Monday, July 17, 2017

ಯಾ ದೇವೀ ಸರ್ವಭೂತೇಷು...

ಅಶೋಕ್ ಶ್ರೀನಿವಾಸನ್ ಅವರ ಇನ್ನೊಂದು ಕತೆ.
------------------------------

ಬಿಟಿಯಾ ಪ್ರೇತ. ಆಗಸದಲ್ಲಿ ಚಂದಿರನಿಲ್ಲದ ಒಂದು ಅಮಾವಾಸ್ಯೆಯ ರಾತ್ರಿ ಅವಳು ಹಾಡೊಂದು ಹಾಡುಗಾರನ್ನ ಅರಸಿಕೊಂಡು ಬಂದಂತೆ ಬನಾರಸ್ ನಗರವನ್ನು ಪ್ರವೇಶಿಸಿದಳು. ಬನಾರಸ್ಸಿನ ಒಂದೊಂದು ತುಣುಕೂ ಬಿಟಿಯಾಳಂಥ ಪ್ರೇತವನ್ನು ಹೀರಿಕೊಳ್ಳಲು ಕಾದು ಕೂತಂತಿತ್ತು. ಬೇಯುತ್ತಿದ್ದ ಅಡುಗೆ, ದೇಹಗಳು, ಕೊಳಚೆ, ಕೊಳೆತು ನಾರುತ್ತಿದ್ದ ವಾಸನೆ ಎಲ್ಲವೂ ಅವಳನ್ನು ಎಷ್ಟೊಂದು ಮೋಹ ಪರವಶಗೊಳಿಸಿ ಅಪ್ಪಿ ಆವರಿಸಿತೆಂದರೆ, ಸುಮ್ಮನೇ ಹಾದು ಹೋಗುವ ಯಾರನ್ನೇ ಆದರೂ ಸೆಳೆದಿಡುವ ಹಾಗೆಯೇ ಈ ಬಿಟಿಯಾಳನ್ನೂ ಸೆಳೆದು, ಅವಳು ತನ್ನದೇ ಒಂದು ಭಾಗವೋ ಎಂಬಂತೆ ತನ್ನೊಡಲಿಗೆ ತಗುಲಿ ಹಾಕಿಕೊಂಡು ಬಿಟ್ಟಿತು. ಯಾರಿಗೆ ಕಳೆದುಕೊಳ್ಳಲು ಇನ್ನೇನೂ ಉಳಿದಿಲ್ಲವೋ ಹಾಗೆ, ಯಾರು ಅಲ್ಲಿಗೆ ಏನನ್ನೋ ಹುಡುಕಲು ಹೋಗಿ ಇನ್ನೇನೋ ಸಿಕ್ಕಿ ಅದರಲ್ಲೇ ಕಳೆದು ಹೋಗುತ್ತಾರೋ ಹಾಗೆ, ಯಾರು ತಮ್ಮ ಕಡುಕೊನೆಯ ತನಕ ಅಲ್ಲಿಯೇ ನೆಲೆನಿಂತು ಬಿಡುವರೋ ಹಾಗೆ, ಯಾರು ತಮ್ಮ ಕಹಿಯಾದ ಭೂತಕಾಲವನ್ನೂ, ಇಲ್ಲಿಗೆ ಹೊರಟು ನಿಲ್ಲುವ ಹಾಗೆ ಮಾಡಿದ ಘಳಿಗೆಯನ್ನೂ ಪೂರ್ತಿಯಾಗಿ ಮರೆತೇ ಹೋಗುವರೋ ಹಾಗೆ...

ವೃತ್ತಿಯಿಂದ ಬಿಟಿಯಾ ಒಬ್ಬ ಫೋಟೋಗ್ರಾಫರ್. ನಕ್ಷತ್ರದಂಥ ಕಣ್ಣುಗಳೂ, ಮೊಣಕಾಲ ತನಕ ಇಳಿದ ಕಡುಕಪ್ಪು ತಲೆಗೂದಲೂ ಇತ್ತವಳಿಗೆ. ಅವಳ ನೇರಳೆ ಬಣ್ಣದ ಕಂಗಳು ನೋವಿನ ಕೊಳಗಳಂತೆ ನಿರಂತರ ಬದಲಾಗುವ ಆಳದೊಂದಿಗೆ ನೆಮ್ಮದಿಯ ಭರವಸೆಯನ್ನೀಯುವ ವಿಚಿತ್ರ ಹೊಳಹು ಹೊಂದಿದ್ದವು. ಅದು ಹೇಗೆಂದರೆ, ಈಗಿತ್ತು ಈಗಿಲ್ಲ ಎನ್ನುವಂತೆ ಕಂಡ ಮರುಕ್ಷಣ ಮರೆಯಾಗುತ್ತಿತ್ತು. ಹಾಗಾಗಿ ಅದನ್ನೇ ಅವಳ ಒಂದು ಮುಖಲಕ್ಷಣ ಎಂದು ಹೇಳಲು ಬರುವಂತಿರಲಿಲ್ಲ. ಅಲ್ಲಿ, ಆ ನಗರಗಳ ನಗರದಲ್ಲಿ ಅವಳನ್ನು ಮತ್ತೆ ಮತ್ತೆ ಹಳಿಯಲಾಯಿತು. ಅವಳ ತಲೆಯ ಮೇಲೆ ಸುರಿದ ಪ್ರತಿಯೊಂದು ನಿಂದಾಸ್ತುತಿಯೂ ಅವಳನ್ನು ಮತ್ತಷ್ಟು ಬೆಳಗಿಸಿತು, ಹೊಳೆಯಿಸಿತು. ಅವಳನ್ನು ಕೀಳುಗೈದಂತೆಲ್ಲ ಅವಳು ಮತ್ತಷ್ಟು ಯೌವನದಿಂದ ನಳನಳಿಸುತ್ತಿದ್ದಳು. ಅವಳನ್ನು ಕೆಡಿಸಬಂದವರೆಲ್ಲರೂ ಅವಳಿಂದ ಪೂರ್ಣಗೊಂಡರು, ಕೊಳೆ ತೊಳೆದು ಕಳೆದುಕೊಂಡರು.

ಬಿಟಿಯಾ ಸುತ್ತಲೂ ದೃಷ್ಟಿ ಹಾಯಿಸಿದಳು. ಏರುತಗ್ಗಿನ ಆ ನೆಲದ ಮೇಲೆಲ್ಲ ಸುಡುವ ಬೆಂಕಿಯ ಬೆರಣಿಯ ಮುಂದೆ ಮುಕುರಿಕೊಂಡ ಜನಸ್ತೋಮ. ಎಂದಿಗೂ ಮುಗಿಯದ ಆ ರಾತ್ರಿಯ ಎದುರು ಸಹನೆಯಿಂದ ಕಾದು ಕುಳಿತ ಮಂದಿಯ ಹೆಪ್ಪುಗಟ್ಟಿದ ನೆರಳು ಚಾಚಿತ್ತು. ನಾಫ್ತಾದ ಜ್ವಾಲೆಯಿಂದಾಗಿ ಕತ್ತಲು ಚಿತ್ರವಿಚಿತ್ರವಾಗಿ ಚಿಂದಿಗೊಂಡಂತಿತ್ತು. ಫಾಟ್ಗಳಲ್ಲಿ ಚಿತೆಗಳು ಉರಿಯುತ್ತಲೇ ಇದ್ದವು. ಅಲ್ಲಲ್ಲಿ ನಿಯಾನ್ ಬೆಳಕೂ ಚೆಲ್ಲಿತ್ತು. ಸಂಸ್ಕಾರಕ್ಕೆ ಕಾದ ಹೆಣಗಳ ರಾಶಿಯೂ ದೊಡ್ಡದಿತ್ತು. ಎಲ್ಲೆಲ್ಲೋ ಎಸೆದಂತೆ ಚದುರಿಬಿದ್ದ ಬೆಳಕಿನ ಅಂದಾಜು ಮಾಡಿದಳು ಬಿಟಿಯಾ. ಚಂದನಿಲ್ಲದೇ ಇದ್ದ ಆಗಸಕ್ಕೆ ದನಿಯಿಲ್ಲದಂತಾಗಿತ್ತು. ಅವಳು ಅಲ್ಲಿ ಕಣ್ಣುಮುಚ್ಚಿ ಕಲ್ಲಿನಂತೆ ನಿಂತೇ ಇದ್ದಳು. ಮಿಡಿಯುತ್ತಿದ್ದ ನಗರದ ನೋವೆಲ್ಲವೂ ನಂಜಿನಂತೆ ಅವಳ ನರನಾಡಿಯನ್ನೆಲ್ಲ ಹೊಕ್ಕು ಸಂಚರಿಸಿ ರಕ್ತಕ್ಕಿಳಿಯಿತು. ಬಿಟಿಯಾ ರೂಮು ಹಿಡಿದಳು. ಸುರುಳಿ ಸುತ್ತುವ ಮೆಟ್ಟಿಲುಗಳನ್ನು ಹತ್ತಿ ಟೆರೇಸಿಗೆ ಬಂದರೆ ಅವಳ ರೂಮು, ಅದರ ಬಾಲ್ಕನಿ ತೆರೆದುಕೊಳ್ಳುತ್ತಿತ್ತು. ಅಲ್ಲಿಂದ ಕುಂಬಾರರ ಕೇರಿ ಕಾಣುತ್ತಿತ್ತು. ಕೆಂಪು ಮಣ್ಣು ಮತ್ತು ಕೊಳಕು ಕೊಚ್ಚೆಯಾದ ಗಂಗೆಯ ಪವಿತ್ರ ನೀರು ಎರಡೂ ಸೇರಿ ಜಗದ ಅಷ್ಟು ಪವಿತ್ರವಲ್ಲದ ಇತರ ಮೂಲೆಮೂಲೆಗೂ ಯಾವ ಗಂಗೆಯ ಪಾವನ ತೀರ್ಥವನ್ನು ತುಂಬಿ ಕಳಿಸಲಾಗುವುದೋ ಅದಕ್ಕೆ ಬೇಕಾದ ಪುಟ್ಟಪುಟ್ಟ ಮಣ್ಣಿನ ಕುಡಿಕೆಗಳು ತಯಾರಾಗುತ್ತಿದ್ದವು.

ಸತ್ತವರನ್ನಿಟ್ಟುಕೊಂಡು ವ್ಯಾಪಾರ ಮಾಡಲು ಬಯಸುವುದಾದರೆ ಬನಾರಸ್ ಅದಕ್ಕೆ ಸರಿಯಾದ ಜಾಗ. ಮಂದಿ ಅಲ್ಲಿಗೆ ಬದುಕುವುದಕ್ಕೆ ಹೋಗುವುದಕ್ಕಿಂತ ಸಾಯುವುದಕ್ಕೆ ಹೋಗುವುದೇ ಹೆಚ್ಚು. ಜನನ ಮರಣಗಳ ನಿರಂತರ ಚಕ್ರದಿಂದ ಪಾರಾಗುವುದಕ್ಕೆ ಇಲ್ಲಿ ಸಾಯುವುದೊಂದೇ ಮಾರ್ಗ. ಒಂದೇ ದಿನದಲ್ಲಿ ಅದೆಷ್ಟೋ ಶವ ಸಂಸ್ಕಾರಗಳನ್ನು ನಡೆಸಿಕೊಡುವ ಶಾಸ್ತ್ರಿಯಂಥ ಬ್ರಾಹ್ಮಣರಿಗೆ ಇಲ್ಲಿ ಭಾರೀ ಡಿಮ್ಯಾಂಡ್ ಇದೆ. ಅಥವಾ ಹೆಣಗಳನ್ನು ಅಂತಿಮ ಸಂಸ್ಕಾರಕ್ಕೆ ಅಣಿಗೊಳಿಸುವ ಜರಾನಂಥ ಕೆಳಜಾತಿಯ ಚಾಂಡಾಲರಿಗೂ ಭಾರೀ ಬೇಡಿಕೆಯಿದೆ. ನಿಮ್ಮ ಮೇಲೆ ತನ್ನ ನೆರಳೇ ಹಾಸದ, ನೆಲದ ಮೇಲೆ ತನ್ನ ಹೆಜ್ಜೆ ಗುರುತೇ ಬಿಡದ ಬಿಟಿಯಾಳ ಜೊತೆಗಿನ ತಣ್ಣನೆಯ ಆಪ್ತಸಾನ್ನಿಧ್ಯದಲ್ಲಿ ತಮ್ಮ ಬದುಕು ಬದಲಿಸಿಕೊಂಡ ಅಸಂಖ್ಯಾತ ಮಂದಿಯಲ್ಲಿ ಎರಡು ಜೀವಗಳಿವು. ಅವಳು ಶಾಸ್ತ್ರಿಯನ್ನು ಮದುವೆಯಾದಳು. ತನ್ನ ರಾತ್ರಿಗಳನ್ನು ಆ ಮುಟ್ಟಲಾಗದವನೊಂದಿಗೆ ಕಳೆದಳು. ಮತ್ತು ಇತರ ಬಹಿಷ್ಕೃತರ, ತಿರಸ್ಕೃತರ, ಭರವಸೆ ಕಳೆದುಕೊಂಡವರ, ತಮ್ಮನ್ನೆ ತಾವು ಕಳೆದುಕೊಂಡವರ ಜೊತೆ ಅವಳು ಸದಾ ಒಂದಾಗಿ ನಿಂತಳು.

ಉಳಿದ ಪುರೋಹಿತರಂತೆ ಶಾಸ್ತ್ರಿ ಯಾವತ್ತೂ ಉಪವಾಸ, ಭೂತ ಬಿಡಿಸುವುದು, ಕೆಂಡ ಹಾಯುವುದು ಎಲ್ಲ ಮಾಡುತ್ತಿರಲಿಲ್ಲ. ಅವರು ಮೊತ್ತ ಮೊದಲಸಲ ಭೇಟಿಯಾದಾಗ ಬಿಟಿಯಾಳಲ್ಲಿ ಯಾವುದೋ ಒಂದು ಭಯಂಕರವಾದ ಮಿಂಚಿನ ಸೆಲೆಯೇ ಉಕ್ಕುತ್ತ ಇರುವುದನ್ನು ಕಂಡಿದ್ದ ಶಾಸ್ತ್ರಿ. ಆದರೆ ಅವನು ಅವಳ ಬಳಿ ಹೇಳಿದ ಮಾತು ಬೇರೆ. ನಿನ್ನ ಮೊಗದಲ್ಲಿ ಅದೇನೋ ನೋವು, ಅದೇನೋ ಭಾವತೀವ್ರತೆ ಎಂದ. ಮಬ್ಬು ಕವಿದ ಕತ್ತಲಲ್ಲಿ ಅಂದು ಕಿಟಕಿಯಿಂದ ಕಂಡ ಅವಳ ಮುಖದ ತೇಜಸ್ಸು ಮನಸ್ಸಲ್ಲಿ ಅಚ್ಚೊತ್ತಿನಿಂತ ಬಗೆಯನ್ನು ಅವನು ಎಂದಿಗೂ ಮೀರದಾದ. ಮತ್ತು ಅವಳಿಗದು ಗೊತ್ತಿತ್ತು ಕೂಡ. ಅವಳಿಗಿಂತ ವಯಸ್ಸಿನಲ್ಲಿ ಎಷ್ಟೋ ಹಿರಿಯನಾದ ಶಾಸ್ತ್ರಿ ಆ ಹೊತ್ತಿಗಾಗಲೇ ವಿಧುರನಾಗಿದ್ದ. ಹಾಗಿದ್ದೂ ಅವನ ಯಾವ ಶಿಕ್ಷಣವಾಗಲಿ, ಮನೋಧರ್ಮವಾಗಲಿ ಈ ಒಂದು ಮುಖಾಮುಖಿಗೆ ಅವನನ್ನು ಸಜ್ಜಾಗಿಸುವಲ್ಲಿ ಸಹಾಯಕ್ಕೆ ಬರಲಿಲ್ಲ. ಅದು ಚಳಿಗಾಲದ ಒಂದು ಭಾನುವಾರ ಮುಸ್ಸಂಜೆ.

ಅವನು ಆಗಷ್ಟೇ ಹೇಳಿದ ಅವನದೇ ಮಾತನ್ನು ಪುನರುಚ್ಚರಿಸುತ್ತ ಅವಳು ಕೇಳಿದ್ದಳು, ನಗುತ್ತಲೇ, "ಹಾಗೆ ನಾನು ಭಾನುವಾರದಷ್ಟೇ ದುಃಖಿಯಾಗಿ ಕಾಣುತ್ತೇನಾ." ಆ ಕಣ್ಣುಗಳ ಮೇಲೆ ಹರಡಿಕೊಂಡಿದ್ದ ನೆರಳು ಒಮ್ಮೆಗೇ ಸರಿದು ಮುಖದಲ್ಲಿ ಬೆಳಕು ಮಿನುಗಿತ್ತು. ಪೂರ್ತಿ ಕಳೆದು ಹೋದವನಂತಿದ್ದ ಅವನು ಅವಳ ಸೌಂದರ್ಯದ ಮಾಯಾಜಾಲದಲ್ಲಿ ಪರವಶನಾಗಿದ್ದ. ಅವನು ನಕ್ಕು ಕಿಟಕಿಯಿಂದ ಹೊರನೋಡತೊಡಗಿದ. ಹೊರಗೆ ಅವರಿಗೆ ಕಾಣುತ್ತಿದ್ದ ನೋಟದಲ್ಲಿ ಪ್ರೇಮವಾಗಲಿ ವಿಷಾದವಾಗಲಿ ಇದ್ದಂತಿರಲಿಲ್ಲ. ಆಗಷ್ಟೇ ಬೆಳಗಿದ ಬೀದಿ ದೀಪಗಳು ಆಗಸದಿಂದ ಮರೆಯಾಗುವ ಹವಣಿಕೆಯಲ್ಲಿದ್ದ ಬೆಳಕಿನ ಹೊಳಪಿನೊಂದಿಗೆ ಸೆಣಸಾಡುವಂತಿದ್ದವು. ಆದರೆ ಸುಳ್ಳೇ ಅವಳಾಡಿದ ಒಂದು ಮಾತು ಅವನನ್ನು ಕೆಡವಿತ್ತು. ಎಲ್ಲಿಂದ ಬಂತೋ ಅದು, ಹೇಳಿಬಿಟ್ಟಿದ್ದಳು, ತಾನು ಗರ್ಭವತೀ. ಗಾಳಿಯಲ್ಲಿ ಹಾಗೇ ನೇತು ಬಿದ್ದಂತಿದ್ದ ಆ ಮಾತು ಅಲ್ಲೇ ಉಳಿಯಿತು. ಅವರ ತನಕ ಸರಿದು ಬರಲಿಲ್ಲ, ಅಲ್ಲಿಂದೆದ್ದು ಹೊರಟು ಹೋಗಲಿಲ್ಲ. ಮತ್ತೆ ಮೌನ ಮುರಿದಿದ್ದು ಶಾಸ್ತ್ರಿಯೇ. ಅವಳು ಒಪ್ಪುವುದಾದರೆ ತಾನು ಅವಳನ್ನು ಮದುವೆಯಾಗುವೆನೆಂದ. ಅವಳು ಒಪ್ಪಿದಳು.

ಸ್ಟುಡಿಯೋ ಕಂ ಡಾರ್ಕ್ ರೂಮ್ ಆಗಿ ಅವಳು ಬಳಸುತ್ತಿದ್ದ ಮೇಲಿನ ರೂಮಿಗೆ ಅವಳು ತನ್ನ ವಯಸ್ಸಿನ ಅರ್ಧಕ್ಕಿಂತ ಕಮ್ಮಿ ಪ್ರಾಯದ ಜರಾನನ್ನು ಆಹ್ವಾನಿಸಿದಾಗ ಅವನು ಆಗಷ್ಟೇ ಹದಿಹರಯಕ್ಕೆ ವಿದಾಯ ಹೇಳುವವನಿದ್ದ. ಅದೊಂದು ಹದವಾಗಿ ಬೆಚ್ಚಗಿದ್ದ ಬೇಸಗೆಯ ರಾತ್ರಿ. ಮಣಿಕರ್ಣಿಕಾ ಘಾಟ್ನಲ್ಲಿ ಸುಡುತ್ತಿದ್ದ ದೇಹಗಳ ದೇಖರೇಕಿ ಮಾಡುತ್ತಿದ್ದ ಅವನು. ಕಟ್ಟಿಗೆ ರಾಶಿಯನ್ನು, ಗಂಗೆಯಲ್ಲಿ ವಿಸರ್ಜಿಸುವುದಕ್ಕಾಗಿ ತೆಗೆದಿರಿಸಿದ ಚಿತಾಭಸ್ಮವಿದ್ದ ಕುಡಿಕೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಿತ್ತು ಅವನು. ಹಾಗೆಯೇ ಶವಸಂಸ್ಕಾರದ ಫೋಟೋ ತೆಗೆಯದ ಹಾಗೆಯೂ ನೋಡಿಕೊಳ್ಳಬೇಕಿತ್ತು. ಸಂಸ್ಕಾರದ ವೀಡಿಯೋ ಫಿಲ್ಮ್ ಸೆರೆಹಿಡಿಯಲು ಕಾಯುವ, ಸದಾ ಕ್ಯಾಮರಾ ಸಿದ್ಧವಾಗಿಟ್ಟುಕೊಂಡು ಕಾಯುತ್ತಿದ್ದ ವಿದೇಶೀ ಪ್ರವಾಸಿಗರೂ ಸೇರಿದಂತೆ ಸಂದರ್ಶಕರು ಇದ್ದೇ ಇರುತ್ತಿದ್ದರು. ತಾನು ತೆಗೆದ ಫೋಟೋಗಳನ್ನು ಅವನಿಗೆ ತೋರಿಸಲು, ಅವನಿಗೆ ಫೋಟೋಗ್ರಫಿ ಹೇಳಿಕೊಡಲು ಮತ್ತು ಕಾಮದ ಅನೂಹ್ಯ ಜಗತ್ತಿಗೆ ಅವನನ್ನು ಸೆಳೆದೊಯ್ಯಲು ಬಿಟಿಯಾ ತಹತಹಿಸುತ್ತಿದ್ದಳು. ಆ ರಾತ್ರಿ ಎಲ್ಲೆಲ್ಲೂ ಪರಾಪರ ಕ್ರಿಯಾವಿಧಿಗಳ ವೈರುಧ್ಯಮಯ ಮಂತ್ರಪಠಣದ ಘಂಟಾಘೋಷ ತುಂಬಿತ್ತು. ಆದರೆ ಆ ಪಾವಿತ್ರ್ಯದ ಸಾಂಕ್ರಾಮಿಕ ಕ್ರಿಮಿಕೀಟಗಳೊಂದೂ ಸೋಕದಂತೆ, ನಿಷ್ಕಲ್ಮಶವಾದ ಭಾವಶುದ್ಧಿಯಿಂದ,ಕಟ್ಟಿಗೆಯ ರಾಶಿಯ ಹಿಂದಿನಿಂದ ಕಿವಿಯಲ್ಲಿ ಪಿಸುಗುಟ್ಟಿದಂತೆ ಬಂದ ಬಿಟಿಯಾಳ ಆಹ್ವಾನ ಜರಾನನ್ನು ಗಂಡಸಾಗುವ ಹಾದಿಯಲ್ಲಿ ಮುನ್ನಡೆಸಿತ್ತು.

ಬೀದಿ ದೀಪಗಳ ಮಂದ ಬೆಳಕು ಕೋಣೆಯಲ್ಲಿ ಹೌದೋ ಅಲ್ಲವೋ ಎಂಬಷ್ಟು ಪಸರಿಸಿತ್ತು. ಕೈಗೆಟಕುವ ಸಾಧ್ಯತೆ ಹೊಂದಿದ್ದ ಒಂದು ಕನಸಿನಂತೆ ಬಿಟಿಯಾ ಜರಾನ ದೇಹವನ್ನು ತಡಕಿದ್ದಳು. ಕಣಕಣದಲ್ಲೂ ಉಕ್ಕಿ ಹರಿಯುತ್ತಿದ್ದ ಅಮೂರ್ತವಾದೊಂದು ಉನ್ಮಾದದೊಂದಿಗೆ ಅವಳು ಅವನನ್ನು ಆವರಿಸಿದ್ದಳು. ನಂತರ ಅವಳು ಅವನಿಗೆ ತಾನು ಬನಾರಸ್ಸಿನಲ್ಲಿ ತೆಗೆದ ಫೋಟೋಗಳ ರಾಶಿಯನ್ನೇ ತೋರಿಸಿದಳು. ಹೆಚ್ಚಿನವು ಅಂತ್ಯಸಂಸ್ಕಾರದ ಚಿತ್ರಗಳೇ. ಬಹಳಷ್ಟು ಚಿತ್ರಗಳಲ್ಲಿ ತಾನಿದ್ದುದು ಅವನಿಗೆ ಮುದನೀಡಿತ್ತು. ಅರುಣೋದಯಕ್ಕೆ ಮುನ್ನ ಅವನು ತನ್ನ ಶವಗಳಿಗೆ ವಾಪಾಸಾದ. ಕಣ್ಣುಗಳಲ್ಲಿ ಬಿಟಿಯಾಳ ಚಿತ್ರ ಸಿಕ್ಕಿಹಾಕಿಕೊಂಡಿತು. ಅವಳ ನೀಳ ಕೇಶರಾಶಿಯ ಸುವಾಸನೆಯಲ್ಲಿ ಅವನು ಕರಗಿ ಹೋಗಿದ್ದ.

ಸಾಧ್ಯವಿದ್ದ ಮಟ್ಟಿಗೆ ಬಿಟಿಯಾ ಬಿಸಿಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದಳು. ಬೆಳಕು ಕಣ್ಣಿಗೆ ರಾಚಿದರೆ ತನಗೆ ತಲೆ ಸಿಡಿಯುತ್ತದೆ ಎನ್ನುತ್ತಿದ್ದಳು. ಅಲ್ಲಲ್ಲಿ ಚದುರಿದಂತೆ ಚೆಲ್ಲಿದ ಬಿಸಿಲ ಹಂದರದ ಕೆಳಗಿನ ಒಂದು ನೆರಳಿನ ತಾವಿಂದ ಇನ್ನೊಂದಕ್ಕೆ ಚಲನೆಯೇ ಕಾಣದ ತೆರದಲ್ಲಿ ನವಿರಾದ ನಡಿಗೆಯಲ್ಲೇ ಸರಿಯುತ್ತ ಮಿಂಚಿನಂತೆ ಸುಳಿಯುತ್ತಿದ್ದ ಬಿಟಿಯಾ ಎಲ್ಲಿಯೂ ತನ್ನ ನೆರಳು ಕೂಡ ಬೀಳಗೊಡುತ್ತಿರಲಿಲ್ಲ. ಹಗಲಲ್ಲಿ ಅವಳನ್ನು ಹಿಡಿಯುವುದೇ ಸಾಧ್ಯವಿರಲಿಲ್ಲ. ಅವಳು ಸದಾ ಇನ್ನೆಲ್ಲೋ ಇರುತ್ತಿದ್ದಳು. ಹಾಗಿದ್ದೂ ಜನ ಅವಳನ್ನು ತಮ್ಮವಳೆಂದು ಸ್ವೀಕರಿಸಿದ್ದರು. ಅವಳು ಎಲ್ಲೂ ಕಣ್ಣಿಗೆ ಬೀಳದಿದ್ದಾಗಲೂ ಅವಳನ್ನು ಎಲ್ಲೋ ಕಂಡೆವೆಂದು ಹೇಳುವವರು ಇದ್ದೇ ಇರುತ್ತಿದ್ದರು. ಮಡಿವಾಳರು ಬಟ್ಟೆ ಒಗೆಯುವ ಧೋಬೀಘಾಟ್ನಲ್ಲಿ ಕಂಡೆವೆನ್ನುವವರು, ದೀಪಕ್ಕೆ ಬತ್ತಿ ಹೊಸೆಯುತ್ತ ಗಣೇಶ ಮಂದಿರದ ಪ್ರಾಂಗಣದಲ್ಲಿದ್ದಳೆನ್ನುವರು, ನೀಲಮೇಘಶ್ಯಾಮನ ಭಜನೆ ಮಾಡುತ್ತ ಹೆಂಗಸರ ಗುಂಪಿನಲ್ಲಿದ್ದಳೆನ್ನುವರು. ಅವಳು ಶಾಸ್ತ್ರಿಯ ಮನೆಗೆ ಕಾಲಿಟ್ಟ ಮೇಲೆ ಮನೆಯಲ್ಲಿದ್ದ ಎಲ್ಲಾ ಕನ್ನಡಿಗಳು ಮಾಯವಾದವು. ಒಮ್ಮೆ, ಮಳೆ ನಿಂತು ಹೋದಮೇಲೆ ಮನೆಯಂಗಳದ ಹೂಗಿಡಗಳ ನಡುವೆ ಎಲ್ಲೋ ನಿಂತ ನೀರಲ್ಲಿ ಡಿಸೀಲ್ ಬಿದ್ದು ಉಂಟಾದ ಸಪ್ತವರ್ಣದ ಕಾಮನಬಿಲ್ಲು ತೋರಿಸಲೆಂದು ಶಾಸ್ತ್ರಿ ಇವಳನ್ನು ಕೂಗಿದ್ದ. ನೀರಿನಲ್ಲಿ ಅವನ ಮುಖದ ಪಕ್ಕ ಇವಳ ಮುಖವೂ ಪ್ರತಿಫಲಿಸಿದ ಕ್ಷಣವೇ ಬೆರಳು ಅದ್ದಿ ನೀರನ್ನು ಕಲಕಿದ್ದಳು ಅವಳು. ಮತ್ತೆ ನೀರಲ್ಲಿ ಚೂರಾದ ಬಿಂಬ ಒಂದಾಗಿ ಕೂಡಿ ಶಾಸ್ತ್ರಿಯ ಮುಖ ಮೂಡಿದಾಗಲೇ ಪಕ್ಕದಲ್ಲಿ ಇವಳಿಲ್ಲದಿರುವುದು ಅವನಿಗೆ ಗೊತ್ತಾಗಿದ್ದು. ಅವಳ ಮಟ್ಟಿಗೆ ಅದು ಕೇವಲ ಪ್ರತಿಫಲನದ ಕ್ರಿಯೆಯಷ್ಟೇ ಆಗಿತ್ತು. ಏಕೆಂದರೆ, ಶಾಸ್ತ್ರಿಗೆ ಆ ಹೊತ್ತಿಗಾಗಲೇ ಗೊತ್ತಾಗಿತ್ತು, ಅವಳೊಂದು ಪ್ರೇತವಾಗಿದ್ದಳು. ಅವನು ಪ್ರೀತಿಸಿದ ಪ್ರೇತ.

ಬಿಟಿಯಾಗೆ ಬನಾರಸ್ ಹುಚ್ಚು ಹಿಡಿಸಿತ್ತು. ಅವಳು ಜರಾಗೆ ಫೋಟೋಗ್ರಫಿಯ ಎಬಿಸಿಡಿ ಕಲಿಸಿಕೊಟ್ಟಳು, ಹೆಚ್ಚು ಮಾತುಗಳನ್ನು ವ್ಯಯಿಸದೆ. ಸಾಮಾನ್ಯವಾಗಿ ಅವಳು ಜರಾ ಬಳಿ ಮಾತೇ ಆಡುತ್ತಿರಲಿಲ್ಲ, ಮೌನವಾಗಿಯೇ ಇರುತ್ತಿದ್ದಳು. ಆದರೆ ಅದೇ ಶಾಸ್ತ್ರಿಯ ಜೊತೆಗಿದ್ದಾಗ ಕೊನೆಮೊದಲಿಲ್ಲದಂತೆ ಮಾತನಾಡುತ್ತಲೇ ಇರುತ್ತಿದ್ದಳು, ರಾತ್ರಿಯಿಡೀ. ಸದಾ ಬನಾರಸ್ ಕುರಿತೇ. ಶಾಸ್ತ್ರಿಗೆ ಅವಳಾಗಲೀ ಅವಳ ಮಾತುಗಳಾಗಲೀ ಯಾವತ್ತೂ ಪೂರ್ತಿಯಾಗಿ ದಕ್ಕುತ್ತಿರಲಿಲ್ಲ. ಶಾಸ್ತ್ರಿಗೆ ಚೆನ್ನಾಗಿಯೇ ಅರಿವಿತ್ತು, ತನಗೆ ಅವಳ ಚಿಕ್ಕದೊಂದು ಭಾಗವಷ್ಟೇ ಸಲ್ಲಬಹುದಾದ್ದು ಎಂಬ ಸತ್ಯ. ಈಗ, ಈ ಸದ್ಯದ ಕ್ಷಣದಲ್ಲೂ ಅವಳು ಪೂರ್ತಿಯಾಗಿ ಇಲ್ಲಿಲ್ಲ, ಇನ್ನೆಲ್ಲೋ ಇದ್ದಾಳೆ, ತನ್ನ ಮನುಷ್ಯ ಮಿತಿಯ ಎಟುಕಿಗೆ ಸಿಗಲಾರದಂತೆ ಅವಳು ಅವಳ ಹಲವು ಹತ್ತು ಜೀವರಾಶಿಗಳೊಂದಿಗೆ ಆಳವಾಗಿ ಬೇರೂರಿಕೊಂಡೇ ಇರುವವಳು ಎನ್ನುವ ಸತ್ಯ. ಗೊತ್ತಿದ್ದೂ ಅವನು ಅವಳನ್ನು ಆರಾಧಿಸುತ್ತಿದ್ದ.

ಒಮ್ಮೆ ಅವನು ಅವಳ ಬಳಿ ಕೇಳಿದ್ದ, "ಆದರೆ ಬನಾರಸ್ಸೇ ಯಾಕೆ? ಭಿಕ್ಷುಕರಿಂದ ತುಂಬಿ ತುಳುಕುವ ಈ ನಗರ! ಅದೇನು ನಿನ್ನನ್ನು ಇಷ್ಟೊಂದು ಕಚ್ಚಿ ಹಿಡಿದಿರೋದು ಇಲ್ಲಿ?"

"ಈ ನಗರ, ನನ್ನ ಹಾಗೇ, ಯಾವತ್ತೂ ನಿದ್ರಿಸಲಾರದು. ಬನಾರಸ್ಸಿನಲ್ಲಿ ನಾನೇನು ಕಾಣುತ್ತಿರುವೆನೊ ಅದು ನನ್ನ ಕಣ್ಣೆದುರೇ ನಡೆದ ವಿಕಾಸ. ಹಾಗಾಗಿ ಅದು ನನ್ನ ಹೆಚ್ಚೆಚ್ಚು ಮೆದುವಾಗಿಸಿದೆ. ಹಾಗಾಗಿ ಈ ಕರುಣೆಯ ಕಡಲಿನಂಥ ಸ್ಥಳವನ್ನು ನಾನು ಆರಾಧಿಸುತ್ತ ಬಂದಿದ್ದೇನೆ."

ಈ ಕೆಲವು ವರ್ಷಗಳಲ್ಲಿ ಜರಾ ಸ್ವತಃ ಬಿಟಿಯಾಳ ಎಷ್ಟೋ ಫೋಟೋಗಳನ್ನು ತೆಗೆದಿದ್ದಾನೆ. ಆದರೆ ಒಂದರಲ್ಲಾದರೂ ಅವಳು ಇಲ್ಲ. ನೆರಳು, ಛಾಯೆ, ಚೌಕಟ್ಟಿನಂಥ ರೇಖೆ......ಒಂದೂ ಇಲ್ಲ. ಸರಳವಾಗಿ ಏನೂ ಇರಲಿಲ್ಲ ಅಲ್ಲಿ ಅಷ್ಟೆ. ಫೋಟೋಗಳಲ್ಲಿ ಅವಳ ಗೈರುಹಾಜರಿ ಸಂಪೂರ್ಣ, ಪರಿಪೂರ್ಣ.

ಯಾವುದೇ ಒಂದು ನಿರ್ದಿಷ್ಟ ಕಾಲದಲ್ಲಿ ಬಿಟಿಯಾ ಯಾವುದಾದರೂ ಒಂದೇ ಸ್ಥಳದಲ್ಲಿ ಇದ್ದಳು ಎನ್ನುವಂತಿರಲಿಲ್ಲ. ಜರಾನೊಂದಿಗೆ ಪ್ರೇಮ ಮಾಡುತ್ತ ಇದ್ದಾಗಲೇ, ಅವಳು ಕುಷ್ಠರೋಗಿಗಳ ಕಾಲನಿಯಲ್ಲಿ, ಕೀವು ತುಂಬಿಕೊಂಡು ಬ್ಯಾಂಡೇಜಿನಲ್ಲಿ ಸುತ್ತಲ್ಪಟ್ಟ ಯಾರನ್ನೋ ತಬ್ಬಿ ಸಂತೈಸುತ್ತಲೂ ಇರುತ್ತಿದ್ದಳು. ಅದೇ ಹೊತ್ತಿಗೆ ಅವಳು ಶಾಸ್ತ್ರಿಯ ಬೆಡ್ರೂಮಿನಲ್ಲಿ ಅವನ ಹುಟ್ಟೂರಿನ ಬಗ್ಗೆ ಅವನಿಗೇ ವಿವರ ವಿವರವಾಗಿ ಹೇಳುತ್ತ ಕೂತಿರುತ್ತಿದ್ದಳು. "ಚಪ್ಪಲಿಯ ಬಾರು ಕಿತ್ತು ಹೋಗಿತ್ತಲ್ಲ. ಅದಕ್ಕೊಂದು ಕಟ್ಟು ಹಾಕಿಸುತ್ತಾ ನಿಂತಿದ್ದೆ." ಎನ್ನುತ್ತಿದ್ದಳವಳು. " ಆ ಮೋಚಿ ಯಾರೋ ವಿದೇಶೀ ಪ್ರವಾಸಿಗೆ ಈ ಬನಾರಸ್ಸಿನ ಆಳದ ಸೂಕ್ಷ್ಮಾತಿಸೂಕ್ಷ್ಮ ಸಂಕೀರ್ಣತೆಯನ್ನೆಲ್ಲ ವಿವರಿಸುತ್ತಿದ್ದ. ಬನಾರಸ್ ಎಂದರೆ ಬರೀ ಮಾಯೆ. ಮಾಯೆಯ ಹೊರತು ಇನ್ನೇನೂ ಇಲ್ಲ. ಇದೊಂದು ವಿಭ್ರಾಂತಿ. ಕೆಲವರು ಹೇಳುವ ಪ್ರಕಾರ ಇದು ಬರೀ ಹೊಗೆ, ಕನ್ನಡಿಗಳು ಮತ್ತು ಮೂಲ ತಿಳಿಯಲಾರದ ಬೆಳಕಿನ ನಗರ. ಇನ್ನೂ ಕೆಲವರ ಪ್ರಕಾರ ಇದು ನೆನಪುಗಳ, ಕನಸುಗಳ, ಭರವಸೆಗಳ ಮತ್ತು ಆತಂಕಗಳ ನಗರ. ಆದರೆ ಆ ಪ್ರವಾಸಿ ಇವನೇನು ಗಳಹುತ್ತಲೇ ಇದ್ದನೊ ಅದರತ್ತ ಕಿವಿಗೊಡಲೇ ಇಲ್ಲ. ಅವನು ಆ ಪವಿತ್ರ ಗಂಗೆಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಒಂದು ಸುಟ್ಟು ಕರಕಲಾದ ದೇಹದ ಮೇಲೆ ಕುಳಿತ ಪುಟ್ಟ ಹಕ್ಕಿ ನೀರಿನ ವೇಗಕ್ಕೆ ಅತಂತ್ರಗೊಂಡು ಬೀಳುವಂತಾಗಿದ್ದನ್ನೇ ಬೊಟ್ಟುಮಾಡಿ ತೋರಿಸುತ್ತ ಇದ್ದ....."

ಮತ್ತೆ ಕ್ಷಣಕೂಡ ನಿಲ್ಲಿಸದೆ ಮುಂದುವರಿಸುತ್ತಾಳೆ. "ಪೈಲ್ವಾನರ ಗಲ್ಲಿಗೂ ಮಡಿವಾಳರ ಕೇರಿಗೂ ನಡುವೆ ಒಂದು ಹೊಸದೇ ದೇವರ ಗುಡಿಯ ಪ್ರತಿಷ್ಠಾಪನೆ ನಡೀತ ಇತ್ತು..." ಹೀಗೆಯೇ ಸಾಗುತ್ತದೆ ಅದು, ಬನಾರಸ್ ಕುರಿತ ವರದಿ.

ಶಾಸ್ತ್ರಿಯ ಜೊತೆ ಅಡೆತಡೆಯಿಲ್ಲದ ಅವಳ ಈ ವಟವಟ ಸಾಗುತ್ತಿರುವಾಗಲೇ ಅವಳ ಆ ನೀಳಕೇಶರಾಶಿಯ ಮೃದುವಾದ ತುದಿಯಿಂದ ಜರಾಗೆ ಒಂದೆರಡು ಬಾರಿ ಜಾಡಿಸಿದ ಏಟೂ ಬೀಳುವುದಿತ್ತು. ಅದೇ ಹೊತ್ತಿಗೆ ಅವಳು ಕತ್ತಲು ಕವಿದ ಮೇಲಷ್ಟೇ ಜೀವಕಳೆ ತುಂಬಿಕೊಳ್ಳುವ ರೆಡ್ಲೈಟ್ ಗಲ್ಲಿಯ ಯಾವುದೋ ಸಂದಿಗೊಂದಿಯಲ್ಲೂ ಸುತ್ತಾಡುತ್ತ ಇರುತ್ತಿದ್ದಳು. ಯಾರಿಗೆ ತುರ್ತಾಗಿ ಅವಳ ಅಗತ್ಯ ಬಿದ್ದಿದೆಯೋ ಅವರೊಂದಿಗೆಲ್ಲ ಅವಳು ಏಕಕಾಲಕ್ಕೆ ತಪ್ಪದೇ ಇದ್ದೇ ಇರುತ್ತಿದ್ದಳು. ಒಂದು ರಾತ್ರಿ, ಭಾರೀ ಮಳೆ ಸುರಿದು ನಿಂತ ನಂತರ ನದಿಯ ಮೇಲಿಂದ ತಣ್ಣಗಿನ ಗಾಳಿಯೊಂದು ಬೀಸಿತು. ಆಗ ಗಂಧದ್ವಾರೇ ಧರಾದರ್ಶೇ ಎಂಬಂತೆ ಈ ಬನಾರಸ್ಸಿನ ಗುಣಲಕ್ಷಣವೇ ಆದ ಮೃಣ್ಮಯೀ ಸುವಾಸನೆ ಮತ್ತು ಕಾಮದ ಖಮ್ಮೆನ್ನುವ ಲಹರಿ ಅಲ್ಲೆಲ್ಲ ತುಂಬಿಕೊಂಡಿತು. ನಿತ್ರಾಣದಿಂದ ಕಾಲೆಳೆದುಕೊಂಡು ಬರುವ ನಿಶ್ಶಕ್ತಿ ತನ್ನನ್ನು ಆವರಿಸುವುದನ್ನು ತಪ್ಪಿಸಿಕೊಳ್ಳಲು ಬಯಸಿದ ಬಿಟಿಯಾಳ ಮೇಲೆ ಒಬ್ಬ ಕುಡುಕ ಎಗರಿದ. ಎಲ್ಲೋ ಕತ್ತಲಿನಿಂದ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾದ ಆತ ಅವಳ ರಟ್ಟೆಗೆ ಕೈ ಹಾಕಿ ಕೆಡವಿದ. ಒದ್ದೆಯಾಗಿ ವಾಸನೆ ಬರುವ ಗೋಣೀಚೀಲ ಹಾಸಿತ್ತು, ಎಲ್ಲೆಲ್ಲೂ ಉಗಿದ ಪಾನ್ನ ಘಾಟು ತುಂಬಿದ ಮೆಟ್ಟಿಲು, ಜೇಡರ ಬಲೆ ಧಾರಾಳವಾಗಿದ್ದ ಒಂದು ಕತ್ತಲ ಮೂಲೆಯದು. ಅವನು ಮಿತಿಮೀರಿ ಡ್ರಗ್ಸ್ ತೆಗೆದುಕೊಂಡಿದ್ದ. ಅವನು ತನ್ನದೇ ನಿಯಂತ್ರಣದಲ್ಲಿಲ್ಲದ ತೋಳುಗಳಲ್ಲಿ ಅವಳನ್ನು ಎಳೆದಾಡಿ ಎದ್ದೇಳಲು ಪ್ರಯತ್ನಿಸಿದರೆ ಕತ್ತು ಕತ್ತರಿಸಿ ಬಿಡುವುದಾಗಿ ಬೆದರಿಕೆ ಹಾಕಿದ. ಅವಳು ಅವನನ್ನು ಸಮಾಧಾನಿಸಿ ಅವನ ಕೈಲಿದ್ದ ರೇಜರ್ ಬ್ಲೇಡನ್ನು ಅತ್ತ ಎಸೆಯುವಂತೆ ಮಾಡಿದಳು. ದಾಹ ದಾಹ ಎನ್ನುವ ಶಬ್ದ, ಅದೊಂದು ಮಂತ್ರವೋ, ಪ್ರಾರ್ಥನೆಯೋ ಎಂಬಂತೆ ಬಡಬಡಿಸುತ್ತಲೇ ಇದ್ದ ಅವನು. ಅವಳು ಅವನನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅವನ ಅತಂತ್ರ ತುಟಿಗಳನ್ನು ಹೊಂದಿಸಿ ತನ್ನ ನಗ್ನ ಮೊಲೆಗಳಿಗೆ ಒತ್ತಿಕೊಂಡಳು. ಅವನ ಸಾವು ಸಮೀಪಿಸಿತ್ತು. ಅವಳು ಮೊಲೆಯೂಡಿಸುತ್ತಿದ್ದಳು. ಬಿಟಿಯಾ ಮಾತೃತ್ವದ ಕಳೆಹೊತ್ತು ತಿರುಚಿಕೊಂಡಿದ್ದ ಅವನ ದೇಹವನ್ನು ಮಗುವಿನಂತೆ ಸಂಭಾಳಿಸುತ್ತ ಕುಳಿತಿದ್ದಳು, ಅವನ ದೇಹ ತಣ್ಣಗಾಗಿ ಅದೆಷ್ಟೋ ಹೊತ್ತು ಕಳೆದಿದ್ದರೂ. ರಾತ್ರಿ ಕಳೆದು ಬೆಳಕು ಹರಿಯುವವರೆಗೂ ಅವಳು ಹಾಗೆ ಅವನೊಂದಿಗೇ ಉಳಿದಳು. ನಕ್ಷತ್ರಗಳು ತುಂಬಿದ್ದ ಚಳಿಗಾಲದ ಒಂದಿರುಳು ಬಾಲವೇಶ್ಯೆಯರ ಲಾಡ್ಜ್ ಕಡೆ ಅವಳು ಸಾಗುತ್ತಿದ್ದಾಗ ವನಸ್ಪತಿಗಳನ್ನು ಮಾರಿಕೊಂಡಿದ್ದ ಅರೆಹುಚ್ಚನಂತಿದ್ದ ಬೀದಿವ್ಯಾಪಾರಿಯೊಬ್ಬ ಅವಳನ್ನು ತಡಕಿದ. ಡ್ರೈನೇಜಿನ ಸೆಪ್ಟಿಕ್ ಟ್ಯಾಂಕ್ ಪಕ್ಕದಲ್ಲೇ ಇದ್ದ ಯಾರೂ ಬಳಸದ ಮೆಟ್ಟಿಲುಗಳ ದಾರಿಯಲ್ಲಿ ನಡೆ ಎಂದ. ಅವನು ಮಾನಸಿಕವಾಗಿ ಎಂಥಾ ಹಿಂಸೆಯನ್ನು ಅನುಭವಿಸಿದ್ದನೆಂದರೆ ಬಿಟಿಯಾ ಆದದ್ದಾಗಲಿ ಎಂದು ಮರುಮಾತನಾಡದೆ ಅವನು ತೋರಿಸಿದ ಹಾದಿಯಲ್ಲಿ ಹೆಜ್ಜೆ ಹಾಕಿದಳು. ಆ ಜಾಗದಲ್ಲೆಲ್ಲ ಅಸಾಧ್ಯ ನಾತ ತುಂಬಿತ್ತು. ಅವನು ಅವಳ ಮೇಲೆ ಬಲತ್ಕಾರದಿಂದಲೇ ಯಾವುದೋ ವಾಮಮಾರ್ಗದ ಆಚರಣೆ ನಡೆಸಲು ಹೆಣಗುತ್ತಿದ್ದ. ಕೈಯಲ್ಲಿದ್ದ ಪುಟ್ಟ ಚಾಪುಗೊಡಲಿಯಿಂದ ಅವಳ ತಲೆಕಡಿದು ಬಲಿ ನೀಡುವ ಸಿದ್ಧತೆಯಲ್ಲಿ ಇದ್ದಂತಿತ್ತು ಅವನು. ಆದರೆ ಇದ್ದಕ್ಕಿದ್ದ ಹಾಗೆ ಕೈಸೋತು, ಇವಳೇ ಎದ್ದು ಅವನನ್ನು ಕಾಪಾಡುವುದಕ್ಕೂ ಮೊದಲೇ ಸತ್ತ ಮರದ ಬಿಳಲನ್ನೆ ಉರುಳು ಹಾಕಿಕೊಂಡು ಸತ್ತಿದ್ದ.

ಯಾವ ರಾತ್ರಿಯ ಬದುಕು ಅವಳನ್ನು ಮುನ್ನಡೆಸಿತ್ತೋ ಅದೇ ಬದುಕನ್ನು ತಾನು ಮುನ್ನಡೆಸುತ್ತ ಬಂದವಳಿಗೆ ಅಪಾಯ ತಪ್ಪಿದ್ದಲ್ಲ ಎನ್ನುವುದು ಗೊತ್ತಿದ್ದ ವಿಷಯವೇ. ಯಾರನ್ನು ಅವರ ಕಷ್ಟಕಾಲದಲ್ಲಿ ಅವಳು ಪೊರೆದಿದ್ದಳೋ ಅದೇ ಮಂದಿ ಅವಳನ್ನು ಹೊಡೆಯುವುದು, ಅಮಲು ಪದಾರ್ಥ ತಿನ್ನಿಸುವುದು, ಅತ್ಯಾಚಾರ ನಡೆಸುವುದು, ಲೈಂಗಿಕ ಹಿಂಸೆ ಕೊಡುವುದು ಮಾಡಲು ಹೇಸುತ್ತಿರಲಿಲ್ಲ. ಆದರೆ ಈ ಯಾವ ಘಟನೆಗಳೂ ಅವಳ ಮೇಲೆ ಕಿಂಚಿತ್ತೂ ಕಲೆ, ಕಳಂಕ ಉಳಿಸಲಿಲ್ಲ. ಹೆಚ್ಚು ಹೆಚ್ಚು ಪೆಟ್ಟು ಬಿದ್ದಂತೆಲ್ಲ ಅವಳು ಹೆಚ್ಚು ಹೆಚ್ಚು ಕಳೆಕಳೆಯಾಗಿ ಕಾಣುತ್ತಿದ್ದಳು. ವರ್ಷಗಳು ಕಳೆದಂತೆಲ್ಲ ಅವಳು ಯೌವನದಿಂದ ಮೈತುಂಬಿಕೊಂಡು ನವಯುವತಿಯಂತೆ ನಳನಳಿಸುತ್ತಿದ್ದಳು. ದಿನದಿಂದ ದಿನಕ್ಕೆ ಅವಳು ಪುಟಕ್ಕಿಟ್ಟ ಚಿನ್ನದಂತೆ, ತೇಜಸ್ಸಿನಿಂದ ಕಂಗೊಳಿಸುವ ಸಂತನಂತೆ ಬೆಳಗುತ್ತ ಅವಳ ಸೌಂದರ್ಯ ಇಮ್ಮಡಿಸುತ್ತಲೇ ಹೋಯಿತು. ಪಿತೃಲೋಕದ ನಿಷ್ಠಾವಂತ ಅನುಯಾಯಿಗಳ ಅಗ್ರಹಾರದಲ್ಲಿ ಆಗಲೇ ಹೊಸ ಅವತಾರವೊಂದರ ಪುನರಾಗಮನಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ಗುಸುಗುಸು ಹಬ್ಬಿತ್ತು. ಕಾಲಾತೀತವಾದ ಆ ಮರಣ ಮತ್ತು ಮೋಹಗಳ ನಗರದ ಪೇಟೆ ಬೀದಿಗಳ ತುಂಬೆಲ್ಲ ತುಂಬಿದ ವದಂತಿಗಳ ಮತ್ತು ಜನಜಂಗುಳಿಯ ನಡುವಿಂದ ಬಿಟಿಯಾ, ಪ್ರೇತಾತ್ಮ, ಮೆಲ್ಲನೆ ಸರಿದು ಹೋಯಿತು.

ರಾತ್ರಿ ಇನ್ನೇನು ಮುಗಿಯಲಿತ್ತು. ಅದು ಯಾವತ್ತಿನಂಥದೇ ಇನ್ನೊಂದು ರಾತ್ರಿ. ಬಿಟಿಯಾ ತನ್ನ ಎಂದಿನ ಸುತ್ತಾಟ ಮುಗಿಸಿ ಯಾವತ್ತೂ ನಿದ್ದೆ ಹೋಗದ ನಗರದ ವಿಭಿನ್ನ ತಾಣಗಳಿಂದೆದ್ದು ಬಂದು ತನ್ನದೇ ಲಹರಿಯಲ್ಲಿ, ತನ್ನದೇ ಲೋಕದಲ್ಲಿ ಒಬ್ಬಳೇ ಮನೆಗೆ ಮರಳುತ್ತಾ ಇದ್ದಳು. ರಾತ್ರಿಯ ಕೊನೆಯ ಜಾವದ ಕತ್ತಲೆ ಕಳೆದು, ಅರುಣೋದಯದ ಮೊದಲ ಜಾವದ ಬೆಳಕು ಹರಿಯೆ ಹವಣಿಸುತ್ತಿದ್ದ ಕಾಲ. ಪೂರ್ವದ ಆಗಸದಲ್ಲಿ ಆಗಲೇ ಬೆಳ್ಳಿ ಮೂಡಿ ಅದರ ಪ್ರಥಮ ವಜ್ರಕಿರಣಗಳು ಭುವಿಯನ್ನು ತಲುಪಲು ಮುನ್ನುಗ್ಗುತ್ತಿದ್ದವು. ಅದೇ ಕ್ಷಣದಲ್ಲಿ ಬಿಟಿಯಾ ಬನಾರಸ್ ನಗರಕ್ಕೆ ಬೆನ್ನು ಹಾಕಿ ಶಾಶ್ವತವಾಗಿ, ಅದು ಹೇಗೆ ಬಂದಳೋ ಹಾಗೆಯೇ ಕಣ್ಮರೆಯಾಗಿ ಹೋದಳು. ಅವಳು ಬಿಟ್ಟು ಹೋದ ತೇಜೋಃಪುಂಜದ ಸುತ್ತ ಬಿಟಿಯಾ ದೇವಿಯ ಆರಾಧಕರು ಕಾಣಿಸಿಕೊಂಡರು. ಉಪಖಂಡದ ಮಾತೃಕೆಗಳಲ್ಲಿ ತೀರ ಈಚಿನವಳು ಕೊನೆಗೂ ಕಾಣಿಸಿಕೊಂಡಿದ್ದಳು.

No comments: