Wednesday, May 17, 2017

ಬರೆಯದೇ ಇರುವುದರ ಚಂದ ಅಥವಾ ಹುವಾನ್ ರುಲ್ಫೋಗೆ ಒಂದು ಅನಗತ್ಯ ಶೃದ್ಧಾಂಜಲಿ

ನನಗೆ ತುಂಬ ಇಷ್ಟವಾದ ಪುಸ್ತಕ ಪೀಟರ್ ಆರ್ನರನ Am I Alone Here? ನಿಂದ ಈಗಾಗಲೇ ಹಲವು ಲೇಖನಗಳನ್ನು ಅನುವಾದಿಸಿ ಇಲ್ಲಿ ಕಾಣಿಸಿದ್ದೇನೆ. ಇದು ಕೊನೆಯದು. ರುಲ್ಫೋ ಕುರಿತಾದ್ದು.

ಇನ್ನೂ ಮೌನವಾಗಿ ಸುಮ್ಮನಿದ್ದು ಬಿಡುವುದು ನನಗೆ ಇಷ್ಟ. ಓದಬೇಕೆಂಬ ಸದಾ ಕಾಡುವ ಬೇನೆಯೇನಿದೆ, ಆ ತುಡಿತವನ್ನು ಮೀರಿ ಬರೆಯಬೇಕೆಂಬ ಒತ್ತಡ ಬರುವುದು ಯಾವಾಗಾದರೂ ಒಮ್ಮೊಮ್ಮೆ ಮಾತ್ರ. ಮತ್ತದು ಕಾಣಿಸಿಕೊಂಡಾಗ ನಾನು ಚುಟುಕಾಗಿರಲು ಸಾಧ್ಯವಾದ ಪ್ರಯತ್ನ ಮಾಡುತ್ತೇನೆ. ಬರೆಯುವುದರ ಬಗ್ಗೆ ಮತ್ತೆ ಮತ್ತೆ ಕೇಳಿಬರುವ ಒಂದು ಸಲಹೆ ಎಂದರೆ, "ಬರಿ, ಬರಿ, ಮತ್ತಷ್ಟು ಬರಿ. ತುಂಬಾ ಬರೆದೆ ಅನಿಸಿದ ಮೇಲೂ ಬರೀತಾ ಇರಬೇಕು" ಅನ್ನೋದೆ ಎನಿಸುತ್ತದೆ. ಶಾಶ್ವತವಾಗಿ ನಿಲ್ಲುವಂಥದ್ದೇನಾದರೂ ರಚಿಸಲ್ಪಡುವುದು ಈ ಹಾದಿಯಲ್ಲಿ ಸಾಗಿದರೆ ಮಾತ್ರ ಎನ್ನುವುದರ ಬಗ್ಗೆ ನನಗೆ ಗಂಭೀರ ಅನುಮಾನಗಳಿವೆ. ನಾನೊಬ್ಬನೇ ಹೀಗೆ ಯೋಚಿಸೋದೆ? ಅಥವಾ ನಿಮಗೂ ಪ್ರತಿನಿತ್ಯ ಸುನಾಮಿಯಂತೆ ಅಪ್ಪಳಿಸುವ ಶಬ್ದಸಾಗರದಿಂದ ತಪ್ಪಿಸಿಕೋಬೇಕು ಅಂತ ಅನಿಸುತ್ತಿರುತ್ತಾ? ಈಚೆಗೆ ನನಗೆ ತನ್ನ ಜೀವಮಾನವಿಡೀ ಮುನ್ನೂರು ಪುಟ ಕೂಡ ಬರೆಯದ ಒಬ್ಬ ಲೇಖಕನಿಗೆ ಶ್ರದ್ಧಾಂಜಲಿ ಅರ್ಪಿಸಬೇಕು ಅನಿಸಿತು. ಒಂದಿಷ್ಟು ಟಿಪ್ಪಣಿ ಮಾಡಿಕೊಂಡ ಮೇಲೆ ನನಗೆ ಇದರಲ್ಲಿ ಎದ್ದುಕಾಣುವ ವಿಪರ್ಯಾಸದ ಬಗ್ಗೆಯೂ ಜ್ಞಾನೋದಯವಾಯ್ತು. ಒಂದೆರಡು ಕ್ಷಣ ನಾನು ಯಾವುದೇ ಒಂದು ವಾಕ್ಯವನ್ನೂ ರಚಿಸದೆ ಸುಮ್ಮನೇ ಹುವಾನ್ ರುಲ್ಫೋ ಬಗ್ಗೆ ಯೋಚಿಸುತ್ತಾ ಇದ್ದೆ. ಅದೇ ಬಹುಶಃ ಸರಿಯಾದ ಕ್ರಮ. ಯಾರ ಮೇಲೂ ತನ್ನ ಬಳುವಳಿಯನ್ನು ಹೇರದೇ ಹೊರಟು ಹೋದವರ ಬಗ್ಗೆ ಯಾಕೆ ಒಂದಷ್ಟು ಶಬ್ದಗಳ ಹೊರೆ ಹೊರಿಸಬೇಕು? ಬರೆದುಕೊಂಡಿದ್ದನ್ನೂ ಎಸೆದು ಬಿಡುವವನಿದ್ದೆ.

ಹುವಾನ್ ರುಲ್ಫೋ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾನೆ. "ದ ಬರ್ನಿಂಗ್ ಪ್ಲೇಯಿನ್" (ಬೆಂಕಿಬಿದ್ದ ಬಯಲು - ಓಎಲ್ಲೆನ್ ಅನುವಾದ) ಎಂಬ ಒಂದು ಕಥಾಸಂಕಲನವನ್ನು 1953ರಲ್ಲಿ ಮತ್ತು ಎರಡು ವರ್ಷಗಳ ಬಳಿಕ "ಪೆದ್ರೊ ಪರಮೊ" ಎಂಬ ಒಂದು ಕಾದಂಬರಿ. ಪೆದ್ರೊ ಪರಮೊ ಬಗ್ಗೆ ಹೇಳುತ್ತ ಗಾರ್ಸಿಯಾ ಮಾರ್ಕೆಸ್ ಈ ಕಾದಂಬರಿಯ ಲಯವಿನ್ಯಾಸವನ್ನು ಅಂತರ್ಗತಗೊಳಿಸಿಕೊಳ್ಳುವುದಕ್ಕಾಗಿ ತಾನು ಒಮ್ಮೆ ಅದರ ಪ್ರತಿ ಶಬ್ದವನ್ನೂ ಬಾಯಿಪಾಠ ಕಲಿತೆ ಎಂದು ಹೇಳುವ ಮೂಲಕ ತನ್ನ ಗೌರವ ಅರ್ಪಿಸಿದ್ದಾನೆ. ನಾನವನ ಮಾತು ನಂಬುತ್ತೇನೆ. ದಶಕಗಳ ಕಾಲ ಮೆಕ್ಸಿಕೊ ಮತ್ತು ಜಗದಾದ್ಯಂತ ಓದುಗರು ಮತ್ತೊಂದು ಪುಸ್ತಕಕ್ಕಾಗಿ ಕಾದರು. ಅವರು ಕಾದರು, ಕಾದೇ ಕಾದರು. ಅರವತ್ತೊಂಬತ್ತನೆಯ ವಯಸ್ಸಿನಲ್ಲಿ, 1986ರಲ್ಲಿ ರುಲ್ಫೋ ತೀರಿಕೊಂಡ. ಯಾವುದೇ ಒಂದು ಹೊಸ ಕಥಾನಕ ಎಂದಿಗೂ ಹೊರಬರಲೇ ಇಲ್ಲ.
ಯಾಕೆ ಬರೆಯುವುದನ್ನು ನಿಲ್ಲಿಸಿದೆ ಎಂದು ಒಮ್ಮೆ ಸಂದರ್ಶಕನೊಬ್ಬ ಕೇಳಿದ ಪ್ರಶ್ನೆಗೆ ರುಲ್ಫೋ ಹೇಳುತ್ತಾನೆ, ತಾನು ಬರೆದ ಹೆಚ್ಚಿನೆಲ್ಲಾ ಕತೆಗಳನ್ನು ತಾನು ತನ್ನೊಬ್ಬ ಅಚ್ಚುಮೆಚ್ಚಿನ ಅಂಕಲ್ ಬಾಯಲ್ಲಿ ಕೇಳಿದ್ದು. ಅದೇನಾಯ್ತು ಅಂದ್ರೆ, ಆ ಅಂಕಲ್ ತೀರಿಕೊಂಡು ಬಿಟ್ಟ. ಯಾವುದೇ ಲೇಖಕ ಇಂಥ ಅಧಿಕಪ್ರಸಂಗಿ ಪ್ರಶ್ನೆಗೆ ಇದಕ್ಕಿಂತ ಚೆನ್ನಾದ ಉತ್ತರ ಕೊಟ್ಟಿದ್ದುಂಟೆ? ಯಾವತ್ತೂ ಯಾವುದೇ ಕಥಾನಕಗಳನ್ನು ಬರೆಯದ ಮೂರ್ಖ ಮಾತ್ರ ಕೇಳಬಹುದಾದ ಪ್ರಶ್ನೆಯಿದು. ನನ್ನ ನಿಲುವು ಇದು: ಒಬ್ಬ ಬರಹಗಾರನ (ಅಥವಾ ಯಾರೊಬ್ಬರದೂ) ಮೌನವನ್ನು ಯಾವತ್ತೂ ತನಿಖೆ ಮಾಡಲು ಹೋಗಬಾರದು. ಅದನ್ನು ಗೌರವಿಸಬೇಕು ಮತ್ತು ಅದನ್ನೂ ದೂರದಿಂದ.

ಪೆದ್ರೊ ಪರಮೊದ ಪ್ರವೇಶಿಕೆಯಲ್ಲಿ ಸುಸಾನ್ ಸಾಂಟಗ್ ಬರೆಯುತ್ತಾಳೆ:

"ಒಬ್ಬ ಬರಹಗಾರ ತನ್ನ ಬದುಕಿನಲ್ಲಿ ಸದಾ ಒಂದರ ಹಿಂದೆ ಒಂದರಂತೆ ಪುಸ್ತಕಗಳನ್ನು ಬರೆಯುತ್ತಾ, ಅವುಗಳನ್ನು ಪ್ರಕಟಿಸುತ್ತಾ ಇರಬೇಕೇನೋ ಎನ್ನುವ ಹಾಗೆ ಎಲ್ಲರೂ ರುಲ್ಫೋ ಬಳಿ ಯಾಕೆ ಅವನು ಮತ್ತೆ ಪುಸ್ತಕ ಬರೆಯಲಿಲ್ಲ ಎಂದು ಕೇಳುವವರೇ. ನಿಜಕ್ಕಾದರೆ ಒಬ್ಬ ಬರಹಗಾರ ತನ್ನ ಬದುಕಿನಲ್ಲಿ ಒಂದು ಮಹತ್ತಾದ ಪುಸ್ತಕವನ್ನು, ಯಾವುದು ಸದಾ ಕಾಲ ನಿಲ್ಲುವಂತಿರುತ್ತದೋ ಅಂಥದ್ದನ್ನು ಬರೆಯಬೇಕು ಅಷ್ಟೆ. ರುಲ್ಫೋ ಮಾಡಿದ್ದು ಅದನ್ನೆ. ಒಂದು ಪುಸ್ತಕ ಎರಡನೆಯ ಸಲ ಓದುವುದಕ್ಕೆ ಅರ್ಹವಾಗಿಲ್ಲ ಎಂದಾದರೆ ಅದು ಒಂದು ಸಲ ಓದುವುದಕ್ಕೂ ಅರ್ಹವಾಗಿಲ್ಲ ಎಂದೇ ಅರ್ಥ."

ಸಾಂಟಗ್‌ಳ ಈ ಅದ್ಭುತವಾದ ಮಾತಿಗೆ ನಾನೊಂದು ಪುಟ್ಟ ತಿದ್ದುಪಡಿ ಸೇರಿಸಬಯಸುತ್ತೇನೆ. ರುಲ್ಫೋ ಸದಾ ಕಾಲ ನಿಲ್ಲುವ ಒಂದಲ್ಲ, ಎರಡು ಪುಸ್ತಕಗಳನ್ನು ಬರೆದಿದ್ದಾನೆ. ನನಗೆ ಗೊತ್ತಿರುವಂತೆ ಹೀಗೆ ಹಲವು ಸ್ತರದ ಧ್ವನಿಶಕ್ತಿಯುಳ್ಳಂಥ, ಅತೀಂದ್ರಿಯ ಜಗತ್ತಿಗೆ ಸೇರಿದ್ದೋ ಎನಿಸುವಂಥ, ಕಾಲವನ್ನೇ ತನ್ನ ನಿಯಂತ್ರಣದಲ್ಲಿ ಬಗ್ಗಿಸಿಟ್ಟಂಥ, ಸಂತುಲಿತವಾದ ಒಂದು ಪ್ರಖರತೆಯನ್ನು ಉದ್ದಕ್ಕೂ ಉಳಿಸಿಕೊಂಡಂಥ ಪೆದ್ರೊ ಪರಮೊ ತರದ ಇನ್ನೊಂದು ಕಾದಂಬರಿ ಇಲ್ಲ. ಈ ಗುಣಗಳು ಕಾದಂಬರಿಯಲ್ಲಿ ಒಂದು ಬಗೆಯ ಸಮೂಹಗಾಯನದಂಥ ಉನ್ಮತ್ತ ಸ್ತರದಲ್ಲಿ ಉಕ್ಕುತ್ತಿವೆ.

"ಅರುಣೋದಯದಲ್ಲೆ ಗಂಟೆಗಳ ನಾದದೊಂದಿಗೆ ಹಳ್ಳಿಯು ಮೈಮುರಿಯುತ್ತದೆ. ಅದು ಡಿಸೆಂಬರ್ ಎಂಟರ ಮುಂಜಾವು. ಮಬ್ಬು ಮುಸುಕಿದ ಮುಂಜಾನೆ. ಹಾಗಂತ ಚಳಿಯೇನೂ ಇರಲಿಲ್ಲ. ಇದ್ದುದರಲ್ಲಿ ದೊಡ್ಡ ಗಂಟೆಯ ದನಿಯೊಂದಿಗೆ ಆ ನಾದ ತೊಡಗಿತ್ತು. ನಂತರ ಉಳಿದ ಗಂಟೆಗಳ ಗಣಗಣ ಅದರೊಂದಿಗೆ ಸೇರಿಕೊಂಡಿತು. ಕೆಲವರು ಹೈಮಾಸ್ ತೊಡಗಲಿದೆ ಎಂದು ಭಾವಿಸಿ ಮನೆಯ ಕದ ತೆರೆದು ಹೊರಬಂದರು. ಕತ್ತಲಿರುವಾಗಲೇ ಎದ್ದು ತಡರಾತ್ರಿಯ ತನಕ ಎಚ್ಚರಿರುವ ಕೆಲವೇ ಕೆಲವು ಮಂದಿಗೆ ಗೊತ್ತಿತ್ತು. ಅವರು ಹೇಳಿದ್ದು ಉಳಿದವರಿಗೆ, ರಾತ್ರಿ ಮುಗೀತು, ಹಗಲಾಗಿದೆ ಅಂತ. ಆದರೆ ಯಾವತ್ತಿಗಿಂತ ತುಸು ಹೆಚ್ಚು ಹೊತ್ತು ಈ ಗಂಟೆಗಳ ಸದ್ದು ಮುಂದುವರಿಯಿತು."

ಈ ಕಾದಂಬರಿಯಲ್ಲಿ ನಿರೂಪಕ ನಮ್ಮ ಜಗತ್ತಿನಷ್ಟೇ ನರಕದಂತಿರುವ ಮತ್ತು ಅದರಷ್ಟೇ ಸೂಕ್ಷ್ಮ ಕೂಡ ಆಗಿರುವ ಒಂದು ಭೂಗತ ಲೋಕದಲ್ಲಿ ತನ್ನ ತಂದೆ ಪೆದ್ರೊ ಪರಮೊನನ್ನು ಹುಡುಕುತ್ತಿದ್ದಾನೆ. ಆದರೆ ನಾನು, ಇದೆಲ್ಲಕ್ಕಿಂತ ಹೆಚ್ಚು ಮೂಲಭೂತವಾದ ಒಂದು ಪ್ರಶ್ನೆಯನ್ನಿಟ್ಟುಕೊಂಡು ಮತ್ತೆ ಮತ್ತೆ ರುಲ್ಫೋನ ಮೊದಲ ಪುಸ್ತಕಕ್ಕೇ ಮರಳಿ ಹೋಗುತ್ತೇನೆ; ಒಂದು ಕತೆಯನ್ನು ಸುಮ್ಮನೇ ಕೇಳುವುದರಿಂದ ಹೇಗೆ ಆವಾಹಿಸಿಕೊಳ್ಳಬಹುದು ಎನ್ನುವುದು ನನ್ನ ಕೌತುಕ.

ನನಗಿದು ಮರೆತು ಹೋಗುತ್ತದೆ. ನಾನು ನನ್ನ ತಲೆಯೊಳಗೆ ಒಬ್ಬನೇ ಸುಳಿದಾಡುತ್ತ ಎಷ್ಟೊಂದು ಸಮಯ ಕಳೆಯುತ್ತೇನೆಂದರೆ, ಕೊನೆಗೆ ಅಪರಿಚಿತನೊಬ್ಬನ ಧ್ವನಿಗೆ ತೆರೆದುಕೊಳ್ಳುವುದು ಕೂಡ ನನಗೆ ಹೇಗೆ ಎಂಬುದೇ ಮರೆತು ಹೋಗುತ್ತದೆ. ಅಲ್ಲಲ್ಲಿ ಗೀಚಿಕೊಂಡ ನನ್ನ ಟಿಪ್ಪಣಿಗಳಲ್ಲಿ ನಾನು ಒಂದು ತೀರ ಚಿಕ್ಕ ಕತೆಯ (ದ ಬರ್ನಿಂಗ್ ಪ್ಲೆಯಿನ್ಸ್ ಸಂಕಲನದ ಎಲ್ಲಾ ಕತೆಗಳೂ ಹತ್ತು ಪುಟಕ್ಕಿಂತ ಚಿಕ್ಕವೇ) ಕಡೆಗೆ ಹೆಚ್ಚು ಗಮನ ಕೊಡಲು ಇಚ್ಛಿಸುತ್ತೇನೆ. ಅದರ ಹೆಸರು ಲುವಿನಾ. ರಸ್ತೆ ಬದಿಯ ಒಂದು ಬಾರಿನಲ್ಲಿ ಒಬ್ಬ ದಾರಿಹೋಕ ಮತ್ತೊಬ್ಬ ಕುಡುಕ ಇಬ್ಬರೂ ಕುಡಿಯುತ್ತ ಕುಳಿತಿದ್ದಾರೆ. ಹೊರಗೆ ನದಿಯ ದಂಡೆಯಲ್ಲಿ ಕೆಲವು ಮಕ್ಕಳು ಆಡಿಕೊಳ್ಳುತ್ತಿವೆ. ಲುವಿನಾ ಎಂಬ ಹೆಸರಿನ ನಗರವೊಂದಕ್ಕೆ ವಲಸೆ ಹೋಗುತ್ತಿರುವ ದಾರಿಹೋಕನಿಗೆ, ಈ ಕುಡುಕ ತನಗೆ ಕುಡಿಯಲು ಕೊಡಿಸಿದ್ದಕ್ಕೆ ಪ್ರತಿಯಾಗಿ ಲುವಿನಾ ಕುರಿತು ಹೇಳುತ್ತಿದ್ದಾನೆ. ಕುಡುಕ ಹೇಳುತ್ತಾನೆ, ಲುವಿನಾದಲ್ಲಿ ಗಾಳಿ ಎಷ್ಟು ಜೋರಾಗಿ ಬೀಸುತ್ತೆಂದರೆ ಕೆಲವೊಮ್ಮೆ ಅದು ಮನೆಯ ಛಾವಣಿಯನ್ನು ಅದು ತಲೆಯ ಮೇಲಿನ ಹ್ಯಾಟೋ ಎಂಬಂತೆ ಎಗರಿಸಿಕೊಂಡು ಹೋಗುತ್ತದೆ! ಮಳೆ ಮಾತ್ರ ವರ್ಷದಲ್ಲಿ ಕೆಲವೇ ಕೆಲವು ದಿನ ಸುರಿಯುತ್ತದೆ. ಕೆಲವೊಂದು ವರ್ಷ ಮಳೆ ಬರುವುದೇ ಇಲ್ಲ. ಕುಡುಕ ಹೇಳುತ್ತಾನೆ, ಲುವಿನಾ ಎಂಬುದು ಒಂದು ತೆಗ್ದುಹಾಕಿದ ಊರು. ಹಳೇ ಚರ್ಮದಷ್ಟು ಒಣಹವೆ. ಚಳಿಗಾಲದಲ್ಲಿ ಭಯಂಕರ ಚಳಿ. ಬೇಸಿಗೆಯಲ್ಲಿ ಸುಡು ಬಿಸಿಲು. ಅಂಥಲ್ಲಿ ಒಬ್ಬ ಮನುಷ್ಯ ಅಬ್ಬಬ್ಬಾ ಎಂದರೆ ಸದ್ದುಗದ್ದಲವಿಲ್ಲದೆ ಶಾಂತವಾಗಿ ಸಾಯಬಹುದು ಅನ್ನೋದೆ ಉಳಿದ ಆಸೆ. ಕುಡುಕ ಹೇಳುತ್ತಲೇ ಹೋಗುತ್ತಾನೆ. ಅವನು ಒಬ್ಬ ಸ್ಕೂಲ್ ಮಾಸ್ತರನಾಗಿದ್ದಾತ. ಸ್ವತಃ ಒಂದು ಕಾಲದಲ್ಲಿ ಏನೇನೋ ಕನಸು ಕಟ್ಟಿಕೊಂಡು ಲುವಿನಾಕ್ಕೆ ವಲಸೆ ಹೋದವ.

"ಆಗ ನನ್ನಲ್ಲಿ ತ್ರಾಣವಿತ್ತು. ತಲೆ ತುಂಬ ಹೊಸ ಹೊಸ ಐಡಿಯಾ ಇತ್ತು - ಗೊತ್ತಲ್ಲ ನಿಮಗೆ, ಎಂಥೆಂಥಾ ಹುಚ್ಚು ಐಡಿಯಾಗಳೆಲ್ಲ ಇರ್ತವೆ ತಲೇಲಿ ಅಂತ. ಅದನ್ನೆಲ್ಲ ಇಟ್ಕೊಂಡು ಏನೋ ಮಾಡಬೇಕು ಅಂತ್ಲೇ ಮನುಷ್ಯ ಎಲ್ಲೆಲ್ಲಿಗೋ ಹೋಗ್ತಾನೆ. ಆದ್ರೆ ಲುವಿನಾದಲ್ಲಿ ಅದೆಲ್ಲ ಕೆಲಸಕ್ಕೆ ಬರೋದಿಲ್ಲ. ನಾನೂ ಒಂದು ಕೈ ನೋಡ್ಲಿಕ್ಕೆ ಹೋದೆ. ಎಲ್ಲ ಹಾಳಾಯ್ತು ಅಷ್ಟೆ..."

ದಾರಿಹೋಕ ಹೆಚ್ಚೇನೂ ಮಾತನಾಡುವುದೇ ಇಲ್ಲ. ಅವನು ತನ್ನ ಲುವಿನಾ ಪ್ರಯಾಣದ ಬಗ್ಗೆ ಏನಂದುಕೊಂಡಿದ್ದಾನೆ ಎನ್ನುವುದು ನಮಗೆ ಕೊನೆಗೂ ತಿಳಿಯುವುದಿಲ್ಲ. ಅವನಿಗೆ ಭಯವಾಯಿತೆ? ಅಥವಾ ಅವನು ಈ ಕುಡುಕನ ಯೌವನಕ್ಕಿಂತ ತನ್ನ ಯೌವನ ಹೆಚ್ಚು ಸಬಲವಾದದ್ದು ಮತ್ತು ಲುವಿನಾ ತನ್ನನ್ನು ಸೋಲಿಸಲಾರದು ಎಂದುಕೊಂಡಿದ್ದಾನೆಯೆ? ಕತೆಯಲ್ಲಿ ಎಲ್ಲಿಯೂ ಈ ದಾರಿಹೋಕ ಯುವಕ ಎನ್ನುವ ಬಗ್ಗೆ ನೇರವಾದ ಪುರಾವೆ ಸಿಗುವುದಿಲ್ಲ. ಆದರೂ ಹಾಗನಿಸುತ್ತದೆ. ಒಂದು ಕಡೆ ಕುಡುಕ ಸ್ವಲ್ಪ ಹೊತ್ತು ಸುಮ್ಮನಿರುತ್ತಾನೆ. ಅಲ್ಲೊಂದು ಮಧ್ಯಂತರ ಬಂದಂತಿದೆ. ಆಗ ಅಶರೀರವಾಣಿಯಂತಿರುವ ನಿರೂಪಕನ ಮಾತುಗಳು ಮೇಲಿನಿಂದ ಕೇಳಿಬಂದಂತೆ ನಮಗೆ ಹೇಳುತ್ತವೆ:

"ಪತಂಗಗಳು ಎಣ್ಣೆದೀಪಕ್ಕೆ ಮುತ್ತಿಕೊಳ್ಳಲು ಹಾರಿಕೊಂಡು ಬರತೊಡಗಿದವು ಮತ್ತು ದೀಪಕ್ಕೆ ಹೊಡೆದು ರೆಕ್ಕೆ ಸುಟ್ಟುಕೊಂಡು ನೆಲಕ್ಕೆ ಬೀಳತೊಡಗಿದವು. ಹೊರಗೆ ಕಾರ್ಗತ್ತಲು ನಿಧಾನಕ್ಕೆ ಹೆಜ್ಜೆಯಿಕ್ಕುತ್ತಾ ಮುಂದು ಮುಂದಕ್ಕೆ ಬರುತ್ತಿತ್ತು"

"ಲುವಿನಾ" ಕತೆಯ ಬಗ್ಗೆ ಈ "ಹೊರಗೆ ಕಾರ್ಗತ್ತಲು ನಿಧಾನಕ್ಕೆ ಹೆಜ್ಜೆಯಿಕ್ಕುತ್ತಾ ಮುಂದು ಮುಂದಕ್ಕೆ ಬರುತ್ತಿತ್ತು" ಎನ್ನುವ ಸಾಲು ಹೇಳದೇ ಇರುವ ಏನನ್ನು ತಾನೇ ನಾನು ಹೇಳಲು ಸಾಧ್ಯವಿದೆ? ಅಲ್ಲವೆ? ನಮಗೆಲ್ಲರಿಗೂ? ಸದಾ ಕಾಲಾಕ್ಕೂ?

ಶ್ರದ್ಧಾಂಜಲಿಯ ಮಾತು ಇಷ್ಟೇ, ನನ್ನ ಮಟ್ಟಿಗೆ.

ಸದ್ಯ ನಾನು ಬುಟಾನೊ ಸ್ಟೇಟ್ ಪಾರ್ಕಿನ ಒಂದು ಪಿಕ್‌ನಿಕ್ ಟೇಬಲ್ ಎದುರು ಕುಳಿತಿದ್ದೇನೆ. ಕ್ಯಾಲಿಫೋರ್ನಿಯಾದಿಂದ ತೀರ ದೂರವೇನಿಲ್ಲ ಇದು. ನಾನು ಕುಳಿತಲ್ಲಿಂದ ಕೆಲವೇ ಅಡಿಗಳ ಅಂತರದಲ್ಲಿ ರಷ್ಯನ್ ಎಂದು ನಾನು ಅಂದುಕೊಂಡಿರೋ ಒಂದು ಕುಟುಂಬ ಕೂತಿದೆ. ಕಳೆದ ಒಂದು ಗಂಟೆಯಿಂದ ನಾನು ಅವರ ಮಾತುಕತೆಯನ್ನೆಲ್ಲ ಕೇಳುತ್ತ ಕೂತಿದ್ದೇನೆ. ಮೊದಲಿಗೆ ನಾನು ಅವರೇನೋ ಸಿಕ್ಕಾಪಟ್ಟೆ ಸಿಟ್ಟಿನಲ್ಲಿದ್ದಾರೆ, ಏನೋ ಜಗಳ ನಡೆಯುತ್ತಿದೆ, ಸ್ವಲ್ಪ ಹೊತ್ತಿನಲ್ಲೇ ಕೈಗೆ ಸಿಕ್ಕಿದ್ದನ್ನ ತೆಗೆದುಕೊಂಡು ಒಬ್ಬರನ್ನೊಬ್ಬರು ಮರ್ಡರ್ ಮಾಡಲಿದ್ದಾರೆ ಎಂದೇ ಅಂದುಕೊಂಡಿದ್ದೆ. ಒಮ್ಮೆಯಂತೂ ಅವರಲ್ಲೊಬ್ಬ ದೊಡ್ಡ ಒಂದು ಕರಿದ ಮಾಂಸದ ತುಂಡು ಕೈಗೆ ತಗೊಂಡು ಟೇಬಲ್ ಸುತ್ತಿಕೊಂಡು ಬಂದು ಎದುರಿನವನ ತಲೆಗೆ ಕುಟ್ಟಿದ್ದ ಕೂಡ. ಮತ್ತೆ ಮತ್ತೆ ಅರ್ಥವಾಯಿತು, ಈ ಸಂಸಾರದ ಮಂದಿ ಊಟದ ಹೊತ್ತಲ್ಲಿ ಮಾತನಾಡಿಕೊಳ್ಳುವ ಶೈಲಿಯೇ ಇದು ಅಂತ. ಅವರು ಇದ್ದಿದ್ದು ಐದೇ ಮಂದಿ. ಸುಮಾರು ಎಪ್ಪತ್ತರ ಆಸುಪಾಸಿನಲ್ಲಿರುವ ತಂದೆ-ತಾಯಿ, ನಲವತ್ತರಿಂದ ಐವತ್ತರ ನಡುವಿನ ಮೂವರು ಮಕ್ಕಳು ಅಂತ ಕಾಣುತ್ತೆ, ಇಬ್ಬರು ಗಂಡಸರು, ಒಬ್ಬಾಕೆ ಹೆಂಗಸು. ಅವರು ಇದ್ದಿದ್ದು ಐದೇ ಮಂದಿ ಎಂದೆನಲ್ಲ, ಆದರೆ ಅವರು ಮಾಡುತ್ತಿದ್ದ ಗದ್ದಲ ಇಪ್ಪತ್ತು ಮಂದಿ ರೌಡಿ ಕೊಸಾಕ್ಸ್ ಮಾಡುವಷ್ಟಿತ್ತು. ಎಲ್ಲ ಸಖತ್ ಪರ್ಸನಾಲಿಟಿಯವರೇ, ಆದರೆ ಅವರ ಧ್ವನಿಯೇ ನಿಜಕ್ಕೂ ಅವರನ್ನು ಮತ್ತಷ್ಟು ದೈತ್ಯರೆನಿಸುವಂತೆ ಮಾಡಿತ್ತು. ಏನು ಬೊಬ್ಬೆ, ಅಟ್ಟಹಾಸ, ಆ ಭಾರೀ ಕೈಗಳಿಂದ ಆ ಪಿಕ್‍‌ನಿಕ್ ಟೇಬಲ್ ಮೇಲೆ ಬಡಿಯುವುದೇನು! ಮತ್ತೊಮ್ಮೆ ನನಗೆ ಹೆಚ್ಚು ಭಾಷೆಗಳು ಬರದೇ ಇರುವುದರ ಬಗ್ಗೆ ನಾಚಿಕೆಯಾಯಿತು. ನನ್ನ ಮುಂದಿನ ಜನ್ಮದಲ್ಲಿ ನಾನು ಸತ್ತರೂ ಸರಿ, ರಷ್ಯನ್ ಕಲಿಯುತ್ತೇನೆ. ಚೆಕೊವ್ ಮತ್ತು ತುರ್ಗನೇವರನ್ನು ಓದುತ್ತೇನೆ. ಮತ್ತು ಐಸಾಕ್ ಬೇಬಲ್. ಗೂಗಲನ್ನ ಮೂಲದಲ್ಲೇ ಅರೆದು ಕುಡಿದು ಬಿಡುತ್ತೇನೆ. ಮಾಸ್ಕೋಗೆ ವಲಸೆ ಹೋಗಿ ಅಲ್ಲೆ ನೆಲೆಸುತ್ತೇನೆ ಮತ್ತು ಇಡೀ ದೇಶದ ಎಲ್ಲಾ ಆಪ್ತ, ಗುಟ್ಟುಕಟ್ಟಿನ ಮಾತುಕತೆಯನ್ನೆಲ್ಲ ಕದ್ದುಮುಚ್ಚಿಯಾದರೂ ಕೇಳಿಸಿಕೊಳ್ಳುತ್ತೇನೆ.

ನಾನಿಲ್ಲಿಗೆ ರೆಡ್‌ವೂಡ್ಸ್‌ನ ಶಾಂತ ಪರಿಸರದಲ್ಲಿ ಸಮಯ ಕಳೆಯಲೆಂದು ಬಂದವನು. ಬದಲಿಗೆ ಈ ಗದ್ದಲಕ್ಕೆ ಮುದಗೊಂಡು ಕುಳಿತಿದ್ದೇನೆ. ನೈಸರ್ಗಿಕವಾದ ವನರಾಜಿಗಳ ನಡುವಣ ವಿಹಾರವನ್ನು ಬಿಡಿ; ನಾನು ಈ ಶಿಷ್ಟವಲ್ಲದ ಬಗೆಯ ಬದುಕನ್ನೇ, ಇಚ್ಛಾನುಸಾರ ಇರುವ ಮಂದಿಯನ್ನೇ ಹೆಚ್ಚು ಇಷ್ಟಪಡುವವನು, ಅವರೊಂದಿಗೇ ಇರಲು ಬಯಸುವವನು. ನಾನು ಅವರಿಗಾಗಿಯೇ ಇಲ್ಲಿಗೆ ಬಂದವನು. ಮತ್ತೀಗ ಯಾವುದೋ ಕೆಲವು ಕಾರಣಗಳಿಗೆ ನನಗೆ ಹುವಾನ್ ರುಲ್ಫೋ ನೆನಪಾಗುತ್ತಾನೆ. ಪಕ್ಕದ ಊಟದ ಟೇಬಲ್ಲಿನಲ್ಲಿ ದಾಸ್ತೊವಸ್ಕಿಯನ್ ಔತಣವೊಂದು ಕೊಬ್ಬಿ ಬೀಗುತ್ತಿರಬೇಕಾದರೆ ಮೌನದ ಮನೋಮೂರ್ತಿ, ಕಿರಿದರಲ್ಲಿ ಪಿರಿದರ್ಥವಂ ಪೇಳ್ವ ರುಲ್ಫೋಗೇನಪ್ಪ ಕೆಲಸ! ಹೆಚ್ಚೇನಿಲ್ಲವೆನ್ನಿ, ಸರಿಯೇ, ಮೇಲ್ನೋಟಕ್ಕಾದರೂ ಅದು ಸರಿ. ಆದರೆ ಇಲ್ಲಿ ಹೀಗೆ ಕುಳಿತಿರಬೇಕಾದರೆ ಅನಿಸುತ್ತಿದೆ, ರುಲ್ಫೋ ಕೂಡಾ ಈ ಜನರ ಮಾತುಕತೆಯನ್ನು ಕೇಳಿಸಿಕೊಳ್ಳಲು ಬಯಸುತ್ತಿದ್ದ, ಇಷ್ಟಪಡುತ್ತಿದ್ದ. ಬಹುಶಃ ಅವನ ಅಂಕಲ್ ಒಬ್ಬ ಸಿಕ್ಕಾಪಟ್ಟೆ ಮಾತುಗಾರನೇ ಇದ್ದಿರಬೇಕು. ನಾನೊಬ್ಬನೇ ಹೀಗೆ ಎನ್ನುತ್ತೀರಾ? ಅಥವಾ ನೀವೂ ಕೂಡಾ ಹೀಗೆ ಕೆಲವೊಮ್ಮೆ ಈಗಿಲ್ಲದ ಕತೆಗಾರರೊಂದಿಗೆ ಹೂಬೇಹೂಬ್ ನಮ್ಮ ಗತಿಸಿದ ಗೆಳೆಯನೊಂದಿಗೆ ಮಾತಿಗೆ ಕೂತಂತೆಯೇ ಲೊಟ್ಟೆಹೊಡೆದು ಕೂರುತ್ತೀರಾ? ರುಲ್ಫೋ ಹಾಗೆ ಇಲ್ಲಿ ಬಂದು ನನ್ನೆದುರಿನ ಟೇಬಲ್ಲಿನಾಚೆ ಕುಳಿತಿದ್ದಾನೆ. ಬೆಳಗುವ ಬಿಳೀ ಶರ್ಟ್ ತೊಟ್ಟಿದ್ದಾನೆ, ಹೆಗಲ ಮೇಲೆ ಕ್ಯಾಮರಾ ತೂಗಾಡುತ್ತಿದೆ. ಅವನು ಒಂದೂ ಮಾತನಾಡುತ್ತಿಲ್ಲ ಎನ್ನುವುದೇನೋ ನಿಜವೇ. ಅದರೆ ನನ್ನನ್ನು ಅವನ ಕತೆಗಳ ಬಗ್ಗೆ ಯೋಚಿಸುವ ಹಾಗಂತೂ ಮಾಡಿಬಿಟ್ಟಿದ್ದಾನೆ. ಒಬ್ಬರು ಇನ್ನೊಬ್ಬರಿಗೆ ಪರಸ್ಪರ ಕತೆಗಳನ್ನು ಹೇಳುತ್ತಲೇ ಒಂದು ಪಾತ್ರದಿಂದ ಇನ್ನೊಂದು ಪಾತ್ರದ ಸುತ್ತ ಸುತ್ತುವ ಅವನ ಕತೆಗಳಂತೆಯೇ ನಾನೀಗ ಸುತ್ತುತ್ತಿದ್ದೇನೆ, ಅವನವೇ ಕತೆಗಳ ಸುತ್ತ. ಪಕ್ಕದ ಟೇಬಲ್ಲಿನ ನನ್ನ ಗೆಳೆಯರು ಅದೇನು ಮಾಡುತ್ತಿದ್ದಾರೆ ಎನ್ನುವುದನ್ನು ನಾನು ಕಲ್ಪಿಸುವುದಾದರೆ, ಅವರು ಪರಸ್ಪರ ಒಬ್ಬರು ಇನ್ನೊಬ್ಬರ ಕತೆಗಳನ್ನೇ ಹೊರಸೆಳೆಯುವ ಕೆಲಸ ಮಾಡುತ್ತಿದ್ದಾರೆ ಅಷ್ಟೆ. ಬಹುಶಃ ಅವರು ಈಗಾಗಲೇ ಆ ಕತೆಗಳನ್ನೆಲ್ಲ ನೂರಾರು ಬಾರಿ ಕೇಳಿಯೂ ಆಗಿದೆ. ಆದರೂ...

ನಾನಂತೂ ಈಗೀಗ ಇದನ್ನೇ ನಂಬತೊಡಗಿದ್ದೇನೆ; ಅದು ಕತೆ ಹೇಳುವುದರಲ್ಲಿಲ್ಲ, ಅದನ್ನು ಮತ್ತೆ ಮತ್ತೆ ಹೇಳುವುದರಲ್ಲೇ ಇದೆ. ಅತ್ಯಂತ ಆಳದಲ್ಲಿ ರುಲ್ಫೋನ ಕತೆಗಳೆಲ್ಲವೂ ಹೇಳದೇ ಇರಲಾರದ ತಮ್ಮ ಕತೆಗಳನ್ನು ಗಳಗಳನೆ ಹೇಳಿಕೊಂಡು ಹಗುರಾಗಬಯಸುವ ಪಾತ್ರಗಳ ಕುರಿತೇ ಇವೆ. ಉಳಿದೆಲ್ಲಕ್ಕಿಂತ ಹೆಚ್ಚಾಗಿ ಈ ಕಾರಣಕ್ಕೇ, ಈ ಕೊಂಪೆಯ ಗುಡಿಸಲಿನಂಥ ಪಿಕ್‌ನಿಕ್ ಏರಿಯಾದಲ್ಲಿ, ತನಗಾದರೂ ಒಂದಕ್ಷರ ಅರ್ಥವಾಗದ ಭಾಷೆಯನ್ನು ಕೇಳಿಸಿಕೊಳ್ಳುತ್ತ ಕೂತಿರಲು ಬಂದಿದ್ದಾನಾತ ಅನಿಸುತ್ತದೆ ನನಗೆ. ಈ ಉನ್ಮತ್ತ ಪಿಕ್‌ನಿಕ್ ಪ್ರಿಯರು ಇನ್ಯಾರೂ ಅನುಕರಿಸಲಾಗದ ವಿಶಿಷ್ಟವಾದೊಂದು ವಿಧಾನದಲ್ಲಿ ಪರಸ್ಪರ ಹೇಳಿಕೊಳ್ಳುತ್ತಿರುವ ಕತೆಗಳೂ ಕೂಡ ಒಂದಿಲ್ಲೊಂದು ಬಗೆಯಲ್ಲಿ ಇವರೆಲ್ಲರ ಯೌವನದ ದಿನಗಳಲ್ಲಿ ಕಟ್ಟಿಕೊಂಡಿದ್ದ ಕನಸುಗಳೆಲ್ಲ ಏನಾಗಿ ಹೋದವು ಎನ್ನುವ ಕುರಿತೇ ಆಗಿರಬಹುದು ಎನ್ನುವ ಗುಮಾನಿ ಕೂಡ ನನಗೆ, ಯಾಕೆ, ಇಲ್ಲಿರುವ ರುಲ್ಫೋನ ಛಾಯೆಗೂ ಇದ್ದಿರಲೇ ಬೇಕೆಂಬ ನಂಬುಗೆ ನನ್ನದು. ಈಗೀಗ ನನಗೇ ನನ್ನಲ್ಲಿದ್ದ ಯಾವುದೋ ಒಂದು ಹುಮ್ಮಸ್ಸು ನಿಧಾನಕ್ಕೆ ಕರಗತೊಡಗಿದೆ ಅನಿಸುತ್ತಿದೆ. ಜೀವನದ ಯಾವ ತಿರುವಿನ ಯಾವ ಘಟ್ಟದಲ್ಲಿ ನಾವು ನಮ್ಮದೇ ಸೋಲುಗಳ ಕುರಿತು ಮೋಹಕ್ಕೆ ಬೀಳುತ್ತೇವೆ, ಅವುಗಳ ಕುರಿತೇ ಮಾತನಾಡುವುದನ್ನು ಬಿಡಲಾರದ ತುಡಿತಕ್ಕೆ ಒಳಗಾಗುತ್ತೇವೆ? ಎಲ್ಲೋ ಒಂದು ಕಡೆ ನಾವು ಕೊನೆಗೂ ನಮ್ಮಷ್ಟಕ್ಕೇ ತಣ್ಣಗಾಗುತ್ತೇವೆಯೆ? ಈಗ ಮತ್ತೆ "ಲುವಿನಾ" ಕುರಿತು ಯೋಚಿಸುವಾಗ, (ನನ್ನ ಬಳಿ ಈಗ ತೀರ ಬೇಕನಿಸುತ್ತಿರುವ ಘಳಿಗೆಯಲ್ಲಿ ಆ ಪುಸ್ತಕ ಇಲ್ಲ*) ನಾನೇ ಬಾರ್‌ನಲ್ಲಿ ಕುಳಿತು ಯೋಚಿಸುತ್ತಿರುವ ದಾರಿಹೋಕನಾಗುತ್ತೇನೆ. ಸಶಬ್ದವಾಗಿ ನಾನದನ್ನು ಹೇಳದಿದ್ದರೂ ನನಗೆ ಗೊತ್ತು, ನಾನು ನನ್ನ ಬದುಕನ್ನು ಹಿಂದಿರುಗಿ ನೋಡುವವನಿದ್ದೇನೆ. ನಾನು ಲುವಿನಾ ಎಂಬ ಹೆಸರಿನ ಒಂದು ಊರಿಗೆ ಹೋಗುತ್ತಿದ್ದೇನೆ. ಅಲ್ಲಿ ಎಲ್ಲವೂ, ಕೊನೆಗೊಮ್ಮೆ ಎಲ್ಲವೂ, ಬದಲಾಗಲಿದೆ.

"ನಾನೊಬ್ಬ ಶಾಲಾ ಮಾಸ್ತರನಾಗಿದ್ದೆ. ನಾನಲ್ಲಿಗೆ ಶಾಲೆಯಲ್ಲಿ ಕೆಲಸ ಮಾಡಲು ಬಂದಿದ್ದೆ. ನಾನು ನನ್ನ ಹೆಂಡತಿ ಮಕ್ಕಳ ಜೊತೆ ಅಲ್ಲಿಗೆ ತಲುಪಿದಾಗ ಬಂದ್ರಾ ಅಂತ ಕೇಳುವವರೇ ಗತಿಯಿರಲಿಲ್ಲ. ತಿನ್ನುವುದಕ್ಕೇನಾದರೂ ಸಿಗುತ್ತಾ ನೋಡು ಅಂತ ನಾನು ನನ್ನ ಹೆಂಡತಿಯನ್ನು ಕಳಿಸಿದೆ. ಗಂಟೆಗಟ್ಟಲೆ ಕಾದರೂ ಅವಳ ಪತ್ತೆಯಿಲ್ಲ. ಕೊನೆಗೆ ನಾನೇ ಅವಳನ್ನು ಹುಡುಕಿಕೊಂಡು ಹೊರಟೆ. ಒಂದು ಚರ್ಚಿನೊಳಗೆ, ಅಲ್ಲಿ ನರಮನುಷ್ಯರಿರಲಿಲ್ಲ, ಮೊಣಕಾಲು ಹಿಡಿದುಕೊಂಡು ಸುಧಾರಿಸಿಕೊಳ್ಳುತ್ತಾ ಇದ್ದ ಅವಳನ್ನು ಕಂಡೆ. ಏನಾಯಿತು ಮಾರಾಯ್ತಿ, ತಿನ್ನುವುದಕ್ಕೇನಾದರೂ ತಗೊಂಬಾ ಅಂತ ಕಳಿಸಿದರೆ ಇಷ್ಟು ಹೊತ್ತಾ, ಇದೇನು ನಿನ್ನ ಕತೆ ಅಂತ ಕೇಳಿದೆ. ದೊಡ್ಡಕ್ಕೆ ನಿಟ್ಟುಸಿರು ಬಿಟ್ಟು ಹೇಳಿದ್ಲು, ನಾನಿನ್ನೂ ದೇವರಿಗೆ ಮೊರೆಯಿಟ್ಟು ಮುಗಿದಿಲ್ಲ ಅಂತ. ನನಗಿಂತ ಮೊದಲು ಅವಳಿಗೆ ಚೆನ್ನಾಗಿ ಅರ್ಥವಾಗಿತ್ತು, ನಾವು ಎಲ್ಲಿಗೆ ಬಂದು ಸಿಕ್ಕಿಕೊಂಡಿದ್ದೇವೆ ಅಂತ. ಆವತ್ತು ರಾತ್ರಿ ಅದೇ ಚರ್ಚಿನಲ್ಲಿ ನಾವೆಲ್ಲರೂ ಗುಪ್ಪೆ ಹಾಕಿಕೊಂಡು ಚಳಿಗೆ ಮರಗಟ್ಟಿಕೊಂಡು ಮುದುರಿ ಮಲಗಿದೆವು. ಇನ್ನೇನು ಬೆಳಕು ಹರಿಯಬೇಕು ಎನ್ನುವಾಗ ಯಾವುದೋ ಒಂದು ವಿಚಿತ್ರ ಸದ್ದಿಗೆ ನನಗೆ ಎಚ್ಚರಾಯ್ತು. ಮೊದಲಿಗೆ ನಾನದನ್ನು ಬಾವಲಿಗಳು ರೆಕ್ಕೆ ಬಡಿಯುವ ಸದ್ದು ಅಂತಲೇ ಅಂದುಕೊಂಡೆ. ಇನ್ನೂ ಇದ್ದ ಮಂಪರು ನಿದ್ದೆಯಲ್ಲೇ ನಾನು ಚರ್ಚಿನ ಬಾಗಿಲಿನ ತನಕ ಹೋದೆ. ಸರಬರ ಸದ್ದು ಮಾಡುವ ಕಪ್ಪು ಬಟ್ಟೆತೊಟ್ಟ ಹೆಂಗಸರ ಒಂದು ಪುಟ್ಟ ಗುಂಪು ಹೆಗಲ ಮೇಲೆ ಖಾಲಿ ಕೊಡ ಹೊತ್ತು ನಿಧಾನವಾಗಿ ಸರಿಯುತ್ತ ಇದ್ದುದನ್ನು ಕಂಡೆ."

ಇಲ್ಲ, ಪ್ರಯತ್ನಿಸುವುದು ವ್ಯರ್ಥ. ನಾದದ ನೆಲೆ ಹಿಡಿವ ನನ್ನೆಲ್ಲ ಸಂವೇದನೆಗಳೂ ಜಡಗೊಂಡಿವೆ ಎಂದೇ ತಿಳಿದರೂ, ಕೊನೆಗೂ ನನಗೆ ಇದ್ಯಾವುದೂ ದಕ್ಕಿಯೇ ಇಲ್ಲ ಅಂತ ಅಂದುಕೊಂಡರೂ, ರುಲ್ಫೋನ ಲಯವನ್ನು ಕಂಡುಕೊಳ್ಳುವಲ್ಲಿ ಅಥವಾ ಕನಿಷ್ಠ ಅದಕ್ಕೆ ಹತ್ತಿರದ ಒಂದು ಲಯಕ್ಕಾದರೂ ಶ್ರುತಿಯಾಗಲು ಸಾಧ್ಯವಾಗದೇ ಹೋಯಿತೆಂದುಕೊಂಡರೂ ಅದಕ್ಕೆ ಕಾರಣ ನನಗೆ ಆ ಸಾಮರ್ಥ್ಯವಿಲ್ಲ ಎಂದೇ. ಆದರೆ ನನಗೆ ಒಂದಂತೂ ಸ್ಪಷ್ಟವಾಗಿ ತಿಳಿದಿದೆ. ಬೆಳಕು ಹರಿಯುವ ಮುನ್ನ ಚರ್ಚಿನೆದುರು ಹಾಗೆ ಸರಿದು ಹೋದ ಹೆಂಗಸರ ಗುಂಪು ತೊಟ್ಟಿದ್ದ ಬಟ್ಟೆಯ ಸರಬರ ಸದ್ದು ಬಾವಲಿಗಳ ರೆಕ್ಕೆ ಸದ್ದಿನಂತೆಯೇ ಕೇಳಿಸಿತ್ತು. ಮೊತ್ತ ಮೊದಲ ಬಾರಿಗೆ "ಲುವಿನಾ"ಕ್ಕೆ ಮುಖಾಮುಖಿಯಾದಂದಿನಿಂದಲೂ ಈ ಒಂದು ವಿವರ ನನ್ನ ನೆನಪಿನಲ್ಲಿ ಹುದುಗಿ ಕುಳಿತಿದೆ. ಪುಟದಲ್ಲಿ ಆ ಸಾಲನ್ನು ನೋಡುತ್ತಲೇ ಆ ಬಟ್ಟೆ ಒಂದಕ್ಕೊಂದು ಉಜ್ಜಿ ಹುಟ್ಟಿಸುವ ವಿಚಿತ್ರ ಸದ್ದನ್ನು ಕೇಳಿಸಿಕೊಳ್ಳಲು ನಾನು ಕಿವಿಯಾನಿಸಿಯೇ ಆನಿಸಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ಅವನ ಮಂದಿಗೆ ಹೆಚ್ಚೇನೂ ಹೇಳುವುದಕ್ಕೆ ಇದ್ದಿರದೇ ಇರಬಹುದು. ಆದರೆ ಇದು ಮಾತನಾಡುವುದೇನು ಕಡಿಮೆಯೆ? ಹೇಗಿದನ್ನು ಮಾಡುತ್ತಾನಾತ? ಹೇಳುತ್ತಾನೆ, ಅಂಕಲ್ ಹೇಳುತ್ತಿದ್ದ ಕತೆಗಳನ್ನು ಕೇಳುತ್ತಿದ್ದನಂತೆ. ಆಯ್ತು, ಸರಿ. ನನಗನಿಸುತ್ತದೆ, ರುಲ್ಪೋ ಮೌನವನ್ನು ಕೂಡ ಕೇಳಿಸಿಕೊಳ್ಳುತ್ತಿದ್ದ ಅಂತ. ಯಾವ ಮೌನವು ನಮ್ಮನ್ನೆಲ್ಲ ಅಕಾಲಿಕ ಸಾವಿನಂತೆ ಹಿಂಬಾಲಿಸುತ್ತಲೇ ಇರುವುದೋ ಅದನ್ನು.

ಹಳಬ ಕುಡುಕ ಇನ್ನೂ ಸ್ವಲ್ಪ ಕುಡಿಯುತ್ತಲೇ ಮಾತನಾಡುತ್ತಾನೆ. ಅವನು ಹೇಳುತ್ತಾನೆ, ಎಲ್ಲಾ ಶಕುನಗಳಾಚೆಗೂ ಅವನು ಅಲ್ಲಿಯೇ ನೆಲೆಯೂರಲು ನಿರ್ಧರಿಸಿದ. ಅಲ್ಲೇ ಇದ್ದು ಏನಾದರೂ ಮಾಡುವುದು ಅಂತ ಮಾಡಿದ್ದ. ವರ್ಷಗಳುರುಳಿದ ಮೇಲೆ, ಆ ಸ್ಥಳ ಅವನನ್ನು ಪೂರ್ತಿಯಾಗಿ ನಾಶಗೊಳಿಸಿದ ಮೇಲೆ, ಕೊನೆಗೂ ಅವನು ಅಲ್ಲಿಂದ ಹೊರಟ. ಆದರೆ ಆಗಂತೂ ತೀರ ತಡವಾಗಿತ್ತು. ಲುವಿನಾ ನಗರವು ಆ ಹೊತ್ತಿಗಾಗಲೇ ಅವನ ಕತೆಯಾಗಿ ಬಿಟ್ಟಿತ್ತು. ಅದನ್ನವನು ಯಾರಿಗಾದರೂ ಹೇಳುತ್ತಿರುತ್ತಾನೆ, ಮತ್ತೆ ಮತ್ತೆ ಹೇಳಲು ತಯಾರಾಗಿಯೇ ಇರುತ್ತಾನೆ. ಆದರೆ ಅವನ ಯೌವನದ, ಗಟ್ಟಿಮುಟ್ಟಾಗಿದ್ದು ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ಆ ಕಾಲದ ಕತೆಯನ್ನು ಕೇಳುವವರು ( ಮತ್ತೆ ಅದಕ್ಕಾಗಿ ಅವನಿಗೆ ಒಂದೊ ಎರಡೋ ಬಾಟಲು ಬೇರೆ ಕೊಡಿಸುವವರು) ಯಾರು?

ಚೆಕೊವ್ ಒಂದು ಕಡೆ ಬರೆಯುತ್ತಾನೆ, "ರಷ್ಯನ್ನರು ಕಳೆದು ಹೋದ ಬದುಕನ್ನು ನೆನೆಯುವುದಕ್ಕೆ ಇಷ್ಟಪಡುತ್ತಾರೆ; ಆದರೆ ಸದ್ಯದ ಬದುಕನ್ನು ಬದುಕಲು ಅಲ್ಲ."

ಬಹುಶಃ ಇದು ನಮಗೆಲ್ಲರಿಗೂ ಅನ್ವಯಿಸುವ ಮಾತೇ. ಆದರೆ ನೆನೆಯುವುದೇ ಬದುಕಲ್ಲವೆ? ಮತ್ತು ನಮ್ಮ ಸೋಲುಗಳೇ ನಮ್ಮ ಕತೆಗಳೂ. ಇಲ್ಲಿಯೂ ನಾನು ಸೋತಿದ್ದೇನೆ. ಬರೆಯದೇ ಇರುವುದರ ಸೌಂದರ್ಯ ನೋಡುತ್ತ, ಆ ದಾರಿಯಲ್ಲಿ ನಾನು ತೀರ ದೂರ ಸಾಗಿಬಿಟ್ಟೆ. ಇದಂತೂ ಶ್ರದ್ಧಾಂಜಲಿಯಲ್ಲ. ಆದರೆ ಕತೆಗಳಿರುವುದೇ ಹೇಳುವುದಕ್ಕೆ. ಹಾಗಾಗಿ ಹೇಳುತ್ತೇನೆ, ಅವುಗಳನ್ನು ಹಂಚಿಕೊಳ್ಳಿ. ನಿಧಾನವಾಗಿ ಆದರೂ ಪರವಾಗಿಲ್ಲ, ಹಂಚಿಕೊಳ್ಳದೇ ಇರಬೇಡಿ. ಹೇಳುವುದು ಮುಗಿದ ಬಳಿಕ, ಹುಲ್ಲುಹಾಸಿನ ಬಳಿ ಕುಳಿತಲ್ಲೇ ಸುಸ್ತಾಗಿ ಒರಗಿಕೊಂಡಿರುವ ನನ್ನ ಕ್ಯಾಲಿಫೋರ್ನಿಯಾದ ರಷ್ಯನ್ ಗೆಳೆಯರ ಹಾಗೆ, ಬಾರಿನಲ್ಲೇ ತನ್ನ ಕೆಟ್ಟು ಕೆಸರಾದ ತಲೆಯನ್ನು ಒರಗಿಸಿ ಮಲಗಿದ ಕುಡುಕ ಮುದಿ ಮಾಸ್ತರನ ಹಾಗೆ, ಸ್ವಸ್ಥ ಮಲಗಿ ಬಿಡಿ.
------------------------------
* ಕೆಲವೊಮ್ಮೆ ಚಿಂತೆಯಾಗುತ್ತದೆ, ಒಂದಲ್ಲಾ ಒಂದು ದಿನ ನಾನು ಶರಣಾಗುತ್ತೇನೆ, ದರಿದ್ರ ಕಿಂಡ್ಲ್ ಕೊಳ್ಳುತ್ತೇನೆ ಅನಿಸುತ್ತಿದೆ.

No comments: