Sunday, September 17, 2017

ಮೌನಕ್ಕೆ ಅವಕಾಶವಿದೆಯೆಂದಾದರೆ....

ಈಚೆಗೆ ಗ್ರೇಟೆಸ್ಟ್ ಉರ್ದು ಸ್ಟೋರೀಸ್ ಎವರ್ ಟೋಲ್ಡ್ ಎಂಬ ಒಂದು ಅಪರೂಪದ ಕೃತಿ ಬಂತು. ಮುಹಮ್ಮದ್ ಉಮರ್ ಮೆಮೊನ್ ಆರಿಸಿ ಅನುವಾದಿಸಿದ ಹೆಸರಾಂತ ಉರ್ದು ಕತೆಗಾರರ ಒಟ್ಟು ಇಪ್ಪತ್ತೈದು ಕತೆಗಳಿರುವ ಈ ಪುಸ್ತಕವನ್ನು ಹಲವು ಉತ್ತಮ ಕೃತಿಗಳನ್ನು ಹೊರತಂದ ಅಲೆಪ್ ಬುಕ್ಸ್ ಪ್ರಕಟಿಸಿದೆ. ಫಾಂಟ್ ತೀರ ಚಿಕ್ಕದು ಅನಿಸಿದರೂ ಮುನ್ನೂರೈವತ್ತು ಪುಟಗಳ ಪುಸ್ತಕಕ್ಕೆ ಬಹುಶಃ ಅನಿವಾರ್ಯವಾಗಿತ್ತೇನೊ. ಉಮರ್ ಮೆಮೊನ್ ಅವರೇ ಇಕ್ರಮುಲ್ಲಾ ಅವರ ಎರಡು ನೀಳ್ಗತೆಗಳ ಪುಸ್ತಕ, ರೆಗ್ರೆಟ್ ಕೂಡಾ ಅನುವಾದಿಸಿರುವುದು ಇಲ್ಲಿ ಉಲ್ಲೇಖನೀಯ.

ಈ ಸಂಕಲನದ ಮೊದಲ ಕತೆಯೇ ಈಚೆಗೆ ತೀರಿಕೊಂಡ ನಯರ್ ಮಸೂದ್ ಅವರದ್ದು. (ನಯರ್ ಮಸೂದ್ ಬಗ್ಗೆ ಹೆಚ್ಚಿನ ವಿವರಗಳಿಗೆ ಈ ಬಾರಿಯ ಪಂಚ್ ಮ್ಯಾಗಝೀನ್ ಗಮನಿಸಿ) ಕತೆಯ ಹೆಸರು ಅಬ್ಸ್‌ಕ್ಯೂರ್ ಡೊಮೈನ್ಸ್ ಆಫ್ ಫಿಯರ್ ಯಾಂಡ್ ಡಿಸಾಯರ್. ಮೊದಲಿಗೆ ಇಲ್ಲಿನ ನಿರೂಪಕ ವರ್ಷಕ್ಕೊಮ್ಮೆ ತನ್ನ ಪಾರಂಪರಿಕ ವಾಡೆಗೆ ಬರುವ, ಬಂದಾಗ ಎರಡು ಮೂರು ದಿನ ತಂಗುವ ಒಬ್ಬ ಮಹಿಳೆಯಲ್ಲಿ ಮೋಹಗೊಂಡು ಅವಳ ದೇಹಸಂಗಕ್ಕೆ ಹಾತೊರೆಯುವ ವಿವರಗಳೇ ಇವೆ. ಆ ಮನೆಯ ತುಂಬ ಆ ಮನೆಯಂತೆಯೇ ಪಳೆಯುಳಿಕೆಗಳಾಗಿರುವ ಮುದಿ ಹೆಂಗಸರು. ಇವರ ಮಿಲನಕ್ಕೆ ಅವರದೇ ಬಹುದೊಡ್ಡ ಅಡ್ಡಿ. ಅಂದರೆ, ಪ್ರತೀ ಬಾರಿ ಏಕಾಂತ ಸಾಧಿಸಿದಾಗಲೂ ಎಲ್ಲಿಂದಲೋ ಯಾರೋ ಗಮನಿಸುತ್ತಿರಬಹುದು ಎನ್ನುವ ಒಂದು ಶಂಕೆ, ಶಂಕೆ ಹುಟ್ಟಿಸುವ ಭೀತಿ ಇಲ್ಲಿನ ಅಡ್ಡಿ. ಇವನಿಗೊಬ್ಬ ಪುಟ್ಟ ಹುಡುಗಿಯನ್ನು ಇವನ ಭಾವೀ ವಧು ಎಂದು ತಮಾಶೆ ಮಾಡುವ ಮನೆಮಂದಿ. ಅಪಾರ ನಿರೀಕ್ಷೆ, ಆಸೆ ಮತ್ತು ಲೈಂಗಿಕ ವಾಂಛೆ ಹುಟ್ಟಿಸಿದ ಆಕೆ ಇದ್ದಕ್ಕಿದ್ದಂತೆ ಹೊರಟು ಹೋಗಬೇಕಾಗಿ ಬರುತ್ತದೆ. ಈ ಇಬ್ಬರು, ಬಹುಶಃ ವಯಸ್ಸಿನಲ್ಲಿ ತೀರ ಕಿರಿಯನಾಗಿರಬಹುದಾದ ನಿರೂಪಕ ಮತ್ತು ಪ್ರಬುದ್ಧೆ, ವಿವಾಹಿತೆ ಎಂದೆಲ್ಲ ಅನಿಸುವ ಆಕೆಯ ನಡುವಿನ ದೇಹ ಭಾಷೆಯ ಮೂಕ ಸಂಭಾಷಣೆ, ಅಲ್ಪಸ್ವಲ್ಪ ಸಾನ್ನಿಧ್ಯ, ಸಂಪರ್ಕ, ಸಾಮೀಪ್ಯಗಳ ರೋಮಾಂಚಕತೆ ಸಾಕಷ್ಟು ಪೋಷಣೆ ಪಡೆದಿದ್ದೂ ಅದಿಷ್ಟೂ ಭಾಗ ಕತೆ ಉದ್ದೇಶಿಸಿರುವ ಮಹತ್ವದ ಯಾವುದೋ ಇನ್ನೊಂದಕ್ಕೆ ಕೇವಲ ತಾಂತ್ರಿಕ ಚಿಮ್ಮುಹಲಗೆಯಷ್ಟೇ ಆಗಿರುವುದು ವಿಶೇಷ.

ಈತನಿಗೆ ಇದ್ದಕ್ಕಿದ್ದಂತೆ, ಅಥವಾ ಕೆಲ ಸಮಯದ ಬಳಿಕ ಈ ಮುದಿಯರೇ ತುಂಬಿರುವ ಹಳೆಯ ಸುವಿಶಾಲ ಮನೆ/ವಾಡೆ ಉಸಿರುಗಟ್ಟಿಸುವ ಸೆರೆಮನೆ ಎನಿಸತೊಡಗುತ್ತದೆ. ತಾನು ಹೊರಗೆ ಹೋಗಬೇಕು, ದುಡಿಯಬೇಕು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ಸಂಪಾದಿಸಿ ತಿನ್ನಬೇಕು ಮುಂತಾದ ತುಡಿತಗಳೆಲ್ಲ ಇವನಲ್ಲಿ ಕಾಣಿಸಿಕೊಳ್ಳುತ್ತವೆ. ಬಹುಶಃ ಕೂತು ತಿನ್ನಬಹುದಾದ ಸ್ಥಿತಿಗತಿಯ ವಾತಾವರಣವೊಂದರಿಂದ ಈತ ಹೊರಬೀಳುತ್ತಾನೆ ಮತ್ತು ಒಬ್ಬ ಅಲೆಮಾರಿಯಂತೆ ಬದುಕತೊಡಗುತ್ತಾನೆ. ಮನೆಗಳನ್ನು ಹೊಕ್ಕು ಅವುಗಳ ಆರ್ಕಿಟೆಕ್ಚರ್ ಸ್ಟಡಿ ಮಾಡಿ ಒಪೀನಿಯನ್ ನೀಡುವ ಒಂದು ವೃತ್ತಿ, ಅಂಥದ್ದೊಂದು ಇದ್ದರೆ, ಅದನ್ನೀತ ಮಾಡತೊಡಗುತ್ತಾನೆ. ಮಾಡುತ್ತ ಮಾಡುತ್ತ ಅದರ ಟೆಕ್ನಿಕಲ್ ಅಥವಾ ಪ್ರೊಫೆಶನಲ್ ಚೌಕಟ್ಟಿನಿಂದಲೂ ಹೊರಬರುತ್ತಾನೆ. ಒಂದರ್ಥದಲ್ಲಿ ಅಕ್ಷರಶಃ ಬೀದಿಗೆ ಬರುತ್ತಾನೆ.

ಮುಂದಿನ ಹಂತವೇ ವಿಶೇಷವಾದದ್ದು ಮತ್ತು ಬಹಳ ಸೂಕ್ಷ್ಮವೂ ಮುಖ್ಯವೂ ಆದದ್ದು. ಇಲ್ಲೇನಾಗುತ್ತದೆ ಎಂದರೆ, ಈತ ಸುಮ್ಮನೇ ಕುತೂಹಲಕ್ಕೆ ಒಂದು ಮನೆಯ ಬೇರೆ ಬೇರೆ ಕೋಣೆಯಲ್ಲಿ ನಿಂತು, ಅದರ ಕಿಟಕಿ, ಬಾಗಿಲುಗಳ ಮೂಲಕ ಕೋಣೆಯ ಬೇರೆ ಬೇರೆ ಸ್ಥಳದಲ್ಲಿ ನಿಂತು ದೃಷ್ಟಿ ಹಾಯಿಸಿದಾಗ್ಯೂ ನೋಡಲು ಸಾಧ್ಯವೇ ಇಲ್ಲದ ಮನೆಯ ಅನ್ಯಭಾಗಗಳನ್ನು ಮತ್ತು ನೋಡಬಹುದಾದ ಅನ್ಯಭಾಗಗಳನ್ನು ಗುರುತಿಸುತ್ತ ಹೋಗುತ್ತಾನೆ. ಒಂದು ಭಾಗಕ್ಕೆ ಬಿಳಿ ಬಣ್ಣ ಕೊಟ್ಟರೆ ಇನ್ನೊಂದಕ್ಕೆ ಕರಿ ಬಣ್ಣ ಕೊಡುತ್ತಾನೆ. ಒಟ್ಟಾರೆಯಾಗಿ, ಯಾವುದೇ ಕೋಣೆಯಲ್ಲಿ ನಿಂತು ಸಾಧ್ಯವಿರುವ ಯಾವತ್ತೂ ಕೋನಗಳಿಂದ ದೃಷ್ಟಿ ಹಾಯಿಸಿದರೂ ನೋಟಕ್ಕೆ ಸಿಗುವುದು ಸಾಧ್ಯವೇ ಇಲ್ಲದ ಒಂದು ಭಾಗವನ್ನು ಗುರುತಿಸುವಾಗ ಅದಕ್ಕೆ ಒಂದು ನಿರ್ದಿಷ್ಟ ಆಕೃತಿ ಕೂಡ ಒದಗುವುದನ್ನು ಈತ ಕಂಡುಕೊಳ್ಳುತ್ತಾನೆ. ಇಲ್ಲಿಯ ತನಕ ಕೇವಲ ಆರ್ಕಿಟೆಕ್ಚರಲ್ ಆಗಿದ್ದ ಈತನ ಅಧ್ಯಯನಕ್ಕೆ ಇದ್ದಕ್ಕಿದ್ದಂತೆ ಮಾನವೀಯ ಮುಖವೊಂದು ಒಡಮೂಡುವುದು ಇಲ್ಲಿಯೇ.


ಒಂದು ಪ್ರೈವಸಿ ಎನ್ನುವುದು ವ್ಯಕ್ತಿಗೆ ತನ್ನ ಸ್ವಂತ ಮನೆಯಲ್ಲಿ ಸಿಗಬೇಕು ಎನ್ನುವುದು ಸಾಮಾನ್ಯವಾದ ನಿರೀಕ್ಷೆ. ಆದರೆ ಅದು ಯಾವ ಕಾಲಕ್ಕೆ ಸೇರಿದ ಮನೆಯಾಗಿದ್ದರೂ, ಯಾವ ಪ್ರಕಾರದ ಮನೆಯೇ (ವಾಡೆ/ಪ್ರತ್ಯೇಕ ಮನೆ/ಸಾಲುಮನೆ/ಅಪಾರ್ಟ್‌ಮೆಂಟು/ಪೇಯಿಂಗ್ ಗೆಸ್ಟುಗಳಿರುವ ಮನೆ ಇತ್ಯಾದಿ) ಆಗಿದ್ದರೂ, ಯಾವ ಊರು, ನಗರಕ್ಕೆ ಸೇರಿದ ಮನೆಯಾಗಿದ್ದರೂ ಅದರ ಎಲ್ಲಾ ಬಿಂದುಗಳಲ್ಲೂ ಪ್ರೈವಸಿ ಇರುವುದಿಲ್ಲ ಎನ್ನುವುದು ಕೂಡ ನಮಗೆಲ್ಲ ಗೊತ್ತು. ಆದರೆ, ಯಾರೂ, ಎಲ್ಲಿಂದಲೂ ನಮ್ಮನ್ನು ಗಮನಿಸಲು ಸಾಧ್ಯವೇ ಇಲ್ಲದ ಬಿಂದುಗಳು ಒಂದು ಮನೆಯಲ್ಲಿ ಇರುವುದು ಸಾಧ್ಯ. ಇವತ್ತಿನ ಸಿಸಿ ಟಿವಿ, ಗ್ಲಾಸುಗಳ ಕಿಟಕಿ, ಸ್ಥಳ ಉಳಿಸುವ ಪ್ಲಾನುಗಳ ದಿನಗಳಲ್ಲೂ ಬಹುಶಃ ಇದು ಸಾಧ್ಯ. ಆದರೆ ಆ ಬಿಂದುಗಳ ಮಾನವೀಯ ನೆಲೆಯ ಅಧ್ಯಯನವೊಂದು ಸಾಧ್ಯವೆ?

ಅಂದರೆ, ಇದನ್ನೇ ಮಾನವ ದೇಹಕ್ಕೆ ಅನ್ವಯಿಸಿ ನೋಡುವುದು ಸಾಧ್ಯವಿಲ್ಲವೆ? ನಮ್ಮಲ್ಲೂ, ಒಳಗೆ ಮತ್ತು ಹೊರಗೆ, ನಾವು ನೋಡಲು ಸಾಧ್ಯವಿರುವ ಮತ್ತು ಏನು ಮಾಡಿದರೂ ನೋಡಲು ಸಾಧ್ಯವಿಲ್ಲದ (ದೃಷ್ಟಿ)ಕೋನಗಳು ಇಲ್ಲವೆ? ಮಹಾಭಾರತದ ಅರ್ಜುನನಿಗೆ ಶ್ರೀಕೃಷ್ಣ ದಿವ್ಯದೃಷ್ಟಿ ನೀಡುವ ಒಂದು ಸಂದರ್ಭವಿದೆ. ಅಂದರೆ, ಮಾನವ ಕಣ್ಣುಗಳಿಗೆ ಒಂದು ಮಿತಿ ಇದೆ. ಬೆಳಕು ಯಾವ ವಸ್ತುವಿನ ಮೇಲೆ ಬಿದ್ದು ಪ್ರತಿಫಲಿಸುವುದೋ ಅದನ್ನು ಮಾತ್ರ ಮನುಷ್ಯ ನೋಡಬಲ್ಲ. ಬೆಳಕನ್ನು ಹೀರಿಕೊಂಡು ಬಿಡುವ ವಸ್ತುಗಳನ್ನು ಅವನು ನೋಡಲಾರ. ಹಾಗೆಯೇ ಕತ್ತಲೆ ಅವನಿಗೆ ನಿಗೂಢ. ಕತ್ತಲಲ್ಲಿ ನಾಯಿ, ಬೆಕ್ಕು ಮುಂತಾದ ಕೆಲವು ಪ್ರಾಣಿಗಳು ಕಾಣಬಲ್ಲವಂತೆ! ಆ ದೃಷ್ಟಿ ನಮಗಿಲ್ಲ. ಹಗಲಲ್ಲೇ ನಾವು ನಿಸ್ತಂತು ಜಾಲವನ್ನು ಕಾಣಲಾರೆವು, ಆದರೆ ಅದು ಇದೆ.

ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಂತಾಗ ಅಥವಾ ಮಲಗಿದಾಗ ಅಥವಾ ಕೂತಾಗ ಕಾಮ ಭಾವ ಸ್ಫುರಿಸುವ ಅನುಭೂತಿ, ನಿದ್ದೆ ಬರುವ ಅನುಭೂತಿ, ಯಾರೋ ನೋಡುತ್ತಿದ್ದಾರೆಂಬ ಆತಂಕ ಮೂಡುವ ಅನುಭೂತಿ ಎಲ್ಲ ಇರುತ್ತದೆಯೆ? ಒಂದು ನಿರ್ದಿಷ್ಟ ಬಿಂದು ನಿಮ್ಮ ಜೊತೆ ಮಾತನಾಡಲು ಸಾಧ್ಯವೆ? ಅಲ್ಲೊಂದು ಕತೆಯಿರಲು ಸಾಧ್ಯವೆ? ಅಲ್ಲಿ ನಿಂತದ್ದೇ ನೀವು ಆ ಕಾಲಕ್ಕೆ ಸಂದು ಹೋಗುವುದು ಸಂಭಾವ್ಯವೆ? ಮನುಷ್ಯನೊಳಗೂ ಭಾಷೆಯ, ಅಕ್ಷರದ, ಮಾತಿನ ಹಂಗಿಲ್ಲದ ಅನುಭೂತಿಗಳಿದ್ದೇ ಇವೆಯಲ್ಲವೆ?

ಈ ಭಾಗವನ್ನು ಕತೆಯ ಆರಂಭದ ದೆಸೆಯ ವಿದ್ಯಮಾನದೊಂದಿಗೆ ನೋಡಬೇಕು. ಒಂದು ಗಂಡು, ಇನ್ನೊಂದು ಹೆಣ್ಣು ದೇಹವನ್ನು ಭಯ ಮತ್ತು ಮೋಹ ಎರಡೂ ಸೇರಿದ ಒಂದು ವಿಲಕ್ಷಣ ತಲ್ಲಣದೊಂದಿಗೆ ಸಮೀಪಿಸುವ, ಸ್ಪರ್ಶಿಸುವ, ಸ್ಪರ್ಶದ ಮುಖೇನ ಪಂಚೇಂದ್ರಿಯಗಳಿಗೂ ದಕ್ಕಿಸಿಕೊಳ್ಳುವ ಒಂದು ನಡೆ ಏನಿದೆ ಅದನ್ನು ಅರ್ಥಮಾಡಿಕೊಳ್ಳುವುದರ ಮೂಲಕವೇ ಮನುಷ್ಯನ ಆಳದಲ್ಲಿರುವ ಬಯಕೆ ಮತ್ತು ಭಯದ ಪ್ರತಿಮೆಗಳನ್ನು ಚಿತ್ತ ಕೆತ್ತಬೇಕಿದೆ. ಮತ್ತು ಹಾಗೆ ಕೆತ್ತುತ್ತಲೇ ಮನುಷ್ಯ (ಮತ್ತು ಮನೆ) ನಮಗೆ ಅರ್ಥವಾಗಬೇಕಿದೆ.

ಕತೆಯ ಕೊನೆಯ ಭಾಗದಲ್ಲಿ ಕಗ್ಗತ್ತಲೆಯಲ್ಲಿ ನಡೆಯುವ ಒಂದು ಸಮಾಗಮದ ಚಿತ್ರವಿದೆ. ಅದು ಕಣ್ಣಿದ್ದೂ ಕುರುಡುತನ ತರುವ ಕತ್ತಲಲ್ಲೇ ಯಾಕೆ ನಡೆಯುತ್ತದೆ, ಗೊತ್ತಿಲ್ಲ. ಸದ್ದು ಹುಟ್ಟಿಸುವ ಭಾಷೆ ಪುಸ್ತಕದ ಹಾಳೆಯ ಮೇಲೆ ತಣ್ಣಗೆ ಸದ್ದಿಲ್ಲದೆ ಕುಳಿತಿರುತ್ತದೆ. ಅದನ್ನು ಓದುವಾಗ ಮನಸ್ಸಿನ ಒಳಗೊಳಗೇ ಆದರೂ ಸರಿ, ಸದ್ದು ಹುಟ್ಟುತ್ತದೆ. ಮಾತು ಕೂಡ ಸದ್ದು ಹುಟ್ಟಿಸುತ್ತದೆ. ಅಂದ ಮಾತ್ರಕ್ಕೆ ಮೌನ ಸದ್ದು ಹುಟ್ಟಿಸುವುದಿಲ್ಲ ಎಂದೇನೂ ಅಲ್ಲ. ಮೌನ ಕೂಡ ಸದ್ದು ಹುಟ್ಟಿಸಬಲ್ಲುದು ಎಂದಾದರೆ ಅಕ್ಷರವೇಕೆ ಬೇಕು, ಸದ್ದು ಏಕೆ ಬೇಕು ಎನ್ನುವುದು ಪ್ರಶ್ನೆಯಾದಾಗ ಸದ್ದು ಮತ್ತು ಅಕ್ಷರ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಾಗುತ್ತದೆ ಮತ್ತು ಆಗ ಅದರ ನೆರವಿಗೆ ಬರುವುದು ಅರ್ಥ. ಆದರೆ ಮೌನಕ್ಕೂ ಅರ್ಥವಿದೆ. ಮೌನಕ್ಕೂ ಅರ್ಥವನ್ನು ಸಂವಹನ ಮಾಡುವ ಶಕ್ತಿ ಕೂಡ ಇದೆ. ಸದ್ದು ಮತ್ತು ಅಕ್ಷರಕ್ಕೆ ಅದು ಹೆಚ್ಚು ಸುಲಭವಿದ್ದೀತೇ ಹೊರತು ಮೌನದ ಕಷ್ಟ ಏನಿದೆ, ಅದೇ ಶಬ್ದ ಮತ್ತು ಅಕ್ಷರದ ಹೆಚ್ಚುಗಾರಿಕೆ ಎಂದು ತಿಳಿಯಬೇಕಾದ್ದಿಲ್ಲ ಅನಿಸುವುದಿಲ್ಲವೆ?

ಮತ್ತಿದನ್ನು ಕೇವಲ ಒಂದೊ ಎರಡೋ ಇಂದ್ರಿಯಗಳಿಗೆ ಮಾತ್ರ ಅನ್ವಯಿಸಿ ನೋಡಬೇಕಾದ್ದೂ ಇಲ್ಲ. ಐದೇ ಇಂದ್ರಿಯಗಳು ಎನ್ನುವುದಾದರೆ ಅವೆಲ್ಲವುಗಳಿಗೂ ಇದೇ ತತ್ವವನ್ನು ಅನ್ವಯಿಸಿ ಅದರೆದುರು ನಿಲ್ಲಬಹುದು.

ಇದು ಕತೆ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳನ್ನೆಬ್ಬಿಸುವ ಹಲವು ನೆಲೆಗಳಲ್ಲಿ ಒಂದು. ಕತೆ ಮೌನದಲ್ಲಿ ಎಬ್ಬಿಸುವ ಈ ಪ್ರಶ್ನೆಗಳು ಕೂಡ ಸದ್ದು ಮಾಡುತ್ತವೆ. ಹಾಗಾಗಿ ಈ ಕತೆಯ ನಿರೂಪಕ ಮೌನಕ್ಕೆ ಸೇರಿ ಹೋಗುವ ನಿರ್ಧಾರಕ್ಕೆ ಬಂದಿದ್ದಾನೆ. ನಿಜಕ್ಕಾದರೆ ಕತೆ ಸುರುವಾಗುವುದೇ ಅಲ್ಲಿಂದ. ಕತೆಯ ಆರಂಭದ ಪ್ಯಾರಾ ಓದಿ. ಆಮೇಲೆ ನೀವು ಕತೆಯನ್ನು ಓದದೇ ಇರುವುದು ಸಾಧ್ಯವಿಲ್ಲ. ನಯರ್ ಮಸೂದ್ ಅವರ ಸಮಗ್ರ ಕತೆಗಳ ಸಂಕಲನವೂ ಇಂಗ್ಲೀಷಿನಲ್ಲಿ ಲಭ್ಯವಿದೆ. ಮತ್ತಿದನ್ನು ಕೂಡಾ ಅನುವಾದಿಸಿದವರು ಮೆಮೊನ್ ಅವರೇ. ಉರ್ದು ಕತೆಗಳ ಸಂಕಲನದ ಈ ಒಂದು ಮೊದಲ ಕತೆಯನ್ನು ಓದಿದ ಬಳಿಕ ನಾನು ನೇರವಾಗಿ ನಯರ್ ಮಸೂದ್ ಅವರ ಸಮಗ್ರಕ್ಕೆ ಹೊರಳಿಕೊಂಡೆ.

ಕತೆ ಸುರುವಾಗುವುದು ಹೀಗೆ:

OBSCURE DOMAINS OF FEAR AND DESIRE 
NAIYER MASUD

We kept looking at each other, in silence, for the longest time ever. Our faces didn’t betray any kind of curiosity. His eyes had an intensity, a brightness, but throughout this time, never for a moment did they seem to be devoid of feeling. I could not tell if his eyes were trying to say something or were merely observing me, but I felt we were coming to some silent understanding. All of a sudden a terrible feeling of despair came over me. I was experiencing it for the first time since I’d come to this house. Just then, his nurse placed her hand on my arm and led me out of the room. 

Outside, as I spoke with his nurse, I realized that my speech was a shortcoming and that the patient was travelling far ahead of me on a road I knew nothing about. 

I have given up talking, not looking. It isn’t easy to stop looking if one happens to possess a pair of eyes. Keeping quiet, even though one has a tongue, is relatively easy. At times I do get an urge to close my eyes. But so far they are still open. This may be due to the presence of the person who is looking after me.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, September 5, 2017

ತೆರೆದಷ್ಟೂ ತೆರೆದುಕೊಳ್ಳುತ್ತ ಹೋಗುವ ‘ತೆರೆ’

ಸುಬ್ರಾಯ ಚೊಕ್ಕಾಡಿಯವರು ತಮ್ಮ ಬರವಣಿಗೆಗೆ ಪ್ರೇರಣೆಗಳೇನು ಎನ್ನುವುದನ್ನು ವಿವರಿಸುತ್ತ ಅವರು ಬರೆದಿರುವುದನ್ನು ಓದಿ:

"......ಹೀಗಿದ್ದೂ ನಾನೊಬ್ಬ ಬರಹಗಾರನಾಗಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಹೆಚ್ಚೆಂದರೆ ನಾನು ನನ್ನ ತಂದೆಯವರಂತೆ ಯಕ್ಷಗಾನ ಪ್ರಸಂಗಕರ್ತ ಇಲ್ಲವೇ ಭಾಗವತನಾಗಬಹುದಿತ್ತೋ ಏನೋ. ಆದರೆ ನಾನು ಪ್ರಾಥಮಿಕ ಶಾಲಾ ಶಿಕ್ಷಕನಾದ ಮೇಲೆ ನನ್ನ ಬದುಕಿನಲ್ಲುಂಟಾದ ಪಲ್ಲಟಗಳು, ಆಘಾತಗಳು ಹಾಗೂ ಅಸಹನೀಯ ಒತ್ತಡಗಳು ನನ್ನ ಮೇಲೆ ಭಾರೀ ಪರಿಣಾಮವನ್ನುಂಟುಮಾಡಿದವು. ಬಾಳಿನ ನೋವಿನ ಹೊರೆಯನ್ನು ತಾಳಲಾರದೆ ತಂದೆ ಸ್ಕಿಜೋಫ್ರೇನಿಯಾ ಎಂಬ ಭಯಾನಕ ರೋಗಕ್ಕೆ ತುತ್ತಾದರು. ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಮನೆ ಹಾಗೂ ಶಾಲೆಗಳ ಹೊರೆ ಹೊತ್ತ ನಾನು ಪ್ರತಿದಿನ ಸುಮಾರು ಹನ್ನೆರಡು ಮೈಲಿಗಳ ಹಾದಿ ಸವೆಸುತ್ತಾ ಮತ್ತೆ ಏಕಾಂಗಿತನದತ್ತ ಜಾರುತ್ತಾ ಹೋದೆ. ಆ ಹಾದಿಯಾದರೋ ಗುಡ್ಡಗಾಡು, ಬಯಲು, ತೋಡುಗಳ ನಡುವೆ ಒಂಟಿಯಾಗಿ ತೆಪ್ಪಗೆ ಬಿದ್ದುಕೊಂಡಿದ್ದ ಪುಟ್ಟ ಹಾದಿ. ತಲ್ಲಣಗೊಳಿಸುವ ಭಯಾವಹ ಮೌನವನ್ನು ಒಳಗಿಟ್ಟುಕೊಂಡು ಕಾಡಿನ ಈ ಏಕಾಂತದಲ್ಲಿ ನಡೆಯುತ್ತಿದ್ದಂತೆ ಬದುಕಿನ ನೋವು, ವಿಷಾದಗಳು, ಸಮಾಜದಲ್ಲಿ ಅನುಭವಿಸಿದ ಅವಮಾನ, ತಿರಸ್ಕಾರಗಳು - ಕಾಡಿನಲ್ಲಿ ಹಕ್ಕಿಗಳ ಚಿಲಿಪಿಲಿ, ತೊರೆಯ ಹರಿವಿನ ಮಂಜುಳ ನಿನಾದ, ಸೂರ್ಯಕಿರಣಗಳ ನೆರಳು ಬೆಳಕಿನಾಟ, ಈ ವೈವಿಧ್ಯಪೂರ್ಣ ಹಸುರ ವೈಭವ ಮೊದಲಾದುವುಗಳೊಂದಿಗೆ ಮುಖಾಮುಖಿಯಾಗಿ ನನ್ನದೇ, ಕೇವಲ ನನ್ನದೇ ಆದ ಪುಟ್ಟ ಹೊಸ ಪ್ರಪಂಚವೊಂದನ್ನು ಸೃಷ್ಟಿಸತೊಡಗಿತು. ನಾನು ಕಂಗೆಡಿಸುವ ಹೊಸ ಪ್ರಪಂಚದಿಂದ ಕಂಗೊಳಿಸುವ ಈ ಒಳ ಪ್ರಪಂಚದಲ್ಲಿ ಬೆರೆಯುತ್ತಾ ಹೋದೆ. ಅಂದರೆ ಅನಿರೀಕ್ಷಿತವಾಗಿ ಬಿದ್ದ ಬಾಳಿನ ಅತೀ ಹೊರೆಯ ಭಾರದಿಂದ ಪಾರಾಗಲು ನನಗೊಂದು ಅಡಗುದಾಣವಾಗಿ ಬರವಣಿಗೆಯು ನಿಧಾನವಾಗಿ ನನಗೆ ಒದಗಿಬಂತು. ಯಕ್ಷಗಾನ ಭಾಗವತರಾಗಿದ್ದ ನನ್ನ ತಂದೆಯವರಿಗೊದಗಿದ್ದ ಸಂಗತಿಯನ್ನು ಕಂಡೇ ಭಯಗೊಂಡ ನಾನು ಅದರಿಂದ ದೂರ ಸರಿದು ಹೊಸ ಹಾದಿಯೊಂದನ್ನು ಹುಡುಕತೊಡಗಿದೆ."
(ಅರವಿಂದ ಚೊಕ್ಕಾಡಿ ಸಂಪಾದಕತ್ವದ ‘ಸಮಾಲೋಕ’ ಕೃತಿಯಿಂದ)
1980ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ‘ಸುವರ್ಣ ಸಂಪುಟ’ ಎಂಬ ಹೆಸರಿನಲ್ಲಿ 1966ರ ವರೆಗೆ ಪ್ರಕಟವಾದ ಕವಿತಾ ಸಂಕಲನಗಳಿಂದ ಆಯ್ದ ಕವನಗಳ ಒಂದು ಸಂಕಲನವನ್ನು ಪ್ರಕಟಿಸಿತ್ತಂತೆ. ತದನಂತರ ಅದರ ಮುಂದುವರಿಕೆಯಾಗಿ 1985ರಲ್ಲಿ ‘ರತ್ನ ಸಂಪುಟ’ ಎಂಬ ಹೆಸರಿನಲ್ಲಿ ಮತ್ತೆ ಸುಮಾರು 105 ಕವಿಗಳ ತಲಾ ಎರಡರಿಂದ ಐದರ ವರೆಗೆ ಕವಿತೆಗಳನ್ನು ಆಯ್ದು ಪ್ರಕಟಿಸಿತು. ಅಕಸ್ಮಾತ್ ಕಣ್ಣಿಗೆ ಬಿದ್ದು ಇದನ್ನು ಎತ್ತಿಕೊಂಡು ಬಂದೆ. ಇವತ್ತು ಲಭ್ಯವಿಲ್ಲದ, ಮುದ್ರಿತ ಪ್ರತಿಗಳು ಮುಗಿದ ಸಂಕಲನದಿಂದ ಆಯ್ದ ಅನೇಕ ಅತ್ಯುತ್ತಮ ಕವಿತೆಗಳು ನಮಗಿಲ್ಲಿ ಸಿಗುತ್ತಿರುವುದೇ ಒಂದು ಭಾಗ್ಯ. ಪಿ ಲಂಕೇಶರು ‘ಅಕ್ಷರ ಹೊಸ ಕಾವ್ಯ’ ಪ್ರಕಟಿಸುವಾಗ ಒಬ್ಬ ಕವಿಯ ಒಂದಕ್ಕಿಂತ ಹೆಚ್ಚಿನ ಕವಿತೆಗಳನ್ನು ನಮಗೆ ಕೊಡುತ್ತ ಹೋದರು. ಅದಕ್ಕೂ ಮೊದಲೇ ಇಂಥ ಒಂದು ಅಗತ್ಯ ಮನಗಂಡವರು ಇದ್ದರಲ್ಲ ಎನ್ನುವುದು ಅತ್ಯಂತ ಸಮಾಧಾನದ ಸಂಗತಿ. ಈ ರತ್ನಸಂಪುಟದ ಸಂಪಾದಕರನ್ನು ಗಮನಿಸಿ: ಪುತಿನ, ಜಿಎಸೆಸ್, ಕಣವಿ, ಪ್ರಭುಶಂಕರ, ಹಾ ಮಾ ನಾಯಕ, ನಿಸಾರ್ ಮತ್ತು ಕೆ ಟಿ ವೀರಪ್ಪ.

ಈ ಪುಸ್ತಕದಲ್ಲಿ ಸಿಕ್ಕಿದ ನಮ್ಮ ಸುಬ್ರಾಯ ಚೊಕ್ಕಾಡಿಯವರ ಕವಿತೆಗಳಲ್ಲಿ ನನಗೆ ತುಂಬ ಹಿಡಿಸಿದ ಒಂದನ್ನು ಇಲ್ಲಿ ಹಂಚಿಕೊಳ್ಳುತ್ತಲೇ ನನ್ನ ಖುಶಿಯನ್ನು ಹೇಳಿಕೊಳ್ಳುವುದು ನನ್ನ ಉದ್ದೇಶ. ಕವಿತೆಯ ಹೆಸರು ‘ತೆರೆ’. ಅದರ ಪೂರ್ಣಪಠ್ಯವನ್ನು ಚೊಕ್ಕಾಡಿಯವರ ಸರಳ ಸಹೃದಯ ಪ್ರೀತಿ ಕ್ಷಮಿಸೀತೆಂಬ ಭರವಸೆಯಿಂದ ಇಲ್ಲಿ ಕಾಣಿಸಿದ್ದೇನೆ.

ಈ ಕವಿತೆಯ ಹೆಸರು ‘ತೆರೆ’. ಗಂಡು ಹೆಣ್ಣಿನ ಒಂದು ರಾತ್ರಿಕಾಲದ ಏಕಾಂತದ ಸನ್ನಿವೇಶ ಇದು ಎಂದು ಭಾವಿಸಿಕೊಳ್ಳಬಹುದು. ಮೊದಲ ಸಾಲು ‘ರಾತ್ರಿ ಕೂದಲಿನಲ್ಲಿ ಬೆರಳಾಡುತಿರುವಾಗ’ ಎನ್ನುತ್ತದೆ. ಅಥವಾ ರಾತ್ರಿ ಕೂದಲಿನಲ್ಲಿ ಬೆರಳಾಡುತಿರುವಾಗ ಬಿಚ್ಚುವುದು ಎಂದೂ, ಎರಡನೆಯ ಸಾಲಿನಿಂದ ಸ್ವಲ್ಪ ಕಡಪಡೆದು, ಓದಬಹುದು. ಕೂದಲಿನಲ್ಲಿ ಬೆರಳಾಡಿಸಿದಾಗ ಮುಡಿ ಬಿಚ್ಚಿಕೊಂಡಿತು ಎನ್ನುವ ಅರ್ಥದಲ್ಲಿ. ಏಕೆಂದರೆ, ಎರಡನೆಯ ಸಾಲು, ‘ಬಿಚ್ಚುವುದು - ಮಾದಕದ ಕಣ್ಣು’ ಎಂದಿದ್ದರೂ ಮೂರನೆಯ ಸಾಲಿನಲ್ಲಿ ಮುಚ್ಚುವುದು ಎಂದಿದೆ! ಕಣ್ಣೇ ಬಿಚ್ಚುವುದು ಮುಚ್ಚುವುದು ಮಾಡುತ್ತಿದೆಯೆ? ಇರಬಹುದು! ಬೆರಳಾಡಿಸಿದ್ದೇ ಬಿಚ್ಚಿಕೊಂಡ ಮುಡಿ ಅಥವಾ, ಬೆರಳಾಡಿಸುತ್ತಿರುವ ಸುಖಕ್ಕೆ ಬಿಚ್ಚಿಕೊಂಡು-ಮುಚ್ಚಿಕೊಂಡು ಸುಖಿಸಿದ ಕಣ್ಣು ‘ಬಿಚ್ಚಲೆಳಸುವುದು ಬದುಕನ್ನು’ ಎನ್ನುತ್ತದೆ ನಾಲ್ಕನೆಯ ಸಾಲು. ಕವಿತೆಯ ಎಲ್ಲ ಸುರತ-ನಿರತ ಗಮ್ಯವನ್ನು ಈ ನಿಟ್ಟಿನಿಂದಲೇ ಕಾಣುವುದಿದೆ ನಮಗೆ. ಕಣ್ಣು ಎನ್ನುವುದನ್ನು ಈ ರಾತ್ರಿಯ ಮಾದಕ ಸನ್ನಿವೇಶದಲ್ಲಿ ಬೇರೊಂದು ಅರ್ಥದಲ್ಲೂ ನೀವು ಕಲ್ಪಿಸಿಕೊಳ್ಳಲು ನನ್ನದೇನೂ ಅಡ್ಡಿಯಿಲ್ಲ. ಇಂದ್ರನಿಗೆ ಗೌತಮ ಕೊಟ್ಟ ಶಾಪದಿಂದ ಅವನ ಮೈಯೆಲ್ಲ ಸಹಸ್ರಯೋನಿಗಳಾದವಂತೆ. ಇಲ್ಲ, ಅವನು ಸಹಸ್ರಾಕ್ಷನಾದ ಎನ್ನುವವರೂ ಇದ್ದಾರೆ. ಈ ಹೆಣ್ಣಿಗೂ ಕಣ್ಣಿಗೂ ಏನು ಮೋಹವೋ ಎಂದುಕೊಳ್ಳಬಹುದು.

ಇದೆಲ್ಲ ನನ್ನ ಕಪೋಲ-ಕಲ್ಪನೆಯೇನಲ್ಲ ಮತ್ತೆ. ಬನ್ನಿ ಮುಂದಿನ ಚರಣಕ್ಕೆ.

ಪಟಪಟನೆ ತೆರೆದು ಪಕಳೆಗಳಂಥ ಪರಿಗಳ
ಸ್ನೇಹ ಪಾತ್ರೆಯ ಹಿಡಿದು, -ನಗ್ನ - ಕಾದಾಗಲೂ
ಬೆರೆಯಲಿಲ್ಲ. ಬೆರೆಯುವುದೆ ಇಲ್ಲವೋ ಮಣ್ಣು - ನೀರು?

ಮಣ್ಣು ನೀರು ಬೆರೆಯುವುದು! ವಾಹ್, ಎಂಥ ಪರಿಕಲ್ಪನೆಯಿದು! ಇದರಲ್ಲಿ ಏನಿದೆ ಏನಿಲ್ಲ. ಮಣ್ಣು ನೀರು ಬೆರೆತಲ್ಲದೆ ಇದೆಯೆ ಸೃಷ್ಟಿ? ಮಣ್ಣಿನ ಫಲವತ್ತತೆಯೇ ನೀರಿನ ಗುಣದಲ್ಲಿದೆಯೋ ಎಂಬಂತೆ, ನೀರಿನ ಸತ್ವವೇ ಮಣ್ಣಿನ ಘಮದಲ್ಲಡಗಿತ್ತೋ ಎಂಬಂತೆ ಇದೊಂದು ಸೃಷ್ಟಿಯ ಚಿದಂಬರ ರಹಸ್ಯ. ದೇವೀ ಸ್ತುತಿಯಲ್ಲೂ ಇದು ಬರುತ್ತದೆ, ಗಂಧದ್ವಾರೇ| ಧರಾದರ್ಷೇ| ಧರೆಯೊಂದಿಗೆ ಒಂದು ಘರ್ಷಣೆ ಇದೆ, ಗಂಧ ಘಮಿಘಮಿಸಲು! ಆದರೆ ಮನುಷ್ಯ ಕೊನೆಗೆ ಸೇರುವುದೂ ಇದೇ ಮಣ್ಣಿಗೆ. ಕೊನೆಯಲ್ಲಿ ಅವನ ಗಂಟಲಿಗೆ ಸುರಿಯುವುದೂ ಇದೇ ಒಂದುದ್ಧರಣೆ ನೀರನ್ನು.

ನಿಮಗೀಗ ತಪ್ಪದೇ ನೆನಪಾಗುವವರು ಗೋಪಾಲಕೃಷ್ಣ ಅಡಿಗರು.

ಯಾವ ಮೋಹನ ಮುರಲಿ ಕರೆಯಿತೊ| ದೂರ ತೀರಕೆ ನಿನ್ನನು|
ಯಾವ ಬೃಂದಾವನವು ಸೆಳೆಯಿತೊ| ನಿನ್ನ ಮಣ್ಣಿನ ಕಣ್ಣನು|

ಎನ್ನುತ್ತಾರೆ ಅಡಿಗರು. ಬೃಂದಾವನವೇ ಮಣ್ಣಿನದು. ದೇಹ ತ್ಯಾಗ ಮಾಡಿದ ಯತಿಗಳಿಗೆ ಕಟ್ಟುವುದು ಕೂಡ ಬೃಂದಾವನವೆ. ಮತ್ತೀ ಮಣ್ಣಿನ ಕಣ್ಣು ಎಂದರೇನು? ಅದು ಯಾಕೆ ಮತ್ತು ಹೇಗೆ ಸೆಳೆಯುತ್ತದೆ?

ಈ ಭೂಮಿಗೆ ಒಂದು ಕಣ್ಣಿದ್ದರೆ ಅದನ್ನು ಮಣ್ಣಿನ ಕಣ್ಣು ಎನ್ನಬಹುದೆ? ಅಥವಾ, ಭೂಮಿಯನ್ನು ಹೆಣ್ಣು ಎನ್ನುತ್ತೇವೆ. ಭೂಗರ್ಭ ಎನ್ನುವ ಶಬ್ದವೂ ಬಳಕೆಯಲ್ಲಿದೆ. ಅಹಲ್ಯಾ ಅಂದರೆ ಯಾವತ್ತೂ ಉಳಲ್ಪಡದ ಭುವಿ ಎನ್ನುವ ಅರ್ಥದಲ್ಲೇ ಈ ಭೂಮಿಯ ಒಂದು ಗರ್ಭಕ್ಕೆ ಒಂದು ದ್ವಾರ ಇರುವುದಾದರೆ, (ಭೂಮಿ ತಾಯ ಮಗಳಾದ ಸೀತೆ ಕೊನೆಯಲ್ಲಿ ಭೂಗರ್ಭವನ್ನೇ ಹೊಕ್ಕಳು ಎನ್ನುತ್ತಾರಲ್ಲ, ಆಗ ಆಕೆ ಪ್ರವೇಶಿಸಿದ ದ್ವಾರ?) ಅದನ್ನು ಮಣ್ಣಿನ ಕಣ್ಣು ಎಂದು ಸೂಚ್ಯವಾಗಿ ಹೇಳಬಹುದೆ? ಅಂಥ ಮಣ್ಣಿನ ಕಣ್ಣು ಸೆಳೆದಾಗ ಸೀತೆ ಭೂಗರ್ಭ ಪ್ರವೇಶಿಸಿದಳೆ? ಮಣ್ಣಿನ ಕಣ್ಣು ಸೆಳೆಯುವುದೆಂದರೇ ಮೃತ್ಯು ಸೆಳೆಯುವುದೆ?

ಕಾಮದ ಬಗ್ಗೆ ಎಷ್ಟು ಕವಿತೆಗಳು ಬಂದಿಲ್ಲ ನಮ್ಮಲ್ಲಿ? ಬಹುಶಃ ನವ್ಯ ಕಾಲಘಟ್ಟದಲ್ಲಿ ಇದಕ್ಕೊಂದು ಉಚ್ಛ್ರಾಯ ಪ್ರಾಪ್ತಿಯಾಗಿತ್ತೆನ್ನಬಹುದೇನೊ. ಗಂಗಾಧರ ಚಿತ್ತಾಲರ ಕವಿತೆಗಳಿಂದ ಹಿಡಿದು ಇವತ್ತಿಗೂ ಕಾಮ, ಪ್ರೇಮ, ಗಂಡು ಹೆಣ್ಣು ಸಮಾಗಮದ ಪರಿಕಲ್ಪನೆಯನ್ನು ಕಾವ್ಯ ಬಳಸಿಕೊಳ್ಳುತ್ತಲೇ ಬಂದಿದೆ. ಅದನ್ನು ಎಷ್ಟೆಲ್ಲ ರೋಚಕವಾಗಿ, ಹೊಸ ಹೊಸ ಪ್ರತಿಮೆ/ಪರಿಕಲ್ಪನೆಗಳಲ್ಲಿ ಹೆಣೆದು ಹೇಳಿದರೂ ಹೆಚ್ಚೇನೂ ಕಷ್ಟವಿಲ್ಲದೆ ಅರ್ಥವಾಗುವಂತೆಯೇ ಒಟ್ಟಾರೆಯಾಗಿ ಅದರಲ್ಲಿ ಹೆಚ್ಚೇನೂ ವಿಶೇಷವಿಲ್ಲವಲ್ಲ ಎನಿಸುವುದೂ ಸಾಮಾನ್ಯವಾಗಿದೆ. ಆದರೆ ಚೊಕ್ಕಾಡಿಯವರ ಕವಿತೆಯಲ್ಲಿ ಆವತ್ತು, ಸುಮಾರು ಐವತ್ತು ವರ್ಷಗಳಷ್ಟು ಹಿಂದೆಯೇ, ಕಾಮ ನಿರ್ವಹಿಸಿದ ಪಾತ್ರವನ್ನು ಗಮನಿಸುವುದೇ ಇಲ್ಲಿ ನನಗೆ ಮುಖ್ಯವೆನಿಸಿದ್ದು. ಅಥವಾ ಇದನ್ನು ಹೀಗೆಯೂ ಹೇಳಬಹುದು, ಕಾಮವನ್ನು ಸುಬ್ರಾಯಚೊಕ್ಕಾಡಿಯವರು ತಮ್ಮ ಕವಿತೆಯಲ್ಲಿ ಬಳಸಿಕೊಂಡು ಸಾಧಿಸಿದ್ದನ್ನು, ಅದು ವಿಶಿಷ್ಟವೂ ವಿಶೇಷವೂ ಆಗಿರುವುದರಿಂದಲೇ, ಗಮನಿಸುವುದೇ ನನಗೆ ಮುಖ್ಯವಾಗುತ್ತದೆ.

ಗಂಟು ಸಡಿಲುವುದಿಲ್ಲ. (ಮುಡಿಯ ಕೂದಲಗಂಟೆ ಅಥವಾ ಹುಟ್ಟು ಸಾವಿನ ಬ್ರಹ್ಮಗಂಟೆ?)
ಬೆರಳು ಮುಟ್ಟುವುದಿಲ್ಲ ಮೈಯ. (ತಲೆಗೂದಲ ನೇವರಿಸುತ್ತಿತ್ತಲ್ಲ ಬೆರಳು! ಅದೇಕೆ ಮೈಯ ಮುಟ್ಟಲು ಹಿಂಜರಿದಿದೆ ಇಲ್ಲಿ?) ನರವುಬ್ಬಿ ಸಿಡಿಯುವುದಿಲ್ಲ.

ನರವುಬ್ಬಿ ಸಿಡಿಯುವುದು! ಈ ಸಿಡಿತಕ್ಕೆ ಒಂದು ಗಮ್ಯವಿದೆ, ಅದೇನು? ‘ಹುಟ್ಟನನುಭವಿಸಿಲ್ಲ. ಸಾವು ಕಾಣುವುದಿಲ್ಲ.’ ಈ ಶಬ್ದಪ್ರಯೋಗವೇ ‘ಭಯಂಕರ’ ಅರ್ಥಪರಂಪರೆಯುಳ್ಳದ್ದು. ಹುಟ್ಟನನುಭವಿಸುವುದು ಹೇಗೆ ಹೇಳಿ? ಒಂದು ಗಂಡಿಗೆ ಹೆರಿಗೆಯ ಅನುಭವ ಸಾಧ್ಯವೇ ಎಂದು ಮೊನ್ನೆ ಮೊನ್ನೆ ಸುಮಂಗಲಾ ಪ್ರಶ್ನಿಸಿದ್ದರು. ಯಾರೋ ಪ್ರಸವವೇದನೆಯನ್ನು ಸೃಜನಶೀಲ ಬರವಣಿಗೆಯ ಕಷ್ಟನಷ್ಟಗಳಿಗೆ ಹೋಲಿಸಿ ಮಾತನಾಡಿದ ಸಂದರ್ಭವನ್ನಿಟ್ಟುಕೊಂಡು. ಗಂಡಿಗೆ ನರವುಬ್ಬಿ ಸಿಡಿಯುವ ಅನುಭವವೇ ಬಹುಶಃ ಹುಟ್ಟಿನನುಭವವನ್ನು ಕೊಡಬೇಕು. ಅಷ್ಟರ ಮಟ್ಟಿಗೆ ಅದು ಸಿಡಿತವೇ. ಅಷ್ಟು ಮಾತ್ರವಲ್ಲ, ಅದು ಸಾವನ್ನೂ ಕಾಣಿಸಬೇಕು ಎನ್ನುತ್ತಾರೆ ಚೊಕ್ಕಾಡಿ. ಸಾವಿನ ನೆರಳೇ ಇಲ್ಲದ ಹುಟ್ಟು ಎನ್ನುವುದುಂಟೆ?! ಹುಟ್ಟಿದಾಗ ಹುಟ್ಟುವುದೇ ಸಾವಲ್ಲವೆ?

ಕಾಮವನ್ನು ಹಿಂಸೆಗೆ ಸಮೀಕರಿಸಿದವರು ಗಾಂಧಿ. ತಮ್ಮ ಇಳಿವಯಸ್ಸಿನಲ್ಲಿ ಅವರು ನಗ್ನರಾಗಿ ಹರೆಯದ ಹುಡುಗಿಯರ ಜೊತೆ ಮಲಗುತ್ತಿದ್ದರು ಎನ್ನುತ್ತಾರೆ. ಅದನ್ನವರು ತಮ್ಮಲ್ಲಿ ಇನ್ನೂ ಕಾಮ (ಹಿಂಸೆ) ಜೀವಂತವಾಗುಳಿದಿದೆಯೇ ಎನ್ನುವುದನ್ನು ಕಂಡುಕೊಳ್ಳುವುದಕ್ಕಾಗಿಯೇ ಮಾಡುತ್ತಿದ್ದರಂತೆ. ಇಲ್ಲಿಯೇ ಅವರ ಈ ನಿಲುವು ಟಾಲ್‌ಸ್ಟಾಯ್ ಜೊತೆಗೂ ತಳುಕು ಹಾಕಿಕೊಂಡಿದೆ. ಸಾಧ್ಯವಾದರೆ ಟಾಲ್‌ಸ್ಟಾಯ್ ಅವರ ‘ಕ್ರೊಯೆತ್ಸರ್ ಸೊನಾಟ’ ನೀಳ್ಗತೆಯನ್ನು ಓದಿ. ಚೊಕ್ಕಾಡಿಯವರು ಕಾಮವನ್ನು ಹುಟ್ಟಿನೊಂದಿಗೆ ಎಂತೋ ಸಾವಿನೊಂದಿಗೂ ಸಮೀಕರಿಸಿ ನೋಡುತ್ತಾರೆ ಎನಿಸಿದೆ ನನಗೆ. ಅಂದರೆ, ಈ ಸಾವು ಬರಿಯ ದೇಹದ್ದೇ ಎಂದಲ್ಲ. ಒಂದರ್ಥದ ಶರಣಾಗತಿಯಿದೆ ಕಾಮದಲ್ಲಿ. ಅಹಂ ಬಿಟ್ಟು, ನಗ್ನರಾಗಿ, ನಿದ್ದೆಯಲ್ಲಿ ಅಸ್ಮಿತೆಯ ಅಹಂಕಾರವನ್ನು ಕಳೆದುಕೊಂಡು ಶರಣಾದ ಹಾಗೆ ಶರಣಾಗಿ ಅನುಭವಿಸುವ ಸುಖ ಅದು, ಸಾವೂ ಅದೇ. ಕಾಮ ಎನ್ನುವುದು ಭಾಷೆಯ ಹಂಗಿಲ್ಲದೆ ಎರಡು ದೇಹಗಳು ನೇರವಾಗಿ ಮಾತನಾಡಿಕೊಳ್ಳುವ ಕ್ರಿಯೆಯಾಗುವುದು ಆಗ. ಇಲ್ಲವಾದಲ್ಲಿ ಅದು ಹಿಂಸೆ, ಅದು ಸಾವು. ಬದುಕು ಅಥವಾ ಸಾವು, ಆಯ್ಕೆ ತೆರೆದಿದೆ, ತೆರೆದಿದೆಯೆ? ತೆರೆ!

ಭ್ರಮಣವೇ ಭ್ರಮೆಯಾಗಿ ಹರಡಿ ಜಾಲದ ಹಾಗೆ,
ಮನಸಿನೋವರಿಯಲ್ಲಿ ಬೆಳಕಿಲ್ಲ.
ಆಳದಾಚೆಗೂ ದಾರಿ; ತೆರೆಯಿಲ್ಲ, ತೆರೆದಿಲ್ಲ.

ಮನಸಿನೋವರಿಯಲ್ಲಿ ಬೆಳಕಿಲ್ಲ. ಮನಸ್ಸಿನ ಒಳಮನೆಯಲ್ಲಿ ಸದಾ ಕತ್ತಲೆ. ಹಾಗೆಯೇ ದೇಹದ ಒಳಮನೆಯಲ್ಲೂ ಕತ್ತಲೆಯೇ. ಅಲ್ಲಿಯೂ ಆಳದಾಚೆಗೂ ದಾರಿಯಿದೆ, ತೆರೆ ಇಲ್ಲವಂತೆ. ಸರಿಯೇ. ಆದರೆ ಅದು ತೆರೆದೂ ಇಲ್ಲ ಎನ್ನುತ್ತಾರೆ ಚೊಕ್ಕಾಡಿ. ದೇಹ ಕೆಲವೊಮ್ಮೆ ಕೆಲವರಿಗೆ ಬಿಟ್ಟುಕೊಳ್ಳುವುದಿಲ್ಲ. ಬಸ್ಸಿನಲ್ಲಿ ನಿಮ್ಮ ಪಕ್ಕ ಕೂತ ನಿಮ್ಮದೇ ಲಿಂಗದ ಮನುಷ್ಯ ಕೂಡ ನಿಮಗೆ ಹಿತ ತರುವುದಿಲ್ಲ, ಅವನು ಎಷ್ಟೇ ಅಪರಿಚಿತನಾಗಿದ್ದರೂ, ಕೆಲವೇ ಹೊತ್ತಿನಲ್ಲಿ ಎದ್ದು ಹೋಗುತ್ತಾನೆಂದು ಕೊಂಡರೂ ಏನೋ ಅಸುಖ, ಅಹಿತ. ಹಾಗೆಯೇ ಅಹಲ್ಯೆಗೂ ಗೌತಮನಿಗೂ ಒಂದು ಹಂತದಲ್ಲಿ ಹಿತ ತಪ್ಪಿತಲ್ಲ. ಮನುಷ್ಯ ಕಲ್ಲಾಗುವುದು ಹಾಗೆ. ಮನಸ್ಸು ಕೂಡ ಸುಲಭಕ್ಕೆ ತೆರೆದುಕೊಳ್ಳುವುದಿಲ್ಲವಲ್ಲ. ಅಬ್ಬಾ ಅದರ ಹಠವೇ! ಬಾಗಿಲು ಹಾಕಿಕೊಂಡಾಗೆಲ್ಲ ಉಳಿಯುವುದು ಕತ್ತಲೆಯೇ. ನಿಮಗೆ ಬೆಳಕು ಬೇಕಿದ್ದರೆ ತೆರೆ ಸರಿಸಿ, ತೆರೆದುಕೊಂಡು ಸ್ವೀಕಾರಕ್ಕೆ ನೀವು ಸಿದ್ಧರಾಗಲೇ ಬೇಕು. ಯಾವುದರ ಸ್ವೀಕಾರ ಇಲ್ಲಿ? ಬದುಕಿನ ಸ್ವೀಕಾರ ಮತ್ತು ಅದರ ನೆರಳಾದ ಸಾವಿನ ಸ್ವೀಕಾರವೂ. ಆದರೆ ಜಿಜ್ಞಾಸೆಯಿದೆ ಕವಿಗೆ. ನಮಗೆ, ಎಲ್ಲರಿಗೆ, ಪ್ರಶ್ನೆಯ ಮೂರ್ತಿಗೆ.

ತನ್ನೆದುರೆ ಬರುವ-ಸರಿಯುವ ಬದುಕು ಬರುತ್ತಿದೆಯೊ ಹೋಗುತ್ತಿದೆಯೊ ಎನ್ನುವ ಜಿಜ್ಞಾಸೆಯಿದು. ಇಷ್ಟು ಸಾಕಪ್ಪ!
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ