Wednesday, May 17, 2017

ಭಿಕ್ಷುಕಿಯ ಕೊಡುಗೆ

ಇಟೆಲಿಯ ಬಹುಮುಖ್ಯ ಲೇಖಕಿ, Elena Ferrante ಬರೆದ, ನಮ್ಮ ವಿವೇಕ್ ಶಾನಭಾಗ್ "ದ ಹಿಂದೂ" ಪತ್ರಿಕೆಯಲ್ಲಿ ತಾವು ಓದಿದ ಕೃತಿ ಎಂದು ಹಂಚಿಕೊಂಡ ಒಂದು ಪುಸ್ತಕ, Frantumaglia: A Writer's Journey ಯಿಂದ ಎತ್ತಿಕೊಂಡ ಒಂದು ಪತ್ರದ ಅನುವಾದ ಇಲ್ಲಿದೆ.

ಪ್ರೀತಿಯ ಸಾಂಡ್ರಾ,

ನಿನ್ನ ಮತ್ತು ನಿನ್ನ ಪತಿಯೊಂದಿಗಿನ ನನ್ನ ಇತ್ತೀಚಿನ ಭೇಟಿ ಚೇತೋಹಾರಿಯಾಗಿತ್ತು. ಆ ಸಂದರ್ಭ ನೀನು ನನ್ನ ಬಳಿ ಟ್ರಬ್ಲಿಂಗ್ ಲವ್ (ಪುಸ್ತಕದ ಕೊನೆಯ ಹೆಸರಿನಿಂದ ಅದನ್ನು ಗುರುತಿಸುವಂತೆ ಮಾಡಿದ್ದು ನನಗೆ ತುಂಬ ಹಿಡಿಸಿತು) ಕೃತಿಯ ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಾನು ಏನು ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಕೇಳಿದ್ದಿ. ನೀನು ಆ ಪ್ರಶ್ನೆಯನ್ನು ಕೊಂಚ ತಮಾಷೆಯಾಗಿ, ಮನಸ್ಸು ಇನ್ನೆಲ್ಲೊ ಇರುವವರ ಹಾಗೆ ಕೇಳುವ ನಿನ್ನದೊಂದು ಶೈಲಿಯಿದೆಯಲ್ಲ, ಆ ತರ ಕೇಳಿದ್ದೆ. ಅಲ್ಲಿಯೇ ಮತ್ತು ಆಗಲೇ ನಿನಗೆ ಉತ್ತರ ನೀಡುವ ಧೈರ್ಯವಾಗಲಿಲ್ಲ: ಸ್ಯಾಂಡ್ರೊ ಜತೆ ನಾನಿದನ್ನ ಸ್ಪಷ್ಟಪಡಿಸಿದ್ದೆ; ಅವನು ನನ್ನ ನಿರ್ಧಾರದೊಂದಿಗೆ ಸಂಪೂರ್ಣ ಸಹಮತ ಹೊಂದಿರುವುದಾಗಿಯೂ ಹೇಳಿದ್ದ ಮತ್ತು ನಾನು ಮತ್ತೊಮ್ಮೆ ಇದೇ ವಿಷಯದ ಬಗ್ಗೆ ಆತ ತಮಾಷೆಗಾಗಿಯಾದರೂ ಹೊರಳಿ ಮಾತೆತ್ತಲಾರ ಎಂದುಕೊಂಡಿದ್ದೆ. ಇದೀಗ ನಾನು ಬರವರ್ದಿಯಲ್ಲಿ ಉತ್ತರಿಸುತ್ತಿದ್ದೇನೆ. ಇದು ಕಿರಿಕಿರಿ ಹುಟ್ಟಿಸಬಹುದಾದ ಅಡೆತಡೆಗಳಿಲ್ಲದೆ, ಹಿಂಜರಿಕೆಯಿಲ್ಲದೆ, ಬದ್ಧತೆಗೆ ಕಟ್ಟಿಹಾಕದೆ ಮಾತನಾಡಲು ಅನುಕೂಲ.

ಟ್ರಬ್ಲಿಂಗ್ ಲವ್ ಬಗ್ಗೆ ಏನೂ ಮಾಡುವ ಉದ್ದೇಶ ನನಗಿಲ್ಲ, ವ್ಯಕ್ತಿಗತವಾಗಿ ನನ್ನನ್ನು ಸಾರ್ವಜನಿಕವಾಗಿ ಕೆಲಸಕ್ಕಿಳಿಸುವಂಥ ಏನನ್ನೂ ನಾನು ಮಾಡಲಾರೆ. ನಾನು ಈಗಾಗಲೇ ಈ ಸುದೀರ್ಘ ಕಥಾನಕದ ಮಟ್ಟಿಗೆ ನಾನು ಮಾಡಬಹುದಾದ್ದನ್ನು ಮಾಡಿದ್ದಾಗಿದೆ, ಅಂದರೆ ನಾನದನ್ನು ಬರೆದಿದ್ದೇನೆ. ಈ ಪುಸ್ತಕದಲ್ಲಿ ನಿಜಕ್ಕೂ ಅರ್ಹವಾದದ್ದು ಏನಾದರೂ ಇರುವುದೇ ಆದಲ್ಲಿ ಅದೇ ಸಾಕಷ್ಟಾಯ್ತು. ಯಾವುದೇ ಚರ್ಚೆ ಅಥವಾ ಗೋಷ್ಠಿಗಳಿಗೆ ನನ್ನನ್ನು ಆಹ್ವಾನಿಸಿದಲ್ಲಿ ನಾನು ಭಾಗವಹಿಸಲಾರೆ. ಯಾವುದೇ ಬಹುಮಾನ ಇತ್ಯಾದಿ ಘೋಷಿಸಿದಲ್ಲಿ ಹೋಗಿ ನಾನದನ್ನು ಸ್ವೀಕರಿಸಲಾರೆ. ಇಟೆಲಿಯಲ್ಲಾಗಲೀ, ಹೊರದೇಶಗಳಲ್ಲೇ ಆಗಲಿ, ಪುಸ್ತಕ ಮಾರಾಟಕ್ಕೆ ಉತ್ತೇಜನ ನೀಡುವಂಥ ಕೆಲಸದಲ್ಲಿ, ವಿಶೇಷತಃ ದೂರದರ್ಶನದಲ್ಲಿ, ತೊಡಗಲಾರೆ. ಲಿಖಿತ ಸಂದರ್ಶನವಷ್ಟೇ ಸಾಧ್ಯ ಮತ್ತು ಅದು ಕೂಡ ಅನಿವಾರ್ಯವೆನಿಸುವ ಮಟ್ಟಕ್ಕಷ್ಟೇ ಸೀಮಿತವಾಗಿ. ಈ ವಿಷಯದ ಮಟ್ಟಿಗೆ ನಾನು ಸಂಪೂರ್ಣವಾಗಿ ನನಗೂ ನನ್ನ ಕುಟುಂಬಕ್ಕೂ ಬದ್ಧಳಾಗಿದ್ದೇನೆ. ನನ್ನ ಮನಸ್ಸು ಬದಲಿಸುವಂತೆ ನನ್ನ ಮೇಲೆ ಒತ್ತಡ ತರುವುದಿಲ್ಲ ಎಂದು ನಾನು ಭಾವಿಸುತ್ತೇನೆ.

ನನಗೆ ಗೊತ್ತು, ಪ್ರಕಾಶಕರಿಗೆ ಇದರಿಂದ ಸ್ವಲ್ಪ ಕಷ್ಟವಾಗಬಹುದು. ನಿಮ್ಮ ಕೆಲಸದ ಬಗ್ಗೆ ನನಗೆ ಅತೀವ ಗೌರವವಿದೆ. ನಿಮ್ಮಿಬ್ಬರನ್ನೂ ನಾನು ತಕ್ಷಣವೇ ಇಷ್ಟಪಟ್ಟೆ. ನಿಮಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡುವ ಮನಸ್ಸಿಲ್ಲ. ನನ್ನ ಪುಸ್ತಕ ಪ್ರಕಟನೆ ಕೈಬಿಡಲು ನಿರ್ಧರಿಸಿದಲ್ಲಿ ನನಗದನ್ನು ನೇರವಾಗಿ ತಿಳಿಸಿ, ನನಗೆ ಅರ್ಥವಾಗುತ್ತದೆ. ಈ ಪುಸ್ತಕವನ್ನು ಪ್ರಕಟಿಸುವುದು ನನಗೇನೇನೂ ಮುಖ್ಯವಲ್ಲ. ನನ್ನ ನಿರ್ಧಾರಗಳಿಗೆ ಎಲ್ಲಾ ಕಾರಣಗಳನ್ನು ವಿವರಿಸುವುದು ನನಗೆ ತೀರ ಕಷ್ಟ, ನಿಮಗದು ಗೊತ್ತು. ನನ್ನೊಂದಿಗೇ, ನನ್ನ ನಿಲುವುಗಳೊಂದಿಗೆ ನಡೆಸುತ್ತಿರುವ ಒಂದು ಪುಟ್ಟ ಸಾಹಸವಿದು. ನನ್ನ ಪ್ರಕಾರ, ಒಮ್ಮೆ ಬರೆದಾದ ಮೇಲೆ ಈ ಪುಸ್ತಕಗಳಿಗೆ ಅವುಗಳ ಲೇಖಕನ ಅಗತ್ಯ ಉಳಿದಿರುವುದೇ ಇಲ್ಲ. ಅವುಗಳಿಗೇನಾದರೂ ಹೇಳುವುದಿದೆ ಎಂದಾದಲ್ಲಿ, ಇವತ್ತಲ್ಲಾ ನಾಳೆ ಅವುಗಳಿಗೆ ಓದುಗರು ಸಿಕ್ಕಿಯೇ ಸಿಗುತ್ತಾರೆ. ಇಲ್ಲವಾದಲ್ಲಿ ಇಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದು. ಸರಿಯಾಗಿ ಯಾರು ಬರೆದರು ಎನ್ನುವುದೇ ಗೊತ್ತಿಲ್ಲದ, ಇವತ್ತಿಗೂ ಜೀವಂತಿಕೆಯಿಂದ ನಳನಳಿಸುತ್ತಿರುವ ಎಷ್ಟೋ ಹಳೆಯ ಮತ್ತು ಹೊಸ ಕೃತಿಸಂಪುಟಗಳು ನನಗೆ ಸದಾ ಮುದ ನೀಡಿವೆ. ರಾತ್ರಿಯ ಹೊತ್ತಲ್ಲಿ ಗೊತ್ತೇ ಆಗದ ಹಾಗೆ ನಡೆದು ಬಿಡುವ ಅದ್ಭುತ ಪವಾಡದಂತಿವೆ ಅವು. ಪುಟ್ಟಮಕ್ಕಳು ಕಾದು ಕೂರುವ ಬೇಫಾನಳ* ಉಡುಗೊರೆಗಳಂತೆ. ವಿಚಿತ್ರ ಉದ್ವೇಗದೊಂದಿಗೆ ನಾನು ನಿದ್ದೆ ಹೋಗುತ್ತಿದ್ದೆ ಮತ್ತು ಮುಂಜಾನೆ ಎದ್ದಾಗ ಆ ಉಡುಗೊರೆಗಳೆಲ್ಲ ಪ್ರತ್ಯಕ್ಷವಾಗಿರುತ್ತಿದ್ದವು. ಆದರೆ ಯಾರೂ ಯಾವತ್ತೂ ಬೇಫಾನಳನ್ನು ಮಾತ್ರ ಕಂಡವರಿಲ್ಲ. ನಿಜವಾದ ಪವಾಡಗಳು ಹೇಗಿರುತ್ತವೆ ಎಂದರೆ ಅದನ್ನು ಮಾಡಿದವರು ಯಾರೆಂಬುದು ಯಾವತ್ತೂ ಗೊತ್ತಾಗುವುದೇ ಇಲ್ಲ. ಅವು ಮನೆಯೊಳಗಿನ ನಿಗೂಢ ಶಕ್ತಿಗಳು ಮಾಡಿಟ್ಟ ತೀರ ಪುಟ್ಟ ಪವಾಡಗಳಿರಬಹುದು, ಅಥವಾ ನಿಜಕ್ಕೂ ನಮ್ಮನ್ನು ಅವಾಕ್ಕಾಗಿಸಿದ ಅದ್ಭುತಗಳಿರಬಹುದು. ನನ್ನಲ್ಲಿ ಈಗಲೂ ಇಂಥ ವಿಸ್ಮಯ ಹುಟ್ಟಿಸುವ ರೋಮಾಂಚನದ, ಅದು ಚಿಕ್ಕದಿರಲಿ, ದೊಡ್ಡದಿರಲಿ, ಆಸೆ ಉಳಿಸಿಕೊಂಡಿರುವ ಒಂದು ಪುಟ್ಟ ಮಗು ಇದೆ. ನಾನಿನ್ನೂ ಅದನ್ನು ನಂಬುತ್ತೇನೆ.

ಹೀಗಾಗಿ, ಪ್ರೀತಿಯ ಸಾಂಡ್ರಾ, ನಾನಿದನ್ನು ನಿನಗೆ ಸ್ಪಷ್ಟವಾಗಿ ಹೇಳಬಯಸುತ್ತೇನೆ. ಟ್ರಬ್ಲಿಂಗ್ ಲವ್ನಲ್ಲಿ ತನ್ನನ್ನು ತಾನು ನೇಯ್ದುಕೊಳ್ಳಬಲ್ಲ ಒಂದೆಳೆ ಅಂತರ್ಗತವಾಗಿಯೇ ಇಲ್ಲವೆಂದಾದಲ್ಲಿ, ಒಳ್ಳೆಯದು, ನಾವು ಅದರ ಬಗ್ಗೆ ತಪ್ಪು ತಿಳಿದಿದ್ದೆವು ಎನ್ನುವುದು ಸ್ಪಷ್ಟ. ಅಥವಾ, ಇದರ ಬದಲಿಗೆ ಅಂಥ ಎಳೆಯೊಂದು ಅದರಲ್ಲಿದೆ ಎಂದಾದಲ್ಲಿ, ಅದು ತನ್ನನ್ನು ತಾನು ಎಲ್ಲಿ ಸಾಧ್ಯವೋ ಅಲ್ಲಿ ಪೋಷಿಸಿಕೊಳ್ಳುತ್ತದೆ. ಅದರ ಆ ತುದಿಯ ತಂತು ಹಿಡಿದು ಸೆಳೆಯುತ್ತಾ ಹೋದ ಓದುಗರಿಗೆ ಮತ್ತು ಅವರ ತಾಳ್ಮೆಗೆ ನಾವು ಕೃತಜ್ಞತೆ ಸೂಚಿಸುವುದಷ್ಟೇ ಉಳಿದಿರುತ್ತದೆ.

ಅದೂ ಅಲ್ಲದೆ, ಮಾರಾಟ ಉತ್ತೇಜಿಸುವುದೆಲ್ಲ ಖರ್ಚಿನ ಬಾಬ್ತು ಕೂಡ ಹೌದಲ್ಲವೆ? ನಾನಂತೂ ಪ್ರಕಾಶಕರ ಅತ್ಯಂತ ಕಡಿಮೆ ವೆಚ್ಚದ ಲೇಖಕಿಯಾಗುಳಿಯುತ್ತೇನೆ. ನನ್ನ ಹಾಜರಿಯಿಂದಲೂ ನಿಮಗೆ ವಿನಾಯಿತಿ ನೀಡಲಿಚ್ಛಿಸುತ್ತೇನೆ.
ಪ್ರೀತಿಯಿಂದ,

ಎಲೆನಾ.
(ಪತ್ರ ಸೆಪ್ಟೆಂಬರ್ 21,1991ರ ದಿನಾಂಕದ್ದು)

(*ಜನವರಿ ಆರರ ಮುನ್ನಾದಿನ ಸಂಜೆ ಸರಿಸುಮಾರು ಸಾಂತಾಕ್ಲಾಸ್ನಂತೆಯೇ ಒಳ್ಳೆಯ ಮಕ್ಕಳಿಗೆ ಹೊಸ ಉಡುಗೊರೆಗಳನ್ನು ತರುವ ಕೊಳಕು ಮುದುಕಿ ಈ ಬೇಫಾನಾ ಎಂದು ತಿಳಿಯಲಾಗುತ್ತದೆ.)

No comments: