Sunday, May 21, 2017

ಸ್ವರ್ಗದಲ್ಲೂ ಇಲ್ಲ ಅದು

ಪೀಟರ್ ಆರ್ನರ್ ಕೆಲವೊಮ್ಮೆ ಅಚ್ಚರಿಯನ್ನೂ ಮರುಕವನ್ನೂ ಹುಟ್ಟಿಸುತ್ತಾನೆ. ಯಾವತ್ತೋ ಹಿಂದೆ ತಾನು ಹೆಂಡತಿಯ ಜೊತೆ ವಾಸವಿದ್ದ ಒಂದು ಬಾಡಿಗೆ ಮನೆಯ ಬಾಗಿಲಿನ ಮೇಲೆ ಆಗಲೂ ಇದ್ದ ಹೆಸರಿನ ಚೀಟಿ ಇನ್ನೂ ಇರುವುದು ಪವಾಡವೆಂದೇ ನಂಬುತ್ತ, ಅದನ್ನು ಕಿತ್ತು ಕಿಸೆಗೆ ಸೇರಿಸಿಕೊಂಡು ಬರುವ, ಅದರಲ್ಲಿ ಯಾವುದೋ ವೈಭವದ ರೋಮಾಂಚನ ಕಾಣುವ ಈ ಆರ್ನರ್ ಆಗಾಗ ಹನಿಗಣ್ಣಾಗುತ್ತಾನೆ. ಮಡದಿಯ ಮೇಲಿನ ಇವನ ಪ್ರೀತಿ ಇನ್ನೊಂದು ದಂತಕತೆ ಎನ್ನಲೆ? ಅವಳೋ ಇವನನ್ನು ದ್ವೇಷಿಸುವಷ್ಟು ಮತಿಭ್ರಾಂತಳಾಗಿ, ಚಿಕಿತ್ಸೆ ಪಡೆದು ಇವನ ಬದುಕನ್ನೆ ಹೈರಾಣಾಗಿಸಿದವಳು. ಒಂದು ರಾತ್ರಿ ಕದ್ದು ಮನೆ ಬಿಟ್ಟು ತೆರಳುವಂತೆ, ಯಾರದೋ ಅಟ್ಟದಲ್ಲಿ ಧೂಳಿನಲ್ಲಿ ಮಲಗುವಂತೆ ಮಾಡಿದವಳು. ಇಲ್ಲಿ ಹಾಂಟಾ ಬಗ್ಗೆ ಹೇಳುತ್ತ ಅಲ್ಲಲ್ಲಿ ಅವನು ವಿವರಗಳಿಗೆ ಹೋಗದೆ ತಪ್ಪಿಸಿಕೊಂಡಿದ್ದರೆ ಅದಕ್ಕೆ ಕಾರಣ ಅವನ ಮೃದು ಸ್ವಭಾವ ಹುಟ್ಟಿಸಿದ ಆತಂಕವೇ ಹೊರತು ಇನ್ನೇನಲ್ಲ. ಸ್ವಭಾವತಃ ‘ಹೆಚ್ಚು ಹೇಳಬಾರದು’ ಎನ್ನುವ ಅರಿವಿರುವ ಎಚ್ಚರದ ಲೇಖಕನೇ ಅವನು. ಆದರೆ ಇಲ್ಲಿ ಅವನು ಹೆಚ್ಚು ವಿವರಿಸದೇ ಬಿಟ್ಟ ಎರಡು ಸನ್ನಿವೇಶಗಳ ಬಗ್ಗೆ ಹೇಳಲೇ ಬೇಕು. ಈ ಲೇಖನ ಮುಗಿದ ಬಳಿಕ ಅವು ಇವೆ.

ರಾತ್ರಿಯ ರೈಲಿನಲ್ಲಿ ಪಯಣ


1999 ರಲ್ಲಿ ಎಮ್ ಜೊತೆ ಕ್ರೊಶಿಯಾದ ಸ್ಪ್ಲಿಟ್‌ಗೆ ರಾತ್ರಿ ರೈಲಿನಲ್ಲಿ ಸಾಗುತ್ತಿದ್ದೆ. ನಮ್ಮ ರೈಲಿನಲ್ಲಿ ಪಾನಮತ್ತ ರಷ್ಯನ್ನರ ಒಂದು ಗುಂಪು ರಾತ್ರಿಯಿಡೀ ಪಾರ್ಟಿ ಮಾಡುತ್ತ ವಿಪರೀತ ಸದ್ದುಗದ್ದಲ ನಡೆಸಿದ್ದರು. ಒಬ್ಬ ಕಂಡಕ್ಟರ್ ನಮಗೆ "ಇವರೆಲ್ಲ ರಷ್ಯನ್ನರೆಂದು ತಿಳಿದು ಮಂಗ ಆಗಬೇಡಿ, ಇವರೆಲ್ಲ ಸ್ಲೊವನ್ನರು." ಎಂದು ತಿಳಿಸಿದ. ಇದ್ದುದರಲ್ಲಿ ಅತ್ಯಂತ ಗದ್ದಲ ಎಬ್ಬಿಸೊ ಮಂದಿ ಈ ಸ್ವೊವನ್ನರು ಎಂದೂ ಆತ ಹೇಳಿದ. ಯುಗಾಸ್ಲಾವಿಯಾದಲ್ಲಿ ಮೊದಲಿಗೆ ಎಲ್ಲ ಕಿರಿಕ್ಕು ಸುರುವಾಗಿದ್ದೇ ಇವರಿಂದ.

ಹಾದಿಯಲ್ಲಿ ನಾನು ಏನಾದರೂ ಓದುತ್ತಿರಬೇಕಿತ್ತು. ಬಹುಶಃ ಅದು Too Loud a Solitude ಆಗಿರಬಹುದಿತ್ತು. ಬಹುಮಿಲ್ ಹರಬಾಲ್‌ನ ಗಿಚ್ಚಿಗಿರಿದ ಏಕಾಂತವನ್ನು ಕಂಡ ಮೇಲೆ ಮಿಲನ್ ಕುಂದೇರಾನ ಕೈಬಿಟ್ಟಿದ್ದು ನೆನಪಾಯಿತು. ಈತ ಎಷ್ಟೊಂದು ವಿಶಿಷ್ಟನಾದ ಲೇಖಕ ಎಂದರೆ ಚೆಕ್ ಜನರೇ ಹೇಳುವಂತೆ ಇವನನ್ನು ಅನುವಾದಿಸುವುದೇ ಕಷ್ಟ. ಕೊನೆಗೂ ನನಗೆ ಸಾಧ್ಯವಿರೋದು ಎಷ್ಟು ದಕ್ಕುತ್ತೋ ಅಷ್ಟು ತೆಗೆದುಕೊಳ್ಳೋದು. ಏಕೆಂದರೆ, ಸಾಕಷ್ಟು ಕಾಲ "ನಿಜ" ಹರಬಾಲ್ ನ ಅಂದಾಜು ಅರಿವೇ ನನ್ನ ಪಾಲಿಗೆ ಸಾಕಷ್ಟಾಗಿತ್ತು. ಆ ವರ್ಷ ನಾನು Too Loud a Solitude ನ್ನು ಹಠ ಹಿಡಿದು ಓದಿದ್ದೆ. ಆಮೇಲೆ ಅದನ್ನು ಸದಾ ಪಕ್ಕದಲ್ಲಿರಿಸಿಕೊಳ್ಳುತ್ತೇನೆ. ಬೇಕೆಂದಾಗ ಅದರ ವಿಚಿತ್ರ ಮಾಧುರ್ಯದ ಸಾಲುಗಳ ನಡುವೆ ಹೊಕ್ಕು ಮರೆಯಾಗಿ ಬಿಡಲು ನನಗೆ ಇಷ್ಟ. ಆ ಕಳೆದು ಹೋದ ದಿನಗಳಲ್ಲಿ ನಾನು ಮತ್ತು ಎಮ್ ಒಟ್ಟಾಗಿ ಹೋಗಿದ್ದೆವು. 1999ರ ಪ್ರಾಗ್ವೆ. ನಮ್ಮ ಕೈಲಿ ಹಣವಿರಲಿಲ್ಲ. ಯೌವನವಿತ್ತು, ಖುಶಿಯಾಗಿದ್ದೆವು, ಸಾಕಷ್ಟು ತುಂಟತನ ಇತ್ತು. ಇದಕ್ಕೆ ಹೆಚ್ಚು ಅರ್ಥ ಹಚ್ಚಬೇಡಿ ಮತ್ತೆ. ಮೊದಲ ಬಾರಿ Too Loud a Solitude ಓದಿದಾಗ ನಾನು Letn'a ಪಾರ್ಕಿನಲ್ಲಿದ್ದೆ. ಚೆನ್ನಾಗಿ ನೆನಪಿದೆ, ಬೆಂಚಿನ ಮೇಲೆ ಕೂರದೆ ಸುಮ್ಮನೇ ಸುತ್ತು ಹಾಕುತ್ತ ಇದ್ದೆ, ಪುಸ್ತಕವನ್ನ ತಲೆ ಮೇಲಿಟ್ಟುಕೊಂಡು ಕೂತು ಹಾಕಿದ್ದೆ ಕೂಡ! ಯಾವುದೋ ಸಮ್ಯಕ್‌ಜ್ಞಾನ ಸಿಗುತ್ತಾ ಇದೆ ನನಗೆ ಅನ್ನುವಂಥ ಅನುಭೂತಿಯಾಗಿತ್ತು ನನಗೆ. ಕಳೆದ ಮುವ್ವತ್ತೈದು ವರ್ಷಗಳಿಂದ ಪ್ರಾಗ್ವೇಯ ಬೀದಿಯೊಂದರಲ್ಲಿದ್ದ ನೆಲಮಾಳಿಗೆಯಲ್ಲಿ ಹಳೇ ಪುಸ್ತಕ, ರದ್ದಿಯನ್ನು ರೀಸೈಕಲ್ ಮಾಡುತ್ತಿದ್ದ ಹಂಟಾ ಎನ್ನುವ ಮನುಷ್ಯನ ಕುರಿತು ಇರುವ ಈ ಬರೇ ತೊಂಬತ್ತೆಂಟು ಪುಟಗಳ ಪುಟ್ಟ ಪುಸ್ತಕ, ಕಾದಂಬರಿಯ ಹೆಸರಲ್ಲಿ ಕೊಡುವ ಮಿಂಚಿನ ಆಘಾತ ಸಣ್ಣದೇನಲ್ಲ. ಹಾದಿಯಲ್ಲಿನ ಕಿಂಡಿಯಲ್ಲಿ ಜನ ಪೇಪರು, ಹಳೇ ಪುಸ್ತಕ, ರದ್ದಿಯನ್ನೆಲ್ಲ ತೂರುತ್ತಲೇ ಇರುತ್ತಾರೆ, ಬ್ಯಾರೆಲ್ಲುಗಟ್ಟಲೆ. ಅವನ್ನು ಮುದ್ದೆಮಾಡುವ ಮೊದಲು ಹಂಟಾ ಅವನ್ನೆಲ್ಲ ಓದುತ್ತಾನೆ. ಇಕ್ವೀಸಿಯಾಸ್ಟೀಸ್, ತಾಲ್ಮುಡ್, ಗಯಟೆ, ಸ್ಚಿಲ್ಲರ್, ನೀತ್ಸೆ, ಇಮ್ಯಾನುಯೆಲ್ ಕಾಂಟ್‌ನ ಥಿಯರಿ ಆಫ್ ಹೆವನ್ಸ್. ಸ್ವರ್ಗವೇನೂ ಮಾನವೀಯವಾದುದಲ್ಲ ಎನ್ನುವ ಕಾಂಟ್ ಮೇಲೆ ಅಥವಾ ಕೆಳಗೆ ಕೂಡಾ ಬದುಕು ಸ್ವರ್ಗವಲ್ಲ ಎನ್ನುತ್ತಾನೆ.

ಅತ್ಯಂತ ಶ್ರೇಷ್ಠ ಪುಸ್ತಕವನ್ನು ಹಂಟಾ ತನ್ನ ಮನೆಗೆ ಎತ್ತಿಕೊಂಡೊಯ್ಯುತ್ತಾನೆ. ಮುವ್ವತ್ತೈದು ವರ್ಷಗಳಿಂದ ಹೀಗೆ ಹಂಟಾನ ಪುಟ್ಟ ಅಪಾರ್ಟ್‌ಮೆಂಟಿನ ಗೋಡೆಯೇ ಕಾಣಿಸದಷ್ಟು ಎಲ್ಲೆಲ್ಲೂ ಪುಸ್ತಕಗಳಿಂದ ಆವೃತವಾಗಿದೆ. 

"ಬಾತ್‌ರೂಮಿನಲ್ಲಿ ಕೂಡ ನನಗೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳವಿಲ್ಲ. ಟಾಯ್ಲೆಟ್ ಬಾವ್ಲ್‌ನ ಮೇಲೆ, ನೆಲದಿಂದ ಐದಡಿ ಎತ್ತರಕ್ಕೆ ಸ್ಟ್ಯಾಂಡು, ಶೆಲ್ಫುಗಳನ್ನು ಜೋಡಿಸಿದ್ದೇನೆ, ಸೀಲಿಂಗಿನ ತನಕ. ಅವುಗಳಲ್ಲಿ ನೂರಾರು ಪೌಂಡ್ ತೂಕದ ಪುಸ್ತಕಗಳು ತುಂಬಿವೆ. ಕೂರುವಾಗ ಇಲ್ಲವೇ ಏಳುವಾಗ ಸ್ವಲ್ಪ ಅಜಾಗರೂಕತೆ ಮಾಡಿದರೆ, ಶೆಲ್ಫಿಗೆ ಮೈಯೊರೆಸಿದರೆ ಏನಿಲ್ಲವೆಂದರೂ ಅರ್ಧ ಪೌಂಡ್ ಪುಸ್ತಕಗಳು ದೊಸ್ಸಿಲ್ಲನೆ ಮೈಮೇಲೆ ಬರುತ್ತವೆ. ಪ್ಯಾಂಟು ಕೆಳಗೆ ಜಾರಿಸಿಕೊಂಡ ನಾನು ಅವುಗಳ ಕೆಳಗೆ ಪತ್ತೆಯಾಗುವುದು ಖಚಿತ."

ಹಾಂಟಾ ಓದುವ ಬಹುತೇಕ ಎಲ್ಲ ಪುಸ್ತಕಗಳೂ ಬ್ಯಾನ್ ಆದವು ಅಥವಾ ಸರಕಾರದ ತೀವ್ರ ಅವಕೃಪೆಗೆ ಪಾತ್ರವಾದಂಥವು. 1976 ರಲ್ಲಿ ಸ್ವಂತ ಪ್ರಕಾಶನದಲ್ಲಿ ಮೊತ್ತಮೊದಲ ಬಾರಿಗೆ ಹೊರಬಂದ Too Loud a Solitude ಕೂಡ ಒಂದೇ ಒಂದು ಬೆರಳು ಎತ್ತದೆಯೂ ಕಮ್ಯುನಿಸಂ ವಿರೋಧಿ ಎಂಬ ಹಣೆಪಟ್ಟಿಗೆ ಬಿದ್ದು ಅಧಿಕೃತವಾಗಿ ಪ್ರಕಟವಾಗಿದ್ದು 1989ರ ವೆಲ್ವೆಟ್ ರೆವಲ್ಯೂಶನ್ ಬಳಿಕವೇ. ಈ ಪುಸ್ತಕ ತನ್ನ ಕಾಲದ ರಾಜಕಾರಣವನ್ನು ಮೀರಿ ಬೆಳೆದುನಿಂತಿದೆ. ಈ ಪುಸ್ತಕ ಇವತ್ತಿಗೆ ಎಷ್ಟು ಪ್ರಸ್ತುತ ಎನ್ನುವುದರ ಬಗ್ಗೆ ಯಾವ ಸಂಶಯವೂ ಇಲ್ಲ. Too Loud a Solitude ಒಂದು ಸ್ಮರಣೀಯ ಓದನ್ನು ಕರುಣಿಸುವ ಕೃತಿ. ಲಂಗುಲಗಾಮಿಲ್ಲದ ತಂತ್ರಜ್ಞಾನದ ಅಭಿವೃದ್ಧಿಯ ಆರಾಧನೆ ನಿಶ್ಚಿತವಾಗಿ ಮಾನವೀಯ ಚೈತನ್ಯದ ಸೆಲೆಯನ್ನು ಬತ್ತಿಸುತ್ತದೆ ಎನ್ನುವುದನ್ನು ಈ ಕೃತಿ ತಣ್ಣಗೆ ಸೂಚಿಸುತ್ತದೆ. ಹೇಗೆ ಮನುಷ್ಯನ ವ್ಯಕ್ತಿಗತವಾದ ನೆನಪು, ಸ್ಮೃತಿ ಮತ್ತು ಅರಿವು ಅವನನ್ನು ಮತ್ತೆ ಮತ್ತೆ ಜೀವಂತಿಕೆಯಿಂದಿಡಬಲ್ಲ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ ಎನ್ನುವುದನ್ನು ಕೂಡಾ ಈ ಕೃತಿಯಲ್ಲಿ ಕಾಣುತ್ತೇವೆ. ಈ ವಿಶದವಾದ ಮಾತುಗಳ ಹಂದರದಲ್ಲಿ ಹರಬಾಲ್ ಸಾಕಷ್ಟು ದೃಢವಾದ ಒಂದು ಹುಯಿಲಿಟ್ಟಿದ್ದಾನೆ. 

ಇಷ್ಟು ಹೇಳಿದ ಮೇಲೆ ನಾನು ಈ ಪುಸ್ತಕದಲ್ಲಿ ಸಾಕಷ್ಟು ಮಾನವೀಯ ನೆಲೆಯ ಮುಖಗಳೂ ಇವೆ ಎನ್ನುವುದನ್ನು ಹೇಳಲೇ ಬೇಕು. ನನಗೆ ತಿಳಿದ ಮಟ್ಟಿಗೆ ಯಾವುದೇ ಗಂಭೀರವಾದ ಪುಸ್ತಕವಾದರೂ ಮಾನವೀಯ ನೆಲೆಗಳನ್ನು ಕಾಣುವ ಪರಿಗಿಂತ ಕಡಿಮೆ ಗಂಭೀರವಾಗಿ ಈ ಪುಸ್ತಕ ಕಂಡಿಲ್ಲ. ಹಾಂಟಾ ತಿಕ್ಕಲ ಮತ್ತು ಜಾಣ. ಪುಸ್ತಕದ ಬಹುಭಾಗ ಅವನು ದೊರೆಯಂಥಾ ಕುಡುಕ. ಬೀದಿಬದಿಯ ಅವನ ನೆಲಮಾಳಿಗೆಯಲ್ಲಿ ಅವನು ಜೀಸಸ್ ಜೊತೆ ಮಾತುಕತೆಯಲ್ಲಿ ತೊಡಗುತ್ತಾನೆ. ಹಾಗೆಯೇ ಲಾವೋತ್ಸೆ ಜೊತೆಗೂ. ಉಳಿದಂತೆ ಓದು, ಓದು, ಓದು. ಅಮಲಿನಲ್ಲೂ ಓದುತ್ತಾನೆ, ಸ್ವಸ್ಥವಿದ್ದಾಗಲೂ ಓದುತ್ತಾನೆ. ನಾಶಪಡಿಸಲು ಮನಸ್ಸೊಪ್ಪದ ಪುಸ್ತಕಗಳನ್ನು ಅವನು ಓದುತ್ತಾನೆ. ಹಾಗೆ ಓದುತ್ತ ಅವನು ತನ್ನ ಬದುಕಿನ ಒಂದೊಂದೇ ಘಟನೆಗಳನ್ನು, ಕಳೆದುಕೊಂಡ ಪ್ರೇಮವನ್ನು, ಅತ್ಯಂತ ಪ್ರೀತಿಯ ಅಂಕಲ್‌ನ್ನು ನೆನೆಯುತ್ತಾನೆ. ಪೇಪರ್ ವ್ಹೇಟಿನಷ್ಟೇ ಭಾರದ ನೆನಪುಗಳು ಇನ್ನು ಕೆಲವು. ಜೀವ ಬಾಯಿಗೆ ಬಂದಂಥ ಘಟನೆಗಳು ಕೆಲವು. ಇವನೆದೆಗೆ ಚಾಕು ಹಿಡಿದವನ ಉದ್ದೇಶ ಇವನ ಪರ್ಸು ಎಗರಿಸುವುದೇನೂ ಆಗಿರಲಿಲ್ಲ. ಅವನಿಗೆ ಬೇಕಿದ್ದುದು ಯಾರೋ, ಅವನ ಕವಿತೆಗಳನ್ನು ಒಂದು ಬಾರಿ ಕೇಳಲು ಸಿದ್ಧನಿರುವ ಯಾರಾದರೂ ಒಬ್ಬ.

ಹಂಟಾಗೆ ಅವನ ಜಿಪ್ಸಿ ಹುಡುಗಿಯ ತುಟಿಗಳ ನೆನಪಾಗುತ್ತದೆ. ಇವನು ಮನೆಯಲ್ಲಿಲ್ಲದಾಗ ಬಹುಶಃ ನಾಝಿಗಳ ಪೋಲಿಸು ಪಡೆ ಅವಳನ್ನು ಹಿಡಿದೊಯ್ದು ಕಾನ್ಸಂಟ್ರೇಶನ್ ಕ್ಯಾಂಪುಗಳಲ್ಲಿ ಕೂಡಿಹಾಕಿದ್ದಿರಬಹುದು. ಅಂತೂ ಅವಳು ನಾಪತ್ತೆಯಾಗಿದ್ದಾಳೆ. ಆವತ್ತು ಸಂಜೆ ಅವನು ಮನೆಗೆ ಮರಳಿದಾಗ ಅವಳಿರಲಿಲ್ಲ. ಶಾಶ್ವತವಾಗಿ ಹೊರಟು ಹೋಗಿದ್ದಳು.

ಪುಸ್ತಕದ ಮೊದಲಲ್ಲೇ ಹಾಂಟಾ ತಾಲ್ಮುದನ್ನ ಕೋಟ್ ಮಾಡುತ್ತಾನೆ, "ಅದೇಕೆಂದರೆ ನಾವು ಆಲಿವ್ಸ್ ತರ: ನಮ್ಮನ್ನು ಹಿಂಡಿದಾಗಲೇ ನಾವು ನಮ್ಮೊಳಗಿನ ಅತ್ಯಂತ ಶ್ರೇಷ್ಠವಾದ್ದನ್ನು ಕೊಡುವವರು." ಕಾದಂಬರಿಯ ಕೊನೆಗೆ ಬರುವಷ್ಟರಲ್ಲಿ ನಮಗೇ ತಿಳಿದು ಬಿಡುತ್ತದೆ, ಈ ಒಂದು ಸಾಲು ಬರಿಯ ರೂಪಕವಾಗಿ ಉಳಿದೇ ಇಲ್ಲ ಎನ್ನುವ ಸತ್ಯ. ಅದು ಮಾತ್ರ ದುರಂತವೇ. ಹಾಗಿದ್ದೂ Too Loud a Solitude ಪುಸ್ತಕ ಒಂದಕ್ಕಿಂತ ಹೆಚ್ಚು ಬಾರಿ ನನ್ನನ್ನು ಕಾಪಾಡಿದೆ ಎಂದು ಹೇಳಿದರೆ ಅದರಲ್ಲಿ ಅತಿಶಯವಾದುದೇನೂ ಇಲ್ಲ. ಸಾಕಷ್ಟು ಸಲ ನಾನು ನನ್ನ ಗೆಳೆಯರ ಕತ್ತು ಹಿಸುಕಿ ಹಿಡಿದು ಹೇಳಿದ್ದಿದೆ, ತಗೊಂಡು ಹೋಗು ಈ ಪುಸ್ತಕ, ತಗೊಂಡು ಹೋಗು ಮನೆಗೆ, ಹೋಗಿ ಓದು, ನಿಧಾನವಾಗಿ ಓದು, ಎಷ್ಟು ನಿಧಾನವಾಗಿ ಎಂದರೆ ಇದರಲ್ಲಿನ ವಾಕ್ಯ ವಾಕ್ಯವೂ ನಿನ್ನ ಮೆದುಳಿನೊಳಗೆ ಪ್ರತಿಧ್ವನಿಯೆಬ್ಬಿಸಬೇಕು, ಅಷ್ಟು. ಈ ಕಾದಂಬರಿಯನ್ನು ನನ್ನ ಬದುಕಿನ ಪುಸ್ತಕವೆಂದೇ ಹೇಳಬಹುದು. ಇತರೆಲ್ಲಾ ಪುಸ್ತಕಗಳಿಗಿಂತ ಹೆಚ್ಚಾಗಿ ಇದು ಹತಾಶೆ ಮತ್ತು ಹೊಸ ನಿರೀಕ್ಷೆಯೊಂದನ್ನು ಸದಾ ಹೆಣಿಗೆ ಹಾಕಿಕೊಂಡೇ ಮುಂದುವರಿಯುವ ಬಗೆ ವಿಶೇಷವಾದದ್ದು. ಇದೀಗ ಅಂತ್ಯವೋ, ಹೊಸ ಆರಂಭವೋ ಹೇಳಲಾಗದ ಬಗೆಯಲ್ಲಿ ಬರುತ್ತವೆ ಅವು. ಇದರಲ್ಲಷ್ಟೇ ಹೊಸ ನಿರೀಕ್ಷೆ ಉಳಿದಿದೆ.

"ನಾನು ನನ್ನಷ್ಟಕ್ಕೇ ಇರಬಲ್ಲೆ. ಇರಬಲ್ಲೆ ಯಾಕೆಂದರೆ ನಾನು ಯಾವತ್ತೂ ಒಬ್ಬಂಟಿಯಾಗಿರಲೇ ಇಲ್ಲ. ನಾನು ಒಬ್ಬನೇ ಇದ್ದೆ ಅಷ್ಟೆ. ನನ್ನದೇ ಭಾರೀ ಜನಜಂಗುಳಿಯ ಗದ್ದಲ ತುಂಬಿದ ಏಕಾಂತವದು. ನಾವುಂಟು ಮೂರು ಲೋಕವುಂಟು ಬಗೆಯ ಆದಿಯಿಲ್ಲದ ಅಂತ್ಯವಿಲ್ಲದ ಜೋಶ್ ತುಂಬಿದ, ಆ ಅನಾದಿಯಾದ, ಅಮರವಾದ ಯಾವುದೋ ನನ್ನನ್ನೇ ಬಯಸಿ ಬಂದಂತಿದ್ದ ಏಕಾಂತವದು."

****
2015 ರಲ್ಲಿ ನಾನು ಒಂದೆರಡು ದಿನಗಳ ಮಟ್ಟಿಗೆ ಪ್ರಾಗ್ವೆಗೆ ಮರಳಿ ಹೋದೆ. ಜರ್ಮನಿಯಲ್ಲಿರಬೇಕಾಗಿ ಬಂದಿದ್ದರಿಂದ ಒಂದು ಟ್ರೈನ್ ಹಿಡಿದು ಮ್ಯುನಿಚ್‌ಗೂ ಹೋದೆ. ನಾನೇನು ಹುಡುಕುತ್ತಿದ್ದೇನೆ ಎಂಬುದು ನನಗೇ ಸ್ಪಷ್ಟವಿರದಿದ್ದಾಗ್ಯೂ ನಾನು ಎಮ್ ಜೊತೆ ಹದಿನಾರು ವರ್ಷ ಬದುಕಿದ್ದ ಪರಿಸರದ ಆಸುಪಾಸಿನಲ್ಲೆ ಸುತ್ತುತ್ತಿದ್ದೆ. ಸುಮಾರು ಒಂದು ಗಂಟೆಯ ಹುಡುಕಾಟದ ಬಳಿಕ ನಾವು ವಾಸ್ತವ್ಯವಿದ್ದ ಅಪಾರ್ಟ್‌ಮೆಂಟ್ ಹುಡುಕಿ ತೆಗೆದೆ. ಈಗ ನನಗೇ ನಂಬಲಾಗದಿದ್ದರೂ ಟ್ರಾಮ್ ನಿಲುಗಡೆಯಿಂದ ನಮ್ಮ ಬಾಗಿಲಿನ ವರೆಗಿನ ಹಾದಿ ನನ್ನ ಕಾಲುಗಳಿಗೆ ಹೇಗೆ ರೂಢಿಯಾಗಿತ್ತೆಂದರೆ ನಾನು ನೇರವಾಗಿ ಅಪಾರ್ಟ್‌ಮೆಂಟಿನ ಬಾಗಿಲಲ್ಲೇ ನಿಂತಿದ್ದೆ. ಇಂಥ ರೂಢಿಗಳನ್ನು ಹೇಗೆ ತಾನೇ ಮರೆಯುವುದು ಸಾಧ್ಯ? ಕೊನೆಗೂ ನಾನು ಅಲ್ಲಿಗೆ ತಲುಪಿದಾಗ ನಮ್ಮ ಮನೆಯೊಡೆಯನ ಹೆಸರು ಬರೆದ ಹಳೆಯ ಟೇಪು ಕೂಡ ಅಲ್ಲಿ ಕಾಲಿಂಗ್ ಬೆಲ್‌ನ ಪಕ್ಕ ಹಾಗೆಯೇ ಇತ್ತು. ನಾವು ಅಲ್ಲಿದ್ದಾಗ ಇದ್ದ ಅದೇ ಟೇಪು ಅದು ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಬಲ್ಲೆ. ಇದೊಂದು ಪವಾಡವಂತೂ ಪೂರ್ತಿಯಾಗಿ ಅನಗತ್ಯವಾದದ್ದೇ ಎನ್ನಿ. ನಾನು ಕಾಲಿಂಗ್ ಬೆಲ್ ಒತ್ತಿ ಕಾದೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮತ್ತೊಮ್ಮೆ ಒತ್ತಿದೆ. ಇಲ್ಲ. ಟೇಪನ್ನು ಮೆತ್ತಗೆ ಕಿತ್ತು ತೆಗೆದೆ, ನನ್ನ ಕಿಸೆಯೊಳಕ್ಕೆ ಹಾಕಿಕೊಂಡೆ.


ಈಗ ಎಮ್ ಪರವಾಗಿಲ್ಲ. ಮಿಡ್‌ವೆಸ್ಟ್‌ಗೆ ವಾಪಾಸಾಗಿದ್ದಾಳೆ, ಅವಳ ಕುಟುಂಬಕ್ಕೆ ಹತ್ತಿರವೇ ಮನೆ ಮಾಡಿದ್ದಾಳೆ, ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾಳೆ, ಬರೆಯುತ್ತಿದ್ದಾಳೆ. ಯಾವಾಗ ಬೇಕಾದರೂ ಬರುತ್ತಿರುವ ಹಣ ನಿಂತು ಹೋಗುವ ಆತಂಕದಲ್ಲೇ ಇರುವ ಇಲ್ಲಿನ ಸ್ಥಳೀಯ ಸಂಸ್ಥೆಯೊಂದರಲ್ಲಿ ತನ್ನಂಥದೇ ಸಮಸ್ಯೆಯಿಂದ ಬಳಲುತ್ತಿರುವ ಇತರರಿಗೆ ತನ್ನಿಂದ ಸಾಧ್ಯವಿರುವ ಸಹಾಯವನ್ನೂ ಮಾಡುತ್ತಿದ್ದಾಳೆ. ಹರಬಾಲ್ ಹೇಳುತ್ತಾನೆ, `ಸ್ವರ್ಗವು ಮಾನವೀಯವಾಗಿರದೇ ಇರಬಹುದು, ಆದರೆ ಅಪರೂಪಕ್ಕಾದರೂ, ಯಾವಾಗಲೂ ಅಂತಲ್ಲ, ಈ ಭೂಮಿಯ ಮೇಲೆ ಕಕ್ಕುಲಾತಿ ಮತ್ತು ಪ್ರೀತಿ ಇಲ್ಲದೇ ಇರುವುದಿಲ್ಲ ಎಂದೂ ಅದರರ್ಥವಲ್ಲ' ಎಂದು. 

ರೈಲಿನ ಕುಲುಕಾಟಕ್ಕೆ ಎಚ್ಚರವಾಗಿದ್ದು ನೆನಪಿದೆ. ಇನ್ನೂ ಹಗಲಾಗಿರಲಿಲ್ಲ. ಸ್ಲೋವನ್ನರು ಕೊನೆಗೂ ಸುಸ್ತಾಗಿ ಬಿದ್ದುಕೊಂಡಿದ್ದರು. ಲೆಕ್ಕ ಪ್ರಕಾರ ಅಷ್ಟೊತ್ತಿಗೆ ನಾವು ಟ್ರೈಸ್ಟೇಟಿನ ದಕ್ಷಿಣ ಭಾಗ ತಲುಪಿರಬೇಕಿತ್ತು. ಮೇಲಿನ ಬಂಕಿನಲ್ಲಿ ಎಮ್ ಇನ್ನೂ ಮಲಗಿದ್ದಳು. ಬೆಳಕು ಇನ್ನೂ ಅವಳ ಮುಖಕ್ಕೆ ಬೀಳುತ್ತಿರಲಿಲ್ಲ. ನಾನು ಮೆತ್ತಗೆ ಏಣಿಯೇರಿ ಅವಳು ಉಸಿರಾಟವನ್ನೇ ಗಮನಿಸಿದೆ. 

ಹೊರಗೆ ಮಂಜು ಎಷ್ಟು ದಟ್ಟವಾಗಿತ್ತೆಂದರೆ, ಅದು ನಿಜಕ್ಕೂ ಮಂಜಾಗಿರಲಿಲ್ಲ. ಸುರಿಯುವ ಮಳೆ ನಿರ್ಮಿಸಿದ ಒಂದು ದಪ್ಪನೆಯ ತೆರೆಯಂತಿದ್ದೂ ಅಲ್ಲಿ ಆಗ ಮಳೆ ಸುರಿಯುವುದನ್ನೇ ಮರೆತು ನಿಂತಂತಿತ್ತು.

ಈಗ ಪೀಟರ್ ಆರ್ನರ್ ಹೇಳದೇ ಬಿಟ್ಟ ಎರಡು ಸನ್ನಿವೇಶಗಳ ಬಗ್ಗೆ ಹೇಳುತ್ತೇನೆ. ಒಂದು, ಅವನ ಜಿಪ್ಸಿ ಹುಡುಗಿಯ ಬಗ್ಗೆ. ಒಂದು ದಿನ ಇದ್ದಕ್ಕಿದ್ದಂತೆ ಈ ಪುಟ್ಟ ಹುಡುಗಿ ಹಾಂಟಾನ ಹಿಂದೆ ಬರುತ್ತಾಳೆ. ಹಾದಿ ಕವಲೊಡೆದಾಗ ಹಾಂಟಾ ಹೇಳುತ್ತಾನೆ, ಸರಿ, ಇನ್ನು ನಾನು ಈ ಹಾದಿಯಲ್ಲಿ ಹೋಗಾಂವ, ನೀನು ಹೋಗು. ಹುಡುಗಿ ಹೇಳುತ್ತಾಳೆ, ಇಲ್ಲ, ನನ್ನದೂ ನಿನ್ನ ಹಾದಿಯೇ, ನಾನೂ ಬರುತ್ತೇನೆ. ಸರಿ, ಊರಿನೊಳಗೆ ಹೋಗುವ ಸಮಯ ಬರುತ್ತದೆ. ಹಾಂಟಾ ಹೇಳುತ್ತಾನೆ, ಹುಡುಗೀ, ಇದು ನನ್ನ ಊರು. ನಾನು ಇಲ್ಲಿಯೇ ಇರುವವ. ನೀನು ಹೋಗು. ಹುಡುಗಿ ಹೇಳುತ್ತಾಳೆ, ಇದೇ ನನ್ನ ಊರೂ. ನಾನೂ ಇಲ್ಲೇ ಇರುವವಳು. ಸರಿ, ಹಾಂಟಾ ಊರಿನೊಳಗೆ ಬರುತ್ತಾನೆ. ತನ್ನ ಮನೆಯ ಓಣಿ ಹೊಕ್ಕುವ ಮುನ್ನ ನಿಂತು ಹೇಳುತ್ತಾನೆ, ಹುಡುಗೀ, ಇದು ನನ್ನ ಮನೆಯಿರುವ ಓಣಿ. ನಾನು ಹೊರಟೆ. ನೀನು ನಿನ್ನ ಹಾದಿ ಹಿಡಿ. ಹುಡುಗಿ ಹೇಳುತ್ತಾಳೆ, ಇಲ್ಲ, ನನ್ನ ಮನೆಯಿರುವ ಓಣಿಯೂ ಇದೇ. ನಾನೂ ಬರುತ್ತೇನೆ. ಹಾಂಟಾನ ಮನೆಯಂಗಳ ಬರುತ್ತದೆ. ಹಾಂಟಾ ಹೇಳುತ್ತಾನೆ, ಸರಿ ಹುಡುಗಿ, ಇದೇ ನನ್ನ ಮನೆ. ನೀನಿನ್ನು ಹೋಗು. ಹುಡುಗಿ ಹೇಳುತ್ತಾಳೆ, ಇಲ್ಲ, ನನ್ನ ಮನೆಯೂ ಇದೇ, ನಾನು ಬರುತ್ತೇನೆ. ಮನೆಯ ಬೀಗ ತೆಗೆದ ಹಾಂಟಾ ಹೇಳುತ್ತಾನೆ, ಹುಡುಗೀ ಇದೇ ನನ್ನ ಮನೆ. ನೀನಿನ್ನು ನಿನ್ನ ಮನೆಗೆ ಹೋಗು. ಹುಡುಗಿ ಹೇಳುತ್ತಾಳೆ, ಇದೇ ನನ್ನ ಮನೆಯೂ. ನಾನಿಲ್ಲೇ ಇರುತ್ತೇನೆ. ಹಾಗೆ ಜೊತೆಯಾದವಳು ಈ ಜಿಪ್ಸಿ ಹುಡುಗಿ. ಹಾಂಟಾನ ಬಳಿ ಅವಳು ಯಾವತ್ತೂ ಏನೂ ಕೇಳುವುದಿಲ್ಲ. ಅವನು ಮನೆಯಿಂದ ಹೊರಬೀಳುವಾಗ ಅವಳು ಮನೆಯಿಂದ ಹೊರಬಂದು ಕೂರುತ್ತಾಳೆ. ಅವನು ಬಂದು ಬೀಗ ತೆಗೆಯುತ್ತಲೇ ಒಳಗೆ ಸೇರಿಕೊಳ್ಳುತ್ತಾಳೆ. ಎಲ್ಲಿಂದಲೋ ಸಂಗ್ರಹಿಸಿದ ಕಟ್ಟಿಗೆಯಿಂದ ಅಡುಗೆ ಮಾಡುತ್ತಾಳೆ. ದಿನವೂ ಒಂದೇ ಅಡುಗೆ. ಯಾವ ಮಾತೂ ಇಲ್ಲ. ಯಾವ ಬೇಡಿಕೆಯೂ ಇಲ್ಲ. ಎಷ್ಟೋ ದಿನ ಹೀಗೇ ಸಾಗುತ್ತದೆ. ಇದು ಹಾಂಟಾನ ಸಂಸಾರ. ಈ ನಡುವೆ ಅವರಿಬ್ಬರೂ ಗಾಳಿಪಟ ಹಾರಿಸುವ ಒಂದು ಕನಸಿನಂಥ ಸನ್ನಿವೇಶವಿದೆ. ಅಲ್ಲಿ ಹಾಂಟಾ ಗಾಳಿಪಟಕ್ಕೆ ಒಂದು ಸಂದೇಶ ಬರೆದ ಚೀಟಿ ಕಳಿಸಲು ಅದರ ದಾರಕ್ಕೆ ಅದನ್ನು ಕಟ್ಟುತ್ತಾನೆ. ಆಗ ನಡುವೆಲ್ಲೋ ಒಂದರೆ ಘಳಿಗೆ ಅವಳ ಬಳಿ ಅದರ ದಾರ ಹಿಡಿಯಲು ಹೇಳಿದರೆ ಹುಡುಗಿ ಹೆದರಿ ನಡುಗುತ್ತಾಳೆ. ತಾನು ಅದನ್ನು ಹಿಡಿದದ್ದೇ ಆದರೆ ತಾನೂ ಗಾಳಿಪಟದಂತೆಯೇ ದಾರದೊಂದಿಗೆ ಹಾರಿ ಹೋಗುವುದೇ ಸೈ ಎನ್ನುತ್ತಾಳೆ. ಅದು ನಿಜವೆನ್ನಿಸುವಂತೆ ಆ ವಿವರಗಳೆಲ್ಲ ಇವೆ. ಹಾಗೇನೂ ಆಗುವುದಿಲ್ಲ ನಿಜ. ಆದರೆ ಇಷ್ಟರೊಳಗಾಗಲೇ ನಮಗೆಲ್ಲ ಅನಿಷ್ಟದ ಸುಳಿವು ಹತ್ತಿರುತ್ತದೆ. ಹಾಗೆ ಸುರುವಾದ ಆತಂಕ ಒಂದು ದಿನ ಅನಿರೀಕ್ಷಿತವಾಗಿ, ಅಪೇಕ್ಷೆಗಳಿಗೆ ವಿರುದ್ಧವಾಗಿ ನಿಜವಾಗುತ್ತದೆ. ಹುಡುಗಿ ನಾಝಿಗಳ ಕಾನ್ಸಂಟ್ರೇಶನ್ ಕ್ಯಾಂಪ್ ಸೇರುತ್ತಾಳೆ. ಮುಂದಿನದು ಇತಿಹಾಸ. ತಮಾಷೆ ಎಂದರೆ, ಆಗ ಹಾಂಟಾ ಹೇಳುತ್ತಾನೆ, ಇಬ್ಬರಿಗೂ ಒಬ್ಬರ ಹೆಸರು ಇನ್ನೊಬ್ಬರಿಗೆ ಗೊತ್ತೇ ಇಲ್ಲ. ಪೀಟರ್ ಆರ್ನರ್ ಒಂದೇ ವಾಕ್ಯದಲ್ಲಿ ಇದನ್ನು ಮುಗಿಸುತ್ತಾನೆ. 

One evening I came home to find her gone.

ಇದು ಬರಿಯ ಸಾಲಲ್ಲ. ಅದು ಆರ್ನರ್‌ನ ಬದುಕಿಗೂ ಸಂಬಂಧಪಟ್ಟ ವೇದನೆಯ ಸಾಲು. ಆ ವೇದನೆ ನಮಗೆ ಅರ್ಥವಾಗದೇ ಹೋದರೆ ಆರ್ನರ್ ಕೂಡ ಅರ್ಥವಾಗುವುದಿಲ್ಲ, ಹಾಂಟಾ ಕೂಡ ದಕ್ಕುವುದಿಲ್ಲ.

ನಿಮಗಿಲ್ಲಿ ಸೂರಿ (ಎಸ್ ಸುರೇಂದ್ರನಾಥ್) ಬರೆದ ಒಂದು ಪುಟ್ಟ ಕತೆ ನೆನಪಾಗಲ್ವ? ಉದಯವಾಣಿಯ ಅವರ ಅಂಕಣದಲ್ಲಿ ಬಂದಿತ್ತದು. ಗಂಡ ಹೆಂಡತಿ, ಪ್ರತೀ ದಿನ ಪೇಟೆಗೆ ಹೋಗುತ್ತಾರೆ. ಹೋಗುವಾಗ ಒಂದು ಕ್ರಮ. ಗಂಡ ಒಂದು ಹೆಜ್ಜೆ ಮುಂದೆ, ಹೆಂಡತಿ ಎರಡು ಹೆಜ್ಜೆ ಹಿಂದೆ. ಅವನು ಒಂದು ಹೆಜ್ಜೆ ಇಟ್ಟು ಹಂ ಎನ್ನಬೇಕು, ಹೆಂಡತಿ ಒಂದು ಹೆಜ್ಜೆ ಮುಂದೆ ಬರಬೇಕು. ಹಂ ಎನ್ನದಿದ್ದರೆ ಅವಳು ಮುಂದೆ ಹೆಜ್ಜೆ ಇಡುವಂತಿಲ್ಲ. ಹಂ ಎನ್ನದೇ ಅವನು ಮುಂದೆ ಹೋಗುವುದಿಲ್ಲ. ದಿನವೂ ಇದೇ ಕ್ರಮ. ಒಂದು ದಿನ ಇದ್ದಕ್ಕಿದ್ದ ಹಾಗೆ ಯಾವುದೋ ಯೋಚನೆಯಲ್ಲಿ ಸಂತೆಯ ನಡುವೆ ಅವನು ಹಂ ಎನ್ನಲು ಮರೆತು ಹೆಜ್ಜೆ ಇಟ್ಟಿದ್ದಾನೆ. ಅವಳು ಸಂತೆಯ ನಡುವೆಯೇ ನಿಂತು ಬಿಟ್ಟಿದ್ದಾಳೆ. ಇವನು ಗೊತ್ತೇ ಇಲ್ಲದವನಂತೆ ನಡೆದು ಬಿಟ್ಟಿದ್ದಾನೆ, ತಲೆಯಲ್ಲಿ ಹಿಂದೆ ಹೆಂಡತಿ ಇದ್ದಾಳೆ ಎಂದೇ. ಅಂಗಡಿ ಬಾಗಿಲಿಗೆ ಬಂದು ನೋಡಿದರೆ ಹಿಂದೆ ಯಾರು ಯಾರೋ ಇದ್ದಾರೆ. ತಲೆಗೆ ಸೆರಗು ಹೊದ್ದಿರುತ್ತಿದ್ದ ಹೆಂಗಸು, ಅವಳ ಮುಖ ಕೂಡ ಇವನು ಕಂಡಿದ್ದು ಮಲಗುವ ಮುನ್ನ, ಕತ್ತಲಲ್ಲಿ, ಜೊತೆಗಿಲ್ಲ! ಅವಳನ್ನು ಹುಡುಕುವುದಾದರೂ ಹೇಗೆ ಎಂದರೆ ಇವನಿಗೂ ಹೆಂಡತಿಯ ಹೆಸರೂ ಗೊತ್ತಿಲ್ಲ! 

ಇನ್ನೊಂದು ಅಂಕಲ್ ಕುರಿತ ವಿವರ. ಈ ಅಂಕಲ್ ಬಹುಶಃ ಹಾಂಟಾನಿಗಿದ್ದ ಏಕೈಕ ಬಂಧು. ಅವನು ರೈಲ್ವೇಯಲ್ಲಿ ಕೆಲಸದಲ್ಲಿದ್ದು ನಿವೃತ್ತನಾದವನು. ಹಾಂಟಾಗೆ ಕೂಡಾ ನಾವು ಜೀವನ ಪೂರ್ತಿ ಮಾಡಿದ ಉದ್ಯೋಗ ಸುಲಭವಾಗಿ ನಮ್ಮನ್ನು ಬಿಟ್ಟು ಹೋಗುವುದಿಲ್ಲ, ಹಾಗಾಗಿ ನಿವೃತ್ತಿಯ ನಂತರವೂ ನಾವು ಹೇಗಾದರೂ ಅದನ್ನೇ ಮಾಡುತ್ತಿರುವ ಹಾಗೆ ಬದುಕು ರೂಪಿಸಿಕೊಂಡು ಹೋಗಬೇಕು ಎಂದು ಸಲಹೆ ಕೊಟ್ಟವನು. ತನಗೆ ತಾನೇ ಗೆಳೆಯನೊಂದಿಗೆ ಸೇರಿಕೊಂಡು ಒಂದು ಡಮ್ಮಿ ರೈಲ್ವೇ ಸ್ಟೇಶನ್ ಮಾಡಿಕೊಂಡು ಅಲ್ಲಿ ಒಂದು ಬೋಗಿ ಓಡುವಂತೆ ವ್ಯವಸ್ಥೆ ಮಾಡಿಕೊಂಡು ಅದಕ್ಕೆ ಸಿಗ್ನಲ್ ತೋರಿಸುತ್ತ ಬದುಕುತ್ತಿದ್ದವನು. ವಾರಕ್ಕೊಮ್ಮೆ ಊರಿನ ಮಕ್ಕಳಿಗೆ ತನ್ನ ಡಮ್ಮಿ ರೈಲಿನಲ್ಲಿ ಪ್ರಯಾಣದ ಸುಖ ಹಂಚಿದವನು. ಹಾಂಟಾಗೆ ಕೂಡ ನಿವೃತ್ತಿಯ ಬಳಿಕ ತನ್ನದೇ ಪ್ರೆಸ್ ಹಾಕು ಎಂದು ವ್ಯವಸ್ಥೆ ಮಾಡಿದವನು. ಇಂಥ ಅಂಕಲ್ ಸತ್ತಿದ್ದು ಯಾರಿಗೂ ಗೊತ್ತೇ ಆಗುವುದಿಲ್ಲ. ಎರಡು ವಾರದ ಬಳಿಕವಷ್ಟೇ ಅವನ ಅಳಿದುಳಿದ ದೇಹ ಸಿಗ್ನಲ್ ಟವರಿನ ಮೇಲೆ ಅನಾಥವಾಗಿದ್ದ ಸ್ಥಿತಿಯಲ್ಲೇ ಪತ್ತೆಯಾಗಿ ಹಾಂಟಾಗೆ ಕರೆ ಬರುತ್ತದೆ. ಹಾಂಟಾ ಅವನ ಅಪರಕ್ರಿಯೆಯ ವ್ಯವಸ್ಥೆ ಮಾಡುವ, ಅವನ ಅಳಿದು ಉಳಿದ ದೇಹದ ಉಳಿದ ಅವಶೇಷವನ್ನು ಮಣ್ಣಿಗೆ ಇಳಿಸುವ ಮುನ್ನ ಅವನ ಪ್ರಿಯವಾದ ವಸ್ತುಗಳನ್ನು ಶವಪೆಟ್ಟಿಗೆಯಲ್ಲಿರಿಸುವ ವಿವರಗಳೆಲ್ಲ ಇವೆ. ಪೀಟರ್ ಅದನ್ನೆಲ್ಲ ಹೇಳ ಹೋಗಿಲ್ಲ. ಬಹುಶಃ ಅದನ್ನು ಅವನು ಸುಮ್ಮನೇ ಕಣ್ಣೀರಿಡುತ್ತ ಮತ್ತೊಮ್ಮೆ ಓದಿ ನಿಟ್ಟುಸಿರು ಬಿಟ್ಟಿರುತ್ತಾನೆ.

ಈ ಪುಸ್ತಕದಲ್ಲಿ ಇನ್ನೂ ಒಂದು ಸರ್ರಿಯಲಿಸ್ಟಿಕ್ ಸನ್ನಿವೇಶವಿದೆ. ಅದು ಹಾಂಟಾನ ಪ್ರಿಯತಮೆಯೊಬ್ಬಳು ಸ್ವರ್ಗಕ್ಕೆ ಸಂಪರ್ಕ ಸಾಧಿಸುವ ಭ್ರಮೆ, ಕಲ್ಪನೆ, ಕನಸು ಎಲ್ಲವೂ ಆಗಿರಬಹುದಾದ ಒಂದು ಚಿತ್ರ. ಅದು ರೂಪಕದಂತಿರುವುದರಿಂದ ಇಡೀ ಕಥನಕ್ಕೆ ಬಹುಮುಖ್ಯವಾದೊಂದು ಆಯಾಮವನ್ನು ಕೊಟ್ಟಿದೆ. ಹಾಂಟಾಗೆ ತನ್ನ ಓದಿನ ಹುಚ್ಚು ನಿರರ್ಥಕವಾಯಿತೇ ಎನಿಸುವಂತೆ ಮಾಡಿದ ಒಂದು ಘಳಿಗೆ ಅದು. ಕಾದಂಬರಿಗಿರುವ ಹಲವು ಆಯಾಮಗಳನ್ನು ಹೇಳುವಾಗ ಈ ಸನ್ನಿವೇಶ ಕೂಡ ಬಹಳ ಮುಖ್ಯವಾಗುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, May 17, 2017

ಕಾಲದ ಚಹರೆ

Keki N Daruwalla ಅವರ ಹೊಸ ಕಥಾ ಸಂಕಲನ ಬಂದಿದೆ. Time ಎನ್ನುವ ಅವರ ಒಂದು ಕವಿತೆಯ ಅನುವಾದ ಇಲ್ಲಿದೆ:
ತಾನು ಸರಿಯುತ್ತ ತನ್ನೊಳಗೇ ಕಳೆದುಹೋದ ಕಾಲ
ತನ್ನದೇ ಬಿಂಬ ತಾನೇ ನೋಡಿಕೊಳ್ಳಲು ಬೇಡವೆ ಅದಕ್ಕೊಂದು
ಕನ್ನಡಿ-ಕ್ಷಣ!
ಕಾಣಲೆಂದೆ ಕಾಲ ಲಕ್ಷಣ - ಮುಖ ಲಕ್ಷಣ
ಕಾಲಕಳೆದಂತೆಲ್ಲ ಕಾಲದ ಚಹರೆ ಬದಲುವುದು.
ಸದಾ ಭೂತದತ್ತಲೆ ಗಮನ - ಮನಭಾರ
ಗೊತ್ತಲ್ಲ, ಕತ್ತಲ ದಾರಿ ದೂರ, ಚೆಲ್ಲಿಬಿದ್ದ ನೆನಪುಗಳೋ ಮಣಭಾರ
ಶತಮಾನ ತಿರುವಿನಲ್ಲಿ ಹೊರಳುವಾಗ ಕ್ಷಣಕಾಲ
ಕಂಡ ಬಿಂಬ - ವೇ ಅದರ ಕನ್ನಡಿಕಾಲ
ಅದರ ಗಾಜು ನಾಜೂಕು
ಹೀರಿಕೊಳುವುದು ಆಪೋಶನ, ಭೂತ ತರ್ಪಣ
ದರ್ಪಣದ ಹಿಂದಿನ ಸಕಲವೂ ಸ್ಫಟಿಕಾರ್ಪಣ
ನವಶತಮಾನವೂ ನುಸುಳುತಿಹುದು ಒಳಗೆ
ಕಾಣಬಹುದೀಗ ಮಾಯಾದರ್ಪಣವ ತೆರೆದು ಬೊಗಸೆಯಲ್ಲೇ.
ನಮಗೆ,
ಕನ್ನಡಿಯ ಕಣ್ಣಲ್ಲಿ ಕಣ್ಣುನೆಟ್ಟು ಕಂಡಾಗ ಗಾಜು ಗೋಜಲು ಖಾಲಿ
ಕ್ರಿಸ್ತ ಕಣ್ಣರಳಿಸಿದಾಗ ಬಂದ ದೇವಲೋಕದ ಬಂಟರಿಗೆ ಕಾಣಿಸಿತು
ಮಿಂಚಂತೆ ರಂಗು ಭವ್ಯ ಭವಿತವ್ಯವ ಚೆಲ್ಲಿ ಹೊಳಹು - ಹೋಲಿ
ಕಾಲವೇ ಒಂದು ಕನ್ನಡಿ
ಬದುಕಿನ ಒಂದೊಂದು ಹೋಳು
ಹೊದ್ದು ಹೊತ್ತು ಮೆರೆದ ನೂರೆಂಟು ಗೋಳು
ಹಂಚಿಕೊಂಡಂತೆ ಮಾತು-ಕತೆ, ಕಷ್ಟ-ಸುಖ, ನಗು - ದುಃಖ
ತಮ್ಮೊಳಗೇ ತಾವು, ತಾವು ತಂತಮ್ಮೊಳಗೆ.
ತಾನು ಸರಿಯುತ್ತ ತನ್ನೊಳಗೇ ಕಳೆದುಹೋದ ಕಾಲ
ಸರಿವ ಚಹರೆಗಳ ತನ್ನದೇ ಮೊಗವ ಕಾಣಬಲ್ಲದು
ಚಲನೆ ಮರೆತ ಕನ್ನಡಿಯಲ್ಲು, ಕಾಲ.
ಚಲನೆ ಮರೆತ ಕನ್ನಡಿಯೂ, ಕಾಲ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಬರೆಯದೇ ಇರುವುದರ ಚಂದ ಅಥವಾ ಹುವಾನ್ ರುಲ್ಫೋಗೆ ಒಂದು ಅನಗತ್ಯ ಶೃದ್ಧಾಂಜಲಿ

ನನಗೆ ತುಂಬ ಇಷ್ಟವಾದ ಪುಸ್ತಕ ಪೀಟರ್ ಆರ್ನರನ Am I Alone Here? ನಿಂದ ಈಗಾಗಲೇ ಹಲವು ಲೇಖನಗಳನ್ನು ಅನುವಾದಿಸಿ ಇಲ್ಲಿ ಕಾಣಿಸಿದ್ದೇನೆ. ಇದು ಕೊನೆಯದು. ರುಲ್ಫೋ ಕುರಿತಾದ್ದು.

ಇನ್ನೂ ಮೌನವಾಗಿ ಸುಮ್ಮನಿದ್ದು ಬಿಡುವುದು ನನಗೆ ಇಷ್ಟ. ಓದಬೇಕೆಂಬ ಸದಾ ಕಾಡುವ ಬೇನೆಯೇನಿದೆ, ಆ ತುಡಿತವನ್ನು ಮೀರಿ ಬರೆಯಬೇಕೆಂಬ ಒತ್ತಡ ಬರುವುದು ಯಾವಾಗಾದರೂ ಒಮ್ಮೊಮ್ಮೆ ಮಾತ್ರ. ಮತ್ತದು ಕಾಣಿಸಿಕೊಂಡಾಗ ನಾನು ಚುಟುಕಾಗಿರಲು ಸಾಧ್ಯವಾದ ಪ್ರಯತ್ನ ಮಾಡುತ್ತೇನೆ. ಬರೆಯುವುದರ ಬಗ್ಗೆ ಮತ್ತೆ ಮತ್ತೆ ಕೇಳಿಬರುವ ಒಂದು ಸಲಹೆ ಎಂದರೆ, "ಬರಿ, ಬರಿ, ಮತ್ತಷ್ಟು ಬರಿ. ತುಂಬಾ ಬರೆದೆ ಅನಿಸಿದ ಮೇಲೂ ಬರೀತಾ ಇರಬೇಕು" ಅನ್ನೋದೆ ಎನಿಸುತ್ತದೆ. ಶಾಶ್ವತವಾಗಿ ನಿಲ್ಲುವಂಥದ್ದೇನಾದರೂ ರಚಿಸಲ್ಪಡುವುದು ಈ ಹಾದಿಯಲ್ಲಿ ಸಾಗಿದರೆ ಮಾತ್ರ ಎನ್ನುವುದರ ಬಗ್ಗೆ ನನಗೆ ಗಂಭೀರ ಅನುಮಾನಗಳಿವೆ. ನಾನೊಬ್ಬನೇ ಹೀಗೆ ಯೋಚಿಸೋದೆ? ಅಥವಾ ನಿಮಗೂ ಪ್ರತಿನಿತ್ಯ ಸುನಾಮಿಯಂತೆ ಅಪ್ಪಳಿಸುವ ಶಬ್ದಸಾಗರದಿಂದ ತಪ್ಪಿಸಿಕೋಬೇಕು ಅಂತ ಅನಿಸುತ್ತಿರುತ್ತಾ? ಈಚೆಗೆ ನನಗೆ ತನ್ನ ಜೀವಮಾನವಿಡೀ ಮುನ್ನೂರು ಪುಟ ಕೂಡ ಬರೆಯದ ಒಬ್ಬ ಲೇಖಕನಿಗೆ ಶ್ರದ್ಧಾಂಜಲಿ ಅರ್ಪಿಸಬೇಕು ಅನಿಸಿತು. ಒಂದಿಷ್ಟು ಟಿಪ್ಪಣಿ ಮಾಡಿಕೊಂಡ ಮೇಲೆ ನನಗೆ ಇದರಲ್ಲಿ ಎದ್ದುಕಾಣುವ ವಿಪರ್ಯಾಸದ ಬಗ್ಗೆಯೂ ಜ್ಞಾನೋದಯವಾಯ್ತು. ಒಂದೆರಡು ಕ್ಷಣ ನಾನು ಯಾವುದೇ ಒಂದು ವಾಕ್ಯವನ್ನೂ ರಚಿಸದೆ ಸುಮ್ಮನೇ ಹುವಾನ್ ರುಲ್ಫೋ ಬಗ್ಗೆ ಯೋಚಿಸುತ್ತಾ ಇದ್ದೆ. ಅದೇ ಬಹುಶಃ ಸರಿಯಾದ ಕ್ರಮ. ಯಾರ ಮೇಲೂ ತನ್ನ ಬಳುವಳಿಯನ್ನು ಹೇರದೇ ಹೊರಟು ಹೋದವರ ಬಗ್ಗೆ ಯಾಕೆ ಒಂದಷ್ಟು ಶಬ್ದಗಳ ಹೊರೆ ಹೊರಿಸಬೇಕು? ಬರೆದುಕೊಂಡಿದ್ದನ್ನೂ ಎಸೆದು ಬಿಡುವವನಿದ್ದೆ.

ಹುವಾನ್ ರುಲ್ಫೋ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾನೆ. "ದ ಬರ್ನಿಂಗ್ ಪ್ಲೇಯಿನ್" (ಬೆಂಕಿಬಿದ್ದ ಬಯಲು - ಓಎಲ್ಲೆನ್ ಅನುವಾದ) ಎಂಬ ಒಂದು ಕಥಾಸಂಕಲನವನ್ನು 1953ರಲ್ಲಿ ಮತ್ತು ಎರಡು ವರ್ಷಗಳ ಬಳಿಕ "ಪೆದ್ರೊ ಪರಮೊ" ಎಂಬ ಒಂದು ಕಾದಂಬರಿ. ಪೆದ್ರೊ ಪರಮೊ ಬಗ್ಗೆ ಹೇಳುತ್ತ ಗಾರ್ಸಿಯಾ ಮಾರ್ಕೆಸ್ ಈ ಕಾದಂಬರಿಯ ಲಯವಿನ್ಯಾಸವನ್ನು ಅಂತರ್ಗತಗೊಳಿಸಿಕೊಳ್ಳುವುದಕ್ಕಾಗಿ ತಾನು ಒಮ್ಮೆ ಅದರ ಪ್ರತಿ ಶಬ್ದವನ್ನೂ ಬಾಯಿಪಾಠ ಕಲಿತೆ ಎಂದು ಹೇಳುವ ಮೂಲಕ ತನ್ನ ಗೌರವ ಅರ್ಪಿಸಿದ್ದಾನೆ. ನಾನವನ ಮಾತು ನಂಬುತ್ತೇನೆ. ದಶಕಗಳ ಕಾಲ ಮೆಕ್ಸಿಕೊ ಮತ್ತು ಜಗದಾದ್ಯಂತ ಓದುಗರು ಮತ್ತೊಂದು ಪುಸ್ತಕಕ್ಕಾಗಿ ಕಾದರು. ಅವರು ಕಾದರು, ಕಾದೇ ಕಾದರು. ಅರವತ್ತೊಂಬತ್ತನೆಯ ವಯಸ್ಸಿನಲ್ಲಿ, 1986ರಲ್ಲಿ ರುಲ್ಫೋ ತೀರಿಕೊಂಡ. ಯಾವುದೇ ಒಂದು ಹೊಸ ಕಥಾನಕ ಎಂದಿಗೂ ಹೊರಬರಲೇ ಇಲ್ಲ.
ಯಾಕೆ ಬರೆಯುವುದನ್ನು ನಿಲ್ಲಿಸಿದೆ ಎಂದು ಒಮ್ಮೆ ಸಂದರ್ಶಕನೊಬ್ಬ ಕೇಳಿದ ಪ್ರಶ್ನೆಗೆ ರುಲ್ಫೋ ಹೇಳುತ್ತಾನೆ, ತಾನು ಬರೆದ ಹೆಚ್ಚಿನೆಲ್ಲಾ ಕತೆಗಳನ್ನು ತಾನು ತನ್ನೊಬ್ಬ ಅಚ್ಚುಮೆಚ್ಚಿನ ಅಂಕಲ್ ಬಾಯಲ್ಲಿ ಕೇಳಿದ್ದು. ಅದೇನಾಯ್ತು ಅಂದ್ರೆ, ಆ ಅಂಕಲ್ ತೀರಿಕೊಂಡು ಬಿಟ್ಟ. ಯಾವುದೇ ಲೇಖಕ ಇಂಥ ಅಧಿಕಪ್ರಸಂಗಿ ಪ್ರಶ್ನೆಗೆ ಇದಕ್ಕಿಂತ ಚೆನ್ನಾದ ಉತ್ತರ ಕೊಟ್ಟಿದ್ದುಂಟೆ? ಯಾವತ್ತೂ ಯಾವುದೇ ಕಥಾನಕಗಳನ್ನು ಬರೆಯದ ಮೂರ್ಖ ಮಾತ್ರ ಕೇಳಬಹುದಾದ ಪ್ರಶ್ನೆಯಿದು. ನನ್ನ ನಿಲುವು ಇದು: ಒಬ್ಬ ಬರಹಗಾರನ (ಅಥವಾ ಯಾರೊಬ್ಬರದೂ) ಮೌನವನ್ನು ಯಾವತ್ತೂ ತನಿಖೆ ಮಾಡಲು ಹೋಗಬಾರದು. ಅದನ್ನು ಗೌರವಿಸಬೇಕು ಮತ್ತು ಅದನ್ನೂ ದೂರದಿಂದ.

ಪೆದ್ರೊ ಪರಮೊದ ಪ್ರವೇಶಿಕೆಯಲ್ಲಿ ಸುಸಾನ್ ಸಾಂಟಗ್ ಬರೆಯುತ್ತಾಳೆ:

"ಒಬ್ಬ ಬರಹಗಾರ ತನ್ನ ಬದುಕಿನಲ್ಲಿ ಸದಾ ಒಂದರ ಹಿಂದೆ ಒಂದರಂತೆ ಪುಸ್ತಕಗಳನ್ನು ಬರೆಯುತ್ತಾ, ಅವುಗಳನ್ನು ಪ್ರಕಟಿಸುತ್ತಾ ಇರಬೇಕೇನೋ ಎನ್ನುವ ಹಾಗೆ ಎಲ್ಲರೂ ರುಲ್ಫೋ ಬಳಿ ಯಾಕೆ ಅವನು ಮತ್ತೆ ಪುಸ್ತಕ ಬರೆಯಲಿಲ್ಲ ಎಂದು ಕೇಳುವವರೇ. ನಿಜಕ್ಕಾದರೆ ಒಬ್ಬ ಬರಹಗಾರ ತನ್ನ ಬದುಕಿನಲ್ಲಿ ಒಂದು ಮಹತ್ತಾದ ಪುಸ್ತಕವನ್ನು, ಯಾವುದು ಸದಾ ಕಾಲ ನಿಲ್ಲುವಂತಿರುತ್ತದೋ ಅಂಥದ್ದನ್ನು ಬರೆಯಬೇಕು ಅಷ್ಟೆ. ರುಲ್ಫೋ ಮಾಡಿದ್ದು ಅದನ್ನೆ. ಒಂದು ಪುಸ್ತಕ ಎರಡನೆಯ ಸಲ ಓದುವುದಕ್ಕೆ ಅರ್ಹವಾಗಿಲ್ಲ ಎಂದಾದರೆ ಅದು ಒಂದು ಸಲ ಓದುವುದಕ್ಕೂ ಅರ್ಹವಾಗಿಲ್ಲ ಎಂದೇ ಅರ್ಥ."

ಸಾಂಟಗ್‌ಳ ಈ ಅದ್ಭುತವಾದ ಮಾತಿಗೆ ನಾನೊಂದು ಪುಟ್ಟ ತಿದ್ದುಪಡಿ ಸೇರಿಸಬಯಸುತ್ತೇನೆ. ರುಲ್ಫೋ ಸದಾ ಕಾಲ ನಿಲ್ಲುವ ಒಂದಲ್ಲ, ಎರಡು ಪುಸ್ತಕಗಳನ್ನು ಬರೆದಿದ್ದಾನೆ. ನನಗೆ ಗೊತ್ತಿರುವಂತೆ ಹೀಗೆ ಹಲವು ಸ್ತರದ ಧ್ವನಿಶಕ್ತಿಯುಳ್ಳಂಥ, ಅತೀಂದ್ರಿಯ ಜಗತ್ತಿಗೆ ಸೇರಿದ್ದೋ ಎನಿಸುವಂಥ, ಕಾಲವನ್ನೇ ತನ್ನ ನಿಯಂತ್ರಣದಲ್ಲಿ ಬಗ್ಗಿಸಿಟ್ಟಂಥ, ಸಂತುಲಿತವಾದ ಒಂದು ಪ್ರಖರತೆಯನ್ನು ಉದ್ದಕ್ಕೂ ಉಳಿಸಿಕೊಂಡಂಥ ಪೆದ್ರೊ ಪರಮೊ ತರದ ಇನ್ನೊಂದು ಕಾದಂಬರಿ ಇಲ್ಲ. ಈ ಗುಣಗಳು ಕಾದಂಬರಿಯಲ್ಲಿ ಒಂದು ಬಗೆಯ ಸಮೂಹಗಾಯನದಂಥ ಉನ್ಮತ್ತ ಸ್ತರದಲ್ಲಿ ಉಕ್ಕುತ್ತಿವೆ.

"ಅರುಣೋದಯದಲ್ಲೆ ಗಂಟೆಗಳ ನಾದದೊಂದಿಗೆ ಹಳ್ಳಿಯು ಮೈಮುರಿಯುತ್ತದೆ. ಅದು ಡಿಸೆಂಬರ್ ಎಂಟರ ಮುಂಜಾವು. ಮಬ್ಬು ಮುಸುಕಿದ ಮುಂಜಾನೆ. ಹಾಗಂತ ಚಳಿಯೇನೂ ಇರಲಿಲ್ಲ. ಇದ್ದುದರಲ್ಲಿ ದೊಡ್ಡ ಗಂಟೆಯ ದನಿಯೊಂದಿಗೆ ಆ ನಾದ ತೊಡಗಿತ್ತು. ನಂತರ ಉಳಿದ ಗಂಟೆಗಳ ಗಣಗಣ ಅದರೊಂದಿಗೆ ಸೇರಿಕೊಂಡಿತು. ಕೆಲವರು ಹೈಮಾಸ್ ತೊಡಗಲಿದೆ ಎಂದು ಭಾವಿಸಿ ಮನೆಯ ಕದ ತೆರೆದು ಹೊರಬಂದರು. ಕತ್ತಲಿರುವಾಗಲೇ ಎದ್ದು ತಡರಾತ್ರಿಯ ತನಕ ಎಚ್ಚರಿರುವ ಕೆಲವೇ ಕೆಲವು ಮಂದಿಗೆ ಗೊತ್ತಿತ್ತು. ಅವರು ಹೇಳಿದ್ದು ಉಳಿದವರಿಗೆ, ರಾತ್ರಿ ಮುಗೀತು, ಹಗಲಾಗಿದೆ ಅಂತ. ಆದರೆ ಯಾವತ್ತಿಗಿಂತ ತುಸು ಹೆಚ್ಚು ಹೊತ್ತು ಈ ಗಂಟೆಗಳ ಸದ್ದು ಮುಂದುವರಿಯಿತು."

ಈ ಕಾದಂಬರಿಯಲ್ಲಿ ನಿರೂಪಕ ನಮ್ಮ ಜಗತ್ತಿನಷ್ಟೇ ನರಕದಂತಿರುವ ಮತ್ತು ಅದರಷ್ಟೇ ಸೂಕ್ಷ್ಮ ಕೂಡ ಆಗಿರುವ ಒಂದು ಭೂಗತ ಲೋಕದಲ್ಲಿ ತನ್ನ ತಂದೆ ಪೆದ್ರೊ ಪರಮೊನನ್ನು ಹುಡುಕುತ್ತಿದ್ದಾನೆ. ಆದರೆ ನಾನು, ಇದೆಲ್ಲಕ್ಕಿಂತ ಹೆಚ್ಚು ಮೂಲಭೂತವಾದ ಒಂದು ಪ್ರಶ್ನೆಯನ್ನಿಟ್ಟುಕೊಂಡು ಮತ್ತೆ ಮತ್ತೆ ರುಲ್ಫೋನ ಮೊದಲ ಪುಸ್ತಕಕ್ಕೇ ಮರಳಿ ಹೋಗುತ್ತೇನೆ; ಒಂದು ಕತೆಯನ್ನು ಸುಮ್ಮನೇ ಕೇಳುವುದರಿಂದ ಹೇಗೆ ಆವಾಹಿಸಿಕೊಳ್ಳಬಹುದು ಎನ್ನುವುದು ನನ್ನ ಕೌತುಕ.

ನನಗಿದು ಮರೆತು ಹೋಗುತ್ತದೆ. ನಾನು ನನ್ನ ತಲೆಯೊಳಗೆ ಒಬ್ಬನೇ ಸುಳಿದಾಡುತ್ತ ಎಷ್ಟೊಂದು ಸಮಯ ಕಳೆಯುತ್ತೇನೆಂದರೆ, ಕೊನೆಗೆ ಅಪರಿಚಿತನೊಬ್ಬನ ಧ್ವನಿಗೆ ತೆರೆದುಕೊಳ್ಳುವುದು ಕೂಡ ನನಗೆ ಹೇಗೆ ಎಂಬುದೇ ಮರೆತು ಹೋಗುತ್ತದೆ. ಅಲ್ಲಲ್ಲಿ ಗೀಚಿಕೊಂಡ ನನ್ನ ಟಿಪ್ಪಣಿಗಳಲ್ಲಿ ನಾನು ಒಂದು ತೀರ ಚಿಕ್ಕ ಕತೆಯ (ದ ಬರ್ನಿಂಗ್ ಪ್ಲೆಯಿನ್ಸ್ ಸಂಕಲನದ ಎಲ್ಲಾ ಕತೆಗಳೂ ಹತ್ತು ಪುಟಕ್ಕಿಂತ ಚಿಕ್ಕವೇ) ಕಡೆಗೆ ಹೆಚ್ಚು ಗಮನ ಕೊಡಲು ಇಚ್ಛಿಸುತ್ತೇನೆ. ಅದರ ಹೆಸರು ಲುವಿನಾ. ರಸ್ತೆ ಬದಿಯ ಒಂದು ಬಾರಿನಲ್ಲಿ ಒಬ್ಬ ದಾರಿಹೋಕ ಮತ್ತೊಬ್ಬ ಕುಡುಕ ಇಬ್ಬರೂ ಕುಡಿಯುತ್ತ ಕುಳಿತಿದ್ದಾರೆ. ಹೊರಗೆ ನದಿಯ ದಂಡೆಯಲ್ಲಿ ಕೆಲವು ಮಕ್ಕಳು ಆಡಿಕೊಳ್ಳುತ್ತಿವೆ. ಲುವಿನಾ ಎಂಬ ಹೆಸರಿನ ನಗರವೊಂದಕ್ಕೆ ವಲಸೆ ಹೋಗುತ್ತಿರುವ ದಾರಿಹೋಕನಿಗೆ, ಈ ಕುಡುಕ ತನಗೆ ಕುಡಿಯಲು ಕೊಡಿಸಿದ್ದಕ್ಕೆ ಪ್ರತಿಯಾಗಿ ಲುವಿನಾ ಕುರಿತು ಹೇಳುತ್ತಿದ್ದಾನೆ. ಕುಡುಕ ಹೇಳುತ್ತಾನೆ, ಲುವಿನಾದಲ್ಲಿ ಗಾಳಿ ಎಷ್ಟು ಜೋರಾಗಿ ಬೀಸುತ್ತೆಂದರೆ ಕೆಲವೊಮ್ಮೆ ಅದು ಮನೆಯ ಛಾವಣಿಯನ್ನು ಅದು ತಲೆಯ ಮೇಲಿನ ಹ್ಯಾಟೋ ಎಂಬಂತೆ ಎಗರಿಸಿಕೊಂಡು ಹೋಗುತ್ತದೆ! ಮಳೆ ಮಾತ್ರ ವರ್ಷದಲ್ಲಿ ಕೆಲವೇ ಕೆಲವು ದಿನ ಸುರಿಯುತ್ತದೆ. ಕೆಲವೊಂದು ವರ್ಷ ಮಳೆ ಬರುವುದೇ ಇಲ್ಲ. ಕುಡುಕ ಹೇಳುತ್ತಾನೆ, ಲುವಿನಾ ಎಂಬುದು ಒಂದು ತೆಗ್ದುಹಾಕಿದ ಊರು. ಹಳೇ ಚರ್ಮದಷ್ಟು ಒಣಹವೆ. ಚಳಿಗಾಲದಲ್ಲಿ ಭಯಂಕರ ಚಳಿ. ಬೇಸಿಗೆಯಲ್ಲಿ ಸುಡು ಬಿಸಿಲು. ಅಂಥಲ್ಲಿ ಒಬ್ಬ ಮನುಷ್ಯ ಅಬ್ಬಬ್ಬಾ ಎಂದರೆ ಸದ್ದುಗದ್ದಲವಿಲ್ಲದೆ ಶಾಂತವಾಗಿ ಸಾಯಬಹುದು ಅನ್ನೋದೆ ಉಳಿದ ಆಸೆ. ಕುಡುಕ ಹೇಳುತ್ತಲೇ ಹೋಗುತ್ತಾನೆ. ಅವನು ಒಬ್ಬ ಸ್ಕೂಲ್ ಮಾಸ್ತರನಾಗಿದ್ದಾತ. ಸ್ವತಃ ಒಂದು ಕಾಲದಲ್ಲಿ ಏನೇನೋ ಕನಸು ಕಟ್ಟಿಕೊಂಡು ಲುವಿನಾಕ್ಕೆ ವಲಸೆ ಹೋದವ.

"ಆಗ ನನ್ನಲ್ಲಿ ತ್ರಾಣವಿತ್ತು. ತಲೆ ತುಂಬ ಹೊಸ ಹೊಸ ಐಡಿಯಾ ಇತ್ತು - ಗೊತ್ತಲ್ಲ ನಿಮಗೆ, ಎಂಥೆಂಥಾ ಹುಚ್ಚು ಐಡಿಯಾಗಳೆಲ್ಲ ಇರ್ತವೆ ತಲೇಲಿ ಅಂತ. ಅದನ್ನೆಲ್ಲ ಇಟ್ಕೊಂಡು ಏನೋ ಮಾಡಬೇಕು ಅಂತ್ಲೇ ಮನುಷ್ಯ ಎಲ್ಲೆಲ್ಲಿಗೋ ಹೋಗ್ತಾನೆ. ಆದ್ರೆ ಲುವಿನಾದಲ್ಲಿ ಅದೆಲ್ಲ ಕೆಲಸಕ್ಕೆ ಬರೋದಿಲ್ಲ. ನಾನೂ ಒಂದು ಕೈ ನೋಡ್ಲಿಕ್ಕೆ ಹೋದೆ. ಎಲ್ಲ ಹಾಳಾಯ್ತು ಅಷ್ಟೆ..."

ದಾರಿಹೋಕ ಹೆಚ್ಚೇನೂ ಮಾತನಾಡುವುದೇ ಇಲ್ಲ. ಅವನು ತನ್ನ ಲುವಿನಾ ಪ್ರಯಾಣದ ಬಗ್ಗೆ ಏನಂದುಕೊಂಡಿದ್ದಾನೆ ಎನ್ನುವುದು ನಮಗೆ ಕೊನೆಗೂ ತಿಳಿಯುವುದಿಲ್ಲ. ಅವನಿಗೆ ಭಯವಾಯಿತೆ? ಅಥವಾ ಅವನು ಈ ಕುಡುಕನ ಯೌವನಕ್ಕಿಂತ ತನ್ನ ಯೌವನ ಹೆಚ್ಚು ಸಬಲವಾದದ್ದು ಮತ್ತು ಲುವಿನಾ ತನ್ನನ್ನು ಸೋಲಿಸಲಾರದು ಎಂದುಕೊಂಡಿದ್ದಾನೆಯೆ? ಕತೆಯಲ್ಲಿ ಎಲ್ಲಿಯೂ ಈ ದಾರಿಹೋಕ ಯುವಕ ಎನ್ನುವ ಬಗ್ಗೆ ನೇರವಾದ ಪುರಾವೆ ಸಿಗುವುದಿಲ್ಲ. ಆದರೂ ಹಾಗನಿಸುತ್ತದೆ. ಒಂದು ಕಡೆ ಕುಡುಕ ಸ್ವಲ್ಪ ಹೊತ್ತು ಸುಮ್ಮನಿರುತ್ತಾನೆ. ಅಲ್ಲೊಂದು ಮಧ್ಯಂತರ ಬಂದಂತಿದೆ. ಆಗ ಅಶರೀರವಾಣಿಯಂತಿರುವ ನಿರೂಪಕನ ಮಾತುಗಳು ಮೇಲಿನಿಂದ ಕೇಳಿಬಂದಂತೆ ನಮಗೆ ಹೇಳುತ್ತವೆ:

"ಪತಂಗಗಳು ಎಣ್ಣೆದೀಪಕ್ಕೆ ಮುತ್ತಿಕೊಳ್ಳಲು ಹಾರಿಕೊಂಡು ಬರತೊಡಗಿದವು ಮತ್ತು ದೀಪಕ್ಕೆ ಹೊಡೆದು ರೆಕ್ಕೆ ಸುಟ್ಟುಕೊಂಡು ನೆಲಕ್ಕೆ ಬೀಳತೊಡಗಿದವು. ಹೊರಗೆ ಕಾರ್ಗತ್ತಲು ನಿಧಾನಕ್ಕೆ ಹೆಜ್ಜೆಯಿಕ್ಕುತ್ತಾ ಮುಂದು ಮುಂದಕ್ಕೆ ಬರುತ್ತಿತ್ತು"

"ಲುವಿನಾ" ಕತೆಯ ಬಗ್ಗೆ ಈ "ಹೊರಗೆ ಕಾರ್ಗತ್ತಲು ನಿಧಾನಕ್ಕೆ ಹೆಜ್ಜೆಯಿಕ್ಕುತ್ತಾ ಮುಂದು ಮುಂದಕ್ಕೆ ಬರುತ್ತಿತ್ತು" ಎನ್ನುವ ಸಾಲು ಹೇಳದೇ ಇರುವ ಏನನ್ನು ತಾನೇ ನಾನು ಹೇಳಲು ಸಾಧ್ಯವಿದೆ? ಅಲ್ಲವೆ? ನಮಗೆಲ್ಲರಿಗೂ? ಸದಾ ಕಾಲಾಕ್ಕೂ?

ಶ್ರದ್ಧಾಂಜಲಿಯ ಮಾತು ಇಷ್ಟೇ, ನನ್ನ ಮಟ್ಟಿಗೆ.

ಸದ್ಯ ನಾನು ಬುಟಾನೊ ಸ್ಟೇಟ್ ಪಾರ್ಕಿನ ಒಂದು ಪಿಕ್‌ನಿಕ್ ಟೇಬಲ್ ಎದುರು ಕುಳಿತಿದ್ದೇನೆ. ಕ್ಯಾಲಿಫೋರ್ನಿಯಾದಿಂದ ತೀರ ದೂರವೇನಿಲ್ಲ ಇದು. ನಾನು ಕುಳಿತಲ್ಲಿಂದ ಕೆಲವೇ ಅಡಿಗಳ ಅಂತರದಲ್ಲಿ ರಷ್ಯನ್ ಎಂದು ನಾನು ಅಂದುಕೊಂಡಿರೋ ಒಂದು ಕುಟುಂಬ ಕೂತಿದೆ. ಕಳೆದ ಒಂದು ಗಂಟೆಯಿಂದ ನಾನು ಅವರ ಮಾತುಕತೆಯನ್ನೆಲ್ಲ ಕೇಳುತ್ತ ಕೂತಿದ್ದೇನೆ. ಮೊದಲಿಗೆ ನಾನು ಅವರೇನೋ ಸಿಕ್ಕಾಪಟ್ಟೆ ಸಿಟ್ಟಿನಲ್ಲಿದ್ದಾರೆ, ಏನೋ ಜಗಳ ನಡೆಯುತ್ತಿದೆ, ಸ್ವಲ್ಪ ಹೊತ್ತಿನಲ್ಲೇ ಕೈಗೆ ಸಿಕ್ಕಿದ್ದನ್ನ ತೆಗೆದುಕೊಂಡು ಒಬ್ಬರನ್ನೊಬ್ಬರು ಮರ್ಡರ್ ಮಾಡಲಿದ್ದಾರೆ ಎಂದೇ ಅಂದುಕೊಂಡಿದ್ದೆ. ಒಮ್ಮೆಯಂತೂ ಅವರಲ್ಲೊಬ್ಬ ದೊಡ್ಡ ಒಂದು ಕರಿದ ಮಾಂಸದ ತುಂಡು ಕೈಗೆ ತಗೊಂಡು ಟೇಬಲ್ ಸುತ್ತಿಕೊಂಡು ಬಂದು ಎದುರಿನವನ ತಲೆಗೆ ಕುಟ್ಟಿದ್ದ ಕೂಡ. ಮತ್ತೆ ಮತ್ತೆ ಅರ್ಥವಾಯಿತು, ಈ ಸಂಸಾರದ ಮಂದಿ ಊಟದ ಹೊತ್ತಲ್ಲಿ ಮಾತನಾಡಿಕೊಳ್ಳುವ ಶೈಲಿಯೇ ಇದು ಅಂತ. ಅವರು ಇದ್ದಿದ್ದು ಐದೇ ಮಂದಿ. ಸುಮಾರು ಎಪ್ಪತ್ತರ ಆಸುಪಾಸಿನಲ್ಲಿರುವ ತಂದೆ-ತಾಯಿ, ನಲವತ್ತರಿಂದ ಐವತ್ತರ ನಡುವಿನ ಮೂವರು ಮಕ್ಕಳು ಅಂತ ಕಾಣುತ್ತೆ, ಇಬ್ಬರು ಗಂಡಸರು, ಒಬ್ಬಾಕೆ ಹೆಂಗಸು. ಅವರು ಇದ್ದಿದ್ದು ಐದೇ ಮಂದಿ ಎಂದೆನಲ್ಲ, ಆದರೆ ಅವರು ಮಾಡುತ್ತಿದ್ದ ಗದ್ದಲ ಇಪ್ಪತ್ತು ಮಂದಿ ರೌಡಿ ಕೊಸಾಕ್ಸ್ ಮಾಡುವಷ್ಟಿತ್ತು. ಎಲ್ಲ ಸಖತ್ ಪರ್ಸನಾಲಿಟಿಯವರೇ, ಆದರೆ ಅವರ ಧ್ವನಿಯೇ ನಿಜಕ್ಕೂ ಅವರನ್ನು ಮತ್ತಷ್ಟು ದೈತ್ಯರೆನಿಸುವಂತೆ ಮಾಡಿತ್ತು. ಏನು ಬೊಬ್ಬೆ, ಅಟ್ಟಹಾಸ, ಆ ಭಾರೀ ಕೈಗಳಿಂದ ಆ ಪಿಕ್‍‌ನಿಕ್ ಟೇಬಲ್ ಮೇಲೆ ಬಡಿಯುವುದೇನು! ಮತ್ತೊಮ್ಮೆ ನನಗೆ ಹೆಚ್ಚು ಭಾಷೆಗಳು ಬರದೇ ಇರುವುದರ ಬಗ್ಗೆ ನಾಚಿಕೆಯಾಯಿತು. ನನ್ನ ಮುಂದಿನ ಜನ್ಮದಲ್ಲಿ ನಾನು ಸತ್ತರೂ ಸರಿ, ರಷ್ಯನ್ ಕಲಿಯುತ್ತೇನೆ. ಚೆಕೊವ್ ಮತ್ತು ತುರ್ಗನೇವರನ್ನು ಓದುತ್ತೇನೆ. ಮತ್ತು ಐಸಾಕ್ ಬೇಬಲ್. ಗೂಗಲನ್ನ ಮೂಲದಲ್ಲೇ ಅರೆದು ಕುಡಿದು ಬಿಡುತ್ತೇನೆ. ಮಾಸ್ಕೋಗೆ ವಲಸೆ ಹೋಗಿ ಅಲ್ಲೆ ನೆಲೆಸುತ್ತೇನೆ ಮತ್ತು ಇಡೀ ದೇಶದ ಎಲ್ಲಾ ಆಪ್ತ, ಗುಟ್ಟುಕಟ್ಟಿನ ಮಾತುಕತೆಯನ್ನೆಲ್ಲ ಕದ್ದುಮುಚ್ಚಿಯಾದರೂ ಕೇಳಿಸಿಕೊಳ್ಳುತ್ತೇನೆ.

ನಾನಿಲ್ಲಿಗೆ ರೆಡ್‌ವೂಡ್ಸ್‌ನ ಶಾಂತ ಪರಿಸರದಲ್ಲಿ ಸಮಯ ಕಳೆಯಲೆಂದು ಬಂದವನು. ಬದಲಿಗೆ ಈ ಗದ್ದಲಕ್ಕೆ ಮುದಗೊಂಡು ಕುಳಿತಿದ್ದೇನೆ. ನೈಸರ್ಗಿಕವಾದ ವನರಾಜಿಗಳ ನಡುವಣ ವಿಹಾರವನ್ನು ಬಿಡಿ; ನಾನು ಈ ಶಿಷ್ಟವಲ್ಲದ ಬಗೆಯ ಬದುಕನ್ನೇ, ಇಚ್ಛಾನುಸಾರ ಇರುವ ಮಂದಿಯನ್ನೇ ಹೆಚ್ಚು ಇಷ್ಟಪಡುವವನು, ಅವರೊಂದಿಗೇ ಇರಲು ಬಯಸುವವನು. ನಾನು ಅವರಿಗಾಗಿಯೇ ಇಲ್ಲಿಗೆ ಬಂದವನು. ಮತ್ತೀಗ ಯಾವುದೋ ಕೆಲವು ಕಾರಣಗಳಿಗೆ ನನಗೆ ಹುವಾನ್ ರುಲ್ಫೋ ನೆನಪಾಗುತ್ತಾನೆ. ಪಕ್ಕದ ಊಟದ ಟೇಬಲ್ಲಿನಲ್ಲಿ ದಾಸ್ತೊವಸ್ಕಿಯನ್ ಔತಣವೊಂದು ಕೊಬ್ಬಿ ಬೀಗುತ್ತಿರಬೇಕಾದರೆ ಮೌನದ ಮನೋಮೂರ್ತಿ, ಕಿರಿದರಲ್ಲಿ ಪಿರಿದರ್ಥವಂ ಪೇಳ್ವ ರುಲ್ಫೋಗೇನಪ್ಪ ಕೆಲಸ! ಹೆಚ್ಚೇನಿಲ್ಲವೆನ್ನಿ, ಸರಿಯೇ, ಮೇಲ್ನೋಟಕ್ಕಾದರೂ ಅದು ಸರಿ. ಆದರೆ ಇಲ್ಲಿ ಹೀಗೆ ಕುಳಿತಿರಬೇಕಾದರೆ ಅನಿಸುತ್ತಿದೆ, ರುಲ್ಫೋ ಕೂಡಾ ಈ ಜನರ ಮಾತುಕತೆಯನ್ನು ಕೇಳಿಸಿಕೊಳ್ಳಲು ಬಯಸುತ್ತಿದ್ದ, ಇಷ್ಟಪಡುತ್ತಿದ್ದ. ಬಹುಶಃ ಅವನ ಅಂಕಲ್ ಒಬ್ಬ ಸಿಕ್ಕಾಪಟ್ಟೆ ಮಾತುಗಾರನೇ ಇದ್ದಿರಬೇಕು. ನಾನೊಬ್ಬನೇ ಹೀಗೆ ಎನ್ನುತ್ತೀರಾ? ಅಥವಾ ನೀವೂ ಕೂಡಾ ಹೀಗೆ ಕೆಲವೊಮ್ಮೆ ಈಗಿಲ್ಲದ ಕತೆಗಾರರೊಂದಿಗೆ ಹೂಬೇಹೂಬ್ ನಮ್ಮ ಗತಿಸಿದ ಗೆಳೆಯನೊಂದಿಗೆ ಮಾತಿಗೆ ಕೂತಂತೆಯೇ ಲೊಟ್ಟೆಹೊಡೆದು ಕೂರುತ್ತೀರಾ? ರುಲ್ಫೋ ಹಾಗೆ ಇಲ್ಲಿ ಬಂದು ನನ್ನೆದುರಿನ ಟೇಬಲ್ಲಿನಾಚೆ ಕುಳಿತಿದ್ದಾನೆ. ಬೆಳಗುವ ಬಿಳೀ ಶರ್ಟ್ ತೊಟ್ಟಿದ್ದಾನೆ, ಹೆಗಲ ಮೇಲೆ ಕ್ಯಾಮರಾ ತೂಗಾಡುತ್ತಿದೆ. ಅವನು ಒಂದೂ ಮಾತನಾಡುತ್ತಿಲ್ಲ ಎನ್ನುವುದೇನೋ ನಿಜವೇ. ಅದರೆ ನನ್ನನ್ನು ಅವನ ಕತೆಗಳ ಬಗ್ಗೆ ಯೋಚಿಸುವ ಹಾಗಂತೂ ಮಾಡಿಬಿಟ್ಟಿದ್ದಾನೆ. ಒಬ್ಬರು ಇನ್ನೊಬ್ಬರಿಗೆ ಪರಸ್ಪರ ಕತೆಗಳನ್ನು ಹೇಳುತ್ತಲೇ ಒಂದು ಪಾತ್ರದಿಂದ ಇನ್ನೊಂದು ಪಾತ್ರದ ಸುತ್ತ ಸುತ್ತುವ ಅವನ ಕತೆಗಳಂತೆಯೇ ನಾನೀಗ ಸುತ್ತುತ್ತಿದ್ದೇನೆ, ಅವನವೇ ಕತೆಗಳ ಸುತ್ತ. ಪಕ್ಕದ ಟೇಬಲ್ಲಿನ ನನ್ನ ಗೆಳೆಯರು ಅದೇನು ಮಾಡುತ್ತಿದ್ದಾರೆ ಎನ್ನುವುದನ್ನು ನಾನು ಕಲ್ಪಿಸುವುದಾದರೆ, ಅವರು ಪರಸ್ಪರ ಒಬ್ಬರು ಇನ್ನೊಬ್ಬರ ಕತೆಗಳನ್ನೇ ಹೊರಸೆಳೆಯುವ ಕೆಲಸ ಮಾಡುತ್ತಿದ್ದಾರೆ ಅಷ್ಟೆ. ಬಹುಶಃ ಅವರು ಈಗಾಗಲೇ ಆ ಕತೆಗಳನ್ನೆಲ್ಲ ನೂರಾರು ಬಾರಿ ಕೇಳಿಯೂ ಆಗಿದೆ. ಆದರೂ...

ನಾನಂತೂ ಈಗೀಗ ಇದನ್ನೇ ನಂಬತೊಡಗಿದ್ದೇನೆ; ಅದು ಕತೆ ಹೇಳುವುದರಲ್ಲಿಲ್ಲ, ಅದನ್ನು ಮತ್ತೆ ಮತ್ತೆ ಹೇಳುವುದರಲ್ಲೇ ಇದೆ. ಅತ್ಯಂತ ಆಳದಲ್ಲಿ ರುಲ್ಫೋನ ಕತೆಗಳೆಲ್ಲವೂ ಹೇಳದೇ ಇರಲಾರದ ತಮ್ಮ ಕತೆಗಳನ್ನು ಗಳಗಳನೆ ಹೇಳಿಕೊಂಡು ಹಗುರಾಗಬಯಸುವ ಪಾತ್ರಗಳ ಕುರಿತೇ ಇವೆ. ಉಳಿದೆಲ್ಲಕ್ಕಿಂತ ಹೆಚ್ಚಾಗಿ ಈ ಕಾರಣಕ್ಕೇ, ಈ ಕೊಂಪೆಯ ಗುಡಿಸಲಿನಂಥ ಪಿಕ್‌ನಿಕ್ ಏರಿಯಾದಲ್ಲಿ, ತನಗಾದರೂ ಒಂದಕ್ಷರ ಅರ್ಥವಾಗದ ಭಾಷೆಯನ್ನು ಕೇಳಿಸಿಕೊಳ್ಳುತ್ತ ಕೂತಿರಲು ಬಂದಿದ್ದಾನಾತ ಅನಿಸುತ್ತದೆ ನನಗೆ. ಈ ಉನ್ಮತ್ತ ಪಿಕ್‌ನಿಕ್ ಪ್ರಿಯರು ಇನ್ಯಾರೂ ಅನುಕರಿಸಲಾಗದ ವಿಶಿಷ್ಟವಾದೊಂದು ವಿಧಾನದಲ್ಲಿ ಪರಸ್ಪರ ಹೇಳಿಕೊಳ್ಳುತ್ತಿರುವ ಕತೆಗಳೂ ಕೂಡ ಒಂದಿಲ್ಲೊಂದು ಬಗೆಯಲ್ಲಿ ಇವರೆಲ್ಲರ ಯೌವನದ ದಿನಗಳಲ್ಲಿ ಕಟ್ಟಿಕೊಂಡಿದ್ದ ಕನಸುಗಳೆಲ್ಲ ಏನಾಗಿ ಹೋದವು ಎನ್ನುವ ಕುರಿತೇ ಆಗಿರಬಹುದು ಎನ್ನುವ ಗುಮಾನಿ ಕೂಡ ನನಗೆ, ಯಾಕೆ, ಇಲ್ಲಿರುವ ರುಲ್ಫೋನ ಛಾಯೆಗೂ ಇದ್ದಿರಲೇ ಬೇಕೆಂಬ ನಂಬುಗೆ ನನ್ನದು. ಈಗೀಗ ನನಗೇ ನನ್ನಲ್ಲಿದ್ದ ಯಾವುದೋ ಒಂದು ಹುಮ್ಮಸ್ಸು ನಿಧಾನಕ್ಕೆ ಕರಗತೊಡಗಿದೆ ಅನಿಸುತ್ತಿದೆ. ಜೀವನದ ಯಾವ ತಿರುವಿನ ಯಾವ ಘಟ್ಟದಲ್ಲಿ ನಾವು ನಮ್ಮದೇ ಸೋಲುಗಳ ಕುರಿತು ಮೋಹಕ್ಕೆ ಬೀಳುತ್ತೇವೆ, ಅವುಗಳ ಕುರಿತೇ ಮಾತನಾಡುವುದನ್ನು ಬಿಡಲಾರದ ತುಡಿತಕ್ಕೆ ಒಳಗಾಗುತ್ತೇವೆ? ಎಲ್ಲೋ ಒಂದು ಕಡೆ ನಾವು ಕೊನೆಗೂ ನಮ್ಮಷ್ಟಕ್ಕೇ ತಣ್ಣಗಾಗುತ್ತೇವೆಯೆ? ಈಗ ಮತ್ತೆ "ಲುವಿನಾ" ಕುರಿತು ಯೋಚಿಸುವಾಗ, (ನನ್ನ ಬಳಿ ಈಗ ತೀರ ಬೇಕನಿಸುತ್ತಿರುವ ಘಳಿಗೆಯಲ್ಲಿ ಆ ಪುಸ್ತಕ ಇಲ್ಲ*) ನಾನೇ ಬಾರ್‌ನಲ್ಲಿ ಕುಳಿತು ಯೋಚಿಸುತ್ತಿರುವ ದಾರಿಹೋಕನಾಗುತ್ತೇನೆ. ಸಶಬ್ದವಾಗಿ ನಾನದನ್ನು ಹೇಳದಿದ್ದರೂ ನನಗೆ ಗೊತ್ತು, ನಾನು ನನ್ನ ಬದುಕನ್ನು ಹಿಂದಿರುಗಿ ನೋಡುವವನಿದ್ದೇನೆ. ನಾನು ಲುವಿನಾ ಎಂಬ ಹೆಸರಿನ ಒಂದು ಊರಿಗೆ ಹೋಗುತ್ತಿದ್ದೇನೆ. ಅಲ್ಲಿ ಎಲ್ಲವೂ, ಕೊನೆಗೊಮ್ಮೆ ಎಲ್ಲವೂ, ಬದಲಾಗಲಿದೆ.

"ನಾನೊಬ್ಬ ಶಾಲಾ ಮಾಸ್ತರನಾಗಿದ್ದೆ. ನಾನಲ್ಲಿಗೆ ಶಾಲೆಯಲ್ಲಿ ಕೆಲಸ ಮಾಡಲು ಬಂದಿದ್ದೆ. ನಾನು ನನ್ನ ಹೆಂಡತಿ ಮಕ್ಕಳ ಜೊತೆ ಅಲ್ಲಿಗೆ ತಲುಪಿದಾಗ ಬಂದ್ರಾ ಅಂತ ಕೇಳುವವರೇ ಗತಿಯಿರಲಿಲ್ಲ. ತಿನ್ನುವುದಕ್ಕೇನಾದರೂ ಸಿಗುತ್ತಾ ನೋಡು ಅಂತ ನಾನು ನನ್ನ ಹೆಂಡತಿಯನ್ನು ಕಳಿಸಿದೆ. ಗಂಟೆಗಟ್ಟಲೆ ಕಾದರೂ ಅವಳ ಪತ್ತೆಯಿಲ್ಲ. ಕೊನೆಗೆ ನಾನೇ ಅವಳನ್ನು ಹುಡುಕಿಕೊಂಡು ಹೊರಟೆ. ಒಂದು ಚರ್ಚಿನೊಳಗೆ, ಅಲ್ಲಿ ನರಮನುಷ್ಯರಿರಲಿಲ್ಲ, ಮೊಣಕಾಲು ಹಿಡಿದುಕೊಂಡು ಸುಧಾರಿಸಿಕೊಳ್ಳುತ್ತಾ ಇದ್ದ ಅವಳನ್ನು ಕಂಡೆ. ಏನಾಯಿತು ಮಾರಾಯ್ತಿ, ತಿನ್ನುವುದಕ್ಕೇನಾದರೂ ತಗೊಂಬಾ ಅಂತ ಕಳಿಸಿದರೆ ಇಷ್ಟು ಹೊತ್ತಾ, ಇದೇನು ನಿನ್ನ ಕತೆ ಅಂತ ಕೇಳಿದೆ. ದೊಡ್ಡಕ್ಕೆ ನಿಟ್ಟುಸಿರು ಬಿಟ್ಟು ಹೇಳಿದ್ಲು, ನಾನಿನ್ನೂ ದೇವರಿಗೆ ಮೊರೆಯಿಟ್ಟು ಮುಗಿದಿಲ್ಲ ಅಂತ. ನನಗಿಂತ ಮೊದಲು ಅವಳಿಗೆ ಚೆನ್ನಾಗಿ ಅರ್ಥವಾಗಿತ್ತು, ನಾವು ಎಲ್ಲಿಗೆ ಬಂದು ಸಿಕ್ಕಿಕೊಂಡಿದ್ದೇವೆ ಅಂತ. ಆವತ್ತು ರಾತ್ರಿ ಅದೇ ಚರ್ಚಿನಲ್ಲಿ ನಾವೆಲ್ಲರೂ ಗುಪ್ಪೆ ಹಾಕಿಕೊಂಡು ಚಳಿಗೆ ಮರಗಟ್ಟಿಕೊಂಡು ಮುದುರಿ ಮಲಗಿದೆವು. ಇನ್ನೇನು ಬೆಳಕು ಹರಿಯಬೇಕು ಎನ್ನುವಾಗ ಯಾವುದೋ ಒಂದು ವಿಚಿತ್ರ ಸದ್ದಿಗೆ ನನಗೆ ಎಚ್ಚರಾಯ್ತು. ಮೊದಲಿಗೆ ನಾನದನ್ನು ಬಾವಲಿಗಳು ರೆಕ್ಕೆ ಬಡಿಯುವ ಸದ್ದು ಅಂತಲೇ ಅಂದುಕೊಂಡೆ. ಇನ್ನೂ ಇದ್ದ ಮಂಪರು ನಿದ್ದೆಯಲ್ಲೇ ನಾನು ಚರ್ಚಿನ ಬಾಗಿಲಿನ ತನಕ ಹೋದೆ. ಸರಬರ ಸದ್ದು ಮಾಡುವ ಕಪ್ಪು ಬಟ್ಟೆತೊಟ್ಟ ಹೆಂಗಸರ ಒಂದು ಪುಟ್ಟ ಗುಂಪು ಹೆಗಲ ಮೇಲೆ ಖಾಲಿ ಕೊಡ ಹೊತ್ತು ನಿಧಾನವಾಗಿ ಸರಿಯುತ್ತ ಇದ್ದುದನ್ನು ಕಂಡೆ."

ಇಲ್ಲ, ಪ್ರಯತ್ನಿಸುವುದು ವ್ಯರ್ಥ. ನಾದದ ನೆಲೆ ಹಿಡಿವ ನನ್ನೆಲ್ಲ ಸಂವೇದನೆಗಳೂ ಜಡಗೊಂಡಿವೆ ಎಂದೇ ತಿಳಿದರೂ, ಕೊನೆಗೂ ನನಗೆ ಇದ್ಯಾವುದೂ ದಕ್ಕಿಯೇ ಇಲ್ಲ ಅಂತ ಅಂದುಕೊಂಡರೂ, ರುಲ್ಫೋನ ಲಯವನ್ನು ಕಂಡುಕೊಳ್ಳುವಲ್ಲಿ ಅಥವಾ ಕನಿಷ್ಠ ಅದಕ್ಕೆ ಹತ್ತಿರದ ಒಂದು ಲಯಕ್ಕಾದರೂ ಶ್ರುತಿಯಾಗಲು ಸಾಧ್ಯವಾಗದೇ ಹೋಯಿತೆಂದುಕೊಂಡರೂ ಅದಕ್ಕೆ ಕಾರಣ ನನಗೆ ಆ ಸಾಮರ್ಥ್ಯವಿಲ್ಲ ಎಂದೇ. ಆದರೆ ನನಗೆ ಒಂದಂತೂ ಸ್ಪಷ್ಟವಾಗಿ ತಿಳಿದಿದೆ. ಬೆಳಕು ಹರಿಯುವ ಮುನ್ನ ಚರ್ಚಿನೆದುರು ಹಾಗೆ ಸರಿದು ಹೋದ ಹೆಂಗಸರ ಗುಂಪು ತೊಟ್ಟಿದ್ದ ಬಟ್ಟೆಯ ಸರಬರ ಸದ್ದು ಬಾವಲಿಗಳ ರೆಕ್ಕೆ ಸದ್ದಿನಂತೆಯೇ ಕೇಳಿಸಿತ್ತು. ಮೊತ್ತ ಮೊದಲ ಬಾರಿಗೆ "ಲುವಿನಾ"ಕ್ಕೆ ಮುಖಾಮುಖಿಯಾದಂದಿನಿಂದಲೂ ಈ ಒಂದು ವಿವರ ನನ್ನ ನೆನಪಿನಲ್ಲಿ ಹುದುಗಿ ಕುಳಿತಿದೆ. ಪುಟದಲ್ಲಿ ಆ ಸಾಲನ್ನು ನೋಡುತ್ತಲೇ ಆ ಬಟ್ಟೆ ಒಂದಕ್ಕೊಂದು ಉಜ್ಜಿ ಹುಟ್ಟಿಸುವ ವಿಚಿತ್ರ ಸದ್ದನ್ನು ಕೇಳಿಸಿಕೊಳ್ಳಲು ನಾನು ಕಿವಿಯಾನಿಸಿಯೇ ಆನಿಸಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ಅವನ ಮಂದಿಗೆ ಹೆಚ್ಚೇನೂ ಹೇಳುವುದಕ್ಕೆ ಇದ್ದಿರದೇ ಇರಬಹುದು. ಆದರೆ ಇದು ಮಾತನಾಡುವುದೇನು ಕಡಿಮೆಯೆ? ಹೇಗಿದನ್ನು ಮಾಡುತ್ತಾನಾತ? ಹೇಳುತ್ತಾನೆ, ಅಂಕಲ್ ಹೇಳುತ್ತಿದ್ದ ಕತೆಗಳನ್ನು ಕೇಳುತ್ತಿದ್ದನಂತೆ. ಆಯ್ತು, ಸರಿ. ನನಗನಿಸುತ್ತದೆ, ರುಲ್ಪೋ ಮೌನವನ್ನು ಕೂಡ ಕೇಳಿಸಿಕೊಳ್ಳುತ್ತಿದ್ದ ಅಂತ. ಯಾವ ಮೌನವು ನಮ್ಮನ್ನೆಲ್ಲ ಅಕಾಲಿಕ ಸಾವಿನಂತೆ ಹಿಂಬಾಲಿಸುತ್ತಲೇ ಇರುವುದೋ ಅದನ್ನು.

ಹಳಬ ಕುಡುಕ ಇನ್ನೂ ಸ್ವಲ್ಪ ಕುಡಿಯುತ್ತಲೇ ಮಾತನಾಡುತ್ತಾನೆ. ಅವನು ಹೇಳುತ್ತಾನೆ, ಎಲ್ಲಾ ಶಕುನಗಳಾಚೆಗೂ ಅವನು ಅಲ್ಲಿಯೇ ನೆಲೆಯೂರಲು ನಿರ್ಧರಿಸಿದ. ಅಲ್ಲೇ ಇದ್ದು ಏನಾದರೂ ಮಾಡುವುದು ಅಂತ ಮಾಡಿದ್ದ. ವರ್ಷಗಳುರುಳಿದ ಮೇಲೆ, ಆ ಸ್ಥಳ ಅವನನ್ನು ಪೂರ್ತಿಯಾಗಿ ನಾಶಗೊಳಿಸಿದ ಮೇಲೆ, ಕೊನೆಗೂ ಅವನು ಅಲ್ಲಿಂದ ಹೊರಟ. ಆದರೆ ಆಗಂತೂ ತೀರ ತಡವಾಗಿತ್ತು. ಲುವಿನಾ ನಗರವು ಆ ಹೊತ್ತಿಗಾಗಲೇ ಅವನ ಕತೆಯಾಗಿ ಬಿಟ್ಟಿತ್ತು. ಅದನ್ನವನು ಯಾರಿಗಾದರೂ ಹೇಳುತ್ತಿರುತ್ತಾನೆ, ಮತ್ತೆ ಮತ್ತೆ ಹೇಳಲು ತಯಾರಾಗಿಯೇ ಇರುತ್ತಾನೆ. ಆದರೆ ಅವನ ಯೌವನದ, ಗಟ್ಟಿಮುಟ್ಟಾಗಿದ್ದು ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ಆ ಕಾಲದ ಕತೆಯನ್ನು ಕೇಳುವವರು ( ಮತ್ತೆ ಅದಕ್ಕಾಗಿ ಅವನಿಗೆ ಒಂದೊ ಎರಡೋ ಬಾಟಲು ಬೇರೆ ಕೊಡಿಸುವವರು) ಯಾರು?

ಚೆಕೊವ್ ಒಂದು ಕಡೆ ಬರೆಯುತ್ತಾನೆ, "ರಷ್ಯನ್ನರು ಕಳೆದು ಹೋದ ಬದುಕನ್ನು ನೆನೆಯುವುದಕ್ಕೆ ಇಷ್ಟಪಡುತ್ತಾರೆ; ಆದರೆ ಸದ್ಯದ ಬದುಕನ್ನು ಬದುಕಲು ಅಲ್ಲ."

ಬಹುಶಃ ಇದು ನಮಗೆಲ್ಲರಿಗೂ ಅನ್ವಯಿಸುವ ಮಾತೇ. ಆದರೆ ನೆನೆಯುವುದೇ ಬದುಕಲ್ಲವೆ? ಮತ್ತು ನಮ್ಮ ಸೋಲುಗಳೇ ನಮ್ಮ ಕತೆಗಳೂ. ಇಲ್ಲಿಯೂ ನಾನು ಸೋತಿದ್ದೇನೆ. ಬರೆಯದೇ ಇರುವುದರ ಸೌಂದರ್ಯ ನೋಡುತ್ತ, ಆ ದಾರಿಯಲ್ಲಿ ನಾನು ತೀರ ದೂರ ಸಾಗಿಬಿಟ್ಟೆ. ಇದಂತೂ ಶ್ರದ್ಧಾಂಜಲಿಯಲ್ಲ. ಆದರೆ ಕತೆಗಳಿರುವುದೇ ಹೇಳುವುದಕ್ಕೆ. ಹಾಗಾಗಿ ಹೇಳುತ್ತೇನೆ, ಅವುಗಳನ್ನು ಹಂಚಿಕೊಳ್ಳಿ. ನಿಧಾನವಾಗಿ ಆದರೂ ಪರವಾಗಿಲ್ಲ, ಹಂಚಿಕೊಳ್ಳದೇ ಇರಬೇಡಿ. ಹೇಳುವುದು ಮುಗಿದ ಬಳಿಕ, ಹುಲ್ಲುಹಾಸಿನ ಬಳಿ ಕುಳಿತಲ್ಲೇ ಸುಸ್ತಾಗಿ ಒರಗಿಕೊಂಡಿರುವ ನನ್ನ ಕ್ಯಾಲಿಫೋರ್ನಿಯಾದ ರಷ್ಯನ್ ಗೆಳೆಯರ ಹಾಗೆ, ಬಾರಿನಲ್ಲೇ ತನ್ನ ಕೆಟ್ಟು ಕೆಸರಾದ ತಲೆಯನ್ನು ಒರಗಿಸಿ ಮಲಗಿದ ಕುಡುಕ ಮುದಿ ಮಾಸ್ತರನ ಹಾಗೆ, ಸ್ವಸ್ಥ ಮಲಗಿ ಬಿಡಿ.
------------------------------
* ಕೆಲವೊಮ್ಮೆ ಚಿಂತೆಯಾಗುತ್ತದೆ, ಒಂದಲ್ಲಾ ಒಂದು ದಿನ ನಾನು ಶರಣಾಗುತ್ತೇನೆ, ದರಿದ್ರ ಕಿಂಡ್ಲ್ ಕೊಳ್ಳುತ್ತೇನೆ ಅನಿಸುತ್ತಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ನಮ್ಮದೆಂಬುದೀ ಬದುಕ ಪೊರೆವ ಕೈಯಾವುದು!

Am I Alone Here ಪುಸ್ತಕದ ಇನ್ನೊಂದು ಪ್ರಬಂಧ. ಒಂದೊಂದನ್ನು ಓದಿದಂತೆಯೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ತೀವ್ರವಾಗಿ ಅನಿಸುವ ಪ್ರಬಂಧಗಳಿವು. ಒಂಥರಾ ಹುಚ್ಚು ಹಿಡಿಸಿದೆ ಈ ಪುಸ್ತಕ ನನಗೆ. ಒಂದು ಪುಸ್ತಕದ ಬಗ್ಗೆ ಹೀಗೆಯೂ ಮಾತನಾಡಬಹುದು ಎಂದು ತೋರಿಸಿಕೊಟ್ಟ ಕೃತಿಯಿದು. ವೈಯಕ್ತಿಕ ವಿಷಯಗಳು, ಬರಹಗಾರನ ಕತೆ, ಅವನ ವೈಯಕ್ತಿಕ ವಿಷಯಗಳು, ಸದ್ಯದ ಕಥಾನಕ, ಆ ಪಾತ್ರಗಳು, ಆ ಪಾತ್ರಗಳ ವೈಯಕ್ತಿಕ ಎಲ್ಲ ಸೇರಿಯೇ ಮಾತನಾಡಬೇಕಾದ್ದು ಎನಿಸುವಂತೆ ಮಾತನಾಡುವ ಪೀಟರ್ ಆರ್ನರ್ ಕೃತಿ ಏಕಕಾಲಕ್ಕೆ ಮೆಮೊಯರ್, ಆತ್ಮಕಥಾನಕ, ಸಾಹಿತ್ಯ ವಿಮರ್ಶೆ, ಆಪ್ತ ಮಾತುಕತೆ, ಚರ್ಚೆ, ಜಿಜ್ಞಾಸೆ ಎಲ್ಲವೂ ಆಗಿಬಿಡುತ್ತದೆ. ಆದರೆ ಇಲ್ಲಿ ಉಡಾಫೆಯಿಲ್ಲ, ತೇಲಿಸಿ ಬಿಡುವ ಮಾತುಗಳಿಲ್ಲ. ಹುಸಿ ಪಾಂಡಿತ್ಯ ಪ್ರದರ್ಶನದ ಮೋಹವಿಲ್ಲ. ಕೊನೆಗೆ ವಾಹ್ ಎನಿಸುವ ಡಯ್ಲಾಗುಗಳ ರೀಲು ಬಿಡುತ್ತ ತನ್ನ ದನಿಗೆ ತಾನೇ ವಿಸ್ಮಯಪಡುತ್ತ, ನಿಮ್ಮನ್ನು ಮರುಳು ಮಾಡುವ ಬರಹಗಾರಿಕೆಯ ಕಸುಬುದಾರಿಕೆ ಕೂಡ ಇಲ್ಲಿಲ್ಲ.

ಹೆಸರು ಗ್ರೆಗ್. ಮಡದಿಗೆ ವಿಚ್ಛೇದನ ನೀಡಿದ್ದಾನೆ. ಸ್ವಂತ ಮಗನ ‘ಒಂದು ಕಾಲದ’ ಪತ್ನಿಯ ಜೊತೆ ಮಲಗುತ್ತಾನೆ. ಅವಳ ಹೆಸರು ಬೃಂದಾ. ಅದೆಲ್ಲ ಹೋಗಲಿ ಎಂದರೆ ಈಗ ಅವಳನ್ನೇ ಮದುವೆಯಾಗುತ್ತಿದ್ದಾನೆ. ಸ್ವಲ್ಪ ನಿಷ್ಠುರವಾದ ಘಳಿಗೆಯೊಂದು ಬಂದಿದೆ. ಅವನು ಇದನ್ನು ತನ್ನ ಮಗನಿಗೆ ಹೇಳಬೇಕೆಂದಿದ್ದಾನೆ.
ಮದುವೆ? ಅವಳೊಂದಿಗೆ ಮದುವೆ?

"ಅದೆಲ್ಲ ಗೊತ್ತಾಗುವ ಮೊದಲು ಎಲ್ಲ ಆಗಿಹೋಗಿತ್ತು. ಅದು ಆಗುವುದೇ ಹಾಗೆ..."

"ವಾಹ್! ಮತ್ತೆ ವಿಲ್ ಏನಾಯ್ತು ಈಗ!"

"ವಿಲ್ ಬಗ್ಗೆ ಈಗ ಮಾತು ಬೇಡ. ನೀನು ನಿನ್ನ ಮದುವೆ ಎಕ್ಕುಟ್ಟಿ ಹೋಗಲಿ ಅಂತ ಬಯಸಿದ್ದೆಯ? ನಿಮ್ಮಮ್ಮ ಮತ್ತು ನಾನು ಸಂಬಂಧ ಹಾಗಾಗುತ್ತೆ ಅಂತ ಕನಸು ಕಂಡಿದ್ದೆವ? ವಿಲ್ಲು ಗಿಲ್ಲು ಎಲ್ಲ ಕೆಲಸವಿಲ್ಲದ್ದನ್ನೆಲ್ಲ ಬರೆಯುತ್ತಾ ಇರುತ್ತಾರಲ್ಲ, ಅವರಿಗೆ ಸರಿ. ಹೊರಗಿನ ಜಗತ್ತಲ್ಲಿ ಎಲ್ಲ..."

"......"

".......ಕೊನೆಗೂ ಚುರುಕಾಗಿರುವವರು ಬದುಕುತ್ತಾರೆ, ಅಲ್ಲ? ಒಳ್ಳೆಯದು. ಉಫ್! ಸಾರಿ ಮಗನೇ. ನಾನು ಸ್ವಲ್ಪ ಬೇರೆ ತರ. ನಿನ್ನ ಒಂದು ಕಾಲದ ಹೆಂಡತಿಯನ್ನ ಕಸಿದುಕೋತಾ ಇದ್ದೇನೆ."

ದೃಶ್ಯವೇನೊ ದೈನಂದಿನ ಟೀವಿ ಸೀರಿಯಲ್ಲಿನ ಸರಕು, ನೇರ ಮೌರಿ ಪೊವಿಚ್ ಕಿಸೆಯಿಂದಲೇ. ಹಾಗೆ ಇದನ್ನೆಲ್ಲ ಸೆನ್ಸಷನಲೈಸ್ ಮಾಡಿಬಿಡುವುದು ಸುಲಭ. ತಂದೆಯನ್ನ ಒಬ್ಬ ವಿಲನ್ ಆಗಿಸಿ ಪುರುಷೋತ್ತಮನಂಥ ಮಗನ ವ್ಯಕ್ತಿತ್ವದೆದುರು ಕುಬ್ಜನನ್ನಾಗಿಸಿ ಬಿಡಬಹುದು. ಆದರೆ ಆಂಡ್ರ್ಯೂ ಡುಬಸ್ ಹಾಗೆ ಮಾಡುವುದಿಲ್ಲ. ಅವನ ಕಿರು ಕಾದಂಬರಿ "ವಾಯ್ಸಸ್ ಫ್ರಮ್ ದಿ ಮೂನ್" ಸೂಕ್ಷ್ಮ ಸಂವೇದನೆಗಳ, ಭಾವನೆಗಳ, ತಲ್ಲಣಗಳಲ್ಲೇ ಸಾಗುವ, ಮನುಷ್ಯ ಸಂಬಂಧಗಳ ನಡುವಿನ ನಂಬಿಕೆ ಮತ್ತು ಪ್ರೀತಿಯ ಒಂದು ಅನನ್ಯ ಧ್ಯಾನದಂತಿದೆ. ಬಹಳಷ್ಟು ಕಾಲ ನಾನು ಇದೊಂದು ಸಹಿಸಲಸಾಧ್ಯವಾದ ನೋವಿನ ಕಥಾನಕವೆಂದೇ ಬಗೆದಿದ್ದೆ. ಕಾದಂಬರಿ ತನ್ನ ಮೊತ್ತ ಮೊದಲ ವಾಕ್ಯದಿಂದಲೇ ತನ್ನೊಡಲ ಕಾಲ್ಪನಿಕ ಸಂಸಾರವನ್ನು ನನ್ನದೇ ಕುಟುಂಬದೊಂದಿಗೆ ತಳುಕು ಹಾಕಿಬಿಟ್ಟಿತು. ಆ ಸಾಲು "ಎಲ್ಲವೂ ಆ ವಿಚ್ಛೇದನದೊಂದಿಗೆ ಸುರುವಾಯಿತು". ನನಗೆ ಡೈವೋರ್ಸ್ ಬಗ್ಗೆ ಎಲ್ಲ ಗೊತ್ತು. ನನ್ನ ಹೆತ್ತವರದ್ದು, ನನ್ನ ಸ್ವಂತದ್ದು. ನನ್ನ ವಿಷಯದಲ್ಲಿ ಹೆತ್ತವರದ್ದಾದ ಹಾಗೆ ಆಗಲಿಲ್ಲ. ನಮ್ಮದು ಸಹ-ಸಮ್ಮತಿಯೊಂದಿಗೆ ಆಗಿದ್ದು. ಅಷ್ಟೇ ಅಲ್ಲ, ಮಧ್ಯವರ್ತಿಯ ಕಚೇರಿಯಲ್ಲಿ ನಾನು ಮತ್ತು ಎಮ್ ಎಷ್ಟೋ ಸಲ ನಕ್ಕುಬಿಟ್ಟಿದ್ದೆವು. ಅದೆಲ್ಲ ವಿಚಿತ್ರವಾಗಿತ್ತು. ನಮ್ಮ ನಡುವೆ ಪರಸ್ಪರ ವಿಂಗಡಿಸಿಕೊಳ್ಳುವುದಕ್ಕೆ ತೀರ ಕಡಿಮೆಯಿತ್ತು. (ಪುಸ್ತಕಗಳು, ಕೆಲವು ಕಾಫಿ ಕಪ್‌ಗಳು, ಎಮ್ ಬಳಿ ಎಲಿಯೆಟ್‌ನ ಫೋರ್ ಕ್ವಾರ್ಟರ್ಸ್‌ನ ಆ ಮಿರುಗುವ ತಿಳಿಹಸಿರು ಬಣ್ಣದ ಫೇಬರ್ ಎಂಡ್ ಫೇಬರ್ ಪ್ರತಿಯಿತ್ತು.) ಏನಿದ್ದರೂ ಡೈವೋರ್ಸ್ ಎನ್ನುವುದು ಡೈವೋರ್ಸೇ ತಾನೆ. ಒಂದಷ್ಟು ಕಾಗದಪತ್ರಗಳ ನಡುವೆ ಅಡಗಿ ಕುಳಿತ ಏನನ್ನೋ ಕುಕ್ಕಿ ಕುಕ್ಕಿ ಹೊರತೆಗೆಯುವ ಪ್ರಕ್ರಿಯೆ ಅದು. ಈ ಅಪರಾಹ್ನ ನಾನು ವಾಯ್ಸಸ್ ಫ್ರಮ್ ದಿ ಮೂನ್ ಮುಚ್ಚಿಟ್ಟು ನನ್ನ ಭೂಗತ ಓದುತಾಣದ ಕಿಟಕಿಯಿಲ್ಲದ ಗೋಡೆಗಳ ನಡುವೆ ನನ್ನದೇ ಕಿಟಕಿಯ ಕದ ತೆರೆದು ಹೊರನೋಡತೊಡಗಿದೆ. ಮತ್ತೆ ತಪ್ಪು: ಒಂದು ಪುಸ್ತಕವನ್ನು ನೆನೆಯುವುದೆಂದರೆ ಒಬ್ಬ ವ್ಯಕ್ತಿಯನ್ನು ನೆನೆದಂತೆಯೇ. ಮತ್ತೆ ನೀವು ಅಕ್ಷರಗಳ ಜಗತ್ತಿನಿಂದ ಎದ್ದು ಬಂದ ರಕ್ತಮಾಂಸದ ಮೂರ್ತಸ್ವರೂಪದ ಮುಖಾಮುಖಿಯಾದಿರೆಂದರೆ ಎಲ್ಲವೂ ಬದಲತೊಡಗುತ್ತದೆ. ವಾಯ್ಸಸ್ ಫ್ರಮ್ ದಿ ಮೂನ್ ಒಂದು ಆಹ್ಲಾದಕರ ಕೃತಿ. ಕಷ್ಟದಿಂದ ದಕ್ಕಿಸಿಕೊಳ್ಳಬಹುದಾದ ಆದರೆ ಆಹ್ಲಾದದ ಕೃತಿ, ಸಾರ್ಥಕತೆಯ ಆಹ್ಲಾದ ದ(ಉ)ಕ್ಕಿಸುವ ಕೃತಿ.

ತಂದೆ ಮತ್ತು ಹಿರಿಯಣ್ಣನ ನಡುವಿನ ಸಂಭಾಷಣೆಯನ್ನು ಕೇಳಿಸಿಕೊಂಡ ಗ್ರೆಗ್‌ನ ಎಳೆಯ ಮಗ, ಇನ್ನೂ ಹನ್ನೆರಡು ವರ್ಷದ ರಿಚಿ, ಈ ಮನೆಯಲ್ಲಿ ಒಬ್ಬ ಕೆಥಲಿಕ್ ಆಗಿ ಉಳಿಯುವುದು ತುಂಬ ಕಷ್ಟವಿದೆ ಎಂದುಕೊಳ್ಳುತ್ತಾನೆ.

ನಿಜ, ಅದು ಖಂಡಿತಕ್ಕೂ ಕಷ್ಟ ಎನ್ನುತ್ತೇನೆ ನಾನೂ.

ಕಾಫ್ಕಾನ ಡೈರಿಯಲ್ಲಿನ ಕೆಲವು ಸಾಲುಗಳು ಇಲ್ಲಿ ನನಗೆ ನೆನಪಾಗುತ್ತವೆ. ಆ ಸಾಲುಗಳು ಹೀಗಿವೆ: "ಯಹೂದಿ? ನಾನೀಗ ಒಬ್ಬ ಯಹೂದಿಯಾಗಬೇಕೆ? ಒಬ್ಬ ಮಾನವ ಜೀವಿಯಾಗಿರುವುದಕ್ಕೇ ನನಗೆ ಸಾಕೋಬೇಕಾಗಿದೆ. ಬೇಕೆಂದಾಗ ಒಬ್ಬ ಮನುಷ್ಯನಾಗಿರುವುದೋ, ಒಬ್ಬ ಕ್ಯಾಥಲಿಕ್ಕನಾಗಿರುವುದೋ ಅಥವಾ ಒಬ್ಬ ಯಹೂದಿಯಾಗಿರುವುದೋ ಸುಲಭವೇನಲ್ಲ. ಅದರಲ್ಲೂ ನಿಮ್ಮಪ್ಪ ಏನಾದರೂ ಹೊಸ ಪೀಕಲಾಟ ತಂದಿಟ್ಟ ಎಂದರೆ, ಅಪ್ಪಂದಿರು ತಪ್ಪದೇ ತಂದಿಕ್ಕುತ್ತಾರೆ ಕೂಡ - ಮುಗಿದೇ ಹೋಯಿತು. ಮಕ್ಕಳು ಏನು ಮಾಡಬೇಕು?"

ಡುಬಸ್ ಈ ಹನ್ನೆರಡು ವರ್ಷದ ಕಿರಿಯನಿಗೆ ಸೂಕ್ಷ್ಮಸಂವೇದನೆಯನ್ನೂ ವಿವೇಕವನ್ನೂ ಕೊಟ್ಟು ಆ ಪಾತ್ರವನ್ನು ಪೊರೆಯುತ್ತಾನೆ. ಆಳದಲ್ಲಿ ತುಂಬ ಸಾತ್ವಿಕನಾದ, ಪಾದ್ರಿಯಾಗುವ ಉದ್ದೇಶವಿರುವ ಹುಡುಗ ಈ ರಿಚೀ. ಅವನ ಅಪ್ಪನ ಕೆಲಸ ಅವನ ಹಾದಿಯನ್ನು ದುರ್ಗಮಗೊಳಿಸುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಪ್ಪ ಮತ್ತು ಅಣ್ಣನ ಮಾತುಕತೆಯಾದ ಬಳಿಕ, ಆ ಬೆಳಿಗ್ಗೆ ಅವನು ಚರ್ಚಿಗೆ ಹೋಗಿ ಕೂರುತ್ತಾನೆ.

"ಬ್ರೆಡ್ ಮತ್ತು ವೈನ್ ಇಟ್ಟಲ್ಲಿಂದ ಆಚೆ, ಫಾದರ್ ಒಬರ್ಟಿಯ ಮುಖ ಮೇಲ್ಮುಖವಾಗಿ, ಏನನ್ನೋ ಕಂಡುಕೊಂಡವನ ಬೆಳಕಿನಿಂದ ಕೂಡಿತ್ತು. ಆ ಬಗೆಯ ನೋಟವನ್ನು ಅದುವರೆಗೂ ಯುವ ಪಾದ್ರಿಗಳಲ್ಲಿ ಮಾತ್ರ ಕಂಡಿದ್ದ ರಿಚಿ. ಉಪಹಾರವನ್ನು ತೆಗೆದಿರಿಸಿದ ತರುವಾಯದಲ್ಲಿ ಧರಿಸುವ ಮುಖಭಾವ ಅದು. ಸಿನಿಮಾಗಳಲ್ಲಿ ಕಂಡಿದ್ದನವನು. ತನ್ನ ಪ್ರಿಯತಮನತ್ತ ಅಥವಾ ಮನದನ್ನೆಯತ್ತ ಪ್ರೇಮಿಯು ಹರಿಸುವ ನೋಟವದು. ಆ ತುಟಿಗಳೂ, ಕಂಗಳೂ ಅಳುವಿಗೆ ತೀರ ಹತ್ತಿರದ ಒಂದು ಭಾವಲಹರಿಯಲ್ಲಿ ಏನನ್ನೋ ತಡವರಿಸಿದಂತೆ.....ಅಲ್ಲ, ಯಥಾವತ್ ಅದೇ ಅಲ್ಲ ಇದು, ಅದಕ್ಕೆ ಹೋಲುತ್ತದಷ್ಟೆ. ಫಾದರ್ ಒಬರ್ಟಿಯ ಮುಖಭಾವದಲ್ಲಿ ರಿಚೀ ಕಂಡಿದ್ದು ಇದಕ್ಕೆ ಸನಿಹದ ಒಂದು ಹೊಳಹು, ಅದೇ ಅಲ್ಲ."

ಮೇಲೆ ಬರುವ ಕೊನೆಯ ವಾಕ್ಯವಂತೂ ಡುಬಸ್‌ಗೆ ಮಾತ್ರ ಸಾಧ್ಯ. ಅದು ಒಂದು ಕಡೆ (ಫಾದರ್ ಒಬರ್ಟಿ) ಸುರುವಾಗಿ, ಇನ್ಯಾವುದೋ ಒಂದು (ಸಿನಿಮಾದಲ್ಲಿ ಬರುವ ಪ್ರೇಮಿಗಳ ಮುಖಭಾವ) ಹೋಲಿಕೆಯನ್ನು ಸೂಚಿಸುತ್ತಲೇ ಪಾವಿತ್ರ್ಯದ ನೆಲೆಯಲ್ಲಿ ಅದನ್ನು ತಿರಸ್ಕರಿಸುತ್ತಿದೆ ಕೂಡಾ ಎನ್ನುವುದನ್ನು ನೋಡಿ. ಬ್ರೆಡ್ ಮತ್ತು ವೈನ್ ಎತ್ತಿ ಹಿಡಿಯುತ್ತ ರಿಚಿಗೆ ಕಂಡ ಫಾದರ್ ಮುಖಭಾವ ಏನಿದೆ ಅದು ರಿಚಿಗೆ ಸಿನಿಮಾದಲ್ಲಿ ಕಂಡ ಪ್ರೇಮಿಗಳ ಪ್ರತೀಕವಾಗಿದೆ ಅಷ್ಟೆ. ಹೋಲಿಕೆಯ ಪ್ರತಿಮೆಯನ್ನು ತಂದಿಟ್ಟೂ ಅದನ್ನು ನಿರಾಕರಿಸುತ್ತಿರುವ ಬಗೆಯಲ್ಲೇ ರಿಚಿಯ ವಾಸ್ತವ ಪ್ರಜ್ಞೆಯ ಅರಿವನ್ನು ಸೂಚಿಸುತ್ತಿದೆ, ದೃಢಪಡಿಸುತ್ತಿದೆ. ಅಥೆಂಟಿಕ್ ಆದ ಶ್ರದ್ಧೆ ಎನ್ನುವುದು ಏನೋ ಒಂದು, ತುಂಬ ವಿಶಿಷ್ಟವಾದದ್ದು, ಮೂರ್ತವಾದದ್ದು ಎನ್ನುವ ಅರಿವು ಅವನಲ್ಲಿ ಜಾಗೃತಗೊಳ್ಳುತ್ತಿರುವಾಗಲೇ ಅದು ತನಗೆ ತನ್ನ ತಂದೆ ಮತ್ತು ಹಿರಿಯಣ್ಣನ ಬಗ್ಗೆ ಅಂತರಂಗದಲ್ಲಿ ಏಕತ್ರ ಕಲಕುತ್ತಿರುವ ಪ್ರೀತಿಯಂತೆಯೇ ಮಾತುಗಳಲ್ಲಿ ಹಿಡಿಯಲಾಗದ್ದು ಕೂಡಾ ಎನ್ನುವುದು ಗೊತ್ತಾಗುತ್ತಿದೆ.

ಈಗ ರಿಚೀಗೆ ಅರ್ಥವಾಗುತ್ತಿದೆ. ನಾವು ತಂದೆಯೋ ತಾಯಿಯೋ ಆಗಿರಬಹುದು ಅಥವಾ ಆಗಿರದೇ ಇರಬಹುದು; ಆದರೆ ನಾವು ಪ್ರತಿಯೊಬ್ಬರೂ ನಮ್ಮನಮ್ಮದೇ ಆದ ಬಗೆಯಲ್ಲಿ ನಮ್ಮ ಸ್ವಂತ ಕುಟುಂಬಕ್ಕೆ ಏನೋ ಘಾಸಿಯುಂಟು ಮಾಡಿಯೇ ಮಾಡುತ್ತೇವೆ. ಜಗತ್ತಿನ ಯಾವುದೇ ಶ್ರದ್ಧೆ ಅಥವಾ ಪ್ರೀತಿ ಅದನ್ನು ಮಾಡಗೊಡದಂತೆ ನಮ್ಮನ್ನು ತಡೆಯಲಾರದು. ಇಲ್ಲಿ ಬೃಂದಾ ತನ್ನಷ್ಟಕ್ಕೇ ತಾನು ಹೇಳಿಕೊಳ್ಳುವಂತೆ ‘ಯಾರಿಗೂ ಯಾವ ಕೇಡನ್ನೂ ಉಂಟು ಮಾಡದಂತೆ ತನ್ನ ಪಾಡಿಗೆ ತಾನು ಬದುಕುವ ಯಾವತ್ತೂ ಪ್ರಯತ್ನವನ್ನು’ ತಾನು ಮಾಡಿದವಳು ಎಂದೇ ಆಕೆ ನಂಬಿದ್ದಾಳೆ. ಈ ಪುಸ್ತಕ ಒಂದು ಮಹತ್ವದ ಪ್ರಶ್ನೆಯನ್ನು ಎತ್ತುತ್ತಿದೆ. ಎಲ್ಲಾ ಸಮಸ್ಯೆಯನ್ನು ಉಂಟುಮಾಡುತ್ತಿರುವುದು ಸ್ವತಃ ಪ್ರೀತಿಯೇ ಆಗಿದ್ದಲ್ಲಿ, ನಾವು ಯಾರನ್ನು ಪ್ರೀತಿಸಬೇಕೆಂದುಕೊಳ್ಳುತ್ತೇವೋ ಆ ಪ್ರೀತಿಯೇ ಸಮಸ್ಯೆಯ ಮೂಲವಾಗಿಬಿಟ್ಟಲ್ಲಿ ಏನಾಗುತ್ತದೆ? ಇಲ್ಲಿನ ದುಃಖಾತಿದುಃಖದ ನಿಗೂಢ ಶೋಧ ಇರುವುದು ನಾವು ಹೇಗೆ ಅನ್ಯರಿಗೆ ಯಾವ ಕೇಡನ್ನೂ ಮಾಡದುಳಿಯಬಹುದು ಎನ್ನುವುದಲ್ಲವೇ ಅಲ್ಲ. ಬದಲಿಗೆ, ಕೇಡಿನ ಬಳಿಕ ನಾವು ಹೇಗೆ ಅದನ್ನು ಜೀರ್ಣಿಸಿಕೊಳ್ಳುತ್ತೇವೆ, ಆ ಪ್ರಕ್ರಿಯೆ ಹೇಗಿರುತ್ತದೆ ಎನ್ನುವುದರ ಬಗ್ಗೆ. ನಾವದನ್ನು ನುಂಗಿಕೊಳ್ಳುತ್ತೇವೆಯೆ, ಬೇರೆಯೇ ಆದ ಮಾರ್ಗಗಳಿವೆಯೆ?

ಇಲ್ಲೀಗ ನಾನು ಜೋನ್ ಕಡೆ ತಿರುಗುತ್ತೇನೆ. ಇವಳು ರಿಚಿ ಮತ್ತು ಲ್ಯಾರಿಯ ತಾಯಿ. ಈ ಕತೆ ಸುರುವಾಗುವುದಕ್ಕೂ ಎರಡು ವರ್ಷಗಳ ಹಿಂದೆ ಪಾರಂಪರಿಕವಾದ ನೈತಿಕ ಚೌಕಟ್ಟಿನಲ್ಲಿ ಸಾಕಷ್ಟು ಮಂದಿ ಇದಕ್ಕಿಂತ ಹೆಚ್ಚು ಅಕ್ಷಮ್ಯ ಎಂದೇ ಪರಿಗಣಿಸುವ ತಪ್ಪೊಂದನ್ನು ಜೋನ್ ಮಾಡಿದ್ದಾಳೆ. ತನ್ನ ಗಂಡ ಮತ್ತು ಹತ್ತು ವರ್ಷ ಪ್ರಾಯದ ಮಗನನ್ನು ತ್ಯಜಿಸಿ ಹೊರನಡೆದವಳು ಅವಳು. ಈಗ ಅವಳು ಸನಿಹದ ಒಂದು ನಗರದಲ್ಲಿ ಒಂಟಿಯಾಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ಬದುಕುತ್ತಿದ್ದಾಳೆ. ಆಗಾಗ ರಿಚಿಯನ್ನು ಬಂದು ಕಾಣುತ್ತಾಳೆ ಕೂಡ. ಆದರೆ ಮಾಡಿದ ಗಾಯ ಸದಾ ಕಾಲ ಹಸಿಯಾಗಿಯೇ ಉಳಿಯುವಂಥದ್ದು. ಮತ್ತೊಮ್ಮೆ ರಿಚಿಗೆ ಜನ್ಮ ನೀಡುವ ನೋವನ್ನಾದರೂ ಜೋನ್ ಅನುಭವಿಸಲು ಸಿದ್ಧಳಿದ್ದಾಳೆ, ಆದರೆ ಬಿಟ್ಟು ಹೋಗುವ ದಿನ ಅನುಭವಿಸಿದ ಸಂಕಟವನ್ನಲ್ಲ.

ಲ್ಯಾರಿ ತನ್ನ ತಾಯಿಯ ಬಳಿ ಗ್ರೆಗ್‌ ಮತ್ತು ಬೃಂದಾ ಕತೆಯನ್ನು ಹೇಳಿದಾಗ ಅವಳು ನೀಡುವ ಪ್ರತಿಕ್ರಿಯೆಯಂತೂ ಏಕಕಾಲಕ್ಕೆ ನಿಷ್ಠುರವಾಗಿಯೂ, ಉದಾರವಾಗಿಯೂ, ಆಶ್ಚರ್ಯಕರವಾಗಿಯೂ ಇದೆ.

"ನಾವು ಮಹಾನ್ ಬದುಕನ್ನು ಬಾಳಬೇಕಾಗಿಲ್ಲ. ನಮಗೆ ಬದುಕಬೇಕಾಗಿ ಬಂದ ಬದುಕನ್ನೇ ನಾವು ಅರ್ಥಮಾಡಿಕೊಳ್ಳಬೇಕಿದೆ ಮತ್ತು ಅದನ್ನು ಬದುಕಿ ನೀಗಬೇಕಿದೆ."

ನಿಡುಗಾಲದಿಂದ ನನಗೆ ತಿಳಿದ ಮಟ್ಟಿಗೆ, ತನ್ನ ಬದುಕಿನ ಕೊನೆಯ ಏಳು ವರ್ಷಗಳಷ್ಟು ಕಾಲ, ಕಾರ್ ಅಪಘಾತವೊಂದರಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡ ಆಂಡ್ರ್ಯೂ ಡುಬಸ್ ಅತೀವ ಮಾನಸಿಕ, ದೈಹಿಕ ಯಾತನೆಯನ್ನು ಅನುಭವಿಸಬೇಕಾಗಿ ಬಂದಿತ್ತು. ಬ್ರೋಕನ್ ವೆಸಲ್ಸ್ ಎಂಬ ತನ್ನ ಪ್ರಬಂಧಗಳ ಸಂಕಲನದಲ್ಲಿ ಅವನು ಬರೆಯುತ್ತಾನೆ;

"ಒಂದು ದಿನ ರಾತ್ರಿ ಹೊತ್ತು, ಆಸ್ಪತ್ರೆಯಲ್ಲಿ ನಾನು ಮಲಗಿದ್ದೆ, ಎಚ್ಚರವಾದಾಗ ಲೈಟುಗಳನ್ನೆಲ್ಲ ಆರಿಸಿಯಾಗಿತ್ತು, ಆಗ, ನನಗೆ ಅಗತ್ಯವಾಗಿ ಏನೋ ಬೇಕಾಗಿ ಬಂತು. ಮಾರ್ಫಿನ್ ಅಥವಾ ಜ್ಯೂಸ್ ಅಥವಾ ನೀರು ಏನೋ ಒಂದು. ನಾನು ಇನ್ನೇನು ನರ್ಸ್‌ಗಾಗಿ ಬಟನ್ ಪ್ರೆಸ್ ಮಾಡುವುದರಲ್ಲಿದ್ದೆ. ಆಗ, ಅಷ್ಟರಲ್ಲಿ ಕೆಳಗಿನ ಹಾಲ್‌ನಿಂದ ಪ್ರಾಯದ ಹೆಂಗಸೊಬ್ಬಳು ಯಾತನೆಯಿಂದ ನರಳುವ ಆರ್ತನಾದದಂಥ ಶಬ್ದ ಕೇಳಿಸಿತು. ಆಕೆ ನಿಲ್ಲಿಸಲಿಲ್ಲ ಮತ್ತು ಆಕೆಯ ಆರ್ತನಾದದ ತೀವ್ರತೆಯೂ ಕುಸಿಯಲಿಲ್ಲ. ನೋವಿನ ತೀವ್ರತೆ ಅಷ್ಟಿತ್ತು. ನಾನು ಬಟನ್ ಪ್ರೆಸ್ ಮಾಡಲಿಲ್ಲ. ಯೋಚಿಸಿದೆ. ಇನ್ನೊಬ್ಬ ವ್ಯಕ್ತಿ ಯಾತನೆಯಲ್ಲಿರುವಾಗ ನೀವು ನಿಮ್ಮ ಬೇಡಿಕೆಯನ್ನೇ ಮುಂದೊತ್ತಬಾರದು. ಮತ್ತೆ ಅನಿಸಿತು, ಸದಾ ಕಾಲ ಒಬ್ಬರಲ್ಲಾ ಒಬ್ಬರು ಯಾತನೆಯಲ್ಲಿದ್ದೇ ಇರುತ್ತಾರೆ, ಮತ್ತು ಹಾಗಾದರೆ, ನಾನು ಯಾವತ್ತೂ ನನ್ನ ಬೇಡಿಕೆಯನ್ನು ಮುಂದಿಡುವಂತಿಲ್ಲ. ತಕ್ಷಣವೇ ನನಗೆ ಹೊಳೆದಿದ್ದು, ಒಬ್ಬ ಸಂತ ಮಾತ್ರ ಅಂಥ ಬದುಕನ್ನು ಬದುಕಬಲ್ಲ, ಅಂಥ ನಿಲುವು ತಳೆಯಬಲ್ಲ ಮತ್ತು ಅದನ್ನು ನಿಭಾಯಿಸಬಲ್ಲ ಎನ್ನುವ ಸತ್ಯ. ನರ್ಸ್ ಆಕೆಯನ್ನು ಸುಧಾರಿಸುವ ತನಕ, ಆಕೆಯ ನರಳಾಟ ನಿಲ್ಲುವ ತನಕ ನಾನು ಕಾದೆ. ಬಳಿಕ ಬಟನ್ ಪ್ರೆಸ್ ಮಾಡಿದೆ."

ಈಗ ಆಂಡ್ರ್ಯೂ ಬಗ್ಗೆ ಯೋಚಿಸುವಾಗ, (ನಾನು ಅವನ ಬಗ್ಗೆ ಆಗಾಗ ಯೋಚಿಸುತ್ತೇನೆ ಮತ್ತು ಅವನು ನನ್ನ ಗುರು ಮತ್ತು ಗೆಳೆಯ ಕೂಡ) ಅವನು ಮೆಸ್ಸಾಚ್ಯೂಸೆಟ್ಸ್‌ನ ಹೇವರ್‌ಹಿಲ್ಲಿನ ಅಡುಗೆಮನೆಯೊಳಗೆ ತನ್ನ ವೀಲ್‌ಚೇರಿನಲ್ಲಿ ಕೂತು ಮೌನವಾಗಿಯೇ ನನ್ನ ಮುಖದ ತುಂಬ ತಡಕಾಡಿ ನನ್ನ ನೋವಿನ ಮೂಲ ಯಾವುದು ಎನ್ನುವ ಶೋಧದಲ್ಲಿ ತೊಡಗುವುದನ್ನು ಕಾಣುತ್ತೇನೆ. ಕೆಲವೊಮ್ಮೆ ಅವನು ಕೇಳುತ್ತಾನೆ, "ಅಪ್ಪನಿಗೆ ಫೋನ್ ಮಾಡಿದೆಯ?" ಮತ್ತೆ ಅವನು ಗೊಳ್ಳನೆ ನಗುತ್ತಾನೆ. ಥಟ್ಟನೆ ನಿಲ್ಲಿಸಿ "ಸೀರಿಯಸ್ಸಾಗಿ ಹೇಳಿದ್ದು, ಮಾಡಿದೆಯ? ಈ ವಾರ? ಅಪ್ಪನಿಗೊಮ್ಮೆಯಾದರೂ ಫೋನ್ ಮಾಡಿದೆಯಾ? ತಗೊ, ನನ್ನ ಫೋನ್ ತಗೊ, ಖರ್ಚಿನ ಬಗ್ಗೆ ಯೋಚಿಸಬೇಡ, ಇಕೊ ಕಾಲ್ ಮಾಡು." ಉಳಿದಂತೆ ಎಷ್ಟೋ ಸಲ ಅವನು ಏನೂ ಹೇಳುವುದಿಲ್ಲ. ಸುಮ್ಮನೇ ನನ್ನತ್ತ ನೋಡುತ್ತಾನೆ, ನಿಟ್ಟುಸಿರು ಬಿಡುತ್ತಾನೆ ಮತ್ತು ತನ್ನ ಉಳಿದ ಕಾಲಿನ ಭಾಗವನ್ನು ಒತ್ತಿಕೊಳ್ಳುತ್ತ ಒಂದೂ ಮಾತಿಲ್ಲದೆ ಕೂರುತ್ತಾನೆ.
(ತಂದೆಯ ಬಗ್ಗೆ ಅತೀವ ಪ್ರೀತಿ ಮತ್ತು ಸಿಟ್ಟಿನಂಥದ್ದೇನೋ ಉಳಿಸಿಕೊಂಡ ಪೀಟರ್ ಆರ್ನರ್ ಕೊನೆ ತನಕ ತಂದೆಗೆ ಕಾಲ್ ಮಾಡುವುದಿಲ್ಲ. ತಂದೆ ತೀರಿದ ಬಳಿಕವೂ ಅದೊಂದು ಅವನನ್ನು ಕಾಡುತ್ತಲೇ ಇರುವುದು ಇಲ್ಲಿನ ಅನೇಕ ಪ್ರಬಂಧಗಳಲ್ಲಿ ಬರುತ್ತದೆ. ಎಮ್ ಎಂದು ಉಲ್ಲೇಖಿಸಲ್ಪಟ್ಟ ವ್ಯಕ್ತಿ ಆರ್ನರ್ ಪತ್ನಿ. ಆಕೆಯ ಮೇಲಿನ ಪ್ರೀತಿ ಕೂಡ ಕೊನೆ ತನಕ ಆರ್ನರ್ ಪ್ರಬಂಧಗಳಲ್ಲಿ ನಳನಳಿಸುತ್ತದೆ. Andre Dubus ನ ಪುಸ್ತಕ Selected Stories ಆನ್‌ಲೈನಿನಲ್ಲಿ ಪುಕ್ಕಟೆ ಲಭ್ಯವಿದೆ, ಪುಸ್ತಕವಾಗಿಯೇ ಬೇಕು ಎಂದಿಲ್ಲವಾದಲ್ಲಿ ಡೌನ್‌ಲೋಡ್ ಮಾಡಿಕೊಂಡು ಓದಬಹುದು.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ವನಮನೋತ್ಸವ!

ನಮಗೆ ಕೇಶವ ಮಳಗಿಯವರ ‘ನೇರಳೆ ಮರ’ ಗೊತ್ತು. ಲಂಕೇಶರ ‘ಹುಳಿ ಮಾವಿನಮರ’ ಕೂಡ ಗೊತ್ತು. ಆ ಮರ ಆ ಮರ ಎನ್ನುತ್ತ ಅಮರ ಕಾವ್ಯ ಬರೆದ ಆದಿಕವಿ ಗೊತ್ತು. ‘ಮಣ್ಣಲ್ಲಿ ಒಂದು ಮರವಾಗಿ ಪುಣ್ಯವಂತರಿಗೆ ನೆರಳಾಗಿ’ ಹುಟ್ಟುವ ಹತಾಶೆ ತೋರಿದ ಮನೆಮಗಳು ಗೊತ್ತು. ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಸ್ವತಃ ತಾನೊಂದು ಮರವಾಗ ಹೊರಟ ಸುಮನಾ ರಾಯ್ ಬಗ್ಗೆ ಗೊತ್ತೆ? ಅವರ ಹೊಸ, ಮಾತ್ರವಲ್ಲ ಮೊತ್ತ ಮೊದಲ ಪುಸ್ತಕ ‘ಹೌ ಐ ಬಿಕೇಮೆ ಟ್ರೀ’ ಯ ಚಿಗುರೆಲೆಗಳು ಕಾಣಿಸಿಕೊಳ್ಳುವ ವರೆಗೆ ಅವರ ಒಂದೂ ಪುಸ್ತಕ ಪ್ರಕಟವಾಗಿರಲಿಲ್ಲ ಎನ್ನುವುದೇ ಗೊತ್ತಾಗದಷ್ಟು ಅವರು ಖ್ಯಾತರು. ಅಂತರ್ರಾಷ್ಟ್ರೀಯ, ರಾಷ್ಟ್ರೀಯ ಪತ್ರಿಕೆಗಳಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಅವರ ಸಮೃದ್ಧ ಶ್ರೀಮಂತ ಪ್ರಬಂಧಗಳು ಬಹುಜನಪ್ರಿಯ. ಅವರ ಪುಸ್ತಕದ ಅಧ್ಯಾಯಗಳಿಂದಾಯ್ದ ಕೆಲವು ಭಾಗಗಳು ಇಲ್ಲಿವೆ.

ಇದೀಗ ಟ್ರೀ ಟೈಮ್!

ಮೊದಲಿಗೆ ಅದು ಅಂದರ್ ಕ ಬಾತ್. ನಾನು ಒಂದು ಮರವಾಗಲು ಬಯಸಿದ್ದೇಕೆಂದರೆ ಮರಗಳಿಗೆ ಬ್ರಾ ಇಲ್ಲ.

ಆಮೇಲೆ ಅದು ಇಲ್ಲೆಲ್ಲ ಚೆಲ್ಲಿರುವ ಈ ಹಿಂಸೆಯ ನೆರಳು ಸುಡುಗಾಡು ಎನಿಸಿದ್ದು. ಸೂರ್ಯನಿಲ್ಲದ ಕಾಲವೆಲ್ಲ ಕರ್ಫ್ಯೂ ಹೇರಿದಂತನಿಸುವ ನನಗೆ ಕತ್ತಲು ಮತ್ತು ಏಕಾಂತದ ಜಾಗದಲ್ಲಿ ಮರಗಳು ಕಂಡುಕೊಳ್ಳುವ ವಿಚಿತ್ರ ನೆಮ್ಮದಿಯ ಕಂಡು ಅವುಗಳ ಮೇಲೆ ಅದೇನೋ ಪ್ರೀತಿ. ಈಗಿನ್ನೂ ಪುಕ್ಕಟೆಯಾಗೇ ಸಿಗುತ್ತಿರುವ ನೀರು, ಗಾಳಿ ಮತ್ತು ಸೂರ್ಯನ ಬೆಳಕನ್ನೇ ನೆಚ್ಚಿಕೊಂಡು ಬದುಕುವ ಇವುಗಳ ಕೆಚ್ಚು ಕಂಡು ಅದೇನೋ ನೆಚ್ಚು. ಜೀವಮಾನವಿಡೀ ನೆಲಕಚ್ಚಿ ಬದುಕುವ ಹಕ್ಕಿನ ಬೇರಿಳಿಸಿಯೂ ಒಂದು ಮಾರ್ಗೇಜಿಗೆ ರುಜುವಿಲ್ಲ, ಠಸೆಪತ್ರವಿಲ್ಲ, ಕೋರ್ಟುಕಟ್ಲೆಯಿಲ್ಲ.

ಗೊತ್ತುಗುರಿಯಿಲ್ಲದ ಈ ಮರಗಳ ಮೇಲಿನ ಮಮಕಾರಕ್ಕೊಂದು ಆಕಾರ ದಕ್ಕಿದ್ದು ನಡುವಯಸ್ಸು ಕಾಲಿಟ್ಟಾಗ. ಖಾತರಿಯಾದ ಸಂಬಳದ ನೌಕರಿಯ ಚಾಕರಿ ಬಿಟ್ಟು ಫ್ರೀಲ್ಯಾನ್ಸರಿನ ಫ್ರೀಡಮ್ಮಿನ ಭಾರ ಹೊತ್ತ ಕಾಲಕ್ಕೆ. ಬೋಧಿವೃಕ್ಷದ ಕೆಳಗೆ ಬುದ್ಧನಿಗಾದಂತೆ ಯಾವುದೋ ಅರಿವಿನ ಲತೆಯೊಂದು ನನ್ನ ಸುತ್ತಿಕೊಂಡು - ಮರಗಳು ಫ್ರೀಲ್ಯಾನ್ಸರುಗಳೆ ಅಥವಾ ಸಂಬಳದ ಕೆಲಸಗಾರರೆ? ಬಹುಶಃ ದಿನಗೂಲಿ ನೌಕರ. ದಿನಕರನ ಸುತ್ತು ಸಾಗಿದಂತಲ್ಲವೆ ಅದರ ಹೊತ್ತುಗೊತ್ತು ಹೊತ್ತಿಳಿಯುವುದು!? ರಜೆ, ಬಿಡುವು, ವಾರಾಂತ್ಯ, ಸಂಬಳದ ತಾಪತ್ರಯ, ಪೆನ್ಷನ್ನು,ಲೋನು ಎಲ್ಲ ಈಚೀನದು, ನನ್ನಂಥ ನೌಕರಿಗಿರಿಯ ಸಮಾಧಾನಕರ ಪರಿಕರಗಳಷ್ಟೆ.

ಹೀಗೆ. ಸಮಯವೆಂಬ ಬುಲ್‌ಡೋಜರು ನನ್ನ ಮೇಲೇ ಏರಿ ಬರುತ್ತಿರಲು ನನಗೆ ಈ ಮಾನವ ಜನ್ಮದ ಮೇಲೇ ಒಂದು ಹೇವರಿಕೆ. ಏನು ಹೀಗೆ ಒಂದು ಮರವಾಗುವುದರಲ್ಲಿರುವ ಮೋಹದ ಸೆಳೆತಗಳಿಗೆ ಕಾರಣ ಎಂದು ಕೆದಕಿ ನೋಡಿದರೆ ಇದರ ಬೇರುಗಳೆಲ್ಲ ಅಲ್ಲೇ ಇರುವಂತೆ ಕಾಣುತ್ತಿವೆ. ಮಣಿಕಟ್ಟಿನಿಂದ ಕಟ್ಟಿದ ವಾಚು ಬಿಚ್ಚಿಡುತ್ತೇನೆ. ಗೋಡೆ ಮೇಲೆ ತೂಗು ಹಾಕಿದ ಗಡಿಯಾರ ಇಳಿಸಿಡುತ್ತೇನೆ. ಆಹಾ, ಇದೀಗ ನನ್ನ ಸೋಲುಗಳೆಲ್ಲ ಕಣ್ಣೆದುರು ಬಂದು ನಿಲ್ಲುತ್ತಿವೆ. ಇದನ್ನೆಲ್ಲ ಈಗ ನಾನು ಹಂಚಿಕೊಳ್ಳಬೇಕಿದೆ. ಸಮಯದ ಕಾಲ ಕೆಳಗೆ ಒಬ್ಬ ನಿಷ್ಠ ಗುಲಾಮನಂತಿರಲು ಸೋತಿದ್ದೆ. ಮರದ ಮೇಲೆ ಮುನಿಸು. ಏನಿದರ ಸೊಕ್ಕು, ಮನುಷ್ಯ ಕಟ್ಟಿದ ಕಾಲಪ್ರಜ್ಞೆಯನ್ನು ಕಾಲಕಸವೆಂದು ಕಂಡು ಧಿಕ್ಕರಿಸುವ ನಿಲುವು. ಒಂದರ ಹಿಂದೊಂದು ಸ್ಕೈಸ್ಕ್ರೇಪರುಗಳನ್ನು ಕಟ್ಟಿ ನಿಲ್ಲಿಸಲು ಬಿಲ್ಡರುಗಳು ಪ್ರತಿನಿತ್ಯ ಕಳಿಸುವ ತಮ್ಮ ನೌಕರರ ಪಡೆಗಳನ್ನು ನೋಡಿ. ಹಗಲು ರಾತ್ರಿ ಎನ್ನದೆ ಟೈಟಾದ ಶೆಡ್ಯೂಲುಗಳ, ಡೆಡ್ ಲೈನುಗಳ ಹಿಂದೆ ಹೂಡಿದ ಓಟದಲ್ಲಿ ಅವರು ಹೈರಾಣಾಗುತ್ತಿದ್ದರೆ ಬಿಲ್ಡಿಂಗ್ ಪ್ಲ್ಯಾನಿನ ಪ್ರಕಾರ ಅವರೇ ನೆಟ್ಟ ಗಿಡಗಳು ಮರವಾಗಿ ಸೆಟೆದುಕೊಳ್ಳುತ್ತ ಅವರನ್ನೇ ಗೇಲಿ ಮಾಡುತ್ತಿವೆ. ಅವು ತಮ್ಮ ಪಾಡಿಗೆ ತಾವು ಸಹಜವಾಗಿ ಯಾವುದೇ ಅವಸರವಿಲ್ಲದೆ ಬೆಳೆದೇ ಬೆಳೆದವು. ಯಾರೂ ಗಡಿಬಿಡಿ ಮಾಡಲಿಲ್ಲ ಅವುಗಳಿಗೆ. ‘ಬೇಗ ಬೇಗ, ಹೂಂ ಇನ್ನೂ ಸ್ವಲ್ಪ ಬೇಗ’ ಎಂದಿದ್ದಿಲ್ಲ. ಅಷ್ಟಿಷ್ಟು ಸಿಟ್ಟು, ಒಂದಿಷ್ಟು ಮೆಚ್ಚು, ಮತ್ತಿಷ್ಟು ಸಾಧನೆಯ ಕೆಚ್ಚು ಒತ್ತಟ್ಟಿಗಿಟ್ಟು ನಾನೆಂದೆ, ಇದೀಗ ಟ್ರೀಟೈಮ್! (ಸಾಲ್ವಡಾರ್ ಡಾಲಿ ತನ್ನ ಪೇಂಟಿಂಗಿನಲ್ಲಿ ಮರಗಳ ತುಂಬ ಕರಗುತ್ತಿರುವ ಗಡಿಯಾರಗಳನ್ನು ಇಳಿಬಿಟ್ಟ ಉದ್ದೇಶ ಇದನ್ನೇ ನಿಮ್ಮೆದೆಯಲ್ಲೂ ನೆಡುವುದೇ ಇರಬಹುದೆ?)

ಸಾಕಾಗಿತ್ತು ನನಗೆ ಈ ಕಾಲದೊಂದಿಗಿನ ಓಟ. ವೃಕ್ಷವೊಂದರ ಕಾಲಪ್ರಜ್ಞೆಯೊಂದಿಗೆ ಹೆಜ್ಜೆಯಿಡಲು ಬಯಸಿದ್ದೆ. ಪರೀಕ್ಷಾ ಹಾಲ್‌ನಲ್ಲಿ ಪರಿವೀಕ್ಷಕಿಯ ಕೆಲಸ ಮಾಡುತ್ತ, ನನ್ನ ವಿದ್ಯಾರ್ಥಿಗಳ ನಿಸ್ಸಾರಗೊಂಡ ಮೊಗಗಳನ್ನು ಕಾಣುತ್ತ, ಆಗಲೂ ಅವರ ಮೇಲೊಂದು ಕಣ್ಣಿಡುತ್ತ, ಒಂದಿಡೀ ವರ್ಷವನ್ನು ಕೆಲವೇ ಗಂಟೆಗಳಿಗಿಳಿಸಿಬಿಡಲು ಅವರು ಒದ್ದಾಡುವುದನ್ನು ಕಾಣುತ್ತಿದ್ದೆ. ದಿನದ ಬೇರೆ ಬೇರೆ ಅವಧಿಯಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಅದು ಹೇಗೋ ಪಡೆದ ಜ್ಞಾನ ಇಲ್ಲೀಗ ಕೆಲವೇ ಗಂಟೆಗಳ ಬರೆಯುವ ಅವಧಿಯೊಳಗೆ ಓಡಿ ಗುರಿ ತಲುಪಲಾಗದೆ ಕುಸಿಯುವುದನ್ನು ಕಾಣುತ್ತ ನನ್ನ ಸಂಕಟಗಳು ಹೆಚ್ಚಿದವು; ನಿರ್ಧಾರಗಳು ದೃಢವಾದವು. ಪರೀಕ್ಷೆಗಳನ್ನು ಪಾಸು ಮಾಡುವುದು ಹೀಗೆ. ಡಿಗ್ರಿಗಳನ್ನು, ನೌಕರಿಗಳನ್ನು ಮತ್ತು ಯಶಸ್ಸು ಎಂದು ಎಲ್ಲರೂ ತಿಳಿದ ಅದನ್ನು ಪಡೆದುಕೊಳ್ಳುವುದು ಹೀಗೆ. ಮರವಂತೂ ಮರುದಿನ ಯಶಸ್ವೀ ಪರೀಕ್ಷಾರ್ಥಿಯಾಗುವುದಕ್ಕೆಂದೇ ರಾತ್ರಿಯಿಡೀ ನಿದ್ದೆಗೆಟ್ಟು ಓದಲಿಕ್ಕಿಲ್ಲಪ್ಪ. ವೈವಿಧ್ಯಮಯ ತಳಿಗಳಿದ್ದೂ, ಋತುಮಾನಕ್ಕೆ ಹೊಂದಿಕೊಂಡು ಹೂವು ಹಣ್ಣು ತಳೆಯುತ್ತ ಬರುವ ಮರಕ್ಕೆ ಕೂಡ ಇದೆಲ್ಲ ಸಾಧ್ಯವೂ ಇಲ್ಲ, ಅದು ಅದನ್ನು ಮಾಡುವುದೂ ಇಲ್ಲ. ಆಕಳಿಸುವ ಸಮಯದಲ್ಲಿ ಉರು ಹೊಡೆಯುವುದು ಸಾಧ್ಯವಿಲ್ಲ, ವೃಕ್ಷಗತಿಯೊಂದಿಗೆ ಆಟವಾಡುವುದು ಸಲ್ಲ.

ನಾನು ಸುರುಮಾಡಿದ್ದು ಹೀಗೆ. ಮೊದಲಿಗೆ ದಿನಪತ್ರಿಕೆಗಳನ್ನು ನಿಷೇಧಿಸಿದೆ. ವಾರ್ತೆಗಳನ್ನು, ವಾರ್ತೆ ನೀಡುವ ಟೆಲಿವಿಷನ್ ಮತ್ತು ಸುದ್ದಿ ಒದಗಿಸುವವರನ್ನು ದೂರವಿಟ್ಟೆ. ಸಂಕಲಿತ ಮಾದರಿಯಲ್ಲಿ ಒದಗಿಸಲ್ಪಡುವ ಈ ಕಡಕ್ ಕಹಿಗುಳಿಗೆಗಳು ನಮ್ಮ ಏಕಾಗ್ರತೆಯನ್ನು ಚಿಂದಿ ಉಡಾಯಿಸುವುದಕ್ಕಾಗಿಯೇ ಇವೆ. ನಮ್ಮ ಬದುಕನ್ನು ಇವು ಅಸ್ತ್ರ ಮಾಡಿಕೊಂಡು ಬಳಸಿಕೊಳ್ಳುತ್ತಿವೆ. ಮರಗಿಡಗಳೇನೂ ಸುದ್ದಿ ಮಾಡುವುದಿಲ್ಲ. ಅವು ಇದ್ದಕ್ಕಿದ್ದಂತೆ ದೊಂಬಿ ಎಬ್ಬಿಸಲಾರವು, ಯುದ್ಧಕ್ಕೆ ಕಾರಣವಾಗಲಾರವು. ಮರಗಿಡಗಳು ಸುದ್ದಿಯನ್ನು ತಿನ್ನಲಾರವು ಕೂಡ, ನಮ್ಮಂತೆ. ಸರಕಾರಗಳು ಉರುಳಲಿ ಬಿಡಲಿ, ಕ್ರಿಕೆಟ್ ಮ್ಯಾಚು ಯಾರೇ ಗೆಲ್ಲಲಿ ಅವುಗಳ ಜಗತ್ತು ಅದರಿಂದ ಮಿಸುಕಾಡುವುದಿಲ್ಲ. ಹವಾಮಾನ ವೈಪ್ಯರೀತ್ಯದ ಹೊರತಾಗಿ (ಹಾಂ ನೆನಪಿಡಿ, ಹವಾಮಾನ ವರದಿಯ ಹೆಸರಿನಲ್ಲಿ ಟೀವಿಯಲ್ಲಿ ಬರುವ ಕಾಮಿಡಿ ಶೋ ಇದೆಯಲ್ಲ, ಅದಲ್ಲ ಮತ್ತೆ), ಈ ಜಗತ್ತಿನಲ್ಲಿ ನಡೆಯುವಂಥ, ಅದು ಮನುಷ್ಯ ನಿರ್ಮಿತವಿರಲಿ ಪ್ರಾಕೃತಿಕವೇ ಆಗಿರಲಿ, ಎಲ್ಲವೂ ಅವುಗಳ ಓಪನ್‌ರೂಫ್ ರಂಗಭೂಮಿಯ ವ್ಯಾಪ್ತಿಯಾಚೆಗೇ. ಈ ದೈನಂದಿನ ನನ್ನನ್ನು ಸ್ತಂಭೀಭೂತಗೊಳಿಸಿದೆ; ಮಾನವರೊಂದಿಗೆ, ಅವರ ರೀತಿ ನೀತಿಗಳೊಂದಿಗೂ, ಅಣತಿ ಅಪ್ಪಣೆಗಳೊಂದಿಗೂ ಏಗಲಾರದ ಹಾಗೆ ಮಾಡಿದೆ. ಮಾತು ಮಾತು ಮಾತು. ಓತಪ್ರೋತವಾಗಿ ಇದೀಗ ಏನು ನಡೆಯುತ್ತಿದೆಯೋ ಅದರ ಇಂಚಿಂಚು ವರದಿ. ಇಪ್ಪತ್ತನಾಲ್ಕು ಗಂಟೆ ಇದು ಸಾಗುತ್ತದೆ ಮತ್ತು ಎಲ್ಲವೂ ಮನುಷ್ಯ ಜಗತ್ತಿಗೆ ಸಂಬಂಧಿಸಿದ್ದು ಇದು. ಭೂ-ಜಲ-ವಾಯು ಎಂಬ ಬೇಧ ಭಾವವಿಲ್ಲದೆ ಸರ್ವತ್ರ ಸರ್ವವ್ಯಾಪಿಯಾದ ಈ ಭೂತ ನನ್ನನ್ನು ಭಯಭೀತಗೊಳಿಸುತ್ತಿದೆ. ಇದನ್ನು ವಿವರಿಸುವುದು ಕಷ್ಟ ನನಗೆ. ಸುದ್ದಿಮನೆಯ ವಾರ್ತೆಗಳನ್ನು ಎಡೆಬಿಡದೆ ತಿನ್ನುವ ಮಹಾ ಸುದ್ದಿಬಾಕನೊಬ್ಬನ ಮಗಳು ನಾನು. ಬಂಗಾಳದ ದೂರದರ್ಶನ ಚಾನೆಲ್ಲಿನಲ್ಲಿ ನೋಡಿದ ಅವೇ ಸುದ್ದಿಯ ತುಣುಕುಗಳನ್ನು ಒಮ್ಮೆ ನೋಡಿಯಾದ ಮೇಲೆ ಅವನ್ನೇ ಮತ್ತೆ ಹಿಂದಿಯಲ್ಲಿ, ತದನಂತರ ಉರ್ದುವಿನಲ್ಲಿ ನೋಡಬೇಕು. ಟೆಲಿಗ್ರಾಮುಗಳಂತೆ ನಿರಂತರ ಬರುತ್ತಲೇ ಇರುವ ಸುದ್ದಿಗಳನ್ನು ಶೇಖರಿಸುವುದೇ ಕೆಲಸವಾಗಿ ಬಿಟ್ಟ ಒಬ್ಬ ಕಾರ್ಯಕರ್ತೆಯ ಹಾಗೆ, ಸ್ವತಃ ಸುದ್ದಿಗಳ ದಾಸ್ತಾನು ಕೋಣೆಯಂತಾಗಿರುವ ನಾನು ಬೇರೆಯೇ ಒಂದು ಜಗತ್ತಿನಲ್ಲಿ ಇದ್ದೇನೋ ಅನಿಸುವುದು. ತಮಾಷೆಯೆಂದರೆ, ಸ್ವಲ್ಪ ಗಮನ ಕೊಡುವಂಥ ಯಾವತ್ತೂ ಸುದ್ದಿಗಳು ಕೆಟ್ಟ ಸುದ್ದಿಯೇ ಆಗಿರುವುದು. ಇಡೀ ಜಗತ್ತನ್ನೆ ಒಂದು ಪ್ರಳಯಸದೃಶ ಸಿನಿಮಾದಂತೆ ಪರಿವರ್ತಿಸಿ ಬಿಟ್ಟ ಈ ಪ್ರತಿಗಾಮಿ ದುಷ್ಟಶಕ್ತಿಯ ಸೆಳೆತವೇನಿದೆ ಅದೇ ಸುದ್ದಿಮನೆಯ ಜೀವಚೈತನ್ಯವಾಗಿದೆ. ನಮ್ಮೆಲ್ಲರ ಕಾಲೆಳೆದು, ನಮ್ಮನ್ನೆಲ್ಲ ಸುದ್ದಿಯನ್ನಷ್ಟೇ ಆಗಿಸುವ ಉದ್ದೇಶಹೊತ್ತು ಇದು ನಮ್ಮನ್ನು ದುರಂತದತ್ತ ಸೆಳೆದೊಯ್ಯುತ್ತಿದೆ. ವಾರ್ತಾಪತ್ರವೇ ಹೊಸ ಪವಿತ್ರಗ್ರಂಥ ಮತ್ತು ವಾರ್ತೆಗಳನ್ನು ಓದುತ್ತಿರುವವರೇ ಹೊಸ ಧರ್ಮಗುರುಗಳು. ಅಸಹಜವಾದ ಈ ಸುದ್ದಿ ಲಯ, ಉಸಿರುಗಟ್ಟಿಕೊಂಡು ಅದೀಗ ಸಾಗುತ್ತಿರುವ ಓಘ, ನನ್ನ ಉಸಿರುಗಟ್ಟಿಸಿದೆ. ನನಗೆಲ್ಲಾದರೂ ಹೊರಗೆ ಹೋಗಬೇಕನಿಸಿದೆ, ಈ ನೆರೆಹೊರೆಯಂತಾಗಿರುವ ವಾರ್ತೆಗಳಿಂದ ಹೊರಗೆ. ಹಾಗೆ ನನ್ನಲಿ ಮೊಳೆಯುವುದೀ ವೃಕ್ಷಪ್ರೀತಿ, ಸುದ್ದಿಗಳ ಕುರಿತ ವಿಕ್ಷಿಪ್ತ ಮನಸ್ಥಿತಿಯತ್ತ ಅವು ತೋರುವ ದಿವ್ಯನಿರ್ಲಕ್ಷ್ಯದತ್ತ ನನ್ನ ಲಕ್ಷ್ಯ.

ನನಗಂತೂ ವಿಶ್ವಾಸವಿದೆ, ಒಂದಲ್ಲಾ ಒಂದು ಕಾಲದಲ್ಲಿ ಮನುಷ್ಯ ಮತ್ತು ಮರಗಳು ಒಂದೇ ಗತಿಯಲ್ಲಿ ಸಾಗಿರಬೇಕು, ಒಂದೇ ಕಾಲಧರ್ಮದಲ್ಲಿ ಬದುಕಿರಬೇಕು. ಕೇವಲ ನನ್ನ ಮನಸ್ಸಿನಲ್ಲಷ್ಟೇ ಆಕೃತಿ ಪಡೆದುಕೊಳ್ಳುತ್ತಿರುವ ಈ ಒಂದು ಸಿದ್ಧಾಂತವನ್ನು ಹೆಚ್ಚು ಸ್ಪಷ್ಟವಾಗಿ ಕಂಡುಕೊಳ್ಳಲು ನಾನು ಎಳೆಯ ಗಿಡಗಳನ್ನು ನೆಟ್ಟು, ಆಧಾರಕೊಟ್ಟು ಬೆಳೆಸತೊಡಗಿದೆ. ಅವುಗಳ ಬದುಕಿನ ಆರಂಭ ಮತ್ತು ಬೆಳವಣಿಗೆಯ ಸುರುವಾತು ಗಮನಿಸತೊಡಗಿದೆ. ಒಂದು ಉದಾಹರಣೆ ಹೇಳುವುದಾದರೆ, ಐದು ವರ್ಷದ ಹಿಂದೆ ನನ್ನ ಸೋದರಳಿಯ ಹುಟ್ಟಿದಾಗ ನಾನು ನಮ್ಮ ಹಿತ್ತಲಲ್ಲಿ ಒಂದು ಬೇವಿನ ಗಿಡ ನೆಟ್ಟೆ. ಈ ಪುಟ್ಟ ಹುಡುಗನೀಗ ಸುಮಾರು ಮೂರು ಅಡಿ ಎತ್ತರವಿದ್ದಾನೆ. ಬೇವಿನ ಮರವಂತೂ ಆರಡಿ ಎತ್ತರವಿರುವ ನನ್ನ ಗಂಡನಿಗಿಂತ ಎತ್ತರಕ್ಕೆ ಬೆಳೆದಿದೆ. ಇದಕ್ಕೂ ಮೊದಲು ನನ್ನ ಮದುವೆಯಷ್ಟೇ ಪ್ರಾಯದ ಮರ ಒಂದಿದೆ. ನಾನೇನೂ ಅದನ್ನು ನೆಟ್ಟಿರಲಿಲ್ಲ. ನಗರವನ್ನು ಹಸಿರಾಗಿಸುವ ಮುನ್ಸಿಪಲ್ ಕಾರ್ಪೊರೇಶನ್ನಿನ ಕಾರ್ಯಕ್ರಮದಡಿ ಅದನ್ನು ನೆಟ್ಟಿದ್ದರು. ಇನ್ನೂ ಒಂದು ಖುಶಿಕೊಟ್ಟ ಸಂಗತಿಯೆಂದರೆ ನಮ್ಮಿಬ್ಬರ ಕೋಣೆಗೆ ನೇರವಾಗಿ ಕಾಣುವಂತೆ ಬೆಳೆದು ನಿಂತಿರುವ ಒಂದು ಹಳದಿ ವರ್ಣದ ಗುಲ್‌ಮೊಹರ್ ಗಿಡ. ಅದನ್ನು ಮದುವೆಗೆ ಕೆಲವೇ ದಿನಗಳಿರುವಾಗ ನೆಟ್ಟಿದ್ದು ಅದೀಗ ಹಳದಿ ವರ್ಣದ ಗುಲ್‌ಮೊಹರ್ ಹೂವುಗಳಿಂದ ತುಂಬಿ ಕಂಗೊಳಿಸುವಂತಾಗಿದೆ. ಅದಂತೂ ಈಗ ನಮ್ಮ ಮೂರಂತಸ್ತಿನ ಮನೆಗಿಂತ ದೊಡ್ಡದಾಗಿ ಬೆಳೆದು ನಿಂತಿದೆ. ಅದನ್ನು ಕಂಡಾಗಲೆಲ್ಲ ನನಗೆ ನಮ್ಮ ಮದುವೆ ಕೂಡ ಹೇಗೆಲ್ಲ ರೂಪುಗೊಳ್ಳುವುದು ಸಾಧ್ಯವಿತ್ತಲ್ಲಾ ಎಂಬ ಕಲ್ಪನೆ ಗರಿಗೆದರುತ್ತದೆ. ಆಗ ನಾನು ಎಂಥಾ ಒಂದು ಬದುಕನ್ನು ಪಡೆಯುವುದು ಸಾಧ್ಯವಿತ್ತಲ್ಲಾ, ವೃಕ್ಷದ ಕಾಲಧರ್ಮಕ್ಕನುಗುಣವಾಗಿ ಏನೆಲ್ಲ ಅವಕಾಶಗಳಿದ್ದವಲ್ಲಾ ಎಂದೆಲ್ಲ ಅನಿಸುತ್ತದೆ.

****
ಆದರೆ ಈ ಡೆಡ್‌ಲೈನುಗಳೇ ತುಂಬಿರುವ ಜಗತ್ತಿನಲ್ಲಿ ವೃಕ್ಷವೊಂದರ ಕಾಲಧರ್ಮವನ್ನು ಅನುಸರಿಸುವುದಾದರೂ ಹೇಗೆ? ನಾನು ನನ್ನ ತಲೆಯೊಳಗೆ ತುಂಬಿಕೊಂಡ ಕಾಲಮಾನದ ಕಟ್ಟಡವೇನಿದೆ ಅದರ ಒಂದೊಂದೇ ಘಟಕಗಳನ್ನು ಕಳಚ ತೊಡಗಿದೆ. ಅದೇನೂ ಒಂದು ಪ್ರಜ್ಞಾಪೂರ್ವಕ ಪ್ರಯತ್ನವೆಂದಲ್ಲ. ಒಂದು ಅರ್ಜಿ ಫಾರ್ಮು ಕೈಗೆ ತೆಗೆದುಕೊಂಡರೆ ಅಥವಾ ನಮ್ಮ ಸಾಮಾನ್ಯ ಸಂಭಾಷಣೆಯನ್ನು ಮರದೊಂದಿಗೆ ನಡೆಸಿದರೆ ನಮ್ಮ ಸಮಯದೊಂದಿಗಿನ ವಿಲಕ್ಷಣ ಸಂಬಂಧ ಅರಿವಿಗೆ ಬರತೊಡಗುತ್ತದೆ. ‘ನಿಮ್ಮ ಬರ್ತ್‌ಡೇ ಯಾವಾಗ?’ ನಾನು ಫೇಸ್‌ಬುಕ್ಕಿನಿಂದ ನನ್ನ ಬರ್ತ್‌ಡೇ ಮಾಹಿತಿ ತೆಗೆದು ಹಾಕಿದ್ದೇನೆ. ಮಂದಿ ನನ್ನ ಬಳಿ ಬರ್ತ್‌ಡೇ ಬಗ್ಗೆ ಕೇಳಿದಾಗೆಲ್ಲ ನನಗೆ ಮುಜುಗರವಾಗುತ್ತಿತ್ತು. ನಮ್ಮ ಸಾಮಾಜಿಕ ಮತ್ತು ಆಡಳಿತಾತ್ಮಕ ಸಂಸ್ಕೃತಿಯಲ್ಲಿ ನಾವು ಈ ಜಗತ್ತಿಗೆ ಬಂದ ದಿನಾಂಕಕ್ಕೆ ಯಾಕೆ ಅಷ್ಟೊಂದು ಮಹತ್ವ ನೀಡಲಾಗುತ್ತದೆಯೊ ಗೊತ್ತಿಲ್ಲ. ಯಾರೊಬ್ಬರೂ ಮರಗಳ ಬರ್ತ್‌ಡೇ ಆಚರಿಸಿದ್ದಿಲ್ಲ ಅಲ್ಲವೆ? ಹಾಗೆಯೇ ಮರಗಳು ವೈಕುಂಠ ಸಮಾರಾಧನೆ ಆಚರಿಸುವುದನ್ನೂ ಕಲ್ಪಿಸಲಾರೆವು. ಮರವೊಂದು ತನ್ನ ಜೀವಿತಾವಧಿಯಲ್ಲಿ ಆಗಬಹುದಾದ ಮದುವೆಗಳ ಲೆಕ್ಕ ತೆಗೆದರೆ ವೆಡ್ಡಿಂಗ್ ಆನಿವರ್ಸರಿ ಎನ್ನುವುದಂತೂ ಒಂದು ಜೋಕ್ ತರ ಕಂಡೀತು. ಹಾಗಾದರೆ ಟ್ರೀ-ಟೈಮ್ ಎಂದರೇನು? ಕಾಲದ ಬಗ್ಗೆ ನಾನು ಗೊತ್ತುಗುರಿಯಿಲ್ಲದಂತೆ ಸಾಕಷ್ಟು ತಾತ್ವಿಕ ಚರ್ಚೆಗಳನ್ನೂ ಗಮನಿಸುತ್ತ ಹೋದೆ. ಒಂದಿನ ರಾತ್ರಿ ನಿದ್ದೆ ಮಂಪರಿನಲ್ಲಿ ಅದು ಹೊಳೆಯಿತು: ಇಲ್ಲಿ ಮತ್ತು ಈಗ. ಈ ಕ್ಷಣವನ್ನು ಅನುಭವಿಸು. ವರ್ತಮಾನದಲ್ಲಿ ಬದುಕುವುದು - ಭವಿಷ್ಯದ ಚಿಂತೆಗಳಿಲ್ಲದ, ಗತದ ವಿಷಾದಗಳಿಲ್ಲದ ವರ್ತಮಾನ.

ಶಂಖನಾದಕಿಂತ ಕಿಂಚಿದೂನಾ
ಮರವಾಗಬೇಕೆಂಬ ಆಸೆಯ ಹಿಂದಿದ್ದ ಉಳಿದೆಲ್ಲಾ ಆಮಿಷಗಳಿಗಿಂತ ಮುಖ್ಯವಾದದ್ದು ಗದ್ದಲದಿಂದ ಮುಕ್ತವಾಗುವುದು ಎಂದು ಮತ್ತೊಮ್ಮೆ ಹೇಳುತ್ತೇನೆ. ಇದಕ್ಕೆ ಸಂಬಂಧಿಸಿದಂತೆ ಎರಡು ಸಂಗತಿಗಳಿವೆ - ಒಂದು ಮನುಷ್ಯರು ಎಬ್ಬಿಸುವ ಗದ್ದಲ, ಇನ್ನೊಂದು ಮರಗಳು ತಮ್ಮ ದೈನಂದಿನದಲ್ಲಿ ಬಳಸುವ ಮೌನದ ಭಾಷೆ. ವೈರುಧ್ಯವಂತೂ ಕಣ್ಣಿಗೆ ಹೊಡೆದು ಕಾಣುವಂತೆಯೇ ಇತ್ತು. ಮನುಷ್ಯನ ಕೆಲಸಕಾರ್ಯಗಳಲ್ಲಿ ಕಾಣುವ, ಪರರನ್ನು ದೂರುವ ಒಂದು ಧ್ವನಿ ಮತ್ತು ಸದಾ ದುಡಿಯುತ್ತಲೇ ಇರುವ ಮರಗಳ ಅಗಾಧ ಕಾರ್ಯಕ್ಷಮತೆಯ ಹಿಂದಿನ ಮೌನ. ನನಗೆ ಆ ಕಡೆಗೆ ಸರಿಯುವುದಿತ್ತು. ಸಂಗೀತದಿಂದ ಸಸ್ಯಗಳ ಮೇಲೆ ಪರಿಣಾಮವನ್ನುಂಟು ಮಾಡಬಹುದು ಎನ್ನುವಂಥ ಅರೆವೈಜ್ಞಾನಿಕ ಅಧ್ಯಯನಗಳ ಬಗ್ಗೆಯೂ ನನಗೆ ಅರಿವಿತ್ತು. ಒಂದು ಉದಾಹರಣೆಗೆ, ನನಗೆ ಸಹಿಸಲಿಕ್ಕೇ ಅಗದ, ಭಾರೀ ಸದ್ದಿನ ಸಂಗೀತ ಹೇಗೆ ಅತ್ಯುತ್ತಮ ಫಲ ನೀಡುವಂತೆ ಮಾಡಿತು ಮತ್ತು ಕ್ಲಿಫ್ ರಿಚರ್ಡ್‌ನ ಪಥ್ಯದಿಂದ ಸಸ್ಯಗಳು ಬಾಡಿದವು ಎನ್ನುವಂಥ ಸಂಶೋಧನೆಗಳು. ಪ್ರಯೋಗಗಳು ವೃಕ್ಷಸಂಕುಲದ ಜೈವಿಕಪ್ರಕ್ರಿಯೆಯನ್ನೇ ಬದಲಿಸಿ ಹೊಸದೊಂದು ಸಂಗೀತ ಪ್ರಕಾರವನ್ನೇ ಸೃಷ್ಟಿಸಿವೆ. ಆದರೆ ನನಗಿದರಲ್ಲೆಲ್ಲ ಆಸಕ್ತಿಯಿಲ್ಲ. ಏಕೆಂದರೆ ಒಂದು ಹೊಸ ಹವ್ಯಾಸ ನನ್ನ ಬದುಕಿನಲ್ಲಿ ಬೇರೂರತೊಡಗಿದೆ. ಪ್ರತಿಸಲ ಗಾಳಿ ಬೀಸಿದ ಸದ್ದು ಕೇಳಿದಾಗಲೆಲ್ಲ ಸೆಲ್‌ಫೋನಿನತ್ತ ನನ್ನ ಕಣ್ಣುಗಳು ಹೋಗುತ್ತಿವೆ.

ಗಾಳಿ ಬೀಸುವ ಸದ್ದಿಗೆ ಗಿಡಮರಗಳು ಹೇಗೆ ಸ್ಪಂದಿಸುತ್ತವೆ ಎನ್ನುವುದನ್ನು ಕಂಡು ಹಿಡಿಯಬೇಕಿದೆ ನನಗೆ. ಈ ಆಸಕ್ತಿ ನನಗೆ ಮೂಡಿದ್ದು ಆಕಸ್ಮಿಕವಾಗಿ. ಹಿಮಾಲಯದ ತಪ್ಪಲಲ್ಲಿರುವ ನನ್ನ ಊರಿನ ಹೊರಭಾಗಕ್ಕೆ ನಾವೆಲ್ಲ ಸಂಸಾರವಂದಿಗರಾಗಿ ಒಂದು ಟ್ರಿಪ್ ಹೋಗಿದ್ದೆವು. ಮನಸ್ಸಿನ ಯೋಚನಾ ಲಹರಿಯನ್ನು ತುಂಡರಿಸುವ ಮಾನವ ಧ್ವನಿಗಳಿಲ್ಲದ ಹಳ್ಳಿಗಾಡಿನ ಪರಿಸರದಲ್ಲಿ ಖುಶಿಯಾಗಿ ಸುಸ್ತಾಗುವ ವರೆಗೂ ಸುತ್ತಾಡಿದೆ. ವಸಂತ ಋತುವಿನ ಆರಂಭದ ದಿನಗಳವು. ನಡುಹಗಲ ಸೂರ್ಯರಶ್ಮಿಗಳು ಚುಚ್ಚದಂತೆ ನವಿರಾಗಿ ಬೀಸುತ್ತಿದ್ದ ಸಿಹಿಗಾಳಿ ಹಿತವನ್ನೀಯುತ್ತಿತ್ತು. ಅಲ್ಲಿನ ಸದ್ದುಗದ್ದಲವಿಲ್ಲದ ಪರಿಸರ ನನ್ನನ್ನು ತುಂಬಾ ಸೆಳೆಯಿತು. ಅಲ್ಲಿ ಯಾವುದೇ ಮಾನವನ, ಪ್ರಾಣಿ ಪಕ್ಷಿಗಳ, ವಾಹನಗಳ ಅಥವಾ ಸೆಲ್ ಫೋನಿನ ಸದ್ದುಗಳೆಲ್ಲ ಒಂದರೊಂದಿಗೆ ಒಂದು ಗುದ್ದಾಡುವ ಸಾಧ್ಯತೆಯೇ ಇರಲಿಲ್ಲ. ಆದರೆ ಇದೇನೂ ಪರೀಕ್ಷಾ ಕೊಠಡಿಯ ಅಥವಾ ಪ್ರಾರ್ಥನಾ ಮಂದಿರದ ವಿಚಿತ್ರ ನಿಶ್ಶಬ್ದವಾಗಿರಲಿಲ್ಲ. ಕೊಂಚ ಸುಧಾರಿಸಿಕೊಳ್ಳಲೆಂದು ನಾನು ನಿಂತಲ್ಲಿದ್ದ ಬಿದಿರಿನ ಮೆಳೆಯಲ್ಲಿ ಬೀಸುವ ಗಾಳಿ ಆಡತೊಡಗಿದ್ದೇ ಅಲ್ಲಿನ ಆ ನಿಶ್ಶಬ್ದದಲ್ಲಿ ಶಿಸ್ತಿಗೆ ಬದಲಾದ ಒಂದು ಲಾಲಿತ್ಯವಿರುವುದು ನನ್ನ ಗಮನಕ್ಕೆ ಬಂತು. ಈ ಹಿಂದೆಯೂ ನಾನು ಈ ಸದ್ದನ್ನು ಕೇಳಿದ್ದೆ. ಆದರೂ ಅದರಲ್ಲೊಂದು ಹೊಸತನವಿತ್ತು, ಪ್ರೇಮದಂತೆಯೇ ಅದು ಏಕಕಾಲಕ್ಕೆ ಗೊತ್ತಿರುವ ಆದರೂ ಗೊತ್ತಿಲ್ಲದ ಮತ್ತು ಅಪೂರ್ವವೂ ಹೊಚ್ಚ ಹೊಸದೂ ಆಗಿತ್ತು. ನಾನು ಬಿದಿರಮೆಳೆಯ ದನಿಯಾಗಿದ್ದೆ. ಮೊದಲಿಗೆ ಹೌದೋ ಅಲ್ಲವೊ ಎಂಬಂತೆ, ನಂತರ ಬಲವಾಗಿ ಮತ್ತು ತದನಂತರ ದೃಢವಾಗಿ, ಕ್ರಮೇಣ ಗೊತ್ತುಗುರಿಯಿಲ್ಲದಂತೆ ಹರಿದಾಡಿ ತನ್ನನ್ನು ತಾನು ಕಳೆದುಕೊಳ್ಳುವ ಹಾಗೆ. ಸಂಗೀತಗಾರನ ಶ್ವಾಸಾನುಸಂಧಾನದಿಂದಲೇ ಬಲ ಪಡೆದುಕೊಂಡು ಸೌಂದರ್ಯ ಸೃಷ್ಟಿಯಾಗುವಂಥ ವಾದ್ಯಸಂಗೀತವನ್ನು ನಾನು ಕೇಳಿಯೇ ಇರದಿದ್ದಲ್ಲಿ ಇದನ್ನು ನಾನು ಒಂದು ವಿಶಿಷ್ಟ ಸಂಗೀತದ ನಾದವೆಂದೇ ತಿಳಿದುಕೊಳ್ಳುತ್ತಿದ್ದೆ.

ಹೆಚ್ಚಿನೆಲ್ಲಾ ಸುಂದರ ಸಂಗೀತ ವಾದ್ಯಗಳೂ ವೃಕ್ಷಸಂಕುಲದ ಬಳುವಳಿಯೇ ಎನ್ನುವುದು ಕೇವಲ ಕಾಕತಾಳೀಯವೇನಲ್ಲ. ಗಾಳಿಯನ್ನು ತನ್ನ ದೇಹ ಕೋಶದೊಳಗಿರಿಸಿಕೊಂಡು ಕ್ರಮೇಣ ಕಂತುಗಳಲ್ಲಿ ಉಸಿರಾಗಿಸಿ ಬಿಡುವ ಕೊಳಲು - ಇಲ್ಲಿ ಬಿದಿರಿನ ಮೆಳೆಗಳ ತುಂಬ ನಿಂತ ಮಹಾ ಕೊಳಲೇ ಎನ್ನುವುದು ನನ್ನರಿವಿಗೆ ಆಗ, ತಕ್ಷಣಕ್ಕೆ ಬರಲಿಲ್ಲ. ಅದೇಕೆಂದರೆ, ಅಲ್ಲಿ ಪಿಸುಗುಡುತ್ತಿದ್ದುದು ಆ ಬಿದಿರುಗಳಾಗಿರದೆ ಅವುಗಳ ಎಲೆಗಳಾಗಿದ್ದವು. ಅವು ಗಾಳಿಯಲ್ಲಿ ಫಡಫಡಿಸಿದವು, ಅದರ ಬಗ್ಗೆ ದೂರಿದವು, ಅದಕ್ಕೆ ಹೊಂದಿಕೊಂಡವು ಮತ್ತು ಅದನ್ನು ನಿರ್ಲಕ್ಷಿಸಿ ತಮ್ಮ ಪಾಡಿಗೆ ತಾವಾದವು. ಮದುವೆಮನೆಯಲ್ಲಿ ನುಡಿಸುವ ಶಹನಾಯ್ ತರ ನನ್ನ ಮನದಲ್ಲಿ ಈ ಎಲೆಗಳ ದೂರಿನ ಅಹವಾಲು ಅಲೆಯಲೆಯಾಗಿ, ಪ್ರೇಮದ ಶಿಸ್ತುಗಳ ಗೋಜಿಲ್ಲದ, ಹೊತ್ತು ಗೊತ್ತಿಲ್ಲದೆ ಬಂದು ಹೋಗುವ ಅಜ್ಞಾತಪ್ರೇಮಿಯೊಬ್ಬನ ಕುರಿತ ಎದೆಯಳಲ ಹಾಡಿನಂತೆ ಮೊರೆಯುತ್ತಿತ್ತು.

ಬಹುಶಃ ನಾನು ತುಸು ಹೆಚ್ಚೇ ಕಲ್ಪನೆ ಮಾಡಿದೆ. ಆದರದು ಒಂದು ಹವ್ಯಾಸಕ್ಕೆ ಕಾರಣವಾಯಿತು. ನಾನು ಗಾಳಿಯಲ್ಲಿ ಸರಿದಾಡುವ ಬಿದಿರ ಚುರುಕು ಎಲೆಗಳ ಸದ್ದನ್ನು ರೆಕಾರ್ಡ್ ಮಾಡಿದೆ - ಅವುಗಳ ಆ ಚೈತನ್ಯ ತುಂಬಿದ, ಸಂವೇದನೆಗಳಿಂದ ಪುಟಿಯುವ, ಎಲೆಗಳ ಸರಿದಾಟದ ಸದ್ದಿನಲ್ಲೇ ತುಡಿಯುವಂಥದ್ದೇನೋ, ಕರೆಯುವಂಥದ್ದೇನೋ ಇತ್ತು . ಅವು ಹದಕ್ಕೆ ಬರಲು ನಿರಾಕರಿಸುವಂಥ ಪೆಡಸು ಹೊಂದಿದ್ದವು. ಈ ಗಾಳಿಯೊಂದಿಗೆ ಅಷ್ಟಿಷ್ಟು ಸರಸದ ನಂತರ ಅದನ್ನು ಇನ್ನೊಬ್ಬಳ ಬಳಿಗೆ ಹೋಗಗೊಡುವ ಅದರ ಶೈಲಿಯಲ್ಲೇ ಹತಾಶೆಯಂಥದ್ದೇನೋ ಇದ್ದಂತಿತ್ತು. ನಾನು ಆ ಭೇಟಿ - ಬೇಟ? ದ, ಗಾಳಿ ಮತ್ತು ಎಲೆಗಳ ಸಮಾಗಮದ ಸದ್ದನ್ನು ಸೆರೆಹಿಡಿದೆ. ಆಮೇಲೆ, ಮುಸ್ಸಂಜೆಯ ನೀರವತೆಯಲ್ಲಿ, ದೈನಂದಿನದ ಗದ್ದಲವನ್ನು ಮಬ್ಬುಗತ್ತಲು ನಿಧಾನವಾಗಿ ಹೀರಿಕೊಳ್ಳುತ್ತಿದ್ದ ಹೊತ್ತಲ್ಲಿ, ಮನೆಯಲ್ಲಿ ಕುಳಿತು ಆ ವೀಡಿಯೋ ನೋಡಿದೆ. ಕಣ್ಣುಮುಚ್ಚಿ ಬರಿಯ ಸದ್ದನ್ನೆ ಆಲಿಸತೊಡಗಿದೆ. ಸ್ವರಲಯದ ತಂತ್ರಜ್ಞರ ಹೊರತಾಗಿ ಬೇರೆ ಯಾರೂ ಗಮನಿಸಲಾರದ ನನ್ನದೇ ಉಸಿರ ಸದ್ದು, ಎರಡು ಕಡೆ, ಆ ಒಂದು ನಿಮಿಷದ ವೀಡಿಯೋದಲ್ಲಿ ಸೇರಿ ಹೋಗಿತ್ತು. ಏನೋ ನಿರಾಶೆ. ಏನೋ ಸಿಟ್ಟು. ನನಗೇಕೆ ಬಿದಿರಮೆಳೆಯಂತೆ ಅದರ ನಾದದಲ್ಲೇ ಸೇರಿಹೋಗುವುದಾಗಲೇ ಇಲ್ಲ?
ಈ ಲೇಖನ 02/04/2017ರ ಪ್ರಜಾವಾಣಿ ಮುಕ್ತಛಂದದಲ್ಲಿ ಪ್ರಕಟಿತ
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಇಪ್ಪತ್ತು ಸಾವಿರ ಪುಸ್ತಕಗಳ ಮನೆ

ಮೊಮ್ಮಗನು ಹೇಳುವ ಅಜ್ಜನ ಕತೆಯಿದು. ಹಾಗೆ ಸಾಂಸಾರಿಕ ಕಥನ. ಇಪ್ಪತ್ತು ಸಾವಿರ ಪುಸ್ತಕಗಳ ಮನೆಯ ಕಥನವಿದು. ಹಾಗಾಗಿ ಸಾಹಿತ್ಯಿಕ. ಚರಿತ್ರೆ, ರಾಜಕೀಯ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಸೇರಿಕೊಂಡು ಬಂದ ಒಂದು ಜೀವನಗಾಥೆಯಿದು. ಯಾವ ರೂಪಕಗಳ ಆಧಾರಪಡೆದು ವಿವರಿಸಬೇಕೊ ತಿಳಿಯದ ಒಂದು ಅದ್ಭುತ ಪುಸ್ತಕವೆಂದು ಮುಂಗಡವಾಗಿಯೇ ಇನ್ನಿಲ್ಲದಂತೆ ಹೊಗಳಿಸಿಕೊಂಡಿರುವ, ಬಹು ನಿರೀಕ್ಷಿತವಾಗಿದ್ದೂ ಹೊರಬರದೇ ಇದ್ದ ಈ ಪುಸ್ತಕದ ಹೆಸರು ದ ಹೌಸ್ ಆಫ್ ಟ್ವೆಂಟಿ ಥೌಸಂಡ್ ಬುಕ್ಸ್. ಸಾಶಾ ಅಬ್ರಾಮಸ್ಕಿ ಬರೆದ ಈ ಪುಸ್ತಕ ಮೊನ್ನೆಮೊನ್ನೆಯಷ್ಟೇ ಬಿಡುಗಡೆಯ ಭಾಗ್ಯ ಕಂಡಿದೆ. ಅದರ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.

ಪ್ರವೇಶಿಕೆ-ಒಂದು
ಶುಭವಿದಾಯ
ತನ್ನನ್ನು ಅವನು ಪುಸ್ತಕಗಳದ್ದೇ ಒಂದಂಶವೆಂದು ತಿಳಿದಿದ್ದನೆ, ತಾನೇ ಪುಸ್ತಕಗಳ ಒಂದಂಶವೆಂದುಕೊಂಡಿದ್ದನೆ, ನನಗಂತೂ ತಿಳಿಯದು.
- ವಿಲಿಯಮ್ ಮೊರಿಸ್, ನಿವ್ಸ್ ಫ್ರಮ್ ನೊವೇರ್ (1890).

ಒಬ್ಬ ಮೌನಿಗಿಂತ, ಒಬ್ಬ ಸಭ್ಯನಿಗಿಂತ, ಆದಿಯಿಲ್ಲದ ದುಗುಡದಲ್ಲಿರುವ ಒಬ್ಬ ವ್ಯಕ್ತಿಗಿಂತ ದೊಡ್ಡ ಸದ್ದು ಈ ಭೂಮಿಯ ಮೇಲೆ ಇನ್ಯಾವುದೂ ಇರಲಾರದು. ಕರಿಹಲಗೆಯ ಮೇಲೆ ಉಗುರಿನಿಂದ ಗೀಚುವ ಸದ್ದಾಗಲಿ, ಹಲ್ಲಿನ ಆಳಕ್ಕಿಳಿವ ಡ್ರಿಲ್ಲಿಂಗ್ ಮಶಿನಿನ ಕಿರ್ರೆಂಬ ಸದ್ದಾಗಲಿ, ಬೇರೆ ಇನ್ಯಾವುದೇ ಹೋಲಿಕೆಯೂ ಇದಕ್ಕೆ ಇಲ್ಲ. ಯಾವುದೂ ಇಲ್ಲ. ಭಯಂಕರ ಭೀತಿಯಿಂದ ಹುಯಿಲಿಟ್ಟಂತೆ ಇರುತ್ತದೆ ಅದು. ಎಲ್ಲಾ ಸದ್ದುಗಳನ್ನೂ ಗುಳುಂಕರಿಸುವ ಒಂದು ಸ್ಪಷ್ಟ ಬ್ಲ್ಯಾಕ್‌ಹೋಲ್‌ನಂತೆ ಇರುತ್ತದೆ ಅದು. ಅಸಾಮಾನ್ಯವಾದ, ಅಳವಿಗೆ ನಿಲುಕದ, ಆಳ ಪ್ರಪಾತಕ್ಕೆ ನೇರವಾಗಿ ಧುಮುಕುವ ಹಳ್ಳವು ನಿಮ್ಮನ್ನು ಬಿಡದೇ ಸೆಳೆದೊಯ್ಯುವಂತಿರುತ್ತದೆ ಅದು. ಇದು ನಿರಂತರ, ಇದು ನಿರಂತರ ಎಂದು ಈ ಸದ್ದು ಘೋಷಿಸುತ್ತಿರುತ್ತದೆ.

ಮಾರ್ಚ್ 2010ರಂದು ನಾನು ಟೆಲಿಪೋನ್ ಕರೆ ಸ್ವೀಕರಿಸಿ, ರಿಸೀವರ್ ನನ್ನ ಎಡಗಿವಿಗೆ ಇಟ್ಟುಕೊಂಡಾಗ ಕೇಳಿಸಿದ ಸದ್ದು ಇಂಥಾದ್ದು. ಕ್ಯಾಲಿಫೋರ್ನಿಯಾದಲ್ಲಿ, ಮನೆಯಲ್ಲಿದ್ದೆ. ಟೀವಿ ಎದುರಿನ ಸೋಫಾದ ಮೇಲೆ ಮುದುರಿಕೊಂಡು ಕೂತಿದ್ದೆ. ಹೆಂಡತಿ ಮತ್ತು ಮಕ್ಕಳು ಪಕ್ಕದ ಇನ್ನೊಂದು ಕೋಣೆಯಲ್ಲಿದ್ದರು. ಆರು ಸಾವಿರ ಮೈಲಿಯಾಚೆ, ಲಂಡನ್ನಿನಲ್ಲಿ ನನ್ನ ತಂದೆ ಅವರ ತಂದೆಯ ದೇಹದ ಪಕ್ಕ ಕೂತಿದ್ದರು. ಕೆಲವೇ ಕ್ಷಣ ಮುನ್ನ, ನನ್ನ ಅಜ್ಜ, ಚಿಮನ್ ಅಬ್ರಾಮಸ್ಕಿ ಕೊನೆಗೂ ತೀರಿಕೊಂಡಿದ್ದರು. ವಯಸ್ಸಾಗಿದ್ದರಿಂದಲೆ? ಅವರಿಗೆ ತೊಂಭತ್ತ ಮೂರು ವರ್ಷ ವಯಸ್ಸಾಗಿತ್ತು. ಪಾರ್ಕಿನ್ಸನ್ ಸಮಸ್ಯೆ ಉಲ್ಬಣಿಸಿದ್ದರಿಂದಲೆ? ವರ್ಷಗಳಿಂದ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಸುರುಟಿ ಹೋದ, ಕಿವಿ ಕೇಳಿಸದಿದ್ದ, ಮುದುಕ. ಹೆಚ್ಚು ಹೆಚ್ಚು ಮನೆಯೊಳಗೇ ಉಳಿಯುವಂತಾಗಿತ್ತು. ನಿಸ್ತೇಜ ಮೊಗದ, ಶಿಥಿಲಗೊಂಡ ಒಣದೇಹದ ವಿಧುರ. ಅಥವಾ ಕೊನೆಗಾಲದಲ್ಲಿ ಸರಣಿಯಾಗಿ ಬರುವ ಭಯಂಕರ ಕಾಯಿಲೆಗಳು, ಸೋಂಕುಗಳು ಸ್ವತಃ ಅಥವಾ ಪರೋಕ್ಷವಾಗಿ ಅವರ ಸಾವಿಗೆ ಕಾರಣವಾಗಿರಬಹುದೆ? ಕೊನೆಗೂ ಏನು ಕಾರಣ ಎನ್ನುವುದು ಮುಖ್ಯವಾಗುವುದಿಲ್ಲ. ಕೊನೆಗೂ ಮುಖ್ಯವಾಗುವುದು ನನ್ನ ಅಜ್ಜಂದಿರಲ್ಲಿ ಕಟ್ಟಕೊನೆಯವನು ತೀರಿಕೊಂಡಿದ್ದ ಎನ್ನುವುದು; ನನ್ನ ಟೀಚರ್, ಆದರ್ಶ, ಗುರು ಮತ್ತು ಪ್ರೀತಿಯ ‘ನೈ’ ಕೊನೆಯದಾಗಿ ಹೊರಟು ಹೋಗಿದ್ದ. ನಾನು ಚಿಕ್ಕವನಿರುವಾಗ ಯಾವಾಗಲೂ ಟೈ ಕಟ್ಟಿಕೊಂಡಿರುತ್ತಿದ್ದ ಅಜ್ಜನ ಟೈ ನೋಡಿ ನಾನದನ್ನು ನೈ ಎನ್ನುತ್ತಿದ್ದೆನಂತೆ, ಅದೇ ಅವನಿಗೆ ನನ್ನ ಪ್ರೀತಿಯ ಅಡ್ಡಹೆಸರಾಯಿತು. ನಾನು ಮಗುವಾಗಿದ್ದಾಗ, ಅವನ ಡೈನಿಂಗ್ ರೂಮಿನ ಸುತ್ತ ತಲೆಯ ಮೇಲೆ ಒಂದರ ಮೇಲೊಂದರಂತೆ ನೀಟಾಗಿ ಜೋಡಿಸಿದ ಬಣ್ಣಬಣ್ಣದ ಪ್ಲಾಸ್ಟಿಕ್ ಕಪ್ಪುಗಳನ್ನು ಇರಿಸಿಕೊಂಡು, ನನ್ನನ್ನು ಖುಶಿಪಡಿಸಲೆಂದೇ ಕುಣಿಯುತ್ತಿದ್ದ ಮುದ್ದಿನ ಅಜ್ಜ ಇನ್ನಿಲ್ಲ. ಶತಮಾನದುದ್ದಕ್ಕೂ ಅವನು ಕೊಂಡ ಅದ್ಭುತವಾದ ಅಪರೂಪದ ನೂರಾರು, ಸಾವಿರಾರು ಪುಸ್ತಕಗಳಿಂದಲೇ ಸದಾ ಸುತ್ತುವರಿದಿರುತ್ತಿದ್ದ ಮನುಷ್ಯ ಕಣ್ಮರೆಯಾಗಿ ಬಿಟ್ಟಿದ್ದ. ಯಾವುದು ಅವನನ್ನು ಅವನನ್ನಾಗಿ ಮಾಡಿತ್ತೋ ಅದೆಲ್ಲವನ್ನೂ ಹೀಗೆ ಅನಾಥವಾಗಿ ಬಿಟ್ಟು ಮೇಣದ ಮೂರ್ತಿಯಂತೆ ತಟಸ್ಥನಾಗಿ ಸಾವಿನ ಸ್ಥಿರಚಿತ್ರದಂತೆ ಮಲಗಿದ್ದ.

ಬಿಕ್ಕಿ ಬಿಕ್ಕಿ ಅಳತೊಡಗಿದೆ. ನಾನೊಂದು ಹತ್ತಿಯ ಬೊಂಬೆಯೋ ಎಂಬಂತೆ ದೇಹ ನಾನು ಬಿಕ್ಕಿದಂತೆಲ್ಲ ಕುಲುಕುತ್ತಿತ್ತು. ನನ್ನದೇ ಒಂದು ಭಾಗ ಇದ್ದಕ್ಕಿದ್ದಂತೆ ಅಷ್ಟೆತ್ತರದಲ್ಲಿ ನಿಂತು ನಾನೇಕೆ ಅಷ್ಟೊಂದು ವಿಚಲಿತನಾದೆ ಎಂಬಂತೆ ನನ್ನನ್ನೇ ಆಶ್ಚರ್ಯದಿಂದ ನೋಡುತ್ತಿತ್ತು. ಕೊನೆಗೂ ಈ ದುಃಖಕ್ಕೆ ತಯಾರಾಗಲು ವಿಧಿ ನನಗೆ ಸಾಕಷ್ಟು ಕಾಲಾವಕಾಶ ಕೊಟ್ಟಿತ್ತು. ಚಿಮನ್ನನ ಅಂತ್ಯವು ನಿಧಾನವಾಗಿ ಬಂತು, ಅವನ ಕೊನೆಯ ದಿನಗಳು ನೋವು ಮತ್ತು ಹತಾಶೆಯಿಂದ ಕೂಡಿದ್ದವು. ನನ್ನ ಹೆತ್ತವರು ಮತ್ತು ಸಹೋದರರ ಪ್ರತಿಯೊಂದು ಫೋನ್‌ಕಾಲ್ ಕೂಡ ಮೊದಲಿಗೆ ಅಜ್ಜನ ಆರೋಗ್ಯದಲ್ಲಿ ಯಾವುದೇ ಏರುಪೇರಿಲ್ಲದ ಕುರಿತೇ ಹೇಳುತ್ತಿದ್ದವು. ಆ ಕೊನೆಯ ಕೆಲವು ವರ್ಷಗಳಲ್ಲಿ ಅವನು ಅವನದೇ ಕತೆಯ ಉಪಸಂಹಾರವಷ್ಟೇ ಆಗಿ ಉಳಿದಿದ್ದ.

****

ಹದಿನೇಳನೆಯ ಶತಮಾನದಲ್ಲಿ ಫ್ರೆಂಚ್ ತತ್ವಜ್ಞಾನಿ ರೇನೆ ಡೆಸ್ಕಾರ್ಟೆಸ್ ತನ್ನ ಬಹು ಪ್ರಖ್ಯಾತ ಘೋಷಣೆ ಮಾಡಿದ್ದಾಗಿತ್ತು, “ನಾನು ಯೋಚಿಸುತ್ತೇನೆ, ಹಾಗಾಗಿ ನಾನು ಇದ್ದೇನೆ”. ಚಿಮನ್ನನ ಬದುಕಿನ ಮಟ್ಟಿಗೆ, ಅವನು ಕ್ರಮಬದ್ಧವಾಗಿ ಕಟ್ಟಿದ ಅವನ ಪುಸ್ತಕಮನೆಯ ನೆಲೆಯಲ್ಲಿ ಹೇಳುವುದಾದರೆ, ಇದರ ಉಲ್ಟಾ ಮಾತು ಹೆಚ್ಚು ನಿಜ. ಅವನು ಇದ್ದ, ಹಾಗಾಗಿ ಅವನು ಯೋಚಿಸುತ್ತಿದ್ದ. ಅವನು ಯೋಚಿಸದೇ ಇದ್ದಿದ್ದರೆ, ಓದದೇ ಇದ್ದಿದ್ದರೆ, ತನ್ನ ಸುತ್ತಲಿನ ಜಗತ್ತನ್ನು ಮತ್ತು ಇತಿಹಾಸದಲ್ಲಿ ಎಂದಿನಿಂದ ಈ ಜಗತ್ತು ಹೇಗೆಲ್ಲ ಬೆಳೆಯುತ್ತ ಬಂದಿದೆ ಎನ್ನುವುದನ್ನು ವಿಶ್ಲೇಷಿಸದೇ ಇದ್ದಿದ್ದರೆ ಅವನು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದ. ಏನೂ ಮಾಡದೆ ಕುಳಿತಿರುವುದು ಅವನಿಂದಾಗದ ಮಾತು. ಆದರೆ ಈಗ, ಅವನ ತೊಂಬತ್ತರ ವಯಸ್ಸಿನಲ್ಲಿ, ಪಾರ್ಕಿನ್ಸನ್‌ನಿಂದ ಕುಗ್ಗಿದ ದೇಹದೊಂದಿಗೆ, ಕಿವಿ ಮಂದಗೊಂಡು, ಮನೆಯನ್ನು ಬಿಟ್ಟು ಎಲ್ಲಿಗೂ ಹೊರಹೋಗಲಾರದೆ, ತಾನು ಬಹುವಾಗಿ ಇಷ್ಟಪಡುತ್ತಿದ್ದ ವಾಕ್ ಕೂಡ ಹೋಗಲಾರದ ಸ್ಥಿತಿಯಲ್ಲಿ ಅವನು ವಸ್ತುಶಃ ಖೈದಿಯೇ ಆಗಿದ್ದ, ಅವನ ಮನಸ್ಸು ಸೋಲುತ್ತಿದ್ದ ದೇಹದೊಳಗೆ ಬಂಧಿಯಾಗಿತ್ತು, ಆ ದೇಹ ಅವನದೇ ಪುಸ್ತಕಮನೆಯಿಂದ ಕಳಚಿಕೊಂಡಂತೆ, ದೂರವಾದಂತೆ ಒಂಟಿಗೊಂಡು ನಿಂತಿತ್ತು. ಒಂದೊಂದಾಗಿ ಈ ಜಗತ್ತಿನ ಬಾಗಿಲುಗಳು ಅವನಿಗೆ ಮುಚ್ಚಿಕೊಳ್ಳುತ್ತಿದ್ದವು; ಅದಕ್ಕೆ ಸರಿಯಾಗಿ ಅವನಿಗೂ ಜಗತ್ತಿನೊಂದಿಗೆ ಮತ್ತೊಮ್ಮೆ ಸಂಬಂಧ ಕುದುರಿಸಿಕೊಳ್ಳುವುದು ಕೈಲಾಗದೇ ಹೋಯಿತು. ಅವನ ಮನೆಯ ತಳ ಅಂತಸ್ತಿನ, ಪುಸ್ತಕಗಳು ತುಂಬಿದ್ದ ಒಂದು ಪುಟ್ಟ ಕೋಣೆಗೆ ಅವನ ಜಗತ್ತು ಸೀಮಿತಗೊಂಡಿತು. ಒಂದು ಕಾಲದಲ್ಲಿ ಲಂಡನ್ನಿನ ಎಡಪಂಥೀಯರ ಬಹುದೊಡ್ಡ ಅಡ್ಡೆಯಾಗಿದ್ದ, ಇಂದಿಗೂ ಇಂಗ್ಲೆಂಡಿನ ಅತ್ಯಂತ ಪ್ರಮುಖ ಖಾಸಗಿ ಲೈಬ್ರರಿಯನ್ನು ಹೊಂದಿರುವ ಮನೆ, ಈಗ ಜನವಸತಿಯಿಲ್ಲದ ಪಾಳುಬಂಗ್ಲೆಯಂತಾಯಿತು. ನಾನು ಚಿಕ್ಕವನಿದ್ದಾಗ ಬೌದ್ಧಿಕ ತೇಜಸ್ಸಿನಿಂದ ಕಂಗೊಳಿಸಿ ಬುದ್ಧಿಜೀವಿಗಳ ಪ್ರಖರ ಚಿಂತನೆಗಳನ್ನು ಹೊರಹೊಮ್ಮಿಸುತ್ತಿದ್ದ ಮನೆ ಈಗ ಸ್ವಲ್ಪ ಹೆದರಿಕೆ ಹುಟ್ಟಿಸುವ, ಪಾಳು ಬಿದ್ದಂಥ ಮನೆಯಾಗಿ ಕಾಣುತ್ತಿತ್ತು. ನಾನು ನನ್ನ ಮಕ್ಕಳನ್ನು ಅದೊಂದು ಕರ್ತವ್ಯ ಎಂಬಂತೆ ಅಲ್ಲಿಗೆ ಕರೆದೊಯ್ಯುತ್ತಿದ್ದೆನೆ ಹೊರತು ಅದೊಂದು ಉಲ್ಲಾಸದ ಭೇಟಿಯಾಗಿರುತ್ತಿರಲಿಲ್ಲ. ಏರು ಧ್ವನಿಯ ಹಾವಭಾವದ ಸಂಭಾಷಣೆಗಳೆಲ್ಲವೂ ಕಿವುಡು ಮುದಿತನದ ಸುದೀರ್ಘ ಮೌನವಾಗಿ ಬದಲಾಗಿದ್ದವು; ಸದಾ ಗಡಿಬಿಡಿ, ಸಡಗರದ ತಾಣವಾಗಿದ್ದ ಅಡುಗೆಮನೆ, ಗೌಜಿ ಗದ್ದಲದ ತಾಣವಾಗಿದ್ದ ಔತಣಗಳು, ರಾತ್ರಿ ಉಳಿದುಕೊಳ್ಳುತ್ತಿದ್ದ ಅತಿಥಿಗಳ ಸಂಭ್ರಮ ಎಲ್ಲವೂ ಪಾರ್ಕಿನ್ಸನ್‌ನ ಸ್ತಬ್ಧ ಚಿತ್ರಕ್ಕೆ ಸದ್ದಿಲ್ಲದೆ ಜಾಗ ಬಿಟ್ಟುಕೊಟ್ಟಿದ್ದವು.

ಈಗ ಕಾರ್ಟೆಸಿಯನ್ನನ ಘೋಷವಾಕ್ಯ ತನ್ನನ್ನು ತಾನು ಬದಲಿಸಿಕೊಳ್ಳಬೇಕಾಗಿ ಬಂತು: ಬದುಕಿನ ಮೇಲೆ, ಚಿತ್ತಸ್ವಾಸ್ಥ್ಯದ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಳ್ಳುವುದಕ್ಕಾಗಿ ಚಿಮನ್ ತಾನೇ ತನಗಾಗಿ ಕಟ್ಟಿಕೊಂಡ ಪುಸ್ತಕಗಳ ಜಗತ್ತಿನಲ್ಲಿ ಹೆಚ್ಚು ಹೆಚ್ಚು ತನ್ಮಯನಾಗುವಂತಾಯಿತು. ತನಗಿನ್ನೂ ಸಂವೇದನೆಗಳಿವೆ ಎಂದು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ತನ್ನನ್ನೇ ತಾನು ಚಿವುಟಿಕೊಂಡು ನೋಡುವವನ ಹಾಗೆ ಚಿಮನ್ ತಾನಿನ್ನೂ ಬದುಕಿದ್ದೇನೆ ಎಂದು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಓದತೊಡಗಿದ. ಅವನು ಯೋಚಿಸುತ್ತಿದ್ದ ಮತ್ತು ಹಾಗಾಗಿ ಅವನು ಇದ್ದ. ವರ್ಷದಿಂದ ವರ್ಷಕ್ಕೆ ಅವನು ಕುಸಿಯುತ್ತಿದ್ದ ಹಾಗೆಲ್ಲ ಅವನ ಯೋಚಿಸಬಲ್ಲ ಚೈತನ್ಯ ಅವನನ್ನು ಪೊರೆಯುತ್ತಲೇ ಬಂತು; ಅವನು ತನ್ನ ಅತ್ಯದ್ಭುತವಾದ ಬೌದ್ಧಿಕ ಸಾಮರ್ಥ್ಯಕ್ಕೆ, ಸರಿಸುಮಾರು ಫೋಟೋಗ್ರಾಫಿಕ್ ಎನ್ನಬಹುದಾದ ಸ್ಮರಣಶಕ್ತಿಗೆ ಅಂಟಿಕೊಂಡ. ಒಮ್ಮೆ ಒಬ್ಬ ಸಾಮಾಜಿಕ ಕಾರ್ಯಕರ್ತ ಚಿಮನ್ನನ ಸ್ಮೃತಿಯ ಚುರುಕು ಎಷ್ಟಿದೆ ಎಂದು ಪರೀಕ್ಷಿಸುವುದಕ್ಕಾಗಿಯೇ ಈಗಿನ ಪ್ರಧಾನಮಂತ್ರಿ ಯಾರೆಂದು ಗೊತ್ತಿದೆಯೇ ಎಂದು ಕೇಳಿದಾಗ ತಾನು ಕಳೆದ ಇನ್ನೂರು ವರ್ಷಗಳ ಪ್ರತಿಯೊಬ್ಬ ಪ್ರಧಾನಮಂತ್ರಿಯ ಹೆಸರು ಪಟ್ಟಿಮಾಡಬಲ್ಲೆ ಎಂದು ನಡುಗುಧ್ವನಿಯಲ್ಲೇ ಪ್ರತ್ಯುತ್ತರ ನೀಡಿದ್ದ. ಆದರೆ ಕಟ್ಟಕೊನೆಗೆ ಆತನ ಸ್ಮರಣಶಕ್ತಿ ಕೂಡ ಅವನನ್ನು ಬಿಟ್ಟು ಹೋಯಿತು. ದೈಹಿಕವಾಗಿ ಛಿದ್ರಗೊಂಡಂತಾಗಿದ್ದವನ ಮನಸ್ಸು ಗೊಂದಲಗೊಂಡಿತು.

ಚಿಮನ್ನನ ಅಂತ್ಯದ ದುಃಖವು ನನ್ನನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಾಡಿದೆ. ಹೊತ್ತಲ್ಲದ ಹೊತ್ತಲ್ಲಿ, ಕಾಡಬಾರದ ಸ್ಥಳದಲ್ಲಿ ಅದು ನನ್ನ ಜೀವವನ್ನು ಹಿಂಡಿದೆ. ಆದರೆ ಈಗ, ಹ್ಯಾಂಪ್‌ಸ್ಟೆಡ್ ಹೀತ್‌ನ ಅಜ್ಜನ ಮನೆಯಲ್ಲಿ, ಮೆಟ್ಟಿಲು ಹತ್ತಿ ಮೇಲೆ ಹೋಗಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದ ನಂತರದ ದಿನಗಳಲ್ಲಿ ಅಜ್ಜ ಮಲಗುತ್ತಿದ್ದ, ಪುಸ್ತಕಗಳೇ ಕಿಕ್ಕಿರಿದ ಲಿವಿಂಗ್ ರೂಮಿನಲ್ಲಿ, ಅಪ್ಪನ ವಿಷಾದದ ಮಾತುಗಳನ್ನು ಕೇಳುತ್ತಿದ್ದ ಹಾಗೇ ಏನೋ ಬಡಿದಂತಾಯಿತು. ಜೀವನದಿಂದ ಮೃತ್ಯುವನ್ನು ಬೇರ್ಪಡಿಸುವ ಉಕ್ಕಿನ ಬಾಗಿಲಿನ ಅನಿವಾರ್ಯ, ಶಾಶ್ವತ, ನಿಶ್ಚಿತ ಸತ್ಯ ನನ್ನನ್ನು ಚಿಂದಿ ಚಿಂದಿ ಮಾಡುತ್ತಿತ್ತು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಟೊಂಗೆಯಲ್ಲಿ ಸಿಕ್ಕಿಕೊಂಡ ನಕ್ಷತ್ರ

ರಾಶಿ ನಿರೀಕ್ಷೆ ಇಟ್ಕೊಂಡು ಓದಬೇಡಿ ಅಂತ ಹೇಳಿಯೇ ಪುಸ್ತಕ ಕೈಗಿಟ್ಟಾಗ ಎಲ್ಲರೂ ನನಗೆ ಹೆದರುವುದೇ ಆಯ್ತಲ್ಲ ಅನಿಸಿತ್ತು. ರಕ್ಕಸರಿಗೆ ಮಾತ್ರ ಜನ ಹೆದರುವುದಲ್ಲವೆ, ಹಾಗೆ.

ಈ ಕವನಗಳು ಓದಿಗೆ ಭಾರವಿಲ್ಲ. ಪುಟ್ಟ ಪುಟ್ಟ ಸಾಲುಗಳು, ಗಹನವಾದ ಏನನ್ನೂ ಹೇಳ ಹೊರಟಿದ್ದಿಲ್ಲ ಎನ್ನುವ ಭಾವ. ರಾತ್ರಿ ಕತ್ತಲಲ್ಲಿ ಸುರಿವ ಮಳೆಯಲ್ಲಿ ಕೊಡೆ ಹಿಡಿದು ಎಲ್ಲಿಗೋ ಹೊರಟ ಹಾಗಿದೆ ಈ ಪ್ರಯಾಣ. ನಡುನಡುವೆ ಅಷ್ಟಿಷ್ಟು ಮಾತು. ಗಾಂವ್ ಎನ್ನುವ ಕಡಲಿನ ಮೊರೆತ, ನೂರಾರು ಬಗೆಯ ಕ್ರಿಮಿಕೀಟ, ಕಪ್ಪೆ ಮತ್ತೊಂದು ಎಬ್ಬಿಸುವ ಹಿನ್ನೆಲೆ ಶಬ್ದ, ಒದ್ದೆಯಾಗಿ ಭಾರವಾದ ಮರಗಿಡಗಳ ಗಾಂಭೀರ್ಯದ ನಡುವೆ ನಡೆಯುವಾಗ ಏನೋ ಅಸ್ಪಷ್ಟತೆಯೊಂದು ಕಾಡುತ್ತಲೇ ಇರುತ್ತದೆ. ಇದು ರಾಜು ಹೆಗಡೆಯವರ ಕವನದ ಧಾಟಿ. ಸರಳ ಎನಿಸಿದ, ಸುಮ್ಮನೇ ಮಾತನಾಡಿದ ಹಾಗೆ ಅನಿಸಿದ ಆ ಸಾಲುಗಳ ನಡುವೆ ಒಂದು ಮೌನ ಕದ್ದು ಕೂತಿದೆ, ಸದ್ದು ಅಡಗಿದ್ದೇ ಎದ್ದು ಕೂತಿದೆ. ಕಂಡ ಹಾಗಿಲ್ಲ ಈ ಮನುಷ್ಯ! ಈಗ ಅರ್ಥವಾಗತೊಡಗಿತು ನನಗೆ ಯಾಕೆ ಹಾಗೆ ಹೇಳಿದರು ಪುಸ್ತಕ ಕೊಡುವಾಗ ಅಂತ!

ನನ್ನ ಅಗಾಧ
ಮೌನದೊಳಿರುವ ಕತ್ತಲೆಯೆ
ಬೆಳಕಾಗಿ ಹಾಡು
ಓ ಅಲ್ಲಿ ಮುರಿದು ಬಿದ್ದ ಕಡಲು
ಅಡ್ಡ ಬಿದ್ದಿರುವ ಬೆಟ್ಟ
ಗುಡ್ಡಗಳು
ಹರಿದು ಬರುವ ಹೊಳೆಯ
ಹೊರೆ
ಚಿತ್ತದೊಳಗೆ ಹೊತ್ತಿ
ಉರಿಯುವ ಬೆಂಕಿ

- ಹೀಗೆ ತೆರೆದುಕೊಳ್ಳುವ ಈ ಪುಸ್ತಕ ಕೊನೆತನಕ ಇದೇ ಕಾವು, ಕಾಡುವ ಒಂದು ಮೌನವನ್ನು ಕಾಪಿಟ್ಟುಕೊಂಡೇ ಬೆಳೆಯುತ್ತದೆ. ರಾಜು ಹೆಗಡೆ ಎಲ್ಲವನ್ನೂ ತೆರೆತೆರೆದು ಹೇಳುತ್ತಿರುವಂತೆ ಕಾಣುತ್ತದೆ. ಕಾಣುತ್ತದೆ ಅಷ್ಟೇ. ಆಯ್ತು ಮಾರಾಯ, ಬರ್ಲಿಯ ಎಂದು ಈತ ಹೊರಟಿದ್ದೇ ಇಷ್ಟು ಹೊತ್ತೂ ಆಡಿದ್ದರ ಅರ್ಥ ಬರಿಯ ಅಷ್ಟೇ ಆಗಿರಲಿಲ್ಲ, ಅಲ್ಲ ಅನಿಸತೊಡಗುತ್ತದೆ. ಕೇಳುವಾ ಅಂದರೆ ಅಲ್ಲಿ ಅವರಿಲ್ಲ. ಕವಿತೆಯ ಸಾರ್ಥಕತೆ ಇದು.


ಅವಳು ಅವಳು ಎಂದು ಇವರು ಒಂದಿಷ್ಟು ಕವನ ಬರೆಯುತ್ತಾರೆ. (ಇವಳು ಅಂತ ಒಂದೂ ಇಲ್ಲ ಎನ್ನುವುದು ನನ್ನ ತಕರಾರು). ಆದರೆ ಈ ಅವಳು ಅವಳಲ್ಲ ಎನ್ನುವ ಅನುಮಾನ ಸುರುವಾಗಿ ಇನ್ನೇನು ಅದು ದೃಢವಾಗುತ್ತದೆ ಎನ್ನುವಷ್ಟರಲ್ಲಿ ‘ಖರೆ ಅಂದರೆ ಅವಳು ಫೋನ್ ಮಾಡಿರಲಿಲ್ಲ ಮತ್ತು ಅಲ್ಲಿ ಕವಿತೆ ಇರಲಿಲ್ಲ’ ಎಂದು ತೆರೆ ಎಳೆಯುತ್ತಾರೆ.

ಮೊದಲು, ಬಾ
ಪ್ರಭುವೆ ತಬ್ಬಿಕೊ!
ಆತ್ಮವ ಆಲಂಗಿಸು

ಎನ್ನುವಲ್ಲಿ ಅವಳ ದೇಹ, ಭಾವ, ಅಭಾವ, ಹಂಬಲ ಎಲ್ಲದರಲ್ಲಿ ಈ ಜೀವ ಹಪಹಪಿಸಿದ್ದು ತಿಳಿಗೊಳ್ಳುತ್ತದೆ. ಆಗ ಈ ಕವನಗಳಿಗೆಲ್ಲ ಬೇರೆಯೇ ಒಂದು ಬಣ್ಣ. ಅದಕ್ಕೆ ಅಗತ್ಯವಾದ ಮೌನವೊಂದು ಇವರ ಎಲ್ಲ ಸಾಲುಗಳ ನಡುವೆ ಅದು ಹೇಗೋ ನುಸುಳಿ ಕೂತಿದೆ. ಆದರೆ, ಈ ಕವಿತೆಗಳನ್ನು ಬಿಡಿಬಿಡಿಯಾಗಿ ಓದಿದರೆ ರಾಜು ಹೆಗಡೆ ನಮಗೆ ದಕ್ಕುವುದೇ ಇಲ್ಲವೇನೊ ಎನಿಸುತ್ತದೆ ಕೂಡ. ಯಾಕೆಂದರೆ, ಕವಿತೆ ಕವಿಯ ಹೃದಯಕ್ಕೆ ನೇರವಾಗಿ ಪ್ರವೇಶಿಸಲು ಪಾಸ್‌ಪೋರ್ಟ್-ವೀಸಾ ಇದ್ದ ಹಾಗೆ. ಕವಿತೆಯಲ್ಲಿ ಕವಿ ಮುಕ್ತನಾದಷ್ಟು ಗದ್ಯದಲ್ಲಿ ಆಗುವುದಿಲ್ಲವೇನೊ. ಹಾಗಾಗಿ ಕವಿತೆ ಓದುವಾಗೆಲ್ಲ ನಾವು ಕವಿಯನ್ನು ಅರ್ಥಮಾಡಿಕೊಳ್ಳುವ, ಪ್ರೀತಿಸುವ ಒಂದು ಪ್ರೊಸೆಸ್ ನಡೆಯುತ್ತಿರುತ್ತದೆ. ಅದಕ್ಕೆ ಮೌನ ಅಡ್ಡಿ. ಓದುಗನನ್ನು ಕತ್ತಲಲ್ಲಿ ತಡಕಾಡುವಂತೆ ಮಾಡುತ್ತದೆ. ಅಲ್ಲಿ ಕವಿತೆ ಪ್ರತಿ ಬಾರಿಯೂ ಕೈಗೆ ಸಿಗದೇ ನುಣುಚಿಕೊಂಡೇ ಹೋಗುವ ಒಂದು ಅದ್ಭುತ ರಾಗದ ಲಹರಿಯಂತೆ, ಕಣ್ಣಿಗೆ ಕಂಡೂ ಕೈಗೆ ಸಿಗದ ಅಗರಬತ್ತಿಯ ಹೊಗೆಯಂತೆ ಹಾರಿ ಹೋಗುತ್ತಿರುತ್ತದೆ. ಆದರೆ ಕವಿತೆಯ ಪ್ರಕಾಂಡ ಶಕ್ತಿಯೂ ಅದೇ! ಅದು ಸುಲಭವಾಗಿ ಅರ್ಥಕ್ಕೆ ದಕ್ಕಿಬಿಟ್ಟರೆ ಅರ್ಥ ಮಾತ್ರ ಉಳಿದುಬಿಡುತ್ತದೆ, ಕವಿತೆ ಹಾರಿ ಹೋಗುತ್ತದೆ! ಇದು ರಾಜು ಹೆಗಡೆಯವರಿಗೆ ಗೊತ್ತು. ಹಾಗಾಗಿ ಈ ಕವಿತೆಗಳು ಇಷ್ಟವಾಗುತ್ತವೆ.

ಮೊದಲಿಗೆ ರಾಜು ಹೆಗಡೆಯವರು ಉಪಯೋಗಿಸುವ ನವೋದಯ ಕವಿಗಳ ಪ್ರತಿಮೆಗಳು ಕೊಂಚ ಅನುಮಾನ ಹುಟ್ಟಿಸಿದ್ದವು. ಮಾಮರ, ಕೋಗಿಲೆ, ಚೈತ್ರ, ಮಳೆ, ಹೂವು, ಅವಳು ಇತ್ಯಾದಿ. ಆದರೆ ಓದುತ್ತ ಹೋದಂತೆ ಇಲ್ಲಿರುವುದು ರೊಮ್ಯಾಂಟಿಸಿಸಮ್ ಅಲ್ಲ ಎನ್ನುವುದು ತಿಳಿಯುತ್ತದೆ ಮಾತ್ರವಲ್ಲ ಇವರು ಅವೇ ಶಬ್ದಗಳನ್ನು ಬಳಸಿಯೂ ಅದರ ಸಿದ್ಧಚಿತ್ರಗಳನ್ನು ಮೀರುವಂತೆ ಕವಿತೆ ಕಟ್ಟಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ. ಸಹಜವಾಗಿಯೇ ಇದಕ್ಕೆ ರಾಜು ಹೆಗಡೆಯವರ ಮೂಲಭೂತ ಆಶಯ, ಧೋರಣೆ ಕಾರಣವಾಗಿದೆ.

ಕಪ್ಪು ಕಾಡಿನ ನಡುವೆ
ಹರಿವ ಹೊಳೆ
ಎಲ್ಲೆಂದರಲ್ಲಿ ನುಣುಪಾದ
ಕಲ್ಲುಗಳು
ಕಂಡ ಕನಸಿನಂತೆ
ಉಂಡ ಅನುಭವದಂತೆ
ಯಾಕೊ
ಪೂರ್ತಿಯಾಗಿ ಅರಳದೆ
ಅವ್ಯಕ್ತವಾಗಿರುವ ವಾಕ್ಯಗಳು
ಕಲ್ಲೂ ಆಗುಳಿಯದ
ದೇವರೂ ಆಗದ
ಹೊಳೆಯಲ್ಲಿರುವ ಅದರ ಪಾಡು
ಯಾರಿಗೂ ಬೇಡ, ದೇವರೆ!

- ಇಂಥ ಮತ್ತಷ್ಟು ರಚನೆಗಳನ್ನು ಉದಾಹರಿಸಬಹುದು. ಸುಮ್ಮನೇ ಓದಿದರೂ ಏನಿಲ್ಲ ಎನಿಸುವ ಭ್ರಮೆ ಹುಟ್ಟಿಸುವಾಗಲೇ ಏನೋ ಇದೆ ಮತ್ತು ಇರುವುದು ಏನಿದೆ, ಅದನ್ನು ಇದೇ ಎಂದು ಬೆರಳಿಟ್ಟು ತೋರಿಸಲಾಗದ ಒಂದು ಭಾವ ನಿರ್ಮಿಸುವ ರಚನೆಗಳು ಇವು.
ನನಗೆ ತುಂಬ ಇಷ್ಟವಾದ ಎರಡು ಕವಿತೆಗಳೊಂದಿಗೆ ಮಾತು ಮುಗಿಸುತ್ತೇನೆ.

ಪರೀಕ್ಷೆ ಕೋಣೆಯಲ್ಲಿ
```````````````````
ನೆರಳು ನಿಂತಿದೆ
ಮರದ ಕೆಳಗೆ
ಚಳಿಗೆ ಗಾಳಿ
ಒಣಗಿದೆ
ನಕ್ಷತ್ರಗಳು ಉದುರುವುದಿದೆ
ರಾತ್ರಿ
ಚಂದ್ರನ ಬೆಂಕಿಯಲ್ಲಿ
ಅವಳು
ಯಾರದೊ ನೆನಪಲ್ಲಿ
ತೊಯ್ಯುತ್ತಿದ್ದಾಳೆ
ನೀರವವಾದ ಈ ಮಧ್ಯಾಹ್ನ
ಪರೀಕ್ಷೆಯೆಂದು ಕರೆಸಿಕೊಂಡಿದೆ
ಕಿಡಕಿಯಲ್ಲಿ
ನಿಂತ ಜಗತ್ತು
ನೋಡಿಯೂ ನೋಡದ ಹಾಗಿದೆ
ಇನ್ನು ರಾತ್ರಿಯೆಲ್ಲ
ಬೇಂಚು ಡೆಸ್ಕುಗಳು
ಅವಳನ್ನು ಹಂಬಲು ಮಾಡಿಕೊಳ್ಳಬಹುದು.

(ಹಂಬಲು ಮಾಡಿಕೊಳ್ಳುವುದು ಎನ್ನುವ ಶಬ್ದವೇ ಅದ್ಭುತವಾದದ್ದು, ಸ್ಥಳೀಯ ಅರ್ಥದ್ದು. ಹಂಬಲಿಸುವುದು ಎನ್ನುವ ಅರ್ಥದಲ್ಲೇ ನೆನಪಿಸಿಕೊಳ್ಳುವುದು ಎನ್ನುವ ಅರ್ಥ ಅದಕ್ಕೆ. ಬರೇ ನೆನಪು ಮಾಡಿಕೊಳ್ಳುವುದಲ್ಲ ಅದು, ಅದು ಹಪಹಪಿಕೆ, ತೀರದ ಹಂಬಲ. ಅದಕ್ಕೊಂದು ತುಯ್ಯುವಿಕೆಯಿದೆ. ಆದರೆ ಬರೇ ನೆನವರಿಕೆಯಲ್ಲೇ ಅದು ಸಂಪನ್ನವಾಗಬೇಕಾದ ಶಾಪಕ್ಕೂ ತುತ್ತಾಗಿದೆ.)

ವ್ಯಕ್ತ ಮಧ್ಯ
```````````
ಮಲಗಿದ್ದಾನೆ ಅವನು
ಬಸ್ ಸ್ಟ್ಯಾಂಡಿನ ಬೇಂಚಿನ ಮೇಲೆ
ಪ್ಯಾಂಟು, ಅಂಗಿ ಹಾಗೆಯೆ
ಇದೆ
ತಲೆ ಅಡಿಯಲ್ಲಿ ಪುಟ್ಟ ಚೀಲ
ಮುಖದ ಮೇಲೆ ಕರ್ಚೀಪು
ಬೆರಳು ಪಾದ
ಮಾತ್ರ ಬೆತ್ತಲಾಗಿದೆ
ತುಸು
ಹೊಟ್ಟೆ
ಮೇಲೆ ಕೆಳಗೆ ಆಗುತ್ತಿದೆ
ಎಲ್ಲಿಗೆ ಹೋಗುತ್ತಾನೆಯೊ
ಎಲ್ಲಿಂದ ಬಂದನೊ
ಏಳಿಸಿ ಕೇಳಿದರೆ ಹೇಳಬಹುದು
ಅಥವ ಕೋಪ ಬಂದು
ಬಯ್ಯಬಹುದು.
ಅಷ್ಟಕ್ಕೂ
ಅವನಿಗೆ ಅದು ಗೊತ್ತಿದೆಯೆ?
ಕಾಯುತ್ತಿದೆ ಕತ್ತಲು
ಸುತ್ತಲು.

- ಈ ಕವಿತೆಯ ಚಂದ ನೋಡಿ. ಅಷ್ಟಕ್ಕೂ ಅವನಿಗೆ ‘ಅದು’ ಗೊತ್ತಿದೆಯೇ ಎನ್ನುತ್ತಾರೆ. ಇಲ್ಲಿನ ‘ಅದು’ ಅದೂ ಆಗಬಹುದು, ಇದೂ ಆಗಬಹುದು. ಎಲ್ಲಿಗೆ ಹೋಗುತ್ತಾನೆ, ಎಲ್ಲಿಂದ ಬಂದ ಎಂದು ಕೇಳಿದರೆ ಹೇಳಲು ‘ಅದು’ ಅವನಿಗೆ ಗೊತ್ತಿದೆಯೆ ಎನ್ನುವುದು ಸಂಶಯವೇ. ಅಥವಾ, ಮುಂದಿನ ಸಾಲು ನೋಡಿ. ಕಾಯುತ್ತಿದೆ ಕತ್ತಲು - ಸುತ್ತಲು. ಸುತ್ತಮುತ್ತ ಕತ್ತಲಿದೆ ಎನ್ನುವ ‘ಅದು’ ಅವನಿಗೆ ಗೊತ್ತಿದೆಯೆ? ಸುತ್ತಲಿನ ಕತ್ತಲು ಅವನನ್ನೇ ಸುತ್ತಿ ಬಿಡಲು ಕಾಯುತ್ತಿದೆ ಎನ್ನುವ ‘ಅದು’ ಅವನಿಗೆ ಗೊತ್ತಿದೆಯೆ? ಕಾಯುತ್ತಿದೆ ಕತ್ತಲು, ಸುತ್ತಲು! ಕವಿತೆ ಓದುಗನನ್ನು ಸುತ್ತಿಕೊಳ್ಳುವುದು ಹೀಗೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ವಿಲಿಯಂ ಮ್ಯಾಕ್ಸ್‌ವೆಲ್

ನಾನು ಕೆಟ್ಟವನು. ನನಗೆ ಗೊತ್ತಿದೆ, ನಾನು ಒಳ್ಳೆಯವನಲ್ಲ. ಅಡ್ಡಿಲ್ಲ ನನಗೆ, ನಾನು ಕೆಟ್ಟವನೇ. ಒಳ್ಳೆಯವನಾಗಿ ನನಗೇನೂ ಆಗಬೇಕಿಲ್ಲ

ಹೀಗೆ ಹೇಳಿದ್ದು ಬಹುಶಃ ನನ್ನಷ್ಟಕ್ಕೆ, ನನಗೇ ನಾನು ಹೇಳಿಕೊಂಡಿದ್ದು. ನನಗೇ ತೀರ ನಾಚಿಕೆಯೆನಿಸುವಂಥ ತಪ್ಪುಗಳಾಗುತ್ತವೆ. ಯಾರೋ ನಿಷ್ಪಾಪಿಯ ಮೇಲೆ ಹರಿಹಾಯ್ದಿರುತ್ತೇನೆ. ಇನ್ಯಾರಿಗೋ ಇನ್ನೇನೋ ಅನ್ಯಾಯವಾಗಿರುತ್ತದೆ. ಮತ್ತೆ ಮನಸ್ಸು ಕ್ಷಮೆಕೋರಲೂ ಆಗದೆ, ತನ್ನನ್ನು ತಾನು ಕ್ಷಮಿಸಿಕೊಳ್ಳಲಾಗದೆ ಒದ್ದಾಡುತ್ತಿರುತ್ತದೆ, ತುಂಬ ಕಾಲ.

ಬದುಕಿನಲ್ಲಿ ಇಂಥ ಸಣ್ಣ-ದೊಡ್ಡ ತಪ್ಪುಗಳು ಸಾಕಷ್ಟಿರುತ್ತವೆ. ನಮ್ಮೆಲ್ಲರ ಬದುಕಿನಲ್ಲೂ. ಆದರೆ ನನ್ನ ಒಂಟಿಕ್ಷಣಗಳಲ್ಲಿ, ಅರೆಗತ್ತಲಲ್ಲಿ ಕೂತು ನಾನು ನನ್ನವೇ ತಪ್ಪುಹೆಜ್ಜೆಗಳನ್ನು ಎಣಿಸುತ್ತ ಕೂಡ್ರುವಾಗ ಬೇರೆಯವರ ಕುರಿತೆಲ್ಲ ಯೋಚಿಸುವುದಿಲ್ಲ, ಬರೇ ನನ್ನ ದರಿದ್ರ ನಡವಳಿಕೆಯ ಬಗ್ಗೆ ಮಾತ್ರ ಯೋಚಿಸುತ್ತ ಕುಗ್ಗುತ್ತ ಇರುತ್ತೇನೆ. ಬಹುಶಃ ಕೆಲವರು ಕುಡಿಯುವುದು, ಸಿಗರೇಟ್ ಸೇದುವುದು ಎಲ್ಲ ಮಾಡಬಹುದು, ಈಗ ನನಗೆ ಅವೆಲ್ಲ ಸಾಧ್ಯವಿಲ್ಲ.

ಇವತ್ತು ಯಾಕೆ ಇದನ್ನೆಲ್ಲ ಬರೆಯುತ್ತಿದ್ದೇನೆಂದರೆ ಪೀಟರ್ ಆರ್ನರ್ ಪುಸ್ತಕ Am I Alone Here? ನ ಒಂದು ಬರಹ, ವಿಲಿಯಂ ಮ್ಯಾಕ್ಸ್‌ವೆಲ್ ಕುರಿತದ್ದು ಓದಿದೆ. ಇದರ ಹೆಸರು Unforgivable. ಸುರು ಮಾಡುತ್ತ ತಾನು ಇವತ್ತು ತನ್ನ ಕಾರಿನ ಕಿಟಕಿಯಿಂದ ಒಂದು ಕಾದಂಬರಿಯನ್ನು ಹೊರಗೆಸೆದ ಬಗ್ಗೆ ಹೇಳುತ್ತಾನೆ. ಅದು ಜ್ಯೂಲಿಯನ್ ಬಾರ್ನೆಸ್ಸನ ಕಾದಂಬರಿ ದ ಸೆನ್ಸ್ ಆಫ್ ಎನ್ ಎಂಡಿಂಗ್. ಇದರ ಬಗ್ಗೆ ನಾನು ತುಂಬ ಹಿಂದೆ ಬ್ಲಾಗಿನಲ್ಲಿ ಬರೆದಿದ್ದು ತೆಗೆದು ಓದತೊಡಗಿದರೆ ತಲೆಬುಡ ಅರ್ಥವಾಗಲಿಲ್ಲ. ಹತ್ತು ಹಲವು ವಿಷಯಗಳನ್ನೆಲ್ಲ ಒಂದೇಟಿಗೆ ಹೇಳಹೊರಟು ಕೊನೆಗೆ ಏನು ಹೇಳುತ್ತಿದ್ದೇನೆಂಬುದೇ ಸ್ಪಷ್ಟವಾಗದ ಹಾಗೆ ಮುಗಿಸಿದ ಕೆಟ್ಟ ಲೇಖನ ಅದು. ಸಾಯಲಿ ಎಂದು ಮತ್ತೆ ಪೀಟರ್ ಆರ್ನರ್ ಬರೆದಿದ್ದು ಓದತೊಡಗಿದೆ.

ಆಡ್ರಿನ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟೋನಿ ಎಂಬಾತ ಅದರ ಬಗ್ಗೆ, ಅವನ ಬಗ್ಗೆ ಹೇಳುತ್ತಿದ್ದಾನೆ. ಆತ್ಮಹತ್ಯೆಗೆ ಕಾರಣ ಟೋನಿ. ಕಾದಂಬರಿಯ ನಡುವಿನಲ್ಲೆಲ್ಲೊ ಒಂದು ಈಮೇಲ್ ಮಾಡಿದ್ದು ಬರುತ್ತದೆ. ಆ ಮೇಲ್‌ಗೆ ಕೊಟ್ಟ ಸಬ್ಜೆಕ್ಟ್ ಲೈನ್ ಒಂದು ಪ್ರಶ್ನೆ. "ಆಗ, ಆ ದಿನಗಳಲ್ಲಿ, ನಾನು ನಿನ್ನ ಹಿಂದೆ ಬಿದ್ದಿದ್ದೆ ಅನಿಸುತ್ತಾ ನಿನಗೆ?" ಪೀಟರ್ ಆರ್ನರ್‌ಗೆ ಈ ಟೋನಿಯ ಪಾಪಾತ್ಮಾ ಪಾಪಸಂಭವ (ಆತ್ಮನಿವೇದನೆ) ಎಲ್ಲ ಎಲ್ಲೋ ಏನೋ ಹಿಡಿದಿಟ್ಟುಕೊಂಡು ಹೊರಬರುತ್ತಿದೆ ಎನಿಸಿದೆ ಮತ್ತು ಅದೇ ಕ್ಷಣಕ್ಕೆ ಅದು ಸಹಿಸುವುದಕ್ಕೇ ಅಸಾಧ್ಯ ಎನಿಸಿ ಕಾರಿನ ಗಾಜು ಇಳಿಸಿ ಕಾದಂಬರಿಯನ್ನು ಹೊರಕ್ಕೆಸೆಯಲು ಪ್ರೇರಣೆಯಾಗಿದೆ. ಆಮೇಲೆ ಅದರ ಬಗ್ಗೆ ವಿಷಾದವಾಗಿರಬಹುದು, ಅದು ಬೇರೆ ಪ್ರಶ್ನೆ.

ಇಡೀ ಪುಸ್ತಕದಲ್ಲಿ ಪೀಟರ್ ಆರ್ನರ್ ತನ್ನನ್ನು ಬಿಟ್ಟುಹೋದ ಬಾಳಸಂಗಾತಿಯ ನೆನಪಿನಲ್ಲಿ ಹಪಹಪಿಸುತ್ತಲೇ ಇರುತ್ತಾನೆ ಎನ್ನುವುದನ್ನು ನಾನಿಲ್ಲಿ ಹೇಳಬೇಕು. ಆಕೆ ಸ್ವಲ್ಪ ತಲೆಕೆಟ್ಟವಳಂತೆ ವರ್ತಿಸುತ್ತಿದ್ದರೂ ಅದನ್ನು ಬಹುಕಾಲ ಸಹಿಸಿಕೊಂಡು ಬಂದಿರುತ್ತಾನೆ ಆರ್ನರ್. ಎಲ್ಲೋ ಒಂದು ಕಡೆ ಎಲ್ಲ ಮುಗಿದು ಹೋಗುತ್ತದೆ. ಆ ರಾತ್ರಿಯ ಬಗ್ಗೆ ಆರ್ನರ್ ಒಂದು ಕಡೆ ಬರೆದಿದ್ದಾನೆ, ಇರಲಿ. ಇಲ್ಲಿ ಮುಖ್ಯವಾದದ್ದು ಒಂದು ಕಾಲ್ಪನಿಕ ಕಥಾನಕದ ಈಮೇಲಿನ ಸಬ್ಜೆಕ್ಟ್ ಲೈನ್ ಮತ್ತು ಇರ್ರಿಟೇಶನ್.

ಮನೆಗೆ ಬಂದ ಆರ್ನರ್ ಕೈಗೆತ್ತಿಕೊಳ್ಳುವುದು ವಿಲಿಯಮ್ ಮ್ಯಾಕ್ಸ್‌ವೆಲ್‌ನ ಪುಸ್ತಕ, ಅದರಲ್ಲಿನ ಒಂದು ಅತಿಚಿಕ್ಕ ಕತೆ, ವಿದ್ ರೆಫರೆನ್ಸ್ ಟು ಎನ್ ಇನ್ಸಿಡೆಂಟ್ ಎಟ್ ಅ ಬ್ರಿಜ್. ಟೋನಿ ತರದವನೇ ಎನಿಸುವ ಒಬ್ಬ ತುಂಟ ಸ್ಕೌಟ್ ಬಾಯ್ ಪುಟ್ಟಪುಟ್ಟ ಮಕ್ಕಳ ಜೊತೆ ನಡೆಸುವ ಕೀಟಲೆಯ ಆಟವೊಂದು ಮುಂದೆ ತನ್ನನ್ನೇ ತಾನು ಕ್ಷಮಿಸಲಾರದ ಪಾಪಭಾವಕ್ಕೆ ಕಾರಣವಾಗುವ ಕತೆಯದು. ಆರ್ನರ್‌ಗೆ ತಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಟೆಡ್ಡಿ ಎಂಬ ಸ್ಥೂಲಕಾಯದ ಒಬ್ಬ ಹುಡುಗನನ್ನು ಗೇಲಿ ಮಾಡಿ, ಹಾಡು ಹೇಳಿ ರೇಗಿಸುತ್ತಿದ್ದುದು, ಅವಮಾನಿಸುತ್ತಿದ್ದುದು ಎಲ್ಲ ನೆನಪಾಗಿ ಕುಗ್ಗುತ್ತಾನೆ.

ದೇವರು ಕ್ಷಮಿಸಬಹುದು, ಆದರೆ ನನ್ನನ್ನೇ ನಾನು ಕ್ಷಮಿಸಲಾರೆ ಎನ್ನುವ ಭಾವವೊಂದು ಕಾಡುವ ಘಳಿಗೆಯಿದು. ರಬ್ಬೀ (ಯಹೂದಿ ಧರ್ಮಗುರು)ಯೊಬ್ಬ ತನಗೆ ಹೇಳಿದ ಮರೆಯಲಾಗದ ಮಾತನ್ನು ನೆನೆಯುತ್ತಾನೆ. ಈ ರಬ್ಬಿಯನ್ನು ಯಹೂದಿಯಲ್ಲದ ಯುವತಿಯೊಬ್ಬಳನ್ನು ಪ್ರೀತಿಸಿದ್ದಕ್ಕಾಗಿ ಊರಿನಿಂದ ಓಡಿಸಿರುತ್ತಾರೆ. ಇಡೀ ಊರು ಮುಂದೆ ಬರೇ ‘ಯಾರನ್ನೋ’ ಪ್ರೀತಿಸಿದ ಎನ್ನುವ ಒಂದೇ ಕಾರಣಕ್ಕೆ ತಾವು ರಬ್ಬಿಯನ್ನು ಊರಿನಿಂದಲೇ ಹೊರದಬ್ಬಿದೆವಲ್ಲಾ ಎಂದು ಪಶ್ಚಾತ್ತಾಪ ಪಡುತ್ತಲೇ ಇತ್ತು ಎನ್ನುತ್ತಾನೆ ಆರ್ನರ್, ಇರಲಿ. ಈ ರಬ್ಬೀ ಹೇಳಿದ ಮಾತಿದು: "ನಿನಗೆ ಪ್ರಾಯಶ್ಚಿತ್ತ ಬೇಕೆ? ಅದಕ್ಕೆ ನೀನು ನಿನ್ನಿಂದ ಯಾರಿಗೆ ನೋವಾಗಿದೆಯೋ ಅವರನ್ನೇ ಹೋಗಿ ಕೇಳಬೇಕು. ದೇವರನ್ನಲ್ಲ. ಹೋಗು, ಸುರುಹಚ್ಚಿಕೊ"

ಟೆಡ್ಡಿಯ ಬಳಿ ಹೋಗಿ ಕೇಳಲೆ? ಎಷ್ಟು ಮಂದಿಯ ಬಳಿಗೆಲ್ಲ ಹೋಗಲಿ? ಇನ್ನು ಮುಂದೆಯೂ ನಾನು ‘ಅಂಥ ಕೆಲಸ’ ಮಾಡುತ್ತಲೇ ಇರುತ್ತೇನಲ್ಲ! ಎಲ್ಲಿಗೆಲ್ಲ ಹೋಗಲಿ, ಯಾರನ್ನೆಲ್ಲ ಕೇಳಲಿ? ಅಷ್ಟು ಸಮಯವಾದರೂ ಎಲ್ಲಿದೆ ನನಗೆ? ನಿಮಗೆ?

ಈ ಲೇಖನದ ಕೊನೆಯಲ್ಲಿ ವಿಲಿಯಂ ಮ್ಯಾಕ್ಸ್‌ವೆಲ್ಲನ ಕತೆಯ ತಾತ್ಪೂರ್ತಿಕ ಅಂತ್ಯವನ್ನು ಯಥಾವತ್ ಕಾಣಿಸುತ್ತಾನೆ ಆರ್ನರ್. ಅದರ ಕಟ್ಟಕಡೆಯ ಸಾಲು ಹೀಗಿದೆ:

I have remembered it because it was the moment I learned I was not to be trusted.
ನೀವು ಪೀಟರ್ ಆರ್ನರ್‌ನ ಪುಸ್ತಕ Am I Alone Here ಓದಿ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಜಗದ ಎಲ್ಲ ತಾಯಂದಿರನ್ನು (ಹೆಮ್ಮಕ್ಕಳನ್ನು) ಸುಖವಾಗಿಡು ದೇವರೇ!!!

I WANT TO DESTROY MYSELF - A Memoir (Translated from Marathi by Jerry Pinto)
ಜೆರ್ರಿ ಪಿಂಟೊ ಬರೆಯುತ್ತಾರೆ......

ನಾನು ಮಲಿಕಾ ಅಮರ್ ಶೈಖ್ ಅವರ ‘ಮಾಲಾ ಉಧ್ವಸ್ಥ್ ವಾಯ್‌ಚಾಯ್’ (ನಾನು ಉಧ್ವಸ್ಥವಾಗಿ ಹೋಗಲಿ) ಬಗ್ಗೆ ಕೇಳಿದ್ದೆ, ಆದರೆ ನಾನದನ್ನು ಓದಿರಲಿಲ್ಲ. ಕೆಲವೊಂದು ಪುಸ್ತಕಗಳು ಆಕಾಶದಲ್ಲಿ ಸರ್ರನೆ ಮಿಂಚಿ ಮಾಯವಾಗುವ ನಕ್ಷತ್ರಗಳಂತೆ, ಅದೃಷ್ಟವಿದ್ದರೆ ಮಾತ್ರ ನಿಮ್ಮ ಕಣ್ಣಿಗೆ ಬೀಳುತ್ತವೆ. ಆಮೇಲೆ ನೋಡುತ್ತೇನೆ ಎಂದು ಕುಳಿತರೆ ನಿಮಗೆ ಸಿಗುವುದು ಕಗ್ಗತ್ತಲೆಯಷ್ಟೆ.

ಪುಸ್ತಕವಂತೂ ಸಾರ್ವತ್ರಿಕವಾದ ಪ್ರಶಂಸೆಗೆ ಒಳಗಾಗಿತ್ತು. ಅದರಲ್ಲಿ ಪ್ರೀತಿಯ ಹುಚ್ಚು ಹೊಳೆಯಲ್ಲಿ ಬಿದ್ದ ಎಳೆಯ ಯುವತಿಯೊಬ್ಬಳು ಕಲಿಯುತ್ತಿರುವಾಗಲೇ ಮದುವೆಯ ತನಕ ಹೋಗಿ ನಡುವೆಯೇ ಮುರಿದ ದಾಂಪತ್ಯದ ಸುಳಿಗೆ ಸಿಕ್ಕ ಬಗ್ಗೆ ಅನುಕಂಪವಿತ್ತು, ಪುಸ್ತಕದ ಬಗ್ಗೆ ಪ್ರಶಂಸೆಯೂ ಇತ್ತು. ಯಾವುದೇ ಒಂದು ನಿರ್ದಿಷ್ಟ ಬದ್ಧತೆಯನ್ನೇ ತೋರದ ಒಬ್ಬ ರಾಜಕಾರಣಿಯನ್ನು ಕಟ್ಟಿಕೊಂಡು ಈಕೆ ಅನುಭವಿಸಿದ್ದು ನರಕ. ಆದರೆ, ಒಮ್ಮೆ ಮೊದಲ ಮುದ್ರಣದ ಪ್ರತಿಗಳು ಮುಗಿದದ್ದೇ ಪುಸ್ತಕ ಯಾರ ಕಣ್ಣಿಗೂ ಬೀಳದಾಯ್ತು.

ಏಶಿಯಾಟಿಕ್ ಸೊಸೈಟಿಯ ಲೈಬ್ರರಿಯಲ್ಲಾದರೂ ಅದರ ಪ್ರತಿ ಸಿಕ್ಕೇ ಸಿಗಬಹುದೆಂಬ ನಿರೀಕ್ಷೆ ನನ್ನಲ್ಲಿತ್ತು. ಆದರೆ ಅವರ ಪ್ರತಿ ಕೂಡ ಕಳೆದು ಹೋಗಿತ್ತು. ಅದಕ್ಕಾಗಿ ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಗಳಿಗೂ ಅಲೆದೆ. ಕೊನೆಗೂ ಒಬ್ಬ ಸ್ನೇಹಿತರ ಹತ್ತಿರ ಇದಕ್ಕೆಲ್ಲ ಪರಿಹಾರ ಸಿಕ್ಕಿತು. ಸೋಫಿಯಾ ಪಾಲಿಟೆಕ್ನಿಕ್‌ನ ಸೋಶಿಯಲ್ ಮೀಡಿಯಾ ಕಮ್ಯುನಿಕೇಶನ್ ವಿಭಾಗದಲ್ಲಿ ಮಿಥಿಲಾ ಫಡ್ಕೆ ನನ್ನ ವಿದ್ಯಾರ್ಥಿಯಾಗಿದ್ದರು. ನಾವು ಆಗ ವಾರ್ಷಿಕ ಸಂಚಿಕೆಯ ತಯಾರಿಯಲ್ಲಿದ್ದೆವು. ಈ ಮಿಥಿಲಾ ಫಡ್ಕೆ ನಮ್ಮ ವಾರ್ಷಿಕ ಸಂಚಿಕೆಗೆ ಇತ್ತೀಚಿಗಷ್ಟೇ ತಾವು ಓದಿದ ಒಂದು ಪುಸ್ತಕದ ಲೇಖಕಿಯ ಸಂದರ್ಶನ ಮಾಡುವುದಾಗಿ ಹೇಳಿದರು. ಪುಸ್ತಕ ಇನ್ಯಾವುದೂ ಅಲ್ಲ, ‘ಮಾಲಾ ಉಧ್ವಸ್ಥ್ ವಾಯ್‌ಚಾಯ್’. ಆ ಹೊತ್ತಿಗಾಗಲೇ ನನಗೆ ಈ ಲೇಖಕಿ ಏಕಾಂತವಾಸಿ, ಯಾರೊಂದಿಗೂ ತೆರೆದು ಕೊಳ್ಳುವುದಿಲ್ಲ ಮತ್ತು ಈಕೆಯ ಪುಸ್ತಕ ಸಿಗುವ ಸಾಧ್ಯತೆಯಿಲ್ಲ ಎನ್ನುವುದು ಗೊತ್ತಾಗಿತ್ತು. ಒಮ್ಮೆ ಮನಸ್ಸು ಮಾಡಿದರೆ ಯಾವುದಕ್ಕೂ ಜಗ್ಗದ ಪತ್ರಕರ್ತೆ ಫಡ್ಕೆ ಮಾತ್ರ ತನ್ನ ತಾಯಿಯ ಪರಿಚಯದ ಪ್ರೇರಣಾ ಬರ್ವೆ ಮೂಲಕ ಶೈಖ್ ಅವರನ್ನು ಕಾಣುವುದಾಗಿಯೂ, ಪುಸ್ತಕದ ಒಂದು ಪ್ರತಿಯನ್ನು ಕೂಡ ಸಂಪಾದಿಸುವುದಾಗಿಯೂ ಭರವಸೆ ಹೊಂದಿದ್ದರು. ಅಂತೂ ಹಾಗೆ ನಾನು ಹಲವಾರು ವರ್ಷಗಳ ಹಿಂದೆ ಈ ‘ಮಾಲಾ ಉಧ್ವಸ್ಥ್ ವಾಯ್‌ಚಾಯ್’ ಓದುವಂತಾಯಿತು. ಇಂಗ್ಲೀಷ್ ಹೊರತಾಗಿ ಇನ್ನಿತರ ಭಾಷೆಯಲ್ಲಿ ನಾನು ತುಂಬ ನಿಧಾನಗತಿಯ ಓದುಗನಾಗಿದ್ದೆ, ಈಗಲೂ ಹಾಗೇ ಇದ್ದೇನೆ. ಆದರೆ ಈ ಪುಸ್ತಕವನ್ನು ಮಾತ್ರ ಕೆಳಗಿಡುವುದು ಅಸಾಧ್ಯವಾಗಿತ್ತು.

ಮಲಿಕಾ ಅಮರ್ ಶೈಖ್ ಅವರ ನಿರೂಪಣೆಯ ಶೈಲಿ ನಿಮ್ಮೆದುರು ಕೂತು ಮಾತನಾಡುವವರದ್ದು. ಆದರೆ ಆಕೆ ತೆರೆದಿಡುತ್ತಿರುವುದು ಮಾತ್ರ ಏಕಕಾಲಕ್ಕೆ ವೈಯಕ್ತಿಕ ಮತ್ತು ಸಾರ್ವತ್ರಿಕ, ತೀರ ಆಪ್ತವಾದ್ದು ಮತ್ತು ರಾಜಕೀಯಕ್ಕೆ ಸಂಬಂಧಿಸಿದ್ದು, ಶಯ್ಯಾಗ್ರಹಕ್ಕೂ ಲೈಂಗಿಕ ಕಾಯಿಲೆಗಳಿಗೂ ಉಯ್ಯಾಲೆಯಂತೆ ತೂಗಾಡುತ್ತಲೇ ಕಂಗಾಲಾಗಿಸುವಂಥದ್ದು. ಅತ್ಯಂತ ಮೋಹಕ ಧ್ವನಿಯ ಲಾವಣಿ ಹಾಡುಗಾರ - ಇವತ್ತಿಗೂ ಸರಕಾರಗಳನ್ನೇ ಅಲುಗಾಡಿಸಬಲ್ಲ, ಉಳ್ಳವರ ಧ್ವನಿಯಡಗಿಸಬಲ್ಲ ಸಾಮರ್ಥ್ಯವುಳ್ಳ, ಸಮ್ಮೋಹಕ ಸಂದೇಶ ಹರಡಬಲ್ಲ ಶಕ್ತಿಯಿರುವ ಇವರನ್ನು ಇಂಥ ಬಡಶಬ್ದದಿಂದ ಕರೆಯುವುದು ಸರಿಯಲ್ಲದಿದ್ದಾಗ್ಯೂ - ನ ಮಗಳಾಗಿ ಹುಟ್ಟಿದವರು. ಕಮ್ಯೂನಿಸ್ಟ್ ಚಳವಳಿಯ ಮಹಾನ್ ನೇತಾರನೂ, ರಂಗಭೂಮಿಯ ಉತ್ತಮ ಪ್ರತಿಭೆಯೂ ಆಗಿದ್ದ ವ್ಯಕ್ತಿ ಇವರನ್ನೆಲ್ಲ ಭೇಟಿಯಾಗುತ್ತಾರೆ. ನಾಟಕಕಾರ ಅನ್ನಾ ಭಾವು ಸಾಠೆ ಮತ್ತು ಭಕ್ತಿ ಬರ್ವೆ ಇಬ್ಬರೂ ಹೊಸಹಾದಿ ಹಿಡಿಯುವುದು ಇಲ್ಲಿಂದ. ಇಲ್ಲೆಲ್ಲ ಚಿತ್ರಕಾರರು, ಕವಿಗಳು ಮತ್ತು ಶಿಲ್ಪಿಗಳ ಉಲ್ಲೇಖ ಮತ್ತೆ ಮತ್ತೆ ಬರುತ್ತದೆ. ಇವೇನೂ ಸುಮ್ಮನೆ ಬಂದು ಹೋಗುವ ಹೆಸರುಗಳಲ್ಲ. ಮಲಿಕಾ ಅಮರ್ ಶೈಖ್ ತಮ್ಮ ಬಾಲ್ಯದ ಸ್ವರ್ಗಸಹಜ ನಂದನವನವನ್ನು ಇಲ್ಲಿ ವಿವರಿಸಿದ್ದಾರೆ. ಇಲ್ಲೆಲ್ಲೂ ಕಣ್ಣೀರು ಹರಿದಿಲ್ಲ, ಹರಿದಿಲ್ಲ ಯಾಕೆಂದರೆ ವೈದ್ಯರು ಆಕೆಯ ಹೆತ್ತವರನ್ನು ಆಕೆಗೆ ಹದಿನಾಲ್ಕು ತುಂಬುವವರೆಗೆ ಆಕೆ ಕಣ್ಣಲ್ಲಿ ನೀರು ಹಾಕದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದ್ದರು.

ಆಮೇಲೆ ಅಲ್ಲಿ ನಾಮ್‌ದೇವ್ ಧಸಲ್ ಆಕೆಯ ಬದುಕಿಗೆ ಕಾಲಿಡುತ್ತಾರೆ.

ಅದಂತೂ ಇಬ್ಬರಿಗೂ ಪ್ರಥಮ ನೋಟದ ಪ್ರೇಮಕಥನವೇ ಆಗಿತ್ತೆನ್ನಬೇಕು. ಮಲಿಕಾ ಮಟ್ಟಿಗೆ ಅದೊಂದು ವಿನಾಶಕಾರಿ ಸಂಬಂಧವಾಗಿ ಮಾರ್ಪಟ್ಟಿತು. 2014ರಲ್ಲಿ ಧಸಲ್ ತೀರಿಕೊಂಡಾಗಷ್ಟೇ ಆ ಮದುವೆ ಕೊನೆಗೊಂಡಂತೆ ಕಾಣುತ್ತದೆ. ನೀವು ಒಂದು ವಿಫಲ ದಾಂಪತ್ಯದ ಸರಳ ಕತೆಯನ್ನು ಇಲ್ಲಿ ಕಾಣಬಯಸುವಿರಾದರೆ, ಅಥವಾ ಹೆಣ್ಣು ಹೊಸಿಲು ದಾಟಿ ಹೊರಗಿನ ಗಾಳಿ ಬೆಳಕಿಗೆ ಒಡ್ಡಿಕೊಂಡಾಗಷ್ಟೇ ಮುಗಿಯುವ ಒಂದು ಶೋಕಗಾಥೆಯಿದು ಎಂದು ತಿಳಿಯುವವರಾದರೆ ನಿಮಗದು ಇಲ್ಲಿ ಕಾಣಸಿಗದು. ಕ್ರಮೇಣ ಸೆರೆಮನೆಯಾದ ಬೊಂಬೆಮನೆಯಿಂದ ಹೊರಬಂದ ನೋರಾ ಕೂಡಾ ನಿಮಗಿಲ್ಲಿ ಸಿಗುವುದಿಲ್ಲ.

ಅದೇನಿದ್ದರೂ ನಿಮಗಿಲ್ಲಿ ಒಂದು ಪ್ರಾಮಾಣಿಕ ಧ್ವನಿ ಕೇಳಿಸುವುದು ಖಚಿತ. ತಾನು ಗರ್ಭಿಣಿಯಾಗಿದ್ದಾಗ ನಡೆಸಿದ ಆತ್ಮಹತ್ಯಾ ಪ್ರಯತ್ನಗಳ ಬಗ್ಗೆ ನಿಮ್ಮೊಂದಿಗೆ ಆಕೆ ಹೇಳಿಕೊಂಡಾಗ, ಸ್ಮಿತಾ ಪಾಟೀಲ್ ನಿರ್ವಹಿಸಿದ ಪಾತ್ರಗಳನ್ನೆ ತಾನು ತನ್ನ ನಿಜ ಜೀವನದಲ್ಲಿ ನಿಭಾಯಿಸಬೇಕಾಗಿ ಬಂದ ವಿಧಿಯ ಕುರಿತು ಹೇಳಿಕೊಳ್ಳುವಾಗ, ತಾನು ಏನೇನೆಲ್ಲ ಪ್ರಯತ್ನಿಸಿದೆ, ಯಾವೆಲ್ಲ ಮಾರ್ಗೋಪಾಯಗಳನ್ನು ಆಶ್ರಯಿಸಿದೆ ಮತ್ತು ಪ್ರತಿಬಾರಿ ಹೇಗೆ ಆರಂಭಿಸಿದ ಒಂದನ್ನೂ ಕೊನೆಮುಟ್ಟಿಸುವುದಾಗಲಿಲ್ಲ ಎನ್ನುವುದನ್ನೆಲ್ಲ ತೆರೆದಿಟ್ಟಾಗ ನಿಮ್ಮಲ್ಲಿ ಏನೋ ಹೊಯ್ದಾಟ ಸುರುವಾಗುತ್ತದೆ. ‘ಇದನ್ನೆಲ್ಲ ಹೀಗೆ ಇಲ್ಲಿ ಹೇಳಬೇಕಿತ್ತೆ?’ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ. ‘ಇಂಥದ್ದನ್ನೆಲ್ಲ ಓದುವಾಗ ಸಹಜವಾಗಿಯೇ ಈಕೆಯ ಬಗ್ಗೆ ಸದ್ಭಾವ ಮೂಡುವುದಿಲ್ಲವಲ್ಲ’ ಎಂದುಕೊಳ್ಳುತ್ತೀರಿ.

ಹೀಗೆ ಇದು ಅಪರೂಪದ ಒಂದು ಆತ್ಮಕಥಾನಕ. ಇಲ್ಲಿ ನೀವು ಹುಳುಕುಗಳಿಂದ ಹೊರತಾದ ಸುಂದರ ವ್ಯಕ್ತಿಚಿತ್ರ ಕಾಣಲಾರಿರಿ. ಇದೊಂದು ದಾಂಪತ್ಯದ ಕತೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ತಾಯಿ ನಿಶ್ಚಿತವಾಗಿ ತನ್ನ ಕಂದಮ್ಮನನ್ನು ಕಳೆದುಕೊಳ್ಳುವ ಪರಿಸ್ಥಿತಿಯೊಂದನ್ನು ಇದು ನಿಮಗೆ ನೆನಪಿಸುತ್ತದೆ. ನಾನು ಸಹಲೇಖಕನಾಗಿದ್ದ ಲೀಲಾ ನಾಯ್ಡು ಅವರ ಜೀವನಗಾಥೆಯಲ್ಲಿ ಆಕೆ ಹಾಗೆ ತನ್ನ ಮಗುವನ್ನು ಕಳೆದುಕೊಳ್ಳುತ್ತಾರೆ. ಗಿರಣಿ-ಕೇಂದ್ರಿತ, ಗಿರಣಿ ನಿಯಂತ್ರಿತ ಮುಂಬಯಿ ಕ್ರಮೇಣ ಇವತ್ತು ಏನಾಗಿ ಪರಿವರ್ತನೆ ಹೊಂದಿದೆಯೋ ಆ ಬದಲಾವಣೆ ತೊಡಗಿಕೊಂಡ ಕಾಲಘಟ್ಟದ ಕತೆಯಿದು. ಜೊತೆಗೇ ಇದು ಮಹಿಳೆಯೊಬ್ಬಳು ತನ್ನ ಧ್ವನಿ ಕಂಡುಕೊಳ್ಳಲು ನಡೆಸಿದ ಹೆಣಗಾಟದ ಕತೆ ಕೂಡ.

ಈ ಎಲ್ಲ ಹೋರಾಟದ ಹಾದಿಯಲ್ಲಿ ಏನೋ ಒಂದು ಬಗೆಯ ಸುಖವಿತ್ತು ಎಂದು ಹೇಳುವುದು ಸಂಪ್ರದಾಯವಾಗಿ ಬಿಟ್ಟಿದೆ. ನನಗಂತೂ ‘ಮಾಲಾ ಉಧ್ವಸ್ಥ್ ವಾಯ್‌ಚಾಯ್’ ಕೃತಿಯ ಅನುವಾದ ಒಂದು ಖುಶಿಯ ಅನುಭವವಾಗಿರಲಿಲ್ಲ. ಎಷ್ಟೋ ಕಡೆ ಅದು ನನ್ನನ್ನು ಮಾನಸಿಕವಾಗಿ ಕುಸಿದು ಬೀಳುವ ಹಂತಕ್ಕೊಯ್ದಿದೆ. ಒಂದು ಕಡೆ ಇನ್ನೂ ಇಪ್ಪತ್ತು ವರ್ಷ ಕೂಡ ಆಗಿರದ ಮಲಿಕಾ ಅಮರ್ ಶೈಖ್ ಲೋನವಾಳದ ಒಂದು ಬಾಡಿಗೆ ಖೋಲಿಯಲ್ಲಿ ತನ್ನ ಕೂಸಿನೊಂದಿಗೆ ಇರುವ ಪ್ರಸಂಗ ಬರುತ್ತದೆ. ಅಲ್ಲಿ ಆಕೆಯ ಸಹಾಯಕ್ಕೆ ಯಾರೂ ಇಲ್ಲ. ಅಲ್ಲಿದ್ದ ಒಬ್ಬನೇ ಒಬ್ಬ ಜೊತೆಗಾರನೆಂದರೆ ಒಬ್ಬ ಸನಾತನಿ. ಆತ ಅಂಬೇಡ್ಕರ್-ವಾದಿಯಾಗಿದ್ದು ಸಹಜವಾಗಿಯೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೆಯೇ ಬೌದ್ಧಮತಕ್ಕೆ ಪರಿವರ್ತನೆಗೊಂಡಿದ್ದಿರಬಹುದು ಬಿಡಿ. ಆದರೆ ಉದ್ದಕ್ಕೂ ಆಕೆಗೆ ಹಿಂದೂ ಧರ್ಮದ ಕರ್ಮಸಿದ್ಧಾಂತದ ಬೋಧನೆ ಮಾಡುವುದನ್ನು ಬಿಡುವುದಿಲ್ಲ. ಆಕೆಯ ಗಂಡನೋ ಒಮ್ಮೊಮ್ಮೆ ಮಾಯವಾದರೆ ವಾರಗಟ್ಟಲೆ ಈಕೆಯನ್ನು ಒಂಟಿಯಾಗಿ ಬಿಟ್ಟು ಪೂನಾಗೋ ಇನ್ನೆಲ್ಲಿಗೋ ಹೋಗಿ ಬಿಡುತ್ತಿದ್ದ. ಇವಳಿಲ್ಲಿ ತೊಳೆಯುವುದು, ತಿಕ್ಕುವುದು, ಮಗು ನೋಡಿಕೊಳ್ಳುವುದು ಮಾತ್ರವಲ್ಲ, ಈ ಕರ್ಮಸಿದ್ಧಾಂತದ ನಿರಂತರ ಪುಕ್ಕಟೆ ಪ್ರವಚನದೊಂದಿಗೆ ಗುದ್ದಾಡಬೇಕಿತ್ತು.

ಆಮೇಲಷ್ಟೇ ಆಕೆಗೆ ತಿಳಿದು ಬರುತ್ತದೆ, ಪತಿಮಹಾಶಯನಿಂದ ತನಗೆ ಲೈಂಗಿಕ ರೋಗವೂ ಬಳುವಳಿಯಾಗಿ ಬಂದಿದೆ ಎನ್ನುವ ಸಂಗತಿ.

ಕೈಯಲ್ಲಿ ಹಣವಿಲ್ಲ. ಚಿಕಿತ್ಸೆಗಾಗಲಿ, ಔಷಧಿಗಾಗಲಿ ಎಲ್ಲಿ ಹೋಗಬೇಕು ಆಕೆ? ಸಹಿಸಲಾಗದ ಜ್ವರ ಮತ್ತು ನಿಶ್ಶಕ್ತಿಯಿಂದ ಬಿದ್ದು ಹೋಗುವ ತನಕ ಇದು ಹಾಗೆಯೇ ಮುಂದುವರಿಯುತ್ತದೆ. ಮೈಯೆಲ್ಲ ಕೀವು ತುಂಬಿದ ಹುಣ್ಣುಗಳು.
ಕೊನೆಗೂ ರೈಲ್ವೇ ಸ್ಟೇಶನ್ನಿನಲ್ಲಿ ಕಸಗುಡಿಸುವಾಕೆಯಿಂದ ಸ್ವಲ್ಪ ಕೈಸಾಲ ಸಿಗುತ್ತದೆ.

I read this section and I wept for the young woman with the endless meals and floors and nappies, for boils and also for the kindness of strangers.

Its that kind of book.

-Jerry Pinto
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಸೆಪ್ಟೆಂಬರಿನ ಚಳಿ

ಒಂದು ಪುಸ್ತಕವನ್ನು, ಏಕೆ ಒಂದು ಸಣ್ಣಕತೆಯನ್ನು ಮತ್ತದರ ಕತೆಗಾರನನ್ನು ಹೇಗೆಲ್ಲ ಪರಿಚಯಿಸಬಹುದು ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. 2016ರ ಅತ್ಯುತ್ತಮ ನಾನ್‌ಫಿಕ್ಷನ್ ಕೃತಿಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿರುವ, ಪೀಟರ್ ಆರ್ನರ್‌ನ Am I Alone Here? ಪುಸ್ತಕದಿಂದ ಆಯ್ದ ಈ ಪ್ರಬಂಧ ಓದಿದ ಮೇಲೆ ಪೇನ್‌ಕೇಕನ ಕಥಾಸಂಕಲನ ಕೊಳ್ಳುವುದು ಅನಿವಾರ್ಯವಾಯಿತು. ಹಾಗೆ ನೋಡಿದರೆ ಈ ಆರ್ನರ್‌ನ ಒಂದೊಂದು ಪ್ರಬಂಧವೂ ಹೀಗೆಯೇ ಹುಚ್ಚು ಹಿಡಿಸುವುದು ಖಾತ್ರಿಯೆನಿಸುತ್ತದೆ. ಒಂದೇ ವಾಕ್ಯದಲ್ಲಿ ಹಲವನ್ನೆಲ್ಲ ಹೇಳಿಬಿಡುವ ಈತನ ಇಂಗ್ಲೀಷನ್ನು ಅನುವಾದಿಸುವುದು ಕೊಂಚ ಕಷ್ಟ. ಸಾಧ್ಯವಾದ ಮಟ್ಟಿಗೆ ಒದ್ದಾಡಿದ್ದೇನೆ. ಹಾಗಾಗಿ ಓದುತ್ತ ನೀವೂ ಸ್ವಲ್ಪ ಒದ್ದಾಡುವಂತಾದರೆ ಕ್ಷಮಿಸಿ...

*****

ನೀವು ಒಂದು ಕತೆಯನ್ನು ಒಂದೇ ಸಲ ಓದಿ ಬಿಟ್ಟುಬಿಟ್ಟರೆ ಅದು ದಕ್ಕುವುದಿಲ್ಲ. ಬೇರೆ ಬೇರೆ ಮೂಡುಗಳಲ್ಲಿ, ನಿಮ್ಮ ಬದುಕಿನ ಬೇರೆ ಬೇರೆ ಘಟ್ಟಗಳಲ್ಲಿ ನೀವು ಮತ್ತೆ ಮತ್ತೆ ಕತೆಗಳನ್ನು ಭೇಟಿಯಾಗಲು ಮರಳಿ ಬರಬೇಕು. ಈ ಮುಂಜಾನೆ, ಬೊಲಿನಾಸ್ ಎಂಬ ದ್ವೀಪ ಪಟ್ಟಣದಲ್ಲಿ ಹೀಗೆ ಕುಳಿತು, ಮತ್ತೊಮ್ಮೆ ವೆಸ್ಟ್ ವರ್ಜೀನಿಯಾದ ಫಾರ್ಮ್‌ಹೌಸಿನ ಅಡುಗೆಮನೆಗೆ ಭೇಟಿ ಕೊಡುತ್ತಿದ್ದೇನೆ.

ಈ ಮುಂಜಾನೆ ಯಾಕೆ ಬ್ರೀಸ್ ಡಿಜೆ ಪೇನ್‌ಕೇಕ್ ನ ಒಂದು ಕತೆ? ಇವತ್ತು ಬೆಳಿಗ್ಗೆ ಬೇಗನೆ ಎದ್ದೆ. ನನ್ನ ಬದುಕಿನ ಒಂದರ್ಧವನ್ನೇ ಕಳೆದಿರುವ ಈ ಕ್ಯಾಬಿನ್ನಿಗೆ ನುಗ್ಗಿದೆ. ನನ್ನನ್ನು ಕೊಂಚ ಶಾಂತಗೊಳಿಸಿ ತೆಪ್ಪಗಿರಿಸಬಲ್ಲ ಏನಾದರೂ ಇಲ್ಲಿನ ಶೆಲ್ಫುಗಳಲ್ಲಿ ಸಿಗಬಹುದೇ ಅಂತ ಹುಡುಕತೊಡಗಿದ್ದಷ್ಟೇ ಗೊತ್ತು. ಬಹುಶಃ ನನಗಿವತ್ತು ಬೆಳ್ಳಂಬೆಳಗ್ಗೆ ಯಾವುದಾದರೊಂದು ಕಥಾಜಗತ್ತಿನ ಪೇನ್ ಕಿಲ್ಲರ್ ಅಗತ್ಯವಾಗಿತ್ತು. ಯಾಕೆಂದರೆ ನಾನು ತುಂಬ ಹೊತ್ತು ನನ್ನ ಅಪ್ಪನ ಕುರಿತೇ ಯೋಚಿಸುತ್ತಾ ಕಳೆದಿದ್ದೆ. ಈ ಜಗತ್ತಿನ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾನೆ ಅಪ್ಪ. ಚಿಕಾಗೋದಲ್ಲಿ ಟೀವಿಯ ಎದುರು ಕುಳಿತ ನನ್ನಪ್ಪ ನನಗೆ ಕಾಣಿಸುತ್ತಿದ್ದಾನೆ. ಕ್ಷಣದಿಂದ ಕ್ಷಣಕ್ಕೆ ನನಗೆ ಅದೇ ಚಿತ್ರ ಕಣ್ಣಿಗೆ ಕಟ್ಟುತ್ತಿದೆ. ಅಪ್ಪ ಇಲ್ಲಿಂದ ಹೊರಟು ಹೋಗಲು ಸಜ್ಜಾಗುತ್ತಿರುವಂತಿದೆ. ನನ್ನಪ್ಪನಿಗೆ ನಿದ್ದೆ ಎಂದರೆ ತುಂಬ ಇಷ್ಟ. ಅವನು ಸದಾ ತಡವಾಗಿಯೇ ಏಳುತ್ತಿದ್ದ, ಸದಾ ತಡವಾಗಿಯೇ. ಆದರೆ ಪ್ರತಿವರ್ಷ, ಪ್ರತಿದಿನ, ಪ್ರತಿಕ್ಷಣವನ್ನೂ ದಕ್ಕಿಸಿಕೊಳ್ಳಲು ಪುಟಿಯುತ್ತಿದ್ದ ಮನುಷ್ಯ. ಅಂಥ ನಿರಂತರ ಹೋರಾಟದ ಮನುಷ್ಯನೊಬ್ಬ ಹೀಗಾಗಿರುವುದು ನಿಜಕ್ಕೂ ಆಶ್ಚರ್ಯವೇ.

ಪುಸ್ತಕಗಳನ್ನು ಏನೋ ಸಾಂತ್ವನ ನೀಡುವ ಸಂಗತಿಯಂತೆ ಪರಿಗಣಿಸುವುದನ್ನು ನಾನು ಯಾವತ್ತೂ ವಿರೋಧಿಸಿದವನು. ನಾನವುಗಳನ್ನು ಯಾವತ್ತೂ ನನ್ನ ಬದುಕನ್ನು ತಲ್ಲಣಕ್ಕೊಡ್ಡಬೇಕಾದ, ನನ್ನ ಭ್ರಾಮಕ ನೆಮ್ಮದಿಯ ಜಗತ್ತಿನಿಂದ ಅಲ್ಲಾಡಿಸಿ ಬಿಡಬೇಕಾದ ಸವಾಲಿನಂತೆಯೇ ಕಂಡವನು. ಆದರೆ ಬದುಕಿನಲ್ಲಿ ಕೆಲವೊಂದು ದಿನಗಳಿರುತ್ತವೆ, ಇಂದಿನ ಮುಂಜಾನೆಯಂಥ ದಿನಗಳು, ವಾಸ್ತವ ಎನ್ನುತ್ತೇವಲ್ಲ - ಅದೇನೆ ಇರಲಿ, ಅದು ನಾನು ತಡೆದುಕೊಳ್ಳಲು ಸಾಧ್ಯವಿರುವುದಕ್ಕಿಂತಲೂ ಹೆಚ್ಚು ಕಡಕ್ಕಾಗಿ ಕಾಡುವ ದಿನಗಳಲ್ಲಿ ಪುಸ್ತಕಗಳು ಏನೋ ಒಂದಿಷ್ಟು ಸಮಾಧಾನ ನೀಡುವಂತಿರುತ್ತವೆ. ಅಂತೂ ಹೀಗೆ ನಾನು ಈ ಮುಂಜಾನೆ "ಚಳಿಗಾಲದ ಮೊತ್ತಮೊದಲ ದಿನ" ಓದತೊಡಗಿದೆ. ನಿಧಾನವಾಗಿ, ಸೆಪ್ಟೆಂಬರಿನ ಸೂರ್ಯ ಬೇಕೋ ಬೇಡವೋ ಎಂಬಂತೆ ಮೇಲೇರುತ್ತಿರುವಾಗ, ಈ ಪ್ರಾಚೀನ ಕಾಲದ ಪ್ರಿಜ್ಜಿನ ಕುರ್ರೆಂಬ ಸದ್ದಿನ ಹೊರತಾಗಿ ಜಗತ್ತೇ ಮೌನದಲ್ಲೇ ಅದ್ದಿ ಕೂತಂತಿರುವ ಹೊತ್ತಿನಲ್ಲಿ. ಓದಿ ಮುಗಿಸಿದ್ದೇ ನಾನು ಪುಸ್ತಕವನ್ನು ಕಿಚನ್ನಿನ ಟೇಬಲ್ ಮೇಲಿರಿಸಿ ಸುಮ್ಮನೇ ಒಂದು ಘಳಿಗೆ ಹೊರಗೆ ಬಂದು ನಿಂತೆ. ಬೊಲಿನಾಸಿನ ತಣ್ಣಗಿನ ಅರುಣೋದಯ. ವೆಸ್ಟ್ ವರ್ಜೀನಿಯಾದಲ್ಲಿರುವಂತೆ ಅಥವಾ ಚಿಕಾಗೊದಲ್ಲಿಯಂತೆ ಇಲ್ಲೂ ಈಗ ಹಿಮ ಇರಬೇಕೆತ್ತೆನಿಸಿತು. ಸುತ್ತಲಿನ ಮರಗಿಡಗಳಿಂದ ಬೀಸಿ ಬರುತ್ತಿದ್ದ ಗಾಳಿ ಸಾಕೆನಿಸುವಂತಿತ್ತು. ಸುಮ್ಮನೇ ನಾನು ಅಲ್ಲಿ ನಿಂತು ಹೋಲಿಸ್ ಬಗ್ಗೆ ಯೋಚಿಸಿದೆ. ಅವನ ಹೆತ್ತವರು, ಅವನ ಅರೆಹುಚ್ಚ ತಾಯಿ, ಅವನ ಕುರುಡು ತಂದೆ. ಹೋಲಿಸ್‌ಗೆ ಗೊತ್ತು, ಹೊಲ ಇನ್ನು ಮುಂದೆ ತಮ್ಮನ್ನು ಪೊರೆಯಲಾರದು ಎನ್ನುವ ಸತ್ಯ. ಆದರೂ ತನ್ನ ಕುಟುಂಬವನ್ನು ಹೀಗೇ ಒಟ್ಟಾಗಿಟ್ಟುಕೊಳ್ಳಬೇಕೆಂಬುದು ಅವನ ಆಸೆ. ಅಷ್ಟರಲ್ಲಿ ಚಳಿಗಾಲ. ಬಂದೇ ಬಿಟ್ಟಿತು, ನಿರಂತರವೋ ಎನಿಸುವಷ್ಟು ದೀರ್ಘವಾದ ಚಳಿಗಾಲ.

"ಹಿಮದಿಂದ ಸೂರ್ಯನ ಮೊಗ ಕಪ್ಪಿಟ್ಟಿತು. ಕಣಿವೆಯು ನಿಧಾನವಾಗಿ ಗುಂಯ್‌ಗುಡುತ್ತ ಮುಚ್ಚಿಕೊಂಡಿತು, ಪ್ರಾರ್ಥನಾ ಸಮಯದ ಮೌನಕ್ಕೆ ಸಜ್ಜಾದ ಹಾಗೆ."

ಪಾನ್‌ಕೇಕ್ ತನ್ನ ಪಾತ್ರಗಳ ನಡುವಿನ ಮೌನವನ್ನು ಕೇಳಿಸಿಕೊಂಡವ. ಮಾತ್ರವಲ್ಲ, ವಾಕ್ಯಗಳ ನಡುವಿನ ಮೌನವನ್ನು ಮತ್ತು ಶಬ್ದಗಳ ನಡುವಿನ ನಿಶ್ಶಬ್ದವನ್ನೂ ಕೇಳಿಸಿಕೊಂಡವನು ಅವನು. "ಚಳಿಗಾಲದ ಮೊತ್ತಮೊದಲ ದಿನ" ತುಂಬ ಸಣ್ಣ ಕತೆ, ಕನಿಷ್ಠ ಪುಟಗಳ ದೃಷ್ಟಿಯಿಂದಾದರೂ. ಆದರೆ ನನಗೆ ಮಾತ್ರ ಅದನ್ನು ಓದಲು, ಮತ್ತೊಮ್ಮೆ ಪುನಃ ಓದಲು ಗಂಟೆಯೇ ಹಿಡಿಯಿತು. ಸರಿಸುಮಾರು ಅದು ಪ್ರಾರ್ಥನಾ ಸಮಯದಂತೆಯೇ ಇತ್ತು ನನಗೆ. ಪ್ರಾರ್ಥನಾ ಸಮಯ ಎನ್ನುವುದನ್ನು ಅದರ ಒಳ್ಳೆಯ ಅರ್ಥದಲ್ಲಿ ಬಳಸುತ್ತಿದ್ದೇನೆ.

ಈ ಕತೆ ವೃದ್ಧಾಪ್ಯದ ಕುರಿತಾಗಿದೆ. ಜವಾಬ್ದಾರಿಯ ನಿರ್ವಹಣೆಯ ಕುರಿತಾಗಿ ಇದೆ. ನಮ್ಮ ಜೀವಮಾನವೆಲ್ಲಾ ನಾವು ಯಾರೊಂದಿಗೆ ಬದುಕುತ್ತಾ ಕಳೆದಿದ್ದೇವೆಯೋ, ಸದಾ ಚಿಂತಿಸುತ್ತಾ ಸವೆಸಿದ್ದೇವೆಯೋ, ಕೊನೆಗೊಂದು ದಿನ ಬದುಕು ತೀರ ಕುಸಿದು ಕೂತಾಗ ಗೊತ್ತಾಗುತ್ತದೆ, ನಮಗೆ ಅವರ ಬಗ್ಗೆ ನಿಜಕ್ಕೂ ಇದು ಗೊತ್ತೇ ಇರಲಿಲ್ಲ ಎನ್ನುವ ಸತ್ಯ. ಕತೆ ಈ ಹೊಸ ಅರಿವಿನ ಕುರಿತಾಗಿದೆ. ಮೇಲು ಮೇಲಿನ ಒಂದು ತೀರ್ಮಾನಕ್ಕೆ ಬಂದಿದ್ದೇನೆ ನಾನು; ನಮಗೆ ತುಂಬ ಚೆನ್ನಾಗಿ ಗೊತ್ತಿರುವ ವ್ಯಕ್ತಿಗಳು ಕೊನೆಗೆ ನಮಗೆ ನಿಗೂಢವಾಗಿಯೇ ಇರುತ್ತಾರೆ - ಉಳಿಯುತ್ತಾರೆ? ಈ ಅಜ್ಞಾನದ ಅರ್ಥ ನಾವೇನೂ ಅವರನ್ನು ಪ್ರೀತಿಸುತ್ತಿಲ್ಲ ಎಂದಲ್ಲ. ಪ್ರೀತಿಯನ್ನು ಪೊರೆಯುವ ಈ ಒಂದು ನಿಗೂಢತೆಯೇನಿದೆ, ಅದೇ ಪ್ರೀತಿ.

******

ನಾನು ಒಂದು ಕಡೆ ಓದಿದ್ದೆ, ವಿಮರ್ಶಕನ ಅಸಂದಿಗ್ಧ ಸಂತೃಪ್ತಿಯಿಲ್ಲದವನೇ ನಿಜವಾದ ಓದುಗ ಅಂತ. ನಾನಂತೂ ಸದಾ ಅಂಥ ಒಂದು ಸಂತೃಪ್ತಿಯಾಗಲಿ ಅಸಂದಿಗ್ಧ ಮನಸ್ಥಿತಿಯಾಗಲಿ ಇರದವನಾಗಿಯೇ ಉಳಿಯಲು ಪ್ರಯತ್ನಿಸುತ್ತ ಬಂದವನು. ಈಗಾಗಲೇ ಹತ್ತು ಸಲ ಓದಿದ ಕತೆಯನ್ನಾದರೂ ಮತ್ತೆ ವಿಸ್ಮಯದಿಂದಲೇ ಓದತೊಡಗುವುದು ಸಾಧ್ಯವಾಗಬೇಕು ನನಗೆ. ನಾನು ಕೆಲವೊಮ್ಮೆಯಂತೂ ಓದಿದ ಕತೆಯ ಬಗ್ಗೆ ಗಂಟೆಗಟ್ಟಲೆ, ದಿನಗಟ್ಟಲೆ, ಅದೃಷ್ಟವಿದ್ದರೆ ವರ್ಷಗಟ್ಟಲೆ ಯೋಚಿಸುತ್ತ ಉಳಿದಿದ್ದಿದೆ. ಹಾಗೆ ಯೋಚಿಸುವುದೇ ಒಂದು ಬಗೆ. ಅಚ್ಚರಿಯಿಂದ ಹುಟ್ಟಿದ ಒಂದು ಮೌನವನ್ನಷ್ಟೇ ನಾನು ಒಂದು ಕತೆಗೆ ಹಿಂದಿರುಗಿ ಕೊಡಬಹುದಾದ್ದು. ಮತ್ತೆ ಕೆಲವೊಮ್ಮೆ ಇಂಥ ಸಂದರ್ಭ ಒದಗಿ ಬರುತ್ತದೆ. ನಿಮಗೇನೋ ಹೇಳುವುದಿದೆ, ಆದರೆ ನೀವು ನಿಮಗೇ ಹೇಳಿಕೊಳ್ಳಬಹುದಾದ್ದು, ನೀವು ಮರದೊಳಗಾಡುವ ಗಾಳಿಯಷ್ಟೇ ಆಗಿಬಿಡುವುದು ಸಾಧ್ಯವಿದ್ದರೆ ಮಾತ್ರ ಹೇಳಿಬಿಡಬಹುದಾದ್ದು.

ಈ ಕತೆಗಾರ 1979ರಲ್ಲಿ, ತನ್ನ ಇಪ್ಪತ್ತೇಳನೆಯ ಹುಟ್ಟುಹಬ್ಬಕ್ಕೂ ಮೊದಲೇ ಆತ್ಮಹತ್ಯೆ ಮಾಡಿಕೊಂಡ. ತನ್ನದೇ ಪುಸ್ತಕವೊಂದು ಅಚ್ಚಾಗಿ ಬಂದಾಗ ಅದನ್ನು ಕೈಲಿ ಹಿಡಿದು ಆನಂದಿಸಲೂ ಆತ ಬದುಕಿರಲಿಲ್ಲ. ಅದೇನಾದರೂ ವ್ಯತ್ಯಾಸವನ್ನುಂಟು ಮಾಡುತ್ತಿತ್ತೆ, ಅವನೊಂದಷ್ಟು ಕಾಲ ತಡೆಯುತ್ತಿದ್ದನೆ, ಗೊತ್ತಿಲ್ಲ. ನನಗಂತೂ ಸಂಶಯ. ಪುಸ್ತಕಗಳು ಅದ್ಭುತವಾಗಿರುವಂತೆಯೇ ಅವು ಮಾತನಾಡಲಾರವು, ನಮ್ಮನ್ನು ತಬ್ಬಿ ಹಿಡಿಯಲಾರವು, ನಮ್ಮ ಪಿಸುನುಡಿಯ ಕೇಳಿಸಿಕೊಳ್ಳಲಾರವು. ಆದಾಗ್ಯೂ, "ಚಳಿಗಾಲದ ಮೊತ್ತ ಮೊದಲದಿನ" ಕತೆ, ಸ್ವತಃ ಅದನ್ನು ಬರೆದವನನ್ನಲ್ಲದಿದ್ದರೇನಂತೆ, ಒಬ್ಬನನ್ನು ಪೊರೆಯಬಲ್ಲ ತಾಕತ್ತು ಹೊಂದಿರುವ ಕತೆಯೇ ಸರಿ. ಈ ಕತೆಯಲ್ಲಿ ಅತ್ಯಂತ ಸುಂದರವಾದದ್ದು ಮತ್ತು ಬಹುವಾಗಿ ಕಾಡುವಂಥದ್ದು ಏನೆಂದರೆ ಅದರಲ್ಲಿ ಯಾವುದೇ ತೀರ್ಮಾನಗಳಿಲ್ಲದಿರುವುದೇ. ಈ ಮುದಿ ತಂದೆ ತಾಯಿಗೆ ಏನಾಗುತ್ತದೆ? ಕೊನೆಗೂ ಅವರು ಹೊಲ ತೊರೆದು ಹೋಗುವರೆ? ಅದು ಕೊನೆಗೂ ನಮಗೆ ತಿಳಿಯುವುದಿಲ್ಲ. ನೀವು ಇಂಥ ಕತೆಗೆ ಭೇಟಿ ಕೊಡುವುದು ಕೂಡ ಅಂಥ ಉತ್ತರಗಳಿಗಾಗಿ ಅಲ್ಲ. "ಚಳಿಗಾಲದ ಮೊತ್ತ ಮೊದಲದಿನ" ಒಬ್ಬ ಹಳೆಯ ಆಪ್ತಸ್ನೇಹಿತನಂತೆ, ಯಾವುದೇ ಮುಗ್ಧ ಆಶ್ವಾಸನೆಗಳನ್ನೀಯದ, ಪೊಳ್ಳು ಭರವಸೆಗಳನ್ನು ಹುಟ್ಟಿಸದ, ಕೇವಲ ಜೊತೆಗಿರುವ ಧೈರ್ಯವನ್ನಷ್ಟೇ ನೀಡಬಲ್ಲ ಕತೆ.

"ಚಳಿಗಾಲದ ಮೊತ್ತ ಮೊದಲದಿನ" ಕತೆಯನ್ನು ವೇಗವಾಗಿ ಓದಿ ಮುಗಿಸಿ, ನಿಮಗೆ ಏನೆಂದರೆ ಏನೂ ದಕ್ಕುವುದಿಲ್ಲ. "ಇಷ್ಟೇನಾ?" ಎಂದು ಭುಜ ಹಾರಿಸಿದರೂ ಆಶ್ಚರ್ಯವೇನಿಲ್ಲ. ಅದೇ ಈ ಕತೆಯನ್ನು ನಿಧಾನವಾಗಿ ಓದಿ. ನೀವು ಇಡೀ ರಾತ್ರಿ ಹೋಲಿಸ್ ಜೊತೆ ಎಚ್ಚರವಾಗಿದ್ದು ಕಳೆಯುತ್ತೀರಿ. ಕಿಟಕಿಯ ಗಾಜಿನಲ್ಲಿ ತನ್ನದೇ ಪ್ರತಿಬಿಂಬವನ್ನು ಕಾಣುತ್ತ ನಿಂತ ಹೋಲಿಸ್ ಹೊಲದ ಸಾಲ, ಬ್ಯಾಂಕು, ಈಗಾಗಲೇ ಕಟುಕನ ಅಂಗಡಿಯಿಂದ ಮಾರ್ಕೆಟ್ಟಿಗೆ ತಲುಪಿರುವ, ತಲುಪಿಯೂ ತರಬೇಕಾದ ಹಣ ತಾರದೇ ಹೋದ ತನ್ನ ಮನೆಯ ಸಾಕುಪ್ರಾಣಿಗಳು, ಜಳ್ಳುಕಾಳಾಗಿ ಹೊಲದಲ್ಲೇ ಉದುರಿ ಹೋದ ಫಸಲು ಎಲ್ಲದರ ಬಗ್ಗೆ ಯೋಚಿಸುತ್ತಿರುವುದು ನಿಮಗೆ ಕಾಣಿಸತೊಡಗುತ್ತದೆ. ಮತ್ತೆ ಮರುದಿನ ಮುಂಜಾನೆ, ಹೋಲಿಸ್ ತರವೇ ಸುಸ್ತಾದ ನೀವು ಅವನೊಂದಿಗೇ ಮೆಟ್ಟಿಲಿಳಿದು ಬರುತ್ತೀರಿ. ಅದಾಗಲೇ ಎದ್ದು ಎಷ್ಟೋ ಹೊತ್ತು ಕಳೆದಿರುವ ಅವನ ಮುದಿ ತಂದೆ ತಾಯಿ ಅಡುಗೆಮನೆಯಲ್ಲಿ ಕಾದು ಕುಳಿತಿರುವುದನ್ನು ಕಾಣುತ್ತೀರಿ. ಅದೆಷ್ಟೋ ಹೊತ್ತಿಗೆ ಮೊದಲು ಮಾಡಿಟ್ಟ ಕಾಫಿ ತಣ್ಣಗಾಗಿ ಕೊರೆಯುತ್ತಿರುತ್ತದೆ.

"ಅವನಮ್ಮ ಸ್ನಾನ ಮಾಡುವುದಿಲ್ಲ ಮತ್ತು ಬೆಚ್ಚಗಿರುವ ಅಡುಗೆ ಮನೆ ತುಂಬ ಅವಳ ಮೈಯ ವಾಸನೆ ತುಂಬಿದೆ. ಅವಳು ತಂದೆಯೊಂದಿಗೆ ಓಟ್‌ಮೀಲ್ ತಿನ್ನುತ್ತ ಕುಳಿತಿದ್ದಾಳೆ. ಮುದಿಯನ ಕುರುಡು ಕಂಗಳ ರೆಪ್ಪೆಗಳು ಅರೆಮುಚ್ಚಿವೆ ಮತ್ತವನು ತಲೆಗೂದಲೂ ಬಾಚಿಕೊಂಡಿಲ್ಲ. ಅದು ಗಂಟು ಗಂಟಾಗಿ ಅವನು ಹೇಗೆ ಮಲಗಿದ್ದನೋ ಹಾಗೆ ಅಚ್ಚುಹೊಡೆದಂತೆ ಕೂತಿದೆ."

ಈ ಸಾಲುಗಳು ವೇದನೆ ತರುತ್ತವೆ. ಪ್ರೀತಿ ಎನ್ನುವುದು ನಿಜಕ್ಕೂ ನಮ್ಮ ದೈನಂದಿನ ಬದುಕಿನಲ್ಲಿ ನೋಡಲು ಹೇಗಿರುತ್ತದೆ ಎನ್ನುವುದನ್ನು ತೋರಿಸಲು ಸಾಮಾನ್ಯವಾಗಿ ಬರಹಗಾರರು ಹಿಂಜರಿಯುತ್ತಾರೆ. ಏಕೆಂದರೆ, ಅದು ಭಾವುಕತೆಯ ಪ್ರದರ್ಶನವಾಗಿ ಅರ್ಥಹೀನ ಎನಿಸಿಬಿಡಬಹುದೆಂಬ ಸಕಾರಣ ಭಯ ಅವರಿಗೆ. ಯಾವುದು ಭಾವುಕತೆ ಎನ್ನುವುದರ ಕುರಿತು ನಮಗಿರುವ ಕಾಳಜಿಯೇ ಭಾವುಕತೆಯ ಅಭಿವ್ಯಕ್ತಿಯಲ್ಲವೇ ಎಂದೂ ಎನಿಸುತ್ತದೆ ನನಗೆ. ಇರಿಸುಮುರಿಸು ಉಂಟುಮಾಡದೇ ಪ್ರೀತಿಯೆನ್ನುವುದರ ಅನುಭವ ಹೇಗಿರುತ್ತದೆ ಎನ್ನುವುದನ್ನು ತೋರಿಸಲು ಸಾಧ್ಯವೆ? ಹಾಗಾಗಿ ನಾವಂಥ ಪ್ರಯತ್ನಕ್ಕೇ ಕೈ ಹಾಕುವುದಿಲ್ಲ. ನಮ್ಮ ದಿನನಿತ್ಯದ ಬದುಕು ಇರುವುದೇ ಹೀಗೆ ಅನಿಸುವುದಿಲ್ಲವೆ? ನಮ್ಮ ನಮ್ಮ ಹಾಸಿಗೆಯಲ್ಲಿ, ಅಡುಗೆಮನೆಯಲ್ಲಿ? ಮತ್ತು ನಾವು ಕಳೆದುಕೊಳ್ಳಲಿರುವುದರ ಬಗ್ಗೆ ಇನ್ನೂ ಕಳೆದುಕೊಳ್ಳುವ ಮೊದಲೇ ಶೋಕಿಸುವುದಿಲ್ಲವೆ? ಇದೆಲ್ಲ ಭಾವುಕತೆಯಲ್ಲದಿದ್ದರೆ ಹೇಳಿ ನನಗೆ. ಪಾನ್‌ಕೇಕ್ ಕಟ್ಟಿಕೊಡುವ ಭಾವನೆಯ ವಿವರಗಳು ನಿರ್ಭೀತ. ತನ್ನಪ್ಪನ ಬಾಚದ ಕೂದಲನ್ನು ಹೋಲೀಸ್ ನಿಕಟವಾಗಿ ನೋಡುತ್ತಾನೆ. ಅವನಿಗೆ ಇದನ್ನೆಲ್ಲ ಭರಿಸುವುದು ಅಸಾಧ್ಯವಾಗುತ್ತದೆ. ಹಾಗೆಂದೇ ಯಾವನೇ ಪ್ರೀತಿ ತುಂಬಿದ ಮಗ ಮಾಡುವುದನ್ನೇ ಅವನೂ ಮಾಡುತ್ತಾನೆ. ಅವನು ಅಡುಗೆಮನೆಯಿಂದ ಹೊರಕ್ಕೆ ಧಾವಿಸುತ್ತಾನೆ.

"ನನಗೆ ಆ ಕಾರು ಏನಾದರೂ ಮಾಡಲಿಕ್ಕಾಗುತ್ತಾ ನೋಡಬೇಕಿದೆ" ಎನ್ನುತ್ತಾ ಹೋಲಿಸ್ ಅಲ್ಲಿಂದ ಬಾಗಿಲಿನತ್ತ ಸರಿದ.

"ಆ ಕಾರು ಅಲ್ಲಿ ಹಾಗೇ ಇದ್ದು ಎಷ್ಟು ಕಾಲವಾಯ್ತು" ಮುದುಕಿ ದನಿಯೇರಿಸಿ ಎಚ್ಚರಿಸಿದಳು. "ಹಾವು ಗೀವು ಸೇರಿಕೊಂಡಿದ್ದೀತು, ಜಾಗ್ರತೆ ಮಗಾ."

ಹೋಲಿಸ್ ಹೊರಗೆ ಕೆಟ್ಟು ಹೋದ ಎಂಜಿನ್ ಗಮನಿಸಿಕೊಳ್ಳುತ್ತಿರುವಷ್ಟರಲ್ಲಿಯೇ ಅವನಪ್ಪ ಅಲ್ಲಿ ತನ್ನ ಬಡಿಗೆಯೊಂದಿಗೆ ಹೊರಗೆ ಕಾಣಿಸಿಕೊಂಡಾಯಿತು, ಬೇಡದ ಸಲಹೆ ಸೂಚನೆ ಕೊಡಲು.

"ಬಹುಶಃ ಇಂಜಿನ್ ಬ್ಲಾಕ್ ಆಗಿದೆಯಂತ್ಲೇ ಕಾಣ್ಸುತ್ತೆ" ಎಂದ ಕುರುಡ, ಮಗನ ಮುಖವನ್ನೇ ನೋಡುತ್ತ.
"ಇದೇನೂ ಟ್ರ್ಯಾಕ್ಟರ್ ಅಲ್ಲ"

ಇವತ್ತು ಮುಂಜಾನೆ ನಾನು ಶೆಲ್ಫಿನಿಂದ ಈ ಪುಸ್ತಕ ಹೊರತೆಗೆಯುತ್ತ ಪೇನ್‌ಕೇಕನ ಪಾತ್ರಗಳು ಪರಸ್ಪರ ಎಷ್ಟೊಂದು ಕಡಿಮೆ ಮಾತನಾಡುತ್ತವೆ, ಎಷ್ಟೊಂದು ಮೌನ ಈ ಕೃತಿಯಲ್ಲಿ ಹಬ್ಬಿಕೊಂಡಿದೆ ಎಂದೇ ಯೋಚಿಸುತ್ತಾ ಇದ್ದೆ. ಮತ್ತೆ ಓದುವಾಗ ನನಗೆ ನನ್ನದು ತಪ್ಪು ಕಲ್ಪನೆ ಎನಿಸಿಬಿಟ್ಟಿತು. ನಾನು ನೆನಪಿಸಿಕೊಂಡಿದ್ದಕ್ಕಿಂತ ಅವನ ಮಂದಿ ಪರಸ್ಪರ ಹೆಚ್ಚೇ ಮಾತನಾಡಿಕೊಳ್ಳುತ್ತಾರೆ. ಹಾಗಿದ್ದೂ ಇಲ್ಲಿನ ಸಂಭಾಷಣೆ - ಈ ಶಬ್ದ ಇಲ್ಲಿ ತೀರ ಭಾರವೆನಿಸುತ್ತದೆ, ಮಾತುಕತೆ ಎನ್ನಿ - ಇಡೀ ಕತೆಯ ಚೌಕಟ್ಟಿನಲ್ಲಿ ಅದೆಷ್ಟು ಸಂತುಲಿತವೆಂದರೆ ನಿಮಗೆ ಅದನ್ನು ಬೇರೆಯಾಗಿ ಗಮನಿಸುವುದಕ್ಕೇ ಆಗುವುದಿಲ್ಲ, ಅಷ್ಟೂ ಅದು ಬೆರೆತು ಹೋದಂತಿರುತ್ತದೆ.

"ಆ ಮಬ್ಬು ಕವಿದ ಮುಂಜಾನೆ ನೆಲವೆಲ್ಲ ನಂಜಾಗಿರುವಂತೆ ಕಂಡಿತು. ಮೊದಲ ಮಂಜು ಅದಾಗಲೇ ಸುರಿದಿತ್ತು, ಅಲ್ಲಲ್ಲಿ ಹಿಮಗಡ್ಡೆಗಳು ಗುಡ್ಡಗಳ ಮೇಲ್ಪದರವನ್ನೆಲ್ಲ ಮುಚ್ಚುವಷ್ಟು ಇದ್ದವು. ಸೂರ್ಯನಿಗೂ ಅವುಗಳನ್ನು ಕರಗಿಸುವುದು ಸಾಧ್ಯವಾಗಿರಲಿಲ್ಲ. ಓಕ್ ಮರದಲ್ಲಿ ಈಗಲೋ ಆಗಲೋ ಎಂದು ಕಚ್ಚಿಕೊಂಡಿದ್ದ ಕೊನೆಯ ಎಲೆಗಳನ್ನು ಕೂಡ ಬೀಸಿದ ಗಾಳಿ ಎಗರಿಸಿಯಾಗಿತ್ತು. ಮೌನಕ್ಕೆ ಶರಣಾದ ಕಂದು-ಬೂದು ಗುಡ್ಡಗಳ ಎರಡೂ ಬದುಗಳು ತೆಪ್ಪಗೇ ಕಣಿವೆಯ ಕಡೆಗೆ ಜಾರಿದ್ದವು.

ಮುದಿಯನ ತಲೆಗೂದಲು ಗಾಳಿಗೆ ಸಿಕ್ಕಿ ತೂಗಾಡುವುದನ್ನು ಅವನು ಕಂಡ.

"ಒಳಗೆ ಬಾ, ಚಳಿಗೆ ನೆಗಡಿಯಾದೀತು ಮತ್ತೆ"
"ನೀನೇನು ಬೇಟೆಗೆ ಹೊರಟಿ ಎಂದೆನಾ ನಾನೀಗ?"

ಮ್ಯೂಸಿಯಮ್ಮಿನಲ್ಲಿ ನೋಡಿದ ಒಂದು ಪೇಂಟಿಂಗ್ ನೆನಪಾಗುತ್ತಿದೆ ನನಗೆ. ತಾಯಿ, ತಂದೆ ಮತ್ತು ಒಂದು ಮಗು ಬೀಚೊಂದರಲ್ಲಿ ಸುಳಿಗಾಳಿಗೆ ಸಿಲುಕಿದ್ದ ಚಿತ್ರವದು. ಗಾಳಿಯ ರಭಸಕ್ಕೆ ಅವರ ಬಟ್ಟೆ ಉಚಾಯಿಸುತ್ತಿದೆ. ಈ ಮೂವರ ಒಂದು ಸಂಸಾರದ ಬಗ್ಗೆ ತೀರ ಕಲಕುವಂಥದ್ದೇನೋ ಅದರಲ್ಲಿತ್ತು. ಅವರಲ್ಲಿ ಯಾರನ್ನಾದರೂ ಒಬ್ಬರನ್ನು ತೆಗೆದು ಬಿಟ್ಟರೆ ಉಳಿದಿಬ್ಬರು ತಮ್ಮ ಜೀವನ ಪೂರ್ತಿ ಹೊತ್ತು ತಿರುಗಬೇಕಾದ ಒಂದು ನಿರಂತರವಾದ ಶೂನ್ಯ ಅಲ್ಲಿ ಉಳಿದು ಬಿಡುತ್ತದೆ. ಈಗ ಈ ಕತೆಯ ಮೂವರ ಬಗ್ಗೆ ಯೋಚಿಸುವಾಗ ನನಗೆ ಆ ಹೃದಯ ಕಲಕುವ ಚಿತ್ರದ ನೆನಪಾಗುತ್ತಿದೆ. ಹಾಗೆಯೇ ನನಗೆ ನನ್ನ ಮಗಳ ಮತ್ತು ಅವಳ ತಾಯಿಯ ನೆನಪೂ ಆಗುತ್ತಿದೆ. ನಾವೂ ಮೂವರಿದ್ದೇವೆ. ಅದೇ ಹೊತ್ತಿಗೆ ನನಗೆ ಟೆಲಿವಿಷನ್ ಎದುರು ಅರೆಮುಚ್ಚಿದ ಕಣ್ಣುಗಳೊಂದಿಗೆ ಒರಗಿದ ನನ್ನಪ್ಪನ ಚಿತ್ರವೂ ಕಣ್ಮುಂದೆ ಬರುತ್ತಿದೆ. ನನ್ನ ಮೆದುಳು ಈ ಇಡೀ ನಕಾಶೆಯ ಮೇಲೆ ಹಾರುತ್ತಾ ಸುತ್ತುತ್ತಿದೆ. ನಾನು ನಾರ್ಥ್ ಕ್ಯಾಲಿಫೋರ್ನಿಯಾದಲ್ಲಿ ಕೂತು ವೆಸ್ಟ್ ವರ್ಜೀನಿಯಾದ ಒಂದು ಸಂಸಾರದ ಕತೆಯನ್ನು ಓದುತ್ತಿದ್ದೇನೆ. ಕೊನೆಯ ಬಾರಿ ಚಿಕಾಗೋದಲ್ಲಿದ್ದಾಗ ಕನಿಷ್ಠ ಒಮ್ಮೆಯಾದರೂ ಸಮಯ ಮಾಡಿಕೊಂಡು ಅಪ್ಪನ ಬಳಿ ಹೋಗಿ ನೋಡಿಬರಲಿಲ್ಲವಲ್ಲಾ ಎನ್ನುವ ಸಂಕಟ ನನ್ನನ್ನು ಕಾಡತೊಡಗಿದೆ.

ಇದು ಪ್ರತಿ ಬಾರಿಯೂ ಹೀಗಾಗುತ್ತದೆ ನನಗೆ. ವಾಸ್ತವ ಜಗತ್ತಿನಲ್ಲಿಲ್ಲದ ಮಂದಿಯ, ಕೇವಲ ಪಾತ್ರಗಳ ಕತೆಯೊಂದು ನಮ್ಮನ್ನು ನಮ್ಮದೇ ಮಂದಿಯ ಬಳಿಗೆ, ವಾಸ್ತವವಾಗಿ ಇರುವ, ಈ ನೆಲದ ಮೇಲೆ ಓಡಾಡಿಕೊಂಡಿರುವ ಮಂದಿಯ ಬಳಿಗೊಯ್ಯುತ್ತದೆ. ಅಷ್ಟೊಂದು ಪುಟ್ಟದಾದ ಬದುಕಿನಲ್ಲಿ ಬ್ರೀಸೆ ಪಾನ್‌ಕೇಕ್ ನಮಗೆ ಇಷ್ಟೊಂದನ್ನೆಲ್ಲ ಕೊಟ್ಟು ಹೋಗಿದ್ದಾನೆ. ಇನ್ನಷ್ಟು ಬೇಕು ಎನ್ನುವುದು ದುರಾಸೆಯಾದೀತು ಎನಿಸುತ್ತದೆ. ಹಾಗಿದ್ದೂ ಅವನ ಬಗ್ಗೆ ಏನು ಹೇಳುವುದು? ಪಾನ್‌ಕೇಕ್ ತನಗೇ ಸೃಜಿಸುವುದಕ್ಕೆ ಅವಕಾಶ ಕೊಟ್ಟುಕೊಳ್ಳದೇ ಹೋದಂಥ, ಹಾಗೆ ಉಳಿದು ಹೋದಂಥ ಮಂದಿ ಮತ್ತು ಪಾತ್ರಗಳ ಕತೆಯೇನು? ಅವು ಅವನಿಗೊಂದು ವಿಧವಾದ ಸಾಂತ್ವನ ನೀಡಿರಲಾರವೆ?

*****
ಹೋಲಿಸ್ ಅಡುಗೆಗೆ ಒಂದು ಚೀಲದ ತುಂಬ ಇಣಚಿಗಳನ್ನು ಹೊತ್ತು ಮನೆಗೆ ಮರಳುತ್ತಾನೆ. ಊಟದ ಹೊತ್ತಲ್ಲಿ ಅವನು ತನ್ನ ಸಹೋದರ ಜೇಕ್‌ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳುತ್ತಾನೆ. ಅವರಿಬ್ಬರನ್ನೂ ಇನ್ನು ಮುಂದೆ ನೀನೇ ನೋಡಿಕೋ ಎಂದು ಅವನಿಗೆ ಹೇಳುವುದಾಗಿಯೂ ಇಬ್ಬರೂ ಇನ್ನೂ ಹೀಗೆ ತನ್ನ ಮೇಲೆಯೇ ಅವಲಂಬಿತರಾಗಿರುವುದು ಸಾಧ್ಯವಿಲ್ಲವೆಂದೂ ಹೇಳುತ್ತಾನೆ. ಅವನಪ್ಪ ಅದನ್ನು ವಿರೋಧಿಸಲು ಬಾಯ್ತೆರೆಯುತ್ತಾನೆ. ಆದರೆ ಯಾವುದೇ ಮಾತು ಹೊಳೆಯುವುದಿಲ್ಲ. ಅವನು ಒಮ್ಮೆಗೇ ದುಃಖದ ಕಟ್ಟೆಯೊಡೆದು ಅಳತೊಡಗುತ್ತಾನೆ. ಕ್ಷಣಗಳು ಜಾರತೊಡಗುತ್ತವೆ. ಯಾರೊಬ್ಬರೂ ಮಾತನಾಡುತ್ತಿಲ್ಲ.

"ಮುದುಕು ಇನ್ನೂ ಬಿಕ್ಕುತ್ತಲೇ ಇದ್ದಾನೆ. ಅವಳು ನಿಧಾನವಾಗಿ ಅವನ ಬಳಿ ಸಾರಿ ಕುಳಿತಲ್ಲಿಂದ ಏಳಲು ಸಹಾಯ ಮಾಡುತ್ತಾಳೆ. ವಯಸ್ಸಿನಿಂದಾಗಿ, ಈ ದುಃಖದಿಂದಾಗಿ ಬಾಗಿರುವ ಅವನು ನಿಧಾನವಾಗಿ ಎದ್ದೇಳುತ್ತಾನೆ. ಸುಕ್ಕುಗಟ್ಟಿದ ತನ್ನ ತೋಳಿನಿಂದ ಮಡದಿಯ ಆಸರೆ ಪಡೆಯುತ್ತಾನೆ."

ಊಟದ ಬಳಿಕ ಹೋಲೀಸ್ ತನ್ನ ಹಾಸಿಗೆಯ ಮೇಲೊರಗುತ್ತಾನೆ ಮತ್ತು - ಮತ್ತೆ - ನಿದ್ದೆಹೋಗಲು ಪ್ರಯತ್ನಿಸುತ್ತಾನೆ. ಹಟ್ಟಿಯಲ್ಲಿ ದನ ತನ್ನ ಹುಲ್ಲಿಗಾಗಿ ಅರಸಿ ಉಸಿರುಬಿಟ್ಟು ಸದ್ದೆಬ್ಬಿಸಿದ್ದು ಅವನಿಗೆ ಕೇಳಿಸುತ್ತದೆ. ನಿದ್ದೆಯಲ್ಲೇ ಅಳುತ್ತಿರುವ ಅಪ್ಪನನ್ನು ಒರಗಿಸಿಕೊಂಡ ಅಮ್ಮ ಮೆತ್ತಗೆ ಗುನುಗುತ್ತಿರುವುದು ಕೇಳಿಸುತ್ತದೆ. ನಲುಗುತ್ತಿರುವ ಸಂಸಾರವೊಂದು ಮತ್ತೂ ಒಂದು ದಿನವನ್ನು ಹೀಗೆ ಹಾಯುತ್ತಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಭಿಕ್ಷುಕಿಯ ಕೊಡುಗೆ

ಇಟೆಲಿಯ ಬಹುಮುಖ್ಯ ಲೇಖಕಿ, Elena Ferrante ಬರೆದ, ನಮ್ಮ ವಿವೇಕ್ ಶಾನಭಾಗ್ "ದ ಹಿಂದೂ" ಪತ್ರಿಕೆಯಲ್ಲಿ ತಾವು ಓದಿದ ಕೃತಿ ಎಂದು ಹಂಚಿಕೊಂಡ ಒಂದು ಪುಸ್ತಕ, Frantumaglia: A Writer's Journey ಯಿಂದ ಎತ್ತಿಕೊಂಡ ಒಂದು ಪತ್ರದ ಅನುವಾದ ಇಲ್ಲಿದೆ.

ಪ್ರೀತಿಯ ಸಾಂಡ್ರಾ,

ನಿನ್ನ ಮತ್ತು ನಿನ್ನ ಪತಿಯೊಂದಿಗಿನ ನನ್ನ ಇತ್ತೀಚಿನ ಭೇಟಿ ಚೇತೋಹಾರಿಯಾಗಿತ್ತು. ಆ ಸಂದರ್ಭ ನೀನು ನನ್ನ ಬಳಿ ಟ್ರಬ್ಲಿಂಗ್ ಲವ್ (ಪುಸ್ತಕದ ಕೊನೆಯ ಹೆಸರಿನಿಂದ ಅದನ್ನು ಗುರುತಿಸುವಂತೆ ಮಾಡಿದ್ದು ನನಗೆ ತುಂಬ ಹಿಡಿಸಿತು) ಕೃತಿಯ ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಾನು ಏನು ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಕೇಳಿದ್ದಿ. ನೀನು ಆ ಪ್ರಶ್ನೆಯನ್ನು ಕೊಂಚ ತಮಾಷೆಯಾಗಿ, ಮನಸ್ಸು ಇನ್ನೆಲ್ಲೊ ಇರುವವರ ಹಾಗೆ ಕೇಳುವ ನಿನ್ನದೊಂದು ಶೈಲಿಯಿದೆಯಲ್ಲ, ಆ ತರ ಕೇಳಿದ್ದೆ. ಅಲ್ಲಿಯೇ ಮತ್ತು ಆಗಲೇ ನಿನಗೆ ಉತ್ತರ ನೀಡುವ ಧೈರ್ಯವಾಗಲಿಲ್ಲ: ಸ್ಯಾಂಡ್ರೊ ಜತೆ ನಾನಿದನ್ನ ಸ್ಪಷ್ಟಪಡಿಸಿದ್ದೆ; ಅವನು ನನ್ನ ನಿರ್ಧಾರದೊಂದಿಗೆ ಸಂಪೂರ್ಣ ಸಹಮತ ಹೊಂದಿರುವುದಾಗಿಯೂ ಹೇಳಿದ್ದ ಮತ್ತು ನಾನು ಮತ್ತೊಮ್ಮೆ ಇದೇ ವಿಷಯದ ಬಗ್ಗೆ ಆತ ತಮಾಷೆಗಾಗಿಯಾದರೂ ಹೊರಳಿ ಮಾತೆತ್ತಲಾರ ಎಂದುಕೊಂಡಿದ್ದೆ. ಇದೀಗ ನಾನು ಬರವರ್ದಿಯಲ್ಲಿ ಉತ್ತರಿಸುತ್ತಿದ್ದೇನೆ. ಇದು ಕಿರಿಕಿರಿ ಹುಟ್ಟಿಸಬಹುದಾದ ಅಡೆತಡೆಗಳಿಲ್ಲದೆ, ಹಿಂಜರಿಕೆಯಿಲ್ಲದೆ, ಬದ್ಧತೆಗೆ ಕಟ್ಟಿಹಾಕದೆ ಮಾತನಾಡಲು ಅನುಕೂಲ.

ಟ್ರಬ್ಲಿಂಗ್ ಲವ್ ಬಗ್ಗೆ ಏನೂ ಮಾಡುವ ಉದ್ದೇಶ ನನಗಿಲ್ಲ, ವ್ಯಕ್ತಿಗತವಾಗಿ ನನ್ನನ್ನು ಸಾರ್ವಜನಿಕವಾಗಿ ಕೆಲಸಕ್ಕಿಳಿಸುವಂಥ ಏನನ್ನೂ ನಾನು ಮಾಡಲಾರೆ. ನಾನು ಈಗಾಗಲೇ ಈ ಸುದೀರ್ಘ ಕಥಾನಕದ ಮಟ್ಟಿಗೆ ನಾನು ಮಾಡಬಹುದಾದ್ದನ್ನು ಮಾಡಿದ್ದಾಗಿದೆ, ಅಂದರೆ ನಾನದನ್ನು ಬರೆದಿದ್ದೇನೆ. ಈ ಪುಸ್ತಕದಲ್ಲಿ ನಿಜಕ್ಕೂ ಅರ್ಹವಾದದ್ದು ಏನಾದರೂ ಇರುವುದೇ ಆದಲ್ಲಿ ಅದೇ ಸಾಕಷ್ಟಾಯ್ತು. ಯಾವುದೇ ಚರ್ಚೆ ಅಥವಾ ಗೋಷ್ಠಿಗಳಿಗೆ ನನ್ನನ್ನು ಆಹ್ವಾನಿಸಿದಲ್ಲಿ ನಾನು ಭಾಗವಹಿಸಲಾರೆ. ಯಾವುದೇ ಬಹುಮಾನ ಇತ್ಯಾದಿ ಘೋಷಿಸಿದಲ್ಲಿ ಹೋಗಿ ನಾನದನ್ನು ಸ್ವೀಕರಿಸಲಾರೆ. ಇಟೆಲಿಯಲ್ಲಾಗಲೀ, ಹೊರದೇಶಗಳಲ್ಲೇ ಆಗಲಿ, ಪುಸ್ತಕ ಮಾರಾಟಕ್ಕೆ ಉತ್ತೇಜನ ನೀಡುವಂಥ ಕೆಲಸದಲ್ಲಿ, ವಿಶೇಷತಃ ದೂರದರ್ಶನದಲ್ಲಿ, ತೊಡಗಲಾರೆ. ಲಿಖಿತ ಸಂದರ್ಶನವಷ್ಟೇ ಸಾಧ್ಯ ಮತ್ತು ಅದು ಕೂಡ ಅನಿವಾರ್ಯವೆನಿಸುವ ಮಟ್ಟಕ್ಕಷ್ಟೇ ಸೀಮಿತವಾಗಿ. ಈ ವಿಷಯದ ಮಟ್ಟಿಗೆ ನಾನು ಸಂಪೂರ್ಣವಾಗಿ ನನಗೂ ನನ್ನ ಕುಟುಂಬಕ್ಕೂ ಬದ್ಧಳಾಗಿದ್ದೇನೆ. ನನ್ನ ಮನಸ್ಸು ಬದಲಿಸುವಂತೆ ನನ್ನ ಮೇಲೆ ಒತ್ತಡ ತರುವುದಿಲ್ಲ ಎಂದು ನಾನು ಭಾವಿಸುತ್ತೇನೆ.

ನನಗೆ ಗೊತ್ತು, ಪ್ರಕಾಶಕರಿಗೆ ಇದರಿಂದ ಸ್ವಲ್ಪ ಕಷ್ಟವಾಗಬಹುದು. ನಿಮ್ಮ ಕೆಲಸದ ಬಗ್ಗೆ ನನಗೆ ಅತೀವ ಗೌರವವಿದೆ. ನಿಮ್ಮಿಬ್ಬರನ್ನೂ ನಾನು ತಕ್ಷಣವೇ ಇಷ್ಟಪಟ್ಟೆ. ನಿಮಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡುವ ಮನಸ್ಸಿಲ್ಲ. ನನ್ನ ಪುಸ್ತಕ ಪ್ರಕಟನೆ ಕೈಬಿಡಲು ನಿರ್ಧರಿಸಿದಲ್ಲಿ ನನಗದನ್ನು ನೇರವಾಗಿ ತಿಳಿಸಿ, ನನಗೆ ಅರ್ಥವಾಗುತ್ತದೆ. ಈ ಪುಸ್ತಕವನ್ನು ಪ್ರಕಟಿಸುವುದು ನನಗೇನೇನೂ ಮುಖ್ಯವಲ್ಲ. ನನ್ನ ನಿರ್ಧಾರಗಳಿಗೆ ಎಲ್ಲಾ ಕಾರಣಗಳನ್ನು ವಿವರಿಸುವುದು ನನಗೆ ತೀರ ಕಷ್ಟ, ನಿಮಗದು ಗೊತ್ತು. ನನ್ನೊಂದಿಗೇ, ನನ್ನ ನಿಲುವುಗಳೊಂದಿಗೆ ನಡೆಸುತ್ತಿರುವ ಒಂದು ಪುಟ್ಟ ಸಾಹಸವಿದು. ನನ್ನ ಪ್ರಕಾರ, ಒಮ್ಮೆ ಬರೆದಾದ ಮೇಲೆ ಈ ಪುಸ್ತಕಗಳಿಗೆ ಅವುಗಳ ಲೇಖಕನ ಅಗತ್ಯ ಉಳಿದಿರುವುದೇ ಇಲ್ಲ. ಅವುಗಳಿಗೇನಾದರೂ ಹೇಳುವುದಿದೆ ಎಂದಾದಲ್ಲಿ, ಇವತ್ತಲ್ಲಾ ನಾಳೆ ಅವುಗಳಿಗೆ ಓದುಗರು ಸಿಕ್ಕಿಯೇ ಸಿಗುತ್ತಾರೆ. ಇಲ್ಲವಾದಲ್ಲಿ ಇಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದು. ಸರಿಯಾಗಿ ಯಾರು ಬರೆದರು ಎನ್ನುವುದೇ ಗೊತ್ತಿಲ್ಲದ, ಇವತ್ತಿಗೂ ಜೀವಂತಿಕೆಯಿಂದ ನಳನಳಿಸುತ್ತಿರುವ ಎಷ್ಟೋ ಹಳೆಯ ಮತ್ತು ಹೊಸ ಕೃತಿಸಂಪುಟಗಳು ನನಗೆ ಸದಾ ಮುದ ನೀಡಿವೆ. ರಾತ್ರಿಯ ಹೊತ್ತಲ್ಲಿ ಗೊತ್ತೇ ಆಗದ ಹಾಗೆ ನಡೆದು ಬಿಡುವ ಅದ್ಭುತ ಪವಾಡದಂತಿವೆ ಅವು. ಪುಟ್ಟಮಕ್ಕಳು ಕಾದು ಕೂರುವ ಬೇಫಾನಳ* ಉಡುಗೊರೆಗಳಂತೆ. ವಿಚಿತ್ರ ಉದ್ವೇಗದೊಂದಿಗೆ ನಾನು ನಿದ್ದೆ ಹೋಗುತ್ತಿದ್ದೆ ಮತ್ತು ಮುಂಜಾನೆ ಎದ್ದಾಗ ಆ ಉಡುಗೊರೆಗಳೆಲ್ಲ ಪ್ರತ್ಯಕ್ಷವಾಗಿರುತ್ತಿದ್ದವು. ಆದರೆ ಯಾರೂ ಯಾವತ್ತೂ ಬೇಫಾನಳನ್ನು ಮಾತ್ರ ಕಂಡವರಿಲ್ಲ. ನಿಜವಾದ ಪವಾಡಗಳು ಹೇಗಿರುತ್ತವೆ ಎಂದರೆ ಅದನ್ನು ಮಾಡಿದವರು ಯಾರೆಂಬುದು ಯಾವತ್ತೂ ಗೊತ್ತಾಗುವುದೇ ಇಲ್ಲ. ಅವು ಮನೆಯೊಳಗಿನ ನಿಗೂಢ ಶಕ್ತಿಗಳು ಮಾಡಿಟ್ಟ ತೀರ ಪುಟ್ಟ ಪವಾಡಗಳಿರಬಹುದು, ಅಥವಾ ನಿಜಕ್ಕೂ ನಮ್ಮನ್ನು ಅವಾಕ್ಕಾಗಿಸಿದ ಅದ್ಭುತಗಳಿರಬಹುದು. ನನ್ನಲ್ಲಿ ಈಗಲೂ ಇಂಥ ವಿಸ್ಮಯ ಹುಟ್ಟಿಸುವ ರೋಮಾಂಚನದ, ಅದು ಚಿಕ್ಕದಿರಲಿ, ದೊಡ್ಡದಿರಲಿ, ಆಸೆ ಉಳಿಸಿಕೊಂಡಿರುವ ಒಂದು ಪುಟ್ಟ ಮಗು ಇದೆ. ನಾನಿನ್ನೂ ಅದನ್ನು ನಂಬುತ್ತೇನೆ.

ಹೀಗಾಗಿ, ಪ್ರೀತಿಯ ಸಾಂಡ್ರಾ, ನಾನಿದನ್ನು ನಿನಗೆ ಸ್ಪಷ್ಟವಾಗಿ ಹೇಳಬಯಸುತ್ತೇನೆ. ಟ್ರಬ್ಲಿಂಗ್ ಲವ್ನಲ್ಲಿ ತನ್ನನ್ನು ತಾನು ನೇಯ್ದುಕೊಳ್ಳಬಲ್ಲ ಒಂದೆಳೆ ಅಂತರ್ಗತವಾಗಿಯೇ ಇಲ್ಲವೆಂದಾದಲ್ಲಿ, ಒಳ್ಳೆಯದು, ನಾವು ಅದರ ಬಗ್ಗೆ ತಪ್ಪು ತಿಳಿದಿದ್ದೆವು ಎನ್ನುವುದು ಸ್ಪಷ್ಟ. ಅಥವಾ, ಇದರ ಬದಲಿಗೆ ಅಂಥ ಎಳೆಯೊಂದು ಅದರಲ್ಲಿದೆ ಎಂದಾದಲ್ಲಿ, ಅದು ತನ್ನನ್ನು ತಾನು ಎಲ್ಲಿ ಸಾಧ್ಯವೋ ಅಲ್ಲಿ ಪೋಷಿಸಿಕೊಳ್ಳುತ್ತದೆ. ಅದರ ಆ ತುದಿಯ ತಂತು ಹಿಡಿದು ಸೆಳೆಯುತ್ತಾ ಹೋದ ಓದುಗರಿಗೆ ಮತ್ತು ಅವರ ತಾಳ್ಮೆಗೆ ನಾವು ಕೃತಜ್ಞತೆ ಸೂಚಿಸುವುದಷ್ಟೇ ಉಳಿದಿರುತ್ತದೆ.

ಅದೂ ಅಲ್ಲದೆ, ಮಾರಾಟ ಉತ್ತೇಜಿಸುವುದೆಲ್ಲ ಖರ್ಚಿನ ಬಾಬ್ತು ಕೂಡ ಹೌದಲ್ಲವೆ? ನಾನಂತೂ ಪ್ರಕಾಶಕರ ಅತ್ಯಂತ ಕಡಿಮೆ ವೆಚ್ಚದ ಲೇಖಕಿಯಾಗುಳಿಯುತ್ತೇನೆ. ನನ್ನ ಹಾಜರಿಯಿಂದಲೂ ನಿಮಗೆ ವಿನಾಯಿತಿ ನೀಡಲಿಚ್ಛಿಸುತ್ತೇನೆ.
ಪ್ರೀತಿಯಿಂದ,

ಎಲೆನಾ.
(ಪತ್ರ ಸೆಪ್ಟೆಂಬರ್ 21,1991ರ ದಿನಾಂಕದ್ದು)

(*ಜನವರಿ ಆರರ ಮುನ್ನಾದಿನ ಸಂಜೆ ಸರಿಸುಮಾರು ಸಾಂತಾಕ್ಲಾಸ್ನಂತೆಯೇ ಒಳ್ಳೆಯ ಮಕ್ಕಳಿಗೆ ಹೊಸ ಉಡುಗೊರೆಗಳನ್ನು ತರುವ ಕೊಳಕು ಮುದುಕಿ ಈ ಬೇಫಾನಾ ಎಂದು ತಿಳಿಯಲಾಗುತ್ತದೆ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Only Connect

Anne Fadiman ಪ್ರಬಂಧಗಳ ಬಗ್ಗೆ ಹೇಳಿದಾಗ ಅವರು ಇದನ್ನೆಲ್ಲ ನೆನಪಿಸಿಕೊಂಡರು. ಒಂದು ನಸುಕಿನ ಮುಂಜಾನೆ ಇವರು ಒಂದು ಪ್ರಬಂಧ ಓದುತ್ತಾರೆ. ಇದು ಆ ಪ್ರಬಂಧದ ವಿಷಯ:

ಒಂದು ಕವಿತೆ. ತೀರ ಸಾಮಾನ್ಯ ಕವಿತೆ‌.

ಕಿಟಕಿ ಗಾಜಿನ ಹಿಂದೆ ಸೆರೆಯಾದ ಪತಂಗವೇ
ನೀನು ಹಾರದಿರು, ಹಾರದಿರು.
ಕಣ್ಣರೆಪ್ಪೆಯಡಿ ತುಂಬಿಕೊಂಡ ಅಶ್ರುವೇ
ನೀನು ಜಾರದಿರು, ಜಾರದಿರು.
ಕಿಟಕಿ ಗಾಜಿನ ಹಿಂದೆ ಸೆರೆಯಾದ ಪತಂಗವೇ
ನೀನು ಹಾರಿಬಿಡು, ಹಾರಿಬಿಡು.
ಕಣ್ಣರೆಪ್ಪೆಯಡಿ ತುಂಬಿಕೊಂಡ ಅಶ್ರುವೇ
ನೀನು ಜಾರಿಬಿಡು, ಜಾರಿಬಿಡು.

ಏನಿದೆ ಇದರಲ್ಲಿ! ಒಂದು ಮಕ್ಕಳ ಪದ್ಯದ ಹಾಗಿದೆ. ಸರಿ, ಮುಂದೆ ಒಂದು ದಿನ ಈ ಕವಿತೆ ಬರೆದ ಕವಿ ಶಾಲೆಯೊಂದರಲ್ಲಿ ತಮ್ಮ ಇದೇ ಕವಿತೆಯನ್ನು ಮಕ್ಕಳಿಗೆ ಓದುತ್ತಾರೆ. ಮಕ್ಕಳು ಎಷ್ಟು ನೇರ ಮತ್ತು ಸರಳ ನೋಡಿ. ಪುಟಾಣಿಯೊಬ್ಬ ಎದ್ದು ನಿಂತು, ನನಗೆ ಇದು ಏನೂ ತಿಳಿಯಲಿಲ್ಲ. ಈ ಪದ್ಯದ ಅರ್ಥ ಏನು, ಇದನ್ನು ನೀವು ಯಾಕೆ ಬರೆದಿದ್ದು ಎಂದು ಕವಿಯನ್ನು ಪ್ರಶ್ನಿಸುತ್ತಾನೆ.

ಕವಿ ಹೇಳುತ್ತಾರೆ. ನಮ್ಮ ಮನೆಯಲ್ಲಿ ತೀರ ಪ್ರಾಯವಾದ ಹಿರಿಯ ಮುತ್ತಜ್ಜಿಯೊಬ್ಬಳು ಹಲವಾರು ದಿನಗಳಿಂದ ಕಾಯಿಲೆ ಬಿದ್ದು ನರಳುತ್ತಾ ಇದ್ದಳು. ನನ್ನನ್ನು ಮಗುವಾಗಿದ್ದಾಗಿನಿಂದ ಅವಳು ತೀರಾ ಪ್ರೀತಿಯಿಂದ ಲಾಲಿಸಿ ಪಾಲಿಸಿ ಬೆಳೆಸಿದವಳು. ಅವಳ ಸಾವನ್ನು ಕುರಿತು ಯೋಚಿಸುವುದಕ್ಕೂ ನನ್ನ ಮನಸ್ಸಿಗೆ ಸಾಧ್ಯವಿರಲಿಲ್ಲ. ಆದರೆ ಅವಳು ನರಳುವುದನ್ನೂ ನೋಡಲಾಗುತ್ತಿಲ್ಲ. ಈ ಸ್ಥಿತಿಯನ್ನು ಬರೆಯಬೇಕಿತ್ತು ನನಗೆ. ನೇರವಾಗಿ ಅದನ್ನು ಬರೆಯುವುದು ನನಗೆ ಸಾಧ್ಯವಿರಲಿಲ್ಲ...

ಈ ಪ್ರಬಂಧ ಬರೆದವರು ಕೊಂಕಣಿಯ, ಪ್ರತಿಯೊಬ್ಬರೂ ಓದಲೇ ಬೇಕಾದ ಪ್ರಬಂಧಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರವೀಂದ್ರ ಕೇಳೇಕರ್. ನಸುಕಿನಲ್ಲಿ ಇದನ್ನು ಓದಿ ಮುಗಿಸುತ್ತಲೇ ತನ್ನ ನಿಡುಗಾಲದ ಸ್ನೇಹಿತನ ಸಾವಿನ ಸುದ್ದಿ ಕೇಳಿ ತತ್ತರಿಸಿದ್ದನ್ನು ವಿವರಿಸಿದ್ದು ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್.

E.M.Forster ನ "Only Connect" ಸಲಹೆ ಬಗ್ಗೆ ಕೇಳಿರುತ್ತೇವೆ. ಓದಿದ್ದು, ಕೇಳಿದ್ದು, ನೋಡಿದ್ದು, ಅನುಭವಿಸಿದ್ದು ಎಲ್ಲ ಸೇರಿ ಬದುಕು ಸಂಪನ್ನವಾಗುತ್ತ ಹೋಗುತ್ತದೆ. ಹಾಗೆ ಪ್ರಬಂಧ ಬರೆಯುತ್ತಾಳೆ Anne Fadiman. ಹಾಗೆಯೇ ರವೀಂದ್ರ ಕೇಳೇಕರ್. ಹಾಗೆಯೇ ನಮ್ಮ Somathanahalli Diwakar.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಮೌನ ಧ್ವನಿಗಳೊಂದಿಗೆ....

ನಿಮಗೆ ನೆನಪಿರಬಹುದು, ‘ಅವರಿಗೆ ಹೇಳು- ನನ್ನನ್ನು ಕೊಲ್ಲಬೇಡಿ ಎಂದು!’ ಎಂಬ ಹೆಸರಿನ ಕತೆಯೊಂದು ದೇಶಕಾಲ ತ್ರೈಮಾಸಿಕದ ಆರನೆಯ ಸಂಚಿಕೆಯಲ್ಲಿ, ಅಂದರೆ 2006ರಲ್ಲಿ ಪ್ರಕಟವಾಗಿತ್ತು. ಹುವಾನ್ ರುಲ್ಫೊನ ಈ ಕತೆಯನ್ನು ವಿಶಾಲಾ ಕನ್ನಡಕ್ಕೆ ತಂದಿದ್ದರು. ಕತೆ ಹೇಗಿತ್ತೆಂದರೆ, ಕಿತ್ತುಕೊಂಡು ಕಾಡುವಷ್ಟು ತೀಕ್ಷ್ಣವಾಗಿತ್ತು.

ಈಗ ನಿಮಗೆ ಹೇಳಿಬಿಡುತ್ತೇನೆ. ತುಂಬ ಎಂದರೆ ತುಂಬಾ ಹಿಂದೆ, ನಾನೊಂದು ತಪ್ಪೆಸಗಿದ್ದೆ. ಇಷ್ಟು ಕಾಲ ಹೇಗೋ ಅದನ್ನು ಯಾರಿಗೂ ತಿಳಿಯದ ಹಾಗೆ, ದೊಡ್ಡ ಇಶ್ಯೂ ಆಗದ ಹಾಗೆ ಹೇಗೋ ಕಷ್ಟಪಟ್ಟು ನಿಭಾಯಿಸಿಕೊಂಡು ಬಂದಿದ್ದೇನೆ. ಆದರೆ ಈಗ ಅದು ಬಯಲಾಗಿದೆ, ಅದಕ್ಕೆ ಶಿಕ್ಷೆಯಾಗುವ ಕಾಲ ಒದಗಿದೆ. ತಪ್ಪು-ಸರಿ ಗೊತ್ತಿದೆ ನನಗೆ. ಆ ತಪ್ಪು ನಡೆದು ಹೋದ ಘಳಿಗೆ ಏನಿದೆ, ಅದು ನನ್ನ ಕೈಮೀರಿದ್ದಾಗಿತ್ತು. ಇಲ್ಲವಾದಲ್ಲಿ ನಾನೂ ನಿಮ್ಮೆಲ್ಲರ ಹಾಗೆ, ನಿಮ್ಮಷ್ಟೇ ಸಭ್ಯ ಮನುಷ್ಯ. ನನಗೂ ನೋವು,ನಲಿವು,ಸುಖ,ದುಃಖ ಎಲ್ಲ ಇವೆ. ಹೇಗೋ ಏನೋ, ಒಂದು ಹುಚ್ಚು ಆವೇಶದ ಆವೇಗದಲ್ಲಿ ಅದೆಲ್ಲ ಆಗಿ ಹೋಯಿತು. ತಪ್ಪಾಯಿತು ಎಂದೆನಲ್ಲ. ಪಾಪಪ್ರಜ್ಞೆಯಿಂದ ನರಳಿದ್ದೇನೆ, ಆ ತಪ್ಪು ಮುಚ್ಚಿಡಲು ಇಡೀ ಬದುಕಿನುದ್ದಕ್ಕೂ ಏನೇನೆಲ್ಲ ಮಾಡಿದ್ದೇನೆ, ಅಕ್ಷರಶಃ ಕದ್ದುಮುಚ್ಚಿ ಬದುಕಿದ್ದೇನೆ, ಅದಕ್ಕೆಂದೇ ಬದುಕಿನ ಎಷ್ಟೋ ಖುಶಿ, ಸಹಜ ಸುಖಕ್ಕೆ ಎರವಾಗಿ ಮುಕ್ಕಾಗಿದ್ದೇನೆ. ನಿದ್ದೆ ಎಚ್ಚರದಲ್ಲಿ ಅದನ್ನು ನಾನೇ ಮಾಡಿದೆನೆ, ನಾನಷ್ಟು ಕೆಟ್ಟವನಾಗಿ ಬಿಟ್ಟೆನೆ ಎಂದೆಲ್ಲ ಪ್ರಶ್ನಿಸಿಕೊಂಡಿದ್ದೇನೆ, ಆಶ್ಚರ್ಯಪಟ್ಟಿದ್ದೇನೆ. ಇನ್ನೂ ನನಗೆ ಶಿಕ್ಷೆ ಕೊಡುವುದಿದೆಯೆ? ಇನ್ನೇನು ಅವರು ನನ್ನನ್ನು ಗುಂಡಿಟ್ಟು ಕೊಲ್ಲಲಿದ್ದಾರೆ. ದಯವಿಟ್ಟು ನನ್ನ ಪರವಾಗಿ ನೀವು ಅವರಿಗೆ ಒಂದು ಮಾತು ಹೇಳಿ, ನನ್ನನ್ನು ಕೊಲ್ಲಬೇಡಿ ಎಂದು ಹೇಳಿ - ಎನ್ನುವ ಒಂದು ಪಾತ್ರ ಮಾಡಿದ್ದು ಘೋರ ಹತ್ಯೆ, ಕ್ಷಮಿಸುವುದು ಕಷ್ಟವಾದಂಥ ಹತ್ಯೆ ಎನ್ನುವುದು ಕ್ರಮೇಣ ನಿಮಗೆ ತಿಳಿಯುತ್ತದೆ. ಶಿಕ್ಷೆ ಕೊಡಲು ಬಂದಾತ ಯಾರೋ ಅಧಿಕಾರಿಯಲ್ಲ. ಹಾಗೆ ಘೋರವಾಗಿ ಹತ್ಯೆಗೀಡಾದ ವ್ಯಕ್ತಿಯ ಸ್ವಂತ ಮಗ ಎನ್ನುವುದು ಕೊನೆ ಕೊನೆಗೆ ತಿಳಿಯುತ್ತದೆ. ಆದರೂ ನನಗೆ ಆಗುತ್ತಿರುವ ಶಿಕ್ಷೆಯ ಬಗ್ಗೆ ಅದಾಗಲೇ ನಿಮ್ಮಲ್ಲಿ ಮರುಕ ಹುಟ್ಟಿಕೊಂಡಿದೆ. ನನಗೆ ಆಗುತ್ತಿರುವುದು ಸರಿ ಎಂದೂ, ಬೇಡವಿತ್ತು ಎಂದೂ ಏಕಕಾಲಕ್ಕೆ ಅನಿಸತೊಡಗಿದೆ. ಇಲ್ಲಿ ಅಪರಾಧಿಯಾಗಿ ನಿಂತ ಪಾತ್ರ ದಯನೀಯವಾಗಿ ಬದುಕುವ ಆಸೆಹೊತ್ತು ಬೇಡಿಕೊಳ್ಳುತ್ತಿರುವುದು ತನ್ನ ಸ್ವಂತ ಮಗನನ್ನು. ಸಾಯಲಿರುವಾತ ತನ್ನ ಸ್ವಂತ ತಂದೆಯಾಗಿದ್ದೂ ಆ ಬಗ್ಗೆ ಏನೂ ಮಾಡಲಾರದೆ ಸುಮ್ಮನೇ ಅದಕ್ಕೆ ಪ್ರೇಕ್ಷಕನಾಗಬೇಕಾಗಿ ಬಂದಿದೆ ಮಗನಿಗೆ. ಇಲ್ಲಿ ಓದುಗ ಏಕಕಾಲಕ್ಕೆ ಈ ಮೂರೂ ಪಾತ್ರಗಳೊಂದಿಗೆ ನಿಲ್ಲುತ್ತಾನೆ, ಮೂರೂ ಪಕ್ಷದೊಂದಿಗೆ ನಿಂತು ಆಯಾ ಪಾತ್ರದ ತುಮುಲ, ದ್ವಂದ್ವ, ಆತಂಕಗಳನ್ನು ಅನುಭವಿಸುತ್ತಾನೆ, ಸ್ಪಂದಿಸುತ್ತಾನೆ. ಇಷ್ಟು ಪರಿಣಾಮಕಾರಿಯಾಗುವಂಥದ್ದೇನಿತ್ತು ಈ ಒಂದು ಪುಟ್ಟ ಕತೆಯಲ್ಲಿ ಎಂದು ಹಲವರು ತಲೆಕೆಡಿಸಿಕೊಂಡಿದ್ದು ಸಹಜವಾಗಿಯೇ ಇದೆ.

ಮುಂದೆ 2013ರಲ್ಲಿ ಎಸ್ ದಿವಾಕರ್ ಅವರ ‘ಹಾರಿಕೊಂಡು ಹೋದವನು’ ಸಂಕಲನದಲ್ಲಿ ‘ನಮಗವರು ಜಮೀನು ಕೊಟ್ಟರು’ ಬಂತು. ಮುಂದೆ 2015ರ ಜೂಲೈ ತಿಂಗಳಲ್ಲಿ ಒಂದು ದಿನ ವಿವೇಕ್ ಶಾನಭಾಗ್ ನನಗೆ ಆವತ್ತಿನ ಪುರವಣಿಯೊಂದರಲ್ಲಿ ಪ್ರಕಟವಾದ ಒಂದು ಪುಟ್ಟ ಕತೆಯ ಬಗ್ಗೆ ಬಹಳ ಉತ್ಸಾಹದಿಂದ ಹೇಳತೊಡಗಿದರು. ಅದನ್ನು ಓದಿದಾಗ ತಮಗೆ ರುಲ್ಫೋ ಕತೆ ನೆನಪಾಯಿತೆಂದೂ, ಅದನ್ನು ತಪ್ಪದೇ ಓದಬೇಕೆಂದೂ ಹೇಳಿ, ಜೊತೆಗೆ ‘ತಲ್ಪಾ’ ಕತೆಯ ಒಂದು ಅನುವಾದಿತ ಪ್ರತಿಯನ್ನು ಕಳಿಸಿಕೊಟ್ಟರು ಮಾತ್ರವಲ್ಲ ಈಗಲೂ ಯೂಟ್ಯೂಬಿನಲ್ಲಿ ಲಭ್ಯವಿರುವ ಅದರ ಚಲಚಿತ್ರ ಆವೃತ್ತಿಯ ಕೊಂಡಿಯನ್ನೂ ಕೊಟ್ಟರು. ‘ತಲ್ಪಾ’ ಕತೆಯಲ್ಲೂ ಇರುವುದು ಪಾಪ, ಅದನ್ನು ಆಗುಗೊಳಿಸಿದ ಮಾನವ ಸಹಜ ದೌರ್ಬಲ್ಯ ಅಥವಾ ವಿಧಿಯೇ ಕೆಲವು ಪಾತ್ರಗಳ ಬದುಕಿನಲ್ಲಿ ತಂದಿಟ್ಟ ದುರ್ಬಲ ಘಳಿಗೆ, ಕಾಡುವ ಪಾಪಪ್ರಜ್ಞೆ, ಪಾಪಕ್ಕಾಗುವ ಶಿಕ್ಷೆ. ಇಲ್ಲಿಯೂ ಪಾಪಿ, ಪಾಪಕ್ಕೆ ಪ್ರೇರಣೆಯಾದದ್ದು, ಬಲಿಪಶುವಾದ ವ್ಯಕ್ತಿ ಮತ್ತು ಶಿಕ್ಷೆಯ ತೀವೃತೆ ಎಲ್ಲದರೊಂದಿಗೂ ಓದುಗ ನಲುಗುತ್ತಾನೆ. ಅವನು ಎಲ್ಲರ ಪಕ್ಷವನ್ನೂ ವಹಿಸುತ್ತಾನೆ, ಎಲ್ಲರೊಂದಿಗೂ ಒಂದು ಕ್ಷಣ ನಿಂತು ಸ್ಪಂದಿಸಿ ನಿಡುಸುಯ್ಯುತ್ತಾನೆ.

ಸಿಂಗರ್‌ನನ್ನು ಸಮೃದ್ಧವಾಗಿ ಕನ್ನಡಕ್ಕೆ ತಂದ, ಟಾಲ್‌ಸ್ಟಾಯ್, ನೆರೂಡನನ್ನು ಅನುವಾದಿಸಿದ ಓ.ಎಲ್.ನಾಗಭೂಷಣ ಸ್ವಾಮಿ ಈಗ ರುಲ್ಫೋನ ಎಲ್ಲ ಕತೆಗಳನ್ನು, ಕಾದಂಬರಿಯನ್ನು ಕನ್ನಡಕ್ಕೆ ಒದಗಿಸಿ ಮಹದುಪಕಾರ ಮಾಡಿದ್ದಾರೆ. ಅನುವಾದಕ್ಕಿಳಿಯುವುದು ಯಾವ ಬರಹಗಾರನಿಗೂ ಒಂದು ವ್ರತವೇ. ಬಹುಮಟ್ಟಿಗೆ ಅದೊಂದು ಥ್ಯಾಂಕ್‌ಲೆಸ್ ಜಾಬ್ ಕೂಡ ಹೌದು. ಆದರೆ ಅನುವಾದದ ಕುರಿತು ಗಂಭೀರವಾದ ಚಿಂತನ-ಮಂಥನ ನಡೆಸಿರುವ ಓಎಲ್ಲೆನ್ ಈ ಅನುವಾದದ ಹಿಂದಿನ ಪ್ರೇರಣೆಗಳನ್ನು ನೆನೆಯುತ್ತ ಬರೆದಿರುವ ಎರಡು ಮಾತುಗಳು ಅತ್ಯಂತ ಅರ್ಥಪೂರ್ಣವೂ, ಸಾಂಕೇತಿಕವಾಗಿ ಕನ್ನಡ ಮೈಗೂಡಿಸಿಕೊಳ್ಳಬೇಕಾದ ಸಂಪನ್ನತೆಗೆ ಮಾರ್ಗದರ್ಶಿಯೂ ಆಗಿದ್ದು ಮನಸೆಳೆಯುವಂತಿದೆ. ವಿವೇಕ್ ಶಾನಭಾಗ ಅವರು ದೇವನೂರ ಮಹದೇವರಿಗೆ ಓದಲು ಕೊಟ್ಟ ಪುಸ್ತಕವನ್ನು ಪಡೆದು ತಾವೂ ಓದಿದ ಓಎಲ್ಲೆನ್ ಕನ್ನಡದ ಹೊಸ ಬರಹಗಾರರು, ವಿಮರ್ಶಕರು, ಓದುಗರು ಎಲ್ಲರಿಗೂ ಈ ಅಪೂರ್ವ ನಿಧಿ ದೊರಕಬೇಕೆಂಬ ತುಡಿತಕ್ಕೆ ಒಳಗಾಗುತ್ತಾರೆ. ಕಾದಂಬರಿಯನ್ನು ಅನುವಾದಿಸುತ್ತಾರೆ. ಆದರೆ ಅದೇ ವಿವೇಕ್ ಈ ಓಎಲ್ಲೆನ್ ಅವರನ್ನು ಅಷ್ಟಕ್ಕೆ ಬಿಡುವುದಿಲ್ಲ. ಇಷ್ಟು ಮಾಡಿದವರಿಗೆ ಅಷ್ಟೇನೂ ಹೆಚ್ಚಲ್ಲ ಎನ್ನುತ್ತ ರುಲ್ಫೋನ ಹದಿನೇಳು ಕತೆಗಳನ್ನೂ ಅನುವಾದಿಸಲು ಪ್ರೇರೇಪಿಸುತ್ತಾರೆ. ಅವರ ಅಪಾರ ಶ್ರಮ, ತಾಳ್ಮೆ ಮತ್ತು ಸಮಯ ನುಂಗಿದ ಈ ವ್ರತದ ಕರಗ ಹೊರಲು ಇದ್ದ ಪ್ರೇರಣೆ, ಒತ್ತಾಸೆಗಳು ಒಟ್ಟಾರೆಯಾಗಿ ನಮ್ಮದೇ, ನಮ್ಮ ಕನ್ನಡದ್ದು. ಬಹುಶಃ ಒಂದು ದಶಕದ ಹಿಂದೆಯೇ ಈ ಮಹತ್ಕಾರ್ಯದ ಪ್ರೇರಣೆಗಳು ಅಲೆಯಲೆಯಾಗಿ ಕನ್ನಡದ ತೀರವನ್ನು ತಡವುತ್ತಿದ್ದಿರಬೇಕೆಂದೇ ಅನಿಸುತ್ತದೆ. ಓಎಲ್ಲೆನ್ ಅನುವಾದದಲ್ಲಿ ಒಂದು ವಿಶೇಷವಿದೆ. ನಿಗೂಢವಾಗಿ ಕಥಾನಕದ ಒಡಲು ತೆರೆದಿಡುತ್ತ ಸಾಗುವ ರುಲ್ಫೋನನ್ನು ಹೇಗೆ ಓದಬೇಕೆಂಬುದೇ ಒಂದು ಒಗಟಾಗಿ ಜಗತ್ತಿನಾದ್ಯಂತ ಓದುಗರನ್ನು ವಿಮರ್ಶಕರನ್ನು ಕಾಡಿದೆ. ಓಎಲ್ಲೆನ್ ಅವರ ಅನುವಾದ ಕೂಡ, ಅವರು ಸ್ವತಃ ಒದಗಿಸಿರುವ ಐದು ಸಮರ್ಥ ಅನುಬಂಧಗಳ ಹೊರತಾಗಿಯೂ ಈ ಗುಣವನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ. ರುಲ್ಫೋ ದಕ್ಕುವುದು ಕೊಂಚ ಕಷ್ಟವಾಗಬಹುದು ಎನ್ನುವ ಅನುಮಾನ ಸ್ವತಃ ಓಎಲ್ಲೆನ್ ಅವರನ್ನೂ ಕಾಡಿದಂತಿದೆ.

"I think therefore I am" ಎಂದ ಡೆಸ್ಕಾರ್ಟಸ್. ಆದರೆ ಯೋಚಿಸುತ್ತಿರುವುದು ಯಾರು ಮತ್ತು ಈ ಯೋಚನೆ ಎಂಬುದು ಏನು? ನಿಜಕ್ಕಾದರೆ ಇರುವುದು ಯೋಚನೆಗಳಲ್ಲವೆ? ನಾವದನ್ನು ಸುಮ್ಮನೇ ಸೆಳೆದುಕೊಂಡಿದ್ದೇ ಅದೇ ನಾವಾಗಿ ಬಿಡುತ್ತೇವೆಯೆ? ಒಂದು ಮೊಬೈಲ್ ಫೋನು ಮೆಸೇಜುಗಳನ್ನು ಥಟ್ಟನೆ ತೋರಿಸುವಷ್ಟೇ ಸಹಜವಾಗಿ ನಮ್ಮ ಸುತ್ತಮುತ್ತ ಹರಿದಾಡುತ್ತಿರುವ ಯೋಚನೆಗಳನ್ನು ನಾವು ತಡಕುತ್ತ ಅಥವಾ ಅವು ನಮ್ಮನ್ನು ತಡಕುತ್ತಾ ಇರುವುದರಿಂದಲೇ ಅದೇ ನಾವೆಂಬ ಒಂದು ಭ್ರಾಂತಿಗೆ ಬಿದ್ದು ಅಸ್ಮಿತೆಯ ಅಹಂಕಾರಕ್ಕೆ ತುತ್ತಾಗಿದ್ದೇವೆಯೆ? ಮೊಬೈಲ್ ಫೋನಿಗೆ ಬಂದ ಮೆಸೇಜುಗಳೇ ಮೊಬೈಲ್ ಫೋನೆ? ಮನುಷ್ಯನ ಮೆದುಳು ಕೇವಲ ಪರಿಸರದಲ್ಲಿರುವ ಯೋಚನೆಗಳಿಗೆ ಟ್ಯೂನ್ ಮಾಡಿಕೊಳ್ಳುವ ಸಾಮರ್ಥ್ಯವಷ್ಟೇ ಇರುವ ಒಂದು ಸಾಧನವಿರಬಹುದೆ? ನಮ್ಮ ಸುತ್ತಮುತ್ತ ಇದೀಗ ನೂರಾರು, ಸಾವಿರಾರು ಬಗೆಯ ಭಾವನೆ, ಯೋಚನೆ, ಚಿಂತನೆ ಎಲ್ಲ ಹರಿದಾಡುತ್ತ ಇದ್ದಿರಬಹುದೆ? ನಮಗೆ ಅವು ಕೇಳೀತೇ?

ರುಲ್ಫೋನ ಕಾದಂಬರಿಯ ತುಂಬ ಇರುವ ಪಾತ್ರಗಳು ಏನೇನೋ ಗಳಹುತ್ತ ಇರುತ್ತವೆ. ಅವುಗಳ ಹಿಂದೆ ಕತೆಯೇನು, ಚರಿತ್ರೆಯೇ ಇದೆ. ಕ್ರಮೇಣ ನಿಮಗೆ ಗೊತ್ತಾಗುವುದೇನೆಂದರೆ ಆ ಯಾವ ಪಾತ್ರಗಳೂ ನಮ್ಮ ನಿಮ್ಮಂತೆ ಜೀವಂತವಿಲ್ಲ. ಸತ್ತಿವೆ, ಸಾಯುತ್ತಿವೆ, ಗೋರಿಯಲ್ಲಿ ಮಲಗಿವೆ, ಅಶಾಂತ ಪ್ರೇತಗಳಂತೆ ಅಲೆಯುತ್ತಿವೆ ಇತ್ಯಾದಿ ಇತ್ಯಾದಿ. ಎಷ್ಟೋ ಬಾರಿ ಮಾತು ಕೇಳುತ್ತಲೇ ಇಲ್ಲ, ಆದರೆ ನಿಮಗವು ತಲುಪುತ್ತಿವೆ, ಕನಸಿನಲ್ಲಿ ಯಾರೋ ಏನೋ ಹೇಳಿದ್ದನ್ನು ಕೇಳಿಸಿಕೊಂಡ ಹಾಗೆ. ದೇಹವಿಲ್ಲದೆ, ಧ್ವನಿಯಿಲ್ಲದೆ ನಿಮ್ಮನ್ನು ಮಾತು, ಕತೆ, ದೃಶ್ಯ ಎಲ್ಲವೂ ತಲುಪುತ್ತಿದೆ ಇಲ್ಲಿ, ರುಲ್ಫೋನ ಕತೆಯಲ್ಲಿ. ಇದೊಂದು ತರ ನೀವು ಈಗಾಗಲೇ ಓದಿರುವ ನೂರಾರು ಪುಸ್ತಕಗಳ ನಡುವೆ ಕುಳಿತಿರುವಾಗ ಆ ಎಲ್ಲ ಪುಸ್ತಕಗಳಿಂದ ಯಾವುಯಾವುದೋ ಪಾತ್ರಗಳು ಇದ್ದಕ್ಕಿದ್ದ ಹಾಗೆ ನಿಮ್ಮೊಂದಿಗೆ ಮಾತಿಗೆ ತೊಡಗಿದ ಹಾಗೆ! ಒಬ್ಬರೇ ಸ್ನಾನ ಮಾಡುತ್ತಿರುವಾಗ, ಟಾಯ್ಲೆಟ್ಟಿನಲ್ಲಿ ಕುಳಿತಿರುವಾಗ ಹತ್ತು ಹಲವು ಮಂದಿಯ ಜೊತೆ ನೀವೇ ಒಂದು ಕಲ್ಪಿತ ಸಂಭಾಷಣೆಯಲ್ಲಿ ತೊಡಗಿಕೊಂಡು ನಿಮ್ಮ ಮೂಡ್ ನೀವೇ ಕೆಡಿಸಿಕೊಂಡ ಹಾಗೆ.

ರುಲ್ಫೋ ಇದನ್ನು ಎಷ್ಟು ಸಮೃದ್ಧವಾಗಿ, ಸಂಗತವಾಗಿ ಮತ್ತು ಸಂಪನ್ನವಾಗಿ ಮಾಡುತ್ತಾನೆಂದರೆ ಎಲ್ಲಿಯೂ ಅವನು ಕತೆ ಹೇಳುತ್ತಲೇ ಇಲ್ಲ. ಬದಲಿಗೆ ಅವನೇ ಇಲ್ಲಿ ಕತೆ ಆಗುತ್ತಿದ್ದಾನೆ. ಅವನಲ್ಲಿ ನಿರೂಪಕನಿಲ್ಲ. ಅವನೇ ಪಾತ್ರವಾಗಿ ನಿಮಗೆ ವಿವರಿಸುತ್ತಿದ್ದಾನೆ. ಕ್ಯಾಮೆರಾ ಇದೆ, ಕ್ಯಾಮೆರಾಮನ್ ಇಲ್ಲ. ಅವನೊಬ್ಬ ಫೋಟೋಗ್ರಾಫರ್ ಮತ್ತು ಚಲಚಿತ್ರ ಸ್ಕ್ರಿಪ್ಟ್ ರೈಟರ್. ಇದನ್ನು ಹೇಳದೆಯೂ ನೀವು ಅವನ ನಿರೂಪಣೆಯಲ್ಲಿ ಇದರ ಪಸೆ ಧಾರಾಳವಾಗಿಯೇ ಕಾಣುತ್ತೀರಿ. ಅವನು ಕತೆಯನ್ನು ನಮಗೆ ತೋರಿಸುತ್ತಿದ್ದಾನಷ್ಟೇ. ಕತೆಯನ್ನು ಕಾಣುವುದು ನಿಮಗೇ ಬಿಟ್ಟಿದ್ದು. ಹಾಗಾಗಿ ಇಲ್ಲಿ ಯಾವ ಪಾತ್ರ ಎಲ್ಲಿ ನಿಮ್ಮೊಂದಿಗೆ ಮಾತು ನಿಲ್ಲಿಸಿತು ಮತ್ತು ಯಾವ ಹೊಸ ಪಾತ್ರ ನಿಮ್ಮೊಂದಿಗೆ ಮಾತಿಗೆ ಕೂಡಿಕೊಂಡಿತು ಎನ್ನುವುದು ನಿಮ್ಮ ಸಂವೇದನೆಗೇ ನಿಲುಕಬೇಕು. ಅಂತೆಯೇ, ಪಾಪ, ಪಾಪಪ್ರಜ್ಞೆ, ಸ್ವಗತ, ಶಿಕ್ಷೆ ಮತ್ತು ಅನುಕಂಪ ಎಲ್ಲವೂ ಇಲ್ಲಿ ಕಾಲಬದ್ಧವಾಗಿ ನಿಮ್ಮೆದುರಿಗೆ ಬರುತ್ತಿಲ್ಲ. ಒಂದೇ ಕತೆಯ ಬೇರೆ ಬೇರೆ ಪಾತ್ರಗಳು ಒಂದೇ ಕಾಲಘಟ್ಟದಲ್ಲಿ ನಿಂತು ಮಾತನಾಡುತ್ತಲೂ ಇಲ್ಲ. ಇದರಿಂದ ಕೆಲವು ಅನುಕೂಲಗಳೂ ಇವೆ, ಅನಾನುಕೂಲಗಳೂ ಇವೆ.

ಕೊನೆಗೂ ಇಬ್ಬರು ಓದುಗರು ಒಂದೇ ಪುಸ್ತಕವನ್ನು ಓದುವುದು ಸಾಧ್ಯವಿಲ್ಲ. ನಿಮ್ಮ ಓದು ನಿಮ್ಮದು. ನನ್ನ ಓದು ನನ್ನದು. ಹಾಗೆಯೇ ಅನುವಾದ ಕೂಡ. ಓಎಲ್ಲೆನ್ ಅವರಿಗೆ "ನಮಗೆ ಕೊಟ್ಟ ಭೂಮಿ ಇನ್ನೂ ಮುಂದಿದೆ" ಅನಿಸಿದರೆ, ಎಸ್ ದಿವಾಕರ್ ಅವರಿಗೆ "ನಮಗವರು ಕೊಟ್ಟ ಜಮೀನು ನಮ್ಮ ಹಿಂದೆ, ಬಹು ದೂರದಲ್ಲಿದೆ" ಅನಿಸಿದೆ. ಹಾಗೆಯೇ "ನಾವು ಬಡವರೆಂದು" ಕತೆಯಲ್ಲಿ ತಾಚಾಳ ‘ಒಂದೇ ಸಮ ಏರುತ್ತ ಇಳಿಯುತ್ತ ಇರುವ ಮೊಲೆ’ ಅವಳನ್ನು ‘ನಾಶದ ಸಮೀಪಕ್ಕೆ ಒಯ್ಯುತ್ತಿ’ದ್ದರೆ ಒಂದು ಇಂಗ್ಲೀಷ್ ಅನುವಾದದಲ್ಲಿ ಅವು ಅವಳನ್ನು ನಾಶಗೊಳಿಸುವುದಕ್ಕೆಂದೇ ಉಬ್ಬತೊಡಗುತ್ತವೆ. ಇನ್ನೊಂದು ಅನುವಾದದಲ್ಲಿ ಅವು ಅವಳನ್ನು ‘ಪಾಪಕೂಪದತ್ತ ಮತ್ತಷ್ಟು ಮತ್ತಷ್ಟು ತಳ್ಳುವುದಕ್ಕೆ’ ಉಬ್ಬಿಕೊಳ್ಳುತ್ತಿವೆ. ರುಲ್ಫೋ ನಿಮಗೆ ಏರಿಳಿಯುತ್ತಿರುವ ಆ ಮೊಲೆಗಳು ಮತ್ತು ಅವುಗಳನ್ನು ಪ್ರಳಯದ ಭೀತಿಯಿಂದಲೋ ಎಂಬಂತೆ ಕಾಣುತ್ತಿರುವ ಪುಟ್ಟ ತಮ್ಮನನ್ನಷ್ಟೇ ಕಾಣಿಸುತ್ತಾನೆ. ಉಳಿದಿದ್ದೆಲ್ಲ ನಮ್ಮದು. ನಮ್ಮ ಸುತ್ತ ಮುತ್ತ ಸದಾ ಸುತ್ತುತ್ತಿರುವ ಯೋಚನೆಗಳು ಅಮರಿಕೊಂಡು ಮಾಡುವ ಅಧ್ವಾನ ಕಡಿಮೆಯೇನಲ್ಲ. ಹಾಗೆ ಅನುವಾದವೊಂದು ‘ಇರುವುದನ್ನು’ ಹೇಳುವ ಬದಲಿಗೆ ಅದನ್ನು "ವಿವರಿಸುವ" ಉಪದ್ವ್ಯಾಪಕ್ಕೆ ಮುಂದಾಗುವ ಅಪಾಯ ಇದ್ದೇ ಇರುತ್ತದೆ.

ರುಲ್ಫೋ ಒಂದೊಂದು ಶಬ್ದವನ್ನೂ ಆರಿಸಿ ಬಳಸುವ ಲೇಖಕ. ಹಾಗಾಗಿಯೇ ಅನುವಾದದ ಜವಾಬ್ದಾರಿ ಇಲ್ಲಿ ಹೆಚ್ಚು. ಎಷ್ಟು ಕಡಿಮೆ ಬರೆದರೆ ಸಾಕು ಎಂದಷ್ಟೇ ಯೋಚಿಸುತ್ತಿದ್ದ ಪುಣ್ಯಾತ್ಮ ಅವನು. ಕಾದಂಬರಿ ಬರೆಯುವುದೆಂದರೆ ಬರೆದಿದ್ದರಲ್ಲಿ ಎಷ್ಟನ್ನು ಬಿಡಬೇಕು ಎನ್ನುವ ಕಸರತ್ತು ಎನ್ನುತ್ತಾನಾತ. ಹಾಗೆಯೇ ರುಲ್ಫೋ ಸಾಂಗತ್ಯ ಇದ್ದಿದ್ದು ಮೌನದೊಂದಿಗೆ. ವಿವರಗಳಲ್ಲಿ, ಕಥಾನಕದ ನಡೆಯನ್ನು ಸ್ಟಿಲ್ ಆಗಿಸಿ ಮೌನವನ್ನು ತುಂಬುವುದು ಹೇಗೆ ಎನ್ನುವುದಕ್ಕೆ ಉತ್ತಮ ಉದಾಹರಣೆ ರುಲ್ಫೋ. ರುಲ್ಫೋ ಬರೆದಿದ್ದನ್ನೇ ಗಮನಿಸಿ ತಿಳಿದುಕೊಳ್ಳುವುದು ಸಾಕಷ್ಟಿದೆ. ಹಾಗಾಗಿಯೇ ಈತನ ಒಟ್ಟು ಮುನ್ನೂರು ಪುಟಗಳ ಸಾಹಿತ್ಯದ ಬಗ್ಗೆ ಮುವ್ವತ್ತಮೂರು ಭಾಷೆಗಳಲ್ಲಿ 567 ಪುಸ್ತಕಗಳು, 2646 ಪ್ರಬಂಧಗಳು ತಲೆಕೆಡಿಸಿಕೊಂಡಿವೆಯಂತೆ! ಇದೀಗ ಕನ್ನಡದ ಸರದಿ.

ತನ್ನ ಬದುಕಿನಲ್ಲಿ ಅನೇಕ ಮೌನಗಳಿಗೆ ಎನ್ನುವ ರುಲ್ಫೋ ತನ್ನ ಕಾದಂಬರಿ ಹಲವು ಬಗೆಯ ಮೌನಗಳ ವಿನ್ಯಾಸ ಎಂದಿದ್ದಾನೆ. ಆತ ಹೆಚ್ಚು ಮಾತನಾಡುತ್ತಿರಲಿಲ್ಲ. ಅವನು ಆಡುತ್ತಿದ್ದ ಅಷ್ಟೋ ಇಷ್ಟೋ ಮಾತು ಅನೇಕರಿಗೆ ಅರ್ಥವೇ ಆಗುತ್ತಿರಲಿಲ್ಲ. ಸಹಜವೇ. ಅರ್ಥ ಮಾಡಿಕೊಳ್ಳುವುದೆಂದರೆ ಅದರೊಂದಿಗೆ ನಾವು ಅನುಸಂಧಾನ ನಡೆಸುವುದು, ಕನೆಕ್ಟ್ ಮಾಡಿಕೊಳ್ಳುವುದು. ಅಥವಾ ಅದನ್ನೇ ಸರಳವಾಗಿ ಹೇಳುವುದಾದರೆ, ಅರ್ಥ ಮಾಡಿಕೊಳ್ಳುವುದೆಂದರೆ ಪ್ರೀತಿಸುವುದು. ಪ್ರೀತಿಸುವುದು ಎಂದರೇನೆ ಅರ್ಥ ಮಾಡಿಕೊಳ್ಳುವುದು. ಎಷ್ಟೋ ಬಾರಿ ನಾವು ಅರ್ಥ ಮಾಡಿಕೊಳ್ಳುವುದಿಲ್ಲ. ಅಂದರೆ ನಾವು ಪ್ರೀತಿಸುವುದಿಲ್ಲ. ರುಲ್ಫೋನನ್ನು ಪ್ರೀತಿಸುವುದು ಸಾಧ್ಯವಾದರೆ ಅವನು ನಿಮಗೆ ಅರ್ಥವಾಗುತ್ತಾನೆ. ಅದು ಅಷ್ಟು ಸುಲಭ ಮತ್ತು ಕಷ್ಟ.

(ಈ ಲೇಖನ 05/03/2017 ರ ಪ್ರಜಾವಾಣಿ ಮುಕ್ತಛಂದದಲ್ಲಿ ಪ್ರಕಟಿತ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ