Wednesday, May 17, 2017

ಮೌನ ಧ್ವನಿಗಳೊಂದಿಗೆ....

ನಿಮಗೆ ನೆನಪಿರಬಹುದು, ‘ಅವರಿಗೆ ಹೇಳು- ನನ್ನನ್ನು ಕೊಲ್ಲಬೇಡಿ ಎಂದು!’ ಎಂಬ ಹೆಸರಿನ ಕತೆಯೊಂದು ದೇಶಕಾಲ ತ್ರೈಮಾಸಿಕದ ಆರನೆಯ ಸಂಚಿಕೆಯಲ್ಲಿ, ಅಂದರೆ 2006ರಲ್ಲಿ ಪ್ರಕಟವಾಗಿತ್ತು. ಹುವಾನ್ ರುಲ್ಫೊನ ಈ ಕತೆಯನ್ನು ವಿಶಾಲಾ ಕನ್ನಡಕ್ಕೆ ತಂದಿದ್ದರು. ಕತೆ ಹೇಗಿತ್ತೆಂದರೆ, ಕಿತ್ತುಕೊಂಡು ಕಾಡುವಷ್ಟು ತೀಕ್ಷ್ಣವಾಗಿತ್ತು.

ಈಗ ನಿಮಗೆ ಹೇಳಿಬಿಡುತ್ತೇನೆ. ತುಂಬ ಎಂದರೆ ತುಂಬಾ ಹಿಂದೆ, ನಾನೊಂದು ತಪ್ಪೆಸಗಿದ್ದೆ. ಇಷ್ಟು ಕಾಲ ಹೇಗೋ ಅದನ್ನು ಯಾರಿಗೂ ತಿಳಿಯದ ಹಾಗೆ, ದೊಡ್ಡ ಇಶ್ಯೂ ಆಗದ ಹಾಗೆ ಹೇಗೋ ಕಷ್ಟಪಟ್ಟು ನಿಭಾಯಿಸಿಕೊಂಡು ಬಂದಿದ್ದೇನೆ. ಆದರೆ ಈಗ ಅದು ಬಯಲಾಗಿದೆ, ಅದಕ್ಕೆ ಶಿಕ್ಷೆಯಾಗುವ ಕಾಲ ಒದಗಿದೆ. ತಪ್ಪು-ಸರಿ ಗೊತ್ತಿದೆ ನನಗೆ. ಆ ತಪ್ಪು ನಡೆದು ಹೋದ ಘಳಿಗೆ ಏನಿದೆ, ಅದು ನನ್ನ ಕೈಮೀರಿದ್ದಾಗಿತ್ತು. ಇಲ್ಲವಾದಲ್ಲಿ ನಾನೂ ನಿಮ್ಮೆಲ್ಲರ ಹಾಗೆ, ನಿಮ್ಮಷ್ಟೇ ಸಭ್ಯ ಮನುಷ್ಯ. ನನಗೂ ನೋವು,ನಲಿವು,ಸುಖ,ದುಃಖ ಎಲ್ಲ ಇವೆ. ಹೇಗೋ ಏನೋ, ಒಂದು ಹುಚ್ಚು ಆವೇಶದ ಆವೇಗದಲ್ಲಿ ಅದೆಲ್ಲ ಆಗಿ ಹೋಯಿತು. ತಪ್ಪಾಯಿತು ಎಂದೆನಲ್ಲ. ಪಾಪಪ್ರಜ್ಞೆಯಿಂದ ನರಳಿದ್ದೇನೆ, ಆ ತಪ್ಪು ಮುಚ್ಚಿಡಲು ಇಡೀ ಬದುಕಿನುದ್ದಕ್ಕೂ ಏನೇನೆಲ್ಲ ಮಾಡಿದ್ದೇನೆ, ಅಕ್ಷರಶಃ ಕದ್ದುಮುಚ್ಚಿ ಬದುಕಿದ್ದೇನೆ, ಅದಕ್ಕೆಂದೇ ಬದುಕಿನ ಎಷ್ಟೋ ಖುಶಿ, ಸಹಜ ಸುಖಕ್ಕೆ ಎರವಾಗಿ ಮುಕ್ಕಾಗಿದ್ದೇನೆ. ನಿದ್ದೆ ಎಚ್ಚರದಲ್ಲಿ ಅದನ್ನು ನಾನೇ ಮಾಡಿದೆನೆ, ನಾನಷ್ಟು ಕೆಟ್ಟವನಾಗಿ ಬಿಟ್ಟೆನೆ ಎಂದೆಲ್ಲ ಪ್ರಶ್ನಿಸಿಕೊಂಡಿದ್ದೇನೆ, ಆಶ್ಚರ್ಯಪಟ್ಟಿದ್ದೇನೆ. ಇನ್ನೂ ನನಗೆ ಶಿಕ್ಷೆ ಕೊಡುವುದಿದೆಯೆ? ಇನ್ನೇನು ಅವರು ನನ್ನನ್ನು ಗುಂಡಿಟ್ಟು ಕೊಲ್ಲಲಿದ್ದಾರೆ. ದಯವಿಟ್ಟು ನನ್ನ ಪರವಾಗಿ ನೀವು ಅವರಿಗೆ ಒಂದು ಮಾತು ಹೇಳಿ, ನನ್ನನ್ನು ಕೊಲ್ಲಬೇಡಿ ಎಂದು ಹೇಳಿ - ಎನ್ನುವ ಒಂದು ಪಾತ್ರ ಮಾಡಿದ್ದು ಘೋರ ಹತ್ಯೆ, ಕ್ಷಮಿಸುವುದು ಕಷ್ಟವಾದಂಥ ಹತ್ಯೆ ಎನ್ನುವುದು ಕ್ರಮೇಣ ನಿಮಗೆ ತಿಳಿಯುತ್ತದೆ. ಶಿಕ್ಷೆ ಕೊಡಲು ಬಂದಾತ ಯಾರೋ ಅಧಿಕಾರಿಯಲ್ಲ. ಹಾಗೆ ಘೋರವಾಗಿ ಹತ್ಯೆಗೀಡಾದ ವ್ಯಕ್ತಿಯ ಸ್ವಂತ ಮಗ ಎನ್ನುವುದು ಕೊನೆ ಕೊನೆಗೆ ತಿಳಿಯುತ್ತದೆ. ಆದರೂ ನನಗೆ ಆಗುತ್ತಿರುವ ಶಿಕ್ಷೆಯ ಬಗ್ಗೆ ಅದಾಗಲೇ ನಿಮ್ಮಲ್ಲಿ ಮರುಕ ಹುಟ್ಟಿಕೊಂಡಿದೆ. ನನಗೆ ಆಗುತ್ತಿರುವುದು ಸರಿ ಎಂದೂ, ಬೇಡವಿತ್ತು ಎಂದೂ ಏಕಕಾಲಕ್ಕೆ ಅನಿಸತೊಡಗಿದೆ. ಇಲ್ಲಿ ಅಪರಾಧಿಯಾಗಿ ನಿಂತ ಪಾತ್ರ ದಯನೀಯವಾಗಿ ಬದುಕುವ ಆಸೆಹೊತ್ತು ಬೇಡಿಕೊಳ್ಳುತ್ತಿರುವುದು ತನ್ನ ಸ್ವಂತ ಮಗನನ್ನು. ಸಾಯಲಿರುವಾತ ತನ್ನ ಸ್ವಂತ ತಂದೆಯಾಗಿದ್ದೂ ಆ ಬಗ್ಗೆ ಏನೂ ಮಾಡಲಾರದೆ ಸುಮ್ಮನೇ ಅದಕ್ಕೆ ಪ್ರೇಕ್ಷಕನಾಗಬೇಕಾಗಿ ಬಂದಿದೆ ಮಗನಿಗೆ. ಇಲ್ಲಿ ಓದುಗ ಏಕಕಾಲಕ್ಕೆ ಈ ಮೂರೂ ಪಾತ್ರಗಳೊಂದಿಗೆ ನಿಲ್ಲುತ್ತಾನೆ, ಮೂರೂ ಪಕ್ಷದೊಂದಿಗೆ ನಿಂತು ಆಯಾ ಪಾತ್ರದ ತುಮುಲ, ದ್ವಂದ್ವ, ಆತಂಕಗಳನ್ನು ಅನುಭವಿಸುತ್ತಾನೆ, ಸ್ಪಂದಿಸುತ್ತಾನೆ. ಇಷ್ಟು ಪರಿಣಾಮಕಾರಿಯಾಗುವಂಥದ್ದೇನಿತ್ತು ಈ ಒಂದು ಪುಟ್ಟ ಕತೆಯಲ್ಲಿ ಎಂದು ಹಲವರು ತಲೆಕೆಡಿಸಿಕೊಂಡಿದ್ದು ಸಹಜವಾಗಿಯೇ ಇದೆ.

ಮುಂದೆ 2013ರಲ್ಲಿ ಎಸ್ ದಿವಾಕರ್ ಅವರ ‘ಹಾರಿಕೊಂಡು ಹೋದವನು’ ಸಂಕಲನದಲ್ಲಿ ‘ನಮಗವರು ಜಮೀನು ಕೊಟ್ಟರು’ ಬಂತು. ಮುಂದೆ 2015ರ ಜೂಲೈ ತಿಂಗಳಲ್ಲಿ ಒಂದು ದಿನ ವಿವೇಕ್ ಶಾನಭಾಗ್ ನನಗೆ ಆವತ್ತಿನ ಪುರವಣಿಯೊಂದರಲ್ಲಿ ಪ್ರಕಟವಾದ ಒಂದು ಪುಟ್ಟ ಕತೆಯ ಬಗ್ಗೆ ಬಹಳ ಉತ್ಸಾಹದಿಂದ ಹೇಳತೊಡಗಿದರು. ಅದನ್ನು ಓದಿದಾಗ ತಮಗೆ ರುಲ್ಫೋ ಕತೆ ನೆನಪಾಯಿತೆಂದೂ, ಅದನ್ನು ತಪ್ಪದೇ ಓದಬೇಕೆಂದೂ ಹೇಳಿ, ಜೊತೆಗೆ ‘ತಲ್ಪಾ’ ಕತೆಯ ಒಂದು ಅನುವಾದಿತ ಪ್ರತಿಯನ್ನು ಕಳಿಸಿಕೊಟ್ಟರು ಮಾತ್ರವಲ್ಲ ಈಗಲೂ ಯೂಟ್ಯೂಬಿನಲ್ಲಿ ಲಭ್ಯವಿರುವ ಅದರ ಚಲಚಿತ್ರ ಆವೃತ್ತಿಯ ಕೊಂಡಿಯನ್ನೂ ಕೊಟ್ಟರು. ‘ತಲ್ಪಾ’ ಕತೆಯಲ್ಲೂ ಇರುವುದು ಪಾಪ, ಅದನ್ನು ಆಗುಗೊಳಿಸಿದ ಮಾನವ ಸಹಜ ದೌರ್ಬಲ್ಯ ಅಥವಾ ವಿಧಿಯೇ ಕೆಲವು ಪಾತ್ರಗಳ ಬದುಕಿನಲ್ಲಿ ತಂದಿಟ್ಟ ದುರ್ಬಲ ಘಳಿಗೆ, ಕಾಡುವ ಪಾಪಪ್ರಜ್ಞೆ, ಪಾಪಕ್ಕಾಗುವ ಶಿಕ್ಷೆ. ಇಲ್ಲಿಯೂ ಪಾಪಿ, ಪಾಪಕ್ಕೆ ಪ್ರೇರಣೆಯಾದದ್ದು, ಬಲಿಪಶುವಾದ ವ್ಯಕ್ತಿ ಮತ್ತು ಶಿಕ್ಷೆಯ ತೀವೃತೆ ಎಲ್ಲದರೊಂದಿಗೂ ಓದುಗ ನಲುಗುತ್ತಾನೆ. ಅವನು ಎಲ್ಲರ ಪಕ್ಷವನ್ನೂ ವಹಿಸುತ್ತಾನೆ, ಎಲ್ಲರೊಂದಿಗೂ ಒಂದು ಕ್ಷಣ ನಿಂತು ಸ್ಪಂದಿಸಿ ನಿಡುಸುಯ್ಯುತ್ತಾನೆ.

ಸಿಂಗರ್‌ನನ್ನು ಸಮೃದ್ಧವಾಗಿ ಕನ್ನಡಕ್ಕೆ ತಂದ, ಟಾಲ್‌ಸ್ಟಾಯ್, ನೆರೂಡನನ್ನು ಅನುವಾದಿಸಿದ ಓ.ಎಲ್.ನಾಗಭೂಷಣ ಸ್ವಾಮಿ ಈಗ ರುಲ್ಫೋನ ಎಲ್ಲ ಕತೆಗಳನ್ನು, ಕಾದಂಬರಿಯನ್ನು ಕನ್ನಡಕ್ಕೆ ಒದಗಿಸಿ ಮಹದುಪಕಾರ ಮಾಡಿದ್ದಾರೆ. ಅನುವಾದಕ್ಕಿಳಿಯುವುದು ಯಾವ ಬರಹಗಾರನಿಗೂ ಒಂದು ವ್ರತವೇ. ಬಹುಮಟ್ಟಿಗೆ ಅದೊಂದು ಥ್ಯಾಂಕ್‌ಲೆಸ್ ಜಾಬ್ ಕೂಡ ಹೌದು. ಆದರೆ ಅನುವಾದದ ಕುರಿತು ಗಂಭೀರವಾದ ಚಿಂತನ-ಮಂಥನ ನಡೆಸಿರುವ ಓಎಲ್ಲೆನ್ ಈ ಅನುವಾದದ ಹಿಂದಿನ ಪ್ರೇರಣೆಗಳನ್ನು ನೆನೆಯುತ್ತ ಬರೆದಿರುವ ಎರಡು ಮಾತುಗಳು ಅತ್ಯಂತ ಅರ್ಥಪೂರ್ಣವೂ, ಸಾಂಕೇತಿಕವಾಗಿ ಕನ್ನಡ ಮೈಗೂಡಿಸಿಕೊಳ್ಳಬೇಕಾದ ಸಂಪನ್ನತೆಗೆ ಮಾರ್ಗದರ್ಶಿಯೂ ಆಗಿದ್ದು ಮನಸೆಳೆಯುವಂತಿದೆ. ವಿವೇಕ್ ಶಾನಭಾಗ ಅವರು ದೇವನೂರ ಮಹದೇವರಿಗೆ ಓದಲು ಕೊಟ್ಟ ಪುಸ್ತಕವನ್ನು ಪಡೆದು ತಾವೂ ಓದಿದ ಓಎಲ್ಲೆನ್ ಕನ್ನಡದ ಹೊಸ ಬರಹಗಾರರು, ವಿಮರ್ಶಕರು, ಓದುಗರು ಎಲ್ಲರಿಗೂ ಈ ಅಪೂರ್ವ ನಿಧಿ ದೊರಕಬೇಕೆಂಬ ತುಡಿತಕ್ಕೆ ಒಳಗಾಗುತ್ತಾರೆ. ಕಾದಂಬರಿಯನ್ನು ಅನುವಾದಿಸುತ್ತಾರೆ. ಆದರೆ ಅದೇ ವಿವೇಕ್ ಈ ಓಎಲ್ಲೆನ್ ಅವರನ್ನು ಅಷ್ಟಕ್ಕೆ ಬಿಡುವುದಿಲ್ಲ. ಇಷ್ಟು ಮಾಡಿದವರಿಗೆ ಅಷ್ಟೇನೂ ಹೆಚ್ಚಲ್ಲ ಎನ್ನುತ್ತ ರುಲ್ಫೋನ ಹದಿನೇಳು ಕತೆಗಳನ್ನೂ ಅನುವಾದಿಸಲು ಪ್ರೇರೇಪಿಸುತ್ತಾರೆ. ಅವರ ಅಪಾರ ಶ್ರಮ, ತಾಳ್ಮೆ ಮತ್ತು ಸಮಯ ನುಂಗಿದ ಈ ವ್ರತದ ಕರಗ ಹೊರಲು ಇದ್ದ ಪ್ರೇರಣೆ, ಒತ್ತಾಸೆಗಳು ಒಟ್ಟಾರೆಯಾಗಿ ನಮ್ಮದೇ, ನಮ್ಮ ಕನ್ನಡದ್ದು. ಬಹುಶಃ ಒಂದು ದಶಕದ ಹಿಂದೆಯೇ ಈ ಮಹತ್ಕಾರ್ಯದ ಪ್ರೇರಣೆಗಳು ಅಲೆಯಲೆಯಾಗಿ ಕನ್ನಡದ ತೀರವನ್ನು ತಡವುತ್ತಿದ್ದಿರಬೇಕೆಂದೇ ಅನಿಸುತ್ತದೆ. ಓಎಲ್ಲೆನ್ ಅನುವಾದದಲ್ಲಿ ಒಂದು ವಿಶೇಷವಿದೆ. ನಿಗೂಢವಾಗಿ ಕಥಾನಕದ ಒಡಲು ತೆರೆದಿಡುತ್ತ ಸಾಗುವ ರುಲ್ಫೋನನ್ನು ಹೇಗೆ ಓದಬೇಕೆಂಬುದೇ ಒಂದು ಒಗಟಾಗಿ ಜಗತ್ತಿನಾದ್ಯಂತ ಓದುಗರನ್ನು ವಿಮರ್ಶಕರನ್ನು ಕಾಡಿದೆ. ಓಎಲ್ಲೆನ್ ಅವರ ಅನುವಾದ ಕೂಡ, ಅವರು ಸ್ವತಃ ಒದಗಿಸಿರುವ ಐದು ಸಮರ್ಥ ಅನುಬಂಧಗಳ ಹೊರತಾಗಿಯೂ ಈ ಗುಣವನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ. ರುಲ್ಫೋ ದಕ್ಕುವುದು ಕೊಂಚ ಕಷ್ಟವಾಗಬಹುದು ಎನ್ನುವ ಅನುಮಾನ ಸ್ವತಃ ಓಎಲ್ಲೆನ್ ಅವರನ್ನೂ ಕಾಡಿದಂತಿದೆ.

"I think therefore I am" ಎಂದ ಡೆಸ್ಕಾರ್ಟಸ್. ಆದರೆ ಯೋಚಿಸುತ್ತಿರುವುದು ಯಾರು ಮತ್ತು ಈ ಯೋಚನೆ ಎಂಬುದು ಏನು? ನಿಜಕ್ಕಾದರೆ ಇರುವುದು ಯೋಚನೆಗಳಲ್ಲವೆ? ನಾವದನ್ನು ಸುಮ್ಮನೇ ಸೆಳೆದುಕೊಂಡಿದ್ದೇ ಅದೇ ನಾವಾಗಿ ಬಿಡುತ್ತೇವೆಯೆ? ಒಂದು ಮೊಬೈಲ್ ಫೋನು ಮೆಸೇಜುಗಳನ್ನು ಥಟ್ಟನೆ ತೋರಿಸುವಷ್ಟೇ ಸಹಜವಾಗಿ ನಮ್ಮ ಸುತ್ತಮುತ್ತ ಹರಿದಾಡುತ್ತಿರುವ ಯೋಚನೆಗಳನ್ನು ನಾವು ತಡಕುತ್ತ ಅಥವಾ ಅವು ನಮ್ಮನ್ನು ತಡಕುತ್ತಾ ಇರುವುದರಿಂದಲೇ ಅದೇ ನಾವೆಂಬ ಒಂದು ಭ್ರಾಂತಿಗೆ ಬಿದ್ದು ಅಸ್ಮಿತೆಯ ಅಹಂಕಾರಕ್ಕೆ ತುತ್ತಾಗಿದ್ದೇವೆಯೆ? ಮೊಬೈಲ್ ಫೋನಿಗೆ ಬಂದ ಮೆಸೇಜುಗಳೇ ಮೊಬೈಲ್ ಫೋನೆ? ಮನುಷ್ಯನ ಮೆದುಳು ಕೇವಲ ಪರಿಸರದಲ್ಲಿರುವ ಯೋಚನೆಗಳಿಗೆ ಟ್ಯೂನ್ ಮಾಡಿಕೊಳ್ಳುವ ಸಾಮರ್ಥ್ಯವಷ್ಟೇ ಇರುವ ಒಂದು ಸಾಧನವಿರಬಹುದೆ? ನಮ್ಮ ಸುತ್ತಮುತ್ತ ಇದೀಗ ನೂರಾರು, ಸಾವಿರಾರು ಬಗೆಯ ಭಾವನೆ, ಯೋಚನೆ, ಚಿಂತನೆ ಎಲ್ಲ ಹರಿದಾಡುತ್ತ ಇದ್ದಿರಬಹುದೆ? ನಮಗೆ ಅವು ಕೇಳೀತೇ?

ರುಲ್ಫೋನ ಕಾದಂಬರಿಯ ತುಂಬ ಇರುವ ಪಾತ್ರಗಳು ಏನೇನೋ ಗಳಹುತ್ತ ಇರುತ್ತವೆ. ಅವುಗಳ ಹಿಂದೆ ಕತೆಯೇನು, ಚರಿತ್ರೆಯೇ ಇದೆ. ಕ್ರಮೇಣ ನಿಮಗೆ ಗೊತ್ತಾಗುವುದೇನೆಂದರೆ ಆ ಯಾವ ಪಾತ್ರಗಳೂ ನಮ್ಮ ನಿಮ್ಮಂತೆ ಜೀವಂತವಿಲ್ಲ. ಸತ್ತಿವೆ, ಸಾಯುತ್ತಿವೆ, ಗೋರಿಯಲ್ಲಿ ಮಲಗಿವೆ, ಅಶಾಂತ ಪ್ರೇತಗಳಂತೆ ಅಲೆಯುತ್ತಿವೆ ಇತ್ಯಾದಿ ಇತ್ಯಾದಿ. ಎಷ್ಟೋ ಬಾರಿ ಮಾತು ಕೇಳುತ್ತಲೇ ಇಲ್ಲ, ಆದರೆ ನಿಮಗವು ತಲುಪುತ್ತಿವೆ, ಕನಸಿನಲ್ಲಿ ಯಾರೋ ಏನೋ ಹೇಳಿದ್ದನ್ನು ಕೇಳಿಸಿಕೊಂಡ ಹಾಗೆ. ದೇಹವಿಲ್ಲದೆ, ಧ್ವನಿಯಿಲ್ಲದೆ ನಿಮ್ಮನ್ನು ಮಾತು, ಕತೆ, ದೃಶ್ಯ ಎಲ್ಲವೂ ತಲುಪುತ್ತಿದೆ ಇಲ್ಲಿ, ರುಲ್ಫೋನ ಕತೆಯಲ್ಲಿ. ಇದೊಂದು ತರ ನೀವು ಈಗಾಗಲೇ ಓದಿರುವ ನೂರಾರು ಪುಸ್ತಕಗಳ ನಡುವೆ ಕುಳಿತಿರುವಾಗ ಆ ಎಲ್ಲ ಪುಸ್ತಕಗಳಿಂದ ಯಾವುಯಾವುದೋ ಪಾತ್ರಗಳು ಇದ್ದಕ್ಕಿದ್ದ ಹಾಗೆ ನಿಮ್ಮೊಂದಿಗೆ ಮಾತಿಗೆ ತೊಡಗಿದ ಹಾಗೆ! ಒಬ್ಬರೇ ಸ್ನಾನ ಮಾಡುತ್ತಿರುವಾಗ, ಟಾಯ್ಲೆಟ್ಟಿನಲ್ಲಿ ಕುಳಿತಿರುವಾಗ ಹತ್ತು ಹಲವು ಮಂದಿಯ ಜೊತೆ ನೀವೇ ಒಂದು ಕಲ್ಪಿತ ಸಂಭಾಷಣೆಯಲ್ಲಿ ತೊಡಗಿಕೊಂಡು ನಿಮ್ಮ ಮೂಡ್ ನೀವೇ ಕೆಡಿಸಿಕೊಂಡ ಹಾಗೆ.

ರುಲ್ಫೋ ಇದನ್ನು ಎಷ್ಟು ಸಮೃದ್ಧವಾಗಿ, ಸಂಗತವಾಗಿ ಮತ್ತು ಸಂಪನ್ನವಾಗಿ ಮಾಡುತ್ತಾನೆಂದರೆ ಎಲ್ಲಿಯೂ ಅವನು ಕತೆ ಹೇಳುತ್ತಲೇ ಇಲ್ಲ. ಬದಲಿಗೆ ಅವನೇ ಇಲ್ಲಿ ಕತೆ ಆಗುತ್ತಿದ್ದಾನೆ. ಅವನಲ್ಲಿ ನಿರೂಪಕನಿಲ್ಲ. ಅವನೇ ಪಾತ್ರವಾಗಿ ನಿಮಗೆ ವಿವರಿಸುತ್ತಿದ್ದಾನೆ. ಕ್ಯಾಮೆರಾ ಇದೆ, ಕ್ಯಾಮೆರಾಮನ್ ಇಲ್ಲ. ಅವನೊಬ್ಬ ಫೋಟೋಗ್ರಾಫರ್ ಮತ್ತು ಚಲಚಿತ್ರ ಸ್ಕ್ರಿಪ್ಟ್ ರೈಟರ್. ಇದನ್ನು ಹೇಳದೆಯೂ ನೀವು ಅವನ ನಿರೂಪಣೆಯಲ್ಲಿ ಇದರ ಪಸೆ ಧಾರಾಳವಾಗಿಯೇ ಕಾಣುತ್ತೀರಿ. ಅವನು ಕತೆಯನ್ನು ನಮಗೆ ತೋರಿಸುತ್ತಿದ್ದಾನಷ್ಟೇ. ಕತೆಯನ್ನು ಕಾಣುವುದು ನಿಮಗೇ ಬಿಟ್ಟಿದ್ದು. ಹಾಗಾಗಿ ಇಲ್ಲಿ ಯಾವ ಪಾತ್ರ ಎಲ್ಲಿ ನಿಮ್ಮೊಂದಿಗೆ ಮಾತು ನಿಲ್ಲಿಸಿತು ಮತ್ತು ಯಾವ ಹೊಸ ಪಾತ್ರ ನಿಮ್ಮೊಂದಿಗೆ ಮಾತಿಗೆ ಕೂಡಿಕೊಂಡಿತು ಎನ್ನುವುದು ನಿಮ್ಮ ಸಂವೇದನೆಗೇ ನಿಲುಕಬೇಕು. ಅಂತೆಯೇ, ಪಾಪ, ಪಾಪಪ್ರಜ್ಞೆ, ಸ್ವಗತ, ಶಿಕ್ಷೆ ಮತ್ತು ಅನುಕಂಪ ಎಲ್ಲವೂ ಇಲ್ಲಿ ಕಾಲಬದ್ಧವಾಗಿ ನಿಮ್ಮೆದುರಿಗೆ ಬರುತ್ತಿಲ್ಲ. ಒಂದೇ ಕತೆಯ ಬೇರೆ ಬೇರೆ ಪಾತ್ರಗಳು ಒಂದೇ ಕಾಲಘಟ್ಟದಲ್ಲಿ ನಿಂತು ಮಾತನಾಡುತ್ತಲೂ ಇಲ್ಲ. ಇದರಿಂದ ಕೆಲವು ಅನುಕೂಲಗಳೂ ಇವೆ, ಅನಾನುಕೂಲಗಳೂ ಇವೆ.

ಕೊನೆಗೂ ಇಬ್ಬರು ಓದುಗರು ಒಂದೇ ಪುಸ್ತಕವನ್ನು ಓದುವುದು ಸಾಧ್ಯವಿಲ್ಲ. ನಿಮ್ಮ ಓದು ನಿಮ್ಮದು. ನನ್ನ ಓದು ನನ್ನದು. ಹಾಗೆಯೇ ಅನುವಾದ ಕೂಡ. ಓಎಲ್ಲೆನ್ ಅವರಿಗೆ "ನಮಗೆ ಕೊಟ್ಟ ಭೂಮಿ ಇನ್ನೂ ಮುಂದಿದೆ" ಅನಿಸಿದರೆ, ಎಸ್ ದಿವಾಕರ್ ಅವರಿಗೆ "ನಮಗವರು ಕೊಟ್ಟ ಜಮೀನು ನಮ್ಮ ಹಿಂದೆ, ಬಹು ದೂರದಲ್ಲಿದೆ" ಅನಿಸಿದೆ. ಹಾಗೆಯೇ "ನಾವು ಬಡವರೆಂದು" ಕತೆಯಲ್ಲಿ ತಾಚಾಳ ‘ಒಂದೇ ಸಮ ಏರುತ್ತ ಇಳಿಯುತ್ತ ಇರುವ ಮೊಲೆ’ ಅವಳನ್ನು ‘ನಾಶದ ಸಮೀಪಕ್ಕೆ ಒಯ್ಯುತ್ತಿ’ದ್ದರೆ ಒಂದು ಇಂಗ್ಲೀಷ್ ಅನುವಾದದಲ್ಲಿ ಅವು ಅವಳನ್ನು ನಾಶಗೊಳಿಸುವುದಕ್ಕೆಂದೇ ಉಬ್ಬತೊಡಗುತ್ತವೆ. ಇನ್ನೊಂದು ಅನುವಾದದಲ್ಲಿ ಅವು ಅವಳನ್ನು ‘ಪಾಪಕೂಪದತ್ತ ಮತ್ತಷ್ಟು ಮತ್ತಷ್ಟು ತಳ್ಳುವುದಕ್ಕೆ’ ಉಬ್ಬಿಕೊಳ್ಳುತ್ತಿವೆ. ರುಲ್ಫೋ ನಿಮಗೆ ಏರಿಳಿಯುತ್ತಿರುವ ಆ ಮೊಲೆಗಳು ಮತ್ತು ಅವುಗಳನ್ನು ಪ್ರಳಯದ ಭೀತಿಯಿಂದಲೋ ಎಂಬಂತೆ ಕಾಣುತ್ತಿರುವ ಪುಟ್ಟ ತಮ್ಮನನ್ನಷ್ಟೇ ಕಾಣಿಸುತ್ತಾನೆ. ಉಳಿದಿದ್ದೆಲ್ಲ ನಮ್ಮದು. ನಮ್ಮ ಸುತ್ತ ಮುತ್ತ ಸದಾ ಸುತ್ತುತ್ತಿರುವ ಯೋಚನೆಗಳು ಅಮರಿಕೊಂಡು ಮಾಡುವ ಅಧ್ವಾನ ಕಡಿಮೆಯೇನಲ್ಲ. ಹಾಗೆ ಅನುವಾದವೊಂದು ‘ಇರುವುದನ್ನು’ ಹೇಳುವ ಬದಲಿಗೆ ಅದನ್ನು "ವಿವರಿಸುವ" ಉಪದ್ವ್ಯಾಪಕ್ಕೆ ಮುಂದಾಗುವ ಅಪಾಯ ಇದ್ದೇ ಇರುತ್ತದೆ.

ರುಲ್ಫೋ ಒಂದೊಂದು ಶಬ್ದವನ್ನೂ ಆರಿಸಿ ಬಳಸುವ ಲೇಖಕ. ಹಾಗಾಗಿಯೇ ಅನುವಾದದ ಜವಾಬ್ದಾರಿ ಇಲ್ಲಿ ಹೆಚ್ಚು. ಎಷ್ಟು ಕಡಿಮೆ ಬರೆದರೆ ಸಾಕು ಎಂದಷ್ಟೇ ಯೋಚಿಸುತ್ತಿದ್ದ ಪುಣ್ಯಾತ್ಮ ಅವನು. ಕಾದಂಬರಿ ಬರೆಯುವುದೆಂದರೆ ಬರೆದಿದ್ದರಲ್ಲಿ ಎಷ್ಟನ್ನು ಬಿಡಬೇಕು ಎನ್ನುವ ಕಸರತ್ತು ಎನ್ನುತ್ತಾನಾತ. ಹಾಗೆಯೇ ರುಲ್ಫೋ ಸಾಂಗತ್ಯ ಇದ್ದಿದ್ದು ಮೌನದೊಂದಿಗೆ. ವಿವರಗಳಲ್ಲಿ, ಕಥಾನಕದ ನಡೆಯನ್ನು ಸ್ಟಿಲ್ ಆಗಿಸಿ ಮೌನವನ್ನು ತುಂಬುವುದು ಹೇಗೆ ಎನ್ನುವುದಕ್ಕೆ ಉತ್ತಮ ಉದಾಹರಣೆ ರುಲ್ಫೋ. ರುಲ್ಫೋ ಬರೆದಿದ್ದನ್ನೇ ಗಮನಿಸಿ ತಿಳಿದುಕೊಳ್ಳುವುದು ಸಾಕಷ್ಟಿದೆ. ಹಾಗಾಗಿಯೇ ಈತನ ಒಟ್ಟು ಮುನ್ನೂರು ಪುಟಗಳ ಸಾಹಿತ್ಯದ ಬಗ್ಗೆ ಮುವ್ವತ್ತಮೂರು ಭಾಷೆಗಳಲ್ಲಿ 567 ಪುಸ್ತಕಗಳು, 2646 ಪ್ರಬಂಧಗಳು ತಲೆಕೆಡಿಸಿಕೊಂಡಿವೆಯಂತೆ! ಇದೀಗ ಕನ್ನಡದ ಸರದಿ.

ತನ್ನ ಬದುಕಿನಲ್ಲಿ ಅನೇಕ ಮೌನಗಳಿಗೆ ಎನ್ನುವ ರುಲ್ಫೋ ತನ್ನ ಕಾದಂಬರಿ ಹಲವು ಬಗೆಯ ಮೌನಗಳ ವಿನ್ಯಾಸ ಎಂದಿದ್ದಾನೆ. ಆತ ಹೆಚ್ಚು ಮಾತನಾಡುತ್ತಿರಲಿಲ್ಲ. ಅವನು ಆಡುತ್ತಿದ್ದ ಅಷ್ಟೋ ಇಷ್ಟೋ ಮಾತು ಅನೇಕರಿಗೆ ಅರ್ಥವೇ ಆಗುತ್ತಿರಲಿಲ್ಲ. ಸಹಜವೇ. ಅರ್ಥ ಮಾಡಿಕೊಳ್ಳುವುದೆಂದರೆ ಅದರೊಂದಿಗೆ ನಾವು ಅನುಸಂಧಾನ ನಡೆಸುವುದು, ಕನೆಕ್ಟ್ ಮಾಡಿಕೊಳ್ಳುವುದು. ಅಥವಾ ಅದನ್ನೇ ಸರಳವಾಗಿ ಹೇಳುವುದಾದರೆ, ಅರ್ಥ ಮಾಡಿಕೊಳ್ಳುವುದೆಂದರೆ ಪ್ರೀತಿಸುವುದು. ಪ್ರೀತಿಸುವುದು ಎಂದರೇನೆ ಅರ್ಥ ಮಾಡಿಕೊಳ್ಳುವುದು. ಎಷ್ಟೋ ಬಾರಿ ನಾವು ಅರ್ಥ ಮಾಡಿಕೊಳ್ಳುವುದಿಲ್ಲ. ಅಂದರೆ ನಾವು ಪ್ರೀತಿಸುವುದಿಲ್ಲ. ರುಲ್ಫೋನನ್ನು ಪ್ರೀತಿಸುವುದು ಸಾಧ್ಯವಾದರೆ ಅವನು ನಿಮಗೆ ಅರ್ಥವಾಗುತ್ತಾನೆ. ಅದು ಅಷ್ಟು ಸುಲಭ ಮತ್ತು ಕಷ್ಟ.

(ಈ ಲೇಖನ 05/03/2017 ರ ಪ್ರಜಾವಾಣಿ ಮುಕ್ತಛಂದದಲ್ಲಿ ಪ್ರಕಟಿತ)

No comments: