Wednesday, May 17, 2017

ನಮ್ಮದೆಂಬುದೀ ಬದುಕ ಪೊರೆವ ಕೈಯಾವುದು!

Am I Alone Here ಪುಸ್ತಕದ ಇನ್ನೊಂದು ಪ್ರಬಂಧ. ಒಂದೊಂದನ್ನು ಓದಿದಂತೆಯೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ತೀವ್ರವಾಗಿ ಅನಿಸುವ ಪ್ರಬಂಧಗಳಿವು. ಒಂಥರಾ ಹುಚ್ಚು ಹಿಡಿಸಿದೆ ಈ ಪುಸ್ತಕ ನನಗೆ. ಒಂದು ಪುಸ್ತಕದ ಬಗ್ಗೆ ಹೀಗೆಯೂ ಮಾತನಾಡಬಹುದು ಎಂದು ತೋರಿಸಿಕೊಟ್ಟ ಕೃತಿಯಿದು. ವೈಯಕ್ತಿಕ ವಿಷಯಗಳು, ಬರಹಗಾರನ ಕತೆ, ಅವನ ವೈಯಕ್ತಿಕ ವಿಷಯಗಳು, ಸದ್ಯದ ಕಥಾನಕ, ಆ ಪಾತ್ರಗಳು, ಆ ಪಾತ್ರಗಳ ವೈಯಕ್ತಿಕ ಎಲ್ಲ ಸೇರಿಯೇ ಮಾತನಾಡಬೇಕಾದ್ದು ಎನಿಸುವಂತೆ ಮಾತನಾಡುವ ಪೀಟರ್ ಆರ್ನರ್ ಕೃತಿ ಏಕಕಾಲಕ್ಕೆ ಮೆಮೊಯರ್, ಆತ್ಮಕಥಾನಕ, ಸಾಹಿತ್ಯ ವಿಮರ್ಶೆ, ಆಪ್ತ ಮಾತುಕತೆ, ಚರ್ಚೆ, ಜಿಜ್ಞಾಸೆ ಎಲ್ಲವೂ ಆಗಿಬಿಡುತ್ತದೆ. ಆದರೆ ಇಲ್ಲಿ ಉಡಾಫೆಯಿಲ್ಲ, ತೇಲಿಸಿ ಬಿಡುವ ಮಾತುಗಳಿಲ್ಲ. ಹುಸಿ ಪಾಂಡಿತ್ಯ ಪ್ರದರ್ಶನದ ಮೋಹವಿಲ್ಲ. ಕೊನೆಗೆ ವಾಹ್ ಎನಿಸುವ ಡಯ್ಲಾಗುಗಳ ರೀಲು ಬಿಡುತ್ತ ತನ್ನ ದನಿಗೆ ತಾನೇ ವಿಸ್ಮಯಪಡುತ್ತ, ನಿಮ್ಮನ್ನು ಮರುಳು ಮಾಡುವ ಬರಹಗಾರಿಕೆಯ ಕಸುಬುದಾರಿಕೆ ಕೂಡ ಇಲ್ಲಿಲ್ಲ.

ಹೆಸರು ಗ್ರೆಗ್. ಮಡದಿಗೆ ವಿಚ್ಛೇದನ ನೀಡಿದ್ದಾನೆ. ಸ್ವಂತ ಮಗನ ‘ಒಂದು ಕಾಲದ’ ಪತ್ನಿಯ ಜೊತೆ ಮಲಗುತ್ತಾನೆ. ಅವಳ ಹೆಸರು ಬೃಂದಾ. ಅದೆಲ್ಲ ಹೋಗಲಿ ಎಂದರೆ ಈಗ ಅವಳನ್ನೇ ಮದುವೆಯಾಗುತ್ತಿದ್ದಾನೆ. ಸ್ವಲ್ಪ ನಿಷ್ಠುರವಾದ ಘಳಿಗೆಯೊಂದು ಬಂದಿದೆ. ಅವನು ಇದನ್ನು ತನ್ನ ಮಗನಿಗೆ ಹೇಳಬೇಕೆಂದಿದ್ದಾನೆ.
ಮದುವೆ? ಅವಳೊಂದಿಗೆ ಮದುವೆ?

"ಅದೆಲ್ಲ ಗೊತ್ತಾಗುವ ಮೊದಲು ಎಲ್ಲ ಆಗಿಹೋಗಿತ್ತು. ಅದು ಆಗುವುದೇ ಹಾಗೆ..."

"ವಾಹ್! ಮತ್ತೆ ವಿಲ್ ಏನಾಯ್ತು ಈಗ!"

"ವಿಲ್ ಬಗ್ಗೆ ಈಗ ಮಾತು ಬೇಡ. ನೀನು ನಿನ್ನ ಮದುವೆ ಎಕ್ಕುಟ್ಟಿ ಹೋಗಲಿ ಅಂತ ಬಯಸಿದ್ದೆಯ? ನಿಮ್ಮಮ್ಮ ಮತ್ತು ನಾನು ಸಂಬಂಧ ಹಾಗಾಗುತ್ತೆ ಅಂತ ಕನಸು ಕಂಡಿದ್ದೆವ? ವಿಲ್ಲು ಗಿಲ್ಲು ಎಲ್ಲ ಕೆಲಸವಿಲ್ಲದ್ದನ್ನೆಲ್ಲ ಬರೆಯುತ್ತಾ ಇರುತ್ತಾರಲ್ಲ, ಅವರಿಗೆ ಸರಿ. ಹೊರಗಿನ ಜಗತ್ತಲ್ಲಿ ಎಲ್ಲ..."

"......"

".......ಕೊನೆಗೂ ಚುರುಕಾಗಿರುವವರು ಬದುಕುತ್ತಾರೆ, ಅಲ್ಲ? ಒಳ್ಳೆಯದು. ಉಫ್! ಸಾರಿ ಮಗನೇ. ನಾನು ಸ್ವಲ್ಪ ಬೇರೆ ತರ. ನಿನ್ನ ಒಂದು ಕಾಲದ ಹೆಂಡತಿಯನ್ನ ಕಸಿದುಕೋತಾ ಇದ್ದೇನೆ."

ದೃಶ್ಯವೇನೊ ದೈನಂದಿನ ಟೀವಿ ಸೀರಿಯಲ್ಲಿನ ಸರಕು, ನೇರ ಮೌರಿ ಪೊವಿಚ್ ಕಿಸೆಯಿಂದಲೇ. ಹಾಗೆ ಇದನ್ನೆಲ್ಲ ಸೆನ್ಸಷನಲೈಸ್ ಮಾಡಿಬಿಡುವುದು ಸುಲಭ. ತಂದೆಯನ್ನ ಒಬ್ಬ ವಿಲನ್ ಆಗಿಸಿ ಪುರುಷೋತ್ತಮನಂಥ ಮಗನ ವ್ಯಕ್ತಿತ್ವದೆದುರು ಕುಬ್ಜನನ್ನಾಗಿಸಿ ಬಿಡಬಹುದು. ಆದರೆ ಆಂಡ್ರ್ಯೂ ಡುಬಸ್ ಹಾಗೆ ಮಾಡುವುದಿಲ್ಲ. ಅವನ ಕಿರು ಕಾದಂಬರಿ "ವಾಯ್ಸಸ್ ಫ್ರಮ್ ದಿ ಮೂನ್" ಸೂಕ್ಷ್ಮ ಸಂವೇದನೆಗಳ, ಭಾವನೆಗಳ, ತಲ್ಲಣಗಳಲ್ಲೇ ಸಾಗುವ, ಮನುಷ್ಯ ಸಂಬಂಧಗಳ ನಡುವಿನ ನಂಬಿಕೆ ಮತ್ತು ಪ್ರೀತಿಯ ಒಂದು ಅನನ್ಯ ಧ್ಯಾನದಂತಿದೆ. ಬಹಳಷ್ಟು ಕಾಲ ನಾನು ಇದೊಂದು ಸಹಿಸಲಸಾಧ್ಯವಾದ ನೋವಿನ ಕಥಾನಕವೆಂದೇ ಬಗೆದಿದ್ದೆ. ಕಾದಂಬರಿ ತನ್ನ ಮೊತ್ತ ಮೊದಲ ವಾಕ್ಯದಿಂದಲೇ ತನ್ನೊಡಲ ಕಾಲ್ಪನಿಕ ಸಂಸಾರವನ್ನು ನನ್ನದೇ ಕುಟುಂಬದೊಂದಿಗೆ ತಳುಕು ಹಾಕಿಬಿಟ್ಟಿತು. ಆ ಸಾಲು "ಎಲ್ಲವೂ ಆ ವಿಚ್ಛೇದನದೊಂದಿಗೆ ಸುರುವಾಯಿತು". ನನಗೆ ಡೈವೋರ್ಸ್ ಬಗ್ಗೆ ಎಲ್ಲ ಗೊತ್ತು. ನನ್ನ ಹೆತ್ತವರದ್ದು, ನನ್ನ ಸ್ವಂತದ್ದು. ನನ್ನ ವಿಷಯದಲ್ಲಿ ಹೆತ್ತವರದ್ದಾದ ಹಾಗೆ ಆಗಲಿಲ್ಲ. ನಮ್ಮದು ಸಹ-ಸಮ್ಮತಿಯೊಂದಿಗೆ ಆಗಿದ್ದು. ಅಷ್ಟೇ ಅಲ್ಲ, ಮಧ್ಯವರ್ತಿಯ ಕಚೇರಿಯಲ್ಲಿ ನಾನು ಮತ್ತು ಎಮ್ ಎಷ್ಟೋ ಸಲ ನಕ್ಕುಬಿಟ್ಟಿದ್ದೆವು. ಅದೆಲ್ಲ ವಿಚಿತ್ರವಾಗಿತ್ತು. ನಮ್ಮ ನಡುವೆ ಪರಸ್ಪರ ವಿಂಗಡಿಸಿಕೊಳ್ಳುವುದಕ್ಕೆ ತೀರ ಕಡಿಮೆಯಿತ್ತು. (ಪುಸ್ತಕಗಳು, ಕೆಲವು ಕಾಫಿ ಕಪ್‌ಗಳು, ಎಮ್ ಬಳಿ ಎಲಿಯೆಟ್‌ನ ಫೋರ್ ಕ್ವಾರ್ಟರ್ಸ್‌ನ ಆ ಮಿರುಗುವ ತಿಳಿಹಸಿರು ಬಣ್ಣದ ಫೇಬರ್ ಎಂಡ್ ಫೇಬರ್ ಪ್ರತಿಯಿತ್ತು.) ಏನಿದ್ದರೂ ಡೈವೋರ್ಸ್ ಎನ್ನುವುದು ಡೈವೋರ್ಸೇ ತಾನೆ. ಒಂದಷ್ಟು ಕಾಗದಪತ್ರಗಳ ನಡುವೆ ಅಡಗಿ ಕುಳಿತ ಏನನ್ನೋ ಕುಕ್ಕಿ ಕುಕ್ಕಿ ಹೊರತೆಗೆಯುವ ಪ್ರಕ್ರಿಯೆ ಅದು. ಈ ಅಪರಾಹ್ನ ನಾನು ವಾಯ್ಸಸ್ ಫ್ರಮ್ ದಿ ಮೂನ್ ಮುಚ್ಚಿಟ್ಟು ನನ್ನ ಭೂಗತ ಓದುತಾಣದ ಕಿಟಕಿಯಿಲ್ಲದ ಗೋಡೆಗಳ ನಡುವೆ ನನ್ನದೇ ಕಿಟಕಿಯ ಕದ ತೆರೆದು ಹೊರನೋಡತೊಡಗಿದೆ. ಮತ್ತೆ ತಪ್ಪು: ಒಂದು ಪುಸ್ತಕವನ್ನು ನೆನೆಯುವುದೆಂದರೆ ಒಬ್ಬ ವ್ಯಕ್ತಿಯನ್ನು ನೆನೆದಂತೆಯೇ. ಮತ್ತೆ ನೀವು ಅಕ್ಷರಗಳ ಜಗತ್ತಿನಿಂದ ಎದ್ದು ಬಂದ ರಕ್ತಮಾಂಸದ ಮೂರ್ತಸ್ವರೂಪದ ಮುಖಾಮುಖಿಯಾದಿರೆಂದರೆ ಎಲ್ಲವೂ ಬದಲತೊಡಗುತ್ತದೆ. ವಾಯ್ಸಸ್ ಫ್ರಮ್ ದಿ ಮೂನ್ ಒಂದು ಆಹ್ಲಾದಕರ ಕೃತಿ. ಕಷ್ಟದಿಂದ ದಕ್ಕಿಸಿಕೊಳ್ಳಬಹುದಾದ ಆದರೆ ಆಹ್ಲಾದದ ಕೃತಿ, ಸಾರ್ಥಕತೆಯ ಆಹ್ಲಾದ ದ(ಉ)ಕ್ಕಿಸುವ ಕೃತಿ.

ತಂದೆ ಮತ್ತು ಹಿರಿಯಣ್ಣನ ನಡುವಿನ ಸಂಭಾಷಣೆಯನ್ನು ಕೇಳಿಸಿಕೊಂಡ ಗ್ರೆಗ್‌ನ ಎಳೆಯ ಮಗ, ಇನ್ನೂ ಹನ್ನೆರಡು ವರ್ಷದ ರಿಚಿ, ಈ ಮನೆಯಲ್ಲಿ ಒಬ್ಬ ಕೆಥಲಿಕ್ ಆಗಿ ಉಳಿಯುವುದು ತುಂಬ ಕಷ್ಟವಿದೆ ಎಂದುಕೊಳ್ಳುತ್ತಾನೆ.

ನಿಜ, ಅದು ಖಂಡಿತಕ್ಕೂ ಕಷ್ಟ ಎನ್ನುತ್ತೇನೆ ನಾನೂ.

ಕಾಫ್ಕಾನ ಡೈರಿಯಲ್ಲಿನ ಕೆಲವು ಸಾಲುಗಳು ಇಲ್ಲಿ ನನಗೆ ನೆನಪಾಗುತ್ತವೆ. ಆ ಸಾಲುಗಳು ಹೀಗಿವೆ: "ಯಹೂದಿ? ನಾನೀಗ ಒಬ್ಬ ಯಹೂದಿಯಾಗಬೇಕೆ? ಒಬ್ಬ ಮಾನವ ಜೀವಿಯಾಗಿರುವುದಕ್ಕೇ ನನಗೆ ಸಾಕೋಬೇಕಾಗಿದೆ. ಬೇಕೆಂದಾಗ ಒಬ್ಬ ಮನುಷ್ಯನಾಗಿರುವುದೋ, ಒಬ್ಬ ಕ್ಯಾಥಲಿಕ್ಕನಾಗಿರುವುದೋ ಅಥವಾ ಒಬ್ಬ ಯಹೂದಿಯಾಗಿರುವುದೋ ಸುಲಭವೇನಲ್ಲ. ಅದರಲ್ಲೂ ನಿಮ್ಮಪ್ಪ ಏನಾದರೂ ಹೊಸ ಪೀಕಲಾಟ ತಂದಿಟ್ಟ ಎಂದರೆ, ಅಪ್ಪಂದಿರು ತಪ್ಪದೇ ತಂದಿಕ್ಕುತ್ತಾರೆ ಕೂಡ - ಮುಗಿದೇ ಹೋಯಿತು. ಮಕ್ಕಳು ಏನು ಮಾಡಬೇಕು?"

ಡುಬಸ್ ಈ ಹನ್ನೆರಡು ವರ್ಷದ ಕಿರಿಯನಿಗೆ ಸೂಕ್ಷ್ಮಸಂವೇದನೆಯನ್ನೂ ವಿವೇಕವನ್ನೂ ಕೊಟ್ಟು ಆ ಪಾತ್ರವನ್ನು ಪೊರೆಯುತ್ತಾನೆ. ಆಳದಲ್ಲಿ ತುಂಬ ಸಾತ್ವಿಕನಾದ, ಪಾದ್ರಿಯಾಗುವ ಉದ್ದೇಶವಿರುವ ಹುಡುಗ ಈ ರಿಚೀ. ಅವನ ಅಪ್ಪನ ಕೆಲಸ ಅವನ ಹಾದಿಯನ್ನು ದುರ್ಗಮಗೊಳಿಸುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಪ್ಪ ಮತ್ತು ಅಣ್ಣನ ಮಾತುಕತೆಯಾದ ಬಳಿಕ, ಆ ಬೆಳಿಗ್ಗೆ ಅವನು ಚರ್ಚಿಗೆ ಹೋಗಿ ಕೂರುತ್ತಾನೆ.

"ಬ್ರೆಡ್ ಮತ್ತು ವೈನ್ ಇಟ್ಟಲ್ಲಿಂದ ಆಚೆ, ಫಾದರ್ ಒಬರ್ಟಿಯ ಮುಖ ಮೇಲ್ಮುಖವಾಗಿ, ಏನನ್ನೋ ಕಂಡುಕೊಂಡವನ ಬೆಳಕಿನಿಂದ ಕೂಡಿತ್ತು. ಆ ಬಗೆಯ ನೋಟವನ್ನು ಅದುವರೆಗೂ ಯುವ ಪಾದ್ರಿಗಳಲ್ಲಿ ಮಾತ್ರ ಕಂಡಿದ್ದ ರಿಚಿ. ಉಪಹಾರವನ್ನು ತೆಗೆದಿರಿಸಿದ ತರುವಾಯದಲ್ಲಿ ಧರಿಸುವ ಮುಖಭಾವ ಅದು. ಸಿನಿಮಾಗಳಲ್ಲಿ ಕಂಡಿದ್ದನವನು. ತನ್ನ ಪ್ರಿಯತಮನತ್ತ ಅಥವಾ ಮನದನ್ನೆಯತ್ತ ಪ್ರೇಮಿಯು ಹರಿಸುವ ನೋಟವದು. ಆ ತುಟಿಗಳೂ, ಕಂಗಳೂ ಅಳುವಿಗೆ ತೀರ ಹತ್ತಿರದ ಒಂದು ಭಾವಲಹರಿಯಲ್ಲಿ ಏನನ್ನೋ ತಡವರಿಸಿದಂತೆ.....ಅಲ್ಲ, ಯಥಾವತ್ ಅದೇ ಅಲ್ಲ ಇದು, ಅದಕ್ಕೆ ಹೋಲುತ್ತದಷ್ಟೆ. ಫಾದರ್ ಒಬರ್ಟಿಯ ಮುಖಭಾವದಲ್ಲಿ ರಿಚೀ ಕಂಡಿದ್ದು ಇದಕ್ಕೆ ಸನಿಹದ ಒಂದು ಹೊಳಹು, ಅದೇ ಅಲ್ಲ."

ಮೇಲೆ ಬರುವ ಕೊನೆಯ ವಾಕ್ಯವಂತೂ ಡುಬಸ್‌ಗೆ ಮಾತ್ರ ಸಾಧ್ಯ. ಅದು ಒಂದು ಕಡೆ (ಫಾದರ್ ಒಬರ್ಟಿ) ಸುರುವಾಗಿ, ಇನ್ಯಾವುದೋ ಒಂದು (ಸಿನಿಮಾದಲ್ಲಿ ಬರುವ ಪ್ರೇಮಿಗಳ ಮುಖಭಾವ) ಹೋಲಿಕೆಯನ್ನು ಸೂಚಿಸುತ್ತಲೇ ಪಾವಿತ್ರ್ಯದ ನೆಲೆಯಲ್ಲಿ ಅದನ್ನು ತಿರಸ್ಕರಿಸುತ್ತಿದೆ ಕೂಡಾ ಎನ್ನುವುದನ್ನು ನೋಡಿ. ಬ್ರೆಡ್ ಮತ್ತು ವೈನ್ ಎತ್ತಿ ಹಿಡಿಯುತ್ತ ರಿಚಿಗೆ ಕಂಡ ಫಾದರ್ ಮುಖಭಾವ ಏನಿದೆ ಅದು ರಿಚಿಗೆ ಸಿನಿಮಾದಲ್ಲಿ ಕಂಡ ಪ್ರೇಮಿಗಳ ಪ್ರತೀಕವಾಗಿದೆ ಅಷ್ಟೆ. ಹೋಲಿಕೆಯ ಪ್ರತಿಮೆಯನ್ನು ತಂದಿಟ್ಟೂ ಅದನ್ನು ನಿರಾಕರಿಸುತ್ತಿರುವ ಬಗೆಯಲ್ಲೇ ರಿಚಿಯ ವಾಸ್ತವ ಪ್ರಜ್ಞೆಯ ಅರಿವನ್ನು ಸೂಚಿಸುತ್ತಿದೆ, ದೃಢಪಡಿಸುತ್ತಿದೆ. ಅಥೆಂಟಿಕ್ ಆದ ಶ್ರದ್ಧೆ ಎನ್ನುವುದು ಏನೋ ಒಂದು, ತುಂಬ ವಿಶಿಷ್ಟವಾದದ್ದು, ಮೂರ್ತವಾದದ್ದು ಎನ್ನುವ ಅರಿವು ಅವನಲ್ಲಿ ಜಾಗೃತಗೊಳ್ಳುತ್ತಿರುವಾಗಲೇ ಅದು ತನಗೆ ತನ್ನ ತಂದೆ ಮತ್ತು ಹಿರಿಯಣ್ಣನ ಬಗ್ಗೆ ಅಂತರಂಗದಲ್ಲಿ ಏಕತ್ರ ಕಲಕುತ್ತಿರುವ ಪ್ರೀತಿಯಂತೆಯೇ ಮಾತುಗಳಲ್ಲಿ ಹಿಡಿಯಲಾಗದ್ದು ಕೂಡಾ ಎನ್ನುವುದು ಗೊತ್ತಾಗುತ್ತಿದೆ.

ಈಗ ರಿಚೀಗೆ ಅರ್ಥವಾಗುತ್ತಿದೆ. ನಾವು ತಂದೆಯೋ ತಾಯಿಯೋ ಆಗಿರಬಹುದು ಅಥವಾ ಆಗಿರದೇ ಇರಬಹುದು; ಆದರೆ ನಾವು ಪ್ರತಿಯೊಬ್ಬರೂ ನಮ್ಮನಮ್ಮದೇ ಆದ ಬಗೆಯಲ್ಲಿ ನಮ್ಮ ಸ್ವಂತ ಕುಟುಂಬಕ್ಕೆ ಏನೋ ಘಾಸಿಯುಂಟು ಮಾಡಿಯೇ ಮಾಡುತ್ತೇವೆ. ಜಗತ್ತಿನ ಯಾವುದೇ ಶ್ರದ್ಧೆ ಅಥವಾ ಪ್ರೀತಿ ಅದನ್ನು ಮಾಡಗೊಡದಂತೆ ನಮ್ಮನ್ನು ತಡೆಯಲಾರದು. ಇಲ್ಲಿ ಬೃಂದಾ ತನ್ನಷ್ಟಕ್ಕೇ ತಾನು ಹೇಳಿಕೊಳ್ಳುವಂತೆ ‘ಯಾರಿಗೂ ಯಾವ ಕೇಡನ್ನೂ ಉಂಟು ಮಾಡದಂತೆ ತನ್ನ ಪಾಡಿಗೆ ತಾನು ಬದುಕುವ ಯಾವತ್ತೂ ಪ್ರಯತ್ನವನ್ನು’ ತಾನು ಮಾಡಿದವಳು ಎಂದೇ ಆಕೆ ನಂಬಿದ್ದಾಳೆ. ಈ ಪುಸ್ತಕ ಒಂದು ಮಹತ್ವದ ಪ್ರಶ್ನೆಯನ್ನು ಎತ್ತುತ್ತಿದೆ. ಎಲ್ಲಾ ಸಮಸ್ಯೆಯನ್ನು ಉಂಟುಮಾಡುತ್ತಿರುವುದು ಸ್ವತಃ ಪ್ರೀತಿಯೇ ಆಗಿದ್ದಲ್ಲಿ, ನಾವು ಯಾರನ್ನು ಪ್ರೀತಿಸಬೇಕೆಂದುಕೊಳ್ಳುತ್ತೇವೋ ಆ ಪ್ರೀತಿಯೇ ಸಮಸ್ಯೆಯ ಮೂಲವಾಗಿಬಿಟ್ಟಲ್ಲಿ ಏನಾಗುತ್ತದೆ? ಇಲ್ಲಿನ ದುಃಖಾತಿದುಃಖದ ನಿಗೂಢ ಶೋಧ ಇರುವುದು ನಾವು ಹೇಗೆ ಅನ್ಯರಿಗೆ ಯಾವ ಕೇಡನ್ನೂ ಮಾಡದುಳಿಯಬಹುದು ಎನ್ನುವುದಲ್ಲವೇ ಅಲ್ಲ. ಬದಲಿಗೆ, ಕೇಡಿನ ಬಳಿಕ ನಾವು ಹೇಗೆ ಅದನ್ನು ಜೀರ್ಣಿಸಿಕೊಳ್ಳುತ್ತೇವೆ, ಆ ಪ್ರಕ್ರಿಯೆ ಹೇಗಿರುತ್ತದೆ ಎನ್ನುವುದರ ಬಗ್ಗೆ. ನಾವದನ್ನು ನುಂಗಿಕೊಳ್ಳುತ್ತೇವೆಯೆ, ಬೇರೆಯೇ ಆದ ಮಾರ್ಗಗಳಿವೆಯೆ?

ಇಲ್ಲೀಗ ನಾನು ಜೋನ್ ಕಡೆ ತಿರುಗುತ್ತೇನೆ. ಇವಳು ರಿಚಿ ಮತ್ತು ಲ್ಯಾರಿಯ ತಾಯಿ. ಈ ಕತೆ ಸುರುವಾಗುವುದಕ್ಕೂ ಎರಡು ವರ್ಷಗಳ ಹಿಂದೆ ಪಾರಂಪರಿಕವಾದ ನೈತಿಕ ಚೌಕಟ್ಟಿನಲ್ಲಿ ಸಾಕಷ್ಟು ಮಂದಿ ಇದಕ್ಕಿಂತ ಹೆಚ್ಚು ಅಕ್ಷಮ್ಯ ಎಂದೇ ಪರಿಗಣಿಸುವ ತಪ್ಪೊಂದನ್ನು ಜೋನ್ ಮಾಡಿದ್ದಾಳೆ. ತನ್ನ ಗಂಡ ಮತ್ತು ಹತ್ತು ವರ್ಷ ಪ್ರಾಯದ ಮಗನನ್ನು ತ್ಯಜಿಸಿ ಹೊರನಡೆದವಳು ಅವಳು. ಈಗ ಅವಳು ಸನಿಹದ ಒಂದು ನಗರದಲ್ಲಿ ಒಂಟಿಯಾಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ಬದುಕುತ್ತಿದ್ದಾಳೆ. ಆಗಾಗ ರಿಚಿಯನ್ನು ಬಂದು ಕಾಣುತ್ತಾಳೆ ಕೂಡ. ಆದರೆ ಮಾಡಿದ ಗಾಯ ಸದಾ ಕಾಲ ಹಸಿಯಾಗಿಯೇ ಉಳಿಯುವಂಥದ್ದು. ಮತ್ತೊಮ್ಮೆ ರಿಚಿಗೆ ಜನ್ಮ ನೀಡುವ ನೋವನ್ನಾದರೂ ಜೋನ್ ಅನುಭವಿಸಲು ಸಿದ್ಧಳಿದ್ದಾಳೆ, ಆದರೆ ಬಿಟ್ಟು ಹೋಗುವ ದಿನ ಅನುಭವಿಸಿದ ಸಂಕಟವನ್ನಲ್ಲ.

ಲ್ಯಾರಿ ತನ್ನ ತಾಯಿಯ ಬಳಿ ಗ್ರೆಗ್‌ ಮತ್ತು ಬೃಂದಾ ಕತೆಯನ್ನು ಹೇಳಿದಾಗ ಅವಳು ನೀಡುವ ಪ್ರತಿಕ್ರಿಯೆಯಂತೂ ಏಕಕಾಲಕ್ಕೆ ನಿಷ್ಠುರವಾಗಿಯೂ, ಉದಾರವಾಗಿಯೂ, ಆಶ್ಚರ್ಯಕರವಾಗಿಯೂ ಇದೆ.

"ನಾವು ಮಹಾನ್ ಬದುಕನ್ನು ಬಾಳಬೇಕಾಗಿಲ್ಲ. ನಮಗೆ ಬದುಕಬೇಕಾಗಿ ಬಂದ ಬದುಕನ್ನೇ ನಾವು ಅರ್ಥಮಾಡಿಕೊಳ್ಳಬೇಕಿದೆ ಮತ್ತು ಅದನ್ನು ಬದುಕಿ ನೀಗಬೇಕಿದೆ."

ನಿಡುಗಾಲದಿಂದ ನನಗೆ ತಿಳಿದ ಮಟ್ಟಿಗೆ, ತನ್ನ ಬದುಕಿನ ಕೊನೆಯ ಏಳು ವರ್ಷಗಳಷ್ಟು ಕಾಲ, ಕಾರ್ ಅಪಘಾತವೊಂದರಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡ ಆಂಡ್ರ್ಯೂ ಡುಬಸ್ ಅತೀವ ಮಾನಸಿಕ, ದೈಹಿಕ ಯಾತನೆಯನ್ನು ಅನುಭವಿಸಬೇಕಾಗಿ ಬಂದಿತ್ತು. ಬ್ರೋಕನ್ ವೆಸಲ್ಸ್ ಎಂಬ ತನ್ನ ಪ್ರಬಂಧಗಳ ಸಂಕಲನದಲ್ಲಿ ಅವನು ಬರೆಯುತ್ತಾನೆ;

"ಒಂದು ದಿನ ರಾತ್ರಿ ಹೊತ್ತು, ಆಸ್ಪತ್ರೆಯಲ್ಲಿ ನಾನು ಮಲಗಿದ್ದೆ, ಎಚ್ಚರವಾದಾಗ ಲೈಟುಗಳನ್ನೆಲ್ಲ ಆರಿಸಿಯಾಗಿತ್ತು, ಆಗ, ನನಗೆ ಅಗತ್ಯವಾಗಿ ಏನೋ ಬೇಕಾಗಿ ಬಂತು. ಮಾರ್ಫಿನ್ ಅಥವಾ ಜ್ಯೂಸ್ ಅಥವಾ ನೀರು ಏನೋ ಒಂದು. ನಾನು ಇನ್ನೇನು ನರ್ಸ್‌ಗಾಗಿ ಬಟನ್ ಪ್ರೆಸ್ ಮಾಡುವುದರಲ್ಲಿದ್ದೆ. ಆಗ, ಅಷ್ಟರಲ್ಲಿ ಕೆಳಗಿನ ಹಾಲ್‌ನಿಂದ ಪ್ರಾಯದ ಹೆಂಗಸೊಬ್ಬಳು ಯಾತನೆಯಿಂದ ನರಳುವ ಆರ್ತನಾದದಂಥ ಶಬ್ದ ಕೇಳಿಸಿತು. ಆಕೆ ನಿಲ್ಲಿಸಲಿಲ್ಲ ಮತ್ತು ಆಕೆಯ ಆರ್ತನಾದದ ತೀವ್ರತೆಯೂ ಕುಸಿಯಲಿಲ್ಲ. ನೋವಿನ ತೀವ್ರತೆ ಅಷ್ಟಿತ್ತು. ನಾನು ಬಟನ್ ಪ್ರೆಸ್ ಮಾಡಲಿಲ್ಲ. ಯೋಚಿಸಿದೆ. ಇನ್ನೊಬ್ಬ ವ್ಯಕ್ತಿ ಯಾತನೆಯಲ್ಲಿರುವಾಗ ನೀವು ನಿಮ್ಮ ಬೇಡಿಕೆಯನ್ನೇ ಮುಂದೊತ್ತಬಾರದು. ಮತ್ತೆ ಅನಿಸಿತು, ಸದಾ ಕಾಲ ಒಬ್ಬರಲ್ಲಾ ಒಬ್ಬರು ಯಾತನೆಯಲ್ಲಿದ್ದೇ ಇರುತ್ತಾರೆ, ಮತ್ತು ಹಾಗಾದರೆ, ನಾನು ಯಾವತ್ತೂ ನನ್ನ ಬೇಡಿಕೆಯನ್ನು ಮುಂದಿಡುವಂತಿಲ್ಲ. ತಕ್ಷಣವೇ ನನಗೆ ಹೊಳೆದಿದ್ದು, ಒಬ್ಬ ಸಂತ ಮಾತ್ರ ಅಂಥ ಬದುಕನ್ನು ಬದುಕಬಲ್ಲ, ಅಂಥ ನಿಲುವು ತಳೆಯಬಲ್ಲ ಮತ್ತು ಅದನ್ನು ನಿಭಾಯಿಸಬಲ್ಲ ಎನ್ನುವ ಸತ್ಯ. ನರ್ಸ್ ಆಕೆಯನ್ನು ಸುಧಾರಿಸುವ ತನಕ, ಆಕೆಯ ನರಳಾಟ ನಿಲ್ಲುವ ತನಕ ನಾನು ಕಾದೆ. ಬಳಿಕ ಬಟನ್ ಪ್ರೆಸ್ ಮಾಡಿದೆ."

ಈಗ ಆಂಡ್ರ್ಯೂ ಬಗ್ಗೆ ಯೋಚಿಸುವಾಗ, (ನಾನು ಅವನ ಬಗ್ಗೆ ಆಗಾಗ ಯೋಚಿಸುತ್ತೇನೆ ಮತ್ತು ಅವನು ನನ್ನ ಗುರು ಮತ್ತು ಗೆಳೆಯ ಕೂಡ) ಅವನು ಮೆಸ್ಸಾಚ್ಯೂಸೆಟ್ಸ್‌ನ ಹೇವರ್‌ಹಿಲ್ಲಿನ ಅಡುಗೆಮನೆಯೊಳಗೆ ತನ್ನ ವೀಲ್‌ಚೇರಿನಲ್ಲಿ ಕೂತು ಮೌನವಾಗಿಯೇ ನನ್ನ ಮುಖದ ತುಂಬ ತಡಕಾಡಿ ನನ್ನ ನೋವಿನ ಮೂಲ ಯಾವುದು ಎನ್ನುವ ಶೋಧದಲ್ಲಿ ತೊಡಗುವುದನ್ನು ಕಾಣುತ್ತೇನೆ. ಕೆಲವೊಮ್ಮೆ ಅವನು ಕೇಳುತ್ತಾನೆ, "ಅಪ್ಪನಿಗೆ ಫೋನ್ ಮಾಡಿದೆಯ?" ಮತ್ತೆ ಅವನು ಗೊಳ್ಳನೆ ನಗುತ್ತಾನೆ. ಥಟ್ಟನೆ ನಿಲ್ಲಿಸಿ "ಸೀರಿಯಸ್ಸಾಗಿ ಹೇಳಿದ್ದು, ಮಾಡಿದೆಯ? ಈ ವಾರ? ಅಪ್ಪನಿಗೊಮ್ಮೆಯಾದರೂ ಫೋನ್ ಮಾಡಿದೆಯಾ? ತಗೊ, ನನ್ನ ಫೋನ್ ತಗೊ, ಖರ್ಚಿನ ಬಗ್ಗೆ ಯೋಚಿಸಬೇಡ, ಇಕೊ ಕಾಲ್ ಮಾಡು." ಉಳಿದಂತೆ ಎಷ್ಟೋ ಸಲ ಅವನು ಏನೂ ಹೇಳುವುದಿಲ್ಲ. ಸುಮ್ಮನೇ ನನ್ನತ್ತ ನೋಡುತ್ತಾನೆ, ನಿಟ್ಟುಸಿರು ಬಿಡುತ್ತಾನೆ ಮತ್ತು ತನ್ನ ಉಳಿದ ಕಾಲಿನ ಭಾಗವನ್ನು ಒತ್ತಿಕೊಳ್ಳುತ್ತ ಒಂದೂ ಮಾತಿಲ್ಲದೆ ಕೂರುತ್ತಾನೆ.
(ತಂದೆಯ ಬಗ್ಗೆ ಅತೀವ ಪ್ರೀತಿ ಮತ್ತು ಸಿಟ್ಟಿನಂಥದ್ದೇನೋ ಉಳಿಸಿಕೊಂಡ ಪೀಟರ್ ಆರ್ನರ್ ಕೊನೆ ತನಕ ತಂದೆಗೆ ಕಾಲ್ ಮಾಡುವುದಿಲ್ಲ. ತಂದೆ ತೀರಿದ ಬಳಿಕವೂ ಅದೊಂದು ಅವನನ್ನು ಕಾಡುತ್ತಲೇ ಇರುವುದು ಇಲ್ಲಿನ ಅನೇಕ ಪ್ರಬಂಧಗಳಲ್ಲಿ ಬರುತ್ತದೆ. ಎಮ್ ಎಂದು ಉಲ್ಲೇಖಿಸಲ್ಪಟ್ಟ ವ್ಯಕ್ತಿ ಆರ್ನರ್ ಪತ್ನಿ. ಆಕೆಯ ಮೇಲಿನ ಪ್ರೀತಿ ಕೂಡ ಕೊನೆ ತನಕ ಆರ್ನರ್ ಪ್ರಬಂಧಗಳಲ್ಲಿ ನಳನಳಿಸುತ್ತದೆ. Andre Dubus ನ ಪುಸ್ತಕ Selected Stories ಆನ್‌ಲೈನಿನಲ್ಲಿ ಪುಕ್ಕಟೆ ಲಭ್ಯವಿದೆ, ಪುಸ್ತಕವಾಗಿಯೇ ಬೇಕು ಎಂದಿಲ್ಲವಾದಲ್ಲಿ ಡೌನ್‌ಲೋಡ್ ಮಾಡಿಕೊಂಡು ಓದಬಹುದು.)

No comments: