Tuesday, September 5, 2017

ತೆರೆದಷ್ಟೂ ತೆರೆದುಕೊಳ್ಳುತ್ತ ಹೋಗುವ ‘ತೆರೆ’

ಸುಬ್ರಾಯ ಚೊಕ್ಕಾಡಿಯವರು ತಮ್ಮ ಬರವಣಿಗೆಗೆ ಪ್ರೇರಣೆಗಳೇನು ಎನ್ನುವುದನ್ನು ವಿವರಿಸುತ್ತ ಅವರು ಬರೆದಿರುವುದನ್ನು ಓದಿ:

"......ಹೀಗಿದ್ದೂ ನಾನೊಬ್ಬ ಬರಹಗಾರನಾಗಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಹೆಚ್ಚೆಂದರೆ ನಾನು ನನ್ನ ತಂದೆಯವರಂತೆ ಯಕ್ಷಗಾನ ಪ್ರಸಂಗಕರ್ತ ಇಲ್ಲವೇ ಭಾಗವತನಾಗಬಹುದಿತ್ತೋ ಏನೋ. ಆದರೆ ನಾನು ಪ್ರಾಥಮಿಕ ಶಾಲಾ ಶಿಕ್ಷಕನಾದ ಮೇಲೆ ನನ್ನ ಬದುಕಿನಲ್ಲುಂಟಾದ ಪಲ್ಲಟಗಳು, ಆಘಾತಗಳು ಹಾಗೂ ಅಸಹನೀಯ ಒತ್ತಡಗಳು ನನ್ನ ಮೇಲೆ ಭಾರೀ ಪರಿಣಾಮವನ್ನುಂಟುಮಾಡಿದವು. ಬಾಳಿನ ನೋವಿನ ಹೊರೆಯನ್ನು ತಾಳಲಾರದೆ ತಂದೆ ಸ್ಕಿಜೋಫ್ರೇನಿಯಾ ಎಂಬ ಭಯಾನಕ ರೋಗಕ್ಕೆ ತುತ್ತಾದರು. ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಮನೆ ಹಾಗೂ ಶಾಲೆಗಳ ಹೊರೆ ಹೊತ್ತ ನಾನು ಪ್ರತಿದಿನ ಸುಮಾರು ಹನ್ನೆರಡು ಮೈಲಿಗಳ ಹಾದಿ ಸವೆಸುತ್ತಾ ಮತ್ತೆ ಏಕಾಂಗಿತನದತ್ತ ಜಾರುತ್ತಾ ಹೋದೆ. ಆ ಹಾದಿಯಾದರೋ ಗುಡ್ಡಗಾಡು, ಬಯಲು, ತೋಡುಗಳ ನಡುವೆ ಒಂಟಿಯಾಗಿ ತೆಪ್ಪಗೆ ಬಿದ್ದುಕೊಂಡಿದ್ದ ಪುಟ್ಟ ಹಾದಿ. ತಲ್ಲಣಗೊಳಿಸುವ ಭಯಾವಹ ಮೌನವನ್ನು ಒಳಗಿಟ್ಟುಕೊಂಡು ಕಾಡಿನ ಈ ಏಕಾಂತದಲ್ಲಿ ನಡೆಯುತ್ತಿದ್ದಂತೆ ಬದುಕಿನ ನೋವು, ವಿಷಾದಗಳು, ಸಮಾಜದಲ್ಲಿ ಅನುಭವಿಸಿದ ಅವಮಾನ, ತಿರಸ್ಕಾರಗಳು - ಕಾಡಿನಲ್ಲಿ ಹಕ್ಕಿಗಳ ಚಿಲಿಪಿಲಿ, ತೊರೆಯ ಹರಿವಿನ ಮಂಜುಳ ನಿನಾದ, ಸೂರ್ಯಕಿರಣಗಳ ನೆರಳು ಬೆಳಕಿನಾಟ, ಈ ವೈವಿಧ್ಯಪೂರ್ಣ ಹಸುರ ವೈಭವ ಮೊದಲಾದುವುಗಳೊಂದಿಗೆ ಮುಖಾಮುಖಿಯಾಗಿ ನನ್ನದೇ, ಕೇವಲ ನನ್ನದೇ ಆದ ಪುಟ್ಟ ಹೊಸ ಪ್ರಪಂಚವೊಂದನ್ನು ಸೃಷ್ಟಿಸತೊಡಗಿತು. ನಾನು ಕಂಗೆಡಿಸುವ ಹೊಸ ಪ್ರಪಂಚದಿಂದ ಕಂಗೊಳಿಸುವ ಈ ಒಳ ಪ್ರಪಂಚದಲ್ಲಿ ಬೆರೆಯುತ್ತಾ ಹೋದೆ. ಅಂದರೆ ಅನಿರೀಕ್ಷಿತವಾಗಿ ಬಿದ್ದ ಬಾಳಿನ ಅತೀ ಹೊರೆಯ ಭಾರದಿಂದ ಪಾರಾಗಲು ನನಗೊಂದು ಅಡಗುದಾಣವಾಗಿ ಬರವಣಿಗೆಯು ನಿಧಾನವಾಗಿ ನನಗೆ ಒದಗಿಬಂತು. ಯಕ್ಷಗಾನ ಭಾಗವತರಾಗಿದ್ದ ನನ್ನ ತಂದೆಯವರಿಗೊದಗಿದ್ದ ಸಂಗತಿಯನ್ನು ಕಂಡೇ ಭಯಗೊಂಡ ನಾನು ಅದರಿಂದ ದೂರ ಸರಿದು ಹೊಸ ಹಾದಿಯೊಂದನ್ನು ಹುಡುಕತೊಡಗಿದೆ."
(ಅರವಿಂದ ಚೊಕ್ಕಾಡಿ ಸಂಪಾದಕತ್ವದ ‘ಸಮಾಲೋಕ’ ಕೃತಿಯಿಂದ)
1980ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ‘ಸುವರ್ಣ ಸಂಪುಟ’ ಎಂಬ ಹೆಸರಿನಲ್ಲಿ 1966ರ ವರೆಗೆ ಪ್ರಕಟವಾದ ಕವಿತಾ ಸಂಕಲನಗಳಿಂದ ಆಯ್ದ ಕವನಗಳ ಒಂದು ಸಂಕಲನವನ್ನು ಪ್ರಕಟಿಸಿತ್ತಂತೆ. ತದನಂತರ ಅದರ ಮುಂದುವರಿಕೆಯಾಗಿ 1985ರಲ್ಲಿ ‘ರತ್ನ ಸಂಪುಟ’ ಎಂಬ ಹೆಸರಿನಲ್ಲಿ ಮತ್ತೆ ಸುಮಾರು 105 ಕವಿಗಳ ತಲಾ ಎರಡರಿಂದ ಐದರ ವರೆಗೆ ಕವಿತೆಗಳನ್ನು ಆಯ್ದು ಪ್ರಕಟಿಸಿತು. ಅಕಸ್ಮಾತ್ ಕಣ್ಣಿಗೆ ಬಿದ್ದು ಇದನ್ನು ಎತ್ತಿಕೊಂಡು ಬಂದೆ. ಇವತ್ತು ಲಭ್ಯವಿಲ್ಲದ, ಮುದ್ರಿತ ಪ್ರತಿಗಳು ಮುಗಿದ ಸಂಕಲನದಿಂದ ಆಯ್ದ ಅನೇಕ ಅತ್ಯುತ್ತಮ ಕವಿತೆಗಳು ನಮಗಿಲ್ಲಿ ಸಿಗುತ್ತಿರುವುದೇ ಒಂದು ಭಾಗ್ಯ. ಪಿ ಲಂಕೇಶರು ‘ಅಕ್ಷರ ಹೊಸ ಕಾವ್ಯ’ ಪ್ರಕಟಿಸುವಾಗ ಒಬ್ಬ ಕವಿಯ ಒಂದಕ್ಕಿಂತ ಹೆಚ್ಚಿನ ಕವಿತೆಗಳನ್ನು ನಮಗೆ ಕೊಡುತ್ತ ಹೋದರು. ಅದಕ್ಕೂ ಮೊದಲೇ ಇಂಥ ಒಂದು ಅಗತ್ಯ ಮನಗಂಡವರು ಇದ್ದರಲ್ಲ ಎನ್ನುವುದು ಅತ್ಯಂತ ಸಮಾಧಾನದ ಸಂಗತಿ. ಈ ರತ್ನಸಂಪುಟದ ಸಂಪಾದಕರನ್ನು ಗಮನಿಸಿ: ಪುತಿನ, ಜಿಎಸೆಸ್, ಕಣವಿ, ಪ್ರಭುಶಂಕರ, ಹಾ ಮಾ ನಾಯಕ, ನಿಸಾರ್ ಮತ್ತು ಕೆ ಟಿ ವೀರಪ್ಪ.

ಈ ಪುಸ್ತಕದಲ್ಲಿ ಸಿಕ್ಕಿದ ನಮ್ಮ ಸುಬ್ರಾಯ ಚೊಕ್ಕಾಡಿಯವರ ಕವಿತೆಗಳಲ್ಲಿ ನನಗೆ ತುಂಬ ಹಿಡಿಸಿದ ಒಂದನ್ನು ಇಲ್ಲಿ ಹಂಚಿಕೊಳ್ಳುತ್ತಲೇ ನನ್ನ ಖುಶಿಯನ್ನು ಹೇಳಿಕೊಳ್ಳುವುದು ನನ್ನ ಉದ್ದೇಶ. ಕವಿತೆಯ ಹೆಸರು ‘ತೆರೆ’. ಅದರ ಪೂರ್ಣಪಠ್ಯವನ್ನು ಚೊಕ್ಕಾಡಿಯವರ ಸರಳ ಸಹೃದಯ ಪ್ರೀತಿ ಕ್ಷಮಿಸೀತೆಂಬ ಭರವಸೆಯಿಂದ ಇಲ್ಲಿ ಕಾಣಿಸಿದ್ದೇನೆ.

ಈ ಕವಿತೆಯ ಹೆಸರು ‘ತೆರೆ’. ಗಂಡು ಹೆಣ್ಣಿನ ಒಂದು ರಾತ್ರಿಕಾಲದ ಏಕಾಂತದ ಸನ್ನಿವೇಶ ಇದು ಎಂದು ಭಾವಿಸಿಕೊಳ್ಳಬಹುದು. ಮೊದಲ ಸಾಲು ‘ರಾತ್ರಿ ಕೂದಲಿನಲ್ಲಿ ಬೆರಳಾಡುತಿರುವಾಗ’ ಎನ್ನುತ್ತದೆ. ಅಥವಾ ರಾತ್ರಿ ಕೂದಲಿನಲ್ಲಿ ಬೆರಳಾಡುತಿರುವಾಗ ಬಿಚ್ಚುವುದು ಎಂದೂ, ಎರಡನೆಯ ಸಾಲಿನಿಂದ ಸ್ವಲ್ಪ ಕಡಪಡೆದು, ಓದಬಹುದು. ಕೂದಲಿನಲ್ಲಿ ಬೆರಳಾಡಿಸಿದಾಗ ಮುಡಿ ಬಿಚ್ಚಿಕೊಂಡಿತು ಎನ್ನುವ ಅರ್ಥದಲ್ಲಿ. ಏಕೆಂದರೆ, ಎರಡನೆಯ ಸಾಲು, ‘ಬಿಚ್ಚುವುದು - ಮಾದಕದ ಕಣ್ಣು’ ಎಂದಿದ್ದರೂ ಮೂರನೆಯ ಸಾಲಿನಲ್ಲಿ ಮುಚ್ಚುವುದು ಎಂದಿದೆ! ಕಣ್ಣೇ ಬಿಚ್ಚುವುದು ಮುಚ್ಚುವುದು ಮಾಡುತ್ತಿದೆಯೆ? ಇರಬಹುದು! ಬೆರಳಾಡಿಸಿದ್ದೇ ಬಿಚ್ಚಿಕೊಂಡ ಮುಡಿ ಅಥವಾ, ಬೆರಳಾಡಿಸುತ್ತಿರುವ ಸುಖಕ್ಕೆ ಬಿಚ್ಚಿಕೊಂಡು-ಮುಚ್ಚಿಕೊಂಡು ಸುಖಿಸಿದ ಕಣ್ಣು ‘ಬಿಚ್ಚಲೆಳಸುವುದು ಬದುಕನ್ನು’ ಎನ್ನುತ್ತದೆ ನಾಲ್ಕನೆಯ ಸಾಲು. ಕವಿತೆಯ ಎಲ್ಲ ಸುರತ-ನಿರತ ಗಮ್ಯವನ್ನು ಈ ನಿಟ್ಟಿನಿಂದಲೇ ಕಾಣುವುದಿದೆ ನಮಗೆ. ಕಣ್ಣು ಎನ್ನುವುದನ್ನು ಈ ರಾತ್ರಿಯ ಮಾದಕ ಸನ್ನಿವೇಶದಲ್ಲಿ ಬೇರೊಂದು ಅರ್ಥದಲ್ಲೂ ನೀವು ಕಲ್ಪಿಸಿಕೊಳ್ಳಲು ನನ್ನದೇನೂ ಅಡ್ಡಿಯಿಲ್ಲ. ಇಂದ್ರನಿಗೆ ಗೌತಮ ಕೊಟ್ಟ ಶಾಪದಿಂದ ಅವನ ಮೈಯೆಲ್ಲ ಸಹಸ್ರಯೋನಿಗಳಾದವಂತೆ. ಇಲ್ಲ, ಅವನು ಸಹಸ್ರಾಕ್ಷನಾದ ಎನ್ನುವವರೂ ಇದ್ದಾರೆ. ಈ ಹೆಣ್ಣಿಗೂ ಕಣ್ಣಿಗೂ ಏನು ಮೋಹವೋ ಎಂದುಕೊಳ್ಳಬಹುದು.

ಇದೆಲ್ಲ ನನ್ನ ಕಪೋಲ-ಕಲ್ಪನೆಯೇನಲ್ಲ ಮತ್ತೆ. ಬನ್ನಿ ಮುಂದಿನ ಚರಣಕ್ಕೆ.

ಪಟಪಟನೆ ತೆರೆದು ಪಕಳೆಗಳಂಥ ಪರಿಗಳ
ಸ್ನೇಹ ಪಾತ್ರೆಯ ಹಿಡಿದು, -ನಗ್ನ - ಕಾದಾಗಲೂ
ಬೆರೆಯಲಿಲ್ಲ. ಬೆರೆಯುವುದೆ ಇಲ್ಲವೋ ಮಣ್ಣು - ನೀರು?

ಮಣ್ಣು ನೀರು ಬೆರೆಯುವುದು! ವಾಹ್, ಎಂಥ ಪರಿಕಲ್ಪನೆಯಿದು! ಇದರಲ್ಲಿ ಏನಿದೆ ಏನಿಲ್ಲ. ಮಣ್ಣು ನೀರು ಬೆರೆತಲ್ಲದೆ ಇದೆಯೆ ಸೃಷ್ಟಿ? ಮಣ್ಣಿನ ಫಲವತ್ತತೆಯೇ ನೀರಿನ ಗುಣದಲ್ಲಿದೆಯೋ ಎಂಬಂತೆ, ನೀರಿನ ಸತ್ವವೇ ಮಣ್ಣಿನ ಘಮದಲ್ಲಡಗಿತ್ತೋ ಎಂಬಂತೆ ಇದೊಂದು ಸೃಷ್ಟಿಯ ಚಿದಂಬರ ರಹಸ್ಯ. ದೇವೀ ಸ್ತುತಿಯಲ್ಲೂ ಇದು ಬರುತ್ತದೆ, ಗಂಧದ್ವಾರೇ| ಧರಾದರ್ಷೇ| ಧರೆಯೊಂದಿಗೆ ಒಂದು ಘರ್ಷಣೆ ಇದೆ, ಗಂಧ ಘಮಿಘಮಿಸಲು! ಆದರೆ ಮನುಷ್ಯ ಕೊನೆಗೆ ಸೇರುವುದೂ ಇದೇ ಮಣ್ಣಿಗೆ. ಕೊನೆಯಲ್ಲಿ ಅವನ ಗಂಟಲಿಗೆ ಸುರಿಯುವುದೂ ಇದೇ ಒಂದುದ್ಧರಣೆ ನೀರನ್ನು.

ನಿಮಗೀಗ ತಪ್ಪದೇ ನೆನಪಾಗುವವರು ಗೋಪಾಲಕೃಷ್ಣ ಅಡಿಗರು.

ಯಾವ ಮೋಹನ ಮುರಲಿ ಕರೆಯಿತೊ| ದೂರ ತೀರಕೆ ನಿನ್ನನು|
ಯಾವ ಬೃಂದಾವನವು ಸೆಳೆಯಿತೊ| ನಿನ್ನ ಮಣ್ಣಿನ ಕಣ್ಣನು|

ಎನ್ನುತ್ತಾರೆ ಅಡಿಗರು. ಬೃಂದಾವನವೇ ಮಣ್ಣಿನದು. ದೇಹ ತ್ಯಾಗ ಮಾಡಿದ ಯತಿಗಳಿಗೆ ಕಟ್ಟುವುದು ಕೂಡ ಬೃಂದಾವನವೆ. ಮತ್ತೀ ಮಣ್ಣಿನ ಕಣ್ಣು ಎಂದರೇನು? ಅದು ಯಾಕೆ ಮತ್ತು ಹೇಗೆ ಸೆಳೆಯುತ್ತದೆ?

ಈ ಭೂಮಿಗೆ ಒಂದು ಕಣ್ಣಿದ್ದರೆ ಅದನ್ನು ಮಣ್ಣಿನ ಕಣ್ಣು ಎನ್ನಬಹುದೆ? ಅಥವಾ, ಭೂಮಿಯನ್ನು ಹೆಣ್ಣು ಎನ್ನುತ್ತೇವೆ. ಭೂಗರ್ಭ ಎನ್ನುವ ಶಬ್ದವೂ ಬಳಕೆಯಲ್ಲಿದೆ. ಅಹಲ್ಯಾ ಅಂದರೆ ಯಾವತ್ತೂ ಉಳಲ್ಪಡದ ಭುವಿ ಎನ್ನುವ ಅರ್ಥದಲ್ಲೇ ಈ ಭೂಮಿಯ ಒಂದು ಗರ್ಭಕ್ಕೆ ಒಂದು ದ್ವಾರ ಇರುವುದಾದರೆ, (ಭೂಮಿ ತಾಯ ಮಗಳಾದ ಸೀತೆ ಕೊನೆಯಲ್ಲಿ ಭೂಗರ್ಭವನ್ನೇ ಹೊಕ್ಕಳು ಎನ್ನುತ್ತಾರಲ್ಲ, ಆಗ ಆಕೆ ಪ್ರವೇಶಿಸಿದ ದ್ವಾರ?) ಅದನ್ನು ಮಣ್ಣಿನ ಕಣ್ಣು ಎಂದು ಸೂಚ್ಯವಾಗಿ ಹೇಳಬಹುದೆ? ಅಂಥ ಮಣ್ಣಿನ ಕಣ್ಣು ಸೆಳೆದಾಗ ಸೀತೆ ಭೂಗರ್ಭ ಪ್ರವೇಶಿಸಿದಳೆ? ಮಣ್ಣಿನ ಕಣ್ಣು ಸೆಳೆಯುವುದೆಂದರೇ ಮೃತ್ಯು ಸೆಳೆಯುವುದೆ?

ಕಾಮದ ಬಗ್ಗೆ ಎಷ್ಟು ಕವಿತೆಗಳು ಬಂದಿಲ್ಲ ನಮ್ಮಲ್ಲಿ? ಬಹುಶಃ ನವ್ಯ ಕಾಲಘಟ್ಟದಲ್ಲಿ ಇದಕ್ಕೊಂದು ಉಚ್ಛ್ರಾಯ ಪ್ರಾಪ್ತಿಯಾಗಿತ್ತೆನ್ನಬಹುದೇನೊ. ಗಂಗಾಧರ ಚಿತ್ತಾಲರ ಕವಿತೆಗಳಿಂದ ಹಿಡಿದು ಇವತ್ತಿಗೂ ಕಾಮ, ಪ್ರೇಮ, ಗಂಡು ಹೆಣ್ಣು ಸಮಾಗಮದ ಪರಿಕಲ್ಪನೆಯನ್ನು ಕಾವ್ಯ ಬಳಸಿಕೊಳ್ಳುತ್ತಲೇ ಬಂದಿದೆ. ಅದನ್ನು ಎಷ್ಟೆಲ್ಲ ರೋಚಕವಾಗಿ, ಹೊಸ ಹೊಸ ಪ್ರತಿಮೆ/ಪರಿಕಲ್ಪನೆಗಳಲ್ಲಿ ಹೆಣೆದು ಹೇಳಿದರೂ ಹೆಚ್ಚೇನೂ ಕಷ್ಟವಿಲ್ಲದೆ ಅರ್ಥವಾಗುವಂತೆಯೇ ಒಟ್ಟಾರೆಯಾಗಿ ಅದರಲ್ಲಿ ಹೆಚ್ಚೇನೂ ವಿಶೇಷವಿಲ್ಲವಲ್ಲ ಎನಿಸುವುದೂ ಸಾಮಾನ್ಯವಾಗಿದೆ. ಆದರೆ ಚೊಕ್ಕಾಡಿಯವರ ಕವಿತೆಯಲ್ಲಿ ಆವತ್ತು, ಸುಮಾರು ಐವತ್ತು ವರ್ಷಗಳಷ್ಟು ಹಿಂದೆಯೇ, ಕಾಮ ನಿರ್ವಹಿಸಿದ ಪಾತ್ರವನ್ನು ಗಮನಿಸುವುದೇ ಇಲ್ಲಿ ನನಗೆ ಮುಖ್ಯವೆನಿಸಿದ್ದು. ಅಥವಾ ಇದನ್ನು ಹೀಗೆಯೂ ಹೇಳಬಹುದು, ಕಾಮವನ್ನು ಸುಬ್ರಾಯಚೊಕ್ಕಾಡಿಯವರು ತಮ್ಮ ಕವಿತೆಯಲ್ಲಿ ಬಳಸಿಕೊಂಡು ಸಾಧಿಸಿದ್ದನ್ನು, ಅದು ವಿಶಿಷ್ಟವೂ ವಿಶೇಷವೂ ಆಗಿರುವುದರಿಂದಲೇ, ಗಮನಿಸುವುದೇ ನನಗೆ ಮುಖ್ಯವಾಗುತ್ತದೆ.

ಗಂಟು ಸಡಿಲುವುದಿಲ್ಲ. (ಮುಡಿಯ ಕೂದಲಗಂಟೆ ಅಥವಾ ಹುಟ್ಟು ಸಾವಿನ ಬ್ರಹ್ಮಗಂಟೆ?)
ಬೆರಳು ಮುಟ್ಟುವುದಿಲ್ಲ ಮೈಯ. (ತಲೆಗೂದಲ ನೇವರಿಸುತ್ತಿತ್ತಲ್ಲ ಬೆರಳು! ಅದೇಕೆ ಮೈಯ ಮುಟ್ಟಲು ಹಿಂಜರಿದಿದೆ ಇಲ್ಲಿ?) ನರವುಬ್ಬಿ ಸಿಡಿಯುವುದಿಲ್ಲ.

ನರವುಬ್ಬಿ ಸಿಡಿಯುವುದು! ಈ ಸಿಡಿತಕ್ಕೆ ಒಂದು ಗಮ್ಯವಿದೆ, ಅದೇನು? ‘ಹುಟ್ಟನನುಭವಿಸಿಲ್ಲ. ಸಾವು ಕಾಣುವುದಿಲ್ಲ.’ ಈ ಶಬ್ದಪ್ರಯೋಗವೇ ‘ಭಯಂಕರ’ ಅರ್ಥಪರಂಪರೆಯುಳ್ಳದ್ದು. ಹುಟ್ಟನನುಭವಿಸುವುದು ಹೇಗೆ ಹೇಳಿ? ಒಂದು ಗಂಡಿಗೆ ಹೆರಿಗೆಯ ಅನುಭವ ಸಾಧ್ಯವೇ ಎಂದು ಮೊನ್ನೆ ಮೊನ್ನೆ ಸುಮಂಗಲಾ ಪ್ರಶ್ನಿಸಿದ್ದರು. ಯಾರೋ ಪ್ರಸವವೇದನೆಯನ್ನು ಸೃಜನಶೀಲ ಬರವಣಿಗೆಯ ಕಷ್ಟನಷ್ಟಗಳಿಗೆ ಹೋಲಿಸಿ ಮಾತನಾಡಿದ ಸಂದರ್ಭವನ್ನಿಟ್ಟುಕೊಂಡು. ಗಂಡಿಗೆ ನರವುಬ್ಬಿ ಸಿಡಿಯುವ ಅನುಭವವೇ ಬಹುಶಃ ಹುಟ್ಟಿನನುಭವವನ್ನು ಕೊಡಬೇಕು. ಅಷ್ಟರ ಮಟ್ಟಿಗೆ ಅದು ಸಿಡಿತವೇ. ಅಷ್ಟು ಮಾತ್ರವಲ್ಲ, ಅದು ಸಾವನ್ನೂ ಕಾಣಿಸಬೇಕು ಎನ್ನುತ್ತಾರೆ ಚೊಕ್ಕಾಡಿ. ಸಾವಿನ ನೆರಳೇ ಇಲ್ಲದ ಹುಟ್ಟು ಎನ್ನುವುದುಂಟೆ?! ಹುಟ್ಟಿದಾಗ ಹುಟ್ಟುವುದೇ ಸಾವಲ್ಲವೆ?

ಕಾಮವನ್ನು ಹಿಂಸೆಗೆ ಸಮೀಕರಿಸಿದವರು ಗಾಂಧಿ. ತಮ್ಮ ಇಳಿವಯಸ್ಸಿನಲ್ಲಿ ಅವರು ನಗ್ನರಾಗಿ ಹರೆಯದ ಹುಡುಗಿಯರ ಜೊತೆ ಮಲಗುತ್ತಿದ್ದರು ಎನ್ನುತ್ತಾರೆ. ಅದನ್ನವರು ತಮ್ಮಲ್ಲಿ ಇನ್ನೂ ಕಾಮ (ಹಿಂಸೆ) ಜೀವಂತವಾಗುಳಿದಿದೆಯೇ ಎನ್ನುವುದನ್ನು ಕಂಡುಕೊಳ್ಳುವುದಕ್ಕಾಗಿಯೇ ಮಾಡುತ್ತಿದ್ದರಂತೆ. ಇಲ್ಲಿಯೇ ಅವರ ಈ ನಿಲುವು ಟಾಲ್‌ಸ್ಟಾಯ್ ಜೊತೆಗೂ ತಳುಕು ಹಾಕಿಕೊಂಡಿದೆ. ಸಾಧ್ಯವಾದರೆ ಟಾಲ್‌ಸ್ಟಾಯ್ ಅವರ ‘ಕ್ರೊಯೆತ್ಸರ್ ಸೊನಾಟ’ ನೀಳ್ಗತೆಯನ್ನು ಓದಿ. ಚೊಕ್ಕಾಡಿಯವರು ಕಾಮವನ್ನು ಹುಟ್ಟಿನೊಂದಿಗೆ ಎಂತೋ ಸಾವಿನೊಂದಿಗೂ ಸಮೀಕರಿಸಿ ನೋಡುತ್ತಾರೆ ಎನಿಸಿದೆ ನನಗೆ. ಅಂದರೆ, ಈ ಸಾವು ಬರಿಯ ದೇಹದ್ದೇ ಎಂದಲ್ಲ. ಒಂದರ್ಥದ ಶರಣಾಗತಿಯಿದೆ ಕಾಮದಲ್ಲಿ. ಅಹಂ ಬಿಟ್ಟು, ನಗ್ನರಾಗಿ, ನಿದ್ದೆಯಲ್ಲಿ ಅಸ್ಮಿತೆಯ ಅಹಂಕಾರವನ್ನು ಕಳೆದುಕೊಂಡು ಶರಣಾದ ಹಾಗೆ ಶರಣಾಗಿ ಅನುಭವಿಸುವ ಸುಖ ಅದು, ಸಾವೂ ಅದೇ. ಕಾಮ ಎನ್ನುವುದು ಭಾಷೆಯ ಹಂಗಿಲ್ಲದೆ ಎರಡು ದೇಹಗಳು ನೇರವಾಗಿ ಮಾತನಾಡಿಕೊಳ್ಳುವ ಕ್ರಿಯೆಯಾಗುವುದು ಆಗ. ಇಲ್ಲವಾದಲ್ಲಿ ಅದು ಹಿಂಸೆ, ಅದು ಸಾವು. ಬದುಕು ಅಥವಾ ಸಾವು, ಆಯ್ಕೆ ತೆರೆದಿದೆ, ತೆರೆದಿದೆಯೆ? ತೆರೆ!

ಭ್ರಮಣವೇ ಭ್ರಮೆಯಾಗಿ ಹರಡಿ ಜಾಲದ ಹಾಗೆ,
ಮನಸಿನೋವರಿಯಲ್ಲಿ ಬೆಳಕಿಲ್ಲ.
ಆಳದಾಚೆಗೂ ದಾರಿ; ತೆರೆಯಿಲ್ಲ, ತೆರೆದಿಲ್ಲ.

ಮನಸಿನೋವರಿಯಲ್ಲಿ ಬೆಳಕಿಲ್ಲ. ಮನಸ್ಸಿನ ಒಳಮನೆಯಲ್ಲಿ ಸದಾ ಕತ್ತಲೆ. ಹಾಗೆಯೇ ದೇಹದ ಒಳಮನೆಯಲ್ಲೂ ಕತ್ತಲೆಯೇ. ಅಲ್ಲಿಯೂ ಆಳದಾಚೆಗೂ ದಾರಿಯಿದೆ, ತೆರೆ ಇಲ್ಲವಂತೆ. ಸರಿಯೇ. ಆದರೆ ಅದು ತೆರೆದೂ ಇಲ್ಲ ಎನ್ನುತ್ತಾರೆ ಚೊಕ್ಕಾಡಿ. ದೇಹ ಕೆಲವೊಮ್ಮೆ ಕೆಲವರಿಗೆ ಬಿಟ್ಟುಕೊಳ್ಳುವುದಿಲ್ಲ. ಬಸ್ಸಿನಲ್ಲಿ ನಿಮ್ಮ ಪಕ್ಕ ಕೂತ ನಿಮ್ಮದೇ ಲಿಂಗದ ಮನುಷ್ಯ ಕೂಡ ನಿಮಗೆ ಹಿತ ತರುವುದಿಲ್ಲ, ಅವನು ಎಷ್ಟೇ ಅಪರಿಚಿತನಾಗಿದ್ದರೂ, ಕೆಲವೇ ಹೊತ್ತಿನಲ್ಲಿ ಎದ್ದು ಹೋಗುತ್ತಾನೆಂದು ಕೊಂಡರೂ ಏನೋ ಅಸುಖ, ಅಹಿತ. ಹಾಗೆಯೇ ಅಹಲ್ಯೆಗೂ ಗೌತಮನಿಗೂ ಒಂದು ಹಂತದಲ್ಲಿ ಹಿತ ತಪ್ಪಿತಲ್ಲ. ಮನುಷ್ಯ ಕಲ್ಲಾಗುವುದು ಹಾಗೆ. ಮನಸ್ಸು ಕೂಡ ಸುಲಭಕ್ಕೆ ತೆರೆದುಕೊಳ್ಳುವುದಿಲ್ಲವಲ್ಲ. ಅಬ್ಬಾ ಅದರ ಹಠವೇ! ಬಾಗಿಲು ಹಾಕಿಕೊಂಡಾಗೆಲ್ಲ ಉಳಿಯುವುದು ಕತ್ತಲೆಯೇ. ನಿಮಗೆ ಬೆಳಕು ಬೇಕಿದ್ದರೆ ತೆರೆ ಸರಿಸಿ, ತೆರೆದುಕೊಂಡು ಸ್ವೀಕಾರಕ್ಕೆ ನೀವು ಸಿದ್ಧರಾಗಲೇ ಬೇಕು. ಯಾವುದರ ಸ್ವೀಕಾರ ಇಲ್ಲಿ? ಬದುಕಿನ ಸ್ವೀಕಾರ ಮತ್ತು ಅದರ ನೆರಳಾದ ಸಾವಿನ ಸ್ವೀಕಾರವೂ. ಆದರೆ ಜಿಜ್ಞಾಸೆಯಿದೆ ಕವಿಗೆ. ನಮಗೆ, ಎಲ್ಲರಿಗೆ, ಪ್ರಶ್ನೆಯ ಮೂರ್ತಿಗೆ.

ತನ್ನೆದುರೆ ಬರುವ-ಸರಿಯುವ ಬದುಕು ಬರುತ್ತಿದೆಯೊ ಹೋಗುತ್ತಿದೆಯೊ ಎನ್ನುವ ಜಿಜ್ಞಾಸೆಯಿದು. ಇಷ್ಟು ಸಾಕಪ್ಪ!

1 comment:

Narayan Bhat said...

ತೆರೆ ತೆರೆಯಾಗಿ ಹರಿದುಬಂದ ನಿಮ್ಮ ವಿವರಣೆ 'ತೆರೆದಷ್ಟೂ ತೆರೆದುಕೊಳ್ಳುವಂತಿದೆ'.