Monday, December 26, 2016

ಹಣತೆಯ ಬೆಳಕು...

ನನ್ನ ಅಮ್ಮನಿಗೆ ಮಾನಸಿಕ ಅಸ್ವಾಸ್ಥ್ಯ ಇತ್ತು. ನನ್ನ ಹುಟ್ಟಿನೊಂದಿಗೆ ಅದು ಸುರುವಾಯಿತು. ಮುಂದಿನ ಮುವ್ವತ್ತಾರು ವರ್ಷಕಾಲ ಆಕೆ ತನ್ನ ಬದುಕನ್ನು ಕೊನೆಗಾಣಿಸಿಕೊಳ್ಳುವ ಹಲವಾರು ಪ್ರಯತ್ನಗಳನ್ನು ನಡೆಸಿದರು. ಇದನ್ನೆಲ್ಲ ಸೇರಿಸಿ ನಾನೊಂದು ಕಾದಂಬರಿ ಬರೆದೆ. 2012 ರಲ್ಲಿ ರವಿ ಸಿಂಗ್ ಅವರು ಅದನ್ನು ಪ್ರಕಟಿಸಿದರು, ಅದರ ಹೆಸರು, Em and the Big Hoom. ಮುಂದೆ ಕೃತಿ ಬಿಡುಗಡೆಗೆ ಸಂಬಂಧಿಸಿದಂತೆ ನಡೆದ ಒಂದು ವಾಚನ ಕಾರ್ಯಕ್ರಮದಲ್ಲ್ಲಿ, ನಾನು ನನ್ನ ಗೆಳೆಯ ಎಂದುಕೊಂಡಿದ್ದ ಪತ್ರಕರ್ತರೊಬ್ಬರು ಎದ್ದು ನಿಂತು ಒಂದು ಪ್ರಶ್ನೆ ಕೇಳಿದರು. "ನಿಮಗೆ ನಿಮ್ಮ ತಾಯಿ ಮತ್ತು ಆಕೆಯ ಬದುಕನ್ನು ಹೀಗೆ ಉಪಯೋಗಿಸಿಕೊಂಡೆ, ಇಂಥ ಒಂದು ಒಳ್ಳೆಯ ಕಾದಂಬರಿ ಬರೆಯೋದಿಕ್ಕೆ, ಇದು ತಪ್ಪು ಅಂತ ಅನಿಸುವುದಿಲ್ಲವೆ?"

ಆ ಕ್ಷಣ ಹೇಗೋ ಸಾವರಿಸಿಕೊಂಡೆ. ಆ ಸಂಜೆಯ ಉಳಿದ ಅವಧಿಯನ್ನು ಕಣ್ಣೀರು ಹಾಕುತ್ತ ಅಥವಾ ಸಿಟ್ಟಿನಿಂದ ಕುದಿಯುತ್ತ ಕಳೆಯಲಿಲ್ಲ ಬಿಡಿ. ಆದರೆ ನನ್ನ ಬದುಕಿನ ಅತ್ಯಂತ ಕಷ್ಟದ ಮಗ್ಗುಲು ಬೆನ್ನ ಹಿಂದೆಯೇ ಇತ್ತು.

ನಾನೇನೂ ಹತಾಶನಾಗಿರಲಿಲ್ಲ.

ಮುಂದಿನ ಕೆಲವು ತಿಂಗಳು ಕಾದಂಬರಿಯ ವಾಚನ ಇತ್ಯಾದಿ ಚೆನ್ನಾಗಿಯೇ ನಡೆಯಿತಾದರೂ ಅದರ ಜೊತೆಗಿನ ಈ ಪ್ರಶ್ನೋತ್ತರದ ಅವಧಿ ಇರುತ್ತಲ್ಲ, ಅದು ನನಗೆ ನಾನು ಈ ಕಾದಂಬರಿ ಬರೆದು ಇದೇನನ್ನು ಹಂಚಿಕೊಂಡೆ ಅಂತ ಮತ್ತೆಮತ್ತೆ ಯೋಚಿಸುವಂತೆ ಮಾಡಿತ್ತು. ನನ್ನ ಸಹೋದ್ಯೋಗಿಯೊಬ್ಬರ ಜೊತೆ "ನನಗೆ ಇದೆಲ್ಲ ಏನಾಗ್ತಿದೆ ಅಂತಲೇ ಗೊತ್ತಾಗ್ತಿಲ್ಲ. ಈ ವಾಚನ, ಪ್ರಶ್ನೋತ್ತರ ಎಲ್ಲ ಒಂಥರಾ ಎನ್‌ಕೌಂಟರ್ ಗುಂಪುಗಳಾಗ್ತಿವೆಯಾ ಅನಿಸ್ತಿದೆ. ಕಳೆದ ಸಲ ಏನಾಯ್ತೆಂದರೆ, ಒಬ್ಬ ಹೆಂಗಸು ತನ್ನ ತಮ್ಮನ್ನ ಹೇಗೆ ಎಲ್ಲರೂ ಸೇರಿ ಒಂದು ಕೋಣೆಯಲ್ಲಿ ಐದು ವರ್ಷ ಕಾಲ ಕೂಡಿ ಹಾಕಿದ್ದೆವು ಎನ್ನುವುದನ್ನ ವಿವರಿಸ್ತಿದ್ದರು. ಅವನು ತನ್ನ ಜೊತೆ ದೇವರು ಮಾತಾಡ್ತಿದ್ದಾನೆ ಅಂತಿದ್ನಂತೆ ಅಷ್ಟೆ. ಏನಾಗ್ತಿದೆ ಅಂತ ಅರ್ಥ ಮಾಡಿಕೊಂಡು ಕೊನೆಗೂ ಅವನ್ನ ಮಾನಸಿಕ ತಜ್ಞರ ಹತ್ತಿರ ಕರ್ಕೊಂಡು ಹೋಗೋಕೆ ತುಂಬ ಕಾಲ ತಗೊಂಡ್ವಿ ಅಂದ್ರು." ಎಂದೆಲ್ಲ ಹೇಳಿಕೊಂಡೆ.
ನಾನು ಸುಮ್ಮನೆ ಕೊಚ್ಚಿಕೊಳ್ಳುತ್ತಾ ಇದ್ದೇನೆ ಎಂಬಂತೆ ಅವರು ನಕ್ಕು ಸುಮ್ಮನಾದಾಗ ನನಗೇ ಒಂಥರಾ ಆಯ್ತು.

"ಇದನ್ನೆಲ್ಲ ಹೇಗೆ ಸಂಭಾಳಿಸಬೇಕೊ ಗೊತ್ತಾಗ್ತಿಲ್ಲ ನಂಗೆ. ಏನು ಮಾಡ್ಬೇಕೊ ತೋಚುವುದಿಲ್ಲ" ಎಂದೆ.

"ಬಹುಶಃ ನೀನು ಸುಮ್ಮನೆ ಕೇಳಿಸಿಕೊ ಬೇಕು" ಎಂದರು ಅವರು.

ಕೆಲವು ದಿನಗಳ ನಂತರ ಅವರು ನನಗೊಂದು ಈಮೇಲ್ ಕಳಿಸಿದರು. ಅದರಲ್ಲಿ ಅವರು ನಾನು ಅಂಥ ಕತೆಗಳನ್ನೆಲ್ಲ ಒಟ್ಟು ಮಾಡಿ ಒಂದು ಪುಸ್ತಕ - ಎ ಬುಕ್ ಆಫ್ ಲೈಟ್ - ಅವರದೇ ಶಬ್ದ ಅದು, ರಚಿಸಬೇಕು, ಅದು ಭಾರತದ ಮಧ್ಯಮವರ್ಗದ ಕುಟುಂಬಗಳಲ್ಲಿ ತುಂಬಿಕೊಂಡ ಇಂಥ ಬದುಕಿನ ಕತ್ತಲೆಯನ್ನು ತೊಲಗಿಸಿ ಒಂದಿಷ್ಟು ನೆಮ್ಮದಿಯ ಬೆಳಕನ್ನು ಕೊಡುವಂತಾಗಬೇಕು ಎಂದಿದ್ದರು.

ಅದೇ ಸಂಜೆ ಪರ್ವಾನಾ ನೂರಾನಿ ಫೋನ್ ಮಾಡಿ ತಾವು Em..ಓದಿದ್ದಾಗಿಯೂ, ಕಷ್ಟಪಟ್ಟು ನನ್ನ ನಂಬರ್ ಹುಡುಕಿ ತೆಗೆದು ಕಾಲ್ ಮಾಡಿದ್ದಾಗಿಯೂ ಹೇಳಿದರು ಮಾತ್ರವಲ್ಲ ತಮ್ಮ ತಾಯಿಯೊಂದಿಗಿನ ತಮ್ಮದೇ ಅನುಭವವನ್ನು ಕಾದಂಬರಿ ತಮಗೆ ನೆನಪಿಸಿತೆಂದೂ ಹೇಳಿಕೊಂಡರು. ಇಬ್ಬರ ಕತೆಯೂ ಸರಿಸುಮಾರು ಒಂದೇ ಆಗಿತ್ತು. ಅದೇ ಗಾಯಗಳು, ಅದೇ ನೋವು. ಅದೇ ತಲ್ಲಣ, ಅದೇ ಆತಂಕ ಮತ್ತು ಅವೇ ವಾರ್ಡುಗಳು, ಹೊಸ ಮೆಡಿಸಿನ್ ಏನಾದರೂ ಸಿಗಬಹುದಾ ಎನ್ನುವ ಅದೇ ಅದೇ ಪರದಾಟ, ಅವೇ ಅವೇ ಹತಾಶ ಹಂಬಲಗಳು, ನಿರೀಕ್ಷೆಗಳು. ಮತ್ತೆ, ಇದೆಲ್ಲದರಿಂದ ಒಮ್ಮೆಗೇ ಮುಕ್ತರಾಗಿ ಬಿಡುವ ಒತ್ತಡ. ನಾನು ಪರ್ವಾನಾ ಅವರ ಬಳಿ ಅದನ್ನೆಲ್ಲ ಬರೆಯಬಹುದೇ ಎಂದು ಕೇಳಿದೆ. ಅವರು ತಕ್ಷಣವೇ ಒಪ್ಪಿಕೊಂಡಿದ್ದು ನನಗೆ ಶುಭಸೂಚನೆಯಾಗಿ ಕಂಡಿತು. ಹಾಗೆ ಆವತ್ತು ಬುಕ್ ಆಫ್ ಲೈಟ್‌ನ ಮೊದಲ ಹಣತೆಯನ್ನು ಹಚ್ಚಿದಂತಾಗಿತ್ತು.

ಮುಂದಿನ ಒಂದೆರಡು ವರ್ಷಗಳ ಕಾಲ ನಾನು ನನಗೆ ತಿಳಿದ, ತಮ್ಮ ಪ್ರೀತಿಪಾತ್ರರ ವಿಷಯದಲ್ಲಿ ಇಂಥವೇ ಸಮಸ್ಯೆಯ ಸುಳಿಗೆ ಸಿಲುಕಿ ನಲುಗಿದ ಹಲವಾರು ಮಂದಿಗೆ ಈಮೇಲುಗಳನ್ನು ಕಳಿಸುತ್ತಲೇ ಇದ್ದೆ. ಇದು ಕಷ್ಟದ ಕೆಲಸ ಎಂಬುದು ನನಗೆ ಗೊತ್ತಿತ್ತು; ಕೆಲವೊಮ್ಮೆ ಇದು ತೀರ ಹಸಿಗಾಯದ ಮೇಲೆಯೇ ಉಗುರು ನೆಟ್ಟಂತೆ ಇರುತ್ತಿತ್ತು. ಕೆಲವೊಮ್ಮೆ ತಮ್ಮ ಹತಾಶ ಕ್ಷಣದಲ್ಲಿ, ನನ್ನ ಬಳಿ ಏನಾದರೂ ಉಪಶಮನ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿ ನನ್ನನ್ನು ಸಂಪರ್ಕಿಸಿದಾಗ ನನಗೆ ‘ಸಮಸ್ಯೆ’ ಏನೆಂಬುದು ತಿಳಿದು ಬಂದಿತ್ತು. ಇದು Em...ಪ್ರಕಟವಾಗುವುದಕ್ಕೂ ಮೊದಲೇ ಹೀಗೆ ಆಗಿದ್ದಿದೆ. ಅದು ಹೇಗೆಂದರೆ, ನಾನು ಯಾವತ್ತೂ ಸಾಧ್ಯವಿದ್ದ ಮಟ್ಟಿಗೆ ನನ್ನ ಅಮ್ಮನಿಗೆ ಮಾನಸಿಕ ಅಸ್ವಾಸ್ಥ್ಯವಿದೆ ಎಂಬ ಸಂಗತಿಯನ್ನು ಯಾವುದೇ ಮುಚ್ಚುಮರೆಯಿಲ್ಲದೇ ಹೇಳುತ್ತಿದ್ದೆ. ನನಗೆ ನಾನು ಬದ್ಧನಾಗಿ, ಅಮ್ಮನಿಗೆ ಬದ್ಧನಾಗಿ ಮತ್ತು ನಮ್ಮಿಬ್ಬರ ಬಾಂಧವ್ಯಕ್ಕೆ ಬದ್ಧನಾಗಿ ವಿಧಿಸಿಕೊಂಡಿದ್ದದು. ಅದು ನನ್ನಮ್ಮನಿಗೆ ಡಯಾಬಿಟೀಸ್ ಇದೆ ಎಂದು ಹೇಳುವಷ್ಟೇ ಸರಳ ಮತ್ತು ನೇರವಾಗಿರಬೇಕು ಎಂಬುದು. ಯಾಕೆಂದರೆ, ಕೊನೆಗೂ ಇದು ಜೈವಿಕ ಕೆಮಿಕಲ್ಸುಗಳ, ರಕ್ತದ ಅಸಮತೋಲನದ ವಿದ್ಯಮಾನ; ನ್ಯೂರಾನ್‌ಗಳ ಅಸಮರ್ಪಕತೆ ಅಷ್ಟೇ. ಇದು ನಿಮಗೆ ತೀರಾ ಸರಳವಾಗಿ ರೂಪಿಸಿಕೊಂಡ ಜೈವಿಕಸಂಕಲ್ಪವೊಂದನ್ನು ಸುಮ್ಮನೇ ಆರೋಪಿಸಿಕೊಂಡಿದ್ದು ಎಂದು ಅನಿಸಿದರೆ ನಾನು ಹೇಳುವುದಿಷ್ಟೇ; ನಾವೆಲ್ಲರೂ ನಮ್ಮನ್ನು ಕಿತ್ತು ತಿನ್ನುವ ನೋವಿಗೆ ಪ್ರತಿಯಾಗಿ ನಮ್ಮ ನಮ್ಮದೇ ಒಂದು ಪ್ರತಿ ಅಸ್ತ್ರವನ್ನು ರೂಪಿಸಿಕೊಳ್ಳಬೇಕು, ಮತ್ತು ಇದು ನನ್ನ ಪ್ರತ್ಯಸ್ತ್ರ.

ನನ್ನೊಂದಿಗೆ ಮಾತನಾಡಿದ ಕೆಲವೊಬ್ಬರು ಮರೆಯಲಾಗದಂಥ ಕತೆಗಳನ್ನು ಹೇಳಿಕೊಂಡಿದ್ದಾರೆ. ಮಾನಸಿಕ ಸಮಸ್ಯೆಗಳಿದ್ದ ಓರ್ವ ಹಿರಿಯ ವೈದ್ಯ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿ, ಅಲ್ಲಿನ ಒಂದು ಪುಟ್ಟ ಸಮುದಾಯದೊಂದಿಗೆ ಬೆರೆತು ಬದುಕತೊಡಗಿದರು. ಆ ಊರು ಅವರನ್ನು ಎಷ್ಟೊಂದು ಪ್ರೀತಿಯಿಂದ ನೋಡಿಕೊಂಡಿತೆಂದರೆ, ಆ ಇಡೀ ಊರು ಅವರೊಂದಿಗೆ ನಿಂತಿದ್ದರಿಂದ ಅವರು ಅಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸುವುದು ಕೂಡ ಸಾಧ್ಯವಾಯಿತು. ಒಬ್ಬ ಅಜ್ಜಿ, ಮುದ್ದಾಗಿಯೂ, ವ್ಯಗ್ರವಾಗಿಯೂ ಎಂಥೆಂಥಾ ಚಿತ್ರವಿಚಿತ್ರ ಕತೆಗಳನ್ನೆಲ್ಲ ಹೇಳುತ್ತಿತ್ತೆಂದರೆ ಅದನ್ನು ಕೇಳಿ ಕೇಳಿಯೇ ಅವಳ ಮೊಮ್ಮಕ್ಕಳು ಸೃಜನಾತ್ಮಕವಾಗಿ ಬದಲಾದರು. ಆ ಕತೆಗಳು ಅವರನ್ನು ಎಷ್ಟೆಲ್ಲ ಕಾಡತೊಡಗಿದವೆಂದರೆ ಅವರಲ್ಲಿ ಆ ಕತೆಗಳು ಸೃಜನಶೀಲ, ರಚನಾತ್ಮಕ ತುಡಿತಗಳನ್ನೆಬ್ಬಿಸಿದ್ದವು. ಅಣ್ಣ ತಂಗಿಯರ ಒಂದು ಕುಟುಂಬದಲ್ಲಿ ಇಬ್ಬರಿಗೂ ಸಮಸ್ಯೆಯಿದ್ದು, ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಬೇಕಾಯಿತು.... ಆದರೆ ಈ ಯಾವ ಕತೆಗಳೂ ಈ ಸಂಕಲನದಲ್ಲಿಲ್ಲ. ತಮ್ಮ ಅಜ್ಜನ ಮಾನಸಿಕ ಕಾಯಿಲೆಯನ್ನು ಸಾರ್ವಜನಿಕ ವಿಷಯವಾಗಿಸಲು ಒಲ್ಲದ ಕುಟುಂಬದ ಎಳೆಯ ತಲೆಮಾರು ಒಂದು ಕತೆಯನ್ನು ಮುಂದೆ ಸಾಗಲು ಬಿಡಲಿಲ್ಲ. ಇನ್ನೊಂದು ಪ್ರಸಂಗದಲ್ಲಿ ಕುಟುಂಬದ ಯಾರೊಬ್ಬರೂ ಸಹಕರಿಸದೇ ಹೋದುದರಿಂದ ಹಾಗೂ ಅಜ್ಜಿಯ ಕುರಿತಂತೆ ಕೇವಲ ಮಹಿಳೆಯೊಬ್ಬರ ಮಸುಕಾದ ನೆನಪುಗಳಲ್ಲೆ ಎಲ್ಲವೂ ಮುಗಿದದ್ದರಿಂದ ಅದನ್ನು ಕೈಬಿಡಬೇಕಾಯಿತು. ಮೂರನೆಯದು ಚೆನ್ನಾಗಿಯೇ ಸುರುವಾದರೂ ಮುಂದೆ ಅದನ್ನು ಬರೆಯುತ್ತಿದ್ದ ವ್ಯಕ್ತಿ ಈಮೇಲುಗಳಿಗೆ ಪ್ರತಿಕ್ರಿಯಿಸುವುದನ್ನೇ ಬಿಟ್ಟುಬಿಟ್ಟರು.

ನೆನಪುಗಳು ಏನೆಲ್ಲವನ್ನು ಹೊತ್ತು ತರಬಹುದೋ, ಆ ನೋವು ಮನುಷ್ಯನನ್ನು ಏನೆಲ್ಲ ಮಾಡಬಹುದೋ ಅದರ ಎದುರು ನಾವು ಹೂಡುವ ಪ್ರತ್ಯಸ್ತ್ರಗಳಲ್ಲಿ ಇದೂ ಒಂದು ಎಂದು ತಿಳಿದು ನಾನು ಸುಮ್ಮನಾದೆ. ಅವರ ನಿರ್ಧಾರವನ್ನು ನಾನು ಗೌರವದಿಂದ ಒಪ್ಪಿಕೊಂಡಿದ್ದೇನೆ.

ಉಳಿದವರು ನೇರವಾಗಿಯೇ ನಿರಾಕರಿಸಿದರು. ನಾನು ಅವರನ್ನೂ ದೂರಲಾರೆ. ನಾವು ನಮ್ಮನಮ್ಮ ಕತೆಗಳಿಗೆ ನಾವು ನಾವೇ ಆಕಾರವೊಂದನ್ನು ಕೊಟ್ಟುಕೊಳ್ಳಬೇಕಿದೆ ಮತ್ತು ನಾವಿದನ್ನು ಹೇಳುವುದರ ಮೂಲಕ ಮಾಡುವಷ್ಟೇ ಹೇಳದೇ ಇರುವುದರ ಮೂಲಕವೂ ಮಾಡುತ್ತಿರುತ್ತೇವೆ. ನನ್ನ ಕತೆಯ ಲೇಖಕನಾಗಿದ್ದುಕೊಂಡು ನಾನು ಯಾವುದರೊಂದಿಗೆ ಹೊಂದಿಕೊಂಡಿದ್ದೇನೆ ಮತ್ತು ಯಾವುದರೊಂದಿಗೆ ಹೊಂದಿಕೊಂಡಿಲ್ಲ ಎನ್ನುವುದನ್ನು ನಾನು ಮಾತ್ರ ನಿರ್ಧರಿಸಬಲ್ಲೆ.

ಹಾಗಾಗಿ ಈ ಕತೆಗಳನ್ನು ತಿದ್ದುವಾಗಲು ಕೂಡ ನಾನು ಎಚ್ಚರದ ಹೆಜ್ಜೆಗಳನ್ನಿರಿಸಿದ್ದೇನೆ. ಇವರಲ್ಲಿ ಕೆಲವರು ನನ್ನ ಸ್ನೇಹಿತರು. ತಮ್ಮ ಒಡಹುಟ್ಟಿದವರು ಕತ್ತಿ ಹಿಡಿದು ಓಡಿಸಿಕೊಂಡು ಬಂದಾರು, ಅಮ್ಮ ಎಲ್ಲಿ ಬಾವಿಗೆ ಹಾರಿಕೊಂಡಳೋ ಎಂದು ಕಂಗಾಲಾಗಿ ಅವಳನ್ನು ತಡೆಯಲು ದಿಕ್ಕೆಟ್ಟು ಓಡುವಂತೆ ಆದೀತು ಎಂದೆಲ್ಲ ಹೇಳಿಯೇ ತಮ್ಮ ತಮ್ಮ ಕತೆಯನ್ನು ಹಂಚಿಕೊಂಡವರು. ಕೆಲವೊಮ್ಮೆ ಅವರು ಬರೆದಿದ್ದರಲ್ಲಿ ಇಂಥವೇ ಸಂದರ್ಭದ ವಿವರಗಳು ತಪ್ಪಿಹೋಗಿವೆ. ‘ನೀವು ಮಾತನಾಡುತ್ತ ನಿಮ್ಮ ತಂದೆ ನಿಮ್ಮ ತಂಗಿಯನ್ನು ಮಚ್ಚು ಹಿಡಿದುಕೊಂಡು ಬೆನ್ನಟ್ಟಿದ ಸಂದರ್ಭದ ಬಗ್ಗೆ ಹೇಳಿದ್ದಿರಿ, ಅದನ್ನು ಇಲ್ಲಿ ಸೇರಿಸಬೇಕಿತ್ತೆ?’ ಎಂದು ಕೇಳಲೆ ಅನಿಸಿದ್ದಿದೆ. ಅವರು ಹೇಳಿದ ಮಾತನ್ನು ಅವರಿಗೆ ಹೀಗೆ ನೆನಪಿಸುವುದರಿಂದ ಅವರಲ್ಲುಂಟಾಗುವ ಒತ್ತಡವನ್ನು ನಮ್ಮ ಸಂಬಂಧ ತಾಳಿಕೊಂಡೀತೇ ಎಂದು ಕ್ಷಣಕಾಲ ಯೋಚಿಸಿ ಹಾಗೆ ಕೇಳಲು ಮುಂದಾಗುತ್ತೇನೆ. ಹೆಚ್ಚಾಗಿ ಮಂದಿ ತಾವು ಏನೆಲ್ಲವನ್ನು ಹೇಳಿಬಿಟ್ಟಿದ್ದೇವೆಂದು ತಿಳಿದು ಆಘಾತಕ್ಕೊಳಗಾಗುತ್ತಾರೆ; ಅಥವಾ, ಬಹುಶಃ ತಾವು ಏನೆಲ್ಲವನ್ನು ನೆನಪಿಸಿಕೊಂಡಿದ್ದೇವೆಂದು ತಿಳಿದು ಆಗುವ ಆಘಾತವೇ ಅದಕ್ಕಿಂತಲೂ ಹೆಚ್ಚಿನದಿರಬೇಕು.

ತಮ್ಮ ಕತೆಯನ್ನು ಇಲ್ಲಿ ಹೇಳಿಕೊಂಡಿರುವವರ ಬಗ್ಗೆ ನನಗೆ ಅಗಾಧ ಗೌರವವಿದೆ. ನೋವಿನ, ಪಾಪಪ್ರಜ್ಞೆಯ ಮತ್ತು ತೀವ್ರ ಅಸಹಾಯಕ ಸ್ಥಿತಿಯೊಂದರ ಗೂಡಿನ ಕಗ್ಗತ್ತಲನ್ನು ಅಷ್ಟಿಷ್ಟಾದರೂ ತೊಡೆದು ಹಾಕುವ ಹಣತೆಯೊಂದನ್ನು ಎತ್ತಿ ಹಿಡಿದ ಧೀರರು ಇವರು. ಏಕೆಂದರೆ, ಮನಸ್ಸಿನ ಈ ಎಲ್ಲ ಧಿಮಿಕಿಟಗಳು ನಡೆಯುವುದು ನಮ್ಮ ನಮ್ಮ ಸಂಸಾರವೆಂಬ ರಂಗಭೂಮಿಯ ಒಳಗಷ್ಟೇ. ಕತೆ ಕಾದಂಬರಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಾವು ಹೇಗೆ ಒಬ್ಬ ನೊಂದ ವ್ಯಕ್ತಿ ತನ್ನ ಕುಟುಂಬದ ಮಡಿಲಿಗೆ ಮರಳುತ್ತಾನೆ ಎನ್ನುವುದನ್ನು ನೋಡುತ್ತೇವೆ. ಅಲ್ಲಿ ಅವನನ್ನು ಪ್ರೀತಿ ಮತ್ತು ಅಕ್ಕರೆಯೊಂದಿಗೆ ಎಲ್ಲರೂ ಸುತ್ತುವರಿದು ನಿಲ್ಲುತ್ತಾರೆ ಮತ್ತು ಮನಸ್ಸಿಗಾದ ಗಾಯಗಳನ್ನು ಮಾಯುವಂತೆ ಮಾಡಲು ಬೇಕಾದ್ದು ಅಲ್ಲಿರುತ್ತದೆ. ಆದರೆ ನಿಮ್ಮ ಹೆತ್ತಮ್ಮನೇ ನಿಮ್ಮನ್ನು ಇರಿದಲ್ಲೇ ಇರಿಯುತ್ತ ಮತ್ತು ಮರುಕ್ಷಣ ಇನ್ನಿಲ್ಲದ ಪ್ರೀತಿಯಲ್ಲಿ ಪೊರೆಯುತ್ತ ಇರುವುದಾದರೆ, ನಿಮ್ಮ ಪ್ರೀತಿಯ ತಂದೆಯೇ ಎಲ್ಲರಿಂದ ತೊರೆಯಲ್ಪಟ್ಟವರಂತೆ, ದೂರಾಗಿಬಿಟ್ಟಂತೆ ಕಂಡರೆ, ನೀವೆಂದೂ ಸಮೀಪಿಸಲಾಗದ ಕತ್ತಲ ಗೋಪುರದಲ್ಲಿರುವಂತೆ ಕಂಡರೆ? ಕೌರವರೂ ಪಾಂಡವರೂ ಒಂದೇ ಮನೆಯೊಳಗೆ ಇದ್ದುಬಿಟ್ಟರೆ? ನಿಮಗೆಲ್ಲಿ ನೆಲೆ ಆಮೇಲೆ?

ಹಾಗೆ ನೋಡಿದರೆ,ಎಲ್ಲವೂ ಸರಿಯಾಗಿರುವ ಮನೆ ಎಂಬುದೊಂದು ಭ್ರಾಂತಿ ಎನ್ನುವುದು ನಿಜವೇ. ನಮ್ಮ ಬದುಕಿನ ಎಲ್ಲ ಬಗೆಯ ತೀವ್ರ ಸಂವೇದನೆಗಳ ರಂಗಸ್ಥಳವೇ ಅದಾಗಿರುತ್ತ ಅಲ್ಲಿ ಎಲ್ಲವೂ ಸರಿಯಾಗಿ ಇರಲು ಹೇಗೆ ಸಾಧ್ಯ? ಇಲ್ಲಿ ನಮ್ಮ ಬಗ್ಗೆ ಚೆನ್ನಾಗಿ ತಿಳಿದುಕೊಂಡವರಿದ್ದಾರೆ; ನಮ್ಮನ್ನು ಯಾವುದರಿಂದ ಕಾಪಾಡಬೇಕೆಂದು ಯಾರೂ ಹೇಳದೇನೇ ಅವರು ಬಲ್ಲರು. ಮತ್ತು ಅವರಿಗೆ ಯಾವಾಗ ನಮ್ಮನ್ನು ನೋಯಿಸುವ ಬಯಕೆಯಾಗುವುದೆಂದೂ ಅವರು ಬಲ್ಲರು. ನಮ್ಮ ಅತ್ಯಂತ ದುರ್ಬಲ ಅಂಗ ಯಾವುದೆಂದೂ ಅವರು ಬಲ್ಲರು. ನಮಗೆಲ್ಲರಿಗೂ ಗೊತ್ತಿದೆ, ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಸಂಸಾರವೆಂಬುದು ಒಂದು ಮಾನವೀಯ ಸಂಸ್ಥೆಯಾಗಿರುವುದರಿಂದಲೇ ಅದರಲ್ಲಿ ದೌರ್ಬಲ್ಯಗಳಿವೆ ಎಂಬುದು ತಿಳಿಯುತ್ತದೆ. ನೀನಿಲ್ಲದೇ ನಾನು ಹೇಗಿರಲಿ ಎಂದು ಯೋಚಿಸಿದಷ್ಟೇ ಇಂಥವನೊಂ(ಳೊಂ)ದಿಗೆ ಹೇಗಪ್ಪಾ ಎಂದು ಕೂಡ ಯೋಚಿಸಿದವರೇ ಎಲ್ಲರೂ.

ಆದರೆ ಇದ್ದಕ್ಕಿದ್ದಂತೆ ಸಮಸ್ಯೆಯಾಗಿ ಬಿಟ್ಟ ಒಬ್ಬನೇ ವ್ಯಕ್ತಿಯತ್ತ ಇಡೀ ಕುಟುಂಬದ ಗಮನ ಕೇಂದ್ರೀಕರಿಸಲ್ಪಡಬೇಕಾಗಿ ಬಂದಾಗ ಹೇಗಿರುತ್ತದೆ? ಮನೆಯ ಯಾರೊ ಒಬ್ಬರು ಆತ್ಮಹತ್ಯೆ ಮಾಡಿಕೊಂಡು ಬಿಟ್ಟರೆ? ಉಳಿದವರೆಲ್ಲ ಆ ಶೂನ್ಯವನ್ನು ಸಹಿಸಬೇಕು ಹೇಗೆ? ಪ್ರೀತಿ ಮತ್ತು ಅನುಬಂಧದ ಪ್ರತಿಯೊಂದು ನಡೆಯನ್ನೂ ಪರಿಹಾಸ್ಯ ಮಾಡುತ್ತಲೇ ಉಳಿಯುವ ಆ ವ್ಯಕ್ತಿಯ ನೆರಳು ಹೇಗೆ ಕಾಡಬಹುದು ಅವರನ್ನೆಲ್ಲ? ಯಾರೋ ಒಬ್ಬ ವ್ಯಕ್ತಿಯನ್ನು ಅಡ್ಮಿಟ್ ಮಾಡಬೇಕಾಗಿ ಬಂದರೆ? ಅದು ಹೇಗೆ ಇದನ್ನೆಲ್ಲ ನಿರ್ವಹಿಸುತ್ತದೆ?

ಎಲ್ಲವನ್ನೂ ಮಾಡಿ ಮುಗಿಸಿದ ಮೇಲೆ ಮತ್ತೆ ಅದರ ಕುರಿತಾಗಿ ಮಾತನಾಡಬೇಕಾಗಿ ಬಂದರೆ ಅದು ಹೇಗಿರುತ್ತದೆ? ಅಥವಾ ಯಾಕೆ ಮತ್ತೆ ಅದನ್ನೆಲ್ಲ ನೆನಪಿಸಿಕೊಳ್ಳಬೇಕು?

ಈ ‘ಯಾಕೆ’ ಎನ್ನುವ ಶಬ್ದಕ್ಕೆ ನನ್ನಲ್ಲಿ ಉತ್ತರವಿಲ್ಲ. Em.... ಬರೆದ ನಂತರದಲ್ಲಿ ಹಲವಾರು ಬಾರಿ ನಾನೆದುರಿಸಿದ ಪ್ರಶ್ನೆಯದು. ಎಲ್ಲವನ್ನೂ ಹೊರಗೆ ಹಾಕಿ ಮುಕ್ತವಾಗುವುದು. ‘ಈಗ ಅಯ್ಯಬ್ಬ ಎನಿಸುತ್ತದೆಯೆ? ಭೂತಕಾಲದಿಂದ ಒಮ್ಮೆಗೆ ಕಳಚಿಕೊಂಡು ಇನ್ನಾದರೂ ಮುಂದೆ ಸಾಗಬಹುದು ಅನಿಸುತ್ತಾ ಈಗ?’ ಇದಕ್ಕೆ ಹೇಗೆಂದು ಉತ್ತರಿಸಬೇಕು, ನನಗೆ ಗೊತ್ತಾಗುತ್ತಿರಲಿಲ್ಲ. ಈಗಲೂ ನನಗೆ ಗೊತ್ತಿಲ್ಲ. ಬದಲಿಗೆ ಏನೋ ಒಂದು ಉತ್ತರ ಎಂದು ಆಡುವುದು ಸುಲಭ ಇತ್ತು; ಆದರೆ ಅದು ಕೇವಲ ಪೊಳ್ಳು ಭರವಸೆಯನ್ನು ನೆಚ್ಚಿದ ಹಾಗೆ. ಉತ್ತರಿಸುವುದೇ ಆದಲ್ಲಿ ಏನೆಂದು ಹೇಳಬಹುದಿತ್ತು ನಾನು? ಸೋಮವಾರ ‘ಹೌದು’ ಎಂದರೆ ಮಂಗಳವಾರ ‘ಇಲ್ಲ’ ಎನ್ನಲೆ, ಬುಧವಾರ ‘ ಬಹುಶಃ, ಈ ಕಳಚಿಕೊಳ್ಳುವುದು ಎಂದರೆ ಏನು ಎನ್ನುವ ಬಗ್ಗೆ ಸ್ಪಷ್ಟ ಇದ್ದರೆ...’ ಎನ್ನುತ್ತಿದ್ದೆನೆ? ಗುರುವಾರ ಬಹುಶಃ ‘ನಿಮಗೇನಾದರೂ ತಲೆಕೆಟ್ಟಿದೆಯೆ?’ ಎಂದು ಬಿಟ್ಟು ಶುಕ್ರವಾರ ‘ಕಲೆಯ ಕೆಲಸ ಕಲಾವಿದನ ನೋವು ನಿವಾರಿಸುವುದಲ್ಲ, ಬದಲಿಗೆ ಜಗತ್ತಿನ ನೋವು ಉಪಶಮನಗೊಳಿಸುವುದು’; ಮತ್ತು ಶನಿವಾರ ‘ಹೌದು, ಕೆಲವೊಮ್ಮೆ ಹೌದೆನಿಸುತ್ತೆ. ಆದರೆ ನಿಜ ಹೇಳಬೇಕೆಂದರೆ ಇಲ್ಲ ಎಂದೇ ಹೇಳಬೇಕು. ಹೀಗೇ ಎಂದು ಹೇಳುವಷ್ಟು ನನಗೇನೂ ಗೊತ್ತಾಗುತ್ತಿಲ್ಲ ಆ ಬಗ್ಗೆ’ ಎನ್ನುತ್ತಿದ್ದೆನೆ? ಮತ್ತೆ ಭಾನುವಾರ ನನಗೇ ನಾನು ಬಿಡುವು ಕೊಟ್ಟುಕೊಂಡು ಬೇರೆಯವರ ಪ್ರಶ್ನೆಗಳಿಗೆ ಉತ್ತರಿಸುವುದಿರಲಿ, ನನಗೇ ನಾನು ಏನನ್ನೂ ಹೇಳಿಕೊಳ್ಳಲು ನಿರಾಕರಿಸುತ್ತಿದ್ದೆನೇನೊ.

ಒಂದು ವಿಧದ ಉತ್ತರ ಎನ್ನುವಂತೆ ನಾನು ಕೊಡಬಹುದಾದ್ದು ಈ ಒಂದು ಚಿತ್ರಣವನ್ನಷ್ಟೇ. ನೀವು ಒಂದು ಬಹುದೂರ ಸಾಗಬೇಕಾದ ಗುಡ್ದ ಹತ್ತುತ್ತಿದ್ದೀರಿ. ನಿಮ್ಮ ಬೆನ್ನ ಮೇಲಿನ ಬ್ಯಾಗು ನಿಮ್ಮ ಭುಜ ಸೆಳೆಯುತ್ತಿದೆ. ಬಿಗಿ ಹಿಡಿದ ಬ್ಯಾಗಿನ ಪಟ್ಟಿಗಳಿಂದ ನಿಮ್ಮ ಹಸ್ತಗಳನ್ನೀಚೆ ತೆಗೆಯುತ್ತೀರಿ. ಬ್ಯಾಗನ್ನು ಬೆನ್ನಿನಿಂದ ಇಳಿಸಿ ಬೇರೆಡೆ ಸರಿಸುತ್ತೀರಿ. ಒಂದು ಕ್ಷಣ ಭಾರ ಇಳಿಸಿದ ನೆಮ್ಮದಿಯಿಂದ ಉಸ್ಸಪ್ಪ ಎನಿಸುತ್ತದೆ. ಆದರೆ ಕೆಲವೇ ಹೊತ್ತಿನಲ್ಲಿ ಬ್ಯಾಗಿನ ಭಾರ ಇನ್ನೆಲ್ಲೊ ಅನುಭವಕ್ಕೆ ಬರತೊಡಗುತ್ತದೆ. ಕೈಗಳನ್ನು ಭಾರ ಸೆಳೆಯತೊಡಗುತ್ತದೆ. ಅಂದ ಮಾತ್ರಕ್ಕೆ ಬದುಕಿನ ಪ್ರತಿ ಕ್ಷಣವೂ ನೀವು ಇದರಲ್ಲೇ ಮುಳುಗಿರುತ್ತೀರಿ ಎಂದೇನಲ್ಲ. ಆಗಾಗ ನೀವು ಭಾರವನ್ನು ಇಳಿಸಿಬಿಟ್ಟು ಮನಸ್ಸು ದೇಹ ಹಗುರಾಗಿ ಕುಣಿವ ಹೆಜ್ಜೆಯಾಡಿಸಬಹುದು. ಆಗ ಅಷ್ಟು ಹೊತ್ತು ನೀವು ಗಾಳಿಯಲ್ಲೇ ತೇಲಬಹುದು. ಭಾರ ಮತ್ತೆ ನಿಮ್ಮ ಬೆನ್ನ ಮೇಲೇರುವುದು, ಸದ್ಯಕ್ಕಂತೂ ನೀವು ತೇಲುತ್ತೀರಿ.

ಆದರೆ ಒಂದು ಮಾತನ್ನಂತೂ ನಾನು ಖಚಿತವಾಗಿ ಹೇಳಬಲ್ಲೆ, ಈ ಕುರಿತು ಮಾತೇ ಆಡದಿರುವುದರಿಂದೇನೂ ಅದು ಹೆಚ್ಚು ಸಹನೀಯ ಅಥವಾ ಸುರಳೀತವಂತೂ ಆಗುವುದಿಲ್ಲ.

‘ಹೇಗೆ’ ಎನ್ನುವ ಕುರಿತು ಹೇಳುವುದಾದರೆ, ನೀವಿಲ್ಲಿ ಈ ಸಂಕಲನದಲ್ಲಿನ ಇಬ್ಬರು ಲೇಖಕರು ನಿರೂಪಣೆಯ ತಂತ್ರ ಬಳಸಿಕೊಂಡಿರುವುದನ್ನು ಕಾಣುತ್ತೀರಿ. ಅವರು ಒಂದು ಕಾಲ್ಪನಿಕ ಕತೆಯನ್ನು ಹೇಳುತ್ತಿರುವರೋ ಎಂಬಂತೆ ಎಲ್ಲವನ್ನೂ ಹೇಳಿದ್ದಾರೆ. ಒಂದು ಕಥಾನಕದಲ್ಲಿ ಎಲ್ಲವನ್ನೂ ಮೂರನೆಯ ವ್ಯಕ್ತಿಯೊಬ್ಬ ನಿರೂಪಿಸುತ್ತಿರುವಂತೆ ಬಂದರೆ ಇನ್ನೊಂದು ವಿಭ್ರಾಂತ ಮನಸ್ಸು ತನ್ನ ಮನೋಗತವನ್ನು ತೆರೆದಿಡುತ್ತಿದೆಯೊ ಎಂಬಂತೆ. ‘ಇದೆಲ್ಲ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವ ಉಪಾಯಗಳಲ್ಲವೆ?’ ಎಂದು ನೀವು ಕೇಳಬಹುದು. ಆದರೆ ಎಲ್ಲಾ ಬರವಣಿಗೆಗೂ ಒಂದು ಮಟ್ಟದ ಅಂತರ ಅನಿವಾರ್ಯ. ಕೆಲವೊಂದು ಮೇಲ್ನೋಟಕ್ಕೇ ಗೋಚರಿಸುತ್ತವೆ. ಕೆಲವು ನಿಧಾನವಾಗಿ, ಬರವಣಿಗೆಯ ಧ್ವನಿಯಾಗಿ ಹುದುಗಿರುತ್ತವೆ: ಉದಾಹರಣೆಗೆ ವ್ಯಂಗ್ಯ ಅಥವಾ ವಿಡಂಬನೆ. ನೀವು ಒಂದು ಕನಿಷ್ಠ ಅಂತರವನ್ನು ಕಾಯ್ದುಕೊಳ್ಳದೇ ಹೋದರೆ ನಿಮಗದನ್ನು ಹೇಳುವುದೇ ಅಸಾಧ್ಯವಾಗಿ ಬಿಡುತ್ತದೆ. ಪ್ರತಿಯೊಬ್ಬರಿಗೂ ಅವರವರದೇ ಆದ ಒಂದು ಅಂತರ, ಅವರವರದೇ ಆದ ಒಂದು ತಂತ್ರ.

ಈ ಪುಸ್ತಕದಲ್ಲಿನ ಕತೆಗಳು ನಿಮಗೆ ಯಾವುದೇ ಪರಿಹಾರಗಳನ್ನು, ಉತ್ತರಗಳನ್ನು ಒದಗಿಸುವ ಉದ್ದೇಶ ಹೊಂದಿಲ್ಲ. ಅವು ಏನು ನಡೆಯಿತು ಎನ್ನುವುದನ್ನು ಹೇಳುತ್ತಿವೆ, ಅದನ್ನು ಹೇಗೆ ನಿಭಾಯಿಸಿದೆವು ಎನ್ನುವುದನ್ನು ಹೇಳುತ್ತವೆ. ಏನು ಮಾಡಿದೆವೊ, ಅದನ್ನು ಹೇಗೆ ಮಾಡಿದೆವೊ ಅದನ್ನು ನೀವು ಒಪ್ಪಿಕೊಳ್ಳದೇ ಇರಬಹುದು. ಅದು ಸಹಜವೇ. ನನ್ನಮ್ಮನಿಗೆ ಸೌಖ್ಯವಿಲ್ಲದಾಗ ನಮ್ಮ ಕುಟುಂಬದ ಬಂಧು ಬಾಂಧವರು ಮತ್ತು ಸ್ನೇಹಿತರಿಂದ ಸದಾ ಸಲಹೆಗಳ ಮಹಾಪೂರವೇ ಹರಿದು ಬರುತ್ತಿತ್ತು. ಅವುಗಳಲ್ಲಿ ಕೆಲವು ತುಂಬ ಸಹಾಯಕವಾಗಿದ್ದವು. ಹೊಸ ಹೊಸ ಪರಿಹಾರೋಪಾಯಗಳ ಕುರಿತಂತೆ ಅಲ್ಲಿ ಇಲ್ಲಿ ಪ್ರಕಟವಾದ ಲೇಖನಗಳ, ಪತ್ರಿಕೆಗಳ ಕಟಿಂಗ್ಸ್, ವೈದ್ಯರ ಹೆಸರುಗಳು; ಕೆಲವು ಹಾಗಿರಲಿಲ್ಲ - ಏನೇನೋ ಹುಡಿ ಮತ್ತೊಂದು ಕೊಡುವ, ವಿಶೇಷ ಶಕ್ತಿಸಂಪನ್ನರ, ಎಂಥ ಸಮಸ್ಯೆಯನ್ನಾದರೂ ಪರಿಹರಿಸಬಲ್ಲವರ ಹೆಸರುಗಳು; ‘ಇದ್ಯಾವುದನ್ನೂ’ ಗಂಭೀರವಾಗಿ ತೆಗೆದುಕೊಳ್ಳಬೇಡಿ, ಯಾಕೆಂದರೆ ‘ಇದೆಲ್ಲ ಸುಮ್ಮನೇ ಉದಾಸೀನ ನಟಿಸೋದಷ್ಟೇ, ಎರಡು ದಿನ ಹೊಟ್ಟೆಗೆ ಏನೇನೂ ಕೊಡದೆ ನೋಡಿ, ಹೇಗೆ ಹಸಿವು ಅವರನ್ನ ತಟಕ್ಕನೆ ಸರಿದಾರಿಗೆ ತರುತ್ತೆ ಅಂತ’ ಎಂಬ ಸಲಹೆ. ಇದೆಲ್ಲ ಸುಮ್ಮನೆ ಕಿರಿಕಿರಿಯನ್ನಷ್ಟೇ ಹೆಚ್ಚಿಸುತ್ತಾ ಇತ್ತು. ಯಾಕೆಂದರೆ ನಾವಿದನ್ನೆಲ್ಲ ಪ್ರತಿದಿನ ಎಂಬಂತೆ ಅನುಭವಿಸುತ್ತ ಇರುವಾಗ ನಮಗೆ ನಾವೆಲ್ಲೆಲ್ಲಿ ಏನೇನು ತಪ್ಪು ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಸತತವಾದ ಮಾತುಗಳನ್ನೂ ಕೇಳಿಸಿಕೊಳ್ಳುತ್ತ ಇರುವುದು ಸಾಕಾಗಿತ್ತು.

ನಮಗೇ ಅದೆಲ್ಲ ಚೆನ್ನಾಗಿಯೇ ಗೊತ್ತಿತ್ತು.

ನಿಮ್ಮಮ್ಮ ಮತ್ತೊಮ್ಮೆ ತನ್ನನ್ನೆ ತಾನು ಮುಗಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದಾಗಲೇ ಅದು ಸ್ಪಷ್ಟ, ಅವಳು ಸಹಿಸಲಾಗದ್ದು ಏನೋ ಮಾಡಿದ್ದೇವೆ. ಒಂದು ಹಂತದಲ್ಲಿ ನೀವು ವೈಪರೀತ್ಯಗಳನ್ನು ಏನು ಮಾಡಿದರೂ ತಡೆಯುವುದಕ್ಕೆ ಸಾಧ್ಯವಿಲ್ಲ ಎನ್ನುವುದು ನಿಮಗೀಗಾಗಲೇ ಗೊತ್ತಾಗಿರುತ್ತದೆ. ಅಲ್ಲದೆ, ಬಿಟ್ಟುಕೊಡುವುದಕ್ಕೂ ಮುನ್ನ ಸಾಧ್ಯವಿರುವ ಎಲ್ಲ ಬಗೆಯಲ್ಲಿ ಸ್ವತಃ ಅವಳೇ ಎಷ್ಟೊಂದು ಪ್ರಯತ್ನಿಸಿರಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಸಾಧ್ಯವಾದಲ್ಲಿ, ಅದರ ಎದುರು ನಿಮ್ಮ ಪ್ರಯತ್ನ ಏನೇನೂ ಅಲ್ಲ ಎನ್ನುವುದೂ ನಿಮಗೆ ಗೊತ್ತಾಗಿರುತ್ತದೆ. ನಿಮಗಿದೆಲ್ಲ ಅರ್ಥವಾಗುತ್ತದೆ. ಎಷ್ಟೋ ಸಲ ಸುಮ್ಮನೇ ಪಕ್ಕದಲ್ಲಿ ಕೂತು, ನಿಮಗೆ ಮಾತನಾಡಬೇಕು ಅನಿಸಿದಾಗಷ್ಟೇ ಕೇಳಿಸಿಕೊಂಡು, ನಿಮಗೆ ಮೌನವಾಗಿರಬೇಕೆನಿಸಿದಾಗ ಹಾಗಿರಲು ಬಿಟ್ಟು, ನಿಮ್ಮ ಮೌನದಲ್ಲೇ ನಿಮ್ಮನ್ನು ನೀವು ಸಂಭಾಳಿಸಿಕೊಳ್ಳಲು ಅನುವು ಮಾಡಿಕೊಡುವ ಸಾಂಗತ್ಯಕ್ಕಿಂತ ಹೆಚ್ಚಿನದು ಏನೂ ಇಲ್ಲವೇನೊ ಅನಿಸುತ್ತದೆ.

ಅಂಥ ಸ್ನೇಹಿತರು, ಬಂಧುಗಳು ಇದ್ದರು ಎನ್ನುವುದೇ ದೊಡ್ಡ ಸಮಾಧಾನ. ಸೂಕ್ಷ್ಮವಾದ ಸಂವೇದನೆಯಿಂದಲೇ ಮತ್ತು ಅಂತರಂಗದ ಮಾತಾಗಿ ಅವರು ಏನನ್ನಾದರೂ ಹೇಳುವ ಅಥವಾ ಮೌನವಹಿಸುವ ಕೆಲಸ ಮಾಡಿದ್ದರು. ದೂರವೇ ಉಳಿದುಬಿಟ್ಟ ಕೆಲವರೂ ಇದ್ದರು. ಒಮ್ಮೊಮ್ಮೆ ಅದು ನೋವು ನೀಡುತ್ತದೆ. ಆದರೆ, ಕಾಲಾಂತರದಲ್ಲಿ ನೋಡಿದರೆ ಬಹುಶಃ ಅದೇ ಸರಿಯೇನೊ. ಕೇವಲ ಕರ್ತವ್ಯದ ದೃಷ್ಟಿಯಿಂದಷ್ಟೇ ನೋಡಲು ಬರುವ, ಅನ್ಯಥಾ ಮೈಲಿಗಟ್ಟಲೆ ದೂರವೇ ಉಳಿಯಲು ಬಯಸುವ ಅಂಥವರು ತಮಗೆ ಅಸಹನೀಯವೆನಿಸುವ ವಾತಾವರಣದಲ್ಲಿ ಮತ್ತಷ್ಟು ಅಸಹನೀಯ ವಾತಾವರಣ ಸೃಷ್ಟಿಸುವುದಕ್ಕಿಂತ ದೂರವಿರುವುದೇ ಮೇಲು. ಮಾನಸಿಕ ಅಸ್ವಾಸ್ಥ್ಯದ ವಿದ್ಯಮಾನಗಳು ನೋಡಲು ಕೇಳಲು ತುಂಬ ಕುತೂಹಲಕರವಾಗಿರುತ್ತವೆ ಎನ್ನುವಂಥ ಒಂದು ಕೀಳು ಮಟ್ಟದ ಯೋಚನೆಗಳಿರುವ ಮಂದಿಯ ಪ್ರಶ್ನೆಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯ ಯಾರಿಗೂ ಇದ್ದಿರುವುದಿಲ್ಲ. ‘ಆಕೆ ಹೇಗೆ ಎಲ್ಲ ಮಾಡ್ಕೋತಾರೆ?’ ಮತ್ತು ‘ಆಗ ನೀವೆಲ್ಲ ಎಲ್ಲಿ ಇದ್ರಪ್ಪ!’ ಮತ್ತು ‘ಓಹ್! ಮತ್ತೆ ಅದನ್ನೆಲ್ಲ ಯಾರು ಚೊಕ್ಕ ಮಾಡಿದ್ದು ಆಮೇಲೆ? ಎಂಥಾ ಕರ್ಮಕಾಂಡ ಅಲ್ವಾ!’ ಹೌದು,ಅದೆಲ್ಲವೂ ತುಂಬ ಕಷ್ಟದ್ದೇ. ಆದರೆ ಇಂಥ ಪ್ರಶ್ನೆಗಳಿಗೆಲ್ಲ ಉತ್ತರಿಸುವ ಅನಿವಾರ್ಯತೆಯಲ್ಲಿ ಕೇವಲ ವರದಿ ನೀಡುವವರ ನಿರ್ಲಿಪ್ತ ಧರ್ತಿಯಲ್ಲಿ ಏನೇನೋ ಉತ್ತರಿಸುವ ನಮ್ಮದೇ ನಾಟಕೀಯ ವರ್ತನೆಯಿದೆಯಲ್ಲ, ಅದು ಇನ್ನೂ ದರಿದ್ರಸ್ಥಿತಿ. ‘ಅಯ್ಯೊ, ಅದು ಒಂದೆರಡು ಮಿನಿಟು ಬೇರೆ ಕಡೆ ಮನಸ್ಸು ಕೊಟ್ರೆ, ಅಥ್ವಾ ಸ್ವಲ್ಪ ಅತ್ತ ಹೋಗಿ ಇತ್ತ ಬರುವಷ್ಟರಲ್ಲಿ ಆಗಿ ಹೋಗಿರುತ್ತೆ ನೋಡಿ,’ ಎನ್ನುತ್ತೀರಿ. ‘ಎಲ್ಲರೂ ಮಲಗಿ ಬಿಟ್ಟಿದ್ದೆವು’ ಎನ್ನುತ್ತೀರಿ, ಪಾಪಪ್ರಜ್ಞೆಯನ್ನು ಮುಚ್ಚಿಕೊಳ್ಳುವ ಭಾವದಲ್ಲಿ. ಶಾಂತವಾಗಿ ‘ನಾವೇ ಎಲ್ಲ ಸ್ವಚ್ಛಗೊಳಿಸಿದ್ವಿ’ ಎನ್ನುತ್ತೀರಿ. ಮತ್ತೆ ಇದನ್ನೆಲ್ಲ ಇನ್ಯಾರಿಗೋ ವಿವರಿಸಬೇಕಾದುದಕ್ಕೆ ನಿಮ್ಮನ್ನೇ ನೀವು ಹಳಿದುಕೊಳ್ಳುತ್ತೀರಿ, ನಿಜವೇ. ಆದರೆ ಈ ಸ್ಥಿತಿಯಲ್ಲಿ ಸಹಜ ಮಂದಿಯ ಜೊತೆ ಸಹಜವಾಗಿಯೇ ಇರುವುದು ಚೆನ್ನಾಗಿರುತ್ತದೆ. ಆಮೇಲೆ ಖಡಕ್ಕಾದ ಉತ್ತರಗಳೂ ಮನಸ್ಸಿಗೆ ಬರುತ್ತವೆ, ನಿಜ. ಆದರೆ ನಿಮ್ಮನ್ನೇ ನೀವು ಹಿಂಸಿಸಿಕೊಳ್ಳುವುದಕ್ಕಿಂತ ಹೆಚ್ಚು ಖಡಕ್ಕಾದುದು ಬೇರೆ ಯಾವುದೂ ಇರಲಿಕ್ಕಿಲ್ಲ.

ಈ ಪುಸ್ತಕದಲ್ಲಿ ನೈತಿಕ ಪಾಠಗಳೇನೂ ಇಲ್ಲ. ಅಥವಾ ಕೊನೆಗೊಮ್ಮೆ ಎಲ್ಲವೂ ಸರಿಯಾಗಿ ಚೆನ್ನಾಗಿ ಮುಗಿಯಿತು ಎನ್ನುವಂಥ ಸುಲಲಿತ ಕತೆಗಳೂ ಇಲ್ಲಿಲ್ಲ. ನೀವು ಕೇಳಬಯಸುವ ಪ್ರಶ್ನೆಗಳು ಕೊನೆಗೂ ಉಳಿಯುತ್ತವೆ. ಲೈಂಗಿಕವಾದ ಅತಿರೇಕದ ವರ್ತನೆಗಳನ್ನು ನೀವು ಹೇಗೆ ನಿಭಾಯಿಸಿದಿರಿ? ನಿಮ್ಮ ತಂದೆ ಈಗ ಎಲ್ಲಿರಬಹುದು ಅಂತ ಅನಿಸುತ್ತೆ? ನಿಮ್ಮ ತಾಯಿಯನ್ನ ನೀವು ಎಂದಾದರೂ ಕ್ಷಮಿಸ್ತೀರಾ? ಅವಳು ಬೇರೆಯವರನ್ನ ಮದುವೆಯಾದ್ಲಾ ಆಮೇಲೆ? ಈ ನಿರೂಪಣೆಗಳ ನೈಜತೆ, ಪ್ರಾಮಾಣಿಕತೆ, ವಿವರಗಳ ವಾಸ್ತವಿಕತೆಯ ಬಗ್ಗೆ ನಿಮಗೆ ನಿಮ್ಮ ಪ್ರಶ್ನೆಗಳೇ ಆಧಾರವನ್ನೊದಗಿಸಬೇಕು. ಜೀವನವೆಂದರೆ ಹಾಗೆಯೇ ಇರುತ್ತದೆ. ಅದು ಸದಾ ಗಂಟುಬಿಚ್ಚಿದ ಕುಚ್ಚುಗಳಂತೆ. ಸವಾಲುಗಳ ಗೊಂಚಲಿನಂತೆ. ಭಯ ಹುಟ್ಟಿಸುವಂತೆ. ನಮ್ಮಲ್ಲಿರುವುದನ್ನೆಲ್ಲಾ ಸೇರಿ ಮತ್ತೂ ಮತ್ತೂ ಕೊಟ್ಟುಬಿಡು ಎಂದು ಆಗ್ರಹಪಡಿಸುವಂತೆ.

ಹಂಚಿಕೊಳ್ಳಲು ಬಯಸುವ ಒಂದು ಕತೆ ನಿಮ್ಮಲ್ಲಿಯೂ ಇದ್ದರೆ ದಯವಿಟ್ಟು ನನಗೆ assignments.for.jerry@gmail.com ವಿಳಾಸಕ್ಕೆ ಬರೆಯಿರಿ. ನಿಮ್ಮಲ್ಲೊಂದು ಕತೆಯಿದೆ ಮತ್ತು ನೀವದನ್ನು ಹಂಚಿಕೊಳ್ಳಲು ಬಯಸುವುದಿಲ್ಲವಾದಾಗ್ಯೂ ದಾಖಲಿಸಲು ಬಯಸಿದಲ್ಲಿ ಅದನ್ನು ಅಕ್ಷರ ರೂಪಕ್ಕಿಳಿಸಿ, ಧ್ವನಿಮುದ್ರಿಸಿ, ಚಿತ್ರಿಸಿ, ಪೇಂಟಿಂಗ್‌ನ ರೂಪಕೊಡಿ, ಯಾವುದಾದರೊಂದು ಬಗೆಯಲ್ಲಿ ಅದಕ್ಕೊಂದು ರೂಪ, ಆಕೃತಿ ನೀಡಿ. ಅದರಿಂದ ಏನೋ ಪರಿಹಾರ ಸಿಗುತ್ತದೆ ಎಂದೇನೂ ನಾನು ಹೇಳುತ್ತಿಲ್ಲ, ಆದರೆ ಅದು ನಿಮಗೆ ಕೆಟ್ಟದ್ದನ್ನಂತೂ ಮಾಡುವುದಿಲ್ಲ.

ನಿಮಗೆ ಒಳಿತಾಗಲಿ ಎಂದು ಹಾರೈಸುತ್ತೇನೆ. ಕೊನೆಗೂ ನಾವು ನಾವಾಗಿಯೇ ಮಾಡಬೇಕಾದ ಒಂದು ನಿರ್ಧಾರವೆಂದರೆ ಬೆಳಕಿನತ್ತ ಮೊಗಮಾಡುವುದು.

- ಜೆರ್ರಿ ಪಿಂಟೊ

(ಖ್ಯಾತ ಕವಿ, ಕಾದಂಬರಿಕಾರ ಜೆರ್ರಿ ಪಿಂಟೊ ಅವರ A Book of Light ಕೃತಿಯ ಮುನ್ನುಡಿಯ ಅನುವಾದ. ಈ ಕೃತಿಯನ್ನು ಇನ್ಯಾವುದೇ ರೀತಿಯಲ್ಲಿ ಪರಿಚಯಿಸುವುದು ಕಷ್ಟ! ಈ ಲೇಖನ ಪ್ರಜಾವಾಣಿ ಸಾಪ್ತಾಹಿಕ ಮುಕ್ತಛಂದದಲ್ಲಿ ಪ್ರಕಟಿತ)

No comments: