Wednesday, December 28, 2016

ಕೆ ಎಸ್ ನರಸಿಂಹ ಸ್ವಾಮಿಯವರ `ಏನ ಬೇಡಲಿ?'

ಮೈಸೂರ ಮಲ್ಲಿಗೆ ಸಂಕಲನ ಪ್ರೇಮಭಾವದ ಕವಿತೆಗಳಿಗೆ ಹೆಸರಾದದ್ದು. ಅದಕ್ಕೆ ಅಪವಾದವೆಂಬಂತಿರುವ ಈ ಸಂಕಲನದ ಒಂದು ಕವಿತೆ “ಏನ ಬೇಡಲಿ?” ಇದು ತುಂಬ ಸರಳವಾಗಿರುವ, ಕೆ ಎಸ್ ನರಸಿಂಹ ಸ್ವಾಮಿಯವರ ದೇವರು - ಮಾನವ ಸಂಬಂಧದ ಕುರಿತ ನೀತಿ - ನಿಲುವುಗಳನ್ನಷ್ಟೇ ಸ್ಪಷ್ಟಪಡಿಸುವ ಒಂದು ಕವಿತೆ. ಪ್ರೇಮಕವಿ, ದಾಂಪತ್ಯಕವಿ ಎಂದೆಲ್ಲ ಹೊಗಳಿಸಿಕೊಳ್ಳುತ್ತಲೇ ನವ್ಯದ ಪರಾಕಾಷ್ಠೆಯ ದಿನಗಳಲ್ಲಿ ಸಾಕಷ್ಟು ಟೀಕೆ, ಕಟುವಿಮರ್ಶೆಗೂ ತುತ್ತಾದ ಕವಿ ಮುಂದೆ ಕಾಲಧರ್ಮಕ್ಕೂ ವಯೋಧರ್ಮಕ್ಕೂ ಅನುಗುಣವಾಗಿ ಭಾವದೊಂದಿಗೆ ವೈಚಾರಿಕತೆಯನ್ನು ರೂಢಿಸಿಕೊಂಡಿದ್ದನ್ನು ಎಲ್ಲರೂ ಬಲ್ಲರು. ಆದರೆ "ತೆರೆದ ಬಾಗಿಲು" ಸಂಕಲನದಿಂದ ಎಲ್ಲರೂ ಗಮನಿಸಿದ ಈ ಬದಲಾವಣೆಯ ಬೀಜಗಳು ಇಲ್ಲಿಯೇ ಇದ್ದವು ಎನ್ನುವುದನ್ನು ಸೂಚಿಸುವ ಕವಿತೆ ಕೂಡ ಇದೇ ಆಗಿರುವುದು ಇದರ ಒಂದು ವಿಶೇಷ. ಈ ಕವಿತೆಯೊಂದಿಗೆ ನಾವು ಈ ಸಂಕಲನದಲ್ಲಿಯೇ ಗಮನಿಸಬಹುದಾದ ಇನ್ನೊಂದು ಕವಿತೆ "ರಂಗನಾಥನ ಕಂಡು".


"ಏನ ಬೇಡಲಿ?" ಕವಿತೆಯನ್ನು ನೇರವಾಗಿ ಪ್ರವೇಶಿಸಿದರೆ ಆರಂಭದಲ್ಲಿಯೇ ಕವಿ ದೇವರೊಂದಿಗಿನ ತನ್ನ ಸಂಬಂಧವನ್ನು ಮೊದಲೇ ಸ್ಪಷ್ಟಪಡಿಸಿಕೊಳ್ಳುವುದು ಕಾಣುತ್ತದೆ. ತಾನು ನಿನ್ನ ಮಾಯೆಗೆ ಅಂಜುವುದೂ ಇಲ್ಲ, ಹೆದರಿ ನಡುಗುವುದೂ ಇಲ್ಲ ಎನ್ನುತ್ತಲೇ ನಡುಗಿ ಬಾಡೆನು ಎಂದು ಹೇಳಿಬಿಡುತ್ತಾನೆ. ಇದು ತನ್ನ ಬದುಕು ತನ್ನದು ಎಂಬ ಸ್ಪಷ್ಟ ಪ್ರಜ್ಞೆ. ಐಹಿಕದ ಬದುಕಿನಲ್ಲಿ ದೇವ-ದೈವದ ಮೂಗುತೂರಿಸುವಿಕೆಯ ಬಗ್ಗೆ ಕವಿಗೆ ಅಸಮಾಧಾನವಿದೆ. ಈ ಅಸಮಾಧಾನ ಏಕಪ್ರಕಾರವಾಗಿ ಕವಿಯಲ್ಲಿ ಮುಂದುವರಿಯುತ್ತಲೇ ಬಂದಿರುವುದನ್ನು ನೋಡಿದರೆ ಇದು ಬಹಳ ಗಟ್ಟಿಯಾದ ಚಿಂತನ ಮಂಥನದಿಂದ ಪ್ರಾಪ್ತವಾಗಿರುವಂಥ ಒಂದು ಜೀವನದೃಷ್ಟಿ ಮತ್ತು ಇದು ದೃಢವಾದದ್ದು ಎಂಬುದು ವೇದ್ಯವಾಗುತ್ತದೆ. ಇಷ್ಟು ಮಾತ್ರವಲ್ಲ, ಕೊನೆ ತನಕ ಕೆ ಎಸ್ ನರಸಿಂಹಸ್ವಾಮಿಯವರು ತಮ್ಮ ಕವಿತೆ, ಮಾತು ಮತ್ತು ನಡವಳಿಕೆಯಲ್ಲಿ ಯಾವುದೇ ದ್ವಂದ್ವವನ್ನು, ಗೊಂದಲವನ್ನು ವ್ಯಕ್ತಪಡಿಸದೇ ಇರುವುದು ಕೂಡ ಗಮನಾರ್ಹವಾದ ಒಂದು ಸಂಗತಿಯಾಗಿದೆ. 1942ರಲ್ಲಿ ಬಂದ "ಮೈಸೂರ ಮಲ್ಲಿಗೆ", 1958 ರಲ್ಲಿ ಬಂದ "ಶಿಲಾಲತೆ", 1976 ರಲ್ಲಿ ಬಂದ "ತೆರೆದ ಬಾಗಿಲು", 2001ರಲ್ಲಿ ಬಂದ "ಕೈಮರದ ನೆಳಲಲ್ಲಿ" ಎಲ್ಲ ಕಡೆ ನಮಗೆ ಕಾಣಸಿಗುವ ಜೀವನದೃಷ್ಟಿ ಇದುವೇ ಆಗಿರುವುದು ಇಲ್ಲಿ ಉಲ್ಲೇಖನೀಯ.


ನೀನು ಕಡೆದಂತಲ್ಲ ನಾನಿರುವುದು:
ನೀನು ನುಡಿದಂತಲ್ಲ ನಾನಿರುವುದು:
ಬಿಡುವಿಲ್ಲದಂತೆ ದುಡಿಯುವೆನು:
ಆಗಾಗ ಬಂದು ನೋಡುವೆನು...."
(ಸಂಭವಾಮಿ ಯುಗೇ ಯುಗೇ, ಶಿಲಾಲತೆ)

ದೇವನಿಗೆ ಹೆದರಿ ಬಾಡುವುದಿಲ್ಲ ಸರಿ; ಆದರೆ ಅವನ ಇಚ್ಛೆಯೊಂದಿದೆ ಎನ್ನುವುದನ್ನು ಕವಿ ನಿರಾಕರಿಸುತ್ತಿಲ್ಲ. ಮಾತ್ರವಲ್ಲ ತಾನು ಅದಕ್ಕೆ ತಕ್ಕಂತೆ ಆಡುವುದಿಲ್ಲ ಎಂದೂ ಹೇಳುತ್ತಿಲ್ಲ ಕವಿ. ಬಂಡಾಯವೇನಿಲ್ಲ, ಅಥವಾ ದೈವದ, ಅತಿರಿಕ್ತ ಶಕ್ತಿಯೊಂದರ ಸಾರಾಸಗಟು ನಿರಾಕರಣೆಯೇನಿಲ್ಲ. ಆದರೆ ದೈವದ ಮಾಯೆಯ ಕುರಿತಾದ ಅಂಜಿಕೆ, ಭಯ, ನಡುಕ ಮುಂತಾದ ಋಣಾತ್ಮಕ ಧೋರಣೆಗಳು ತನ್ನಲ್ಲಿ ಇಲ್ಲ ಎನ್ನುವುದಷ್ಟೇ ಇಲ್ಲಿನ ಮರ್ಮ. 

"ಯಾವುದೋ ಶಕ್ತಿ ನಮ್ಮನು ಆಳುತಿದೆ| ಆಗುವುದು ಆಗುತಿದೆ,
ಹೋಗುವುದು ಹೋಗುತಿದೆ| ನಂಬಿಕೆಯ ಮೇಲೆ ನಿಂತಿದೆ ಜಗತ್ತು"
(ಕೈಮರದ ನೆಳಲಲ್ಲಿ)

ಮುಂದೆ ಸ್ವಲ್ಪ ಗಹನವಾದ ಪ್ರಶ್ನೆಯಿದೆ, ಅದು ಮುಕ್ತಿಯದ್ದು. ಮುಕ್ತಿಯ ಪರಿಕಲ್ಪನೆಯ ಬಗ್ಗೆ ಕವಿಗಿರುವ ಗ್ರಹಿಕೆ “ತನ್ನನ್ನು ತಾನು ತಿಳಿದುಕೊಳ್ಳುವುದು”. ಹಾಗಾಗಿಯೇ ಕವಿ ಅದನ್ನು ಹೊರತಾದ ಪರಿಕಲ್ಪನೆಯನ್ನು ಪ್ರಶ್ನಿಸುತ್ತಿದ್ದಾನೆ. ಇಲ್ಲಿಯೂ ಕವಿಯ ನಿರಾಕರಣೆಯಿರುವುದು ಸಾವಿನ ಭಯದ್ದು, ಹೇಡಿತನದ್ದು ಹೊರತು ಮುಕ್ತಿಯದ್ದಲ್ಲ. ದೇವನ ಉದ್ದೇಶ ಕೂಡ ಮಂದಿ ಮುಕ್ತಿಯ ಆಸೆಯಿಂದ ಸದಾ ಕಾಲ ಅಂಜಿ ತನ್ನಡಿಯಲ್ಲಿ ಅಡಗಿಕೊಂಡಿರಬೇಕು ಎನ್ನುವುದಲ್ಲ ಎಂಬುದು ಕವಿಗೆ ಸ್ಪಷ್ಟವಿದೆ. ತನ್ನನ್ನು ತಾನು ಅರಿತುಕೊಳ್ಳುವ ಹಾದಿಯಲ್ಲಿ ಸಾಗುವುದೇ ಮುಕ್ತಿಪಥ ಎಂಬುದೂ ಕವಿಗೆ ಸ್ಪಷ್ಟವಿದೆ. ಇಲ್ಲಿ ಇಹವನ್ನು ಪರದೊಂದಿಗೆ ಜೋಡಿಸುವ ಜೀವನದೃಷ್ಟಿಯಲ್ಲ ಇದು ಎನ್ನುವುದನ್ನು ನಾವು ಕಂಡುಕೊಳ್ಳುವುದು ಮುಖ್ಯ. ಕವಿಗೆ ಪರದಲ್ಲಿ ಯಾವ ವಿಶ್ವಾಸವೂ ಇಲ್ಲ, ಅದರ ಬಗ್ಗೆ ಯಾವ ಯೋಚನೆಯೂ ಇಲ್ಲ. ಕವಿಯ ಕಾಳಜಿಯೇನಿದ್ದರೂ ಅದು ಇಹದ್ದು, ಸದ್ಯದ್ದು.

ಈ ಶಕ್ತಿಯೇನಿದೆ, ತನ್ನನ್ನು ತಾನು ಅರಿತುಕೊಳ್ಳುವುದಕ್ಕೆ ಬೇಕಾದ ಶಕ್ತಿ, ಬುದ್ಧಿಶಕ್ತಿ ಎಂದಿಟ್ಟುಕೊಳ್ಳೋಣ, ಅದನ್ನು ನಮಗೆ ಆ ದೇವನು ಇತ್ತಿದ್ದಾನೆ. ಹಾಗೆಯೇ ಅವನು ಬಳ್ಳಿಯನ್ನು ಬೆಳೆಸಿಕೊಳ್ಳಲು ನೀರೂ ಎರೆದಿದ್ದಾನೆ. ಅಂದರೆ ಬಾಡೆನು ಎಂದು ಕವಿ ಮೊದಲಿಗೇ ಹೇಳಿದ್ದು ಈ ಭರವಸೆಯಿಂದಲೇ. ಬೆಳೆಯುವುದಕ್ಕೆ, ಅರಳುವುದಕ್ಕೆ ಅವನು ನೀರೆರೆದಿರುವಾಗ ಬಾಡುವ, ಬಾಡಿಸುವ ಭಯ, ಅಂಜಿಕೆ, ನಡುಕ ತನ್ನಲ್ಲಿ ಇಲ್ಲ. ಆದರೆ ಬಳ್ಳಿಗೆ ಬರಿಯ ನೀರು ಸಾಕೆ?

ಬರಿಯ ನೀರಲ್ಲ, ಬೆಳಕನ್ನೂ ನೀಡುತ್ತಾನೆ ಅವನು. ಗಾಳಿಯನ್ನೂ ಇತ್ತಿದ್ದಾನೆ ಅವನು. ಬೆಳಕು ಇಲ್ಲಿ ಜ್ಞಾನರವಿಯ ರೂಪದಲ್ಲಿ ಬಂದಿದೆ. ಈ ಬೆಳಕಿನಿಂದ ನಾವು ನಮ್ಮದೇ ಎದೆಯನ್ನು ನೋಡಿಕೊಳ್ಳಬಹುದಾಗಿದೆ. ಎದೆಯನ್ನು ನೋಡಿಕೊಳ್ಳುವುದು ಎಂದರೆ ನಮ್ಮನ್ನು ನಾವು ಅರಿತುಕೊಳ್ಳುವುದು ಎಂದು ಯಾರಿಗಾದರೂ ತಿಳಿಯುತ್ತದೆ. ಇನ್ನು ಗಾಳಿ ಎನ್ನುವುದು ಅದೇ ಜ್ಞಾನರವಿಯ ರಶ್ಮಿಯಂತೆ, ಗೀತೆ. ಈ ಗೀತೆಯನ್ನು ಕೊಟ್ಟಿರುವುದು ಕೊಳಲೊಳೂದಿಕೊಳ್ಳಲು. ಕೊಳಲಲ್ಲಿ ಊದುವುದು ಗಾಳಿಯನ್ನೇ. ಆದರೆ ಇಲ್ಲಿ ಕೊಳಲು ಯಾವುದು? ಅದು ದೇಹವೆಂಬ ಬಿದಿರು. ಇದರ ರಂಧ್ರಗಳಲ್ಲಿ ಗಾಳಿ ಉಸಿರಾಗಿ ಊದಿಕೊಂಡಾಗಲೇ ಬದುಕಿನ ನಾದ ಹೊರಹೊಮ್ಮುತ್ತದೆ. ಈ ಕೊಳಲಿನ ಪರಿಕಲ್ಪನೆ ಕೆ ಎಸ್ ನರಸಿಂಹ ಸ್ವಾಮಿಯವರ "ಶ್ರೀಕೃಷ್ಣನಂತೊಂದು ಮುಗಿಲು" (ಇರುವಂತಿಗೆ) ಕವಿತೆಯಲ್ಲಿಯೂ ಇದೆ. 

ಗಾಳಿ, ಬೆಳಕು, ನೀರು ಕೊಟ್ಟು ಬಳ್ಳಿಯನ್ನು ಹಬ್ಬಿಸಿರುವಾಗ ಅದು ಮಾಯೆಗೆ, ಸಾವಿಗೆ ಅಂಜಿ ಬಾಡಬೇಕೇಕೆ, ಬೆಳೆಯಬೇಕಲ್ಲವೆ? ಅದಕ್ಕೆಂದೇ ಜಗತ್ತು ಕೊಡಲ್ಪಟ್ಟಿದೆ. ಅಲ್ಲಿಗೆ ಮಣ್ಣು ಕೂಡ ದಕ್ಕಿತು. ಊರಿಕೊಳ್ಳಬಹುದಲ್ಲವೆ? ಇನ್ನೇನಾದರೂ ಬೇಡಿಕೆಯಿದೆಯೇ ಎಂದರೆ ಇಲ್ಲ. ಎಲ್ಲವನ್ನೂ ಕೊಟ್ಟಿದ್ದಾನವನು, ಜಗವನ್ನೇ ಬಿಟ್ಟುಕೊಟ್ಟಿದ್ದಾನೆ. ಕೊಟ್ಟಿದ್ದಲ್ಲ, ಬಿಟ್ಟುಕೊಟ್ಟಿದ್ದು. ಇನ್ನೂ ಅವನನ್ನು ಕಾಡುವುದಕ್ಕೇನಿದೆ? ಅಂದರೆ, ಈ ಜಗತ್ತು ಆ ದೇವನಿಂದ ಅಷ್ಟರಮಟ್ಟಿಗೆ ಸ್ವತಂತ್ರವಾಗಿಯೇ ಇದೆ ಎಂಬುದು ಕವಿಯ ನಂಬಿಕೆಯಾಗಿದೆ. ಜಗವನ್ನು ಅವನು ತನಗೆಂದೇ ಬಿಟ್ಟಿದ್ದಾನೆ, ಕೊಡುವುದನ್ನೆಲ್ಲ ಕೊಟ್ಟು. ಅವನ ಇಚ್ಛೆಗೆ ಅಡ್ಡಿ ಮಾಡದ ಹಾಗೆ, ನಮ್ಮನ್ನು ನಾವು ಅರಿತುಕೊಳ್ಳುತ್ತ ಬದುಕುವುದಷ್ಟೇ ನಮ್ಮ ಕರ್ತವ್ಯ. ಇನ್ನೂ ಇನ್ನೂ ಅವನನ್ನು ಅದು ಕೊಡು, ಇದು ಕೊಡು ಎಂದು ಕಾಡುವುದಕ್ಕೆ ಕವಿ ತಯಾರಿಲ್ಲ. ದೇವನಿಂದ ಜಗತ್ತು ಸ್ವತಂತ್ರವಾಗಿ ಇದೆ, ಇರಬೇಕು ಎಂಬುದು ಅವರ ನಂಬಿಕೆ. ತಾನೂ ದೇವನಿಂದ ಸ್ವತಂತ್ರವಾಗಿಯೇ ಇರುತ್ತೇನೆಂಬುದು ಕವಿಯ ನಿಲುವು.

ನಿನ್ನ ಹಂಗಿಲ್ಲದೆ ನಾ ಬಾಳುವುದ ಕಲಿಸು;
ನೊಂದು ಮಾಗಲಿ ಜೀವ ಎಂದು ಹರಸು;
ನಿನ್ನ ಕುರಿಯದ ನನ್ನ ದಾರಿಗೆಡರನು ನಿಲಿಸು;
ನಡೆದಂತೆ ದಾರಿಯನು ಬಿಚ್ಚಿ ಬೆಳೆಸು.
(ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ, ಶಿಲಾಲತೆ)

ಮೈಸೂರ ಮಲ್ಲಿಗೆ ಸಂಕಲನದಲ್ಲಿ ದೇವರು, ದೈವ, ಸಾವು ಮತ್ತು ಮುಕ್ತಿಯಂಥ ಪರಿಕಲ್ಪನೆಯ ಏಕೈಕ ಕವನ ಇದೆಂಬುದು ಸರಿಯೇ. ಆದರೆ ಇದೇ ಸಂಕಲನದ "ರಂಗನಾಥನ ಕಂಡು" ಕವಿತೆಯನ್ನು ಗಮನಿಸಿದರೆ ಅಲ್ಲಿಯೂ ದೇವರು, ಆರಾಧನೆ, ಬದುಕು ಕುರಿತ ಉಜ್ವಲವಾದ ವಿಚಾರಗಳಿರುವುದನ್ನು ಕಾಣುತ್ತೇವೆ. "ರಂಗನಾಥನ ಕಂಡು" ಕವಿತೆ ಸರಿಸುಮಾರು ಒಂದೇ ಕಾಲಘಟ್ಟದಲ್ಲಿ ಬಂದಿರುವುದರಿಂದ ಕವಿಗೆ ದೇವರು ಮತ್ತು ಆಧ್ಯಾತ್ಮದ ಬಗ್ಗೆ ಆಗ ಇದ್ದ ವಿಚಾರಗಳನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಳ್ಳುವಲ್ಲಿ ಅದು ಹೆಚ್ಚು ನೆರವು ನೀಡುವಂಥ ಕವನ.

ಕಲ್ಲುದೇವರು ಮಲಗಿ ಕನಸ ಕಾಂಬುದ ಕಂಡೆ ಎನ್ನುವ ಸಾಲುಗಳಲ್ಲಿ ಸಾಕಷ್ಟು ಕಠೋರತೆಯಿದೆ. ಕಲ್ಲುದೇವರು, ಮಲಗಿ ಕನಸು ಕಾಂಬುದು ಎರಡೂ ಆತನ ನಿರ್ಲಿಪ್ತಿಯನ್ನೂ ನಿರ್ಲಕ್ಷ್ಯವನ್ನೂ ಎತ್ತಿ ತೋರುವಂತಿದೆ. ಅವನನ್ನು ಏಳು ಎನ್ನುವ ಧೈರ್ಯ ಕವಿಗಿಲ್ಲ. ಅಲ್ಲದೆ, "`ಏಳು ಏಳೆನ್ನರಸ’ ಎಂಬ ರೋದನಕ್ಕೆಲ್ಲ| ಕರಿಕಲ್ಲ ಸೂಕ್ಷ್ಮತರ ಕಿರುನಗೆಯೆ ಉತ್ತರ"! ರೋದನಕ್ಕೂ ಅವನು ಸ್ಪಂದಿಸದ ಕಲ್ಲು. ಜಗತ್ತು ನಡೆದಿದೆ, "ಅವನ ಕರುಣಾದೀಪದೆಡೆಗೆ ನಡುಗಿ." ಅಂದರೆ ದೇವರ ಕುರಿತಾಗಿ ನಾವು ಎಲ್ಲರಲ್ಲಿ ಬಿತ್ತಿರುವುದು ಭಕ್ತಿಯನ್ನಲ್ಲ, ಭಯವನ್ನು, ನಡುಕವನ್ನು. ಅವನೂ ಹಾಗೆಯೇ, ಒಂದೇ ಹೆಜ್ಜೆಯಲ್ಲಿ ಭೂಮಿಯನ್ನೇ ತುಂಬಿಬಿಟ್ಟವನು ಮತ್ತೆ. ಈ ವಾಮನ-ದಾನವ ಪರಿಕಲ್ಪನೆ ದೀಪದ ಮಲ್ಲಿ ಸಂಕಲನದ "ದೇವರ ಹೆಜ್ಜೆ" ಕವನದಲ್ಲಿಯೂ ಮರುಕಳಿಸಿದೆ. "ತುಳಿದ ಆ ಹೆಜ್ಜೆ, ಮತ್ತೊಮ್ಮೆ ಈ ಭೂಮಿಯಲಿ| ಕಂಗೊಳಿಸಿ ಬದುಕ ಹರಸಿತೆ, ಇಲ್ಲ. ..." ಹೀಗಾಗಿ ಕವಿ ಶ್ರೀರಂಗನಾಥನಲ್ಲಿ ಬೇಡಿಕೊಳ್ಳುವುದಿಷ್ಟೇ, ಇಹದ ಮಂದಿ ಬದುಕಿಗೆ ಅಣಿಯಾಗಿ ಚಲಿಸುತ್ತಿರುವಾಗ, ಅವರಿಗೆ ದಾರಿ ಸಿಕ್ಕುವ ತನಕ, ಬೆಳಕು ಹರಿಯುವ ತನಕ ನೀನು ಮಲಗಿ ನಿದ್ರಿಸು ಪ್ರಭುವೆ ಎಂದು! ಅಂದರೆ ಈ ದೇವರು ಮಲಗಿ ನಿದ್ರಿಸುತ್ತಿದ್ದರೇ ಜಗತ್ತಿಗೆ ಕ್ಷೇಮ! ಎದ್ದರೆ ಅವನು ತುಳಿಯುತ್ತಾನೆ ಎನ್ನುವ ಭಯ ಇಲ್ಲಿದೆ.

ಇಂಥ ವಿಚಾರಗಳ ಬಗ್ಗೆ ಕೆ ಎಸ್ ನರಸಿಂಹಸ್ವಾಮಿಯವರು ಮುಂದೆಯೂ ಹಲವಾರು ಕವನಗಳಲ್ಲಿ ಉಲ್ಲೇಖಿಸಿದ್ದಿದೆ. ಈ ಬಗ್ಗೆ ಅವರು ಮಾತನಾಡಿರುವುದೂ ಇದೆ. ಸ್ಥೂಲವಾಗಿ ನರಸಿಂಹಸ್ವಾಮಿಯವರು ಪರಕ್ಕಿಂತ ಹೆಚ್ಚು ಐಹಿಕವನ್ನು, ಅರ್ಚನೆಗಿಂತ ಹೆಚ್ಚು ಕಾಯಕವನ್ನು, ಯಾಚನೆಗಿಂತ ಹೆಚ್ಚು ಸ್ವಾನುಭೂತಿ, ಆತ್ಮಾನುಸಂಧಾನವನ್ನು ನಂಬಿದವರು. ಇಹ ಅವರಿಗೆ ಮಾಯೆಯಲ್ಲ, ಭ್ರಾಂತಿಯಲ್ಲ, ಕಳಚಿಕೊಳ್ಳತಕ್ಕ ವಸ್ತುವಲ್ಲ. ಒಂದೊಮ್ಮೆ ಅದೇ ಹೌದು ಎಂದಾದರೆ, ತಮಗೆ ಅದೇ ಇರಲಿ ಎನ್ನುತ್ತಾರವರು! ಶಿಲಾಲತೆ ಸಂಕಲನದ "ನನ್ನ ನೆಲೆ" ಕವಿತೆಯನ್ನು ಗಮನಿಸಿದರೂ ಇದೇ ಅಂಶ ಸ್ಪಷ್ಟವಾಗುತ್ತದೆ.

ಯಾವುದು ನಿಜವೊ ಯಾವುದು ಗುಣವೊ
ಅದಾಗಲಿ ನನ್ನ ಗುರು;
ಯಾವುದು ಮಾನವಲೋಕದ ಋಣವೊ
ಅದಾಗಲಿ ನನ್ನುಸಿರು;

ಯಾವುದಿಹವೊ `ಬಂಧನ’ವೊ `ಭ್ರಾಂತಿ’ಯೊ
ಅದಾಗಲಿ ನನ್ನ ನೆಲೆ;
ಯಾವುದನಾದಿ ಸೃಷ್ಟಿಕಾಂತಿಯೊ
ಅದಾಗಲಿ ನನ್ನ ದೊರೆ

ಮಾಯೆಯ ಭಯ, ಸಾವಿನ ಭಯ ಎರಡರ ಹಿನ್ನೆಲೆಯಲ್ಲಿ ನಮಗೆ ದೈವದ ಭಯ ಎನ್ನುವುದು ಕವಿಯ ನಂಬುಗೆಯಿರುವಂತೆ ಕಾಣುತ್ತದೆ. ಮಾಯೆಯನ್ನು ಅವರು ಅಂಗೀಕರಿಸಿದರೆ ಸಾವನ್ನು ಒಂದರ್ಥದಲ್ಲಿ ನಿರಾಕರಿಸಿದವರು. "ಸಾವನ್ನು ಕುರಿತು ಯೋಚನೆ ಮಾಡಿದರೆ ಏನೂ ಕೆಲಸ ಮಾಡೋಕೇ ಆಗೋಲ್ಲ. ಅದನ್ನು ignore ಮಾಡಿಕೊಂಡೇ ಮುಂದಕ್ಕೆ ಹೋಗಬೇಕು ಬದುಕಿನಲ್ಲಿ" (ಸಮಗ್ರ ವಾಙ್ಮಯ: ಸಂಪುಟ ಮೂರು, ನುಡಿಮಲ್ಲಿಗೆ ವಿಭಾಗ - ಪುಟ ೨೪೯) "ನಾವು ಬದುಕುವ ತನಕ ನೆನೆಯಬಾರದು ಸಾವ| ಎಲ್ಲವನು ಸಹಿಸುವುದು ನಮ್ಮ ಜೀವ" (ಕೈಮರದ ನೆಳಲಲ್ಲಿ) ಹೇಳುವುದು ಇದನ್ನೇ. ಬಹುಶಃ "ತೆರೆದ ಬಾಗಿಲು" ಕವಿತೆಯಲ್ಲಿ ಕೆ ಎಸ್ ನರಸಿಂಹಸ್ವಾಮಿಯವರು ಸಾವಿನ ಕುರಿತಾದ ತಮ್ಮ ನಿಲುವನ್ನು ಅತ್ಯಂತ ಸ್ಪಷ್ಟಗೊಳಿಸಿದ್ದಾರೆನ್ನಬಹುದು. "ಹೀಗಾಯಿತು", "ಬಾಳು ಸಾವು" ಕವಿತೆಗಳಲ್ಲಿ ಕೂಡ ಸಾವಿನ ಕುರಿತ ಚಿಂತನೆಯಿದೆ. ಸಾವಿನ ಕುರಿತ ಚಿಂತನೆಯಿಂದ ಬದುಕಿನ ನಿರಾಕರಣೆಯಾಗುತ್ತದೆ, ಇಹದ ನಿರಾಕರಣೆಯಾಗುತ್ತದೆ. ಅದು ಜೀವವಿರೋಧಿ, ಜೀವನವಿಮುಖಿಯಾದ ಧೋರಣೆ, ಅದು ಕೂಡದು ಎನ್ನುವುದು ಕವಿಗೆ ಸ್ಪಷ್ಟ. ಬದುಕಿನಲ್ಲಿ ನೋವಿದೆ, ಕಹಿಯಿದೆ ಎಲ್ಲ ಸರಿ. ಜೀವನದ ಕರಾಳ ಮುಖ ಕೂಡ ಅವರ ಕವಿತೆಗಳಲ್ಲಿ ಬಂದಿರುವುದಿದೆ. "ಕೈಮರದ ನೆಳಲಲ್ಲಿ" ಇದಕ್ಕೊಂದು ಉತ್ತಮ ಉದಾಹರಣೆ ಎನ್ನಬಹುದು. ಆದರೆ ಅದೆಲ್ಲ ಇದ್ದೂ ಕವಿಯ ಆಯ್ಕೆ ಬದುಕು ಮತ್ತು ಇಹ ಎಂಬುದು ಗಮನಾರ್ಹ. "ಕೈಮರದ ನೆಳಲಲ್ಲಿ" ಕೂಡ ಅವರ ನಿಲುವು ಅದೇ.

ಇಹದ ಪರಿಮಳವಿರದ ಹಾದಿ ಹಿಡಿದು
ಬದುಕು ದುರ್ಬಲವಾಯಿತು
ಕವಿತೆ ನೀರಸವಾಯಿತು (ಬೆಳಗಿನ ಮಂಜು)

ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ,ದೇಶ ಕುಲಕರ್ಣಿ ಮತ್ತು ವೆಂಕಟೇಶ ಮೂರ್ತಿಯವರು ಕೆ ಎಸ್ ನರಸಿಂಹಸ್ವಾಮಿಯವರೊಡನೆ ನಡೆಸಿದ ಸುದೀರ್ಘ ಮಾತುಕತೆಯಲ್ಲಿ ಬರುವ ಇದೇ ಕೃತಿಯ "ಈ ವಸುಂಧರೆಯ ಮಗ ನಾನು" ಅಧ್ಯಾಯದಲ್ಲಿ ದೇವರು, ಆಧ್ಯಾತ್ಮ ಕುರಿತಂತೆ ಅವರು ವಿವರವಾಗಿ ಮಾತನಾಡಿದ್ದಾರೆ. ದೇವರು ಇದ್ದಾನೆ ಅಥವಾ ಇಲ್ಲ ಎಂಬ ಪ್ರಶ್ನೆ ಅವರಿಗೆ ಮುಖ್ಯ ಎಂದಾಗಲೀ, ಅದರೊಂದಿಗೆ ಗುದ್ದಾಡುವುದು ಮುಖ್ಯವೆಂದಾಗಲೀ ಅನಿಸಿಲ್ಲ. ಇದ್ದರೂ ಇಲ್ಲದಿದ್ದರೂ ಅದರಿಂದ ನಾವು ಇಲ್ಲಿ ಬದುಕಬೇಕಾದ ಹಾದಿ ಭಿನ್ನವಾಗದು (`ಇಹನೋ ಇಲ್ಲವೋ ಅವನು’ ಎನುವ ಸಂಶಯವೇಕೆ? ಇರಲಿ, ಇಲ್ಲದೆ ಇರಲಿ, ದಾರಿಯೊಂದೇ! (ಬೆಳಗಿನ ಮಂಜು, ಶಿಲಾಲತೆ) ಎಂದು ದೃಢವಾಗಿ ನಂಬಿದವರು ಅವರು. ಡಾ. ಕೆ. ಶಿವರಾಮ ಕಾರಂತರು ಕೂಡ ಇಂಥ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ಬದುಕು ಪಡೆದುದಾಗಿದೆ, ಅದನ್ನು ಸರಿಯಾದ ರೀತಿ ಬದುಕುವುದು ಮುಖ್ಯ ಎಂದು ಹೇಳುತ್ತ ಬಂದ ಇನ್ನೊಬ್ಬ ಹಿರಿಯ ವ್ಯಕ್ತಿ.
"ಯಾವುದೋ ಶಕ್ತಿ ನಮ್ಮನು ಆಳುತಿದೆ| ಆಗುವುದು ಆಗುತಿದೆ,
ಹೋಗುವುದು ಹೋಗುತಿದೆ| ನಂಬಿಕೆಯ ಮೇಲೆ ನಿಂತಿದೆ ಜಗತ್ತು"
(ಕೈಮರದ ನೆಳಲಲ್ಲಿ)

ಈ ಯಾವುದೋ ಶಕ್ತಿಯನ್ನು ಕೆ ಎಸ್ ನರಸಿಂಹಸ್ವಾಮಿಯವರು ಪ್ರಕೃತಿಯಲ್ಲಿ, ಭೂಮಿಯಲ್ಲಿ ಕಂಡುಕೊಂಡರೆಂದೇ ಹೇಳಬೇಕು. "ನೆಲವೇ ದೇವರೆಂದು ನಂಬಿ ನುಡಿಯುವವರು ನರಸಿಂಹಸ್ವಾಮಿ" ಎಂದು ರಾಮಚಂದ್ರ ಶರ್ಮ ಅವರು ಹೇಳಿರುವುದು ಇಲ್ಲಿ ಉಲ್ಲೇಖನೀಯ. `ತೆರೆದ ಬಾಗಿಲು’ ಸಂಕಲನದ "ಕುಂಕುಮ ಭೂಮಿ", ದೀಪದ ಮಲ್ಲಿ ಸಂಕಲನದ "ಭೂಮಿಗೀತ", "ಐರಾವತ" ಮುಂತಾದ ಕವಿತೆಗಳಲ್ಲಿ ಈ ಅಂಶ ನಮಗೆ ಸ್ಪಷ್ಟವಾಗುತ್ತದೆ. ಹೀಗೆ ತಾಯಿಯಾದ ಭೂಮಿಯನ್ನು ನೆಚ್ಚಿ, ತಂದೆಯಾದ ದೇವನಿಂದ ಸ್ವತಂತ್ರನಾಗಿ ಬದುಕುವ ಹಾದಿಯನ್ನು ಅವರು ಪ್ರತಿಪಾದಿಸಿರುವುದು "ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ" (ಶಿಲಾಲತೆ) ಕವಿತೆಯಲ್ಲಿ ಸ್ಪಷ್ಟವಾಗುತ್ತದೆ.

ಬಂದ ಬಾಗಿಲು ಮಣ್ಣು; ಬಿಡುವ ಬಾಗಿಲು ಮಣ್ಣು
ನಡುವೆ ಕಾಪಾಡುವುದು ತಾಯ ಕಣ್ಣು
ಈ ಕಣ್ಣ ಸೆರೆಯ ಕಲ್‌ಕೋಟೆಯೆಲ್ಲಾ ಹೊನ್ನು;
ನನ್ನ ಕೈ ಬಿಡುವುದೇ ನಿನಗೆ ಚೆನ್ನು.

ಹೀಗೆ ಕವಿಯ ಬದ್ಧತೆಯಿರುವುದೆಲ್ಲಾ ಭೂಮಿಗೆ, ಬದುಕಿಗೆ, ಇಹಕ್ಕೆ. ಸಾವಿನ ಕುರಿತ ಚಿಂತೆಯಾಗಲಿ, ಭಯವಾಗಲಿ, ಅದರ ಜೊತೆಗೆ ಕುಣಿಕೆ ಹಾಕಿಕೊಂಡ ಮುಕ್ತಿಯಾಗಲಿ ಕವಿಗೆ ಬೇಕಿಲ್ಲ. ಕವಿಗೆ ಮುಕ್ತಿಯೆಂಬುದು ಕೂಡ ಇಹದ ಬದುಕು ಕೊಡುವ ಅರಿವಿನಿಂದ ಬರಬೇಕಿದೆ. ತನ್ನನ್ನು ತಾನು ಅರಿಯುವುದಕ್ಕೆ ಯಾವುದು ಹೆಚ್ಚು ಸಹಕಾರಿ ಎಂಬ ಬಗ್ಗೆ ಕವಿಯಲ್ಲಿ ದ್ವಂದ್ವಗಳಿಲ್ಲ. 

ಇಷ್ಟು ಮಾತ್ರಕ್ಕೆ ಕೆ ಎಸ್ ನರಸಿಂಹಸ್ವಾಮಿಯವರು ದೇವರನ್ನು, ದೈವತ್ವವನ್ನು ನಿರಾಕರಿಸಿದರು ಎಂದು ತಿಳಿಯಬೇಕಾಗಿಯೇ ಇಲ್ಲ. ಒಂದರ್ಥದಲ್ಲಿ ಹೀಗೆ ಬದುಕಿಗೆ, ಇಹಕ್ಕೆ ನಿಷ್ಠರಾಗಿ ಬದುಕುವುದೇ ಅವನ ಇಚ್ಛೆ ಎಂಬುದು ಅವರ ನಿಲುವಾಗಿತ್ತೆನ್ನಬಹುದು. ಇದೊಂದು ರೀತಿ ಜಗತ್ತು ನನ್ನದು, ದೇವನ ಕೆಲಸ ಮುಗಿದಿದೆ, ಇನ್ನುಳಿದಿರುವುದು ನನ್ನದು ಎಂಬ ಪ್ರಜ್ಞೆ. ಹೇಗೆ ಮತ್ತೆ ಮತ್ತೆ ಇಲ್ಲಿನ ಮನುಷ್ಯ ಅದುಕೊಡು ಇದುಕೊಡು ಎಂದು ದೇವನನ್ನು ಕರೆಯುವುದು ಅವರಿಗೆ ಸರಿಯೆನ್ನಿಸುವುದಿಲ್ಲವೋ ಹಾಗೆಯೇ ಇಲ್ಲಿನ ಸ್ವತಂತ್ರ ಬದುಕಿಗೆ ಮತ್ತೆ ಮತ್ತೆ ದೇವನ ಪ್ರವೇಶವಾಗುವುದು ಕೂಡ ಅವರಿಗೆ ಇಷ್ಟವಿಲ್ಲ. 

ತುಳಿದ ಆ ಹೆಜ್ಜೆ, ಮತ್ತೊಮ್ಮೆ ಈ ಭೂಮಿಯಲಿ
ಕಂಗೊಳಿಸಿ ಬದುಕ ಹರಸಿತೆ, ಇಲ್ಲ. ...
...........
...............
ಸೆರೆ ತುಳಿತ ಹಿಂಸೆ - ಪಾವನವಲ್ಲ. ಗೆಲ್ಲುವ ಹೆಜ್ಜೆ
ರಾಜಬೀದಿಗಳಲ್ಲಿ ಬಾರದಿದೆ. ಧರ್ಮವೆಲ್ಲ
ಅಲ್ಪಯುಕ್ತಿಗಳಿಂದ ತನ್ನನ್ನೆ ತಾನಿರಿಯುತ್ತಿದೆ.
(ದೇವರ ಹೆಜ್ಜೆ, ದೀಪದ ಮಲ್ಲಿ)

"ರಂಗನಾಥನ ಕಂಡು" (ಮೈಸೂರ ಮಲ್ಲಿಗೆ) ಕವಿತೆಯಲ್ಲಿಯೂ ಇದೇ ಭಾವ ಇರುವುದನ್ನು ಕಾಣಬಹುದು. ಅಲ್ಲಿ ಅವನಿಗೆ ಅವರು ಮಲಗಿಯೇ ಇರು ಎನ್ನುತ್ತಾರೆ! ಕವಿಗೆ ದೇವರ ಪ್ರವೇಶದ ಬಗ್ಗೆ, ಅವತಾರದ ಬಗ್ಗೆ ಅವ್ಯಕ್ತವಾದ ಭಯವೇ ಇದೆ.

ಇದು ನಾವು ಕೆ ಎಸ್ ನರಸಿಂಹಸ್ವಾಮಿಯವರ ಕಾಲ, ವ್ಯಕ್ತಿತ್ವ ಮತ್ತು ಸಮಕಾಲೀನ ಸಾಂಸ್ಕೃತಿಕ ಪರಂಪರೆಗನುಗುಣವಾಗಿ ಅರ್ಥಮಾಡಿಕೊಳ್ಳುವ ಬಗೆಯಾಯಿತು. ಅದಕ್ಕೆ ನಮಗೆ ಅವರ ಮೈಸೂರ ಮಲ್ಲಿಗೆ ಸಂಕಲನದ "ಏನ ಬೇಡಲಿ?" ಕವಿತೆ ಮತ್ತು ಅವರದೇ ಇತರ ಕವಿತೆಗಳು ನೆರವಾದವು. ಆದರೆ ನಾವು ಇವತ್ತು ನಮ್ಮದೇ ಕಾಲ, ನಮ್ಮ ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ಒತ್ತಡದ ನಡುವೆ ಹೇಗೆ ಕಾಣುತ್ತೇವೆ ಎನ್ನುವ ಒಂದು ಪ್ರಶ್ನೆಯೂ ಇದೆ. ದೇವ-ದೈವದ ಜೊತೆ ಮನುಷ್ಯನ ಸಂಬಂಧ ಕೂಡ ಇವತ್ತು ಬದಲಾಗಿದೆ. ಧರ್ಮ, ದೇವರು ಮತ್ತು ಸನಾತನ ಮೌಲ್ಯಗಳು ವ್ಯಕ್ತಿಗತವಾಗಿದ್ದು, ಅದು ಅವನ ಅಂತರಂಗದ ಉನ್ನತಿಗೆ, ಆತ್ಮಸಂಸ್ಕಾರಕ್ಕೆ, ಜ್ಞಾನಸಂಪಾದನೆಗೆ (ಮುಕ್ತಿ ಎಂದು ಸೂಚ್ಯವಾಗಿಸಿದ್ದಾದರೆ) ಹಾದಿಯಾಗಿದ್ದ ಕಾಲ ಇವತ್ತು ಇಲ್ಲ. ಇಷ್ಟರಮಟ್ಟಿಗೆ ಅದು ಕೆ ಎಸ್ ನರಸಿಂಹಸ್ವಾಮಿಯವರು ಒಪ್ಪಿದ್ದ ಮಾರ್ಗವೇ ಆಗಿತ್ತು. ಅವರು ಒಪ್ಪದೇ ಇದ್ದ ಭಾಗ ಇಹವನ್ನು ನಿರಾಕರಿಸುವ ಅದರ ಋಣಾತ್ಮಕ, ಜೀವವಿಮುಖಿ ನಿಲುವು, ಇಹದ ಬದುಕನ್ನು ಕೆಡಿಸಬಲ್ಲ ಮಟ್ಟಕ್ಕೆ ಆವರಿಸಬಹುದಾದ ಧಾರ್ಮಿಕ ಕಟ್ಟುಕಟ್ಟಳೆಯ ಹೇರಿಕೆ. ಉಳಿದಂತೆ ನಂಬುಗೆ, ಸ್ವೀಕೃತಿ ಎರಡರ ಕುರಿತೂ ಅವರ ತಕರಾರಿರಲಿಲ್ಲ. ಇವತ್ತು ಯಾವುದನ್ನು ಕೆ ಎಸ್ ನರಸಿಂಹಸ್ವಾಮಿಯವರು ಒಪ್ಪಿಕೊಂಡಿದ್ದರೋ ಅದು ಜನಜೀವನದಿಂದಲೇ ಕಣ್ಮರೆಯಾಗಿದ್ದರೆ ಅವರು ಒಪ್ಪದೇ ಇದ್ದ, ನಿರಾಕರಿಸಿದ್ದ ಮತ್ತು ಒಳಗೊಳಗೇ ಹೆದರಿದ್ದ ಸಂಗತಿಗಳು ವೈಭವೀಕರಿಸಲ್ಪಟ್ಟಿವೆ. ಇದನ್ನು ಸ್ವಲ್ಪ ವಿವರಿಸಬೇಕು.

ಈಗ ದೇವರು, ಧರ್ಮ ಮತ್ತು ಸನಾತನ ಮೌಲ್ಯಗಳು ವ್ಯಕ್ತಿಗತವಾಗಿರದೇ ಸಾಮಾಜಿಕ ವಿದ್ಯಮಾನಗಳಾಗಿವೆ. ಅದು ಅಂತರಂಗಕ್ಕೆ ಸಂಬಂಧಪಟ್ಟ, ವ್ಯಕ್ತಿ-ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಸಂಗತಿಯಾಗಿ ಉಳಿದೇ ಇಲ್ಲ. ಅದು ಇವತ್ತು ಸಾಮಾಜಿಕ, ರಾಜಕೀಯ, ಆರ್ಥಿಕ ಆಯಾಮಗಳನ್ನೆಲ್ಲ ಪಡೆದುಕೊಂಡು ಗಟ್ಟಿದನಿಯ ಘೋಷಣೆಯಾಗಿದೆ, ವರ್ಗಸಂಘರ್ಷಕ್ಕೆ, ಅಂತರ್ರಾಷ್ಟ್ರೀಯ ನೆಲೆಯಲ್ಲಿ ವಿಭಜನೆಗೆ ಒಂದು ಕಾರಣವನ್ನೊದಗಿಸಬಲ್ಲ ವಸ್ತುವಾಗಿದೆ. ನೀಲಾಂಜನದ ಬೆಳಕಿನಲ್ಲಿ ಅಸ್ಪಷ್ಟವಾಗಿ ಕಂಡ ಕಣ್ಣಿನೊಳಗೆ ತನ್ನದೇ ಮೂರ್ತಿಯನ್ನಿರಿಸಿ ಆತ್ಮಾನುಸಂಧಾನ ನಡೆಸಬಹುದಾಗಿದ್ದ ತೀರ ಖಾಸಗಿತನದ ಪರಂಪರೆಯಿಂದ ನಾವು ಅರ್ಥಹೀನ ರಿಚ್ಯುಯಲ್‌ಗಳ, ಲೌಡ್ ಸ್ಪೀಕರ್-ಮೈಕುಸೆಟ್ಟುಗಳ ಆರ್ಭಟದ, ಪ್ರದರ್ಶನಪ್ರಿಯತೆ ಮತ್ತು ಕೊಳ್ಳುಬಾಕತನವನ್ನಷ್ಟೇ ಪೋಷಿಸುವ ಜಾತ್ರೆಗಳ ಒಂದು ಧರ್ಮ, ಆಧ್ಯಾತ್ಮ, ದೇವರ ಪರಿಕಲ್ಪನೆಯತ್ತ ಹೊರಳಿದ್ದೇವೆ. ಸಹಜವಾಗಿಯೇ ವೈದಿಕ ಪುರೋಹಿತಶಾಹಿಯ ಬಿಗಿಮುಷ್ಠಿಯಲ್ಲಿದ್ದ ಧಾರ್ಮಿಕತೆ ಸಮಾಜದ ಕೆಳಸ್ತರದವರ ಸೊತ್ತಾಗಿದೆ. ಈ ಪಲ್ಲಟಕ್ಕೆ ಏನು ಕಾರಣ ಎನ್ನುವುದು ಸಮಾಜಶಾಸ್ತ್ರೀಯ ಸಂಶೋಧನೆಗೆ ತಕ್ಕ ವಿಷಯವಾದೀತೆ ಹೊರತು ಇಲ್ಲಿನ ಚರ್ಚೆಯ ವ್ಯಾಪ್ತಿಗೆ ಹೊರಗಿನ ವಿಚಾರ. ಆದರೆ ಇದರಿಂದಾಗಿ ಏನಾಯಿತು ಎಂದರೆ ಧರ್ಮವೆಂಬುದು, ಭಕ್ತಿಯೆಂಬುದು, ಸನಾತನ ಪರಂಪರೆಯೆಂಬುದು ಒಂದು ಪ್ರದರ್ಶನಕ್ಕೆ ಒಗ್ಗುವ ವಸ್ತುವಾಯಿತು. ಕೆಲವೊಂದು ಪ್ರದರ್ಶನಸಾಧ್ಯ ಸಾಂಕೇತಿಕ ವಸ್ತು/ಆಚರಣೆಗಳೇ ಅದು ಎಂಬ ಒಂದು ಧಾರ್ಮಿಕ/ಸಾಂಸ್ಕೃತಿಕ ವಿಸ್ಮೃತಿಗೆ ನಾವು ಒಳಗಾದೆವು. ಇದನ್ನು ಇನ್ನೂ ಹೆಚ್ಚು ವಿವರಿಸುವ ಅಗತ್ಯವಿಲ್ಲ. 

ಪರಿಣಾಮದಲ್ಲಿ, ಇವತ್ತಿಗೂ ಕೆ ಎಸ್ ನರಸಿಂಹಸ್ವಾಮಿಯವರದೇ ಮನೋಧರ್ಮದಿಂದ ತನ್ನನ್ನು ತಾನು ಅರಿಯುವ ಪಥ ಈ ಬದುಕಿನ ಸತ್ವ ಎಂದು ತಿಳಿದ ಮಂದಿಗೆ ಕೂಡ ದೇವರು, ಧರ್ಮ ಮತ್ತು ಪರಂಪರೆ ಎಂಬ ವಿಚಾರ ಭಯಕ್ಕೆ, ನಡುಕಕ್ಕೆ ಮತ್ತು "ಬದುಕಿನ ಬಳ್ಳಿ" ಬಾಡುವುದಕ್ಕೆ ಕಾರಣವಾಗಬಹುದಾದ "ಅಪಾಯಕಾರಿ" ವಸ್ತುಗಳು ಎಂಬ ಭಯ ಇರುವಂತಾಗಿದ್ದು ಮಾತ್ರ ವಿಪರ್ಯಾಸವೇ ಎನ್ನಬೇಕು. ನರಸಿಂಹಸ್ವಾಮಿಯವರಿಗೆ ಇವಕ್ಕೆಲ್ಲ ಪರ್ಯಾಯವಾಗಿ ವಸುಂಧರೆಯಾದರೂ ಇದ್ದಳು. ನಮಗೆ ಪ್ರಕೃತಿ, ಪರಿಸರ, ವಸುಂಧರೆ ಯಾರೂ ಇಲ್ಲ ಎನ್ನುವುದು ಕೂಡ ನಮ್ಮ ಕಾಲದ ಇನ್ನೊಂದು ವಿಪರ್ಯಾಸ. ಇಲ್ಲಿ ನಿಂತು ನೋಡಿದರೆ ನಮಗೆ ಕೆ ಎಸ್ ನರಸಿಂಹಸ್ವಾಮಿಯವರ ನಿಲುವು ಅರ್ಥವಾಗುತ್ತದೆ. ಅವರು ದೇವ-ದೈವ, ಮೃತ್ಯುಪ್ರಜ್ಞೆ ಮತ್ತು ಜೀವನವಿಮುಖಿ ಧೋರಣೆಗಳ ಆಧ್ಯಾತ್ಮವನ್ನು ನಿರಾಕರಿಸಿದ ನೆಲೆ, ಅವು ಬದುಕನ್ನು ಆವರಿಸುವ ಬಗ್ಗೆ ಹೆದರಿದ ನೆಲೆ ಅರ್ಥವಾಗುತ್ತದೆ. ಅವರ ಭಯ ಆಗಲೂ ವ್ಯಕ್ತಿಗತ ನೆಲೆಯದ್ದೇ ಆಗಿತ್ತು. ಆದರೆ ಇವತ್ತು ಹೇಗೆ ಅವೆಲ್ಲ ವ್ಯಕ್ತಿಗತ ನೆಲೆ ಕಳಚಿಕೊಂಡು ಸಾಮಾಜಿಕವಾಗಿ ನಿಂತವೋ ಹಾಗೆಯೇ, ಆ ಭಯ ಕೂಡ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಆಯಾಮಗಳನ್ನು ಪಡೆದುಕೊಂಡು ನಮ್ಮ ಸಂಕೀರ್ಣ ವರ್ತಮಾನದೊಂದಿಗೆ ದೈತ್ಯಾಕಾರವಾಗಿ ಬೆಳೆದಿರುವುದು ಕಾಣುತ್ತೇವೆ. ಈಗ ಹಿಂದಿರುಗಿ ನೋಡುತ್ತ ನನಗೆ ಕೆ ಎಸ್ ನರಸಿಂಹಸ್ವಾಮಿಯವರ ಭಯ, ಅಂಜಿಕೆ ಮತ್ತು ನಡುಕವನ್ನು ಪ್ರೊಫೆಟಿಕ್ ಆಗಿ ನೋಡಲು ಇಷ್ಟ; ಯಾಕೆಂದರೆ, ವ್ಯಕ್ತಿಗತ ನೆಲೆಯಲ್ಲಿ ಆ ಯಾವತ್ತೂ ಭಯ, ಅಂಜಿಕೆ ಮತ್ತು ನಡುಕ, ಮಾಯೆ ಮತ್ತು ಮೃತ್ಯುವಿನ ಕುರಿತೇ ಆಗಿರಲೊಲ್ಲದೇಕೆ, ಅಷ್ಟು ಅಪೀಲಿಂಗ್ ಅನಿಸಿರಲಿಲ್ಲ. ಇವತ್ತು ತೀರ ನನ್ನದೇ ಭಯದ ಕುರಿತು ಅವರು ಹೇಳುತ್ತಿದ್ದಾರೆ ಎನಿಸುತ್ತಿರುವುದು ನಿಜ!

ಏನ ಬೇಡಲಿ?

ದೇವ, ನಿನ್ನ ಮಾಯೆಗಂಜಿ
ನಡುಗಿ ಬಾಡೆನು;
ನಿನ್ನ ಇಚ್ಛೆಯಂತೆ ನಡೆವೆ-
ನಡ್ಡಿ ಮಾಡೆನು.

ಮುಕ್ತಿ! ಮುಕ್ತಿ! - ನನ್ನ ನಾನು
ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
ಅಡಗಿಕೊಳ್ವುದೋ?

ಶಕ್ತಿಯಿತ್ತೆ ಮುಕ್ತಿಯನ್ನು
ಗಳಿಸಿಕೊಳ್ಳಲು;
ನೀರನೆರೆದೆ ಬಳ್ಳಿಯನು
ಬೆಳೆಸಿಕೊಳ್ಳಲು;

ಜ್ಞಾನರವಿಯನಿತ್ತೆ ಎದೆಯ
ನೋಡಿಕೊಳ್ಳಲು;
ಗೀತೆಯನ್ನು ಕೊಟ್ಟೆ ಕೊಳಲೊ-
ಳೂದಿಕೊಳ್ಳಲು.

ಎಲ್ಲವನ್ನು ಕೊಟ್ಟಿರುವೆ;
ಏನ ಬೇಡಲಿ!
ಜಗವನೆನಗೆ ಬಿಟ್ಟಿರುವೆ,
ಏಕೆ ಕಾಡಲಿ!


(ಕನ್ನಡದ ಪ್ರಮುಖ ವಿಮರ್ಶಕ ಎಸ್ ಆರ್ ವಿಜಯಶಂಕರ್ ಅವರು ಸಂಪಾದಿಸಲಿದ್ದ ಕೆ ಎಸ್ ನ ಅವರ ಕವಿತೆಗಳ ಮರು ಓದಿನ ಟಿಪ್ಪಣಿಗಳ ಒಂದು ಸಂಕಲನಕ್ಕಾಗಿ ಅವರೇ ಸೂಚಿಸಿದ "ಏನ ಬೇಡಲಿ?" ಕವಿತೆಯ ಬಗ್ಗೆ ಬರೆದ ಟಿಪ್ಪಣಿ.)

No comments: