Friday, November 11, 2016

ಹೊಸಕಾಲದ ಬಿಕ್ಕಟ್ಟುಗಳ ಕಥನ

ಅಂಜುಂ ಹಸನ್ ಅವರಿಂದ ನಿರೀಕ್ಷಿಸಬಹುದಾದಂತೆಯೇ ಇದೊಂದು ಬಹು ಸಾಧ್ಯತೆಗಳ ಅಥವಾ ಬಹು-ಸ್ತರಗಳ ಕಾದಂಬರಿ. ಹೀಗಾಗಿ ಇದು ಏನನ್ನು ಹೇಳುತ್ತಿದೆ ಎನ್ನುವುದಕ್ಕಿಂತ ಇದರೊಂದಿಗೆ ನಮ್ಮ ಒಡನಾಟವನ್ನು ಕುರಿತು ಕೊಂಚ ಜಿಜ್ಞಾಸೆ ನಡೆಸುವುದು ಇದನ್ನು ಅರ್ಥ ಮಾಡಿಕೊಳ್ಳುವ ಒಂದು ದಾರಿ ಎನಿಸುತ್ತದೆ.

ಇಡೀ ಕಾದಂಬರಿ ಕಾಯ್ನಾಟ್ ಎಂಬಾಕೆಯ ಮೂಲಕ ನಿರೂಪಿಸಲ್ಪಟ್ಟಿದೆ. ಈಕೆ ಇನ್ನೇನು ಯೌವನ ಕೈಜಾರಿ ಹೋಗುತ್ತಿದೆ ಎಂಬ ವಯಸ್ಸಿನ ಒಂಟಿ ಹುಡುಗಿ. ಈಕೆಯ ಇಂಜಿನಿಯರ್ ತಂದೆ ತೀರಿಕೊಂಡಿದ್ದಾನೆ. ಪತಿಯನ್ನು ಬಿಟ್ಟು ಬಂದಿದ್ದಾಳೆ. ತಂದೆ ಕಟ್ಟಿಸಿದ ಮನೆ ಇದೆ. ಸಣ್ಣಪುಟ್ಟ ಕೆಲಸ, ಫ್ರೀಲ್ಯಾನ್ಸಿಂಗ್, ಕಲೆಯ ಕುರಿತ ಬರವಣಿಗೆ, ನರ್ಸರಿ, ಯೋಗದ ತರಗತಿ ನಡೆಸಲು ಬಿಟ್ಟುಕೊಟ್ಟಿರುವ ಒಂದು ಶೆಡ್‌ನ ಬಾಡಿಗೆ ಇತ್ಯಾದಿ ಈಕೆಯ ಆದಾಯ ಮೂಲ. ತಂದೆಯ ಇನ್ಸೂರೆನ್ಸಿನ ಹಣ ಈಕೆಯೇ ಮೃತವ್ಯಕ್ತಿಯ ಮಗಳು ಎನ್ನುವುದಕ್ಕೆ ಸೂಕ್ತ ದಾಖಲಾತಿಗಳಿಲ್ಲದೆ ಕೈತಪ್ಪಿದೆ. ಅಷ್ಟಿಷ್ಟು ಸಾಲ ಬೇರೆ ಇದೆ. ಸಾರಾ ಎಂಬ ಕಲಾಸಂಗ್ರಾಹಕಿ ಸಿರಿವಂತೆ ಈಕೆಯ ಸ್ನೇಹಿತೆ, ಕಷ್ಟಕಾಲದ ಬಂಧು. ಸಾಥಿ ಎಂಬಾತ ಒಂದು ಕಾಲದ ಗೆಳೆಯ. ಆತನ ತಂದೆಯೂ ಈಕೆಯ ತಂದೆಯೂ ತಾವು ತಾವು ಬಿಟ್ಟು ಬಂದ ಮೂಲನೆಲೆಯ ನೆರೆಕರೆಯವರು, ಸ್ನೇಹಿತರು. ಸಾಥಿಗೆ ಕಾಯ್ನಾಟ್ ಬಗ್ಗೆ ಹಾಗೊಂದು ಸಲುಗೆ, ಹಾಗೊಂದು ಕಕ್ಕುಲಾತಿ. ಪ್ರೇಮ ಇವರ ನಡುವೆ ಬಿರುಕು ಬಿಟ್ಟಿದೆ. ಈ ಸಾಥಿ ಒಬ್ಬ ಪರ್ತಕರ್ತ. ಎಲ್ಲವನ್ನೂ ಕೊಂಚ ಉಡಾಫೆಯಿಂದ ಅಥವಾ ನಿರ್ಲಿಪ್ತಿಯಿಂದ ಕಾಣಬಲ್ಲವ. ಕಲಾವಿದರು, ಕಲಾರಸಿಕರು, ಕಲಾಸಂಗ್ರಾಹಕರು, ಕಲಾವಿಮರ್ಶಕರು - ಈ ಎಲ್ಲರ ಬಗ್ಗೆ ಕಾಯ್ನಾಟ್‌ಗೆ ಅಭಿಮಾನ, ಪ್ರೀತಿ, ಗೌರವ ಇದ್ದರೆ ಸಾಥಿಗೆ ಅವರ ರೀತಿನೀತಿಗಳಲ್ಲಿನ ಕೃತಕತೆ, ನಾಟಕೀಯತೆ, ಹುಸಿತನ ಕಣ್ಣಿಗೆ ಹೊಡೆದು ಕಾಣುತ್ತದೆ.

ಈಗ ಅಂತರ್ರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿ ಕಲಾವಿದನಾಗಿ ಗುರುತಿಸಿಕೊಳ್ಳುವ ಬಬನ್ ಒಂದು ಕಾಲಕ್ಕೆ ಏನೂ ಅಲ್ಲದ ವ್ಯಕ್ತಿ ಮತ್ತು ಕಾಯ್ನಾಟಳ ಸಹೋದ್ಯೋಗಿ, ಸಹವರ್ತಿ. ಕಾಯ್ನಾಟ್‌ಗೆ ಬಬನ್ ಎಂದರೆ ಏನೋ ಸೆಳೆತ, ಜೀವದಲ್ಲಿ ಮಿಡಿತ. ಬಬನ್ ಅಂತರ್ರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಯಾಗಿ ಬದಲಾಗುವಾಗ ಅವನ ವ್ಯಕ್ತಿತ್ವದಲ್ಲಿಯೂ ಅದಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳಾಗಿವೆ. ಕಲೆ ಮಾರುಕಟ್ಟೆಯ ಸರಕು ಎಂಬ ವಾಸ್ತವ ಪ್ರಜ್ಞೆ ಅವನಲ್ಲೂ ಜಾಗೃತವಾಗಿದೆ ಅಥವಾ ಅದು ಮರೆತರೆ ಜ್ಞಾಪಿಸಲು ಸದಾ ಪಕ್ಕದಲ್ಲಿಯೇ ಇದ್ದು ಎಚ್ಚರಿಸಲು ತಾನ್ಯಾ ತರದ ಒಬ್ಬಾಕೆಯನ್ನು ಆತ ಕಟ್ಟಿಕೊಂಡಿದ್ದಾನೆ. ಕಾಲ ಮತ್ತು ಹಣ ಬಬನ್ ಮತ್ತು ಕಾಯ್ನಾಟ್ ನಡುವೆ ಸಾಕಷ್ಟು ದಪ್ಪದ ತೆರೆಗಳನ್ನು ಹಾಸಿದೆ. ಇದನ್ನು ಹಂತಹಂತವಾಗಿ ಅರಿವಿಗಿಳಿಸಿಕೊಳ್ಳುವ ಕಾಯ್ನಾಟ್ ಕಟುಸತ್ಯದ ಕಹಿ ಕುಡಿದ ಹಿಂಸೆಯಲ್ಲಿ ತೊಳಲುತ್ತಾಳೆ.

ಕಾಯ್ನಾಟ್‌ಳ ದಿಕ್ಕೆಟ್ಟ ಆರ್ಥಿಕ ಪರಿಸ್ಥಿತಿ, ಉದ್ಯೋಗ ಅಥವಾ ಅವಳು ಆಯ್ದುಕೊಂಡ ಕ್ರಿಯಾಕ್ಷೇತ್ರದಲ್ಲಿ "ಬದುಕಿನ ಯಶಸ್ಸಿನ ಮಾನದಂಡಗಳು" ಎಂದು ಏನನ್ನು ನಾವೆಲ್ಲ ಕಾಣುತ್ತೇವೆಯೋ ಆ ನೆಲೆಯಲ್ಲಿ ಇದು ಸೋಲು ಎನಿಸುವಂಥ ಪರಿಸ್ಥಿತಿಯೇ ಕಾರಣವಾಗಿ ಮೂಡಿರಬಹುದಾದ ಅವಳ ಒಂದು ವಿಶಿಷ್ಟ ಮಾನಸಿಕ ಸ್ಥಿತಿ, ಅವಳ ಸ್ವತಂತ್ರ ಮನೋಭಾವದ, ಆದರ್ಶಗಳ, ಅವಳು ಬೆಳೆದ ರೀತಿ ನೀತಿಗಳ ಮೂಲಕ ರೂಪುಗೊಂಡಿರುವ ಅವಳ ಒಂದು ವ್ಯಕ್ತಿತ್ವದ ವಿಶಿಷ್ಟ ಬಗೆ, ತಂದೆ/ತಾಯಿ/ಪತಿ/ಪ್ರೇಮಿ/ಗೆಳೆಯ/ಗೆಳತಿ ಎಲ್ಲರೂ ಸೇರಿ ಅವಳು ನಿರ್ಮಿಸಿಕೊಂಡಿರುವ ಅವಳದ್ದೇ ಎನ್ನಬಹುದಾದ ಒಂದು ಸೀಮಿತವಾದ ಸಮಾಜದಲ್ಲಿ ಅವಳದ್ದಾಗಿರುವ ಸದ್ಯದ ಒಂಟಿತನ - ಇದೆಲ್ಲ ನಮಗೆ ಅರ್ಥವಾಗದೆ ಕಾಯ್ನಾಟ್ ನಮಗೆ ಅರ್ಥವಾಗುವುದಿಲ್ಲ. ಈ ಎಲ್ಲವೂ ಅವಳ ಪಾತ್ರದ ಸಂಕೀರ್ಣತೆಯನ್ನು ಮತ್ತಷ್ಟು ಜಟಿಲಗೊಳಿಸಿರುವಂತೆಯೇ ಅವಳು ಬದುಕುತ್ತಿರುವ (ಸದ್ಯ) ವರ್ತಮಾನವೂ ಸಂಕೀರ್ಣ ಮತ್ತು ಜಟಿಲವಾಗಿಯೇ ಇದೆ. ಆ ಅರ್ಥದಲ್ಲಿ ಕಾಯ್ನಾಟ್ ಒಂದು ರೂಪಕ, ಬೆಂಗಳೂರು ನಗರ ಒಂದು ರೂಪಕ. ಒಬ್ಬ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಪ್ರೀತಿಸುವುದು; ಅಥವಾ ಪ್ರೀತಿಸುವುದು ಎಂದರೆ ಅರ್ಥಮಾಡಿಕೊಳ್ಳುವುದು ಎನ್ನಿ. ಹಾಗೆ ಈ ಕೃತಿಯ ಓದು ಎಂದರೆ, ಈ ಇಡೀ ಕಾದಂಬರಿಯನ್ನು ನಮಗೆ ದಕ್ಕಿಸುವ ಈ ಕೇಂದ್ರ ಪಾತ್ರವನ್ನು ಅರ್ಥಮಾಡಿಕೊಳ್ಳುವ, ಪ್ರೀತಿಸುವ ಒಂದು ಕ್ರಿಯೆಯೇ ಆಗಿ ಬಿಡುತ್ತದೆ. ಇದರಿಂದಾಗಿಯೇ ಕೆಲವು ಸಮಸ್ಯೆಗಳು ಎದುರಾಗುತ್ತವೆ.

ಒಂದು, ನಾವು ಕಾಯ್ನಾಟ್ ದೃಷ್ಟಿಕೋನಕ್ಕೆ ಚಂದಾದಾರರಾಗ ಬೇಕಾಗುತ್ತದೆ ಅಥವಾ ಅವಳ ದೃಷ್ಟಿಕೋನದಿಂಡಲೇ ಇಲ್ಲಿಯ ಎಲ್ಲವನ್ನೂ ನೋಡುವುದಕ್ಕೆ ಸಿದ್ಧರಾಗ ಬೇಕಾಗುತ್ತದೆ. ಕಾಯ್ನಾಟ್ ಪ್ರಜ್ಞೆ ಮತ್ತು ಕಾಯ್ನಾಟ್ ಇಲ್ಲದ ನಿರೂಪಕ ಪ್ರಜ್ಞೆ ಎರಡರ ನಡುವೆ ಎಳೆಯ ಬಹುದಾದ ಗೆರೆಗಳು ಕಾಣಿಸುವುದಿಲ್ಲ. ಅಂದರೆ, ಕಾಯ್ನಾಟ್‌ಗೆ ಗೊತ್ತಿಲ್ಲದಂತೆ ಇಲ್ಲಿ ನಡೆದ/ನಡೆಯುವ ಸಂಗತಿಗಳೇನಾದರೂ ಇದ್ದರೆ, ಅವು ನಮಗೆ ತಿಳಿದು ಬರುವ ಸಂಭವ ಇಲ್ಲ. ಇದು ಒಂದು ಮಿತಿ. ಹೀಗಾಗಿ ಇಲ್ಲೇನಾಗುತ್ತದೆ ಎಂದರೆ ಪಾತ್ರಚಿತ್ರಣಕ್ಕೆ ಮತ್ತು ಕಥಾನಕದ ನಿರೂಪಣೆಗೆ ಅನಿವಾರ್ಯವಾಗಿ ಇನ್ನೊಬ್ಬ ಮೂರನೆಯ ವ್ಯಕ್ತಿಯ ಹೇಳಿಕೆ/ಮಾತು ಅನಿವಾರ್ಯವಾಗುತ್ತ ಹೋಗುತ್ತದೆ. ಇಲ್ಲಿ ಬರುವ ಒಂದೊಂದು ಪಾತ್ರದ ಬಗ್ಗೆಯೂ ಕಾಯ್ನಾಟ್ ನೋಟದ ಹೊರತಾದ ಒಂದು ನೋಟ ನಮಗೆ ಸಿಗಬೇಕಾದರೆ ಅದನ್ನು ಇನ್ಯಾರೋ ಹೇಳುವ ಮಾತುಗಳಿಂದ ಪಡೆಯಬೇಕಾಗುತ್ತದೆ ಮತ್ತು ಅನಿವಾರ್ಯವಾಗಿ ಆ ಇನ್ಯಾರೋ ಹೇಳುವ ಮಾತುಗಳು ಕಾಯ್ನಾಟ್ ಕಿವಿಗೆ ಬಿದ್ದೇ ನಮಗೆ ದಾಟಿಸಲ್ಪಡಬೇಕಾಗುತ್ತದೆ. ಒಂದು ಕಡೆ ಮಾತ್ರ ವಿಪುಲ್ ಟೇಪ್ ರೆಕಾರ್ಡರ್‌ನಲ್ಲಿ ಧ್ವನಿಮುದ್ರಿಸಿಕೊಂಡು ತಂದ ಮಾತುಗಳನ್ನು ಕೇಳುತ್ತೇವೆ. ಮಾತು ಕೇಳಿಸಿಕೊಳ್ಳುವಾಗ ಇದ್ದರೂ ಅವುಗಳು ಆಡಲ್ಪಟ್ಟಾಗ ಅಲ್ಲಿ ಕಾಯ್ನಾಟ್ ಇರಲಿಲ್ಲ. ಒಟ್ಟಾರೆ ಇಲ್ಲಿ ಓದುಗನಿಗೆ ದಕ್ಕಬೇಕಾದ ಗ್ರಹಿಕೆಗಳು ಕಾಯ್ನಾಟ್ ಕಟ್ಟಿಕೊಡುವ, ಅವಳ ಗ್ರಹಿಕೆಗಳೂ ಆಗಿರುತ್ತವೆ.

ಎರಡನೆಯದು, ನೀವು ತೀರ ಕಣ್ಣೆದುರಿನ ವಸ್ತುಸ್ಥಿತಿಯನ್ನೇ ಸೃಜನಶೀಲ ಸಾಹಿತ್ಯದ ರಂಗಭೂಮಿಯನ್ನಾಗಿ ಮಾಡಿಕೊಂಡು ಕಾದಂಬರಿ ಬರೆಯಲು ಹೊರಟರೆ ಆಗುವ ಹಾಗೆ ವ್ಯಂಗ್ಯ, ವಿಡಂಬನೆ, ಸಿನಿಕತನ ಎನಿಸಬಹುದಾದ ನೆಲೆಯ ಮಾತು, ನಿರೂಪಣೆ ಅನಿವಾರ್ಯವಾಗಿ ಬಿಡುತ್ತದೆ. ಇಲ್ಲಿ ನಿಮಗೆ ಕಾಣಿಸುವುದಕ್ಕೂ ಹೇಳುವುದಕ್ಕೂ ಇರುವ ಅಂತರ ಕೂದಲೆಳೆಯದ್ದು. ನೀವು ಕಾಣಿಸುತ್ತಿರುವ ಪ್ರತೀ ಚಿತ್ರದ ಫ್ರೇಮ್‌ನಲ್ಲಿಯೇ ಕೊಂಕು, ವಿಡಂಬನೆ, ವ್ಯಂಗ್ಯ ಎದ್ದು ಕಾಣುತ್ತಿರುತ್ತದೆ. ಹೀಗಾಗಿ ನೀವು ಹೇಳುವುದು ಮತ್ತು ಕಾಣಿಸುತ್ತಿರುವುದು ಎರಡೂ ಬೇರೆ ಬೇರೆಯಾಗಿ ಉಳಿಯುವುದೇ ಇಲ್ಲ. ಇದರಿಂದೇನಾಗುತ್ತದೆ ಎಂದರೆ, ಮೊದಲು ತಮಾಷೆಯಾಗಿ ಕಾಣುವ ಇದೆಲ್ಲ ಬರಬರುತ್ತ ಸಿನಿಕತನ ಎನಿಸಲು ಸುರುವಾಗಿ ಒಂದು ಹಂತದಲ್ಲಿ ಈ ಸಿನಿಕತನದ ಮೂಲ ಈ ಕೇಂದ್ರಪ್ರಜ್ಞೆಯ ವ್ಯಕ್ತಿಗತ ಬದುಕು, ಪರಿಸ್ಥಿತಿ ಮತ್ತು ಮನೋಧರ್ಮದಿಂದ ಹುಟ್ಟಿದ್ದೇ ಅಥವಾ ಒಬ್ಬ ಸಂತೃಪ್ತ ಮನಸ್ಸಿನ, ಸಹಜವಾಗಿ ನೋಡುವ ನಿರೂಪಕನ ಪ್ರಜ್ಞೆಯಲ್ಲೂ ಹುಟ್ಟುವಂಥಾದ್ದೆ ಎನ್ನುವುದು ಪ್ರಶ್ನಾತೀತವಾಗಿ ಉಳಿಯುವುದಿಲ್ಲ. ಹಾಗಾಗಿ ಎಷ್ಟೆಷ್ಟು ನಾವು ಕಾಯ್ನಾಟ್ ಎಂಬ ಪಾತ್ರದೊಂದಿಗೆ ಬೆರೆತು ಹೋಗುತ್ತೇವೆಯೋ ಅಷ್ಟಷ್ಟು ನಮಗಿದು ಹೌದು ಎನಿಸುವಂತೆ ಆ ಪಾತ್ರದಿಂದ ಬೇರೆಯಾಗಿ ಉಳಿಯುತ್ತ ನೋಡುವಾಗ ಅನಿಸಲೇ ಬೇಕಾದ್ದಿಲ್ಲ. ಕಾಯ್ನಾಟ್ ನೀತಿ-ನಿಲುವು ಒಪ್ಪಿಕೊಳ್ಳುವ ಅಥವಾ ಒಪ್ಪಿಕೊಳ್ಳದೇ ಇರುವ ಪ್ರಶ್ನೆಗಿಂತ ದೊಡ್ಡದಾದ ಮತ್ತು ಮೂಲಭೂತವಾದ ಪ್ರಶ್ನೆಯಿದು. ಕಾಯ್ನಾಟ್ ಬೂಟುಗಳಲ್ಲಿ ನಮ್ಮ ನಮ್ಮ ಪಾದಗಳನ್ನು ಹುದುಗಿಸದೇ ಇಲ್ಲಿನ ಸಂವೇದನೆಗಳಿಗೆ ನಾವು ಸ್ಪಂದಿಸುವುದು ಕಷ್ಟ.

ಇವೆರಡೂ ಈ ಕಾದಂಬರಿ ಎದುರಿಸುವ ಬಹುದೊಡ್ಡ ಸವಾಲು. ಈ ಸವಾಲು ವಿವೇಕ್ ಶಾನಭಾಗರ ‘ಊರುಭಂಗ’ ಕಾದಂಬರಿಯಲ್ಲಿ ಬರುವ ‘ಪಾಲಿಟಿಕ್ಸ್ ಆಫ್ ಮೆಮೊರಿ’ ತರದ್ದೇ ‘ಪಾಲಿಟಿಕ್ಸ್ ಆಫ್ ನರೇಶನ್’ ಇಲ್ಲಿ ಇಣುಕುವ ಸಾಧ್ಯತೆಗೆ ಬಾಗಿಲು ತೆರೆದಿಡುತ್ತದೆ. ಕಾಯ್ನಾಟಳನ್ನು ಅರ್ಥ ಮಾಡಿಕೊಳ್ಳುವುದು, ಅವಳ ಮನೋಧರ್ಮಕ್ಕೆ ಸ್ಪಂದಿಸುವುದು, ತನ್ಮೂಲಕ ಇಲ್ಲಿ ಅವಳು ನಮಗೆ ನಿರೂಪಿಸುವ (ಆಯ್ದ) ಚಿತ್ರಗಳಿಂದಲೇ ಒಟ್ಟು ಆಕೃತಿ/ಆಶಯ/ಚಿತ್ರ ಕಟ್ಟಿಕೊಳ್ಳುವುದು ಎಲ್ಲವೂ ಒಂದೇ ಹಂತವಾಗಿದೆ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಎನ್ನುವ ಹಂತವೊಂದು ಉಳಿಯುವುದಿದ್ದರೆ ಅದು ಆಮೇಲಿನದು.

ಹೀಗಾಗಿ ಅಂಜುಂ ಹಸನ್ ಕಾಯ್ನಾಟ್ ಪಾತ್ರವನ್ನು ಪೋಷಿಸುವುದಕ್ಕೆ ವಿಶೇಷ ಗಮನ ನೀಡಬೇಕಾಗುತ್ತದೆ ಮತ್ತು ಅದು ಕಥಾನಕದ ಚಲನೆಗೆ ಹೊಂದಿಕೊಂಡು ಸಾಗಬೇಕಾಗುತ್ತದೆ. ಇದು ಎಷ್ಟೆಂದರೆ, ಕಾದಂಬರಿಯ ಯಶಸ್ಸು ಕೂಡ ನಿಂತಿರುವುದು ಕಾಯ್ನಾಟ್ ಎಷ್ಟರಮಟ್ಟಿಗೆ ಓದುಗನನ್ನು ಆವರಿಸಿಕೊಳ್ಳುತ್ತಾಳೆ ಎನ್ನುವುದರ ಮೇಲೆಯೇ ಎನ್ನಬಹುದಾದಷ್ಟು.

ಅಂಜುಂ ಅವರು ಹೇಳಿಕೊಂಡಂತೆ ಈ ಕಾದಂಬರಿ ಬರೆಯಬೇಕಾದರೆ ಅವರ ಮನಸ್ಸಿನಲ್ಲಿ ಇದ್ದ ಮೂರು ನಾಲ್ಕು ವಿಚಾರಗಳು ಇವು:

1. ಒಬ್ಬ ನಡುವಯಸ್ಸಿನ ಯುವತಿ, ಒಂಟಿ, ಸ್ವಾಭಿಮಾನಿ ಮತ್ತು ಸ್ವತಂತ್ರವಾದ ಚಿಂತನೆಗಳಿರುವ ಯುವತಿ ಬೆಂಗಳೂರಿನಂಥ ಒಂದು ನಗರದಲ್ಲಿ ದೇಶ ಕಟ್ಟುವ ಒಂದು ತಲೆಮಾರು ಮತ್ತು ಎಂಟಿವಿ, ಎಫ್ ಟಿವಿ ಸಂಸ್ಕೃತಿಯ ಹೈಟೆಕ್ ತಲೆಮಾರು ಎರಡರ ನಡುವಿನ ಸಂಘರ್ಷಗಳನ್ನು ಹೇಗೆ ಎದುರಿಸುತ್ತಾಳೆ ಎನ್ನುವುದು.

2. ಕಲೆ, ಕಲಾವಿದ, ಕಲೆಯ ಸಂಗ್ರಾಹಕ, ಕಲಾ ವಿಮರ್ಶಕ, ಸಾಮಾನ್ಯ ರಸಿಕ, ಅವನ ರಸಾಸ್ವಾದದ ನೆಲೆ ಮತ್ತು ಬಗೆ, ಹಾಗೂ ಇದನ್ನೆಲ್ಲ ‘ಆಚರಿಸುವ’ ಮಂದಿಯ ನಡುವೆಯೇ ಇದರ ಸಂಭ್ರಮವನ್ನು ಹುಸಿ ಎಂಬಂತೆ, ನಿರ್ಲಿಪ್ತವಾಗಿ ಕಾಣಬಹುದಾದ ಒಂದು ನೋಟ - ಎರಡರ ಕಾಂಟ್ರಾಸ್ಟ್;

ಕಲಾ ಜಗತ್ತಿನಲ್ಲಿ ಸಹಜವೆಂಬಂತೆ ಹೊಂದಿಕೊಂಡು ಬಿಟ್ಟಿರುವ ಮಾನವೀಯ ಕಾಮಿಡಿ ಮತ್ತು ಮಾನವೀಯ ಟ್ರಾಜಿಡಿ;

ಒಂದು ಕಲೆಯ ಪ್ರಯಾಣ, ಮತ್ತು ಇಂಥ ಪ್ರಯಾಣ ಅಥವಾ ವಲಸೆಯಿಂದಾಗಿಯೇ ಪರವೂರಿನಲ್ಲಿ ಅದು ಗಳಿಸಿಕೊಳ್ಳುವ ಮೌಲ್ಯವನ್ನು ಕಲೆಯ ಹುಟ್ಟಿನೂರಿನ ಮಂದಿ ಗ್ರಹಿಸುವ ಬಗೆ ಇತ್ಯಾದಿ.

3. ಕಳೆದ ಐದಾರು ದಶಕಗಳಲ್ಲಿ ಆಗಿರುವ ಬೆಂಗಳೂರಿನ ಬೆಳವಣಿಗೆ, ಅದರ ಹಿಂದಿನ ದಿನಗಳ ಕುರಿತಾದ ಕನವರಿಕೆ, ಒಳಗಿನವನಾಗಿ ಅಲ್ಲದಿದ್ದರೂ ಹೊರಗಿನವನಾಗಿಯಾದರೂ, ಸಾಮಾನ್ಯ ನೋಟವೊಂದರ ಮೂಲಕ ಈ ಬೆಳವಣಿಗೆಯನ್ನು ಕಾಣುವ ಒಂದು ಪ್ರಯತ್ನ.

4. ಬೆಂಗಳೂರಿನಂಥ ದೊಡ್ಡ ನಗರ ಮತ್ತು ಸಿಂಹಳದ ಧರ್ತಿಯಂಥ ಪುಟ್ಟ ಊರು ಎರಡಕ್ಕೂ ಹೊಂದಿಕೊಳ್ಳುವ ಸಾಧ್ಯತೆಯನ್ನು ಎಲ್ಲ ವರ್ಗದ ಮಂದಿ ಉಳಿಸಿಕೊಂಡಿರದೇ ಇರುವುದನ್ನು ಗಮನಿಸುತ್ತಲೇ ಈ ಎರಡರ ನಡುವೆ ನಾವು ಕಂಡುಕೊಂಡಂತೆ ‘ಕಳೆದುಕೊಳ್ಳುವ’ ಮತ್ತು ‘ಉಳಿಸಿಕೊಳ್ಳುವ’ ಹತ್ತು ಹಲವು ಸಂಗತಿಗಳ ಕುರಿತಾದ ಪ್ರಜ್ಞೆ, ಆಮಿಷ, ಮೋಹ, ಅನಿವಾರ್ಯತೆ ಇತ್ಯಾದಿ ಹುಟ್ಟಿಸುವ ಒಂದು ಒತ್ತಡಗಳ ಕುರಿತ ಭಯ, ಹಾಗೂ ಈ ಭಯ ಕೂಡ ಎಷ್ಟರ ಮಟ್ಟಿಗೆ ಕಪೋಲ ಕಲ್ಪಿತ, ಅಥವಾ ನಿಜ ಎಂಬುದರ ಜಿಜ್ಞಾಸೆ. ಇಲ್ಲಿ ಯಾವುದೇ ಒಂದು ಪುಟ್ಟ ಊರು ಹೆಚ್ಚು ‘ನಿಜ-ಸಹಜ’ ಮತ್ತು ನಗರ ಹೆಚ್ಚು ‘ನಾಟಕೀಯ - ಹಿಪೊಕ್ರಾಟ್’ ಎಂದೇನಿಲ್ಲ.

- ಈ ಯಾವತ್ತೂ ಅಂಶಗಳೇ ಕಾದಂಬರಿಯನ್ನು ಪರಿಪೂರ್ಣವಾಗಿ ರೂಪಿಸಿರುವುದು ನಿಜ. ಕಾದಂಬರಿಯನ್ನು ಸಮಪ್ ಮಾಡುವುದಾದರೆ ಈ ಮೇಲಿನ ಮಾತುಗಳು ಅದನ್ನು ಬಹಳ ನಿರ್ದಿಷ್ಟವಾಗಿಯೂ ನಿಖರವಾಗಿಯೂ ಮಾಡುತ್ತಿವೆ ಎನ್ನುವುದು ಕೂಡ ನಿಜ. ಆದರೆ ಯಾರೂ ಗಮನಿಸಬಹುದಾದಂತೆ, ಈ ಯಾವತ್ತೂ ಅಂಶಗಳಲ್ಲಿ ಕಥಾನಕದ ಅಂಶ, ಕಥಾನಕದ ಪಾತ್ರವೇನಿರುತ್ತದೆ ಎನಿಸುವುದಿಲ್ಲವೆ? ತೀರ ಪ್ರಜ್ಞೆಗೆ, ತರ್ಕಕ್ಕೆ ಮತ್ತು ಬುದ್ಧಿಗೆ ಸಂಬಂಧಿಸಿದ ‘ವಿಚಾರಗಳೇ’ ಇಲ್ಲಿರುವಂತೆಯೂ ಕಾಣಿಸುತ್ತದೆ. ಇದನ್ನು ಕಥಾನಕದ ಹಂದರದಲ್ಲಿರಿಸುವುದು ಬಹುಮುಖ್ಯವಾದ ಸವಾಲು. ಇದನ್ನು ಎದುರಿಸಿದ ವಿಶಿಷ್ಟವಾದ ಬಗೆಯಲ್ಲಿಯೇ ಈ ಕಾದಂಬರಿಯ ಮಹತ್ವವಿದೆ.

ಒಂದು ಸಾವು, ಆಕಸ್ಮಿಕವಾಗಿ ಘಟಿಸಿದ್ದಾದರೂ ಅದನ್ನು ಕೊಲೆ ಎಂದೂ ಕಾಣಬಹುದು ಎನ್ನುವ ಅಂಶವೇ ಪಾಪಪ್ರಜ್ಞೆ ಅಥವಾ ಮನಸ್ಸು ಕಾಡುವ ಸಂಗತಿಯಾದಾಗ ಕಾಯ್ನಾಟ್ ಬೆಂಗಳೂರು ಬಿಟ್ಟು ಸಿಂಹಳಕ್ಕೆ ಬರುತ್ತಾಳೆ. ಈ ಸಿಂಹಳದ ವಾಸ್ತವ್ಯದ ಭಾಗ ಕಾದಂಬರಿಯ ಮೊದಲ ಭಾಗಕ್ಕೆ ಒದಗಿಸುವ ಕಾಂಟ್ರಾಸ್ಟ್‌ನಲ್ಲೇ ಇಡೀ ಕಾದಂಬರಿಗೆ ಒಂದು ಚೌಕಟ್ಟು ಲಭ್ಯವಾಗಿದೆ. ಮೊದಲ ಭಾಗದ ನಿಧಾನಗತಿ, ಕಥಾನಕದ ಕೊರತೆ, ಒಂದು ಮಟ್ಟದ ಏಕತಾನತೆ ಇಲ್ಲಿ ಮಾಯವಾಗಿದ್ದು ಚುರುಕಿನಿಂದ ಸಾಗುವ ಕಾದಂಬರಿ ಇಷ್ಟವಾಗುತ್ತದೆ ಮಾತ್ರವಲ್ಲ ಸಾಕಷ್ಟು ಕೌತುಕವನ್ನೂ ಉಂಟು ಮಾಡುತ್ತದೆ. ಕ್ರಾಂತಿಕಾರಿ ಬಂಡುಕೋರರ ವಿಧ್ವಂಸಕ ಕೃತ್ಯಗಳು, ರಾಜಮನೆತನಕ್ಕೆ ಸೇರಿದ ದೊರೆಯ ನಿಗೂಢ ನಡೆ, ಕೊನೆತನಕ ಕಣ್ಣಿಗೆ ಬೀಳದ ಪಾಠಕ್, ವಿಚಿತ್ರವಾಗಿ ಒಮ್ಮೆ ಬಫೂನ್ ತರ ಒಮ್ಮೆ ಅಪಾಯಕಾರಿ ವ್ಯಕ್ತಿಯ ತರ ಕಾಣಿಸಿಕೊಳ್ಳುವ ವಿಪುಲ್ ಮತ್ತು ಇವರೆಲ್ಲರ ನಡುವೆ ನೃತ್ಯ ಪ್ರಕಾರವೊಂದರ ಅಧ್ಯಯನಕ್ಕೆಂದು ಬಂದು ಸಿಕ್ಕಿ ಹಾಕಿಕೊಂಡಂತೆ ಕಾಣುವ ಕಾಯ್ನಾಟ್ ಕೇವಲ ಕಥಾನಕದ ನೆಲೆಯಲ್ಲಿ ಮಾತ್ರವಲ್ಲ, ಇಲ್ಲಿನ ಪುಟ್ಟ ಊರಿನ, ಸಾಮಾನ್ಯ ಜನರ ಬದುಕಿನ, ಪ್ರಾಕೃತಿಕ ವಿವರಗಳ ಮೂಲಕವೂ ಆಪ್ತವಾಗುತ್ತ ಅತ್ಯುತ್ತಮವಾದ ಲಯ ಪಡೆದುಕೊಂಡಿದೆ. ಆದರೆ, ಇದೇ ಹೊತ್ತಿಗೆ ಮೊದಲ ಭಾಗದ ತುಂಬ ಕಾಯ್ನಾಟ್ ಒಂದು ಕೇಂದ್ರಪ್ರಜ್ಞೆಯಾಗಿ ದಟ್ಟವಾಗಿ ಆವರಿಸಿಕೊಂಡಿದ್ದ ಛಾಯೆ ಏನಿತ್ತು, ಅದು ಮಾಯವಾಗಿ ಇಡೀ ಊರು ಆ ಕೇಂದ್ರವಾಗಿ ಬದಲಾಗುತ್ತದೆ ಮತ್ತು ಹಾಗಾಗಿ ಓದುಗನ ಮನಸ್ಸನ್ನು ಕಾಯ್ನಾಟ್ ಆವರಿಸಿಕೊಳ್ಳುವುದಕ್ಕೆ ತೊಡಕಾಗುತ್ತದೆ. ಇಲ್ಲಿ ಕಾಯ್ನಾಟ್‌ಳ ಮಾನಸಿಕ ತುಮುಲಗಳಿಗೆ ಅಷ್ಟೇನೂ ಅವಕಾಶವಿಲ್ಲ. ಅವಳದ್ದೇನಿದ್ದರೂ ಕ್ರಿಯೆ ಮತ್ತು ಕ್ರಿಯೆಯ ಮೂಲಕ ಹೊರಬರಬೇಕಾದಂಥ ಒಂದು ವಾತಾವರಣ ಸೃಷ್ಟಿಯಾಗುತ್ತದೆ. ಇಲ್ಲಿ ಓದುಗನ ಆಸಕ್ತಿ ದೊರೆಯ ಪಾತ್ರಕ್ಕೆ, ನೇರವಾಗಿ ಎಂದೂ ಕಾಣಿಸಿಕೊಳ್ಳದ, ಒಂದು ನೆರಳಿನಂಥ ಪಾಠಕ್ ಪಾತ್ರಕ್ಕೆ, ಅವನ ಪ್ರತಿನಿಧಿಯಂತಿರುವ ವಿಪುಲ್ ಪಾತ್ರಕ್ಕೆ, ಲೈಬ್ರರಿಯಲ್ಲಿ ಸಿಗುವ ಕುತೂಹಲಕರ ಹಿನ್ನೆಲೆಯ ಮಾಲ್ತಿ ಪಾತ್ರಕ್ಕೆ ಸಮಾನವಾಗಿ ಜಿಗಿಯುತ್ತದೆ, ಹಂಚಿ ಹೋಗುತ್ತದೆ. ಮೊದಲ ಭಾಗದ ಬಬನ್, ತಾನ್ಯಾ, ಸಾರಾ, ಸಾಥಿ ಮುಂತಾದ ಯಾವುದೇ ಪಾತ್ರಗಳಲ್ಲಿ ಇಂಥ ಕಸು ಇರಲಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಇಷ್ಟಾಗಿಯೂ ಇಡೀ ಕಾದಂಬರಿ ಹಳತು ಹೊಸತರ ನಡುವಿನ ಒಂದು ಸಂಘರ್ಷವನ್ನು, ಆಯ್ಕೆಯ ಕಿರಿಕಿರಿಗಳಿಲ್ಲದೆ ತೆರೆದಿಡುವುದಕ್ಕೇ ಹೆಚ್ಚು ಒತ್ತು ನೀಡಿದೆ ಎಂದು ಅನಿಸದೇ ಇರದು. ಕಾದಂಬರಿಯ ಮೊದಲಿಗೇ ಬಬನ್ ನಿರ್ಮಿಸಿದ ಕಲಾಕೃತಿ ನಾಸ್ಟಾಲ್ಜಿಯ ಇದೆ. ಇಡೀ ಕಾದಂಬರಿಯ ಉತ್ತರಾರ್ಧ ಇರುವುದು ಇದರ ಸುತ್ತ ಎಂದರೂ ತಪ್ಪಾಗಲಾರದು. ಈ ಭಾಗದ ಯಾವತ್ತೂ ಪಾತ್ರಗಳು ಈ ಕಲಾಕೃತಿಯ ಪ್ರದರ್ಶನದಲ್ಲಿಯೇ ಮುಖಾಮುಖಿಯಾಗುತ್ತವೆ. ಅವರವರ ನಡುವಿನ ಸಂಬಂಧಗಳು, ಗೊಂದಲಗಳು ಮತ್ತು ತಿಕ್ಕಾಟಗಳು ಇಲ್ಲಿಯೇ ಕಾಣಿಸುತ್ತವೆ. ಕಾಯ್ನಾಟಳ ಗತಿಸಿರುವ ತಂದೆ ಮತ್ತು ಅದಕ್ಕೆ ಸಂಬಂಧಿಸಿದ ವಿವರಗಳು ಮಾತ್ರವೇ ಈ ಅಧ್ಯಾಯದ ಹೊರಗೆ ಉಳಿದ ಸಂಗತಿ.

ಬಬನ್ ವ್ಯಕ್ತಿತ್ವದಲ್ಲಿ ಕಾಣಬಹುದಾದ, ಅವನು ವಿದೇಶಕ್ಕೆ ಹಾರುವುದಕ್ಕೂ ಮುನ್ನಿನ ಮತ್ತು ನಂತರದ ಒಂದು ಪಲ್ಲಟ; ಕಾಯ್ನಾಟ್ ತಂದೆ ಬೆಂಗಳೂರಿನಲ್ಲಿ ನೆಲೆಗೊಂಡಾಗಿನ ಬೆಂಗಳೂರು ಮತ್ತು ಈಗಿನ ಬೆಂಗಳೂರು (ಕಾಯ್ನಾಟ್ ವ್ಯಕ್ತಿತ್ವದಿಂದ ಇದನ್ನು ಬಿಡಿಸಿ ನೋಡುವುದಂತೂ ಅಸಾಧ್ಯ); ಕಲಾ ಸಂಗ್ರಾಹಕಿ ಸಾರಾ ಮತ್ತು ಕಲೆ-ಕಲಾವಿದರ ಜಗತ್ತಿನ ಭ್ರಾಮಕ ಅಂಶಗಳನ್ನು ಬಿಟ್ಟುಕೊಟ್ಟು ಅದನ್ನು ಕಾಣಬಲ್ಲ ಸಾಥಿ ನಡುವಣ ಕಾಂಟ್ರಾಸ್ಟ್; ತಾನ್ಯಾ ಮತ್ತು ಪೈ - ಇಬ್ಬರು ಕಲೆಯನ್ನು ಕಾಣುವ, ಕಾಣಬಯಸುವ ಮತ್ತು ಇತರರಿಗೆ ರೆಡಿಮೇಡ್ ಫಾಸ್ಟ್‌ಫುಡ್ ತರ ಕಟ್ಟಿಕೊಡಬಯಸುವ ಒಂದು ಚಿತ್ರದಲ್ಲಿಯೇ ಇರುವ ಸಂಘರ್ಷ; ಕಾಯ್ನಾಟ್ ಮತ್ತು ಈ ಬಬನ್, ತಾನ್ಯಾ, ಸಾರಾ, ಸಾಥಿ, ಪೈ ಪಾತ್ರಗಳ ನಡುವಿನ ಸಂಘರ್ಷ; ಕಾಯ್ನಾಟ್ ತಾಯಿ ಮತ್ತು ಕಾಯ್ನಾಟ್, ಕಾಯ್ನಾಟ್ ತಂದೆ ಮತ್ತು ಕಾಯ್ನಾಟ್ ನಡುವಿನ ಸೂಕ್ಷ್ಮ ಸಂಘರ್ಷಗಳು ಈ ಭಾಗದಲ್ಲಿ ತುಂಬಿವೆ. ಇಲ್ಲಿ ಯಾವುದೇ ಸಂತುಲನದ ಒಂದೂ ಸಂಬಂಧ ಇಲ್ಲದಿರುವುದು ಅಚ್ಚರಿಯ ಮತ್ತು ದಿಗ್ಭ್ರಾಂತಿ ಮೂಡಿಸುವ ಅಂಶ. ಅದು ಇದ್ದರೆ ಬಹುಶಃ ಶಿವಾಜಿನಗರದ ದಂಧೆ ನಡೆಸುವ ಶಾರುಖ್ ಭಾಯಿಯ ಪಾತ್ರದಲ್ಲಿಯೇ ಎನಿಸುತ್ತದೆ!

ಹೀಗಾಗಿ, ಕಾಯ್ನಾಟ್ ಪಾತ್ರದ ಮೂಲಕವೇ ಎಲ್ಲವನ್ನೂ ನೋಡುತ್ತ, ಅವಳನ್ನು ಅರಿಯುತ್ತ, ಅವಳ ಮೂಲಕ ಇತರರನ್ನು, ಇತರೆಲ್ಲ ಸಂಗತಿಯನ್ನು ಅರಿಯುತ್ತ, ಇದರಲ್ಲಿನ ‘ಪೊಲಿಟಿಕ್ಸ್ ಆಫ್ ನರೇಶನ್’ ಬಗ್ಗೆ ಅರಿವಿದ್ದೂ ಈ ಸಂಘರ್ಷಮಯ ಚಿತ್ರವನ್ನು ಹೇಗೆ ಸ್ವೀಕರಿಸಬೇಕು ಎನ್ನುವುದು ಒಂದು ಜಿಜ್ಞಾಸೆಯಾಗಿ ಬಿಡುತ್ತದೆ. ಇಂಥದ್ದು ಕಾದಂಬರಿಯ ಎರಡನೆಯ ಭಾಗದಲ್ಲಿ ಇಲ್ಲದಿರುವುದು ಮತ್ತು ಇಲ್ಲದೆಯೂ ಅದು ಕಾದಂಬರಿಯ ಮೊದಲ ಭಾಗಕ್ಕೆ ಒಡ್ಡುವ ಪರಿಪ್ರೇಕ್ಷ್ಯ ಮಹತ್ವದ್ದು.

ಎರಡನೆಯ ಭಾಗದಲ್ಲಿ ನೇರವಾಗಿ ಮಾಲ್ತಿ ಪಾತ್ರವೇ ಕಾಯ್ನಾಟ್ ಪಾತ್ರಕ್ಕೆ ಒಂದು ಸಂಘರ್ಷವನ್ನೊಡ್ಡುತ್ತಿದೆ. ಇಲ್ಲಿನ ನೃತ್ಯಕಲೆ ತನ್ನ ಅತ್ಯಂತ ಸಾಮಾನ್ಯ ನೆಲೆಯಲ್ಲಿ ತಾನ್ಯಾ ಮತ್ತು ಬಬನ್ ಅವರ ಕಲೆಯ ಮೂಲನೆಲೆಯ ಪರಿಕಲ್ಪನೆಗೆ ಸಂಘರ್ಷವನ್ನೊಡ್ಡಿದರೆ ಅದೇ ನೃತ್ಯಕಲೆಯನ್ನು ವಿದೇಶಕ್ಕೊಯ್ದು ಬಳಸಿಕೊಂಡ ಪಾಠಕ್ ಒಂದು ಸ್ತರದಲ್ಲಿ, ದೊರೆ ಇನ್ನೊಂದು ಸ್ತರದಲ್ಲಿ ಸಂಘರ್ಷದ ನೆಲೆಗಳನ್ನು ಒದಗಿಸುತ್ತಿದ್ದಾರೆ. ಇಷ್ಟಲ್ಲದೆ ಸ್ವತಃ ಮಾಲ್ತಿ ಒಂದು ನೆಲೆಯಲ್ಲಿ ತನ್ನವರ ಹೋರಾಟವನ್ನು ಬೆಂಬಲಿಸುತ್ತ, (ಅವರಿಂದಲೇ ಹತ್ಯೆಯಾದ ಪತಿಯ ವಿಯೋಗದ ನೋವಿನಲ್ಲೂ) ತನ್ನ ಮಗ ಇದೆಲ್ಲದರಿಂದ ದೂರವಾಗಿ ಬದುಕು ಕಟ್ಟಿಕೊಳ್ಳಲಿ ಎಂದು ಬಯಸುತ್ತಾಳೆ. ಇದಕ್ಕೆ ಪ್ರತಿಯಾಗಿ ಆಧುನಿಕತೆಯನ್ನೇ ಒಂದು ತೊಡಕು ಎಂದು ತಿಳಿಯುವ ದೊರೆ ಕಾಯ್ನಾಟ್‌ ಸಖ್ಯವನ್ನು ಬಯಸುತ್ತಲೇ, ತನ್ನ ತಾಯಿಯ ಆರೋಗ್ಯವನ್ನು ಬಯಸುತ್ತಲೇ ಅಮಾನವೀಯವಾದ ಮೌಢ್ಯವನ್ನು ಆತುಕೊಳ್ಳುತ್ತಾನೆ. ಹಳತು-ಹೊಸತರ ಸಂಘರ್ಷದ ನೆಲೆಗಳನ್ನು ಇಷ್ಟು ಸಂಕೀರ್ಣವಾಗಿ ಕಾಣುತ್ತಿರುವುದೇ ಈ ಕೃತಿಯ ಹೆಗ್ಗಳಿಕೆಯೂ ಆಗಿದೆ. ಮಾಲ್ತಿ ಮತ್ತು ದೊರೆಯಂಥವರ ನಡುವೆಯೇ ಎಲ್ಲವನ್ನೂ ಬಳಸಿಕೊಂಡು ಕೊಬ್ಬುತ್ತಿರುವಂತೆ ಕಾಣುವ ಪಾಠಕ್ ಮತ್ತು ವಿಪುಲ್ ಇದ್ದಾರೆ ಮಾತ್ರವಲ್ಲ ಕೊನೆಗೂ ಕಾಯ್ನಾಟ್ ಅವರದೇ ಸಹಾಯ ಪಡೆದು ಅಲ್ಲಿಂದ ಪಾರಾಗಬೇಕಾಗುತ್ತದೆ ಕೂಡ!

ಸಂವೇದನಾಶೀಲ ಆಧುನಿಕ ಮನುಷ್ಯನ ಸರಿ-ತಪ್ಪು, ಹಳತು-ಹೊಸತು, ಹಣ-ಮೌಲ್ಯ, ಕಲೆ-ವ್ಯಾಪಾರ, ಪಾಪಪ್ರಜ್ಞೆ ಮತ್ತು ಪೂರ್ವಾಗ್ರಹಗಳ ಒಂದು ಸಂಕೀರ್ಣ ಸಂಘರ್ಷವಷ್ಟೇ ಇಲ್ಲಿದೆ, ತೀರ್ಮಾನಗಳಲ್ಲ, ಮಾರ್ಗದರ್ಶಿ ಸೂತ್ರಗಳಲ್ಲ, ಬಿಕ್ಕಟ್ಟು ಬಿಡಿಸುವ ಪರಿಹಾರೋಪಾಯಗಳಲ್ಲ. ಅದೇನಿದ್ದರೂ ಓದುಗ ತಾನೇ ಹೊರಬೇಕಾದ ಅವನದೇ ಶಿಲುಬೆಯಾಗಿದೆ. ಆ ಶಿಲುಬೆಯ ರೂಕ್ಷಚಿತ್ರಣವೊಂದು ಮಾತ್ರ ಇಲ್ಲಿದೆ, ಸೂಕ್ಷ್ಮವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅದರ ವಿರಾಟ್ ಸ್ವರೂಪ ಕಣ್ಣೆದುರು ತೆರೆದುಕೊಳ್ಳುತ್ತದೆ. ನೂರ್‌ಜಹಾನಳಂಥ ಕಲಾವಿದೆಯನ್ನು ಬರ್ಬರವಾಗಿ ಕೊಲೆಗೈಯುವ ಒಂದು ಸಮಾಜದಲ್ಲಿಯೇ ಪ್ರತೀಕಾರದ ಹಾದಿಯ ನಿರರ್ಥಕ, ಅರ್ಥಹೀನ ಮತ್ತು ಅನರ್ಥಕಾರಿ ಪರಿಣಾಮಗಳನ್ನು ಕಂಡುಕೊಂಡು ಬದುಕು ಕಟ್ಟಿಕೊಳ್ಳಲು ಸಜ್ಜಾಗುವ ಪುಟಾಣಿ ಚೋಟು ಇಂಥ ಬಿಕ್ಕಟ್ಟುಗಳನ್ನು ಸಮರ್ಥವಾಗಿ ನಿಭಾಯಿಸುತ್ತಾನೆಂಬಂತೆ, ಮೊದಲ ದೃಶ್ಯಕ್ಕೆ ಸಂವಾದಿಯಾದಂಥ ಒಂದು ದೃಶ್ಯದೊಂದಿಗೇ ಕಾದಂಬರಿ ಮುಗಿಯುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ