Tuesday, December 27, 2016

ಕನ್ನಡ ಕನ್ನಡವ ಕನ್ನಡಿಸುತಿರಲಿ ಸದಾ...

ನಮ್ಮಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ವಿವಾದಗಳು ತೊಡಗಿದಾಗ ಅಥವಾ ಬೆಳಗಾವಿಯಲ್ಲಿಯೊ, ಬೆಂಗಳೂರಿನಲ್ಲೊ ಮರಾಠಿ ಭಾಷಿಕರ, ತಮಿಳರ ಜೊತೆ ಗಡಿ ಅಥವಾ ಭಾಷೆಗೆ ಸಂಬಂಧಿಸಿದಂತೆ ಏನಾದರೂ ತಕರಾರು ಎದ್ದಾಗ ಬಂದ್, ಮುಷ್ಕರ, ಗಲಾಟೆ ಎಲ್ಲ ಆಗುತ್ತಲ್ಲ, ಅದು ಇಡೀ ಕರ್ನಾಟಕದ ತುಂಬ ಏಕಪ್ರಕಾರ ಆಗುವುದಿಲ್ಲ. ಉದಾಹರಣೆಗೆ ಇಂಥ ಯಾವತ್ತೂ ಸಂದರ್ಭಗಳನ್ನು ಬಿಡಿ, ಪಕ್ಕದ ಕಾಸರಗೋಡು ಕರ್ನಾಟಕಕ್ಕೇ ಸೇರಬೇಕು ಎಂಬ ಬಗ್ಗೆ ನಡೆಯುವ ಗದ್ದಲದಲ್ಲಿ ಕೂಡಾ ನಾನು ವಾಸವಾಗಿರುವ ಕರಾವಳಿಯ ಜಿಲ್ಲೆಗಳು ಭಾಗವಹಿಸಿದ್ದು ಅಷ್ಟಕ್ಕಷ್ಟೇ. ನಮ್ಮಲ್ಲಿ ಹೆಚ್ಚಿನವರು ಮನೆಯಲ್ಲಿ, ಸಂತೆಯಲ್ಲಿ ಎಲ್ಲ ಕಡೆ ಕನ್ನಡವೂ ಸೇರಿದಂತೆ ತುಳು, ಕೊಂಕಣಿ, ಬ್ಯಾರಿ, ಉರ್ದು, ಮಲಯಾಳಂ, ಇಂಗ್ಲೀಷ್ ಮಾತನಾಡುತ್ತೇವೆ. ಮೆಡಿಕಲ್ ಇತ್ಯಾದಿ ಕಲಿಯಲು ಬಂದ ವಿದ್ಯಾರ್ಥಿಗಳಿಂದಾಗಿ ಹಿಂದಿ ಸಾಮಾನ್ಯವಾಗಿದೆ. ಈಚೆಗೆ ವಲಸೆ ಬಂದಿರುವ ಕೂಲಿ ಕಾರ್ಮಿಕರು, ಪಾನಿಪೂರಿ ಮಾರುವ, ಬೀದಿಬದಿ ಚೂಡಿದಾರ ತೂಗುಹಾಕಿದ, ಸೆಲೂನುಗಳಲ್ಲಿ ಸೇರಿಕೊಂಡ ಮತ್ತು ಸಣ್ಣಪುಟ್ಟ ಬೀದಿವ್ಯಾಪಾರದ ಮಂದಿ ಕೂಡ ಹೆಚ್ಚಿದ್ದು ಅವರಿಂದಾಗಿ ಉತ್ತರ ಕರ್ನಾಟಕದ ಕನ್ನಡ, ಉತ್ತರ ಭಾರತದ ಹಿಂದಿಯನ್ನು ಹೋಲುವ ಇತರ ಭಾಷೆಗಳು ಕೂಡ ಆಗಾಗ ಕಿವಿಗೆ ಬೀಳುತ್ತವೆ. ಮುವ್ವತ್ತು ವರ್ಷಗಳಿಂದ ನೋಡುತ್ತಿದ್ದೇನೆ, ಕರಾವಳಿ ಪ್ರದೇಶದ ಬಗ್ಗೆ ಯಾರು ಏನೇ ಹೇಳಲಿ, ಇಲ್ಲಿಯೂ ಹರಿಯುತ್ತಿರುವ, ಜನಸಾಮಾನ್ಯರಲ್ಲಿ ಮಿಡಿಯುತ್ತಿರುವ ಸಮಾನ ತಂತುವೇನಿದೆ, ಅದು ಕನ್ನಡತನದ್ದೇ, ಕನ್ನಡದ್ದೇ. ನಾನು ಕರಾವಳಿಯ ಉದಾಹರಣೆ ನೀಡಿದೆ. ಆದರೆ ಕಾವೇರಿಗೆ ಸಂಬಂಧಿಸಿದಂತೆ ಕರ್ನಾಟಕದ ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಆಸುಪಾಸಿನ ಕೆಲವು ಜಿಲ್ಲೆಗಳನ್ನು ಬಿಟ್ಟರೆ, ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ ಇವುಗಳೊಂದಿಗೆ ಬೆಳಗಾವಿಯನ್ನೂ ಸೇರಿಸಿಕೊಂಡು ನೋಡಿದರೆ, ಈ ಜಿಲ್ಲೆಗಳು ಸ್ಪಂದಿಸುವ ಮಟ್ಟದಲ್ಲಿ, ಅಷ್ಟೇ ತೀವ್ರವಾಗಿ ಕರ್ನಾಟಕದ ಬೇರೆ ಯಾವುದೇ ಜಿಲ್ಲೆಯೂ ಸ್ಪಂದಿಸಿರುವುದಿಲ್ಲ. ಇದನ್ನು ಎಲ್ಲರೂ ಬಲ್ಲರು. ಆದರೆ ಒಪ್ಪಿಕೊಳ್ಳುವುದು ಬಿಡುವುದು ಅವರವರ ಕಾರಣಕ್ಕೆ ವ್ಯತ್ಯಾಸವಾಗಬಹುದು, ಅದು ಬೇರೆ ಸಂಗತಿ. ಹೀಗಿದ್ದೂ ಕನ್ನಡದ ಬಗ್ಗೆ, ನಮ್ಮೆಲ್ಲರ ಆಳದ ಒಂದು ಭಾವನಾತ್ಮಕ ಸಂವೇದನೆಯ ಬಗ್ಗೆ ಯಾವುದೇ ಅನುಮಾನಕ್ಕೆ ಕಾರಣವಿಲ್ಲ. ಇದನ್ನು ಮೇಲ್ನೋಟಕ್ಕೆ ಕಂಡುಕೊಳ್ಳಲು ನಾವು ವಿಫಲರಾದರೆ ಅದು ನಮ್ಮ ವೈಫಲ್ಯವೇ ಹೊರತು ವಸ್ತುಸ್ಥಿತಿಯದ್ದಲ್ಲ. ಆಳವಾಗಿ ನೋಡಬಲ್ಲವರಿಗೆ ಇದು ಗೊತ್ತಿರುವ ಸತ್ಯ.

ಜನಸಾಮಾನ್ಯನೊಬ್ಬನಿಗೆ ಕನ್ನಡ, ಕರ್ನಾಟಕ ಎಂದರೆ ಇವತ್ತು ಕನ್ನಡ ಭಾಷೆಯನ್ನೇ ಮಾತನಾಡುವುದು, ಕನ್ನಡದ್ದನ್ನೇ ಓದುವುದು, ಕನ್ನಡ ಸಿನಿಮಾಗಳನ್ನೇ ನೋಡುವುದು, ಕನ್ನಡ ಚಾನೆಲ್ಲನ್ನೇ ನೋಡುವುದು, ಕಾವೇರಿ, ಮರಾಠಿ, ಹಿಂದಿ ಹೇರಿಕೆ, ತಮಿಳರ ಅಬ್ಬರ ಎಂದಾಗಲೆಲ್ಲ ಕುದಿಯುವುದು - ಆಗಿ ಉಳಿದಿಲ್ಲ. ಹಾಗೆ ಉಳಿಯದೆಯೂ ಅವನು ಅಪ್ಪಟ ಕನ್ನಡಿಗನೇ, ಕರ್ನಾಟಕದ ಬಗ್ಗೆ ಅಭಿಮಾನ, ಹೆಮ್ಮೆ, ಪ್ರೀತಿ ಎಲ್ಲ ಇರುವವನೇ. ಅವನು ಕರ್ನಾಟಕದೊಳಗೇ ಇರಬೇಕಾಗಿಯೂ ಇಲ್ಲ, ಕರ್ನಾಟಕದಲ್ಲೇ ವರ್ಷಾನುಗಟ್ಟಲೆ ಇದ್ದೂ ಇಲ್ಲೇ ಹುಟ್ಟಿ ಬೆಳೆದವನಾಗಿರಬೇಕಾಗಿಯೂ ಇಲ್ಲ. ಅವನಿಗೆ ಇವತ್ತಿಗೂ ಕನ್ನಡ ಬರದಿದ್ದರೂ ಅದು ದೊಡ್ಡ ಸಂಗತಿ ಅನಿಸಬೇಕಾಗಿಯೇ ಇಲ್ಲ. ಇಲ್ಲಿರುವ ಏಳೆಂಟು ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಲ್ಲಿ ದುಡಿಯುವ ಉತ್ತರ ಭಾರತದ ಅನೇಕ ಎಳೆಯ ವೈದ್ಯರು ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ, ಕನ್ನಡದಲ್ಲೇ ಮಾತನಾಡಲು ಹಾತೊರೆಯುತ್ತಾರೆ. ಇಲ್ಲಿನವರೇ ಆದ ನರ್ಸುಗಳು ಒಂದಿಷ್ಟೂ ತಡವರಿಸದೆ ಮಲಯಾಳಂ, ತಮಿಳು ಮಾತನಾಡುತ್ತಾರೆ. ಅದು ಅವರಿಗೆ ವೃತ್ತಿಜೀವನದ ಅನಿವಾರ್ಯವೂ ಆಗಿದೆ. ಈ ನೆಲದ ಕಲೆಯಾದ ಯಕ್ಷಗಾನಕ್ಕೆ ಬಂದರೆ ತೆಂಕು ಬಡಗು ಎರಡೂ ತಿಟ್ಟಿನ ಪ್ರಸಂಗಗಳೆಲ್ಲ ಇದ್ದಿದ್ದು ಕನ್ನಡದಲ್ಲಿಯೇ, ತುಳುವಿನಲ್ಲಲ್ಲ. ತುಳು ಪ್ರಸಂಗಗಳು ಈಚಿನವು. ತುಳುವಿನಲ್ಲೇ ಇರುವ ಯಕ್ಷಗಾನದ ಪದಗಳು ಅದಕ್ಕೂ ನಂತರದವು. (ಆಸಕ್ತರು ಪುರುಷೋತ್ತಮ ಬಿಳಿಮಲೆಯವರ ‘ಜನಸಂಸ್ಕೃತಿ’ ಕೃತಿಯ ‘ಕಲೆ ಮತ್ತು ಬದಲಾವಣೆ: ಯಕ್ಷಗಾನದ ಉದಾಹರಣೆ’ ಲೇಖನವನ್ನು ಗಮನಿಸಬಹುದು) ಈ ನೆಲದಲ್ಲಿ ಮಾತ್ರವೇ ಕಾಣಸಿಗುವ ತಾಳಮದ್ದಲೆ ಎಂಬ ಪ್ರಕಾರವಂತೂ ಕನ್ನಡದಲ್ಲೇ ಇದ್ದು, ಯಕ್ಷಗಾನದ ಭಿನ್ನ ಆವೃತ್ತಿಗಳು ದೇಶದ ಹಲವೆಡೆ ಇದ್ದರೂ ಈ ತಾಳಮದ್ದಲೆ ಎಂಬುದು ಕರಾವಳಿಯಲ್ಲಿ ಮತ್ತು ಕನ್ನಡದಲ್ಲಿ ಮಾತ್ರ ಯಾಕೆ ಬೆಳೆದು ಬಂತು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿವೆ. (ಆಸಕ್ತರು ಡಾ.ಪಾದೇಕಲ್ಲು ವಿಷ್ಣು ಭಟ್ಟ ಹಾಗೂ ಡಾ.ಎಂ.ಪ್ರಭಾಕರ ಜೋಶಿಯವರ ಜಂಟಿ ಸಂಪಾದಕತ್ವದ ‘ವಾಚಿಕ’ ಕೃತಿಯನ್ನು ಗಮನಿಸಬಹುದು.) ಪಾಡ್ದನಗಳು ತುಳು-ಕನ್ನಡ ಎರಡೂ ಭಾಷೆಯಲ್ಲಿ ಸಿಗುತ್ತವೆ. ಇನ್ನು ಕೊಣ್ಕಿ ಎನ್ನುವ ವಿಶಿಷ್ಟ ಕುಣಿತ-ಗಾಯನ ಕಥನ ಇರುವುದು ಕನ್ನಡದಲ್ಲಿ ಮಾತ್ರ. ಜಾನಪದದ ಮಾತಂತಿರಲಿ, ಇಲ್ಲಿನ ತುಳು, ಕೊಂಕಣಿ, ಕೊಡವ, ಬ್ಯಾರಿ ಭಾಷೆಯ ಸಾಹಿತ್ಯ ಬಳಸುತ್ತಿರುವ ಲಿಪಿ ಕನ್ನಡದ್ದೇ. ಕೋಲಾರದ ತೆಲುಗರು ಕೂಡ ಕನ್ನಡ ಲಿಪಿಯನ್ನೇ ಬಳಸುತ್ತಿದ್ದರೆಂದು ಕೇಳಿದ್ದೇನೆ. ಅದೇ ರೀತಿ ಅಂತರ್ಜಾಲದಲ್ಲಿ, ಸೆಲ್‌ಫೋನುಗಳಲ್ಲಿ ಹಲವರು ಇವತ್ತಿಗೂ ಕನ್ನಡ ಮಾತಿಗೆ ಇಂಗ್ಲೀಷ್ ಲಿಪಿಯನ್ನೇ ಬಳಸುವ ಪರಿಪಾಠವನ್ನೂ ಇಟ್ಟುಕೊಂಡಿದ್ದಾರೆ. ಇದು ಇವತ್ತಿನ ಕನ್ನಡತನ. ಇದನ್ನು ನಾವು ಒಪ್ಪಿಕೊಳ್ಳಬೇಕಿದೆ, ಸ್ವೀಕರಿಸಬೇಕಿದೆ.

ನಮ್ಮ ರಾಜ್ಯದಲ್ಲೇ ಇವತ್ತು ಜನಸಮುದಾಯದಲ್ಲಿ ಬಳಸಲ್ಪಡುತ್ತಿರುವ ಕನ್ನಡ ಎಷ್ಟೊಂದು ಸಮೃದ್ಧವೂ ವೈವಿಧ್ಯಮಯವೂ ಆಗಿದೆ ಎಂದರೆ ಪ್ರತಿಯೊಂದು ಕನ್ನಡವೂ ಭಿನ್ನ ಮತ್ತು ಅಷ್ಟೇ ಚಂದ. ಧಾರವಾಡ ಕನ್ನಡ, ಉತ್ತರ ಕರ್ನಾಟಕದ ಕನ್ನಡ, ಕುಂದಾಪುರ ಕನ್ನಡ, ಹವ್ಯಕ ಕನ್ನಡ, ಮಂಡ್ಯ ಕನ್ನಡ ಎಂದೆಲ್ಲ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಐವತ್ತು ಅರವತ್ತು ಕಿಲೊಮೀಟರ್ ಅಂತರದಲ್ಲೇ ಕನ್ನಡದ ಲಯ ವಿನ್ಯಾಸ ಬದಲಾಗಿರುತ್ತದೆ! ನಮ್ಮ ಪತ್ರಿಕೆಗಳು ಆಗಾಗ ಈ ಎಲ್ಲ ಭಾಷೆಯ ಸೊಗಡನ್ನು ನಮಗೆ ಅಷ್ಟಿಷ್ಟು ದಕ್ಕಿಸಿದ್ದರಿಂದಲೇ ನಮಗೆ ಈ ಎಲ್ಲ ಭಾಷೆಗಳೂ ಪ್ರಿಯವೇ, ಇಷ್ಟವೇ. ಗ್ರಾಂಥಿಕ ಕನ್ನಡದಲ್ಲಿ ಕ್ರಿಯಾಪದ ಕೊನೆಯಲ್ಲಿ ಬಂದರೆ ಧಾರವಾಡ ಮತ್ತು ಉತ್ತರ ಕರ್ನಾಟಕದ ನುಡಿಯಲ್ಲಿ ಕ್ರಿಯಾಪದ ತನ್ನ ಜಾಗ ಬದಲಿಸಿ ಆರಂಭದಲ್ಲೊ ನಡುವಿನಲ್ಲೊ ಕೂತದ್ದೇ ಭಾಷೆಗೆ ಒಂದು ಕಾವ್ಯದ ಲಯ ದಕ್ಕಿಬಿಡುತ್ತದೆ. ಆಡುಭಾಷೆಯ ಸಾಹಿತ್ಯ ಓದುವುದಕ್ಕೆ ತುಸು ಕಷ್ಟ ಎನಿಸಿದರೂ ಒಮ್ಮೆ ಅದರ ಲಯಕ್ಕೆ ಮನಸ್ಸು ಒಗ್ಗಿದ್ದೇ ಅದು ನಮ್ಮದೇ ಆಗಿಬಿಡುತ್ತದೆ. ಇದು ನಿಜವಾದ ಕನ್ನಡ ಭಾಷೆಯ ಶಕ್ತಿ. ಇಲ್ಲದಿದ್ದರೆ ನಮಗೆ ಬೇಂದ್ರೆ, ದೇವನೂರು ಮಹದೇವ, ಸಿದ್ಧಲಿಂಗ ಪಟ್ಟಣಶೆಟ್ಟಿ, ಕುಂವೀ, ಗೀತಾ ನಾಗಭೂಷಣ ಎಲ್ಲ ದಕ್ಕುವುದಿತ್ತೆ?

ದಕ್ಷಿಣಕನ್ನಡದಲ್ಲೇ ಯಕ್ಷಗಾನದ ಪಾತ್ರಗಳು ಆಡುವ ಕನ್ನಡವೇ ಬೇರೆ. ಈಚೆಗೆ ಏಡ್ಸ್ ಬಗ್ಗೆ ಪ್ರಸಂಗ ಬಂದಾಗ ಯಕ್ಷಗಾನದ ಭಾಷೆಯನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಸಣ್ಣ ಗದ್ದಲವೆದ್ದಿತು. ಹಾಗೆಯೇ ನಾವು ಸಿನಿಮಾಗಳಲ್ಲಿ ಕೇಳುವ ಮಂಗಳೂರು ಕನ್ನಡ ಎನ್ನುವುದೊಂದು ವಾಸ್ತವವಾಗಿ ಅಸ್ತಿತ್ವದಲ್ಲೇ ಇಲ್ಲ. ತುಳು ಅಥವಾ ಕೊಂಕಣಿ ಲಯದಲ್ಲಿಯೇ ಕನ್ನಡ ಮಾತನಾಡುವಾಗ ಆಗುವ ಆಭಾಸವೇ ಮಂಗಳೂರು ಕನ್ನಡ ಎಂದು ಸಾರ್ವತ್ರಿಕವಾಗಿ ಸಿನಿಮಾಗಳಲ್ಲಿ ಬಳಸಲ್ಪಟ್ಟಿದೆ ಅಷ್ಟೇ. ಯಾವ ಉಡುಪಿ ಅಡುಗೆ ಭಟ್ಟರೂ ‘ಪ್ರೀತಿ ವಾತ್ಸಲ್ಯ’ ಸಿನಿಮಾದ ದಿನೇಶ್ ಬಳಸುವ ಲಯದಲ್ಲಿ "ನಾವು ಗಟ್ಟದ ತಗ್ಗಿನವರು, ಗೊತ್ತಾಯಿತಲ್ಲ!" ಬಳಸುವುದಿಲ್ಲ. ಅಥವಾ ಲವ್ ಮಾಡಿ ನೋಡು ಸಿನಿಮಾದ ಕಾಶೀನಾಥರಂತೆ "ನಾನು ಮಂಗಳೂರು ಮಂಜುನಾಥ , ಗೊತ್ತುಂಟಲ್ಲ" ಎನ್ನುವುದಿಲ್ಲ. ಆದರೆ ಸಿನಿಮಾದ ಸೃಷ್ಟಿಯಾದ ಈ ಮಂಗಳೂರು ಕನ್ನಡವನ್ನು ನಾವು ಮಂಗಳೂರಿನವರೇ ತಮಾಷೆಗೆ ಬಳಸಿ ಖುಶಿ ಪಡುತ್ತೇವೆ ಎನ್ನುವುದು ಬೇರೆ ವಿಷಯ!

ಪಿ ಲಂಕೇಶರ ಒಂದು ಪುಟ್ಟ ಕತೆಯಿದೆ, ‘ಡಿಸೋಜಾನ ‘ಊವಿನ’ ವೃತ್ತಿ’ ಎಂದು ಅದರ ಹೆಸರು. ಆರೆಸ್ಸೆಸ್ಸಿನ ಮುದುಕ ಶೇಷಗಿರಿಯವರು ಹೂವು ಮಾರಲು ಹೊರಟ ಡಿಸೋಜಾಗೆ ‘ನಿನ್ನ ಇಂಗ್ಲೀಷೆಲ್ಲ ತಲೆಹರಟೆ, ವೃತ್ತಿಗೆ ತಕ್ಕಂತೆ ಭಾಷೆ ಇರಬೇಕು ಕಣಯ್ಯ’ ಎಂದು ನೀಡುವ ಉಪದೇಶದ ಕತೆಯಿದು. ನಮ್ಮ ಸಾಮಾನ್ಯ ಜನ ಭಾಷೆಯನ್ನು ಉಪಯೋಗಿಸುವುದು ಯಾರನ್ನೂ ಮೆಚ್ಚಿಸುವುದಕ್ಕಲ್ಲ. ಅದು ಅವನಿಗೆ ಉಸಿರಾಡಿದಂತೆ, ಬದುಕುವ ಅನಿವಾರ್ಯ ಅಗತ್ಯವಾಗಿ ಬೇಕು ಅಷ್ಟೇ. ತಾನು ಹೇಳಬೇಕೆಂದಿರುವುದು ಎದುರಿನ ವ್ಯಕ್ತಿಗೆ ತಲುಪುವುದು ಮುಖ್ಯವೇ ಹೊರತು ಅದಕ್ಕೆ ತಾನು ಬಳಸುವ ಭಾಷೆ ಕನ್ನಡವೇ, ತಮಿಳೇ, ಇಂಗ್ಲೀಷೇ ಎನ್ನುವುದು ಮುಖ್ಯವಾಗುವುದೇ ಇಲ್ಲ. ಇವೆಲ್ಲದರ ಬೆರಕೆ ಕೂಡಾ ಅವನಿಗೆ ನಿಷಿದ್ಧವಲ್ಲ. ಹೀಗೆಯೇ ಸಾಮಾನ್ಯರ ನಡುವೆ ನಮ್ಮ ಭಾಷೆ ಮುಕ್ತವಾಗಿ ‘ಕೊಟ್ಟು-ತಗೊಂಡು’ ಶ್ರೀಮಂತವಾಗುತ್ತ ಬಂದಿದ್ದು ಎನ್ನುವುದನ್ನು ಮರೆಯಬಾರದು. ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿಗೆ ಬಹಳ ಮುಕ್ತವಾಗಿ, ಎಲ್ಲಾ ಭಾಷೆಯ ಶಬ್ದಗಳನ್ನು ಸೇರಿಸಿಕೊಳ್ಳುತ್ತಿದ್ದಾರಂತೆ ಎಂಬ ಬಗ್ಗೆ ಆಶ್ಚರ್ಯಪಡುವುದಕ್ಕೇನೂ ಕಾರಣವಿಲ್ಲ. ಈ ಕೆಲಸವನ್ನು ಶತಶತಮಾನಗಳಿಂದ ನಮ್ಮ ಸಂತೆಮಾರ್ಕೆಟ್ಟು, ಹಿತ್ತಲು, ‘ಕಟ್ಟೆಪಟ್ಟಾಂಗ’ದ ಅರಳಿಮರದ ಕಟ್ಟೆ, ಕ್ರಿಕೆಟ್, ಗೋಲಿ ಆಡಿದ ಗದ್ದೆಗಳು ಮಾಡುತ್ತಲೇ ಬಂದಿವೆ. ಆ ಶಬ್ದಗಳೆಲ್ಲ ಇವತ್ತು ಕನ್ನಡದೊಳಗೆ ಹೇಗೆ ಸೇರಿಕೊಂಡು ಬಿಟ್ಟಿವೆ ಎಂದರೆ ಇನ್ನು ಅವುಗಳನ್ನು ಗುರುತಿಸಿ ಬೇರ್ಪಡಿಸುವುದೇ ಆಗದ ಮಾತು. ನಾವು ಆಡುವ ಗೋಲಿ ಆಟವೊಂದಕ್ಕೆ ‘ಬೆಂದ’ ಎನ್ನುತ್ತಿದ್ದೆವು. ಅದರಲ್ಲಿ ಸಮಾನ ಅಂತರದಿಂದ ಆದರೆ ಬೇರೆಯೇ ಕಡೆಯಿಂದ ಹೊಡೆಯುವ ಮುನ್ನ ಕೋನ ಬದಲಿಸಿಕೊಳ್ಳುವುದಕ್ಕೆ ಕೂಚ್ ಮತ್ತು ಸರ್ಫೀಟ್ ಎನ್ನುತ್ತಿದ್ದೆವು. ಎದುರಿನ ಪಕ್ಷದವರು ಮೊದಲೇ "ಕೂಚ್ ನೈ ಸರ್ಫೀಟ್ ನೈ" ಎಂದು ಡಿಕ್ಲೇರ್ ಮಾಡಿಬಿಟ್ಟರೆ ಇಂಥ ಅನುಕೂಲಕ್ಕೆ ನಿಷೇಧ ಬೀಳುತ್ತಿತ್ತು! ಸಿಮೆಂಟಿನ ಗೋಲಿಗೆ ಮಾರ್ಗೋಲಿ ಎನ್ನುತ್ತಿದ್ದೆವು. ಮಣ್ಣಿನಲ್ಲಿ ಒಂದು ಚೌಕ ಬರೆದು ಅದರ ನಾಲ್ಕೂ ಗೆರೆಗಳ ಮೇಲಿರಿಸಿದ ಗೋಲಿಗೆ ಹೊಡೆದು ಅಲ್ಲಿಂದ ಅದನ್ನು ಎಬ್ಬಿಸುವ ಆಟ ಅದು, ಬೆಂದ. ಅಕಸ್ಮಾತ್ ನಮ್ಮ ಗೋಲಿ ಆ ಚೌಕದೊಳಗೆ ಕೂತರೆ ಅದೇ ‘ಬೆಂದ’! ಏನರ್ಥ ಆ ಶಬ್ದಕ್ಕೆ?! ನಮ್ಮ ಕರ್ನಾಟಕದ ಊರುಗಳ, ಆ ಊರಿನಲ್ಲೇ ಮಾರಿಗೊಂದರಂತೆ ಇರುವ ಬಸ್ ಸ್ಟಾಪುಗಳ ಹೆಸರುಗಳನ್ನು ಗಮನಿಸಿದರೇ ಸಾಕು ಎಂಥೆಂಥ ಕತೆಗಳು ಕೇಳಿಸುತ್ತವೆ!

ಎರಡು ವರ್ಷಗಳ ಹಿಂದೆ ಟಿ ಕೆ ದಯಾನಂದ ಅವರ ಕಥಾಸಂಕಲನ ‘ರೆಕ್ಕೆಹಾವು’ ಬಂತು. ಮತ್ತೆ ಇಲ್ಲಿ ನಮಗೆ ಸಿಗುವ ಜಗತ್ತು ಕೂಡ ‘ರಸ್ತೆ ನಕ್ಷತ್ರ’ಗಳದ್ದೇ. ಅಲ್ಲಿ ಬರುವ ಮೋಟುಬೀಡಿ ತೋಪಮ್ಮ, ಡೈನೋಸಾರ್ ತಾತ ಎಂದು ಕರೆಯಲ್ಪಡುವ ಮಚ್ಚನುಮ, ಟಕಾಟಿಕಿ ಶಂಕ್ರ, ಗಂಟೇಸಾಬರು, ಕುಟ್ರಪ್ಪ, ಪಾಪಾತ್ತಿ, ಪುರ್ರ, ಬುಲೆಟ್‍ಮಾಮ, ವಾಚ್‌ಮನ್ ಪಂಗಾಳಿ, ಡ್ರೈವರ್ ಟೋಬಿ, ಬೇಬಿಸಾಬರು, ಸೆಂಟ್ ಹನ್ಮಂತ, ಉಂತೂರವ್ವ ಒಬ್ಬೊಬ್ಬರೂ ಕಥಾಸರಿತ್ಸಾಗರರೇ! ನಮ್ಮಲ್ಲಿ ಶ್ರೀಕೃಷ್ಣ ಆಲನಹಳ್ಳಿ ಹೀಗೆ ಮಾತಿಗೆ ತೊಡಗಿದರೆ ಪುಂಖಾನುಪುಂಖ ಕತೆಗಳನ್ನು ಹೇಳಬಲ್ಲವರಾಗಿದ್ದರಂತೆ. ಹಾಗೆಂದೇ ಲಂಕೇಶರಂಥ ಸಂಪಾದಕರು ಆಲನಹಳ್ಳಿಗೆ ಬರೆಯಲಿರುವ ಕಾದಂಬರಿಗೆ ಸಂಭಾವನೆ ಕೊಡುತ್ತಿದ್ದರಂತೆ! ಹೀಗೆ ಅಡ್ವಾನ್ಸ್ ತೆಗೆದುಕೊಂಡು ಬರೆದ ಇನ್ನೊಬ್ಬ ಕನ್ನಡ ಕತೆ-ಕಾದಂಬರಿಕಾರ ಇರಲಿಕ್ಕಿಲ್ಲ. ಸ್ವತಃ ಲಂಕೇಶ್‌ಗೆ ಆ ಶಕ್ತಿ ಇತ್ತು. ಅವರು ಬರೆದ ಕತೆಗಳನ್ನು ಗಮನಿಸಿದರೆ ಅವರು ಕತೆ ಕಟ್ಟುತ್ತಿದ್ದಾರೆಂಬುದು ಗೊತ್ತೇ ಆಗದ ಹಾಗೆ ಕತೆಯೊಂದನ್ನು ಹೇಳಿ ಮುಗಿಸುವ ಶಕ್ತಿ ಹೊಂದಿದ್ದರು ಎನ್ನುವುದು ಅರಿವಾಗುತ್ತದೆ. ಅವರು ಎಲ್ಲಿಂದಲೋ ಬಂದವರು ಸಿನಿಮಾಕ್ಕೆ ಬರೆದ ಹಾಡುಗಳು ಈಗಲೂ ಅಲ್ಲಲ್ಲಿ ಭಾವಗೀತೆಗಳಂತೆ ಹಾಡಿಗೆ ದಕ್ಕುತ್ತಿವೆ. ಅವು ಜಾನಪದ ಹಾಡುಗಳೋ ಎಂಬಂತೆ ಹಾಡಲ್ಪಡುತ್ತವೆ! ಉಳಿದಂತೆ ತೇಜಸ್ವಿ, ದೇವನೂರ ಮಹದೇವ, ಈಚಿನವರಲ್ಲಿ ಅಬ್ದುಲ್ ರಶೀದ್. ತಡವಾಗಿ (ಕತೆ) ಬರೆಯತೊಡಗಿದ ಶ್ರೀನಿವಾಸ ವೈದ್ಯರು. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿದು ಬರುವ ಸಂಗತಿ ಎಂದರೆ ಇವರೆಲ್ಲರೂ ಸಾಮಾನ್ಯ ಜನರೊಂದಿಗಿನ ತಮ್ಮ ಸಹಜ ಸಂಪರ್ಕವನ್ನು ಕಡಿದುಕೊಳ್ಳದೆ, ಅದನ್ನು ಮುಖ್ಯ ಎಂದು ಅರಿತುಕೊಂಡು, ಉಳಿಸಿಕೊಂಡು ಬಂದವರು ಎನ್ನುವುದು. ಹಾಗಾಗಿಯೇ ಇವರ ಭಾಷೆಯಲ್ಲಿ ಆ ತಾಜಾತನ, ಹೊಸತನ ಎಲ್ಲ ಇವೆ. ಆದರೆ ಇದೆಲ್ಲ ಗತಕಾಲಕ್ಕೆ ಸೇರಿಹೋದಂತಿರುವುದು ಸುಳ್ಳಲ್ಲ.

ಇವತ್ತು ಇದಕ್ಕೆ ನಮ್ಮದೇ ಉದಾಹರಣೆ ಕೊಡುವುದಾದರೆ ಅತ್ಯಂತ ಸೂಕ್ತವಾದದ್ದು ಯೋಗರಾಜ್ ಭಟ್ ಅವರ ಸಿನಿಮಾ ಹಾಡುಗಳು! ಯೋಗರಾಜ್ ಭಟ್ಟರ ಹಾಡುಗಳಾದರೂ ತಟ್ಟನೇ ಮಾಸ್ ಅಪೀಲ್ ಪಡೆದುಕೊಂಡು ಜನಪ್ರಿಯವಾಗಲು ಅವು ಜನಸಾಮಾನ್ಯರು ದೈನಂದಿನ ವ್ಯವಹಾರದಲ್ಲಿ ಬಳಸುವ ಭಾಷೆಯಲ್ಲಿರುವುದೂ ಒಂದು ಕಾರಣ. ಇವರ ಪ್ರತಿಭೆಯ ಆಳ ತಿಳಿಯಲು ‘ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ’ ಹಾಡನ್ನು ನೆನಪಿಸಿಕೊಂಡರೆ ಸಾಕು. ಈ ಹಾಡನ್ನು ಕೇಳುತ್ತ ಕಣ್ಣೀರಿಡದವರು ಕಡಿಮೆ. ಇದರೊಂದಿಗೆ ಯೋಗರಾಜ್ ಭಟ್ಟರು ಬಳಸುವ ವಿಟ್ ಮತ್ತು ಪನ್ ಸೇರಿದ್ದೇ ‘ಭಯಂಕರ’ ಹಿಟ್ ಆಗತೊಡಗಿದ ಅವರ ಹಾಡುಗಳ ಎದುರು ಜಯಂತ್ ಕಾಯ್ಕಿಣಿಯವರ ಮಾಧುರ್ಯ ಕೂಡ ದೃಢವಾಗಿ ನಿಂತಿದ್ದನ್ನು ಸೂಕ್ಷ್ಮವಾಗಿಯೇ ಗಮನಿಸಬೇಕು. ಜಯಂತರ ಭಾಷೆಯ ನಿಜವಾದ ಉಸಿರು ಇರುವುದು ಅವರ ಸಂವೇದನೆಗಳ ಜೀವಂತಿಕೆ ಮತ್ತು ಪ್ರಾಮಾಣಿಕತೆಯಲ್ಲಿಯೇ. ಅರವತ್ತರ ಚಿರಯುವಕ ಜಯಂತ್ ಬರೆವ ಯುಗಳ ಗೀತೆಗಳಲ್ಲಿ ಐವತ್ತರ ಸನಿಹವಿರುವ ನನ್ನಂಥವರು ನಮ್ಮನಮ್ಮ ಮೊದಲ ಪ್ರೇಮಗೀತೆಗಳ ಹಿಂದಿದ್ದ ಸಂವೇದನೆಯನ್ನು ಗುರುತಿಸಿಕೊಂಡರೆ, ಈಗಿನ ಕಾಲೇಜು ಯುವಕ ಯುವತಿಯರು ಸರಿಯಾದ ಶಬ್ದ ಕೈಗೆ ಹತ್ತದೇ ತಮ್ಮ ಮನಸ್ಸು ಹೃದಯಗಳ ತುಂಬ ಸಿಕ್ಕಿ ಹಾಕಿಕೊಂಡಂತೆ ಹಿಂಸಿಸುತ್ತಿದ್ದ ಭಾವ ಇದೇ ಅಲ್ಲವೆ ಎಂದು ದಂಗಾಗುತ್ತಾರೆ! ಇಲ್ಲಿಯೇ ನಮಗೆ ಭಾಷೆಯ ಸಹಜ ಗುಣ ಮತ್ತು ಅದನ್ನು ಬಳಸುವವನ ಸಹಜ ಗುಣ ಎರಡೂ ಎಷ್ಟು ಮುಖ್ಯ ಎನ್ನುವುದರ ಹೊಳಹು ಸಿಗಬಹುದಾದ್ದು.

ಕನ್ನಡದ ಪರಂಪರೆ ಹಾಗೂ ಕನ್ನಡಿಗರ ಸಹಿಷ್ಣುತೆ ಮುಂತಾದ ಸದ್ಗುಣಗಳನ್ನು ಹೇಳಲು ಉಪಯೋಗಿಸುವ ‘ಕನ್ನಡದ ಮನ್ಸಸ್ಸು’ ಎನ್ನುವ ನುಡಿಗಟ್ಟಿನ ಬಗ್ಗೆ ಮಾತನಾಡುತ್ತ ನಾಡಿನ ಪ್ರಮುಖ ಚಿಂತಕ ಜಿ ರಾಜಶೇಖರ್ ಈ ಕನ್ನಡದ ಮನಸ್ಸು ಬೆಂಗಾಡಾಗಿ ಬದಲುತ್ತಿರುವುದರ ಬಗ್ಗೆ ಅತೀವ ಖೇದ ವ್ಯಕ್ತಪಡಿಸುತ್ತಾರೆ. ನಾವು ಮತ್ತು ‘ಅನ್ಯರು’ ಎಂದು ಗುರುತಿಸಲು ಬಳಸಲ್ಪಡುತ್ತಿರುವ ಧರ್ಮ, ಜಾತಿ, ರಾಜ್ಯ, ಭಾಷೆ ಮತ್ತು ಮನೋಧರ್ಮವನ್ನೇ ಅವರು ಪ್ರಶ್ನಿಸುತ್ತಾರೆ. (ಜಿ ರಾಜಶೇಖರ್: ಲೇಖಕನಾಗಿ ನನ್ನ ತಲ್ಲಣಗಳು: ಸಂ: ಶೂದ್ರ ಶ್ರೀನಿವಾಸ್). ನಮ್ಮ ಗಡಿನಾಡು ಪ್ರದೇಶದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಸಮಸ್ಯೆಯಾಗಿದೆ. ಹೊರರಾಜ್ಯಗಳಲ್ಲಿರುವ ಕನ್ನಡಿಗರಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವುದಕ್ಕೆ ಇರುವ ಅವಕಾಶಗಳನ್ನು ಆಗಾಗ ಮೊಟಕುಗೊಳಿಸಲಾಗುತ್ತಿದೆ. ನಮ್ಮ ರಾಜ್ಯದೊಳಗೇ ಸರಕಾರೀ ಶಾಲೆಗಳು, ಎಲ್ಲಿ ಕನ್ನಡ ಮಾಧ್ಯಮವೇ ಇವತ್ತಿಗೂ ಉಳಿದಿದೆಯೊ, ಅವು ಒಂದೊಂದಾಗಿ ಮುಚ್ಚಲ್ಪಡುತ್ತಿವೆ. ನಮ್ಮ ರಾಜ್ಯದ ಪ್ರತಿಭಾನ್ವಿತರು ವಿದೇಶಿ ನೌಕರಿಯತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಅಂಥವರು ಹೆಚ್ಚು ಹೆಚ್ಚಾಗಿ ಅಲ್ಲಿಯೇ ನೆಲೆಯಾಗುತ್ತಾರೆ. ನಮ್ಮ ರಾಜ್ಯದಲ್ಲಿ ಹೊರರಾಜ್ಯದ ಮಂದಿ ಹೆಚ್ಚುತ್ತಿದ್ದಾರೆ. ಇವರು ಕನ್ನಡ ಕಲಿಯುವ ಅನಿವಾರ್ಯ ಇಲ್ಲದಿರುವುದರಿಂದ ಕನ್ನಡದ ಮಂದಿಗಿಂತ ಇವರೇ ಹೆಚ್ಚುತ್ತಿದ್ದಾರೆ. ಕನ್ನಡ ಅಳಿಯುತ್ತಿರುವ ಭಾಷೆ ಎನ್ನುವ ಆತಂಕ ಬೇರೆ ಇದೆ. ಇದಕ್ಕೆ ಇಲ್ಲಿ ಹೇಳಿರುವ ‘ಪರಭಾಷಾ ಆಕ್ರಮಣ’ದ ಕಾರಣಗಳಲ್ಲದೆ ನಮ್ಮಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಾ ಹೋಗುತ್ತಿರುವುದು ಮತ್ತು ಸ್ವತಃ ನಾವು ಬಳಸುತ್ತಿರುವ ಕನ್ನಡ ಕೂಡ ಶುದ್ಧವಾಗಿಲ್ಲದೇ ಇರುವುದು ಸಹ ಕಾರಣ ಎಂದು ಕೆ ವಿ ನಾರಾಯಣ ಅವರು ಗುರುತಿಸುತ್ತಾರೆ. ಉಳಿದವರ ಮಾತಂತಿರಲಿ, ನಮ್ಮ ಅನೇಕ ಉದಯೋನ್ಮುಖ ಸಾಹಿತಿಗಳ ಬರವಣಿಗೆಯೇ ತಪ್ಪುಗಳ ತಿಪ್ಪೆಯಂತಿರುತ್ತದೆ ಎನ್ನುವುದು ಈಚೆಗೆ ನನ್ನ ಗಮನಕ್ಕೆ ಬಂದು ಸಂಪಾದಕರೊಬ್ಬರ ಬಳಿ ಇಂಥವರ ಬರಹವನ್ನೂ ಪ್ರಕಟಿಸುತ್ತೀರಲ್ಲ, ನೀವು ತಪ್ಪಾಗಿ ಬರೆಯುವವರಿಗೆ ಪ್ರೋತ್ಸಾಹ ನೀಡಿದಂತಾಗದೆ, ಸಾಹಿತಿ ಎನಿಸಿಕೊಳ್ಳಲು ಬಯಸುವವರೇ ತಪ್ಪು ತಪ್ಪು ಕನ್ನಡ ಬರೆಯುವುದಾದರೆ ಕನ್ನಡ ಉಳಿಸಿ ಎಂದು ಇನ್ಯಾರಲ್ಲಿ ಮೊರೆಯಿಡುತ್ತೀರಿ ಎಂದು ಕೇಳಿದೆ. ನಮಗೆ ಬರುವ ಲೇಖನಗಳಲ್ಲಿ ನೂರಕ್ಕೆ ತೊಂಬತ್ತೈದರಷ್ಟು ಹೀಗೇ ಇರುತ್ತವೆ, ಅದರಲ್ಲಿ ಹೊಸಬರು ಹಳಬರು ಅಂತೇನಿಲ್ಲ, ತುಂಬ ತಪ್ಪುಗಳಿವೆಯಲ್ಲ ಸರ್ ಎಂದರೆ ನೀವೇ ಸ್ವಲ್ಪ ಸರಿಮಾಡ್ಕೊಳ್ಳಿ ಎನ್ನುವವರೇ ಎಲ್ಲರೂ. ಏನು ಮಾಡ್ತೀರಿ ಎಂದು ನನ್ನನ್ನೇ ಕೇಳಿದರು.

ಈಚೆಗೆ ಓರಿಯೆಂಟ್ ಬ್ಲ್ಯಾಕ್‌ಸ್ವಾನ್ ಸಂಸ್ಥೆಯು ಒಂದು ಪುಸ್ತಕ ಪ್ರಕಟಿಸಿತು. ಅದರ ಹೆಸರು Impure Languages. ಭಾಷೆಯ ಬದಲಾವಣೆಯ ಪ್ರಕ್ರಿಯೆಯ ಕುರಿತಾಗಿ ಒಟ್ಟು ಹದಿನಾಲ್ಕು ಮಂದಿ ವಿದ್ವಾಂಸರು, ಚಿಂತಕರು ಸೇರಿ ಬರೆದ ಪ್ರಬಂಧಗಳಿರುವ ಈ ಕೃತಿಯನ್ನು ಸಂಪಾದಿಸಿದವರು ದೆಹಲಿ ಯೂನಿವರ್ಸಿಟಿಯ ಭಾಷಾವಿಜ್ಞಾನ ವಿಭಾಗದ ನಿವೃತ್ತ ಪ್ರೊಫೆಸರ್ ರಮಾಕಾಂತ್ ಅಗ್ನಿಹೋಗ್ರಿ, ಯೂನಿವರ್ಸಿಟಿ ಆಫ್ ಹ್ಯಾಂಬರ್ಗ್‌ನ ಪ್ರೊಫೆಸರ್ ಕ್ಲಾಡಿಯಾ ಬೆನಥೀನ್ (ಬರ್ಲಿನ್) ಮತ್ತು ಪ್ರೊಫೆಸರ್ ತಾತಿಯಾನಾ ಒರಾನ್ಸ್‌ಕಯಾ (ರಷ್ಯಾ). ಈ ಕೃತಿಯಲ್ಲಿ ಹಿಂದಿ-ಇಂಗ್ಲೀಷ್ ಹೈಬ್ರಿಡಿಟಿ ಕುರಿತೇ ಮೂರು ಪ್ರಬಂಧಗಳಿವೆ. ಇದು ಸರಿಸುಮಾರು ನಮ್ಮ ಸಲ್ಮಾನ್ ರಶ್ದಿ ತನ್ನ ಮಿಡ್ ನೈಟ್ ಚಿಲ್ಡ್ರನ್ ಕಾದಂಬರಿ ಬರೆವ ಹೊತ್ತಿಗೆ ಬಳಸತೊಡಗಿದ ‘ಚಟ್ನಿಫಿಕೇಶನ್’ ಕುರಿತಾಗಿಯೇ ಇದೆ.

2005ರ ಹೊತ್ತಿಗೇ ಕೆ ವಿ ನಾರಾಯಣ ಅವರು ತನ್ನ ‘ನಮ್ಮೊಡನೆ ನಮ್ಮ ನುಡಿ’ ಎಂಬ ಕೃತಿಯಲ್ಲಿ ಭಾಷೆಯ ಚಟ್ನಿಫಿಕೇಶನ್ ಕುರಿತು ಆಳವಾದ ಅಧ್ಯಯನ ನಡೆಸಿದ್ದರು. ‘ನಮ್ಮ ಭಾಷೆ ನಿಜವಾಗಿಯೂ ನಮ್ಮದೆ?’ ‘ಭಾಷೆಯಲ್ಲಿ ಬದಲಾವಣೆ’, ‘ಭಾಷಾ ವೈವಿಧ್ಯವನ್ನೇಕೆ ಕಾಯ್ದುಕೊಳ್ಳಬೇಕು’ ಮುಂತಾದ ಪ್ರಬಂಧಗಳಲ್ಲಿ ಅವರು ವಿವರವಾಗಿ ಈ ಕುರಿತು ಚರ್ಚಿಸಿದ್ದಾರೆ. ಕನ್ನಡ ಜಗತ್ತು ಅರ್ಧಶತಮಾನ ಕೃತಿಯಲ್ಲಿಯೂ ಕೂಡ ಭಾಷೆಯ ಪರಿವರ್ತನಾಶೀಲ ಗುಣದ ಬಗ್ಗೆ ವಿವರಿಸಿದ್ದಾರೆ.

"ಹೀಗಲ್ಲದೆ ಭಾಷೆ ನಿರಂತರ ಪರಿವರ್ತನೆಯನ್ನು ಹೊಂದುವುದರಿಂದ ತಟ್ಟನೇ ಅದರಲ್ಲಾಗುವ ಬದಲಾವಣೆಗಳು ಗೋಚರಿಸದಿದ್ದರೂ ಎಷ್ಟೋ ಶತಮಾನಗಳ ನಂತರ ಮೂಲಭಾಷೆಯ ಲಕ್ಷಣಗಳು ಸಂಪೂರ್ಣ ಬೇರೆ ಎಂಬಂತೆ ಆಗಿಬಿಡುತ್ತವೆ. ಇಂತಹ ಪ್ರಸಂಗಗಳನ್ನು ಯಾರೂ ಭಾಷಾನಾಶ ಎನ್ನುವುದಿಲ್ಲ. ಕನ್ನಡವು ಹೀಗೆ ನಿರಂತರವಾಗಿ ಬದಲಾಗುತ್ತಿದೆ. ಆ ಬದಲಾವಣೆಯ ಪರಿಣಾಮವಾಗಿ ಮುಂದೆಯೂ ಕನ್ನಡ ಇದ್ದೇ ಇರುತ್ತದೆ. ಮೊದಲೇ ಹೇಳಿದಂತೆ ಅದು ಗುರುತು ಹಿಡಿಯಲು ಸಾಧ್ಯವಾಗದಷ್ಟು ಬೇರೆಯ ಆಕಾರವನ್ನು ಪಡೆಯಬಹುದು. ಹೀಗೆ ಮೂಲ ಆಕಾರ ಕಳೆದು ಹೋಗುವುದಕ್ಕೆ ಆತಂಕ ವ್ಯಕ್ತಪಡಿಸುವುದು ಅಷ್ಟೇನು ಸರಿಯಾದ ಪ್ರತಿಕ್ರಿಯೆಯಲ್ಲ. ಏಕೆಂದರೆ ಒಂದು ಭಾಷೆ ಹೀಗೆ ಬೇರೆ ಬೇರೆ ಆಕಾರಗಳನ್ನು ಪಡೆಯುವುದು ಅದರ ಜೈವಿಕತೆಯ ಲಕ್ಷಣವಾಗಿದೆ."
(ಕೆ ವಿ ನಾರಾಯಣ: ಕನ್ನಡ ಜಗತ್ತು ಅರ್ಧ ಶತಮಾನ 2007)

ಹೀಗೆ ಒಂದು ಕಡೆ ಕನ್ನಡ ತನ್ನದನ್ನು ಅಷ್ಟಿಷ್ಟು ಕಳೆದುಕೊಳ್ಳುತ್ತ ಇದೆ ಮತ್ತು ಇನ್ನೊಂದೆಡೆ ಅನ್ಯವನ್ನು ತನ್ನದನ್ನಾಗಿಸಿಕೊಂಡು ಬೆಳೆಯುತ್ತಲೂ ಇದೆ. ಇದು ಸಹಜ ಪ್ರಕ್ರಿಯೆಯೇ ಇರಬಹುದು. ಆದರೆ, ಯಾವುದನ್ನು ಕಳೆದುಕೊಳ್ಳಬೇಕು ಮತ್ತು ಯಾವುದನ್ನು ಉಳಿಸಿಕೊಳ್ಳಬೇಕು ಎನ್ನುವ ಬಗ್ಗೆ ಒಂದು ವಿವೇಕ, ವಿವೇಚನೆ ಬೇಕೆನಿಸುತ್ತದೆ. ಇವತ್ತು ಹಳೆಗನ್ನಡ, ನಡುಗನ್ನಡ ಮೂಲೆಗುಂಪಾಗುತ್ತಿದೆ. ಆ ಭಾಷೆಯ ಮಹತ್ವದ ಕೃತಿಗಳು ಆಧುನಿಕ ಕನ್ನಡದಲ್ಲಿ ಮರುಹುಟ್ಟು ಪಡೆಯಲಿಲ್ಲ. ಕನ್ನಡ ಮಾತನಾಡುವ ನಮ್ಮ ಮಕ್ಕಳಿಗೆ ಕೂಡ ಕನ್ನಡದ ಲಿಪಿ ದೂರವಾಗುತ್ತಿದೆ. ಇದು ಬೇಸರದ ಸಂಗತಿ. ಒಂದು ವೈಯಕ್ತಿಕ ಅನುಭವದೊಂದಿಗೆ ಇದನ್ನು ಹೇಳುತ್ತೇನೆ.

ನಿಮಗೆಲ್ಲ ಗೊತ್ತಿರಬಹುದು, ಕೇಂದ್ರ ಸಾಹಿತ್ಯ ಅಕಾಡಮಿ ಕೊಂಕಣಿ ಕೃತಿಗಳನ್ನು ಪರಿಶೀಲಿಸಬೇಕಾದರೆ ಅವು ದೇವನಾಗರಿ ಲಿಪಿಯಲ್ಲೇ ಇರಬೇಕಾದ್ದು ಅನಿವಾರ್ಯ. ಕೆಲವು ವರ್ಷಗಳ ಹಿಂದೆ ಕೊಂಕಣಿಯನ್ನು ಶಾಲೆಗಳಲ್ಲಿ ಕಲಿಸುವುದು ಇತ್ಯಾದಿ ಸುರುವಾದಾಗ ಲಿಪಿ ಯಾವುದಿರಬೇಕು ಎನ್ನುವ ಬಗ್ಗೆ ಸಾರಸ್ವತ ಕೊಂಕಣಿಗರಲ್ಲೂ ಕ್ರಿಶ್ಚಿಯನ್ ಕೊಂಕಣಿಗರಲ್ಲೂ ಮತಭೇದ ಕಂಡುಬಂತು. ಮಂಗಳೂರಿನ ಕ್ರಿಶ್ಚಿಯನ್ ಕೊಂಕಣಿಗರು ಕನ್ನಡ ಲಿಪಿಯಲ್ಲಿ ವಿಪುಲವಾದ ಸಾಹಿತ್ಯ ರಚಿಸಿದ್ದಾರೆ. ಸಾರಸ್ವತ ಕೊಂಕಣಿಗರ ಲಿಖಿತ ಸಾಹಿತ್ಯ ಪ್ರಮಾಣದಲ್ಲಿ ಅಷ್ಟಿಲ್ಲ. ಅಂದರೆ, ಕರ್ನಾಟಕದ ಒಟ್ಟಾರೆ ಕೊಂಕಣಿ ಸಾಹಿತ್ಯ ಇರುವುದು ಕನ್ನಡ ಲಿಪಿಯಲ್ಲಿ. ಕೊಂಕಣಿಗೆ ಇದ್ದುದರಲ್ಲಿ ಮೂಲ ಲಿಪಿ ಎಂದರೆ ದೇವನಾಗರಿಯೇ. ಆದರೆ ಕರ್ನಾಟಕದಲ್ಲಂತೂ ಅದಕ್ಕೆ ಗಿರಾಕಿಗಳು ಇರಲಿಕ್ಕಿಲ್ಲ. ಹಾಗಾಗಿ ಕನ್ನಡ ಲಿಪಿ ಇರಲಿ ಎಂದು ಕೆಲವರು, ಕಲಿಕೆಯ ಹಂತಕ್ಕೆ ಬಂದಿರುವಾಗ ದೇವನಾಗರಿ ಅಳವಡಿಸಿಕೊಳ್ಳುವುದೇ ಸೂಕ್ತ ಎಂದು ಕೆಲವರು ಪಟ್ಟು ಹಿಡಿದರು. ಇದೇ ಸಮಸ್ಯೆ ತುಳುವಿಗೂ ಇದೆ. ತುಳು ಭಾಷೆ ಅಕಾಡೆಮಿಕ್ ಆಗುವಾಗ ಅದಕ್ಕೆ ತನ್ನದೇ ಲಿಪಿ ಇದೆ ಎನ್ನುವವರು ಅದನ್ನೇಕೆ ಬಿಡಬೇಕು ಎನ್ನುವ ಪ್ರಶ್ನೆ ಇಲ್ಲವೆ? ತನ್ನದೇ ಲಿಪಿಯನ್ನು ಬಿಟ್ಟುಕೊಟ್ಟು ಅದೇಕೆ ಕನ್ನಡವನ್ನು ಆತುಕೊಳ್ಳಬೇಕು? ಆದರೆ ಸದ್ಯಕ್ಕೆ ತುಳು ಭಾಷಾ ಸಾಹಿತ್ಯ ಇರುವುದು ಕನ್ನಡದ ಲಿಪಿಯಲ್ಲೇ ಅಲ್ಲವೆ? ಇಲ್ಲಿ ಹುಟ್ಟಿಕೊಳ್ಳುವ ಗೊಂದಲವನ್ನು ಸೂಕ್ಷ್ಮವಾಗಿ ಗಮನಿಸಿ. ಇಂಗ್ಲೀಷ್ ಫಾಂಟ್ ಬಳಸಿ ಕನ್ನಡ ಬರೆಯುವುದನ್ನು ಕಂಡಾಗಲೆಲ್ಲ ಮನಸ್ಸು ತೊಳೆಸುತ್ತದೆ.

ನಾನು ಗೋವಾಕ್ಕೆ ಹೋದಾಗ ಅಲ್ಲಿನ ಜನಸಾಮಾನ್ಯರು ಆಡುವ ಕೊಂಕಣಿ ನನಗೆ, ಕರ್ನಾಟಕದವರಿಗೆ ಅರ್ಥವಾಗುವುದು ಅಷ್ಟಕ್ಕಷ್ಟೆ. ಕೊಚ್ಚಿಯವರು ಆಡುವ ಕೊಂಕಣಿ ನನಗೆ ತುಂಬ ಇಷ್ಟ. ಅವರದ್ದು ಧಾರವಾಡದ ಕನ್ನಡದಂಥ ಕೊಂಕಣಿ. ಕ್ರಿಯಾಪದದ ಸ್ಥಾನ ಸದಾ ಪಲ್ಲಟದ್ದು. ಆದರೆ ಅದೂ ಪೂರ್ತಿಯಾಗಿ ದಕ್ಕುವುದಿಲ್ಲ. ಇನ್ನು ದೇವನಾಗರಿ ಲಿಪಿಯ ಏನನ್ನೂ ನಾನು ಓದಲಾರೆ. ಹೋಗಲಿ ಎಂದರೆ ಈಚೆಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಗೆಳೆಯ ಮೆಲ್ವಿನ್ ರೊಡ್ರಿಗಸ್ ಅವರ ಪುರಸ್ಕೃತ ಕೃತಿಯ (ದ್ವಿಭಾಷಿ) ಕವನಗಳನ್ನು ಓದಲು ಹೋದರೆ, ಕನ್ನಡ ಲಿಪಿಯಲ್ಲಿರುವ ಕೊಂಕಣಿ ಕವಿತೆಯನ್ನಾದರೂ ಓದುವುದು ನನಗೆ ಸಾಧ್ಯವಾಗಲೇ ಇಲ್ಲ. ಮೆಲ್ವಿನ್ ರೊಡ್ರಿಗಸ್ ಅವರೇ ಮುಂದೆ ನಿಂತು ಇಲ್ಲಿನ ‘ಕವಿತಾ ಟ್ರಸ್ಟ್’ ಮೂಲಕ ಬಹುಭಾಷಾ ಕವಿಗೋಷ್ಠಿ, ಕೊಂಕಣಿ ಕವಿಗೋಷ್ಠಿ ಎಲ್ಲ ನಡೆಸುತ್ತಿರುತ್ತಾರೆ. ಇಲ್ಲಿಗೆ ಜಯಂತ್ ಕಾಯ್ಕಿಣಿ, ವಿವೇಕ್ ಶಾನಭಾಗ ಎಲ್ಲ ಬಂದಿದ್ದೂ ಇದೆ. ಆದರೆ ನನಗೆ ಕ್ರಿಶ್ಚಿಯನ್ ಕೊಂಕಣಿ ಆಡಲು ಚೆನ್ನಾಗಿಯೇ ಬರುತ್ತದಾದರೂ ಆ ಕವಿತೆಗಳು ದಕ್ಕಲಿಲ್ಲ. ಅಂದರೆ ಲಿಪಿಯಷ್ಟೇ ವಾಚನ ಕೂಡ ಅಪರಿಚಿತವಾದಂತೆ ಅನಿಸಿತು. ಇವರ ಪತ್ರಿಕೆಗಳ ಗದ್ಯವನ್ನು ಓದುವುದೂ ಕಷ್ಟಸಾಧ್ಯ ಎನಿಸುತ್ತದೆ. ಇದು ಕೊಂಕಣಿಯ ಒಳಗೇನೆ ಆಗುತ್ತಿರುವುದು ಎನ್ನುವುದನ್ನು ಗಮನಿಸಿ.

ಅದು ಹೋಗಲಿ ಎಂದರೆ ಈಚೆಗೆ ಕಾಸರಗೋಡು ಚಿನ್ನಾ ಅವರು ಕನ್ನಡದ ಮಹತ್ವದ ಮುವ್ವತ್ತು ಕತೆಗಳನ್ನು ಕೊಂಕಣಿಗೆ ಅನುವಾದಿಸಿದರು. ಗೋವಾದಿಂದ ಕೊಚ್ಚಿಯ ವರೆಗೆ ಇರುವ ಕೊಂಕಣಿ ಆಡುಮಾತು ಒಂದೇ ಆಗಿ ಉಳಿದಿಲ್ಲ. ಹೀಗಿರುತ್ತ ಕನ್ನಡದ ಕತೆಗಳ ಅನುವಾದದ ಕಷ್ಟಗಳ ಬಗ್ಗೆ ಕೂಡ ಚಿನ್ನಾ ಹೇಳಿಕೊಂಡಿದ್ದರು. ಜಯಂತರ ಕತೆಗಳೂ ಕೊಂಕಣಿಗೆ ಬಂದವು. ಎಲ್ಲ ಕನ್ನಡ ಲಿಪಿಯಲ್ಲೇ. ಕನ್ನಡ ಲಿಪಿ ಓದಬಲ್ಲ ಕೊಂಕಣಿ ಕನ್ನಡಿಗ ಅವುಗಳನ್ನು ಕೊಂಕಣಿಯಲ್ಲಿ ಓದಿಯಾನು ಅನಿಸುತ್ತಾ? ನನಗೇನೋ ಅನುಮಾನವೇ. ಆದರೆ ಜಯಂತ್ ಅವರು ಈ ಬಗ್ಗೆ ಬೇರೆಯೇ ಹೇಳಿದರು. ಕೆಲವೊಂದು ಸಂವೇದನೆಗಳು, ಅವನ್ನು ಕೊಂಕಣಿಯಲ್ಲಿ ಕೇಳುವಾಗಲೇ ತಮಗೆ ನಿಜ ಅನಿಸ್ತು ಎನ್ನುತ್ತಾರೆ ಅವರು. ಈ ಕೊಂಕಣಿ ಕತೆಗಳನ್ನು ದೇವನಾಗರಿ ಬಳಸುವ ಗೋವನ್ನರು ಓದಲಾರರು, ಕೇರಳದ ಕೊಂಕಣಿಗರೂ ಓದಲಾರರು. ಇದನ್ನೇಕೆ ಹೇಳಿದೆನೆಂದರೆ, ಯಾವುದೇ ಭಾಷೆ ಲಿಪಿ ಕಳೆದುಕೊಂಡಿತು ಎಂದರೆ ಅರ್ಧ ಸತ್ತಂತೆಯೇ. ಒಂದು ಭಾಷೆಯ ಆಡುನುಡಿಗಳು, ಪದಸಂಪತ್ತು ಅದಕ್ಕೆ ನೇರವಾಗಿ ಸಂಬಂಧಿಸಿದವರಿಗೇ ಅಪರಿಚಿತವಾಗುತ್ತಿವೆ ಎಂದರೆ ಎಲ್ಲವೂ ಮುಗಿದಂತೆಯೆ.

ಇದೆಲ್ಲವನ್ನೂ ಯಾಕೆ ಹೇಳುತ್ತಿದ್ದೇನೆಂದರೆ, ಕೊಂಕಣಿ ಅಥವಾ ತುಳುವಿಗೆ, ಇಂಥವೇ ಇನ್ನಷ್ಟು ಭಾಷೆಗಳಿಗೆ, ಅವುಗಳ ಆಡುಮಾತು ಮತ್ತು ಲಿಪಿ ಎರಡೂ ಸೇರಿದಂತೆ ಇವತ್ತು ಬಂದಿರುವ ಪರಿಸ್ಥಿತಿಗೆ ಕಾರಣಗಳೇನು ಎಂದು ನಾವು ಯೋಚಿಸಬೇಕಿದೆ. ಸರ್ವೈವಲ್ ಆಫ್ ದ ಫಿಟ್ಟೆಸ್ಟ್ - ಇದ್ದೇ ಇದೆ. ಆದರೆ, ಒಂದು ಭಾಷೆಯ ಕಸುವನ್ನು ನಿರ್ಧರಿಸುವಂಥ, ಬೇರೆ ಬೇರೆ ವಿಧಾನಗಳ ಮೂಲಕ ನಾವು ಉಳಿಸಿಕೊಳ್ಳಬೇಕಾದ ಮತ್ತು ಕಳೆದುಕೊಳ್ಳಬಾರದ ಅಂಶಗಳು ನಮಗೆ ಸ್ಪಷ್ಟವಾಗಿ ಕಾಣುವುದು ಅಗತ್ಯ. ತುಂಬ ಸಮಯದ ಹಿಂದೆ ವಿಜಯರಾಜ್ ಕನ್ನಂತ ಎನ್ನುವ ಒಬ್ಬರು ಗೆಳೆಯರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕುಂದಾಪುರ ಆಸುಪಾಸಿನ ಹೂವು, ಗಿಡ, ಮರ, ಹಳೆಯ ದಿನಬಳಕೆಯ ವಸ್ತುಗಳು, ಚಿಕ್ಕವರಿರುವಾಗ ಕಾಡುಹಾಡಿ ಅಲೆದು ತಿನ್ನುತ್ತಿದ್ದ ಹಣ್ಣುಗಳು, ವೇಷಗಳು, ಆಡುತ್ತಿದ್ದ ಆಟಗಳು, ಕೆಲವೊಂದು ಆಚರಣೆ ಇತ್ಯಾದಿಗಳ ಚಿತ್ರ ಹಾಕಿ ಅವುಗಳಿಗೆ ಸಂಬಂಧಿಸಿದ ನಮ್ಮ ನೆನಪುಗಳನ್ನು ಅರಳಿಸುತ್ತಾ ಹೋದರು. ಸೈಕಲಿನ ರೋಲ್ ಮೇಲೆ ಮಕ್ಕಳಿಗೆಂದೇ ಹಾಕುತ್ತಿದ್ದ ಪುಟ್ಟ ಸೀಟು ಈಗೆಲ್ಲಿ ಕಾಣಸಿಗುತ್ತದೆ? ಆದರೆ ನೆನಪುಗಳಿಗೊಂದು ಜಗತ್ತಿಲ್ಲವೆ? ಆ ಜಗತ್ತಿಗೊಂದು ಜೀವವಿಲ್ಲವೆ? ನಾವು ಸಾವನ್ನು ಗೆಲ್ಲುವುದು ಸಾಧ್ಯವಿದ್ದರೆ ಅದು ನೆನಪುಗಳ ಮೂಲಕ ಮಾತ್ರ. ಬದುಕಿಗೆ ಮರೆವು, ನಿದ್ದೆ ಎಷ್ಟು ಮುಖ್ಯವೋ, ಎಚ್ಚರ ಮತ್ತು ನೆನಪುಗಳನ್ನು ಜೀವಂತವಾಗಿರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ನಿಜವಾಗಿ ಇರುವುದು ಆಯ್ಕೆಯ ಪ್ರಶ್ನೆ. ಕನ್ನಂತರು ಆವತ್ತು ಮಾಡಿದ ಕೆಲಸ ನಿಜಕ್ಕೂ ಅವರೇ ಕಲ್ಪಿಸಿದ್ದಕ್ಕಿಂತಲೂ ದೊಡ್ಡ ವ್ಯಾಪ್ತಿಯದ್ದಾಗಿತ್ತು. ಯಾಕೊ ಎಲ್ಲ ನಡುವಿನಲ್ಲೇ ನಿಂತ ನೆನಪು. ಒಂದು ಭಾಷೆ ಅನಿವಾರ್ಯವಾಗಿ ಇವೆಲ್ಲದರೊಂದಿಗೆ ಸಂಬಂಧದ ಹೆಣಿಗೆ ಹಾಕಿಕೊಂಡೇ ಇರುತ್ತದೆ. ಯಾವ ಒಂದು ಅಂಶವೂ ಒಂದಿಲ್ಲದೇ ಇನ್ನೊಂದು ಉಳಿದು ಬರಲಾರದು. ಯಾವುದೋ ಒಂದನ್ನು ಕಳೆದುಕೊಂಡಾಗ ಅದಕ್ಕೆ ಸಂಬಂಧಿಸಿದ ಎಷ್ಟೋ ಅಗೋಚರ ಸಂಗತಿಗಳನ್ನೂ ಕಳೆದುಕೊಂಡಿರುತ್ತೇವೆ. ಭೌತಿಕವಾಗಿ ಕಳೆದು ಕೊಂಡವುಗಳನ್ನು ಮಾನಸಿಕವಾಗಿ ಜೀವಂತವಾಗಿರಿಸುವುದು ಪ್ರೀತಿ ಮಾತ್ರ. ಅದೊಂದು ಇದ್ದರೆ ನಾವು ಯಾವತ್ತೂ ಯಾವುದನ್ನೂ ಕಳೆದುಕೊಳ್ಳುವುದೇ ಇಲ್ಲ.

(ಈ ಲೇಖನ ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟಿತ)

No comments: