ಮೊಗಸಾಲೆಯವರ ಮುಂದಿನ ಕಥಾಜಗತ್ತು ಹೆಚ್ಚಿನ ವಿಸ್ತಾರ, ಆಳ ಪಡೆದುಕೊಳ್ಳುವ ಸೂಚನೆಯನ್ನು ನೀಡುವಂತಿವೆ.

ಕಿರಿಯನಾದ ನನಗೆ ಈ ಪ್ರಸ್ತಾವನೆಯನ್ನು ಬರೆಯುವ ಅವಕಾಶ ಒದಗಿಸಿದ ನಾ ಮೊಗಸಾಲೆಯವರ ಔದಾರ್ಯಕ್ಕೆ ಹೊಸ ತಲೆಮಾರು ತಮ್ಮ ಕತೆಗಳಿಗೆ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕೆಂಬ ಅವರ ಕುತೂಹಲವಷ್ಟೇ ಕಾರಣವೆಂದು ತಿಳಿದಿದ್ದೇನೆ. ಇದಲ್ಲದೆ ಈ ಹಿರಿಯರ ಕತೆಗಳ ಬಗ್ಗೆ ಮಾತನಾಡುವ ಬೇರಾವ ಅರ್ಹತೆಯೂ ನನ್ನದಲ್ಲ ಎಂಬ ವಿನಯದೊಂದಿಗೆ ಈ ಪ್ರಸ್ತಾವನೆಯನ್ನು ಮುಗಿಸುತ್ತೇನೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಸುಂದರಿಯ ಎರಡನೇ ಅವತಾರ ಮತ್ತು ಸೀತಾಪುರದ ಕತೆಗಳು

ಮೊದಲ ಸಂಕಲನ - ಸುಂದರಿಯ ಎರಡನೇ ಅವತಾರ

1. ಐಕಾರ್ನಿಯಾ - ರಂಗಪ್ಪಶೆಟ್ಟಿ - ಪಂಚಾಯಿತಿ ಅಧ್ಯಕ್ಷ. ಅಂಗಾರ - ಉಪಕೃತ, ಫಲಾನುಭವಿ. ವಿಶ್ವ - ಅಂಗಾರನ ಮಗ, ಬಂಡಾಯಗಾರ. ಬೆನ್ನೆಲುಬಿಲ್ಲದ ವ್ಯಕ್ತಿ ಮಾಸ್ತರರು, ಒಂದು ಕೃಪಾಪೋಷಿತ ಯುವಕಸಂಘ. ಮಾಸ್ತರ ಮತ್ತು ವಿಶ್ವನ ತಂಗಿಯ ಸಂಬಂಧ, ಬಿಲ್ಲವ ಸಮಾಜದ ಪ್ರಮುಖ ಕರಿಯ ಬೋಂಟ್ರ, ಜಾತಿಸಂಘದತ್ತ ಹೆಜ್ಜೆ. ಸಮಾಜದ ಸಂಕೀರ್ಣ ಚಿತ್ರ ಮತ್ತು ಹೊಸ ಹೆಜ್ಜೆ ಸಾಧ್ಯವಾಗದ ಅಸಹಾಯಕತೆ. ಲಚ್ಚುಮಿ ತಂದು ಕೊಡುವ ತಣ್ಣಗಿನ ಕಾಫಿ.
2. ಮುಖಾಮುಖಿ - ಸತೀಶ ಮತ್ತು ಅವನ ಅಕ್ಕ- ಭಾವ. ಇಬ್ಬರೂ ಅವರ ಮಗಳು ಭಾರತಿ, ಸಿರಿಲ್ ಎಂಬಾತನಲ್ಲಿ ಅನುರಕ್ತಿಯನ್ನು ಹೊಂದಿದ ಬಗ್ಗೆ ಚಿಂತಿತರು. ಸಿರಿಲ್‌ನ ವೈಚಾರಿಕತೆ. ರಾಮಾಚಾರಿಯ ಸಂತಾನ ಹೀನತೆ ಮತ್ತು ಆತನ ಪತ್ನಿ ಮೂಢನಂಬಿಕೆಗೆ ಬಲಿಯಾಗುವ ಕತೆ. ರಾಮಾಚಾರಿಯ ಮೌಢ್ಯ ಹರಿದಾಗ ಉಂಟಾಗುವ ಅತಿರೇಕಕ್ಕೆ ಸಿರಿಲ್ ಹೊಣೆಗಾರನಾಗುವ ಕತೆ.
3. ಕಿಡ್ನಿ - ಜಿಲ್ಲಾಪಂಚಾಯತ್ ಸದಸ್ಯರಾದ ಹಲಗೆಪ್ಪ ಮತ್ತು ತಗಡಪ್ಪನವರ ರಾಜಕೀಯ ಜಿದ್ದು. ಕೃಷ್ಣಯ್ಯ ತಗಡಪ್ಪನ ಅಭಿಮಾನಿ. ಹಲಗೆಪ್ಪನ ಧರ್ಮಪತ್ನಿ ಕೆಂಚಮ್ಮನ ಕಿಡ್ನಿ ಸಮಸ್ಯೆ. ಗೋವಾದ ಭಾವಮೈದುನ ಮುಕುಂದಪ್ಪ. ಅಲ್ಲಿ ಕೆಲಸಕ್ಕಿದ್ದ ಹರಿಜನ ಪರ್ದೇಶಿಯ ಮಗ ಗುಡ್ಡನ ಆಕ್ಸಿಡೆಂಟ್ ಪ್ರಕರಣ. ಕಿಡ್ನಿ ಬಳಕೆ. ಕೆಂಚಮ್ಮನ ಜಾತಿಪ್ರಜ್ಞೆ ಮತ್ತು ಗುಡ್ಡನ ತಾಯಿ ಗುಡ್ಡಿಯ ಮುಗ್ಧತೆ. ಮಾಸ್ಟ್ರು-ಸಿದ್ಧಪ್ಪ-ಕೃಷ್ಣಯ್ಯಗಳ ಪಾತ್ರ. ಪ್ರತಿಭಟನೆಯ ಕಾವು. ಕೃಷ್ಣಯ್ಯನ ದುರ್ಗಾಭವನದಲ್ಲಿ ಹರಿಜನರ ಟಿಫನ್ನು, ಅವರ ಎಂಜಲು ಪಾತ್ರೆ ತೊಳೆಯಲು ಸೋಮಾರಿ ಸಾದುವಿನ ವಿರೋಧ. ಪೋಲೀಸರಿಗೆ ಜಾಪಾಳ ಬೀಜ. ಸಭೆಗೆ ಜೇನುಹುಳಗಳ ದಾಳಿ. (ಇಲ್ಲಿ ತೇಜಸ್ವಿಯವರ ಕರ್ವಾಲೊ ಕಾದಂಬರಿಯ ಒಂದು ಪ್ರಕರಣವನ್ನು ನೆನೆಯಬಹುದು.)
4. ಅಳಿಯುವ ಮೊದಲೇ - ಕುಪ್ಪಣ್ಣಾಚಾರ್ಯ ಮತ್ತು ಡಾಕ್ಟ್ರು. ದುರ್ಗಾಭವನದ ಕೃಷ್ಣಯ್ಯ. ಕುಪ್ಪಣ್ಣಾಚಾರ್ಯನೊಂದಿಗೆ ಜಮೀನಿನ ವ್ಯವಹಾರ. ಹೈಸ್ಕೂಲಿನ ವಂತಿಗೆ. ಮೈಸೂರಿನ ಅಚ್ಯುತಾಚಾರ್ಯ. ಕುಪ್ಪಣ್ಣಾಚಾರ್ಯನಿಗೆ ನೀಡಿದ್ದ ಹತ್ತು ಸಾವಿರದ ಸಾಲ, ಕುಪ್ಪಣಾಚಾರ್ಯರ ಜೀವನಗಾಥೆ, ಸಾಲದ ಮರುಪಾವತಿಯಲ್ಲಿ ತತ್ವ.
5. ಸುಂದರಿಯ ಎರಡನೇ ಅವತಾರ - ಊರಿನ ಡಾಕ್ಟ್ರು. ರಂಗಪ್ಪಯ್ಯ ಮಾಸ್ಟ್ರು ಮತ್ತು ಸುಂದರಿಯ ಸಂಬಂಧ. ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಧನಿಕನ ಮಗನಿಂದ ನಡೆದ ಬಲಾತ್ಕಾರ. ವೈದ್ಯರ ಸಹಾಯ, ಬೆಂಬಲ. ಕೋರ್ಟ್ ಕೇಸಿನಲ್ಲಿ ತಾಲೂಕು ವೈದ್ಯಾಧಿಕಾರಿಯ ನುಣುಚಿಕೊಳ್ಳುವಿಕೆ. ತಾಲೂಕು ಪಂಚಾಯಿತಿ ಅಧ್ಯಕ್ಷ ಚೆಂಗಪ್ಪನ ನಿಲುವು. ರಂಗಪ್ಪಯ್ಯ ಮಾಸ್ಟ್ರ ಹಿಂಜರಿಕೆ. ಸುಂದರಿಯಿಂದ ಧರ್ನಪ್ಪನ ಗರ್ವಭಂಗ.
6. ಹಸಿದ ವೇಳೆಗೆ ಸಿಕ್ಕಿದೊಡವೆಯ... ತಬುರ - ಕೃಷ್ಣಯ್ಯ- ವಿಲೇಜ್ ಅಕೌಂಟೆಂಟ್ ಸುಂದ್ರಪ್ಪನ ಲಂಚದ ಪ್ರಕರಣ. ಉಸನೆ ಸಮಾರಾಧನೆ - ಭ್ರಷ್ಟ ರುದ್ರಪ್ಪ-ಪ್ರಾಮಾಣಿಕ ಅಧಿಕಾರಿ ಶಾಂತಾರಾಮಯ್ಯ- ವೆಂಕಪ್ಪ ಮತ್ತು ಗಿರಿಜಾ ಸಂಬಂಧದ ನಡುವೆ ಮತ್ತೊಬ್ಬ! ತಿಮ್ಮಪ್ಪ ಪೂಜಾರಿಯ ಮಗ ವಿಶ್ವನಾಥನ ವಿದ್ಯುತ್ ಸಂಪರ್ಕ ಪಡೆವ ಹರಸಾಹಸ - ಜಾನ್ ಡಿಸಿಲ್ವರಿಗೆ ಕೊಟ್ಟ ಲಂಚದ ರಿಕವರಿ ಮುಖ್ಯವೆಂದುಕೊಂಡ ತಬುರ - ರುದ್ರಪ್ಪನ ಕುತಂತ್ರ ಮತ್ತು ಲಂಚದ ಪ್ರಕರಣ - ಮನ ಪರಿವರ್ತನೆಗೊಂಡ ತಬುರನ ಒಪ್ಪಿಗೆ (ವಿದ್ಯುತ್ ಸಂಪರ್ಕಕ್ಕೆ) ನಿಷ್ಪ್ರಯೋಜಕಗೊಂಡದ್ದು.
7. ಹದ್ದು - ಕುಪ್ಪಣ್ಣಾಚಾರ್ಯ-ಮಗಳು ಹರಿಜನ ಡ್ರೈವರ್ ಮಗ ಡೀಕಯ್ಯನ ಜೊತೆ ಮದುವೆಯಾಗಿ ಮನೆಬಿಟ್ಟು ಹೋಗುವುದು, ಆತನ ಯಜಮಾನ, ದೊಡ್ಡ ರಾಜಕಾರಣಿ, ಭಾರೀ ಶ್ರೀಮಂತ ದುಗ್ಗೇಗೌಡರು - ಮುಂಬಯಿಯ ಇನ್ನೊಬ್ಬ ಶ್ರೀಮಂತ ಮಾರಪ್ಪ ಶೆಟ್ಟಿ- ಪಂಚಾಯಿತಿ ಚುನಾವಣಾ ಕಣ - ಅಧಿಕಾರವನ್ನು ತಮ್ಮ ಕೈಯಲ್ಲೇ ಹಿಡಿದಿಟ್ಟುಕೊಳ್ಳಲು ಸಾಮಾನ್ಯ ಅಥವಾ ಪರಿಶಿಷ್ಟವರ್ಗದ ಮಹಿಳೆಗೆ ಪಂಚಾಯಿತಿ ಅಧ್ಯಕ್ಷಸ್ಥಾನ ಮೀಸಲು ಎಂಬ ನಿಯಮವನ್ನು ಬಳಸಿಕೊಳ್ಳಲು ನಡೆಸುವ ಹುನ್ನಾರ - ರಮ್ಯ (ಕುಪ್ಪಣ್ಣಾಚಾರ್ಯರ ಮಗಳು ಬ್ರಾಹ್ಮಣಿ/ಹರಿಜನ) ಮತ್ತು ಕುಪ್ಪಣ್ಣಾಚಾರ್ಯರ ಹೆಂಡತಿ (ಬ್ರಾಹ್ಮಣಿ) ನಡುವೆ ಹುಟ್ಟಿಕೊಳ್ಳುವ ಜಿದ್ದು.

ಎರಡನೆಯ ಸಂಕಲನ - ಸೀತಾಪುರದ ಕತೆಗಳು
8. ಇದು ನೀವೇ ಕೊಟ್ಟ ತೀರ್ಪು, ದೇವರೇ! - ನಾಗಬೀದಿ - ಪಂಚಾಯಿತಿ ಅಧ್ಯಕ್ಷ ಶೇಕಬ್ಬ - ಅಂಬೇಡ್ಕರ್ ಕಾಲೊನಿಯಲ್ಲಿ ಶೌಚಾಲಯ ನಿರ್ಮಾಣದ ಸಮಸ್ಯೆ- ನರಂಗ - ಎದುರಾಳಿ ಪಕ್ಷದ ತಿಮ್ಮಪ್ಪಯ್ಯನ ರಾಜಕೀಯ-ಮಧ್ವರಾಯ ಭಟ್ಟರ ಮಾತು - ನಾಗಪಾತ್ರಿಯ ಸೂಚನೆ - ಮಧ್ವರಾಯಭಟ್ಟರು ಕುಪ್ಪಣ್ಣಯ್ಯನವರ ಬಳಿ ಬಿಚ್ಚಿಕೊಡುವ ಗುಟ್ಟುಗಳು
9. ಲಂಗೋಟಿಯ ನ್ಯಾಯಪ್ರಕರಣ ಎಂಬ ಕಥಾವಾಚಕವು - ನಾರ್ಣಪ್ಪನ ಮಗ ತಿಮ್ಮಪ್ಪ ಮಂಜಯ್ಯನಿಗೆ ಅರ್ಪಿಸಿದ ಬಾಷ್ಪಾಂಜಲಿಯ ಹಿನ್ನೆಲೆ - ಚಡ್ಡಿ ದೋಸ್ತ ಮುಂದಿಲ ವಾಸುದೇವ-ನಿರೂಪಕನ ಫೋನ್ ಸಂಭಾಷಣೆ-ಮುಕ್ತ ಧಾರಾವಾಹಿ - ಹಿಂದುಳಿದ ವರ್ಗದಿಂದ ಬಂದ ಮೇಸ್ತ್ರಿ ಮಂಜಯ್ಯ ಮತ್ತು ಒಕ್ಕಲಿಗ ಜಾತ್ಯಸ್ಥ ನಾರ್ಣಪ್ಪ. ಮಂಜಪ್ಪನ ಮಗಳು ಕುಸುಮ, ಅವಳ ಗಂಡ ಸುಂದರ. ನಾರ್ಣಪ್ಪನ ಹೆಂಡತಿ ಶಾಂತ ಮಂಜಯ್ಯನ ಹೆಂಡತಿ ಪದ್ದು ಜೊತೆ ಆಡಿದ ಲಂಗೋಟಿ ತೊಳೆಯಲು ಹೋಗುವ ಮಾತು.
10. ಬೀಜದೊಳಗಿನ ಬೀಜ - ನಾಗವೇಣಿ - ಸೋದರತ್ತೆ ಭಾಗೀರಥಿ - ಮಾವ ಗೋಪಾಲಾಚಾರ್ಯ - ಉಡುಪಿ ಮಠದ ಚೌಕಿಯ ಊಟ - ಅಡಿಗೆಯ ಚಂಕಣ್ಣ - ಗೋಪಾಲಾಚಾರ್ಯರು ಸಾಕಿ ಬೆಳೆಸಿದ ರಾಮಚಂದ್ರನ ಕತೆ - ಚಂಕಣ್ಣನ ಪೀಠಿಕೆ ಮತ್ತು ಅದಕ್ಕೆ ಹೆದರಿದ ಗೋಪಾಲಾಚಾರ್ಯರು - ಚಂಕಣ್ಣನ ಚಾಂಚಲ್ಯ- ಬಾಳೆಗದ್ದೆ ಸುಬ್ರಾಯರು - ಚಂಕಣ್ಣ-ಯಮುನ ದಾಂಪತ್ಯ - ಯಶೋದ-ಸುಬ್ರಾಯರ ದಾಂಪತ್ಯ. ಚಂಕಣ್ಣನ ದಾಂಪತ್ಯದಲ್ಲಿ ಮನಸ್ತಾಪ - ಸುಬ್ರಾಯರ ಕಚ್ಚೆ ಹರಕುತನ ಮತ್ತು ಯಶೋದೆಯ ನಡತೆಯ ವ್ಯಾಖ್ಯಾನ. ( ಈ ಕತೆಗೂ ನಾಲ್ಕನೆಯ ಸಂಕಲನದಲ್ಲಿನ "ಭಾಷೆ ಎಂಬುದು ಪ್ರಾಣಘಾತುಕ" ಎಂಬ ಹೆಸರಿನ ಕತೆಗೂ ಇರುವ ಸಾಮ್ಯ ಗಮನಾರ್ಹ)
11. ಮಾಯೆ ಅಲ್ಲದ ಮಾಯೆ - ಭೀಮಸೇನಾಚಾರ್ಯರು - ಬಾಳುಭಟ್ಟರ ಅಂಗಡಿ - ವೈದಿಕದ ಬಿಲ್ಲು ಪಾವತಿ - ಸಹೋದರ ಹನುಮಂತಾಚಾರ್ಯರು - ಅವರನ್ನು ನೋಡಲು ಬಂದ ರಾಜಗೋಪಾಲಯ್ಯ - ಶುದ್ಧಾದ್ವೈತಿ ವಲ್ಲಭಾಚಾರ್ಯರ ಮಠ, ಶಿಷ್ಯಪರಂಪರೆ, ಕೈಬರಹದ "ತತ್ವ ಚಿಂತನಂ" ಎಂಬ ಗ್ರಂಥ ಕಾಣೆಯಾಗುವುದು - ಅದನ್ನು ಹಣಕ್ಕೆ ವಿದೇಶೀಯರಿಗೆ ಮಾರಲಾಗಿದೆ ಎಂಬ ಭೀಮಸೇನಾಚಾರ್ಯರ ಆವೃತ್ತಿ. ತದನಂತರ ಭೇಟಿಯಾಗುವ ಹನುಮಂತಾಚಾರ್ಯರ ಕಾಯಿಲೆ, ಯಶೋದಮ್ಮನವರಿಂದ ಸಿಗುವ ವಿವರಣೆ, ಅಂಜನದ ಕತೆ. ರಾಜಗೋಪಾಲಯ್ಯನವರ ರಾಮಬಾಣ ಮತ್ತು ಕೊನೆಯಲ್ಲಿ ಸೀತಾಪುರದಿಂದ ಬಂದ ಪತ್ರದಲ್ಲಿ ಕಾಣಿಸಿಕೊಂಡ ಪರಿಹಾರ.
12. ಬಿಜಾಗರಿ - ಅರ್ಚಕ ರಾಮಭಟ್ಟರ ಮಗನ ಮದುವೆಗೆ ಒಬ್ಬರೇ ಬಂದ ನಿವೃತ್ತ ಮುಖ್ಯೋಪಾಧ್ಯಾಯ ಸೀತಾರಾಮಯ್ಯ - ನಾಸ್ಟಾಲ್ಜಿಯಾ - ಕುಟುಂಬದ ಮನೆ,ಆಸ್ತಿ ಖರೀದಿಸಿದ್ದ ಹಸನಬ್ಬನ ಭೇಟಿ-ಅವನ ಮನೆಗೆ ಪ್ರಯಾಣ- ತಮ್ಮದೇ ಮನೆಯನ್ನು ಅವನಿರಿಸಿಕೊಂಡ ಬಗೆ ನೋಡಿ ಕಾಡಿದ ಮೋಹ - ಪದ್ಮಾವತಮ್ಮನವರ ಜೊತೆ ಹಂಚಿಕೊಳ್ಳುವುದು - ಮಗ ಶ್ರೀಧರನ ಪ್ರಾಕ್ಟಿಕಲ್ ಮನೋಧರ್ಮ - ಬಿಜಾಗರಿ ಕಳಚಿಕೊಂಡ ಬಚ್ಚಲ ಬಾಗಿಲು - ಭೇಟಿ ಕೊಟ್ಟ ಅರ್ಚಕ ರಾಮಭಟ್ಟ ದಂಪತಿಗಳು - ದೇವಕಿಯಮ್ಮನ ಮೇಲೆ ಬೀಳುವ ಬಿಜಾಗರಿ ಇಲ್ಲದ ಬಾಗಿಲು - ಎದ್ದ ರಂಪ - ವೃದ್ಧ ದಂಪತಿಗಳ ನಿರ್ಧಾರ - ಮಗನ ಸಮಜಾಯಿಸಿ - ಅರ್ಥಮಾಡಿಕೊಂಡು ಒಟ್ಟಿಗೆ ಬದುಕುವ ಕುಟುಂಬ.
13. ಹರಕೆಯ ಕೋಳಿ - ನಾಗಪ್ಪ ದಂಪತಿಗಳಿಗೆ ಕತೆ ಹೇಳುವ ಕುಪ್ಪಣ್ಣಯ್ಯ - ಶೀನಶೆಟ್ಟರು - ಎರಡು ಮಾರಿಗುಡಿಗಳ ಕಾಲ - ಮಾರಿಗೆ ಬಲಿಕೊಡಲೆಂದೇ ಹುಟ್ಟಿದ ಚಂದಯ್ಯ-ಕಾಂತಪ್ಪ ಕುಟುಂಬಗಳ ಅವಳಿ ಜವಳಿ ಕೋಳಿಗಳು - ನಾಪತ್ತೆಯಾದ ಒಂದು ಕೋಳಿಗಾಗಿ ಹುಟ್ಟಿಕೊಂಡ ಜಗಳ - ಮಂಗನ ನ್ಯಾಯದ ಕ್ರಮದಲ್ಲಿ ಜಗಳ ಪರಿಹರಿಸುವ ಶೀನಶೆಟ್ಟರ ರಾಜಕೀಯ - ತನಿಯಪ್ಪನ ಮಾತಿಗೆ ಸಿಕ್ಕಿಕೊಂಡ ಪದ್ದು ತೆರೆದಿಟ್ಟ ಹುನ್ನಾರದ ವಿವರ.
14. ಕೋಟಿಲ್ಲದ ಕೋರ್ಟು - ಜ್ವರದಿಂದಾಗಿ ತೆಗೆಯದ ಗಡ್ಡ - ಕ್ಷೌರಕ್ಕೆ ಮನೆಗೇ ಬರುವ ಫಕೀರನ ಮಗ. ಬದಲಾದ ಕಾಲಮಾನ. ಫಕೀರ ಭಂಡಾರಿ ನ್ಯಾಯದಾನಕ್ಕೆ ಪೂರಕನಾದ ಕತೆ. ಫಕೀರ ತಿಮ್ಮರಾಯ ಹೆಗ್ಡೆ ಅವರ ಗೇಣಿ ಒಕ್ಕಲು. ಪಂಚಾಯಿತಿ ಇಲ್ಲದ ಸೀತಾಪುರ - ನ್ಯಾಯ ತೀರ್ಮಾನ ನಡೆಯುವ ತಿಮ್ಮರಾಯ ಹೆಗ್ಡೆ ಚಾವಡಿ - ನ್ಯಾಯ ತೀರ್ಮಾನದ ವಿಧಾನ - ಚಾವಡಿಯ ಪಂಜುರ್ಲಿ ಭೂತದ ತೀರ್ಪು - ಉಪಪತ್ನಿ ಗಿರಿಜ - ಪೇಟೆಯಲ್ಲೇ ನೆಲೆಯಾದ ಹೆಗ್ಡೆಯವರು - ನ್ಯಾಯತೀರ್ಮಾನಕ್ಕೆ ಮಧ್ಯವರ್ತಿಗಳ ಮೇಲೆ ಅವಲಂಬನ - ಅವರ ಸ್ವಹಿತಾಸಕ್ತಿಗಳು - ಫಕೀರ ಭಂಡಾರಿಯ ಪರ್ಯಾಯ ವ್ಯವಸ್ಥೆ - ಭಂಡಾರಿಯ ಕಷ್ಟನಷ್ಟಗಳು - ಗಿರಿಜಮ್ಮನ ಔದಾರ್ಯ.
15. ಪುರುಷಾರ್ಥ - ಮಾಬ್ಲಯ್ಯ - ಅನಂತ ಭಟ್ಟರು - ಕಷಾಯದ ವಿವರ - ಅನಂತ ಭಟ್ಟರ ಮಾತುಗಳಲ್ಲಿ ಬರುವ ಮಾಬ್ಲಯ್ಯನವರ ಪರಿಚಯ - ಕಾಸರಗೋಡಿನಿಂದ ಬಂದು ನೆಲೆಯಾದ ಗೋಪಾಲಯ್ಯನವರ ಜನಪ್ರಿಯತೆಯ ಪ್ರಖರತೆ - ಮಾಬ್ಲಯ್ಯ ಅನಂತ ಭಟ್ಟರನ್ನು ಬಿಟ್ಟು ಗೋಪಾಲಯ್ಯನವರ ಹಿಂಬಾಲಕನಾದದ್ದು - ನಿಧನರಾದ ಯಕ್ಷಗಾನದ ಭೀಷ್ಮ ಗೋಪಾಲಯ್ಯ - ಸಂಸ್ಮರಣಾ ಕಾರ್ಯಕ್ರಮ ಮತ್ತು ಪುರುಷಾರ್ಥ ಸಂಸ್ಥೆಯ ಉದ್ಭಾಟನೆ - ಅನಂತಭಟ್ಟರ ವೃತ್ತಿಪರ ಈರ್ಷ್ಯೆ- ಅವಮಾನದ ಭಾವ-ಮೇಲು-ಕೀಳಿನ ಜಿದ್ದಾಜಿದ್ದಿ - ವಾಲಿ-ರಾಮ ದ್ವಂದ್ವಯುದ್ಧದ ವಾಗ್ವಾದದಲ್ಲಿ ಪೇಜಾವರ ಸ್ವಾಮೀಜಿಗಳ ಎದುರು ರಾಮನಾಗಿ ಸೋಲುಂಡ ನೋವು - ಲೀಲಾ ಮೇಡಂ ಮಧ್ಯಸ್ತಿಕೆ - ಕಣ್ತೆರೆಸುವ ದಿವಂಗತ ಗೋಪಾಲಯ್ಯನವರ ಕ್ಯಾಸೆಟ್ ಮಾತುಗಳು
16. Go (ಗೋ)-ದಾನ - ಪಂಚಕರ್ಮಿ ವೆಂಕಟ್ರಮಣ - ಪುರೋಹಿತ ನಾರಾಯಣ ಯಾಜಿಗಳು - ವೆಂಕಟ್ರಮಣನ ಬದುಕು ನೇರ್ಪುಗೊಳಿಸಿದ ವಿವರ - ಗೋದಾನ ಹಿಡಿಯುವುದರಲ್ಲಿ ಹಿಂಜರಿಕೆಯಾದಂತಹ ಕಾಲಧರ್ಮದ ಪಲ್ಲಟಗಳು - ವೆಂಕಟ್ರಮಣನ ಬಸುರಿ ಹೆಂಡತಿಗಾಗಿ ಅಗತ್ಯಬಿದ್ದ ಹಾಲು (ಗೋವು) - ತೀರಿಕೊಂಡ ತಿಮ್ಮಣ್ಣ ಭಟ್ಟರು - ಅವರ ಇಬ್ಬರು ಮಕ್ಕಳು - ವಾಸುದೇವ ಮತ್ತು ಮಹಾಬಲ - ದನದ ಮೇಲೆ ಕಣ್ಣು - ಎಲ್ಲಿಲ್ಲದ ಮಹತ್ವ ಪಡೆದ ಗೋದಾನದ ವಿಚಾರ - ದೇಶೀಯ ತಳಿ ಸಾಕುವಂತೆ ಮಕ್ಕಳ ಮನವೊಲಿಸಲಾರದೇ ಹೋದ ತಿಮ್ಮಣ್ಣ ಭಟ್ಟರು - ಯಾಜಿಗಳು ಹಿಡಿದ ದಾನವಸ್ತುಗಳ ವಿಲೇವಾರಿ ಸೂತ್ರ - ಹಣ ತಗೊಂಡು ದನ ಮರಳಿಸಿ ಎಂದು ಕೇಳಿದ ತಿಮ್ಮಣ್ಣಭಟ್ಟರ ಮಕ್ಕಳು - ಸಾಯುವ ಮೊದಲು ತಿಮ್ಮಣ್ಣಭಟ್ಟರು ಕೊಟ್ಟಿದ್ದ ಪತ್ರ - ದನ ಇಲ್ಲದೇನೆ ಪರಿಹಾರಗೊಂಡ ವೆಂಕಟ್ರಮಣನ ಹಾಲಿನ ಸಮಸ್ಯೆ.
17. ಪ್ರಭುಸಮ್ಮಿತ - ಮಂಗಳೂರಿಗೆ ತಂಗಿಯ ಮಗಳ ಮದುವೆಗೆ ಹೋಗಿದ್ದ ಕೃಷ್ಣ ಶೆಟ್ಟಿ ಹಣ ಕಳೆದುಕೊಂಡು ಕಂಗಾಲಾದಾಗ ಹಿಂದಿನ ಒಡೆಯರ ಮಗ ನಡೆಸಿಕೊಂಡ ಬಗೆ ಮತ್ತು ಅದಕ್ಕೆ ಕಾರಣವಾದ ಕೃಷ್ಣಶೆಟ್ಟಿಯ ಅಪ್ಪನ ಒಳ್ಳೆಯತನ. ಹಿನ್ನೆಲೆ: ರಾಜುಶೆಟ್ಟಿ - ರಂಗಣ್ಣಾಚಾರ್ಯರು - ಶೇಷಗಿರಿ ಪ್ರಭು - ಭೂಮಸೂದೆ. ಈಗಿನ ಕೃಷ್ಣಶೆಟ್ಟಿಯ ಕಾಲ = ಶೇಷಗಿರಿ ಪ್ರಭುಗಳ ಮಕ್ಕಳ ಕಾಲ - ಶಾಂತಾರಾಮ ಪ್ರಭುಗಳು ಹೇಳಿದ ಕೃಷ್ಣಶೆಟ್ಟಿಯ ತಂಗಿಯ ಕತೆ - ತಾನು ಕಳೆದುಕೊಂಡಿದ್ದು ಐದು ಸಾವಿರ ಎಂದು ಸುಳ್ಳು ಹೇಳಿ, ಅಷ್ಟನ್ನು ಪಡೆದು, ಅದರಲ್ಲೂ ಮೂರು ಸಾವಿರ ತಾನು ಒಳಹಾಕುವ, ಸುಳ್ಳು ಹೇಳುವ ಕೃಷ್ಣಶೆಟ್ಟಿಯ ಭಂಡತನ.
18. ಮಾತು ಕತೆಯಾದ ಕತೆ - ಪತ್ರದ ನಿರೀಕ್ಷೆ, ಮದುವೆ ಆಮಂತ್ರಣ - ಮದುವೆ ಮನೆಯಲ್ಲಿ ಭೇಟಿಯಾಗುವ ಸೀತಾಪುರದ ಈಶ್ವರ ಭಟ್ಟರು - ಸೀತಾಪುರದ ಮೈಂದಪ್ಪನವರ ತೋಟದಲ್ಲಿ ಬಾವಿಗೆ ಬಿದ್ದ ಹುಲಿ - ಮೈಂದಪ್ಪನ ರಥ ಹೊರಡುವ ಸದ್ದು - ಹುಲಿಗಳಿಗೆ ವಿಷವಿಕ್ಕಿದ ಕತೆ - ಮೈಂದಪ್ಪನನ್ನು ಬೋನಿಗೆ ಹಿಡಿದು ಹಾಕಿದ ಹೆಣ್ಮಗಳ ಕತೆ. ಗುಡ್ಡನ ಎರಡನೇ ಹೆಂಡತಿಯಲ್ಲಿ ಹುಟ್ಟಿದ ಮಗಳು ಕಾವೇರಿ ಮೈಂದಪ್ಪನಿಗೆ ಬುದ್ಧಿ ಕಲಿಸಿದ್ದು. ( ಈ ಕತೆಗೂ ಮೂರನೆಯ ಕಥಾಸಂಕಲನದ ಕೊನೆಯ ಕತೆ "ಚಾರಣ" ಕ್ಕೂ ಇರುವ ಸಾಮ್ಯ ಗಮನಾರ್ಹ.)
19. ಒಳಗಿದ್ದವಳು(ನು) - ಶ್ರೀಮಠದ ಮ್ಯಾನೇಜರ್ ರಾಮ ಐತಾಳ - ಹೆಂಡತಿ ಲಕ್ಷ್ಮಿ - ಗೆಳತಿ ಅನಸೂಯ - ಅವಳ ಗಂಡ ಹಾಡುಗಾರ ಗಿರಿಧರ ಎಳಿಚಿತ್ತಾಯ - ಪತ್ರ ಹೆಂಡತಿಯ ಹೆಸರಿಗೆ ಬರುವುದೆಂದರೇನು ಎಂಬಲ್ಲಿಂದ ಒಂದು ಕಾರ್ಯಕ್ರಮಕ್ಕೆ ಪತ್ನಿ ಸ್ವತಂತ್ರವಾಗಿ ಹೋಗಿ ಬರುವ ವಿದ್ಯಮಾನ, ಅವಳ ಗೆಳತಿಯರೊಂದಿಗಿನ ವ್ಯವಹಾರದಲ್ಲಿ ಮೂಗು ತೂರಿಸುವ ಗಂಡಂದಿರ ವ್ಯವಹಾರ ಮುಂತಾಗಿ ಒಟ್ಟಾರೆ ಪುರುಷ ಪ್ರಧಾನ ಕುಟುಂಬದಲ್ಲಿ ಸ್ತ್ರೀಯ ಸ್ಥಾನಮಾನದ ಪ್ರಶ್ನೆ ಕತೆಯುದ್ದಕ್ಕೂ ಜೀವಂತ. ಗಂಡ - ಗೆಳತಿ - ಗೆಳತಿಯ ಗಂಡ -ಮೂವರಲ್ಲಿ ಯಾರು ಸರಿ, ಯಾರು ತಪ್ಪು ಎಂಬ ಪ್ರಶ್ನೆಯೊಂದಿಗೆ ತುಯ್ಯುವ ತುಮುಲದಲ್ಲೇ ಲಕ್ಷ್ಮಿಯ ಮುಗ್ಧತೆ, ಪ್ರಾಮಾಣಿಕತೆಗಳು ರಾಮ ಐತಾಳರ ನಡತೆಯನ್ನು ಒರೆಗೆ ಹಚ್ಚುವ ತಂತ್ರ. ಹೋಗಬೇಕೆ ಬೇಡವೆ ಎಂಬ ಪ್ರಶ್ನೆಯೇ ಕತೆಯ ಬಹುಭಾಗವನ್ನು ಆವರಿಸಿರುವುದು. ರಾಮ ಐತಾಳರ ಬೆನ್ನುನೋವು, ಗಿರಿಧರ ಮದುವೆ ಮನೆಯಲ್ಲಿ ಐತಾಳರನ್ನು ವಿಚಾರಿಸದಿರುವುದು, ಅನಸೂಯಳನ್ನೇ ಬೋಳೆ ಎಂದು ಭಾವಿಸುವ ಲಕ್ಷ್ಮಿ - ಬಳೆ ಒಡೆದುಕೊಂಡು ಪ್ರತಿಭಟನೆಯ ಕಹಳೆಯೂದುವ ಲಕ್ಷ್ಮಿ.
20. ಈ ಕತೆ ಸುಮ್ಮನೇ ಅಲ್ಲ - ಗ್ರೆಗರಿ ಕ್ರಾಸ್ತರು - ರಾಮ ಕಾರಂತರು - ಶ್ರೀನಿವಾಸಯ್ಯ ಮತ್ತು ನಾಗಿಣಿ ಟೀಚರರ ಪ್ರೇಮ ಪ್ರಸಂಗ - ಪ್ರೇತ ಬಾಧೆ, ನಿವೃತ್ತ ಮುಖ್ಯೋಪಾಧ್ಯಾಯ ರಾಮರಾಯರ ಮಗ ಆದರ್ಶ - ಕ್ಲಾಸುಗಳ ನಡುವೆ ಅಧ್ಯಾಪಕರ ಕೊಠಡಿಯಲ್ಲಿ ನಡೆಯುವ ಸಂಭಾಷಣೆಯಲ್ಲಿ, ಫ್ಲ್ಯಾಶ್ ಬ್ಯಾಕುಗಳಲ್ಲಿ ಮುಂದೆ ಸಾಗುವ ಕತೆ. ರಾಮರಾಯರ ಜೊತೆ ವಿದ್ಯಾರ್ಥಿ ಜೀವನದಲ್ಲಿ ಅಸಮಾಧಾನ ಹುಟ್ಟಿಸಿದ ಆದರ್ಶನ ಕುರಿತ ಚರ್ಚೆ - ವಿಚಾರವಾದಿ ಸಂಘದ ಅಸ್ತಿತ್ವ-ಭಾಷಣ - ಪೋಲೀಸ್/ಅರಣ್ಯ ಇಲಾಖೆ/ಪಂಚಾಯತ್ ಅಧ್ಯಕ್ಷರು ಎಲ್ಲರ ಜೊತೆ ಚರ್ಚಿಸಿದರೂ ಸಿಗದ ಸಹಕಾರ/ಬೆಂಬಲ, ಧರ್ನಪ್ಪನ ಪ್ರೇತವೊ ನಕ್ಸಲ್ ಸಮಸ್ಯೆಯೋ? ಆದರ್ಶನಿಗೆ ಬಿದ್ದ ಕನಸು ಮತ್ತು ರಾಮರಾಯರು ಮಗನಿಗೆ ಬೆಂಬಲ ಸೂಚಿಸಿದ್ದು.
21. ಅಪ್ಪ ಅಮ್ಮನ ಪುಣ್ಯ - ಗೆಣಪಣ್ಣ (ಗಣಪತಿಯಣ್ಣ) ಕಾಶಿಯಾತ್ರೆಗೆ ಹೊರಟವ, ಅದನ್ನು ರದ್ದು ಮಾಡಿ ಆ ಹಣವನ್ನೆಲ್ಲ ಮುಳಿಮನೆಗೆ ಬೆಂಕಿ ಬಿದ್ದು ಎಲ್ಲವನ್ನೂ ಕಳೆದುಕೊಂಡ (ನಡತೆಗೆಟ್ಟವಳೆಂಬ ಗುಸುಗುಸು ಇರುವ) ನತ್ತಲಾಬಾಯಿಗೆ ಕೊಟ್ಟು ಬಿಟ್ಟ ಸುದ್ದಿ - ಪಂಜಿಗದ್ದೆ ಭೀಮಣ್ಣ ಕೊಡುವ ಸುದ್ದಿ - ಗೋವಿಂದಯ್ಯ ಕ್ರಮೇಣ ಚೆಂಡೆ ಗೋವಿಂದಯ್ಯನಾದ ಕತೆ. ನತ್ತಲಾಬಾಯಿ - ಮೊಂತೆರೋ ದಂಪತಿಗಳು. ಕಳ್ಳಭಟ್ಟಿ ವ್ಯವಹಾರ - ಶರಾಬು ಗುತ್ತಿಗೆಯ ಗಂಗಣ್ಣನ ವೈರ. ಮೊಂತೆರೊ ಬಂಧನ - ಬಿಡಿಸಲು ತ್ಯಾಂಪಣ್ಣ ಶೆಟ್ಟರ ಸಹಾಯ. ಗಂಗಣ್ಣನಿಗೆ ಶರಾಬು ಪೂರೈಸುತ್ತಿದ್ದ ಜೀಪಿಗೆ ಬಲಿಯಾದ ಮೊಂತೆರೊ - ಅತ್ತೆ ಮೇರಿಯ ಪಕ್ಷಾಘಾತ. ಚೆಂಡೆ ಗೋವಿಂದಯ್ಯನಿಗೆ ತಬ್ರಿಕೆರೆ ತಂತ್ರಿಗಳ ಪ್ರಶ್ನೆ. ಗೆಣಪಣ್ಣನ ಭೇಟಿಗೆ ಹೊರಟು-ನಿಂತು-ಹೊರಟು-ನಿಂತು ಸಂದಿಗ್ಧ ಎದುರಿಸುವ ಗೋವಿಂದಯ್ಯ. ಗೆಣಪಣ್ಣನ ಪತ್ನಿಯ ಜೊತೆ ಮಾತೆತ್ತುವ ಗೋವಿಂದಯ್ಯ - ಮಾತಲ್ಲೇ ಜಾಡಿಸುವ ಪ್ರೇಮಕ್ಕ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ನಾ ಮೊಗಸಾಲೆಯವರ ಇದುವರೆಗಿನ ಕತೆಗಳು

ನಾ ಮೊಗಸಾಲೆಯವರ ಇದುವರೆಗಿನ ಕತೆಗಳ ಈ ಸಂಕಲನಕ್ಕೆ ಹೆಸರು ಆರಿಸುವಾಗ ಸೀತಾಪುರದಲ್ಲಿ ಎಲ್ಲವೂ ಕತೆಯೇ, ಹಾಗಾಗಿ ಇಲ್ಲಿ ಕತೆಗಳು ಅನ್ನೋದು ಇಲ್ಲ, ಸೀತಾಪುರವೇ ಒಂದು ಅಮರ-ಅಕ್ಷಯ ಕಥಾಕೋಶ ಎಂಬರ್ಥದಲ್ಲಿ ಸೀತಾಪುರದಲ್ಲಿ ಕತೆಗಳಿಲ್ಲ ಎಂಬ ಹೆಸರನ್ನು ಅವರು ಆರಿಸಿದರು. ಮೊಗಸಾಲೆಯವರ ಜೀವನದೃಷ್ಟಿಯನ್ನೂ, ಸೀತಾಪುರವನ್ನು ಅವರು ಎಷ್ಟು ಗಾಢವಾಗಿ ಧರಿಸಿದ್ದಾರೆಂಬುದನ್ನೂ ಸ್ಪಷ್ಟಪಡಿಸುವ ಮಾತಿದು. ಕಾರಂತರು ತಮಗೆ ಕಾದಂಬರಿಗಳಲ್ಲಿ ಹೇಳಬೇಕನಿಸಿದ್ದನ್ನು ತೋಡಿಕೊಳ್ಳುವುದು ಮುಖ್ಯವೇ ಹೊರತು, ತಂತ್ರ-ವಸ್ತು ಇತ್ಯಾದಿಯಲ್ಲ, ತಾವು ಆ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಂಡುದಿಲ್ಲ ಎಂಬರ್ಥದ ಮಾತನ್ನು ಆಡಿದ್ದರು. ಮೊಗಸಾಲೆಯವರು ಆಡದೆಯೂ ಮಾಡಿದ್ದು ಅದನ್ನೇ. ಅವರಿಗೆ ಕತೆ ಬೇರೆಯಲ್ಲ, ಬದುಕು ಬೇರೆಯಲ್ಲ. ಅವರಿಗೆ ಬದುಕು ಬೇರೆಯಲ್ಲ, ಅದನ್ನು ಹಂಚಿಕೊಳ್ಳುವ ಮಾತು ಬೇರೆಯಲ್ಲ. ಅವರಿಗೆ ಮಾತು ಬೇರೆಯಲ್ಲ, ಕತೆ ಬೇರೆಯಲ್ಲ. ಬದುಕು, ಮಾತು ಮತ್ತು ಕತೆ - ಇವುಗಳ ನಡುವಿನ ಒಂದು ಸಂಬಂಧದ ವಿಶ್ಲೇಷಣೆ ನಡೆಸುತ್ತ ಹೋದರೆ, ಸಣ್ಣಕಥಾ ಮಾಧ್ಯಮದ ಇದುವರೆಗಿನ ಎಲ್ಲ ಪ್ರಯೋಗಶೀಲತೆ, ದೇಶ ವಿದೇಶದ ಸಾಹಿತ್ಯಾಧ್ಯಯನದಿಂದ ಅದು ಮೈಗೂಡಿಸಿಕೊಂಡ ಹೊಸತನ, ವೈಶಿಷ್ಟ್ಯ, ಕಸು ಎಲ್ಲದರ ಹಿನ್ನೆಲೆಯಲ್ಲಿಯೂ ಮೊಗಸಾಲೆಯವರ ತಾಜಾ, ಸಹಜ ಮತ್ತು ಜೀವಂತ ಮಾದರಿಯೊಂದು ನಮ್ಮನ್ನು ಸೆಳೆಯುವ ಪರಿಯಿದೆಯಲ್ಲ, ಅದರಲ್ಲಿ ಒಂದು ಅನನ್ಯತೆಯಿದೆ, ಗಹನತೆಯೂ ಇದೆ. ಅದನ್ನು ನಾವು ಸಾವಧಾನದಿಂದ ಸೂಕ್ಷ್ಮವಾಗಿ ಗಮನಿಸಬೇಕಾದ್ದಿದೆ. ಶ್ರೀಮಂತ ಸಾಹಿತ್ಯ ಸೃಷ್ಟಿಗಾಗಿ, ಶ್ರೇಷ್ಠವಾದುದನ್ನು ಸೃಜಿಸುವ ಬೌದ್ಧಿಕ ಪರಿಶ್ರಮದ ತನ್ಮಯತೆಯಲ್ಲಿ ನಾವು ಸಾಗುತ್ತಿರುವ ಹಾದಿಯೇ ಅದಕ್ಕಿರುವ ಏಕೈಕ ಮಾರ್ಗ ಎಂಬಂಥ ಪರಿಜ್ಞಾನವೇನಿದೆ, ಅದು ಬೌದ್ಧಿಕ ಕಸರತ್ತಿನ ಒಂದು ಭ್ರಮೆ ಕೂಡ ಆಗಿರಬಹುದಾದ ಒಂದು ಅನುಮಾನ, ಕೊನೆಗೆ ನಮಗೆ ಅಂಥ ಸತ್ಯವೊಂದು ಎದುರಾಗುವ ಸಾಧ್ಯತೆಯ ಹೊಳಹು ಇರಿಸಿಕೊಂಡು ಹಿಂದಿರುಗಿ ನೋಡಬೇಕಿದೆ.

ನಾ ಮೊಗಸಾಲೆಯವರ ಒಟ್ಟು ನಲವತ್ತೆರಡು ಕತೆಗಳನ್ನು ಓದುತ್ತಲೇ ನಾಲ್ಕು ಸಂಕಲನಗಳಲ್ಲಿ ಲಭ್ಯವಿದ್ದ ಇವುಗಳ ಮುನ್ನುಡಿಯನ್ನೂ ಗಮನಿಸುವ ಅವಕಾಶ ಸಿಕ್ಕಿತು. ಎಸ್.ಪಿ.ಪದ್ಮಪ್ರಸಾದ್, ಮಾಧವ ಕುಲಕರ್ಣಿ, ಎಸ್ ಆರ್ ವಿಜಯಶಂಕರ ಮತ್ತು ಡಾ ವಾಸುದೇವ ಶೆಟ್ಟಿಯವರು ಬರೆದಿರುವ ಮುನ್ನುಡಿಗಳು ವಿಸ್ತೃತ ಅಧ್ಯಯನ ಮತ್ತು ಸೂಕ್ಷ್ಮ ಸಂವೇದಿ ನೆಲೆಯಿಂದ ಬಂದಿದ್ದು ಮೊಗಸಾಲೆಯವರ ಕಥನ ವ್ಯವಸಾಯದ ಒಟ್ಟು ಪ್ರಕ್ರಿಯೆಯ ಬಗ್ಗೆ ಸಾಕಷ್ಟು ಒಳನೋಟಗಳನ್ನು ಒದಗಿಸುವಂತಿವೆ. ಈ ಮುನ್ನುಡಿಗಳನ್ನು ಗಮನವಿಟ್ಟು ವಿಶ್ಲೇಷಿಸಿದರೆ ನಮಗೆ ಮೊಗಸಾಲೆಯವರ ಕತೆಗಳ ಬಗ್ಗೆ, ಕತೆಯನ್ನು ಅವರು ಕಟ್ಟುವ ಒಟ್ಟು ಪ್ರಕ್ರಿಯೆಯ ಬಗ್ಗೆ ಒಂದು ಸಮಗ್ರ ಎನ್ನಬಹುದಾದ ನೋಟ ಲಭ್ಯವಾಗುತ್ತದೆ. ಆದರೆ ಈ ಯಾವತ್ತೂ ಮಹನೀಯರು ತಮ್ಮ ಬರಹಗಳನ್ನು ಎಲ್ಲಿಯೂ ಇದೇ ಕೊನೆಯ ಮಾತು ಎಂಬಂತೆ ಹೇಳುತ್ತಿಲ್ಲವಾಗಿ ನಾವು ಮತ್ತೆ ಮತ್ತೆ ಆ ಮಾತುಗಳನ್ನು ಚರ್ಚೆಗೊಡ್ಡಬಹುದಾಗಿದೆ, ವಿಸ್ತರಿಸಬಹುದಾಗಿದೆ ಮತ್ತು ಪ್ರಶ್ನಿಸಬಹುದಾಗಿದೆ ಎನ್ನುವುದು ಗಮನಾರ್ಹ. ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಈ ವಿಮರ್ಶಕರು ಸ್ವತಃ ವಿಮರ್ಶೆಯ ವಿನಯ ಮತ್ತು ಮಹತ್ವ ಬಲ್ಲವರಾಗಿದ್ದು ಪ್ರಸ್ತುತ ಈ ಮಾನ್ಯರ ಮಾತುಗಳು ಅಂಥ ಅವಕಾಶವನ್ನು ಓದುಗರಿಗೆ ಸ್ಪಷ್ಟವಾಗಿಯೇ ತೆರೆದಿರಿಸಿವೆ. ಹಾಗಾಗಿಯೇ ಮೊಗಸಾಲೆಯವರ ಇದುವರೆಗಿನ ಎಲ್ಲ ಕತೆಗಳನ್ನಿಟ್ಟುಕೊಂಡು ವಿಶ್ಲೇಷಿಸುವಾಗ ಈ ಎಲ್ಲ ಮುನ್ನುಡಿಗಳೂ ಮಹತ್ವದ್ದಾಗುತ್ತವೆ.

"ಸುಂದರಿಯ ಎರಡನೇ ಅವತಾರ" ಸಂಕಲನಕ್ಕೆ ಮುನ್ನುಡಿ ಬರೆದಿರುವ ಎಸ್.ಪಿ. ಪದ್ಮಪ್ರಸಾದ್ ಅವರು ಮೊಗಸಾಲೆಯವರ ಕತೆಗಳಲ್ಲಿ ಪ್ರತಿಮೆ, ಸಂಕೇತಗಳಿಗಾಗಿ ಹುಡುಕಾಟವಿಲ್ಲ, ತೀರ ಸರಳವೆಂಬಂತೆ ಆರಂಭವಾಗುವ ಕತೆಗಳು ಬಹುಮಟ್ಟಿಗೆ ಹಾಗೆಯೇ ಮುನ್ನಡೆಯುತ್ತವೆ ಎನ್ನುತ್ತಾರೆ. ಹಾಗೆಯೇ ಮುಂದುವರಿದು ಮೊಗಸಾಲೆಯವರದ್ದು ನೇರವಾಗಿ ವಸ್ತುವಿನ ಕೇಂದ್ರ ಅಥವಾ ಶಿಖರದತ್ತ ಸಾಗುವ ಕಥನ ಶೈಲಿ. ಪರಸ್ಪರ ದೂರವೆನಿಸುವ ಹಲವು ಶಿಖರಗಳನ್ನು ಸೃಷ್ಟಿಸಿ ಕೊನೆಯಲ್ಲಿ ಅವುಗಳನ್ನು ಯಾವುದೋ ಒಂದು ಸೂತ್ರದಿಂದ ಸೇರಿಸಿ ಸಂಬದ್ಧಗೊಳಿಸಿ ಕತೆಯನ್ನು ಮುಕ್ತಾಯಗೊಳಿಸುವ ಕ್ಲಿಷ್ಟ ತಂತ್ರ ಇವರಲ್ಲಿ ಕಾಣದು ಎನ್ನುತ್ತಾರೆ. ಪದ್ಮಪ್ರಸಾದ್ ಅವರು ಮೊಗಸಾಲೆಯವರ ಕತೆಗಳನ್ನು ವೈದೇಹಿ, ಬೊಳುವಾರು, ಅನಂತಮೂರ್ತಿ, ತೇಜಸ್ವಿ, ಮೋಹನ ನಾಗಮ್ಮನವರ, ಚಿತ್ರಶೇಖರ ಕಂಠಿ, ಕುಂವೀ ಅವರ ಕತೆಗಳೊಂದಿಗಿಟ್ಟು ತುಲನಾತ್ಮಕವಾದ ಒಂದು ಅವಲೋಕನವನ್ನೂ ನಡೆಸುತ್ತಾರೆ. ಈ ಸಂಕಲನದ ಹೆಚ್ಚಿನ ಕತೆಗಳು 2000ದ ಆಸುಪಾಸಿನಲ್ಲಿ ರಚಿಸಲ್ಪಟ್ಟವಾಗಿದ್ದು ಮೊಗಸಾಲೆಯವರ ಸೃಜನಶೀಲ ವಯೋಮಾನದ ಅವಧಿ ನವ್ಯದ ಉಚ್ಛ್ರಾಯದೊಂದಿಗೆ ಸಹಜವಾಗಿಯೇ ತಳುಕು ಹಾಕಿಕೊಂಡಿದ್ದ ಅವಧಿಯೇ ಆಗಿರುವುದರಿಂದ ಬಹುಶಃ ಪದ್ಮಪ್ರಸಾದ್ ಅವರ ನಿರೀಕ್ಷೆ, ಹೋಲಿಕೆಗಳು ಸ್ವಾಭಾವಿಕವಾದುವು ಎಂದೇ ಹೇಳಬಹುದು. ಆದರೆ ಇಲ್ಲಿಯೇ ನಮ್ಮ ಗಮನಕ್ಕೆ ಬರಬೇಕಾದ ಸಂಗತಿಯೆಂದರೆ, ನವ್ಯದ ಅಬ್ಬರದಲ್ಲಿ ಮೊಗಸಾಲೆಯವರಂಥ ಸಹಜ ಕಥನಕಾರರು ಕನ್ನಡ ಸಾಹಿತ್ಯಪ್ರಪಂಚದ ಅವಗಣನೆಗೆ, ತುಸುಮಟ್ಟಿಗೆ ನವ್ಯ ವಿಮರ್ಶಾ ಪದ್ಧತಿಗೆ ಒಗ್ಗದ ಬರಹಗಳಾಗಿ ಆ ನೆಲೆಯಲ್ಲಿ ತಿರಸ್ಕಾರಕ್ಕೆ ಗುರಿಯಾಗುವ ಅತಿರೇಕವೊಂದು ಸೃಷ್ಟಿಯಾಯಿತು ಎಂಬ ವಾದದಲ್ಲೂ ಹುರುಳಿದೆ ಎಂಬುದು. ನಾವು ಸಂಕೇತ, ಪ್ರತಿಮೆಗಳಿಗಾಗಿ ಮೊಗಸಾಲೆಯವರ ಕತೆಗಳಲ್ಲಿ ಹುಡುಕಾಟ ನಡೆಸುವುದಾಗಲೀ, ಇತರ ನವ್ಯ ಕತೆಗಾರರ ಜೊತೆ ಮೊಗಸಾಲೆಯವರ ಕತೆಗಳನ್ನು ತೌಲನಿಕವಾಗಿಟ್ಟು ನೋಡುವುದಾಗಲೀ ಮಾಡುವಾಗಲೇ ಒಂದು ಸಿದ್ಧ ಮಾದರಿಯ ಕಥನ ಪರಂಪರೆಯೊಳಗೆ ಮೊಗಸಾಲೆಯವರನ್ನಿಟ್ಟು ನೋಡುವ ಸನಾತನಿ ಧೋರಣೆ ತೋರಿದಂತಾಗದೆ? ಇಲ್ಲಿ ನಾವು ಮೊಗಸಾಲೆಯವರ ಕಥನದಲ್ಲಿ "ಇಲ್ಲ"ದವುಗಳನ್ನು ಗಮನಿಸುತ್ತೇವೆ, "ಇರುವ" ಅಂಶಗಳತ್ತ ಅವಗಣನೆ ತೋರುತ್ತೇವೆ ಎಂದರೆ ತಪ್ಪಾಗಲಾರದು.

ಮೊಗಸಾಲೆಯವರ ಎರಡನೆಯ ಕಥಾಸಂಕಲನ "ಸೀತಾಪುರದ ಕತೆಗಳು". ಇದಕ್ಕೆ ಮುನ್ನುಡಿಯನ್ನು ಬರೆದಿರುವಂಥ ಮಾಧವ ಕುಲಕರ್ಣಿಯವರು ಮೊಗಸಾಲೆಯವರ ಕತೆಗಳಿಗೆ ತಮ್ಮನ್ನು "ಕೊಟ್ಟುಕೊಂಡು" ಓದಿದ್ದಾರೆ, ಅಧ್ಯಯನಪೂರ್ಣವಾದ ಮುನ್ನುಡಿಯನ್ನು ಬರೆದು ಕೃತಿಗೆ ನ್ಯಾಯ ಸಲ್ಲಿಸಿದ್ದಾರೆ. "ದಕ್ಷಿಣಕನ್ನಡದ ಜೀವನವನ್ನು ಕೇವಲ ಪ್ರಾದೇಶಿಕ ಜೀವನವನ್ನಾಗಿ ನೋಡದೆ ಅದರ ನೆಲೆ-ಬೆಲೆ ಮತ್ತು ಅರ್ಥಗಳನ್ನು ಕಂಡುಹಿಡಿಯಲು ಇಲ್ಲಿಯ ಕತೆಗಳು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತವೆ. ನವೋದಯದ ನಿರೂಪಣೆ, ನವ್ಯರ ವಿಶ್ಲೇಷಣಾ ಮನೋಧರ್ಮ, ಬಂಡಾಯದ ಸಮಾಜಮುಖಿ ಧೋರಣೆ - ಇವೆಲ್ಲವುಗಳನ್ನು ಏಕತ್ರಗೊಳಿಸಿಕೊಂಡು, ಸೃಜನಶೀಲತೆಯನ್ನು ಬಲಿ ಕೊಡಲಾರೆನೆಂದು ಹಟ ತೊಟ್ಟು ಬರೆದ ಕತೆಗಳಿವು. ಅದಕ್ಕೇ ಈ ಕತೆಗಳಿಗೆ ಸದ್ಯದ ಕನ್ನಡದ ಕಥಾ ಜಗತ್ತಿನಲ್ಲಿ ವಿಶಿಷ್ಟ ಸ್ಥಾನವಿದೆ. ಪ್ರಾದೇಶಿಕತೆ ಕೇವಲ ಪ್ರಾದೇಶಿಕತೆಯಾಗಿ ಉಳಿಯದೆ, ನೆನಪುಗಳು ಕೇವಲ ಹಳಹಳಿಯ ವಸ್ತುಗಳಾಗದೆ ಅವುಗಳು ಸೃಜನಶೀಲತೆಗೆ ದೊರೆಯುವ ಜೀವನದ ಚಿಲುಮೆಗಳಾಗಿ ಈ ಕತೆಗಳಲ್ಲಿ ಮಾರ್ಪಾಡಾ"ಗುತ್ತವೆ ಎಂಬುದು ಮಾಧವ ಕುಲಕರ್ಣಿಯವರ ಅಭಿಮತ. ಇಲ್ಲಿ ಬರುವ ಪ್ರಾದೇಶಿಕತೆ, ನೆನಪುಗಳ ಹಳಹಳಿಕೆ, ನವೋದಯ-ನವ್ಯ-ಬಂಡಾಯ ಘಟ್ಟದ ಸಮನ್ವಯದ ಹದ ಕಂಡುಕೊಂಡ ಬರವಣಿಗೆ - ಈ ಮೂರೂ ವಿಚಾರಗಳು ಮೊಗಸಾಲೆಯವರ ಕಥನಕ್ರಿಯೆಯ ಒಳಗು ಹೊರಗನ್ನು ಅರ್ಥೈಸಿಕೊಳ್ಳಲು ಬಹುಮುಖ್ಯವಾದ ಪರಿಕರಗಳನ್ನೊದಗಿಸುತ್ತವೆ.

ನೆನಪುಗಳ ಹಳಹಳಿಕೆ ಮೊಗಸಾಲೆಯವರ ಕತೆಗಳ ಮೂಲದ್ರವ್ಯವಲ್ಲ. ಇದಕ್ಕೆ ಬಹುಶಃ ಮೊಗಸಾಲೆಯವರು ಅದೇ ಜಗತ್ತಿನಲ್ಲಿ ಬದುಕುತ್ತಿದ್ದು, ಅವರು ಏನನ್ನೂ ಕಳೆದುಕೊಂಡಿರದೇ ಇರುವುದೇ ಇದ್ದೀತು. ಮೊಗಸಾಲೆಯವರದ್ದು ಆಧುನಿಕ ಸಾಹಿತಿಗಳಂತೆ ವಲಸೆ ಬಂದ ಪ್ರಜ್ಞೆಯಲ್ಲ. ಅವರು ಬಾಲ್ಯವನ್ನು, ನೆನಪುಗಳನ್ನು ನೆಚ್ಚಿ ಬರೆಯುತ್ತಿರುವ ಅನೇಕ ನವ್ಯ, ನವ್ಯೋತ್ತರ ಲೇಖಕರಿಗಿಂತ ಭಿನ್ನವಾಗಿ ನಿಲ್ಲುವುದು ಇಲ್ಲಿಯೇ. ಇದಕ್ಕಿಂತ ಮುಖ್ಯವಾಗಿ ಮೊಗಸಾಲೆಯವರು ಸಮಾಜಮುಖಿ ಧೋರಣೆಯ, ವರ್ತಮಾನಕ್ಕೆ ಹೆಚ್ಚು ಸಲ್ಲುತ್ತ ಬಂದ ಲೇಖಕರಾಗಿರುವುದು. ಅವರ ಕತೆಗಳಲ್ಲಿ ವೈಯಕ್ತಿಕ ನೆಲೆಯ ಸಮಸ್ಯೆಗಳಿಲ್ಲ. ಇದ್ದರೂ ಅದಕ್ಕೊಂದು ಸಾಮಾಜಿಕ ಮುಖವೇ ಇದ್ದು ಅದೇ ಕತೆಯ ನೆಲೆಯಲ್ಲಿ ಮುಂದೊತ್ತಿ ನಿಲ್ಲುತ್ತದೆ. ಹಾಗೆಯೇ ಅವರು ತಕ್ಷಣಕ್ಕೆ ಸ್ಪಂದಿಸಿ ಬರೆಯುವ ಸಾಹಿತಿ ಎಂದು ಎಸ್.ಆರ್.ವಿಜಯಶಂಕರ್ ಅವರು ಹೇಳಿದ ಮಾತುಗಳು ಕೂಡ ಇಲ್ಲಿ ಮುಖ್ಯವಾಗುತ್ತವೆ. ಎಷ್ಟರಮಟ್ಟಿಗೆ ಎಂದರೆ, ಎರಡು ಕತೆಗಳನ್ನು ಹೊರತು ಪಡಿಸಿದರೆ ಮೊಗಸಾಲೆಯವರ ಯಾವುದೇ ಕತೆಗಳಲ್ಲಿ ನಮಗೆ ಕನಸು, ಕಲ್ಪನೆ, ಭ್ರಮೆಗಳ ಮುಖಾಮುಖಿಯಾಗುವುದಿಲ್ಲ! ಈ ಎರಡು ಕತೆಗಳಲ್ಲಿ ಬರುವ ಕನಸು ಕೂಡ ಕನಸಿನ ಅಸ್ಪಷ್ಟತೆ, ಅತಾರ್ಕಿಕತೆ, ಊಹೆಗಳ ಯಾವುದೇ ಅಂಶಗಳಿಲ್ಲದ ಕಡು ವಾಸ್ತವದ ಕನಸುಗಳೇ ಆಗಿರುವುದು ಸುಳ್ಳಲ್ಲ. ಹೀಗೆ ಅಮೂರ್ತತೆಯನ್ನು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಕತೆಗಾರ ಕೂಡ ನಾ ಮೊಗಸಾಲೆಯವರೇ ಎನ್ನಬೇಕು. ಹೀಗಾಗಿ ಅವರ ಕತೆಗಳಿಗೆ ಅಥೆಂಟಿಸಿಟಿ ಪ್ರಾಪ್ತವಾಗಿಯೂ “ಇರುವುದನ್ನು” ಮೀರಿ ಅವು ಚಾಚಿಕೊಳ್ಳುವುದಿಲ್ಲ ಎನ್ನುವುದು ಕೂಡ ಗಮನಿಸಬೇಕಾದ ಸಂಗತಿಯಾಗಿದೆ.

ನಿಖರವಾದ ವಿಶ್ಲೇಷಣೆಯಿಂದ ಸ್ಪಷ್ಟ ಮಾತುಗಳಲ್ಲಿ ತಮ್ಮ ಗ್ರಹಿಕೆಗಳನ್ನು ತೆರೆದಿಡುವ ವಿಮರ್ಶಕರಾದ ಎಸ್. ಆರ್. ವಿಜಯಶಂಕರ್ ಅವರು ಮೊಗಸಾಲೆಯವರ ಮೂರನೆಯ ಕಥಾಸಂಕಲನ "ಸೀತಾಪುರದಲ್ಲಿ ಗಾಂಧೀಜಿ"ಯ ಮುನ್ನುಡಿಕಾರರು. ಮೊಟ್ಟಮೊದಲ ಬಾರಿಗೆ ಇಲ್ಲಿ ವಿಜಯಶಂಕರ ಅವರು ಮೊಗಸಾಲೆಯವರದು ಮೌಕಿಕ ಪರಂಪರೆಯ ಹಿನ್ನೆಲೆಯುಳ್ಳ ಕತೆಗಳು ಎಂದು ಗುರುತಿಸಿರುವುದು ಗಮನಾರ್ಹವಾದ ಮತ್ತು ಮಹತ್ವದ ಮಾತು. ಪದ್ಮಪ್ರಸಾದ್ ಅವರ ನವ್ಯ ಮಾನದಂಡಗಳಲ್ಲಿ ನಾವು ಕಳೆದುಕೊಳ್ಳಬಹುದಾದ ನೋಟಗಳು ಎಂದು ನಾನು ಹೇಳಬಯಸಿದ್ದು ಇದನ್ನೇ. ನಾವು "ಕತೆ ಹೇಳುವ" ಕಾಲದಿಂದ "ಕತೆ ಬರೆಯುವ" ಕಾಲಕ್ಕೆ ಹೆಜ್ಜೆ ಇಟ್ಟು, ಕತೆಗಾರಿಕೆ ಎಂಬುದು ಒಂದು ಪ್ರೆಸೆಂಟೇಶನ್ ಟೆಕ್ನಿಕ್ ಎಂಬ ಮಟ್ಟಕ್ಕೆ ಅದನ್ನೊಯ್ದು, ವಸ್ತುವಿಗಿಂತ ಅದನ್ನು ನೀನು ಹೇಗೆ ಹೇಳುತ್ತೀ ಎನ್ನುವುದೇ ಮುಖ್ಯ ಎಂಬ ತತ್ವಕ್ಕೆ ಮನಸೋತು, ರಾಚನಿಕ ಮತ್ತು ನಿರಚನಾ ತತ್ವಗಳಿಗೆ ಸಿಕ್ಕಿಕೊಂಡು, ಇವತ್ತು ಕತೆಗಳಲ್ಲಿ ಕಥಾನಕ ಮುಖ್ಯವಲ್ಲ, ಅದು ನೀಡುವ ಒಟ್ಟಾರೆ ಅನುಭವ, ಅನುಭೂತಿಯಷ್ಟೇ ಮುಖ್ಯವೆಂಬ ನೆಲೆಗೆ ತಲುಪಿದ್ದೇವೆ. ಸ್ಥೂಲವಾಗಿ ಇದನ್ನು ಕಾವ್ಯಕ್ಕೆ ಅನ್ವಯಿಸುತ್ತಿದ್ದೆವು. ಇದೇ ನೆಲೆಯಲ್ಲಿ ಯೋಚಿಸುತ್ತಾ ಹೋದರೆ ಮೌಕಿಕ ಪರಂಪರೆಯ ಕತೆಗಾರರಾದ ಮೊಗಸಾಲೆಯವರನ್ನು ಎಲ್ಲಿ ಫಿಟ್ ಮಾಡಬೇಕು ಎಂಬ ಸಮಸ್ಯೆ ಎದುರಾಗುವುದು ಸಹಜವೇ. ಆದರೆ ಈ ಸಮಸ್ಯೆ ವಿಮರ್ಶಕರದ್ದಾಗಿರುವಷ್ಟರ ಮಟ್ಟಿಗೆ ಅಪಾಯಕಾರಿಯಲ್ಲ. ಸ್ವತಃ ಮೊಗಸಾಲೆಯವರಿಗೆ ತಮ್ಮದು ಕತೆಯೆ, ಕಥಾಪ್ರಸಂಗಗಳೇ, ಇವು ಸಣ್ಣಕಥಾ ಪ್ರಕಾರಕ್ಕೆ ಫಿಟ್ ಆಗುತ್ತವೆಯೇ ಎಂಬ ಅನುಮಾನ ಮೂಡಿಸುವಷ್ಟರ ಮಟ್ಟಿಗೆ ಮುಂದುವರಿದರೆ ಕಷ್ಟ. ಆಗ ಅದು ಮೊಗಸಾಲೆಯವರದೇ ಒಂದಾನೊಂದು ಕತೆಯಲ್ಲಿ ಬರುವ ಶಾಸ್ತ್ರಕ್ಕಾಗಿ ನಾವಿಲ್ಲ, ನಮಗಾಗಿ ಶಾಸ್ತ್ರವಿರೋದು ಎಂಬ ಮಾತಿಗೆ ವಿರುದ್ಧವಾದ ಚಲನೆಯಷ್ಟೇ ಆಗುತ್ತದೆ. ಶಾಸ್ತ್ರ, ಸಿಲೆಬಸ್, ಮಾದರಿ, ಪ್ರಯೋಗಶೀಲತೆ, ಫಾರ್ಮೆಟ್ ಗಳು ಬೇಕು, ಆದರೆ ಅದೇ ಕತೆಗಾರನ ವಿಧಿಯಾಗಬಾರದು.

ಎಸ್. ಆರ್. ವಿಜಯಶಂಕರ ಅವರು ಇನ್ನೂ ಒಂದು ಬಹುಮುಖ್ಯವಾದ ಅಂಶವನ್ನು ಇಲ್ಲಿ ಹೇಳುತ್ತಾರೆ. ಕತೆಗಾರನನ್ನು ಮೀರಿ ಪಾತ್ರಗಳೂ, ಸಂದರ್ಭಗಳೂ ಕತೆಯೊಳಗೆ ಗರಿಗೆದರುವುದನ್ನು ನಾವು ಸಹಜವಾಗಿ ಇಲ್ಲಿ ಗಮನಿಸಬಹುದು ಎನ್ನುವ ಅವರು ಮೊಗಸಾಲೆಯವರ ಕತೆಗಳನ್ನು ಓದುವಾಗ ಅವರು ಕಾದಂಬರಿಯೊಂದನ್ನು ಕತೆಗಳಾಗಿ ಕತ್ತರಿಸಿ ಹೇಳುವ ಪ್ರಯತ್ನದಲ್ಲಿರುವಂತೆ ಅನಿಸುತ್ತದೆ ಎನ್ನುತ್ತಾರೆ. ಇದೇ ಅರ್ಥದ ಮಾತನ್ನು ಮಾಧವ ಕುಲಕರ್ಣಿಯವರೂ ತಮ್ಮ ಮುನ್ನುಡಿಯಲ್ಲಿ ಹೇಳಿರುವುದುಂಟು. ಬೇರೆ ಬೇರೆ ಕತೆಗಳಲ್ಲಿ ಮತ್ತೆ ಮತ್ತೆ ಮರಳಿ ಬರುವ ಅವೇ ಪಾತ್ರಗಳು, ಅದೇ ಅದೇ ಊರು, ಗೊತ್ತಿರುವ ಜನ, ಗೊತ್ತಿರುವ ಬೀದಿಗಳು, ಗೊತ್ತಿದೆ ಎನಿಸುವಂಥ ನಡೆನುಡಿ, ಆಚಾರ ವಿಚಾರ, ಸರಳ ಸಂಭವನೀಯತೆಗಳು - ಈ ಎಲ್ಲದರಿಂದ ಇಂಥ ಒಂದು ಭಾವನೆ ಸಹಜವೇ. ಅಲ್ಲದೆ ಮೊಗಸಾಲೆಯವರೇ ಸ್ವತಃ ತಮಗೆ ಸಣ್ಣಕತೆಗಳಿಗಿಂತ ಕಾದಂಬರಿ ಪ್ರಕಾರ ಹೆಚ್ಚು ಸಹಜವಾಗಿ ಒಗ್ಗಿದ್ದು ಎಂಬರ್ಥದ ಮಾತುಗಳನ್ನೂ ಹೇಳಿರುವುದುಂಟು. ಅದೆಲ್ಲದರಾಚೆ ನಾವು ಈ ಬಗೆಯ ಕತೆಗಳು ಹೇಗೆ ರೂಪುಗೊಳ್ಳುತ್ತವೆ ಎನ್ನುವ ಬಗ್ಗೆ ಯೋಚಿಸಬೇಕಾಗಿದೆ. ಮೊಗಸಾಲೆಯವರದು ಒಂದರ್ಥದಲ್ಲಿ ಕಾದಂಬರಿ ಮತ್ತು ಸಣ್ಣಕತೆಗಳ ನಡುವಣ ಅನುಸಂಧಾನದ ಹಾದಿ. ಸಣ್ಣಕತೆಯೊಂದು ಕಾದಂಬರಿಯ ಓದಿನ ಗಹನತೆಯನ್ನು, ಅನುಭವವನ್ನು ಒದಗಿಸಬಲ್ಲುದಾದರೆ ಅದರಲ್ಲಿ ತಪ್ಪೇನಿದೆ? ಫಾರ್ಮ್ ಮತ್ತು ಕಟೆಂಟ್ ಕುರಿತ ಚರ್ಚೆ ಒಂದು ಮಟ್ಟದ ವರೆಗೆ ಸರಿಯಾದರೂ ಸೃಜನಶೀಲ ಅಭಿವ್ಯಕ್ತಿಗೆ ಅದೇ ಒಂದು ತೊಡಕಾಗುವ ಹಂತದಲ್ಲಿ ಅದನ್ನು ಉಪೇಕ್ಷಿಸುವುದು ವಿಹಿತ. ಸಣ್ಣಕತೆಯ ಶರೀರದಲ್ಲಿ ಒಂದು ಪಾತ್ರದ ವ್ಯಕ್ತಿತ್ವದ ಪರಿಚಯಕ್ಕಾಗಿ, ವಿಭಿನ್ನ ಪಾತ್ರಗಳ ಸದ್ಯದ ನಡೆನುಡಿಗಳಿಗೆ ಇರುವ ಹಿನ್ನೆಲೆಯ ಕುರಿತು ಹೇಳುವುದಕ್ಕಾಗಿ ಮೊಗಸಾಲೆಯವರು ತರುವ ಕತೆ-ಉಪಕತೆಗಳು ಕೂಡ ಒಂದು ತಂತ್ರವೇ.

ಇಲ್ಲಿ ನೆನೆಯ ಬಹುದಾದ ಒಂದು ಮಾತಿದೆ; ಲೇಖಕ ಲೋಕವನ್ನು ಪ್ರಶ್ನಿಸಿದರೆ, ವಿಮರ್ಶಕ ಕೃತಿಯನ್ನು ಪ್ರಶ್ನಿಸುತ್ತಾನೆ. ಲೇಖಕನಿಗೆ ಕೃತಿಯಾಗಿರುವುದು ವಿಮರ್ಶಕನಿಗೆ ವಿಮರ್ಶಾ ಪರಿಕರವಾಗಿದ್ದು, ಆ ನೆಲೆಯಲ್ಲೇ ಅರ್ಥ ಹೊಮ್ಮಿಸುವುದು ಅಗತ್ಯವಾಗುತ್ತದೆ. (ರಾಚನಿಕವಾದ ಮತ್ತು ಸಾಹಿತ್ಯ ವಿಮರ್ಶೆ: ಗೆರಾರ್ಡ್ ಜಿನೆಟ್ ಲೇಖನದ ಅನುವಾದ, ಕೇಶವ ಮಳಗಿ ಸಂಪಾದಿತ ಕೃತಿ "ಸಂಕಥನ"ದಿಂದ.) ಮೊಗಸಾಲೆಯವರು ಬರೆದ ಕತೆಗಳೆಲ್ಲವೂ ಅವರು ಅನುಭವಿಸಿದ, ಕಂಡ, ಕೇಳಿದ ಸಂಗತಿಗಳನ್ನೇ ಆಧರಿಸಿದಂಥವು. ಪೂರ್ತಿಯಾಗಿ ಕಾಲ್ಪನಿಕವಾದ ರಚನೆಗಳು ಇಲ್ಲಿಲ್ಲ. ಮೊಗಸಾಲೆಯವರ ನಾಲ್ಕನೆಯ ಕಥಾಸಂಕಲನ "ಸನ್ನಿಧಿಯಲ್ಲಿ ಸೀತಾಪುರ"ದ ಮುನ್ನುಡಿಕಾರರಾದ ಡಾ.ವಾಸುದೇವ ಶೆಟ್ಟಿಯವರು ವಿವರವಾಗಿ ಉಲ್ಲೇಖಿಸಿರುವಂತೆ, "ಕೋಟಿಲ್ಲದ ಕೋರ್ಟು" ಕತೆಯಲ್ಲಿ ಸ್ವತಃ ಮೊಗಸಾಲೆಯವರೇ ಕತೆಗಾರಿಕೆ ಮತ್ತು ಕಥನತಂತ್ರದ ಬಗ್ಗೆ ಪರೋಕ್ಷವಾಗಿ ಮಾತನಾಡುತ್ತ "...ಅವು ಕತೆಗಳಾಗಬೇಕೆಂದು ಸೃಷ್ಟಿಯಾದವಲ್ಲ. ಅಥವಾ ನೀವು ಅವುಗಳಲ್ಲಿ ಕತೆ ಇದೆ ಎಂದುಕೊಂಡದ್ದರಿಂದ ಅವುಗಳೆಲ್ಲ ಕತೆಗಳಾಗಿರಲೂ ಬಹುದು" ಎನ್ನುತ್ತಾರೆ. ನಮ್ಮ ಬದುಕು, ಅನುಭವ, ನಮ್ಮ ಗಮನಕ್ಕೆ ಬರುವ ಘಟನೆಗಳು, ಎದುರಾಗುವ ಸನ್ನಿವೇಶಗಳು ಯಾವುವೂ ಕತೆಯೋ ಕಾದಂಬರಿಯೋ ಎಂಬ ಸಂದಿಗ್ಧ ಎದುರಿಸುವ ಪ್ರಮೇಯವಿಲ್ಲ. ಸಾಹಿತಿ ತನ್ನ ಬರಹಕ್ಕೆ ಒಂದು ಆಕೃತಿ, ಶಿಲ್ಪ, ಪ್ರಕಾರದ ಚೌಕಟ್ಟು ಬೇಕು ಎಂದುಕೊಂಡು ತನಗೆ ಹೇಳಬೇಕಿರುವುದನ್ನು ಹೇಳುತ್ತ ಅವು ಪಡೆದುಕೊಳ್ಳುವ ರೂಪುರೇಷೆ ಹೊಂದಿಕೊಂಡು ಅವುಗಳನ್ನು ಹಾಗೆಲ್ಲ ವಿಂಗಡಿಸುತ್ತಾನೆ ಎಂಬುದು ಎಲ್ಲರಿಗೂ ಗೊತ್ತು.

ಮೌಕಿಕ ಪರಂಪರೆಯ ಕಥಾನಕಕ್ಕೆ ಕೂಡ ಕೆಲವೊಂದು ಅಲಿಖಿತ ಚೌಕಟ್ಟುಗಳಿದ್ದೇ ಇದ್ದವು. ಇಲ್ಲಿ ತಮ್ಮ ಕೊನೆಯ ಕಥಾಸಂಕಲನಕ್ಕೆ ಮೊಗಸಾಲೆಯವರು "ಕಥಾ ಪ್ರಸಂಗಗಳು" ಎಂಬ ಉಪಾದಿ ನೀಡಿದ್ದಾರೆ. ಇದರಲ್ಲಿ ವಿಮರ್ಶಕರು ಅವರಲ್ಲಿ ಹುಟ್ಟಿಸಿದ ಗೊಂದಲಕ್ಕೂ ತನ್ನದೇ ಆದ ಪಾಲಿದ್ದೇ ಇದೆ ಬಿಡಿ. ಮೊಗಸಾಲೆಯವರ "ಕತೆ ಕಟ್ಟುವ ಅಥವಾ ಕತೆ ಬಗೆಯುವ ಬಗೆ" ಲೇಖನದಲ್ಲಿ ಅಜ್ಜೀಕತೆಗಳ ಬಗ್ಗೆ ಮಾತು ಬರುತ್ತದೆ. ಅಲ್ಲಿ ಆ ಕತೆಗಳನ್ನು ಆಲಿಸುವ ಮಕ್ಕಳಿಗೆ ಮುಖ್ಯ ಕತೆ ಏನು ಎಂಬುದು ಮುಖ್ಯವಲ್ಲ. ಅಜ್ಜನೋ ಅಜ್ಜಿಯೋ ಅದನ್ನು ರಂಗಾಗಿ ವರ್ಣಿಸಿ, ಸ್ವರದ ಏರಿಳಿತಗಳೊಂದಿಗೆ ರಂಜಿಸುತ್ತಾ, ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಾ "ಹೇಳುವ ರೀತಿ" ಮುಖ್ಯ. ಮತ್ತೆ ಇಲ್ಲಿ ರಾಚನಿಕತೆಯ ಮಹತ್ವ ಮಂಚೂಣಿಗೆ ಬಂತು. ಮುಂದೇನಾಯ್ತು, ಆಮೇಲೇನಾಯ್ತು ಎಂದರೆ ಅಲ್ಲಿ ಬಹುತೇಕ ಏನೂ ಆಗುವುದಿಲ್ಲ ಅಥವಾ ನಿನ್ನೆ ಆಗಿದ್ದೇ ಆಗುತ್ತದೆ ಅಥವಾ ಏನಾದರೂ ಆಗುವ ಮುನ್ನವೇ ನಿದ್ದೆ ಬಂದು ಬಿಡುವುದು ಕೂಡ ಸಾಧ್ಯ. ಹೀಗೆ ಅವರು ಒಂದೇ ಕತೆಯನ್ನು ಮತ್ತೆ ಮತ್ತೆ ಹೇಳಬಲ್ಲವರಾಗಿದ್ದರು, ಮಕ್ಕಳು ಅದನ್ನು ಬಯಸುತ್ತಿದ್ದರು. ಇದು ಮೌಕಿಕ ಪರಂಪರೆಯ ಒಂದು ಲಕ್ಷಣ. ಎರಡನೆಯದು, ನಾವು ಪ್ರಸಂಗ ಎಂದು ಕೇಳುತ್ತಿದ್ದುದು ಯಕ್ಷಗಾನದ ಹಿನ್ನೆಲೆಯಲ್ಲಿ. ಪ್ರಸಂಗವನ್ನು ಮುಂದುವರಿಸಿಕೊಂಡು ಹೋಗುವುದು ಮತ್ತು ಹೊತ್ತಿಗೆ ಸರಿಯಾಗಿ ಅದನ್ನು ಎಲ್ಲಿ ಮುಗಿಯಬೇಕೋ ಅಲ್ಲೇ ಮುಗಿಸುವುದು ಮುಖ್ಯವೇ ಹೊರತು ನಡುವೆ ಏನೆಲ್ಲ ಅದರೊಳಗೆ ಬಂದು ಹೋಯಿತು ಎನ್ನುವುದು ಮುಖ್ಯವಲ್ಲ! ಇದು ಪರಮೇಶಿ ಪ್ರೇಮ ಪ್ರಸಂಗಕ್ಕೂ ಮುಸ್ಸಂಜೆ ಕಥಾ ಪ್ರಸಂಗಕ್ಕೂ ಜಂಟಿಯಾಗಿಯೇ ಅನ್ವಯಿಸುತ್ತದೆ! ಇನ್ನು ಮೂರನೆಯದು, ನಮ್ಮಲ್ಲಿ ಪ್ರಸಂಗಗಳೆಂದರೆ ರಾಮಾಯಣ, ಮಹಾಭಾರತಗಳಿಂದ ಆಯ್ದ ಭಾಗವೇ. ಇದರ ಅನುಕೂಲವೆಂದರೆ ಈ ಪುರಾಣಗಳ ಕತೆ ಎಲ್ಲರಿಗೂ ಈಗಾಗಲೇ ಗೊತ್ತಿರುವುದೇ, ಅನೇಕ ಬಾರಿ ಕೇಳಿರುವುದೇ! ಹೀಗೆ ಇಲ್ಲಿಯೂ ಮತ್ತೆ ಮುಖ್ಯವಾಗುವುದು ನೀವು ಅದನ್ನು ಹೇಳುತ್ತ ಏನು Value Add ಮಾಡಿದಿರಿ ಎನ್ನುವುದೇ ಹೊರತು ಕತೆ ಏನು ಎನ್ನುವುದಲ್ಲ. ಮತ್ತೆ ಇಲ್ಲಿಯೂ ರಾಚನಿಕತೆಯ ಮಹತ್ವವೇ ಎದುರಿಗೆ ಬಂತು.

ಇಷ್ಟು ಹೇಳಿದ ಮೇಲೆ, ಮೊಗಸಾಲೆಯವರ ಕೊನೆಯ ಒಂದು ಸಂಕಲನವನ್ನು ಹೊರತು ಪಡಿಸಿ ಉಳಿದ ಮೂರೂ ಸಂಕಲನದ ಕತೆಗಳಿಗೆ ಒಂದು ಚೌಕಟ್ಟು, ಆಕೃತಿ, ಶಿಲ್ಪ ಇಲ್ಲವೇ ಎನ್ನುವ ಪ್ರಶ್ನೆಗೆ ಮುಖಾಮುಖಿಯಾಗುವುದು ಸಾಧ್ಯವಿದೆ. ಮೊಗಸಾಲೆಯವರದು ಸಾವಧಾನದ ನಡೆ, ಪುರುಸೊತ್ತಿನ ಶೈಲಿ, ಕಥಾನಕದ್ದು ವೇಗವಿಲ್ಲದ ಚಲನೆ ಎಂದೆಲ್ಲ ಈ ಮುನ್ನುಡಿಗಳಲ್ಲಿ ಹೇಳಿರುವುದೂ ಇದೆ. ಇವತ್ತು ಆಧುನಿಕ ಮನುಷ್ಯ ಅಲಾರ್ಮ್ ಇಟ್ಟುಕೊಂಡು ಎದ್ದು, ಸೆಕೆಂಡಿನ ಮುಳ್ಳು ನೋಡಿಕೊಂಡೇ ಸ್ನಾನ, ಪೂಜೆ, ಟಿಫನ್ನು ಇತ್ಯಾದಿ ನಿತ್ಯಕರ್ಮಗಳನ್ನು ಮುಗಿಸಿ ಕಚೇರಿಗೋ, ವ್ಯವಹಾರಕ್ಕೋ ಧಾವಿಸುವ ಧಾವಂತದಲ್ಲಿರುವುದು ನಿಜ. ಆದರೆ ಹಳ್ಳಿಯ ಕೃಷಿಕನೊಬ್ಬನಿಗೆ ಈ ಬಗೆಯ ಧಾವಂತ ಇರುವುದಿಲ್ಲ. ಇಲ್ಲಿ ಹೋಟೆಲು ನಡೆಸುವ ಕುಪ್ಪಣ್ಣಯ್ಯ ಕೂಡ ಅಗತ್ಯ ಬಿದ್ದರೆ ಬಾಗಿಲೆಳೆದು ಹೊರಗೆ ಹೊರಟಾರು. ಆಧುನಿಕ ಮನುಷ್ಯನಿಗೆ ಬಾವಿಯಿಂದ ನೀರು ಸೇದಬೇಕಿಲ್ಲ. ನೆಲದಡಿ ನೀರು ಶೇಖರಿಸಿಟ್ಟು ಅದನ್ನು ಬೇಕೆಂದಾಗ ಬೇಕಾದಷ್ಟು ತಲೆಯ ಮೇಲಿನ ಸೂರಿಗೆ ಕಳಿಸಿ ತನಗೆ ಬೇಕಾದ ಕೋಣೆಯಲ್ಲಿ ನೀರನ್ನು ಇಳಿಸಿಕೊಳ್ಳುತ್ತಾನೆ ಆತ. ಅವನಿಗೆ ಬಟ್ಟೆ ಒಗೆಯುವುದಕ್ಕೆ, ಹಿಟ್ಟು ಕಡೆಯುವುದಕ್ಕೆ, ಒಲೆ ಉರಿಸುವುದಕ್ಕೆ, ಒಮ್ಮೆ ಮಾಡಿದ ಅಡುಗೆ ಕೆಡದಂತೆ ಉಳಿಸಿಟ್ಟು ಬಳಸುವುದಕ್ಕೆ ಬೇಕಾದ ಎಲ್ಲ ಯಂತ್ರ-ತಂತ್ರ ಗೊತ್ತು. ಅವನು ಮೆಟ್ಟಿಲು ಇಳಿದು ಹತ್ತಿ ಮಾಡುವುದಿಲ್ಲ, ಸಿಟಿಬಸ್ಸಿಗೆ ಕಾದು ಸಮಯ ಹಾಳು ಮಾಡಲಾರ. ಆದಾಗ್ಯೂ ಅವನಿಗೆ ಒಂದು ಕ್ಷಣದಷ್ಟು ಪುರುಸೊತ್ತಿಲ್ಲ. ಈ ಯಾವ ಸವಲತ್ತೂ ಇಲ್ಲದ ಸಾಮಾನ್ಯ ಹಳ್ಳಿಗನೊಬ್ಬ ಪ್ರತಿದಿನ ಸಾಕಷ್ಟು ಸಮಯ ಪುರುಸೊತ್ತಾಗಿರಬಲ್ಲ ಭಾವನೆಯಿಂದ ನೆಮ್ಮದಿಯಾಗಿರುತ್ತಾನೆ. ಮೊಗಸಾಲೆಯವರದ್ದು ಮೌಕಿಕ ಪರಂಪರೆಯ ಕಥಾನಕಗಳೆಂತೋ ಅಂತೆಯೇ ಅದು ನಗರ ಜೀವನದಿಂದ ದೂರವುಳಿದ ಒಂದು ಪುಟ್ಟ ಊರಿನ ಕತೆ ಕೂಡ ಹೌದು. ಈ ಎರಡು ಅಂಶಗಳಲ್ಲದೇನೆ ಈ ನಿಧಾನಗತಿಯ ಕಥಾನಕಕ್ಕೆ ಬೇರೆ ಕಾರಣ, ಮಹತ್ವ ಇದ್ದಿರುವುದು ಸಾಧ್ಯವಿದೆ. ನಾವು ಪ್ರತಿಯೊಂದು ಕತೆಯನ್ನು ಇಟ್ಟುಕೊಂಡು ಅದರ ತಂತ್ರ, ವಸ್ತು ಮತ್ತು ಕೇಂದ್ರ ಮೂರನ್ನೂ ಗಮನಿಸುತ್ತ ಹೋದರೆ ನಮಗೆ ಮಹತ್ವದ ಕೆಲವು ಸತ್ಯಗಳು ಕಂಡು ಬರುತ್ತವೆ.

ಪುರುಸೊತ್ತಿಲ್ಲದ ಆಧುನಿಕ ಓದುಗನಿಗಾಗಿಯೇ ನಮ್ಮ ಪತ್ರಿಕೆಗಳು (ಸಾಮಾನ್ಯವಾಗಿ ಒಂದು ಪ್ರಕಾರದ (Form) ರೂಪುರೇಷೆಗಳನ್ನು ನಿರ್ಣಯಿಸುವುದು ಪತ್ರಿಕೆಗಳೇ ಆಗಿರುವುದು ಒಂದು ವಿಶೇಷ) 2500-3500 ಪದಮಿತಿಯಲ್ಲಿದ್ದ ಸಣ್ಣಕತೆಯನ್ನು 1500 ರ ಪದಮಿತಿಗಿಳಿಸಿದವು. ಆದರೆ ನಾವು ನೆನಪಿಡಬೇಕಾದ್ದು, ನಮ್ಮ ಜೀವನಶೈಲಿಯಾಗಲೀ, ಮಾಧ್ಯಮಗಳ ಡಿಮಾಂಡ್-ಸಪ್ಲೈ ತತ್ವಸಿದ್ಧಾಂತಗಳಾಗಲೀ ಸೃಜನಶೀಲ ಅಭಿವ್ಯಕ್ತಿಯ ಚೌಕಟ್ಟನ್ನು ವಿಧಿಸಬಾರದು, ಅದು ಮುಕ್ತವಾಗಿರಬೇಕು ಎಂಬ ಸತ್ಯವನ್ನು. ಈ ಕಾರಣಕ್ಕಾಗಿಯೂ ಮೊಗಸಾಲೆಯವರ ನಿರೂಪಣಾ ವಿಧಾನ, ಅದರ ಲಯ ಮತ್ತು ಅದು ಸೆಳೆದುಕೊಳ್ಳುವ ವಿವರಗಳು ಎಲ್ಲವನ್ನೂ ಸಾರಾಸಗಟಾಗಿ ತಳ್ಳಿ ಹಾಕದೇ ಅದರ ಒಳ್ಳೆಯ ಅಂಶಗಳನ್ನು ಗುರುತಿಸುವುದು, ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ಕಂಪೆನಿ ನಾಟಕಗಳಿಂದ ಹವ್ಯಾಸಿ ರಂಗಭೂಮಿ ಸಾಕಷ್ಟನ್ನು ಪಡೆದುಕೊಂಡಂತೆಯೇ ನಮ್ಮ ಉತ್ಕೃಷ್ಟ ಮಾದರಿಯ ಕತೆಗಳು ಮೊಗಸಾಲೆಯವರ ಕತೆಗಳ ಅಧ್ಯಯನದಿಂದ ಪಡೆದುಕೊಳ್ಳುವುದು ತುಂಬ ಇದೆ.

ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಮಾತಿದೆ. ಕಥಾನಕದ ಚಲನೆಯ ಗತಿ ಬೇರೆ, ಕಥಾನಕದೊಳಗೆ ನುಸುಳುವ ಅನಗತ್ಯ ವಿವರಗಳ,ಕತೆ-ಉಪಕತೆಗಳ ಹಾವಳಿ ಬೇರೆ. ಎರಡನೆಯದು ಆಕೃತಿ/ಶಿಲ್ಪ/ಚೌಕಟ್ಟುಗಳಿಗೆ ಹಾನಿಕಾರಕವಾದದ್ದು. ಮೊದಲನೆಯದ್ದು ಉದ್ದೇಶಪೂರ್ವಕವಾಗಿ ನಿರ್ಧರಿಸಿದ “ಗತಿ”ಆಗಿದ್ದಿರಲೂ ಬಹುದು. ತಾನು ಹೇಳುತ್ತಿರುವ ಸಂಗತಿಗೆ ಕತೆಗಾರ ತನ್ನ ಓದುಗನಿಂದ ನಿರೀಕ್ಷಿಸುವ ಸಂವೇದನೆಗೆ ತಕ್ಕಂತೆ ಅವನು ಕತೆಯನ್ನು ಹೇಳಬೇಕಾದ ಒಂದು ವೇಗವೂ ಇರುತ್ತದೆ. ನುರಿತ ಕತೆಗಾರರು ತಮ್ಮ ಕತೆಯೊಳಗೆ ಮಾತುಗಳಿಂದ, ವಿವರಗಳಿಂದಲೇ ಎಲ್ಲಿ ಬೇಕೊ ಅಲ್ಲಿ ಮೌನವನ್ನು ಕೂಡ ಸೃಷ್ಟಿಸಿಕೊಳ್ಳಬಲ್ಲರು. ಜೇಮ್ಸ್ ಜಾಯ್ಸ್ ಹೇಳುವ ಸಿಗ್ನಿಫಿಕೆಂಟ್ ಡೀಟೇಲ್ಸ್ ಬಗ್ಗೆ ವಿಶೇಷ ಗಮನ ನೀಡುವ ಕತೆಗಾರರು ತಮ್ಮ ಕತೆಯ ಶರೀರದಲ್ಲಿ ಅನಗತ್ಯವಾದ ಒಂದು ಪದವನ್ನೂ ಇಡಲಾರರು. ಇದೆಲ್ಲ ಕತೆಯೊಳಗಿನ ವಿವರಗಳು, ಅದರ ಕಥಾನಕದ ಚಲನೆಯ ಗತಿ ಮತ್ತು ಕೇಂದ್ರಪ್ರಜ್ಞೆಯನ್ನು ದುಡಿಸಿಕೊಳ್ಳುವ ಬಗೆಯ ಬಗ್ಗೆ ಆಡುವ ಮಾತಾಯಿತು. ಮೊಗಸಾಲೆಯವರ ಕತೆಗಳ ಬಗ್ಗೆ ಮಾತನಾಡುವಾಗ ಹೇಳಲಾಗುವ ಸಾವಧಾನದ ನಡೆ, ಪುರುಸೊತ್ತಿನ ಶೈಲಿ ಮತ್ತು ವೇಗವಿಲ್ಲದ ಗತಿಯಲ್ಲಿ ಕ್ರಮಿಸುವ ಕಥಾನಕ ಮುಂತಾದ ಗ್ರಹಿಕೆಗಳೇನಿವೆ, ಅದು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಕತೆಯ ಒಟ್ಟಾರೆ ಆಕೃತಿ/ಶಿಲ್ಪ ಅಥವಾ ಚೌಕಟ್ಟಿನಿಂದ ಹೊರಸರಿಯುವಂತಿವೆಯೇ ಮತ್ತು ಕಥಾನಕದ ಏಕಸೂತ್ರದ ಎಳೆಯನ್ನು ಕೆಡಿಸುತ್ತಿವೆಯೇ ಎಂಬುದನ್ನು ನಾವು ಪ್ರತಿಯೊಂದು ಕತೆಯನ್ನಿಟ್ಟುಕೊಂಡು ಗಮನಿಸಬೇಕಿದೆ. ಗಮನಿಸಿ, ಅತಿರೇಕಗಳನ್ನು ಬಿಟ್ಟುಕೊಟ್ಟು, ಸಂತುಲಿತ ಉದಾಹರಣೆಗಳಿಂದ ಪಡೆದುಕೊಂಡು ಸಣ್ಣಕಥಾ ಪರಂಪರೆ ಬೆಳೆಯುವುದಿದೆ.

ಮೌಕಿಕ ಪರಂಪರೆಯನ್ನು ಇನ್ನಿಲ್ಲದಂತೆ ದುಡಿಸಿಕೊಂಡಿರುವ ಬಹುಶಃ ಕನ್ನಡದ ಏಕೈಕ ನವ್ಯೋತ್ತರ ಕತೆಗಾರರಾದ ಮೊಗಸಾಲೆಯವರ ಮಾದರಿಯನ್ನು ನಿಕಷಕ್ಕೊಡ್ಡಿಯೇ ಅದರ ಸಾಮರ್ಥ್ಯವನ್ನು ನಾವು ಕಂಡುಕೊಳ್ಳುವುದರ ಅಗತ್ಯವಿದ್ದೇ ಇದೆ. ಮೊದಲಿಗೆ ಹೊಸ ತಲೆಮಾರಿನ ಕತೆಗಾರರಲ್ಲಿ ಜೀವನಾನುಭವವಿಲ್ಲ ಎಂಬ ಸಾಮಾನ್ಯವಾದ ಆರೋಪವಿದೆ. ಡಾ||ಕೆ ಶಿವರಾಮ ಕಾರಂತರಂತೆ ಅಥವಾ ತೇಜಸ್ವಿಯವರಂತೆ ತಮ್ಮನ್ನು ತಾವು ಬದುಕಿಗೆ ಕೊಟ್ಟುಕೊಂಡು, ಅದರ ಅನಿರೀಕ್ಷಿತಗಳಿಗೆ ಸಹಜವಾಗಿ ತೆರೆದುಕೊಂಡ ಮತ್ತು ಅದೇ ಹೊತ್ತಿಗೆ ಬರೆದು ಬದುಕಿದ ಒಂದು ತಲೆಮಾರು ಇವತ್ತಿನ ಕನ್ನಡದ ಬರಹಗಾರರಿಗೆ ಕಲ್ಪನೆಯಷ್ಟೇ ಆಗುಳಿದಿದ್ದಾರೆ. ಸಾಹಿತ್ಯ ಇವತ್ತು ಬಡ ಮೇಷ್ಟ್ರುಗಳ ಕಾಯಕವಾಗಿಯೂ ಉಳಿದಿಲ್ಲ. ಇವತ್ತಿನ ಸಾಹಿತಿ ಡೆಸಿಗ್ನೇಟೆಡ್ ಎಕ್ಸಿಕ್ಯೂಟಿವ್ ಆಗಿದ್ದಾನೆ. ಫ್ಲ್ಯಾಟುಗಳಲ್ಲಿ ಬದುಕುತ್ತ ಮನೆಬಾಗಿಲಿನಿಂದ ಲಿಫ್ಟಿನ ಬಾಗಿಲಿಗೂ, ಅಲ್ಲಿಂದ ಕಚೇರಿಯ ಬಾಗಿಲಿಗೂ ಹರಿದಾಡುವ ಆಧುನಿಕ ಮನುಷ್ಯ ಕೂಲಿಕಾರರೊಂದಿಗೆ, ಸಿಟಿಬಸ್ಸುಗಳ ಡ್ರೈವರು-ಕಂಡಕ್ಟರುಗಳೊಂದಿಗೆ, ಮೆಕ್ಯಾನಿಕ್ಕು, ಹೋಟೆಲು ಮಾಣಿಗಳೊಂದಿಗೆ, ಮಾರ್ಕೆಟ್ಟಿನಲ್ಲಿ ತರಕಾರಿ, ಹಣ್ಣು ಮಾರುವ ಸಾಬಿಗಳೊಂದಿಗೆ ದಿನನಿತ್ಯ ಮಾತನಾಡುವ ಸಂದರ್ಭ ಕಳೆದುಕೊಂಡು ಆಡುಮಾತಿನಿಂದಲೂ ದೂರವಾಗುತ್ತಿದ್ದಾನೆ. ಇಂದಿಗೂ ಕನ್ನಡ ಸಾಹಿತ್ಯದ ಹಬ್ ಎನ್ನುವುದು ಬೆಂಗಳೂರೇ ಆಗಿರುತ್ತ ಕನ್ನಡ ನಾಡಿನ ಮೂಲೆ ಮೂಲೆಗಳಿಂದ ಬೆಂಗಳೂರು ಸೇರಿಕೊಂಡ ಯಾವತ್ತೂ ಕತೆ/ಕಾದಂಬರಿಕಾರರು ಅನನ್ಯವಾಗಿ ಬರೆದಿರಿಸಿರುವುದೆಲ್ಲಾ ತಮ್ಮ ಹಳ್ಳಿಯಲ್ಲಿ ಕಳೆದ ಬಾಲ್ಯ, ತಾರುಣ್ಯದ ಅನುಭವ, ಸಂವೇದನೆಗಳನ್ನೇ. ಬೆಂಗಳೂರನ್ನೇ ಕೇಂದ್ರವಾಗಿರಿಸಿಕೊಂಡಿರುವ ಒಂದೇ ಒಂದು ಕನ್ನಡ ಕಾದಂಬರಿ ಬಂದಿಲ್ಲ ಎಂದು ಗಿರೀಶ್ ಕಾರ್ನಾಡ್ ಹೇಳಿರುವ ಮಾತು, ಕನ್ನಡ ಒಟ್ಟಾರೆ ಸಾಹಿತ್ಯ ಸಂದರ್ಭದಲ್ಲಿ ಮಹತ್ವದ ಕೊರತೆಯೇನಲ್ಲವಾದಾಗ್ಯೂ, ಎಲ್ಲೋ ಒಂದೆಡೆ ಕೆಲವೊಂದು ಅರೆ-ಕೊರೆ, ಕೊರತೆಗಳತ್ತ ನಮ್ಮ ಗಮನವನ್ನು ಹರಿಯುವಂತೆ ಮಾಡುವಂಥಾದ್ದೇ, ಮಾಡಬೇಕಾದ್ದೇ. ಚಳುವಳಿಗಳಿಲ್ಲದ, ಆರ್ಥಿಕ, ರಾಜಕೀಯ, ಸಾಮಾಜಿಕ ತತ್ವ-ಸಿದ್ಧಾಂತಗಳು ಕೆಡವಲ್ಪಟ್ಟ ಆಧುನಿಕ ಬದುಕಿನ ಸಂಕ್ರಮಣ ಕಾಲವೊಂದು ನಮ್ಮೆದುರಿಗಿದೆ. ಗಾಂಧಿ, ನೆಹರೂ, ಎಸ್ ರಾಧಾಕೃಷ್ಣನ್, ಶ್ರೀರಾಮ, ಅಂಬೇಡ್ಕರ್, ಟಿಪ್ಪುಗಳ ಮೌಲ್ಯ, ಆದರ್ಶ, ಮಾದರಿಗಳನ್ನು ಆಧುನಿಕ ಪ್ರಜ್ಞೆ ಪ್ರಶ್ನಿಸುತ್ತದೆ, ಅವರ ಹುಳುಕುಗಳಲ್ಲಿ ಹೆಚ್ಚು ಆಸಕ್ತವಾಗಿದೆ ಮತ್ತು ಅವರನ್ನು ನಿರಾಕರಿಸುತ್ತದೆ. ಪರ್ಯಾಯವಾಗಿ ಅದು ಕಟ್ಟಿಕೊಳ್ಳುತ್ತಿರುವ ಮೌಲ್ಯ, ಆದರ್ಶ ಮತ್ತು ಮಾದರಿಗಳು ತತ್ಕಾಲೀನ ಅಗತ್ಯಗಳಾಗಿದ್ದು ಬಹುಬೇಗ ಅವುಗಳೆಲ್ಲಾ ಭ್ರಮನಿರಸನ ಹುಟ್ಟಿಸುವ ದಿನಗಳು ಕಾದಿವೆ. ಇದು ನಡುವಿನ ಸಂಕ್ರಮಣ ಘಟ್ಟವಷ್ಟೇ ಆಗಿದ್ದು ಮುಂದೆ ಎಲ್ಲವನ್ನೂ ಅವನು ಹೊಸದಾಗಿ ಕಟ್ಟಿಕೊಳ್ಳುವುದು ಅನಿವಾರ್ಯವಾಗುವುದು ಶತಃಸಿದ್ಧ. ಈ ಹಿನ್ನೆಲೆಯಲ್ಲಿ ನಾ ಮೊಗಸಾಲೆಯವರಂಥ ಜೀವನ ನಿಷ್ಠ ಬರಹಗಾರರು ಮುಖ್ಯವಾಗುತ್ತಾರೆ. ಅವರ ಮಾದರಿಯನ್ನು ಗಂಭೀರವಾಗಿ ಗಮನಿಸಿ ಪರಿಶೀಲಿಸುವುದು ಮುಖ್ಯವಾಗುತ್ತದೆ.

"ವರ್ತಮಾನದ ಮುಖಗಳನ್ನು ಗಮನಿಸುವುದು ಮತ್ತು ಅದರ ನಾನಾ ಸಾಧ್ಯತೆಗಳನ್ನು ಪರಿಭಾವಿಸಿ ಆ ಮೂಲಕ ಒಂದು ತಾತ್ವಿಕತೆಯನ್ನು ಸೂಚಿಸುವುದರತ್ತ ಮೊಗಸಾಲೆಯವರ ಪ್ರಧಾನ ಆಸಕ್ತಿ." ಎಂದೂ ಎಸ್. ಆರ್. ವಿಜಯಶಂಕರ್ ಅವರು ಗುರುತಿಸುತ್ತಾರೆ. "ಮೊಗಸಾಲೆಯವರು ಸದಾ ವರ್ತಮಾನದ ಪ್ರಭಾವಕ್ಕೆ ಒಳಗಾಗಿ ಪ್ರತಿಕ್ರಿಯಿಸುವವರು. ಅವರ ವರ್ತಮಾನದ ಮುಖಗಳಲ್ಲಿ ಆ ಕಾಲದ ಚಿಂತನೆಯೂ ಸೇರಿರುತ್ತದೆ. ಹಾಗಾಗಿ ವರ್ತಮಾನದ ಘಟನೆ, ಚಿಂತನೆ ಹಾಗೂ ಜೀವನಕ್ರಮ ಎಲ್ಲವೂ ಮೊಗಸಾಲೆ ಸೃಷ್ಟಿಸುವ ಬದುಕಿನ ಭಾಗವಾಗಿ ಕಾಣಿಸುತ್ತದೆ. ಅದನ್ನು ತೋರಿಸುವುದೇ ತಮ್ಮ ಕಲೆಯ ದರ್ಶನ ಶಕ್ತಿ ಎಂದವರು ತಿಳಿದಂತೆ ಭಾಸವಾಗುತ್ತದೆ.
"ಅಂದರೆ, ಸಾಹಿತ್ಯ ಸೃಷ್ಟಿಕ್ರಿಯೆ, ಕಂಡುದರ ವಿಶ್ಲೇಷಣೆಗಿಂತಲೂ ಹೆಚ್ಚಾಗಿ ಅದೊಂದು ಪ್ರತಿಸೃಷ್ಟಿ ಎಂಬುದು ಮೊಗಸಾಲೆಯವರ ಸೃಜನಶೀಲ ಮೀಮಾಂಸೆ" ಎನ್ನುವಲ್ಲಿ ಎಸ್. ಆರ್. ವಿಜಯಶಂಕರ್ ನಮಗೆ ಕೆಲವೊಂದು ಮಹತ್ವದ ಒಳನೋಟಗಳನ್ನು ದಕ್ಕಿಸುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ.

ಪ್ರಾದೇಶಿಕ ಪದಗಳ ಬಳಕೆ ಮತ್ತು ಒಟ್ಟಾರೆಯಾಗಿ ದಕ್ಷಿಣಕನ್ನಡದ ಒಂದು ಪ್ರಾದೇಶಿಕ ಬದುಕಿನ ಚಿತ್ರವನ್ನು ಮೊಗಸಾಲೆಯವರು ಕನ್ನಡದ ಪ್ರಜ್ಞೆಗೆ ಸೇರಿಸುತ್ತ ಬಂದಿದ್ದಾರೆನ್ನುವ ಎಸ್. ಆರ್. ವಿಜಯಶಂಕರ್ ಅವರು ಮೊಗಸಾಲೆಯವರ ಕತೆಗಳಿಗೆ ಒಂದು ಅಥೆಂಟಿಸಿಟಿ ಒದಗಿ ಬರುವ ಮಾಯಕತೆಯ ಬಗ್ಗೆ ಹೇಳುತ್ತ "ಕತೆಗಳು ಕೆಲವೊಮ್ಮೆ ಈಗಾಗಲೇ ತಿಳಿದಿರುವ ವರ್ತಮಾನವನ್ನೇ ವಿವರಿಸಿದರೂ, ಅವುಗಳಿಗೆ ಪಟ್ಟಾಂಗದ ಒಂದು ಗಮ್ಮತ್ತು ಸೇರಿಕೊಂಡಿರುತ್ತದೆ. ಹಾಗಾಗಿ ಅದು ಪುಟ್ಟ ಊರಿನ ಸುತ್ತಲಿನ ಜೀವಗಳ ವಿಚಾರ ತಿಳಿಯುವ ಮಾತು ಕತೆಯಾಗಿ ಪರಿವರ್ತನೆ ಹೊಂದುತ್ತದೆ. ಕತೆ ಹೇಳುವ ಲವಲವಿಕೆ ಹಾಗೂ ಚೈತನ್ಯ ಆಕರ್ಷಿಸುತ್ತದೆ." ಎಂದು ಬರೆಯುತ್ತಾರೆ.

ಹೀಗೆ ಹೇಳುವಾಗಲೂ ಮೊಗಸಾಲೆಯವರು ವಹಿಸುವ ಕೆಲವೊಂದು ಎಚ್ಚರಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ಪುಟ್ಟ ಹಳ್ಳಿ ಅಥವಾ ಊರಿನಲ್ಲಿ ಸುದ್ದಿಯಾಗುವ ವಿದ್ಯಮಾನಗಳು ಪಟ್ಟಾಂಗದ ಗಮ್ಮತ್ತಿಗೆ ಸಿಕ್ಕಿಕೊಂಡಾಗ ಸಹಜವಾಗಿಯೇ ಅವು ವದಂತಿಯ, ಸಡಿಲ ಮಾತುಗಳ ಮತ್ತು ಆರೋಪ-ಪ್ರತ್ಯಾರೋಪಗಳ ಕಡೆಗೆ ವಾಲುವುದು ನಡೆಯುತ್ತದೆ. ಆದರೆ ಮೊಗಸಾಲೆಯವರ ಫಿಲ್ಟರಿಂಗ್ ಇಲ್ಲಿ ಕೆಲಸ ಮಾಡಿದೆ. ಮಾಡಿಯೂ ಅದು ಉಳಿಸಿಕೊಂಡ ಅಥೆಂಟಿಸಿಟಿಯನ್ನು ಮೆಚ್ಚಿಕೊಳ್ಳುತ್ತಲೇ, ಒಟ್ಟಾರೆ ನಿರೂಪಣೆಯ ಹದ ಹುಟ್ಟಿಸುವ ಆಪ್ತಭಾವವನ್ನು ಒಪ್ಪಿಕೊಳ್ಳುತ್ತಲೇ, ಈ ಕತೆಗಳ ಸಾಮಾಜಿಕ, ತಾತ್ವಿಕ ಅರ್ಥಪೂರ್ಣತೆಯೇನು ಎಂಬುದರ ಮೌಲ್ಯನಿರ್ಣಯ ಕೂಡ ಮಾಡಬೇಕಾಗುತ್ತದೆ.

ಇಲ್ಲಿಯೇ ಗಮನಿಸಬೇಕಾದ ಇನ್ನೊಂದು ಬಹುಮುಖ್ಯ ವಿಚಾರವಿದೆ. ಪ್ರಾದೇಶಿಕ ಪದಗಳ ಬಳಕೆ ಮತ್ತು ಒಟ್ಟಾರೆಯಾಗಿ ದಕ್ಷಿಣಕನ್ನಡದ ಒಂದು ಪ್ರಾದೇಶಿಕ ಬದುಕಿನ ಚಿತ್ರವನ್ನು ಮೊಗಸಾಲೆಯವರು ಕನ್ನಡದ ಪ್ರಜ್ಞೆಗೆ ಸೇರಿಸುತ್ತ ಬಂದಿದ್ದಾರೆನ್ನುವ ಎಸ್. ಆರ್. ವಿಜಯಶಂಕರ್ ಅವರ ಮಾತಿನ ಮುಂದುವರಿಕೆಯಾಗಿ ಇದನ್ನು ಗಮನಿಸಬಹುದು. ನಮ್ಮ ದಕ್ಷಿಣಕನ್ನಡ ಒಂದು ವಿಶಿಷ್ಟವಾದ ಜಗತ್ತು. ಇಲ್ಲಿ ತುಳು, ಕೊಂಕಣಿ, ಕುಂದಾಪುರ ಕನ್ನಡ, ಹವ್ಯಕ ಕನ್ನಡ, ಬ್ಯಾರಿ ಭಾಷೆ, ಕ್ರಿಶ್ಚಿಯನ್ ಕೊಂಕಣಿ, ಕೇರಳದ ನಂಟು ಬಿಗಿಯಾಗಿರುವುದರಿಂದ ಮಲಯಾಳಂ-ಬ್ಯಾರಿ ಪ್ರಭಾವಿತ ಕನ್ನಡ, ಇಂಗ್ಲೀಷ್ ಮತ್ತು ಮುಂಬಯಿ ಸಂಪರ್ಕದಿಂದಲೋ ಶೈಕ್ಷಣಿಕವಾಗಿ ಮುಂದುವರಿದಿರುವುದರಿಂದಲೋ ಅಷ್ಟಿಷ್ಟು ಹಿಂದಿ ದೈನಂದಿನ ವ್ಯವಹಾರದಲ್ಲಿಯೇ ಕೇಳಸಿಗುವ ಭಾಷೆಗಳು. ಎಷ್ಟೇ ಸೀಮಿತ ವಲಯದಲ್ಲಿದ್ದರೂ ತುಳು, ಕೊಂಕಣಿ, ಕ್ರಿಶ್ಚಿಯನ್ ಕೊಂಕಣಿ ಮತ್ತು ಬ್ಯಾರಿ ಭಾಷೆಯ ಲಯ, ನಾದಗಳಿಂದ ಹೊರತಾಗಿ ಉಳಿಯಲು ಸಾಧ್ಯವೇ ಇಲ್ಲ. ಮೊಗಸಾಲೆಯವರಿಗೆ ಹವ್ಯಕ ಕನ್ನಡ ಮತ್ತು ಇಂಗ್ಲೀಷ್ ಹೆಚ್ಚುವರಿಯಾಗಿ ಇದ್ದ ಭಾಷೆಗಳು. ಇದರಿಂದಾಗಿ ಈ ಭಾಗದ ಬರಹಗಾರರು ಬಳಸುವ ಭಾಷೆಗೆ ಒಂದು ವಿಶಿಷ್ಟ ಲಯವಿದೆ. ನಾನು ಸಿನಿಮಾದವರು ಬಳಸುವ, ಮಂಗಳೂರಲ್ಲಿ ಬಿಡಿ, ಎಲ್ಲಿಯೂ ಬಳಕೆಯಲ್ಲಿಲ್ಲದ ಒಂದು ಅಪಭ್ರಂಶದ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿ ಹೆಸರಿಸಿದ ಯಾವತ್ತೂ ಭಾಷೆಗಳಲ್ಲಿ ಸ್ವತಂತ್ರವಾದ ಕೃತಿ ರಚನೆಗಳಾಗುತ್ತಿವೆ. ಆಯಾ ಭಾಷೆಗಳಿಗೆ ತಮ್ಮದೇ ಆದ ಸಾಹಿತ್ಯಿಕ ಸಂಪತ್ತು ಇದ್ದೇ ಇದೆ. ಆದರೆ ಇದೇ ಭಾಗದಿಂದ ಬಂದ ಒಬ್ಬ ಕನ್ನಡದ ಬರಹಗಾರ ಬರೆಯುವಾಗ ಅವನ ಭಾಷೆಗೆ, ಅವನು ಈ ಎಲ್ಲ ಭಾಷೆಗಳ ಆಡುಮಾತನ್ನು ದಿನನಿತ್ಯ ಕೇಳುತ್ತ ಬೆಳೆದವನಾದುದರಿಂದಲೇ ದಕ್ಕುವ ಒಂದು ವಿಶಿಷ್ಟ ಸೊಗಡು ಇದೆ. ಇದು ನಮಗೆ ಸಾಧಾರಣವಾಗಿ ಕುಪ್ಪಣ್ಣಯ್ಯನ ಹೋಟೆಲಿನಂಥ ಜಾಗದಲ್ಲಿ ಸೇರುವ ಜನ ಆಡುವ ಮಾತುಗಳಲ್ಲಿ ಸಿಗುತ್ತದೆ. ಅಲ್ಲಿ ಈ ಯಾವತ್ತೂ ಭಾಷೆಗಳನ್ನಾಡುವ ಮಂದಿ ಕಲೆಯುವುದರಿಂದ ಇದು ಸುಲಭವಾಗಿ ಕಾಣಸಿಗುತ್ತದೆ. ಇದನ್ನು ಮಲ್ಟಿ ಲಿಂಗ್ಯುಯಿಸ್ಟಿಕ್ (ಬಹುಭಾಷಾ) ಆಯಾಮವನ್ನಾಗಿ ಗುರುತಿಸುವ ಹೊಸ ಪ್ರಯತ್ನಗಳು ನಡೆದಿವೆ ಎಂದು ಮೊದಲು ನನ್ನ ಗಮನಕ್ಕೆ ತಂದವರು ಜಯಂತ ಕಾಯ್ಕಿಣಿ. ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಅಲ್ಲಿಯೇ ಬಹುಕಾಲ ನೆಲೆನಿಂತ ಕನ್ನಡ ಬರಹಗಾರರಲ್ಲಿ, ಬೇರೆ ಮಾತೃಭಾಷೆಯ ಕನ್ನಡ ಬರಹಗಾರರಲ್ಲಿ ಮಾತ್ರವೇ ಕಾಣಸಿಗುವ ಈ ಅಪರೂಪದ ಒಂದು ವಿಶಿಷ್ಟ ಲಯ ದಕ್ಷಿಣಕನ್ನಡದ ಬರಹಗಾರರಲ್ಲಿ ಅತ್ಯಂತ ಸಹಜವಾಗಿಯೇ ಬರುವುದು ಗಮನಾರ್ಹ. ಈ ಒಂದು ಪುಟ್ಟ ಭೂಪ್ರದೇಶದ ಭಾಷಾ ಶ್ರೀಮಂತಿಕೆಯೇ ಅದಕ್ಕೆ ಕಾರಣವೆನ್ನುವುದು ನಿಜವಾದರೂ ಅದರ ಎಳೆಯನ್ನು ಹಿಡಿದು, ಸೂಕ್ಷ್ಮವಾಗಿ ಗ್ರಹಿಸಿ ತಮ್ಮ ಅಭಿವ್ಯಕ್ತಿಯಲ್ಲಿ ಅದನ್ನು ಉಳಿಸಿಕೊಂಡು ಕೃತಿರಚಿಸುವ ಕಲೆಗಾರಿಕೆ ಎಲ್ಲರಿಗೂ ಸಿದ್ಧಿಸುವಂಥದ್ದಲ್ಲ. ಮೊಗಸಾಲೆಯವರು ಇದನ್ನು ಅದರ ಎಲ್ಲ ತಾಜಾತನದೊಂದಿಗೇ ಮರುಸೃಷ್ಟಿಸುವುದರಿಂದಾಗಿ ಅವರ ಕತೆಗಳ ನಿರೂಪಣೆಗೆ ಒಂದು "ಲವಲವಿಕೆ ಮತ್ತು ಚೈತನ್ಯ" ದಕ್ಕಿದೆ ಎಂದರೆ ತಪ್ಪಾಗಲಾರದು.

ಮೊಗಸಾಲೆಯವರ ಕತೆಗಳಲ್ಲಿ ಬರುವ ಸ್ತ್ರೀಮತದ ಪರ ನಿಲುವುಗಳ ಕುರಿತು ಎಸ್. ಆರ್. ವಿಜಯಶಂಕರ್ ಅವರು ನಮ್ಮ ಗಮನಸೆಳೆಯುತ್ತಾರೆ. ಮೊಗಸಾಲೆಯವರ ಅನೇಕ ಕತೆಗಳಲ್ಲಿ ಸ್ತ್ರೀ ಗಟ್ಟಿಮನಸ್ಸಿನ, ಗಂಡಿನೆದುರು ಸರಿಸಮಾನವಾಗಿ ನಿಂತು ವಾದಿಸಬಲ್ಲ, ಬೇಕೆಂದರೆ ಒಲೆಯಾಗಿ ಹೊತ್ತಿ ಉರಿಯಬಲ್ಲ (ಧರೆ), ಬುದ್ಧಿ ಕಲಿಸಬಲ್ಲ ಮತ್ತು ಸಂದರ್ಭ ಬಂದರೆ ತಾನೇ ಮುಂದಾಗಿ ನಿಂತು ರಕ್ಷಿಸಬಲ್ಲ ಹೆಣ್ಣು. ಅಸಹಾಯಕತೆಯಿಂದ ಅಳಲು ತೋಡಿಕೊಳ್ಳುವ, ಕನಿಕರ,ಅನುಕಂಪ ಗಿಟ್ಟಿಸಿಕೊಳ್ಳಲು ಹಾತೊರೆಯುವ ಒಂದೇ ಒಂದು ಹೆಣ್ಣು ಜೀವ ಇಲ್ಲಿಲ್ಲ. ಭ್ರಷ್ಟಾಚಾರ, ಪಂಚಾಯಿತಿ ಚುನಾವಣೆಯ ಮಟ್ಟದ ರಾಜಕೀಯ, ಸೀಮಿತ ಮಟ್ಟದಲ್ಲಿ ಆರ್ಥಿಕ ವ್ಯವಹಾರ ಮತ್ತು ಲೇವಾದೇವಿ, ಕೃಷಿ-ಕಂಬಳ-ಯಕ್ಷಗಾನ-ನಾಗಾರಾಧನೆ ಮತ್ತಿತರ ವೈದಿಕ ಆಚರಣೆಗಳು, ಅಡುಗೆಯ ವಿವರ/ವರ್ಣನೆ, ಗಂಡು-ಹೆಣ್ಣು ಸಂಬಂಧದ ಸುತ್ತ ತಿರುಗುವ ವಿದ್ಯಮಾನಗಳು - ಇವು ಪ್ರಧಾನವಾಗಿ ನಾ ಮೊಗಸಾಲೆಯವರ ಕಥಾಜಗತ್ತಿನ ಕೇಂದ್ರಬಿಂದುಗಳು. ಹಾಗಿದ್ದೂ ಒಂದು ಕೇಂದ್ರವನ್ನು ಫೋಕಸ್ ಮಾಡುವ ತಂತ್ರವನ್ನು ಮೊಗಸಾಲೆಯವರು ಎಲ್ಲಿಯೂ ಅನುಸರಿಸುವುದೇ ಇಲ್ಲ. ಇದಕ್ಕಾಗಿ ಬಹುಶಃ ಉದ್ದೇಶಪೂರ್ವಕವಾಗಿಯೇ ಅವರು ಕೊಂಚ ವಾಚಾಳಿತನವನ್ನು ಆರೋಪಿಸಿಕೊಳ್ಳುವ ತಂತ್ರ ಹೂಡುತ್ತಾರೆಯೇ ಎನ್ನುವ ಅನುಮಾನವೂ ಬರುತ್ತದೆ. ಧರ್ಮ, ಧಾರ್ಮಿಕ ಆಚರಣೆಗಳು, ಶಾಸ್ತ್ರ, ಜಾತೀಯತೆ ಮತ್ತು ಇಂಥ ವಿಚಾರಗಳಲ್ಲಿನ ಗೊಡ್ಡುತನವೂ ಸೇರಿದಂತೆ ಒಟ್ಟಾರೆ ಮೌಢ್ಯದ ಸ್ಪಷ್ಟ ನಿರಾಕರಣೆಯೊಂದೇ ಈ ಕತೆಗಳ ಕ್ರಾಂತಿಕಾರಕ ಅಂಶವೇ ಹೊರತು ಯಾವುದೇ ಸಾಮಾಜಿಕ ಸಮಸ್ಯೆಯ ನ್ಯಾಯನಿರ್ಣಯವಾಗಲೀ, ಒಂದು ತಾತ್ವಿಕ ನಿಲುವಿನ ಪ್ರತಿಪಾದನೆಯಾಗಲೀ ಇಲ್ಲಿ ನಮಗೆ ಸಿಗುವುದಿಲ್ಲ. ಗಾಂಧೀವಾದದ ನೆಲೆಯಾಗಲಿ, ಅಲ್ಲಮನ ತತ್ವಗಳ ಚಿಂತನೆಯಾಗಲೀ ಸೀತಾಪುರದ ಬದುಕಿನ ರೀತಿ-ನೀತಿ, ಮೌಲ್ಯ-ಪ್ರಮಾಣಗಳ ನೆಲೆಯಲ್ಲೇ ಒದಗಿ ಬರಬೇಕಾದ ಸಂಗತಿಗಳಾಗಿವೆಯೇ ಹೊರತು ಅವುಗಳ ಸಾರ್ವತ್ರಿಕ ಆಯಾಮವನ್ನೇನೂ ಇಲ್ಲಿನ ಗ್ರಾಮ್ಯಜೀವನ ಪದ್ಧತಿಗೆ ಅನುಸಂಧಾನಗೊಳಿಸುವ ಪ್ರಯತ್ನವಿಲ್ಲ.

ಮೊಗಸಾಲೆಯವರ ಕತೆಗಳಲ್ಲಿ ಉದ್ದಕ್ಕೂ ಸಮಾಜಮುಖಿ ಧೋರಣೆಯೇ ಎದ್ದು ಕಾಣುತ್ತದೆ. ನವ್ಯಪರಂಪರೆಯ ಉಚ್ಛ್ರಾಯದಲ್ಲೇ ಸಣ್ಣಕತೆಗಳ ಬರವಣಿಗೆಯನ್ನು ಆರಂಭಿಸಿದರೂ ಮೊಗಸಾಲೆಯವರ ಯಾವುದೇ ಕತೆಗಳಲ್ಲಿ ಅಂತರಂಗದ ವಿಶ್ಲೇಷಣೆಯನ್ನಾಗಲೀ, ಮಾನಸಿಕ ತುಮುಲ, ದ್ವಂದ್ವಗಳ ಸ್ವಗತವನ್ನಾಗಲೀ ನಾವು ಕಾಣುವುದು ಸಾಧ್ಯವಿಲ್ಲ. ಎಲ್ಲವೂ ಗಟ್ಟಿಧ್ವನಿಯ ಮಾತುಗಳಲ್ಲೇ ಸ್ಪಷ್ಟವಾಗುವ, ಹೆಚ್ಚೆಂದರೆ ರಥಬೀದಿಯ ಕುಪ್ಪಣ್ಣಯ್ಯನವರ ಹೋಟೇಲಿನಲ್ಲೋ, ಅವರ ಮನೆಯ ಚಾವಡಿಯಲ್ಲೋ ಇಬ್ಬರಿಗಷ್ಟೇ ಕೇಳುವ ಪಿಸುಮಾತಾಗಿಯೋ ನಡೆಯುವ ವಿಶ್ಲೇಷಣೆಯಷ್ಟೇ ಇಲ್ಲಿ ಲಭ್ಯ. ಆದರೆ ಈ ಮಾತಿಗೆ ಅಪವಾದವೆಂಬಂತೆ ಮೊಗಸಾಲೆಯವರ ನಾಲ್ಕನೆಯ ಕಥಾಸಂಕಲನದ ಎರಡನೆಯ ಭಾಗದ ಮೂರು ಕತೆಗಳಿವೆ. ಸದಾನಂದ ರಾಯರ ಇನ್‌ಫ್ಯಾಚುಯೇಶನ್ ಆಗಲಿ, ತಮ್ಮ ಹೆಂಡತಿ ಮತ್ತು ಸೊಸೆ ಅಲ್ಲಮನ ತಾತ್ವಿಕ ನಿಲುವುಗಳಿಗೆ ಅಲೈನ್ ಆಗುವುದನ್ನೇ ಕಾಯುತ್ತಿರುವ ಶ್ರೀನಿವಾಸರಾಯರ ತುಮುಲಗಳಾಗಲೀ, ರಮಾನಾಥ ಮತ್ತು ಅವನಿಯ ಪ್ರೇಮ-ಕಾಮದ ಗೊಂದಲಗಳಾಗಲೀ, ಪಾವಿತ್ರ್ಯ(ಪ್ಯೂರಿಟನ್ ಕಾನ್ಸೆಪ್ಟ್) ದ ಪರಿಕಲ್ಪನೆಯಾಗಲಿ ಮೊಗಸಾಲೆಯವರ ಕತೆಗಳ ಜಾಯಮಾನಕ್ಕೆ ಹೊಸದೆಂಬಂತೆ ನಿಲ್ಲುತ್ತವೆ. ಈ ಮೂರೂ ಕತೆಗಳು ಸಾಮಾನ್ಯವಾಗಿ ಅಂತರಂಗದ ಪಿಸುಮಾತುಗಳನ್ನು ಕತೆಯಾಗಿಸದ ಮೊಗಸಾಲೆಯವರ ಕಥನ ಕ್ರಮಕ್ಕೆ ಒಡ್ಡಿದ ಸವಾಲುಗಳಿಗಾಗಿ ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ.

ಜಾಗತೀಕರಣ, ಮುಕ್ತ ವ್ಯಾಪಾರನೀತಿಗಳಿಂದಾಗಿ ಜಗತ್ತು ಕಿರಿದಾಗಿ ಅದೊಂದು ಗ್ರಾಮವೇ ಆಗಿಬಿಟ್ಟಿರುವುದು ಎಲ್ಲರಿಗೂ ಗೊತ್ತು. ಇದರ ಪರಿಣಾಮವೋ ಎಂಬಂತೆ ಆಧುನಿಕ ಸಾಹಿತ್ಯದಲ್ಲಿ, ವಿಶೇಷತಃ ಇಂಗ್ಲೀಷ್ ಸಾಹಿತ್ಯದ ಪ್ರಭಾವದಿಂದ ದೇಶೀಯ ಸಾಹಿತ್ಯದಲ್ಲಿಯೂ Outsider ಎಂಬ ಒಂದು ಪ್ರಜ್ಞೆ ಒಂದು ಕೃತಿಯಲ್ಲಿ ಹೇಗೆಲ್ಲ ಕಾಣಿಸಿಕೊಳ್ಳಬಹುದು, ಅದರ ಸಾಧಕ-ಬಾಧಕಗಳೇನು ಎಂಬ ಅಂಶ ಮಹತ್ವ ಪಡೆದಿದೆ. ನಾ ಮೊಗಸಾಲೆಯವರ ಕತೆಗಳಲ್ಲಿಯೂ ಸೀತಾಪುರದಲ್ಲಿಯೇ ಹುಟ್ಟಿ ಬೆಳೆದವರು, ಸೀತಾಪುರವನ್ನು ಬಿಟ್ಟು ಹೊರ ಹೋಗಿ ನೆಲೆಯಾದವರ ಮರುಭೇಟಿ, ಸೀತಾಪುರಕ್ಕೆ ಹೊರಗಿನಿಂದ ಉದ್ಯೋಗನಿಮಿತ್ತವೋ, ವ್ಯವಹಾರ ನಿಮಿತ್ತವೋ ಬಂದು ಸೇರಿಕೊಂಡು ಇಲ್ಲೇ ನೆಲೆಯಾದವರು ಮುಂತಾದ ಬಗೆಯ ವ್ಯಕ್ತಿಗಳಿದ್ದಾರೆ, ಅವರ ಇಂಥ ಹಿನ್ನೆಲೆಯ ಕುರಿತ ವಿವರವನ್ನು ಅವಶ್ಯ ನೀಡಲಾಗುತ್ತದೆ. ಆದರೆ, ಲೋಕಲೈಟ್ ಎಂಬ ಪ್ರಜ್ಞೆ ಇಲ್ಲಿ ಸಾಕಷ್ಟು ವಿಸ್ತೃತ ನೆಲೆಯಲ್ಲಿಯೇ ಮೆರೆಯುತ್ತದೆ. ಇಲ್ಲಿನ ಕುಪ್ಪಣ್ಣಯ್ಯನಾಗಲೀ, ಹಲಗೆಪ್ಪ-ತಗಡಪ್ಪಗಳಾಗಲೀ, ಶೇಕಬ್ಬ-ಹಸನಬ್ಬಗಳಾಗಲೀ, ಸಿರಿಲ್-ಜಾನ್ ಡಿಸಿಲ್ವಗಳಾಗಲೀ ಹೊರಗಿನವರಾಗುವುದು ಸಾಧ್ಯವೇ ಇಲ್ಲದಂತೆ ಸೀತಾಪುರದವರೇ ಆಗಿಬಿಡುತ್ತಾರೆ ಎಂಬ ಅಂಶ ಮಹತ್ವದ್ದು.

ಮೊಗಸಾಲೆಯವರ ಕಥನ ಕ್ರಮ, ಸ್ಥೂಲವಾಗಿ ಕತೆಯನ್ನು ತೊಡಗುವ ಕ್ರಮ ಅಥವಾ ತಂತ್ರ, ಮೊಗಸಾಲೆಯವರು ಆರಿಸಿಕೊಂಡ (ಅದರಲ್ಲಿ ಪುನರಾವರ್ತನೆಯೇನಾದರೂ ಇದೆಯೇ ಎಂಬ ಪ್ರಶ್ನೆಯೊಂದಿಗೆ) ವಸ್ತು ವಿನ್ಯಾಸ, ಅವರ ಕತೆಯ ಕೇಂದ್ರಬಿಂದು - ಈ ಮೂರು ಅಂಶಗಳನ್ನು ಅರಿಯಲು ಇಲ್ಲಿ ಒಂದು ಹೊಸ ವಿಧಾನವನ್ನು ಅನುಸರಿಸುತ್ತಿದ್ದೇನೆ. ಇಲ್ಲಿ ಕತೆಯನ್ನು ಸರಳಗೊಳಿಸಿ, ಅದರ ವಸ್ತು ಅಥವಾ ಕೇಂದ್ರವನ್ನು ಒಂದು ಅಥವಾ ಎರಡು ವಾಕ್ಯಗಳಲ್ಲಿ ಹಿಡಿದುಕೊಡುವ ಪ್ರಯತ್ನವಿಲ್ಲ. ಉದ್ದೇಶಪೂರ್ವಕವಾಗಿಯೇ ಮೊಗಸಾಲೆಯವರು ಕತೆಯನ್ನು ಎಲ್ಲಿಂದ ತೊಡಗುತ್ತಾರೆ, ಪ್ರಮುಖವಾಗಿ ಯಾವ ಯಾವ ಪಾತ್ರಗಳು ಅಲ್ಲಿ ಬರುತ್ತವೆ, ಯಾವೆಲ್ಲ ಪ್ರಕರಣಗಳನ್ನು ಕತೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತವೆ ಎನ್ನುವುದನ್ನು ಸೂಚಿಸಲು ಕತೆಯನ್ನು ಓದಿದವರಿಗಷ್ಟೇ ಅರ್ಥವಾಗುವ ಹಾಗೆ ಗುರುತಿಸಿಕೊಂಡು (ಸ್ಕೆಚ್ ಮಾಡಿದಂತೆ) ಒಟ್ಟಾರೆ ಕತೆ ಯಾವೆಲ್ಲದರ ಕುರಿತಾಗಿದೆ ಎನ್ನುವುದನ್ನು ಕಾಣುವ ಪ್ರಯತ್ನವಿದೆ. ತನ್ಮೂಲಕ ಮೊಗಸಾಲೆಯವರ ತಂತ್ರ, ಕತೆಯ ವಸ್ತು ಮತ್ತು ಕೇಂದ್ರ ಹಾಗೂ ಒಟ್ಟಾರೆಯಾಗಿ ಕತೆ ಕೇಂದ್ರದಿಂದ ಅನ್ಯತ್ರ ಸರಿದು ಹೋಗುವ ಪ್ರಮಾಣ ಎಷ್ಟು ಮತ್ತು ಯಾವ ಬಗೆಯದ್ದು ಎನ್ನುವುದನ್ನು ಅರಿಯಲು ಸಾಧ್ಯವಾದೀತೆಂಬ ನಂಬಿಕೆಯಿದೆ. ಇದರ ಜೊತೆಜೊತೆಗೇ ಮೊಗಸಾಲೆಯವರ ಕತೆಗಳಲ್ಲಿನ ವಸ್ತು ವೈವಿಧ್ಯ, ಅದರ ಸಾಮಾಜಿಕ/ತಾತ್ವಿಕ ಆಯಾಮಗಳು ಮತ್ತು ಅವು ಪ್ರತಿಪಾದಿಸುವ (ಪ್ರತಿಪಾದಿಸುತ್ತಿದ್ದಲ್ಲಿ) ಅಂಶಗಳೇನು ಎಂಬ ಕುರಿತೂ ಒಂದು ಸ್ಥೂಲ ಅಂದಾಜು ಸಿಗಬಹುದು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Friday, May 20, 2016

ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಾಕಿಲ್ಲ

ಹಿಂದಿ ಕವಿ ವಿಜಯಕುಮಾರ ಅವರ ಕೆಲವು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಮುಕುಂದ ಜೋಷಿಯವರ "ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಾಕಿಲ್ಲ ಮತ್ತು ಇತರ ಕವಿತೆಗಳು" ಎಂಬ ಸಂಕಲನ ಹಿಂದಿಗೆ ಹೇಗೋ ಕನ್ನಡಕ್ಕೂ ಹೊಸ ಸಂವೇದನೆ, ಗ್ರಹಿಕೆ ಮತ್ತು ಅಭಿವ್ಯಕ್ತಿಯ ಕ್ರಮ ಕೊಡಮಾಡಬಲ್ಲ ಕಸು ಹೊಂದಿರುವ ಕೃತಿ.

ನಮ್ಮೆಲ್ಲರ ಬದುಕಿನಲ್ಲೂ ಏನೋ ಕೆಲವು ಆಳದ ಸೆಳೆತಗಳು, ಹಂಬಲ, ಹಪಾಹಪಿಗಳು ಮತ್ತು ಅವು ಈಡೇರದ ತೊಳಲಾಟಗಳು ಇದ್ದೇ ಇರುತ್ತವೆ. ಸಂಜೆ ಹೊತ್ತು ಒಬ್ಬರೇ ಕುಳಿತು ಮೌನ ಗಂವ್ ಎಂದು ಕಿವಿಹೊಕ್ಕಾಗ ಏನೋ ಒಂದು ಸುದೀರ್ಘ ಆಲಾಪದಂತೆ ಅದು ನಮ್ಮನ್ನು ಆವರಿಸಿ ಅಪ್ಪುತ್ತದೆ. ನಾವು ಏನನ್ನೂ ಯೋಚಿಸುತ್ತಿರುವುದಿಲ್ಲ, ಮನಸ್ಸು ಖಾಲಿಯಾಗಿರುತ್ತದೆ. ಆದರೂ ತುಂಬಾ ಯೋಚಿಸುತ್ತಿರುವಂತೆ ಅನಿಸುತ್ತದೆ. ನಮ್ಮಲ್ಲಿ ಯಾವ ಆಪ್ತರು ನಮ್ಮನ್ನು ಬಿಟ್ಟೇ ಹೊರಟುಹೋದ ಕುರಿತ ನೋವೂ ಅಳುವಾಗಿ ಬಿಕ್ಕುತ್ತಿರುವುದಿಲ್ಲ. ಆದರೂ ಮೌನವಾಗಿ ರೋದಿಸುತ್ತಿರುವಂತೆ ಅನಿಸುತ್ತದೆ. ಓದು ಮುಗಿದು ವರ್ಷ ಕಳೆಯುತ್ತ ಬಂದರೂ ಕೆಲಸ ಸಿಗದೇ ಹೋದ, ಪರಾನ್ನಕ್ಕೆ ಬಿದ್ದ ಅವಮಾನಕ್ಕೆ ಕುಗ್ಗಿದ ಯುವಕರು, ವಯಸ್ಸು ದಾಟುತ್ತಿದ್ದರೂ ಮದುವೆಯಾಗುವುದು ಸಾಧ್ಯವಾಗದೇ ಅನಿಶ್ಚಿತ ಭವಿಷ್ಯಕ್ಕೆ ಕಣ್ಣರಳಸಿ ಕಾಯುತ್ತಿರುವ ಯುವತಿಯರು, ಪ್ರತಿದಿನವೂ ಹಿಂದಿನ ದಿನದಂತೆ ಅನ್ನಕ್ಕೆ ಸಾಲುವಷ್ಟು ಸಂಪಾದನೆ ಕೈಗೂಡದೇ ಹೋದ ಫುಟ್‌ಪಾತ್ ವ್ಯಾಪಾರಸ್ಥರು, ವೃದ್ಧಾಪ್ಯದಲ್ಲಿ ಒಂಟಿಯಾಗಿಬಿಟ್ಟವರು.....

ಈ ಜಗತ್ತಿನಲ್ಲಿ ನಮಗಿಂತ ಕಡಿಮೆ ನೋವು, ಅನಿಶ್ಚಿತತೆ, ವೈಕಲ್ಯ, ಶೂನ್ಯ ತುಂಬಿಕೊಂಡ ಮಂದಿ ತುಂಬ ಇದ್ದಾರೆ. ಆದರೆ ನಮಗೆ ನಮ್ಮ ನೋವು ಸಣ್ಣದೆನಿಸುವುದಿಲ್ಲ. ಅಷ್ಟು ಸಾಲದೆಂಬಂತೆ ನಮಗೆ, ನಮಗೇ ಈ ಬದುಕು ಯಾಕೆ ಹೀಗೆ ಹೊರಲಾರದ ಹೊರೆಯಾಗಿ ಬಿಟ್ಟಿತೆಂಬ ಚಿದಂಬರ ರಹಸ್ಯವೊಂದಕ್ಕೆ ಉತ್ತರ ಬೇಕೆಂಬ ಬೇಗುದಿಯೂ ಕಾಡುತ್ತಿರುತ್ತದೆ. ಮುಸ್ಸಂಜೆಯಲ್ಲಿ ಕಣ್ಣರಳಿಸಿ ನೋಡಿದರೆ ಸುಖವಾಗಿದ್ದಾರೆಂಬಂತೆ ಕಾಣುವ ಮಂದಿಯೆಲ್ಲ ಏನೋ ಭಾರಹೊತ್ತಂತೆ, "ಶಿವನೆ ಸಾಕು ಎನ್ನೋರು" ತುಂಬಿರುವಂತೆ ಕಾಣತೊಡಗುತ್ತದೆ.

ಮತ್ತಿದು, ಹೀಗೆ ಎಲ್ಲರಿಗೂ ಆಗುವುದಿಲ್ಲ. ಮೇಲಿನ ಯಾವುದೂ ಯಾವತ್ತೂ ಸಂಭವಿಸದಂತೆ ಬದುಕು ನೀಗಿದವರು ಸಾಕಷ್ಟಿದ್ದಾರೆ. ಈ ಕೃತಿ ಅವರಿಗಲ್ಲ.

ಬದುಕಿನ ಮೌನಸಂಕಟಗಳನ್ನು ಬಲ್ಲವರೇ ಬಲ್ಲರು. ಅವುಗಳು ಭಾಷೆಗೆ ಮೀರಿ ನಿಂತಿರುವುದರಿಂದಲೇ ಮೌನಕ್ಕೆ, ಸಂಗೀತಕ್ಕೆ ಮಾತ್ರ ತೆರೆದುಕೊಳ್ಳುತ್ತವೆ. ಆದರೆ ಸಾಹಿತಿಯೊಬ್ಬನ ಬಳಿ ಇರುವ ಸಾಯತ ಭಾಷೆ ಮತ್ತು ಕೇವಲ ಭಾಷೆಯೊಂದೇ. ಅವನು ಮೌನವನ್ನು ಕೂಡ ಭಾಷೆಯಲ್ಲೇ ಕಟ್ಟಿಕೊಡಬೇಕಾಗಿದೆ ಮತ್ತು ಅದರಿಂದಲೇ ಓದುಗನ ಪಂಚೇಂದ್ರಿಯಗಳಿಗೆ ಆ ನೀರವ ಕ್ಷಣಗಳ ಅಮೂರ್ತ ಅನುಭವವನ್ನು ಮೂರ್ತೀಕರಿಸ ಬೇಕಿದೆ. ಇದು ಅವನ ಎದುರಿಗಿರುವ ಸವಾಲು ಮತ್ತು ಅವನಿಗಿರಬೇಕಾದ ಕನಿಷ್ಟ ಸಾಮರ್ಥ್ಯವೆಂದು ನಿರೀಕ್ಷಿಸಲಾಗುವ ಶಕ್ತಿ. ಇದನ್ನು ಕಂಡುಕೊಳ್ಳದ ಸಾಹಿತಿಗಳ ಮಾತು ಬಿಡಿ.
ವಿಜಯಕುಮಾರ ವಿಮರ್ಶಕರೆಂದೇ ಖ್ಯಾತರಾದವರು. ಶ್ರೇಷ್ಠ ಸಾಹಿತಿಯಾಗಲು ವಿಫಲರಾದವರು ವಿಮರ್ಶಕರಾಗುತ್ತಾರೆ ಎಂಬುದು ಒಂದು ಮಾತು. ವಿಜಯಕುಮಾರರ ಈ ಸಂಕಲನಕ್ಕೆ ಮುನ್ನುಡಿ ಬರೆದ ಅರುಣಕಮಲ ಅವರು ಕೂಡ ವಿಮರ್ಶಕನೊಬ್ಬ ಕವಿ ಹೇಗಾಗಬಹುದು ಎಂದು ಪ್ರಶ್ನಿಸಿಕೊಳ್ಳುತ್ತ ವಿಜಯಕುಮಾರ ಮೂಲತಃ ಒಬ್ಬ ಕವಿ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಸ್ವತಃ ವಿಜಯಕುಮಾರ ಅವರೇ ಹೇಳಿಕೊಂಡಿರುವ ಎರಡು ಮಾತುಗಳಲ್ಲಿ ಬಹಳಷ್ಟು ತಥ್ಯವಿದೆ. "...ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುವುದರ ರೋಮಾಂಚನ, ಚರ್ಚಿತ ಸಾಹಿತ್ಯಕಾರರ ಗ್ಲಾಮರ್, ಗಾಳಿಸುದ್ದಿ, ವಿಶಿಷ್ಟ ಅನ್ನಿಸಿಕೊಳ್ಳುವುದರ ಭ್ರಮೆ ಮತ್ತು ಹೊಸ ಹೊಸ ಜನರ ಪರಿಚಯದ ಉತ್ತೇಜನೆಯ ಆಕರ್ಷಣೆಯ ಹೊರತಾಗಿಯೂ ನಿಶ್ಚಿತವಾಗಿ (ಆ ಎಲ್ಲ ರಾತ್ರಿಗಳು) ಬದುಕುವುದರ ಬಗ್ಗಿನ, ವಿಶಿಷ್ಟ ರೀತಿಗಳ ಜೊತೆಗಿನ ಸಂಶಯ, ಅಸ್ಪಷ್ಟತೆ ಮತ್ತು ಏಕಾಕಿತನ ತುಂಬಿದ ಎಲ್ಲ ರಾತ್ರಿಗಳು ನನ್ನ ಜೊತೆಗೇ ಇದ್ದವು."

"ಕಲೆ ಅಸಫಲತೆಗಳ ಜೊತೆಗಿನ ಪ್ರಾಮಾಣಿಕತೆ" ಎಂಬ ಮಾತನ್ನು ನೆನೆದುಕೊಳ್ಳುವ ವಿಜಯಕುಮಾರ "ಒಂದು ಹೇಳಲಾಗದ ವಿಚಿತ್ರ ಅಸ್ವಸ್ಥತೆ ಮನಸ್ಸಿನಲ್ಲಿ ಇರುತ್ತಿತ್ತು. ಈ ಪ್ರತಿನಿತ್ಯದ ಬದುಕು ನಮಗೇನು ಕೊಡುತ್ತದೆ ಎಂಬ ಪ್ರಶ್ನೆ ಕೂಡುತ್ತಿತ್ತು. ನಮ್ಮ ಅಕ್ಕಪಕ್ಕದ ಲಕ್ಷಾವಧಿ ಜನರ ಬದುಕಿನಲ್ಲಿ ಇದ್ಯಾವ ಗತಿಹೀನತೆ, ನಿಸ್ಸಹಾಯಕತೆ ಇದೆ? ಒಂದು ಕಾಣೆಯಾಗುತ್ತಿರುವ ನೋಟ, ಸರಿಯುತ್ತಿರುವ ದೃಶ್ಯ, ಒಂದು (ಕಳೆದು ಹೋದರೂ ಉಳಿದ) ಸಮಯ ನನ್ನೊಳಗೆ ಉಳಿದೇ ಇರುತ್ತಿತ್ತು. ನಾನದನ್ನು ಭಾಷೆಯಲ್ಲಿ ಮತ್ತೊಮ್ಮೆ ಹಿಡಿಯಬಯಸಿದ್ದೆ. ಮನಸ್ಸಿನಲ್ಲಿ ಯಾವಾಗಲೂ ಒಂದು ಸಂಶಯವೂ ಎದ್ದೇಳುತ್ತಿತ್ತು. ಇದೆಲ್ಲ ವ್ಯರ್ಥ ಭಾವುಕತೆ ಇರಲಿಕ್ಕಿಲ್ಲ ತಾನೇ?" ಎಂದೂ ಹೇಳುತ್ತಾರೆ. ಇಲ್ಲಿ ಗಮನಿಸಬೇಕಾದ ಎರಡು ಮೂರು ಸಂಗತಿಗಳಿವೆ.

ಒಂದು, ವಿಜಯಕುಮಾರ ಬಯಸಿದ "ಭಾಷೆಯಲ್ಲಿ ಮತ್ತೊಮ್ಮೆ ಹಿಡಿಯುವ" ಕೆಲಸಕ್ಕೆ ಅವರಿಗೆ ಒದಗಿದ ಸಹಾಯಕ ಅಂಶಗಳು ಯಾವುವು ಮತ್ತು ಅವರದನ್ನು ಹೇಗೆ ದುಡಿಸಿಕೊಂಡರು ಎನ್ನುವುದು. "ನನ್ನ ಬಳಿ ಕೇವಲ ಕೆಲವು ಕವಿತೆಗಳ ಮುರಿದು ತುಂಡಾದ ಸಾಲುಗಳು, ಅಪೂರ್ಣ ಬಿಂಬಗಳು ಮತ್ತು ಸಾವಿರಾರು ಸಲ ಪುನಃ ಪುನಃ ಬಳಸಿದ ಶಬ್ದಗಳಿವೆ" ಎನ್ನುತ್ತಾರವರು. ಇದನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ.

ಇನ್ನೊಂದು, ನಿಮ್ಮಲ್ಲಿ ಕೆಲವರಿಗಾದರೂ ಇಷ್ಟರಲ್ಲೇ ನೆನಪಾಗಿರಬಹುದಾದ, ತಮ್ಮ "ಅವಸ್ಥೆ" ಕಾದಂಬರಿಯಲ್ಲಿ ಡಾ||ಯು.ಆರ್.ಅನಂತಮೂರ್ತಿಯವರು ಚರ್ಚಿಸಿದ ಒಂದು ಸಂಗತಿ. ಅದು ಈ ಪ್ರತಿನಿತ್ಯದ ಬದುಕು ನಮಗೇನು ಕೊಡುತ್ತದೆ ಎನ್ನುವ ಪ್ರಶ್ನೆಗೆ ಸಂಬಂಧಿಸಿದ್ದು. "ಅವಸ್ಥೆ" ಕಾದಂಬರಿಯಲ್ಲಿ ಕೃಷ್ಣಪ್ಪನನ್ನು ಮೊದಲಿಂದ ತುದಿಯ ತನಕ ಕಾಡುವ ಒಂದು ಪ್ರಶ್ನೆ ದೈನಿಕ ಕ್ಷುದ್ರತೆಯ ಕುರಿತಾದ್ದು. ಪ್ರೀತಿ, ಪ್ರೇಮ, ಕಾಮ ಎಲ್ಲದರಲ್ಲೂ ಕ್ಷುದ್ರತೆಯನ್ನು ಕಾಣುವ ಆತ ರಾಜಕೀಯದಿಂದಲೂ ತನಗೆ ಅದನ್ನು ಮೀರಲಾಗಿಲ್ಲ ಎಂದು ಹಳಹಳಿಸುತ್ತಾನೆ, ಇರಲಿ. ನಮ್ಮ ದೈನಂದಿನದಲ್ಲಿ ಅಂಥ "ಗ್ರೇಟ್" ಆದುದು ಏನೂ ಇಲ್ಲ. ಅಡುಗೆ, ಪಾತ್ರೆ ತೊಳೆಯುವುದು, ಕಸ ಗುಡಿಸಿ ನೆಲ ಒರೆಸುವುದು, ಬಟ್ಟೆಬರೆ ತೊಳೆಯುವುದು, ಹೆಚ್ಚೆಂದರೆ ನಾಲ್ಕು ಟೀವಿ ಸೀರಿಯಲ್ ನೋಡುವುದು - ಇಷ್ಟರಲ್ಲೇ ಇಡೀ ಬದುಕು ಕಳೆದ ಲಕ್ಷಾಂತರ ಮಹಿಳೆಯರು ನಮ್ಮ ಆಸುಪಾಸಿನಲ್ಲಿ ಇವತ್ತಿಗೂ ಇದ್ದಾರೆ. ಗಂಡಸರೂ ಸೇರಿದಂತೆ ಇನ್ನಷ್ಟು ಮಂದಿ ಮಹಿಳೆಯರು ದಿನವೂ ಆಫೀಸಿಗೆ ಹೋಗಿ ಬಂದು, ಪೇಪರು ಓದಿ, ಫೇಸ್‌ಬುಕ್ಕು, ಟೀವಿ ಮತ್ತೊಂದು ನೋಡಿ, ಶೇರ್ ಮಾರ್ಕೆಟ್ಟು, ಟ್ಯಾಕ್ಸು, ಟ್ರಾಫಿಕ್ಕು, ಮೋದಿಯ ವಿದೇಶಯಾತ್ರೆ, ಸುನಂದಾ ಪುಷ್ಕರ್ ಕೊಲೆ, ಅಸಹಿಷ್ಣುತೆ ಇದೆಯೇ ಇಲ್ಲವೆ ಎಂದೆಲ್ಲ ತಲೆಕೆಡಿಸಿಕೊಂಡು ಕಳೆದುಬಿಟ್ಟ ಕಾಲ ಕೂಡ ಒಟ್ಟಾರೆ ಆಯುರ್ಮಾನದಲ್ಲಿ "ಗ್ರೇಟ್" ಅನಿಸಿಕೊಳ್ಳುವುದಿಲ್ಲ. ಮೀರುವುದು ಹೇಗೆ? ಇದು ಪ್ರಶ್ನೆ. ಇದು ವಿಜಯಕುಮಾರರನ್ನೂ ಕಾಡಿದೆ, ನಮ್ಮನಿಮ್ಮನ್ನೂ ಕಾಡಿದೆ. ನಮ್ಮ ಮೌನಕ್ಷಣಗಳ ಸಂಕಟದ ಮೂಲವೆಲ್ಲವೂ ಬಹುಶಃ ಇದೇ ಇರಬಹುದು. ಬದುಕಿನ ಎಲ್ಲ ಜಂಜಾಟಗಳ ನಿರರ್ಥಕತೆ, ವ್ಯರ್ಥಪ್ರಲಾಪ ಮತ್ತು ಅರ್ಥಹೀನತೆಯ ಒಂದು ದರ್ಶನ ನಮಗಾದ ಅರಿವು ಇರಬಹುದು ಅದರ ಮೂಲದಲ್ಲಿ. ಆದರೆ ಅದು ನಿರಾಶಾವಾದವೂ ಅಲ್ಲ. ಅದೊಂದು ತರದ ಸ್ತಬ್ಧತೆ. ಅರುಣ ಕಮಲ ಅವರೂ "...ಕವಿತೆಗಳು ಕತ್ತಲೆ ಮತ್ತು ನಿರಾಶೆಗಳಿಂದ ತುಂಬಿವೆ. ಆದರೆ ಈ ನಿರಾಶೆ ಸುಳ್ಳು ಆಶಾವಾದಕ್ಕಿಂತ ಹೆಚ್ಚು ಫಲವತ್ತಾದದ್ದು, ಹುಲುಸಾದದ್ದು." ಎನ್ನುತ್ತಾರೆ. ಹಾಗಿದ್ದೂ ಅದರೊಂದಿಗೇ ವಿಹರಿಸುವುದು ಕೂಡ ಅರ್ಥಹೀನ ಭಾವುಕತೆಯಾದೀತೆ ಎಂಬ ಅನುಮಾನವೂ ವಿಜಯಕುಮಾರರನ್ನು ಕಾಡಿದೆ. ಇದು ಎಲ್ಲಕ್ಕಿಂತ ಮೇಲೆ ಹೋಗುವ (ಎತ್ತರಕ್ಕೇರುವ, ಶ್ರೇಷ್ಠನಾಗುವ) ಹುಸಿ ಡಾಂಭಿಕತೆ ಇರಬಹುದೇ ಎಂಬ ಅನುಮಾನ ಡಾ||ಯು.ಆರ್.ಅನಂತಮೂರ್ತಿಯವರನ್ನೂ ಕಾಡಿದೆ. ಅವರ ಪಾತ್ರ (ಅಣ್ಣಾಜಿ) ಕೊಡುವ ಉತ್ತರ ನೋಡಿ:

"ಮುಚ್ಚುಬಾಯಿ. ಗರ್ವದ ಮಾತಾಡಬೇಡ. ಜೀವನಕ್ಕಿಂತ ನೀನು ಶ್ರೇಷ್ಠ ಅಂತ ತಿಳಿಯೋಕೆ ನೀನು ಯಾರು? ದೇವರ? ಕ್ಷುದ್ರವಾದ ದೈನಿಕ, ದೈನಿಕ ಅಂತ ಗೋಳಿಡ್ತೀಯಲ್ಲ - ಅದನ್ನು ಬಿಟ್ಟು ಉಳಿದದ್ದೇನಿದೆ? ಈ ದೈನಿಕ ಜೀವನಕ್ಕೇ ಪ್ರಭೇನ್ನ ತರೋದಕ್ಕಿಂತ ದೊಡ್ಡ ಕೆಲಸ ಏನಿದೆ? ಸಮಾಧಿಯಲ್ಲೋ, ಭಕ್ತಿಯ ಪರವಶತೇಲೊ ಎಲ್ಲಕ್ಕಿಂತ ಮೇಲೆ ಹೋಗ್ತೀನಿ ಅಂತ ತಿಳಿದಿರೋ ಹಿಂಜಿದ ಬುದ್ಧಿಯ ಈಡಿಯಟ್ಟರಂತೆ ಮಾತಾಡಬೇಡ."

ಕೃಷ್ಣಪ್ಪನನ್ನು ಕಾಡುವ ಕ್ಷುದ್ರತೆಗಳ ಪದರಗಳು ಇನ್ನೂ ಇವೆ. ಹೊರಗಿನ (ಸಮಾಜದ) ಕ್ಷುದ್ರತೆ ಮತ್ತು ಒಳಗಿನ (ವ್ಯಕ್ತಿತ್ವದ) ಕ್ಷುದ್ರತೆಯ ಕುರಿತೂ ಅವನಿಗೆ ಕಳವಳವಿದೆ. ವಿಜಯಕುಮಾರರ ಸಂಕಲನಕ್ಕೆ ಮುನ್ನುಡಿ ಬರೆದ ಅರುಣಕಮಲ ಅವರೂ ಕೂಡ ಒಂದೆಡೆ "ಇಲ್ಲಿ ಎಲ್ಲವೂ ಒಂದೇ ಹೊತ್ತಿಗೆ ಹೊರಗಿನ ಮತ್ತು ಒಳಗಿನ ಜೀವನದಲ್ಲಿ ಘಟಿಸುತ್ತಿದೆ. ಇಲ್ಲಿ ಎಲ್ಲವೂ ಒಂದು ಇನ್ನೊಂದರ ಪ್ರಸಾರ (ವಿಸ್ತರಣೆ). ನಂತರ ವಿಸರ್ಜನೆ. ಆನಂತರ ವಿಭಜನೆ." ಎನ್ನುತ್ತಾರೆ. ಚೈತನ್ಯ ಮತ್ತು ಜಡತ್ವ ಎರಡೂ ಒಟ್ಟಿಗೇ ಇರುತ್ತವೆಂಬುದನ್ನು ಮರೆಯಬಾರದು ಎಂದೂ ಅವನು ಹೇಳಿಕೊಳ್ಳುತ್ತಾನೆ. ಆದರೆ ಸರಳವಾಗಿ ಬದುಕುವ ಅವಕಾಶವನ್ನು ಕಳೆದುಕೊಂಡು ಸಾಮಾನ್ಯ ಬದುಕಿಗೆ ಎರವಾದೆನೆ ಎಂಬ ಹಳಹಳಿಕೆಯೂ ಅವನನ್ನು ಕೊನೆಯ ತನಕ ಬಿಟ್ಟು ಹೋಗುವುದಿಲ್ಲ ಎನ್ನುವುದು ನಿಮಗೆ ಗೊತ್ತು. ವಿಜಯಕುಮಾರರ ಕವನಗಳ ಓಘಕ್ಕೆ ನಾವು ಮಾರುಹೋಗದೇ ಅವುಗಳ ಮಹತ್ವವನ್ನು ಅರಿಯುವುದಕ್ಕೆ ಇದಿಷ್ಟು ಅಗತ್ಯ ಎನಿಸುತ್ತದೆ. ಈ ಜಾಗೃತಿ ವಿಜಯಕುಮಾರರಲ್ಲೂ ಇರುವುದರಿಂದ ಅವರ ಕವನಗಳು ಏಕಕಾಲಕ್ಕೆ ಜಡತ್ವವನ್ನೂ ಚೈತನ್ಯವನ್ನೂ ಅನುಸಂಧಾನಕ್ಕೊಡ್ಡುತ್ತಿವೆ. ಆದರೆ ಚಿತ್ತ ಯಾವತ್ತೂ ನಿರಾಶಾವಾದಿ. ಅದಕ್ಕೆ ಸಮಾಧಿ, ಧ್ಯಾನ, ಭಕ್ತಿಪರವಶತೆಯಂಥ ಎಸ್ಕೇಪಿಸಮ್ ಇಷ್ಟ. ನಮ್ಮ ಆಧುನಿಕ ಕಾಲಮಾನದಲ್ಲಿ ಎಸ್ಕೇಪಿಸಮ್ಮಿನ ಹೊರದಾರಿಗಳು ಮತ್ತಷ್ಟು ಹೆಚ್ಚಿವೆ. ಅವುಗಳ ಬಗ್ಗೆ ಎಲ್ಲರಿಗೂ ಗೊತ್ತು.

ಈ ಕವನಗಳ ಅನುವಾದಕ್ಕೆ ಪ್ರವೇಶಿಕೆಯನ್ನೊದಗಿಸಿದ ಜಯಂತ ಕಾಯ್ಕಿಣಿಯವರು ಒಂದು ಮಾತನ್ನು ಹೇಳುತ್ತಾರೆ. "ಯಾವುದೇ ವಸ್ತು, ಸನ್ನಿವೇಶ, ದೃಶ್ಯಗಳ "ಮೇಲೆ" ಬರೆಯುವುದರ ಬದಲಿಗೆ, ಅವುಗಳ "ಮೂಲಕ" ಹಾಯುವ ಒಂದು ದಟ್ಟ ಚಲನೆ ಇಲ್ಲಿದೆ." ಇದು ಬಹಳ ಮುಖ್ಯವಾದ ಮಾತು. ಈ ಚಲನೆ ಮತ್ತು "ಮೂಲಕ ಹಾಯುವ" ಪ್ರಕ್ರಿಯೆಗಳು ಗಮನಾರ್ಹವಾದ ಹೊಳಹುಗಳನ್ನು ನಮಗೆ ನೀಡುತ್ತವೆ. ಮೊದಲನೆಯದಾಗಿ ವಿಜಯಕುಮಾರ ಅವರು ನಮ್ಮನ್ನು ವಿಷಣ್ಣರಾಗಿಸುವ ಆ ಅವೇ ಬಿಂಬಗಳನ್ನು ಒಂದು ವಿಶಿಷ್ಟ ವಿನ್ಯಾಸದಲ್ಲಿ ಪುನರ್ ಸೃಷ್ಟಿಸುತ್ತಾ ಹೋಗುವುದರ ಮೂಲಕ ಈ ಕವನಗಳ ಭಾವಕೋಶವನ್ನು ಸೃಜಿಸುತ್ತಾರೆ. ಅವರು ಯಾವುದೇ ಪ್ರಯತ್ನ ಮಾಡುತ್ತಿಲ್ಲ, ಶ್ರಮವೇನೂ ಹಾಕುತ್ತಿಲ್ಲ ಎನಿಸುವಾಗಲೇ ಅತ್ಯಂತ ಸೂಕ್ಷ್ಮ ಸಂವೇದನೆಯ ಗ್ರಹಿಕೆಗಳನ್ನಷ್ಟೇ ಆಯುವ ಮತ್ತು ಅವನ್ನು ನಿರ್ದಿಷ್ಟ ಅನುಕ್ರಮದಲ್ಲೇ ಜೋಡಿಸುವ ಹದ, ಲಯ ಮತ್ತು ಒತ್ತಡ ಕಾಯ್ದುಕೊಂಡು ನಿಭಾಯಿಸುವ ಗುರುತರ ಹೊಣೆಯನ್ನು ನಿರ್ವಹಿಸುತ್ತಿರುತ್ತಾರೆ. ಇದು ಸುಲಭದ ಹೊಣೆಗಾರಿಕೆಯೇನಲ್ಲ. ಹೀಗಾಗಿಯೇ ಇದು ಮೌನಸಂಕಟವನ್ನು ಅಕ್ಷರದ ಮೂಲಕ ಭಾಷೆಯಲ್ಲಿ ಕಟ್ಟಿಕೊಡುವ ಕೆಲಸ ಎಂದಿದ್ದು. ಇಲ್ಲಿ ವಿಜಯಕುಮಾರ ಎಷ್ಟರಮಟ್ಟಿಗೆ ಸಫಲ ಎನ್ನುವುದು ಅವರವರ ಸಂವೇದನೆಗೇ ಬಿಟ್ಟಿದ್ದು. ನಾವು ಟ್ಯೂನ್ ಮಾಡಿಕೊಳ್ಳಲು ಸೋಲಬಹುದು ಅಥವಾ ಕವನಗಳ ಒಟ್ಟು ತರಂಗಾಂತರಕ್ಕೆ ನಾವು, ನಮಗೆ ಅವು ಸ್ಪಂದಿಸುವಲ್ಲಿ ಸೋಲಬಹುದು. ದಕ್ಕಿದರೆ ಸಿಕ್ಕಿದ್ದು ಲಾಭ. ಈ ನಿಟ್ಟಿನಲ್ಲಿ ಮತ್ತಷ್ಟು ಬೆಳಕು ಚೆಲ್ಲುವ ಮಾತುಗಳನ್ನು ಅರುಣಕಮಲ ಅವರು ಹೇಳಿದ್ದಾರೆ.

"ಎಲ್ಲಿ ಅಂತರ್ ವಿರೋಧ ಮತ್ತು ದ್ವಂದ್ವಗಳು ಎಲ್ಲಕ್ಕಿಂತ ಹೆಚ್ಚಾಗಿವೆಯೋ ಆ ಸ್ಥಳಗಳನ್ನು ವಿಜಯಕುಮಾರ ಹುಡುಕುತ್ತಾರೆ. ನೆಮ್ಮದಿಯಿಂದ ಬದುಕುವ ಜನರ ಮೇಲೆ ಪ್ರಹಾರ ಮಾಡುತ್ತಾರೆ. “ಇಪ್ಪತ್ತನೆಯ ಶತಮಾನದ ಅಂತಿಮ ದಿನಗಳಲ್ಲಿ ಒಂದು ದಿನ ಬಾಲ್ಯಕಾಲದ ಗೆಳೆಯ ಸುಂದರನ ಮರೆಯಲಾಗದ ನೆನಪು” ಅಥವಾ “ಗಾರ್ಡ್” ಕವನದಂಥ ಕವಿತೆಗಳು ಇನ್ನೊಬ್ಬರ ಜೊತೆಗೇನೆ ತಮ್ಮ ಬದುಕನ್ನೂ ಪರೀಕ್ಷೆಗೆ ಒಡ್ಡುತ್ತವೆ. ವಿಜಯಕುಮಾರರ ಕವಿತೆಗಳಲ್ಲಿ ನಮ್ಮನ್ನು ನಿಶ್ಚಿಂತರನ್ನಾಗಿ ಮತ್ತು ಪ್ರಸನ್ನರನ್ನಾಗಿ ಇರಲು ಬಿಡುವಂತಹ ಸ್ಥಳಗಳೇ ಅಪರೂಪ. ಬಹುಶಃ ಇಲ್ಲವೇ ಇಲ್ಲವೇನೊ. ಅವರ ಕವಿತೆಗಳಲ್ಲಿ ಒಂದು ಜ್ವರ ತುಂಬಿದ ಅಸ್ವಸ್ಥತೆಯಿದೆ. ವಿಶೇಷತಃ ಅವರ ದೀರ್ಘ ಕವಿತೆಗಳಲ್ಲಿ. ಅಲ್ಲಿ ಎಲ್ಲಿಯೂ ನಿಲ್ಲಲು ಅವಕಾಶವೇ ಸಿಗುವುದಿಲ್ಲ. ವಿಜಯಕುಮಾರ ನಡೆಯುತ್ತಿರುತ್ತಾರೆ. ಕೆತ್ತನೆಯ ಕೆಲಸ ಮಾಡುತ್ತಿರುತ್ತಾರೆ. ಒಳಗೆಲ್ಲೋ ಯಾರೋ ಸಿಕ್ಕಿಹಾಕಿಕೊಂಡಿರುವಂತೆ. ಮಣ್ಣಿನೊಳಗಡೆ ಹೋಗಿ ಅವಲೋಕಿಸುತ್ತಾರೆ. ಎಷ್ಟೊಂದು ಕತ್ತಲೆ, ಎಷ್ಟೊಂದು ಮೌನ."

ಈ ಕಾರಣಕ್ಕೇ ವಿಜಯಕುಮಾರರ ಒಳ್ಳೆಯ ಕವಿತೆಗಳನ್ನು, ಅವುಗಳಿಂದಾಯ್ದ ಒಂದೆರಡು ಭಾಗಗಳನ್ನು ಕೋಟ್ ಮಾಡುವುದು ಕಷ್ಟ ಮಾತ್ರವಲ್ಲ ಅದು ಅಸಾಧು ಎನಿಸುತ್ತದೆ. ಇಲ್ಲಿನ ಮುನ್ನುಡಿಗಳಲ್ಲಿ ಹಾಗೆ ಮಾಡಿದ್ದಿದೆ. ಮುನ್ನುಡಿ ಓದುವಾಗ ಅದು ಒಂದು ಬಗೆಯ ಅನುಭೂತಿಯನ್ನೇನೋ ನೀಡಿದೆ. ಆದರೆ ವಿಜಯಕುಮಾರರ ಕವಿತೆಗಳನ್ನು ಹೀಗೆ ಒಂದೇ ಗುಕ್ಕಿಗೆ ಓದಿ ಮುಗಿಸಿದ ಮೇಲೆ ಮತ್ತೊಮ್ಮೆ ಮುನ್ನುಡಿಗಳನ್ನು, ಅಲ್ಲಿ ನಡುನಡುವೆ ಬರುವ ಅವರ ಕವಿತೆಯ ಕೋಟ್‌ಗಳನ್ನು ಓದಿದರೆ ಅದರಿಂದ ವಿಜಯಕುಮಾರರ ಕವಿತೆಯ ಒಟ್ಟು ಧ್ವನಿಗೆ ಅನ್ಯಾಯವಾಗಿದೆ ಎಂದೇ ಅನಿಸಿದೆ. ವಿಜಯಕುಮಾರ ಅವರ ಕವಿತೆಗಳಲ್ಲಿ ನಿಲುಗಡೆ, ಅಲ್ಪವಿರಾಮ ಇಲ್ಲ. ಅದೊಂದು ನಿರಂತರ ಪ್ರವಾಹದಂತೆ ನಮಗೆದುರಾಗುತ್ತದೆ. ಹಾಗೆಯೇ ಅದು ನಮ್ಮದು ತೊಳೆದು ಇಳಿದು ಹೋಗುತ್ತದೆ.

ಒಬ್ಬ ಸಾಮಾನ್ಯ ಕವಿಯ ಕೈಯಲ್ಲಿ ಕೇವಲ ವೈಯಕ್ತಿಕ ಗೋಳು, ಮನಸ್ಸಿನ ವಿಕ್ಷಿಪ್ತ ಘಳಿಗೆಯ ಲಹರಿ ಇತ್ಯಾದಿ ಆಗಿ ಬಿಡಬಹುದಾಗಿದ್ದ, ಮನದ ತಲ್ಲಣಗಳನ್ನು ವಿಜಯಕುಮಾರ ಅವರು ವೈಯಕ್ತಿಕತೆಯಿಂದ ಪಾರುಮಾಡಿದ್ದಾರೆ ಮಾತ್ರವಲ್ಲ, ಅದನ್ನು ಸಾಮಾನ್ಯನೊಬ್ಬನ ದೈನಂದಿನವೋ ಎಂಬಷ್ಟು ಸರಳವಾಗಿ, ಸುಲಲಿತವಾಗಿ ಕಟ್ಟಿಕೊಟ್ಟಿದ್ದಾರೆ. ಆಗಲೂ ಈ ಕವನಗಳು ಗಹನವಾಗಿ ಕಾಡುವ, ಸೂಕ್ಷ್ಮಸಂವೇದಿಗಳ ತಲ್ಲಣಕ್ಕೆ ಕಾರಣವಾಗುವ ಧೀಃಶಕ್ತಿಯನ್ನು ಪಡೆದುಕೊಂಡಿವೆ. ಇಲ್ಲಿ ಅಡಿಗರ "ಹದ್ದು" ಕವಿತೆಯ ಒಂದು ಸಾಲಿಗೆ ಡಾ||ಯು.ಆರ್.ಅನಂತಮೂರ್ತಿಯವರು ಕೊಟ್ಟ ಅರ್ಥವಿಸ್ತರಣೆಯ ನೆನಪಾಗುತ್ತಿದೆ.

"ಕ್ರೌಂಚ ವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು" ಎಂಬುದು ಆ ವಾಕ್ಯ. ಡಾ||ಯು ಆರ್ ಅನಂತಮೂರ್ತಿಯವರ ಮಾತುಗಳು ಇಂತಿವೆ:

"ಹಸಿಯಾಗದ ಮೈಯ ಮೃದುವಾದ ಹುಳ ರೇಷ್ಮೆಯ ಗಟ್ಟಿಯಾದ ನೂಲನ್ನು ಉತ್ಪನ್ನ ಮಾಡುತ್ತದೆ. ಅದರ ಮೈ ನೋಯಬಲ್ಲ್ ಬತ್ತಲೆಯದಾದ್ದರಿಂದ ಈ ಗಟ್ಟಿ ರೇಷ್ಮೆ ಅದಕ್ಕೆ ಸಾಧ್ಯ ಎಂಬುದಿಲ್ಲಿ ಮುಖ್ಯ. ಜೀವನದ ಮೂಲದಲ್ಲಿರುವ ಈ ನೋವನ್ನು ಅಡಿಗರು ಅಹೇತುವಾದ್ದೆಂದು ತಿಳಿದಿರಬಹುದು. ಮೇಲೆ ನಾನು ಉದ್ಧರಿಸಿದ ಅಡಿಗರ ಸಾಲು ಅವರ ಕಾವ್ಯದ ಪ್ರಕ್ರಿಯೆಯನ್ನು ಸಾರದಲ್ಲಿ ತಿಳಿಸುತ್ತದೆ ಎಂದು ನನಗೆ ಅನೇಕ ಸಾರಿ ಅನ್ನಿಸಿದೆ. ಅಡಿಗರ ಎಲ್ಲ ಮುಖ್ಯ ಕವನಗಳ ಕೇಂದ್ರದಲ್ಲಿ ಇಂಥ ಒಂದು ಬತ್ತಲೆಯ, ನೋಯಬಲ್ಲ, ಅನುಭವದ ಆಘಾತಕ್ಕೆ ಒಡ್ಡಿಕೊಂಡ, ತನ್ನ ಗಟ್ಟಿತನವನ್ನೂ ಪಡೆದ ವ್ಯಕ್ತಿತ್ವವಿದೆ ಎನ್ನಬಹುದು." (ಸಂಸ್ಕೃತಿ ಮತ್ತು ಅಡಿಗ).

ಮಾಡಬೇಕಾದ ಕೆಲಸ ತುಂಬ ಸರಳವಿದೆ; ಒಂದು ಮುವ್ವತ್ತು ಕವನಗಳನ್ನು ಓದುವುದು ಅಷ್ಟೇ.

ಒಂದೊಂದು ಓದಿ ಮುಗಿಸಿದಾಗಲೂ ಹೇಳಲಾಗದ ಸುಸ್ತು. ನೂರಾರು ನೆನಪುಗಳನ್ನು ಹುಗಿದಿಟ್ಟ ಬಂಡೆಕಲ್ಲನ್ನು ಎದೆಯ ಮೇಲಿಂದ ಜರುಗಿಸಿ ಅದರ ಬುಡದಲಿನ ತೇವ, ಹುಳ ಹುಪ್ಪಡಿ, ಇರುವೆಮೊಟ್ಟೆ ಕದಲಿಸಿದ ಕಲಕಲಕಲಕಲ ಚಲನೆ, ಹಸಿಹಸಿ ಘಮಲು. ಮತ್ತೊಮ್ಮೆ ಹುಟ್ಟಿದೆನಾ, ಮತ್ತೆ ಆ ಗಲ್ಲಿ, ಕಸದ ಹೊಂಡ, ಓಣಿ, ಕೇರಿ ಅಲೆದೆನಾ, ಮತ್ತದೇ ರಣಾರಂಪ, ಬಡಿದಾಟ ಎದುರಾದೆನಾ, ಅಳುತ್ತ ಕೂತ ಕತ್ತಲೆ ಮತ್ತೆ ಕಣ್ತುಂಬಿತೇ, ಮನೆಗೆ ಮರಳುವ ನಿರಾಶೆಯ ಹಾದಿಯಲ್ಲಿ ಕೊನೆ ಸಿಗದೆ ಕಳೆದು ಹೋದೆನಾ....

ಮುಂದಿನ ಕವನಕ್ಕೆ ಎಂದೂ ಇಳಿಯಲಾಗದ ತಳಮಳ, ಭಾರ. ಅಲ್ಲೇ ಎಲ್ಲ ಸ್ತಬ್ಧ.

ಒಂದು ಒಳ್ಳೆಯ ಸಾಹಿತ್ಯ ಕೃತಿಯ ಓದು ನಮ್ಮನ್ನು ಶ್ರೀಮಂತಗೊಳಿಸುತ್ತದೆ, ಸಂವೇದನೆಯನ್ನು, ಗ್ರಹಿಕೆಗಳನ್ನು ವಿಸ್ತರಿಸಿ ನಮ್ಮ ಜೀವನದೃಷ್ಟಿ, ನಿಲುವು ಮತ್ತು ರೀತಿನೀತಿಗಳನ್ನು ತಿದ್ದುತ್ತದೆ. ಸರಳವಾಗಿ ನಮ್ಮನ್ನು ಹೆಚ್ಚು ಹೆಚ್ಚು ಮನುಷ್ಯರನ್ನಾಗಿಸುತ್ತದೆ. ಇದು ಅಂಥ ಒಂದು ಕೃತಿ.
(ಸಂಕಥನ - ಸಾಹಿತ್ಯ ಸಾಂಸ್ಕೃತಿಕ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟಿತ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ