Thursday, June 1, 2017

ಸೇತುರಾಮ್ ಸ್ಪೀಕಿಂಗ್...

ನನಗೆ ಈ ಪುಸ್ತಕ ಮುಖ್ಯ ಎನಿಸಿದ್ದು ಅದನ್ನು ಬರೆದ, ಕೈಯಿಂದಲೇ ಹಣ ಹಾಕಿ ಪ್ರಕಟಿಸಿದ್ದರ ಹಿಂದೆ ಇದೆ ಎಂದು ಸೇತುರಾಮ್ ಅವರು ಸ್ವತಃ ಹೇಳಿಕೊಂಡಿರುವ ಉದ್ದೇಶಗಳಿಗಾಗಿ ಎಂದು ಮೊದಲೇ ಹೇಳಿಬಿಡುತ್ತೇನೆ. ಇದನ್ನು ಸ್ವಲ್ಪ ವಿವರಿಸಬೇಕು ಎನಿಸಿದ್ದರಿಂದ ಈ ಕೆಲವು ಮಾತುಗಳು.

ಸಾಹಿತ್ಯ ಹಲವು ರೀತಿ ಉದಿಸಬಲ್ಲುದು. ಅದು ತನ್ನ ಸಹಜೀವಿಯ ನೋವಿನೊಂದಿಗೆ ಬೆರೆತು ಅದನ್ನು ಮೂರನೆಯ ವ್ಯಕ್ತಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಉದಿಸಿದಾಗ ತನ್ನ ಹುಟ್ಟಿನ ಅತ್ಯಂತ ಸಾರ್ಥಕ ಉದ್ದಿಶ್ಯವನ್ನು ಸಾಧಿಸ ಹೊರಟಿರುತ್ತದೆ ಎಂಬರ್ಥದ ಮಾತನ್ನು ಮಾಸ್ತಿಯವರು ಚಿತ್ತಾಲರಿಗೆ ಬರೆದ ಒಂದು ಪತ್ರದಲ್ಲಿ ಹೇಳಿದ್ದರಂತೆ. ಚಿತ್ತಾಲರೇ ಮಾಸ್ತಿಯವರ ಭೇಟಿಗೆ ಹೋದಾಗ ಇದನ್ನು ನೆನಪಿಸಿದರೆ, ಹೌದೆ! ಹಾಗೆ ಬರೆದೆನೆ ಎಂದು ಆ ಮಾತುಗಳು ತಮ್ಮದಲ್ಲವೇನೊ ಎಂಬಂತೆ ಆ ಮಾತುಗಳ ಸೌಂದರ್ಯಕ್ಕೆ ತಾವೇ ಮಾರು ಹೋದವರಂತೆ ಗುನುಗಿಕೊಂಡರಂತೆ! ಮಾತು ಮಂತ್ರವಾಗುವ ಬಗ್ಗೆ ಬರೆದವರು, ಅದಕ್ಕೂ ಒಂದು ಮುಹೂರ್ತ ಒದಗುವುದು ಉಂಟೇನೊ ಎಂದು ಸೋಜಿಗಪಟ್ಟುಕೊಂಡವರು ಕೂಡ ಚಿತ್ತಾಲರೇ.


ನನ್ನಂಥ ಕೆಲವರು ಪತ್ರಿಕೆಯಲ್ಲಿ ಒಮ್ಮೆ ನನ್ನ ಹೆಸರು ಬರಬೇಕು, ಕತೆಗಾರ ಎನಿಸಿಕೊಳ್ಳಬೇಕು ಎಂಬ ಏಕೈಕ ಉದ್ದೇಶದಿಂದ ಬರೆಯತೊಡಗಿದ್ದೆವು. ಸಾಹಿತಿ ಎನಿಸಿಕೊಳ್ಳುವುದೇ ಒಂದು ಅದ್ಭುತವಾದ ಸಂಗತಿ ಎನ್ನುವ ಭಾವನೆಯಿತ್ತು. ತಮಾಶೆ ಎಂದರೆ ಸಾಹಿತಿ ಎನಿಸಿಕೊಳ್ಳುವುದು ಅಸಹ್ಯ ಎನಿಸತೊಡಗಿದಾಗಲೇ ನನ್ನ ಬರೆಯುವ ಉತ್ಸಾಹ ಇಳಿದಿದ್ದು ಕೂಡ! ಅದಿರಲಿ.

ಇನ್ನು ಕೆಲವರು ನಿಜವಾಗಿಯೂ ಪ್ರಶಸ್ತಿಗೆ, ಅವಾರ್ಡುಗಳಿಗೆ, ಅಭೂತಪೂರ್ವ ವಿಮರ್ಶೆಗೆ, ದೊಡ್ಡಸ್ತಿಕೆಗೆ ಬರೆಯುತ್ತಾರೆ. ಹೇಳುವಾಗ ಸ್ವಲ್ಪ ODD ಎನಿಸಿದರೂ ಇಂಥವರ ಪಟ್ಟಿಯೇನು ಸಣ್ಣದಿಲ್ಲ. ಸ್ವಲ್ಪ ಹೆಸರು, ಪ್ರಸಿದ್ಧಿ ಬರುತ್ತಲೇ ತಗುಲಿಕೊಳ್ಳುವ ರೋಗ ಇದು. ಇನ್ನೂ ಕೆಲವರು ಶ್ರೇಷ್ಠವಾದ್ದನ್ನು ಮಾತ್ರ ಬರೆಯುವವರು ಬೇರೇನು ಕಾರಣ ಕೊಟ್ಟರೂ, ಕೊಂಚ ದೂರದಿಂದ, ಸರಳವಾಗಿ ನೋಡುವವರಿಗೆ ಅದೇನೆಂದು ಗೊತ್ತೇ ಇರುತ್ತದೆ. ನಮಗೆ ಮೆದುಳಿದೆ, ಬುದ್ಧಿಯಿದೆ ಎನ್ನುವುದು ಅದೆಲ್ಲ ಇರುವುದರಿಂದ-ಲೇ ನಮಗೆ ಗೊತ್ತಾಗಿರುವ ನಮ್ಮ-ದೇ ಹೆಚ್ಚುಗಾರಿಕೆ(-ಯೆ?). ಕೆಲವು ಪ್ರಾಣಿ ಪಕ್ಷಿಗಳಿಗೆ ನಮಗಿಂತ ಹೆಚ್ಚೇ ಬುದ್ಧಿ ಇರಬಹುದು, ಅದು "ನಮ್ಮ" ಜಗತ್ತಿನಲ್ಲಿ ಇನ್ನೂ ಪ್ರೂವ್ ಆಗದೇ ಇರಬಹುದು. ಇದಲ್ಲದೆ, ನಮ್ಮ ಕೈಯಲ್ಲಿ ಒಂದು ಭಾಷೆ ಇದೆ ಮತ್ತು ನಮಗೆ ಬರೆಯುವುದಕ್ಕೆ ಒಂದು ಲಿಪಿಯೂ ಇದೆ ಎನ್ನುವುದನ್ನು ಬಿಟ್ಟರೆ ಜಗತ್ತಿನ ಬೇರಾವ ಜೀವಿಯೂ ಮಾಡದ ಒಂದು ಅಸಹಜ ಕ್ರಿಯೆ ಇದು, ಬರೆಯುವುದು. ಹಕ್ಕಿ ಹಾಡುವುದು, ರೆಕ್ಕೆ ಬಿಚ್ಚಿ ಕುಣಿಯುವುದೋ ಓಡಾಡುವುದೋ ಎಲ್ಲ ಇಂಥ, ಬರಹಗಾರರ ಪ್ರಕಟಿತ/ಅಪ್ರಕಟಿತ ಅಪೇಕ್ಷೆಯಿಂದಲ್ಲ. ಅಷ್ಟರಮಟ್ಟಿಗೆ ಅಸ್ಮಿತೆಯ, ಅಹಂನ ಒಂದು ಎಕ್ಸ್‌ಟೆನ್ಷನ್ ಬರೆಯುವ ಕ್ರಿಯೆ. 

ನಮ್ಮ ಪಾಡಿಗೆ ನಾವು, ನಮ್ಮನ್ನೇ ನಾವು ಕಂಡುಕೊಳ್ಳುವುದಕ್ಕೋ, ಆತ್ಮತೃಪ್ತಿಗೋ, ಬರೆಯದೇ ಇರಲಾರದ ಸಂಥಿಂಗ್-ಗಾಗಿಯೋ ಬರೆದುಕೊಂಡಿರಲು ಯಾರದ್ದೇನು ಅಡ್ಡಿ. ನಮ್ಮ ನಮ್ಮ ಡೈರಿ ಸಾಕಾಗುತ್ತದೆ ಅದಕ್ಕೆ. ಆದರೆ ಅದನ್ನು ಪುಸ್ತಕವಾಗಿ ಪ್ರಕಟಿಸುವಾಗ ಕೆಲವು ಅಡ್ಡಿ ಆತಂಕಗಳಿರುತ್ತವೆ, ಉತ್ತರಿಸಿಕೊಳ್ಳಬೇಕಾದ ಪ್ರಶ್ನೆಗಳೂ ಇರುತ್ತವೆ. ನಮ್ಮ ಒಬ್ಬರು ಸಾಹಿತಿಗಳು ತಮ್ಮ ಪುಸ್ತಕದ ಮುಖಪುಟದಲ್ಲೇ ದೊಡ್ಡದಾಗಿ "ಇದನ್ನು ನಾನು ಬರೆಯಬಾರದಿತ್ತು ಎಂದುಕೊಳ್ಳುವಾಗಲೇ ನೀವದನ್ನು ಓದಿಯಾಗಿತ್ತು" ಎಂದು ಓದಿಬಿಟ್ಟ "ಮೂರ್ಖ(?)" ಓದುಗರ ಮೇಲೆ ಗೂಬೆಕೂರಿಸಿದ್ದಿದೆ. ಬರೆಯುವಾಗ ಗೊತ್ತಿರಲಿಲ್ಲ ಎಂದೇ ಇಟ್ಟುಕೊಳ್ಳೋಣ, ಪುಸ್ತಕವಾಗಿ ಅಚ್ಚುಹಾಕುವಾಗ ಇದನ್ನು ಬರೆಯಬಾರದಿತ್ತು (ಎಂದು ಅವ-ರೇ ಹೇಳಿಕೊಂಡಂತೆ ಅವರಿ-ಗೇ ನಿಜ-ಕ್ಕೂ) ಅನಿಸಿದ್ದರೆ, ಏನಾದರೂ ಮಾಡಬಹುದಿತ್ತಲ್ಲವೆ! ಇರಲಿ ಬಿಡಿ, ಓದಿದವರ ಸಮಸ್ಯೆ ಅದು. ಹಾಗೆ ಪ್ರಕಟನೆಗೂ ಮುನ್ನ ಒಬ್ಬ ಲೇಖಕನನ್ನು ಕಾಡುವ ಸಂಗತಿಗಳು ಇದ್ದೇ ಇರುತ್ತವೆ. ಮುಖ್ಯವಾಗಿ ಹಣದ ತಾಪತ್ರಯವಂತೂ ಇದ್ದೇ ಇದೆ. ಅದೆಲ್ಲ ಏನೇ ಇದ್ದರೂ ಪ್ರಕಟಿಸುತ್ತೇವೆ ಎಂದರೆ ಅದಕ್ಕೂ ಏನೋ ಉದ್ದೇಶವಿರಲೇ ಬೇಕು. 

ಸೇತುರಾಮ್ ಅವರ ಈ ಕಥಾಸಂಕಲನ ಸ್ವ-ಪ್ರಕಟಿತ. ಸ್ವಲ್ಪ ವಾಚಾಳಿತನದಿಂದ ಕಿರಿಕಿರಿ ಕೂಡ ಹುಟ್ಟಿಸಬಲ್ಲಷ್ಟು ಹರಿತವಾಗಿರುವ ಇಲ್ಲಿನ ಭಾಷೆ ಮತ್ತು ಅಂಥ ಮೊನಚು ದಕ್ಕುವಂತೆ ಮಾಡಿದ ಅವರ ಜೀವನಾನುಭವ ಎರಡೇ ಇಲ್ಲಿನ ಆಕರ್ಷಣೆ. ಯಾವುದೇ ರಾಚನಿಕ ಎಕ್ಸಲೆನ್ಸ್ ತೋರಿಸುವ, ವಿವರಗಳಲ್ಲೇ ನಿಮ್ಮನ್ನು ಹಿಡಿದಿಡುವ, ನಿರೂಪಣೆಯ ಸೊಗಸಲ್ಲಿ ಮೈಮರೆಯುವಂತೆ ಮಾಡಬಲ್ಲ, ಬದುಕಲ್ಲಿ ನೀವು ಇದುವರೆಗೂ ನೋಡದಿರುವ ಏನನ್ನೋ ಧಕ್ಕೆಂದು ಕಾಣಿಸಿ ಬೆಚ್ಚಿ ಬೀಳಿಸುವ, ಹೊಸ ಒಳನೋಟ ಅಥವಾ ದರ್ಶನ ಒದಗಿಸುವ ಯಾವುದೇ ಉದ್ದೇಶ-ಅಜೆಂಡಾ ಇಲ್ಲದ ಕತೆಗಾರ ಇವರು. ಹಾಗಾಗಿ ನೀವು ಹಾಯಾಗಿ ಓದಿಕೊಳ್ಳಲು ಇವು ಸಿದ್ಧಗೊಂಡು ಕೂತಿವೆ. ಭಾರವಿಲ್ಲದೆ ಕೈಗೆತ್ತಿಕೊಳ್ಳಬಹುದಾದ ಪುಸ್ತಕ. ರಾಚನಿಕ ಎಕ್ಸಲೆನ್ಸ್ ಇಲ್ಲ ಎಂದ ಮಾತ್ರಕ್ಕೆ ರಾಚನಿಕವಾಗಿ ಸೇತುರಾಮ್ ಯಾವುದೇ ತಂತ್ರ, ಆಕೃತಿ ಬಳಸುತ್ತಿಲ್ಲ ಎಂದಲ್ಲ. ಅವರದು ನಿರಚನವಾದ ಅಲ್ಲ. ವಿವರಗಳ ಸೊಗಸು ಇಲ್ಲವೆಂದೂ ಅಲ್ಲ. ನಿರೂಪಣೆಗೆ ಅವರದೇ ಆದ ಒಂದು ಸೊಗಸು ಇದ್ದೇ ಇದೆ, ಅದರ ರುಚಿ ಹತ್ತುವಷ್ಟು ಅದು ಎದ್ದು ಕಾಣುತ್ತದೆ. ಬಹುಶಃ ಕೈಗೆತ್ತಿಕೊಂಡರೆ ಕೆಳಗಿಡುವುದು ಕಷ್ಟ ಎನ್ನುವ ಮಾತನ್ನು ಲಗತ್ತಿಸಬಹುದಾದಂಥ ಒಂದು ಪುಸ್ತಕವಿದು.

ಮುನ್ನುಡಿಯಲ್ಲಿ ಸೇತುರಾಮ್ ಕೆಲವು ಮಾತುಗಳನ್ನು ಹೇಳುತ್ತಾರೆ. 

"ಇದೆಲ್ಲಾ ಬರಹದ ತುರ್ತಿಗಾಯ್ತು. ಪ್ರಕಟಣೆಯ ತುರ್ತಿಗೆರಡು ಮಾತು!

"ಕಥೆಗಳಾಗಿ ಬದುಕಿದ, ಕಥೆಯ ಹಂದರಕ್ಕೆ ಸಿಲುಕದ, ಕಥೆಗಳಾದ ಸಾಕಷ್ಟು ಹೆಣ್ಣು ಮಕ್ಕಳ ಪರಿಚಯವಿದೆ. ಮುಖ್ಯವಾಗಿ ನನ್ನ ಕೆಲವು ಸಮಕಾಲೀನರು ಬಂಡವಾಳ ಹಾಕಿ, ದಿನ/ವಾರ/ಮಾಸ ಪತ್ರಿಕೆಗಳನ್ನು ನಡೆಸಿದರು/ನಡೆಸುತ್ತಿದ್ದಾರೆ. ಸತ್ಯ ಶೋಧನೆಯ ಸೋಗಲ್ಲಿ, ಪತ್ರಿಕಾ ಸ್ವಾತಂತ್ರ್ಯದ ಕವಚ ತೊಟ್ಟು, ಸ್ವಂತ ಮನೆ ಮಂದಿಯ ಉಂಬಳದ ತುರ್ತಿಗೆ, ಅವರ ಸ್ನೇಹಿತ ಸಮುದಾಯದ (ಗಂಡು ಹೆಣ್ಣು ಅನ್ನುವ ಬೇಧವಿಲ್ಲದೇ) ಚಟ ತೆವಲುಗಳ ತುರಿಕೆಗೆ, ಅಮಾಯಕ ಹೆಣ್ಣು ಮಕ್ಕಳನ್ನ ರೋಚಕ ಸುದ್ದಿ ಮಾಡಿದ ಮಹಾನುಭಾವರಿದ್ದಾರೆ. ಚಾರಿತ್ರ್ಯವಧೆ ಮಾಡಿಸಿಕೊಂಡು, ಭವಿಷ್ಯ ಕಳಕೊಂಡು, ತೊಳಕೊಂಡು, ಮುಕ್ತಿಯಿಲ್ಲದೆ ಆವಿಗಳಾಗಿ ಅಲೆಯುತ್ತಿರುವ ಆ ಕೆಲವು ಹೆಣ್ಣು ಮಕ್ಕಳು... ಅವರ ನೆನಪು ಈವತ್ತು!

"ಕಾರಣವೇ ಇಲ್ಲದೆ, ಅವರುಗಳ ತಪ್ಪೇ ಇಲ್ಲದೆ, ಚಾರಿತ್ರ್ಯವಧೆ ಮಾಡಿಸಿಕೊಂಡಂತಹ ಕೆಲವು ಪಾತ್ರಗಳನ್ನ ಹತ್ತಿರದಿಂದ ನೋಡಿದ್ದೀನಿ. ಅವಮಾನ ಕೋಪಕ್ಕೆ ಮಸೆದ ದವಡೆ, ಪ್ರತಿಕ್ರಿಯಿಸಕ್ಕೂ ಆಗದ ಪ್ರತೀಕಾರದ ಚೈತನ್ಯವೇ ಇಲ್ಲದ ಅಸಹಾಯಕತೆ ಕಟಬಾಯ ಜೊಲ್ಲು, ಕಣ್ಣ ಬಿಳಿ ಪಾಪೆ ಕೆಂಪಾಗಿ, ಹರಿದ ನೀರು ಕೆನ್ನೆ ಕೆಂಪಿಳಿದು, ಮೂಗಲ್ಲಿ ನೀರಾಡಿಸಿ, ಬಿಸಿಗಾಳಿಯೊಟ್ಟಿಗೆ ಬುಸುಗುಟ್ಟುತ್ತಿರುತ್ತದೆ.
......
.......
"ದುರಂತ! ಈ ಚಾರಿತ್ರ್ಯವಧೆಗಳ ಕಾರಣಕರ್ತರಾಗಿ ಸಾಕ್ಷೀಭೂತರಾಗಿ ಲಾಭ ಪಡೆದವರಲ್ಲಿ ಮುಕ್ಕಾಲುಮೂರುವಾಸಿ ಸ್ತ್ರೀಸ್ವಾತಂತ್ರ್ಯದ ಉದ್ಘೋಷಣೆಗಳ ಮುಂಚೂಣಿಯಲ್ಲಿದ್ದವರೇ! ಹಲವಾರು ಜನ ನನ್ನ ಪರಿಚಯಸ್ತರೇ! ಆ ಪರಿಚಯದ ಪಾಪಕ್ಕೆ ಈ ದಾಖಲೆಯ ಪ್ರಾಯಶ್ಚಿತ್ತ.

"ಅಂಕಣ ಬರೆದಿರಿ, ಚಾರಿತ್ರ್ಯವಧೆ ಆಯ್ತು. ಯಾರದ್ದು? ಈಡಾದ ಆ ಹೆಣ್ಣುಮಕ್ಕಳದ್ದಾ? ಅಲ್ಲ! ಈಡು ಮಾಡಿದ ನಿಮ್ಮಂಥವರನ್ನ ಹೊತ್ತು ಹೆತ್ತ ತಾಯಂದಿರದ್ದಲ್ಲವಾ?"

- ಈ ಮಾತುಗಳನ್ನ ದಾಖಲಿಸೋಕೆ ಒಂದು ವೇದಿಕೆ ಬೇಕಿತ್ತು ಎನ್ನುತ್ತಾರೆ "ಪ್ರಕಟಣೆಯ ತುರ್ತು" ವಿವರಿಸುತ್ತ ಸೇತುರಾಮ್. 

ಸೇತುರಾಮ್ ನಿವೃತ್ತರು. ಆದಾಯ ತೆರಿಗೆ ಇಲಾಖೆಯಲ್ಲಿ ಡೆಪ್ಯುಟಿ ಕಮೀಷನರ್ ಆಗಿದ್ದಾಗ ಸ್ವಯಂನಿವೃತ್ತಿ ಪಡೆದವರು. ಈಗಲೂ ಗಂಟೆಗಟ್ಟಲೆ ರಂಗದ ಮೇಲೆ ನಿಂತು ಬಹುತೇಕ ಮಾತಿನಿಂದಲೇ ಮಂಟಪ ಕಟ್ಟುವ ನಾಟಕಕಾರ ಅವರು. ಟೀವಿಯಲ್ಲಿ ಮಂಥನದಂಥ ಧಾರಾವಾಹಿಗಳನ್ನು ಮಾಡಿದವರು. ಟಿ ಎನ್ ಸೀತಾರಾಮ್ ಅವರೊಂದಿಗಿನ ಧಾರಾವಾಹಿಗಳು ಸಾಕಷ್ಟು ಪ್ರಸಿದ್ಧಿಯನ್ನೂ ತಂದುಕೊಟ್ಟಿವೆ. ಅವರಿಗೆ ವಯಸ್ಸಿನ ಈ ಹಂತದಲ್ಲಿ ಕತೆಗಾರ ಅನಿಸಿಕೊಂಡು ಸಂಭ್ರಮಿಸುವ ಹಂಬಲ ಖಂಡಿತ ಇರಲಾರದು. ಪ್ರಕಟಣೆಗೆ ಹಾಕಿದ ಹಣ ಕಳೆದುಕೊಂಡಂತೆಯೇ ಎನ್ನುವ ವಾಸ್ತವದ ಅರಿವೂ ಇಲ್ಲದವರಲ್ಲ ಅವರು. ಆದರೂ ಯಾಕೆ ಪ್ರಕಟಿಸುತ್ತಾರೆ ಎನ್ನುವ ಬಗ್ಗೆ ನಾವು ಸ್ವಲ್ಪ ಯೋಚಿಸಬೇಕು. ಬರೇ ಸಾಹಿತ್ಯ, ಸಾಹಿತಿ, ಹೆಸರು, ಪ್ರಸಿದ್ಧಿ, ಸನ್ಮಾನ, ಪ್ರಶಸ್ತಿ, ಶಾಲು, ಹಣ್ಣಿನ ತಟ್ಟೆ, ಪ್ರಶಸ್ತಿಪತ್ರ, ಸಂಭಾವನೆ, ವಿಮರ್ಶಾ ಲೇಖನಗಳ ಸಂಖ್ಯೆ, ಹೊಗಳಿ ಫೋನ್ ಮಾಡಿದ ಮಹನೀಯರು, ಪ್ರಖ್ಯಾತಿ ಜಗದ್ವಿಖ್ಯಾತ ಆವರಿಸಿದ್ದಕ್ಕೆ ಪುರಾವೆ - ಇದೇ ಜಗತ್ತಿನೊಳಗೆ ಸುಳಿಗೆ ಸಿಕ್ಕಿದ ತರಗಲೆಗಳಂತೆ ಗಿರಿಗಿಟ್ಟಿ ಸುತ್ತುತ್ತಿರುವ ನಮ್ಮ ಲೇಖಕರಿಗೆ ಇದೆಲ್ಲ ಅರ್ಥವಾಗುವ ಸಂಭವ ಕಡಿಮೆ. 

ಟಿ ಎನ್ ಸೀತಾರಾಮ್ ಅವರ ಮಾಯಾಮೃಗ ಧಾರಾವಾಹಿಯಲ್ಲಿ ಮೊಟ್ಟಮೊದಲು ನಾನು ಅವರನ್ನು ಕಂಡಿದ್ದು. ಅವರ ಮಾತುಗಾರಿಕೆಯ ಪಟ್ಟು ತಿಳಿಸುವ ಒಂದು ಕಲ್ಪಿತ ಸಂಭಾಷಣೆ ಹೇಳುತ್ತೇನೆ, ಕೇಳಿ:

ಮಗಳು: ಅಪ್ಪಾ ಎಲ್ಲಿಗೋಗಿದ್ರಿ ಇಷ್ಟೊತ್ತು, ಕಾದು ಕಾದು ಭಯಾನೆ ಆಗಿತ್ತು.
ಅಪ್ಪ: ಅಯ್ಯೊ, ಇಲ್ಲ ಪುಟ್ಟಿ, ಇಲ್ಲೇ ದೇವಸ್ಥಾನಕ್ಕೊಗಿದ್ದೆ ಅಷ್ಟೆ, ಸುಬ್ಬಣ್ಣಯ್ಯ ಸಿಕ್ಕಿದ್ರು, ಅದೇ, ಗೋದೂಬಾಯಿ ಓಣೀಲಿದ್ರಲ್ಲ, ಹ್ಹಿಹ್ಹಿಹ್ಹಿ, ಮತಾಡ್ತ ಮಾತಾಡ್ತ ಸ್ವಲ್ಪ ತಡವಾಗೋಯ್ತು, ಸಾರಿ ಪುಟ್ಟಿ.
ಮಗಳು: ನೀವು ದೇವಸ್ಥಾನಕ್ಕೊಗಿದ್ರ ಅಪ್ಪ!
ಅಪ್ಪ: ಹೂಂ, ನಿಜಕ್ಕೂ ಹೋಗಿದ್ದೆ ಪುಟ್ಟೀ. ಹ್ಹಿಹ್ಹಿಹ್ಹಿ, ಭಕ್ತಿಯಿಂದೇನೂ ಅಲ್ಲ ಪುಟ್ಟೀ, ತುಂಬ ಹಸಿವಾಗ್ತಿತ್ತು....ಬೆಳಿಗ್ಗೆಯಿಂದ ಏನೂ ತಿಂದಿರ್ಲಿಲ್ಲ.....ಅಲ್ಲೀ, ಪ್ರಸಾದ ತುಂಬ ಚೆನ್ನಾಗ್ ಮಾಡ್ತಾರೆ ಪುಟ್ಟೀ...ಹೂಂ....ತುಪ್ಪಾನೆ ಹಾಕಿ ಮಾಡ್ತಾರೆ. ನೋಡು, ನಿಂಗೂ ಸ್ವಲ್ಪ ತಂದಿದೀನಿ ಪುಟ್ಟೀ, ತಗೊ, ರುಚಿ ನೋಡು..."

ಮನೆಯಲ್ಲಿ ಹೇಳಿಕೊಳ್ಳಲಾಗದ ಬಡತನ. ಇವನಿಗೋ ಹಸಿವು. ಒಂಥರಾ ಸೆಲ್ಫ್ ಪಿಟೀ ಇಲ್ಲದ, ಆದರೆ ಅದನ್ನು ಹುಟ್ಟಿಸುವಂಥ ಸಂಕೋಚ, ತನ್ನನ್ನೇ ತಾನು ತಮಾಷೆ ಮಾಡಿಕೊಳ್ಳುವ ಸ್ವಭಾವದ ವೃದ್ಧನ ಪಾತ್ರವದು. ಮಗಳು ಕುಂಟಿ, ಹಾಡುಗಾರ್ತಿ. ಮದುವೆಗೆ ಬೆಳೆದು ನಿಂತಿದ್ದಾಳೆ. ಇತ್ಯಾದಿ...ಒಟ್ಟಿನಲ್ಲಿ ಅದು ಸಂಕೀರ್ಣವಾದ ಒಂದು ಪಾತ್ರ. ಮುಂದೆ ಅವರ ಇನ್ನೊಂದು ಪಾತ್ರ ನೋಡಿದೆ. ಕಟ್ಟಿಕೊಂಡ ಹೆಂಡತಿ ಈತನನ್ನು ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದ ಎಂದು ದೂರಿ ಕಣ್ಣೆದುರೇ ಇನ್ನೊಬ್ಬನನ್ನು ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದಾಳೆ. ಇವನ ಜೊತೆ ಇವನು ಹೆತ್ತ ಮಗಳು. ತನ್ನದೇ ಹೆಂಡತಿಯ ಈಗಿನ ಗಂಡನನ್ನು ಮುಖಾಮುಖಿಯಾಗುವ, ನಿರ್ಲಕ್ಷ್ಯ, ಅವಮಾನ ಇತ್ಯಾದಿಗಳಿಗೆ ಗುರಿಯಾಗುವ ಸನ್ನಿವೇಶಗಳಿವೆ. ಪ್ರಾಯಕ್ಕೆ ಬಂದ ಮಗಳು ಪೋಲೀಸ್ ಅಧಿಕಾರಿ. ಈತ ಒಂಥರಾ ಸದ್ಯದ ಹಂಗು ತೊರೆದವನಂತಿದ್ದಾನೆ. ಇದೆಲ್ಲ ಸೇತುರಾಮ್ ನಿರ್ವಹಿಸಿದ ಪಾತ್ರ. ಒಂಥರಾ ಸಂಕಟ ಹುಟ್ಟಿಸುವ, ಆದರೆ ನೋಡುತ್ತಿರುವಾಗ ನಗಿಸುವ ಪಾತ್ರ. ನಾವು ನಾವು ಅನುಭವಿಸಿದ ಅಪಮಾನ, ಅಸಹಾಯಕತೆಗಳಿಗೆಲ್ಲ ಮೂರ್ತಸ್ವರೂಪ ದಕ್ಕಿಸುವ ಪಾತ್ರ. ಸೇತುರಾಮ್ ಬರೆದಿರುವ ಕತೆಗಳನ್ನು ನಮ್ಮಲ್ಲಿ ಹೆಚ್ಚಿನವರು ಬರೆದಾಗಿದೆ, ನಮ್ಮ ನಮ್ಮದೇ ಮನಸ್ಸಿನ ಗೋಡೆಗಳ ಮೇಲೆ. 

ಅವರಿಗೊಂದು ಮೆಸೇಜ್ ಕಳಿಸಿದರೆ ಅವರೇ ಕಾಲ್ ಮಾಡಿ ತುಂಬ ಹೊತ್ತು ಮಾತನಾಡಿದರು. ಸೇತುರಾಮ್ ಕಾರಂತರ ಅಭಿಮಾನಿ. ಕಾರಂತರಿಂದ ಸಾಕಷ್ಟು ಕಲಿತ ದ್ರೋಣಶಿಷ್ಯ. ಕಾರಂತರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಇವತ್ತು. ಅವರು ಅರವತ್ತೈದು ಕಾದಂಬರಿ ಬರೆದಿದ್ದಾರೆ ಎಂದು ಒಬ್ಬ ಅಂತರ್ರಾಷ್ಟ್ರೀಯ ಖ್ಯಾತಿಯ ಸಿನಿಮಾ ನಿರ್ದೇಶಕರು ಡಾಕ್ಯುಮೆಂಟರಿಯಲ್ಲಿ ರೀಲು ಬಿಡುವುದು ಕೇಳಿದೆ. ಕಾರಂತರು ಇದ್ದಿದ್ದರೆ, ನಾನು ಮಾಡಿದ ಪಾಪಗಳ ಜೊತೆ ಬೇರೆಯವರದ್ದನ್ನೂ ಸೇರಿಸಿ ನನ್ನ ತಲೆಗ ಕಟ್ಟಬೇಡಪ್ಪ ಎನ್ನುತ್ತಿದ್ದರು. ಅವರಿಲ್ಲ ಈಗ. ಹಾಗಾಗಿ ಇದು ಸಾಧ್ಯ. ಅವರನ್ನು ನಿಜಕ್ಕೂ ಓದಿದವರು ಕಡಿಮೆ. 

ಇಲ್ಲಿ ಒಟ್ಟು ಆರು ಕತೆಗಳಿವೆ. ಒಂದು, ‘ಕಾತ್ಯಾಯಿನಿ’ ಎನ್ನುವ ಕತೆ ನಲವತ್ತು ಪುಟಗಳಷ್ಟಿದೆಯಾದರೂ ಅದು ಕಾದಂಬರಿಯಲ್ಲ, ಕತೆಯೇ. ಇದು ಮತ್ತು ಮಠದ ಸುತ್ತ ಇರುವ ‘ಮೋಕ್ಷ’, ಕರ್ಮಸಿದ್ಧಾಂತದ ಸುತ್ತ ಇರುವ ‘ಸಂಭವಾಮಿ’ ತುಂಬ ಇಷ್ಟವಾಗುವ ಕತೆಗಳು. ‘ನಾವಲ್ಲ’ ಕತೆ ಈ ಸಂಕಲನಕ್ಕೆ ಹೆಸರು ಕೊಟ್ಟ ಕತೆಯಾದರೂ ಸಂಕಲನದ ಕೆಟ್ಟ ಕತೆ ಎಂದರೆ ಅದೊಂದೇ. ಅದು ಪ್ರಗತಿಶೀಲರ ಕಾಲದ ಕತೆಯಂತಿದೆ. ‘ಮೌನಿ’ ಮತ್ತು ‘ಸ್ಮಾರಕ’ದಲ್ಲಿ ವಾಚಾಳಿತನ ಕೊಂಚ ಹೆಚ್ಚಾಯ್ತು. ಆದರೆ ಇವೆರಡೂ ಕತೆಯನ್ನು ಹೇಳಿದ ರೀತಿ ಅಂದರೆ ತಂತ್ರ ಮತ್ತು ನಿರೂಪಣಾ ಶೈಲಿ ಎರಡೂ ಮೆಚ್ಚುಗೆಯಾಗುತ್ತದೆ. ನನಗಂತೂ ಇವತ್ತಿನ ಸಾಹಿತ್ಯ ರಚನೆಯ ಹಿಂದಿನ "ದುರುದ್ದೇಶ"ಗಳನ್ನು ಕಂಡಾಗಲೆಲ್ಲ ಇಂಥವರ ಕೃತಿ, ಅದು ಶ್ರೇಷ್ಠವಾಗಿರದೇ ಇದ್ದರೇನಂತೆ, ತುಂಬ ಇಷ್ಟವಾಗುತ್ತದೆ, ಆಪ್ತವಾಗುತ್ತದೆ. ಒಂದು Cause ಇದೆ ಅನಿಸುತ್ತದೆ. ಅದನ್ನು ಬೆಂಬಲಿಸಬೇಕು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ