Saturday, July 29, 2017

ಜೋಗತಿ ಜೋಳಿಗೆ - ಆರು ಭಾಗದ ಲೇಖನದ ಎರಡನೆಯ ಬರಹ

ಜೋಗತಿ ಜೋಳಿಗೆ ಅನುಪಮಾ ಪ್ರಸಾದ್ ಅವರ ನಾಲ್ಕನೆಯ ಕಥಾಸಂಕಲನ. ಇದರಲ್ಲಿ ಒಟ್ಟು ಎಂಟು ಕತೆಗಳಿದ್ದು ಸಬಿತಾ ಬನ್ನಾಡಿಯವರ ಒಂದು ಮೌಲಿಕ ಮುನ್ನುಡಿ ಕೂಡ ಇದರಲ್ಲಿದೆ. ಜೋಗತಿ ಜೋಳಿಗೆ ಮತ್ತು ಇಸುಮುಳ್ಳು ಕತೆಗಳು ಪ್ರಧಾನವಾಗಿ ಸ್ತ್ರೀಯರ ಬದುಕಿನ ಕತ್ತು ಹಿಚುಕುವುದಕ್ಕೇ ಇರುವ ಲೈಂಗಿಕತೆ ಮತ್ತು ಪ್ಯೂರಿಟನ್ ಕಾನ್ಸೆಪ್ಟ್ (ಪಾವಿತ್ರ್ಯದ ಪರಿಕಲ್ಪನೆ)ಯನ್ನು ಪರಸ್ಪರ ಒಂದರಿಂದ ಇನ್ನೊಂದನ್ನು ಮುಕ್ತಗೊಳಿಸುವ ಜೀವನದೃಷ್ಟಿಯನ್ನೇ ಕೇಂದ್ರವಾಗಿರಿಸಿಕೊಂಡ ಕತೆಗಳಾದರೆ ಡೇಗೆ ಬಾಡಿಗೆ ತಾಯ್ತನವನ್ನು, ದಾರಿ, ಆನೆ ಬಂತೊಂದಾನೆ ಮತ್ತು ಸೂರು ಕತೆಗಳು ಪರಿಸರದ ಮೇಲೆ ಮನುಷ್ಯನ ಆಕ್ರಮಣವನ್ನು, ಆ ಜೀವದ ಅಪೂರ್ಣ ಸ್ವಗತಗಳು ಕತೆ ಮಂಗಳಮುಖಿಯರು ಎಂದು ನಾಮಕರಣಗೊಂಡ ಲೈಂಗಿಕ ಅಲ್ಪಸಂಖ್ಯಾತರನ್ನು ಕೇಂದ್ರವಾಗಿರಿಸಿಕೊಂಡ ಕತೆಗಳು. ಸೈತಾನನ ಬಲೆ ಕತೆ ಹಿಂದೂ-ಮುಸ್ಲಿಂ ಸಂಬಂಧದ ಮೇಲಿದೆ. ಕೇಂದ್ರ ಎಂದು ಸ್ಪಷ್ಟಪಡಿಸುವಷ್ಟು ನಿಚ್ಚಳವಾಗಿ ಇಲ್ಲಿನ ವಿವರಗಳು ಮತ್ತು ಕಥಾನಕದ ನಡೆ ಏಕಮುಖವಾಗಿ ಇಡಿಕ್ಕಿರಿದಿಲ್ಲ ಎಂಬುದು ಈ ಕತೆಗಳ ಹೆಚ್ಚುಗಾರಿಕೆಯಾದರೂ ನುರಿತ ಕತೆಗಾರ್ತಿಯಾಗಿರುವ ಅನುಪಮಾ ಅವರಿಗೆ ಈ ಬಗೆಯ ಶಿಲ್ಪ ಒದಗಿಸುವುದೇನೂ ವಿಶೇಷ ಶ್ರಮದ ಕೆಲಸವಲ್ಲ. ಎಲ್ಲ ವಿವರಗಳಾಚೆ, ಬದುಕಿನ ಸಂಕೀರ್ಣ ಚಿತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಹಜ ತುಡಿತದ ಚಾಚುವಿಕೆಗೂ ಹೊರತಾಗಿ (ವಿರುದ್ಧವಾಗಿ) ಇಲ್ಲಿನ ಇಸುಮುಳ್ಳು, ಸೈತಾನನ ಬಲೆ ಮತ್ತು ಜೋಗತಿ ಜೋಳಿಗೆ ಕತೆಗಳು ಪ್ರಧಾನ ಧಾರೆಯತ್ತಲೇ (ಕೇಂದ್ರದತ್ತಲೇ) ಮರಳುವುದು ಗಮನಾರ್ಹವಾಗಿದೆ. ಕಾದಂಬರಿಯೊಂದರ ಹರಹು ಮತ್ತು ಪೋಷಣೆ ಪಡೆಯುತ್ತ ಸಾಗುವಾಗಲೇ ಸಣ್ಣಕತೆಯಾಗಿ ಮೈತಳೆಯುವ ಧೋರಣೆಯನ್ನೇ ಮೆರೆಯುವ ಈ ಕತೆಗಳ ವಿಚಾರದಲ್ಲಿ ಇದನ್ನು ಒಂದು ಮಿತಿಯಾಗಿ ಕಾಣಬೇಕೆ ವೈಶಿಷ್ಟ್ಯವಾಗಿ ಕಾಣಬೇಕೆ ಎಂಬ ಪ್ರಶ್ನೆಯಿದೆ. ಇಸುಮುಳ್ಳು ಕತೆ ಬಹುಶಃ ಈ ಅಂಶವನ್ನು ಸ್ಪಷ್ಟವಾಗಿ ಕಾಣಿಸುವ, ಹೊಸ ನಿರೀಕ್ಷೆಗಳನ್ನು ಓದುಗನಲ್ಲಿ ಹುಟ್ಟಿಸಿಯೂ, ಹಾಗೆ ಹುಟ್ಟಿಸಿದುದರಿಂದಲೇ ನಿರಾಸೆಗೆ ಕಾರಣವಾಗುವ ಕತೆಯಾಗಿ ನಿಲ್ಲುವುದರಿಂದ ಅದನ್ನೇ ಈ ಮಾತನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕಾಗಿ ಚರ್ಚೆಗೆ ಎತ್ತಿಕೊಳ್ಳಬಹುದಾಗಿದೆ. ಆದರೆ ನನ್ನ ಮಾತುಗಳು ಸಮಾನವಾಗಿ ಇಸುಮುಳ್ಳು, ಜೋಗತಿ ಜೋಳಿಗೆ ಮತ್ತು ಸೈತಾನನ ಬಲೆ ಕತೆಗಳಿಗೆ ಅನ್ವಯಿಸುತ್ತವೆ ಮತ್ತು ಹಾಗೆ ಒಂದು ಸಂಕಲನದ ಮೂರು ಮುಖ್ಯ ಕತೆಗಳಿಗೆ ಅನ್ವಯಿಸುವುದರಿಂದಾಗಿಯೇ ಮಹತ್ವದ ಪ್ರಶ್ನೆಯಾಗುತ್ತದೆ ಎಂಬುದು ಮುಖ್ಯ.

ಕತೆಗೆ ಇರುವಂತೆ ಕಾಣುವ ಹಲವು ಆಯಾಮಗಳಲ್ಲಿ ಒಂದು ಪಾಂಡು, ಮಾದ್ರಿ ಮತ್ತು ಕುಂತಿ ಸಂಬಂಧದ್ದು.

ಎರಡನೆಯದು ತುಕ್ರನದ್ದು. ಈತ ಶಂಕರಯ್ಯನ ಒಕ್ಕಲಾಗಿದ್ದವ ಪ್ರಸ್ತುತ ಸ್ವತಂತ್ರನಾಗಿದ್ದರೂ ಅವರ ಮನೆಯ, ತೋಟದ ಕೆಲಸಕ್ಕೆ ಒದಗುವ ವ್ಯಕ್ತಿಯಾಗಿಯೇ ಉಳಿಯುವ ಸ್ವಾಮಿನಿಷ್ಠೆ ಮೆರೆಯುತ್ತಾನಾದರೂ ಶಂಕರಯ್ಯ ಮತ್ತು ಅವರ ಪತ್ನಿ ಸುಭದ್ರಮ್ಮನ ನಡುವೆ ಆತನ ನಿಷ್ಠೆ ಹೆಚ್ಚು ಗಟ್ಟಿಯಾಗಿರುವುದು ಸುಭದ್ರಮ್ಮನ ಕಡೆಗೇ ಎನ್ನುವುದಷ್ಟೇ ಈ ಆಯಾಮ ತೆರೆದು ತೋರುವ ಅಂಶ. ಅದರಾಚೆ ಈ ಪಾತ್ರಕ್ಕಾಗಲಿ ಆಯಾಮಕ್ಕಾಗಲಿ ಹೆಚ್ಚಿನ ಮಹತ್ವವಿಲ್ಲ.

ಮೂರನೆಯದು ಭಾಗ್ಯಲಕ್ಷ್ಮಿ ಎಂಬ ದನ ಮತ್ತು ಶೆಟ್ಟರ ಹೋರಿ, ಗಿಡ್ಡನ ಸಂಬಂಧದ ಬಗ್ಗೆ ಶಂಕರಯ್ಯನವರಿಗಿರುವ ಅಸಹನೆ ಮತ್ತು ಸುಭದ್ರಮ್ಮನಿಗಿರುವ ಸಹಜ ನಿಲುವು. ಇದಕ್ಕೂ ಮೇಲೆ ಹೇಳಿದ ಪಾಂಡು ಪ್ರಕರಣಕ್ಕೂ ಒಂದು ಎಳೆಯ ಸಂಬಂಧ ಇದೆ.

ನಾಲ್ಕನೆಯದು ಶಂಕರಯ್ಯ ಮತ್ತು ಸುಭದ್ರಮ್ಮನ ಸಂಬಂಧ. ಮಾತಿನ ಹಕ್ಕು, ಅಧಿಕಾರ ಯಾವುದೂ ಇಲ್ಲದ, ಶಂಕರಯ್ಯನ ಅಹಂಮಿಕೆಗೆ ಹಿನ್ನೆಲೆ ಒದಗಿಸುತ್ತ, ಅವರ ಸಿಟ್ಟು, ಆಕ್ರೋಶಗಳಿಗೆ ಮೂಕಪ್ರಾಣಿಯಂತೆಯೇ ಬಲಿಯಾಗುತ್ತ ಇರಬೇಕಾದ ಒಂದು ಪಾತ್ರವಾಗಷ್ಟೇ ಎಂಬುದು ಪುರುಷವರ್ಗದ ನಿಲುವಾದರೆ ಅದನ್ನು ಕೈಲಾದ ಮಟ್ಟಿಗೆ ಮೀರುತ್ತಲೇ ಗಟ್ಟಿಯಾಗಿ ನಿಲ್ಲುವ ಸ್ತ್ರೀಮತದ ಪ್ರತಿನಿಧಿ ಸುಭದ್ರಮ್ಮ ಎಂಬುದು ಸ್ಪಷ್ಟವಾಗಿ ಕಾಣುವ ಒಂದು ಆಯಾಮವಿದು. ಇದನ್ನು ಅತ್ಯಂತ ಜೀವಂತಿಕೆಯೊಂದಿಗೆ, ಆಡಂಬರ, ನಾಟಕೀಯತೆ ಯಾವುದೂ ಕಾಣದಂತೆ ನವಿರಾಗಿ ಚಿತ್ರಿಸಿರುವುದು ನಿಶ್ಚಯವಾಗಿಯೂ ಅನುಪಮಾ ಪ್ರಸಾದ್ ಅವರ ಕಲೆಗಾರಿಕೆಯ ನೈಪುಣ್ಯವನ್ನೂ ಕೌಶಲವನ್ನೂ ಕಾಣಿಸುವ ಅಂಶ. ಇದೇ ಮಾತನ್ನು ಅವರು ಇಲ್ಲಿ ಚಿತ್ರಿಸುವ ಇಂದಿರೆ, ರಾಜೀವ, ವಿಷ್ಣು, ಲಲಿತೆ, ಶಂಕರಿ, ವೈಜಯಂತಿ ಮುಂತಾದ ಪಾತ್ರಗಳ ವಿಚಾರದಲ್ಲಿಯೂ ಹೇಳಬಹುದಾದರೂ ಅಲ್ಲೆಲ್ಲ ಸ್ಪಷ್ಟವಾಗಿಯೇ ಒಂದು ವಿಧವಾದ ಯೋಜಿತ ಹೆಣಿಗೆ ಇದ್ದೇ ಇದೆ. ಆದರೆ ಅದು ಈ ಶಂಕರಯ್ಯ-ಸುಭದ್ರಮ್ಮ ಪಾತ್ರಗಳ ಚಿತ್ರಣದಲ್ಲಿ ಗೈರಾಗಿದೆ. ಹೇಳಬೇಕೆಂದರೆ ಶಂಕರಯ್ಯನ ಕ್ರೌರ್ಯವೇ ಒಂದು ಆಯಾಮವಾಗಬಹುದಾಗಿತ್ತು. ಆತ ಸುಭದ್ರಮ್ಮನ ಮೇಲೆ ಚಾಯ ಮಾಡಿ ತರಲಿಲ್ಲ ಎಂಬ ಕಾರಣಕ್ಕೆ ನಡೆಸುವ ಹಲ್ಲೆ ಸಣ್ಣಸಂಗತಿಯೇನಲ್ಲ. ಅದು ವರ್ಷಾನುಗಟ್ಟಲೆ ನಡೆದು ಬಂದ, ಸುಭದ್ರಮ್ಮನ ದೈನಂದಿನವೇ ಆಗಿಬಿಟ್ಟಂತಿರುವ ಒಂದು ಹಿಂಸೆ, ದಬ್ಬಾಳಿಕೆ. ಆದರೆ ಅದು ಸಣ್ಣಸಂಗತಿಯಾಗಿ ಬಿಟ್ಟಂತಿದೆ. ಬದಲಿಗೆ ಮೂಕಪ್ರಾಣಿಗಳ ಮೇಲೆ ನಡೆಸಿದ ಹಲ್ಲೆ ವಿಶೇಷ ಮಹತ್ವ ಪಡೆಯುತ್ತದೆ, ಕತೆಯ ಕೇಂದ್ರ ಆಯಾಮದ ಕಾರಣಕ್ಕೆ. ಅದು ಶಂಕರಯ್ಯನಲ್ಲಿ ಸುಪ್ತವಾಗಿದ್ದ ಕ್ರೌರ್ಯದ ಪರಾಕಾಷ್ಠೆಯನ್ನು ಕಣ್ಣಿಗೆ ಕಟ್ಟಿಸಿದರೂ ಸುಭದ್ರಮ್ಮನ ಪಾತ್ರಕ್ಕೆ ಒದಗಿಸಬಹುದಾಗಿದ್ದ ಒಂದಂಶವನ್ನು ಕಸಿದಿದೆ. ಇಲ್ಲಿ ರಾಜೀವನಿಗೂ ಸುಭದ್ರಮ್ಮ ಅರ್ಥವಾಗದೇ ಹೋಗುವುದಕ್ಕೆ ಕೂಡ ಅವನ ದೈನಂದಿನದಲ್ಲಿ ಮೂಕಪ್ರಾಣಿಗಳಿಗೆ ನೀಡಿದ ಹಿಂಸೆಯನ್ನು ಎಂದಿಗೂ ಮರೆಯಲಾರದ ಅನುಭವವನ್ನಾಗಿಯೂ, ಸುಭದ್ರಮ್ಮನಂಥ ಹಿರಿಯ ಜೀವಕ್ಕೆ ತನ್ನ ಕಣ್ಣೆದುರೇ ನೀಡಿದ ಹಿಂಸೆಯನ್ನು ಸಾಮಾನ್ಯ ಸಂಗತಿಯೆಂಬಂತೆ ಕಾಣುವುದನ್ನೂ ಕಲಿಸಿರುವುದು ಕಾರಣವಾಗಿದೆ. ಕತೆಗಾರ್ತಿ ಅದನ್ನು ಹಾಗೆಯೇ ಇರಗೊಡುತ್ತಾರೆ.

ಇಂದಿರೆ ಮತ್ತು ಅವಳ ದಾಂಪತ್ಯ ಈ ಕತೆಗೆ ಇನ್ನೊಂದು ಆಯಾಮವನ್ನೊದಗಿಸಿದೆ. ಅದಕ್ಕೆ ಹೆಚ್ಚು ಸಂಕೀರ್ಣವಾದ ಹರಹು ಇದ್ದರೂ, ಅದು ಕೂಡ ಕತೆಯ ಕೇಂದ್ರದತ್ತಗಿನ ತುಡಿತ ಅತಿಯಾದುದರಿಂದ ತಕ್ಕ ಪೋಷಣೆ ಪಡೆಯದೇ ಸೊರಗುವುದು ವಿಚಿತ್ರ ಮಾತ್ರವಲ್ಲ, ಹೆಚ್ಚಿನ ನಿರಾಸೆಗೆ ಕಾರಣವಾಗುವ ಅಂಶ. ಇಂದಿರೆ ಮತ್ತು ಅವಳ ಸ್ವಯವಿಲ್ಲದ ಪತಿಯ ಸಂಬಂಧ ಒಂದು ಆಯಾಮವಾಗಿ ಪಡೆದ ಪೋಷಣೆಯನ್ನು ಆ ಮದುವೆಯ ಫಲವಾಗಿ ದಕ್ಕುವ ಆಸ್ತಿಯ ವಿಲೇವಾರಿ ಪ್ರಶ್ನೆ ಪಡೆದುಕೊಳ್ಳುವುದಿಲ್ಲ. ಆಸ್ತಿಯ ನಿಜವಾದ ವಾರಸುದಾರರಾದ ಇಂದಿರೆಯ ಮಕ್ಕಳಾದ ವಿಷ್ಣು ಮತ್ತು ರಾಜೀವ ಅದಕ್ಕಾಗಿ ಯಾವತ್ತೂ ಸೊಲ್ಲೆತ್ತದೆ ತಮ್ಮ ತಮ್ಮ ಪತ್ನಿಯರೊಂದಿಗಿನ ವಿಷಮ ದಾಂಪತ್ಯದತ್ತಲೇ ಹೆಚ್ಚು ಗಮನ ನೀಡುವುದು ಕೂಡ ನನ್ನ ವಾದಕ್ಕೆ ಹೆಚ್ಚಿನ ಪುಷ್ಟಿಯನ್ನೊದಗಿಸುವಂತಿದೆ. ಶಂಕರಯ್ಯ ತಾವು ತಮ್ಮ ಮಗಳು ಇಂದಿರೆಯ ಮದುವೆಯ ಮುಖೇನ ಪಡೆದ ಆಸ್ತಿಯ ಹಕ್ಕನ್ನು ಇಂದಿರೆಯ ಹೊರತಾದ ಮೂವರು ಗಂಡು ಮಕ್ಕಳು ನೆಲೆಯಾಗುವುದಕ್ಕೇ ಬಳಸಿಕೊಂಡು ಇಂದಿರೆಯ ಮಕ್ಕಳು ಅತಂತ್ರರಾಗಲು ಕಾರಣರಾಗುವುದನ್ನು ಕೂಡ ಈ ಇಬ್ಬರು ಪ್ರಬುದ್ಧ ಮಕ್ಕಳು ಗುರುತಿಸುವಲ್ಲಿ, ಇಡೀ ಊರು ಆ ಬಗ್ಗೆ ಆಡಿಕೊಂಡರೂ, ವಿಫಲರಾಗುವುದನ್ನು ಇಲ್ಲಿ ಗಮನಿಸಬೇಕು. ಬದಲಿಗೆ ಅಣ್ಣ ತಮ್ಮಂದಿರು ತಮ್ಮ ದಾಂಪತ್ಯದ ಸಮಸ್ಯೆಗೆ ತಲೆಗೊಡುತ್ತಾರೆ. ಶಂಕರಯ್ಯ ಸತ್ತಾಗಲಾಗಲಿ, ಸುಭದ್ರಮ್ಮ ಸತ್ತಾಗಲಾಗಲಿ ಈ ಇಂದಿರೆಯ ಅಣ್ಣಂದಿರು, ಅವರ ಮಕ್ಕಳು ಮನೆಗೆ ಬರುವ, ಮತ್ತೆ ಆಸ್ತಿಯ ಹಕ್ಕಿನ ಪ್ರಶ್ನೆಗಳು ಮೇಲೆದ್ದು ಬರುವ ವಿದ್ಯಮಾನ ನಡೆಯುವುದೇ ಇಲ್ಲ ಎಂಬುದು ಆಶ್ಚರ್ಯಕರವಾದ ಒಂದು ಗೈರು. ಬದಲಿಗೆ ಶಂಕರಿಯ ಅಪ್ಪ ಇಂಥ ಮುತುವರ್ಜಿ ತೋರಿಸುವ, ಅದನ್ನು ಸುಭದ್ರಮ್ಮ ಸಂಭಾಳಿಸುವ ಒಂದು ಪ್ರಸಂಗವಿದೆ. ಸ್ವತಃ ಸುಭದ್ರಮ್ಮನಿಗೂ ಇಂದಿರೆಯ ಮಕ್ಕಳಿಗಾದ ಅನ್ಯಾಯದ ಅರಿವಿದ್ದೂ, ಅದು ಸರಿಯಲ್ಲ ಎಂಬ ಭಾವವಿದ್ದೂ ಇಡೀ ಕುಟುಂಬದ ಚೌಕಟ್ಟಿನಲ್ಲಿ ಈ ಪ್ರಶ್ನೆಯನ್ನು ಮತ್ತೆ ಮೇಲಕ್ಕೆತ್ತುವುದಿಲ್ಲ. ಆದರೆ ಯಾವ ಕುಟುಂಬದಲ್ಲಿ ಇದು ಹೀಗೆ ನಡೆಯಲು ಸಾಧ್ಯ?

ಆಗಲೇ ಹೇಳಿದಂತೆ ವಿಷ್ಣು - ಶಂಕರಿ ಮತ್ತು ರಾಜೀವ - ಲಲಿತೆಯರ ಸಂಬಂಧ ಒದಗಿಸುವ ಇನ್ನೊಂದು ಆಯಾಮ ಕೂಡ ಪಾಂಡು, ಭಾಗ್ಯಲಕ್ಷ್ಮಿ, ಇಂದಿರೆಯರ ಜಾಡಿನಲ್ಲೇ ಸಾಗುತ್ತದೆ.

ಇಷ್ಟಾದ ಮೇಲೆ ಮೂರ್ತಿ-ವೈಜಯಂತಿಯರ ಇನ್ನೊಂದು ಸಂಬಂಧವೂ ಈ ಕತೆಗೆ ಒದಗಿಸುವ ಆಯಾಮ ಕೂಡ ಅದೇ. ಇಲ್ಲಿ ಅನಿವಾರ್ಯವಾಗಿ ವೈಜಯಂತಿಯ ಗಂಡ ಅನಾಸಕ್ತನೊ ಅನ್ಯಾಸಕ್ತನೋ ಆಗಿ ಕಾಣಿಸಿಕೊಂಡಿರುವುದಂತೂ ಜಗತ್ತಿನಲ್ಲೆಲ್ಲ ವಿಷಮ ದಾಂಪತ್ಯಗಳೇ ತುಂಬಿದ್ದು ಎಲ್ಲಾ ಸ್ತ್ರೀಯರೂ ಒಂದು ಹೊಸ ಔಟ್‌ಲೆಟ್‌ಗಾಗಿ ಹಾತೊರೆಯುತ್ತಲೇ ಇದ್ದಾರೇನೊ ಎಂಬಂಥ ಸಾಮಾನ್ಯೀಕರಣಕ್ಕೆ ಶರಣಾಗಿರುವಂತೆ ಕಾಣುತ್ತದೆ. ಸಮಾಜದಲ್ಲಿ ನಾವು ನಿಜಕ್ಕೂ ಅನ್ಯೋನ್ಯ ದಾಂಪತ್ಯವನ್ನು ಕೂಡ ಕಾಣುತ್ತೇವೆ ಮತ್ತು ಅದು ಅಸಹಜವಾದ ವಿದ್ಯಮಾನವೇನೂ ಅಲ್ಲ ಅಲ್ಲವೆ? ತುಂಬ ಹಿಂದೆ ಮಂದ್ರ ಕಾದಂಬರಿಯಲ್ಲಿ ಎಸ್ ಎಲ್ ಭೈರಪ್ಪ ಇಂಥದೇ ಒಂದು ಸಾದೃಶ್ಯವನ್ನು ಕಾಣಿಸುತ್ತ ಹೋಗಿದ್ದು ನೆನಪಾಗುತ್ತದೆ. ಅಲ್ಲಿ ಬರುವ ಒಬ್ಬನೇ ಒಬ್ಬ ತೀರ ಸಾಯಬಿದ್ದ ಮುದುಕ ಗುರುವಿನ ಹೊರತಾಗಿ ಎಲ್ಲಾ ಸಂಗೀತದ ಗುರುಗಳೂ ತಮ್ಮ ಸ್ತ್ರೀಶಿಷ್ಯೆಯರಿಂದ ದೈಹಿಕ ಸಂಪರ್ಕದ ಗುರುದಕ್ಷಿಣೆಯನ್ನು ಬಯಸುವವರು! ಕಾದಂಬರಿಯಾಗಿ ಇದನ್ನು ಒಪ್ಪಿದರೂ ಅದು ಸಮಾಜದ ಒಂದು ವರ್ತಮಾನದೊಂದಿಗೆ ಸಂತುಲಿತವಾಗಿರಬೇಡವೆ? ಹಾಗಿದೆ ಎಂದು ಒಪ್ಪಿಕೊಂಡರೆ ನಮ್ಮ ಗಂಗೂಬಾಯಿ ಹಾನಗಲ್, ಲತಾಮಂಗೇಶ್ಕರ್, ಸುಬ್ಬುಲಕ್ಷ್ಮಿ ಮುಂತಾದವರನ್ನು ನಾವು ಹೇಗೆ ಕಾಣಬೇಕು ಎಂಬ ಪ್ರಶ್ನೆಯಿಲ್ಲವೆ? ಹಾಗಿಲ್ಲ, ಅದು ಕಾದಂಬರಿಯ ದೃಷ್ಟಿ ಎಂದು ಕಾಣುವುದಾದರೆ ಅದು ಪ್ರತಿಪಾದಿಸುವ ತಾತ್ವಿಕತೆಯನ್ನು ಹೇಗೆ ಸ್ವೀಕರಿಸಬೇಕು ಎಂಬ ಪ್ರಶ್ನೆಯಿಲ್ಲವೆ? ತಾತ್ವಿಕವಾಗಿ ಅನುಪಮಾ ಪ್ರಸಾದ್ ಇಲ್ಲಿ ಪ್ರತಿಪಾದಿಸುವ ಅಂಶಕ್ಕೆ ಬಂದರೆ ಹೀಗೆ ವಾದಿಸಬೇಕಾಗುತ್ತದೆ:

ಹೇಗೆ ಮನುಷ್ಯ ಸಂಬಂಧದಲ್ಲಿ ಬಿರುಕುಗಳು ಸಹಜವೋ, ಹಾಗೆಯೇ ವಿಷಮ ಸಂಬಂಧಗಳೆಂದು ಕರೆಯಲ್ಪಡುವ, ದಾಂಪತ್ಯದ ಪಾವಿತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡುವಂಥ ಮಾರ್ಗ ಎಂದು ಯಾವುದನ್ನು ಸಮಾಜ ತನ್ನ ಸ್ತ್ರೀವಿರೋಧೀ ಧೋರಣೆಯ ಒಂದು ಹತಾರವಾಗಿ ಬಳಸಿಕೊಂಡು ಬಂದಿದೆಯೋ ಅದು ಕೂಡ ಹೆಣ್ಣಿಗೆ ತೆರೆಯುವ ಅನ್ಯಮಾರ್ಗವೂ ಮತ್ತದೇ ಮನುಷ್ಯ ಸಂಬಂಧದದ್ದೇ, ಕೇವಲ ಕಾಮದ್ದಲ್ಲ ಮತ್ತು ಹಾಗಾಗಿ ಅದು ಕೂಡ ಹೊಸ ಬಿರುಕುಗಳಿಗೆ ಪಕ್ಕಾಗುವಂಥಾದ್ದೇ ಎನ್ನುವುದನ್ನು ಮರೆಯುವುದು ಸಾಧ್ಯವೆ? ಅದು ಇವನಲ್ಲ ಅವನು ಅಥವಾ ಅದು ಅವಳಲ್ಲ ಇವಳು ಎಂಬ ಭಾವವನ್ನೇ ಪುಷ್ಟೀಕರಿಸುತ್ತ ಹೋಗುವುದಾದರೆ ಅದಕ್ಕೊಂದು ಅಂತ್ಯವುಂಟೇ? ದಾಂಪತ್ಯದ ಹೊರಗಿನದ್ದೆಲ್ಲವೂ ಸ್ವೀಕಾರಾರ್ಹವೇ ಆಗಿರುತ್ತದೆ ಎಂಬುದು ಕೂಡ ಇನ್ನೊಂದು ಪೂರ್ವಾಗ್ರಹವಲ್ಲವೆ?

ವಾಂಛೆ ಅಥವಾ ಜೀವದ Basic Instincts ಮುಖ್ಯ, ಅವು ನಿಷ್ಪಾಪಿ, ಅವಕ್ಕೆ ಮೌಲ್ಯ-ನೈತಿಕತೆ-ಸಮಾಜದ ಕಟ್ಟುಪಾಡು ಇವೆಲ್ಲದರ ಹಂಗಿನ ಹಂದರ ತೊಡಿಸಬೇಡಿ ಎನ್ನುವುದನ್ನು ಒಪ್ಪಬಹುದು. ಆದರೆ ಇಲ್ಲಿ ಇದೆಲ್ಲ ಮುಖ್ಯ, ಅದಕ್ಕೆ ಗೌರವ ಸಲ್ಲಿಸುವುದು ಮುಖ್ಯ ಹೊರತು ವ್ಯಕ್ತಿ ಮುಖ್ಯವಲ್ಲ ಎಂದು ಹೇಳುವುದಾದರೆ ಅದನ್ನು ಒಪ್ಪುವುದು ಸರಳವೆ/ಸುಲಭವೆ? ಗಿಡ್ಡ ಯಾಕಾಗಬಾರದು, ಲಲಿತೆ ಯಾಕಾಗಬಾರದು, ವೈಜಯಂತಿ ಯಾಕಾಗಬಾರದು ಎನ್ನುವುದಾದರೆ ಗಿಡ್ಡನೇ ಯಾಕಾಗಬೇಕು, ಲಲಿತೆಯೇ ಯಾಕಾಗಬೇಕು, ವೈಜಯಂತಿಯೇ ಯಾಕೆ ಎನ್ನುವುದಕ್ಕೆ ಏನು ಪುಷ್ಟೀಕರಣವಿದೆ ಎಂಬ ಪ್ರತಿವಾದವನ್ನೂ ಹೂಡುವುದಕ್ಕೆ ಸಾಧ್ಯವಿದೆ.

ಮುಖ್ಯಪ್ರಶ್ನೆ ಇದಲ್ಲ. ಇಸುಮುಳ್ಳು ಕತೆ ಒಂದು ಕೇಂದ್ರದತ್ತಲೇ ಧಾವಂತದಿಂದ ಧಾವಿಸುವ ಒತ್ತಡಕ್ಕೆ ಬಿದ್ದು ಹಾರಿಜಾಂಟಲ್ ಬೆಳವಣಿಗೆ ಪಡೆಯುತ್ತದೆಯೇ ಹೊರತು ವರ್ಟಿಕಲ್ ಬೆಳವಣಿಗೆಗೆ ಅವಕಾಶವಿದ್ದರೂ, ಕತೆಯ ಹರಹು ಅದಕ್ಕೆ ತುಡಿಯುವಂತಿದ್ದರೂ ಯಾವುದೇ ಪೋಷಣೆ ಪಡೆಯದೇ ಸೊರಗುವುದು ಹೆಚ್ಚು ಎದ್ದು ಕಾಣುತ್ತದೆ ಎನ್ನುವುದೇ ಮುಖ್ಯವಾದ ಪ್ರಶ್ನೆ. ಇದು ಕೇವಲ ಪ್ರಕಾರಕ್ಕೆ ಸಂದ ಪ್ರಶ್ನೆಯಷ್ಟೇ ಅಲ್ಲ. ಇವತ್ತು ಸಣ್ಣಕತೆಗೆ ಒಂದು ಕೇಂದ್ರ ಇರಬೇಕು ಎಂಬ ಶಾಸ್ತ್ರವನ್ನು ಮುರಿದು ಕಟ್ಟುವ ಕೆಲಸ ಎಲ್ಲ ಕಡೆಯೂ ನಡೆದಿದೆ. ಬಹುಶಃ ಇದು ಸಣ್ಣಕತೆಯ ಅಳವಿಗೆ ಮೀರಿದ, ಕಾದಂಬರಿಯ ವ್ಯಾಪ್ತಿಗಷ್ಟೇ ದಕ್ಕುವ ವಸ್ತು-ವಿನ್ಯಾಸಗಳನ್ನು ಹೊಂದಿರುವುದೇ ಇಂಥ ಭಾವ ಹುಟ್ಟಲು ಕಾರಣವಾಗಿರಬಹುದಾದರೂ ಪ್ರಕಾರದ ಚೌಕಟ್ಟು ಮೀರಿ ಈ ಪ್ರಶ್ನೆಗೆ ಕತೆಗಾರ್ತಿ ಮುಖಾಮುಖಿಯಾಗಬೇಕಾದ ಅಗತ್ಯ ಇದ್ದೇ ಇದೆ.

2 comments:

Anupamaprasad Prasad said...

ಅರೆ! ನರೇಂದ್ರ ಪೈ ಅವರೇ,
ಜೋಗತಿ ಜೋಳಿಗೆಯನ್ನ ನೀವಿಲ್ಲಿ ಕೊಡವಿ ನೋಡಿದ್ದೀರಿ ಅಂತ ನನ್ನ ಗಮನಕ್ಕೆ ಬಂದಿದ್ದು ಈಗ ಎರಡು ದಿನಗಳ ಹಿಂದೆ. ನಿಯಮಿತವಾಗಿ ನಿಮ್ಮ ಬ್ಲಾಗ್ ಮೇಲೆ ಕಣ್ಣಿಡುತ್ತಿದ್ದೆ. ಆದರೆ, ಈಗ ಸುಮಾರು ಒಂದುವರೆ ವರ್ಷದಿಂದ ಬೇರೆ ಬೇರೆ ಕಾರಣಗಳಿಗಾಗಿ ಎಲ್ಲ ತಪ್ಪಿ ಹೋಗಿತ್ತು. ಕೆಲವೊಮ್ಮೆ ಕಣ್ಣಾಡಿಸಿದ್ದಿದೆಯಾದರೂ ಒಳ ಹೊಕ್ಕು ನೋಡಿರಲಿಲ್ಲ. ಈಗ ನಿಮ್ಮ ತಕರಾರನ್ನು ಸ್ವಾಗತಿಸುತ್ತ ನನ್ನ ಒಂದೆರಡು ತಕರಾರು.ನೀವು ಇಸುಮುಳ್ಳನ್ನೇ ಇಟ್ಟುಕೊಂಡಿದ್ದೀರಿ. ನಾನು ಅದರ ಬಗ್ಗೆಯೇ ಮಾತಾಡುತ್ತೇನೆ. ಆದರೆ, ಮೊದಲಿಗೇ ಒಂದು ವಿಚಾರ ಹೇಳಿ ಬಿಡುತ್ತೇನೆ, ಕಾದಂಬರಿಯ ಹರಿವನ್ನು ಕಥೆಗೆ ಕೊಂಡೊಯ್ಯುವ ಬಗ್ಗೆ ನಿಮ್ಮ ತಕರಾರಿಗೆ ನನ್ನ ತಕರಾರಿಲ್ಲ. ಯಾಕೆ ಹಾಗೆ ಅನ್ನುವುದರ ಬಗ್ಗೆ ನನ್ನದೇ ಬೇರೆ ಬೇರೆ ಕೊರತೆಗಳು. ಅದನ್ನ ದಾಟಿಕೊಂಡಾಗ ಇದನ್ನೂ ದಾಟಬಹುದು. ಕಾಯುತ್ತಿದ್ದೇನೆ ಅದಕ್ಕಾಗಿ.
ಇನ್ನು ನನ್ನ ತಕರಾರು - ಆತ್ಮಾಭಿಮಾನದ ಒಳ ಪ್ರತಿಭಟನೆಯ ಧ್ವನಿಯೇ ನನಗೆ ಸುಭದ್ರಮ್ಮ. ಚಾಯ ಮಾಡುವ ವಿಷಯದಲ್ಲಿ ಆಕೆ ತೋರಿಸುವ ನಿರ್ಲಕ್ಷ್ಯ, ನಿರಾಸಕ್ತಿಯೂ ಅದನ್ನೇ ಸೂಚಿಸುತ್ತದೆಯೆಂದು ನನ್ನ ಭಾವನೆ. ಇನ್ನು ವಿಷಮ ದಾಂಪತ್ಯದ ಸಾಮಾನ್ಯೀಕರಣ. ಕಥೆ ಅಂತಹ ಒಂದು ಥೀಮ್ ಕಡೆ ವಾಲುವುದನ್ನು ಸ್ವತಃ ನಾನೇ ಇಷ್ಟ ಪಡುವುದಿಲ್ಲ. ಯಾವುದನ್ನೇ ಆದರೂ ಸಾಮಾನ್ಯೀಕರಿಸಿ ನೋಡುವುದು ನನಗೆ ಸಹಮತವಲ್ಲ. ಇಲ್ಲಿ ಇಂದಿರೆಯ ದಾಂಪತ್ಯ ವಿಷಮ ದಾಂಪತ್ಯವಲ್ಲ. ಹಾಗು ಆಕೆ ಅಥವಾ ಆತನ ಹಂಬಲಿಕೆ ಪರಸ್ಪರರ ವಿಷಯದಲ್ಲಿ ಎಷ್ಟೊಂದು ತೀವ್ರವಾಗಿತ್ತು ಅನ್ನುವುದು ಕಥೆಯಲ್ಲಿ ಪರಿಣಾಮಕಾರಿಯಾಗಿಯೇ ಬಂದಿದೆಯೆಂದು ನನಗೀಗಲೂ ನಿಮ್ಮ ತಕರಾರು ಓದಿದ ಮೇಲೂ ಅನಿಸುತ್ತಿದೆ. ಅವಳ ವ್ಯಕ್ತಿತ್ವ ಸುಭದ್ರಮ್ಮನಮ್ಮನಂತೆ ಗಟ್ಟಿಯಾಗಿದ್ದಲ್ಲ. ಗಂಡನ ಭ್ರಾಂತಿ, ಪುಟ್ಟ ಮಕ್ಕಳ ಭವಿಷ್ಯದ ಭಯಕ್ಕೆ ಅವಳು ತಂದೆಯ ನಿರ್ಧಾರಗಳಿಗೆ ಶರಣಾಗುತ್ತಾಳೆ. ಇನ್ನು ವಿಷ್ಣು-ರಾಜೀವರಿಗೆ ಶಂಕರಯ್ಯನಿಂದ ಆದ ಅನ್ಯಾಯ ಹಾಗು ಹಿರಿಯರ ಸಾವಿನ ನಂತರವೂ ಮಕ್ಕಳಿಗೆ ಅದು ಪ್ರಶ್ನೆಯಾಗದಿರುವ ಬಗ್ಗೆ- ತೀರಾ ಚಿಕ್ಕವರಿದ್ದಾಗಲೇ ಅಜ್ಜನ ಮನೆ ಸೇರಿದವರು. ಆಗಾಗ ಅಪ್ಪನ ಭ್ರಾಂತಿಯನ್ನು ಕಣ್ಣಾರೆ ಕಂಡು ಹೆದರಿದವರು. ವಿಷ್ಣುವಿನಲ್ಲಿ ಪ್ರಬುದ್ಧತೆಯಿದೆ ಆದರೆ ತಾಯಿಯ ಅಸಹಾಯಕತನವೇ ಇದೆ. ರಾಜೀವ ಪೂರ್ತಿಯಾಗಿ ಅಜ್ಜನ ಪ್ರಭಾವದಲ್ಲೇ ಬೆಳೆಯುತ್ತಾನೆ. ಇನ್ನು ಶಂಕರಯ್ಯ ಎಷ್ಟೊಂದು ಚಾಣಾಕ್ಷ, ಸ್ವಾರ್ಥಿ ಅನ್ನವುದು ಹೆಜ್ಜೆಗೆ ಗೊತ್ತಾಗುತ್ತದೆ. ಆಸ್ತಿ ವಿಸ್ತರಿಸಿ ಗಂಡು ಮಕ್ಕಳನ್ನು ಕೂರಿಸುವಾಗ ಎಲ್ಲರಿಗೂ ತನ್ನ ವಾದ ಹೌದೆನಿಸುವಂತೆ ಸಮರ್ಥಿಸುವುದಲ್ಲದೆ, ಕಾನೂನು ಪ್ರಕಾರ ಎಲ್ಲ ವ್ಯವಸ್ಥೆ ಮಾಡಿಯೇ ಇರುತ್ತಾನೆ. ಗಂಡು ಮಕ್ಕಳಿಗೂ ಹೆಣ್ಣು ಮಗಳ ಸ್ಥಿತಿಯಿಂದ ತಮಗಾದ ಲಾಭದ ಅರಿವಿರುತ್ತದೆ. ಎಲ್ಲಕ್ಕಿಂತ ನನಗೆ ಆಶ್ಚರ್ಯವಾಗಿದ್ದು ಯಾವ ಕುಟುಂಬದಲ್ಲಿ ಹೀಗೆ ನಡೆಯಲು ಸಾಧ್ಯ ಎಂಬ ನಿಮ್ಮ ಅನುಮಾನ. ಸಾಧ್ಯ ಇಲ್ವೊ ಅಂದ್ರೆ ಇದೆ ಅನ್ನುವುದನ್ನ ಗಟ್ಟಿಯಾಗಿಯೇ ಹೇಳಬೇಕಾಗುತ್ತದೆ. ಆದರೆ, ಈ ಪ್ರಶ್ನೆ ಕಥೆಯ ಸಂದರ್ಭಕ್ಕೆ ಅಗತ್ಯವೇ ಅನ್ನುವುದು ನನಗೆ ಅರ್ಥವಾಗಲಿಲ್ಲ. ನಿಜ ಹೇಳ್ಬೇಕಂದ್ರೆ ನನಗನಿಸಿದ್ದು ಈ ಕಥೆ ನಿಮ್ಮನ್ನ ಬಹಳಷ್ಟು ತಟ್ಟಿದೆ. ಕಲಕಿದೆ. ಅದಕ್ಕೆ ಶಂಕರಯ್ಯನನನ್ನ ತೀವ್ರವಾಗಿ ತರಾಟೆಗೆ ತಗೊಂಡಿದ್ದೀರಿ. ಇದು ಕಥೆಯ ಗೆಲುವು ಅಂತ ನನ್ನನಿಸಿಕೆ ನರೇಂದ್ರ.

ಅನುಪಮಾ ಪ್ರಸಾದ್

ನರೇಂದ್ರ ಪೈ said...

ಪ್ರೀತಿಯ ಅನುಪಮಾ,
ನಿಮ್ಮ ತಕರಾರು ಕತೆಯ ಪಾತ್ರಗಳ ನಡೆಯ ಕುರಿತಂತೆ ನಾನು ಎತ್ತಿದ ಅಪಸ್ವರದ ಕುರಿತಾಗಿದೆ. ನಾನು ಅವುಗಳನ್ನು ತಾತ್ವಿಕವಾಗಿ ಮತ್ತು ತರ್ಕಕ್ಕೆ ಸಮನಾಗಿ ನಡೆಯುತ್ತವೆಯೇ ಎಂದು ಪರೀಕ್ಷಿಸುತ್ತೇನೆ. ನೀವು, ನೀವು ಕಂಡಿದ್ದನ್ನು, ಅನುಭವವನ್ನು ಸಕ್ಷಾತ್ಕರಿಸುತ್ತಿರುತ್ತೀರಿ. ತಕರಾರು ಸಹಜ. ಅದರ ಬಗ್ಗೆ ನಾನು ಹೇಳುವುದೇನಿಲ್ಲ. ಕತೆ ನನ್ನನ್ನು ಕಾಡದೇ ಇದ್ದರೆ ತಕರಾರುಗಳೇ ಇರುವುದಿಲ್ಲ!
ನಿಮ್ಮ
ನರೇಂದ್ರ