Tuesday, October 4, 2016

ರಸ್ತೆ ನಕ್ಷತ್ರಗಳತ್ತ ನೆಗೆಯುವ ರೆಕ್ಕೆಹಾವು

ನಾಲ್ಕು ವರ್ಷಗಳ ಹಿಂದೆ ‘ರಸ್ತೆ ನಕ್ಷತ್ರ’ ಎಂಬ ಒಂದು ಪುಸ್ತಕ ಕನ್ನಡದಲ್ಲಿ ಬಂದಾಗ ಅದು ನಿಜಕ್ಕೂ ಎಂಥಾ ಸೆನ್ಸೆಶನ್ ಹುಟ್ಟಿಸಿತ್ತೆಂದರೆ, ಅದಕ್ಕೂ ಹಿಂದಿನ ಐದಾರು ವರ್ಷಗಳಿಂದ ಹೊಸತೇ ಆದದ್ದು, ವಿಶಿಷ್ಟವಾದದ್ದು ಏನೂ ಇಲ್ಲದೆ ಜಡ್ಡುಗಟ್ಟಿ ಹೋಗಿದ್ದ ಕನ್ನಡ ಸಾಹಿತ್ಯದ ಕುಳವಾರಿಗಳನ್ನು ಅನಾಮತ್ತು ನಿದ್ದೆಯಿಂದೆಬ್ಬಿಸಿ ತಲೆಗೆ ಒಂದು ಕೊಡ ನೀರು ಸುರುವಿದಂತಾಗಿತ್ತು; ಎಂದು ಹೇಳಬಹುದಾದ ಸಂದರ್ಭ ಒದಗಬೇಕಿತ್ತು. ಆದರೆ ಹಾಗೇನೂ ಆಗಲಿಲ್ಲ ಎಂದು ಎಲ್ಲರಿಗೂ ಗೊತ್ತು. ಅಲ್ಲಿ ಟಿ ಕೆ ದಯಾನಂದ ಅವರು ‘ಇಲ್ಲಿನ ಯಾವ ಪದಗಳೂ, ಒಂದೇ ಒಂದು ಅಕ್ಷರವೂ ನನ್ನದಲ್ಲ ಎಂದು ಎದೆತಟ್ಟಿಕೊಂಡು’ ಹೇಳಿದ್ದರು. ಅವರವರ ಕತೆಯನ್ನು ಅವರವರ ಬಾಯಲ್ಲಿ ಹೇಳಿಸಿದ್ದರು ಮತ್ತು ಅದನ್ನು ಹಾಗೆಯೇ ಅಕ್ಷರದ ಜಗತ್ತಿಗೆ ಒಪ್ಪಿಸಿ ಕೈಕಟ್ಟಿಕೊಂಡು ನಿಂತಿದ್ದರು. ಆ ಕತೆಗಳಲ್ಲಿ ಸತ್ಯ ಇತ್ತು.

ಸತ್ಯಕ್ಕೆ ಬೆಚ್ಚಿ ಬೀಳಿಸುವ ಒಂದು ಗುಣ ಇರುತ್ತದೆ. ಆ ಗುಣ ಯಾಕಿರುತ್ತದೆ ಎಂದರೆ ನಾವು ಸುಳ್ಳನ್ನು ಬದುಕುತ್ತಿರುತ್ತೇವಲ್ಲ, ಹಾಗಾಗಿ. ಆದರೆ ಈ ಸುಳ್ಳನ್ನು ವಿಪರೀತ ನಂಬಿಬಿಟ್ಟರೆ ನಮಗೆ ಇನ್ನೊಬ್ಬರು ‘ಹೇಳುವ’, ‘ಕಾಣಿಸುವ’ ಸತ್ಯ ಕಾಣಿಸುವುದೇ ಇಲ್ಲ. ಆಕಾಶದಲ್ಲಿನ ನಕ್ಷತ್ರಗಳನ್ನು ಕಾಣಲು ಮರೆತ ಮನುಷ್ಯ ರಸ್ತೆಯ ನಕ್ಷತ್ರಗಳನ್ನು ಕಾಣುವ ಶಕ್ತಿ ಕಳೆದುಕೊಂಡಿರುವುದು ಸಹಜವೇ ಆಗಿದೆ. ಅಪಾರ್ಟ್‌ಮೆಂಟಿನ ಬಾಗಿಲಿನಿಂದ ಲಿಫ್ಟ್‌ನ ಬಾಗಿಲಿಗೆ ಮತ್ತು ಅಲ್ಲಿಂದ ನೇರ ಕಾರಿನ ಬಾಗಿಲಿಗೆ ಹೊಗ್ಗುವ ಆಧುನಿಕ ಮನುಷ್ಯ ಕಾರಿನಿಂದ ಇಳಿದದ್ದೇ ಇದೇ ಕ್ರಮದಲ್ಲಿ ತನ್ನ ಕಚೇರಿಯ ಎಸಿ ಕ್ಯಾಬಿನ್ ಹೊಕ್ಕು ಕೂರುತ್ತಾನೆ. ಡೋರ್ ಕ್ಲೋಸರ್ ಇರುವುದರಿಂದ ಬಾಗಿಲು ತನ್ನಿಂತಾನೇ ಮುಚ್ಚಿಕೊಳ್ಳುತ್ತದೆ. ಮತ್ತಿವನು ಕತೆ ಬರೆಯತೊಡಗಿದರೆ ತನ್ನ ಐದನೇ ವರ್ಷ ವಯಸ್ಸಿನಿಂದ ಇಪ್ಪತ್ತರೊಳಗಿನದ್ದೇ ಏನಾದರೂ ಬರೆದುಕೊಂಡಿರಬೇಕಾಗುತ್ತದೆ. ಪ್ರಸ್ತುತ ಈ ಆಧುನಿಕ ಮನುಷ್ಯನಿಗೆ ತನ್ನ ಪಕ್ಕದ ಅಪಾರ್ಟ್‌ಮೆಂಟಿನಲ್ಲಿ ಮಂದಿ ಇದ್ದಾರೆಯೇ ಇಲ್ಲವೆ ಗೊತ್ತಿಲ್ಲ, ಅವರಾಡುವ ಭಾಷೆಯೂ ಗೊತ್ತಿಲ್ಲ. ಅವನಿಗೆ ತನ್ನದೇ ಬಾಲ್ಯದ ಭಾಷೆ ಮತ್ತು ಯಾವುದಕ್ಕೆ ಏನು ಹೇಳುತ್ತಿದ್ದೆವು ಎಂಬ ಬಗ್ಗೆ ‘ಭಯಂಕರ’ ಮರೆವು ತೊಡಗಿದೆ. ಹೀಗಾಗಿ ಹೊಳೆದದ್ದು ಆಕಾಶ, ಉಳಿದದ್ದು ತಾರೆ!

ಎರಡು ವರ್ಷಗಳ ಹಿಂದೆ ಟಿ ಕೆ ದಯಾನಂದ ಅವರ ಕಥಾಸಂಕಲನ ‘ರೆಕ್ಕೆಹಾವು’ ಬಂತು. ಇಲ್ಲಿನ ಕತೆಗಳು ಕೂಡ ನಮಗೆ ಹೇಳುತ್ತಿರುವ ಸತ್ಯ ಅದೇ. ಆದರೆ ನಾವು ಬದುಕುತ್ತಿರುವ ಈ ಜಗತ್ತಿನಲ್ಲಿ ಎರಡು ಸತ್ಯಗಳಿವೆ. ಒಂದು ಸತ್ಯ. ಅದು ಇದೆ ಮತ್ತು ಅದರ ಪಾಡಿಗೆ ಅದು ಇದೆ. ನೀವದನ್ನು ಒಳಗಣ್ಣಿನಿಂದ ಮಾತ್ರ ಕಾಣಲು, ಅನುಭವಿಸಲು ಸಾಧ್ಯ. ಬಯಲು ಗೊಳಿಸುವ ಭೀತಿಯಿಲ್ಲದೆ, ನಿಮ್ಮನ್ನೇ ನೀವು ಕೇಳಿಕೊಂಡರೆ ಸಿಗುವ ಉತ್ತರಗಳಲ್ಲಿ ಅದಿರುತ್ತದೆ. ಒಬ್ಬರು ಇನ್ನೊಬ್ಬರಿಗೆ ಅದನ್ನು ಹೇಳಲಾಗದು. ಇನ್ನೊಂದು ಸತ್ಯ ಇದೆ. ಅದು ಮನುಷ್ಯ ಬಾಯಿ ಬಿಟ್ಟ ತಕ್ಷಣ ಹುಟ್ಟಿಕೊಳ್ಳುತ್ತದೆ. ಮೊದಲಿಗೆ ಇದನ್ನು ನಾವು ಕೇವಲ ಫ್ಯಾಕ್ಟ್ಸ್ ಹೇಳುತ್ತೇವೆ ಎಂದು ಹೊರಡುವವರು ಸುರು ಮಾಡುತ್ತಾರೆ. ಉದಾಹರಣೆಗೆ ನಮ್ಮ ನಿವ್ಸ್ ಚಾನೆಲ್ಲುಗಳು. ಸರಳವಾಗಿ ಹೇಳಬೇಕೆಂದರೆ ಮನುಷ್ಯ ಕತೆ ಕಟ್ಟುತ್ತಾನೆ. ತಮಾಷೆ ಎಂದರೆ ಮೊದಲನೆಯ ಸತ್ಯ ಕಂಡವರಿಗೆ ಗೊತ್ತು, ಇದು ಸತ್ಯ ಅಲ್ಲ. ಆದರೆ ನಾವೂ ನೀವೂ ಎಲ್ಲರೂ ದಿನನಿತ್ಯ ಯಾವುದು ಸತ್ಯ ಅಲ್ಲವೋ ಅದನ್ನೇ ಸತ್ಯ ಎಂದು ನಂಬುವ ಅಭ್ಯಾಸಕ್ಕೆ ಬಿದ್ದು ಮನುಷ್ಯ ಹುಟ್ಟಿದಷ್ಟೇ ಕಾಲ ಕಳೆದಿದೆ. ಅದಕ್ಕೇ Edgar Lawrence Doctorow ಎಂಬ ಅಮೆರಿಕನ್ ಕಾದಂಬರಿಕಾರ ಹೇಳಿದ್ದು, ಅಕ್ಷರ ರೂಪದಲ್ಲಿರುವುದೆಲ್ಲಾ ಫಿಕ್ಷನ್ನೇ ಅಂತ. ಈ ಕಾದಂಬರಿಕಾರ ವಾಸ್ತವ ಜಗತ್ತಿನ ಖ್ಯಾತ ವ್ಯಕ್ತಿಗಳ ಹೆಸರು ಮತ್ತು ಅವರ ಬದುಕಿನ ವಾಸ್ತವಿಕ ವಿವರಗಳ ಜೊತೆಗೆ ಸತ್ಯದ ನೆತ್ತಿ ಮೇಲೆ ಹೊಡೆದಂಥಾ ಕಲ್ಪನೆಯನ್ನು ಬೆರೆಸಿ ಕಾದಂಬರಿಗಳನ್ನು ಬರೆದು ಹುಟ್ಟಿಸಿದ ವಿವಾದಗಳು, ಕಟ್ಲೆಗಳು ಒಂದೆರಡಲ್ಲ! ಹೀಗಾಗಿ ಕತೆಗಳ ಕುರಿತೇ ಮಾತನಾಡುವುದಾದರೆ ಅದು ಸದಾ ಸುಳ್ಳಿನ ಕಂತೆಯೇ. ಎಷ್ಟು ಚೆನ್ನಾಗಿ ಸುಳ್ಳು ಹೇಳುತ್ತೀರಿ ಎನ್ನುವ ಬಗ್ಗೆ ವಿಮರ್ಶೆ ಇದೆ!

ನಮ್ಮಲ್ಲಿ ಶ್ರೀಕೃಷ್ಣ ಆಲನಹಳ್ಳಿ ಹೀಗೆ ಮಾತಿಗೆ ತೊಡಗಿದರೆ ಪುಂಖಾನುಪುಂಖ ಕತೆಗಳನ್ನು ಹೇಳಬಲ್ಲವರಾಗಿದ್ದರಂತೆ. ಹಾಗೆಂದೇ ಲಂಕೇಶರಂಥ ಸಂಪಾದಕರು ಆಲನಹಳ್ಳಿಗೆ ಬರೆಯಲಿರುವ ಕಾದಂಬರಿಗೆ ಸಂಭಾವನೆ ಕೊಡುತ್ತಿದ್ದರಂತೆ! ಹೀಗೆ ಅಡ್ವಾನ್ಸ್ ತೆಗೆದುಕೊಂಡು ಬರೆದ ಇನ್ನೊಬ್ಬ ಕನ್ನಡ ಕತೆ-ಕಾದಂಬರಿಕಾರ ಇರಲಿಕ್ಕಿಲ್ಲ. ಸ್ವತಃ ಲಂಕೇಶ್‌ಗೆ ಆ ಶಕ್ತಿ ಇತ್ತು. ಅವರು ಬರೆದ ಕತೆಗಳನ್ನು ಗಮನಿಸಿದರೆ ಅವರು ಗೊತ್ತೇ ಆಗದ ಹಾಗೆ ಕತೆಯೊಂದನ್ನು ಹೇಳಿ ಮುಗಿಸುವ ಶಕ್ತಿ ಹೊಂದಿದ್ದರು ಎನ್ನುವುದು ಅರಿವಾಗುತ್ತದೆ. ಉಳಿದಂತೆ ತೇಜಸ್ವಿ, ದೇವನೂರ ಮಹದೇವ, ಈಚಿನವರಲ್ಲಿ ಅಬ್ದುಲ್ ರಶೀದ್. ತಡವಾಗಿ (ಕತೆ) ಬರೆಯತೊಡಗಿದ ಶ್ರೀನಿವಾಸ ವೈದ್ಯರು. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿದು ಬರುವ ಸಂಗತಿ ಎಂದರೆ ಇವರೆಲ್ಲರೂ ಸಾಮಾನ್ಯ ಜನರೊಂದಿಗಿನ ತಮ್ಮ ಸಹಜ ಸಂಪರ್ಕವನ್ನು ಕಡಿದುಕೊಳ್ಳದೆ, ಅದನ್ನು ಮುಖ್ಯ ಎಂದು ಅರಿತುಕೊಂಡು, ಉಳಿಸಿಕೊಂಡು ಬಂದವರು ಎನ್ನುವುದು. ಟಿ ಕೆ ದಯಾನಂದ್ ಅವರ ಬರವಣಿಗೆ ನೋಡುವಾಗ ಆಗುವ ಒಂದೇ ಒಂದು ಅದಮ್ಯವಾದ ಖುಶಿಗೆ ಕಾರಣ ಇಷ್ಟೇ. ಈ ಖುಶಿಯನ್ನು ಹಂಚಿಕೊಳ್ಳುವುದು ಕೂಡ ಕಷ್ಟ. ಸುಮ್ಮನೇ ಈ ಸಾಲುಗಳನ್ನು ಓದಿ:

ನೂರ್ ರೂಪಾಯ್ ದುಡಿಯೋ ಅಷ್ಟರಲ್ಲಿ ಸಾಕ್ ಸಾಕಾಗ್ತದೆ - ಸರ್ದಾರ್ (ಚಾಕು ಚೂಪು ಮಾಡುವ ವೃತ್ತಿಯವ)
ಈ ಬಂಡೆಗೋಳ ಜೊತೆಯಾಗ ಬದುಕಾದು ಹೆಂಗೆ...? - ಜಕ್ಕವ್ವ (ಚಿಂದಿ ಆರಿಸುವ ಮಹಿಳೆ)
ಈ ಬೆಂಗ್ಳೂರ್ ಯಾಕಿಂಗ್ಮಾಡುತ್ತೆ - ಹೆಸರು ಬೇಡ (ಸೆಕ್ಸ್ ವರ್ಕರ್)
ನಮ್ಮ ಸೈನಿಕರು ನಮ್ಮ ಮೇಲೇ ಯುದ್ಧ ಮಾಡ್ತಾ ಇದಾರೆ...! - ಅಮ್ಮು (ಮಾಯಾಬಜಾರ್ ಸ್ಲಂ)
ಎಲ್ಲರೂ ಆಕೀಗೆ ಚಿತ್ರಹಿಂಸೆ ಕೊಟ್ಟೇ ಹುಟ್ಟಿದೀವಿ.....- ರಾಜಾಹುಸೇನ್ ಖಲಂದರ್ (ಕರಡಿ ಆಡಿಸುವವ)
ಈ ಊರು ಇನ್ನ ಅದೇನ್ ಕತೆ ಆಗ್ತದೋ...! - ಪೆರಿಯಸಾಮಿ (ಸುಟ್ಟಜೋಳ ಮಾರುವ ಶ್ರೀಲಂಕಾ ವಲಸಿಗ)
ಬೈತಾರೆ....ನಿಮ್ಮಪ್ಪಂದಾ ಜಾಗ ಅಂತಾರೆ...- ತವಮಣಿ (ಮನೆಗೆಲಸದಾಕೆ)
ಎಲ್ಲಾರ ಜೀವದ ಗೂಡನಾಗೆ ಒಂದು ಹಸಕೊಂಡಿರೋ ಹಕ್ಕಿ! - ರಾಮಯ್ಯ (ಬುಡಬುಡಿಕೆಯವ)
ಆಟೋ ಓಡಿಸಿಕೊಂಡು ಉದ್ಧಾರ ಆದವನ್ನ ತೋರಿಸಿ ಸಾರ್ - ನರಸಿಂಹರಾಜು (ಆಟೋ ಡ್ರೈವರ್)
ಒಬ್ಬೊಬ್ಬರಾಗಿ ಎಲ್ರೂ ಓಡೋಗ್ ಬುಡೋದಾ...! - ವೀರ (ಚಪ್ಪಲಿ ಹೊಲಿಯುವಾತ)
ಊರ್ ಕಡೆ ಹೋಗ್ಬೇಕು ಅಂತ ಆಸೆ ಇಲ್ಲ - ಶಂಕರ (ಭಿಕ್ಷೆ ಬೇಡುವ ಅಂಗವಿಕಲ ಬಾಲಕ)
ಹಸ ಇತ್ತು ಸೋಮಿ....ಹೆಂಡ್ರು ಆಸ್ಪತ್ರೆ ಖರ್ಚಿಗೆ ಮಾರಿಬಿಟ್ಟೆ - ಚಂದ್ರಣ್ಣ (ಬಸವ ಆಡಿಸುವಾತ)
ಮಿಲ್ಟ್ರಿಗೆ ಸೇರಿಕಂಡ್ರೆ ಒಳ್ಳೆ ಊಟ ಮಟನ್ನು ಎಲ್ಲಾ ಸಿಕ್ತೈತೆ - ಪುಟ್ಟಣ್ಣ (ಸೈಕಲ್ ಶಾಪ್ ಅಂಗಡಿಯಾತ)
ಚಿನ್ನ ತೆಗೆಯುತ್ತಿದ್ದ ಕೈಗಳು ಸಾರೂ....ಇವತ್ತು ನೋಡಿ! - ಪ್ರಸಾದ್ (ಕೆಜಿಎಫ್‌ನ ಮಲಹೊರುವವ)
ಲಿಂಗಾಯಿತನಾಗಿ ಟಾಯ್ಲೆಟ್ ತೊಳೆಯೋ ಕೆಲ್ಸ ಮಾಡ್ತಿದ್ದೀಯ - ಮಂಜು (ಮೆಜೆಸ್ಟಿಕ್ ಟಾಯ್ಲೆಟ್ ವರ್ಕರ್)
ಸತ್ತವರಿಗೂ ಖುಷಿ ಆಗಬೇಕು ಹಂಗೆ ಹಾಡು ಹೇಳಿ ಬರ್ತೀವಿ...- ಶಿವಣ್ಣ (ಸಾವಿನ ಮನೆಯ ಹಾಡುಗಾರ)
ಬಡವರೆಲ್ಲ ಸತ್ತೋಗಿಬಿಟ್ರೆ ಇವರಿಗೆ ಖುಷಿ ಆಗ್ತದೇನೋ... - ಮುರುಗನ್ (ಫುಟ್‌ಪಾತ್ ಕನ್ನಡಕ ವ್ಯಾಪಾರಿ)
ಹಾವು ಹಾವಷ್ಟೇ ಸಾರ್, ದೇವರೂ ಅಲ್ಲ ದೆವ್ವಾನೂ ಅಲ್ಲ - ಕಾರ್ತಿಕ್ (ಹಾವು ಹಿಡಿಯುವ ಹವ್ಯಾಸದ ಹುಡುಗ)
ಭಿಕ್ಷೆ ಬೇಡೋಕೆ ಮಾತ್ರೆ ತಿನ್ನಬೇಕು....ಮಾತ್ರೆ ದುಡ್ಡಿಗೆ ಭಿಕ್ಷೆ - ಅಮೀರುನ್ನೀಸಾ (ಫ್ರೂಟ್ ಮಾರ್ಕೆಟ್‌ನಲ್ಲಿ ಭಿಕ್ಷುಕಿ)
ಕಕ್ಕಸು ರೂಮೊಳಗೆ ಹಾಸಿಕೊಂಡು ಮಲಕ್ಕೋತೀನಿ - ಮುನಿಯಮ್ಮ (ಬೀದಿ ನಿವಾಸಿ)
ಕಾಡಲ್ಲೇ ಚೆನ್ನಾಗಿದ್ವಿ....ಇಲ್ಲಿ ಸಾಯೋಕೂ ಆಗದು.... - ಕಲ್ಲೇಶಪ್ಪ (ಹಕ್ಕಿಪಿಕ್ಕಿ ಸಮುದಾಯದವರು)
ಅವಳ ಮನೆಯೋರಿಗೆ ಇಷ್ಟ ಇಲ್ಲ...ಓಡೋಗಣ ಅಂತಿದೀವಿ....- ಕುಮಾರ (ಸೈಕಲ್ ಅಂಗಡಿಯ ಹಮಾಲಿ)
‘ಒಬ್ಬ ದ್ಯಾವರೂ ಹುಟ್ಟಿಲ್ಲವಾ ಭುಮ್ತಾಯ ಹೊಟ್ಯಾಗ?’ - ಸಂತೆವ್ವ ತೆಳಗೇರಿ (ದೇವದಾಸಿ)
ಸರ್ಕಾರಿ ಆಸ್ಪತ್ರೇಲಿ ಅಡ್ಮಿಟ್ ಆಗೋ ಅಷ್ಟು ಯೋಗ್ಯತೆ ಇಲ್ಲ - ರಾಮು (ಚರಂಡಿ ಮಣ್ಣು ಜಾಲಿಸಿ ಚಿನ್ನ ಸೋಸುವವ)

- ಇಲ್ಲ, ಇವು ಕತೆಗಳಲ್ಲ. ‘ರಸ್ತೆ ನಕ್ಷತ್ರ’ ಪುಸ್ತಕದ ಪರಿವಿಡಿ ಮಾತ್ರ. ಒಳಗಿನ ಪುಟಗಳಲ್ಲಿ ಮಿಡಿವ ಹೃದಯಗಳೇ ಇವೆ, ಎಚ್ಚರ, ಮಾತಿಗೆ ತೊಡಗಿದರೆ ಬಾಯಿಗೆ ಬರುತ್ತವೆ! ಹೀಗೆ ಕಿವಿಯಾಗಬಲ್ಲವರು ಕತೆಗಾರರಾಗುವ ಮನಸ್ಸು ಮಾಡಿದರೆ ಆಗ ಒಂದೊಂದು ಕೃತಿಯ ಓದೂ ಒಂದೊಂದು ಬದುಕನ್ನು ಬದುಕಿ ಬಂದ ಸಾರ್ಥಕ ಅನುಭವ ಒದಗಿಸುವ ವಸ್ತುವಾದೀತು ಮತ್ತು ಕನ್ನಡ ಕೃತಿಗಳ ಓದಿಗೆ ಅರ್ಥವಿದೆ ಎಂದು ಓದುವುದನ್ನು ಬಿಟ್ಟ ಮಂದಿ ಕೂಡ ತಿಳಿದಾರು.

ಕತೆಗಳಿಗೆ ಹೀಗೆ ಟಿ ಕೆ ದಯಾನಂದ್ ಅವರ ಬಳಿ ಕೊರತೆಯಿರಲಾರದು. ಅವರು ಭೇಟಿಯಾದ ಒಬ್ಬೊಬ್ಬರನ್ನು ನೆನೆದರೂ ಹತ್ತು ಹತ್ತು ಕತೆಗಳು ನೆನಪಾಗಬಹುದು ಅವರಿಗೆ. ಇಲ್ಲಿ ಬರುವ ಮೋಟುಬೀಡಿ ತೋಪಮ್ಮ, ಡೈನೋಸಾರ್ ತಾತ ಎಂದು ಕರೆಯಲ್ಪಡುವ ಮಚ್ಚನುಮ, ಟಕಾಟಿಕಿ ಶಂಕ್ರ, ಗಂಟೇಸಾಬರು, ಕುಟ್ರಪ್ಪ, ಪಾಪಾತ್ತಿ, ಪುರ್ರ, ಬುಲೆಟ್‍ಮಾಮ, ವಾಚ್‌ಮನ್ ಪಂಗಾಳಿ, ಡ್ರೈವರ್ ಟೋಬಿ, ಬೇಬಿಸಾಬರು, ಸೆಂಟ್ ಹನ್ಮಂತ, ಉಂತೂರವ್ವ ಒಬ್ಬೊಬ್ಬರೂ ಕಥಾಸರಿತ್ಸಾಗರರೇ! ಆದರೆ ಕನ್ನಡದ ಸಣ್ಣಕತೆಗಳ ಜಾಯಮಾನಕ್ಕೆ ತಕ್ಕಂತೆ ಅದನ್ನು ಹೇಳುವುದು ಅಷ್ಟು ಸುಲಭವೆ? ‘ಬೈಲಹಳ್ಳಿ ಸರ್ವೆ’, ‘ನಮ್ಮೂರ ರಸಿಕರು’, ‘ಹಳ್ಳಿಯ ಹತ್ತು ಸಮಸ್ತರು’ ಮುಂತಾಗಿ ಬರೆದ ಗೊರೂರು, ‘ಹಳ್ಳೀಕಾರನ ಅವಸಾನ’ ಬರೆದ ಬಿ ಚಂದ್ರೇಗೌಡ, ‘ಒಕ್ಕಲ ಒನಪು’, ‘ಮರೆತ ಭಾರತ’ ಬರೆದ ಕೇಶವರೆಡ್ಡಿ ಹಂದ್ರಾಳ ಮುಂತಾದವರೊಂದಿಗೆ ‘ನೆನಪಿನ ಹಳ್ಳಿ’ಯ ಪ್ರೊ.ಎಂ ಎನ್ ಶ್ರೀನಿವಾಸ್ ಅವರನ್ನೂ ನೆನೆಯಬೇಕು. ಇವರಲ್ಲಿ ಎಲ್ಲರೂ ಬಳಸಿಕೊಂಡ ಪ್ರಕಾರ ಕತೆ-ಕಾದಂಬರಿಗಳದ್ದಲ್ಲ. ಅವು ಪಾತ್ರ ಚಿತ್ರಣದಿಂದ ತೊಡಗಿ, ಸಣ್ಣಕತೆಗಳ ಛಾಯೆಯನ್ನೂ ಹೊಂದಿ ಸಮಾಜಶಾಸ್ತ್ರೀಯ ಅಧ್ಯಯನದ ವರೆಗೆ ವ್ಯಾಪ್ತಿಯುಳ್ಳ ಬರಹಗಳು. ಸಣ್ಣಕತೆಯ ಪ್ರಕಾರಕ್ಕೇ ಅಂಟಿಕೊಂಡರೆ ಇರುವ ಸವಾಲುಗಳು ಹೆಚ್ಚು. ಇವತ್ತು ವಸ್ತು, ಭಾಷೆ, ಆಕೃತಿ, ಕತೆಗಾರ ಅಥವಾ ಕತೆಯ ಜೀವನದೃಷ್ಟಿ/ಅದು ಸ್ಫುರಿಸುವ ಒಟ್ಟಾರೆ ಆಶಯ, ಅದರ ಸಾಮಾಜಿಕ-ತಾತ್ವಿಕ ಆಯಾಮ ಮತ್ತು ಅರ್ಥಪೂರ್ಣತೆ, ಕತೆಗಾರ ಬಳಸಿದ ತಂತ್ರ ಮತ್ತು ಅದರಲ್ಲಿ ತೋರಿದ ಪ್ರಯೋಗಶೀಲತೆ, ಕಥಾವಸ್ತು ಮತ್ತು ಕಥಾನಕ ಎರಡನ್ನೂ ನಿರೂಪಣೆಗೆ ಒಗ್ಗಿಸಿಕೊಂಡ ವಿಧಾನ, ಅಭಿವ್ಯಕ್ತಿ ತಂತ್ರಗಳೇ ಅಲ್ಲದೆ ಯಾವುದೇ ವಿಧವಾದ ಹೊಸತನ, ವೈವಿಧ್ಯ ಅಥವಾ ವೈಶಿಷ್ಟ್ಯಪೂರ್ಣತೆ - ಮುಂತಾಗಿ ಒಂದು ಕತೆಯಲ್ಲಿ ಏನೇನು ಇರಬೇಕು ಎನ್ನುವ ವಿಚಾರದಲ್ಲಿ ಹುಟ್ಟಿಕೊಂಡಿರುವ ನಿರೀಕ್ಷೆಗಳನ್ನು ಸಾರಾಸಗಟಾಗಿ ನಿರ್ಲಕ್ಷಿಸಿ ಒಬ್ಬ ಹೊಸ ಬರಹಗಾರ ಬರೆಯುವುದು ಸಾಧ್ಯವಿದೆಯೆ? ಪ್ರಸ್ತುತ ಬರೆಯುತ್ತಿರುವ ಮಂದಿಯೇ ನಾವು ಕರೆಯುವ "ಓದುಗವರ್ಗ"ದ ಶೇಕಡಾ 99ರಷ್ಟು ಭಾಗ ಇರುತ್ತ, ಅಂಥ ಓದುಗರು ಕೇವಲ ಕತೆ ಕೇಳುವ ಸೊಗಸಿಗೇ ಅವುಗಳನ್ನು ಮೆಚ್ಚುವುದು ಕಷ್ಟ. ಒಂದು ಕತೆಯ ಓದು, ಓದುಗನಿಗೆ ಓದು ನೀಡುವ ಅನುಭವ, ಅದು ಅವನಲ್ಲಿ ಉದ್ದೀಪಿಸುವ ಬೌದ್ಧಿಕ/ಭಾವುಕ ಸಂವೇದನೆ - ಹೀಗೆ ಹಲವು ಹತ್ತು ನಿರೀಕ್ಷೆಗಳಿಗೆ ಇವತ್ತಿನ ಕನ್ನಡ ಸಣ್ಣಕತೆ ಉತ್ತರಿಸುವ ಅಗತ್ಯವಿದೆ. ಈ ಸವಾಲಿನ ಅರಿವು ಟಿ ಕೆ ದಯಾನಂದ್ ಅವರಿಗೂ ಇದೆ. ಶ್ರೀಕೃಷ್ಣ ಆಲನಹಳ್ಳಿ ಕುರಿತು ಕೆ ವಿ ತಿರುಮಲೇಶ್ ಬರೆದ ಈ ಮಾತುಗಳು ಇಲ್ಲಿ ಅತ್ಯಂತ ಪ್ರಸ್ತುತ ಎನಿಸುತ್ತದೆ.

"ಆದರೆ ಕೃಷ್ಣನ ಕಾಲಕ್ಕೇ ಬಹಳಷ್ಟು ಬದಲಾದ ಕನ್ನಡದ ಓದುಗಲೋಕ ಅವನ ಕೃತಿಗಳನ್ನು ತೆಗೆದುಕೊಂಡ ಬಗೆ ಹೇಗೆ? ಈ ಎಲ್ಲಾ ಕೃತಿಗಳೂ ಜನಪ್ರಿಯವಾದವು. ಕೆಲವು ರಜತ ಪರದೆಯ ಮೇಲೆ ಮೆರೆದುವು. ಭಾರತದ ಇತರ ಭಾಷೆಗಳಿಗೆ ಅನುವಾದಗೊಂಡವು. ಗೆಂಡೆದಿಮ್ಮನ್ ಮಲೆಯಾಳಿಗಳ ನಾಲಿಗೆ ಮೇಲೂ ಕುಣಿದಾಡಿದ. ಇಷ್ಟಕ್ಕೆ ಅವನು ನೇರವಾಗಿ ಜನರನ್ನು ಮುಟ್ಟಲು ಬಯಸಿದ್ದು ಸಾರ್ಥಕವಾಯಿತೆಂದು ಹೇಳಬಹುದು. ಆದರೆ ಸಾಹಿತ್ಯ ಇಷ್ಟಕ್ಕೇ ಬಿಡುವುದಿಲ್ಲ - ತನಗೇನು ಸಂದಿದೆ ಎಂದು ನೋಡುತ್ತದೆ. ಸ್ಪಷ್ಟವಾಗಿ ಹೇಳುವುದಿದ್ದರೆ, ಕೃಷ್ಣನ ಕೃತಿಗಳು ಸಾಹಿತ್ಯ ಲೋಕಕ್ಕೆ ಕೊಟ್ಟಿರಬಹುದಾದ ಕೊಡುಗೆ ಯಾವ ರೀತಿಯದು? ಈ ಕುರಿತು ಗಂಭೀರವಾದ ಅಧ್ಯಯನ ಇನ್ನೂ ಬಂದಿಲ್ಲ.............ಕೃಷ್ಣನ ಕೃತಿಗಳನ್ನು ಅವನ ಸಾಹಿತ್ಯ ವ್ಯಕ್ತಿತ್ವದಿಂದ ಬೇರ್ಪಡಿಸಿ ಕೇವಲ ಪಠ್ಯ ವಿಮರ್ಶೆಗೆ ಒಳಗಾಗಿಸುವುದರಿಂದ ನಾವು ಕಳಕೊಳ್ಳುವುದೇ ಜಾಸ್ತಿ. ನವ್ಯ, ಸಮನ್ವಯ, ದಲಿತ-ಬಂಡಾಯ ಚಳುವಳಿಗಳ ಕಾಲಾಂತರದಲ್ಲಿ ನೋಡುವುದರಿಂದ ಕೃಷ್ಣ ಹೆಚ್ಚು ಅರ್ಥಪೂರ್ಣ ಸಾಹಿತಿಯಾಗಿ ತೋರುವುದು ಸಾಧ್ಯ."
(ಕೆ ವಿ ತಿರುಮಲೇಶ್ : ಉಲ್ಲೇಖ (2002))

ಆದರೆ ಇದನ್ನು ಸಾರಾಸಗಟಾಗಿ ತಿರಸ್ಕರಿಸಿ ಬರೆದವರು ಕೆ ಪಿ ಪೂರ್ಣಚಂದ್ರ ತೇಜಸ್ವಿ. ನವ್ಯದ ಪ್ರಭಾವಳಿಯಿಂದ ಅವರು ಹೊರಬಂದಾಗಲೂ ಅವರಲ್ಲಿ ಇಂತಹುದೇ ಒಂದು ತುಡಿತವಿತ್ತು. ತೀರ ಈಚೆಗೆ ‘ಮಾಯಾಲೋಕ’ ಬರೆದಾಗಲೂ ಅವರಲ್ಲಿ ಅಂತಹುದೇ ಉದ್ದೇಶವಿತ್ತು. ಅದನ್ನು ಅವರು ‘ಅಬಚೂರಿನ ಪೋಸ್ಟಾಫೀಸು’ ಸಂಕಲನದ ಮುನ್ನುಡಿಯಲ್ಲಿ ಸ್ಪಷ್ಟವಾಗಿ ಮತ್ತು ‘ಕರ್ವಾಲೊ’ ಕಾದಂಬರಿಯ ಮುನ್ನುಡಿಯಲ್ಲಿ ಸೂಚ್ಯವಾಗಿಯೂ ಹೇಳಿದ್ದು ಅತಿಹೆಚ್ಚು ಸಲ ಉದ್ಧೃತವಾಗಿರುವ ಮಾತೇ ಆದುದರಿಂದ ಮತ್ತೆ ಎತ್ತಿ ಹೇಳಬೇಕಾದ್ದಿಲ್ಲ. ಫಾರ್ಮ್ ಮತ್ತು ಕಂಟೆಂಟ್ ವಿಚಾರವಾಗಿ ಫಾರ್ಮನ್ನು ಮೀರಬಲ್ಲ ಕಂಟೆಂಟ್ ನಿಮ್ಮ ಬಳಿ ನಿಜಕ್ಕೂ ಇದ್ದರೆ ನೀವು ಖಂಡಿತವಾಗಿಯೂ ಫಾರ್ಮ್ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ್ದಿಲ್ಲವೇ ಇಲ್ಲ. ಆದರೆ ಕಂಟೆಂಟ್ ಸ್ಪಷ್ಟವಿಲ್ಲದ ಗ್ರಹಚಾರಕ್ಕೆ ಫಾರ್ಮ್ ಎನ್ನುವುದೊಂದು ಇಲ್ಲವೇ ಇಲ್ಲ ಎಂಬ ವಾದ ಹೂಡಿದರೆ ಅಂಥ ವಾದ ನಿಲ್ಲುವುದಿಲ್ಲ. ಇದನ್ನೆಲ್ಲ ಹೆಸರುಗಳನ್ನು ಹೇಳಿ ವಾದಿಸಿ ಸಾಧಿಸಬೇಕಾದ ದರ್ದು ಏನಿಲ್ಲ. ಸೂಕ್ಷ್ಮವಾಗಿ ಇದು ಎಲ್ಲರಿಗೂ ವೇದ್ಯವಾಗಿಯೇ ಇರುತ್ತದೆ.

ಕುತೂಹಲಕರ ಎನಿಸಿದ್ದು ಎಸ್ ದಿವಾಕರ್ ಈ ಫಾರ್ಮ್ ಮತ್ತು ಕಂಟೆಂಟ್ ಬಗ್ಗೆ ಆಡಿದ ಮಾತುಗಳು. ಅವರು ಒಂದು ದಿನ ಹೀಗೇ ಮಾತನಾಡುತ್ತ ಯಾವುದೇ ಒಂದು ಕತೆ ಅಥವಾ ಕಾದಂಬರಿಯಿಂದ ಅದರ ಫಾರ್ಮ್ ಮತ್ತು ಕಂಟೆಂಟ್ ಎರಡನ್ನೂ ತೆಗೆದು ಬಿಡಿ, ಏನು ಉಳಿಯುತ್ತೆ? ಎಂದು ಪ್ರಶ್ನೆಯನ್ನೆಸೆದು ತುಂಟ ನಗುವಿನೊಂದಿಗೆ ಗಮನಿಸತೊಡಗಿದರು. ನಂತರ ಅವರಿಗೆ ಇಷ್ಟವಾದ ಸಂಗೀತಕ್ಕೆ ಬಂದರು. ಅಲ್ಲಿ ನೋಡಿ, ಫಾರ್ಮ್ ಎನ್ನುವುದೇ ಅದರ ಕಂಟೆಂಟ್ ಕೂಡ ಆಗಿದೆ, ಗಮನಿಸಿದ್ದೀರಾ ಎಂದರು. ಒಂದು ಉತ್ತಮ ಕಲೆ ಹಾಗೆ, ಫಾರ್ಮ್ ಮತ್ತು ಕಂಟೆಂಟ್ ಎರಡೂ ಒಂದೇ ಆಗುವ ತುಡಿತ ಇಟ್ಟುಕೊಂಡಿರುತ್ತೆ, ಅದಕ್ಕೇ ಸಂಗೀತ ಎನ್ನುವುದು ಪ್ಯೂರ್ ಆರ್ಟ್ ಎಂದೆಲ್ಲ ವಿವರಿಸುತ್ತ ಹೋದರು. ಅವರು ಈಚೆಗೆ ಬರೆದ ‘ಮಧುವಂತಿ’ ಎನ್ನುವ ಪ್ರಬಂಧವೊಂದರಲ್ಲಿ ಇದನ್ನೇ ವಿವರಿಸಿದ್ದಾರೆ.

"ಸಂಗೀತದ ವಿಷಯ ಹಾಗಲ್ಲ. ಅದು ಬುದ್ಧಿಯ ಯಜಮಾನಿಕೆಯನ್ನು ಬದಿಗೊತ್ತಿ ನೇರವಾಗಿ ಹೃದಯದ ಜೊತೆಗೇ ಮಾತಾಡಬಲ್ಲದು. ಅದರ ಭಾಷೆ ನಾವು ನೀವು ಆಡುವ, ಬರೆಯುವ ಭಾಷೆಯಲ್ಲ. ಅದು ವಾಚಾಮಗೋಚರ (ಮಾತಿಗೆ ಗೋಚರವಾಗದ್ದು); ಅನಿರ್ವಚನೀಯ (ಮಾತಿನಲ್ಲಿ ಹೇಳಲಾಗದ್ದು). ಬಹುಶಃ ಇದೇ ಕಾರಣದಿಂದಲೇ ಅದು ಶುದ್ಧ ಕಲೆ. ತತ್ವಜ್ಞಾನಿ ಆರ್ಥರ್ ಶೋಪೆನ್ಹಾವರ್ ಎಲ್ಲ ಕಲೆಗಳೂ ಸಂಗೀತದ ಹಂತವನ್ನು ತಲಪಲು ಹೆಣಗಾಡುತ್ತವೆ ಎಂದ. ಅರ್ಥಪೂರ್ಣವಾದ ಮಾತು. ಯಾಕೆಂದರೆ ಸಂಗೀತವನ್ನುಳಿದು ಬೇರೆಲ್ಲ ಕಲೆಗಳಲ್ಲೂ ಆಕೃತಿಯೂ (ಫಾರಂ), ಆಶಯವೂ (ಕಾಂಟೆಂಟ್) ಪರಸ್ಪರ ಒಂದಾಗುವುದಿರಲಿ, ಹತ್ತಿರ ಕೂಡ ಸುಳಿಯುವುದು ಅಪರೂಪ. ಸಂಗೀತದಲ್ಲಾದರೋ, ಒಂದನ್ನು ಬಿಟ್ಟು ಇನ್ನೊಂದಿಲ್ಲ ಅಥವಾ ಎರಡೂ ಒಂದೇ. ಹಾಗಾಗಿ ಸಂಗೀತವನ್ನು, ಅದರಲ್ಲೂ ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತವನ್ನು, ವರ್ಣಿಸುವಂಥ ವಸ್ತು- ಪ್ರತಿರೂಪಗಳು ನಮ್ಮ ಭಾಷೆಯಲ್ಲಿ ಸಿಕ್ಕಲಾರವು."

ಇಷ್ಟು ದೀರ್ಘವಾದ ಚರ್ಚೆಗೆ ಟಿ ಕೆ ದಯಾನಂದರ ಕಥಾಸಂಕಲನ ಮತ್ತು ಅದಕ್ಕೂ ಮುನ್ನ ಬಂದ ಅಧ್ಯಯನದ ಫಲಶ್ರುತಿಯಾದ ಕೃತಿ ‘ರಸ್ತೆ ನಕ್ಷತ್ರ’ ನೆವವಾಯಿತು. ಇನ್ನು ಕತೆಗಳನ್ನು ಗಮನಿಸುವ.

ತಲೆಯಪ್ಪ ದೇವರು
ಎರಡೂ ಕೈ ಜೋಡಿಸಿ, ಪಟ್ಟು ಸಡಿಲಿಸದಂತೆ ಅದನ್ನು ಕಾಲ ಕೆಳಗಿನಿಂದ ಹಿಂದಕ್ಕೊಯ್ದು ತಲೆಯ ಮೇಲಿಂದ ಈಚೆ ತರುವ ಚುಂಚುಂಬ್ಲನ ಸವಾಲಿನೊಂದಿಗೆ ತೊಡಗುವ ಕತೆ ಮುಂದೆ ಪೂಜವ್ವನ ಪರಿಸೆಯ ಡಂಗೂರದ ಹಾದಿಯಾಗಿ ಕರುಂಪುಳಿಯ ಮೂವರು ದೇವತೆಗಳ ನಡುವಿನ ಸಾಮರಸ್ಯ ಕೆಟ್ಟು ಜಗಳಕ್ಕೆ ಕಾರಣವಾದ ರಾಜಕೀಯಕ್ಕೆ ಹೊರಳುತ್ತದೆ. ಮೂರೂ ದೇವತೆಗಳಿಗೆ ಬೇರೆ ಬೇರೆಯಾಗಿ ಪರಿಸೆ ಮಾಡಿದರೆ ಪ್ರತಿಬಾರಿ ನೆಂಟರನ್ನು ಸತ್ಕರಿಸುವ ಖರ್ಚಿಗೆ ಎಲ್ಲಿಗೆ ಹೋಗುವುದು! ಅದಕ್ಕಾಗಿ ಎಮ್ಮೆ ಕದಿಯುವ ಕೈಂಕರ್ಯದ ಕಷ್ಟಗಳಿಗೆ ಹೆದರುವ, ಪ್ರಸ್ತುತ ಬಲಗೈಯ ಬಲ ಕಳೆದುಕೊಂಡ ಕಾರಣಕ್ಕೆ ‘ರೌಡಿಸಂನಿಂದ ಸಸ್ಪೆಂಡಾದ’ ಡೈನೋಸಾರ್ ತಾತ; ದುರುಗವ್ವನ ಗುಡಿಗೆ ಅಜಮಲ್ ನಾನ್‌ವೆಜ್ ಹೋಟೆಲ್ ತರ ಕಾಣುವಂತೆ ಪೇಂಟ್ ಮಾಡಿದ ಪೇಂಟರ್ ರಮೇಶ; ವರ್ಷಕ್ಕೊಮ್ಮೆ ಪಂಚೆಯುಟ್ಟು ಪೂಜೆ ಮಾಡುವ, ಉಳಿದ ಟೈಮಿನಲ್ಲಿ ಸೆಕೆಂಡ್ಸ್ ಮದ್ಯದ ಬಾಟಲಿ ಮಾರುವ ಗಂಗನುಮ; ಪೂಜವ್ವನ ಗುಡಿಯ ಪೂಜಾರಿ ರೇನಸಿದ್ದನ ಮಗ ಟಕಾಟಿಕಿ ಶಂಕ್ರ, ವಿಪರೀತ ಕುಡಿತದ ಚಟದಿಂದಾಗಿ ಇದ್ದ ಸ್ಕೂಲಿನ ಕೆಲಸ ಕಳೆದುಕೊಂಡು ದಾಳಗವ್ವನ ಗುಡಿಯ ಪೂಜಾರಿಯಾಗಿ ಪರಿವರ್ತಿತನಾದ ನಾರಾನಪ್ಪ; ‘ದೊಸದೊಸ ಎನ್ನುವ ಹೊಗೆಯನ್ನು ಮುಂದೆ ಕಳಿಸುತ್ತ ಅದರ ಹಿಂದೆ ತಾನು ಬರುವ’ ಮೋಟುಬೀಡಿ ತೋಪಮ್ಮ ಮುಂತಾದವರ ಒಂದು ಲೋಕಪರ್ಯಟನೆ ಮಾಡುತ್ತಲೇ ಕಟ್ಟಿಕೊಡುವ ಕತೆ ದಂಗು ಹೊಡೆಸುವಂತಿದೆ. ಮೂರೂ ದೇವತೆಗಳ ನಡುವೆ ಕಾಂಪಿಟೀಶನ್ ಸುರುವಾಗಿರುವ ಹೊತ್ತಿನಲ್ಲೇ ಮೂರನೆಯ ದೇವರೊಂದು ಸಿಗುವುದು ಮತ್ತು ಬರೀ ತಲೆಯ ಈ ಹೊಸ ದೇವರಿಗೆ ತಲೆಯಪ್ಪ ಎಂಬ ನಾಮಕರಣವಾಗುವುದು ಹಾಗೂ ಈ ಹೊಸ ದೇವರ ಇತಿಹಾಸವನ್ನು ಬಿಚ್ಚಿಟ್ಟ ತೋಪಮ್ಮ ಪೂಜಾರಿಣಿಯಾಗಿ ಭಡ್ತಿ ಪಡೆಯುವುದು ಎಲ್ಲ ಈ ಲೋಕಪರ್ಯಟನೆಯ ನೇಯ್ಗೆಯಲ್ಲೇ ಬಂದಿರುವುದು ನಿರುದ್ದಿಶ್ಯ ಅಲ್ಲ. ಇಲ್ಲೇ ಗಮನಿಸಬೇಕಾದ ಮಾತೆಂದರೆ ಈ ತಲೆ ಮಾತ್ರ ಇರುವ ಹೊಸ ದೇವರು ಅರೆಬರೆ ಕಣ್ಣು ಬಿಟ್ಟುಕೊಂಡಿರುವುದರಿಂದ ಲೋಕವು ಎಂದಿನಂತೆಯೇ ಸಾಗುವುದಕ್ಕೆ ಯಾವುದೇ ತಕರಾರು ತೆಗೆಯತಕ್ಕವನಲ್ಲ ಎನ್ನುವುದನ್ನು ಕೂಡ ಈ ಮಂದಿ ಅರ್ಥಮಾಡಿಕೊಂಡಿರುವುದು! ಇವೆಲ್ಲಕ್ಕಿಂತ ಮುಖ್ಯವಾದ ಮುದ್ದೆಯೊಂದಿದೆ. ಅದು ಈ ತಲೆಯಪ್ಪ ದೇವರ ‘ಪವರ್ರಿನ’ ಬಗ್ಗೆ ಯಜಮಾನ್ ಕುಟ್ಯಪ್ಪ ಹೆದರಿಸಿದ ವಿಷಯಗಳಿಗೆ ‘ತಲೆಕೊಟ್ಟು’ ತ್ರಿಮೂರ್ತನಿಯರು ಮತ್ತವರ ಬಣದವರೂ ಪರಿಸೆಯಲ್ಲಿ ಪುನಃ ಒಟ್ಟುಗೂಡುವುದು!

ಬೋನಿಗೆ ಬಿದ್ದವರು
ಈ ಕತೆ ಕಾಡುವಾಸಿಗಳ ಪುನರ್ವಸತಿ ಯೋಜನೆಯಿಂದಾಗಿ ಬುಡಬುಡಕೆಯವರು, ಹಕ್ಕಿಪಿಕ್ಕರು, ಗೊರವರು, ಕರಡಿಖಲಂದರ್‌ಗಳು, ಗಿಣಿಶಾಸ್ತ್ರದವರು, ಗೊಂಬೆಯಾಟದವರು, ಹಾವುಗೊಲ್ಲರು, ದೊಂಬರು, ಕೊರಚರು, ಕೊರಮರು ಮುಂತಾದ ಬುಡಕಟ್ಟುಗಳು ಅತ್ತ ನಾಡಿಗೆ ಹೊಂದಿಕೊಳ್ಳಲಾಗದೆ, ತಮ್ಮ ಕಾಡಿಗೆ ಮರಳಲಾಗದೆ ಪಡುವ ಪಾಡಿನ ಕುರಿತಾಗಿ ಇದೆ. ಹೊಲಗಳಲ್ಲಿ ಸುರುವಾದ ಇಲಿಗಳ ಸಮಸ್ಯೆಗೆ ಸರ್ಕಾರಿ ಯಂತ್ರ ಕೈಚಿಲ್ಲಿ ಕೂತಾಗ ಗಿಣಿಶಾಸ್ತ್ರದ ಮಂಕಾಳಿಗೆ ಅದು ಹೊಟ್ಟೆಪಾಡಿನ ದಾರಿಯಾಗಿ ತೆರೆದುಕೊಳ್ಳುವುದು ಹಾಗೂ ಆ ಹಾದಿ ಮುಚ್ಚಿಕೊಳ್ಳದಂತೆ ಅವನು ವಹಿಸುವ ಮುಂಜಾಗ್ರತೆ ಎರಡೂ ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳ ಸಂಗತಿಗಳಾಗಿ ಇಲ್ಲ. ಈ ಕತೆಗಳು ಕಥಾನಕದ ಚೌಕಟ್ಟಿನಲ್ಲಿಯೇ ಕಂಡುಬರುವ, ಅಲ್ಲಿನ ಪಾತ್ರಗಳ ತಂತ್ರ ಅಥವಾ ಜಾಣ್ಮೆ ನೀಡುವ ರಂಜನೆಯಾಚೆಗೆ ವಿಸ್ತರಿಸುವ ಕಸುವುಳ್ಳವು. ಅಂಥ ಅಂಶಗಳು ಉದ್ದೀಪಿಸುವ ಚಿಂತನೆಗಾಗಿಯೇ ಇಂಥ ಕತೆಗಳು ಶ್ರೇಷ್ಠವಾಗುತ್ತವೆ ಎನ್ನುವುದನ್ನು ಗಮನಿಸಬೇಕು. ದಯಾನಂದ್ ಅವರ ಕತೆಗಳ ಒಟ್ಟು ಆಕೃತಿಯಲ್ಲಿ ಉಳಿದುಬಿಡುವ ನಿರುದ್ದಿಶ್ಯದ ಲಕ್ಷಣಗಳು ಅದರ ಸೌಂದರ್ಯ ಮತ್ತು ಸಹಜಧರ್ಮಕ್ಕೆ ಎಷ್ಟು ಅನಿವಾರ್ಯವೋ ಅಷ್ಟೇ ಅವು ಸುಪ್ತವಾಗಿಯೇ ಹೊರಹೊಮ್ಮಿಸುವ ಒಳನೋಟಗಳಿಗಾಗಿ, ಕಾಣ್ಕೆಗಳಿಗಾಗಿ ಮತ್ತು ಅವುಗಳ ಧ್ವನಿಶಕ್ತಿಗಾಗಿ ಕೂಡ ಅನಿವಾರ್ಯವೇ ಎನ್ನುವುದನ್ನು ಗಮನಿಸದೇ ಹೋದಲ್ಲಿ ನಮಗೆ ಈ ಕತೆಗಾರನ ಕೌಶಲಗಳು ಅರ್ಥವಾಗುವುದು ಕಷ್ಟ.

ಗಂಟೇಸಾಬರ ಸ್ವಪುನದೊಳಗೆ ನೆಪೋಲಿ ಬಂದ ಕಥೆಯು

ಕಕ್ಕಸು ಗುಂಡಿಗೆ ಇಳಿದ ಯರ್ರಣ್ಣ ಗ್ಯಾಸು ಕುಡಿದು ಸಾಯುವ ದುರಂತದೊಂದಿಗೆ ಆರಂಭವಾಗುವ ಈ ಕತೆ ಗಂಟೇಸಾಬರ ಹಳಹಳಿಕೆಯ ನಿರೂಪಣೆಯಾಗಬಹುದಿತ್ತು. ಹಾಗಾಗದೆ ಗಂಟೇಸಾಬರ ನೆವದಲ್ಲಿ ನಿರೂಪಕನ ಪ್ರಜ್ಞೆಯೇ ಕತೆಯನ್ನು ತೆರೆದಿಡುತ್ತಿದೆ. ಇಲ್ಲಿ ತೆರೆದು ಕೊಳ್ಳುವ ಒಂದು ವಿಶ್ವ ಸಮೃದ್ಧವಾದದ್ದು. ವಾಲೆರಾಮನ ಫೈನಾನ್ಸಿಂಗ್ ಚಟುವಟಿಕೆಗಳು, ಮುನ್ಸಿಪಾಲಿಟಿಯ ಜಡತ್ವ, ಯರ್ರಣ್ಣನ ಜಾಣತನ, ಯರ್ರಣ್ಣನ ಮಗನ ಶಿಕ್ಷಣ ಎಲ್ಲವೂ ಇಲ್ಲಿ ತೆರೆದುಕೊಳ್ಳುವಾಗಲೇ ತೂರಮ್ಮನ ಗುಡಿಯ ಆನೆ ಮಾವುತ ಗಂಟೇಸಾಬರ ಕತೆಯೂ ತೆರೆದುಕೊಳ್ಳುತ್ತದೆ. ಒಂದು ಪುಟ್ಟ ಊರಿನ ಸಹಜ ವಾತಾವರಣದಲ್ಲೇ ಜನಜೀವನದ ರೂಢಿಗತ ಭ್ರಷ್ಟಾಚಾರ, ಶೋಷಣೆ ಮತ್ತು ಸಣ್ಣತನಗಳು ಮಾಡುವ ಅನಾಹುತಗಳನ್ನು ಕುರಿತು ತಣ್ಣಗೆ ಬೊಟ್ಟು ಮಾಡಿದೆ ಈ ಕತೆ. ಇವು ಹೇಗೆ ಗಮನಕ್ಕೇ ಬರದ ತೆರದಲ್ಲಿ ಅಥವಾ ಸುದ್ದಿಯಾಗಬಲ್ಲ ಯಾವುದೇ ಒಂದು ಸಾಮಾಜಿಕ ಅನ್ಯಾಯದ ಮುಖವನ್ನೂ ಪಡೆದುಕೊಳ್ಳದೆ, ತೀರ ಅವಜ್ಞೆಗಷ್ಟೇ ಅರ್ಹವಾದದ್ದು ಇವೆಲ್ಲ ಎನ್ನುವಂತೆ ಮುಗಿದು ಹೋಗುವ ಯರ್ರಣ್ಣನ ಕನಸಿಗೆ ನಾವು ಸ್ಪಂದಿಸದೇ ಹೋದಲ್ಲಿ ಅದು ನಾವು ಕಳೆದುಕೊಂಡಿರುವ ಸಂವೇದನೆಗಳ ಫಲವೆಂದೇ ಹೇಳಬೇಕು. ಕಕ್ಕಸುಗುಂಡಿಯಂಥದೇ ವಾತಾವರಣವೊಂದರಲ್ಲಿ ಅತ್ತ ಸಾಲ ತೀರದೆ ಇತ್ತ ಮಗನ ಶಿಕ್ಷಣದ ಕನಸು ಪೂರ್ತಿಗೊಳಿಸಲಾಗದೆ ಸತ್ತ ಯರ್ರಣ್ಣ ಮತ್ತು ಇದಕ್ಕಾಗಿ ಮರುಗುವ ಗಂಟೇಸಾಬರ ಮರುಕ ವ್ಯಕ್ತವಾಗುವುದು ಒಂದು ಕನಸಿನ ರೂಪಕದಲ್ಲಿ ಎನ್ನುವುದು ಕೂಡ ಮುಖ್ಯವಾಗುತ್ತದೆ.

ರೆಕ್ಕೆಹಾವು
ಈ ಕತೆಗೆ ಪ್ರಾಪ್ತವಾಗಿರುವ ಅತ್ತ ಕಾವ್ಯಾತ್ಮಕವೂ ಇತ್ತ ಜಾನಪದೀಯವೂ ಆಗಿ ಸೆಳೆಯಬಲ್ಲ ಒಂದು ಕಥಾನಕದ ಹಂದರ ಅಚ್ಚರಿ ಹುಟ್ಟಿಸುತ್ತದೆ. ಹಾಗೆ ನೋಡಿದರೆ ಈ ಕತೆಯಲ್ಲಿ ಅಂಥ ವಿಶೇಷವಾದದ್ದೇನಿಲ್ಲ. ಒಂದಕ್ಕೊಂದು ತಳುಕು ಹಾಕಿಕೊಂಡು ಪೆರುವಾಯಿಯ ದೊಂಬರ ಹುಡುಗರಿಂದ ತೊಡಗಿ ನಡಕತ್ತಿಯ ಆಚಾರಿ, ಹಿರೀಕ ಪೊಟ್ಟಸಿದ್ಧ, ಎರಡು ಬೆಟ್ಟ ಹತ್ತಿಳಿದು ಆನೆದಿಬ್ಬ ದಾಟಿಕೊಂಡರೆ ಸಿಗುವ ಕೊಡೆಪಾವು ಎನ್ನುವ ಊರಿನ ಪಾಪಾತ್ತಿ, ಕೊಡೆಪಾವಿನ ವಾರಾಂಗನೆ ರೇವಮ್ಮ, ಕರುವಾತ್ತಿಬಾರೆಯ ಪಕ್ಕದ ಕುರುಡಕ್ಕಿಬೆಟ್ಟದ ಧವನದ ಮರಗಳ ಪೊಟರೆಯೊಳಗೆ ಅವಿತಿರುವ ರೆಕ್ಕೆಹಾವು, ಮಾದರಹಟ್ಟಿಯ ಮಾಟಗಾರ ಕುಟ್ರಪ್ಪನ ಪರಂಗಿ ಮರ, ಪಾಪಾತ್ತಿಯ ಗಂಡ ಪುರ್ರ, ಅವನ ‘ಕನ್ನಡಕುವರ ರಸಮಂಜರಿ ಕಂಪೆನಿ’, ಬುಲೆಟ್ ಮಾಮನ ಸೇಂದಿ ಅಂಗಡಿ, ವಿಜಿಲೆನ್ಸಿನವರ ದಾಳಿ, ಕುಟ್ರಪ್ಪ-ಪಾಪಾತ್ತಿ ಮತ್ತು ಪರಂಗಿ ಮರದ ಅನುಬಂಧ ಎಂದೆಲ್ಲ ಹರಿಯುವ ಕಥಾನಕಕ್ಕೆ ಏಕಸೂತ್ರದ ಎಳೆಯೊಂದು ಇದ್ದಂತೆಯೇ ಅನಿಸುವುದಿಲ್ಲ. ಆದರೆ ಗಮನಿಸಿ ನೋಡಿ; ದೇವಸ್ಥಾನ ಕಟ್ಟಬೇಕೆಂಬ ಆಸೆ ಕಳ್ಳತನದ ಕೃತ್ಯಕ್ಕೆ ಇಳಿಸುತ್ತದೆ. ಮಾಟ ಮುರಿಯುವ ವಿದ್ಯೆ ಕಲಿಯುವ ಹಂಬಲ ಹಾದರಕ್ಕೆ ಇಳಿಸುತ್ತದೆ. ರೆಕ್ಕೆಹಾವನ್ನು ಕೊಂದು ಸುಟ್ಟರಷ್ಟೇ ಕುಲದೇವತೆಗೆ ಸಂತೋಷವಾಗಿ ಅದು ಎಲ್ಲ ಪಾಪಕ್ಕೆ ಉಪಶಮನ ನೀಡುತ್ತದೆ ಎನ್ನುವ ಒಂದು ಸುಳ್ಳು ಇನ್ನಷ್ಟು ಅನರ್ಥವನ್ನುಂಟು ಮಾಡುತ್ತದೆ. ಇಲ್ಲಿ ಬರುವ ರೆಕ್ಕೆಹಾವು ಎಂಬುದು ಒಂದು ಅನಿಷ್ಟದ, ಮನುಷ್ಯನ ಹಪಾಹಪಿಯ ಅಸ್ಪಷ್ಟ ರೂಹು ಒದಗಿಸುವುದಾದರೂ ಕತೆ ಪ್ರಜ್ಞಾಪೂರ್ವಕ ಕಟ್ಟಿಕೊಳ್ಳುವ ಸಾಂಕೇತಿಕತೆಯೇನಲ್ಲ ಅದು. ಹೀಗಾಗಿ ಒಂದು ಕವನ ನೀಡುವ ಹೊಳಹುಗಳಂಥ ಪ್ರತಿಮೆಯಲ್ಲೇ ಈ ಕತೆ ಸಂಪನ್ನವಾಗುತ್ತದೆ.

ಪುಲಿಮೊಗರು
ಪುಲಿಮೊಗರು ಕೂಡ ‘ರೆಕ್ಕೆಹಾವು’ ಕತೆಯಷ್ಟು ಸುಪುಷ್ಟವಾದ ಕಥಾನಕದ ಹರಹು ಹೊಂದಿಲ್ಲದಿದ್ದರೂ ಅದೇ ಆಶಯ ಮತ್ತು ಆಕೃತಿಯುಳ್ಳ ಕತೆ. ಇಲ್ಲಿ ಪಂಗಾಳಿಯ ಸಾಕುಮಗಳ ಪ್ರೇಮ ಪ್ರಕರಣ ಒಂದು ಎಳೆಯಾದರೆ ಪಂಗಾಳಿಯ ಬದುಕು-ಸಾವಿನದ್ದೇ ಒಂದು ಎಳೆ. ಎರಡೂ ಜೊತೆ ಜೊತೆಯಾಗಿಯೇ ಸಾಗುತ್ತವೆ. ವಿವರಗಳಲ್ಲಿ ಊರು, ಆಸ್ಪತ್ರೆ, ವೈದ್ಯರು ಎಲ್ಲ ಸೇರಿಕೊಳ್ಳುತ್ತ ಕತೆ ಬೆಳೆಯುತ್ತದೆ. ಆದರೆ ಕಾಡುವ ಒಂದು ಕೇಂದ್ರ ಈ ಕತೆಗೆ ಅಯಾಚಿತ ದಕ್ಕಿದಂತಿರುವುದು ಗಮನಿಸಬೇಕು. ಮಾತು ಬಾರದ ಮೂಕ ಪಂಗಾಳಿ ತಾನು ಸಾಕಿದ ಮಗಳು ಜೆನ್ಸಿಯ ಬಗ್ಗೆ ಬೆಳೆಸಿಕೊಳ್ಳುವ ಪೊಸೆಸಿವ್ ಎನ್ನಬಹುದಾದ ಒಂದು ವ್ಯಾಮೋಹ ಮತ್ತು ಪಂಗಾಳಿಯನ್ನು ನೋಯಿಸುವ ಯಾವ ಉದ್ದೇಶವೂ ಇಲ್ಲದೆ ಅಪ್ಪನ ಬೇಲಿಗಳನ್ನು ಮೀರುವ ಜೆನ್ಸಿ, ಎಲ್ಲ ಹರಯದ ಹಂಬಲಗಳಲ್ಲೂ ಇರುವ ರಿಸ್ಕು - ಈ ಮೂರು ಸಂಗತಿಗಳು ಏಕಕಾಲಕ್ಕೆ ಓದುಗನ ಮನಸ್ಸಿನಲ್ಲುಂಟು ಮಾಡುವ ತಲ್ಲಣ ವಿಶಿಷ್ಟವಾದದ್ದು. ತರ್ಕ ಮತ್ತು ಭಾವಕೋಶಗಳೆರಡನ್ನೂ ತಡಕಿ ತಡಕಿ ಪ್ರಶ್ನಿಸುವಂಥಾದ್ದು. ಪಂಗಾಳಿಯ ಅನಿರೀಕ್ಷಿತ ಅಂತ್ಯದಲ್ಲಿಯೇ ಈ ಬದುಕಿನ ಅನಿರೀಕ್ಷಿತಗಳಿಗೆ, ಅನಿರ್ದಿಷ್ಟ ಭವಿಷ್ಯದ ಅತಂತ್ರ ಸ್ಥಿತಿಗೆ ಕತೆ ಬೊಟ್ಟು ಮಾಡುವಂತಿದೆ.

ಬಳೆಶೆಟ್ಟರ ಮಗಳು
ಈ ಕತೆಯ ಕೊನೆಯ ಒಂದು ಪ್ಯಾರಾ ಎಷ್ಟು ಸಶಕ್ತವಾಗಿದೆ ಎಂದರೆ, ಅದು ಇಡೀ ಕತೆಯ ಎಲ್ಲ ವಿವರ ಮತ್ತು ನಡೆಗೆ ಥಟ್ಟನೇ ಒಂದು ಬಿಗಿಯಾದ ಎಳೆಯನ್ನು, ಹೆಣಿಗೆಯನ್ನು ಒದಗಿಸಿ ಬಿಡುವ ಬಗೆ ಸೋಜಿಗದ್ದಾಗಿದೆ. ಇಲ್ಲಿನ ಬಳೆಶೆಟ್ಟರ ಮಗಳ ಪ್ರೇಮ ಪ್ರಕರಣದಲ್ಲಿ ಅಂಥ ವಿಶೇಷವಾದದ್ದೇನಿಲ್ಲ. ಇಲ್ಲಿನ ಪಾತ್ರಗಳು ಮತ್ತು ಊರು, ಫಕೀರಸಾಬ ಮತ್ತು ಬಳೇಶೆಟ್ಟರ ಮಗಳು ಪದ್ಮಾವತಿ, ಇಬ್ಬರ ನಡುವಿನ ‘ತಮಾಷೆಯಂಥ ಒಂದು ಸಂಬಂಧ’ ಹಾಗೂ ಕರಾವಳಿಯ ಜಾತಕವನ್ನೇ ಜನ್ಮತಃ ಪಡೆದುಕೊಂಡಂತೆ ಕಾಣುವ ಇಡೀ ಕತೆಯ ರಂಗಭೂಮಿಯಾದ ಕರುಂಪುಳಿ - ಸಹಜವಾಗಿಯೇ ಓದುಗನಿಗೆ ಸಾಕಷ್ಟು ಹೊಳಹುಗಳನ್ನು ಒದಗಿಸುವಂಥದ್ದು. ಹಾಗಾಗಿ ಆತ ಕತೆಯನ್ನು ಊಹಿಸಿಕೊಂಡೇ ಓದಿಗೆ ಸಜ್ಜಾಗಬಲ್ಲ ಅವಕಾಶ ಇಲ್ಲಿದೆ. ಇಡೀ ಕತೆಯ ಜೀವಂತಿಕೆ ಇರುವುದು ದಯಾನಂದ್ ಅವರು ಕಟ್ಟಿಕೊಡುವ ಬೀದಿ ಮಾರಾಟಗಾರರ ವ್ಯಾಪಾರದ ನಿತ್ಯವೂ ಸಹಜವೂ ಆದ ವಿವರಗಳಲ್ಲಿಯೇ ಎನ್ನುವುದು ನಿರ್ವಿವಾದ.

ನಾಯಿಬೇಟೆ
ಆಶಯದಲ್ಲಿ ಯರ್ರಣ್ಣನ ಕತೆಯನ್ನೇ ಹೋಲುವ ಸೆಂಟ್ ಹನ್ಮಂತನ ಕತೆಯಿದು. ಸ್ವಲ್ಪ ಎಡವಿದರೆ ಇಲಿ ಹಿಡಿಯುವ ಮಂಕಾಳಿಯ ಕತೆಯೂ ಇದೇ ಹಾದಿ ಹಿಡಿಯುತ್ತಿತ್ತಲ್ಲವೇ ಎನಿಸಿದರೆ ಅಚ್ಚರಿಯೇನಿಲ್ಲ. ಯರ್ರಣ್ಣ, ಗಂಟೆಸಾಬಿ, ಸೆಂಟ್ ಹನ್ಮಂತ, ಪಾಪಾತ್ತಿ, ಪುರ್ರ, ಕುಟ್ರಪ್ಪ, ಪಂಗಾಳಿ, ಮೋಟುಬೀಡಿ ತೋಪಮ್ಮನಂಥವರ ಜಾತಕದ ಗುಣವೇ ಅದು. ಒಂದು ಬ್ಯಾಲೆನ್ಸ್ ದಕ್ಕಿದರೆ ಬದುಕು. ತಪ್ಪಿದರೆ ಜೈಲು ಅಥವಾ ಸಾವು. ಯರ್ರಪ್ಪನನ್ನು ಸತಾಯಿಸುವ ವಾಲೆರಾಮನ ಬದಲಾಗಿ ಇಲ್ಲಿ ತುಕಾರಾಮನಿದ್ದಾನೆ. ಮಂಕಾಳಿಗೆ ಕೆಲಸ ಒದಗಿಸಿದ ಇಲಿಗಳಿಗೆ ಬದಲಾಗಿ ಇಲ್ಲಿ ಬೀದಿ ನಾಯಿಗಳ ಹಾವಳಿಯಿದೆ. ಉಳಿದಂತೆ ಇಲ್ಲಿಯೂ ಅದೇ ರಾಜಕೀಯ, ಭ್ರಷ್ಟಾಚಾರ, ಸಣ್ಣತನ ಮತ್ತು ಶೋಷಣೆಗಳು ಜೀವನದ ಸಹಜಧರ್ಮಗಳೇ ಆಗಿ ಚಲಾವಣೆಯಲ್ಲಿವೆ. ಈ ಎಲ್ಲದರ ನಡುವೆ ಸುದ್ದಿಯಾಗದ ಸುಂದರ ಬಗೆಯಲ್ಲಿ ಬದುಕು ಮುರುಟಿಕೊಳ್ಳುವ ಒಂದು ಕತೆಯನ್ನು ದಯಾನಂದ್ ಇಲ್ಲಿಯೂ ತೆರೆದಿಡುತ್ತಾರೆ. ಇಂಥ ಕತೆಗಳಿಲ್ಲದೇ ಹೋದಲ್ಲಿ ನಾವು ಇವರಿಗೆ ನಮ್ಮ ದೈನಂದಿನದಲ್ಲಿ ಯಾವುದೇ ಸಮಯ ನೀಡುವುದಿಲ್ಲ ಎನ್ನುವುದು ಸತ್ಯ ಕೂಡ, ಕಾಲದ ದುರಂತ ಕೂಡ. ಈ ನೋವು ನಮ್ಮದೇ ಆಗಬಹುದಾಗಿದ್ದ ಒಂದು ಸಾಧ್ಯತೆಯನ್ನು, ‘ಬ್ಯಾಲೆನ್ಸ್’ ತಪ್ಪದೇ ಹೋದ ಸುದೈವದಿಂದಷ್ಟೇ ಸಂಭಾವ್ಯ ಸಾಧ್ಯತೆಯಾಗಿ ಉಳಿದುಬಿಟ್ಟ - ಸಾಧ್ಯತೆಯನ್ನು ಇಂಥ ಕತೆ ಕಾಣಿಸಬೇಕು.

ವಾಸ್ನೆ
ಈ ಕತೆ ಯೋಗರಾಜ ಭಟ್ ಅವರದ್ದು, ನಿರೂಪಣೆ ಮಾತ್ರ ದಯಾನಂದ್ ಅವರದ್ದು ಎನ್ನುವುದು ಅಡಿಟಿಪ್ಪಣಿ. ಈ ಅಡಿಟಿಪ್ಪಣಿ ಕತೆಯ ಭಾಗ ಅಲ್ಲ ಎಂದುಕೊಳ್ಳಬಹುದು. ಬಹುಪಾಲು ಬಳೇಶೆಟ್ಟರ ಮಗಳ ಕತೆಯನ್ನೇ ಹೋಲುವ ಹಂದರ ಇಲ್ಲಿದೆ. ಈ ಕತೆಯಲ್ಲಿ ಅಲೀಮ ಎಂಬ ಪಾತ್ರ ಬದುಕಿನ ಎಲ್ಲ ಜಂಜಡಗಳಿಗೂ, ಭಾರಕ್ಕೂ ಒದಗಿಸುವ ಲಘುತ್ವವೇ ಇಡೀ ಕತೆಗೂ ಒದಗಿಸಿದ್ದು ನಿಜ. ಇಲ್ಲವಾದಲ್ಲಿ ಬಳೇಶೆಟ್ಟರ ಮಗಳ ಪ್ರಕರಣದಲ್ಲಿ ಆದಂತೆ ಫಕೀರಸಾಬ ಮತ್ತು ಲಾಳಸಾಬರ ರುಂಡ ಮುಂಡ ಚೆಲ್ಲಾಡಿದ ಭೀಕರ ದುರಂತ ಅಂತ್ಯವೇ ಇಲ್ಲಿಯೂ ಆಗುವುದಿತ್ತೇನೊ. ಒಂದು, ಅಲೀಮನಂಥ ಹುಚ್ಚನೊಬ್ಬ ಊರಿನ ಹುಚ್ಚಿಗೆ, ದುರ್ವಾಸನೆಗೆ ಪ್ರತೀಕ ಒದಗಿಸುವಂತಿರುವುದು ಕಾರಣ ಎನ್ನಬಹುದಾದರೆ, ಭಟ್ಟರ ಈ ಕತೆ ದಯಾನಂದರ ಕರುಂಪುಳಿಯಲ್ಲಿ ನಡೆಯದೇ ಪತ್ತೇಕಾನಿನಲ್ಲಿ ಜರುಗುತ್ತಿರುವುದು ಇನ್ನೊಂದು ಕಾರಣವಿದ್ದೀತು!

ಕತೆಗಾರನಿಗೆ ಜನಸಾಮಾನ್ಯನ ದೈನಂದಿನದೊಂದಿಗೆ, ಅವನ ಭಾಷೆಯೊಂದಿಗೆ, ಅವನ ವೃತ್ತಿಯ ವಿವರಗಳೊಂದಿಗೆ ಸಾಕಷ್ಟು ಒಡನಾಟವಿದ್ದರೆ ಕತೆ ಬರೆಯುವುದು ಒಂದು ಅನಿವಾರ್ಯ ಕರ್ಮವಾಗದೆ ಸಹಜಧರ್ಮವಾಗಬಹುದು ಎನ್ನುವುದಕ್ಕೆ ತೇಜಸ್ವಿಯವರಂತೆಯೇ ದಯಾನಂದ್ ಅವರ ಕತೆಗಳು ಸಾಕ್ಷ್ಯ ಒದಗಿಸುತ್ತವೆ. ಹಲವರು ದಯಾನಂದರ ಕತೆಗಳನ್ನು ದೇವನೂರರ ಕತೆಗಳೊಂದಿಗೂ ಹೋಲಿಸಿದ್ದಿದೆ. ಅದೆಲ್ಲ ಇಲ್ಲದೆಯೂ ದಯಾನಂದರ ಕತೆಗಳು ಕನ್ನಡದ ಬಹಳಷ್ಟು ಶ್ರೇಷ್ಠ ಕತೆಗಾರರ ಕತೆಗಳ ಸಾಲಿನಲ್ಲಿ ನಿಲ್ಲುವ ಎಲ್ಲ ಲಕ್ಷಣಗಳನ್ನು ಪಡೆದಿವೆ ಎಂದು ಧಾರಾಳವಾಗಿಯೇ ಹೇಳಬಹುದು. ಆದರೆ ಇಂಥ ಮಾತುಗಳನ್ನು ದೃಢವಾಗಿಸುವುದು ಅವರ ಮುಂದಿನ ಬರವಣಿಗೆಯ ಮೇಲೆ ನಿಂತಿರುತ್ತದೆ ಎನ್ನುವುದನ್ನು ಕೂಡ ಯಾರೂ ಅಲ್ಲಗಳೆಯಲಾಗದು.

8 comments:

Bharath G Babu said...

I am reading your blog from almost a week i think completed around 30-35% of it. Let me tell you this only you making me read through computer. Your language has such power which is not allowing me to continue my work. I became your FAN honestly.

I see that you have not written much about Karanth, Kuvempu, Chittal, Mainly Ramachandra Sharma why i am mentioning about this writer because I lost in his short stories what a language he use, absolutely brilliant.

Request you to write about Classic novels and Classic short stories in kannada.

Thank you for the such a wonderful blog page.

ನರೇಂದ್ರ ಪೈ said...

ಸರ್, ನಿಮ್ಮ ಉತ್ತೇಜಕ ಮಾತುಗಳಿಗೆ ಶರಣು. ಕ್ಲಾಸಿಕ್ ಲೇಖಕರ ಬಗ್ಗೆ ಬರೆಯುವ ಸಾಮರ್ಥ್ಯವನ್ನು ನನಗೆ ನಿಮ್ಮಂಥವರ ಮಾತುಗಳೇ ನೀಡಬೇಕಷ್ಟೇ, ಅನ್ಯಥಾ ಅದು ನನ್ನ ಎಟುಕಿಗೆ ಮೀರಿದ್ದೇ ಸರಿ! ನಿಮ್ಮ ಪ್ರೀತಿಗೆ ನನ್ನಲ್ಲಿ ಮಾತುಗಳಿಲ್ಲ ಸರ್.

Bharath G Babu said...

Dear Sir, Pls dont call me sir I am just 25 now ;-)
Thank you for such a sweet response. I love reading specially kannada books, now with the help of your blog I can categorize my books list. My opinion is not just for single article or two, Its for your entire blog. I wish one day I will get all these articles in one book as your collection.

Hopefully this conversation will continue........

Thank You,
Bharath

ನರೇಂದ್ರ ಪೈ said...

ಹೊಸತನ್ನು, ತಿಳಿಯದ್ದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲ, ಉಮೇದು, ಶಕ್ತಿಯೇ ಜೀವಂತಿಕೆಯ ಲಕ್ಷಣ ಭರತ್ ಅವರೆ. ಅದು ಯಾರಲ್ಲಿದೆಯೊ ಅವರನ್ನು ಇಪ್ಪತ್ತೈದಾಗಲಿ ಎಪ್ಪತ್ತೈದಾಗಲಿ ಸರ್ ಎನ್ನುವುದು ಕರೆಯುವವರಿಗೂ ಖುಶಿ ನೀಡುತ್ತದೆ. ನನಗೆ ಪುಸ್ತಕ ಹೊರತರುವುದರಲ್ಲಿ ಅಷ್ಟು ಉತ್ಸಾಹವಿಲ್ಲ. ಇದು ಸಾಕಷ್ಟು ಎನಿಸಿದೆ, ಇರಲಿ. ನೀವು ನನ್ನ ಈಮೇಲ್ ವಿಳಾಸ ಗುರುತು ಹಾಕಿಕೊಳ್ಳಿ, ಪರಸ್ಪರ ಹಂಚಿಕೊಳ್ಳಲು ಸಹಾಯಕ. narendrapai2003@gmail.com

ನಿಮ್ಮ
ನರೇಂದ್ರ

ನರೇಂದ್ರ ಪೈ said...

ಹೊಸತನ್ನು, ತಿಳಿಯದ್ದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲ, ಉಮೇದು, ಶಕ್ತಿಯೇ ಜೀವಂತಿಕೆಯ ಲಕ್ಷಣ ಭರತ್ ಅವರೆ. ಅದು ಯಾರಲ್ಲಿದೆಯೊ ಅವರನ್ನು ಇಪ್ಪತ್ತೈದಾಗಲಿ ಎಪ್ಪತ್ತೈದಾಗಲಿ ಸರ್ ಎನ್ನುವುದು ಕರೆಯುವವರಿಗೂ ಖುಶಿ ನೀಡುತ್ತದೆ. ನನಗೆ ಪುಸ್ತಕ ಹೊರತರುವುದರಲ್ಲಿ ಅಷ್ಟು ಉತ್ಸಾಹವಿಲ್ಲ. ಇದು ಸಾಕಷ್ಟು ಎನಿಸಿದೆ, ಇರಲಿ. ನೀವು ನನ್ನ ಈಮೇಲ್ ವಿಳಾಸ ಗುರುತು ಹಾಕಿಕೊಳ್ಳಿ, ಪರಸ್ಪರ ಹಂಚಿಕೊಳ್ಳಲು ಸಹಾಯಕ. narendrapai2003@gmail.com

ನಿಮ್ಮ
ನರೇಂದ್ರ

Pradeep Hegde said...

Even I am also in same list. Recently started reading your blog and going through all articles. the insight details in articles are very helpful for book readers.

Thank you.

Regards,
Pradeep

ನರೇಂದ್ರ ಪೈ said...

ಪ್ರೀತಿಯ ಪ್ರದೀಪ್,
ಗಂಭೀರ ಸಾಹಿತ್ಯ ಓದುವವರೇ ಕಡಿಮೆಯಾಗುತ್ತಿರುವ ದಿನಗಳಲ್ಲಿ ನಿಮ್ಮಂಥವರು ಸಿಗುತ್ತಿರುವುದು ನಿಜಕ್ಕೂ ಚೇತೋಹಾರಿ ಅನುಭವ ಸರ್. ಏನೋ ಓದಿದಾಗ ಅನಿಸಿದ್ದನ್ನು ಇಲ್ಲಿ ದಾಖಲಿಸಿದ್ದೇನೆ. ಸ್ವತಃ ನನಗೆ ನಾನಿಲ್ಲಿ ಬರೆದಿರುವುದನ್ನು ಓದುವುದಕ್ಕಿಂತ ನೀವು ಆಯಾ ಕೃತಿಗಳನ್ನೇ ಓದಿದರೆ ಹೆಚ್ಚು ಖುಶಿಯಾಗುತ್ತದೆ. ನಿಮ್ಮ ಪ್ರೋತ್ಸಾಹಕ್ಕೆ ಋಣಿ.
ನಿಮ್ಮ
ನರೇಂದ್ರ

Pradeep Hegde said...

ಖಂಡಿತ, ನೀವು ಪರಿಚಯಿಸಿದ ಕೃತಿಗಳನ್ನು ಓದುವ ಲಿಸ್ಟ್ ಗೆ ಸೇರಿಸಿದ್ದೇನೆ.