Friday, May 20, 2016

ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಾಕಿಲ್ಲ

ಹಿಂದಿ ಕವಿ ವಿಜಯಕುಮಾರ ಅವರ ಕೆಲವು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಮುಕುಂದ ಜೋಷಿಯವರ "ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಾಕಿಲ್ಲ ಮತ್ತು ಇತರ ಕವಿತೆಗಳು" ಎಂಬ ಸಂಕಲನ ಹಿಂದಿಗೆ ಹೇಗೋ ಕನ್ನಡಕ್ಕೂ ಹೊಸ ಸಂವೇದನೆ, ಗ್ರಹಿಕೆ ಮತ್ತು ಅಭಿವ್ಯಕ್ತಿಯ ಕ್ರಮ ಕೊಡಮಾಡಬಲ್ಲ ಕಸು ಹೊಂದಿರುವ ಕೃತಿ.

ನಮ್ಮೆಲ್ಲರ ಬದುಕಿನಲ್ಲೂ ಏನೋ ಕೆಲವು ಆಳದ ಸೆಳೆತಗಳು, ಹಂಬಲ, ಹಪಾಹಪಿಗಳು ಮತ್ತು ಅವು ಈಡೇರದ ತೊಳಲಾಟಗಳು ಇದ್ದೇ ಇರುತ್ತವೆ. ಸಂಜೆ ಹೊತ್ತು ಒಬ್ಬರೇ ಕುಳಿತು ಮೌನ ಗಂವ್ ಎಂದು ಕಿವಿಹೊಕ್ಕಾಗ ಏನೋ ಒಂದು ಸುದೀರ್ಘ ಆಲಾಪದಂತೆ ಅದು ನಮ್ಮನ್ನು ಆವರಿಸಿ ಅಪ್ಪುತ್ತದೆ. ನಾವು ಏನನ್ನೂ ಯೋಚಿಸುತ್ತಿರುವುದಿಲ್ಲ, ಮನಸ್ಸು ಖಾಲಿಯಾಗಿರುತ್ತದೆ. ಆದರೂ ತುಂಬಾ ಯೋಚಿಸುತ್ತಿರುವಂತೆ ಅನಿಸುತ್ತದೆ. ನಮ್ಮಲ್ಲಿ ಯಾವ ಆಪ್ತರು ನಮ್ಮನ್ನು ಬಿಟ್ಟೇ ಹೊರಟುಹೋದ ಕುರಿತ ನೋವೂ ಅಳುವಾಗಿ ಬಿಕ್ಕುತ್ತಿರುವುದಿಲ್ಲ. ಆದರೂ ಮೌನವಾಗಿ ರೋದಿಸುತ್ತಿರುವಂತೆ ಅನಿಸುತ್ತದೆ. ಓದು ಮುಗಿದು ವರ್ಷ ಕಳೆಯುತ್ತ ಬಂದರೂ ಕೆಲಸ ಸಿಗದೇ ಹೋದ, ಪರಾನ್ನಕ್ಕೆ ಬಿದ್ದ ಅವಮಾನಕ್ಕೆ ಕುಗ್ಗಿದ ಯುವಕರು, ವಯಸ್ಸು ದಾಟುತ್ತಿದ್ದರೂ ಮದುವೆಯಾಗುವುದು ಸಾಧ್ಯವಾಗದೇ ಅನಿಶ್ಚಿತ ಭವಿಷ್ಯಕ್ಕೆ ಕಣ್ಣರಳಸಿ ಕಾಯುತ್ತಿರುವ ಯುವತಿಯರು, ಪ್ರತಿದಿನವೂ ಹಿಂದಿನ ದಿನದಂತೆ ಅನ್ನಕ್ಕೆ ಸಾಲುವಷ್ಟು ಸಂಪಾದನೆ ಕೈಗೂಡದೇ ಹೋದ ಫುಟ್‌ಪಾತ್ ವ್ಯಾಪಾರಸ್ಥರು, ವೃದ್ಧಾಪ್ಯದಲ್ಲಿ ಒಂಟಿಯಾಗಿಬಿಟ್ಟವರು.....

ಈ ಜಗತ್ತಿನಲ್ಲಿ ನಮಗಿಂತ ಕಡಿಮೆ ನೋವು, ಅನಿಶ್ಚಿತತೆ, ವೈಕಲ್ಯ, ಶೂನ್ಯ ತುಂಬಿಕೊಂಡ ಮಂದಿ ತುಂಬ ಇದ್ದಾರೆ. ಆದರೆ ನಮಗೆ ನಮ್ಮ ನೋವು ಸಣ್ಣದೆನಿಸುವುದಿಲ್ಲ. ಅಷ್ಟು ಸಾಲದೆಂಬಂತೆ ನಮಗೆ, ನಮಗೇ ಈ ಬದುಕು ಯಾಕೆ ಹೀಗೆ ಹೊರಲಾರದ ಹೊರೆಯಾಗಿ ಬಿಟ್ಟಿತೆಂಬ ಚಿದಂಬರ ರಹಸ್ಯವೊಂದಕ್ಕೆ ಉತ್ತರ ಬೇಕೆಂಬ ಬೇಗುದಿಯೂ ಕಾಡುತ್ತಿರುತ್ತದೆ. ಮುಸ್ಸಂಜೆಯಲ್ಲಿ ಕಣ್ಣರಳಿಸಿ ನೋಡಿದರೆ ಸುಖವಾಗಿದ್ದಾರೆಂಬಂತೆ ಕಾಣುವ ಮಂದಿಯೆಲ್ಲ ಏನೋ ಭಾರಹೊತ್ತಂತೆ, "ಶಿವನೆ ಸಾಕು ಎನ್ನೋರು" ತುಂಬಿರುವಂತೆ ಕಾಣತೊಡಗುತ್ತದೆ.

ಮತ್ತಿದು, ಹೀಗೆ ಎಲ್ಲರಿಗೂ ಆಗುವುದಿಲ್ಲ. ಮೇಲಿನ ಯಾವುದೂ ಯಾವತ್ತೂ ಸಂಭವಿಸದಂತೆ ಬದುಕು ನೀಗಿದವರು ಸಾಕಷ್ಟಿದ್ದಾರೆ. ಈ ಕೃತಿ ಅವರಿಗಲ್ಲ.

ಬದುಕಿನ ಮೌನಸಂಕಟಗಳನ್ನು ಬಲ್ಲವರೇ ಬಲ್ಲರು. ಅವುಗಳು ಭಾಷೆಗೆ ಮೀರಿ ನಿಂತಿರುವುದರಿಂದಲೇ ಮೌನಕ್ಕೆ, ಸಂಗೀತಕ್ಕೆ ಮಾತ್ರ ತೆರೆದುಕೊಳ್ಳುತ್ತವೆ. ಆದರೆ ಸಾಹಿತಿಯೊಬ್ಬನ ಬಳಿ ಇರುವ ಸಾಯತ ಭಾಷೆ ಮತ್ತು ಕೇವಲ ಭಾಷೆಯೊಂದೇ. ಅವನು ಮೌನವನ್ನು ಕೂಡ ಭಾಷೆಯಲ್ಲೇ ಕಟ್ಟಿಕೊಡಬೇಕಾಗಿದೆ ಮತ್ತು ಅದರಿಂದಲೇ ಓದುಗನ ಪಂಚೇಂದ್ರಿಯಗಳಿಗೆ ಆ ನೀರವ ಕ್ಷಣಗಳ ಅಮೂರ್ತ ಅನುಭವವನ್ನು ಮೂರ್ತೀಕರಿಸ ಬೇಕಿದೆ. ಇದು ಅವನ ಎದುರಿಗಿರುವ ಸವಾಲು ಮತ್ತು ಅವನಿಗಿರಬೇಕಾದ ಕನಿಷ್ಟ ಸಾಮರ್ಥ್ಯವೆಂದು ನಿರೀಕ್ಷಿಸಲಾಗುವ ಶಕ್ತಿ. ಇದನ್ನು ಕಂಡುಕೊಳ್ಳದ ಸಾಹಿತಿಗಳ ಮಾತು ಬಿಡಿ.
ವಿಜಯಕುಮಾರ ವಿಮರ್ಶಕರೆಂದೇ ಖ್ಯಾತರಾದವರು. ಶ್ರೇಷ್ಠ ಸಾಹಿತಿಯಾಗಲು ವಿಫಲರಾದವರು ವಿಮರ್ಶಕರಾಗುತ್ತಾರೆ ಎಂಬುದು ಒಂದು ಮಾತು. ವಿಜಯಕುಮಾರರ ಈ ಸಂಕಲನಕ್ಕೆ ಮುನ್ನುಡಿ ಬರೆದ ಅರುಣಕಮಲ ಅವರು ಕೂಡ ವಿಮರ್ಶಕನೊಬ್ಬ ಕವಿ ಹೇಗಾಗಬಹುದು ಎಂದು ಪ್ರಶ್ನಿಸಿಕೊಳ್ಳುತ್ತ ವಿಜಯಕುಮಾರ ಮೂಲತಃ ಒಬ್ಬ ಕವಿ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಸ್ವತಃ ವಿಜಯಕುಮಾರ ಅವರೇ ಹೇಳಿಕೊಂಡಿರುವ ಎರಡು ಮಾತುಗಳಲ್ಲಿ ಬಹಳಷ್ಟು ತಥ್ಯವಿದೆ. "...ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುವುದರ ರೋಮಾಂಚನ, ಚರ್ಚಿತ ಸಾಹಿತ್ಯಕಾರರ ಗ್ಲಾಮರ್, ಗಾಳಿಸುದ್ದಿ, ವಿಶಿಷ್ಟ ಅನ್ನಿಸಿಕೊಳ್ಳುವುದರ ಭ್ರಮೆ ಮತ್ತು ಹೊಸ ಹೊಸ ಜನರ ಪರಿಚಯದ ಉತ್ತೇಜನೆಯ ಆಕರ್ಷಣೆಯ ಹೊರತಾಗಿಯೂ ನಿಶ್ಚಿತವಾಗಿ (ಆ ಎಲ್ಲ ರಾತ್ರಿಗಳು) ಬದುಕುವುದರ ಬಗ್ಗಿನ, ವಿಶಿಷ್ಟ ರೀತಿಗಳ ಜೊತೆಗಿನ ಸಂಶಯ, ಅಸ್ಪಷ್ಟತೆ ಮತ್ತು ಏಕಾಕಿತನ ತುಂಬಿದ ಎಲ್ಲ ರಾತ್ರಿಗಳು ನನ್ನ ಜೊತೆಗೇ ಇದ್ದವು."

"ಕಲೆ ಅಸಫಲತೆಗಳ ಜೊತೆಗಿನ ಪ್ರಾಮಾಣಿಕತೆ" ಎಂಬ ಮಾತನ್ನು ನೆನೆದುಕೊಳ್ಳುವ ವಿಜಯಕುಮಾರ "ಒಂದು ಹೇಳಲಾಗದ ವಿಚಿತ್ರ ಅಸ್ವಸ್ಥತೆ ಮನಸ್ಸಿನಲ್ಲಿ ಇರುತ್ತಿತ್ತು. ಈ ಪ್ರತಿನಿತ್ಯದ ಬದುಕು ನಮಗೇನು ಕೊಡುತ್ತದೆ ಎಂಬ ಪ್ರಶ್ನೆ ಕೂಡುತ್ತಿತ್ತು. ನಮ್ಮ ಅಕ್ಕಪಕ್ಕದ ಲಕ್ಷಾವಧಿ ಜನರ ಬದುಕಿನಲ್ಲಿ ಇದ್ಯಾವ ಗತಿಹೀನತೆ, ನಿಸ್ಸಹಾಯಕತೆ ಇದೆ? ಒಂದು ಕಾಣೆಯಾಗುತ್ತಿರುವ ನೋಟ, ಸರಿಯುತ್ತಿರುವ ದೃಶ್ಯ, ಒಂದು (ಕಳೆದು ಹೋದರೂ ಉಳಿದ) ಸಮಯ ನನ್ನೊಳಗೆ ಉಳಿದೇ ಇರುತ್ತಿತ್ತು. ನಾನದನ್ನು ಭಾಷೆಯಲ್ಲಿ ಮತ್ತೊಮ್ಮೆ ಹಿಡಿಯಬಯಸಿದ್ದೆ. ಮನಸ್ಸಿನಲ್ಲಿ ಯಾವಾಗಲೂ ಒಂದು ಸಂಶಯವೂ ಎದ್ದೇಳುತ್ತಿತ್ತು. ಇದೆಲ್ಲ ವ್ಯರ್ಥ ಭಾವುಕತೆ ಇರಲಿಕ್ಕಿಲ್ಲ ತಾನೇ?" ಎಂದೂ ಹೇಳುತ್ತಾರೆ. ಇಲ್ಲಿ ಗಮನಿಸಬೇಕಾದ ಎರಡು ಮೂರು ಸಂಗತಿಗಳಿವೆ.

ಒಂದು, ವಿಜಯಕುಮಾರ ಬಯಸಿದ "ಭಾಷೆಯಲ್ಲಿ ಮತ್ತೊಮ್ಮೆ ಹಿಡಿಯುವ" ಕೆಲಸಕ್ಕೆ ಅವರಿಗೆ ಒದಗಿದ ಸಹಾಯಕ ಅಂಶಗಳು ಯಾವುವು ಮತ್ತು ಅವರದನ್ನು ಹೇಗೆ ದುಡಿಸಿಕೊಂಡರು ಎನ್ನುವುದು. "ನನ್ನ ಬಳಿ ಕೇವಲ ಕೆಲವು ಕವಿತೆಗಳ ಮುರಿದು ತುಂಡಾದ ಸಾಲುಗಳು, ಅಪೂರ್ಣ ಬಿಂಬಗಳು ಮತ್ತು ಸಾವಿರಾರು ಸಲ ಪುನಃ ಪುನಃ ಬಳಸಿದ ಶಬ್ದಗಳಿವೆ" ಎನ್ನುತ್ತಾರವರು. ಇದನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ.

ಇನ್ನೊಂದು, ನಿಮ್ಮಲ್ಲಿ ಕೆಲವರಿಗಾದರೂ ಇಷ್ಟರಲ್ಲೇ ನೆನಪಾಗಿರಬಹುದಾದ, ತಮ್ಮ "ಅವಸ್ಥೆ" ಕಾದಂಬರಿಯಲ್ಲಿ ಡಾ||ಯು.ಆರ್.ಅನಂತಮೂರ್ತಿಯವರು ಚರ್ಚಿಸಿದ ಒಂದು ಸಂಗತಿ. ಅದು ಈ ಪ್ರತಿನಿತ್ಯದ ಬದುಕು ನಮಗೇನು ಕೊಡುತ್ತದೆ ಎನ್ನುವ ಪ್ರಶ್ನೆಗೆ ಸಂಬಂಧಿಸಿದ್ದು. "ಅವಸ್ಥೆ" ಕಾದಂಬರಿಯಲ್ಲಿ ಕೃಷ್ಣಪ್ಪನನ್ನು ಮೊದಲಿಂದ ತುದಿಯ ತನಕ ಕಾಡುವ ಒಂದು ಪ್ರಶ್ನೆ ದೈನಿಕ ಕ್ಷುದ್ರತೆಯ ಕುರಿತಾದ್ದು. ಪ್ರೀತಿ, ಪ್ರೇಮ, ಕಾಮ ಎಲ್ಲದರಲ್ಲೂ ಕ್ಷುದ್ರತೆಯನ್ನು ಕಾಣುವ ಆತ ರಾಜಕೀಯದಿಂದಲೂ ತನಗೆ ಅದನ್ನು ಮೀರಲಾಗಿಲ್ಲ ಎಂದು ಹಳಹಳಿಸುತ್ತಾನೆ, ಇರಲಿ. ನಮ್ಮ ದೈನಂದಿನದಲ್ಲಿ ಅಂಥ "ಗ್ರೇಟ್" ಆದುದು ಏನೂ ಇಲ್ಲ. ಅಡುಗೆ, ಪಾತ್ರೆ ತೊಳೆಯುವುದು, ಕಸ ಗುಡಿಸಿ ನೆಲ ಒರೆಸುವುದು, ಬಟ್ಟೆಬರೆ ತೊಳೆಯುವುದು, ಹೆಚ್ಚೆಂದರೆ ನಾಲ್ಕು ಟೀವಿ ಸೀರಿಯಲ್ ನೋಡುವುದು - ಇಷ್ಟರಲ್ಲೇ ಇಡೀ ಬದುಕು ಕಳೆದ ಲಕ್ಷಾಂತರ ಮಹಿಳೆಯರು ನಮ್ಮ ಆಸುಪಾಸಿನಲ್ಲಿ ಇವತ್ತಿಗೂ ಇದ್ದಾರೆ. ಗಂಡಸರೂ ಸೇರಿದಂತೆ ಇನ್ನಷ್ಟು ಮಂದಿ ಮಹಿಳೆಯರು ದಿನವೂ ಆಫೀಸಿಗೆ ಹೋಗಿ ಬಂದು, ಪೇಪರು ಓದಿ, ಫೇಸ್‌ಬುಕ್ಕು, ಟೀವಿ ಮತ್ತೊಂದು ನೋಡಿ, ಶೇರ್ ಮಾರ್ಕೆಟ್ಟು, ಟ್ಯಾಕ್ಸು, ಟ್ರಾಫಿಕ್ಕು, ಮೋದಿಯ ವಿದೇಶಯಾತ್ರೆ, ಸುನಂದಾ ಪುಷ್ಕರ್ ಕೊಲೆ, ಅಸಹಿಷ್ಣುತೆ ಇದೆಯೇ ಇಲ್ಲವೆ ಎಂದೆಲ್ಲ ತಲೆಕೆಡಿಸಿಕೊಂಡು ಕಳೆದುಬಿಟ್ಟ ಕಾಲ ಕೂಡ ಒಟ್ಟಾರೆ ಆಯುರ್ಮಾನದಲ್ಲಿ "ಗ್ರೇಟ್" ಅನಿಸಿಕೊಳ್ಳುವುದಿಲ್ಲ. ಮೀರುವುದು ಹೇಗೆ? ಇದು ಪ್ರಶ್ನೆ. ಇದು ವಿಜಯಕುಮಾರರನ್ನೂ ಕಾಡಿದೆ, ನಮ್ಮನಿಮ್ಮನ್ನೂ ಕಾಡಿದೆ. ನಮ್ಮ ಮೌನಕ್ಷಣಗಳ ಸಂಕಟದ ಮೂಲವೆಲ್ಲವೂ ಬಹುಶಃ ಇದೇ ಇರಬಹುದು. ಬದುಕಿನ ಎಲ್ಲ ಜಂಜಾಟಗಳ ನಿರರ್ಥಕತೆ, ವ್ಯರ್ಥಪ್ರಲಾಪ ಮತ್ತು ಅರ್ಥಹೀನತೆಯ ಒಂದು ದರ್ಶನ ನಮಗಾದ ಅರಿವು ಇರಬಹುದು ಅದರ ಮೂಲದಲ್ಲಿ. ಆದರೆ ಅದು ನಿರಾಶಾವಾದವೂ ಅಲ್ಲ. ಅದೊಂದು ತರದ ಸ್ತಬ್ಧತೆ. ಅರುಣ ಕಮಲ ಅವರೂ "...ಕವಿತೆಗಳು ಕತ್ತಲೆ ಮತ್ತು ನಿರಾಶೆಗಳಿಂದ ತುಂಬಿವೆ. ಆದರೆ ಈ ನಿರಾಶೆ ಸುಳ್ಳು ಆಶಾವಾದಕ್ಕಿಂತ ಹೆಚ್ಚು ಫಲವತ್ತಾದದ್ದು, ಹುಲುಸಾದದ್ದು." ಎನ್ನುತ್ತಾರೆ. ಹಾಗಿದ್ದೂ ಅದರೊಂದಿಗೇ ವಿಹರಿಸುವುದು ಕೂಡ ಅರ್ಥಹೀನ ಭಾವುಕತೆಯಾದೀತೆ ಎಂಬ ಅನುಮಾನವೂ ವಿಜಯಕುಮಾರರನ್ನು ಕಾಡಿದೆ. ಇದು ಎಲ್ಲಕ್ಕಿಂತ ಮೇಲೆ ಹೋಗುವ (ಎತ್ತರಕ್ಕೇರುವ, ಶ್ರೇಷ್ಠನಾಗುವ) ಹುಸಿ ಡಾಂಭಿಕತೆ ಇರಬಹುದೇ ಎಂಬ ಅನುಮಾನ ಡಾ||ಯು.ಆರ್.ಅನಂತಮೂರ್ತಿಯವರನ್ನೂ ಕಾಡಿದೆ. ಅವರ ಪಾತ್ರ (ಅಣ್ಣಾಜಿ) ಕೊಡುವ ಉತ್ತರ ನೋಡಿ:

"ಮುಚ್ಚುಬಾಯಿ. ಗರ್ವದ ಮಾತಾಡಬೇಡ. ಜೀವನಕ್ಕಿಂತ ನೀನು ಶ್ರೇಷ್ಠ ಅಂತ ತಿಳಿಯೋಕೆ ನೀನು ಯಾರು? ದೇವರ? ಕ್ಷುದ್ರವಾದ ದೈನಿಕ, ದೈನಿಕ ಅಂತ ಗೋಳಿಡ್ತೀಯಲ್ಲ - ಅದನ್ನು ಬಿಟ್ಟು ಉಳಿದದ್ದೇನಿದೆ? ಈ ದೈನಿಕ ಜೀವನಕ್ಕೇ ಪ್ರಭೇನ್ನ ತರೋದಕ್ಕಿಂತ ದೊಡ್ಡ ಕೆಲಸ ಏನಿದೆ? ಸಮಾಧಿಯಲ್ಲೋ, ಭಕ್ತಿಯ ಪರವಶತೇಲೊ ಎಲ್ಲಕ್ಕಿಂತ ಮೇಲೆ ಹೋಗ್ತೀನಿ ಅಂತ ತಿಳಿದಿರೋ ಹಿಂಜಿದ ಬುದ್ಧಿಯ ಈಡಿಯಟ್ಟರಂತೆ ಮಾತಾಡಬೇಡ."

ಕೃಷ್ಣಪ್ಪನನ್ನು ಕಾಡುವ ಕ್ಷುದ್ರತೆಗಳ ಪದರಗಳು ಇನ್ನೂ ಇವೆ. ಹೊರಗಿನ (ಸಮಾಜದ) ಕ್ಷುದ್ರತೆ ಮತ್ತು ಒಳಗಿನ (ವ್ಯಕ್ತಿತ್ವದ) ಕ್ಷುದ್ರತೆಯ ಕುರಿತೂ ಅವನಿಗೆ ಕಳವಳವಿದೆ. ವಿಜಯಕುಮಾರರ ಸಂಕಲನಕ್ಕೆ ಮುನ್ನುಡಿ ಬರೆದ ಅರುಣಕಮಲ ಅವರೂ ಕೂಡ ಒಂದೆಡೆ "ಇಲ್ಲಿ ಎಲ್ಲವೂ ಒಂದೇ ಹೊತ್ತಿಗೆ ಹೊರಗಿನ ಮತ್ತು ಒಳಗಿನ ಜೀವನದಲ್ಲಿ ಘಟಿಸುತ್ತಿದೆ. ಇಲ್ಲಿ ಎಲ್ಲವೂ ಒಂದು ಇನ್ನೊಂದರ ಪ್ರಸಾರ (ವಿಸ್ತರಣೆ). ನಂತರ ವಿಸರ್ಜನೆ. ಆನಂತರ ವಿಭಜನೆ." ಎನ್ನುತ್ತಾರೆ. ಚೈತನ್ಯ ಮತ್ತು ಜಡತ್ವ ಎರಡೂ ಒಟ್ಟಿಗೇ ಇರುತ್ತವೆಂಬುದನ್ನು ಮರೆಯಬಾರದು ಎಂದೂ ಅವನು ಹೇಳಿಕೊಳ್ಳುತ್ತಾನೆ. ಆದರೆ ಸರಳವಾಗಿ ಬದುಕುವ ಅವಕಾಶವನ್ನು ಕಳೆದುಕೊಂಡು ಸಾಮಾನ್ಯ ಬದುಕಿಗೆ ಎರವಾದೆನೆ ಎಂಬ ಹಳಹಳಿಕೆಯೂ ಅವನನ್ನು ಕೊನೆಯ ತನಕ ಬಿಟ್ಟು ಹೋಗುವುದಿಲ್ಲ ಎನ್ನುವುದು ನಿಮಗೆ ಗೊತ್ತು. ವಿಜಯಕುಮಾರರ ಕವನಗಳ ಓಘಕ್ಕೆ ನಾವು ಮಾರುಹೋಗದೇ ಅವುಗಳ ಮಹತ್ವವನ್ನು ಅರಿಯುವುದಕ್ಕೆ ಇದಿಷ್ಟು ಅಗತ್ಯ ಎನಿಸುತ್ತದೆ. ಈ ಜಾಗೃತಿ ವಿಜಯಕುಮಾರರಲ್ಲೂ ಇರುವುದರಿಂದ ಅವರ ಕವನಗಳು ಏಕಕಾಲಕ್ಕೆ ಜಡತ್ವವನ್ನೂ ಚೈತನ್ಯವನ್ನೂ ಅನುಸಂಧಾನಕ್ಕೊಡ್ಡುತ್ತಿವೆ. ಆದರೆ ಚಿತ್ತ ಯಾವತ್ತೂ ನಿರಾಶಾವಾದಿ. ಅದಕ್ಕೆ ಸಮಾಧಿ, ಧ್ಯಾನ, ಭಕ್ತಿಪರವಶತೆಯಂಥ ಎಸ್ಕೇಪಿಸಮ್ ಇಷ್ಟ. ನಮ್ಮ ಆಧುನಿಕ ಕಾಲಮಾನದಲ್ಲಿ ಎಸ್ಕೇಪಿಸಮ್ಮಿನ ಹೊರದಾರಿಗಳು ಮತ್ತಷ್ಟು ಹೆಚ್ಚಿವೆ. ಅವುಗಳ ಬಗ್ಗೆ ಎಲ್ಲರಿಗೂ ಗೊತ್ತು.

ಈ ಕವನಗಳ ಅನುವಾದಕ್ಕೆ ಪ್ರವೇಶಿಕೆಯನ್ನೊದಗಿಸಿದ ಜಯಂತ ಕಾಯ್ಕಿಣಿಯವರು ಒಂದು ಮಾತನ್ನು ಹೇಳುತ್ತಾರೆ. "ಯಾವುದೇ ವಸ್ತು, ಸನ್ನಿವೇಶ, ದೃಶ್ಯಗಳ "ಮೇಲೆ" ಬರೆಯುವುದರ ಬದಲಿಗೆ, ಅವುಗಳ "ಮೂಲಕ" ಹಾಯುವ ಒಂದು ದಟ್ಟ ಚಲನೆ ಇಲ್ಲಿದೆ." ಇದು ಬಹಳ ಮುಖ್ಯವಾದ ಮಾತು. ಈ ಚಲನೆ ಮತ್ತು "ಮೂಲಕ ಹಾಯುವ" ಪ್ರಕ್ರಿಯೆಗಳು ಗಮನಾರ್ಹವಾದ ಹೊಳಹುಗಳನ್ನು ನಮಗೆ ನೀಡುತ್ತವೆ. ಮೊದಲನೆಯದಾಗಿ ವಿಜಯಕುಮಾರ ಅವರು ನಮ್ಮನ್ನು ವಿಷಣ್ಣರಾಗಿಸುವ ಆ ಅವೇ ಬಿಂಬಗಳನ್ನು ಒಂದು ವಿಶಿಷ್ಟ ವಿನ್ಯಾಸದಲ್ಲಿ ಪುನರ್ ಸೃಷ್ಟಿಸುತ್ತಾ ಹೋಗುವುದರ ಮೂಲಕ ಈ ಕವನಗಳ ಭಾವಕೋಶವನ್ನು ಸೃಜಿಸುತ್ತಾರೆ. ಅವರು ಯಾವುದೇ ಪ್ರಯತ್ನ ಮಾಡುತ್ತಿಲ್ಲ, ಶ್ರಮವೇನೂ ಹಾಕುತ್ತಿಲ್ಲ ಎನಿಸುವಾಗಲೇ ಅತ್ಯಂತ ಸೂಕ್ಷ್ಮ ಸಂವೇದನೆಯ ಗ್ರಹಿಕೆಗಳನ್ನಷ್ಟೇ ಆಯುವ ಮತ್ತು ಅವನ್ನು ನಿರ್ದಿಷ್ಟ ಅನುಕ್ರಮದಲ್ಲೇ ಜೋಡಿಸುವ ಹದ, ಲಯ ಮತ್ತು ಒತ್ತಡ ಕಾಯ್ದುಕೊಂಡು ನಿಭಾಯಿಸುವ ಗುರುತರ ಹೊಣೆಯನ್ನು ನಿರ್ವಹಿಸುತ್ತಿರುತ್ತಾರೆ. ಇದು ಸುಲಭದ ಹೊಣೆಗಾರಿಕೆಯೇನಲ್ಲ. ಹೀಗಾಗಿಯೇ ಇದು ಮೌನಸಂಕಟವನ್ನು ಅಕ್ಷರದ ಮೂಲಕ ಭಾಷೆಯಲ್ಲಿ ಕಟ್ಟಿಕೊಡುವ ಕೆಲಸ ಎಂದಿದ್ದು. ಇಲ್ಲಿ ವಿಜಯಕುಮಾರ ಎಷ್ಟರಮಟ್ಟಿಗೆ ಸಫಲ ಎನ್ನುವುದು ಅವರವರ ಸಂವೇದನೆಗೇ ಬಿಟ್ಟಿದ್ದು. ನಾವು ಟ್ಯೂನ್ ಮಾಡಿಕೊಳ್ಳಲು ಸೋಲಬಹುದು ಅಥವಾ ಕವನಗಳ ಒಟ್ಟು ತರಂಗಾಂತರಕ್ಕೆ ನಾವು, ನಮಗೆ ಅವು ಸ್ಪಂದಿಸುವಲ್ಲಿ ಸೋಲಬಹುದು. ದಕ್ಕಿದರೆ ಸಿಕ್ಕಿದ್ದು ಲಾಭ. ಈ ನಿಟ್ಟಿನಲ್ಲಿ ಮತ್ತಷ್ಟು ಬೆಳಕು ಚೆಲ್ಲುವ ಮಾತುಗಳನ್ನು ಅರುಣಕಮಲ ಅವರು ಹೇಳಿದ್ದಾರೆ.

"ಎಲ್ಲಿ ಅಂತರ್ ವಿರೋಧ ಮತ್ತು ದ್ವಂದ್ವಗಳು ಎಲ್ಲಕ್ಕಿಂತ ಹೆಚ್ಚಾಗಿವೆಯೋ ಆ ಸ್ಥಳಗಳನ್ನು ವಿಜಯಕುಮಾರ ಹುಡುಕುತ್ತಾರೆ. ನೆಮ್ಮದಿಯಿಂದ ಬದುಕುವ ಜನರ ಮೇಲೆ ಪ್ರಹಾರ ಮಾಡುತ್ತಾರೆ. “ಇಪ್ಪತ್ತನೆಯ ಶತಮಾನದ ಅಂತಿಮ ದಿನಗಳಲ್ಲಿ ಒಂದು ದಿನ ಬಾಲ್ಯಕಾಲದ ಗೆಳೆಯ ಸುಂದರನ ಮರೆಯಲಾಗದ ನೆನಪು” ಅಥವಾ “ಗಾರ್ಡ್” ಕವನದಂಥ ಕವಿತೆಗಳು ಇನ್ನೊಬ್ಬರ ಜೊತೆಗೇನೆ ತಮ್ಮ ಬದುಕನ್ನೂ ಪರೀಕ್ಷೆಗೆ ಒಡ್ಡುತ್ತವೆ. ವಿಜಯಕುಮಾರರ ಕವಿತೆಗಳಲ್ಲಿ ನಮ್ಮನ್ನು ನಿಶ್ಚಿಂತರನ್ನಾಗಿ ಮತ್ತು ಪ್ರಸನ್ನರನ್ನಾಗಿ ಇರಲು ಬಿಡುವಂತಹ ಸ್ಥಳಗಳೇ ಅಪರೂಪ. ಬಹುಶಃ ಇಲ್ಲವೇ ಇಲ್ಲವೇನೊ. ಅವರ ಕವಿತೆಗಳಲ್ಲಿ ಒಂದು ಜ್ವರ ತುಂಬಿದ ಅಸ್ವಸ್ಥತೆಯಿದೆ. ವಿಶೇಷತಃ ಅವರ ದೀರ್ಘ ಕವಿತೆಗಳಲ್ಲಿ. ಅಲ್ಲಿ ಎಲ್ಲಿಯೂ ನಿಲ್ಲಲು ಅವಕಾಶವೇ ಸಿಗುವುದಿಲ್ಲ. ವಿಜಯಕುಮಾರ ನಡೆಯುತ್ತಿರುತ್ತಾರೆ. ಕೆತ್ತನೆಯ ಕೆಲಸ ಮಾಡುತ್ತಿರುತ್ತಾರೆ. ಒಳಗೆಲ್ಲೋ ಯಾರೋ ಸಿಕ್ಕಿಹಾಕಿಕೊಂಡಿರುವಂತೆ. ಮಣ್ಣಿನೊಳಗಡೆ ಹೋಗಿ ಅವಲೋಕಿಸುತ್ತಾರೆ. ಎಷ್ಟೊಂದು ಕತ್ತಲೆ, ಎಷ್ಟೊಂದು ಮೌನ."

ಈ ಕಾರಣಕ್ಕೇ ವಿಜಯಕುಮಾರರ ಒಳ್ಳೆಯ ಕವಿತೆಗಳನ್ನು, ಅವುಗಳಿಂದಾಯ್ದ ಒಂದೆರಡು ಭಾಗಗಳನ್ನು ಕೋಟ್ ಮಾಡುವುದು ಕಷ್ಟ ಮಾತ್ರವಲ್ಲ ಅದು ಅಸಾಧು ಎನಿಸುತ್ತದೆ. ಇಲ್ಲಿನ ಮುನ್ನುಡಿಗಳಲ್ಲಿ ಹಾಗೆ ಮಾಡಿದ್ದಿದೆ. ಮುನ್ನುಡಿ ಓದುವಾಗ ಅದು ಒಂದು ಬಗೆಯ ಅನುಭೂತಿಯನ್ನೇನೋ ನೀಡಿದೆ. ಆದರೆ ವಿಜಯಕುಮಾರರ ಕವಿತೆಗಳನ್ನು ಹೀಗೆ ಒಂದೇ ಗುಕ್ಕಿಗೆ ಓದಿ ಮುಗಿಸಿದ ಮೇಲೆ ಮತ್ತೊಮ್ಮೆ ಮುನ್ನುಡಿಗಳನ್ನು, ಅಲ್ಲಿ ನಡುನಡುವೆ ಬರುವ ಅವರ ಕವಿತೆಯ ಕೋಟ್‌ಗಳನ್ನು ಓದಿದರೆ ಅದರಿಂದ ವಿಜಯಕುಮಾರರ ಕವಿತೆಯ ಒಟ್ಟು ಧ್ವನಿಗೆ ಅನ್ಯಾಯವಾಗಿದೆ ಎಂದೇ ಅನಿಸಿದೆ. ವಿಜಯಕುಮಾರ ಅವರ ಕವಿತೆಗಳಲ್ಲಿ ನಿಲುಗಡೆ, ಅಲ್ಪವಿರಾಮ ಇಲ್ಲ. ಅದೊಂದು ನಿರಂತರ ಪ್ರವಾಹದಂತೆ ನಮಗೆದುರಾಗುತ್ತದೆ. ಹಾಗೆಯೇ ಅದು ನಮ್ಮದು ತೊಳೆದು ಇಳಿದು ಹೋಗುತ್ತದೆ.

ಒಬ್ಬ ಸಾಮಾನ್ಯ ಕವಿಯ ಕೈಯಲ್ಲಿ ಕೇವಲ ವೈಯಕ್ತಿಕ ಗೋಳು, ಮನಸ್ಸಿನ ವಿಕ್ಷಿಪ್ತ ಘಳಿಗೆಯ ಲಹರಿ ಇತ್ಯಾದಿ ಆಗಿ ಬಿಡಬಹುದಾಗಿದ್ದ, ಮನದ ತಲ್ಲಣಗಳನ್ನು ವಿಜಯಕುಮಾರ ಅವರು ವೈಯಕ್ತಿಕತೆಯಿಂದ ಪಾರುಮಾಡಿದ್ದಾರೆ ಮಾತ್ರವಲ್ಲ, ಅದನ್ನು ಸಾಮಾನ್ಯನೊಬ್ಬನ ದೈನಂದಿನವೋ ಎಂಬಷ್ಟು ಸರಳವಾಗಿ, ಸುಲಲಿತವಾಗಿ ಕಟ್ಟಿಕೊಟ್ಟಿದ್ದಾರೆ. ಆಗಲೂ ಈ ಕವನಗಳು ಗಹನವಾಗಿ ಕಾಡುವ, ಸೂಕ್ಷ್ಮಸಂವೇದಿಗಳ ತಲ್ಲಣಕ್ಕೆ ಕಾರಣವಾಗುವ ಧೀಃಶಕ್ತಿಯನ್ನು ಪಡೆದುಕೊಂಡಿವೆ. ಇಲ್ಲಿ ಅಡಿಗರ "ಹದ್ದು" ಕವಿತೆಯ ಒಂದು ಸಾಲಿಗೆ ಡಾ||ಯು.ಆರ್.ಅನಂತಮೂರ್ತಿಯವರು ಕೊಟ್ಟ ಅರ್ಥವಿಸ್ತರಣೆಯ ನೆನಪಾಗುತ್ತಿದೆ.

"ಕ್ರೌಂಚ ವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು" ಎಂಬುದು ಆ ವಾಕ್ಯ. ಡಾ||ಯು ಆರ್ ಅನಂತಮೂರ್ತಿಯವರ ಮಾತುಗಳು ಇಂತಿವೆ:

"ಹಸಿಯಾಗದ ಮೈಯ ಮೃದುವಾದ ಹುಳ ರೇಷ್ಮೆಯ ಗಟ್ಟಿಯಾದ ನೂಲನ್ನು ಉತ್ಪನ್ನ ಮಾಡುತ್ತದೆ. ಅದರ ಮೈ ನೋಯಬಲ್ಲ್ ಬತ್ತಲೆಯದಾದ್ದರಿಂದ ಈ ಗಟ್ಟಿ ರೇಷ್ಮೆ ಅದಕ್ಕೆ ಸಾಧ್ಯ ಎಂಬುದಿಲ್ಲಿ ಮುಖ್ಯ. ಜೀವನದ ಮೂಲದಲ್ಲಿರುವ ಈ ನೋವನ್ನು ಅಡಿಗರು ಅಹೇತುವಾದ್ದೆಂದು ತಿಳಿದಿರಬಹುದು. ಮೇಲೆ ನಾನು ಉದ್ಧರಿಸಿದ ಅಡಿಗರ ಸಾಲು ಅವರ ಕಾವ್ಯದ ಪ್ರಕ್ರಿಯೆಯನ್ನು ಸಾರದಲ್ಲಿ ತಿಳಿಸುತ್ತದೆ ಎಂದು ನನಗೆ ಅನೇಕ ಸಾರಿ ಅನ್ನಿಸಿದೆ. ಅಡಿಗರ ಎಲ್ಲ ಮುಖ್ಯ ಕವನಗಳ ಕೇಂದ್ರದಲ್ಲಿ ಇಂಥ ಒಂದು ಬತ್ತಲೆಯ, ನೋಯಬಲ್ಲ, ಅನುಭವದ ಆಘಾತಕ್ಕೆ ಒಡ್ಡಿಕೊಂಡ, ತನ್ನ ಗಟ್ಟಿತನವನ್ನೂ ಪಡೆದ ವ್ಯಕ್ತಿತ್ವವಿದೆ ಎನ್ನಬಹುದು." (ಸಂಸ್ಕೃತಿ ಮತ್ತು ಅಡಿಗ).

ಮಾಡಬೇಕಾದ ಕೆಲಸ ತುಂಬ ಸರಳವಿದೆ; ಒಂದು ಮುವ್ವತ್ತು ಕವನಗಳನ್ನು ಓದುವುದು ಅಷ್ಟೇ.

ಒಂದೊಂದು ಓದಿ ಮುಗಿಸಿದಾಗಲೂ ಹೇಳಲಾಗದ ಸುಸ್ತು. ನೂರಾರು ನೆನಪುಗಳನ್ನು ಹುಗಿದಿಟ್ಟ ಬಂಡೆಕಲ್ಲನ್ನು ಎದೆಯ ಮೇಲಿಂದ ಜರುಗಿಸಿ ಅದರ ಬುಡದಲಿನ ತೇವ, ಹುಳ ಹುಪ್ಪಡಿ, ಇರುವೆಮೊಟ್ಟೆ ಕದಲಿಸಿದ ಕಲಕಲಕಲಕಲ ಚಲನೆ, ಹಸಿಹಸಿ ಘಮಲು. ಮತ್ತೊಮ್ಮೆ ಹುಟ್ಟಿದೆನಾ, ಮತ್ತೆ ಆ ಗಲ್ಲಿ, ಕಸದ ಹೊಂಡ, ಓಣಿ, ಕೇರಿ ಅಲೆದೆನಾ, ಮತ್ತದೇ ರಣಾರಂಪ, ಬಡಿದಾಟ ಎದುರಾದೆನಾ, ಅಳುತ್ತ ಕೂತ ಕತ್ತಲೆ ಮತ್ತೆ ಕಣ್ತುಂಬಿತೇ, ಮನೆಗೆ ಮರಳುವ ನಿರಾಶೆಯ ಹಾದಿಯಲ್ಲಿ ಕೊನೆ ಸಿಗದೆ ಕಳೆದು ಹೋದೆನಾ....

ಮುಂದಿನ ಕವನಕ್ಕೆ ಎಂದೂ ಇಳಿಯಲಾಗದ ತಳಮಳ, ಭಾರ. ಅಲ್ಲೇ ಎಲ್ಲ ಸ್ತಬ್ಧ.

ಒಂದು ಒಳ್ಳೆಯ ಸಾಹಿತ್ಯ ಕೃತಿಯ ಓದು ನಮ್ಮನ್ನು ಶ್ರೀಮಂತಗೊಳಿಸುತ್ತದೆ, ಸಂವೇದನೆಯನ್ನು, ಗ್ರಹಿಕೆಗಳನ್ನು ವಿಸ್ತರಿಸಿ ನಮ್ಮ ಜೀವನದೃಷ್ಟಿ, ನಿಲುವು ಮತ್ತು ರೀತಿನೀತಿಗಳನ್ನು ತಿದ್ದುತ್ತದೆ. ಸರಳವಾಗಿ ನಮ್ಮನ್ನು ಹೆಚ್ಚು ಹೆಚ್ಚು ಮನುಷ್ಯರನ್ನಾಗಿಸುತ್ತದೆ. ಇದು ಅಂಥ ಒಂದು ಕೃತಿ.
(ಸಂಕಥನ - ಸಾಹಿತ್ಯ ಸಾಂಸ್ಕೃತಿಕ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟಿತ)

No comments: