Saturday, May 21, 2016

ನಾ ಮೊಗಸಾಲೆಯವರ ಇದುವರೆಗಿನ ಕತೆಗಳು

ನಾ ಮೊಗಸಾಲೆಯವರ ಇದುವರೆಗಿನ ಕತೆಗಳ ಈ ಸಂಕಲನಕ್ಕೆ ಹೆಸರು ಆರಿಸುವಾಗ ಸೀತಾಪುರದಲ್ಲಿ ಎಲ್ಲವೂ ಕತೆಯೇ, ಹಾಗಾಗಿ ಇಲ್ಲಿ ಕತೆಗಳು ಅನ್ನೋದು ಇಲ್ಲ, ಸೀತಾಪುರವೇ ಒಂದು ಅಮರ-ಅಕ್ಷಯ ಕಥಾಕೋಶ ಎಂಬರ್ಥದಲ್ಲಿ ಸೀತಾಪುರದಲ್ಲಿ ಕತೆಗಳಿಲ್ಲ ಎಂಬ ಹೆಸರನ್ನು ಅವರು ಆರಿಸಿದರು. ಮೊಗಸಾಲೆಯವರ ಜೀವನದೃಷ್ಟಿಯನ್ನೂ, ಸೀತಾಪುರವನ್ನು ಅವರು ಎಷ್ಟು ಗಾಢವಾಗಿ ಧರಿಸಿದ್ದಾರೆಂಬುದನ್ನೂ ಸ್ಪಷ್ಟಪಡಿಸುವ ಮಾತಿದು. ಕಾರಂತರು ತಮಗೆ ಕಾದಂಬರಿಗಳಲ್ಲಿ ಹೇಳಬೇಕನಿಸಿದ್ದನ್ನು ತೋಡಿಕೊಳ್ಳುವುದು ಮುಖ್ಯವೇ ಹೊರತು, ತಂತ್ರ-ವಸ್ತು ಇತ್ಯಾದಿಯಲ್ಲ, ತಾವು ಆ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಂಡುದಿಲ್ಲ ಎಂಬರ್ಥದ ಮಾತನ್ನು ಆಡಿದ್ದರು. ಮೊಗಸಾಲೆಯವರು ಆಡದೆಯೂ ಮಾಡಿದ್ದು ಅದನ್ನೇ. ಅವರಿಗೆ ಕತೆ ಬೇರೆಯಲ್ಲ, ಬದುಕು ಬೇರೆಯಲ್ಲ. ಅವರಿಗೆ ಬದುಕು ಬೇರೆಯಲ್ಲ, ಅದನ್ನು ಹಂಚಿಕೊಳ್ಳುವ ಮಾತು ಬೇರೆಯಲ್ಲ. ಅವರಿಗೆ ಮಾತು ಬೇರೆಯಲ್ಲ, ಕತೆ ಬೇರೆಯಲ್ಲ. ಬದುಕು, ಮಾತು ಮತ್ತು ಕತೆ - ಇವುಗಳ ನಡುವಿನ ಒಂದು ಸಂಬಂಧದ ವಿಶ್ಲೇಷಣೆ ನಡೆಸುತ್ತ ಹೋದರೆ, ಸಣ್ಣಕಥಾ ಮಾಧ್ಯಮದ ಇದುವರೆಗಿನ ಎಲ್ಲ ಪ್ರಯೋಗಶೀಲತೆ, ದೇಶ ವಿದೇಶದ ಸಾಹಿತ್ಯಾಧ್ಯಯನದಿಂದ ಅದು ಮೈಗೂಡಿಸಿಕೊಂಡ ಹೊಸತನ, ವೈಶಿಷ್ಟ್ಯ, ಕಸು ಎಲ್ಲದರ ಹಿನ್ನೆಲೆಯಲ್ಲಿಯೂ ಮೊಗಸಾಲೆಯವರ ತಾಜಾ, ಸಹಜ ಮತ್ತು ಜೀವಂತ ಮಾದರಿಯೊಂದು ನಮ್ಮನ್ನು ಸೆಳೆಯುವ ಪರಿಯಿದೆಯಲ್ಲ, ಅದರಲ್ಲಿ ಒಂದು ಅನನ್ಯತೆಯಿದೆ, ಗಹನತೆಯೂ ಇದೆ. ಅದನ್ನು ನಾವು ಸಾವಧಾನದಿಂದ ಸೂಕ್ಷ್ಮವಾಗಿ ಗಮನಿಸಬೇಕಾದ್ದಿದೆ. ಶ್ರೀಮಂತ ಸಾಹಿತ್ಯ ಸೃಷ್ಟಿಗಾಗಿ, ಶ್ರೇಷ್ಠವಾದುದನ್ನು ಸೃಜಿಸುವ ಬೌದ್ಧಿಕ ಪರಿಶ್ರಮದ ತನ್ಮಯತೆಯಲ್ಲಿ ನಾವು ಸಾಗುತ್ತಿರುವ ಹಾದಿಯೇ ಅದಕ್ಕಿರುವ ಏಕೈಕ ಮಾರ್ಗ ಎಂಬಂಥ ಪರಿಜ್ಞಾನವೇನಿದೆ, ಅದು ಬೌದ್ಧಿಕ ಕಸರತ್ತಿನ ಒಂದು ಭ್ರಮೆ ಕೂಡ ಆಗಿರಬಹುದಾದ ಒಂದು ಅನುಮಾನ, ಕೊನೆಗೆ ನಮಗೆ ಅಂಥ ಸತ್ಯವೊಂದು ಎದುರಾಗುವ ಸಾಧ್ಯತೆಯ ಹೊಳಹು ಇರಿಸಿಕೊಂಡು ಹಿಂದಿರುಗಿ ನೋಡಬೇಕಿದೆ.

ನಾ ಮೊಗಸಾಲೆಯವರ ಒಟ್ಟು ನಲವತ್ತೆರಡು ಕತೆಗಳನ್ನು ಓದುತ್ತಲೇ ನಾಲ್ಕು ಸಂಕಲನಗಳಲ್ಲಿ ಲಭ್ಯವಿದ್ದ ಇವುಗಳ ಮುನ್ನುಡಿಯನ್ನೂ ಗಮನಿಸುವ ಅವಕಾಶ ಸಿಕ್ಕಿತು. ಎಸ್.ಪಿ.ಪದ್ಮಪ್ರಸಾದ್, ಮಾಧವ ಕುಲಕರ್ಣಿ, ಎಸ್ ಆರ್ ವಿಜಯಶಂಕರ ಮತ್ತು ಡಾ ವಾಸುದೇವ ಶೆಟ್ಟಿಯವರು ಬರೆದಿರುವ ಮುನ್ನುಡಿಗಳು ವಿಸ್ತೃತ ಅಧ್ಯಯನ ಮತ್ತು ಸೂಕ್ಷ್ಮ ಸಂವೇದಿ ನೆಲೆಯಿಂದ ಬಂದಿದ್ದು ಮೊಗಸಾಲೆಯವರ ಕಥನ ವ್ಯವಸಾಯದ ಒಟ್ಟು ಪ್ರಕ್ರಿಯೆಯ ಬಗ್ಗೆ ಸಾಕಷ್ಟು ಒಳನೋಟಗಳನ್ನು ಒದಗಿಸುವಂತಿವೆ. ಈ ಮುನ್ನುಡಿಗಳನ್ನು ಗಮನವಿಟ್ಟು ವಿಶ್ಲೇಷಿಸಿದರೆ ನಮಗೆ ಮೊಗಸಾಲೆಯವರ ಕತೆಗಳ ಬಗ್ಗೆ, ಕತೆಯನ್ನು ಅವರು ಕಟ್ಟುವ ಒಟ್ಟು ಪ್ರಕ್ರಿಯೆಯ ಬಗ್ಗೆ ಒಂದು ಸಮಗ್ರ ಎನ್ನಬಹುದಾದ ನೋಟ ಲಭ್ಯವಾಗುತ್ತದೆ. ಆದರೆ ಈ ಯಾವತ್ತೂ ಮಹನೀಯರು ತಮ್ಮ ಬರಹಗಳನ್ನು ಎಲ್ಲಿಯೂ ಇದೇ ಕೊನೆಯ ಮಾತು ಎಂಬಂತೆ ಹೇಳುತ್ತಿಲ್ಲವಾಗಿ ನಾವು ಮತ್ತೆ ಮತ್ತೆ ಆ ಮಾತುಗಳನ್ನು ಚರ್ಚೆಗೊಡ್ಡಬಹುದಾಗಿದೆ, ವಿಸ್ತರಿಸಬಹುದಾಗಿದೆ ಮತ್ತು ಪ್ರಶ್ನಿಸಬಹುದಾಗಿದೆ ಎನ್ನುವುದು ಗಮನಾರ್ಹ. ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಈ ವಿಮರ್ಶಕರು ಸ್ವತಃ ವಿಮರ್ಶೆಯ ವಿನಯ ಮತ್ತು ಮಹತ್ವ ಬಲ್ಲವರಾಗಿದ್ದು ಪ್ರಸ್ತುತ ಈ ಮಾನ್ಯರ ಮಾತುಗಳು ಅಂಥ ಅವಕಾಶವನ್ನು ಓದುಗರಿಗೆ ಸ್ಪಷ್ಟವಾಗಿಯೇ ತೆರೆದಿರಿಸಿವೆ. ಹಾಗಾಗಿಯೇ ಮೊಗಸಾಲೆಯವರ ಇದುವರೆಗಿನ ಎಲ್ಲ ಕತೆಗಳನ್ನಿಟ್ಟುಕೊಂಡು ವಿಶ್ಲೇಷಿಸುವಾಗ ಈ ಎಲ್ಲ ಮುನ್ನುಡಿಗಳೂ ಮಹತ್ವದ್ದಾಗುತ್ತವೆ.

"ಸುಂದರಿಯ ಎರಡನೇ ಅವತಾರ" ಸಂಕಲನಕ್ಕೆ ಮುನ್ನುಡಿ ಬರೆದಿರುವ ಎಸ್.ಪಿ. ಪದ್ಮಪ್ರಸಾದ್ ಅವರು ಮೊಗಸಾಲೆಯವರ ಕತೆಗಳಲ್ಲಿ ಪ್ರತಿಮೆ, ಸಂಕೇತಗಳಿಗಾಗಿ ಹುಡುಕಾಟವಿಲ್ಲ, ತೀರ ಸರಳವೆಂಬಂತೆ ಆರಂಭವಾಗುವ ಕತೆಗಳು ಬಹುಮಟ್ಟಿಗೆ ಹಾಗೆಯೇ ಮುನ್ನಡೆಯುತ್ತವೆ ಎನ್ನುತ್ತಾರೆ. ಹಾಗೆಯೇ ಮುಂದುವರಿದು ಮೊಗಸಾಲೆಯವರದ್ದು ನೇರವಾಗಿ ವಸ್ತುವಿನ ಕೇಂದ್ರ ಅಥವಾ ಶಿಖರದತ್ತ ಸಾಗುವ ಕಥನ ಶೈಲಿ. ಪರಸ್ಪರ ದೂರವೆನಿಸುವ ಹಲವು ಶಿಖರಗಳನ್ನು ಸೃಷ್ಟಿಸಿ ಕೊನೆಯಲ್ಲಿ ಅವುಗಳನ್ನು ಯಾವುದೋ ಒಂದು ಸೂತ್ರದಿಂದ ಸೇರಿಸಿ ಸಂಬದ್ಧಗೊಳಿಸಿ ಕತೆಯನ್ನು ಮುಕ್ತಾಯಗೊಳಿಸುವ ಕ್ಲಿಷ್ಟ ತಂತ್ರ ಇವರಲ್ಲಿ ಕಾಣದು ಎನ್ನುತ್ತಾರೆ. ಪದ್ಮಪ್ರಸಾದ್ ಅವರು ಮೊಗಸಾಲೆಯವರ ಕತೆಗಳನ್ನು ವೈದೇಹಿ, ಬೊಳುವಾರು, ಅನಂತಮೂರ್ತಿ, ತೇಜಸ್ವಿ, ಮೋಹನ ನಾಗಮ್ಮನವರ, ಚಿತ್ರಶೇಖರ ಕಂಠಿ, ಕುಂವೀ ಅವರ ಕತೆಗಳೊಂದಿಗಿಟ್ಟು ತುಲನಾತ್ಮಕವಾದ ಒಂದು ಅವಲೋಕನವನ್ನೂ ನಡೆಸುತ್ತಾರೆ. ಈ ಸಂಕಲನದ ಹೆಚ್ಚಿನ ಕತೆಗಳು 2000ದ ಆಸುಪಾಸಿನಲ್ಲಿ ರಚಿಸಲ್ಪಟ್ಟವಾಗಿದ್ದು ಮೊಗಸಾಲೆಯವರ ಸೃಜನಶೀಲ ವಯೋಮಾನದ ಅವಧಿ ನವ್ಯದ ಉಚ್ಛ್ರಾಯದೊಂದಿಗೆ ಸಹಜವಾಗಿಯೇ ತಳುಕು ಹಾಕಿಕೊಂಡಿದ್ದ ಅವಧಿಯೇ ಆಗಿರುವುದರಿಂದ ಬಹುಶಃ ಪದ್ಮಪ್ರಸಾದ್ ಅವರ ನಿರೀಕ್ಷೆ, ಹೋಲಿಕೆಗಳು ಸ್ವಾಭಾವಿಕವಾದುವು ಎಂದೇ ಹೇಳಬಹುದು. ಆದರೆ ಇಲ್ಲಿಯೇ ನಮ್ಮ ಗಮನಕ್ಕೆ ಬರಬೇಕಾದ ಸಂಗತಿಯೆಂದರೆ, ನವ್ಯದ ಅಬ್ಬರದಲ್ಲಿ ಮೊಗಸಾಲೆಯವರಂಥ ಸಹಜ ಕಥನಕಾರರು ಕನ್ನಡ ಸಾಹಿತ್ಯಪ್ರಪಂಚದ ಅವಗಣನೆಗೆ, ತುಸುಮಟ್ಟಿಗೆ ನವ್ಯ ವಿಮರ್ಶಾ ಪದ್ಧತಿಗೆ ಒಗ್ಗದ ಬರಹಗಳಾಗಿ ಆ ನೆಲೆಯಲ್ಲಿ ತಿರಸ್ಕಾರಕ್ಕೆ ಗುರಿಯಾಗುವ ಅತಿರೇಕವೊಂದು ಸೃಷ್ಟಿಯಾಯಿತು ಎಂಬ ವಾದದಲ್ಲೂ ಹುರುಳಿದೆ ಎಂಬುದು. ನಾವು ಸಂಕೇತ, ಪ್ರತಿಮೆಗಳಿಗಾಗಿ ಮೊಗಸಾಲೆಯವರ ಕತೆಗಳಲ್ಲಿ ಹುಡುಕಾಟ ನಡೆಸುವುದಾಗಲೀ, ಇತರ ನವ್ಯ ಕತೆಗಾರರ ಜೊತೆ ಮೊಗಸಾಲೆಯವರ ಕತೆಗಳನ್ನು ತೌಲನಿಕವಾಗಿಟ್ಟು ನೋಡುವುದಾಗಲೀ ಮಾಡುವಾಗಲೇ ಒಂದು ಸಿದ್ಧ ಮಾದರಿಯ ಕಥನ ಪರಂಪರೆಯೊಳಗೆ ಮೊಗಸಾಲೆಯವರನ್ನಿಟ್ಟು ನೋಡುವ ಸನಾತನಿ ಧೋರಣೆ ತೋರಿದಂತಾಗದೆ? ಇಲ್ಲಿ ನಾವು ಮೊಗಸಾಲೆಯವರ ಕಥನದಲ್ಲಿ "ಇಲ್ಲ"ದವುಗಳನ್ನು ಗಮನಿಸುತ್ತೇವೆ, "ಇರುವ" ಅಂಶಗಳತ್ತ ಅವಗಣನೆ ತೋರುತ್ತೇವೆ ಎಂದರೆ ತಪ್ಪಾಗಲಾರದು.

ಮೊಗಸಾಲೆಯವರ ಎರಡನೆಯ ಕಥಾಸಂಕಲನ "ಸೀತಾಪುರದ ಕತೆಗಳು". ಇದಕ್ಕೆ ಮುನ್ನುಡಿಯನ್ನು ಬರೆದಿರುವಂಥ ಮಾಧವ ಕುಲಕರ್ಣಿಯವರು ಮೊಗಸಾಲೆಯವರ ಕತೆಗಳಿಗೆ ತಮ್ಮನ್ನು "ಕೊಟ್ಟುಕೊಂಡು" ಓದಿದ್ದಾರೆ, ಅಧ್ಯಯನಪೂರ್ಣವಾದ ಮುನ್ನುಡಿಯನ್ನು ಬರೆದು ಕೃತಿಗೆ ನ್ಯಾಯ ಸಲ್ಲಿಸಿದ್ದಾರೆ. "ದಕ್ಷಿಣಕನ್ನಡದ ಜೀವನವನ್ನು ಕೇವಲ ಪ್ರಾದೇಶಿಕ ಜೀವನವನ್ನಾಗಿ ನೋಡದೆ ಅದರ ನೆಲೆ-ಬೆಲೆ ಮತ್ತು ಅರ್ಥಗಳನ್ನು ಕಂಡುಹಿಡಿಯಲು ಇಲ್ಲಿಯ ಕತೆಗಳು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತವೆ. ನವೋದಯದ ನಿರೂಪಣೆ, ನವ್ಯರ ವಿಶ್ಲೇಷಣಾ ಮನೋಧರ್ಮ, ಬಂಡಾಯದ ಸಮಾಜಮುಖಿ ಧೋರಣೆ - ಇವೆಲ್ಲವುಗಳನ್ನು ಏಕತ್ರಗೊಳಿಸಿಕೊಂಡು, ಸೃಜನಶೀಲತೆಯನ್ನು ಬಲಿ ಕೊಡಲಾರೆನೆಂದು ಹಟ ತೊಟ್ಟು ಬರೆದ ಕತೆಗಳಿವು. ಅದಕ್ಕೇ ಈ ಕತೆಗಳಿಗೆ ಸದ್ಯದ ಕನ್ನಡದ ಕಥಾ ಜಗತ್ತಿನಲ್ಲಿ ವಿಶಿಷ್ಟ ಸ್ಥಾನವಿದೆ. ಪ್ರಾದೇಶಿಕತೆ ಕೇವಲ ಪ್ರಾದೇಶಿಕತೆಯಾಗಿ ಉಳಿಯದೆ, ನೆನಪುಗಳು ಕೇವಲ ಹಳಹಳಿಯ ವಸ್ತುಗಳಾಗದೆ ಅವುಗಳು ಸೃಜನಶೀಲತೆಗೆ ದೊರೆಯುವ ಜೀವನದ ಚಿಲುಮೆಗಳಾಗಿ ಈ ಕತೆಗಳಲ್ಲಿ ಮಾರ್ಪಾಡಾ"ಗುತ್ತವೆ ಎಂಬುದು ಮಾಧವ ಕುಲಕರ್ಣಿಯವರ ಅಭಿಮತ. ಇಲ್ಲಿ ಬರುವ ಪ್ರಾದೇಶಿಕತೆ, ನೆನಪುಗಳ ಹಳಹಳಿಕೆ, ನವೋದಯ-ನವ್ಯ-ಬಂಡಾಯ ಘಟ್ಟದ ಸಮನ್ವಯದ ಹದ ಕಂಡುಕೊಂಡ ಬರವಣಿಗೆ - ಈ ಮೂರೂ ವಿಚಾರಗಳು ಮೊಗಸಾಲೆಯವರ ಕಥನಕ್ರಿಯೆಯ ಒಳಗು ಹೊರಗನ್ನು ಅರ್ಥೈಸಿಕೊಳ್ಳಲು ಬಹುಮುಖ್ಯವಾದ ಪರಿಕರಗಳನ್ನೊದಗಿಸುತ್ತವೆ.

ನೆನಪುಗಳ ಹಳಹಳಿಕೆ ಮೊಗಸಾಲೆಯವರ ಕತೆಗಳ ಮೂಲದ್ರವ್ಯವಲ್ಲ. ಇದಕ್ಕೆ ಬಹುಶಃ ಮೊಗಸಾಲೆಯವರು ಅದೇ ಜಗತ್ತಿನಲ್ಲಿ ಬದುಕುತ್ತಿದ್ದು, ಅವರು ಏನನ್ನೂ ಕಳೆದುಕೊಂಡಿರದೇ ಇರುವುದೇ ಇದ್ದೀತು. ಮೊಗಸಾಲೆಯವರದ್ದು ಆಧುನಿಕ ಸಾಹಿತಿಗಳಂತೆ ವಲಸೆ ಬಂದ ಪ್ರಜ್ಞೆಯಲ್ಲ. ಅವರು ಬಾಲ್ಯವನ್ನು, ನೆನಪುಗಳನ್ನು ನೆಚ್ಚಿ ಬರೆಯುತ್ತಿರುವ ಅನೇಕ ನವ್ಯ, ನವ್ಯೋತ್ತರ ಲೇಖಕರಿಗಿಂತ ಭಿನ್ನವಾಗಿ ನಿಲ್ಲುವುದು ಇಲ್ಲಿಯೇ. ಇದಕ್ಕಿಂತ ಮುಖ್ಯವಾಗಿ ಮೊಗಸಾಲೆಯವರು ಸಮಾಜಮುಖಿ ಧೋರಣೆಯ, ವರ್ತಮಾನಕ್ಕೆ ಹೆಚ್ಚು ಸಲ್ಲುತ್ತ ಬಂದ ಲೇಖಕರಾಗಿರುವುದು. ಅವರ ಕತೆಗಳಲ್ಲಿ ವೈಯಕ್ತಿಕ ನೆಲೆಯ ಸಮಸ್ಯೆಗಳಿಲ್ಲ. ಇದ್ದರೂ ಅದಕ್ಕೊಂದು ಸಾಮಾಜಿಕ ಮುಖವೇ ಇದ್ದು ಅದೇ ಕತೆಯ ನೆಲೆಯಲ್ಲಿ ಮುಂದೊತ್ತಿ ನಿಲ್ಲುತ್ತದೆ. ಹಾಗೆಯೇ ಅವರು ತಕ್ಷಣಕ್ಕೆ ಸ್ಪಂದಿಸಿ ಬರೆಯುವ ಸಾಹಿತಿ ಎಂದು ಎಸ್.ಆರ್.ವಿಜಯಶಂಕರ್ ಅವರು ಹೇಳಿದ ಮಾತುಗಳು ಕೂಡ ಇಲ್ಲಿ ಮುಖ್ಯವಾಗುತ್ತವೆ. ಎಷ್ಟರಮಟ್ಟಿಗೆ ಎಂದರೆ, ಎರಡು ಕತೆಗಳನ್ನು ಹೊರತು ಪಡಿಸಿದರೆ ಮೊಗಸಾಲೆಯವರ ಯಾವುದೇ ಕತೆಗಳಲ್ಲಿ ನಮಗೆ ಕನಸು, ಕಲ್ಪನೆ, ಭ್ರಮೆಗಳ ಮುಖಾಮುಖಿಯಾಗುವುದಿಲ್ಲ! ಈ ಎರಡು ಕತೆಗಳಲ್ಲಿ ಬರುವ ಕನಸು ಕೂಡ ಕನಸಿನ ಅಸ್ಪಷ್ಟತೆ, ಅತಾರ್ಕಿಕತೆ, ಊಹೆಗಳ ಯಾವುದೇ ಅಂಶಗಳಿಲ್ಲದ ಕಡು ವಾಸ್ತವದ ಕನಸುಗಳೇ ಆಗಿರುವುದು ಸುಳ್ಳಲ್ಲ. ಹೀಗೆ ಅಮೂರ್ತತೆಯನ್ನು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಕತೆಗಾರ ಕೂಡ ನಾ ಮೊಗಸಾಲೆಯವರೇ ಎನ್ನಬೇಕು. ಹೀಗಾಗಿ ಅವರ ಕತೆಗಳಿಗೆ ಅಥೆಂಟಿಸಿಟಿ ಪ್ರಾಪ್ತವಾಗಿಯೂ “ಇರುವುದನ್ನು” ಮೀರಿ ಅವು ಚಾಚಿಕೊಳ್ಳುವುದಿಲ್ಲ ಎನ್ನುವುದು ಕೂಡ ಗಮನಿಸಬೇಕಾದ ಸಂಗತಿಯಾಗಿದೆ.

ನಿಖರವಾದ ವಿಶ್ಲೇಷಣೆಯಿಂದ ಸ್ಪಷ್ಟ ಮಾತುಗಳಲ್ಲಿ ತಮ್ಮ ಗ್ರಹಿಕೆಗಳನ್ನು ತೆರೆದಿಡುವ ವಿಮರ್ಶಕರಾದ ಎಸ್. ಆರ್. ವಿಜಯಶಂಕರ್ ಅವರು ಮೊಗಸಾಲೆಯವರ ಮೂರನೆಯ ಕಥಾಸಂಕಲನ "ಸೀತಾಪುರದಲ್ಲಿ ಗಾಂಧೀಜಿ"ಯ ಮುನ್ನುಡಿಕಾರರು. ಮೊಟ್ಟಮೊದಲ ಬಾರಿಗೆ ಇಲ್ಲಿ ವಿಜಯಶಂಕರ ಅವರು ಮೊಗಸಾಲೆಯವರದು ಮೌಕಿಕ ಪರಂಪರೆಯ ಹಿನ್ನೆಲೆಯುಳ್ಳ ಕತೆಗಳು ಎಂದು ಗುರುತಿಸಿರುವುದು ಗಮನಾರ್ಹವಾದ ಮತ್ತು ಮಹತ್ವದ ಮಾತು. ಪದ್ಮಪ್ರಸಾದ್ ಅವರ ನವ್ಯ ಮಾನದಂಡಗಳಲ್ಲಿ ನಾವು ಕಳೆದುಕೊಳ್ಳಬಹುದಾದ ನೋಟಗಳು ಎಂದು ನಾನು ಹೇಳಬಯಸಿದ್ದು ಇದನ್ನೇ. ನಾವು "ಕತೆ ಹೇಳುವ" ಕಾಲದಿಂದ "ಕತೆ ಬರೆಯುವ" ಕಾಲಕ್ಕೆ ಹೆಜ್ಜೆ ಇಟ್ಟು, ಕತೆಗಾರಿಕೆ ಎಂಬುದು ಒಂದು ಪ್ರೆಸೆಂಟೇಶನ್ ಟೆಕ್ನಿಕ್ ಎಂಬ ಮಟ್ಟಕ್ಕೆ ಅದನ್ನೊಯ್ದು, ವಸ್ತುವಿಗಿಂತ ಅದನ್ನು ನೀನು ಹೇಗೆ ಹೇಳುತ್ತೀ ಎನ್ನುವುದೇ ಮುಖ್ಯ ಎಂಬ ತತ್ವಕ್ಕೆ ಮನಸೋತು, ರಾಚನಿಕ ಮತ್ತು ನಿರಚನಾ ತತ್ವಗಳಿಗೆ ಸಿಕ್ಕಿಕೊಂಡು, ಇವತ್ತು ಕತೆಗಳಲ್ಲಿ ಕಥಾನಕ ಮುಖ್ಯವಲ್ಲ, ಅದು ನೀಡುವ ಒಟ್ಟಾರೆ ಅನುಭವ, ಅನುಭೂತಿಯಷ್ಟೇ ಮುಖ್ಯವೆಂಬ ನೆಲೆಗೆ ತಲುಪಿದ್ದೇವೆ. ಸ್ಥೂಲವಾಗಿ ಇದನ್ನು ಕಾವ್ಯಕ್ಕೆ ಅನ್ವಯಿಸುತ್ತಿದ್ದೆವು. ಇದೇ ನೆಲೆಯಲ್ಲಿ ಯೋಚಿಸುತ್ತಾ ಹೋದರೆ ಮೌಕಿಕ ಪರಂಪರೆಯ ಕತೆಗಾರರಾದ ಮೊಗಸಾಲೆಯವರನ್ನು ಎಲ್ಲಿ ಫಿಟ್ ಮಾಡಬೇಕು ಎಂಬ ಸಮಸ್ಯೆ ಎದುರಾಗುವುದು ಸಹಜವೇ. ಆದರೆ ಈ ಸಮಸ್ಯೆ ವಿಮರ್ಶಕರದ್ದಾಗಿರುವಷ್ಟರ ಮಟ್ಟಿಗೆ ಅಪಾಯಕಾರಿಯಲ್ಲ. ಸ್ವತಃ ಮೊಗಸಾಲೆಯವರಿಗೆ ತಮ್ಮದು ಕತೆಯೆ, ಕಥಾಪ್ರಸಂಗಗಳೇ, ಇವು ಸಣ್ಣಕಥಾ ಪ್ರಕಾರಕ್ಕೆ ಫಿಟ್ ಆಗುತ್ತವೆಯೇ ಎಂಬ ಅನುಮಾನ ಮೂಡಿಸುವಷ್ಟರ ಮಟ್ಟಿಗೆ ಮುಂದುವರಿದರೆ ಕಷ್ಟ. ಆಗ ಅದು ಮೊಗಸಾಲೆಯವರದೇ ಒಂದಾನೊಂದು ಕತೆಯಲ್ಲಿ ಬರುವ ಶಾಸ್ತ್ರಕ್ಕಾಗಿ ನಾವಿಲ್ಲ, ನಮಗಾಗಿ ಶಾಸ್ತ್ರವಿರೋದು ಎಂಬ ಮಾತಿಗೆ ವಿರುದ್ಧವಾದ ಚಲನೆಯಷ್ಟೇ ಆಗುತ್ತದೆ. ಶಾಸ್ತ್ರ, ಸಿಲೆಬಸ್, ಮಾದರಿ, ಪ್ರಯೋಗಶೀಲತೆ, ಫಾರ್ಮೆಟ್ ಗಳು ಬೇಕು, ಆದರೆ ಅದೇ ಕತೆಗಾರನ ವಿಧಿಯಾಗಬಾರದು.

ಎಸ್. ಆರ್. ವಿಜಯಶಂಕರ ಅವರು ಇನ್ನೂ ಒಂದು ಬಹುಮುಖ್ಯವಾದ ಅಂಶವನ್ನು ಇಲ್ಲಿ ಹೇಳುತ್ತಾರೆ. ಕತೆಗಾರನನ್ನು ಮೀರಿ ಪಾತ್ರಗಳೂ, ಸಂದರ್ಭಗಳೂ ಕತೆಯೊಳಗೆ ಗರಿಗೆದರುವುದನ್ನು ನಾವು ಸಹಜವಾಗಿ ಇಲ್ಲಿ ಗಮನಿಸಬಹುದು ಎನ್ನುವ ಅವರು ಮೊಗಸಾಲೆಯವರ ಕತೆಗಳನ್ನು ಓದುವಾಗ ಅವರು ಕಾದಂಬರಿಯೊಂದನ್ನು ಕತೆಗಳಾಗಿ ಕತ್ತರಿಸಿ ಹೇಳುವ ಪ್ರಯತ್ನದಲ್ಲಿರುವಂತೆ ಅನಿಸುತ್ತದೆ ಎನ್ನುತ್ತಾರೆ. ಇದೇ ಅರ್ಥದ ಮಾತನ್ನು ಮಾಧವ ಕುಲಕರ್ಣಿಯವರೂ ತಮ್ಮ ಮುನ್ನುಡಿಯಲ್ಲಿ ಹೇಳಿರುವುದುಂಟು. ಬೇರೆ ಬೇರೆ ಕತೆಗಳಲ್ಲಿ ಮತ್ತೆ ಮತ್ತೆ ಮರಳಿ ಬರುವ ಅವೇ ಪಾತ್ರಗಳು, ಅದೇ ಅದೇ ಊರು, ಗೊತ್ತಿರುವ ಜನ, ಗೊತ್ತಿರುವ ಬೀದಿಗಳು, ಗೊತ್ತಿದೆ ಎನಿಸುವಂಥ ನಡೆನುಡಿ, ಆಚಾರ ವಿಚಾರ, ಸರಳ ಸಂಭವನೀಯತೆಗಳು - ಈ ಎಲ್ಲದರಿಂದ ಇಂಥ ಒಂದು ಭಾವನೆ ಸಹಜವೇ. ಅಲ್ಲದೆ ಮೊಗಸಾಲೆಯವರೇ ಸ್ವತಃ ತಮಗೆ ಸಣ್ಣಕತೆಗಳಿಗಿಂತ ಕಾದಂಬರಿ ಪ್ರಕಾರ ಹೆಚ್ಚು ಸಹಜವಾಗಿ ಒಗ್ಗಿದ್ದು ಎಂಬರ್ಥದ ಮಾತುಗಳನ್ನೂ ಹೇಳಿರುವುದುಂಟು. ಅದೆಲ್ಲದರಾಚೆ ನಾವು ಈ ಬಗೆಯ ಕತೆಗಳು ಹೇಗೆ ರೂಪುಗೊಳ್ಳುತ್ತವೆ ಎನ್ನುವ ಬಗ್ಗೆ ಯೋಚಿಸಬೇಕಾಗಿದೆ. ಮೊಗಸಾಲೆಯವರದು ಒಂದರ್ಥದಲ್ಲಿ ಕಾದಂಬರಿ ಮತ್ತು ಸಣ್ಣಕತೆಗಳ ನಡುವಣ ಅನುಸಂಧಾನದ ಹಾದಿ. ಸಣ್ಣಕತೆಯೊಂದು ಕಾದಂಬರಿಯ ಓದಿನ ಗಹನತೆಯನ್ನು, ಅನುಭವವನ್ನು ಒದಗಿಸಬಲ್ಲುದಾದರೆ ಅದರಲ್ಲಿ ತಪ್ಪೇನಿದೆ? ಫಾರ್ಮ್ ಮತ್ತು ಕಟೆಂಟ್ ಕುರಿತ ಚರ್ಚೆ ಒಂದು ಮಟ್ಟದ ವರೆಗೆ ಸರಿಯಾದರೂ ಸೃಜನಶೀಲ ಅಭಿವ್ಯಕ್ತಿಗೆ ಅದೇ ಒಂದು ತೊಡಕಾಗುವ ಹಂತದಲ್ಲಿ ಅದನ್ನು ಉಪೇಕ್ಷಿಸುವುದು ವಿಹಿತ. ಸಣ್ಣಕತೆಯ ಶರೀರದಲ್ಲಿ ಒಂದು ಪಾತ್ರದ ವ್ಯಕ್ತಿತ್ವದ ಪರಿಚಯಕ್ಕಾಗಿ, ವಿಭಿನ್ನ ಪಾತ್ರಗಳ ಸದ್ಯದ ನಡೆನುಡಿಗಳಿಗೆ ಇರುವ ಹಿನ್ನೆಲೆಯ ಕುರಿತು ಹೇಳುವುದಕ್ಕಾಗಿ ಮೊಗಸಾಲೆಯವರು ತರುವ ಕತೆ-ಉಪಕತೆಗಳು ಕೂಡ ಒಂದು ತಂತ್ರವೇ.

ಇಲ್ಲಿ ನೆನೆಯ ಬಹುದಾದ ಒಂದು ಮಾತಿದೆ; ಲೇಖಕ ಲೋಕವನ್ನು ಪ್ರಶ್ನಿಸಿದರೆ, ವಿಮರ್ಶಕ ಕೃತಿಯನ್ನು ಪ್ರಶ್ನಿಸುತ್ತಾನೆ. ಲೇಖಕನಿಗೆ ಕೃತಿಯಾಗಿರುವುದು ವಿಮರ್ಶಕನಿಗೆ ವಿಮರ್ಶಾ ಪರಿಕರವಾಗಿದ್ದು, ಆ ನೆಲೆಯಲ್ಲೇ ಅರ್ಥ ಹೊಮ್ಮಿಸುವುದು ಅಗತ್ಯವಾಗುತ್ತದೆ. (ರಾಚನಿಕವಾದ ಮತ್ತು ಸಾಹಿತ್ಯ ವಿಮರ್ಶೆ: ಗೆರಾರ್ಡ್ ಜಿನೆಟ್ ಲೇಖನದ ಅನುವಾದ, ಕೇಶವ ಮಳಗಿ ಸಂಪಾದಿತ ಕೃತಿ "ಸಂಕಥನ"ದಿಂದ.) ಮೊಗಸಾಲೆಯವರು ಬರೆದ ಕತೆಗಳೆಲ್ಲವೂ ಅವರು ಅನುಭವಿಸಿದ, ಕಂಡ, ಕೇಳಿದ ಸಂಗತಿಗಳನ್ನೇ ಆಧರಿಸಿದಂಥವು. ಪೂರ್ತಿಯಾಗಿ ಕಾಲ್ಪನಿಕವಾದ ರಚನೆಗಳು ಇಲ್ಲಿಲ್ಲ. ಮೊಗಸಾಲೆಯವರ ನಾಲ್ಕನೆಯ ಕಥಾಸಂಕಲನ "ಸನ್ನಿಧಿಯಲ್ಲಿ ಸೀತಾಪುರ"ದ ಮುನ್ನುಡಿಕಾರರಾದ ಡಾ.ವಾಸುದೇವ ಶೆಟ್ಟಿಯವರು ವಿವರವಾಗಿ ಉಲ್ಲೇಖಿಸಿರುವಂತೆ, "ಕೋಟಿಲ್ಲದ ಕೋರ್ಟು" ಕತೆಯಲ್ಲಿ ಸ್ವತಃ ಮೊಗಸಾಲೆಯವರೇ ಕತೆಗಾರಿಕೆ ಮತ್ತು ಕಥನತಂತ್ರದ ಬಗ್ಗೆ ಪರೋಕ್ಷವಾಗಿ ಮಾತನಾಡುತ್ತ "...ಅವು ಕತೆಗಳಾಗಬೇಕೆಂದು ಸೃಷ್ಟಿಯಾದವಲ್ಲ. ಅಥವಾ ನೀವು ಅವುಗಳಲ್ಲಿ ಕತೆ ಇದೆ ಎಂದುಕೊಂಡದ್ದರಿಂದ ಅವುಗಳೆಲ್ಲ ಕತೆಗಳಾಗಿರಲೂ ಬಹುದು" ಎನ್ನುತ್ತಾರೆ. ನಮ್ಮ ಬದುಕು, ಅನುಭವ, ನಮ್ಮ ಗಮನಕ್ಕೆ ಬರುವ ಘಟನೆಗಳು, ಎದುರಾಗುವ ಸನ್ನಿವೇಶಗಳು ಯಾವುವೂ ಕತೆಯೋ ಕಾದಂಬರಿಯೋ ಎಂಬ ಸಂದಿಗ್ಧ ಎದುರಿಸುವ ಪ್ರಮೇಯವಿಲ್ಲ. ಸಾಹಿತಿ ತನ್ನ ಬರಹಕ್ಕೆ ಒಂದು ಆಕೃತಿ, ಶಿಲ್ಪ, ಪ್ರಕಾರದ ಚೌಕಟ್ಟು ಬೇಕು ಎಂದುಕೊಂಡು ತನಗೆ ಹೇಳಬೇಕಿರುವುದನ್ನು ಹೇಳುತ್ತ ಅವು ಪಡೆದುಕೊಳ್ಳುವ ರೂಪುರೇಷೆ ಹೊಂದಿಕೊಂಡು ಅವುಗಳನ್ನು ಹಾಗೆಲ್ಲ ವಿಂಗಡಿಸುತ್ತಾನೆ ಎಂಬುದು ಎಲ್ಲರಿಗೂ ಗೊತ್ತು.

ಮೌಕಿಕ ಪರಂಪರೆಯ ಕಥಾನಕಕ್ಕೆ ಕೂಡ ಕೆಲವೊಂದು ಅಲಿಖಿತ ಚೌಕಟ್ಟುಗಳಿದ್ದೇ ಇದ್ದವು. ಇಲ್ಲಿ ತಮ್ಮ ಕೊನೆಯ ಕಥಾಸಂಕಲನಕ್ಕೆ ಮೊಗಸಾಲೆಯವರು "ಕಥಾ ಪ್ರಸಂಗಗಳು" ಎಂಬ ಉಪಾದಿ ನೀಡಿದ್ದಾರೆ. ಇದರಲ್ಲಿ ವಿಮರ್ಶಕರು ಅವರಲ್ಲಿ ಹುಟ್ಟಿಸಿದ ಗೊಂದಲಕ್ಕೂ ತನ್ನದೇ ಆದ ಪಾಲಿದ್ದೇ ಇದೆ ಬಿಡಿ. ಮೊಗಸಾಲೆಯವರ "ಕತೆ ಕಟ್ಟುವ ಅಥವಾ ಕತೆ ಬಗೆಯುವ ಬಗೆ" ಲೇಖನದಲ್ಲಿ ಅಜ್ಜೀಕತೆಗಳ ಬಗ್ಗೆ ಮಾತು ಬರುತ್ತದೆ. ಅಲ್ಲಿ ಆ ಕತೆಗಳನ್ನು ಆಲಿಸುವ ಮಕ್ಕಳಿಗೆ ಮುಖ್ಯ ಕತೆ ಏನು ಎಂಬುದು ಮುಖ್ಯವಲ್ಲ. ಅಜ್ಜನೋ ಅಜ್ಜಿಯೋ ಅದನ್ನು ರಂಗಾಗಿ ವರ್ಣಿಸಿ, ಸ್ವರದ ಏರಿಳಿತಗಳೊಂದಿಗೆ ರಂಜಿಸುತ್ತಾ, ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಾ "ಹೇಳುವ ರೀತಿ" ಮುಖ್ಯ. ಮತ್ತೆ ಇಲ್ಲಿ ರಾಚನಿಕತೆಯ ಮಹತ್ವ ಮಂಚೂಣಿಗೆ ಬಂತು. ಮುಂದೇನಾಯ್ತು, ಆಮೇಲೇನಾಯ್ತು ಎಂದರೆ ಅಲ್ಲಿ ಬಹುತೇಕ ಏನೂ ಆಗುವುದಿಲ್ಲ ಅಥವಾ ನಿನ್ನೆ ಆಗಿದ್ದೇ ಆಗುತ್ತದೆ ಅಥವಾ ಏನಾದರೂ ಆಗುವ ಮುನ್ನವೇ ನಿದ್ದೆ ಬಂದು ಬಿಡುವುದು ಕೂಡ ಸಾಧ್ಯ. ಹೀಗೆ ಅವರು ಒಂದೇ ಕತೆಯನ್ನು ಮತ್ತೆ ಮತ್ತೆ ಹೇಳಬಲ್ಲವರಾಗಿದ್ದರು, ಮಕ್ಕಳು ಅದನ್ನು ಬಯಸುತ್ತಿದ್ದರು. ಇದು ಮೌಕಿಕ ಪರಂಪರೆಯ ಒಂದು ಲಕ್ಷಣ. ಎರಡನೆಯದು, ನಾವು ಪ್ರಸಂಗ ಎಂದು ಕೇಳುತ್ತಿದ್ದುದು ಯಕ್ಷಗಾನದ ಹಿನ್ನೆಲೆಯಲ್ಲಿ. ಪ್ರಸಂಗವನ್ನು ಮುಂದುವರಿಸಿಕೊಂಡು ಹೋಗುವುದು ಮತ್ತು ಹೊತ್ತಿಗೆ ಸರಿಯಾಗಿ ಅದನ್ನು ಎಲ್ಲಿ ಮುಗಿಯಬೇಕೋ ಅಲ್ಲೇ ಮುಗಿಸುವುದು ಮುಖ್ಯವೇ ಹೊರತು ನಡುವೆ ಏನೆಲ್ಲ ಅದರೊಳಗೆ ಬಂದು ಹೋಯಿತು ಎನ್ನುವುದು ಮುಖ್ಯವಲ್ಲ! ಇದು ಪರಮೇಶಿ ಪ್ರೇಮ ಪ್ರಸಂಗಕ್ಕೂ ಮುಸ್ಸಂಜೆ ಕಥಾ ಪ್ರಸಂಗಕ್ಕೂ ಜಂಟಿಯಾಗಿಯೇ ಅನ್ವಯಿಸುತ್ತದೆ! ಇನ್ನು ಮೂರನೆಯದು, ನಮ್ಮಲ್ಲಿ ಪ್ರಸಂಗಗಳೆಂದರೆ ರಾಮಾಯಣ, ಮಹಾಭಾರತಗಳಿಂದ ಆಯ್ದ ಭಾಗವೇ. ಇದರ ಅನುಕೂಲವೆಂದರೆ ಈ ಪುರಾಣಗಳ ಕತೆ ಎಲ್ಲರಿಗೂ ಈಗಾಗಲೇ ಗೊತ್ತಿರುವುದೇ, ಅನೇಕ ಬಾರಿ ಕೇಳಿರುವುದೇ! ಹೀಗೆ ಇಲ್ಲಿಯೂ ಮತ್ತೆ ಮುಖ್ಯವಾಗುವುದು ನೀವು ಅದನ್ನು ಹೇಳುತ್ತ ಏನು Value Add ಮಾಡಿದಿರಿ ಎನ್ನುವುದೇ ಹೊರತು ಕತೆ ಏನು ಎನ್ನುವುದಲ್ಲ. ಮತ್ತೆ ಇಲ್ಲಿಯೂ ರಾಚನಿಕತೆಯ ಮಹತ್ವವೇ ಎದುರಿಗೆ ಬಂತು.

ಇಷ್ಟು ಹೇಳಿದ ಮೇಲೆ, ಮೊಗಸಾಲೆಯವರ ಕೊನೆಯ ಒಂದು ಸಂಕಲನವನ್ನು ಹೊರತು ಪಡಿಸಿ ಉಳಿದ ಮೂರೂ ಸಂಕಲನದ ಕತೆಗಳಿಗೆ ಒಂದು ಚೌಕಟ್ಟು, ಆಕೃತಿ, ಶಿಲ್ಪ ಇಲ್ಲವೇ ಎನ್ನುವ ಪ್ರಶ್ನೆಗೆ ಮುಖಾಮುಖಿಯಾಗುವುದು ಸಾಧ್ಯವಿದೆ. ಮೊಗಸಾಲೆಯವರದು ಸಾವಧಾನದ ನಡೆ, ಪುರುಸೊತ್ತಿನ ಶೈಲಿ, ಕಥಾನಕದ್ದು ವೇಗವಿಲ್ಲದ ಚಲನೆ ಎಂದೆಲ್ಲ ಈ ಮುನ್ನುಡಿಗಳಲ್ಲಿ ಹೇಳಿರುವುದೂ ಇದೆ. ಇವತ್ತು ಆಧುನಿಕ ಮನುಷ್ಯ ಅಲಾರ್ಮ್ ಇಟ್ಟುಕೊಂಡು ಎದ್ದು, ಸೆಕೆಂಡಿನ ಮುಳ್ಳು ನೋಡಿಕೊಂಡೇ ಸ್ನಾನ, ಪೂಜೆ, ಟಿಫನ್ನು ಇತ್ಯಾದಿ ನಿತ್ಯಕರ್ಮಗಳನ್ನು ಮುಗಿಸಿ ಕಚೇರಿಗೋ, ವ್ಯವಹಾರಕ್ಕೋ ಧಾವಿಸುವ ಧಾವಂತದಲ್ಲಿರುವುದು ನಿಜ. ಆದರೆ ಹಳ್ಳಿಯ ಕೃಷಿಕನೊಬ್ಬನಿಗೆ ಈ ಬಗೆಯ ಧಾವಂತ ಇರುವುದಿಲ್ಲ. ಇಲ್ಲಿ ಹೋಟೆಲು ನಡೆಸುವ ಕುಪ್ಪಣ್ಣಯ್ಯ ಕೂಡ ಅಗತ್ಯ ಬಿದ್ದರೆ ಬಾಗಿಲೆಳೆದು ಹೊರಗೆ ಹೊರಟಾರು. ಆಧುನಿಕ ಮನುಷ್ಯನಿಗೆ ಬಾವಿಯಿಂದ ನೀರು ಸೇದಬೇಕಿಲ್ಲ. ನೆಲದಡಿ ನೀರು ಶೇಖರಿಸಿಟ್ಟು ಅದನ್ನು ಬೇಕೆಂದಾಗ ಬೇಕಾದಷ್ಟು ತಲೆಯ ಮೇಲಿನ ಸೂರಿಗೆ ಕಳಿಸಿ ತನಗೆ ಬೇಕಾದ ಕೋಣೆಯಲ್ಲಿ ನೀರನ್ನು ಇಳಿಸಿಕೊಳ್ಳುತ್ತಾನೆ ಆತ. ಅವನಿಗೆ ಬಟ್ಟೆ ಒಗೆಯುವುದಕ್ಕೆ, ಹಿಟ್ಟು ಕಡೆಯುವುದಕ್ಕೆ, ಒಲೆ ಉರಿಸುವುದಕ್ಕೆ, ಒಮ್ಮೆ ಮಾಡಿದ ಅಡುಗೆ ಕೆಡದಂತೆ ಉಳಿಸಿಟ್ಟು ಬಳಸುವುದಕ್ಕೆ ಬೇಕಾದ ಎಲ್ಲ ಯಂತ್ರ-ತಂತ್ರ ಗೊತ್ತು. ಅವನು ಮೆಟ್ಟಿಲು ಇಳಿದು ಹತ್ತಿ ಮಾಡುವುದಿಲ್ಲ, ಸಿಟಿಬಸ್ಸಿಗೆ ಕಾದು ಸಮಯ ಹಾಳು ಮಾಡಲಾರ. ಆದಾಗ್ಯೂ ಅವನಿಗೆ ಒಂದು ಕ್ಷಣದಷ್ಟು ಪುರುಸೊತ್ತಿಲ್ಲ. ಈ ಯಾವ ಸವಲತ್ತೂ ಇಲ್ಲದ ಸಾಮಾನ್ಯ ಹಳ್ಳಿಗನೊಬ್ಬ ಪ್ರತಿದಿನ ಸಾಕಷ್ಟು ಸಮಯ ಪುರುಸೊತ್ತಾಗಿರಬಲ್ಲ ಭಾವನೆಯಿಂದ ನೆಮ್ಮದಿಯಾಗಿರುತ್ತಾನೆ. ಮೊಗಸಾಲೆಯವರದ್ದು ಮೌಕಿಕ ಪರಂಪರೆಯ ಕಥಾನಕಗಳೆಂತೋ ಅಂತೆಯೇ ಅದು ನಗರ ಜೀವನದಿಂದ ದೂರವುಳಿದ ಒಂದು ಪುಟ್ಟ ಊರಿನ ಕತೆ ಕೂಡ ಹೌದು. ಈ ಎರಡು ಅಂಶಗಳಲ್ಲದೇನೆ ಈ ನಿಧಾನಗತಿಯ ಕಥಾನಕಕ್ಕೆ ಬೇರೆ ಕಾರಣ, ಮಹತ್ವ ಇದ್ದಿರುವುದು ಸಾಧ್ಯವಿದೆ. ನಾವು ಪ್ರತಿಯೊಂದು ಕತೆಯನ್ನು ಇಟ್ಟುಕೊಂಡು ಅದರ ತಂತ್ರ, ವಸ್ತು ಮತ್ತು ಕೇಂದ್ರ ಮೂರನ್ನೂ ಗಮನಿಸುತ್ತ ಹೋದರೆ ನಮಗೆ ಮಹತ್ವದ ಕೆಲವು ಸತ್ಯಗಳು ಕಂಡು ಬರುತ್ತವೆ.

ಪುರುಸೊತ್ತಿಲ್ಲದ ಆಧುನಿಕ ಓದುಗನಿಗಾಗಿಯೇ ನಮ್ಮ ಪತ್ರಿಕೆಗಳು (ಸಾಮಾನ್ಯವಾಗಿ ಒಂದು ಪ್ರಕಾರದ (Form) ರೂಪುರೇಷೆಗಳನ್ನು ನಿರ್ಣಯಿಸುವುದು ಪತ್ರಿಕೆಗಳೇ ಆಗಿರುವುದು ಒಂದು ವಿಶೇಷ) 2500-3500 ಪದಮಿತಿಯಲ್ಲಿದ್ದ ಸಣ್ಣಕತೆಯನ್ನು 1500 ರ ಪದಮಿತಿಗಿಳಿಸಿದವು. ಆದರೆ ನಾವು ನೆನಪಿಡಬೇಕಾದ್ದು, ನಮ್ಮ ಜೀವನಶೈಲಿಯಾಗಲೀ, ಮಾಧ್ಯಮಗಳ ಡಿಮಾಂಡ್-ಸಪ್ಲೈ ತತ್ವಸಿದ್ಧಾಂತಗಳಾಗಲೀ ಸೃಜನಶೀಲ ಅಭಿವ್ಯಕ್ತಿಯ ಚೌಕಟ್ಟನ್ನು ವಿಧಿಸಬಾರದು, ಅದು ಮುಕ್ತವಾಗಿರಬೇಕು ಎಂಬ ಸತ್ಯವನ್ನು. ಈ ಕಾರಣಕ್ಕಾಗಿಯೂ ಮೊಗಸಾಲೆಯವರ ನಿರೂಪಣಾ ವಿಧಾನ, ಅದರ ಲಯ ಮತ್ತು ಅದು ಸೆಳೆದುಕೊಳ್ಳುವ ವಿವರಗಳು ಎಲ್ಲವನ್ನೂ ಸಾರಾಸಗಟಾಗಿ ತಳ್ಳಿ ಹಾಕದೇ ಅದರ ಒಳ್ಳೆಯ ಅಂಶಗಳನ್ನು ಗುರುತಿಸುವುದು, ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ಕಂಪೆನಿ ನಾಟಕಗಳಿಂದ ಹವ್ಯಾಸಿ ರಂಗಭೂಮಿ ಸಾಕಷ್ಟನ್ನು ಪಡೆದುಕೊಂಡಂತೆಯೇ ನಮ್ಮ ಉತ್ಕೃಷ್ಟ ಮಾದರಿಯ ಕತೆಗಳು ಮೊಗಸಾಲೆಯವರ ಕತೆಗಳ ಅಧ್ಯಯನದಿಂದ ಪಡೆದುಕೊಳ್ಳುವುದು ತುಂಬ ಇದೆ.

ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಮಾತಿದೆ. ಕಥಾನಕದ ಚಲನೆಯ ಗತಿ ಬೇರೆ, ಕಥಾನಕದೊಳಗೆ ನುಸುಳುವ ಅನಗತ್ಯ ವಿವರಗಳ,ಕತೆ-ಉಪಕತೆಗಳ ಹಾವಳಿ ಬೇರೆ. ಎರಡನೆಯದು ಆಕೃತಿ/ಶಿಲ್ಪ/ಚೌಕಟ್ಟುಗಳಿಗೆ ಹಾನಿಕಾರಕವಾದದ್ದು. ಮೊದಲನೆಯದ್ದು ಉದ್ದೇಶಪೂರ್ವಕವಾಗಿ ನಿರ್ಧರಿಸಿದ “ಗತಿ”ಆಗಿದ್ದಿರಲೂ ಬಹುದು. ತಾನು ಹೇಳುತ್ತಿರುವ ಸಂಗತಿಗೆ ಕತೆಗಾರ ತನ್ನ ಓದುಗನಿಂದ ನಿರೀಕ್ಷಿಸುವ ಸಂವೇದನೆಗೆ ತಕ್ಕಂತೆ ಅವನು ಕತೆಯನ್ನು ಹೇಳಬೇಕಾದ ಒಂದು ವೇಗವೂ ಇರುತ್ತದೆ. ನುರಿತ ಕತೆಗಾರರು ತಮ್ಮ ಕತೆಯೊಳಗೆ ಮಾತುಗಳಿಂದ, ವಿವರಗಳಿಂದಲೇ ಎಲ್ಲಿ ಬೇಕೊ ಅಲ್ಲಿ ಮೌನವನ್ನು ಕೂಡ ಸೃಷ್ಟಿಸಿಕೊಳ್ಳಬಲ್ಲರು. ಜೇಮ್ಸ್ ಜಾಯ್ಸ್ ಹೇಳುವ ಸಿಗ್ನಿಫಿಕೆಂಟ್ ಡೀಟೇಲ್ಸ್ ಬಗ್ಗೆ ವಿಶೇಷ ಗಮನ ನೀಡುವ ಕತೆಗಾರರು ತಮ್ಮ ಕತೆಯ ಶರೀರದಲ್ಲಿ ಅನಗತ್ಯವಾದ ಒಂದು ಪದವನ್ನೂ ಇಡಲಾರರು. ಇದೆಲ್ಲ ಕತೆಯೊಳಗಿನ ವಿವರಗಳು, ಅದರ ಕಥಾನಕದ ಚಲನೆಯ ಗತಿ ಮತ್ತು ಕೇಂದ್ರಪ್ರಜ್ಞೆಯನ್ನು ದುಡಿಸಿಕೊಳ್ಳುವ ಬಗೆಯ ಬಗ್ಗೆ ಆಡುವ ಮಾತಾಯಿತು. ಮೊಗಸಾಲೆಯವರ ಕತೆಗಳ ಬಗ್ಗೆ ಮಾತನಾಡುವಾಗ ಹೇಳಲಾಗುವ ಸಾವಧಾನದ ನಡೆ, ಪುರುಸೊತ್ತಿನ ಶೈಲಿ ಮತ್ತು ವೇಗವಿಲ್ಲದ ಗತಿಯಲ್ಲಿ ಕ್ರಮಿಸುವ ಕಥಾನಕ ಮುಂತಾದ ಗ್ರಹಿಕೆಗಳೇನಿವೆ, ಅದು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಕತೆಯ ಒಟ್ಟಾರೆ ಆಕೃತಿ/ಶಿಲ್ಪ ಅಥವಾ ಚೌಕಟ್ಟಿನಿಂದ ಹೊರಸರಿಯುವಂತಿವೆಯೇ ಮತ್ತು ಕಥಾನಕದ ಏಕಸೂತ್ರದ ಎಳೆಯನ್ನು ಕೆಡಿಸುತ್ತಿವೆಯೇ ಎಂಬುದನ್ನು ನಾವು ಪ್ರತಿಯೊಂದು ಕತೆಯನ್ನಿಟ್ಟುಕೊಂಡು ಗಮನಿಸಬೇಕಿದೆ. ಗಮನಿಸಿ, ಅತಿರೇಕಗಳನ್ನು ಬಿಟ್ಟುಕೊಟ್ಟು, ಸಂತುಲಿತ ಉದಾಹರಣೆಗಳಿಂದ ಪಡೆದುಕೊಂಡು ಸಣ್ಣಕಥಾ ಪರಂಪರೆ ಬೆಳೆಯುವುದಿದೆ.

ಮೌಕಿಕ ಪರಂಪರೆಯನ್ನು ಇನ್ನಿಲ್ಲದಂತೆ ದುಡಿಸಿಕೊಂಡಿರುವ ಬಹುಶಃ ಕನ್ನಡದ ಏಕೈಕ ನವ್ಯೋತ್ತರ ಕತೆಗಾರರಾದ ಮೊಗಸಾಲೆಯವರ ಮಾದರಿಯನ್ನು ನಿಕಷಕ್ಕೊಡ್ಡಿಯೇ ಅದರ ಸಾಮರ್ಥ್ಯವನ್ನು ನಾವು ಕಂಡುಕೊಳ್ಳುವುದರ ಅಗತ್ಯವಿದ್ದೇ ಇದೆ. ಮೊದಲಿಗೆ ಹೊಸ ತಲೆಮಾರಿನ ಕತೆಗಾರರಲ್ಲಿ ಜೀವನಾನುಭವವಿಲ್ಲ ಎಂಬ ಸಾಮಾನ್ಯವಾದ ಆರೋಪವಿದೆ. ಡಾ||ಕೆ ಶಿವರಾಮ ಕಾರಂತರಂತೆ ಅಥವಾ ತೇಜಸ್ವಿಯವರಂತೆ ತಮ್ಮನ್ನು ತಾವು ಬದುಕಿಗೆ ಕೊಟ್ಟುಕೊಂಡು, ಅದರ ಅನಿರೀಕ್ಷಿತಗಳಿಗೆ ಸಹಜವಾಗಿ ತೆರೆದುಕೊಂಡ ಮತ್ತು ಅದೇ ಹೊತ್ತಿಗೆ ಬರೆದು ಬದುಕಿದ ಒಂದು ತಲೆಮಾರು ಇವತ್ತಿನ ಕನ್ನಡದ ಬರಹಗಾರರಿಗೆ ಕಲ್ಪನೆಯಷ್ಟೇ ಆಗುಳಿದಿದ್ದಾರೆ. ಸಾಹಿತ್ಯ ಇವತ್ತು ಬಡ ಮೇಷ್ಟ್ರುಗಳ ಕಾಯಕವಾಗಿಯೂ ಉಳಿದಿಲ್ಲ. ಇವತ್ತಿನ ಸಾಹಿತಿ ಡೆಸಿಗ್ನೇಟೆಡ್ ಎಕ್ಸಿಕ್ಯೂಟಿವ್ ಆಗಿದ್ದಾನೆ. ಫ್ಲ್ಯಾಟುಗಳಲ್ಲಿ ಬದುಕುತ್ತ ಮನೆಬಾಗಿಲಿನಿಂದ ಲಿಫ್ಟಿನ ಬಾಗಿಲಿಗೂ, ಅಲ್ಲಿಂದ ಕಚೇರಿಯ ಬಾಗಿಲಿಗೂ ಹರಿದಾಡುವ ಆಧುನಿಕ ಮನುಷ್ಯ ಕೂಲಿಕಾರರೊಂದಿಗೆ, ಸಿಟಿಬಸ್ಸುಗಳ ಡ್ರೈವರು-ಕಂಡಕ್ಟರುಗಳೊಂದಿಗೆ, ಮೆಕ್ಯಾನಿಕ್ಕು, ಹೋಟೆಲು ಮಾಣಿಗಳೊಂದಿಗೆ, ಮಾರ್ಕೆಟ್ಟಿನಲ್ಲಿ ತರಕಾರಿ, ಹಣ್ಣು ಮಾರುವ ಸಾಬಿಗಳೊಂದಿಗೆ ದಿನನಿತ್ಯ ಮಾತನಾಡುವ ಸಂದರ್ಭ ಕಳೆದುಕೊಂಡು ಆಡುಮಾತಿನಿಂದಲೂ ದೂರವಾಗುತ್ತಿದ್ದಾನೆ. ಇಂದಿಗೂ ಕನ್ನಡ ಸಾಹಿತ್ಯದ ಹಬ್ ಎನ್ನುವುದು ಬೆಂಗಳೂರೇ ಆಗಿರುತ್ತ ಕನ್ನಡ ನಾಡಿನ ಮೂಲೆ ಮೂಲೆಗಳಿಂದ ಬೆಂಗಳೂರು ಸೇರಿಕೊಂಡ ಯಾವತ್ತೂ ಕತೆ/ಕಾದಂಬರಿಕಾರರು ಅನನ್ಯವಾಗಿ ಬರೆದಿರಿಸಿರುವುದೆಲ್ಲಾ ತಮ್ಮ ಹಳ್ಳಿಯಲ್ಲಿ ಕಳೆದ ಬಾಲ್ಯ, ತಾರುಣ್ಯದ ಅನುಭವ, ಸಂವೇದನೆಗಳನ್ನೇ. ಬೆಂಗಳೂರನ್ನೇ ಕೇಂದ್ರವಾಗಿರಿಸಿಕೊಂಡಿರುವ ಒಂದೇ ಒಂದು ಕನ್ನಡ ಕಾದಂಬರಿ ಬಂದಿಲ್ಲ ಎಂದು ಗಿರೀಶ್ ಕಾರ್ನಾಡ್ ಹೇಳಿರುವ ಮಾತು, ಕನ್ನಡ ಒಟ್ಟಾರೆ ಸಾಹಿತ್ಯ ಸಂದರ್ಭದಲ್ಲಿ ಮಹತ್ವದ ಕೊರತೆಯೇನಲ್ಲವಾದಾಗ್ಯೂ, ಎಲ್ಲೋ ಒಂದೆಡೆ ಕೆಲವೊಂದು ಅರೆ-ಕೊರೆ, ಕೊರತೆಗಳತ್ತ ನಮ್ಮ ಗಮನವನ್ನು ಹರಿಯುವಂತೆ ಮಾಡುವಂಥಾದ್ದೇ, ಮಾಡಬೇಕಾದ್ದೇ. ಚಳುವಳಿಗಳಿಲ್ಲದ, ಆರ್ಥಿಕ, ರಾಜಕೀಯ, ಸಾಮಾಜಿಕ ತತ್ವ-ಸಿದ್ಧಾಂತಗಳು ಕೆಡವಲ್ಪಟ್ಟ ಆಧುನಿಕ ಬದುಕಿನ ಸಂಕ್ರಮಣ ಕಾಲವೊಂದು ನಮ್ಮೆದುರಿಗಿದೆ. ಗಾಂಧಿ, ನೆಹರೂ, ಎಸ್ ರಾಧಾಕೃಷ್ಣನ್, ಶ್ರೀರಾಮ, ಅಂಬೇಡ್ಕರ್, ಟಿಪ್ಪುಗಳ ಮೌಲ್ಯ, ಆದರ್ಶ, ಮಾದರಿಗಳನ್ನು ಆಧುನಿಕ ಪ್ರಜ್ಞೆ ಪ್ರಶ್ನಿಸುತ್ತದೆ, ಅವರ ಹುಳುಕುಗಳಲ್ಲಿ ಹೆಚ್ಚು ಆಸಕ್ತವಾಗಿದೆ ಮತ್ತು ಅವರನ್ನು ನಿರಾಕರಿಸುತ್ತದೆ. ಪರ್ಯಾಯವಾಗಿ ಅದು ಕಟ್ಟಿಕೊಳ್ಳುತ್ತಿರುವ ಮೌಲ್ಯ, ಆದರ್ಶ ಮತ್ತು ಮಾದರಿಗಳು ತತ್ಕಾಲೀನ ಅಗತ್ಯಗಳಾಗಿದ್ದು ಬಹುಬೇಗ ಅವುಗಳೆಲ್ಲಾ ಭ್ರಮನಿರಸನ ಹುಟ್ಟಿಸುವ ದಿನಗಳು ಕಾದಿವೆ. ಇದು ನಡುವಿನ ಸಂಕ್ರಮಣ ಘಟ್ಟವಷ್ಟೇ ಆಗಿದ್ದು ಮುಂದೆ ಎಲ್ಲವನ್ನೂ ಅವನು ಹೊಸದಾಗಿ ಕಟ್ಟಿಕೊಳ್ಳುವುದು ಅನಿವಾರ್ಯವಾಗುವುದು ಶತಃಸಿದ್ಧ. ಈ ಹಿನ್ನೆಲೆಯಲ್ಲಿ ನಾ ಮೊಗಸಾಲೆಯವರಂಥ ಜೀವನ ನಿಷ್ಠ ಬರಹಗಾರರು ಮುಖ್ಯವಾಗುತ್ತಾರೆ. ಅವರ ಮಾದರಿಯನ್ನು ಗಂಭೀರವಾಗಿ ಗಮನಿಸಿ ಪರಿಶೀಲಿಸುವುದು ಮುಖ್ಯವಾಗುತ್ತದೆ.

"ವರ್ತಮಾನದ ಮುಖಗಳನ್ನು ಗಮನಿಸುವುದು ಮತ್ತು ಅದರ ನಾನಾ ಸಾಧ್ಯತೆಗಳನ್ನು ಪರಿಭಾವಿಸಿ ಆ ಮೂಲಕ ಒಂದು ತಾತ್ವಿಕತೆಯನ್ನು ಸೂಚಿಸುವುದರತ್ತ ಮೊಗಸಾಲೆಯವರ ಪ್ರಧಾನ ಆಸಕ್ತಿ." ಎಂದೂ ಎಸ್. ಆರ್. ವಿಜಯಶಂಕರ್ ಅವರು ಗುರುತಿಸುತ್ತಾರೆ. "ಮೊಗಸಾಲೆಯವರು ಸದಾ ವರ್ತಮಾನದ ಪ್ರಭಾವಕ್ಕೆ ಒಳಗಾಗಿ ಪ್ರತಿಕ್ರಿಯಿಸುವವರು. ಅವರ ವರ್ತಮಾನದ ಮುಖಗಳಲ್ಲಿ ಆ ಕಾಲದ ಚಿಂತನೆಯೂ ಸೇರಿರುತ್ತದೆ. ಹಾಗಾಗಿ ವರ್ತಮಾನದ ಘಟನೆ, ಚಿಂತನೆ ಹಾಗೂ ಜೀವನಕ್ರಮ ಎಲ್ಲವೂ ಮೊಗಸಾಲೆ ಸೃಷ್ಟಿಸುವ ಬದುಕಿನ ಭಾಗವಾಗಿ ಕಾಣಿಸುತ್ತದೆ. ಅದನ್ನು ತೋರಿಸುವುದೇ ತಮ್ಮ ಕಲೆಯ ದರ್ಶನ ಶಕ್ತಿ ಎಂದವರು ತಿಳಿದಂತೆ ಭಾಸವಾಗುತ್ತದೆ.
"ಅಂದರೆ, ಸಾಹಿತ್ಯ ಸೃಷ್ಟಿಕ್ರಿಯೆ, ಕಂಡುದರ ವಿಶ್ಲೇಷಣೆಗಿಂತಲೂ ಹೆಚ್ಚಾಗಿ ಅದೊಂದು ಪ್ರತಿಸೃಷ್ಟಿ ಎಂಬುದು ಮೊಗಸಾಲೆಯವರ ಸೃಜನಶೀಲ ಮೀಮಾಂಸೆ" ಎನ್ನುವಲ್ಲಿ ಎಸ್. ಆರ್. ವಿಜಯಶಂಕರ್ ನಮಗೆ ಕೆಲವೊಂದು ಮಹತ್ವದ ಒಳನೋಟಗಳನ್ನು ದಕ್ಕಿಸುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ.

ಪ್ರಾದೇಶಿಕ ಪದಗಳ ಬಳಕೆ ಮತ್ತು ಒಟ್ಟಾರೆಯಾಗಿ ದಕ್ಷಿಣಕನ್ನಡದ ಒಂದು ಪ್ರಾದೇಶಿಕ ಬದುಕಿನ ಚಿತ್ರವನ್ನು ಮೊಗಸಾಲೆಯವರು ಕನ್ನಡದ ಪ್ರಜ್ಞೆಗೆ ಸೇರಿಸುತ್ತ ಬಂದಿದ್ದಾರೆನ್ನುವ ಎಸ್. ಆರ್. ವಿಜಯಶಂಕರ್ ಅವರು ಮೊಗಸಾಲೆಯವರ ಕತೆಗಳಿಗೆ ಒಂದು ಅಥೆಂಟಿಸಿಟಿ ಒದಗಿ ಬರುವ ಮಾಯಕತೆಯ ಬಗ್ಗೆ ಹೇಳುತ್ತ "ಕತೆಗಳು ಕೆಲವೊಮ್ಮೆ ಈಗಾಗಲೇ ತಿಳಿದಿರುವ ವರ್ತಮಾನವನ್ನೇ ವಿವರಿಸಿದರೂ, ಅವುಗಳಿಗೆ ಪಟ್ಟಾಂಗದ ಒಂದು ಗಮ್ಮತ್ತು ಸೇರಿಕೊಂಡಿರುತ್ತದೆ. ಹಾಗಾಗಿ ಅದು ಪುಟ್ಟ ಊರಿನ ಸುತ್ತಲಿನ ಜೀವಗಳ ವಿಚಾರ ತಿಳಿಯುವ ಮಾತು ಕತೆಯಾಗಿ ಪರಿವರ್ತನೆ ಹೊಂದುತ್ತದೆ. ಕತೆ ಹೇಳುವ ಲವಲವಿಕೆ ಹಾಗೂ ಚೈತನ್ಯ ಆಕರ್ಷಿಸುತ್ತದೆ." ಎಂದು ಬರೆಯುತ್ತಾರೆ.

ಹೀಗೆ ಹೇಳುವಾಗಲೂ ಮೊಗಸಾಲೆಯವರು ವಹಿಸುವ ಕೆಲವೊಂದು ಎಚ್ಚರಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ಪುಟ್ಟ ಹಳ್ಳಿ ಅಥವಾ ಊರಿನಲ್ಲಿ ಸುದ್ದಿಯಾಗುವ ವಿದ್ಯಮಾನಗಳು ಪಟ್ಟಾಂಗದ ಗಮ್ಮತ್ತಿಗೆ ಸಿಕ್ಕಿಕೊಂಡಾಗ ಸಹಜವಾಗಿಯೇ ಅವು ವದಂತಿಯ, ಸಡಿಲ ಮಾತುಗಳ ಮತ್ತು ಆರೋಪ-ಪ್ರತ್ಯಾರೋಪಗಳ ಕಡೆಗೆ ವಾಲುವುದು ನಡೆಯುತ್ತದೆ. ಆದರೆ ಮೊಗಸಾಲೆಯವರ ಫಿಲ್ಟರಿಂಗ್ ಇಲ್ಲಿ ಕೆಲಸ ಮಾಡಿದೆ. ಮಾಡಿಯೂ ಅದು ಉಳಿಸಿಕೊಂಡ ಅಥೆಂಟಿಸಿಟಿಯನ್ನು ಮೆಚ್ಚಿಕೊಳ್ಳುತ್ತಲೇ, ಒಟ್ಟಾರೆ ನಿರೂಪಣೆಯ ಹದ ಹುಟ್ಟಿಸುವ ಆಪ್ತಭಾವವನ್ನು ಒಪ್ಪಿಕೊಳ್ಳುತ್ತಲೇ, ಈ ಕತೆಗಳ ಸಾಮಾಜಿಕ, ತಾತ್ವಿಕ ಅರ್ಥಪೂರ್ಣತೆಯೇನು ಎಂಬುದರ ಮೌಲ್ಯನಿರ್ಣಯ ಕೂಡ ಮಾಡಬೇಕಾಗುತ್ತದೆ.

ಇಲ್ಲಿಯೇ ಗಮನಿಸಬೇಕಾದ ಇನ್ನೊಂದು ಬಹುಮುಖ್ಯ ವಿಚಾರವಿದೆ. ಪ್ರಾದೇಶಿಕ ಪದಗಳ ಬಳಕೆ ಮತ್ತು ಒಟ್ಟಾರೆಯಾಗಿ ದಕ್ಷಿಣಕನ್ನಡದ ಒಂದು ಪ್ರಾದೇಶಿಕ ಬದುಕಿನ ಚಿತ್ರವನ್ನು ಮೊಗಸಾಲೆಯವರು ಕನ್ನಡದ ಪ್ರಜ್ಞೆಗೆ ಸೇರಿಸುತ್ತ ಬಂದಿದ್ದಾರೆನ್ನುವ ಎಸ್. ಆರ್. ವಿಜಯಶಂಕರ್ ಅವರ ಮಾತಿನ ಮುಂದುವರಿಕೆಯಾಗಿ ಇದನ್ನು ಗಮನಿಸಬಹುದು. ನಮ್ಮ ದಕ್ಷಿಣಕನ್ನಡ ಒಂದು ವಿಶಿಷ್ಟವಾದ ಜಗತ್ತು. ಇಲ್ಲಿ ತುಳು, ಕೊಂಕಣಿ, ಕುಂದಾಪುರ ಕನ್ನಡ, ಹವ್ಯಕ ಕನ್ನಡ, ಬ್ಯಾರಿ ಭಾಷೆ, ಕ್ರಿಶ್ಚಿಯನ್ ಕೊಂಕಣಿ, ಕೇರಳದ ನಂಟು ಬಿಗಿಯಾಗಿರುವುದರಿಂದ ಮಲಯಾಳಂ-ಬ್ಯಾರಿ ಪ್ರಭಾವಿತ ಕನ್ನಡ, ಇಂಗ್ಲೀಷ್ ಮತ್ತು ಮುಂಬಯಿ ಸಂಪರ್ಕದಿಂದಲೋ ಶೈಕ್ಷಣಿಕವಾಗಿ ಮುಂದುವರಿದಿರುವುದರಿಂದಲೋ ಅಷ್ಟಿಷ್ಟು ಹಿಂದಿ ದೈನಂದಿನ ವ್ಯವಹಾರದಲ್ಲಿಯೇ ಕೇಳಸಿಗುವ ಭಾಷೆಗಳು. ಎಷ್ಟೇ ಸೀಮಿತ ವಲಯದಲ್ಲಿದ್ದರೂ ತುಳು, ಕೊಂಕಣಿ, ಕ್ರಿಶ್ಚಿಯನ್ ಕೊಂಕಣಿ ಮತ್ತು ಬ್ಯಾರಿ ಭಾಷೆಯ ಲಯ, ನಾದಗಳಿಂದ ಹೊರತಾಗಿ ಉಳಿಯಲು ಸಾಧ್ಯವೇ ಇಲ್ಲ. ಮೊಗಸಾಲೆಯವರಿಗೆ ಹವ್ಯಕ ಕನ್ನಡ ಮತ್ತು ಇಂಗ್ಲೀಷ್ ಹೆಚ್ಚುವರಿಯಾಗಿ ಇದ್ದ ಭಾಷೆಗಳು. ಇದರಿಂದಾಗಿ ಈ ಭಾಗದ ಬರಹಗಾರರು ಬಳಸುವ ಭಾಷೆಗೆ ಒಂದು ವಿಶಿಷ್ಟ ಲಯವಿದೆ. ನಾನು ಸಿನಿಮಾದವರು ಬಳಸುವ, ಮಂಗಳೂರಲ್ಲಿ ಬಿಡಿ, ಎಲ್ಲಿಯೂ ಬಳಕೆಯಲ್ಲಿಲ್ಲದ ಒಂದು ಅಪಭ್ರಂಶದ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿ ಹೆಸರಿಸಿದ ಯಾವತ್ತೂ ಭಾಷೆಗಳಲ್ಲಿ ಸ್ವತಂತ್ರವಾದ ಕೃತಿ ರಚನೆಗಳಾಗುತ್ತಿವೆ. ಆಯಾ ಭಾಷೆಗಳಿಗೆ ತಮ್ಮದೇ ಆದ ಸಾಹಿತ್ಯಿಕ ಸಂಪತ್ತು ಇದ್ದೇ ಇದೆ. ಆದರೆ ಇದೇ ಭಾಗದಿಂದ ಬಂದ ಒಬ್ಬ ಕನ್ನಡದ ಬರಹಗಾರ ಬರೆಯುವಾಗ ಅವನ ಭಾಷೆಗೆ, ಅವನು ಈ ಎಲ್ಲ ಭಾಷೆಗಳ ಆಡುಮಾತನ್ನು ದಿನನಿತ್ಯ ಕೇಳುತ್ತ ಬೆಳೆದವನಾದುದರಿಂದಲೇ ದಕ್ಕುವ ಒಂದು ವಿಶಿಷ್ಟ ಸೊಗಡು ಇದೆ. ಇದು ನಮಗೆ ಸಾಧಾರಣವಾಗಿ ಕುಪ್ಪಣ್ಣಯ್ಯನ ಹೋಟೆಲಿನಂಥ ಜಾಗದಲ್ಲಿ ಸೇರುವ ಜನ ಆಡುವ ಮಾತುಗಳಲ್ಲಿ ಸಿಗುತ್ತದೆ. ಅಲ್ಲಿ ಈ ಯಾವತ್ತೂ ಭಾಷೆಗಳನ್ನಾಡುವ ಮಂದಿ ಕಲೆಯುವುದರಿಂದ ಇದು ಸುಲಭವಾಗಿ ಕಾಣಸಿಗುತ್ತದೆ. ಇದನ್ನು ಮಲ್ಟಿ ಲಿಂಗ್ಯುಯಿಸ್ಟಿಕ್ (ಬಹುಭಾಷಾ) ಆಯಾಮವನ್ನಾಗಿ ಗುರುತಿಸುವ ಹೊಸ ಪ್ರಯತ್ನಗಳು ನಡೆದಿವೆ ಎಂದು ಮೊದಲು ನನ್ನ ಗಮನಕ್ಕೆ ತಂದವರು ಜಯಂತ ಕಾಯ್ಕಿಣಿ. ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಅಲ್ಲಿಯೇ ಬಹುಕಾಲ ನೆಲೆನಿಂತ ಕನ್ನಡ ಬರಹಗಾರರಲ್ಲಿ, ಬೇರೆ ಮಾತೃಭಾಷೆಯ ಕನ್ನಡ ಬರಹಗಾರರಲ್ಲಿ ಮಾತ್ರವೇ ಕಾಣಸಿಗುವ ಈ ಅಪರೂಪದ ಒಂದು ವಿಶಿಷ್ಟ ಲಯ ದಕ್ಷಿಣಕನ್ನಡದ ಬರಹಗಾರರಲ್ಲಿ ಅತ್ಯಂತ ಸಹಜವಾಗಿಯೇ ಬರುವುದು ಗಮನಾರ್ಹ. ಈ ಒಂದು ಪುಟ್ಟ ಭೂಪ್ರದೇಶದ ಭಾಷಾ ಶ್ರೀಮಂತಿಕೆಯೇ ಅದಕ್ಕೆ ಕಾರಣವೆನ್ನುವುದು ನಿಜವಾದರೂ ಅದರ ಎಳೆಯನ್ನು ಹಿಡಿದು, ಸೂಕ್ಷ್ಮವಾಗಿ ಗ್ರಹಿಸಿ ತಮ್ಮ ಅಭಿವ್ಯಕ್ತಿಯಲ್ಲಿ ಅದನ್ನು ಉಳಿಸಿಕೊಂಡು ಕೃತಿರಚಿಸುವ ಕಲೆಗಾರಿಕೆ ಎಲ್ಲರಿಗೂ ಸಿದ್ಧಿಸುವಂಥದ್ದಲ್ಲ. ಮೊಗಸಾಲೆಯವರು ಇದನ್ನು ಅದರ ಎಲ್ಲ ತಾಜಾತನದೊಂದಿಗೇ ಮರುಸೃಷ್ಟಿಸುವುದರಿಂದಾಗಿ ಅವರ ಕತೆಗಳ ನಿರೂಪಣೆಗೆ ಒಂದು "ಲವಲವಿಕೆ ಮತ್ತು ಚೈತನ್ಯ" ದಕ್ಕಿದೆ ಎಂದರೆ ತಪ್ಪಾಗಲಾರದು.

ಮೊಗಸಾಲೆಯವರ ಕತೆಗಳಲ್ಲಿ ಬರುವ ಸ್ತ್ರೀಮತದ ಪರ ನಿಲುವುಗಳ ಕುರಿತು ಎಸ್. ಆರ್. ವಿಜಯಶಂಕರ್ ಅವರು ನಮ್ಮ ಗಮನಸೆಳೆಯುತ್ತಾರೆ. ಮೊಗಸಾಲೆಯವರ ಅನೇಕ ಕತೆಗಳಲ್ಲಿ ಸ್ತ್ರೀ ಗಟ್ಟಿಮನಸ್ಸಿನ, ಗಂಡಿನೆದುರು ಸರಿಸಮಾನವಾಗಿ ನಿಂತು ವಾದಿಸಬಲ್ಲ, ಬೇಕೆಂದರೆ ಒಲೆಯಾಗಿ ಹೊತ್ತಿ ಉರಿಯಬಲ್ಲ (ಧರೆ), ಬುದ್ಧಿ ಕಲಿಸಬಲ್ಲ ಮತ್ತು ಸಂದರ್ಭ ಬಂದರೆ ತಾನೇ ಮುಂದಾಗಿ ನಿಂತು ರಕ್ಷಿಸಬಲ್ಲ ಹೆಣ್ಣು. ಅಸಹಾಯಕತೆಯಿಂದ ಅಳಲು ತೋಡಿಕೊಳ್ಳುವ, ಕನಿಕರ,ಅನುಕಂಪ ಗಿಟ್ಟಿಸಿಕೊಳ್ಳಲು ಹಾತೊರೆಯುವ ಒಂದೇ ಒಂದು ಹೆಣ್ಣು ಜೀವ ಇಲ್ಲಿಲ್ಲ. ಭ್ರಷ್ಟಾಚಾರ, ಪಂಚಾಯಿತಿ ಚುನಾವಣೆಯ ಮಟ್ಟದ ರಾಜಕೀಯ, ಸೀಮಿತ ಮಟ್ಟದಲ್ಲಿ ಆರ್ಥಿಕ ವ್ಯವಹಾರ ಮತ್ತು ಲೇವಾದೇವಿ, ಕೃಷಿ-ಕಂಬಳ-ಯಕ್ಷಗಾನ-ನಾಗಾರಾಧನೆ ಮತ್ತಿತರ ವೈದಿಕ ಆಚರಣೆಗಳು, ಅಡುಗೆಯ ವಿವರ/ವರ್ಣನೆ, ಗಂಡು-ಹೆಣ್ಣು ಸಂಬಂಧದ ಸುತ್ತ ತಿರುಗುವ ವಿದ್ಯಮಾನಗಳು - ಇವು ಪ್ರಧಾನವಾಗಿ ನಾ ಮೊಗಸಾಲೆಯವರ ಕಥಾಜಗತ್ತಿನ ಕೇಂದ್ರಬಿಂದುಗಳು. ಹಾಗಿದ್ದೂ ಒಂದು ಕೇಂದ್ರವನ್ನು ಫೋಕಸ್ ಮಾಡುವ ತಂತ್ರವನ್ನು ಮೊಗಸಾಲೆಯವರು ಎಲ್ಲಿಯೂ ಅನುಸರಿಸುವುದೇ ಇಲ್ಲ. ಇದಕ್ಕಾಗಿ ಬಹುಶಃ ಉದ್ದೇಶಪೂರ್ವಕವಾಗಿಯೇ ಅವರು ಕೊಂಚ ವಾಚಾಳಿತನವನ್ನು ಆರೋಪಿಸಿಕೊಳ್ಳುವ ತಂತ್ರ ಹೂಡುತ್ತಾರೆಯೇ ಎನ್ನುವ ಅನುಮಾನವೂ ಬರುತ್ತದೆ. ಧರ್ಮ, ಧಾರ್ಮಿಕ ಆಚರಣೆಗಳು, ಶಾಸ್ತ್ರ, ಜಾತೀಯತೆ ಮತ್ತು ಇಂಥ ವಿಚಾರಗಳಲ್ಲಿನ ಗೊಡ್ಡುತನವೂ ಸೇರಿದಂತೆ ಒಟ್ಟಾರೆ ಮೌಢ್ಯದ ಸ್ಪಷ್ಟ ನಿರಾಕರಣೆಯೊಂದೇ ಈ ಕತೆಗಳ ಕ್ರಾಂತಿಕಾರಕ ಅಂಶವೇ ಹೊರತು ಯಾವುದೇ ಸಾಮಾಜಿಕ ಸಮಸ್ಯೆಯ ನ್ಯಾಯನಿರ್ಣಯವಾಗಲೀ, ಒಂದು ತಾತ್ವಿಕ ನಿಲುವಿನ ಪ್ರತಿಪಾದನೆಯಾಗಲೀ ಇಲ್ಲಿ ನಮಗೆ ಸಿಗುವುದಿಲ್ಲ. ಗಾಂಧೀವಾದದ ನೆಲೆಯಾಗಲಿ, ಅಲ್ಲಮನ ತತ್ವಗಳ ಚಿಂತನೆಯಾಗಲೀ ಸೀತಾಪುರದ ಬದುಕಿನ ರೀತಿ-ನೀತಿ, ಮೌಲ್ಯ-ಪ್ರಮಾಣಗಳ ನೆಲೆಯಲ್ಲೇ ಒದಗಿ ಬರಬೇಕಾದ ಸಂಗತಿಗಳಾಗಿವೆಯೇ ಹೊರತು ಅವುಗಳ ಸಾರ್ವತ್ರಿಕ ಆಯಾಮವನ್ನೇನೂ ಇಲ್ಲಿನ ಗ್ರಾಮ್ಯಜೀವನ ಪದ್ಧತಿಗೆ ಅನುಸಂಧಾನಗೊಳಿಸುವ ಪ್ರಯತ್ನವಿಲ್ಲ.

ಮೊಗಸಾಲೆಯವರ ಕತೆಗಳಲ್ಲಿ ಉದ್ದಕ್ಕೂ ಸಮಾಜಮುಖಿ ಧೋರಣೆಯೇ ಎದ್ದು ಕಾಣುತ್ತದೆ. ನವ್ಯಪರಂಪರೆಯ ಉಚ್ಛ್ರಾಯದಲ್ಲೇ ಸಣ್ಣಕತೆಗಳ ಬರವಣಿಗೆಯನ್ನು ಆರಂಭಿಸಿದರೂ ಮೊಗಸಾಲೆಯವರ ಯಾವುದೇ ಕತೆಗಳಲ್ಲಿ ಅಂತರಂಗದ ವಿಶ್ಲೇಷಣೆಯನ್ನಾಗಲೀ, ಮಾನಸಿಕ ತುಮುಲ, ದ್ವಂದ್ವಗಳ ಸ್ವಗತವನ್ನಾಗಲೀ ನಾವು ಕಾಣುವುದು ಸಾಧ್ಯವಿಲ್ಲ. ಎಲ್ಲವೂ ಗಟ್ಟಿಧ್ವನಿಯ ಮಾತುಗಳಲ್ಲೇ ಸ್ಪಷ್ಟವಾಗುವ, ಹೆಚ್ಚೆಂದರೆ ರಥಬೀದಿಯ ಕುಪ್ಪಣ್ಣಯ್ಯನವರ ಹೋಟೇಲಿನಲ್ಲೋ, ಅವರ ಮನೆಯ ಚಾವಡಿಯಲ್ಲೋ ಇಬ್ಬರಿಗಷ್ಟೇ ಕೇಳುವ ಪಿಸುಮಾತಾಗಿಯೋ ನಡೆಯುವ ವಿಶ್ಲೇಷಣೆಯಷ್ಟೇ ಇಲ್ಲಿ ಲಭ್ಯ. ಆದರೆ ಈ ಮಾತಿಗೆ ಅಪವಾದವೆಂಬಂತೆ ಮೊಗಸಾಲೆಯವರ ನಾಲ್ಕನೆಯ ಕಥಾಸಂಕಲನದ ಎರಡನೆಯ ಭಾಗದ ಮೂರು ಕತೆಗಳಿವೆ. ಸದಾನಂದ ರಾಯರ ಇನ್‌ಫ್ಯಾಚುಯೇಶನ್ ಆಗಲಿ, ತಮ್ಮ ಹೆಂಡತಿ ಮತ್ತು ಸೊಸೆ ಅಲ್ಲಮನ ತಾತ್ವಿಕ ನಿಲುವುಗಳಿಗೆ ಅಲೈನ್ ಆಗುವುದನ್ನೇ ಕಾಯುತ್ತಿರುವ ಶ್ರೀನಿವಾಸರಾಯರ ತುಮುಲಗಳಾಗಲೀ, ರಮಾನಾಥ ಮತ್ತು ಅವನಿಯ ಪ್ರೇಮ-ಕಾಮದ ಗೊಂದಲಗಳಾಗಲೀ, ಪಾವಿತ್ರ್ಯ(ಪ್ಯೂರಿಟನ್ ಕಾನ್ಸೆಪ್ಟ್) ದ ಪರಿಕಲ್ಪನೆಯಾಗಲಿ ಮೊಗಸಾಲೆಯವರ ಕತೆಗಳ ಜಾಯಮಾನಕ್ಕೆ ಹೊಸದೆಂಬಂತೆ ನಿಲ್ಲುತ್ತವೆ. ಈ ಮೂರೂ ಕತೆಗಳು ಸಾಮಾನ್ಯವಾಗಿ ಅಂತರಂಗದ ಪಿಸುಮಾತುಗಳನ್ನು ಕತೆಯಾಗಿಸದ ಮೊಗಸಾಲೆಯವರ ಕಥನ ಕ್ರಮಕ್ಕೆ ಒಡ್ಡಿದ ಸವಾಲುಗಳಿಗಾಗಿ ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ.

ಜಾಗತೀಕರಣ, ಮುಕ್ತ ವ್ಯಾಪಾರನೀತಿಗಳಿಂದಾಗಿ ಜಗತ್ತು ಕಿರಿದಾಗಿ ಅದೊಂದು ಗ್ರಾಮವೇ ಆಗಿಬಿಟ್ಟಿರುವುದು ಎಲ್ಲರಿಗೂ ಗೊತ್ತು. ಇದರ ಪರಿಣಾಮವೋ ಎಂಬಂತೆ ಆಧುನಿಕ ಸಾಹಿತ್ಯದಲ್ಲಿ, ವಿಶೇಷತಃ ಇಂಗ್ಲೀಷ್ ಸಾಹಿತ್ಯದ ಪ್ರಭಾವದಿಂದ ದೇಶೀಯ ಸಾಹಿತ್ಯದಲ್ಲಿಯೂ Outsider ಎಂಬ ಒಂದು ಪ್ರಜ್ಞೆ ಒಂದು ಕೃತಿಯಲ್ಲಿ ಹೇಗೆಲ್ಲ ಕಾಣಿಸಿಕೊಳ್ಳಬಹುದು, ಅದರ ಸಾಧಕ-ಬಾಧಕಗಳೇನು ಎಂಬ ಅಂಶ ಮಹತ್ವ ಪಡೆದಿದೆ. ನಾ ಮೊಗಸಾಲೆಯವರ ಕತೆಗಳಲ್ಲಿಯೂ ಸೀತಾಪುರದಲ್ಲಿಯೇ ಹುಟ್ಟಿ ಬೆಳೆದವರು, ಸೀತಾಪುರವನ್ನು ಬಿಟ್ಟು ಹೊರ ಹೋಗಿ ನೆಲೆಯಾದವರ ಮರುಭೇಟಿ, ಸೀತಾಪುರಕ್ಕೆ ಹೊರಗಿನಿಂದ ಉದ್ಯೋಗನಿಮಿತ್ತವೋ, ವ್ಯವಹಾರ ನಿಮಿತ್ತವೋ ಬಂದು ಸೇರಿಕೊಂಡು ಇಲ್ಲೇ ನೆಲೆಯಾದವರು ಮುಂತಾದ ಬಗೆಯ ವ್ಯಕ್ತಿಗಳಿದ್ದಾರೆ, ಅವರ ಇಂಥ ಹಿನ್ನೆಲೆಯ ಕುರಿತ ವಿವರವನ್ನು ಅವಶ್ಯ ನೀಡಲಾಗುತ್ತದೆ. ಆದರೆ, ಲೋಕಲೈಟ್ ಎಂಬ ಪ್ರಜ್ಞೆ ಇಲ್ಲಿ ಸಾಕಷ್ಟು ವಿಸ್ತೃತ ನೆಲೆಯಲ್ಲಿಯೇ ಮೆರೆಯುತ್ತದೆ. ಇಲ್ಲಿನ ಕುಪ್ಪಣ್ಣಯ್ಯನಾಗಲೀ, ಹಲಗೆಪ್ಪ-ತಗಡಪ್ಪಗಳಾಗಲೀ, ಶೇಕಬ್ಬ-ಹಸನಬ್ಬಗಳಾಗಲೀ, ಸಿರಿಲ್-ಜಾನ್ ಡಿಸಿಲ್ವಗಳಾಗಲೀ ಹೊರಗಿನವರಾಗುವುದು ಸಾಧ್ಯವೇ ಇಲ್ಲದಂತೆ ಸೀತಾಪುರದವರೇ ಆಗಿಬಿಡುತ್ತಾರೆ ಎಂಬ ಅಂಶ ಮಹತ್ವದ್ದು.

ಮೊಗಸಾಲೆಯವರ ಕಥನ ಕ್ರಮ, ಸ್ಥೂಲವಾಗಿ ಕತೆಯನ್ನು ತೊಡಗುವ ಕ್ರಮ ಅಥವಾ ತಂತ್ರ, ಮೊಗಸಾಲೆಯವರು ಆರಿಸಿಕೊಂಡ (ಅದರಲ್ಲಿ ಪುನರಾವರ್ತನೆಯೇನಾದರೂ ಇದೆಯೇ ಎಂಬ ಪ್ರಶ್ನೆಯೊಂದಿಗೆ) ವಸ್ತು ವಿನ್ಯಾಸ, ಅವರ ಕತೆಯ ಕೇಂದ್ರಬಿಂದು - ಈ ಮೂರು ಅಂಶಗಳನ್ನು ಅರಿಯಲು ಇಲ್ಲಿ ಒಂದು ಹೊಸ ವಿಧಾನವನ್ನು ಅನುಸರಿಸುತ್ತಿದ್ದೇನೆ. ಇಲ್ಲಿ ಕತೆಯನ್ನು ಸರಳಗೊಳಿಸಿ, ಅದರ ವಸ್ತು ಅಥವಾ ಕೇಂದ್ರವನ್ನು ಒಂದು ಅಥವಾ ಎರಡು ವಾಕ್ಯಗಳಲ್ಲಿ ಹಿಡಿದುಕೊಡುವ ಪ್ರಯತ್ನವಿಲ್ಲ. ಉದ್ದೇಶಪೂರ್ವಕವಾಗಿಯೇ ಮೊಗಸಾಲೆಯವರು ಕತೆಯನ್ನು ಎಲ್ಲಿಂದ ತೊಡಗುತ್ತಾರೆ, ಪ್ರಮುಖವಾಗಿ ಯಾವ ಯಾವ ಪಾತ್ರಗಳು ಅಲ್ಲಿ ಬರುತ್ತವೆ, ಯಾವೆಲ್ಲ ಪ್ರಕರಣಗಳನ್ನು ಕತೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತವೆ ಎನ್ನುವುದನ್ನು ಸೂಚಿಸಲು ಕತೆಯನ್ನು ಓದಿದವರಿಗಷ್ಟೇ ಅರ್ಥವಾಗುವ ಹಾಗೆ ಗುರುತಿಸಿಕೊಂಡು (ಸ್ಕೆಚ್ ಮಾಡಿದಂತೆ) ಒಟ್ಟಾರೆ ಕತೆ ಯಾವೆಲ್ಲದರ ಕುರಿತಾಗಿದೆ ಎನ್ನುವುದನ್ನು ಕಾಣುವ ಪ್ರಯತ್ನವಿದೆ. ತನ್ಮೂಲಕ ಮೊಗಸಾಲೆಯವರ ತಂತ್ರ, ಕತೆಯ ವಸ್ತು ಮತ್ತು ಕೇಂದ್ರ ಹಾಗೂ ಒಟ್ಟಾರೆಯಾಗಿ ಕತೆ ಕೇಂದ್ರದಿಂದ ಅನ್ಯತ್ರ ಸರಿದು ಹೋಗುವ ಪ್ರಮಾಣ ಎಷ್ಟು ಮತ್ತು ಯಾವ ಬಗೆಯದ್ದು ಎನ್ನುವುದನ್ನು ಅರಿಯಲು ಸಾಧ್ಯವಾದೀತೆಂಬ ನಂಬಿಕೆಯಿದೆ. ಇದರ ಜೊತೆಜೊತೆಗೇ ಮೊಗಸಾಲೆಯವರ ಕತೆಗಳಲ್ಲಿನ ವಸ್ತು ವೈವಿಧ್ಯ, ಅದರ ಸಾಮಾಜಿಕ/ತಾತ್ವಿಕ ಆಯಾಮಗಳು ಮತ್ತು ಅವು ಪ್ರತಿಪಾದಿಸುವ (ಪ್ರತಿಪಾದಿಸುತ್ತಿದ್ದಲ್ಲಿ) ಅಂಶಗಳೇನು ಎಂಬ ಕುರಿತೂ ಒಂದು ಸ್ಥೂಲ ಅಂದಾಜು ಸಿಗಬಹುದು.

No comments: