Friday, December 29, 2017

ಓದದೇ ಇರುವ ಪುಸ್ತಕಗಳು

ಒಂದು ಪುಸ್ತಕವನ್ನು ಇಬ್ಬರು ಓದುವ ಬಗೆ, ಅದನ್ನು ಗ್ರಹಿಸುವ ಬಗೆ, ಅದು ದಕ್ಕುವ ಬಗೆ ಬೇರೆ ಬೇರೆ ಇರುತ್ತದೆ ಎನ್ನುವ ನೆಲೆಯಲ್ಲಿ ಇಬ್ಬರು ಒಂದೇ ಪುಸ್ತಕವನ್ನು ಓದುವುದಿಲ್ಲ ಎನ್ನುವ ಮಾತಿದೆ. ಇಲ್ಲಿ ಲೇಖಕನ ಸಂವೇದನೆ, ಪ್ರತಿಮೆ, ಭಾಷೆ, ಅನುಭವ ಅಕ್ಷರಗಳಲ್ಲಿ ರೂಪು ತಳೆದು, ಓದುಗನಿಗೆ ತಲುಪುವಾಗ ಓದುಗನ ಅನುಭವ ಮತ್ತು ಸ್ಥಿತಿಯ ಮೇಲೆ ಹೊಂದಿಕೊಂಡು ಅವನವನ ಸಂವೇದನೆ, ಗ್ರಹಿಕೆಗಳಿಗನುಗುಣವಾಗಿ ಅವನು ಅದನ್ನು ಅವನದೇ ರೀತಿಯಲ್ಲಿ ಸ್ವೀಕರಿಸುತ್ತಾನೆ ಎನ್ನುವುದು ತರ್ಕ. ಹೀಗಾಗಿ ಒಂದು ಕೃತಿಯ ಯಶಸ್ಸು ಅಥವಾ ಸೋಲು 50:50 ಆಗಿರುತ್ತದೆ. ಇದನ್ನು ಒಪ್ಪಿದರೂ, ಒಪ್ಪದಿದ್ದರೂ ಒಂದು ಕೃತಿ ಎಲ್ಲರಿಗೂ ಏಕರೂಪದಲ್ಲಿ ದಕ್ಕುವುದಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಇಲ್ಲೊಂದು ತರ್ಕವಿದೆ, ಉಂಬರ್ಟೊ ತನ್ನ ಹೊಸ ಕೃತಿಯಲ್ಲಿ (Chronicles of a Liquid Society ,ಆತನ ಕಣ್ಮರೆಯ ಬಳಿಕ ಪ್ರಕಟವಾಗಿದ್ದು) ಇದನ್ನು ಕೈಗೆತ್ತಿಕೊಂಡಿದ್ದಾನೆ.

ನಮ್ಮಲ್ಲಿನ ಬಹುತೇಕ ಬ್ಲರ್ಬುಗಳನ್ನು ಓದುವಾಗ, ಪತ್ರಿಕೆಗಳಲ್ಲಿ ಬರುವ ಪುಸ್ತಕ ಪರಿಚಯದ ಟಿಪ್ಪಣಿಗಳನ್ನು ಓದುವಾಗ ಅವರು ಕೃತಿಯನ್ನು ಓದಿ ಬರೆದರೇ ಎನ್ನುವುದು ಅನುಮಾನಾಸ್ಪದವೇ. ಅದರಲ್ಲೂ ಕೆಲವರು ಲೇಖಕನನ್ನು ನೇರ ಹೊನ್ನಶೂಲಕ್ಕೇ ಏರಿಸುವುದನ್ನು ಕಂಡಾಗ ಅನುಮಾನ ಕೂಡ ಉಳಿಯುವುದಿಲ್ಲ! ಹೀಗೆ ಓದದೇ ಮಾತನಾಡುವ ಶೂರರ ಪ್ರಮೇಯವೊಂದನ್ನು ಅವರದೇ ತರ್ಕದಿಂದ ಉಂಬರ್ಟೊ ಇಲ್ಲಿ ಕಟ್ಟಿ ಕೆಡಹಿರುವುದು ತುಂಬ ಕುತೂಹಲಕರವಾಗಿದೆ. ಹಾಗಿದ್ದೂ ತರ್ಕ-ವಿತರ್ಕ ಎರಡೂ ಹಲವು ಒಳನೋಟಗಳನ್ನು ಹೊಂದಿರುವುದು ಸುಳ್ಳಲ್ಲ.


ಸರಳವಾಗಿ ಹೇಳುವುದಾದರೆ ತಲೆಯಲ್ಲಿ ಹುಳ ಬಿಟ್ಟುಕೊಳ್ಳುವುದು ಅನ್ನುತ್ತಾರಲ್ಲ, ಇದು!

ಓದದೇ ಇರುವ ಪುಸ್ತಕಗಳು

Giorgio Manganelli ತನ್ನ ಅದ್ಭುತವಾದ ಒಂದು ಲೇಖನದಲ್ಲಿ ಒಬ್ಬ ಸಂಪನ್ನ ಓದುಗ ಹೇಗೆ ತಾನು ಒಂದು ಕೃತಿಯನ್ನು ತೆರೆಯುವ ಮೊದಲೇ ಅದನ್ನು ಓದಬೇಕೇ ಬೇಡವೇ ಎನ್ನುವುದನ್ನು ತಿಳಿದುಕೊಳ್ಳಬಲ್ಲ ಎನ್ನುವುದನ್ನು ವಿವರಿಸಿದ್ದು ನೆನಪಾಗುತ್ತಿದೆ. ನನ್ನ ನೆನಪು ಕೊಂಚ ಮುಕ್ಕಾಗಿರಬಹುದು. ಕೃತಿಯ ಮೊದಲ ವಾಕ್ಯದಿಂದಲೇ ಅದನ್ನು ತೂಗಿ ನೋಡುವ, ಸುಮ್ಮನೇ ಒಂದೆರಡು ಪುಟಗಳ ಮೇಲೆ ಕಣ್ಣಾಡಿಸಿ, ಪರಿವಿಡಿಯ ಸಹಾಯದಿಂದ, ಕೃತಿಯ ಕುರಿತ ಮಾತುಗಳಿಂದ ಒಂದು ಕೃತಿ ಓದಬೇಕಾದ್ದೇ ಅಲ್ಲವೇ ಎನ್ನುವುದನ್ನು ನಿರ್ಧರಿಸುವ, ವೃತ್ತಿಪರ ಓದುಗನೊಬ್ಬನಿಗೆ ಇರಬೇಕು ಎಂದು ಭಾವಿಸುವ ಸಾಮರ್ಥ್ಯದ ಕುರಿತಾಗಲಿ, ಒಬ್ಬ ಗಾಢ ಕುತೂಹಲಿಯಾದ, ಮಹಾ ಗ್ರಹಿಕೆಗಳಿರುವ ಓದುಗನ ಕುರಿತಾಗಲೀ ಅವನು ಹೇಳುತ್ತಿರುವುದಲ್ಲ. ನನ್ನ ಪ್ರಕಾರ ಇದು ಕೇವಲ ಅನುಭವಕ್ಕೆ ಸಂಬಂಧಿಸಿದ್ದು ಅಷ್ಟೆ. ಇಲ್ಲ, Manganelli ಹೇಳುತ್ತಿರುವುದು ಒಂದು ಬಗೆಯ ಹೊಳಹಿನ ಬಗ್ಗೆ. ಸಾಮಾನ್ಯವಾಗಿ ಎಲ್ಲರಲ್ಲೂ ಇರದ ಮತ್ತು ಸ್ಪಷ್ಟವಾಗಿ ತನ್ನಲ್ಲಿರುವ ಒಂದು ದೈವದತ್ತವೆನ್ನಬಹುದಾದ ಸಾಮರ್ಥ್ಯದ ಬಗ್ಗೆ. 

ಮನೋಶಾಸ್ತ್ರಜ್ಞ ಮತ್ತು ಸಾಹಿತ್ಯದ ಪ್ರೊಫೆಸರ್ Pierre Bayard ನ ಕೃತಿ How to Talk About Books You Haven’t Read ಇರುವುದು ನೀವು ಹೇಗೆ ಒಂದು ಪುಸ್ತಕವನ್ನು ಓದದೇ ಇರುವ ನಿರ್ಧಾರಕ್ಕೆ ಬರಬಹುದು ಎಂದು ತಿಳಿದುಕೊಳ್ಳುವ ಕುರಿತಾದ್ದಲ್ಲ. ಬದಲಿಗೆ ಹೇಗೆ ನೀವು ಓದದೇ ಇರುವ ಒಂದು ಕೃತಿಯ ಬಗ್ಗೆ ಆರಾಮವಾಗಿ, ಅದೂ ಆ ಕೃತಿ ವಿಶೇಷತಃ ಒಂದು ಬಹುಮುಖ್ಯ ಕೃತಿಯಾಗಿದ್ದರೂ ಕೂಡ, ನೀವು ಅದರ ಬಗ್ಗೆ ನಿಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದರೂ ಕೂಡ ಆರಾಮಾಗಿ ಮಾತನಾಡಬಹುದು ಎನ್ನುವ ಕುರಿತಾದ್ದು. ಆತನ ತರ್ಕ ವೈಜ್ಞಾನಿಕವಾದದ್ದು. ಒಂದು ಒಳ್ಳೆಯ ಲೈಬ್ರರಿಯಲ್ಲಿ ಮಿಲಿಯಗಟ್ಟಲೆ ಪುಸ್ತಕಗಳಿರುತ್ತವೆ. ನೀವು ದಿನಕ್ಕೊಂದರಂತೆ ಪುಸ್ತಕಗಳನ್ನು ಓದುವವರಾಗಿದ್ದರೂ ಕೂಡ ವರ್ಷಕ್ಕೆ 365 ಪುಸ್ತಕಗಳನ್ನೂ, ಹತ್ತು ವರ್ಷಗಳಲ್ಲಿ ಸುಮಾರು 3,600 ಪುಸ್ತಕಗಳನ್ನೂ ಓದಬಹುದು ಅಷ್ಟೆ. ನಿಮ್ಮ ಹತ್ತನೆಯ ವಯಸ್ಸಿನಿಂದ ಎಂಭತ್ತರ ಪ್ರಾಯದೊಳಗೆ ಹೀಗೆ ನೀವು ಓದಬಹುದಾದ ಪುಸ್ತಕಗಳು 25,200. ಇದು ತೀರ ಅಲ್ಪ. ಇದಕ್ಕೆ ಬದಲಾಗಿ, ಕೊಂಚ ಉತ್ತಮ ಶಿಕ್ಷಣ ಪಡೆದುಕೊಂಡ ಒಬ್ಬ ಇಟಾಲಿಯನ್‌ಗೆ ಕೂಡ Matteo Bandello, Francesco Guicciardini ಅಥವಾ Matteo Boiardo, Vittorio Alfieri ನ ದುರಂತ ನಾಟಕಗಳು ಅಥವಾ Ippolito Nievo ನ Confessions of an Italian ಕುರಿತ ಚರ್ಚೆಯಲ್ಲಿ ಸ್ವತಃ ತಾನು ಬರೇ ಹೆಸರುಗಳನ್ನು ಮತ್ತು ಒಂದಿಷ್ಟು ಸಾಂದರ್ಭಿಕ ವಿವರಗಳನ್ನು ಹೊರತುಪಡಿಸಿ ಒಂದಕ್ಷರ ಓದದಿದ್ದರೂ ಕೂಡ ಭಾಗವಹಿಸಬಲ್ಲೆ ಎನ್ನುವ ಬಗ್ಗೆ ಯಾವುದೇ ಅನುಮಾನವಿರುವುದಿಲ್ಲ. 

ಈ ಸಾಂದರ್ಭಿಕ ವಿವರಗಳೇ Bayard ಪ್ರಕಾರ ಅತ್ಯಂತ ಮಹತ್ವದ ಅಂಶ. ಅವನು ಒಂದಿಷ್ಟೂ ನಾಚಿಕೆಯಿಲ್ಲದೆ ತಾನೆಂದೂ ಜೇಮ್ಸ್ ಜಾಯ್ಸನ ಯೂಲಿಸಿಸ್ ಓದಿಲ್ಲವಾದರೂ ಅದು ಒಡಿಸ್ಸಿ ಮಹಾಕಾವ್ಯದ್ದೇ (ಅದನ್ನೂ ತಾನೆಂದೂ ಪೂರ್ತಿಯಾಗಿ ಓದಿಕೊಂಡಿಲ್ಲ ಎನ್ನುವುದನ್ನೂ ಒಪ್ಪಿಕೊಳ್ಳುತ್ತ) ಇನ್ನೊಂದು ಆವೃತ್ತಿ ಎಂದುಕೊಂಡು ಅದು ಆಂತರಿಕ ಸ್ವಗತದಂಥ ನೆಲೆಯಲ್ಲಿದೆ, ಡಬ್ಲಿನ್‌ನಲ್ಲಿ ಒಂದೇ ದಿನದಲ್ಲಿ ನಡೆಯುವ ಕತೆಯಿದೆ ಇತ್ಯಾದಿ, ಎಂದೆಲ್ಲ ತಾನು ಅದರ ಬಗ್ಗೆ ಮಾತನಾಡಬಲ್ಲೆ ಎಂದು ಹೇಳಿಕೊಳ್ಳುತ್ತಾನೆ. "ಇದರ ಪರಿಣಾಮವಾಗಿ, ನಾನು ಆಗಾಗ ಜೇಮ್ಸ್ ಜಾಯ್ಸನ್ನೇ ಒಂದಿಷ್ಟೂ ಆತಂಕವಿಲ್ಲದೆ ಆವಾಹಿಸಿಕೊಳ್ಳಬಲ್ಲೆ" ಎಂದಾತ ಬರೆಯುತ್ತಾನೆ. ಒಂದು ಪುಸ್ತಕಕ್ಕೂ ಇನ್ನೊಂದು ಪುಸ್ತಕಕ್ಕೂ ಇರುವ ನಂಟುಗಳನ್ನು ಅರಿತುಕೊಳ್ಳುವುದರ ಮೂಲಕ ನೀವು ನೇರವಾಗಿ ಒಂದು ಪುಸ್ತಕವನ್ನೇ ಓದಿ ತಿಳಿದುಕೊಳ್ಳುವುದಕ್ಕಿಂತಲೂ ಹೆಚ್ಚಿನದನ್ನು ಅದರ ಕುರಿತು ತಿಳಿದುಕೊಳ್ಳುವುದು ಕೂಡ ಸಾಧ್ಯವಿದೆ. 

ಅದು ಹೇಗೆಂದು ಕೂಡ Bayard ತಿಳಿಸುತ್ತಾನೆ. ಯಾರ ಗಮನಕ್ಕೂ ಬರದ ಕೆಲವೊಂದು ಪುಸ್ತಕಗಳನ್ನು ಓದುವಾಗ ನಿಮಗೆ ಅದರಲ್ಲಿನ ವಿವರಗಳನ್ನೆಲ್ಲ ಎಲ್ಲಿಯೋ ಓದಿದಂತೆ, ಈಗಾಗಲೇ ಕೇಳಿದ್ದಂತೆ ಅನಿಸಬಹುದು. ಅದೇಕೆಂದರೆ, ಅವುಗಳನ್ನು ಓದಿದವರು ಆ ಬಗ್ಗೆ ಮಾತನಾಡಿರಬಹುದು, ಅಲ್ಲಿನ ವಿವರಗಳನ್ನು ಕೋಟ್ ಮಾಡಿರಬಹುದು ಅಥವಾ ಅದೇ ನೆಲೆಯ ಮನೋಧರ್ಮದೊಂದಿಗೆ ಹೊಸದೇನಾದರೂ ಬರೆದಿರಬಹುದು. ಯಾವತ್ತೂ ಓದದೇ ಇರುವ Robert Musil, Graham Greene, Paul Valéry, Anatole France ಮತ್ತು David Lodge ಅಂಥವರ ಪುಸ್ತಕಗಳೂ ಸೇರಿದಂತೆ ಇಂಥ ಕೃತಿಗಳ ಕುರಿತೇ ಎಷ್ಟೊಂದು ಸಾಹಿತ್ಯಿಕ ಪಠ್ಯಗಳು ಲಭ್ಯವಿವೆ ಎನ್ನುವ ಬಗ್ಗೆ ಅವನು ಅತ್ಯಂತ ರೋಚಕವೆನ್ನಿಸುವ ಮಾಹಿತಿಯನ್ನೆಲ್ಲ ಕಲೆಹಾಕಿದ್ದಾನೆ. ನನ್ನ The Name of the Rose ಗೆ ಒಂದಿಡೀ ಅಧ್ಯಾಯವನ್ನು ಮೀಸಲಿಡುವ ಗೌರವವನ್ನು ಕೊಟ್ಟಿದ್ದು, ಅದರಲ್ಲಿ William of Baskerville ತಾನು ಅದೇ ಮೊದಲ ಬಾರಿ ಕೈಯಿಕ್ಕಿದ ಅರಿಸ್ಟಾಟಲ್‌ನ ಪೊಯೆಟಿಕ್ಸ್ ಕುರಿತ ಎರಡನೆಯ ಕೃತಿಯೊಂದಿಗೆ ಅದನ್ನು ಸಮೀಕರಿಸಿದ್ದಾನೆ. ಅರಿಸ್ಟಾಟಲ್ಲನ ಕೆಲವು ಪುಟಗಳಲ್ಲಿರುವ ವಿಚಾರವನ್ನೇ ತಾನು ಇಲ್ಲಿ ಕಂಡುಕೊಂಡೆ ಎನ್ನುವ ಸರಳವಾದ ಕಾರಣವನ್ನಿಟ್ಟುಕೊಂಡು ಆತ ಇದನ್ನು ಮಾಡುತ್ತಾನೆ. ಬರೇ ಕೊಚ್ಚಿಕೊಳ್ಳುವುದಕ್ಕೆ ನಾನಿದನ್ನಿಲ್ಲಿ ಹೇಳುತ್ತಿಲ್ಲ, ಅದು ನಿಮಗೆ ಈ ಲೇಖನದ ಕೊನೆಯಲ್ಲಿ ಗೊತ್ತಾಗಲಿದೆ. 

ಮೇಲ್ನೋಟಕ್ಕೆ ಕೊಂಚ ವಿರೋಧಾಭಾಸ ಎನಿಸಿದರೂ ಹಾಗೇನೂ ಅಲ್ಲದ ಕುತೂಹಲಕಾರಿ ಸಂಗತಿಯೊಂದಿದೆ ಈ ಪುಸ್ತಕದಲ್ಲಿ. ನಿಜವಾಗಿಯೂ ಓದಿದ ಪುಸ್ತಕದಲ್ಲಿನ ಸಾಕಷ್ಟು ಅಂಶಗಳನ್ನು ಕೂಡ ನಾವು ಕಾಲಕ್ರಮೇಣ ಮರೆತು ಬಿಟ್ಟಿರುತ್ತೇವೆ. ಅಲ್ಲದೆ, ನಾವೇ ಅಂಥ ಪುಸ್ತಕಗಳ ಬಗ್ಗೆ ನಮ್ಮದೇ ಆದ ಒಂದು ಪರ್ಯಾಯ ಚಿತ್ರವನ್ನು ಕೂಡ ನಮ್ಮ ಮನಸ್ಸಿನಲ್ಲಿ ಕಟ್ಟಿಕೊಂಡಿರುತ್ತೇವೆ ಮತ್ತು ಅದು ಹೇಗಿರುತ್ತದೆಂದರೆ ಪುಸ್ತಕದಲ್ಲಿಲ್ಲದ, ಆದರೆ ನಮ್ಮ ಮನಸ್ಸಿನಲ್ಲಿ ನಾವೇ ನಂಬಿ ಸೃಷ್ಟಿಸಿಕೊಂಡ ಚಿತ್ರವಷ್ಟೇ ಆಗಿರುತ್ತದೆ. ಹೀಗಾಗಿ ಪುಸ್ತಕವನ್ನೇ ಓದಿರದ ಒಬ್ಬ ವ್ಯಕ್ತಿ ಆ ಕೃತಿಯಿಂದ ಅದರಲ್ಲಿಲ್ಲದ ಕೆಲವು ಸಂದರ್ಭಗಳನ್ನೋ, ಪರಿಚ್ಛೇದವನ್ನೋ ಇದೆ ಎಂಬಂತೆ ಹೇಳತೊಡಗಿದರೆ, ನಾವು ಹೆಚ್ಚೇನೂ ತಕರಾರಿಲ್ಲದೆ ಬಹುಶಃ ಅವೆಲ್ಲ ಆ ಪುಸ್ತಕದಲ್ಲಿದ್ದಾವೆ ಎಂದೇ ಒಪ್ಪಿಕೊಂಡು ಬಿಡಲು ತಯಾರಿರುತ್ತೇವೆ. 

Bayard ಮೂಲತಃ, ಪ್ರಾಸಂಗಿಕವಾಗಿ ಬೇರೆಯವರು ಬರೆದ ಪುಸ್ತಕಗಳನ್ನು ಓದುವ ಮಂದಿಯಲ್ಲಿ ಅಷ್ಟು ಆಸಕ್ತನಲ್ಲ. ಒಬ್ಬ ಸಾಹಿತ್ಯದ ಪ್ರೊಫೆಸರ್‌ಗಿಂತ ಒಬ್ಬ ಮನಃಶಾಸ್ತ್ರಜ್ಞನ ಧ್ವನಿಯಲ್ಲಿ ಆತ ಇಲ್ಲಿ ಹೇಳುವುದೇನಿದೆ ಗಮನಿಸಿ. ಪ್ರತಿಯೊಂದು ಓದು ಅಥವಾ ಓದದವನ ಕಲ್ಪಿತ ಓದು ಅಥವಾ ಅರೆಬರೆಯಾದ ಒಟ್ಟಾರೆ ಓದು - ಪ್ರತಿಯೊಂದೂ ಓದಿಗೆ ತನ್ನದೇ ಆದ ಒಂದು ಸೃಜನಾತ್ಮಕವಾದ ಮಗ್ಗುಲಿದ್ದೇ ಇದೆ, ಅಂದರೆ, ಸರಳವಾಗಿ ಹೇಳುವುದಾದರೆ,
ಓದುಗನೂ ತನ್ನದೇ ಆದ ಕೊಡುಗೆಯನ್ನು ಇಲ್ಲಿ ನೀಡುತ್ತಿರುತ್ತಾನೆ. ಆಮೇಲೆ ಅವನು ತಾವು ಓದದೇ ಇರುವ ಪುಸ್ತಕಗಳನ್ನು ಕೂಡ "ಸಂಶೋಧಿಸ"ಬಲ್ಲ ಶಾಲಾ ಮಕ್ಕಳ ಸಾಮರ್ಥ್ಯವೇನಿದೆ, ಅದು ಭವಿಷ್ಯದಲ್ಲಿ ಏನೇನು ಅದ್ಭುತಗಳನ್ನುಂಟು ಮಾಡಬಹುದು ಎಂಬ ಬಗ್ಗೆಯೂ ತನ್ನ ಗಮನ ಹರಿಸುತ್ತಾನೆ. 

ಇದಲ್ಲದೆ ಹೇಗೆ ಒಬ್ಬ ವ್ಯಕ್ತಿ ತಾನು ಓದದೇ ಇರುವ ಕೃತಿಯ ಕುರಿತು ಮಾತನಾಡುವಾಗ ಆ ಕೃತಿಯನ್ನು ಓದಿರುವವರೂ ಕೂಡ ಆತ ಅಥವಾ ಆಕೆ ಹೇಳುತ್ತಿರುವುದು ತಪ್ಪು ಎನ್ನುವುದನ್ನು ಗುರುತಿಸಲಾರದೇ ಹೋಗುತ್ತಾರೆನ್ನುವುದನ್ನು Bayard ಪುರಾವೆ ಸಮೇತ ವಿವರಿಸುತ್ತಾನೆ. ಪುಸ್ತಕದ ಕೊನೆಯಲ್ಲಿ ಅವನು ನನ್ನ The Name of the Rose, Graham Greene ಬರೆದ The Third Man ಮತ್ತು David Lodge ನ ಕೃತಿ Changing Places ಗಳ ತನ್ನದೇ ಸಂಕ್ಷಿಪ್ತ ಆವೃತ್ತಿಯಲ್ಲಿ ತಾನು ಸೇರಿಸಿದ ಮೂರು ತಪ್ಪುಗಳ ಬಗ್ಗೆ ಸ್ವತಃ ಒಪ್ಪಿಕೊಳ್ಳುತ್ತಾನೆ. ತಮಾಷೆ ಎಂದರೆ, ಅದನ್ನು ನಾನೇ ಓದಿದಾಗ Graham Greene ವಿಷಯದಲ್ಲಿ ತಕ್ಷಣವೇ ಆ ತಪ್ಪು ಗಮನಕ್ಕೆ ಬಂತು. David Lodge ನ ಕೃತಿಯ ವಿಚಾರದಲ್ಲಿ ಅನುಮಾನವೆದ್ದಿತ್ತು. ಆದರೆ ನನ್ನ ಸ್ವಂತ ಕೃತಿಯ ಆವೃತ್ತಿಯಲ್ಲಿ ನುಸುಳಿದ ತಪ್ಪು ನನ್ನ ಗಮನಕ್ಕೇ ಬರಲಿಲ್ಲ! ಬಹುಶಃ ನಾನು Bayard ನ ಸಂಕ್ಷಿಪ್ತ ಆವೃತ್ತಿಯನ್ನು ಸರಿಯಾಗಿ ಓದಿಲ್ಲ ಎನ್ನುವುದನ್ನಿದು ಸೂಚಿಸುತ್ತದೆ. ಅಥವಾ, ಪರ್ಯಾಯವಾಗಿ, ಆ ವಿವರ ಹೇಗಿದ್ದಿರಬಹುದೆಂದರೆ, ಅವನು ಮತ್ತು ನನ್ನ ಓದುಗರು ಕೂಡ ನನ್ನ ಕೃತಿಯಲ್ಲಿನ ವಿವರವನ್ನು ಹೀಗೂ ಇರಬಹುದು ಎಂದು ಊಹಿಸಲು ಸ್ವತಂತ್ರರು. ನಾನು ಮೇಲು ಮೇಲಕ್ಕೆ ಓದಿಕೊಂಡಿದ್ದಿರಬೇಕು ಅವನ ಕೃತಿಯನ್ನು. ಆದರೆ ತುಂಬ ಕುತೂಹಲದ ಸಂಗತಿಯೆಂದರೆ, ತನ್ನ ಉದ್ದೇಶಿತ ಮೂರು ತಪ್ಪುಗಳನ್ನು ಒಪ್ಪಿಕೊಳ್ಳುತ್ತ ಆತ ಒಂದು ಕೃತಿಯನ್ನು ಇದೊಂದೇ ಬಗೆಯಲ್ಲಿ ಓದುವುದು ಹೆಚ್ಚು ಸರಿಯಾದ್ದು, ಉಳಿದೆಲ್ಲ ಓದು ಇದರೆದುರು ಕಳಪೆ ಎನ್ನುತ್ತಿದ್ದಾನೆ. Bayard ಒಂದು ಕೃತಿಯನ್ನು ಹಲವು ನಿಟ್ಟಿನಿಂದ ಕಾಣಬಹುದು ಮತ್ತು ಅದಕ್ಕೆ ಪರ್ಯಾಯ ನೆಲೆಯ ಓದಿನ ಸಾಧ್ಯತೆಗಳಿವೆ ಎನ್ನುವುದನ್ನು ಕಾಣಲು ವಿಫಲನಾಗುತ್ತಾನೆ. ಹೀಗೆ, ಪುಸ್ತಕಗಳನ್ನು ಓದದೆಯೂ ಓದಿದವರಂತೆ ಇರಬಹುದೆನ್ನುವ ತನ್ನ ಪ್ರಮೇಯವನ್ನು ಮಂಡಿಸುವುದಕ್ಕಾಗಿ ಅವನು ತಾನು ಉಲ್ಲೇಖಿಸುವ ಪುಸ್ತಕಗಳ ಕೂಲಂಕಶ ಅಧ್ಯಯನವನ್ನು ಎಚ್ಚರದಿಂದಲೇ ಮಾಡುತ್ತಾನೆ. ಈ ವಿರೋಧಾಭಾಸವಂತೂ ಎಷ್ಟು ಕಣ್ಣಿಗೆ ಹೊಡೆದು ಕಾಣುವಂತಿದೆ ಎಂದರೆ, Bayard ತಾನು ಬರೆದ ಈ ತನ್ನದೇ ಪುಸ್ತಕವನ್ನು ಸರಿಯಾಗಿ ಓದಿರುವನೇ ಎನ್ನುವ ಅನುಮಾನ ಹುಟ್ಟುತ್ತದೆ.

(Eco, Umberto Chronicles of a Liquid Society (p. 248))

No comments: