Wednesday, July 5, 2017

ಹಳಿಗಳ ನಡುವೆ ಚಡಿಯಿಡಬಾರದು

ಅಶೋಕ್ ಶ್ರೀನಿವಾಸನ್ ಅವರ "ಬುಕ್ ಆಫ್ ಕಾಮನ್ ಸೈನ್ಸ್" ಕಥಾ ಸಂಕಲನದ ಮೊದಲ ಕತೆ Not to Be Loose Shunted ಕತೆಯ ಪೂರ್ಣಪಾಠ. ನನ್ನ ಕೈಲಾದ ಮಟ್ಟಿಗೆ ಇದನ್ನು ಅನುವಾದಿಸಿದ್ದೇನೆ, ಒಪ್ಪಿಸಿಕೊಳ್ಳುವುದು.

ಈ ಕತೆಯ ಬಗ್ಗೆ ಮೊದಲೇ ಎರಡು ಮಾತು ಹೇಳುವುದಾದರೆ ಇಲ್ಲಿರುವುದು ಒಂದು ಭಾವಗೀತೆಯೇ ಹೊರತು ಕಥಾನಕವಲ್ಲ. ರೈಲು, ಹಳಿಗಳು, ಪ್ರಯಾಣ, ವಿವಿಧ ನಿಲ್ದಾಣಗಳು, ಜಂಕ್ಷನ್ನುಗಳು, ಗೊತ್ತುಗುರಿಯಿಲ್ಲ ಎನಿಸಿಬಿಡುವ ನಿರಂತರ ಪ್ರಯಾಣದ ಜಂಜಾಟ ಮತ್ತು ಅಂಥ ಒಂದು ಬದುಕಿನ ಕುರಿತ ಭ್ರಮೆ-ವಾಸ್ತವದ ನಡುವೆ ನಲುಗುವ ದೈನಂದಿನದ ಸಣ್ಣಪುಟ್ಟ ಆಸೆ-ಆಕಾಂಕ್ಷೆಗಳು, ಹಣ ಮತ್ತು ಮೌಲ್ಯ, ಮನುಷ್ಯ ಸಂಬಂಧ ಮತ್ತು ಅವುಗಳ ಕುರಿತ ನೆನಪುಗಳು, ಸಂಬಂಧಾತೀತ ಸಂಬಂಧಗಳು. ಇವನ್ನೆಲ್ಲ ಈ ನಿರೂಪಣೆ ಸ್ಪರ್ಶಿಸುತ್ತದೆ, ತನ್ನದೇ ಬಗೆಯಲ್ಲಿ. ಈ ಸ್ಪರ್ಶ ನಿಮ್ಮಲ್ಲಿ ಹುಟ್ಟಿಸುವ ಸಂವೇದನೆ, ಹುಟ್ಟಿದರೆ ಇದು ಕತೆಯಾಗುತ್ತದೆ, ನಿಮ್ಮ ನಿಮ್ಮ ಮನಸ್ಸಿನ ಸೂಕ್ಷ್ಮ ಒಳಪದರಗಳಲ್ಲಿ.

=========================================
ನನಗೆ ಹದಿನಾಲ್ಕು ವರ್ಷವಾಗುವವರೆಗೆ ನನ್ನ ಅಪ್ಪನ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ. ಅದುವರೆಗೆ ನಾನೆಂದೂ ಕಡಲನ್ನು ಕಂಡವನೂ ಅಲ್ಲ. ನನಗೆ ಎರಡು ವರ್ಷವಿದ್ದಾಗ ಅಪ್ಪ ನಮ್ಮನ್ನೆಲ್ಲ ಬಿಟ್ಟು ಹೋದರು. ಅಮ್ಮನ ಹೊಟ್ಟೆಯಲ್ಲಿ ಎರಡನೆಯ ಮಗುವಿತ್ತು, ಹೆಣ್ಣುಮಗು. ಹುಟ್ಟುವಾಗಲೇ ಅದು ಸತ್ತಿತ್ತು. ಅದನ್ನು ಹೆರಬೇಕಾದರೆ ಅಮ್ಮ ಕೂಡ ಹೆಚ್ಚೂಕಮ್ಮಿ ಸತ್ತೇ ಹೋಗಿದ್ದಳಂತೆ. ಜನಜಂಗುಳಿ, ಹಾರಗಳು, ಹೂವಿನ ಅಲಂಕಾರ, ಕಣ್ಣುಕುಕ್ಕುವ ಬಣ್ಣಬಣ್ಣದ ಲೈಟಿಂಗ್ ಮುಂತಾದ ಮದುವೆಯ ಫೋಟೋಗಳನ್ನು ಬಿಟ್ಟರೆ ಅಪ್ಪ ಸ್ಪಷ್ಟವಾಗಿ ಕಾಣಿಸುವ ಒಂದು ಫೋಟೋ ಇತ್ತು. ಅದನ್ನು ಅವನ ತಾರುಣ್ಯದ ಉತ್ತುಂಗದಲ್ಲಿ ತೆಗೆದಿದ್ದಿರಬೇಕು. ಅದರಲ್ಲಿ ಅಪ್ಪ ಒಂದು ರೈಲ್ವೇ ಲೆವೆಲ್ ಕ್ರಾಸಿಂಗಿನಲ್ಲಿ ನಿಂತಿದ್ದ. ಮರದ ಸ್ಲೀಪರುಗಳು, ಫಿಶ್ಪ್ಲೇಟುಗಳ ನಡುವೆ ನಿಂತಿದ್ದರಿಂದ ಅವುಗಳ ರಾಶಿ ಕಾಣುತ್ತದೆ ಅದರಲ್ಲಿ. ನಗುತ್ತಿದ್ದ ಅಪ್ಪ ಅದರಲ್ಲಿ. ಕಬ್ಬಿಣದ ಹಳಿಗಳು ಎಲ್ಲೆಲ್ಲೋ ದೂರದಲ್ಲಿ ಒಂದರ ಜೊತೆಗೊಂದು ಹೆಣೆದುಕೊಂಡು ಹೊರಳುವ ದೃಶ್ಯ ಕೂಡ ಅಪ್ಪನ ಬೆನ್ನ ಹಿಂದಿನ ಹಿನ್ನೆಲೆಯಲ್ಲಿ ಕಾಣಿಸುತ್ತಿತ್ತು. ಕಪ್ಪು ದಪ್ಪ ಮೀಸೆ, ದೃಢಕಾಯ, ಬಿಳಿಯ ಹಲ್ಲುಗಳು. ನನ್ನಮ್ಮ ಅವನ ಬಗ್ಗೆ ಯಾವತ್ತೂ ಮಾತನಾಡಿದ್ದೇ ಇಲ್ಲ ಎನ್ನಬಹುದು.


ನನಗೆ ಅವನ ಬಗ್ಗೆ ಗೊತ್ತಿರುವ ಒಂದೇ ಒಂದು ವಿಚಿತ್ರ ವಿಷಯ ಎಂದರೆ ಅಪ್ಪನಿಗೆ ಆಗಾಗ ಕುಳಿತಲ್ಲೇ ಪ್ರವಾಸ ಹೋಗುವ ಅಭ್ಯಾಸವಿತ್ತು ಎನ್ನೋದು. ಅವನಿಗೆ ತನ್ನ ಸುತ್ತಾ ರೈಲ್ವೇ ಟೈಂಟೇಬಲ್ಲು, ಬ್ರಾಡ್ಗೇಜ್, ಮೀಟರ್ಗೇಜ್, ನ್ಯಾರೋಗೇಜಿನ ಗೆರೆಗಳೆಲ್ಲ ಇದ್ದ ಮ್ಯಾಪುಗಳು, ಲೇಟೆಸ್ಟ್ ರೈಲ್ವೇ ಟೈಮಿಂಗ್ಸು ಎಲ್ಲ ಇಟ್ಟುಕೊಂಡು ಮನಸ್ಸಲ್ಲೇ ಯಾವುದೋ ಒಂದು ಟ್ರೇನ್ ಹಿಡಿದು ಪ್ರವಾಸ ಹೋಗೋದು ಬಹಳ ಹಿಡಿಸುತ್ತಿತ್ತು. ಅವನು ಕಾಗದ ತೆಗೆದುಕೊಂಡು ತನ್ನ ಪ್ರವಾಸದ ಯೋಜನೆಯನ್ನು ವಿವರ ವಿವರವಾಗಿ ಬರೆಯುತ್ತಿದ್ದ. ಬೇರೆ ಬೇರೆ ಖರ್ಚುವೆಚ್ಚ ಲೆಕ್ಕ ಹಾಕೋದು, ಯಾವ ಮಾರ್ಗವಾಗಿ ಹೋಗೋದು ಒಳ್ಳೇದು ಅನ್ನೋದರ ಲೆಕ್ಕಾಚಾರ ಹಾಕೋದು, ಟ್ರಾವೆಲ್ ಗೈಡುಗಳಲ್ಲಿ ಕೆಲವು ಬದಲಾವಣೆ ಮಾಡೋದು, ಕೊನೆಕ್ಷಣದ ತನಕ ಯಾವ ಹಾದಿ, ಯಾವ ಟ್ರೇನು ಅನ್ನೋದನ್ನ ನಿರ್ಧರಿಸದೇ ಇರೋದು ಇದನ್ನೇ ಮಾಡುತ್ತಿದ್ದ. ನಿಜ ಏನೆಂದರೆ ಅವನೆಂದೂ ಮನೆಯಿಂದ ಹೊರಗೆ ಕಾಲಿಟ್ಟಿದ್ದೇ ಇಲ್ಲ. ಪ್ರಯಾಣದ ಕುರಿತು ಅವನಲ್ಲೇ ಇದ್ದ ರೇಜಿಗೆ ಕೂಡ ಸುಳ್ಳೆನಿಸುವಂತಿದ್ದ ಒಂದೇ ಒಂದು ಸಂಗತಿ ಎಂದರೆ ಅವನು ಒಂದಿಷ್ಟೂ ದಣಿವಿಲ್ಲದವನಂತೆ ಕಾಗದಗಳ ಮೇಲೆ ಅತ್ಯಂತ ನಿಖರವಾದ ಬಗೆಯಲ್ಲಿ ಮೂಡಿಸುತ್ತಿದ್ದ ಕೊನೆಯೇ ಇಲ್ಲದ ಪ್ರವಾಸಗಳ ನಕ್ಷೆ. ಅವು ಅವನ ಕಾಗದದ ಮೇಲೆ ಗಟ್ಟಿಯಾಗಿ ಬೇರೂರಿ ಕಾಗದದ ಮೇಲೆಯೇ ಮತ್ತಷ್ಟು ಪ್ರವಾಸಗಳಿಗೆ ಕಾರಣವಾಗುವಂತೆ ರೆಂಬೆ ಕೊಂಬೆ ಚಾಚಿಕೊಳ್ಳುತ್ತಿದ್ದವು. ಅವನ ತಲೆತುಂಬ ಸಣ್ಣಪುಟ್ಟ ರೈಲ್ವೇ ಸ್ಟೇಶನ್ನುಗಳ ಹೆಸರುಗಳೇ ಗಿಚ್ಚಿಗಿರಿದಿರಬಹುದು ಎನಿಸುತ್ತಿತ್ತು ನನಗೆ. ಹಳಿ ಬದಲಿಸುವ ಯಾವುದೋ ಒಂದು ಕವಲಿನಲ್ಲಿ ಕಣ್ಣಿಗೆ ಬೀಳದಂತುಳಿದುಬಿಟ್ಟಿದ್ದ ಯಾವುದೋ ಹೊಸದೇ ಆದೊಂದು ಹಳಿಯ ಮೇಲೆ ಮಗುಚಿಕೊಂಡು ಇನ್ನೊಂದೇ ಬದುಕಿನತ್ತ ಅವನು ಮಾಯವಾಗಿ ಹೋದನೆ? ಕಲ್ಲಿದ್ದಲು, ಉಗಿ, ಉಕ್ಕು ಮತ್ತು ಹೌದು, ಹೊಸದೇ ವೇಗ ಆವೇಗಗಳ ಖುಶಿ ಕೂಡ ಇದ್ದಿರಬಹುದಾದ, ದಡಬಡಿಸಿ ಸಾಗುವ ಒಂದು ಹೊಸ ಬದುಕಿನತ್ತ? ನೋವಿಲ್ಲದ ಮತ್ತು ಪ್ರಾಯಶಃ ಗೊಂದಲಗಳೂ ಇಲ್ಲದ ಒಂದು ಜಾಗವನ್ನರಸಿ ಹೊರಟಿರಬಹುದೆ?

ಈ ಆಟ ಅಪ್ಪನ ಪ್ರಯಾಣದ ಆಸೆಗಳನ್ನೆಲ್ಲ ತಣಿಸಲು ಅಗತ್ಯವಾಗಿತ್ತು ಅನಿಸುತ್ತದೆ. ಅದು ಬಹುಶಃ ಸಾಕಷ್ಟು ತೃಪ್ತಿಯನ್ನೂ ಕೊಡುತ್ತಿತ್ತೇನೊ ಅವನಿಗೆ. ಬೇರೆ ಬೇರೆ ರೈಲ್ವೇ ಮಾರ್ಗಗಳ ಹೆಸರುಗಳು, ಸ್ಟೇಶನ್ನುಗಳ, ಜಂಕ್ಷನ್ನುಗಳ ಹೆಸರುಗಳು, ಸ್ಥಳಗಳ ಹೆಸರುಗಳು, ಎಲ್ಲದರ ಪಟ್ಟಿ ಮಾಡುತ್ತಿದ್ದ. ಅವುಗಳನ್ನೆಲ್ಲ ಕೇಳುತ್ತಿದ್ದರೆ ಆ ಶಬ್ದಗಳೆಲ್ಲ ಒಂದರ ಜೊತೆ ಒಂದು ಸೇರಿಕೊಂಡು ಏನೋ ಒಂದು ನಾದಮಾಧುರ್ಯ ಹೊರಡಿಸುವ ಅನುಭವ ಆಗುತ್ತಿತ್ತು. ದಾವಣಗೆರೆ, ಕೊಟ್ಟಾಯಂ, ಲೊಹ್ಯಾನ್ಖಾಸ್, ಹಲ್ದೀಬಾರಿ, ಮರಿಯಾನಿ, ಗೇಡೆ, ಕೋಳಿವಾಡ. ರೈಲ್ವೇ ಮೂಲಕ ಪ್ರಯಾಣಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿಗೂ, ಸೂಕ್ತ ಪ್ರಯಾಣದರವನ್ನು ಪಾವತಿಸಿದಲ್ಲಿ, ಆತ ಪ್ರಯಾಣಿಸಲಿರುವ ತರಗತಿ ಮತ್ತು ಬೋಗಿಯನ್ನು ಸೂಚಿಸುವ ವಿವರಗಳ ಸಹಿತ ಎಲ್ಲಿಂದ ಎಲ್ಲಿಗೆ ಪ್ರಯಾಣಿಸಲು ದರ ಪಾವತಿ ಮಾಡಿದ್ದಾರೆ ಎನ್ನುವುದನ್ನೂ ನಮೂದಿಸಿದ ಒಂದು ಟಿಕೇಟು ನೀಡಲಾಗುವುದು. ಇದನ್ನೆಲ್ಲ ನನಗೆ ಹೇಳುವಾಗ ಅಮ್ಮ ನಿರ್ಭಾವುಕಳಾಗಿದ್ದಳು. ಬೇಸಿಗೆ ರಜೆಯಲ್ಲಿ ಊರಿಂದ ದೂರವಾಗಿದ್ದಾಗ, ಕಡಲ ದಂಡೆಯ ಮೇಲೆ, ಅದೂ ನಾನು ಜ್ವರ ಬಂದು ಸುಧಾರಿಸಿಕೊಳ್ಳುತ್ತಿದ್ದಾಗ ಅಮ್ಮ ನನಗಿದನ್ನೆಲ್ಲ ಹೇಳಿದ್ದಳು. ಆಗ ನನಗೆ ಹದಿನಾಲ್ಕು ವರ್ಷ ವಯಸ್ಸು. ನನ್ನ ತಂದೆ ತಾಯಿ ಇಬ್ಬರೂ ಶಾಲಾ ಶಿಕ್ಷಕರಾಗಿದ್ದರು. ಅಮ್ಮನನ್ನೂ ಸೇರಿ ಯಾರಿಗೂ ಯಾಕೆ ಅಪ್ಪ ಹಾಗೆ ಇದ್ದಕ್ಕಿದ್ದ ಹಾಗೆ ಹೊರಟು ಹೋದ ಎನ್ನುವುದು ಅರ್ಥವಾಗಿರಲಿಲ್ಲ. ಅವರಿಬ್ಬರೂ ಜೊತೆಜೊತೆಯಾಗಿ ಎಲ್ಲರಿಗಿಂತ ಚೆನ್ನಾಗಿಯೇ, ಸಂತೋಷವಾಗಿಯೇ ಇದ್ದ ಹಾಗಿತ್ತು. ನಾನು ಸೇಲ್ಸ್ ರೆಪ್ರೆಸೆಂಟೇಟಿವ್ ಆಗಿ ಆಗಾಗ ಟ್ರೇನಿನಲ್ಲಿ ಪ್ರಯಾಣಿಸುತ್ತಿದ್ದೆ. ಹೆಚ್ಚು ಹೆಚ್ಚು ಪಯಣ ಸಾಗಿದಂತೆಲ್ಲ, ನಾನು ಯಾವ ದಿಕ್ಕಿನಲ್ಲೇ ಸಾಗುತ್ತಿರಲಿ, ಅಪ್ಪನ ಬಗ್ಗೆ ನನಗೆ ಗೊತ್ತಿರುವ ಬರೇ ಒಂದಿಷ್ಟೇ ಇಷ್ಟು ಮಾಹಿತಿಯಿಂದ ಕೂಡ ದೂರವಾಗುತ್ತಿದ್ದೇನೆ; ಈ ಮೈಲುದ್ದದ ಉಕ್ಕಿನ ಹಳಿಗಳ ಮೇಲೆ ಜಾರುತ್ತಲೇ ನೆನಪುಗಳ ಹಾದಿಯಲ್ಲಿಯೂ ಹೆಚ್ಚು ಹೆಚ್ಚು ದೂರ ಸಾಗುತ್ತಿದ್ದೇನೆ ಎಂದೇ ಅನಿಸುವುದು. ನನಗೆ ಹದಿನಾಲ್ಕು ತುಂಬಿದ ಆ ಬೇಸಗೆಯ ದಿನಗಳಲ್ಲಿ ಅಮ್ಮ ಅವಳ ಫೀಲ್ಡ್ ರೀಸರ್ಚ್ ಕೆಲಸದ ಮೇಲೆ ಪೂರ್ವ ಕರಾವಳಿಯ ವಯಲೂರಿಗೆ ಹೋಗುತ್ತ ನನ್ನನ್ನೂತನ್ನ ಜೊತೆಯಲ್ಲೆ ಕರೆಕೊಂಡು ಹೋಗಿದ್ದಳು. ಅದು ಅವಳ ಕೆಲಸಕ್ಕೆ ಸಂಬಂಧಿಸಿದ ಪ್ರವಾಸವಲ್ಲದೇ ಹೋಗಿದ್ದರೆ ನಾವೆಂದೂ ಹಾಗೆ ಸಾವಿರದೈನೂರು ಮೈಲಿ ದೂರದ ಒಂದು ಊರಿಗೆ ಪ್ರಯಾಣ ಮಾಡುವುದು ಸಾಧ್ಯವೇ ಇರಲಿಲ್ಲ.
ನಾನು ಕಡಲನ್ನು ನೋಡಿದ್ದು ಆಗಲೇ. ಧೂಳಿನಿಂದ ತುಂಬಿದ ಆ ನಮ್ಮ ಬಸ್ ಪ್ರಯಾಣದ ಕಟ್ಟಕಡೆಯ ಹಂತದಲ್ಲಿ ನಾವು ಕಡಲ ಕಿನಾರೆಗೆ ಬಂದು ತಲುಪಿದ್ದೆವು. ಅದರ ಸುರುವಿನಲ್ಲೇ ನನಗೆ ವಾಕರಿಕೆ ಸುರುವಾಯಿತು. ನನ್ನನ್ನು ಗಮನಿಸುತ್ತಿರುವ ಸಂಗತಿ ನನಗೇ ತಿಳಿಯದ ಹಾಗೆ ಎಚ್ಚರವಹಿಸಿ ಗಮನಿಸುವ ಅವಳ ಯಾವತ್ತಿನ ರೀತಿಯಲ್ಲೇ ಅಮ್ಮ ನನ್ನ ಕಾಳಜಿ ವಹಿಸತೊಡಗಿದ್ದಳು. ಬಸ್ ಡಿಪೊದಿಂದ ಮೊತ್ತಮೊದಲ ಬಾರಿ ಕಡಲನ್ನು ಕಾಣುವಾಗಲೇ ನನ್ನ ಮೈ ಜ್ವರದಿಂದ ಸುಡುತ್ತಿತ್ತು. ಆದರೂ ಪರಿಸ್ಥಿತಿ ನನ್ನ ನಿಯಂತ್ರಣದಲ್ಲೇ ಇದೆ ಎನ್ನುವ ಹಾಗೆ ಹೋಲ್ಡಾಲು ಎತ್ತಿಕೊಂಡು ಬಸ್ಸಿನಿಂದ ಹೊರಬಿದ್ದವನೇ ಮಣ್ಣಲ್ಲೇ ಹೋಲ್ಡಾಲನ್ನು ಜಾಗ್ರತೆಯಾಗಿ ಎತ್ತಿಟ್ಟು ಬೇರೇನೂ ಯೋಚನೆ ಮಾಡದೆ ಅಲ್ಲೇ ರಸ್ತೆಯಲ್ಲಿ ಕುಳಿತುಬಿಟ್ಟೆ.

ಅಲ್ಲಿನ ಶಾಲೆಯ ವಿಶಾಲ ವೆರಾಂಡದಲ್ಲಿ ಆವತ್ತು ಸಂಜೆ ನಾನೂ ನನ್ನಮ್ಮನ್ನ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಅಮ್ಮ ನನ್ನ ತಲೆಯನ್ನು ಅವಳ ತೊಡೆಯ ಮೇಲಿರಿಸಿಕೊಂಡು ಮೆಲ್ಲಗೆ ಸಂಭಾಳಿಸುತ್ತಲೇ ಇದ್ದಳು. ನಾವಿಬ್ಬರೂ ಕಡಲಿನತ್ತಲೇ ನೋಡುತ್ತ ಉಳಿದೆವು. ಜ್ವರದಿಂದ ಕಂಗೆಟ್ಟಿದ್ದ ನನಗೆ ಅದರ ಸಂಗೀತ ಹಿತವಾಗಿತ್ತು. ನನಗೆ ನೆನಪಿದೆ, ನನ್ನಮ್ಮ ಆವತ್ತು ಬಿಳಿ ಬಣ್ಣದ ಸೀರೆಯುಟ್ಟಿದ್ದಳು. ಅದರಲ್ಲಿ ಅಲ್ಲಲ್ಲಿ ಕೆಂಪು ಬಣ್ಣದ ಕಲೆಗಳಾಗಿದ್ದು ವಿಲಕ್ಷಣವಾಗಿ ಕಾಣುತ್ತಿತ್ತದು. ಆಗಷ್ಟೇ ನನಗೆ ಮೂಗಿನಲ್ಲಿ ರಕ್ತ ಒಸರುವುದು ಸುರುವಾಗಿತ್ತು. ಇನ್ನೇನು ಸೂರ್ಯ ಮುಳುಗುತ್ತಾನೆನ್ನುವಾಗ ಕಡಲ ಕಿನಾರೆಯುದ್ದಕ್ಕೂ ನಡೆದಾಡಿಸು ಎಂದು ನಾನು ಕೇಳಿಕೊಂಡಿದ್ದೆ. ಅವಳು ಆವತ್ತು ಅವಳ ಗಂಡನ ಬಗ್ಗೆ, ನನ್ನ ಅಪ್ಪನ ಬಗ್ಗೆ, ನಮಗೆಲ್ಲ ಅಪರಿಚಿತನಾಗಿಯೇ ಉಳಿದು ಹೋದ ಆ ವ್ಯಕ್ತಿಯ ಬಗ್ಗೆ ಹೇಳಿದ್ದಳು.

ಮರಳು ಮತ್ತು ಉಪ್ಪಿನ ಸಾಗರದ ಮೇಲಿಂದ ತೇಲಿ ಬರುತ್ತಿದ್ದ ಗಾಳಿಯ ಪರಿಣಾಮಕ್ಕೆ ಒಂದು ಪ್ರಮಾಣವೋ ಎಂಬಂತೆ ಆವತ್ತು ಆ ವಾತಾವರಣದಲ್ಲಿ ಅವಳ ಮಾತುಗಳನ್ನೆಲ್ಲ ನಾನು ಅತ್ಯಂತ ಸಹಜವಾದ ಸಂಗತಿಯೋ ಎಂಬಂತೆ ಸ್ವೀಕರಿಸಿದ್ದೆ. ಒಮ್ಮೆ ನನ್ನ ಅಮ್ಮನ ಮಾಮ (ಹಳ್ಳಿಯ ಒಕ್ಕಲಿಗನಾದ ಮಾಮ ಸದ್ಯ ತನ್ನ ಗ್ರಹಗತಿ ಚೆನ್ನಾಗಿರುವುದನ್ನು ತಿಳಿದುಕೊಂಡು ಜಾಗದ ವಿಷಯದ ಒಂದು ವ್ಯಾಜ್ಯದ ಸಂಬಂಧದಲ್ಲಿ ಪೇಟೆಗೆ ಬಂದಿದ್ದ.) ನನ್ನಪ್ಪನ ಬಗ್ಗೆ ಹೇಳಿದ ಮಾತು ನನಗೊಂಚೂರೂ ಅರ್ಥವಾಗಿರಲಿಲ್ಲ. ನಮ್ಮ ಕುಟುಂಬದಲ್ಲಿ ಯಾರಿಗೂ ಇಲ್ಲದ ಒಂದು ವಿಚಿತ್ರವಾದ ಮೌನ ಅವನಲ್ಲಿತ್ತು, ಅಂಥ ಮೌನ ಇದ್ದವರು ಮಳೆ ತರಿಸುವ ಶಕ್ತಿ ಹೊಂದಿರುತ್ತಾರೆ ಎಂದಿದ್ದ ಅವನು. ಬರಗಾಲ, ಕ್ಷಾಮದ ಸಮಯದಲ್ಲಿ ಜನ ಇಂಥ ಮಾತುಗಳನ್ನಾಡುವುದು ನಾನು ಕೇಳಿದ್ದೆ.

ಇದು ನಡೆದಿದ್ದು ಸುಮಾರಾಗಿ ನನ್ನಮ್ಮ ರಿಟೈರ್ ಆದ ಹೊತ್ತಿನಲ್ಲೇ. ಆಗ ನಾನು ಅಶೋಕನ ರೂಮಿನಲ್ಲಿ, ಅವನು ಟೂರ್ ಮೇಲೆ ಊರೂರಿಗೆ ಹೋದಾಗಲೆಲ್ಲ ಅವನ ಹೆಂಗಸಿನ ಜೊತೆ ಇರುತ್ತಿದ್ದೆ. ರೂಮು ಎಂದರೆ ಸೆಂಟ್ರಲ್ ಮಾರ್ಕೆಟ್ನ ಒಂದು ಮುರುಕಲು ರೆಸ್ಟೊರೆಂಟಿನ ಮೇಲಿದ್ದ ಮರದ ಪಾರ್ಟಿಷನ್ಗಳ ಸಾಲು ಕೊಠಡಿ ಅಷ್ಟೇ. ಅವನು ಊರಲ್ಲಿದ್ದಾಗ ಅವಳ ಜೊತೆ ಅವನಿರುತ್ತಿದ್ದ ಮತ್ತು ಅವನಿಗೆ ಅವಳ ಅಗತ್ಯವಿಲ್ಲದ ಸಮಯದಲ್ಲಿ ಅವಳು ಬೇರೆಯವರ ಜೊತೆ ಅವಳ ಸಂಪಾದನೆ ಮಾಡಿಕೊಳ್ಳಲು ಅವಕಾಶ ಕೊಡುತ್ತಿದ್ದ. ಇದು ನಮ್ಮ ನಮ್ಮೊಳಗೆ ಇದ್ದ ಒಂದು ಹೊಂದಾಣಿಕೆ.

ಅಂಥ ಸಂದರ್ಭದಲ್ಲೆಲ್ಲ ನಾನು ಅಮ್ಮನ ಹತ್ತಿರ ಕೊತಾಹ್ಗೆ ಕೆಲಸದ ಮೇಲೆ ಹೋಗುತ್ತಿದ್ದೇನೆ ಮತ್ತು ಬರುವುದು ಒಂದು ವಾರವಾಗುತ್ತೆ ಅಂತ ಸುಳ್ಳು ಹೇಳುತ್ತಿದ್ದೆ. ಊರಿನ ಕಡೆಯಿಂದ ಅವಳ ಒಬ್ಬ ಕಸಿನ್ ನಮ್ಮನೆಗೆ ಬರುವುದಿತ್ತು. ನಾನಿಲ್ಲದ ಈ ಅವಧಿಯಲ್ಲಿ ನನ್ನಮ್ಮ ಅವಳನ್ನು ಪೇಟೆಯಲ್ಲಿ ಸುತ್ತಾಡಿಸಲು ಮತ್ತು ಶಾಪಿಂಗಿಗೆ ಕರೆದೊಯ್ಯಲು ಪ್ಲ್ಯಾನ್ ಹಾಕುತ್ತಿದ್ದಳು. ಸಿಟಿ ಶಾಪಿಂಗ್ ಸೆಂಟರಿನ ಪಕ್ಕದ ಬೀದಿಯಲ್ಲಿ ನೀರಿನ ಪೈಪ್ಲೈನ್ ಒಂದು ಒಡೆದು ಈ ರೆಸ್ಟೊರೆಂಟಿನ ಕೆಳಗಿದ್ದ ಜಂಕ್ಷನ್ನಿನಲ್ಲಿ ಟ್ರಾಫಿಕ್ ಬ್ಲಾಕ್ ಆಗಿತ್ತು.

ಅಶೋಕನ ಹೆಂಗಸು ಮತ್ತು ನಾನು ಕಿಟಕಿಯ ಪಕ್ಕ ನಿಂತು ಹೊರಗೆ ನೋಡುತ್ತಾ ಇದ್ದಾಗ ಆಕಸ್ಮಿಕವಾಗಿ ನನ್ನಮ್ಮ ಮೇಲ್ಗಡೆ ನನ್ನತ್ತಲೇ ನೋಡಿಬಿಟ್ಟಳು. ಅವಳು ಚರಂಡಿ ಹಾಯುವುದಕ್ಕೆ ತಯಾರಾಗಿ, ಸೀರೆಯನ್ನು ಕೊಂಚ ಮೇಲೆತ್ತಿಕೊಂಡು ಅಲ್ಲಿನ ಒದ್ದೆಯಾದ ರಸ್ತೆ ದಾಟಲು ತಯಾರಿ ನಡೆಸಿದ್ದಾಗ ಇದ್ದಕ್ಕಿದ್ದ ಹಾಗೆ ಆಕಸ್ಮಿಕವಾಗಿ ಮುಖ ಮೇಲಕ್ಕೆತ್ತಿ, ನನಗೆ ಅವಳಲ್ಲಿರುವುದು ತಿಳಿಯುವ ಮೊದಲೇ ನನ್ನನ್ನು ನೋಡಿಬಿಟ್ಟಿದ್ದಳು. ಒಮ್ಮೆಗೇ ಆಘಾತವಾದವಳಂತೆ ಬಾಯಿಗೆ ಕೈಯಿಟ್ಟಳು ಮತ್ತು ತಕ್ಷಣವೇ ಎಚ್ಚೆತ್ತುಕೊಂಡವಳಂತೆ, ಆಂಟಿ ನನ್ನತ್ತ ನೋಡುವ ಮುನ್ನ ಅವಳ ರಟ್ಟೆಗೆ ಕೈಹಾಕಿ ಅವಳನ್ನೆಳೆದುಕೊಂಡೇ ಅಲ್ಲಿನ ಪಾದಚಾರಿಗಳ ನಡುವೆ ಹೇಗೋ ದಾರಿ ಮಾಡಿಕೊಂಡು ಮಾಯವಾದಳು. ಲೈಟ್ಸ್ ಬೆಳಗಿದವು, ಮೊದಲ ಮಳೆಗೆ ಅರಳಿದ ಭೂಮಿಯಿಂದೆದ್ದ ಹೊಸ ಮಣ್ಣಿನ ವಾಸನೆಯಂಥ ಪರಿಮಳ ಗಾಳಿಯಲ್ಲೆಲ್ಲ ಸೇರಿಕೊಂಡು ಅಲ್ಲಿನ ವಾತಾವರಣವೇ ಬದಲಾಯಿತು. ನಾನು ಮನೆಗೆ ಮರಳಿದ ಮೇಲೆ ಅವಳು ಈ ಬಗ್ಗೆ ಸೊಲ್ಲೆತ್ತಲಿಲ್ಲ. ಯಾರೇನಾದರೆ ನನಗೇನು ಎಂಬಂತಿದ್ದ ನನ್ನ ರೀತಿನೀತಿಯನ್ನು ಅವಳು ಚೆನ್ನಾಗಿಯೇ ಅರಿತಿದ್ದಳು. ಆದರೆ ಆ ಬಳಿಕ ಅವಳು ನಗುವುದನ್ನು ಪೂರ್ತಿಯಾಗಿ ನಿಲ್ಲಿಸಿಬಿಟ್ಟಳು. ಯಾವ ಜೋಕಿಗೂ ಅವಳು ಕ್ಯಾರೇ ಎನ್ನಲಿಲ್ಲ. ಹಾಗಾಗಿ ನಾನು ಹೆಚ್ಚು ಹೆಚ್ಚಾಗಿ ಅವಳಿಗೆ ಕೀಟಲೆ ಕೊಡುತ್ತಿದ್ದೆ. ರೈಲ್ವೇ ಸ್ಟೇಶನ್ನುಗಳಲ್ಲಿ ಹಾಕುವ ಸೂಚನಾ ಫಲಕಗಳ ಬಗ್ಗೆ, ಪ್ರಯಾಣಿಕರು, ಅವರು ಯಾವ ಕಡೆಗೇ ಹೋಗುವುದಿದ್ದರೂ ಚರ್ಮರೋಗದ ಮುಲಾಮು, ಝಿಂದಾ ತಿಲಿಸ್ಮಥ್ ಮುಂತಾದವನ್ನು ಬಳಸಬೇಕು ಎನ್ನುವ ಬೋರ್ಡಿನ ಬಗ್ಗೆ ಮಾತನಾಡುತ್ತಿದ್ದೆ. ನಾನವಳಿಗೆ ಹಣೆಯ ಮೇಲೆ ಭಾರೀ ನಾಮ ಗಂಧ ಎಲ್ಲ ಹಾಕಿಕೊಂಡಿದ್ದ ಒಬ್ಬ ಮನುಷ್ಯ ಅವನಿದ್ದ ಬೋಗಿಯ ಕಿಟಕಿ ಹೊರಗೆಯೇ ಮೌನವಾಗಿ ರೋದಿಸುತ್ತಾ ಇದ್ದ ಒಬ್ಬ ಹೆಂಗಸಿನ ವಿಷಯದಲ್ಲಿ ತನಗೇನೂ ಸಂಬಂಧ ಇಲ್ಲ ಎಂಬಂತಿದ್ದ ಬಗ್ಗೆಯೂ ಹೇಳಿದೆ. ಅದರ ಮೇಲೆ ನಾನು ಕೋತಾಹ್ನಿಂದ ಭುಸ್ವಾಲ್, ಇತಾರ್ಸಿ, ಕಸ್ಬೆ ಸುಕೆನೆ, ಜುಲ್ಖೇರ, ಜೈಸಲ್ಮೇರ್, ಬುರ್ದ್ವಾನ್ ಮತ್ತು ಚಿನ್ಚಪೊಖ್ಲಿಗೆಲ್ಲ ಹೋಗಿದ್ದೆ ಎಂದೂ ರೀಲು ಬಿಟ್ಟೆ. ಈ ತಖ್ತೆಯಲ್ಲಿ ತೋರಿಸಲಾದ ಪ್ರಯಾಣದರದಲ್ಲಿ ಯಾತ್ರೆ/ಕೊನೆಯ ನಿಲ್ದಾಣ/ಸೇತುವೆ/ನಗರಸಭೆಯ ತೆರಿಗೆಗಳು, ಅನ್ವಯಿಸಿದಲ್ಲಿ, ಅವೂ ಒಳಗೊಂಡಿವೆ. ಕಡಲಿನೆದುರು ಆವತ್ತು ಸಂಜೆ ನನ್ನಮ್ಮ ನನ್ನ ಅಪ್ಪನನ್ನು ಅವಾಸ್ತವಿಕಗೊಳಿಸಿದ ದಿನ, ನಾನು ರಾತ್ರಿಯಿಡೀ ಮಲಗಲೇ ಇಲ್ಲ.

ನನಗೇನೊ ಕಾಯಿಲೆಯಿದೆ ಮತ್ತದು ಎಂದಿಗೂ ನನ್ನನ್ನು ಬಿಟ್ಟು ಹೋಗುವುದಲ್ಲ ಎನಿಸಿಬಿಟ್ಟಿತು. ಯಾಕೋ ನಾನು ತೀರ ಹತಪ್ರಭನಂತೆ, ಯಾವುದೋ ಒಂದು ಗೌಪ್ಯವಾದ ವಚನಪಾಲನೆಯಲ್ಲಿ ಚ್ಯುತಿ ಮಾಡಿದಂಥ ಭಾವ ಕಾಡತೊಡಗಿ ಪಾಪಪ್ರಜ್ಞೆಯನ್ನೂ ಅನುಭವಿಸಿದೆ. ನನ್ನ ಪತನ ರಭಸವಾಗಿಯೇ ಆಳದಿಂದೆದ್ದು ಬಂತು. ನನ್ನ ತುಟಿಗಳು ಒಣಗಿದ್ದವು. ಬಾಯಿ ಮಾತ್ರ ತನಗೆ ಅತ್ಯಗತ್ಯವಾದ ಮತ್ತು ಏಕಕಾಲಕ್ಕೆ ತೀರ ಪರಕೀಯವೂ ಆದ ಅಪ್ಪ ಅಪ್ಪ ಎಂಬ ಶಬ್ದವನ್ನು ನಿರಂತರವಾಗಿ ಗುನುಗಲು ಪ್ರಯತ್ನಿಸುವಂತಿತ್ತು. ನಾನು ಸುಮ್ಮನೇ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದೆ. ಕಿವಿಗಳಲ್ಲಿ ಕಡಲು ಮೊರೆಯುತ್ತಲೇ ಇತ್ತು. ನನಗಾತ ಚೆನ್ನಾಗಿಯೇ ಗೊತ್ತು ಅನಿಸುತ್ತಿರುವಾಗಲೇ ನನ್ನ ಅಚ್ಚುಮೆಚ್ಚಿನ ಫೋಟೋದಲ್ಲಿನ ಅಪ್ಪನ ಚಿತ್ರ ಮಾತ್ರ ಇದ್ದಕ್ಕಿದ್ದ ಹಾಗೆ ನನ್ನ ಕಣ್ಣುಗಳಿಗೆ ಮಸುಕಾಗ ತೊಡಗಿತ್ತು.

ಮರುದಿನ ನನಗೆ ಮತ್ತೆ ಜ್ವರ ಬಂದಿತು. ತೀರ ಎಳವೆಯಲ್ಲೇ ನನಗೆ ಕಡಲಿನ ಜೊತೆ ಒಂದು ಸಂಬಂಧ ಏರ್ಪಟ್ಟಿತ್ತು ಮತ್ತು ಈಗ ನನಗೆ ನನ್ನಪ್ಪನನ್ನು ಕಡಲಿನಿಂದ ಬೇರ್ಪಡಿಸಿ ಮನಸ್ಸಿಗೆ ತಂದುಕೊಳ್ಳುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಕಣ್ಣು ಮುಚ್ಚಿದ ತಕ್ಷಣವೇ ನಾನು ಆ ಬೀಚಿನಲ್ಲಿರುತ್ತಿದ್ದೆ, ಅಪ್ಪನ ಬಗ್ಗೆ ಮಾತನಾಡುತ್ತಿದ್ದ, ಮಾತುಗಳ ನಡುನಡುವೆ ಅಲ್ಲಿನ ಗಾಳಿ ನುಸುಳಿಕೊಂಡಂತಿದ್ದ, ನನ್ನಮ್ಮನ ಧ್ವನಿಯನ್ನು ನನ್ನ ಜ್ವರ ನುಂಗಿದ ಕಡಲ ಮೊರೆತದಾಳದಲ್ಲಿಂದ ಕೇಳಿಸಿಕೊಳ್ಳುತ್ತಿರುವ ಅನುಭವವೇ ಆಗುತ್ತಿತ್ತು. ನನ್ನ ಇನ್ನೊಂದು ಖಾಸಗಿ ಪ್ರವಾಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ಸಂದರ್ಭದಲ್ಲಿ ಅಮ್ಮ ನನ್ನ ಕತ್ತಿನ ಬಳಿ ಯಾರೋ ಕಚ್ಚಿದ ಗುರುತು ಇರುವುದನ್ನು ಗಮನಿಸಿದಳು. ಅದುವರೆಗೂ ನನ್ನ ಗಮನಕ್ಕೇ ಅದು ಬಂದಿರಲಿಲ್ಲ. ನಾನು ಅದೇನೊ ತರಚಿದ್ದಿರಬೇಕು ಎಂದು ಮಾತು ಹಾರಿಸಿದರೂ, ಅದಕ್ಕವಳು ಏನೊಂದೂ ಹೇಳದಿದ್ದರೂ, ಅದೇನೆಂದು ಅವಳಿಗೆ ಚೆನ್ನಾಗಿಯೇ ಗೊತ್ತಿತ್ತು. ನನಗಿನ್ನೂ ನೆನಪಿದೆ, ವಯಲೂರಿನಿಂದ ನಾವು ಆವತ್ತು ನನ್ನಪ್ಪನ ಹಳ್ಳಿಗೆ ಹೋದೆವು. ಅಲ್ಲಿ ಅವನ ತಂದೆ ತಾಯಿ ಇನ್ನೂ ಬದುಕಿದ್ದರು.

ನಾನು ಯಾವತ್ತೂ ಅಲ್ಲಿಗೆ ಹೋಗಿದ್ದಿಲ್ಲ. ಊರಿನ ದೊಡ್ಡ ರಸ್ತೆ ಊರೊಳಗೆ ಹಾದು ಹೋಗುತ್ತ ಒಂದಿಷ್ಟು ದೇವಸ್ಥಾನಗಳತ್ತ ಮೊಗ ಮಾಡಿದೆ. ಈ ಊರಿಗೆ ಆಸುಪಾಸಿನಲ್ಲಿ ಸ್ವಲ್ಪ ಹೆಸರು ಇರೋದು ಕೂಡ ಈ ದೇವಸ್ಥಾನಗಳಿಂದಲೇ. ಏಳು ಗುಡಿಗಳು (ಕಾಲರಾ, ಸಿಡುಬು, ಪ್ಲೇಗ್ ಮತ್ತಿತರ ಸಾಂಕ್ರಾಮಿಕಗಳಿಗೆ ಸಂಬಂಧಪಟ್ಟ ಭೂತ-ದೈವಗಳದ್ದು ಹೊರತು ಪಡಿಸಿ), ಎರಡು ದೇವಾಲಯಗಳು, ಒಂದು ದೊಡ್ಡ ಕೆರೆ ಮತ್ತು ಐದು ಕಟ್ಟುನಿಟ್ಟಾಗಿ ವಿಂಗಡಿಸಲ್ಪಟ್ಟ, ಪೋಸ್ಟಾಫೀಸಿನಿಂದ ಬರುವ ಮನಿಯಾರ್ಡರ್ ಮೇಲೆಯೇ ಅವಲಂಬಿತರಾದ ಹೆಂಗಸರು, ಮಕ್ಕಳು ಮತ್ತು ವೃದ್ಧರು ಇರುವ ಓಣಿಗಳು. ಹಳ್ಳಿಯ ಈ ಭಾಗದ ಬಹುತೇಕ ಎಲ್ಲಾ ಬಾವಿಗಳೂ ನೀರಿಲ್ಲದೆ ಒಣಗಿದ್ದವು.

ಒಂದು ಸುದೀರ್ಘ ಬರದ ಕೊನೆ ಸಮೀಪಿಸಿದೆ ಎನ್ನುವಾಗ ನಾವು ಈ ಹಳ್ಳಿಗೆ ಬಂದಿದ್ದೆವು. ಹಳ್ಳಿಯ ನಟ್ಟನಡುವಿನ ಬತ್ತಿ ಒಣಗಿದ ಕೆರೆಯಲ್ಲಿ ಒಣಗಿದ ಕಸ ಕಡ್ಡಿಯನ್ನೆಲ್ಲ ಒಗ್ಗೂಡಿಸಿ ಕಿಚ್ಚು ಒಟ್ಟಿದ್ದರು. ಇದರಿಂದ ಹಾವು ಚೇಳುಗಳೆಲ್ಲ ಸತ್ತು, ಕೆರೆ ಚೊಕ್ಕವಾಗುವುದಲ್ಲದೆ ಆಸುಪಾಸಿನ ಭತ್ತದ ಹೊಲಗಳಿಗೆ ಮುಂದಿನ ಬಿತ್ತನೆಗೆ ಅಗತ್ಯವಾದ ಗೊಬ್ಬರವೂ ಸಿಕ್ಕಂತಾಗುತ್ತಿತ್ತು. ರಸ್ತೆಯಲ್ಲಿ ಮಳೆಗಾಗಿ ಪ್ರಾರ್ಥಿಸುವ ಮೆರವಣಿಗೆಗಳು ಕೂಡ ಕಂಡವು. ಆದರೆ ಅಲ್ಲೆಲ್ಲೂ ಮಳೆ ತರಿಸಬಲ್ಲ ನನ್ನಪ್ಪನ ಸುಳಿವೇ ಇರಲಿಲ್ಲ. ಕಡು ನೀಲಿ ಆಗಸದಲ್ಲಿ ಕೆಲವೇ ಕೆಲವು ಪೊಳ್ಳು ಭರವಸೆಗಳಂತಿದ್ದ ಬೆಳ್ಳಿಮೋಡಗಳನ್ನು ಬಿಟ್ಟರೆ ಮಳೆ ಬರುವ ಯಾವುದೇ ಕುರುಹು ಇರಲಿಲ್ಲ. ನಾವಲ್ಲಿ ಉಳಿದುಕೊಂಡಿದ್ದು ಎರಡೇ ಎರಡು ದಿನ. ಅಲ್ಲಿನ ದೇವಾಲಯಗಳ ಟ್ರಸ್ಟಿಗಳಿಂದ ತನಗೆ ಬೇಕಾದ ಮಾಹಿತಿಯನ್ನೆಲ್ಲ ಕಲೆಹಾಕಿಕೊಳ್ಳಲು ನನ್ನಮ್ಮನಿಗೆ ಅಷ್ಟು ಕಾಲಾವಕಾಶ ಸಾಕಷ್ಟಾಗಿತ್ತು.

ನನಗಂತೂ ಆ ಸಂಕ್ಷಿಪ್ತ ವಾಸ್ತವ್ಯ ಕೂಡ ಸಾಕಪ್ಪಾ ಎನಿಸಿಬಿಟ್ಟಿತು. ನಾನು ನಿತ್ರಾಣಗೊಂಡಿದ್ದರೂ ಸೊಳ್ಳೆಗಳಿಂದಾಗಿ ರಾತ್ರಿಯಿಡೀ ಮಲಗುವುದು ಸಾಧ್ಯವಾಗಿರಲಿಲ್ಲ. ನನ್ನ ಅಜ್ಜ ಅಜ್ಜಿ ಇಬ್ಬರೂ ನನ್ನ ಮೇಲೆ ಮಮತೆಯ ಮಳೆಯನ್ನೇ ಸುರಿದಿದ್ದರು. ಬಹುಶಃ ನನ್ನಪ್ಪನ ನಾಪತ್ತೆಗೆ ಅವರೇ ಹೊಣೆಯೆಂದು ನಾನು ತಿಳಿದಿದ್ದೇನೆ ಅಂದುಕೊಂಡರೋ ಏನೊ. ಆಗ ನನಗೆ ಅಷ್ಟೆಲ್ಲ ಹೊಳೆದಿರಲಿಲ್ಲ. ನಾನು ಅವರನ್ನು ಮತ್ತೆಂದೂ ಕಾಣುವುದಿಲ್ಲ ಎನ್ನುವುದೂ ನನಗೆ ಆಗ ತಿಳಿದಿರಲಿಲ್ಲ.

ವಿಶೇಷವಾಗಿ ನನ್ನಜ್ಜಿ ಅಪ್ಪನ ಬಗ್ಗೆ ಹೇಳುತ್ತ ಹೇಳುತ್ತ ಎಲ್ಲೆಲ್ಲೊ ಹೋಗಿಬಿಟ್ಟಳು. ಅವನು ಎಂಟು ವರ್ಷದವನಿದ್ದಾಗಲೇ ಮನೆ ಬಿಟ್ಟು ಓಡಿ ಹೋಗಿದ್ದನಂತೆ. ಮರುದಿನ ಎಲ್ಲೊ ಹುಣಸೇ ಮರದ ಮೇಲೆ ಹತ್ತಿ ಕುಳಿತಿದ್ದವನನ್ನು ಪತ್ತೆ ಮಾಡಿದ್ದರಂತೆ. ಅಜ್ಜಿ ಹೇಳುತ್ತ ಹೋದಳು. ಅವನ ಭಾಷೆ ತುಂಬ ಶುದ್ಧವೂ ಸುಂದರವೂ ಆಗಿತ್ತಂತೆ. ಅವನು ಮಾತನಾಡುವಾಗ ಅಲ್ಲಲ್ಲಿ ನಿಲ್ಲಿಸುತ್ತಿದ್ದನಂತೆ. ಅದನ್ನು ತಪ್ಪಾಗಿ ತಿಳಿಯುವಂತಿರಲಿಲ್ಲವಂತೆ. ಅವನ ಮೌನ ಕೂಡಾ ಒಬ್ಬ ಮನುಷ್ಯನ ಮಾತಿನಷ್ಟೇ ಮುಖ್ಯವಾಗಿತ್ತಂತೆ. ಬಿಸಿಲು ಕಿಟಕಿಯ ಮೇಲ್ಛಾವಣಿಯ ಸಂದಿಯಿಂದ ಓರೆಯಾಗಿ ನಾವು ಕುಳಿತಲ್ಲಿ ನಮ್ಮ ಮೇಲೆ ಬೀಳುತ್ತಾ ಇತ್ತು. ಮುಸ್ಸಂಜೆಯ ಬಂಗಾರದ ಬಣ್ಣದ ಸೂರ್ಯರಶ್ಮಿ ಒಮ್ಮೆಗೇ ಕೊಂಚ ಗಾಢವಾದಂತಾಗಿ ಕಿಟಕಿಯಿಂದ ಕಾಣುತ್ತಿದ್ದ ಆ ಹೊರಗಿನ ಸಾಮಾನ್ಯ ದೃಶ್ಯಕ್ಕೂ ಎಲ್ಲಿಲಲ್ಲದ ಮಾಯಕದ ಬೆಡಗು ಬಿನ್ನಾಣವೊಂದನ್ನು ತೊಡಿಸಿದಂತಾಯ್ತು. ಒಂದೇ ಒಂದು ಕ್ಷಣ, ಕತ್ತಲಾವರಿಸುವ ಕ್ಷಣಕಾಲ ಮುನ್ನ, ಆ ಇಡೀ ದೃಶ್ಯಕ್ಕೆ ನೀರಿನ ಒಂದು ತೆರೆ ಹೊದಿಸಿದಂತಾಗಿ ಎಲ್ಲವೂ ಕತ್ತಲಲ್ಲಿ ಮಾಯವಾಯಿತು.

ನನ್ನ ಅಜ್ಜಿಯ ನಿಶ್ಶಕ್ತ ಮಾತುಗಳ ಧ್ವನಿ ಕ್ರಮೇಣ ತೂಕಡಿಸಿದಂತೆ ಏಕತಾನತೆಗೆ ಶರಣಾಗುವ ಹೊತ್ತಲ್ಲೇ ಹಲ್ಲಿಗಳು ಒಂದಕ್ಕೊಂದು ಸಂದೇಶ ರವಾನಿಸತೊಡಗಿದ್ದವು. ಕಿಟಕಿಗಳ ಬಾಗಿಲುಗಳಿಗೆ ಹೊರಗಿನಿಂದ ಜೀರುಂಡೆಗಳು ಬಂದು ಬಡಿಯುವ ಸದ್ದೂ ಕೇಳುತ್ತಿತ್ತು. ಅವನಿಗೆ ಹದಿಮೂರು ವರ್ಷ ಪ್ರಾಯವಿದ್ದಾಗ ಅವನು ಮತ್ತೊಮ್ಮೆ ಮನೆಯಿಂದ ಓಡಿ ಹೋಗಿದ್ದನಂತೆ. ಅಂದರೆ ನಾನಿದನ್ನು ಕೇಳುತ್ತಿದ್ದಾಗ ನನಗಾಗಿದ್ದ ವಯಸ್ಸಿಗಿಂತಲೂ ಒಂದು ವರ್ಷ ಚಿಕ್ಕವನಿರುವಾಗ. ಕರಾವಳಿಯ ಗುಂಟ ಮುವ್ವತ್ತು ಮೈಲಿ ಕೆಳಗೆ ಯಾವುದೋ ಹಳ್ಳಿಯಲ್ಲಿ ಅಲೆಯುತ್ತಿದ್ದಾಗ, ಅದೂ ಒಂದು ತಿಂಗಳ ಬಳಿಕ, ಪತ್ತೆಯಾಗಿದ್ದನಂತೆ. ಒಣಗಿದ ಬಾಯೊಳಗಿನ ನಾಲಗೆ ಕೂಡ ಕಪ್ಪಾಗಿತ್ತಂತೆ. ಮಾತುಗಳು ತೊದಲುತ್ತಿದ್ದವಂತೆ, ಕಣ್ಣುಗಳು ನಿಶ್ಶಕ್ತಿಯಿಂದ ಬಳಲಿ ಕನಸಿನಲ್ಲಿರುವಂತೆ ಆಗಿದ್ದುವಂತೆ. ಆಗಲೂ ಅರ್ಥವಿಲ್ಲದ ಅವನ ಮಾತುಗಳಲ್ಲೂ ಒಂದು ಸ್ಪಷ್ಟ ಶಬ್ದ ಮತ್ತು ಅನುಕಂಪದ ತೊಳಲಾಟಗಳಿದ್ದವಂತೆ. ಹೀಗೆ ಅವನು ನಮ್ಮನ್ನು ತೊರೆದು ಹೋಗುವುದಕ್ಕೂ ಮೊದಲು ಎರಡು ಬಾರಿ ಮನೆಬಿಟ್ಟು ಹೋಗಿದ್ದ. ಆದರೆ, ನೀವು ಎಷ್ಟೇ ಜೋರಾಗಿ ಓಡಿದರೂ ನಿಮ್ಮ ಮನಸ್ಸಿನಿಂದ ನೀವು ತಪ್ಪಿಸಿಕೊಂಡು ಹೋಗುವುದು ಸಾಧ್ಯವೇ ಇಲ್ಲ. ಇಷ್ಟರ ಮೇಲೆ ನೀವು ಪ್ರಾಮಾಣಿಕರೂ ಆಗಿದ್ದರೆ, ಅವನಮ್ಮ ಹೇಳುತ್ತಾಳೆ ಅವನು ಆಗಿದ್ದ ಎಂದು, ನಿಮ್ಮ ಕತೆ ಮುಗಿದೇ ಹೋಯಿತು. ಓಡಿಹೋಗುವವರು ಸುಳ್ಳರಾಗಿದ್ದರೂ ಪರವಾಗಿಲ್ಲ, ಪ್ರಾಮಾಣಿಕರಾಗಿರಬಾರದು. ಪ್ರಯಾಣವನ್ನು ಅಷ್ಟೊಂದು ದ್ವೇಷಿಸುತ್ತಿದ್ದ ನನ್ನಪ್ಪನನ್ನು ಅವನ ಈ ಪ್ರಯಾಣ ಖಂಡಿತವಾಗಿ ಅವನು ಎಂದಿಗೂ ತಲುಪಲಾರದ ದೂರಕ್ಕೇ ಕರೆದೊಯ್ದಿರಬೇಕು. ಅವನ ಗೈರುಹಾಜರಿ ನಮ್ಮೆಲ್ಲರ ಬದುಕಿನ ಮೇಲೂ ದಟ್ಟವಾಗಿ ಚಾಚಿಕೊಂಡಂತಿತ್ತು.

ನಾವು ಹಳ್ಳಿ ಬಿಟ್ಟು ಹೊರಟಾಗ ಕೆರೆಯಲ್ಲಿ ಇನ್ನೂ ಅಲ್ಲಲ್ಲಿ ಹೊಗೆಯೇಳುತ್ತಲೇ ಇತ್ತು. ಸಾಮಾನ್ಯವಾಗಿ ಎಲ್ಲೆಡೆಯೂ ಮಳೆ ಬಂದೀತು ಎನ್ನುವ ನಿರೀಕ್ಷೆಯ ಮಾತೇ ಇತ್ತು. ನಮ್ಮ ರೈಲು ವೇಗ ಹೆಚ್ಚಿಸಿಕೊಳ್ಳುತ್ತಿದ್ದ ಹಾಗೇ ನಾನು ನಮ್ಮ ಬೋಗಿಯ ಕಿಟಕಿಯಿಂದ ನನ್ನ ತಲೆ ಹೊರಗೆ ಹಾಕಿ ನಾವು ಹಿಂದಕ್ಕೆ ಬಿಟ್ಟು ಹೋಗುತ್ತಲಿದ್ದ ಆ ಅರೆಸುಟ್ಟಂತಿದ್ದ ಹಳ್ಳಿಯತ್ತ ನೋಡಿದ್ದು ನನಗೆ ನೆನಪಿದೆ. ನೀವು ಎಂದೂ ಕಾಣಲು ಸಾಧ್ಯವಿಲ್ಲದಷ್ಟು ಕಪ್ಪನೆಯ ದಟ್ಟದಟ್ಟ ಮೋಡಗಳು ಕವಿಯುತ್ತಿದ್ದ ದೃಶ್ಯವಿತ್ತು ಅಲ್ಲಿ. ವರುಷಗಳ ನಂತರ ಹಳ್ಳಿಯ ಪೋಸ್ಟ್ಮಾಸ್ತರು ನಮಗೆ ಪತ್ರವೊಂದನ್ನು ಬರೆದು ನನ್ನ ಅಜ್ಜ ಅಜ್ಜಿ ಇಬ್ಬರೂ ಜೊತೆಜೊತೆಗೇ, ಕತೆಗಳಲ್ಲಿ ನಡೆಯುವ ಹಾಗೆ, ಮಲಗಿದ್ದಲ್ಲೇ ಶಾಂತಿಯಿಂದ ಮರಣ ಹೊಂದಿದ ಸುದ್ದಿಯನ್ನು ಬರೆದು ತಿಳಿಸುವ ಕೃಪೆ ತೋರಿಸಿದರು. ಇತ್ತೀಚೆಗೆ ನನ್ನ ಆಫೀಸಿನಲ್ಲಿ ನಮ್ಮ ಮ್ಯಾನೇಜರ್ ಮಾತನಾಡುತ್ತ ಅಶೋಕ್ ಮತ್ತು ನಾನು ಕಂಪೆನಿಯ ಬೆಸ್ಟ್ ರೆಪ್ಗಳಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲಿ ನಮ್ಮಿಬ್ಬರ ಸಂಬಳದ ಮೇಲಿನ ಕಮಿಶನ್ ಮೊತ್ತ ನಮ್ಮ ಬೇಸಿಕ್ ಪೇಗಿಂತ ಹೆಚ್ಚಾಗಲಿದೆ ಎನ್ನುವ ಸುದ್ದಿ ಕೊಟ್ಟರು. ನನಗೆ ಎಷ್ಟೊಂದು ಪ್ರವಾಸ ಹೋಗಬೇಕಾಗಿತ್ತೆಂದರೆ ನಾನು ಮನೆಯಲ್ಲಿರುವುದೇ ಕಡಿಮೆ ಎಂಬಂತಾಯಿತು. ಅಮ್ಮನೊಂದಿಗೆ ಮಾತನಾಡುವುದಕ್ಕೂ ಆಗುತ್ತಿರಲಿಲ್ಲ ಎನ್ನುವುದು ನಿಜವಾದರೂ ಅದೇನೂ ನಮಗೆ ಹೊಸದಾಗಿರಲಿಲ್ಲ. ಅವಳು ನಾನಿಲ್ಲದೇ ಇದ್ದಾಗ ನನಗಾಗಿ ಕಾಯುತ್ತಿದ್ದಳು ಮತ್ತು ನಾನಿರುವಾಗ ನನ್ನನ್ನು ಕಾಯುತ್ತಿದ್ದಳು. ನಾನೊಬ್ಬ ಪ್ರವಾಸೀ ಮಾರಾಟ ಪ್ರತಿನಿಧಿಯಾಗಿದ್ದೆ ಮತ್ತು ಮಾಡುವುದಕ್ಕೆ ಕೆಲಸ ಸಾಕಷ್ಟಿತ್ತು.

ಒಂದು ಭಾನುವಾರ ಅಪರಾಹ್ನ ಊಟವಾದ ಬಳಿಕ ಸಿಗರೇಟ್ ಸೇದುತ್ತ ಹಾಸಿಗೆಯ ಮೇಲೆ ಬಿದ್ದುಕೊಂಡೇ ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ. ಹೊರಗೆ ಕಾಣುತ್ತಿದ್ದ ಒಂದು ವೇರ್ಹೌಸಿನ ಗೋಡೆಯ ಮೇಲೆ ಒಂದಿಷ್ಟು ಜಾಗ, ಗೋಡೆಯ ಒಳಗೆಲ್ಲೋ ನೀರಿನ ಲೀಕೇಜ್ ಇದ್ದಿದ್ದರಿಂದ ಒದ್ದೆಯಾಗಿ ಅಲ್ಲಿ ಕಪ್ಪನೆಯ ಪಾಚಿಯ ಕಲೆ ದಟ್ಟವಾಗಿ ಮೂಡಿತ್ತು. ನಾನು ಅದನ್ನೇ ದಿಟ್ಟಿಸುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಅದು ಹಬ್ಬದ ದಿನ ಮುಂಜಾನೆ ತಲೆಸ್ನಾನ ಮಾಡಿ ಕೂದಲು ಒಣಗಿಸಲು ಹರವಿಕೊಂಡ ಹೆಣ್ಣಿನ ಮುಡಿಯಂತೆ ಕಾಣಿಸತೊಡಗಿತು. ರಸ್ತೆಯಾಚೆ, ವೇರ್ಹೌಸ್ ಗೋಡೆಯ ಗೇಟಿಗೂ ಆಚೆ ಮನೆಬಳಕೆಯ ಪೀಠೋಪಕರಣಗಳನ್ನೆಲ್ಲ ಪೇರಿಸಿ ಅದರ ಮೇಲೊಂದು ಸೈಕಲ್ ಸಹಿತ ಜೋಡಿಸಿದ್ದ ಒಂದು ಲಾರಿ ನಿಂತಿದ್ದು ಕಾಣಿಸುತ್ತಿತ್ತು. ಮನೆಯ ಸದಸ್ಯರು ಅಲ್ಲಿ ಸುತ್ತಲೂ ನಿಂತಿದ್ದರೆ ಕೆಲಸದವರು ಆಚೀಚೆ ದಡಬಡಿಸಿ ಓಡಾಡುತ್ತಿದ್ದರು. ಇದ್ದಕ್ಕಿದ್ದ ಹಾಗೆ ಶ್ರೀನಿವಾಸನ್ ಲಾರಿಯ ಹಿಂದುಗಡೆಯಿಂದ ಎದುರು ಬರುತ್ತಿರುವುದು ಕಾಣಿಸಿತು. ಅವನ ಕೈಯಲ್ಲಿ ಖಾಕಿ ಬಣ್ಣದ ಲಕೋಟೆಯೊಳಗಿದ್ದ ಒಂದು ಪಾರ್ಸೆಲ್ ಇತ್ತು. ನಾನು ತಿರುಗಿದಾಗ ಬಾಗಿಲಲ್ಲೆ ನಿಂತು, ಅವಳು ಯಾವಾಗಲೂ ಮಾಡುತ್ತಿದ್ದ ಹಾಗೆ ಕಣ್ಣುಗಳಲ್ಲೇ ನನ್ನನ್ನು ಆಪೋಶನ ತೆಗೆದುಕೊಳ್ಳುವವಳಂತೆ ನನ್ನನ್ನು ಗಮನಿಸುತ್ತಿದ್ದ ಅಮ್ಮನನ್ನು ಕಂಡೆ.

ಅದೊಂದು ಓಘದ ತಂತು ಇದ್ದಕ್ಕಿದ್ದಂತೆ ಕಡಿದು ಹೋದಂತೆ ಅವಳು ತಟ್ಟನೆ ಬೇರೆಡೆ ತಿರುಗುತ್ತ, ತೀರ ಮುಗ್ಧವಾಗಿ ಹೇಳಿದ್ದಳು, "ನೀನು ಎಲ್ಲ ನಿಮ್ಮಪ್ಪನ ಹಾಗೆ, ಥೇಟ್ ನಿಮ್ಮಪ್ಪನ ಹಾಗೇ." ತಕ್ಷಣವೇ ಏನೋ ಹೇಳಲಿದ್ದವನು ಪ್ರಯತ್ನಪೂರ್ವಕವಾಗಿ ತಡೆದುಕೊಂಡೆ, ಆ ಹೊತ್ತಿನಲ್ಲಿ ಏನು ಹೇಳಿದ್ದರೂ, ಒಂದು ಮುಗುಳ್ನಗೆ ಕೂಡಾ ಅವಳ ಅಳುವಿನ ಕಟ್ಟೆಯೊಡೆಯಲು ಸಾಕಾಗಿತ್ತು. ತುಕೈಥಾದ್, ಯಾವತ್ಮಾಲ್, ಪೊಲ್ಲಾಚಿ, ತೆನ್ಕಸಿ, ಪನ್ಸುಕಾರ, ಫಾಜಿಲ್ಕಾ ಮತ್ತು ಮಂಖುರ್ದ್. ಪ್ರಯಾಣಿಕರ ಅನುಕೂಲತೆಗಾಗಿ ರಾತ್ರಿಯ ಮೇಲ್, ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ಟ್ರೇನುಗಳ ಗಾರ್ಡುಗಳಿಗೆ, ಮುಂಚಿತವಾಗಿ ತಮ್ಮನ್ನು ಎಬ್ಬಿಸಿ ಎಂದು ಕೇಳಿಕೊಂಡಂಥ ಏರ್ಕಂಡೀಶನ್ ಮತ್ತು ಫಸ್ಟ್ಕ್ಲಾಸ್ ಬೋಗಿಗಳ ಪ್ರಯಾಣಿಕರನ್ನು ನಿದ್ದೆಯಿಂದ ಎಚ್ಚರಿಸುವಂತೆ ಸೂಚನೆ ಕೊಟ್ಟಿರುತ್ತಾರೆ. ಆದಾಗ್ಯೂ ಪ್ರಯಾಣಿಕರು ಎಚ್ಚರಗೊಳ್ಳದೇ ಇದ್ದಲ್ಲಿ ಅಥವಾ ತಾವು ಪ್ರಯಾಣಿಸಬೇಕಾದ ಸ್ಟೇಶನ್ನಿಗಿಂತ ಮುಂದಕ್ಕೆ ಪ್ರಯಾಣಿಸಿದಲ್ಲಿ ಪಾವತಿಸಬೇಕಾದ ದಂಡ ಮತ್ತು ಮೇಲ್ತೆರಿಗೆಯ ವಿಚಾರದಲ್ಲಿ ರೈಲ್ವೇ ಯಾವುದೇ ಜವಾಬ್ದಾರಿ ಹೊಂದಿರುವುದಿಲ್ಲ ಎನ್ನುವುದನ್ನು ತಿಳಿದಿರಬೇಕು.

ನಾನು ಮತ್ತೂ ಒಂದು ಅಫೀಶಿಯಲ್ ಟೂರಿನಲ್ಲಿದ್ದೆ. ರೈಲು ಇನ್ನೂ ಸ್ಟೇಶನ್ ಸಮೀಪಿಸುವುದಕ್ಕೂ ಮೊದಲೇ ಸಮುದ್ರದ ಮೇಲಿಂದ ಬೀಸುವ ಉಪ್ಪುಗಾಳಿಯಲ್ಲಿ ಸೇರಿಕೊಂಡೇ ಇರುವ ಪೆಟ್ರೋಲ್ ಮತ್ತು ಸಮುದ್ರಜೀವಿಗಳ ವಾಸನೆ ಮೂಗಿಗೆ ಬಡಿದಿತ್ತು. ದೂರ ಕ್ಷಿತಿಜದಲ್ಲಿ ಸಾಗರದ ಅಲೆಗಳು, ಉಪ್ಪು ಒಣಗಿಸುವ ಗದ್ದೆಗಳು, ಕಿನಾರೆಯ ಪಾಚಿಗಟ್ಟಿದ ನೆಲ ಎಲ್ಲ ಕಣ್ಣಿಗೆ ಬಿದ್ದುದ್ದು ನಂತರ. ರೈಲಿನಲ್ಲಿ ಪ್ರಯಾಣಿಸುವವರಿಗೆ ತೀರ ಸಾಮಾನ್ಯವಾದ ಕೆಲವು ಭ್ರಾಂತಿಗಳಿಂದ ನನ್ನಪ್ಪನೂ ನರಳಿರಬಹುದೇ ಎಂಬ ಯೋಚನೆಯೊಂದು ಮನಸ್ಸಿನಲ್ಲಿ ಸುಳಿದು ಹೋಯಿತು. ಅದೇ ಕಿಟಕಿಯಲ್ಲಿ ಇಡೀ ಜಗತ್ತು ಧಡಬಡಿಸಿ ಓಡುತ್ತಿರುವಾಗ ನನ್ನಪ್ಪ ಕಂಪಾರ್ಟ್ಮೆಂಟಿನ ಕಿಟಕಿಯೆದುರು ಕಲ್ಲಿನಂತೆ ನಿಂತೇ ಇರುತ್ತಾರೆ. ಆದರೆ ನನ್ನಪ್ಪನ ವಿಷಯದಲ್ಲಿ ಇದೇ ನಿಜವಾದ ವಾಸ್ತವ ಸಂಗತಿಯಾಗಿತ್ತು. ಅವನು ಅದಾಗಲೇ ತಾನೊಬ್ಬ ಸದಾ ಪ್ರಯಾಣಿಸುತ್ತಲೇ ಇರುವ ವ್ಯಕ್ತಿ ಎಂಬ ಭ್ರಾಂತಿಗೆ ಸಿಲುಕಿದ್ದ. ಇದೀಗ ಆ ಭ್ರಾಂತಿಯೊಳಗಿನ ಇನ್ನೊಂದು ಭ್ರಾಂತಿ ಬಡಿದಿರಬೇಕು ಅವನಿಗೆ. ಜಾಗ್ರತೆ! ಕಿಟಕಿ ತೆರೆಯಬೇಡ. ರೈಲು ಸಾಗುತ್ತಿರುವ ದಿಕ್ಕಿಗೆ ತಲೆ ಹೊರಗೆ ಹಾಕಿ ನೋಡಬೇಡ. ರೈಲ್ವೇ ಇಂಜಿನ್ನಿನ ಹೊಗೆ ಮತ್ತು ಬೂದಿ ಕಣ್ಣಿಗೆ ಹೋದೀತು. ಗಾಳಿಯಲ್ಲಿರುವ ಮಣ್ಣು, ಧೂಳಿನ ಬಗ್ಗೆಯಂತೂ ಹೇಳಬೇಕಾದ್ದೇ ಇಲ್ಲ.

ಇನ್ನೂ ಒಂದು ಹೊಸ ಜಾಗ. ಅರ್ಥವಾಗದ ವಿಚಿತ್ರ ಭಾಷೆಯನ್ನಾಡುವ ಜನ. ನಾನು ಲಗ್ಗೇಜ್ ಇರಿಸುವಲ್ಲಿ ನನ್ನ ಸೂಟ್ಕೇಸ್ ಒಪ್ಪಿಸಿ ನಗರದೊಳಗೆ ಕಾಲಿಟ್ಟೆ. ಆಗಸವೆಲ್ಲ ಧೂಳು, ಹೊಗೆಯಿಂದ ಮುಸುಕಿತ್ತು. ಕಪ್ಪನೆಯ ಇಬ್ಬನಿ ಸುರಿಯುತ್ತಿದೆಯೋ ಎಂಬಂತೆ ಕರಿಯ ಬಣ್ಣದ ಧೂಳು ಮೆಲ್ಲನೆ ಜನರ ಮೇಲೆ ಸುರಿಯುತ್ತಲೇ ಇತ್ತು. ಜನ ಮಾತ್ರ ತಲೆತಗ್ಗಿಸಿ ಮಾತಿಲ್ಲದೆ ಧಾವಂತದಿಂದ ಸಾಗುತ್ತಿದ್ದರು.

ಈ ಜಾಗವು ನನಗೆ ಪೂರ್ತಿಯಾಗಿ ಅಪರಿಚಿತವೂ, ಹೊಸದೂ ಆಗಿದ್ದರೂ ಆಳದಲ್ಲೆಲ್ಲೊ ಇದೆಲ್ಲ ತೀರ ಗೊತ್ತಿರುವ ಜಾಗವಲ್ಲವೇ ಎನ್ನುವ ಆಪ್ತ ಭಾವ. ಧೂಳಿನಿಂದ ತುಂಬಿದ ಗಾಳಿ ಒಮ್ಮೆಗೇ ಬಿರುಸಾಗಿ ಬೀಸತೊಡಗಿತು. ನನ್ನ ಮೂಗು ಉರಿಯತೊಡಗಿ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅಂಗಡಿ ಮುಂಗಟ್ಟುಗಳ ಹೊದಿಕೆ, ಅಂತರ್ರಾಜ್ಯ ಗಡಿಭಾಗದ ನಿಲ್ದಾಣದಲ್ಲಿ ನೆರೆದಿದ್ದ ಟ್ರಕ್ಕು,ಬಸ್ಸುಗಳ ಟರ್ಪಾಲುಗಳು ಪಟಪಟನೆ ಬಡಿದುಕೊಂಡು ಗಾಳಿಗೆ ಮೇಲೇರುವುದು, ಬಡಿಯುವುದು ಸುರುವಾಯಿತು. ಕೈಬೀಸಿ ಬಾ ಎಂದು ಕರೆಯುವಂತೆ ಮೇಲೇರಿ ಕೆಳಗಿಳಿದು ಮಾಡುತ್ತಿದ್ದ ಟರ್ಪಾಲುಗಳ ಓಲಾಟ ಹೇಗಿತ್ತೆಂದರೆ, ಅವು ನನ್ನ ಗುರುತು ಹಿಡಿದು ನನ್ನ ಕಳೆದು ಹೋದ ಬಾಲ್ಯದತ್ತಲೇ ಬಾ ಹೀಗೆ ಎನ್ನುತ್ತ ಕರೆಯುತ್ತಿವೆ ಎನಿಸಿತು. ನಾನು ನನ್ನ ರೌಂಡ್ಸ್ ಮುಗಿಸಿ, ಆರ್ಡರ್ಸ್ ಪಡೆದು, ಇಂಡೆಂಟ್ಗಳನ್ನು ಅಂಚೆಗೆ ಹಾಕಿ ನನ್ನ ಕೆಲಸ ಮುಗಿಸಿದೆ.

ಬೀದಿಯಲ್ಲಿ ಚಿಂದಿಯುಟ್ಟ ಮಕ್ಕಳು ಅದೇನೋ ಆಟ ಆಡುತ್ತಿದ್ದರು. ನನಗದು ಅರ್ಥವೇ ಆಗಲಿಲ್ಲ. ಚೆನ್ನಾಗಿ ಗೊತ್ತಿದೆ ಎನಿಸುವ ಸಂಗತಿಯೊಂದನ್ನು ಗುರುತಿಸಲು ಪಾಡುಪಡುವ ಒತ್ತಡ ಬೃಹದಾಕಾರವಾಗಿ ಬೆಳೆಯುತ್ತಿತ್ತು, ನಾನು ಮತ್ತೆ ಒಂದು ಮಗುವಂತೆ ಮೆತ್ತಗಾಗುವ ತನಕ. ಇನ್ನೊಬ್ಬನ ಮಾತು ತೊಟ್ಟ ಭಾಷೆಯ ದೇಹದ ಬಗ್ಗೆ ಎಳ್ಳಷ್ಟೂ ಗಮನಕೊಡದಿರುವಾಗಲೂ ಆತ ಹೇಳುತ್ತಿರುವುದರ ಭಾವ ದಕ್ಕಿಸಿಕೊಳ್ಳಬಲ್ಲ ಒಂದು ಕೇವಲ ಜೀವಿಯಾಗುವ ತನಕ. ಗೊಂದಲ ಮತ್ತು ನನ್ನನ್ನು ನಾನು ಎಲ್ಲೊ ಕಳೆದುಕೊಂಡಂಥ ಲುಪ್ತಭಾವದೊಂದಿಗೆ ನಾನು ತೆಪ್ಪಗೆ ರೈಲ್ವೇ ಸ್ಟೇಶನ್ನಿಗೆ ಬಂದು ರೆಸ್ಟ್ ರೂಮಿನಲ್ಲಿ ಮಲಗಿದೆ. ನಾನು ಕಣ್ತೆರೆದಾಗ ಕತ್ತಲಾವರಿಸಿತ್ತು.

ರಾತ್ರಿಯ ಆ ಹೊತ್ತಿನಲ್ಲಿ ಸ್ಟೇಶನ್ನಿನಲ್ಲಿ ಯಾರೊಬ್ಬರೂ ಇದ್ದಂತಿರಲಿಲ್ಲ. ಟೀ ಸ್ಟಾಲು ಕೂಡ ಮುಚ್ಚಿತ್ತು. ಎದುರಿನ ಪ್ಲ್ಯಾಟ್ಫಾರ್ಮ್ ಮೇಲೆ ಒಬ್ಬ ಪೋರ್ಟರ್ ಕೈಗಾಡಿಯ ಮೇಲೆ ಅಲ್ಲಾಡದೆ ಬಿದ್ದುಕೊಂಡಿದ್ದ. ಓವರ್ಬ್ರಿಜ್ಜಿನ ಬುಡದಲ್ಲಿ ಎರಡು ನಾಯಿ, ದನ ಮಲಗಿದ್ದವು. ಪ್ಲ್ಯಾಟ್ಫಾರ್ಮಿನ ತುತ್ತ ತುದಿಯಲ್ಲಿ ನಳ್ಳಿಯ ಪಕ್ಕ ಒಬ್ಬ ಮುದುಕ ಹೊಟ್ಟೆಯಲ್ಲಿದ್ದುದೆಲ್ಲಾ ಕಾರಿಕೊಳ್ಳುತ್ತಾ ಇದ್ದ. ಹೊರಗೆ ಕತ್ತಲಿನಲ್ಲಿ ಮೌನವಾಗಿ ನಿಂತಿದ್ದ ಕಟ್ಟಡಗಳು, ಹಳದಿ ಬೆಳಕು ಚೆಲ್ಲುವ ವಿವಿಧಾಕಾರದ ಲೈಟ್ಶೇಪುಗಳು ಕಾಣಿಸುತ್ತಿದ್ದವು. ಸುಮ್ಮನೇ ನಡೆಯತೊಡಗಿದೆ. ಶಟರ್ ಕೆಳಕ್ಕೆಳೆಯುವ ಮುನ್ನ ಒಂದು ರೆಸ್ಟೊರೆಂಟಿನಿಂದ ಒಂದು ನಾಯನ್ನು ಹೊರಕ್ಕೆ ಒದ್ದು ಎಸೆಯಲಾಯಿತು. ಒಣಗಿಹೋದ ಗಂಟಲಿನಲ್ಲೇ ಮಣಿಸರದ ತೆರೆಯನ್ನು ಸರಿಸಿ ನಾನು ಅವಳ ಪಾರ್ಟಿಶನ್ ಹೊಕ್ಕೆ, ಅವಳು ಮಲಗಿದ್ದಳು. ನನ್ನನ್ನು ನೋಡಿ ಅವಳು ಉರಿಯುತ್ತಿದ್ದ ಕಣ್ಣುಗಳನ್ನುಜ್ಜಿಕೊಳ್ಳುತ್ತಲೇ ಎದ್ದು ಕುಳಿತಳು. ಸುಸ್ತು ಹೊಡೆದು ಹೋದಂತಿದ್ದ ಅವಳ ತೊಡೆಗಳ ನಡುವೆ ನಾನು ನನ್ನ ಬಾಯಾರಿಕೆ ಹಿಂಗಿಸಿಕೊಳ್ಳದೆ ಸುಮ್ಮನೇ ಬಿದ್ದುಕೊಂಡೆ. ಕ್ವಿಲಾನ್, ಜೆರ್ಸಾಗುಡಾ, ನಾಸಿಕ್, ಪಠಾಣ್ಕೊಟ್, ಮೊಂಘ್ಯಾ, ರಾಕ್ಸುಲ್ ಮತ್ತು ಮಸ್ಜಿದ್. ಅಧಿಕೃತವಾಗಿ ಮತ್ತು ನಿಗದಿತ ಶುಲ್ಕ ಪಾವತಿಸಿದ ಹೊರತು ಪ್ರಯಾಣಿಕರ ವಸ್ತುಗಳು ಕಳೆದು ಹೋದಲ್ಲಿ, ಕೆಟ್ಟು ಹೋದಲ್ಲಿ ಅಥವಾ ಅವುಗಳಿಗೆ ಯಾವುದೇ ಹಾನಿಯುಂಟಾದಲ್ಲಿ ರೈಲ್ವೇಯು ಜವಾಬ್ದಾರವಾಗಿರುವುದಿಲ್ಲ. ನಿಗದಿತ ಶುಲ್ಕ ಪಾವತಿಸಿದ್ದಾಗ್ಯೂ ತಮ್ಮ ತಮ್ಮ ವಸ್ತುಗಳ ಬಗ್ಗೆ ಬೇಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಅಥವಾ ಅನಧಿಕೃತ ವ್ಯಕ್ತಿಗಳ ವಶಕ್ಕೊಪ್ಪಿಸಿದಲ್ಲಿ ಸಹ ರೈಲ್ವೇಯು ಯಾವುದೇ ರೀತಿಯಲ್ಲಿ ಜವಾಬ್ದಾರವಾಗಿರುವುದಿಲ್ಲ.

ಅಂತಹ ಪ್ರಯಾಣಿಕರು, ಪ್ರಥಮ ದರ್ಜೆ ಪ್ರಯಾಣಿಕರಾಗಿದ್ದಲ್ಲಿ, ತಾವು ಊಟ, ಕಾಫಿತಿಂಡಿ ಅಥವಾ ಶೌಚಕ್ಕೆ ತೆರಳುವಾಗ ತಮ್ಮ ಕಂಪಾರ್ಟ್ಮೆಂಟಿನಲ್ಲಿ ತಮ್ಮ ವಸ್ತುಗಳನ್ನು ಸೂಕ್ತ ಸೇವಕರ ಸುಪರ್ದಿಗೆ ಒಪ್ಪಿಸಿ ತೆರಳುವುದು ಉತ್ತಮ. ಆದರೆ, ಕಂಪಾರ್ಟ್ಮೆಂಟಿನಲ್ಲಿ ಬೇರೆ ಯಾವುದೇ ಪ್ರಯಾಣಿಕರು ಇರದೇ ಇದ್ದಲ್ಲಿ ಅಥವಾ ಬೇರೆ ಪ್ರಯಾಣಿಕರು ಕೂಡ ಇಂಥ ಸೇವಕರ ಸೇವೆಯನ್ನು ಪರ್ಯಾಯವಾಗಿ ಬಳಸುವುದಕ್ಕೆ ಒಪ್ಪಿಕೊಂಡಲ್ಲಿ ಮಾತ್ರ ಹೀಗೆ ಮಾಡಬಹುದಾಗಿದೆ. ರಾತ್ರಿಯ ಕೊನೆಯ ಜಾವದಲ್ಲಿ ಇನ್ನೇನು ಹಗಲಾಗುತ್ತಿದೆ ಎನ್ನುವಾಗ ನಾನು ವೇಶ್ಯಾಗೃಹದಿಂದ, ಅವಳ ನಿದ್ದೆಯನ್ನಾಗಲಿ ಕನಸನ್ನಾಗಲಿ ಹೊಕ್ಕು ನೋಡದೆ ಹೊರಬಿದ್ದೆ. ರೈಲ್ವೇ ಸ್ಟೇಶನ್ನಿನ ಮೇಲ್ಗಡೆಯಿದ್ದ ಆ ಅರೆಬರೆ ಬೆಳಕು ಮತ್ತು ಸೊಳ್ಳೆಕಾಟದಲ್ಲಿ ಅದೊಂದೂ ಸಾಧ್ಯವಾಗಿರಲಿಲ್ಲ.

ಸ್ಟೇಶನ್ನಿನ ಲ್ಯಾವೆಟ್ರಿಯಲ್ಲಿ ತನ್ನದೇ ವೈರುಗಳ ಪಂಜರದಲ್ಲಿ ಸಿಕ್ಕಿಕೊಂಡ ಒಂದು ಬಲ್ಬು ಮಂದವಾಗಿ ಉರಿಯುತ್ತಿತ್ತು. ಒಂದು ಹಳೆಯ ಕೊಳೆಯುತ್ತಿದ್ದ ಪೊರಕೆಯ ಕಡ್ಡಿಗಳು ಮಡ್ಡಿಗಟ್ಟಿದ ಯೂರಿನಲ್ಸಿನ ಕೆಳಗಿನ ನೀರು ಹರಿವ ತೋಡಿನಲ್ಲಿ ಸಿಕ್ಕಿಕೊಂಡೇ ಇದ್ದವು. ಯೂರಿನಲ್ಸ್ ಎದುರು ನಿಂತು ನಾನು ನನ್ನ ಅಜ್ಜಿಯ ಜೊತೆ ಚಿಕ್ಕಂದಿನಲ್ಲಿ ರೈಲು ಪ್ರಯಾಣ ಮಾಡಿದಾಗಿನ ನೆನಪುಗಳಿಗೆ ಸರಿದೆ. ಮಾನ್ಸೂನ್ ತಿಂಗಳಿನಲ್ಲಿ ಘಟ್ಟಪ್ರದೇಶದಲ್ಲಿ ಸಾಗುತ್ತಿದ್ದ ನೆನಪುಗಳವು. ಗುಡ್ಡಬೆಟ್ಟಗಳ ನಡುನಡುವೆ ಮಳೆ ನೀರಿಗೆ ಕೃತಕವಾಗಿ ಹುಟ್ಟಿಕೊಂಡ ಜಲಪಾತಗಳು ಕಂಡಾಗಲೆಲ್ಲ ಅಜ್ಜಿ ಹೇಳುತ್ತಿದ್ದಳು, ದೂರದಿಂದಷ್ಟೇ, ಹತ್ತಿರ ಹೋದರೆ ಬರೀ ಕೊಳಕು ನೀರು. ನಗುತ್ತಿದ್ದೆವು. ಕಗ್ಗಲ್ಲ ಸನಿಹದಿಂದ ಸಾಗುವಾಗ ಅವು ಕೂಡ ಒಂಥರಾ ಮಳೆನೀರಿನಲ್ಲಿ ಹುಲ್ಲು ತೊಳೆದಿಟ್ಟಂತೆ ವಾಸನೆ ಸೂಸುತ್ತಿದ್ದವು. ಉಳಿದಂತೆ ಹೆಚ್ಚಿನೆಲ್ಲಾ ಕಡೆ ನೀರಲ್ಲಿ ಅದ್ದಿದಂತಿದ್ದ, ತುಂಡು ತುಂಡಾದಂತೆ ಕಾಣುವ ಹಳ್ಳಿಯ ಹೊಲಗದ್ದೆಗಳು, ಸಿಹಿಯಾದ ಪರಿಮಳ ಬೀರುವ ಗಿಡಗಂಟಿಗಳು, ಗುಡ್ಡಬೆಟ್ಟಗಳಿಂದ ಹರಿದು ಬಂದ ನೀರಿನ ತೋಡುಗಳು ಸೀಳಿ ಹಾಕಿದ ಭೂಪ್ರದೇಶ, ಬೇರೆ ಬೇರೆ ವರ್ಣವಿನ್ಯಾಸದ ಹಸಿರು ಎಲ್ಲೆಲ್ಲೂ ಕಣ್ತುಂಬ ಕಾಣಿಸೋದು. ಉಲುಬೆರಿಯಾ, ತಿತಾಗಾರ್, ಅಲ್ವಾಯಿ, ಲಾಲ್ಗೋಲಾ, ಸೋದೆಪುರ್, ಡಾನ್ಕುನಿ......

No comments: