Sunday, September 17, 2017

ಮೌನಕ್ಕೆ ಅವಕಾಶವಿದೆಯೆಂದಾದರೆ....

ಈಚೆಗೆ ಗ್ರೇಟೆಸ್ಟ್ ಉರ್ದು ಸ್ಟೋರೀಸ್ ಎವರ್ ಟೋಲ್ಡ್ ಎಂಬ ಒಂದು ಅಪರೂಪದ ಕೃತಿ ಬಂತು. ಮುಹಮ್ಮದ್ ಉಮರ್ ಮೆಮೊನ್ ಆರಿಸಿ ಅನುವಾದಿಸಿದ ಹೆಸರಾಂತ ಉರ್ದು ಕತೆಗಾರರ ಒಟ್ಟು ಇಪ್ಪತ್ತೈದು ಕತೆಗಳಿರುವ ಈ ಪುಸ್ತಕವನ್ನು ಹಲವು ಉತ್ತಮ ಕೃತಿಗಳನ್ನು ಹೊರತಂದ ಅಲೆಪ್ ಬುಕ್ಸ್ ಪ್ರಕಟಿಸಿದೆ. ಫಾಂಟ್ ತೀರ ಚಿಕ್ಕದು ಅನಿಸಿದರೂ ಮುನ್ನೂರೈವತ್ತು ಪುಟಗಳ ಪುಸ್ತಕಕ್ಕೆ ಬಹುಶಃ ಅನಿವಾರ್ಯವಾಗಿತ್ತೇನೊ. ಉಮರ್ ಮೆಮೊನ್ ಅವರೇ ಇಕ್ರಮುಲ್ಲಾ ಅವರ ಎರಡು ನೀಳ್ಗತೆಗಳ ಪುಸ್ತಕ, ರೆಗ್ರೆಟ್ ಕೂಡಾ ಅನುವಾದಿಸಿರುವುದು ಇಲ್ಲಿ ಉಲ್ಲೇಖನೀಯ.

ಈ ಸಂಕಲನದ ಮೊದಲ ಕತೆಯೇ ಈಚೆಗೆ ತೀರಿಕೊಂಡ ನಯರ್ ಮಸೂದ್ ಅವರದ್ದು. (ನಯರ್ ಮಸೂದ್ ಬಗ್ಗೆ ಹೆಚ್ಚಿನ ವಿವರಗಳಿಗೆ ಈ ಬಾರಿಯ ಪಂಚ್ ಮ್ಯಾಗಝೀನ್ ಗಮನಿಸಿ) ಕತೆಯ ಹೆಸರು ಅಬ್ಸ್‌ಕ್ಯೂರ್ ಡೊಮೈನ್ಸ್ ಆಫ್ ಫಿಯರ್ ಯಾಂಡ್ ಡಿಸಾಯರ್. ಮೊದಲಿಗೆ ಇಲ್ಲಿನ ನಿರೂಪಕ ವರ್ಷಕ್ಕೊಮ್ಮೆ ತನ್ನ ಪಾರಂಪರಿಕ ವಾಡೆಗೆ ಬರುವ, ಬಂದಾಗ ಎರಡು ಮೂರು ದಿನ ತಂಗುವ ಒಬ್ಬ ಮಹಿಳೆಯಲ್ಲಿ ಮೋಹಗೊಂಡು ಅವಳ ದೇಹಸಂಗಕ್ಕೆ ಹಾತೊರೆಯುವ ವಿವರಗಳೇ ಇವೆ. ಆ ಮನೆಯ ತುಂಬ ಆ ಮನೆಯಂತೆಯೇ ಪಳೆಯುಳಿಕೆಗಳಾಗಿರುವ ಮುದಿ ಹೆಂಗಸರು. ಇವರ ಮಿಲನಕ್ಕೆ ಅವರದೇ ಬಹುದೊಡ್ಡ ಅಡ್ಡಿ. ಅಂದರೆ, ಪ್ರತೀ ಬಾರಿ ಏಕಾಂತ ಸಾಧಿಸಿದಾಗಲೂ ಎಲ್ಲಿಂದಲೋ ಯಾರೋ ಗಮನಿಸುತ್ತಿರಬಹುದು ಎನ್ನುವ ಒಂದು ಶಂಕೆ, ಶಂಕೆ ಹುಟ್ಟಿಸುವ ಭೀತಿ ಇಲ್ಲಿನ ಅಡ್ಡಿ. ಇವನಿಗೊಬ್ಬ ಪುಟ್ಟ ಹುಡುಗಿಯನ್ನು ಇವನ ಭಾವೀ ವಧು ಎಂದು ತಮಾಶೆ ಮಾಡುವ ಮನೆಮಂದಿ. ಅಪಾರ ನಿರೀಕ್ಷೆ, ಆಸೆ ಮತ್ತು ಲೈಂಗಿಕ ವಾಂಛೆ ಹುಟ್ಟಿಸಿದ ಆಕೆ ಇದ್ದಕ್ಕಿದ್ದಂತೆ ಹೊರಟು ಹೋಗಬೇಕಾಗಿ ಬರುತ್ತದೆ. ಈ ಇಬ್ಬರು, ಬಹುಶಃ ವಯಸ್ಸಿನಲ್ಲಿ ತೀರ ಕಿರಿಯನಾಗಿರಬಹುದಾದ ನಿರೂಪಕ ಮತ್ತು ಪ್ರಬುದ್ಧೆ, ವಿವಾಹಿತೆ ಎಂದೆಲ್ಲ ಅನಿಸುವ ಆಕೆಯ ನಡುವಿನ ದೇಹ ಭಾಷೆಯ ಮೂಕ ಸಂಭಾಷಣೆ, ಅಲ್ಪಸ್ವಲ್ಪ ಸಾನ್ನಿಧ್ಯ, ಸಂಪರ್ಕ, ಸಾಮೀಪ್ಯಗಳ ರೋಮಾಂಚಕತೆ ಸಾಕಷ್ಟು ಪೋಷಣೆ ಪಡೆದಿದ್ದೂ ಅದಿಷ್ಟೂ ಭಾಗ ಕತೆ ಉದ್ದೇಶಿಸಿರುವ ಮಹತ್ವದ ಯಾವುದೋ ಇನ್ನೊಂದಕ್ಕೆ ಕೇವಲ ತಾಂತ್ರಿಕ ಚಿಮ್ಮುಹಲಗೆಯಷ್ಟೇ ಆಗಿರುವುದು ವಿಶೇಷ.

ಈತನಿಗೆ ಇದ್ದಕ್ಕಿದ್ದಂತೆ, ಅಥವಾ ಕೆಲ ಸಮಯದ ಬಳಿಕ ಈ ಮುದಿಯರೇ ತುಂಬಿರುವ ಹಳೆಯ ಸುವಿಶಾಲ ಮನೆ/ವಾಡೆ ಉಸಿರುಗಟ್ಟಿಸುವ ಸೆರೆಮನೆ ಎನಿಸತೊಡಗುತ್ತದೆ. ತಾನು ಹೊರಗೆ ಹೋಗಬೇಕು, ದುಡಿಯಬೇಕು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ಸಂಪಾದಿಸಿ ತಿನ್ನಬೇಕು ಮುಂತಾದ ತುಡಿತಗಳೆಲ್ಲ ಇವನಲ್ಲಿ ಕಾಣಿಸಿಕೊಳ್ಳುತ್ತವೆ. ಬಹುಶಃ ಕೂತು ತಿನ್ನಬಹುದಾದ ಸ್ಥಿತಿಗತಿಯ ವಾತಾವರಣವೊಂದರಿಂದ ಈತ ಹೊರಬೀಳುತ್ತಾನೆ ಮತ್ತು ಒಬ್ಬ ಅಲೆಮಾರಿಯಂತೆ ಬದುಕತೊಡಗುತ್ತಾನೆ. ಮನೆಗಳನ್ನು ಹೊಕ್ಕು ಅವುಗಳ ಆರ್ಕಿಟೆಕ್ಚರ್ ಸ್ಟಡಿ ಮಾಡಿ ಒಪೀನಿಯನ್ ನೀಡುವ ಒಂದು ವೃತ್ತಿ, ಅಂಥದ್ದೊಂದು ಇದ್ದರೆ, ಅದನ್ನೀತ ಮಾಡತೊಡಗುತ್ತಾನೆ. ಮಾಡುತ್ತ ಮಾಡುತ್ತ ಅದರ ಟೆಕ್ನಿಕಲ್ ಅಥವಾ ಪ್ರೊಫೆಶನಲ್ ಚೌಕಟ್ಟಿನಿಂದಲೂ ಹೊರಬರುತ್ತಾನೆ. ಒಂದರ್ಥದಲ್ಲಿ ಅಕ್ಷರಶಃ ಬೀದಿಗೆ ಬರುತ್ತಾನೆ.

ಮುಂದಿನ ಹಂತವೇ ವಿಶೇಷವಾದದ್ದು ಮತ್ತು ಬಹಳ ಸೂಕ್ಷ್ಮವೂ ಮುಖ್ಯವೂ ಆದದ್ದು. ಇಲ್ಲೇನಾಗುತ್ತದೆ ಎಂದರೆ, ಈತ ಸುಮ್ಮನೇ ಕುತೂಹಲಕ್ಕೆ ಒಂದು ಮನೆಯ ಬೇರೆ ಬೇರೆ ಕೋಣೆಯಲ್ಲಿ ನಿಂತು, ಅದರ ಕಿಟಕಿ, ಬಾಗಿಲುಗಳ ಮೂಲಕ ಕೋಣೆಯ ಬೇರೆ ಬೇರೆ ಸ್ಥಳದಲ್ಲಿ ನಿಂತು ದೃಷ್ಟಿ ಹಾಯಿಸಿದಾಗ್ಯೂ ನೋಡಲು ಸಾಧ್ಯವೇ ಇಲ್ಲದ ಮನೆಯ ಅನ್ಯಭಾಗಗಳನ್ನು ಮತ್ತು ನೋಡಬಹುದಾದ ಅನ್ಯಭಾಗಗಳನ್ನು ಗುರುತಿಸುತ್ತ ಹೋಗುತ್ತಾನೆ. ಒಂದು ಭಾಗಕ್ಕೆ ಬಿಳಿ ಬಣ್ಣ ಕೊಟ್ಟರೆ ಇನ್ನೊಂದಕ್ಕೆ ಕರಿ ಬಣ್ಣ ಕೊಡುತ್ತಾನೆ. ಒಟ್ಟಾರೆಯಾಗಿ, ಯಾವುದೇ ಕೋಣೆಯಲ್ಲಿ ನಿಂತು ಸಾಧ್ಯವಿರುವ ಯಾವತ್ತೂ ಕೋನಗಳಿಂದ ದೃಷ್ಟಿ ಹಾಯಿಸಿದರೂ ನೋಟಕ್ಕೆ ಸಿಗುವುದು ಸಾಧ್ಯವೇ ಇಲ್ಲದ ಒಂದು ಭಾಗವನ್ನು ಗುರುತಿಸುವಾಗ ಅದಕ್ಕೆ ಒಂದು ನಿರ್ದಿಷ್ಟ ಆಕೃತಿ ಕೂಡ ಒದಗುವುದನ್ನು ಈತ ಕಂಡುಕೊಳ್ಳುತ್ತಾನೆ. ಇಲ್ಲಿಯ ತನಕ ಕೇವಲ ಆರ್ಕಿಟೆಕ್ಚರಲ್ ಆಗಿದ್ದ ಈತನ ಅಧ್ಯಯನಕ್ಕೆ ಇದ್ದಕ್ಕಿದ್ದಂತೆ ಮಾನವೀಯ ಮುಖವೊಂದು ಒಡಮೂಡುವುದು ಇಲ್ಲಿಯೇ.


ಒಂದು ಪ್ರೈವಸಿ ಎನ್ನುವುದು ವ್ಯಕ್ತಿಗೆ ತನ್ನ ಸ್ವಂತ ಮನೆಯಲ್ಲಿ ಸಿಗಬೇಕು ಎನ್ನುವುದು ಸಾಮಾನ್ಯವಾದ ನಿರೀಕ್ಷೆ. ಆದರೆ ಅದು ಯಾವ ಕಾಲಕ್ಕೆ ಸೇರಿದ ಮನೆಯಾಗಿದ್ದರೂ, ಯಾವ ಪ್ರಕಾರದ ಮನೆಯೇ (ವಾಡೆ/ಪ್ರತ್ಯೇಕ ಮನೆ/ಸಾಲುಮನೆ/ಅಪಾರ್ಟ್‌ಮೆಂಟು/ಪೇಯಿಂಗ್ ಗೆಸ್ಟುಗಳಿರುವ ಮನೆ ಇತ್ಯಾದಿ) ಆಗಿದ್ದರೂ, ಯಾವ ಊರು, ನಗರಕ್ಕೆ ಸೇರಿದ ಮನೆಯಾಗಿದ್ದರೂ ಅದರ ಎಲ್ಲಾ ಬಿಂದುಗಳಲ್ಲೂ ಪ್ರೈವಸಿ ಇರುವುದಿಲ್ಲ ಎನ್ನುವುದು ಕೂಡ ನಮಗೆಲ್ಲ ಗೊತ್ತು. ಆದರೆ, ಯಾರೂ, ಎಲ್ಲಿಂದಲೂ ನಮ್ಮನ್ನು ಗಮನಿಸಲು ಸಾಧ್ಯವೇ ಇಲ್ಲದ ಬಿಂದುಗಳು ಒಂದು ಮನೆಯಲ್ಲಿ ಇರುವುದು ಸಾಧ್ಯ. ಇವತ್ತಿನ ಸಿಸಿ ಟಿವಿ, ಗ್ಲಾಸುಗಳ ಕಿಟಕಿ, ಸ್ಥಳ ಉಳಿಸುವ ಪ್ಲಾನುಗಳ ದಿನಗಳಲ್ಲೂ ಬಹುಶಃ ಇದು ಸಾಧ್ಯ. ಆದರೆ ಆ ಬಿಂದುಗಳ ಮಾನವೀಯ ನೆಲೆಯ ಅಧ್ಯಯನವೊಂದು ಸಾಧ್ಯವೆ?

ಅಂದರೆ, ಇದನ್ನೇ ಮಾನವ ದೇಹಕ್ಕೆ ಅನ್ವಯಿಸಿ ನೋಡುವುದು ಸಾಧ್ಯವಿಲ್ಲವೆ? ನಮ್ಮಲ್ಲೂ, ಒಳಗೆ ಮತ್ತು ಹೊರಗೆ, ನಾವು ನೋಡಲು ಸಾಧ್ಯವಿರುವ ಮತ್ತು ಏನು ಮಾಡಿದರೂ ನೋಡಲು ಸಾಧ್ಯವಿಲ್ಲದ (ದೃಷ್ಟಿ)ಕೋನಗಳು ಇಲ್ಲವೆ? ಮಹಾಭಾರತದ ಅರ್ಜುನನಿಗೆ ಶ್ರೀಕೃಷ್ಣ ದಿವ್ಯದೃಷ್ಟಿ ನೀಡುವ ಒಂದು ಸಂದರ್ಭವಿದೆ. ಅಂದರೆ, ಮಾನವ ಕಣ್ಣುಗಳಿಗೆ ಒಂದು ಮಿತಿ ಇದೆ. ಬೆಳಕು ಯಾವ ವಸ್ತುವಿನ ಮೇಲೆ ಬಿದ್ದು ಪ್ರತಿಫಲಿಸುವುದೋ ಅದನ್ನು ಮಾತ್ರ ಮನುಷ್ಯ ನೋಡಬಲ್ಲ. ಬೆಳಕನ್ನು ಹೀರಿಕೊಂಡು ಬಿಡುವ ವಸ್ತುಗಳನ್ನು ಅವನು ನೋಡಲಾರ. ಹಾಗೆಯೇ ಕತ್ತಲೆ ಅವನಿಗೆ ನಿಗೂಢ. ಕತ್ತಲಲ್ಲಿ ನಾಯಿ, ಬೆಕ್ಕು ಮುಂತಾದ ಕೆಲವು ಪ್ರಾಣಿಗಳು ಕಾಣಬಲ್ಲವಂತೆ! ಆ ದೃಷ್ಟಿ ನಮಗಿಲ್ಲ. ಹಗಲಲ್ಲೇ ನಾವು ನಿಸ್ತಂತು ಜಾಲವನ್ನು ಕಾಣಲಾರೆವು, ಆದರೆ ಅದು ಇದೆ.

ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಂತಾಗ ಅಥವಾ ಮಲಗಿದಾಗ ಅಥವಾ ಕೂತಾಗ ಕಾಮ ಭಾವ ಸ್ಫುರಿಸುವ ಅನುಭೂತಿ, ನಿದ್ದೆ ಬರುವ ಅನುಭೂತಿ, ಯಾರೋ ನೋಡುತ್ತಿದ್ದಾರೆಂಬ ಆತಂಕ ಮೂಡುವ ಅನುಭೂತಿ ಎಲ್ಲ ಇರುತ್ತದೆಯೆ? ಒಂದು ನಿರ್ದಿಷ್ಟ ಬಿಂದು ನಿಮ್ಮ ಜೊತೆ ಮಾತನಾಡಲು ಸಾಧ್ಯವೆ? ಅಲ್ಲೊಂದು ಕತೆಯಿರಲು ಸಾಧ್ಯವೆ? ಅಲ್ಲಿ ನಿಂತದ್ದೇ ನೀವು ಆ ಕಾಲಕ್ಕೆ ಸಂದು ಹೋಗುವುದು ಸಂಭಾವ್ಯವೆ? ಮನುಷ್ಯನೊಳಗೂ ಭಾಷೆಯ, ಅಕ್ಷರದ, ಮಾತಿನ ಹಂಗಿಲ್ಲದ ಅನುಭೂತಿಗಳಿದ್ದೇ ಇವೆಯಲ್ಲವೆ?

ಈ ಭಾಗವನ್ನು ಕತೆಯ ಆರಂಭದ ದೆಸೆಯ ವಿದ್ಯಮಾನದೊಂದಿಗೆ ನೋಡಬೇಕು. ಒಂದು ಗಂಡು, ಇನ್ನೊಂದು ಹೆಣ್ಣು ದೇಹವನ್ನು ಭಯ ಮತ್ತು ಮೋಹ ಎರಡೂ ಸೇರಿದ ಒಂದು ವಿಲಕ್ಷಣ ತಲ್ಲಣದೊಂದಿಗೆ ಸಮೀಪಿಸುವ, ಸ್ಪರ್ಶಿಸುವ, ಸ್ಪರ್ಶದ ಮುಖೇನ ಪಂಚೇಂದ್ರಿಯಗಳಿಗೂ ದಕ್ಕಿಸಿಕೊಳ್ಳುವ ಒಂದು ನಡೆ ಏನಿದೆ ಅದನ್ನು ಅರ್ಥಮಾಡಿಕೊಳ್ಳುವುದರ ಮೂಲಕವೇ ಮನುಷ್ಯನ ಆಳದಲ್ಲಿರುವ ಬಯಕೆ ಮತ್ತು ಭಯದ ಪ್ರತಿಮೆಗಳನ್ನು ಚಿತ್ತ ಕೆತ್ತಬೇಕಿದೆ. ಮತ್ತು ಹಾಗೆ ಕೆತ್ತುತ್ತಲೇ ಮನುಷ್ಯ (ಮತ್ತು ಮನೆ) ನಮಗೆ ಅರ್ಥವಾಗಬೇಕಿದೆ.

ಕತೆಯ ಕೊನೆಯ ಭಾಗದಲ್ಲಿ ಕಗ್ಗತ್ತಲೆಯಲ್ಲಿ ನಡೆಯುವ ಒಂದು ಸಮಾಗಮದ ಚಿತ್ರವಿದೆ. ಅದು ಕಣ್ಣಿದ್ದೂ ಕುರುಡುತನ ತರುವ ಕತ್ತಲಲ್ಲೇ ಯಾಕೆ ನಡೆಯುತ್ತದೆ, ಗೊತ್ತಿಲ್ಲ. ಸದ್ದು ಹುಟ್ಟಿಸುವ ಭಾಷೆ ಪುಸ್ತಕದ ಹಾಳೆಯ ಮೇಲೆ ತಣ್ಣಗೆ ಸದ್ದಿಲ್ಲದೆ ಕುಳಿತಿರುತ್ತದೆ. ಅದನ್ನು ಓದುವಾಗ ಮನಸ್ಸಿನ ಒಳಗೊಳಗೇ ಆದರೂ ಸರಿ, ಸದ್ದು ಹುಟ್ಟುತ್ತದೆ. ಮಾತು ಕೂಡ ಸದ್ದು ಹುಟ್ಟಿಸುತ್ತದೆ. ಅಂದ ಮಾತ್ರಕ್ಕೆ ಮೌನ ಸದ್ದು ಹುಟ್ಟಿಸುವುದಿಲ್ಲ ಎಂದೇನೂ ಅಲ್ಲ. ಮೌನ ಕೂಡ ಸದ್ದು ಹುಟ್ಟಿಸಬಲ್ಲುದು ಎಂದಾದರೆ ಅಕ್ಷರವೇಕೆ ಬೇಕು, ಸದ್ದು ಏಕೆ ಬೇಕು ಎನ್ನುವುದು ಪ್ರಶ್ನೆಯಾದಾಗ ಸದ್ದು ಮತ್ತು ಅಕ್ಷರ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಾಗುತ್ತದೆ ಮತ್ತು ಆಗ ಅದರ ನೆರವಿಗೆ ಬರುವುದು ಅರ್ಥ. ಆದರೆ ಮೌನಕ್ಕೂ ಅರ್ಥವಿದೆ. ಮೌನಕ್ಕೂ ಅರ್ಥವನ್ನು ಸಂವಹನ ಮಾಡುವ ಶಕ್ತಿ ಕೂಡ ಇದೆ. ಸದ್ದು ಮತ್ತು ಅಕ್ಷರಕ್ಕೆ ಅದು ಹೆಚ್ಚು ಸುಲಭವಿದ್ದೀತೇ ಹೊರತು ಮೌನದ ಕಷ್ಟ ಏನಿದೆ, ಅದೇ ಶಬ್ದ ಮತ್ತು ಅಕ್ಷರದ ಹೆಚ್ಚುಗಾರಿಕೆ ಎಂದು ತಿಳಿಯಬೇಕಾದ್ದಿಲ್ಲ ಅನಿಸುವುದಿಲ್ಲವೆ?

ಮತ್ತಿದನ್ನು ಕೇವಲ ಒಂದೊ ಎರಡೋ ಇಂದ್ರಿಯಗಳಿಗೆ ಮಾತ್ರ ಅನ್ವಯಿಸಿ ನೋಡಬೇಕಾದ್ದೂ ಇಲ್ಲ. ಐದೇ ಇಂದ್ರಿಯಗಳು ಎನ್ನುವುದಾದರೆ ಅವೆಲ್ಲವುಗಳಿಗೂ ಇದೇ ತತ್ವವನ್ನು ಅನ್ವಯಿಸಿ ಅದರೆದುರು ನಿಲ್ಲಬಹುದು.

ಇದು ಕತೆ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳನ್ನೆಬ್ಬಿಸುವ ಹಲವು ನೆಲೆಗಳಲ್ಲಿ ಒಂದು. ಕತೆ ಮೌನದಲ್ಲಿ ಎಬ್ಬಿಸುವ ಈ ಪ್ರಶ್ನೆಗಳು ಕೂಡ ಸದ್ದು ಮಾಡುತ್ತವೆ. ಹಾಗಾಗಿ ಈ ಕತೆಯ ನಿರೂಪಕ ಮೌನಕ್ಕೆ ಸೇರಿ ಹೋಗುವ ನಿರ್ಧಾರಕ್ಕೆ ಬಂದಿದ್ದಾನೆ. ನಿಜಕ್ಕಾದರೆ ಕತೆ ಸುರುವಾಗುವುದೇ ಅಲ್ಲಿಂದ. ಕತೆಯ ಆರಂಭದ ಪ್ಯಾರಾ ಓದಿ. ಆಮೇಲೆ ನೀವು ಕತೆಯನ್ನು ಓದದೇ ಇರುವುದು ಸಾಧ್ಯವಿಲ್ಲ. ನಯರ್ ಮಸೂದ್ ಅವರ ಸಮಗ್ರ ಕತೆಗಳ ಸಂಕಲನವೂ ಇಂಗ್ಲೀಷಿನಲ್ಲಿ ಲಭ್ಯವಿದೆ. ಮತ್ತಿದನ್ನು ಕೂಡಾ ಅನುವಾದಿಸಿದವರು ಮೆಮೊನ್ ಅವರೇ. ಉರ್ದು ಕತೆಗಳ ಸಂಕಲನದ ಈ ಒಂದು ಮೊದಲ ಕತೆಯನ್ನು ಓದಿದ ಬಳಿಕ ನಾನು ನೇರವಾಗಿ ನಯರ್ ಮಸೂದ್ ಅವರ ಸಮಗ್ರಕ್ಕೆ ಹೊರಳಿಕೊಂಡೆ.

ಕತೆ ಸುರುವಾಗುವುದು ಹೀಗೆ:

OBSCURE DOMAINS OF FEAR AND DESIRE 
NAIYER MASUD

We kept looking at each other, in silence, for the longest time ever. Our faces didn’t betray any kind of curiosity. His eyes had an intensity, a brightness, but throughout this time, never for a moment did they seem to be devoid of feeling. I could not tell if his eyes were trying to say something or were merely observing me, but I felt we were coming to some silent understanding. All of a sudden a terrible feeling of despair came over me. I was experiencing it for the first time since I’d come to this house. Just then, his nurse placed her hand on my arm and led me out of the room. 

Outside, as I spoke with his nurse, I realized that my speech was a shortcoming and that the patient was travelling far ahead of me on a road I knew nothing about. 

I have given up talking, not looking. It isn’t easy to stop looking if one happens to possess a pair of eyes. Keeping quiet, even though one has a tongue, is relatively easy. At times I do get an urge to close my eyes. But so far they are still open. This may be due to the presence of the person who is looking after me.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, September 5, 2017

ತೆರೆದಷ್ಟೂ ತೆರೆದುಕೊಳ್ಳುತ್ತ ಹೋಗುವ ‘ತೆರೆ’

ಸುಬ್ರಾಯ ಚೊಕ್ಕಾಡಿಯವರು ತಮ್ಮ ಬರವಣಿಗೆಗೆ ಪ್ರೇರಣೆಗಳೇನು ಎನ್ನುವುದನ್ನು ವಿವರಿಸುತ್ತ ಅವರು ಬರೆದಿರುವುದನ್ನು ಓದಿ:

"......ಹೀಗಿದ್ದೂ ನಾನೊಬ್ಬ ಬರಹಗಾರನಾಗಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಹೆಚ್ಚೆಂದರೆ ನಾನು ನನ್ನ ತಂದೆಯವರಂತೆ ಯಕ್ಷಗಾನ ಪ್ರಸಂಗಕರ್ತ ಇಲ್ಲವೇ ಭಾಗವತನಾಗಬಹುದಿತ್ತೋ ಏನೋ. ಆದರೆ ನಾನು ಪ್ರಾಥಮಿಕ ಶಾಲಾ ಶಿಕ್ಷಕನಾದ ಮೇಲೆ ನನ್ನ ಬದುಕಿನಲ್ಲುಂಟಾದ ಪಲ್ಲಟಗಳು, ಆಘಾತಗಳು ಹಾಗೂ ಅಸಹನೀಯ ಒತ್ತಡಗಳು ನನ್ನ ಮೇಲೆ ಭಾರೀ ಪರಿಣಾಮವನ್ನುಂಟುಮಾಡಿದವು. ಬಾಳಿನ ನೋವಿನ ಹೊರೆಯನ್ನು ತಾಳಲಾರದೆ ತಂದೆ ಸ್ಕಿಜೋಫ್ರೇನಿಯಾ ಎಂಬ ಭಯಾನಕ ರೋಗಕ್ಕೆ ತುತ್ತಾದರು. ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಮನೆ ಹಾಗೂ ಶಾಲೆಗಳ ಹೊರೆ ಹೊತ್ತ ನಾನು ಪ್ರತಿದಿನ ಸುಮಾರು ಹನ್ನೆರಡು ಮೈಲಿಗಳ ಹಾದಿ ಸವೆಸುತ್ತಾ ಮತ್ತೆ ಏಕಾಂಗಿತನದತ್ತ ಜಾರುತ್ತಾ ಹೋದೆ. ಆ ಹಾದಿಯಾದರೋ ಗುಡ್ಡಗಾಡು, ಬಯಲು, ತೋಡುಗಳ ನಡುವೆ ಒಂಟಿಯಾಗಿ ತೆಪ್ಪಗೆ ಬಿದ್ದುಕೊಂಡಿದ್ದ ಪುಟ್ಟ ಹಾದಿ. ತಲ್ಲಣಗೊಳಿಸುವ ಭಯಾವಹ ಮೌನವನ್ನು ಒಳಗಿಟ್ಟುಕೊಂಡು ಕಾಡಿನ ಈ ಏಕಾಂತದಲ್ಲಿ ನಡೆಯುತ್ತಿದ್ದಂತೆ ಬದುಕಿನ ನೋವು, ವಿಷಾದಗಳು, ಸಮಾಜದಲ್ಲಿ ಅನುಭವಿಸಿದ ಅವಮಾನ, ತಿರಸ್ಕಾರಗಳು - ಕಾಡಿನಲ್ಲಿ ಹಕ್ಕಿಗಳ ಚಿಲಿಪಿಲಿ, ತೊರೆಯ ಹರಿವಿನ ಮಂಜುಳ ನಿನಾದ, ಸೂರ್ಯಕಿರಣಗಳ ನೆರಳು ಬೆಳಕಿನಾಟ, ಈ ವೈವಿಧ್ಯಪೂರ್ಣ ಹಸುರ ವೈಭವ ಮೊದಲಾದುವುಗಳೊಂದಿಗೆ ಮುಖಾಮುಖಿಯಾಗಿ ನನ್ನದೇ, ಕೇವಲ ನನ್ನದೇ ಆದ ಪುಟ್ಟ ಹೊಸ ಪ್ರಪಂಚವೊಂದನ್ನು ಸೃಷ್ಟಿಸತೊಡಗಿತು. ನಾನು ಕಂಗೆಡಿಸುವ ಹೊಸ ಪ್ರಪಂಚದಿಂದ ಕಂಗೊಳಿಸುವ ಈ ಒಳ ಪ್ರಪಂಚದಲ್ಲಿ ಬೆರೆಯುತ್ತಾ ಹೋದೆ. ಅಂದರೆ ಅನಿರೀಕ್ಷಿತವಾಗಿ ಬಿದ್ದ ಬಾಳಿನ ಅತೀ ಹೊರೆಯ ಭಾರದಿಂದ ಪಾರಾಗಲು ನನಗೊಂದು ಅಡಗುದಾಣವಾಗಿ ಬರವಣಿಗೆಯು ನಿಧಾನವಾಗಿ ನನಗೆ ಒದಗಿಬಂತು. ಯಕ್ಷಗಾನ ಭಾಗವತರಾಗಿದ್ದ ನನ್ನ ತಂದೆಯವರಿಗೊದಗಿದ್ದ ಸಂಗತಿಯನ್ನು ಕಂಡೇ ಭಯಗೊಂಡ ನಾನು ಅದರಿಂದ ದೂರ ಸರಿದು ಹೊಸ ಹಾದಿಯೊಂದನ್ನು ಹುಡುಕತೊಡಗಿದೆ."
(ಅರವಿಂದ ಚೊಕ್ಕಾಡಿ ಸಂಪಾದಕತ್ವದ ‘ಸಮಾಲೋಕ’ ಕೃತಿಯಿಂದ)
1980ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ‘ಸುವರ್ಣ ಸಂಪುಟ’ ಎಂಬ ಹೆಸರಿನಲ್ಲಿ 1966ರ ವರೆಗೆ ಪ್ರಕಟವಾದ ಕವಿತಾ ಸಂಕಲನಗಳಿಂದ ಆಯ್ದ ಕವನಗಳ ಒಂದು ಸಂಕಲನವನ್ನು ಪ್ರಕಟಿಸಿತ್ತಂತೆ. ತದನಂತರ ಅದರ ಮುಂದುವರಿಕೆಯಾಗಿ 1985ರಲ್ಲಿ ‘ರತ್ನ ಸಂಪುಟ’ ಎಂಬ ಹೆಸರಿನಲ್ಲಿ ಮತ್ತೆ ಸುಮಾರು 105 ಕವಿಗಳ ತಲಾ ಎರಡರಿಂದ ಐದರ ವರೆಗೆ ಕವಿತೆಗಳನ್ನು ಆಯ್ದು ಪ್ರಕಟಿಸಿತು. ಅಕಸ್ಮಾತ್ ಕಣ್ಣಿಗೆ ಬಿದ್ದು ಇದನ್ನು ಎತ್ತಿಕೊಂಡು ಬಂದೆ. ಇವತ್ತು ಲಭ್ಯವಿಲ್ಲದ, ಮುದ್ರಿತ ಪ್ರತಿಗಳು ಮುಗಿದ ಸಂಕಲನದಿಂದ ಆಯ್ದ ಅನೇಕ ಅತ್ಯುತ್ತಮ ಕವಿತೆಗಳು ನಮಗಿಲ್ಲಿ ಸಿಗುತ್ತಿರುವುದೇ ಒಂದು ಭಾಗ್ಯ. ಪಿ ಲಂಕೇಶರು ‘ಅಕ್ಷರ ಹೊಸ ಕಾವ್ಯ’ ಪ್ರಕಟಿಸುವಾಗ ಒಬ್ಬ ಕವಿಯ ಒಂದಕ್ಕಿಂತ ಹೆಚ್ಚಿನ ಕವಿತೆಗಳನ್ನು ನಮಗೆ ಕೊಡುತ್ತ ಹೋದರು. ಅದಕ್ಕೂ ಮೊದಲೇ ಇಂಥ ಒಂದು ಅಗತ್ಯ ಮನಗಂಡವರು ಇದ್ದರಲ್ಲ ಎನ್ನುವುದು ಅತ್ಯಂತ ಸಮಾಧಾನದ ಸಂಗತಿ. ಈ ರತ್ನಸಂಪುಟದ ಸಂಪಾದಕರನ್ನು ಗಮನಿಸಿ: ಪುತಿನ, ಜಿಎಸೆಸ್, ಕಣವಿ, ಪ್ರಭುಶಂಕರ, ಹಾ ಮಾ ನಾಯಕ, ನಿಸಾರ್ ಮತ್ತು ಕೆ ಟಿ ವೀರಪ್ಪ.

ಈ ಪುಸ್ತಕದಲ್ಲಿ ಸಿಕ್ಕಿದ ನಮ್ಮ ಸುಬ್ರಾಯ ಚೊಕ್ಕಾಡಿಯವರ ಕವಿತೆಗಳಲ್ಲಿ ನನಗೆ ತುಂಬ ಹಿಡಿಸಿದ ಒಂದನ್ನು ಇಲ್ಲಿ ಹಂಚಿಕೊಳ್ಳುತ್ತಲೇ ನನ್ನ ಖುಶಿಯನ್ನು ಹೇಳಿಕೊಳ್ಳುವುದು ನನ್ನ ಉದ್ದೇಶ. ಕವಿತೆಯ ಹೆಸರು ‘ತೆರೆ’. ಅದರ ಪೂರ್ಣಪಠ್ಯವನ್ನು ಚೊಕ್ಕಾಡಿಯವರ ಸರಳ ಸಹೃದಯ ಪ್ರೀತಿ ಕ್ಷಮಿಸೀತೆಂಬ ಭರವಸೆಯಿಂದ ಇಲ್ಲಿ ಕಾಣಿಸಿದ್ದೇನೆ.

ಈ ಕವಿತೆಯ ಹೆಸರು ‘ತೆರೆ’. ಗಂಡು ಹೆಣ್ಣಿನ ಒಂದು ರಾತ್ರಿಕಾಲದ ಏಕಾಂತದ ಸನ್ನಿವೇಶ ಇದು ಎಂದು ಭಾವಿಸಿಕೊಳ್ಳಬಹುದು. ಮೊದಲ ಸಾಲು ‘ರಾತ್ರಿ ಕೂದಲಿನಲ್ಲಿ ಬೆರಳಾಡುತಿರುವಾಗ’ ಎನ್ನುತ್ತದೆ. ಅಥವಾ ರಾತ್ರಿ ಕೂದಲಿನಲ್ಲಿ ಬೆರಳಾಡುತಿರುವಾಗ ಬಿಚ್ಚುವುದು ಎಂದೂ, ಎರಡನೆಯ ಸಾಲಿನಿಂದ ಸ್ವಲ್ಪ ಕಡಪಡೆದು, ಓದಬಹುದು. ಕೂದಲಿನಲ್ಲಿ ಬೆರಳಾಡಿಸಿದಾಗ ಮುಡಿ ಬಿಚ್ಚಿಕೊಂಡಿತು ಎನ್ನುವ ಅರ್ಥದಲ್ಲಿ. ಏಕೆಂದರೆ, ಎರಡನೆಯ ಸಾಲು, ‘ಬಿಚ್ಚುವುದು - ಮಾದಕದ ಕಣ್ಣು’ ಎಂದಿದ್ದರೂ ಮೂರನೆಯ ಸಾಲಿನಲ್ಲಿ ಮುಚ್ಚುವುದು ಎಂದಿದೆ! ಕಣ್ಣೇ ಬಿಚ್ಚುವುದು ಮುಚ್ಚುವುದು ಮಾಡುತ್ತಿದೆಯೆ? ಇರಬಹುದು! ಬೆರಳಾಡಿಸಿದ್ದೇ ಬಿಚ್ಚಿಕೊಂಡ ಮುಡಿ ಅಥವಾ, ಬೆರಳಾಡಿಸುತ್ತಿರುವ ಸುಖಕ್ಕೆ ಬಿಚ್ಚಿಕೊಂಡು-ಮುಚ್ಚಿಕೊಂಡು ಸುಖಿಸಿದ ಕಣ್ಣು ‘ಬಿಚ್ಚಲೆಳಸುವುದು ಬದುಕನ್ನು’ ಎನ್ನುತ್ತದೆ ನಾಲ್ಕನೆಯ ಸಾಲು. ಕವಿತೆಯ ಎಲ್ಲ ಸುರತ-ನಿರತ ಗಮ್ಯವನ್ನು ಈ ನಿಟ್ಟಿನಿಂದಲೇ ಕಾಣುವುದಿದೆ ನಮಗೆ. ಕಣ್ಣು ಎನ್ನುವುದನ್ನು ಈ ರಾತ್ರಿಯ ಮಾದಕ ಸನ್ನಿವೇಶದಲ್ಲಿ ಬೇರೊಂದು ಅರ್ಥದಲ್ಲೂ ನೀವು ಕಲ್ಪಿಸಿಕೊಳ್ಳಲು ನನ್ನದೇನೂ ಅಡ್ಡಿಯಿಲ್ಲ. ಇಂದ್ರನಿಗೆ ಗೌತಮ ಕೊಟ್ಟ ಶಾಪದಿಂದ ಅವನ ಮೈಯೆಲ್ಲ ಸಹಸ್ರಯೋನಿಗಳಾದವಂತೆ. ಇಲ್ಲ, ಅವನು ಸಹಸ್ರಾಕ್ಷನಾದ ಎನ್ನುವವರೂ ಇದ್ದಾರೆ. ಈ ಹೆಣ್ಣಿಗೂ ಕಣ್ಣಿಗೂ ಏನು ಮೋಹವೋ ಎಂದುಕೊಳ್ಳಬಹುದು.

ಇದೆಲ್ಲ ನನ್ನ ಕಪೋಲ-ಕಲ್ಪನೆಯೇನಲ್ಲ ಮತ್ತೆ. ಬನ್ನಿ ಮುಂದಿನ ಚರಣಕ್ಕೆ.

ಪಟಪಟನೆ ತೆರೆದು ಪಕಳೆಗಳಂಥ ಪರಿಗಳ
ಸ್ನೇಹ ಪಾತ್ರೆಯ ಹಿಡಿದು, -ನಗ್ನ - ಕಾದಾಗಲೂ
ಬೆರೆಯಲಿಲ್ಲ. ಬೆರೆಯುವುದೆ ಇಲ್ಲವೋ ಮಣ್ಣು - ನೀರು?

ಮಣ್ಣು ನೀರು ಬೆರೆಯುವುದು! ವಾಹ್, ಎಂಥ ಪರಿಕಲ್ಪನೆಯಿದು! ಇದರಲ್ಲಿ ಏನಿದೆ ಏನಿಲ್ಲ. ಮಣ್ಣು ನೀರು ಬೆರೆತಲ್ಲದೆ ಇದೆಯೆ ಸೃಷ್ಟಿ? ಮಣ್ಣಿನ ಫಲವತ್ತತೆಯೇ ನೀರಿನ ಗುಣದಲ್ಲಿದೆಯೋ ಎಂಬಂತೆ, ನೀರಿನ ಸತ್ವವೇ ಮಣ್ಣಿನ ಘಮದಲ್ಲಡಗಿತ್ತೋ ಎಂಬಂತೆ ಇದೊಂದು ಸೃಷ್ಟಿಯ ಚಿದಂಬರ ರಹಸ್ಯ. ದೇವೀ ಸ್ತುತಿಯಲ್ಲೂ ಇದು ಬರುತ್ತದೆ, ಗಂಧದ್ವಾರೇ| ಧರಾದರ್ಷೇ| ಧರೆಯೊಂದಿಗೆ ಒಂದು ಘರ್ಷಣೆ ಇದೆ, ಗಂಧ ಘಮಿಘಮಿಸಲು! ಆದರೆ ಮನುಷ್ಯ ಕೊನೆಗೆ ಸೇರುವುದೂ ಇದೇ ಮಣ್ಣಿಗೆ. ಕೊನೆಯಲ್ಲಿ ಅವನ ಗಂಟಲಿಗೆ ಸುರಿಯುವುದೂ ಇದೇ ಒಂದುದ್ಧರಣೆ ನೀರನ್ನು.

ನಿಮಗೀಗ ತಪ್ಪದೇ ನೆನಪಾಗುವವರು ಗೋಪಾಲಕೃಷ್ಣ ಅಡಿಗರು.

ಯಾವ ಮೋಹನ ಮುರಲಿ ಕರೆಯಿತೊ| ದೂರ ತೀರಕೆ ನಿನ್ನನು|
ಯಾವ ಬೃಂದಾವನವು ಸೆಳೆಯಿತೊ| ನಿನ್ನ ಮಣ್ಣಿನ ಕಣ್ಣನು|

ಎನ್ನುತ್ತಾರೆ ಅಡಿಗರು. ಬೃಂದಾವನವೇ ಮಣ್ಣಿನದು. ದೇಹ ತ್ಯಾಗ ಮಾಡಿದ ಯತಿಗಳಿಗೆ ಕಟ್ಟುವುದು ಕೂಡ ಬೃಂದಾವನವೆ. ಮತ್ತೀ ಮಣ್ಣಿನ ಕಣ್ಣು ಎಂದರೇನು? ಅದು ಯಾಕೆ ಮತ್ತು ಹೇಗೆ ಸೆಳೆಯುತ್ತದೆ?

ಈ ಭೂಮಿಗೆ ಒಂದು ಕಣ್ಣಿದ್ದರೆ ಅದನ್ನು ಮಣ್ಣಿನ ಕಣ್ಣು ಎನ್ನಬಹುದೆ? ಅಥವಾ, ಭೂಮಿಯನ್ನು ಹೆಣ್ಣು ಎನ್ನುತ್ತೇವೆ. ಭೂಗರ್ಭ ಎನ್ನುವ ಶಬ್ದವೂ ಬಳಕೆಯಲ್ಲಿದೆ. ಅಹಲ್ಯಾ ಅಂದರೆ ಯಾವತ್ತೂ ಉಳಲ್ಪಡದ ಭುವಿ ಎನ್ನುವ ಅರ್ಥದಲ್ಲೇ ಈ ಭೂಮಿಯ ಒಂದು ಗರ್ಭಕ್ಕೆ ಒಂದು ದ್ವಾರ ಇರುವುದಾದರೆ, (ಭೂಮಿ ತಾಯ ಮಗಳಾದ ಸೀತೆ ಕೊನೆಯಲ್ಲಿ ಭೂಗರ್ಭವನ್ನೇ ಹೊಕ್ಕಳು ಎನ್ನುತ್ತಾರಲ್ಲ, ಆಗ ಆಕೆ ಪ್ರವೇಶಿಸಿದ ದ್ವಾರ?) ಅದನ್ನು ಮಣ್ಣಿನ ಕಣ್ಣು ಎಂದು ಸೂಚ್ಯವಾಗಿ ಹೇಳಬಹುದೆ? ಅಂಥ ಮಣ್ಣಿನ ಕಣ್ಣು ಸೆಳೆದಾಗ ಸೀತೆ ಭೂಗರ್ಭ ಪ್ರವೇಶಿಸಿದಳೆ? ಮಣ್ಣಿನ ಕಣ್ಣು ಸೆಳೆಯುವುದೆಂದರೇ ಮೃತ್ಯು ಸೆಳೆಯುವುದೆ?

ಕಾಮದ ಬಗ್ಗೆ ಎಷ್ಟು ಕವಿತೆಗಳು ಬಂದಿಲ್ಲ ನಮ್ಮಲ್ಲಿ? ಬಹುಶಃ ನವ್ಯ ಕಾಲಘಟ್ಟದಲ್ಲಿ ಇದಕ್ಕೊಂದು ಉಚ್ಛ್ರಾಯ ಪ್ರಾಪ್ತಿಯಾಗಿತ್ತೆನ್ನಬಹುದೇನೊ. ಗಂಗಾಧರ ಚಿತ್ತಾಲರ ಕವಿತೆಗಳಿಂದ ಹಿಡಿದು ಇವತ್ತಿಗೂ ಕಾಮ, ಪ್ರೇಮ, ಗಂಡು ಹೆಣ್ಣು ಸಮಾಗಮದ ಪರಿಕಲ್ಪನೆಯನ್ನು ಕಾವ್ಯ ಬಳಸಿಕೊಳ್ಳುತ್ತಲೇ ಬಂದಿದೆ. ಅದನ್ನು ಎಷ್ಟೆಲ್ಲ ರೋಚಕವಾಗಿ, ಹೊಸ ಹೊಸ ಪ್ರತಿಮೆ/ಪರಿಕಲ್ಪನೆಗಳಲ್ಲಿ ಹೆಣೆದು ಹೇಳಿದರೂ ಹೆಚ್ಚೇನೂ ಕಷ್ಟವಿಲ್ಲದೆ ಅರ್ಥವಾಗುವಂತೆಯೇ ಒಟ್ಟಾರೆಯಾಗಿ ಅದರಲ್ಲಿ ಹೆಚ್ಚೇನೂ ವಿಶೇಷವಿಲ್ಲವಲ್ಲ ಎನಿಸುವುದೂ ಸಾಮಾನ್ಯವಾಗಿದೆ. ಆದರೆ ಚೊಕ್ಕಾಡಿಯವರ ಕವಿತೆಯಲ್ಲಿ ಆವತ್ತು, ಸುಮಾರು ಐವತ್ತು ವರ್ಷಗಳಷ್ಟು ಹಿಂದೆಯೇ, ಕಾಮ ನಿರ್ವಹಿಸಿದ ಪಾತ್ರವನ್ನು ಗಮನಿಸುವುದೇ ಇಲ್ಲಿ ನನಗೆ ಮುಖ್ಯವೆನಿಸಿದ್ದು. ಅಥವಾ ಇದನ್ನು ಹೀಗೆಯೂ ಹೇಳಬಹುದು, ಕಾಮವನ್ನು ಸುಬ್ರಾಯಚೊಕ್ಕಾಡಿಯವರು ತಮ್ಮ ಕವಿತೆಯಲ್ಲಿ ಬಳಸಿಕೊಂಡು ಸಾಧಿಸಿದ್ದನ್ನು, ಅದು ವಿಶಿಷ್ಟವೂ ವಿಶೇಷವೂ ಆಗಿರುವುದರಿಂದಲೇ, ಗಮನಿಸುವುದೇ ನನಗೆ ಮುಖ್ಯವಾಗುತ್ತದೆ.

ಗಂಟು ಸಡಿಲುವುದಿಲ್ಲ. (ಮುಡಿಯ ಕೂದಲಗಂಟೆ ಅಥವಾ ಹುಟ್ಟು ಸಾವಿನ ಬ್ರಹ್ಮಗಂಟೆ?)
ಬೆರಳು ಮುಟ್ಟುವುದಿಲ್ಲ ಮೈಯ. (ತಲೆಗೂದಲ ನೇವರಿಸುತ್ತಿತ್ತಲ್ಲ ಬೆರಳು! ಅದೇಕೆ ಮೈಯ ಮುಟ್ಟಲು ಹಿಂಜರಿದಿದೆ ಇಲ್ಲಿ?) ನರವುಬ್ಬಿ ಸಿಡಿಯುವುದಿಲ್ಲ.

ನರವುಬ್ಬಿ ಸಿಡಿಯುವುದು! ಈ ಸಿಡಿತಕ್ಕೆ ಒಂದು ಗಮ್ಯವಿದೆ, ಅದೇನು? ‘ಹುಟ್ಟನನುಭವಿಸಿಲ್ಲ. ಸಾವು ಕಾಣುವುದಿಲ್ಲ.’ ಈ ಶಬ್ದಪ್ರಯೋಗವೇ ‘ಭಯಂಕರ’ ಅರ್ಥಪರಂಪರೆಯುಳ್ಳದ್ದು. ಹುಟ್ಟನನುಭವಿಸುವುದು ಹೇಗೆ ಹೇಳಿ? ಒಂದು ಗಂಡಿಗೆ ಹೆರಿಗೆಯ ಅನುಭವ ಸಾಧ್ಯವೇ ಎಂದು ಮೊನ್ನೆ ಮೊನ್ನೆ ಸುಮಂಗಲಾ ಪ್ರಶ್ನಿಸಿದ್ದರು. ಯಾರೋ ಪ್ರಸವವೇದನೆಯನ್ನು ಸೃಜನಶೀಲ ಬರವಣಿಗೆಯ ಕಷ್ಟನಷ್ಟಗಳಿಗೆ ಹೋಲಿಸಿ ಮಾತನಾಡಿದ ಸಂದರ್ಭವನ್ನಿಟ್ಟುಕೊಂಡು. ಗಂಡಿಗೆ ನರವುಬ್ಬಿ ಸಿಡಿಯುವ ಅನುಭವವೇ ಬಹುಶಃ ಹುಟ್ಟಿನನುಭವವನ್ನು ಕೊಡಬೇಕು. ಅಷ್ಟರ ಮಟ್ಟಿಗೆ ಅದು ಸಿಡಿತವೇ. ಅಷ್ಟು ಮಾತ್ರವಲ್ಲ, ಅದು ಸಾವನ್ನೂ ಕಾಣಿಸಬೇಕು ಎನ್ನುತ್ತಾರೆ ಚೊಕ್ಕಾಡಿ. ಸಾವಿನ ನೆರಳೇ ಇಲ್ಲದ ಹುಟ್ಟು ಎನ್ನುವುದುಂಟೆ?! ಹುಟ್ಟಿದಾಗ ಹುಟ್ಟುವುದೇ ಸಾವಲ್ಲವೆ?

ಕಾಮವನ್ನು ಹಿಂಸೆಗೆ ಸಮೀಕರಿಸಿದವರು ಗಾಂಧಿ. ತಮ್ಮ ಇಳಿವಯಸ್ಸಿನಲ್ಲಿ ಅವರು ನಗ್ನರಾಗಿ ಹರೆಯದ ಹುಡುಗಿಯರ ಜೊತೆ ಮಲಗುತ್ತಿದ್ದರು ಎನ್ನುತ್ತಾರೆ. ಅದನ್ನವರು ತಮ್ಮಲ್ಲಿ ಇನ್ನೂ ಕಾಮ (ಹಿಂಸೆ) ಜೀವಂತವಾಗುಳಿದಿದೆಯೇ ಎನ್ನುವುದನ್ನು ಕಂಡುಕೊಳ್ಳುವುದಕ್ಕಾಗಿಯೇ ಮಾಡುತ್ತಿದ್ದರಂತೆ. ಇಲ್ಲಿಯೇ ಅವರ ಈ ನಿಲುವು ಟಾಲ್‌ಸ್ಟಾಯ್ ಜೊತೆಗೂ ತಳುಕು ಹಾಕಿಕೊಂಡಿದೆ. ಸಾಧ್ಯವಾದರೆ ಟಾಲ್‌ಸ್ಟಾಯ್ ಅವರ ‘ಕ್ರೊಯೆತ್ಸರ್ ಸೊನಾಟ’ ನೀಳ್ಗತೆಯನ್ನು ಓದಿ. ಚೊಕ್ಕಾಡಿಯವರು ಕಾಮವನ್ನು ಹುಟ್ಟಿನೊಂದಿಗೆ ಎಂತೋ ಸಾವಿನೊಂದಿಗೂ ಸಮೀಕರಿಸಿ ನೋಡುತ್ತಾರೆ ಎನಿಸಿದೆ ನನಗೆ. ಅಂದರೆ, ಈ ಸಾವು ಬರಿಯ ದೇಹದ್ದೇ ಎಂದಲ್ಲ. ಒಂದರ್ಥದ ಶರಣಾಗತಿಯಿದೆ ಕಾಮದಲ್ಲಿ. ಅಹಂ ಬಿಟ್ಟು, ನಗ್ನರಾಗಿ, ನಿದ್ದೆಯಲ್ಲಿ ಅಸ್ಮಿತೆಯ ಅಹಂಕಾರವನ್ನು ಕಳೆದುಕೊಂಡು ಶರಣಾದ ಹಾಗೆ ಶರಣಾಗಿ ಅನುಭವಿಸುವ ಸುಖ ಅದು, ಸಾವೂ ಅದೇ. ಕಾಮ ಎನ್ನುವುದು ಭಾಷೆಯ ಹಂಗಿಲ್ಲದೆ ಎರಡು ದೇಹಗಳು ನೇರವಾಗಿ ಮಾತನಾಡಿಕೊಳ್ಳುವ ಕ್ರಿಯೆಯಾಗುವುದು ಆಗ. ಇಲ್ಲವಾದಲ್ಲಿ ಅದು ಹಿಂಸೆ, ಅದು ಸಾವು. ಬದುಕು ಅಥವಾ ಸಾವು, ಆಯ್ಕೆ ತೆರೆದಿದೆ, ತೆರೆದಿದೆಯೆ? ತೆರೆ!

ಭ್ರಮಣವೇ ಭ್ರಮೆಯಾಗಿ ಹರಡಿ ಜಾಲದ ಹಾಗೆ,
ಮನಸಿನೋವರಿಯಲ್ಲಿ ಬೆಳಕಿಲ್ಲ.
ಆಳದಾಚೆಗೂ ದಾರಿ; ತೆರೆಯಿಲ್ಲ, ತೆರೆದಿಲ್ಲ.

ಮನಸಿನೋವರಿಯಲ್ಲಿ ಬೆಳಕಿಲ್ಲ. ಮನಸ್ಸಿನ ಒಳಮನೆಯಲ್ಲಿ ಸದಾ ಕತ್ತಲೆ. ಹಾಗೆಯೇ ದೇಹದ ಒಳಮನೆಯಲ್ಲೂ ಕತ್ತಲೆಯೇ. ಅಲ್ಲಿಯೂ ಆಳದಾಚೆಗೂ ದಾರಿಯಿದೆ, ತೆರೆ ಇಲ್ಲವಂತೆ. ಸರಿಯೇ. ಆದರೆ ಅದು ತೆರೆದೂ ಇಲ್ಲ ಎನ್ನುತ್ತಾರೆ ಚೊಕ್ಕಾಡಿ. ದೇಹ ಕೆಲವೊಮ್ಮೆ ಕೆಲವರಿಗೆ ಬಿಟ್ಟುಕೊಳ್ಳುವುದಿಲ್ಲ. ಬಸ್ಸಿನಲ್ಲಿ ನಿಮ್ಮ ಪಕ್ಕ ಕೂತ ನಿಮ್ಮದೇ ಲಿಂಗದ ಮನುಷ್ಯ ಕೂಡ ನಿಮಗೆ ಹಿತ ತರುವುದಿಲ್ಲ, ಅವನು ಎಷ್ಟೇ ಅಪರಿಚಿತನಾಗಿದ್ದರೂ, ಕೆಲವೇ ಹೊತ್ತಿನಲ್ಲಿ ಎದ್ದು ಹೋಗುತ್ತಾನೆಂದು ಕೊಂಡರೂ ಏನೋ ಅಸುಖ, ಅಹಿತ. ಹಾಗೆಯೇ ಅಹಲ್ಯೆಗೂ ಗೌತಮನಿಗೂ ಒಂದು ಹಂತದಲ್ಲಿ ಹಿತ ತಪ್ಪಿತಲ್ಲ. ಮನುಷ್ಯ ಕಲ್ಲಾಗುವುದು ಹಾಗೆ. ಮನಸ್ಸು ಕೂಡ ಸುಲಭಕ್ಕೆ ತೆರೆದುಕೊಳ್ಳುವುದಿಲ್ಲವಲ್ಲ. ಅಬ್ಬಾ ಅದರ ಹಠವೇ! ಬಾಗಿಲು ಹಾಕಿಕೊಂಡಾಗೆಲ್ಲ ಉಳಿಯುವುದು ಕತ್ತಲೆಯೇ. ನಿಮಗೆ ಬೆಳಕು ಬೇಕಿದ್ದರೆ ತೆರೆ ಸರಿಸಿ, ತೆರೆದುಕೊಂಡು ಸ್ವೀಕಾರಕ್ಕೆ ನೀವು ಸಿದ್ಧರಾಗಲೇ ಬೇಕು. ಯಾವುದರ ಸ್ವೀಕಾರ ಇಲ್ಲಿ? ಬದುಕಿನ ಸ್ವೀಕಾರ ಮತ್ತು ಅದರ ನೆರಳಾದ ಸಾವಿನ ಸ್ವೀಕಾರವೂ. ಆದರೆ ಜಿಜ್ಞಾಸೆಯಿದೆ ಕವಿಗೆ. ನಮಗೆ, ಎಲ್ಲರಿಗೆ, ಪ್ರಶ್ನೆಯ ಮೂರ್ತಿಗೆ.

ತನ್ನೆದುರೆ ಬರುವ-ಸರಿಯುವ ಬದುಕು ಬರುತ್ತಿದೆಯೊ ಹೋಗುತ್ತಿದೆಯೊ ಎನ್ನುವ ಜಿಜ್ಞಾಸೆಯಿದು. ಇಷ್ಟು ಸಾಕಪ್ಪ!
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, August 8, 2017

ಅಮೀನ... ನೀನೆಲ್ಲಿ?

ಇದು ಜ ನಾ ತೇಜಶ್ರೀಯವರು ಮಂಗಳೂರಿನ ಬಹುಭಾಷಾ ಕವಿಗೋಷ್ಠಿಯಲ್ಲಿ ಓದಿದ ನಾಲ್ಕು ಕವಿತೆಗಳಲ್ಲಿ ಒಂದು. (ಪ್ರಜಾವಾಣಿ ಮುಕ್ತಛಂದದ ಆಗಸ್ಟ್ 28, 2016ರ ಸಂಚಿಕೆಯಲ್ಲಿದೆ.) ‘ಉಸ್ರುಬಂಡೆ’ ಸಂಕಲನದ ‘ಗಾಂಧಿ ನನಗೆ ಗೊತ್ತು’ ಕವಿತೆಯನ್ನಲ್ಲದೆ ಇನ್ನೂ ಎರಡು ಕವಿತೆಗಳನ್ನು ಅವರು ಆವತ್ತು ಓದಿದರು. ಅಹಲ್ಯೆಯ ಕುರಿತ ಒಂದು ಕವಿತೆ ಮತ್ತು ‘ಯಕ್ಷಿಣಿ ಕನ್ನಡಿ’ ಎಂಬ ಇನ್ನೊಂದು ಕವಿತೆಯನ್ನೂ ಸೇರಿ ಎರಡೂ ಕವಿತೆಗಳು ಇನ್ನೂ ಎಲ್ಲಿಯೂ ಕಾಣಿಸಿಕೊಂಡಂತಿಲ್ಲ. ಅಹಲ್ಯೆ ಕುರಿತ ಕವಿತೆಯಂತೂ ಆವತ್ತು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತ್ತೆಂದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ. ಅಧ್ಯಕ್ಷತೆ ವಹಿಸಿದ್ದ ಪ್ರಸಿದ್ಧ ಯಕ್ಷಗಾನ-ತಾಳಮದ್ದಲೆಯ ಅರ್ಥಧಾರಿ, ‘ತತ್ತ್ವಮನ’, ಭಾರತೀಯ ದರ್ಶನಗಳ ಕುರಿತ ಕೃತಿಗಳನ್ನು ರಚಿಸಿದ ಡಾ||ಎಂ ಪ್ರಭಾಕರ ಜೋಶಿಯವರಂತೂ ಅಹಲ್ಯೆಯ ಈ ಹೊಸನಿಟ್ಟಿನ ಪರಿಕಲ್ಪನೆಯ ಕುರಿತು ವಾಹ್! ವಾಹ್! ಎನ್ನುತ್ತಲೇ ಈ ಕವನ ಕರುಣಿಸಿದ "ಸ್ಪರ್ಶ"ಕ್ಕೆ ಮಾರುಹೋದಂತಿತ್ತು. ಕವನ ಮುಗಿಯುವುದೂ ಸ್ಪರ್ಶ ಕುರಿತ ಅಂಥ ಒಂದು ಸಾಲಿನೊಂದಿಗೇನೆ.

ಈ ಕೊಳಲ ಕವಿತೆಯ ಸೊಗಡು ನೋಡಿ. ಹೊನಲು ಏರಿದಂತೆ ಹೊಳಹುದೋರಿ ಮರೆಯಾದ ಬೆಳಕನ್ನು ಅರಸಿ ಲಗುಬಗೆಯಿಂದ ಅವಳು ಅವಸರಿಸಿ ಓಡುತ್ತಿದ್ದಾಳೆ. ಇಲ್ಲಿ ಮಾವಿನ ತೋಪಿನ ನಡುವಿರುವ ಕಲ್ಲಬಾವಿಯ ಒಂದು ಚಿತ್ರವಿದೆ. ಅದೆಷ್ಟು ರಮ್ಯವಾಗಿದೆ ಮತ್ತು ಪರಿಪೂರ್ಣವೂ ಆಗಿದೆ ಎಂದರೆ ಯಾವುದೋ ಬೆಳದಿಂಗಳ ಒಂದು ರಾತ್ರಿ ನಾವು ಇಲ್ಲಿ ತಂಗಿದ್ದ ನೆನಪು ಬಂದಂತಾಗುತ್ತದೆ! ಮಾತ್ರವಲ್ಲ, ಕವಿತೆ ಕೊಡುವ ಚಿತ್ರದಲ್ಲಿ ಎಲ್ಲಿಯೂ ಮಳೆ ಸುರಿದು ನಿಂತ ಹೊಳಹು ಇಲ್ಲ. ಆದರೂ ನನಗೆ ಅಲ್ಲೆಲ್ಲ ಪಾದದಡಿಯ ಹುಲ್ಲು,ಗರಿಕೆಗಳೂ ನೀರಲ್ಲಿ ತೊಯ್ದಂತೆ, ಮಾವಿನ ಮರಗಳೆಲ್ಲ ಗಾಳಿ ಬೀಸಿದಾಗ ಮಳೆ ನೀರ ಹನಿಗಳನ್ನು ಬರ್ರನೆ ಸುರಿಸುತ್ತಿದ್ದಂತೆ ಅನಿಸುತ್ತಿದೆ. ಮುಂದಿನ ಚರಣದಲ್ಲಿ ಇದೇ ನಿಜವೇನೋ ಎಂದೂ ಅನಿಸುವಂತಿದೆ ನೋಡಿ...

ಇಡೀ ಚರಣವನ್ನು ಒಂದೇ ಗುಟುಕಿಗೆ ಗ್ರಹಿಕೆಗೆ ತೆಗೆದುಕೊಳ್ಳಲು ಕಷ್ಟವಾಗುವಷ್ಟು (ಓವರ್ ಡೋಸ್!) ಇದು ತೇಜಸ್ಸಿನಿಂದ ಹೊಳೆಯುತ್ತಿದೆ. ಇಲ್ಲಿ ಯಾರೋ ಬಿಕ್ಕಿದಂತಿದೆ. ಬಿಕ್ಕುತ್ತಿರುವುದು ಯಾರೂ ಅಲ್ಲ, ಇಡೀ ಪ್ರಕೃತಿ. ಬೆಳಕು ಚೆಲ್ಲುತ್ತಿರುವ ಚಂದ್ರಮ ಬಿಕ್ಕುತ್ತಿದ್ದಾನೆ, ಕಲ್ಲಬಾವಿಯ ನೀರು ಬಿಕ್ಕುತ್ತಿದೆ, ತೊಟ್ಟಿಕ್ಕುತ್ತಿರುವ ತೋಪಿನ ಮರಗಳೆಲ್ಲವೂ ಬಿಕ್ಕುತ್ತಿವೆ! ಇಲ್ಲಿ ಹಿಕ್ಕಲು ನೀರ ಹರಿವು ಎನ್ನುವ ಪ್ರಯೋಗವಿದೆ ಗಮನಿಸಿ. ಹಿಕ್ಕುವುದು ಎನ್ನುವ ಶಬ್ದವೇ ಕೇವಲ ಅನುಭವಕ್ಕೆ ನಿಲುಕುವಂಥಾದ್ದು. ಅರ್ಥಕ್ಕೆ ಸಿಲುಕುವುದು ಆಮೇಲಿನ ಪ್ರಕ್ರಿಯೆ. ಹಾಗೆಯೇ ‘ದಾಟುತ್ತ ಸಾರುವೆಯ ಕತ್ತಲೆಯ ಒಳಹೊಕ್ಕಳು’ ಎಂಬ ಸಾಲು! ಸಾರುವುದು ಎನ್ನುವಲ್ಲೇ ಚಲನೆ ಇದೆ. ಆದರೆ ಸಾರುವೆ ಎಂದರೆ ಸೇತುವೆ, ಏಣಿ ಎರಡೂ ಆಗುತ್ತದೆ. ಇದು ಹೊಮ್ಮಿಸುವ ಅರ್ಥವ್ಯಾಪ್ತಿಯನ್ನು ಸ್ವೀಕರಿಸಿ! ಕತ್ತಲ ಕಣ್ಣಿಗೆ ಕಣ್ಣು ನೆಟ್ಟು ಅವಳು ಏರಿ ದಾಟುತ್ತಿರುವುದೇನನ್ನು? ಏರಿದರೂ ದಾಟಿದರೂ ಹೊಕ್ಕಿದ್ದು ಕತ್ತಲನ್ನೇ. ಅದೂ ಹೇಗೆ? ಮೊಗ್ಗೊಳಗೆ ಪರಾಗ ಮಿಲುಗುವಂತೆ ಕತ್ತಲೆಯ ಒಳಹೊಕ್ಕು ಸೇರಿಕೊಳ್ಳುತ್ತಾಳವಳು! ಆ ಮಿಲುಗುವುದು ಎಂಬ ಪ್ರಯೋಗ ಗಮನಿಸಿ. ಮಿಲನ, ಮಿಲಾಯಿಸು, ನಿಮೀಲಿತ ಎಲ್ಲ ಕೇಳಿದ್ದೇವೆ, ಅಲ್ಲವೆ? ಮಿಲುಗುವುದು ಹೊಸದು! ಆಗಲೇ ಹೇಳಿದಂತೆ ಇಂಥ ಪ್ರಯೋಗಗಳು ಮೊದಲು ಅನುಭವಕ್ಕೆ ದಕ್ಕುತ್ತವೆ, ಅರ್ಥಕ್ಕೆ ಕೊಂಚ ತಡವಾಗಿ, ತಡಕಿ ಹುಡುಕಿದರೆ ದಕ್ಕುತ್ತವೆ. ಆದರೆ ರಸಗ್ರಹಣಕ್ಕೆ ತೊಡಕಿಲ್ಲದಂತೆ ಕೈಹಿಡಿದು ನಡೆಸುತ್ತವೆ ಕೂಡ.

ಹಕ್ಕೆದಲೆ ಎಂದರೇನು? ಹಕ್ಕೆ ಎಂದರೆ ಹಕ್ಕಿಗೂಡು. ಅಲೆ ಎನ್ನುವಲ್ಲಿ ಅನಿವಾರ್ಯವಾಗಿ ನಿಮಗೆ ನೆನಪಾಗುವುದು ಕಲ್ಲಬಾವಿಯ ನೀರು. ಮಿಸುಕಾಟ, ರೆಕ್ಕೆಬಡಿತ ಹಕ್ಕಿಯದ್ದೇ. ಅಲ್ಲಿ ಹಕ್ಕಿಗೂಡಿನಲ್ಲಿ ಒಂದು ಮಿಸುಕಾಟವೂ ಇದೆ, ಅದು ಒಂದು ಅಲೆಯನ್ನೂ ಎಬ್ಬಿಸಿದೆ. ಅಲೆಗೆ ದಡ ಸೋಕಿದಾಗಲೆ ಮುಕ್ತಿ ಅಲ್ಲವೆ? ದಡ ಯಾರು? ಅಮೀನ! ಅಲ್ಲಿ ಹಕ್ಕಿಗೂಡಿನ ಹಕ್ಕಿಗಳ ಮರುನಿದ್ದೆಯ ಹಂಬಿನಲ್ಲೇ (ಹಂಬು - ಗಮನಿಸಿ. ಹಂಬು ಎನ್ನುವುದು ಇಲ್ಲಿ ಹಂಬಲ, ನಿದ್ದೆಯ ಮಂಪರು ಎನ್ನುವ ಅರ್ಥ ಕೊಡುತ್ತಲೇ ಬಳ್ಳಿ, ಬಿಳಲು ಎನ್ನುವ ಅರ್ಥವನ್ನೂ ಸ್ಫುರಿಸುತ್ತಿದೆ. ಬಿಳಲಿಗೆ ಜೋತು ಬಿದ್ದಂತಿರುವ ಒಂದು ಸ್ಥಿತಿಯ ಚಿತ್ರವನ್ನೂ ಇದು ಮನಸ್ಸಿಗೆ ತರುತ್ತಿದೆ.) ಇನ್ನೇನೋ ನಡೆಯುತ್ತಿದೆ. ಘಟಿಸುತ್ತಿದೆ ಎನ್ನಬೇಕೆ? "ಕನಸಿನೂರಿಗೆ ಹಬ್ಬುವ ಪರತತ್ತ್ವ!" ಪರತತ್ತ್ವಕ್ಕೆ ಕನಸಿನ ಹಂಗಿದೆಯೆ? ಇಹದ ಮೋಹ ಕಳಚಿ, ಎಲ್ಲ ಕನಸುಗಳ ಬೇಲಿಯಾಚೆಗೆ ನಡೆದ ನಂತರ ಕೈಹಿಡಿವ ತತ್ತ್ವವಲ್ಲವೆ ಅದು! ಅದು ಪರಕ್ಕೆ ಸಂಬಂಧಿಸಿದ್ದಲ್ಲವೆ? ಆ ಹಾದಿಯಲ್ಲಿ ಕನಸುಗಳಿರುತ್ತವೆಯೆ? ತೇಜಶ್ರೀಯವರ ಕವಿತೆಯಲ್ಲಿ ಇರುತ್ತವೆ. ಇಲ್ಲಿ ಮಾತ್ರ ಅದು ಸಂಭವಿಸುತ್ತದೆ. ಇಲ್ಲಿ ಪರತತ್ತ್ವ ಕನಸಿನೂರಿಗೆ ಹಬ್ಬುವ ಜೀವಸೆಲೆ ಚಿಮ್ಮಿಸಿದೆ. ಹೀಗಾದಾಗ ವಿಪರೀತವಾದದ್ದು ಏನಾದರೂ ನಡೆಯಲೇ ಬೇಕಲ್ಲ!

ನೋಡಿ, ಈಗ ಕಾಣಿಸಿಕೊಳ್ಳುತ್ತಾನೆ, ಬಾವಿಯ ಕಡುನೀಲಿಯಾಗಿದ್ದೂ ಈಗ ಕಪ್ಪಾದ ನೀರಿನ ನಡುವೆ, ಚಂದಿರ! ಎಲ್ಲಿದ್ದ ಈತ ಇಷ್ಟು ಹೊತ್ತು? ಯಾರು ಹೇಳಿದ್ದರು ನಮಗೆ ಆವತ್ತು ಬೆಳ್ದಿಂಗಳೆಂದು? ಅದು ಹೇಗೆ ನನಗೆ ಮೊದಲೇ ಗೊತ್ತಾಗಿತ್ತು? ಆದರೆ ನಿಜವಾದ ಮ್ಯಾಜಿಕ್ ನಡೆಯುವುದು ಚಂದಿರ ಕಾಣಿಸಿಕೊಂಡಾಗಲೂ ಅಲ್ಲ, ರಾತ್ರಿರಾಣಿಯರ ಹೂವಿನ ಮಳೆ ಸುರಿದಾಗಲೂ ಅಲ್ಲ. ಸುರಿದದ್ದು ಮತ್ತದೇ ಮಳೆನೀರ ಸಿಂಚನವೂ ಇದ್ದೀತು, ಯಾರಿಗೆ ಗೊತ್ತು! ಅದೂ ಹೂಮಳೆಯೇ ಅಲ್ಲವೆ ಮತ್ತೆ? ಅದ್ಭುತವಾದದ್ದು ಇದೆ ಮುಂದೆ.

ಆ ಕ್ಷಣದೆ ಮತ್ತದೇ ಕೊಳಲನಾದ...
ಮಂತ್ರಂಗಾಳಿಯಲ್ಲಿ ಸಗ್ಗದ ಹಿಗ್ಗು,
ಸೋಪಾನ ಕಟ್ಟೆಗೊರಗಿ ಬಾವಿನೀರ ಉಯ್ಯಲಾಟ.
ಧಿಗ್ಗನೆ ಹೊತ್ತಿ ಏನೋ ಎದೆಯೊಳಗೆ
ಅಮೀನ ತಾರಾಡಿದಳು,
ಎಲ್ಲಿಂದ ಹೊಮ್ಮುತ್ತಿದೆ ಈ ಪಾಟಿ ಬೆಳಕು
ಎತ್ತ ಹರಿಯುತ್ತಿದೆ ಇದು ಹೀಗೆ,
ದುರದುರನೆ ನೋಡನೋಡುತ್ತ ಕಲ್ಲುಬಾವಿಯ
ನಗುಮೊಗ್ಗೆಯಾದಳವಳು ಕಂಡು ಆ ಗಮ್ಯವ ಅದರೊಳಗೆ.
ಮರುಗಳಿಗೆ,
ಕದಡಿತು ನಡುಬಾವಿಯ ಚಂದ್ರಬಿಂಬ,
ಗರಬಡಿದು ನಿಂತಿತು ಬಾವಿ ಧಿಕ್ಕನೆ ಹೊಕ್ಕ ಬೆಳಕಿಗೆ,
ಗಳಬಳವಿಲ್ಲದೆ ಬಾಗಿ ನಿಂತವು ರಾತ್ರಿರಾಣಿ ಹೂಗಳು,
ಅರಳೀಮರದೆಡೆಯಿಂದ ಸುಯಿಲಿನ ಸುಯ್ಯಲಾಟ.
ಅಮೀನ...
ನೀನೆಲ್ಲಿ?
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, July 29, 2017

ಮನಸು ಅಭಿಸಾರಿಕೆ - ಆರು ಭಾಗದ ಲೇಖನದ ಕೊನೆಯ ಬರಹ

ಶಾಂತಿ ಕೆ ಅಪ್ಪಣ್ಣ ಅವರ ಕಥಾಸಂಕಲನ ಮನಸು ಅಭಿಸಾರಿಕೆಯಲ್ಲಿ ಒಟ್ಟು ಹದಿನಾಲ್ಕು ಕತೆಗಳಿವೆ. ಇಲ್ಲಿನ ಎಲ್ಲಾ ಕತೆಗಳ ಕೇಂದ್ರ ಲೈಂಗಿಕ ಸಂಬಂಧಗಳು, ವಾಂಛೆಗಳು ಮತ್ತು ಅದರಿಂದ ಹುಟ್ಟಿದ ಭೌತಿಕ ಸಮಸ್ಯೆ ಅಥವಾ ಮನದ ತವಕ-ತಲ್ಲಣ. ಇದು ಸಂಕಲನವನ್ನು ಒಂದೇಟಿಗೆ ಓದುವಾಗ ಏಕತಾನತೆ ಕಾಡುವ ಮಟ್ಟಿಗಿದೆ. ಒಂದೇ ಧ್ವನಿಯನ್ನು ಸತತವಾಗಿ ಕೇಳುತ್ತಿರುವ ಭಾವ ಓದುಗನಿಗೆ ಕೊಂಚ ಒಜ್ಜೆಯಾಗುವ ಸಂಭವ ಕಾಣುತ್ತದೆ. ಸಿನಿಮೀಯತೆ, ವಾಚಾಳಿತನ ಇವರ ಕತೆಗಳ ಪರಿಣಾಮಕಾರತ್ವವನ್ನು ಕುಗ್ಗಿಸಿದ ಸಂಗತಿಗಳು. ಉಳಿದಂತೆ ಇವರ ಸೂಕ್ಷ್ಮಗ್ರಹಿಕೆಗಳು ಬರಹರೂಪಕ್ಕೆ ಒದಗಿ ಬರುವ ಮತ್ತು ತನ್ಮೂಲಕ ಕತೆಯ ವಸ್ತುಲೋಕವನ್ನು ಹಿಗ್ಗಿಸಿ, ವಿವರಗಳನ್ನು ಸುಪುಷ್ಟಗೊಳಿಸಿ ನಿರೂಪಣೆಯ ಸೌಂದರ್ಯ ಹೆಚ್ಚಿಸಿವೆ.

ಬಿಂಬಗಳು ಕತೆ ಗಂಡು-ಹೆಣ್ಣು ಪರಸ್ಪರ ಬೇಕುಗಳನ್ನು ಹೇಳಿಕೊಳ್ಳುವಲ್ಲಿ ಅಡ್ಡಬರುವ ಟೈಮಿಂಗ್ ಡಿಫರೆನ್ಸ್ ಕುರಿತದ್ದು. ಅವಳಿಗೆ ಬೇಕೆನಿಸಿದ ಘಳಿಗೆಯಲ್ಲಿ ಅವನಿಗೆ ಬೇಡವೆನಿಸಿದೆ. ಅವನಿಗೆ ಬೇಕೆನಿಸಿದಾಗ ಕಾಲ ಮಿಂಚಿ ಹೋಗಿದೆ. ಪೂರ್ತಿಯಾಗಿ ಇಲ್ಲಿನ ನಿರೂಪಣೆಯಲ್ಲಿನ ಹೊಸತನವೊಂದೇ ಈ ಕತೆಯನ್ನು ಆಧರಿಸಿರುವ ಸಂಗತಿಯಾಗಿದೆ. ಪುಟ್ಟದಾಗಿ ಚೊಕ್ಕವಾಗಿ ಹಿತನೀಡುವ ಕತೆ.

ಮುಳ್ಳುಗಳು ಕತೆಯಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರ ಬದುಕನ್ನು ಪರೋಕ್ಷವಾಗಿ ಕತೆ ಕಟ್ಟಿಕೊಡುವ ರೀತಿ, ಅಲ್ಲಿನ ವಿವರಗಳು ತುಂಬ ಮೆಚ್ಚುಗೆ ಹುಟ್ಟಿಸುತ್ತವೆ. ಆದರೆ ಕತೆಯ ಗಮ್ಯ ಅದಲ್ಲ. ಹೊಸದಾಗಿ ಮದುವೆಯಾದ ಟಿಪ್ಪು ಪತ್ನಿಯನ್ನು ಊರಲ್ಲೆ ಬಿಟ್ಟು ಹೊಟ್ಟೆಪಾಡಿಗಾಗಿ ನಗರ ಸೇರಿಕೊಂಡಿದ್ದಾನೆ. ತಂದೆಯ ಅಕಾಲಿಕ ಮರಣಕ್ಕೆ ಆತ ತುಳಿಯುತ್ತಿದ್ದ ಸೈಕಲ್ ರಿಕ್ಷಾ ಕಾರಣವೊ, ಮನೆಗೆ ಕಾಲಿಟ್ಟ ಹೊಸ ಸೊಸೆಯ ಕಾಲ್ಗುಣ ಕಾರಣವೋ ತಿಳಿಯದ ತಾಯಿ ತಲೆಕೆಟ್ಟಂತಾಗಿದ್ದಾಳೆ. ಮಗನನ್ನು ಅಪ್ಪನ ಉದ್ಯೋಗ ಮಾಡದಂತೆ ಮಾಡಿ ನಗರಕ್ಕೆ ಕಳಿಸಿದ್ದಾಳೆ, ಹೊಸದಾಗಿ ಮದುವೆಯಾದ ಗಂಡ ಹೆಂಡಿರು ಬೇರೆಯಾಗುವಂತಾಗಿದೆ, ಸೊಸೆಯನ್ನು ಚುಚ್ಚಿ ಹಿಂಸಿಸತೊಡಗಿದ್ದಾಳೆ. ಇಲ್ಲಿ ಟಿಪ್ಪು ಕೆಲಸ ಮಾಡುವಲ್ಲಿಯೂ ಸಮಸ್ಯೆಗಳಿವೆ. ಇಷ್ಟರಲ್ಲೇ ಈ ಕತೆ ಎಲ್ಲ ಬಗೆಯ ಸಂಕೀರ್ಣತೆ, ಸೌಂದರ್ಯವನ್ನು ಪಡೆದುಕೊಂಡಿದ್ದರೂ ಕತೆಗಾರ್ತಿ ಸಿನಿಮೀಯವೆನ್ನಬಹುದಾದ ಒಂದು ತಿರುವನ್ನು ತರುತ್ತಾರೆ. ಟಿಪ್ಪುವನ್ನು ನೋಡಲು ಬಂದ ಅವನ ಹೆಂಡತಿಯನ್ನು ಡ್ರೈವರ್, ಮೇಸ್ತ್ರಿ ಮತ್ತು ಇಂಜಿನಿಯರ್ ಸೇರಿಕೊಂಡು ರೇಪ್ ಮಾಡುವುದು, ಕೊಲ್ಲುವುದು, ಟಿಪ್ಪುವನ್ನೂ ಮೇಲಿನಿಂದ ತಳ್ಳಲು ಹೇಳಿ ಮುಗಿಸುವುದು ಇತ್ಯಾದಿ ಕೊಂಚ ನಾಟಕೀಯವಾಗಿ ಕಾಣುತ್ತದೆ.

ನನ್ನ ಹಾಡು ನನ್ನದು ಕತೆಯಲ್ಲಿ ಕೂಡ ಪ್ರಧಾನವಾಗಿ ಕಾಣುವುದು ಲೈಂಗಿಕತೆಯೇ. ಇಲ್ಲಿ ಚಿಕ್ಕಂದಿನಲ್ಲಿ ಕಳೆದು ಹೋದ, ಈಗ ತನ್ನ ಹೆಂಡತಿಯನ್ನೇ ಹೋಲುವ, ಮೈಮಾರಿಕೊಂಡು ಬದುಕುತ್ತಿರುವ ಮಗಳ ಬಳಿ ಕಾಮಾತುರನಾದ ತಂದೆ, ಲಾರಿ ಡ್ರೈವರ್ ಬಂದಿದ್ದಾನೆ.
ಈ ಮುಖಾಮುಖಿಯನ್ನು ಕತೆ ನಿಧಾನವಾಗಿ, ಹದವಾದ ವಿವರಗಳಲ್ಲಿ ಕಾಣಿಸುವ ಬಗೆಯಲ್ಲಿ ಸೌಂದರ್ಯವಿದೆ, ಆದರೆ ಅಗತ್ಯವಾದ ಸಜ್ಜಿಕೆಯ ತಯಾರಿ ಏನಿಲ್ಲ. ಅಷ್ಟರಮಟ್ಟಿಗೆ ಕತೆಗಾರ್ತಿಯ ನಿರೂಪಣಾ ಶೈಲಿ ನೇರ, ಸಹಜ. ಹೆಚ್ಚಿನ ತಂತ್ರಗಾರಿಕೆ, ಬೌದ್ಧಿಕ ಕಸರತ್ತು, ಒಳನೋಟಗಳನ್ನು ಒದಗಿಸುತ್ತ ಕಟ್ಟುವ ರಾಚನಿಕ ನಿರೂಪಣೆಗೆ ಇವರು ಒಲಿದಿಲ್ಲ. ತಂತ್ರದ ಬಗ್ಗೆ ಅನೇಕರಿಗೆ, ವಿಶೇಷವಾಗಿ ಇಂದಿನ ತಲೆಮಾರಿನ ಕತೆಗಾರರಿಗೆ ಕೊಂಚ ಇರಿಸು ಮುರಿಸು ಇರುವಂತಿದೆ. ವಿವೇಕ್ ಶಾನಭಾಗ್ ಅವರು ಹೇಳುವಂತೆ, ತಂತ್ರ ಒಂದು ಕುರ್ಚಿಗೆ ಅಗತ್ಯವಾದ ಕೀಲುಗಳು, ಮೊಳೆಗಳು ಇದ್ದಂತೆ. ಅವು ಕಾಣಿಸಲೂ ಬಾರದು, ಕುಳಿತವರಿಗೆ ಚುಚ್ಚಲೂ ಕೂಡದು. ಆದರೆ ಇರಬೇಕು, ಇಲ್ಲದ ಹಾಗಿರಬೇಕು. ಒಮ್ಮೆ ಅನಂತಮೂರ್ತಿಯವರು ಹೇಳಿದಂತೆ, ಮದುವೆ ಮನೆಯಲ್ಲಿ ಪರಿಮಳ ದ್ರವ್ಯ ಸಿಂಪಡಿಸಿದಂತೆ, ಹೆಚ್ಚಾದರೆ ಚೆಲ್ಲಿದಂತಾಗುತ್ತದೆ, ಕಡಿಮೆಯಾದರೆ ಹರಕೆ ತೀರಿಸಿದಂತಾಗುತ್ತದೆ. ಎರಡೂ ಆಗಬಾರದು. ಹಾಗೆ ಅದರ ಹದ, ಅದು ಸಹಜವಾಗಿ ಒದಗಿ ಬರಬೇಕು. ಅದಕ್ಕೆ ಕತೆಗಾರ ತಾಲೀಮು ನಡೆಸಬೇಕಾಗುತ್ತದೆ. ಅದರತ್ತ ಮೂಗು ಮುರಿಯುವುದೇ ಸರಿ ಎನ್ನಲಾಗದು.

ಇಲ್ಲಿಯೂ ಕತೆಯ ಕೊನೆಯಲ್ಲಿ ಒಂದು ಸಿನಿಮೀಯ ಎನ್ನಬಹುದಾದ ನಡೆಯೇ ಎದ್ದು ಕಾಣುವಂತಿದೆ. ಲೈಂಗಿಕ ಪಿಪಾಸೆ ಮತ್ತು ಹೆತ್ತ ಮಗಳ ಮೇಲಿನ ಕಕ್ಕುಲಾತಿ ಎರಡರ ನಡುವಣ ಯುದ್ಧವೇನಿಲ್ಲ. ಮೈಮಾರಿಕೊಂಡು ಬದುಕಬೇಕಾಗಿ ಬಂದ ಮಗಳನ್ನು, ಅವಳನ್ನು ಈ ತನಕ ಪೊರೆದ ಕಾಯಿಲೆಬಿದ್ದಿರುವ ಮುದುಕಿಯನ್ನು ಜೊತೆಯಾಗಿಯೇ ತನ್ನ ಆಸರೆಗೆ ಬರಮಾಡಿಕೊಳ್ಳುವ ತಂದೆಯ ಕತೆ ಹೇಳುತ್ತ ತಪ್ಪು ಸರಿಗಳ ಬಗ್ಗೆ ಕತೆ ವಾಚ್ಯವಾಗಿ ಹೇಳಲೇ ಬೇಕಾದುದಿರಲಿಲ್ಲ ಎನಿಸುತ್ತದೆ.

ನೆರಳು ಕತೆಯಲ್ಲಿ ಹುಡುಗಿಯೊಂದು ಅತ್ತೆ ಮನೆಯಲ್ಲಿ ಬೆಳೆಯುತ್ತ ಕಂಡ ಎರಡು ಪ್ರತ್ಯೇಕ ಪ್ರೇಮ ಪ್ರಕರಣಗಳ ಚಿತ್ರವಿದೆ. ಈ ಕತೆಗೆ ಮುಂದೆ ಬರುವ ಪ್ರಶ್ನೆ ಕತೆಯೊಂದಿಗೆ ಇರುವ ಸಾಮ್ಯ ಗಮನಾರ್ಹವಾದದ್ದು. ಒಂದು ಮುಸ್ಲಿಂ ಹುಡುಗಿಯ ಪ್ರೇಮ ಪ್ರಕರಣದ ದುರಂತ ಅಂತ್ಯವಾದರೆ ಇನ್ನೊಂದು ಈ ಹುಡುಗಿಯ ಆಪ್ತ ಗೆಳತಿಯಂತಿದ್ದ ಸುಧಾ ಮತ್ತು ವಾಸು ಭಾವನ ಸುಖಾಂತ್ಯದ ಪ್ರೇಮಪ್ರಕರಣ. ನಡುವೆ ಅತ್ತೆಯ ನಿಷ್ಠುರ ನಡೆ, ಕಟು ಮನಸ್ಸು ಒಂದೆಡೆ ನೆಬಿಸಾ ತಾಯಿಯ ಅಸಹಾಯಕತೆ ಇದೆ. ಕತೆಯ ಕೇಂದ್ರ ಲೈಂಗಿಕತೆಯೇ ಆಗಿದ್ದು ಈ ಕತೆ ಹೊಸತೇ ಎನ್ನಬಹುದಾದ ಏನನ್ನೂ ಹೇಳುತ್ತಿಲ್ಲ.

ಪರಶುವಿನ ದೇವರು ಕತೆ ಕೊಂಚ ಭಿನ್ನವಾದ ಕತೆ. ಇಲ್ಲಿಯೂ ಈ ಪರಶುವಿನ ಮೈಮೇಲೆ ಬರುವ ದೇವರ ಪ್ರಧಾನ ಆಸಕ್ತಿ ‘ಹಾದರ’ಗಳನ್ನು ಬಯಲು ಮಾಡುವುದೇ ಎನಿಸಿದರೂ ಕತೆಯ ಕೊನೆಯಲ್ಲಿ ಇದು ಜಾತಿ ಪದ್ಧತಿಯ ಆಚರಣೆಯ ವಿರುದ್ಧ ತನ್ನ ಚಾಟಿ ಬೀಸುವುದು ಮತ್ತು ಹೀಗೆ ಮೈಮೇಲೆ ಬರುವ ಒಂದು ಪರಿಕಲ್ಪನೆಯನ್ನೇ ಬಳಸಿಕೊಂಡು ಕತೆ ನೇಯ್ದಿರುವುದು ಮೆಚ್ಚುಗೆಯಾಗುತ್ತದೆ. ಕತೆಗಾರ್ತಿಯ ಸೂಕ್ಷ್ಮ ಅವಲೋಕನ, ಭಾಷೆಯಲ್ಲಿ ಅವುಗಳನ್ನು ಜತನದಿಂದ ಸಂಯೋಜಿಸುವ ಕಲೆಗಾರಿಕೆ ಗಮನ ಸೆಳೆಯುತ್ತದೆ.

ಪರಿಹಾರ ಕತೆಯಲ್ಲಿ ರುಕುಮಣಿ ಎಂಬ ಅತ್ತಿಗೆ ತನ್ನ ಗಂಡನ ತಮ್ಮನಿಗೆ ಸೇರಬೇಕಾದ ತುಂಡು ಆಸ್ತಿ ಒಳಹಾಕಲು ನಡೆಸುವ ಸಂಚು ಪ್ರಧಾನ ಅಂಶವಾಗಿದೆ. ಉಳಿದಂತೆ ಇಲ್ಲಿಯೂ ಮತ್ತೆ ಅದೇ ಲೈಂಗಿಕ ವ್ಯವಹಾರಗಳು, ಅಕ್ರಮ ಎನ್ನುವ ಲೇಬಲ್ ಪಡೆದಿರುವ ಸಂಬಂಧಗಳು, ಊಹಾಪೋಹಗಳು ತಪ್ಪದೇ ಇಣುಕುತ್ತವೆ. ಈ ಕತೆಯೂ ಕೆಲಮಟ್ಟಿಗೆ ಹುಟ್ಟಿಸುವ ನಿರಾಸೆಗೆ ಕಾರಣವಾಗುವುದು ಅಂತ್ಯದಲ್ಲಿನ ಸಿನಿಮೀಯತೆ. ಮರ ಬಿದ್ದು ಬಸ್ಸಿನೊಳಗಿದ್ದ ಮುತ್ತ ತೀರಿಕೊಳ್ಳುವುದು ಅವಾಸ್ತವಿಕ ಅಲ್ಲದಿದ್ದಾಗ್ಯೂ ಕತೆಯ ಬಂಧದಲ್ಲಿ ಕೊಂಚ ಅತಿರೇಕದ ತಿರುವು ಎನಿಸಿಯೇ ಅನಿಸುತ್ತದೆ. ಅನಿರೀಕ್ಷಿತವಾದ, ಆಘಾತಕಾರಿಯಾದ ಒಂದು ತಿರುವನ್ನು ಕೊಡುವುದೇ ಕತೆಗಾರನ ಉದ್ದೇಶವಾಗಿರಬಹುದೇ ಎನ್ನುವ ಸಂಶಯಕ್ಕೆ ಅದು ಕಾರಣವಾಗುತ್ತದೆಯೇ ಹೊರತು, ಕತೆಗಾರ್ತಿ ಅದುವರೆಗೂ ಕಟ್ಟಿದ ಸಂಯಮದ ಕಟ್ಟಡವೊಂದು ಅಂತ್ಯದ ಪಂಚ್ ಇಲ್ಲದೆಯೂ ಓದುಗನ ಸಂವೇದನೆಯನ್ನು ಮೀಟಿ ಪರಿಣಾಮಕಾರಿಯಾಗಿ ಮೂಡಿಬಂದಿರುತ್ತ ಈ ತಿರುವು ಸ್ವಲ್ಪ ಭಾರದ್ದು ಎನಿಸುತ್ತದೆ.

ಪಾಸಿಂಗ್ ಕ್ಲೌಡ್ಸ್ ಕತೆಯನ್ನು ಕೊಂಚ ಸೂಕ್ಷ್ಮವಾಗಿ ನೋಡುವ ಅಗತ್ಯವಿದೆ. ಸಂಚಾರೀ ಭಾವ, ಕ್ಷಣಭಂಗುರತೆ ಎನ್ನುವುದನ್ನು ನಾವು ಬದುಕಿನ ಭಾವಾತಿರೇಕಕ್ಕೆ ಉಪಯೋಗಿಸುತ್ತ ಬಂದಿದ್ದೆವೇ ಹೊರತು ಮನುಷ್ಯ ಸಂಬಂಧಗಳಿಗಲ್ಲ. ಬದ್ಧತೆ, ಕಮ್ಮಿಟ್‌ಮೆಂಟ್ ಎನ್ನುವುದು ಮನುಷ್ಯ ಸಂಬಂಧಗಳಿಗೆ ಅರ್ಥದ ಚೌಕಟ್ಟು ಒದಗಿಸಿದ ಒಂದು ಮೌಲ್ಯ. ಮದುವೆ ಎನ್ನುವ ಒಂದು ಕೃತಕವಾದ ಆಚರಣೆ, ಅದರ ಸಂವಿಧಾನಕ್ಕೆ ಕೊಡುವ ಗೌರವ ಎಲ್ಲವೂ ಈ ಮೌಲ್ಯದ ಮೇಲೆ ನಿಂತಿರುವಂಥಾದ್ದು. ಅದು ಮಾನವ ಸಹಜವೇ ಅಲ್ಲವೆ ಎನ್ನುವ ಪ್ರಶ್ನೆ ಬದಿಗಿಟ್ಟು ಇದನ್ನು ಪಾಲಿಸುತ್ತ ಬಂದಿರುವುದು ಸಮಾಜದ ಒಟ್ಟಾರೆ ಹಿತ ಅದರಲ್ಲಿದೆ ಎನ್ನುವ ಕಾರಣಕ್ಕೆ. ಮನಸ್ಸು ಅಭಿಸಾರಿಕೆಯೇ ಇರಬಹುದು, ಆದರೆ ಅದರ ಎಳೆ ಹಿಡಿದು ನಡೆದುಕೊಳ್ಳತೊಡಗಿದರೆ, ಅದರ ಪರಿಣಾಮಗಳು ವ್ಯಕ್ತಿಗತವಾಗಿ ಇರುವ ತನಕ ಅದೆಲ್ಲ ಎಷ್ಟು ಸಹ್ಯವೋ ಹಾಗೆಯೇ ಅದರ ಪರಿಣಾಮ ವ್ಯಕ್ತಿಯನ್ನು ಮೀರಿ ಚಾಚಿಕೊಂಡಾಗ ಅಷ್ಟೇ ಅಸಹ್ಯವೂ ಆಗುತ್ತದೆ. ಯಾವಾಗ ಈ ಸಮಾಜದ ಘಟಕವಾದ ಮನುಷ್ಯನ ನಡೆ ವೈಯಕ್ತಿಕವಾಗಿ ಉಳಿಯುತ್ತದೆ, ಯಾವಾಗ ಅದು ಕೌಟುಂಬಿಕವಾಗಿ ಚಾಚಿಕೊಳ್ಳುತ್ತದೆ ಅಥವಾ ಯಾವಾಗ ಅದು ಸಮಾಜಕ್ಕೆ ಸಂದೇಶ ನೀಡುವ ಮಟ್ಟಕ್ಕೆ ಬೆಳೆಯುತ್ತದೆ ಎನ್ನುವುದೆಲ್ಲ ಇಲ್ಲಿ ಅನಗತ್ಯ.

ಮದುವೆ ಎನ್ನುವ ವ್ಯವಸ್ಥೆಯನ್ನು ಮೀರಿ ಲಿವಿಂಗ್ ಇನ್ ಎನ್ನುವ ವ್ಯವಸ್ಥೆ ಪ್ರಾಯೋಗಿಕವಾಗಿ ಬಂತು ನಿಜ. ಆದರೆ ಇದನ್ನು ಮನುಷ್ಯ ಮದುವೆ ಎನ್ನುವ ವ್ಯವಸ್ಥೆಗೆ ಬದ್ಧನಾಗುವ ಮುನ್ನ ಪ್ರಯತ್ನಿಸಿಯೇ ಇರಲಿಲ್ಲ ಎಂದುಕೊಳ್ಳುವುದು ಮೂರ್ಖತನ. ವೇದಗಳ ಕಾಲದಲ್ಲಿ ಗಂಡು ಹೆಣ್ಣು ಸಂಬಂಧ, ನಡವಳಿಕೆ ಹೇಗಿತ್ತು ಎನ್ನುವುದನ್ನು ತಿಳಿದುಕೊಳ್ಳಲು ನಮಗೆ ಸಾಕಷ್ಟು ಸಾಹಿತ್ಯ ಸಾಮಾಗ್ರಿ ಲಭ್ಯವಿದೆ. ರಾಹುಲ ಸಾಂಕೃತ್ಯಾಯನರ ವೋಲ್ಗಾ-ಗಂಗಾದಿಂದ ಹಿಡಿದು ಮೊಕಾಶಿಯವರ ಅವಧೇಶ್ವರಿಯ ವರೆಗೆ ನಾವಿದನ್ನು ಕಾಣಬಹುದಾಗಿದೆ. ಹಾಗಿರುತ್ತ ಲಿವಿಂಗ್ ಇನ್ ಒಂದು ಆಧುನಿಕತೆ ಎಂದು ತಿಳಿಯಬೇಕಾದ್ದಾಗಲಿ, ಆಧುನಿಕವಾದುದೆಲ್ಲ ಲಿಬರೇಟ್ ಮಾಡುವ ಉದ್ದೇಶ ಹೊಂದಿರುವುದರಿಂದ ಸ್ವಾಗತಾರ್ಹ ಎಂದುಕೊಳ್ಳಬೇಕಾದ್ದಾಗಲಿ ಇಲ್ಲ.

ಈ ಕತೆ ತನ್ನ ಒಂದು ಕವಲಿನಲ್ಲಿ ಡ್ರೈನೇಜ್ ಕೂಲಿಕೆಲಸಗಾರರ ಅತಂತ್ರದ ಬದುಕನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಇನ್ನೊಂದು ಕವಲಿನಲ್ಲಿ ನಕ್ಸಲಿಸಂನ್ನೂ ತಂದು ಸಮಸ್ಯೆಯ ಎದುರಿಗೆ ನಿಲ್ಲಿಸುತ್ತದೆ. ಹಿಂಸೆ ಒಂದು ಮಟ್ಟದಲ್ಲಿ ಪರಿಣಾಮಕಾರಿಯಾಗಿ ಸರ್ಕಾರಿ ಯಂತ್ರವನ್ನು ಚಲನೆಗೆ ಹಚ್ಚುತ್ತದೆ ಎನ್ನುವ ನಂಬಿಕೆಯ ಸರಿ ತಪ್ಪುಗಳ ವಿಚಾರದಲ್ಲಿ ಕತೆ ಸಂತುಲಿತವಾದ ನಡೆಯನ್ನು ಕಾಯ್ದುಕೊಳ್ಳುತ್ತದೆ. ಆದರೆ, ಅನಂತಮೂರ್ತಿಯವರ ಅವಸ್ಥೆ ಕಾದಂಬರಿಯ ಮಾರ್ಕ್ಸಿಸ್ಟ್ ಪಾತ್ರವೊಂದು ಮುಂದೊಡ್ಡುವ ವಾದ ಇಲ್ಲಿ ನೆನಪಾಗುತ್ತದೆ. ಸಮಾನತೆಯ ಇನ್ನೊಂದು ಪ್ರಧಾನ ಅಂಗ, ಖಾಸಗಿ ಆಸ್ತಿಯ ನಿರಾಕರಣೆ. ಅಂದರೆ ಇದನ್ನು ಮನುಷ್ಯ ಸಂಬಂಧಗಳಿಗೂ ಅನ್ವಯಿಸಬಹುದೇ? ಸಮಾಜವಾದದಲ್ಲಿ ಯಾರಿಗೂ ಖಾಸಗಿ ಹೆಂಡಿರಿಲ್ಲ, ಗಂಡಂದಿರಿಲ್ಲ ಎಂದರೆ ಹೇಗೆ? ಯಾರ ಹೆಂಡತಿಯನ್ನು ಯಾರೂ ಬಳಸಿಕೊಳ್ಳಬಹುದು ಎನ್ನುವಷ್ಟು ಉದಾರವಾದಿ ನೀವಾದರೆ ಮಾತ್ರ ನಿಮಗೆ ಖಾಸಗಿ ಆಸ್ತಿಯನ್ನು ನಿರಾಕರಿಸುವ ಹಕ್ಕು ಬರುತ್ತದೆ ಅಲ್ಲವೆ? - ಹೇಗಿದೆ? ಬಹುಶಃ ಇಷ್ಟು ಸಾಕು.

ಪಯಣ ಕತೆ ಕೂಡ ಇದೇ ಪಾಸಿಂಗ್ ಕೌಡ್ಸ್ ಕತೆಯ ನಿಲುವು, ಧೋರಣೆಯನ್ನೇ ಹೊಂದಿದೆ. ಇಟ್ಸ್ ಜಸ್ಟ್ ಓಕೆ ಎನ್ನುವಂತಿದೆ ಇಲ್ಲಿನ ಹೆಚ್ಚಿನ ಕತೆಗಳ ನಿಲುವು. ಈ ಕತೆ ನೆನಪಿಸುವ ಒಂದು ಹಿಂದೀ ಸಿನಿಮಾ ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್. ರೈಲು ಪ್ರಯಾಣದಲ್ಲಿ ಒಂದೇ ಸೀಟಿನಲ್ಲಿ ಕೂರಬೇಕಾದ, ಒಂದೇ ಸೀಟಿನಲ್ಲಿ ಅನಿವಾರ್ಯವಾಗಿ ಹೇಗೊ ಹೊಂದಿಸಿಕೊಂಡು ಮಲಗಲೂ ಬೇಕಾದ (ಮಲಗುವುದೇ ಇದ್ದರೆ) ಅನಿವಾರ್ಯತೆಯೊಂದನ್ನು ಸೃಷ್ಟಿಸಿ ಅಲ್ಲಿ ವಿವಾಹಿತೆಯಾದ ಒಂದು ಹೆಣ್ಣು ಮತ್ತು ಲಿವಿಂಗ್ ಇನ್ ಅನುಭವ ಹೊಂದಿರುವ ಒಂದು ಗಂಡು ಇರುತ್ತ ನಿರೂಪಣೆಯ ಹೊಣೆ ಹೊತ್ತ ಹೆಣ್ಣು ಮನಸ್ಸಿನ ಮೂಲಕ ಹುಚ್ಚುಕೋಡಿ ಮನಸ್ಸನ್ನು ಚಿತ್ರಿಸುತ್ತದೆ ಈ ಕತೆ. ಅಷ್ಟರಮಟ್ಟಿಗೆ ಕತೆಗಾರ್ತಿ ಕಾಯ್ದುಕೊಂಡ ಹದ ಮತ್ತು ಸಂತುಲನ ಅತ್ಯಂತ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹಗ್ಗದ ಮೇಲಿನ ನಡಿಗೆಯಂಥ ಈ ನವಿರು ನಿರೂಪಣೆ ಸುಲಭದ್ದಲ್ಲ. ಹೆಜ್ಜೆ ಹೆಜ್ಜೆಗೂ ವಿಮರ್ಶಕ ಪ್ರಜ್ಞೆಯೊಂದನ್ನು ಜೀವಂತವಾಗಿಟ್ಟುಕೊಂಡೇ ರಸಾಭಿಜ್ಞತೆಯನ್ನೂ ಬಿಟ್ಟುಕೊಡದೆ ಕಟ್ಟಬೇಕಾದ ರಮ್ಯ ಕಟ್ಟಡವಿದು. ಇಲ್ಲಿ ಕತೆಗಾರ್ತಿ ಸಂಪೂರ್ಣವಾಗಿಯೇ ಯಶಸ್ವಿಯಾಗಿದ್ದಾರೆನ್ನಬಹುದು. ಒಂದು ಕಡೆ ಮಾತ್ರ, ಓದುಗನಿಗೆ ಅನಿಸಬೇಕಾದ್ದನ್ನು (ಅನಿಸುವುದನ್ನು) ವಾಚ್ಯವಾಗಿ ಹೇಳುವ ಅನಗತ್ಯ ವಾಕ್ಯ ಉಳಿಸಿಕೊಂಡಿರುವುದನ್ನು ಬಿಟ್ಟರೆ ನಿರೂಪಣೆಯ ಹದ ಈ ಕತೆಗಾರ್ತಿಗೆ ಒಲಿದಿದೆ. ಆದರೆ ಇದನ್ನು ಅವರು ಬಳಸುತ್ತಿರುವುದು ಏನನ್ನು ಹೇಳುವುದಕ್ಕಾಗಿ ಎನ್ನುವುದು ಹೆಚ್ಚು ಮುಖ್ಯವಾದ ಪ್ರಶ್ನೆಯಾಗುತ್ತದೆ ಎನ್ನುವುದನ್ನು ಮರೆಯಬಾರದು.

ಇಲ್ಲೇನೂ ರೋಮಾಂಚಕವಾದದ್ದು ನಡೆಯುವುದಿಲ್ಲ. ಆದರೆ ರಂಗಸಜ್ಜಿಕೆಯನ್ನು ನಿರ್ಮಿಸುವುದರಲ್ಲೇ ಅದು ಸಾಕಷ್ಟು ರೋಮಾಂಚನವನ್ನು ಹುಟ್ಟಿಸಿ, ತನ್ಮೂಲಕ ಓದುಗರ ಮನಸ್ಸಿನ ಲಹರಿಯನ್ನು ಸ್ವತಃ ಓದುಗನೇ ನೋಡಿಕೊಂಡು ಇಟ್ಸ್ ಜಸ್ಟ್ ಓಕೆ ಹೌದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುವ ಉತ್ತರದಾಯಿತ್ವವನ್ನು ಹೊರಬೇಕಾಗಿದೆ. ಇದೇ ಕತೆಗಾರ್ತಿಯ ಉದ್ದೇಶ. ಗಂಡು-ಹೆಣ್ಣು, ಏಕಾಂತ, ಲೈಂಗಿಕವಾದ ವಾಂಛೆಯನ್ನು ಉದ್ದೀಪಿಸಬಲ್ಲ ವಾತಾವರಣ ಇಷ್ಟಿದ್ದರೆ ಎಲ್ಲರೂ ಪ್ರಾಣಿಗಳಂತೆ ವರ್ತಿಸುತ್ತಾರೆ ಎನ್ನುವುದು ನಿಜವೆಂದೇ ಒಪ್ಪಿಕೊಳ್ಳೋಣ. ಆದರೆ ಕತೆಯಲ್ಲೇ ಒಂದು ಹಂತದಲ್ಲಿ ಈ ಇಬ್ಬರ ನಡುವೆ ಅತ್ಯಂತ ಪಾರದರ್ಶಕವಾದ ಒಂದು ನೋಟ ಸಾಧ್ಯವಾದದ್ದೇ ಅಂಥ ವಾಂಛೆ ತಟ್ಟನೆ ಮಾಯವಾಗುವ ವಿದ್ಯಮಾನವೂ ಬರುತ್ತದೆ. ಯಾಕೆ, ನಾವೊಮ್ಮೆ ನನ್ನ ಹಾಡು ನನ್ನದು ಕತೆಗೆ ಹಿಂದಿರುಗುವುದಾದರೆ, ಅಲ್ಲಿ ಲಾರಿ ಡ್ರೈವರ್‌ಗೆ ತಾನು ತನ್ನ ಕಾಮತೃಷೆಯನ್ನು ನೀಗಿಕೊಳ್ಳಲೆಂದೇ ಗಂಟೆಗಟ್ಟಲೆ ಕಾದು ಕೂತಿರುವುದು ತನ್ನದೇ ಮಗಳಿಂದ ಶಮನಗೊಳ್ಳಬೇಕಾದ ಒಂದಕ್ಕೆ ಎಂದು ತಿಳಿದ ಕ್ಷಣವೇ ಅವನಿಗೆ ತನ್ನ ದಾಹ ಮರೆತೇ ಹೋಗುತ್ತದೆಯಲ್ಲವೆ? ಇಲ್ಲಿಯೇ ನಾವು ಜಸ್ಟ್ ಓಕೆ ನಿಲುವಿನ ಇತಿಮಿತಿಗಳನ್ನು ಕಂಡುಕೊಳ್ಳುವ ಛಾತಿ ತೋರಿಸಬೇಕಾಗುತ್ತದೆ. ಇಲ್ಲವಾದಲ್ಲಿ ತಂದೆ-ತಾಯಿ, ಒಡಹುಟ್ಟು, ಮಗಳು ಎನ್ನುವುದನ್ನೆಲ್ಲ ಬದಿಗಿಟ್ಟು ಒಂದು ಗಂಡು ಮತ್ತು ಒಂದು ಹೆಣ್ಣು ದೇಹದ ನೆಲೆಯಲ್ಲೇ ಎಲ್ಲವನ್ನೂ ನೋಡುತ್ತ ಹೋಗಬೇಕಾಗುತ್ತದೆ. ಆಯ್ಕೆಗೆ ಅವಕಾಶವಿದೆ.

ಬಹುಶಃ ನಾನು ಸೂಳೆ ಮಗನಾ ಎನ್ನುವ ಪ್ರಶ್ನೆಯ ಸುತ್ತ ಹಬ್ಬುವ ಕತೆ ಪ್ರಶ್ನೆ, ಮೈದುನನ ಅತಿರೇಕದ ವರ್ತನೆ ಗಂಡನಿಗೆ ತಿಳಿಯಿತೊ ಎನ್ನುವ ಆತಂಕದಲ್ಲಿ ಬೇಯುವ ಹೆಂಡತಿಗೆ ತಾನು ಮಾಜಿ ಪ್ರೇಯಸಿಯ ಜೊತೆ ಕೂಡಿದ್ದನ್ನು ಪಾಪಪ್ರಜ್ಞೆಯೊಂದಿಗೇ ಹೇಳಿಕೊಳ್ಳುವ ಗಂಡನ ಕತೆ ಹೇಳುವ ಸುಳಿ, ಐಸಿಯುನಲ್ಲಿರುವ ಗಂಡ ಸತ್ತರೆ ತಾನು ಅವನ ಅಸ್ತಿಯೊಂದಿಗೆ ತನಗೆ ಬೇಕಾದವನೊಂದಿಗೆ ನೆಮ್ಮದಿಯಾಗಿರಬಹುದೆಂದು ಯೋಚಿಸುವ ಹೆಂಡತಿಯ ಕತೆಯನ್ನು ಹೇಳುವ ವೇಷ, ಇಬ್ಬರು ಮನೆಗೆಲಸದ ಹುಡುಗಿಯರು ಹಾಗೂ ಸ್ವತಃ ತನಗೆ ಕಮಿಟ್‌ಮೆಂಟ್ ಬೇಡ ಎನ್ನುವ ಒಬ್ಬ ಕಾಲೇಜು ಸಹಪಾಠಿಯೊಂದಿಗಿನ ಸಂಬಂಧದ ಹಿನ್ನೆಲೆಯಲ್ಲಿ ಲೈಂಗಿಕತೆ, ಸಂಬಂಧದ ಅಗತ್ಯ, ಅದು ಬಯಸುವ ಬದ್ಧತೆಯ ತೊಡಕುಗಳನ್ನು ಕಾಣುವ ಕತೆ ದಾರಿ ಮತ್ತು ವಿಚ್ಛೇದಿತೆಯೊಬ್ಬಳ ಮನದ ತುಮುಲಗಳಿಗೆ ಸಿನಿಮೀಯ ಪರಿಹಾರವನ್ನು ಒದಗಿಸುವ ಕತೆ ಮನಸು ಅಭಿಸಾರಿಕೆ - ಎಲ್ಲವೂ ಒಂದೇ ಎಳೆಯನ್ನು ಬೇರೆ ಬೇರೆ ಪರಿಸ್ಥಿತಿ ಸಂದರ್ಭಗಳಲ್ಲಿ ಇಟ್ಟು ಕಾಣುವುದರಾಚೆ ಬೇರೆ ವೈಶಿಷ್ಟ್ಯವನ್ನು ಹೊಂದಿಲ್ಲ ಎನಿಸುತ್ತದೆ. ಇದ್ದುದರಲ್ಲಿ ಭಿನ್ನವಾದ ಕತೆ ಬಾಹುಗಳು.

ಬಾಹುಗಳು ಕತೆ ಭಿನ್ನವಾಗಿದೆ, ಇಲ್ಲಿನ ನಿರೂಪಣೆ, ತಂತ್ರ ವಿಶಿಷ್ಟವಾಗಿದೆ. ಇಡೀ ಸಂಕಲನದಲ್ಲಿ ಫ್ಯಾಂಟಸಿಯನ್ನೂ, ಕನಸು-ಕಲ್ಪನೆ-ಭ್ರಮೆ ಮತ್ತು ವಾಸ್ತವವನ್ನು ಒಂದೆಳೆಯಲ್ಲಿ ಜೋಡಿಸುವ ಕತೆ ಅಂತಿರಲಿ, ಅಲ್ಲಲ್ಲಿಯಾದರೂ ಇವುಗಳಲ್ಲಿ ಯಾವುದಾದರೊಂದನ್ನು ಬಳಸಿಕೊಂಡ ಇನ್ನೊಂದೇ ಒಂದು ಕತೆ ಇಲ್ಲ. ಬಾಹುಗಳು ಕತೆಯಲ್ಲಿ ಒಂದೇಟಿಗೆ ಇವೆಲ್ಲವೂ ಬಳಕೆಯಾಗುತ್ತವೆ. ಅಷ್ಟರಮಟ್ಟಿಗೆ ಇದು ವಿಶಿಷ್ಟವೂ, ವಿಭಿನ್ನವೂ, ಆಕರ್ಷಕವೂ ಆದ ಕತೆ. ಇವರ ಎಲ್ಲಾ ಕತೆಗಳೂ ಆಕರ್ಷಕವಾಗಿವೆ ಎನ್ನುವುದು ಬೇರೆ ಮಾತು, ಅದಿರಲಿ. ಆದರೆ ಈ ಕತೆ ಹೇಳುವುದು ವ್ಯಕ್ತಿತ್ವ ವಿಕಸನ ಮಾದರಿಯ ಐದು ಅಂಶಗಳನ್ನು ಎನ್ನುವುದು ಗಮನಕ್ಕೆ ತೆಗೆದುಕೊಂಡರೆ ನಿರಾಸೆಯಾಗುತ್ತದೆ.

ಸೊಗಸಾದ ನಿರೂಪಣೆ, ಉತ್ತಮ ಶೈಲಿ, ಓದುಗನನ್ನು ತುದಿಗಾಲಲ್ಲಿ ನಿಲ್ಲಿಸಬಲ್ಲ ಕೌತುಕವನ್ನು ಕಟ್ಟುವ ಜಾಣ್ಮೆ, ಬದುಕಿನ ಸೂಕ್ಷ್ಮಗಳನ್ನು ಗ್ರಹಿಸುವ ಕಲೆ, ಮನುಷ್ಯ ಸಂಬಂಧಗಳ - ಮನಸ್ಸಿನ - ಬದುಕಿನ - ಒಟ್ಟಾರೆ ತಾತ್ವಿಕ-ತಾರ್ಕಿಕ ಪ್ರಶ್ನೆಗಳನ್ನು ಒರೆಗೆ ಹಚ್ಚಿ ನೋಡಬಲ್ಲ ಅದ್ಭುತ ಚಿಂತನಶೀಲತೆ, ಕತೆಯನ್ನು ಹೇಳುವಾಗ ಪ್ರಾಣಿಗಳು, ಪರಿಸರ, ವಸ್ತುಲೋಕದ ಪರಿಜ್ಞಾನ ಮತ್ತು ಬರಹಕ್ಕೆ ಅವು ಒದಗಿ ಬರುವಂತೆ ಎಚ್ಚರ ವಹಿಸುವ ಕಲೆಗಾರಿಕೆ ಎಲ್ಲ ಇದ್ದೂ ಇಡೀ ಸಂಕಲನದ ಕತೆಗಳು ಕೇವಲ ಲೈಂಗಿಕತೆಯ ಸುತ್ತಲೇ ಸುತ್ತುತ್ತಿವೆ ಎನಿಸಿದರೆ ಆಶ್ಚರ್ಯವಿಲ್ಲ. ಹ್ಯಾಪಿ ಟು ಬ್ಲೀಡ್ ಎನ್ನುವ ಸ್ಲೋಗನ್ ಹಿಡಿದು ನಿಲ್ಲುವುದು, ತೊಡೆ ಮತ್ತು ಎದೆಯನ್ನು ಪ್ರದರ್ಶಿಸುವುದರ ಮೂಲಕವೇ ನಾವು ಗಂಡಿನ ಮನಸ್ಸಿನ ಕಲ್ಮಶವನ್ನು ಈಚೆ ತರುತ್ತೇವೆ ಮಾತ್ರವಲ್ಲ ತೊಲಗಿಸುತ್ತೇವೆ ಎಂದು ತಿಳಿಯುವುದು, ಲಿವಿಂಗ್ ಇನ್ ಮೂಲಕ ಸರಿಯಾದ ಆಯ್ಕೆಗೆ ಸಜ್ಜಾಗುತ್ತೇವೆ ಎಂದು ಹೇಳುವುದು - ಇವೆಲ್ಲವೂ ಲಿಬರೇಟಿಂಗ್ ಎನ್ನುವ ಬಗ್ಗೆ, ಇದರಿಂದ ಬದಲಾವಣೆ ಸಾಧ್ಯ ಎನ್ನುವ ಬಗ್ಗೆ ನಾನು ಆಶಾವಾದಿಯಾಗಿಯೇ ಇದ್ದೇನೆ. ಆದರೆ ಮನುಷ್ಯ ಸಂಬಂಧಗಳು ಕನಿಷ್ಠ ದೇಹದ ನೆಲೆಯಲ್ಲಾದರೂ ಸಂಚಾರೀ ಭಾವದ ನೆಲೆಯನ್ನು ಕಂಡುಕೊಂಡು ಇಟ್ಸ್ ಜಸ್ಟ್ ಓಕೆ ಎನ್ನಬಹುದು ಎಂದರೆ ನಾನು ಅದನ್ನು ಒಪ್ಪಿಕೊಳ್ಳುವಷ್ಟು ಆಧುನಿಕನಲ್ಲ. ಇಲ್ಲಿನ ಕತೆಗಳು ತಿಳಿದೊ ತಿಳಿಯದೆಯೊ ಮಾಡುತ್ತಿರುವುದು ಅದನ್ನೆ ಎನಿಸಿದೆ ನನಗೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಣದ ಕಡಲು - ಆರು ಭಾಗದ ಲೇಖನದ ಐದನೆಯ ಬರಹ

ಈ ಸಂಕಲನದಲ್ಲಿ ಒಟ್ಟು ಹದಿನೇಳು ಸಣ್ಣಕತೆಗಳಿದ್ದು ಇಂದ್ರಕುಮಾರ್ ಎಚ್ ಬಿ ಅವರ ನಾಲ್ಕನೆಯ ಸಂಕಲನ ಇದಾಗಿದೆ.

ತಂತ್ರಕ್ಕೆ ವಿಶೇಷ ಒತ್ತು ಕೊಟ್ಟು ಬರೆಯುವ ಇಂದ್ರಕುಮಾರ್ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯ ಎರಡೂ ಇದೇ ಆಗಿದೆ. ಅತ್ಯುತ್ತಮ ಭಾಷೆ, ಆಕೃತಿಯತ್ತ ವಿಶೇಷ ಗಮನ, ತಾತ್ವಿಕ/ಸಾಮಾಜಿಕ ಆಯಾಮದ ಕಡೆ ಎಚ್ಚರ ಮತ್ತು ಆಕರ್ಷಕ ನಿರೂಪಣಾ ಶೈಲಿಯಿರುವ ಇಂದ್ರಕುಮಾರ್ ಎಚ್ ಬಿ ಅವರು ಪ್ರಯೋಗಶೀಲ ಕತೆಗಾರ, ಮಹತ್ವಾಕಾಂಕ್ಷೆಯ ಬರಹಗಾರ. ಮ್ಯಾಗಝೀನ್ ಕತೆಗಳ ಧನಾತ್ಮಕ ಅಂಶವನ್ನು ಉಳಿಸಿಕೊಂಡು ಮಹತ್ವಾಕಾಂಕ್ಷೆಯ ರಚನೆಗಳಿಗೆ ಇವರು ತುಡಿಯುತ್ತಿರುವುದು ಸ್ಪಷ್ಟ.

ಮೊತ್ತ ಮೊದಲ ಕತೆ ಸಂಧಿಯಲ್ಲಿ ಇಂದ್ರಕುಮಾರ್ ಅವರು ನಿರೂಪಣಾ ತಂತ್ರಕ್ಕೆ ನೀಡುವ ಒತ್ತು ಯಾವ ಬಗೆಯದು ಎನ್ನುವುದು ಸ್ಪಷ್ಟವಾಗುತ್ತದೆ. ಸಂಧ್ಯಾ ಎನ್ನುವ ಹುಡುಗಿಯೇ ರಾಣಿ ಕೂಡ (ಪೂರ್ತಿ ಹೆಸರು ಸಂಧ್ಯಾರಾಣಿ), ಲಾವಣ್ಯ ಎಂದು ಕರೆ ಮಾಡಿದಾಕೆಯೂ ಅವಳೇ; ಸೂರ್ಯೇಶ್ ಮತ್ತು ಸುರೇಶ್ ಎನ್ನುವ ಹೆಸರಿನಲ್ಲಿ ಸ್ಪೆಲ್ಲಿಂಗ್ ತಪ್ಪಾಗುತ್ತದೆ; ಸೂರ್ಯೇಶನೇ ಕಶ್ಯಪ್ ಮುಂತಾದ ಕೆಲವೊಂದು ಕೌತುಕಗಳನ್ನು ಎಲ್ಲಿ ಹೇಳಬೇಕೊ ಅಲ್ಲಿಯೇ ಬಹಿರಂಗಗೊಳಿಸುವ ಒಂದು ತಂತ್ರವನ್ನು ಅತ್ಯಂತ ಕೌಶಲದಿಂದ ಇಂದ್ರಕುಮಾರ್ ನಿಭಾಯಿಸಿದ್ದಾರಿಲ್ಲಿ. ಹಾಗೆಯೇ ಕತೆಯನ್ನು ಎಲ್ಲಿಂದ ಹೇಳುತ್ತಾರೆ ಎನ್ನುವಲ್ಲಿಯೂ ಮಹತ್ವದ ತಾಂತ್ರಿಕ ಕೌಶಲವನ್ನು ಅವರಿಲ್ಲಿ ಮೆರೆದಿದ್ದಾರೆ. ಎಚ್ ಐ ವಿ ರಿಪೋರ್ಟ್ ಅದಲು ಬದಲಾಗುವ ಒಂದು ವಿದ್ಯಮಾನ ಮತ್ತು ಸಾಲಕ್ಕೆ ಜಾಮೀನು ನಿಂತದ್ದರಿಂದ ಸಂಕಷ್ಟಕ್ಕೆ ಸಿಲುಕುವ ಒಬ್ಬ ನಿವೃತ್ತನ ಗೋಳು, ಪತ್ನಿಯೊಬ್ಬಳ ಅಕಾರಣ ಸಂಶಯ ಪ್ರವೃತ್ತಿ - ಇವುಗಳನ್ನು ಒಂದೇ ಕತೆಯಲ್ಲಿ ಹೆಣೆಯುವ ಇಂದ್ರಕುಮಾರ್ ಹೀಗೆ ಹೆಣೆಯುತ್ತಿರುವುದು ತಂತ್ರಕ್ಕೆ ಅಗತ್ಯವಾಗಿಯೇ ಹೊರತು ಕತೆಯ ಹೂರಣಕ್ಕೆ ಅಗತ್ಯವಾಗಿ ಅಲ್ಲ ಎನ್ನುವುದನ್ನು ಗಮನಿಸಬೇಕು. ಈ ಗುಣ ಇವರ ಹೆಚ್ಚಿನೆಲ್ಲಾ ಕತೆಗಳಲ್ಲಿ ನಮಗೆ ಮತ್ತೆ ಮತ್ತೆ ಎದುರಾಗುವುದರಿಂದ ಇದನ್ನು ಇಲ್ಲಿಯೇ ಸ್ಪಷ್ಟವಾಗಿ ಗುರುತಿಸಿಕೊಂಡು ಮುಂದುವರಿಯುವುದು ಸೂಕ್ತ.

ಸಾಮಾನ್ಯವಾಗಿ ಒಂದು ಸಣ್ಣಕತೆಗೆ ಸರಳವಾಗಿ ಒಂದು ಕೇಂದ್ರ ಇರುವುದು ವಾಡಿಕೆ. ಸಂಕೀರ್ಣ ಕತೆಗಳಲ್ಲಿ ಅದನ್ನು ಒಂದು ವಾಕ್ಯವಾಗಿ ವಿವರಿಸಲಾಗದ ಸ್ಥಿತಿ ಇದ್ದರೂ ಗುರುತಿಸಲಾಗದ ಸ್ಥಿತಿ ಇರುವುದಿಲ್ಲ. ಇದ್ದರೆ ಅಂಥ ಕತೆಯನ್ನು ಯಶಸ್ವಿ ಕತೆ ಎನ್ನಲಾಗುವುದಿಲ್ಲ. ಕೇಂದ್ರ ಹಲವು ಬಗೆಯಲ್ಲಿರಬಹುದು ಮತ್ತು ಅದನ್ನು ಕತೆಗಾರ ತನ್ನ ಕೌಶಲದಿಂದ ಹೇಗೆ ಬೇಕೊ ಹಾಗೆ ಕಾಣಿಸುವ ಚಾತುರ್ಯವನ್ನೂ ಮೆರೆಯಬಹುದು. ಆದರೆ ಅದು ಸಣ್ಣಕತೆಯ ತಾಯಿಬೇರಿನಂತೆ ಇರುವುದಂತೂ ಅನಿವಾರ್ಯ. ಒಂದಕ್ಕಿಂತ ಹೆಚ್ಚಿನ ಕೇಂದ್ರವನ್ನು ಸಣ್ಣಕತೆ ಹೊರುವುದು ಕಷ್ಟ. ಹೊತ್ತರೆ ಕೊನೆಗೆ ಕತೆ ಏನನ್ನು ಹೇಳಲು ಬಯಸುತ್ತದೆ ಎನ್ನುವಲ್ಲಿ ಆ ಎಲ್ಲ ಕೇಂದ್ರಗಳಿಗೂ ಒಂದು ಸಮಾನ ತಂತುವಿನ ಜೋಡಣೆ ಇರುವುದು ಅತ್ಯಗತ್ಯವಾಗುತ್ತದೆ.

ಇಂದ್ರಕುಮಾರ್ ಅವರ ಸಂಧಿ ಕತೆಯಲ್ಲಿ ಏನಾಗುತ್ತಿದೆ ಗಮನಿಸಬೇಕು. ಸುಮಾರು ಹನ್ನೆರಡು ಪುಟಗಳ ಈ ಕತೆಯ ಮೊದಲ ಮೂರು ಪುಟಗಳಷ್ಟು ಇರುವ ಕತೆ ಸಂಗಪ್ಪ ಮತ್ತು ದುಗ್ಗವ್ವನ ಕುಟುಂಬದ್ದು. ಸಂಧ್ಯಾ ಇವರ ಮಗಳು. ಸಂಗಪ್ಪ ಹಿರಿಯ ಅಧಿಕಾರಿಯೊಬ್ಬರ ಸಾಲಕ್ಕೆ ಜಾಮೀನು ನಿಂತು ತನ್ನ ನಿವೃತ್ತಿಯ ಹಣ ಕಳೆದುಕೊಂಡಿದ್ದಾನೆ. ಮನೆಯಲ್ಲಿ ಕಷ್ಟವಿದೆ. ಇದೆಲ್ಲದರ ಪರಿಣಾಮವೋ ಎಂಬಂತೆ ಮಗಳ ನಡತೆಯ ಬಗ್ಗೆ ದುಗ್ಗವ್ವನ ಅಸಹನೆ ಹೊರಹೊಮ್ಮುತ್ತಿದೆ. ಸಾಲ ಪಡೆದು ತೀರಿಕೊಂಡ ಅಧಿಕಾರಿಯ ಮಗ ಲಿಂಗರಾಜ ಹಣ ಒದಗಿಸುವ ಭರವಸೆಯನ್ನೇನೊ ನೀಡಿದ್ದಾನೆ ಮತ್ತು ಸಂಧ್ಯಾ ಜೊತೆ ಅವನ ಸಂಬಂಧ ಚಿಗುರಿಕೊಳ್ಳುವ ಹಂತದಲ್ಲಿದೆ.

ಎರಡನೆಯ, ಸುಮಾರು ಎರಡು ಪುಟಗಳಷ್ಟಿರುವ ಭಾಗದಲ್ಲಿ ಪೂರ್ವಿ ಎಂಬಾಕೆ ತನ್ನ ಪತಿ ಕಶ್ಯಪ್ ಈಚೆಗೆ ಬದಲಾಗುತ್ತಿದ್ದಾನೆ ಎನ್ನುವ ಬಗ್ಗೆ ಚಿಂತಿತಳಾಗಿದ್ದಾಳೆ. ಲಾವಣ್ಯ ಎಂಬವಳ ಕರೆ ಅವಳಲ್ಲಿ ಅನುಮಾನದ ತರಂಗಗಳನ್ನು ಹುಟ್ಟಿಸಿದೆ. ಈ ಪೂರ್ವಿಯದ್ದು ಮರುವಿವಾಹ ಬೇರೆ. ಈ ಸಂಬಂಧದ ಮತ್ತಷ್ಟು ವಿವರಗಳು ಇದ್ದು ಈ ಭಾಗ ಕೂಡ ಪಡೆದ ಪೋಷಣೆ ಗಾಢವಾದದ್ದೇ.

ಮೂರನೆಯ ಭಾಗದಿಂದ ಕತೆ ನೇರವಾದ ಟ್ರ್ಯಾಕ್ ಹಿಡಿಯುತ್ತದೆ. ಕೆಕೆ‌ಎಂ ಲ್ಯಾಬ್ ನಡೆಸುವ ಸಿಂಗಾರಮ್ಮ, ಅವಳಿಗೆ ಮರುಳಾದ ಡಾಕ್ಟರ್ ಮೂಲಿಮನಿ, ಸಿಂಗಾರಮ್ಮನ ಕೈಕೆಳಗಿನ ನರ್ಸ್ ಸ್ನೇಹಾ, ಕೌಂಟರಿನಲ್ಲಿ ದುಡಿಯುವ ರಾಣಿ, ಅಲ್ಲಿಗೆ ಎಚ್ ಐ ವಿ ಪರೀಕ್ಷೆಗೆ ಬರುವ ಸೂರ್ಯೇಶ್ (ಕಶ್ಯಪ್), ಇನ್ನೊಬ್ಬ ಮಾರ್ವಾಡಿ ಸುರೇಶ್ (ನಾಲ್ಕನೆಯ ಭಾಗದಲ್ಲಿ ಈತ ವಿವಾಹ ನೋಂದಣಿ ಕೇಂದ್ರದಲ್ಲಿ ಅಲ್ಲಿನ ಅಧಿಕಾರಿ ಪೂರ್ವಿ ಜೊತೆ ನಡೆಸುವ ಸಂಭಾಷಣೆಯಿಂದ ಈತ ಒಬ್ಬ ಚಿಕ್ಕ ಪ್ರಾಯದ ಹುಡುಗಿಯನ್ನು ಮದುವೆಯಾಗುವ ಆತುರದಲ್ಲಿರುವುದು, ಅಂಥ ಒಂದು ಹುಡುಗಿಯನ್ನು ಕರೆತಂದಿರುವುದು, ಆಕೆಯ ತಂದೆ,ತಾಯಿ ಅಥವಾ ಯಾರೊಬ್ಬ ಸಂಬಂಧಿಯೂ ಜೊತೆಗಿಲ್ಲದಿರುವುದು ಬರುತ್ತದೆ.) ಇಬ್ಬರ ರಿಪೋರ್ಟು ಅದಲು ಬದಲಾಗುವುದು ಒಂದರ್ಥದಲ್ಲಿ ಕತೆಯ ಕೇಂದ್ರ. ರೈಲ್ವೇ ಸ್ಟೇಶನ್ನಿನಲ್ಲಿ ಈ ಸೂರ್ಯೇಶ್ ಮತ್ತು ಸುರೇಶ್ ಅಕಸ್ಮಾತ್ ಪರಿಚಯವಾಗಿ ಎಷ್ಟೆಲ್ಲ ಮಾತನಾಡಿಕೊಳ್ಳುತ್ತಾರೆಂದರೆ ತಮ್ಮಿಬ್ಬರ ಎಚ್ ಐ ವಿ ಟೆಸ್ಟ್ ರಿಪೋರ್ಟ್ ಅದಲು ಬದಲಾಗಿದ್ದನ್ನು ತಿಳಿಯುತ್ತಾರೆ!

ಇಡೀ ಕತೆ ಸಲೀಸಾಗಿ ಓದಿಸಿಕೊಳ್ಳುವಂತಿದೆ. ವಿವರಗಳು ಸಾಕಷ್ಟು ಗಾಢವಾಗಿದ್ದು ಪ್ರತಿ ಭಾಗವೂ ಇದೇ ಮುಖ್ಯ ಮುದ್ದೆ ಎನಿಸುವಂತಿವೆ. ಕೊಂಚ ಗೊಂದಲ ಹುಟ್ಟುವುದಾದರೂ ಅದು ಪ್ರಜ್ಞಾಪೂರ್ವಕ ನಿರ್ಮಿಸಿದ, ರಂಜಕ ಉದ್ದೇಶದ ಗೊಂದಲವೇ ಹೊರತು ಇನ್ನೇನಲ್ಲ. ಯಾರಿಗಾದರೂ ಇಷ್ಟವಾಗಿ ಬಿಡುವ ಈ ಕತೆಗೆ 2014ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಬಹುಮಾನ ಕೂಡ ಬಂದಿದೆ. ಆದರೆ ಒಂದು ಸಣ್ಣಕತೆ ತನ್ನ ಒಡಲಲ್ಲಿ ಧರಿಸಿದ ಇಂಥ ಮಲ್ಟಿಪಲ್ ಸೆಂಟರ್ಸ್ ಈ ಕತೆಯ ಸಂದರ್ಭದಲ್ಲಿ ಅಗತ್ಯವೆ? ಅದು ಸಾಧಿಸಿದ್ದೇನು ಎನ್ನುವ ಪ್ರಶ್ನೆಗಳಿಗೆ ಉತ್ತರ ಕಷ್ಟ. ಯಾಕಿಷ್ಟು ವಿವರವಾಗಿ ಈ ಕತೆಯನ್ನು ಗಮನಿಸಿದೆ ಎಂದರೆ ಇಂದ್ರಕುಮಾರ್ ಎಚ್ ಬಿ ತಮ್ಮ ಎಲ್ಲಾ ಕತೆಗಳಲ್ಲೂ, ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲಾ ಇದನ್ನೇ ಮಾಡುತ್ತಾರೆ ಎನ್ನುವ ಕಾರಣಕ್ಕೆ. ಇದರಿಂದಾಗಿಯೇ ಇವರ ಕತೆಗಳು ಓದುಗನ ಮೇಲೆ ಮಾಡುವ ಪರಿಣಾಮ ಮೊಂಡಾಗುತ್ತದೆ. ಆತನನ್ನು ಕತೆಯ ಸಂಕೀರ್ಣತೆ ತಲ್ಲಣಗೊಳಿಸಿಯೂ ಕಾಡುವುದಿಲ್ಲ, ಕೆದಕುವುದಿಲ್ಲ. ಕತೆ ಮಾಡಬಹುದಾದ ಮಾಯಕದ ಪರಿಣಾಮ ಸಾಧಿಸಲ್ಪಡುವುದಿಲ್ಲ ಎನಿಸುತ್ತದೆ.

ಎರಡನೆಯ ಕತೆ ಚಾಕರಿಯಮ್ಮ ಸಿನಿಮೀಯ ಎನಿಸುವ ಘಟನಾವಳಿಗಳಿಂದ ಕೂಡಿದೆ. ಇಲ್ಲಿನ ಅಂತ್ಯ ಕೂಡ ನಾಟಕೀಯವಾಗಿದೆ. ಒಂಟಿ ಬದುಕನ್ನು ಆಯ್ದುಕೊಂಡ ಚಾಕರಿಯಮ್ಮ ಅದನ್ನು ನಿಭಾಯಿಸುವ ಬಗೆ ಕೊಂಚ ಅಸಂಗತವಾಗಿದ್ದು ಇಡೀ ಕತೆಯ ಚೌಕಟ್ಟಿನಲ್ಲಿ ಅದು ಮಹತ್ವವನ್ನು ಪಡೆಯುವ ರೂಪಕವಾಗುವುದಿಲ್ಲ ಎನ್ನುವುದು ಮುಖ್ಯ. ಒಂದೇ ಕೈಯ ವ್ಯಕ್ತಿ ಮತ್ತು ಆತನ ಮಗುವನ್ನು ಯಾವ ಸಂಘರ್ಷವಿಲ್ಲದೆ ಸ್ವೀಕರಿಸಿದಂತೆ ಕಾಣುವ ಈ ಕತೆಯ ಅಂತ್ಯ ಹಾಗೂ ಎರಡು ಮತ್ತು ಒಂದು ಕತೆಯಲ್ಲಿಯೂ ಸಕ್ಕೂ ಒಂದು ಮಗುವನ್ನು ಸ್ವೀಕರಿಸುವುದರೊಂದಿಗೆ ಬರುವ ಅಂತ್ಯ, ಶರಧಿಯ ಸನ್ನಿಧಿಯಲ್ಲಿ ಸಿಕ್ಕವಳು ಕತೆಯಲ್ಲಿ ತನ್ನ ಹೆಂಡತಿಯ ಕಿರಿಕಿರಿಗೆ ಬೇಸತ್ತು ಗೋವಾಕ್ಕೆ ಹೋದ ಮಧುಕರ ಅಲ್ಲಿ ಲೈಲಾ ಎಂಬ ಹುಡುಗಿ, ಆಕೆಯ ಜೊತೆಯವರನ್ನು ಸ್ವೀಕರಿಸುವುದರೊಂದಿಗೆ ಬರುವ ಅಂತ್ಯ , ಪ್ರಚಂಡ ಪುಲಕೇಶಿ ಕತೆಯಲ್ಲಿ ಆತ ಭಿಕ್ಷುಕಿಯೊಬ್ಬಳನ್ನು ತನ್ನ ತಾಯಿ ಎಂದು ಸ್ವೀಕರಿಸುವಲ್ಲಿ ಸಿಗುವ ಅಂತ್ಯ - ಎಲ್ಲವೂ ಒಂದೇ ಬಗೆಯದ್ದಾಗಿದೆ, ಅದರ ಸಿನಿಮೀಯತೆಯಲ್ಲಿಯೂ, ಅಸಂಗತ ಜೋಡಣೆಯಲ್ಲಿಯೂ ಮತ್ತು ಇಡೀ ಕತೆಯ ಚೌಕಟ್ಟು ಅಂಥ ಒಂದು ಗಮ್ಯಕ್ಕೆ ತಯಾರಾಗುವ ಬಗೆಯಲ್ಲಿ ರೂಪುಗೊಳ್ಳದೇ ಇರುವುದರಲ್ಲಿಯೂ.

ಹಳಿಗಳು ಕೂಡಿದವು ಕತೆ ಸಂಭಾಷಣೆಯಲ್ಲಿದೆ. ಕತೆಯಲ್ಲಿ ಸಿನಿಮೀಯ ಪರಿಕಲ್ಪನೆಯೇ ಹೆಚ್ಚಿದ್ದು ಒಂದು ಪ್ರೇಮ ಪ್ರಸಂಗದ ಉದ್ದೇಶ ಬಿಟ್ಟರೆ ಹೆಚ್ಚೇನೂ ಇಲ್ಲ.

ಕಾಣದ ಕಡಲು ಈ ಸಂಕಲನದ ಒಂದು ಉತ್ತಮ ಕತೆ. ಸಾಕಷ್ಟು ನೇರವಾಗಿ, ಸಹಜ ಸುಂದರ ನಿರೂಪಣೆಯೊಂದಿಗೆ ಬಂದಿರುವ ಒಂದು ಸರಳ ಕತೆಯಿದು. ಮನೆಬಿಟ್ಟು ಹೋಗಿರುವ ಮೈದುನ ಸಿಗಬಹುದು ಎಂಬ ನಿರೀಕ್ಷೆಯಿಂದ ಕರೆತರಲು ಹೋದ ಕುಟುಂಬ ಒಂದೆಡೆ, ಮನೆಯಲ್ಲೇ ಅಡುಗೆ ಮಾಡುತ್ತ ಅವನ ಬರವನ್ನು ಹಾರೈಸುವ ಕೇಂದ್ರ ಪಾತ್ರ ಒಂದೆಡೆ ಇದ್ದು ಕತೆ ಹದವಾಗಿ ಹೃದ್ಯವಾಗಿ ಮೂಡಿಬಂದಿದೆ.

ಕತ್ತಲೆಯೊಳಗಿನ ಬೆಳಕು ಕತೆಯಲ್ಲಿಯೂ ಸಿನಿಮೀಯವೆನಿಸುವ ರೋಹಿತದಾಸ-ಸುಭಾಷಿಣಿ ಸಮಾಗಮದ ಕತೆಗೆ ಸುಮಂಗಲಾ ಪ್ರವರದ ಮುಂಡಾಸು ತುಸು ಭಾರವಾಗಿಯೇ ಇದೆ ಎನ್ನದೆ ನಿರ್ವಾಹವಿಲ್ಲ. ಇಂದ್ರಕುಮಾರ್ ಅವರ ನಿರೂಪಕ ಶೈಲಿ, ವಿವರಗಳ ಗಾಢ ಕಥಾಜಗತ್ತು ಮತ್ತು ಅವರು ತರುವ ವಾಸ್ತವಿಕ ಜಗತ್ತಿನ ಅಂಶಗಳು ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿಯೂ ಅವುಗಳ ಸದುಪಯೋಗವಾಗಲಿ, ಸೂಕ್ತವಾದ ಬಳಕೆಯಾಗಲಿ ಆಗುತ್ತಲೇ ಇಲ್ಲ ಎನಿಸುವುದು ಇಂಥಲ್ಲಿಯೇ. ಈ ಕತೆಯಲ್ಲಿ ಬರುವ ವಿದ್ಯುತ್ ಸಮಸ್ಯೆ ಇಡೀ ಕತೆಯ ಮುಕ್ಕಾಲು ಭಾಗ ಆವರಿಸಿದೆ. ಆದರೆ ಕತೆಯ ಕೊನೆಯಲ್ಲಿ ಧುತ್ತೆಂದು ಬರುವ ಸುಭಾಷಿಣಿ ಮತ್ತು ರೋಹಿತದಾಸರ ರೊಮ್ಯಾಂಟಿಕ್ ಸಂಭಾಷಣೆ ಕತೆಯನ್ನು ಬೇರೆಯೇ ಮಜಲಿಗೆ ತೆಗೆದುಕೊಂಡು ಹೋಗುತ್ತದೆ. ಹಳಿಗಳು ಕೂಡಿದವು ಕತೆಯ ಸಿನಿಮೀಯವೆನಿಸುವ ಗಂಡು ಹೆಣ್ಣು ಮುಖಾಮುಖಿ ಸನ್ನಿವೇಶವೊಂದು ಆಗಾಗ ಇವರ ಗಂಭೀರ ವಿವರಗಳ ಸಂಕೀರ್ಣ ಕಥಾಜಗತ್ತನ್ನು ಧುತ್ತೆಂದು ಪ್ರವೇಶಿಸಿ ಅತ್ತ ಇದು ಜನಪ್ರಿಯ ಸಾಹಿತ್ಯವೂ ಆಗದೆ ಇತ್ತ ಮಹತ್ವಾಕಾಂಕ್ಷೆಯ ಬರಹವೂ ಆಗದೆ ತ್ರಿಶಂಕುವಾಗುವುದು ಕಾಣುತ್ತದೆ. ಇದು ಇಂದ್ರಕುಮಾರ್ ಅವರು ಮೀರಬೇಕಾದ ಅವರ ಒಂದು ಮಿತಿ ಎನಿಸುವಂತೆಯೂ ಮಾಡುತ್ತದೆ.

ದೂರ ತೀರದ ಕನಸು ಕತೆಯನ್ನು ಗಮನಿಸಿ. ಹೆಂಡತಿ ಸತ್ತಿದ್ದಾಳೆ. ಹೆಂಡತಿಯ ತಂಗಿಯ ಜೊತೆ ಚಿಗುರುವ ಹಂತದಲ್ಲಿದ್ದ ಪ್ರೇಮ ಪ್ರಕರಣ ಮುರುಟಿದ ಇತಿಹಾಸವಿದೆ. ಬಹಳ ವರ್ಷಗಳ ಬಳಿಕ ಅವಳನ್ನು ಹುಡುಕಿಕೊಂಡು ಹೋಗಿ ನಡೆಯುವ ಮುಖಾಮುಖಿಯೊಂದು ಇಲ್ಲಿ ಸಾಕಷ್ಟು ಪೋಷಣೆಯ ಪೀಠಿಕೆಯೊಂದಿಗೆ ನಡೆಯುತ್ತಿದೆ. ಆದರೆ ಅದರಿಂದ ಮಹಾರಹಸ್ಯವೇನೂ ಸ್ಫೋಟಗೊಳ್ಳುವುದಾಗಲಿ, ಹೊಸ ಒಂದು ತಿರುವು ಕಾಣುವುದಾಗಲೀ ನಡೆಯುತ್ತಿಲ್ಲ. ಒಂದು ನಿಷ್ಫಲವಾದ ಭೇಟಿಯಿದು. ಈ ಎಲ್ಲ ಸಂಕೀರ್ಣ, ಗಾಢ ಕಥಾನಕದ ಪ್ರವರದ ಉದ್ದೇಶವೇನು ಎಂಬ ಪ್ರಶ್ನೆಯಿದೆ. ಪ್ರೇಮ, ತ್ಯಾಗ, ಸಾವು ಮತ್ತು ತಪಸ್ಸಿನಂಥ ಒಂಟಿ ಬದುಕು ಕೊನೆಗೂ ಇದೆಲ್ಲದರ ಪೋಸ್ಟ್ ಮಾರ್ಟೆಮ್ ಒಂದು ಸಣ್ಣಕತೆಯ ಚೌಕಟ್ಟಿನಲ್ಲಿ ನಡೆಯುತ್ತಿದೆ, ನಡೆದೂ ಏನೂ ಘಟಿಸುತ್ತಿಲ್ಲ.

ಈ ಹಿಂದೆಯೇ ಒಮ್ಮೆ ಉಲ್ಲೇಖಿಸಿದ ಎರಡು ಮತ್ತು ಒಂದು ಕತೆ ವಿಚಿತ್ರವಾಗಿದೆ. ಇದನ್ನು ಕೊಂಚ ನೇರ, ಸರಳಗೊಳಿಸಿ ನೋಡುವುದಾದರೆ ಇಷ್ಟು: ತಾನೋಜಿ, ತಾರಾಬಾಯಿಯ ಏಕೈಕ ಸುಪುತ್ರಿ ಸಕ್ಕೂಬಾಯಿ ಅತಿಮುದ್ದಿನಿಂದ ಕೆಳ ಮಧ್ಯಮವರ್ಗದ ಸಾಂಸಾರಿಕ ಇತಿಮಿತಿಗಳನ್ನು ಮೀರಿ ಬೆಳೆಯುತ್ತಾಳೆ. ಈಡುಜೋಡು ಸರಿಯಿಲ್ಲದವನೊಂದಿಗೆ ಅವಳ ಮದುವೆಯಾಗುತ್ತದೆ. ಆದರೂ ಸಂಭಾಳಿಸಿಕೊಂಡು ಬದುಕುವ ಅವಳ ಗಂಡ ಹಾಸಿಗೆ ಹಿಡಿದಾಗ ಸೇರಿಕೊಳ್ಳುವ ಇನ್ನೊಬ್ಬನೊಂದಿಗೆ ಅದೇ ಸೂರಿನಡಿ ಅವಳು ಅವಳಿ ಸಂಸಾರ ನಡೆಸುತ್ತಾಳೆ.

ಕತೆಯ ಆರಂಭದಲ್ಲಿ ಈ ಇಬ್ಬರು ಗಂಡಂದಿರ ಹೆಂಡತಿಯ ಮೇಲೆ ಇಬ್ಬರಿಗೂ ಏನೋ ಮುನಿಸಿದೆ, ಅವಳು ನಾಪತ್ತೆಯಾಗಿದ್ದು ಇಬ್ಬರೂ ಅವಳನ್ನು ಹುಡುಕುತ್ತಿದ್ದಾರೆ. ಮಗುವಾಗಿದ್ದರೆ ಗಂಡಂದಿರ ಪ್ರೀತಿ ಸಿಗುತ್ತಿತ್ತು ಎಂದು ಮತ್ತೆ ಮತ್ತೆ ಯೋಚಿಸುವ ಸಕ್ಕೂ ಒಂದು ಆಸ್ಪತ್ರೆಯಿಂದ ಮಗು ಎತ್ತಿಕೊಂಡು ಬರುತ್ತಾಳೆ. ಉಳಿದಂತೆ ಇಲ್ಲಿಯೂ ವಿಶೇಷ ಪೋಷಣೆ ಪಡೆದಿರುವ ಸಕ್ಕೂಬಾಯಿಯ ಪೂರ್ವಾಪರ ಮನಕಲಕುವಂತಿದೆ. ವಿಶೇಷವಾಗಿ ತಾನೋಜಿ, ತಾರಾಬಾಯಿ ಇಬ್ಬರ ದಾರುಣವಾದ ವೃದ್ಧಾಪ್ಯ ಮನಕರಗುವಂತೆ ಮೂಡಿಬಂದಿದೆ. ಆದರೆ ಕತೆಯನ್ನು ಬಹುವಾಗಿ ಆವರಿಸುವ ಆ ಭಾಗ ಅಷ್ಟು ಮುಖ್ಯವಾಗದೆ ಸಕ್ಕೂಬಾಯಿಯ ಇಡೀ ಬದುಕನ್ನು ಕಟ್ಟಿಕೊಡುವತ್ತ ಕತೆ ಹರಿಯುತ್ತದೆ. ಹಾಗೆ ಮಾಡುವಲ್ಲಿ ಅದು ಸಾಂಬಾಜಿ-ತಿಪ್ಪೇಶಿಗಳ ಮೇಲೆ ಹೆಚ್ಚು ಫೋಕಸ್ ಮಾಡಿ ಮುಗ್ಗರಿಸಿದಂತಿದೆ. ಇಷ್ಟಿದ್ದೂ ಈ ಕತೆ ಸಂಕಲನದ ಇನ್ನೊಂದು ಉತ್ತಮವಾದ ಕತೆಯಾಗಿ ಮನಸ್ಸಲ್ಲಿ ನಿಲ್ಲುತ್ತದೆ.

ಒಳಗೊಂದು ವಿಲಕ್ಷಣ ಮಿಶ್ರಣ ಕತೆಯ ಹೆಸರೇ ಕತೆಯ ಚೌಕಟ್ಟು ಮತ್ತು ಒಡಲಿಗೆ ಒಂದು ರೂಪಕದಂತಿದೆ. ಇಲ್ಲಿ ಸೆಕೆಂಡ್ ಹ್ಯಾಂಡ್ ಬುಕ್ಸ್ ಮಾರುವ, ಮನೆ ಬಾಡಿಗೆ ಬಾಕಿ ಇರಿಸಿಕೊಂಡಿರುವ ಕಥಾನಾಯಕನಿಗೆ ಮಾರ್ನಿಂಗ್ ವಾಕ್ ಜೊತೆಗಾರ ರಮಣಕಾಂತ ತನ್ನ ಹೆಂಡತಿ ತನಗೆ ಸೂಟ್ ಆಗುತ್ತಿಲ್ಲ, ನೀನೇ ಇಟ್ಕೊ ಎನ್ನುವಂತೆ ವರ್ತಿಸುತ್ತಾನೆ. ಅವಳು ಇಬ್ಬರ ನಡುವಿನ ಪ್ರಶ್ನಾರ್ಥಕ ಚಿಹ್ನೆಯಂತಿದ್ದಾಳೆ. ಇವನು ಯಾವುದಕ್ಕೋ ಕಾಯುತ್ತಿರುವವನಂತಿದ್ದು ಕತೆ ನವಿರಾಗಿ ಮುಂದುವರಿಯಲು ಅವಕಾಶವಾಗಿದೆ. ಇಲ್ಲಿ ರಮಣಕಾಂತ ಆಕೆಯ ಅಪ್ಪನ ಕಾಯಿಲೆ, ಅವನು ಕೊನೆಗಾಲದಲ್ಲಿ ಮದುವೆಯಾದ ಈಕೆಯ ಸ್ನೇಹಿತೆಯ ಕತೆ ಹೇಳುತ್ತಾನೆ.

ಅಪ್ಪನ ವ್ಯಕ್ತಿತ್ವ ಕಟ್ಟಿಕೊಡಲು ಬಳಕೆಯಾದಂತಿರುವ ಕಪ್ಪು ಬಿಳುಪು ಕತೆ, ಕೊಲೆಯಾದ ತಮ್ಮನ ವ್ಯಕ್ತಿತ್ವ ಕಟ್ಟಿಕೊಡಲು ಬಳಕೆಯಾದಂತಿರುವ ಕತೆ ಸಿಕ್ಕು - ಹೆಚ್ಚು ನೇರವಾದ ಸರಳ ನಿರೂಪಣೆಯಲ್ಲಿರುವ ಇನ್ನೆರಡು ಕತೆಗಳಾಗಿವೆ. ಕಪ್ಪು ಬಿಳುಪು ಮಾದರಿಯಲ್ಲೇ ಇರುವ ಇನ್ನೊಂದು ಕತೆ ನೆನಪಿನ ಸುರುಳಿ ಸುಳಿಗಾಳಿಯಾಗಿ ಬಗ್ಗೆ ಇದೇ ಮಾತನ್ನು ಹೇಳಲು ಸಾಧ್ಯವಿಲ್ಲದಿರುವುದು ತೌಲನಿಕ ಗಮನಕ್ಕೆ ಅರ್ಹವಾದ ಸಂಗತಿ. ಇಲ್ಲಿಯೂ ಗತಿಸಿದ ತಂದೆಯ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಕ್ರಿಯೆಯೇ ಇರುವುದು. ಆದರೆ ಅದಕ್ಕಾಗಿ ವ್ಯಯಿಸುವ ವಿವರ, ಪೀಠಿಕೆಯ ಉದ್ದ ಅತಿಯಾಗಿದ್ದು ಕೊನೆಯ ಎರಡು ಮೂರು ಪ್ಯಾರಾದಲ್ಲಿ ಬರುವ ವಿಚಿತ್ರವಾದ ಒಂದು ತಿರುವು ಹೊಂದಾಣಿಕೆಯಾಗದೆ ಕತೆಯ ಓದು ಕೊಂಚ ಗಲಿಬಿಲಿಯನ್ನುಂಟು ಮಾಡುವಂತಿದೆ.

ಒಟ್ಟಾರೆ ಆಕೃತಿಯ ದೃಷ್ಟಿಯಿಂದ ಇಂದ್ರಕುಮಾರ್ ಅವರ ಕತೆಗಳು ವೈರುಧ್ಯದ ಕೇಂದ್ರಗಳನ್ನು ಹಿಡಿದಿಟ್ಟುಕೊಳ್ಳುವ, ತನ್ಮೂಲಕ ಸಂಕೀರ್ಣತೆಯನ್ನು ಸಾಧಿಸುವ ಚಪಲಕ್ಕೆ ಬಿದ್ದಂತೆ ಕಾಣುವುದರಿಂದ ಯಶಸ್ವಿಯಾಗುವುದಿಲ್ಲ. ಸಿನಿಮೀಯವೆನಿಸುವ ಸಂಭಾಷಣೆ, ಯುವಪ್ರೇಮಿಗಳ ರಮ್ಯ ಸಂಭಾಷಣೆಯ ಸನ್ನಿವೇಶಗಳು, ಅನಿರೀಕ್ಷಿತಕ್ಕೆ, ತಿರುವುಗಳಿಗೆ ಕೊಡುವ ಅತಿ ಮಹತ್ವ, ನಿಗೂಢವಾದದ್ದನ್ನೇನೊ ಮುಚ್ಚಿಟ್ಟು ಚುಟುಕಿನಲ್ಲಿ ತೆರೆದು ಪಂಚ್ ಕೊಡುವ ಪ್ರಯತ್ನ - ಇವೆಲ್ಲ ಸಣ್ಣಕತೆಯ ರಂಜಕ ಅಂಶಗಳೆನ್ನುವುದರಲ್ಲಿ ಅನುಮಾನವೇನಿಲ್ಲ. ಆದರೆ ಇಂದ್ರಕುಮಾರ್ ತಮ್ಮ ಗಾಢ ವಿವರಗಳಲ್ಲಿ ಕಟ್ಟಿಕೊಡುವ ಒಂದು ಕಥಾಜಗತ್ತಿನ ಕಟ್ಟಡವೇನಿದೆ ಅದು ಇಂಥ ರಂಜಕ ಅಂಶಗಳಿಗಿಂತ ಹೆಚ್ಚು ತಾತ್ವಿಕ, ಪ್ರಯೋಗಶೀಲ ಮತ್ತು ಶೋಧಕ ಮಹತ್ವಾಕಾಂಕ್ಷೆಯತ್ತ ಗಮನ ನೀಡಿದರೆ ಎಷ್ಟು ಚೆನ್ನಾಗಿತ್ತು ಎನ್ನುವ ಒಂದು ಭಾವನೆ ಮೂಡುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಗೆಂಡೆದೇವ್ರು - ಆರು ಭಾಗದ ಲೇಖನದ ನಾಲ್ಕನೆಯ ಬರಹ

ಹನುಮಂತ ಹಾಲಿಗೇರಿಯವರ ಕಥಾಸಂಕಲನ ಗೆಂಡೆದೇವ್ರು ಒಂಭತ್ತು ಕತೆಗಳ ಒಂದು ಗುಚ್ಛ. ಕೇಶವ ಮಳಗಿಯವರ ಮುನ್ನುಡಿ ಮತ್ತು ರಹಮತ್ ತರೀಕೆರೆ ಹಾಗೂ ಅಮರೇಶ ನುಗಡೋಣಿಯವರ ಬೆನ್ನುಡಿಗಳೊಂದಿಗೆ ಬಂದಿರುವ ಈ ಸಂಕಲನ ಕತೆಗಾರರ ಐದನೆಯ ಕೃತಿ. ಕೆಂಗುಲಾಬಿ, ಮಠದ ಹೋರಿ, ಕತ್ತಲಗರ್ಭದ ಮಿಂಚು ಮತ್ತು ಊರು ಸುಟ್ಟರೂ ಹನುಮಪ್ಪ ಹೊರಗ ಇವರ ಇನ್ನಿತರ ಕೃತಿಗಳು. ಬರವಣಿಗೆಗಾಗಿ ಈಗಾಗಲೇ ಸಾಕಷ್ಟು ಬಹುಮಾನ, ಪುರಸ್ಕಾರ, ಪ್ರಶಸ್ತಿ ಪಡೆದಿರುವುದು ಇವರ ಪರಿಚಯದಲ್ಲಿ ನಮೂದಿಸಲ್ಪಟ್ಟಿದೆ.

ಸಂಕಲನದ ಮೊದಲ ಕತೆ ಸುಡುಗಾಡು ಹೆಸರೇ ಹೇಳುವಂತೆ ಸ್ಮಶಾನದಲ್ಲಿ ಹೆಣ ಒಪ್ಪಮಾಡುವುದು, ಸುಡುವುದು, ಹೂಳುವುದು ಮಾಡಿಕೊಂಡು ಅಲ್ಲೇ ವಾಸವಾಗಿದ್ದ ಒಂದು ಕುಟುಂಬದ ಕುರಿತದ್ದು. ದೊರೆರಾಜ ಅಥವಾ ದರಿಯನ ಇಡೀ ಬದುಕಿನ ಒಂದು ನೋಟವನ್ನು ಕೊಡುತ್ತಲೇ ಈ ಕತೆ ಆತನ ದಾರಿದ್ರ್ಯ, ಜೀವನದೃಷ್ಟಿ ಮತ್ತು ದುರಂತವನ್ನು ಕಟ್ಟಿಕೊಡುತ್ತದೆ. ಇತ್ತೀಚೆಗೆ ಓದಿದ ಎಡೆ ಎಂಬ ಹೆಸರಿನ ಬೇರೊಬ್ಬ ಕತೆಗಾರರ ಇದೇ ಬಗೆಯ ಕತೆಗೆ ಹೋಲಿಸಿದಲ್ಲಿ ಈ ಕತೆಯಲ್ಲಿ ಹೆಚ್ಚಿನ ಲವಲವಿಕೆ ಮತ್ತು ಕಥನದ ಎಳೆ ಇರುವುದು ಕಾಣಿಸುತ್ತದೆ. ಇಲ್ಲಿನ ಭಾಷೆ ಅತ್ಯುತ್ತಮವಾಗಿದ್ದು ನಿರೂಪಣೆ ಸರಳ, ನೇರವಾಗಿದ್ದೂ ಒಂದು ಬಗೆಯ ಹದ ಕಾಯ್ದುಕೊಂಡು ಮೆಚ್ಚುಗೆಗೆ ಕಾರಣವಾಗುತ್ತದೆ. ಸಂಕಲನದ ಉತ್ತಮ ಕತೆಗಳಲ್ಲಿ ಇದೊಂದು.

ಎರಡನೆಯ ಕತೆ ಅಲೈದೇವ್ರು ಇಷ್ಟವಾಗುವುದು ಅದರ ಆಶಯಕ್ಕಾಗಿ. ಹಿಂದೂ-ಮುಸ್ಲಿಮ್ ಸಾಮರಸ್ಯವನ್ನು ಕೆಡಿಸುವ ಶಕ್ತಿಗಳು ಮತ್ತು ಅದನ್ನು ಉಳಿಸಿಕೊಳ್ಳ ಬಯಸುವ ಶಕ್ತಿಗಳ ನಡುವಣ ಒಂದು ಸಂಘರ್ಷ ಇಲ್ಲಿದೆ. ಇಂಥ ಕತೆಗಳು ಸಹಜವಾಗಿಯೇ ಇವತ್ತು ಹೆಚ್ಚುತ್ತಿದ್ದು ಹೆಚ್ಚಿನ ಎಲ್ಲಾ ಕತೆಗಳಲ್ಲಿ ವಾಸ್ತವವನ್ನು ನೇರಾನೇರ ಚಿತ್ರಿಸುವ ಪ್ರಯತ್ನವಷ್ಟೇ ಇದೆ. ತೀರ ದೈನಂದಿನವನ್ನೇ ಕತೆಯಾಗಿಸಿದರೆ ಹೇಗೋ ಹಾಗೆಯೇ ಪ್ರತಿದಿನ ನಾವು ಕಾಣುತ್ತಿರುವುದನ್ನೇ ಕತೆಯಾಗಿಸುವಾಗ ಕತೆಗಾರ ಅದು ಜನರಿಗೆ ಬೋರ್ ಹೊಡೆಸದಂತೆ ಕೆಲವು ತಂತ್ರಗಳ ಮೊರೆ ಹೋಗಬೇಕಾಗುತ್ತದೆ. ಇಲ್ಲವಾದಲ್ಲಿ ಇವತ್ತು ವರದಿ ಎನ್ನುವುದು ಸ್ಟೋರಿ ಆಗಿ, ಪ್ರತಿಯೊಂದು ವರದಿ ಕೂಡ ರೋಚಕ, ಕೌತುಕಮಯ ಆಗಿರಬೇಕೆಂಬ ನೆಲೆಯಲ್ಲಿ ಬದಲಾಗಿರುವ ಪತ್ರಿಕಾವರದಿಗಳ ಎದುರು ಕಥನದ ಮಾಯಕತೆ ಮತ್ತು ಪರಿಣಾಮಕಾರತ್ವ ಮೆರೆಯುವುದು ಕಷ್ಟವಾಗುತ್ತದೆ.

ಮೂರನೆಯ ಕತೆ ದೇವಸಗ್ಗ ಒಂದು ವಿಧದಲ್ಲಿ ಮುಳುಗಡೆ, ನಿರಾಶ್ರಿತರು ಮತ್ತು ಪುನರ್ವಸತಿಯ ಸಮಸ್ಯೆಯ ಸುತ್ತ ಇದ್ದರೂ ಇನ್ನೊಂದು ನೆಲೆಯಲ್ಲಿ ಅದು ಆಧುನಿಕ ಜೀವನಶೈಲಿಯಿಂದ ರೋಸಿ ಹೋದ ಒಬ್ಬ ವ್ಯಕ್ತಿ ಕಾಡಿನ ನಡುವೆ ಮುಗ್ಧವಾಗಿ, ಸರಳವಾಗಿ ಬದುಕುತ್ತಿರುವವರ ಜೀವನ ಶೈಲಿಗೆ ಮಾರು ಹೋಗಿ ಅವರೊಂದಿಗೇ ಬದುಕುವ ಕನಸು ಕಾಣುವುದರ ಕತೆ ಕೂಡಾ ಆಗಿದೆ. ಆದರೆ ಒಂದು ತೀರ ಹಳೆಯ ವಸ್ತುವಾದರೆ ಇನ್ನೊಂದು ತೀರ ಆದರ್ಶದ ಒಂದು ಕಲ್ಪನೆಗಷ್ಟೇ ಸಂದುಹೋಗುವಂತಿದೆ. ಇಲ್ಲಿ ನಿರೂಪಕ ತಾನು ಚರಕವನ್ನು ತೆಗೆದುಕೊಂಡು ಹೋಗಬೇಕು ಎಂದುಕೊಳ್ಳುವಲ್ಲಿಯೇ ಕತೆಯ ವಿಡಂಬನೆ ಕೂಡ ಇರುವುದು ಗಮನಿಸಬೇಕಾದ ಅಂಶ. ಈ ಕತೆಯ ಚೌಕಟ್ಟಿನೊಳಗೆ ಕತೆಗಾರರು ಹಾಡುಗಳನ್ನು ಬಳಸಿಕೊಂಡಿರುವುದು ಇಲ್ಲಿನ ನಿರೂಪಣೆಗೆ ಹೆಚ್ಚಿನ ಸೊಗಸು ತುಂಬಿದೆ. ಈ ಕತೆ ವಿವರಗಳಲ್ಲಿ ಮೈತುಂಬಿಕೊಂಡಿದ್ದು ಇಂಥ ಪ್ರಯೋಗಶೀಲತೆ ಗಮನಸೆಳೆಯುತ್ತದೆ. ಭಾಷೆ, ಅಭಿವ್ಯಕ್ತಿಯ ತಂತ್ರಗಳು ಮತ್ತು ಒಟ್ಟಾರೆಯಾಗಿ ಕತೆಯ ಆಕೃತಿ ಎಲ್ಲಾ ದೃಷ್ಟಿಯಿಂದಲೂ ಇದು ಸಂಕಲನದ ಇನ್ನೊಂದು ಉತ್ತಮ ಕತೆಯಾಗಿ ಮೈತಳೆದಿದೆ.

ನಾಲ್ಕನೆಯ ಕತೆ ಗಂಡು ಜೋಗ್ಯಾ ಒಂದರ್ಥದಲ್ಲಿ ಜೋಗತಿ ಸಮಸ್ಯೆಯನ್ನು ಕುರಿತದ್ದು. ಆದರೆ ಇಲ್ಲಿನ ಜೋಗಯ್ಯ ಗಂಡು. ಅವನ ಸಹಜ ಆಸೆಯಾದ ಮದುವೆ, ಮಕ್ಕಳು, ಪ್ರೀತಿ ಮತ್ತು ಸಂಸಾರಕ್ಕೆ ಕತೆಯ ನಿರೂಪಕ ಒತ್ತಾಸೆಯಾಗಿ ನಿಲ್ಲುವುದನ್ನು ಹೇಳುವ ಪುಟ್ಟ ಕತೆಯಿದು. ಈ ಕತೆಯ ನಿರೂಪಣೆಯಲ್ಲಿಯೂ ಯಾವುದೇ ಗಿಮ್ಮಿಕ್ಕುಗಳಿಲ್ಲ. ಸರಳ ನೇರ ನಿರೂಪಣೆಯೊಂದಿಗೆ ಚೊಕ್ಕವಾಗಿ ಮುಗಿಯುವ ಕತೆ ಮನಸೆಳೆಯುವುದು ಅದರ ಆಶಯದಿಂದಾಗಿಯೇ.

ಐದನೆಯ ಕತೆ ಕರ್ಕಿಬೇರು. ಈ ಕತೆ ಒಂದು ನೆಲೆಯಿಂದ ನಿರಂಜನರ ಕೊನೆಯ ಗಿರಾಕಿ ಕತೆಯನ್ನು ನೆನಪಿಸುತ್ತದೆ. ಬಡತನ, ಕಾಮ-ಪ್ರೇಮದ ಆಕರ್ಷಣೆ, ನಡುವೆ ಅತಂತ್ರಗೊಂಡ ಬದುಕು ಮತ್ತು ದುರಂತದ ಅಂತ್ಯ ಇದು ಇಲ್ಲಿನ ಹಂದರ. ವಸ್ತುವಿನ ನಿಟ್ಟಿನಿಂದ ಇದರಲ್ಲಿ ಹೊಸತೇನಿಲ್ಲ. ಊರಿಗೆ ಹೇರ್‌ಪಿನ್ನು, ಟಿಕ್ಲಿ ಇತ್ಯಾದಿ ಮಾರಿಕೊಂಡು ಬರುವಾತ ಕೂಡ ಕನ್ನಡದ ಹಲವಾರು ಕತೆಗಳಲ್ಲಿ ಇರುವಂತೆ ಒಬ್ಬ ಸಾಬಿಯೇ. ಹೊಸತೇ ಆದ ಜಗತ್ತೊಂದು ತೆರೆದುಕೊಳ್ಳುವ ಯಾವ ಸಾಹಸಕ್ಕೂ ಹೋಗದೆ ಹಳೆಯ ಜಾಡಿನಲ್ಲೇ ಸಾಗುವ ಕಥಾನಕವಾದರೂ ಇಲ್ಲಿನ ನಿರೂಪಣೆಯಲ್ಲಿ ಒಂದು ಸೊಗಡಿದೆ. ದುರಂತ ಮನಕಲಕುವಂತೆ ಮೂಡಿಬಂದಿದೆ. ಕತೆಯ ಯಶಸ್ಸು ಇರುವುದು ಇದರಲ್ಲಿಯೇ.

ನಿಮ್ಮಿ ಕತೆಯ ಬಗ್ಗೆ ಕತೆಗಾರರಿಗೇ ಇದು ತೀರ ಎಳಸು ಕತೆ ಎನ್ನುವ ನಿಲುವಿದೆ. ಹಾಗಿದ್ದೂ ಈ ಕತೆ ಒಂದು ಘನತೆಯೊಂದಿಗೇ ಮೂಡಿಬಂದಿದೆ. ಕಾರ್ಗಿಲ್ ಯುದ್ಧದ ಕುರಿತು ಬರುವ ವಿವರಗಳಲ್ಲಿ ನೈಜವೆನಿಸುವ ಅಂಶಗಳಿದ್ದೂ ಶತ್ರುಗಳು ಕಾಡತೂಸು ಬಳಸುತ್ತಿದ್ದರು ಎನ್ನುವಂಥ ವಿವರ ಒಂದೆಡೆ ಬರುತ್ತದೆ. ಕಾಡತೂಸು ಬಳಸುವುದು ನಕ್ಸಲರು ಎಂದು ಎಲ್ಲರೂ ಬಲ್ಲರು. ಸುಸಜ್ಜಿತ ಸೈನಿಕರಿಗೆ ಕಾಡತೂಸು ಬಳಸುವ ಅಗತ್ಯವಿರುವುದಿಲ್ಲ ಅಲ್ಲವೆ? ಕತೆಗಾರರು ಇಂಥ ಅಂಶಗಳತ್ತ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇಲ್ಲವಾದರೆ ಅಲ್ಲಿ ಇಲ್ಲಿ ಕೇಳಿದ ಹಳಸಲು ಮಾತು, ವಿವರ, ವದಂತಿ ಎಲ್ಲವೂ ಸೇರಿಕೊಂಡು ನಿರೂಪಣೆ ಹದ ತಪ್ಪುತ್ತದೆ.

ಗೆಂಡೆದೇವ್ರು ಕತೆಯಲ್ಲಿ ಪರಿಹಾಸ್ಯ, ವಿಡಂಬನೆ ಎಲ್ಲವೂ ಸೇರಿದೆ. ಹಾಸ್ಯದ ಮೂಲಕ ಮನುಷ್ಯನ ‘ದೇವರು ಕಟ್ಟಿಕೊಳ್ಳುವ’ ಚಟವನ್ನು ಇಲ್ಲಿ ವಿಡಂಬನೆ ಮಾಡುತ್ತಲೇ ಬದುಕಿನ ಅಗತ್ಯಗಳ ಕುರಿತು ಕತೆ ನವಿರಾಗಿ ಹರಿದು ಮುಕ್ತಾಯ ಹಾಡುವುದು ಸುಂದರವಾಗಿ ಮೂಡಿಬಂದಿದೆ.

ಪಿಡುಗು ಕತೆಯಲ್ಲಿ ಮತ್ತೆ ಕರ್ಕಿಬೇರು ತರದ್ದೇ ವಸ್ತುವನ್ನು ಹೊಂದಿದ್ದು ಲೈಂಗಿಕ ಸಂಪಾದನೆಯ ಮಾರ್ಗವನ್ನು ಕಟುವಾಗಿ ಟೀಕಿಸುವುದರಲ್ಲಿ ತೃಪ್ತಿ ಪಡೆಯುವ ಕತೆ.

ನಾಗಬಲಿ ಕತೆ ಆಧುನಿಕತೆ, ಪ್ರಗತಿ, ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ಅಗಲೀಕರಣದ ಮೂಲಕ ಬಲಿಹಾಕುತ್ತಿರುವ ಅನೇಕ ಸ್ಥಳೀಯ ಜೀವನಶೈಲಿಯನ್ನು ಕುರಿತಾಗಿದೆ. ಒಂದರ್ಥದಲ್ಲಿ ಇದೂ ದೇವಸಗ್ಗದ ವಸ್ತುವನ್ನೇ ಹೊಂದಿದೆ.

ಒಟ್ಟಾರೆಯಾಗಿ ಗಮನಿಸಿದಾಗ ಇಲ್ಲಿ ಹೊಸತನವನ್ನು ಮೆರೆಯುವ ವಸ್ತು, ನಿರೂಪಣಾ ಶೈಲಿ, ಜೀವನದೃಷ್ಟಿ ಇಲ್ಲ. ಅದೇ ಮುಳುಗಡೆ, ರಸ್ತೆಯಗಲ, ವೇಶ್ಯಾವಾಟಿಕೆ, ಬಡತನ, ಕೋಮು ಘರ್ಷಣೆ ಮುಂತಾದ ವಸ್ತುಗಳಿದ್ದು ಈಗಾಗಲೇ ಇನ್ನಿತರರ ಸಂಕಲನಗಳಲ್ಲಿ ಕಂಡುಬಂದಿರುವ ವಸ್ತು ಪ್ರಪಂಚವೇ ಮತ್ತೊಮ್ಮೆ ಎದುರಾಗುವುದು ನಿರಾಸೆಯನ್ನೆ ಹುಟ್ಟಿಸುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಬೆತ್ತಲೆಯ ಬೆಳಕನುಟ್ಟು - ಆರು ಭಾಗದ ಲೇಖನದ ಮೂರನೆಯ ಬರಹ

ಜೆ ಪಿ ಬಸವರಾಜು ಅವರ ಬೆತ್ತಲೆಯ ಬೆಳಕನುಟ್ಟು ಸಂಕಲನದಲ್ಲಿ ಒಟ್ಟು 18 ಕತೆಗಳಿದ್ದು ಇವುಗಳಲ್ಲಿ ಆರನ್ನು ಕಿರುಗತೆಗಳೆಂದು ಎರಡನೆಯ ಭಾಗದಲ್ಲಿ ವಿಂಗಡಿಸಿಡಲಾಗಿದೆ. ಒಟ್ಟಾರೆಯಾಗಿ ಬಸವರಾಜು ಅವರ ಕಥಾಲೋಕ ವಿಭಿನ್ನವಾದದ್ದು, ನಿರೂಪಣೆ ಸುಂದರ-ಸರಳ, ತಂತ್ರ ನವೀನ ಮತ್ತು ಆಕೃತಿ ವಿಶಿಷ್ಟವಾಗಿದ್ದು ಇವರ ಕಥಾಲೋಕವನ್ನು ಸ್ಪರ್ಶಿಸಲು ಕೊಂಚ ಭಿನ್ನವಾದ ಮನಸ್ಥಿತಿಯೊಂದಿಗೆ ತಯಾರಾಗುವುದು ಅಗತ್ಯವೆನಿಸುತ್ತದೆ.

ಬಸವರಾಜು ಅವರು ದೈನಂದಿನಗಳಿಂದಲೇ ತಮ್ಮ ಕತೆಗಳಿಗೆ ಬೇಕಾದ ವಸ್ತು ಮತ್ತು ಕಥಾನಕವನ್ನು ಆರಿಸಿಕೊಂಡು ಕತೆ ಹೇಳತೊಡಗುತ್ತಾರೆ. ಹೇಳುವಾಗಲೂ ಅತ್ಯಂತ ಸಹಜವಾದ ಒಂದು ನೆಲೆಗಟ್ಟು ಅವರ ವಿಧಾನವಾಗಿದೆ. ಅನಗತ್ಯವಾದ ಗಿಮ್ಮಿಕ್ಕುಗಳಾಗಲೀ, ಸುಂದರಗೊಳಿಸುವ ಅಸಹಜ ಪ್ರಯತ್ನಗಳಾಗಲೀ ಅವರಲ್ಲಿ ಇಲ್ಲವೇ ಇಲ್ಲ. ಒಂದು ಕಥಾನಕಕ್ಕೆ ಹೊಂದುವ ಬಗೆಯಲ್ಲೇ ಅವರು ಅದನ್ನು ಸಮೀಪಿಸುವ ಕೋನವನ್ನು ನಿರ್ಧರಿಸಿ ಅಲ್ಲಿಂದ ತೊಡಗಿ ನೇರವಾಗಿ ಕೇಂದ್ರಕ್ಕೆ ಸಾಗುತ್ತಾರೆ ಮತ್ತು ಈ ಅಪ್ರೋಚ್‌ಗಾಗಿ ತಂತ್ರವನ್ನು ಹೊಂದಿಸಿಕೊಳ್ಳುವ ಕ್ರಮವನ್ನು ಅನುಸರಿಸದೆ, ಸಹಜವಾದ ತಂತ್ರವನ್ನಷ್ಟೇ ಉಪಯೋಗಿಸಿಕೊಳ್ಳುತ್ತಾರೆ. ಹಾಗಿದ್ದೂ ಅವರ ಕತೆಗಳ ವಸ್ತು-ಆಕೃತಿ ಮತ್ತು ನಿರೂಪಣಾ ಶೈಲಿಗಳಿಂದಾಗಿಯೇ ತಂತ್ರಗಳ ವೈವಿಧ್ಯತೆ ಇದ್ದು ಎಲ್ಲಿಯೂ ಏಕತಾನತೆ ಕಾಣಿಸುವುದಿಲ್ಲ. ಪ್ರತಿಯೊಂದು ಕತೆಯೂ ತನ್ನ ತಾಜಾತನದಿಂದಾಗಿ, ನಿರೂಪಣೆಯ ಲವಲವಿಕೆಯಿಂದಾಗಿ ಗಮನ ಸೆಳೆಯುತ್ತದೆ. ಓದು ಹೊರೆಯಾಗದ್ದು, ಮುದ ನೀಡುವಂಥದ್ದು.

ಬಸವರಾಜು ಅವರ ಕತೆಗಳು ಒಡ್ಡುವ ಸವಾಲು ಕೊಂಚ ವಿಚಿತ್ರವಾದದ್ದು. ಮುನ್ನುಡಿಯಲ್ಲಿ ಹಕ್ಕಿಗಾಗಿ ಬಲೆ ಬೀಸಿ ಕೂತಿದ್ದು, ಕತೆಗಳಿಂದ ದೂರವಾಗಿದ್ದು, ಹತ್ತಿರವಾಗಿದ್ದು, ಮತ್ತೆ ಮತ್ತೆ ಅದೇ ಜಗತ್ತಿಗೆ ಹಿಂದಿರುಗಿ ತಿದ್ದಿದ್ದು, ಪ್ರತಿಬಾರಿ ತಿದ್ದಿದಾಗಲೂ ಕತೆಯ ಸ್ವರೂಪವೇ ಬದಲಾಗಿ ಅಚ್ಚರಿ ಮೂಡಿಸಿದ್ದು ಎಲ್ಲದರ ಕುರಿತು ಬರೆದಿದ್ದಾರೆ. ಏನೋ ಗೀಚಿದ್ದೆನ್ನುವಂಥ ಕತೆಗಳಲ್ಲ ಇವು. ಶ್ರದ್ಧೆಯಿಂದ ಆರೈಕೆ ಮಾಡಿ ಪೋಷಿಸಿದ ಕತೆಗಳು. ಹಾಗಾಗಿ ಇಲ್ಲಿನ ಕೆಲವಾದರೂ ಕತೆಗಳಲ್ಲಿ ಬಸವರಾಜು ಅವರು ಢಾಳಾಗಿ ಕಾಣುವ ಕಥಾನಕದ ನಡೆ, ಸಂಭಾಷಣೆ ಮತ್ತು ವಿದ್ಯಮಾನಗಳಾಚೆಯದೇನನ್ನೋ, subtle ಆದ ಏನನ್ನೋ ಹೇಳಲು ಪ್ರಯತ್ನಿಸಿದ್ದಾರೆನ್ನುವುದು ಸ್ಪಷ್ಟ. ಆದರೆ ಅದರಲ್ಲಿ ಬಸವರಾಜು ಅವರ ಕತೆಗಳು ಯಶಸ್ವಿಯಾಗಿವೆಯೇ ಎನ್ನುವುದು ಸವಾಲು. ಮೊದಲ ಓದಿನಲ್ಲಿ, ಓದುವ ಘಳಿಗೆಯಲ್ಲೇ ಅದು ಛಕ್ಕೆಂದು ಮನಸ್ಸು ಹೃದಯಕ್ಕೆ ಸೋಕದಿದ್ದರೆ ಉತ್ತರ ಇಲ್ಲವೆನ್ನಬೇಕು. ಸೋಕಿದರೆ ಜಿಜ್ಞಾಸೆಯೇ ಇರುವುದಿಲ್ಲ. ಅಂಥ ಒಂದು ಹದ, ಮ್ಯಾಜಿಕ್ ಎನ್ನಬೇಕೆ, ಅದು ಕತೆಗೆ ಹೇಗೆ ಮತ್ತು ಯಾವಾಗ ದಕ್ಕುವುದೋ ಹೇಳಲಾಗದು. ಜಯಂತ್ ಕಾಯ್ಕಿಣಿಯವರು ಹೇಳುವಂತೆ, ಬಹುಶಃ ಅದೃಷ್ಟ ಒಲಿದಾಗಲೆ? ಗೊತ್ತಿಲ್ಲ. ಭಾವಕ್ಕಿಂತ ಬುದ್ಧಿ ಹೆಚ್ಚು ಕೆಲಸ ಮಾಡುತ್ತಿದ್ದರೆ ಅದು ಕೈಜಾರಿ ಹೋಗುವುದೆ? ಅದೂ ಗೊತ್ತಿಲ್ಲ. ಅಡುಗೆಯೊಂದು ಎಲ್ಲ ಹದವರಿತ ಪದಾರ್ಥಗಳಿದ್ದೂ ರುಚಿಕಟ್ಟುವ ಮಾಯಕ ಯಾವುದು ಎಂದು ಹೇಗೆ ಹೇಳಲಾಗದೊ ಹಾಗೆಯೇ ಇದೂ.

ಬೆತ್ತಲೆಯ ಬೆಳಕನುಟ್ಟು ಕತೆ ಈ ಸಂಕಲನದ ಮೊದಲ ಕತೆ. ಇಲ್ಲಿ ಬಡ ದ್ಯಾಮವ್ವ ತನ್ನ ತುಂಬು ಹರಯದ ಮಗಳು ರತ್ನಿಯೊಂದಿಗೆ ಎಲ್ಲಮ್ಮನ ಗುಡ್ಡಕ್ಕೆ ಬಂದಿದ್ದಾಳೆ, ಹರಕೆ ಸಂದಾಯಕ್ಕೆ. ಇಲ್ಲಿಯೇ ಆ ಮಗಳು ತನ್ನದೇ ಊರಿನ ಗ್ರಾಮಸೇವಕ ಗೋವಿಂದ ದಾಸ್ ಜೊತೆ ಹಿಂದೆಯೇ ಕುದುರಿದ್ದ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವ ಮೊದಲ ಹೆಜ್ಜೆಯನ್ನು ಎತ್ತಿಡುತ್ತಾಳೆ. ತಾಯಿಯನ್ನು ಬಿಟ್ಟು ಅಲ್ಲಿಂದ ಕಾಲ್ಕಿದ್ದಾಳೆ. ಇದು ದ್ಯಾಮವ್ವನಿಗೆ ಅನಿರೀಕ್ಷಿತ ಆಘಾತ. ಮುದಿವಯಸ್ಸಿನಲ್ಲಿ ಆಸರೆ ತಪ್ಪಿದಂತಾಗಿ ಆಕೆ ಕಂಗಾಲಾಗುವಾಗಲೇ ಅಲ್ಲಿ ಬೆತ್ತಲೆ ಸೇವೆಯ ವಿರುದ್ಧ ಪ್ರತಿಭಟನೆ, ಸನಾತನಿಗಳ ಆಕ್ರೋಶ, ಪೋಲೀಸರ ಅಸಹಾಯಕ ದೊಂಬರಾಟ ನಡೆಯುತ್ತಿದೆ. ಕತೆಯ ಕೊನೆಯಲ್ಲಿ ದ್ಯಾಮವ್ವ ಒಂದು ಕನಸು ಕಾಣುತ್ತಾಳೆ. ಇದು ಇಡೀ ಕತೆಯ ಉಸಿರಿಗೆ ಒಂದು ಅರ್ಥವನ್ನು, ಕೇಂದ್ರವನ್ನು, ಹೊಳಹನ್ನು ದಯಪಾಲಿಸುವ ಉದ್ದೇಶದ ಕನಸು. ತಾಂತ್ರಿಕವಾಗಿಯೂ, ನಿರೂಪಣೆಯ ಸೊಗಸಿಗೂ ಮೆಚ್ಚುಗೆಯಾಗುವ ಒಂದು ಕತೆಯಿದು.

ಎರಡನೆಯ ಕತೆ ಕುದುರೆ ಕೂಡ ಧ್ವನಿಸುವ ಸತ್ಯ ಮಾರ್ಮಿಕವಾಗಿ ಮೂಡಿ ಬಂದಿದೆ. ಆಕಸ್ಮಿಕವಾಗಿ ನಿರೂಪಕನ ಆಶ್ರಯಕ್ಕೆ ಬರುವ ಒಂದು ಕುದುರೆ, ಮಕ್ಕಳ ಸಂತಸ, ಆಟ ಮತ್ತು ಕ್ರಮೇಣ ಎಲ್ಲರ ಉಪಯೋಗಕ್ಕೂ ದಕ್ಕುವ ಬಗೆ ನಿರೂಪಣೆಯಲ್ಲಿ ರೂಪುತಳೆದ ಬಗೆ ಅತ್ಯಂದ ಹದವಾಗಿ, ನವಿರಾಗಿ ಮನಸೆಳೆಯುತ್ತದೆ. ಪ್ರಚಾರ ಮತ್ತು ರಾಜಕೀಯ ಒಟ್ಟಾರೆ ಸಂತುಲನವನ್ನೇ ಕೆಡಿಸುವ ಬಗೆ ಕೂಡ ಅಚ್ಚುಕಟ್ಟಾಗಿ ಬಂದಿರುವ ಸೊಗಸಾದ ಕತೆಯಿದು.

ಮೂರನೆಯ ಕತೆ ಸ್ನಾನ. ಸಾವನದುರ್ಗಕ್ಕೆ ಪ್ರವಾಸ ಹೊರಟ ನಿರೂಪಕ ಮತ್ತು ಆತನ ಗೆಳೆಯ ಹಾದಿಯ ನಡುವೆ ಒಂದೆಡೆ ಒಂದು ತುಳಸಿ ಗಿಡಕ್ಕೆ ಮೋಹಗೊಂಡು ಅದರ ಬೀಜ ತರಿದು ಕೊಡಲು ಸ್ನಾನ ಮಾಡಿರುವ ಒಬ್ಬನಿಗಾಗಿ ಇಡೀ ಹಳ್ಳಿ ತಲಾಶು ಮಾಡಬೇಕಾಗಿ ಬರುವ ತಮಾಷೆಯ ಒಂದು ಕತೆಯಿದು. ಕೊನೆಗೂ ಇವರಿಗೆ ಆಪದ್ಬಾಂಧವನಂತೆ ಒದಗಿದ ಪುಟ್ಟ ಹುಡುಗ ಕೂಡ ಸ್ನಾನ ಮಾಡಿದ್ದು ವಾರದ ಹಿಂದೆ ಎನ್ನುವುದು ಬಹುಶಃ ಎಲ್ಲರಿಗೂ ಗೊತ್ತೇ ಇರುತ್ತದೆ. ಆದರೆ ಹಳ್ಳಿ ಮಂದಿಗೆ ತಮ್ಮ ಊರಿನ ತುಳಸಿ ಪರವೂರಿನವರಿಗೆ ಸಿಗಲಿ ಎನ್ನುವ ಸದುದ್ದೇಶಕ್ಕೆ ದೇವರಂತಿರುವ ಪುಟ್ಟ ಬಾಲಕನಿಗೆ ಸ್ನಾನದ ಶೌಚ ಅಗತ್ಯ ಎನಿಸುವುದಿಲ್ಲ. ಇವರಿಗೂ ಅದು ಅಗತ್ಯವಿಲ್ಲ. ಇದಿಷ್ಟರ ಆಚೆಗೂ ಕತೆ ಕೊಂಚ ವಿಸ್ತರಿಸುತ್ತದೆ. ಹುಡುಗನ ಪ್ರಕೃತಿ ಪ್ರೇಮ, ಅಲ್ಲಿ ಅವನು ಸ್ವಚ್ಛಂದ ಹಕ್ಕಿಯ ಹಾಗೆ ವಿಹರಿಸುವ ಒಂದು ನೋಟ ಇಲ್ಲಿದೆ. ಕತೆಯ ಮೂಲ ಆಶಯಕ್ಕೆ ಅದರಿಂದ ಒದಗುವ ಹೆಚ್ಚುವರಿ ಒತ್ತು ಏನಿಲ್ಲ. ಆದರೆ, ಇಡೀ ಕತೆ ಕೊಂಚ ಐಷಾರಾಮಿ ನಿರೂಪಣೆಯ ಶೈಲಿಯಲ್ಲೇ ಇದ್ದು ಇಲ್ಲಿ ಯಾವುದೇ ಕೇಂದ್ರವಿಲ್ಲ ಎಂದು ನಂಬಿಸುವ ಬಗೆಯಲ್ಲಿರುವುದರಿಂದ ಎಲ್ಲವೂ ಒಟ್ಟಂದಕ್ಕೆ ಚ್ಯುತಿಯಿಲ್ಲದಂತಿದೆ.

ನಾಲ್ಕನೆಯ ಕತೆ ತಾಳಿತ್ತಾಯ ಎನ್ನುವ ಒಬ್ಬ ಚಿತ್ರ ಕಲಾವಿದನ ಮುಪ್ಪಿನ ದಿನಗಳ ಕನವರಿಕೆಯಾಗಿದೆ. ತಾಳಿತ್ತಾಯರ ಇಡೀ ಬದುಕಿನ ಒಂದು ಹಿನ್ನೋಟವನ್ನು ಕೊಡುತ್ತಲೇ ಪ್ರಸ್ತುತ ಎಲ್ಲೆಲ್ಲೊ ನೆಲೆ ಕಂಡುಕೊಂಡಿರುವ ಮಗ ಮತ್ತು ಮಗಳು ತಮ್ಮೊಂದಿಗೆ ಬಂದು ನೆಲೆಸುವ ಅಸಂಭವನೀಯತೆಯನ್ನು ಜೀರ್ಣಿಸಿಕೊಳ್ಳುವ ಸುಸ್ತನ್ನು ಅನುಭವಿಸುತ್ತಿದ್ದಾರೆ. ಸದ್ಯ ಮೊಮ್ಮಕ್ಕಳು ಅಜ್ಜನ ಮನೆಯಲ್ಲಿದ್ದಾರಾದರೂ ಅವರು ಯಾವುದೇ ಆಶಾವಾದಕ್ಕೆ ನೀರೆರೆಯುವ ಸೂಚನೆ ಕತೆಯಲ್ಲಂತೂ ಇಲ್ಲ.

ಸಂಕಲನದ ಐದನೆಯೆ ಕತೆ ಜೀವ ಕೋಟಿ. ಬುಲ್ಡೋಜರು ಬಳಸಿ ಹುಲ್ಲು, ಪೊದೆ ಬೆಳೆದ ಖಾಲಿ ಜಾಗವನ್ನು ಶುಚಿಗೊಳಿಸುವ ಡ್ರೈವರ್ ಕೃಷ್ಣ ತನ್ನ ಕೆಲಸದ ಮಧ್ಯೆ ಹಾವಿನ ಒಂದು ಸಂಸಾರವನ್ನೇ ನಾಶಪಡಿಸಿದ್ದಾನೆ. ಅರೆಜೀವ ಮಾಡಿ ಬಿಡಬಾರದು, ಮರಿಗಳನ್ನು ಅನಾಥಗೊಳಿಸಿ ಬಿಟ್ಟರೆ ಅವೂ ಸೇಡು ತೀರಿಸಿಕೊಳ್ಳುತ್ತವೆ ಮುಂತಾದ ಸಮರ್ಥನೆಗಳಿಗೆ ಬಿದ್ದು ಅವನು ಅಗತ್ಯವಿಲ್ಲದಿದ್ದರೂ ಆ ಹಾವಿನ ಇಡೀ ವಂಶವನ್ನೇ ನಿರ್ವಂಶಗೊಳಿಸುವಂಥ ಹಠಕ್ಕೆ ಬೀಳುತ್ತಾನೆ. ಆದರೆ ಎಲ್ಲ ಮುಗಿದ ಮೇಲೆ ಒಂದು ಬಗೆಯ ಭಯ, ಭ್ರಾಂತಿಗೆ ಸಿಲುಕುತ್ತಾನೆ. ತತ್ವಪದದ ಮುಖೇನ ಇಲ್ಲಿ ಸಕಲ ಜೀವಕೋಟಿಗೂ ಬದುಕುವ ಸಮಾನ ಹಕ್ಕಿದೆ ಎನ್ನುವಂಥ ಒಂದು ಜೀವನದೃಷ್ಟಿಗೆ ಕೃಷ್ಣ ಮುಖಾಮುಖಿಯಾಗಬೇಕಾಗುತ್ತದೆ. ಇದು ಅವನ ಸಂಕಟವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಅಂಕಲ್, ನಿಮ್ಮ ಬೈಕ್ ಕತೆ ಒಂದು ನಾಸ್ಟಾಲ್ಜಿಯ ಕುರಿತದ್ದು. ವಿವರಗಳು, ನಿರೂಪಣೆ ಸೊಗಸಾಗಿದೆ.

ಪಿಸ್ತೂಲು ಕತೆ ಕೂಡ ವೃದ್ಧಾಪ್ಯದ ಏಕಾಂಗಿತನವನ್ನು ಮೀರುವ ಹೋರಾಟದ ಕುರಿತಾಗಿಯೇ ಇದೆ ಎನ್ನಬಹುದು. ಇಲ್ಲಿ ಹಾಸಿಗೆ ಬಿಟ್ಟೇಳಲಾರದ ಸ್ಥಿತಿಯಲ್ಲಿರುವ ಪದ್ಮನಾಭರಾಯರು ತಮ್ಮ ಮಡದಿ ಕಮಲಮ್ಮನ ಮೇಲೆ ಒಟ್ಟು ಮೂರು ಗುಂಡು ಹಾರಿಸಿ ಕೊಲೆ ಪ್ರಯತ್ನ ನಡೆಸಿದರು ಎನ್ನುವ ಕುತೂಹಲಕರ ಸುದ್ದಿಯ ಹಿನ್ನೆಲೆಯಲ್ಲಿ ಕತೆ ತೊಡಗಿದರೂ ಇದು ಪತ್ತೇದಾರಿ ಕತೆಯೇನಲ್ಲ. ಹಾಗೆಯೇ ಕತೆ ಬಹುಶಃ ಕೆದಕಲು ಬಯಸುವ ಮನುಷ್ಯನ ಹತಾಶ ಕ್ಷಣದ ಉದ್ವಿಗ್ನತೆ ಕೂಡಾ ಕತೆಯ ನಿರೂಪಣೆಯ ತೆಕ್ಕೆಗೆ ಸಿಕ್ಕದೇ ನುಣುಚಿಕೊಂಡಿದೆ. ಸಂಕಲನಕ್ಕೆ ಬೆನ್ನುಡಿ ಬರೆದಿರುವ ಕೆ ಸತ್ಯನಾರಾಯಣರ ಕತೆಗಳ ನಿರೂಪಣಾ ವಿಧಾನವನ್ನು ನೆನಪಿಸುವಂಥ ಒಂದು ಕತೆಯಿದು.

ಮತ್ತೆ ಬಂದ ಮಳೆ ಕತೆಯಲ್ಲೂ ವೃದ್ಧಾಪ್ಯದ ಗೋಳಿದೆ. ಇಲ್ಲಿ ಸಾವಿನಂಚಿನಲ್ಲಿರುವ ಮಾವನನ್ನು ನೋಡಿಕೊಳ್ಳುತ್ತಿರುವ ಸೊಸೆ ಮತ್ತು ಮಗ ಈ ಹೊಣೆಯನ್ನು ನಿಭಾಯಿಸುತ್ತ ಹೈರಾಣಾಗುವ ಚಿತ್ರದ ಜೊತೆಗೇನೆ ಧಾರಾಕಾರ ಸುರಿದ ಮಳೆಯ ದಿನ, ಕತ್ತಲಲ್ಲಿ ಕಚ್ಚಿ ಹೋದ ಹಾವಿನಿಂದ ಸತ್ತ ಅತ್ತೆಯ ನೆನಪು ಕಾಡುವ ಬಗೆಯಲ್ಲೇ ಮಾವ/ಅಪ್ಪನ ಮೇಲಿನ ಪ್ರೀತಿ ಜಾಗೃತವಾಗುವ ಒಂದು ಚಿತ್ರ ನಮಗೆ ಕಾಣಸಿಗುತ್ತದೆ. ಉದ್ವೇಗವಿಲ್ಲದ, ಭಾವಾತಿರೇಕವಿಲ್ಲದ ನಲುನುಡಿಯ ಚಿತ್ರಣ ಕೊಡುವ ಬಸವರಾಜು ಅವರ ಶೈಲಿಗೆ ಈ ಕತೆ ಒಂದು ಮಾದರಿಯಂತಿದೆ. ಕತೆಗಾರನ ಉದ್ವೇಗ ಮತ್ತು ಕತೆ ಹುಟ್ಟಿಸುವ ಉದ್ವೇಗ ಎರಡೂ ಬೇರೆ ಬೇರೆ ಮತ್ತು ಇದನ್ನು ನುರಿತ ಕತೆಗಾರ ಮಾತ್ರ ಅರಿಯಬಲ್ಲ ಎಂದಿದ್ದರು ಒಮ್ಮೆ, ಹಿರಿಯ ವಿಮರ್ಶಕರು. ಮಾಸ್ತಿ ಕತೆಗಳು, ಕೆ ಸತ್ಯನಾರಾಯಣರ ಕತೆಗಳು ಬಹುಶಃ ಅಂಥ ಅಂತರ ಕಾಯ್ದುಕೊಂಡ ನಿರೂಪಣೆಗೆ ಉದಾಹರಿಸಬಹುದಾದ ಮಾದರಿಗಳು ಎನಿಸುತ್ತದೆ. ಬಸವರಾಜು ಅವರದ್ದೂ ಅದೇ ಸಾಲಿಗೆ ಸೇರುವ ನಿರೂಪಣೆಯಾಗಿದೆ. ಆದರೆ ಬರಹಗಾರನ ತಾದ್ಯಾತ್ಮವಿಲ್ಲದೆ, ಅವನ ಭಾವಾತಿರೇಕದ ಅಭಿವ್ಯಕ್ತಿ ಅವನ ಬರವಣಿಗೆಯಲ್ಲಿ ಬಾರದೇ ಇದ್ದರೆ ಇನ್ನೆಲ್ಲಿ ಅದು ಬರಬೇಕು ಎನ್ನುವ ನನ್ನ ಗೊಂದಲ ಇನ್ನೂ ಪರಿಹಾರವಾಗಿಲ್ಲ. ಬರಹಗಾರ ಮತ್ತು ಅವನ ಬರವಣಿಗೆಯ ನಡುವೆ ಇಂಥ ಒಂದು ಅಂತಃಪಠವಿದ್ದರೆ, ಅದು ಇರಬೇಕಾದ ಒಂದು ಲಕ್ಷಣ ಎಂದು ಒಪ್ಪುವುದಾದರೆ ಅದು ಬರವಣಿಗೆ ಮತ್ತು ಓದುಗನಲ್ಲೂ ಉಳಿದುಕೊಂಡೇ ಬರುತ್ತದೆ ಎನಿಸಿದೆ ನನಗೆ. ಅಂಥ ಬರವಣಿಗೆ ಓದುಗನಲ್ಲೂ ಭಾವಕೋಶವನ್ನು ಮೀಟುವಲ್ಲಿ ಅಂತರ ಕಾಯ್ದುಕೊಂಡು ಕೊಂಚ ದೂರದಲ್ಲೇ ನಿಲ್ಲುತ್ತದೆ ಎನಿಸುತ್ತದೆ.

ಹೊಲಿಗೆ ಯಂತ್ರ ಕತೆ ತೇಜಸ್ವಿಯವರ ಕತೆಗಳನ್ನು ನೆನಪಿಸುವಂಥದ್ದು. ಊರಿಗೆ ಬರುವ ಹೊಲಿಗೆಯಂತ್ರ, ಜಗಲಿಯಲ್ಲಿ ಸುರುವಾಗುವ ಜೂಜು, ಪೋಲೀಸರ ಆಗಮನ ಮುಂತಾಗಿ ಇಡೀ ಊರು ಒಂದು ಪುಟ್ಟ ಆಧುನಿಕ ಸೋಂಕಿನಲ್ಲಿ ಸ್ಪಂದಿಸುವ ವಿಧಾನವನ್ನು ಹದವಾದ ತಮಾಶೆಯೊಂದಿಗೆ ನಿರೂಪಿಸುವ ಈ ಕತೆ ಆಪ್ತವಾಗುತ್ತದೆ. ಕತೆಯ ಕೊನೆಯಲ್ಲಿ ಬರುವ ಸುಖಾಂತ್ಯಗೊಳ್ಳುವ ಒಂದು ಪ್ರೇಮ ಪ್ರಕರಣವೂ ಕತೆಗೆ ಉತ್ತಮ ತಿರುವು, ಘನತೆ ಒದಗಿಸಿದೆ. ಮನಸೆಳೆವ ನಿರೂಪಣೆ.

ಅಂತರಾಳ ಈ ಸಂಕಲನದ ಅತ್ಯುತ್ತಮ ಕತೆಗಳಲ್ಲೊಂದು. ಈ ಕತೆಯ ಬಂಧ ಎಷ್ಟು ಸಂಕೀರ್ಣವಾಗಿದೆಯೊ ಅದು ಹೇಳುತ್ತಿರುವ ಅಥವಾ ಕಾಣಿಸುತ್ತಿರುವ ಒಳಸತ್ಯಗಳು ಕೂಡ ಅಷ್ಟೇ ಸಂಕೀರ್ಣವಾಗಿದೆ. ಒಂದು ಕಥನ ಕಾವ್ಯದಂಥ ಈ ಕತೆಯ ಬಗ್ಗೆ ಮಾತನಾಡುವುದು ಕಷ್ಟ. ಲಾತೂರಿನ ಭೂಕಂಪ ಪೀಡಿತ ಪ್ರದೇಶವೊಂದಕ್ಕೆ ವರದಿಗಾಗಿ, ಫೋಟೋಗಳಿಗಾಗಿ ಭೇಟಿಕೊಡುವ ಪತ್ರಕರ್ತ ಅಲ್ಲಿ ಪಡುವ ಸ್ವಂತದ ಪರಿಪಾಟಲುಗಳ ಜೊತೆಗೇ ಒಂದು ಪುಟ್ಟ ಸಂಸಾರದ ರೀತಿ ನೀತಿ, ಪ್ರೀತಿ-ಹಿಂಸೆ, ಬಡತನ-ಹೃದಯ ಶ್ರೀಮಂತಿಕೆ, ಮನುಷ್ಯನ ಒಳ್ಳೆಯತನದ ಇತಿ ಮಿತಿಗಳನ್ನು ಯಾವ ಆಡಂಬರವಿಲ್ಲದ ನಿರುದ್ದಿಶ್ಯ ಶೈಲಿಯಲ್ಲೇ ತೆರೆದಿಡುವ ಬಗೆ ಅನನ್ಯವಾಗಿದೆ.

ಚಿಯರ್ಸ್ ಕತೆಯಲ್ಲಿ ಮೆಚ್ಚಿಕೊಳ್ಳಬಹುದಾದ ಅತಿ ದೊಡ್ಡ ಗುಣವೆಂದರೆ ಇದು ಮುಂದೇನಾಗುವುದೋ ಎನ್ನುವ ಒಂದು ಕೌತುಕವನ್ನು ಹಿಡಿದಿಟ್ಟುಕೊಳ್ಳುವ ವಿಚಿತ್ರ ಶೈಲಿ. ವೀರಪ್ಪನ್ ಓಡಾಟದ ತಾಣದಲ್ಲಿ, ಕರ್ನಾಟಕ-ತಮಿಳುನಾಡು ಗಡಿಪ್ರದೇಶದಲ್ಲಿ, ತಪ್ಪೆಸಗಿ ತಪ್ಪಿಸಿಕೊಳ್ಳಲು ಹೆಣಗುತ್ತ ಓಡಾಡುವ ಒಂದು ಗೆಳೆಯರ ಗುಂಪು ಅದರ ವಿಚಿತ್ರ ಸನ್ನಿವೇಶದಿಂದಾಗಿಯೇ ಹೇಳುವ ವಿಚಾರವನ್ನು ಬಿಟ್ಟೂ ಕತೆಯ ಈ ಗುಣವೇ ಹೆಚ್ಚು ಗಾಢವಾಗಿ ಸೆಳೆಯುವಂತಿದೆ.

ಹುಲಿ ಹಿಡಿದದ್ದು ಕತೆ ಮೊದಲ ಭಾಗದ ಕೊನೆಯ ಕತೆ. ನಾಯಿಮರಿ ಸಾಕಬೇಕೆನ್ನುವ ಆಸೆ ಮತ್ತು ಅದರ ಕಷ್ಟನಷ್ಟಗಳ ಅರಿವು, ತೊಡಕುಗಳ ಬಲೆ ಇವುಗಳ ನಡುವೆ ಸಿಲುಕಿಕೊಂಡ ತಳಮಳ ಇಲ್ಲಿನ ವಸ್ತು. ನಿರೂಪಣೆ, ತಂತ್ರ, ಹೊಸತನದ ವಸ್ತು ಬಹುವಾಗಿ ಗಮನ ಸೆಳೆಯುತ್ತವೆ.

ಎರಡನೆಯ ಭಾಗದ ಕಿರುಗತೆಗಳಲ್ಲಿ ಒಟ್ಟು ಆರು ಕತೆಗಳಿವೆ. ‘ಒಂದು ಹಸು, ಒಂದು ಹುಲಿ’ , ಬೇಜಾರು, ಆಟ ಮೂರೂ ಕತೆಗಳು ಚುಚ್ಚುಮದ್ದಿನಂತೆ ಪುಟ್ಟದಾಗಿ ಕುಟುಕಿ ಕಾಣಿಸುವ ಜೀವನ ದರ್ಶನ ದೊಡ್ಡದು. ರೊಟ್ಟಿ, ಬಿಳಿಬೆಕ್ಕು ಕರಿಬೆಕ್ಕು ಮತ್ತು ಕಾಣದೂರಿಗೆ ಖಾಲಿ ಕೈಮರ ಕತೆಗಳಲ್ಲಿ ಅಂಥ ಮಾಯಕದ ಸೆಳೆತವಿಲ್ಲ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಜೋಗತಿ ಜೋಳಿಗೆ - ಆರು ಭಾಗದ ಲೇಖನದ ಎರಡನೆಯ ಬರಹ

ಜೋಗತಿ ಜೋಳಿಗೆ ಅನುಪಮಾ ಪ್ರಸಾದ್ ಅವರ ನಾಲ್ಕನೆಯ ಕಥಾಸಂಕಲನ. ಇದರಲ್ಲಿ ಒಟ್ಟು ಎಂಟು ಕತೆಗಳಿದ್ದು ಸಬಿತಾ ಬನ್ನಾಡಿಯವರ ಒಂದು ಮೌಲಿಕ ಮುನ್ನುಡಿ ಕೂಡ ಇದರಲ್ಲಿದೆ. ಜೋಗತಿ ಜೋಳಿಗೆ ಮತ್ತು ಇಸುಮುಳ್ಳು ಕತೆಗಳು ಪ್ರಧಾನವಾಗಿ ಸ್ತ್ರೀಯರ ಬದುಕಿನ ಕತ್ತು ಹಿಚುಕುವುದಕ್ಕೇ ಇರುವ ಲೈಂಗಿಕತೆ ಮತ್ತು ಪ್ಯೂರಿಟನ್ ಕಾನ್ಸೆಪ್ಟ್ (ಪಾವಿತ್ರ್ಯದ ಪರಿಕಲ್ಪನೆ)ಯನ್ನು ಪರಸ್ಪರ ಒಂದರಿಂದ ಇನ್ನೊಂದನ್ನು ಮುಕ್ತಗೊಳಿಸುವ ಜೀವನದೃಷ್ಟಿಯನ್ನೇ ಕೇಂದ್ರವಾಗಿರಿಸಿಕೊಂಡ ಕತೆಗಳಾದರೆ ಡೇಗೆ ಬಾಡಿಗೆ ತಾಯ್ತನವನ್ನು, ದಾರಿ, ಆನೆ ಬಂತೊಂದಾನೆ ಮತ್ತು ಸೂರು ಕತೆಗಳು ಪರಿಸರದ ಮೇಲೆ ಮನುಷ್ಯನ ಆಕ್ರಮಣವನ್ನು, ಆ ಜೀವದ ಅಪೂರ್ಣ ಸ್ವಗತಗಳು ಕತೆ ಮಂಗಳಮುಖಿಯರು ಎಂದು ನಾಮಕರಣಗೊಂಡ ಲೈಂಗಿಕ ಅಲ್ಪಸಂಖ್ಯಾತರನ್ನು ಕೇಂದ್ರವಾಗಿರಿಸಿಕೊಂಡ ಕತೆಗಳು. ಸೈತಾನನ ಬಲೆ ಕತೆ ಹಿಂದೂ-ಮುಸ್ಲಿಂ ಸಂಬಂಧದ ಮೇಲಿದೆ. ಕೇಂದ್ರ ಎಂದು ಸ್ಪಷ್ಟಪಡಿಸುವಷ್ಟು ನಿಚ್ಚಳವಾಗಿ ಇಲ್ಲಿನ ವಿವರಗಳು ಮತ್ತು ಕಥಾನಕದ ನಡೆ ಏಕಮುಖವಾಗಿ ಇಡಿಕ್ಕಿರಿದಿಲ್ಲ ಎಂಬುದು ಈ ಕತೆಗಳ ಹೆಚ್ಚುಗಾರಿಕೆಯಾದರೂ ನುರಿತ ಕತೆಗಾರ್ತಿಯಾಗಿರುವ ಅನುಪಮಾ ಅವರಿಗೆ ಈ ಬಗೆಯ ಶಿಲ್ಪ ಒದಗಿಸುವುದೇನೂ ವಿಶೇಷ ಶ್ರಮದ ಕೆಲಸವಲ್ಲ. ಎಲ್ಲ ವಿವರಗಳಾಚೆ, ಬದುಕಿನ ಸಂಕೀರ್ಣ ಚಿತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಹಜ ತುಡಿತದ ಚಾಚುವಿಕೆಗೂ ಹೊರತಾಗಿ (ವಿರುದ್ಧವಾಗಿ) ಇಲ್ಲಿನ ಇಸುಮುಳ್ಳು, ಸೈತಾನನ ಬಲೆ ಮತ್ತು ಜೋಗತಿ ಜೋಳಿಗೆ ಕತೆಗಳು ಪ್ರಧಾನ ಧಾರೆಯತ್ತಲೇ (ಕೇಂದ್ರದತ್ತಲೇ) ಮರಳುವುದು ಗಮನಾರ್ಹವಾಗಿದೆ. ಕಾದಂಬರಿಯೊಂದರ ಹರಹು ಮತ್ತು ಪೋಷಣೆ ಪಡೆಯುತ್ತ ಸಾಗುವಾಗಲೇ ಸಣ್ಣಕತೆಯಾಗಿ ಮೈತಳೆಯುವ ಧೋರಣೆಯನ್ನೇ ಮೆರೆಯುವ ಈ ಕತೆಗಳ ವಿಚಾರದಲ್ಲಿ ಇದನ್ನು ಒಂದು ಮಿತಿಯಾಗಿ ಕಾಣಬೇಕೆ ವೈಶಿಷ್ಟ್ಯವಾಗಿ ಕಾಣಬೇಕೆ ಎಂಬ ಪ್ರಶ್ನೆಯಿದೆ. ಇಸುಮುಳ್ಳು ಕತೆ ಬಹುಶಃ ಈ ಅಂಶವನ್ನು ಸ್ಪಷ್ಟವಾಗಿ ಕಾಣಿಸುವ, ಹೊಸ ನಿರೀಕ್ಷೆಗಳನ್ನು ಓದುಗನಲ್ಲಿ ಹುಟ್ಟಿಸಿಯೂ, ಹಾಗೆ ಹುಟ್ಟಿಸಿದುದರಿಂದಲೇ ನಿರಾಸೆಗೆ ಕಾರಣವಾಗುವ ಕತೆಯಾಗಿ ನಿಲ್ಲುವುದರಿಂದ ಅದನ್ನೇ ಈ ಮಾತನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕಾಗಿ ಚರ್ಚೆಗೆ ಎತ್ತಿಕೊಳ್ಳಬಹುದಾಗಿದೆ. ಆದರೆ ನನ್ನ ಮಾತುಗಳು ಸಮಾನವಾಗಿ ಇಸುಮುಳ್ಳು, ಜೋಗತಿ ಜೋಳಿಗೆ ಮತ್ತು ಸೈತಾನನ ಬಲೆ ಕತೆಗಳಿಗೆ ಅನ್ವಯಿಸುತ್ತವೆ ಮತ್ತು ಹಾಗೆ ಒಂದು ಸಂಕಲನದ ಮೂರು ಮುಖ್ಯ ಕತೆಗಳಿಗೆ ಅನ್ವಯಿಸುವುದರಿಂದಾಗಿಯೇ ಮಹತ್ವದ ಪ್ರಶ್ನೆಯಾಗುತ್ತದೆ ಎಂಬುದು ಮುಖ್ಯ.

ಕತೆಗೆ ಇರುವಂತೆ ಕಾಣುವ ಹಲವು ಆಯಾಮಗಳಲ್ಲಿ ಒಂದು ಪಾಂಡು, ಮಾದ್ರಿ ಮತ್ತು ಕುಂತಿ ಸಂಬಂಧದ್ದು.

ಎರಡನೆಯದು ತುಕ್ರನದ್ದು. ಈತ ಶಂಕರಯ್ಯನ ಒಕ್ಕಲಾಗಿದ್ದವ ಪ್ರಸ್ತುತ ಸ್ವತಂತ್ರನಾಗಿದ್ದರೂ ಅವರ ಮನೆಯ, ತೋಟದ ಕೆಲಸಕ್ಕೆ ಒದಗುವ ವ್ಯಕ್ತಿಯಾಗಿಯೇ ಉಳಿಯುವ ಸ್ವಾಮಿನಿಷ್ಠೆ ಮೆರೆಯುತ್ತಾನಾದರೂ ಶಂಕರಯ್ಯ ಮತ್ತು ಅವರ ಪತ್ನಿ ಸುಭದ್ರಮ್ಮನ ನಡುವೆ ಆತನ ನಿಷ್ಠೆ ಹೆಚ್ಚು ಗಟ್ಟಿಯಾಗಿರುವುದು ಸುಭದ್ರಮ್ಮನ ಕಡೆಗೇ ಎನ್ನುವುದಷ್ಟೇ ಈ ಆಯಾಮ ತೆರೆದು ತೋರುವ ಅಂಶ. ಅದರಾಚೆ ಈ ಪಾತ್ರಕ್ಕಾಗಲಿ ಆಯಾಮಕ್ಕಾಗಲಿ ಹೆಚ್ಚಿನ ಮಹತ್ವವಿಲ್ಲ.

ಮೂರನೆಯದು ಭಾಗ್ಯಲಕ್ಷ್ಮಿ ಎಂಬ ದನ ಮತ್ತು ಶೆಟ್ಟರ ಹೋರಿ, ಗಿಡ್ಡನ ಸಂಬಂಧದ ಬಗ್ಗೆ ಶಂಕರಯ್ಯನವರಿಗಿರುವ ಅಸಹನೆ ಮತ್ತು ಸುಭದ್ರಮ್ಮನಿಗಿರುವ ಸಹಜ ನಿಲುವು. ಇದಕ್ಕೂ ಮೇಲೆ ಹೇಳಿದ ಪಾಂಡು ಪ್ರಕರಣಕ್ಕೂ ಒಂದು ಎಳೆಯ ಸಂಬಂಧ ಇದೆ.

ನಾಲ್ಕನೆಯದು ಶಂಕರಯ್ಯ ಮತ್ತು ಸುಭದ್ರಮ್ಮನ ಸಂಬಂಧ. ಮಾತಿನ ಹಕ್ಕು, ಅಧಿಕಾರ ಯಾವುದೂ ಇಲ್ಲದ, ಶಂಕರಯ್ಯನ ಅಹಂಮಿಕೆಗೆ ಹಿನ್ನೆಲೆ ಒದಗಿಸುತ್ತ, ಅವರ ಸಿಟ್ಟು, ಆಕ್ರೋಶಗಳಿಗೆ ಮೂಕಪ್ರಾಣಿಯಂತೆಯೇ ಬಲಿಯಾಗುತ್ತ ಇರಬೇಕಾದ ಒಂದು ಪಾತ್ರವಾಗಷ್ಟೇ ಎಂಬುದು ಪುರುಷವರ್ಗದ ನಿಲುವಾದರೆ ಅದನ್ನು ಕೈಲಾದ ಮಟ್ಟಿಗೆ ಮೀರುತ್ತಲೇ ಗಟ್ಟಿಯಾಗಿ ನಿಲ್ಲುವ ಸ್ತ್ರೀಮತದ ಪ್ರತಿನಿಧಿ ಸುಭದ್ರಮ್ಮ ಎಂಬುದು ಸ್ಪಷ್ಟವಾಗಿ ಕಾಣುವ ಒಂದು ಆಯಾಮವಿದು. ಇದನ್ನು ಅತ್ಯಂತ ಜೀವಂತಿಕೆಯೊಂದಿಗೆ, ಆಡಂಬರ, ನಾಟಕೀಯತೆ ಯಾವುದೂ ಕಾಣದಂತೆ ನವಿರಾಗಿ ಚಿತ್ರಿಸಿರುವುದು ನಿಶ್ಚಯವಾಗಿಯೂ ಅನುಪಮಾ ಪ್ರಸಾದ್ ಅವರ ಕಲೆಗಾರಿಕೆಯ ನೈಪುಣ್ಯವನ್ನೂ ಕೌಶಲವನ್ನೂ ಕಾಣಿಸುವ ಅಂಶ. ಇದೇ ಮಾತನ್ನು ಅವರು ಇಲ್ಲಿ ಚಿತ್ರಿಸುವ ಇಂದಿರೆ, ರಾಜೀವ, ವಿಷ್ಣು, ಲಲಿತೆ, ಶಂಕರಿ, ವೈಜಯಂತಿ ಮುಂತಾದ ಪಾತ್ರಗಳ ವಿಚಾರದಲ್ಲಿಯೂ ಹೇಳಬಹುದಾದರೂ ಅಲ್ಲೆಲ್ಲ ಸ್ಪಷ್ಟವಾಗಿಯೇ ಒಂದು ವಿಧವಾದ ಯೋಜಿತ ಹೆಣಿಗೆ ಇದ್ದೇ ಇದೆ. ಆದರೆ ಅದು ಈ ಶಂಕರಯ್ಯ-ಸುಭದ್ರಮ್ಮ ಪಾತ್ರಗಳ ಚಿತ್ರಣದಲ್ಲಿ ಗೈರಾಗಿದೆ. ಹೇಳಬೇಕೆಂದರೆ ಶಂಕರಯ್ಯನ ಕ್ರೌರ್ಯವೇ ಒಂದು ಆಯಾಮವಾಗಬಹುದಾಗಿತ್ತು. ಆತ ಸುಭದ್ರಮ್ಮನ ಮೇಲೆ ಚಾಯ ಮಾಡಿ ತರಲಿಲ್ಲ ಎಂಬ ಕಾರಣಕ್ಕೆ ನಡೆಸುವ ಹಲ್ಲೆ ಸಣ್ಣಸಂಗತಿಯೇನಲ್ಲ. ಅದು ವರ್ಷಾನುಗಟ್ಟಲೆ ನಡೆದು ಬಂದ, ಸುಭದ್ರಮ್ಮನ ದೈನಂದಿನವೇ ಆಗಿಬಿಟ್ಟಂತಿರುವ ಒಂದು ಹಿಂಸೆ, ದಬ್ಬಾಳಿಕೆ. ಆದರೆ ಅದು ಸಣ್ಣಸಂಗತಿಯಾಗಿ ಬಿಟ್ಟಂತಿದೆ. ಬದಲಿಗೆ ಮೂಕಪ್ರಾಣಿಗಳ ಮೇಲೆ ನಡೆಸಿದ ಹಲ್ಲೆ ವಿಶೇಷ ಮಹತ್ವ ಪಡೆಯುತ್ತದೆ, ಕತೆಯ ಕೇಂದ್ರ ಆಯಾಮದ ಕಾರಣಕ್ಕೆ. ಅದು ಶಂಕರಯ್ಯನಲ್ಲಿ ಸುಪ್ತವಾಗಿದ್ದ ಕ್ರೌರ್ಯದ ಪರಾಕಾಷ್ಠೆಯನ್ನು ಕಣ್ಣಿಗೆ ಕಟ್ಟಿಸಿದರೂ ಸುಭದ್ರಮ್ಮನ ಪಾತ್ರಕ್ಕೆ ಒದಗಿಸಬಹುದಾಗಿದ್ದ ಒಂದಂಶವನ್ನು ಕಸಿದಿದೆ. ಇಲ್ಲಿ ರಾಜೀವನಿಗೂ ಸುಭದ್ರಮ್ಮ ಅರ್ಥವಾಗದೇ ಹೋಗುವುದಕ್ಕೆ ಕೂಡ ಅವನ ದೈನಂದಿನದಲ್ಲಿ ಮೂಕಪ್ರಾಣಿಗಳಿಗೆ ನೀಡಿದ ಹಿಂಸೆಯನ್ನು ಎಂದಿಗೂ ಮರೆಯಲಾರದ ಅನುಭವವನ್ನಾಗಿಯೂ, ಸುಭದ್ರಮ್ಮನಂಥ ಹಿರಿಯ ಜೀವಕ್ಕೆ ತನ್ನ ಕಣ್ಣೆದುರೇ ನೀಡಿದ ಹಿಂಸೆಯನ್ನು ಸಾಮಾನ್ಯ ಸಂಗತಿಯೆಂಬಂತೆ ಕಾಣುವುದನ್ನೂ ಕಲಿಸಿರುವುದು ಕಾರಣವಾಗಿದೆ. ಕತೆಗಾರ್ತಿ ಅದನ್ನು ಹಾಗೆಯೇ ಇರಗೊಡುತ್ತಾರೆ.

ಇಂದಿರೆ ಮತ್ತು ಅವಳ ದಾಂಪತ್ಯ ಈ ಕತೆಗೆ ಇನ್ನೊಂದು ಆಯಾಮವನ್ನೊದಗಿಸಿದೆ. ಅದಕ್ಕೆ ಹೆಚ್ಚು ಸಂಕೀರ್ಣವಾದ ಹರಹು ಇದ್ದರೂ, ಅದು ಕೂಡ ಕತೆಯ ಕೇಂದ್ರದತ್ತಗಿನ ತುಡಿತ ಅತಿಯಾದುದರಿಂದ ತಕ್ಕ ಪೋಷಣೆ ಪಡೆಯದೇ ಸೊರಗುವುದು ವಿಚಿತ್ರ ಮಾತ್ರವಲ್ಲ, ಹೆಚ್ಚಿನ ನಿರಾಸೆಗೆ ಕಾರಣವಾಗುವ ಅಂಶ. ಇಂದಿರೆ ಮತ್ತು ಅವಳ ಸ್ವಯವಿಲ್ಲದ ಪತಿಯ ಸಂಬಂಧ ಒಂದು ಆಯಾಮವಾಗಿ ಪಡೆದ ಪೋಷಣೆಯನ್ನು ಆ ಮದುವೆಯ ಫಲವಾಗಿ ದಕ್ಕುವ ಆಸ್ತಿಯ ವಿಲೇವಾರಿ ಪ್ರಶ್ನೆ ಪಡೆದುಕೊಳ್ಳುವುದಿಲ್ಲ. ಆಸ್ತಿಯ ನಿಜವಾದ ವಾರಸುದಾರರಾದ ಇಂದಿರೆಯ ಮಕ್ಕಳಾದ ವಿಷ್ಣು ಮತ್ತು ರಾಜೀವ ಅದಕ್ಕಾಗಿ ಯಾವತ್ತೂ ಸೊಲ್ಲೆತ್ತದೆ ತಮ್ಮ ತಮ್ಮ ಪತ್ನಿಯರೊಂದಿಗಿನ ವಿಷಮ ದಾಂಪತ್ಯದತ್ತಲೇ ಹೆಚ್ಚು ಗಮನ ನೀಡುವುದು ಕೂಡ ನನ್ನ ವಾದಕ್ಕೆ ಹೆಚ್ಚಿನ ಪುಷ್ಟಿಯನ್ನೊದಗಿಸುವಂತಿದೆ. ಶಂಕರಯ್ಯ ತಾವು ತಮ್ಮ ಮಗಳು ಇಂದಿರೆಯ ಮದುವೆಯ ಮುಖೇನ ಪಡೆದ ಆಸ್ತಿಯ ಹಕ್ಕನ್ನು ಇಂದಿರೆಯ ಹೊರತಾದ ಮೂವರು ಗಂಡು ಮಕ್ಕಳು ನೆಲೆಯಾಗುವುದಕ್ಕೇ ಬಳಸಿಕೊಂಡು ಇಂದಿರೆಯ ಮಕ್ಕಳು ಅತಂತ್ರರಾಗಲು ಕಾರಣರಾಗುವುದನ್ನು ಕೂಡ ಈ ಇಬ್ಬರು ಪ್ರಬುದ್ಧ ಮಕ್ಕಳು ಗುರುತಿಸುವಲ್ಲಿ, ಇಡೀ ಊರು ಆ ಬಗ್ಗೆ ಆಡಿಕೊಂಡರೂ, ವಿಫಲರಾಗುವುದನ್ನು ಇಲ್ಲಿ ಗಮನಿಸಬೇಕು. ಬದಲಿಗೆ ಅಣ್ಣ ತಮ್ಮಂದಿರು ತಮ್ಮ ದಾಂಪತ್ಯದ ಸಮಸ್ಯೆಗೆ ತಲೆಗೊಡುತ್ತಾರೆ. ಶಂಕರಯ್ಯ ಸತ್ತಾಗಲಾಗಲಿ, ಸುಭದ್ರಮ್ಮ ಸತ್ತಾಗಲಾಗಲಿ ಈ ಇಂದಿರೆಯ ಅಣ್ಣಂದಿರು, ಅವರ ಮಕ್ಕಳು ಮನೆಗೆ ಬರುವ, ಮತ್ತೆ ಆಸ್ತಿಯ ಹಕ್ಕಿನ ಪ್ರಶ್ನೆಗಳು ಮೇಲೆದ್ದು ಬರುವ ವಿದ್ಯಮಾನ ನಡೆಯುವುದೇ ಇಲ್ಲ ಎಂಬುದು ಆಶ್ಚರ್ಯಕರವಾದ ಒಂದು ಗೈರು. ಬದಲಿಗೆ ಶಂಕರಿಯ ಅಪ್ಪ ಇಂಥ ಮುತುವರ್ಜಿ ತೋರಿಸುವ, ಅದನ್ನು ಸುಭದ್ರಮ್ಮ ಸಂಭಾಳಿಸುವ ಒಂದು ಪ್ರಸಂಗವಿದೆ. ಸ್ವತಃ ಸುಭದ್ರಮ್ಮನಿಗೂ ಇಂದಿರೆಯ ಮಕ್ಕಳಿಗಾದ ಅನ್ಯಾಯದ ಅರಿವಿದ್ದೂ, ಅದು ಸರಿಯಲ್ಲ ಎಂಬ ಭಾವವಿದ್ದೂ ಇಡೀ ಕುಟುಂಬದ ಚೌಕಟ್ಟಿನಲ್ಲಿ ಈ ಪ್ರಶ್ನೆಯನ್ನು ಮತ್ತೆ ಮೇಲಕ್ಕೆತ್ತುವುದಿಲ್ಲ. ಆದರೆ ಯಾವ ಕುಟುಂಬದಲ್ಲಿ ಇದು ಹೀಗೆ ನಡೆಯಲು ಸಾಧ್ಯ?

ಆಗಲೇ ಹೇಳಿದಂತೆ ವಿಷ್ಣು - ಶಂಕರಿ ಮತ್ತು ರಾಜೀವ - ಲಲಿತೆಯರ ಸಂಬಂಧ ಒದಗಿಸುವ ಇನ್ನೊಂದು ಆಯಾಮ ಕೂಡ ಪಾಂಡು, ಭಾಗ್ಯಲಕ್ಷ್ಮಿ, ಇಂದಿರೆಯರ ಜಾಡಿನಲ್ಲೇ ಸಾಗುತ್ತದೆ.

ಇಷ್ಟಾದ ಮೇಲೆ ಮೂರ್ತಿ-ವೈಜಯಂತಿಯರ ಇನ್ನೊಂದು ಸಂಬಂಧವೂ ಈ ಕತೆಗೆ ಒದಗಿಸುವ ಆಯಾಮ ಕೂಡ ಅದೇ. ಇಲ್ಲಿ ಅನಿವಾರ್ಯವಾಗಿ ವೈಜಯಂತಿಯ ಗಂಡ ಅನಾಸಕ್ತನೊ ಅನ್ಯಾಸಕ್ತನೋ ಆಗಿ ಕಾಣಿಸಿಕೊಂಡಿರುವುದಂತೂ ಜಗತ್ತಿನಲ್ಲೆಲ್ಲ ವಿಷಮ ದಾಂಪತ್ಯಗಳೇ ತುಂಬಿದ್ದು ಎಲ್ಲಾ ಸ್ತ್ರೀಯರೂ ಒಂದು ಹೊಸ ಔಟ್‌ಲೆಟ್‌ಗಾಗಿ ಹಾತೊರೆಯುತ್ತಲೇ ಇದ್ದಾರೇನೊ ಎಂಬಂಥ ಸಾಮಾನ್ಯೀಕರಣಕ್ಕೆ ಶರಣಾಗಿರುವಂತೆ ಕಾಣುತ್ತದೆ. ಸಮಾಜದಲ್ಲಿ ನಾವು ನಿಜಕ್ಕೂ ಅನ್ಯೋನ್ಯ ದಾಂಪತ್ಯವನ್ನು ಕೂಡ ಕಾಣುತ್ತೇವೆ ಮತ್ತು ಅದು ಅಸಹಜವಾದ ವಿದ್ಯಮಾನವೇನೂ ಅಲ್ಲ ಅಲ್ಲವೆ? ತುಂಬ ಹಿಂದೆ ಮಂದ್ರ ಕಾದಂಬರಿಯಲ್ಲಿ ಎಸ್ ಎಲ್ ಭೈರಪ್ಪ ಇಂಥದೇ ಒಂದು ಸಾದೃಶ್ಯವನ್ನು ಕಾಣಿಸುತ್ತ ಹೋಗಿದ್ದು ನೆನಪಾಗುತ್ತದೆ. ಅಲ್ಲಿ ಬರುವ ಒಬ್ಬನೇ ಒಬ್ಬ ತೀರ ಸಾಯಬಿದ್ದ ಮುದುಕ ಗುರುವಿನ ಹೊರತಾಗಿ ಎಲ್ಲಾ ಸಂಗೀತದ ಗುರುಗಳೂ ತಮ್ಮ ಸ್ತ್ರೀಶಿಷ್ಯೆಯರಿಂದ ದೈಹಿಕ ಸಂಪರ್ಕದ ಗುರುದಕ್ಷಿಣೆಯನ್ನು ಬಯಸುವವರು! ಕಾದಂಬರಿಯಾಗಿ ಇದನ್ನು ಒಪ್ಪಿದರೂ ಅದು ಸಮಾಜದ ಒಂದು ವರ್ತಮಾನದೊಂದಿಗೆ ಸಂತುಲಿತವಾಗಿರಬೇಡವೆ? ಹಾಗಿದೆ ಎಂದು ಒಪ್ಪಿಕೊಂಡರೆ ನಮ್ಮ ಗಂಗೂಬಾಯಿ ಹಾನಗಲ್, ಲತಾಮಂಗೇಶ್ಕರ್, ಸುಬ್ಬುಲಕ್ಷ್ಮಿ ಮುಂತಾದವರನ್ನು ನಾವು ಹೇಗೆ ಕಾಣಬೇಕು ಎಂಬ ಪ್ರಶ್ನೆಯಿಲ್ಲವೆ? ಹಾಗಿಲ್ಲ, ಅದು ಕಾದಂಬರಿಯ ದೃಷ್ಟಿ ಎಂದು ಕಾಣುವುದಾದರೆ ಅದು ಪ್ರತಿಪಾದಿಸುವ ತಾತ್ವಿಕತೆಯನ್ನು ಹೇಗೆ ಸ್ವೀಕರಿಸಬೇಕು ಎಂಬ ಪ್ರಶ್ನೆಯಿಲ್ಲವೆ? ತಾತ್ವಿಕವಾಗಿ ಅನುಪಮಾ ಪ್ರಸಾದ್ ಇಲ್ಲಿ ಪ್ರತಿಪಾದಿಸುವ ಅಂಶಕ್ಕೆ ಬಂದರೆ ಹೀಗೆ ವಾದಿಸಬೇಕಾಗುತ್ತದೆ:

ಹೇಗೆ ಮನುಷ್ಯ ಸಂಬಂಧದಲ್ಲಿ ಬಿರುಕುಗಳು ಸಹಜವೋ, ಹಾಗೆಯೇ ವಿಷಮ ಸಂಬಂಧಗಳೆಂದು ಕರೆಯಲ್ಪಡುವ, ದಾಂಪತ್ಯದ ಪಾವಿತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡುವಂಥ ಮಾರ್ಗ ಎಂದು ಯಾವುದನ್ನು ಸಮಾಜ ತನ್ನ ಸ್ತ್ರೀವಿರೋಧೀ ಧೋರಣೆಯ ಒಂದು ಹತಾರವಾಗಿ ಬಳಸಿಕೊಂಡು ಬಂದಿದೆಯೋ ಅದು ಕೂಡ ಹೆಣ್ಣಿಗೆ ತೆರೆಯುವ ಅನ್ಯಮಾರ್ಗವೂ ಮತ್ತದೇ ಮನುಷ್ಯ ಸಂಬಂಧದದ್ದೇ, ಕೇವಲ ಕಾಮದ್ದಲ್ಲ ಮತ್ತು ಹಾಗಾಗಿ ಅದು ಕೂಡ ಹೊಸ ಬಿರುಕುಗಳಿಗೆ ಪಕ್ಕಾಗುವಂಥಾದ್ದೇ ಎನ್ನುವುದನ್ನು ಮರೆಯುವುದು ಸಾಧ್ಯವೆ? ಅದು ಇವನಲ್ಲ ಅವನು ಅಥವಾ ಅದು ಅವಳಲ್ಲ ಇವಳು ಎಂಬ ಭಾವವನ್ನೇ ಪುಷ್ಟೀಕರಿಸುತ್ತ ಹೋಗುವುದಾದರೆ ಅದಕ್ಕೊಂದು ಅಂತ್ಯವುಂಟೇ? ದಾಂಪತ್ಯದ ಹೊರಗಿನದ್ದೆಲ್ಲವೂ ಸ್ವೀಕಾರಾರ್ಹವೇ ಆಗಿರುತ್ತದೆ ಎಂಬುದು ಕೂಡ ಇನ್ನೊಂದು ಪೂರ್ವಾಗ್ರಹವಲ್ಲವೆ?

ವಾಂಛೆ ಅಥವಾ ಜೀವದ Basic Instincts ಮುಖ್ಯ, ಅವು ನಿಷ್ಪಾಪಿ, ಅವಕ್ಕೆ ಮೌಲ್ಯ-ನೈತಿಕತೆ-ಸಮಾಜದ ಕಟ್ಟುಪಾಡು ಇವೆಲ್ಲದರ ಹಂಗಿನ ಹಂದರ ತೊಡಿಸಬೇಡಿ ಎನ್ನುವುದನ್ನು ಒಪ್ಪಬಹುದು. ಆದರೆ ಇಲ್ಲಿ ಇದೆಲ್ಲ ಮುಖ್ಯ, ಅದಕ್ಕೆ ಗೌರವ ಸಲ್ಲಿಸುವುದು ಮುಖ್ಯ ಹೊರತು ವ್ಯಕ್ತಿ ಮುಖ್ಯವಲ್ಲ ಎಂದು ಹೇಳುವುದಾದರೆ ಅದನ್ನು ಒಪ್ಪುವುದು ಸರಳವೆ/ಸುಲಭವೆ? ಗಿಡ್ಡ ಯಾಕಾಗಬಾರದು, ಲಲಿತೆ ಯಾಕಾಗಬಾರದು, ವೈಜಯಂತಿ ಯಾಕಾಗಬಾರದು ಎನ್ನುವುದಾದರೆ ಗಿಡ್ಡನೇ ಯಾಕಾಗಬೇಕು, ಲಲಿತೆಯೇ ಯಾಕಾಗಬೇಕು, ವೈಜಯಂತಿಯೇ ಯಾಕೆ ಎನ್ನುವುದಕ್ಕೆ ಏನು ಪುಷ್ಟೀಕರಣವಿದೆ ಎಂಬ ಪ್ರತಿವಾದವನ್ನೂ ಹೂಡುವುದಕ್ಕೆ ಸಾಧ್ಯವಿದೆ.

ಮುಖ್ಯಪ್ರಶ್ನೆ ಇದಲ್ಲ. ಇಸುಮುಳ್ಳು ಕತೆ ಒಂದು ಕೇಂದ್ರದತ್ತಲೇ ಧಾವಂತದಿಂದ ಧಾವಿಸುವ ಒತ್ತಡಕ್ಕೆ ಬಿದ್ದು ಹಾರಿಜಾಂಟಲ್ ಬೆಳವಣಿಗೆ ಪಡೆಯುತ್ತದೆಯೇ ಹೊರತು ವರ್ಟಿಕಲ್ ಬೆಳವಣಿಗೆಗೆ ಅವಕಾಶವಿದ್ದರೂ, ಕತೆಯ ಹರಹು ಅದಕ್ಕೆ ತುಡಿಯುವಂತಿದ್ದರೂ ಯಾವುದೇ ಪೋಷಣೆ ಪಡೆಯದೇ ಸೊರಗುವುದು ಹೆಚ್ಚು ಎದ್ದು ಕಾಣುತ್ತದೆ ಎನ್ನುವುದೇ ಮುಖ್ಯವಾದ ಪ್ರಶ್ನೆ. ಇದು ಕೇವಲ ಪ್ರಕಾರಕ್ಕೆ ಸಂದ ಪ್ರಶ್ನೆಯಷ್ಟೇ ಅಲ್ಲ. ಇವತ್ತು ಸಣ್ಣಕತೆಗೆ ಒಂದು ಕೇಂದ್ರ ಇರಬೇಕು ಎಂಬ ಶಾಸ್ತ್ರವನ್ನು ಮುರಿದು ಕಟ್ಟುವ ಕೆಲಸ ಎಲ್ಲ ಕಡೆಯೂ ನಡೆದಿದೆ. ಬಹುಶಃ ಇದು ಸಣ್ಣಕತೆಯ ಅಳವಿಗೆ ಮೀರಿದ, ಕಾದಂಬರಿಯ ವ್ಯಾಪ್ತಿಗಷ್ಟೇ ದಕ್ಕುವ ವಸ್ತು-ವಿನ್ಯಾಸಗಳನ್ನು ಹೊಂದಿರುವುದೇ ಇಂಥ ಭಾವ ಹುಟ್ಟಲು ಕಾರಣವಾಗಿರಬಹುದಾದರೂ ಪ್ರಕಾರದ ಚೌಕಟ್ಟು ಮೀರಿ ಈ ಪ್ರಶ್ನೆಗೆ ಕತೆಗಾರ್ತಿ ಮುಖಾಮುಖಿಯಾಗಬೇಕಾದ ಅಗತ್ಯ ಇದ್ದೇ ಇದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಐದು ತಕರಾರುಗಳು - ಆರು ಭಾಗದ ಲೇಖನದ ಮೊದಲ ಬರಹ, ಪೀಠಿಕೆಯ ಪಿಟೀಲು

ನವ್ಯದ ಉಚ್ಛ್ರಾಯ ಮುಗಿದ ಬಳಿಕ, ನವ್ಯೋತ್ತರ ಅಥವಾ ಆಧುನಿಕ ಕಥಾಜಗತ್ತಿನ ವಿದ್ಯಮಾನಗಳನ್ನು ಗಮನಿಸಿದರೆ ಸಣ್ಣಕತೆ ಎಂಬ ಪ್ರಕಾರ ಒಡ್ಡಿಕೊಂಡಷ್ಟು ಪ್ರಯೋಗಗಳಿಗೆ, ಪ್ರಯತ್ನಗಳಿಗೆ ಇನ್ಯಾವುದೇ ಪ್ರಕಾರ ಒಡ್ಡಿಕೊಂಡಿರಲಾರದು ಎನಿಸುತ್ತದೆ. ಓದುಗರ ಮಟ್ಟದಲ್ಲಿಯೂ ಇಂದಿನ ಕಾಲಮಾನ ಮತ್ತು ಜೀವನಶೈಲಿಗೆ ಅತ್ಯಂತ ಸೂಕ್ತವಾಗಿ ಹೊಂದಿಕೊಂಡು ಜನಪ್ರಿಯವಾಗಿರುವ ಪ್ರಕಾರವೂ ಇದೇ ಇದ್ದೀತು. ಆದಾಗ್ಯೂ, ಈಗಲೂ ನಮ್ಮ ನಡುವೆ ಇದ್ದು ಬರೆಯುತ್ತಲೇ ಇರುವ ರಾಘವೇಂದ್ರ ಪಾಟೀಲ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಅಮರೇಶ ನುಗಡೋಣಿ, ಅಬ್ದುಲ್ ರಶೀದ್, ವೈದೇಹಿಯವರಂಥ ಹೊಸ ಕತೆಗಾರರು ಕನ್ನಡಕ್ಕೆ ಇನ್ನೂ ದಕ್ಕಿಲ್ಲ ಎಂದೇ ಅನಿಸುತ್ತದೆ. ನಾನು ಈಚೆಗೆ ಓದಿದ ಈ ಐದೂ ಸಂಕಲನದ ಕತೆಗಳನ್ನು ಈ ಕತೆಗಾರರ ಕತೆಗಳೊಂದಿಗೆ ಇಟ್ಟು ತೂಗಬಹುದಾದ ಒಂದು ಪರಿಸ್ಥಿತಿ ಇಲ್ಲದಿರುವುದು ನನ್ನ ಇಂಥ ಮಾತಿಗೆ ಕಾರಣವೇ ಹೊರತು ಇನ್ನೇನಲ್ಲ. ಇಡೀ ಸಂಕಲನದಲ್ಲಿ ಒಂದು ಅಥವಾ ಎರಡು ಅಂಥ ಕತೆಗಳಿರಬಹುದು, ಅದು ಬೇರೆ ಪ್ರಶ್ನೆ. ಇಡೀ ಸಂಕಲನದಲ್ಲಿ ತೀರ ಜಾಳಾದ ರಚನೆ ಇಲ್ಲದೇ ಇರುವುದು ಕೂಡ ಅಷ್ಟೇ ಮುಖ್ಯವಾದ್ದು ಎನ್ನುವುದು ನಮ್ಮ ಕತೆಗಾರರಿಗೆ ಅರಿವಾಗಬೇಕಲ್ಲವೆ? ಈಗಲೂ ನನಗೆ ನೆನಪಿನಲ್ಲುಳಿವ ಕತೆಗಾರರು ಟಿ ಕೆ ದಯಾನಂದ್ (ಇವರ ರೆಕ್ಕೆಹಾವುಗಿಂತಲೂ ರಸ್ತೆನಕ್ಷತ್ರ ನನಗೆ ಪ್ರಿಯ), ಮೌನೇಶ್ ಬಡಿಗೇರ, ಪದ್ಮನಾಭ ಭಟ್ ಶೇವ್ಕಾರ. ನೀವೆಲ್ಲ ಬಲ್ಲಂತೆ ಇವರ ಒಂದೊಂದು ಕಥಾಸಂಕಲನಗಳಷ್ಟೇ ಬಂದಿವೆ. ವಿಜಯಕರ್ನಾಟಕ-ಅಂಕಿತ ಕಥಾಸ್ಪರ್ಧೆಯ ಬಹುಮಾನ, ಪ್ರಜಾವಾಣಿ ಕಥಾಸ್ಪರ್ಧೆಯ ಬಹುಮಾನ, ಛಂದ ಪುಸ್ತಕ ಬಹುಮಾನ ಇತ್ಯಾದಿಗಳನ್ನು ಪಡೆದ ಅನೇಕರು ಇನ್ನೂ ಎರಡನೆಯ ಕಥಾಸಂಕಲನ ತಂದಿಲ್ಲ. ಯಾಕೆ ಹೀಗಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಸಂದೀಪ ನಾಯಕ, ರಘುನಾಥ ಚ ಹ, ಭಾಸ್ಕರ ಹೆಗಡೆ, ಅನುಜಯಾ ಎಸ್ ಕುಮಟಾಕರ್, ಕಣಾದ ರಾಘವ, ಲೋಕೇಶ್ ಅಗಸನಗಟ್ಟೆ, ಬಿ ಚಂದ್ರೇಗೌಡ, ಅಲಕಾ ತೀರ್ಥಹಳ್ಳಿ ಹೀಗೆ ಈಚೆಗೆ ಸಂಕಲನಗಳಲ್ಲಿ ಕಾಣಸಿಗದ ಕತೆಗಾರರ ಸಂಖ್ಯೆ ಹೆಚ್ಚಿದೆ. ಒಂದು ತಗಡಿನ ಚೂರು, ಒಳ್ಳೆಯವನು, ಅಶ್ವಮೇಧದಂಥ ಕೃತಿಗಳನ್ನು ಕೊಟ್ಟ ಅಶೋಕ ಹೆಗಡೆಯವರ ಬಹುನಿರೀಕ್ಷಿತ ಕಾದಂಬರಿ ಮೀನುಗಳು ಇನ್ನೂ ಹೊರಬಂದಿಲ್ಲ. ಬರುತ್ತಿರುವ ಸಂಕಲನಗಳು ಗೊತ್ತಿಲ್ಲದೇ ಇರುವುದನ್ನು ಗೊತ್ತು ಮಾಡಿಕೊಡುತ್ತಿಲ್ಲ. ಬೇರೆಯೇ ಒಂದು ಜಗತ್ತಿಗೆ ಹೊತ್ತು ಒಯ್ಯುತ್ತಿಲ್ಲ.

ಓದು ನನ್ನನ್ನು ಬೆಳೆಸದೇ ಇದ್ದರೆ ಅದರಿಂದ ಓದುಗನಿಗೆ ಏನು ಉಪಯೋಗ? ಓದುಗನನ್ನು ಬೆಳೆಸುವಂಥ ಬರವಣಿಗೆ ಯಾವಾಗ ಬರುತ್ತದೆ ಎಂದರೆ ಓದುಗನಿಗೆ ಕಾಣಿಸದೇ ಇರುವುದು ಕತೆಗಾರನಿಗೆ ಕಾಣಿಸಿದಾಗ. ಇಲ್ಲಿನ ಕತೆಗಳಲ್ಲಿ ಓದುಗನಿಗೂ ಕಾಣಿಸಿದ್ದು ಮಂಡಿಸಲ್ಪಟ್ಟಿದೆ ಅಥವಾ ವಿವರಿಸಲ್ಪಟ್ಟಿದೆಯೇ ಹೊರತು ಅವನಿಗೆ ಕಾಣಿಸದೇ ಇರುವುದು ಇದೆ ಎನಿಸುವುದಿಲ್ಲ. ಎಲ್ಲೋ ಅಷ್ಟಿಷ್ಟು ಇದೆ, ಅದು ಸಾಕಾಗುತ್ತಿಲ್ಲ. ಹೀಗೆ ಹೇಳುವಾಗ ಇದು ವ್ಯಕ್ತಿಗತ ನೆಲೆಯಿಂದ ಹೊರಟ ಮಾತು ಎನ್ನುವುದನ್ನು ಮರೆತಿಲ್ಲ. ಒಂದು ಹಂತದಲ್ಲಿ ಮನುಷ್ಯನಿಗೆ ಅವನ ವಯಸ್ಸು, ಓದು, ಅನುಭವ ಎಷ್ಟು ಭಾರವಾಗಿ ಬಿಡುತ್ತದೆಂದರೆ ಯಾವುದೂ ಕುತೂಹಲ ಹುಟ್ಟಿಸುವುದಿಲ್ಲ, ರೋಮಾಂಚನ ತರುವುದಿಲ್ಲ, ಆಹಾ ಎನಿಸುವಂತೆ ಮಾಡುವುದಿಲ್ಲ. ಬಹುಶಃ ನನ್ನ ಸ್ಥಿತಿ ಈಗ ಅದೇ ಇದ್ದಿರಲೂ ಬಹುದು. ಈ ಮಿತಿಯ ಅರಿವಿದ್ದೂ ಬರೆದಿದ್ದೇನೆ. ಅಲ್ಲದೆ ನನಗೆ ಅನಿಸಿದ್ದು ಕೊನೆಯ ಮಾತಲ್ಲ. ಆದರೂ ನಾನು ಹೇಳಬಹುದಾದ್ದು ನನಗೆ ಅನಿಸಿದ್ದು ಮಾತ್ರ.

ಒಂದು ಸಾಹಿತ್ಯ ಕೃತಿಯನ್ನ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಈ ವಿಮರ್ಶಕರು, ವಿಶೇಷತಃ ಅವಾರ್ಡು, ಪ್ರಶಸ್ತಿ ಕೊಡೋವ್ರು ಹೇಗೆ ತೀರ್ಮಾನಿಸ್ತಾರೆ ಎನ್ನುವ ಪ್ರಶ್ನೆಗೆ ನನ್ನನ್ನು ನಾನು ಒಡ್ಡಿಕೊಂಡು ನಂತರ ಈ ಐದೂ ಕೃತಿಗಳ ಕುರಿತು ನನಗಿರುವ ತಕರಾರುಗಳಿಗೆ ಬರುತ್ತೇನೆ. ಈ ಎಲ್ಲಾ ಕೃತಿಗಳಿಗೂ ಈಗಾಗಲೇ ತಲಾ ಎರಡೆರಡು ಪ್ರಶಸ್ತಿಗಳಾದರೂ ಬಂದಿವೆ. ಹಾಗಾಗಿ ಇವು ಒಂದರ್ಥದಲ್ಲಿ ಪ್ರಾತಿನಿಧಿಕ ಕೃತಿಗಳೇ ಎನ್ನಬಹುದು. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಯು ಆರ್ ಅನಂತಮೂರ್ತಿ ಪ್ರಶಸ್ತಿ, ಸಾಹಿತ್ಯ ಅಕಾಡಮಿಯ ದತ್ತಿ ಪ್ರಶಸ್ತಿ, ಛಂದ ಪುಸ್ತಕ ಬಹುಮಾನ, ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಎಚ್ ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ, ಬೇಂದ್ರೆ ಗ್ರಂಥ ಪ್ರಶಸ್ತಿ ಎಂದೆಲ್ಲ ಹೆಸರಿಸುತ್ತ ಹೋಗಬಹುದಾದ ಪ್ರಶಸ್ತಿಗಳೆಲ್ಲ ಈ ಕೃತಿಗಳಿಗೆ ಸಂದಿವೆ ಎನ್ನಬಹುದು. ಉದಾಹರಣೆಗೆ, ಹನುಮಂತ ಹಾಲಿಗೇರಿಯವರ ಸಂಕಲನದ ಪ್ರತಿ ಕತೆಗೂ ಒಂದಿಲ್ಲಾ ಒಂದು ಪ್ರಶಸ್ತಿ ಬಂದಿದೆ. ಈ ಒಂಭತ್ತು ಕತೆಗಳು ಇದುವರೆಗೆ 21 ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಕತೆಗಳು. ಇವರಲ್ಲಿ ಶಾಂತಿ ಕೆ ಅಪ್ಪಣ್ಣ ಅವರನ್ನು ಬಿಟ್ಟರೆ ಉಳಿದ ಎಲ್ಲರೂ ಈಗಾಗಲೇ ನಾಲ್ಕೈದು ಕೃತಿಗಳನ್ನು ಪ್ರಕಟಿಸಿದವರು, ತೀರ ಹೊಸಬರಲ್ಲ. ಹಾಗಾಗಿ ನಾನು ಐದೂ ಕೃತಿಗಳ ಕುರಿತು ಮಾಡಿಕೊಂಡ ಟಿಪ್ಪಣಿಗಳನ್ನು ಐದು ತಕರಾರುಗಳು ಎಂದೇ ಕರೆದಿದ್ದೇನೆ. ಕಾರಣ ಸ್ಪಷ್ಟ, ಇಲ್ಲಿ ತಕರಾರು ಎತ್ತಿದ್ದು ಹೆಚ್ಚು, ಮೆಚ್ಚಿದ್ದು, ಹೊಗಳಿದ್ದು ಕಡಿಮೆ. ನನ್ನ ನಿಲುವು ಏನೆಂದರೆ, ಒಂದು ಕೃತಿ ಚೆನ್ನಾಗಿಲ್ಲ ಎನಿಸಿದರೆ ಅದನ್ನು ಹೇಳುವ ಅಗತ್ಯ ಇಲ್ಲ. ಚೆನ್ನಾಗಿದೆ ಎನಿಸಿದರೆ ಅವಶ್ಯ ಹೇಳಬೇಕು. ನನಗೆ ಚೆನ್ನಾಗಿಲ್ಲ ಎನಿಸಿದ್ದು ನಿಮಗೆ ಚೆನ್ನಾಗಿದೆ ಅನಿಸಲೂ ಬಹುದು. ಹಾಗಾಗಿ, ಚೆನ್ನಾಗಿಲ್ಲ ಎನಿಸಿದರೆ ಸುಮ್ಮನಿರುವುದು ಸರಿ. ಒಂದು ಹಂತದ ವರೆಗೆ ಸರಿ. ಅದು ತಪ್ಪಾಗುವ ಒಂದು ಹಂತ ಇರುತ್ತದೆ. ಆಗ ಬಾಯಿಬಿಡದೇ ಇದ್ದರೇ ತಪ್ಪು.

ನನ್ನ ಬರಹಗಳು ಕೊಂಚ ಹೆಚ್ಚೇ ಹರಿತವಾಗಿವೆ ಎನಿಸಿದರೆ ಕ್ಷಮೆಯಿರಲಿ, ಪ್ರಶಸ್ತಿ/ಬಹುಮಾನ/ಅವಾರ್ಡು ಕೊಡುವ ಹಿನ್ನೆಲೆಯಲ್ಲೇ ನಾನಿವುಗಳನ್ನು (ಈ ಟಿಪ್ಪಣಿಗಳನ್ನು) ಮಾಡಿಕೊಂಡೆ ಎಂದಿಟ್ಟುಕೊಳ್ಳಿ. ಈ ಒಂದು ಕೃತಿಯನ್ನು ಪ್ರಶಸ್ತಿಗೆ, ಬಹುಮಾನಕ್ಕೆ, ಅವಾರ್ಡಿಗೆ ಆರಿಸುವಾಗ ಯಾಕೆ ಆರಿಸಬೇಕು, ಯಾಕೆ ಆರಿಸಬಾರದು, ಒಂದಕ್ಕಿಂತ ಇನ್ನೊಂದು ಹೇಗೆ ಶ್ರೇಷ್ಠ ಎನ್ನುವ ಪ್ರಶ್ನೆಗಳಿಗೆಲ್ಲ ನಮಗೆ ನಾವೇ ಪ್ರಶ್ನಿಸುವವರಾಗಿ ನೋಡುತ್ತೇವಲ್ಲ, ಅಂಥ ಒಂದು ಜಿಜ್ಞಾಸೆ ಇದರ ಹಿಂದಿದೆ. ಇಲ್ಲಿ ನಾವೇ ಲಾಯರು, ನಾವೇ ಜಡ್ಜು! ಇದು ಇಂಥ ಇಕ್ಕಟ್ಟಿನ ಒಂದು ಸ್ಥಿತಿಯಲ್ಲಿ ಹುಟ್ಟಿದ ಟಿಪ್ಪಣಿಗಳೆಂದರೂ ಸರಿಯೇ.

ಸ್ವತಃ ನಾನೇ ಒಂದೆರಡು ಬಾರಿ ಇಂಥ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದರಿಂದ ಇದನ್ನು ಕೊಂಚ ಹತ್ತಿರದಿಂದ ಅನುಭವಿಸಿದ್ದೇನೆ.

ಮೊದಲಿಗೆ ಇನ್ಯಾರೋ ಆರಿಸಿದ ಒಂದು ಸೀಮಿತ ಸಂಖ್ಯೆಯ ಕತೆ/ಕೃತಿ ನಮ್ಮೆದುರು ಬರುವುದರಿಂದ, ಆ "ಇನ್ಯಾರೊ" ನಮ್ಮ ನಿರ್ಧಾರಕ್ಕೆ ಒಂದು ಚೌಕಟ್ಟು ಹಾಕಿರುತ್ತಾರೆ. ಅಪ್ರಕಟಿತ ಕತೆ/ಕವನ/ಹಸ್ತಪ್ರತಿಯಾದಲ್ಲಿ ನಮಗೆ ಹೀಗೆ ಕೈಬಿಟ್ಟ ಕತೆ/ಕವನ/ಹಸ್ತಪ್ರತಿಗಳ ಬಗ್ಗೆ ಏನೂ ಗೊತ್ತಿರುವುದಿಲ್ಲ. ಸಾಮಾನ್ಯವಾಗಿ ಅಂಥ ಸಂದರ್ಭದಲ್ಲಿ ಸ್ಪರ್ಧಿಗಳ ಹೆಸರೂ ಗೊತ್ತಿರುವುದಿಲ್ಲ. ಗೊತ್ತಿದ್ದರೆ, ನಮಗೆ ಗೊತ್ತಿರುವ ಉತ್ತಮ ಲೇಖಕ/ಕವಿಯ ಬರಹ ಸ್ಪರ್ಧೆಯಲ್ಲಿ ಇಲ್ಲದೆ ಇದ್ದಲ್ಲಿ ಆತ ಅಥವಾ ಆಕೆ ಸ್ಪರ್ಧಿಸಬೇಕಿತ್ತು ಎಂದೂ ಅನಿಸುತ್ತದೆ. ಆತ/ಆಕೆ ಸ್ಪರ್ಧಿಸದೇ ಇದ್ದಿರಬಹುದು ಅಥವಾ ಮೊದಲ ಹಂತದಲ್ಲಿ ಫಿಲ್ಟರ್ ಆಗಿರಬಹುದು. ಆಗ ಏನು ಮಾಡುತ್ತೀರಿ? ಅಲ್ಲದೆ, ಅಕಸ್ಮಾತ್ ಪ್ರಕಟಿತ ಕೃತಿಗಳಾಗಿದ್ದರೆ ನಮಗೂ ಆಯಾ ವರ್ಷ ಪ್ರಕಟವಾದ ಕೆಲವು ಕೃತಿಗಳ ಬಗ್ಗೆ ಗೊತ್ತಿರುತ್ತದೆ. ಆಯ್ಕೆಗೆ ಬಂದ ಕೃತಿಗಳಲ್ಲಿ ಇರಬೇಕಿತ್ತು ಎಂದು ನಾವು ಅಂದುಕೊಂಡ ಒಂದು ಕೃತಿ ಇಲ್ಲದೇ ಇದ್ದರೆ ಏನು ಮಾಡಬೇಕು? ಇಲ್ಲಿಯೇ ಎದುರಾಗುವ ಇನ್ನೊಂದು ಸಮಸ್ಯೆ, ಈ ಆಯ್ಕೆಗಾರ/ತೀರ್ಪುಗಾರನ ಆಯ್ಕೆಗೆ ಏನು ಮಾನದಂಡ? ಆತ/ಆಕೆ ಸಾಕಷ್ಟು ಓದಿಕೊಂಡಿರಬೇಕೆ, ವಿಮರ್ಶಕನಾಗಿರಬೇಕೆ, ವಯಸ್ಸಾದವನಾಗಿರಬೇಕೆ ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ.

ಈಚೆಗೆ ಒಂದು ನಿರ್ದಿಷ್ಟ ವಸ್ತುವನ್ನು ಆಯ್ದುಕೊಂಡ ಕತೆಗಳ ಬಗ್ಗೆ ಚರ್ಚಿಸುವಾಗ ಸಹ-ತೀರ್ಪುಗಾರರು ತಾವು ಕಂಟೆಂಪರರಿ ಕಥಾಸಾಹಿತ್ಯವನ್ನು ಅಷ್ಟಾಗಿ ಓದಿಕೊಂಡಿಲ್ಲ ಎಂದು ಚರ್ಚೆಯಿಂದ ಹೊರಗುಳಿದು ಬಿಟ್ಟರು. ಒಂದು ಕತೆಯ ಮಟ್ಟ ನಿರ್ಧರಿಸುವುದಕ್ಕೆ ಅದೇ ವಸ್ತುವನ್ನು ಆಯ್ದುಕೊಂಡು ಬಂದ ಇತರ ಕತೆಗಳೊಂದಿಗೆ ಅದನ್ನಿಟ್ಟು ತೂಗುವುದು ನನ್ನ ಉದ್ದೇಶವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇಲ್ಲಿ ನನಗೆದುರಾದ ಪ್ರಶ್ನೆ, ತೀರ್ಪುಗಾರ/ಆಯ್ಕೆಗಾರನ ಆಯ್ಕೆಗೆ ಏನು ಆಧಾರವಪ್ಪಾ ಎನ್ನುವುದು.

- ಇಲ್ಲಿ ಒಟ್ಟು ಮೂರು ಪ್ರಶ್ನೆಗಳಿವೆ.

ಓದು ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವ ಒಂದು ಸಂವೇದನಾಶೀಲ ಪ್ರಕ್ರಿಯೆ. ಒಬ್ಬ ವ್ಯಕ್ತಿಗೆ ಚೆನ್ನಾಗಿದೆ ಎನಿಸಿದ ಪುಸ್ತಕ ಇನ್ನೊಬ್ಬ ವ್ಯಕ್ತಿಗೆ ಚೆನ್ನಾಗಿದೆ ಅನಿಸಬೇಕಾಗಿಲ್ಲ. ಒಬ್ಬನೇ ವ್ಯಕ್ತಿಗೆ ಹತ್ತು ವರ್ಷಗಳಷ್ಟು ಹಿಂದೆ ಅದ್ಭುತವಾಗಿದೆ ಎನಿಸಿದ ಅದೇ ಪುಸ್ತಕ ಇವತ್ತು ಸಾಧಾರಣ ಎನಿಸಲೂ ಬಹುದು. ವ್ಯಕ್ತಿಯ ವಯಸ್ಸು, ಅನುಭವ, ಮನಸ್ಸು, ಸಂವೇದನಾಶೀಲ-ಸ್ಪಂದನಾಶೀಲ-ಸೂಕ್ಷ್ಮಗ್ರಹಣಶೀಲ ಸಾಮರ್ಥ್ಯ, ವಿಪುಲ ಓದು ಎಲ್ಲ ಇದ್ದರೂ ಸಾಕಾಗುವುದಿಲ್ಲ. ನಾನು ಓದುವ ಸಮಯದ ನನ್ನ ಮನಸ್ಥಿತಿ, ನನ್ನ ನಿದ್ದೆ, ನನ್ನ ವಾತಾವರಣದ ಗದ್ದಲ, ಶಾಖ, ಬೆಳಕು, ಹಸಿವು, ಸಿಟ್ಟು, ಜಾತಿ, ಪೂರ್ವಾಗ್ರಹ, ಒಲವು-ನಿಲುವು ಎಂದು ಒಂದೆರಡು ಅಂಶಗಳಲ್ಲ ನನ್ನ ಓದು ನನಗೆ ದಕ್ಕುವ ಅಥವಾ ದಕ್ಕದಿರುವ ಸಂಗತಿಗೆ ಕಾರಣವಾಗಬಹುದಾದ ಸಂಗತಿಗಳು. ಇವೆಲ್ಲ ಮುಖ್ಯವಲ್ಲ ಅಥವಾ ಇವನ್ನೆಲ್ಲ ಪರಿಗಣಿಸುತ್ತಾ ಕೂತರೆ ಆಗಲಿಕ್ಕಿಲ್ಲ ಎನ್ನುವುದನ್ನು ಒಪ್ಪುತ್ತೇನೆ. ಒಂದು ಓದು, ಒಂದು ಕೃತಿ ಚೆನ್ನಾಗಿದೆ ಅಥವಾ ಇಲ್ಲ ಎನ್ನುವ ತೀರ್ಮಾನ ಯಾವತ್ತೂ ಸಾಪೇಕ್ಷವಾದದ್ದು ಮತ್ತು ಅಂತಿಮವಾದ ತೀರ್ಪು ಎನ್ನುವುದೇ ಇಲ್ಲ ಇಲ್ಲಿ ಎನ್ನುವುದನ್ನು ಸೂಚಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ಕೆಲವೊಂದು ಮನಸ್ಥಿತಿಯಲ್ಲಿ ಕೆಲವೊಂದು ಭಾವ/ರಾಗದ ಹಾಡು ಕೇಳಲು ಇಷ್ಟವಾಗುವ ಅಥವಾ ಇಷ್ಟವಾಗದೇ ಇರುವ ಹಾಗೆಯೇ ಇದು. ಹಾಗಾಗಿ ಯಾವ ಒಂದು ತೀರ್ಪು ಕೂಡ ಪ್ರಶ್ನಾರ್ಹವಾಗಿಯೇ ಇರುತ್ತದೆ ಎನ್ನುವಾಗ ಕೂಡ, ಇದೇ ಸಂಗತಿ ಇಚ್ಚಾನುಸಾರ ತೀರ್ಪು ಕೊಡಲು ಒಂದು ಸಮರ್ಥನೆಯಾಗಿ ಬಳಸಲ್ಪಡಬಾರದು, ಅಲ್ಲವೆ?

ಮುವ್ವತ್ತು ಕತೆಗಳನ್ನು ಕೊಟ್ಟು ಮೂರನ್ನು ಆರಿಸು ಎಂದಾಗ ನಾನು ಇದೆಲ್ಲ ಎಷ್ಟು ಕಷ್ಟವಿದೆ ಎನ್ನುವುದನ್ನು ಕಂಡೆ. ಕೊನೆಗೆ, ವಸ್ತು (ಕನಿಷ್ಠ ಅಂಕ 2), ಭಾಷೆ (ಕನಿಷ್ಠ ಅಂಕ 8), ಆಕೃತಿ (ಕನಿಷ್ಠ ಅಂಕ 1), ಜೀವನ ದೃಷ್ಟಿ/ಆಶಯ/ಸಾಮಾಜಿಕ - ತಾತ್ವಿಕ ಆಯಾಮ (ಕನಿಷ್ಠ ಅಂಕ 2), ತಂತ್ರ ಮತ್ತು ಅದರ ಪ್ರಯೋಗಶೀಲತೆ (ಕನಿಷ್ಠ ಅಂಕ 1), ಹೊಸತನ/ವೈವಿಧ್ಯ/ವೈಶಿಷ್ಟ್ಯ(ಕನಿಷ್ಠ ಅಂಕ 1) ಎಂದೆಲ್ಲ ಪ್ರತಿಯೊಂದು ಅಂಶಕ್ಕೂ ತಲಾ ಹತ್ತು ಅಂಕಗಳನ್ನು ನಿಗದಿಪಡಿಸಿ ಇಡೀ ಕತೆಗೆ ನನ್ನ ಮನಸ್ಸು ಹೃದಯಕ್ಕೆ ತಟ್ಟುವ ಶಕ್ತಿ ಎಷ್ಟಿದೆ, ಅದು ಕೊಡುವ ಅನುಭವ ಮತ್ತು ನನ್ನಲ್ಲಿ ಉದ್ದೀಪಿಸಿದ ಸಂವೇದನೆ ಹೇಗಿತ್ತು ಎನ್ನುವುದಕ್ಕೆ ನಲವತ್ತು ಅಂಕಗಳನ್ನಿಟ್ಟೆ. ಇಲ್ಲಿ ಕನಿಷ್ಠ ಇಪ್ಪತ್ತು ಅಂಕಗಳನ್ನು ಗಳಿಸದ ಕತೆ ಉಳಿದ ಅರವತ್ತು ಅಂಕಗಳಲ್ಲಿ ಪೂರ್ತಿ ಅರವತ್ತು ಪಡೆದುಕೊಂಡರೂ ಅದು ಅರ್ಹವಾಗುತ್ತಿರಲಿಲ್ಲ. ಏಕೆಂದರೆ ಆ ಎಲ್ಲಾ ಅಂಶಗಳೂ ಉಪ್ಪು, ಮೆಣಸು, ಜೀರಿಗೆ, ಹುಳಿ ಎಲ್ಲ ಇದ್ದ ಹಾಗೆ. ಇವೆಲ್ಲವನ್ನೂ ಸೂಕ್ತ ಪ್ರಮಾಣದಲ್ಲಿ ಹಾಕಿದ್ದರೂ ಅಡುಗೆಗೆ ಒಂದು ರುಚಿ ಬರಬೇಕಾದರೆ ಅದಕ್ಕೆ ಪ್ರೀತಿಯನ್ನೂ ಹಾಕಿ ಬೇಯಿಸಬೇಕು ತಾನೆ? ಹಾಗೆಯೇ ಎಲ್ಲ ಇದ್ದೂ ಒಂದು ಬರಹವನ್ನು ಓದಿದಾಗ ನನ್ನ ಹೃದಯ, ಮನಸ್ಸು (ಇವೆರಡೂ ವೈಜ್ಞಾನಿಕವಾಗಿ ಇಲ್ಲದ ವಸ್ತುಗಳು. ನಾನು ಅಪಧಮನಿ-ಅಭಿಧಮನಿಗಳ ಹೃದಯದ ಕುರಿತು ಹೇಳುತ್ತಿಲ್ಲ, ಮೆದುಳಿನ ಕುರಿತೂ ಹೇಳುತ್ತಿಲ್ಲ) ಗಳನ್ನು ತಟ್ಟದೇ ಹೋದರೆ ಏನು ಫಲ? ಒಟ್ಟು ಮುವ್ವತ್ತೈದು ಅಂಕ ಒಂದು ಕತೆ ಅರ್ಹಗೊಳ್ಳಲು ಗಳಿಸಬೇಕಿದ್ದ ಕನಿಷ್ಠ ಅಂಕ.

ತನ್ನಿಂತಾನೇ ಇದನ್ನು ನಿರ್ಧರಿಸುವ ಒಂದು ಎಕ್ಸೆಲ್ ಫೈಲ್ ನಾನು ಮಾಡಿಕೊಂಡೆ. ಅದು ಈಗಲೂ ನನ್ನ ಬಳಿ ಇದೆ! ಈ ವಿಧವಾಗಿ ಅರ್ಹಗೊಂಡ ಕತೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಕತೆಯನ್ನು ನಾನು ಪಟ್ಟಿ ಮಾಡಿದ್ದೆ. ಆದರೆ ಸಹ ತೀರ್ಪುಗಾರರ ಜೊತೆಗಿನ ಚರ್ಚೆಯ ಬಳಿಕ ಈ ಇಡೀ ಸರ್ಕಸ್ಸು ‘ನಿಮಗೆ ಬೇರೆ ಕೆಲಸ ಇಲ್ಲ’ ಎನಿಸಿಕೊಂಡಿದ್ದು ಬೇರೆ ವಿಚಾರ.

ಒಂದೇ ವಸ್ತುವನ್ನು ಆಯ್ದುಕೊಂಡು ಬಂದ ಹತ್ತು ಕತೆಗಳನ್ನು ನಾನು ಓದಿದ್ದರೆ, ಸ್ಪರ್ಧೆಗೆ ಬಂದ ಅದೇ ವಸ್ತುವಿನ ಸುತ್ತ ಇರುವ ಕತೆಯನ್ನು ಎಲ್ಲಿಡಬೇಕು ಎಂದು ತೀರ್ಮಾನಿಸಲು ನನಗೆ ಹೆಚ್ಚು ಅನುಕೂಲವಾಗುತ್ತದೆ. ಆದರೆ ಇದು ಅನಿವಾರ್ಯ ಅರ್ಹತೆಯೇನಲ್ಲ. ಇದನ್ನು ನಾವು ನಿರೀಕ್ಷಿಸುವುದೂ ಕಷ್ಟವೇ.

ಭಾಷೆ ತೀರ ಕೆಟ್ಟದಾಗಿದ್ದೂ ಕತೆ ಅತ್ಯುತ್ತಮವಾಗಿದ್ದರೆ ಏನು ಮಾಡಬೇಕು? ಒಬ್ಬ ಸಾಹಿತಿಯೇ ಭಾಷೆಯನ್ನು ಶುದ್ಧವಾಗಿ ಬಳಸಲಾರದವನಾಗಿದ್ದರೆ ಅಂಥವನನ್ನು ಪುರಸ್ಕರಿಸಬೇಕೆ? ಅದು ಎಂಥ ಸಂದೇಶ ನೀಡುತ್ತದೆ ಎನ್ನುವಲ್ಲಿ ಭಿನ್ನಮತ ಇದೆ. ನಾನು ವ್ಯಾಕರಣ ಮತ್ತು ಅಕ್ಷರಮಾಲೆಯ ಶುದ್ಧತೆಯ ಬಗ್ಗೆ ಮಾತ್ರ ಹೇಳುತ್ತಿರುವ ಮಾತಿದು. ಅದರ ನೈತಿಕ ಮೌಲ್ಯದ ಬಗ್ಗೆ ಅಲ್ಲ.

ಫಾರ್ಮ್ ಎನ್ನುವುದೇ ಅಪ್ರಸ್ತುತ ಎನ್ನುವ ವಾದ ಇದೆ. ಪ್ರಬಂಧದಂಥ ಕತೆ, ಕತೆಯಂಥ ಪ್ರಬಂಧ; ಕಾವ್ಯದಂಥ ಕತೆ, ಕತೆಯಂಥ ಕಾವ್ಯ; ಕಾದಂಬರಿಯ ಹರಹು ಇರುವ ಕತೆ ಎಲ್ಲ ಸಾಧ್ಯ. ಆದರೆ ಒಟ್ಟಾರೆಯಾಗಿ ಒಂದು ಓದು ಮುಗಿದಾಗ ನಿಮಗೆ ಅದು ಏನನ್ನೊ ಕೊಡುತ್ತಲ್ಲ, ಅಲ್ಲಿ ಅದು ಕತೆ ಎನಿಸುವಂತೆ ಮುಗಿದಿದೆಯೆ ಎಂದು ನೋಡಬಹುದು. ಅಂದರೆ ಜೀವನ ನದಿಯಂತೆ ಸಾಗುತ್ತಲೇ ಇರುತ್ತದೆ. ಅಲ್ಲಿ ನಿರ್ದಿಷ್ಟ ಆರಂಭ-ತಿರುವು-ಮೇರುಘಟ್ಟ-ಅಂತ್ಯ ಎನ್ನುವ ಯಾವ ಹಂತಗಳೂ ಇರುವುದಿಲ್ಲ. ಇಲ್ಲಿಗೆ ಮುಗಿಯಿತು ಎನ್ನುವ ಹಾಗೆ ಒಂದು ಪೀಸ್ ಕಟ್ ಮಾಡುವ ಬ್ರೆಡ್ಡೂ ಅಲ್ಲವಲ್ಲ ಅದು. ಹಾಗಾಗಿಯೇ ಕತೆಗಾರ ಅಥವಾ ಕವಿ ದಕ್ಕಿಸುವ ಆಕೃತಿ ಮುಖ್ಯವಾಗುತ್ತದೆ. ಕೆಲವೊಮ್ಮೆ ಆಕೃತಿಯೇ ಅದರ ಸಂವೇದಕ ಶಕ್ತಿಯನ್ನೂ ನಿರ್ಧರಿಸುವ ಘಟ್ಟವಾಗುವುದಿದೆ.

ಜೀವನ ದೃಷ್ಟಿ/ಆಶಯ/ಸಾಮಾಜಿಕ - ತಾತ್ವಿಕ ಆಯಾಮ ಬಹಳ ಮುಖ್ಯ. ಅದ್ಭುತವಾದ ಒಂದು ಕತೆ ಋಣಾತ್ಮಕ ಧೋರಣೆ ಇಟ್ಟುಕೊಂಡಿರುವುದು, ಪುರೋಗಾಮಿಯಲ್ಲದ ಸಂಕುಚಿತ/ಸಣ್ಣತನದ ಆಶಯವನ್ನು ಧ್ವನಿಸುವುದು, ಸಮಾಜಕ್ಕೆ ಆರೋಗ್ಯಕರವಲ್ಲ ಎನಿಸುವ ಜೀವನದೃಷ್ಟಿಯನ್ನು ಪುರಸ್ಕರಿಸುವುದು ಮಾಡಿದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಹೆಣ್ಣಿನ ಆಧುನಿಕತೆಯನ್ನು ಒಪ್ಪದ ಕತೆಗಳು, ಲೈಂಗಿಕ ಸ್ವೇಚ್ಛಾಚಾರವನ್ನೆ ಸರಿಯೆನ್ನುವ ಕತೆಗಳು, ಕೌಟುಂಬಿಕ ವ್ಯವಸ್ಥೆಯ ಒಟ್ಟಾರೆ ಚೌಕಟ್ಟನ್ನೆ ಪ್ರಶ್ನಿಸುವ ಕತೆಗಳು ಸಮಸ್ಯೆಯನ್ನೊಡ್ಡುತ್ತವೆ. ಇಲ್ಲಿ, ಇತರ ಹಲವೆಡೆಗಳಲ್ಲೂ ಆಗುವಂತೆ ತೀರ್ಪುಗಾರನ ವೈಯಕ್ತಿಕ ನಿಲುವು-ಒಲವು ಮೇಲ್ಗೈ ಸಾಧಿಸುವುದಿಲ್ಲವೆ?

ತಂತ್ರ ಮತ್ತು ಅದರ ಪ್ರಯೋಗಶೀಲತೆ ಕೂಡ ಒಂದು ಪರಿಗಣಿಸಬೇಕಾದ ಅಂಶವೇ. ತಂತ್ರ ಹೇಗಿರಬೇಕು ಎನ್ನುವುದಕ್ಕೆ ವಿವೇಕ್ ಶಾನಭಾಗ ಅವರು ವಿವರಿಸಿದ ಮಾತುಗಳೇ ಮಾನದಂಡ. ನನ್ನ ಬ್ಲಾಗಿನಲ್ಲಿನ ಅವರ ಸಂದರ್ಶನದಲ್ಲಿ ಇದು ನಿಮಗೆ ಸಿಗುತ್ತದೆ, ಆಸಕ್ತಿಯಿದ್ದರೆ ಗಮನಿಸಿ. ಸೂಕ್ಷ್ಮವಾಗಿ - ಅದು ಕುರ್ಚಿಗೆ ಹೊಡೆದ ಮೊಳೆ, ಕೀಲುಗಳಂತೆ ಇರಬೇಕು. ಕಾಣಬಾರದು, ಕುಳಿತುಕೊಳ್ಳುವವನಿಗೆ ಚುಚ್ಚಬಾರದು. ಸಹಜವಾಗಿರಬೇಕು, ಸೌಂದರ್ಯ ಸೃಷ್ಟಿಸಬೇಕು.

ಹೊಸತನ/ವೈವಿಧ್ಯ/ವೈಶಿಷ್ಟ್ಯ ಒಂದು ಮಾನದಂಡ. ಇಂಥದ್ದರ ತುಡಿತ ಬರಹಗಾರನಲ್ಲಿ ಸಹಜವಾಗಿಯೇ ಇರುತ್ತದೆ ಬಿಡಿ.

ಹೀಗೆ ಅಥವಾ ಸಾಕಷ್ಟು ಚರ್ಚೆ, ಚಿಂತನೆ ಮತ್ತು ನಿರ್ಧಾರಗಳ ಬಳಿಕ ಒಂದು ಸ್ಥೂಲ ಮಾನದಂಡ ನಿರ್ಮಿಸಿಕೊಳ್ಳಲು ಸಾಧ್ಯವೆ? ನಿಯಮಗಳಿಗೆ ಬದ್ಧವಾಗಿ ಎಲ್ಲಾ ಅರ್ಹ ಲೇಖಕರ ಕೃತಿಗಳನ್ನೂ ಸ್ಪರ್ಧೆಯಲ್ಲಿ ಪರಿಗಣಿಸುವ ಪರಿಸ್ಥಿತಿ ನಿರ್ಮಿಸಲು ಸಾಧ್ಯವೆ? ಆಯಾ ಲೇಖಕ/ಪ್ರಕಾಶಕ ಅರ್ಜಿ ಹಾಕಿದಂತೆ ಪುಸ್ತಕ ಕಳಿಸುವ ಬದಲಿಗೆ ಪ್ರಶಸ್ತಿ ನೀಡಲು ಮುಂದಾಗುವ ಸಂಸ್ಥೆ ಸ್ವಯಂಪ್ರೇರಣೆಯಿಂದ ಅರ್ಹ ಕೃತಿಗಳನ್ನು ಕೊಂಡು ಪರಿಗಣಿಸಬೇಕಲ್ಲವೆ? ಅತ್ಯಂತ ಪಾರದರ್ಶಕವಾಗಿ ಆಯಾ ಲೇಖಕನಿಗೆ ಆತನ ಕೃತಿ/ಕತೆಯಲ್ಲಿ ಯಾವ ಅಂಶ ಸಾಕಷ್ಟು ಪೋಷಣೆ ಪಡೆದಿಲ್ಲ ಎನ್ನುವುದನ್ನು ಮನಗಾಣಿಸುವಂಥ ಒಂದು ಸ್ಥಿತಿ ಸಾಧ್ಯವಾದೀತೆ? ಪ್ರತಿಯೊಬ್ಬ ತೀರ್ಪುಗಾರ ತನ್ನ ನಿರ್ಧಾರಕ್ಕೆ ಸಾಕಷ್ಟು ಹೋಂ ವರ್ಕ್ ನಡೆಸಿದ್ದರ ಪುರಾವೆ ಸಹಿತ ಆತನ ಒಟ್ಟಾರೆ ಟಿಪ್ಪಣಿಗಳನ್ನು ಎಲ್ಲಾ ಸ್ಪರ್ಧಿಗಳಿಗೂ ಒದಗಿಸುವುದು ಸಾಧ್ಯವಾಗಬಹುದೆ?

ಹಾಗೆಯೇ, ಮೂವರು, ನಾಲ್ವರು ತೀರ್ಪುಗಾರರಿರುವಾಗ ಅವರೆಲ್ಲ ಪರಸ್ಪರ ಚರ್ಚಿಸಿ ಸಹಮತಕ್ಕೆ ಬರಬೇಕೆ ಅಥವಾ ಅವರು ಪರಸ್ಪರರಿಗೆ ಅಜ್ಞಾತರಾಗಿಯೇ ಉಳಿಯುವುದು ಒಳ್ಳೆಯದೆ ಎನ್ನುವ ಪ್ರಶ್ನೆ ಇದೆ. ಆಗ ಪ್ರಶಸ್ತಿ ನೀಡುತ್ತಿರುವ ಸಂಸ್ಥೆಯ ಸಾಹಿತ್ಯಾಸಕ್ತ ಪದಾಧಿಕಾರಿಗಳೋ, ಪತ್ರಿಕೆಯ ಸಂಪಾದಕ ಮಂಡಳಿಯ ಕೆಲವು ಸದಸ್ಯರೋ ಸಮನ್ವಯಕಾರರಾಗಿ ಒಂದು ನಿರ್ಧಾರಕ್ಕೆ ಬರಬೇಕಾದೀತು. ಇಲ್ಲಿ ಹುಟ್ಟುವ ಇನ್ನೊಂದು ಸಮಸ್ಯೆ ಇದೆ.

ಕೆಲವರು ಅಂಕಗಳನ್ನು ಕೊಡಿ ಎನ್ನುತ್ತಾರೆ. ಇನ್ನು ಕೆಲವರು ಸ್ಥಾನಕ್ಕನುಸಾರ ಕ್ರಮಾಂಕ ಕೊಡಿ ಸಾಕು ಎನ್ನುತ್ತಾರೆ. ಅಂಕಗಳನ್ನು ನೀಡುವಾಗ ಹತ್ತರಲ್ಲಿ ಅಥವಾ ನೂರರಲ್ಲಿ ಕೊಡುವುದು ಕ್ರಮ. ಹತ್ತರಲ್ಲಿ, ಐದರಲ್ಲಿ ಕೊಡುವುದಕ್ಕೆ ನನ್ನ ತಕರಾರೇನಿಲ್ಲ. ಆದರೆ ನೂರರಲ್ಲಿ ಕೊಡಿ ಎಂದಾಗ ಸಮಸ್ಯೆಗಳು ಎದುರಾಗುತ್ತವೆ. ನೂರರಲ್ಲಿ ಅಂಕಗಳನ್ನು ನೀಡುವಾಗ ಪ್ರತಿ ಸ್ಪರ್ಧಿಯ ನಡುವೆ ಇರಿಸುವ ಅಂತರದಲ್ಲಿ ಪ್ರತಿಯೊಬ್ಬರೂ ಅನುಸರಿಸುವ ಒಂದು ಕ್ರಮಬದ್ಧತೆಯೇನಿದೆ, ಅದು ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಈ ಅಂತರದಲ್ಲಿನ ವ್ಯತ್ಯಾಸದಿಂದ ಒಟ್ಟಾರೆ ಫಲಿತಾಂಶಕ್ಕೆ ತಲುಪುವಾಗ ಎಚ್ಚರ ವಹಿಸದೇ ಇದ್ದರೆ ಅದು ಏರುಪೇರಾಗುವುದು ಸಾಧ್ಯವಿದೆ. ಅಂದರೆ, ಒಬ್ಬರು ವಿಸ್ತಾರವಾದ ಅಂತರದಲ್ಲಿ 30-50-70-90-100 ಎಂದು ಅಂಕ ನೀಡಬಹುದು. ಇನ್ನೊಬ್ಬರು ಹತ್ತರೊಳಗಿನ ಅಂತರವಿರಿಸಿ, 85-87-90-93-95 ಎಂದು ನೀಡಬಹುದು, ಮತ್ತೊಬ್ಬರು ಕೊಂಚ ಅತ್ತಲೂ ಅಲ್ಲ ಇತ್ತಲೂ ಅಲ್ಲ ಮಾದರಿಯಲ್ಲಿ 70-75-80-85-90 ಎಂದೆಲ್ಲ ವಿಭಿನ್ನವಾಗಿ ಅಂಕ ನೀಡುವ ಸಾಧ್ಯತೆ ಇದ್ದೇ ಇದೆ. ಒಟ್ಟಾರೆ ಅಂಕಗಳಿಗೆ ತಲುಪುವ ಮುನ್ನ ಇಂಥ ಅಂತರದ ವ್ಯತ್ಯಸ್ಥ ಬಗೆಯನ್ನು ವೈಜ್ಞಾನಿಕವಾದ ವಿಧಾನದಿಂದ ಸೂಕ್ತ ರೀತಿಯಲ್ಲಿ (weighted average ಅಥವಾ indexed average) ಸರಿಪಡಿಸಿಕೊಳ್ಳದೇ ಹೋದರೆ ಒಟ್ಟಾರೆ ಉದ್ದೇಶ ವಿಫಲವಾಗುವುದರಿಂದ ಅಂಕಗಳನ್ನು ಕೂಡಿಸದೆ ಸ್ಥಾನ ಮಾತ್ರ ಗಮನಕ್ಕೆ ತೆಗೆದುಕೊಳ್ಳುವುದು ಹೆಚ್ಚು ಸೂಕ್ತವಾದೀತು ಎನಿಸುತ್ತದೆ.

ಕೆಲವೊಂದು ಬದಲಾವಣೆಗಳಾದರೂ ಆಗದೇ ಹೋದಲ್ಲಿ ಗಲ್ಲಿಗೊಂದು ತಿರುವಿಗೊಂದು ಇರುವ ಅವಾರ್ಡು/ಪ್ರಶಸ್ತಿ ಇತ್ಯಾದಿಗಳ ಬಗ್ಗೆ, ತೀರ್ಪುಗಾರರ ಬಗ್ಗೆಯೂ ಪೂರ್ವಾಗ್ರಹದ, ವಶೀಲಿಬಾಜಿಯ, ಗುಂಪುಗಾರಿಕೆಯ, ಅನ್ಯಾಯದ ಆಪಾದನೆ ಇದ್ದೇ ಇರುತ್ತದೆ ಅಲ್ಲವೆ? ಪ್ರತಿಬಾರಿಯೂ ಪುರಸ್ಕೃತರು ಒಂದು ವಿಧವಾದ ಮುಜುಗರಕ್ಕೆ ಒಳಗಾಗುವ ಸ್ಥಿತಿಯನ್ನು ಬಹುಶಃ ನಿವಾರಿಸಬಹುದು ಎನಿಸುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, July 17, 2017

ಯಾ ದೇವೀ ಸರ್ವಭೂತೇಷು...

ಅಶೋಕ್ ಶ್ರೀನಿವಾಸನ್ ಅವರ ಇನ್ನೊಂದು ಕತೆ.
------------------------------

ಬಿಟಿಯಾ ಪ್ರೇತ. ಆಗಸದಲ್ಲಿ ಚಂದಿರನಿಲ್ಲದ ಒಂದು ಅಮಾವಾಸ್ಯೆಯ ರಾತ್ರಿ ಅವಳು ಹಾಡೊಂದು ಹಾಡುಗಾರನ್ನ ಅರಸಿಕೊಂಡು ಬಂದಂತೆ ಬನಾರಸ್ ನಗರವನ್ನು ಪ್ರವೇಶಿಸಿದಳು. ಬನಾರಸ್ಸಿನ ಒಂದೊಂದು ತುಣುಕೂ ಬಿಟಿಯಾಳಂಥ ಪ್ರೇತವನ್ನು ಹೀರಿಕೊಳ್ಳಲು ಕಾದು ಕೂತಂತಿತ್ತು. ಬೇಯುತ್ತಿದ್ದ ಅಡುಗೆ, ದೇಹಗಳು, ಕೊಳಚೆ, ಕೊಳೆತು ನಾರುತ್ತಿದ್ದ ವಾಸನೆ ಎಲ್ಲವೂ ಅವಳನ್ನು ಎಷ್ಟೊಂದು ಮೋಹ ಪರವಶಗೊಳಿಸಿ ಅಪ್ಪಿ ಆವರಿಸಿತೆಂದರೆ, ಸುಮ್ಮನೇ ಹಾದು ಹೋಗುವ ಯಾರನ್ನೇ ಆದರೂ ಸೆಳೆದಿಡುವ ಹಾಗೆಯೇ ಈ ಬಿಟಿಯಾಳನ್ನೂ ಸೆಳೆದು, ಅವಳು ತನ್ನದೇ ಒಂದು ಭಾಗವೋ ಎಂಬಂತೆ ತನ್ನೊಡಲಿಗೆ ತಗುಲಿ ಹಾಕಿಕೊಂಡು ಬಿಟ್ಟಿತು. ಯಾರಿಗೆ ಕಳೆದುಕೊಳ್ಳಲು ಇನ್ನೇನೂ ಉಳಿದಿಲ್ಲವೋ ಹಾಗೆ, ಯಾರು ಅಲ್ಲಿಗೆ ಏನನ್ನೋ ಹುಡುಕಲು ಹೋಗಿ ಇನ್ನೇನೋ ಸಿಕ್ಕಿ ಅದರಲ್ಲೇ ಕಳೆದು ಹೋಗುತ್ತಾರೋ ಹಾಗೆ, ಯಾರು ತಮ್ಮ ಕಡುಕೊನೆಯ ತನಕ ಅಲ್ಲಿಯೇ ನೆಲೆನಿಂತು ಬಿಡುವರೋ ಹಾಗೆ, ಯಾರು ತಮ್ಮ ಕಹಿಯಾದ ಭೂತಕಾಲವನ್ನೂ, ಇಲ್ಲಿಗೆ ಹೊರಟು ನಿಲ್ಲುವ ಹಾಗೆ ಮಾಡಿದ ಘಳಿಗೆಯನ್ನೂ ಪೂರ್ತಿಯಾಗಿ ಮರೆತೇ ಹೋಗುವರೋ ಹಾಗೆ...

ವೃತ್ತಿಯಿಂದ ಬಿಟಿಯಾ ಒಬ್ಬ ಫೋಟೋಗ್ರಾಫರ್. ನಕ್ಷತ್ರದಂಥ ಕಣ್ಣುಗಳೂ, ಮೊಣಕಾಲ ತನಕ ಇಳಿದ ಕಡುಕಪ್ಪು ತಲೆಗೂದಲೂ ಇತ್ತವಳಿಗೆ. ಅವಳ ನೇರಳೆ ಬಣ್ಣದ ಕಂಗಳು ನೋವಿನ ಕೊಳಗಳಂತೆ ನಿರಂತರ ಬದಲಾಗುವ ಆಳದೊಂದಿಗೆ ನೆಮ್ಮದಿಯ ಭರವಸೆಯನ್ನೀಯುವ ವಿಚಿತ್ರ ಹೊಳಹು ಹೊಂದಿದ್ದವು. ಅದು ಹೇಗೆಂದರೆ, ಈಗಿತ್ತು ಈಗಿಲ್ಲ ಎನ್ನುವಂತೆ ಕಂಡ ಮರುಕ್ಷಣ ಮರೆಯಾಗುತ್ತಿತ್ತು. ಹಾಗಾಗಿ ಅದನ್ನೇ ಅವಳ ಒಂದು ಮುಖಲಕ್ಷಣ ಎಂದು ಹೇಳಲು ಬರುವಂತಿರಲಿಲ್ಲ. ಅಲ್ಲಿ, ಆ ನಗರಗಳ ನಗರದಲ್ಲಿ ಅವಳನ್ನು ಮತ್ತೆ ಮತ್ತೆ ಹಳಿಯಲಾಯಿತು. ಅವಳ ತಲೆಯ ಮೇಲೆ ಸುರಿದ ಪ್ರತಿಯೊಂದು ನಿಂದಾಸ್ತುತಿಯೂ ಅವಳನ್ನು ಮತ್ತಷ್ಟು ಬೆಳಗಿಸಿತು, ಹೊಳೆಯಿಸಿತು. ಅವಳನ್ನು ಕೀಳುಗೈದಂತೆಲ್ಲ ಅವಳು ಮತ್ತಷ್ಟು ಯೌವನದಿಂದ ನಳನಳಿಸುತ್ತಿದ್ದಳು. ಅವಳನ್ನು ಕೆಡಿಸಬಂದವರೆಲ್ಲರೂ ಅವಳಿಂದ ಪೂರ್ಣಗೊಂಡರು, ಕೊಳೆ ತೊಳೆದು ಕಳೆದುಕೊಂಡರು.

ಬಿಟಿಯಾ ಸುತ್ತಲೂ ದೃಷ್ಟಿ ಹಾಯಿಸಿದಳು. ಏರುತಗ್ಗಿನ ಆ ನೆಲದ ಮೇಲೆಲ್ಲ ಸುಡುವ ಬೆಂಕಿಯ ಬೆರಣಿಯ ಮುಂದೆ ಮುಕುರಿಕೊಂಡ ಜನಸ್ತೋಮ. ಎಂದಿಗೂ ಮುಗಿಯದ ಆ ರಾತ್ರಿಯ ಎದುರು ಸಹನೆಯಿಂದ ಕಾದು ಕುಳಿತ ಮಂದಿಯ ಹೆಪ್ಪುಗಟ್ಟಿದ ನೆರಳು ಚಾಚಿತ್ತು. ನಾಫ್ತಾದ ಜ್ವಾಲೆಯಿಂದಾಗಿ ಕತ್ತಲು ಚಿತ್ರವಿಚಿತ್ರವಾಗಿ ಚಿಂದಿಗೊಂಡಂತಿತ್ತು. ಫಾಟ್ಗಳಲ್ಲಿ ಚಿತೆಗಳು ಉರಿಯುತ್ತಲೇ ಇದ್ದವು. ಅಲ್ಲಲ್ಲಿ ನಿಯಾನ್ ಬೆಳಕೂ ಚೆಲ್ಲಿತ್ತು. ಸಂಸ್ಕಾರಕ್ಕೆ ಕಾದ ಹೆಣಗಳ ರಾಶಿಯೂ ದೊಡ್ಡದಿತ್ತು. ಎಲ್ಲೆಲ್ಲೋ ಎಸೆದಂತೆ ಚದುರಿಬಿದ್ದ ಬೆಳಕಿನ ಅಂದಾಜು ಮಾಡಿದಳು ಬಿಟಿಯಾ. ಚಂದನಿಲ್ಲದೇ ಇದ್ದ ಆಗಸಕ್ಕೆ ದನಿಯಿಲ್ಲದಂತಾಗಿತ್ತು. ಅವಳು ಅಲ್ಲಿ ಕಣ್ಣುಮುಚ್ಚಿ ಕಲ್ಲಿನಂತೆ ನಿಂತೇ ಇದ್ದಳು. ಮಿಡಿಯುತ್ತಿದ್ದ ನಗರದ ನೋವೆಲ್ಲವೂ ನಂಜಿನಂತೆ ಅವಳ ನರನಾಡಿಯನ್ನೆಲ್ಲ ಹೊಕ್ಕು ಸಂಚರಿಸಿ ರಕ್ತಕ್ಕಿಳಿಯಿತು. ಬಿಟಿಯಾ ರೂಮು ಹಿಡಿದಳು. ಸುರುಳಿ ಸುತ್ತುವ ಮೆಟ್ಟಿಲುಗಳನ್ನು ಹತ್ತಿ ಟೆರೇಸಿಗೆ ಬಂದರೆ ಅವಳ ರೂಮು, ಅದರ ಬಾಲ್ಕನಿ ತೆರೆದುಕೊಳ್ಳುತ್ತಿತ್ತು. ಅಲ್ಲಿಂದ ಕುಂಬಾರರ ಕೇರಿ ಕಾಣುತ್ತಿತ್ತು. ಕೆಂಪು ಮಣ್ಣು ಮತ್ತು ಕೊಳಕು ಕೊಚ್ಚೆಯಾದ ಗಂಗೆಯ ಪವಿತ್ರ ನೀರು ಎರಡೂ ಸೇರಿ ಜಗದ ಅಷ್ಟು ಪವಿತ್ರವಲ್ಲದ ಇತರ ಮೂಲೆಮೂಲೆಗೂ ಯಾವ ಗಂಗೆಯ ಪಾವನ ತೀರ್ಥವನ್ನು ತುಂಬಿ ಕಳಿಸಲಾಗುವುದೋ ಅದಕ್ಕೆ ಬೇಕಾದ ಪುಟ್ಟಪುಟ್ಟ ಮಣ್ಣಿನ ಕುಡಿಕೆಗಳು ತಯಾರಾಗುತ್ತಿದ್ದವು.

ಸತ್ತವರನ್ನಿಟ್ಟುಕೊಂಡು ವ್ಯಾಪಾರ ಮಾಡಲು ಬಯಸುವುದಾದರೆ ಬನಾರಸ್ ಅದಕ್ಕೆ ಸರಿಯಾದ ಜಾಗ. ಮಂದಿ ಅಲ್ಲಿಗೆ ಬದುಕುವುದಕ್ಕೆ ಹೋಗುವುದಕ್ಕಿಂತ ಸಾಯುವುದಕ್ಕೆ ಹೋಗುವುದೇ ಹೆಚ್ಚು. ಜನನ ಮರಣಗಳ ನಿರಂತರ ಚಕ್ರದಿಂದ ಪಾರಾಗುವುದಕ್ಕೆ ಇಲ್ಲಿ ಸಾಯುವುದೊಂದೇ ಮಾರ್ಗ. ಒಂದೇ ದಿನದಲ್ಲಿ ಅದೆಷ್ಟೋ ಶವ ಸಂಸ್ಕಾರಗಳನ್ನು ನಡೆಸಿಕೊಡುವ ಶಾಸ್ತ್ರಿಯಂಥ ಬ್ರಾಹ್ಮಣರಿಗೆ ಇಲ್ಲಿ ಭಾರೀ ಡಿಮ್ಯಾಂಡ್ ಇದೆ. ಅಥವಾ ಹೆಣಗಳನ್ನು ಅಂತಿಮ ಸಂಸ್ಕಾರಕ್ಕೆ ಅಣಿಗೊಳಿಸುವ ಜರಾನಂಥ ಕೆಳಜಾತಿಯ ಚಾಂಡಾಲರಿಗೂ ಭಾರೀ ಬೇಡಿಕೆಯಿದೆ. ನಿಮ್ಮ ಮೇಲೆ ತನ್ನ ನೆರಳೇ ಹಾಸದ, ನೆಲದ ಮೇಲೆ ತನ್ನ ಹೆಜ್ಜೆ ಗುರುತೇ ಬಿಡದ ಬಿಟಿಯಾಳ ಜೊತೆಗಿನ ತಣ್ಣನೆಯ ಆಪ್ತಸಾನ್ನಿಧ್ಯದಲ್ಲಿ ತಮ್ಮ ಬದುಕು ಬದಲಿಸಿಕೊಂಡ ಅಸಂಖ್ಯಾತ ಮಂದಿಯಲ್ಲಿ ಎರಡು ಜೀವಗಳಿವು. ಅವಳು ಶಾಸ್ತ್ರಿಯನ್ನು ಮದುವೆಯಾದಳು. ತನ್ನ ರಾತ್ರಿಗಳನ್ನು ಆ ಮುಟ್ಟಲಾಗದವನೊಂದಿಗೆ ಕಳೆದಳು. ಮತ್ತು ಇತರ ಬಹಿಷ್ಕೃತರ, ತಿರಸ್ಕೃತರ, ಭರವಸೆ ಕಳೆದುಕೊಂಡವರ, ತಮ್ಮನ್ನೆ ತಾವು ಕಳೆದುಕೊಂಡವರ ಜೊತೆ ಅವಳು ಸದಾ ಒಂದಾಗಿ ನಿಂತಳು.

ಉಳಿದ ಪುರೋಹಿತರಂತೆ ಶಾಸ್ತ್ರಿ ಯಾವತ್ತೂ ಉಪವಾಸ, ಭೂತ ಬಿಡಿಸುವುದು, ಕೆಂಡ ಹಾಯುವುದು ಎಲ್ಲ ಮಾಡುತ್ತಿರಲಿಲ್ಲ. ಅವರು ಮೊತ್ತ ಮೊದಲಸಲ ಭೇಟಿಯಾದಾಗ ಬಿಟಿಯಾಳಲ್ಲಿ ಯಾವುದೋ ಒಂದು ಭಯಂಕರವಾದ ಮಿಂಚಿನ ಸೆಲೆಯೇ ಉಕ್ಕುತ್ತ ಇರುವುದನ್ನು ಕಂಡಿದ್ದ ಶಾಸ್ತ್ರಿ. ಆದರೆ ಅವನು ಅವಳ ಬಳಿ ಹೇಳಿದ ಮಾತು ಬೇರೆ. ನಿನ್ನ ಮೊಗದಲ್ಲಿ ಅದೇನೋ ನೋವು, ಅದೇನೋ ಭಾವತೀವ್ರತೆ ಎಂದ. ಮಬ್ಬು ಕವಿದ ಕತ್ತಲಲ್ಲಿ ಅಂದು ಕಿಟಕಿಯಿಂದ ಕಂಡ ಅವಳ ಮುಖದ ತೇಜಸ್ಸು ಮನಸ್ಸಲ್ಲಿ ಅಚ್ಚೊತ್ತಿನಿಂತ ಬಗೆಯನ್ನು ಅವನು ಎಂದಿಗೂ ಮೀರದಾದ. ಮತ್ತು ಅವಳಿಗದು ಗೊತ್ತಿತ್ತು ಕೂಡ. ಅವಳಿಗಿಂತ ವಯಸ್ಸಿನಲ್ಲಿ ಎಷ್ಟೋ ಹಿರಿಯನಾದ ಶಾಸ್ತ್ರಿ ಆ ಹೊತ್ತಿಗಾಗಲೇ ವಿಧುರನಾಗಿದ್ದ. ಹಾಗಿದ್ದೂ ಅವನ ಯಾವ ಶಿಕ್ಷಣವಾಗಲಿ, ಮನೋಧರ್ಮವಾಗಲಿ ಈ ಒಂದು ಮುಖಾಮುಖಿಗೆ ಅವನನ್ನು ಸಜ್ಜಾಗಿಸುವಲ್ಲಿ ಸಹಾಯಕ್ಕೆ ಬರಲಿಲ್ಲ. ಅದು ಚಳಿಗಾಲದ ಒಂದು ಭಾನುವಾರ ಮುಸ್ಸಂಜೆ.

ಅವನು ಆಗಷ್ಟೇ ಹೇಳಿದ ಅವನದೇ ಮಾತನ್ನು ಪುನರುಚ್ಚರಿಸುತ್ತ ಅವಳು ಕೇಳಿದ್ದಳು, ನಗುತ್ತಲೇ, "ಹಾಗೆ ನಾನು ಭಾನುವಾರದಷ್ಟೇ ದುಃಖಿಯಾಗಿ ಕಾಣುತ್ತೇನಾ." ಆ ಕಣ್ಣುಗಳ ಮೇಲೆ ಹರಡಿಕೊಂಡಿದ್ದ ನೆರಳು ಒಮ್ಮೆಗೇ ಸರಿದು ಮುಖದಲ್ಲಿ ಬೆಳಕು ಮಿನುಗಿತ್ತು. ಪೂರ್ತಿ ಕಳೆದು ಹೋದವನಂತಿದ್ದ ಅವನು ಅವಳ ಸೌಂದರ್ಯದ ಮಾಯಾಜಾಲದಲ್ಲಿ ಪರವಶನಾಗಿದ್ದ. ಅವನು ನಕ್ಕು ಕಿಟಕಿಯಿಂದ ಹೊರನೋಡತೊಡಗಿದ. ಹೊರಗೆ ಅವರಿಗೆ ಕಾಣುತ್ತಿದ್ದ ನೋಟದಲ್ಲಿ ಪ್ರೇಮವಾಗಲಿ ವಿಷಾದವಾಗಲಿ ಇದ್ದಂತಿರಲಿಲ್ಲ. ಆಗಷ್ಟೇ ಬೆಳಗಿದ ಬೀದಿ ದೀಪಗಳು ಆಗಸದಿಂದ ಮರೆಯಾಗುವ ಹವಣಿಕೆಯಲ್ಲಿದ್ದ ಬೆಳಕಿನ ಹೊಳಪಿನೊಂದಿಗೆ ಸೆಣಸಾಡುವಂತಿದ್ದವು. ಆದರೆ ಸುಳ್ಳೇ ಅವಳಾಡಿದ ಒಂದು ಮಾತು ಅವನನ್ನು ಕೆಡವಿತ್ತು. ಎಲ್ಲಿಂದ ಬಂತೋ ಅದು, ಹೇಳಿಬಿಟ್ಟಿದ್ದಳು, ತಾನು ಗರ್ಭವತೀ. ಗಾಳಿಯಲ್ಲಿ ಹಾಗೇ ನೇತು ಬಿದ್ದಂತಿದ್ದ ಆ ಮಾತು ಅಲ್ಲೇ ಉಳಿಯಿತು. ಅವರ ತನಕ ಸರಿದು ಬರಲಿಲ್ಲ, ಅಲ್ಲಿಂದೆದ್ದು ಹೊರಟು ಹೋಗಲಿಲ್ಲ. ಮತ್ತೆ ಮೌನ ಮುರಿದಿದ್ದು ಶಾಸ್ತ್ರಿಯೇ. ಅವಳು ಒಪ್ಪುವುದಾದರೆ ತಾನು ಅವಳನ್ನು ಮದುವೆಯಾಗುವೆನೆಂದ. ಅವಳು ಒಪ್ಪಿದಳು.

ಸ್ಟುಡಿಯೋ ಕಂ ಡಾರ್ಕ್ ರೂಮ್ ಆಗಿ ಅವಳು ಬಳಸುತ್ತಿದ್ದ ಮೇಲಿನ ರೂಮಿಗೆ ಅವಳು ತನ್ನ ವಯಸ್ಸಿನ ಅರ್ಧಕ್ಕಿಂತ ಕಮ್ಮಿ ಪ್ರಾಯದ ಜರಾನನ್ನು ಆಹ್ವಾನಿಸಿದಾಗ ಅವನು ಆಗಷ್ಟೇ ಹದಿಹರಯಕ್ಕೆ ವಿದಾಯ ಹೇಳುವವನಿದ್ದ. ಅದೊಂದು ಹದವಾಗಿ ಬೆಚ್ಚಗಿದ್ದ ಬೇಸಗೆಯ ರಾತ್ರಿ. ಮಣಿಕರ್ಣಿಕಾ ಘಾಟ್ನಲ್ಲಿ ಸುಡುತ್ತಿದ್ದ ದೇಹಗಳ ದೇಖರೇಕಿ ಮಾಡುತ್ತಿದ್ದ ಅವನು. ಕಟ್ಟಿಗೆ ರಾಶಿಯನ್ನು, ಗಂಗೆಯಲ್ಲಿ ವಿಸರ್ಜಿಸುವುದಕ್ಕಾಗಿ ತೆಗೆದಿರಿಸಿದ ಚಿತಾಭಸ್ಮವಿದ್ದ ಕುಡಿಕೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಿತ್ತು ಅವನು. ಹಾಗೆಯೇ ಶವಸಂಸ್ಕಾರದ ಫೋಟೋ ತೆಗೆಯದ ಹಾಗೆಯೂ ನೋಡಿಕೊಳ್ಳಬೇಕಿತ್ತು. ಸಂಸ್ಕಾರದ ವೀಡಿಯೋ ಫಿಲ್ಮ್ ಸೆರೆಹಿಡಿಯಲು ಕಾಯುವ, ಸದಾ ಕ್ಯಾಮರಾ ಸಿದ್ಧವಾಗಿಟ್ಟುಕೊಂಡು ಕಾಯುತ್ತಿದ್ದ ವಿದೇಶೀ ಪ್ರವಾಸಿಗರೂ ಸೇರಿದಂತೆ ಸಂದರ್ಶಕರು ಇದ್ದೇ ಇರುತ್ತಿದ್ದರು. ತಾನು ತೆಗೆದ ಫೋಟೋಗಳನ್ನು ಅವನಿಗೆ ತೋರಿಸಲು, ಅವನಿಗೆ ಫೋಟೋಗ್ರಫಿ ಹೇಳಿಕೊಡಲು ಮತ್ತು ಕಾಮದ ಅನೂಹ್ಯ ಜಗತ್ತಿಗೆ ಅವನನ್ನು ಸೆಳೆದೊಯ್ಯಲು ಬಿಟಿಯಾ ತಹತಹಿಸುತ್ತಿದ್ದಳು. ಆ ರಾತ್ರಿ ಎಲ್ಲೆಲ್ಲೂ ಪರಾಪರ ಕ್ರಿಯಾವಿಧಿಗಳ ವೈರುಧ್ಯಮಯ ಮಂತ್ರಪಠಣದ ಘಂಟಾಘೋಷ ತುಂಬಿತ್ತು. ಆದರೆ ಆ ಪಾವಿತ್ರ್ಯದ ಸಾಂಕ್ರಾಮಿಕ ಕ್ರಿಮಿಕೀಟಗಳೊಂದೂ ಸೋಕದಂತೆ, ನಿಷ್ಕಲ್ಮಶವಾದ ಭಾವಶುದ್ಧಿಯಿಂದ,ಕಟ್ಟಿಗೆಯ ರಾಶಿಯ ಹಿಂದಿನಿಂದ ಕಿವಿಯಲ್ಲಿ ಪಿಸುಗುಟ್ಟಿದಂತೆ ಬಂದ ಬಿಟಿಯಾಳ ಆಹ್ವಾನ ಜರಾನನ್ನು ಗಂಡಸಾಗುವ ಹಾದಿಯಲ್ಲಿ ಮುನ್ನಡೆಸಿತ್ತು.

ಬೀದಿ ದೀಪಗಳ ಮಂದ ಬೆಳಕು ಕೋಣೆಯಲ್ಲಿ ಹೌದೋ ಅಲ್ಲವೋ ಎಂಬಷ್ಟು ಪಸರಿಸಿತ್ತು. ಕೈಗೆಟಕುವ ಸಾಧ್ಯತೆ ಹೊಂದಿದ್ದ ಒಂದು ಕನಸಿನಂತೆ ಬಿಟಿಯಾ ಜರಾನ ದೇಹವನ್ನು ತಡಕಿದ್ದಳು. ಕಣಕಣದಲ್ಲೂ ಉಕ್ಕಿ ಹರಿಯುತ್ತಿದ್ದ ಅಮೂರ್ತವಾದೊಂದು ಉನ್ಮಾದದೊಂದಿಗೆ ಅವಳು ಅವನನ್ನು ಆವರಿಸಿದ್ದಳು. ನಂತರ ಅವಳು ಅವನಿಗೆ ತಾನು ಬನಾರಸ್ಸಿನಲ್ಲಿ ತೆಗೆದ ಫೋಟೋಗಳ ರಾಶಿಯನ್ನೇ ತೋರಿಸಿದಳು. ಹೆಚ್ಚಿನವು ಅಂತ್ಯಸಂಸ್ಕಾರದ ಚಿತ್ರಗಳೇ. ಬಹಳಷ್ಟು ಚಿತ್ರಗಳಲ್ಲಿ ತಾನಿದ್ದುದು ಅವನಿಗೆ ಮುದನೀಡಿತ್ತು. ಅರುಣೋದಯಕ್ಕೆ ಮುನ್ನ ಅವನು ತನ್ನ ಶವಗಳಿಗೆ ವಾಪಾಸಾದ. ಕಣ್ಣುಗಳಲ್ಲಿ ಬಿಟಿಯಾಳ ಚಿತ್ರ ಸಿಕ್ಕಿಹಾಕಿಕೊಂಡಿತು. ಅವಳ ನೀಳ ಕೇಶರಾಶಿಯ ಸುವಾಸನೆಯಲ್ಲಿ ಅವನು ಕರಗಿ ಹೋಗಿದ್ದ.

ಸಾಧ್ಯವಿದ್ದ ಮಟ್ಟಿಗೆ ಬಿಟಿಯಾ ಬಿಸಿಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದಳು. ಬೆಳಕು ಕಣ್ಣಿಗೆ ರಾಚಿದರೆ ತನಗೆ ತಲೆ ಸಿಡಿಯುತ್ತದೆ ಎನ್ನುತ್ತಿದ್ದಳು. ಅಲ್ಲಲ್ಲಿ ಚದುರಿದಂತೆ ಚೆಲ್ಲಿದ ಬಿಸಿಲ ಹಂದರದ ಕೆಳಗಿನ ಒಂದು ನೆರಳಿನ ತಾವಿಂದ ಇನ್ನೊಂದಕ್ಕೆ ಚಲನೆಯೇ ಕಾಣದ ತೆರದಲ್ಲಿ ನವಿರಾದ ನಡಿಗೆಯಲ್ಲೇ ಸರಿಯುತ್ತ ಮಿಂಚಿನಂತೆ ಸುಳಿಯುತ್ತಿದ್ದ ಬಿಟಿಯಾ ಎಲ್ಲಿಯೂ ತನ್ನ ನೆರಳು ಕೂಡ ಬೀಳಗೊಡುತ್ತಿರಲಿಲ್ಲ. ಹಗಲಲ್ಲಿ ಅವಳನ್ನು ಹಿಡಿಯುವುದೇ ಸಾಧ್ಯವಿರಲಿಲ್ಲ. ಅವಳು ಸದಾ ಇನ್ನೆಲ್ಲೋ ಇರುತ್ತಿದ್ದಳು. ಹಾಗಿದ್ದೂ ಜನ ಅವಳನ್ನು ತಮ್ಮವಳೆಂದು ಸ್ವೀಕರಿಸಿದ್ದರು. ಅವಳು ಎಲ್ಲೂ ಕಣ್ಣಿಗೆ ಬೀಳದಿದ್ದಾಗಲೂ ಅವಳನ್ನು ಎಲ್ಲೋ ಕಂಡೆವೆಂದು ಹೇಳುವವರು ಇದ್ದೇ ಇರುತ್ತಿದ್ದರು. ಮಡಿವಾಳರು ಬಟ್ಟೆ ಒಗೆಯುವ ಧೋಬೀಘಾಟ್ನಲ್ಲಿ ಕಂಡೆವೆನ್ನುವವರು, ದೀಪಕ್ಕೆ ಬತ್ತಿ ಹೊಸೆಯುತ್ತ ಗಣೇಶ ಮಂದಿರದ ಪ್ರಾಂಗಣದಲ್ಲಿದ್ದಳೆನ್ನುವರು, ನೀಲಮೇಘಶ್ಯಾಮನ ಭಜನೆ ಮಾಡುತ್ತ ಹೆಂಗಸರ ಗುಂಪಿನಲ್ಲಿದ್ದಳೆನ್ನುವರು. ಅವಳು ಶಾಸ್ತ್ರಿಯ ಮನೆಗೆ ಕಾಲಿಟ್ಟ ಮೇಲೆ ಮನೆಯಲ್ಲಿದ್ದ ಎಲ್ಲಾ ಕನ್ನಡಿಗಳು ಮಾಯವಾದವು. ಒಮ್ಮೆ, ಮಳೆ ನಿಂತು ಹೋದಮೇಲೆ ಮನೆಯಂಗಳದ ಹೂಗಿಡಗಳ ನಡುವೆ ಎಲ್ಲೋ ನಿಂತ ನೀರಲ್ಲಿ ಡಿಸೀಲ್ ಬಿದ್ದು ಉಂಟಾದ ಸಪ್ತವರ್ಣದ ಕಾಮನಬಿಲ್ಲು ತೋರಿಸಲೆಂದು ಶಾಸ್ತ್ರಿ ಇವಳನ್ನು ಕೂಗಿದ್ದ. ನೀರಿನಲ್ಲಿ ಅವನ ಮುಖದ ಪಕ್ಕ ಇವಳ ಮುಖವೂ ಪ್ರತಿಫಲಿಸಿದ ಕ್ಷಣವೇ ಬೆರಳು ಅದ್ದಿ ನೀರನ್ನು ಕಲಕಿದ್ದಳು ಅವಳು. ಮತ್ತೆ ನೀರಲ್ಲಿ ಚೂರಾದ ಬಿಂಬ ಒಂದಾಗಿ ಕೂಡಿ ಶಾಸ್ತ್ರಿಯ ಮುಖ ಮೂಡಿದಾಗಲೇ ಪಕ್ಕದಲ್ಲಿ ಇವಳಿಲ್ಲದಿರುವುದು ಅವನಿಗೆ ಗೊತ್ತಾಗಿದ್ದು. ಅವಳ ಮಟ್ಟಿಗೆ ಅದು ಕೇವಲ ಪ್ರತಿಫಲನದ ಕ್ರಿಯೆಯಷ್ಟೇ ಆಗಿತ್ತು. ಏಕೆಂದರೆ, ಶಾಸ್ತ್ರಿಗೆ ಆ ಹೊತ್ತಿಗಾಗಲೇ ಗೊತ್ತಾಗಿತ್ತು, ಅವಳೊಂದು ಪ್ರೇತವಾಗಿದ್ದಳು. ಅವನು ಪ್ರೀತಿಸಿದ ಪ್ರೇತ.

ಬಿಟಿಯಾಗೆ ಬನಾರಸ್ ಹುಚ್ಚು ಹಿಡಿಸಿತ್ತು. ಅವಳು ಜರಾಗೆ ಫೋಟೋಗ್ರಫಿಯ ಎಬಿಸಿಡಿ ಕಲಿಸಿಕೊಟ್ಟಳು, ಹೆಚ್ಚು ಮಾತುಗಳನ್ನು ವ್ಯಯಿಸದೆ. ಸಾಮಾನ್ಯವಾಗಿ ಅವಳು ಜರಾ ಬಳಿ ಮಾತೇ ಆಡುತ್ತಿರಲಿಲ್ಲ, ಮೌನವಾಗಿಯೇ ಇರುತ್ತಿದ್ದಳು. ಆದರೆ ಅದೇ ಶಾಸ್ತ್ರಿಯ ಜೊತೆಗಿದ್ದಾಗ ಕೊನೆಮೊದಲಿಲ್ಲದಂತೆ ಮಾತನಾಡುತ್ತಲೇ ಇರುತ್ತಿದ್ದಳು, ರಾತ್ರಿಯಿಡೀ. ಸದಾ ಬನಾರಸ್ ಕುರಿತೇ. ಶಾಸ್ತ್ರಿಗೆ ಅವಳಾಗಲೀ ಅವಳ ಮಾತುಗಳಾಗಲೀ ಯಾವತ್ತೂ ಪೂರ್ತಿಯಾಗಿ ದಕ್ಕುತ್ತಿರಲಿಲ್ಲ. ಶಾಸ್ತ್ರಿಗೆ ಚೆನ್ನಾಗಿಯೇ ಅರಿವಿತ್ತು, ತನಗೆ ಅವಳ ಚಿಕ್ಕದೊಂದು ಭಾಗವಷ್ಟೇ ಸಲ್ಲಬಹುದಾದ್ದು ಎಂಬ ಸತ್ಯ. ಈಗ, ಈ ಸದ್ಯದ ಕ್ಷಣದಲ್ಲೂ ಅವಳು ಪೂರ್ತಿಯಾಗಿ ಇಲ್ಲಿಲ್ಲ, ಇನ್ನೆಲ್ಲೋ ಇದ್ದಾಳೆ, ತನ್ನ ಮನುಷ್ಯ ಮಿತಿಯ ಎಟುಕಿಗೆ ಸಿಗಲಾರದಂತೆ ಅವಳು ಅವಳ ಹಲವು ಹತ್ತು ಜೀವರಾಶಿಗಳೊಂದಿಗೆ ಆಳವಾಗಿ ಬೇರೂರಿಕೊಂಡೇ ಇರುವವಳು ಎನ್ನುವ ಸತ್ಯ. ಗೊತ್ತಿದ್ದೂ ಅವನು ಅವಳನ್ನು ಆರಾಧಿಸುತ್ತಿದ್ದ.

ಒಮ್ಮೆ ಅವನು ಅವಳ ಬಳಿ ಕೇಳಿದ್ದ, "ಆದರೆ ಬನಾರಸ್ಸೇ ಯಾಕೆ? ಭಿಕ್ಷುಕರಿಂದ ತುಂಬಿ ತುಳುಕುವ ಈ ನಗರ! ಅದೇನು ನಿನ್ನನ್ನು ಇಷ್ಟೊಂದು ಕಚ್ಚಿ ಹಿಡಿದಿರೋದು ಇಲ್ಲಿ?"

"ಈ ನಗರ, ನನ್ನ ಹಾಗೇ, ಯಾವತ್ತೂ ನಿದ್ರಿಸಲಾರದು. ಬನಾರಸ್ಸಿನಲ್ಲಿ ನಾನೇನು ಕಾಣುತ್ತಿರುವೆನೊ ಅದು ನನ್ನ ಕಣ್ಣೆದುರೇ ನಡೆದ ವಿಕಾಸ. ಹಾಗಾಗಿ ಅದು ನನ್ನ ಹೆಚ್ಚೆಚ್ಚು ಮೆದುವಾಗಿಸಿದೆ. ಹಾಗಾಗಿ ಈ ಕರುಣೆಯ ಕಡಲಿನಂಥ ಸ್ಥಳವನ್ನು ನಾನು ಆರಾಧಿಸುತ್ತ ಬಂದಿದ್ದೇನೆ."

ಈ ಕೆಲವು ವರ್ಷಗಳಲ್ಲಿ ಜರಾ ಸ್ವತಃ ಬಿಟಿಯಾಳ ಎಷ್ಟೋ ಫೋಟೋಗಳನ್ನು ತೆಗೆದಿದ್ದಾನೆ. ಆದರೆ ಒಂದರಲ್ಲಾದರೂ ಅವಳು ಇಲ್ಲ. ನೆರಳು, ಛಾಯೆ, ಚೌಕಟ್ಟಿನಂಥ ರೇಖೆ......ಒಂದೂ ಇಲ್ಲ. ಸರಳವಾಗಿ ಏನೂ ಇರಲಿಲ್ಲ ಅಲ್ಲಿ ಅಷ್ಟೆ. ಫೋಟೋಗಳಲ್ಲಿ ಅವಳ ಗೈರುಹಾಜರಿ ಸಂಪೂರ್ಣ, ಪರಿಪೂರ್ಣ.

ಯಾವುದೇ ಒಂದು ನಿರ್ದಿಷ್ಟ ಕಾಲದಲ್ಲಿ ಬಿಟಿಯಾ ಯಾವುದಾದರೂ ಒಂದೇ ಸ್ಥಳದಲ್ಲಿ ಇದ್ದಳು ಎನ್ನುವಂತಿರಲಿಲ್ಲ. ಜರಾನೊಂದಿಗೆ ಪ್ರೇಮ ಮಾಡುತ್ತ ಇದ್ದಾಗಲೇ, ಅವಳು ಕುಷ್ಠರೋಗಿಗಳ ಕಾಲನಿಯಲ್ಲಿ, ಕೀವು ತುಂಬಿಕೊಂಡು ಬ್ಯಾಂಡೇಜಿನಲ್ಲಿ ಸುತ್ತಲ್ಪಟ್ಟ ಯಾರನ್ನೋ ತಬ್ಬಿ ಸಂತೈಸುತ್ತಲೂ ಇರುತ್ತಿದ್ದಳು. ಅದೇ ಹೊತ್ತಿಗೆ ಅವಳು ಶಾಸ್ತ್ರಿಯ ಬೆಡ್ರೂಮಿನಲ್ಲಿ ಅವನ ಹುಟ್ಟೂರಿನ ಬಗ್ಗೆ ಅವನಿಗೇ ವಿವರ ವಿವರವಾಗಿ ಹೇಳುತ್ತ ಕೂತಿರುತ್ತಿದ್ದಳು. "ಚಪ್ಪಲಿಯ ಬಾರು ಕಿತ್ತು ಹೋಗಿತ್ತಲ್ಲ. ಅದಕ್ಕೊಂದು ಕಟ್ಟು ಹಾಕಿಸುತ್ತಾ ನಿಂತಿದ್ದೆ." ಎನ್ನುತ್ತಿದ್ದಳವಳು. " ಆ ಮೋಚಿ ಯಾರೋ ವಿದೇಶೀ ಪ್ರವಾಸಿಗೆ ಈ ಬನಾರಸ್ಸಿನ ಆಳದ ಸೂಕ್ಷ್ಮಾತಿಸೂಕ್ಷ್ಮ ಸಂಕೀರ್ಣತೆಯನ್ನೆಲ್ಲ ವಿವರಿಸುತ್ತಿದ್ದ. ಬನಾರಸ್ ಎಂದರೆ ಬರೀ ಮಾಯೆ. ಮಾಯೆಯ ಹೊರತು ಇನ್ನೇನೂ ಇಲ್ಲ. ಇದೊಂದು ವಿಭ್ರಾಂತಿ. ಕೆಲವರು ಹೇಳುವ ಪ್ರಕಾರ ಇದು ಬರೀ ಹೊಗೆ, ಕನ್ನಡಿಗಳು ಮತ್ತು ಮೂಲ ತಿಳಿಯಲಾರದ ಬೆಳಕಿನ ನಗರ. ಇನ್ನೂ ಕೆಲವರ ಪ್ರಕಾರ ಇದು ನೆನಪುಗಳ, ಕನಸುಗಳ, ಭರವಸೆಗಳ ಮತ್ತು ಆತಂಕಗಳ ನಗರ. ಆದರೆ ಆ ಪ್ರವಾಸಿ ಇವನೇನು ಗಳಹುತ್ತಲೇ ಇದ್ದನೊ ಅದರತ್ತ ಕಿವಿಗೊಡಲೇ ಇಲ್ಲ. ಅವನು ಆ ಪವಿತ್ರ ಗಂಗೆಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಒಂದು ಸುಟ್ಟು ಕರಕಲಾದ ದೇಹದ ಮೇಲೆ ಕುಳಿತ ಪುಟ್ಟ ಹಕ್ಕಿ ನೀರಿನ ವೇಗಕ್ಕೆ ಅತಂತ್ರಗೊಂಡು ಬೀಳುವಂತಾಗಿದ್ದನ್ನೇ ಬೊಟ್ಟುಮಾಡಿ ತೋರಿಸುತ್ತ ಇದ್ದ....."

ಮತ್ತೆ ಕ್ಷಣಕೂಡ ನಿಲ್ಲಿಸದೆ ಮುಂದುವರಿಸುತ್ತಾಳೆ. "ಪೈಲ್ವಾನರ ಗಲ್ಲಿಗೂ ಮಡಿವಾಳರ ಕೇರಿಗೂ ನಡುವೆ ಒಂದು ಹೊಸದೇ ದೇವರ ಗುಡಿಯ ಪ್ರತಿಷ್ಠಾಪನೆ ನಡೀತ ಇತ್ತು..." ಹೀಗೆಯೇ ಸಾಗುತ್ತದೆ ಅದು, ಬನಾರಸ್ ಕುರಿತ ವರದಿ.

ಶಾಸ್ತ್ರಿಯ ಜೊತೆ ಅಡೆತಡೆಯಿಲ್ಲದ ಅವಳ ಈ ವಟವಟ ಸಾಗುತ್ತಿರುವಾಗಲೇ ಅವಳ ಆ ನೀಳಕೇಶರಾಶಿಯ ಮೃದುವಾದ ತುದಿಯಿಂದ ಜರಾಗೆ ಒಂದೆರಡು ಬಾರಿ ಜಾಡಿಸಿದ ಏಟೂ ಬೀಳುವುದಿತ್ತು. ಅದೇ ಹೊತ್ತಿಗೆ ಅವಳು ಕತ್ತಲು ಕವಿದ ಮೇಲಷ್ಟೇ ಜೀವಕಳೆ ತುಂಬಿಕೊಳ್ಳುವ ರೆಡ್ಲೈಟ್ ಗಲ್ಲಿಯ ಯಾವುದೋ ಸಂದಿಗೊಂದಿಯಲ್ಲೂ ಸುತ್ತಾಡುತ್ತ ಇರುತ್ತಿದ್ದಳು. ಯಾರಿಗೆ ತುರ್ತಾಗಿ ಅವಳ ಅಗತ್ಯ ಬಿದ್ದಿದೆಯೋ ಅವರೊಂದಿಗೆಲ್ಲ ಅವಳು ಏಕಕಾಲಕ್ಕೆ ತಪ್ಪದೇ ಇದ್ದೇ ಇರುತ್ತಿದ್ದಳು. ಒಂದು ರಾತ್ರಿ, ಭಾರೀ ಮಳೆ ಸುರಿದು ನಿಂತ ನಂತರ ನದಿಯ ಮೇಲಿಂದ ತಣ್ಣಗಿನ ಗಾಳಿಯೊಂದು ಬೀಸಿತು. ಆಗ ಗಂಧದ್ವಾರೇ ಧರಾದರ್ಶೇ ಎಂಬಂತೆ ಈ ಬನಾರಸ್ಸಿನ ಗುಣಲಕ್ಷಣವೇ ಆದ ಮೃಣ್ಮಯೀ ಸುವಾಸನೆ ಮತ್ತು ಕಾಮದ ಖಮ್ಮೆನ್ನುವ ಲಹರಿ ಅಲ್ಲೆಲ್ಲ ತುಂಬಿಕೊಂಡಿತು. ನಿತ್ರಾಣದಿಂದ ಕಾಲೆಳೆದುಕೊಂಡು ಬರುವ ನಿಶ್ಶಕ್ತಿ ತನ್ನನ್ನು ಆವರಿಸುವುದನ್ನು ತಪ್ಪಿಸಿಕೊಳ್ಳಲು ಬಯಸಿದ ಬಿಟಿಯಾಳ ಮೇಲೆ ಒಬ್ಬ ಕುಡುಕ ಎಗರಿದ. ಎಲ್ಲೋ ಕತ್ತಲಿನಿಂದ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾದ ಆತ ಅವಳ ರಟ್ಟೆಗೆ ಕೈ ಹಾಕಿ ಕೆಡವಿದ. ಒದ್ದೆಯಾಗಿ ವಾಸನೆ ಬರುವ ಗೋಣೀಚೀಲ ಹಾಸಿತ್ತು, ಎಲ್ಲೆಲ್ಲೂ ಉಗಿದ ಪಾನ್ನ ಘಾಟು ತುಂಬಿದ ಮೆಟ್ಟಿಲು, ಜೇಡರ ಬಲೆ ಧಾರಾಳವಾಗಿದ್ದ ಒಂದು ಕತ್ತಲ ಮೂಲೆಯದು. ಅವನು ಮಿತಿಮೀರಿ ಡ್ರಗ್ಸ್ ತೆಗೆದುಕೊಂಡಿದ್ದ. ಅವನು ತನ್ನದೇ ನಿಯಂತ್ರಣದಲ್ಲಿಲ್ಲದ ತೋಳುಗಳಲ್ಲಿ ಅವಳನ್ನು ಎಳೆದಾಡಿ ಎದ್ದೇಳಲು ಪ್ರಯತ್ನಿಸಿದರೆ ಕತ್ತು ಕತ್ತರಿಸಿ ಬಿಡುವುದಾಗಿ ಬೆದರಿಕೆ ಹಾಕಿದ. ಅವಳು ಅವನನ್ನು ಸಮಾಧಾನಿಸಿ ಅವನ ಕೈಲಿದ್ದ ರೇಜರ್ ಬ್ಲೇಡನ್ನು ಅತ್ತ ಎಸೆಯುವಂತೆ ಮಾಡಿದಳು. ದಾಹ ದಾಹ ಎನ್ನುವ ಶಬ್ದ, ಅದೊಂದು ಮಂತ್ರವೋ, ಪ್ರಾರ್ಥನೆಯೋ ಎಂಬಂತೆ ಬಡಬಡಿಸುತ್ತಲೇ ಇದ್ದ ಅವನು. ಅವಳು ಅವನನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅವನ ಅತಂತ್ರ ತುಟಿಗಳನ್ನು ಹೊಂದಿಸಿ ತನ್ನ ನಗ್ನ ಮೊಲೆಗಳಿಗೆ ಒತ್ತಿಕೊಂಡಳು. ಅವನ ಸಾವು ಸಮೀಪಿಸಿತ್ತು. ಅವಳು ಮೊಲೆಯೂಡಿಸುತ್ತಿದ್ದಳು. ಬಿಟಿಯಾ ಮಾತೃತ್ವದ ಕಳೆಹೊತ್ತು ತಿರುಚಿಕೊಂಡಿದ್ದ ಅವನ ದೇಹವನ್ನು ಮಗುವಿನಂತೆ ಸಂಭಾಳಿಸುತ್ತ ಕುಳಿತಿದ್ದಳು, ಅವನ ದೇಹ ತಣ್ಣಗಾಗಿ ಅದೆಷ್ಟೋ ಹೊತ್ತು ಕಳೆದಿದ್ದರೂ. ರಾತ್ರಿ ಕಳೆದು ಬೆಳಕು ಹರಿಯುವವರೆಗೂ ಅವಳು ಹಾಗೆ ಅವನೊಂದಿಗೇ ಉಳಿದಳು. ನಕ್ಷತ್ರಗಳು ತುಂಬಿದ್ದ ಚಳಿಗಾಲದ ಒಂದಿರುಳು ಬಾಲವೇಶ್ಯೆಯರ ಲಾಡ್ಜ್ ಕಡೆ ಅವಳು ಸಾಗುತ್ತಿದ್ದಾಗ ವನಸ್ಪತಿಗಳನ್ನು ಮಾರಿಕೊಂಡಿದ್ದ ಅರೆಹುಚ್ಚನಂತಿದ್ದ ಬೀದಿವ್ಯಾಪಾರಿಯೊಬ್ಬ ಅವಳನ್ನು ತಡಕಿದ. ಡ್ರೈನೇಜಿನ ಸೆಪ್ಟಿಕ್ ಟ್ಯಾಂಕ್ ಪಕ್ಕದಲ್ಲೇ ಇದ್ದ ಯಾರೂ ಬಳಸದ ಮೆಟ್ಟಿಲುಗಳ ದಾರಿಯಲ್ಲಿ ನಡೆ ಎಂದ. ಅವನು ಮಾನಸಿಕವಾಗಿ ಎಂಥಾ ಹಿಂಸೆಯನ್ನು ಅನುಭವಿಸಿದ್ದನೆಂದರೆ ಬಿಟಿಯಾ ಆದದ್ದಾಗಲಿ ಎಂದು ಮರುಮಾತನಾಡದೆ ಅವನು ತೋರಿಸಿದ ಹಾದಿಯಲ್ಲಿ ಹೆಜ್ಜೆ ಹಾಕಿದಳು. ಆ ಜಾಗದಲ್ಲೆಲ್ಲ ಅಸಾಧ್ಯ ನಾತ ತುಂಬಿತ್ತು. ಅವನು ಅವಳ ಮೇಲೆ ಬಲತ್ಕಾರದಿಂದಲೇ ಯಾವುದೋ ವಾಮಮಾರ್ಗದ ಆಚರಣೆ ನಡೆಸಲು ಹೆಣಗುತ್ತಿದ್ದ. ಕೈಯಲ್ಲಿದ್ದ ಪುಟ್ಟ ಚಾಪುಗೊಡಲಿಯಿಂದ ಅವಳ ತಲೆಕಡಿದು ಬಲಿ ನೀಡುವ ಸಿದ್ಧತೆಯಲ್ಲಿ ಇದ್ದಂತಿತ್ತು ಅವನು. ಆದರೆ ಇದ್ದಕ್ಕಿದ್ದ ಹಾಗೆ ಕೈಸೋತು, ಇವಳೇ ಎದ್ದು ಅವನನ್ನು ಕಾಪಾಡುವುದಕ್ಕೂ ಮೊದಲೇ ಸತ್ತ ಮರದ ಬಿಳಲನ್ನೆ ಉರುಳು ಹಾಕಿಕೊಂಡು ಸತ್ತಿದ್ದ.

ಯಾವ ರಾತ್ರಿಯ ಬದುಕು ಅವಳನ್ನು ಮುನ್ನಡೆಸಿತ್ತೋ ಅದೇ ಬದುಕನ್ನು ತಾನು ಮುನ್ನಡೆಸುತ್ತ ಬಂದವಳಿಗೆ ಅಪಾಯ ತಪ್ಪಿದ್ದಲ್ಲ ಎನ್ನುವುದು ಗೊತ್ತಿದ್ದ ವಿಷಯವೇ. ಯಾರನ್ನು ಅವರ ಕಷ್ಟಕಾಲದಲ್ಲಿ ಅವಳು ಪೊರೆದಿದ್ದಳೋ ಅದೇ ಮಂದಿ ಅವಳನ್ನು ಹೊಡೆಯುವುದು, ಅಮಲು ಪದಾರ್ಥ ತಿನ್ನಿಸುವುದು, ಅತ್ಯಾಚಾರ ನಡೆಸುವುದು, ಲೈಂಗಿಕ ಹಿಂಸೆ ಕೊಡುವುದು ಮಾಡಲು ಹೇಸುತ್ತಿರಲಿಲ್ಲ. ಆದರೆ ಈ ಯಾವ ಘಟನೆಗಳೂ ಅವಳ ಮೇಲೆ ಕಿಂಚಿತ್ತೂ ಕಲೆ, ಕಳಂಕ ಉಳಿಸಲಿಲ್ಲ. ಹೆಚ್ಚು ಹೆಚ್ಚು ಪೆಟ್ಟು ಬಿದ್ದಂತೆಲ್ಲ ಅವಳು ಹೆಚ್ಚು ಹೆಚ್ಚು ಕಳೆಕಳೆಯಾಗಿ ಕಾಣುತ್ತಿದ್ದಳು. ವರ್ಷಗಳು ಕಳೆದಂತೆಲ್ಲ ಅವಳು ಯೌವನದಿಂದ ಮೈತುಂಬಿಕೊಂಡು ನವಯುವತಿಯಂತೆ ನಳನಳಿಸುತ್ತಿದ್ದಳು. ದಿನದಿಂದ ದಿನಕ್ಕೆ ಅವಳು ಪುಟಕ್ಕಿಟ್ಟ ಚಿನ್ನದಂತೆ, ತೇಜಸ್ಸಿನಿಂದ ಕಂಗೊಳಿಸುವ ಸಂತನಂತೆ ಬೆಳಗುತ್ತ ಅವಳ ಸೌಂದರ್ಯ ಇಮ್ಮಡಿಸುತ್ತಲೇ ಹೋಯಿತು. ಪಿತೃಲೋಕದ ನಿಷ್ಠಾವಂತ ಅನುಯಾಯಿಗಳ ಅಗ್ರಹಾರದಲ್ಲಿ ಆಗಲೇ ಹೊಸ ಅವತಾರವೊಂದರ ಪುನರಾಗಮನಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ಗುಸುಗುಸು ಹಬ್ಬಿತ್ತು. ಕಾಲಾತೀತವಾದ ಆ ಮರಣ ಮತ್ತು ಮೋಹಗಳ ನಗರದ ಪೇಟೆ ಬೀದಿಗಳ ತುಂಬೆಲ್ಲ ತುಂಬಿದ ವದಂತಿಗಳ ಮತ್ತು ಜನಜಂಗುಳಿಯ ನಡುವಿಂದ ಬಿಟಿಯಾ, ಪ್ರೇತಾತ್ಮ, ಮೆಲ್ಲನೆ ಸರಿದು ಹೋಯಿತು.

ರಾತ್ರಿ ಇನ್ನೇನು ಮುಗಿಯಲಿತ್ತು. ಅದು ಯಾವತ್ತಿನಂಥದೇ ಇನ್ನೊಂದು ರಾತ್ರಿ. ಬಿಟಿಯಾ ತನ್ನ ಎಂದಿನ ಸುತ್ತಾಟ ಮುಗಿಸಿ ಯಾವತ್ತೂ ನಿದ್ದೆ ಹೋಗದ ನಗರದ ವಿಭಿನ್ನ ತಾಣಗಳಿಂದೆದ್ದು ಬಂದು ತನ್ನದೇ ಲಹರಿಯಲ್ಲಿ, ತನ್ನದೇ ಲೋಕದಲ್ಲಿ ಒಬ್ಬಳೇ ಮನೆಗೆ ಮರಳುತ್ತಾ ಇದ್ದಳು. ರಾತ್ರಿಯ ಕೊನೆಯ ಜಾವದ ಕತ್ತಲೆ ಕಳೆದು, ಅರುಣೋದಯದ ಮೊದಲ ಜಾವದ ಬೆಳಕು ಹರಿಯೆ ಹವಣಿಸುತ್ತಿದ್ದ ಕಾಲ. ಪೂರ್ವದ ಆಗಸದಲ್ಲಿ ಆಗಲೇ ಬೆಳ್ಳಿ ಮೂಡಿ ಅದರ ಪ್ರಥಮ ವಜ್ರಕಿರಣಗಳು ಭುವಿಯನ್ನು ತಲುಪಲು ಮುನ್ನುಗ್ಗುತ್ತಿದ್ದವು. ಅದೇ ಕ್ಷಣದಲ್ಲಿ ಬಿಟಿಯಾ ಬನಾರಸ್ ನಗರಕ್ಕೆ ಬೆನ್ನು ಹಾಕಿ ಶಾಶ್ವತವಾಗಿ, ಅದು ಹೇಗೆ ಬಂದಳೋ ಹಾಗೆಯೇ ಕಣ್ಮರೆಯಾಗಿ ಹೋದಳು. ಅವಳು ಬಿಟ್ಟು ಹೋದ ತೇಜೋಃಪುಂಜದ ಸುತ್ತ ಬಿಟಿಯಾ ದೇವಿಯ ಆರಾಧಕರು ಕಾಣಿಸಿಕೊಂಡರು. ಉಪಖಂಡದ ಮಾತೃಕೆಗಳಲ್ಲಿ ತೀರ ಈಚಿನವಳು ಕೊನೆಗೂ ಕಾಣಿಸಿಕೊಂಡಿದ್ದಳು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, July 5, 2017

ಹಳಿಗಳ ನಡುವೆ ಚಡಿಯಿಡಬಾರದು

ಅಶೋಕ್ ಶ್ರೀನಿವಾಸನ್ ಅವರ "ಬುಕ್ ಆಫ್ ಕಾಮನ್ ಸೈನ್ಸ್" ಕಥಾ ಸಂಕಲನದ ಮೊದಲ ಕತೆ Not to Be Loose Shunted ಕತೆಯ ಪೂರ್ಣಪಾಠ. ನನ್ನ ಕೈಲಾದ ಮಟ್ಟಿಗೆ ಇದನ್ನು ಅನುವಾದಿಸಿದ್ದೇನೆ, ಒಪ್ಪಿಸಿಕೊಳ್ಳುವುದು.

ಈ ಕತೆಯ ಬಗ್ಗೆ ಮೊದಲೇ ಎರಡು ಮಾತು ಹೇಳುವುದಾದರೆ ಇಲ್ಲಿರುವುದು ಒಂದು ಭಾವಗೀತೆಯೇ ಹೊರತು ಕಥಾನಕವಲ್ಲ. ರೈಲು, ಹಳಿಗಳು, ಪ್ರಯಾಣ, ವಿವಿಧ ನಿಲ್ದಾಣಗಳು, ಜಂಕ್ಷನ್ನುಗಳು, ಗೊತ್ತುಗುರಿಯಿಲ್ಲ ಎನಿಸಿಬಿಡುವ ನಿರಂತರ ಪ್ರಯಾಣದ ಜಂಜಾಟ ಮತ್ತು ಅಂಥ ಒಂದು ಬದುಕಿನ ಕುರಿತ ಭ್ರಮೆ-ವಾಸ್ತವದ ನಡುವೆ ನಲುಗುವ ದೈನಂದಿನದ ಸಣ್ಣಪುಟ್ಟ ಆಸೆ-ಆಕಾಂಕ್ಷೆಗಳು, ಹಣ ಮತ್ತು ಮೌಲ್ಯ, ಮನುಷ್ಯ ಸಂಬಂಧ ಮತ್ತು ಅವುಗಳ ಕುರಿತ ನೆನಪುಗಳು, ಸಂಬಂಧಾತೀತ ಸಂಬಂಧಗಳು. ಇವನ್ನೆಲ್ಲ ಈ ನಿರೂಪಣೆ ಸ್ಪರ್ಶಿಸುತ್ತದೆ, ತನ್ನದೇ ಬಗೆಯಲ್ಲಿ. ಈ ಸ್ಪರ್ಶ ನಿಮ್ಮಲ್ಲಿ ಹುಟ್ಟಿಸುವ ಸಂವೇದನೆ, ಹುಟ್ಟಿದರೆ ಇದು ಕತೆಯಾಗುತ್ತದೆ, ನಿಮ್ಮ ನಿಮ್ಮ ಮನಸ್ಸಿನ ಸೂಕ್ಷ್ಮ ಒಳಪದರಗಳಲ್ಲಿ.

=========================================
ನನಗೆ ಹದಿನಾಲ್ಕು ವರ್ಷವಾಗುವವರೆಗೆ ನನ್ನ ಅಪ್ಪನ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ. ಅದುವರೆಗೆ ನಾನೆಂದೂ ಕಡಲನ್ನು ಕಂಡವನೂ ಅಲ್ಲ. ನನಗೆ ಎರಡು ವರ್ಷವಿದ್ದಾಗ ಅಪ್ಪ ನಮ್ಮನ್ನೆಲ್ಲ ಬಿಟ್ಟು ಹೋದರು. ಅಮ್ಮನ ಹೊಟ್ಟೆಯಲ್ಲಿ ಎರಡನೆಯ ಮಗುವಿತ್ತು, ಹೆಣ್ಣುಮಗು. ಹುಟ್ಟುವಾಗಲೇ ಅದು ಸತ್ತಿತ್ತು. ಅದನ್ನು ಹೆರಬೇಕಾದರೆ ಅಮ್ಮ ಕೂಡ ಹೆಚ್ಚೂಕಮ್ಮಿ ಸತ್ತೇ ಹೋಗಿದ್ದಳಂತೆ. ಜನಜಂಗುಳಿ, ಹಾರಗಳು, ಹೂವಿನ ಅಲಂಕಾರ, ಕಣ್ಣುಕುಕ್ಕುವ ಬಣ್ಣಬಣ್ಣದ ಲೈಟಿಂಗ್ ಮುಂತಾದ ಮದುವೆಯ ಫೋಟೋಗಳನ್ನು ಬಿಟ್ಟರೆ ಅಪ್ಪ ಸ್ಪಷ್ಟವಾಗಿ ಕಾಣಿಸುವ ಒಂದು ಫೋಟೋ ಇತ್ತು. ಅದನ್ನು ಅವನ ತಾರುಣ್ಯದ ಉತ್ತುಂಗದಲ್ಲಿ ತೆಗೆದಿದ್ದಿರಬೇಕು. ಅದರಲ್ಲಿ ಅಪ್ಪ ಒಂದು ರೈಲ್ವೇ ಲೆವೆಲ್ ಕ್ರಾಸಿಂಗಿನಲ್ಲಿ ನಿಂತಿದ್ದ. ಮರದ ಸ್ಲೀಪರುಗಳು, ಫಿಶ್ಪ್ಲೇಟುಗಳ ನಡುವೆ ನಿಂತಿದ್ದರಿಂದ ಅವುಗಳ ರಾಶಿ ಕಾಣುತ್ತದೆ ಅದರಲ್ಲಿ. ನಗುತ್ತಿದ್ದ ಅಪ್ಪ ಅದರಲ್ಲಿ. ಕಬ್ಬಿಣದ ಹಳಿಗಳು ಎಲ್ಲೆಲ್ಲೋ ದೂರದಲ್ಲಿ ಒಂದರ ಜೊತೆಗೊಂದು ಹೆಣೆದುಕೊಂಡು ಹೊರಳುವ ದೃಶ್ಯ ಕೂಡ ಅಪ್ಪನ ಬೆನ್ನ ಹಿಂದಿನ ಹಿನ್ನೆಲೆಯಲ್ಲಿ ಕಾಣಿಸುತ್ತಿತ್ತು. ಕಪ್ಪು ದಪ್ಪ ಮೀಸೆ, ದೃಢಕಾಯ, ಬಿಳಿಯ ಹಲ್ಲುಗಳು. ನನ್ನಮ್ಮ ಅವನ ಬಗ್ಗೆ ಯಾವತ್ತೂ ಮಾತನಾಡಿದ್ದೇ ಇಲ್ಲ ಎನ್ನಬಹುದು.


ನನಗೆ ಅವನ ಬಗ್ಗೆ ಗೊತ್ತಿರುವ ಒಂದೇ ಒಂದು ವಿಚಿತ್ರ ವಿಷಯ ಎಂದರೆ ಅಪ್ಪನಿಗೆ ಆಗಾಗ ಕುಳಿತಲ್ಲೇ ಪ್ರವಾಸ ಹೋಗುವ ಅಭ್ಯಾಸವಿತ್ತು ಎನ್ನೋದು. ಅವನಿಗೆ ತನ್ನ ಸುತ್ತಾ ರೈಲ್ವೇ ಟೈಂಟೇಬಲ್ಲು, ಬ್ರಾಡ್ಗೇಜ್, ಮೀಟರ್ಗೇಜ್, ನ್ಯಾರೋಗೇಜಿನ ಗೆರೆಗಳೆಲ್ಲ ಇದ್ದ ಮ್ಯಾಪುಗಳು, ಲೇಟೆಸ್ಟ್ ರೈಲ್ವೇ ಟೈಮಿಂಗ್ಸು ಎಲ್ಲ ಇಟ್ಟುಕೊಂಡು ಮನಸ್ಸಲ್ಲೇ ಯಾವುದೋ ಒಂದು ಟ್ರೇನ್ ಹಿಡಿದು ಪ್ರವಾಸ ಹೋಗೋದು ಬಹಳ ಹಿಡಿಸುತ್ತಿತ್ತು. ಅವನು ಕಾಗದ ತೆಗೆದುಕೊಂಡು ತನ್ನ ಪ್ರವಾಸದ ಯೋಜನೆಯನ್ನು ವಿವರ ವಿವರವಾಗಿ ಬರೆಯುತ್ತಿದ್ದ. ಬೇರೆ ಬೇರೆ ಖರ್ಚುವೆಚ್ಚ ಲೆಕ್ಕ ಹಾಕೋದು, ಯಾವ ಮಾರ್ಗವಾಗಿ ಹೋಗೋದು ಒಳ್ಳೇದು ಅನ್ನೋದರ ಲೆಕ್ಕಾಚಾರ ಹಾಕೋದು, ಟ್ರಾವೆಲ್ ಗೈಡುಗಳಲ್ಲಿ ಕೆಲವು ಬದಲಾವಣೆ ಮಾಡೋದು, ಕೊನೆಕ್ಷಣದ ತನಕ ಯಾವ ಹಾದಿ, ಯಾವ ಟ್ರೇನು ಅನ್ನೋದನ್ನ ನಿರ್ಧರಿಸದೇ ಇರೋದು ಇದನ್ನೇ ಮಾಡುತ್ತಿದ್ದ. ನಿಜ ಏನೆಂದರೆ ಅವನೆಂದೂ ಮನೆಯಿಂದ ಹೊರಗೆ ಕಾಲಿಟ್ಟಿದ್ದೇ ಇಲ್ಲ. ಪ್ರಯಾಣದ ಕುರಿತು ಅವನಲ್ಲೇ ಇದ್ದ ರೇಜಿಗೆ ಕೂಡ ಸುಳ್ಳೆನಿಸುವಂತಿದ್ದ ಒಂದೇ ಒಂದು ಸಂಗತಿ ಎಂದರೆ ಅವನು ಒಂದಿಷ್ಟೂ ದಣಿವಿಲ್ಲದವನಂತೆ ಕಾಗದಗಳ ಮೇಲೆ ಅತ್ಯಂತ ನಿಖರವಾದ ಬಗೆಯಲ್ಲಿ ಮೂಡಿಸುತ್ತಿದ್ದ ಕೊನೆಯೇ ಇಲ್ಲದ ಪ್ರವಾಸಗಳ ನಕ್ಷೆ. ಅವು ಅವನ ಕಾಗದದ ಮೇಲೆ ಗಟ್ಟಿಯಾಗಿ ಬೇರೂರಿ ಕಾಗದದ ಮೇಲೆಯೇ ಮತ್ತಷ್ಟು ಪ್ರವಾಸಗಳಿಗೆ ಕಾರಣವಾಗುವಂತೆ ರೆಂಬೆ ಕೊಂಬೆ ಚಾಚಿಕೊಳ್ಳುತ್ತಿದ್ದವು. ಅವನ ತಲೆತುಂಬ ಸಣ್ಣಪುಟ್ಟ ರೈಲ್ವೇ ಸ್ಟೇಶನ್ನುಗಳ ಹೆಸರುಗಳೇ ಗಿಚ್ಚಿಗಿರಿದಿರಬಹುದು ಎನಿಸುತ್ತಿತ್ತು ನನಗೆ. ಹಳಿ ಬದಲಿಸುವ ಯಾವುದೋ ಒಂದು ಕವಲಿನಲ್ಲಿ ಕಣ್ಣಿಗೆ ಬೀಳದಂತುಳಿದುಬಿಟ್ಟಿದ್ದ ಯಾವುದೋ ಹೊಸದೇ ಆದೊಂದು ಹಳಿಯ ಮೇಲೆ ಮಗುಚಿಕೊಂಡು ಇನ್ನೊಂದೇ ಬದುಕಿನತ್ತ ಅವನು ಮಾಯವಾಗಿ ಹೋದನೆ? ಕಲ್ಲಿದ್ದಲು, ಉಗಿ, ಉಕ್ಕು ಮತ್ತು ಹೌದು, ಹೊಸದೇ ವೇಗ ಆವೇಗಗಳ ಖುಶಿ ಕೂಡ ಇದ್ದಿರಬಹುದಾದ, ದಡಬಡಿಸಿ ಸಾಗುವ ಒಂದು ಹೊಸ ಬದುಕಿನತ್ತ? ನೋವಿಲ್ಲದ ಮತ್ತು ಪ್ರಾಯಶಃ ಗೊಂದಲಗಳೂ ಇಲ್ಲದ ಒಂದು ಜಾಗವನ್ನರಸಿ ಹೊರಟಿರಬಹುದೆ?

ಈ ಆಟ ಅಪ್ಪನ ಪ್ರಯಾಣದ ಆಸೆಗಳನ್ನೆಲ್ಲ ತಣಿಸಲು ಅಗತ್ಯವಾಗಿತ್ತು ಅನಿಸುತ್ತದೆ. ಅದು ಬಹುಶಃ ಸಾಕಷ್ಟು ತೃಪ್ತಿಯನ್ನೂ ಕೊಡುತ್ತಿತ್ತೇನೊ ಅವನಿಗೆ. ಬೇರೆ ಬೇರೆ ರೈಲ್ವೇ ಮಾರ್ಗಗಳ ಹೆಸರುಗಳು, ಸ್ಟೇಶನ್ನುಗಳ, ಜಂಕ್ಷನ್ನುಗಳ ಹೆಸರುಗಳು, ಸ್ಥಳಗಳ ಹೆಸರುಗಳು, ಎಲ್ಲದರ ಪಟ್ಟಿ ಮಾಡುತ್ತಿದ್ದ. ಅವುಗಳನ್ನೆಲ್ಲ ಕೇಳುತ್ತಿದ್ದರೆ ಆ ಶಬ್ದಗಳೆಲ್ಲ ಒಂದರ ಜೊತೆ ಒಂದು ಸೇರಿಕೊಂಡು ಏನೋ ಒಂದು ನಾದಮಾಧುರ್ಯ ಹೊರಡಿಸುವ ಅನುಭವ ಆಗುತ್ತಿತ್ತು. ದಾವಣಗೆರೆ, ಕೊಟ್ಟಾಯಂ, ಲೊಹ್ಯಾನ್ಖಾಸ್, ಹಲ್ದೀಬಾರಿ, ಮರಿಯಾನಿ, ಗೇಡೆ, ಕೋಳಿವಾಡ. ರೈಲ್ವೇ ಮೂಲಕ ಪ್ರಯಾಣಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿಗೂ, ಸೂಕ್ತ ಪ್ರಯಾಣದರವನ್ನು ಪಾವತಿಸಿದಲ್ಲಿ, ಆತ ಪ್ರಯಾಣಿಸಲಿರುವ ತರಗತಿ ಮತ್ತು ಬೋಗಿಯನ್ನು ಸೂಚಿಸುವ ವಿವರಗಳ ಸಹಿತ ಎಲ್ಲಿಂದ ಎಲ್ಲಿಗೆ ಪ್ರಯಾಣಿಸಲು ದರ ಪಾವತಿ ಮಾಡಿದ್ದಾರೆ ಎನ್ನುವುದನ್ನೂ ನಮೂದಿಸಿದ ಒಂದು ಟಿಕೇಟು ನೀಡಲಾಗುವುದು. ಇದನ್ನೆಲ್ಲ ನನಗೆ ಹೇಳುವಾಗ ಅಮ್ಮ ನಿರ್ಭಾವುಕಳಾಗಿದ್ದಳು. ಬೇಸಿಗೆ ರಜೆಯಲ್ಲಿ ಊರಿಂದ ದೂರವಾಗಿದ್ದಾಗ, ಕಡಲ ದಂಡೆಯ ಮೇಲೆ, ಅದೂ ನಾನು ಜ್ವರ ಬಂದು ಸುಧಾರಿಸಿಕೊಳ್ಳುತ್ತಿದ್ದಾಗ ಅಮ್ಮ ನನಗಿದನ್ನೆಲ್ಲ ಹೇಳಿದ್ದಳು. ಆಗ ನನಗೆ ಹದಿನಾಲ್ಕು ವರ್ಷ ವಯಸ್ಸು. ನನ್ನ ತಂದೆ ತಾಯಿ ಇಬ್ಬರೂ ಶಾಲಾ ಶಿಕ್ಷಕರಾಗಿದ್ದರು. ಅಮ್ಮನನ್ನೂ ಸೇರಿ ಯಾರಿಗೂ ಯಾಕೆ ಅಪ್ಪ ಹಾಗೆ ಇದ್ದಕ್ಕಿದ್ದ ಹಾಗೆ ಹೊರಟು ಹೋದ ಎನ್ನುವುದು ಅರ್ಥವಾಗಿರಲಿಲ್ಲ. ಅವರಿಬ್ಬರೂ ಜೊತೆಜೊತೆಯಾಗಿ ಎಲ್ಲರಿಗಿಂತ ಚೆನ್ನಾಗಿಯೇ, ಸಂತೋಷವಾಗಿಯೇ ಇದ್ದ ಹಾಗಿತ್ತು. ನಾನು ಸೇಲ್ಸ್ ರೆಪ್ರೆಸೆಂಟೇಟಿವ್ ಆಗಿ ಆಗಾಗ ಟ್ರೇನಿನಲ್ಲಿ ಪ್ರಯಾಣಿಸುತ್ತಿದ್ದೆ. ಹೆಚ್ಚು ಹೆಚ್ಚು ಪಯಣ ಸಾಗಿದಂತೆಲ್ಲ, ನಾನು ಯಾವ ದಿಕ್ಕಿನಲ್ಲೇ ಸಾಗುತ್ತಿರಲಿ, ಅಪ್ಪನ ಬಗ್ಗೆ ನನಗೆ ಗೊತ್ತಿರುವ ಬರೇ ಒಂದಿಷ್ಟೇ ಇಷ್ಟು ಮಾಹಿತಿಯಿಂದ ಕೂಡ ದೂರವಾಗುತ್ತಿದ್ದೇನೆ; ಈ ಮೈಲುದ್ದದ ಉಕ್ಕಿನ ಹಳಿಗಳ ಮೇಲೆ ಜಾರುತ್ತಲೇ ನೆನಪುಗಳ ಹಾದಿಯಲ್ಲಿಯೂ ಹೆಚ್ಚು ಹೆಚ್ಚು ದೂರ ಸಾಗುತ್ತಿದ್ದೇನೆ ಎಂದೇ ಅನಿಸುವುದು. ನನಗೆ ಹದಿನಾಲ್ಕು ತುಂಬಿದ ಆ ಬೇಸಗೆಯ ದಿನಗಳಲ್ಲಿ ಅಮ್ಮ ಅವಳ ಫೀಲ್ಡ್ ರೀಸರ್ಚ್ ಕೆಲಸದ ಮೇಲೆ ಪೂರ್ವ ಕರಾವಳಿಯ ವಯಲೂರಿಗೆ ಹೋಗುತ್ತ ನನ್ನನ್ನೂತನ್ನ ಜೊತೆಯಲ್ಲೆ ಕರೆಕೊಂಡು ಹೋಗಿದ್ದಳು. ಅದು ಅವಳ ಕೆಲಸಕ್ಕೆ ಸಂಬಂಧಿಸಿದ ಪ್ರವಾಸವಲ್ಲದೇ ಹೋಗಿದ್ದರೆ ನಾವೆಂದೂ ಹಾಗೆ ಸಾವಿರದೈನೂರು ಮೈಲಿ ದೂರದ ಒಂದು ಊರಿಗೆ ಪ್ರಯಾಣ ಮಾಡುವುದು ಸಾಧ್ಯವೇ ಇರಲಿಲ್ಲ.
ನಾನು ಕಡಲನ್ನು ನೋಡಿದ್ದು ಆಗಲೇ. ಧೂಳಿನಿಂದ ತುಂಬಿದ ಆ ನಮ್ಮ ಬಸ್ ಪ್ರಯಾಣದ ಕಟ್ಟಕಡೆಯ ಹಂತದಲ್ಲಿ ನಾವು ಕಡಲ ಕಿನಾರೆಗೆ ಬಂದು ತಲುಪಿದ್ದೆವು. ಅದರ ಸುರುವಿನಲ್ಲೇ ನನಗೆ ವಾಕರಿಕೆ ಸುರುವಾಯಿತು. ನನ್ನನ್ನು ಗಮನಿಸುತ್ತಿರುವ ಸಂಗತಿ ನನಗೇ ತಿಳಿಯದ ಹಾಗೆ ಎಚ್ಚರವಹಿಸಿ ಗಮನಿಸುವ ಅವಳ ಯಾವತ್ತಿನ ರೀತಿಯಲ್ಲೇ ಅಮ್ಮ ನನ್ನ ಕಾಳಜಿ ವಹಿಸತೊಡಗಿದ್ದಳು. ಬಸ್ ಡಿಪೊದಿಂದ ಮೊತ್ತಮೊದಲ ಬಾರಿ ಕಡಲನ್ನು ಕಾಣುವಾಗಲೇ ನನ್ನ ಮೈ ಜ್ವರದಿಂದ ಸುಡುತ್ತಿತ್ತು. ಆದರೂ ಪರಿಸ್ಥಿತಿ ನನ್ನ ನಿಯಂತ್ರಣದಲ್ಲೇ ಇದೆ ಎನ್ನುವ ಹಾಗೆ ಹೋಲ್ಡಾಲು ಎತ್ತಿಕೊಂಡು ಬಸ್ಸಿನಿಂದ ಹೊರಬಿದ್ದವನೇ ಮಣ್ಣಲ್ಲೇ ಹೋಲ್ಡಾಲನ್ನು ಜಾಗ್ರತೆಯಾಗಿ ಎತ್ತಿಟ್ಟು ಬೇರೇನೂ ಯೋಚನೆ ಮಾಡದೆ ಅಲ್ಲೇ ರಸ್ತೆಯಲ್ಲಿ ಕುಳಿತುಬಿಟ್ಟೆ.

ಅಲ್ಲಿನ ಶಾಲೆಯ ವಿಶಾಲ ವೆರಾಂಡದಲ್ಲಿ ಆವತ್ತು ಸಂಜೆ ನಾನೂ ನನ್ನಮ್ಮನ್ನ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಅಮ್ಮ ನನ್ನ ತಲೆಯನ್ನು ಅವಳ ತೊಡೆಯ ಮೇಲಿರಿಸಿಕೊಂಡು ಮೆಲ್ಲಗೆ ಸಂಭಾಳಿಸುತ್ತಲೇ ಇದ್ದಳು. ನಾವಿಬ್ಬರೂ ಕಡಲಿನತ್ತಲೇ ನೋಡುತ್ತ ಉಳಿದೆವು. ಜ್ವರದಿಂದ ಕಂಗೆಟ್ಟಿದ್ದ ನನಗೆ ಅದರ ಸಂಗೀತ ಹಿತವಾಗಿತ್ತು. ನನಗೆ ನೆನಪಿದೆ, ನನ್ನಮ್ಮ ಆವತ್ತು ಬಿಳಿ ಬಣ್ಣದ ಸೀರೆಯುಟ್ಟಿದ್ದಳು. ಅದರಲ್ಲಿ ಅಲ್ಲಲ್ಲಿ ಕೆಂಪು ಬಣ್ಣದ ಕಲೆಗಳಾಗಿದ್ದು ವಿಲಕ್ಷಣವಾಗಿ ಕಾಣುತ್ತಿತ್ತದು. ಆಗಷ್ಟೇ ನನಗೆ ಮೂಗಿನಲ್ಲಿ ರಕ್ತ ಒಸರುವುದು ಸುರುವಾಗಿತ್ತು. ಇನ್ನೇನು ಸೂರ್ಯ ಮುಳುಗುತ್ತಾನೆನ್ನುವಾಗ ಕಡಲ ಕಿನಾರೆಯುದ್ದಕ್ಕೂ ನಡೆದಾಡಿಸು ಎಂದು ನಾನು ಕೇಳಿಕೊಂಡಿದ್ದೆ. ಅವಳು ಆವತ್ತು ಅವಳ ಗಂಡನ ಬಗ್ಗೆ, ನನ್ನ ಅಪ್ಪನ ಬಗ್ಗೆ, ನಮಗೆಲ್ಲ ಅಪರಿಚಿತನಾಗಿಯೇ ಉಳಿದು ಹೋದ ಆ ವ್ಯಕ್ತಿಯ ಬಗ್ಗೆ ಹೇಳಿದ್ದಳು.

ಮರಳು ಮತ್ತು ಉಪ್ಪಿನ ಸಾಗರದ ಮೇಲಿಂದ ತೇಲಿ ಬರುತ್ತಿದ್ದ ಗಾಳಿಯ ಪರಿಣಾಮಕ್ಕೆ ಒಂದು ಪ್ರಮಾಣವೋ ಎಂಬಂತೆ ಆವತ್ತು ಆ ವಾತಾವರಣದಲ್ಲಿ ಅವಳ ಮಾತುಗಳನ್ನೆಲ್ಲ ನಾನು ಅತ್ಯಂತ ಸಹಜವಾದ ಸಂಗತಿಯೋ ಎಂಬಂತೆ ಸ್ವೀಕರಿಸಿದ್ದೆ. ಒಮ್ಮೆ ನನ್ನ ಅಮ್ಮನ ಮಾಮ (ಹಳ್ಳಿಯ ಒಕ್ಕಲಿಗನಾದ ಮಾಮ ಸದ್ಯ ತನ್ನ ಗ್ರಹಗತಿ ಚೆನ್ನಾಗಿರುವುದನ್ನು ತಿಳಿದುಕೊಂಡು ಜಾಗದ ವಿಷಯದ ಒಂದು ವ್ಯಾಜ್ಯದ ಸಂಬಂಧದಲ್ಲಿ ಪೇಟೆಗೆ ಬಂದಿದ್ದ.) ನನ್ನಪ್ಪನ ಬಗ್ಗೆ ಹೇಳಿದ ಮಾತು ನನಗೊಂಚೂರೂ ಅರ್ಥವಾಗಿರಲಿಲ್ಲ. ನಮ್ಮ ಕುಟುಂಬದಲ್ಲಿ ಯಾರಿಗೂ ಇಲ್ಲದ ಒಂದು ವಿಚಿತ್ರವಾದ ಮೌನ ಅವನಲ್ಲಿತ್ತು, ಅಂಥ ಮೌನ ಇದ್ದವರು ಮಳೆ ತರಿಸುವ ಶಕ್ತಿ ಹೊಂದಿರುತ್ತಾರೆ ಎಂದಿದ್ದ ಅವನು. ಬರಗಾಲ, ಕ್ಷಾಮದ ಸಮಯದಲ್ಲಿ ಜನ ಇಂಥ ಮಾತುಗಳನ್ನಾಡುವುದು ನಾನು ಕೇಳಿದ್ದೆ.

ಇದು ನಡೆದಿದ್ದು ಸುಮಾರಾಗಿ ನನ್ನಮ್ಮ ರಿಟೈರ್ ಆದ ಹೊತ್ತಿನಲ್ಲೇ. ಆಗ ನಾನು ಅಶೋಕನ ರೂಮಿನಲ್ಲಿ, ಅವನು ಟೂರ್ ಮೇಲೆ ಊರೂರಿಗೆ ಹೋದಾಗಲೆಲ್ಲ ಅವನ ಹೆಂಗಸಿನ ಜೊತೆ ಇರುತ್ತಿದ್ದೆ. ರೂಮು ಎಂದರೆ ಸೆಂಟ್ರಲ್ ಮಾರ್ಕೆಟ್ನ ಒಂದು ಮುರುಕಲು ರೆಸ್ಟೊರೆಂಟಿನ ಮೇಲಿದ್ದ ಮರದ ಪಾರ್ಟಿಷನ್ಗಳ ಸಾಲು ಕೊಠಡಿ ಅಷ್ಟೇ. ಅವನು ಊರಲ್ಲಿದ್ದಾಗ ಅವಳ ಜೊತೆ ಅವನಿರುತ್ತಿದ್ದ ಮತ್ತು ಅವನಿಗೆ ಅವಳ ಅಗತ್ಯವಿಲ್ಲದ ಸಮಯದಲ್ಲಿ ಅವಳು ಬೇರೆಯವರ ಜೊತೆ ಅವಳ ಸಂಪಾದನೆ ಮಾಡಿಕೊಳ್ಳಲು ಅವಕಾಶ ಕೊಡುತ್ತಿದ್ದ. ಇದು ನಮ್ಮ ನಮ್ಮೊಳಗೆ ಇದ್ದ ಒಂದು ಹೊಂದಾಣಿಕೆ.

ಅಂಥ ಸಂದರ್ಭದಲ್ಲೆಲ್ಲ ನಾನು ಅಮ್ಮನ ಹತ್ತಿರ ಕೊತಾಹ್ಗೆ ಕೆಲಸದ ಮೇಲೆ ಹೋಗುತ್ತಿದ್ದೇನೆ ಮತ್ತು ಬರುವುದು ಒಂದು ವಾರವಾಗುತ್ತೆ ಅಂತ ಸುಳ್ಳು ಹೇಳುತ್ತಿದ್ದೆ. ಊರಿನ ಕಡೆಯಿಂದ ಅವಳ ಒಬ್ಬ ಕಸಿನ್ ನಮ್ಮನೆಗೆ ಬರುವುದಿತ್ತು. ನಾನಿಲ್ಲದ ಈ ಅವಧಿಯಲ್ಲಿ ನನ್ನಮ್ಮ ಅವಳನ್ನು ಪೇಟೆಯಲ್ಲಿ ಸುತ್ತಾಡಿಸಲು ಮತ್ತು ಶಾಪಿಂಗಿಗೆ ಕರೆದೊಯ್ಯಲು ಪ್ಲ್ಯಾನ್ ಹಾಕುತ್ತಿದ್ದಳು. ಸಿಟಿ ಶಾಪಿಂಗ್ ಸೆಂಟರಿನ ಪಕ್ಕದ ಬೀದಿಯಲ್ಲಿ ನೀರಿನ ಪೈಪ್ಲೈನ್ ಒಂದು ಒಡೆದು ಈ ರೆಸ್ಟೊರೆಂಟಿನ ಕೆಳಗಿದ್ದ ಜಂಕ್ಷನ್ನಿನಲ್ಲಿ ಟ್ರಾಫಿಕ್ ಬ್ಲಾಕ್ ಆಗಿತ್ತು.

ಅಶೋಕನ ಹೆಂಗಸು ಮತ್ತು ನಾನು ಕಿಟಕಿಯ ಪಕ್ಕ ನಿಂತು ಹೊರಗೆ ನೋಡುತ್ತಾ ಇದ್ದಾಗ ಆಕಸ್ಮಿಕವಾಗಿ ನನ್ನಮ್ಮ ಮೇಲ್ಗಡೆ ನನ್ನತ್ತಲೇ ನೋಡಿಬಿಟ್ಟಳು. ಅವಳು ಚರಂಡಿ ಹಾಯುವುದಕ್ಕೆ ತಯಾರಾಗಿ, ಸೀರೆಯನ್ನು ಕೊಂಚ ಮೇಲೆತ್ತಿಕೊಂಡು ಅಲ್ಲಿನ ಒದ್ದೆಯಾದ ರಸ್ತೆ ದಾಟಲು ತಯಾರಿ ನಡೆಸಿದ್ದಾಗ ಇದ್ದಕ್ಕಿದ್ದ ಹಾಗೆ ಆಕಸ್ಮಿಕವಾಗಿ ಮುಖ ಮೇಲಕ್ಕೆತ್ತಿ, ನನಗೆ ಅವಳಲ್ಲಿರುವುದು ತಿಳಿಯುವ ಮೊದಲೇ ನನ್ನನ್ನು ನೋಡಿಬಿಟ್ಟಿದ್ದಳು. ಒಮ್ಮೆಗೇ ಆಘಾತವಾದವಳಂತೆ ಬಾಯಿಗೆ ಕೈಯಿಟ್ಟಳು ಮತ್ತು ತಕ್ಷಣವೇ ಎಚ್ಚೆತ್ತುಕೊಂಡವಳಂತೆ, ಆಂಟಿ ನನ್ನತ್ತ ನೋಡುವ ಮುನ್ನ ಅವಳ ರಟ್ಟೆಗೆ ಕೈಹಾಕಿ ಅವಳನ್ನೆಳೆದುಕೊಂಡೇ ಅಲ್ಲಿನ ಪಾದಚಾರಿಗಳ ನಡುವೆ ಹೇಗೋ ದಾರಿ ಮಾಡಿಕೊಂಡು ಮಾಯವಾದಳು. ಲೈಟ್ಸ್ ಬೆಳಗಿದವು, ಮೊದಲ ಮಳೆಗೆ ಅರಳಿದ ಭೂಮಿಯಿಂದೆದ್ದ ಹೊಸ ಮಣ್ಣಿನ ವಾಸನೆಯಂಥ ಪರಿಮಳ ಗಾಳಿಯಲ್ಲೆಲ್ಲ ಸೇರಿಕೊಂಡು ಅಲ್ಲಿನ ವಾತಾವರಣವೇ ಬದಲಾಯಿತು. ನಾನು ಮನೆಗೆ ಮರಳಿದ ಮೇಲೆ ಅವಳು ಈ ಬಗ್ಗೆ ಸೊಲ್ಲೆತ್ತಲಿಲ್ಲ. ಯಾರೇನಾದರೆ ನನಗೇನು ಎಂಬಂತಿದ್ದ ನನ್ನ ರೀತಿನೀತಿಯನ್ನು ಅವಳು ಚೆನ್ನಾಗಿಯೇ ಅರಿತಿದ್ದಳು. ಆದರೆ ಆ ಬಳಿಕ ಅವಳು ನಗುವುದನ್ನು ಪೂರ್ತಿಯಾಗಿ ನಿಲ್ಲಿಸಿಬಿಟ್ಟಳು. ಯಾವ ಜೋಕಿಗೂ ಅವಳು ಕ್ಯಾರೇ ಎನ್ನಲಿಲ್ಲ. ಹಾಗಾಗಿ ನಾನು ಹೆಚ್ಚು ಹೆಚ್ಚಾಗಿ ಅವಳಿಗೆ ಕೀಟಲೆ ಕೊಡುತ್ತಿದ್ದೆ. ರೈಲ್ವೇ ಸ್ಟೇಶನ್ನುಗಳಲ್ಲಿ ಹಾಕುವ ಸೂಚನಾ ಫಲಕಗಳ ಬಗ್ಗೆ, ಪ್ರಯಾಣಿಕರು, ಅವರು ಯಾವ ಕಡೆಗೇ ಹೋಗುವುದಿದ್ದರೂ ಚರ್ಮರೋಗದ ಮುಲಾಮು, ಝಿಂದಾ ತಿಲಿಸ್ಮಥ್ ಮುಂತಾದವನ್ನು ಬಳಸಬೇಕು ಎನ್ನುವ ಬೋರ್ಡಿನ ಬಗ್ಗೆ ಮಾತನಾಡುತ್ತಿದ್ದೆ. ನಾನವಳಿಗೆ ಹಣೆಯ ಮೇಲೆ ಭಾರೀ ನಾಮ ಗಂಧ ಎಲ್ಲ ಹಾಕಿಕೊಂಡಿದ್ದ ಒಬ್ಬ ಮನುಷ್ಯ ಅವನಿದ್ದ ಬೋಗಿಯ ಕಿಟಕಿ ಹೊರಗೆಯೇ ಮೌನವಾಗಿ ರೋದಿಸುತ್ತಾ ಇದ್ದ ಒಬ್ಬ ಹೆಂಗಸಿನ ವಿಷಯದಲ್ಲಿ ತನಗೇನೂ ಸಂಬಂಧ ಇಲ್ಲ ಎಂಬಂತಿದ್ದ ಬಗ್ಗೆಯೂ ಹೇಳಿದೆ. ಅದರ ಮೇಲೆ ನಾನು ಕೋತಾಹ್ನಿಂದ ಭುಸ್ವಾಲ್, ಇತಾರ್ಸಿ, ಕಸ್ಬೆ ಸುಕೆನೆ, ಜುಲ್ಖೇರ, ಜೈಸಲ್ಮೇರ್, ಬುರ್ದ್ವಾನ್ ಮತ್ತು ಚಿನ್ಚಪೊಖ್ಲಿಗೆಲ್ಲ ಹೋಗಿದ್ದೆ ಎಂದೂ ರೀಲು ಬಿಟ್ಟೆ. ಈ ತಖ್ತೆಯಲ್ಲಿ ತೋರಿಸಲಾದ ಪ್ರಯಾಣದರದಲ್ಲಿ ಯಾತ್ರೆ/ಕೊನೆಯ ನಿಲ್ದಾಣ/ಸೇತುವೆ/ನಗರಸಭೆಯ ತೆರಿಗೆಗಳು, ಅನ್ವಯಿಸಿದಲ್ಲಿ, ಅವೂ ಒಳಗೊಂಡಿವೆ. ಕಡಲಿನೆದುರು ಆವತ್ತು ಸಂಜೆ ನನ್ನಮ್ಮ ನನ್ನ ಅಪ್ಪನನ್ನು ಅವಾಸ್ತವಿಕಗೊಳಿಸಿದ ದಿನ, ನಾನು ರಾತ್ರಿಯಿಡೀ ಮಲಗಲೇ ಇಲ್ಲ.

ನನಗೇನೊ ಕಾಯಿಲೆಯಿದೆ ಮತ್ತದು ಎಂದಿಗೂ ನನ್ನನ್ನು ಬಿಟ್ಟು ಹೋಗುವುದಲ್ಲ ಎನಿಸಿಬಿಟ್ಟಿತು. ಯಾಕೋ ನಾನು ತೀರ ಹತಪ್ರಭನಂತೆ, ಯಾವುದೋ ಒಂದು ಗೌಪ್ಯವಾದ ವಚನಪಾಲನೆಯಲ್ಲಿ ಚ್ಯುತಿ ಮಾಡಿದಂಥ ಭಾವ ಕಾಡತೊಡಗಿ ಪಾಪಪ್ರಜ್ಞೆಯನ್ನೂ ಅನುಭವಿಸಿದೆ. ನನ್ನ ಪತನ ರಭಸವಾಗಿಯೇ ಆಳದಿಂದೆದ್ದು ಬಂತು. ನನ್ನ ತುಟಿಗಳು ಒಣಗಿದ್ದವು. ಬಾಯಿ ಮಾತ್ರ ತನಗೆ ಅತ್ಯಗತ್ಯವಾದ ಮತ್ತು ಏಕಕಾಲಕ್ಕೆ ತೀರ ಪರಕೀಯವೂ ಆದ ಅಪ್ಪ ಅಪ್ಪ ಎಂಬ ಶಬ್ದವನ್ನು ನಿರಂತರವಾಗಿ ಗುನುಗಲು ಪ್ರಯತ್ನಿಸುವಂತಿತ್ತು. ನಾನು ಸುಮ್ಮನೇ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದೆ. ಕಿವಿಗಳಲ್ಲಿ ಕಡಲು ಮೊರೆಯುತ್ತಲೇ ಇತ್ತು. ನನಗಾತ ಚೆನ್ನಾಗಿಯೇ ಗೊತ್ತು ಅನಿಸುತ್ತಿರುವಾಗಲೇ ನನ್ನ ಅಚ್ಚುಮೆಚ್ಚಿನ ಫೋಟೋದಲ್ಲಿನ ಅಪ್ಪನ ಚಿತ್ರ ಮಾತ್ರ ಇದ್ದಕ್ಕಿದ್ದ ಹಾಗೆ ನನ್ನ ಕಣ್ಣುಗಳಿಗೆ ಮಸುಕಾಗ ತೊಡಗಿತ್ತು.

ಮರುದಿನ ನನಗೆ ಮತ್ತೆ ಜ್ವರ ಬಂದಿತು. ತೀರ ಎಳವೆಯಲ್ಲೇ ನನಗೆ ಕಡಲಿನ ಜೊತೆ ಒಂದು ಸಂಬಂಧ ಏರ್ಪಟ್ಟಿತ್ತು ಮತ್ತು ಈಗ ನನಗೆ ನನ್ನಪ್ಪನನ್ನು ಕಡಲಿನಿಂದ ಬೇರ್ಪಡಿಸಿ ಮನಸ್ಸಿಗೆ ತಂದುಕೊಳ್ಳುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಕಣ್ಣು ಮುಚ್ಚಿದ ತಕ್ಷಣವೇ ನಾನು ಆ ಬೀಚಿನಲ್ಲಿರುತ್ತಿದ್ದೆ, ಅಪ್ಪನ ಬಗ್ಗೆ ಮಾತನಾಡುತ್ತಿದ್ದ, ಮಾತುಗಳ ನಡುನಡುವೆ ಅಲ್ಲಿನ ಗಾಳಿ ನುಸುಳಿಕೊಂಡಂತಿದ್ದ, ನನ್ನಮ್ಮನ ಧ್ವನಿಯನ್ನು ನನ್ನ ಜ್ವರ ನುಂಗಿದ ಕಡಲ ಮೊರೆತದಾಳದಲ್ಲಿಂದ ಕೇಳಿಸಿಕೊಳ್ಳುತ್ತಿರುವ ಅನುಭವವೇ ಆಗುತ್ತಿತ್ತು. ನನ್ನ ಇನ್ನೊಂದು ಖಾಸಗಿ ಪ್ರವಾಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ಸಂದರ್ಭದಲ್ಲಿ ಅಮ್ಮ ನನ್ನ ಕತ್ತಿನ ಬಳಿ ಯಾರೋ ಕಚ್ಚಿದ ಗುರುತು ಇರುವುದನ್ನು ಗಮನಿಸಿದಳು. ಅದುವರೆಗೂ ನನ್ನ ಗಮನಕ್ಕೇ ಅದು ಬಂದಿರಲಿಲ್ಲ. ನಾನು ಅದೇನೊ ತರಚಿದ್ದಿರಬೇಕು ಎಂದು ಮಾತು ಹಾರಿಸಿದರೂ, ಅದಕ್ಕವಳು ಏನೊಂದೂ ಹೇಳದಿದ್ದರೂ, ಅದೇನೆಂದು ಅವಳಿಗೆ ಚೆನ್ನಾಗಿಯೇ ಗೊತ್ತಿತ್ತು. ನನಗಿನ್ನೂ ನೆನಪಿದೆ, ವಯಲೂರಿನಿಂದ ನಾವು ಆವತ್ತು ನನ್ನಪ್ಪನ ಹಳ್ಳಿಗೆ ಹೋದೆವು. ಅಲ್ಲಿ ಅವನ ತಂದೆ ತಾಯಿ ಇನ್ನೂ ಬದುಕಿದ್ದರು.

ನಾನು ಯಾವತ್ತೂ ಅಲ್ಲಿಗೆ ಹೋಗಿದ್ದಿಲ್ಲ. ಊರಿನ ದೊಡ್ಡ ರಸ್ತೆ ಊರೊಳಗೆ ಹಾದು ಹೋಗುತ್ತ ಒಂದಿಷ್ಟು ದೇವಸ್ಥಾನಗಳತ್ತ ಮೊಗ ಮಾಡಿದೆ. ಈ ಊರಿಗೆ ಆಸುಪಾಸಿನಲ್ಲಿ ಸ್ವಲ್ಪ ಹೆಸರು ಇರೋದು ಕೂಡ ಈ ದೇವಸ್ಥಾನಗಳಿಂದಲೇ. ಏಳು ಗುಡಿಗಳು (ಕಾಲರಾ, ಸಿಡುಬು, ಪ್ಲೇಗ್ ಮತ್ತಿತರ ಸಾಂಕ್ರಾಮಿಕಗಳಿಗೆ ಸಂಬಂಧಪಟ್ಟ ಭೂತ-ದೈವಗಳದ್ದು ಹೊರತು ಪಡಿಸಿ), ಎರಡು ದೇವಾಲಯಗಳು, ಒಂದು ದೊಡ್ಡ ಕೆರೆ ಮತ್ತು ಐದು ಕಟ್ಟುನಿಟ್ಟಾಗಿ ವಿಂಗಡಿಸಲ್ಪಟ್ಟ, ಪೋಸ್ಟಾಫೀಸಿನಿಂದ ಬರುವ ಮನಿಯಾರ್ಡರ್ ಮೇಲೆಯೇ ಅವಲಂಬಿತರಾದ ಹೆಂಗಸರು, ಮಕ್ಕಳು ಮತ್ತು ವೃದ್ಧರು ಇರುವ ಓಣಿಗಳು. ಹಳ್ಳಿಯ ಈ ಭಾಗದ ಬಹುತೇಕ ಎಲ್ಲಾ ಬಾವಿಗಳೂ ನೀರಿಲ್ಲದೆ ಒಣಗಿದ್ದವು.

ಒಂದು ಸುದೀರ್ಘ ಬರದ ಕೊನೆ ಸಮೀಪಿಸಿದೆ ಎನ್ನುವಾಗ ನಾವು ಈ ಹಳ್ಳಿಗೆ ಬಂದಿದ್ದೆವು. ಹಳ್ಳಿಯ ನಟ್ಟನಡುವಿನ ಬತ್ತಿ ಒಣಗಿದ ಕೆರೆಯಲ್ಲಿ ಒಣಗಿದ ಕಸ ಕಡ್ಡಿಯನ್ನೆಲ್ಲ ಒಗ್ಗೂಡಿಸಿ ಕಿಚ್ಚು ಒಟ್ಟಿದ್ದರು. ಇದರಿಂದ ಹಾವು ಚೇಳುಗಳೆಲ್ಲ ಸತ್ತು, ಕೆರೆ ಚೊಕ್ಕವಾಗುವುದಲ್ಲದೆ ಆಸುಪಾಸಿನ ಭತ್ತದ ಹೊಲಗಳಿಗೆ ಮುಂದಿನ ಬಿತ್ತನೆಗೆ ಅಗತ್ಯವಾದ ಗೊಬ್ಬರವೂ ಸಿಕ್ಕಂತಾಗುತ್ತಿತ್ತು. ರಸ್ತೆಯಲ್ಲಿ ಮಳೆಗಾಗಿ ಪ್ರಾರ್ಥಿಸುವ ಮೆರವಣಿಗೆಗಳು ಕೂಡ ಕಂಡವು. ಆದರೆ ಅಲ್ಲೆಲ್ಲೂ ಮಳೆ ತರಿಸಬಲ್ಲ ನನ್ನಪ್ಪನ ಸುಳಿವೇ ಇರಲಿಲ್ಲ. ಕಡು ನೀಲಿ ಆಗಸದಲ್ಲಿ ಕೆಲವೇ ಕೆಲವು ಪೊಳ್ಳು ಭರವಸೆಗಳಂತಿದ್ದ ಬೆಳ್ಳಿಮೋಡಗಳನ್ನು ಬಿಟ್ಟರೆ ಮಳೆ ಬರುವ ಯಾವುದೇ ಕುರುಹು ಇರಲಿಲ್ಲ. ನಾವಲ್ಲಿ ಉಳಿದುಕೊಂಡಿದ್ದು ಎರಡೇ ಎರಡು ದಿನ. ಅಲ್ಲಿನ ದೇವಾಲಯಗಳ ಟ್ರಸ್ಟಿಗಳಿಂದ ತನಗೆ ಬೇಕಾದ ಮಾಹಿತಿಯನ್ನೆಲ್ಲ ಕಲೆಹಾಕಿಕೊಳ್ಳಲು ನನ್ನಮ್ಮನಿಗೆ ಅಷ್ಟು ಕಾಲಾವಕಾಶ ಸಾಕಷ್ಟಾಗಿತ್ತು.

ನನಗಂತೂ ಆ ಸಂಕ್ಷಿಪ್ತ ವಾಸ್ತವ್ಯ ಕೂಡ ಸಾಕಪ್ಪಾ ಎನಿಸಿಬಿಟ್ಟಿತು. ನಾನು ನಿತ್ರಾಣಗೊಂಡಿದ್ದರೂ ಸೊಳ್ಳೆಗಳಿಂದಾಗಿ ರಾತ್ರಿಯಿಡೀ ಮಲಗುವುದು ಸಾಧ್ಯವಾಗಿರಲಿಲ್ಲ. ನನ್ನ ಅಜ್ಜ ಅಜ್ಜಿ ಇಬ್ಬರೂ ನನ್ನ ಮೇಲೆ ಮಮತೆಯ ಮಳೆಯನ್ನೇ ಸುರಿದಿದ್ದರು. ಬಹುಶಃ ನನ್ನಪ್ಪನ ನಾಪತ್ತೆಗೆ ಅವರೇ ಹೊಣೆಯೆಂದು ನಾನು ತಿಳಿದಿದ್ದೇನೆ ಅಂದುಕೊಂಡರೋ ಏನೊ. ಆಗ ನನಗೆ ಅಷ್ಟೆಲ್ಲ ಹೊಳೆದಿರಲಿಲ್ಲ. ನಾನು ಅವರನ್ನು ಮತ್ತೆಂದೂ ಕಾಣುವುದಿಲ್ಲ ಎನ್ನುವುದೂ ನನಗೆ ಆಗ ತಿಳಿದಿರಲಿಲ್ಲ.

ವಿಶೇಷವಾಗಿ ನನ್ನಜ್ಜಿ ಅಪ್ಪನ ಬಗ್ಗೆ ಹೇಳುತ್ತ ಹೇಳುತ್ತ ಎಲ್ಲೆಲ್ಲೊ ಹೋಗಿಬಿಟ್ಟಳು. ಅವನು ಎಂಟು ವರ್ಷದವನಿದ್ದಾಗಲೇ ಮನೆ ಬಿಟ್ಟು ಓಡಿ ಹೋಗಿದ್ದನಂತೆ. ಮರುದಿನ ಎಲ್ಲೊ ಹುಣಸೇ ಮರದ ಮೇಲೆ ಹತ್ತಿ ಕುಳಿತಿದ್ದವನನ್ನು ಪತ್ತೆ ಮಾಡಿದ್ದರಂತೆ. ಅಜ್ಜಿ ಹೇಳುತ್ತ ಹೋದಳು. ಅವನ ಭಾಷೆ ತುಂಬ ಶುದ್ಧವೂ ಸುಂದರವೂ ಆಗಿತ್ತಂತೆ. ಅವನು ಮಾತನಾಡುವಾಗ ಅಲ್ಲಲ್ಲಿ ನಿಲ್ಲಿಸುತ್ತಿದ್ದನಂತೆ. ಅದನ್ನು ತಪ್ಪಾಗಿ ತಿಳಿಯುವಂತಿರಲಿಲ್ಲವಂತೆ. ಅವನ ಮೌನ ಕೂಡಾ ಒಬ್ಬ ಮನುಷ್ಯನ ಮಾತಿನಷ್ಟೇ ಮುಖ್ಯವಾಗಿತ್ತಂತೆ. ಬಿಸಿಲು ಕಿಟಕಿಯ ಮೇಲ್ಛಾವಣಿಯ ಸಂದಿಯಿಂದ ಓರೆಯಾಗಿ ನಾವು ಕುಳಿತಲ್ಲಿ ನಮ್ಮ ಮೇಲೆ ಬೀಳುತ್ತಾ ಇತ್ತು. ಮುಸ್ಸಂಜೆಯ ಬಂಗಾರದ ಬಣ್ಣದ ಸೂರ್ಯರಶ್ಮಿ ಒಮ್ಮೆಗೇ ಕೊಂಚ ಗಾಢವಾದಂತಾಗಿ ಕಿಟಕಿಯಿಂದ ಕಾಣುತ್ತಿದ್ದ ಆ ಹೊರಗಿನ ಸಾಮಾನ್ಯ ದೃಶ್ಯಕ್ಕೂ ಎಲ್ಲಿಲಲ್ಲದ ಮಾಯಕದ ಬೆಡಗು ಬಿನ್ನಾಣವೊಂದನ್ನು ತೊಡಿಸಿದಂತಾಯ್ತು. ಒಂದೇ ಒಂದು ಕ್ಷಣ, ಕತ್ತಲಾವರಿಸುವ ಕ್ಷಣಕಾಲ ಮುನ್ನ, ಆ ಇಡೀ ದೃಶ್ಯಕ್ಕೆ ನೀರಿನ ಒಂದು ತೆರೆ ಹೊದಿಸಿದಂತಾಗಿ ಎಲ್ಲವೂ ಕತ್ತಲಲ್ಲಿ ಮಾಯವಾಯಿತು.

ನನ್ನ ಅಜ್ಜಿಯ ನಿಶ್ಶಕ್ತ ಮಾತುಗಳ ಧ್ವನಿ ಕ್ರಮೇಣ ತೂಕಡಿಸಿದಂತೆ ಏಕತಾನತೆಗೆ ಶರಣಾಗುವ ಹೊತ್ತಲ್ಲೇ ಹಲ್ಲಿಗಳು ಒಂದಕ್ಕೊಂದು ಸಂದೇಶ ರವಾನಿಸತೊಡಗಿದ್ದವು. ಕಿಟಕಿಗಳ ಬಾಗಿಲುಗಳಿಗೆ ಹೊರಗಿನಿಂದ ಜೀರುಂಡೆಗಳು ಬಂದು ಬಡಿಯುವ ಸದ್ದೂ ಕೇಳುತ್ತಿತ್ತು. ಅವನಿಗೆ ಹದಿಮೂರು ವರ್ಷ ಪ್ರಾಯವಿದ್ದಾಗ ಅವನು ಮತ್ತೊಮ್ಮೆ ಮನೆಯಿಂದ ಓಡಿ ಹೋಗಿದ್ದನಂತೆ. ಅಂದರೆ ನಾನಿದನ್ನು ಕೇಳುತ್ತಿದ್ದಾಗ ನನಗಾಗಿದ್ದ ವಯಸ್ಸಿಗಿಂತಲೂ ಒಂದು ವರ್ಷ ಚಿಕ್ಕವನಿರುವಾಗ. ಕರಾವಳಿಯ ಗುಂಟ ಮುವ್ವತ್ತು ಮೈಲಿ ಕೆಳಗೆ ಯಾವುದೋ ಹಳ್ಳಿಯಲ್ಲಿ ಅಲೆಯುತ್ತಿದ್ದಾಗ, ಅದೂ ಒಂದು ತಿಂಗಳ ಬಳಿಕ, ಪತ್ತೆಯಾಗಿದ್ದನಂತೆ. ಒಣಗಿದ ಬಾಯೊಳಗಿನ ನಾಲಗೆ ಕೂಡ ಕಪ್ಪಾಗಿತ್ತಂತೆ. ಮಾತುಗಳು ತೊದಲುತ್ತಿದ್ದವಂತೆ, ಕಣ್ಣುಗಳು ನಿಶ್ಶಕ್ತಿಯಿಂದ ಬಳಲಿ ಕನಸಿನಲ್ಲಿರುವಂತೆ ಆಗಿದ್ದುವಂತೆ. ಆಗಲೂ ಅರ್ಥವಿಲ್ಲದ ಅವನ ಮಾತುಗಳಲ್ಲೂ ಒಂದು ಸ್ಪಷ್ಟ ಶಬ್ದ ಮತ್ತು ಅನುಕಂಪದ ತೊಳಲಾಟಗಳಿದ್ದವಂತೆ. ಹೀಗೆ ಅವನು ನಮ್ಮನ್ನು ತೊರೆದು ಹೋಗುವುದಕ್ಕೂ ಮೊದಲು ಎರಡು ಬಾರಿ ಮನೆಬಿಟ್ಟು ಹೋಗಿದ್ದ. ಆದರೆ, ನೀವು ಎಷ್ಟೇ ಜೋರಾಗಿ ಓಡಿದರೂ ನಿಮ್ಮ ಮನಸ್ಸಿನಿಂದ ನೀವು ತಪ್ಪಿಸಿಕೊಂಡು ಹೋಗುವುದು ಸಾಧ್ಯವೇ ಇಲ್ಲ. ಇಷ್ಟರ ಮೇಲೆ ನೀವು ಪ್ರಾಮಾಣಿಕರೂ ಆಗಿದ್ದರೆ, ಅವನಮ್ಮ ಹೇಳುತ್ತಾಳೆ ಅವನು ಆಗಿದ್ದ ಎಂದು, ನಿಮ್ಮ ಕತೆ ಮುಗಿದೇ ಹೋಯಿತು. ಓಡಿಹೋಗುವವರು ಸುಳ್ಳರಾಗಿದ್ದರೂ ಪರವಾಗಿಲ್ಲ, ಪ್ರಾಮಾಣಿಕರಾಗಿರಬಾರದು. ಪ್ರಯಾಣವನ್ನು ಅಷ್ಟೊಂದು ದ್ವೇಷಿಸುತ್ತಿದ್ದ ನನ್ನಪ್ಪನನ್ನು ಅವನ ಈ ಪ್ರಯಾಣ ಖಂಡಿತವಾಗಿ ಅವನು ಎಂದಿಗೂ ತಲುಪಲಾರದ ದೂರಕ್ಕೇ ಕರೆದೊಯ್ದಿರಬೇಕು. ಅವನ ಗೈರುಹಾಜರಿ ನಮ್ಮೆಲ್ಲರ ಬದುಕಿನ ಮೇಲೂ ದಟ್ಟವಾಗಿ ಚಾಚಿಕೊಂಡಂತಿತ್ತು.

ನಾವು ಹಳ್ಳಿ ಬಿಟ್ಟು ಹೊರಟಾಗ ಕೆರೆಯಲ್ಲಿ ಇನ್ನೂ ಅಲ್ಲಲ್ಲಿ ಹೊಗೆಯೇಳುತ್ತಲೇ ಇತ್ತು. ಸಾಮಾನ್ಯವಾಗಿ ಎಲ್ಲೆಡೆಯೂ ಮಳೆ ಬಂದೀತು ಎನ್ನುವ ನಿರೀಕ್ಷೆಯ ಮಾತೇ ಇತ್ತು. ನಮ್ಮ ರೈಲು ವೇಗ ಹೆಚ್ಚಿಸಿಕೊಳ್ಳುತ್ತಿದ್ದ ಹಾಗೇ ನಾನು ನಮ್ಮ ಬೋಗಿಯ ಕಿಟಕಿಯಿಂದ ನನ್ನ ತಲೆ ಹೊರಗೆ ಹಾಕಿ ನಾವು ಹಿಂದಕ್ಕೆ ಬಿಟ್ಟು ಹೋಗುತ್ತಲಿದ್ದ ಆ ಅರೆಸುಟ್ಟಂತಿದ್ದ ಹಳ್ಳಿಯತ್ತ ನೋಡಿದ್ದು ನನಗೆ ನೆನಪಿದೆ. ನೀವು ಎಂದೂ ಕಾಣಲು ಸಾಧ್ಯವಿಲ್ಲದಷ್ಟು ಕಪ್ಪನೆಯ ದಟ್ಟದಟ್ಟ ಮೋಡಗಳು ಕವಿಯುತ್ತಿದ್ದ ದೃಶ್ಯವಿತ್ತು ಅಲ್ಲಿ. ವರುಷಗಳ ನಂತರ ಹಳ್ಳಿಯ ಪೋಸ್ಟ್ಮಾಸ್ತರು ನಮಗೆ ಪತ್ರವೊಂದನ್ನು ಬರೆದು ನನ್ನ ಅಜ್ಜ ಅಜ್ಜಿ ಇಬ್ಬರೂ ಜೊತೆಜೊತೆಗೇ, ಕತೆಗಳಲ್ಲಿ ನಡೆಯುವ ಹಾಗೆ, ಮಲಗಿದ್ದಲ್ಲೇ ಶಾಂತಿಯಿಂದ ಮರಣ ಹೊಂದಿದ ಸುದ್ದಿಯನ್ನು ಬರೆದು ತಿಳಿಸುವ ಕೃಪೆ ತೋರಿಸಿದರು. ಇತ್ತೀಚೆಗೆ ನನ್ನ ಆಫೀಸಿನಲ್ಲಿ ನಮ್ಮ ಮ್ಯಾನೇಜರ್ ಮಾತನಾಡುತ್ತ ಅಶೋಕ್ ಮತ್ತು ನಾನು ಕಂಪೆನಿಯ ಬೆಸ್ಟ್ ರೆಪ್ಗಳಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲಿ ನಮ್ಮಿಬ್ಬರ ಸಂಬಳದ ಮೇಲಿನ ಕಮಿಶನ್ ಮೊತ್ತ ನಮ್ಮ ಬೇಸಿಕ್ ಪೇಗಿಂತ ಹೆಚ್ಚಾಗಲಿದೆ ಎನ್ನುವ ಸುದ್ದಿ ಕೊಟ್ಟರು. ನನಗೆ ಎಷ್ಟೊಂದು ಪ್ರವಾಸ ಹೋಗಬೇಕಾಗಿತ್ತೆಂದರೆ ನಾನು ಮನೆಯಲ್ಲಿರುವುದೇ ಕಡಿಮೆ ಎಂಬಂತಾಯಿತು. ಅಮ್ಮನೊಂದಿಗೆ ಮಾತನಾಡುವುದಕ್ಕೂ ಆಗುತ್ತಿರಲಿಲ್ಲ ಎನ್ನುವುದು ನಿಜವಾದರೂ ಅದೇನೂ ನಮಗೆ ಹೊಸದಾಗಿರಲಿಲ್ಲ. ಅವಳು ನಾನಿಲ್ಲದೇ ಇದ್ದಾಗ ನನಗಾಗಿ ಕಾಯುತ್ತಿದ್ದಳು ಮತ್ತು ನಾನಿರುವಾಗ ನನ್ನನ್ನು ಕಾಯುತ್ತಿದ್ದಳು. ನಾನೊಬ್ಬ ಪ್ರವಾಸೀ ಮಾರಾಟ ಪ್ರತಿನಿಧಿಯಾಗಿದ್ದೆ ಮತ್ತು ಮಾಡುವುದಕ್ಕೆ ಕೆಲಸ ಸಾಕಷ್ಟಿತ್ತು.

ಒಂದು ಭಾನುವಾರ ಅಪರಾಹ್ನ ಊಟವಾದ ಬಳಿಕ ಸಿಗರೇಟ್ ಸೇದುತ್ತ ಹಾಸಿಗೆಯ ಮೇಲೆ ಬಿದ್ದುಕೊಂಡೇ ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ. ಹೊರಗೆ ಕಾಣುತ್ತಿದ್ದ ಒಂದು ವೇರ್ಹೌಸಿನ ಗೋಡೆಯ ಮೇಲೆ ಒಂದಿಷ್ಟು ಜಾಗ, ಗೋಡೆಯ ಒಳಗೆಲ್ಲೋ ನೀರಿನ ಲೀಕೇಜ್ ಇದ್ದಿದ್ದರಿಂದ ಒದ್ದೆಯಾಗಿ ಅಲ್ಲಿ ಕಪ್ಪನೆಯ ಪಾಚಿಯ ಕಲೆ ದಟ್ಟವಾಗಿ ಮೂಡಿತ್ತು. ನಾನು ಅದನ್ನೇ ದಿಟ್ಟಿಸುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಅದು ಹಬ್ಬದ ದಿನ ಮುಂಜಾನೆ ತಲೆಸ್ನಾನ ಮಾಡಿ ಕೂದಲು ಒಣಗಿಸಲು ಹರವಿಕೊಂಡ ಹೆಣ್ಣಿನ ಮುಡಿಯಂತೆ ಕಾಣಿಸತೊಡಗಿತು. ರಸ್ತೆಯಾಚೆ, ವೇರ್ಹೌಸ್ ಗೋಡೆಯ ಗೇಟಿಗೂ ಆಚೆ ಮನೆಬಳಕೆಯ ಪೀಠೋಪಕರಣಗಳನ್ನೆಲ್ಲ ಪೇರಿಸಿ ಅದರ ಮೇಲೊಂದು ಸೈಕಲ್ ಸಹಿತ ಜೋಡಿಸಿದ್ದ ಒಂದು ಲಾರಿ ನಿಂತಿದ್ದು ಕಾಣಿಸುತ್ತಿತ್ತು. ಮನೆಯ ಸದಸ್ಯರು ಅಲ್ಲಿ ಸುತ್ತಲೂ ನಿಂತಿದ್ದರೆ ಕೆಲಸದವರು ಆಚೀಚೆ ದಡಬಡಿಸಿ ಓಡಾಡುತ್ತಿದ್ದರು. ಇದ್ದಕ್ಕಿದ್ದ ಹಾಗೆ ಶ್ರೀನಿವಾಸನ್ ಲಾರಿಯ ಹಿಂದುಗಡೆಯಿಂದ ಎದುರು ಬರುತ್ತಿರುವುದು ಕಾಣಿಸಿತು. ಅವನ ಕೈಯಲ್ಲಿ ಖಾಕಿ ಬಣ್ಣದ ಲಕೋಟೆಯೊಳಗಿದ್ದ ಒಂದು ಪಾರ್ಸೆಲ್ ಇತ್ತು. ನಾನು ತಿರುಗಿದಾಗ ಬಾಗಿಲಲ್ಲೆ ನಿಂತು, ಅವಳು ಯಾವಾಗಲೂ ಮಾಡುತ್ತಿದ್ದ ಹಾಗೆ ಕಣ್ಣುಗಳಲ್ಲೇ ನನ್ನನ್ನು ಆಪೋಶನ ತೆಗೆದುಕೊಳ್ಳುವವಳಂತೆ ನನ್ನನ್ನು ಗಮನಿಸುತ್ತಿದ್ದ ಅಮ್ಮನನ್ನು ಕಂಡೆ.

ಅದೊಂದು ಓಘದ ತಂತು ಇದ್ದಕ್ಕಿದ್ದಂತೆ ಕಡಿದು ಹೋದಂತೆ ಅವಳು ತಟ್ಟನೆ ಬೇರೆಡೆ ತಿರುಗುತ್ತ, ತೀರ ಮುಗ್ಧವಾಗಿ ಹೇಳಿದ್ದಳು, "ನೀನು ಎಲ್ಲ ನಿಮ್ಮಪ್ಪನ ಹಾಗೆ, ಥೇಟ್ ನಿಮ್ಮಪ್ಪನ ಹಾಗೇ." ತಕ್ಷಣವೇ ಏನೋ ಹೇಳಲಿದ್ದವನು ಪ್ರಯತ್ನಪೂರ್ವಕವಾಗಿ ತಡೆದುಕೊಂಡೆ, ಆ ಹೊತ್ತಿನಲ್ಲಿ ಏನು ಹೇಳಿದ್ದರೂ, ಒಂದು ಮುಗುಳ್ನಗೆ ಕೂಡಾ ಅವಳ ಅಳುವಿನ ಕಟ್ಟೆಯೊಡೆಯಲು ಸಾಕಾಗಿತ್ತು. ತುಕೈಥಾದ್, ಯಾವತ್ಮಾಲ್, ಪೊಲ್ಲಾಚಿ, ತೆನ್ಕಸಿ, ಪನ್ಸುಕಾರ, ಫಾಜಿಲ್ಕಾ ಮತ್ತು ಮಂಖುರ್ದ್. ಪ್ರಯಾಣಿಕರ ಅನುಕೂಲತೆಗಾಗಿ ರಾತ್ರಿಯ ಮೇಲ್, ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ಟ್ರೇನುಗಳ ಗಾರ್ಡುಗಳಿಗೆ, ಮುಂಚಿತವಾಗಿ ತಮ್ಮನ್ನು ಎಬ್ಬಿಸಿ ಎಂದು ಕೇಳಿಕೊಂಡಂಥ ಏರ್ಕಂಡೀಶನ್ ಮತ್ತು ಫಸ್ಟ್ಕ್ಲಾಸ್ ಬೋಗಿಗಳ ಪ್ರಯಾಣಿಕರನ್ನು ನಿದ್ದೆಯಿಂದ ಎಚ್ಚರಿಸುವಂತೆ ಸೂಚನೆ ಕೊಟ್ಟಿರುತ್ತಾರೆ. ಆದಾಗ್ಯೂ ಪ್ರಯಾಣಿಕರು ಎಚ್ಚರಗೊಳ್ಳದೇ ಇದ್ದಲ್ಲಿ ಅಥವಾ ತಾವು ಪ್ರಯಾಣಿಸಬೇಕಾದ ಸ್ಟೇಶನ್ನಿಗಿಂತ ಮುಂದಕ್ಕೆ ಪ್ರಯಾಣಿಸಿದಲ್ಲಿ ಪಾವತಿಸಬೇಕಾದ ದಂಡ ಮತ್ತು ಮೇಲ್ತೆರಿಗೆಯ ವಿಚಾರದಲ್ಲಿ ರೈಲ್ವೇ ಯಾವುದೇ ಜವಾಬ್ದಾರಿ ಹೊಂದಿರುವುದಿಲ್ಲ ಎನ್ನುವುದನ್ನು ತಿಳಿದಿರಬೇಕು.

ನಾನು ಮತ್ತೂ ಒಂದು ಅಫೀಶಿಯಲ್ ಟೂರಿನಲ್ಲಿದ್ದೆ. ರೈಲು ಇನ್ನೂ ಸ್ಟೇಶನ್ ಸಮೀಪಿಸುವುದಕ್ಕೂ ಮೊದಲೇ ಸಮುದ್ರದ ಮೇಲಿಂದ ಬೀಸುವ ಉಪ್ಪುಗಾಳಿಯಲ್ಲಿ ಸೇರಿಕೊಂಡೇ ಇರುವ ಪೆಟ್ರೋಲ್ ಮತ್ತು ಸಮುದ್ರಜೀವಿಗಳ ವಾಸನೆ ಮೂಗಿಗೆ ಬಡಿದಿತ್ತು. ದೂರ ಕ್ಷಿತಿಜದಲ್ಲಿ ಸಾಗರದ ಅಲೆಗಳು, ಉಪ್ಪು ಒಣಗಿಸುವ ಗದ್ದೆಗಳು, ಕಿನಾರೆಯ ಪಾಚಿಗಟ್ಟಿದ ನೆಲ ಎಲ್ಲ ಕಣ್ಣಿಗೆ ಬಿದ್ದುದ್ದು ನಂತರ. ರೈಲಿನಲ್ಲಿ ಪ್ರಯಾಣಿಸುವವರಿಗೆ ತೀರ ಸಾಮಾನ್ಯವಾದ ಕೆಲವು ಭ್ರಾಂತಿಗಳಿಂದ ನನ್ನಪ್ಪನೂ ನರಳಿರಬಹುದೇ ಎಂಬ ಯೋಚನೆಯೊಂದು ಮನಸ್ಸಿನಲ್ಲಿ ಸುಳಿದು ಹೋಯಿತು. ಅದೇ ಕಿಟಕಿಯಲ್ಲಿ ಇಡೀ ಜಗತ್ತು ಧಡಬಡಿಸಿ ಓಡುತ್ತಿರುವಾಗ ನನ್ನಪ್ಪ ಕಂಪಾರ್ಟ್ಮೆಂಟಿನ ಕಿಟಕಿಯೆದುರು ಕಲ್ಲಿನಂತೆ ನಿಂತೇ ಇರುತ್ತಾರೆ. ಆದರೆ ನನ್ನಪ್ಪನ ವಿಷಯದಲ್ಲಿ ಇದೇ ನಿಜವಾದ ವಾಸ್ತವ ಸಂಗತಿಯಾಗಿತ್ತು. ಅವನು ಅದಾಗಲೇ ತಾನೊಬ್ಬ ಸದಾ ಪ್ರಯಾಣಿಸುತ್ತಲೇ ಇರುವ ವ್ಯಕ್ತಿ ಎಂಬ ಭ್ರಾಂತಿಗೆ ಸಿಲುಕಿದ್ದ. ಇದೀಗ ಆ ಭ್ರಾಂತಿಯೊಳಗಿನ ಇನ್ನೊಂದು ಭ್ರಾಂತಿ ಬಡಿದಿರಬೇಕು ಅವನಿಗೆ. ಜಾಗ್ರತೆ! ಕಿಟಕಿ ತೆರೆಯಬೇಡ. ರೈಲು ಸಾಗುತ್ತಿರುವ ದಿಕ್ಕಿಗೆ ತಲೆ ಹೊರಗೆ ಹಾಕಿ ನೋಡಬೇಡ. ರೈಲ್ವೇ ಇಂಜಿನ್ನಿನ ಹೊಗೆ ಮತ್ತು ಬೂದಿ ಕಣ್ಣಿಗೆ ಹೋದೀತು. ಗಾಳಿಯಲ್ಲಿರುವ ಮಣ್ಣು, ಧೂಳಿನ ಬಗ್ಗೆಯಂತೂ ಹೇಳಬೇಕಾದ್ದೇ ಇಲ್ಲ.

ಇನ್ನೂ ಒಂದು ಹೊಸ ಜಾಗ. ಅರ್ಥವಾಗದ ವಿಚಿತ್ರ ಭಾಷೆಯನ್ನಾಡುವ ಜನ. ನಾನು ಲಗ್ಗೇಜ್ ಇರಿಸುವಲ್ಲಿ ನನ್ನ ಸೂಟ್ಕೇಸ್ ಒಪ್ಪಿಸಿ ನಗರದೊಳಗೆ ಕಾಲಿಟ್ಟೆ. ಆಗಸವೆಲ್ಲ ಧೂಳು, ಹೊಗೆಯಿಂದ ಮುಸುಕಿತ್ತು. ಕಪ್ಪನೆಯ ಇಬ್ಬನಿ ಸುರಿಯುತ್ತಿದೆಯೋ ಎಂಬಂತೆ ಕರಿಯ ಬಣ್ಣದ ಧೂಳು ಮೆಲ್ಲನೆ ಜನರ ಮೇಲೆ ಸುರಿಯುತ್ತಲೇ ಇತ್ತು. ಜನ ಮಾತ್ರ ತಲೆತಗ್ಗಿಸಿ ಮಾತಿಲ್ಲದೆ ಧಾವಂತದಿಂದ ಸಾಗುತ್ತಿದ್ದರು.

ಈ ಜಾಗವು ನನಗೆ ಪೂರ್ತಿಯಾಗಿ ಅಪರಿಚಿತವೂ, ಹೊಸದೂ ಆಗಿದ್ದರೂ ಆಳದಲ್ಲೆಲ್ಲೊ ಇದೆಲ್ಲ ತೀರ ಗೊತ್ತಿರುವ ಜಾಗವಲ್ಲವೇ ಎನ್ನುವ ಆಪ್ತ ಭಾವ. ಧೂಳಿನಿಂದ ತುಂಬಿದ ಗಾಳಿ ಒಮ್ಮೆಗೇ ಬಿರುಸಾಗಿ ಬೀಸತೊಡಗಿತು. ನನ್ನ ಮೂಗು ಉರಿಯತೊಡಗಿ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅಂಗಡಿ ಮುಂಗಟ್ಟುಗಳ ಹೊದಿಕೆ, ಅಂತರ್ರಾಜ್ಯ ಗಡಿಭಾಗದ ನಿಲ್ದಾಣದಲ್ಲಿ ನೆರೆದಿದ್ದ ಟ್ರಕ್ಕು,ಬಸ್ಸುಗಳ ಟರ್ಪಾಲುಗಳು ಪಟಪಟನೆ ಬಡಿದುಕೊಂಡು ಗಾಳಿಗೆ ಮೇಲೇರುವುದು, ಬಡಿಯುವುದು ಸುರುವಾಯಿತು. ಕೈಬೀಸಿ ಬಾ ಎಂದು ಕರೆಯುವಂತೆ ಮೇಲೇರಿ ಕೆಳಗಿಳಿದು ಮಾಡುತ್ತಿದ್ದ ಟರ್ಪಾಲುಗಳ ಓಲಾಟ ಹೇಗಿತ್ತೆಂದರೆ, ಅವು ನನ್ನ ಗುರುತು ಹಿಡಿದು ನನ್ನ ಕಳೆದು ಹೋದ ಬಾಲ್ಯದತ್ತಲೇ ಬಾ ಹೀಗೆ ಎನ್ನುತ್ತ ಕರೆಯುತ್ತಿವೆ ಎನಿಸಿತು. ನಾನು ನನ್ನ ರೌಂಡ್ಸ್ ಮುಗಿಸಿ, ಆರ್ಡರ್ಸ್ ಪಡೆದು, ಇಂಡೆಂಟ್ಗಳನ್ನು ಅಂಚೆಗೆ ಹಾಕಿ ನನ್ನ ಕೆಲಸ ಮುಗಿಸಿದೆ.

ಬೀದಿಯಲ್ಲಿ ಚಿಂದಿಯುಟ್ಟ ಮಕ್ಕಳು ಅದೇನೋ ಆಟ ಆಡುತ್ತಿದ್ದರು. ನನಗದು ಅರ್ಥವೇ ಆಗಲಿಲ್ಲ. ಚೆನ್ನಾಗಿ ಗೊತ್ತಿದೆ ಎನಿಸುವ ಸಂಗತಿಯೊಂದನ್ನು ಗುರುತಿಸಲು ಪಾಡುಪಡುವ ಒತ್ತಡ ಬೃಹದಾಕಾರವಾಗಿ ಬೆಳೆಯುತ್ತಿತ್ತು, ನಾನು ಮತ್ತೆ ಒಂದು ಮಗುವಂತೆ ಮೆತ್ತಗಾಗುವ ತನಕ. ಇನ್ನೊಬ್ಬನ ಮಾತು ತೊಟ್ಟ ಭಾಷೆಯ ದೇಹದ ಬಗ್ಗೆ ಎಳ್ಳಷ್ಟೂ ಗಮನಕೊಡದಿರುವಾಗಲೂ ಆತ ಹೇಳುತ್ತಿರುವುದರ ಭಾವ ದಕ್ಕಿಸಿಕೊಳ್ಳಬಲ್ಲ ಒಂದು ಕೇವಲ ಜೀವಿಯಾಗುವ ತನಕ. ಗೊಂದಲ ಮತ್ತು ನನ್ನನ್ನು ನಾನು ಎಲ್ಲೊ ಕಳೆದುಕೊಂಡಂಥ ಲುಪ್ತಭಾವದೊಂದಿಗೆ ನಾನು ತೆಪ್ಪಗೆ ರೈಲ್ವೇ ಸ್ಟೇಶನ್ನಿಗೆ ಬಂದು ರೆಸ್ಟ್ ರೂಮಿನಲ್ಲಿ ಮಲಗಿದೆ. ನಾನು ಕಣ್ತೆರೆದಾಗ ಕತ್ತಲಾವರಿಸಿತ್ತು.

ರಾತ್ರಿಯ ಆ ಹೊತ್ತಿನಲ್ಲಿ ಸ್ಟೇಶನ್ನಿನಲ್ಲಿ ಯಾರೊಬ್ಬರೂ ಇದ್ದಂತಿರಲಿಲ್ಲ. ಟೀ ಸ್ಟಾಲು ಕೂಡ ಮುಚ್ಚಿತ್ತು. ಎದುರಿನ ಪ್ಲ್ಯಾಟ್ಫಾರ್ಮ್ ಮೇಲೆ ಒಬ್ಬ ಪೋರ್ಟರ್ ಕೈಗಾಡಿಯ ಮೇಲೆ ಅಲ್ಲಾಡದೆ ಬಿದ್ದುಕೊಂಡಿದ್ದ. ಓವರ್ಬ್ರಿಜ್ಜಿನ ಬುಡದಲ್ಲಿ ಎರಡು ನಾಯಿ, ದನ ಮಲಗಿದ್ದವು. ಪ್ಲ್ಯಾಟ್ಫಾರ್ಮಿನ ತುತ್ತ ತುದಿಯಲ್ಲಿ ನಳ್ಳಿಯ ಪಕ್ಕ ಒಬ್ಬ ಮುದುಕ ಹೊಟ್ಟೆಯಲ್ಲಿದ್ದುದೆಲ್ಲಾ ಕಾರಿಕೊಳ್ಳುತ್ತಾ ಇದ್ದ. ಹೊರಗೆ ಕತ್ತಲಿನಲ್ಲಿ ಮೌನವಾಗಿ ನಿಂತಿದ್ದ ಕಟ್ಟಡಗಳು, ಹಳದಿ ಬೆಳಕು ಚೆಲ್ಲುವ ವಿವಿಧಾಕಾರದ ಲೈಟ್ಶೇಪುಗಳು ಕಾಣಿಸುತ್ತಿದ್ದವು. ಸುಮ್ಮನೇ ನಡೆಯತೊಡಗಿದೆ. ಶಟರ್ ಕೆಳಕ್ಕೆಳೆಯುವ ಮುನ್ನ ಒಂದು ರೆಸ್ಟೊರೆಂಟಿನಿಂದ ಒಂದು ನಾಯನ್ನು ಹೊರಕ್ಕೆ ಒದ್ದು ಎಸೆಯಲಾಯಿತು. ಒಣಗಿಹೋದ ಗಂಟಲಿನಲ್ಲೇ ಮಣಿಸರದ ತೆರೆಯನ್ನು ಸರಿಸಿ ನಾನು ಅವಳ ಪಾರ್ಟಿಶನ್ ಹೊಕ್ಕೆ, ಅವಳು ಮಲಗಿದ್ದಳು. ನನ್ನನ್ನು ನೋಡಿ ಅವಳು ಉರಿಯುತ್ತಿದ್ದ ಕಣ್ಣುಗಳನ್ನುಜ್ಜಿಕೊಳ್ಳುತ್ತಲೇ ಎದ್ದು ಕುಳಿತಳು. ಸುಸ್ತು ಹೊಡೆದು ಹೋದಂತಿದ್ದ ಅವಳ ತೊಡೆಗಳ ನಡುವೆ ನಾನು ನನ್ನ ಬಾಯಾರಿಕೆ ಹಿಂಗಿಸಿಕೊಳ್ಳದೆ ಸುಮ್ಮನೇ ಬಿದ್ದುಕೊಂಡೆ. ಕ್ವಿಲಾನ್, ಜೆರ್ಸಾಗುಡಾ, ನಾಸಿಕ್, ಪಠಾಣ್ಕೊಟ್, ಮೊಂಘ್ಯಾ, ರಾಕ್ಸುಲ್ ಮತ್ತು ಮಸ್ಜಿದ್. ಅಧಿಕೃತವಾಗಿ ಮತ್ತು ನಿಗದಿತ ಶುಲ್ಕ ಪಾವತಿಸಿದ ಹೊರತು ಪ್ರಯಾಣಿಕರ ವಸ್ತುಗಳು ಕಳೆದು ಹೋದಲ್ಲಿ, ಕೆಟ್ಟು ಹೋದಲ್ಲಿ ಅಥವಾ ಅವುಗಳಿಗೆ ಯಾವುದೇ ಹಾನಿಯುಂಟಾದಲ್ಲಿ ರೈಲ್ವೇಯು ಜವಾಬ್ದಾರವಾಗಿರುವುದಿಲ್ಲ. ನಿಗದಿತ ಶುಲ್ಕ ಪಾವತಿಸಿದ್ದಾಗ್ಯೂ ತಮ್ಮ ತಮ್ಮ ವಸ್ತುಗಳ ಬಗ್ಗೆ ಬೇಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಅಥವಾ ಅನಧಿಕೃತ ವ್ಯಕ್ತಿಗಳ ವಶಕ್ಕೊಪ್ಪಿಸಿದಲ್ಲಿ ಸಹ ರೈಲ್ವೇಯು ಯಾವುದೇ ರೀತಿಯಲ್ಲಿ ಜವಾಬ್ದಾರವಾಗಿರುವುದಿಲ್ಲ.

ಅಂತಹ ಪ್ರಯಾಣಿಕರು, ಪ್ರಥಮ ದರ್ಜೆ ಪ್ರಯಾಣಿಕರಾಗಿದ್ದಲ್ಲಿ, ತಾವು ಊಟ, ಕಾಫಿತಿಂಡಿ ಅಥವಾ ಶೌಚಕ್ಕೆ ತೆರಳುವಾಗ ತಮ್ಮ ಕಂಪಾರ್ಟ್ಮೆಂಟಿನಲ್ಲಿ ತಮ್ಮ ವಸ್ತುಗಳನ್ನು ಸೂಕ್ತ ಸೇವಕರ ಸುಪರ್ದಿಗೆ ಒಪ್ಪಿಸಿ ತೆರಳುವುದು ಉತ್ತಮ. ಆದರೆ, ಕಂಪಾರ್ಟ್ಮೆಂಟಿನಲ್ಲಿ ಬೇರೆ ಯಾವುದೇ ಪ್ರಯಾಣಿಕರು ಇರದೇ ಇದ್ದಲ್ಲಿ ಅಥವಾ ಬೇರೆ ಪ್ರಯಾಣಿಕರು ಕೂಡ ಇಂಥ ಸೇವಕರ ಸೇವೆಯನ್ನು ಪರ್ಯಾಯವಾಗಿ ಬಳಸುವುದಕ್ಕೆ ಒಪ್ಪಿಕೊಂಡಲ್ಲಿ ಮಾತ್ರ ಹೀಗೆ ಮಾಡಬಹುದಾಗಿದೆ. ರಾತ್ರಿಯ ಕೊನೆಯ ಜಾವದಲ್ಲಿ ಇನ್ನೇನು ಹಗಲಾಗುತ್ತಿದೆ ಎನ್ನುವಾಗ ನಾನು ವೇಶ್ಯಾಗೃಹದಿಂದ, ಅವಳ ನಿದ್ದೆಯನ್ನಾಗಲಿ ಕನಸನ್ನಾಗಲಿ ಹೊಕ್ಕು ನೋಡದೆ ಹೊರಬಿದ್ದೆ. ರೈಲ್ವೇ ಸ್ಟೇಶನ್ನಿನ ಮೇಲ್ಗಡೆಯಿದ್ದ ಆ ಅರೆಬರೆ ಬೆಳಕು ಮತ್ತು ಸೊಳ್ಳೆಕಾಟದಲ್ಲಿ ಅದೊಂದೂ ಸಾಧ್ಯವಾಗಿರಲಿಲ್ಲ.

ಸ್ಟೇಶನ್ನಿನ ಲ್ಯಾವೆಟ್ರಿಯಲ್ಲಿ ತನ್ನದೇ ವೈರುಗಳ ಪಂಜರದಲ್ಲಿ ಸಿಕ್ಕಿಕೊಂಡ ಒಂದು ಬಲ್ಬು ಮಂದವಾಗಿ ಉರಿಯುತ್ತಿತ್ತು. ಒಂದು ಹಳೆಯ ಕೊಳೆಯುತ್ತಿದ್ದ ಪೊರಕೆಯ ಕಡ್ಡಿಗಳು ಮಡ್ಡಿಗಟ್ಟಿದ ಯೂರಿನಲ್ಸಿನ ಕೆಳಗಿನ ನೀರು ಹರಿವ ತೋಡಿನಲ್ಲಿ ಸಿಕ್ಕಿಕೊಂಡೇ ಇದ್ದವು. ಯೂರಿನಲ್ಸ್ ಎದುರು ನಿಂತು ನಾನು ನನ್ನ ಅಜ್ಜಿಯ ಜೊತೆ ಚಿಕ್ಕಂದಿನಲ್ಲಿ ರೈಲು ಪ್ರಯಾಣ ಮಾಡಿದಾಗಿನ ನೆನಪುಗಳಿಗೆ ಸರಿದೆ. ಮಾನ್ಸೂನ್ ತಿಂಗಳಿನಲ್ಲಿ ಘಟ್ಟಪ್ರದೇಶದಲ್ಲಿ ಸಾಗುತ್ತಿದ್ದ ನೆನಪುಗಳವು. ಗುಡ್ಡಬೆಟ್ಟಗಳ ನಡುನಡುವೆ ಮಳೆ ನೀರಿಗೆ ಕೃತಕವಾಗಿ ಹುಟ್ಟಿಕೊಂಡ ಜಲಪಾತಗಳು ಕಂಡಾಗಲೆಲ್ಲ ಅಜ್ಜಿ ಹೇಳುತ್ತಿದ್ದಳು, ದೂರದಿಂದಷ್ಟೇ, ಹತ್ತಿರ ಹೋದರೆ ಬರೀ ಕೊಳಕು ನೀರು. ನಗುತ್ತಿದ್ದೆವು. ಕಗ್ಗಲ್ಲ ಸನಿಹದಿಂದ ಸಾಗುವಾಗ ಅವು ಕೂಡ ಒಂಥರಾ ಮಳೆನೀರಿನಲ್ಲಿ ಹುಲ್ಲು ತೊಳೆದಿಟ್ಟಂತೆ ವಾಸನೆ ಸೂಸುತ್ತಿದ್ದವು. ಉಳಿದಂತೆ ಹೆಚ್ಚಿನೆಲ್ಲಾ ಕಡೆ ನೀರಲ್ಲಿ ಅದ್ದಿದಂತಿದ್ದ, ತುಂಡು ತುಂಡಾದಂತೆ ಕಾಣುವ ಹಳ್ಳಿಯ ಹೊಲಗದ್ದೆಗಳು, ಸಿಹಿಯಾದ ಪರಿಮಳ ಬೀರುವ ಗಿಡಗಂಟಿಗಳು, ಗುಡ್ಡಬೆಟ್ಟಗಳಿಂದ ಹರಿದು ಬಂದ ನೀರಿನ ತೋಡುಗಳು ಸೀಳಿ ಹಾಕಿದ ಭೂಪ್ರದೇಶ, ಬೇರೆ ಬೇರೆ ವರ್ಣವಿನ್ಯಾಸದ ಹಸಿರು ಎಲ್ಲೆಲ್ಲೂ ಕಣ್ತುಂಬ ಕಾಣಿಸೋದು. ಉಲುಬೆರಿಯಾ, ತಿತಾಗಾರ್, ಅಲ್ವಾಯಿ, ಲಾಲ್ಗೋಲಾ, ಸೋದೆಪುರ್, ಡಾನ್ಕುನಿ......
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ