Wednesday, December 27, 2017

ಕಣ್ಣ ನೀಡುವ ಕವಿ, ಕಾಣಿರಿಲ್ಲಿ ರವಿ ಕಾಣದ್ದ.....

ಜಗತ್ತನ್ನು ವಿಭಿನ್ನವಾಗಿ ಗ್ರಹಿಸುವ ಮತ್ತು ಅಷ್ಟೇ ವಿಭಿನ್ನವಾಗಿ ನಾವು ದಿನನಿತ್ಯ ಬಳಸುವ ಸಾಮಾನ್ಯ ಭಾಷೆಯಲ್ಲೇ ತನ್ನ ಗ್ರಹಿಕೆಯನ್ನು ಕಟ್ಟಿಕೊಡುವ ಕೆಲಸ ಸುಲಭವಲ್ಲ. ಲೋಕರೂಢಿಯನ್ನೇ ಅನುಸರಿಸುವುದು ಸಾಮಾನ್ಯವಾಗಿ ನಾವೆಲ್ಲರೂ ಮಾಡುತ್ತ ಬಂದಿರುವ ವಿಧಾನ. ಆದರೆ ಮಿಹಿರ್ ವತ್ಸ ಅವರ ಕವಿತೆಗಳನ್ನು ಓದುತ್ತ ಹೋದಂತೆ ‘ಅರೆ! ಇದನ್ನೆಲ್ಲ ಹೀಗೂ ಕಾಣಬಹುದಲ್ಲ’ ಎನ್ನುವ ಒಂದು ಧಕ್ಕೆ ತಗುಲಿದಂತೆ ಇಲ್ಲಿನ ನುಡಿಕಟ್ಟುಗಳು ನಮ್ಮನ್ನು ಸೆಳೆಯುತ್ತವೆ. ಆದರೆ ಅಷ್ಟಕ್ಕೇ ಈ ಕವಿತೆಗಳ ಸ್ವಾರಸ್ಯ ಮುಗಿಯುವುದಿಲ್ಲ ಎನ್ನುವುದೇ ಈ ಕವಿತೆಗಳ ನಿಜವಾದ ವೈಶಿಷ್ಟ್ಯ. ಹೀಗಾಗಿ ಮಿಹಿರ್ ವತ್ಸ ಅವರದ್ದು ನಿಮಗೆ ಒಂದು ಆರಂಭಿಕ ಧಕ್ಕೆ ನೀಡಿ ಗಮನ ಸೆಳೆವ ಗಿಮ್ಮಿಕ್ ಆಗದೆ, ಅದರತ್ತ ಯಾವ ಲಕ್ಷ್ಯವೂ ಅಗತ್ಯವಿಲ್ಲ, ಭಾಷೆಯನ್ನು ನಾನು ಬಳಸುವ ಒಂದು ಸಹಜ ವ್ಯಾಪಾರವದು ಅಷ್ಟೇ, ನೀವು ಗಮನಿಸಬೇಕಾದ್ದು ಬೇರೆಯೇ ಇದೆ, ಬನ್ನಿ ಎನ್ನುವ ಧರ್ತಿಯಲ್ಲಿ ಓದುಗನನ್ನು ಮುಂದಕ್ಕೆ ಕರೆದೊಯ್ಯುತ್ತವೆ.

ಈ ಸಂಕಲನದ ಹೆಸರೇ ವಿಂಗ್ ಮ್ಯಾನ್. ಪ್ರಸನ್ನ ಅವರ ಬಾಲಗೋಪಾಲ ಎಂಬ ಒಂದು ಕಾದಂಬರಿಯಲ್ಲಿ ಮನುಷ್ಯರು ಹಾರಲು ಕಲಿಯುವ ಚಿತ್ರವಿದೆ. 2009ರ ಹೊತ್ತಿಗೆ ಹೊರಬಂದಿದ್ದ ಈ ಕಾದಂಬರಿಯ ವಿವರಗಳೆಲ್ಲ ಈಗ ಮರೆತಿವೆ. ಆದರೆ ಅಲ್ಲಿನ ಪರಿಕಲ್ಪನೆ ಕೂಡ ಹೊಸದು.

ಈ ಸಂಕಲನದಲ್ಲಿ ಒಟ್ಟು ಹದಿನೇಳು ಕವಿತೆಗಳಿವೆ. ಪ್ರತಿಯೊಂದು ಕವಿತೆಯೂ ಮೇಲೆ ಹೇಳಿದ ವಿಶಿಷ್ಟ ಗುಣಗಳನ್ನು ಹೊಂದಿರುವ, ಗಮನಾರ್ಹವಾದ ಕವಿತೆಯೇ ಆಗಿರುವುದು ವಿಶೇಷ. ಹಾಗೆಯೇ ಮಿಹಿರ್ ವತ್ಸ ಅವರು ಬುದ್ಧಿ-ಭಾವ ಸಮನ್ವಯದ ಕವಿ ಎನ್ನುವ ಅಂಶವನ್ನೂ ನಾವು ಗಮನಿಸಬೇಕು. ಅಂದರೆ ಇಲ್ಲಿನ ಕವಿತೆಗಳು ಭಾವಪ್ರಧಾನವಲ್ಲ. ಅವು ಭಾವುಕ ವಿಚಾರಗಳಲ್ಲಿ ರಮಿಸುವುದಿಲ್ಲ. ಕವಿತೆ ಸ್ಥೂಲವಾಗಿ ಎರಡು ಬಗೆಯಲ್ಲಿರುತ್ತವೆ. ಒಂದನ್ನು ಯಾವುದೇ ದನಿಯ ಸೂತಕ ತಗುಲದಂತೆ ಕೇವಲ ನಿಮ್ಮದೇ ಮೌನದ ಒಂದು ವಿಶಿಷ್ಟ ಸ್ವರದಲ್ಲಿ ನೀವು ಮಾತ್ರ ಕೇಳಿಕೊಂಡು ಅದರೊಂದಿಗೆ ರಮಿಸಬೇಕಾದ ಕವಿತೆಗಳು. ಇನ್ನೊಂದು ಗಟ್ಟಿಯಾಗಿ ಓದಿ ಹೇಳಬಹುದಾದ ಕವಿತೆಗಳು. ಇಲ್ಲಿನ ಕವಿತೆಗಳು ಗಟ್ಟಿಸ್ವರದವು ಅನಿಸುವಾಗಲೂ ಅವು ಮೌನವಾಗಿ ಮಾತನಾಡುವ ಕಸು ಹೊಂದಿರುವುದು ಗಮನಕ್ಕೆ ಬರುತ್ತದೆ.

ಅಂದರೆ, ಬದುಕಿನ ಕಟು ವಾಸ್ತವಗಳನ್ನೇ, ಮೆಲುದನಿಯ ಲಯವನ್ನು ಬಿಟ್ಟುಕೊಟ್ಟು ಗಟ್ಟಿಯಾಗಿಯೇ ಹೇಳುತ್ತಿರುವಂತೆ ಅನಿಸುವಾಗಲೂ ಮೌನದಲ್ಲಿ ಆವರಿಸುವ ವಿಶೇಷ ಶಕ್ತಿಯನ್ನೂ ಹೊಂದಿವೆ ಎನ್ನುವುದು ಈ ಕವಿತೆಗಳ ಹೆಚ್ಚುಗಾರಿಕೆಯಾಗಿದೆ. ಈ ಗುಣದೊಂದಿಗೆ ಕವಿತೆಯ ಪ್ರಾಥಮಿಕ ಜೀವಸೆಲೆಯಾದ ಮೌನ ಇಲ್ಲಿನ ಎಲ್ಲ ಕವಿತೆಗಳ ಜೀವನಾಡಿಯಾಗಿ ನಮ್ಮನ್ನು ಆವರಿಸುತ್ತದೆ.

ಇಲ್ಲಿನ ಒಂದು ಕವಿತೆ, "ಅಮ್ಮನ ಬಗ್ಗೆ ನಾನೊಮ್ಮೆ ಇಂಗ್ಲೀಷಿನಲ್ಲಿ ಬರೆದಿದ್ದ ಕವಿತೆಯನ್ನು ಅವಳು ಓದಿದಾಗ" ಎನ್ನುವ ಹೆಸರಿನ ಕವಿತೆ. ಅದನ್ನು ಗಮನಿಸಿ. ಇಲ್ಲೇನಾಗುತ್ತಿದೆ ಎಂದರೆ ಕವಿ ತನ್ನ ಓದುಗರಿಗೆ, ಕಾವ್ಯಪ್ರಿಯರಿಗೆ ಏನೇ ಆಗಿದ್ದರೂ ತಾಯಿಗೆ ತನ್ನ ಮಗನಷ್ಟೇ ಆಗಿರುತ್ತಾನೆ. ಆದರೆ ಆಕೆಗೆ ತನ್ನ ಮಗ ಕವಿ ಎನ್ನುವುದೂ ಗೊತ್ತಿರುತ್ತದೆ. ಅದೇನು ಬರೆಯುತ್ತಾನೆ ತನ್ನ ಮಗ ಎನ್ನುವ ಕುತೂಹಲ, ಕೊಂಚ ಅಸಡ್ಡೆ ಸಹಜವಾದದ್ದೇ. ಮಗನಿಗೆ ಕವಿಯಾಗಿ ತಾಯಿ ಎಂದರೆ ತಾಯಿ. ತನ್ನ ತಾಯಿಯೂ, ಜಗದ ಎಲ್ಲ ಮಕ್ಕಳ ತಾಯಿಯೂ ಕವಿಯಾಗಿ ಅವನಿಗೆ ‘ತಾಯಿ’. ಅಲ್ಲಿ ವೈಯಕ್ತಿಕ ಮತ್ತು ಸಾಮಾಜಿಕಗಳು ಬೆರಕೆಯಾಗಿ, ಖಾಸಗಿಯಾದದ್ದು ಸಾಂಕೇತಿಕವಾಗುವ, ಪ್ರತಿಮೆಯಾಗುವ ಸಹಜ ಪ್ರಕ್ರಿಯೆ ಏನಿದೆ, ಅದು ನಡೆಯುತ್ತದೆ. ಹೀಗೆ ಖಾಸಗಿ ನೆಲೆಯಲ್ಲಿ ಕವಿಯ ಎದುರೇ ಕವಿಯ ತಾಯಿ ಕೇವಲ ಕವಿಯ ತಾಯಿಯಷ್ಟೇ ಆಗಿ ಓದುವಾಗ ಅದನ್ನು ಮುಖಾಮುಖಿಯಾಗುವುದು ಕವಿಗೆ ಒಂಥರಾ ಮುಜುಗರ. ಅವನು ಅದನ್ನು ಕವಿಯಾಗಿಯೂ ಕೇವಲ ಒಬ್ಬ ಮಗನಾಗಿಯೂ ಏಕಕಾಲಕ್ಕೆ ಮಾಡಲು ಕಷ್ಟಪಡುತ್ತಾನೆ. ಇಷ್ಟು ಸರಿಸುಮಾರು ಎಲ್ಲಾ ಬರಹಗಾರರಿಗೂ ಗೊತ್ತಿರುವ, ಬೇರೆ ಬೇರೆ ಬಗೆಯಲ್ಲಿ ಅನುಭವಕ್ಕೆ ಬಂದಿರುವ ಸಂಗತಿಯೇ. ಆದರೆ ಒಂದು ಕವಿತೆಯಾಗಿ ಇದು ಅರಳುವ ಸಂಭ್ರಮವನ್ನು ಮಿಹಿರ್ ಅವರ ಕವಿತೆಯನ್ನು ಓದಿಯೇ ಅರಿಯಬೇಕು.

ಯಾವತ್ತೊ ಇಂಗ್ಲೀಷಿನಲ್ಲಿ ಅಮ್ಮನ ಮೇಲೆ ಬರೆದ ಕವಿತೆಯನ್ನು ಅಮ್ಮನೇ ಓದಿದಾಗ

ಅರ್ಥದ ಒಂದು ವ್ಯಾಖ್ಯಾನಕ್ಕೆ ಮೀರಿದ ಸಾಲು
ಆದರೆ ಅವಳಿಗೀಗ ಅದರ ಅರ್ಥವೇ ಮುಖ್ಯ
ಪಕ್ಕದಲ್ಲಿ ಕುಳಿತಿದ್ದೇನೆ, ಇದು ಮಹಾ ಕಿರಿಕಿರಿ
ಆ ಸಾಲು, ನಡುವಿನ ಮೌನ ಬರೆದು ತಿಂಗಳೆಷ್ಟೋ ಕಳೆದಿದೆ
ಈಗದರ ಸದ್ದು ಬೇಡ ಎನಿಸುತ್ತಿದೆ ನನಗೆ
ಹೊರಗಡೆ ಎಲೆಗಳೆಲ್ಲ ಕಾಯುತ್ತಿವೆ ಅವಳ ಕಾವ್ಯವಾಚನಕ್ಕೆ
ಎಲ್ಲಿಲ್ಲದ ತಾಳ್ಮೆಯಿಂದ.
ತನ್ನದಲ್ಲದ ಭಾಷೆಯೊಂದಕ್ಕೆ ಧ್ವನಿ ನೀಡುತ್ತ ಅವಳು ಸುರುಹಚ್ಚಿಕೊಳ್ಳುತ್ತಾಳೆ
ಅವಳು ಪ್ರತಿಬಾರಿ ತಪ್ಪುಚ್ಛಾರ ಹೊರಡಿಸಿದಾಗಲೂ
ನನ್ನದೇನನ್ನೋ ಇಡಿಯಾಗಿ ಕಾಪಿಟ್ಟುಕೊಳ್ಳಲು ನನ್ನ
ಯಾರೋ ಕೊಂಕಿದಂತೆ ಮೊಣಕೈಯಿಂದ ನೂಕಿ.
ಚಿಂದಿಯಾಗುತ್ತಿವೆ ಅವು, ಬೇಡ ಅವುಗಳು ಅವಳ ಬಾಯಲ್ಲಿ
ಎಂದರೂ ಇರು ಸ್ವಲ್ಪ, ನಾನು ಅರ್ಥವಾಗುತ್ತಾ ನೋಡ್ತೇನೆ
ಬರಿಯ ಸಮಾಧಾನಕ್ಕಂದ ಮಾತು.
ಮುಂದುವರಿಸಿಯೇ ಮುಂದುವರಿಸುತ್ತಾಳವಳು
ಗೊತ್ತವಳಿಗೆ, ವಾಚನವನ್ನು ಅರ್ಧಕ್ಕೇ ಕೈಬಿಟ್ಟರೆ
ಕವಿತೆಗಾಗುವ ಅವಮಾನ.
ಕಾಯುತ್ತೇನೆ ನಾನು, ಅವಳಿಗದು ತಿಳಿಯಬೇಕು, ಕವಿತೆ ಅವಳದು
ನಾನೇನೂ ಹೇಳದಲೆ.
ಅದರ ಸೂಕ್ಷ್ಮ ಸೂಚನೆ, ಕಣ್ಸನ್ನೆ, ಬಳಕು, ಹಠ ಮತ್ತು ಮೌನ.
ಕೊಂಚ ಇರಿಸು ಮುರಿಸಲ್ಲೇ ಹೇಳಿದೆ, ಎಲ್ಲಕ್ಕೂ ಅದೇ ಅರ್ಥ ಅಂದ್ಕೋಬೇಡಮ್ಮ
ನಿನಗೆ ಅದೆಲ್ಲ ಗೊತ್ತಿರೋದೆ ಅಲ್ವ?
ಖಂಡಿತ, ಗೊತ್ತಿರೋದೆ ಎಲ್ಲಾ.
ಪೇಲವವಾಗೇ ಇರುವ ನನ್ನ ಮುಖವೀಗ ನೋವಿಂದ
ಕೆಂಪೇರುವುದನ್ನು ಕಂಡಳೆ?
ಒಂದು - ಎರಡು - ಮೂರು - ನಾಲ್ಕು -
ಒಮ್ಮೆಗೇ ಆ ದರಿದ್ರವನ್ನು ನೆಲಕ್ಕೆ ಒಗೆದು ಎದ್ದು ನಿಂತೆನಲ್ಲ
ಮುಗೀತಾ?!
ಹರಿತವಾದ ಮೌನ.
ಅವಳ ಕಣ್ಣುಗಳಲ್ಲಿ ಹತಾಶ ಪ್ರಯತ್ನದ ಸೋಲು ತಂದ ನೋವು.
ಇನ್ನೊಂದು ಮಾತೂ ಆಡದೆ ಟೀವಿ ಆನ್ ಮಾಡುತ್ತಾಳವಳು
ಯಾರೋ ನೆಲದ ಮೇಲಿಷ್ಟು ಹಾಲು ಚೆಲ್ಲಿದ್ದಾರಲ್ಲಿ.
ಮುದ್ದಿನ ಬೆಕ್ಕಿನ ಮರಿ ಭಯದಿಂದ ಹಿಂಜರಿದು ಕಾದಿದೆ.
ನಾನು ಸುಮ್ಮನೇ ನನ್ನ ಕೋಣೆ ಹೊಕ್ಕು ಕೂರುತ್ತೇನೆ
ಕವಿತೆಯನ್ನು ಮತ್ತೊಮ್ಮೆ ಓದುತ್ತೇನೆ,
ಅಪರಾಧೀ ಭಾವ ಎಂದರೇನೆಂದು
ಯೋಚಿಸುತ್ತೇನೆ.

ಇದೊಂದು ಉದಾಹರಣೆ, ಕವಿ ಕವಿತೆಯೊಳಗೆ ಮೌನವನ್ನು ತಂದು ಅಲ್ಲಾಡದಂತೆ ನಿಲ್ಲಿಸುತ್ತಾನೆ ಹೇಗೆ ಎನ್ನುವುದನ್ನು ಕಾಣಲು. ತಾಯಿಗೆ ತನ್ನ ಕುರಿತೇ ಬರೆದ ಒಂದು ಕವಿತೆ ತನಗೇ ಅರ್ಥವಾಗದೇ, ಪೂರ್ತಿ ಓದಲಾಗದೇ, ಓದಿದ್ದನ್ನು ದಕ್ಕಿಸಿಕೊಳ್ಳಲಾಗದೇ ಹೋಗುವ ನೋವು ಮತ್ತು ಅಂಥ ಒಂದು ಹತಾಶ ಪ್ರಯತ್ನಕ್ಕೆ ತನ್ನದೇ ಕವಿತೆ ಬಲಿಯಾಗುತ್ತಿರುವುದನ್ನು ಕವಿ ಮುಖಾಮುಖಿಯಾಗುವ ಸಂಕಟ ಎರಡೂ ಭಾಷೆಗೆ ಮೀರಿದ್ದು. ಅದನ್ನು ಕವಿತೆಯಾಗಿಸುವುದು ಒಂದು ಹೊಸ ಸವಾಲು. ಅದು ಇಲ್ಲಿದೆ.

ಗೈರು (Absence) ಎನ್ನುವ ಕವಿತೆಯಲ್ಲಿ The road blocked by an anthology of memoirs ಎನ್ನುತ್ತಾರೆ ಕವಿ. ಈ ಕವಿತೆ ಕೊನೆಯಾಗುವುದು ಹೀಗೆ:

ಅವರು ಹೇಳಿದ್ದರು, ಸೂರ್ಯ ಮುಳುಗುವ ಹೊತ್ತಿಗೆ
ಮರಳಿ ಬಂದೆ ಎಂದಾದಲ್ಲಿ
ನೀನು ಕಳೆದು ಹೋಗಲಿಲ್ಲ
ಎಂದೇ ಅರ್ಥ.
ಬಂದೆ ನಾನು, ಆದರೆ ನೀನು
ಇನ್ನೂ ಇಲ್ಲ ಇಲ್ಲಿ.

ಇನ್ನೊಂದು ಕವಿತೆ, ‘ಮತ್ತೊಬ್ಬನ ಕತೆಯನ್ನು ಬರೆಯುವ ಕಷ್ಟ’ ದಲ್ಲಿ ಮಿಹಿರ್ ವತ್ಸ ಭಾಷೆಯಲ್ಲಿ ದೈನಂದಿನ ಸಾಮಾನ್ಯ ಬದುಕಿನ ವಿವರಗಳನ್ನೇ ವಿಶಿಷ್ಟವಾಗಿ ಗ್ರಹಿಸುವ ಮತ್ತು ಕಟ್ಟಿಕೊಡುವ ಒಂದು ಗಮನಾರ್ಹ ವಿಧಾನವನ್ನು ಗಮನಿಸಬಹುದಾಗಿದೆ. ಈ ‘ಮತ್ತೊಬ್ಬನ ಕತೆಯನ್ನು ಬರೆಯುವ ಕಷ್ಟ’ ಹೆಸರಿನ ಎರಡು ಕವಿತೆಗಳು ಸಂಕಲನದಲ್ಲಿದ್ದು, ಒಂದನ್ನು ಕಲ್ಲುಗಳು ಎಂದೂ ಇನ್ನೊಂದನ್ನು ಚಿಟ್ಟೆಗಳು ಎಂದೂ ಉಪಶೀರ್ಷಿಕೆಯೊಂದಿಗೆ ಪ್ರಸ್ತುತಪಡಿಸಲಾಗಿದೆ.

ಮತ್ತೊಬ್ಬನ ಕತೆಯನ್ನು ಬರೆಯುವ ಕಷ್ಟ


ಕಲ್ಲುಗಳು

ಒಳಗೊಳಗೇ ಟೊಳ್ಳೆನ್ನಿಸುವ ನಗರವೊಂದರಲ್ಲಿ
ನೀವು ಹಿಡಿದಿಟ್ಟುಕೊಳ್ಳಲು ಬರುವುದು ಒಂದೇ ಒಂದು,
ಅದರ ಮೌನದ ಪ್ರತಿಧ್ವನಿ.
ರಸ್ತೆಬದಿಯಲ್ಲಿ ಬಿದ್ದ ಕೋಟು ನಿಧಾನಕ್ಕೆ ತನ್ನ ತೋಳುಗಳನ್ನ
ಸೆಳೆದುಕೊಳ್ಳುತ್ತಿದೆ ತನ್ನತ್ತ, ಆದರೇನು, ಬಾಹುಗಳಿಗೆ
ಸರಿಹೊಂದುತ್ತಿಲ್ಲ ಅವು
ಹವೆಗಿನ್ನೂ ಯಾವ ಋತುವೂ ತನ್ನ ಹೆಸರಿಟ್ಟಿಲ್ಲ
ದೀರ್ಘ ಹಗಲಿನ ಬಳಿಕ ಅದನ್ನು ತಾನೇ ಸೆಳೆದುಕೊಂಡ ರಾತ್ರಿಗೂ ಅದೇ ಗತಿ.
ಉಸ್ಸಪ್ಪಾ ಎನ್ನಲು ಹಿಡಿಯುವ ಶಬ್ದಗಳ ಲೆಕ್ಕ ಹಾಕಲು
ನೀವೆಷ್ಟು ಚುರುಕಾಗಿರಬೇಕು?
ಅದು ನೋಡು, ಮನೆಯನ್ನು ಸುಟ್ಟಾದ ಬಳಿಕ
ದೊಪ್ಪೆಂದು ಅಲ್ಲೇ ಕಲ್ಲಿನ ಮೇಲೆ ಬಿದ್ದುಕೊಂಡು ನೆರಳಿಗಾಗಿ ಹುಡುಕುತ್ತಿದೆ.
ಅವಶೇಷಗಳ ನಡುವೆ ಪ್ರೇಮಿಗಳು ತಮ್ಮ ಹೆಸರು ಕೆತ್ತಿದ್ದಾರಲ್ಲಿ
ಮಧ್ಯಯುಗೀನ ಕಲ್ಲುಗಳು ಬಾಹುಗಳಲ್ಲಿ ಕರಗುವ ಮಿದುದೇಹಕ್ಕಿಂತ
ಹೆಚ್ಚು ಶಾಶ್ವತ ನೋಡಿ, ಅದಕ್ಕೇ. ಅಯ್ಯೋ, ಸುಡು ಬಿಸಿಲಲ್ಲಿ ಅವು ಹಾರುಬಿದ್ದ
ಚಿತ್ರ ನೋಡುವುದದೆಷ್ಟು ಕಷ್ಟ. ಇಲ್ಲೀಗ ಎದ್ದು ನಿಂತ ಗೋಡೆಗಳಿಲ್ಲ,
ಸಾವಿನ ಬೆದರುಗೊಂಬೆ ಮಾತ್ರ ಇದೆ ಸೆಟಗೊಂಡು.
ಕಾಲ ತನ್ನ ಹುಟ್ಟಿನ ಮೂಲದತ್ತಲೇ ಚಲಿಸುತ್ತಿರುವಂತಿದೆ
ತಿಳಿ, ನೀನೇ ಇಲ್ಲಿನ ಮೊತ್ತಮೊದಲ ಮನುಷ್ಯನೇನಲ್ಲ.

‘Imminent' ಎಂಬ ಹೆಸರಿನ ಒಂದು ಕವಿತೆ ಸಂಕಲನದಲ್ಲಿದ್ದು ಇಲ್ಲಿ ತತ್‌ಕ್ಷಣದಲ್ಲಿ ನೀವು ಮಾಡಬೇಕಾದ ಅಥವಾ ಆಗಬೇಕಾದ ಒಂದು ಕ್ರಿಯೆಯನ್ನು ‘ಸ್ಥಿತಿ ಸ್ಥಿರಗೊಳಿಸುವ’ ತಂತ್ರಕ್ಕೆ ಒಳಪಡಿಸಿ ಕಾಣುವ ಪ್ರಯತ್ನವಿದೆ. ಉದಾಹರಣೆಗೆ, ದೊಡ್ಡ ಕಟ್ಟಡದಿಂದ ಕಾಲು ಜಾರಿ ಕೆಳಗೆ ಬಿದ್ದ ಒಂದು ಸನ್ನಿವೇಶದಲ್ಲಿ ಕೇವಲ ಬೀಳುತ್ತಿರುವ ಹಂತವನ್ನೇ ಸ್ಥಿರಗೊಳಿಸಿ ನೋಡುವುದು. ಬೆಂಕಿಯಲ್ಲಿ ಸುಡುತ್ತಿರುವ ಕೈಯನ್ನು ಅಲ್ಲಿಯೇ ಸ್ಥಿರಗೊಳಿಸಿ ಕಾಣುವುದು ಇತ್ಯಾದಿ.

ಅಡುಗೆಮನೆಯ ಸ್ತಬ್ಧ ಚಿತ್ರವೊಂದರಲ್ಲಿ ಉರಿಯುತ್ತಿರುವ ಒಲೆಯ ಮೇಲೆ ಪಾತ್ರೆ ಇರಬೇಕಿತ್ತು. ಅಂದರೆ ಇಲ್ಲ ಎಂದು ತಿಳಿಯಬೇಕೆ? ಗೊತ್ತಿಲ್ಲ. ಕವಿ ಹೇಳುತ್ತಾನೆ, ತಾನು ತುಂಬ ದೂರದಲ್ಲಿದ್ದೇನೆ, ಅಲ್ಲಿಯ ತನಕ ಹೋಗಲಾರೆ, ಅಲ್ಲದೆ, ತನ್ನ ಚರ್ಮಕ್ಕೆ ಬೆಂಕಿಯಿಂದ ಬರೆಸಿಕೊಳ್ಳುವುದೇನೂ ಇಲ್ಲ. ಆದಾಗ್ಯೂ, ಕೊಳದ ಮೇಲೆ ಮೆತ್ತಗೆ ಬೀಳುತ್ತಿರುವ ಮಳೆಯ ಹನಿಗಳು ಸೂಕ್ತ ಅಲಂಕಾರಿಕ ನುಡಿಯೊಂದನ್ನು ಬಯಸಿವೆ. ಇನ್ನೂ ಪೂರ್ತಿ ತಣ್ಣಗಾಗದೇ ಇರುವ ನಕ್ಷತ್ರವೊಂದನ್ನು ಕೈಲಿ ಹಿಡಿದು ನೋಡುವ ಉತ್ಸಾಹವೇನಿದೆ, ಅದು ಪ್ರೇಮದಲ್ಲಿ ಬಿದ್ದವರ ಹಳೆಯ ಗುಂಗು. ನನ್ನ ಹೆಜ್ಜೆಗಳಿಂದಾದ ಕುಳಿಯನ್ನು ಲೋಹದ ಬಿಸಿಪಾಕ ಸತತವಾಗಿ ತುಂಬಿಕೊಡುತ್ತಿದೆ. ಬಾನು ಎಳೆದು ಹಾಕಿರುವ ಈ ಅರುಣೋದಯದ ರಂಗಿನಲ್ಲಿ ಹೊಳೆವ ಚಮಚೆಗಳ ಕಾಂತಿಯನ್ನು ಇನ್ನೂ ಚೆನ್ನಾಗಿ ಮಾಡಲು ನಾನು ಪ್ರಯತ್ನಿಸಬೇಕಿದೆ. ಸ್ಟೀಲ್ ಪಾತ್ರೆಯ ಕೆಳಗೆ ಬೆಂಕಿ ಅಸಹಾಯಕವಾಗಿ ಒದ್ದಾಡುತ್ತಿರುವಂತೆ ಕಾಣ್ತಿದೆ. ಮುಖ್ಯ, ನಿನ್ನ ಗೈರುಹಾಜರಿ ಇದೆ. ನಿನ್ನ ಗೈರು ಹಾಜರಿಯಲ್ಲಿ ಬೆಂಕಿ ಹೌದೋ ಅಲ್ಲವೋ ಎಂಬಂತೆ ಉರಿಯುತ್ತಲೇ ಇರಲಿ.

ಈ ಎಲ್ಲಾ ಚಿತ್ರಗಳಲ್ಲಿಯೂ ಉರಿಯುತ್ತಿರುವುದೇನೋ ಇದೆ. ಅದು ಅಡುಗೆಮನೆಯ ಸ್ತಬ್ಧ ಚಿತ್ರದಲ್ಲಿ ಉರಿಯುತ್ತಿರುವ ಒಲೆಯೇ. ಅದರ ಮೇಲಿಟ್ಟ ಸ್ಟೀಲಿನ ಪಾತ್ರೆಯೇ. ಅಲ್ಲಿ ತತ್‌ಕ್ಷಣ ಏನೋ ಕ್ರಿಯೆಯ ಅಗತ್ಯವಿದೆ, ಹೆಜ್ಜೆಕುಳಿಗಳನ್ನು ತತ್‌ಕ್ಷಣವೇ ತುಂಬಿಕೊಡುತ್ತಿರುವ ಬಿಸಿಬಿಸಿ ಲೋಹದ ಪಾಕದಷ್ಟೇ ತತ್‌ಕ್ಷಣದ್ದು ಮತ್ತು ಸದ್ಯದ್ದು. ಪಾತ್ರೆಯನ್ನು ಸ್ಟವ್ ಮೇಲಿಡುವುದಿರಬಹುದು, ಪಾತ್ರೆಯಲ್ಲಿ ಏನೋ ಹಾಕುವುದಿರಬಹುದು, ಕನಿಷ್ಠ ಬೆಂಕಿಯನ್ನು ಆರಿಸುವುದೇ ಇರಬಹುದು. ಆದರೆ ಅದೇನೂ ಸಾಧ್ಯವಿಲ್ಲದ ಹಾಗೆ ಕವಿ ದೂರದಲ್ಲಿ, ಚಲನೆಯಿಲ್ಲದೇ ಬಿದ್ದುಕೊಂಡಿದ್ದಾನೆ ಮತ್ತು ಅಲ್ಲಿ ‘ನಿನ್ನ ಗೈರುಹಾಜರಿ ಇದೆ’. ಅಥವಾ, ಅದು ನಿಜವಾದ ಅಡುಗೆಮನೆಯೇ ಅಲ್ಲ, ಅದೊಂದು ಚಿತ್ರ ಮಾತ್ರ! ಇಲ್ಲಿ ಕವಿಗೆ ಹೇಳಲಿಕ್ಕಿರುವುದು ಒಂದು ಗೈರು (absence) ಕುರಿತ ಭಾವ. ಆದರೆ ಅದನ್ನು ಹೇಳಲು ಬಳಸಿಕೊಳ್ಳುವ ಪ್ರತಿಮೆಗಳನ್ನು, ಚಿತ್ರಗಳನ್ನು ಗಮನಿಸಿ.

‘ನಿನ್ನನ್ನು ಮನುಷ್ಯನನ್ನಾಗಿ ನೋಡುವುದಕ್ಕಿರುವ ಕಷ್ಟಗಳು’
ಎಂಬ ಕವಿತೆಯೊಂದಿಗೆ ಈ ಟಿಪ್ಪಣಿಯನ್ನು ಮುಗಿಸುತ್ತೇನೆ.

ಭಾನುವಾರದ ಭೋಜನಕ್ಕೆ ಮುನ್ನ, ಈ ಪುಟ್ಟ ಪಯಣ
ದೇವಿಯ ದರ್ಶನಕ್ಕೆ

ತಣ್ಣಗಿದ್ದ ಬಂಡೆ ಕಲ್ಲು ಸುಡುತ್ತಿದೆ
ಯಾವುದೇ ಕಲ್ಲು ತಗೊಳ್ಳಿ, ಅದಿರುವುದೇ ಹೀಗೆ

ಎಂದುಕೊಂಡರೆ,

"ಓ ನನ್ನ ಮುದ್ದುಮಣಿಗಳೇ, ನಿಮ್ಮಾಸೆಯೇನಿದೆ ಹೇಳಿ, ಕೇಳೋಣ"

ಬಾಯಿಂದ ಒಂದು ತಪ್ಪೊಪ್ಪಿಗೆಯನ್ನು ಎಳೆದೆಳೆದು ತೆಗೆವಂತೆ
ನನ್ನ ಚಪ್ಪಲಿಗಳನ್ನು ಕಳಚಿದೆ

ಯಾವತ್ತೂ ಮುಳುಗುವುದಕ್ಕೆ ಸಾಕಷ್ಟಿಲ್ಲದ
ಯಾವತ್ತೂ ಕೊಳೆಯನ್ನು ಕಿತ್ತು ತೆಗೆಯುವುದಕ್ಕೆ ಬೇಕಷ್ಟಿಲ್ಲದ

ನೀರಲ್ಲಿ ನನ್ನ ಕಾಲುಗಳನ್ನು ಇರಿಸುವೆ

ನನ್ನ ಕಾಲುಗಳ ತಾತ್ಕಾಲಿಕ ಹೊರೆಯಡಿ
ಇರುವೆಗಳು ಚಲಿಸುತ್ತವೆ

ಕೈಹಿಡಿದೆತ್ತಿ ಉದ್ಧರಿಸಲಿಕ್ಕಾಗದೇ ಹೋದ ಯಾವನೋ
ವ್ಯಾಪಾರಿಯ ಹರಕೆಯ ಈ ಸಿಮೆಂಟು, ಅದರ ಮೇಲಿನ ಡಿಸ್ಟೆಂಪರು
ಅದರ ಹೆಸರು ದೇವಸ್ಥಾನ

ಪೂಜಾರಿಗಳೀಗ ಅವಳನ್ನು ಸಂಸ್ಕೃತದಲ್ಲಿ
ಸುರಿದು ಕರೆದು ಮಾಡುತ್ತಿದ್ದಾರೆ.

ಅವಳೆಷ್ಟು ಪುರಾತನಿ ಎಂದರೆ, ನನಗೆ ಗೊತ್ತು
ಅವಳಿಗೆ ಗಿಫ್ಟ್ ಕಾರ್ಡುಗಳಿಗಿಂತ
ಹೂವುಗಳೆಂದರೆ ಇಷ್ಟ

ಪೀಡೀಎಫ್ ಫೈಲುಗಳಿಗಿಂತ ತಾಳೆಗರಿಗಳ
ಧೂಳು ಹಿಡಿದ ಪುಸ್ತಕ ಇಷ್ಟ

ಗರ್ಭಗುಡಿಯ ನೀಲಾಂಜನದ ಬೆಳಕಲ್ಲಿ
ಊದಿನಕಡ್ಡಿ, ಲೋಬಾನ, ಎಣ್ಣೆ, ಕರ್ಪೂರ, ಹೂವುಗಳ
ಪರಿಮಳದಲ್ಲಿ ಅವಳ ಸೌಂದರ್ಯವೀಗ ಇಮ್ಮಡಿಸಿದೆ
ಶಿಲ್ಪಿಯ ಕೈಚಳಕ, ಕಲೆ, ಅದ್ಭುತವೆಲ್ಲವೂ ಕಣ್ಣಿಗೆ ಕಟ್ಟಿದೆ

ಓಹ್!

ಮಿಸ್, ನನ್ನ ತಮಾಶೆಯನ್ನು ಕ್ಷಮಿಸಿಬಿಡು!

ಕಮಲನಯನಿ, ನಿನ್ನ ಆ ಬಿಂಬಕ್ಕನುವರ್ತಿಯಾದ
ಕಣ್ಣುಗಳ ಸಂಯೋಜನೆಗಳ ಸಹಿತ
ಎದೆ ತೆರೆದು ನಿಂತಿರುವಿ

ಮತ್ತು ನನ್ನ ಮಂದಿಗೆ
ನಿನ್ನತ್ತ ಹೂವಿನೆಸಳು ಎಸೆವ ಕಲೆಗಾರಿಕೆ ಗೊತ್ತು

ನಾನಂತೂ ಹೊರಗೆ ನಿಂತಿದ್ದೇನೆ, ಕಾಯುತ್ತ
ನೀನು ಈ ನದಿಯಂತೆ ಎಂದು ನಿನ್ನನೇ ಯೋಚಿಸುತ್ತ.

ಸೂರ್ಯರಶ್ಮಿಗೆ ಮಿನುಗುತ್ತ ಅದು ಹೊರಳಿ
ಇನ್ನೊಂದು ನಗರದತ್ತ ಹರಿದು ಹೋಗುವುದ ಕಾಣುತ್ತ

ಮಾತಿಲ್ಲದೆ, ಸದ್ದಿಲ್ಲದೆ.

(ಕವಿತೆಗಳ ಅನುವಾದಕ್ಕೆ ಅನುಮತಿ ನೀಡಿದ ಮಿಹಿರ್ ವತ್ಸ್ ಅವರಿಗೆ ಕೃತಜ್ಞ)

No comments: