Tuesday, August 8, 2017

ಅಮೀನ... ನೀನೆಲ್ಲಿ?

ಇದು ಜ ನಾ ತೇಜಶ್ರೀಯವರು ಮಂಗಳೂರಿನ ಬಹುಭಾಷಾ ಕವಿಗೋಷ್ಠಿಯಲ್ಲಿ ಓದಿದ ನಾಲ್ಕು ಕವಿತೆಗಳಲ್ಲಿ ಒಂದು. (ಪ್ರಜಾವಾಣಿ ಮುಕ್ತಛಂದದ ಆಗಸ್ಟ್ 28, 2016ರ ಸಂಚಿಕೆಯಲ್ಲಿದೆ.) ‘ಉಸ್ರುಬಂಡೆ’ ಸಂಕಲನದ ‘ಗಾಂಧಿ ನನಗೆ ಗೊತ್ತು’ ಕವಿತೆಯನ್ನಲ್ಲದೆ ಇನ್ನೂ ಎರಡು ಕವಿತೆಗಳನ್ನು ಅವರು ಆವತ್ತು ಓದಿದರು. ಅಹಲ್ಯೆಯ ಕುರಿತ ಒಂದು ಕವಿತೆ ಮತ್ತು ‘ಯಕ್ಷಿಣಿ ಕನ್ನಡಿ’ ಎಂಬ ಇನ್ನೊಂದು ಕವಿತೆಯನ್ನೂ ಸೇರಿ ಎರಡೂ ಕವಿತೆಗಳು ಇನ್ನೂ ಎಲ್ಲಿಯೂ ಕಾಣಿಸಿಕೊಂಡಂತಿಲ್ಲ. ಅಹಲ್ಯೆ ಕುರಿತ ಕವಿತೆಯಂತೂ ಆವತ್ತು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತ್ತೆಂದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ. ಅಧ್ಯಕ್ಷತೆ ವಹಿಸಿದ್ದ ಪ್ರಸಿದ್ಧ ಯಕ್ಷಗಾನ-ತಾಳಮದ್ದಲೆಯ ಅರ್ಥಧಾರಿ, ‘ತತ್ತ್ವಮನ’, ಭಾರತೀಯ ದರ್ಶನಗಳ ಕುರಿತ ಕೃತಿಗಳನ್ನು ರಚಿಸಿದ ಡಾ||ಎಂ ಪ್ರಭಾಕರ ಜೋಶಿಯವರಂತೂ ಅಹಲ್ಯೆಯ ಈ ಹೊಸನಿಟ್ಟಿನ ಪರಿಕಲ್ಪನೆಯ ಕುರಿತು ವಾಹ್! ವಾಹ್! ಎನ್ನುತ್ತಲೇ ಈ ಕವನ ಕರುಣಿಸಿದ "ಸ್ಪರ್ಶ"ಕ್ಕೆ ಮಾರುಹೋದಂತಿತ್ತು. ಕವನ ಮುಗಿಯುವುದೂ ಸ್ಪರ್ಶ ಕುರಿತ ಅಂಥ ಒಂದು ಸಾಲಿನೊಂದಿಗೇನೆ.

ಈ ಕೊಳಲ ಕವಿತೆಯ ಸೊಗಡು ನೋಡಿ. ಹೊನಲು ಏರಿದಂತೆ ಹೊಳಹುದೋರಿ ಮರೆಯಾದ ಬೆಳಕನ್ನು ಅರಸಿ ಲಗುಬಗೆಯಿಂದ ಅವಳು ಅವಸರಿಸಿ ಓಡುತ್ತಿದ್ದಾಳೆ. ಇಲ್ಲಿ ಮಾವಿನ ತೋಪಿನ ನಡುವಿರುವ ಕಲ್ಲಬಾವಿಯ ಒಂದು ಚಿತ್ರವಿದೆ. ಅದೆಷ್ಟು ರಮ್ಯವಾಗಿದೆ ಮತ್ತು ಪರಿಪೂರ್ಣವೂ ಆಗಿದೆ ಎಂದರೆ ಯಾವುದೋ ಬೆಳದಿಂಗಳ ಒಂದು ರಾತ್ರಿ ನಾವು ಇಲ್ಲಿ ತಂಗಿದ್ದ ನೆನಪು ಬಂದಂತಾಗುತ್ತದೆ! ಮಾತ್ರವಲ್ಲ, ಕವಿತೆ ಕೊಡುವ ಚಿತ್ರದಲ್ಲಿ ಎಲ್ಲಿಯೂ ಮಳೆ ಸುರಿದು ನಿಂತ ಹೊಳಹು ಇಲ್ಲ. ಆದರೂ ನನಗೆ ಅಲ್ಲೆಲ್ಲ ಪಾದದಡಿಯ ಹುಲ್ಲು,ಗರಿಕೆಗಳೂ ನೀರಲ್ಲಿ ತೊಯ್ದಂತೆ, ಮಾವಿನ ಮರಗಳೆಲ್ಲ ಗಾಳಿ ಬೀಸಿದಾಗ ಮಳೆ ನೀರ ಹನಿಗಳನ್ನು ಬರ್ರನೆ ಸುರಿಸುತ್ತಿದ್ದಂತೆ ಅನಿಸುತ್ತಿದೆ. ಮುಂದಿನ ಚರಣದಲ್ಲಿ ಇದೇ ನಿಜವೇನೋ ಎಂದೂ ಅನಿಸುವಂತಿದೆ ನೋಡಿ...

ಇಡೀ ಚರಣವನ್ನು ಒಂದೇ ಗುಟುಕಿಗೆ ಗ್ರಹಿಕೆಗೆ ತೆಗೆದುಕೊಳ್ಳಲು ಕಷ್ಟವಾಗುವಷ್ಟು (ಓವರ್ ಡೋಸ್!) ಇದು ತೇಜಸ್ಸಿನಿಂದ ಹೊಳೆಯುತ್ತಿದೆ. ಇಲ್ಲಿ ಯಾರೋ ಬಿಕ್ಕಿದಂತಿದೆ. ಬಿಕ್ಕುತ್ತಿರುವುದು ಯಾರೂ ಅಲ್ಲ, ಇಡೀ ಪ್ರಕೃತಿ. ಬೆಳಕು ಚೆಲ್ಲುತ್ತಿರುವ ಚಂದ್ರಮ ಬಿಕ್ಕುತ್ತಿದ್ದಾನೆ, ಕಲ್ಲಬಾವಿಯ ನೀರು ಬಿಕ್ಕುತ್ತಿದೆ, ತೊಟ್ಟಿಕ್ಕುತ್ತಿರುವ ತೋಪಿನ ಮರಗಳೆಲ್ಲವೂ ಬಿಕ್ಕುತ್ತಿವೆ! ಇಲ್ಲಿ ಹಿಕ್ಕಲು ನೀರ ಹರಿವು ಎನ್ನುವ ಪ್ರಯೋಗವಿದೆ ಗಮನಿಸಿ. ಹಿಕ್ಕುವುದು ಎನ್ನುವ ಶಬ್ದವೇ ಕೇವಲ ಅನುಭವಕ್ಕೆ ನಿಲುಕುವಂಥಾದ್ದು. ಅರ್ಥಕ್ಕೆ ಸಿಲುಕುವುದು ಆಮೇಲಿನ ಪ್ರಕ್ರಿಯೆ. ಹಾಗೆಯೇ ‘ದಾಟುತ್ತ ಸಾರುವೆಯ ಕತ್ತಲೆಯ ಒಳಹೊಕ್ಕಳು’ ಎಂಬ ಸಾಲು! ಸಾರುವುದು ಎನ್ನುವಲ್ಲೇ ಚಲನೆ ಇದೆ. ಆದರೆ ಸಾರುವೆ ಎಂದರೆ ಸೇತುವೆ, ಏಣಿ ಎರಡೂ ಆಗುತ್ತದೆ. ಇದು ಹೊಮ್ಮಿಸುವ ಅರ್ಥವ್ಯಾಪ್ತಿಯನ್ನು ಸ್ವೀಕರಿಸಿ! ಕತ್ತಲ ಕಣ್ಣಿಗೆ ಕಣ್ಣು ನೆಟ್ಟು ಅವಳು ಏರಿ ದಾಟುತ್ತಿರುವುದೇನನ್ನು? ಏರಿದರೂ ದಾಟಿದರೂ ಹೊಕ್ಕಿದ್ದು ಕತ್ತಲನ್ನೇ. ಅದೂ ಹೇಗೆ? ಮೊಗ್ಗೊಳಗೆ ಪರಾಗ ಮಿಲುಗುವಂತೆ ಕತ್ತಲೆಯ ಒಳಹೊಕ್ಕು ಸೇರಿಕೊಳ್ಳುತ್ತಾಳವಳು! ಆ ಮಿಲುಗುವುದು ಎಂಬ ಪ್ರಯೋಗ ಗಮನಿಸಿ. ಮಿಲನ, ಮಿಲಾಯಿಸು, ನಿಮೀಲಿತ ಎಲ್ಲ ಕೇಳಿದ್ದೇವೆ, ಅಲ್ಲವೆ? ಮಿಲುಗುವುದು ಹೊಸದು! ಆಗಲೇ ಹೇಳಿದಂತೆ ಇಂಥ ಪ್ರಯೋಗಗಳು ಮೊದಲು ಅನುಭವಕ್ಕೆ ದಕ್ಕುತ್ತವೆ, ಅರ್ಥಕ್ಕೆ ಕೊಂಚ ತಡವಾಗಿ, ತಡಕಿ ಹುಡುಕಿದರೆ ದಕ್ಕುತ್ತವೆ. ಆದರೆ ರಸಗ್ರಹಣಕ್ಕೆ ತೊಡಕಿಲ್ಲದಂತೆ ಕೈಹಿಡಿದು ನಡೆಸುತ್ತವೆ ಕೂಡ.

ಹಕ್ಕೆದಲೆ ಎಂದರೇನು? ಹಕ್ಕೆ ಎಂದರೆ ಹಕ್ಕಿಗೂಡು. ಅಲೆ ಎನ್ನುವಲ್ಲಿ ಅನಿವಾರ್ಯವಾಗಿ ನಿಮಗೆ ನೆನಪಾಗುವುದು ಕಲ್ಲಬಾವಿಯ ನೀರು. ಮಿಸುಕಾಟ, ರೆಕ್ಕೆಬಡಿತ ಹಕ್ಕಿಯದ್ದೇ. ಅಲ್ಲಿ ಹಕ್ಕಿಗೂಡಿನಲ್ಲಿ ಒಂದು ಮಿಸುಕಾಟವೂ ಇದೆ, ಅದು ಒಂದು ಅಲೆಯನ್ನೂ ಎಬ್ಬಿಸಿದೆ. ಅಲೆಗೆ ದಡ ಸೋಕಿದಾಗಲೆ ಮುಕ್ತಿ ಅಲ್ಲವೆ? ದಡ ಯಾರು? ಅಮೀನ! ಅಲ್ಲಿ ಹಕ್ಕಿಗೂಡಿನ ಹಕ್ಕಿಗಳ ಮರುನಿದ್ದೆಯ ಹಂಬಿನಲ್ಲೇ (ಹಂಬು - ಗಮನಿಸಿ. ಹಂಬು ಎನ್ನುವುದು ಇಲ್ಲಿ ಹಂಬಲ, ನಿದ್ದೆಯ ಮಂಪರು ಎನ್ನುವ ಅರ್ಥ ಕೊಡುತ್ತಲೇ ಬಳ್ಳಿ, ಬಿಳಲು ಎನ್ನುವ ಅರ್ಥವನ್ನೂ ಸ್ಫುರಿಸುತ್ತಿದೆ. ಬಿಳಲಿಗೆ ಜೋತು ಬಿದ್ದಂತಿರುವ ಒಂದು ಸ್ಥಿತಿಯ ಚಿತ್ರವನ್ನೂ ಇದು ಮನಸ್ಸಿಗೆ ತರುತ್ತಿದೆ.) ಇನ್ನೇನೋ ನಡೆಯುತ್ತಿದೆ. ಘಟಿಸುತ್ತಿದೆ ಎನ್ನಬೇಕೆ? "ಕನಸಿನೂರಿಗೆ ಹಬ್ಬುವ ಪರತತ್ತ್ವ!" ಪರತತ್ತ್ವಕ್ಕೆ ಕನಸಿನ ಹಂಗಿದೆಯೆ? ಇಹದ ಮೋಹ ಕಳಚಿ, ಎಲ್ಲ ಕನಸುಗಳ ಬೇಲಿಯಾಚೆಗೆ ನಡೆದ ನಂತರ ಕೈಹಿಡಿವ ತತ್ತ್ವವಲ್ಲವೆ ಅದು! ಅದು ಪರಕ್ಕೆ ಸಂಬಂಧಿಸಿದ್ದಲ್ಲವೆ? ಆ ಹಾದಿಯಲ್ಲಿ ಕನಸುಗಳಿರುತ್ತವೆಯೆ? ತೇಜಶ್ರೀಯವರ ಕವಿತೆಯಲ್ಲಿ ಇರುತ್ತವೆ. ಇಲ್ಲಿ ಮಾತ್ರ ಅದು ಸಂಭವಿಸುತ್ತದೆ. ಇಲ್ಲಿ ಪರತತ್ತ್ವ ಕನಸಿನೂರಿಗೆ ಹಬ್ಬುವ ಜೀವಸೆಲೆ ಚಿಮ್ಮಿಸಿದೆ. ಹೀಗಾದಾಗ ವಿಪರೀತವಾದದ್ದು ಏನಾದರೂ ನಡೆಯಲೇ ಬೇಕಲ್ಲ!

ನೋಡಿ, ಈಗ ಕಾಣಿಸಿಕೊಳ್ಳುತ್ತಾನೆ, ಬಾವಿಯ ಕಡುನೀಲಿಯಾಗಿದ್ದೂ ಈಗ ಕಪ್ಪಾದ ನೀರಿನ ನಡುವೆ, ಚಂದಿರ! ಎಲ್ಲಿದ್ದ ಈತ ಇಷ್ಟು ಹೊತ್ತು? ಯಾರು ಹೇಳಿದ್ದರು ನಮಗೆ ಆವತ್ತು ಬೆಳ್ದಿಂಗಳೆಂದು? ಅದು ಹೇಗೆ ನನಗೆ ಮೊದಲೇ ಗೊತ್ತಾಗಿತ್ತು? ಆದರೆ ನಿಜವಾದ ಮ್ಯಾಜಿಕ್ ನಡೆಯುವುದು ಚಂದಿರ ಕಾಣಿಸಿಕೊಂಡಾಗಲೂ ಅಲ್ಲ, ರಾತ್ರಿರಾಣಿಯರ ಹೂವಿನ ಮಳೆ ಸುರಿದಾಗಲೂ ಅಲ್ಲ. ಸುರಿದದ್ದು ಮತ್ತದೇ ಮಳೆನೀರ ಸಿಂಚನವೂ ಇದ್ದೀತು, ಯಾರಿಗೆ ಗೊತ್ತು! ಅದೂ ಹೂಮಳೆಯೇ ಅಲ್ಲವೆ ಮತ್ತೆ? ಅದ್ಭುತವಾದದ್ದು ಇದೆ ಮುಂದೆ.

ಆ ಕ್ಷಣದೆ ಮತ್ತದೇ ಕೊಳಲನಾದ...
ಮಂತ್ರಂಗಾಳಿಯಲ್ಲಿ ಸಗ್ಗದ ಹಿಗ್ಗು,
ಸೋಪಾನ ಕಟ್ಟೆಗೊರಗಿ ಬಾವಿನೀರ ಉಯ್ಯಲಾಟ.
ಧಿಗ್ಗನೆ ಹೊತ್ತಿ ಏನೋ ಎದೆಯೊಳಗೆ
ಅಮೀನ ತಾರಾಡಿದಳು,
ಎಲ್ಲಿಂದ ಹೊಮ್ಮುತ್ತಿದೆ ಈ ಪಾಟಿ ಬೆಳಕು
ಎತ್ತ ಹರಿಯುತ್ತಿದೆ ಇದು ಹೀಗೆ,
ದುರದುರನೆ ನೋಡನೋಡುತ್ತ ಕಲ್ಲುಬಾವಿಯ
ನಗುಮೊಗ್ಗೆಯಾದಳವಳು ಕಂಡು ಆ ಗಮ್ಯವ ಅದರೊಳಗೆ.
ಮರುಗಳಿಗೆ,
ಕದಡಿತು ನಡುಬಾವಿಯ ಚಂದ್ರಬಿಂಬ,
ಗರಬಡಿದು ನಿಂತಿತು ಬಾವಿ ಧಿಕ್ಕನೆ ಹೊಕ್ಕ ಬೆಳಕಿಗೆ,
ಗಳಬಳವಿಲ್ಲದೆ ಬಾಗಿ ನಿಂತವು ರಾತ್ರಿರಾಣಿ ಹೂಗಳು,
ಅರಳೀಮರದೆಡೆಯಿಂದ ಸುಯಿಲಿನ ಸುಯ್ಯಲಾಟ.
ಅಮೀನ...
ನೀನೆಲ್ಲಿ?
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ