Sunday, May 21, 2017

ಸ್ವರ್ಗದಲ್ಲೂ ಇಲ್ಲ ಅದು

ಪೀಟರ್ ಆರ್ನರ್ ಕೆಲವೊಮ್ಮೆ ಅಚ್ಚರಿಯನ್ನೂ ಮರುಕವನ್ನೂ ಹುಟ್ಟಿಸುತ್ತಾನೆ. ಯಾವತ್ತೋ ಹಿಂದೆ ತಾನು ಹೆಂಡತಿಯ ಜೊತೆ ವಾಸವಿದ್ದ ಒಂದು ಬಾಡಿಗೆ ಮನೆಯ ಬಾಗಿಲಿನ ಮೇಲೆ ಆಗಲೂ ಇದ್ದ ಹೆಸರಿನ ಚೀಟಿ ಇನ್ನೂ ಇರುವುದು ಪವಾಡವೆಂದೇ ನಂಬುತ್ತ, ಅದನ್ನು ಕಿತ್ತು ಕಿಸೆಗೆ ಸೇರಿಸಿಕೊಂಡು ಬರುವ, ಅದರಲ್ಲಿ ಯಾವುದೋ ವೈಭವದ ರೋಮಾಂಚನ ಕಾಣುವ ಈ ಆರ್ನರ್ ಆಗಾಗ ಹನಿಗಣ್ಣಾಗುತ್ತಾನೆ. ಮಡದಿಯ ಮೇಲಿನ ಇವನ ಪ್ರೀತಿ ಇನ್ನೊಂದು ದಂತಕತೆ ಎನ್ನಲೆ? ಅವಳೋ ಇವನನ್ನು ದ್ವೇಷಿಸುವಷ್ಟು ಮತಿಭ್ರಾಂತಳಾಗಿ, ಚಿಕಿತ್ಸೆ ಪಡೆದು ಇವನ ಬದುಕನ್ನೆ ಹೈರಾಣಾಗಿಸಿದವಳು. ಒಂದು ರಾತ್ರಿ ಕದ್ದು ಮನೆ ಬಿಟ್ಟು ತೆರಳುವಂತೆ, ಯಾರದೋ ಅಟ್ಟದಲ್ಲಿ ಧೂಳಿನಲ್ಲಿ ಮಲಗುವಂತೆ ಮಾಡಿದವಳು. ಇಲ್ಲಿ ಹಾಂಟಾ ಬಗ್ಗೆ ಹೇಳುತ್ತ ಅಲ್ಲಲ್ಲಿ ಅವನು ವಿವರಗಳಿಗೆ ಹೋಗದೆ ತಪ್ಪಿಸಿಕೊಂಡಿದ್ದರೆ ಅದಕ್ಕೆ ಕಾರಣ ಅವನ ಮೃದು ಸ್ವಭಾವ ಹುಟ್ಟಿಸಿದ ಆತಂಕವೇ ಹೊರತು ಇನ್ನೇನಲ್ಲ. ಸ್ವಭಾವತಃ ‘ಹೆಚ್ಚು ಹೇಳಬಾರದು’ ಎನ್ನುವ ಅರಿವಿರುವ ಎಚ್ಚರದ ಲೇಖಕನೇ ಅವನು. ಆದರೆ ಇಲ್ಲಿ ಅವನು ಹೆಚ್ಚು ವಿವರಿಸದೇ ಬಿಟ್ಟ ಎರಡು ಸನ್ನಿವೇಶಗಳ ಬಗ್ಗೆ ಹೇಳಲೇ ಬೇಕು. ಈ ಲೇಖನ ಮುಗಿದ ಬಳಿಕ ಅವು ಇವೆ.

ರಾತ್ರಿಯ ರೈಲಿನಲ್ಲಿ ಪಯಣ


1999 ರಲ್ಲಿ ಎಮ್ ಜೊತೆ ಕ್ರೊಶಿಯಾದ ಸ್ಪ್ಲಿಟ್‌ಗೆ ರಾತ್ರಿ ರೈಲಿನಲ್ಲಿ ಸಾಗುತ್ತಿದ್ದೆ. ನಮ್ಮ ರೈಲಿನಲ್ಲಿ ಪಾನಮತ್ತ ರಷ್ಯನ್ನರ ಒಂದು ಗುಂಪು ರಾತ್ರಿಯಿಡೀ ಪಾರ್ಟಿ ಮಾಡುತ್ತ ವಿಪರೀತ ಸದ್ದುಗದ್ದಲ ನಡೆಸಿದ್ದರು. ಒಬ್ಬ ಕಂಡಕ್ಟರ್ ನಮಗೆ "ಇವರೆಲ್ಲ ರಷ್ಯನ್ನರೆಂದು ತಿಳಿದು ಮಂಗ ಆಗಬೇಡಿ, ಇವರೆಲ್ಲ ಸ್ಲೊವನ್ನರು." ಎಂದು ತಿಳಿಸಿದ. ಇದ್ದುದರಲ್ಲಿ ಅತ್ಯಂತ ಗದ್ದಲ ಎಬ್ಬಿಸೊ ಮಂದಿ ಈ ಸ್ವೊವನ್ನರು ಎಂದೂ ಆತ ಹೇಳಿದ. ಯುಗಾಸ್ಲಾವಿಯಾದಲ್ಲಿ ಮೊದಲಿಗೆ ಎಲ್ಲ ಕಿರಿಕ್ಕು ಸುರುವಾಗಿದ್ದೇ ಇವರಿಂದ.

ಹಾದಿಯಲ್ಲಿ ನಾನು ಏನಾದರೂ ಓದುತ್ತಿರಬೇಕಿತ್ತು. ಬಹುಶಃ ಅದು Too Loud a Solitude ಆಗಿರಬಹುದಿತ್ತು. ಬಹುಮಿಲ್ ಹರಬಾಲ್‌ನ ಗಿಚ್ಚಿಗಿರಿದ ಏಕಾಂತವನ್ನು ಕಂಡ ಮೇಲೆ ಮಿಲನ್ ಕುಂದೇರಾನ ಕೈಬಿಟ್ಟಿದ್ದು ನೆನಪಾಯಿತು. ಈತ ಎಷ್ಟೊಂದು ವಿಶಿಷ್ಟನಾದ ಲೇಖಕ ಎಂದರೆ ಚೆಕ್ ಜನರೇ ಹೇಳುವಂತೆ ಇವನನ್ನು ಅನುವಾದಿಸುವುದೇ ಕಷ್ಟ. ಕೊನೆಗೂ ನನಗೆ ಸಾಧ್ಯವಿರೋದು ಎಷ್ಟು ದಕ್ಕುತ್ತೋ ಅಷ್ಟು ತೆಗೆದುಕೊಳ್ಳೋದು. ಏಕೆಂದರೆ, ಸಾಕಷ್ಟು ಕಾಲ "ನಿಜ" ಹರಬಾಲ್ ನ ಅಂದಾಜು ಅರಿವೇ ನನ್ನ ಪಾಲಿಗೆ ಸಾಕಷ್ಟಾಗಿತ್ತು. ಆ ವರ್ಷ ನಾನು Too Loud a Solitude ನ್ನು ಹಠ ಹಿಡಿದು ಓದಿದ್ದೆ. ಆಮೇಲೆ ಅದನ್ನು ಸದಾ ಪಕ್ಕದಲ್ಲಿರಿಸಿಕೊಳ್ಳುತ್ತೇನೆ. ಬೇಕೆಂದಾಗ ಅದರ ವಿಚಿತ್ರ ಮಾಧುರ್ಯದ ಸಾಲುಗಳ ನಡುವೆ ಹೊಕ್ಕು ಮರೆಯಾಗಿ ಬಿಡಲು ನನಗೆ ಇಷ್ಟ. ಆ ಕಳೆದು ಹೋದ ದಿನಗಳಲ್ಲಿ ನಾನು ಮತ್ತು ಎಮ್ ಒಟ್ಟಾಗಿ ಹೋಗಿದ್ದೆವು. 1999ರ ಪ್ರಾಗ್ವೆ. ನಮ್ಮ ಕೈಲಿ ಹಣವಿರಲಿಲ್ಲ. ಯೌವನವಿತ್ತು, ಖುಶಿಯಾಗಿದ್ದೆವು, ಸಾಕಷ್ಟು ತುಂಟತನ ಇತ್ತು. ಇದಕ್ಕೆ ಹೆಚ್ಚು ಅರ್ಥ ಹಚ್ಚಬೇಡಿ ಮತ್ತೆ. ಮೊದಲ ಬಾರಿ Too Loud a Solitude ಓದಿದಾಗ ನಾನು Letn'a ಪಾರ್ಕಿನಲ್ಲಿದ್ದೆ. ಚೆನ್ನಾಗಿ ನೆನಪಿದೆ, ಬೆಂಚಿನ ಮೇಲೆ ಕೂರದೆ ಸುಮ್ಮನೇ ಸುತ್ತು ಹಾಕುತ್ತ ಇದ್ದೆ, ಪುಸ್ತಕವನ್ನ ತಲೆ ಮೇಲಿಟ್ಟುಕೊಂಡು ಕೂತು ಹಾಕಿದ್ದೆ ಕೂಡ! ಯಾವುದೋ ಸಮ್ಯಕ್‌ಜ್ಞಾನ ಸಿಗುತ್ತಾ ಇದೆ ನನಗೆ ಅನ್ನುವಂಥ ಅನುಭೂತಿಯಾಗಿತ್ತು ನನಗೆ. ಕಳೆದ ಮುವ್ವತ್ತೈದು ವರ್ಷಗಳಿಂದ ಪ್ರಾಗ್ವೇಯ ಬೀದಿಯೊಂದರಲ್ಲಿದ್ದ ನೆಲಮಾಳಿಗೆಯಲ್ಲಿ ಹಳೇ ಪುಸ್ತಕ, ರದ್ದಿಯನ್ನು ರೀಸೈಕಲ್ ಮಾಡುತ್ತಿದ್ದ ಹಂಟಾ ಎನ್ನುವ ಮನುಷ್ಯನ ಕುರಿತು ಇರುವ ಈ ಬರೇ ತೊಂಬತ್ತೆಂಟು ಪುಟಗಳ ಪುಟ್ಟ ಪುಸ್ತಕ, ಕಾದಂಬರಿಯ ಹೆಸರಲ್ಲಿ ಕೊಡುವ ಮಿಂಚಿನ ಆಘಾತ ಸಣ್ಣದೇನಲ್ಲ. ಹಾದಿಯಲ್ಲಿನ ಕಿಂಡಿಯಲ್ಲಿ ಜನ ಪೇಪರು, ಹಳೇ ಪುಸ್ತಕ, ರದ್ದಿಯನ್ನೆಲ್ಲ ತೂರುತ್ತಲೇ ಇರುತ್ತಾರೆ, ಬ್ಯಾರೆಲ್ಲುಗಟ್ಟಲೆ. ಅವನ್ನು ಮುದ್ದೆಮಾಡುವ ಮೊದಲು ಹಂಟಾ ಅವನ್ನೆಲ್ಲ ಓದುತ್ತಾನೆ. ಇಕ್ವೀಸಿಯಾಸ್ಟೀಸ್, ತಾಲ್ಮುಡ್, ಗಯಟೆ, ಸ್ಚಿಲ್ಲರ್, ನೀತ್ಸೆ, ಇಮ್ಯಾನುಯೆಲ್ ಕಾಂಟ್‌ನ ಥಿಯರಿ ಆಫ್ ಹೆವನ್ಸ್. ಸ್ವರ್ಗವೇನೂ ಮಾನವೀಯವಾದುದಲ್ಲ ಎನ್ನುವ ಕಾಂಟ್ ಮೇಲೆ ಅಥವಾ ಕೆಳಗೆ ಕೂಡಾ ಬದುಕು ಸ್ವರ್ಗವಲ್ಲ ಎನ್ನುತ್ತಾನೆ.

ಅತ್ಯಂತ ಶ್ರೇಷ್ಠ ಪುಸ್ತಕವನ್ನು ಹಂಟಾ ತನ್ನ ಮನೆಗೆ ಎತ್ತಿಕೊಂಡೊಯ್ಯುತ್ತಾನೆ. ಮುವ್ವತ್ತೈದು ವರ್ಷಗಳಿಂದ ಹೀಗೆ ಹಂಟಾನ ಪುಟ್ಟ ಅಪಾರ್ಟ್‌ಮೆಂಟಿನ ಗೋಡೆಯೇ ಕಾಣಿಸದಷ್ಟು ಎಲ್ಲೆಲ್ಲೂ ಪುಸ್ತಕಗಳಿಂದ ಆವೃತವಾಗಿದೆ. 

"ಬಾತ್‌ರೂಮಿನಲ್ಲಿ ಕೂಡ ನನಗೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳವಿಲ್ಲ. ಟಾಯ್ಲೆಟ್ ಬಾವ್ಲ್‌ನ ಮೇಲೆ, ನೆಲದಿಂದ ಐದಡಿ ಎತ್ತರಕ್ಕೆ ಸ್ಟ್ಯಾಂಡು, ಶೆಲ್ಫುಗಳನ್ನು ಜೋಡಿಸಿದ್ದೇನೆ, ಸೀಲಿಂಗಿನ ತನಕ. ಅವುಗಳಲ್ಲಿ ನೂರಾರು ಪೌಂಡ್ ತೂಕದ ಪುಸ್ತಕಗಳು ತುಂಬಿವೆ. ಕೂರುವಾಗ ಇಲ್ಲವೇ ಏಳುವಾಗ ಸ್ವಲ್ಪ ಅಜಾಗರೂಕತೆ ಮಾಡಿದರೆ, ಶೆಲ್ಫಿಗೆ ಮೈಯೊರೆಸಿದರೆ ಏನಿಲ್ಲವೆಂದರೂ ಅರ್ಧ ಪೌಂಡ್ ಪುಸ್ತಕಗಳು ದೊಸ್ಸಿಲ್ಲನೆ ಮೈಮೇಲೆ ಬರುತ್ತವೆ. ಪ್ಯಾಂಟು ಕೆಳಗೆ ಜಾರಿಸಿಕೊಂಡ ನಾನು ಅವುಗಳ ಕೆಳಗೆ ಪತ್ತೆಯಾಗುವುದು ಖಚಿತ."

ಹಾಂಟಾ ಓದುವ ಬಹುತೇಕ ಎಲ್ಲ ಪುಸ್ತಕಗಳೂ ಬ್ಯಾನ್ ಆದವು ಅಥವಾ ಸರಕಾರದ ತೀವ್ರ ಅವಕೃಪೆಗೆ ಪಾತ್ರವಾದಂಥವು. 1976 ರಲ್ಲಿ ಸ್ವಂತ ಪ್ರಕಾಶನದಲ್ಲಿ ಮೊತ್ತಮೊದಲ ಬಾರಿಗೆ ಹೊರಬಂದ Too Loud a Solitude ಕೂಡ ಒಂದೇ ಒಂದು ಬೆರಳು ಎತ್ತದೆಯೂ ಕಮ್ಯುನಿಸಂ ವಿರೋಧಿ ಎಂಬ ಹಣೆಪಟ್ಟಿಗೆ ಬಿದ್ದು ಅಧಿಕೃತವಾಗಿ ಪ್ರಕಟವಾಗಿದ್ದು 1989ರ ವೆಲ್ವೆಟ್ ರೆವಲ್ಯೂಶನ್ ಬಳಿಕವೇ. ಈ ಪುಸ್ತಕ ತನ್ನ ಕಾಲದ ರಾಜಕಾರಣವನ್ನು ಮೀರಿ ಬೆಳೆದುನಿಂತಿದೆ. ಈ ಪುಸ್ತಕ ಇವತ್ತಿಗೆ ಎಷ್ಟು ಪ್ರಸ್ತುತ ಎನ್ನುವುದರ ಬಗ್ಗೆ ಯಾವ ಸಂಶಯವೂ ಇಲ್ಲ. Too Loud a Solitude ಒಂದು ಸ್ಮರಣೀಯ ಓದನ್ನು ಕರುಣಿಸುವ ಕೃತಿ. ಲಂಗುಲಗಾಮಿಲ್ಲದ ತಂತ್ರಜ್ಞಾನದ ಅಭಿವೃದ್ಧಿಯ ಆರಾಧನೆ ನಿಶ್ಚಿತವಾಗಿ ಮಾನವೀಯ ಚೈತನ್ಯದ ಸೆಲೆಯನ್ನು ಬತ್ತಿಸುತ್ತದೆ ಎನ್ನುವುದನ್ನು ಈ ಕೃತಿ ತಣ್ಣಗೆ ಸೂಚಿಸುತ್ತದೆ. ಹೇಗೆ ಮನುಷ್ಯನ ವ್ಯಕ್ತಿಗತವಾದ ನೆನಪು, ಸ್ಮೃತಿ ಮತ್ತು ಅರಿವು ಅವನನ್ನು ಮತ್ತೆ ಮತ್ತೆ ಜೀವಂತಿಕೆಯಿಂದಿಡಬಲ್ಲ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ ಎನ್ನುವುದನ್ನು ಕೂಡಾ ಈ ಕೃತಿಯಲ್ಲಿ ಕಾಣುತ್ತೇವೆ. ಈ ವಿಶದವಾದ ಮಾತುಗಳ ಹಂದರದಲ್ಲಿ ಹರಬಾಲ್ ಸಾಕಷ್ಟು ದೃಢವಾದ ಒಂದು ಹುಯಿಲಿಟ್ಟಿದ್ದಾನೆ. 

ಇಷ್ಟು ಹೇಳಿದ ಮೇಲೆ ನಾನು ಈ ಪುಸ್ತಕದಲ್ಲಿ ಸಾಕಷ್ಟು ಮಾನವೀಯ ನೆಲೆಯ ಮುಖಗಳೂ ಇವೆ ಎನ್ನುವುದನ್ನು ಹೇಳಲೇ ಬೇಕು. ನನಗೆ ತಿಳಿದ ಮಟ್ಟಿಗೆ ಯಾವುದೇ ಗಂಭೀರವಾದ ಪುಸ್ತಕವಾದರೂ ಮಾನವೀಯ ನೆಲೆಗಳನ್ನು ಕಾಣುವ ಪರಿಗಿಂತ ಕಡಿಮೆ ಗಂಭೀರವಾಗಿ ಈ ಪುಸ್ತಕ ಕಂಡಿಲ್ಲ. ಹಾಂಟಾ ತಿಕ್ಕಲ ಮತ್ತು ಜಾಣ. ಪುಸ್ತಕದ ಬಹುಭಾಗ ಅವನು ದೊರೆಯಂಥಾ ಕುಡುಕ. ಬೀದಿಬದಿಯ ಅವನ ನೆಲಮಾಳಿಗೆಯಲ್ಲಿ ಅವನು ಜೀಸಸ್ ಜೊತೆ ಮಾತುಕತೆಯಲ್ಲಿ ತೊಡಗುತ್ತಾನೆ. ಹಾಗೆಯೇ ಲಾವೋತ್ಸೆ ಜೊತೆಗೂ. ಉಳಿದಂತೆ ಓದು, ಓದು, ಓದು. ಅಮಲಿನಲ್ಲೂ ಓದುತ್ತಾನೆ, ಸ್ವಸ್ಥವಿದ್ದಾಗಲೂ ಓದುತ್ತಾನೆ. ನಾಶಪಡಿಸಲು ಮನಸ್ಸೊಪ್ಪದ ಪುಸ್ತಕಗಳನ್ನು ಅವನು ಓದುತ್ತಾನೆ. ಹಾಗೆ ಓದುತ್ತ ಅವನು ತನ್ನ ಬದುಕಿನ ಒಂದೊಂದೇ ಘಟನೆಗಳನ್ನು, ಕಳೆದುಕೊಂಡ ಪ್ರೇಮವನ್ನು, ಅತ್ಯಂತ ಪ್ರೀತಿಯ ಅಂಕಲ್‌ನ್ನು ನೆನೆಯುತ್ತಾನೆ. ಪೇಪರ್ ವ್ಹೇಟಿನಷ್ಟೇ ಭಾರದ ನೆನಪುಗಳು ಇನ್ನು ಕೆಲವು. ಜೀವ ಬಾಯಿಗೆ ಬಂದಂಥ ಘಟನೆಗಳು ಕೆಲವು. ಇವನೆದೆಗೆ ಚಾಕು ಹಿಡಿದವನ ಉದ್ದೇಶ ಇವನ ಪರ್ಸು ಎಗರಿಸುವುದೇನೂ ಆಗಿರಲಿಲ್ಲ. ಅವನಿಗೆ ಬೇಕಿದ್ದುದು ಯಾರೋ, ಅವನ ಕವಿತೆಗಳನ್ನು ಒಂದು ಬಾರಿ ಕೇಳಲು ಸಿದ್ಧನಿರುವ ಯಾರಾದರೂ ಒಬ್ಬ.

ಹಂಟಾಗೆ ಅವನ ಜಿಪ್ಸಿ ಹುಡುಗಿಯ ತುಟಿಗಳ ನೆನಪಾಗುತ್ತದೆ. ಇವನು ಮನೆಯಲ್ಲಿಲ್ಲದಾಗ ಬಹುಶಃ ನಾಝಿಗಳ ಪೋಲಿಸು ಪಡೆ ಅವಳನ್ನು ಹಿಡಿದೊಯ್ದು ಕಾನ್ಸಂಟ್ರೇಶನ್ ಕ್ಯಾಂಪುಗಳಲ್ಲಿ ಕೂಡಿಹಾಕಿದ್ದಿರಬಹುದು. ಅಂತೂ ಅವಳು ನಾಪತ್ತೆಯಾಗಿದ್ದಾಳೆ. ಆವತ್ತು ಸಂಜೆ ಅವನು ಮನೆಗೆ ಮರಳಿದಾಗ ಅವಳಿರಲಿಲ್ಲ. ಶಾಶ್ವತವಾಗಿ ಹೊರಟು ಹೋಗಿದ್ದಳು.

ಪುಸ್ತಕದ ಮೊದಲಲ್ಲೇ ಹಾಂಟಾ ತಾಲ್ಮುದನ್ನ ಕೋಟ್ ಮಾಡುತ್ತಾನೆ, "ಅದೇಕೆಂದರೆ ನಾವು ಆಲಿವ್ಸ್ ತರ: ನಮ್ಮನ್ನು ಹಿಂಡಿದಾಗಲೇ ನಾವು ನಮ್ಮೊಳಗಿನ ಅತ್ಯಂತ ಶ್ರೇಷ್ಠವಾದ್ದನ್ನು ಕೊಡುವವರು." ಕಾದಂಬರಿಯ ಕೊನೆಗೆ ಬರುವಷ್ಟರಲ್ಲಿ ನಮಗೇ ತಿಳಿದು ಬಿಡುತ್ತದೆ, ಈ ಒಂದು ಸಾಲು ಬರಿಯ ರೂಪಕವಾಗಿ ಉಳಿದೇ ಇಲ್ಲ ಎನ್ನುವ ಸತ್ಯ. ಅದು ಮಾತ್ರ ದುರಂತವೇ. ಹಾಗಿದ್ದೂ Too Loud a Solitude ಪುಸ್ತಕ ಒಂದಕ್ಕಿಂತ ಹೆಚ್ಚು ಬಾರಿ ನನ್ನನ್ನು ಕಾಪಾಡಿದೆ ಎಂದು ಹೇಳಿದರೆ ಅದರಲ್ಲಿ ಅತಿಶಯವಾದುದೇನೂ ಇಲ್ಲ. ಸಾಕಷ್ಟು ಸಲ ನಾನು ನನ್ನ ಗೆಳೆಯರ ಕತ್ತು ಹಿಸುಕಿ ಹಿಡಿದು ಹೇಳಿದ್ದಿದೆ, ತಗೊಂಡು ಹೋಗು ಈ ಪುಸ್ತಕ, ತಗೊಂಡು ಹೋಗು ಮನೆಗೆ, ಹೋಗಿ ಓದು, ನಿಧಾನವಾಗಿ ಓದು, ಎಷ್ಟು ನಿಧಾನವಾಗಿ ಎಂದರೆ ಇದರಲ್ಲಿನ ವಾಕ್ಯ ವಾಕ್ಯವೂ ನಿನ್ನ ಮೆದುಳಿನೊಳಗೆ ಪ್ರತಿಧ್ವನಿಯೆಬ್ಬಿಸಬೇಕು, ಅಷ್ಟು. ಈ ಕಾದಂಬರಿಯನ್ನು ನನ್ನ ಬದುಕಿನ ಪುಸ್ತಕವೆಂದೇ ಹೇಳಬಹುದು. ಇತರೆಲ್ಲಾ ಪುಸ್ತಕಗಳಿಗಿಂತ ಹೆಚ್ಚಾಗಿ ಇದು ಹತಾಶೆ ಮತ್ತು ಹೊಸ ನಿರೀಕ್ಷೆಯೊಂದನ್ನು ಸದಾ ಹೆಣಿಗೆ ಹಾಕಿಕೊಂಡೇ ಮುಂದುವರಿಯುವ ಬಗೆ ವಿಶೇಷವಾದದ್ದು. ಇದೀಗ ಅಂತ್ಯವೋ, ಹೊಸ ಆರಂಭವೋ ಹೇಳಲಾಗದ ಬಗೆಯಲ್ಲಿ ಬರುತ್ತವೆ ಅವು. ಇದರಲ್ಲಷ್ಟೇ ಹೊಸ ನಿರೀಕ್ಷೆ ಉಳಿದಿದೆ.

"ನಾನು ನನ್ನಷ್ಟಕ್ಕೇ ಇರಬಲ್ಲೆ. ಇರಬಲ್ಲೆ ಯಾಕೆಂದರೆ ನಾನು ಯಾವತ್ತೂ ಒಬ್ಬಂಟಿಯಾಗಿರಲೇ ಇಲ್ಲ. ನಾನು ಒಬ್ಬನೇ ಇದ್ದೆ ಅಷ್ಟೆ. ನನ್ನದೇ ಭಾರೀ ಜನಜಂಗುಳಿಯ ಗದ್ದಲ ತುಂಬಿದ ಏಕಾಂತವದು. ನಾವುಂಟು ಮೂರು ಲೋಕವುಂಟು ಬಗೆಯ ಆದಿಯಿಲ್ಲದ ಅಂತ್ಯವಿಲ್ಲದ ಜೋಶ್ ತುಂಬಿದ, ಆ ಅನಾದಿಯಾದ, ಅಮರವಾದ ಯಾವುದೋ ನನ್ನನ್ನೇ ಬಯಸಿ ಬಂದಂತಿದ್ದ ಏಕಾಂತವದು."

****
2015 ರಲ್ಲಿ ನಾನು ಒಂದೆರಡು ದಿನಗಳ ಮಟ್ಟಿಗೆ ಪ್ರಾಗ್ವೆಗೆ ಮರಳಿ ಹೋದೆ. ಜರ್ಮನಿಯಲ್ಲಿರಬೇಕಾಗಿ ಬಂದಿದ್ದರಿಂದ ಒಂದು ಟ್ರೈನ್ ಹಿಡಿದು ಮ್ಯುನಿಚ್‌ಗೂ ಹೋದೆ. ನಾನೇನು ಹುಡುಕುತ್ತಿದ್ದೇನೆ ಎಂಬುದು ನನಗೇ ಸ್ಪಷ್ಟವಿರದಿದ್ದಾಗ್ಯೂ ನಾನು ಎಮ್ ಜೊತೆ ಹದಿನಾರು ವರ್ಷ ಬದುಕಿದ್ದ ಪರಿಸರದ ಆಸುಪಾಸಿನಲ್ಲೆ ಸುತ್ತುತ್ತಿದ್ದೆ. ಸುಮಾರು ಒಂದು ಗಂಟೆಯ ಹುಡುಕಾಟದ ಬಳಿಕ ನಾವು ವಾಸ್ತವ್ಯವಿದ್ದ ಅಪಾರ್ಟ್‌ಮೆಂಟ್ ಹುಡುಕಿ ತೆಗೆದೆ. ಈಗ ನನಗೇ ನಂಬಲಾಗದಿದ್ದರೂ ಟ್ರಾಮ್ ನಿಲುಗಡೆಯಿಂದ ನಮ್ಮ ಬಾಗಿಲಿನ ವರೆಗಿನ ಹಾದಿ ನನ್ನ ಕಾಲುಗಳಿಗೆ ಹೇಗೆ ರೂಢಿಯಾಗಿತ್ತೆಂದರೆ ನಾನು ನೇರವಾಗಿ ಅಪಾರ್ಟ್‌ಮೆಂಟಿನ ಬಾಗಿಲಲ್ಲೇ ನಿಂತಿದ್ದೆ. ಇಂಥ ರೂಢಿಗಳನ್ನು ಹೇಗೆ ತಾನೇ ಮರೆಯುವುದು ಸಾಧ್ಯ? ಕೊನೆಗೂ ನಾನು ಅಲ್ಲಿಗೆ ತಲುಪಿದಾಗ ನಮ್ಮ ಮನೆಯೊಡೆಯನ ಹೆಸರು ಬರೆದ ಹಳೆಯ ಟೇಪು ಕೂಡ ಅಲ್ಲಿ ಕಾಲಿಂಗ್ ಬೆಲ್‌ನ ಪಕ್ಕ ಹಾಗೆಯೇ ಇತ್ತು. ನಾವು ಅಲ್ಲಿದ್ದಾಗ ಇದ್ದ ಅದೇ ಟೇಪು ಅದು ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಬಲ್ಲೆ. ಇದೊಂದು ಪವಾಡವಂತೂ ಪೂರ್ತಿಯಾಗಿ ಅನಗತ್ಯವಾದದ್ದೇ ಎನ್ನಿ. ನಾನು ಕಾಲಿಂಗ್ ಬೆಲ್ ಒತ್ತಿ ಕಾದೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮತ್ತೊಮ್ಮೆ ಒತ್ತಿದೆ. ಇಲ್ಲ. ಟೇಪನ್ನು ಮೆತ್ತಗೆ ಕಿತ್ತು ತೆಗೆದೆ, ನನ್ನ ಕಿಸೆಯೊಳಕ್ಕೆ ಹಾಕಿಕೊಂಡೆ.


ಈಗ ಎಮ್ ಪರವಾಗಿಲ್ಲ. ಮಿಡ್‌ವೆಸ್ಟ್‌ಗೆ ವಾಪಾಸಾಗಿದ್ದಾಳೆ, ಅವಳ ಕುಟುಂಬಕ್ಕೆ ಹತ್ತಿರವೇ ಮನೆ ಮಾಡಿದ್ದಾಳೆ, ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾಳೆ, ಬರೆಯುತ್ತಿದ್ದಾಳೆ. ಯಾವಾಗ ಬೇಕಾದರೂ ಬರುತ್ತಿರುವ ಹಣ ನಿಂತು ಹೋಗುವ ಆತಂಕದಲ್ಲೇ ಇರುವ ಇಲ್ಲಿನ ಸ್ಥಳೀಯ ಸಂಸ್ಥೆಯೊಂದರಲ್ಲಿ ತನ್ನಂಥದೇ ಸಮಸ್ಯೆಯಿಂದ ಬಳಲುತ್ತಿರುವ ಇತರರಿಗೆ ತನ್ನಿಂದ ಸಾಧ್ಯವಿರುವ ಸಹಾಯವನ್ನೂ ಮಾಡುತ್ತಿದ್ದಾಳೆ. ಹರಬಾಲ್ ಹೇಳುತ್ತಾನೆ, `ಸ್ವರ್ಗವು ಮಾನವೀಯವಾಗಿರದೇ ಇರಬಹುದು, ಆದರೆ ಅಪರೂಪಕ್ಕಾದರೂ, ಯಾವಾಗಲೂ ಅಂತಲ್ಲ, ಈ ಭೂಮಿಯ ಮೇಲೆ ಕಕ್ಕುಲಾತಿ ಮತ್ತು ಪ್ರೀತಿ ಇಲ್ಲದೇ ಇರುವುದಿಲ್ಲ ಎಂದೂ ಅದರರ್ಥವಲ್ಲ' ಎಂದು. 

ರೈಲಿನ ಕುಲುಕಾಟಕ್ಕೆ ಎಚ್ಚರವಾಗಿದ್ದು ನೆನಪಿದೆ. ಇನ್ನೂ ಹಗಲಾಗಿರಲಿಲ್ಲ. ಸ್ಲೋವನ್ನರು ಕೊನೆಗೂ ಸುಸ್ತಾಗಿ ಬಿದ್ದುಕೊಂಡಿದ್ದರು. ಲೆಕ್ಕ ಪ್ರಕಾರ ಅಷ್ಟೊತ್ತಿಗೆ ನಾವು ಟ್ರೈಸ್ಟೇಟಿನ ದಕ್ಷಿಣ ಭಾಗ ತಲುಪಿರಬೇಕಿತ್ತು. ಮೇಲಿನ ಬಂಕಿನಲ್ಲಿ ಎಮ್ ಇನ್ನೂ ಮಲಗಿದ್ದಳು. ಬೆಳಕು ಇನ್ನೂ ಅವಳ ಮುಖಕ್ಕೆ ಬೀಳುತ್ತಿರಲಿಲ್ಲ. ನಾನು ಮೆತ್ತಗೆ ಏಣಿಯೇರಿ ಅವಳು ಉಸಿರಾಟವನ್ನೇ ಗಮನಿಸಿದೆ. 

ಹೊರಗೆ ಮಂಜು ಎಷ್ಟು ದಟ್ಟವಾಗಿತ್ತೆಂದರೆ, ಅದು ನಿಜಕ್ಕೂ ಮಂಜಾಗಿರಲಿಲ್ಲ. ಸುರಿಯುವ ಮಳೆ ನಿರ್ಮಿಸಿದ ಒಂದು ದಪ್ಪನೆಯ ತೆರೆಯಂತಿದ್ದೂ ಅಲ್ಲಿ ಆಗ ಮಳೆ ಸುರಿಯುವುದನ್ನೇ ಮರೆತು ನಿಂತಂತಿತ್ತು.

ಈಗ ಪೀಟರ್ ಆರ್ನರ್ ಹೇಳದೇ ಬಿಟ್ಟ ಎರಡು ಸನ್ನಿವೇಶಗಳ ಬಗ್ಗೆ ಹೇಳುತ್ತೇನೆ. ಒಂದು, ಅವನ ಜಿಪ್ಸಿ ಹುಡುಗಿಯ ಬಗ್ಗೆ. ಒಂದು ದಿನ ಇದ್ದಕ್ಕಿದ್ದಂತೆ ಈ ಪುಟ್ಟ ಹುಡುಗಿ ಹಾಂಟಾನ ಹಿಂದೆ ಬರುತ್ತಾಳೆ. ಹಾದಿ ಕವಲೊಡೆದಾಗ ಹಾಂಟಾ ಹೇಳುತ್ತಾನೆ, ಸರಿ, ಇನ್ನು ನಾನು ಈ ಹಾದಿಯಲ್ಲಿ ಹೋಗಾಂವ, ನೀನು ಹೋಗು. ಹುಡುಗಿ ಹೇಳುತ್ತಾಳೆ, ಇಲ್ಲ, ನನ್ನದೂ ನಿನ್ನ ಹಾದಿಯೇ, ನಾನೂ ಬರುತ್ತೇನೆ. ಸರಿ, ಊರಿನೊಳಗೆ ಹೋಗುವ ಸಮಯ ಬರುತ್ತದೆ. ಹಾಂಟಾ ಹೇಳುತ್ತಾನೆ, ಹುಡುಗೀ, ಇದು ನನ್ನ ಊರು. ನಾನು ಇಲ್ಲಿಯೇ ಇರುವವ. ನೀನು ಹೋಗು. ಹುಡುಗಿ ಹೇಳುತ್ತಾಳೆ, ಇದೇ ನನ್ನ ಊರೂ. ನಾನೂ ಇಲ್ಲೇ ಇರುವವಳು. ಸರಿ, ಹಾಂಟಾ ಊರಿನೊಳಗೆ ಬರುತ್ತಾನೆ. ತನ್ನ ಮನೆಯ ಓಣಿ ಹೊಕ್ಕುವ ಮುನ್ನ ನಿಂತು ಹೇಳುತ್ತಾನೆ, ಹುಡುಗೀ, ಇದು ನನ್ನ ಮನೆಯಿರುವ ಓಣಿ. ನಾನು ಹೊರಟೆ. ನೀನು ನಿನ್ನ ಹಾದಿ ಹಿಡಿ. ಹುಡುಗಿ ಹೇಳುತ್ತಾಳೆ, ಇಲ್ಲ, ನನ್ನ ಮನೆಯಿರುವ ಓಣಿಯೂ ಇದೇ. ನಾನೂ ಬರುತ್ತೇನೆ. ಹಾಂಟಾನ ಮನೆಯಂಗಳ ಬರುತ್ತದೆ. ಹಾಂಟಾ ಹೇಳುತ್ತಾನೆ, ಸರಿ ಹುಡುಗಿ, ಇದೇ ನನ್ನ ಮನೆ. ನೀನಿನ್ನು ಹೋಗು. ಹುಡುಗಿ ಹೇಳುತ್ತಾಳೆ, ಇಲ್ಲ, ನನ್ನ ಮನೆಯೂ ಇದೇ, ನಾನು ಬರುತ್ತೇನೆ. ಮನೆಯ ಬೀಗ ತೆಗೆದ ಹಾಂಟಾ ಹೇಳುತ್ತಾನೆ, ಹುಡುಗೀ ಇದೇ ನನ್ನ ಮನೆ. ನೀನಿನ್ನು ನಿನ್ನ ಮನೆಗೆ ಹೋಗು. ಹುಡುಗಿ ಹೇಳುತ್ತಾಳೆ, ಇದೇ ನನ್ನ ಮನೆಯೂ. ನಾನಿಲ್ಲೇ ಇರುತ್ತೇನೆ. ಹಾಗೆ ಜೊತೆಯಾದವಳು ಈ ಜಿಪ್ಸಿ ಹುಡುಗಿ. ಹಾಂಟಾನ ಬಳಿ ಅವಳು ಯಾವತ್ತೂ ಏನೂ ಕೇಳುವುದಿಲ್ಲ. ಅವನು ಮನೆಯಿಂದ ಹೊರಬೀಳುವಾಗ ಅವಳು ಮನೆಯಿಂದ ಹೊರಬಂದು ಕೂರುತ್ತಾಳೆ. ಅವನು ಬಂದು ಬೀಗ ತೆಗೆಯುತ್ತಲೇ ಒಳಗೆ ಸೇರಿಕೊಳ್ಳುತ್ತಾಳೆ. ಎಲ್ಲಿಂದಲೋ ಸಂಗ್ರಹಿಸಿದ ಕಟ್ಟಿಗೆಯಿಂದ ಅಡುಗೆ ಮಾಡುತ್ತಾಳೆ. ದಿನವೂ ಒಂದೇ ಅಡುಗೆ. ಯಾವ ಮಾತೂ ಇಲ್ಲ. ಯಾವ ಬೇಡಿಕೆಯೂ ಇಲ್ಲ. ಎಷ್ಟೋ ದಿನ ಹೀಗೇ ಸಾಗುತ್ತದೆ. ಇದು ಹಾಂಟಾನ ಸಂಸಾರ. ಈ ನಡುವೆ ಅವರಿಬ್ಬರೂ ಗಾಳಿಪಟ ಹಾರಿಸುವ ಒಂದು ಕನಸಿನಂಥ ಸನ್ನಿವೇಶವಿದೆ. ಅಲ್ಲಿ ಹಾಂಟಾ ಗಾಳಿಪಟಕ್ಕೆ ಒಂದು ಸಂದೇಶ ಬರೆದ ಚೀಟಿ ಕಳಿಸಲು ಅದರ ದಾರಕ್ಕೆ ಅದನ್ನು ಕಟ್ಟುತ್ತಾನೆ. ಆಗ ನಡುವೆಲ್ಲೋ ಒಂದರೆ ಘಳಿಗೆ ಅವಳ ಬಳಿ ಅದರ ದಾರ ಹಿಡಿಯಲು ಹೇಳಿದರೆ ಹುಡುಗಿ ಹೆದರಿ ನಡುಗುತ್ತಾಳೆ. ತಾನು ಅದನ್ನು ಹಿಡಿದದ್ದೇ ಆದರೆ ತಾನೂ ಗಾಳಿಪಟದಂತೆಯೇ ದಾರದೊಂದಿಗೆ ಹಾರಿ ಹೋಗುವುದೇ ಸೈ ಎನ್ನುತ್ತಾಳೆ. ಅದು ನಿಜವೆನ್ನಿಸುವಂತೆ ಆ ವಿವರಗಳೆಲ್ಲ ಇವೆ. ಹಾಗೇನೂ ಆಗುವುದಿಲ್ಲ ನಿಜ. ಆದರೆ ಇಷ್ಟರೊಳಗಾಗಲೇ ನಮಗೆಲ್ಲ ಅನಿಷ್ಟದ ಸುಳಿವು ಹತ್ತಿರುತ್ತದೆ. ಹಾಗೆ ಸುರುವಾದ ಆತಂಕ ಒಂದು ದಿನ ಅನಿರೀಕ್ಷಿತವಾಗಿ, ಅಪೇಕ್ಷೆಗಳಿಗೆ ವಿರುದ್ಧವಾಗಿ ನಿಜವಾಗುತ್ತದೆ. ಹುಡುಗಿ ನಾಝಿಗಳ ಕಾನ್ಸಂಟ್ರೇಶನ್ ಕ್ಯಾಂಪ್ ಸೇರುತ್ತಾಳೆ. ಮುಂದಿನದು ಇತಿಹಾಸ. ತಮಾಷೆ ಎಂದರೆ, ಆಗ ಹಾಂಟಾ ಹೇಳುತ್ತಾನೆ, ಇಬ್ಬರಿಗೂ ಒಬ್ಬರ ಹೆಸರು ಇನ್ನೊಬ್ಬರಿಗೆ ಗೊತ್ತೇ ಇಲ್ಲ. ಪೀಟರ್ ಆರ್ನರ್ ಒಂದೇ ವಾಕ್ಯದಲ್ಲಿ ಇದನ್ನು ಮುಗಿಸುತ್ತಾನೆ. 

One evening I came home to find her gone.

ಇದು ಬರಿಯ ಸಾಲಲ್ಲ. ಅದು ಆರ್ನರ್‌ನ ಬದುಕಿಗೂ ಸಂಬಂಧಪಟ್ಟ ವೇದನೆಯ ಸಾಲು. ಆ ವೇದನೆ ನಮಗೆ ಅರ್ಥವಾಗದೇ ಹೋದರೆ ಆರ್ನರ್ ಕೂಡ ಅರ್ಥವಾಗುವುದಿಲ್ಲ, ಹಾಂಟಾ ಕೂಡ ದಕ್ಕುವುದಿಲ್ಲ.

ನಿಮಗಿಲ್ಲಿ ಸೂರಿ (ಎಸ್ ಸುರೇಂದ್ರನಾಥ್) ಬರೆದ ಒಂದು ಪುಟ್ಟ ಕತೆ ನೆನಪಾಗಲ್ವ? ಉದಯವಾಣಿಯ ಅವರ ಅಂಕಣದಲ್ಲಿ ಬಂದಿತ್ತದು. ಗಂಡ ಹೆಂಡತಿ, ಪ್ರತೀ ದಿನ ಪೇಟೆಗೆ ಹೋಗುತ್ತಾರೆ. ಹೋಗುವಾಗ ಒಂದು ಕ್ರಮ. ಗಂಡ ಒಂದು ಹೆಜ್ಜೆ ಮುಂದೆ, ಹೆಂಡತಿ ಎರಡು ಹೆಜ್ಜೆ ಹಿಂದೆ. ಅವನು ಒಂದು ಹೆಜ್ಜೆ ಇಟ್ಟು ಹಂ ಎನ್ನಬೇಕು, ಹೆಂಡತಿ ಒಂದು ಹೆಜ್ಜೆ ಮುಂದೆ ಬರಬೇಕು. ಹಂ ಎನ್ನದಿದ್ದರೆ ಅವಳು ಮುಂದೆ ಹೆಜ್ಜೆ ಇಡುವಂತಿಲ್ಲ. ಹಂ ಎನ್ನದೇ ಅವನು ಮುಂದೆ ಹೋಗುವುದಿಲ್ಲ. ದಿನವೂ ಇದೇ ಕ್ರಮ. ಒಂದು ದಿನ ಇದ್ದಕ್ಕಿದ್ದ ಹಾಗೆ ಯಾವುದೋ ಯೋಚನೆಯಲ್ಲಿ ಸಂತೆಯ ನಡುವೆ ಅವನು ಹಂ ಎನ್ನಲು ಮರೆತು ಹೆಜ್ಜೆ ಇಟ್ಟಿದ್ದಾನೆ. ಅವಳು ಸಂತೆಯ ನಡುವೆಯೇ ನಿಂತು ಬಿಟ್ಟಿದ್ದಾಳೆ. ಇವನು ಗೊತ್ತೇ ಇಲ್ಲದವನಂತೆ ನಡೆದು ಬಿಟ್ಟಿದ್ದಾನೆ, ತಲೆಯಲ್ಲಿ ಹಿಂದೆ ಹೆಂಡತಿ ಇದ್ದಾಳೆ ಎಂದೇ. ಅಂಗಡಿ ಬಾಗಿಲಿಗೆ ಬಂದು ನೋಡಿದರೆ ಹಿಂದೆ ಯಾರು ಯಾರೋ ಇದ್ದಾರೆ. ತಲೆಗೆ ಸೆರಗು ಹೊದ್ದಿರುತ್ತಿದ್ದ ಹೆಂಗಸು, ಅವಳ ಮುಖ ಕೂಡ ಇವನು ಕಂಡಿದ್ದು ಮಲಗುವ ಮುನ್ನ, ಕತ್ತಲಲ್ಲಿ, ಜೊತೆಗಿಲ್ಲ! ಅವಳನ್ನು ಹುಡುಕುವುದಾದರೂ ಹೇಗೆ ಎಂದರೆ ಇವನಿಗೂ ಹೆಂಡತಿಯ ಹೆಸರೂ ಗೊತ್ತಿಲ್ಲ! 

ಇನ್ನೊಂದು ಅಂಕಲ್ ಕುರಿತ ವಿವರ. ಈ ಅಂಕಲ್ ಬಹುಶಃ ಹಾಂಟಾನಿಗಿದ್ದ ಏಕೈಕ ಬಂಧು. ಅವನು ರೈಲ್ವೇಯಲ್ಲಿ ಕೆಲಸದಲ್ಲಿದ್ದು ನಿವೃತ್ತನಾದವನು. ಹಾಂಟಾಗೆ ಕೂಡಾ ನಾವು ಜೀವನ ಪೂರ್ತಿ ಮಾಡಿದ ಉದ್ಯೋಗ ಸುಲಭವಾಗಿ ನಮ್ಮನ್ನು ಬಿಟ್ಟು ಹೋಗುವುದಿಲ್ಲ, ಹಾಗಾಗಿ ನಿವೃತ್ತಿಯ ನಂತರವೂ ನಾವು ಹೇಗಾದರೂ ಅದನ್ನೇ ಮಾಡುತ್ತಿರುವ ಹಾಗೆ ಬದುಕು ರೂಪಿಸಿಕೊಂಡು ಹೋಗಬೇಕು ಎಂದು ಸಲಹೆ ಕೊಟ್ಟವನು. ತನಗೆ ತಾನೇ ಗೆಳೆಯನೊಂದಿಗೆ ಸೇರಿಕೊಂಡು ಒಂದು ಡಮ್ಮಿ ರೈಲ್ವೇ ಸ್ಟೇಶನ್ ಮಾಡಿಕೊಂಡು ಅಲ್ಲಿ ಒಂದು ಬೋಗಿ ಓಡುವಂತೆ ವ್ಯವಸ್ಥೆ ಮಾಡಿಕೊಂಡು ಅದಕ್ಕೆ ಸಿಗ್ನಲ್ ತೋರಿಸುತ್ತ ಬದುಕುತ್ತಿದ್ದವನು. ವಾರಕ್ಕೊಮ್ಮೆ ಊರಿನ ಮಕ್ಕಳಿಗೆ ತನ್ನ ಡಮ್ಮಿ ರೈಲಿನಲ್ಲಿ ಪ್ರಯಾಣದ ಸುಖ ಹಂಚಿದವನು. ಹಾಂಟಾಗೆ ಕೂಡ ನಿವೃತ್ತಿಯ ಬಳಿಕ ತನ್ನದೇ ಪ್ರೆಸ್ ಹಾಕು ಎಂದು ವ್ಯವಸ್ಥೆ ಮಾಡಿದವನು. ಇಂಥ ಅಂಕಲ್ ಸತ್ತಿದ್ದು ಯಾರಿಗೂ ಗೊತ್ತೇ ಆಗುವುದಿಲ್ಲ. ಎರಡು ವಾರದ ಬಳಿಕವಷ್ಟೇ ಅವನ ಅಳಿದುಳಿದ ದೇಹ ಸಿಗ್ನಲ್ ಟವರಿನ ಮೇಲೆ ಅನಾಥವಾಗಿದ್ದ ಸ್ಥಿತಿಯಲ್ಲೇ ಪತ್ತೆಯಾಗಿ ಹಾಂಟಾಗೆ ಕರೆ ಬರುತ್ತದೆ. ಹಾಂಟಾ ಅವನ ಅಪರಕ್ರಿಯೆಯ ವ್ಯವಸ್ಥೆ ಮಾಡುವ, ಅವನ ಅಳಿದು ಉಳಿದ ದೇಹದ ಉಳಿದ ಅವಶೇಷವನ್ನು ಮಣ್ಣಿಗೆ ಇಳಿಸುವ ಮುನ್ನ ಅವನ ಪ್ರಿಯವಾದ ವಸ್ತುಗಳನ್ನು ಶವಪೆಟ್ಟಿಗೆಯಲ್ಲಿರಿಸುವ ವಿವರಗಳೆಲ್ಲ ಇವೆ. ಪೀಟರ್ ಅದನ್ನೆಲ್ಲ ಹೇಳ ಹೋಗಿಲ್ಲ. ಬಹುಶಃ ಅದನ್ನು ಅವನು ಸುಮ್ಮನೇ ಕಣ್ಣೀರಿಡುತ್ತ ಮತ್ತೊಮ್ಮೆ ಓದಿ ನಿಟ್ಟುಸಿರು ಬಿಟ್ಟಿರುತ್ತಾನೆ.

ಈ ಪುಸ್ತಕದಲ್ಲಿ ಇನ್ನೂ ಒಂದು ಸರ್ರಿಯಲಿಸ್ಟಿಕ್ ಸನ್ನಿವೇಶವಿದೆ. ಅದು ಹಾಂಟಾನ ಪ್ರಿಯತಮೆಯೊಬ್ಬಳು ಸ್ವರ್ಗಕ್ಕೆ ಸಂಪರ್ಕ ಸಾಧಿಸುವ ಭ್ರಮೆ, ಕಲ್ಪನೆ, ಕನಸು ಎಲ್ಲವೂ ಆಗಿರಬಹುದಾದ ಒಂದು ಚಿತ್ರ. ಅದು ರೂಪಕದಂತಿರುವುದರಿಂದ ಇಡೀ ಕಥನಕ್ಕೆ ಬಹುಮುಖ್ಯವಾದೊಂದು ಆಯಾಮವನ್ನು ಕೊಟ್ಟಿದೆ. ಹಾಂಟಾಗೆ ತನ್ನ ಓದಿನ ಹುಚ್ಚು ನಿರರ್ಥಕವಾಯಿತೇ ಎನಿಸುವಂತೆ ಮಾಡಿದ ಒಂದು ಘಳಿಗೆ ಅದು. ಕಾದಂಬರಿಗಿರುವ ಹಲವು ಆಯಾಮಗಳನ್ನು ಹೇಳುವಾಗ ಈ ಸನ್ನಿವೇಶ ಕೂಡ ಬಹಳ ಮುಖ್ಯವಾಗುತ್ತದೆ.

No comments: