Wednesday, May 17, 2017

ಟೊಂಗೆಯಲ್ಲಿ ಸಿಕ್ಕಿಕೊಂಡ ನಕ್ಷತ್ರ

ರಾಶಿ ನಿರೀಕ್ಷೆ ಇಟ್ಕೊಂಡು ಓದಬೇಡಿ ಅಂತ ಹೇಳಿಯೇ ಪುಸ್ತಕ ಕೈಗಿಟ್ಟಾಗ ಎಲ್ಲರೂ ನನಗೆ ಹೆದರುವುದೇ ಆಯ್ತಲ್ಲ ಅನಿಸಿತ್ತು. ರಕ್ಕಸರಿಗೆ ಮಾತ್ರ ಜನ ಹೆದರುವುದಲ್ಲವೆ, ಹಾಗೆ.

ಈ ಕವನಗಳು ಓದಿಗೆ ಭಾರವಿಲ್ಲ. ಪುಟ್ಟ ಪುಟ್ಟ ಸಾಲುಗಳು, ಗಹನವಾದ ಏನನ್ನೂ ಹೇಳ ಹೊರಟಿದ್ದಿಲ್ಲ ಎನ್ನುವ ಭಾವ. ರಾತ್ರಿ ಕತ್ತಲಲ್ಲಿ ಸುರಿವ ಮಳೆಯಲ್ಲಿ ಕೊಡೆ ಹಿಡಿದು ಎಲ್ಲಿಗೋ ಹೊರಟ ಹಾಗಿದೆ ಈ ಪ್ರಯಾಣ. ನಡುನಡುವೆ ಅಷ್ಟಿಷ್ಟು ಮಾತು. ಗಾಂವ್ ಎನ್ನುವ ಕಡಲಿನ ಮೊರೆತ, ನೂರಾರು ಬಗೆಯ ಕ್ರಿಮಿಕೀಟ, ಕಪ್ಪೆ ಮತ್ತೊಂದು ಎಬ್ಬಿಸುವ ಹಿನ್ನೆಲೆ ಶಬ್ದ, ಒದ್ದೆಯಾಗಿ ಭಾರವಾದ ಮರಗಿಡಗಳ ಗಾಂಭೀರ್ಯದ ನಡುವೆ ನಡೆಯುವಾಗ ಏನೋ ಅಸ್ಪಷ್ಟತೆಯೊಂದು ಕಾಡುತ್ತಲೇ ಇರುತ್ತದೆ. ಇದು ರಾಜು ಹೆಗಡೆಯವರ ಕವನದ ಧಾಟಿ. ಸರಳ ಎನಿಸಿದ, ಸುಮ್ಮನೇ ಮಾತನಾಡಿದ ಹಾಗೆ ಅನಿಸಿದ ಆ ಸಾಲುಗಳ ನಡುವೆ ಒಂದು ಮೌನ ಕದ್ದು ಕೂತಿದೆ, ಸದ್ದು ಅಡಗಿದ್ದೇ ಎದ್ದು ಕೂತಿದೆ. ಕಂಡ ಹಾಗಿಲ್ಲ ಈ ಮನುಷ್ಯ! ಈಗ ಅರ್ಥವಾಗತೊಡಗಿತು ನನಗೆ ಯಾಕೆ ಹಾಗೆ ಹೇಳಿದರು ಪುಸ್ತಕ ಕೊಡುವಾಗ ಅಂತ!

ನನ್ನ ಅಗಾಧ
ಮೌನದೊಳಿರುವ ಕತ್ತಲೆಯೆ
ಬೆಳಕಾಗಿ ಹಾಡು
ಓ ಅಲ್ಲಿ ಮುರಿದು ಬಿದ್ದ ಕಡಲು
ಅಡ್ಡ ಬಿದ್ದಿರುವ ಬೆಟ್ಟ
ಗುಡ್ಡಗಳು
ಹರಿದು ಬರುವ ಹೊಳೆಯ
ಹೊರೆ
ಚಿತ್ತದೊಳಗೆ ಹೊತ್ತಿ
ಉರಿಯುವ ಬೆಂಕಿ

- ಹೀಗೆ ತೆರೆದುಕೊಳ್ಳುವ ಈ ಪುಸ್ತಕ ಕೊನೆತನಕ ಇದೇ ಕಾವು, ಕಾಡುವ ಒಂದು ಮೌನವನ್ನು ಕಾಪಿಟ್ಟುಕೊಂಡೇ ಬೆಳೆಯುತ್ತದೆ. ರಾಜು ಹೆಗಡೆ ಎಲ್ಲವನ್ನೂ ತೆರೆತೆರೆದು ಹೇಳುತ್ತಿರುವಂತೆ ಕಾಣುತ್ತದೆ. ಕಾಣುತ್ತದೆ ಅಷ್ಟೇ. ಆಯ್ತು ಮಾರಾಯ, ಬರ್ಲಿಯ ಎಂದು ಈತ ಹೊರಟಿದ್ದೇ ಇಷ್ಟು ಹೊತ್ತೂ ಆಡಿದ್ದರ ಅರ್ಥ ಬರಿಯ ಅಷ್ಟೇ ಆಗಿರಲಿಲ್ಲ, ಅಲ್ಲ ಅನಿಸತೊಡಗುತ್ತದೆ. ಕೇಳುವಾ ಅಂದರೆ ಅಲ್ಲಿ ಅವರಿಲ್ಲ. ಕವಿತೆಯ ಸಾರ್ಥಕತೆ ಇದು.


ಅವಳು ಅವಳು ಎಂದು ಇವರು ಒಂದಿಷ್ಟು ಕವನ ಬರೆಯುತ್ತಾರೆ. (ಇವಳು ಅಂತ ಒಂದೂ ಇಲ್ಲ ಎನ್ನುವುದು ನನ್ನ ತಕರಾರು). ಆದರೆ ಈ ಅವಳು ಅವಳಲ್ಲ ಎನ್ನುವ ಅನುಮಾನ ಸುರುವಾಗಿ ಇನ್ನೇನು ಅದು ದೃಢವಾಗುತ್ತದೆ ಎನ್ನುವಷ್ಟರಲ್ಲಿ ‘ಖರೆ ಅಂದರೆ ಅವಳು ಫೋನ್ ಮಾಡಿರಲಿಲ್ಲ ಮತ್ತು ಅಲ್ಲಿ ಕವಿತೆ ಇರಲಿಲ್ಲ’ ಎಂದು ತೆರೆ ಎಳೆಯುತ್ತಾರೆ.

ಮೊದಲು, ಬಾ
ಪ್ರಭುವೆ ತಬ್ಬಿಕೊ!
ಆತ್ಮವ ಆಲಂಗಿಸು

ಎನ್ನುವಲ್ಲಿ ಅವಳ ದೇಹ, ಭಾವ, ಅಭಾವ, ಹಂಬಲ ಎಲ್ಲದರಲ್ಲಿ ಈ ಜೀವ ಹಪಹಪಿಸಿದ್ದು ತಿಳಿಗೊಳ್ಳುತ್ತದೆ. ಆಗ ಈ ಕವನಗಳಿಗೆಲ್ಲ ಬೇರೆಯೇ ಒಂದು ಬಣ್ಣ. ಅದಕ್ಕೆ ಅಗತ್ಯವಾದ ಮೌನವೊಂದು ಇವರ ಎಲ್ಲ ಸಾಲುಗಳ ನಡುವೆ ಅದು ಹೇಗೋ ನುಸುಳಿ ಕೂತಿದೆ. ಆದರೆ, ಈ ಕವಿತೆಗಳನ್ನು ಬಿಡಿಬಿಡಿಯಾಗಿ ಓದಿದರೆ ರಾಜು ಹೆಗಡೆ ನಮಗೆ ದಕ್ಕುವುದೇ ಇಲ್ಲವೇನೊ ಎನಿಸುತ್ತದೆ ಕೂಡ. ಯಾಕೆಂದರೆ, ಕವಿತೆ ಕವಿಯ ಹೃದಯಕ್ಕೆ ನೇರವಾಗಿ ಪ್ರವೇಶಿಸಲು ಪಾಸ್‌ಪೋರ್ಟ್-ವೀಸಾ ಇದ್ದ ಹಾಗೆ. ಕವಿತೆಯಲ್ಲಿ ಕವಿ ಮುಕ್ತನಾದಷ್ಟು ಗದ್ಯದಲ್ಲಿ ಆಗುವುದಿಲ್ಲವೇನೊ. ಹಾಗಾಗಿ ಕವಿತೆ ಓದುವಾಗೆಲ್ಲ ನಾವು ಕವಿಯನ್ನು ಅರ್ಥಮಾಡಿಕೊಳ್ಳುವ, ಪ್ರೀತಿಸುವ ಒಂದು ಪ್ರೊಸೆಸ್ ನಡೆಯುತ್ತಿರುತ್ತದೆ. ಅದಕ್ಕೆ ಮೌನ ಅಡ್ಡಿ. ಓದುಗನನ್ನು ಕತ್ತಲಲ್ಲಿ ತಡಕಾಡುವಂತೆ ಮಾಡುತ್ತದೆ. ಅಲ್ಲಿ ಕವಿತೆ ಪ್ರತಿ ಬಾರಿಯೂ ಕೈಗೆ ಸಿಗದೇ ನುಣುಚಿಕೊಂಡೇ ಹೋಗುವ ಒಂದು ಅದ್ಭುತ ರಾಗದ ಲಹರಿಯಂತೆ, ಕಣ್ಣಿಗೆ ಕಂಡೂ ಕೈಗೆ ಸಿಗದ ಅಗರಬತ್ತಿಯ ಹೊಗೆಯಂತೆ ಹಾರಿ ಹೋಗುತ್ತಿರುತ್ತದೆ. ಆದರೆ ಕವಿತೆಯ ಪ್ರಕಾಂಡ ಶಕ್ತಿಯೂ ಅದೇ! ಅದು ಸುಲಭವಾಗಿ ಅರ್ಥಕ್ಕೆ ದಕ್ಕಿಬಿಟ್ಟರೆ ಅರ್ಥ ಮಾತ್ರ ಉಳಿದುಬಿಡುತ್ತದೆ, ಕವಿತೆ ಹಾರಿ ಹೋಗುತ್ತದೆ! ಇದು ರಾಜು ಹೆಗಡೆಯವರಿಗೆ ಗೊತ್ತು. ಹಾಗಾಗಿ ಈ ಕವಿತೆಗಳು ಇಷ್ಟವಾಗುತ್ತವೆ.

ಮೊದಲಿಗೆ ರಾಜು ಹೆಗಡೆಯವರು ಉಪಯೋಗಿಸುವ ನವೋದಯ ಕವಿಗಳ ಪ್ರತಿಮೆಗಳು ಕೊಂಚ ಅನುಮಾನ ಹುಟ್ಟಿಸಿದ್ದವು. ಮಾಮರ, ಕೋಗಿಲೆ, ಚೈತ್ರ, ಮಳೆ, ಹೂವು, ಅವಳು ಇತ್ಯಾದಿ. ಆದರೆ ಓದುತ್ತ ಹೋದಂತೆ ಇಲ್ಲಿರುವುದು ರೊಮ್ಯಾಂಟಿಸಿಸಮ್ ಅಲ್ಲ ಎನ್ನುವುದು ತಿಳಿಯುತ್ತದೆ ಮಾತ್ರವಲ್ಲ ಇವರು ಅವೇ ಶಬ್ದಗಳನ್ನು ಬಳಸಿಯೂ ಅದರ ಸಿದ್ಧಚಿತ್ರಗಳನ್ನು ಮೀರುವಂತೆ ಕವಿತೆ ಕಟ್ಟಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ. ಸಹಜವಾಗಿಯೇ ಇದಕ್ಕೆ ರಾಜು ಹೆಗಡೆಯವರ ಮೂಲಭೂತ ಆಶಯ, ಧೋರಣೆ ಕಾರಣವಾಗಿದೆ.

ಕಪ್ಪು ಕಾಡಿನ ನಡುವೆ
ಹರಿವ ಹೊಳೆ
ಎಲ್ಲೆಂದರಲ್ಲಿ ನುಣುಪಾದ
ಕಲ್ಲುಗಳು
ಕಂಡ ಕನಸಿನಂತೆ
ಉಂಡ ಅನುಭವದಂತೆ
ಯಾಕೊ
ಪೂರ್ತಿಯಾಗಿ ಅರಳದೆ
ಅವ್ಯಕ್ತವಾಗಿರುವ ವಾಕ್ಯಗಳು
ಕಲ್ಲೂ ಆಗುಳಿಯದ
ದೇವರೂ ಆಗದ
ಹೊಳೆಯಲ್ಲಿರುವ ಅದರ ಪಾಡು
ಯಾರಿಗೂ ಬೇಡ, ದೇವರೆ!

- ಇಂಥ ಮತ್ತಷ್ಟು ರಚನೆಗಳನ್ನು ಉದಾಹರಿಸಬಹುದು. ಸುಮ್ಮನೇ ಓದಿದರೂ ಏನಿಲ್ಲ ಎನಿಸುವ ಭ್ರಮೆ ಹುಟ್ಟಿಸುವಾಗಲೇ ಏನೋ ಇದೆ ಮತ್ತು ಇರುವುದು ಏನಿದೆ, ಅದನ್ನು ಇದೇ ಎಂದು ಬೆರಳಿಟ್ಟು ತೋರಿಸಲಾಗದ ಒಂದು ಭಾವ ನಿರ್ಮಿಸುವ ರಚನೆಗಳು ಇವು.
ನನಗೆ ತುಂಬ ಇಷ್ಟವಾದ ಎರಡು ಕವಿತೆಗಳೊಂದಿಗೆ ಮಾತು ಮುಗಿಸುತ್ತೇನೆ.

ಪರೀಕ್ಷೆ ಕೋಣೆಯಲ್ಲಿ
```````````````````
ನೆರಳು ನಿಂತಿದೆ
ಮರದ ಕೆಳಗೆ
ಚಳಿಗೆ ಗಾಳಿ
ಒಣಗಿದೆ
ನಕ್ಷತ್ರಗಳು ಉದುರುವುದಿದೆ
ರಾತ್ರಿ
ಚಂದ್ರನ ಬೆಂಕಿಯಲ್ಲಿ
ಅವಳು
ಯಾರದೊ ನೆನಪಲ್ಲಿ
ತೊಯ್ಯುತ್ತಿದ್ದಾಳೆ
ನೀರವವಾದ ಈ ಮಧ್ಯಾಹ್ನ
ಪರೀಕ್ಷೆಯೆಂದು ಕರೆಸಿಕೊಂಡಿದೆ
ಕಿಡಕಿಯಲ್ಲಿ
ನಿಂತ ಜಗತ್ತು
ನೋಡಿಯೂ ನೋಡದ ಹಾಗಿದೆ
ಇನ್ನು ರಾತ್ರಿಯೆಲ್ಲ
ಬೇಂಚು ಡೆಸ್ಕುಗಳು
ಅವಳನ್ನು ಹಂಬಲು ಮಾಡಿಕೊಳ್ಳಬಹುದು.

(ಹಂಬಲು ಮಾಡಿಕೊಳ್ಳುವುದು ಎನ್ನುವ ಶಬ್ದವೇ ಅದ್ಭುತವಾದದ್ದು, ಸ್ಥಳೀಯ ಅರ್ಥದ್ದು. ಹಂಬಲಿಸುವುದು ಎನ್ನುವ ಅರ್ಥದಲ್ಲೇ ನೆನಪಿಸಿಕೊಳ್ಳುವುದು ಎನ್ನುವ ಅರ್ಥ ಅದಕ್ಕೆ. ಬರೇ ನೆನಪು ಮಾಡಿಕೊಳ್ಳುವುದಲ್ಲ ಅದು, ಅದು ಹಪಹಪಿಕೆ, ತೀರದ ಹಂಬಲ. ಅದಕ್ಕೊಂದು ತುಯ್ಯುವಿಕೆಯಿದೆ. ಆದರೆ ಬರೇ ನೆನವರಿಕೆಯಲ್ಲೇ ಅದು ಸಂಪನ್ನವಾಗಬೇಕಾದ ಶಾಪಕ್ಕೂ ತುತ್ತಾಗಿದೆ.)

ವ್ಯಕ್ತ ಮಧ್ಯ
```````````
ಮಲಗಿದ್ದಾನೆ ಅವನು
ಬಸ್ ಸ್ಟ್ಯಾಂಡಿನ ಬೇಂಚಿನ ಮೇಲೆ
ಪ್ಯಾಂಟು, ಅಂಗಿ ಹಾಗೆಯೆ
ಇದೆ
ತಲೆ ಅಡಿಯಲ್ಲಿ ಪುಟ್ಟ ಚೀಲ
ಮುಖದ ಮೇಲೆ ಕರ್ಚೀಪು
ಬೆರಳು ಪಾದ
ಮಾತ್ರ ಬೆತ್ತಲಾಗಿದೆ
ತುಸು
ಹೊಟ್ಟೆ
ಮೇಲೆ ಕೆಳಗೆ ಆಗುತ್ತಿದೆ
ಎಲ್ಲಿಗೆ ಹೋಗುತ್ತಾನೆಯೊ
ಎಲ್ಲಿಂದ ಬಂದನೊ
ಏಳಿಸಿ ಕೇಳಿದರೆ ಹೇಳಬಹುದು
ಅಥವ ಕೋಪ ಬಂದು
ಬಯ್ಯಬಹುದು.
ಅಷ್ಟಕ್ಕೂ
ಅವನಿಗೆ ಅದು ಗೊತ್ತಿದೆಯೆ?
ಕಾಯುತ್ತಿದೆ ಕತ್ತಲು
ಸುತ್ತಲು.

- ಈ ಕವಿತೆಯ ಚಂದ ನೋಡಿ. ಅಷ್ಟಕ್ಕೂ ಅವನಿಗೆ ‘ಅದು’ ಗೊತ್ತಿದೆಯೇ ಎನ್ನುತ್ತಾರೆ. ಇಲ್ಲಿನ ‘ಅದು’ ಅದೂ ಆಗಬಹುದು, ಇದೂ ಆಗಬಹುದು. ಎಲ್ಲಿಗೆ ಹೋಗುತ್ತಾನೆ, ಎಲ್ಲಿಂದ ಬಂದ ಎಂದು ಕೇಳಿದರೆ ಹೇಳಲು ‘ಅದು’ ಅವನಿಗೆ ಗೊತ್ತಿದೆಯೆ ಎನ್ನುವುದು ಸಂಶಯವೇ. ಅಥವಾ, ಮುಂದಿನ ಸಾಲು ನೋಡಿ. ಕಾಯುತ್ತಿದೆ ಕತ್ತಲು - ಸುತ್ತಲು. ಸುತ್ತಮುತ್ತ ಕತ್ತಲಿದೆ ಎನ್ನುವ ‘ಅದು’ ಅವನಿಗೆ ಗೊತ್ತಿದೆಯೆ? ಸುತ್ತಲಿನ ಕತ್ತಲು ಅವನನ್ನೇ ಸುತ್ತಿ ಬಿಡಲು ಕಾಯುತ್ತಿದೆ ಎನ್ನುವ ‘ಅದು’ ಅವನಿಗೆ ಗೊತ್ತಿದೆಯೆ? ಕಾಯುತ್ತಿದೆ ಕತ್ತಲು, ಸುತ್ತಲು! ಕವಿತೆ ಓದುಗನನ್ನು ಸುತ್ತಿಕೊಳ್ಳುವುದು ಹೀಗೆ.

No comments: