Saturday, December 24, 2016

ಓದು ಎಂಬುದು ಲಕ್ಷುರಿ

ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಲೇಖನವೊಂದರಲ್ಲಿ ಓದುವ ಪ್ರಕ್ರಿಯೆಯ ಬಗ್ಗೆ ಬಂದ ಒಂದು ಲೇಖನದಲ್ಲಿ ಪ್ರದೀಪ್ ಸೆಬಾಸ್ಟಿಯೆನ್ ಹೇಳುತ್ತಾರೆ, ಸದ್ಯಕ್ಕೆ ನಮಗೆ ನಮ್ಮದೇ ಒಂದು ಖಾಸಗಿ ಏಕಾಂತಕ್ಕೆ ಮರಳ ಬೇಕೆಂದರೆ ಉಳಿದಿರುವ ಕೆಲವೇ ಕೆಲವು ಉಪಾಯಗಳಲ್ಲಿ ಓದು ಒಂದು. ಈ ಜಗತ್ತಿನ ಜಂಜಾಟಗಳಿಂದ ಸ್ವಲ್ಪ ಹೊತ್ತಿನ ಮಟ್ಟಿಗಾದರೂ ಮುಕ್ತರಾಗಿ ನಮ್ಮೊಳಗೆ ನಾವು ಸೇರಿಕೊಳ್ಳುವ, ನಮ್ಮನ್ನು ನಾವು ಪಡೆದುಕೊಳ್ಳುವ ಒಂದು ಹಾದಿ ಅದು. ಓದು ನಮ್ಮನ್ನೇ ನಮಗೆ ದಕ್ಕಿಸಬಲ್ಲ ಒಂದು ಅದ್ಭುತ ದಾರಿ ಎನ್ನುವುದು ಅವರ ಬಹುಮುಖ್ಯ ಮಾತು.

ಕಳೆದ ಶತಮಾನದ ಕೊನೆ ಕೊನೆಯ ತನಕ ಓದುವುದು ಎಂದರೆ ಅದು ಕಾದಂಬರಿಗಳನ್ನೋ, ಸುಧಾ, ತರಂಗ, ಪ್ರಜಾಮತದಂಥ ಪತ್ರಿಕೆಗಳನ್ನೋ ಎಂತಲೇ ತಿಳಿಯಲಾಗುತ್ತಿತ್ತು. ಆ ನಂತರ ಇದ್ದಕ್ಕಿದ್ದಂತೆ ಸಂಜೆ ಪತ್ರಿಕೆಗಳ ಭರಾಟೆ, ಒಂದಕ್ಕಿಂತ ಹೆಚ್ಚಿನ ದಿನಪತ್ರಿಕೆಗಳ ಭರಾಟೆ ತೊಡಗಿತು. ಅಪರಾಧ ಕುರಿತ ಸುದ್ಧಿ, ವದಂತಿಗಳ ಕಡೆಗೆ ವಿಪರೀತ ಆಸಕ್ತಿ ಹೆಚ್ಚಿ ರಾಜಕೀಯ ಹಗರಣಗಳನ್ನೇ ಕೇಂದ್ರವಾಗಿರಿಸಿಕೊಂಡು ಬರುತ್ತಿದ್ದರೂ ಸಾಹಿತ್ಯಕ್ಕೆ ಅವಕಾಶ ನೀಡಿದ್ದ ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರು ಸೇರಿದಂತೆ ಜ್ವಾಲಾಮುಖಿ, ಅಮೃತದಂಥ ಪತ್ರಿಕೆಗಳ ಸ್ಥಾನವನ್ನು ಕ್ರಮೇಣ ಸ್ಥಳೀಯ ಲಫಡಾಗಳ, ಕೊಲೆ, ಅತ್ಯಾಚಾರಗಳ ಕುರಿತ ಅಂತೆಕಂತೆಗಳನ್ನೂ ರೋಚಕವಾಗಿ ವರದಿ ಮಾಡುವ ಸಂಜೆ ಪತ್ರಿಕೆಗಳ ಅಬ್ಬರ ಆವರಿಸಿಕೊಂಡಿತು. ಟೀವಿ ಚಾನೆಲ್ಲುಗಳ ಸಂಖ್ಯೆಯೂ ವೃದ್ಧಿಸಿದ್ದು ಸರಿಸುಮಾರು ಇದೇ ಕಾಲದಲ್ಲಿ. ಚಾನೆಲ್ಲುಗಳು ಕೂಡ ಕ್ರೈಂಟೈಮ್, ಕ್ರೈಂಸ್ಟೋರಿ ಎಂದೆಲ್ಲ ರೋಚಕ ವರದಿಗಳಿಗೆ ಸಮಯ ಮೀಸಲಿಡುವುದು ಅನಿವಾರ್ಯವಾಯಿತು. ಇದರ ಜೊತೆ ಪುನರ್ಜನ್ಮ, ಅತೀಂದ್ರಿಯ ಲೋಕ, ಕಲ್ಪನಾತೀತ ವಿದ್ಯಮಾನಗಳು ಸೇರಿಕೊಂಡವು. ವದಂತಿ, ಕಲ್ಪನೆ, ಮೂಢನಂಬಿಕೆ ಮತ್ತು ವಾಸ್ತವಗಳ ಒಂದು ಕಲಸುಮೇಲೋಗರವೇ ಪುಂಖಾನುಪುಂಖ ಬರತೊಡಗಿದ್ದು ಹೀಗೆ. ಅಷ್ಟೇಕೆ, ಅರ್ಧಗಂಟೆ ಕಾಲ ಟೀವಿ ವಾಹಿನಿಗಳು ಪ್ರಸರಿಸುತ್ತಿದ್ದ ವಾರ್ತೆಗಳ ಸ್ವರೂಪವೇ ಬದಲಾಗಿ ಅದರಲ್ಲಿ ಹೆಚ್ಚು ಹೆಚ್ಚು ಸಾಮಾನ್ಯ ಜನರ ನಾಪತ್ತೆ, ಕೊಲೆ, ವೈವಾಹಿಕ ಲಫಡಾ, ಓಡಿ ಹೋಗಿದ್ದು, ಕಾಣೆಯಾಗಿದ್ದು, ಹೆಂಡತಿಯನ್ನು ಬಿಟ್ಟಿದ್ದು, ಸುಟ್ಟಿದ್ದು, ವಾಮಾಚಾರ, ಮಠ-ಸ್ವಾಮಿಗಳ ಹಗರಣಗಳೇ ಪ್ರಧಾನವಾಯಿತು. ಪತ್ರಿಕೆಗಳಲ್ಲಿ ಧಾರಾವಾಹಿಗಳು, ಸಣ್ಣಕತೆಗಳು ಕ್ರಮೇಣ ಸಣ್ಣಗಾದವು ಇಲ್ಲವೇ ಮಾಯವಾದವು.


ತದನಂತರ ಸ್ಮಾರ್ಟ್ ಫೋನುಗಳ ಅಲೆ ತೊಡಗಿದ್ದು. ಈಗಂತೂ ಫೇಸ್ ಬುಕ್, ವ್ಯಾಟ್ಸಪ್ ತರದ ಸಾಮಾಜಿಕ ಜಾಲತಾಣಗಳು, ವರ್ತುಲಗಳು ಬಹು ಜನಪ್ರಿಯ. ಯುವ ಜನಾಂಗವನ್ನು ಇನ್ನಿಲ್ಲದಂತೆ ಕಾಡುವ ಆತ್ಮರತಿಯ ಪೋಷಣೆ ಮತ್ತು ಅಸ್ಮಿತೆಯ ಹುಡುಕಾಟದಂಥ ಪ್ರಮುಖ ತುಡಿತಗಳಿಗೆ ಇಲ್ಲಿ ವಿಪುಲ ಅವಕಾಶ. ಇಲ್ಲಿ ಕವಿಗಳು, ಚಿತ್ರಕಾರರು, ಛಾಯಾಚಿತ್ರಕಾರರು, ವರದಿಗಾರರು, ಹಾಡುಗಾರರು, ಸಾಮಾಜಿಕ, ರಾಜಕೀಯ, ಆರ್ಥಿಕ ಮುಂತಾದ ಜ್ವಲಂತ ಸಮಸ್ಯೆಗಳ ವಿಶ್ಲೇಷಕರು, ಕ್ರಾಂತಿಕಾರರು, ಅಭಿಮತ ಸಂಗ್ರಾಹಕರು, ಉಪನ್ಯಾಸಕರು ಹುಟ್ಟಿಕೊಳ್ಳುವ ಬಗೆಯನ್ನು ಕಾಣುವುದು ಸಾಧ್ಯವಿರುವಂತೆಯೇ ಪ್ರಧಾನ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುವವರು, ಅಲ್ಲಿ ವಿಫಲವಾದವರು, ಅಲ್ಲಿ ಪ್ರವೇಶವೇ ಸಿಗದ ಹಂತದಲ್ಲಿರುವವರು, ಅಲ್ಲಿ ಗಟ್ಟಿಗೊಳ್ಳಲು ಇಲ್ಲಿ ವೇದಿಕೆ ನಿರ್ಮಿಸಿಕೊಳ್ಳುತ್ತಿರುವವರು ಕೂಡ ಕಾಣಸಿಗುತ್ತಾರೆ. ಆದರೆ ಇಲ್ಲಿಯೂ ಮಹಾಪೂರದ ಸಮಸ್ಯೆಯಿದೆ. ಯಾರೊಬ್ಬರಿಗೂ ಹೆಚ್ಚು ಹೊತ್ತು ವೇದಿಕೆಯ ಮೇಲೆ ನಿಂತಿರಲು ಅವಕಾಶವಿಲ್ಲ. ಹಾಗಾಗಿ ಇಲ್ಲಿ ಬಿಕರಿಯಾಗುವ ಸರಕೂ ಸ್ಥಾಯಿಯಾಗುವ ಗುಣಮಟ್ಟದ್ದಲ್ಲ, ಅದು ಕೇವಲ ಈ ಕ್ಷಣಕ್ಕೆ ಸಲ್ಲಬೇಕಾದ್ದು, ಚಲನಶೀಲ ಜಗತ್ತಿನ ಸಂಚಾರೀ ಭಾವದ ಅಭಿವ್ಯಕ್ತಿಯ ಮಟ್ಟದಲ್ಲೇ ಇರುತ್ತದೆ ಎನ್ನುವ ಆರೋಪ ತೀರ ಹುರುಳಿಲ್ಲದ್ದೂ ಅಲ್ಲ.

ಸುಮಾರು ದಶಕದ ಹಿಂದೆ ಡಾ||ಭಾಸ್ಕರ ಚಂದಾವರ್ಕರ್, ಸಂಗೀತ ಎಂಬ ಅದ್ಭುತವಾದ ಒಂದು ಸೃಜನಶೀಲ ಕಲೆ ಹೇಗೆ ಕ್ಯಾಸೆಟ್ಟುಗಳಲ್ಲಿ, ಸೀಡಿಗಳಲ್ಲಿ ಜಡವಾಗುತ್ತ ಹೋಯಿತು, ಸಂಗೀತ ಕಚೇರಿಗಳು ಹೇಗೆ ತೆರೆಮರೆಗೆ ಸರಿಯತೊಡಗಿದವು ಎಂದೆಲ್ಲ ವಿವರಿಸುತ್ತಲೇ ಮ್ಯೂಸಿಕ್ ಚಾನೆಲ್ಲುಗಳಿಂದ ಹೇಗೆ ಇವತ್ತು ಸಂಗೀತವೆಂಬುದು ಕೇವಲ "ಕೇಳುವ" ಕಲಾಮಾಧ್ಯಮವಾಗಿ ಉಳಿದೇ ಇಲ್ಲ ಎನ್ನುವುದನ್ನು ವಿವರಿಸಿದ್ದರು. "ಸಾಧ್ಯವಾದಷ್ಟೂ ಕಡಿಮೆ ಬಟ್ಟೆ ತೊಟ್ಟ ನೃತ್ಯಗಾತಿಯರು, ಜಗಮಗಿಸುವ, ಸದಾ ಅಕರಾಳ ವಿಕರಾಳ ಚಲಿಸುವ ಬಣ್ಣಬಣ್ಣದ ಸ್ಪಾಟ್ಲೈಟುಗಳು, ಕಣ್ಣು ನೋಡಿ ಮನಸ್ಸು ಗ್ರಹಿಸುವ ಮೊದಲೇ ತೆರೆಯಿಂದ ಚಕಚಕನೆ ಮಾಯವಾಗುವ ಶಾಟ್ಗಳು, ದೇಹವನ್ನು ಚಿತ್ರವಿಚಿತ್ರವಾಗಿ ಕುಲುಕಿಸುವ ಪ್ರಚೋದನಕಾರಿ ನೃತ್ಯದ ಒಂದು ಮಾಯಾಲೋಕದ ದೃಶ್ಯಗಳಲ್ಲಿ ದಿನದ ಇಪ್ಪತ್ತನಾಲ್ಕು ತಾಸೂ ಬಿತ್ತರಗೊಳ್ಳುತ್ತಲೇ ಇರುವುದೆಲ್ಲ ಸಂಗೀತ. ಇದು ಈ ಚಾನೆಲ್ಲುಗಳ ಸಂಗೀತದ ವ್ಯಾಖ್ಯಾನ." ಚಂದಾವರ್ಕರ್ ಮುಂದೆ ಹೇಗೆ ಇಂಥ ಸಂಗೀತ ಮನಸ್ಸಿನ ಏಕಾಗ್ರತೆಯ ಸಾಮರ್ಥ್ಯವನ್ನೂ ಛಿದ್ರವಿಚ್ಛಿದ್ರಗೊಳಿಸಬಲ್ಲ ಪರಿಣಾಮಕಾರತ್ವ ಹೊಂದಿರುತ್ತದೆ ಎನ್ನುವುದನ್ನು ವಿವರಿಸಿದ್ದರು.

ಸಂಗೀತದ ಕುರಿತಂತೆ ಚಂದಾವರ್ಕರ್ ಅವರು ಆಡಿದ ಮಾತು ಬದಲಾದ ಸ್ವರೂಪದ ಓದಿಗೆ ಕೂಡ ಅನ್ವಯಿಸುತ್ತದೆ. ಬರಬರುತ್ತ ಪತ್ರಿಕೆಗಳಲ್ಲಿ ಕತೆಗಳ ಗಾತ್ರ ಚಿಕ್ಕದಾಗುವುದು, ಹೆಚ್ಚೇನೂ ಆಳವಿಲ್ಲದ, ಆತ್ಮವಿಲ್ಲದ ಬರಹಗಳೇ ಓದುಗರಿಗೆ ಇಷ್ಟವಾಗುವುದು, ಸೀಮಿತ ಅವಧಿಯ ಯಕ್ಷಗಾನ ಬಯಲಾಟಗಳು ಜನಪ್ರಿಯವಾಗುವುದು, ಸಿನಿಮಾಗಳ ಅವಧಿ ಕಡಿತಗೊಳ್ಳುವುದು, ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಹೆಚ್ಚು ಜನಾಕರ್ಷಕವಾಗುವುದು, ಓದಿನಲ್ಲೂ ಕಣ್ಣಾಡಿಸುವುದು, ನೋಡುವುದು ಎಂಬ ಬಗೆ ಹುಟ್ಟಿಕೊಳ್ಳುವುದು ಎಲ್ಲವೂ ಆಧುನಿಕ ಮನುಷ್ಯನ ಸಮಯದ ಅಭಾವವನ್ನಷ್ಟೇ ಸೂಚಿಸುತ್ತಿಲ್ಲ. ಸುದೀರ್ಘಾವಧಿಯ ವರೆಗೆ ಅವನು ಯಾವುದೇ ಒಂದು ಸಂಗತಿಗೆ ಅಂಟಿಕೊಳ್ಳಲಾರ ಎನ್ನುವುದನ್ನೂ, ಅವನ ಏಕಾಗ್ರತೆ ಅಷ್ಟರಮಟ್ಟಿಗೆ ಛಿದ್ರಗೊಂಡಿರುವುದನ್ನೂ ಸೂಚಿಸುತ್ತಲೇ ಅವನ ಸಹನೆ, ವಿವೇಚನೆ ಮತ್ತು ಸ್ಥಿಮಿತದ ಬಗ್ಗೆಯೂ ಬೊಟ್ಟು ಮಾಡುತ್ತದೆ.

ಒಂದು ಕಾಲಕ್ಕೆ ಸಮಾಜದ ಎಲ್ಲ ವರ್ಗಕ್ಕೂ ಓದು ಮುಕ್ತವಾಗಿರಲಿಲ್ಲ. ಓದು ಬರಹ ಬಲ್ಲವರಿಗೂ ಅದು ಬೇರೆ ಬೇರೆ ಕಾರಣಗಳಿಂದ ದುರ್ಲಭವಾಗಿತ್ತು. ಸಿನಿಮಾ, ಯಕ್ಷಗಾನ, ತಾಳಮದ್ದಲೆ, ನಾಟಕ, ಹರಿಕಥೆ, ರೇಡಿಯೋ, ಟೀವಿ ಎಲ್ಲ ಇರುವಾಗಲೂ ಓದು ತನ್ನ ಮಹತ್ವ ಉಳಿಸಿಕೊಂಡಿತ್ತು. ಮತ್ತು ಆ ಓದು ಪುರಾಣ, ಕಾವ್ಯ, ಕತೆ-ಕಾದಂಬರಿಗಳ ಚೌಕಟ್ಟಿನಲ್ಲಿತ್ತು. ಈ ಯಾವತ್ತೂ ಪರ್ಯಾಯಗಳು ಮನುಷ್ಯನ ಏಕಾಗ್ರತೆಯ ಮೇಲೆ ಇವತ್ತಿನ ಮಾಹಿತಿ/ವಿಚಾರ/ರಂಜನೆ ಎಲ್ಲದರ ಬಾಹುಳ್ಯ ಉಂಟುಮಾಡಿದಂಥ ಪ್ರಹಾರ ಮಾಡಿರಲಿಲ್ಲ ಎನ್ನುವುದು ಬಹುಮುಖ್ಯ ಅಂಶ. ಇವತ್ತಿನ ಸ್ಮಾರ್ಟ್ಫೋನ್, , ಟ್ಯಾಬ್ಲೆಟ್ ಮೂಲಕ ಸಿಗುವ ಫೇಸ್ಬುಕ್, ವ್ಯಾಟ್ಸಪ್ ಮಾದರಿಯ ಹಲವು ಹತ್ತು ಸಾಮಾಜಿಕ ಜಾಲತಾಣಗಳು, ಇಲೆಕ್ಟ್ರಾನಿಕ್ ಮಾಧ್ಯಮದ ಹೊಸಬಗೆಯ ಆಟಗಳು, ಸದಾ ಇಯರ್ ಪ್ಲಗ್ ಸಿಕ್ಕಿಸಿಕೊಂಡು ಯುವತಲೆಮಾರು ಕೇಳುವ ಸಂಗೀತ ಎಲ್ಲವೂ ಒಂದು ಕೇಂದ್ರ ಸಂವೇದನೆಗೆ ಅವನ ಭಾವಕೋಶವನ್ನು ಒತ್ತಟ್ಟುಗೊಳಿಸಿ ಒಂದು ಅನುಭವ ನೀಡುವುದಕ್ಕೆ ಬದಲಾಗಿ ವಿಭಿನ್ನ ಸಂವೇದನೆಗಳ, ಪರಸ್ಪರ ಸಂಬಂಧರಹಿತ ಅನುಭವದ ಬೇಕಾಬಿಟ್ಟಿ ಸಂಚಾರಕ್ಕೆ ಹೆಚ್ಚು ಒತ್ತು ಕೊಡುತ್ತಿರುವಂತೆ ಇವೆ. ಅಂಥ ಮಲ್ಟಿಶಿಫ್ಟ್ ಅವನಿಗೂ ಇಷ್ಟ ಮತ್ತು ಅವನಿಗೆ ಲಭ್ಯವಿರುವ ಮಾರ್ಗೋಪಾಯಗಳು ಇದಕ್ಕೆ ಪೂರಕವಾಗಿವೆ. ಇದಕ್ಕೆ ಸಮಾನಾಂತರವಾಗಿ ಯುವ ತಲೆಮಾರು ಇರಿಸಿಕೊಂಡಿರುವ ಮೌಲ್ಯಗಳು ಮತ್ತು ಅವರ ಸಾಧನೆಯ ಗುರಿ, ಅವರು ಆರಿಸಿಕೊಂಡ ಕ್ರಿಯಾಕ್ಷೇತ್ರ - ಇವೆಲ್ಲವೂ ಸೇರಿ ಪರಂಪರಾನುಗತ ಓದುವ ಒಂದು ಪ್ರಕ್ರಿಯೆಯನ್ನು ಔಟ್ಡೇಟೆಡ್ ಮಾಡಿಬಿಟ್ಟಂತಿದೆ. ಓದು ಇದೆ, ಆದರೆ ಅದರ ಸ್ವರೂಪ ಎಷ್ಟು ಬದಲಾಗಿದೆ ಎಂದರೆ ಅದನ್ನು ಓದು ಎಂದು ಕರೆಯಬೇಕೇ ತಿಳಿಯುತ್ತಿಲ್ಲ.

ಇವತ್ತಿನ ತಲೆಮಾರು ಸಾಹಿತ್ಯದ ಓದಿನಿಂದ ಆಘಾತಕಾರಿ ಮಟ್ಟದಲ್ಲಿ ವಿಮಖವಾಗಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಈ ಮಾತಿಗೆ ಇಂಗ್ಲೀಷ್ ಭಾಷೆಯ ಯಂಗ್ ಅಡಲ್ಟ್ ನಾವೆಲ್ಸ್ ಎಂದು ಕರೆಯಲ್ಪಡುವ ಪ್ರಕಾರದ ಸಾಹಿತ್ಯ ಹಾಗೂ ಥ್ರಿಲ್ಲರ್ಸ್ ಎಂದು ವರ್ಗೀಕರಿಸಲ್ಪಡುವ ಕಾದಂಬರಿಗಳು ಅಪವಾದವಾಗಿ ಉಳಿದಿವೆ ಮತ್ತು ಈಗಲೂ ಈ ಪ್ರಕಾರದ ಕತೆ-ಕಾದಂಬರಿಗಳಿಗೆ ಸಮಾಜದ ಇಲೈಟ್ ವರ್ಗದ ಯುವ ಜನಾಂಗ ಉತ್ಸಾಹದಿಂದಲೇ ತೆರೆದುಕೊಂಡಿದೆ. ಆದರೆ ಈ ಓದಿನಿಂದ ಯುವಜನಾಂಗಕ್ಕೆ ಏನು ದಕ್ಕುತ್ತದೆ ಎನ್ನುವ ಪ್ರಶ್ನೆಗಿಂತಲೂ ನಮ್ಮ ಸ್ಥಳೀಯ ಭಾಷೆ, ಸಂಸ್ಕೃತಿ, ಸಂವೇದನೆಗಳು ಮತ್ತು ಪರಂಪರೆಯ ದೃಷ್ಟಿಯಿಂದ ಅದು ನಿರುಪಯುಕ್ತ ಎನ್ನುವ ಅಂಶ ಗಮನಾರ್ಹವಾದುದು. ಉಳಿದಂತೆ ಪತ್ರಿಕೆಗಳ ಓದು, ಪ್ರಧಾನವಾಗಿ ಅಂಕಣಗಳದ್ದು, ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಗೆಳೆಯ ಗೆಳತಿಯರ ಕತೆ-ಕವನ-ಲಹರಿಯ ಬರಹಗಳು, ಸ್ಮಾರ್ಟ್ಫೋನ್ ಮೂಲಕ ಹರಿದಾಡುವ ಜೋಕುಗಳು, ಆಡಿಯೋ ವಿಶುವಲ್ ಕಥಾನಕಗಳು, ಶಾರ್ಟ್ಫಿಲ್ಮ್ಗಳು, ಬ್ಲಾಗ್ ಬರಹಗಳು ಈ ತಲೆಮಾರಿನ ಓದು ರೂಪಿಸುತ್ತಿದೆ. ಇಲ್ಲಿಯೂ ಓದಿನಲ್ಲಿ ಕಣ್ಣಾಡಿಸುವ ಓದು, ಗಮನವಿಟ್ಟು ಓದುವ ಓದು ಮತ್ತು ದಪ್ಪಕ್ಷರದ ಮುಖ್ಯಾಂಶಗಳ ಓದು ಎಂಬೆಲ್ಲ ಬಗೆಗಳಿವೆ! ಇವತ್ತಿನ ಹತ್ತು ಮಂದಿ ಓದುಗರಲ್ಲಿ ಒಂಭತ್ತು ಮಂದಿ ಸ್ವತಃ ಬರಹಗಾರ ಕೂಡ ಆಗಿರುತ್ತಾನೆ ಮತ್ತು ಅವನು ಕ್ರಮೇಣ ಓದು ತನ್ನ ಸ್ವಂತ ಬರವಣಿಗೆಗೆ ಮಾರಕ ಎನ್ನುವುದನ್ನು ಕಂಡುಕೊಳ್ಳುತ್ತಾನೆ. ಇದರಿಂದ ಹತ್ತರಲ್ಲಿ ಒಬ್ಬನಷ್ಟೇ ಉಳಿದುಕೊಳ್ಳುವ(!) ಸಂಭವ ಹೆಚ್ಚು. ಅಲ್ಲದೆ ಇವತ್ತು ಹಣ ತರಬಲ್ಲ ಸರಕಿಗೆ ಇರುವ ಬೇಡಿಕೆ, ಪ್ರಚಾರ ಮತ್ತು ಮಹತ್ವ ಅವನ ಕಣ್ಣು ಕುಕ್ಕುವುದಕ್ಕೆ ಹೆಚ್ಚೇನೂ ಸಮಯ ಹಿಡಿಯುವುದಿಲ್ಲ. ಹೀಗಾಗಿ ಕನ್ನಡದಲ್ಲಿ ಬರೆಯುವುದು ಕನ್ನಡವನ್ನು ಓದುವುದು ಎರಡೂ ಕೂಡ ಔಟ್ಡೇಟೆಡ್ ಆಗುವುದು ಸಹಜವಾಗಿದೆ.

ಕನ್ನಡದಲ್ಲಿ ತಪ್ಪಿಲ್ಲದೆ ಒಂದು ವಾಕ್ಯ ರಚಿಸುವ ಸ್ಥಿತಿಯಲ್ಲಿಲ್ಲದ ಕಾಲೇಜು ಯುವಕ ಯುವತಿಯರನ್ನು ಕಾಣುವಾಗ ಗಾಭರಿಯಾಗುತ್ತದೆ. ತರಗತಿಯಿಂದ ಹೊರಗೆ ಬರುತ್ತಲೇ ಈ ತಲೆಮಾರು ಎಲ್ಲಿಂದಲೋ ಸ್ಮಾರ್ಟ್ ಫೋನ್ ಹೊರತೆಗೆಯುತ್ತಾರೆ. ತದನಂತರ ಸುತ್ತಲಿನ ಜಗತ್ತಿನ ಯಾವುದೇ ವಿದ್ಯಮಾನವೂ ಇವರ ಗಮನಕ್ಕೆ ಬರುವುದೇ ಸಾಧ್ಯವಿಲ್ಲದಷ್ಟು ಅದರಲ್ಲೇ ತಲ್ಲೀನರಾಗಿ ಬಿಡುತ್ತಾರೆ. ಈಗೀಗ ಬಸ್ಸು ರೈಲುಗಳಲ್ಲೂ ಕಿಟಕಿ ಪಕ್ಕದ ಸೀಟು ಬೇಕೇ ಬೇಕೆಂದು ಹಠ ಹಿಡಿಯುವವರಿಲ್ಲ. ಅವರಿಗೆ ಹೊರಗೆ ನೋಡುವುದೇನೂ ಇಲ್ಲ! ತಮ್ಮೊಳಗು ನೋಡಿಕೊಳ್ಳುವುದೂ ಇಲ್ಲ. ಇರುವುದೆಲ್ಲಾ ಅಂಗೈಯಲ್ಲೇ ಇದೆ! ಇವರ ಕಣ್ಣು, ಕಿವಿ, ಮನಸ್ಸು - ಇವುಗಳ ಆರೋಗ್ಯದ ಗತಿಯೇನು? ಇಯರ್ ಪ್ಲಗ್ ಉಪಯೋಗ ಒಂದು ಮಿತಿಯಾಚೆ ತೀರ ಕೆಟ್ಟದು. ಸ್ಮಾರ್ಟ್ ಫೋನಿನ ತೆರೆಯನ್ನು ದೀರ್ಘಕಾಲದ ತನಕ ನೋಡುತ್ತಿರುವುದು, ಅದನ್ನು ಓದುವುದಕ್ಕೆ ಬಳಸುವುದು ಅಪಾಯಕಾರಿ. ಅಂತರ್ಜಾಲ ಸಂಪರ್ಕದ ವೇಗ ಮತ್ತು ತೆರೆಯ ಮೇಲೆ ಕಾಣ ಬಯಸುವ ಮಾಹಿತಿ ಡೌನ್ಲೋಡ್ ಆಗುವ ತನಕ ಅನುಭವಿಸುವ ಉದ್ವೇಗ, ಕಾತರ, ನಿರೀಕ್ಷೆ ಆರೋಗ್ಯಕ್ಕೆ ಮಾರಕ. ಈ ಬಗೆಯ ಬ್ರೌಸಿಂಗ್ ಏಕಾಗ್ರತೆಯ ಸಾಮರ್ಥ್ಯವನ್ನು ಕೊಲ್ಲುವಷ್ಟು ಸಂಚಾರೀ ನೆಲೆಯಲ್ಲಿಯೇ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯದೇ ಇರದು.

ಇದರಿಂದಾಗಿ ಏನಾಗುತ್ತದೆಂದರೆ, ಸುಮಾರು ಇನ್ನೂರು-ಇನ್ನೂರೈವತ್ತು ಪುಟಗಳ ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು, ಯಾವುದೇ ಬಗೆಯ ಅಡಚಣೆಗಳಿಲ್ಲದೆ ದೀರ್ಘಕಾಲ ಓದುವ ಕಲ್ಪನೆಯೇ ಈ ಜನಾಂಗಕ್ಕೆ ಅಸಾಧ್ಯವಾಗಿ ಬಿಡುತ್ತದೆ. ಎರಡು ಮೂರು ನಿಮಿಷಕ್ಕೊಮ್ಮೆ ವ್ಯಾಟ್ಸಪ್/ಫೇಸ್ ಬುಕ್/ಟ್ವಿಟ್ಟರ್/ಸ್ಕೈಪ್ ಇತ್ಯಾದಿ ಗಮನಿಸಬೇಕೆನಿಸುತ್ತದೆ. ಅಥವಾ ಕರೆ ಬರುತ್ತದೆ. ಇಲ್ಲವೇ ಟೀವಿಯಲ್ಲಿ ಯಾವುದೋ ಕಾರ್ಯಕ್ರಮವಿದೆ. ಮತ್ತೆ ಮಾಡುವುದಕ್ಕೆ ಕೆಲಸವಾದರೂ ಎಷ್ಟಿಲ್ಲ! ದಿನದ 24 ಗಂಟೆಗಳೂ ಎದ್ದೇ ಕೂತರೂ ಮುಗಿಸಲಾರದಷ್ಟು! ದಿನಪತ್ರಿಕೆ ಓದುವುದಕ್ಕೂ ಸಮಯವಿಲ್ಲದ ಪರಿಸ್ಥಿತಿ ಇದೆ ಇವತ್ತು. ಪಠ್ಯಕ್ರಮವನ್ನು ಅನುಸರಿಸಬೇಕು, ಇತರೇ ಚಟುವಟಿಕೆ (ಕ್ರೀಡೆ/ಸಂಗೀತ/ನಾಟ್ಯ/ಕಲೆ/ಪ್ರಾಜೆಕ್ಟ್/ಟ್ಯೂಶನ್/ಅರೆಕಾಲಿಕ ಕೋರ್ಸು)ಗಳಿಗೆ ಸಮಯ ಮೀಸಲಿಡಬೇಕು. ಟ್ರಾಫಿಕ್ ಸಮಸ್ಯೆ ಸಾಕಷ್ಟು ಸಮಯ ತಿನ್ನುತ್ತದೆ. ಆಹಾರ, ನಿದ್ದೆ, ಕಂಪ್ಯೂಟರ್, ಬಟ್ಟೆಬರೆ ಮತ್ತು ಇತರ ಅಂದಚಂದದತ್ತ ಗಮನಹರಿಸಲು, ಖರೀದಿಗೆ, ಸ್ಮಾರ್ಟ್ ಫೋನ್ ಹೊರತಾಗಿ ಸ್ನೇಹಿತರ ಜೊತೆ ನಡೆಸುವ ಮಾತುಕತೆ - ಹೀಗೆ ಸಮಯ ಯಾವುದಕ್ಕೂ ಸಾಲದು. ಇಲ್ಲಿ ಪಠ್ಯಕ್ರಮದ ಓದೇ ಸೊರಗುತ್ತಿದೆ. ಹಳೆಯ ಪ್ರಶ್ನೆಪತ್ರಿಕೆಗಳಿಗೆ ತಯಾರಾಗುವುದಕ್ಕೇ ಸಮಯವಿಲ್ಲ ಎಂದಾದ ಮೇಲೆ ನೋಟ್ಸ್ ಮತ್ತು ಟೆಕ್ಸ್ಟ್ ಬುಕ್ಸ್ ಯಾರು ಗಮನಿಸುತ್ತಾರೆ! ಇಷ್ಟರ ಮೇಲೆ ಸಾಹಿತ್ಯದ ಓದು! ಎಂಥ ಲಕ್ಷುರಿಯದು!!

ಅಮೆರಿಕೆಗೆ ಹೋಗಿ ಬಂದ ಜಯಂತ ಕಾಯ್ಕಿಣಿಯವರು ಹೇಳಿದ ಒಂದು ಮಾತಂತೂ ನಾನು ಮರೆಯಲಾರದ್ದು. "ನನಗೆ ಅಲ್ಲಿ ವಿಶೇಷವಾಗಿ ಕಾಣಿಸಿದ್ದು ಆ ಜನ ಸ್ವಲ್ಪ ಪುರುಸೊತ್ತು ಸಿಕ್ಕಿದರೂ ತಕ್ಷಣ ಬ್ಯಾಗಿನಿಂದ ಒಂದು ಪುಸ್ತಕ ಹೊರತೆಗೆದು ಓದುವ ಹುಮ್ಮಸ್ಸು ಹೊಂದಿರುವುದೇ! ಎಲ್ಲಿಯೇ ನೋಡು, ಜನರ ಕೈಯಲ್ಲಿ ಪುಸ್ತಕ ಇದೆ. ನಮ್ಮಲ್ಲಿ ಇದನ್ನು ಕಾಣುವುದು ಕಷ್ಟ." ಇದನ್ನೇ ನಾನು ಅಮೆರಿಕೆಯಲ್ಲಿ ನೆಲೆಸಿರುವ ವೈದ್ಯ, ಕತೆ-ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆಯವರ ಬಳಿ ಹೇಳಿದಾಗ ಅವರು "ಇದೇನು ಬಿಡಿ, ನೀವು ಯುರೋಪಿಯನ್ ಕಂಟ್ರೀಸ್ ನೋಡಬೇಕು. ಟ್ಯಾಕ್ಸಿ ಡ್ರೈವರ್ ಜೊತೆ ನೀವು ಕಾಫ್ಕಾ ಬಗ್ಗೆ ಗಂಭೀರವಾದ ಚರ್ಚೆ ನಡೆಸಬಹುದು!" ಎಂದಿದ್ದರು. ಈಗಲೂ ಗುಡ್ ರೀಡ್ಸ್, ಬುಕ್ ಬ್ಲಬ್, ಶೆಲ್ಫಾರಿ ಮುಂತಾದ ಯಾವುದೇ ಒಂದು ಪುಸ್ತಕ ಮತ್ತು ಓದಿಗೆ ಮೀಸಲಾದ ಅಂತರ್ಜಾಲ ತಾಣವನ್ನು ತೆರೆದು ನೋಡಿ. ಈ ಮಂದಿಯ ಓದಿನ ಹಸಿವು ಮತ್ತು ಅವರು ಪುಸ್ತಕಗಳ ಬಗ್ಗೆ ಮಾತನಾಡಲು ತೋರಿಸುವ ಉತ್ಸಾಹ ನೋಡಿದರೆ ಹೊಟ್ಟೆಕಿಚ್ಚಾಗುತ್ತದೆ. ಪಾಶ್ಚಾತ್ಯ ಅನುಕರಣೆಯ ನಮ್ಮ ಮಿತಿಗಳು ಕಣ್ಣಿಗೆ ಕಟ್ಟುವುದು ಕೂಡ ಇಲ್ಲಿಯೇ.

ಇಲ್ಲಿ ನಾವು ಭಾಷೆಯ ಅಳಿವು-ಉಳಿವು ಮತ್ತು ಕ್ಷೀಣಿಸುತ್ತಿರುವ ಓದು ಮುಂತಾಗಿ ಚರ್ಚಿಸುತ್ತಿರುವಾಗಲೇ ಅಲ್ಲಿ ಓದುವ ಹೊಸ ಹೊಸ ವಿಧಾನಗಳ ಬಗ್ಗೆ ಶೋಧನೆ, ಚರ್ಚೆ ನಡೆಯುತ್ತಿರುವುದು ಕೂಡ ತಮಾಷೆಯಾಗಿದೆ. ಇತ್ತೀಚೆಗೆ ತೀರಿಕೊಂಡ Eco Umberto ಮತ್ತು Jean-Claude Carriere ನಡೆಸಿದ ಸುದೀರ್ಘ ಸಂವಾದ ಪುಸ್ತಕ ರೂಪದಲ್ಲಿ ಬಂದಿದ್ದು ಅದರ ಹೆಸರು This is Not the End of the Book! ಮುನ್ನೂರಕ್ಕೂ ಹೆಚ್ಚು ಪುಟಗಳ ಈ ಕೃತಿಯಲ್ಲಿ ಚರ್ಚಿಸಲಾದ ಮಹತ್ವದ ಅಂಶವೆಂದರೆ ಬದಲಾಗುತ್ತಿರುವ ಆಧುನಿಕ ಮನುಷ್ಯನ ಓದಿನ ಶೈಲಿ ಮತ್ತು ಮುದ್ರಿತ ಪುಸ್ತಕದ ಮೇಲೆ ಅದೆಲ್ಲದರಿಂದಾಗಬಹುದಾದ ಪರಿಣಾಮಗಳು! ಅಂದರೆ ಇವತ್ತು ಇ-ರೀಡರ್ಗಳು, ಆಡಿಬಲ್ ಪುಸ್ತಕಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವುದನ್ನು ಗಮನಿಸಿ ಕ್ರಮೇಣ ಮುದ್ರಿತ ಪುಸ್ತಕಗಳು ಕಣ್ಮರೆಯಾಗಬಹುದೇ ಎಂಬುದು ಇಲ್ಲಿನ ಚರ್ಚೆಯ ವಸ್ತು. ಉಂಬರ್ಟೊ ಸ್ವತಃ ಅಪೂರ್ವ ದುರ್ಲಭ ಕೃತಿಗಳ ಸಂಗ್ರಾಹಕರಾಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ನಮ್ಮ ದೇಶದಲ್ಲಿ ಇ-ರೀಡರ್ಗಳು ಜನಪ್ರಿಯವಾಗುತ್ತಿರುವ ಸುದ್ದಿಯಿದೆ. ಕೇಳು ಪುಸ್ತಕಗಳೂ ಅಪರೂಪಕ್ಕೆಂಬಂತೆ ದನಿ ಹೊರಡಿಸಿವೆ. ಏನಿಲ್ಲವೆಂದರೂ ನಿಮ್ಮ ಆಸಕ್ತಿಯ ಸಾವಿರಾರು ಇಂಗ್ಲೀಷ್ ಕೃತಿಗಳನ್ನು ಪುಕ್ಕಟೆಯಾಗಿ ಅಂತರ್ಜಾಲದಿಂದ ಡೌನ್ಲೋಡ್ ಮಾಡಿಕೊಳ್ಳುವುದು ಇವತ್ತು ಸಾಧ್ಯವಿದೆ ಎನ್ನುವುದು ಕೂಡ ನಿಜ. ಆದರೆ ಇವನ್ನೆಲ್ಲ ಓದುವುದು ನಮ್ಮ ಆಯುರ್ಮಾನದಲ್ಲಿ ಸಾಧ್ಯವಿದೆಯೆ ಎಂಬ ಪ್ರಶ್ನೆ ಮಾತ್ರ ಉಳಿಯುತ್ತದೆ. ಆಯ್ದು ಓದುವ ಸಮಸ್ಯೆ ಓದುಗರದ್ದಾದರೆ, ಓದುಗರೇ ಕ್ಷೀಣಿಸುತ್ತಿರುವ ಸಮಸ್ಯೆ ಬರಹಗಾರರದ್ದು, ಪ್ರಕಾಶಕರದ್ದು.

ಒಂದೆರಡು ವರ್ಷಗಳ ಹಿಂದೆ ಚುಕ್ಕುಬುಕ್ಕು ಅಂತರ್ಜಾಲ ತಾಣದಲ್ಲಿ ನಡೆಸಿದ ಒಂದು ಪ್ರಶ್ನೋತ್ತರದಲ್ಲಿ ವರ್ಷವೊಂದಕ್ಕೆ ಎಷ್ಟು ಪುಸ್ತಕಗಳನ್ನು ಓದುತ್ತೀರಿ ಎಂದು ಕೇಳಲಾಗಿತ್ತು. ಎಷ್ಟು ಎನ್ನುವಾಗಲೇ ಎಂಥವು ಎನ್ನುವ ಅಂಶವೂ ಮಹತ್ವದ್ದಾಗುತ್ತದೆ. ಆರಾನ್ ಪಮುಕ್ ಪ್ರಕಾರ ಬಹಳಷ್ಟು ಲೇಖಕರ, ಬಹಳಷ್ಟು ಕೃತಿಗಳನ್ನು ಓದಬೇಕಾದ ಅಗತ್ಯವೇನಿಲ್ಲ. ಅತ್ಯಂತ ಮಹತ್ವದ ದಸ್ತಾವಸ್ಕಿ, ನಬಕೋವ್, ಥಾಮಸ್ ಮನ್ ಥರದವರನ್ನು ಪೂರ್ತಿಯಾಗಿ ಮತ್ತು ಗಂಭೀರವಾಗಿ ಓದಿಕೊಂಡರೆ ಅದೇ ಸಾಕಷ್ಟು. ಆದರೆ ಅದಾದರೂ ಸಾಧ್ಯವೆ? ದಸ್ತಾವಸ್ಕಿಯನ್ನು ಪೂರ್ತಿಯಾಗಿ ಓದಲು ಒಂದು ಜೀವಮಾನವೇ ಮುಡುಪಾಗಿಡಬೇಕು ಎನ್ನುವ ಭಯ ಸಹಜವಾಗಿಯೇ ಹಲವರಿಗಿದೆ. ಸರಕಾರವೇನಾದರೂ ಓದುವುದು ಕಂಪಲ್ಸರಿ ಎಂದು ಕಾನೂನು ಮಾಡಿದರೆ ವಿ ಕೃ ಗೋಕಾಕರ ಭಾರತ ಸಿಂಧೂರಶ್ಮಿಯನ್ನು ಓದಲೇ ಬೇಕಾದೀತು ಎಂದು ಯಾರೋ ತಮಾಷೆ ಮಾಡಿದ್ದು ನೆನಪಾಗುತ್ತದೆ! ಎಸ್. ದಿವಾಕರ್ ಒಂದೆಡೆ "ಅರೇಬಿಯನ್ ನೈಟ್ಸ್ ಕತೆಗಳನ್ನು ಯಾರೂ ಪೂರ್ತಿಯಾಗಿ ಓದಿರುವುದಿಲ್ಲ, ಅಕಸ್ಮಾತ್ ಓದಿದರೆ ಅವರು ಬದುಕಿ ಉಳಿಯುವುದಿಲ್ಲ!" ಎನ್ನುವ ಪಮುಕ್ನ ಮಾತನ್ನೇ ಉಲ್ಲೇಖಿಸುತ್ತ ಹೇಳುತ್ತಾರೆ, ಭಯ ಪಡುವ ಅಗತ್ಯವೇನಿಲ್ಲ, ಸಾಯುವುದಂತೂ ತಪ್ಪುವುದಿಲ್ಲ; ಹಾಗಾಗಿ ಓದಿಯೇ ಸಾಯುವುದು ಮೇಲು!

ಇಲ್ಲಿಯೇ ಪ್ರದೀಪ್ ಸೆಬಾಸ್ಟಿಯನ್ ಹೇಳಿರುವ ಮಾತುಗಳು ಬಹಳ ಮುಖ್ಯ ಎನಿಸುವುದು. ನಾವು ನಮ್ಮೊಂದಿಗೆ ಕಳೆಯುವ ಕ್ಷಣಗಳು ಬಹು ಮುಖ್ಯ. ಅದು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ, ಮನಸ್ಸಿನ ಆರೋಗ್ಯಕ್ಕೆ, ಸಂಬಂಧಗಳನ್ನು ನಿರ್ವಹಿಸುವಲ್ಲಿ, ಮನಸ್ಸಿನ ಶಾಂತಿಗೆ ಮತ್ತು ಏಕಾಗ್ರತೆಗೆ ಅತ್ಯಂತ ಆವಶ್ಯಕವಾದ ಒಂದು ಪ್ರಕ್ರಿಯೆ. ಪ್ರತಿಯೊಬ್ಬರಿಗೂ ಇತರರೊಂದಿಗೆ ಮಾತನಾಡುವುದು ಇರುವಂತೆಯೇ ತಮ್ಮೊಂದಿಗೇ ತಾವು ಪ್ರಾಮಾಣಿಕವಾದ ಧ್ವನಿಯಲ್ಲಿ ಮಾತನಾಡುವುದು ಇದ್ದೇ ಇರುತ್ತದೆ. ಈ ಮಾತುಗಳು ಇನ್ಯಾರಿಗೋ ಕೇಳುವುದಕ್ಕಾಗಿ ಇರುವುದಿಲ್ಲ. ಹಾಗಾಗಿಯೇ ಅದರಲ್ಲಿ ಯಾವುದೇ ನಾಟಕೀಯತೆ, ಪ್ರದರ್ಶನದ ಗೀಳು ಇರುವುದಿಲ್ಲ. ಅವು ಪ್ರಾಮಾಣಿಕವಾದ ಪಿಸುದನಿಯ ನುಡಿಗಳು. ಧ್ಯಾನದಂತೆ, ಪ್ರೀತಿ ಮಾಡಿದಂತೆ, ಏಕಾಂತದಲ್ಲಿ ನಮ್ಮ ಅತ್ಯಂತ ಆತ್ಮೀಯ ಗೆಳೆಯನೊಂದಿಗೆ ಮೌನವಾಗಿ ಕುಳಿತಂತೆ ಇರುವ ಅತ್ಯಂತ ವೈಯಕ್ತಿಕ, ಖಾಸಗಿ ಕ್ಷಣಗಳು. ಹಾಗಿದ್ದೂ ಇದಕ್ಕೆ ಆ ಯಾವ ಸಮೀಕರಣವೂ ಹೋಲಿಕೆಯಾಗದು, ಪರ್ಯಾಯವಾಗದು. ಓದುವ, ಓದಿನಲ್ಲಿ ನಮ್ಮನ್ನೇ ನಾವು ಕಳೆದುಹೋಗುವ, ಹಾಗೆ ಕಳೆದುಕೊಂಡೇ ನಮ್ಮನ್ನು ನಾವು ಮರಳಿ ಪಡೆಯುವ ಸುಖಕ್ಕೆ ಓದು ಮತ್ತು ಓದು ಒಂದೇ ಮಾರ್ಗ. ಅದಕ್ಕೆ ಪರ್ಯಾಯವೂ ಇಲ್ಲ, ಪರಿಹಾರವೂ ಇಲ್ಲ. ಮನಸ್ಸು, ಮನುಷ್ಯ ಮತ್ತು ಬದುಕನ್ನು ಅರಿಯುವುದಕ್ಕೆ ತೆರೆದಿರುವ ಹಲವು ಮಾರ್ಗಗಳಲ್ಲಿ ಓದು ಒಂದು ಮತ್ತು ಬಹುಮುಖ್ಯವೂ, ಸುಲಭ ಲಭ್ಯವೂ ಆದ ಒಂದು ಮಾರ್ಗ. ಇದರ ಕುರಿತ ಅಲಕ್ಷ್ಯವೇ ಇವತ್ತು ಅನಗತ್ಯ ವಿವಾದಗಳು, ಮುಕ್ತ ಚರ್ಚೆ ಮತ್ತು ಸಂವಾದ ಸಾಧ್ಯವಿಲ್ಲದಂಥ ಡೆಡ್ ಲಾಕ್ಗಳು, ಸ್ಥೂಲವಾಗಿ ನಮ್ಮ ಸಮಾಜದಲ್ಲಿ ಮತ್ತು ಸೂಕ್ಷ್ಮವಾಗಿ ನಮ್ಮ ನಮ್ಮ ಮನೆ-ಮನಗಳಲ್ಲಿ ಉಂಟಾಗಿರುವ ಬಿರುಕುಗಳಿಗೆ, ಒಡಕುಗಳಿಗೆ ಕಾರಣ. ಇದನ್ನು ಪರಿಹರಿಸಿಕೊಳ್ಳದೇ ಮಾನವ ಜನಾಂಗ ಸಾಧಿಸುವ ಯಾವುದೇ ಪ್ರಗತಿಯೂ ಅರ್ಥಪೂರ್ಣವೆನ್ನಿಸಿಕೊಳ್ಳುವುದು ಸಾಧ್ಯವಾಗದು.

(ಈ ಲೇಖನ ಪ್ರಜಾವಾಣಿ ಸಾಪ್ತಾಹಿಕ ಮುಕ್ತಛಂದದಲ್ಲಿ ಪ್ರಕಟಿತ)

ಚಿತ್ರಗಳು : ಅಂತರ್ಜಾಲದ ವಿವಿಧ ತಾಣಗಳಿಂದ, ಕೃತಜ್ಞತಾ ಪೂರ್ವಕ.

No comments: