Saturday, July 29, 2017

ಐದು ತಕರಾರುಗಳು - ಆರು ಭಾಗದ ಲೇಖನದ ಮೊದಲ ಬರಹ, ಪೀಠಿಕೆಯ ಪಿಟೀಲು

ನವ್ಯದ ಉಚ್ಛ್ರಾಯ ಮುಗಿದ ಬಳಿಕ, ನವ್ಯೋತ್ತರ ಅಥವಾ ಆಧುನಿಕ ಕಥಾಜಗತ್ತಿನ ವಿದ್ಯಮಾನಗಳನ್ನು ಗಮನಿಸಿದರೆ ಸಣ್ಣಕತೆ ಎಂಬ ಪ್ರಕಾರ ಒಡ್ಡಿಕೊಂಡಷ್ಟು ಪ್ರಯೋಗಗಳಿಗೆ, ಪ್ರಯತ್ನಗಳಿಗೆ ಇನ್ಯಾವುದೇ ಪ್ರಕಾರ ಒಡ್ಡಿಕೊಂಡಿರಲಾರದು ಎನಿಸುತ್ತದೆ. ಓದುಗರ ಮಟ್ಟದಲ್ಲಿಯೂ ಇಂದಿನ ಕಾಲಮಾನ ಮತ್ತು ಜೀವನಶೈಲಿಗೆ ಅತ್ಯಂತ ಸೂಕ್ತವಾಗಿ ಹೊಂದಿಕೊಂಡು ಜನಪ್ರಿಯವಾಗಿರುವ ಪ್ರಕಾರವೂ ಇದೇ ಇದ್ದೀತು. ಆದಾಗ್ಯೂ, ಈಗಲೂ ನಮ್ಮ ನಡುವೆ ಇದ್ದು ಬರೆಯುತ್ತಲೇ ಇರುವ ರಾಘವೇಂದ್ರ ಪಾಟೀಲ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಅಮರೇಶ ನುಗಡೋಣಿ, ಅಬ್ದುಲ್ ರಶೀದ್, ವೈದೇಹಿಯವರಂಥ ಹೊಸ ಕತೆಗಾರರು ಕನ್ನಡಕ್ಕೆ ಇನ್ನೂ ದಕ್ಕಿಲ್ಲ ಎಂದೇ ಅನಿಸುತ್ತದೆ. ನಾನು ಈಚೆಗೆ ಓದಿದ ಈ ಐದೂ ಸಂಕಲನದ ಕತೆಗಳನ್ನು ಈ ಕತೆಗಾರರ ಕತೆಗಳೊಂದಿಗೆ ಇಟ್ಟು ತೂಗಬಹುದಾದ ಒಂದು ಪರಿಸ್ಥಿತಿ ಇಲ್ಲದಿರುವುದು ನನ್ನ ಇಂಥ ಮಾತಿಗೆ ಕಾರಣವೇ ಹೊರತು ಇನ್ನೇನಲ್ಲ. ಇಡೀ ಸಂಕಲನದಲ್ಲಿ ಒಂದು ಅಥವಾ ಎರಡು ಅಂಥ ಕತೆಗಳಿರಬಹುದು, ಅದು ಬೇರೆ ಪ್ರಶ್ನೆ. ಇಡೀ ಸಂಕಲನದಲ್ಲಿ ತೀರ ಜಾಳಾದ ರಚನೆ ಇಲ್ಲದೇ ಇರುವುದು ಕೂಡ ಅಷ್ಟೇ ಮುಖ್ಯವಾದ್ದು ಎನ್ನುವುದು ನಮ್ಮ ಕತೆಗಾರರಿಗೆ ಅರಿವಾಗಬೇಕಲ್ಲವೆ? ಈಗಲೂ ನನಗೆ ನೆನಪಿನಲ್ಲುಳಿವ ಕತೆಗಾರರು ಟಿ ಕೆ ದಯಾನಂದ್ (ಇವರ ರೆಕ್ಕೆಹಾವುಗಿಂತಲೂ ರಸ್ತೆನಕ್ಷತ್ರ ನನಗೆ ಪ್ರಿಯ), ಮೌನೇಶ್ ಬಡಿಗೇರ, ಪದ್ಮನಾಭ ಭಟ್ ಶೇವ್ಕಾರ. ನೀವೆಲ್ಲ ಬಲ್ಲಂತೆ ಇವರ ಒಂದೊಂದು ಕಥಾಸಂಕಲನಗಳಷ್ಟೇ ಬಂದಿವೆ. ವಿಜಯಕರ್ನಾಟಕ-ಅಂಕಿತ ಕಥಾಸ್ಪರ್ಧೆಯ ಬಹುಮಾನ, ಪ್ರಜಾವಾಣಿ ಕಥಾಸ್ಪರ್ಧೆಯ ಬಹುಮಾನ, ಛಂದ ಪುಸ್ತಕ ಬಹುಮಾನ ಇತ್ಯಾದಿಗಳನ್ನು ಪಡೆದ ಅನೇಕರು ಇನ್ನೂ ಎರಡನೆಯ ಕಥಾಸಂಕಲನ ತಂದಿಲ್ಲ. ಯಾಕೆ ಹೀಗಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಸಂದೀಪ ನಾಯಕ, ರಘುನಾಥ ಚ ಹ, ಭಾಸ್ಕರ ಹೆಗಡೆ, ಅನುಜಯಾ ಎಸ್ ಕುಮಟಾಕರ್, ಕಣಾದ ರಾಘವ, ಲೋಕೇಶ್ ಅಗಸನಗಟ್ಟೆ, ಬಿ ಚಂದ್ರೇಗೌಡ, ಅಲಕಾ ತೀರ್ಥಹಳ್ಳಿ ಹೀಗೆ ಈಚೆಗೆ ಸಂಕಲನಗಳಲ್ಲಿ ಕಾಣಸಿಗದ ಕತೆಗಾರರ ಸಂಖ್ಯೆ ಹೆಚ್ಚಿದೆ. ಒಂದು ತಗಡಿನ ಚೂರು, ಒಳ್ಳೆಯವನು, ಅಶ್ವಮೇಧದಂಥ ಕೃತಿಗಳನ್ನು ಕೊಟ್ಟ ಅಶೋಕ ಹೆಗಡೆಯವರ ಬಹುನಿರೀಕ್ಷಿತ ಕಾದಂಬರಿ ಮೀನುಗಳು ಇನ್ನೂ ಹೊರಬಂದಿಲ್ಲ. ಬರುತ್ತಿರುವ ಸಂಕಲನಗಳು ಗೊತ್ತಿಲ್ಲದೇ ಇರುವುದನ್ನು ಗೊತ್ತು ಮಾಡಿಕೊಡುತ್ತಿಲ್ಲ. ಬೇರೆಯೇ ಒಂದು ಜಗತ್ತಿಗೆ ಹೊತ್ತು ಒಯ್ಯುತ್ತಿಲ್ಲ.

ಓದು ನನ್ನನ್ನು ಬೆಳೆಸದೇ ಇದ್ದರೆ ಅದರಿಂದ ಓದುಗನಿಗೆ ಏನು ಉಪಯೋಗ? ಓದುಗನನ್ನು ಬೆಳೆಸುವಂಥ ಬರವಣಿಗೆ ಯಾವಾಗ ಬರುತ್ತದೆ ಎಂದರೆ ಓದುಗನಿಗೆ ಕಾಣಿಸದೇ ಇರುವುದು ಕತೆಗಾರನಿಗೆ ಕಾಣಿಸಿದಾಗ. ಇಲ್ಲಿನ ಕತೆಗಳಲ್ಲಿ ಓದುಗನಿಗೂ ಕಾಣಿಸಿದ್ದು ಮಂಡಿಸಲ್ಪಟ್ಟಿದೆ ಅಥವಾ ವಿವರಿಸಲ್ಪಟ್ಟಿದೆಯೇ ಹೊರತು ಅವನಿಗೆ ಕಾಣಿಸದೇ ಇರುವುದು ಇದೆ ಎನಿಸುವುದಿಲ್ಲ. ಎಲ್ಲೋ ಅಷ್ಟಿಷ್ಟು ಇದೆ, ಅದು ಸಾಕಾಗುತ್ತಿಲ್ಲ. ಹೀಗೆ ಹೇಳುವಾಗ ಇದು ವ್ಯಕ್ತಿಗತ ನೆಲೆಯಿಂದ ಹೊರಟ ಮಾತು ಎನ್ನುವುದನ್ನು ಮರೆತಿಲ್ಲ. ಒಂದು ಹಂತದಲ್ಲಿ ಮನುಷ್ಯನಿಗೆ ಅವನ ವಯಸ್ಸು, ಓದು, ಅನುಭವ ಎಷ್ಟು ಭಾರವಾಗಿ ಬಿಡುತ್ತದೆಂದರೆ ಯಾವುದೂ ಕುತೂಹಲ ಹುಟ್ಟಿಸುವುದಿಲ್ಲ, ರೋಮಾಂಚನ ತರುವುದಿಲ್ಲ, ಆಹಾ ಎನಿಸುವಂತೆ ಮಾಡುವುದಿಲ್ಲ. ಬಹುಶಃ ನನ್ನ ಸ್ಥಿತಿ ಈಗ ಅದೇ ಇದ್ದಿರಲೂ ಬಹುದು. ಈ ಮಿತಿಯ ಅರಿವಿದ್ದೂ ಬರೆದಿದ್ದೇನೆ. ಅಲ್ಲದೆ ನನಗೆ ಅನಿಸಿದ್ದು ಕೊನೆಯ ಮಾತಲ್ಲ. ಆದರೂ ನಾನು ಹೇಳಬಹುದಾದ್ದು ನನಗೆ ಅನಿಸಿದ್ದು ಮಾತ್ರ.

ಒಂದು ಸಾಹಿತ್ಯ ಕೃತಿಯನ್ನ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಈ ವಿಮರ್ಶಕರು, ವಿಶೇಷತಃ ಅವಾರ್ಡು, ಪ್ರಶಸ್ತಿ ಕೊಡೋವ್ರು ಹೇಗೆ ತೀರ್ಮಾನಿಸ್ತಾರೆ ಎನ್ನುವ ಪ್ರಶ್ನೆಗೆ ನನ್ನನ್ನು ನಾನು ಒಡ್ಡಿಕೊಂಡು ನಂತರ ಈ ಐದೂ ಕೃತಿಗಳ ಕುರಿತು ನನಗಿರುವ ತಕರಾರುಗಳಿಗೆ ಬರುತ್ತೇನೆ. ಈ ಎಲ್ಲಾ ಕೃತಿಗಳಿಗೂ ಈಗಾಗಲೇ ತಲಾ ಎರಡೆರಡು ಪ್ರಶಸ್ತಿಗಳಾದರೂ ಬಂದಿವೆ. ಹಾಗಾಗಿ ಇವು ಒಂದರ್ಥದಲ್ಲಿ ಪ್ರಾತಿನಿಧಿಕ ಕೃತಿಗಳೇ ಎನ್ನಬಹುದು. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಯು ಆರ್ ಅನಂತಮೂರ್ತಿ ಪ್ರಶಸ್ತಿ, ಸಾಹಿತ್ಯ ಅಕಾಡಮಿಯ ದತ್ತಿ ಪ್ರಶಸ್ತಿ, ಛಂದ ಪುಸ್ತಕ ಬಹುಮಾನ, ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಎಚ್ ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ, ಬೇಂದ್ರೆ ಗ್ರಂಥ ಪ್ರಶಸ್ತಿ ಎಂದೆಲ್ಲ ಹೆಸರಿಸುತ್ತ ಹೋಗಬಹುದಾದ ಪ್ರಶಸ್ತಿಗಳೆಲ್ಲ ಈ ಕೃತಿಗಳಿಗೆ ಸಂದಿವೆ ಎನ್ನಬಹುದು. ಉದಾಹರಣೆಗೆ, ಹನುಮಂತ ಹಾಲಿಗೇರಿಯವರ ಸಂಕಲನದ ಪ್ರತಿ ಕತೆಗೂ ಒಂದಿಲ್ಲಾ ಒಂದು ಪ್ರಶಸ್ತಿ ಬಂದಿದೆ. ಈ ಒಂಭತ್ತು ಕತೆಗಳು ಇದುವರೆಗೆ 21 ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಕತೆಗಳು. ಇವರಲ್ಲಿ ಶಾಂತಿ ಕೆ ಅಪ್ಪಣ್ಣ ಅವರನ್ನು ಬಿಟ್ಟರೆ ಉಳಿದ ಎಲ್ಲರೂ ಈಗಾಗಲೇ ನಾಲ್ಕೈದು ಕೃತಿಗಳನ್ನು ಪ್ರಕಟಿಸಿದವರು, ತೀರ ಹೊಸಬರಲ್ಲ. ಹಾಗಾಗಿ ನಾನು ಐದೂ ಕೃತಿಗಳ ಕುರಿತು ಮಾಡಿಕೊಂಡ ಟಿಪ್ಪಣಿಗಳನ್ನು ಐದು ತಕರಾರುಗಳು ಎಂದೇ ಕರೆದಿದ್ದೇನೆ. ಕಾರಣ ಸ್ಪಷ್ಟ, ಇಲ್ಲಿ ತಕರಾರು ಎತ್ತಿದ್ದು ಹೆಚ್ಚು, ಮೆಚ್ಚಿದ್ದು, ಹೊಗಳಿದ್ದು ಕಡಿಮೆ. ನನ್ನ ನಿಲುವು ಏನೆಂದರೆ, ಒಂದು ಕೃತಿ ಚೆನ್ನಾಗಿಲ್ಲ ಎನಿಸಿದರೆ ಅದನ್ನು ಹೇಳುವ ಅಗತ್ಯ ಇಲ್ಲ. ಚೆನ್ನಾಗಿದೆ ಎನಿಸಿದರೆ ಅವಶ್ಯ ಹೇಳಬೇಕು. ನನಗೆ ಚೆನ್ನಾಗಿಲ್ಲ ಎನಿಸಿದ್ದು ನಿಮಗೆ ಚೆನ್ನಾಗಿದೆ ಅನಿಸಲೂ ಬಹುದು. ಹಾಗಾಗಿ, ಚೆನ್ನಾಗಿಲ್ಲ ಎನಿಸಿದರೆ ಸುಮ್ಮನಿರುವುದು ಸರಿ. ಒಂದು ಹಂತದ ವರೆಗೆ ಸರಿ. ಅದು ತಪ್ಪಾಗುವ ಒಂದು ಹಂತ ಇರುತ್ತದೆ. ಆಗ ಬಾಯಿಬಿಡದೇ ಇದ್ದರೇ ತಪ್ಪು.

ನನ್ನ ಬರಹಗಳು ಕೊಂಚ ಹೆಚ್ಚೇ ಹರಿತವಾಗಿವೆ ಎನಿಸಿದರೆ ಕ್ಷಮೆಯಿರಲಿ, ಪ್ರಶಸ್ತಿ/ಬಹುಮಾನ/ಅವಾರ್ಡು ಕೊಡುವ ಹಿನ್ನೆಲೆಯಲ್ಲೇ ನಾನಿವುಗಳನ್ನು (ಈ ಟಿಪ್ಪಣಿಗಳನ್ನು) ಮಾಡಿಕೊಂಡೆ ಎಂದಿಟ್ಟುಕೊಳ್ಳಿ. ಈ ಒಂದು ಕೃತಿಯನ್ನು ಪ್ರಶಸ್ತಿಗೆ, ಬಹುಮಾನಕ್ಕೆ, ಅವಾರ್ಡಿಗೆ ಆರಿಸುವಾಗ ಯಾಕೆ ಆರಿಸಬೇಕು, ಯಾಕೆ ಆರಿಸಬಾರದು, ಒಂದಕ್ಕಿಂತ ಇನ್ನೊಂದು ಹೇಗೆ ಶ್ರೇಷ್ಠ ಎನ್ನುವ ಪ್ರಶ್ನೆಗಳಿಗೆಲ್ಲ ನಮಗೆ ನಾವೇ ಪ್ರಶ್ನಿಸುವವರಾಗಿ ನೋಡುತ್ತೇವಲ್ಲ, ಅಂಥ ಒಂದು ಜಿಜ್ಞಾಸೆ ಇದರ ಹಿಂದಿದೆ. ಇಲ್ಲಿ ನಾವೇ ಲಾಯರು, ನಾವೇ ಜಡ್ಜು! ಇದು ಇಂಥ ಇಕ್ಕಟ್ಟಿನ ಒಂದು ಸ್ಥಿತಿಯಲ್ಲಿ ಹುಟ್ಟಿದ ಟಿಪ್ಪಣಿಗಳೆಂದರೂ ಸರಿಯೇ.

ಸ್ವತಃ ನಾನೇ ಒಂದೆರಡು ಬಾರಿ ಇಂಥ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದರಿಂದ ಇದನ್ನು ಕೊಂಚ ಹತ್ತಿರದಿಂದ ಅನುಭವಿಸಿದ್ದೇನೆ.

ಮೊದಲಿಗೆ ಇನ್ಯಾರೋ ಆರಿಸಿದ ಒಂದು ಸೀಮಿತ ಸಂಖ್ಯೆಯ ಕತೆ/ಕೃತಿ ನಮ್ಮೆದುರು ಬರುವುದರಿಂದ, ಆ "ಇನ್ಯಾರೊ" ನಮ್ಮ ನಿರ್ಧಾರಕ್ಕೆ ಒಂದು ಚೌಕಟ್ಟು ಹಾಕಿರುತ್ತಾರೆ. ಅಪ್ರಕಟಿತ ಕತೆ/ಕವನ/ಹಸ್ತಪ್ರತಿಯಾದಲ್ಲಿ ನಮಗೆ ಹೀಗೆ ಕೈಬಿಟ್ಟ ಕತೆ/ಕವನ/ಹಸ್ತಪ್ರತಿಗಳ ಬಗ್ಗೆ ಏನೂ ಗೊತ್ತಿರುವುದಿಲ್ಲ. ಸಾಮಾನ್ಯವಾಗಿ ಅಂಥ ಸಂದರ್ಭದಲ್ಲಿ ಸ್ಪರ್ಧಿಗಳ ಹೆಸರೂ ಗೊತ್ತಿರುವುದಿಲ್ಲ. ಗೊತ್ತಿದ್ದರೆ, ನಮಗೆ ಗೊತ್ತಿರುವ ಉತ್ತಮ ಲೇಖಕ/ಕವಿಯ ಬರಹ ಸ್ಪರ್ಧೆಯಲ್ಲಿ ಇಲ್ಲದೆ ಇದ್ದಲ್ಲಿ ಆತ ಅಥವಾ ಆಕೆ ಸ್ಪರ್ಧಿಸಬೇಕಿತ್ತು ಎಂದೂ ಅನಿಸುತ್ತದೆ. ಆತ/ಆಕೆ ಸ್ಪರ್ಧಿಸದೇ ಇದ್ದಿರಬಹುದು ಅಥವಾ ಮೊದಲ ಹಂತದಲ್ಲಿ ಫಿಲ್ಟರ್ ಆಗಿರಬಹುದು. ಆಗ ಏನು ಮಾಡುತ್ತೀರಿ? ಅಲ್ಲದೆ, ಅಕಸ್ಮಾತ್ ಪ್ರಕಟಿತ ಕೃತಿಗಳಾಗಿದ್ದರೆ ನಮಗೂ ಆಯಾ ವರ್ಷ ಪ್ರಕಟವಾದ ಕೆಲವು ಕೃತಿಗಳ ಬಗ್ಗೆ ಗೊತ್ತಿರುತ್ತದೆ. ಆಯ್ಕೆಗೆ ಬಂದ ಕೃತಿಗಳಲ್ಲಿ ಇರಬೇಕಿತ್ತು ಎಂದು ನಾವು ಅಂದುಕೊಂಡ ಒಂದು ಕೃತಿ ಇಲ್ಲದೇ ಇದ್ದರೆ ಏನು ಮಾಡಬೇಕು? ಇಲ್ಲಿಯೇ ಎದುರಾಗುವ ಇನ್ನೊಂದು ಸಮಸ್ಯೆ, ಈ ಆಯ್ಕೆಗಾರ/ತೀರ್ಪುಗಾರನ ಆಯ್ಕೆಗೆ ಏನು ಮಾನದಂಡ? ಆತ/ಆಕೆ ಸಾಕಷ್ಟು ಓದಿಕೊಂಡಿರಬೇಕೆ, ವಿಮರ್ಶಕನಾಗಿರಬೇಕೆ, ವಯಸ್ಸಾದವನಾಗಿರಬೇಕೆ ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ.

ಈಚೆಗೆ ಒಂದು ನಿರ್ದಿಷ್ಟ ವಸ್ತುವನ್ನು ಆಯ್ದುಕೊಂಡ ಕತೆಗಳ ಬಗ್ಗೆ ಚರ್ಚಿಸುವಾಗ ಸಹ-ತೀರ್ಪುಗಾರರು ತಾವು ಕಂಟೆಂಪರರಿ ಕಥಾಸಾಹಿತ್ಯವನ್ನು ಅಷ್ಟಾಗಿ ಓದಿಕೊಂಡಿಲ್ಲ ಎಂದು ಚರ್ಚೆಯಿಂದ ಹೊರಗುಳಿದು ಬಿಟ್ಟರು. ಒಂದು ಕತೆಯ ಮಟ್ಟ ನಿರ್ಧರಿಸುವುದಕ್ಕೆ ಅದೇ ವಸ್ತುವನ್ನು ಆಯ್ದುಕೊಂಡು ಬಂದ ಇತರ ಕತೆಗಳೊಂದಿಗೆ ಅದನ್ನಿಟ್ಟು ತೂಗುವುದು ನನ್ನ ಉದ್ದೇಶವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇಲ್ಲಿ ನನಗೆದುರಾದ ಪ್ರಶ್ನೆ, ತೀರ್ಪುಗಾರ/ಆಯ್ಕೆಗಾರನ ಆಯ್ಕೆಗೆ ಏನು ಆಧಾರವಪ್ಪಾ ಎನ್ನುವುದು.

- ಇಲ್ಲಿ ಒಟ್ಟು ಮೂರು ಪ್ರಶ್ನೆಗಳಿವೆ.

ಓದು ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವ ಒಂದು ಸಂವೇದನಾಶೀಲ ಪ್ರಕ್ರಿಯೆ. ಒಬ್ಬ ವ್ಯಕ್ತಿಗೆ ಚೆನ್ನಾಗಿದೆ ಎನಿಸಿದ ಪುಸ್ತಕ ಇನ್ನೊಬ್ಬ ವ್ಯಕ್ತಿಗೆ ಚೆನ್ನಾಗಿದೆ ಅನಿಸಬೇಕಾಗಿಲ್ಲ. ಒಬ್ಬನೇ ವ್ಯಕ್ತಿಗೆ ಹತ್ತು ವರ್ಷಗಳಷ್ಟು ಹಿಂದೆ ಅದ್ಭುತವಾಗಿದೆ ಎನಿಸಿದ ಅದೇ ಪುಸ್ತಕ ಇವತ್ತು ಸಾಧಾರಣ ಎನಿಸಲೂ ಬಹುದು. ವ್ಯಕ್ತಿಯ ವಯಸ್ಸು, ಅನುಭವ, ಮನಸ್ಸು, ಸಂವೇದನಾಶೀಲ-ಸ್ಪಂದನಾಶೀಲ-ಸೂಕ್ಷ್ಮಗ್ರಹಣಶೀಲ ಸಾಮರ್ಥ್ಯ, ವಿಪುಲ ಓದು ಎಲ್ಲ ಇದ್ದರೂ ಸಾಕಾಗುವುದಿಲ್ಲ. ನಾನು ಓದುವ ಸಮಯದ ನನ್ನ ಮನಸ್ಥಿತಿ, ನನ್ನ ನಿದ್ದೆ, ನನ್ನ ವಾತಾವರಣದ ಗದ್ದಲ, ಶಾಖ, ಬೆಳಕು, ಹಸಿವು, ಸಿಟ್ಟು, ಜಾತಿ, ಪೂರ್ವಾಗ್ರಹ, ಒಲವು-ನಿಲುವು ಎಂದು ಒಂದೆರಡು ಅಂಶಗಳಲ್ಲ ನನ್ನ ಓದು ನನಗೆ ದಕ್ಕುವ ಅಥವಾ ದಕ್ಕದಿರುವ ಸಂಗತಿಗೆ ಕಾರಣವಾಗಬಹುದಾದ ಸಂಗತಿಗಳು. ಇವೆಲ್ಲ ಮುಖ್ಯವಲ್ಲ ಅಥವಾ ಇವನ್ನೆಲ್ಲ ಪರಿಗಣಿಸುತ್ತಾ ಕೂತರೆ ಆಗಲಿಕ್ಕಿಲ್ಲ ಎನ್ನುವುದನ್ನು ಒಪ್ಪುತ್ತೇನೆ. ಒಂದು ಓದು, ಒಂದು ಕೃತಿ ಚೆನ್ನಾಗಿದೆ ಅಥವಾ ಇಲ್ಲ ಎನ್ನುವ ತೀರ್ಮಾನ ಯಾವತ್ತೂ ಸಾಪೇಕ್ಷವಾದದ್ದು ಮತ್ತು ಅಂತಿಮವಾದ ತೀರ್ಪು ಎನ್ನುವುದೇ ಇಲ್ಲ ಇಲ್ಲಿ ಎನ್ನುವುದನ್ನು ಸೂಚಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ಕೆಲವೊಂದು ಮನಸ್ಥಿತಿಯಲ್ಲಿ ಕೆಲವೊಂದು ಭಾವ/ರಾಗದ ಹಾಡು ಕೇಳಲು ಇಷ್ಟವಾಗುವ ಅಥವಾ ಇಷ್ಟವಾಗದೇ ಇರುವ ಹಾಗೆಯೇ ಇದು. ಹಾಗಾಗಿ ಯಾವ ಒಂದು ತೀರ್ಪು ಕೂಡ ಪ್ರಶ್ನಾರ್ಹವಾಗಿಯೇ ಇರುತ್ತದೆ ಎನ್ನುವಾಗ ಕೂಡ, ಇದೇ ಸಂಗತಿ ಇಚ್ಚಾನುಸಾರ ತೀರ್ಪು ಕೊಡಲು ಒಂದು ಸಮರ್ಥನೆಯಾಗಿ ಬಳಸಲ್ಪಡಬಾರದು, ಅಲ್ಲವೆ?

ಮುವ್ವತ್ತು ಕತೆಗಳನ್ನು ಕೊಟ್ಟು ಮೂರನ್ನು ಆರಿಸು ಎಂದಾಗ ನಾನು ಇದೆಲ್ಲ ಎಷ್ಟು ಕಷ್ಟವಿದೆ ಎನ್ನುವುದನ್ನು ಕಂಡೆ. ಕೊನೆಗೆ, ವಸ್ತು (ಕನಿಷ್ಠ ಅಂಕ 2), ಭಾಷೆ (ಕನಿಷ್ಠ ಅಂಕ 8), ಆಕೃತಿ (ಕನಿಷ್ಠ ಅಂಕ 1), ಜೀವನ ದೃಷ್ಟಿ/ಆಶಯ/ಸಾಮಾಜಿಕ - ತಾತ್ವಿಕ ಆಯಾಮ (ಕನಿಷ್ಠ ಅಂಕ 2), ತಂತ್ರ ಮತ್ತು ಅದರ ಪ್ರಯೋಗಶೀಲತೆ (ಕನಿಷ್ಠ ಅಂಕ 1), ಹೊಸತನ/ವೈವಿಧ್ಯ/ವೈಶಿಷ್ಟ್ಯ(ಕನಿಷ್ಠ ಅಂಕ 1) ಎಂದೆಲ್ಲ ಪ್ರತಿಯೊಂದು ಅಂಶಕ್ಕೂ ತಲಾ ಹತ್ತು ಅಂಕಗಳನ್ನು ನಿಗದಿಪಡಿಸಿ ಇಡೀ ಕತೆಗೆ ನನ್ನ ಮನಸ್ಸು ಹೃದಯಕ್ಕೆ ತಟ್ಟುವ ಶಕ್ತಿ ಎಷ್ಟಿದೆ, ಅದು ಕೊಡುವ ಅನುಭವ ಮತ್ತು ನನ್ನಲ್ಲಿ ಉದ್ದೀಪಿಸಿದ ಸಂವೇದನೆ ಹೇಗಿತ್ತು ಎನ್ನುವುದಕ್ಕೆ ನಲವತ್ತು ಅಂಕಗಳನ್ನಿಟ್ಟೆ. ಇಲ್ಲಿ ಕನಿಷ್ಠ ಇಪ್ಪತ್ತು ಅಂಕಗಳನ್ನು ಗಳಿಸದ ಕತೆ ಉಳಿದ ಅರವತ್ತು ಅಂಕಗಳಲ್ಲಿ ಪೂರ್ತಿ ಅರವತ್ತು ಪಡೆದುಕೊಂಡರೂ ಅದು ಅರ್ಹವಾಗುತ್ತಿರಲಿಲ್ಲ. ಏಕೆಂದರೆ ಆ ಎಲ್ಲಾ ಅಂಶಗಳೂ ಉಪ್ಪು, ಮೆಣಸು, ಜೀರಿಗೆ, ಹುಳಿ ಎಲ್ಲ ಇದ್ದ ಹಾಗೆ. ಇವೆಲ್ಲವನ್ನೂ ಸೂಕ್ತ ಪ್ರಮಾಣದಲ್ಲಿ ಹಾಕಿದ್ದರೂ ಅಡುಗೆಗೆ ಒಂದು ರುಚಿ ಬರಬೇಕಾದರೆ ಅದಕ್ಕೆ ಪ್ರೀತಿಯನ್ನೂ ಹಾಕಿ ಬೇಯಿಸಬೇಕು ತಾನೆ? ಹಾಗೆಯೇ ಎಲ್ಲ ಇದ್ದೂ ಒಂದು ಬರಹವನ್ನು ಓದಿದಾಗ ನನ್ನ ಹೃದಯ, ಮನಸ್ಸು (ಇವೆರಡೂ ವೈಜ್ಞಾನಿಕವಾಗಿ ಇಲ್ಲದ ವಸ್ತುಗಳು. ನಾನು ಅಪಧಮನಿ-ಅಭಿಧಮನಿಗಳ ಹೃದಯದ ಕುರಿತು ಹೇಳುತ್ತಿಲ್ಲ, ಮೆದುಳಿನ ಕುರಿತೂ ಹೇಳುತ್ತಿಲ್ಲ) ಗಳನ್ನು ತಟ್ಟದೇ ಹೋದರೆ ಏನು ಫಲ? ಒಟ್ಟು ಮುವ್ವತ್ತೈದು ಅಂಕ ಒಂದು ಕತೆ ಅರ್ಹಗೊಳ್ಳಲು ಗಳಿಸಬೇಕಿದ್ದ ಕನಿಷ್ಠ ಅಂಕ.

ತನ್ನಿಂತಾನೇ ಇದನ್ನು ನಿರ್ಧರಿಸುವ ಒಂದು ಎಕ್ಸೆಲ್ ಫೈಲ್ ನಾನು ಮಾಡಿಕೊಂಡೆ. ಅದು ಈಗಲೂ ನನ್ನ ಬಳಿ ಇದೆ! ಈ ವಿಧವಾಗಿ ಅರ್ಹಗೊಂಡ ಕತೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಕತೆಯನ್ನು ನಾನು ಪಟ್ಟಿ ಮಾಡಿದ್ದೆ. ಆದರೆ ಸಹ ತೀರ್ಪುಗಾರರ ಜೊತೆಗಿನ ಚರ್ಚೆಯ ಬಳಿಕ ಈ ಇಡೀ ಸರ್ಕಸ್ಸು ‘ನಿಮಗೆ ಬೇರೆ ಕೆಲಸ ಇಲ್ಲ’ ಎನಿಸಿಕೊಂಡಿದ್ದು ಬೇರೆ ವಿಚಾರ.

ಒಂದೇ ವಸ್ತುವನ್ನು ಆಯ್ದುಕೊಂಡು ಬಂದ ಹತ್ತು ಕತೆಗಳನ್ನು ನಾನು ಓದಿದ್ದರೆ, ಸ್ಪರ್ಧೆಗೆ ಬಂದ ಅದೇ ವಸ್ತುವಿನ ಸುತ್ತ ಇರುವ ಕತೆಯನ್ನು ಎಲ್ಲಿಡಬೇಕು ಎಂದು ತೀರ್ಮಾನಿಸಲು ನನಗೆ ಹೆಚ್ಚು ಅನುಕೂಲವಾಗುತ್ತದೆ. ಆದರೆ ಇದು ಅನಿವಾರ್ಯ ಅರ್ಹತೆಯೇನಲ್ಲ. ಇದನ್ನು ನಾವು ನಿರೀಕ್ಷಿಸುವುದೂ ಕಷ್ಟವೇ.

ಭಾಷೆ ತೀರ ಕೆಟ್ಟದಾಗಿದ್ದೂ ಕತೆ ಅತ್ಯುತ್ತಮವಾಗಿದ್ದರೆ ಏನು ಮಾಡಬೇಕು? ಒಬ್ಬ ಸಾಹಿತಿಯೇ ಭಾಷೆಯನ್ನು ಶುದ್ಧವಾಗಿ ಬಳಸಲಾರದವನಾಗಿದ್ದರೆ ಅಂಥವನನ್ನು ಪುರಸ್ಕರಿಸಬೇಕೆ? ಅದು ಎಂಥ ಸಂದೇಶ ನೀಡುತ್ತದೆ ಎನ್ನುವಲ್ಲಿ ಭಿನ್ನಮತ ಇದೆ. ನಾನು ವ್ಯಾಕರಣ ಮತ್ತು ಅಕ್ಷರಮಾಲೆಯ ಶುದ್ಧತೆಯ ಬಗ್ಗೆ ಮಾತ್ರ ಹೇಳುತ್ತಿರುವ ಮಾತಿದು. ಅದರ ನೈತಿಕ ಮೌಲ್ಯದ ಬಗ್ಗೆ ಅಲ್ಲ.

ಫಾರ್ಮ್ ಎನ್ನುವುದೇ ಅಪ್ರಸ್ತುತ ಎನ್ನುವ ವಾದ ಇದೆ. ಪ್ರಬಂಧದಂಥ ಕತೆ, ಕತೆಯಂಥ ಪ್ರಬಂಧ; ಕಾವ್ಯದಂಥ ಕತೆ, ಕತೆಯಂಥ ಕಾವ್ಯ; ಕಾದಂಬರಿಯ ಹರಹು ಇರುವ ಕತೆ ಎಲ್ಲ ಸಾಧ್ಯ. ಆದರೆ ಒಟ್ಟಾರೆಯಾಗಿ ಒಂದು ಓದು ಮುಗಿದಾಗ ನಿಮಗೆ ಅದು ಏನನ್ನೊ ಕೊಡುತ್ತಲ್ಲ, ಅಲ್ಲಿ ಅದು ಕತೆ ಎನಿಸುವಂತೆ ಮುಗಿದಿದೆಯೆ ಎಂದು ನೋಡಬಹುದು. ಅಂದರೆ ಜೀವನ ನದಿಯಂತೆ ಸಾಗುತ್ತಲೇ ಇರುತ್ತದೆ. ಅಲ್ಲಿ ನಿರ್ದಿಷ್ಟ ಆರಂಭ-ತಿರುವು-ಮೇರುಘಟ್ಟ-ಅಂತ್ಯ ಎನ್ನುವ ಯಾವ ಹಂತಗಳೂ ಇರುವುದಿಲ್ಲ. ಇಲ್ಲಿಗೆ ಮುಗಿಯಿತು ಎನ್ನುವ ಹಾಗೆ ಒಂದು ಪೀಸ್ ಕಟ್ ಮಾಡುವ ಬ್ರೆಡ್ಡೂ ಅಲ್ಲವಲ್ಲ ಅದು. ಹಾಗಾಗಿಯೇ ಕತೆಗಾರ ಅಥವಾ ಕವಿ ದಕ್ಕಿಸುವ ಆಕೃತಿ ಮುಖ್ಯವಾಗುತ್ತದೆ. ಕೆಲವೊಮ್ಮೆ ಆಕೃತಿಯೇ ಅದರ ಸಂವೇದಕ ಶಕ್ತಿಯನ್ನೂ ನಿರ್ಧರಿಸುವ ಘಟ್ಟವಾಗುವುದಿದೆ.

ಜೀವನ ದೃಷ್ಟಿ/ಆಶಯ/ಸಾಮಾಜಿಕ - ತಾತ್ವಿಕ ಆಯಾಮ ಬಹಳ ಮುಖ್ಯ. ಅದ್ಭುತವಾದ ಒಂದು ಕತೆ ಋಣಾತ್ಮಕ ಧೋರಣೆ ಇಟ್ಟುಕೊಂಡಿರುವುದು, ಪುರೋಗಾಮಿಯಲ್ಲದ ಸಂಕುಚಿತ/ಸಣ್ಣತನದ ಆಶಯವನ್ನು ಧ್ವನಿಸುವುದು, ಸಮಾಜಕ್ಕೆ ಆರೋಗ್ಯಕರವಲ್ಲ ಎನಿಸುವ ಜೀವನದೃಷ್ಟಿಯನ್ನು ಪುರಸ್ಕರಿಸುವುದು ಮಾಡಿದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಹೆಣ್ಣಿನ ಆಧುನಿಕತೆಯನ್ನು ಒಪ್ಪದ ಕತೆಗಳು, ಲೈಂಗಿಕ ಸ್ವೇಚ್ಛಾಚಾರವನ್ನೆ ಸರಿಯೆನ್ನುವ ಕತೆಗಳು, ಕೌಟುಂಬಿಕ ವ್ಯವಸ್ಥೆಯ ಒಟ್ಟಾರೆ ಚೌಕಟ್ಟನ್ನೆ ಪ್ರಶ್ನಿಸುವ ಕತೆಗಳು ಸಮಸ್ಯೆಯನ್ನೊಡ್ಡುತ್ತವೆ. ಇಲ್ಲಿ, ಇತರ ಹಲವೆಡೆಗಳಲ್ಲೂ ಆಗುವಂತೆ ತೀರ್ಪುಗಾರನ ವೈಯಕ್ತಿಕ ನಿಲುವು-ಒಲವು ಮೇಲ್ಗೈ ಸಾಧಿಸುವುದಿಲ್ಲವೆ?

ತಂತ್ರ ಮತ್ತು ಅದರ ಪ್ರಯೋಗಶೀಲತೆ ಕೂಡ ಒಂದು ಪರಿಗಣಿಸಬೇಕಾದ ಅಂಶವೇ. ತಂತ್ರ ಹೇಗಿರಬೇಕು ಎನ್ನುವುದಕ್ಕೆ ವಿವೇಕ್ ಶಾನಭಾಗ ಅವರು ವಿವರಿಸಿದ ಮಾತುಗಳೇ ಮಾನದಂಡ. ನನ್ನ ಬ್ಲಾಗಿನಲ್ಲಿನ ಅವರ ಸಂದರ್ಶನದಲ್ಲಿ ಇದು ನಿಮಗೆ ಸಿಗುತ್ತದೆ, ಆಸಕ್ತಿಯಿದ್ದರೆ ಗಮನಿಸಿ. ಸೂಕ್ಷ್ಮವಾಗಿ - ಅದು ಕುರ್ಚಿಗೆ ಹೊಡೆದ ಮೊಳೆ, ಕೀಲುಗಳಂತೆ ಇರಬೇಕು. ಕಾಣಬಾರದು, ಕುಳಿತುಕೊಳ್ಳುವವನಿಗೆ ಚುಚ್ಚಬಾರದು. ಸಹಜವಾಗಿರಬೇಕು, ಸೌಂದರ್ಯ ಸೃಷ್ಟಿಸಬೇಕು.

ಹೊಸತನ/ವೈವಿಧ್ಯ/ವೈಶಿಷ್ಟ್ಯ ಒಂದು ಮಾನದಂಡ. ಇಂಥದ್ದರ ತುಡಿತ ಬರಹಗಾರನಲ್ಲಿ ಸಹಜವಾಗಿಯೇ ಇರುತ್ತದೆ ಬಿಡಿ.

ಹೀಗೆ ಅಥವಾ ಸಾಕಷ್ಟು ಚರ್ಚೆ, ಚಿಂತನೆ ಮತ್ತು ನಿರ್ಧಾರಗಳ ಬಳಿಕ ಒಂದು ಸ್ಥೂಲ ಮಾನದಂಡ ನಿರ್ಮಿಸಿಕೊಳ್ಳಲು ಸಾಧ್ಯವೆ? ನಿಯಮಗಳಿಗೆ ಬದ್ಧವಾಗಿ ಎಲ್ಲಾ ಅರ್ಹ ಲೇಖಕರ ಕೃತಿಗಳನ್ನೂ ಸ್ಪರ್ಧೆಯಲ್ಲಿ ಪರಿಗಣಿಸುವ ಪರಿಸ್ಥಿತಿ ನಿರ್ಮಿಸಲು ಸಾಧ್ಯವೆ? ಆಯಾ ಲೇಖಕ/ಪ್ರಕಾಶಕ ಅರ್ಜಿ ಹಾಕಿದಂತೆ ಪುಸ್ತಕ ಕಳಿಸುವ ಬದಲಿಗೆ ಪ್ರಶಸ್ತಿ ನೀಡಲು ಮುಂದಾಗುವ ಸಂಸ್ಥೆ ಸ್ವಯಂಪ್ರೇರಣೆಯಿಂದ ಅರ್ಹ ಕೃತಿಗಳನ್ನು ಕೊಂಡು ಪರಿಗಣಿಸಬೇಕಲ್ಲವೆ? ಅತ್ಯಂತ ಪಾರದರ್ಶಕವಾಗಿ ಆಯಾ ಲೇಖಕನಿಗೆ ಆತನ ಕೃತಿ/ಕತೆಯಲ್ಲಿ ಯಾವ ಅಂಶ ಸಾಕಷ್ಟು ಪೋಷಣೆ ಪಡೆದಿಲ್ಲ ಎನ್ನುವುದನ್ನು ಮನಗಾಣಿಸುವಂಥ ಒಂದು ಸ್ಥಿತಿ ಸಾಧ್ಯವಾದೀತೆ? ಪ್ರತಿಯೊಬ್ಬ ತೀರ್ಪುಗಾರ ತನ್ನ ನಿರ್ಧಾರಕ್ಕೆ ಸಾಕಷ್ಟು ಹೋಂ ವರ್ಕ್ ನಡೆಸಿದ್ದರ ಪುರಾವೆ ಸಹಿತ ಆತನ ಒಟ್ಟಾರೆ ಟಿಪ್ಪಣಿಗಳನ್ನು ಎಲ್ಲಾ ಸ್ಪರ್ಧಿಗಳಿಗೂ ಒದಗಿಸುವುದು ಸಾಧ್ಯವಾಗಬಹುದೆ?

ಹಾಗೆಯೇ, ಮೂವರು, ನಾಲ್ವರು ತೀರ್ಪುಗಾರರಿರುವಾಗ ಅವರೆಲ್ಲ ಪರಸ್ಪರ ಚರ್ಚಿಸಿ ಸಹಮತಕ್ಕೆ ಬರಬೇಕೆ ಅಥವಾ ಅವರು ಪರಸ್ಪರರಿಗೆ ಅಜ್ಞಾತರಾಗಿಯೇ ಉಳಿಯುವುದು ಒಳ್ಳೆಯದೆ ಎನ್ನುವ ಪ್ರಶ್ನೆ ಇದೆ. ಆಗ ಪ್ರಶಸ್ತಿ ನೀಡುತ್ತಿರುವ ಸಂಸ್ಥೆಯ ಸಾಹಿತ್ಯಾಸಕ್ತ ಪದಾಧಿಕಾರಿಗಳೋ, ಪತ್ರಿಕೆಯ ಸಂಪಾದಕ ಮಂಡಳಿಯ ಕೆಲವು ಸದಸ್ಯರೋ ಸಮನ್ವಯಕಾರರಾಗಿ ಒಂದು ನಿರ್ಧಾರಕ್ಕೆ ಬರಬೇಕಾದೀತು. ಇಲ್ಲಿ ಹುಟ್ಟುವ ಇನ್ನೊಂದು ಸಮಸ್ಯೆ ಇದೆ.

ಕೆಲವರು ಅಂಕಗಳನ್ನು ಕೊಡಿ ಎನ್ನುತ್ತಾರೆ. ಇನ್ನು ಕೆಲವರು ಸ್ಥಾನಕ್ಕನುಸಾರ ಕ್ರಮಾಂಕ ಕೊಡಿ ಸಾಕು ಎನ್ನುತ್ತಾರೆ. ಅಂಕಗಳನ್ನು ನೀಡುವಾಗ ಹತ್ತರಲ್ಲಿ ಅಥವಾ ನೂರರಲ್ಲಿ ಕೊಡುವುದು ಕ್ರಮ. ಹತ್ತರಲ್ಲಿ, ಐದರಲ್ಲಿ ಕೊಡುವುದಕ್ಕೆ ನನ್ನ ತಕರಾರೇನಿಲ್ಲ. ಆದರೆ ನೂರರಲ್ಲಿ ಕೊಡಿ ಎಂದಾಗ ಸಮಸ್ಯೆಗಳು ಎದುರಾಗುತ್ತವೆ. ನೂರರಲ್ಲಿ ಅಂಕಗಳನ್ನು ನೀಡುವಾಗ ಪ್ರತಿ ಸ್ಪರ್ಧಿಯ ನಡುವೆ ಇರಿಸುವ ಅಂತರದಲ್ಲಿ ಪ್ರತಿಯೊಬ್ಬರೂ ಅನುಸರಿಸುವ ಒಂದು ಕ್ರಮಬದ್ಧತೆಯೇನಿದೆ, ಅದು ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಈ ಅಂತರದಲ್ಲಿನ ವ್ಯತ್ಯಾಸದಿಂದ ಒಟ್ಟಾರೆ ಫಲಿತಾಂಶಕ್ಕೆ ತಲುಪುವಾಗ ಎಚ್ಚರ ವಹಿಸದೇ ಇದ್ದರೆ ಅದು ಏರುಪೇರಾಗುವುದು ಸಾಧ್ಯವಿದೆ. ಅಂದರೆ, ಒಬ್ಬರು ವಿಸ್ತಾರವಾದ ಅಂತರದಲ್ಲಿ 30-50-70-90-100 ಎಂದು ಅಂಕ ನೀಡಬಹುದು. ಇನ್ನೊಬ್ಬರು ಹತ್ತರೊಳಗಿನ ಅಂತರವಿರಿಸಿ, 85-87-90-93-95 ಎಂದು ನೀಡಬಹುದು, ಮತ್ತೊಬ್ಬರು ಕೊಂಚ ಅತ್ತಲೂ ಅಲ್ಲ ಇತ್ತಲೂ ಅಲ್ಲ ಮಾದರಿಯಲ್ಲಿ 70-75-80-85-90 ಎಂದೆಲ್ಲ ವಿಭಿನ್ನವಾಗಿ ಅಂಕ ನೀಡುವ ಸಾಧ್ಯತೆ ಇದ್ದೇ ಇದೆ. ಒಟ್ಟಾರೆ ಅಂಕಗಳಿಗೆ ತಲುಪುವ ಮುನ್ನ ಇಂಥ ಅಂತರದ ವ್ಯತ್ಯಸ್ಥ ಬಗೆಯನ್ನು ವೈಜ್ಞಾನಿಕವಾದ ವಿಧಾನದಿಂದ ಸೂಕ್ತ ರೀತಿಯಲ್ಲಿ (weighted average ಅಥವಾ indexed average) ಸರಿಪಡಿಸಿಕೊಳ್ಳದೇ ಹೋದರೆ ಒಟ್ಟಾರೆ ಉದ್ದೇಶ ವಿಫಲವಾಗುವುದರಿಂದ ಅಂಕಗಳನ್ನು ಕೂಡಿಸದೆ ಸ್ಥಾನ ಮಾತ್ರ ಗಮನಕ್ಕೆ ತೆಗೆದುಕೊಳ್ಳುವುದು ಹೆಚ್ಚು ಸೂಕ್ತವಾದೀತು ಎನಿಸುತ್ತದೆ.

ಕೆಲವೊಂದು ಬದಲಾವಣೆಗಳಾದರೂ ಆಗದೇ ಹೋದಲ್ಲಿ ಗಲ್ಲಿಗೊಂದು ತಿರುವಿಗೊಂದು ಇರುವ ಅವಾರ್ಡು/ಪ್ರಶಸ್ತಿ ಇತ್ಯಾದಿಗಳ ಬಗ್ಗೆ, ತೀರ್ಪುಗಾರರ ಬಗ್ಗೆಯೂ ಪೂರ್ವಾಗ್ರಹದ, ವಶೀಲಿಬಾಜಿಯ, ಗುಂಪುಗಾರಿಕೆಯ, ಅನ್ಯಾಯದ ಆಪಾದನೆ ಇದ್ದೇ ಇರುತ್ತದೆ ಅಲ್ಲವೆ? ಪ್ರತಿಬಾರಿಯೂ ಪುರಸ್ಕೃತರು ಒಂದು ವಿಧವಾದ ಮುಜುಗರಕ್ಕೆ ಒಳಗಾಗುವ ಸ್ಥಿತಿಯನ್ನು ಬಹುಶಃ ನಿವಾರಿಸಬಹುದು ಎನಿಸುತ್ತದೆ.

4 comments:

ಸೋಮು ಕುದರಿಹಾಳ said...

ನನಗೆ ಇಡೀ ಬರೆಹ ಮಾರ್ಗದರ್ಶಕನಂತೆ ಕೈ ಹಿಡಿದುಕೊಂಡಿತು ಸರ್. ಈಗಿನ್ನೂ ಆರೆಂಟು ಕಥೆಗಳ ಗೋಡೆ ಕಟ್ಟಿರುವ ನಾನು ಇನ್ನೂ ಮುಂದಿನ ಮೇಲ್ಛಾವಣಿಯನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಅರಿವು ಸಿಕ್ಕಿತು. ಈ ಪ್ರಶಸ್ತಿ ಮತ್ತು ಆಯ್ಕೆಯ ಮಾನದಂಡಗಳಲ್ಲಿ ಓದುಗರ ಅಭಿಪ್ರಾಯ ಅಂತ ಒಂದು ಅಂಶವನ್ನೂ ಸೇರಿಸಬೇಕು ಸರ್. ಕಥೆಗಾರರಿಂದ ಪ್ರಭಾವಿತರಾಗದ ನಿಷ್ಠುರ ವಿಮರ್ಶೆಯನ್ನು ಪರಿಗಣಿಸಬೇಕು.

ನರೇಂದ್ರ ಪೈ said...

ಪ್ರೀತಿಯ ಸೋಮುರವರೆ, ನಮಸ್ತೆ. ತಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್. ನಿಮ್ಮ ಮಾತು ಸರಿ, ಆದರೆ ನಮ್ಮಲ್ಲಿ ಕೇವಲ ಓದುವ ಖುಶಿಗಾಗಿ ಓದುವ ಓದುಗರು ತಮ್ಮ ಅನಿಸಿಕೆ ಹಂಚಿಕೊಳ್ಳುವುದು ತೀರ ಕಡಿಮೆಯಾಗಿದೆ.

ಹನುಮಂತ ಹಾಲಿಗೇರಿ said...

ನಿಮ್ಒಮ ಟಿಪ್ಬ್ಬಪಣೆಗಳನ್ನು ನೋಡಿದೆ ತೀರ್ಪುಗಾರನ ಜವಾಬ್ದಾರಿ ಬಲು ಕಷ್ಟದ್ದು ಎಂದು ಭಯವಾಗುತ್ತದೆ ಸರ್. ನಿಮ್ಮ ಬ್ಲಾಗಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಒಂಥರಾ ಪಠ್ಯವಿದ್ದಂತೆ ಈ ಬ್ಲಾಗ್. ಬೈಗುಳ- ಹೊಗಳಿಕೆಗಳಿಗೆ ಜಗ್ಗದೇ ನಿಷ್ಕಾಮ ಕರ್ಮದಂತೆ ಬರಿಯುತ್ತಿರುವ ನಿಮ್ಮ ಸಮತೂಕ ಬಹಳಷ್ಟು ಹಿಡಿಸಿತು.

ನರೇಂದ್ರ ಪೈ said...

ಹನುಮಂತ ಹಾಲಿಗೇರಿ ಸರ್, ಸ್ವತಃ ಕತೆಗಾರರೂ, ಕ್ಷೇತ್ರಕಾರ್ಯಗಳಲ್ಲಿ ತೊಡಗಿ ಜೀವಂತ ಅನುಭವ ಗ್ರಹಿಸಿದವರೂ ಆದ ನೀವು ಒಂದಾನೊಂದು ಅನಿಸಿಕೆಯಷ್ಟೇ ಆದ ನನ್ನ ಮಾತುಗಳಿಗೆ ಸ್ಪಂದಿಸಿದ್ದು ನಿಮ್ಮ ಹೃದಯವಂತಿಕೆಯನ್ನು ಸೂಚಿಸುತ್ತದೆ ಸರ್. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುವೆ ಸರ್