Wednesday, May 17, 2017

ವಿಲಿಯಂ ಮ್ಯಾಕ್ಸ್‌ವೆಲ್

ನಾನು ಕೆಟ್ಟವನು. ನನಗೆ ಗೊತ್ತಿದೆ, ನಾನು ಒಳ್ಳೆಯವನಲ್ಲ. ಅಡ್ಡಿಲ್ಲ ನನಗೆ, ನಾನು ಕೆಟ್ಟವನೇ. ಒಳ್ಳೆಯವನಾಗಿ ನನಗೇನೂ ಆಗಬೇಕಿಲ್ಲ

ಹೀಗೆ ಹೇಳಿದ್ದು ಬಹುಶಃ ನನ್ನಷ್ಟಕ್ಕೆ, ನನಗೇ ನಾನು ಹೇಳಿಕೊಂಡಿದ್ದು. ನನಗೇ ತೀರ ನಾಚಿಕೆಯೆನಿಸುವಂಥ ತಪ್ಪುಗಳಾಗುತ್ತವೆ. ಯಾರೋ ನಿಷ್ಪಾಪಿಯ ಮೇಲೆ ಹರಿಹಾಯ್ದಿರುತ್ತೇನೆ. ಇನ್ಯಾರಿಗೋ ಇನ್ನೇನೋ ಅನ್ಯಾಯವಾಗಿರುತ್ತದೆ. ಮತ್ತೆ ಮನಸ್ಸು ಕ್ಷಮೆಕೋರಲೂ ಆಗದೆ, ತನ್ನನ್ನು ತಾನು ಕ್ಷಮಿಸಿಕೊಳ್ಳಲಾಗದೆ ಒದ್ದಾಡುತ್ತಿರುತ್ತದೆ, ತುಂಬ ಕಾಲ.

ಬದುಕಿನಲ್ಲಿ ಇಂಥ ಸಣ್ಣ-ದೊಡ್ಡ ತಪ್ಪುಗಳು ಸಾಕಷ್ಟಿರುತ್ತವೆ. ನಮ್ಮೆಲ್ಲರ ಬದುಕಿನಲ್ಲೂ. ಆದರೆ ನನ್ನ ಒಂಟಿಕ್ಷಣಗಳಲ್ಲಿ, ಅರೆಗತ್ತಲಲ್ಲಿ ಕೂತು ನಾನು ನನ್ನವೇ ತಪ್ಪುಹೆಜ್ಜೆಗಳನ್ನು ಎಣಿಸುತ್ತ ಕೂಡ್ರುವಾಗ ಬೇರೆಯವರ ಕುರಿತೆಲ್ಲ ಯೋಚಿಸುವುದಿಲ್ಲ, ಬರೇ ನನ್ನ ದರಿದ್ರ ನಡವಳಿಕೆಯ ಬಗ್ಗೆ ಮಾತ್ರ ಯೋಚಿಸುತ್ತ ಕುಗ್ಗುತ್ತ ಇರುತ್ತೇನೆ. ಬಹುಶಃ ಕೆಲವರು ಕುಡಿಯುವುದು, ಸಿಗರೇಟ್ ಸೇದುವುದು ಎಲ್ಲ ಮಾಡಬಹುದು, ಈಗ ನನಗೆ ಅವೆಲ್ಲ ಸಾಧ್ಯವಿಲ್ಲ.

ಇವತ್ತು ಯಾಕೆ ಇದನ್ನೆಲ್ಲ ಬರೆಯುತ್ತಿದ್ದೇನೆಂದರೆ ಪೀಟರ್ ಆರ್ನರ್ ಪುಸ್ತಕ Am I Alone Here? ನ ಒಂದು ಬರಹ, ವಿಲಿಯಂ ಮ್ಯಾಕ್ಸ್‌ವೆಲ್ ಕುರಿತದ್ದು ಓದಿದೆ. ಇದರ ಹೆಸರು Unforgivable. ಸುರು ಮಾಡುತ್ತ ತಾನು ಇವತ್ತು ತನ್ನ ಕಾರಿನ ಕಿಟಕಿಯಿಂದ ಒಂದು ಕಾದಂಬರಿಯನ್ನು ಹೊರಗೆಸೆದ ಬಗ್ಗೆ ಹೇಳುತ್ತಾನೆ. ಅದು ಜ್ಯೂಲಿಯನ್ ಬಾರ್ನೆಸ್ಸನ ಕಾದಂಬರಿ ದ ಸೆನ್ಸ್ ಆಫ್ ಎನ್ ಎಂಡಿಂಗ್. ಇದರ ಬಗ್ಗೆ ನಾನು ತುಂಬ ಹಿಂದೆ ಬ್ಲಾಗಿನಲ್ಲಿ ಬರೆದಿದ್ದು ತೆಗೆದು ಓದತೊಡಗಿದರೆ ತಲೆಬುಡ ಅರ್ಥವಾಗಲಿಲ್ಲ. ಹತ್ತು ಹಲವು ವಿಷಯಗಳನ್ನೆಲ್ಲ ಒಂದೇಟಿಗೆ ಹೇಳಹೊರಟು ಕೊನೆಗೆ ಏನು ಹೇಳುತ್ತಿದ್ದೇನೆಂಬುದೇ ಸ್ಪಷ್ಟವಾಗದ ಹಾಗೆ ಮುಗಿಸಿದ ಕೆಟ್ಟ ಲೇಖನ ಅದು. ಸಾಯಲಿ ಎಂದು ಮತ್ತೆ ಪೀಟರ್ ಆರ್ನರ್ ಬರೆದಿದ್ದು ಓದತೊಡಗಿದೆ.

ಆಡ್ರಿನ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟೋನಿ ಎಂಬಾತ ಅದರ ಬಗ್ಗೆ, ಅವನ ಬಗ್ಗೆ ಹೇಳುತ್ತಿದ್ದಾನೆ. ಆತ್ಮಹತ್ಯೆಗೆ ಕಾರಣ ಟೋನಿ. ಕಾದಂಬರಿಯ ನಡುವಿನಲ್ಲೆಲ್ಲೊ ಒಂದು ಈಮೇಲ್ ಮಾಡಿದ್ದು ಬರುತ್ತದೆ. ಆ ಮೇಲ್‌ಗೆ ಕೊಟ್ಟ ಸಬ್ಜೆಕ್ಟ್ ಲೈನ್ ಒಂದು ಪ್ರಶ್ನೆ. "ಆಗ, ಆ ದಿನಗಳಲ್ಲಿ, ನಾನು ನಿನ್ನ ಹಿಂದೆ ಬಿದ್ದಿದ್ದೆ ಅನಿಸುತ್ತಾ ನಿನಗೆ?" ಪೀಟರ್ ಆರ್ನರ್‌ಗೆ ಈ ಟೋನಿಯ ಪಾಪಾತ್ಮಾ ಪಾಪಸಂಭವ (ಆತ್ಮನಿವೇದನೆ) ಎಲ್ಲ ಎಲ್ಲೋ ಏನೋ ಹಿಡಿದಿಟ್ಟುಕೊಂಡು ಹೊರಬರುತ್ತಿದೆ ಎನಿಸಿದೆ ಮತ್ತು ಅದೇ ಕ್ಷಣಕ್ಕೆ ಅದು ಸಹಿಸುವುದಕ್ಕೇ ಅಸಾಧ್ಯ ಎನಿಸಿ ಕಾರಿನ ಗಾಜು ಇಳಿಸಿ ಕಾದಂಬರಿಯನ್ನು ಹೊರಕ್ಕೆಸೆಯಲು ಪ್ರೇರಣೆಯಾಗಿದೆ. ಆಮೇಲೆ ಅದರ ಬಗ್ಗೆ ವಿಷಾದವಾಗಿರಬಹುದು, ಅದು ಬೇರೆ ಪ್ರಶ್ನೆ.

ಇಡೀ ಪುಸ್ತಕದಲ್ಲಿ ಪೀಟರ್ ಆರ್ನರ್ ತನ್ನನ್ನು ಬಿಟ್ಟುಹೋದ ಬಾಳಸಂಗಾತಿಯ ನೆನಪಿನಲ್ಲಿ ಹಪಹಪಿಸುತ್ತಲೇ ಇರುತ್ತಾನೆ ಎನ್ನುವುದನ್ನು ನಾನಿಲ್ಲಿ ಹೇಳಬೇಕು. ಆಕೆ ಸ್ವಲ್ಪ ತಲೆಕೆಟ್ಟವಳಂತೆ ವರ್ತಿಸುತ್ತಿದ್ದರೂ ಅದನ್ನು ಬಹುಕಾಲ ಸಹಿಸಿಕೊಂಡು ಬಂದಿರುತ್ತಾನೆ ಆರ್ನರ್. ಎಲ್ಲೋ ಒಂದು ಕಡೆ ಎಲ್ಲ ಮುಗಿದು ಹೋಗುತ್ತದೆ. ಆ ರಾತ್ರಿಯ ಬಗ್ಗೆ ಆರ್ನರ್ ಒಂದು ಕಡೆ ಬರೆದಿದ್ದಾನೆ, ಇರಲಿ. ಇಲ್ಲಿ ಮುಖ್ಯವಾದದ್ದು ಒಂದು ಕಾಲ್ಪನಿಕ ಕಥಾನಕದ ಈಮೇಲಿನ ಸಬ್ಜೆಕ್ಟ್ ಲೈನ್ ಮತ್ತು ಇರ್ರಿಟೇಶನ್.

ಮನೆಗೆ ಬಂದ ಆರ್ನರ್ ಕೈಗೆತ್ತಿಕೊಳ್ಳುವುದು ವಿಲಿಯಮ್ ಮ್ಯಾಕ್ಸ್‌ವೆಲ್‌ನ ಪುಸ್ತಕ, ಅದರಲ್ಲಿನ ಒಂದು ಅತಿಚಿಕ್ಕ ಕತೆ, ವಿದ್ ರೆಫರೆನ್ಸ್ ಟು ಎನ್ ಇನ್ಸಿಡೆಂಟ್ ಎಟ್ ಅ ಬ್ರಿಜ್. ಟೋನಿ ತರದವನೇ ಎನಿಸುವ ಒಬ್ಬ ತುಂಟ ಸ್ಕೌಟ್ ಬಾಯ್ ಪುಟ್ಟಪುಟ್ಟ ಮಕ್ಕಳ ಜೊತೆ ನಡೆಸುವ ಕೀಟಲೆಯ ಆಟವೊಂದು ಮುಂದೆ ತನ್ನನ್ನೇ ತಾನು ಕ್ಷಮಿಸಲಾರದ ಪಾಪಭಾವಕ್ಕೆ ಕಾರಣವಾಗುವ ಕತೆಯದು. ಆರ್ನರ್‌ಗೆ ತಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಟೆಡ್ಡಿ ಎಂಬ ಸ್ಥೂಲಕಾಯದ ಒಬ್ಬ ಹುಡುಗನನ್ನು ಗೇಲಿ ಮಾಡಿ, ಹಾಡು ಹೇಳಿ ರೇಗಿಸುತ್ತಿದ್ದುದು, ಅವಮಾನಿಸುತ್ತಿದ್ದುದು ಎಲ್ಲ ನೆನಪಾಗಿ ಕುಗ್ಗುತ್ತಾನೆ.

ದೇವರು ಕ್ಷಮಿಸಬಹುದು, ಆದರೆ ನನ್ನನ್ನೇ ನಾನು ಕ್ಷಮಿಸಲಾರೆ ಎನ್ನುವ ಭಾವವೊಂದು ಕಾಡುವ ಘಳಿಗೆಯಿದು. ರಬ್ಬೀ (ಯಹೂದಿ ಧರ್ಮಗುರು)ಯೊಬ್ಬ ತನಗೆ ಹೇಳಿದ ಮರೆಯಲಾಗದ ಮಾತನ್ನು ನೆನೆಯುತ್ತಾನೆ. ಈ ರಬ್ಬಿಯನ್ನು ಯಹೂದಿಯಲ್ಲದ ಯುವತಿಯೊಬ್ಬಳನ್ನು ಪ್ರೀತಿಸಿದ್ದಕ್ಕಾಗಿ ಊರಿನಿಂದ ಓಡಿಸಿರುತ್ತಾರೆ. ಇಡೀ ಊರು ಮುಂದೆ ಬರೇ ‘ಯಾರನ್ನೋ’ ಪ್ರೀತಿಸಿದ ಎನ್ನುವ ಒಂದೇ ಕಾರಣಕ್ಕೆ ತಾವು ರಬ್ಬಿಯನ್ನು ಊರಿನಿಂದಲೇ ಹೊರದಬ್ಬಿದೆವಲ್ಲಾ ಎಂದು ಪಶ್ಚಾತ್ತಾಪ ಪಡುತ್ತಲೇ ಇತ್ತು ಎನ್ನುತ್ತಾನೆ ಆರ್ನರ್, ಇರಲಿ. ಈ ರಬ್ಬೀ ಹೇಳಿದ ಮಾತಿದು: "ನಿನಗೆ ಪ್ರಾಯಶ್ಚಿತ್ತ ಬೇಕೆ? ಅದಕ್ಕೆ ನೀನು ನಿನ್ನಿಂದ ಯಾರಿಗೆ ನೋವಾಗಿದೆಯೋ ಅವರನ್ನೇ ಹೋಗಿ ಕೇಳಬೇಕು. ದೇವರನ್ನಲ್ಲ. ಹೋಗು, ಸುರುಹಚ್ಚಿಕೊ"

ಟೆಡ್ಡಿಯ ಬಳಿ ಹೋಗಿ ಕೇಳಲೆ? ಎಷ್ಟು ಮಂದಿಯ ಬಳಿಗೆಲ್ಲ ಹೋಗಲಿ? ಇನ್ನು ಮುಂದೆಯೂ ನಾನು ‘ಅಂಥ ಕೆಲಸ’ ಮಾಡುತ್ತಲೇ ಇರುತ್ತೇನಲ್ಲ! ಎಲ್ಲಿಗೆಲ್ಲ ಹೋಗಲಿ, ಯಾರನ್ನೆಲ್ಲ ಕೇಳಲಿ? ಅಷ್ಟು ಸಮಯವಾದರೂ ಎಲ್ಲಿದೆ ನನಗೆ? ನಿಮಗೆ?

ಈ ಲೇಖನದ ಕೊನೆಯಲ್ಲಿ ವಿಲಿಯಂ ಮ್ಯಾಕ್ಸ್‌ವೆಲ್ಲನ ಕತೆಯ ತಾತ್ಪೂರ್ತಿಕ ಅಂತ್ಯವನ್ನು ಯಥಾವತ್ ಕಾಣಿಸುತ್ತಾನೆ ಆರ್ನರ್. ಅದರ ಕಟ್ಟಕಡೆಯ ಸಾಲು ಹೀಗಿದೆ:

I have remembered it because it was the moment I learned I was not to be trusted.
ನೀವು ಪೀಟರ್ ಆರ್ನರ್‌ನ ಪುಸ್ತಕ Am I Alone Here ಓದಿ.

No comments: