Sunday, December 31, 2017

ಕೇಳದೆ ನಿಮಗೀಗ...ದೂರದಲ್ಲಿ ಯಾರೋ, ಹಾಡು ಹೇಳಿದಂತೇ...

ಏನೋ ಮೆಲ್ಲಗೆ ಮಾತನಾಡುವ ಧ್ವನಿ. ಎಲ್ಲಿಂದ ಬರುತ್ತಿದೆ ಅದು ಅಂತ ಗೊತ್ತಾಗಲಿಲ್ಲ. ಅಥವಾ ನನ್ನದೇ ಭ್ರಮೆಯೋ ಎಂಬ ಅನುಮಾನ ಬೇರೆ. ನಿಧಾನಕ್ಕೆ ಎದ್ದು ಕಿವಿಯಾನಿಸಿದೆ. ಎಡ ಪಕ್ಕದ ಗೋಡೆಯಿಂದ ಬರ್ತಿದೆ ಅನಿಸಿತು. ಆ ಕಡೆ ನಮ್ಮ ಕಿಚನ್ನಿದೆ. ರೂಮಿನಿಂದ ಹೊರಬಂದು ಕಿಚನ್ನಿಗೆ ಹೋದೆ. ಅಲ್ಲಿ ಲೈಟ್ ಹಾಕಿದ್ದೇ ಸರಬರ ಎಂದು ಜಿರಲೆ, ಹಲ್ಲಿಗಳೆಲ್ಲ ಅಡ್ಡಾದಿಡ್ಡಿ ಓಡತೊಡಗಿದವು. ಆ ಸದ್ದಿಗೆ ಧ್ವನಿ ನಿಂತೀತಾ ಎಂದು ಆಲಿಸಿದರೆ, ಇಲ್ಲ. ಈಗ ಹೆಚ್ಚು ಸ್ಪಷ್ಟವಾಗಿಯೇ ಕೇಳುತಿತ್ತು. ನಿಧಾನವಾಗಿ ಅತ್ತಂತೆ. ಅಲ್ಲ, ಏನೋ ದೂರಿಕೊಂಡಂತೆ. ಆದರೆ ಧ್ವನಿಯಲ್ಲಿ ಸಿಟ್ಟು, ರೋಷ ಇಲ್ಲ. ಒಂಥರಾ ಬೇಸರ, ನೋವು. ಇಲ್ಲ, ಅಳುತ್ತಿಲ್ಲ. ಧ್ವನಿ ಸ್ಪಷ್ಟವಾಗಿಯೇ ಇದೆಯಾದರೂ ತೀರ ಮೆಲುದನಿ, ತನ್ನಷ್ಟಕ್ಕೆ ತಾನು ಆಡಿಕೊಂಡಂತೆ.... ಅಲ್ಲಿಯೂ ಗೋಡೆಯಿಂದಲೇ ಬರುತ್ತಿತ್ತು ಧ್ವನಿ! ಗೋಡೆಯ ಮೇಲೆ ತೂಗು ಹಾಕಿದ್ದ ಚೀಲ, ಕ್ಯಾಲೆಂಡರು, ದೇವರ ಒಂದು ಫೋಟೋ ಎಲ್ಲ ಮೆಲ್ಲಗೆ ಒಂದರ ಬಳಿಕ ಒಂದರಂತೆ ತೆಗೆದು ಇಳಿಸತೊಡಗಿದೆ. ಆಗಲೂ ಧ್ವನಿ ನಿಲ್ಲುತ್ತಿಲ್ಲ. ಇನ್ನೇನು ನಾನು ಗೋಡೆಯೊಳಗೇ ಹೋಗಿ ನೋಡಬೇಕು ಎಂದುಕೊಂಡಿದ್ದೇ ಗೋಡೆಯನ್ನು ಪ್ರವೇಶಿಸಿದೆ ಮೆಲ್ಲಗೆ, ಆ ಧ್ವನಿಗೆ ನನ್ನಿಂದ ತೊಂದರೆಯಾಗದಂತೆ. ಎದುರಾಗಿದ್ದು ಗೋಡೆಯಷ್ಟೇ ದೊಡ್ಡ ಕನ್ನಡಿ. ಧ್ವನಿ ನೊಂದ ಹೆಣ್ಣಿನದು. ನನ್ನದೇ ಕನ್ನಡಕವನ್ನು ಹಣೆಯ ಮೇಲಿಟ್ಟು ಮರೆತವನಂತೆ ಕನ್ನಡಿಯಲ್ಲಿ ನೋಡಿ ಒಮ್ಮೆಗೇ ಥಕ್ಕಾದೆ! ಆ ಮಾತಿಗೆ ಸಮನಾಗಿ ಆಡುತ್ತಿದ್ದ ತುಟಿಗಳು ನನ್ನವೇ!


ಇದು ಮಂಜಿರಿ ಇಂದೂರ್ಕರ್ ಅವರ ಕವಿತೆಗಳಿಗೆ ನಾನು ಬರೆದ ರೂಪಕ. ಇವರ ಕವಿತೆಗಳನ್ನು ಓದುತ್ತ ಒಂದು ಬಗೆಯ ಆಶ್ಚರ್ಯಾಘಾತ ಎನ್ನುತ್ತಾರಲ್ಲ, ಅದರ ಅನುಭವವಾಗುತ್ತದೆ. ಇವರು ತಮ್ಮ ಕವಿತೆಯಲ್ಲಿ ಒಂದರ ಪಕ್ಕ ಒಂದು ಪ್ರತಿಮೆಗಳನ್ನಿರಿಸುವ ಎಚ್ಚರದ ರೀತಿ ಹೇಗಿದೆಯೆಂದರೆ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಒಡೆದು ಬಿಡಬಹುದಾದ ಗಾಜಿನ ಅಪೂರ್ವ ಪುರಾತನ ವಸ್ತುಗಳನ್ನು ಎತ್ತಿಡುತ್ತಿದ್ದಾರೋ ಎಂಬಂತೆ! ಅವು ನಮ್ಮ ದೈನಂದಿನ ಬದುಕಿನ ಭೌತಿಕ ವಸ್ತು ವಿವರಗಳಾಗಿದ್ದೂ ಇವರು ಹೇಳುತ್ತಿರುವುದು ಪಾರಮಾರ್ಥಿಕವಾದ ಇನ್ನೇನನ್ನೋ ಎಂಬಂತೆ! ಕೊನೆಗೂ ಹೇಳಿಯೂ ಹೇಳದುಳಿಯುವ ಇವರ ಮಾತುಗಳೆಲ್ಲ ನಿದ್ದೆಯಲ್ಲಿ ಕೇಳಿಸಿಕೊಂಡ ಮಾತುಗಳಂತೆ, ಕನಸಲ್ಲಿ ದಕ್ಕಿದ ರಸಿಕ ಸ್ಪರ್ಶದಂತೆ, ನಾಲಗೆಯಲ್ಲಿ ರುಚಿ ಮಾತ್ರ ಉಳಿಸಿ ಹೋದ ತಿನ್ನದ ಸಿಹಿತಿಂಡಿಯಂತೆ, ಬೊಗಸೆಯಲ್ಲಿ ಹಿಡಿಯಲಾಗದೇ ಹೋದ ಒಂದು ಅದ್ಭುತ ರಾಗದಂತೆ ಜಾರಿ ಹೋಗುತ್ತವೆ. ಆದಾಗ್ಯೂ ನಿಮಗೂ ನಮಗೂ ಎಲ್ಲವೂ ಅರ್ಥವಾಗಿರುತ್ತದೆ. ಇಲ್ಲಿ ಒಂದು ಆಶ್ಚರ್ಯ ಚಿಹ್ನೆ ಹಾಕಲು ಮರೆತಿಲ್ಲ, ಅದರ ಅಗತ್ಯವಿಲ್ಲ ಅಷ್ಟೆ. 

ಹಾಗೆಯೇ, ಈ ಯಾವ ಕವಿತೆಗಳಿಗೂ ವಿವರಣೆ ಬೇಕಿಲ್ಲ. ಆದರೆ ನಿಮ್ಮ ಸಾಂಗತ್ಯ ಬೇಕು, ಮೌನ ಬೇಕು, ಪ್ರೀತಿ ಬೇಕು. ಮತ್ತೆ, ಅವನ್ನೆಲ್ಲ ಬೇಡದೇ ಪಡೆದುಕೊಳ್ಳೊ ಕವಿತೆಗಳಿವು. 

ಕೆಲವೊಂದು ಕವಿತೆಗಳು ಬಂಡಾಯವೆದ್ದ ಹಾಗೆ ತುಂಡು ಸಾಲುಗಳಲ್ಲಿ ಮೂಡದೆ, ಗದ್ಯದ ಸಾಲುಗಳಂತೆ ಉದ್ದಕ್ಕೂ ಇವೆ. ನಮ್ಮಲ್ಲಿ ಎಸ್ ದಿವಾಕರ್ ಅವರು ಹೀಗೆ ಕವಿತೆಗಳನ್ನು ಬರೆದಿದ್ದರು. ಒಬ್ಬ ಕವಿ ಹೇಗೆ ಬರೆದರೂ ಅದರಲ್ಲಿ ಕವಿತ್ವ ಇರುತ್ತದೆ ಎನ್ನುವುದಕ್ಕೆ ಸಾಕ್ಷಿಯಂತಿವೆ ಈ ಪ್ರಯತ್ನಗಳು. ಅಷ್ಟರಮಟ್ಟಿಗೆ ಮಂಜಿರಿ ಇಂಧೂರ್ಕರ್ ಒಬ್ಬ ಶುದ್ಧಕವಿ.

ಕವಿತೆ ಒಂದು
ಹನ್ನೆರಡಕ್ಕೆ ಇನ್ನೂ ಹತ್ನಿಮಿಷ: ನಾನು ಬಹುಶಃ ತುಂಬ ಪ್ರೀತಿಸುವ, ಒಂದು ಹೆಣ್ಣಿನ ಸಾವು.

ಮನೆ, ನಾನು ಹುಟ್ಟಿ ಬೆಳೆದ ಮನೆಯಲ್ಲ,
ಇದು ಬೇರೆ, ಹೊಸ ಮನೆ,
ಹಳತರ ಪಳೆಯುಳಿಕೆಯಿಂದ ನಿರ್ಮಿಸಿದ್ದು.
ಈ ಮನೆ ನನ್ನ ಮನೆಯಲ್ಲ, ಅಂದರೆ
ಹಳೇ ಮನೆ ಆಗಿತ್ತಲ್ಲ, ಹಾಗೆ ನಂದಲ್ಲ.
ಈ ಮನೆಯ ಕಿಚನ್ನೇ ಅದ್ದ್ಯಾ ಕೋಣೆಯಾಗಿತ್ತು,
ನಾನು ಈ ಕೋಣೇನ ಹಂಚಿಕೊಂಡಿದ್ದೆ ಅವಳ ಜೊತೆ,
ರಮಾಕಾಂತನ ಬದಲಿಗೆ. 

ಈ ಕೋಣೆಯ ಸೊಳ್ಳೆಪರದೆಯೇ ನನ್ನ ಗುಮ್ಮನಿಂದ ಕಾಪಾಡಿದ್ದು
ಮತ್ತು ನಾನು ಪೌರಾಣಿಕ ಸಿನಿಮಾದಲ್ಲಿ ಮಕ್ಕಳು ಇದ್ದಕ್ಕಿದ್ದ ಹಾಗೆ
ಜಾರಿ ಪಾತಾಳಕ್ಕೆ ಬೀಳ್ತಾರಲ್ಲ, ಹಾಗೆ ಬೀಳದ ಹಾಗೆ ಹಿಡಿದಿದ್ದು.
ಸಿನಿಮಾದ ಹೆಸರು ಕೇಳಬೇಡಿ, ನನಗೀಗ ಅದೆಲ್ಲ ನೆನಪಿಲ್ಲ,
ಗೂಗಲಲ್ಲೂ ಹುಡುಕಲಾರೆ, ಅಷ್ಟೆ.

ಲಿವಿಂಗ್ ರೂಮಿನ ಅರ್ಧದಷ್ಟು, ಮೊದಲಿನ ಹಾಗೇ ಇದೆ,
ಹಳೇ ಮನೆಯ ಕಿಚನ್ನಿನ ಅರ್ಧದಷ್ಟು ಈಗ ಲಿವಿಂಗ್ ರೂಮ್ ಆಗಿಬಿಟ್ಟಿದೆ.
ಅಮ್ಮ ಮತ್ತು ನಾನು ಲತಾ ಮಂಗೇಶ್ಕರ್ ಹಾಡು ಹಾಡುತ್ತಿದ್ದ ಅದೇ ಜಾಗ
ಲಗ್ ಜಾ ಗಲೇ ಕಿ ಫಿರ್ ಯೇ ಹಸೀನ್ ರಾತ್ ಹೊ ನ ಹೊ,
ಶಾಯದ್ ಫಿರ್ ಇಸ್ ಜನಮ್ ಮೆ, ಮುಲಾಖಾತ್ ಹೊ ನ ಹೊ

ಭೋಗೋಳಿಕವಾಗಿ ಅಮ್ಮ ಮತ್ತು ಅಪ್ಪನ ಕೋಣೆ ಅಲ್ಲೇ ಇದೆ,
ಆದರದು ದೊಡ್ಡದು ಕಾಣ್ತಿದೆ, ಅದಕ್ಕೆ ಅದರದ್ದೇ ಟಾಯ್ಲೆಟ್ಟಿದೆ.
ಈಗ ಯಾರೂ ಹಿತ್ತಲ ಕಡೆ ಹೋಗಬೇಕಾದ್ದಿಲ್ಲ.
ಈಗ ಯಾರೂ "ಹಿತ್ಲು ಕಡೆ ಹೋಗ್ತಿದೀನೀ" ಅಂತ ಹೇಳೋದಿಲ್ಲ.
ನಾವದನ್ನೆಲ್ಲ ಹಿಂದಕ್ಕಿಕ್ಕಿಯಾಗಿದೆ.

ಅದ್ದ್ಯಾ ಸತ್ತ ಮುಂಜಾನೆ ಅಮ್ಮ ನನಗೆ ಕಾಲ್ ಮಾಡಿದ್ಲು,
ಕಾಲ್ ರಿಸೀವ್ ಮಾಡೊ ಮೊದಲೇ ನನಗೆ ಗೊತ್ತಿತ್ತು,
ಆ ಹೆಂಗಸು ಸತ್ತಿದ್ದಾಳೆ ಅಂತ.
ನನ್ನ ಅತ್ಯಂತ ಭಯಂಕರ ಗುಟ್ಟೊಂದನ್ನ ತನ್ನ ಹೊಟ್ಟೇಲಿ ಬಚ್ಚಿಟ್ಕೊಂಡ ಹೆಣ್ಣು,
ನನ್ನ ಅತ್ಯಂತ ಭಯಂಕರ ಗುಟ್ಟೊಂದನ್ನ ತನ್ನ ಹೊಟ್ಟೇಲಿ ಬಚ್ಚಿಡಬಾರದಿದ್ದ ಹೆಣ್ಣು
ಸತ್ತಿದ್ದಳು.

ಅದ್ದ್ಯಾಹೊಟ್ಟೆಯೇ ಒಂದು ಪವಾಡಸದೃಶ ಹೊಟ್ಟೆ.
ಸಾಯುವುದಕ್ಕೂ ತಿಂಗಳ ಹಿಂದೆ ಅವಳು ನೋವು ನೋವು ಅಂತಿದ್ಲು,
ಆ ಬಳಿಕ ಸಾಯುವ ತನಕವೂ ಅವಳು ಬೇಗಬೇಗ ‘ರೆಡಿಯಾಗ್ತಿದ್ಲು’.
ಆ ಹೊಟ್ಟೆ ಕೊನೆಮೊದಲಿಲ್ಲದಷ್ಟು ಕಥೆಗಳಿಂದ ತುಂಬಿತ್ತು.
ನಾನವುಗಳನ್ನ ನನ್ನಿಬ್ಬರು ಗೆಳತಿಯರಿಗೆ ಹೇಳುತ್ತಿದ್ದೆ,
ಕಣ್ಣುಬಾಯಿ ಬಿಟ್ಟು ಕೇಳುತ್ತಿದ್ದ ನನ್ನ ಇಬ್ಬರು ಗೆಳತಿಯರು,
ಅವರವರ ಮನೆಯ, ಸತ್ತಿರುವ ಯಜಮಾನನ
ಕುರ್ಚಿ ಮೇಲೆ ಕೂತು ಕೇಳುತ್ತಿದ್ದರು.
ಅವಳ ಹೊಟ್ಟೆ ನಡುವಿನಿಂದ ಒಳಕ್ಕೆ ಎಳಕೊಂಡ ಹಾಗೆ ಚಟ್ಟೆ
ನಂಗಷ್ಟೂ ಇಷ್ಟವಾದ, ಹೊರಕ್ಕೆ ಉಬ್ಬಿಕೊಂಡು ಬೀಗಿದ ಅಮ್ಮಂದರ ಹಾಗಲ್ಲ 
ಭೂತ ಪಿಶಾಚಿ ಬರದ ಹಾಗೆ ನಾನವಳ ಹೊಟ್ಟೆ ಮೇಲೆ ಕೈಯಿಟ್ಟು ಮಲಗತಾ ಇದ್ದೆ
(ನಾನವಳನ್ನ ಮುಟ್ಕೊಂಡಿದ್ರೆ ಭೂತ ಪಿಶಾಚಿ ನನ್ನ ಮುಟ್ಟಲ್ಲ)
ಅವಳು ನಡುರಾತ್ರಿ ಯಾವಾಗ್ಲೊ ನಿದ್ದೇಲಿ ಅದನ್ನ ಕಿತ್ತೆಸೀತಿದ್ಲು.
ಸ್ವತಂತ್ರ ಮನೋಭಾವದ ಹೆಂಗಸೇನಾದ್ರೂ ಎಲ್ಲಾದ್ರೂ ಇದ್ರೆ 
ಅದು ಅದ್ದ್ಯಾನೇ.

ನಮ್ಮ ಕಿಚನ್ನಾಗಿದ್ದ ಅವಳ ಕೋಣೆ ತುಂಬ
ತುಂಬಾ ದಿನದಿಂದ ಬೀಗ ಹಾಕಿಟ್ಟ ಹಳೇ ಕೋಣೆ ಘಾಟು, ವಾಸನೆ.
ಏರ್ ಕಂಡೀಶನರ್‌ಗಾಗಿ ನಾವು ಆ ಕೋಣೇನ ಮುಚ್ಚಿಟ್ಟಿದ್ದೀವಿ.
ಬೇಡದ ಗಲೀಜು ಪಾತ್ರೆಪಗಡಿ ಇಡೋದಕ್ಕಷ್ಟೆ 
ಹಿತ್ತಲಕಡೆ ಇರೊ ಆ ಕೋಣೆ ಕಡೆ ನಾವು ಹೋಗ್ತೀವಿ.
ಯಾವ್ದಾದ್ರೂ ಬಟ್ಟೆ ಹುಡುಕೋಕೆ ಹೋಗ್ತೀವಿ,
ಮದ್ದು ಮಾತ್ರೆ ಹುಡುಕೋಕೆ ಹೋಗ್ತೀವಿ.
ನೆಂಟರು ಬಂದಾಗ ನಾವು ಅವಳ ಹಾಸಿಗೆ ಮೇಲೆ ಹೊದಿಕೆ ಹಾಸ್ತೀವಿ.
ಅವಳ ಕೋಣೇಲಿ ಕೂಲರು, ಏರ್‌ಕಂಡೀಶನರು ಎಲ್ಲ ಇಲ್ಲ,
ಬಹುಶಃ ಸತ್ತವರಿಗೆ ಅದೆಲ್ಲ ಬೇಕಂತ ಇಲ್ಲ.

ನಾವ್ಯಾರೂ ಅವಳ ಬಾತ್‌ರೂಮು, ಎಲ್ಲಾ ಸರಿಯಿದ್ರೂ, ಬಳಸಲ್ಲ.
ನಾವು ಅವಳ ಗಡಿಯಾರದ ಸೆಲ್ಲು ಬದಲಿಸಲ್ಲ.
ನಾವಲ್ಲಿ ಧೂಳು ಕೂಡ ಹೊಡೆಯಲ್ಲ.
ಯಾವತ್ತಾದ್ರೂ ಜಬ್ ವಿ ಮೆಟ್ ಸಿನಿಮಾ ನೋಡೋವಾಗ,
ರೂಮ್ಮೇಟ್ ಹತ್ರ ಹೇಳೋದಿದೆ, ಇದು ಅವಳ ಇಷ್ಟದ ಸಿನಿಮಾ ಅಂತ,
ಯಾವಾಗ್ಲೂ ಜಾನ್ ಅಬ್ರಹಾಂನ್ನೂ ಶಹೀದ್ ಕಪೂರನ್ನೂ ಕನ್ಫ್ಯೂಸ್ ಮಾಡ್ಕೋತಿದ್ಲು ಅಂತ.
ಇಬ್ರೂ ನಗ್ತಿದ್ವಿ, ಮತ್ತೆ, ಒಂದೇ ಸಲಕ್ಕೆ ಯಾಕೋ ಹೆದರಿದ ಹಾಗೆ ಬಿಳಿಚುತಿದ್ವಿ
ಮತ್ತೆಲ್ಲ ಯಾವತ್ತಿನ ಹಾಗೇ ನಡೀತಿತ್ತು.

ಅದ್ದ್ಯಾ ಸಾವಿಗೆ ಇದ್ದಿರಬಹುದಾದ ಕಾರಣಗಳ ಪಟ್ಟಿ
1. ಹೊಸಾ ಮನೇಲಿ ಅವಳ ಕೋಣೆಗೆ ಅದರದ್ದೇ ಬಾತ್‌ರೂಮಿತ್ತು,
ಬಾತ್‌ರೂಮಲ್ಲಿ ಕಮೋಡು ಕೂಡಾ ಹಾಕಿದ್ದರು,
ಅವಳು ಬ್ರಾಹ್ಮಣರವಳಾಗಿದ್ಲು ಮತ್ತು ಇಂಥ ಅಬದ್ಧಕ್ಕೆಲ್ಲ ಅವಳು ಒಗ್ಗಿರಲಿಲ್ಲ,
ಕೊಳಕನ್ನ ಕೋಣೆಯೊಳಕ್ಕೇ ತಂದಿದ್ದು ಅವಳನ್ನ ಕೊಂದಿತೆ?
2. ಅವಳಿಗೆ ನಿಜಕ್ಕೂ ವಯಸ್ಸಾದಾಗ ಅವಳು ಸೀರೆ ಬಿಟ್ಟು
ಮ್ಯಾಕ್ಸಿ ಉಡಬೇಕಾಗಿ ಬಂತು.
ತನ್ನ ವಯಸ್ಸಿಗೆ ಅದು ಶೋಭಿಸಲ್ಲ ಅಂತಿದ್ಲು ನನ್ನ ಹತ್ರ.
ಮನಸ್ಸಿಗೆ ವಿರುದ್ಧವಾಯ್ತಲ್ಲ, ಅದು ಕೊಂದಿತೆ ಅವಳನ್ನ?
3. ಅವಳು ಯಾವಾಗ ನೋಡಿದ್ರೂ ಹೊಟ್ಟೆ ನೋವು ಅಂತಿದ್ಲು
ಆದ್ರೆ, ನಾವು ಕೊಟ್ಟ ಪುದಿನ್‌ಹಾರ ತಗೋತಿರಲಿಲ್ಲ.
ಅವಳಿಗೆ ನಮ್ಮ ಮೇಲೆ ವಿಶ್ವಾಸ ಇರಲಿಲ್ಲ
ನಾವು ವಿಷ ಹಾಕ್ಬೋದು ಅಂತ ಅನುಮಾನ.
ಅವಳ ಅನುಮಾನವೇ ಅವಳನ್ನ ಕೊಂದಿತಾ?
4. ಅವಳ ಕೋಣೆಯ ಗಡಿಯಾರ ನಿಂತಿತ್ತು
ಯಾರೂ ಅದನ್ನ ಸರಿಪಡಿಸ್ಲಿಲ್ಲ.
ಹನ್ನೆರಡಕ್ಕೆ ಹತ್ನಿಮಿಷ ಇತ್ತು ಅದರಲ್ಲಿ, ಹಗಲೊ, ರಾತ್ರಿಯೊ ಗೊತ್ತಿಲ್ಲ.
ಚಲನೆ ಇಲ್ದೇ ಇದ್ದಿದ್ದೇ ಅವಳನ್ನ ಕೊಂದಿತಾ?

ಕವಿತೆ ಎರಡು

ಕೆರೆ-ದಡ, ದಡ-ಕೆರೆ
ಹಗಲಲ್ಲಿ ನಾನು ಇದ್ದುದರಲ್ಲಿ ಕಡಕ್ಕಾದ ಕೆಂಪು ಲಿಪ್‌ಸ್ಟಿಕ್ ಹಚ್ಚಿಕೊಂಡು ನೀರಳೆಯುವ ಪಾತ್ರೆಯ ಪಕ್ಕ ಕೂರುತ್ತೇನೆ. ನಾನು ಹೊಸದಾಗಿ ಲಿಪ್‌ಸ್ಟಿಕ್ಕಿನ ಗೀಳಿಗೆ ಬಿದ್ದಿದ್ದೇನೆ. ನಾನು ಕಣ್ಣಿಗೆ ಬೀಳದೇ ಇರಲು ಸಾಧ್ಯವಿಲ್ಲದಂಥ ಕಡು ಬಣ್ಣದ ಬಟ್ಟೆಗಳನ್ನ ಧರಿಸುತ್ತೇನೆ. ನಾನು ಕೆಂಪು ವರ್ಣಛಾಯೆಯ ಬಟ್ಟೆಗಳನ್ನ ಧರಿಸುತ್ತೇನೆ. ನಾನು ಧರಿಸಿಯಾದ ಮೇಲೆ ಕನ್ನಡಿಯಲ್ಲಿ ನನ್ನನ್ನೇ ನಾನು ನೋಡಿಕೊಳ್ಳುತ್ತೇನೆ, ಅದನ್ನ ಒರೆಸಿ ಹಾಕುತ್ತೇನೆ. ಆಮೇಲೆ ಮತ್ತೆ ನಾನು ಧರಿಸುತ್ತೇನೆ. ನೀರಿನ ಪಾತ್ರೆಯ ಪಕ್ಕ, ನನ್ನ ತೋಳುಗಳು ಗಾಳಿಯಲ್ಲಿ ಆಡುತ್ತವೆ, ಕಡಿದಾದ ಸೇತುವೆಯ ಹಾಗೆ ಬಾಗಿದ ನನ್ನ ಮೊಣಕಾಲ ಮೇಲೆ ಪೂರ್ತಿ ಭಾರ ಹಾಕದೇ ಅವು ನಿಲ್ಲುತ್ತವೆ. ಈಗ ಆ ಜಾಗ ಕಿಚನ್ನಿನಲ್ಲೂ ಇಲ್ಲ, ನಮ್ಮ ಲಿವಿಂಗ್ ರೂಮಲ್ಲೂ ಇಲ್ಲ. ಆ ಜಾಗದಲ್ಲೀಗ ನಾನಿದ್ದೇನೆ. ನನ್ನ ಕೋಣೆಯ ಗೋಡೆಯ ಮೇಲೆ ಕ್ಷಿಪ್ರಾತಿಕ್ಷಿಪ್ರ ಕೋನಗಳಲ್ಲಿ ತೂಗು ಬಿದ್ದಿರುವ ಆ ಚಚ್ಚೌಕದ ಕನ್ನಡಿಯ ಮೇಲೆ ಕೂರಲು ಪ್ರತಿ ಧೂಳಿನ ಕಣಕಣವೂ ಒಂದರೊಂದಿಗೆ ಇನ್ನೊಂದು ತಮ್ಮತಮ್ಮ ಜಾಗಕ್ಕಾಗಿ ಹೊಡೆದಾಡುತ್ತ ಇರಬೇಕಾದರೆ, ಅದೂ ಹೊಸಬ ಬೇರೆ ತನ್ನ ಜಾಗಕ್ಕಾಗಿ ಬಂದು ಕಾದು ನಿಂತಾಗ, ನಾನು ನನ್ನ ಮೇಕಪ್ಪಿಗೆ ಜಾಗ ಕಬಳಿಸುತ್ತೇನೆ.

ಕೆಲವು ದಿನಗಳ ಹಿಂದೆ ಸತ್ತ ನನ್ನ ಅಜ್ಜಿ ಕೊನೆಗೂ ಇವತ್ತು ನನ್ನ ಕನಸಿನಲ್ಲಿ ಬಂದಳು. ಕನಸಲ್ಲಿ ಅವಳು ಸತ್ತಿದ್ದಳು. ಅಜ್ಜಿ ಸತ್ತ ವಾರ್ತೆ ಕೇಳಿ ನನ್ನಜ್ಜ ಸೂಯಿಸೈಡ್ ಮಾಡಿಕೊಂಡ, ಕನಸಲ್ಲಿ. ನನ್ನ ಎಷ್ಟೇ ಹಿಂದಿನ ನೆನಪು ತೆಗೆದರೂ ಅದರಲ್ಲಿಯೂ ಅವನು ಮುದುಕನಾಗಿಯೇ ಇದ್ದ. ಅವನು ನೇಣು ಹಾಕಿಕೊಳ್ಳಲು ಅವರ ಕೋಣೆಯ ಒಂದು ಮೂಲೇನ ಆರಿಸಿಕೊಂಡಿದ್ದ. ಅವನದಕ್ಕೆ ಹಳೇ ಫ್ಯಾನು ಆರಿಸಲಿಲ್ಲ. ಒಂದು ಬೀಮ್‌ಗೆ ನೇತು ಬಿದ್ದಿದ್ದನ್ನ ನಾನು ಕಂಡೆ. ಅವನ ದೇಹ ಗೋಡೆಯ ಜೊತೆ ಒಂದು ವಿಚಿತ್ರ ಕೋನದಲ್ಲಿ ತೂಗುತ್ತಿತ್ತು. ಅದು ಕೆರೆಯೋ ದಡವೋ ನನಗೆ ನಿರ್ಧರಿಸೋಕೆ ಆಗಲಿಲ್ಲ. ಅವನನ್ನ ಕೆಳಗಿಳಿಸೋ ಆತುರ ಯಾರೊಬ್ಬರಿಗೂ ಇದ್ದಂತಿರಲಿಲ್ಲ. ಗೋಡೆ ಮೇಲಿನ ಕನ್ನಡಿ ನನಗೆ ಅವನ ತೂಗುತ್ತಾ ಇರುವ ದೇಹಾನ ತೋರಿಸಿತು. ಅದು ಎಂಥಾ ನೆಮ್ಮದಿ ಮತ್ತು ಶಾಂತಿಯಿಂದ ತೂಗಾಡ್ತಾ ಇತ್ತೆಂದರೆ, ಅದು ಶಾಶ್ವತವಾಗಿ ಹಾಗೆಯೇ ಇದ್ದುಬಿಡಲು ಬಯಸಿದ ಹಾಗಿತ್ತು. ಅಷ್ಟಕ್ಕೂ ಸತ್ತವರಿಗೆಂಥ ಅರ್ಜೆಂಟು ಇರುತ್ತೆ. ನನ್ನಜ್ಜಿಯೂ ಏನೂ ಗಡಿಬಿಡಿಯಲ್ಲಿರಲಿಲ್ಲ. ಅವಳು ನನಗೆ ಚಾಯ್‌ಗೆ ಒಳ್ಳೇ ಸ್ವಾದ ಬರಬೇಕಂದ್ರೆ ಹಾಕೋ ಮೊದಲು ಏಲಕ್ಕೀನ ಸರಿಯಾಗಿ ಹುಡಿ ಮಾಡ್ಕೋಬೇಕು ಅಂತ ನೆನಪಿಸಿದ್ಲು. ಈ ಹೆಂಗ್ಸು ಮಾಡೊ ಅಡುಗೆ ಭಯಂಕರ ಇತ್ತು. ಸತ್ಮೇಲೂ ಇದು ನನ್ನ ಕನಸಲ್ಲಿ ಬಂದು ಏಲಕ್ಕಿ ಹುಡಿ ಮಾಡೋ ಬಗ್ಗೆ ಹೇಳೋದಿದೆಯಲ್ಲ, ನಗು ಬರುತ್ತೆ. ಸರಿಯಾಗಿ ಅಂದಿದ್ದು ಅವಳು, ನಾನೂ ರಿಪೀಟ್ ಮಾಡ್ದೆ, ಸರಿಯಾಗಿ. ಇದೆಲ್ಲ ಆಗ್ತಿರಬೇಕಿದ್ರೆ, ಅಜ್ಜ ಕೆರೆ-ದಡ, ದಡ-ಕೆರೆ ಮಾಡ್ತಲೇ ಇದ್ದ ಎನ್ನಿ.

ಕನ್ನಡಿಗೆ ಎಲ್ಲವೂ ಗೊತ್ತು. ಇವತ್ತು ನನ್ನ ಲಿಪ್‌ಸ್ಟಿಕ್ ಬಣ್ಣ ನೇರಳೆ. ಲಿಪ್‌ಸ್ಟಿಕ್ಕಿನ ಸ್ಟಿಕ್ಕು ಮುರಿದಿದೆ. ತೋರು ಬೆರಳಿನಿಂದ ಮೆತ್ತಗೆ ತುಟಿ ಮೇಲೆ ತಟ್ಟಿ ಸರಿಪಡಿಸಿದ್ದೇನೆ. ಅಜ್ಜ ತೂಗಾಡುತ್ತಿರುವ ಕನ್ನಡಿಯಲ್ಲೇ ನನಗೊಂದಿಷ್ಟು ಜಾಗ ಖಾಲಿ ಇದೆ. ನನ್ನ ಲಿಪ್‌ಸ್ಟಿಕ್ ಧರಿಸುತ್ತೇನೆ. ಅದು ನನ್ನ ಯಾವ ಡ್ರೆಸ್ಸಿನೊಂದಿಗೂ ಮ್ಯಾಚಾಗುತ್ತಿಲ್ಲ. ಹಾಗಾಗಿ ನಾನು ಅವೆಲ್ಲವನ್ನೂ ತೆಗೆದು ಹಾಕಿದ್ದೇನೆ. ನನ್ನ ಮೊಲೆಗಳ ಮೇಲೆಲ್ಲ ಒಣಗಿದ ಗಾಯದ ಗುರುತಿದೆ. ಕೀವು ತುಂಬಿದ ಗುಳ್ಳೆಗಳನ್ನು ನಾನು ನೀರ್ಗುಳ್ಳೆ ಒಡೆದ ಹಾಗೆ ಒಡೆದಿದ್ದರಿಂದ ಆಗಿದ್ದು. ಯಾವತ್ತೂ ತುಸು ಬಿಗಿಯಾಗೇ ಇರುತ್ತಿದ್ದ ನನ್ನ ಸ್ಕೂಲ್ ಯೂನಿಫಾರ್ಮಿನ ಬೆಲ್ಟ್‌ನಿಂದಾಗಿ ಆದ ಗುರುತು ಹೊಟ್ಟೆಯ ಮೇಲೆ ಕಾಣಿಸುತ್ತಿದೆ. ಕಂಕುಳವನ್ನ ಶೇವ್ ಮಾಡದೆ ಅಲ್ಲೆಲ್ಲ ಕಪ್ಪನೆಯ ಗುರುತಾದಂತಿದೆ. ನಾನು ನನ್ನ ಲಿಪ್‍ಸ್ಟಿಕ್ಕನ್ನು ಮತ್ತಷ್ಟು ದಪ್ಪಕ್ಕೆ ಬಳಿಯುತ್ತೇನೆ. ಅಜ್ಜನತ್ತ ಮುಗುಳ್ನಕ್ಕು ನನ್ನ ಜಾಗವನ್ನು ಆವರಿಸುತ್ತೇನೆ. ನಾನು ಹಾಗೆ ಮಾಡಲೇಬೇಕಲ್ಲವೆ. ಅದು ಖಾಲಿ ಬಿದ್ದ ಒಂದು ಚಚ್ಚೌಕದ ನನ್ನ ಜಾಗ. ಅದು ಸರಿಯಾಗಿ ನೀರಳೆಯುವ ಪಾತ್ರೆಯ ಪಕ್ಕಕ್ಕಿದೆ.

ಕವಿತೆ ಮೂರು

ಸ್ಕಿಜೋಫ್ರೇನಿಯಾ
ನನ್ನ ನೂರಹದಿನಾರು ವರ್ಷ ಪ್ರಾಯದ ಅಜ್ಜಿ, ಮೇರಿ ಅನ್ನೋ ಗೆಳತಿಯ ಬಗ್ಗೆ ಹೇಳುತ್ತಾಳೆ. ಅವಳು ಹೇಳೋ ಹಾಗೆ, ಮೇರಿ, ಅವಳು ನೋಡಿರೋ ಹುಡುಗೀರಲ್ಲೇ ಅತ್ಯಂತ ಸುಂದರಿಯಾದ ಹುಡುಗಿ. ನನ್ನಜ್ಜಿ ತನ್ನ ಅಪ್ಪನ ಅಂತಿಮಯಾತ್ರೆಯ ಸಂದರ್ಭದಲ್ಲಿ ಮೇರೀನ ಕಂಡಿದ್ದಂತೆ. ಆವತ್ನಿಂದ ಅವರಿಬ್ರೂ ಗೆಳತೀರು. ಮೇರಿಯ ಜೊತೆ ಗೆಳೆತನ ಮಾಡ್ದೇ ಇರೋದು ಸಾಧ್ಯವೇ ಇಲ್ಲ. ತನ್ನ ರಾಕಿಂಗ್ ಚೇರಿನಲ್ಲಿ ಕೂತು ಒಂದೇ ಸಮನೆ ಗಡಿಯಾರದತ್ತ ದೃಷ್ಟಿ ನೆಟ್ಟಿರೋ ನನ್ನಜ್ಜ ಕಾಲಾನ ಅಳೀತಾನೆ ಹೇಳ್ತಾನೆ, ಮೇರಿ ಹೆಸರಿನ ವ್ಯಕ್ತಿಯೇ ಇಲ್ಲ, ಅವನೆಂದೂ ಮೇರೀನ ಕಂಡಿದ್ದಿಲ್ಲ. ನೂರ ಇಪ್ಪತ್ತಾರನೇ ವಯಸ್ಸಿನಲ್ಲಿ ನನ್ನಜ್ಜಿ ಸತ್ತಾಗ, ಅವಳಿಗಿದ್ದ ಒಂದೇ ಒಂದು ಆಸೆ ಅಂದ್ರೆ, ಅವಳು ಮೇರೀನ ಮೊತ್ತಮೊದಲು ಭೇಟಿಯಾದ ಸಿಮೆಟ್ರಿಯಲ್ಲೇ ತನ್ನ ಹೂಳಬೇಕು ಅನ್ನೋದು. ನಾನು ಸ್ವತಃ ಗೋರಿ ತೋಡುತ್ತಾ ಇರಬೇಕಾದ್ರೆ ಮೇರಿ ಅಲ್ಲೇ ಪಕ್ಕದ ಗೋರಿ ಮೇಲೆ ಕೂತು ಉದ್ದಕ್ಕೂ ನನ್ನನ್ನೇ ನೋಡ್ತಿದ್ಲು. ಎಷ್ಟು ಚಂದ ಕಾಣ್ತಿದೀ ನೀನು ಮೇರಿ, ಅಂದೆ. ನಿಜಕ್ಕೂ ನಾನು ಕಂಡ ಹುಡುಗೀರಲ್ಲೆಲ್ಲಾ ನೀನೇ ಚಂದ. ನನ್ನಜ್ಜ, ಸದಾ ಸಮಯದ ಮೇಲೆ ಒಂದು ಕಣ್ಣಿಟ್ಟೇ ಬದುಕಿದ ಮನುಷ್ಯ ಈ ಜಗತ್ತಿಗೆ ಸಂದವ. ಈಗ, ತನ್ನ ರಾಕಿಂಗ್ ಚೇರಿನ ಮೇಲೆ ಕೂತು ಲೆಕ್ಕ ಹಾಕುವ ಪ್ರತೀ ನೋವಿನ ಒಂದೊಂದು ಸೆಕೆಂಡಿಗೂ ಕಣ್ಣೀರಿಡುತ್ತಿದ್ದಾನೆ. ಹಗಲಲ್ಲಿ ನಾನು ಅವನನ್ನು ಒಂದು ಮೂಲೆಯಿಂದ ಗಮನಿಸುತ್ತೇನೆ. ಅವನ ಕಣ್ಣಿಗೆ ಕಾಣಿಸಿಕೊಳ್ಳಲ್ಲ. ಹಗಲಲ್ಲಿ ಹೆಚ್ಚಾಗಿ, ಆದರೆ, ನಾನು ಮೇರಿ ಜೊತೆಗಿರೋದು ಹೆಚ್ಚು. ಅವಳೀಗ ನನ್ನ ಮತ್ತು ನನ್ನಜ್ಜಿ ಜೊತೆ ಬಂದಿರುತ್ತಾಳೆ. ನಮ್ಮದೇ ಚಲನೆಯಿಲ್ಲದ ಜಗತ್ತಿದೆ. ಅಲ್ಲಿ ಕ್ಷಣಗಳು ಕಲ್ಲಾಗಿವೆ ಮತ್ತು ಯಾರೂ ಕಾಲವನ್ನ ಅಳೆಯೋಲ್ಲ.

ಕವಿತೆ ನಾಲ್ಕು

ಕರೇನಿನಾಳ ಪ್ರೇಮಿ
ಹಾಗೆ ಮಲಗಬೇಡ್ವೆ, ತೆರೆದ ಪುಸ್ತಕಾನ ಹಾಗೇ ಎದೆ ಮೇಲೆ ಹಾಕ್ಕೊಂಡು. ತುಂಬ ಹೊತ್ತಿನವರೆಗೆ ಹಾಗೆ ಅಲ್ಲಿ ಓದುತ್ತಾ ಕೂರಬೇಡ, ಆ ಜಾಗ ಕಾಡುತ್ತೆ ಅನ್ನುತ್ತಾಳೆ ನನ್ನಜ್ಜಿ. ಅವಳು ನೂರಾರು ಕತೆಗಳ ಮುದುಕಿ, ನೂರಾರು ನಂಬಿಕೆಗಳ ಹೆಂಗಸು, ನನ್ನಜ್ಜಿ. ಅವಳ ಓದೋ ಜಾಗ ಏನಿದೆ, ಅದು ಪಾತ್ರಗಳೆಲ್ಲ ಜೀವಂತಗೊಂಡು ಓಡಾಡೋ ಜಾಗವಂತೆ, ಹೇಳ್ತಾಳೆ ನನ್ನಜ್ಜಿ. ನೀವು ಗಮನ ಇಟ್ಟು ಕೇಳಿಸ್ಕೊಂಡ್ರೆ, ರಾತ್ರಿ ಹೊತ್ತು ಅವು ಮಾತಾಡೋದು ಕೇಳಿಸುತ್ತೆ ಅಂತಾಳೆ ನನ್ನಜ್ಜಿ. ಅವಳ ಪ್ರಕಾರ ಅವೆಲ್ಲ ಸೇರಿ ಅವಳ ವಿರುದ್ಧ ಪಿತೂರಿ ಮಾಡ್ತಿವೆಯಂತೆ, ನಂಬಿದ್ದಾಳೆ ನನ್ನಜ್ಜಿ. ಒಂದು ಕಾಲದಲ್ಲಿ, ನನ್ನ ಅಜ್ಜ ಅಂಥ ಒಂದು ಪುಸ್ತಕಾನ ತೆರೆದೇ ಇಟ್ಟಿದ್ನಂತೆ, ಹೇಳ್ತಾಳೆ ನನ್ನಜ್ಜಿ. ಅನ್ನಾಕರೇನಿನಾ ಗೊತ್ತಲ್ಲ, ಒಬ್ಬಂಟಿ, ನೋವುಂಡ ಮಾಯಾವಿ, ಆ ಪುಸ್ತಕದಿಂದ ಮೆತ್ತಗೆ ಹೊರಬಿದ್ದು ನನ್ನಜ್ಜನ್ನ ಕರೆದುಕೊಂಡೇ ಹೋದ್ಲು. ನನ್ನಜ್ಜಿ ಪ್ರತಿ ರಾತ್ರಿ ಪುಸ್ತಕಾನ ಹಿಡಿದು ಓದುತ್ತಾಳೆ, ಕರೇನಿನಾಳ ಪ್ರೇಮಿ ಅಂತ ವದಂತಿ ಇದೆಯಲ್ಲ, ಆ ತನ್ನ ಗಂಡನ್ನ ಹುಡುಕೋಕೆ. ಆ ಇನ್ನೊಂದು ಹೆಂಗಸು ಕರೇನಿನಾ. ನಾನವಳನ್ನ ಇಷ್ಟಪಡೋ ಹಾಗಿಲ್ಲ, ನಾನವಳ ಹತ್ತಿರ ಹೋಗೋ ಹಾಗಿಲ್ಲ. ಆ ರಶಿಯನ್ ಮಾಟಗಾತಿಗೆ ಮಾಯ ಮಂತ್ರಗಳೆಲ್ಲ ಗೊತ್ತು, ಅವಳು ನಿನ್ನ ಮೇಲೆ ಮಂಕುಬೂದಿ ಎರಚಿ, ನಿನ್ನನ್ನೂ ತನ್ನ ಜೊತೆ ಕರೆದೊಯ್ತಾಳೆ ಅಂತಾಳೆ ನನ್ನಜ್ಜಿ. ಕರೇನಿನಾನ ಸದಾ ಕಾಲ ನನ್ನಜ್ಜಿಯ ಕಬೋರ್ಡ್ ಒಳಗೆ ಬೀಗ ಜಡಿದು ಬಂಧಿಸಿಡಲಾಗಿದೆ. ನನ್ನಜ್ಜಿ ಸತ್ತ ದಿನವೇ ನಾನವಳನ್ನ ಬಂಧಮುಕ್ತಗೊಳಿಸಿದೆ. ಆ ಒಬ್ಬಂಟಿ, ನೋವುಂಡ ಮಾಯಾವಿ ಈಗ ನನ್ನ ಟೇಬಲ್ಲಿನ ಮೇಲೆ ಬಿದ್ಕೊಂಡಿದ್ದಾಳೆ. ಅವಳ ಹೊರಮೈಯೆಲ್ಲ ಹರಿದು ಹೋಗಿದೆ. ಅವಳ ಬಾಗಿದ ನಗ್ನ ಬೆನ್ನಿನ ಭಾಗ ನನ್ನ ಕಡೆಗಿದೆ. ಮುಟ್ಟಬೇಕು ಅವಳನ್ನ ಅಂತ ಆಸೆಯಾಗುತ್ತೆ. ಅವಳು ಮೇಜಿನಿಂದಿಳಿದು ಬಂದು ನನ್ನನ್ನೂ ಸೆಳೆದೊಯ್ಯಬಾರದೇ ಎಂದು ನಾನದೆಷ್ಟು ಹಂಬಲಿಸುತ್ತಿದ್ದೇನೆ.

No comments: