Sunday, December 30, 2018

ಮುತ್ತಿನಂಥ ಕತೆಗಾರ ಮುತ್ತುಸ್ವಾಮಿ

ಎನ್ ಮುತ್ತುಸ್ವಾಮಿಯವರ ಕತೆಗಳನ್ನು ಓದಬೇಕೆಂದರೆ ಲಭ್ಯವಿರುವುದು "ಕಥಾ" ಹೊರತಂದ "ವಾಟರ್‌ನೆಸ್" (ನೀರ್ಮಯಿ) ಮತ್ತು ಅವರು ತೀರಿಕೊಳ್ಳುವ ಕೆಲವೇ ಕಾಲದ ಮೊದಲು ವೆಸ್ಟ್‌ಲ್ಯಾಂಡ್ ಬುಕ್ಸ್ ಹೊರತಂದ "ಬುಲ್ಲಕ್ಸ್ ಫ್ರಮ್‌ ದ ವೆಸ್ಟ್" ಎಂಬ ಎರಡೇ ಎರಡು ಕಥಾಸಂಕಲನಗಳು ಮಾತ್ರ. ಇಷ್ಟೊಂದು ಚೆನ್ನಾದ ಕತೆಗಳನ್ನು ಬರೆಯುತ್ತಿದ್ದ ಕತೆಗಾರನನ್ನು ಕಾಲ ಹೇಗೆ ಮರೆತು ಬಿಟ್ಟಿತು ಎಂದು ಅಚ್ಚರಿ ಪಟ್ಟರೆ, ಅವರ ಸಂದರ್ಶನಕ್ಕೆಂದು ಹೋದ ಕಿರಣ್ ಕೇಶವಮೂರ್ತಿಯವರಿಗೇ ಅಚ್ಚರಿಯಾಗುವಂತೆ ತಮಗೆ ತಾವು ಬರೆದ ಕತೆಗಳ ನೆನಪೇ ಇಲ್ಲ, ಅವುಗಳನ್ನೆಲ್ಲ ತೀರ ಹಿಂದೆ ಬರೆದೆ, ಈಗ ಅವುಗಳ ನೆನಪು ಆಗುತ್ತಿಲ್ಲ ಎಂದು ಬಿಟ್ಟರಂತೆ ಸ್ವತಃ ಕತೆಗಾರ ಮುತ್ತುಸ್ವಾಮಿ! ಸಿನಿಮಾ, ರಂಗಭೂಮಿ ಎಂದೆಲ್ಲ ತಮ್ಮ ಕಾರ್ಯಕ್ಷೇತ್ರ ಬದಲಾದಂತೆ ಮುತ್ತುಸ್ವಾಮಿ ಕತೆಗಳನ್ನು ಬರೆಯುವುದನ್ನು ಬಿಟ್ಟು ಬಿಟ್ಟರು. ಆದರೆ ಮೊನ್ನೆ ಮೊನ್ನೆ ಅಕ್ಟೋಬರ್ 24, 2018ರಂದು ತಮ್ಮ 82ನೆಯ ವಯಸ್ಸಿನಲ್ಲಿ ಕಣ್ಮರೆಯಾದ ಎನ್ ಮುತ್ತುಸ್ವಾಮಿ ಒಬ್ಬ ಅದ್ಭುತ ಕತೆಗಾರ ಎನ್ನುವುದನ್ನು ತಿಳಿದೂ ಅವರ ಲಭ್ಯ ಕತೆಗಳನ್ನು ಗಮನಿಸದೇ ಹೋದರೆ ಅದು ನಮಗಾಗುವ ಅತಿದೊಡ್ಡ ನಷ್ಟ.

ಮುತ್ತುಸ್ವಾಮಿಯವರ ಕತೆಗಳಲ್ಲಿ ಥಟ್ಟನೇ ಗಮನ ಸೆಳೆವ ಆಕರ್ಷಕ ವಿಚಾರವೆಂದರೆ ಅವರು ಸಮೃದ್ಧವಾಗಿ ತರುವ, ತರುವಾಗ ಕುಸುರಿ ಕಲೆಯಷ್ಟೇ ಕೌಶಲ ಮತ್ತು ಸೂಕ್ಷ್ಮ ನಿರ್ವಹಿಸುವ ಹಳ್ಳಿ ಬದುಕಿನ ವಿವರಗಳು. ಈ ವಿಷಯದಲ್ಲಿ ಅವರ ನೆನಪಿನ ಶಕ್ತಿ ಮತ್ತು ಹಳ್ಳಿ ಬದುಕಿನ ಕುರಿತ ಪ್ರೀತಿ ಎರಡೂ ಅಚ್ಚರಿ ಹುಟ್ಟಿಸುತ್ತವೆ. ನಾವು ನೀವು ಸ್ವತಃ ಕಂಡಿರಬಹುದಾದ, ಬದುಕಿದ ಒಂದು ಬದುಕಿನದ್ದೇ ಅನಿಸುವ, ಓದುತ್ತ ಥಟ್ಟನೆ ನನ್ನ ಬಾಲ್ಯದಲ್ಲೂ ಇದನ್ನೆಲ್ಲ ಅನುಭವಿಸಿದ್ದೆನಲ್ಲಾ ಎಂಬ ಹಳಹಳಿಕೆ ಹುಟ್ಟುವಂಥ, ನಾವೆಂದೂ ಇಷ್ಟು ಸಮೃದ್ಧವಾಗಿ ನೆನಪಿಸಿಕೊಳ್ಳಲು ಸಾಧ್ಯವೆಂದೇ ನಂಬದಿದ್ದ ವಿವರಗಳು ಇನ್ನಷ್ಟು ಮತ್ತಷ್ಟು ಬರಲಿ ಅನಿಸುವಷ್ಟು ಈ ವಿವರಗಳು ಆಕರ್ಷಕ, ಜೀವಂತ ಮತ್ತು ಸೂಕ್ಷ್ಮ.

ಎರಡನೆಯದಾಗಿ ಮುತ್ತುಸ್ವಾಮಿಯವರು ಕಟ್ಟಿದ ಕತೆಗಳ ವೈವಿಧ್ಯತೆ. ಅದು ವಸ್ತು, ತಂತ್ರ ಮತ್ತು ಹೊಸತನ ಮೂರೂ ನೆಲೆಯಲ್ಲಿ ಸಲ್ಲುವ ಮಾತು. "ವಾಟರ್‌ನೆಸ್" ಸಂಕಲನದಲ್ಲಿ ಒಟ್ಟು ಹತ್ತು ಕತೆಗಳಿವೆ. "ಬುಲ್ಲಕ್ಸ್ ಫ್ರಮ್ ದ ವೆಸ್ಟ್" ಸಂಕಲನದಲ್ಲಿರುವುದು ಐದು ಕತೆಗಳು ಮತ್ತು ಒಂದು ನಾಟಕ. ಐದು ಕತೆಗಳಲ್ಲಿ ವಾಟರ್‌ನೆಸ್ ಕತೆ ಮರುಕಳಿಸಿದೆಯಾದರೂ ಎರಡೂ ಸಂಕಲನಗಳ ಅನುವಾದಕರು ಬೇರೆ ಬೇರೆಯವರಾದ್ದರಿಂದ ಮತ್ತೊಮ್ಮೆ ಓದಬಹುದು. ನಾನಿಲ್ಲಿ ಪ್ರಸ್ತಾಪಿಸುತ್ತಿರುವುದು "ಕಥಾ" ದವರು ಪ್ರಕಟಿಸಿದ ಸಂಕಲನದ ಕತೆಗಳ ಬಗ್ಗೆ ಮಾತ್ರ.

ಮುತ್ತುಸ್ವಾಮಿಯವರ ಕತೆಗಳನ್ನು ಕತೆಗಾಗಿ ಓದುವುದು ಸಾಧ್ಯವಿಲ್ಲ. ಅವರ ಹಲವಾರು ಕತೆಗಳಲ್ಲಿ ಏನೂ ನಡೆಯುವುದಿಲ್ಲ. ಉದಾಹರಣೆಗೆ "ಚೆಂಬನರ್ಕೋಲಿಗೆ ಹೋಗುವುದಾದರೂ ಹೇಗೆ?" ಎಂಬ ಕತೆಯಲ್ಲಿ ಬರೇ ಚೆಂಬನರ್ಕೋಲಿಗೆ ಹೊರಟ ಒಬ್ಬ ಎತ್ತಿನ ಗಾಡಿಗಾಗಿ ಪ್ರಯತ್ನಿಸುವುದರ ಚಡಪಡಿಕೆಯಷ್ಟೇ ಇದೆ. "ಯಾರಾದಾರು ನನ್ನ ಆಶ್ರಯದಾತರು", "ಜೇನುಗೂಡು ಮತ್ತು ಹಾವು" ಮುಂತಾದ ಕತೆಗಳೂ ಇದೇ ಸಾಲಿಗೆ ಸೇರುತ್ತವೆ. ಹಾಗಿದ್ದೂ ಈ ಕತೆಗಳ ರಂಜಕತೆ ಕಿಂಚಿತ್ತೂ ಕಡಿಮೆಯಿಲ್ಲ. ಅದಕ್ಕೆ ಇಲ್ಲಿನ ಸಮೃದ್ಧ ವಿವರಗಳು, ಹಳ್ಳಿ ಬದುಕಿನ ದೈನಂದಿನ, ಅಲ್ಲಿ ಸಮಯ ಸಾಗುವ ಒಂದು ನಿಧಾನಗತಿ, ಜನರ ಪರಸ್ಪರ ಅವಲಂಬನ-ಸಂಬಂಧ-ಪ್ರೀತಿ ಹೊರಹೊಮ್ಮುವ ಮಾತುಕತೆಗಳು ಎಲ್ಲ ನಮ್ಮನ್ನು ಸದಾ ಮುಗುಳ್ನಗುತ್ತಲೇ ಇವನ್ನೆಲ್ಲ ಓದುವಂತೆ ಮಾಡುತ್ತವೆ, ಓದು ಮುದ ನೀಡುತ್ತದೆ, ಮುಗಿಯುತ್ತಲೇ ‘ಅಯ್ಯೊ, ಮುಗಿದೇ ಹೋಯ್ತಲ್ಲ’ ಅನಿಸುವಂತೆ ಮಾಡುತ್ತದೆ.

ಹಾಗೆ ನೋಡಿದರೆ "ಪುಂಜಾಯಿಯಲ್ಲಿ ಸಮಯ ಕೊಲ್ಲುವುದು" ಎಂಬ ಹೆಸರಿನ ಕತೆಯಲ್ಲೇ ಗಟ್ಟಿಯಾದ ಕಥಾನಕ, ಇಡೀ ಕತೆಗೆ ರೂಪಕವಾಗಬಲ್ಲ ಪ್ರತಿಮೆಗಳ ಬಳಕೆ ಎಲ್ಲ ಇದೆ! ಅಲ್ಲದೆ ಬಾಲ್ಯಕಾಲದ ಸಖಿಯೊಬ್ಬಳಿಗಾಗಿ ಕಾಯುವ ಪ್ರಬುದ್ಧ ಗ್ರಹಸ್ಥನಿದ್ದಾನಿಲ್ಲಿ. ಅವಳಿಗೀಗ ಮದುವೆಯಾಗಿದೆ, ಮಗನಿದ್ದಾನೆ. ಸಂಸಾರದಲ್ಲಿ ಸಮಸ್ಯೆಯೂ ಇದೆ. ವಿಪರೀತವೆನಿಸುವ ಏನೂ ಇಲ್ಲದಿದ್ದರೂ ಇವನು ಊರಿಗೆ ಬಂದಾಗಲೇ ಅವಳೂ ಊರಲ್ಲಿರುತ್ತ ಅವಳು ಮನೆಗೆ ಬರುವುದನ್ನು ಕಾಯುತ್ತ ಇರುವಾಗಲೇ ನಡೆಯುವ ಹಳ್ಳಿ ಬದುಕಿನ ವಿದ್ಯಮಾನಗಳು ಕತೆಯ ಕಾಯುವಿಕೆಯನ್ನು ಜೀವಂತವಾಗಿಡುತ್ತದೆ ಮಾತ್ರವಲ್ಲ, ಗಂಡು ಹೆಣ್ಣು ಸಂಬಂಧಕ್ಕೆ ಪೂರಕವಾದ ಮತ್ತಷ್ಟು ವಿವರಗಳನ್ನು ಕಲೆಹಾಕುತ್ತ ಸಾಗುತ್ತದೆ. ಈ ಸಾವಿತ್ರಿ ಎಂಥ ಜೀವಂತಿಕೆಯ, ಚೈತನ್ಯದ ಬುಗ್ಗೆ ಎಂದರೆ ಕತೆ ಮುಗಿಯುವಾಗ ಅದು ಮುಗಿಯಬಾರದಿತ್ತು ಎಂದು ಅನಿಸಿಯೇ ಅನಿಸುತ್ತದೆ!

ಹಲವಾರು ಬಾರಿ ಬಾವಿಗೆ ಬಿದ್ದು ಅನುಭವವಿರುವ ಹುಡುಗನೊಬ್ಬ ತಾನು ಮೂರು ವರ್ಷದವನಿರುವಾಗ ಮೊತ್ತ ಮೊದಲ ಬಾರಿ ಬಾವಿಗೆ ಬಿದ್ದ ಕತೆ ಹೇಳುವ "ಒಂದು ಘಟನೆ" ಎಂಬ ಕತೆಯಂತೂ ಎಷ್ಟೊಂದು ಖುಶಿ ಕೊಡುತ್ತದೆ ಎಂದರೆ ಅದನ್ನು ನೀವು ಓದಿಯೇ ಅನುಭವಿಸಬೇಕು! "ಅವನ ಅಪ್ಪನ ಶಾಲೆ", "ಮೃತ್ಯು" ಕತೆಗಳಲ್ಲಿಯೂ ಕಥಾನಕ ಮೇಲ್ಗೈ ಸಾಧಿಸಿದೆ ಮತ್ತು ಇವೆರಡೂ ಕತೆಗಳು ಉಳಿದ ಕತೆಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕವೂ ಆಗಿವೆ. ಅದೇ "ಎತ್ತಿನಗಾಡಿ" ಕತೆ ಸುಮ್ಮನೇ ಗಾಡಿ ಸಾಗುವ ವಿವರಗಳು ಅನಿಸುವಾಗಲೂ ಅದನ್ನು ಮೀರಿದ ಇನ್ನೇನೋ ಇದೆ ಅದರಲ್ಲಿ ಎಂಬಂತೆ ನಿಗೂಢವಾದ ಸ್ತರವೊಂದನ್ನು ಕೊನೆತನಕ ಕಾಪಿಟ್ಟುಕೊಳ್ಳುತ್ತದೆ. "ಜೇನುಗೂಡು ಮತ್ತು ಹಾವು" ಕತೆಯಂತೂ ಅಸಂಗತ ನಾಟಕದಂತೆ ಅರ್ಥವಾಗದ ಲಯ, ಗುಟ್ಟು ಕಾಪಾಡಿಕೊಂಡೇ ಮುಗಿಯುತ್ತದೆ.

ಎರಡೂ ಸಂಕಲನಗಳಲ್ಲಿ ಅವಕಾಶ ಪಡೆದುಕೊಂಡ ಮತ್ತು ಮೊದಲ ಸಂಕಲನಕ್ಕೆ ಹೆಸರು ಕೊಟ್ಟ ಕತೆ "ವಾಟರ್‌ನೆಸ್" (ನೀರ್ಮಯಿ) ಒಬ್ಬ ಬಾಲವಿಧವೆಯ ಕುರಿತಾಗಿದೆ. ಇಡೀ ಹಳ್ಳಿಯ ಕೇಂದ್ರವೆಂಬಂತಿರುವ ಈ ಬಾಲವಿಧವೆ ತನ್ನ ಹತ್ತನೇ ವಯಸ್ಸಿಗೆ ವಿಧವೆಯಾದಾಕೆ. ಮುಂದೆ ಮುವ್ವತ್ತು ವರ್ಷ, ತನ್ನ ತಂದೆ ಸತ್ತ ದಿನದ ವರೆಗೆ ಹೊರಗೆ ತಲೆ ಹಾಕದೆ ಗೃಹಬಂಧಿಯಂತೆ ಬದುಕು ಕಳೆದ ಈಕೆಗೆ ತನ್ನ ನಲವತ್ತನೆಯ ವಯಸ್ಸಿನಲ್ಲಿ ಹೊರಬಂದಾಗ ಬದಲಾದ ಊರು, ಬೀದಿ, ಮನೆಗಳು, ಕಾಲದೊಂದಿಗೆ ಬೆಳೆದ ಬಾಲ್ಯದ ಗೆಳೆಯರು, ಸಹವರ್ತಿಗಳು, ಊರ ಗಣ್ಯರು ಯಾವುದೂ ತನ್ನದೇ ಬಾಲ್ಯದ ಸ್ಮೃತಿಯೊಂದಿಗೆ ತಾಳೆಯಾಗದ ಗೊಂದಲ ಉಂಟು ಮಾಡುವ ತಲ್ಲಣ ಬಹುಶಃ ಯಾರಿಗೂ ಅರ್ಥವಾಗದ್ದು. ಅವಳ ಕಾಲದ ಗಡಿಯಾರ ಎಲ್ಲೋ ನಿಂತು ಬಿಟ್ಟಿದೆ. ಕತೆಗಾರನಾಗಿ ಮುತ್ತುಸ್ವಾಮಿ ಅದನ್ನು ಗಮನಿಸುವ, ಕತೆಯಲ್ಲಿ ತರುವ ವಿಧಾನ ಅದ್ಭುತವಾದದ್ದು. ಕುರುಡಿಯಂತೆ, ಕಿವುಡಿಯಂತೆ ಬದುಕುವ ಈಕೆ ತಿಳಿದೋ ತಿಳಿಯದೆಯೊ ಊರ ಕೇಂದ್ರವಾಗಿದ್ದಾಳೆ. ಅಂದರೆ, ಮುಟ್ಟಿನ ಸ್ತ್ರೀಯರು ನೀರು ಎರೆದುಕೊಳ್ಳುವ ದಿನ ಸ್ನಾನಕ್ಕೆ ಹೋಗುವ ಕೊಳ್ಳದ ಬಳಿ ಅವರ ನೆರವಿಗೆ ಬರುವ ಮುದುಕಿ ಈಕೆ. ಅಲ್ಲಿ ಭೂತವಿದೆ, ಅದು ಮುಟ್ಟಾದ ಹುಡುಗಿಯರ ಆಪ್ತಗೆಳತಿಯ ರೂಪ ಧರಿಸಿ ಜೊತೆಗೇ ಬರುತ್ತದೆ, ಗೊತ್ತೇ ಆಗುವುದಿಲ್ಲ - ಮುಂತಾದ ವದಂತಿಗಳಿರುತ್ತವೆ. ಹಾಗಿದ್ದೂ ಇಡೀ ಊರು ಇವಳನ್ನು ನಿರ್ಲಕ್ಷಿಸುತ್ತದೆ, ಅವಮಾನಿಸುತ್ತದೆ, ಅವಲಕ್ಷಣ ಎಂದು ದೂರವಿಡುತ್ತದೆ, ಅವಳು ಒಂದು ಪ್ರೇತವೋ ಎಂಬಂತೆ ಕಾಣುತ್ತದೆ. ಆದರೆ ಮುತ್ತುಸ್ವಾಮಿಯವರ ನಿರೂಪಣೆಯಲ್ಲಿ ಇದ್ಯಾವುದೂ ಕಾಣಿಸುವುದೇ ಇಲ್ಲ. ಬರೀ ಅನುಭವಕ್ಕೆ ಬರುವಂತೆ ಮಾತ್ರ ಇರುವ, ನಿರೂಪಣೆಯಲ್ಲಿ ಒಂದು ಹಳ್ಳಿಯ ಸಹಜ ದೈನಂದಿನ ಸಾಗುತ್ತಿದೆ ಎಂಬಂತೆ ಬರುವ ವಿವರಗಳು ಕತೆಯ ಅಂತ್ಯಕ್ಕೆ ಬರುವಷ್ಟರಲ್ಲಿ ನಿಮ್ಮನ್ನು ಆರ್ದ್ರಗೊಳಿಸಿರುತ್ತವೆ. ಇದು ಮುತ್ತುಸ್ವಾಮಿಯವರ ಕಥನ ಕೌಶಲದ ಶ್ರೇಷ್ಠತೆ.

ಮುತ್ತುಸ್ವಾಮಿಯವರ ನಿರೂಪಣಾ ಶೈಲಿ ಎಂಥದ್ದೆಂದರೆ ಅವರು ಎಲ್ಲಿಯೂ ಕತೆ ಹೇಳುತ್ತಿದ್ದಾರೆ ಅನಿಸುವುದಿಲ್ಲ. ಕತೆ ಬರೆಯುತ್ತಿದ್ದಾರೆಂದು ಅನಿಸುವುದಂತೂ ಇಲ್ಲವೇ ಇಲ್ಲ. ನೀವು ಸ್ವತಃ ನಿಮ್ಮ ಕಣ್ಣೆದುರು ಕಾಣುತ್ತಿರುವ ವಿದ್ಯಮಾನಗಳಂತೆ ಇವರ ನಿರೂಪಣೆ ಇದೆ. ಪ್ರಜ್ಞಾಪೂರ್ವಕವಾದ ಏನೊಂದೂ ಇಲ್ಲದ ಸಹಜ ಸುಂದರ ಕಥಾನಕಗಳು ಇವು. ಮಿಸ್ ಮಾಡಿಕೊಳ್ಳದೇ ಓದ ಬೇಕಾದ ಕತೆಗಳು.

ಮುತ್ತುಸ್ವಾಮಿಯವರ ಕತೆಗಳಿಗೆ ಬಹುಶಃ ಸಿಗಬೇಕಾದ ಮಾನ್ಯತೆ ಅಂದೂ ಸಿಕ್ಕಿರಲಿಕ್ಕಿಲ್ಲ. ಹಾಗಾಗಿಯೋ ಏನೋ ಅವರು ರಂಗಭೂಮಿ, ಸಿನಿಮಾ ಎಂದು ಬೇರೆ ಕ್ಷೇತ್ರಕ್ಕೆ ಹೊರಳಿಕೊಂಡಿರಬೇಕು. ಈಗಲೂ ಅವರ ಕತೆಗಳಿಗೆ ಸಿಗಬೇಕಾದ ಮಾನ್ಯತೆ ಸಿಕ್ಕಿದಂತಿಲ್ಲ. ಮೊನ್ನೆ ಮೊನ್ನೆ ಅವರು ತೀರಿಕೊಂಡಾಗಲೇ ಅವರೊಬ್ಬ ಅಪ್ರತಿಮ ಪ್ರತಿಭೆಯ ಕತೆಗಾರ ಆಗಿದ್ದರು ಎನ್ನುವುದನ್ನು ಸಾಹಿತ್ಯದ ಜಗತ್ತು ನೆನೆಯಿತು. ಈ ಕತೆಗಳೆಲ್ಲ ಕನ್ನಡಕ್ಕೆ ಬಂದರೆ ಚೆನ್ನ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, December 26, 2018

ಕೇಶವ ಮಳಗಿಯವರ ‘ಒಂದೇ ಗುರಿ ಬೇರೆ ದಾರಿ’


ಸಮಾಜದ ಅತಿ ಕೆಳಸ್ತರದ ವ್ಯಕ್ತಿಗೆ ಕನೆಕ್ಟ್ ಆಗದ, ರಿಲೆವಂಟ್ ಅನಿಸದ ಯಾವುದೇ ಸಮಾಜಮುಖಿ ಚಿಂತನೆ ಬರೆದವನಿಗೆ ಖ್ಯಾತಿ, ಪ್ರಶಸ್ತಿ ತಂದುಕೊಡಬಹುದೇ ಹೊರತು ಬೇರೆ ಯಾರಿಗೂ ಅದರಿಂದ ಕಿಂಚಿತ್ತು ಉಪಯೋಗವಿಲ್ಲ. ಅಲ್ಲದೆ ಇಂಥ ಸಂಶೋಧನಾ ಗ್ರಂಥಗಳಲ್ಲಿ ಹೆಚ್ಚಾಗಿ ಕಂಡುಬರುವ ಇನ್ನೊಂದು ಸಮಸ್ಯೆಯಿದೆ. ಅದೆಂದರೆ ಇಂಥ ಕೃತಿಯಲ್ಲಿ ಕಂಡುಬರುವ ಕಾರಕೂನಿ ಅನುವಾದದ ಹೊರೆ. ಎಷ್ಟೋ ಬಾರಿ ಮಾಧ್ಯಮಿಕ ತರಗತಿಗಳಲ್ಲಿ ಇಂಗ್ಲೀಷ್ ಕಲಿತವನಿಗೂ ಈ ಅನುವಾದಕ್ಕಿಂತ ಮೂಲದ ಇಂಗ್ಲೀಷು ಸುಲಭ ಎನಿಸುವಂತಿರುತ್ತದೆ! ಇಂಥ ಕೆಲವು ಪೂರ್ವಾಗ್ರಹಗಳನ್ನು ಇಟ್ಟುಕೊಂಡೇ ಇಂಥ ಪುಸ್ತಕಗಳನ್ನು ಕೈಗೆತ್ತಿಕೊಳ್ಳುವ ನನಗೆ ಕೇಶವ ಮಳಗಿಯವರ ಹೊಸ ಪುಸ್ತಕ "ಒಂದೇ ಗುರಿ ಬೇರೆ ದಾರಿ: ಭಾರತೀಯ ಸಂವಾದ ಪರಂಪರೆ" ತುಂಬ ಮಹತ್ವದ್ದು ಎನಿಸುವುದು ಇದು ಇವತ್ತಿನ ನಮ್ಮ ಸಮಾಜ ಸಂವಾದ, ಮಾತುಕತೆ, ಚರ್ಚೆಗೆ ಒಂದು ಹೊಸ, ಸರಳ ಮತ್ತು ಮುಕ್ತವಾದ ವೇದಿಕೆಯನ್ನು ನಿರ್ಮಿಸಿಕೊಳ್ಳಲು ಇದು ಸಕಾಲ ಎಂಬ ಅರಿವನ್ನು ತುಂಬ ಸಾಂದ್ರವಾಗಿ, ಸಕಾಲಿಕವೂ ಸತ್ವಶಾಲಿಯೂ ಆದ ಮಾದರಿಗಳ ಮೂಲಕ ಮಂಡಿಸುತ್ತಿದೆ ಎಂಬ ಕಾರಣಕ್ಕೆ. ಇಂಥ ಸರಳ ತಾತ್ವಿಕ ಸತ್ಯದರ್ಶನ ಮಳಗಿಯವರಿಗಷ್ಟೇ ಸಾಧ್ಯ ಎನ್ನುವ ಕಾರಣಕ್ಕೂ ನನಗಿದು ಇಷ್ಟವಾದ ಹೆಜ್ಜೆ.

ಆದರೆ ಮಳಗಿಯವರ ಮಾದರಿ ಅನಿವಾರ್ಯವಾಗಿಯೋ ಅಥವಾ ಬೇರೆ ಇತಿಮಿತಿಗಳಿಂದಾಗಿಯೋ ಗಾಂಧಿ, ಅಂಬೇಡ್ಕರ್, ಬೋಸ್, ಠಾಕೂರ್ ಮುಂತಾದವರಿಗೆ ಸೀಮಿತವಾಗಿದೆ. ಮೇಲ್ನೋಟಕ್ಕೇ ಕಾಣುವಂತೆ ಈ ಮಂದಿಯ ನಡುವೆ ಇದ್ದ ಯಾವತ್ತೂ ಭಿನ್ನಾಭಿಪ್ರಾಯಗಳು ‘ಒಂದೇ ಗುರಿ’ ಗೆ ಸೇರಿದವೇ ಆಗಿವೆ. ‘ಭಿನ್ನ ಗುರಿ’ಯ ವ್ಯಕ್ತಿಗಳ ನಡುವೆ ಸಂವಾದ ನಡೆಯುವುದು ಬೇಡವೆ? ಅದು ನಡೆಯಬೇಕಿರುವುದೇ ಅಂಥವರ ನಡುವೆಯಲ್ಲವೆ? ಬಹುಶಃ ಗಾರ್ಗಿ, ರಾಹುಲ ಸಾಂಕೃತ್ಯಾಯನ, ಜಿನ್ನಾ, ಸಾವರ್ಕರ್, ಗೋಳ್ವಾಲ್ಕರ್ ವಿಚಾರಗಳೊಂದಿಗೆ ಇಂಥದ್ದೇ ಸಂವಾದದ ದಾಖಲೆ, ಚರ್ಚೆ ಇಲ್ಲಿ ಸಿಗುವಂತಿದ್ದರೆ ಅದು ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತಿತ್ತೇನೊ. ಹಾಗೆಯೇ ರಾಣೀ ನರಸಿಂಹ ಶಾಸ್ತ್ರಿಯವರ "ಕೊನೆಯ ಬ್ರಾಹ್ಮಣ" ಎತ್ತುವ ಕೆಲವು ಜಿಜ್ಞಾಸೆಗಳಿಗೂ ಹೊರಳಿದ್ದರೆ ಒಟ್ಟಾರೆ ಚಿತ್ರ ಹೆಚ್ಚು ಸಮೃದ್ಧವಾಗುತ್ತಿತ್ತು.

ಇಲ್ಲಿ ಚರ್ಚೆಗೆ ಬರುವ ವಿಚಾರಗಳು ಕೂಡ ತುಂಬ ಸೀಮಿತ ನೆಲೆಯಲ್ಲಿವೆ. ಸಾಂಸ್ಥಿಕವಾಗಿ ಕಾಂಗ್ರೆಸ್ಸು ಅಂದಿನ ಬ್ರಿಟಿಷ್ ಸರಕಾರ/ಆಡಳಿತಶಾಹಿಯ ಜೊತೆ ವ್ಯವಹರಿಸುವಾಗ ಎದುರಾದ ತೊಡಕುಗಳು, ಮಾತುಕತೆಗಳಲ್ಲಿ ಎತ್ತಿಕೊಳ್ಳಬೇಕಾದ ವಿಚಾರಗಳಲ್ಲಿ ಆದ್ಯತೆ ಯಾವುದಕ್ಕಿರಬೇಕು ಎಂಬ ಚರ್ಚೆ, ಸ್ವಾತಂತ್ರ್ಯ- ಸ್ವಾಭಿಮಾನ ಮತ್ತು ಚರಕ ಮುಂತಾದ ಸಂಗತಿಗಳ ಕುರಿತ ವ್ಯಾಖ್ಯಾನ-ಜಿಜ್ಞಾಸೆಗಳು, ಗ್ರಾಮೀಣ ಗುಡಿಕೈಗಾರಿಕೆ ಮತ್ತು ಆಧುನಿಕ-ಬೃಹತ್ ಕೈಗಾರಿಕೆಗಳ ಬೇಕು ಬೇಡ ಕುರಿತ ಚರ್ಚೆ ಹಾಗೂ ಅಂಬೇಡ್ಕರ್ ಜೊತೆ ನಡೆಯುವ ಜಾತಿ-ಧರ್ಮ ಕುರಿತ ಚರ್ಚೆ ಇಲ್ಲಿನ ಸಂವಾದಗಳಲ್ಲಿ ಮಹತ್ವ ಪಡೆದಿವೆ. ಆರ್ಷೇಯ ವಿಚಾರಗಳಿಗೆ ಬಂದರೆ ಯಮ-ನಚಿಕೇತ, ಯಾಜ್ಞವಲ್ಕ್ಯ-ಮೈತ್ರೇಯಿ, ಬುದ್ಧ - ಅಜಾತಶತ್ರು ಮುಂತಾದವರ ನಡುವೆ ನಡೆಯುವುದು ನಿಜಕ್ಕೂ ಸಂವಾದವೆ ಎನ್ನುವ ಪ್ರಶ್ನೆಯಿದೆ. ಇವರಲ್ಲಿ ಭಿನ್ನಾಭಿಪ್ರಾಯಗಳಿದ್ದವೆ, ಖಚಿತ ಸೈದ್ಧಾಂತಿಕ ನಿಲುವಿನ ಮೇಲೆ ನಿಂತ ವಾದವಿತ್ತೆ? ಜಿಜ್ಞಾಸುಗಳ ಅರಿವಿನ ಹಸಿವು ಮತ್ತು ಕೇಳಿಸಿಕೊಳ್ಳುವ ವಿನಯ, ತಾಳ್ಮೆಗಳಿಂದ ಮಿಳಿತವಾದ ವಿದ್ಯಾರ್ಥಿದೆಸೆಯೊಂದು ನಮಗಿಲ್ಲಿ ಕಾಣಿಸುತ್ತದೆ. ಆದರೆ ವರ್ತಮಾನದ ಸಂವಾದದ ಸವಾಲುಗಳು ಬೇರೆಯೇ ಜಗತ್ತಿಗೆ ಸೇರಿದಂತೆ ಕಾಣುತ್ತಿಲ್ಲವೆ?


ಇವತ್ತಿನ ಸಮಾಜದಲ್ಲಿ ಅಸಮಾನತೆ, ಶೋಷಣೆ, ಭ್ರಷ್ಟಾಚಾರ, ಹಿಂಸೆ ಮತ್ತು ಒಡಕುಗಳಿಗೆ ಮೂಲಭೂತ ಕಾರಣವಾಗಿರುವ ಕೆಲವು ಪೀಡೆಗಳನ್ನು ಗುರುತಿಸುವ ಸಂದರ್ಭದಲ್ಲೆಲ್ಲ ಜಾತಿ ಮಾತ್ರ ಮಹತ್ವ ಪಡೆಯುತ್ತದೆ. ಬದಲಿಗೆ ಆರ್ಥಿಕ, ರಾಜಕೀಯ, ಧಾರ್ಮಿಕ, ಲಿಂಗಾಧಾರಿತ ನೆಲೆಗಟ್ಟುಗಳಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ವರ್ಗಸಂಘರ್ಷಗಳು ಚರ್ಚೆಗೆ ಬರುವುದಿಲ್ಲ. ಇವತ್ತು, ಇಲ್ಲಿ ದೇವಸ್ಥಾನದ ಪ್ರವೇಶ ಕೋರುವ ಮೇಲ್ಜಾತಿಯ ಹೆಣ್ಣುಮಕ್ಕಳಿಗೆ ಎದುರಾಗಿ ಕೇಸರಿ ಧ್ವಜ ಹಿಡಿದ ದಲಿತನಿದ್ದಾನೆ! ನಿಮಗೆ ನ್ಯಾಯವಾಗಿ ಸಿಗಬೇಕಾದ ಸರ್ಕಾರಿ ಸವಲತ್ತು ಒದಗಿಸುವ ಮುನ್ನ ನಿಮ್ಮ ರಾಜಕೀಯ ಒಲವನ್ನು ಕುರಿತು ಗಮನಿಸಿಕೊಳ್ಳುವ ಕಾರ್ಯಕರ್ತರು, ಎಮ್ಮೆಲ್ಲೆಗಳಿದ್ದಾರೆ. ನಿಮ್ಮ ಬಳಿ ಕಾರಿದೆಯೇ, ಮಾಧ್ಯಮಗಳಲ್ಲಿ ನಿಮಗೆ ಸಾಕಷ್ಟು ಪ್ರಭಾವ ಇದೆಯೇ ಎಂಬುದರ ಮೇಲೆ ನಿಮಗೆ ಸಾಂಸ್ಕೃತಿಕ ವಲಯದಲ್ಲಿ ಅವಕಾಶ ಒದಗುತ್ತದೆ, ಮನ್ನಣೆ, ಪ್ರಶಸ್ತಿ ಇತ್ಯಾದಿ ದೊರಕುತ್ತದೆ. ನಾನು ಗಮನಿಸಿದಂತೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಇವತ್ತು ತನ್ನ ದೈನಂದಿನ ವ್ಯವಹಾರದಲ್ಲಿ ಎದುರಾಗುವ ಮಹತ್ವದ ಸವಾಲುಗಳಲ್ಲಿ ಜಾತಿಯನ್ನು ಮೀರಿದ ಅಂಶಗಳೇ ಹೆಚ್ಚಿವೆ. ಹಾಗಿದ್ದೂ ನಾವು ಜಾತಿ ಸಮಸ್ಯೆಯ ಬಗ್ಗೆಯೇ ಚರ್ಚಿಸುತ್ತ ಕೂರುವುದು ತಮಾಶೆಯಾಗಿ ಕಾಣುತ್ತದೆ. ಇನ್ನು ಆರ್ಷೇಯ ವಿಚಾರಧಾರೆಯತ್ತ ನೋಡಿದರೆ ಯಾವತ್ತೋ ಪೂಜೆ, ಹೋಮ, ಜಾತ್ರೆ, ಲೌಡ್‌ಸ್ಪೀಕರ್ ಭಜನೆ, ದೇವಾಲಯ ನಿರ್ಮಾಣ ಮತ್ತು ವ್ರತಧಾರಿಗಳ ಅಭಿಯಾನಗಳಂಥ ಬಹಿರಂಗದ ಆಚರಣೆಯ ಮಟ್ಟಕ್ಕೆ ಇಳಿದು ಬಿಟ್ಟಿರುವ ಧರ್ಮದ ವೈಚಾರಿಕ, ಸೈದ್ಧಾಂತಿಕ, ತಾತ್ವಿಕ ನೆಲೆಗಳೇ ಜನಮಾನಸದಿಂದ ಮರೆಯಾಗಿ ಹೋಗಿರುವುದು ವಾಸ್ತವವಾಗಿರುತ್ತ ಸಂವಾದ ಯಾವುದರ ಬಗ್ಗೆ, ಯಾವ ನೆಲೆಗಟ್ಟಿನಲ್ಲಿ ನಡೆಯಬೇಕಿದೆ ಎನ್ನುವುದೇ ಮುಖ್ಯ ಪ್ರಶ್ನೆಯಾಗಿದೆ. ಈಗ ನಡೆಯುತ್ತಿರುವ ಚರ್ಚೆಗಳೆಲ್ಲ ಅಕ್ರಮ ಗೋಸಾಗಾಟ, ಬಾಬ್ರಿ ಮಸೀದಿ, ತಾಜ್ ಮಹಲ್, ಟಿಪ್ಪು ಜನ್ಮದಿನಾಚರಣೆ, ದತ್ತ ಜಯಂತಿಯ ಗಲಭೆಗಳು, ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ, ಲವ್ ಜೆಹಾದು, ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವುದು ಇತ್ಯಾದಿಗಳು. ಇವುಗಳೊಂದಿಗೆ ಧರ್ಮಕ್ಕಿರುವ ಸಂಬಂಧ ಏನು!


ಹಾಗೆಯೇ ಮಳಗಿಯವರು ಎತ್ತಿಕೊಂಡ ಸಮಾಜದ ನಾಯಕರುಗಳಿಗೆ ಜನಸಾಮಾನ್ಯನ ಬದುಕು, ಬವಣೆಗಳ ಅರಿವು ಎಷ್ಟರಮಟ್ಟಿಗಿತ್ತು ಎನ್ನುವ ಪ್ರಶ್ನೆಯೂ ಇದೆ. ಕಾರಂತರು ‘ಈ ಮನುಷ್ಯನಿಗೆ ಜೀವನ ಹೇಗೆ ನಡೆಯುತ್ತದೆ ಎನ್ನುವುದರ ಅರಿವಿಲ್ಲ’ ಎಂದು ಕಂಡುಕೊಂಡ ಘಟನೆ ನೆನಪಾಗುತ್ತದೆ. ಹೌದು, ಅದು ಮಹಾತ್ಮನ ಬಗ್ಗೆ. ಡಾ||ಅಂಬೇಡ್ಕರ್ ಒಬ್ಬರನ್ನು ಬಿಟ್ಟರೆ ಉಳಿದವರು ಸಮಾಜದ ಅತ್ಯಂತ ಕೆಳಸ್ತರದಿಂದ ಬಂದವರೇನಲ್ಲ. ಇವರಿಗೆಲ್ಲ ದೇಶ, ರಾಷ್ಟ್ರ, ಐಕ್ಯಮತ್ಯ, ಅಭಿವೃದ್ಧಿ ಮುಂತಾದ ಮ್ಯಾಕ್ರೊ ಲೆವೆಲ್ಲಿನ ವಿಚಾರಗಳಿದ್ದವೇ ಹೊರತು ತೀರ ಕೆಳಮಟ್ಟದ ವ್ಯಕ್ತಿಯ ಹಸಿವು, ರೋಗ ಮತ್ತು ‘ಉಳ್ಳವರ’ ಕರಾಳ ಹಿಡಿತದ ಹಿಂಸೆಗಳನ್ನು ನೀಗುವ ವಿಚಾರಗಳು ‘ಸದ್ಯದ’ ತುರ್ತುಗಳಾಗಿರಲಿಲ್ಲ. ದೇಶದ ಪರಿಸ್ಥಿತಿ ಹಾಗಿತ್ತು ಎನ್ನುವ ಸಮರ್ಥನೆ ಕೊಡಬಹುದೆಂದಾದರೆ ಆ ಪರಿಸ್ಥಿತಿಯ ಸಂವಾದಗಳು ಇಂದಿಗೆ ಪ್ರಸ್ತುತವಾಗುವ ಹೊಸಬಗೆಯನ್ನು ವ್ಯಾಖ್ಯಾನಿಸುವುದು ಕೂಡ ಅಗತ್ಯವಾಗುತ್ತದೆ.


ಅಲ್ಲದೆ ಮಳಗಿಯವರು ಸ್ವತಃ ಮುನ್ನುಡಿಯಲ್ಲಿ ತಮ್ಮ ಕೃತಿಯ ಕೆಲವು ಇತಿಮಿತಿಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ಇತಿಮಿತಿಗಳನ್ನು ಮೀರಿ ಈ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆಯನ್ನು ಅವರು ಮುಂದಿನ ತಲೆಮಾರಿಗೆ, ಇತರರಿಗೆ ವರ್ಗಾಯಿಸಿದ್ದಾರೆ ಕೂಡ. ಅಷ್ಟರ ಮಟ್ಟಿಗೆ ಕಿಡಿ ಹಚ್ಚುವ ಮಹತ್ವದ ಕೆಲಸವನ್ನಂತೂ ಅವರು ಮಾಡಿಯೇ ಮಾಡಿದ್ದಾರೆ. ಸಮಯೋಚಿತವಾಗಿ ಮತ್ತು ಮುತ್ಸದ್ಧಿತನದಿಂದಲೇ ಒಂದು ತಲೆಮಾರನ್ನು ಸೂಚ್ಯವಾಗಿ ಮತ್ತು ವಿವಾದಗಳಿಗೆ ಎಡೆಯಿಲ್ಲದ ನಿಟ್ಟಿನಿಂದ ಚರ್ಚೆಯಲ್ಲಿ ತೊಡಗಿಸುತ್ತ, ಸದ್ಯದ ಒಂದು ಮಹತ್ವದ ಅವಶ್ಯಕತೆಯನ್ನು ಎತ್ತಿ ತೋರಿಸಿದ್ದಾರೆ. ಮಳಗಿಯವರು ನಮ್ಮ ಕಾಲದ ಹಲವು ವಿಚಾರವಾದಿಗಳಿಗಿಂತ ಸೂಕ್ಷ್ಮವಾಗಿ ಯೋಚಿಸಬಲ್ಲ, ವರ್ತಮಾನದ ಹೈಪ್‌ಗಳಿಂದ ಕಳಚಿಕೊಂಡು ನಿಂತ ಬರಹಗಾರ. ಕೊಂಚ ಸಿನಿಕತನ ಬೆರೆತರೂ ಅದನ್ನು ಸೇರಿಸಿಯೇ ತನ್ನನ್ನು ತಾನು ಕಾಣಬಲ್ಲ ಮತ್ತು ಅಷ್ಟೇ ಮುಕ್ತ ಮನಸ್ಸಿನಿಂದ ಪರರ ಕುರಿತು ಯೋಚಿಸಬಲ್ಲ ಸೂಕ್ಷ್ಮಸಂವೇದಿ. ಚಿಂತಕ-ಬುದ್ಧಿಜೀವಿ-ವಿಚಾರವಾದಿಗಳ ತೆವಲು, ಪೂರ್ವಾಗ್ರಹ ಮತ್ತು ಭಂಗಿಗಳಿಲ್ಲದ ಅಪರೂಪದ ವ್ಯಕ್ತಿ. ಅವರೊಂದಿಗೆ ನಡೆಸಿದ ವಿಸ್ತೃತ ಸಂದರ್ಶನ ಮತ್ತು ಒಡನಾಟದಿಂದಲೇ ಈ ರೀತಿ ಕಾಣುವುದನ್ನು ಕಲಿತ ನನ್ನಂಥವರು ಅವರಿಂದ ನಿರೀಕ್ಷಿಸುವುದು ಇದಕ್ಕಿಂತ ಹೆಚ್ಚಿನದನ್ನೇ.

ಹಾಗಿದ್ದೂ ಅವರು ತಾತ್ವಿಕವಾಗಿಯೂ ಪ್ರಾಯೋಗಿಕವಾಗಿಯೂ ತೋರಿಸಿಕೊಟ್ಟಿರುವುದು ಸಣ್ಣದೇನಲ್ಲ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಬೇಕಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, November 17, 2018

ರಾಜೂ ಹೆಗಡೆಯವರ ಕಥಾಜಗತ್ತು

ಉತ್ತರಕನ್ನಡದ ಸಣ್ಣಕತೆಗಾರರ ಒಂದು ದೊಡ್ಡ ಪರಂಪರೆಯೇ ನಮ್ಮ ಸಣ್ಣಕತೆಗಳ ಜಗತ್ತಿಗಿದೆ. ವಿ.ಜಿ.ಶ್ಯಾನಭಾಗರಿಂದ ತೊಡಗಿ ಚಿತ್ತಾಲ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ ಮುಂತಾದ ಖ್ಯಾತನಾಮರ ಜೊತೆ ಹೊಸ ತಲೆಮಾರಿಗೆ ಸೇರಿದ ಬಹುದೊಡ್ಡ ಕತೆಗಾರರ ಪಡೆಯೇ ಉತ್ತರಕನ್ನಡದ ಸೊಗಡನ್ನು ಕನ್ನಡ ಸಣ್ಣಕತೆಗೆ ಧಾರೆ ಎರೆದಿದೆ. ಶ್ರೀಧರ ಬಳಗಾರ, ಅಶೋಕ ಹೆಗಡೆ, ಉಲ್ಲಾಸ ಹೆಗಡೆ, ಚಿಂತಾಮಣಿ ಕೂಡ್ಲೆಕೆರೆ, ಸುನಂದಾ ಪ್ರಕಾಶ ಕಡಮೆ, ಸಂದೀಪ ನಾಯಕ, ಅನುಜಯಾ ಎಸ್ ಕುಮಟಾಕರ್, ಕಾವ್ಯಾ ಕಡಮೆ, ಪದ್ಮನಾಭ ಭಟ್ ಶೇವ್ಕಾರ, ಪ್ರಕಾಶ್ ನಾಯಕ್, ಭಾಸ್ಕರ ಹೆಗಡೆ, ಸಚ್ಚಿದಾನಂದ ಹೆಗಡೆ ಮುಂತಾದವರಲ್ಲದೆ ಇನ್ನೂ ಹಲವರು ಸಣ್ಣಕತೆಗಳ ಕ್ಷೇತ್ರದಲ್ಲಿ ಸಾಕಷ್ಟು ಗಮನಾರ್ಹ ಕೊಡುಗೆಯನ್ನಿತ್ತಿದ್ದಾರೆ. ಇವರುಗಳು ನಮಗೆ ದಕ್ಕಿಸಿದ ಹನೇಹಳ್ಳಿ, ಗೋಕರ್ಣ, ಹೊನ್ನಾವರ, ಶಿರಸಿ, ಅಂಕೋಲೆ, ಶರಾವತಿ, ಗಂಗಾವಳಿ, ಪಾಪನಾಶಿನಿ, ಅಘನಾಶಿನಿ, ಅಳಿವೆ ಬಾಗಿಲು, ಯಕ್ಷಗಾನ ಬಯಲಾಟ, ದೋಣಿ-ಲಾಂಚುಗಳ ಪ್ರಯಾಣ ಎಲ್ಲ ಸೇರಿ ನಮಗೆ ಉತ್ತರಕನ್ನಡ ಎಂದರೆ ಇದು ಎಂಬಂಥ ಏನು ಒಂದು ಚಿತ್ರ ಮನಸ್ಸಿನಲ್ಲಿ ನೆಲೆಯಾಗಿದೆ, ಅದು ನಿಜವಾದ ಉತ್ತರಕನ್ನಡವೇ ಎನ್ನುವ ಪ್ರಶ್ನೆ ಇದೆ.

ಭಾರತೀಯ ಇಂಗ್ಲೀಷ್ ಸಾಹಿತ್ಯ ಸೃಷ್ಟಿಸಿದ ಒಂದು ಭಾರತ ಕೂಡ ಇಂಥ ಜಿಜ್ಞಾಸೆಗೆ ಕಾರಣವಾಗಿದ್ದನ್ನು ಇಲ್ಲಿ ನೆನೆಯಬಹುದು. ಭಾರತೀಯ ಇಂಗ್ಲೀಷ್ ಸಾಹಿತ್ಯದ ಭಾರತ ನಿಜವಾದ ಭಾರತವಾಗಿರದೆ, ಸಾಮಾನ್ಯವಾಗಿ ಹೊರದೇಶಗಳಲ್ಲೇ ನೆಲೆಯಾದ ಭಾರತೀಯ ಮೂಲದ ಇಂಗ್ಲೀಷ್ ಸಾಹಿತಿಗಳ ಅರೆಬರೆ ನೆನಪು ಮತ್ತು ಕಲ್ಪನೆಯ ಒಂದು ಭಾರತವಾಗಿದೆ ಎನ್ನುವ ಆರೋಪವಿದೆ. ಭಾರತೀಯ ಭಾಷೆಯಲ್ಲಿ ನಮಗೆ ಸಿಗುವ ಭಾರತದ ಚಿತ್ರವೇನಿದೆ ಅದು ಭಾರತದ ಕತೆಗಳನ್ನು ಹೇಳುವ ಇಂಗ್ಲೀಷ್ ಸಾಹಿತ್ಯದಲ್ಲಿ ಸಿಗುವ ಭಾರತಕ್ಕೆ ಹೋಲಿಸಲಾಗದಷ್ಟು ಭಿನ್ನವಾಗಿರುವುದು ಕೂಡ ನಿಜ. ಇಲೈಟ್ ವರ್ಗಕ್ಕೆ ಮತ್ತು ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ಸರಿಯಾಗಿ ಐಷಾರಾಮಿ ಭವ್ಯ ಬಂಗಲೆಯಲ್ಲಿ ವಾಸವಿರುವ ಭಾರತದ ಮಧ್ಯಮವರ್ಗದವರ ಕೌಂಟುಂಬಿಕ ಕತೆಗಳನ್ನು ಹೇಳುವ, ವಿದೇಶದಲ್ಲಿ ಡ್ಯುಯೆಟ್ಟುಗಳ ಚಿತ್ರೀಕರಣ ಮಾಡುವ ಬಾಲಿವುಡ್ ಸಿನಿಮಾಗಳ ಹಾಗೆಯೇ ‘ಹೊರಗಿನ’ವರಿಗೆ ಹೊರಗಿನವರ ಭಾಷೆಯಲ್ಲಿ ಕಟ್ಟಿಕೊಡುವ ಭಾರತ ಮತ್ತು ನಮ್ಮದೇ ಕನ್ನಡ, ಹಿಂದಿ, ಬಂಗಾಳಿ, ಗುಜರಾಥಿ, ತಮಿಳು, ತೆಲುಗು ಭಾಷೆಯ ಕೃತಿಗಳಲ್ಲಿ ನಮಗೆ ಸಿಗುವ ಭಾರತ ಏಕೆ ಭಿನ್ನ? ವಿದೇಶದಲ್ಲೇ ನೆಲೆನಿಂತ ಸಲ್ಮಾನ್ ರಶ್ದಿ, ನೈಪಾಲರುಗಳಿಗೆ ದಕ್ಕುವ/ದಕ್ಕದ ಭಾರತ ಯಾವುದು?

ಇವೇ ಪ್ರಶ್ನೆಗಳನ್ನು ನಾವು ನಗರದಲ್ಲಿ ನೆಲೆನಿಂತ ನಮ್ಮ ಪ್ರಾದೇಶಿಕ ಬಾಲ್ಯ, ತಾರುಣ್ಯಗಳನ್ನು ನೆಚ್ಚಿ ಬರೆಯುತ್ತಿರುವ ಹೊಸ ತಲೆಮಾರಿನ ಕತೆಗಾರರ ವಿಷಯದಲ್ಲಿಯೂ ಎತ್ತುವುದು ಸಾಧ್ಯವಿದೆ. ಗಿರೀಶ್ ಕಾರ್ನಾಡ್ ಅವರು ಬೆಂಗಳೂರನ್ನೇ ಕೇಂದ್ರವಾಗಿರಿಸಿಕೊಂಡ ಒಂದೇ ಒಂದು ಕಾದಂಬರಿ ಕನ್ನಡದಲ್ಲಿ ಬಂದಿಲ್ಲ ಎಂದಿರುವುದರ ಹಿಂದಿರುವ ಕಾರಣಗಳಲ್ಲಿ ಬಹುಶಃ ಇದೂ ಒಂದಾಗಿರುವುದು ಸಾಧ್ಯವಿದೆ.

ಇಲ್ಲಿ ಸಾಮಾನ್ಯೀಕರಣದ ಅಪಾಯ ಮತ್ತು ಮಿತಿಗಳನ್ನು ಮರೆಯದೇ, ಒಂದು ಸೀಮಿತ ನೆಲೆಯಲ್ಲಿ ಕೆಲವೊಂದು ಅಂಶಗಳನ್ನು ಗುರುತಿಸುವ ಉದ್ದೇಶದಿಂದಷ್ಟೇ ಮುಂದಿನ ಮಾತುಗಳನ್ನಾಡುತ್ತಿದ್ದೇನೆ. ಪ್ರತಿಯೊಬ್ಬ ಲೇಖಕನೂ ಅನನ್ಯ ಮತ್ತು ಅಸ್ಮಿತೆಯ ಪ್ರತಿರೂಪ ಎನ್ನುವುದನ್ನು ಗೌರವಪೂರ್ವಕ ಒಪ್ಪಿಕೊಂಡೇ ಈ ಮಾತುಗಳನ್ನು ಆಡುತ್ತಿದ್ದೇನೆ.

ಸ್ಥೂಲವಾಗಿ ಹೇಳುವುದಾದರೆ, ಮೊದಲನೆಯದಾಗಿ, ಈ ಯಾವತ್ತೂ ಕತೆಗಾರರು ಕತೆ ಬರೆಯುವ ಕಾಲಕ್ಕೆ ಉತ್ತರಕನ್ನಡದಿಂದ ದೂರವಾಗಿ ಮುಂಬಯಿ, ಬೆಂಗಳೂರು, ಧಾರವಾಡ ಮುಂತಾದ ಕಡೆ ನೆಲೆಯಾದವರು ಎನ್ನುವುದು. ಹಾಗಿದ್ದೂ ಇವರು ತಮ್ಮ ಬಾಲ್ಯ, ತಾರುಣ್ಯದ ಉತ್ತರಕನ್ನಡದ ಸ್ಮೃತಿಯನ್ನೇ ನೆಚ್ಚಿಕೊಂಡು ಕಥಾಜಗತ್ತನ್ನು ಕಟ್ಟುತ್ತ ಬಂದಿದ್ದಾರೆ. ಆದರೆ, ಬಹುಶಃ ಶ್ರೀಧರ ಬಳಗಾರ ಒಬ್ಬರನ್ನು ಬಿಟ್ಟರೆ ಪೂರ್ತಿಯಾಗಿ ಉತ್ತರಕನ್ನಡದ ಗಡಿರೇಖೆಯ ಒಳಗೇ ತಮ್ಮ ಕಥಾಜಗತ್ತನ್ನು ಸೃಜಿಸಿಕೊಂಡ (ಮತ್ತು ಸ್ವತಃ ನೆಲೆಯಾದ) ಇನ್ನೊಬ್ಬ ಕತೆಗಾರ ಇಲ್ಲಿಂದ ಬಂದಿಲ್ಲ. ಉತ್ತರಕನ್ನಡದ ಕತೆಗಾರರು ಸ್ಪಷ್ಟವಾಗಿ ತಮ್ಮ ಕತೆಗಳಲ್ಲಿ ಪಡಿಮೂಡಿಸಿದ ಕಥಾಜಗತ್ತು ಉತ್ತರಕನ್ನಡದ ಗಡಿರೇಖೆಗಳ ಋಣ ಕಟ್ಟಿಕೊಂಡೇ ಹುಟ್ಟಿರುವುದು ಎನ್ನುವುದು ನಿಜವಾಗಿದ್ದೂ ಅದು ಬೇರೆಬೇರೆ ಕಾರಣಗಳಿಂದಾಗಿ ಅವರ ಕಲ್ಪನೆ, ಆಸೆ, ನಿರೀಕ್ಷೆಗಳ ಒಂದು ಕಥಾಜಗತ್ತೇ ಹೊರತು ವಾಸ್ತವದ ಉತ್ತರಕನ್ನಡ ಅಲ್ಲ. ಬಾಲ್ಯ ತಾರುಣ್ಯದಾಚೆ ಪ್ರಬುದ್ಧನಾದ ಗ್ರಹಸ್ಥ ಜೀವನವನ್ನು ಇಲ್ಲಿಯೇ ಇದ್ದು, ವೃತ್ತಿಗಾಗಿಯೋ ಕೃಷಿಗಾಗಿಯೋ ಇಲ್ಲಿಯೇ ನೆಲೆಯಾಗಿ ತಮ್ಮ ಅನುಭವದ ಕಥಾಜಗತ್ತನ್ನು ಕಟ್ಟಿಕೊಡಬಲ್ಲ ಅವಕಾಶ ಹೆಚ್ಚಿನ ಕತೆಗಾರರಿಗೆ ಇರಲೇ ಇಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಕತೆಗಾರ ಫಿಕ್ಷನಲೈಸ್ಡ್ ವಾಸ್ತವವನ್ನಲ್ಲದೆ (ಕಲ್ಪಿತ ವಾಸ್ತವ) ಬೇರೆ ವಾಸ್ತವವನ್ನು ಚಿತ್ರಿಸುವಾಗ ಅದು ವರದಿಯ ಧಾಟಿ ಪಡೆದುಕೊಳ್ಳುವುದಿಲ್ಲವೆ ಎನ್ನುವ ಜಿಜ್ಞಾಸೆಯಿದೆ. ತನ್ನ ನೇರ ಅನುಭವದಾಚೆಯ ಏನನ್ನೂ ಬರೆಯಲಾರೆ ಎನ್ನುವ ಬರಹಗಾರ ಕಂಫರ್ಟ್ ಜೋನ್ ಬಿಟ್ಟು ಬರೆಯುವುದು ಸಾಧ್ಯವಾಗುವುದಿಲ್ಲ ಎನ್ನುವ ಇನ್ನೊಂದು ಜಿಜ್ಞಾಸೆಯೂ ಇದೆ. ಈ ಚರ್ಚೆಗಳನ್ನೆಲ್ಲ ಇಲ್ಲಿ ಬೆಳೆಸದೆ, ಇದಕ್ಕೆ ಬಹುಶಃ ಸೂಕ್ತವಾದ ಉತ್ತರವನ್ನು ಈಗಾಗಲೇ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಕತೆ-ಕಾದಂಬರಿಗಳ ಮೂಲಕವೇ ಕೊಟ್ಟಿದ್ದಾರೆ ಎಂದಷ್ಟೇ ಸೂಚಿಸಿ ಮುಂದೆ ಹೋಗಬಹುದು.

ಎರಡನೆಯದಾಗಿ, ಇವರು ಚಿತ್ರಿಸುವ ಉತ್ತರಕನ್ನಡದ ನೆಲ-ಜಲ-ಮಂದಿ ಒಂದು ಬಗೆಯ ಫಿಕ್ಷನಲೈಸ್ಡ್ ರೊಮಾಂಟಿಸಿಸಮ್‌ಗೆ ಒಳಪಟ್ಟಿದ್ದು ಎನ್ನುವುದು. ಸೂಕ್ಷ್ಮವಾಗಿ ಗಮನಿಸಿದರೆ ಉತ್ತರಕನ್ನಡದ ಕತೆಗಾರರು ಸೃಷ್ಟಿಸುವ ಪಾತ್ರಗಳು, ಮನುಷ್ಯ ಸಂಬಂಧಗಳು, ಕುಟುಂಬಗಳು, ಅಲ್ಲಿನ ಸಂಘರ್ಷಗಳು ನವ್ಯ, ದಲಿತ, ಬಂಡಾಯದಂಥ ಚೌಕಟ್ಟಿಗೆ ಸಿಲುಕುವುದೇ ಇಲ್ಲ. ಶಾಂತಿನಾಥ ದೇಸಾಯಿ ಮತ್ತು ಯಶವಂತ ಚಿತ್ತಾಲರನ್ನೂ ಸೇರಿಸಿಯೇ ಈ ಮಾತು ನಿಜ ಎನ್ನುವುದನ್ನು ಗಮನಿಸಬಹುದು. ಹಾಗಾಗಿಯೇ, ಅದೊಂದು ಬೇರೆಯೇ ಜಗತ್ತಿನ ಸೃಷ್ಟಿ ಎಂಬುದು ವಿಚಿತ್ರವಾದರೂ ನಿಜ. ಮತ್ತು ಇದರಿಂದಾಗಿ, ನವ್ಯೋತ್ತರ ಕನ್ನಡ ಕಥಾಸಾಹಿತ್ಯಕ್ಕೆ ಉತ್ತರಕನ್ನಡದ ಕತೆಗಾರರೇ ಒಂದು ಮಾದರಿ ಮತ್ತು ಚೌಕಟ್ಟು ಒದಗಿಸಿದರು ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಅಂಥ ಮಾದರಿ, ವಾಸ್ತವ ಚಿತ್ರಣದ ಸೋಗು ಹೊತ್ತಿದ್ದರೂ ಕಲ್ಪನಾವಿಲಾಸವನ್ನೇ ಹೆಚ್ಚುಹೆಚ್ಚಾಗಿ ಪೋಷಿಸುತ್ತ ಬಂತು ಎನ್ನುವುದನ್ನು ಗುರುತಿಸುವುದು ಮುಖ್ಯ. ಇವರ ಕತೆಗಳಲ್ಲಿ ಬರುವ ಪಾತ್ರಗಳು, ಅವರ ನಡೆನುಡಿ ನಾವು ದಿನನಿತ್ಯ ನೋಡುವ ಜಗತ್ತಿಗೆ ಸೇರಿದಂತಿರುವುದಿಲ್ಲ, ಹಾದಿಯಲ್ಲಿ ಎದುರಾಗುವಂಥವಲ್ಲ ಎನಿಸುತ್ತದೆ.

ಮೂರನೆಯದಾಗಿ, ಈ ಕತೆಗಾರರಲ್ಲಿ ತೊಂಬತ್ತು ಶೇಕಡಾಕ್ಕಿಂತ ಹೆಚ್ಚಿನ ಕತೆಗಾರರು ಚಿತ್ರಿಸುವ ಬದುಕಿನಲ್ಲಿ ‘ಇವಿಲ್’ ಕಣ್ಮರೆಯಾದಂತಿರುವುದು. ಇದನ್ನೇ ಸ್ವಲ್ಪ ಬೇರೆ ರೀತಿ ಹೇಳುವುದಾದರೆ, ನವಿರುತನ, ಭಾವುಕತೆ, ಮಾನವೀಯ ಸಂಬಂಧ, ಕಾವ್ಯಾತ್ಮಕ ನಿರೂಪಣೆ, ರೂಪಕಗಳ ಮಹತ್ವ - ಈ ಹೆಚ್ಚಿನ ಕತೆಗಳ ಸಾಮಾನ್ಯ ಲಕ್ಷಣ ಎಂದು ಸಾಮಾನ್ಯೀಕರಣಗೊಳಿಸಿ ಹೇಳಬಹುದಾದಷ್ಟು ಅತಿಯಾದ, ಎದ್ದುಕಾಣುವ ಲಕ್ಷಣ ಆಗಿರುವುದು. ಈ ಮೂರೂ ಅಂಶಗಳು ಪರಸ್ಪರ ಒಂದಕ್ಕೊಂದು ಪೂರಕವಾಗಿ, ಕೆಲವೊಮ್ಮೆ ಒಂದರಿಂದ ಇನ್ನೊಂದನ್ನು ವಿಂಗಡಿಸಿ ನೋಡಲಾಗದಷ್ಟು ಸೇರಿ ಹೋದಂತಿರುವುದು ನಿಜ. ಒಂದು ಪುಟ್ಟ ಉದಾಹರಣೆ ನೀಡುವುದಾದರೆ, (ಇದು ನನ್ನ ‘ಒರಿಜಿನಲ್’ ಚಿಂತನೆಯಲ್ಲ) ಜಯಂತ ಕಾಯ್ಕಿಣಿಯವರ ‘ಒಪೆರಾ ಹೌಸ್’ ಕತೆಯ ಸಿನಿಮಾ ಟಾಕೀಸಿನ ಗೇಟ್‌ಕೀಪರ್ ಇಂದ್ರನೀಲ, ಸಿನಿಮಾ ನೋಡಲು ಬಂದು ಮರೆತು ಹೋಗಿರಬಹುದಾದ ಒಂದು ಫ್ಲಾಸ್ಕ್ ನೋಡುತ್ತಲೇ ಅದು ಆಸ್ಪತ್ರೆಗೆ ಹೊರಟಿರಬಹುದಾದ ಒಂದು (ಆಸ್ಪತ್ರೆಯ ನೆನಪೇ) ಮಾನವೀಯ ಸ್ಪಂದನವನ್ನುಂಟು ಮಾಡಬಲ್ಲಂಥ ಕಲ್ಪನೆಗೆ ತುತ್ತಾಗುತ್ತಾನೆ. ಆದರೆ ಅವನಂಥ ಬಡವ ಯಾರೋ ಬಿಟ್ಟುಹೋದ ಫ್ಲಾಸ್ಕ್ ಕಣ್ಣಿಗೆ ಬಿದ್ದರೆ ಯಾರಿಗೂ ಗೊತ್ತಾಗದ ಹಾಗೆ ಅದನ್ನು ಒಳಹಾಕುವ ಬಗ್ಗೆ ಮಾತ್ರ ಯೋಚಿಸುತ್ತಾನೆ ಎನ್ನುವುದು ‘ಇವಿಲ್’. ಇಂಥ ಉದಾಹರಣೆ ನಮ್ಮ ಯಾವುದೇ ಉತ್ತರಕನ್ನಡದ ಕತೆಗಾರನ ಯಾವುದೇ ಕತೆಯನ್ನು ಕೈಗೆತ್ತಿಕೊಂಡರೂ ಸಿಗುತ್ತದೆ ಎನ್ನುವುದು ಅಪರೂಪದ ಅಪವಾದಗಳೊಂದಿಗೆ ಸತ್ಯ.

ನಾಲ್ಕನೆಯದಾಗಿ ಹೆಚ್ಚಿನ ಎಲ್ಲಾ ಕತೆಗಾರರು ಬರೆದ ಕತೆಗಳಲ್ಲಿ ವ್ಯಕ್ತಿಗತ/ಕೌಟುಂಬಿಕ ಚಿತ್ರ ಸಿಗುತ್ತದೆಯೇ ಹೊರತು ಸಾಮಾಜಿಕ/ರಾಜಕೀಯ ಚಿತ್ರಗಳು ಸಿಗುವುದು ತೀರ ಕಡಿಮೆ. ಹೀಗಾಗಿ ನಮಗೆ ಉತ್ತರಕನ್ನಡದ ಸ್ವಾತಂತ್ರ್ಯ ಹೋರಾಟದ ಚಿತ್ರಗಳು, ಅಲ್ಲಿನ ಕೈಗಾ, ಸೀಬರ್ಡ್, ಉಷ್ಣ ವಿದ್ಯುತ್ ಸ್ಥಾವರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಡೆದ ಸಾಮಾಜಿಕ/ರಾಜಕೀಯ ಪ್ರತಿಸ್ಪಂದನವನ್ನು ತಿಳಿದುಕೊಳ್ಳಲು ಸಹಾಯ ಮಾಡುವಂಥ ಕಥಾನಕಗಳು ಇಲ್ಲಿಂದ ಬಂದಿಲ್ಲ. ಬಹುಶಃ ಅಶೋಕ ಹೆಗಡೆಯವರ ಅಶ್ವಮೇಧ ಕಾದಂಬರಿ ಇದಕ್ಕೊಂದು ಅಪವಾದ ಅನಿಸುತ್ತದೆ.

ಗಮನಿಸಬೇಕಾದ ಅಂಶವೆಂದರೆ, ರಾಜು ಹೆಗಡೆಯವರ ಕತೆಗಳು ಈ ಅಂಶಗಳಿಂದ ಕಳಚಿಕೊಂಡು ನಿಲ್ಲುತ್ತವೆ ಎನ್ನುವುದು. ಇವರ ಕತೆಗಳಲ್ಲಿ ಬರುವ ಪಾತ್ರಗಳು ಹೆಚ್ಚು ಸಾಚಾ ಆಗಿ, ರೊಮ್ಯಾಂಟಿಸಂ ಇಲ್ಲದ ಒರಟುತನದಿಂದ, ಒಬ್ಬ ಹಳ್ಳಿಗನ ಇವಿಲ್ ಕೂಡ ಸಹಜ ಎಂದು ಅನಿಸುವಂತೆ ಮೂಡಿಬರುತ್ತವೆ. ಇಲ್ಲಿ ಕೊಲೆ ಮಾಡಬಲ್ಲ ಭಾವ, ಮೈದುನರು, ಯಕ್ಷಗಾನ ಬಯಲಾಟದ ಟೆಂಟಿಗೆ ಬೆಂಕಿ ಹಚ್ಚಬಲ್ಲ ಕಟ್ಟಾ ಜಿದ್ದಿನ ಊರ ಮಂದಿ, ಕಳ್ಳನಾಟ ಸಾಗಿಸುವ ದಂಧೆಯನ್ನು ಹೊಟ್ಟೆಪಾಡಿನ ಅನಿವಾರ್ಯ ಎಂದು ಕಂಡುಕೊಳ್ಳುವ ಮತ್ತು ಆದರ್ಶದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವ ಯಕಃಶ್ಚಿತ್ ಮನುಷ್ಯರು ಕಾಣಸಿಗುತ್ತಾರೆ. ಇವರು ಎಕ್ಸ್‌ಟ್ರಾ ಮ್ಯಾರಿಟಲ್ ಸಂಬಂಧವನ್ನು, ಸೆಕ್ಸನ್ನು, ಕುಡಿತವನ್ನು ಒಂದು ಬೇರೆಯೇ ನೆಲೆಯಲ್ಲಿ ಸಂಭ್ರಮಿಸಬಲ್ಲ ಮನುಷ್ಯರು. ‘ಇಲ್ಲಿ ನಾನು ಮೊದಲೇ ಟುವಾಲು ಇಟ್ಟಿದ್ದೆ’ ಎಂಬ ತಕರಾರು ತೆಗೆದು ಜಗಳ ಮಾಡಬಲ್ಲ ಸಾಮಾನ್ಯ ಮನುಷ್ಯರು ಇವರ ಕತೆಗಳಲ್ಲಿ ನಾಚಿಕೆಪಡದೆ ಪಾತ್ರವಹಿಸುತ್ತಾರೆ. ಈ ಸಾಮಾನ್ಯತನ, ಸರಳತೆ ವಸ್ತು, ವಿಷಯ ಮತ್ತು ಎರಡರ ಸಾಮಾಜಿಕ, ತಾತ್ವಿಕ ಆಯಾಮಗಳ ಮಟ್ಟದಲ್ಲಿ ಕೂಡಾ ರಾಜು ಹೆಗಡೆಯವರಿಗೆ ಕತೆಗೊಂದು ಆಹ್ವಾನವಾಗುವುದು ನಾವು ಗಮನಿಸಬೇಕಾದ ಸಂಗತಿ. ಇದು ರಾಜು ಹೆಗಡೆಯವರಲ್ಲಿ ನಾನು ಗುರುತಿಸುವ ಮಹತ್ವದ ಒಂದು ಅಂಶ.

ಕಳೆದ ವರ್ಷ, 2017ರಲ್ಲಿ ಭಾರತೀಯ ಇಂಗ್ಲೀಷ್ ಬರಹಗಾರರು ಕಲ್ಕತ್ತಾದ ಅಮಿತ್ ಚೌಧುರಿಯವರ ಮುಂದಾಳ್ತನದಲ್ಲಿ Against Storytelling ಎಂಬ ವಿಚಾರ ಸಂಕಿರಣ, ಕಮ್ಮಟ ಎಲ್ಲ ಹಮ್ಮಿಕೊಂಡಿದ್ದರು. ಸಾಕಷ್ಟು ಹಿಂದಿನಿಂದಲೂ ಇಂಥ ಒಂದು ಪ್ರಕ್ರಿಯೆಯನ್ನು ಅಮಿತ್ ಚೌಧುರಿಯವರು ಪ್ರತಿಪಾದಿಸುತ್ತಲೇ ಬಂದವರು. ಈ ಬಗ್ಗೆ ಅವರು ಮತ್ತು ಅವರ ಕೃತಿಗಳ ಬಗ್ಗೆ ಬರೆದವರು ಸಾಕಷ್ಟು ಚರ್ಚೆ, ಜಿಜ್ಞಾಸೆ ನಡೆಸಿದ್ದಾರೆ. ಈ ನಿಟ್ಟಿನ ಹೆಚ್ಚು ಆಳವಾದ ಚರ್ಚೆಯಲ್ಲಿ ಆಸಕ್ತಿಯುಳ್ಳವರು ಅಮಿತ್ ಚೌಧುರಿಯವರ ಸಂಪಾದಕತ್ವದಲ್ಲಿ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಹೊರತಂದಿರುವ Literary Activism ಎನ್ನುವ ಕೃತಿಯನ್ನು ಗಮನಿಸಬಹುದು. ಆದರೆ ಅತ್ಯಂತ ಸುಂದರವಾಗಿ ಈ ವಿಚಾರವನ್ನು ನಿರೂಪಿಸಿದ್ದು ಮಾತ್ರ ಅರವಿಂದ ಕೃಷ್ಣ ಮೆಹರೋತ್ರ ಅವರೇ. ಅವರು Against Storytelling ಕುರಿತಾಗಿಯೇ ಅಶೋಕಾ ವಿಶ್ವವಿದ್ಯಾಲಯವು ದ ಯೂನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾದೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ನಾಲ್ಕನೆಯ ಅಂತರ್ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಓದಿದ ಪ್ರಬಂಧದ ಪೂರ್ಣ ಪಠ್ಯ ‘ನನಗೆ ರೆಕ್ಕೆಗಳಿಲ್ಲ’ ಈಗಲೂ ಅಂತರ್ಜಾಲದಲ್ಲಿ ಲಭ್ಯವಿದೆ. ಅಲ್ಲಿ ಅವರು ಹಿಂದಿ ಕಥೆಗಾರ, ಕವಿ ವಿನೋದ್ ಕುಮಾರ್ ಶುಕ್ಲ ಅವರನ್ನು ಉದ್ಧರಿಸುತ್ತ ಇದೇ ಅಂಶವನ್ನು ಪ್ರತಿಪಾದಿಸಿದ ಬಗೆ ಅತ್ಯಂತ ಮನೋಜ್ಞವಾಗಿದೆ.

ನಮಗೆಲ್ಲ ದೊಡ್ಡ ದೊಡ್ಡ ಸಂಗತಿಗಳು ಇಷ್ಟ. ಸಾಮಾಜಿಕವಾಗಿ, ರಾಜಕೀಯವಾಗಿ, ತಾತ್ವಿಕವಾಗಿ ಅತ್ಯಂತ ಸುಸಂಬದ್ಧವಾದ, ಅರ್ಥಪೂರ್ಣವೂ, ಸಮಕಾಲೀನವೂ, ಮಹತ್ವವುಳ್ಳದ್ದೂ ಇಶ್ಯೂಗಳ ಬಗ್ಗೆ ಮಾತ್ರ ಕತೆಗಾರರು ಬರೆಯುತ್ತಾರೆ. ಪ್ರಶಸ್ತಿ, ಪುರಸ್ಕಾರ ಎಲ್ಲ ದಕ್ಕಬೇಕಾದರೆ ಬಹುಶಃ ಇದೆಲ್ಲ ಅನಿವಾರ್ಯವೇನೊ. ನೀವು ಗಮನಿಸಿ, ಇಂಥ ಬರಹಗಳಿಗೆ ಒಂದು ವಿಚಿತ್ರವಾದ ‘ಭಾರ’ - ಒಜ್ಜೆ ಇರುತ್ತದೆ. ಇವು ಹಾರುತ್ತಲೇ ಇರಬೇಕಾದ ಗರಿಯ ಲಘುತನದಿಂದ ದೂರ. ಆದರೆ ದೂರ ಗಗನದಲ್ಲಿ ಹಾರುವ ಹಕ್ಕಿ ತನಗೆ ರೆಕ್ಕೆ ಇದೆ ಎಂಬ ಕಾರಣಕ್ಕೇ ಭೂಮಿಯನ್ನು ‘ಬಿಟ್ಟು’ ದೂರವಾಗುತ್ತದೆ. ಆದರೆ ಮತ್ತೆ ಮತ್ತೆ ಅದೇ ಭೂಮಿಗೆ ಮರಳಿ ಬರಬೇಕಾಗುತ್ತದೆ. ಅದಕ್ಕೆ ತಾನು ಹೀಗೆ ನೆಲದಿಂದ ದೂರವಾಗುತ್ತಿರುವುದಾಗಲೀ, ಮತ್ತೆ ನೆಲಕ್ಕೇ ಮರಳಿ ಬರುತ್ತಿರುವುದಾಗಲೀ ಅರಿವಿದೆಯೋ ಇಲ್ಲವೊ. ಆದರೆ ಚಿಟ್ಟೆಯೊಂದಕ್ಕೆ ಅಂಥ ರೆಕ್ಕೆಗಳಿಲ್ಲ. ಅದು ಸದಾ ನೆಲಮಟ್ಟದಲ್ಲಿ ಹಾರುತ್ತ ಉಳಿಯುತ್ತದೆ. ಈ ರೂಪಕ ವಿನೋದ್ ಕುಮಾರ್ ಶುಕ್ಲ ಅವರ ಒಂದು ಕವಿತೆಯಿಂದ ಆರಿಸಿದ್ದು. ಮೆಹರೋತ್ರ ಅವರು ಶುಕ್ಲ ಅವರ ಒಂದು ಸುಂದರ ಕತೆಯನ್ನು ಅನುವಾದಿಸಿ ಅಲ್ಲಿ ಓದುತ್ತಾರೆ. ಸಂತೆಮಾಳಕ್ಕೆ ಬಂದು ಎರಡೂ ಕೈಗಳಲ್ಲಿ ಎರಡು ಕೈಚೀಲ (ಒಂದು ಅಲ್ಲಲ್ಲಿ ಹರಿದಿದೆ ಕೂಡ) ಹಿಡಿದು, ಅವುಗಳಲ್ಲಿ ಒಂದಿಷ್ಟು ಬಟಾಟೆ, ಹೂಕೋಸು, ಹಸಿರು-ಕೆಂಪು ಹಸಿಮೆಣಸು, ಒಂದು ಗರಂಮಸಾಲೆಯ ಪುಟ್ಟ ಪ್ಯಾಕೆಟು ಇತ್ಯಾದಿ ತುಂಬಿಕೊಂಡು ಹೊರಟ ಒಬ್ಬ ಸಾಮಾನ್ಯನ ಕಿಸೆಯಲ್ಲಿ ಒಂದು ಹತ್ತು ರೂಪಾಯಿಯ ನೋಟು ತಾನಾಗಿರಲು ಬಯಸುತ್ತೇನೆ ಎಂದು ಶುಕ್ಲ ಬರೆಯುತ್ತಾರೆ.

ನಮ್ಮ ಬರವಣಿಗೆಗೆ ಒಂದು ವಿಚಿತ್ರವಾದ ಒತ್ತಡ ಇದೆ, ಭಾರ ಇದೆ. ಜ್ಞಾನದ ಒಜ್ಜೆಯೊ, ವಿಚಾರದ ಭಾರವೋ, ಗೊತ್ತಿದೆ ಎಂಬ ಅಹಂಕಾರದ ತೂಕವೋ ಅದರ ಅನಿವಾರ್ಯ ಎಂಬಂತೆ, ಮೂಳೆಗಂಟಿದ ಕೊಬ್ಬಿನಂತೆ ಉಳಿದು ಬಿಡುತ್ತದೆ. ಈ ಭಾರವನ್ನು ಕಳೆಯುವುದು ಒಬ್ಬ ಬರಹಗಾರನ ಗುರಿಯಾಗಬೇಕು ಎಂಬರ್ಥದ ಮಾತನ್ನು ಕೆಲ್ವಿನೊ ಆಡಿದ್ದಾನಂತೆ. ಅರ್ಥದ ಹಂಗಿನಿಂದ ಭಾಷೆಯನ್ನು ಮುಕ್ತಗೊಳಿಸುವುದು ಕಾವ್ಯ ಎನ್ನುವ ಕೀರಂ, ಬೇಂದ್ರೆ ಅದನ್ನು ಮಾಡಿದರು ಎನ್ನುತ್ತಾರೆ. ಬರಹದ ಭಾರ ನಿವಾರಿಸುತ್ತ ಕಥನದ ಬದುಕನ್ನು ಹಗುರಗೊಳಿಸುವ ಕ್ಷಣವೊಂದು ನಮ್ಮ ನಿಮ್ಮ ಬದುಕಿನಲ್ಲೇ ಇರುತ್ತದೆ. ಅದು ನಮಗೆ ಅರ್ಥವಾಗುವುದು ಮುಖ್ಯ. ಆಗ, ಚಿಂತೆ - ಬಿಡಿಹೂವ ಮುಡಿದಂತೆ ಅನಿಸಬಹುದು. ಚಿಂತೆ ಬಿಡಿ, ಹೂವ ಮುಡಿದಂತೆ ಎಂದೂ ಅನಿಸಬಹುದು. ಅಮ್ಮನ ಬಗ್ಗೆ ಬರೆಯುತ್ತ ಶುಕ್ಲ ಒಂದೆಡೆ ಹೇಳುತ್ತಾರೆ, ಕತ್ತಲಿರುವಾಗಲೇ ಎದ್ದು ಮನೆಗೆಲಸಕ್ಕೆ ತೊಡಗುತ್ತಿದ್ದ ಅಮ್ಮ ಎಲ್ಲರೂ ಮಲಗಿದ ನಂತರ ತಾನು ಚಾಪೆಗೆ ಬೆನ್ನೂರುತ್ತಾಳೆ. ಒಲೆಗೆ ತುರುಕಿದ ಸೆಗಣಿಯ ಬೆರಣಿಯ ಮೇಲೆ ಇರುವೆಯೊಂದು ಹರಿಯುತ್ತಿದ್ದರೆ ಕೈ ಸುಟ್ಟುಕೊಂಡಾದರೂ ಅವಳು ಬೆರಣಿಯನ್ನು ಒಲೆಯಿಂದ ಹೊರತೆಗೆದು ಇರುವೆಯನ್ನು ಉಳಿಸುತ್ತಾಳೆ. ಅವಳ ಕೈಬೆರಳ ಸುಟ್ಟಗಾಯ ಮಾಯುವ ಮೊದಲೇ ಇನ್ನೆಲ್ಲೊ ಸುಟ್ಟುಕೊಳ್ಳುತ್ತಾಳೆ. ತನ್ನ ಕುಟುಂಬವನ್ನು ಎಲ್ಲ ಬಗೆಯ ಬೇಗೆಯಿಂದ ಕಾಪಾಡಲು ಅವಳು ಇದಕ್ಕೆಲ್ಲ ಸದಾ ಸಿದ್ಧಳಾಗಿಯೇ ಇರುತ್ತಾಳೆ. ಯಾಕೆಂದರೆ, ಅವಳು ಅಮ್ಮ. ಶುಕ್ಲ ಅವರ ಬರಹಗಳನ್ನು ಓದುವುದೆಂದರೆ ನಮಗೆ ಈಗಾಗಲೇ ಗೊತ್ತಿರುವುದರ ಫಿಕ್ಷನಲೈಸ್ಡ್ ವರ್ಶನ್ ಓದಿದಂತಲ್ಲ, ಬದಲಿಗೆ ನಮ್ಮ ಸ್ಮೃತಿಯ ಮಾರ್ಜಿನ್ನುಗಳಲ್ಲಿ ನಿರಂತರವಾಗಿ ಬರೆದು-ಅಳಿಸಿ ಮಾಡಿದ ಇಂಪಾರ್ಟೆಂಟ್ ಪಾಯಿಂಟುಗಳಿರುತ್ತವಲ್ಲ, ಅವುಗಳನ್ನೇ ಮತ್ತೊಮ್ಮೆ ನೆನೆಯುವಂತೆ - ಎನ್ನುತ್ತಾರೆ ಅರವಿಂದ ಕೃಷ್ಣ ಮೆಹರೋತ್ರ.

ರಾಜು ಹೆಗಡೆಯವರ ಒಂದು ಕತೆಯಿದೆ, ಚಾವಿ ಅಂತ ಅದರ ಹೆಸರು. ಅಲ್ಲೇನಪ್ಪ ಎಂದರೆ, ಗಂಡ ಹೆಂಡತಿ ಇಬ್ಬರೂ ದುಡಿಯುವವರು. ಹೆಂಡತಿಗೆ ಬೇಗ ಹೊರಡಬೇಕು. ಗಂಡನಿಗೆ ನಿಧಾನವಾಗಿ ಹೋದರಾಯ್ತು. ಆದರೂ ಇಬ್ಬರೂ ಬೇಗ ಎದ್ದು ಮನೆವಾರ್ತೆಯ ಕೆಲಸಗಳನ್ನೆಲ್ಲ ಹಂಚಿಕೊಂಡು ಲಗುಬಗೆಯಿಂದಲೇ ಮಾಡುತ್ತಾರೆ. ಹೆಂಡತಿ ಮನೆಗೆ ಬೀಗ ಹಾಕಿದರೆ, ಅವಳನ್ನು ಬಸ್ಸಿನ ತನಕ ಬಿಡಲು ಶೆಡ್ಡಿನಿಂದ ಗಾಡಿ ಹೊರತೆಗೆಯುವ ಕೆಲಸ ಗಂಡನದು. ಮಳೆ ಬರುತ್ತಿದೆ ಅಂತ ಬೈಕಿನ ಬದಲು ಕಾರು ಹೊರತೆಗೆವ ಗಂಡ ಕೊರಕಲು ಹಾದಿಯಲ್ಲಿ ಬಸ್‌ಸ್ಟ್ಯಾಂಡ್ ತಲುಪಿದಾಗ ಬಸ್ಸು ಆಗಷ್ಟೇ ಹೊರಟಿದೆ. ಸರಿ, ಮುಂದಿನ ಸ್ಟಾಪಿನಲ್ಲಿ ನಿಲ್ಲುತ್ತದೆ ಎಂದು ಅದನ್ನೇ ಹಿಂಬಾಲಿಸುತ್ತಾರೆ. ಆದರೆ ಮತ್ತೆ ಬಸ್ಸು ತಪ್ಪುತ್ತದೆ. ತಮಾಶೆ ಎಂದರೆ ಬೇಕಿದ್ದ ಬಸ್ಸು ಅದಲ್ಲವೇ ಅಲ್ಲ. ಅಂತೂ ಹೆಂಡತಿಯನ್ನು ಮುಂದಿನ ಸ್ಟಾಪಿನಲ್ಲಿ ಇಳಿಸಿ ಮನೆಗೆ ಮರಳಿದರೆ ಮನೆಯ ಬೀಗದ ಕೈ ಹೆಂಡತಿಯ ಬಳಿಯೇ ಉಳಿದಿರಬೇಕೆಂಬುದು ಹೊಳೆಯುತ್ತದೆ. ಫೋನು ಕೂಡ ಮನೆಯೊಳಗಿದೆ. ಬರ್ಮುಡಾದಲ್ಲೇ ಹೊರಟಿದ್ದರಿಂದ ಡ್ರೆಸ್ಸು ಮಾಡುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ. ಸರಿ, ಮತ್ತೆ ಇಳಿಸಿದಲ್ಲಿಗೇ ಹೋದರೆ ಬಸ್ಸು ಹೊರಟುಹೋಗಿದೆ. ಎಲ್ಲೋ ರೇಂಜು ಸಿಗುತ್ತದೆ ಎಂಬ ಆಸೆಯಿಂದ ಫೋನ್ ಮಾಡುತ್ತಲೇ ಉಳಿಯುವ ಗೂಡಂಗಡಿಯವನಿಗೆ ಕೊನೆಗೂ ಇವನ ಹೆಂಡತಿ ಲೈನಿಗೆ ಸಿಗುವುದಿಲ್ಲ. ಬೇರೆ ದಾರಿಯಿಲ್ಲದೆ ಮನೆಗೆ ಮರಳಿದರೆ ಹೆಂಡತಿ ಕುಳಿತಲ್ಲೇ ಕಾರಿನ ಸೀಟಿನಲ್ಲಿ ಬೀಗದ ಕೈ ಬೆಚ್ಚಗೆ ಕೂತಿದೆ!

ಇಷ್ಟೇ ಕತೆ. ಇದರಲ್ಲೇನಿದೆ ಅಂಥಾದ್ದು ಎಂದು ಅನಿಸುವುದು ಸಹಜವೇ. ಆದರೆ, ತನ್ನ ಮನೆಯೊಳಗೆ ತಾನೇ ಹೋಗಲಾರದ ಅಸಹಾಯಕತೆಯೊಂದಿಗೆ ನಿಂತ ಒಬ್ಬ ಮನುಷ್ಯನಿಗೆ ಇದ್ದಕ್ಕಿದ್ದಂತೆ ಕಾರಿನ ಸೀಟಿನಲ್ಲಿ ಬೀಗದ ಕೈ ಕಂಡಾಗ ತಕ್ಷಣಕ್ಕೆ ಆಗುವ ಒಂದು ಅನುಭೂತಿ ಏನಿದೆ, ಅದು ಸಣ್ಣದಲ್ಲ. ಅದೆಷ್ಟು ದೊಡ್ಡದು ಎನ್ನುವುದು ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ ಎನ್ನುವುದು ಕೂಡ ಸತ್ಯ. ಕತೆ ಇರುವುದು ಆ ಒಂದು ಕ್ಷಣದ ಕುಶಿಯಲ್ಲಿ, ಸಂಭ್ರಮದಲ್ಲಿ, ನಿರಾಳತೆಯಲ್ಲಿ. ಆದರೆ ಈ ಕುಶಿಗೆ ಯಾವ ಸಾಮಾಜಿಕ, ತಾತ್ವಿಕ, ರಾಜಕೀಯ ಆಯಾಮವೂ ಇಲ್ಲ, ಹಾಗಾಗಿ ಅವುಗಳ ಭಾರವಾಗಲೀ, ಕಥನದ ಒಜ್ಜೆಯಾಗಲೀ ಇಲ್ಲ. ಬೀಗದ ಕೈಯಿಲ್ಲ ಎನ್ನುವ ಒತ್ತಡವನ್ನು ಒಮ್ಮೆಗೇ ಎತ್ತುವ, ನಿವಾರಿಸುವ ಕೆಲಸವನ್ನಷ್ಟೇ ಈ ಕತೆ ಮಾಡುತ್ತಿದೆ.

ರಾಜೂ ಹೆಗಡೆ ನನಗೆ ಮುಖ್ಯ ಎನಿಸುವುದು ಇಂಥ ಕಾರಣಗಳಿಗೆ. ಅವರು ನಮಗೆ ನಾವು ಕಾಣದೇ ಇರುವ ಉತ್ತರ ಕನ್ನಡವನ್ನು ಕಾಣಿಸಿದರು. ಅಲ್ಲಿಯ ಮನುಷ್ಯರ ಸಾಮಾನ್ಯತನವನ್ನು ಭಾರವಿಲ್ಲದ ಸಹಜತೆಯಲ್ಲಿ ಅಕ್ಷರಕ್ಕೆ ಒಗ್ಗಿಸಿದರು. ನೆಲದಿಂದ ಎತ್ತರದಲ್ಲಿ ಹಾರುತ್ತಿದ್ದ ಅದರ ಕಥಾಜಗತ್ತನ್ನು ನೆಲಮಟ್ಟದಲ್ಲಿರಿಸಿ ಹೆಚ್ಚು ಆಪ್ತಗೊಳಿಸಿದವರು. ನಮ್ಮದೇ ಜಗತ್ತಿನೊಂದಿಗೆ ಅದನ್ನು ಸಮೀಕರಿಸುವ ಉಪಕಾರ ಮಾಡಿದವರು. ನಿಜ, ಅವರ ಕತೆಗಳಲ್ಲಿ ವಿಮರ್ಶಕರ ಪಾಂಡಿತ್ಯ ಹೊರಸೂಸಲು ಅಗತ್ಯವಾದ ಘನಗಂಬೀರ ಇಶ್ಯೂಗಳೆಲ್ಲ ಸಿಗುವುದು ಕಷ್ಟ. ಅಂಥ ಕೃತಕ ನುಡಿಗಟ್ಟುಗಳಲ್ಲಿ ರಾಜು ಹೆಗಡೆಯವರನ್ನು ಕಟ್ಟಿ ಹಾಕಲು ಬರುವುದಿಲ್ಲ. ರಾಜೂ ಹೆಗಡೆಯವರ ಕಥನ ಪ್ರಕ್ರಿಯೆಯಲ್ಲಿ ಮುಖ್ಯವಾದ ಮೂರು ಘಟ್ಟಗಳನ್ನು ಗುರುತಿಸಬಹುದು. ಈ ಮೂರೂ ಘಟ್ಟದಲ್ಲಿ ಅವರು ಸಮಕಾಲೀನ ಕನ್ನಡ ಸಣ್ಣಕತೆಗಳ ಪಾರಂಪರಿಕ ಮಾದರಿಯನ್ನಾಗಲೀ, ಅದರ ಚೌಕಟ್ಟುಗಳನ್ನಾಗಲೀ ಅನುಸರಿಸಿಲ್ಲ ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ಉತ್ತರ ಕನ್ನಡದ ಕತೆಗಾರನಾಗಿ ಅವರು ಇಂಥ ಆಮಿಷಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳದೇ ಉಳಿದಿದ್ದು ಸ್ವಲ್ಪ ವಿಚಿತ್ರವಾಗಿಯೂ ಇದೆ.

ನವ್ಯೋತ್ತರ ಕನ್ನಡ ಸಣ್ಣಕತೆಗಳನ್ನು ಗಮನಿಸಿದರೆ ನಮಗೆ ಇನ್ನೊಂದು ಮಹತ್ವದ ಪಲ್ಲಟ ಕಂಡು ಬರುತ್ತದೆ. ಒಂದು ಆರಂಭ, ಬೆಳವಣಿಕೆ, ಕೇಂದ್ರ ಮತ್ತು ಪಂಚ್ ಇರುವ ಅಂತ್ಯ - ಇದು ಸಣ್ಣಕತೆಯ ಸಾಮಾನ್ಯ ಮಾದರಿಯಾಗಿದ್ದ ಕಾಲವಿತ್ತು. ಒಂದು ಕಾಲದಲ್ಲಿ ಬಹುತೇಕ ಮ್ಯಾಗಝೀನ್‌ಗಳೇ ಸಣ್ಣಕತೆಗಳ ಪ್ರಧಾನ ವೇದಿಕೆಯಾಗಿದ್ದು, ಸುಧಾ, ಪ್ರಜಾಮತ, ತರಂಗದಂಥ ವಾರಪತ್ರಿಕೆಗಳು, ಮಯೂರ, ತುಷಾರದಂಥ ಮಾಸಿಕಗಳು ಮತ್ತು ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿ ಕತೆಗಾರರನ್ನು ಸೃಷ್ಟಿಸುತ್ತಿದ್ದ ದಿನಗಳವು. ದೀಪಾವಳಿ/ಯುಗಾದಿ ವಿಶೇಷ ಸಂಚಿಕೆಗಳು ವೈಶಿಷ್ಟ್ಯಪೂರ್ಣ ಸಣ್ಣಕತೆಗಳನ್ನು ಒದಗಿಸುತ್ತಿದ್ದವು. ಈ ಪತ್ರಿಕೆಗಳು ರೂಪಿಸಿದ ಫಾರ್ಮೆಟ್ ಏನಿದೆ, ಅದನ್ನು ದಾಟಿ ಬಂದ ಕತೆಗಳು ಹೊಸದೊಂದು ಟ್ರೆಂಡ್ ಸೃಷ್ಟಿಸಿದವು ಎಂದರೆ ತಪ್ಪಾಗಲಾರದು. ಇವು, ಕಥಾನಕದ ಅಗತ್ಯಮತ್ತು ಅವಲಂಬನೆಯನ್ನು ಕಡಿಮೆ ಮಾಡಿ, ನಿರೂಪಣೆಯ ಸೊಗಸು ಮತ್ತು ಅನುಭವವೊಂದರ ಯಶಸ್ವಿಯಾದ ಸಂವಹನಕ್ಕೆ ಅಗತ್ಯವಾದ ಪ್ರೆಸೆಂಟೇಶನ್ - ಎರಡರತ್ತ ಹೆಚ್ಚು ಒತ್ತು ನೀಡಿದವು. ಕವಿ ಭಾವ ಪ್ರತಿಮಾ ಪುನರ್‌ಸೃಷ್ಟಿಯನ್ನೇ ಸಣ್ಣಕತೆಗಳ ಸಾರ್ಥಕತೆಯನ್ನಾಗಿ ಮರುವ್ಯಾಖ್ಯಾನಿಸಿಕೊಂಡು ಇಂಥ ಕತೆಗಳು ರೂಪುಗೊಂಡವು. ಇಂಥ ಒಂದು ಪಲ್ಲಟದ ಆರಂಭಿಕ ಹಂತವನ್ನು ಪಿ ಲಂಕೇಶರ ‘ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ’ ಯಂಥ ಕತೆಯಲ್ಲೇ ನಾವು ಕಾಣಬಹುದಾಗಿದೆ ಎಂಬುದು ನಿಜವಾದರೂ ಈ ಬಗೆಯ ಕತೆಗಳನ್ನೇ ಬರೆಯುವ ಪರಿಪಾಠ ತೊಡಗಿದ್ದು ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಅಮರೇಶ ನುಗಡೋಣಿ ಮುಂತಾದವರ ಕಾಲದಲ್ಲಿ. ಮುಂದೆ ಸುಮಂಗಲಾ, ಸುನಂದಾ, ಅನುಜಯಾ, ರಘುನಾಥ ಚ ಹ, ಸಂದೀಪ ನಾಯಕ, ಅಲಕಾ ತೀರ್ಥಹಳ್ಳಿ ಇದೇ ಪರಂಪರೆಯನ್ನು ಮುಂದುವರಿಸುತ್ತ ಕಾವ್ಯದಂಥ ಕಥೆಗಳನ್ನು ಬರೆಯುತ್ತ ಬಂದರು. ವಸುಧೇಂದ್ರರಾದಿಯಾಗಿ (ನಮ್ ವಾಜೀನೂ ಸೇರಿಸ್ಕೊಳ್ರೋ) ಸರಿಸುಮಾರು ಎಲ್ಲಾ ಕತೆಗಾರರೂ ಇಂಥ ಕತೆಗಳನ್ನು ಪ್ರಯತ್ನಿಸುವ ಆಕರ್ಷಣೆಗೆ ಬಿದ್ದಿದ್ದು ನಿಜವೇ. ಬಹುತೇಕ ಒಂದು ನಾಸ್ಟಾಲ್ಜಿಯಾದಾಚೆ ಬೆಳೆಯದ, ನಮ್ಮ ನಿಮ್ಮ ದೈನಂದಿನ ಬದುಕಿನ ವಿವರಗಳೊಂದಿಗೆ ಅನುಸಂಧಾನಗೊಳ್ಳದ, ಓದುವಾಗ ಮುದನೀಡುವ ಮತ್ತು ಅಂಥ ಮುದದಾಚೆ ಯಾವುದೇ ಪರಿಣಾಮ ಉಳಿಸದ ಇಂಥ ಕತೆಗಳು ಬಹುಬೇಗ ಏಕತಾನತೆಯಿಂದ ಸೊರಗತೊಡಗಿದ್ದು ನಿಜ.

ಆದರೆ ಸೂಕ್ಷ್ಮ ಕತೆಗಾರನಿಗೆ ಕಟುವಾದ ವಾಸ್ತವ ಮತ್ತು ಎಲ್ಲ ಬಗೆಯ ಸೋಗಿನ ಕೃತಕ ಫ್ಯಾಂಟಸಿ ಎರಡರ ನಡುವೆ ನಿಂತಂತೆ ಕಾಣುವ ತನ್ನದೇ ಬದುಕಿನ ನಿರರ್ಥಕತೆ, ಅರ್ಥಹೀನತೆ ಮತ್ತು ಅದರ ಎಲ್ಲ ಜಂಜಾಟಗಳ ಉದ್ದೇಶ ರಾಹಿತ್ಯ ಕೂಡ ಅನುಭವಕ್ಕೆ ಬರುವ ಕ್ಷಣಗಳಿದ್ದೇ ಇರುತ್ತವೆ. ಇದೊಂದು ಬಗೆಯ ಸ್ಮಶಾನವೈರಾಗ್ಯವೇ ಹೌದಾದರೂ ಅದು ಕಾಣಿಸುವ ಒಂದು ದರ್ಶನ ಕೂಡ ಇದ್ದೇ ಇದೆ. ಅಲ್ಲಿ, ಕೊನೆಗೂ ಮನುಷ್ಯನ ಅಹಂಕಾರದ ವಿಸ್ತರಣೆಯಾದ, ಒಂದು ಅಸಹಜ ಪ್ರಕ್ರಿಯೆಯಾದ, ಪ್ರಸಿದ್ಧಿ-ಗುರುತಿಸುವಿಕೆ ಇತ್ಯಾದಿಯನ್ನೇ ಬಯಸುವ ಬರವಣಿಗೆ ಎಂಬ ಪ್ರಕ್ರಿಯೆಯ, ಅದರ ಬೈಪ್ರಾಡಕ್ಟ್ ಆದ ಸಾಹಿತ್ಯದ ಬಗ್ಗೆ ಹೆಚ್ಚು ಖಚಿತ ನಿಲುವುಗಳು ಮೂಡುವುದು ಸಾಧ್ಯ. ಮತ್ತು ಇದರಾಚೆಗೂ ಒಬ್ಬ ಬರಹಗಾರ ಬರವಣಿಗೆಯಲ್ಲಿ ಕ್ರಿಯಾಶೀಲನಾಗಿ ಉಳಿಯುವುದು ಕೂಡ ಸಾಧ್ಯ. ವಿನೋದ್ ಕುಮಾರ್ ಶುಕ್ಲ ಅವರು ಅಂಥ ಅಪರೂಪದ ವ್ಯಕ್ತಿಯಾಗಿದ್ದರು.

ರಾಜು ಹೆಗಡೆಯವರೂ ನವ್ಯೋತ್ತರ ಕತೆಗಾರರ ಹೊಸ ತಲೆಮಾರಿಗೆ ಸೇರಿದವರಾದರೂ ಅವರು ಯಾವುದೇ ಮಾದರಿಗೆ ಒಲಿಯಲಿಲ್ಲ ಎನ್ನುವುದನ್ನು ಗಮನಿಸಬೇಕು. ಹೀಗೆ ಕಾವ್ಯದಂಥ ಕತೆಗಳನ್ನು ಬರೆಯುವುದು ಯಾವುದೋ ಒಂದು ಕಥಾನಕದ ಎಳೆ ಹಿಡಿದು, ಕುತೂಹಲಕರವಾಗಿ ಅದನ್ನು ನಿರೂಪಿಸುತ್ತ ಅದಕ್ಕೊಂದು ಆಕೃತಿ, ಅದರಲ್ಲೊಂದು ಮೆಸೇಜು, ಅರ್ಥ ಹುಟ್ಟಿಸುವಷ್ಟು ಸುಲಭದ ಪ್ರಕ್ರಿಯೆಯಾಗಿರಲಿಲ್ಲ. ಈ ಸುಲಭದ ಪ್ರಕ್ರಿಯೆಯನ್ನು ಗಹನಗೊಳಿಸುತ್ತ, ಸಂಕೀರ್ಣಗೊಳಿಸುತ್ತ, ಕಥನದ ಮಹತ್ವವನ್ನು ಪರಾಕಾಷ್ಠೆಗೊಯ್ದ ಕತೆಗಾರರು ಆಗಲೂ ಇದ್ದರು, ಈಗಲೂ ಇದ್ದಾರೆ. ಅಲ್ಲದೆ ಭಿನ್ನ ಮಾದರಿಯನ್ನು ಪೋಷಿಸಿದ ರಾಘವೇಂದ್ರ ಖಾಸನೀಸ, ರಾಘವೇಂದ್ರ ಪಾಟೀಲ, ಆಲನಹಳ್ಳಿ, ದೇವನೂರ ಮಹದೇವ, ಕೇಶವ ಮಳಗಿಯವರಂಥ ಕತೆಗಾರರ ಮಾದರಿಗಳು ತಮ್ಮ ಆಕರ್ಷಣೆಯನ್ನೂ, ಗುರುತ್ವವನ್ನೂ ಪ್ರಖರವಾಗಿಟ್ಟುಕೊಂಡೇ ಇದ್ದ ಕಾಲವದು.

ರಾಜು ಹೆಗಡೆಯವರು ‘ಅಪ್ಪಚ್ಚಿ’ ಸಂಕಲನದಲ್ಲಿ ಪುರಾಣದ ಪುನರ್‌ವ್ಯಾಖ್ಯಾನಕ್ಕೆ ಇಳಿದು ಬರೆದ ಕತೆಗಳನ್ನು ಹೊರತು ಪಡಿಸಿದರೆ ಸುದೀರ್ಘ ಕಾಲಘಟ್ಟದ ಕಥನಗಳಿಗೇ ಹೆಚ್ಚಾಗಿ ಒಲಿದಿದ್ದು ಕಂಡು ಬರುತ್ತದೆ. ‘ಅಪ್ಪಚ್ಚಿ’ ಸಂಕಲನವನ್ನು ಗಮನಿಸಿದರೆ ಎದ್ದು ಕಾಣುವುದು ಪುರಾಣಗಳನ್ನು ಅವರು ಪುನರ್‌ವ್ಯಾಖ್ಯಾನಿಸಲು ಪ್ರಯತ್ನಿಸಿದ್ದು. ಅಹಲ್ಯೆಯ ಕತೆಯನ್ನು (ಮಾನಿನಿ ಮಣಿಯೆ ಬಾರೆ!), ಯಕ್ಷಪ್ರಶ್ನೆಯ ಕಥಾನಕವನ್ನು (ಕಾಡಿನ ನಡುವೆ), ಸಾಲ್ವ-ಅಂಬೆಯರ ಪ್ರಸಂಗವನ್ನು (ಸರಸಿಜಾಂಬಕಿಯರೆ ಕೇಳಿ), ಭರತ-ಬಾಹುಬಲಿಯ ಪ್ರಸಂಗವನ್ನು (ಇರುವುದೆಲ್ಲವ ಬಿಟ್ಟು) ರಾಜು ಹೆಗಡೆ ಮತ್ತೆ ಬರೆದಿರುವುದು ಈ ಸಂಕಲನದಲ್ಲಿ ಗಮನಿಸಿದರೆ ಕಥಾನಕದ ನಿರೂಪಣೆಯಲ್ಲಿ ಅವರಿಗಿರುವ ನೈಪುಣ್ಯ ಮತ್ತು ಆಸಕ್ತಿ ನಮಗೆ ಅರ್ಥವಾಗುತ್ತದೆ. ಯಕ್ಷಗಾನ ಪ್ರಸಂಗಗಳು ಜನಸಾಮಾನ್ಯರಿಗೆ ಈಗಾಗಲೇ ಚೆನ್ನಾಗಿ ಗೊತ್ತಿರುವ ಕಥಾನಕಗಳನ್ನೇ ಆಡುತ್ತವೆ. ಆಶುಪ್ರಸಂಗದ ಒಂದು ಗುಣವೇ ಪ್ರತಿ ಪ್ರಯೋಗವನ್ನೂ ಅನನ್ಯಗೊಳಿಸುವ ಶಕ್ತಿ ಯಕ್ಷಗಾನದಲ್ಲಿ. ಹಾಗಾಗಿ ಜನ ಎಷ್ಟು ಬಾರಿ ನೋಡಿದರೂ, ಎಷ್ಟು ಚೆನ್ನಾಗಿ ಗೊತ್ತಿರುವ ಕಥಾನಕವೇ ಆದರೂ ಮತ್ತೆ ಮತ್ತೆ ಯಕ್ಷಗಾನವನ್ನು ನೋಡಲು ಹೋಗುತ್ತಿದ್ದರು. ರಾಜು ಹೆಗಡೆಯವರ ಈ ಸಂಕಲನದ ನಾಲ್ಕು ಕತೆಗಳು ಮಾಡುವುದು ಇದನ್ನೇ. ಇದನ್ನು ಹೊರತು ಪಡಿಸಿ ನೋಡಿದರೆ, ಇಡೀ ಬದುಕನ್ನು, ತಲೆಮಾರುಗಳನ್ನು ಕಟ್ಟಿಕೊಡುವ ‘ಅಪ್ಪಚ್ಚಿ’, ‘ಬಂಧ’, ‘ಕತ್ತಲೆ ಮೌನ ಮತ್ತು.....’, ‘ತಳಿಯ ನೆರಳು’ ಮುಂತಾದ ಕತೆಗಳನ್ನು ಇಲ್ಲಿ ಗಮನಿಸಬಹುದು. ‘ಅಪ್ಪಚ್ಚಿ’ ಸಂಕಲನದ ಉಳಿದ ಆರು ಕತೆಗಳನ್ನು ಗಮನಿಸಿದರೆ ಅವುಗಳದ್ದೇ ಎಳೆ ಅವರ ಮುಂದಿನ (ಇತ್ತೀಚಿನ) ಕತೆಗಳಲ್ಲಿಯೂ ನಮಗೆ ಕಾಣಿಸುವುದು ಸುಳ್ಳಲ್ಲ. ಒಂದು ಕೊಲೆಯ ಪ್ರಸಂಗ, ಅದೂ ಭಾವನೆಂಟ-ಮೈದುನರ ಸುತ್ತ ಸುತ್ತಿಕೊಳ್ಳುವಂಥ ಕೊಲೆಯ ಕತೆ, ಹೆಗಡೆಯವರ ರಾಜಕೀಯ ಮತ್ತು ದುಂದುವೆಚ್ಚದ ಬದುಕು ಅವರ ಸಿರಿತನವನ್ನು ಕರಗಿಸುವ ಹಂತದಲ್ಲಿ ಮಗ ಮನೆಯ ವ್ಯವಹಾರವನ್ನು ಕೈಗೆತ್ತಿಕೊಂಡು ನಿಭಾಯಿಸುವ ಕತೆ, ಅಪ್ಪಚ್ಚಿಯಂಥವರ, ಜಟ್ಟಿಯಂಥವರ, ನಾಗು ಥರದವರ ಕತೆ ಎಲ್ಲಿಯೋ ಒಂದೇ ಎಳೆಯನ್ನು ಮತ್ತೆ ಮತ್ತೆ ವ್ಯಾಖ್ಯಾನಿಸುತ್ತಿರುವ ಹೊಳಹುಗಳನ್ನು ಕಾಣಿಸುವುದು ನಿಜ. ಇಲ್ಲಿ ಮಾತ್ರ ನಮಗೆ ರಾಜು ಹೆಗಡೆಯವರ ಕಥಾನಕ-ವಸ್ತು-ಆಕೃತಿ-ನಿರೂಪಣೆಯ ಪಟ್ಟುಗಳನ್ನು ಒರೆಗೆ ಹಚ್ಚಿ ನೋಡುವುದು ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕೆ ಈ ಕತೆಗಳು ಮುಖ್ಯವಾದರೂ ರಾಜು ಅವರಲ್ಲಿ ಮೆಚ್ಚುಗೆಯಾಗುವುದೆಲ್ಲ ಇಂಥ ಚೌಕಟ್ಟುಗಳ ಒಳಗೆ ಕೂರಲು ಹವಣಿಸುವ ಕತೆಗಾರಿಕೆಯಲ್ಲ.

‘ಅಪ್ಪಚ್ಚಿ’ ಸಂಕಲನದ ನಂತರ ಹೆಗಡೆಯವರ ಕತೆಗಳಲ್ಲಿ ಪುರಾಣದ ಪುನರ್‌ವ್ಯಾಖ್ಯಾನದ ಹುಮ್ಮಸ್ಸು ಇಳಿಮುಖವಾದಂತೆಯೂ ಕಾಣುತ್ತದೆ ಮಾತ್ರವಲ್ಲ, ಸುದೀರ್ಘಾವಧಿಯ ಕಾಲಘಟ್ಟಕ್ಕೆ ಚಾಚಿಕೊಂಡ ಕತೆಗಳಿಂದಲೂ ಅವರು ಹೊರಳಿಕೊಂಡಂತೆ ಕಾಣುತ್ತದೆ. ಹೀಗಾಗಿ ಮೂರನೆಯ ಘಟ್ಟದ ಕತೆಗಳಲ್ಲಿ ವಸ್ತು, ಆಕೃತಿ, ಕಥಾನಕ ಎಂದೆಲ್ಲ ಹುಡುಕಿ ಹೊರಟರೆ ನಿರಾಶೆಯೇ ಗತಿ.

ಈ ಸಂಕಲನದ ಎಕ್ಸ್‌ಟ್ರಾ ಮೆರಿಟಲ್ ರಿಲೇಶನ್ನಿನ ರೊಮಾಂಟಿಕ್ ಪ್ರೆಸೆಂಟೇಶನ್ ಮಾಡುವ ‘ವಿಪ್ರಲಂಭ’, ಮಹಾಬಲ ಹೆಗಡೆ ಮತ್ತು ಶಂಭು ಭಟ್ಟರ ಜಿದ್ದಾಜಿದ್ದಿ, ಅದಕ್ಕಿರುವ ಒಂದು ಕೊಲೆ ಪ್ರಸಂಗದ ಹಿನ್ನೆಲೆ, ಟುವಾಲು ಇಟ್ಟು ಹೋದವರ ಜಗಳದ ಪ್ರಸಂಗ ಎಲ್ಲ ಬರುವ ‘ಕುರುರಾಯ ಇದನೆಲ್ಲ ಕಂಡು’, ದೈನಂದಿನದ ನಡುವೆ ಬೆಳೆಯುವ ಮನೆಗೆಲಸದ ಕಲಾವತಿಯ ಕತೆ, ಅವಳ ತಂದೆಯ ಸಾವು, ಮನೆಯಲ್ಲಿನ ಹಳೆಯ ಪ್ರಿಜ್ಜಿನ ವಿಲೇವಾರಿ ಪ್ರಸಂಗ ಇರುವ ‘ಫ್ರಿಜ್ಜು’, ಈಗಾಗಲೇ ವಿವರಿಸಿರುವ ‘ಚಾವಿ’, ನಾರಾಯಣ ಮತ್ತು ರವಿ - ಇಬ್ಬರ ಸ್ನೇಹ, ನಾರಾಯಣ ಅವರ ಕಾಯಿಲೆ, ಅದರ ಸುತ್ತಣ ಗುಟ್ಟು ಇತ್ಯಾದಿ ಬರುವ ‘ಲೌಕಿಕ’, ವಿಪ್ರಲಂಭ ಕತೆಯ ಇನ್ನೊಂದು ಅಧ್ಯಾಯದಂತೆ ಕಾಣಿಸುವ ‘ಪಾರಿಜಾತದ ಗೀರು’, ನುಡಿಚಿತ್ರಗಳೋ, ಪುಟ್ಟ ಪುಟ್ಟ ಪ್ರಸಂಗಗಳೋ ಎಂಬಂತಿರುವ ‘ಲಾಸ್ಟ್ ಪೆಗ್ಗು’, ‘ಎಮ್ಮೆ ಕಳೆದಿದೆ’, ‘ತೇಲುವ ಊರು’ ಮುಂತಾದ ಕಥನಗಳೇ ನಮಗೆ ಒಂದು ನೆಲದ ಜನ, ಪರಿಸರ, ಸಂಸ್ಕಾರ, ನಡವಳಿಕೆ ಇತ್ಯಾದಿಗಳೊಂದಿಗೆ ಹೆಚ್ಚು ಜೀವಂತವಾದ ಕಥಾಜಗತ್ತನ್ನು ಕಟ್ಟಿಕೊಡುತ್ತಿರುವುದು. ರಾಜು ಹೆಗಡೆಯವರ ‘ಹಳವಂಡ’ ಸಂಕಲನದಲ್ಲಿ ಕೂಡ ನಾವು ಕಾಣುವುದು ಇಂಥವೇ ಬರಹಗಳನ್ನು ಅಥವಾ ಕತೆಗಳನ್ನು. ಇವು ನುಡಿಚಿತ್ರದ ಚೌಕಟ್ಟನ್ನು ಮೀರಿವೆ ಮತ್ತು ಶಿಷ್ಟಪ್ರಕಾರದ ಕತೆಗಳಾಗುವ ಮಹತ್ವಾಕಾಂಕ್ಷೆಯನ್ನೂ ತೊರೆದಿವೆ. ಪ್ರಕಾರದ ಹಂಗಿಲ್ಲದ ಈ ಕಥನಗಳನ್ನು ಬರೇ ಓದುವ ಕುಶಿಗಾಗಿ ಓದಬಹುದೆನ್ನುವುದೇ ಇವುಗಳ ಹೆಚ್ಚುಗಾರಿಕೆ. ‘ವಿಪ್ರಲಂಭ’ ಮತ್ತು ‘ಪಾರಿಜಾತದ ಗೀರು’ ಎರಡೂ ಕತೆಗಳು ‘ಅಪ್ಪಚ್ಚಿ’ ಸಂಕಲನದಲ್ಲಿಯೇ ಬರುವ ‘ಅವನು’ ಕತೆಯ ನೆಲೆಯಲ್ಲೇ ಸಾಗುತ್ತ ಆತ್ಮರತ ವಿಹಾರದಲ್ಲಿ ಹೆಚ್ಚು ಒಲವು ತೋರುತ್ತಿದೆ ಎನ್ನುವುದು ನಿಜವಾದರೂ ಇವು ಒಪ್ಪಿಕೊಳ್ಳುವ ಮನುಷ್ಯನ ದೌರ್ಬಲ್ಯ ಕೂಡ ಶಿಷ್ಟ ಜಗತ್ತು ಸದಾ ಅಡಗಿಸಿಡಲು, ನಾಗರಿಕ ಸೋಗಿನಲ್ಲಿ ಮರೆಮಾಚಲು ಬಯಸಿದ್ದು ಎನ್ನುವ ಕಾರಣಕ್ಕಾಗಿ ಇಲ್ಲಿ ಇರಬೇಕು ಅನಿಸುತ್ತದೆ. ಹೀಗೆ ಇಲ್ಲಿ ಪಾರಂಪರಿಕವಾದ ಬಗೆಯ ಕಥೆಗಳಿಲ್ಲ. ಹಾಗಾಗಿ ಈ ಕತೆಗಳ ಆಶಯ, ಸಾಮಾಜಿಕ-ತಾತ್ವಿಕ ಆಯಾಮ, ವಸ್ತುವಿನ ಸಮಕಾಲೀನತೆ ಹಾಗಿರಲಿ, ಮುಖ್ಯ ಮುದ್ದೆಯಾದ ವಸ್ತುವೇ ಐಡೆಂಟಿಫೈಯಬಲ್ ಮಾನದಂಡಗಳಿಗೆ ಸಿಕ್ಕಿಕೊಳ್ಳದ ಹಾಗಿವೆ. ಅಂಥ ನಿರೀಕ್ಷೆಗಳ ಚೌಕಟ್ಟು ಬಿಟ್ಟುಕೊಟ್ಟು ಸುಮ್ಮನೇ ಓದುವ ಕುಶಿಗಾಗಿ ಓದುವ ಮನಸ್ಸುಗಳಿಗೆ ಈ ಬಗೆಯ ಬರವಣಿಗೆಯ ಸೊಗಸು, ಮಹತ್ವ ಮತ್ತು ಅವು ಮನಸ್ಸನ್ನು ಸೇರಿ ನಿಲ್ಲುವ ಚೋದ್ಯ ಅರಿವಾಗದೇ ಇರದು. ಈ ಸುಮ್ಮನೇ ಓದುವ ಕುಶಿಗಾಗಿ ಓದುವ, ಓದಬೇಕನ್ನಿಸುವ ಬರಹಗಳ ಬಗ್ಗೆ ಹೇಳಿದವರು ಕೂಡ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರೇ.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, November 6, 2018

ಕಾಲ

1977ರಲ್ಲಿ ತನ್ನ ಮೊದಲ ಕಾದಂಬರಿಗೇ ಬುಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ Penelope Lively ಮತ್ತೊಮ್ಮೆ, 1984ರಲ್ಲಿಯೂ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿಯೇ ತೃಪ್ತಿ ಹೊಂದಬೇಕಾಯಿತು. ಆದರೆ 1989ರಲ್ಲಿ ಈ Moon Tiger ಕಾದಂಬರಿ ಆಕೆಯ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಅಷ್ಟೇಕೆ, ಮೊನ್ನೆ ಮೊನ್ನೆ ಗೋಲ್ಡನ್ ಮ್ಯಾನ್ ಬುಕರ್ ಪ್ರಶಸ್ತಿಯ ಅಂತಿಮಪಟ್ಟಿಗೂ ಆಯ್ಕೆಯಾಯಿತು. ಬಹಳಷ್ಟು ಮಂದಿ ಇದೇ ಕಾದಂಬರಿ ಆ ಪ್ರಶಸ್ತಿಗೆ ಅರ್ಹ ಎಂದು ನಂಬಿದ್ದರು. ಆದರೆ ಆ ಗೌರವ ಅಷ್ಟೇನೂ ಹೆಸರು ಮಾಡದಿದ್ದ ‘ದ ಇಂಗ್ಲೀಷ್ ಪೇಶಂಟ್‌’ಗೆ ಸಂದಿದ್ದು ಈಗ ಇತಿಹಾಸ. ತಮಾಶೆ ಎಂದರೆ, ಈಕೆ ಇಂಗ್ಲೀಷ್ ಪೇಶಂಟ್ ಕಾದಂಬರಿ ಬರೆದ Michael Ondaatjeಯ Warlight ಕಾದಂಬರಿಯ ರಿವ್ಯೂ ಬರೆಯುತ್ತಿದ್ದ ಹೊತ್ತಲ್ಲೇ ಇಬ್ಬರೂ ಆ ಪ್ರಶಸ್ತಿಯ ಶಾರ್ಟ್‌ಲಿಸ್ಟಿನಲ್ಲಿ ಕಾಣಿಸಿಕೊಂಡಿದ್ದು. ಅಡುಗೆಮನೆ ಸಾಹಿತ್ಯ ಎಂಬ ಅಷ್ಟೇನೂ ಸತ್ಯವಿಲ್ಲದ ಟೀಕೆಗೂ ಗುರಿಯಾಗಿರುವ ಈಕೆಯ ಕಾದಂಬರಿಗಳ ಜೊತೆ ಇವರು ಸಾಕಷ್ಟು ಮಕ್ಕಳ ಪುಸ್ತಕಗಳನ್ನೂ ಬರೆದಿದ್ದಾರೆ, ಅವುಗಳಿಗೆ ಬಹುಮಾನ, ಪ್ರಶಸ್ತಿಯನ್ನೂ ಪಡೆದಿದ್ದಾರೆ.


ಮೂನ್ ಟೈಗರ್ ಕಾದಂಬರಿ ಒಂದು ಸಂಕೀರ್ಣ ವ್ಯಕ್ತಿತ್ವದ, ಸಂಕೀರ್ಣ ಬದುಕನ್ನು ಬದುಕಿದ ಎಪ್ಪತ್ತರ ಮುದುಕಿ ತನ್ನ ಇಡೀ ಬದುಕನ್ನು, ಸಂಬಂಧಗಳನ್ನು ಪುನರಾವಲೋಕನ ಮಾಡುತ್ತ ಹೋಗುವ ಕತೆ. ಎಲ್ಲೋ ಅದು ಜಗತ್ತಿನ ಇತಿಹಾಸದ ಕಥನ ಕೂಡ ಆಗಿದೆ ಎನ್ನುವುದನ್ನು ನಾವು ಒಪ್ಪಬಹುದು ಅಥವಾ ಬಿಡಬಹುದು. ಏಕೆಂದರೆ ಈ ಕೇಂದ್ರ ಪಾತ್ರ, ಕ್ಲಾಡಿಯಾ, ಯುದ್ಧಭೂಮಿಯ ವರದಿಗಾರ್ತಿಯೂ, ಇತಿಹಾಸಕಾರ್ತಿಯೂ ಆಗಿರುವುದು ಮಾತ್ರವಲ್ಲ, ತನ್ನದೇ ದಿನಚರಿಯ ಮುಖೇನ (ಅದರ ಯಥಾವತ್ ಪಠ್ಯ ಕಾದಂಬರಿಯ ಒಂದು ಅಧ್ಯಾಯವಾಗಿ ಬಂದಿದೆ) ಯುದ್ಧಭೂಮಿಯ ನಿಕಟ ಚಿತ್ರವನ್ನು ನಮಗೆ ಕೊಡಮಾಡುವ ಟಾಮ್ ಎಂಬಾತನನ್ನು ತೀರ ಹಚ್ಚಿಕೊಂಡು ಪ್ರೇಮಿಸಿರುವುದು ಕೂಡ ಇದಕ್ಕೆಲ್ಲ ಪೂರಕವಾಗಿದೆ. ಇತಿಹಾಸ ಮತ್ತು ಯುದ್ಧದ ವಿವರಗಳೇ ಕಾದಂಬರಿಯ ಪ್ರಧಾನ ಭೂಮಿಕೆಯಲ್ಲದಿದ್ದಾಗ್ಯೂ ಅದರ ನೆರಳು ಕಾದಂಬರಿಯ ಉದ್ದಕ್ಕೂ ಚಾಚಿದಂತಿರುವುದು ನಿಜವೇ. ಆದರೆ ಯಾವುದೇ ಒಂದು ಬಗೆಯ ನಿರ್ದಿಷ್ಟ ಚೌಕಟ್ಟಿಗೆ ಒಳಪಡದಂತೆ ಸಾಗುವ ಈ ಕಾದಂಬರಿ ಇತಿಹಾಸ, ಯುದ್ಧ, ಪ್ರೇಮ, ಮನುಷ್ಯ ಸಂಬಂಧ ಹೀಗೆ ಹಲವು ಸ್ತರಗಳನ್ನು ಮೀಟುತ್ತ ಸಾಗಿದರೂ ಎಲ್ಲೋ ಒಂದು ಕಡೆ ಇದರ ಕೇಂದ್ರವೇ ಜನ ಒಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವ, ಅಪಾರ್ಥ ಮಾಡಿಕೊಳ್ಳುವ ಪ್ರಕ್ರಿಯೆಯ ಸೂಕ್ಷ್ಮಗಳನ್ನು ಶೋಧಿಸುವುದು ಎನಿಸುತ್ತದೆ.

ಉಳಿದಂತೆ ಕ್ಲಾಡಿಯಾ ತುಂಬ ಸಂಕೀರ್ಣ ವ್ಯಕ್ತಿತ್ವದ ವ್ಯಕ್ತಿ. ಎಪ್ಪತ್ತರ ಇಳಿವಯಸ್ಸಿನಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮರಣವನ್ನೇ ಎದುರು ನೋಡುತ್ತ ಮಲಗಿದ್ದಾಗಲೂ ಆಕೆಯ ಹಠ, ಸ್ವಾಭಿಮಾನ, ಸಂಬಂಧಗಳಿಗೆ ಆಕೆ ನೀಡುವ ಸ್ಥಾನ, ತನ್ನ ಬದುಕಿನಲ್ಲಿ ಬಂದು ಹೋದ ವಿಭಿನ್ನ ವ್ಯಕ್ತಿಗಳನ್ನು ಅವಳು ಅರ್ಥಮಾಡಿಕೊಂಡ ನೆಲೆ ಮತ್ತು ಅವರನ್ನು ಎಲ್ಲೆಲ್ಲಿಡಬೇಕೋ ಅಲ್ಲಲ್ಲಿ ಇಟ್ಟಿರುವ ಬಗೆ ಗಮನಿಸಿದರೆ ಇದು ತೀರ ಸಂಕೀರ್ಣವಾದ ಒಂದು ವ್ಯಕ್ತಿತ್ವ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ. ತಮಾಶೆ ಎಂದರೆ ಹೀಗೆ ನಮ್ಮ ಅರಿವಿಗೆ ಬರುವಂತೆ ಒಂದು ಪಾತ್ರವನ್ನು ಅದರ ಎಲ್ಲ ಸಂಕೀರ್ಣ ಮಗ್ಗುಲುಗಳೊಂದಿಗೇ ಚಿತ್ರಿಸುವುದಕ್ಕೆ ಒಬ್ಬ ಬರಹಗಾರನಿಗೆ ಅಪಾರ ತಾಳ್ಮೆ, ಅಬ್ಸರ್ವೇಶನ್ ಮತ್ತು ಪಾತ್ರದೊಂದಿಗೆ ತಾದ್ಯಾತ್ಮವಿಲ್ಲದ ಅನುಕಂಪ ಅಗತ್ಯವಿರುತ್ತದೆ. ಭಾಷೆ ಮತ್ತು ಸನ್ನಿವೇಶಗಳು ಉಳಿದ ಕೆಲಸ ಮಾಡುತ್ತವೆ ಎನ್ನುವುದು ಸರಿಯೇ. ಆದರೆ ತನ್ನದೇ ಒಂದು ಮಾಂಸದ ತುಂಡನ್ನು ಹೀಗೆ ಕತ್ತರಿಸಿ ಹಾಗೆ ಪ್ರದರ್ಶನಕ್ಕಿಡುವ ಸಂಕಷ್ಟ ಇಲ್ಲಿನದು. Penelope Lively ಯ ಯಶಸ್ಸಿರುವುದೇ ಇಲ್ಲಿ. 

ಅವಳಿ ಸಹೋದರ ಗೊರ್ಡನ್, ಪತಿ ಜಾಸ್ಪರ್, ಮಗಳು ಲಿಸಾ, ನಿರಾಶ್ರಿತನಂತೆ ಅಸರೆಗೆ ಬಿದ್ದ ಲಾಸ್ಝ್ಲೊ, ಗೊರ್ಡನ್‌ನ ಹೆಂಡತಿ ಸಿಲ್ವಿಯಾ ಮತ್ತು ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಮಿಲಿಟರಿ ವ್ಯಕ್ತಿ ಟಾಮ್ - ಇಲ್ಲಿನ ಪ್ರಮುಖ ಪಾತ್ರಗಳು. ಕ್ಲಾಡಿಯಾಳ ತಾಯಿ, ಜಾಸ್ಪರ್‌ನ ತಾಯಿ (ಈ ಇಬ್ಬರ ಆಸರೆಯಲ್ಲೇ ಕ್ಲಾಡಿಯಾಳ ಮಗಳು ಲಿಸಾ ಬೆಳೆದು ದೊಡ್ಡವಳಾಗಿರುತ್ತಾಳೇ) ಅಷ್ಟು ಮುಖ್ಯವಲ್ಲದ ಪಾತ್ರಗಳೆನ್ನಬಹುದು. ಈ ಪ್ರತಿಯೊಂದು ಪಾತ್ರದೊಂದಿಗೂ ಕ್ಲಾಡಿಯಾಳ ಸಂಬಂಧ ಹಲವು ಏರಿಳಿತಗಳನ್ನು ಕಂಡಿದೆ. ಪ್ರೀತಿ, ದ್ವೇಷ, ನಿಕಟವಾದ ಒಡನಾಟ, ವರ್ಷಗಳ ಕಾಲದ ಅಂತರ ಎಲ್ಲ ಈ ಸಂಬಂಧದ ವಿಭಿನ್ನ ಮುಖಗಳನ್ನು ಸಾಣೆ ಹಿಡಿದು ರೂಪಿಸಿದೆ. ಅವರವರ ನೆಲೆಯಿಂದ ಅವರವರು ಸರಿಯಾಗಿಯೇ ಇದ್ದಾರೆನ್ನಿಸುವಾಗಲೂ ಎಲ್ಲೋ ಏನೋ ತಪ್ಪಾಗಿದೆ, ಎಲ್ಲೋ ಯಾರಿಗೋ ನೋವಾಗಿದೆ, ಏನೋ ಕೊಂಡಿ ಕಳಚಿದೆ. ಅನಾವಶ್ಯಕವಾಗಿದ್ದ ಚುಚ್ಚುಮಾತು, ಕೊಂಚ ಅತಿಯಾದ ಪ್ರೀತಿ ಮಾತು, ಎಲ್ಲೋ ತಪ್ಪಲ್ಲವೆ ಎನಿಸುವ ನಿರ್ಲಕ್ಷ್ಯ, ಎಲ್ಲೋ ಬಳಸಿಕೊಂಡಂತೆ ಕಾಣಿಸಿಬಿಡುವ ಸಂಬಂಧ.... ಎಲ್ಲ ಇಲ್ಲಿನ ಕ್ಲಾಡಿಯಾಳನ್ನು, ಅವಳ ನಿಷ್ಠುರ ವ್ಯಕ್ತಿತ್ವವನ್ನು, ಕಾಠಿಣ್ಯವನ್ನು, ನಿಷ್ಠುರ ನಿಲುವನ್ನು ರೂಪಿಸಿದ್ದರೂ, ನಮ್ಮ ನಿಮ್ಮ ಬದುಕಿಗೆ ತೀರ ಅನ್ಯವಲ್ಲದ ಘಟನಾವಳಿಗಳು ಎಲ್ಲರನ್ನೂ ಇದೇ ಬಗೆಯಲ್ಲಿ ಕಡಿದು - ಕಟೆದು ನಿಲ್ಲಿಸಬೇಕಾಗಿಲ್ಲ ಎನ್ನುವ ಸತ್ಯವನ್ನು ಒತ್ತಿ ಹೇಳಬೇಕಾದ್ದೇನಿಲ್ಲ. ಇಲ್ಲಿ ಯಾವುದನ್ನೂ ಇದಂ ಇತ್ಥಂ ಎಂದು ಹೇಳಬಲ್ಲವರಿಲ್ಲ. ಆದರೆ ಇಡೀ ಕಾದಂಬರಿ ಕ್ಲಾಡಿಯಾ ಮತ್ತು ಈ ಪಾತ್ರಗಳೊಂದಿಗಿನ ಸಂಬಂಧದ ರೂಪುರೇಷೆಗಳ ಪಲ್ಲಟವನ್ನೇ ಕುರಿತು ಧೇನಿಸಿದಂತಿದೆ. ಇದರಲ್ಲಿ ಸ್ಥಾಯೀ ಎನ್ನಬಹುದಾದ ಏನೂ ಇಲ್ಲ. ಮನುಷ್ಯ ಬದಲಾಗುತ್ತಿರುತ್ತಾನೆ. ಮನುಷ್ಯ ಮನುಷ್ಯರ ನಡುವಿನ ಭಾವನೆಗಳು ಬದಲಾಗುತ್ತಿರುತ್ತವೆ. ಆಕರ್ಷಣೆ, ಪ್ರೀತಿ, ಅಗತ್ಯ ಮತ್ತು ಇಷ್ಟವಾಗುವ, ಆಗದಿರುವ ಸಂಗತಿಗಳೆಲ್ಲವೂ ಕಾಲಕ್ಕೆ ಮತ್ತು ಮನಸ್ಸಿಗೆ ಸಂಬಂಧಿಸಿ ಬದಲಾಗುತ್ತಿರುತ್ತವೆ. ಆದರೆ ಎಂಬತ್ತು, ತೊಂಬತ್ತರ ಕೊನೆಗಾಲದಲ್ಲಿ ಆ ನಿರಂತರ ಚಲನಶೀಲವಾಗಿದ್ದ ಮನುಷ್ಯ ಸಂಬಂಧಗಳ ಒಂದು ಗ್ರಾಫ್‌ನ್ನು ಹಿಂದಿರುಗಿ ನೋಡಿದಾಗ ಗ್ರಹಿಕೆಗೆ ಸಿಗುವ ಸಂಗತಿಗಳು ಹಲವಾರು. ಅವು ಏನೋ ಒಂದು ಸಂವೇದನೆಯನ್ನುಂಟು ಮಾಡುತ್ತವೆ. ಟಾಲ್‌ಸ್ಟಾಯ್ ಅವರ ಇವಾನ್ ಇಲಿಚ್ಯನ ಸಾವು ಬಹುಶಃ ಇದೇ ಕಾರಣಕ್ಕೆ ಇವತ್ತಿಗೂ ಶ್ರೇಷ್ಠ ಕೃತಿಯಾಗಿ ನಿಲ್ಲುವುದು. 


ಈ ಕಾದಂಬರಿಯ ನಿರೂಪಣೆಯಲ್ಲಿಯೂ ಒಂದು ಪುಟ್ಟ ವಿಶೇಷವಿದೆ. ಇಡೀ ಕಾದಂಬರಿ ಬಹುತೇಕ ಉತ್ತಮ ಪುರುಷದಲ್ಲಿಯೇ ನಿರೂಪಿಸಲ್ಪಟ್ಟಿದ್ದರೂ ಅಲ್ಲಲ್ಲಿ ಕ್ಲಾಡಿಯಾ ತಾನು ತನ್ನಿಂದ ಕಳಚಿಕೊಂಡು ನಿಲ್ಲುತ್ತಾಳೆ ಮತ್ತು ಸ್ವತಃ ಕ್ಲಾಡಿಯಾಳನ್ನು ಹೊರಗಿಟ್ಟು ನೋಡುವ ಪರಿಪಾಠ ತೋರುತ್ತಾಳೆ. ಆಗೆಲ್ಲ ಕಾದಂಬರಿ ಪ್ರಥಮ ಪುರುಷ ನಿರೂಪಣೆಗೆ ಹೊರಳಿಕೊಳ್ಳುತ್ತದೆ. ಇದು ಇಂಥ ಸಂಕೀರ್ಣ ಮನುಷ್ಯ ಸಂಬಂಧಗಳ ಸ್ಪಷ್ಟ ಚಿತ್ರಣಕ್ಕೆ ಅತ್ಯಂತ ಸೂಕ್ತವೆನಿಸಿಯೂ ಇದು ಕೂಡ ಕಾದಂಬರಿ ಬರೆಯುತ್ತಿರುವ Penelope Lively ಯ ತಾಂತ್ರಿಕ ಹೊಂದಾಣಿಕೆಯಷ್ಟೇ ಎನ್ನುವುದನ್ನು ಮರೆಯುವುದು ಸಾಧ್ಯವಿಲ್ಲ. ಆದರೆ ಇದೇ ತಂತ್ರವನ್ನು ಇಟ್ಟುಕೊಂಡು ನಮ್ಮ ಕತೆಗಾರ ಎಸ್ ಸುರೇಂದ್ರನಾಥ್ ಸಾಧಿಸಿದ ಒಂದು ಅದ್ಭುತ ಕತೆಯನ್ನು ನಾವು ಗಮನಿಸದೇ ಇರಲು ಸಾಧ್ಯವಿಲ್ಲ.

ಕನ್ನಡಪ್ರಭ ದೀಪಾವಳಿ ಸಂಚಿಕೆ (2018) ಯಲ್ಲಿ ಪ್ರಕಟವಾಗಿರುವ ಈ ಕತೆಯ ಕೇಂದ್ರ ಪಾತ್ರ ಮತ್ತು ಆ ಕತೆಯ ನಿರೂಪಕ ಇಬ್ಬರನ್ನೂ (ಇವರಿಬ್ಬರೂ ಒಬ್ಬರೇ ಆಗಿದ್ದರೂ ಆಗಿರಬಹುದು!) ಸ್ವತಃ ಕತೆಗಾರ ಮುಖಾಮುಖಿ ಎದುರಿಸಬೇಕಾಗುತ್ತದೆ. ಅಂದರೆ, ಕತೆಯ ಕೇಂದ್ರ ಪಾತ್ರವೊಂದು ಕತೆಗಾರನ ನಿಯಂತ್ರಣದಲ್ಲಿದೆಯೇ ಇಲ್ಲವೆ ಎನ್ನುವುದು ಮುದ್ದೆ. ಅಥವಾ ಕತೆಯ ನಿರೂಪಕನಾದರೂ ಕತೆಗಾರನ ನಿಯಂತ್ರಣದಲ್ಲಿದ್ದಾನೆಯೇ ಅಥವಾ ಕತೆಯೇ ಕತೆಗಾರನ ನಿರ್ದೇಶಕನೆ ಎನ್ನುವುದು ಆ ಪ್ರಶ್ನೆ ಎನ್ನಿ. ಆದರೆ ಇದು ಹುಬೇಹೂಬ್ ಮುಷ್ಟಿಯೊಳಗಿರುವ ಹಕ್ಕಿ ಬದುಕಿದೆಯೇ ಸತ್ತಿದೆಯೇ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಯಂತೆಯೇ ಕೊನೆಗೊಳ್ಳುತ್ತದೆ. ಅಂದರೆ ನಿಮಗೆ ಯಾವುದೇ ಉತ್ತರ ಇಲ್ಲಿ ಸಿಗುವುದಿಲ್ಲ. ಆದರೆ ಪ್ರಶ್ನೆ ನಿಮ್ಮನ್ನು ಕಾಡುವುದು ನಿಲ್ಲುವುದಿಲ್ಲ. ಆದರೆ, ತಾಂತ್ರಿಕವಾಗಿ ಸುರೇಂದ್ರನಾಥ್ ಬಳಸಿಕೊಳ್ಳುತ್ತಿರುವ ತಂತ್ರ ಮಾತ್ರ Penelope Lively ಬಳಸಿರುವುದೇ. ಒಮ್ಮೆ ನಿರೂಪಕನೊಂದಿಗೂ, ಕಥನದ ಕೇಂದ್ರ ಪಾತ್ರದೊಂದಿಗೂ ತಾದ್ಯಾತ್ಮ ಪ್ರದರ್ಶಿಸುವ ಕತೆಗಾರನೇ ಇನ್ನೊಮ್ಮೆ ಅದರೊಂದಿಗೆ ಅಂತರ ಕಾಪಾಡಿಕೊಳ್ಳುವ, ಭಿನ್ನನಾಗುವ ಪ್ರಕ್ರಿಯೆಯೇ ಇಲ್ಲಿಯೂ ಇದೆ. ಆದರೆ ಅದು ಸಾವಿನಂಥ ವಿಷಯಕ್ಕೆ ಬಂದಾಗ ಏನಾಗುತ್ತದೆ? ಕತೆಗಾರನಿಗೆ ಇಷ್ಟವಾಗುವ ಕೇಂದ್ರ ಪಾತ್ರದ ಸಾವು ಆ ಪಾತ್ರಕ್ಕೆ ಇಷ್ಟವಿಲ್ಲದೇ ಇದ್ದರೆ! ಅಥವಾ ನಿರೂಪಕನ ಸಾವು ಕತೆಗಾರನ ಸಾವೇ ಆಗಿಬಿಟ್ಟರೆ ಕತೆ ಮುಂದುವರಿಯುವುದಾದರೂ ಹೇಗೆ? ಕತೆಯನ್ನು ಅವಶ್ಯ ಓದಿ. (ಈ ಬಾರಿಯ ಮಯೂರ (ನವೆಂಬರ್ 2018 ರ ಸಂಚಿಕೆಯಲ್ಲಿ) ಕತೆಗಾರ ಸುರೇಂದ್ರನಾಥ್ ತಮ್ಮ ಕಥೆಗಾರಿಕೆಯ ಕುರಿತೇ ಆಡಿರುವುದಿದೆ. ಅಲ್ಲಿ ಅವರು ಈ ಕತೆಯ ಕುರಿತೂ ಕೆಲವು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ). 

ಈ ಕಾದಂಬರಿಯ ಬಹುಮುಖ್ಯ ಧನಾತ್ಮಕ ಅಂಶ ಬೇರೆಯೇ ಇದೆ. ಅದು ಪ್ರತಿ ಪುಟದಲ್ಲಿಯೂ ಕಂಡು ಬರುವ Penelope Lively ಅವರ ಅಪಾರ ತಾಳ್ಮೆ, ಆಳವಾದ ಗ್ರಹಿಕೆ ಮತ್ತು ಒಳನೋಟಗಳು ರೂಪಿಸಿದ ಅವರ ನಿರೂಪಣೆ, ಭಾಷೆ ಮತ್ತು ಅದರ ಶ್ರೀಮಂತಿಕೆ. ನಿಮಗಿಲ್ಲಿ ಪುಟ ಪುಟಕ್ಕೂ ಕೋಟ್ ಮಾಡಬೇಕೆನ್ನಿಸುವ ವಿಚಾರಗಳು, ಒಳಾರ್ಥವಿರುವ ಮಾತುಗಳು, ಮನುಷ್ಯ ಸಂಬಂಧವನ್ನು ವ್ಯಾಖ್ಯಾನಿಸಬಲ್ಲ ನುಡಿಗಳು ಸಿಗುತ್ತವೆ. ಇವುಗಳನ್ನು ಆಕೆ ನಿರೂಪಣೆಯನ್ನು ಸುಂದರಗೊಳಿಸುವುದಕ್ಕಾಗಿ ಬಳಸಿಲ್ಲ, ಕಟ್ಟಿಕೊಟ್ಟಿಲ್ಲ. ಆಕೆಯ ಬದುಕಿನ ಸಾರಸತ್ವವನ್ನು ಹೀರಿಕೊಂಡು ಅತ್ಯಂತ ಸಹಜವಾಗಿ ಅವು ಬಂದಿವೆ. ಹಾಗಾಗಿಯೇ ಅನೇಕ ಮಂದಿ ಈ ಕಾದಂಬರಿಯನ್ನು ತಾವು ಮತ್ತೆ ಮತ್ತೆ ಓದಿರುವುದಾಗಿ, ಪ್ರತಿ ಬಾರಿ ಓದಿದಾಗಲೂ ಅದು ತಮಗೆ ಹೊಸದೇನನ್ನೊ ನೀಡಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ.

ಕಾದಂಬರಿಯ ಹತ್ತು ಹಲವು ಅದ್ಭುತ ವಾಕ್ಯಗಳಿಂದ ಆಯ್ದ ಕೆಲವು...

ತಾನೇನೂ ಅಂಥ ನರಕಕ್ಕೆ ಹೋಗಬೇಕಾಗುವುದಿಲ್ಲ ಎಂದುಕೊಂಡು ನೆಮ್ಮದಿಯಾಗಿರಬಹುದಷ್ಟೇ, ಆದರೆ ಅದೊಂದು ಭ್ರಮೆ. ಅದು ಹೋಗಲಿ. ನಾವೆಲ್ಲವೂ ಉಳಿದವರ ಮನಸ್ಸುಗಳಲ್ಲಿ ಉಳಿದುಬಿಡಬೇಕಿದೆಯಲ್ಲ. ಆಘಾತಕಾರಿಯಾಗುವಷ್ಟು ಅಪಾರ್ಥಗಳೊಂದಿಗೆ ನಾನು ಉಳಿದು ಹೋಗುತ್ತೇನೆ. ಲಿಸಾ ಮನಸ್ಸಿನಲ್ಲಿ, ಸಿಲ್ವಿಯಾಳ ಮನಸ್ಸಿನಲ್ಲಿ ಮತ್ತು ಜಾಸ್ಪರ್‌ನ ಮನಸ್ಸಿನಲ್ಲಿ. ಮತ್ತು ನನ್ನ ಮೊಮ್ಮಕ್ಕಳ ಮನಸ್ಸಿನಲ್ಲಿ (ಫುಟ್‌ಬಾಲ್ ಆಟಗಾರರ ಮತ್ತು ಪಾಪ್ ತಾರೆಗಳ ನಡುವೆ ನನಗೂ ಒಂದಿಷ್ಟು ಸ್ಥಳಾವಕಾಶ ಇದ್ದಲ್ಲಿ ಮಾತ್ರ) ಮತ್ತು ನನ್ನ ಶತ್ರುಗಳ ಮನಸ್ಸಿನಲ್ಲಿ. ಒಬ್ಬ ಇತಿಹಾಸಕಾರಳಾಗಿ ಇಂಥ ಅಪಾರ್ಥಗಳು, ತಪ್ಪಾದ ವ್ಯಾಖ್ಯಾನಗಳ ಕುರಿತು ಯಾರೂ ಏನೂ ಮಾಡಲಾಗದು ಎನ್ನುವುದರ ಸ್ಪಷ್ಟ ಅರಿವುಳ್ಳ ನಾನು ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಳ್ಳಲಾರೆ. ಆದರೆ, ಬಹುಶಃ ಇದಕ್ಕೆಲ್ಲ ತುಂಬ ಮಹತ್ವ ನೀಡುವವರಿಗೆ, ಅದರ ವಿರುದ್ಧ ಕೈಲಾದಷ್ಟು ಸೆಣಸಾಡುವವರಿಗೆ ಇದೊಂದು ಬಗೆಯ ಪರ್ಯಾಯ ನರಕವೇ ಸರಿ. ಅವರಿಗಂತೂ ಅಂಥ ಎಲ್ಲ ವ್ಯಕ್ತಿಗಳ ನೆನವರಿಕೆಯಲ್ಲಿ ಕೂಡಾ ಇಷ್ಟವಾಗದ ಒಂದು ಕಹಿಸಂಗತಿಯಾಗಿ ಅದು ಉಳಿದುಬಿಡುತ್ತದೆ.

ಭಯಂಕರ ಕ್ಲಾಡಿಯಾ, ಸಿಡುಕಿ ಕ್ಲಾಡಿಯಾ. ಮತ್ತು ಲಕ್ಕೀ ಕ್ಲಾಡಿಯಾ. ನಿಶ್ಚಿತವಾಗಿಯೂ ಅವರವರ ಸಂದರ್ಭಾನುಸಾರ ನಾನು ಅವರಿಗೆ ಏನಾಗಿದ್ದೆನೊ ಅದನ್ನೇ ಅವರು ನನ್ನ ನೆನಪನ್ನಾಗಿ ಕಾಪಿಟ್ಟುಕೊಳ್ಳುತ್ತಾರಷ್ಟೆ. ಹಲವರಿಗೆ ಇದೊಂದು ಲಕ್ಷುರಿ ಎನಿಸಬಹುದು, ಸಾವಿನಾಚೆಯ ಲೋಕಕ್ಕೆ ಸಂದು ಹೋದ ರೌಂಡ್‌ಫಿಗರುಗಳಲ್ಲಷ್ಟೇ ನೆನಪಾಗುಳಿವ ಶ್ರಮಿಕವರ್ಗಕ್ಕೆ, ಸೈನಿಕರಿಗೆ, ರಕ್ಷಾಕವಚದಡಿ, ಹೆಲ್ಮೆಟ್ಟುಗಳೊಳಗೆ, ಶಿರಸ್ತ್ರಾಣತೊಟ್ಟ ಸಾವಿರಾರು ಎಳೆಯ ಮುಖಗಳು.... (ಪುಟ 125)

ನೀವು ಕೇಳಬಹುದು, ಚರಿತ್ರೆಯ ಆ ನಿರ್ದಿಷ್ಟ ಕ್ಷಣ ನನ್ನ ಬದುಕಿನೊಂದಿಗೆ ಮಾಡುವುದಾದರೂ ಏನಿದೆ? ಬರೀ ನಾನು ಅದರ ಬಗ್ಗೆ ಪುಸ್ತಕವೊಂದನ್ನು ಬರೆದೆ ಎನ್ನುವುದನ್ನು ಬಿಟ್ಟರೆ? ಈಗಾಗಲೇ ಬರೆದು ರಾಶಿ ಬಿದ್ದಿರುವ ಮಿಲಿಯಗಟ್ಟಲೆ ಶಬ್ದಗಳಿಗೆ ನಾನೂ ಒಂದಿಷ್ಟು ಸೇರಿಸಿದೆ ಎನ್ನುವುದನ್ನು ಬಿಟ್ಟರೆ? ಅದು ನನ್ನ ನಿರರ್ಥಕ ಎಪ್ಪತ್ತಾರು ವರ್ಷಗಳ ಸುದೀರ್ಘ ಬದುಕಿನ ಘಟನಾವಳಿಗಳ ಅನುಕ್ರಮಣಿಕೆಯಲ್ಲಿ ಎಲ್ಲಿ ಹೇಗೆ ಸೇರಿಕೊಂಡು ಹೊಸೆದುಕೊಳ್ಳಲಿದೆ? ಉಳಿದೆಲ್ಲಾ ಸಂಗತಿಗಳ ಹಾಗೆಯೇ ಅದು ನನ್ನನ್ನು ಬೆಳೆಸಿದೆ. ಅದು ನನ್ನನ್ನು ನನ್ನ ಅನುಭವಗಳ ಸೆರೆಮನೆಯಿಂದ ಬಿಡುಗಡೆಗೊಳಿಸಿದೆ. ಅದೇ ಅನುಭವಗಳ ಸೆರೆಮನೆಯನ್ನು ಅದು ಪ್ರತಿಧ್ವನಿಸುತ್ತದೆ. (ಪುಟ 158-159)

ಕ್ಲಾಡಿಯಾ ಮಲಗಿದ್ದಲ್ಲಿಂದಲೇ ಅವನನ್ನು ನೋಡುತ್ತಾಳೆ. ಜಗತ್ತಿನ ಇನ್ಯಾವುದೇ ವ್ಯಕ್ತಿಗಿಂತ ಇವನು ಕೈಗೆಟುಕದ ಗಗನಕುಸುಮ ಎನಿಸುತ್ತದೆ ಅವಳಿಗೆ. ಅತ್ಯಂತ ನಿಕಟವಾಗಿ ಬಲ್ಲ ಮತ್ತು ಅಷ್ಟೇ ಹೆಚ್ಚು ಅಪರಿಚಿತ.

ಅವಳು ತನ್ನ ಹಣೆಯ ಮೇಲಿನ ಗಾಯ ಮತ್ತು ಯಾವುದೇ ಮೇಕಪ್ ಇಲ್ಲದ ಮುಖ ಹೊತ್ತು ಹಾಗೇ ಹಾಸುಗೆಗೆ ಒರಗಿಕೊಂಡು ಕುಳಿತಿದ್ದಾಳೆ. ಅವಳೀಗ ತಪ್ಪೇ ಸಿಗಲಾರದಂತೆ, ಯಾರಿಂದಲೂ ಮಣಿಸಲಾಗದಂತೆ ಭೀಕರವಾಗಿ ಜಗಳಕಾಯುವ ಜಗಳಗಂಟಿ ಕ್ಲಾಡಿಯಾಳಾಗಿ ಕಾಣಿಸುತ್ತಿಲ್ಲ. ಬದಲಿಗೆ ಬಿಳುಚಿಕೊಂಡು ಅತಂತ್ರಳಾದ ಅವಳದೇ ಪ್ರೇತದಂತಿದ್ದಾಳೆ. ಮತ್ತವಳು ಅಳುತ್ತಿರುವುದನ್ನು ಅವನು ಕಂಡಾಗ ಅದೇ ಹಳೆಯ ನಿಕಟ ಸಂಬಂಧದ ನೆರಳು ಅಲ್ಲಿ ಮತ್ತೊಮ್ಮೆ ಪಸರಿಸಿದೆ. ಅದು ತೀರ ಹಿಂದಿನ ನೆನಪು, ವರ್ಷಗಳ ಹಿಂದಿನದು, ಅವರಿಬ್ಬರೇ ಇದ್ದಾಗಿನದು ಮತ್ತು ಇಬ್ಬರೂ ತಮ್ಮಿಬ್ಬರನ್ನು ಹೊರತು ಪಡಿಸಿದ ಒಂದು ಜಗತ್ತು ಇದೆ ಎನ್ನುವುದನ್ನು ಕೂಡ ಕಂಡುಕೊಳ್ಳುವುದಕ್ಕೂ ಹಿಂದಿನ ದಿನಗಳಿಗೆ ಸೇರಿದ್ದು. ಅವನು ಆ ದಿನಗಳ ಅವೇ ಕಂಗಳುಗಳಿಂದ ಅವಳತ್ತ ಒಮ್ಮೆ ನೋಡುತ್ತಾನೆ, ಒಂದೇ ಒಂದು ಕ್ಷಣ. ಮತ್ತು ಅವಳೂ ಅವನತ್ತ ನೋಡುತ್ತಾಳೆ. ಇಬ್ಬರಿಗೂ ಮತ್ತೆ ಅವೇ ದಿನಗಳಿಗೆ ವಾಪಾಸಾಗುವುದು ಬೇಡ. ಇಬ್ಬರೂ ತಾವೆಂದಿಗೂ ಕಳೆದುಕೊಳ್ಳದ ಆ ಸವಿಯನ್ನು ಹಾಗೆಯೇ ಮೌನದಲ್ಲಿ ಸಂಭ್ರಮಿಸುತ್ತಾರೆ. ಗೊರ್ಡಾನ್ ಎದ್ದು ಕಿಟಕಿಯ ಬಳಿ ಹೋಗಿ ಹೊರಗಿನ ದೃಶ್ಯ ನೋಡುತ್ತ ನಿಲ್ಲುತ್ತಾನೆ. ಇಕ್ಕೆಲಗಳಲ್ಲಿ ನಿಯಮಿತವಾಗಿ ಬೆಳೆಸಿದ ಪುಟ್ಟ ಮರಗಳಿರುವ ವಿಶಾಲವಾದ ಬೀದಿ, ಕಣ್ಣಿಗೆ ರಾಚುವಂಥ ಹಳದಿ ಬಣ್ಣದ ಬಸ್ಸುಗಳ ತುಂಬ ತುಂಬಿಕೊಂಡ ಮಂದಿ, ಸಿಗರೇಟು, ವಾಶಿಂಗ್ ಪೌಡರುಗಳ ಜಾಹೀರಾತು ಫಲಕಗಳು. ಯಾಕೋ ಕ್ಲಾಡಿಯಾ ತನ್ನ ಅಕ್ಕಪಕ್ಕದಲ್ಲೇ, ಆದರೆ ತನಗಿಂತ ಮತ್ತು ಉಳಿದೆಲ್ಲರಿಗಿಂತ ಕೊಂಚ ಮುಂದೆ ಸಾಗುತ್ತಿರುವಂತೆ ಅವನಿಗೆ ಅನಿಸುತ್ತದೆ. ಅದೇ ಕ್ಷಣ, ತಮ್ಮ ಸ್ಥಾನ ಅದಲು ಬದಲಾಗಿರಬೇಕಿತ್ತೆಂದೂ ಅವನು ಬಯಸುತ್ತಾನೆ. (ಪುಟ 164-165).

ಇತ್ತೀಚಿನ ಪ್ಯಾರಿಸ್ ರಿವ್ಯೂ ಮಳೆ ಸಂಚಿಕೆ (226) ರಲ್ಲಿ Penelope Lively ಸಂದರ್ಶನ ಪ್ರಕಟವಾಗಿದ್ದು, ಅಲ್ಲಿ ಆಕೆ ತನ್ನ ಬಾಲ್ಯ, ಯುದ್ಧದ ನೆನಪುಗಳು, ತಾನು ಕಾದಂಬರಿ ಬರೆಯುವುದಕ್ಕಾಗಿ ನಡೆಸಿದ ಸಂಶೋಧನೆ, ಬರವಣಿಗೆಯ ಕ್ರಮ, ಪ್ರಕಟನೆ, ವಿಮರ್ಶೆ, ಪ್ರಶಸ್ತಿ, ಸಹಲೇಖಕರು, ಆತ್ಮಚರಿತ್ರೆ, ವೈಯಕ್ತಿಕಗಳು ಕಥಾಜಗತ್ತಿನೊಳಗೆ ಸೇರಿಕೊಳ್ಳುವ ಬಗೆ ಎಂದೆಲ್ಲ ವಿಸ್ತಾರವಾಗಿ ಮಾತನಾಡಿದ್ದಾರೆ. ಅಲ್ಲಿಂದ ಆಯ್ದ ಕೆಲವು ಮಾತುಗಳು ಇಲ್ಲಿವೆ:

ಸಣ್ಣಕತೆ ಬರೆಯುವುದಕ್ಕೂ ಮಕ್ಕಳ ಕತೆ ಬರೆಯುವುದಕ್ಕೂ ಇರುವ ಸಾಮ್ಯತೆಯ ಕುರಿತು:

ಸಣ್ಣಕತೆಯನ್ನು ಬರೆಯುವಾಗ ಆರಂಭದ ಒಂದೆರಡು ವಾಕ್ಯಗಳಲ್ಲೇ ನೀವು ನಿಮ್ಮ ಓದುಗನನ್ನು ಹಿಡಿದುಬಿಡಬೇಕಾಗುತ್ತದೆ. ಅದೇ ನಿಯಮ ಮಕ್ಕಳಿಗಾಗಿ ಬರೆಯುವಾಗಲೂ ಅನ್ವಯಿಸುತ್ತದೆ. ಮೊದಲ ಪುಟದಲ್ಲೇ ನೀವು ಮಗುವನ್ನು ನಿಮ್ಮೊಂದಿಗೆ ಕರೆದೊಯ್ಯಲು ಸೋತರೆ ನೀವು ಅವರನ್ನು ಕಳೆದುಕೊಂಡಂತೆಯೇ.

ಪ್ರಶ್ನೆ: Oleander, Jacaranda ನಲ್ಲಿ ಒಂದು ಕಡೆ ನೀವು ನಿಮ್ಮದೇ ವಯಸ್ಸಿನ ಒಂದು ಮಗುವಿನ ಸಾವಿನ ಕುರಿತು ನೆನಪಿಸಿಕೊಂಡಿದ್ದೀರಿ. ಅದು ಈಜಿಪ್ಟ್‌ನಲ್ಲಿದ್ದಾಗ ನಿಮ್ಮ ಹೆತ್ತವರ ಒಡನಾಟದಲ್ಲಿದ್ದವರಲ್ಲಿ ಒಬ್ಬರ ಮಗು. ಅಕಸ್ಮಾತ್ತಾಗಿ ಅದು ಒಂದು ಬಾಂಬ್‌ಗೆ ಕೈಯಿಕ್ಕಿತ್ತು. Olivia Manning ಅವರು ಈ ಘಟನೆಯನ್ನು ತಮ್ಮ Levant Trilogy ಯಲ್ಲಿ ಬಳಸಿಕೊಂಡಿರುವ ಬಗ್ಗೆ ಹೇಳುತ್ತ "ಅದು ಜೀವನಾನುಭವದ ತೀರಾ ಅಸೂಕ್ಷ್ಮಅನುವಾದವಾಗಿ ಕಥನದಲ್ಲಿ ಬಂದಂತಿದೆ" ಎಂದಿದ್ದೀರಿ. ನಿಮ್ಮ ಬದುಕಿನ ಸನ್ನಿವೇಶಗಳನ್ನು ನಿಮ್ಮ ಕಾಲ್ಪನಿಕ ಕಥನದಲ್ಲಿ ತರುವ ಬಗೆಯನ್ನು ನೀವು ಒಂದು ಬಗೆಯ ಅನುವಾದ ಎಂದು ಪರಿಗಣಿಸುತ್ತೀರಾ?

ಇದೊಂದು ಗಂಭೀರವಾದ ಪ್ರಶ್ನೆ. ನಾನು ಅನುಭವವನ್ನು ಕಥನಕ್ಕೆ ಅನುವಾದಿಸುತ್ತೇನೆ. ನಾನು ಕಾಲ್ಪನಿಕ ಅನುಭವವನ್ನು ಕೂಡ ಬಳಸಿಕೊಳ್ಳುತ್ತೇನೆ. ಆದರೆ ನಾನು ಅಲ್ಲಿಯೂ ನಾನು ನನ್ನ ಸ್ವಂತ ಅನುಭವದ ಮೇಲೆ ಅದನ್ನು ಕಟ್ಟುತ್ತಿರುತ್ತೇನೆ. ನಾನದನ್ನು ಯಾಕೆ ಅಸೂಕ್ಷ್ಮ ಅನುವಾದ ಎಂದು ಹೇಳಿದೆನೆಂದರೆ, ಅದನ್ನು Manning ನಿರ್ವಹಿಸಿದ ಬಗೆ ಹಾಗಿತ್ತು. ಅಲ್ಲಿನ ಮಗು ಮತ್ತು ನಡೆದ ಅವಗಢ ಅಲ್ಲಿನ ಕೇಂದ್ರ ಎನ್ನುವುದು ಮೇಲ್ನೋಟಕ್ಕೇ ನಿಮಗೆ ಗೊತ್ತು. ಅದು ಆ ಹೆತ್ತವರನ್ನು ಕುಸಿಯುವಂತೆ ಮಾಡಿತ್ತು. ನಾನು ನನಗೆ ತೀರ ಹತ್ತಿರದ ಮೂಲದಿಂದ ಘಟನೆಗಳನ್ನು ಅಥವಾ ನಡವಳಿಕೆ, ಸನ್ನಿವೇಶ ಇತ್ಯಾದಿಗಳನ್ನು ಯಥಾವತ್ ಎತ್ತಿಕೊಂಡು ಬಳಸುವುದರಲ್ಲಿ ಹಿಂದೆ. ಬರಹಗಾರರಿಗೆ ಸದಾ ಎದುರಾಗುವ ಒಂದು ಪ್ರಶ್ನೆ ಎಂದರೆ ನೀವು ನಿಜಜೀವನದಲ್ಲಿ ಮುಖಾಮುಖಿಯಾಗುವ ವ್ಯಕ್ತಿಗಳನ್ನು ಕಾದಂಬರಿಯ ಪಾತ್ರಗಳನ್ನಾಗಿ ಬಳಸಿಕೊಳ್ಳುತ್ತೀರಾ ಎನ್ನುವುದು. ಇಲ್ಲ. ಏಕೆಂದರೆ, ಒಂದು ಪಾತ್ರವನ್ನು ನಾವು ಕಥನದ ಚೌಕಟ್ಟಿನಲ್ಲಿ ಕಟ್ಟುತ್ತಾ ಹೋಗಬೇಕಾಗುತ್ತದೆ. ನಾನು ನನ್ನ ಬದುಕಿನ ಯಾವುದೋ ಒಂದು ಪಾತ್ರವನ್ನು ಎತ್ತಿಕೊಂಡು ಅದನ್ನು ನನ್ನ ಕಾದಂಬರಿಯ ಪಾತ್ರವನ್ನಾಗಿಸಿಕೊಂಡರೆ ಅದೆಲ್ಲ ನಡೆಯುವುದಿಲ್ಲ. ಆದರೆ ನಾನು ನನ್ನ ಬದುಕಿನಿಂದ, ಬದುಕಿನಲ್ಲಿ ಬಂದ ವ್ಯಕ್ತಿಗಳಿಂದ ಅಷ್ಟಿಷ್ಟು ಎತ್ತಿಕೊಳ್ಳುತ್ತಿರುತ್ತೇನೆ, ಒಂದು ಕೈ ಇಲ್ಲವೇ ಕಾಲು, ನನ್ನದೇ ಒಂದಿಷ್ಟು ಭಾಗ, ನನ್ನ ಸ್ವಭಾವ, ವ್ಯಕ್ತಿತ್ವದ ಒಂದಿಷ್ಟು ಅಂಶಗಳು ಅಥವಾ ಕ್ರಿಯೆ-ಪ್ರತಿಕ್ರಿಯೆಗಳು ಇತ್ಯಾದಿ. ಮಂದಿ ಹೇಗೆ ನಡೆದುಕೊಳ್ಳುತ್ತಾರೆ ಅಥವಾ ಸಂಗತಿಗಳು ಬದುಕಿನಲ್ಲಿ ಹೇಗೆ ಸಂಭವಿಸುತ್ತವೆ ಎನ್ನುವುದರ ಕುರಿತು ಒಬ್ಬ ಬರಹಗಾರನಿಗಿರುವ ಸಾಮಾನ್ಯಜ್ಞಾನವೇ ಇಲ್ಲಿ ಒದಗಿಬರುವ ಮುಖ್ಯ ವಿಚಾರ.

ಪ್ರಶ್ನೆ:
ಒಬ್ಬ ಇತಿಹಾಸಕಾರನಿಗೂ ಕಾದಂಬರಿಕಾರನಿಗೂ ಇರುವ ಸಾಮ್ಯತೆ ಏನು? ಘಟನೆಗಳನ್ನು ಭಾಷೆಯಲ್ಲಿ ಕಟ್ಟುತ್ತಾ ಅದರ ಹಿಂದಿನ ಕಾರ್ಯಕಾರಣ ಸಂಬಂಧವನ್ನೂ ಇತಿಹಾಸದ ಸಂದರ್ಭದಲ್ಲಿ ಅಥವಾ ಕಥನದ ಚೌಕಟ್ಟಿನಲ್ಲಿ ಅದರ ಅರ್ಥವನ್ನೂ ಅರಸುವ ಪ್ರಕ್ರಿಯೆಯನ್ನೇ ಇಬ್ಬರೂ ನಡೆಸುವುದರಿಂದ ಇಬ್ಬರೂ ಹೆಚ್ಚೂಕಡಿಮೆ ಒಂದೇ ಬಗೆಯ ಪ್ರಯತ್ನದಲ್ಲಿ ತೊಡಗಿರುತ್ತಾರೆ ಅನಿಸುತ್ತಾ?

ಸಂಬಂಧ ಇದೆ ಅನಿಸುತ್ತೆ ನನಗೆ. ಯೂನಿವರ್ಸಿಟಿಯಲ್ಲಿ ಇತಿಹಾಸವನ್ನು ಓದುತ್ತ ಮತ್ತು ತದನಂತರ ಚರಿತ್ರೆಯನ್ನು ಓದಿ ಅದು ಎದುರಿಡುವ ಪರಸ್ಪರ ವೈರುಧ್ಯಗಳಿಂದ ಕೂಡಿರುವ ಅನೇಕ ಸಾಕ್ಷ್ಯ, ಪುರಾವೆಗಳನ್ನು ಗಮನಿಸುತ್ತ ನಾವು ಕಟ್ಟಿಕೊಳ್ಳುವ ಅರ್ಥ, ಕಾರ್ಯಕಾರಣ ಸಂಬಂಧದ ಒಂದು ಚಿತ್ರಣವೇನಿದೆ ಅದೇ ಬಗೆಯಲ್ಲಿ ನಮ್ಮ ನಮ್ಮ ವ್ಯಕ್ತಿಗತ ಬದುಕೂ ಇರುತ್ತದೆ. ಯಾವುದೇ ಒಂದು ಘಟನೆಯಲ್ಲಿ ಇದಂಇತ್ಥಂ ಎಂಬುದಿರುವುದಿಲ್ಲ. ಈ ಮುಂಜಾನೆ ಇಲ್ಲೇನು ನಡೆಯಿತು ಎನ್ನುವುದರ ಬಗ್ಗೆ ನಿಮ್ಮ ಮತ್ತು ನನ್ನ ವಿವರಣೆ ಸಂಪೂರ್ಣವಾಗಿ ವಿಭಿನ್ನವಾಗಿರುವುದು ಸಾಧ್ಯವಿದೆ. ಹಾಗೆ ಬರೆಯುತ್ತಾ ಬಹಳಷ್ಟು ಒದಗಿ ಬರುತ್ತದೆ. ನನಗನ್ನಿಸುವಂತೆ ಸೂಕ್ಷ್ಮವಾದ ಮತ್ತು ನಿಷ್ಠುರವಾದ ವ್ಯತ್ಯಾಸವೇನೆಂದರೆ, ಒಬ್ಬ ಲೇಖಕ ಬದುಕಿನ ಸನ್ನಿವೇಶಗಳಿಂದ ತನಗೆ ಬೇಕಾದುದನ್ನು ಪಡೆದುಕೊಳ್ಳುತ್ತಾನೆ. ಕಾದಂಬರಿಕಾರ ಯಾವ ಸಂಗತಿಯನ್ನು ನೆಚ್ಚಿಕೊಂಡು ಸಾಗಬಹುದು ಎನ್ನುವುದನ್ನು ನಿರ್ಧರಿಸುತ್ತಾನೆ ಮತ್ತು ಅವಶ್ಯವಿದ್ದರೆ ಅಷ್ಟೇನೂ ನಿಖರವಲ್ಲದ ಮೂಲದಿಂದಲೇ ನಿರೂಪಣೆಯನ್ನು ಸಾಗಿಸಿ ವಿಭಿನ್ನವೂ ಮತ್ತು ಪರ್ಯಾಯವೂ ಆದ ಸನ್ನಿವೇಶಗಳ ಮೂಲಕವೂ ಕಥನವನ್ನು ವೈರುಧ್ಯಮಯವಾಗಿ ಕಟ್ಟುತ್ತಾನೆ. ಅದೇ ಇತಿಹಾಸಕಾರ ಏನು ಮಾಡುತ್ತಾನೆಂದರೆ, ಅವನು ಎಲ್ಲಾ ಸಾಕ್ಷ್ಯ, ಪುರಾವೆಗಳನ್ನೂ ಎದುರಿಗಿಟ್ಟುಕೊಂಡು, ಅವು ಪೂರಕವಿರಲಿ, ವೈರುಧ್ಯಮಯವಿರಲಿ ಎಲ್ಲವನ್ನೂ ಒಟ್ಟಿಗಿರಿಸಿಕೊಂಡೇ ನಂಬಲರ್ಹವಾದ ಒಂದು ಚಿತ್ರವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿರುತ್ತಾನೆ. ಈಗ ನಾನು Margaret MacMillan ಅವರ ಒಂದು ಅದ್ಭುತವಾದ ಕೃತಿಯನ್ನು ಓದುತ್ತಿದ್ದೇನೆ. ಆಕೆ ಇತಿಹಾಸದ ಬಗ್ಗೆ ತಳೆದಿರುವ ನಿಲುವನ್ನು ನಾನು ನಿಜಕ್ಕೂ ಮೆಚ್ಚುತ್ತೇನೆ. ಇತಿಹಾಸದಲ್ಲಿ ಖಡಾಖಂಡಿತವಾದದ್ದು ಅನ್ನುವುದೇನೇನೂ ಇಲ್ಲ. ಪ್ರತಿಯೊಂದನ್ನೂ ನಾವು ಮತ್ತೆಮತ್ತೆ ನೋಡಬೇಕಾಗುತ್ತದೆ, ಶೋಧಿಸಬೇಕಾಗುತ್ತದೆ. ಸಂಶೋಧನೆ ಎಂದರೆ ಇದೇ ಎಂದು ನನಗನಿಸುತ್ತದೆ. ನಮಗೆ ಇತಿಹಾಸದ ಪುಸ್ತಕವೊಂದನ್ನು ಇಟ್ಟುಕೊಂಡು ಒಂದು ದರಿದ್ರ ಬೋರ್ಡಿಂಗ್ ಸ್ಕೂಲಿನಲ್ಲಿ ಇತಿಹಾಸ ಬೋಧಿಸುತ್ತಿದ್ದರು. ಅದರಲ್ಲಿ ಎಲ್ಲವೂ ಕಣ್ಣಾರೆ ಕಂಡುಬಂದವರು ಬರೆದ ಹಾಗೆ ಒಂದಿಷ್ಟು ಮಾಹಿತಿಗಳಿದ್ದವು. ನಂತರ, ಆಕ್ಸ್‌ಫರ್ಡ್‌ನಲ್ಲಿ ಕಳೆದ ಮೊದಲವಾರವೇ ಜ್ಯೂಟ್ಸ್ ಯಾರು ಎನ್ನುವ ವಿಷಯವಾಗಿ ಪ್ರಬಂಧ ಬರೆಯಬೇಕಾಗಿತ್ತು ನಾನು. ನಾವು ಆಂಗ್ಲೊ-ಸ್ಯಾಕ್ಸನ್ ಇತಿಹಾಸ ಅಧ್ಯಯನ ಮಾಡುತ್ತಿದ್ದೆವು. ಒಂದಿಷ್ಟು ಪುಸ್ತಕಗಳ ಪಟ್ಟಿ ಹಿಡಿದು ನಾನು ಲೈಬ್ರರಿಗೆ ಹೋದೆ. ಅಲ್ಲಿ ಇವರು ನಿಜಕ್ಕೂ ಯಾರು, ಇವರು ಎಲ್ಲಿಂದ ಬಂದರು ಎಂಬ ಕುರಿತೇ ಅಂತ್ಯವಿಲ್ಲದಷ್ಟು ಚರ್ಚೆ, ವಾಗ್ವಾದ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂತು. ಹತ್ತೊಂಬತ್ತು ವರ್ಷದ ಒಂದು ಮನಸ್ಸು ತೀರಾ ಎಳಸಾಗಿರುತ್ತದೆ, ಮುಕ್ತವಾಗಿರುತ್ತದೆ. ಅಲ್ಲಿ ನನಗೆ ಕಳೆದ ಹತ್ತು ವರ್ಷಗಳಿಂದ ನಮಗೆ ತಪ್ಪು ತಪ್ಪು ಶಿಕ್ಷಣವನ್ನೇ ನೀಡಲಾಗುತ್ತಿತ್ತು ಎನ್ನುವುದು ತಕ್ಷಣವೇ ಹೊಳೆದುಬಿಟ್ಟಿತು. ಇತಿಹಾಸ ಎನ್ನುವುದು ವಾಸ್ತವವಾಗಿ ಚರ್ಚೆ ಮತ್ತು ವಾಗ್ವಾದಗಳಿಂದ ಅರಿತುಕೊಳ್ಳಬೇಕಾದ ಒಂದು ವಿಷಯವಾಗಿದೆ. 

ಪ್ರಶ್ನೆ: ಮೂನ್ ಟೈಗರ್ ಕಾದಂಬರಿಯಲ್ಲಿ ನಿಮ್ಮ ನಿರೂಪಕಿ, ಕ್ಲಾಡಿಯಾ ತನ್ನ ಗತ ಬದುಕಿನ ಪುನರಾವಲೋಕನ ಮಾಡುವ ಚಿತ್ರವಿದೆ. ಈಗ ನೀವು ಸರಿಸುಮಾರು ಅವಳದೇ ವಯಸ್ಸಿನವರಾಗಿದ್ದೀರಿ, ಅವಳಿಗಿಂತ ಹೆಚ್ಚು ವಯಸ್ಕರಾಗಿದ್ದೀರಿ. ಈಗ ಮತ್ತೊಮ್ಮೆ ಅದೇ ಕಾದಂಬರಿಗೆ ಹಿಂದಿರುಗುವುದಾದರೆ ಆಗ ನೀವು ಈ ವಯಸ್ಸಿನ ಮನಸ್ಥಿತಿ ಇತ್ಯಾದಿಗಳನ್ನು ಸರಿಯಾಗಿಯೇ ಗ್ರಹಿಸಿದ್ದಿರಿ ಅನಿಸುತ್ತಾ ಅಥವಾ ಏನಾದರೂ ತಿದ್ದಬೇಕು ಅನಿಸುತ್ತಾ?

ಅದೆಷ್ಟು ಹಿಂದಿನ ಕಾದಂಬರಿ ಎಂದರೆ ಈಗ ನನಗೆ ಅದನ್ನು ಬೇರೆ ಯಾರೋ ಬರೆದಿರಬೇಕು ಅನಿಸುತ್ತಿದೆ. ಒಬ್ಬ ಬರಹಗಾರನೂ ಪ್ರಬುದ್ಧನಾಗುತ್ತ ಹೋಗುವುದರಿಂದ ಕೂಡ ಹೀಗಾಗುತ್ತದೆ, ಅದು ಸಹಜವೇ. ಅದನ್ನು ಬರೆದಿದ್ದು ಬೇರೆ ಯಾರೋ, ನನ್ನದೇ ತುಂಬ ಎಳೆಯ ವ್ಯಕ್ತಿತ್ವವಾದರೂ ಅದು ಈಗಿನ ನಾನಲ್ಲ. ನನಗನಿಸುತ್ತೆ, ಆಗ ನನಗೆ ಅವಳ ಕಾಯಿಲೆ ಬಗ್ಗೆ ಅಷ್ಟು ಸ್ಪಷ್ಟತೆ ಇದ್ದಿರಲಿಲ್ಲ. ಅವಳು ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನಿಂದ ಸಾಯುತ್ತಿರುವ ಒಬ್ಬ ಹೆಂಗಸು. ಆಗ ನನಗೆ ಅದರ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ, ಅಂದರೆ ಈಗ ಸ್ವತಃ ಕ್ಯಾನ್ಸರ್ ಪೇಶಂಟ್ ಆಗಿದ್ದು ತಿಳಿದುಕೊಂಡಿರುವಷ್ಟು ಆಗ ಗೊತ್ತಿರಲಿಲ್ಲ. ಈಗದನ್ನು ನಾನು ಮತ್ತೆ ಬರೆಯುವುದಾದರೆ ಅವಳನ್ನು ಮತ್ತಷ್ಟು ಹೆಚ್ಚು ವಯಸ್ಕ ಪಾತ್ರವನ್ನಾಗಿ ಮಾಡಿರುತ್ತಿದ್ದೆ, ಅವಳಿಗಾಗ ಬರೇ ಎಪ್ಪತ್ತಾಗಿತ್ತು. ಇನ್ನು, ಕೊನೆಕೊನೆಯ ಅಂಶಗಳೊಂದಿಗೆ ನಾನು ಮತ್ತಷ್ಟು ಆಳವಾಗಿ ಹೋಗುತ್ತಿದ್ದೆ, ಕೇವಲ ಪುನರಾವಲೋಕನಕ್ಕಷ್ಟೇ ಸೀಮಿತಗೊಳಿಸಿಕೊಂಡು ಅದನ್ನು ಬರೆಯುತ್ತಿರಲಿಲ್ಲ. ತಮಾಶೆ ಎಂದರೆ, ಅದು ಯಾವ ತರದ ಒಂದು ಪುಸ್ತಕ ಎಂದರೆ, ಓದುಗ ಅದರಲ್ಲಿ ಎಲ್ಲೂ ತನ್ನನ್ನು ತಾನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದು. ಆ ತರ ಅದು ನಿಲುಕದ ಹಾಗೆ ಎಗರಿ ಬೀಳುತ್ತ ಹೋಗುತ್ತದೆ. ಉದ್ದೇಶಪೂರ್ವಕ ಅದನ್ನು ಹಾಗೆ ಬರೆದಿದ್ದೆ.

ಪ್ರಶ್ನೆ: ಶೈಲಿಯ ಮಟ್ಟಿಗೆ ಹೇಳುವುದಾದರೆ ಅದೊಂದು ತರದ ಲೀಪ್ ನಿಮಗೆ. ಅಂಥ ಒಂದು ಹೊಸಬಗೆಯ ಪ್ರಯೋಗಕ್ಕೆ ಮುಂದಾಗಲು ಆಗ ನಿಮಗೇನಾದರೂ ಪ್ರೇರಣೆಗಳಿದ್ದವೆ? 

ವಿಭಿನ್ನ ಸನ್ನಿವೇಶಗಳನ್ನು ವಿಭಿನ್ನ ದೃಷ್ಟಿಕೋನದೊಂದಿಗೆ ಒಟ್ಟಿಗೇ ಒಂದೆಡೆ ತೋರಿಸುವ ವಿಧಾನವೇನಿದೆ, ಅದೇನೂ ನನ್ನ ಶೋಧವಲ್ಲ, ಮೊದಲೇ ಇತ್ತದು. ವಿಶೇಷವಾಗಿ ಟೆಲಿವಿಷನ್ ಮತ್ತು ಸಿನಿಮಾಗಳಲ್ಲಿ ಅದರ ಬಳಕೆಯಾಗುತ್ತಲೇ ಇತ್ತು. ನನಗೆ ಈ ತಂತ್ರದ ಬಗ್ಗೆ ಕುತೂಹಲವೆನಿಸುತ್ತಿತ್ತು ಮತ್ತು ಕಾದಂಬರಿಯಲ್ಲೂ ಅದನ್ನು ಬಳಸುವುದು ಚೆನ್ನಾಗಿರುತ್ತದೆ ಎನಿಸಿತು. ಆದರೆ ನನ್ನ ಉದ್ದೇಶ ಕೊಂಚ ಬೇರೆಯಿತ್ತು. ನಾನು ವಿಭಿನ್ನ ಬಗೆಯ ಚಾರಿತ್ರಿಕ ಮತ್ತು ವ್ಯಕ್ತಿಗತ ಪುರಾವೆಗಳ ಶೋಧದಲ್ಲಿ ತೊಡಗಿದ್ದೆ. ಇದು ಖಂಡಿತವಾಗಿಯೂ ನನ್ನ ಕಾದಂಬರಿಯ ತಂತ್ರಗಾರಿಕೆಯ ಮೇಲೆಯೂ ಪರಿಣಾಮ ಬೀರಿದೆ.

ಪ್ರಶ್ನೆ: ನೀವು ಈಚೆಯ ವರ್ಷಗಳಲ್ಲಿ ಕಥನವನ್ನು ಅನಿರೀಕ್ಷಿತಗಳ ಪರಿಣಾಮವನ್ನು ಶೋಧಿಸುವುದಕ್ಕೆ ಬಳಸುತ್ತಿರುವಂತಿದೆ. ಮೇಲ್ನೋಟಕ್ಕೆ ಕಾರ್ಯಕಾರಣ ಸಂಬಂಧವಿಲ್ಲದ ರೀತಿಯ ವಿಲಕ್ಷಣ ತಿರುವುಗಳು ಮತ್ತು ಅದರ ಪರಿಣಾಮಗಳ ಚಿತ್ರಣದಲ್ಲಿ ಅದು ಕಂಡುಬರುತ್ತದೆ. ಇದರತ್ತ ನಿಮ್ಮನ್ನು ಸೆಳೆದಿದ್ದು ಯಾವುದು?

ಜೀವನದ ಕೊನೆಯ ಹಂತದಲ್ಲಷ್ಟೇ ನಿಮಗೆ ಒಂದೋ ಹಾಗೆ ಅಥವಾ ಹೀಗೆ ಎಂದು ಯಾವತ್ತೋ ಎಳವೆಯಲ್ಲಿ ತೆಗೆದುಕೊಂಡ ಕೆಲವೊಂದು ನಿರ್ಧಾರಗಳ ಮೇಲೆ ಒಬ್ಬನ ಇಡೀ ಬದುಕು ಅವಲಂಬಿಸಿರುವ ವಿಶಿಷ್ಟ ವಿದ್ಯಮಾನದ ಅರಿವು ಮೂಡುವುದು ಮತ್ತು ಈ ತರ ಬದುಕೇ ಒಂದು ಅನಿರೀಕ್ಷಿತಗಳ ಮೊತ್ತವಾಗಿರುವುದನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೋ ಏನೊ. ನನಗನಿಸುವಂತೆ ನೀವು ತೀರ ಎಳೆಯ ವಯಸ್ಸಿನವರಾಗಿರುವಾಗ ಇದು ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ನಿಮಗೆ ನಿಮ್ಮ ಬದುಕು ನಿಮ್ಮದೇ ಇಷ್ಟಾನಿಷ್ಟಗಳಿಗೆ ಹೊಂದಿಕೊಂಡು ರೂಪುಗೊಳ್ಳುತ್ತದೆ ಎನ್ನುವಂಥ ಒಂದು ಧಾರ್ಷ್ಟ್ಯ ಇರುತ್ತದೆ. ಆದರೆ ಹಿಂದಿರುಗಿ ನೋಡಿದರೆ ಒಂದು ಅದ್ಭುತವಾದ ಕಟ್ಟೋಣದ ಕಾಮಗಾರಿಯೇ ಸಾಗುತ್ತಿರುವುದು ಕಂಡುಬರುತ್ತದೆ. ಬದುಕಿನ ಅಂಥ ಬಹುಮುಖ್ಯ ಅವಧಿಯಲ್ಲಿ ನೀವು ಯಾರೊಂದಿಗೆ ಹೆಚ್ಚು ನಿಕಟವಾಗಿರುತ್ತೀರಿ ಎನ್ನುವುದು ಬಹಳ ಮುಖ್ಯ. ಈ ಕಿಟಕಿಯಲ್ಲಿ ನಿಮಗೆ ಇದ್ದಕ್ಕಿದ್ದಂತೆ ಮುಖಾಮುಖಿಯಾಗುವ ಮುಖ ಯಾವುದು ಎನ್ನುವುದನ್ನು ಗಮನಿಸಿ. ಮುಂದೆ ಅದು ನೀವು ಯಾವ ಕೆಲಸದಲ್ಲಿ ತೊಡಗಿಕೊಳ್ಳುತ್ತೀರಿ ಎನ್ನುವುದರೊಂದಿಗೆ ಮುಗಿಯುತ್ತದೆ. 

ಪ್ರಶ್ನೆ: ನಿಮ್ಮ ಮಾತುಗಳನ್ನು ಕೇಳುತ್ತ ನನಗೆ Ammonites & Leaping Fish ನಲ್ಲಿ ನೀವು ಬರೆದಿದ್ದು ನೆನಪಾಗುತ್ತದೆ. "ಇಲ್ಲಿ ಮತ್ತು ಈಗ ಬದುಕುವುದು ಏನೇನೂ ಸಾಲದು. ನನಗಂತೂ ಸಾಲದು. ನನಗೆ ಆ ಕಾಲ್ಪನಿಕ ಜಿಗಿತಗಳ ನೆರವು ಬೇಕು, ಅವುಗಳೊಂದಿಗೆ ನಾನು ನನ್ನ ಕಾಲದ ಚೌಕಟ್ಟು ಮತ್ತು ದೇಶದ ಚೌಕಟ್ಟುಗಳನ್ನು ಮೀರಿ ಹೋಗಲು ಬಯಸುತ್ತೇನೆ. ಹಾಗೆ ನಾನು ಬೇರೆಯೇ ಜಗತ್ತಿಗೆ ಪ್ರವೇಶ ಪಡೆಯ ಬಯಸುತ್ತೇನೆ. ಅಲ್ಲಿ ಎಲ್ಲವೂ ಬೇರೆಯೇ ಆಗಿರುತ್ತದೆ, ಎಲ್ಲವನ್ನೂ ಬೇರೆ ತರ ಮಾಡಲಾಗುತ್ತದೆ ಅಲ್ಲಿ." ಇಂಥ ಆಕಾಂಕ್ಷೆಯೊಂದು ಮೊಳಕೆಯೊಡೆಯಲು ನಿಮ್ಮದೇ ಬದುಕಿನ ಯಾವುದಾದರೂ ಸ್ಥಾಯೀಯಾದ ಸಂಗತಿಯಿಂದ ಹುಟ್ಟಿದ ನಿರಾಸೆ ಕಾರಣವೆ? ನಡೆಯದ ಹಾದಿಯಲ್ಲಿ ನಡೆಯಬೇಕಿತ್ತು ಎನ್ನುವಂಥ ಅಥವಾ ಸ್ವಲ್ಪ ವಿಶಾಲಾರ್ಥದಲ್ಲಿ ಒಂದು ಬದುಕು, ಅದೆಷ್ಟೇ ಕೌತುಕದ್ದು ಮತ್ತು ಪರಿಪೂರ್ಣವಾಗಿದ್ದಾಗ್ಯೂ, ಸಾಲದು ಎನ್ನುವಂಥ ಮನೋಭಾವಕ್ಕೆ ಯಾವುದಾದರೂ ಮಿತಿಯೊಡ್ಡುವ ಪರಿಸ್ಥಿತಿ ಕಾರಣವಾಗಿತ್ತೆ?

ಒಂದು ಬದುಕು ಯಾವತ್ತೂ ಕಡಿಮೆಯೇ. ಹಿಂದಿನ ಕಾಲದ ಜನ ಇದನ್ನು ಹೇಗೆ ಕಾಣುತ್ತಿದ್ದರು ಎನ್ನುವ ಬಗ್ಗೆ ನಾನು ತುಂಬ ಯೋಚಿಸಿದ್ದೇನೆ. ನೀವೇನಾದರೂ ಮಧ್ಯಯುಗದ ಒಬ್ಬ ಸೊಮರ್ಸೆಟ್ ಹಳ್ಳಿಯ ರೈತನಾಗಿದ್ದರೆ, ತಕ್ಷಣದ ಜನಜೀವನದಾಚೆ, ಪರಿಸರದಾಚೆ ಏನೂ ಗೊತ್ತಿರದ, ಶಿಕ್ಷಣವಿಲ್ಲದ ಸರಳ ಬದುಕು ನಿಮ್ಮದಾಗಿದ್ದರೆ ಅಂತ ಯೋಚಿಸಿ. ಬೇರೆ ಬೇರೆ ಕಡೆ ಬೇರೆ ಬೇರೆ ಕಾಲಮಾನದಲ್ಲಿ ಜನ ಹೇಗೆಲ್ಲ ಬದುಕಿದ್ದರು ಎನ್ನುವಂಥ ವಿಷಯದ ಕುರಿತೆಲ್ಲ ಯಾವುದೇ ಒಂದು ಜ್ಞಾನ, ಮಾಹಿತಿ ಸಿಗುವುದೇ ಸಾಧ್ಯವಿಲ್ಲದಿದ್ದ ತೀರ ಅಸಹಾಯಕವಾದ ಸ್ಥಿತಿಯ ಒಂದು ಬದುಕು ಅದು. ಹಾಗಾಗಿ ನನಗೆ ಸದಾ ಭೂತಕಾಲದ ಬಗ್ಗೆ ತಿಳಿದುಕೊಳ್ಳುವ ಬಯಕೆ. ನನಗೆ ಅಂತ ಏನು, ನಮಗೆಲ್ಲರಿಗೂ ಅದಿರುತ್ತದೆ. ನಾನು ಸದಾ ಆರ್ಕಿಯಾಲಜಿ ಬಗ್ಗೆ ತುಂಬ ಓದುತ್ತೇನೆ, ಏಕೆಂದರೆ ನನಗೆ ಹಿಂದಿನ ಕಾಲದ, ತೀರಾ ಅಜ್ಞಾನದಲ್ಲೇ ಬದುಕು ಕಳೆದ ಮಂದಿಯ ಬಗ್ಗೆ, ಆಗಿನ ಸಮಾಜದ ಬಗ್ಗೆ ತಿಳಿದುಕೊಳ್ಳುವುದು ತುಂಬ ಇಷ್ಟ. ನನಗೆ ಹಾಗೆ ವಿಲಕ್ಷಣವೂ ವಿಚಿತ್ರವೂ ಆದ ಒಂದು ಬದುಕನ್ನು ಬದುಕುವ ಕಲ್ಪನೆ ಕೂಡ ಅಸಾಧ್ಯ. ಅಲ್ಲಿ ನಿಮಗೆ ಪ್ರತಿಯೊಬ್ಬರೂ ಯಾರು ಯಾರೆನ್ನುವುದು ಗೊತ್ತು. ನಿಮಗೆ ಅಪರಿಚಿತ ಎನ್ನುವ ಒಂದು ಶಬ್ದವೇ ಗೊತ್ತಿಲ್ಲ ಎನ್ನಬಹುದು. ಅಷ್ಟೊಂದು ಸೀಮಿತ ಪರಿಧಿಯೊಳಗಿನ ಬದುಕದು. ಅದೇ ಇಲ್ಲಿ ನಾನು ಈ ಹಿಂದೆ ನೋಡಿರಬಹುದಾದ ಒಂದೇ ಒಂದು ಪರಿಚಿತ ಮುಖ ಕೂಡ ಸಿಗದ ಜನನಿಬಿಡ ಹಾದಿಯಲ್ಲಿ ನಡೆಯುತ್ತಿರುತ್ತೇನೆ. 

ಪ್ರಶ್ನೆ: ಬರವಣಿಗೆ ಎನ್ನುವುದು ನಿಮ್ಮದೇ ಆದ ಸಾಮಾನ್ಯ ಬದುಕಿನಿಂದ ಒಂದಷ್ಟು ಕಾಲ ದೂರ ಉಳಿಯುವ ಉಪಾಯವೆ?

ಅದರ ವಿಸ್ತರಣೆ ಅದು. ಸಾಮಾನ್ಯ ಬದುಕು ಸದಾ ಅದಕ್ಕೆ ಪೂರಕವಾಗಿ ಪೋಷಣೆ ಒದಗಿಸುತ್ತಿರುತ್ತದೆ. ಅದರಿಂದಾಗಿಯೇ ನಾನು ಒಂದು ಪಾತ್ರವನ್ನು ಸೃಷ್ಟಿಸುವುದಕ್ಕೆ, ಅವಳು ಈ ರೀತಿಯಾಗಿ ವರ್ತಿಸಬಹುದೆ? ಹೀಗೆ ಮಾತನಾಡುವುದು ಆ ಪಾತ್ರಕ್ಕೆ ಉಚಿತವಾದ, ಹೊಂದುವ ರೀತಿಯಾದೀತೆ? ಎಂದೆಲ್ಲ ಸದಾ ಕಾಲ ಅದರ ಕುರಿತೇ ಯೋಚಿಸುವುದಕ್ಕೆ ಅದು ಬೇಕು. ನಾನು ನೋಡಿದ, ಒಡನಾಡಿದ ಮಂದಿಯ ನಡೆನುಡಿ, ಮಾತು ಎಲ್ಲವನ್ನೂ ಗಮನಕ್ಕೆ ತೆಗೆದುಕೊಂಡು ಇದನ್ನು ಮಾಡುತ್ತಿರುತ್ತೇನೆ. ಹೀಗೆ ಅದು ನನ್ನ ಬರವಣಿಗೆ ಬೇಕಾದ ವಿಷಯ ಒದಗಿಸುತ್ತದೆ.

ಪ್ರಶ್ನೆ: ನೀವು ಸಮಕಾಲೀನ ಆಡುಭಾಷೆಯನ್ನು, ಅದರ ನುಡಿಗಟ್ಟು ಮತ್ತು ಲಯಗಾರಿಕೆಯೊಂದಿಗೆ ಅದೆಷ್ಟು ಸಹಜವಾಗಿ ನಿಮ್ಮ ಕೃತಿಯಲ್ಲಿ ತರುತ್ತೀರೆಂದರೆ ಅದರ ಬಗ್ಗೆ ಆಶ್ಚರ್ಯವಾಗುತ್ತದೆ. 

ಬಹುಶಃ ಎಲ್ಲಾ ಕಾದಂಬರಿಕಾರರೂ ಇನ್ನೊಬ್ಬರ ಸಂಭಾಷಣೆಯನ್ನು ಕದ್ದುಮುಚ್ಚಿ ಕೇಳಿಸಿಕೊಳ್ಳುವವರೇ ಎನ್ನಿಸುತ್ತದೆ. ನಾವು ಕೇಳುವ ಹುಚ್ಚು ಅಂಟಿಸಿಕೊಂಡಿರುತ್ತೇವೆ. ಕಾದಂಬರಿಕಾರರು ಮೈಯೆಲ್ಲ ಕಿವಿಯಾಗಿರಬೇಕು. ನೀವು ಜನ ಹೇಗೆ ಮಾತನಾಡುತ್ತಾರೆನ್ನುವುದನ್ನು ಗಮನಿಸುತ್ತ ಇರಬೇಕು. ಬಹುಶಃ ಅದೇಕೆಂದರೆ ನಾವು ಜೀವನದ ಯಾತ್ರೆಯಲ್ಲಿ ಬದಲಾಗುತ್ತಲೇ ಇರುತ್ತೇವೆ. ನಾನು ನನ್ನ ಇಪ್ಪತ್ತರ ಹರಯದಲ್ಲಿ ಮಾತನಾಡುತ್ತಿದ್ದ ರೀತಿಗೆ ಹೋಲಿಸಿದರೆ ಈಗ ಮಾತನಾಡುವ ರೀತಿ ತೀರ ಭಿನ್ನವಾಗಿರುತ್ತದೆ. 

ಪ್ರಶ್ನೆ: ನೀವು ನಿಯಮಿತವಾಗಿ ಡೈರಿ ಬರೆಯುವ ಹವ್ಯಾಸ ಇರಿಸಿಕೊಂಡಿದ್ದೀರೆಂದು ಹೇಳಿದ್ದಿರಿ. ಅದು ನಿಮ್ಮ ಬರವಣಿಗೆಗೆ ಹೇಗೆ ಸಹಕಾರಿಯಾಗಿದೆ?

ಮೊದಲಿಗೆ ಅದೇ ಅದರ ಉದ್ದೇಶವಿತ್ತು. ನಾನು ತುಂಬ ಬ್ಯುಸೀ ಆಗಿರುತ್ತಿದ್ದೆ. ಪುಸ್ತಕಕ್ಕೆ ಸಂಬಂಧಿಸಿದ ಪ್ರವಾಸಗಳು ಅಥವಾ ಬ್ರಿಟಿಷ್ ಕೌನ್ಸಿಲ್‌ನ ಕೆಲಸದ ಮೇಲೆ ಸದಾ ಪ್ರವಾಸದಲ್ಲಿರುತ್ತಿದ್ದೆ. ನಾನು ಏನನ್ನೋ ನೋಡುತ್ತಿದ್ದೆ ಅಥವಾ ಯಾವುದರ ಕುರಿತೋ ಏನೋ ಯೋಚಿಸುತ್ತಿದ್ದೆ ಮತ್ತು ನನಗದನ್ನು ಮುಂದೆ ಬರವಣಿಗೆಯಲ್ಲಿ ಬಳಸಬಹುದು ಅನಿಸುತ್ತಿತ್ತು. ಆದರೆ ಬರೆಯಲು ಕೂತಾಗ ಅದೆಲ್ಲ ನೆನಪಾಗುತ್ತಿರಲಿಲ್ಲ. ಹಾಗಾಗಿ ಒಂದು ಬಗೆಯ ನೋಟ್ ಬುಕ್ಕಾಗಿ ಟಿಪ್ಪಣಿ ಮಾಡಿಕೊಳ್ಳುವುದು ಸುರುವಾಯಿತು. ಹೀಗೆ ನಿಯಮಿತ ಕ್ರಮಬದ್ಧತೆಯಿಲ್ಲದೇ ಮಾಡಿಕೊಳ್ಳುವ ಟಿಪ್ಪಣಿಗಳ ಸಮಸ್ಯೆ ಎಂದರೆ ಅದಕ್ಕೆಲ್ಲ ಒಂದು ಇಂಡೆಕ್ಸ್ ಇರುವುದಿಲ್ಲವಲ್ಲ. ನೀವು ಯಾವುದೋ ಒಂದು ಸ್ಥಳ-ಕಾಲದಲ್ಲಿ ಮಾಡಿಟ್ಟುಕೊಂಡ ಟಿಪ್ಪಣಿಯ ಅಸ್ಪಷ್ಟ ನೆನಪನ್ನೇ ಆಧಾರವಾಗಿಟ್ಟುಕೊಂಡು ಅದನ್ನು ಹುಡುಕಿ ತೆಗೆಯುವುದು ಅಸಂಭವ. ಕಾಲಕ್ರಮೇಣ ಡೈರಿ ಹೆಚ್ಚು ಹೆಚ್ಚು ವೈಯಕ್ತಿಕವಾಗುತ್ತ, ಅದೆಂದೂ ಪಾಪನಿವೇದನೆಯ ಕ್ರಮವಾಗಿ ಬದಲಾಗದಿದ್ದರೂ, ಹೋಯಿತು. ನನಗೆ ಈಗ ಅನಿಸುವ ಮಟ್ಟಿಗೆ ಬರವಣಿಗೆಗೆ ಅದರಿಂದೇನೂ ಸಹಾಯವಾಗಿದ್ದಿಲ್ಲ. ಆದಾಗ್ಯೂ ಅದೊಂದು ಉಪಯುಕ್ತ ದಾಖಲೆಯಾಗಿತ್ತು. ನೆನಪುಗಳ ಕುರಿತಂತೆ ಅದು ಉಪಯುಕ್ತವಾದ ಬೆಳಕು ಚೆಲ್ಲುತ್ತದೆ. ಕೆಲವೊಂದು ಬಾರಿ, ಹೀಗೇ ವರ್ಷಗಳ ಹಿಂದೆ ನಾನು ಯಾವುದೋ ಒಂದರ ಕುರಿತು ಡೈರಿಯಲ್ಲಿ ಮಾಡಿಕೊಂಡ ಟಿಪ್ಪಣಿಯನ್ನು ಗಮನಿಸುತ್ತ ಇದ್ದರೆ ನನಗೆ ಈಗ ಅದರ ಯಾವ ನೆನಪೂ ಬರುವುದಿಲ್ಲ ಎನ್ನುವುದನ್ನು ಕಂಡುಕೊಂಡಿದ್ದೇನೆ. ಆದರೆ ಡೈರಿಯಲ್ಲಿ ಸಣ್ಣ ಉಲ್ಲೇಖ ಕೂಡ ಇಲ್ಲದ, ಅದೇ ಕಾಲಘಟ್ಟಕ್ಕೆ ಸೇರಿದ ಇನ್ಯಾವುದೋ ಒಂದು ನೆನಪು ನನ್ನನ್ನು ಈಗ ಗಾಢವಾಗಿ ಕಾಡುವುದು, ನೆನಪಾಗುವುದು ಇರುತ್ತದೆ. ಇದು ಏನನ್ನು ಸೂಚಿಸುತ್ತದೆ ಎನ್ನುವುದರ ಬಗ್ಗೆ ನನಗೆ ಖಚಿತವಾಗಿ ಗೊತ್ತಿಲ್ಲ. ಬಹುಶಃ ನಾವು ಒಂದು ಕಾಲಕ್ಕೆ ಬಹುಮುಖ್ಯ ಅಂದುಕೊಂಡಿದ್ದನ್ನು ನಮ್ಮ ಮೆದುಳು, ಸ್ಮತಿ ಕೂಡ ಹಾಗೆಯೇ ಒಪ್ಪಿಕೊಳ್ಳುತ್ತದೆ ಅನಿಸುವುದಿಲ್ಲ. 

ಪ್ರಶ್ನೆ: ಪ್ರಕಟಣೆಯ ಸಂಭ್ರಮ ನಿಮಗೆ ಮುಖ್ಯವಲ್ಲ ಎನ್ನುವುದಾದರೆ ಇಷ್ಟೆಲ್ಲ ವರ್ಷ ನಿಮ್ಮನ್ನು ಕ್ರಿಯಾಶೀಲ ಬರಹಗಾರ್ತಿಯಾಗಿ ಉಳಿಸಿರುವುದೇನು?

ನನಗೆ ನನ್ನ ಮೆಚ್ಚಿನ ಕವಿ Dennis Enright ನೆನಪಾಗುತ್ತಾನೆ. ಅವನೊಮ್ಮೆ ಹೇಳಿದ್ದ ಮಾತು, ‘ಸರಿ, ಒಬ್ಬ ಬರಹಗಾರ ಬರೆಯುತ್ತಿರುತ್ತಾನೆ, ಅಲ್ಲವೆ ಪಿನಲೊಪೆ?’ ನಾನದನ್ನೇ ಮಾಡುತ್ತ ಬಂದಿದ್ದೇನೆ. ಏನನ್ನೂ ಬರೆಯದೇ ಇರುವುದು ನನಗೆ ತುಂಬ ಕಷ್ಟವೆನಿಸುತ್ತದೆ. ಈಗಲೂ ನಾನು ಏನನ್ನೋ ಬರೆಯುತ್ತಿದ್ದೇನೆ. ನನಗೆ ಅದನ್ನು ಯಾವತ್ತೂ ಮುಗಿಸದೇ ಇರುವುದರಲ್ಲಿಯೇ ಹೆಚ್ಚು ಸಂತೋಷ ಸಿಗುತ್ತದೆ. ಏಕೆಂದರೆ, ಒಮ್ಮೆ ಅದು ಬರೆದು ಮುಗಿಯಿತೆಂದರೆ ಪ್ರಕಟಣೆಯ ಕಿರಿಕಿರಿಗಳೆಲ್ಲ ಸುರುವಾಗುತ್ತವೆ. 

ಪ್ರಶ್ನೆ: ನೀವೆಂದಾದರೂ ಪ್ರಕಟಣೆಗೇ ಹೋಗದೆ ಉಳಿದ ಕಾದಂಬರಿಗಳನ್ನು ಬರೆದಿದ್ದು ಇದೆಯೆ?

ಇಲ್ಲ. ಬರೆಯುವ ಯೋಜನೆ ಹಾಕಿಕೊಂಡು ನಂತರ ಕೈಬಿಟ್ಟಿದ್ದಿದೆ. ಆದರೆ ಒಂದು ಕೃತಿ ಬರವಣಿಗೆ ಸುರು ಮಾಡುವ ಹಂತದವರೆಗೂ ಬಂತೆಂದರೆ ಅದನ್ನು ಬರೆದು ಮುಗಿಸಿಯೇ ಮುಗಿಸುತ್ತೇನೆಂದರ್ಥ. ಇದುವರೆಗೆ ಹೀಗೆಯೇ ನಡೆದಿದೆ. ಬರೆಯುವುದು ನನ್ನ ಕರ್ಮ. ಬರೆಯುವುದನ್ನ ನಾನು ತುಂಬ ಇಷ್ಟಪಡುತ್ತೇನೆ ಮತ್ತು ಹಾಗಾಗಿ ಬರೆಯುತ್ತಿರುತ್ತೇನೆ. ಇದು ಹೀಗೆ, ನನ್ನ ಎಂಬತ್ತೈದು ವರ್ಷಗಳ ಪಯಣ. ನಾನು ಕಾದಂಬರಿಯನ್ನು ಬರೆದು ಮುಗಿಸುತ್ತೇನೋ ಅಥವಾ ಬರೆಯುತ್ತಲೇ ಕಾದಂಬರಿಯೇ ನನ್ನನ್ನು ಮುಗಿಸುವುದೋ ಯಾರಿಗೆ ಗೊತ್ತು? ನಾನಿನ್ನೂ ಇದನ್ನು ಮಾಡುತ್ತಿದ್ದೇನೆಂದರೆ ಇದನ್ನು ಬಿಟ್ಟು ಬೇರೇನು ಮಾಡುವುದನ್ನೂ ನಾನು ಕಲ್ಪಿಸಲಾರೆ. ಯಾವುದೋ ಒಂದು ಕೃತಿಯ ಬರವಣಿಗೆಯಲ್ಲಿ ನಾನು ವ್ಯಸ್ತಳಾಗಿರದೇ ಇದ್ದಲ್ಲಿ ನನಗೆ ಬೇರೆ ಏನು ಮಾಡುವುದೆಂದೇ ತೋಚುವುದಿಲ್ಲ. ನಾನು ಬರೆಯದೇ ಇರುವಾಗಲೂ ಸಹ, ಅಂದರೆ ಕೈತೋಟದಲ್ಲಿರುವಾಗಲೊ, ಬೇರೇನೋ ಕೆಲಸದಲ್ಲಿರುವಾಗಲೊ ಸಹ ನನ್ನ ತಲೆಯಲ್ಲಿ ಬರೆಯುತ್ತಿರುವ ಕೃತಿಯೇ ಓಡಾಡುತ್ತಿರುತ್ತದೆ. ನಾನು ಬರೆಯುತ್ತಿರುವ ಪಾತ್ರವನ್ನು ಸರಿಯಾಗಿಯೇ ಕಟ್ಟುತ್ತಿರುವೆನಾ ಅಥವಾ ಅದರ ನಡೆನುಡಿ, ರೀತಿನೀತಿಗಳಲ್ಲಿ ಏನಾದರೂ ತಪ್ಪಾಗಿದೆಯಾ ಎಂದೆಲ್ಲ ಯೋಚಿಸುತ್ತಿರುತ್ತೇನೆ. ಯೋಚಿಸುವುದಕ್ಕೆ ಇಂಥದ್ದೆಲ್ಲ ಇಲ್ಲ ಎಂದಾದರೆ ನನಗೆ ನಾನು ಬದುಕಿದ್ದೇನೆಂದೇ ಅನಿಸುವುದಿಲ್ಲ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, September 19, 2018

ನನ್ನ ಹಿಂದೆಯೂ ಯಾರಿಲ್ಲ, ಮುಂದೆಯೂ ಯಾರಿಲ್ಲ.

ಅದಷ್ಟೇ ಜರ್ಮನಿಯ ಏಕೀಕರಣ ನಡೆದಿದೆ, ಪೂರ್ವ ಪಶ್ಚಿಮಗಳ ನಡುವೆ ಎದ್ದಿದ್ದ ಬರ್ಲಿನ್ನಿನ ಗೋಡೆಯನ್ನು ಕೆಡವಲಾಗಿದೆ. ಹಾಗಿದ್ದೂ ನಾವು ಉತ್ತರದವರು, ನೀವು ದಕ್ಷಿಣದವರು ಎಂಬ ಬಿರುಕು ಮನಸ್ಸಿಗಿಳಿವಂತೆ ಮಾಡಿದ ಸಂದರ್ಭಗಳು ಎದುರಾಗಿವೆ. ಮನುಷ್ಯ ಮನುಷ್ಯರ ನಡುವೆ ಎದ್ದಿರುವ ಹೊಸ ಗೋಡೆಯಂತೆ ಅವು ಕಂಡಿವೆ. ಈ ನಿವೃತ್ತ ಪ್ರೊಫೆಸರ್ ವಿಧುರ. ಯೂನಿವರ್ಸಿಟಿಯಲ್ಲಿ ರಾಜಕೀಯ ಇಲ್ಲದೇ ಇದ್ದಿದ್ದರೆ ಇನ್ನೂ ಸ್ವಲ್ಪ ಕಾಲ ದುಡಿಯುವ ಅವಕಾಶ ಸಿಗುವುದಿತ್ತು. ಈಗ ಒಂಟಿಯಾಗಿ ದೊಡ್ಡ ಮನೆಯಲ್ಲಿ ಕೆಲಸವಿಲ್ಲದೆ ಕೂತರೆ ಎದುರಿಗೇ ಕಾಣುವ ವಿಶಾಲ ಕೊಳದಲ್ಲಿ ಮುಳುಗಿದ ಯುವಕ ಕಾಡತೊಡಗುತ್ತಾನೆ. ಬೇರೆ ಬೇರೆ ಕಾರಣಗಳಿಂದ ಅವನ ಶವವನ್ನು ಕೊನೆಗೂ ಮೇಲೆತ್ತುವುದು ಸಾಧ್ಯವಾಗಿಲ್ಲ. ನೆನಪುಗಳಲ್ಲಿ ಹೆಂಡತಿ ಇನ್ನೂ ಜೀವಂತವಾಗಿದ್ದಾಳೆ. ಇಡೀ ವಿಶ್ವದ ಸ್ಮೃತಿಯಲ್ಲಿ ಹಿಟ್ಲರ್‌ನ ಕರಾಳ ಛಾಯೆ ಜರ್ಮನಿ ಎಂಬ ತಮ್ಮದೇ ದೇಶದ ಮೇಲೆ ಬೇಡವೆಂದರೂ ಚಾಚಿಕೊಂಡೇ ಇದೆ ಎನ್ನುವ ಅರಿವು ಎಲ್ಲರಲ್ಲೂ ಹಸಿಹಸಿಯಾಗಿಯೇ ಉಳಿದಿದೆ.
ಆದರೆ ದೇಶದೊಳಗೆ ಲಿಬಿಯ, ಈಜಿಪ್ಟ್, ಇಟೆಲಿ, ಗಾಜಾಗಳಿಂದೆಲ್ಲ ಬೇರೆ ಬೇರೆ ಕಾರಣಗಳಿಂದ ಒಳಬಂದ ನಿರಾಶ್ರಿತರು ನೆಲೆಯಿಲ್ಲದೆ ಕಂಗಾಲಾಗಿದ್ದಾರೆ. ತನ್ನವರನ್ನೆಲ್ಲಾ ಕಳೆದುಕೊಂಡು, ಅಥವಾ ಅವರಿಗೆ ಏನಾಯಿತು ಎನ್ನುವುದೇ ಗೊತ್ತಿಲ್ಲದ, ಗೊತ್ತು ಮಾಡಿಕೊಳ್ಳುವ ಸಾಧ್ಯತೆ ಕೂಡ ಇಲ್ಲದ ಒಂದು ಕಂಗಾಲಿನ ಸ್ಥಿತಿಯಲ್ಲಿ ಉಟ್ಟಬಟ್ಟೆಯಲ್ಲೇ ಓಡಿಬಂದಂತೆ ಗಡಿಯೊಳಗೆ ತೂರಿಕೊಂಡ ಈವಿದೇಶಿಗಳು ನಿರಾಶ್ರಿತರು. ಇವರಲ್ಲಿ ಕೆಲವರ ಹೆತ್ತವರನ್ನು ಕಣ್ಣೆದುರೇ ಕಡಿದು ಕೊಲ್ಲಲಾಗಿದೆ. ಕೆಲವರ ಪತ್ನಿಯಂದಿರು ಇನ್ನೆಲ್ಲೊ ಸಿಕ್ಕಿಕೊಂಡಿರುವುದು ಗೊತ್ತು, ಅಲ್ಲಿಂದ ಏನಾದರೂ ಗೊತ್ತಿಲ್ಲ. ಕೆಲವರು ತಮ್ಮ ಹಸುಗೂಸುಗಳು ಕಾಲ್ತುಳಿತಕ್ಕೆ ಸಿಲುಕಿಯೊ, ಮುಳುಗುವ ಹಡಗಿನಿಂದ ಬಚಾವಾಗಲಾರದೆಯೊ ಕಣ್ಣೆದುರೇ ಸತ್ತಿದ್ದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಇನ್ನು ಕೆಲವರಿಗೆ ಎಲ್ಲೆಲ್ಲೊ ಇದ್ದತಮ್ಮ ಹೆತ್ತವರೊ, ಸಂಗಾತಿಗಳೊ ಈಗ ಏನಾಗಿದ್ದಾರೆಂಬುದು ಗೊತ್ತೇ ಇಲ್ಲ. ಇಲ್ಲಿ ಈದೇಶದಲ್ಲಿ ರೆಕ್ಕೆಕಡಿದ ಹಕ್ಕಿಗಳಂತೆ ತುಪತುಪನೆ ಉದುರಿ ಬಿದ್ದಿದ್ದಾರೆ. ಈಗ ಈ ದೇಶದ ರಾಜಸತ್ತೆ, ಆಡಳಿತ, ಅಧಿಕಾರ, ಪೋಲೀಸು, ಸೇನೆ ಎಲ್ಲವೂ ಇವರಿಗೆ ಅನ್ನ ಕೊಡಬೇಕೆ, ಇರಗೊಡಬೇಕೆ, ಕೊಲ್ಲಬೇಕೆ, ಅಂಥ ಸಭ್ಯ ಮಾರ್ಗ ಯಾವುದಾದರೂ ಇದೆಯೆ, ಅನಾಗರಿಕ ಮಾರ್ಗವೇ ಗತಿಯಾದಲ್ಲಿ ಅದಕ್ಕೆ ತಕ್ಕ ಸಮರ್ಥನೆ ಒದಗಿಸಿಕೊಳ್ಳುವುದು ಹೇಗೆ, ದೇಶದಿಂದ ಆಚೆದಬ್ಬುವುದು ಹೇಗೆ ಎಂದೆಲ್ಲ ಮಂತ್ರಾಲೋಚನೆಯಲ್ಲಿ ತೊಡಗಿದೆ. ಇವರೆಲ್ಲ ತಮ್ಮಂತೆಯೇ ಇರುವುದನ್ನು ಕಂಡು, ಇವರೂ ಮನುಷ್ಯರೇ ಎನ್ನುವುದನ್ನು ಕಂಡು ಆಶ್ಚರ್ಯಚಕಿತರಾಗಿರುವ ಸಾಮಾನ್ಯ ಮಂದಿ ಇವರನ್ನು ನಿರಾಕರಿಸಲಾರದೆ, ಸ್ವೀಕರಿಸುವ ಧೈರ್ಯ, ಔದಾರ್ಯ, ಮಾನವೀಯತೆ ಎಲ್ಲಿ ದೇಶದ್ರೋಹಿ, ದೇಶವಿರೋಧಿ ಎಂದು ಪರಿಗಣಿಸಲ್ಪಡುವುದೋ ಎಂಬ ಭಯದಲ್ಲಿ ಸ್ವೀಕರಿಸಲಾರದೆ ಒದ್ದಾಡುತ್ತಿರುವಂತಿದೆ.

ನಡುರಾತ್ರಿ ಎಚ್ಚರವಾದರೆ ಇಡೀ ಮನೆಯನ್ನು ಒಂಟಿಯಾಗಿ ಸುತ್ತು ಬರುವ ರಿಚರ್ಡ್ ಮನುಷ್ಯನ ಆಳದ ಒಂಟಿತನವನ್ನು, ಸಹಜೀವಿಯನ್ನು ನಂಬಲಾರದ ಅವನ ಸ್ಥಿತಿಯನ್ನು ಬಿಂಬಿಸುತ್ತಾನೆ. ಇದು ಮೇಲ್ನೋಟಕ್ಕೆ ನಿರಾಶ್ರಿತರ ಕುರಿತಾಗಿಯೇ ಇರುವ ಕಾದಂಬರಿ ಎಂಬುದು ನಿಜ. ಆದರೆ ಅಷ್ಟೇ ಅಲ್ಲ ಎನ್ನುವುದು ಇದರ ವಿಶೇಷ. ಅಂಥ ವಿಶೇಷವನ್ನು ಸೂಚಿಸುವಂತೆ ಈ ಒಂದು ಅಧ್ಯಾಯವಿದೆ. ನಮ್ಮ ಬದುಕು ಚರ್ಮದ ಬಣ್ಣ, ಜಾತಿ, ಧರ್ಮ, ಭಾಷೆ, ದೇಶ, ಬಡತನ ಎಲ್ಲವನ್ನೂ ಮೀರಿದ್ದು ಎನ್ನುವ ಸರಳ ಸಂಗತಿಯಿಂದ ಮನುಷ್ಯ ಸಾಕಷ್ಟು ದೂರ ಸರಿದಿದ್ದಾನೆ, ಸರಿಯುತ್ತಲೇ ಇದ್ದಾನೆ. ಸರಳ ಸಂಗತಿಗಳನ್ನು ಕೆಲವೊಮ್ಮೆ ಅವನು ನೆನಪು ಮಾಡಿಕೊಂಡು ಮನುಷ್ಯತ್ವವನ್ನು ಮರಳಿ ಪಡೆಯಬೇಕಾದ ಸ್ಥಿತಿ ಇದೆ. ಹಾಗೆ ಈ ಅಧ್ಯಾಯ ತೀರ ಸಾಮಾನ್ಯವಾದದ್ದು, ಸರಳವಾದದ್ದು ಮತ್ತು ಓದುತ್ತ ಮಹತ್ವದ್ದು ಎಂದೂ ಅನಿಸುವಂಥದ್ದು.


ನನ್ನ ಹಿಂದೆಯೂ ಯಾರಿಲ್ಲ, ಮುಂದೆಯೂ ಯಾರಿಲ್ಲ.
ಆವತ್ತು ಸಂಜೆ ಮನೆಗೆ ಬಂದ ರಿಚರ್ಡ್‌ಗೆ ಆ ಎಲ್ಲ ಮಾತುಕತೆ ಹೇಗೆ ಸುರುವಾಯಿತೆಂಬುದೇ ಸರಿಯಾಗಿ ನೆನಪಾಗಲಿಲ್ಲ. ಮುಚ್ಚಿದ ಬಾಗಿಲುಗಳನ್ನು ತಟ್ಟುತ್ತ ಹೋಗುವುದು ಅವನಿಗೆ ಸಾಕೆನಿಸಿತ್ತು. ಒಳಗೆ ಹುಡುಗರು ಅಡ್ಡಾತಿಡ್ಡ ಮಲಗಿಕೊಂಡಿರುತ್ತಾರೆ. ಯಾರು ಸಿಗುತ್ತಾರೆ ಇವತ್ತಿನ ಮಾತಿಗೆ ಎಂದು ಹುಡುಕುತ್ತಲೇ ಇರಬೇಕು. ರಿಚರ್ಡ್ ಮೆಟ್ಟಿಲಿಳಿದು ಕೆಳಕ್ಕೆ ಹೊರಟಿದ್ದ. ಆಗ ಅವನು ಕಣ್ಣಿಗೆ ಬಿದ್ದ. ಕೈಯಲ್ಲಿ ಪೊರಕೆ ಹಿಡಿದಿದ್ದ. ಜನವಸತಿಯಿಲ್ಲದ ಎರಡನೆಯ ಅಂತಸ್ತಿನ ನೆಲ ಗುಡಿಸುತ್ತಿದ್ದ ಅವನು. ಅದೆಷ್ಟು ನಿಧಾನಗತಿಯಲ್ಲಿ ಗುಡಿಸುತ್ತಿದ್ದನೆಂದರೆ, ಅದೊಂದು ತುಂಡು ಜಾಗ ಗುಡಿಸಿ ಮುಗಿಸಲು ಇಡೀ ದಿನ ತೆಗೆದುಕೊಳ್ಳುವ ಅಂದಾಜಿನಲ್ಲಿದ್ದಂತಿತ್ತು. ಅದು ಹೇಗೆ ಅವನ ಜೊತೆ ಅಷ್ಟೊಂದು ಹೊತ್ತು ಮಾತನಾಡುತ್ತ ಕಳೆದನೊ, ರಿಚರ್ಡ್‌ಗೇ ನಂಬಲಾಗುತ್ತಿಲ್ಲ. ಅವನು ಅಲ್ಲಿ ಯಾರೊಂದಿಗೂ ಅಷ್ಟೊಂದು ಹೊತ್ತು ಮಾತನಾಡಿ ನಿಂತಿದ್ದಿಲ್ಲ.
ಗೊತ್ತು ನನಗಿದೆಲ್ಲ ಯಾಕಾಗ್ತಿದೆ ಅಂತ, ಆ ಧ್ವನಿ ಮೆತ್ತಗೆ ಗುನುಗುತ್ತದೆ. ತೆಳ್ಳನೆಯ ಕೃಶಕಾಯದ ಮನುಷ್ಯ ಇನ್ನೂ ಅಲ್ಲಲ್ಲಿ ಹರಿದ ಹಳದಿಬಣ್ಣದ ಯೂನಿಫಾರಮ್ ತೊಟ್ಟುಕೊಂಡೇ ಇದ್ದಾನೆ. ಕೈಯಲ್ಲಿನ್ನೂ ಅದೇ ಪೊರಕೆಯಿದೆ. ನಡುನಡುವೆ ಕೆಲಸ ನಿಲ್ಲಿಸಿ ಅದೇ ಪೊರಕೆಯ ಬೊಡ್ಡೆಗೆ ತನ್ನ ಸುಸ್ತಾದ ದೇಹವನ್ನು ಆತುಕೊಂಡಂತೆ ಎರಡೂ ಕೈಗಳನ್ನೂರಿ ನಿಲ್ಲುತ್ತಾನೆ. ನಂತರ ಮತ್ತೆ ಒಂದೆರಡು ಬಾರಿ ಪೊರಕೆ ಆಡುತ್ತದೆ.
ಅಥವಾ ಇದೆಲ್ಲ ಇನ್ನೂ ಮುಗಿಯುವ ಇಶಾರೆ ಇಲ್ಲವೋ ಏನೊ.
ನಾನು ಬಿಟ್ಟ ಕಣ್ಣು ಬಿಟ್ಟ ಹಾಗೇ ನನ್ನೆದುರಿನ ಅಷ್ಟೂ ದೂರ ದೃಷ್ಟಿ ಹಾಯಿಸಿ ನೋಡಿದೆ. ಅದೇ ರೀತಿ ನಾನು ಹಾದು ಬಂದ ಹಾದಿಯುದ್ದಕ್ಕೂ ಹಿಂದಿರುಗಿ ದಿಟ್ಟಿಸಿದೆ. ಏನೂ ಕಾಣಿಸಲಿಲ್ಲ ನನಗೆ.
ನಿರ್ಜನವಾಗಿದ್ದ ಆ ಎರಡನೆಯ ಅಂತಸ್ತಿನ ಮನುಷ್ಯ ಆಡಿದ ಮೊತ್ತಮೊದಲ ಮಾತು ಅದು. ಮತ್ತೆಲ್ಲಾ ಮಾತುಗಳು ಇವೇ ಮಾತುಗಳ ಸುತ್ತ ಗಿರಕಿ ಹೊಡೆದಂತೆ ಪುಂಖಾನುಪುಂಖವಾಗಿ ಬರತೊಡಗಿದ್ದವು. ಈಗ ರಿಚರ್ಡ್ ತನ್ನದೇ ಮನೆಯೊಳಗೆ ಸೇರಿಕೊಂಡಿದ್ದಾನೆ, ಆದರೂ ಅವನ ಕಿವಿಯಲ್ಲಿ ಆ ಮನುಷ್ಯನ ಮೆತ್ತಗಿನ ಧ್ವನಿ ಇಲ್ಲಿಯೇ, ಈಗಷ್ಟೇ ಆಡಿದಂತೆ ಗುಂಯ್ ಗುಡುತ್ತಲೇ ಇದೆ.
ನನಗೆ ಎಂಟೋ ಒಂಭತ್ತೋ ವರ್ಷ ವಯಸ್ಸಾದಾಗ ನನ್ನ ಹೆತ್ತವರು ನನ್ನನ್ನು ನನ್ನ ಮಲತಾಯಿಯ ಜೊತೆ, ಅಂದರೆ ನನ್ನ ತಂದೆಯ ಮೊದಲ ಪತ್ನಿಯ ಜೊತೆ, ಬಿಟ್ಟು ಅವರೆಲ್ಲ ನನ್ನ ಇಬ್ಬರು ಸಹೋದರರು ಮತ್ತು ತಂಗಿಯ ಜೊತೆ ಬೇರೊಂದು ಹಳ್ಳಿಗೆ ಹೊರಟು ಹೋದರು. ನನಗೆ ಹನ್ನೊಂದು ತುಂಬಿದಾಗ ನನ್ನ ಮೊದಲು ಕುಡುಗೋಲು ಸಂಪಾದಿಸಿದ್ದೆ. ಹೊಲದಲ್ಲಿ ಗಂಟೆಗೆ ಮುವ್ವತ್ತು ಸೆಂಟ್ಸ್ ದುಡಿಯಲು ಇದೇ ನನಗಿದ್ದ ಏಕೈಕ ಬಂಡವಾಳವಾಗಿತ್ತು. ನನಗೆ ಹದಿನೆಂಟು ತುಂಬಿದಾಗ ನನ್ನ ಬಳಿ ಸಣ್ಣ ಗೂಡಂಗಡಿ ತೆರೆಯಲು ಬೇಕಾದಷ್ಟು ಹಣ ಕೂಡಿತ್ತು. ಹತ್ತೊಂಬತ್ತು ವರ್ಷವಾದಾಗ ನಾನು ನನ್ನ ಗೂಡಂಗಡಿಯನ್ನು ಮಾರಿ ಘಾನಾದ ಕುಮಾಸಿಗೆ ಹೋದೆ. 
ಪ್ರತಿದಿನ ರಾತ್ರಿ ಮನೆಗೆ ಮರಳಿದ್ದೇ ಮಾಡುವ ಹಾಗೆ ರಿಚರ್ಡ್ ಲಿವಿಂಗ್ ರೂಮು, ಓದುವ ಕೋಣೆ, ಕಿಚನ್‌ನ ಲೈಟ್ಸ್ ಹಾಕಿದ. 
ನಾನು ನನ್ನ ಹೆತ್ತವರನ್ನು, ನನ್ನ ಸಹೋದರರು ಮತ್ತು ಸಹೋದರಿಯನ್ನು ನೋಡಲು ಹೋದೆ. ಅವರಿಗೆ ಶುಭವಿದಾಯ ಕೋರಿದೆ. ಅವರೊಂದಿಗೆ ನಾನು ಒಂದೇ ಒಂದು ರಾತ್ರಿ ಕಳೆಯುವುದು ಸಾಧ್ಯವಿತ್ತು. ಅವರಿದ್ದ ಮನೆ ತೀರಾ ಚಿಕ್ಕದಾಗಿತ್ತು.
ನಾನು ಕುಮಾಸಿಗೆ ಹೋಗಿ ಬೀದಿ ಬದಿ ಶೂಸ್ ಮಾರುತ್ತಿದ್ದ ಇಬ್ಬರು ವ್ಯಾಪಾರಿಗಳಿಗೆ ಸಹಾಯಕನಾಗಿ ನಿಂತು ದುಡಿಯತೊಡಗಿದೆ. ಇಲ್ಲಿ ನಾನೊಬ್ಬಳು ಹುಡುಗಿಯನ್ನು ಭೇಟಿಯಾದೆ. ಆದರೆ ನಾನು ತೀರಾ ದರಿದ್ರ ಎಂಬ ಕಾರಣಕ್ಕೆ ಅವಳ ಹೆತ್ತವರು ನಮಗೆ ಮದುವೆಯಾಗಲು ಅನುಮತಿ ಕೊಡಲಿಲ್ಲ. ಆಮೇಲೆ ನಾನು ಕೆಲಸ ಮಾಡುತ್ತಿದ್ದ ವ್ಯಾಪಾರಿಗಳೂ ನಷ್ಟದಿಂದ ದಿವಾಳಿಯಾಗಿಬಿಟ್ಟರು.
ಮತ್ತೆ ನಾನು ನನ್ನ ಹೆತ್ತವರ ಬಳಿಗೆ ಹೋದೆ. ನನ್ನ ತಂದೆ ತಾಯಿ, ಇಬ್ಬರು ಸಹೋದರರು ಮತ್ತು ನನ್ನ ತಂಗಿಯನ್ನು ಮರಳಿ ಭೇಟಿಯಾದೆ. ಆದರೆ ಅವರೊಂದಿಗೆ ನಾನು ಒಂದು ರಾತ್ರಿ ಮಾತ್ರ ಕಳೆಯುವುದು ಸಾಧ್ಯವಿತ್ತು. ಅವರಿದ್ದ ಮನೆ ತೀರಾ ಚಿಕ್ಕದಾಗಿತ್ತು.
ಆ ದಿನಗಳಲ್ಲಿ ನನ್ನ ದೇಹಾರೋಗ್ಯ ಕೂಡ ಚೆನ್ನಾಗಿರಲಿಲ್ಲ.
ರಿಚರ್ಡ್ ಕಿಚನ್ನಿಗೆ ಹೋಗುತ್ತಾನೆ. ಗಾರ್ಡನ್ ಕಡೆಗಿದ್ದ ಕಿಟಕಿಯನ್ನು ತೆರೆಯುತ್ತಾನೆ. ರಾತ್ರಿಯ ಕತ್ತಲಿನಲ್ಲೇ ಹೊರಗಡೆ ದೃಷ್ಟಿ ನೆಟ್ಟು ದಿಟ್ಟಿಸುತ್ತಾನೆ. ಎಲ್ಲವೂ ಸ್ತಬ್ಧವಾದಂತೆ ಆ ನೀರವ ವಾತಾವರಣದ ಮೌನವನ್ನೇ ಕ್ಷಣಕಾಲ ಧೇನಿಸುತ್ತ ನಿಲ್ಲುತ್ತಾನೆ. ಆಗ ಹಿಂಬಂದಿಯಿಂದ ನಿಧಾನವಾಗಿ ಪೊರಕೆ ನೆಲವನ್ನು ಗುಡಿಸುವ ಆ ಶಬ್ದ ಕೇಳಿಸತೊಡಗುತ್ತದೆ.
ಏನೋ ಬದಲಾವಣೆ. ಆದರೆ ಅದು ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಎನ್ನುವುದು ಕೂಡ ನನಗೆ ಅರ್ಥವಾಗಿರಲಿಲ್ಲ. ನಾನು ಒಂದು ಹೊಲದಲ್ಲಿ ದುಡಿಯುವುದಕ್ಕೆ ಸುರುಮಾಡಿದೆ. ಪಶುಗಳನ್ನು, ಆಡು, ಕುರಿ ಮತ್ತು ಹಂದಿಗಳನ್ನು ನೋಡಿಕೊಳ್ಳುವುದು ನನ್ನ ಕೆಲಸವಾಗಿತ್ತು. ನಾನು ಅವುಗಳಿಗಾಗಿ ಹುಲ್ಲು ಕತ್ತರಿಸಿ, ಚಿಗುರು, ಸೊಪ್ಪು ಸದೆ ಕಡಿದು ತರುತ್ತಿದ್ದೆ. ಆದರೆ ನನ್ನ ಯಜಮಾನ ನನ್ನ ಸಂಬಳವನ್ನು ಹಿಡಿದುಕೊಂಡಿದ್ದ. ಕೇಳಿದರೆ, ನನ್ನ ಗಳಿಕೆಯೆಲ್ಲವೂ ನನ್ನ ಹೊಟ್ಟೆ ಹೊರೆಯುವುದಕ್ಕೇ ಖರ್ಚಾಗುತ್ತಿದೆ ಎಂದು ಹೇಳುತ್ತಿದ್ದ. 
ರಿಚರ್ಡ್ ಕಿಟಕಿ ಮುಚ್ಚಿ ಹಿಂದಿರುಗುತ್ತಾನೆ. ಕಸ ಗುಡಿಸುವ ಮನುಷ್ಯ ಮತ್ತೆ ತನ್ನ ಕೋಲಿಗೆ ಆತುಕೊಂಡು ನಿಲ್ಲುತ್ತಾನೆ, ಒಂದು ಮುಗುಳ್ನಗು ಚೆಲ್ಲುತ್ತಾನೆ. ಮಾತು ಸುರು.
ಒಮ್ಮೆ ನನಗೊಂದು ಕನಸು ಬಿತ್ತು. ನನ್ನ ತಂದೆ ಒಂದು ಕಡೆ ಮಲಗಿದ್ದರು. ನಾನವರನ್ನು ಹಿಡಿಯಬೇಕೆಂದುಕೊಂಡರೂ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ. ನನ್ನ ತೋಳುಗಳ ಕೆಳಗೆ ಅವನು ಅಂಗಾತ ಬಿದ್ದುಕೊಂಡಿದ್ದರು ಮತ್ತು ನೋಡ ನೋಡುತ್ತಿದ್ದಂತೆಯೇ ಮಲಗಿದ್ದಲ್ಲೇ ನೆಲದಲ್ಲಿ ಇಂಗತೊಡಗಿದರು.
ಮರುದಿನ ರಾತ್ರಿ ಮತ್ತೆ ಅಂಥದೇ ಕನಸು ಬಿತ್ತು. ಮೂವರು ಹೆಂಗಸರು ನನ್ನ ಅಪ್ಪನ ದೇಹಕ್ಕೆ ಸ್ನಾನ ಮಾಡಿಸುತ್ತಿದ್ದರು. ನಾನು ಅವರಿಗೆ ಸಹಾಯ ಮಾಡಬೇಕಾಗಿತ್ತು. ಆದರೆ ನನಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. 
ಮೂರನೆಯ ರಾತ್ರಿ ಬಿದ್ದ ಕನಸಿನಲ್ಲಿ ನನ್ನ ತಾಯಿ ತಂದೆಯ ದೇಹದ ಪಕ್ಕ ಸುಮ್ಮನೇ ಅದನ್ನು ನೋಡಿಕೊಂಡಿರುವವಳ ಹಾಗೆ ನಿಂತಿರುವುದು ಕಂಡೆ.
ಒಂದು ದಿನದ ನಂತರ ಹಳ್ಳಿಯಲ್ಲೆ ನನ್ನ ತಂದೆ ತೀರಿಕೊಂಡಿರುವ ಸುದ್ದಿ ನನ್ನನ್ನು ತಲುಪಿತು.
ಅದೆಲ್ಲ ಹೋಗಲಿ, ಅವನಿಗೆ ಈ ಪೊರಕೆ ಸಿಕ್ಕಿದ್ದಾದರೂ ಎಲ್ಲಿ?
ಎಂಟು ವಾರಗಳ ಬಳಿಕ ಮೃತನ ಸ್ಮರಣಾರ್ಥ ನಡೆಸಬೇಕಾದ ಆಚರಣೆಗಳಿಗೆ ಹೋಗಲು ಬೇಕಾದಷ್ಟು ಹಣ ನನ್ನ ಬಳಿ ಇಲ್ಲ ಎನ್ನುವುದು ನನಗೆ ಗೊತ್ತಿತ್ತು. ಆದರೆ ಒಬ್ಬ ಮಗ ಅದಕ್ಕೆ ಹಾಜರಿರಲೇ ಬೇಕು, ಶೋಕಾಚರಣೆ ನಡೆಸಲೇ ಬೇಕು. 
ಈಗವನು ಶಾಂತಚಿತ್ತನಾಗಿ ಕಸಗುಡಿಸತೊಡಗುತ್ತಾನೆ. ದೀರ್ಘವಾಗಿ ಪೊರಕೆಯನ್ನು ಎಳೆದೆಳೆದು ಗುಡಿಸುತ್ತಿದ್ದಾನೆ. ಒಳ್ಳೆಯದು, ಇದೇ ಸರಿ ಎಂದುಕೊಳ್ಳುತ್ತಾನೆ ರಿಚರ್ಡ್.
ಮೊದಲನೇ ವಾರ ನಾನು ಕೆಲಸ ಮಾಡಿದೆ.
ನಂತರ ಎರಡನೆಯ ವಾರ.
ಆಮೇಲೆ ಮೂರನೆಯ ವಾರ.
ಮತ್ತು ನಾಲ್ಕನೆಯದು.
ನಾಲ್ಕನೆಯ ವಾರ ಮುಗಿಯುತ್ತಲೇ ನನ್ನ ಯಜಮಾನ ಇದುವರೆಗೂ ಮಾಡಿದ್ದೆಲ್ಲವೂ ತರಬೇತಿಯಾಗಿತ್ತು, ಹಾಗಾಗಿ ಅದಕ್ಕೆ ಹಣವನನ್ನೇನೂ ಕೊಡುವ ಕ್ರಮವಿಲ್ಲ ಎಂದುಬಿಟ್ಟ. 
ನಾನು ಬೇರೊಂದು ಹೊಲದಲ್ಲಿ ಕೆಲಸ ಹುಡುಕಿಕೊಂಡೆ. ಗಡ್ಡೆ ನೆಡುವುದಕ್ಕಾಗಿ ಕುಳಿ ತೋಡುವ ಕೆಲಸ. ಮೊದಲ ವಾರ ನಾನು ದುಡಿದೇ ದುಡಿದೆ. ಮುಂಜಾನೆ ನಾಲ್ಕರಿಂದ ಮುಸ್ಸಂಜೆ ಆರೂವರೆಯ ತನಕ ದುಡಿತ.
ಆಮೇಲೆ ಎರಡನೆಯ ವಾರ.
ಮತ್ತೆ ಮೂರನೆಯ ವಾರ.
ನಂತರ ನಾಲ್ಕನೆಯದು.
ಆದರೆ, ಒಬ್ಬಾಕೆ ನನಗೆ ಪುಕ್ಕಟೆಯಾಗಿ ತಿನ್ನಲು ಕೊಡದೇ ಇರುತ್ತಿದ್ದರೆ ಮೃತನ ಸ್ಮರಣಾರ್ಥ ಕಡಿಯಲು ಬೇಕಿದ್ದ ಆಡು ಮತ್ತು ನನ್ನ ಪ್ರಯಾಣದ ವೆಚ್ಚ ಎರಡನ್ನೂ ಭರಿಸುವಷ್ಟು ಹಣ ಕೂಡ ನನ್ನ ಈ ಸಂಪಾದನೆಯಿಂದ ಹುಟ್ಟುತ್ತಿರಲಿಲ್ಲ. 
ರಿಚರ್ಡ್ ತನ್ನಷ್ಟಕ್ಕೆ ತಾನು ಇಂಥ ಸಂಜೆ ಹೊತ್ತಿನಲ್ಲಿ ತಣ್ಣಗಿನ ಬಿಯರ್ ಕುಡಿಯುವುದು ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಾನೆ. ಅಲ್ಲಿಂದೆದ್ದು ಬೇಸ್‌ಮೆಂಟ್ ಕಡೆಗೆ ಹೆಜ್ಜೆ ಹಾಕತೊಡಗುತ್ತಾನೆ.
ನಾನು ಆಡಿನೊಂದಿಗೆ ಒಂದು ಬಾಡಿಗೆ ಕಾರಿನಲ್ಲಿ ಹೇಗೋ ಜಾಗ ಮಾಡಿಕೊಂಡು ಕ್ವಾಕ್ವಾ ತನಕ ತಲುಪಿದೆ.
ಅಲ್ಲಿಂದ ಬಸ್ಸಿನಲ್ಲಿ ಆಡು ಹತ್ತಿಸಿಕೊಂಡು ಕುಮಾಸಿ ತಲುಪಿದೆ.
ಮತ್ತೆ ಕುಮಾಸಿಯಿಂದ ತೇಪಾ ತನಕ ಬಾಡಿಗೆ ಕಾರಿನಲ್ಲೇ ಆಡಿನೊಂದಿಗೆ ತುರುಕಿಕೊಂಡೆ. ಅಲ್ಲಿಂದ ಆಡು ಮತ್ತು ನಾನು ಮಿಮ್ ತಲುಪಿದೆವು.
ಅಷ್ಟೊಂದು ಜನರ ನಡುವೆ ಒಂದು ಜೀವಂತ ಆಡನ್ನು ಮುದುರಿ ಒತ್ತಿ ಹಿಡಿದುಕೊಂಡು, ತಾನೂ ತುರುಕಿಕೊಂಡು ಪ್ರಯಾಣಿಸುವ ಪಾಡು ವಿವರಿಸುತ್ತಿದ್ದಂತೆ ತಾನು ನಕ್ಕುಬಿಟ್ಟಿದ್ದು ನೆನಪಾಗುತ್ತದೆ ರಿಚರ್ಡ್‌ಗೆ.
ಅಪ್ಪನ ಶೋಕಾರ್ಥ ನಡೆದ ಆಚರಣೆಯ ದಿನವೇ ನಾನು ಅಲ್ಲಿಗೆ ತಲುಪಿದೆ. ಸಾಂಪ್ರದಾಯಿಕ ಪದ್ಧತಿಯಲ್ಲೇ ಆಡನ್ನು ಸಮರ್ಪಿಸಲಾಯಿತು. ನಾನು ನನ್ನ ಸಂಸಾರದೊಂದಿಗೆ ಆ ಒಂದು ರಾತ್ರಿ ಮಾತ್ರ ಉಳಿದುಕೊಳ್ಳುವುದು ಸಾಧ್ಯವಿತ್ತು. ಅವರಿದ್ದ ಮನೆ ತೀರ ಚಿಕ್ಕದಾಗಿತ್ತು. ಅಲ್ಲಿಂದ ಮುಂದೆ ನನ್ನ ತಾಯಿ ಮತ್ತು ಮೂವರು ಒಡಹುಟ್ಟಿದವರ ಖರ್ಚುವೆಚ್ಚ ನೋಡಿಕೊಳ್ಳುವ ಹೊಣೆ ನನ್ನೊಬ್ಬನದೇ ಆಗಿತ್ತು.
ಹತ್ತಿರದ ಹಳ್ಳಿಯೊಂದರಲ್ಲಿ ನನಗೆ ಕೋಕಾ ತೋಟದಲ್ಲಿ ಕೆಲಸ ಸಿಕ್ಕಿತು.
ಒಂದು ವರ್ಷದ ನಂತರ ಕೈಯಲ್ಲಿದ್ದ ಹಣದೊಂದಿಗೆ ನಾನು ಅಕ್ರಾಕ್ಕೆ ಹೋಗಲು ನಿರ್ಧರಿಸಿದೆ.
ನಾನು ನನ್ನ ತಾಯಿ, ಇಬ್ಬರು ಸಹೋದರರು ಮತ್ತು ತಂಗಿಗೆ ವಿದಾಯ ಹೇಳುವುದಕ್ಕಾಗಿ ಅವರಲ್ಲಿಗೆ ಹೋದೆ. ಅಲ್ಲಿ ನಾನು ಒಂದು ರಾತ್ರಿ ಮಾತ್ರ ತಂಗುವುದಕ್ಕೆ ಸಾಧ್ಯವಿತ್ತು. ಅವರಿದ್ದ ಮನೆ ಅಷ್ಟು ಚಿಕ್ಕದಾಗಿತ್ತು.
ರಿಚರ್ಡ್ ಕೈಯಲ್ಲಿ ಬಿಯರ್ ಹಿಡಿದು ಸೋಫಾದ ಮೇಲೆ ಕುಳಿತಿದ್ದಾಗ, ಚಿಂದಿಯಾದ ಹಳದಿ ಯೂನಿಫಾರ್ಮ್ ತೊಟ್ಟ ಆ ಮನುಷ್ಯ ಲಿವಿಂಗ್ ರೂಮಿನ ರಗ್ಗು ಗುಡಿಸುತ್ತಿದ್ದ.
ನಾನು ಅಕ್ರಾಕ್ಕೆ ಹೋಗಿ ನನ್ನ ಸ್ವಂತ ಬಿಸಿನೆಸ್‌ಗಾಗಿ ನಾಲ್ಕು ಜೊತೆ ಶೂಸ್ ಖರೀದಿಸಿದೆ. ಅಪರಾಹ್ನದೊಳಗೆ ನಾನು ಎರಡು ಜೊತೆ ಮಾರಿದ್ದೆ. ಎರಡು ಹೊಸ ಜೊತೆಗಳನ್ನು ಕೊಂಡೆ ಮತ್ತು ಆ ಸಂಜೆ ಇನ್ನೂ ಒಂದು ಜೊತೆ ಶೂಸ್ ಮಾರಿದೆ. ಮೂರು ಜೊತೆ ಶೂಸ್ ಮಾರಿ ಬಂದ ಲಾಭದಿಂದ ನಾನು ತಿನ್ನುವುದಕ್ಕೆ ಕೊಂಡೆ. ಮಲಗಲು ಬೇಕಾದ ಒಂದು ಚಾಪೆ ಮತ್ತು ಬೀದಿ ಬದಿ ಮಲಗುವಾಗ ಹೊದೆಯಲು ಬೇಕಾದ ಒಂದು ಪ್ಲಾಸ್ಟಿಕ್ ಚಾದರ ಕೊಂಡೆ. ರಾತ್ರಿ ಯಾರೋ ಆ ಚಾದರ ಕದ್ದೊಯ್ದರು.
ಐದು ವರ್ಷಗಳಿಂದಲೂ ಲಿವಿಂಗ್ ರೂಮಿನ ಟೇಬಲ್ಲಿನ ಮೇಲೆಯೇ ಉಳಿದುಬಿಟ್ಟ ಆಡ್ವೆಂಟ್‌ಗಾಗಿ ತಂದ ರೀಥ್ ಮೇಲೆಯೇ ರಿಚರ್ಡ್ ದೃಷ್ಟಿ ಕೀಲಿಸಿತ್ತು.
ಅದೇ ತಾನೆ ಮಳೆಗಾಲ ಆರಂಭವಾಗಿತ್ತು. ನಾನು ನಗರದ ಸುತ್ತೆಲ್ಲಾ ಓಡಾಡಿದೆ. ಈಗ ನನ್ನ ಬಳಿ ಹನ್ನೊಂದು ಜೊತೆ ಶೂಸುಗಳಿದ್ದವು. ನಾನು ಯಾವಾಗಲೂ ಒಂದೇ ಶೂವನ್ನು ತೋರಿಸುತ್ತಿದ್ದೆ. ಇನ್ನೊಂದು ನನ್ನ ಬೆನ್ನಿನ ಚೀಲದಲ್ಲೇ ಇರುತ್ತಿತ್ತು. ರಾತ್ರಿ ಕೆಲವೊಮ್ಮೆ ಮಳೆಯಾದರೆ ನನ್ನ ಹೊಸ ಚಾದರ ಅತ್ತಿತ್ತ ಸರಿದಿದ್ದರೆ ಅಷ್ಟಿಷ್ಟು ಒದ್ದೆಯಾಗುತ್ತಿದ್ದೆ. ಹಗಲು ಹೊತ್ತಿನಲ್ಲಿ ನನಗೆ ಎಂಥಾ ಸುಸ್ತು ಆವರಿಸುತ್ತಿತ್ತೆಂದರೆ ಕೆಲವೊಮ್ಮೆ ನಾನು ಕುಳಿತಲ್ಲೇ ನಿದ್ದೆ ಹೋಗಿರುತ್ತಿದ್ದೆ. ಕೊನೆಗೂ ನನಗೆ ಒಂದು ಮರದ ಪಟ್ಟಿಗಳ ಕೌಂಟರ್ ಮಾಡಿಕೊಳ್ಳಲು ಸಾಧ್ಯವಾಯಿತು. ರಾತ್ರಿ ಹೊತ್ತಿನಲ್ಲಿ ನನ್ನ ಶೂಗಳಿದ್ದ ಚೀಲವನ್ನು ಒಂದೆಡೆ ಭದ್ರವಾಗಿ ಇರಿಸಲು ಬಾಗಿಲು, ಬೀಗ ಇದ್ದ ಒಬ್ಬರು ಒಪ್ಪಿಕೊಂಡರು. ಆದರೂ ನಾನು ಆಗಲೂ ಕಿಸೆಯಲ್ಲಿ ಹಣವಿರಿಸಿಕೊಂಡು ಬೀದಿ ಬದಿಯಲ್ಲೇ ಮಲಗಬೇಕಾಗಿತ್ತು ಮತ್ತು ಸದಾ ಕಾಲ ಯಾರಾದರೂ ನನ್ನನ್ನು ಕೊಳ್ಳೆ ಹೊಡೆಯಬಹುದಾದ ಭೀತಿಯಲ್ಲೇ ನಾನು ಮಲಗುತ್ತಿದ್ದೆ. ಕಮಿಷನ್ ಮೇಲೆ ಐದು ಜೊತೆ ಶೂಸ್ ಮಾರಿಕೊಡುತ್ತೇನೆಂದು ಸಹಾಯ ಮಾಡುವವನಂತೆ ಒಬ್ಬ ಬಂದ. ಹಾಗೆ ಶೂಸ್ ತೆಗೆದುಕೊಂಡು ಹೋದವನು ಮರಳಿ ಬರಲೇ ಇಲ್ಲ. 
ಈಗ ಚಿಂದಿಯಾದ ಹಳದಿ ಯೂನಿಫಾರ್ಮ್ ತೊಟ್ಟ ಮನುಷ್ಯ ತನ್ನ ಕಸಬರಿಗೆಯನ್ನು ತಲೆಕೆಳಕು ಮಾಡಿ ಹಿಡಿದು ಅದಕ್ಕೆ ಅಂಟಿಕೊಂಡ ಕಸವನ್ನೆಲ್ಲ ತೆಗೆದು ಹಿಂದಕ್ಕೆಸೆಯ ತೊಡಗಿದ. ಅದು ಅಲ್ಲೇ ನೆಲದ ಮೇಲೆಲ್ಲ ಬೀಳುತ್ತಿತ್ತು. ಈ ಮನುಷ್ಯನಿಗೆ ತಾನೇನು ಮಾಡುತ್ತಿದ್ದೇನೆಂದು ಗೊತ್ತಿದೆಯೇ ಎಂದು ರಿಚರ್ಡ್ ಆಶ್ಚರ್ಯಪಟ್ಟ. ಬಳಿಕ ಅವನಿಗೆ ಹೇಗೆ ಬೇಕೋ ಹಾಗೆ ಮಾಡಿಕೊಳ್ಳಲಿ ಎಂದು ಸುಮ್ಮನಾದ.
ನಾನು ನನ್ನ ತಾಯಿ ಮತ್ತು ಒಡಹುಟ್ಟಿದವರನ್ನು ಕಾಣಲು ಹೋದೆ. ಅಲ್ಲಿ ನನಗೆ ಕೇವಲ ಒಂದೇ ರಾತ್ರಿ ಉಳಿದುಕೊಳ್ಳಲು ಸಾಧ್ಯವಾಯಿತು. ಅವರಿದ್ದ ಮನೆ ತೀರಾ ಚಿಕ್ಕದಾಗಿತ್ತು.
ನಾನು ನನ್ನ ಬಳಿಯೇ ಕೇಳಿಕೊಂಡೆ: ನಾನು ಮಾಡಿದ ತಪ್ಪಾದರೂ ಏನು?
ನಾನು ನನ್ನನ್ನೇ ನಾನು ಪ್ರಶ್ನಿಸಿಕೊಂಡೆ. ನಂತರ ದೇವರನ್ನು ಕೇಳಿದೆ.
ಸರಿ, ಕೆಟ್ಟ ಕಾಲ ಎನ್ನುವುದು ಬರುತ್ತದೆ, ಅದು ಸಹಜವೇ. ಆದರೆ ನಿಮಗೆ ನೀವೆಲ್ಲಿ ಮಲಗಲಿದ್ದೀರಿ, ಏನನ್ನು ತಿನ್ನಲಿದ್ದೀರಿ ಎನ್ನುವುದು ಸಹ ಗೊತ್ತಿಲ್ಲದ ಸ್ಥಿತಿಯಲ್ಲಿ ಬದುಕುವುದೆಂದರೆ? ಇಡೀ ಜಗತ್ತಿನಲ್ಲಿ ನಾನು ನೆಮ್ಮದಿಯಿಂದ ಮಲಗಬಹುದಾದ ಒಂದೇ ಒಂದು ಜಾಗವೂ ಇಲ್ಲವೆ, ನಿಜಕ್ಕೂ?
ನಾನು ನನ್ನೆದುರಿನ ಹಾದಿಯನ್ನು ಅಷ್ಟೂ ದೂರ ದೃಷ್ಟಿ ಹಾಯಿಸಿ ನೋಡಿದೆ. ಅದೇ ರೀತಿ ನಾನು ಹಾದು ಬಂದ ಹಾದಿಯುದ್ದಕ್ಕೂ ಹಿಂದಿರುಗಿ ದಿಟ್ಟಿಸಿದೆ. ಏನೂ ಕಾಣಿಸಲಿಲ್ಲ ನನಗೆ. ಆದರೆ ನಾನು ಅಮ್ಮನ ಬಳಿ ಎಲ್ಲವೂ ಚೆನ್ನಾಗಿ ನಡೀತಿದೆ ಎಂದೇ ಹೇಳಿದೆ.
ಮತ್ತು ನನ್ನಮ್ಮನೂ ನನ್ನ ಹತ್ತಿರ ಅಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದಳು.
ಆದರೆ ನನಗೆ ಗೊತ್ತಿತ್ತು: ನಮಗೆ ಯಾವುದೇ ಭೂಮಿ ಕಾಣಿ ಇರಲಿಲ್ಲ. ನಾನು ಅವಳಿಗೆ ಹಣ ಕಳಿಸದೇ ಇದ್ದರೆ ಮತ್ತು ಯಾರೂ ಅವಳಿಗೆ ಏನೂ ಕೊಡದೇ ಇದ್ದರೆ ಅವಳಿಗಾಗಲೀ, ನನ್ನ ಒಡಹುಟ್ಟಿದವರಿಗಾಗಲೀ ಒಪ್ಪತ್ತಿನ ಗಂಜಿಗೂ ಗತಿಯಿರಲಿಲ್ಲ.
ನಾವಿಬ್ಬರೂ ಮುಖ ಮುಖ ನೋಡಿಕೊಂಡಾಗ ನನ್ನದೇ ಮೌನವು ಅಮ್ಮನ ಮೌನದೊಂದಿಗೆ ಬಡಿದು ಎಡವಿತು.
ಆಮೇಲೆ ನಾನು ತೋಟವೊಂದರಲ್ಲಿ ಕುಯಿಲಿನ ಕೆಲಸಕ್ಕೆ ಸಹಾಯಕನಾಗಿ ದುಡಿದೆ.
ಮೊದಲನೆಯ ವಾರ.
ಎರಡನೆಯ ವಾರ.
ಮೂರನೆಯ ವಾರ.
ಅವನು ಕಸಬರಿಗೆಯನ್ನು ತಿರುಗಿಸಿ ತಿರುಗಿಸಿ ಸುತ್ತಲೂ ಗುಡಿಸುತ್ತಾನಾದರೂ ನಿಂತಲ್ಲಿಯೇ ನಿಂತು ಉಳಿಯುತ್ತಾನೆ.
ನಾನು ಯೋಚಿಸಿದೆ: ನಾನೇ ಇಲ್ಲ ಎಂದಾದರೆ, ಯಾರೂ ನನ್ನ ಹತ್ತಿರ ಏನನ್ನೂ ಕೇಳುವುದಿಲ್ಲ. ಹೊಲದ ಒಂದು ಮೂಲೆಯಲ್ಲಿ ಒಬ್ಬನೇ ಕೂತು ಬಳಬಳನೆ ಅತ್ತುಬಿಟ್ಟೆ.
ಪರಿಸ್ಥಿತಿ ಹೀಗೆಯೇ ಇದೆ. ಘಾನಾದಲ್ಲಿ ಮಂದಿ ಹತಾಶರಾಗಿದ್ದಾರೆ.
ಕೆಲವರು ಸುಮ್ಮನೇ ನೇಣು ಹಾಕಿಕೊಳ್ಳುತ್ತಿದ್ದಾರೆ.
ಇನ್ನು ಕೆಲವರು ಡಿಡಿಟಿ ತೆಗೆದುಕೊಳ್ಳುತ್ತಾರೆ. ನಂತರ ನೀರು ಕುಡಿದು, ಮನೆಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾರೆ ಮತ್ತು ಸಾಯುತ್ತಾರೆ.
ನಾನು ಡಿಡಿಟಿ ಮಾರುವ ಒಂದು ಅಂಗಡಿಗೆ ಪುಟ್ಟ ಹುಡುಗನೊಬ್ಬನ್ನ ಕಳಿಸಿದೆ. ಆದರೆ ಅಂಗಡಿಯವ ಹುಡುಗನ ಹತ್ತಿರ ಯಾರು ನಿನ್ನನ್ನು ಕಳಿಸಿದವರು ಎಂದು ಕೇಳಿದ. ನನ್ನನ್ನು ಹುಡುಕಿಕೊಂಡು ಬಂದು ತುಂಬ ಹೊತ್ತು ನನ್ನ ಜೊತೆ ಕುಳಿತು ಮಾತನಾಡಿದ. ಚೆನ್ನಾಗಿ ಯೋಚಿಸಿ ನೋಡು, ದುಡುಕಬೇಡ ಎಂದ. ಈ ಮಾತುಕತೆಯ ನಂತರದ ಮೂರು ದಿನಗಳ ಕಾಲ ನಾನು ಮಸೀದಿಯಲ್ಲಿ ಕುಳಿತು ಯೋಚಿಸಿದೆ. 
ಆ ಬಳಿಕ ನನ್ನಲ್ಲಿ ಮತ್ತೊಮ್ಮೆ ಅದನ್ನೇ ಮಾಡುವಷ್ಟು ತ್ರಾಣ ಉಳಿದಿರಲಿಲ್ಲ.
ಅದರ ನಂತರ ನಾನು ಕಾಯಿಲೆಬಿದ್ದೆ.
ರಿಚರ್ಡ್ ಎದ್ದು ಹಾಲ್‌ನ ಉದ್ದಕ್ಕೂ ನಡೆದು ತನ್ನ ಓದುವ ಕೋಣೆ ಸೇರಿಕೊಂಡ. ಅಲ್ಲಿ ಅವನು ಕೆಲವೊಮ್ಮೆ ಆರಾಮ ಕುರ್ಚಿಯ ಮೇಲೆ ಕುಳಿತು ಫೋನಿನಲ್ಲಿ ಮಾತನಾಡುವುದಿದೆ. ನಿದ್ದೆ ಹೋಗುವುದಕ್ಕೂ ಮುನ್ನ ತಲೆತುಂಬ ತುಂಬಿಕೊಂಡ ಯೋಚನೆಗಳಿಂದ ಮುಕ್ತನಾಗುವುದಕ್ಕೆ ಏನಾದರೂ ಸ್ವಲ್ಪ ಓದುವುದು ಅಗತ್ಯವಾಗುತ್ತದೆ.
ಡಿಡಿಟಿ ವ್ಯಾಪಾರಿ ನನ್ನೊಂದಿಗೆ ಮಾತನಾಡದೇ ಇದ್ದರೆ ನಾನು ತುಂಬ ಹಿಂದೆಯೇ ಸತ್ತಿರುತ್ತಿದ್ದೆ.
ಓದುವ ಕೋಣೆಯಲ್ಲೂ ಸಿಕ್ಕಾಪಟ್ಟೆ ಧೂಳು ತುಂಬಿಕೊಂಡಿದೆ. ಗುಂಡಗಿನ ಟೇಬಲ್ ಸುತ್ತ ಇರುವ ಕುರ್ಚಿಗಳನ್ನೆಲ್ಲ ಎತ್ತಿ ಟೇಬಲ್ಲಿನ ಮೇಲ್ಗಡೆ ತಲೆಕೆಳಗಾಗಿ ಕೂರಿಸುವಾಗ ರಿಚರ್ಡ್ ಆ ತೆಳ್ಳನೆಯ ಮನುಷ್ಯನನ್ನೇ ಒಂದಷ್ಟು ಹೊತ್ತು ಗಮನಿಸುತ್ತಾನೆ. ಅವನು ತನ್ನ ಪೊರಕೆಯನ್ನು ಪಕ್ಕದ ಪುಸ್ತಕದ ಶೆಲ್ಫ್‌ಗೆ ಆನಿಸಿ ಇರಿಸಿದ್ದಾನೆ. ಅದು ಜರ್ಮನ್ ಕ್ಲಾಸಿಸಿಸಮ್‌ ಕುರಿತ ಕೃತಿಗಳಿಗೆಂದೇ ಮೀಸಲಿರಿಸಿದ ಶೆಲ್ಫ್.
ಬಳಿಕ ನಾನು ಮತ್ತೆ ಅಕ್ರಾಗೆ ಹಿಂದಿರುಗಿದೆ. ಒಬ್ಬ ಸಹಾಯಕನನ್ನು ಗೊತ್ತು ಮಾಡಿಕೊಂಡೆ. ಒಂದು ಕಾಲಘಟ್ಟದಲ್ಲಿ ನನ್ನ ಬಳಿ ಎರಡೂವರೆ ಗೋಣಿಚೀಲದಷ್ಟು ಶೂಸುಗಳಿದ್ದವು, ಸುಮಾರು ಮುನ್ನೂರು ಜೊತೆ ಶೂಸುಗಳು. ಈಗ ನನ್ನ ಬಳಿ ಒಂದು ಕೋಣೆ ಹೊಂದುವುದಕ್ಕೆ ಅಗತ್ಯವಾದಷ್ಟು ಹಣವಿತ್ತು.
ಆದರೆ ಇದ್ದಕ್ಕಿದ್ದಂತೆ ಬೀದಿಬದಿ ಮಾರಾಟವನ್ನು ಅಕ್ರಮ ಎಂದು ನಿಷೇಧಿಸಲಾಯಿತು.
ನಾನು ನನ್ನೆದುರಿನ ಹಾದಿಯನ್ನು ಅಷ್ಟೂ ದೂರ ದೃಷ್ಟಿ ಹಾಯಿಸಿ ನೋಡಿದೆ. ಅದೇ ರೀತಿ ನಾನು ಹಾದು ಬಂದ ಹಾದಿಯುದ್ದಕ್ಕೂ ಹಿಂದಿರುಗಿ ದಿಟ್ಟಿಸಿದೆ. ಏನೂ ದಾರಿ ಕಾಣಿಸಲಿಲ್ಲ ನನಗೆ.
ನಾನು ಐದು ಜೊತೆ ಶೂಸ್ ಹೊತ್ತು ಗುಟ್ಟಾಗಿ ಅದನ್ನು ಮಾರಿದೆ. ಇಡೀ ದಿನದುದ್ದಕ್ಕೂ ನಾನು ನಗರದ ಮೂಲೆ ಮೂಲೆ ಸುತ್ತಿದೆ. ಕೊನೆಯ ಇಪ್ಪತ್ತೋ ಮುವ್ವತ್ತೋ ಜೊತೆ ಶೂಸುಗಳನ್ನು ನಾನು ತೀರ ಕಡಿಮೆ ಬೆಲೆಗೆ ನನ್ನ ಸಹಾಯಕನಿಗೆ ಬಿಟ್ಟುಕೊಟ್ಟೆ. ಬಂದ ಲಾಭದಲ್ಲಿ ನಾನು ಅಥ್‌ಫಿದೈ ತುಂಬಿದ ಗೋಣೆಚೀಲ ಕೊಂಡುಕೊಂಡೆ. ಯುರೋಪಿನಲ್ಲಿ ಅದನ್ನು ಔಷಧಿ ತಯಾರಿಯಲ್ಲಿ ಬಳಸುತ್ತಾರೆ ಎಂದು ಯಾರೋ ಹೇಳಿದರು. ಪ್ಯಾರಾಸಿಟಾಮಲ್.
ರಿಚರ್ಡ್ ತಲೆನೋವು ಬಂದಾಗಲೆಲ್ಲ ಪೂರ್ವ ಜರ್ಮನಿಯಲ್ಲೆಲ್ಲ ಜನಪ್ರಿಯವಾಗಿರುವ ಆಸ್ಪಿರಿನ್ ಮಾತ್ರೆ ಏ.ಎಸ್.ಎಸ್. ತೆಗೆದುಕೊಳ್ಳುತ್ತಾನೆ. ಅದರಲ್ಲಿಯೂ ಪ್ಯಾರಾಸಿಟಾಮಲ್ ಇದ್ದು ಅದು ಕೆಲಸ ಮಾಡುತ್ತದಾ ಎನ್ನುವ ಬಗ್ಗೆ ಅವನಿಗೆ ತಿಳಿಯದು.
ಆಮೇಲೆ ನಾನು ನನ್ನ ತಾಯಿ ಮತ್ತು ಒಡಹುಟ್ಟಿದವರು ಇರುವ ಮನೆಗೆ ಹೋದೆ. ನಾನು ಅಲ್ಲಿ ಅವರೊಂದಿಗೆ ಕೇವಲ ಒಂದು ರಾತ್ರಿ ಮಾತ್ರ ಉಳಿದೆ ಮತ್ತು ಅವರು ನನಗೆ ಯಾವ ರೀತಿ ಸಹಾಯ ಮಾಡಬೇಕೆಂಬುದನ್ನು ವಿವರಿಸಿ ಹೇಳಿದೆ. ಅವರು ನಾಲ್ಕೂ ಮಂದಿ ಈ ಒಂದು ಸೇಬಿನ ತರ ಇರುವ ಹಣ್ಣನ್ನು ಸಂಗ್ರಹಿಸಲು ಪೊದೆಗಳನ್ನು ಹುಡುಕಿಕೊಂಡು ಹೊರಟರು. ಅದನ್ನು ನೀವು ಚೆನ್ನಾಗಿ ಒಣಗಿಸಬೇಕು. ಆಗ ಅದು ಸೀಳಿಕೊಂಡು ತೆರೆದುಕೊಳ್ಳುತ್ತದೆ. ಅದರಲ್ಲಿರುವ ಬೀಜಗಳನ್ನೆಲ್ಲ ಒಟ್ಟು ಮಾಡಿ ಅದನ್ನು ಎರಡರಿಂದ ಮೂರು ದಿನಗಳ ಕಾಲ ಬಿಸಿಲಿಗೆ ಒಣಗಿಸಬೇಕು. ಆಮೇಲೆ ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಬೇಕು. ಕೊನೆಯಲ್ಲಿ ಕಪ್ಪು ಹುಡಿ ತಯಾರಾಗುತ್ತದೆ. ಹಣ್ಣು ಸಿಗುವುದು ಕಷ್ಟ. ಆಮೇಲೆ ಹುಡಿ ತಯಾರಿಸುವುದು ತುಂಬ ಕಷ್ಟದ ಕೆಲಸವೇ. ಆದರೂ ಎಲ್ಲ ಸೇರಿ ಕೊನೆಗೂ ಎರಡನೆ ಚೀಲವನ್ನೂ ತುಂಬಿ ನನ್ನಮ್ಮ ಅದನ್ನು ಅಕ್ರಾಗೆ ಕಳಿಸಿಕೊಟ್ಟಳು. 
ರಿಚರ್ಡ್ ದೀಪ ಆರಿಸಿ ಮಲಗಲು ಬಯಸುತ್ತಾನೆ. ಆದರೂ ಅವನಿನ್ನೂ ಕುಳಿತೇ ಇದ್ದಾನೆ. ಆ ತೆಳ್ಳನೆಯ ಮನುಷ್ಯ ಸೋಫಾ ಮತ್ತು ಸುತ್ತಮುತ್ತ ಎಲ್ಲ ಗುಡಿಸಿ ಮುಗಿಸುವ ತನಕ, ಟೇಬಲ್ ಮೇಲಿನಿಂದ ಕುರ್ಚಿಗಳನ್ನೆಲ್ಲ ಇಳಿಸಿ ನೀಟಾಗಿ ಜೋಡಿಸಿಡುವ ತನಕ ಅವನು ಕಾಯುತ್ತ ಉಳಿಯುತ್ತಾನೆ.
ನಾನು ಎರಡೂ ಚೀಲಗಳೊಂದಿಗೆ ಸಂತೆಗೆ ಹೊರಟೆ.
ಮೊದಲನೆಯ ದಿನ ಯಾರೊಬ್ಬರೂ ಹುಡಿ ಖರೀದಿಸಲು ಬರಲಿಲ್ಲ.
ಎರಡನೆಯ ದಿನ ಕೂಡ ಇಲ್ಲ.
ಮೂರನೆಯ ದಿನವೂ ಇಲ್ಲ.
ಆನಂತರ, ಕಳೆದ ವರ್ಷ ಯಾರೋ ಕೆಲವರು ಅದೇ ತರ ಕಾಣುವ ಬೇರಾವುದೋ ಹುಡಿಯನ್ನು ಚೀಲದಲ್ಲಿ ತುಂಬಿ ಕೊಂಡವರಿಗೆ ಮೋಸ ಮಾಡಿದ್ದರು ಎನ್ನುವ ವಿಷಯ ಕಿವಿಗೆ ಬಿತ್ತು.
ಈಗ ರಿಚರ್ಡ್ ದೀಪವಾರಿಸುತ್ತಾನೆ. ಹಾಲ್‌ನ ಹಾದಿಯಲ್ಲಿ ಧ್ವನಿ ಅವನಿಗಾಗಿ ಕಾಯುತ್ತಿತ್ತು.
ನಾನು ನನ್ನೊಬ್ಬ ಗೆಳೆಯನ ಹತ್ತಿರ ಆ ಚೀಲಗಳನ್ನು ತೆಗೆದಿರಿಸಲು ಹೇಳಿ ನನ್ನಮ್ಮ ಮತ್ತು ಒಡಹುಟ್ಟಿದವರಿಗೆ ವಿದಾಯ ಹೇಳಲು ಹೋದೆ. ಅಲ್ಲಿ ನಾನು ಕೇವಲ ಒಂದು ರಾತ್ರಿ ಮಾತ್ರ ತಂಗುವುದು ಸಾಧ್ಯವಾಯ್ತು ಅಷ್ಟೆ. ಯಾಕೆಂದರೆ ಅವರಿದ್ದ ಮನೆ ತೀರಾ ಚಿಕ್ಕದಾಗಿತ್ತು.
ನನ್ನಲ್ಲಿದ್ದ ಹಣದಲ್ಲಿ ಅರ್ಧದಷ್ಟನ್ನು ನಾನು ನನ್ನಮ್ಮನಿಗೆ ಕೊಟ್ಟೆ. ಮತ್ತು ಉಳಿದರ್ಧವನ್ನು ಇನ್ನೊಬ್ಬನಿಗೆ, ನನ್ನನ್ನು ಕದ್ದು ಲಿಬಿಯಾಕ್ಕೆ ಸಾಗಹಾಕುವ ಕೆಲಸಕ್ಕಾಗಿ ಕೊಟ್ಟುಬಿಟ್ಟೆ. ಅದು 2010ರಲ್ಲಿ.
ಹೀಗೆ ಕಸ ಗುಡಿಸುವುದು ಚೆನ್ನಾಗಿರುತ್ತದೆ ಎನಿಸಿತು ರಿಚರ್ಡ್‌ಗೆ. ಸದ್ದೇ ಇಲ್ಲದ ಕೆಲಸ. ಆಶ್ಚರ್ಯವಾಗುತ್ತದೆ ರಿಚರ್ಡ್‌ಗೆ. ಅಪರೂಪಕ್ಕೆ ಮನೆ ಚೊಕ್ಕ ಮಾಡಲು ಹೊರಟಾಗಲೆಲ್ಲ ರಿಚರ್ಡ್ ತಪ್ಪದೇ ವ್ಯಾಕ್ಯೂಂ ಕ್ಲೀನರ್ ಬಳಸುತ್ತಾನೆ. 
ನಾನು ಕೊಟ್ಟ ಹಣ ನೈಜರ್‌ನ ದಾಕೊರೊ ತನಕ ಹೋಗಲು ಮಾತ್ರವೇ ಸಾಕಾಗುವಷ್ಟಿಟ್ಟು. ಉಳಿದ ಹಣವನ್ನು ಆ ಕದ್ದು ಸಾಗಿಸುವ ವ್ಯಕ್ತಿಯೇ ನನಗೆ ಸಾಲ ರೂಪದಲ್ಲಿ ಒದಗಿಸಿದ. ಉಳಿದ ಕೆಲವರೊಂದಿಗೆ ನಾನೂ ಆ ಪಿಕಪ್ ಟ್ರಕ್ಕಿನ ಕೆಳಗೆ ಜೋಡಿಸಿದ ಕಳ್ಳ ಅಟ್ಟಣಿಕೆ ಸೇರಿಕೊಂಡು ಅಲ್ಲಾಡಲೂ ಸಾಧ್ಯವಿಲ್ಲದಂತೆ ಬಿಗಿಯಾಗಿ ಹಿಡಿದುಕೊಂಡೇ ಪ್ರಯಾಣಿಸಿದೆ. ಆ ಕದ್ದು ಸಾಗಿಸುವ ವ್ಯಕ್ತಿ ಆಗೊಮ್ಮೆ ಈಗೊಮ್ಮೆ ಕೆಳಕ್ಕೆ ಆ ಕಳ್ಳಜಾಗಕ್ಕೆ ತಳ್ಳಿಬಿಡುತ್ತಿದ್ದ ಕಲ್ಲಂಗಡಿ ಹಣ್ಣಿನ ಚೂರುಗಳನ್ನೇ ತಿಂದುಕೊಂಡು ಜೀವ ಸಹಿತ ತಲುಪಿದೆವೆನ್ನಬೇಕು. 
ಟ್ರಿಪೋಲಿಯಲ್ಲಿ ಮೊದಲ ಎಂಟು ತಿಂಗಳ ಕಾಲ ಆ ಮನುಷ್ಯನ ಸಾಲ ತೀರಿಸುವುದಕ್ಕಾಗಿಯೇ ಒಂದು ಕಟ್ಟಡ ನಿರ್ಮಾಣದ ಸೈಟಿನಲ್ಲಿ ದುಡಿಯಬೇಕಾಯಿತು. ನನ್ನ ಸಾಲ ಪೂರ್ತಿಯಾಗಿ ತೀರಿತು ಎನ್ನುವಷ್ಟರಲ್ಲಿ ಯುದ್ಧ ತೊಡಗಿತು. ಕಟ್ಟಡ ನಿರ್ಮಾಣದ ಸೈಟಿನಿಂದ ಹೊರಗೆ ತಲೆ ಹಾಕುವಂತೆಯೇ ಇರಲಿಲ್ಲ. ನಮ್ಮ ಸುತ್ತಮುತ್ತಲೆಲ್ಲ ಗುಂಡು ಹಾರಿಸುವ ಸದ್ದೇ ತುಂಬಿತ್ತು. ಕೆಲವೇ ದಿನಗಳಲ್ಲಿ ನಮಗೆ ತಿನ್ನುವುದಕ್ಕೂ ಕುಡಿಯುವುದಕ್ಕೂ ತರುತ್ತಿದ್ದ ವ್ಯಕ್ತಿ ಬರುವುದು ನಿಂತೇ ಹೋಯಿತು. ಮೂರು ದಿನಗಳ ಕಾಲ ಹೇಗೋ ತಡೆದುಕೊಂಡು ಒಳಗೇ ಉಳಿದೆವು. ಆದರೆ ನಾಲ್ಕನೆಯ ದಿನ ಹೊರಗೆ ಬರಲೇ ಬೇಕಾಯಿತು. ಹಾದಿ ಬೀದಿಗಳೆಲ್ಲ ಪೂರ್ತಿ ಎಂದರೆ ಪೂರ್ತಿಯಾಗಿ ನಿರ್ಜನವಾಗಿದ್ದವು. ವಿದೇಶಿಗರು ಬಿಡಿ ಲಿಬಿಯನ್ನರು ಕೂಡಾ ಕಣ್ಣಿಗೆ ಬೀಳುತ್ತಿರಲಿಲ್ಲ. ಜನರೇ ಇಲ್ಲ ಎಲ್ಲಿಯೂ. ಕೊನೆಗೆ ಅಂತೂ ಇಂತೂ ನಾವೆಲ್ಲ ರಾತ್ರಿ ಹೊತ್ತು ಯಾವುದೋ ಒಂದು ದೋಣಿಯನ್ನು ಹತ್ತಿದೆವು. ಸ್ನೇಹಿತನೊಬ್ಬ ನನಗೆ ಇನ್ನೂರು ಯೂರೋಸ್ ಸಾಲವಾಗಿ ನೀಡಿದ. ಯುರೋಪ್ ಪಾರು ಮಾಡಲು ಅದು ಅನಿವಾರ್ಯವಾಗಿತ್ತು.
ಸಿಸಿಲಿಯ ಕ್ಯಾಂಪಿನಿಂದ ಅಕ್ರಾಗೆ ಕಾಲ್ ಮಾಡಿ ವಿಚಾರಿಸಿದಾಗ, ನಾನು ಎರಡು ಚೀಲ ಹುಡಿ ಒಪ್ಪಿಸಿದ್ದ ವ್ಯಕ್ತಿ ಅದೆಲ್ಲವೂ ಹಳೆಯದಾಗಿ ಬಿಟ್ಟಿದೆ ಎಂದ. 
ಹೌದು, ಅದನ್ನೆಲ್ಲ ಎಸೆದು ಬಿಡು ಎಂದುಬಿಟ್ಟೆ.
ಈಗ ಆ ತೆಳ್ಳನೆಯ ಮನುಷ್ಯ ಕೆಳಗಡೆಯಿಂದ ಮೇಲ್ಗಡೆಗೆ ಸಾಗುತ್ತ ಗುಡಿಸಲು ಸುರುಮಾಡುತ್ತಾನೆ. ರಿಚರ್ಡ್‌ಗೆ ಇದು ತನ್ನ ತಾಯಿ ಗುಡಿಸುತ್ತಿದ್ದ ಕ್ರಮದ ಸಂಪೂರ್ಣ ತದ್ವಿರುದ್ಧ ಬಗೆಯೆಂಬುದು ಗೊತ್ತಾಗುತ್ತದೆ. ಕೆಳಗಿನ ಮೆಟ್ಟಿಲನ್ನು ಗುಡಿಸಿ ಚೊಕ್ಕಗೊಳಿಸಿದ ಮೇಲೆ ಅದಕ್ಕೂ ಮೇಲಿನ ಮೆಟ್ಟಿಲನ್ನು ಗುಡಿಸಿ ಅದರ ಕಸವನ್ನೆಲ್ಲ ಆಗಷ್ಟೇ ಚೊಕ್ಕಗೊಳಿಸಿದ ಕೆಳಗಿನ ಮೆಟ್ಟಿಲ ಮೇಲೆ ಹಾಕುವುದು. 
ಇಟೆಲಿಯ ಕ್ಯಾಂಪಿನಲ್ಲಿದ್ದಷ್ಟೂ ಕಾಲ ನನಗೆ ತಿಂಗಳಿಗೆ ಎಪ್ಪತ್ತೈದು ಯೂರೋ ಕೊಡುತ್ತಿದ್ದರು. ನಾನು ಅದರಲ್ಲಿ ಇಪ್ಪತ್ತು ಅಥವಾ ಮುವ್ವತ್ತು ನನ್ನಮ್ಮನಿಗೆ ಕಳಿಸುತ್ತಾ ಇದ್ದೆ.
ಆದರೆ ಒಂದು ವರ್ಷದ ಬಳಿಕ ಕ್ಯಾಂಪನ್ನು ಮುಚ್ಚಲಾಯಿತು. ನಮಗಾಗ ಐನೂರು ಯೂರೋ ಕೊಟ್ಟರು. ಅದನ್ನು ಹಿಡಿದುಕೊಂಡು ನಾನು ಬೀದಿಯಲ್ಲಿ ನಿಂತಿದ್ದೆ. ನಾನು ಮಲಗುವುದಕ್ಕೆ ರೈಲ್ವೇ ಸ್ಟೇಶನ್ನಿಗೆ ಹೋಗುತ್ತಿದ್ದೆ. ಆದರೆ ಅಲ್ಲಿ ಕೊನೆಗೂ ಪೋಲೀಸಿನವ ಬಂದು ನನ್ನ ಬಳಿ ರೈಲಿನ ಟಿಕೆಟ್ ಇಲ್ಲದಿರುವುದನ್ನು ಕಂಡು ನನ್ನನ್ನು ಓಡಿಸಿದ.
ಹೊರಗೆ ಕ್ಯಾಮರೂನಿನ ಒಬ್ಬ ಮನುಷ್ಯ ಇದ್ದ. ಅವನು ನನಗೆ ತನ್ನ ಸಹೋದರನೊಬ್ಬ ಫಿನ್‌ಲ್ಯಾಂಡಿನಲ್ಲಿರುವುದಾಗಿ ಹೇಳಿದ. ನಾವು ಅವನಿಗೆ ಕಾಲ್ ಮಾಡಿದೆವು. ಸರಿ, ನಾನು ಫಿನ್‌ಲ್ಯಾಂಡಿಗೆ ಹೋಗಿ ಅವನ ಜೊತೆ ಉಳಿದುಕೊಳ್ಳುವುದು ಎಂದಾಯಿತು. ಆ ಪ್ರಕಾರ ನಾನು ಫಿನ್‌ಲ್ಯಾಂಡಿಗೆ ಹೋದೆ. ಆದರೆ ಅಲ್ಲಿಗೆ ಹೋದ ಮೇಲೆ ಕ್ಯಾಮರೂನಿನ ಆ ಮನುಷ್ಯನ ಸಹೋದರ ನನ್ನ ಫೋನ್ ತೆಗೆಯಲೇ ಇಲ್ಲ.
ಎರಡು ವಾರ ನಾನು ಫಿನ್‌ಲ್ಯಾಂಡಿನ ಬೀದಿ ಬದಿ ಮಲಗಿದೆ. ಭಯಂಕರ ಎಂದರೆ ಭಯಂಕರವಾದ ಚಳಿ ಅಲ್ಲಿ. ಆಮೇಲೆ ನಾನು ಮತ್ತೆ ಇಟೆಲಿಗೇ ವಾಪಾಸ್ಸಾದೆ. ನಾನು ನನ್ನ ಬೆನ್ನಿನ ಮೇಲೊಂದು ಚೀಲ ಹಾಕಿಕೊಂಡು ಸುತ್ತುತ್ತಿದ್ದೆ. ಒಂದು ದಿನ ನಾನು ಒಂದು ಜೊತೆ ಶೂಸ್ ಮತ್ತು ಕೆಲವು ಪ್ಯಾಂಟುಗಳನ್ನು ಭಾರ ಹೊರಲಾರದ ಕಾರಣಕ್ಕೆ ಎಸೆದು ಬಿಡಬೇಕಾಯಿತು. 
ಒಟ್ಟು ನಾನು ಒಂದು ವರ್ಷ ಎಂಟು ತಿಂಗಳು ಹೀಗೆ ಇಟೆಲಿಯಲ್ಲಿದ್ದೆ.
ಆಮೇಲೆ ನಾನು ಜರ್ಮನಿಗೆ ಹೋದೆ.
ನನ್ನ ಬಳಿ ಇದ್ದ ಎಲ್ಲಾ ಹಣ, ಐನೂರು ಯೂರೋ, ಹೋಯ್ತು.
ನಾನು ನನ್ನೆದುರಿನ ಹಾದಿಯನ್ನು ಅಷ್ಟೂ ದೂರ ದೃಷ್ಟಿ ಹಾಯಿಸಿ ನೋಡಿದೆ. ಅದೇ ರೀತಿ ನಾನು ಹಾದು ಬಂದ ಹಾದಿಯುದ್ದಕ್ಕೂ ಹಿಂದಿರುಗಿ ದಿಟ್ಟಿಸಿದೆ. ಏನೂ ಕಾಣಿಸಲಿಲ್ಲ ನನಗೆ.
ಈಗ ಆ ತೆಳ್ಳನೆಯ ಮನುಷ್ಯ ಎಲ್ಲಾ ಮೆಟ್ಟಿಲು ಮುಗಿಸಿ ತುತ್ತ ತುದಿ ತಲುಪಿದ್ದ. ಇನ್ನೀಗ ಅವನು ಅತಿಥಿಗಳ ಮಲಗುವ ಕೋಣೆಗಳತ್ತ ಹೆಜ್ಜೆ ಹಾಕಬಹುದು ಅಂದುಕೊಳ್ಳುತ್ತಾನೆ ರಿಚರ್ಡ್. ಆದರೆ ರಿಚರ್ಡ್ ತನ್ನ ಕೈಯಲ್ಲಿ ಎಡ್ಗರ್ ಲೀ ಮಾಸ್ಟರ್ಸ್‌ನ ಸಂಪುಟವನ್ನು ಹಿಡಿದುಕೊಂಡು ಹಿಂಬಾಲಿಸಿ ಹೋಗಿ ನೋಡಿದರೆ ಮೇಲ್ಗಡೆ ಅಂತಸ್ತಿನಲ್ಲಿ ಯಾರೆಂದರೆ ಯಾರೂ ಇರಲಿಲ್ಲ.
(Jenny Erpenbeck ಅವರ ಕಾದಂಬರಿ "Go, Went, Gone" ಕಾದಂಬರಿಯ 23ನೆಯ ಅಧ್ಯಾಯ. ಇದು Granta Publications ಕೃತಿ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, September 13, 2018

ಎಲ್ಲಿಂದಲೋ ಬಂದವರು

ನಿರಾಶ್ರಿತರ ಸಮಸ್ಯೆ ಎಂಬ ಕೇಂದ್ರವನ್ನು ಬೇಕಾಗಿಯೊ ಬೇಡವಾಗಿಯೊ ಒಂದು ಲೇಬಲ್ಲಿನಂತೆ ಪಡೆದುಕೊಂಡೇ ಬಂದಿರುವ ಕಾದಂಬರಿಯಿದು, ಜರ್ಮನ್ ಕಾದಂಬರಿಕಾರ್ತಿ Jenny Erpenbeck ಅವರ Go Went Gone. ಸ್ವಲ್ಪ ಹದ ತಪ್ಪಿದರೆ ಡಾಕ್ಯುಮೆಂಟರಿಯಾಗಿ ಬಿಡಬಹುದಾಗಿದ್ದ ಕಾದಂಬರಿಯನ್ನು ಹಾಗಾಗದಂತೆ ಪೊರೆದು ನಿಲ್ಲಿಸಿರುವ ನಿರೂಪಣೆ, ಕಥಾನಕ, ಅದರ ವಿಭಿನ್ನ ಮಜಲುಗಳ ಪೋಷಣೆ ಹಾಗೂ ವಿವರಗಳನ್ನು ನೇಯುವಾಗ ಸಂತುಲಿತವಾಗಿ ಸೇರಿಸಿಕೊಡುವ ಪರ್ಯಾಯ ಜಗತ್ತಿನ ವಿದ್ಯಮಾನಗಳು ಇಲ್ಲಿ ಗಮನ ಸೆಳೆಯುತ್ತವೆ. ಹಾಗಾಗಿ ಇದು ನಿರಾಶ್ರಿತ ಸಮಸ್ಯೆಯೇ ಅಥವಾ ಪ್ರತಿಯೊಬ್ಬ ವ್ಯಕ್ತಿಯೊಳಗೂ ಇದ್ದು ಕಾಡುವ ಬೇರೆಯೇ ಒಂದು ಅಳಲಿನ ಒಂದಾನೊಂದು ಮುಖ ಈ ಸಮಸ್ಯೆಯಲ್ಲಿ ಕಾಣುತ್ತಿದ್ದೇವೆಯೆ ಎನ್ನುವ ಕೊಂಚ ಆಳವಾದ ಪ್ರಶ್ನೆಯನ್ನು ಈ ಕಾದಂಬರಿ ಉದ್ದೀಪಿಸುವುದು ಸಾಧ್ಯವಾಗಿರುವುದು.

ಈಗಷ್ಟೇ ನಿವೃತ್ತನಾಗಿರುವ ಪ್ರೊಫೆಸರ್ ಇನ್ನೂ ಕೆಲಕಾಲ ನಿವೃತ್ತಿ ನಂತರದ ಸೇವೆಯಡಿ ಅದೇ ಯೂನಿವರ್ಸಿಟಿಯಲ್ಲಿ ಮುಂದುವರಿಯುವುದು ಸಾಧ್ಯವಿತ್ತು, ಕೆಲವರ ರಾಜಕೀಯ ಇಲ್ಲದೇ ಇರುತ್ತಿದ್ದರೆ. ನಿವೃತ್ತ ಪ್ರೊಫೆಸರ್ ಕುಳಿತಲ್ಲಿಂದ ನೇರವಾಗಿ ಕಾಣುವ ವಿಶಾಲ ಕೊಳದಲ್ಲಿ ಇತ್ತೀಚೆಗಷ್ಟೇ ಮುಳುಗಿದ ಯುವಕನೊಬ್ಬನ ಶವವನ್ನು ಬೇರೆ ಬೇರೆ ಕಾರಣಗಳಿಂದಾಗಿ ಮೇಲೆತ್ತುವುದಕ್ಕೆ ಸಾಧ್ಯವೇ ಆಗಲಿಲ್ಲ. ಮೇಲ್ಪದರದಲ್ಲಿ ಮಡುಗಟ್ಟಿದ ಮಂಜುಗಡ್ಡೆಯ ಆಳದ ನೀರಿನಲ್ಲಿ ಅವನು ಇದ್ದಾನೆ ಎನ್ನುವ ಒಂದು ಪ್ರಜ್ಞೆ, ಅಸ್ತಿತ್ವದ ಪ್ರಜ್ಞೆ ಇಡೀ ಕಾದಂಬರಿಯಲ್ಲಿ ಆಗಾಗ, ತಪ್ಪದೇ ಬರುವ ಸ್ಥಾಯೀ ಪ್ರತಿಮೆಯಾಗಿದೆ.

ಪ್ರೊಫೆಸರ್ ವಿಧುರ. ಪತ್ನಿ Christel ಅವನ ನೆನಪುಗಳಲ್ಲಿ ಜೀವಂತ. ಹಾಗಾಗಿ, ಒಂದರ್ಥದಲ್ಲಿ ಆಕೆ ಸತ್ತೇ ಇಲ್ಲ. ಅಥವಾ, ಸಾವು ಎನ್ನುವ ಒಂದು ಗಡಿರೇಖೆಯಾಚೆ ಸರಿದು ಹೋದ ವ್ಯಕ್ತಿಗಳೂ ಕೂಡ ನೆನಪುಗಳಲ್ಲಿ ಜೀವಂತವಾಗಿಯೇ ಇರುತ್ತಾರೆ ಎನ್ನುವುದು ನಿಜ. ಇವತ್ತಿಗೂ ಒಬ್ಬ ನಟನ ಸಿನಿಮಾ ನೋಡುತ್ತಿರುವಾಗ, ಒಬ್ಬ ಸಾಹಿತಿಯ ಕೃತಿಯನ್ನು ಓದುತ್ತಿರುವಾಗ, ಒಬ್ಬ ಸಂಗೀತಗಾರನ ಹಾಡನ್ನು ಕೇಳುತ್ತಿರುವಾಗ ಆತನ ದೈಹಿಕ ಅಸ್ತಿತ್ವ ಅಥವಾ ಸಾವು ಒಂದು ಪ್ರಶ್ನೆಯೇ ಆಗುವುದಿಲ್ಲ ಅಲ್ಲವೆ? ಈ ಅರ್ಥದಲ್ಲಿ, ಡಾ||ರಾಜ್‌ಕುಮಾರ್, ಶಿವರಾಮ ಕಾರಂತ ಅಥವಾ ಭೀಮಸೇನ ಜೋಶಿಯವರ ಸಾವು ನಿಜವೆ ಅಥವಾ ಅಸ್ತಿತ್ವ ನಿಜವೆ? ಒಬ್ಬ ಸಾಮಾನ್ಯ ಸಿನಿಮಾ ನೋಡುಗನಿಗೆ ನಟ ಎಂದರೆ ತೆರೆಯ ಮೇಲಿನ ನಟ. ಸಾಹಿತಿ ಎಂದರೆ ಕೃತಿಯ ಕರ್ತೃ, ಹಾಡುಗಾರ ಎಂದರೆ ಸುಶ್ರಾವ್ಯವಾದ ಕಂಠ. ಅದರಾಚೆಯ ಭೇಟಿ, ಮಾತುಕತೆ, ಸಂಬಂಧ ಎಲ್ಲ ಇದ್ದರೆ ಅದು ಬೇರೆಯೇ ಪ್ರಶ್ನೆ. ಹಾಗೆಯೇ, ಉದ್ಯೋಗ, ಶಿಕ್ಷಣ ಅಥವಾ ಇನ್ಯಾವುದೋ ಕಾರಣಕ್ಕೆ ದೂರದಲ್ಲೆಲ್ಲೊ ಇರುವ ನಮ್ಮ ಸ್ನೇಹಿತ, ಸಂಬಂಧಿ - ಈ ಕ್ಷಣ ಇದ್ದಾರೆ ಎನ್ನುವುದಕ್ಕೆ ನಮ್ಮ ಬಳಿ ಪುರಾವೆಯೇನೂ ಇರುವುದಿಲ್ಲ. ಹಿಂದೆಲ್ಲ ಆಗಾಗ ಬರುತ್ತಿದ್ದ ಪತ್ರ, ಈಗ ಡಿಜಿಟಲ್ ಸಂದೇಶಗಳು, ಫೋನ್ ಕರೆ ಇತ್ಯಾದಿ ಅಂಥ ಅಸ್ತಿತ್ವದ ಪುರಾವೆ. ಅದನ್ನು ನಂಬಿ ಅವರೆಲ್ಲ ಇದ್ದಾರೆ ಎನ್ನುವ ಭರವಸೆಯನ್ನು ನಾವು ತಳೆಯುತ್ತೇವೆ. ಕಚೇರಿಯಲ್ಲಿರುವಷ್ಟು ಹೊತ್ತು ನಾವು ಮನೆಯಲ್ಲಿ ಬಿಟ್ಟು ಬಂದಿರುವ ನಮ್ಮ ಸಂಗಾತಿ, ಮಕ್ಕಳು ಸೇಫ್ ಮತ್ತು ಜೀವಂತ ಎನ್ನುವುದು ಕೂಡ ನಮ್ಮದೊಂದು ಭರವಸೆ. ಹಾಗೆಯೇ ಅವರ ಮಟ್ಟಿಗೆ ಕಚೇರಿಗೆ ಎಂದು ತೆರಳಿದ ನಾವೂ. ಎಲ್ಲವೂ ವರ್ಚ್ಯುಯಲ್ ಟ್ರುಥ್ ಅಷ್ಟೇ. ಉಲ್ಟಾ ಹೊಡೆಯಬಹುದಾದ ಸಾಧ್ಯತೆಯೊಂದು ತೆರೆದೇ ಇರುತ್ತದೆ. ಇದೇ ಅರ್ಥದಲ್ಲಿ ಸಾವು ಎನ್ನುವ ಗಡಿಯನ್ನು ದಾಟಿ ಕಣ್ಮರೆಯಾದವರನ್ನೂ ನೆನಪುಗಳಲ್ಲಿ ಸದಾ ಜೀವಂತವಾಗಿಟ್ಟುಕೊಳ್ಳಲು ಒಂದು ಸೀಮಿತ ನೆಲೆಯಲ್ಲಿ ಸಾಧ್ಯವಿದೆ.

ಇಂಥ ಒಂದು ವಿಶಾಲ ನೆಲೆಯಲ್ಲಿ ಒಂದು ಸಂಸ್ಥೆಯ ಒಳಗೆ ಅಥವಾ ಹೊರಗೆ, ಕೊಳದ ತಳದಲ್ಲಿ ಅಥವಾ ಹೊರಗೆ, ಸಾವಿನಾಚೆ ಅಥವಾ ಈಚೆ, ದೇಹದ ಒಳಗೆ ಅಥವಾ ಹೊರಗೆ, ಮನಸ್ಸಿನ ಒಳಗೆ ಅಥವಾ ಹೊರಗೆ, ಆ ದೇಶದ ಗಡಿಯೊಳಗೆ ಅಥವಾ ಹೊರಗೆ, ಈ ದೇಶದ ಆ ಭಾಗದಲ್ಲಿ ಅಥವಾ ಈ ಭಾಗದಲ್ಲಿ....... ಎಂದೆಲ್ಲ ಗಡಿಗಳನ್ನು, ಗೋಡೆಗಳನ್ನು ಕಾಣುತ್ತಲೊ, ಕಾಣದಂತಿರಲು ಕಲಿಯುತ್ತಲೊ ಇರುವುದು ಸಾಧ್ಯವೇ ಇದೆ. ಅದು ಅಸಾಧ್ಯವೇನೂ ಅಲ್ಲ. ಆದರೆ ಕಷ್ಟ. ತುಂಬ ಕಷ್ಟ. ಹೀಗೆ ಕಷ್ಟವಾಗಿರುವುದು ಮನುಷ್ಯನಿಂದ, ಅವನ ಕಾನೂನು, ನೀತಿ, ನಿಯಮ ಮುಂತಾದ ಹೆಸರುಗಳಲ್ಲಿ ಅವನ ಮೇಲೆ ಅವನೇ ಹೇರಿಕೊಂಡಿರುವ ಗಡಿ/ಗೋಡೆಗಳಿಂದ. ಇವುಗಳನ್ನೆಲ್ಲ ಕುಟ್ಟಿ ಕೆಡವಿ ಬತ್ತಲು ನಿಂತರೆ ಅವನು ಮತ್ತೆ ಮನುಷ್ಯನಾಗಲು ಸಾಧ್ಯವಿದೆಯೇನೋ ಎನಿಸಿದರೂ ಅದು ಪೂರ್ತಿ ನಿಜವೇನಲ್ಲ. ಬರ್ಲಿನ್ನಿನ ಗೋಡೆ ಕೆಡವಿದರೂ ಅದರಿಂದ ಅಂಥ ಪವಾಡವೇನೂ ಆಗಲಿಲ್ಲ ಎನ್ನುವುದನ್ನು ಪ್ರೊಫೆಸರ್ ಗಮನಿಸಿದ್ದಾನೆ.

ಒಮ್ಮೆ ನಡುರಾತ್ರಿ ಎಚ್ಚರಗೊಂಡ ಪ್ರೊಫೆಸರ್, ಉಚ್ಚೆಹೊಯ್ಯುವುದಕ್ಕೂ ಹೋಗದೆ, ಕತ್ತಲಲ್ಲಿ ಅದ್ದಿದಂತಿದ್ದ ತನ್ನದೇ ವಿಶಾಲವಾದ, ಜನವಾಸ್ತವ್ಯವಿಲ್ಲದೆ ಬಣಬಣಗುಡುವ ಖಾಲಿ ಮನೆಯ ತುಂಬ ಒಬ್ಬನೇ ಸುತ್ತುತ್ತಾನೆ. ಕೋಣೆಯಿಂದ ಕೋಣೆಗೆ ಹೋದಂತೆಲ್ಲ ಅವನಿಗೆ ‘ಇಲ್ಲದವರ’ ನೆನಪುಗಳು ಕಾಡತೊಡಗುತ್ತವೆ. ಅಂದರೆ, ಆ ಇಲ್ಲದವರೆಲ್ಲ ಅವನ ಬದುಕಿನಲ್ಲಿ, ಮನಸ್ಸಿನಲ್ಲಿ, ನೆನಪುಗಳಲ್ಲಿ ಅಸ್ತಿತ್ವ ಪಡೆದುಕೊಳ್ಳುತ್ತಾರೆ. ಭಾವುಕ ಹಂಬಲವಾಗಿ ಇದು ತೀವ್ರವಾದ ಸಂವೇದನೆಗಳಿಗೆ ಕಾರಣವಾಗಬಹುದಾದ, ಕಾಡಬಹುದಾದ, ಬದುಕಿನ ನಿರರ್ಥಕತೆ, ಅರ್ಥಹೀನ, ಉದ್ದೇಶ ಹೀನ ನಡೆಯ ಬಗ್ಗೆ ಕಂಗಾಲಾಗಿಸಬಹುದಾದ ಒಂದು ಅನುಭವವೇ. ಬಾಳ ಸಂಗಾತಿಯೊಂದಿಗೆ, ಮಕ್ಕಳು ಮರಿಗಳೊಂದಿಗೆ ಬಾಳಿ ಬದುಕಿದ ಮನೆಯಲ್ಲಿ ರಾತ್ರಿ ಹೊತ್ತಿನ ನೀರವದಲ್ಲಿ, ಕಗ್ಗತ್ತಲಲ್ಲಿ ಒಂಟಿಯಾಗಿ ಎದ್ದು ಕೂತು ಹಂಬಲಿಸಿದ ಅನುಭವ ನಿಮಗಿದ್ದರೆ, ಅದು ಸ್ಮಶಾನದಲ್ಲಿ ಒಂಟಿಯಾಗಿ ಕೂತಂತಿರುತ್ತದೆ ಎಂದು ಬಲ್ಲಿರಿ. ಇದು ಈ ಕಾದಂಬರಿಯ ಅತ್ಯಂತ ಪ್ರಮುಖ ಮತ್ತು ಕೇಂದ್ರ ಪ್ರತಿಮೆ ಎಂದು ನನಗನಿಸಿದೆ.

Last night—he now remembers—he woke up and instead of going to pee, he walked through every room in the house for no particular reason, not looking for anything. He walked through his house in the dark for no reason at all, as if strolling through a museum, as if he himself no longer belonged to it. As he passed among these pieces of furniture, some of which he’s known since childhood, his own life, room after room, suddenly appeared to him utterly foreign, utterly unknown, as if from a far-off galaxy. His tour ended in the kitchen. Ashamed, he remembers how he sat down on a kitchen chair and, without knowing why, began sobbing like a man condemned to exile. (ಪುಟ 91)

ತನ್ನವರನ್ನೆಲ್ಲಾ ಕಳೆದುಕೊಂಡು, ಅಥವಾ ಅವರಿಗೆ ಏನಾಯಿತು ಎನ್ನುವುದೇ ಗೊತ್ತಿಲ್ಲದ, ಗೊತ್ತು ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲದ ಒಂದು ಕಂಗಾಲಿನ ಸ್ಥಿತಿಯಲ್ಲಿ ಉಟ್ಟಬಟ್ಟೆಯಲ್ಲೇ ಓಡಿಬಂದಂತೆ ಗಡಿಯೊಳಗೆ ತೂರಿಕೊಂಡ ಈ ವಿದೇಶಿಗಳು ನಿರಾಶ್ರಿತರು. ಇವರಲ್ಲಿ ಕೆಲವರ ಹೆತ್ತವರನ್ನು ಕಣ್ಣೆದುರೇ ಕಡಿದು ಕೊಲ್ಲಲಾಗಿದೆ. ಕೆಲವರ ಪತ್ನಿಯಂದಿರು ಇನ್ನೆಲ್ಲೊ ಸಿಕ್ಕಿ ಕೊಂಡಿರುವುದು ಗೊತ್ತು, ಅಲ್ಲಿಂದ ಏನಾದರೂ ಗೊತ್ತಿಲ್ಲ. ಕೆಲವರು ತಮ್ಮ ಹಸುಗೂಸುಗಳು ಕಾಲ್ತುಳಿತಕ್ಕೆ ಸಿಲುಕಿಯೊ, ಮುಳುಗುವ ಹಡಗಿನಿಂದ ಬಚಾವಾಗಲಾರದೆಯೊ ಕಣ್ಣೆದುರೇ ಸತ್ತಿದ್ದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಇನ್ನು ಕೆಲವರಿಗೆ ಎಲ್ಲೆಲ್ಲೊ ಇದ್ದ ತಮ್ಮ ಹೆತ್ತವರೊ, ಸಂಗಾತಿಗಳೊ ಈಗ ಏನಾಗಿದ್ದಾರೆಂಬುದು ಗೊತ್ತೇ ಇಲ್ಲ. ಇಲ್ಲಿ ಈ ದೇಶದಲ್ಲಿ ರೆಕ್ಕೆ ಕಡಿದ ಹಕ್ಕಿಗಳಂತೆ ತುಪತುಪನೆ ಉದುರಿ ಬಿದ್ದಿದ್ದಾರೆ. ಈಗ ಈ ದೇಶದ ರಾಜಸತ್ತೆ, ಆಡಳಿತ, ಅಧಿಕಾರ, ಪೋಲೀಸು, ಸೇನೆ ಎಲ್ಲವೂ ಇವರಿಗೆ ಅನ್ನ ಕೊಡಬೇಕೆ, ಇರಗೊಡಬೇಕೆ, ಕೊಲ್ಲಬೇಕೆ, ಅಂಥ ಸಭ್ಯ ಮಾರ್ಗ ಯಾವುದಾದರೂ ಇದೆಯೆ, ಅನಾಗರಿಕ ಮಾರ್ಗವೇ ಗತಿಯಾದಲ್ಲಿ ಅದಕ್ಕೆ ತಕ್ಕ ಸಮರ್ಥನೆ ಒದಗಿಸಿಕೊಳ್ಳುವುದು ಹೇಗೆ, ದೇಶದಿಂದ ಆಚೆ ದಬ್ಬುವುದು ಹೇಗೆ ಎಂದೆಲ್ಲ ಮಂತ್ರಾಲೋಚನೆಯಲ್ಲಿ ತೊಡಗಿದೆ. ಇವರೆಲ್ಲ ತಮ್ಮಂತೆಯೇ ಇರುವುದನ್ನು ಕಂಡು, ಇವರೂ ಮನುಷ್ಯರೇ ಎನ್ನುವುದನ್ನು ಕಂಡು ಆಶ್ಚರ್ಯಚಕಿತರಾಗಿರುವ ಸಾಮಾನ್ಯ ಮಂದಿ ಇವರನ್ನು ನಿರಾಕರಿಸಲಾರದೆ, ಸ್ವೀಕರಿಸುವ ಧೈರ್ಯ, ಔದಾರ್ಯ, ಮಾನವೀಯತೆ ಎಲ್ಲಿ ದೇಶದ್ರೋಹಿ, ದೇಶ ವಿರೋಧಿ ಎಂದು ಪರಿಗಣಿಸಲ್ಪಡುವುದೋ ಎಂಬ ಭಯದಲ್ಲಿ ಸ್ವೀಕರಿಸಲಾರದೆ ಒದ್ದಾಡುತ್ತಿರುವಂತಿದೆ.

ಇವತ್ತಿನ ಮನುಷ್ಯ ನಿಜಕ್ಕೂ ಸ್ಮಶಾನದಲ್ಲಿ ಕುಳಿತು ತನ್ನಾಳದಲ್ಲಿ ಯಾವುದೋ ಒಂದು ಅಂತ್ಯವಿಲ್ಲದ ಅಳಲು, ತಳಮಳ ಹೊಯ್ದಾಡುತ್ತಿರುವುದನ್ನು ಕಂಡು ವಿಹ್ವಲಗೊಂಡಂತಿರುವುದು ಈ ಕಾರಣಕ್ಕೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಪ್ರತಿಯೊಂದಕ್ಕೂ ನಾವು ಕೂಡ ಜವಾಬ್ದಾರಿ. ಈ ಜಗತ್ತಿನ ಯಾವುದೋ ಒಂದು ಮೂಲೆಯಲ್ಲೆಲ್ಲೊ ಈ ಕ್ಷಣ ನಡೆಯುತ್ತಿರುವ ಯಾವುದೋ ಒಂದು ಪುಟ್ಟ ಸಂಗತಿಗೆ ಕೂಡ ಇಲ್ಲಿ ಕುಳಿತ ನನ್ನ ಅಸ್ತಿತ್ವದ ಋಣವಿದೆ. ಮತ್ತು ಈ ಅಸ್ತಿತ್ವ ಎನ್ನುವುದರ ಬಗ್ಗೆ ಹೇಳಿಯಾಗಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, August 11, 2018

ಮಧುವನ ಕರೆದರೇ....ತನುಮನ ಸೆಳೆದರೇ...

ಮಾರ್ಕೆಸ್ ತನ್ನ ಆತ್ಮಕತೆಯ ಪುಸ್ತಕ `ಲಿವಿಂಗ್ ಟು ಟೆಲ್ ದ ಟೇಲ್' ಕೃತಿಯ ಮೊದಲಿಗೆ ಒಂದು ಮಾತನ್ನು ಹೇಳುತ್ತಾನೆ. ಈ ಬದುಕನ್ನು ಗ್ರಹಿಸುವುದಕ್ಕಾಗಿ ನಾವು ಏನನ್ನು ಮತ್ತು ಹೇಗೆ ಅದನ್ನು ನೆನಪಿಸಿಕೊಳ್ಳುತ್ತೇವೆ ಎನ್ನುವುದೇ ಬದುಕು ಎಂಬರ್ಥದ ಮಾತದು. ನಮಗೆ ಬೇಕಾಗಿಯೊ ಬೇಡವಾಗಿಯೊ ಬದುಕಿನ ಬೇರೆ ಬೇರೆ ಹಂತದಲ್ಲಿ, ವಯಸ್ಸಿನಲ್ಲಿ, ಕಾಲಮಾನದಲ್ಲಿ, ಪರಿಸ್ಥಿತಿಯಲ್ಲಿ, ಮನಸ್ಥಿತಿಯಲ್ಲಿ ನಮಗೆ ನಮ್ಮ ಬದುಕಿನ ಯಾವುಯಾವುದೋ ನೆನಪುಗಳು ಮುತ್ತಿಕೊಳ್ಳುತ್ತವೆ. ಅವು ಒಂದಕ್ಕೊಂದು ಕನೆಕ್ಟ್ ಆಗುವ ಬಗೆಯಲ್ಲೇ ಏನೇನೋ ಅರ್ಥ ಸ್ಫುರಿಸುತ್ತವೆ. ಯಾವುದು ಇನ್ಯಾವುದರೊಂದಿಗೆ ಹೇಗೆ ಕನೆಕ್ಟ್ ಆಗುತ್ತೋ, ಯಾವಾಗ ಆಗುತ್ತೋ ಎನ್ನುವುದೆಲ್ಲ ಒಂದು ಸೋಜಿಗ. ಬರೆಯುವ ಕಾಯಕದಲ್ಲಿ ತೊಡಗಿರುವ ಮಂದಿಗೆ ಗತವನ್ನು ಮತ್ತೆ ಮತ್ತೆ ಅಗೆಯುವ ಗೀಳು ಹೆಚ್ಚು. ಅವರು ವರ್ತಮಾನದಲ್ಲಿ ಬದುಕುವುದಕ್ಕಿಂತ ಭೂತದಲ್ಲೇ ಬದುಕುವುದು ಹೆಚ್ಚು. ಹಾಗಾಗಿ ಅವರ ಭೂತವಂತೂ ವಾಸ್ತವ, ಭ್ರಮೆ, ಕಲ್ಪನೆ, ಕನಸುಗಳೊಂದಿಗೆಲ್ಲ ಕನೆಕ್ಟ್ ಆಗುತ್ತಿರುತ್ತದೆ ಮತ್ತು ಚಿತ್ರವಿಚಿತ್ರ ಅರ್ಥ, ದರ್ಶನ, ಒಳನೋಟಗಳನ್ನೆಲ್ಲ ಸ್ಫುರಿಸುತ್ತಿರುತ್ತದೆ. ಅದಕ್ಕೇ ಹೇಳುತ್ತಾರಲ್ಲ, ಒಬ್ಬ ಬರಹಗಾರ ಹಲವು ಬದುಕುಗಳನ್ನ ಬದುಕುತ್ತಿರುತ್ತಾನೆ ಎಂದು! ಅದೊಂಥರಾ ಹುಚ್ಚುಮನಸ್ಸಿನ ಹತ್ತು ಮುಖಗಳಿದ್ದ ಹಾಗೆನ್ನಿ!

ಅಂತೂ ನೆನಪಿಸಿಕೊಳ್ಳುವುದು, ದಾಖಲಿಸುವುದು ಇತ್ಯಾದಿ ಒಟ್ಟಾರೆಯಾಗಿ ದಕ್ಕಿಸುವುದು ಏನನ್ನು ಎನ್ನುವುದರ ಮೇಲೆ ಒಂದು ಕೃತಿಯನ್ನು ಓದುಗ ಇದು ಹೀಗಿದೆ ಎಂದು ತೀರ್ಮಾನಿಸುತ್ತಾನೆ. ಅದು ಕೃತಿಕಾರನಿಗೆ ಕೊಟ್ಟಿದ್ದೆಷ್ಟು ಬಿಟ್ಟಿದ್ದೆಷ್ಟು ಎನ್ನುವುದು ಓದುಗನಿಗೆ ಅಷ್ಟು ಮುಖ್ಯವಾಗುವುದಿಲ್ಲ. ತನಗೆಷ್ಟು ಕೊಟ್ಟಿತು, ಬಿಟ್ಟಿತು ಎನ್ನುವುದರೊಂದಿಗೆ ಓದುಗ/ವಿಮರ್ಶಕ ನಿಲ್ಲುತ್ತಾನೆ.

ಅಲೆಹಾಂಡ್ರಾ ಝಾಂಬ್ರಾನ ಕಾದಂಬರಿ Ways of Going Home ಕೃತಿಯನ್ನು ನಾವು ಹಲವು ಸ್ತರಗಳಲ್ಲಿ ದಕ್ಕಿಸಿಕೊಳ್ಳಲು ಪ್ರಯತ್ನಿಸುವುದು ಸೂಕ್ತ. ಕಾದಂಬರಿಯ ಮೊದಲಿಗೆ ಒಂದು ಮಾತಿದೆ, ವಾಲ್ಟರ್ ಬೆಂಜಮಿನ್ನನ ಮಾತು. Now I know how to walk; I can no longer learn to walk. ಇದನ್ನು ನಡಿಗೆಗೆ ಅನ್ವಯಿಸುವುದಕ್ಕಿಂತ ಅಕ್ಷರಮಾಲೆಯ ಅಭ್ಯಾಸಕ್ಕೆ ಅನ್ವಯಿಸಿ ಹೇಳಿದರೆ ಹೆಚ್ಚು ಸ್ಪಷ್ಟವಾಗುತ್ತದೆ. ಇದನ್ನು ಓದುತ್ತಿರುವ ನಮಗ್ಯಾರಿಗೂ ಇನ್ನೊಮ್ಮೆ ಮೊತ್ತಮೊದಲ ಬಾರಿ `ಅ' ಎಂಬ ಅಕ್ಷರವನ್ನು ಸ್ಲೇಟಿನ ಮೇಲೆ ತಿದ್ದುವಾಗ ಸಿಕ್ಕಿದ ಖುಶಿ ಸಿಗುವುದು ಸಾಧ್ಯವಿಲ್ಲ ಅಲ್ಲವೆ? ಹಾಗೆ ಇದು. ಏನೇ ಮಾಡಿದರೂ ನಾವು ಮತ್ತೊಮ್ಮೆ ಎಬಿಸಿಡಿ ಕಲಿಯಲಾರೆವು!


ಐದಾರು ವರ್ಷದ ಹುಡುಗ ಒಮ್ಮೆ ಹೆತ್ತವರ ಕಣ್ತಪ್ಪಿ ಕಳೆದು ಹೋಗುತ್ತಾನೆ. ತಂದೆ ತಾಯಿ ತಾವು ಬಂದ ಹಾದಿಯ ಗುಂಟ ಹುಡುಕುತ್ತ ಹೋದರೆ ಹುಡುಗ ಬೇರೊಂದು ಹಾದಿ ಹುಡುಕಿಕೊಂಡು ಮನೆ ತಲುಪುತ್ತಾನೆ. ಅಂದರೆ, ಈ ಹುಡುಗ ಇನ್ನೆಂದೂ ಮನೆಯ ದಾರಿ ತಪ್ಪುವ ಸಂಭವ ಇಲ್ಲ ಎನ್ನುವುದನ್ನು ಹೆತ್ತವರು ಕಂಡುಕೊಳ್ಳುತ್ತಾರೆ. ಎಷ್ಟೋ ಮನೆಗಳಲ್ಲಿ ನಡೆದಿರಬಹುದಾದ ಈ ಒಂದು ಘಟನೆ ಇಲ್ಲಿ ರೂಪಕವಾಗುತ್ತದೆ. ಮನೆಗೆ ಮರಳುವುದು ಎನ್ನುವುದಕ್ಕೆ ಹಲವು ಅರ್ಥಗಳಿವೆ, ಅಲ್ಲವೆ? ಮರಳಿ ಮಣ್ಣಿಗೆ ಎನ್ನುವುದನ್ನು ಕಾರಂತರ ಅರ್ಥದಲ್ಲೂ ಹೇಳಬಹುದು, ಮರಳಿ ಮಣ್ಣು ತಿನ್ನುವುದಕ್ಕೇ ಹೋದ ಎನ್ನುವ ಅರ್ಥದಲ್ಲೂ ಹೇಳಬಹುದು. ಮರಳಿಗೂಡಿಗೆ ಎಂದರೆ ಚಂದ, ಮರಳಿ ತವರಿಗೆ ಎಂದರೆ ಅಪಾರ್ಥ. ಚೆಕ್ ರಿಟರ್ನ್ ಆದರೆ ಅವಮಾನ, ಕಳೆದಿದ್ದು ವಾಪಾಸು ಸಿಕ್ಕಿದರೆ ಸಂತೋಷ. ಹಾಗೆಯೇ ನಮಗೆ ಅಭ್ಯಾಸವಾಗಿರುವುದಕ್ಕೆ ಹೊರತಾದ ಪರ್ಯಾಯ ಮಾರ್ಗವೊಂದು ಇರುತ್ತದೆ ಎನ್ನುವುದರ ಅರಿವು, ಶೋಧ, ಅನಿರೀಕ್ಷಿತ ಯಶಸ್ಸು ಕೊಡುವ ಆಘಾತ ಕೂಡ.

ಈ ಕಾದಂಬರಿಯ ನಿರೂಪಕ ಒಂದು ಕಾದಂಬರಿಯನ್ನು ಬರೆಯುತ್ತಿದ್ದಾನೆ ಮತ್ತು ಅದರಲ್ಲಿ ಸ್ವತಃ ಅವನೂ ಇದ್ದಾನೆ, ಆತ ಅಲೆಹಾಂಡ್ರಾ ಝಾಂಬ್ರಾ ಎಂದು ನಾನು ನಿಮಗೆ ಹೇಳುತ್ತೇನೆ. ಏಕೆಂದರೆ, ಅಲೆಹಾಂಡ್ರಾ ಝಾಂಬ್ರಾನ ಈ ಕಾದಂಬರಿಯ ನಿರೂಪಕ (ಕಾದಂಬರಿಯೊಳಗಿನ ಕಾದಂಬರಿಯ ನಿರೂಪಕನಲ್ಲ) ಮೇಡಮ್ ಬೌರಿಯ ಬಗ್ಗೆ ಬರೆದಿರುವುದೆಲ್ಲ ಅಲೆಹಾಂಡ್ರಾ ಝಾಂಬ್ರಾನ ಲೇಖನ ಸಂಗ್ರಹ Not to Read ಕೃತಿಯಲ್ಲೂ ಇರುವುದರಿಂದ! ಸೊ, ನಾವು ಅಲೆಹಾಂಡ್ರಾ ಝಾಂಬ್ರಾ, Way of Going Home ನ ನಿರೂಪಕ ಮತ್ತು ಅದರೊಳಗಿನ ಕಾದಂಬರಿಯ ನಿರೂಪಕರ ನಡುವೆ ಸ್ವಲ್ಪ ಕಳೆದು ಹೋದಂತಾದರೂ ಯಾವುದೋ ಹಾದಿ ಹುಡುಕಿಕೊಂಡಾದರೂ ಮರಳಿ ಮನೆಗೆ ಬರಬೇಕಾದ್ದು ಅನಿವಾರ್ಯ.

ನಮ್ಮ ಕಾದಂಬರಿಯ ನಿರೂಪಕನ ಮಡದಿ, ಸದ್ಯ ಅವನಿಂದ ದೂರವಿರುವಾಕೆ Eme. ಕಾದಂಬರಿ ಇವಳ ಕುರಿತಾಗಿದೆ ಎನ್ನುವ ನಿರೂಪಕ ತನ್ನ ಕಾದಂಬರಿಯಲ್ಲಿ Emeಯ ಪಾತ್ರವನ್ನು ಕ್ಲಾಡಿಯಾ ಎಂಬ ಹುಡುಗಿಯನ್ನಾಗಿ ಚಿತ್ರಿಸುತ್ತ ಹೋಗುತ್ತಾನೆ. ಮಾತ್ರವಲ್ಲ, Eme ಈ ಕಾದಂಬರಿಯನ್ನು ಓದಬೇಕು, ಓದಿ ಆ ಬಗ್ಗೆ ಮಾತನಾಡಬೇಕೆಂದು ಬಯಸುವ ನಮ್ಮ ಕಾದಂಬರಿಯ ನಿರೂಪಕ, ತನ್ನ ಕಾದಂಬರಿಯ ಪಾತ್ರವನ್ನು ಕ್ಲಾಡಿಯಾ ಜೊತೆ ಸ್ವತಂತ್ರವಾಗಿ ಬಿಟ್ಟಿರುವ ರೀತಿಯಿಂದಲೇ Eme ತನ್ನನ್ನು ಅರ್ಥಮಾಡಿಕೊಳ್ಳಬೇಕು, ಮತ್ತೆ ಸಹಜೀವನಕ್ಕೆ ಮನಸಾ ತಯಾರಾಗಬೇಕೆಂದು ಬಯಸುತ್ತಿರಬಹುದು. ಆದರೆ ಆತ ಬರೆಯುತ್ತಿರುವ ಕಾದಂಬರಿ ಕೇವಲ Eme ಯನ್ನು ‘ಮರಳಿ ಮನೆಗೆ ಬರುವುದಕ್ಕೆ’ ಸಿದ್ಧಪಡಿಸುವುದಕ್ಕಾಗಿ ಬರೆದಿರುವ ಕೃತಿಯಂತೆ ಇಲ್ಲ. ಅದು ಚಿಲಿ ದೇಶ ಎದುರಿಸಿದ ಸರ್ವಾಧಿಕಾರಿ ಧೋರಣೆಯ Pinochet ಕಾಲಾವಧಿಯ ಕ್ರಾಂತಿಕಾರಿಗಳ ಕುರಿತಾಗಿಯೂ ಇದೆ, ಸಹಜವಾಗಿಯೇ ಆಗ ಶೈಶವಾವಸ್ಥೆಯಲ್ಲಿದ್ದ ನಿರೂಪಕನ ಬಾಲ್ಯದ ಕುರಿತಾಗಿಯೂ ಇದೆ ಮತ್ತು ಇದರಿಂದಾಗಿ ಇದು ಅವನ ತಂದೆ-ತಾಯಿಯ ಕುರಿತಾಗಿಯೂ ಇದೆ. ಹಾಗಾಗಿ ಇದು ಲವ್‌ಸ್ಟೋರಿ ಅಲ್ಲ. ರಾಜಕೀಯ ಕಾದಂಬರಿಯೂ ಅಲ್ಲ. ಬಾಲ್ಯದ ನಾಸ್ಟಾಲ್ಜಿಯಾ ಕೂಡ ಇಲ್ಲಿನ ವಸ್ತುವಲ್ಲ. ಹಾಗಿದ್ದೂ ಈ ಮೂರನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡೇ ಸಾಗುವ ಕಾದಂಬರಿಯಲ್ಲಿ ನಿರೂಪಕ, ಅವನ ಕಾದಂಬರಿ ಮತ್ತು ಅವನ ಕಾದಂಬರಿಯ ನಿರೂಪಕ - ಮೂರು ಸ್ತರದ ಕತೆ ಕೂಡ ಮುಖ್ಯ ಅಥವಾ ಈ ನಡುವಣ ಗೊಂದಲ ಕೂಡ ಮುಖ್ಯ! ಇಲ್ಲಿ ಒಂದು ದೇಶ ಕೂಡ ತನ್ನದೇ ‘ಮನೆಗೆ’ ಮರಳುವ, ಮರಳಲು ಪ್ರಯತ್ನಿಸುವ ಕಥಾನಕ ಕೂಡ ಇದೆ ಎನ್ನುವುದು ನಿಜ.

ಇಲ್ಲಿಯೇ ಹೇಳಬೇಕಾದ ಇನ್ನೊಂದು ಮುಖ್ಯವಾದ ಆಯಾಮ ಇದೆ. ಕಾದಂಬರಿಯೊಳಗಿನ ಕಾದಂಬರಿಯ ಪ್ರಧಾನ ಪಾತ್ರ ಕ್ಲಾಡಿಯಾಳ ತಂದೆ ಒಬ್ಬ ರಾಜಕೀಯ ಕ್ರಾಂತಿಕಾರಿ. ಈತ ಒಂದು ಹಂತದಲ್ಲಿ ಸರ್ವಾಧಿಕಾರದ ದಮನಕಾರಿ ಕಾರ್ಯಾಚರಣೆಗೆ ಬಲಿಯಾಗದಂತೆ ತಪ್ಪಿಸಿಕೊಳ್ಳಲು ತನ್ನ ಭಾವನ ವೇಷದಲ್ಲಿ ಭೂಗತನಾಗಿ ಬದುಕುವ ನಿರ್ಧಾರಕ್ಕೆ ಬರುತ್ತಾನೆ. ಭಾವನಾದವ ತನ್ನ ತಂಗಿಯ ಗಂಡನಿಗಾಗಿ ಕದ್ದುಮುಚ್ಚಿ ದೇಶ ಬಿಟ್ಟು ಹೋಗುತ್ತಾನೆ ಮತ್ತು ಭಾವನೆಂಟ ತಾನೇ ಭಾವನಂತೆ ವೇಷ ಧರಿಸಿ ಅವನ ಹೆಸರಿನಲ್ಲಿ ಬದುಕುತ್ತಾನೆ. ಹೆಂಡತಿಯನ್ನು ತಂಗಿ ಎಂದೂ ಮಗಳನ್ನು ತಂಗಿಯ ಮಗಳೆಂದೂ ಪರಿಚಯಿಸಿ ಬೇರೊಂದು ಊರಿನಲ್ಲಿ ನೆಲೆಯಾಗುತ್ತಾನೆ. ಮುಂದೆ, ಸರ್ವಾಧಿಕಾರದ ಕೊನೆಯಾದ ಬಳಿಕ ಭಾವ ಮರಳಿ ಬರುವ ದೃಶ್ಯದ ನಾಟಕವೂ ನಡೆಯುತ್ತದೆ. ಇಲ್ಲಿ ಕೂಡ Ways of Going Home ಇರುವುದನ್ನು ಗಮನಿಸಿ. ಒಟ್ಟಾರೆಯಾಗಿ ಇಲ್ಲಿ ಹೆಸರುಗಳು ಅದಲು ಬದಲಾಗುತ್ತಿವೆಯೇ, ವ್ಯಕ್ತಿಗಳೇ ಎನ್ನುವುದು ಒಂದು ಜಿಜ್ಞಾಸೆ; ಮನುಷ್ಯನ ಅಸ್ಮಿತೆ ದೇಹದ್ದೆ, ಅವನ ಹೆಸರಿನದ್ದೆ ಎನ್ನುವ ನೆಲೆಯಲ್ಲಿ.

ಮೊದಲೇ ಹೇಳಿರುವಂತೆ ಇದು ಅಪ್ಪ-ಮಕ್ಕಳ ಕತೆ ಕೂಡ ಹೌದು. ಈ ಅಪ್ಪ ಮಕ್ಕಳ ಸಂಬಂಧದಲ್ಲಿ ಪ್ರೀತಿ-ಭಾವುಕತೆ ಇರುವಂತೆಯೇ ರಾಜಕೀಯದ ಬಲೆ ಕೂಡ ಇರುವುದು ವಿಚಿತ್ರವಾದರೂ ನಿಜ. ಒಂದೆಡೆ ಕಾದಂಬರಿಯನ್ನು ಬರೆಯುತ್ತಿರುವ ನಮ್ಮ ನಿರೂಪಕ ತಂದೆಯೊಡನೆ ಚರ್ಚೆಗಿಳಿಯುತ್ತಾನೆ. ಸರ್ವಾಧಿಕಾರದ ವಿರುದ್ಧ ಮಾತನಾಡದೇ ಉಳಿಯುವ ಮಂದಿಗೆ ತಾವು ಅದರ ಪರವಾಗಿಯೂ ಇರಲಿಲ್ಲ, ವಿರುದ್ಧವಾಗಿಯೂ ಇರಲಿಲ್ಲ ಎನ್ನಲು ಸಾಧ್ಯವಿಲ್ಲ. ನೀವು ಒಂದೋ ಅದನ್ನು ಬೆಂಬಲಿಸುತ್ತಿದ್ದೀರಿ ಅಥವಾ ವಿರೋಧಿಸುತ್ತೀರಿ ಅಷ್ಟೆ. ವಿರೋಧಿಸಿದವರನ್ನು ನೀವು ತುಚ್ಛವಾಗಿ ಕಾಣುವುದೆಂದರೆ ನೀವು ಸರ್ವಾಧಿಕಾರವನ್ನು ಬೆಂಬಲಿಸುತ್ತಿದ್ದೀರಿ ಎಂದರ್ಥ. ವಾದದ ನೆಲೆಯಲ್ಲಿ ಇದೆಲ್ಲ ಹೌದು ಅನಿಸಿದರೂ ಇಲ್ಲಿ ಅಪ್ಪನ ಪಾತ್ರ ಅಷ್ಟು ಸರಳವಿಲ್ಲ ಎನಿಸುತ್ತದೆ. ಕ್ರಾಂತಿಕಾರಿಯಾಗಿ ಕ್ಲಾಡಿಯಾಳ ಅಪ್ಪ ಮಾಡಿದ್ದು ಕೂಡ ವೀರೋಚಿತ ಕೃತ್ಯವಲ್ಲದಿದ್ದರೂ ಕ್ರಾಂತಿಯ ಸಫಲತೆಗೆ ಅದು ಅಗತ್ಯವಾಗಿತ್ತು ಎನ್ನುವುದಾದರೆ, ಸರ್ವಾಧಿಕಾರದ ಅಂತ್ಯವನ್ನೇ ಬಯಸಿ ತೆಪ್ಪಗಿದ್ದವರು ಕೂಡ ತೆಪ್ಪಗಿದ್ದರು ಎಂಬ ಒಂದೇ ಕಾರಣಕ್ಕೆ ಅದರ ಬೆಂಬಲಿಗರು ಎನ್ನುವುದು ಕಷ್ಟ ಎನ್ನುವುದನ್ನು ಒಪ್ಪಬೇಕಾಗುತ್ತದೆ. ಮಥುರಾ ನಗರವನ್ನು ವೈರಿಗಳು ಗೆದ್ದ ಹುಮ್ಮಸ್ಸಿನಲ್ಲಿ ಹಾಳುಗೆಡಹುವುದನ್ನು ತಪ್ಪಿಸುವುದಕ್ಕಾಗಿಯೇ ಶ್ರೀಕೃಷ್ಣ ಅದನ್ನು ಬಿಟ್ಟುಕೊಟ್ಟು ಸುಮ್ಮನೇ ದ್ವಾರಕೆಯನ್ನು ನಿರ್ಮಿಸಿಕೊಂಡು ತನ್ನ ಪಾಡಿಗೆ ತಾನು ತನ್ನ ಪ್ರಜೆಗಳೊಂದಿಗೆ ಅಲ್ಲಿ ನೆಲೆಯಾಗಲಿಲ್ಲವೆ? ಹಾಗೆಂದು ಜರಾಸಂಧನನ್ನು ಬಿಟ್ಟುಬಿಟ್ಟನೆ!

ಮನುಷ್ಯ ಸಂಬಂಧಗಳು ವಿಚಿತ್ರ. ಆದರೆ ಸಂಬಂಧಗಳಿಗೆ ಹುಟ್ಟು ಮಾತ್ರ ಇರುತ್ತದೆ ಎನ್ನುವುದು ಕೂಡ ವಿಚಿತ್ರ. ಅಂದರೆ, ನಾವು ಪರಸ್ಪರ ಸಂಬಂಧಿಗಳು ಎನ್ನುವುದನ್ನು ಕಂಡುಕೊಳ್ಳುತ್ತೇವಲ್ಲ, ಅದನ್ನು ಹುಟ್ಟು ಎನ್ನಬಹುದಾದರೆ, ಸಂಬಂಧಗಳಿಗೆ ಹುಟ್ಟು ಮಾತ್ರ ಇರುತ್ತದೆ. ನಾವು ಭೌತಿಕವಾಗಿ ಪರಸ್ಪರ ದೂರವಾಗಬಹುದು, ಆದರೆ ಒಬ್ಬ ವ್ಯಕ್ತಿಯನ್ನು ಮನಸ್ಸಿನಿಂದ ಕಿತ್ತು ಹಾಕುವುದು ಯಾರಿಗೂ ಸಾಧ್ಯವಿಲ್ಲ. ಅಂದರೆ ನೆನಪುಗಳಿಗೆ ಸಾವೆಂಬುದಿಲ್ಲ. ನಾವು ನಮ್ಮ ನಮ್ಮ ನೆನಪುಗಳನ್ನು ಯಾವ ಕ್ರಮದಲ್ಲಿ ನೆನಪಿಸಿಕೊಳ್ಳುತ್ತೇವೆ ಮತ್ತು ದಾಖಲಿಸುತ್ತೇವೆ ಎನ್ನುವ ಆಧಾರದಲ್ಲಿ ಒಂದು ಕೃತಿ ರಚನೆಯಾಗುತ್ತದೆ ಎನ್ನುವ ತತ್ವವನ್ನೇ ಒಪ್ಪಿಕೊಳ್ಳುವ ಇಲ್ಲಿನ ಕೃತಿಯೊಳಗಿನ ಕಾದಂಬರಿಕಾರ ತುಂಡು ತುಂಡು ನೆನಪುಗಳೇ ನಿಜ ಅರ್ಥದಲ್ಲಿ ಒಂದು ಕೃತಿಯ ಆತ್ಮ ಎಂದೂ ಕಂಡುಕೊಳ್ಳುತ್ತಾನೆ. ಅದೇ ಅರ್ಥದಲ್ಲಿ ಸಂಬಂಧಗಳಿಗೆ ಸಾವು ಎನ್ನುವುದೇ ಇಲ್ಲ. ಆದರೆ ದೂರವಾದ ಸಂಬಂಧಗಳು ಮತ್ತೆ ದುಂಡಗಿನ ಈ ಜಗತ್ತಿನಲ್ಲಿ ಪರಸ್ಪರ ಸಂಧಿಸಬೇಕೆ? ಹಾಗೆ ಸಂಧಿಸದೇ ಇರುವುದು ಸರಿಯೆ ಅಥವಾ ಸಂಧಿಸುವುದು ಸರಿಯೆ? ಭೌತಿಕವಾಗಿ ಸಂಧಿಸದಿದ್ದರೂ ನೆನಪುಗಳಲ್ಲಿ, ಕಲ್ಪನೆಯಲ್ಲಿ, ಕನಸಿನಲ್ಲಿ ಸಂಧಿಸುವುದು ತಪ್ಪುವುದೆ? ಕಥೆ, ಕಾದಂಬರಿಗಳಲ್ಲಿ ಅವು ಮತ್ತೆ ಸಂಧಿಸುತ್ತವೆ, ಅವರ ನಡುವೆ ಮತ್ತೊಮ್ಮೆ ಸಂಬಂಧ ಕುದುರುತ್ತದೆ. ಬದುಕಿನಲ್ಲಿ ಹಾಗೆ ಆಗುತ್ತದೆಯೆ? ಇದು ಕಾದಂಬರಿಯಲ್ಲಿ ಪ್ರಶ್ನೆಯಾಗಿಯೇ ಉಳಿದುಬಿಡುವ ಒಂದು ಅಂಶ. ಇದಕ್ಕೂ ಮನೆಗೆ ಮರಳುವ ಹಾದಿಯ ಒಂದಾನೊಂದು ಕವಲೇ.

ಹುಡುಕುತ್ತ ಹೋದರೆ ನಿಮಗೆ ಇಂಥ ಇನ್ನಷ್ಟು ಗೊಂಡೆ ಕಟ್ಟಬಹುದಾದ ಕುಚ್ಚುಗಳು ಸಿಕ್ಕಿಯೇ ಸಿಗುತ್ತವೆ. ಹಾಗೆ ಗೊಂಡೆ ಕಟ್ಟದೇ ಬಿಟ್ಟ ಹತ್ತು ಹಲವು ಕುಚ್ಚುಗಳ ನೇಯ್ಗೆ ಇದು, Ways of Going Home.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ