Friday, December 23, 2016

ನಾನಾರೆಂಬುದು ನಾನಲ್ಲ,ಈ ಮಾನುಷ ಜನ್ಮವು ನಾನಲ್ಲ...

ಆಸ್ತಿ, ಪ್ರಧಾನವಾಗಿ ಭೂಮಿ ‘ನನ್ನದು’ ಎನಿಸಿಕೊಳ್ಳುವ ಮತ್ತು ನನ್ನದಲ್ಲ ಎನಿಸಿಕೊಳ್ಳುವ ವಿಧಿ ವಿಧಾನಗಳು ವಿಚಿತ್ರ. ಈ ಪ್ರಪಂಚದ ಮೈ ಮೇಲೆ ಮೊದಲು ಗೆರೆ ಎಳೆದು ‘ಇದು ನನ್ನದು’ ಎಂದು ಡಿಕ್ಲೇರ್ ಮಾಡಿದ ವ್ಯಕ್ತಿಗೆ ಇಡೀ ಜಗತ್ತಿಗೇ ಅಂಥ ಗೆರೆ ಎಳೆಯುವುದು ಸಾಧ್ಯವಿದ್ದರೂ ಅದು ಅವನ ಕೈಮೀರಿದ್ದಾಗಿತ್ತು ಎನ್ನುವುದು ನಮಗೆ ಅರ್ಥವಾಗುತ್ತದೆ. ಅಲೆಗ್ಸಾಂಡರ್ ಕೂಡ ಕೂಡಿ ಹಾಕಿದ ಭೂಮಿಗೆ ಒಂದು ಮಿತಿ ಇತ್ತು. ಆದರೆ ಕಲ್ಪಿಸಬಹುದಾದಂತೆ ಯಾವನೇ ವ್ಯಕ್ತಿಗೆ ‘ಇದು ನನ್ನದು’ ಎನ್ನುವ ಅಗತ್ಯ ಬಿದ್ದಿರಬಹುದಾದ ಸಂದರ್ಭದಲ್ಲೇ ‘ಅದು ನಿನ್ನದು’ ಎನ್ನುವ ಅನಿವಾರ್ಯ ಎದುರಾಗಿದ್ದಿರಬೇಕು. ಇಲ್ಲದಿದ್ದಲ್ಲಿ ಬಹುಶಃ ‘ಇದು ನನ್ನದು’ ಎನ್ನುವ ಸಂದರ್ಭವೇ ಹುಟ್ಟುತ್ತಿರಲಿಲ್ಲವೇನೊ ಅನಿಸುತ್ತದೆ. ನಾವು ಭಾರತೀಯರು ಪ್ರಧಾನವಾಗಿ ಪರಿಗಣಿಸುವ ‘ಮಹಾಭಾರತ’ ಕಾವ್ಯ- ಪುರಾಣದಿಂದ ಹಿಡಿದು ಭಾರತದ ವಿಭಜನೆಯ ತನಕದ ಸಂದರ್ಭಗಳನ್ನು ನೆನೆದರೂ ಇವತ್ತಿಗೂ ಅಂತರ್ರಾಷ್ಟ್ರೀಯ ನೆಲೆಯಲ್ಲಿ, ದೇಶೀಯ ಭೂಮಿಕೆಯಲ್ಲಿ ಮತ್ತು ನಮ್ಮ ನಮ್ಮ ವೈಯಕ್ತಿಕ ಮಟ್ಟದಲ್ಲಿ ಕೂಡ ನಮ್ಮ ಪ್ರಧಾನ ಸಮಸ್ಯೆ ಇದೇ. ನನ್ನದು ಮತ್ತು ನಿನ್ನದು ಯಾವು-ಯಾವುದು ಎಂಬ ಕುರಿತ ಜಗಳ. ಇದರಲ್ಲೇ ನಾವು ಕಳೆದು ಹೋಗುತ್ತಿರುವುದು ಮತ್ತು ಅದನ್ನು ಒಪ್ಪಿಕೊಂಡಿರುವುದು ಕುತೂಹಲಕರ.

ಮೊಗಸಾಲೆಯವರ ‘ಮುಖಾಂತರ’ ಕಾದಂಬರಿ ಕೂಡ ಇದಕ್ಕೆಲ್ಲ ಒಂದು ರೂಪಕದಂತಿರುವುದು ನಿಜ. ಇದನ್ನು ಬಳಸಿಕೊಂಡು ಮೊಗಸಾಲೆಯವರು ಕಾಸರಗೋಡು ಪರಿಸರದ ಬ್ರಾಹ್ಮಣ ಸಮುದಾಯದ, ಅದರ ಕೆಲವು ಒಳಪಂಗಡಗಳನ್ನೂ ಸೇರಿ, ಒಂದು ಸಾಂಸ್ಕೃತಿಕ ಚಿತ್ರವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ ಮತ್ತು ಅದರ ಜೊತೆಜೊತೆಗೇ ಸಮಾಜದ ಇತರ ಸಮುದಾಯದವರ ಸಾಂಸ್ಕೃತಿಕ ಬದುಕನ್ನೂ ಅವಗಣಿಸದೆ ಒಟ್ಟಂದಕ್ಕೆ ಚ್ಯುತಿಬರದಂತೆ ಇದನ್ನು ಮಾಡುತ್ತಾರೆ ಎನ್ನುವುದೇ ಈ ಕಾದಂಬರಿಯ ಒಂದು ಪ್ರಮುಖ ಅಂಶ. ಮೊಗಸಾಲೆಯವರು ಇಲ್ಲಿ ಕೊಡುವ ಅನೇಕ ವಿವರಗಳು, ಅಡುಗೆಗೆ ಸಂಬಂಧಿಸಿದಂತೆ ಇರಬಹುದು, ಮದುವೆ-ಬಾಣಂತನ-ಶ್ರಾದ್ಧ-ದೇವರ ಪೂಜೆ-ಪುನಸ್ಕಾರ ಯಾವುದೇ ಕುರಿತಾದ್ದಿರಬಹುದು, ಅಲ್ಲಿ ನೀಡುವ ವಿವರಗಳು ಸಮೃದ್ಧವಾಗಿವೆ, ದಾಖಲಾಗಬೇಕಾದ್ದಿವೆ. ಇಲ್ಲಿ ಬರುವ ಎಷ್ಟೋ ವಿವರಗಳು, ಅವಕ್ಕೆ ಸಂಬಂಧಿಸಿದ ಶಬ್ದಸಂಪತ್ತಿನ ಸಮೇತ ಇವತ್ತು ನಮ್ಮ ಜನಮನದಿಂದ, ದೈನಂದಿನಗಳಿಂದ ಕಣ್ಮರೆಯಾಗುತ್ತಿವೆ, ಈಗಾಗಲೇ ಆಗಿವೆ ಎನ್ನುವುದನ್ನು ಗಮನಕ್ಕೆ ತಂದುಕೊಂಡರೆ ಕಾದಂಬರಿಯೊಂದರ ನೆವದಿಂದ ಅವುಗಳನ್ನೆಲ್ಲ ಅವುಗಳ ಜೀವಂತಿಕೆ ಮತ್ತು ಪ್ರಾದೇಶಿಕ ಸೊಗಡಿನೊಂದಿಗೆ ಹೀಗೆ ದಾಖಲಿಸಿದ್ದಕ್ಕಾಗಿ ನಾವು ಅವರಿಗೆ ಋಣಿಯಾಗಿರಬೇಕು.

ಕೃಷಿ ಮತ್ತು ತತ್ಸಂಬಂಧಿ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಜನ, ಅವರ ಹೊಟ್ಟೆಪಾಡಿನ ಅನಿವಾರ್ಯಗಳನ್ನು ಚಿತ್ರಿಸುವಾಗಲೇ ಮೊಗಸಾಲೆಯವರು ನಮಗೆ ಕಾಣಿಸುವ ಒಂದು ಚಿತ್ರ ಅವರ ಬದುಕಿನ ಸಮಗ್ರ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ ಮಗ್ಗಲುಗಳನ್ನು ತಪ್ಪದೇ ಒಳಗೊಂಡಿರುತ್ತದೆ ಎನ್ನುವುದು ಮೊಗಸಾಲೆಯವರ ನಿರೂಪಣೆಯಲ್ಲಿ ಕಣ್ಣಿಗೆ ಹೊಡೆದು ಕಾಣುವ ಮತ್ತೊಂದು ಪ್ರಮುಖ ಗುಣ. ಇದೇ ಬಹುಶಃ ಮೊಗಸಾಲೆಯವರ ಬಹುದೊಡ್ಡ ಶಕ್ತಿ,ಆಸ್ತಿ ಎಂದರೆ ತಪ್ಪಾಗಲಾರದು. ಹಾಗೆ ವಸ್ತುಲೋಕದ ವಿವರಗಳನ್ನು, ಬದುಕಿನ ದೈನಂದಿನದ ನಡಾವಳಿಗಳ ವಿವರಗಳನ್ನು ಕಟ್ಟಿ ಕೊಡುವಲ್ಲಿ ಮೊಗಸಾಲೆಯವರು ಅಪ್ರತಿಮ ಪ್ರತಿಭೆಯುಳ್ಳವರು. ಇದನ್ನವರು ಹೇಗೆ ಮಾಡುತ್ತಾರೆಂದರೆ, ತಮಗೆ ಕತೆ ಹೇಳುವುದು, ಕಾದಂಬರಿಯೊಂದನ್ನು ಕಟ್ಟುವುದು ಮುಖ್ಯವಲ್ಲ, ಈ ಚಿತ್ರವೊಂದನ್ನು ಸಂಪನ್ನಗೊಳಿಸುವುದೇ ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಎಂಬಂತೆ ನಿಷ್ಠೆಯಿಂದಲೂ, ಪ್ರೀತಿಯಿಂದಲೂ ಮಾಡುತ್ತಾರೆ. ಶಿರಸ್ತೇದಾರರ ಕರೆ ಬಂದಾಗ ಇವರ ಪಾತ್ರಗಳು ಉಟ್ಟಬಟ್ಟೆಯಲ್ಲಿ ಓಡುವುದಿಲ್ಲ ಎನ್ನುವುದನ್ನು ಗಮನಿಸಿ. ಆತ ತಾನು ಯೋಜಿಸಿಕೊಂಡಿದ್ದ, ಈಗಾಗಲೇ ಕೈಹಾಕಿ ಅರ್ಧದಲ್ಲಿದ್ದ ಕೃಷಿಕಾರ್ಯವನ್ನೊ, ಇನ್ನಿತರ ದೈನಂದಿನ ಆಗುಹೋಗುಗಳ ದೇಖರೇಕಿಯ ಕುರಿತೋ ಚಿಂತಿತ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡದೇ ಆತ ಶಿರಸ್ತೇದಾರರ ಕರೆಗೆ ಸ್ಪಂದಿಸಲಾರ.

ಹಾಗೆಯೇ ಮೊಗಸಾಲೆಯವರು ಅಂತುನಲ್ಕೆ ಎಂಬಾತನ ಕುರಿತು ನಮಗೆ ವಿವರಗಳನ್ನು ನೀಡುವ ಸಂದರ್ಭವನ್ನು ಗಮನಿಸಬಹುದು. ಇಲ್ಲಿ ಉಗ್ರಾಣಿಗೆ ಟೊಪ್ಪಿಶಂಭಟ್ಟರು ಎಲ್ಲಿದ್ದಾರೆ ಎನ್ನುವುದನ್ನು ಹುಡುಕುವ ತುರ್ತು ಸಂದರ್ಭ ಎದುರಾಗಿದೆ. ರಾತ್ರಿ ಕತ್ತಲೆ ಬೇರೆ ಆವರಿಸುತ್ತಿದೆ. ಉಗ್ರಾಣಿ ಮಹಾ ಅವಸರದಲ್ಲಿದ್ದಾನೆ. ಆದರೆ ಇಲ್ಲಿ ಎಲ್ಲಿಲ್ಲದ ಸಾವಧಾನದಿಂದ ಮೊಗಸಾಲೆಯವರು ನಮಗೆ ಕೋಲಕಟ್ಟುವ ಅಂತುನಲ್ಕೆಯ ಕುರಿತು ವಿವರವಾಗಿ ಹೇಳತೊಡಗುತ್ತಾರೆ. ಇದೇ ರೀತಿ ಉಡುಪಿಯ ಮಠದಲ್ಲಿ ಶಂಕರನನ್ನು ಶಿಕ್ಷಣಕ್ಕಾಗಿ ಬಿಟ್ಟುಬರುವ ಸಂದರ್ಭದಲ್ಲಿ ಕೃಷ್ಣಯ್ಯ ಮತ್ತು ಐತಾಳರು ಸಂಧಿಸುವ ಹಸನಬ್ಬ, ಮೂಲ್ಕಿಯ ನರಸಿಂಹ ಐತಾಳರು ಕೂಡ. ಈ ಪಾತ್ರಗಳೆಲ್ಲ ಕಾದಂಬರಿಯ ಕಥಾನಕಕ್ಕೆ ಸಂಬಂಧಿಸಿದಂತೆ ನಿರ್ವಹಿಸುವುದೇನೂ ಇಲ್ಲ. ಆದರೆ ಇವರುಗಳಿಲ್ಲದೇ ಈ ಕಾದಂಬರಿಯ ಒಂದು ಜಗತ್ತು ಸಮೃದ್ಧವೂ ಜೀವಂತವೂ ಆಗುತ್ತಿರಲಿಲ್ಲ ಎನ್ನುವುದು ಮುಖ್ಯ. ಬೇರೆ ಯಾರಾಗಿದ್ದರೂ ಕಾದಂಬರಿಯ ಕೇಂದ್ರಕ್ಕೆ, ಗಮ್ಯಕ್ಕೆ ತೊಡಕುಂಟು ಮಾಡಬಹುದು ಎಂಬ ನೆಲೆಯಲ್ಲಿ ಬಿಟ್ಟುಬಿಡುತ್ತಿದ್ದ ವಿವರಗಳು ಮೊಗಸಾಲೆಯವರಿಗೆ ಅಮುಖ್ಯ ಎನಿಸುವುದಿಲ್ಲ ಎನ್ನುವುದನ್ನು ಗಮನಿಸಿ. ಅಂದರೆ, ಕೃತಿಕಾರನಲ್ಲಿ ಒಂದು ಮಟ್ಟದ ಸೂಕ್ಷ್ಮ ಇಲ್ಲದೇ ಹೋದಲ್ಲಿ, ತನ್ನ ಪಾತ್ರದ ದೈನಂದಿನಗಳ ವಿವರ ಕೂಡ ಮುಖ್ಯ ಎನಿಸುವಂಥ ತಾದ್ಯಾತ್ಮ, ತನ್ನ ಪಾತ್ರದ ಬದುಕಿನ ಬಗ್ಗೆ ಇಲ್ಲದೇ ಹೋದಲ್ಲಿ, ಅಥವಾ ತನ್ನ ಪಾತ್ರ ತನಗೇ ‘ನಿಜ’ ಆಗದೇ ಇದ್ದಲ್ಲಿ ಇದು ಸಾಧ್ಯವಾಗುವುದಿಲ್ಲ. ಬದಲಿಗೆ ಅವನಿಗೆ ತನ್ನ ಕೃತಿಯ ಆಕೃತಿ-ಆಶಯ-ಧ್ವನಿ-ತಾತ್ವಿಕತೆ ಮುಂತಾದ ಸಂಗತಿಗಳೇ ಮುಖ್ಯವಾಗಿ ಬಿಡುತ್ತವೆ! ಮೊಗಸಾಲೆಯವರು ನಾವಿಂದು ಕಳೆದುಕೊಳ್ಳುತ್ತಿರುವ ಒಂದು ಜಗತ್ತಿನ ವಿವರಗಳನ್ನು ನಮಗೆ ಒದಗಿಸಬಲ್ಲ ಒಬ್ಬ ವ್ಯಕ್ತಿಯಾಗಿರುವುದರಿಂದಲೇ ಮತ್ತು ಅವರು ಕೊಡುತ್ತಿರುವ ವಿವರಗಳು ವಾಸ್ತವ ಜಗತ್ತಿನ ತಳಮಟ್ಟದ ಪ್ರಾಮಾಣಿಕ ವಿವರಗಳಾಗಿರುವುದರಿಂದಲೇ ಸ್ವಲ್ಪಮಟ್ಟಿಗೆ ಪ್ರಕಾರದ ಮಡಿವಂತಿಕೆಯನ್ನು ಬದಿಗಿಟ್ಟಾದರೂ ಇಂಥ ವಿವರಗಳನ್ನು ನಾವು ಸಹಿಸಬಹುದಾಗಿದೆ ಎಂದೇ ನನಗೆ ತೋರುತ್ತದೆ.

‘ಮುಖಾಂತರ’ ಕಾದಂಬರಿಯ ವಸ್ತುವನ್ನು ಸ್ಥೂಲವಾಗಿ ಗಮನಿಸಿಕೊಂಡರೆ ಇದರ ಮುಖಾಂತರ ಮೊಗಸಾಲೆಯವರು ಹೇಳಹೊರಟಿದ್ದೇನೆಂಬುದನ್ನು ವಿಶ್ಲೇಷಿಸುವುದು ನಮಗೆ ಸುಲಭವಾಗುತ್ತದೆ. ತಿರುಮಲೇಶ್ವರ ಭಟ್ಟರು ತಮ್ಮ ಶಿರಸ್ತೇದಾರರನ್ನು ಮುಜುಗರಕ್ಕೀಡಾಗುವಂಥ ಒಂದು ಸಂದರ್ಭದಲ್ಲಿ ಕಾಯ್ದ ರೀತಿಯೇ ಮೆಚ್ಚುಗೆಗೆ ಕಾರಣವಾಗಿ, ಮೂಲಗೇಣಿಗೆ ಹಿಡಿದ ಒಂದು ಭೂಮಿ ಅವರ ಸ್ವಂತದ್ದಾಗುತ್ತದೆ. ಇದರ ಜೊತೆ ದರ್ಕಾಸ್ತಿನ ಹತ್ತು ಹದಿನೈದು ಎಕರೆ ಕೂಡ ಅವರದ್ದಾಗುತ್ತದೆ. ಮೂಲಗೇಣಿಗೆ ಭೂಮಿ ಕೊಟ್ಟಿದ್ದ ಪಠೇಲರು ಇಲ್ಲಿ ಆ ಭೂಮಿಯನ್ನು ಕಳೆದುಕೊಳ್ಳುತ್ತಾರೆ.

ಈ ತಿರುಮಲೇಶ್ವರ ಭಟ್ಟರಿಗೆ ಮಕ್ಕಳಿಲ್ಲ. ಯಾರದೋ ಭೂಮಿಯನ್ನು ಇವರಿಗೆ ಎತ್ತಿಕೊಟ್ಟ ಶಿರಸ್ತೇದಾರರು ಭಟ್ಟರನ್ನು ಬಳಸಿಕೊಳ್ಳುತ್ತಾರೆ. ತಮ್ಮ ಆಶ್ರಯದಲ್ಲಿದ್ದ ವಿಧವೆ ರತ್ನಮ್ಮನನ್ನು ಅವಳ ಮಗ ವೆಂಕಪ್ಪಯ್ಯನ ಸಮೇತ ಭಟ್ಟರಿಗೆ ಪರಭಾರೆ ಮಾಡುತ್ತಾರೆ. ವೆಂಕಪ್ಪಯ್ಯ ಹೀಗೆ ತಿರುಮಲೇಶ್ವರ ಭಟ್ಟರ ದತ್ತುಪುತ್ರನಾಗುತ್ತಾನೆ. ಒಂದು ದುರ್ಬಲ ಘಳಿಗೆಯಲ್ಲಿ ತಿರುಮಲೇಶ್ವರ ಭಟ್ಟರು ವಿಧವೆ ರತ್ನಮ್ಮನ ಸಂಗ ಮಾಡುವುದರಿಂದ ಅವರಿಗೆ ಅವಳಲ್ಲಿ ಕೃಷ್ಣಯ್ಯನೆಂಬ ಒಬ್ಬ ಮಗ ಹುಟ್ಟುತ್ತಾನೆ. ಇದು ಕಾರಣವಾಗಿ ದತ್ತುಪುತ್ರ ವೆಂಕಪ್ಪಯ್ಯ ತನ್ನ ಸಾಕುತಂದೆ ಮತ್ತು ಸಹೋದರನನ್ನು ದ್ವೇಷಿಸುತ್ತಲೇ ಬೆಳೆಯುತ್ತಾನೆ. ಪಾಂಡವರು ಕೌರವರು ಹುಟ್ಟಿದ ತೆರದಲ್ಲೇ ಇಲ್ಲಿನ ವೆಂಕಪ್ಪಯ್ಯನೂ ತಿರುಮಲೇಶ್ವರ ಭಟ್ಟರ ಹೊಟ್ಟೆಯ ಮಗನಲ್ಲ, ಕೃಷ್ಣಯ್ಯನೂ ಸಾಮಾಜಿಕವಾಗಿ ಸ್ವೀಕೃತವಾದ ಬಗೆಯಲ್ಲಿ ಭಟ್ಟರಿಗೆ ಹುಟ್ಟಿದ ಮಗನಲ್ಲ. ಒಂದು ಅರ್ಥದಲ್ಲಿ ಇಬ್ಬರೂ ವಂಶಕ್ಕೆ ಹೊರಗಿನವರೇ ಆಗಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ. ಹಾಗೆಯೇ, ಈ ತಂದೆ ಮಗನ ನಡುವಿನ, ಸಹೋದರರ ನಡುವಿನ ದ್ವೇಷವೇನಿದೆ, ಅದು ಮುಂದಿನ ಎರಡು ತಲೆಮಾರಿನಲ್ಲೂ ಹರಿದು ಬರುತ್ತದೆ ಎನ್ನುವುದು ಕೂಡ ಗಮನಿಸಬೇಕಾದ ಅಂಶ. ವೆಂಕಪ್ಪಯ್ಯನ ದುಂದುಗಾರಿಕೆ, ಸಾಲಗಳಿಂದಾಗಿ ಹಿಂದೆ ಪಠೇಲರಿಂದ ಬಂದಿದ್ದ ಮೂಲಗೇಣಿಯ ಭೂಮಿ ಮತ್ತೆ ಪಠೇಲರದ್ದೇ ಆಗುವ ಸಂದರ್ಭ ಒದಗುತ್ತದೆ.

ವೆಂಕಪ್ಪಯ್ಯನಿಗೆ ಒಬ್ಬ ಮಗ ಹುಟ್ಟಿದರೂ ಆ ಕವಲಿನ ಕತೆ ಕಾದಂಬರಿಯಲ್ಲಿ ಅಷ್ಟಾಗಿ ಪೋಷಣೆ ಪಡೆಯುವುದಿಲ್ಲ. ಮೂರನೆಯ ತಲೆಮಾರಿನಲ್ಲಿ ಈ ಕವಲಿನ ಶ್ರೀಧರ ಮತ್ತು ಶ್ರೀನಿವಾಸ ಎಂಬ ಇಬ್ಬರು ಸಹೋದರರು ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಬಿಟ್ಟರೆ ವೆಂಕಪ್ಪಯ್ಯನ ವಂಶಾವಳಿ ತೆರೆಮರೆಗೆ ಸರಿದಂತೆಯೇ ಎನ್ನಬಹುದು. ಕೃಷ್ಣಯ್ಯನ ಇಬ್ಬರು ಮಕ್ಕಳು, ಮಾಪಣ್ಣ ಮತ್ತು ಕೇಚಣ್ಣ ಎನ್ನುವವರಲ್ಲಿ ಕೂಡ ಕೇಚಣ್ಣನಿಗೆ ತಂದೆಯ ಮೇಲೆ ಮಮಕಾರವಿಲ್ಲ. ಕೊಂಚ ಮಂದಬುದ್ಧಿಯವನಾದ ಸಹೋದರ ಮಾಪಣ್ಣನ ವಿಚಾರದಲ್ಲಿ ತಂದೆ ಪಕ್ಷಪಾತಿ ಎನ್ನುವುದು ಅದಕ್ಕೆ ಕಾರಣ. ಆದರೆ ಕೇಚಣ್ಣ ಬುದ್ಧಿವಂತ. ಹಾಗಾಗಿ, ತಂದೆಯಿಂದ ದೂರವಾದರೂ ಈತ ವೆಂಕಪ್ಪಯ್ಯನ ಸಾಲಕ್ಕೆ ಬಲಿಯಾದ ಭೂಮಿಯನ್ನು ತನ್ನ ಬೀಗರ ಕಡೆಯಿಂದ ಬಿಡಿಸಿಕೊಂಡು ಮತ್ತೆ ತನ್ನದನ್ನಾಗಿಸಿಕೊಳ್ಳುತ್ತಾನೆ. ಹೀಗೆ ಪಠೇಲರ ಕೈಸೇರಿದ್ದ ಭೂಮಿಯನ್ನು ಕ್ರಯಚೀಟಿಯ ಮೂಲಕ ಮತ್ತೆ ಕೃಷ್ಣಯ್ಯನ ಮಗ ವಾಪಾಸು ಸಂಪಾದಿಸಿದಂತಾಗುತ್ತದೆ ಮಾತ್ರವಲ್ಲ, ಮುಂದೆ ಬೀಗರ ಪ್ರಭಾವಕ್ಕೆ ಬಿದ್ದ ಕೇಚಣ್ಣ ಪೂರ್ತಿಯಾಗಿ ಅವರಿಗೇ ಸಲ್ಲುವವನಾದಾಗ ಆ ಭೂಮಿಯ ದೇಖರೇಕಿ ಕೂಡ ಮರಳಿ ಕೃಷ್ಣಯ್ಯನ ಕೈಗೇ ಬರುತ್ತದೆ, ಮತ್ತೆ ಅದು ಮೂಲಗೇಣಿಯ ನೆಲೆಯಲ್ಲೇ ಬರುತ್ತದೆ! ಆದಾಗ್ಯೂ ಮುಂದೆ ಈ ಕೇಚಣ್ಣನ ಮೊಮ್ಮಗ ಮಾಪಣ್ಣನ ಮೊಮ್ಮಗನ ಪ್ರತಿಸ್ಪರ್ಧಿಯಾಗಿ ರೂಪುಗೊಳ್ಳುತ್ತಾನೆ. ಕಾದಂಬರಿಯ ಆರಂಭ ಈ ಪುತ್ತು (ಪುರುಷೋತ್ತಮ) ಮತ್ತು ಬಂಗಾರಣ್ಣ (ತಿರುಮಲೇಶ್ವರ ಭಟ್ಟ) - ಇಬ್ಬರ ನಡುವಿನ ಜಿದ್ದಿನಿಂದಲೇ ತೊಡಗಿದೆ.

ಮಾಪಣ್ಣನ ಮಗ ಶಂಕರಣ್ಣ ಸ್ವಾತಂತ್ರ್ಯ ಹೋರಾಟ, ಅಸ್ಪೃಶ್ಯತಾ ನಿವಾರಣೆ, ಶಿಕ್ಷಣ ಮುಂತಾದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದವನಾಗಿದ್ದು ಆತನ ಮಗ ಬಂಗಾರಣ್ಣ ಅದನ್ನು ಮುಂದುವರಿಸಿಕೊಂಡು ಬಂದಾತ. ಬಂಗಾರಣ್ಣನ ಎರಡನೆಯ ಮಗ ಲಕ್ಷ್ಮೀನಾರಾಯಣ ಅಕಾಲ ಮೃತ್ಯುವಿಗೀಡಾಗಿ ಆತನ ಹೆಂಡತಿ ಜಯಲಕ್ಷ್ಮಿ(ಒಪ್ಪಮ್ಮ) ತನ್ನ ಮಾವನನ್ನು ನೋಡಿಕೊಂಡಿದ್ದಾಳೆ. ಬಂಗಾರಣ್ಣನ ಮೊದಲ ಮಗ ನಾರಾಯಣ ಒಬ್ಬ ವಕೀಲ. ಈತ ಅತ್ತ ವೆಂಕಪ್ಪಯ್ಯನ ಕವಲಿನ ಶ್ರೀನಿವಾಸನ ಸ್ನೇಹಿತನಾಗಿ, ಇತ್ತ ಕೇಚಣ್ಣನ ಕವಲಿನ ಪುರುಷೋತ್ತಮನನ್ನು ಚಿಕ್ಕಪ್ಪನನ್ನಾಗಿ ಕೂಡಿಕೊಂಡು ವ್ಯವಹಾರ ಇತ್ಯಾದಿಗಳಲ್ಲಿ ತೊಡಗುವುದರಿಂದ ಒಂದರ್ಥದಲ್ಲಿ ಇಡೀ ಕುಟುಂಬ ಮತ್ತೆ ಒಂದು ಸಂಕಲನಕ್ಕೆ ಒಳಗಾದಂತೆ ಕಾಣಿಸುವಲ್ಲಿ ಕಾದಂಬರಿ ಮುಗಿಯುತ್ತದೆ. ವಿಧವೆ ಒಪ್ಪಮ್ಮ ಮರುಮದುವೆಯಾಗುವ ಸೂಚನೆಗಳೂ ನಮಗೆ ಇಲ್ಲಿ ಸಿಗುತ್ತವೆ. ಆದರೆ ಭೂಮಿಯ ಪ್ರಶ್ನೆ ಬೇರೆ ತರ ಇತ್ಯರ್ಥವಾಗುವುದರಿಂದ ಅದು ಪ್ರತ್ಯೇಕವಾಗಿಯೇ ನಿಲ್ಲುತ್ತದೆ.

ವಾಸ್ತವವಾಗಿ ವೆಂಕಪ್ಪಯ್ಯನ ದುಂದುಗಾರಿಕೆ ಮತ್ತು ಸಾಲಕ್ಕೆ ಬಲಿಯಾದ ಯಾವತ್ತೂ ಭೂಮಿ ಕಾನೂನು ರೀತ್ಯ ಅವನದ್ದಾಗಿರಲೇ ಇಲ್ಲ ಎನ್ನುವಂಥ ಒಂದು ಸ್ಫೋಟಕ ಮಾಹಿತಿ ಕಾದಂಬರಿಯ ಕೊನೆಯಲ್ಲಷ್ಟೇ ನಮ್ಮ ಗಮನಕ್ಕೆ ಬರುತ್ತದೆ. ಇಲ್ಲಿ ಪಠೇಲರು, ಪೇಟೆಯ ಭಕ್ತರು ವೆಂಕಪ್ಪಯ್ಯನಿಗೆ ನೀಡಿದ ಸಾಲ ಎಷ್ಟು, ಅದಕ್ಕೆ ಪಡೆದ ಆಧಾರ ಪತ್ರವೇನು ಇತ್ಯಾದಿ ಕುರಿತಂತೆ ಕೊಂಚ ಅಸ್ಪಷ್ಟತೆ ಇರುವಂತಿದೆ. ವೆಂಕಪ್ಪಯ್ಯನ ಸಾಲಕ್ಕೆ ಆತನ ಭೂಮಿಯನ್ನು ಉಪಾಯವಾಗಿ ತಮ್ಮ ಪತ್ನಿಯ ಹೆಸರಿಗೆ ಮಾಡಿಕೊಂಡ ಪಠೇಲರಿಗೆ ವಾಸ್ತವ ತಿಳಿದಿರಲಿಲ್ಲವೆ, ಶಾನುಭೋಗರಿಗೆ ಗೊತ್ತಿರಲಿಲ್ಲವೆ ಎನ್ನುವ ಪ್ರಶ್ನೆಗಳೆಲ್ಲ ಬರುತ್ತವೆ. ಮುಂದೆ ಇದೇ ಭೂಮಿಯನ್ನು ಕೇಚಣ್ಣನ ಬೀಗರ ಮೂಲಕ ಕ್ರಯಚೀಟಿಗೆ ಮರಳಿ ಕೇಚಣ್ಣನಿಗೇ ಕೊಡುವಾಗಲೂ ಇದೇ ಪ್ರಶ್ನೆ ಬರಬೇಕಿತ್ತು. ಹೀಗೆ ಮುಂದೆ ಪುತ್ತು (ಪುರುಷೋತ್ತಮ) ತನ್ನದೆಂದು ತಿಳಿದ ಭೂಮಿ ಕೂಡ ದಾಖಲೆಗಳ ಪ್ರಕಾರ ಬಂಗಾರಣ್ಣನಿಗೇ ಸೇರಿದ್ದು ಎನ್ನುವಲ್ಲಿಯೇ ಕಾದಂಬರಿಯ ಮೊದಲಿಗೇ ಸುರುವಾದ ಜಿದ್ದು ಮುಗಿಯುವ ನೆಲೆಗಳು ಗೋಚರಿಸುತ್ತವೆ. ಆದರೆ ಆ ಹೊತ್ತಿಗಾಗಲೇ ಜಿದ್ದು ಅರ್ಥಹೀನವೆನಿಸುವಷ್ಟು ಬಂಗಾರಣ್ಣ ‘ನನ್ನದು’ ಎಂಬ ನೆಲೆಯ ಅರ್ಥ-ಸ್ವಾರ್ಥಗಳಿಂದ ಕಳಚಿಕೊಂಡ ಸೂಚನೆಗಳೂ ಇದ್ದು ಒಟ್ಟಾರೆ ಜಯಕ್ಕೆ ಯಾವುದೇ ಸಂಭ್ರಮವಿಲ್ಲದ ಸ್ಥಿತಿಯೊಂದು ನಿರ್ಮಾಣವಾಗಿರುತ್ತದೆ. ಮಹಾಭಾರತದಲ್ಲೂ ಎಲ್ಲಾ ಬಂಧು ಮಿತ್ರರನ್ನು ಕಳೆದುಕೊಂಡ ಧರ್ಮರಾಯನ ಗೆಲುವು ಸಾಕಷ್ಟು ಸಂಭ್ರಮಹೀನ ಗೆಲುವಾಗಿತ್ತು ಎನ್ನುವುದು ಇಲ್ಲಿಯೂ ಕಾಣಿಸಿ ಕೊಂಡಿದೆ. ಈ ಒಟ್ಟಾರೆ ವಿಷಾದಪರ್ವಕ್ಕೆ ಕಳೆಕೊಡುವಂತೆ ಇಲ್ಲಿ ಶ್ರೀಧರಾನಂದ ಎನ್ನುವ ಪಾತ್ರವಿದ್ದು ಅದೂ ಕಾದಂಬರಿಯ ಕೊನೆಯಲ್ಲೇ ಅವತರಿಸಿದೆ. ಈತ ವೆಂಕಪ್ಪಯ್ಯನ ಮರಿಮಗ ಮತ್ತು ಒಪ್ಪಕ್ಕನನ್ನು ಮರುಮದುವೆಯಾಗಲು ಮುಂದೆ ಬಂದಿರುವ ಶ್ರೀನಿವಾಸನ ಅಣ್ಣ ಎನ್ನುವುದು ಈ ಕಾದಂಬರಿಯ ಒಟ್ಟು ಆಕೃತಿ-ಆಶಯಗಳಿಗೆ ಒಂದು ಬಗೆಯ ಹೊಳಪನ್ನೂ ನೀಡಿದೆ. ನಿರಾಕರಣ, ವೈರಾಗ್ಯ, ನಿರ್ಲಿಪ್ತಿ ಮುಂತಾದ ಹಂತವನ್ನು ‘ನನ್ನದು’ ಎಂಬಲ್ಲಿಂದ ನೋಡುವ ಒಂದು ಪ್ರಯತ್ನ ಇದು.

ಇಲ್ಲಿ ಬರುವ ಶ್ರೀಧರನ ನಿಟ್ಟು-ನಿಲುವಿಗೂ ಬಂಗಾರಣ್ಣನ ನಿಟ್ಟು-ನಿಲುವಿಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದನ್ನು ಗಮನಿಸುವುದು ಮುಖ್ಯ. ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷಸ್ಥಾನದಿಂದಲೂ ಕೆಳಗಿಳಿಯ ಬಯಸುವ ನಿರಾಸಕ್ತ ಬಂಗಾರಣ್ಣನಿಗೆ ತಮ್ಮದೇ ಕೂಸಾದ ಈ ಸಿರಿಗನ್ನಡ ಶಾಲೆಯನ್ನೂ, ಪುರುಷೋತ್ತಮ ಸೃಷ್ಟಿಯಾದ ನಿತ್ಯಾನಂದ ಎಜ್ಯುಕೇಶನ್ ಟ್ರಸ್ಟಿನವರ ಇಂಗ್ಲೀಷ್ ಮೀಡಿಯಂ ಶಾಲೆ ಎರಡನ್ನೂ ಸುಟ್ಟು ಬಿಡಬೇಕೆಂಬ ರೊಚ್ಚಿದೆ. ಶ್ರೀಧರನೇ ಬಿಡಿಸಿ ಹೇಳುವಂತೆ, ಇಲ್ಲಿ ಬಂಗಾರಣ್ಣ ಇದುವರೆಗೆ ಊರಿನಲ್ಲಿ ತಾನು ‘ನನ್ನದು’ ಎಂಬ ರೂಪದಲ್ಲಿ ಮೂರ್ತೀಕರಿಸಿದ್ದೇನಿದೆ, ಮೂರ್ತೀಭವಿಸಿದ್ದೇನಿದೆ, ಅವೆಲ್ಲವೂ ಪೂರ್ತಿಯಾಗಿ, ನಿಶ್ಶೇಷವಾಗಿ ತನ್ನ ಕಣ್ಮುಂದೆಯೇ ಅಳಿಸಿ ಹೋಗುತ್ತಿರುವುದನ್ನು ಕಂಡು ಸಹಿಸಲಾರದೇ ಹುಟ್ಟಿದ ರೊಚ್ಚಿದು. ಕಾದಂಬರಿಯ ಘನತೆ ಇರುವುದೇ ಇಲ್ಲಿ. ಕೃಷಿಯಲ್ಲಿ ಬಂಗಾರಣ್ಣ ಸೋತಿದ್ದಾನೆ. ಅದಕ್ಕೆ ಕಾರಣಗಳು ಹಲವಿರಬಹುದು, ಇದೀಗ ಬಂಗಾರಣ್ಣನ ಕೃಷಿ ತನ್ನ ಘನತೆಯಿಂದ ಮೆರೆಯುವ ಸ್ಥಿತಿಯಲ್ಲಿಲ್ಲ ಎನ್ನುವುದು ಮಾತ್ರ ವಾಸ್ತವ. ಇನ್ನು ಅವನ ಮಗನೇ ಅವನ ವಿರೋಧಿ. ಬಂಗಾರಣ್ಣ ವಿರೋಧಿಸುತ್ತಿರುವ ಸೆಜ್ ಊರಿಗೆ ದಾಪುಗಾಲಿಟ್ಟು ಬರುತ್ತಿದೆ ಮತ್ತು ಅದನ್ನು ವಿರೋಧಿಸುವವರಲ್ಲಿ ತಾನು ಬಹುತೇಕ ಒಬ್ಬಂಟಿ ಎನ್ನುವುದು ಬಂಗಾರಣ್ಣನ ಅರಿವಿಗೆ ಇಳಿದಿದೆ. ಕೊನೆಗೆ ಮನೆಯೊಳಗೇ ಒಪ್ಪಕ್ಕ ನಡೆದುಕೊಳ್ಳುತ್ತಿರುವ ರೀತಿ ನೀತಿಗಳಲ್ಲಿ ಕೂಡ ಬಂಗಾರಣ್ಣ ತನ್ನನ್ನು ನಿರ್ಲಕ್ಷಿಸುತ್ತಿರುವ ಭಾವಕ್ಕೆ ತುತ್ತಾಗುತ್ತಿದ್ದಾನೆ. ಒಟ್ಟಾರೆಯಾಗಿ ಅವನ ‘ನನ್ನದು’ ಕುಸಿದು ಬೀಳುತ್ತಿದೆ. ಹಾಗೆ ಕುಸಿದು ಬೀಳುತ್ತಿರುವುದನ್ನು ಕಣ್ಣಾರೆ ಕಾಣುತ್ತ, ಕಾಣುವ ಮುಖಾಂತರವೇ ಬಂಗಾರಣ್ಣ ತಲುಪುವ ಒಂದು ಮಾನಸಿಕ ಸ್ಥಿತಿ ಏನಿದೆ, ಅದು ಅತ್ತ ನಿರ್ಲಿಪ್ತಿಯೂ ಅಲ್ಲ, ವೈರಾಗ್ಯವೂ ಅಲ್ಲ. ಆದರೆ ಶ್ರೀಧರನದ್ದು ಮನಸ್ಸು ಇಲ್ಲದ ಮಾರ್ಗ ಮಾತ್ರವಲ್ಲ, ಅವನೇ ಹೇಳಿಕೊಳ್ಳುವಂತೆ ಅದು ದೇಹವಿಲ್ಲದ ಮಾರ್ಗ ಕೂಡ. ಅಂದರೆ ‘ನನ್ನದು’ ಎಂಬ ಪ್ರಜ್ಞೆ ಮಾನಸಿಕವಾಗಿಯೂ, ಐಹಿಕವಾಗಿಯೂ ನಶಿಸಿದ ಸ್ಥಿತಿ. ನನ್ನ ಭೂಮಿ, ನನ್ನ ಆಸ್ತಿ, ನನ್ನ ಹೆಂಡತಿ, ನನ್ನ ಇಷ್ಟ, ನನ್ನ ಮನಸ್ಸು ಎನ್ನುವುದನ್ನೂ ಮೀರಿ ನನ್ನ ದೇಹ ಎನ್ನುವ ಪ್ರಶ್ನೆಯೂ ಇಲ್ಲವಾದ ಸ್ಥಿತಿಯಿದು. ಈ ಮನೋಧರ್ಮ ತುಂಬ ಎತ್ತರದ್ದು ಮತ್ತು ತರ್ಕಾತೀತವಾಗಿ ಚಿತ್ರಿತಗೊಂಡ ಈ ಒಂದು ಪಾತ್ರ ಕಾದಂಬರಿಯ ತುರ್ತಿಗೆ ಸಲ್ಲುವಂಥಾದ್ದು, ಈ ಒಂದು ಒಳನೋಟವನ್ನು ನಮಗೆ ದಕ್ಕಿಸುವುದಕ್ಕೆ ಅಗತ್ಯವಾದದ್ದು ಅಷ್ಟೆ.

ಈ ಕಾದಂಬರಿಯಲ್ಲಿ ನಾನು ಗಮನಿಸಿದ ಇನ್ನೊಂದು ಪ್ರಧಾನ ಅಂಶದ ಕುರಿತು ಹೇಳಬೇಕು. ಕಾದಂಬರಿಯ ಚೌಕಟ್ಟಿನೊಳಗೆ ವಂಶಾವಳಿಯ ಮೂಲಪುರುಷನಾದ ತಿರುಮಲೇಶ್ವರ ಭಟ್ಟರು ಮತ್ತು ಅವರ ಪತ್ನಿ ಪಾರೋತಿ, ವಂಶಾವಳಿಯ ಕೊನೆಯಲ್ಲಿ ಬರುವ ತಿರುಮಲೇಶ್ವರ ಭಟ್ಟ (ಬಂಗಾರಣ್ಣ) - ಈ ಮೂರು ಪಾತ್ರಗಳನ್ನು ಬಿಟ್ಟರೆ ಬೇರೆ ಯಾವುದೇ ಪಾತ್ರವೂ ಸುಮಾರು ಆರುನೂರು ಪುಟಗಳಿಗೂ ಮಿಕ್ಕಿದ ಈ ಕಾದಂಬರಿಯನ್ನು ಓದಿ ಮುಗಿಸಿದ ಮೇಲೂ ಓದುಗನ ಮನಸ್ಸಿನಲ್ಲಿ ನಿಂತು ಬಿಡುವಷ್ಟು ಸಮರ್ಥವಾಗಿಲ್ಲ ಎನ್ನುವುದು. ಸ್ವಲ್ಪಮಟ್ಟಿಗೆ ಒಪ್ಪಕ್ಕ ಇದಕ್ಕೆ ಅಪವಾದ ಎನ್ನಬಹುದೇನೊ. ಅತ್ಯಂತ ಮೆಚ್ಚುಗೆಯಾಗುವ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುವ ನಿರೂಪಣೆಯ ಮೊಗಸಾಲೆಯವರ ಕಾದಂಬರಿಯಲ್ಲಿ ಯಾಕೆ ಹೀಗಾಗುತ್ತದೆ ಎನ್ನುವುದು ನನ್ನನ್ನು ಕಾಡಿದ ಪ್ರಶ್ನೆ. ಇದಕ್ಕೆ ಉತ್ತರ ಸರಳವಿಲ್ಲ.

ಇದನ್ನು ಬೇರೆಯೇ ನಿಟ್ಟಿನಿಂದ ಕೂಡ ನೋಡಬಹುದು. ಮೊಗಸಾಲೆಯವರ ಪಾತ್ರಗಳು ಮಾತನಾಡಿದಾಗಲೆಲ್ಲ ಗಟ್ಟಿ ಧ್ವನಿಯಲ್ಲೇ ಮಾತನಾಡುತ್ತವೆ. ಈ ಪಾತ್ರಗಳಲ್ಲಿ ಅಂತರಂಗದ ಮೌನ ಎಂಬುದು ಇಲ್ಲ. ಬಂಗಾರಣ್ಣನ ಆಂತರಿಕ ತುಮುಲಗಳೇನಿದ್ದರೂ ಅವು ಪ್ರಕಟವಾಗಲು ಗೋವಿಂದಾಚಾರ್ಯರೇ ಬರಬೇಕಾಗುತ್ತದೆ ಮತ್ತು ಎಲ್ಲವೂ ಮಾತುಗಳಲ್ಲಿ, ಸಂಭಾಷಣೆಯಲ್ಲಿ ಸ್ಪಷ್ಟವಾಗಬೇಕಾಗುತ್ತದೆ. ಇಲ್ಲಿ ಉಲ್ಲೇಖಿಸಲೇ ಬೇಕಾದ ಒಂದು ಸಂದರ್ಭ ಕೃಷ್ಣಯ್ಯನಿಗೆ ಸಂಬಂಧಿಸಿದ್ದು. ವೆಂಕಪ್ಪಯ್ಯ ಸತ್ತಾಗ, ಅವನ ಶವಸಂಸ್ಕಾರದ ಹಕ್ಕನ್ನು ಕೃಷ್ಣಯ್ಯನಿಗೆ ನಿರಾಕರಿಸಲಾಗುತ್ತದೆ. ಕುಟುಂಬದ ಹಿರಿಯ ಎಂಬ ಕಾರಣಕ್ಕೆ ಅಂಥ ಹೊಕ್ಕುಬಳಕೆಯೇನಿಲ್ಲದ, ಅಪರಿಚಿತನಂತಿರುವ ಪರಮೇಶ್ವರಣ್ಣ ಬಂದು ಶವಸಂಸ್ಕಾರ ಮಾಡುತ್ತಾರೆ. ಒಂದೇ ತಾಯಿಯ ಮಕ್ಕಳಾದ ತಾವು ರಕ್ತಸಂಬಂಧಿಗಳಾಗಿದ್ದೂ ಶಾಸ್ತ್ರ ಸಂಬಂಧ ಇಲ್ಲ ಎಂಬ ಕಾರಣವನ್ನು ಮುಂದೊತ್ತಿ ತನಗೆ ಶವಸಂಸ್ಕಾರ ಮಾಡುವ ಅವಕಾಶವನ್ನು ನಿರಾಕರಿಸಿದ ಬಗ್ಗೆ ಕೃಷ್ಣಯ್ಯ ತುಂಬ ತೊಳಲಾಡುತ್ತಾನೆ. ಇದೇ ರೀತಿ ಶ್ರೀನಿವಾಸ ಒಪ್ಪಕ್ಕನ ಬಳಿ ಮದುವೆಯ ಪ್ರಸ್ತಾಪ ಮಾಡಬೇಕಾಗಿ ಬಂದಾಗ ತಳಮಳವನ್ನನುಭವಿಸುವ ಚಿತ್ರವಿದೆ. ಆದರೆ ಇವುಗಳಿಗಿಂತ ಹೆಚ್ಚು ಮಹತ್ವದ ಸಂದರ್ಭಗಳಲ್ಲಿ ಇಂಥ ತುಮುಲಗಳಿಗೆ ಕಾದಂಬರಿ ತೆರೆದುಕೊಳ್ಳುವುದಿಲ್ಲ ಎನ್ನುವುದು ಗಮನಕ್ಕೆ ಬರುತ್ತದೆ.

ಇದೇ ಮಾತು ಕೃಷ್ಣಯ್ಯನ ಹುಟ್ಟಿನಿಂದಾಗಿಯೇ ಹಾದಿತಪ್ಪುವ ವೆಂಕಪ್ಪಯ್ಯನ ಆಂತರಿಕ ತುಮುಲಗಳಿಗೂ ಅನ್ವಯಿಸಬಹುದು. ಒಪ್ಪಕ್ಕನ ಆಂತರಿಕ ತುಮುಲಗಳಿಗೂ ಅನ್ವಯಿಸಬಹುದು. ವೆಂಕಪ್ಪಯ್ಯನ ಮಡದಿ ಸಾವಿತ್ರಿಯ ಆಂತರಿಕ ತುಮುಲಗಳಿಗೂ ಅನ್ವಯಿಸಬಹುದು. ಇಲ್ಲಿ ಬರುವ ಪ್ರೇತಭಟ್ಟ, ಪರಿಕರ್ಮಿ, ತೋಟದ ಮೇಲುಸ್ತುವಾಗಿಯ ಇಸ್ಮತ್, ಮಾಪಣ್ಣನ ಆಶ್ರಯದಲ್ಲಿ ಸ್ವಾಭಿಮಾನ ಮೆರೆಯುವ ಪರಿತ್ಯಕ್ತೆ ಕಾಂಬಕ್ಕ, ಮುಡ್ತಿನಿಯ ಮಗಳು ಕ್ರಿಸ್ತಿನಾ ಮುಂತಾದ ಹಲವಾರು ಪಾತ್ರಗಳ ವಿಚಾರದಲ್ಲೂ ಅನ್ವಯಿಸಬಹುದು. ಈ ಯಾವತ್ತೂ ಪಾತ್ರಗಳು ಗಟ್ಟಿಧ್ವನಿಯಲ್ಲಿ ಮಾತನಾಡಿದ್ದೆಷ್ಟೋ ಅಷ್ಟೇ. ಉಳಿದಂತೆ ಕಾದಂಬರಿಯ ನಿರೂಪಕನ ಪ್ರಜ್ಞೆಯ ಮೂಲಕ ಹರಿದು ಬಂದಿರುವುದನ್ನೇ ನೆಚ್ಚಿಕೊಂಡು ಆ ಪಾತ್ರಗಳನ್ನು ಓದುಗ ಕಟ್ಟಿಕೊಳ್ಳಬೇಕೇ ಹೊರತು ಆಯಾ ಪಾತ್ರಗಳ ವೈವಿಧ್ಯಮಯ ದೈನಂದಿನಗಳ ವಿವರಗಳಿಗೆ, ಅವರವರ ಹೊಟ್ಟೆಪಾಡಿನ ಸಮಸ್ಯೆಗಳಿಗೆ, ಅವರವರ ಬದುಕಿನ ರೀತಿ-ರಿವಾಜುಗಳಿಗೆ ಸ್ಪಂದಿಸುವ ಮೊಗಸಾಲೆಯವರ ಸೂಕ್ಷ್ಯಗ್ರಾಹಿ ಮನಸ್ಸು ಅವರವರ ಧ್ವನಿಗೆ, ಮೌನಕ್ಕೆ, ಒಬ್ಬಂಟಿ ಕ್ಷಣಗಳಿಗೆ ತೆರೆದುಕೊಳ್ಳುವುದಿಲ್ಲ ಎನ್ನುವುದು ಒಂದು ಅಚ್ಚರಿಯಾಗಿಯೇ ಉಳಿಯುತ್ತದೆ.

ಇದೇ ಅಂಶವನ್ನು ಮುಂದುವರಿಸುತ್ತ ಗಮನಿಸಬೇಕಾದ ಸಂಗತಿಯಿದು: ಇಲ್ಲಿ ಹಲವು ತಿರುಮಲೇಶ್ವರ ಭಟ್ಟರು, ಮಾಪಣ್ಣಗಳು, ಶಂಕರಗಳು ಬರುತ್ತಾರೆ. ಒಂದು ಕಡೆ ಪುರುಷೋತ್ತಮ ಇವರನ್ನು ಮೊದಲನೆಯ ತಿರುಮಲೇಶ್ವರ ಭಟ್ಟ, ಇಮ್ಮಡಿ ತಿರುಮಲೇಶ್ವರ ಭಟ್ಟ, ಮುಮ್ಮಡಿ ತಿರುಮಲೇಶ್ವರ ಭಟ್ಟ ಎಂದೆಲ್ಲ ಚಾರಿತ್ರಿಕ ಪುರುಷರನ್ನು ಹೆಸರಿಸುವ ಹಾಗೆ ಹೆಸರಿಸಿದ್ದರೆ ಒಳ್ಳೆಯದಿತ್ತಲ್ಲವೆ ಎನ್ನುವ ಮಾತನಾಡುತ್ತಾನೆ. ಅದಕ್ಕೆ ಉತ್ತರವಾಗಿ ಹಯಗ್ರೀವಾಚಾರ್ಯರು ಹಾಗೆ ಮಾಡಲು ಈ ತಲೆಮಾರಿನ ವ್ಯಕ್ತಿಗಳು ಕಡಿದು ಹಾಕಿದ್ದಾದರೂ ಏನು, ಅಜ್ಜ ಮಾಡಿದ್ದನ್ನೇ ಮಗ, ಮಗ ಮಾಡಿದ್ದನ್ನೇ ಮೊಮ್ಮಗ ಮಾಡಿದ್ದಲ್ಲವೆ, ಎಲ್ಲರೂ ಮಾಡಿದ್ದು ಅದೇ ಪೌರೋಹಿತ್ಯವನ್ನಲ್ಲವೆ ಎನ್ನುತ್ತಾರೆ. ಇಲ್ಲೊಂದು ಸೂಕ್ಷ್ಮವಿದೆ. ಇಲ್ಲಿ ಓದುಗನಿಗೆ ಕೊಂಚ ಗೊಂದಲವಾಗುವ ಹಾಗೆ ಬರುವ ಒಂದೇ ಹೆಸರಿನ ಹಲವು ಪಾತ್ರಗಳು, ಅದರಲ್ಲಿಯೂ ಹಲವು ಫ್ಲ್ಯಾಶ್-ಬ್ಯಾಕ್ ತಂತ್ರಗಳ ಮೂಲಕ ಹೇಳಲ್ಪಡುವ ಕತೆಯಲ್ಲಿ ಹೀಗಾಗುವಾಗ ಹುಟ್ಟುವ ಗೊಂದಲ - ಇದು ಉದ್ದೇಶ ಪೂರ್ವಕವಾದದ್ದು ಎನಿಸುತ್ತದೆ. ಮೊದಲೇ ಹೇಳಿರುವಂತೆ ಈ ಕಾದಂಬರಿಯ ಒಂದು ಪ್ರಧಾನ ಎಳೆಯೇ ‘ನನ್ನದು’ ಎನ್ನುವುದರ ಆಳ ಶೋಧಿಸುವುದು. ವಂಶಕ್ಕೆ ‘ಸ್ವಂತದ್ದು’ ಎನ್ನಬಹುದಾದ ಮಕ್ಕಳೇ ಅಲ್ಲದ ಪಾಂಡವರು-ಕೌರವರು ‘ನನ್ನದು-ನನ್ನದು’ ಎಂದು ಭೂಮಿಗಾಗಿ ಹೊಡೆದಾಡಿ ನಾಶವಾದ ಕತೆ ಎಲ್ಲರಿಗೂ ಗೊತ್ತು. ಸ್ವಲ್ಪ ರೂಕ್ಷವಾಗಿ ಹೇಳಬಹುದಾದರೆ ಅದು ರಂಡೆ ಮಕ್ಕಳಿಗೂ ಸೂಳೆಮಕ್ಕಳಿಗೂ ನಡೆದ ಕದನ. (ಗಿರಡ್ಡಿಯವರು ಅನುವಾದಿಸಿರುವ ದೇವದತ್ತ ಪಟ್ಟಾನಾಯಕರ ‘ಜಯ’ ಕೃತಿ ಗಮನಿಸಿ). ಹಾಗೆಯೇ ಇಲ್ಲಿ ಬರುವ ತಿರುಮಲೇಶ್ವರ ಭಟ್ಟರು ಕೂಡ ನಾಲ್ವರಲ್ಲದೆ ಒಬ್ಬರೇ ಇರಬಹುದು. ಮಂದಬುದ್ಧಿಯ ಮಾಪಣ್ಣ ಮತ್ತು ಕಾಂಬಕ್ಕನಿಗೆ ಆಶ್ರಯ ನೀಡಿದ ಅಣ್ಣ ಮಾಪಣ್ಣ ಇಬ್ಬರಾಗಿಲ್ಲದೆ ಒಬ್ಬನೇ ಆಗಿರಬಹುದು. ಅಥವಾ ಯಾವುದೇ ಒಂದು ಮನೋಧರ್ಮ ಇಲ್ಲಿನ ಯಾವುದೇ ಒಂದು ಪಾತ್ರಕ್ಕೆ ಅನ್ಯವೋ ಸ್ವಂತವೋ ಎನ್ನುವುದೇ ಒಂದು ಜಿಜ್ಞಾಸೆಯಾಗಬೇಕೆಂಬುದು ಉದ್ದೇಶಿತವೇ ಇರಬಹುದು! ಈ ನಿಟ್ಟಿನಲ್ಲಿ ನೋಡಿದಾಗ ವಂಶಾವಳಿ, ಅಲ್ಲಿ ಪುನರಾವೃತ್ತಿಯಾಗುವ ಹೆಸರುಗಳು, ಅವರು ಬೇರೆ ಬೇರೆ ಕಾಲಧರ್ಮಕ್ಕೆ ಸೇರಿದ ವ್ಯಕ್ತಿಗಳಾಗಿರುವುದು, ಅವರು ಬೇರೆ ಬೇರೆ ಸಂಘರ್ಷಗಳನ್ನು ಎದುರಿಸಿರುವುದು ಎಲ್ಲವನ್ನೂ ವಿಂಗಡಿಸಿಕೊಂಡೂ ನೋಡಬಹುದು, ಸಾರಾಸಗಟಾಗಿಯೂ ನೋಡಬಹುದು! ಕಾದಂಬರಿಯಲ್ಲಿ ಒಂದೆಡೆ ರಾಮೈತಾಳರೂ ತಿರುಮಲೇಶ್ವರ ಭಟ್ಟರೂ ಆತ್ಮನು ಮತ್ತೆ ಮತ್ತೆ ಹುಟ್ಟುತ್ತ ಸಾಯುತ್ತ ಭವದ ಚಕ್ರಕ್ಕೆ ಸಿಕ್ಕಿಕೊಳ್ಳುವ ಕುರಿತು ಮಾತನಾಡುತ್ತ ಶಂಕರಾಚಾರ್ಯರ ಭಜಗೋವಿಂದದ ಸಾಲನ್ನು ಉಲ್ಲೇಖಿಸುತ್ತಾರೆ. ಹಾಗಿದ್ದರೆ ನಾವು ಇಲ್ಲಿನ ಪಾತ್ರ ವ್ಯಕ್ತಿವಿಶಿಷ್ಟವಾಗಿ ಕೆತ್ತಲ್ಪಡಬೇಕಾಗಿತ್ತು ಎಂದು ನಿರೀಕ್ಷಿಸುವುದು ತಪ್ಪಾಗುವುದಿಲ್ಲವೆ!! ಕಾದಂಬರಿಕಾರರ ಮೂಲ ಉದ್ದೇಶವೇ ವ್ಯಕ್ತಿವೈಶಿಷ್ಟ್ಯವನ್ನು ನಿರಾಕರಿಸುವುದಾಗಿರುವಾಗ, ‘ನನ್ನದು’ ಎನ್ನುವುದನ್ನೇ ಅವರು ಪ್ರಶ್ನೆಗೆ ಒಡ್ಡುತ್ತಿರುವಾಗ ಇದನ್ನು ಬೇರೆ ರೀತಿಯಲ್ಲೇ ನೋಡಬೇಕೆ?

ಮೊಗಸಾಲೆಯವರ ಎಲ್ಲ ಕಾದಂಬರಿಗಳನ್ನು ಓದದೇ ಬಹುಶಃ ಈ ಬಗ್ಗೆ ಏನನ್ನೂ ಹೇಳಲಾಗದೇನೊ ಎನಿಸಿದೆ.

ಈ ಕಾದಂಬರಿ ವಾಸ್ತವಿಕ ಜಗತ್ತಿನ ಹಲವಾರು ಪಾತ್ರಗಳನ್ನು ಅತ್ಯಂತ ಸಹಜವೋ ಎಂಬಂತೆ ತನ್ನ ಕಾದಂಬರಿಯ ಪಾತ್ರಪ್ರಪಂಚಕ್ಕೆ ಸೇರಿಸಿಕೊಂಡು ಬಿಟ್ಟಿದೆ. ಸ್ವಾತಂತ್ರ್ಯ ಹೋರಾಟದ ವಿವರಗಳಲ್ಲಿ, ಸಾಹಿತ್ಯಿಕ ವ್ಯಕ್ತಿಗಳ ಉಲ್ಲೇಖದ ಸಂದರ್ಭದಲ್ಲಿ ಇದು ನಡೆದಿದೆ. ಇದರಿಂದಾಗಿ ಈ ಕಾದಂಬರಿಯ ಜಗತ್ತು ಹೆಚ್ಚು ಅಥೆಂಟಿಕ್ ಆಗಿ ಮೂಡಿಬರುವುದಕ್ಕೂ ಅನುಕೂಲವಾಗಿದೆ. ಹಾಗಿದ್ದೂ ಈ ಬೃಹತ್ ಕಾದಂಬರಿಯನ್ನು ಓದಿ ಮುಗಿಸಿದ ಬಳಿಕ ಕಾಡುವ ಪ್ರಶ್ನೆಯೊಂದೇ. ಕಾದಂಬರಿಯ ಹರಹು ವಿಶಾಲವ್ಯಾಪ್ತಿಯದ್ದಾಗಿದ್ದು, ತಂತ್ರಗಾರಿಕೆ ಮತ್ತು ಒಟ್ಟಾರೆ ಆಕೃತಿ-ಆಶಯಗಳಿಗೆ ಹೆಚ್ಚು ಪ್ರಾಧಾನ್ಯ ನೀಡದ ಲಘುಧಾಟಿಯ ಬರವಣಿಗೆಯನ್ನೇ ಮೊಗಸಾಲೆಯವರು ನೆಚ್ಚಿರುವುದರಿಂದಾಗಿ ಬಹುಗಹನವಾದ ಒಂದು ಪ್ರಶ್ನೆಯನ್ನೆತ್ತಿಕೊಂಡೂ ಅದರ ಮೊನಚು ಕೊಂಚ ಮೊಂಡಾಗುವಂತೆ ಈ ಕಾದಂಬರಿ ಮೂಡಿ ಬಂದಿದೆ. ಇಲ್ಲವಾದಲ್ಲಿ ನಾವು ಯಾವುದು ಈ ಕಾದಂಬರಿಯ ಬಹುಮುಖ್ಯ ಒಳನೋಟ ಎಂದು ಗಮನಿಸಬಹುದಾಗಿದೆಯೋ ಅದು ಹೆಚ್ಚು ತೀವ್ರವಾಗಿ ಓದುಗನನ್ನು ಕಾಡುವ ಸಂಭವವಿತ್ತು ಎಂದು ಅನಿಸದೇ ಇರುವುದಿಲ್ಲ. ಇದು ಮೊಗಸಾಲೆಯವರ ನಿರೂಪಣಾ ಶೈಲಿಯಲ್ಲಿ ಮೆಚ್ಚುಗೆಯಾಗುವ ಅವರ ಅನನ್ಯ ಶಕ್ತಿಯೂ ಹೌದು, ಕೃತಿಯಾಗಿ ಅದು ಸೆಳೆದುಕೊಳ್ಳಬೇಕಾದ ಮನ್ನಣೆ ಪಡೆಯಲು ಸೋತಾಗ ನೋವು ನೀಡುವ ಮಿತಿಯೂ ಹೌದು.

2 comments:

Anonymous said...

Thank you for write up. your blog is great source explore books.

I selected 10 Novels from your list to read for 2017 :)

Interested in reading "ನನ್ನ ಸಣ್ಣಕತೆಗಳು: ನಾನು ಮತ್ತು ನಾನು" (link on top right of this blog.
When clicked it said access denied.

Regards,
Pradeep

ನರೇಂದ್ರ ಪೈ said...

ನಿಮ್ಮ ಅನಿಸಿಕೆಗೆ ಧನ್ಯವಾದಗಳು ಪ್ರದೀಪ್. ನನ್ನ ಸಣ್ಣಕತೆಗಳ ಬ್ಲಾಗ್‌ನಲ್ಲಿ ಒಂದೊ ಎರಡೋ ಕತೆಗಳಷ್ಟೇ ಇವೆ. 2017ರಲ್ಲಿ ಎಲ್ಲ ನಲವತ್ತು ಪ್ಲಸ್ ಕತೆಗಳನ್ನು ಅಪ್‌ಲೋಡ್ ಮಾಡುವ ಉದ್ದೇಶವೇನೊ ಇದೆ. ಆಕಸ್ಮಿಕವಾಗಿ ಒಬ್ಬರು ಪ್ರಕಾಶಕರು ಸಿಕ್ಕಿ ಎರಡನೇ ಸಂಕಲನ ಪ್ರಕಟಗೊಂಡಿದ್ದರಿಂದ ಬ್ಲಾಗ್‌ನಲ್ಲಿ ಕತೆಗಳನ್ನು ಕಾಣಿಸುವ ಕೆಲಸ ಮುಂದೂಡಬೇಕಾಗಿ ಬಂದಿತ್ತು. ನಿಮ್ಮ ವಿಳಾಸ ನೀಡಿದರೆ ನನ್ನ ಕಥಾಸಂಕಲನಗಳನ್ನೆ ಕಳುಹಿಸಿಕೊಡುತ್ತೇನೆ. ಬ್ಲಾಗನ್ನು ಮುಕ್ತವಾಗಿಸಲು ಪ್ರಯತ್ನಿಸುತ್ತೇನೆ, ಸದ್ಯ ಅದು ನನಗೇ ಲಾಗಿನ್ ಆಗಲು ಬಿಡುತ್ತಿಲ್ಲ!!! ನನ್ನ ಈ ಮೇಲ್ ಐಡಿ, narendrapai2003@gmail.com