Wednesday, May 17, 2017

ಸೆಪ್ಟೆಂಬರಿನ ಚಳಿ

ಒಂದು ಪುಸ್ತಕವನ್ನು, ಏಕೆ ಒಂದು ಸಣ್ಣಕತೆಯನ್ನು ಮತ್ತದರ ಕತೆಗಾರನನ್ನು ಹೇಗೆಲ್ಲ ಪರಿಚಯಿಸಬಹುದು ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. 2016ರ ಅತ್ಯುತ್ತಮ ನಾನ್‌ಫಿಕ್ಷನ್ ಕೃತಿಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿರುವ, ಪೀಟರ್ ಆರ್ನರ್‌ನ Am I Alone Here? ಪುಸ್ತಕದಿಂದ ಆಯ್ದ ಈ ಪ್ರಬಂಧ ಓದಿದ ಮೇಲೆ ಪೇನ್‌ಕೇಕನ ಕಥಾಸಂಕಲನ ಕೊಳ್ಳುವುದು ಅನಿವಾರ್ಯವಾಯಿತು. ಹಾಗೆ ನೋಡಿದರೆ ಈ ಆರ್ನರ್‌ನ ಒಂದೊಂದು ಪ್ರಬಂಧವೂ ಹೀಗೆಯೇ ಹುಚ್ಚು ಹಿಡಿಸುವುದು ಖಾತ್ರಿಯೆನಿಸುತ್ತದೆ. ಒಂದೇ ವಾಕ್ಯದಲ್ಲಿ ಹಲವನ್ನೆಲ್ಲ ಹೇಳಿಬಿಡುವ ಈತನ ಇಂಗ್ಲೀಷನ್ನು ಅನುವಾದಿಸುವುದು ಕೊಂಚ ಕಷ್ಟ. ಸಾಧ್ಯವಾದ ಮಟ್ಟಿಗೆ ಒದ್ದಾಡಿದ್ದೇನೆ. ಹಾಗಾಗಿ ಓದುತ್ತ ನೀವೂ ಸ್ವಲ್ಪ ಒದ್ದಾಡುವಂತಾದರೆ ಕ್ಷಮಿಸಿ...

*****

ನೀವು ಒಂದು ಕತೆಯನ್ನು ಒಂದೇ ಸಲ ಓದಿ ಬಿಟ್ಟುಬಿಟ್ಟರೆ ಅದು ದಕ್ಕುವುದಿಲ್ಲ. ಬೇರೆ ಬೇರೆ ಮೂಡುಗಳಲ್ಲಿ, ನಿಮ್ಮ ಬದುಕಿನ ಬೇರೆ ಬೇರೆ ಘಟ್ಟಗಳಲ್ಲಿ ನೀವು ಮತ್ತೆ ಮತ್ತೆ ಕತೆಗಳನ್ನು ಭೇಟಿಯಾಗಲು ಮರಳಿ ಬರಬೇಕು. ಈ ಮುಂಜಾನೆ, ಬೊಲಿನಾಸ್ ಎಂಬ ದ್ವೀಪ ಪಟ್ಟಣದಲ್ಲಿ ಹೀಗೆ ಕುಳಿತು, ಮತ್ತೊಮ್ಮೆ ವೆಸ್ಟ್ ವರ್ಜೀನಿಯಾದ ಫಾರ್ಮ್‌ಹೌಸಿನ ಅಡುಗೆಮನೆಗೆ ಭೇಟಿ ಕೊಡುತ್ತಿದ್ದೇನೆ.

ಈ ಮುಂಜಾನೆ ಯಾಕೆ ಬ್ರೀಸ್ ಡಿಜೆ ಪೇನ್‌ಕೇಕ್ ನ ಒಂದು ಕತೆ? ಇವತ್ತು ಬೆಳಿಗ್ಗೆ ಬೇಗನೆ ಎದ್ದೆ. ನನ್ನ ಬದುಕಿನ ಒಂದರ್ಧವನ್ನೇ ಕಳೆದಿರುವ ಈ ಕ್ಯಾಬಿನ್ನಿಗೆ ನುಗ್ಗಿದೆ. ನನ್ನನ್ನು ಕೊಂಚ ಶಾಂತಗೊಳಿಸಿ ತೆಪ್ಪಗಿರಿಸಬಲ್ಲ ಏನಾದರೂ ಇಲ್ಲಿನ ಶೆಲ್ಫುಗಳಲ್ಲಿ ಸಿಗಬಹುದೇ ಅಂತ ಹುಡುಕತೊಡಗಿದ್ದಷ್ಟೇ ಗೊತ್ತು. ಬಹುಶಃ ನನಗಿವತ್ತು ಬೆಳ್ಳಂಬೆಳಗ್ಗೆ ಯಾವುದಾದರೊಂದು ಕಥಾಜಗತ್ತಿನ ಪೇನ್ ಕಿಲ್ಲರ್ ಅಗತ್ಯವಾಗಿತ್ತು. ಯಾಕೆಂದರೆ ನಾನು ತುಂಬ ಹೊತ್ತು ನನ್ನ ಅಪ್ಪನ ಕುರಿತೇ ಯೋಚಿಸುತ್ತಾ ಕಳೆದಿದ್ದೆ. ಈ ಜಗತ್ತಿನ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾನೆ ಅಪ್ಪ. ಚಿಕಾಗೋದಲ್ಲಿ ಟೀವಿಯ ಎದುರು ಕುಳಿತ ನನ್ನಪ್ಪ ನನಗೆ ಕಾಣಿಸುತ್ತಿದ್ದಾನೆ. ಕ್ಷಣದಿಂದ ಕ್ಷಣಕ್ಕೆ ನನಗೆ ಅದೇ ಚಿತ್ರ ಕಣ್ಣಿಗೆ ಕಟ್ಟುತ್ತಿದೆ. ಅಪ್ಪ ಇಲ್ಲಿಂದ ಹೊರಟು ಹೋಗಲು ಸಜ್ಜಾಗುತ್ತಿರುವಂತಿದೆ. ನನ್ನಪ್ಪನಿಗೆ ನಿದ್ದೆ ಎಂದರೆ ತುಂಬ ಇಷ್ಟ. ಅವನು ಸದಾ ತಡವಾಗಿಯೇ ಏಳುತ್ತಿದ್ದ, ಸದಾ ತಡವಾಗಿಯೇ. ಆದರೆ ಪ್ರತಿವರ್ಷ, ಪ್ರತಿದಿನ, ಪ್ರತಿಕ್ಷಣವನ್ನೂ ದಕ್ಕಿಸಿಕೊಳ್ಳಲು ಪುಟಿಯುತ್ತಿದ್ದ ಮನುಷ್ಯ. ಅಂಥ ನಿರಂತರ ಹೋರಾಟದ ಮನುಷ್ಯನೊಬ್ಬ ಹೀಗಾಗಿರುವುದು ನಿಜಕ್ಕೂ ಆಶ್ಚರ್ಯವೇ.

ಪುಸ್ತಕಗಳನ್ನು ಏನೋ ಸಾಂತ್ವನ ನೀಡುವ ಸಂಗತಿಯಂತೆ ಪರಿಗಣಿಸುವುದನ್ನು ನಾನು ಯಾವತ್ತೂ ವಿರೋಧಿಸಿದವನು. ನಾನವುಗಳನ್ನು ಯಾವತ್ತೂ ನನ್ನ ಬದುಕನ್ನು ತಲ್ಲಣಕ್ಕೊಡ್ಡಬೇಕಾದ, ನನ್ನ ಭ್ರಾಮಕ ನೆಮ್ಮದಿಯ ಜಗತ್ತಿನಿಂದ ಅಲ್ಲಾಡಿಸಿ ಬಿಡಬೇಕಾದ ಸವಾಲಿನಂತೆಯೇ ಕಂಡವನು. ಆದರೆ ಬದುಕಿನಲ್ಲಿ ಕೆಲವೊಂದು ದಿನಗಳಿರುತ್ತವೆ, ಇಂದಿನ ಮುಂಜಾನೆಯಂಥ ದಿನಗಳು, ವಾಸ್ತವ ಎನ್ನುತ್ತೇವಲ್ಲ - ಅದೇನೆ ಇರಲಿ, ಅದು ನಾನು ತಡೆದುಕೊಳ್ಳಲು ಸಾಧ್ಯವಿರುವುದಕ್ಕಿಂತಲೂ ಹೆಚ್ಚು ಕಡಕ್ಕಾಗಿ ಕಾಡುವ ದಿನಗಳಲ್ಲಿ ಪುಸ್ತಕಗಳು ಏನೋ ಒಂದಿಷ್ಟು ಸಮಾಧಾನ ನೀಡುವಂತಿರುತ್ತವೆ. ಅಂತೂ ಹೀಗೆ ನಾನು ಈ ಮುಂಜಾನೆ "ಚಳಿಗಾಲದ ಮೊತ್ತಮೊದಲ ದಿನ" ಓದತೊಡಗಿದೆ. ನಿಧಾನವಾಗಿ, ಸೆಪ್ಟೆಂಬರಿನ ಸೂರ್ಯ ಬೇಕೋ ಬೇಡವೋ ಎಂಬಂತೆ ಮೇಲೇರುತ್ತಿರುವಾಗ, ಈ ಪ್ರಾಚೀನ ಕಾಲದ ಪ್ರಿಜ್ಜಿನ ಕುರ್ರೆಂಬ ಸದ್ದಿನ ಹೊರತಾಗಿ ಜಗತ್ತೇ ಮೌನದಲ್ಲೇ ಅದ್ದಿ ಕೂತಂತಿರುವ ಹೊತ್ತಿನಲ್ಲಿ. ಓದಿ ಮುಗಿಸಿದ್ದೇ ನಾನು ಪುಸ್ತಕವನ್ನು ಕಿಚನ್ನಿನ ಟೇಬಲ್ ಮೇಲಿರಿಸಿ ಸುಮ್ಮನೇ ಒಂದು ಘಳಿಗೆ ಹೊರಗೆ ಬಂದು ನಿಂತೆ. ಬೊಲಿನಾಸಿನ ತಣ್ಣಗಿನ ಅರುಣೋದಯ. ವೆಸ್ಟ್ ವರ್ಜೀನಿಯಾದಲ್ಲಿರುವಂತೆ ಅಥವಾ ಚಿಕಾಗೊದಲ್ಲಿಯಂತೆ ಇಲ್ಲೂ ಈಗ ಹಿಮ ಇರಬೇಕೆತ್ತೆನಿಸಿತು. ಸುತ್ತಲಿನ ಮರಗಿಡಗಳಿಂದ ಬೀಸಿ ಬರುತ್ತಿದ್ದ ಗಾಳಿ ಸಾಕೆನಿಸುವಂತಿತ್ತು. ಸುಮ್ಮನೇ ನಾನು ಅಲ್ಲಿ ನಿಂತು ಹೋಲಿಸ್ ಬಗ್ಗೆ ಯೋಚಿಸಿದೆ. ಅವನ ಹೆತ್ತವರು, ಅವನ ಅರೆಹುಚ್ಚ ತಾಯಿ, ಅವನ ಕುರುಡು ತಂದೆ. ಹೋಲಿಸ್‌ಗೆ ಗೊತ್ತು, ಹೊಲ ಇನ್ನು ಮುಂದೆ ತಮ್ಮನ್ನು ಪೊರೆಯಲಾರದು ಎನ್ನುವ ಸತ್ಯ. ಆದರೂ ತನ್ನ ಕುಟುಂಬವನ್ನು ಹೀಗೇ ಒಟ್ಟಾಗಿಟ್ಟುಕೊಳ್ಳಬೇಕೆಂಬುದು ಅವನ ಆಸೆ. ಅಷ್ಟರಲ್ಲಿ ಚಳಿಗಾಲ. ಬಂದೇ ಬಿಟ್ಟಿತು, ನಿರಂತರವೋ ಎನಿಸುವಷ್ಟು ದೀರ್ಘವಾದ ಚಳಿಗಾಲ.

"ಹಿಮದಿಂದ ಸೂರ್ಯನ ಮೊಗ ಕಪ್ಪಿಟ್ಟಿತು. ಕಣಿವೆಯು ನಿಧಾನವಾಗಿ ಗುಂಯ್‌ಗುಡುತ್ತ ಮುಚ್ಚಿಕೊಂಡಿತು, ಪ್ರಾರ್ಥನಾ ಸಮಯದ ಮೌನಕ್ಕೆ ಸಜ್ಜಾದ ಹಾಗೆ."

ಪಾನ್‌ಕೇಕ್ ತನ್ನ ಪಾತ್ರಗಳ ನಡುವಿನ ಮೌನವನ್ನು ಕೇಳಿಸಿಕೊಂಡವ. ಮಾತ್ರವಲ್ಲ, ವಾಕ್ಯಗಳ ನಡುವಿನ ಮೌನವನ್ನು ಮತ್ತು ಶಬ್ದಗಳ ನಡುವಿನ ನಿಶ್ಶಬ್ದವನ್ನೂ ಕೇಳಿಸಿಕೊಂಡವನು ಅವನು. "ಚಳಿಗಾಲದ ಮೊತ್ತಮೊದಲ ದಿನ" ತುಂಬ ಸಣ್ಣ ಕತೆ, ಕನಿಷ್ಠ ಪುಟಗಳ ದೃಷ್ಟಿಯಿಂದಾದರೂ. ಆದರೆ ನನಗೆ ಮಾತ್ರ ಅದನ್ನು ಓದಲು, ಮತ್ತೊಮ್ಮೆ ಪುನಃ ಓದಲು ಗಂಟೆಯೇ ಹಿಡಿಯಿತು. ಸರಿಸುಮಾರು ಅದು ಪ್ರಾರ್ಥನಾ ಸಮಯದಂತೆಯೇ ಇತ್ತು ನನಗೆ. ಪ್ರಾರ್ಥನಾ ಸಮಯ ಎನ್ನುವುದನ್ನು ಅದರ ಒಳ್ಳೆಯ ಅರ್ಥದಲ್ಲಿ ಬಳಸುತ್ತಿದ್ದೇನೆ.

ಈ ಕತೆ ವೃದ್ಧಾಪ್ಯದ ಕುರಿತಾಗಿದೆ. ಜವಾಬ್ದಾರಿಯ ನಿರ್ವಹಣೆಯ ಕುರಿತಾಗಿ ಇದೆ. ನಮ್ಮ ಜೀವಮಾನವೆಲ್ಲಾ ನಾವು ಯಾರೊಂದಿಗೆ ಬದುಕುತ್ತಾ ಕಳೆದಿದ್ದೇವೆಯೋ, ಸದಾ ಚಿಂತಿಸುತ್ತಾ ಸವೆಸಿದ್ದೇವೆಯೋ, ಕೊನೆಗೊಂದು ದಿನ ಬದುಕು ತೀರ ಕುಸಿದು ಕೂತಾಗ ಗೊತ್ತಾಗುತ್ತದೆ, ನಮಗೆ ಅವರ ಬಗ್ಗೆ ನಿಜಕ್ಕೂ ಇದು ಗೊತ್ತೇ ಇರಲಿಲ್ಲ ಎನ್ನುವ ಸತ್ಯ. ಕತೆ ಈ ಹೊಸ ಅರಿವಿನ ಕುರಿತಾಗಿದೆ. ಮೇಲು ಮೇಲಿನ ಒಂದು ತೀರ್ಮಾನಕ್ಕೆ ಬಂದಿದ್ದೇನೆ ನಾನು; ನಮಗೆ ತುಂಬ ಚೆನ್ನಾಗಿ ಗೊತ್ತಿರುವ ವ್ಯಕ್ತಿಗಳು ಕೊನೆಗೆ ನಮಗೆ ನಿಗೂಢವಾಗಿಯೇ ಇರುತ್ತಾರೆ - ಉಳಿಯುತ್ತಾರೆ? ಈ ಅಜ್ಞಾನದ ಅರ್ಥ ನಾವೇನೂ ಅವರನ್ನು ಪ್ರೀತಿಸುತ್ತಿಲ್ಲ ಎಂದಲ್ಲ. ಪ್ರೀತಿಯನ್ನು ಪೊರೆಯುವ ಈ ಒಂದು ನಿಗೂಢತೆಯೇನಿದೆ, ಅದೇ ಪ್ರೀತಿ.

******

ನಾನು ಒಂದು ಕಡೆ ಓದಿದ್ದೆ, ವಿಮರ್ಶಕನ ಅಸಂದಿಗ್ಧ ಸಂತೃಪ್ತಿಯಿಲ್ಲದವನೇ ನಿಜವಾದ ಓದುಗ ಅಂತ. ನಾನಂತೂ ಸದಾ ಅಂಥ ಒಂದು ಸಂತೃಪ್ತಿಯಾಗಲಿ ಅಸಂದಿಗ್ಧ ಮನಸ್ಥಿತಿಯಾಗಲಿ ಇರದವನಾಗಿಯೇ ಉಳಿಯಲು ಪ್ರಯತ್ನಿಸುತ್ತ ಬಂದವನು. ಈಗಾಗಲೇ ಹತ್ತು ಸಲ ಓದಿದ ಕತೆಯನ್ನಾದರೂ ಮತ್ತೆ ವಿಸ್ಮಯದಿಂದಲೇ ಓದತೊಡಗುವುದು ಸಾಧ್ಯವಾಗಬೇಕು ನನಗೆ. ನಾನು ಕೆಲವೊಮ್ಮೆಯಂತೂ ಓದಿದ ಕತೆಯ ಬಗ್ಗೆ ಗಂಟೆಗಟ್ಟಲೆ, ದಿನಗಟ್ಟಲೆ, ಅದೃಷ್ಟವಿದ್ದರೆ ವರ್ಷಗಟ್ಟಲೆ ಯೋಚಿಸುತ್ತ ಉಳಿದಿದ್ದಿದೆ. ಹಾಗೆ ಯೋಚಿಸುವುದೇ ಒಂದು ಬಗೆ. ಅಚ್ಚರಿಯಿಂದ ಹುಟ್ಟಿದ ಒಂದು ಮೌನವನ್ನಷ್ಟೇ ನಾನು ಒಂದು ಕತೆಗೆ ಹಿಂದಿರುಗಿ ಕೊಡಬಹುದಾದ್ದು. ಮತ್ತೆ ಕೆಲವೊಮ್ಮೆ ಇಂಥ ಸಂದರ್ಭ ಒದಗಿ ಬರುತ್ತದೆ. ನಿಮಗೇನೋ ಹೇಳುವುದಿದೆ, ಆದರೆ ನೀವು ನಿಮಗೇ ಹೇಳಿಕೊಳ್ಳಬಹುದಾದ್ದು, ನೀವು ಮರದೊಳಗಾಡುವ ಗಾಳಿಯಷ್ಟೇ ಆಗಿಬಿಡುವುದು ಸಾಧ್ಯವಿದ್ದರೆ ಮಾತ್ರ ಹೇಳಿಬಿಡಬಹುದಾದ್ದು.

ಈ ಕತೆಗಾರ 1979ರಲ್ಲಿ, ತನ್ನ ಇಪ್ಪತ್ತೇಳನೆಯ ಹುಟ್ಟುಹಬ್ಬಕ್ಕೂ ಮೊದಲೇ ಆತ್ಮಹತ್ಯೆ ಮಾಡಿಕೊಂಡ. ತನ್ನದೇ ಪುಸ್ತಕವೊಂದು ಅಚ್ಚಾಗಿ ಬಂದಾಗ ಅದನ್ನು ಕೈಲಿ ಹಿಡಿದು ಆನಂದಿಸಲೂ ಆತ ಬದುಕಿರಲಿಲ್ಲ. ಅದೇನಾದರೂ ವ್ಯತ್ಯಾಸವನ್ನುಂಟು ಮಾಡುತ್ತಿತ್ತೆ, ಅವನೊಂದಷ್ಟು ಕಾಲ ತಡೆಯುತ್ತಿದ್ದನೆ, ಗೊತ್ತಿಲ್ಲ. ನನಗಂತೂ ಸಂಶಯ. ಪುಸ್ತಕಗಳು ಅದ್ಭುತವಾಗಿರುವಂತೆಯೇ ಅವು ಮಾತನಾಡಲಾರವು, ನಮ್ಮನ್ನು ತಬ್ಬಿ ಹಿಡಿಯಲಾರವು, ನಮ್ಮ ಪಿಸುನುಡಿಯ ಕೇಳಿಸಿಕೊಳ್ಳಲಾರವು. ಆದಾಗ್ಯೂ, "ಚಳಿಗಾಲದ ಮೊತ್ತ ಮೊದಲದಿನ" ಕತೆ, ಸ್ವತಃ ಅದನ್ನು ಬರೆದವನನ್ನಲ್ಲದಿದ್ದರೇನಂತೆ, ಒಬ್ಬನನ್ನು ಪೊರೆಯಬಲ್ಲ ತಾಕತ್ತು ಹೊಂದಿರುವ ಕತೆಯೇ ಸರಿ. ಈ ಕತೆಯಲ್ಲಿ ಅತ್ಯಂತ ಸುಂದರವಾದದ್ದು ಮತ್ತು ಬಹುವಾಗಿ ಕಾಡುವಂಥದ್ದು ಏನೆಂದರೆ ಅದರಲ್ಲಿ ಯಾವುದೇ ತೀರ್ಮಾನಗಳಿಲ್ಲದಿರುವುದೇ. ಈ ಮುದಿ ತಂದೆ ತಾಯಿಗೆ ಏನಾಗುತ್ತದೆ? ಕೊನೆಗೂ ಅವರು ಹೊಲ ತೊರೆದು ಹೋಗುವರೆ? ಅದು ಕೊನೆಗೂ ನಮಗೆ ತಿಳಿಯುವುದಿಲ್ಲ. ನೀವು ಇಂಥ ಕತೆಗೆ ಭೇಟಿ ಕೊಡುವುದು ಕೂಡ ಅಂಥ ಉತ್ತರಗಳಿಗಾಗಿ ಅಲ್ಲ. "ಚಳಿಗಾಲದ ಮೊತ್ತ ಮೊದಲದಿನ" ಒಬ್ಬ ಹಳೆಯ ಆಪ್ತಸ್ನೇಹಿತನಂತೆ, ಯಾವುದೇ ಮುಗ್ಧ ಆಶ್ವಾಸನೆಗಳನ್ನೀಯದ, ಪೊಳ್ಳು ಭರವಸೆಗಳನ್ನು ಹುಟ್ಟಿಸದ, ಕೇವಲ ಜೊತೆಗಿರುವ ಧೈರ್ಯವನ್ನಷ್ಟೇ ನೀಡಬಲ್ಲ ಕತೆ.

"ಚಳಿಗಾಲದ ಮೊತ್ತ ಮೊದಲದಿನ" ಕತೆಯನ್ನು ವೇಗವಾಗಿ ಓದಿ ಮುಗಿಸಿ, ನಿಮಗೆ ಏನೆಂದರೆ ಏನೂ ದಕ್ಕುವುದಿಲ್ಲ. "ಇಷ್ಟೇನಾ?" ಎಂದು ಭುಜ ಹಾರಿಸಿದರೂ ಆಶ್ಚರ್ಯವೇನಿಲ್ಲ. ಅದೇ ಈ ಕತೆಯನ್ನು ನಿಧಾನವಾಗಿ ಓದಿ. ನೀವು ಇಡೀ ರಾತ್ರಿ ಹೋಲಿಸ್ ಜೊತೆ ಎಚ್ಚರವಾಗಿದ್ದು ಕಳೆಯುತ್ತೀರಿ. ಕಿಟಕಿಯ ಗಾಜಿನಲ್ಲಿ ತನ್ನದೇ ಪ್ರತಿಬಿಂಬವನ್ನು ಕಾಣುತ್ತ ನಿಂತ ಹೋಲಿಸ್ ಹೊಲದ ಸಾಲ, ಬ್ಯಾಂಕು, ಈಗಾಗಲೇ ಕಟುಕನ ಅಂಗಡಿಯಿಂದ ಮಾರ್ಕೆಟ್ಟಿಗೆ ತಲುಪಿರುವ, ತಲುಪಿಯೂ ತರಬೇಕಾದ ಹಣ ತಾರದೇ ಹೋದ ತನ್ನ ಮನೆಯ ಸಾಕುಪ್ರಾಣಿಗಳು, ಜಳ್ಳುಕಾಳಾಗಿ ಹೊಲದಲ್ಲೇ ಉದುರಿ ಹೋದ ಫಸಲು ಎಲ್ಲದರ ಬಗ್ಗೆ ಯೋಚಿಸುತ್ತಿರುವುದು ನಿಮಗೆ ಕಾಣಿಸತೊಡಗುತ್ತದೆ. ಮತ್ತೆ ಮರುದಿನ ಮುಂಜಾನೆ, ಹೋಲಿಸ್ ತರವೇ ಸುಸ್ತಾದ ನೀವು ಅವನೊಂದಿಗೇ ಮೆಟ್ಟಿಲಿಳಿದು ಬರುತ್ತೀರಿ. ಅದಾಗಲೇ ಎದ್ದು ಎಷ್ಟೋ ಹೊತ್ತು ಕಳೆದಿರುವ ಅವನ ಮುದಿ ತಂದೆ ತಾಯಿ ಅಡುಗೆಮನೆಯಲ್ಲಿ ಕಾದು ಕುಳಿತಿರುವುದನ್ನು ಕಾಣುತ್ತೀರಿ. ಅದೆಷ್ಟೋ ಹೊತ್ತಿಗೆ ಮೊದಲು ಮಾಡಿಟ್ಟ ಕಾಫಿ ತಣ್ಣಗಾಗಿ ಕೊರೆಯುತ್ತಿರುತ್ತದೆ.

"ಅವನಮ್ಮ ಸ್ನಾನ ಮಾಡುವುದಿಲ್ಲ ಮತ್ತು ಬೆಚ್ಚಗಿರುವ ಅಡುಗೆ ಮನೆ ತುಂಬ ಅವಳ ಮೈಯ ವಾಸನೆ ತುಂಬಿದೆ. ಅವಳು ತಂದೆಯೊಂದಿಗೆ ಓಟ್‌ಮೀಲ್ ತಿನ್ನುತ್ತ ಕುಳಿತಿದ್ದಾಳೆ. ಮುದಿಯನ ಕುರುಡು ಕಂಗಳ ರೆಪ್ಪೆಗಳು ಅರೆಮುಚ್ಚಿವೆ ಮತ್ತವನು ತಲೆಗೂದಲೂ ಬಾಚಿಕೊಂಡಿಲ್ಲ. ಅದು ಗಂಟು ಗಂಟಾಗಿ ಅವನು ಹೇಗೆ ಮಲಗಿದ್ದನೋ ಹಾಗೆ ಅಚ್ಚುಹೊಡೆದಂತೆ ಕೂತಿದೆ."

ಈ ಸಾಲುಗಳು ವೇದನೆ ತರುತ್ತವೆ. ಪ್ರೀತಿ ಎನ್ನುವುದು ನಿಜಕ್ಕೂ ನಮ್ಮ ದೈನಂದಿನ ಬದುಕಿನಲ್ಲಿ ನೋಡಲು ಹೇಗಿರುತ್ತದೆ ಎನ್ನುವುದನ್ನು ತೋರಿಸಲು ಸಾಮಾನ್ಯವಾಗಿ ಬರಹಗಾರರು ಹಿಂಜರಿಯುತ್ತಾರೆ. ಏಕೆಂದರೆ, ಅದು ಭಾವುಕತೆಯ ಪ್ರದರ್ಶನವಾಗಿ ಅರ್ಥಹೀನ ಎನಿಸಿಬಿಡಬಹುದೆಂಬ ಸಕಾರಣ ಭಯ ಅವರಿಗೆ. ಯಾವುದು ಭಾವುಕತೆ ಎನ್ನುವುದರ ಕುರಿತು ನಮಗಿರುವ ಕಾಳಜಿಯೇ ಭಾವುಕತೆಯ ಅಭಿವ್ಯಕ್ತಿಯಲ್ಲವೇ ಎಂದೂ ಎನಿಸುತ್ತದೆ ನನಗೆ. ಇರಿಸುಮುರಿಸು ಉಂಟುಮಾಡದೇ ಪ್ರೀತಿಯೆನ್ನುವುದರ ಅನುಭವ ಹೇಗಿರುತ್ತದೆ ಎನ್ನುವುದನ್ನು ತೋರಿಸಲು ಸಾಧ್ಯವೆ? ಹಾಗಾಗಿ ನಾವಂಥ ಪ್ರಯತ್ನಕ್ಕೇ ಕೈ ಹಾಕುವುದಿಲ್ಲ. ನಮ್ಮ ದಿನನಿತ್ಯದ ಬದುಕು ಇರುವುದೇ ಹೀಗೆ ಅನಿಸುವುದಿಲ್ಲವೆ? ನಮ್ಮ ನಮ್ಮ ಹಾಸಿಗೆಯಲ್ಲಿ, ಅಡುಗೆಮನೆಯಲ್ಲಿ? ಮತ್ತು ನಾವು ಕಳೆದುಕೊಳ್ಳಲಿರುವುದರ ಬಗ್ಗೆ ಇನ್ನೂ ಕಳೆದುಕೊಳ್ಳುವ ಮೊದಲೇ ಶೋಕಿಸುವುದಿಲ್ಲವೆ? ಇದೆಲ್ಲ ಭಾವುಕತೆಯಲ್ಲದಿದ್ದರೆ ಹೇಳಿ ನನಗೆ. ಪಾನ್‌ಕೇಕ್ ಕಟ್ಟಿಕೊಡುವ ಭಾವನೆಯ ವಿವರಗಳು ನಿರ್ಭೀತ. ತನ್ನಪ್ಪನ ಬಾಚದ ಕೂದಲನ್ನು ಹೋಲೀಸ್ ನಿಕಟವಾಗಿ ನೋಡುತ್ತಾನೆ. ಅವನಿಗೆ ಇದನ್ನೆಲ್ಲ ಭರಿಸುವುದು ಅಸಾಧ್ಯವಾಗುತ್ತದೆ. ಹಾಗೆಂದೇ ಯಾವನೇ ಪ್ರೀತಿ ತುಂಬಿದ ಮಗ ಮಾಡುವುದನ್ನೇ ಅವನೂ ಮಾಡುತ್ತಾನೆ. ಅವನು ಅಡುಗೆಮನೆಯಿಂದ ಹೊರಕ್ಕೆ ಧಾವಿಸುತ್ತಾನೆ.

"ನನಗೆ ಆ ಕಾರು ಏನಾದರೂ ಮಾಡಲಿಕ್ಕಾಗುತ್ತಾ ನೋಡಬೇಕಿದೆ" ಎನ್ನುತ್ತಾ ಹೋಲಿಸ್ ಅಲ್ಲಿಂದ ಬಾಗಿಲಿನತ್ತ ಸರಿದ.

"ಆ ಕಾರು ಅಲ್ಲಿ ಹಾಗೇ ಇದ್ದು ಎಷ್ಟು ಕಾಲವಾಯ್ತು" ಮುದುಕಿ ದನಿಯೇರಿಸಿ ಎಚ್ಚರಿಸಿದಳು. "ಹಾವು ಗೀವು ಸೇರಿಕೊಂಡಿದ್ದೀತು, ಜಾಗ್ರತೆ ಮಗಾ."

ಹೋಲಿಸ್ ಹೊರಗೆ ಕೆಟ್ಟು ಹೋದ ಎಂಜಿನ್ ಗಮನಿಸಿಕೊಳ್ಳುತ್ತಿರುವಷ್ಟರಲ್ಲಿಯೇ ಅವನಪ್ಪ ಅಲ್ಲಿ ತನ್ನ ಬಡಿಗೆಯೊಂದಿಗೆ ಹೊರಗೆ ಕಾಣಿಸಿಕೊಂಡಾಯಿತು, ಬೇಡದ ಸಲಹೆ ಸೂಚನೆ ಕೊಡಲು.

"ಬಹುಶಃ ಇಂಜಿನ್ ಬ್ಲಾಕ್ ಆಗಿದೆಯಂತ್ಲೇ ಕಾಣ್ಸುತ್ತೆ" ಎಂದ ಕುರುಡ, ಮಗನ ಮುಖವನ್ನೇ ನೋಡುತ್ತ.
"ಇದೇನೂ ಟ್ರ್ಯಾಕ್ಟರ್ ಅಲ್ಲ"

ಇವತ್ತು ಮುಂಜಾನೆ ನಾನು ಶೆಲ್ಫಿನಿಂದ ಈ ಪುಸ್ತಕ ಹೊರತೆಗೆಯುತ್ತ ಪೇನ್‌ಕೇಕನ ಪಾತ್ರಗಳು ಪರಸ್ಪರ ಎಷ್ಟೊಂದು ಕಡಿಮೆ ಮಾತನಾಡುತ್ತವೆ, ಎಷ್ಟೊಂದು ಮೌನ ಈ ಕೃತಿಯಲ್ಲಿ ಹಬ್ಬಿಕೊಂಡಿದೆ ಎಂದೇ ಯೋಚಿಸುತ್ತಾ ಇದ್ದೆ. ಮತ್ತೆ ಓದುವಾಗ ನನಗೆ ನನ್ನದು ತಪ್ಪು ಕಲ್ಪನೆ ಎನಿಸಿಬಿಟ್ಟಿತು. ನಾನು ನೆನಪಿಸಿಕೊಂಡಿದ್ದಕ್ಕಿಂತ ಅವನ ಮಂದಿ ಪರಸ್ಪರ ಹೆಚ್ಚೇ ಮಾತನಾಡಿಕೊಳ್ಳುತ್ತಾರೆ. ಹಾಗಿದ್ದೂ ಇಲ್ಲಿನ ಸಂಭಾಷಣೆ - ಈ ಶಬ್ದ ಇಲ್ಲಿ ತೀರ ಭಾರವೆನಿಸುತ್ತದೆ, ಮಾತುಕತೆ ಎನ್ನಿ - ಇಡೀ ಕತೆಯ ಚೌಕಟ್ಟಿನಲ್ಲಿ ಅದೆಷ್ಟು ಸಂತುಲಿತವೆಂದರೆ ನಿಮಗೆ ಅದನ್ನು ಬೇರೆಯಾಗಿ ಗಮನಿಸುವುದಕ್ಕೇ ಆಗುವುದಿಲ್ಲ, ಅಷ್ಟೂ ಅದು ಬೆರೆತು ಹೋದಂತಿರುತ್ತದೆ.

"ಆ ಮಬ್ಬು ಕವಿದ ಮುಂಜಾನೆ ನೆಲವೆಲ್ಲ ನಂಜಾಗಿರುವಂತೆ ಕಂಡಿತು. ಮೊದಲ ಮಂಜು ಅದಾಗಲೇ ಸುರಿದಿತ್ತು, ಅಲ್ಲಲ್ಲಿ ಹಿಮಗಡ್ಡೆಗಳು ಗುಡ್ಡಗಳ ಮೇಲ್ಪದರವನ್ನೆಲ್ಲ ಮುಚ್ಚುವಷ್ಟು ಇದ್ದವು. ಸೂರ್ಯನಿಗೂ ಅವುಗಳನ್ನು ಕರಗಿಸುವುದು ಸಾಧ್ಯವಾಗಿರಲಿಲ್ಲ. ಓಕ್ ಮರದಲ್ಲಿ ಈಗಲೋ ಆಗಲೋ ಎಂದು ಕಚ್ಚಿಕೊಂಡಿದ್ದ ಕೊನೆಯ ಎಲೆಗಳನ್ನು ಕೂಡ ಬೀಸಿದ ಗಾಳಿ ಎಗರಿಸಿಯಾಗಿತ್ತು. ಮೌನಕ್ಕೆ ಶರಣಾದ ಕಂದು-ಬೂದು ಗುಡ್ಡಗಳ ಎರಡೂ ಬದುಗಳು ತೆಪ್ಪಗೇ ಕಣಿವೆಯ ಕಡೆಗೆ ಜಾರಿದ್ದವು.

ಮುದಿಯನ ತಲೆಗೂದಲು ಗಾಳಿಗೆ ಸಿಕ್ಕಿ ತೂಗಾಡುವುದನ್ನು ಅವನು ಕಂಡ.

"ಒಳಗೆ ಬಾ, ಚಳಿಗೆ ನೆಗಡಿಯಾದೀತು ಮತ್ತೆ"
"ನೀನೇನು ಬೇಟೆಗೆ ಹೊರಟಿ ಎಂದೆನಾ ನಾನೀಗ?"

ಮ್ಯೂಸಿಯಮ್ಮಿನಲ್ಲಿ ನೋಡಿದ ಒಂದು ಪೇಂಟಿಂಗ್ ನೆನಪಾಗುತ್ತಿದೆ ನನಗೆ. ತಾಯಿ, ತಂದೆ ಮತ್ತು ಒಂದು ಮಗು ಬೀಚೊಂದರಲ್ಲಿ ಸುಳಿಗಾಳಿಗೆ ಸಿಲುಕಿದ್ದ ಚಿತ್ರವದು. ಗಾಳಿಯ ರಭಸಕ್ಕೆ ಅವರ ಬಟ್ಟೆ ಉಚಾಯಿಸುತ್ತಿದೆ. ಈ ಮೂವರ ಒಂದು ಸಂಸಾರದ ಬಗ್ಗೆ ತೀರ ಕಲಕುವಂಥದ್ದೇನೋ ಅದರಲ್ಲಿತ್ತು. ಅವರಲ್ಲಿ ಯಾರನ್ನಾದರೂ ಒಬ್ಬರನ್ನು ತೆಗೆದು ಬಿಟ್ಟರೆ ಉಳಿದಿಬ್ಬರು ತಮ್ಮ ಜೀವನ ಪೂರ್ತಿ ಹೊತ್ತು ತಿರುಗಬೇಕಾದ ಒಂದು ನಿರಂತರವಾದ ಶೂನ್ಯ ಅಲ್ಲಿ ಉಳಿದು ಬಿಡುತ್ತದೆ. ಈಗ ಈ ಕತೆಯ ಮೂವರ ಬಗ್ಗೆ ಯೋಚಿಸುವಾಗ ನನಗೆ ಆ ಹೃದಯ ಕಲಕುವ ಚಿತ್ರದ ನೆನಪಾಗುತ್ತಿದೆ. ಹಾಗೆಯೇ ನನಗೆ ನನ್ನ ಮಗಳ ಮತ್ತು ಅವಳ ತಾಯಿಯ ನೆನಪೂ ಆಗುತ್ತಿದೆ. ನಾವೂ ಮೂವರಿದ್ದೇವೆ. ಅದೇ ಹೊತ್ತಿಗೆ ನನಗೆ ಟೆಲಿವಿಷನ್ ಎದುರು ಅರೆಮುಚ್ಚಿದ ಕಣ್ಣುಗಳೊಂದಿಗೆ ಒರಗಿದ ನನ್ನಪ್ಪನ ಚಿತ್ರವೂ ಕಣ್ಮುಂದೆ ಬರುತ್ತಿದೆ. ನನ್ನ ಮೆದುಳು ಈ ಇಡೀ ನಕಾಶೆಯ ಮೇಲೆ ಹಾರುತ್ತಾ ಸುತ್ತುತ್ತಿದೆ. ನಾನು ನಾರ್ಥ್ ಕ್ಯಾಲಿಫೋರ್ನಿಯಾದಲ್ಲಿ ಕೂತು ವೆಸ್ಟ್ ವರ್ಜೀನಿಯಾದ ಒಂದು ಸಂಸಾರದ ಕತೆಯನ್ನು ಓದುತ್ತಿದ್ದೇನೆ. ಕೊನೆಯ ಬಾರಿ ಚಿಕಾಗೋದಲ್ಲಿದ್ದಾಗ ಕನಿಷ್ಠ ಒಮ್ಮೆಯಾದರೂ ಸಮಯ ಮಾಡಿಕೊಂಡು ಅಪ್ಪನ ಬಳಿ ಹೋಗಿ ನೋಡಿಬರಲಿಲ್ಲವಲ್ಲಾ ಎನ್ನುವ ಸಂಕಟ ನನ್ನನ್ನು ಕಾಡತೊಡಗಿದೆ.

ಇದು ಪ್ರತಿ ಬಾರಿಯೂ ಹೀಗಾಗುತ್ತದೆ ನನಗೆ. ವಾಸ್ತವ ಜಗತ್ತಿನಲ್ಲಿಲ್ಲದ ಮಂದಿಯ, ಕೇವಲ ಪಾತ್ರಗಳ ಕತೆಯೊಂದು ನಮ್ಮನ್ನು ನಮ್ಮದೇ ಮಂದಿಯ ಬಳಿಗೆ, ವಾಸ್ತವವಾಗಿ ಇರುವ, ಈ ನೆಲದ ಮೇಲೆ ಓಡಾಡಿಕೊಂಡಿರುವ ಮಂದಿಯ ಬಳಿಗೊಯ್ಯುತ್ತದೆ. ಅಷ್ಟೊಂದು ಪುಟ್ಟದಾದ ಬದುಕಿನಲ್ಲಿ ಬ್ರೀಸೆ ಪಾನ್‌ಕೇಕ್ ನಮಗೆ ಇಷ್ಟೊಂದನ್ನೆಲ್ಲ ಕೊಟ್ಟು ಹೋಗಿದ್ದಾನೆ. ಇನ್ನಷ್ಟು ಬೇಕು ಎನ್ನುವುದು ದುರಾಸೆಯಾದೀತು ಎನಿಸುತ್ತದೆ. ಹಾಗಿದ್ದೂ ಅವನ ಬಗ್ಗೆ ಏನು ಹೇಳುವುದು? ಪಾನ್‌ಕೇಕ್ ತನಗೇ ಸೃಜಿಸುವುದಕ್ಕೆ ಅವಕಾಶ ಕೊಟ್ಟುಕೊಳ್ಳದೇ ಹೋದಂಥ, ಹಾಗೆ ಉಳಿದು ಹೋದಂಥ ಮಂದಿ ಮತ್ತು ಪಾತ್ರಗಳ ಕತೆಯೇನು? ಅವು ಅವನಿಗೊಂದು ವಿಧವಾದ ಸಾಂತ್ವನ ನೀಡಿರಲಾರವೆ?

*****
ಹೋಲಿಸ್ ಅಡುಗೆಗೆ ಒಂದು ಚೀಲದ ತುಂಬ ಇಣಚಿಗಳನ್ನು ಹೊತ್ತು ಮನೆಗೆ ಮರಳುತ್ತಾನೆ. ಊಟದ ಹೊತ್ತಲ್ಲಿ ಅವನು ತನ್ನ ಸಹೋದರ ಜೇಕ್‌ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳುತ್ತಾನೆ. ಅವರಿಬ್ಬರನ್ನೂ ಇನ್ನು ಮುಂದೆ ನೀನೇ ನೋಡಿಕೋ ಎಂದು ಅವನಿಗೆ ಹೇಳುವುದಾಗಿಯೂ ಇಬ್ಬರೂ ಇನ್ನೂ ಹೀಗೆ ತನ್ನ ಮೇಲೆಯೇ ಅವಲಂಬಿತರಾಗಿರುವುದು ಸಾಧ್ಯವಿಲ್ಲವೆಂದೂ ಹೇಳುತ್ತಾನೆ. ಅವನಪ್ಪ ಅದನ್ನು ವಿರೋಧಿಸಲು ಬಾಯ್ತೆರೆಯುತ್ತಾನೆ. ಆದರೆ ಯಾವುದೇ ಮಾತು ಹೊಳೆಯುವುದಿಲ್ಲ. ಅವನು ಒಮ್ಮೆಗೇ ದುಃಖದ ಕಟ್ಟೆಯೊಡೆದು ಅಳತೊಡಗುತ್ತಾನೆ. ಕ್ಷಣಗಳು ಜಾರತೊಡಗುತ್ತವೆ. ಯಾರೊಬ್ಬರೂ ಮಾತನಾಡುತ್ತಿಲ್ಲ.

"ಮುದುಕು ಇನ್ನೂ ಬಿಕ್ಕುತ್ತಲೇ ಇದ್ದಾನೆ. ಅವಳು ನಿಧಾನವಾಗಿ ಅವನ ಬಳಿ ಸಾರಿ ಕುಳಿತಲ್ಲಿಂದ ಏಳಲು ಸಹಾಯ ಮಾಡುತ್ತಾಳೆ. ವಯಸ್ಸಿನಿಂದಾಗಿ, ಈ ದುಃಖದಿಂದಾಗಿ ಬಾಗಿರುವ ಅವನು ನಿಧಾನವಾಗಿ ಎದ್ದೇಳುತ್ತಾನೆ. ಸುಕ್ಕುಗಟ್ಟಿದ ತನ್ನ ತೋಳಿನಿಂದ ಮಡದಿಯ ಆಸರೆ ಪಡೆಯುತ್ತಾನೆ."

ಊಟದ ಬಳಿಕ ಹೋಲೀಸ್ ತನ್ನ ಹಾಸಿಗೆಯ ಮೇಲೊರಗುತ್ತಾನೆ ಮತ್ತು - ಮತ್ತೆ - ನಿದ್ದೆಹೋಗಲು ಪ್ರಯತ್ನಿಸುತ್ತಾನೆ. ಹಟ್ಟಿಯಲ್ಲಿ ದನ ತನ್ನ ಹುಲ್ಲಿಗಾಗಿ ಅರಸಿ ಉಸಿರುಬಿಟ್ಟು ಸದ್ದೆಬ್ಬಿಸಿದ್ದು ಅವನಿಗೆ ಕೇಳಿಸುತ್ತದೆ. ನಿದ್ದೆಯಲ್ಲೇ ಅಳುತ್ತಿರುವ ಅಪ್ಪನನ್ನು ಒರಗಿಸಿಕೊಂಡ ಅಮ್ಮ ಮೆತ್ತಗೆ ಗುನುಗುತ್ತಿರುವುದು ಕೇಳಿಸುತ್ತದೆ. ನಲುಗುತ್ತಿರುವ ಸಂಸಾರವೊಂದು ಮತ್ತೂ ಒಂದು ದಿನವನ್ನು ಹೀಗೆ ಹಾಯುತ್ತಿದೆ.

No comments: