Saturday, September 17, 2016

ಪದ್ಮನಾಭ ಭಟ್ ಶೇವ್ಕಾರ ಅವರ ‘ಕೇಪಿನ ಡಬ್ಬಿ’

ತಮ್ಮ ಮೊದಲ ಕಥಾಸಂಕಲನದಲ್ಲಿಯೇ ಪ್ರಬುದ್ಧವಾದ ಭಾಷೆ, ವಸ್ತುವಿನ ಸಮರ್ಥ ನಿರ್ವಹಣೆ ಮತ್ತು ಕಥನದ ಒಳಸುಳಿಗಳನ್ನು ಅರಿತ ಕತೆಗಾರನ ನೈಪುಣ್ಯ ಮೆರೆದಿರುವ ಪದ್ಮನಾಭ ಭಟ್, ಶೇವ್ಕಾರ ಅವರ ‘ಕೇಪಿನ ಡಬ್ಬಿ’ ಈಚೆಗೆ ಬಂದಿರುವ ಒಂದು ಉತ್ತಮ ಕಥಾಸಂಕಲನ. ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕತೆಗಳಿದ್ದು ವಸ್ತು ವೈವಿಧ್ಯ ಗಮನಸೆಳೆಯುತ್ತದೆ. ಪ್ರಧಾನವಾಗಿ ಪದ್ಮನಾಭ ಅವರು ಸೂಕ್ಷ್ಮವಾಗಿ ಬದುಕನ್ನು ಗ್ರಹಿಸಿ, ಬದುಕಿನ ನೋವು, ಆತಂಕ, ತಲ್ಲಣ ಮತ್ತು ಹರ್ಷದ ಅನನ್ಯ ಕ್ಷಣಗಳನ್ನು ಗುರುತಿಸಿಕೊಂಡು, ಅವುಗಳನ್ನು ತಮಗೆ ಬೇಕಾದಲ್ಲಿ ಜತನವಾಗಿ ಅಕ್ಷರಗಳಲ್ಲಿ ಹಾಗೆಯೇ, ಆ ಕ್ಷಣದ ಹವೆ, ಬಣ್ಣ, ವಾಸನೆ, ನೋಟ ಮತ್ತು ರುಚಿ ಗೊತ್ತು ಮಾಡಿಸಬಲ್ಲಂಥ ಸಮರ್ಥ ವಿವರಗಳಲ್ಲಿ ಆ ಕ್ಷಣಗಳನ್ನು ಜೀವಂತಗೊಳಿಸುವಾಗ ತೋರಿಸುವ ತಾಳ್ಮೆ ಮತ್ತು ಕೌಶಲ ಗಮನಾರ್ಹವಾದುದು. ಪದ್ಮನಾಭ ಅವರ ಗರಿಮೆ ಇರುವುದೇ ಅವರು ಬದುಕಿನಿಂದ ಎತ್ತಿಕೊಳ್ಳುವ ಮತ್ತು ಅಕ್ಷರಗಳಲ್ಲಿ ಕಟ್ಟಿಕೊಡುವ ವಿವರಗಳ ಆಯ್ಕೆ ಮತ್ತು ಗಹನತೆಯಲ್ಲಿ ಎನಿಸುತ್ತದೆ. ಸದ್ಯದ ಸಂಕಲನದಲ್ಲಂತೂ ಈ ಕತೆಗಳ ಅನನ್ಯತೆಗೆ ಅದು ನೀಡಿರುವ ಪೋಷಣೆ ಮುಖ್ಯವಾದುದು. ಹಾಗೆಯೇ ಅವರು ಕಥನ ಮತ್ತು ವಸ್ತುವಿನ ಆಯ್ಕೆಯಲ್ಲಿ ಕೂಡ ಸಾಕಷ್ಟು ವಿಶಾಲವಾದ ಹರಹಿನ ಆಸಕ್ತಿ ತೋರಿರುವುದನ್ನು ಮರೆಯಬಾರದು. ಉತ್ತರ ಕನ್ನಡದಿಂದ ಬಂದಿರುವ ಅನೇಕ ಅದ್ಭುತ ಕತೆಗಾರರಿಂದ ತಾವು ಭಿನ್ನವಾಗಿ ನಿಲ್ಲಬೇಕಾದ ಸವಾಲನ್ನು ಚೆನ್ನಾಗಿಯೇ ಅರಿತಿರುವ ಅವರು ಓದುಗರಿಗೆ ಎಲ್ಲಿಯೂ ನಿರಾಸೆಯನ್ನುಂಟು ಮಾಡುವುದಿಲ್ಲ. ಅದೇ ಚೇತೋಹಾರಿ ಗುಣದ ತಾಜಾತನವನ್ನು ಉಳಿಸಿಕೊಂಡು ಹೊಸತಾದ ಒಂದು ಕಥಾಜಗತ್ತನ್ನು ಸೃಷ್ಟಿಸಿಕೊಳ್ಳುವಲ್ಲಿ ಸಾಕಷ್ಟು ಸಫಲರಾಗಿದ್ದಾರೆ.

ಚೇಳು ಕಚ್ಚಿದ ಗಾಯ
ತಂದೆ-ತಾಯಿ-ಮಗ-ಮಗಳು ಈ ನಾಲ್ಕು ಪಾತ್ರಗಳ ಒಂದು ನಿರ್ದಿಷ್ಟ ಸಂದಿಗ್ಧವನ್ನು ಪದ್ಮನಾಭ ಇಲ್ಲಿ ಕಟ್ಟಿಕೊಡುತ್ತಿದ್ದಾರೆ. ಚೊಚ್ಚಲ ಹೆರಿಗೆಗೆಂದು ತೌರಿಗೆ ಬಂದ ರೇಣುಕಾ, ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದ ಮಗ ಪ್ರಶಾಂತ ಇಬ್ಬರೂ ಸದ್ಯಕ್ಕೆ ಸಮಸ್ಯೆಯಾಗಿದ್ದಾರೆ. ತೊಟ್ಟಿಲು, ಚಿನ್ನದ ಉಡುದಾರ ಇತ್ಯಾದಿ ಡಿಮ್ಯಾಂಡುಗಳಿರುವ ಮಗಳನ್ನು ಗಂಡನ ಮನೆಗೆ ಕಳಿಸಿಕೊಡುವ ಹೊರೆಗೆ ಮಗನ ನೆರವು ಸಿಗಬಹುದೇನೊ ಎಂದುಕೊಂಡಿದ್ದರೆ ಅವನೇ ಒಂದು ಸಮಸ್ಯೆಯಾಗಿ ತೌರಿಗೆ ಬಂದು ಕೂತಿದ್ದಾನೆ! ಹೆತ್ತವರ ಚಿಂತೆ ಒಂದಾದರೆ ಈ ಇಬ್ಬರು ಮಕ್ಕಳಿಗೂ ಅವರವರದೇ ಚಿಂತೆಗಳಿವೆ. ಈ ಒಂದು ಅವರವರದ್ದೇ ಅವರವರಿಗೆ ಹೆಚ್ಚಾಗಿರುವಂಥ ಸಂದರ್ಭದಲ್ಲಿ ಈ ಪುಟ್ಟ ಸಂಸಾರದ ಸಂಬಂಧಗಳು ಮರು ವ್ಯಾಖ್ಯಾನಿಸಲ್ಪಡುವ, ಮತ್ತೆ ಮೂಲಕ್ಕೆ ಹಿಂದಿರುಗುವ, ಹಿಂದಿರುಗಲಾರದ ಕಷ್ಟ ಅನುಭವಿಸುವ ಸಂದಿಗ್ಧ ಇಲ್ಲಿನ ವಸ್ತು. ಇದನ್ನೆಲ್ಲ ಹಿಡಿಯುವ ಸೂಕ್ಷ್ಮ ಕ್ಷಣಗಳಿವೆ ಇಲ್ಲಿ. ಅದು ಅಸಹನೆ, ಸಿಡುಕು, ತನಗೇನೋ ಅನ್ಯಾಯವಾಗಿದೆ ಎಂಬ ನೋವು ಕೀವಾಗಿ ಒಸರುವ ಮಾತುಗಳು. ನಿಜವಾದ ಉರಿ ಇದು. ಇದು ಜೊತೆಗೇ ಬದುಕುತ್ತ, ಅದನ್ನು ನಿರಾಕರಿಸುತ್ತ, ಅದು ಅನಿವಾರ್ಯ ಎನ್ನುವುದು ಗೊತ್ತಿದ್ದೂ ಸಹಿಸಬೇಕಾದ ಕರ್ಮಕ್ಕೆ ಸಿಡಿಯುತ್ತ ಸಾಗುವ ಸಂಬಂಧದ ಒಂದು ಚಿತ್ರ. "ನೆಮ್ಮದಿಯಿಂದಿರುವ ಎಲ್ಲ ಸಂಸಾರಗಳೂ ಒಂದೇ ತರ ಇರುತ್ತವೆ; ನೆಮ್ಮದಿಯಿಲ್ಲದ ಎಲ್ಲ ಸಂಸಾರಗಳೂ ತಮ್ಮದೇ ರೀತಿಯಲ್ಲಿ ನೆಮ್ಮದಿ ಕಳೆದುಕೊಂಡಿರುತ್ತವೆ." ಹಾಗೆ ನೋಡಿದರೆ ನಾರ್ಮಲ್ ಹೋಮ್ ಎನ್ನುವುದೇ ಒಂದು ಮಿಥ್ ಎನ್ನುತ್ತಾರೆ ಜೆರ್ರಿ ಪಿಂಟೊ. ಮತ್ತು ಇಂಥ ಮನಸ್ತಾಪ, ಅವು ಮನದ ಎಷ್ಟೇ ಆಳದ ನೋವು, ಸಣ್ಣತನ, ಮರೆಯದೇ ಉಳಿಸಿಕೊಂಡಿರುವ ಕಹಿಯನ್ನು ಹೊರಹಾಕಲಿ, ಅವು ಸ್ಥಾಯಿಯಾದ ಮನೋಧರ್ಮವನ್ನು ರೂಪಿಸುವುದಿಲ್ಲ. ಈ ಕದನಗಳೇನಿದ್ದರೂ ಅವು ಸಂಚಾರೀ ಮನೋವೃತ್ತಿಯವು. ಆದರೆ ಅಷ್ಟಕ್ಕೇ ನಾವು ಅಂಥ ಕ್ಷಣಗಳನ್ನು ಅವುಗಳ ಕಣ್ಣಲ್ಲಿ ಕಣ್ಣು ನೆಟ್ಟು ನೋಡಬೇಕೆಂಬ ಅಗತ್ಯವನ್ನು ಹಿಂಗಿಸುತ್ತವೆ ಎಂದೇನೂ ಅರ್ಥವಲ್ಲ. ನೋಡಬೇಕಾದ್ದು, ಶೋಧಿಸಬೇಕಾದ್ದು ಮತ್ತು ಹಾಗೆ ಮಾಡಿ ತಿಳಿದುಕೊಳ್ಳಬೇಕಾದ್ದು ಮತ್ತು ಗಟ್ಟಿಯಾಗಬೇಕಾದ್ದು ಕೂಡ ಇಲ್ಲೇ ಇರುತ್ತದೆ! ಮನುಷ್ಯ ತನ್ನ ಅತ್ಯಂತ ದುರ್ಬಲ ಕ್ಷಣಗಳಲ್ಲೇ ನಿಜವಾಗುತ್ತಿರುತ್ತಾನೆ, ಅದೇ ಅವನಲ್ಲ ಎನಿಸುವಾಗಲೂ! ರೇಣುಕಾಳ ಈ ಸ್ವಗತದಲ್ಲಿ ಅಂಥ ಎಳೆಗಳಿರುವುದನ್ನು ಗಮನಿಸಬಹುದು.

"ನನಗೆ ಇಂದು ಅಮ್ಮನ ಮಾತು ಕೇಳಿದರೆ ಮೈ ಉರಿಯುವ ಹಾಗೆ ಅಮ್ಮನಿಗೂ ದೊಡ್ಡಬ್ಬೆಯ ಮಾತು ಕೇಳಿದರೆ ಮೈ ಉರಿಯುತ್ತಿತ್ತಾ? ಹೀಗೆ ದೊಡ್ಡಬ್ಬೆಯಿಂದ ಅಮ್ಮನಿಗೆ ಅಮ್ಮನಿಂದ ನನಗೆ ದಾಟಿಬಂದ ಈ ಉರಿಯ ಮೂಲ ಯಾವುದು? ರೇಣುಕಾಗೆ ಇದೆಲ್ಲ ಒಂದು ಸರಪಳಿಯಂತೆ ಕಂಡಿತು. ತೊಟ್ಟಿಲಲ್ಲಿ ಮಲಗಿರುವ ತನ್ನ ಮಗಳೂ ಈ ಸರಪಳಿಯ ಮುಂದಿನ ಕೊಂಡಿಯಂತೆಯೇ ಭಾಸವಾಗಿ ಸಣ್ಣಗೆ ಕಂಪಿಸಿದಳು." (ಪುಟ 7)

ಅತ್ಯಂತ ಸಂಯಮದ ಭಾಷೆ, ಮೌನವನ್ನು ದುಡಿಸಿಕೊಂಡು ಕತೆಯನ್ನು ಕಟ್ಟಿದ ರೀತಿ, ಚಿಕ್ಕಪುಟ್ಟ ಘಟನೆಗಳಿಂದ, ತುಂಡು ನೆನಪು, ಚಿತ್ರಗಳಲ್ಲಿ ಪದ್ಮನಾಭ ಕಟ್ಟಿಕೊಡುತ್ತಿರುವ ಅನುಭವ ದೊಡ್ಡದು. ಕತೆ ಎಂದರೆ ಒಂದು ಕಥಾನಕ ಎನ್ನುವ ಸಿದ್ಧಮಾದರಿಯನ್ನು ಬಿಟ್ಟುಕೊಟ್ಟು ಕತೆ ಹೇಳತೊಡಗಿದ ಎಲ್ಲ ಸಮಕಾಲೀನ ಯುವ ಕತೆಗಾರರ ಮಾದರಿಯದೇ ಕತೆ ಇದಾದರೂ ಇಲ್ಲಿರುವ ಸವಾಲು ದೊಡ್ಡದು, ಅದನ್ನು ಕತೆಗಾರ ನಿರ್ವಹಿಸಿದ ರೀತಿಯೂ ದೊಡ್ಡದು.

ಬೆಳಕು ಬಿಡಿಸಿದ ಚಿತ್ರ
ಈ ಕತೆಯನ್ನು ನಾವು ಕೆಲವೊಂದು ಸೀಮಿತ ಕಾರಣಗಳಿಗೆ ಇದೇ ಸಂಕಲನದ ‘ಕತೆ’ ಎಂಬ ಹೆಸರಿನ ಕತೆಯೊಂದಿಗೆ ಇಟ್ಟು ನೋಡಬಹುದು. ಹಾಗೆ ನೋಡಿದರೆ ಇದನ್ನು ಜಯಂತ ಕಾಯ್ಕಿಣಿಯವರ ‘ತೆರೆದ ಬಾಗಿಲು’ ಕತೆಯೊಂದಿಗೂ ಇಟ್ಟು ನೋಡಬಹುದು. ಇನ್ನೂ ಸ್ವಲ್ಪ ಆಳವಾಗಿ ಗಮನಿಸಿದರೆ ಉತ್ತರ ಕನ್ನಡದವರೇ ಆದ ಇನ್ನೊಬ್ಬ ಕತೆಗಾರ ಅಶೋಕ ಹೆಗಡೆಯವರ ‘ಒಳ್ಳೆಯವನು’ ಕಥಾಸಂಕಲನದ ‘ಉಳಿದದ್ದೆ ದಾರಿ’ ಮತ್ತು ‘ಹೊಳೆದದ್ದೆ ತಾರೆ’ ಎರಡೂ ಕತೆಗಳನ್ನು ಜೊತೆ ಜೊತೆಯಾಗಿ ಗಮನಿಸುವುದು ಕೂಡ ಕುತೂಹಲಕರವಾಗಬಹುದು. ತಂದೆ ಮಗನ ಸಂಬಂಧ ಇಲ್ಲಿನ ಕೇಂದ್ರ. ಒಂಥರಾ ಜಿದ್ದು, ಪ್ರೀತಿ, ಹಠ ಮತ್ತು ಅಪೂರ್ವವಾದ ಒಂದು ಅರ್ಥಮಾಡಿಕೊಂಡು ಮಿಡಿವ ತಂತು ಈ ಎಲ್ಲ ಕತೆಗಳ ಸಾಮಾನ್ಯ ಎಳೆಯಾಗಿದ್ದೂ ಪ್ರತಿಯೊಂದು ಕತೆಯೂ ಅನನ್ಯ ಮತ್ತು ವಿಶಿಷ್ಟವಾಗಿರುವುದು ಗಮನಾರ್ಹ. ಈ ಕಥೆಗಳಲ್ಲಿ ಕೆಲವು ಕಡೆ ತಂದೆಗಿರುವ ಒಂದು ಎಕ್ಸ್‌ಟ್ರಾ ಮೆರಿಟಲ್ ರಿಲೇಶನ್ (ವಿವಾಹೇತರ ಸಂಬಂಧ) ಕೇಂದ್ರವಾಗಿರುವುದನ್ನು ಕೂಡ ಕಾಣಬಹುದು. ಈ ಯಾವತ್ತೂ ಕತೆಗಳು ವಸ್ತುವನ್ನು ನಿರ್ವಹಿಸಿರುವ ರೀತಿ ಭಿನ್ನ ಮತ್ತು ಅದರ ಹದವನ್ನು ನಿಧಾನವಾಗಿ ಅಧ್ಯಯನ ಮಾಡುವುದು ಎಲ್ಲ ಕತೆಗಾರರಿಗೆ ನಿಜಕ್ಕೂ ಮಾರ್ಗದರ್ಶಿಯಾಗಬಹುದು.

ಛದ್ಮವೇಷ
ಉತ್ತರಕನ್ನಡದ ಮುಗ್ಧ ಪೋರರು ‘ಇದ್ದಾಗ ಇದ್ಧಾಂಗ’ (ಜಯಂತ ಕಾಯ್ಕಿಣಿ) ಕತೆಯ ಪಬ್ಬುನಂಥ ಅಥವಾ ‘ಬಂದಾವೋ ಬಾರವೋ’ (ವಿವೇಕ ಶಾನಭಾಗ) ಕತೆಯ ನಾಯಕನಂಥ ಕೊಂಚ ‘ಬೆಳೆದ’ ಹುಡುಗರ ಜೊತೆ ಏಗುತ್ತಲೇ ಹೊಸ ಜಗತ್ತಿಗೆ ತೆರೆದುಕೊಳ್ಳುವ ಒಂದು ಪ್ರಕ್ರಿಯೆಯ ಚಿತ್ರವನ್ನು ಛದ್ಮವೇಷ ಕತೆ ಕೊಡುತ್ತದೆ. ಬಹುಶಃ ಮಾಸ್ತರರು ಅಥವಾ ಪ್ರೈಮರಿಶಾಲೆಯ ಅನುಭವವೇ ಕೇಂದ್ರವಾಗಿರುವ ಒಂದಾದರೂ ಕತೆಯನ್ನು ಬರೆಯದ ಉತ್ತರ ಕನ್ನಡದ ಕತೆಗಾರರೂ ಇರಲಿಕ್ಕಿಲ್ಲ. ‘ಛದ್ಮವೇಷ’ ಕತೆಯಲ್ಲಿ ಬರುವ ಪಾತ್ರಗಳು ಮತ್ತೆ ನಮ್ಮನ್ನು ಇದೇ ಬಾಲ್ಯದ ಲೋಕಕ್ಕೆ ಒಯ್ಯುತ್ತವೆ. ಜಯಂತರ ‘ಸುಗ್ಗಿ’ ಕತೆಯನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. ಇಲ್ಲಿ ಪುಟ್ಟ ಹುಡುಗ ಮಧು ಪ್ರತಿಭಾಕಾರಂಜಿಯ ಸ್ಪರ್ಧೆಗೆ ಹೊರಟು ಅಲ್ಲಿ ಪಟ್ಟಣದ ಹುಡುಗರ ಕೈಯಲ್ಲಿ ಹೈರಾಣಾಗುವಂತೆಯೇ ಜಯಂತರ ‘ಸುಗ್ಗಿ’ ಕತೆಯಲ್ಲಿ ಸುಗ್ಗಿ ಕುಣಿತದ ಒಂದು ಪುಟ್ಟ ತಂಡ ಕಟ್ಟಿಕೊಂಡು ಕಾರವಾರಕ್ಕೆ ಹೊರಡುವ ತುಕಾರಾಮ ಮಾಸ್ತರರೂ, ಕಲಾವಿದ ಹಮ್ಮು ಗೌಡನೂ ಹೈರಾಣಾಗುವುದು ಚಿತ್ರಿಸಲ್ಪಟ್ಟಿದೆ. ಅಲ್ಲಿ ಸರ್ಕಾರಿ ವ್ಯಾವಹಾರಿಕತೆ ಮತ್ತು ಕಲೆಯ ಸಂಘರ್ಷವಿದ್ದರೆ ಇಲ್ಲಿ ಬೇರೆ ತರದ ಸಂಘರ್ಷಗಳಿವೆ. ಇದಕ್ಕೆ ಹೆಚ್ಚು ಸಂಕೀರ್ಣವಾದ ಮತ್ತು ಹಲವು ನೆಲೆಯ ಧ್ವನಿಶಕ್ತಿಗಳೆಲ್ಲ ಒದಗಿಬಂದಿರುವ ರೀತಿ ಕೂಡ ಅಧ್ಯಯನ ಯೋಗ್ಯವಾಗಿದೆ. ಇದು ಸಾಂಸಾರಿಕ ಸಂಘರ್ಷವನ್ನೂ, ಸ್ತ್ರೀಮತವನ್ನೂ, ಒಂದು ಮಟ್ಟದ ಪ್ರತಿರೋಧದ ನೈತಿಕಬಲವನ್ನೂ ಜೊತೆಗೆ ಅಂಥದ್ದನ್ನು ಹತ್ತಿಕ್ಕುವ ಈ ಜಗತ್ತಿನ ಕ್ರೂರ-ನಿಷ್ಠುರ ನಿಯತಿಗಳನ್ನೂ ಒಂದೇಟಿಗೆ ಅತ್ಯಂತ ಸಹಜವಾಗಿಯೂ, ನಿರುದ್ದಿಶ್ಯದ ನೆಲೆಯಿಂದಲೂ ಕಟ್ಟಿಕೊಡುವುದು ಅಭಿಮಾನ ಮೂಡಿಸುತ್ತದೆ. ಇವೆಲ್ಲವೂ ಪರಸ್ಪರ ಸಂಬಂಧಪಟ್ಟವು ಎಂದೂ, ಅಲ್ಲ ಎಂದೂ ಇದನ್ನು ಓದುತ್ತ ಹೋಗಬಹುದಾಗಿದೆ. ಆಗಲೂ ಓದುಗನ ಸುಪ್ತ ಮನಸ್ಸಲ್ಲಿ ಇವೆಲ್ಲ ಹುಟ್ಟಿಸುವ ಸಂವೇದನೆ ಮಾತ್ರ ಅದೇ ಆಗಿರುತ್ತದೆ. ವಿಶ್ವಣ್ಣ ಕೂಡ ಇಲ್ಲಿ ಒಂದು ಕೇಂದ್ರವೇ. ಇಲ್ಲಿ ಮಧು ಪುಟ್ಟ ಹುಡುಗನೇ ಆದರೂ ಅವನ ಮುಗ್ಧತೆಯ ಅತಿರಂಜಕತೆಯಿಲ್ಲ. ಹಾಗೆಂದು ಅವನ ಬಾಲ್ಯಕ್ಕೆ ಸಲ್ಲದ ಪ್ರೌಢಿಮೆಯನ್ನೂ ಕಾಣಿಸುತ್ತಿಲ್ಲ. ಈ ಹದವನ್ನು ಕಾಯ್ದುಕೊಂಡಿರುವುದು ಕೂಡ ಮೆಚ್ಚುಗೆ ಹುಟ್ಟಿಸುತ್ತದೆ. ಸಾಮಾನ್ಯ ಕತೆಯಾಗಬಹುದಾದ ಒಂದು ಸಂಗತಿಯೇ ಕತೆಗಾರನ ಪ್ರತಿಭೆಯಿಂದಲೇ, ಅದು ಕೈ ಚಾಚಿ ಒಗ್ಗೂಡಿಸಿಕೊಳ್ಳುವ ವಿವರಗಳ ಜಗತ್ತಿನಿಂದಾಗಿಯೇ ಅದಕ್ಕೆ ಒಂದು ಪ್ರಭೆ ಒದಗಿ ಬರುವ ಸೋಜಿಗವನ್ನು ಇಲ್ಲಿ ಕಾಣುತ್ತೇವೆ.

ಈ ನಡುವೆ...
ಈ ಕತೆ ಫ್ಯಾಂಟಸಿಯನ್ನು ಬಳಸಿಕೊಂಡು ಮನುಷ್ಯನ ನೀಚತನಕ್ಕೆ ಮುಖಾಮುಖಿಯಾಗಿ ಅವನ ಭೋಳೇತನ ಎನಿಸಿಕೊಳ್ಳುವ ಮುಗ್ಧತೆಯನ್ನು ಇಡುತ್ತದೆ ಅಥವಾ ನಾಗರಿಕ ನಡೆನುಡಿಗೆ ಎದುರಾಗಿ ಅನಾಗರಿಕವೆನಿಸಿಕೊಳ್ಳುವ ಸಹಜವನ್ನು ಇಡುತ್ತದೆ ಅಥವಾ ಜಾಣತನ ಎನಿಸಿಕೊಳ್ಳುವ ನಡೆನುಡಿಗೆ ಎದುರಾಗಿ ಪೆದ್ದುತನವನ್ನು ಇಡುತ್ತದೆ. ಕೊಂಚ ಪೇಲವವಾದ ವಸ್ತುವಾಗಿದ್ದರೂ ವಿವರಗಳ ಸೌಂದರ್ಯವನ್ನೇ ನೆಚ್ಚಿಕೊಂಡು ನಿಂತ ಕತೆಯಿದು.

ಹೆಣದ ವಾಸನೆ

ಸ್ವಲ್ಪ ಸ್ಕೆಚೀ ಎನಿಸುವ ವಿವರಗಳಲ್ಲೇ ಪರಿಣಾಮಕಾರಿಯಾಗಿ ಮೂಡಿಬಂದಿರುವ ಕತೆ. ಮಾನಸಿಕ ವಿಭ್ರಾಂತಿಯನ್ನು ಪ್ರಥಮಪುರುಷ ನಿರೂಪಣೆಯಲ್ಲಿ ಹೇಳದೆ ಉತ್ತಮಪುರುಷದಲ್ಲೇ ಹೇಳುವ ಸವಾಲನ್ನೆತ್ತಿಕೊಂಡಿರುವುದು ಮತ್ತು ಅದನ್ನು ಅಷ್ಟೇ ಸಮರ್ಥವಾಗಿ ನಿರ್ವಹಿಸಿರುವುದು ಇಲ್ಲಿ ಗಮನಸೆಳೆಯುವ ಅಂಶ. ಮೊದಲ ಬಾರಿಗೆ ಸೀದಾ ಓದಿಕೊಂಡು ಹೋದರೆ ನಿಖರವಾಗಿ ಎಲ್ಲಿ (ಕಥೆಯ ಚೌಕಟ್ಟಿನಲ್ಲಿ) ಈ ನಿರೂಪಕನ ಮನೋಗತದಲ್ಲಿನ ತರ್ಕ ಹಳಿತಪ್ಪುವುದು ಸುರುವಾಯಿತು ಎನ್ನುವುದನ್ನೇ ಬಿಟ್ಟುಕೊಡದ ಹಾಗಿರುವ ಇಲ್ಲಿನ ಹೆಣಿಗೆಯನ್ನು ಗಮನಿಸಬೇಕು. ಆಗ ನಿಶ್ಚಿತವಾಗಿ ಈ ಕತೆ ಎರಡನೆಯ ಬಾರಿ ಓದಿಸಿಕೊಳ್ಳುತ್ತದೆ! ಕತೆಯ ಯಶಸ್ಸು ಮತ್ತು ಮಿತಿ ಎರಡೂ ಇರುವುದು ಇಲ್ಲಿಯೇ. ಈ ಕತೆಗೆ ವಿಶೇಷವಾದ ಸಾಮಾಜಿಕ ತಾತ್ವಿಕ ಆಯಾಮವೇನೂ ಇಲ್ಲ. ಒಂದು ಒಳ್ಳೆಯ ಕತೆಗೆ ಅದು ಇರಲೇ ಬೇಕೆಂದೇನೂ ನಿಯಮವೂ ಇಲ್ಲ. ಆದರೆ ಪದ್ಮನಾಭ ಭಟ್ ಶೇವ್ಕಾರ ಅವರ ಕೈಯಲ್ಲಿ ಎಂಥೆಂಥ ವಸ್ತುಗಳು, ಎಂಥೆಂಥ ನಿರೂಪಣೆಯಲ್ಲಿ ಮತ್ತು ಎಂಥೆಂಥ ವಿವರಗಳಲ್ಲಿ ಕತೆಯಾಗಿ ಅರಳುತ್ತವೆ ಎನ್ನುವುದನ್ನು ಗಮನಿಸಿದರೆ ಆಗುವ ಅಚ್ಚರಿ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟಿಸುತ್ತ ಹೋಗುತ್ತದೆ!

ಇನ್ನರ್ಧ
ಈ ಕತೆಯನ್ನು ಸೀಮಿತ ನೆಲೆಯಲ್ಲಿ ಜಯಂತ ಕಾಯ್ಕಿಣಿಯವರ ‘ಬಕುಲಗಂಧ’ ಕತೆಯೊಂದಿಗಿಟ್ಟು ನೋಡಬೇಕೆನಿಸುತ್ತದೆ. ಎರಡೂ ಕತೆಗಳು ನಡೆಯುವುದು ಆಸ್ಪತ್ರೆಯಲ್ಲಿ. ಜಯಂತರ ಕತೆಯ ಎರಡೂ ಪ್ರಧಾನ ಪಾತ್ರಗಳೂ ರೋಗಿಗಳೇ; ಕತೆಯ ನಿರೂಪಣೆ ಮಾತ್ರ ಶಶಾಂಕನ ಪ್ರಜ್ಞೆಯ ಮೂಲಕ ನಡೆದಿದೆ. ಪದ್ಮನಾಭರ ಕತೆಯಲ್ಲಿ ತಾಯಿ ಚಿಕಿತ್ಸೆಯಲ್ಲಿರುವಾಕೆ, ಮಗ ನೋಡಿಕೊಳ್ಳಲು ಬಂದಿದ್ದಾನೆ; ಕತೆಯ ನಿರೂಪಣೆ ಮಗನ ಪ್ರಜ್ಞೆಯ ಮೂಲಕ ಸಾಗುತ್ತಿದೆ. ಕೆಲವೊಂದು ವಿವರಗಳು, ಆಸ್ಪತ್ರೆಯ ನಡಾವಳಿಗಳು, ವಾರ್ಡು, ವಿಚಿತ್ರವಾದ ಪಾತ್ರ ನಿರ್ವಹಿಸುವ ಲಿಫ್ಟು(!) - ಇವುಗಳತ್ತ ವಿಶೇಷ ಗಮನ ಹರಿಸಿದರೆ, ಒಂದು ಸಣ್ಣಕತೆಯ ನಿರೂಪಣೆಯಲ್ಲಿ ಕತೆಗಾರ ಎಲ್ಲಿ ಯಾವ ವಿವರವನ್ನು ಹೇಗೆ ತರಬೇಕು ಎನ್ನುವುದರತ್ತ ಒಂದು ಹೊಳಹು ಸಿಗುತ್ತದೆ. ಜಯಂತರ ಕತೆಗಳಲ್ಲಿ ಆಸ್ಪತ್ರೆ ಮತ್ತೆ ಮತ್ತೆ ಬರುತ್ತದೆ. ಅಶೋಕ ಹೆಗಡೆಯವರ ‘ಕೈ ಹಿಡಿದವರು’ ಕತೆ ನಡೆಯುವುದು ಆಸ್ಪತ್ರೆಯಲ್ಲಿ. ಸಂದೀಪ ನಾಯಕರ ‘ಕರೆ’ ಕತೆ ಕೂಡ ಆಸ್ಪತ್ರೆಯ ಮಂಚದ ಮೇಲೆ ಸಾವಿನ ಮತ್ತು ದಯಾನಂದನ ನಿರೀಕ್ಷೆಯಲ್ಲಿರುವ ಮೋನಪ್ಪನ ಸುತ್ತ ಇದೆ. ಈ ಕತೆ ಕೇವಲ ಆಸ್ಪತ್ರೆಯ ಪರಿಸರವನ್ನು ಅದು ಉದ್ದೀಪಿಸಬಲ್ಲ ಭಾವನಾತ್ಮಕ ಸಂವೇದನೆಗಳಿಗಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ‘ಛದ್ಮವೇಷ’ ಕತೆಯಲ್ಲಿನ ಸಾಂಸಾರಿಕ ಬಿಕ್ಕಟ್ಟು ಮತ್ತು ಸ್ತ್ರೀಮತದ ಪ್ರಶ್ನೆಗಳೇ ಇಲ್ಲಿಯೂ ಇರುವಂತಿದೆ. ಆದರೆ ಯಾವತ್ತಿನಂತೆ ಪದ್ಮನಾಭ ಅವರು ಯಾವುದನ್ನೂ ಹೈಲೈಟ್ ಮಾಡುವುದಿಲ್ಲ. ಅಷ್ಟರಮಟ್ಟಿಗೆ ಕತೆಯ ಒಡಲಿನೊಳಗೆ ಅಷ್ಟಿಷ್ಟು ಸೀಟು ಪಡೆದು ಕೂತ ಎಲ್ಲ ಪಾತ್ರಗಳೂ, ವಿವರಗಳೂ ಮುಖ್ಯ ಮತ್ತು ಅಮುಖ್ಯ. ಬದುಕು ಇರುವುದು ಹಾಗೆ ಮತ್ತು ನಾವದನ್ನು ಹಾಗೆಯೇ ನೋಡುವ ಎನ್ನುವಂತಿದೆ ಎಲ್ಲ.

ಆದರೆ ಇಲ್ಲಿ ದಕ್ಕಿದ ಒಂದು ಆಕೃತಿಯ ಒಳಗಿನ ನೋಟ ಮಾತ್ರ ಕತೆಗಾರ ಪ್ರಜ್ಞಾಪೂರ್ವಕ ‘ಆಯ್ದ’ ನೋಟವೇ ಎನ್ನುವುದನ್ನು ಮರೆಯಲಾಗದು. ಹಾಗಾಗಿ, ಎಲ್ಲ ಒಪ್ಪಿಕೊಂಡ ಮೇಲೂ ಒಟ್ಟು ಆಕೃತಿಯ ಆಶಯ ಓದುಗನ ಹುಡುಕಾಟದಿಂದ ತಪ್ಪಿಯೇ ಹೋಗುವ ವಿಚಾರವಾಗುಳಿಯುವುದಿಲ್ಲ. ಈ ನಿಟ್ಟಿನಿಂದ ಕತೆಯನ್ನು ಹೇಳುವ ಕಲೆಯ ಅಧ್ಯಯನಕ್ಕೆ ಬೇಕಾಗಿಯೂ ಈ ಕತೆಯಲ್ಲಿ ಅಂಥ ವಿಶೇಷವಾದ ವಸ್ತು-ಆಶಯ ಕಣ್ಣಿಗೆ ಬೀಳುವುದಿಲ್ಲ.

ಬಾಂದಳದ ಮಿಂಚು
ಮೇಲಿನ ಕತೆಗೆ ಹೇಳಿದ ಅದೇ ಮಾತನ್ನು ಇಲ್ಲಿಯೂ ಹೇಳಬೇಕೆನಿಸುತ್ತದೆ. ಇನ್ನೇನು ಮಗು ಆಗುವ ಸಾಧ್ಯತೆಯ ಗಡಿರೇಖೆಯನ್ನು ದಾಟಲಿದ್ದೇವೆ ಎನ್ನುವಂಥ ವಯಸ್ಸಿಗೆ ಹತ್ತಿರವಿರುವ ಗಂಪಣ್ಣ-ಕಮಲಿಯ ಸಂಸಾರಕ್ಕೆ ಪಕ್ಕದ ಮನೆಯ ಪುಟ್ಟ ಶೃವಂತ್ ಮತ್ತು ಊರಿಗೇ ತಾಯಿಯಂತಿರುವ ಸಾವಿತ್ರಜ್ಜಿ ಒದಗಿಸುವ ಪರಿಪ್ರೇಕ್ಷ್ಯ ದೊಡ್ಡದು. ಉಳಿದಂತೆ ಇವರ ಕತೆ ಸರಸ-ಸರಸಿ ಲಯದಲ್ಲಿಯೇ ಸಾಗುತ್ತ ಮನಸ್ಸಿಗೆ ಮುದ ನೀಡುತ್ತ ರಂಜಿಸುವುದರಾಚೆ ಏನನ್ನೂ ಮಾಡುತ್ತಿಲ್ಲ. ಇಲ್ಲಿರುವುದು ಅದೇ ‘ಕ್ಷುಲ್ಲಕ ದೈನಂದಿನ’ವೇ. ಆದರೆ ಇದರ ಆಳದಲ್ಲೊಂದು ನೋವಿದೆ, ಅದನ್ನು ನಾನು ನಿಮಗೆ ಹೇಳುವುದಕ್ಕೆ ಮತ್ತು ನೀವದನ್ನು ಕೇಳುವುದಕ್ಕೆ ಈ ಹಾದಿಯಾಗಿ ಬನ್ನಿ ಎನ್ನುವಲ್ಲಿ ಈ ಕತೆಯ ಸಂಪನ್ನತೆ ಇರುವುದರಿಂದ, ಇದೂ ನಿರೂಪಣೆಯ ಲಯವಿನ್ಯಾಸ ಮುಖ್ಯವಾಗಿರುವ ಕತೆಯೇ.

ಕತೆ
‘ಬೆಳಕು ಬಿಡಿಸಿದ ಚಿತ್ರ’ ಕತೆಯ ಸಂದರ್ಭದಲ್ಲಿ ಹೇಳಿದಂತೆ ಇಲ್ಲಿರುವುದು ಅಪ್ಪನ ವಿವಾಹೇತರ ಸಂಬಂಧಗಳು ಮತ್ತು ಮಗನ ಉದ್ಯೋಗದ ಪ್ರಶ್ನೆ - ಎರಡರ ಹಿನ್ನೆಲೆಯಲ್ಲಿ ‘ಅಪ್ಪ-ಮಗ’ ಸಂಬಂಧವೊಂದು ಪ್ರಶ್ನಿಸಲ್ಪಡುವ ಪ್ರಕ್ರಿಯೆ. ಅಶೋಕ ಹೆಗಡೆಯವರ ಕತೆಯಲ್ಲಿ ಜೀಪು ಓಡಿಸುವ ಒಂದು ಸ್ಪರ್ಧೆಯ ಪ್ರಸಂಗ ಬರುತ್ತದೆ. ಇಲ್ಲಿ ಕೃಷಿ ಅಂಥದೇ ಸ್ಪರ್ಧೆಯನ್ನು (ಜಿದ್ದು) ಏರ್ಪಡಿಸಿದಂತಿದೆ. ತಂದೆ ತಾಯಿಗೆ ವಿದ್ಯಾವಂತನಾದ ಮಗ ಎಲ್ಲರಂತೆ ಪಟ್ಟಣ ಸೇರಿ ಹೇಳಿಕೊಳ್ಳಬಹುದಾದ ಒಂದು ಉದ್ಯೋಗ-ಹುದ್ದೆ ಹಿಡಿಯಲಿ ಎಂಬ ಆಸೆ ಇರುವಂತಿದೆ. ಆದರೆ ಮಗನಿಗೆ ಕೃಷಿಯನ್ನು ನೆಚ್ಚಿಕೊಂಡು ಹಳ್ಳಿಯಲ್ಲೇ ಇರಬೇಕೆಂಬ ಆದರ್ಶ ಇದೆ. ಆದರೆ ಇಬ್ಬರ ನಿಜ ಮರ್ಜಿ ಬೇರೆಯೇ ಇರಬಹುದಾದ ಸಾಧ್ಯತೆ ಕೂಡ ಇಲ್ಲಿದೆ. ಯಾವ ತಂದೆ ತಾಯಿಗೆ ತಾನೆ ಮಗ ಹತ್ತಿರದಲ್ಲೇ ಇರುವುದು ಬೇಡವಾಗುತ್ತದೆ? ಹಾಗೆಯೇ ಮಗನಿಗೆ ತನ್ನ ಆದರ್ಶ ‘ದೂರದ ಬೆಟ್ಟ’ ಇರಬಹುದೇ ಎಂಬ ಅನುಮಾನಗಳಿವೆ. ಈ ದ್ವಂದ್ವದ ಬೆನ್ನಲ್ಲೇ ಅಪ್ಪನ ವಿವಾಹೇತರ ಸಂಬಂಧವೊಂದರ ಹೊಳಹುಗಳಿವೆ. ಅದು ಅಪ್ಪ ಮಗನ ನಡುವಿನ ಹಲವು ಪ್ರಶ್ನೆಗಳನ್ನು ಮೌನದಲ್ಲೇ ಕೇಳಿಕೊಂಡು ಮೌನದಲ್ಲೇ ಉತ್ತರ ಕೊಟ್ಟುಕೊಳ್ಳುವ ಪ್ರಯತ್ನ ನಡೆಸಿದಂತೆಯೂ ಇದೆ. ಇಲ್ಲಿ ಪದ್ಮನಾಭ ಅವರು ನಿರೂಪಣೆಗೆ ಬಳಸಿದ ತಂತ್ರ ಗಮನಿಸಬೇಕಾದ್ದು. ಮಧುಕರನ ಗೆಳತಿ ತೇಜುಗೆ ಬರೆದ ಒಂದು ಪತ್ರದ ಮೂಲಕವಷ್ಟೇ, ಲಿಖಿತ ಭಾಷೆಯ ಮೂಲಕವಷ್ಟೇ ಹೇಳಬಹುದಾದ ಅಂತರಂಗದ ಮಾತುಗಳು ಇಲ್ಲಿ ಬರುತ್ತವೆ. ಬಹುಶಃ ಇದನ್ನು ಮನೋಗತದ ಮಾತುಗಳಾಗಿ ಬರೆದಿದ್ದರೆ ಮಧುಕರ ಅಷ್ಟು ನಿಜವಾಗುತ್ತಿರಲಿಲ್ಲವೇನೊ. ಅಲ್ಲದೆ ಅಪ್ಪನ ಪ್ರೇಮಕ್ಕೆ ಇದು ಯಾವುದೋ ನಿಟ್ಟಿನಿಂದ ಒಂದು ಪರಿಪ್ರೇಕ್ಷ್ಯವನ್ನೂ ಒದಗಿಸಿದಂತಾಗುತ್ತದೆ ಎನ್ನುವುದೂ ಸುಳ್ಳಲ್ಲ. ಜಯಂತರ ಕತೆಯಲ್ಲಿಯೂ, ಉದ್ದೇಶ ಏನೇ ಇರಲಿ, ನಿರೂಪಕ ಸಹೋದ್ಯೋಗಿಯೊಬ್ಬಳ ಜೊತೆ ತನ್ನ ವ್ಯವಹಾರ ಕೈಮೀರಿದೆ ಎಂದು ಬಹಿರಂಗ ಪಡಿಸುತ್ತಾನೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕೇಪಿನ ಡಬ್ಬಿ
‘ಕೇಪಿನ ಡಬ್ಬಿ’ ಕತೆಯ ಹೆಸರೇ ಹೇಳುವಂತೆ ಇದು ಬಾಲ್ಯದ ಸ್ಮೃತಿಗಳ ಮೂಲಕ ತನ್ನ ವಸ್ತುವನ್ನು ನಿರೂಪಿಸುವ ಕತೆ. ನಿರೂಪಕ ಪ್ರಜ್ಞೆ ಕೂಡ ಮುಗ್ಧ ಬಾಲಕನದ್ದೇ. ಆದರೆ ವಿಷಯ ಕುಟುಂಬದ ಆಸ್ತಿಯ ಹಂಚಿಕೆಯಲ್ಲಾಗುವ ಸೂಕ್ಷ್ಮ ಅನ್ಯಾಯಗಳ, ಸಂಬಂಧದಲ್ಲೇ ನಡೆಯುವ ಹುನ್ನಾರಿನ ಅರಿವು ತಡವಾಗಿ ಗಮನಕ್ಕೆ ಬಂದ ತಂದೆ-ತಾಯಿಯರ ನೋವು, ಅವಮಾನ, ಸ್ವಾಭಿಮಾನ ಮತ್ತು ಭವಿಷ್ಯದ ಕುರಿತ ಆತಂಕಗಳ ಕುರಿತಾದ್ದು. ಅತ್ತೆಮನೆಗೆ ಹೋದವ, ಅಲ್ಲೊಂದು ಕೇಪಿನ ಡಬ್ಬಿ ಕಂಡು, ಆಸೆಪಟ್ಟು ಕಿಸೆಗೆ ಇಳಿಸಿದ್ದೇ ತಪ್ಪಾಯಿತು. ಅತ್ತೆ ಅದನ್ನು ಅಪ್ಪನ ಬಳಿ ಚಾಡಿ ಮಾಡಿ ಹೊಡೆಸಿದ್ದೂ ಅಲ್ಲದೆ ಅಪ್ಪ ಅದನ್ನು ಈಗಲೇ ಪರತ್ ಕೊಟ್ಟು ಬಾ ಎಂದು ವಿಧಿಸಿದ್ದಾನೆ. ಆದರೆ ಪರತ್ ಕೊಡಲು ಬಂದವನಿಗೆ ಅತ್ತೆ ಅದೊಂದು ವಿಷಯವೇ ಅಲ್ಲವೆಂಬಂತೆ ನೀನೇ ಇಟ್ಕೊ ಎಂದಿದ್ದಾಳೆ. ಇವನು ಮಳೆಯಲ್ಲೇ ಅತ್ತೆ ಮನೆ ತನಕ ಹೋಗಿ ವಾಪಾಸು ಬರುವ ಅವಧಿಯ ಕತೆಯಿದು. ಬಾಲಕನ ಚೂರು ಪಾರು ನೆನಪುಗಳು, ಅಪ್ಪ-ಅಮ್ಮ-ಅತ್ತೆ-ಮಾವ ಮತ್ತು ಗಜುಬಾವ ಆಡಿದ್ದು, ಮಾಡಿದ್ದು ಎಲ್ಲ ಸೇರಿ ಚಿತ್ರ ಪೂರ್ತಿಯಾಗಬೇಕಿದೆ. ಇಲ್ಲಿಯೂ ಕೇಪಿನಡಬ್ಬಿಯ ವಿಲೇವಾರಿ ಒಂದು ಸಾಮಾನ್ಯ ಸಂಗತಿ ಅಲ್ಲ ಮತ್ತು ಹೌದು!

‘ಲಂಗರು’ ಕತೆಯಲ್ಲಿ ವಿವೇಕ ಶಾನಭಾಗ ಸರಿಸುಮಾರು ಇಂಥದೇ ವಸ್ತುವನ್ನು ನಿಭಾಯಿಸಿರುವ ರೀತಿಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಮಾತು ಮುಗಿಯುವ ಮೊದಲು
ಈ ಕತೆ ಕೂಡ ಬಾಲ್ಯ-ಹರೆಯದ ಒಂದು ಸ್ಮೃತಿಯ ಮೇಲೆ ನಿಂತಿದೆ. ಐದನೆಯ ಕ್ಲಾಸಿನಿಂದ ಹತ್ತನೆಯ ಕ್ಲಾಸಿನ ತನಕದ ಐದು ವರ್ಷಗಳ ಕಾಲ ಮಹೇಶ ಎಂಬ ಈ ಹುಡುಗ ತನ್ನ ಚಿಕ್ಕಿಯ ಮನೆಯಲ್ಲಿ ನಿಂತು ಕಲಿಯುತ್ತಾ ಸ್ವತಃ ಚಿಕ್ಕಿ ಮತ್ತು ಆಕೆಯ ಮಗ ಚಂದ್ರಣ್ಣನಿಂದ ಸತತ ಹಂಗಿಸುವಿಕೆ, ಬಳಸಿಕೊಳ್ಳುವುದು, ಹೀಗಳೆಯುವುದು ಇತ್ಯಾದಿಗಳನ್ನು ಅನುಭವಿಸುತ್ತ ತನ್ನ ಸಹಜ ಬೆಳವಣಿಗೆಯನ್ನೇ ಮರೆತು ಕುಗ್ಗುತ್ತಾ ಕುಗ್ಗುತ್ತಾ ದಿನ ಕಳೆದಿದ್ದರ ನೆನಪುಗಳು ಇಲ್ಲಿ ತುಂಬಿವೆ. ವರ್ತಮಾನದಲ್ಲಿ ಚಂದ್ರಣ್ಣ ಸೋತಿದ್ದಾನೆ. ಯಾವುದೋ ಹುಡುಗಿಯ ಮೋಹಕ್ಕೆ ಬಿದ್ದು, ಓದನ್ನು ಕಡೆಗಣಿಸಿ, ಹೆತ್ತವರಿಗೂ ತಲೆನೋವಾಗಿ ಬಿಟ್ಟಿದ್ದಾನೆ. ಮಹೇಶ ಒಂದೊಂದಾಗಿ ಯಶಸ್ಸಿನ ಮೆಟ್ಟಿಲನ್ನೇರಿ ಹುಡುಗ ಆಗಬಹುದು ಎನಿಸಿಕೊಂಡಿದ್ದಾನೆ. ಆದರೆ ಐದು ವರ್ಷಗಳ ಬದುಕು ಅವನನ್ನು ರೂಪಿಸಿದ ಬಗೆ, ಚಂದ್ರಣ್ಣ ಮತ್ತು ಚಿಕ್ಕಿಯ ಕುರಿತ ಅವನ ಮನೋಧರ್ಮ ಉದಾರವಾಗಲು ಸೋಲುವಂತೆ ಒತ್ತಾಯಿಸುತ್ತಿದೆ.

"ಇಷ್ಟೆಲ್ಲ ಸುದ್ದಿ ತಿಳಿದಿದ್ದರೂ ನನಗೆ ಎಂದೂ ಚಂದ್ರಣ್ಣ ಪಾಪ ಅನ್ನಿಸಿರಲೇ ಇಲ್ಲ. ಅವನ ಬಗ್ಗೆ ಯೋಚಿಸುವಾಗಲೆಲ್ಲ ಅವನಿಂದ ನಾನು ತಿಂದ ಒಂದೊಂದು ಯಾತನಾಮಯ ಕ್ಷಣಗಳೂ ಹೂಂಕರಿಸಿ ಮನದಲ್ಲಿ ರೋಷ ತುಂಬಿಹೋಗುತ್ತಿತ್ತು. ಈಗ ಚಂದ್ರಣ್ಣ ಫೋನ್ ಮಾಡಿದಾಗ ಬಂದ ನಗುವೂ ಅದರ ಪ್ರತಿಫಲವೇ ಆಗಿತ್ತೇನೊ.
"ಯೋಚಿಸಿದಷ್ಟೂ ಅವನಿಗೆ ಸಹಾಯವಾಗಲಿ, ಸಮಾಧಾನವಾಗಲಿ ಕೊಡಲು ಒಪ್ಪದೇ ಮನ ಸೆಟೆದು ನಿಲ್ಲುತ್ತಿತ್ತು. ಇಷ್ಟೇ ಸಾಲದು ಇನ್ನೂ....ಇನ್ನೂ ಆಗಲಿ ಎಂದು ಚೀರುತ್ತಿತ್ತು." (ಪುಟ 121)

ಈಗ ನಾವು ಮತ್ತೆ ‘ಚೇಳು ಕಚ್ಚಿದ ಗಾಯ’ ಕತೆಯಲ್ಲಿ ಬರುವ ಉರಿಯ ಕುರಿತ ಮಾತುಗಳನ್ನು ನೆನಪಿಸಿಕೊಳ್ಳಬಹುದು. ಕತೆ ನಿರೀಕ್ಷೆಯಂತೆ ಔದಾರ್ಯ, ಪ್ರೀತಿ ಮತ್ತು ಮಾರ್ದವದ ಸೆಲೆ ಹೃದಯದಲ್ಲಿ ಅರಳುವುದರೊಂದಿಗೇ ಮುಗಿಯುತ್ತದೆ ಎಂದು ಹೇಳಲೇ ಬೇಕಿಲ್ಲ ಎನಿಸುತ್ತದೆ.

ಇಲ್ಲದ ತೀರದ ಕಡೆಗೆ...

ಈ ಕತೆ ಕೂಡ ತಪ್ಪದೇ ನೆನಪಿಸುವ ಕತೆ ಜಯಂತರ ‘ಸುಗ್ಗಿ’. ಆ ಕತೆಯ ಬಗ್ಗೆ ಈಗಾಗಲೇ ಹೇಳಿಯಾಗಿರುವುದರಿಂದ ಮತ್ತೊಮ್ಮೆ ವಿವರಿಸುವ ಅಗತ್ಯವಿಲ್ಲ. ಊರಿಗೆ ಬಂದ ಒಂದು ಟೀವಿ ಚಾನೆಲ್ಲಿನವರ ರಿಯಾಲಿಟಿ ಷೋನ ಚಿತ್ರೀಕರಣ ತಂಡಕ್ಕೆ ಏನಾದರೂ ಕೆಲಸ ಮಾಡಿಕೊಟ್ಟರೆ ಊರಿನ ಧನಿ ಶಂಭಟ್ಟ ಕೊಡುವುದಕ್ಕಿಂತ ಹೆಚ್ಚು ಹಣ ಕೊಡುತ್ತಾರೆ ಎನ್ನುವುದೇ ಮೂಲವಾಗಿ ಹಣ ಮಾಡುವುದರಲ್ಲಿ ಕೊಂಚ ಬುರ್ನಾಸು ಎನಿಸಿಕೊಂಡ, ದುಡಿಯಲು ಹೋಗದೆ ಕಲಿಯಲು ಶಾಲೆಗೆ ಹೋದ ಗಂಪು ತನ್ನ ಹುಡುಗಿ ಜಾನಕಿಯನ್ನು ಮೆಚ್ಚಿಸಲು ಈ ಚಿತ್ರೀಕರಣ ತಂಡ ಇರುವಲ್ಲಿಗೆ ಹೋಗುತ್ತಾನೆ. ಸುಗ್ಗಿ ಕುಣಿತಕ್ಕೆ ತಂಡ ಕಟ್ಟಿಕೊಂಡು ಕಾರವಾರಕ್ಕೆ ಹೋದ ತುಕಾರಾಮ ಮಾಸ್ತರರ ಹಾಗೆಯೇ ಅಲ್ಲಿ ಗಂಪು ಮತ್ತು ಜಾನಕಿ ಹೈರಾಣಾಗುತ್ತಾರೆ. ಹಣವೇನೊ ಸಿಗುತ್ತದೆ, ಆದರೆ ಅದರ ಜೊತೆಗೇ ಅವರು ಕೆಲವು ಪಾಠಗಳನ್ನೂ ಕಲಿಯುತ್ತಾರೆ.

ನಾನಿಲ್ಲಿ ಉದ್ದೇಶಪೂರ್ವಕ ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಅಶೋಕ ಹೆಗಡೆ ಮುಂತಾಗಿ ಕೆಲವರ ಕತೆಗಳನ್ನು ಪದ್ಮನಾಭ ಭಟ್ ಅವರ ಕತೆಗಳೊಂದಿಗೆ ಜೊತೆ ಜೊತೆಯಾಗಿ ಇಟ್ಟು ನೋಡಿದ್ದನ್ನು ಉಲ್ಲೇಖಿಸಿದ್ದೇನೆ. ಪದ್ಮನಾಭ ಅವರ ಕತೆಗಳು ವಸ್ತು, ತಂತ್ರ, ನಿರೂಪಣೆ ಮತ್ತು ವಿವರಗಳೆಲ್ಲದರಲ್ಲೂ ಸುಸ್ಪಷ್ಟವಾಗಿ ತಮ್ಮದೇ ಸ್ವಂತಿಕೆಯಿಂದ ಮೆರೆಯುತ್ತಿವೆ ಎನ್ನುವುದನ್ನು ನಾನು ಮರೆತಿಲ್ಲ. ಆದಾಗ್ಯೂ ಈ ಹಂತದಲ್ಲಿ ಪದ್ಮನಾಭ ಭಟ್ ಶೇವ್ಕಾರ ಅವರ ಪುಸ್ತಕವನ್ನು ಕೈಯಲ್ಲಿ ಹಿಡಿದೇ ಈ ನೆವದಲ್ಲೇ ಒಂದು ಮಾತನ್ನು ಹೇಳಿಬಿಡಬೇಕು ಎಂದು ತೀವ್ರವಾಗಿ ಅನಿಸುತ್ತಿದೆ. ಇದಕ್ಕೂ ಪದ್ಮನಾಭ ಭಟ್ ಅವರಿಗೂ ತಥಾಕಥಿತ ಸಂಬಂಧ ಇಲ್ಲದಿದ್ದರೂ ಇಲ್ಲಿಯೇ ಹೇಳುತ್ತಿರುವುದಕ್ಕೆ ಪದ್ಮನಾಭ ಭಟ್ ಅವರ ಕ್ಷಮೆಯಾಚಿಸುತ್ತೇನೆ.

ಉತ್ತರ ಕನ್ನಡ ನಮಗೆ ಅತ್ಯಂತ ಸೂಕ್ಷ್ಮಸಂವೇದನೆಯ ಮತ್ತು ಭಾಷೆಯನ್ನು ವಿಶೇಷ ಕಾಳಜಿಯಿಂದ ಬಳಸುವ ವಿಶಿಷ್ಟ ಕತೆಗಾರರನ್ನು ಕೊಟ್ಟಿದೆ. ಬಹುಶಃ ಇವರುಗಳೇ ಮೊತ್ತಮೊದಲಿಗೆ ಸಣ್ಣಕತೆಯನ್ನು ಕಾವ್ಯದ ಹದಕ್ಕೆ ತಂದು, ಕಥಾನಕದ ಅನಿವಾರ್ಯ ಹಂಗಿನಿಂದ ಅದನ್ನು ಬಿಡುಗಡೆಗೊಳಿಸಿ, ಸುದೀರ್ಘ ಕಾಲಘಟ್ಟದ ಅಥವಾ ಹೆಚ್ಚು ಸಂಕೀರ್ಣವಾದ ಕಥಾನಕದಿಂದ ಮಾತ್ರ ಜೀವನಾನುಭವದ ಸಂವಹನ ಸಾಧ್ಯ ಎಂಬ ಭ್ರಮೆಯಿಂದಲೂ ಅದನ್ನು ಮುಕ್ತಗೊಳಿಸಿ, ಮನಸ್ಸು ಮತ್ತು ಬುದ್ಧಿಯ ಸಂವೇದನೆಗಳನ್ನು ಸಂತುಲನದಲ್ಲಿ ಮೀಟಬಲ್ಲ ವಿವರಗಳನ್ನು, ನೆನಪುಗಳನ್ನು, ಚಿತ್ರಗಳನ್ನು ಒಂದು ಹದದಲ್ಲಿ ಪಾಕವಾಗಿಸಬಲ್ಲ ನೇಯ್ಗೆ ಭಾಷೆಗೆ ದಕ್ಕಿದರೆ ಹಾಗೆಯೇ ನಿಂತು ಹೋದ ಒಂದು ಮೌನ ಕ್ಷಣ ಕೂಡ ಅತ್ಯುತ್ತಮ ಸಣ್ಣಕತೆಗೆ ಸಾಕು ಎಂಬ ಭರವಸೆಯನ್ನು ಮೂಡಿಸಿದವರು ಎನಿಸುತ್ತದೆ. ಈ ಅಭಿಪ್ರಾಯಕ್ಕೆ ಅಪವಾದಗಳಿರಬಹುದು, ಅದು ಬೇರೆ ವಿಷಯ. ಆದರೆ ವಿಪುಲವಾಗಿ ಇದನ್ನೇ ಮಾಡಿದವರು ಉತ್ತರ ಕನ್ನಡದ ಕತೆಗಾರರೇ. ಕಾರಂತ,ಕುವೆಂಪು,ಗೊರೂರು,ಮಾಸ್ತಿ,ಆಲನಹಳ್ಳಿ,ದೇವನೂರ,ತೇಜಸ್ವಿ ಮುಂತಾದವರ ವಿಶಿಷ್ಟವೂ, ಅಪೂರ್ವವೂ ಆದ ಜೀವನಾನುಭವಕ್ಕೆ ಎರವಾದ ಜೀವನಶೈಲಿಯ ಆಧುನಿಕ ತಲೆಮಾರಿನ ಕತೆಗಾರನಿಗೆ ಬಹುಶಃ ಇದು ಅನಿವಾರ್ಯವೂ ಆಗಿತ್ತೇನೊ. ಆದರೆ ಹೇಗೆ ಜಾತೀಯತೆ ಅಥವಾ ಶೋಷಣೆಯನ್ನೇ ನೆಚ್ಚಿಕೊಂಡು ಬರೆದಿದ್ದು - (ಮೇಲ್ಜಾತಿಯ ಹುಡುಗಿಯನ್ನು/ವಿವಾಹಿತೆಯನ್ನು ಪ್ರೇಮಿಸುವ/ಕಾಮಿಸುವ ಶೋಷಿತವರ್ಗದ ತರುಣನನ್ನು ಬಿಟ್ಟರೆ ದಲಿತ ಸಂವೇದನೆಗೆ ಅನ್ಯ ಆಯಾಮಗಳೇ ಇಲ್ಲವೇನೊ ಎಂಬ ಮಟ್ಟಿಗೆ) ಕ್ರಮೇಣ ಕ್ಲೀಷೆಯಾಯಿತೊ, ಹೇಗೆ ಅಲ್ಲಮಪ್ರಭುವಿನ ಒಂದೆರಡು ಸಾಲುಗಳನ್ನು ಕತೆಯ ಸುರುವಿಗೇ ಕೋಟ್ ಮಾಡಿಕೊಂಡು ಮುಂದುವರಿಯುವುದು ಒಂದು ಮಾದರಿಯಾಗಿ ಬದಲಾಯಿತೊ ಹಾಗೆಯೇ ಉತ್ತರಕನ್ನಡದ ಕತೆಗಾರರು ಇವತ್ತು ಇಂಥ ಪುನರಾವೃತ್ತಿಯನ್ನು ನಿವಾರಿಸಿಕೊಂಡು ಬರೆಯಬೇಕಾದ ಸವಾಲುಗಳನ್ನು ಎದುರಿಸಲು ಸಜ್ಜಾಗದೇ ಹೋದರೆ ಅವರಿಗಾದದ್ದೇ ಇವರಿಗೂ ಆಗುತ್ತದೆ. ಅವನತಿಯ ಹಾದಿ ಹಿಡಿದ ಒಂದು ಸ್ಥಿತಿವಂತ ಕುಟುಂಬ, ದಾಯಾದಿಗಳ ಶೀತಲ ಕಲಹ, ಮದುವೆಯ ವಯಸ್ಸು ದಾಟುತ್ತಿರುವ ಹುಡುಗಿಯೊಬ್ಬಳಿರುವ-ಆಧುನಿಕತೆಗೆ ಸಜ್ಜಾಗಲು ಕೊಂಚ ಹಿಂದೆಬಿದ್ದ ಒಂದು ಮನೆ, ಆಸ್ಪತ್ರೆಯ ಚಿತ್ರ, ಬಾಲ್ಯ-ಶಾಲೆ-ಮಾಸ್ತರುಗಳ ಒಂದು ಜಗತ್ತು, ಮಗುವಿನ ಸುತ್ತ ಹೆಣೆದ ಒಂದು ಕತೆ - ಇವೆಲ್ಲ ಮತ್ತೆ ಮತ್ತೆ ಮತ್ತು ಇವರಿಂದಲೇ ಸಿಗುತ್ತಿದ್ದರೆ ಹೀಗನಿಸುವುದು ಸಹಜವಲ್ಲವೆ? ಚಿತ್ತಾಲ, ಶಾಂತಿನಾಥ ದೇಸಾಯರ ತರುವಾಯ ಬಂದ ಅಶೋಕ ಹೆಗಡೆ, ಶ್ರೀಧರ ಬಳಗಾರ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಚಿಂತಾಮಣಿ ಕೂಡ್ಲೆಕೆರೆ, ಅನುಜಯಾ ಎಸ್ ಕುಮಟಾಕರ್, ಪ್ರಕಾಶ್ ನಾಯಕ್, ಸುನಂದಾ ಪ್ರಕಾಶ ಕಡಮೆ, ಸಂದೀಪ ನಾಯಕ, ಭಾಸ್ಕರ ಹೆಗಡೆ, ಸಚ್ಚಿದಾನಂದ ಹೆಗಡೆ, ಪದ್ಮನಾಭ ಭಟ್ ಶೇವ್ಕಾರ ಇನ್ನೂ ಮುಂತಾದವರ ಕತೆಗಳನ್ನು ಸಾಲಾಗಿ ಓದಿದರೆ ಈ ಮಾತು ತೀರ ಬೇಗ ಬಂತು ಅನಿಸಲಾರದೇನೊ. ವಿವೇಕ ಶಾನಭಾಗ ಅವರು ತಾವು ಚಿತ್ತಾಲರ ಪ್ರಭಾವದಿಂದ ಬಿಡಿಸಿಕೊಳ್ಳುವುದಕ್ಕಾಗಿಯೇ ಪ್ರಯತ್ನಪೂರ್ವಕ ಅವರು ಬಳಸುವ ಕೆಲವು ಶಬ್ದಗಳನ್ನು ಬಳಸದೇ ಇರಲು ಯತ್ನಿಸಿದ್ದಾಗಿ ಹೇಳಿದ್ದರು. ಅವರು ಕಂಡ ಉತ್ತರಕನ್ನಡ ಮತ್ತು ತಾವು ಕಂಡ ಉತ್ತರಕನ್ನಡ ಒಂದೇ ಆಗಿದ್ದೂ ಬೇರೆ ಬೇರೆ ಆಗಿರುವುದು ಕೂಡ ಸಾಧ್ಯ ಎನ್ನುವುದು ಅವರಿಗೆ ಅತ್ಯಂತ ಸ್ಪಷ್ಟವಿತ್ತು. ಬಹುಶಃ ಉತ್ತರ ಕನ್ನಡದಿಂದ ಬರುತ್ತಿರುವ ಇಂದಿನ ಹೊಸ ಕತೆಗಾರರು ಮತ್ತೆ ಹೊಸಹಾದಿಯನ್ನು ಕಂಡುಕೊಳ್ಳುವ ಸವಾಲನ್ನು ಸ್ವೀಕರಿಸಲು ಇದು ಸಕಾಲ ಎನಿಸುತ್ತದೆ.

ಈ ಕಥಾಸಂಕಲನವನ್ನು ಅಂದಗಾಣಿಸಿದ ವೆಂಕಟ್ರಮಣ ಭಟ್ ಮತ್ತು ಛಂದಗಾಣಿಸಿದ ವಸುಧೇಂದ್ರ ಇಬ್ಬರನ್ನೂ ಅಭಿನಂದಿಸಲೇ ಬೇಕು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ