Wednesday, May 17, 2017

ಸುವರ್ಣ ಸಂಧ್ಯಾ

ಒಂದು ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಬೇರೆ ಕಾಲೇಜು ವಿದ್ಯಾರ್ಥಿಗಳಂತಲ್ಲ. ಹೆಚ್ಚಿನವರು ದುಡಿಯುವ ವರ್ಗಕ್ಕೆ ಸೇರಿದವರು, ಗೃಹಿಣಿಯರು, ಪ್ರಮೋಶನ್ ಇತ್ಯಾದಿ ಉದ್ದೇಶವುಳ್ಳವರು. ಕೆಲವರದು ಸ್ವೋದ್ಯೋಗದ ಸಾಹಸ ಕೂಡ. ಇಲ್ಲಿನ ವಿದ್ಯಾರ್ಥಿಗಳ ವಯೋಮಾನ, ಮನೋಧರ್ಮ ಮತ್ತು ಸಾಮಾಜಿಕ ಸ್ಥಿತಿಗತಿ, ವ್ಯಾಪಾರ ವ್ಯವಹಾರ ಯಾವುದೂ ಒಂದೇ ತರ ಇರುವುದಿಲ್ಲ.

ಹಲವಾರು ವರ್ಷಗಳಿಂದ ಇಂಥ ವಿದ್ಯಾರ್ಥಿಗಳಿಗೇ ಕಲಿಸುತ್ತ ಬಂದ ಶಿಕ್ಷಕರ ಅನುಭವವೇ ಒಂದು ವಿಭಿನ್ನ ಲೋಕಕ್ಕೆ ಸೇರಿದ್ದಾದರೆ ಸ್ವತಃ ಈ ವಿದ್ಯಾರ್ಥಿಗಳ ಬದುಕು ಬವಣೆಗಳ ಕತೆಗೆ ಕಿವಿಗೊಟ್ಟರೆ ಇನ್ನೊಂದೇ ಲೋಕ ತೆರೆದುಕೊಳ್ಳುತ್ತದೆ. ಇದೊಂದು ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಸಮೃದ್ಧವಾದ ಸಾಮಾಗ್ರಿಯುಳ್ಳ ಕ್ಷೇತ್ರ.

ಇಂಥ ಒಂದು ಕಾಲೇಜು ಸುವರ್ಣ ಸಂಭ್ರಮವನ್ನಾಚರಿಸುವ ಸಂಗತಿಯೇ ರೋಮಾಂಚನವನ್ನುಂಟು ಮಾಡುವಂಥದ್ದು. ಅದು ಮಂಗಳೂರಿನ ‘ಸಂತ ಅಲೊಶಿಯಸ್ ಸಂಧ್ಯಾ ಕಾಲೇಜ್‌’ನ ಹಿರಿಮೆ. ಇಲ್ಲಿನ ಅಧ್ಯಾಪಕ ಮಹಾಲಿಂಗ ಭಟ್ಟರ ಮುತುವರ್ಜಿಯಿಂದಾಗಿ ವಾರ್ಷಿಕ ಸಂಚಿಕೆಯೊಂದು ಕನ್ನಡದಲ್ಲೇ ರೂಪುಗೊಂಡು ಸಂಗ್ರಾಹ್ಯವಾದ ಕೃತಿ ಸಂಪುಟವಾಗಿದೆ.

ಮಹಾಲಿಂಗ ಭಟ್ಟರು ನಿಂತು ರೂಪಿಸಿರುವ ಈ ಪುಸ್ತಕದ ಅರ್ಧದಷ್ಟು ಭಾಗದಲ್ಲಿ ಸುಮಾರು ಐವತ್ತು ಅರವತ್ತು ಮಂದಿ, ಏನೇನೋ ಉದ್ಯೋಗ, ವ್ಯಾಪಾರ ಮತ್ತೊಂದು ಮಾಡುತ್ತಾ ಸಂಜೆ ಹೊತ್ತು ಕಲಿತು ಬದುಕು ರೂಪಿಸಿಕೊಂಡ ಕತೆಗಳಿವೆ. ಕೆಲವು ಹೆಮ್ಮಕ್ಕಳು, ವಿವಾಹಿತರು ಅನುಭವಿಸಿದ ದಾರುಣ ಸಂಕಷ್ಟಗಳ ಕತೆಗಳೂ ಇವೆ. ಆ ಕಳೆದುಹೋದ ದಿನಗಳ ಬವಣೆ, ಅದರಲ್ಲೇ ತಾವು ಸಾಧಿಸಿದ್ದರ ಕುರಿತ ಸಾರ್ಥಕತೆ, ಆ ಎಲ್ಲ ಕಷ್ಟನಷ್ಟಗಳ ನಡುವೆಯೂ ಇದ್ದ ಒಂದು ವಿವರಿಸಲಾಗದ ಸಂಭ್ರಮ ಇಲ್ಲಿನ ಬರಹಗಳಲ್ಲಿ ಮಡುಗಟ್ಟಿದೆ. ಅಸಾಹಿತ್ಯಿಕ ವಲಯದಿಂದ ಬಂದ, ಮಣ್ಣಿನವಾಸನೆಯುಳ್ಳ ಈ ಲೇಖನಗಳನ್ನು ಓದುವುದೇ ಒಂದು ಸುಂದರ ಅನುಭವ. ಇದರ ಜೊತೆಗೆ ಸಂಜೆ ಕಲಿಕೆಯ ಕುರಿತು ಇನ್ನೂ ನಲವತ್ತರಷ್ಟು ಲೇಖನಗಳಿದ್ದು ಶಿಕ್ಷಣಕ್ರಮದ ಬಗ್ಗೆ ದಿಕ್ಸೂಚಿಯಾಗಬಲ್ಲ ಹಲವಾರು ವಿಚಾರಗಳನ್ನು ಇವು ಮಂಡಿಸುತ್ತಿವೆ.

ಕೃತಿಯ ಮೊದಲರ್ಧ ಭಾಗದಲ್ಲಿ ಈ ಸಂಪುಟಕ್ಕೆ ಘನತೆಯನ್ನೊದಗಿಸಿದ ಇನ್ನೂ ಒಂದು ವೈಶಿಷ್ಟ್ಯವಿದೆ. ಇಟಲಿಯ ಚಿತ್ರ ಕಲಾವಿದ ರೆವರೆಂಡ್ ಮೊಸ್ಕೆನಿಯ ಕುರಿತ ಮಾಹಿತಿ, 125 ವರ್ಷಗಳ ಹಿಂದೆ ಇಲ್ಲಿನ ಚಾಪೆಲ್ ಅಲಂಕರಿಸಿದ, ಆತ ರಚಿಸಿದ ಅಪೂರ್ವ ಚಿತ್ರಗಳು, ಆತನ ಸ್ಕೆಚ್ ಬುಕ್ಕಿನಲ್ಲಿನ ಚಿತ್ರಗಳು, ಸಂಬಂಧಿತ ವಿವರಗಳು ಇವೆ.

ಚಾಪೆಲ್‌ನ ಛಾವಣಿಯ ಚಿತ್ರಗಳನ್ನೆಲ್ಲ ಕ್ಯಾಮೆರಾದಲ್ಲಿ ಹಿಡಿದಿದ್ದೇ ಒಂದು ಸಾಹಸದ ಕತೆ. ಇಷ್ಟು ಸಾಲದೆಂಬಂತೆ ಹೆಚ್ಚೂಕಡಿಮೆ ಅಜ್ಞಾತವಾಗಿದ್ದ, ತೀರ ಹಳೆಯವಾಗಿ ಶಿಥಿಲಗೊಳ್ಳುವಂತಿದ್ದ ಮೊಸ್ಕೆನಿಯ ಚಿತ್ರಗಳ ಆಲ್ಬಮ್‌ಗಳನ್ನು ಹುಡುಕಿ ತೆಗೆದು, ಅವುಗಳ ಚಿತ್ರ ತೆಗೆಸಿ, ಮುದ್ರಣಕ್ಕೆ ಅಣಿಗೊಳಿಸಿ, ಅಗತ್ಯ ವಿವರಗಳೊಂದಿಗೆ ಈ ಸಂಪುಟದಲ್ಲಿ ಒದಗಿಸಿದ್ದು ನಿಜಕ್ಕೂ ಮಹಾಲಿಂಗ ಭಟ್ಟರ ಸಾಧನೆಯೇ ಸರಿ.

ಎಲ್ಲರೂ ಮರೆತಿದ್ದ, ‘ತಾನೆಲ್ಲಿ ಮಲಗಿದ್ದೇನೆಂದು ಹೇಳುವ ಒಂದು ಕಲ್ಲು ಕೂಡ ನೆಡದ ಮರಣ’ವನ್ನು ಪಡೆದ ಮೊಸ್ಕೆನಿಯ ಕಲೆಗೆ ಇದಕ್ಕಿಂತ ಒಳ್ಳೆಯ ಶೃದ್ಧಾಂಜಲಿ ಸಾಧ್ಯವೆ! ತನ್ನ ತಾತನ ನೆನಪುಗಳನ್ನು ಅರಸಿ ಬಂದ ಇಟೆಲಿಯ ಮೊಮ್ಮಗಳಿಗೂ ಸಿಗದೇ ಹೋಗಿದ್ದ ಆಲ್ಬಮ್ಮುಗಳು ಮಹಾಲಿಂಗ ಭಟ್ಟರ ಕೈಗೆ ಸಿಕ್ಕಿದ್ದು, ಅವು ಹೀಗೆ ನಮ್ಮ ತನಕ ತಲುಪಿದ್ದು ಎಲ್ಲವೂ ಒಂದರ್ಥದಲ್ಲಿ ಕಾಕತಾಳೀಯವೇ.

ಏಕೆಂದರೆ ಸಂಜೆ ಕಾಲೇಜೊಂದು ಹೀಗೆ ಗತಕಾಲಕ್ಕೆ ಸಂದುಹೋದ ಒಬ್ಬ ಶ್ರಮಜೀವಿಯ ಕಲೆಯನ್ನು, ಪ್ರತಿಭೆಯನ್ನು ಗುರುತಿಸುತ್ತಿರುವುದೇ ಇಲ್ಲಿ ಒಂದು ರೂಪಕದಂತಿದೆ. ಹಾಗೆಯೇ ಇಲ್ಲಿನ ವಿದ್ಯಾರ್ಥಿ (ರಾಮಚಂದ್ರ ಪವಾರ್) ಹಸಿಮಣ್ಣಿನಲ್ಲೇ ರಚಿಸಿದ, ಮಣ್ಣು ಒಣಗಿ ಗಟ್ಟಿಯಾದದ್ದೇ ಒಡೆದು ಬಿಡುವ ಒಂದು ಅಪೂರ್ವ ಮೃಣ್ಮಯೀ ಶಿಲ್ಪದ ಚಿತ್ರವನ್ನೇ ಮುಖಪುಟದಲ್ಲಿ ಹೊತ್ತ, ಪ್ರತಿ ಪುಟದಲ್ಲೂ ಮೊಸ್ಕೆನಿಯ ನೆನಪಿನ ಗಂಧ ಹೊತ್ತ, ಅತ್ಯಂತ ತಾಳ್ಮೆ ಮತ್ತು ಪರಿಶ್ರಮದಿಂದ ರೂಪಿಸಿರುವ, ಗುಣಮಟ್ಟದ ಹಾಳೆಯಲ್ಲಿ ಸರ್ವಾಂಗ ಸುಂದರವಾಗಿ ಮುದ್ರಣಗೊಂಡ ಈ ಪುಸ್ತಕ ಬುದ್ಧಿಗೂ ಭಾವಕ್ಕೂ ಸಮಾನವಾಗಿ ಸಲ್ಲುವ ಒಂದು ಅಪೂರ್ವ ಕೃತಿ.

ಪ್ರಜಾವಾಣಿ ಮುಕ್ತಛಂದದಲ್ಲಿ (ಜನವರಿ 7,2017) ಪ್ರಕಟಿತ.

No comments: