Sunday, December 31, 2017

ಕೇಳದೆ ನಿಮಗೀಗ...ದೂರದಲ್ಲಿ ಯಾರೋ, ಹಾಡು ಹೇಳಿದಂತೇ...

ಏನೋ ಮೆಲ್ಲಗೆ ಮಾತನಾಡುವ ಧ್ವನಿ. ಎಲ್ಲಿಂದ ಬರುತ್ತಿದೆ ಅದು ಅಂತ ಗೊತ್ತಾಗಲಿಲ್ಲ. ಅಥವಾ ನನ್ನದೇ ಭ್ರಮೆಯೋ ಎಂಬ ಅನುಮಾನ ಬೇರೆ. ನಿಧಾನಕ್ಕೆ ಎದ್ದು ಕಿವಿಯಾನಿಸಿದೆ. ಎಡ ಪಕ್ಕದ ಗೋಡೆಯಿಂದ ಬರ್ತಿದೆ ಅನಿಸಿತು. ಆ ಕಡೆ ನಮ್ಮ ಕಿಚನ್ನಿದೆ. ರೂಮಿನಿಂದ ಹೊರಬಂದು ಕಿಚನ್ನಿಗೆ ಹೋದೆ. ಅಲ್ಲಿ ಲೈಟ್ ಹಾಕಿದ್ದೇ ಸರಬರ ಎಂದು ಜಿರಲೆ, ಹಲ್ಲಿಗಳೆಲ್ಲ ಅಡ್ಡಾದಿಡ್ಡಿ ಓಡತೊಡಗಿದವು. ಆ ಸದ್ದಿಗೆ ಧ್ವನಿ ನಿಂತೀತಾ ಎಂದು ಆಲಿಸಿದರೆ, ಇಲ್ಲ. ಈಗ ಹೆಚ್ಚು ಸ್ಪಷ್ಟವಾಗಿಯೇ ಕೇಳುತಿತ್ತು. ನಿಧಾನವಾಗಿ ಅತ್ತಂತೆ. ಅಲ್ಲ, ಏನೋ ದೂರಿಕೊಂಡಂತೆ. ಆದರೆ ಧ್ವನಿಯಲ್ಲಿ ಸಿಟ್ಟು, ರೋಷ ಇಲ್ಲ. ಒಂಥರಾ ಬೇಸರ, ನೋವು. ಇಲ್ಲ, ಅಳುತ್ತಿಲ್ಲ. ಧ್ವನಿ ಸ್ಪಷ್ಟವಾಗಿಯೇ ಇದೆಯಾದರೂ ತೀರ ಮೆಲುದನಿ, ತನ್ನಷ್ಟಕ್ಕೆ ತಾನು ಆಡಿಕೊಂಡಂತೆ.... ಅಲ್ಲಿಯೂ ಗೋಡೆಯಿಂದಲೇ ಬರುತ್ತಿತ್ತು ಧ್ವನಿ! ಗೋಡೆಯ ಮೇಲೆ ತೂಗು ಹಾಕಿದ್ದ ಚೀಲ, ಕ್ಯಾಲೆಂಡರು, ದೇವರ ಒಂದು ಫೋಟೋ ಎಲ್ಲ ಮೆಲ್ಲಗೆ ಒಂದರ ಬಳಿಕ ಒಂದರಂತೆ ತೆಗೆದು ಇಳಿಸತೊಡಗಿದೆ. ಆಗಲೂ ಧ್ವನಿ ನಿಲ್ಲುತ್ತಿಲ್ಲ. ಇನ್ನೇನು ನಾನು ಗೋಡೆಯೊಳಗೇ ಹೋಗಿ ನೋಡಬೇಕು ಎಂದುಕೊಂಡಿದ್ದೇ ಗೋಡೆಯನ್ನು ಪ್ರವೇಶಿಸಿದೆ ಮೆಲ್ಲಗೆ, ಆ ಧ್ವನಿಗೆ ನನ್ನಿಂದ ತೊಂದರೆಯಾಗದಂತೆ. ಎದುರಾಗಿದ್ದು ಗೋಡೆಯಷ್ಟೇ ದೊಡ್ಡ ಕನ್ನಡಿ. ಧ್ವನಿ ನೊಂದ ಹೆಣ್ಣಿನದು. ನನ್ನದೇ ಕನ್ನಡಕವನ್ನು ಹಣೆಯ ಮೇಲಿಟ್ಟು ಮರೆತವನಂತೆ ಕನ್ನಡಿಯಲ್ಲಿ ನೋಡಿ ಒಮ್ಮೆಗೇ ಥಕ್ಕಾದೆ! ಆ ಮಾತಿಗೆ ಸಮನಾಗಿ ಆಡುತ್ತಿದ್ದ ತುಟಿಗಳು ನನ್ನವೇ!


ಇದು ಮಂಜಿರಿ ಇಂದೂರ್ಕರ್ ಅವರ ಕವಿತೆಗಳಿಗೆ ನಾನು ಬರೆದ ರೂಪಕ. ಇವರ ಕವಿತೆಗಳನ್ನು ಓದುತ್ತ ಒಂದು ಬಗೆಯ ಆಶ್ಚರ್ಯಾಘಾತ ಎನ್ನುತ್ತಾರಲ್ಲ, ಅದರ ಅನುಭವವಾಗುತ್ತದೆ. ಇವರು ತಮ್ಮ ಕವಿತೆಯಲ್ಲಿ ಒಂದರ ಪಕ್ಕ ಒಂದು ಪ್ರತಿಮೆಗಳನ್ನಿರಿಸುವ ಎಚ್ಚರದ ರೀತಿ ಹೇಗಿದೆಯೆಂದರೆ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಒಡೆದು ಬಿಡಬಹುದಾದ ಗಾಜಿನ ಅಪೂರ್ವ ಪುರಾತನ ವಸ್ತುಗಳನ್ನು ಎತ್ತಿಡುತ್ತಿದ್ದಾರೋ ಎಂಬಂತೆ! ಅವು ನಮ್ಮ ದೈನಂದಿನ ಬದುಕಿನ ಭೌತಿಕ ವಸ್ತು ವಿವರಗಳಾಗಿದ್ದೂ ಇವರು ಹೇಳುತ್ತಿರುವುದು ಪಾರಮಾರ್ಥಿಕವಾದ ಇನ್ನೇನನ್ನೋ ಎಂಬಂತೆ! ಕೊನೆಗೂ ಹೇಳಿಯೂ ಹೇಳದುಳಿಯುವ ಇವರ ಮಾತುಗಳೆಲ್ಲ ನಿದ್ದೆಯಲ್ಲಿ ಕೇಳಿಸಿಕೊಂಡ ಮಾತುಗಳಂತೆ, ಕನಸಲ್ಲಿ ದಕ್ಕಿದ ರಸಿಕ ಸ್ಪರ್ಶದಂತೆ, ನಾಲಗೆಯಲ್ಲಿ ರುಚಿ ಮಾತ್ರ ಉಳಿಸಿ ಹೋದ ತಿನ್ನದ ಸಿಹಿತಿಂಡಿಯಂತೆ, ಬೊಗಸೆಯಲ್ಲಿ ಹಿಡಿಯಲಾಗದೇ ಹೋದ ಒಂದು ಅದ್ಭುತ ರಾಗದಂತೆ ಜಾರಿ ಹೋಗುತ್ತವೆ. ಆದಾಗ್ಯೂ ನಿಮಗೂ ನಮಗೂ ಎಲ್ಲವೂ ಅರ್ಥವಾಗಿರುತ್ತದೆ. ಇಲ್ಲಿ ಒಂದು ಆಶ್ಚರ್ಯ ಚಿಹ್ನೆ ಹಾಕಲು ಮರೆತಿಲ್ಲ, ಅದರ ಅಗತ್ಯವಿಲ್ಲ ಅಷ್ಟೆ. 

ಹಾಗೆಯೇ, ಈ ಯಾವ ಕವಿತೆಗಳಿಗೂ ವಿವರಣೆ ಬೇಕಿಲ್ಲ. ಆದರೆ ನಿಮ್ಮ ಸಾಂಗತ್ಯ ಬೇಕು, ಮೌನ ಬೇಕು, ಪ್ರೀತಿ ಬೇಕು. ಮತ್ತೆ, ಅವನ್ನೆಲ್ಲ ಬೇಡದೇ ಪಡೆದುಕೊಳ್ಳೊ ಕವಿತೆಗಳಿವು. 

ಕೆಲವೊಂದು ಕವಿತೆಗಳು ಬಂಡಾಯವೆದ್ದ ಹಾಗೆ ತುಂಡು ಸಾಲುಗಳಲ್ಲಿ ಮೂಡದೆ, ಗದ್ಯದ ಸಾಲುಗಳಂತೆ ಉದ್ದಕ್ಕೂ ಇವೆ. ನಮ್ಮಲ್ಲಿ ಎಸ್ ದಿವಾಕರ್ ಅವರು ಹೀಗೆ ಕವಿತೆಗಳನ್ನು ಬರೆದಿದ್ದರು. ಒಬ್ಬ ಕವಿ ಹೇಗೆ ಬರೆದರೂ ಅದರಲ್ಲಿ ಕವಿತ್ವ ಇರುತ್ತದೆ ಎನ್ನುವುದಕ್ಕೆ ಸಾಕ್ಷಿಯಂತಿವೆ ಈ ಪ್ರಯತ್ನಗಳು. ಅಷ್ಟರಮಟ್ಟಿಗೆ ಮಂಜಿರಿ ಇಂಧೂರ್ಕರ್ ಒಬ್ಬ ಶುದ್ಧಕವಿ.

ಕವಿತೆ ಒಂದು
ಹನ್ನೆರಡಕ್ಕೆ ಇನ್ನೂ ಹತ್ನಿಮಿಷ: ನಾನು ಬಹುಶಃ ತುಂಬ ಪ್ರೀತಿಸುವ, ಒಂದು ಹೆಣ್ಣಿನ ಸಾವು.

ಮನೆ, ನಾನು ಹುಟ್ಟಿ ಬೆಳೆದ ಮನೆಯಲ್ಲ,
ಇದು ಬೇರೆ, ಹೊಸ ಮನೆ,
ಹಳತರ ಪಳೆಯುಳಿಕೆಯಿಂದ ನಿರ್ಮಿಸಿದ್ದು.
ಈ ಮನೆ ನನ್ನ ಮನೆಯಲ್ಲ, ಅಂದರೆ
ಹಳೇ ಮನೆ ಆಗಿತ್ತಲ್ಲ, ಹಾಗೆ ನಂದಲ್ಲ.
ಈ ಮನೆಯ ಕಿಚನ್ನೇ ಅದ್ದ್ಯಾ ಕೋಣೆಯಾಗಿತ್ತು,
ನಾನು ಈ ಕೋಣೇನ ಹಂಚಿಕೊಂಡಿದ್ದೆ ಅವಳ ಜೊತೆ,
ರಮಾಕಾಂತನ ಬದಲಿಗೆ. 

ಈ ಕೋಣೆಯ ಸೊಳ್ಳೆಪರದೆಯೇ ನನ್ನ ಗುಮ್ಮನಿಂದ ಕಾಪಾಡಿದ್ದು
ಮತ್ತು ನಾನು ಪೌರಾಣಿಕ ಸಿನಿಮಾದಲ್ಲಿ ಮಕ್ಕಳು ಇದ್ದಕ್ಕಿದ್ದ ಹಾಗೆ
ಜಾರಿ ಪಾತಾಳಕ್ಕೆ ಬೀಳ್ತಾರಲ್ಲ, ಹಾಗೆ ಬೀಳದ ಹಾಗೆ ಹಿಡಿದಿದ್ದು.
ಸಿನಿಮಾದ ಹೆಸರು ಕೇಳಬೇಡಿ, ನನಗೀಗ ಅದೆಲ್ಲ ನೆನಪಿಲ್ಲ,
ಗೂಗಲಲ್ಲೂ ಹುಡುಕಲಾರೆ, ಅಷ್ಟೆ.

ಲಿವಿಂಗ್ ರೂಮಿನ ಅರ್ಧದಷ್ಟು, ಮೊದಲಿನ ಹಾಗೇ ಇದೆ,
ಹಳೇ ಮನೆಯ ಕಿಚನ್ನಿನ ಅರ್ಧದಷ್ಟು ಈಗ ಲಿವಿಂಗ್ ರೂಮ್ ಆಗಿಬಿಟ್ಟಿದೆ.
ಅಮ್ಮ ಮತ್ತು ನಾನು ಲತಾ ಮಂಗೇಶ್ಕರ್ ಹಾಡು ಹಾಡುತ್ತಿದ್ದ ಅದೇ ಜಾಗ
ಲಗ್ ಜಾ ಗಲೇ ಕಿ ಫಿರ್ ಯೇ ಹಸೀನ್ ರಾತ್ ಹೊ ನ ಹೊ,
ಶಾಯದ್ ಫಿರ್ ಇಸ್ ಜನಮ್ ಮೆ, ಮುಲಾಖಾತ್ ಹೊ ನ ಹೊ

ಭೋಗೋಳಿಕವಾಗಿ ಅಮ್ಮ ಮತ್ತು ಅಪ್ಪನ ಕೋಣೆ ಅಲ್ಲೇ ಇದೆ,
ಆದರದು ದೊಡ್ಡದು ಕಾಣ್ತಿದೆ, ಅದಕ್ಕೆ ಅದರದ್ದೇ ಟಾಯ್ಲೆಟ್ಟಿದೆ.
ಈಗ ಯಾರೂ ಹಿತ್ತಲ ಕಡೆ ಹೋಗಬೇಕಾದ್ದಿಲ್ಲ.
ಈಗ ಯಾರೂ "ಹಿತ್ಲು ಕಡೆ ಹೋಗ್ತಿದೀನೀ" ಅಂತ ಹೇಳೋದಿಲ್ಲ.
ನಾವದನ್ನೆಲ್ಲ ಹಿಂದಕ್ಕಿಕ್ಕಿಯಾಗಿದೆ.

ಅದ್ದ್ಯಾ ಸತ್ತ ಮುಂಜಾನೆ ಅಮ್ಮ ನನಗೆ ಕಾಲ್ ಮಾಡಿದ್ಲು,
ಕಾಲ್ ರಿಸೀವ್ ಮಾಡೊ ಮೊದಲೇ ನನಗೆ ಗೊತ್ತಿತ್ತು,
ಆ ಹೆಂಗಸು ಸತ್ತಿದ್ದಾಳೆ ಅಂತ.
ನನ್ನ ಅತ್ಯಂತ ಭಯಂಕರ ಗುಟ್ಟೊಂದನ್ನ ತನ್ನ ಹೊಟ್ಟೇಲಿ ಬಚ್ಚಿಟ್ಕೊಂಡ ಹೆಣ್ಣು,
ನನ್ನ ಅತ್ಯಂತ ಭಯಂಕರ ಗುಟ್ಟೊಂದನ್ನ ತನ್ನ ಹೊಟ್ಟೇಲಿ ಬಚ್ಚಿಡಬಾರದಿದ್ದ ಹೆಣ್ಣು
ಸತ್ತಿದ್ದಳು.

ಅದ್ದ್ಯಾಹೊಟ್ಟೆಯೇ ಒಂದು ಪವಾಡಸದೃಶ ಹೊಟ್ಟೆ.
ಸಾಯುವುದಕ್ಕೂ ತಿಂಗಳ ಹಿಂದೆ ಅವಳು ನೋವು ನೋವು ಅಂತಿದ್ಲು,
ಆ ಬಳಿಕ ಸಾಯುವ ತನಕವೂ ಅವಳು ಬೇಗಬೇಗ ‘ರೆಡಿಯಾಗ್ತಿದ್ಲು’.
ಆ ಹೊಟ್ಟೆ ಕೊನೆಮೊದಲಿಲ್ಲದಷ್ಟು ಕಥೆಗಳಿಂದ ತುಂಬಿತ್ತು.
ನಾನವುಗಳನ್ನ ನನ್ನಿಬ್ಬರು ಗೆಳತಿಯರಿಗೆ ಹೇಳುತ್ತಿದ್ದೆ,
ಕಣ್ಣುಬಾಯಿ ಬಿಟ್ಟು ಕೇಳುತ್ತಿದ್ದ ನನ್ನ ಇಬ್ಬರು ಗೆಳತಿಯರು,
ಅವರವರ ಮನೆಯ, ಸತ್ತಿರುವ ಯಜಮಾನನ
ಕುರ್ಚಿ ಮೇಲೆ ಕೂತು ಕೇಳುತ್ತಿದ್ದರು.
ಅವಳ ಹೊಟ್ಟೆ ನಡುವಿನಿಂದ ಒಳಕ್ಕೆ ಎಳಕೊಂಡ ಹಾಗೆ ಚಟ್ಟೆ
ನಂಗಷ್ಟೂ ಇಷ್ಟವಾದ, ಹೊರಕ್ಕೆ ಉಬ್ಬಿಕೊಂಡು ಬೀಗಿದ ಅಮ್ಮಂದರ ಹಾಗಲ್ಲ 
ಭೂತ ಪಿಶಾಚಿ ಬರದ ಹಾಗೆ ನಾನವಳ ಹೊಟ್ಟೆ ಮೇಲೆ ಕೈಯಿಟ್ಟು ಮಲಗತಾ ಇದ್ದೆ
(ನಾನವಳನ್ನ ಮುಟ್ಕೊಂಡಿದ್ರೆ ಭೂತ ಪಿಶಾಚಿ ನನ್ನ ಮುಟ್ಟಲ್ಲ)
ಅವಳು ನಡುರಾತ್ರಿ ಯಾವಾಗ್ಲೊ ನಿದ್ದೇಲಿ ಅದನ್ನ ಕಿತ್ತೆಸೀತಿದ್ಲು.
ಸ್ವತಂತ್ರ ಮನೋಭಾವದ ಹೆಂಗಸೇನಾದ್ರೂ ಎಲ್ಲಾದ್ರೂ ಇದ್ರೆ 
ಅದು ಅದ್ದ್ಯಾನೇ.

ನಮ್ಮ ಕಿಚನ್ನಾಗಿದ್ದ ಅವಳ ಕೋಣೆ ತುಂಬ
ತುಂಬಾ ದಿನದಿಂದ ಬೀಗ ಹಾಕಿಟ್ಟ ಹಳೇ ಕೋಣೆ ಘಾಟು, ವಾಸನೆ.
ಏರ್ ಕಂಡೀಶನರ್‌ಗಾಗಿ ನಾವು ಆ ಕೋಣೇನ ಮುಚ್ಚಿಟ್ಟಿದ್ದೀವಿ.
ಬೇಡದ ಗಲೀಜು ಪಾತ್ರೆಪಗಡಿ ಇಡೋದಕ್ಕಷ್ಟೆ 
ಹಿತ್ತಲಕಡೆ ಇರೊ ಆ ಕೋಣೆ ಕಡೆ ನಾವು ಹೋಗ್ತೀವಿ.
ಯಾವ್ದಾದ್ರೂ ಬಟ್ಟೆ ಹುಡುಕೋಕೆ ಹೋಗ್ತೀವಿ,
ಮದ್ದು ಮಾತ್ರೆ ಹುಡುಕೋಕೆ ಹೋಗ್ತೀವಿ.
ನೆಂಟರು ಬಂದಾಗ ನಾವು ಅವಳ ಹಾಸಿಗೆ ಮೇಲೆ ಹೊದಿಕೆ ಹಾಸ್ತೀವಿ.
ಅವಳ ಕೋಣೇಲಿ ಕೂಲರು, ಏರ್‌ಕಂಡೀಶನರು ಎಲ್ಲ ಇಲ್ಲ,
ಬಹುಶಃ ಸತ್ತವರಿಗೆ ಅದೆಲ್ಲ ಬೇಕಂತ ಇಲ್ಲ.

ನಾವ್ಯಾರೂ ಅವಳ ಬಾತ್‌ರೂಮು, ಎಲ್ಲಾ ಸರಿಯಿದ್ರೂ, ಬಳಸಲ್ಲ.
ನಾವು ಅವಳ ಗಡಿಯಾರದ ಸೆಲ್ಲು ಬದಲಿಸಲ್ಲ.
ನಾವಲ್ಲಿ ಧೂಳು ಕೂಡ ಹೊಡೆಯಲ್ಲ.
ಯಾವತ್ತಾದ್ರೂ ಜಬ್ ವಿ ಮೆಟ್ ಸಿನಿಮಾ ನೋಡೋವಾಗ,
ರೂಮ್ಮೇಟ್ ಹತ್ರ ಹೇಳೋದಿದೆ, ಇದು ಅವಳ ಇಷ್ಟದ ಸಿನಿಮಾ ಅಂತ,
ಯಾವಾಗ್ಲೂ ಜಾನ್ ಅಬ್ರಹಾಂನ್ನೂ ಶಹೀದ್ ಕಪೂರನ್ನೂ ಕನ್ಫ್ಯೂಸ್ ಮಾಡ್ಕೋತಿದ್ಲು ಅಂತ.
ಇಬ್ರೂ ನಗ್ತಿದ್ವಿ, ಮತ್ತೆ, ಒಂದೇ ಸಲಕ್ಕೆ ಯಾಕೋ ಹೆದರಿದ ಹಾಗೆ ಬಿಳಿಚುತಿದ್ವಿ
ಮತ್ತೆಲ್ಲ ಯಾವತ್ತಿನ ಹಾಗೇ ನಡೀತಿತ್ತು.

ಅದ್ದ್ಯಾ ಸಾವಿಗೆ ಇದ್ದಿರಬಹುದಾದ ಕಾರಣಗಳ ಪಟ್ಟಿ
1. ಹೊಸಾ ಮನೇಲಿ ಅವಳ ಕೋಣೆಗೆ ಅದರದ್ದೇ ಬಾತ್‌ರೂಮಿತ್ತು,
ಬಾತ್‌ರೂಮಲ್ಲಿ ಕಮೋಡು ಕೂಡಾ ಹಾಕಿದ್ದರು,
ಅವಳು ಬ್ರಾಹ್ಮಣರವಳಾಗಿದ್ಲು ಮತ್ತು ಇಂಥ ಅಬದ್ಧಕ್ಕೆಲ್ಲ ಅವಳು ಒಗ್ಗಿರಲಿಲ್ಲ,
ಕೊಳಕನ್ನ ಕೋಣೆಯೊಳಕ್ಕೇ ತಂದಿದ್ದು ಅವಳನ್ನ ಕೊಂದಿತೆ?
2. ಅವಳಿಗೆ ನಿಜಕ್ಕೂ ವಯಸ್ಸಾದಾಗ ಅವಳು ಸೀರೆ ಬಿಟ್ಟು
ಮ್ಯಾಕ್ಸಿ ಉಡಬೇಕಾಗಿ ಬಂತು.
ತನ್ನ ವಯಸ್ಸಿಗೆ ಅದು ಶೋಭಿಸಲ್ಲ ಅಂತಿದ್ಲು ನನ್ನ ಹತ್ರ.
ಮನಸ್ಸಿಗೆ ವಿರುದ್ಧವಾಯ್ತಲ್ಲ, ಅದು ಕೊಂದಿತೆ ಅವಳನ್ನ?
3. ಅವಳು ಯಾವಾಗ ನೋಡಿದ್ರೂ ಹೊಟ್ಟೆ ನೋವು ಅಂತಿದ್ಲು
ಆದ್ರೆ, ನಾವು ಕೊಟ್ಟ ಪುದಿನ್‌ಹಾರ ತಗೋತಿರಲಿಲ್ಲ.
ಅವಳಿಗೆ ನಮ್ಮ ಮೇಲೆ ವಿಶ್ವಾಸ ಇರಲಿಲ್ಲ
ನಾವು ವಿಷ ಹಾಕ್ಬೋದು ಅಂತ ಅನುಮಾನ.
ಅವಳ ಅನುಮಾನವೇ ಅವಳನ್ನ ಕೊಂದಿತಾ?
4. ಅವಳ ಕೋಣೆಯ ಗಡಿಯಾರ ನಿಂತಿತ್ತು
ಯಾರೂ ಅದನ್ನ ಸರಿಪಡಿಸ್ಲಿಲ್ಲ.
ಹನ್ನೆರಡಕ್ಕೆ ಹತ್ನಿಮಿಷ ಇತ್ತು ಅದರಲ್ಲಿ, ಹಗಲೊ, ರಾತ್ರಿಯೊ ಗೊತ್ತಿಲ್ಲ.
ಚಲನೆ ಇಲ್ದೇ ಇದ್ದಿದ್ದೇ ಅವಳನ್ನ ಕೊಂದಿತಾ?

ಕವಿತೆ ಎರಡು

ಕೆರೆ-ದಡ, ದಡ-ಕೆರೆ
ಹಗಲಲ್ಲಿ ನಾನು ಇದ್ದುದರಲ್ಲಿ ಕಡಕ್ಕಾದ ಕೆಂಪು ಲಿಪ್‌ಸ್ಟಿಕ್ ಹಚ್ಚಿಕೊಂಡು ನೀರಳೆಯುವ ಪಾತ್ರೆಯ ಪಕ್ಕ ಕೂರುತ್ತೇನೆ. ನಾನು ಹೊಸದಾಗಿ ಲಿಪ್‌ಸ್ಟಿಕ್ಕಿನ ಗೀಳಿಗೆ ಬಿದ್ದಿದ್ದೇನೆ. ನಾನು ಕಣ್ಣಿಗೆ ಬೀಳದೇ ಇರಲು ಸಾಧ್ಯವಿಲ್ಲದಂಥ ಕಡು ಬಣ್ಣದ ಬಟ್ಟೆಗಳನ್ನ ಧರಿಸುತ್ತೇನೆ. ನಾನು ಕೆಂಪು ವರ್ಣಛಾಯೆಯ ಬಟ್ಟೆಗಳನ್ನ ಧರಿಸುತ್ತೇನೆ. ನಾನು ಧರಿಸಿಯಾದ ಮೇಲೆ ಕನ್ನಡಿಯಲ್ಲಿ ನನ್ನನ್ನೇ ನಾನು ನೋಡಿಕೊಳ್ಳುತ್ತೇನೆ, ಅದನ್ನ ಒರೆಸಿ ಹಾಕುತ್ತೇನೆ. ಆಮೇಲೆ ಮತ್ತೆ ನಾನು ಧರಿಸುತ್ತೇನೆ. ನೀರಿನ ಪಾತ್ರೆಯ ಪಕ್ಕ, ನನ್ನ ತೋಳುಗಳು ಗಾಳಿಯಲ್ಲಿ ಆಡುತ್ತವೆ, ಕಡಿದಾದ ಸೇತುವೆಯ ಹಾಗೆ ಬಾಗಿದ ನನ್ನ ಮೊಣಕಾಲ ಮೇಲೆ ಪೂರ್ತಿ ಭಾರ ಹಾಕದೇ ಅವು ನಿಲ್ಲುತ್ತವೆ. ಈಗ ಆ ಜಾಗ ಕಿಚನ್ನಿನಲ್ಲೂ ಇಲ್ಲ, ನಮ್ಮ ಲಿವಿಂಗ್ ರೂಮಲ್ಲೂ ಇಲ್ಲ. ಆ ಜಾಗದಲ್ಲೀಗ ನಾನಿದ್ದೇನೆ. ನನ್ನ ಕೋಣೆಯ ಗೋಡೆಯ ಮೇಲೆ ಕ್ಷಿಪ್ರಾತಿಕ್ಷಿಪ್ರ ಕೋನಗಳಲ್ಲಿ ತೂಗು ಬಿದ್ದಿರುವ ಆ ಚಚ್ಚೌಕದ ಕನ್ನಡಿಯ ಮೇಲೆ ಕೂರಲು ಪ್ರತಿ ಧೂಳಿನ ಕಣಕಣವೂ ಒಂದರೊಂದಿಗೆ ಇನ್ನೊಂದು ತಮ್ಮತಮ್ಮ ಜಾಗಕ್ಕಾಗಿ ಹೊಡೆದಾಡುತ್ತ ಇರಬೇಕಾದರೆ, ಅದೂ ಹೊಸಬ ಬೇರೆ ತನ್ನ ಜಾಗಕ್ಕಾಗಿ ಬಂದು ಕಾದು ನಿಂತಾಗ, ನಾನು ನನ್ನ ಮೇಕಪ್ಪಿಗೆ ಜಾಗ ಕಬಳಿಸುತ್ತೇನೆ.

ಕೆಲವು ದಿನಗಳ ಹಿಂದೆ ಸತ್ತ ನನ್ನ ಅಜ್ಜಿ ಕೊನೆಗೂ ಇವತ್ತು ನನ್ನ ಕನಸಿನಲ್ಲಿ ಬಂದಳು. ಕನಸಲ್ಲಿ ಅವಳು ಸತ್ತಿದ್ದಳು. ಅಜ್ಜಿ ಸತ್ತ ವಾರ್ತೆ ಕೇಳಿ ನನ್ನಜ್ಜ ಸೂಯಿಸೈಡ್ ಮಾಡಿಕೊಂಡ, ಕನಸಲ್ಲಿ. ನನ್ನ ಎಷ್ಟೇ ಹಿಂದಿನ ನೆನಪು ತೆಗೆದರೂ ಅದರಲ್ಲಿಯೂ ಅವನು ಮುದುಕನಾಗಿಯೇ ಇದ್ದ. ಅವನು ನೇಣು ಹಾಕಿಕೊಳ್ಳಲು ಅವರ ಕೋಣೆಯ ಒಂದು ಮೂಲೇನ ಆರಿಸಿಕೊಂಡಿದ್ದ. ಅವನದಕ್ಕೆ ಹಳೇ ಫ್ಯಾನು ಆರಿಸಲಿಲ್ಲ. ಒಂದು ಬೀಮ್‌ಗೆ ನೇತು ಬಿದ್ದಿದ್ದನ್ನ ನಾನು ಕಂಡೆ. ಅವನ ದೇಹ ಗೋಡೆಯ ಜೊತೆ ಒಂದು ವಿಚಿತ್ರ ಕೋನದಲ್ಲಿ ತೂಗುತ್ತಿತ್ತು. ಅದು ಕೆರೆಯೋ ದಡವೋ ನನಗೆ ನಿರ್ಧರಿಸೋಕೆ ಆಗಲಿಲ್ಲ. ಅವನನ್ನ ಕೆಳಗಿಳಿಸೋ ಆತುರ ಯಾರೊಬ್ಬರಿಗೂ ಇದ್ದಂತಿರಲಿಲ್ಲ. ಗೋಡೆ ಮೇಲಿನ ಕನ್ನಡಿ ನನಗೆ ಅವನ ತೂಗುತ್ತಾ ಇರುವ ದೇಹಾನ ತೋರಿಸಿತು. ಅದು ಎಂಥಾ ನೆಮ್ಮದಿ ಮತ್ತು ಶಾಂತಿಯಿಂದ ತೂಗಾಡ್ತಾ ಇತ್ತೆಂದರೆ, ಅದು ಶಾಶ್ವತವಾಗಿ ಹಾಗೆಯೇ ಇದ್ದುಬಿಡಲು ಬಯಸಿದ ಹಾಗಿತ್ತು. ಅಷ್ಟಕ್ಕೂ ಸತ್ತವರಿಗೆಂಥ ಅರ್ಜೆಂಟು ಇರುತ್ತೆ. ನನ್ನಜ್ಜಿಯೂ ಏನೂ ಗಡಿಬಿಡಿಯಲ್ಲಿರಲಿಲ್ಲ. ಅವಳು ನನಗೆ ಚಾಯ್‌ಗೆ ಒಳ್ಳೇ ಸ್ವಾದ ಬರಬೇಕಂದ್ರೆ ಹಾಕೋ ಮೊದಲು ಏಲಕ್ಕೀನ ಸರಿಯಾಗಿ ಹುಡಿ ಮಾಡ್ಕೋಬೇಕು ಅಂತ ನೆನಪಿಸಿದ್ಲು. ಈ ಹೆಂಗ್ಸು ಮಾಡೊ ಅಡುಗೆ ಭಯಂಕರ ಇತ್ತು. ಸತ್ಮೇಲೂ ಇದು ನನ್ನ ಕನಸಲ್ಲಿ ಬಂದು ಏಲಕ್ಕಿ ಹುಡಿ ಮಾಡೋ ಬಗ್ಗೆ ಹೇಳೋದಿದೆಯಲ್ಲ, ನಗು ಬರುತ್ತೆ. ಸರಿಯಾಗಿ ಅಂದಿದ್ದು ಅವಳು, ನಾನೂ ರಿಪೀಟ್ ಮಾಡ್ದೆ, ಸರಿಯಾಗಿ. ಇದೆಲ್ಲ ಆಗ್ತಿರಬೇಕಿದ್ರೆ, ಅಜ್ಜ ಕೆರೆ-ದಡ, ದಡ-ಕೆರೆ ಮಾಡ್ತಲೇ ಇದ್ದ ಎನ್ನಿ.

ಕನ್ನಡಿಗೆ ಎಲ್ಲವೂ ಗೊತ್ತು. ಇವತ್ತು ನನ್ನ ಲಿಪ್‌ಸ್ಟಿಕ್ ಬಣ್ಣ ನೇರಳೆ. ಲಿಪ್‌ಸ್ಟಿಕ್ಕಿನ ಸ್ಟಿಕ್ಕು ಮುರಿದಿದೆ. ತೋರು ಬೆರಳಿನಿಂದ ಮೆತ್ತಗೆ ತುಟಿ ಮೇಲೆ ತಟ್ಟಿ ಸರಿಪಡಿಸಿದ್ದೇನೆ. ಅಜ್ಜ ತೂಗಾಡುತ್ತಿರುವ ಕನ್ನಡಿಯಲ್ಲೇ ನನಗೊಂದಿಷ್ಟು ಜಾಗ ಖಾಲಿ ಇದೆ. ನನ್ನ ಲಿಪ್‌ಸ್ಟಿಕ್ ಧರಿಸುತ್ತೇನೆ. ಅದು ನನ್ನ ಯಾವ ಡ್ರೆಸ್ಸಿನೊಂದಿಗೂ ಮ್ಯಾಚಾಗುತ್ತಿಲ್ಲ. ಹಾಗಾಗಿ ನಾನು ಅವೆಲ್ಲವನ್ನೂ ತೆಗೆದು ಹಾಕಿದ್ದೇನೆ. ನನ್ನ ಮೊಲೆಗಳ ಮೇಲೆಲ್ಲ ಒಣಗಿದ ಗಾಯದ ಗುರುತಿದೆ. ಕೀವು ತುಂಬಿದ ಗುಳ್ಳೆಗಳನ್ನು ನಾನು ನೀರ್ಗುಳ್ಳೆ ಒಡೆದ ಹಾಗೆ ಒಡೆದಿದ್ದರಿಂದ ಆಗಿದ್ದು. ಯಾವತ್ತೂ ತುಸು ಬಿಗಿಯಾಗೇ ಇರುತ್ತಿದ್ದ ನನ್ನ ಸ್ಕೂಲ್ ಯೂನಿಫಾರ್ಮಿನ ಬೆಲ್ಟ್‌ನಿಂದಾಗಿ ಆದ ಗುರುತು ಹೊಟ್ಟೆಯ ಮೇಲೆ ಕಾಣಿಸುತ್ತಿದೆ. ಕಂಕುಳವನ್ನ ಶೇವ್ ಮಾಡದೆ ಅಲ್ಲೆಲ್ಲ ಕಪ್ಪನೆಯ ಗುರುತಾದಂತಿದೆ. ನಾನು ನನ್ನ ಲಿಪ್‍ಸ್ಟಿಕ್ಕನ್ನು ಮತ್ತಷ್ಟು ದಪ್ಪಕ್ಕೆ ಬಳಿಯುತ್ತೇನೆ. ಅಜ್ಜನತ್ತ ಮುಗುಳ್ನಕ್ಕು ನನ್ನ ಜಾಗವನ್ನು ಆವರಿಸುತ್ತೇನೆ. ನಾನು ಹಾಗೆ ಮಾಡಲೇಬೇಕಲ್ಲವೆ. ಅದು ಖಾಲಿ ಬಿದ್ದ ಒಂದು ಚಚ್ಚೌಕದ ನನ್ನ ಜಾಗ. ಅದು ಸರಿಯಾಗಿ ನೀರಳೆಯುವ ಪಾತ್ರೆಯ ಪಕ್ಕಕ್ಕಿದೆ.

ಕವಿತೆ ಮೂರು

ಸ್ಕಿಜೋಫ್ರೇನಿಯಾ
ನನ್ನ ನೂರಹದಿನಾರು ವರ್ಷ ಪ್ರಾಯದ ಅಜ್ಜಿ, ಮೇರಿ ಅನ್ನೋ ಗೆಳತಿಯ ಬಗ್ಗೆ ಹೇಳುತ್ತಾಳೆ. ಅವಳು ಹೇಳೋ ಹಾಗೆ, ಮೇರಿ, ಅವಳು ನೋಡಿರೋ ಹುಡುಗೀರಲ್ಲೇ ಅತ್ಯಂತ ಸುಂದರಿಯಾದ ಹುಡುಗಿ. ನನ್ನಜ್ಜಿ ತನ್ನ ಅಪ್ಪನ ಅಂತಿಮಯಾತ್ರೆಯ ಸಂದರ್ಭದಲ್ಲಿ ಮೇರೀನ ಕಂಡಿದ್ದಂತೆ. ಆವತ್ನಿಂದ ಅವರಿಬ್ರೂ ಗೆಳತೀರು. ಮೇರಿಯ ಜೊತೆ ಗೆಳೆತನ ಮಾಡ್ದೇ ಇರೋದು ಸಾಧ್ಯವೇ ಇಲ್ಲ. ತನ್ನ ರಾಕಿಂಗ್ ಚೇರಿನಲ್ಲಿ ಕೂತು ಒಂದೇ ಸಮನೆ ಗಡಿಯಾರದತ್ತ ದೃಷ್ಟಿ ನೆಟ್ಟಿರೋ ನನ್ನಜ್ಜ ಕಾಲಾನ ಅಳೀತಾನೆ ಹೇಳ್ತಾನೆ, ಮೇರಿ ಹೆಸರಿನ ವ್ಯಕ್ತಿಯೇ ಇಲ್ಲ, ಅವನೆಂದೂ ಮೇರೀನ ಕಂಡಿದ್ದಿಲ್ಲ. ನೂರ ಇಪ್ಪತ್ತಾರನೇ ವಯಸ್ಸಿನಲ್ಲಿ ನನ್ನಜ್ಜಿ ಸತ್ತಾಗ, ಅವಳಿಗಿದ್ದ ಒಂದೇ ಒಂದು ಆಸೆ ಅಂದ್ರೆ, ಅವಳು ಮೇರೀನ ಮೊತ್ತಮೊದಲು ಭೇಟಿಯಾದ ಸಿಮೆಟ್ರಿಯಲ್ಲೇ ತನ್ನ ಹೂಳಬೇಕು ಅನ್ನೋದು. ನಾನು ಸ್ವತಃ ಗೋರಿ ತೋಡುತ್ತಾ ಇರಬೇಕಾದ್ರೆ ಮೇರಿ ಅಲ್ಲೇ ಪಕ್ಕದ ಗೋರಿ ಮೇಲೆ ಕೂತು ಉದ್ದಕ್ಕೂ ನನ್ನನ್ನೇ ನೋಡ್ತಿದ್ಲು. ಎಷ್ಟು ಚಂದ ಕಾಣ್ತಿದೀ ನೀನು ಮೇರಿ, ಅಂದೆ. ನಿಜಕ್ಕೂ ನಾನು ಕಂಡ ಹುಡುಗೀರಲ್ಲೆಲ್ಲಾ ನೀನೇ ಚಂದ. ನನ್ನಜ್ಜ, ಸದಾ ಸಮಯದ ಮೇಲೆ ಒಂದು ಕಣ್ಣಿಟ್ಟೇ ಬದುಕಿದ ಮನುಷ್ಯ ಈ ಜಗತ್ತಿಗೆ ಸಂದವ. ಈಗ, ತನ್ನ ರಾಕಿಂಗ್ ಚೇರಿನ ಮೇಲೆ ಕೂತು ಲೆಕ್ಕ ಹಾಕುವ ಪ್ರತೀ ನೋವಿನ ಒಂದೊಂದು ಸೆಕೆಂಡಿಗೂ ಕಣ್ಣೀರಿಡುತ್ತಿದ್ದಾನೆ. ಹಗಲಲ್ಲಿ ನಾನು ಅವನನ್ನು ಒಂದು ಮೂಲೆಯಿಂದ ಗಮನಿಸುತ್ತೇನೆ. ಅವನ ಕಣ್ಣಿಗೆ ಕಾಣಿಸಿಕೊಳ್ಳಲ್ಲ. ಹಗಲಲ್ಲಿ ಹೆಚ್ಚಾಗಿ, ಆದರೆ, ನಾನು ಮೇರಿ ಜೊತೆಗಿರೋದು ಹೆಚ್ಚು. ಅವಳೀಗ ನನ್ನ ಮತ್ತು ನನ್ನಜ್ಜಿ ಜೊತೆ ಬಂದಿರುತ್ತಾಳೆ. ನಮ್ಮದೇ ಚಲನೆಯಿಲ್ಲದ ಜಗತ್ತಿದೆ. ಅಲ್ಲಿ ಕ್ಷಣಗಳು ಕಲ್ಲಾಗಿವೆ ಮತ್ತು ಯಾರೂ ಕಾಲವನ್ನ ಅಳೆಯೋಲ್ಲ.

ಕವಿತೆ ನಾಲ್ಕು

ಕರೇನಿನಾಳ ಪ್ರೇಮಿ
ಹಾಗೆ ಮಲಗಬೇಡ್ವೆ, ತೆರೆದ ಪುಸ್ತಕಾನ ಹಾಗೇ ಎದೆ ಮೇಲೆ ಹಾಕ್ಕೊಂಡು. ತುಂಬ ಹೊತ್ತಿನವರೆಗೆ ಹಾಗೆ ಅಲ್ಲಿ ಓದುತ್ತಾ ಕೂರಬೇಡ, ಆ ಜಾಗ ಕಾಡುತ್ತೆ ಅನ್ನುತ್ತಾಳೆ ನನ್ನಜ್ಜಿ. ಅವಳು ನೂರಾರು ಕತೆಗಳ ಮುದುಕಿ, ನೂರಾರು ನಂಬಿಕೆಗಳ ಹೆಂಗಸು, ನನ್ನಜ್ಜಿ. ಅವಳ ಓದೋ ಜಾಗ ಏನಿದೆ, ಅದು ಪಾತ್ರಗಳೆಲ್ಲ ಜೀವಂತಗೊಂಡು ಓಡಾಡೋ ಜಾಗವಂತೆ, ಹೇಳ್ತಾಳೆ ನನ್ನಜ್ಜಿ. ನೀವು ಗಮನ ಇಟ್ಟು ಕೇಳಿಸ್ಕೊಂಡ್ರೆ, ರಾತ್ರಿ ಹೊತ್ತು ಅವು ಮಾತಾಡೋದು ಕೇಳಿಸುತ್ತೆ ಅಂತಾಳೆ ನನ್ನಜ್ಜಿ. ಅವಳ ಪ್ರಕಾರ ಅವೆಲ್ಲ ಸೇರಿ ಅವಳ ವಿರುದ್ಧ ಪಿತೂರಿ ಮಾಡ್ತಿವೆಯಂತೆ, ನಂಬಿದ್ದಾಳೆ ನನ್ನಜ್ಜಿ. ಒಂದು ಕಾಲದಲ್ಲಿ, ನನ್ನ ಅಜ್ಜ ಅಂಥ ಒಂದು ಪುಸ್ತಕಾನ ತೆರೆದೇ ಇಟ್ಟಿದ್ನಂತೆ, ಹೇಳ್ತಾಳೆ ನನ್ನಜ್ಜಿ. ಅನ್ನಾಕರೇನಿನಾ ಗೊತ್ತಲ್ಲ, ಒಬ್ಬಂಟಿ, ನೋವುಂಡ ಮಾಯಾವಿ, ಆ ಪುಸ್ತಕದಿಂದ ಮೆತ್ತಗೆ ಹೊರಬಿದ್ದು ನನ್ನಜ್ಜನ್ನ ಕರೆದುಕೊಂಡೇ ಹೋದ್ಲು. ನನ್ನಜ್ಜಿ ಪ್ರತಿ ರಾತ್ರಿ ಪುಸ್ತಕಾನ ಹಿಡಿದು ಓದುತ್ತಾಳೆ, ಕರೇನಿನಾಳ ಪ್ರೇಮಿ ಅಂತ ವದಂತಿ ಇದೆಯಲ್ಲ, ಆ ತನ್ನ ಗಂಡನ್ನ ಹುಡುಕೋಕೆ. ಆ ಇನ್ನೊಂದು ಹೆಂಗಸು ಕರೇನಿನಾ. ನಾನವಳನ್ನ ಇಷ್ಟಪಡೋ ಹಾಗಿಲ್ಲ, ನಾನವಳ ಹತ್ತಿರ ಹೋಗೋ ಹಾಗಿಲ್ಲ. ಆ ರಶಿಯನ್ ಮಾಟಗಾತಿಗೆ ಮಾಯ ಮಂತ್ರಗಳೆಲ್ಲ ಗೊತ್ತು, ಅವಳು ನಿನ್ನ ಮೇಲೆ ಮಂಕುಬೂದಿ ಎರಚಿ, ನಿನ್ನನ್ನೂ ತನ್ನ ಜೊತೆ ಕರೆದೊಯ್ತಾಳೆ ಅಂತಾಳೆ ನನ್ನಜ್ಜಿ. ಕರೇನಿನಾನ ಸದಾ ಕಾಲ ನನ್ನಜ್ಜಿಯ ಕಬೋರ್ಡ್ ಒಳಗೆ ಬೀಗ ಜಡಿದು ಬಂಧಿಸಿಡಲಾಗಿದೆ. ನನ್ನಜ್ಜಿ ಸತ್ತ ದಿನವೇ ನಾನವಳನ್ನ ಬಂಧಮುಕ್ತಗೊಳಿಸಿದೆ. ಆ ಒಬ್ಬಂಟಿ, ನೋವುಂಡ ಮಾಯಾವಿ ಈಗ ನನ್ನ ಟೇಬಲ್ಲಿನ ಮೇಲೆ ಬಿದ್ಕೊಂಡಿದ್ದಾಳೆ. ಅವಳ ಹೊರಮೈಯೆಲ್ಲ ಹರಿದು ಹೋಗಿದೆ. ಅವಳ ಬಾಗಿದ ನಗ್ನ ಬೆನ್ನಿನ ಭಾಗ ನನ್ನ ಕಡೆಗಿದೆ. ಮುಟ್ಟಬೇಕು ಅವಳನ್ನ ಅಂತ ಆಸೆಯಾಗುತ್ತೆ. ಅವಳು ಮೇಜಿನಿಂದಿಳಿದು ಬಂದು ನನ್ನನ್ನೂ ಸೆಳೆದೊಯ್ಯಬಾರದೇ ಎಂದು ನಾನದೆಷ್ಟು ಹಂಬಲಿಸುತ್ತಿದ್ದೇನೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Friday, December 29, 2017

ಓದದೇ ಇರುವ ಪುಸ್ತಕಗಳು

ಒಂದು ಪುಸ್ತಕವನ್ನು ಇಬ್ಬರು ಓದುವ ಬಗೆ, ಅದನ್ನು ಗ್ರಹಿಸುವ ಬಗೆ, ಅದು ದಕ್ಕುವ ಬಗೆ ಬೇರೆ ಬೇರೆ ಇರುತ್ತದೆ ಎನ್ನುವ ನೆಲೆಯಲ್ಲಿ ಇಬ್ಬರು ಒಂದೇ ಪುಸ್ತಕವನ್ನು ಓದುವುದಿಲ್ಲ ಎನ್ನುವ ಮಾತಿದೆ. ಇಲ್ಲಿ ಲೇಖಕನ ಸಂವೇದನೆ, ಪ್ರತಿಮೆ, ಭಾಷೆ, ಅನುಭವ ಅಕ್ಷರಗಳಲ್ಲಿ ರೂಪು ತಳೆದು, ಓದುಗನಿಗೆ ತಲುಪುವಾಗ ಓದುಗನ ಅನುಭವ ಮತ್ತು ಸ್ಥಿತಿಯ ಮೇಲೆ ಹೊಂದಿಕೊಂಡು ಅವನವನ ಸಂವೇದನೆ, ಗ್ರಹಿಕೆಗಳಿಗನುಗುಣವಾಗಿ ಅವನು ಅದನ್ನು ಅವನದೇ ರೀತಿಯಲ್ಲಿ ಸ್ವೀಕರಿಸುತ್ತಾನೆ ಎನ್ನುವುದು ತರ್ಕ. ಹೀಗಾಗಿ ಒಂದು ಕೃತಿಯ ಯಶಸ್ಸು ಅಥವಾ ಸೋಲು 50:50 ಆಗಿರುತ್ತದೆ. ಇದನ್ನು ಒಪ್ಪಿದರೂ, ಒಪ್ಪದಿದ್ದರೂ ಒಂದು ಕೃತಿ ಎಲ್ಲರಿಗೂ ಏಕರೂಪದಲ್ಲಿ ದಕ್ಕುವುದಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಇಲ್ಲೊಂದು ತರ್ಕವಿದೆ, ಉಂಬರ್ಟೊ ತನ್ನ ಹೊಸ ಕೃತಿಯಲ್ಲಿ (Chronicles of a Liquid Society ,ಆತನ ಕಣ್ಮರೆಯ ಬಳಿಕ ಪ್ರಕಟವಾಗಿದ್ದು) ಇದನ್ನು ಕೈಗೆತ್ತಿಕೊಂಡಿದ್ದಾನೆ.

ನಮ್ಮಲ್ಲಿನ ಬಹುತೇಕ ಬ್ಲರ್ಬುಗಳನ್ನು ಓದುವಾಗ, ಪತ್ರಿಕೆಗಳಲ್ಲಿ ಬರುವ ಪುಸ್ತಕ ಪರಿಚಯದ ಟಿಪ್ಪಣಿಗಳನ್ನು ಓದುವಾಗ ಅವರು ಕೃತಿಯನ್ನು ಓದಿ ಬರೆದರೇ ಎನ್ನುವುದು ಅನುಮಾನಾಸ್ಪದವೇ. ಅದರಲ್ಲೂ ಕೆಲವರು ಲೇಖಕನನ್ನು ನೇರ ಹೊನ್ನಶೂಲಕ್ಕೇ ಏರಿಸುವುದನ್ನು ಕಂಡಾಗ ಅನುಮಾನ ಕೂಡ ಉಳಿಯುವುದಿಲ್ಲ! ಹೀಗೆ ಓದದೇ ಮಾತನಾಡುವ ಶೂರರ ಪ್ರಮೇಯವೊಂದನ್ನು ಅವರದೇ ತರ್ಕದಿಂದ ಉಂಬರ್ಟೊ ಇಲ್ಲಿ ಕಟ್ಟಿ ಕೆಡಹಿರುವುದು ತುಂಬ ಕುತೂಹಲಕರವಾಗಿದೆ. ಹಾಗಿದ್ದೂ ತರ್ಕ-ವಿತರ್ಕ ಎರಡೂ ಹಲವು ಒಳನೋಟಗಳನ್ನು ಹೊಂದಿರುವುದು ಸುಳ್ಳಲ್ಲ.


ಸರಳವಾಗಿ ಹೇಳುವುದಾದರೆ ತಲೆಯಲ್ಲಿ ಹುಳ ಬಿಟ್ಟುಕೊಳ್ಳುವುದು ಅನ್ನುತ್ತಾರಲ್ಲ, ಇದು!

ಓದದೇ ಇರುವ ಪುಸ್ತಕಗಳು

Giorgio Manganelli ತನ್ನ ಅದ್ಭುತವಾದ ಒಂದು ಲೇಖನದಲ್ಲಿ ಒಬ್ಬ ಸಂಪನ್ನ ಓದುಗ ಹೇಗೆ ತಾನು ಒಂದು ಕೃತಿಯನ್ನು ತೆರೆಯುವ ಮೊದಲೇ ಅದನ್ನು ಓದಬೇಕೇ ಬೇಡವೇ ಎನ್ನುವುದನ್ನು ತಿಳಿದುಕೊಳ್ಳಬಲ್ಲ ಎನ್ನುವುದನ್ನು ವಿವರಿಸಿದ್ದು ನೆನಪಾಗುತ್ತಿದೆ. ನನ್ನ ನೆನಪು ಕೊಂಚ ಮುಕ್ಕಾಗಿರಬಹುದು. ಕೃತಿಯ ಮೊದಲ ವಾಕ್ಯದಿಂದಲೇ ಅದನ್ನು ತೂಗಿ ನೋಡುವ, ಸುಮ್ಮನೇ ಒಂದೆರಡು ಪುಟಗಳ ಮೇಲೆ ಕಣ್ಣಾಡಿಸಿ, ಪರಿವಿಡಿಯ ಸಹಾಯದಿಂದ, ಕೃತಿಯ ಕುರಿತ ಮಾತುಗಳಿಂದ ಒಂದು ಕೃತಿ ಓದಬೇಕಾದ್ದೇ ಅಲ್ಲವೇ ಎನ್ನುವುದನ್ನು ನಿರ್ಧರಿಸುವ, ವೃತ್ತಿಪರ ಓದುಗನೊಬ್ಬನಿಗೆ ಇರಬೇಕು ಎಂದು ಭಾವಿಸುವ ಸಾಮರ್ಥ್ಯದ ಕುರಿತಾಗಲಿ, ಒಬ್ಬ ಗಾಢ ಕುತೂಹಲಿಯಾದ, ಮಹಾ ಗ್ರಹಿಕೆಗಳಿರುವ ಓದುಗನ ಕುರಿತಾಗಲೀ ಅವನು ಹೇಳುತ್ತಿರುವುದಲ್ಲ. ನನ್ನ ಪ್ರಕಾರ ಇದು ಕೇವಲ ಅನುಭವಕ್ಕೆ ಸಂಬಂಧಿಸಿದ್ದು ಅಷ್ಟೆ. ಇಲ್ಲ, Manganelli ಹೇಳುತ್ತಿರುವುದು ಒಂದು ಬಗೆಯ ಹೊಳಹಿನ ಬಗ್ಗೆ. ಸಾಮಾನ್ಯವಾಗಿ ಎಲ್ಲರಲ್ಲೂ ಇರದ ಮತ್ತು ಸ್ಪಷ್ಟವಾಗಿ ತನ್ನಲ್ಲಿರುವ ಒಂದು ದೈವದತ್ತವೆನ್ನಬಹುದಾದ ಸಾಮರ್ಥ್ಯದ ಬಗ್ಗೆ. 

ಮನೋಶಾಸ್ತ್ರಜ್ಞ ಮತ್ತು ಸಾಹಿತ್ಯದ ಪ್ರೊಫೆಸರ್ Pierre Bayard ನ ಕೃತಿ How to Talk About Books You Haven’t Read ಇರುವುದು ನೀವು ಹೇಗೆ ಒಂದು ಪುಸ್ತಕವನ್ನು ಓದದೇ ಇರುವ ನಿರ್ಧಾರಕ್ಕೆ ಬರಬಹುದು ಎಂದು ತಿಳಿದುಕೊಳ್ಳುವ ಕುರಿತಾದ್ದಲ್ಲ. ಬದಲಿಗೆ ಹೇಗೆ ನೀವು ಓದದೇ ಇರುವ ಒಂದು ಕೃತಿಯ ಬಗ್ಗೆ ಆರಾಮವಾಗಿ, ಅದೂ ಆ ಕೃತಿ ವಿಶೇಷತಃ ಒಂದು ಬಹುಮುಖ್ಯ ಕೃತಿಯಾಗಿದ್ದರೂ ಕೂಡ, ನೀವು ಅದರ ಬಗ್ಗೆ ನಿಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದರೂ ಕೂಡ ಆರಾಮಾಗಿ ಮಾತನಾಡಬಹುದು ಎನ್ನುವ ಕುರಿತಾದ್ದು. ಆತನ ತರ್ಕ ವೈಜ್ಞಾನಿಕವಾದದ್ದು. ಒಂದು ಒಳ್ಳೆಯ ಲೈಬ್ರರಿಯಲ್ಲಿ ಮಿಲಿಯಗಟ್ಟಲೆ ಪುಸ್ತಕಗಳಿರುತ್ತವೆ. ನೀವು ದಿನಕ್ಕೊಂದರಂತೆ ಪುಸ್ತಕಗಳನ್ನು ಓದುವವರಾಗಿದ್ದರೂ ಕೂಡ ವರ್ಷಕ್ಕೆ 365 ಪುಸ್ತಕಗಳನ್ನೂ, ಹತ್ತು ವರ್ಷಗಳಲ್ಲಿ ಸುಮಾರು 3,600 ಪುಸ್ತಕಗಳನ್ನೂ ಓದಬಹುದು ಅಷ್ಟೆ. ನಿಮ್ಮ ಹತ್ತನೆಯ ವಯಸ್ಸಿನಿಂದ ಎಂಭತ್ತರ ಪ್ರಾಯದೊಳಗೆ ಹೀಗೆ ನೀವು ಓದಬಹುದಾದ ಪುಸ್ತಕಗಳು 25,200. ಇದು ತೀರ ಅಲ್ಪ. ಇದಕ್ಕೆ ಬದಲಾಗಿ, ಕೊಂಚ ಉತ್ತಮ ಶಿಕ್ಷಣ ಪಡೆದುಕೊಂಡ ಒಬ್ಬ ಇಟಾಲಿಯನ್‌ಗೆ ಕೂಡ Matteo Bandello, Francesco Guicciardini ಅಥವಾ Matteo Boiardo, Vittorio Alfieri ನ ದುರಂತ ನಾಟಕಗಳು ಅಥವಾ Ippolito Nievo ನ Confessions of an Italian ಕುರಿತ ಚರ್ಚೆಯಲ್ಲಿ ಸ್ವತಃ ತಾನು ಬರೇ ಹೆಸರುಗಳನ್ನು ಮತ್ತು ಒಂದಿಷ್ಟು ಸಾಂದರ್ಭಿಕ ವಿವರಗಳನ್ನು ಹೊರತುಪಡಿಸಿ ಒಂದಕ್ಷರ ಓದದಿದ್ದರೂ ಕೂಡ ಭಾಗವಹಿಸಬಲ್ಲೆ ಎನ್ನುವ ಬಗ್ಗೆ ಯಾವುದೇ ಅನುಮಾನವಿರುವುದಿಲ್ಲ. 

ಈ ಸಾಂದರ್ಭಿಕ ವಿವರಗಳೇ Bayard ಪ್ರಕಾರ ಅತ್ಯಂತ ಮಹತ್ವದ ಅಂಶ. ಅವನು ಒಂದಿಷ್ಟೂ ನಾಚಿಕೆಯಿಲ್ಲದೆ ತಾನೆಂದೂ ಜೇಮ್ಸ್ ಜಾಯ್ಸನ ಯೂಲಿಸಿಸ್ ಓದಿಲ್ಲವಾದರೂ ಅದು ಒಡಿಸ್ಸಿ ಮಹಾಕಾವ್ಯದ್ದೇ (ಅದನ್ನೂ ತಾನೆಂದೂ ಪೂರ್ತಿಯಾಗಿ ಓದಿಕೊಂಡಿಲ್ಲ ಎನ್ನುವುದನ್ನೂ ಒಪ್ಪಿಕೊಳ್ಳುತ್ತ) ಇನ್ನೊಂದು ಆವೃತ್ತಿ ಎಂದುಕೊಂಡು ಅದು ಆಂತರಿಕ ಸ್ವಗತದಂಥ ನೆಲೆಯಲ್ಲಿದೆ, ಡಬ್ಲಿನ್‌ನಲ್ಲಿ ಒಂದೇ ದಿನದಲ್ಲಿ ನಡೆಯುವ ಕತೆಯಿದೆ ಇತ್ಯಾದಿ, ಎಂದೆಲ್ಲ ತಾನು ಅದರ ಬಗ್ಗೆ ಮಾತನಾಡಬಲ್ಲೆ ಎಂದು ಹೇಳಿಕೊಳ್ಳುತ್ತಾನೆ. "ಇದರ ಪರಿಣಾಮವಾಗಿ, ನಾನು ಆಗಾಗ ಜೇಮ್ಸ್ ಜಾಯ್ಸನ್ನೇ ಒಂದಿಷ್ಟೂ ಆತಂಕವಿಲ್ಲದೆ ಆವಾಹಿಸಿಕೊಳ್ಳಬಲ್ಲೆ" ಎಂದಾತ ಬರೆಯುತ್ತಾನೆ. ಒಂದು ಪುಸ್ತಕಕ್ಕೂ ಇನ್ನೊಂದು ಪುಸ್ತಕಕ್ಕೂ ಇರುವ ನಂಟುಗಳನ್ನು ಅರಿತುಕೊಳ್ಳುವುದರ ಮೂಲಕ ನೀವು ನೇರವಾಗಿ ಒಂದು ಪುಸ್ತಕವನ್ನೇ ಓದಿ ತಿಳಿದುಕೊಳ್ಳುವುದಕ್ಕಿಂತಲೂ ಹೆಚ್ಚಿನದನ್ನು ಅದರ ಕುರಿತು ತಿಳಿದುಕೊಳ್ಳುವುದು ಕೂಡ ಸಾಧ್ಯವಿದೆ. 

ಅದು ಹೇಗೆಂದು ಕೂಡ Bayard ತಿಳಿಸುತ್ತಾನೆ. ಯಾರ ಗಮನಕ್ಕೂ ಬರದ ಕೆಲವೊಂದು ಪುಸ್ತಕಗಳನ್ನು ಓದುವಾಗ ನಿಮಗೆ ಅದರಲ್ಲಿನ ವಿವರಗಳನ್ನೆಲ್ಲ ಎಲ್ಲಿಯೋ ಓದಿದಂತೆ, ಈಗಾಗಲೇ ಕೇಳಿದ್ದಂತೆ ಅನಿಸಬಹುದು. ಅದೇಕೆಂದರೆ, ಅವುಗಳನ್ನು ಓದಿದವರು ಆ ಬಗ್ಗೆ ಮಾತನಾಡಿರಬಹುದು, ಅಲ್ಲಿನ ವಿವರಗಳನ್ನು ಕೋಟ್ ಮಾಡಿರಬಹುದು ಅಥವಾ ಅದೇ ನೆಲೆಯ ಮನೋಧರ್ಮದೊಂದಿಗೆ ಹೊಸದೇನಾದರೂ ಬರೆದಿರಬಹುದು. ಯಾವತ್ತೂ ಓದದೇ ಇರುವ Robert Musil, Graham Greene, Paul Valéry, Anatole France ಮತ್ತು David Lodge ಅಂಥವರ ಪುಸ್ತಕಗಳೂ ಸೇರಿದಂತೆ ಇಂಥ ಕೃತಿಗಳ ಕುರಿತೇ ಎಷ್ಟೊಂದು ಸಾಹಿತ್ಯಿಕ ಪಠ್ಯಗಳು ಲಭ್ಯವಿವೆ ಎನ್ನುವ ಬಗ್ಗೆ ಅವನು ಅತ್ಯಂತ ರೋಚಕವೆನ್ನಿಸುವ ಮಾಹಿತಿಯನ್ನೆಲ್ಲ ಕಲೆಹಾಕಿದ್ದಾನೆ. ನನ್ನ The Name of the Rose ಗೆ ಒಂದಿಡೀ ಅಧ್ಯಾಯವನ್ನು ಮೀಸಲಿಡುವ ಗೌರವವನ್ನು ಕೊಟ್ಟಿದ್ದು, ಅದರಲ್ಲಿ William of Baskerville ತಾನು ಅದೇ ಮೊದಲ ಬಾರಿ ಕೈಯಿಕ್ಕಿದ ಅರಿಸ್ಟಾಟಲ್‌ನ ಪೊಯೆಟಿಕ್ಸ್ ಕುರಿತ ಎರಡನೆಯ ಕೃತಿಯೊಂದಿಗೆ ಅದನ್ನು ಸಮೀಕರಿಸಿದ್ದಾನೆ. ಅರಿಸ್ಟಾಟಲ್ಲನ ಕೆಲವು ಪುಟಗಳಲ್ಲಿರುವ ವಿಚಾರವನ್ನೇ ತಾನು ಇಲ್ಲಿ ಕಂಡುಕೊಂಡೆ ಎನ್ನುವ ಸರಳವಾದ ಕಾರಣವನ್ನಿಟ್ಟುಕೊಂಡು ಆತ ಇದನ್ನು ಮಾಡುತ್ತಾನೆ. ಬರೇ ಕೊಚ್ಚಿಕೊಳ್ಳುವುದಕ್ಕೆ ನಾನಿದನ್ನಿಲ್ಲಿ ಹೇಳುತ್ತಿಲ್ಲ, ಅದು ನಿಮಗೆ ಈ ಲೇಖನದ ಕೊನೆಯಲ್ಲಿ ಗೊತ್ತಾಗಲಿದೆ. 

ಮೇಲ್ನೋಟಕ್ಕೆ ಕೊಂಚ ವಿರೋಧಾಭಾಸ ಎನಿಸಿದರೂ ಹಾಗೇನೂ ಅಲ್ಲದ ಕುತೂಹಲಕಾರಿ ಸಂಗತಿಯೊಂದಿದೆ ಈ ಪುಸ್ತಕದಲ್ಲಿ. ನಿಜವಾಗಿಯೂ ಓದಿದ ಪುಸ್ತಕದಲ್ಲಿನ ಸಾಕಷ್ಟು ಅಂಶಗಳನ್ನು ಕೂಡ ನಾವು ಕಾಲಕ್ರಮೇಣ ಮರೆತು ಬಿಟ್ಟಿರುತ್ತೇವೆ. ಅಲ್ಲದೆ, ನಾವೇ ಅಂಥ ಪುಸ್ತಕಗಳ ಬಗ್ಗೆ ನಮ್ಮದೇ ಆದ ಒಂದು ಪರ್ಯಾಯ ಚಿತ್ರವನ್ನು ಕೂಡ ನಮ್ಮ ಮನಸ್ಸಿನಲ್ಲಿ ಕಟ್ಟಿಕೊಂಡಿರುತ್ತೇವೆ ಮತ್ತು ಅದು ಹೇಗಿರುತ್ತದೆಂದರೆ ಪುಸ್ತಕದಲ್ಲಿಲ್ಲದ, ಆದರೆ ನಮ್ಮ ಮನಸ್ಸಿನಲ್ಲಿ ನಾವೇ ನಂಬಿ ಸೃಷ್ಟಿಸಿಕೊಂಡ ಚಿತ್ರವಷ್ಟೇ ಆಗಿರುತ್ತದೆ. ಹೀಗಾಗಿ ಪುಸ್ತಕವನ್ನೇ ಓದಿರದ ಒಬ್ಬ ವ್ಯಕ್ತಿ ಆ ಕೃತಿಯಿಂದ ಅದರಲ್ಲಿಲ್ಲದ ಕೆಲವು ಸಂದರ್ಭಗಳನ್ನೋ, ಪರಿಚ್ಛೇದವನ್ನೋ ಇದೆ ಎಂಬಂತೆ ಹೇಳತೊಡಗಿದರೆ, ನಾವು ಹೆಚ್ಚೇನೂ ತಕರಾರಿಲ್ಲದೆ ಬಹುಶಃ ಅವೆಲ್ಲ ಆ ಪುಸ್ತಕದಲ್ಲಿದ್ದಾವೆ ಎಂದೇ ಒಪ್ಪಿಕೊಂಡು ಬಿಡಲು ತಯಾರಿರುತ್ತೇವೆ. 

Bayard ಮೂಲತಃ, ಪ್ರಾಸಂಗಿಕವಾಗಿ ಬೇರೆಯವರು ಬರೆದ ಪುಸ್ತಕಗಳನ್ನು ಓದುವ ಮಂದಿಯಲ್ಲಿ ಅಷ್ಟು ಆಸಕ್ತನಲ್ಲ. ಒಬ್ಬ ಸಾಹಿತ್ಯದ ಪ್ರೊಫೆಸರ್‌ಗಿಂತ ಒಬ್ಬ ಮನಃಶಾಸ್ತ್ರಜ್ಞನ ಧ್ವನಿಯಲ್ಲಿ ಆತ ಇಲ್ಲಿ ಹೇಳುವುದೇನಿದೆ ಗಮನಿಸಿ. ಪ್ರತಿಯೊಂದು ಓದು ಅಥವಾ ಓದದವನ ಕಲ್ಪಿತ ಓದು ಅಥವಾ ಅರೆಬರೆಯಾದ ಒಟ್ಟಾರೆ ಓದು - ಪ್ರತಿಯೊಂದೂ ಓದಿಗೆ ತನ್ನದೇ ಆದ ಒಂದು ಸೃಜನಾತ್ಮಕವಾದ ಮಗ್ಗುಲಿದ್ದೇ ಇದೆ, ಅಂದರೆ, ಸರಳವಾಗಿ ಹೇಳುವುದಾದರೆ,
ಓದುಗನೂ ತನ್ನದೇ ಆದ ಕೊಡುಗೆಯನ್ನು ಇಲ್ಲಿ ನೀಡುತ್ತಿರುತ್ತಾನೆ. ಆಮೇಲೆ ಅವನು ತಾವು ಓದದೇ ಇರುವ ಪುಸ್ತಕಗಳನ್ನು ಕೂಡ "ಸಂಶೋಧಿಸ"ಬಲ್ಲ ಶಾಲಾ ಮಕ್ಕಳ ಸಾಮರ್ಥ್ಯವೇನಿದೆ, ಅದು ಭವಿಷ್ಯದಲ್ಲಿ ಏನೇನು ಅದ್ಭುತಗಳನ್ನುಂಟು ಮಾಡಬಹುದು ಎಂಬ ಬಗ್ಗೆಯೂ ತನ್ನ ಗಮನ ಹರಿಸುತ್ತಾನೆ. 

ಇದಲ್ಲದೆ ಹೇಗೆ ಒಬ್ಬ ವ್ಯಕ್ತಿ ತಾನು ಓದದೇ ಇರುವ ಕೃತಿಯ ಕುರಿತು ಮಾತನಾಡುವಾಗ ಆ ಕೃತಿಯನ್ನು ಓದಿರುವವರೂ ಕೂಡ ಆತ ಅಥವಾ ಆಕೆ ಹೇಳುತ್ತಿರುವುದು ತಪ್ಪು ಎನ್ನುವುದನ್ನು ಗುರುತಿಸಲಾರದೇ ಹೋಗುತ್ತಾರೆನ್ನುವುದನ್ನು Bayard ಪುರಾವೆ ಸಮೇತ ವಿವರಿಸುತ್ತಾನೆ. ಪುಸ್ತಕದ ಕೊನೆಯಲ್ಲಿ ಅವನು ನನ್ನ The Name of the Rose, Graham Greene ಬರೆದ The Third Man ಮತ್ತು David Lodge ನ ಕೃತಿ Changing Places ಗಳ ತನ್ನದೇ ಸಂಕ್ಷಿಪ್ತ ಆವೃತ್ತಿಯಲ್ಲಿ ತಾನು ಸೇರಿಸಿದ ಮೂರು ತಪ್ಪುಗಳ ಬಗ್ಗೆ ಸ್ವತಃ ಒಪ್ಪಿಕೊಳ್ಳುತ್ತಾನೆ. ತಮಾಷೆ ಎಂದರೆ, ಅದನ್ನು ನಾನೇ ಓದಿದಾಗ Graham Greene ವಿಷಯದಲ್ಲಿ ತಕ್ಷಣವೇ ಆ ತಪ್ಪು ಗಮನಕ್ಕೆ ಬಂತು. David Lodge ನ ಕೃತಿಯ ವಿಚಾರದಲ್ಲಿ ಅನುಮಾನವೆದ್ದಿತ್ತು. ಆದರೆ ನನ್ನ ಸ್ವಂತ ಕೃತಿಯ ಆವೃತ್ತಿಯಲ್ಲಿ ನುಸುಳಿದ ತಪ್ಪು ನನ್ನ ಗಮನಕ್ಕೇ ಬರಲಿಲ್ಲ! ಬಹುಶಃ ನಾನು Bayard ನ ಸಂಕ್ಷಿಪ್ತ ಆವೃತ್ತಿಯನ್ನು ಸರಿಯಾಗಿ ಓದಿಲ್ಲ ಎನ್ನುವುದನ್ನಿದು ಸೂಚಿಸುತ್ತದೆ. ಅಥವಾ, ಪರ್ಯಾಯವಾಗಿ, ಆ ವಿವರ ಹೇಗಿದ್ದಿರಬಹುದೆಂದರೆ, ಅವನು ಮತ್ತು ನನ್ನ ಓದುಗರು ಕೂಡ ನನ್ನ ಕೃತಿಯಲ್ಲಿನ ವಿವರವನ್ನು ಹೀಗೂ ಇರಬಹುದು ಎಂದು ಊಹಿಸಲು ಸ್ವತಂತ್ರರು. ನಾನು ಮೇಲು ಮೇಲಕ್ಕೆ ಓದಿಕೊಂಡಿದ್ದಿರಬೇಕು ಅವನ ಕೃತಿಯನ್ನು. ಆದರೆ ತುಂಬ ಕುತೂಹಲದ ಸಂಗತಿಯೆಂದರೆ, ತನ್ನ ಉದ್ದೇಶಿತ ಮೂರು ತಪ್ಪುಗಳನ್ನು ಒಪ್ಪಿಕೊಳ್ಳುತ್ತ ಆತ ಒಂದು ಕೃತಿಯನ್ನು ಇದೊಂದೇ ಬಗೆಯಲ್ಲಿ ಓದುವುದು ಹೆಚ್ಚು ಸರಿಯಾದ್ದು, ಉಳಿದೆಲ್ಲ ಓದು ಇದರೆದುರು ಕಳಪೆ ಎನ್ನುತ್ತಿದ್ದಾನೆ. Bayard ಒಂದು ಕೃತಿಯನ್ನು ಹಲವು ನಿಟ್ಟಿನಿಂದ ಕಾಣಬಹುದು ಮತ್ತು ಅದಕ್ಕೆ ಪರ್ಯಾಯ ನೆಲೆಯ ಓದಿನ ಸಾಧ್ಯತೆಗಳಿವೆ ಎನ್ನುವುದನ್ನು ಕಾಣಲು ವಿಫಲನಾಗುತ್ತಾನೆ. ಹೀಗೆ, ಪುಸ್ತಕಗಳನ್ನು ಓದದೆಯೂ ಓದಿದವರಂತೆ ಇರಬಹುದೆನ್ನುವ ತನ್ನ ಪ್ರಮೇಯವನ್ನು ಮಂಡಿಸುವುದಕ್ಕಾಗಿ ಅವನು ತಾನು ಉಲ್ಲೇಖಿಸುವ ಪುಸ್ತಕಗಳ ಕೂಲಂಕಶ ಅಧ್ಯಯನವನ್ನು ಎಚ್ಚರದಿಂದಲೇ ಮಾಡುತ್ತಾನೆ. ಈ ವಿರೋಧಾಭಾಸವಂತೂ ಎಷ್ಟು ಕಣ್ಣಿಗೆ ಹೊಡೆದು ಕಾಣುವಂತಿದೆ ಎಂದರೆ, Bayard ತಾನು ಬರೆದ ಈ ತನ್ನದೇ ಪುಸ್ತಕವನ್ನು ಸರಿಯಾಗಿ ಓದಿರುವನೇ ಎನ್ನುವ ಅನುಮಾನ ಹುಟ್ಟುತ್ತದೆ.

(Eco, Umberto Chronicles of a Liquid Society (p. 248))
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಮೌನವೆಂಬ ಚಿಟ್ಟೆ ಪತರಗುಟ್ಟುತ್ತಿದೆ...

ಜೀವನದ ಸೈಲೆನ್ಸ್ ಏನಿದೆ, ಅದು ಭಾಷೆಯಲ್ಲಿ ಕಂಡು ಬರುವುದು ಪೋಯೆಟ್ರಿಯಲ್ಲೆ. ಕತೆ, ಕಾದಂಬರಿಗಳಲ್ಲಿ ಅದು ಸೀಮಿತವಾದ ನೆಲೆಯಲ್ಲೇ ಬಂದಿದೆ. ಪ್ರೀತಿ, ವಿರಹ, ವಲಸೆ ಮುಂತಾಗಿ. ಚದುರಂಗರ ಹೆಜ್ಜಾಲದಂಥ ಕಾದಂಬರಿಯಲ್ಲಿ ಮೌನ ಇತ್ತು. ಕತೆಗಾರ ತನ್ನ ಸ್ಮೃತಿಯಿಂದ ಆಯ್ದು ತರುವ ವಿವರಗಳಿಂದ ಒಂದು ವಾತಾವರಣವನ್ನು ಸಜೀವವಾಗಿ ನಿರ್ಮಿಸುತ್ತ ಹೋದಂತೆಲ್ಲ ಇಡೀ ಕಥಾನಕ ಜೀವಂತವಾಗುತ್ತ ಹೋಗುತ್ತದೆ ಮತ್ತು ಅನುಭವದ ಒಂದು ಸ್ತರದಲ್ಲಿ ಮೌನ ಹೆಪ್ಪುಗಟ್ಟಿರುವುದು ಓದುಗನ ಅನುಭವಕ್ಕೂ ಬರುತ್ತದೆ. ಆದರೆ ಇದಕ್ಕೆ ಕತೆಗಾರನಲ್ಲಿ ವಿಶಿಷ್ಟವಾದ ಪ್ರತಿಭೆ ಇರಬೇಕಾಗುತ್ತದೆ. ಹಾಗಿದ್ದೂ ಗಾಢವಾದ ಜೀವನಾನುಭವ ಮತ್ತು ಅದಕ್ಕೆ ಬರಹಗಾರ ಎಷ್ಟು ತೀವ್ರವಾಗಿ ಮತ್ತು ಪ್ರಾಮಾಣಿಕವಾಗಿ ಮುಖಾಮುಖಿಯಾಗಿದ್ದಾನೆ ಎನ್ನುವ ಎರಡೇ ಅಂಶಗಳು ಕೊನೆಗೂ ನಿಲ್ಲುವಂಥಾದ್ದು. ಕವಿತೆಯಲ್ಲಿ ಏನಾಗುತ್ತೆ ಅಂದರೆ ಅಂಥ ಮೌನದ ಒಂಟಿ ಕ್ಷಣಗಳು ಮಣಿಗಳಂತೆ ಸಿಗುತ್ತವೆ. ಕಥನದಲ್ಲಿ ಹಾಗೆ ಮಣಿಗಳನ್ನು ಕೊಡಲು ಬರುವುದಿಲ್ಲ. ಹಾರವನ್ನೇ ಕೊಡಬೇಕಾಗುತ್ತದೆ. ಕವಿತೆಯ ಅನುಕೂಲ ಇದು. ಅದೇ ಅದರ ಮಿತಿ ಕೂಡಾ. ನೀವು ಆ ಮಣಿಯನ್ನೇ ಹಿಡಿದು ನಿಲ್ಲುವ ವ್ಯವಧಾನವುಳ್ಳವರಾಗಿರದೇ ಇದ್ದಲ್ಲಿ You just miss it. ಆದರೆ ನಾನು ಇಲ್ಲಿ ಹೇಳಿದ ಲೇಖಕರು (ಸಿಂಗರ್, ಸಾಲ್ ಬೆಲ್ಲೊ, ಬೋರ್ಹೆಸ್, ವರ್ಜೀನಿಯಾ ವೂಲ್ಫ್, ಫ್ಲ್ಯಾನರಿ ಒಕನರ್, ಕ್ಯಾಥರೀನ್ ಮ್ಯಾನ್ಸ್‌ಫೀಲ್ಡ್, ಕ್ಯಾಥರೀನ್ ಆನ್ ಪೋರ್ಟರ್, ಟಾಲ್‌ಸ್ಟಾಯ್, ದಾಸ್ತಾವಸ್ಕಿ, ಇತಾಲೊ ಕೆವಿನೊ, ಯೋಸಾ, ಪಮುಕ್, ಕುಟ್ಸೀ, ಮಾರ್ಕೆಸ್, ನೈಪಾಲ್, ಉಂಬರ್ಟೊ, ಪ್ರೌಸ್ಟ್, ಕುಂದೇರಾ, ಎ ಕೆ ರಾಮಾನುಜನ್, ನಬಕೊವ್, ಅಮಿತಾವ ಘೋಷ್, ಅಮಿತ್ ಚೌಧರಿ, ಫಾರ್ಸ್ಟರ್, ಫ್ಲುಬರ್ಟ್, ಪುಷ್ಕಿನ್, ವಿಲ್ಲಾಕ್ಯಾಥರ್, ಮಿಸ್ತ್ರಿ ಇತ್ಯಾದಿ ಇತ್ಯಾದಿ) ಕಥನದಲ್ಲಿ ಮಣಿಗಳನ್ನೇ ಧರಿಸಿ ಅವತರಿಸುತ್ತಾರೆ. ಇದೇ ಅವರನ್ನು ಉಳಿದವರಿಗಿಂತ ಭಿನ್ನವಾಗಿಸಿದ, ಶ್ರೇಷ್ಠರನ್ನಾಗಿಸಿದ ಸಂಗತಿ. ಒಂದು ಕಾದಂಬರಿಯನ್ನೊ, ಕತೆಯನ್ನೊ ಓದಿ ಮುಗಿಸಿದ ಮೇಲೆ ನಿಮ್ಮೊಂದಿಗೆ ಆ ಕೃತಿಯಲ್ಲಿ ಕಾಣದಂತಿದ್ದ ಒಂದು ಗಾಢ ಮೌನ ಆವರಿಸದೇ ಇದ್ದರೆ ಭಾಷೆಯಲ್ಲಿ ಹೇಳಲಾಗದ್ದೇನೂ ಆತ/ಆಕೆ ತನ್ನ ಕೃತಿಯಲ್ಲಿ ಕೊಡಲು ಸಮರ್ಥನಾಗಿಲ್ಲ ಎಂತಲೇ ಅರ್ಥ. ಅಂಥ ಸಾಹಿತ್ಯ ಯಾಕೆ ಬೇಕು?

ಮೌನ ಯಾಕೆ ಬೇಕು ಎನ್ನುವುದಕ್ಕಿಂತ ಅದರಿಂದ ಹೇಗೆ ದೂರವಾಗುತ್ತ ಇದ್ದೇವೆ ಅನ್ನುವುದನ್ನು ಕಂಡುಕೊಳ್ಳುವುದು ಮುಖ್ಯ. ನನ್ನ ಜೊತೆ ನಾನಿರುವಾಗ, ನನ್ನ ಮೌನದಲ್ಲಿ ನಾನು ಮಾತನಾಡಿಕೊಳ್ಳುವಾಗ ಕೆಲವು ಅನುಕೂಲಗಳಿರುತ್ತವೆ. ಅಂದರೆ, ಇನ್ನೊಬ್ಬರ ಜೊತೆ ಹೇಳಿಕೊಳ್ಳುತ್ತಾ ನಾನು ನನ್ನನ್ನು ಕಂಡುಕೊಳ್ಳುವುದು ಕೂಡ ಸಾಧ್ಯವಿದೆಯಾದ್ದರಿಂದ, ಅದಕ್ಕೂ ಇದಕ್ಕೂ ಇರುವ ವ್ಯತ್ಯಾಸ ಗಮನಿಸಿಕೊಳ್ಳುವಲ್ಲೇ ನಮ್ಮ ಮೌನ ಕರಗುವುದನ್ನು, ಮೌನದಲ್ಲೂ ಗದ್ದಲ ಏಳುವುದನ್ನು ಗುರುತಿಸಬೇಕಿದೆ ನಾವು. I am the most informed person about me. ಹಾಗಾಗಿ ಇನ್ನೊಬ್ಬನಿಗೆ ಹೇಳುವಾಗ ಪರಸ್ಪರರಿಗೆ ಎಷ್ಟೋ ವಿವರಗಳು, ಘಟನೆಗಳು, ವ್ಯಕ್ತಿಗಳು, ಸಂಬಂಧದ ಬೇರೆ ಬೇರೆ ನೆಲೆಗಳು, ಒಂದರ್ಥದ ಹಿನ್ನೆಲೆ/ಚರಿತ್ರೆ ಗೊತ್ತಿರದ ಕಷ್ಟ ಎದುರಾಗುತ್ತದೆ. ಆಗ, ನೀವದನ್ನು ಸಂಕ್ಷಿಪ್ತವಾಗಿಯಾದರೂ ಹೇಳಿಯೇ ಮುಂದುವರಿಯಬೇಕಾಗುತ್ತದೆ. ಅದು ಗದ್ದಲ. ಆಮೇಲೆ, ನಿಜವಾಗಿ ಬದುಕಿನಲ್ಲಿ ವ್ಯಕ್ತಿಗಳು, ಘಟನೆಗಳು ಮುಖ್ಯವಲ್ಲ. ನಾವೇನನ್ನು conceive ಮಾಡ್ತೀವಿ, ಅನುಭವ ಅಂತ ಹೇಳುತ್ತೀವಿ, ಅದು, ವ್ಯಕ್ತಿ ಮತ್ತು ಘಟನೆಗಳಿಗೆ ಅತೀತವಾಗಿ ನಮ್ಮ ವ್ಯಕ್ತಿತ್ವದ ಭಾಗವಾಗಿರುತ್ತದೆ. ಸಾಮಾನ್ಯವಾಗಿ ಹತ್ತು ವರ್ಷ ಹಿಂದಿನ ಒಂದು ಅನುಭವದ ಕುರಿತು ಹೇಳುವಾಗ ನಮಗಿದು ಅರ್ಥವಾಗುತ್ತದೆ. ಅಲ್ಲಿ ವ್ಯಕ್ತಿ ಮತ್ತು ಘಟನೆಗಿಂತ ನಮಗದು ಕಾಡಿದ, ನಮ್ಮ ಮೇಲೆ ಅದು ಬೀರಿದ ಪರಿಣಾಮದ ಅಂಶ ಮಾತ್ರ ಮುಖ್ಯವಾಗಿ ನಿಲ್ಲುವುದು ಕಾಲಾಂತರದಲ್ಲಾದರೂ ನಿಜ. ಆದರೆ ತಕ್ಷಣಕ್ಕೆ ಇದೆಲ್ಲ ಕಾಣಿಸುವುದಿಲ್ಲ ನಮಗೆ. ಸುಮ್ಮನೇ ಆ ಇನ್ನೊಬ್ಬ ವ್ಯಕ್ತಿಗೆ ಸರಿಯಾಗಿ ಅರ್ಥವಾಗಲಿ ಎನ್ನುವ ಕಾರಣಕ್ಕೆ ವ್ಯಕ್ತಿಗಳ ಬಗ್ಗೆ, ಘಟನೆಗಳ ಬಗ್ಗೆ ಕೊರೆಯುತ್ತೇವೆ. ಈ ಎಲ್ಲ ಗದ್ದಲದಲ್ಲಿ ನಿಜವಾದ ಅನುಭೂತಿ ಎನ್ನುವುದು ಡೈಲ್ಯೂಟ್ ಆಗುತ್ತದೆ. ಅಂದರೆ, ಈಗ ಹೇಳ ಹೊರಟಿದ್ದೇನಿದೆ, ಏನು ನಿಜಕ್ಕೂ ಆಯ್ತು, ಅದು ಆಗಿದ್ದು ಹೇಗೆ, ಎಂತು ಎನ್ನುವ ಪ್ರಕ್ರಿಯೆ ಕೂಡಾ ಒಂದು ಘಟನೆಯೋ ವ್ಯಕ್ತಿಯೋ ಆಗಿರದೆ ನಿಮ್ಮ ವ್ಯಕ್ತಿತ್ವದ ನೆಲದ ಮೇಲೆ ಅದು ಇಂಗಿದ್ದು ಹೇಗೆ ಎನ್ನುವ ಕುರಿತಾದ ಸಂಗತಿಯಷ್ಟೇ ಆಗಿರುತ್ತದೆ. ಆದರೆ ಈ ಇಂಗುವಿಕೆಯ ಪ್ರಕ್ರಿಯೆಗೆ ಒಂದು ಇತಿಹಾಸವಿದೆ, ಕತೆಯಿದೆ ಎಂದುಕೊಂಡು ಘಟನೆ ಮತ್ತು ವ್ಯಕ್ತಿಯ ‘ಕಥನ’ಕ್ಕೆ ಇಳಿಯುವ ನೀವು ಮುಖ್ಯ ಮುದ್ದೆಗೆ ಬರುವಾಗ ಘಟನೆ ಮತ್ತು ವ್ಯಕ್ತಿಯ ಬಗ್ಗೆ ಮಾತ್ರವೇ ಹೇಳಿರುತ್ತೀರಿ. ನಿಜಕ್ಕೂ what actually `happenned' is missed out.

ಟಿ ಎಸ್ ಎಲಿಯೆಟ್ಟನ ಈ ಕವಿತೆ ಎಲ್ಲರಿಗೂ ಗೊತ್ತು.

But how can I explain, how can I explain to you?
You will understand less after I have explained it.
All that I could hope to make you understand
Is only events not what has happened.
And people to whom nothing has ever happened
Cannot understand the unimportance of events

ಯಾರಿಗೆ ಯಾವತ್ತೂ ಏನೂ ‘ಆಗಲಿಲ್ಲವೊ’ ಅವರು ಘಟನೆಯ unimportance ನ್ನ ಅರ್ಥ ಮಾಡಿಕೊಳ್ಳಲಾರರು. ಹಾಗಾಗಿ, ನಾನು ವಿವರಿಸುವುದು ವ್ಯರ್ಥ, ಕೊನೆಗೂ ನಿನಗೆ ಅರ್ಥವಾಗುವುದು ಘಟನೆಗಳು ಮಾತ್ರಾ ಎನ್ನುತ್ತಾನೆ ಎಲಿಯೆಟ್.

ಹಾಗಾಗಿ ನೀವು ಈ ವಿವರಿಸುವ ‘ಚಟ’ಕ್ಕೆ ಬೀಳದೇನೆ ನಿಮ್ಮನ್ನು ನೀವು ಕಂಡುಕೊಳ್ಳುವ ಹಾದಿ ಹಿಡಿಯುವುದಾದರೆ, ಆಗ ನಿಮಗೆ ಮೌನ ಮುಖ್ಯವಾಗುತ್ತದೆ. ನಮ್ಮ ನಗರಗಳಲ್ಲಿ ಬದುಕುತ್ತಿರುವವರಿಗೆ ಮತ್ತು ವಿಪರೀತವಾಗಿ ಸಾಮಾಜಿಕ ಜಾಲತಾಣಗಳು, ಚ್ಯಾಟ್ ಇತ್ಯಾದಿಗಳಲ್ಲಿ ತೊಡಗಿರುವವರಿಗೆ ಗದ್ದಲದಿಂದ ಮುಕ್ತಿಯಿಲ್ಲ. ಕ್ರಮೇಣ ಅವರದ್ದೆಲ್ಲವೂ ಗದ್ದಲದಲ್ಲೇ ಏನಾದರೊಂದು ‘ರೂಪು’ ಪಡೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ವ್ಯಕ್ತಿತ್ವ, ರಚನಾತ್ಮಕ ಅಭಿವ್ಯಕ್ತಿ ಎರಡರಲ್ಲೂ ಗದ್ದಲವೇ ಮೈತಾಳಿದಂತಿರುತ್ತಾರೆ ಇವರು. ಇವರ ಹಬ್ಬ, ಹರಿದಿನ, ಫಂಕ್ಷನ್ನುಗಳನ್ನು ಗಮನಿಸಿ. ಸಂಭ್ರಮ ಮೈ ತುಂಬಿಕೊಳ್ಳಬೇಕು ಎಂದರೆ ಲೌಡ್‌ಸ್ಪೀಕರು, ಮ್ಯೂಸಿಕ್ಕು, ಡಿಜೆ, ಕುಡಿತ ಇರಬೇಕಾಗುತ್ತದೆ ಇವರಿಗೆ. ಇವರ ಕೇಕೆ, ಚಪ್ಪಾಳೆ ಮತ್ತು ಗದ್ದಲದ ಅಡಿಕ್ಷನ್ ಯಾವ ಮಟ್ಟದಲ್ಲಿರುತ್ತದೆಂದರೆ, ಇವರು ಭಜನೆ, ಧ್ಯಾನ, ಪ್ರಾರ್ಥನೆ, ಯೋಗ ಇತ್ಯಾದಿಗಳನ್ನು ಕೂಡಾ ಗದ್ದಲದೊಂದಿಗೇ ಮಾಡುತ್ತಾರೆ ಮತ್ತು ಇದು ಸಹಜವೆಂದು ಭಾವಿಸುತ್ತಾರೆ. ಮೌನದಲ್ಲಿ ಇವರು ಸಾವನ್ನು ಕಂಡವರಂತೆ ಭಯಭೀತರಾಗುತ್ತಾರೆ.

ಇವರ ಕ್ರಿಯೇಟಿವಿಟಿ ಕೂಡಾ Obvious ಆದದ್ದನ್ನ ಮಾತ್ರಾ ತೋರಿಸುವ ಬರಡು, ನೀರಸ ಅಭಿವ್ಯಕ್ತಿಯಾಗಿ ಬದಲಾಗುತ್ತದೆ. Subtle ಎನ್ನಬಹುದಾದ್ದು, poetics ಎನ್ನಬಹುದಾದ್ದು ಕಳೆದು ಹೋಗುತ್ತದೆ. ಹೆಚ್ಚಿನವರು ಭಾಷಣಕಾರರಾಗಿ, non-fiction ಎನ್ನುತ್ತೇವಲ್ಲ ಅಂಥ ಲೇಖನ, ಪ್ರಬಂಧಗಳನ್ನು ಮಾತ್ರ ಬರೆಯಬಲ್ಲವರಾಗಿ ಬದಲಾಗುತ್ತಾರೆ. ಸೃಜನಶೀಲ ಅಭಿವ್ಯಕ್ತಿಗೇ ಅಂಟಿಕೊಂಡವರು ಮಾಡಿದ್ದೆಲ್ಲ ಬಹುಬೇಗ ಬೋರು ಹೊಡೆಸುತ್ತದೆ. ಅವರು ಹೊಸದೇನನ್ನೂ ಹೇಳಲು ಅಸಮರ್ಥರಾಗುತ್ತಾರೆ ಮತ್ತು ಅವರು ಬರೆದ ಕತೆ, ಕಾದಂಬರಿ ಓದಿದ ಬಳಿಕ ನಿಮಗೆ ಓದದಿದ್ದರೂ ಕಳೆದುಕೊಳ್ಳುವುದೇನೂ ಇರಲಿಲ್ಲ ಎನಿಸತೊಡಗುತ್ತದೆ. Enrich ಮಾಡಬಲ್ಲ ಕಸು ಆ ಬರವಣಿಗೆಯಲ್ಲಿ ಇರುವುದೇ ಇಲ್ಲ. ಆದರೆ ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ವಿಷಯವಿದೆ.

ಜನಸಾಮಾನ್ಯರೂ ಇದೇ ರೀತಿಯ ಗದ್ದಲದ ಜೀವನಶೈಲಿಗೆ ಹೊಂದಿಕೊಳ್ಳುತ್ತಲೇ ಇರುವುದರಿಂದ, ಅವರೂ ಕ್ರಮೇಣ news channel ಗಳಿಗೆ, ಕ್ರೈಮ್ ಸ್ಟೋರಿ ಥರದ್ದಕ್ಕೆ, ರಾಜಕಾರಣಿಗಳ ಕೆಸರೆರಚಾಟದಂಥ ಜಿದ್ದಾಜಿದ್ದಿ ಸಮರಗಳಿಗೆ, ಸಿನಿಮಾ ನಟನಟಿಯರ ವೈಯಕ್ತಿಕ ಬದುಕಿನ ರೋಚಕ ಗುಟ್ಟುಗಳಿಗೆ ಹೆಚ್ಚು ಹೆಚ್ಚಾಗಿ ಆಸಕ್ತಿ ತೋರುತ್ತಾರೆ. ಇದು ಕೊನೆಗೆ ಸಣ್ಣಪುಟ್ಟ ಊರುಗಳ ಹರೆಯದ ಹುಡುಗ ಹುಡುಗಿಯರು, ವಿವಾಹಿತೆಯರು ಯಾರೊಂದಿಗೋ ಓಡಿಹೋದ, ನಾಪತ್ತೆಯಾದ ವರದಿಗಳನ್ನೆಲ್ಲ ‘ಸ್ಟೋರಿ’ ಎಂದುಕೊಂಡು ಚಾನೆಲ್ಲುಗಳ ಮಂದಿ ವರದಿ ಮಾಡುವ ರೋಗಗ್ರಸ್ತ ವಿದ್ಯಮಾನಕ್ಕೆ ಕಾರಣವಾಗುವುದನ್ನು ನಾವೀಗಾಗಲೇ ನೋಡಿದ್ದೇವೆ. They can take in only the OBVIOUS. ಹೀಗಾಗಿ ನಮ್ಮ ಕೆಲವು ‘ಜನಪ್ರಿಯ’ ಸಾಹಿತಿಗಳು (ಜನಪ್ರಿಯ ಸಾಹಿತ್ಯದ ಬರಹಗಾರರಲ್ಲ, ಅದೊಂದು ಸಾಹಿತ್ಯ ಪ್ರಕಾರ. ಇದು ಆಧುನಿಕ ಕಾಲದ, ಮೂಲಭೂತವಾಗಿ ಮಾರುಕಟ್ಟೆ/ಮಾಧ್ಯಮ ಪ್ರಚಾರ/ಪ್ರಶಸ್ತಿ-ಪುರಸ್ಕಾರ ಕೇಂದ್ರಿತ ಮನಸ್ಥಿತಿಯುಳ್ಳ ಸಾಹಿತಿಯ ವರ್ಗ) ಕ್ಲಿಕ್ ಆಗಿದ್ದು ಇಂಥ ಸಂದರ್ಭದಲ್ಲಿಯೇ. ಇವರಲ್ಲಿ ಪೋಯೆಟ್ರಿ ಇರಲು ಸಾಧ್ಯವಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಪೋಯೆಟ್ರಿ ಯಾವತ್ತೂ obvious ಆಗಿರಲು ಸಾಧ್ಯವಿಲ್ಲ. ಅದು ambiguous ಆಗಿಯೇ ಇರುತ್ತದೆ. ಆದರೆ ಇವತ್ತಿನ ತೊಂಬತ್ತು ಶೇಕಡಾ ಕವಿತೆಗಳು ಕೂಡಾ Obvious ಆಗಿರುವುದನ್ನಷ್ಟೇ ಹೇಳುತ್ತಿರುವುದು ಸುಳ್ಳಲ್ಲ. ನಮ್ಮ ಜನಪ್ರಿಯತೆಯ ಶಿಖರಕ್ಕೇರಿದ ಸಾಹಿತಿಗಳು ಕೂಡ ಇಂಥ ಕವಿತೆಗಳ ಬಗ್ಗೆ ಪುಟಗಟ್ಟಲೆ ಬರೆದು ಸೈ ಎನಿಸಿಕೊಳ್ಳುತ್ತಾರೆ. ಓದುಗ ಕೊಂಚ ಸೂಕ್ಷ್ಮನಾಗಿರದೇ ಇದ್ದಲ್ಲಿ ಜನಪ್ರಿಯತೆಯಿಂದ ಪ್ರತಿಭೆಯನ್ನು ಬೇರ್ಪಡಿಸಿ ನೋಡಲಾರದ ಸ್ಥಿತಿ ತಲುಪುತ್ತಾನೆ.

ನನ್ನ ಆತಂಕ ಇಲ್ಲಿ ಏನು ಎಂದರೆ, ನಾವು ಗದ್ದಲಕ್ಕೆ ಹೊಂದಿಕೊಳ್ಳುತ್ತಾ ಹೋದರೆ, ಅದು ಅನಿವಾರ್ಯವೂ, ಆಕರ್ಷಕವೂ ಮತ್ತು ಇವತ್ತಿನ ಮೊಬೈಲ್ ಕೇಂದ್ರಿತ ಜೀವನಶೈಲಿಯಲ್ಲಿ ಆಮಿಷಕಾರಕವೂ ಆಗಿರುವುದರಿಂದ - ಕ್ರಮೇಣ ನಮ್ಮ ಕ್ರಿಯೇಟಿವ್ ಅಭಿವ್ಯಕ್ತಿ ಮೊಂಡಾಗುತ್ತದೆ ಎನ್ನುವುದು. ನಾವು ಲೇಖನ, ಭಾಷಣ ಎರಡಕ್ಕೇ ಫಿಟ್ ಆಗಿ ಫೇಸ್‌ಬುಕ್ಕು, ಚ್ಯಾಟು ಮಾಡಿಕೊಂಡಿರುವಂತಾಗುತ್ತದೆ.

ಇದಕ್ಕೆ ನಮ್ಮ ಹಿರಿಯ ಸಾಹಿತಿಗಳ ಉದಾಹರಣೆ ಸಾಕಷ್ಟು ಸಿಗುತ್ತದೆ ನಮಗೆ. ಕೆಲವರು ಕತೆ-ಕವಿತೆ-ಕಾದಂಬರಿ ಬರೆಯದೇ ದಶಕಗಳೇ ಕಳೆದಿರುವುದು ಗಮನಿಸಿ. ಬರೆದಿರುವುದು ಕತೆ-ಕವಿತೆ ಆಗದೇ ಹೋಗಿರುವುದನ್ನೂ ಗಮನಿಸಬಲ್ಲಿರಾದರೆ ನಿಮಗೆ ಹೆಚ್ಚು ಉದಾಹರಣೆಗಳು ಸಿಗುತ್ತವೆ.

ವಿವೇಕ್ ಶಾನಭಾಗ ಒಮ್ಮೆ ಮಾತನಾಡುತ್ತ ಹೇಳಿದ್ದರು, ಪ್ರತಿಯೊಬ್ಬ ಲೇಖಕನಿಗೂ ತನ್ನದೇ ಆದ ಒಂದು ಇಂಟೆನ್ಸ್ ಆದ ಅವಧಿ ಎನ್ನುವುದು ಇರುತ್ತದೆ. ವಯಸ್ಸಾದಂತೆಲ್ಲ ಅದು ಮುಕ್ಕಾಗುತ್ತದೆ ಅಂತ. ಅಂದರೆ ಅವರೇ ವಿವರಿಸಿದಂತೆ, ಸೃಜನಶೀಲ ಲೇಖಕನಿಗೆ ತನ್ನ ಅನುಭವವನ್ನ ಘಟನೆ ಮತ್ತು ಘಟನೆಗೆ ಪೂರಕವಾದ ವಿವರಗಳ ಮೂಲಕವೇ ಪುನಃಸೃಷ್ಟಿ ಮಾಡಬೇಕಾದ ಅನಿವಾರ್ಯ ಇರುವುದರಿಂದ ಆತ ತನ್ನ ಸೃಷ್ಟಿಕ್ರಿಯೆಗೆ ಅಗತ್ಯವಾದ ಸಾಹಿತ್ಯ ಸಾಮಗ್ರಿಗಳನ್ನ ಸ್ಮೃತಿಲೋಕದಿಂದ ಎತ್ತಿಕೊಂಡು ಬರಲು ‘ಹೋಗಿ-ಬಂದು’ ಮಾಡಬೇಕಾದ ಒಂದು ಪ್ರಕ್ರಿಯೆ ಏನಿದೆ, (ನೆನಪಿನಾಳಕ್ಕೆ ಇಳಿದು, ಅಲ್ಲಿಂದ ತನಗೆ ಬೇಕಾದ ವಿವರಗಳನ್ನು ಅವುಗಳ ಸಮೃದ್ಧಿಯೊಂದಿಗೆ (ಜೀವಂತಿಕೆಯ ಕುರಿತು ಆರಂಭದಲ್ಲಿ ಹೇಳಿರುವುದನ್ನು ನೆನೆಯಿರಿ) ಮರಳಿ ವರ್ತಮಾನಕ್ಕೆ ಬಂದು ತನ್ನ ಅಭಿವ್ಯಕ್ತಿ ಮಾಧ್ಯಮದಲ್ಲಿ ಅದನ್ನು original ದೇಶ-ಕಾಲದ freshness ನೊಂದಿಗೆ ಸೃಷ್ಟಿಸುವ ಪ್ರಕ್ರಿಯೆ ಏನಿದೆ) ಅದಕ್ಕೆ ಬೇಕಾದ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ ಅಥವಾ ಇರುವುದಿಲ್ಲ - ವಯಸ್ಸಾದಂತೆ ಅಥವಾ ಆಕೆ/ಆತ ತನ್ನ ಇಂಟೆನ್ಸ್ ಆದ ಅವಧಿಯನ್ನು ದಾಟಿದಾಗ ಅಂತ.

ಈ ಪ್ರಕ್ರಿಯೆಗೆ ಬೇಕಾದ ಶಕ್ತಿ ಸಾಮರ್ಥ್ಯಗಳು ಕುಂಠಿತಗೊಳ್ಳಲು ವಯಸ್ಸು ಅಥವಾ ಆತ/ಆಕೆಯ ಇಂಟೆನ್ಸ್ ಆದ ಅವಧಿ ಕಳೆದು ಹೋಗುವುದರ ಜೊತೆಗೇನೆ ಆತನ ಜೀವನಶೈಲಿಯ ಗದ್ದಲದ ಪ್ರಮಾಣ ಕೂಡ ಸೇರ್ಪಡೆಯಾಗಬೇಕು. ವಿವೇಕ್ ಮೇಲಿನ ಮಾತುಗಳನ್ನಾಡುತ್ತ ಇದಕ್ಕೆ ಅಪವಾದ ಎಂಬಂತಿರುವ ಒಬ್ಬ ಬರಹಗಾರನ ಬಗ್ಗೆ ಕೂಡ ಹೇಳಿದ್ದರು. ಆತ ಜೋಸ್ ಸಾರಾಮಗೊ. Jose Saramago ತನ್ನ ಇಳಿವಯಸ್ಸಿನಲ್ಲೆ ಬರವಣಿಗೆಗೆ ತೊಡಗಿದ, ನೊಬೆಲ್ ಪ್ರಶಸ್ತಿ ಪಡೆದ ಪೋರ್ಚುಗಲ್ ಲೇಖಕ. ನಮ್ಮಲ್ಲೂ ಇಂಥ ಅಪರೂಪದ ಒಬ್ಬ ಸಾಹಿತಿ ಇದ್ದರೆ ಅವರು ಶ್ರೀನಿವಾಸ ವೈದ್ಯ.

ಇಲ್ಲಿಯೇ ಹೇಳಬೇಕಾದ ಇನ್ನೊಂದು ಮಾತು ಕುಂದೇರಾನದ್ದು. ನಮ್ಮ ಅನೇಕ gestures (ಆಂಗಿಕ ಚಲನೆ) ನಮ್ಮ ಸ್ವಂತದ್ದಲ್ಲ ಎನ್ನುತ್ತಾನಾತ. ನಾವು ನಮ್ಮ ಕೆಲವೊಂದು ಆಂಗಿಕ ಚಲನೆಗಳಲ್ಲಿ ನಮಗಿಷ್ಟವಾದ ವ್ಯಕ್ತಿ, ಸಿನಿಮಾ ನಟ, ಪ್ರಭಾವೀ ವ್ಯಕ್ತಿಗಳನ್ನು ಅನುಕರಿಸಿದಂತೆಯೇ ಕೆಲವೊಂದು ವಿಶಿಷ್ಟ ನಡವಳಿಕೆಯ ಸಂದರ್ಭದಲ್ಲಿ ಮಗುವಿನ ಹಾಗೆ, ಕಾಮಿಡಿಯನ್ ಹಾಗೆ ಕೂಡಾ ಮಾಡುತ್ತಿರುತ್ತೇವೆ. ಇದು ನಿಜ ಮತ್ತು ಸಹಜ. ಮೀನಗುಂಡಿ ಸುಬ್ರಹ್ಮಣ್ಯ ಅವರು ಕನ್ನಡದಲ್ಲಿ ಬರೆದಿರುವ ‘ಮನಸ್ಸು ಇಲ್ಲದ ಮಾರ್ಗ’ ಗಮನಿಸಿದ್ದರೆ, ಅಥವಾ ಥಾಮಸ್ ಹ್ಯಾರಿಸ್ ಬರೆದ I am Ok, You are Ok ಕೃತಿಯನ್ನು ಓದಿದ್ದರೆ ನಿಮಗೆ Transaction Analysis ಬಗ್ಗೆ ಗೊತ್ತಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಬೇರೆ ಬೇರೆ ಸಂದರ್ಭ, ಪರಿಸ್ಥಿತಿಗನುಗುಣವಾಗಿ ಮಗು, ಪ್ರಬುದ್ಧ ಮತ್ತು ಪೋಷಕ ಮನಸ್ಥಿತಿಯೊಂದಿಗೆ ವರ್ತಿಸುತ್ತಿರುತ್ತಾನೆ ಮತ್ತು ಎದುರಿನ ವ್ಯಕ್ತಿ ಅದಕ್ಕನುಗುಣವಾಗಿ ಈ ಮೂರು ಮನಸ್ಥಿತಿಗಳಲ್ಲಿ ತಕ್ಕುದಾದ ಮನಸ್ಥಿತಿಯೊಂದಿಗೆ ಅದನ್ನು ಮುಖಾಮುಖಿಯಾಗುತ್ತಿರುತ್ತಾನೆ, ಈ ಸಮೀಕರಣ ಯಾವ ಯಾವ ಸಂಯೋಜನೆಗಳಲ್ಲಿ ಯಶಸ್ವಿಯಾಗುತ್ತದೆ ಮತ್ತು ಯಾವ ಯಾವ ಸಂಯೋಜನೆಗಳಲ್ಲಿ ಸೋಲುತ್ತದೆ ಎನ್ನುವುದರ ಮೇಲೆಯೇ ಸಂಬಂಧಗಳು ನಿಂತಿರುತ್ತವೆ ಎನ್ನುತ್ತಾರೆ ಇಬ್ಬರೂ.

ಪೂರ್ತಿಯಾಗಿ ಸ್ವಂತದ್ದು ಎನ್ನಬಹುದಾದ ಆಂಗಿಕ ಚಲನೆಯೇ ಇಲ್ಲ ಎನ್ನುತ್ತಾನೆ ಕುಂದೇರಾ. ಒಪ್ಪಬಹುದು ಅಥವಾ ಬಿಡಬಹುದು, ಪ್ರಶ್ನೆ ಅದಲ್ಲ. ಈ ಆಂಗಿಕ ಚಲನೆಗೆ ಅನ್ವಯವಾಗುವ ತತ್ವವನ್ನೇ ನಮ್ಮ ಮನೋಲೋಕದ ವ್ಯಾಪಾರಕ್ಕೂ ಅನ್ವಯಿಸಬಹುದಾದರೆ, ಇನ್ನೊಬ್ಬರ ಗಮನಕ್ಕೆ ಬರುವಂಥ ಸಂದರ್ಭ ಎಲ್ಲೆಲ್ಲಿದೆಯೋ ಅಂಥಲ್ಲಿ (ಇದು ಬಹಳ ಮುಖ್ಯ, ಆಂಗಿಕ ಚಲನೆಯ ಸಂದರ್ಭದಲ್ಲಿಯೂ) ನಮ್ಮ ಯೋಚನಾ ಶೈಲಿ, ನನ್ನದು ಎಂದು ನಾವು ಹೇಳಿಕೊಳ್ಳುವ (ಅಂದುಕೊಳ್ಳುವ) ಮಾತುಗಳು ಕೂಡಾ ನಮ್ಮದೇ ಆಗಿರದೆ, ಅನುಕರಣೆಯ ಚಾಳಿಗೆ ಬಿದ್ದು ಮುಕ್ಕಾಗಿರುವುದು ಸಾಧ್ಯವಿಲ್ಲವೇ ಎನ್ನುವುದು. ಈ ಪ್ರಶ್ನೆ ಕೂಡಾ ಸಾಮಾಜಿಕ ಜಾಲತಾಣಗಳ, ಚ್ಯಾಟುಗಳ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಪ್ರಸ್ತುತ ಅನಿಸುತ್ತದೆ ನನಗೆ.

ಕೊನೆಗೂ, ವ್ಯಕ್ತವಾದದ್ದು ವ್ಯಕ್ತಿ. ವ್ಯಕ್ತವಾಗುವುದು ಅಭಿವ್ಯಕ್ತಿಯಿಂದ. ವ್ಯಕ್ತವಾಗದೇ ಉಳಿದ ಅವ್ಯಕ್ತವೇನಿದೆ, ಅದು ಸದಾ ಭೂತ ಇದ್ದಂತೆ. ನಾವು ಜಗತ್ತಿಗೆ ನಮ್ಮನ್ನು ನಾವು present ಮಾಡಿಕೊಳ್ಳುವ presentation ನ ಸಾಮಾನ್ಯ ನಿಯಮವೆಂಬಂತೆ ನಾವು ನಮ್ಮ ಒಳ್ಳೆಯ ಮುಖವನ್ನು ಮಾತ್ರಾ ಪ್ರದರ್ಶನಕ್ಕೊಡ್ಡುತ್ತೇವೆಯೇ ಹೊರತು ಕೊಳಕು ಮುಖವನ್ನಲ್ಲ. ಯಾವತ್ತೂ ಬೆಳಕಿಗೆ ಬರದೇ ಹೋಗುವ ಒಂದು ಕತ್ತಲ ಮುಖ (ಕತ್ತಲಿಗೆ ಹತ್ತೆ ತಲೆ!) ಇದ್ದೇ ಇರುತ್ತದಲ್ಲವೆ?

ಹೀಗಾದಾಗ ನಮ್ಮನ್ನು ನಾವು ಕಂಡುಕೊಳ್ಳುವುದು ಏನಾಯ್ತು! ಒಟ್ಟಾರೆ ಗದ್ದಲದಿಂದ ಆಧುನಿಕ ಮನುಷ್ಯನಿಗೆ ಮುಕ್ತಿಯೇ ಇಲ್ಲವೆ ಎನಿಸುವ ದಿನಗಳು ದೂರವಿಲ್ಲ. ಇದ್ದುದರಲ್ಲಿ ನಾವು ಅದೃಷ್ಟಶಾಲಿಗಳು. ಕೆಲವರ ಹಾಗೆ ನಗರ, ಪಟ್ಟಣ ಬಿಟ್ಟು ಸ್ವಲ್ಪ ಹೊರಗಡೆ ಹೋಗಿ ಬದುಕು ರೂಪಿಸಿಕೊಂಡ ಅನೇಕರು ಇನ್ನೂ ಇದ್ದಾರೆ. ನಗರದಲ್ಲಿದ್ದೂ ತಮ್ಮೊಳಗಿನ ಮೌನ, ಏಕಾಂತ ಕಾಪಾಡಿಕೊಂಡವರೂ ಕಾಣ ಸಿಗುತ್ತಾರೆ. ನಡುವೆ ಇದಕ್ಕೇನೆ ಬಲಿಯಾಗಲು ಸಾಕಷ್ಟು ಆತುರ, ಧಾವಂತದಿಂದ ಇರುವ ಮಂದಿಯೂ ಸಾಕಷ್ಟಿದ್ದಾರೆ. ನಮ್ಮೊಳಗಿನ ಮೌನದ ಚಿಟ್ಟೆ ಸ್ವಸ್ಥವಾಗಿ ಸ್ಥಿರವಾಗಿ ಎಲ್ಲೂ ಕೂರಲಾರದೆ ಚಂಚಲಗೊಂಡಿದೆ. ಪಾತರಗಿತ್ತಿ ಪಕ್ಕ ಸದಾ ಕಾಲ ಪತರಗುಟ್ಟುತ್ತಲೇ ಇದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, December 27, 2017

ಕಣ್ಣ ನೀಡುವ ಕವಿ, ಕಾಣಿರಿಲ್ಲಿ ರವಿ ಕಾಣದ್ದ.....

ಜಗತ್ತನ್ನು ವಿಭಿನ್ನವಾಗಿ ಗ್ರಹಿಸುವ ಮತ್ತು ಅಷ್ಟೇ ವಿಭಿನ್ನವಾಗಿ ನಾವು ದಿನನಿತ್ಯ ಬಳಸುವ ಸಾಮಾನ್ಯ ಭಾಷೆಯಲ್ಲೇ ತನ್ನ ಗ್ರಹಿಕೆಯನ್ನು ಕಟ್ಟಿಕೊಡುವ ಕೆಲಸ ಸುಲಭವಲ್ಲ. ಲೋಕರೂಢಿಯನ್ನೇ ಅನುಸರಿಸುವುದು ಸಾಮಾನ್ಯವಾಗಿ ನಾವೆಲ್ಲರೂ ಮಾಡುತ್ತ ಬಂದಿರುವ ವಿಧಾನ. ಆದರೆ ಮಿಹಿರ್ ವತ್ಸ ಅವರ ಕವಿತೆಗಳನ್ನು ಓದುತ್ತ ಹೋದಂತೆ ‘ಅರೆ! ಇದನ್ನೆಲ್ಲ ಹೀಗೂ ಕಾಣಬಹುದಲ್ಲ’ ಎನ್ನುವ ಒಂದು ಧಕ್ಕೆ ತಗುಲಿದಂತೆ ಇಲ್ಲಿನ ನುಡಿಕಟ್ಟುಗಳು ನಮ್ಮನ್ನು ಸೆಳೆಯುತ್ತವೆ. ಆದರೆ ಅಷ್ಟಕ್ಕೇ ಈ ಕವಿತೆಗಳ ಸ್ವಾರಸ್ಯ ಮುಗಿಯುವುದಿಲ್ಲ ಎನ್ನುವುದೇ ಈ ಕವಿತೆಗಳ ನಿಜವಾದ ವೈಶಿಷ್ಟ್ಯ. ಹೀಗಾಗಿ ಮಿಹಿರ್ ವತ್ಸ ಅವರದ್ದು ನಿಮಗೆ ಒಂದು ಆರಂಭಿಕ ಧಕ್ಕೆ ನೀಡಿ ಗಮನ ಸೆಳೆವ ಗಿಮ್ಮಿಕ್ ಆಗದೆ, ಅದರತ್ತ ಯಾವ ಲಕ್ಷ್ಯವೂ ಅಗತ್ಯವಿಲ್ಲ, ಭಾಷೆಯನ್ನು ನಾನು ಬಳಸುವ ಒಂದು ಸಹಜ ವ್ಯಾಪಾರವದು ಅಷ್ಟೇ, ನೀವು ಗಮನಿಸಬೇಕಾದ್ದು ಬೇರೆಯೇ ಇದೆ, ಬನ್ನಿ ಎನ್ನುವ ಧರ್ತಿಯಲ್ಲಿ ಓದುಗನನ್ನು ಮುಂದಕ್ಕೆ ಕರೆದೊಯ್ಯುತ್ತವೆ.

ಈ ಸಂಕಲನದ ಹೆಸರೇ ವಿಂಗ್ ಮ್ಯಾನ್. ಪ್ರಸನ್ನ ಅವರ ಬಾಲಗೋಪಾಲ ಎಂಬ ಒಂದು ಕಾದಂಬರಿಯಲ್ಲಿ ಮನುಷ್ಯರು ಹಾರಲು ಕಲಿಯುವ ಚಿತ್ರವಿದೆ. 2009ರ ಹೊತ್ತಿಗೆ ಹೊರಬಂದಿದ್ದ ಈ ಕಾದಂಬರಿಯ ವಿವರಗಳೆಲ್ಲ ಈಗ ಮರೆತಿವೆ. ಆದರೆ ಅಲ್ಲಿನ ಪರಿಕಲ್ಪನೆ ಕೂಡ ಹೊಸದು.

ಈ ಸಂಕಲನದಲ್ಲಿ ಒಟ್ಟು ಹದಿನೇಳು ಕವಿತೆಗಳಿವೆ. ಪ್ರತಿಯೊಂದು ಕವಿತೆಯೂ ಮೇಲೆ ಹೇಳಿದ ವಿಶಿಷ್ಟ ಗುಣಗಳನ್ನು ಹೊಂದಿರುವ, ಗಮನಾರ್ಹವಾದ ಕವಿತೆಯೇ ಆಗಿರುವುದು ವಿಶೇಷ. ಹಾಗೆಯೇ ಮಿಹಿರ್ ವತ್ಸ ಅವರು ಬುದ್ಧಿ-ಭಾವ ಸಮನ್ವಯದ ಕವಿ ಎನ್ನುವ ಅಂಶವನ್ನೂ ನಾವು ಗಮನಿಸಬೇಕು. ಅಂದರೆ ಇಲ್ಲಿನ ಕವಿತೆಗಳು ಭಾವಪ್ರಧಾನವಲ್ಲ. ಅವು ಭಾವುಕ ವಿಚಾರಗಳಲ್ಲಿ ರಮಿಸುವುದಿಲ್ಲ. ಕವಿತೆ ಸ್ಥೂಲವಾಗಿ ಎರಡು ಬಗೆಯಲ್ಲಿರುತ್ತವೆ. ಒಂದನ್ನು ಯಾವುದೇ ದನಿಯ ಸೂತಕ ತಗುಲದಂತೆ ಕೇವಲ ನಿಮ್ಮದೇ ಮೌನದ ಒಂದು ವಿಶಿಷ್ಟ ಸ್ವರದಲ್ಲಿ ನೀವು ಮಾತ್ರ ಕೇಳಿಕೊಂಡು ಅದರೊಂದಿಗೆ ರಮಿಸಬೇಕಾದ ಕವಿತೆಗಳು. ಇನ್ನೊಂದು ಗಟ್ಟಿಯಾಗಿ ಓದಿ ಹೇಳಬಹುದಾದ ಕವಿತೆಗಳು. ಇಲ್ಲಿನ ಕವಿತೆಗಳು ಗಟ್ಟಿಸ್ವರದವು ಅನಿಸುವಾಗಲೂ ಅವು ಮೌನವಾಗಿ ಮಾತನಾಡುವ ಕಸು ಹೊಂದಿರುವುದು ಗಮನಕ್ಕೆ ಬರುತ್ತದೆ.

ಅಂದರೆ, ಬದುಕಿನ ಕಟು ವಾಸ್ತವಗಳನ್ನೇ, ಮೆಲುದನಿಯ ಲಯವನ್ನು ಬಿಟ್ಟುಕೊಟ್ಟು ಗಟ್ಟಿಯಾಗಿಯೇ ಹೇಳುತ್ತಿರುವಂತೆ ಅನಿಸುವಾಗಲೂ ಮೌನದಲ್ಲಿ ಆವರಿಸುವ ವಿಶೇಷ ಶಕ್ತಿಯನ್ನೂ ಹೊಂದಿವೆ ಎನ್ನುವುದು ಈ ಕವಿತೆಗಳ ಹೆಚ್ಚುಗಾರಿಕೆಯಾಗಿದೆ. ಈ ಗುಣದೊಂದಿಗೆ ಕವಿತೆಯ ಪ್ರಾಥಮಿಕ ಜೀವಸೆಲೆಯಾದ ಮೌನ ಇಲ್ಲಿನ ಎಲ್ಲ ಕವಿತೆಗಳ ಜೀವನಾಡಿಯಾಗಿ ನಮ್ಮನ್ನು ಆವರಿಸುತ್ತದೆ.

ಇಲ್ಲಿನ ಒಂದು ಕವಿತೆ, "ಅಮ್ಮನ ಬಗ್ಗೆ ನಾನೊಮ್ಮೆ ಇಂಗ್ಲೀಷಿನಲ್ಲಿ ಬರೆದಿದ್ದ ಕವಿತೆಯನ್ನು ಅವಳು ಓದಿದಾಗ" ಎನ್ನುವ ಹೆಸರಿನ ಕವಿತೆ. ಅದನ್ನು ಗಮನಿಸಿ. ಇಲ್ಲೇನಾಗುತ್ತಿದೆ ಎಂದರೆ ಕವಿ ತನ್ನ ಓದುಗರಿಗೆ, ಕಾವ್ಯಪ್ರಿಯರಿಗೆ ಏನೇ ಆಗಿದ್ದರೂ ತಾಯಿಗೆ ತನ್ನ ಮಗನಷ್ಟೇ ಆಗಿರುತ್ತಾನೆ. ಆದರೆ ಆಕೆಗೆ ತನ್ನ ಮಗ ಕವಿ ಎನ್ನುವುದೂ ಗೊತ್ತಿರುತ್ತದೆ. ಅದೇನು ಬರೆಯುತ್ತಾನೆ ತನ್ನ ಮಗ ಎನ್ನುವ ಕುತೂಹಲ, ಕೊಂಚ ಅಸಡ್ಡೆ ಸಹಜವಾದದ್ದೇ. ಮಗನಿಗೆ ಕವಿಯಾಗಿ ತಾಯಿ ಎಂದರೆ ತಾಯಿ. ತನ್ನ ತಾಯಿಯೂ, ಜಗದ ಎಲ್ಲ ಮಕ್ಕಳ ತಾಯಿಯೂ ಕವಿಯಾಗಿ ಅವನಿಗೆ ‘ತಾಯಿ’. ಅಲ್ಲಿ ವೈಯಕ್ತಿಕ ಮತ್ತು ಸಾಮಾಜಿಕಗಳು ಬೆರಕೆಯಾಗಿ, ಖಾಸಗಿಯಾದದ್ದು ಸಾಂಕೇತಿಕವಾಗುವ, ಪ್ರತಿಮೆಯಾಗುವ ಸಹಜ ಪ್ರಕ್ರಿಯೆ ಏನಿದೆ, ಅದು ನಡೆಯುತ್ತದೆ. ಹೀಗೆ ಖಾಸಗಿ ನೆಲೆಯಲ್ಲಿ ಕವಿಯ ಎದುರೇ ಕವಿಯ ತಾಯಿ ಕೇವಲ ಕವಿಯ ತಾಯಿಯಷ್ಟೇ ಆಗಿ ಓದುವಾಗ ಅದನ್ನು ಮುಖಾಮುಖಿಯಾಗುವುದು ಕವಿಗೆ ಒಂಥರಾ ಮುಜುಗರ. ಅವನು ಅದನ್ನು ಕವಿಯಾಗಿಯೂ ಕೇವಲ ಒಬ್ಬ ಮಗನಾಗಿಯೂ ಏಕಕಾಲಕ್ಕೆ ಮಾಡಲು ಕಷ್ಟಪಡುತ್ತಾನೆ. ಇಷ್ಟು ಸರಿಸುಮಾರು ಎಲ್ಲಾ ಬರಹಗಾರರಿಗೂ ಗೊತ್ತಿರುವ, ಬೇರೆ ಬೇರೆ ಬಗೆಯಲ್ಲಿ ಅನುಭವಕ್ಕೆ ಬಂದಿರುವ ಸಂಗತಿಯೇ. ಆದರೆ ಒಂದು ಕವಿತೆಯಾಗಿ ಇದು ಅರಳುವ ಸಂಭ್ರಮವನ್ನು ಮಿಹಿರ್ ಅವರ ಕವಿತೆಯನ್ನು ಓದಿಯೇ ಅರಿಯಬೇಕು.

ಯಾವತ್ತೊ ಇಂಗ್ಲೀಷಿನಲ್ಲಿ ಅಮ್ಮನ ಮೇಲೆ ಬರೆದ ಕವಿತೆಯನ್ನು ಅಮ್ಮನೇ ಓದಿದಾಗ

ಅರ್ಥದ ಒಂದು ವ್ಯಾಖ್ಯಾನಕ್ಕೆ ಮೀರಿದ ಸಾಲು
ಆದರೆ ಅವಳಿಗೀಗ ಅದರ ಅರ್ಥವೇ ಮುಖ್ಯ
ಪಕ್ಕದಲ್ಲಿ ಕುಳಿತಿದ್ದೇನೆ, ಇದು ಮಹಾ ಕಿರಿಕಿರಿ
ಆ ಸಾಲು, ನಡುವಿನ ಮೌನ ಬರೆದು ತಿಂಗಳೆಷ್ಟೋ ಕಳೆದಿದೆ
ಈಗದರ ಸದ್ದು ಬೇಡ ಎನಿಸುತ್ತಿದೆ ನನಗೆ
ಹೊರಗಡೆ ಎಲೆಗಳೆಲ್ಲ ಕಾಯುತ್ತಿವೆ ಅವಳ ಕಾವ್ಯವಾಚನಕ್ಕೆ
ಎಲ್ಲಿಲ್ಲದ ತಾಳ್ಮೆಯಿಂದ.
ತನ್ನದಲ್ಲದ ಭಾಷೆಯೊಂದಕ್ಕೆ ಧ್ವನಿ ನೀಡುತ್ತ ಅವಳು ಸುರುಹಚ್ಚಿಕೊಳ್ಳುತ್ತಾಳೆ
ಅವಳು ಪ್ರತಿಬಾರಿ ತಪ್ಪುಚ್ಛಾರ ಹೊರಡಿಸಿದಾಗಲೂ
ನನ್ನದೇನನ್ನೋ ಇಡಿಯಾಗಿ ಕಾಪಿಟ್ಟುಕೊಳ್ಳಲು ನನ್ನ
ಯಾರೋ ಕೊಂಕಿದಂತೆ ಮೊಣಕೈಯಿಂದ ನೂಕಿ.
ಚಿಂದಿಯಾಗುತ್ತಿವೆ ಅವು, ಬೇಡ ಅವುಗಳು ಅವಳ ಬಾಯಲ್ಲಿ
ಎಂದರೂ ಇರು ಸ್ವಲ್ಪ, ನಾನು ಅರ್ಥವಾಗುತ್ತಾ ನೋಡ್ತೇನೆ
ಬರಿಯ ಸಮಾಧಾನಕ್ಕಂದ ಮಾತು.
ಮುಂದುವರಿಸಿಯೇ ಮುಂದುವರಿಸುತ್ತಾಳವಳು
ಗೊತ್ತವಳಿಗೆ, ವಾಚನವನ್ನು ಅರ್ಧಕ್ಕೇ ಕೈಬಿಟ್ಟರೆ
ಕವಿತೆಗಾಗುವ ಅವಮಾನ.
ಕಾಯುತ್ತೇನೆ ನಾನು, ಅವಳಿಗದು ತಿಳಿಯಬೇಕು, ಕವಿತೆ ಅವಳದು
ನಾನೇನೂ ಹೇಳದಲೆ.
ಅದರ ಸೂಕ್ಷ್ಮ ಸೂಚನೆ, ಕಣ್ಸನ್ನೆ, ಬಳಕು, ಹಠ ಮತ್ತು ಮೌನ.
ಕೊಂಚ ಇರಿಸು ಮುರಿಸಲ್ಲೇ ಹೇಳಿದೆ, ಎಲ್ಲಕ್ಕೂ ಅದೇ ಅರ್ಥ ಅಂದ್ಕೋಬೇಡಮ್ಮ
ನಿನಗೆ ಅದೆಲ್ಲ ಗೊತ್ತಿರೋದೆ ಅಲ್ವ?
ಖಂಡಿತ, ಗೊತ್ತಿರೋದೆ ಎಲ್ಲಾ.
ಪೇಲವವಾಗೇ ಇರುವ ನನ್ನ ಮುಖವೀಗ ನೋವಿಂದ
ಕೆಂಪೇರುವುದನ್ನು ಕಂಡಳೆ?
ಒಂದು - ಎರಡು - ಮೂರು - ನಾಲ್ಕು -
ಒಮ್ಮೆಗೇ ಆ ದರಿದ್ರವನ್ನು ನೆಲಕ್ಕೆ ಒಗೆದು ಎದ್ದು ನಿಂತೆನಲ್ಲ
ಮುಗೀತಾ?!
ಹರಿತವಾದ ಮೌನ.
ಅವಳ ಕಣ್ಣುಗಳಲ್ಲಿ ಹತಾಶ ಪ್ರಯತ್ನದ ಸೋಲು ತಂದ ನೋವು.
ಇನ್ನೊಂದು ಮಾತೂ ಆಡದೆ ಟೀವಿ ಆನ್ ಮಾಡುತ್ತಾಳವಳು
ಯಾರೋ ನೆಲದ ಮೇಲಿಷ್ಟು ಹಾಲು ಚೆಲ್ಲಿದ್ದಾರಲ್ಲಿ.
ಮುದ್ದಿನ ಬೆಕ್ಕಿನ ಮರಿ ಭಯದಿಂದ ಹಿಂಜರಿದು ಕಾದಿದೆ.
ನಾನು ಸುಮ್ಮನೇ ನನ್ನ ಕೋಣೆ ಹೊಕ್ಕು ಕೂರುತ್ತೇನೆ
ಕವಿತೆಯನ್ನು ಮತ್ತೊಮ್ಮೆ ಓದುತ್ತೇನೆ,
ಅಪರಾಧೀ ಭಾವ ಎಂದರೇನೆಂದು
ಯೋಚಿಸುತ್ತೇನೆ.

ಇದೊಂದು ಉದಾಹರಣೆ, ಕವಿ ಕವಿತೆಯೊಳಗೆ ಮೌನವನ್ನು ತಂದು ಅಲ್ಲಾಡದಂತೆ ನಿಲ್ಲಿಸುತ್ತಾನೆ ಹೇಗೆ ಎನ್ನುವುದನ್ನು ಕಾಣಲು. ತಾಯಿಗೆ ತನ್ನ ಕುರಿತೇ ಬರೆದ ಒಂದು ಕವಿತೆ ತನಗೇ ಅರ್ಥವಾಗದೇ, ಪೂರ್ತಿ ಓದಲಾಗದೇ, ಓದಿದ್ದನ್ನು ದಕ್ಕಿಸಿಕೊಳ್ಳಲಾಗದೇ ಹೋಗುವ ನೋವು ಮತ್ತು ಅಂಥ ಒಂದು ಹತಾಶ ಪ್ರಯತ್ನಕ್ಕೆ ತನ್ನದೇ ಕವಿತೆ ಬಲಿಯಾಗುತ್ತಿರುವುದನ್ನು ಕವಿ ಮುಖಾಮುಖಿಯಾಗುವ ಸಂಕಟ ಎರಡೂ ಭಾಷೆಗೆ ಮೀರಿದ್ದು. ಅದನ್ನು ಕವಿತೆಯಾಗಿಸುವುದು ಒಂದು ಹೊಸ ಸವಾಲು. ಅದು ಇಲ್ಲಿದೆ.

ಗೈರು (Absence) ಎನ್ನುವ ಕವಿತೆಯಲ್ಲಿ The road blocked by an anthology of memoirs ಎನ್ನುತ್ತಾರೆ ಕವಿ. ಈ ಕವಿತೆ ಕೊನೆಯಾಗುವುದು ಹೀಗೆ:

ಅವರು ಹೇಳಿದ್ದರು, ಸೂರ್ಯ ಮುಳುಗುವ ಹೊತ್ತಿಗೆ
ಮರಳಿ ಬಂದೆ ಎಂದಾದಲ್ಲಿ
ನೀನು ಕಳೆದು ಹೋಗಲಿಲ್ಲ
ಎಂದೇ ಅರ್ಥ.
ಬಂದೆ ನಾನು, ಆದರೆ ನೀನು
ಇನ್ನೂ ಇಲ್ಲ ಇಲ್ಲಿ.

ಇನ್ನೊಂದು ಕವಿತೆ, ‘ಮತ್ತೊಬ್ಬನ ಕತೆಯನ್ನು ಬರೆಯುವ ಕಷ್ಟ’ ದಲ್ಲಿ ಮಿಹಿರ್ ವತ್ಸ ಭಾಷೆಯಲ್ಲಿ ದೈನಂದಿನ ಸಾಮಾನ್ಯ ಬದುಕಿನ ವಿವರಗಳನ್ನೇ ವಿಶಿಷ್ಟವಾಗಿ ಗ್ರಹಿಸುವ ಮತ್ತು ಕಟ್ಟಿಕೊಡುವ ಒಂದು ಗಮನಾರ್ಹ ವಿಧಾನವನ್ನು ಗಮನಿಸಬಹುದಾಗಿದೆ. ಈ ‘ಮತ್ತೊಬ್ಬನ ಕತೆಯನ್ನು ಬರೆಯುವ ಕಷ್ಟ’ ಹೆಸರಿನ ಎರಡು ಕವಿತೆಗಳು ಸಂಕಲನದಲ್ಲಿದ್ದು, ಒಂದನ್ನು ಕಲ್ಲುಗಳು ಎಂದೂ ಇನ್ನೊಂದನ್ನು ಚಿಟ್ಟೆಗಳು ಎಂದೂ ಉಪಶೀರ್ಷಿಕೆಯೊಂದಿಗೆ ಪ್ರಸ್ತುತಪಡಿಸಲಾಗಿದೆ.

ಮತ್ತೊಬ್ಬನ ಕತೆಯನ್ನು ಬರೆಯುವ ಕಷ್ಟ


ಕಲ್ಲುಗಳು

ಒಳಗೊಳಗೇ ಟೊಳ್ಳೆನ್ನಿಸುವ ನಗರವೊಂದರಲ್ಲಿ
ನೀವು ಹಿಡಿದಿಟ್ಟುಕೊಳ್ಳಲು ಬರುವುದು ಒಂದೇ ಒಂದು,
ಅದರ ಮೌನದ ಪ್ರತಿಧ್ವನಿ.
ರಸ್ತೆಬದಿಯಲ್ಲಿ ಬಿದ್ದ ಕೋಟು ನಿಧಾನಕ್ಕೆ ತನ್ನ ತೋಳುಗಳನ್ನ
ಸೆಳೆದುಕೊಳ್ಳುತ್ತಿದೆ ತನ್ನತ್ತ, ಆದರೇನು, ಬಾಹುಗಳಿಗೆ
ಸರಿಹೊಂದುತ್ತಿಲ್ಲ ಅವು
ಹವೆಗಿನ್ನೂ ಯಾವ ಋತುವೂ ತನ್ನ ಹೆಸರಿಟ್ಟಿಲ್ಲ
ದೀರ್ಘ ಹಗಲಿನ ಬಳಿಕ ಅದನ್ನು ತಾನೇ ಸೆಳೆದುಕೊಂಡ ರಾತ್ರಿಗೂ ಅದೇ ಗತಿ.
ಉಸ್ಸಪ್ಪಾ ಎನ್ನಲು ಹಿಡಿಯುವ ಶಬ್ದಗಳ ಲೆಕ್ಕ ಹಾಕಲು
ನೀವೆಷ್ಟು ಚುರುಕಾಗಿರಬೇಕು?
ಅದು ನೋಡು, ಮನೆಯನ್ನು ಸುಟ್ಟಾದ ಬಳಿಕ
ದೊಪ್ಪೆಂದು ಅಲ್ಲೇ ಕಲ್ಲಿನ ಮೇಲೆ ಬಿದ್ದುಕೊಂಡು ನೆರಳಿಗಾಗಿ ಹುಡುಕುತ್ತಿದೆ.
ಅವಶೇಷಗಳ ನಡುವೆ ಪ್ರೇಮಿಗಳು ತಮ್ಮ ಹೆಸರು ಕೆತ್ತಿದ್ದಾರಲ್ಲಿ
ಮಧ್ಯಯುಗೀನ ಕಲ್ಲುಗಳು ಬಾಹುಗಳಲ್ಲಿ ಕರಗುವ ಮಿದುದೇಹಕ್ಕಿಂತ
ಹೆಚ್ಚು ಶಾಶ್ವತ ನೋಡಿ, ಅದಕ್ಕೇ. ಅಯ್ಯೋ, ಸುಡು ಬಿಸಿಲಲ್ಲಿ ಅವು ಹಾರುಬಿದ್ದ
ಚಿತ್ರ ನೋಡುವುದದೆಷ್ಟು ಕಷ್ಟ. ಇಲ್ಲೀಗ ಎದ್ದು ನಿಂತ ಗೋಡೆಗಳಿಲ್ಲ,
ಸಾವಿನ ಬೆದರುಗೊಂಬೆ ಮಾತ್ರ ಇದೆ ಸೆಟಗೊಂಡು.
ಕಾಲ ತನ್ನ ಹುಟ್ಟಿನ ಮೂಲದತ್ತಲೇ ಚಲಿಸುತ್ತಿರುವಂತಿದೆ
ತಿಳಿ, ನೀನೇ ಇಲ್ಲಿನ ಮೊತ್ತಮೊದಲ ಮನುಷ್ಯನೇನಲ್ಲ.

‘Imminent' ಎಂಬ ಹೆಸರಿನ ಒಂದು ಕವಿತೆ ಸಂಕಲನದಲ್ಲಿದ್ದು ಇಲ್ಲಿ ತತ್‌ಕ್ಷಣದಲ್ಲಿ ನೀವು ಮಾಡಬೇಕಾದ ಅಥವಾ ಆಗಬೇಕಾದ ಒಂದು ಕ್ರಿಯೆಯನ್ನು ‘ಸ್ಥಿತಿ ಸ್ಥಿರಗೊಳಿಸುವ’ ತಂತ್ರಕ್ಕೆ ಒಳಪಡಿಸಿ ಕಾಣುವ ಪ್ರಯತ್ನವಿದೆ. ಉದಾಹರಣೆಗೆ, ದೊಡ್ಡ ಕಟ್ಟಡದಿಂದ ಕಾಲು ಜಾರಿ ಕೆಳಗೆ ಬಿದ್ದ ಒಂದು ಸನ್ನಿವೇಶದಲ್ಲಿ ಕೇವಲ ಬೀಳುತ್ತಿರುವ ಹಂತವನ್ನೇ ಸ್ಥಿರಗೊಳಿಸಿ ನೋಡುವುದು. ಬೆಂಕಿಯಲ್ಲಿ ಸುಡುತ್ತಿರುವ ಕೈಯನ್ನು ಅಲ್ಲಿಯೇ ಸ್ಥಿರಗೊಳಿಸಿ ಕಾಣುವುದು ಇತ್ಯಾದಿ.

ಅಡುಗೆಮನೆಯ ಸ್ತಬ್ಧ ಚಿತ್ರವೊಂದರಲ್ಲಿ ಉರಿಯುತ್ತಿರುವ ಒಲೆಯ ಮೇಲೆ ಪಾತ್ರೆ ಇರಬೇಕಿತ್ತು. ಅಂದರೆ ಇಲ್ಲ ಎಂದು ತಿಳಿಯಬೇಕೆ? ಗೊತ್ತಿಲ್ಲ. ಕವಿ ಹೇಳುತ್ತಾನೆ, ತಾನು ತುಂಬ ದೂರದಲ್ಲಿದ್ದೇನೆ, ಅಲ್ಲಿಯ ತನಕ ಹೋಗಲಾರೆ, ಅಲ್ಲದೆ, ತನ್ನ ಚರ್ಮಕ್ಕೆ ಬೆಂಕಿಯಿಂದ ಬರೆಸಿಕೊಳ್ಳುವುದೇನೂ ಇಲ್ಲ. ಆದಾಗ್ಯೂ, ಕೊಳದ ಮೇಲೆ ಮೆತ್ತಗೆ ಬೀಳುತ್ತಿರುವ ಮಳೆಯ ಹನಿಗಳು ಸೂಕ್ತ ಅಲಂಕಾರಿಕ ನುಡಿಯೊಂದನ್ನು ಬಯಸಿವೆ. ಇನ್ನೂ ಪೂರ್ತಿ ತಣ್ಣಗಾಗದೇ ಇರುವ ನಕ್ಷತ್ರವೊಂದನ್ನು ಕೈಲಿ ಹಿಡಿದು ನೋಡುವ ಉತ್ಸಾಹವೇನಿದೆ, ಅದು ಪ್ರೇಮದಲ್ಲಿ ಬಿದ್ದವರ ಹಳೆಯ ಗುಂಗು. ನನ್ನ ಹೆಜ್ಜೆಗಳಿಂದಾದ ಕುಳಿಯನ್ನು ಲೋಹದ ಬಿಸಿಪಾಕ ಸತತವಾಗಿ ತುಂಬಿಕೊಡುತ್ತಿದೆ. ಬಾನು ಎಳೆದು ಹಾಕಿರುವ ಈ ಅರುಣೋದಯದ ರಂಗಿನಲ್ಲಿ ಹೊಳೆವ ಚಮಚೆಗಳ ಕಾಂತಿಯನ್ನು ಇನ್ನೂ ಚೆನ್ನಾಗಿ ಮಾಡಲು ನಾನು ಪ್ರಯತ್ನಿಸಬೇಕಿದೆ. ಸ್ಟೀಲ್ ಪಾತ್ರೆಯ ಕೆಳಗೆ ಬೆಂಕಿ ಅಸಹಾಯಕವಾಗಿ ಒದ್ದಾಡುತ್ತಿರುವಂತೆ ಕಾಣ್ತಿದೆ. ಮುಖ್ಯ, ನಿನ್ನ ಗೈರುಹಾಜರಿ ಇದೆ. ನಿನ್ನ ಗೈರು ಹಾಜರಿಯಲ್ಲಿ ಬೆಂಕಿ ಹೌದೋ ಅಲ್ಲವೋ ಎಂಬಂತೆ ಉರಿಯುತ್ತಲೇ ಇರಲಿ.

ಈ ಎಲ್ಲಾ ಚಿತ್ರಗಳಲ್ಲಿಯೂ ಉರಿಯುತ್ತಿರುವುದೇನೋ ಇದೆ. ಅದು ಅಡುಗೆಮನೆಯ ಸ್ತಬ್ಧ ಚಿತ್ರದಲ್ಲಿ ಉರಿಯುತ್ತಿರುವ ಒಲೆಯೇ. ಅದರ ಮೇಲಿಟ್ಟ ಸ್ಟೀಲಿನ ಪಾತ್ರೆಯೇ. ಅಲ್ಲಿ ತತ್‌ಕ್ಷಣ ಏನೋ ಕ್ರಿಯೆಯ ಅಗತ್ಯವಿದೆ, ಹೆಜ್ಜೆಕುಳಿಗಳನ್ನು ತತ್‌ಕ್ಷಣವೇ ತುಂಬಿಕೊಡುತ್ತಿರುವ ಬಿಸಿಬಿಸಿ ಲೋಹದ ಪಾಕದಷ್ಟೇ ತತ್‌ಕ್ಷಣದ್ದು ಮತ್ತು ಸದ್ಯದ್ದು. ಪಾತ್ರೆಯನ್ನು ಸ್ಟವ್ ಮೇಲಿಡುವುದಿರಬಹುದು, ಪಾತ್ರೆಯಲ್ಲಿ ಏನೋ ಹಾಕುವುದಿರಬಹುದು, ಕನಿಷ್ಠ ಬೆಂಕಿಯನ್ನು ಆರಿಸುವುದೇ ಇರಬಹುದು. ಆದರೆ ಅದೇನೂ ಸಾಧ್ಯವಿಲ್ಲದ ಹಾಗೆ ಕವಿ ದೂರದಲ್ಲಿ, ಚಲನೆಯಿಲ್ಲದೇ ಬಿದ್ದುಕೊಂಡಿದ್ದಾನೆ ಮತ್ತು ಅಲ್ಲಿ ‘ನಿನ್ನ ಗೈರುಹಾಜರಿ ಇದೆ’. ಅಥವಾ, ಅದು ನಿಜವಾದ ಅಡುಗೆಮನೆಯೇ ಅಲ್ಲ, ಅದೊಂದು ಚಿತ್ರ ಮಾತ್ರ! ಇಲ್ಲಿ ಕವಿಗೆ ಹೇಳಲಿಕ್ಕಿರುವುದು ಒಂದು ಗೈರು (absence) ಕುರಿತ ಭಾವ. ಆದರೆ ಅದನ್ನು ಹೇಳಲು ಬಳಸಿಕೊಳ್ಳುವ ಪ್ರತಿಮೆಗಳನ್ನು, ಚಿತ್ರಗಳನ್ನು ಗಮನಿಸಿ.

‘ನಿನ್ನನ್ನು ಮನುಷ್ಯನನ್ನಾಗಿ ನೋಡುವುದಕ್ಕಿರುವ ಕಷ್ಟಗಳು’
ಎಂಬ ಕವಿತೆಯೊಂದಿಗೆ ಈ ಟಿಪ್ಪಣಿಯನ್ನು ಮುಗಿಸುತ್ತೇನೆ.

ಭಾನುವಾರದ ಭೋಜನಕ್ಕೆ ಮುನ್ನ, ಈ ಪುಟ್ಟ ಪಯಣ
ದೇವಿಯ ದರ್ಶನಕ್ಕೆ

ತಣ್ಣಗಿದ್ದ ಬಂಡೆ ಕಲ್ಲು ಸುಡುತ್ತಿದೆ
ಯಾವುದೇ ಕಲ್ಲು ತಗೊಳ್ಳಿ, ಅದಿರುವುದೇ ಹೀಗೆ

ಎಂದುಕೊಂಡರೆ,

"ಓ ನನ್ನ ಮುದ್ದುಮಣಿಗಳೇ, ನಿಮ್ಮಾಸೆಯೇನಿದೆ ಹೇಳಿ, ಕೇಳೋಣ"

ಬಾಯಿಂದ ಒಂದು ತಪ್ಪೊಪ್ಪಿಗೆಯನ್ನು ಎಳೆದೆಳೆದು ತೆಗೆವಂತೆ
ನನ್ನ ಚಪ್ಪಲಿಗಳನ್ನು ಕಳಚಿದೆ

ಯಾವತ್ತೂ ಮುಳುಗುವುದಕ್ಕೆ ಸಾಕಷ್ಟಿಲ್ಲದ
ಯಾವತ್ತೂ ಕೊಳೆಯನ್ನು ಕಿತ್ತು ತೆಗೆಯುವುದಕ್ಕೆ ಬೇಕಷ್ಟಿಲ್ಲದ

ನೀರಲ್ಲಿ ನನ್ನ ಕಾಲುಗಳನ್ನು ಇರಿಸುವೆ

ನನ್ನ ಕಾಲುಗಳ ತಾತ್ಕಾಲಿಕ ಹೊರೆಯಡಿ
ಇರುವೆಗಳು ಚಲಿಸುತ್ತವೆ

ಕೈಹಿಡಿದೆತ್ತಿ ಉದ್ಧರಿಸಲಿಕ್ಕಾಗದೇ ಹೋದ ಯಾವನೋ
ವ್ಯಾಪಾರಿಯ ಹರಕೆಯ ಈ ಸಿಮೆಂಟು, ಅದರ ಮೇಲಿನ ಡಿಸ್ಟೆಂಪರು
ಅದರ ಹೆಸರು ದೇವಸ್ಥಾನ

ಪೂಜಾರಿಗಳೀಗ ಅವಳನ್ನು ಸಂಸ್ಕೃತದಲ್ಲಿ
ಸುರಿದು ಕರೆದು ಮಾಡುತ್ತಿದ್ದಾರೆ.

ಅವಳೆಷ್ಟು ಪುರಾತನಿ ಎಂದರೆ, ನನಗೆ ಗೊತ್ತು
ಅವಳಿಗೆ ಗಿಫ್ಟ್ ಕಾರ್ಡುಗಳಿಗಿಂತ
ಹೂವುಗಳೆಂದರೆ ಇಷ್ಟ

ಪೀಡೀಎಫ್ ಫೈಲುಗಳಿಗಿಂತ ತಾಳೆಗರಿಗಳ
ಧೂಳು ಹಿಡಿದ ಪುಸ್ತಕ ಇಷ್ಟ

ಗರ್ಭಗುಡಿಯ ನೀಲಾಂಜನದ ಬೆಳಕಲ್ಲಿ
ಊದಿನಕಡ್ಡಿ, ಲೋಬಾನ, ಎಣ್ಣೆ, ಕರ್ಪೂರ, ಹೂವುಗಳ
ಪರಿಮಳದಲ್ಲಿ ಅವಳ ಸೌಂದರ್ಯವೀಗ ಇಮ್ಮಡಿಸಿದೆ
ಶಿಲ್ಪಿಯ ಕೈಚಳಕ, ಕಲೆ, ಅದ್ಭುತವೆಲ್ಲವೂ ಕಣ್ಣಿಗೆ ಕಟ್ಟಿದೆ

ಓಹ್!

ಮಿಸ್, ನನ್ನ ತಮಾಶೆಯನ್ನು ಕ್ಷಮಿಸಿಬಿಡು!

ಕಮಲನಯನಿ, ನಿನ್ನ ಆ ಬಿಂಬಕ್ಕನುವರ್ತಿಯಾದ
ಕಣ್ಣುಗಳ ಸಂಯೋಜನೆಗಳ ಸಹಿತ
ಎದೆ ತೆರೆದು ನಿಂತಿರುವಿ

ಮತ್ತು ನನ್ನ ಮಂದಿಗೆ
ನಿನ್ನತ್ತ ಹೂವಿನೆಸಳು ಎಸೆವ ಕಲೆಗಾರಿಕೆ ಗೊತ್ತು

ನಾನಂತೂ ಹೊರಗೆ ನಿಂತಿದ್ದೇನೆ, ಕಾಯುತ್ತ
ನೀನು ಈ ನದಿಯಂತೆ ಎಂದು ನಿನ್ನನೇ ಯೋಚಿಸುತ್ತ.

ಸೂರ್ಯರಶ್ಮಿಗೆ ಮಿನುಗುತ್ತ ಅದು ಹೊರಳಿ
ಇನ್ನೊಂದು ನಗರದತ್ತ ಹರಿದು ಹೋಗುವುದ ಕಾಣುತ್ತ

ಮಾತಿಲ್ಲದೆ, ಸದ್ದಿಲ್ಲದೆ.

(ಕವಿತೆಗಳ ಅನುವಾದಕ್ಕೆ ಅನುಮತಿ ನೀಡಿದ ಮಿಹಿರ್ ವತ್ಸ್ ಅವರಿಗೆ ಕೃತಜ್ಞ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ