Thursday, December 22, 2016

ಒಂದು ನೂರು ಅನುವಾದಗಳ ಪಾತಕಿ!

"ಎಷ್ಟೋ ವರ್ಷಗಳಾದ ಮೇಲೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತನ್ನ ಎದುರು ಗುಂಡಿಕ್ಕಿ ಕೊಲ್ಲಲು ಸಿದ್ಧರಾಗಿ ನಿಂತ ತಂಡದವರನ್ನು ನೋಡುತ್ತ, ಹಿಂದೆಂದೋ ಒಂದು ದಿನ ಮಧ್ಯಾಹ್ನ ತನ್ನ ತಂದೆ ಐಸ್ ನೋಡಲು ಕರೆದುಕೊಂಡು ಹೋದದ್ದನ್ನು ನೆನಪಿಸಿಕೊಂಡ." - ಇದು ಎ ಎನ್ ಪ್ರಸನ್ನ ಅವರು ಅನುವಾದಿಸಿದ ಮಾರ್ಕೆಸ್ ಕಾದಂಬರಿ One Hundred Years of Solitude ನ ಮೊದಲ ಸಾಲು.

"ಬಹಳ ಬಹಳ ವರ್ಷಗಳ ನಂತರ ಕರ್ನಲ್ ಅರೆಲಿಯಾನೋ ಬ್ಯುಂಡಿಯಾ, ತನ್ನನ್ನು ಗುಂಡಿಕ್ಕಿ ಕೊಲ್ಲಲು ತನ್ನೆದುರು ಫೈರಿಂಗ್ ಸ್ಕ್ವಾಜ್ ನಿಂತಿದ್ದಾಗ, ತನ್ನ ತಂದೆ ತನ್ನನ್ನು `ಹಿಮ’ (ಐಸ್)ವನ್ನು ಪತ್ತೆಹಚ್ಚಲು ಕರೆದೊಯ್ದದ್ದು ನೆನಪಾಯಿತು." - ಇದು ಡಾ.ವಿಜಯಾ ಸುಬ್ಬರಾಜ್ ಅವರ ಅನುವಾದ.

"Many years later, as he faced the firing squad, Colonel Aureliano Buendia was to remember that distant afternoon when his father took him to discover ice." ಈ ವಾಕ್ಯವನ್ನು ಹೀಗೆಯೇ ಅನುವಾದಿಸುವ ಮುನ್ನ ರಬಾಸ ಸಾಕಷ್ಟು ಯೋಚಿಸಿದ್ದಾನೆ. "ಜನ ಇದನ್ನು ಮತ್ತೆ ಮತ್ತೆ ಆಡುವಾಗೆಲ್ಲ ಅವರದನ್ನು ಅದರ ಸರಿಯಾದ ಅರ್ಥದಲ್ಲಿ ಆಡುತ್ತಿದ್ದಾರೆಂದು ಆಶಿಸುವುದಷ್ಟೇ ನನಗುಳಿದ ನಿರೀಕ್ಷೆ" ಎನ್ನುತ್ತಾನೆ ಗ್ರಿಗೊರಿ ರಬಾಸ. (If This be Treason). ಇದು ಅನುವಾದಕನೊಬ್ಬನ ವಿಧಿ ಕೂಡ.

ನಮಗೆಲ್ಲ ಗ್ರಿಗೊರಿ ರಬಾಸನ ಹೆಸರು ಕೇಳುತ್ತಲೇ ನೆನಪಾಗುವುದು ಮಾರ್ಕೆಸ್ ಎಂಬುದು ನಿಜವಾದರೂ ಲ್ಯಾಟಿನ್ ಅಮೆರಿಕನ್ ಸಾಹಿತ್ಯದ ಮೂರನೇ ಎರಡು ಭಾಗದಷ್ಟು ಅನುವಾದ ರಬಾಸನಿಂದಲೇ ಆಗಿದೆ ಎನ್ನುವುದನ್ನು ಗಮನಿಸಿದರೆ ಅದು ಎಂಥಾ ಒಂದು ತಪ್ಪು ಪರಿಕಲ್ಪನೆ ಎನ್ನುವುದು ಹೊಳೆಯುತ್ತದೆ. ಆದಾಗ್ಯೂ ನಮಗೆ ರಬಾಸ ದಕ್ಕಿದ್ದು ಸರಿಸುಮಾರು ಮಾರ್ಕೆಸ್ ಸಂಬಂಧದಿಂದಲೇ ಎನ್ನುವುದು ನಿಜ. ಹಾಗಾಗಿ ಇದೇ ಕಾದಂಬರಿಯ ಸುತ್ತ ಈ ಮಾತುಕತೆ ನಡೆಯುವುದು ಸ್ವಾಭಾವಿಕವೇ. ತನ್ನ ಅನುವಾದದ ಕತೆಗಳು, ಕೆಲವು ನಿರ್ದಿಷ್ಟ ಕೃತಿಗಳೊಂದಿಗಿನ ಅನುಸಂಧಾನದ ಕತೆಗಳು ಮತ್ತು ಅವುಗಳ ಕೃತಿಕಾರರೊಂದಿಗಿನ ಸಂಬಂಧ ಎಲ್ಲವನ್ನೂ ವಿವರವಾಗಿ ತೆರೆದಿಡುವ ರಬಾಸನ ಕೃತಿ If This be Treason: Translation and its Dyscontents: A Memoir (2005).

‘ಬ್ರಿಟಿಷ್ ಸೇನೆಯಲ್ಲಾದರೆ ಅದು ಫೈರಿಂಗ್ ಪಾರ್ಟಿ. ಆದರೆ ಅಮೆರಿಕನ್ನರಿಗೆ ಸ್ಕ್ವ್ಯಾಡ್; ರಿಕಾಲ್ ಶಬ್ದಕ್ಕಿಂತ ಇಲ್ಲಿ ರಿಮೆಂಮರ್ ಉತ್ತಮ; ರಿಮೋಟ್ ಎಂಬುದು ರಿಮೋಟ್ ಕಂಟ್ರೋಲ್ ಮತ್ತು ರೊಬೊಟ್ ಜೊತೆಗೆ ತಳುಕು ಹಾಕಿಕೊಳ್ಳುವ ಅಪಾಯವಿದೆ! ಕಾಲದೊಂದಿಗೆ ಡಿಸ್ಟಂಟ್ ಒಳ್ಳೆಯದೆನಿಸಿತು. ಬಹುಶಃ ಇದನ್ನು ಡಾ.ಐನ್‌ಸ್ಟೀನ್ ಒಪ್ಪುತ್ತಿದ್ದರೆನಿಸುತ್ತದೆ. ನಿಜವಾದ ಸಮಸ್ಯೆ ಎದುರಾದದ್ದು ಡಿಸ್ಕವರ್ ಶಬ್ದವನ್ನಾರಿಸುವಲ್ಲಿ. ನೋಡಲು ಎಂದಾಗ ಅದು ಒಬ್ಬ ಒಂದು ವಸ್ತುವನ್ನು ಅಥವಾ ವ್ಯಕ್ತಿಯನ್ನು ಮೊದಲ ಬಾರಿ ನೋಡುವಾಗ, ಅದಾಗಲೇ ಪರಿಚಯವಿದ್ದುದನ್ನು, ಗೊತ್ತಿರುವುದನ್ನು ನೋಡುವುದು ಎಂದಾಗುತ್ತದೆ. ಇಲ್ಲೇನಾಗುತ್ತಿದೆ ಎಂದರೆ ಇದು ಮೊಟ್ಟಮೊದಲ ಬಾರಿ ಕಾಣುವ, ಒಂದು ಬಗೆಯ ಕಲಿಕೆಯಿರುವಂಥ ಕ್ರಿಯೆ. ಅದನ್ನು ಸ್ವಲ್ಪ ಹೆಚ್ಚು ಆಳವಾಗಿ ಗಮನಿಸುವುದಕ್ಕೆ, ಸ್ವಂತ ಅನುಭವದ ಮುಖೇನ ತಿಳಿಯುವುದಕ್ಕೆ ಎನ್ನುವ ಅರ್ಥವೂ ಬರುವಂತಿದೆ ಇದು. ಮಾರ್ಕೆಸ್ ಬಳಸಿದ ಸ್ಪಾನಿಶ್ ಶಬ್ದಕ್ಕೆ ಎಲ್ಲಾ ಅರ್ಥಗಳನ್ನು ಸ್ಫುರಿಸುವ ತಾಕತ್ತಿದೆ. ಇಂಗ್ಲೀಷಿನಲ್ಲಿ to know ice ಎನ್ನಲಾಗದು. ಐಸಿನ ಜೊತೆ ಹಲೊ, ಹೆಂಗಿದ್ದೀ ಎನ್ನಲು ಹೊರಟಂತಿರುತ್ತದೆ ಅದು. to experience ice ಸರಿಹೊಂದುತ್ತಿತ್ತು. ಆದರೆ ಇದು ಮೊದಲಿಗೆ ಮರುಳು ಆಮೇಲೆ ಬಾಲಿಶ. ನೀವು ಮೊಟ್ಟಮೊದಲ ಸಲ ಅದನ್ನು ತಿಳಿದುಕೊಳ್ಳಲು ಮುಂದಾಗುವಾಗ ನೀವದನ್ನು ಡಿಸ್ಕವರ್ ಮಾಡಿದಂತೆಯೇ. ತದನಂತರವೇ ನಿಮಗದರ ಪರಿಪೂರ್ಣ ಪರಿಕಲ್ಪನೆಯೊಂದು ದಕ್ಕುವುದು ಸಾಧ್ಯ. ನಾನು to make the acquaintance with ice ಎನ್ನಬಹುದಾಗಿತ್ತು. ಅದೂ ಕೂಡ ಹ್ಯಾಟು ಎತ್ತಿ ಹಲೊ ಎನ್ನುವ ಪ್ರತಿಮೆಯೊದಗಿಸುವ ಧ್ವನಿಯುಳ್ಳದ್ದು. ಈ ಬಹುಮಹತ್ವದ ಮೊದಲಸಾಲನ್ನು ನಾನು ಹೇಗೆ ರೂಪಿಸಿದೆನೊ ಅದನ್ನೇ ಸರಿಯಾಗಿದೆ ಎಂದು ತಿಳಿಯುತ್ತೇನೆ.’

ಇದೇ ಬಗೆಯ ಚರ್ಚೆ, ಜಿಜ್ಞಾಸೆ ಕಾದಂಬರಿಯ ಹೆಸರಿನ ಕುರಿತೂ ನಡೆಯಿತು. ಪ್ರಸನ್ನ ಅವರದು "ನೂರು ವರ್ಷದ ಏಕಾಂತ" ವಾದರೆ ವಿಜಯಾ ಅವರದು "ಒಂದು ನೂರು ವರ್ಷಗಳ ಏಕಾಂತ". ಈ ನೂರು ಮತ್ತು ಒಂದು ನೂರು ಎನ್ನುವ ಶಬ್ದ ಹುಟ್ಟಿಸುವ ಪ್ರತಿಮೆಗಳ ಕುರಿತು ಎಸ್ ದಿವಾಕರ್ ಒಂದೆಡೆ ಬರೆದಿದ್ದಾರೆ. ಬೋರ್ಹೆಸ್ ಲೇಖನವೊಂದನ್ನು ಉಲ್ಲೇಖಿಸುತ್ತ `ಒಂದು ಸಾವಿರದೊಂದು ರಾತ್ರಿಗಳು' ಅಥವಾ `ಸಾವಿರದೊಂದು ರಾತ್ರಿಗಳು' ಎಂಬ ಹೆಸರುಗಳು ನೀಡುವ ಸೂಚನೆಯ ಕುರಿತು ಅವರು ಅಲ್ಲಿ ನಮ್ಮ ಗಮನ ಸೆಳೆಯುತ್ತಾರೆ.

ರಬಾಸನ ಮೊದಲ ಸಮಸ್ಯೆ ಎದುರಾದದ್ದೂ ಹೆಸರಿನಲ್ಲೇ. `ಇದು "ಶತಮಾನ"ದ ಪ್ರಶ್ನೆಯಲ್ಲ. ಒಂದು ನೂರು ಅಥವಾ ಬರೀ ನೂರು ಎರಡರ ನಡುವೆ ತಾಕಲಾಟವಿದೆ. ಇಂಗ್ಲೀಷಿನಲ್ಲಿ ಇದು ಹೇಗಿರಬೇಕೆಂಬ ಬಗ್ಗೆ ಸ್ಪಾನಿಶ್ ಹೆಸರಿನಲ್ಲಿ ಯಾವುದೇ ಕ್ಲೂ ಇಲ್ಲ! ನಾನು ಇಲ್ಲಿನ ಕಾಲಪ್ರವಾಹದ ಬಗ್ಗೆ, ಅದು ನಿರ್ದಿಷ್ಟವಾದ, ಕಾಲಗಣನೆಗೆ ದಕ್ಕುವ ಒಂದು ಕಾಲಮಾನವೇ ಅಥವಾ ಸುಮ್ಮನೇ ಸಂದುಹೋದ, ಯಾವುದೂ ಆಗಬಹುದಾದ ಒಂದಷ್ಟು ವರ್ಷಗಳ ಬಗ್ಗೆ ಆಡಿದ ಮಾತೇ ಎನ್ನುವ ಬಗ್ಗೆ ಗಮನ ನೀಡಿದೆ. ಸಮಸ್ಯೆ ಎನಿಸಿದ್ದೇನೆಂದರೆ ಒಬ್ಬ ಸ್ಪಾನಿಶ್ ಓದುಗನಿಗೆ ಎರಡೂ ಹೆಸರುಗಳು ಸುಪ್ತವಾಗಿಯಾದರೂ ಎಲ್ಲೋ ಹೊಂದಿಕೊಳ್ಳುವ ಸಂಧಿಯೊಂದು ಇದ್ದೇ ಇರುತ್ತದೆ; ಆದರೆ ಒಬ್ಬ ಇಂಗ್ಲೀಷ್ ವ್ಯಕ್ತಿ ಸ್ಪಾನಿಶ್ ಆವೃತ್ತಿಯನ್ನು ಓದುವಾಗ ತಾನು ಯಾವ ಅರ್ಥದಲ್ಲಿ ಅದನ್ನು ಸ್ವೀಕರಿಸಬೇಕೆಂಬ ಬಗ್ಗೆ ತನ್ನಲ್ಲೇ ತಾನು ನಿರ್ಧರಿಸುವುದು ಅನಿವಾರ್ಯವೇ ಆಗುತ್ತದೆ. ಇದು ಸಮಸ್ಯೆಯನ್ನು ಹುಟ್ಟಿಸುತ್ತದೆ. ಆತನ ಮನಸ್ಸಿನಲ್ಲಿ ಅವೆರಡೂ ಏಕತ್ರ ಸಂಭವಿಸಲಾರವು. ಕಾದಂಬರಿಯ ಅನುಭೂತಿಗೆ ಹೆಚ್ಚು ನಿಕಟವಾಗಿರುವುದು "ಒಂದು" ಎಂದೇ ಗಾಬೊ ಮನದಲ್ಲಿಯೂ ಇತ್ತೆಂಬುದು ನನಗೆ ಗೊತ್ತು. ಅಲ್ಲದೆ ಇಂಗ್ಲೀಷ್ ಹೆಸರಿನ ವಿಚಾರದಲ್ಲಿ ಅವರಲ್ಲಿ ಯಾವುದೇ ಪ್ರತಿಮಾತಿರಲಿಲ್ಲ.’


ಈ ಒಂದು ಮೊದಲಸಾಲಿನ ಕುರಿತು, ಕಾದಂಬರಿಯ ಹೆಸರಿನ ಕುರಿತು ಇಷ್ಟು ದೀರ್ಘವಾಗಿ ಹೇಳುವುದಕ್ಕೆ ಕಾರಣವಿದೆ. ರಬಾಸ ಕಣ್ಮರೆಯಾಗಿರುವ ಈ ಹೊತ್ತಿನಲ್ಲಿ ನಾವು ಆತನ ಗುಣಗಾನ ಮಾಡಿ ಸುಮ್ಮನಾಗುವುದಲ್ಲ ಮುಖ್ಯ. ಪ್ರತಿಯೊಂದು ಸಪರೇಶನ್ ದೂರವಾದ ವ್ಯಕ್ತಿಯೊಂದಿಗಿನ ನಮ್ಮ ಸಂಬಂಧದ ಮತ್ತು ಈಗ ಇಲ್ಲುಳಿದವರೊಂದಿಗಿನ ನಮ್ಮ ಸಂಬಂಧದ ಪುನರಾವಲೋಕನಕ್ಕೆ ಕಾರಣವಾಗಬೇಕು. ರಬಾಸ ನಮಗೆ ಹೇಗೆ ಸಂಬಂಧಿಸಿದ್ದಾನೆ ಎನ್ನುವಷ್ಟೇ ರಬಾಸನ ಗೈರು ನಮ್ಮೆಲ್ಲರಲ್ಲಿ ಉದ್ದೀಪಿಸಬೇಕಾದ, ಅನುರಣಿಸಬೇಕಾದ ವಿಚಾರಗಳು ಮುಖ್ಯ.

ಮಾರ್ಕೆಸ್ ಯಾವ ಅನುವಾದವನ್ನೂ ಒಪ್ಪಿಕೊಂಡವನಲ್ಲ. ಅನುವಾದದ ತುಡಿತ ಒಬ್ಬ ಓದುಗನಲ್ಲಿ ಯಾವಾಗ ಮೂಡುತ್ತದೆ ಎನ್ನುವುದನ್ನು ಅರಿತವ ಮಾರ್ಕೆಸ್. ಸ್ವತಃ ಅದಕ್ಕೆ ಕೈ ಹಾಕಿ (ಗುಟ್ಟಾಗಿ) ಅನುಭವಿಸಿದ ವ್ಯಕ್ತಿ ಕೂಡ. ಈ ಕಾದಂಬರಿಯ ಮಟ್ಟಿಗಂತೂ ತನಗೆ ತಿಳಿದ ಎಲ್ಲಾ ಭಾಷೆಯ ಅನುವಾದವನ್ನೂ ಗಮನಿಸಿದ ಮೇಲೂ ಮಾರ್ಕೆಸ್ ಹೇಳಿದ ಮಾತು, "ಸ್ಪಾನಿಶ್ ಹೊರತು ಪಡಿಸಿ ಬೇರಾವ ಕೃತಿಯಲ್ಲೂ ನನ್ನನ್ನು ಕಾಣಲಾಗಲಿಲ್ಲ" ಎಂದೇ. ಅಂಥ ಮಾರ್ಕೆಸ್ ಗ್ರಿಗೊರಿ ರಬಾಸನ ಅನುವಾದವನ್ನು ಪ್ರಶಂಸಿದ್ದು ಗಮನಾರ್ಹ. ಇಂಗ್ಲೀಷ್‌ನಲ್ಲಿ ಬರೆಯುತ್ತಿರುವ ಅತ್ಯುತ್ತಮ ಲ್ಯಾಟಿನ್ ಅಮೆರಿಕನ್ ಲೇಖಕ ಎಂದಿದ್ದಲ್ಲದೆ ತಾನು `ರಬಾಸ ಇಂಗ್ಲೀಷಿಗೆ ಅನುವಾದಿಸಿದ ಹಲವಾರು ಕೃತಿಗಳನ್ನು ಓದಿದ್ದೇನೆ. ಅನೇಕ ಕಡೆಗಳಲ್ಲಿ ಆತನ ಅನುವಾದ ಮೂಲಕ್ಕಿಂತ ಉತ್ತಮವಾಗಿರುವುದನ್ನು ಒಪ್ಪಿಕೊಳ್ಳಲೇ ಬೇಕು. ಆತ ಸ್ಪಾನಿಶ್ ಭಾಷೆಯಲ್ಲಿ ಇಡೀ ಕೃತಿಯನ್ನು ನೆನಪಿಸಿಕೊಂಡು ಅದನ್ನೇ ಇಂಗ್ಲೀಷಿನಲ್ಲಿ ಬರೆಯುತ್ತಾನೇನೋ ಎಂಬ ಒಂದು ಅನುಭವವನ್ನು ಆತನ ಅನುವಾದ ನೀಡುತ್ತದೆ. ಮೂಲಕೃತಿಗೆ ಆತನ ನಿಷ್ಠೆಯೇನಿದೆ, ಅದು ಸರಳವಾಗಿ ಸಾಹಿತ್ಯಿಕ ಎನ್ನುವುದಕ್ಕಿಂತ ಹೆಚ್ಚು ಸಂಕೀರ್ಣವಾದದ್ದು. ಆತ ಎಂದೂ ಅಡಿಟಿಪ್ಪಣಿಗಳನ್ನು ಬಳಸಲಿಲ್ಲ. ಇದಂತೂ ಎಲ್ಲ ಕೆಟ್ಟ ಅನುವಾದಕರ ಸರ್ವೇಸಾಮಾನ್ಯವಾದ ಕೆಟ್ಟಚಾಳಿಯಾಗಿಬಿಟ್ಟಿದೆ...’ ಎಂದೆಲ್ಲ ಹೇಳಿರುವುದು ಇಲ್ಲಿ ಮುಖ್ಯ. ಯಾಕೆಂದರೆ ಅನುವಾದ ಮೂಲವನ್ನು ಕೊಲ್ಲುತ್ತದೆ ಎಂಬ ಮಾತಿನಲ್ಲಿ ಎಲ್ಲರಿಗೂ ನಂಬಿಕೆಯಿದೆ!

ಕೊನೆಗೂ ಅನುವಾದಕನದ್ದು ಕಣ್ಣಿಗೆ ಕಾಣಿಸದಂತಿದ್ದು ಬಿಡುವ ಪಾತ್ರವೇ. ಆತನೊಬ್ಬ ಲಿಪಿಕಾರ, ಪ್ರತಿಮಾಡುವವ ಅಥವಾ ಒಬ್ಬ ಸಂದೇಶವಾಹಕ ಅಷ್ಟೇ. ಸಾಹಿತ್ಯಕ್ಷೇತ್ರದಲ್ಲಿ ಅನುವಾದಕನದ್ದು ಯಾವಾಗಲೂ ಎರಡನೆಯ ಸ್ಥಾನವೇ, ಆತನ ಸೃಜನಶೀಲ ವ್ಯವಸಾಯವೆಂಬುದು ಒಂದು ಉಪವಸ್ತು! ಈ ಅರ್ಥದಲ್ಲಿ ಅನುವಾದಕರು ಮತ್ತು ಅನುವಾದದ ಸ್ಥಾನಮಾನವೇನಿದ್ದರೂ ಮೂಲ ಲೇಖಕ ಮತ್ತು ಕೃತಿಗೆ ಹೋಲಿಸಿದಲ್ಲಿ ನಂತರದ್ದು. ಅನುವಾದಿತ ಕೃತಿಯೆಂಬುದು ಸದಾ ಇನ್ನೊಂದಕ್ಕೆ ಋಣಿಯಾದದ್ದು. ಇದನ್ನು ಒಪ್ಪಿಕೊಂಡು ಮುಂದುವರಿದರೆ ಯಾವುದು ಮೂಲತಃ "ಇಲ್ಲ"ವೋ ಅದನ್ನು ಕುರಿತು ಚರ್ಚಿಸುವುದಕ್ಕೇನಿದೆ! ಅನುವಾದದ ಬಗ್ಗೆ ಸದಾ ನಡೆಯುವ ಚರ್ಚೆಯೇನಿದ್ದರೂ ಅದು ಎಷ್ಟು "ಅದ್ಭುತವಾಗಿದೆ" ಅಥವಾ "ಕಳಪೆಯಾಗಿದೆ" ಎನ್ನುವ ಕುರಿತಾಗಿಯೇ ಹೊರತು ಅನುವಾದಕನನ್ನೇ ಕೇಂದ್ರವಾಗಿರಿಸಿಕೊಂಡು ಯಾವ ಚರ್ಚೆಯೂ ನಡೆಯುವುದಿಲ್ಲ! ಆತನ ಸೃಜನಶೀಲತೆಯ, ಸಾಹಿತ್ಯಿಕವಾಗಿ ಅಥವಾ ಒಂದು ಬೌದ್ಧಿಕ ಸಂವೇದನೆಯ ಪರಿಚಾರಕನಾಗಿ ಒಂದು ವಿಶ್ಲೇಷಣೆಯ ಅಗತ್ಯವಿದೆ ಎಂದು ಅನಿಸಿದ್ದು ಕಡಿಮೆ. ಸ್ವತಃ ರಬಾಸ ಎಷ್ಟು ವಿನಯಶೀಲನೆಂದರೆ Thomas Hoeksema ಜೊತೆಗಿನ ಸಂದರ್ಶನದಲ್ಲಿ ತನ್ನದೊಂದು ತಂತ್ರವಿದೆ, ತನಗೇ ವಿಶಿಷ್ಟವಾದೊಂದು ಅಪ್ರೋಚ್ ಎಂಬುದಿದೆ ಎಂದೆಲ್ಲ ಹೇಳಿಕೊಳ್ಳುವುದೇ ಇಲ್ಲ. ಅತ್ಯಂತ ಸಹಜವಾದ ಪ್ರಕ್ರಿಯೆ ಅದು. ಮೂಲಕ್ಕೆ ನಿಷ್ಠನಾಗಿರುವುದು ಮತ್ತು ಗದ್ಯದ ಸುಲಲಿತ ಹರಿವು ಮುಖ್ಯವೆಂದುಕೊಂಡು ಅನುವಾದಿಸುವುದು - ಈ ಎರಡೂ ಕೆಲವೊಮ್ಮೆ ಪರಸ್ಪರ ವೈರುಧ್ಯವುಳ್ಳ ಸವಾಲನ್ನು ಅನುವಾದಕನಿಗೆ ಒಡ್ಡುವುದಿದೆ ಎನ್ನುವುದನ್ನು ಒಪ್ಪುವ ರಬಾಸ ಇಲ್ಲಿ ಅನುವಾದಕನೊಬ್ಬ ತನಗೆ ತಾನು ಕೆಲವು ಆದರ್ಶಗಳನ್ನಿರಿಸಿಕೊಳ್ಳಬಹುದೇ ಹೊರತು ಎಲ್ಲಿ ಯಾವುದು ಮೇಲ್ಮೈ ಸಾಧಿಸುವುದೆಂದು ಹೇಳುವುದು ಕಷ್ಟವೆನ್ನುತ್ತಾನೆ. ಗ್ರಿಗೊರಿ ರಬಾಸ ಕೊನೆಗೂ ಎತ್ತಿಹಿಡಿಯುವುದು ಅಟೊಮ್ಯಾಟಿಕ್ ಟ್ರಾನ್ಸಲೇಶನ್ ಎಂಬ ಪರಿಕಲ್ಪನೆಯನ್ನು! ಇಂಥ ಸಂಗತಿಗಳೊಂದಿಗೇನೆ ಅನುವಾದಕನ ಅನುವಾದದ ಪ್ರಕ್ರಿಯೆ, ಮೂಲದೊಂದಿಗೆ ಆತ ನಡೆಸುವ ಅನುಸಂಧಾನ ಮತ್ತು ಪುನಃಸೃಷ್ಟಿಯ ಆನಂದ, ಅದರ ಸಂಕಷ್ಟ, ಅದರೊಂದಿಗೆ ಮತ್ತು ಅದರ ಮೂಲ ಕೃತಿಕಾರನೊಂದಿಗಿನ ಚರ್ಚೆ - ಇದೆಲ್ಲವನ್ನೂ ಒಟ್ಟು ಸಾಹಿತ್ಯರಂಗದಲ್ಲಿ ಒಂದು ಭಾಷೆ ಮತ್ತು ಸಂಸ್ಕೃತಿಗೆ ಅನುವಾದಕನ ಕೊಡುಗೆಗೆ ತತ್ಸಂಬಂಧಿಯಾಗಿ ಕಾಣುವ ಕೆಲಸ ನಡೆದಿರುವುದು ಕಡಿಮೆ. ರಬಾಸ ಕಣ್ಮರೆಯಾದಾಗ ನಮಗಿದೆಲ್ಲ ಮನಸ್ಸಿಗೆ ಬರಬೇಕು.

Maria Constanza Guzman ಬರೆದ ಗ್ರಿಗೊರಿ ರಬಾಸನ ಕುರಿತ ಕೃತಿಯಲ್ಲಿ ಈ ಅನುವಾದದ ಯಾತ್ರೆಯ ವಿವರವಾದ ವಿಶ್ಲೇಷಣೆಯಿದೆ. 2010ರಲ್ಲಿ ಬಂದ ಈ ಕೃತಿಯ ಕಾಲಕ್ಕೇ ರಬಾಸ ಐವತ್ತಕ್ಕೂ ಹೆಚ್ಚು ಲ್ಯಾಟಿನ್ ಅಮೆರಿಕನ್ ಕಾದಂಬರಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದ. ಸ್ಪಾನಿಶ್ ಮತ್ತು ಪೋರ್ಚುಗೀಸ್ ಸಾಹಿತ್ಯವನ್ನು ಇಂಗ್ಲೀಷಿಗೆ ತಂದವರಲ್ಲಿ ರಬಾಸ ಅಗ್ರಗಣ್ಯನೆನಿಸಿದ್ದ. ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಲ್ಯಾಟಿನ್ ಅಮೆರಿಕನ್ ಸಾಹಿತ್ಯಕ್ಕೆ ಅಂತರ್ರಾಷ್ಟ್ರೀಯ ಸಾಹಿತ್ಯಕ್ಷೇತ್ರದಲ್ಲಿ ಒಂದು ಗಣ್ಯ ಸ್ಥಾನಮಾನವನ್ನು ದಕ್ಕಿಸಿಕೊಟ್ಟವರಲ್ಲಿ ರಬಾಸನ ಪಾತ್ರ ಅತಿದೊಡ್ಡದು. ಹೀಗಾಗಿಯೇ ಆತನನ್ನು ಒಬ್ಬ ಕವಿಯಾಗಿಯೋ, ಸೃಜನಶೀಲ ಲೇಖಕನನ್ನಾಗಿಯೋ ಯಾರೂ ಗುರುತಿಸದೇ ಹೋಗುವಂತಾಯಿತು ಎಂಬ ಮಾತೂ ಸುಳ್ಳಲ್ಲ. ಅಷ್ಟರ ಮಟ್ಟಿಗೆ ಆತನೊಬ್ಬ ಅನುವಾದಕನಾಗಿ ಕಣ್ಣಿಗೆ ಹೊಡೆಯುತ್ತಾನೆ! ಅರವತ್ತರ ದಶಕದಲ್ಲಿ Odyssey Review ಎಂಬ ಒಂದು ಪತ್ರಿಕೆಯ ಸಹಸಂಪಾದಕನಾಗಿ ಹೊಸ ಸ್ಪಾನಿಶ್ ಮತ್ತು ಪೋರ್ಚುಗೀಸ್ ಭಾಷೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುವ ಅನಿವಾರ್ಯಕ್ಕೆ ಸಿಲುಕಿದ ರಬಾಸನಿಗೆ ತನಗೆ ಸಿಕ್ಕಿದ್ದನ್ನು ಅನುವಾದಿಸಿಕೊಳ್ಳುವುದು ಕೂಡ ಅನಿವಾರ್ಯವೇ ಆಗಿತ್ತು. ಹಾಗೆ ಅನುವಾದಕನಾದ ರಬಾಸ ಅಲ್ಲಿಂದ ಮುಂದೆ ಅನುವಾದಿಸುತ್ತಲೇ ಹೋದ ಎನ್ನಬೇಕು. ರಬಾಸ ಕೇವಲ ಅಗ್ರಗಣ್ಯರ ಕಾದಂಬರಿಗಳನ್ನು ಅನುವಾದಿಸಿದವನಲ್ಲ ಎನ್ನುವಲ್ಲಿಯೂ ಆತನ ಮಹತ್ವ ನಮ್ಮ ಗಮನಕ್ಕೆ ಬರಬೇಕು. ಅಷ್ಟೇನೂ ಹೆಸರು ಮಾಡಿರದ ಹಲವರ ಕೃತಿಗಳನ್ನೂ ರಬಾಸ ಅನುವಾದಿಸಿದ್ದಾನೆ. ರಬಾಸ ಪಡೆದ ಪ್ರಶಸ್ತಿ, ಗೌರವಗಳಿಗೆ ಕೊನೆಮೊದಲಿಲ್ಲ. ಮಾರ್ಕೆಸ್ ತನ್ನ ಕಾದಂಬರಿಯ ಅನುವಾದಕ್ಕಾಗಿ ಮೂರುವರ್ಷಗಳ ಕಾಲ, ರಬಾಸ ಬಿಡುವಾಗುವವರೆಗೆ ಕಾಯಬೇಕಾಯಿತು ಎಂಬುದು ಕೂಡ ಸಣ್ಣಮಾತಲ್ಲ. ಯಾವತ್ತೂ ಮರೆಯಾಗಿಯೇ ಉಳಿದುಬಿಡುವ ಅನುವಾದಕನೊಬ್ಬ ಮೂಲ ಲೇಖಕನಷ್ಟೇ ಮುನ್ನೆಲೆಯಲ್ಲಿ, ಆತನಿಗೆ ಸರಿಸಮಾನಾಗಿ ಕಾಣಿಸಿಕೊಳ್ಳುವಂಥ ಸ್ಥಿತಿಗೆ ಕಾರಣಕರ್ತನಾಗಿದ್ದು ರಬಾಸ. ಹಾಗೆ ನೋಡಿದರೆ ಅನುವಾದಕರಿಗೆ ಸಿಗುತ್ತಿದ್ದುದು ಏಕಕಾಲದ ಸಂಭಾವನೆ. ಲೇಖಕನಂತೆ ಆತನಿಗೆ ಪ್ರತಿ ಮುದ್ರಣಕ್ಕೂ ಗೌರವಧನ ಬರುತ್ತಲೇ ಇರುವುದಿಲ್ಲ. ಅದು ಹೋಗಲಿ ಎಂದರೆ ಗ್ರಿಗೊರಿ ರಬಾಸ ಈ ಕಾದಂಬರಿಯ ಅನುವಾದವನ್ನು ಬೇರೆಯವರಿಗಾಗಿ ಮಾಡಿದ್ದು. ಕಾದಂಬರಿಯ ಭರ್ಜರಿ ಯಶಸ್ಸು ಮತ್ತು ಕೊನೆಯಿಲ್ಲದ ಮರುಮುದ್ರಣಗಳು ಸಾಹಿತ್ಯಪ್ರೇಮಿಯಾಗಿ ತನಗೆ ನೀಡುವ ಖುಶಿಯನ್ನು ಅನುವಾದಕನಾಗಿ ನೀಡದಾಯಿತು ಎಂದಿದ್ದಾನೆ ರಬಾಸ.

ಹೀಗೆ ಗ್ರಿಗೊರಿ ರಬಾಸ ಲ್ಯಾಟಿನ್ ಅಮೆರಿಕನ್ ಸಾಹಿತ್ಯಕ್ಕೆ ಅಂತರ್ರಾಷ್ಟ್ರೀಯ ನೆಲೆಯಲ್ಲಿ ಒಂದು ಮೂರ್ತರೂಪ ಪರಿಕಲ್ಪಿಸಿಕೊಟ್ಟಂತೆಯೇ ಅನುವಾದಕ ಎನ್ನುವ ಸ್ಥಾನಕ್ಕೂ ಒಂದು ಸ್ಪಷ್ಟ ಮನ್ನಣೆಯನ್ನು ದೊರಕಿಸಿಕೊಟ್ಟನೆನ್ನಬೇಕು. ಹಾಗಾಗಿಯೇ ಅನುವಾದ ಮತ್ತು ಅನುವಾದಕನ ಕುರಿತ ಅಧ್ಯಯನಕ್ಕೆ ತಾವು ರಬಾಸನನ್ನೇ ಆರಿಸಿಕೊಳ್ಳುವುದು ಅನಿವಾರ್ಯವಾಗಿತ್ತು ಎನ್ನುತ್ತಾರೆ Guzman. ಹಲವು ಹತ್ತು ಲೇಖಕರನ್ನು ನಮಗೆ ಒದಗಿಸಿಕೊಟ್ಟ ಕಾರಣಕ್ಕೆ ಮಾತ್ರವೇ ಅಲ್ಲದೆ ಗ್ರಿಗೊರಿ ರಬಾಸ ನಮಗೆಲ್ಲ ಸಂಬಂಧಿಯಾಗುವ ಇತರ ಕೆಲವು ನೆಲೆಗಳು ಇಲ್ಲಿವೆ. ಹಾಗೆಯೇ ಆತನ ಕಣ್ಮರೆಯಲ್ಲಿ ನಮನಿಮಗೆ ಮನಸಾ ಸೂತಕವಿದೆ.

(ಈ ಲೇಖನ ಪ್ರಜಾವಾಣಿ ಸಾಪ್ತಾಹಿಕ ಮುಕ್ತಛಂದದಲ್ಲಿ ಪ್ರಕಟಿತ)

No comments: