Friday, March 30, 2018

ಅಲ್ಲೊಂದು ಚೂರು ಇಲ್ಲೊಂದು ಚೂರು...

ಒಂದು ದಿನ ನಾನು ಕಾಲೇಜಿನಲ್ಲಿ ಯಾವುದೋ ಭಾಷಣ ಮಾಡುತ್ತಿದ್ದೆ. ಯಾರದೋ ಪ್ರಸಿದ್ಧ ಭಾವಭಂಗಿ, ಅಲ್ಲಿ ಇಲ್ಲಿ ಕದ್ದು ಪೋಣಿಸಿಕೊಂಡಿದ್ದ ನುಡಿಮುತ್ತುಗಳು.....ಸುತ್ತ ನನ್ನ ಅಭಿಮಾನೀ ಸಹಪಾಠಿಗಳು, ಮುಖ್ಯವಾಗಿ ಹುಡುಗಿಯರು. ಆಗ, ಅಚಾನಕವಾಗಿ ಅವನನ್ನು ನೋಡಿದ್ದೆ. ಯಾರೋ ಕೊಳಕು ಹುಡುಗ. ಹೋಟೆಲಿನವನಿರಬೇಕು ಎನಿಸಿತು, ಆಕ್ಷಣಕ್ಕೆ. ಈಗ ಎಲ್ಲ ನೆನಪುಗಳ ಮಹಾಪೂರವೇ ಅಲೆಅಲೆಯಾಗಿ ಪ್ರವಹಿಸುವಂತೆ ಮಾಡುವ ಆ ಹುಡುಗ ಒಳಗೂ ಹೊರಗೂ ಸರಳನಾಗಿದ್ದ. ಗಿಮ್ಮಿಕ್‌ಗಳು, ನಾಟಕೀಯ ಚಲನೆಗಳು ತಿಳಿದಿರದವ. ಬೆಳೆದಂತೆಲ್ಲ ತಾನು ತನ್ನದೇ ಅಂತರಂಗದೊಳಗೆ unfit animal ಆಗಿ ಬೆಳೆಯಬಲ್ಲ ಲಕ್ಷಣಗಳನ್ನು ಆ ಪೆದ್ದು ನಗೆಯಲ್ಲಿ, ಸಂಕೋಚದ ಮುದ್ದೆಯಂತಿದ್ದ ಆ ಮುಖದಲ್ಲಿ, ಕೊರಳಲ್ಲಿದ್ದ ಮಾಸಿದ ಕಾಶೀದಾರದಲ್ಲಿ, ಹಳೆಯ ಅಂಗಿ ಮತ್ತು ಖಾಕಿ ಚಡ್ಡಿಯಲ್ಲಿ ಹಾಗೂ ಆ ಚಡ್ಡಿಯ ಕಾಲುಗಳಿಂದ ಹೊರಬಂದ ಸೊಟ್ಟ ಕಾಲುಗಳನ್ನಿಟ್ಟ ರೀತಿಯಲ್ಲಿ - ಇವನ್ನೆಲ್ಲ ಯಾರಿಗೂ ಗೊತ್ತಾಗದಂತೆ ಅಡಗಿಸಿಟ್ಟುಕೊಳ್ಳಬೇಕು ತನ್ನಲ್ಲೆ ಎಂಬ ನಾಗರಿಕ ಪ್ರಜ್ಞೆಯೇ ಇಲ್ಲದೆ - ಬದಲಾಗಿ ಈ ಬೆದರುಗೊಂಬೆಯ ವೇಷವನ್ನು ಜಗತ್ತಿಗೇ ಸಾರುವವನ ಹಾಗೆ ಎಲ್ಲರಿಗಿಂತ ಮುಂದೆ ನಿಂತು ನನ್ನನ್ನೇ ನೋಡುತ್ತ ನಗುತ್ತಿದ್ದ, ಗೊಗ್ಗರು ಹಲ್ಲುಗಳನ್ನು ತೋರಿಸುತ್ತ. ಕೊನೆಗೂ ಆ ಹುಲ್ಲುಗಳನ್ನೇ ನೋಡುತ್ತ ಮಾತು ಮುಂದುವರಿಸಿದ್ದ ನನಗೆ ಹೊಳೆಯಿತು, ಆ ಹುಡುಗ ನಾನೇ ಆಗಿದ್ದೆ!

ಎಂಥ ಆಘಾತ! ಫಕ್ಕನೆ ಎಚ್ಚರವಾಗಿತ್ತು ನನಗೆ. ಆಗಿನ್ನೂ ಮುಂಜಾವದ ನಾಲ್ಕುಗಂಟೆ. ನನ್ನೊಳಗೇ ನಾನು ಭಾಷಣ ಮಾಡಿಕೊಳ್ಳುತ್ತ ಬೆಳೆಸಿಕೊಂಡಿದ್ದ ಢಾಂಬಿಕತೆಯನ್ನು ಇದಕ್ಕಿಂತ ತೀಕ್ಷ್ಣವಾಗಿ ವಿಡಂಬಿಸಬಲ್ಲ ಇನ್ನೊಂದು ಪ್ರತಿಮೆ ಸಾಧ್ಯವಿಲ್ಲದ ಹಾಗೆ ಕನಸು ನನ್ನನ್ನು ಕಂಡು ಕೇಕೇ ಹಾಕಿ ನಕ್ಕಿರಬಹುದು. ನನಗೆ ತುಂಬ ಅವಮಾನವಾಗಿತ್ತು. ಆನಂತರ ನಾನು ಭಾಷಣ ಮಾಡುವುದನ್ನು ಬಿಟ್ಟುಬಿಟ್ಟೆ.


ಮೇಲಾಗಿ, ಆನಂತರದ ದಿನಗಳಲ್ಲಿ ಆ ಹುಡುಗ ನನ್ನನ್ನು ಬಿಡಲಿಲ್ಲ. ಆಗಾಗ ನಾನೇ ಅವನನ್ನು ಭೇಟಿ ಮಾಡುವುದು ಸುರುವಾಯ್ತು. ಹೀಗೆ ಕಡಲಿನ ಎದುರು ದಟ್ಟವಾಗುತ್ತ ಹೋಗುವ ಕತ್ತಲೆಯಲ್ಲಿ, ಸಮುದ್ರದ ನೀರು ಕೂಡಾ ಕಪ್ಪಾಗುತ್ತ ನಿಗೂಢತೆಯನ್ನು ಒಳಗೂ ಹೊರಗೂ ಉಕ್ಕಿಸತೊಡಗುವಾಗ ನಾನು ನನ್ನ ಗರ್ಭದೊಳಗೆ ಬೆಳೆಯತೊಡಗುತ್ತಿದ್ದೆ. ಅಲ್ಲಿ ಆ ವಿಚಿತ್ರ ಸನ್ನಿವೇಶದಲ್ಲಿ, ಕೈಯಲ್ಲಿ ಸಿಗರೇಟ್ ಇಲ್ಲದಿದ್ದರೂ ಇದ್ದ ಹಾಗೆ. ಬಿಯರ್ ಕುಡಿಯುತ್ತಿರುವ ಹಾಗೆ, ಗುಟುಕು ಗುಟುಕಾಗಿ...... ಏನೋ ಆತಂಕ, ಭಯ, ಆಳದಲ್ಲಿ ತಮ್ಮಟೆ ಬಡಿಯುತ್ತಿರುವ ಹಾಗೆ.... (ಡಿಸೆಂಬರ್ 1997)

ಚಿಂತಾಮಣಿಯಲ್ಲಿ ಕಂಡ ಮುಖ
ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣಮಗ್ನ
ಮನಸ್ಸು, ಮನಸ್ಸಿನ ಶೇಕಡಾ ತೊಂಭತ್ತು ಪಾಲು; ಕಣ್ಣು
ಹಾಯುತ್ತಿತ್ತು ಮುಖದಿಂದ ಮುಖಕ್ಕೆ, ಹುಡುಕುತ್ತಿತ್ತು
ರೇವುಳ್ಳ ನಡುಗಡ್ಡೆಯೊಂದ, ತಂಗಲು ನಿಮಿಷ; ತಂಗಿ
ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ
ಬಡಿತಕ್ಕೆ ತಕ್ಕ ಪ್ರತಿ ಬಡಿತ ಕೊಡುವಿನ್ನೊಂದು
ಸಮ ಹೃದಯದ ನಿಗೂಢ ಸಹಕಂಪನದ ರೋಮಾಂಚ
ಪ್ರತಿಫಲಿಸಬಲ್ಲೊಂದು ಮುಖವ. ಹಠಾತ್ತಾಗಿ
ಮೂಡಿತ್ತಲ್ಲಿ ಅಗೋ, ಅಗೋ ಸಭಾಮಧ್ಯದಲ್ಲಿ ಪರಮಾಪ್ತ ಮುಖ,
ಮಾತಿನಾಚೆಯ ಸಹಸ್ಪಂದಿ; ಮಾತಿಲ್ಲದೆಯೆ
ಇಂಗಿತವನರಿವ ಸಹಭಾಗಿನಿಯ ಸಹಜ ಮುದ್ರೆ.
ಯಾವ ಮುಖ ಅದು? ಎಲ್ಲಿ ಯಾವಾಗ ಯಾವ ಭವ
ದಲ್ಲಿ, ಲೋಕದಲ್ಲಿ, ಸಂಭಾವ್ಯತೆಯ ಯಾವ ಆಕಸ್ಮಿಕದ
ಆತ್ಮೀಯ ಆಪ್ಯಾಯಮಾನ ಕ್ಷಣದಲ್ಲಿ
ಕಂಡದ್ದು ಅದು?
ಒಳತಳದ ಬೀಗ ಹೇಗೋ ಕಳಚಿ ಬಾಗಿಲು ತೆರೆದು
ಮೇಲಕ್ಕೆ ಚಿಮ್ಮಿ ಮುಖದಲ್ಲಿ ಮೂಡುವ ಕೆಂಪು,
ಮಿಂಚಂತೆ ಬಂದೊಂದು ಬೆರಗು, ನಿಷ್ಕಾಮವಾದೊಂದು ಚೆಲುವಿನ ಕಂಪು;
ಕಣ್ಣಂಚಲ್ಲಿ ಚಕಮಕಿಸುತ್ತಿರುವ ಬೆಳಕಿನ ಗುಳ್ಳೆ,
ಕನ್ನೆಯಲ್ಲವತರಿಸುವ ಅನಾದಿ ರಾಗದ ಪ್ರತಿಮೆ.
ಅಹಹಾ, ಅಲೌಕಿಕ ಸಖಿಯೆ,
ಮಂಗೈ ಮೇಲೆಯೇ ಅಮೂರ್ತ ಕುಳಿತ ಓ ಅರಗಿಣಿಯೇ,
ಅಸಂಭಾವ್ಯ, ಸಂಭಾವ್ಯವಾದೊಂದು ನಿಮಿಷ, ಅನಿಮೇಷ,
ವೇಷವೆಲ್ಲವ ಕಿತ್ತು ಬಿಸುಟ ಅಂತರ್ಮೂಲದ ಅಮೂಲ್ಯ ಹಾಸ.
ಚಿಂತಾಮಣಿಯನ್ನು ಹಿಡಿದು ಬಯಸುತ್ತಿದ್ದ ಅರಸುತ್ತಿದ್ದ
ನನ್ನ ಆ ಇನ್ನೊಂದು ಮುಖ; ಸ್ತ್ರೀಮುಖ; ಮಖಮಲ್ಲು 
ಮಡಿಕೆ ಬಿಚ್ಚಿದರೆ ಕಾಣುವ ಸೂಕ್ಷ್ಮ ಸೂಕ್ಷ್ಮ ರೇಖೆಗಳಲ್ಲಿ
ರೂಪುಗೊಂಡಂತೆ ಕಾಣುವ ಚಹರೆ; ಕನ್ನಡಿಯಲ್ಲಿ ನಾ ಕಂಡ
ನನ್ನದೇ ಆದ ಹೊಸ ಮುಖ.
ಯಾರು? ಹೆಸರೇನು? ಕುಲ, ಗೋತ್ರ ಯಾವುದು ಎಲ್ಲಿ?
ಗೊತ್ತಿರಲಿಲ್ಲ, ಗೊತ್ತಾಗಲಿಲ್ಲ, ಅರ್ಧಗಂಟೆಯ ಕಾಲ
ಒಳಗು ಒಳಗುಗಳ ಸಂವಾದ, ವಿಷಾದಭರಿತ ಸಂತೋಷದ ಹಂಸ
ಪಾದ, ಮಾನಸ ಸರೋವರದಲ್ಲಿ ಅರಸಂಚೆ
ಕಂಡಿತ್ತು ತನ್ನದೇ ಆದ ಆ ಇನ್ನೊಂದು ಮುಖವ
ಮತ್ತೆ ವಿರಹದ ಸುದೀರ್ಘ ಅಂತ್ಯವಿಲ್ಲದ ರಾತ್ರಿ;
ದೀಪವಿಲ್ಲದ ದೀವಿಯಲ್ಲಿ ಸೆರೆಮನೆಯೊಳಗೆ
ಕಂಭಸುತ್ತುವ ಪುರೋಗಮನಸ್ಥಿತಿ;
ಅಲ್ಲಲ್ಲಿ ಏನನ್ನೊ ಹುಡುಕುತ್ತ ಕಂಡಂತಾಗಿ ಕಾಣದೇ ಬೇಯುವ ಫಜೀತಿ.
ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,
ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ
ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು
ಬದುಕಿಗೂ ಈ ಕರೀ ನೀರಲ್ಲಿ
ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ
ಅತ್ತಿತ್ತ ದೋಣಿ ಸಂಚಾರ. ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ
ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ
ರಿದ್ದರೂ ಸಿಕ್ಕುವುದೆಲ್ಲ ಪರಕೀಯ. ಅಕಸ್ಮಾತ್ತಾಗಿ
ತನ್ನ ಇನ್ನೊಂದರ್ಧ ಎಲ್ಲಾದರೂ ಕ್ಷಣಾರ್ಧ
ಸಿಕ್ಕಿದವನೆ ಕೃತಾರ್ಥ, ಭಾಗ್ಯವಂತ.

ಮತ್ತೆ ಯಾವಾಗ ಮರುಭೇಟಿ? ಕಣ್ಣು ಕಣ್ಣುಗಳ ಸಮ್ಮಿಲನ,
ಮೌನದ ನಿಗೂಢ ಗಂಭೀರ ಸಂವಾದದ ಚಟಾಕಿ?
ಆತ್ಮೀಯ ದೀವಿಗೆ ಮತ್ತೆ ಬರಬಲ್ಲೆನೇ, ಏಳು ಕಡಲುಗಳ ದಾಟಿ?
ಬಂದರೂ ಕೂಡ ದೊರೆವುದೆ ಹೇಳು, ಈ ಇಂಥ ಸರಿಸಾಟಿ?

ಈ ಮೇಲಿನದನ್ನು ಬರೆದಾಗ ನಾನು ಅಡಿಗರ ಕಾವ್ಯವನ್ನು ಓದುವುದಿರಲಿ, ಮುಟ್ಟಿ ಕೂಡ ನೋಡಿರಲಿಲ್ಲ. ಅದರಲ್ಲೇನೂ ಹೆಚ್ಚುಗಾರಿಕೆಯಿಲ್ಲ ಎನ್ನುವುದನ್ನು ಹೇಳುವುದಷ್ಟೇ ನನ್ನ ಉದ್ದೇಶವಾಗಿದ್ದು ಅದನ್ನು ಈ ಪರಿಚ್ಛೇದದಲ್ಲಿ ಸ್ಪಷ್ಟಪಡಿಸುತ್ತೇನೆ. ಎಲ್ಲರಿಗೂ ಗೊತ್ತಿರುವಂತೆ ಅಡಿಗರ ಚಿಂತಾಮಣಿಯಲ್ಲಿ ಕಂಡ ಮುಖ ಕವನಕ್ಕೆ ಹಲವು ವ್ಯಾಖ್ಯಾನಗಳು ಈಗ ಲಭ್ಯವಿವೆ. ಲಂಕೇಶರು ಇದನ್ನು ಓದಿ ‘ಆದರೆ ಎಲ್ಲರಿಗೆ ವಸ್ತು - ಎಪ್ಪತ್ತರ ಅಡಿಗರು ಒಂದು ಹೆಣ್ಣಿನ ಸುಂದರ ಸ್ನೇಹದ ಮುಖ ನೋಡಿ ಭಾವಿಸಿದರು - ಎಂಬುದು. ಅಥವಾ ಈ ವಯಸ್ಸಿನಲ್ಲೇ ಅದು ಬೇರೆ ಎಲ್ಲ ವಯಸ್ಸಿಗಿಂತ ಅನಿವಾರ್ಯವೋ?’ ಎನ್ನುತ್ತಾರೆ. ಸರಿಸುಮಾರು ಕನ್ನಡದ ಎಲ್ಲಾ ಪ್ರಮುಖ ವಿಮರ್ಶಕರೂ ಒಂದಿಲ್ಲಾ ಒಂದು ಸಂದರ್ಭದಲ್ಲಿ ಅಡಿಗರ ಈ ಕವಿತೆಯ ಬಗ್ಗೆ ಬರೆದಿದ್ದಾರೆ. ಅಷ್ಟೇನೂ ಮಹತ್ವದ ಕವಿತೆ ಇದಲ್ಲ ಎಂದವರೂ ಇದರ ವೈಶಿಷ್ಟ್ಯದ ಬಗ್ಗೆ ಹೇಳಿದ್ದಾರೆ. ಬಹಳ ಜನಪ್ರಿಯವಾದ ಒಂದು ವಿಶ್ಲೇಷಣೆ, ಈಗ ಸಾಕಷ್ಟು ಹಳಸಲಾಗಿರುವ ‘ಕಿಟಕಿ ಮತ್ತು ಕನ್ನಡಿ’ಯ ನೆಲೆಯಲ್ಲಿ ಸಾಗಿದರೆ ಇನ್ನೊಂದರಲ್ಲಿ ಒಬ್ಬರು ಪ್ಲೇಟೋನನ್ನು ಸ್ಮರಿಸಿ ತಮ್ಮದೇ ಬಾಲ್ಯಸಖನಲ್ಲಿದ್ದ ಒಬ್ಬ ಆತ್ಮೀಯ ಗೆಳೆಯನ ಕುರಿತಾದ ಅದಮ್ಯ ಹಂಬಲು-ತಹತಹ ಈ ಕವಿತೆಯ ಹಿಂದೆಯೂ ಹಪಹಪಿಸುತ್ತಿರುವುದನ್ನು ಕಾಣಲು ಸೋಲುತ್ತಾರೆ. ಇನ್ನು ಕೆಲವರು ತಮಗಿಷ್ಟವಾದ ಆಧ್ಯಾತ್ಮವನ್ನು ಈ ಕವನದಲ್ಲಿ ಕಂಡು ಅಡಿಗರ ಇಹ-ಪರ ತಾತ್ವಿಕತೆಯನ್ನು ಕೊಂಡಾಡುತ್ತಾರೆ. ಇನ್ನು ಮೊದಲಿಗೇ ಹೇಳಿದ ನಾನು ಯಾರು ಎಂಬ ಹುಡುಕಾಟದ ಬಗ್ಗೆ. ಇದೂ ಈಗ ಹಳತು. ಸ್ಪ್ಲಿಟ್ ಪರ್ಸನಾಲಿಟಿಗೆ ಕೂದಲೆಳೆಯ ಅಂತರದಲ್ಲಿ ಸಾಕ್ಷಿಪ್ರಜ್ಞೆ (ಅಡಿಗರಿಗೆ ತುಂಬ ಇಷ್ಟವಾದದ್ದು ಇದು, ಅವರು ನಡೆಸಿದ ಪತ್ರಿಕೆಯ ಹೆಸರೂ ಸಾಕ್ಷಿ.) ಇದೆ. ಮರದ ಮೇಲೆ ಎರಡು ಹಕ್ಕಿಗಳು ಕುಳಿತಿವೆ, ಅವುಗಳಲ್ಲಿ ಒಂದು ಹಣ್ಣು ತಿನ್ನುತ್ತಿದೆ; ಮತ್ತೊಂದು ಸುಮ್ಮನೇ ಅದನ್ನು ಗಮನಿಸುತ್ತಿದೆ. ವಾಸ್ತವದಲ್ಲಿ ಅಲ್ಲಿ ಎರಡು ಹಕ್ಕಿಗಳಿಲ್ಲ, ಇರುವುದು ಒಂದೇ. ಎರಡನೆಯದು ಮೊದಲನೇ ಹಕ್ಕಿಯ ಸಾಕ್ಷಿಪ್ರಜ್ಞೆ ಎನ್ನುವ ಕತೆಯನ್ನು (ಉಪನಿಷತ್ತು) ಎಲ್ಲರೂ ಕೇಳಿದ್ದೇವೆ. ನಾನು ಯಾರು, ಯಾಕಾಗಿ ಈ ಮನುಷ್ಯ ಜನ್ಮ ತನಗೆ ಕೊಡಲ್ಪಟ್ಟಿದೆ, ಸಾವು ಎಂದರೇನು, ಸತ್ತ ಬಳಿಕ ಏನಿದೆ ಇತ್ಯಾದಿ ಜಿಜ್ಞಾಸೆ ಕೂಡ ಅಡಿಗರಲ್ಲಿದೆ. ಅವರ ‘ವ್ಯಕ್ತಮಧ್ಯ’ ಎನ್ನುವ ಒಂದು ಶಬ್ದವೇ ಇದನ್ನೆಲ್ಲ ಪುಷ್ಟೀಕರಿಸುತ್ತದೆ. ಈ ಎಲ್ಲಾ ಬಗೆಯ ವಿಶ್ಲೇಷಣೆ ಅಥವಾ ಒಳನೋಟ-ಒಳಾರ್ಥ-ದರ್ಶನ ಇತ್ಯಾದಿಗಳ ಹಿನ್ನೆಲೆಯಲ್ಲಿ ಇರುವುದು ‘ನಾನು’ ಎನ್ನುವುದನ್ನು ‘ನನ್ನಿಂದ’ ಹೊರಗಿಟ್ಟು ಅಥವಾ ‘ನಾನು’ ಎನ್ನುವುದರಾಚೆ ನಾನು ನಿಂತು ‘ನನ್ನನ್ನು’ ನೋಡಿಕೊಳ್ಳುವ ಒಂದು ಪ್ರಯತ್ನ ಮತ್ತು ಈ ಹುಟ್ಟಿಗೂ ಮೊದಲಿನದ್ದು ಹಾಗೂ ಸಾವಿನ ನಂತರದ್ದು ಏನೋ ಇದ್ದೇ ಇದೆ ಎನ್ನುವ ಒಂದು ಸುಪ್ತಶ್ರದ್ಧೆಯೇ ಹೊರತು ಇನ್ನೇನಲ್ಲ. ಈ ‘ನಾನು’ ಮತ್ತು ನಾನು - ಗೆ ಎಷ್ಟೇ ಕೋಟ್ ಮಾರ್ಕ್ ಹಾಕಿದರೂ ಆ ಎರಡೂ ನಾನುಗಳನ್ನು ಕಾಣುತ್ತಿರುವ ನಾನು ಒಂದೇ ಎನ್ನುವುದನ್ನು ಮರೆಯದಿದ್ದರೆ ಒಳ್ಳೆಯದು. ಇದೆಲ್ಲ ಒಂದು ಬಗೆಯ ಮನಸ್ಸಿನ ಸರ್ಕಸ್ಸು ಅಷ್ಟೆ. ಸಾಕಷ್ಟು ಪುರುಸೊತ್ತಿದ್ದರೆ ಇನ್ನಷ್ಟು ಸರ್ಕಸ್ಸುಗಳನ್ನು ಆಯೋಜಿಸಬಹುದು. ತಮಾಶೆ ಎಂದರೆ ಎರಡೇ ನಾನುಗಳು ಇರುವುದು ಮತ್ತು ಎಲ್ಲಾ ಪುನರ್ಜನ್ಮದ ವ್ಯಾಖ್ಯಾನಕಾರರು, ಸಂಶೋಧಕರು ಸಾಮಾನ್ಯವಾಗಿ ಹೇಳುವುದು ಹಿಂದಿನ ಒಂದು ಜನ್ಮದ ಬಗ್ಗೆ ಮಾತ್ರವೇ ಆಗಿರುವುದು. ಹಿಂದಿನ ಹತ್ತಾರು, ನೂರಾರು ಅಥವಾ ಸಾವಿರಾರು ಜನ್ಮಗಳ ಬಗ್ಗೆ ಮಾತಾಡುವವರು ನಮ್ಮ ನಿಮ್ಮ ನಡುವೆ ಇರುವುದು ಕಡಿಮೆ. ಈ ಕವನದಲ್ಲೂ ಬರುವ ಸಪ್ತಸಾಗರದಾಚೆಯೆಲ್ಲೊ ಎನ್ನುವ ಮಾತು ಈ ಕವನವನ್ನು ಅಡಿಗರ ಮೋಹನ ಮುರಳಿ ಕವನದೊಂದಿಗೆ ಇದನ್ನು ಜೋಡಿಸುತ್ತದೆ ಎಂದು ಓಎಲ್ಲೆನ್ ಅವರು ಗುರುತಿಸುತ್ತಾರೆ. ಬಹುಶಃ ಸತ್ಯಕ್ಕೆ ಹೆಚ್ಚು ಹತ್ತಿರವಾದ ವಿಶ್ಲೇಷಣೆ ಇದೇ ಎನಿಸುತ್ತದೆ.

ನನ್ನನ್ನು ಅರ್ಥಮಾಡಿಕೊಳ್ಳುವವರು ಯಾರೂ ಇಲ್ಲ ಎನ್ನುವುದು ಹದಿಹರಯದ ಒಂದು ಬೇಗುದಿ. ಅತ್ಯಂತ ಆಪ್ತವಾದ ಒಂದು ಜೀವ ಅದರ ಹುಡುಕಾಟ. ಇದು ಒಂದು ಹಂತದಲ್ಲಿ ಮುಗಿಯುತ್ತದೆ. ಆಗ ನಮಗೆ ಗೊತ್ತಾಗಿರುತ್ತದೆ, ಅಂಥದ್ದೊಂದು ಇಲ್ಲ ಎನ್ನುವುದು. ಆದರೆ ಅಡಿಗರಿಗೆ ಅಂಥದ್ದೊಂದು ಇದೆ ಎನ್ನುವ ಅಚಲ ವಿಶ್ವಾಸ ಅವರ ಎಪ್ಪತ್ತರ ಹರಯದಲ್ಲೂ ಇತ್ತು ಎನ್ನುವುದೇ ಸೋಜಿಗ ಮತ್ತು ಮೆಚ್ಚಬೇಕಾದ ಮುಗ್ಧತೆ ಎಂದೇ ಅನಿಸುತ್ತದೆ ನನಗೆ. 

ಮೈಕು ಮತ್ತು ವೇದಿಕೆ ಸಿಕ್ಕೊಡನೆ ಮನುಷ್ಯ ಸುಳ್ಳುಗಳನ್ನು ಹೇಳತೊಡಗುತ್ತಾನೆ ಎಂದರು ಲಂಕೇಶ್. ಅವರು ಭಾಷಣ ಮಾಡುವುದನ್ನು ಇಷ್ಟಪಡುತ್ತಿರಲಿಲ್ಲ. ಸರಳವಾಗಿ ಮನುಷ್ಯ ಶೋಕಿಲಾಲ. ಅವನು ಜಗತ್ತಿಗೆ ತನ್ನನ್ನು ತಾನು ಪ್ರದರ್ಶಿಸಿಕೊಳ್ಳಲು (ಪ್ರೆಸೆಂಟೇಶನ್) ಇಷ್ಟಪಡುತ್ತಾನೆ. ಇದು ವ್ಯಕ್ತಿತ್ವದ ಭ್ರಷ್ಟತನಕ್ಕೆ ಕಾರಣವಾಗುವ ಮಟ್ಟಕ್ಕೂ ಹೋಗಬಹುದು ಎಂದು ಹೆದರಿದ ಒಂದು ತಲೆಮಾರು ಅದು, ಲಂಕೇಶ್ ಅವರದ್ದು. ಪ್ರದರ್ಶನಪ್ರಿಯರು ಜಗತ್ತಿಗೆ ಪ್ರದರ್ಶಿಸುವುದು ತಮ್ಮ ವ್ಯಕ್ತಿತ್ವದ ಒಳ್ಳೆಯ ಮುಖವನ್ನು ಮಾತ್ರ ಅಲ್ಲವೆ? ತಮ್ಮ ‘ಕ್ಷುದ್ರ ದೈನಂದಿನದ ಕ್ಲುಲ್ಲಕತನವನ್ನು’ (ಡಾ||ಯು ಆರ್ ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿಯಿಂದ) ಯಾರೂ ಬಿಸಿಲಿಗೊಡ್ಡಲು ತಯಾರಿರುವುದಿಲ್ಲ. ಹಾಗೆಯೇ ಭಾಷಣಕ್ಕೆ ನಿಂತ ಮನುಷ್ಯ ತನ್ನ ನಿಜ ಸ್ವರೂಪಕ್ಕೆ ಮುಖಾಮುಖಿಯಾಗಲು ಸಿದ್ಧನಿರುವುದಿಲ್ಲ, ತತ್‌ಕ್ಷಣದ ಮಟ್ಟಿಗಾದರೂ. ವೇದಿಕೆ ಮತ್ತು ಮೈಕಿನ ಮುಂದಿನ ವ್ಯಕ್ತಿತ್ವ ಒಂದು ವೇಷದ್ದು, ಸೋಗಿನದ್ದು ಮತ್ತು ಪ್ರದರ್ಶನಪ್ರಿಯತೆಯ ಉತ್ತುಂಗದ್ದು. ಆಗ, ಚಿಂತಾಮಣಿಯಲ್ಲಿ ಆ ಮುಖ ಕಾಣಿಸಿಕೊಂಡಿರುವುದೇ ಬಹಳ ಮುಖ್ಯವಾದ ಕ್ಷಣ ಇಲ್ಲಿ. ಅದು ಬೇರೆ ಯಾವುದೇ ಸಂದರ್ಭದಲ್ಲಿ ಕಂಡಿದ್ದರೂ ಅಷ್ಟು ಮುಖ್ಯವಾಗುತ್ತಲೇ ಇರಲಿಲ್ಲ.

ಆನಂತರ ನೀವದನ್ನು ಒಂದು ಆಪ್ತಜೀವದ ಹುಡುಕಾಟವೆನ್ನಿ, ಹೆಣ್ಣಿನ ಸಂಗ-ಸಹವಾಸ-ಸಾನ್ನಿಧ್ಯ-ಸಾಹಚರ್ಯ-ಸ್ನೇಹ-ಸಂಬಂಧದ ಬಯಕೆಯೆನ್ನಿ, ಕಂಡಿದ್ದು ಕನ್ನಡಿ ಎನ್ನಿ, ಕಿಟಕಿ ಎನ್ನಿ, ಏನೇ ಅನ್ನಿ. ಅವೆಲ್ಲವೂ ಅಡಿಗರು ಹೇಗೋ ಹಾಗೆ ವಿಶ್ಲೇಷಕರೂ ಪಡೆದುಕೊಂಡಿದ್ದು, ದಕ್ಕಿಸಿಕೊಳ್ಳಲು ಪ್ರಯತ್ನಿಸಿದ್ದು ಅಷ್ಟೆ. ದತ್ತ ಎನ್ನುವುದೇನಾದರೂ ಇದ್ದರೆ ಒಂದೇ ವ್ಯಕ್ತಿತ್ವದ ಒಂದು ಅಂಶ ವೇದಿಕೆಯಲ್ಲಿ ಮೈಕಿನ ಮುಂದೆ ಇದ್ದಿದ್ದು ಮತ್ತು ಇನ್ನೊಂದು ಅಂಶ ಬರೀ ಕಣ್ಣಾಗಿ ಎದುರಾಗಿದ್ದು ಅಷ್ಟೆ. ಅದು ಹಲವರಿಗೆ ಹಲವು ರೂಪದಲ್ಲಿ ಎದುರಾಗುತ್ತಲೇ ಇತ್ತು, ಇದೆ ಮತ್ತು ಇರುತ್ತದೆ. 

ಮುವ್ವತ್ತು ವರ್ಷಗಳ ಬಳಿಕ ಈ ಕವಿತೆಯನ್ನು ಓದುವಾಗ ನಾವು ಕೊಂಚ ಹಗುರವಾಗಿ ಇದನ್ನು ಓದಬಹುದು, ಅದರ ಒರಿಜಿನಲ್ ಭಾರ ನಮ್ಮ ಮೇಲಿಲ್ಲ. ನಾವು ಟಾಯ್ಲೆಟ್ಟಿನಿಂದ ಹಿಡಿದು ಸ್ಮಶಾನದ ತನಕ ಬೇರೆ ಬೇರೆ ಸ್ಥಳದಲ್ಲಿ ನಮ್ಮ ಸೊಡ್ಡು ಚಂದ ಕಾಣುವಂಥ ಸೆಲ್ಫೀ ತೆಗೆದುಕೊಳ್ಳುತ್ತ, ನಮ್ಮದು ಅಂತ ಹೇಳಿಕೊಳ್ಳುವುದಕ್ಕೆ ಯಾವುದೇ ಕವಿತೆ/ವಿಚಾರ/ಅಭಿಪ್ರಾಯ ಇತ್ಯಾದಿ ಇಲ್ಲದಿದ್ದ ಪಕ್ಷದಲ್ಲಿ (ಕೆಲವೊಮ್ಮೆ ಅದಕ್ಕೆಲ್ಲ ವೇದಿಕೆ ಕಲ್ಪಿಸುವಂಥ ವಿವಾದಗಳು ಪತ್ರಿಕೆಯಲ್ಲೇ ಇರುವುದಿಲ್ಲ, ಕರ್ಮ!) ಹೆಂಡತಿ ಮಾಡಿದ ಹಳದೀ ಬಣ್ಣದ ಚಿತ್ರಾನ್ನದ ಫೋಟೋವನ್ನೋ, ನಾವು ಕಷ್ಟಪಟ್ಟು ತಯಾರು ಮಾಡಿದ ನಮ್ಮ ಮಗುವಿನ ಫೋಟೋವನ್ನೋ, ಓದುವುದಕ್ಕಂತೂ ಸಾಧ್ಯವಿಲ್ಲದ್ದರಿಂದ ಕೊಂಡ ಕರ್ಮಕ್ಕೆ ಹಣ ತೆತ್ತು ಕೊಂಡ ಪುಸ್ತಕದ ಫೋಟೋವನ್ನೋ ಫೇಸ್‌ಬುಕ್ಕಿಗೆ ಅಥವಾ ಇನ್ಸ್ಟಾಗ್ರಾಮಿಗೆ ಅಪ್‌ಲೋಡ್ ಮಾಡಿ ಸದ್ಯ ನಾನಿನ್ನೂ ಜೀವಂತವಾಗಿದ್ದೇನೆಂಬುದನ್ನು ಖಾತ್ರಿ ಮಾಡಿಕೊಂಡು ನೆಮ್ಮದಿ ಕಂಡುಕೊಳ್ಳುವ ತಲೆಮಾರಿಗೆ ಸೇರಿದವರು. ಹೆಪ್ಪಿ ಟು ಬ್ಲೀಡು, ಮಿಟೂ, ಫಕ್ ಎಂದೆಲ್ಲ ಬರೆದುಕೊಂಡು ಸ್ತ್ರೀಸ್ವಾತಂತ್ರ್ಯ ಅನುಭವಿಸುವ ಇನ್ಸ್ಟಂಟ್ ಜನ. ನಮಗೆ ಕಿಟಕಿಯೂ ಕನ್ನಡಿಯೂ ಕೈಯಲ್ಲಿರುವ ಸೆಲ್‌ಫೋನೇ ಆಗಿರುತ್ತ ಚಿಂತಾಮಣಿಯಲ್ಲಿ ಅಡಿಗರಿಗೆ ಕಂಡ ಮುಖ ನಮ್ಮದಲ್ಲದ ಪಕ್ಷ ಅದರಲ್ಲೇನೂ ಸ್ವಾರಸ್ಯವಿದೆ ಅನಿಸದ ಮಂದಿ. ವಾಟೆ ಫಕ್ಕಿಂಗ್ ಪೊಯೆಮ್ಮಯಾ ಎಂದು ಬದಿಗೆ ಸರಿಸುತ್ತೇವಾ ಅಥವಾ ಫಕ್ಕಿಂಗ್ ಗುಡ್ಯಾ ಎನ್ನುತ್ತೇವಾ ಎನ್ನುವುದು ಪ್ರಶ್ನೆ.

ಸಂಕಥನದ ರಾಜೇಂದ್ರ ಅಡಿಗರನ್ನು ಇವತ್ತಿನ ಸಂದರ್ಭದಲ್ಲಿಟ್ಟು ನೋಡಿ ಎನ್ನುವಂತೆ ಎಸೆದ ಸವಾಲು ನಿಜಕ್ಕೂ ಸರಿಯಾಗಿಯೇ ಇದೆ. ನಾನು ಇದೀಗಷ್ಟೇ ನೀವು ಓದಿ ಮುಗಿಸಿದ ಪರಿಚ್ಛೇದವನ್ನು ‘ಗೀಚಿಲ್ಲ’. ಸಿನಿಕತೆಯಿಂದ ಕಾರಿದ್ದಲ್ಲ ಅದು. ಪದಪದವನ್ನೂ ಯೋಚಿಸಿಯೇ, ಇಲ್ಲಿ ಸಾಂದರ್ಭಿಕವಾಗಿದೆ ಎಂದೇ ಬರೆದಿದ್ದೇನೆ. ಮೊನ್ನೆ ಮೊನ್ನೆ ನಾನು ಬಲ್ಲ ಒಬ್ಬ ಸೂಕ್ಷ್ಮಗ್ರಾಹಿ ಸಂವೇದನೆಗಳ ಹೊಸತಲೆಮಾರಿನ ಕವಯತ್ರಿ ಒಬ್ಬಳು ಫೇಸ್‌ಬುಕ್ಕಿನಲ್ಲಿ ಒಂದು ಸ್ಟೇಟಸ್ ಹಾಕಿ ಒಂದು ಅದ್ಭುತವಾದ ಕವನ ಸಂಕಲನದ ಬಗ್ಗೆ ಫಕಿಂಗ್ ಗುಡ್ ಎಂದಳು. ಆ ಶಬ್ದವನ್ನು ಆಕೆ ತನ್ನ ಸ್ಟೇಟಸ್ಸಿನಲ್ಲಿ ಕನಿಷ್ಠ ಮೂರು ಸಲ ಬಳಸಿದ ನೆನಪು. ಬಹುಶಃ ನನ್ನ ತಲೆಮಾರಿನ (ಐವತ್ತರ ಆಸುಪಾಸಿನ) ಓರ್ವ ಗಂಡಸು ಅದಕ್ಕೆ ಪ್ರತಿಕ್ರಿಯಿಸುತ್ತ ನೀನು ಬರೆದಿದ್ದೆಲ್ಲ ಚೆನ್ನಾಗಿದೆ, ಆ ಫಕಿಂಗ್ ಎಂಬ ಶಬ್ದವೊಂದನ್ನು ಹೊರತುಪಡಿಸಿ ಎಂದ. ಸುರುವಾಯ್ತು ನೋಡಿ. 1. ಇದು ಗಂಡಸು ಹೆಣ್ಣನ್ನು ಶೋಷಿಸುತ್ತಾ ಬಂದಿರುವುದಕ್ಕೆ ಒಂದು ಮಾದರಿಯಾಗಿದೆ. 2. ನೀನು ನನ್ನನ್ನು ಒಂದು ನಿರ್ದಿಷ್ಟ ಪದ ಬಳಸದಂತೆ ಸೆನ್ಸಾರ್ ಮಾಡುತ್ತಿದ್ದೀಯ. 3. ಹೀಗೆ ಕಟ್ಟುಪಾಡು ವಿಧಿಸುತ್ತಿರುವ ನಿನ್ನ ಮನಸ್ಥಿತಿಯಾದರೂ ಎಂಥದ್ದಿರಬಹುದು! ಹೆಣ್ಣನ್ನು ನಿಯಂತ್ರಿಸುವ ನಿನ್ನ ಧೋರಣೆ ಕಾಣಿಸುತ್ತಾ ಇದೆ ನಿನ್ನ ಮಾತಿನಲ್ಲಿ. 4. ಗಂಡು ಅಥವಾ ಹೆಣ್ಣಿನ ಜನನಾಂಗ ಮತ್ತು ಸಂಭೋಗವನ್ನು ಸೂಚಿಸುವ ಒಂದಿಷ್ಟು ಪದಗಳ ಪಟ್ಟಿ. (ಈಗೇನು ಮಾಡ್ತೀಯ ಎನ್ನುವ ಅರ್ಥದಲ್ಲಿ) 5. ನಿನಗೆ ಒಂದು ಪದ ಇಷ್ಟವಾಗದಿದ್ದರೆ ಸುಮ್ಮನಿರು. ಅದನ್ನು ಬಳಸಬೇಡ ಎನ್ನಲು ನೀನು ಯಾರು? ಇದು ಸ್ತ್ರೀವಿರೋಧಿ ಹೇಗೆ ಎನ್ನುವುದರ ಬಗ್ಗೆ ವಿಚಾರಮಾಡು. ನಮಗಿದು ಅರ್ಥವಾಗುತ್ತದೆ. ನಿನ್ನಂಥವರು ಸುರು ಮಾಡುವ ಈ ಮೀಟೂ ಇತ್ಯಾದಿಗಳೆಲ್ಲ ನಮಗೆ ತಿಳಿಯೋಲ್ಲ ಅಂದುಕೋ ಬೇಡ. ನಿಮ್ಮ ಮನಸ್ಥಿತಿಯಲ್ಲೇ ಅಂಥದ್ದು ಇದೆ. ಇಲ್ಲವಾದಲ್ಲಿ ನಿಮಗೀ ಬಗೆಯ ಸೋಗುಗಳ ಅಗತ್ಯವೇ ಬೀಳುತ್ತಿರಲಿಲ್ಲ.....ಇತ್ಯಾದಿ.

ಅಡಿಗರ ಧ್ವನಿ ತೀರ ಕ್ಷೀಣವಾಗಿ ಕೇಳಿಸುತ್ತಲೇ ಇರುತ್ತದೆ ನನಗೆ.

.......................................ಮಾತಿಲ್ಲದೆಯೆ
ಇಂಗಿತವನರಿವ ಸಹಭಾಗಿನಿಯ ಸಹಜ ಮುದ್ರೆ.
........................
..................................
ಒಳತಳದ ಬೀಗ ಹೇಗೋ ಕಳಚಿ ಬಾಗಿಲು ತೆರೆದು
ಮೇಲಕ್ಕೆ ಚಿಮ್ಮಿ ಮುಖದಲ್ಲಿ ಮೂಡುವ ಕೆಂಪು,
ಮಿಂಚಂತೆ ಬಂದೊಂದು ಬೆರಗು, ನಿಷ್ಕಾಮವಾದೊಂದು ಚೆಲುವಿನ ಕಂಪು;

ಅಡಿಗರಿಗೆ ಸ್ತ್ರೀಯರ ಬಗ್ಗೆ ಇದ್ದ ಮನೋಧರ್ಮವೇನಾದರೂ ಕಾಣಿಸುತ್ತಿದೆಯೆ? ಅಡಿಗರು ಇಲ್ಲಿ ಎಕ್ಸ್‌ಟ್ರಾ ಮೆರಿಟಲ್ ಅಫೇರ್ ಒಂದನ್ನು ಕನಸುತ್ತಾ, ಅವಳ ಬಗ್ಗೆ ಯಾವುದೇ ಬದ್ಧತೆಯಿಲ್ಲದೆ ‘ಮತ್ತಿನ್ನು ಯಾವಾಗ ಸಿಗುತ್ತೀಯ, ಸಿಗುತ್ತಾ ಇರು ಆಗಾಗ’ ಎನ್ನುವ ಧೋರಣೆ ಹೊಂದಿದ್ದಾರೆಯೇ! ಹೊಂದಿದ್ದರೆ ಅದು ಸ್ತ್ರೀವಾದಕ್ಕೆ ಪೂರಕವಾಗಿ ಹೆಣ್ಣನ್ನು ಮುಕ್ತವಾಗಿಸುತ್ತಿದೆಯೇ ಅಥವಾ ಅವಳನ್ನು ಶೋಷಿಸುತ್ತಾ ಇದೆಯೇ?! ಇದೆಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ನಿಮಗೆ ಅಡಿಗರ ‘ನಾನು’ ಗಳ ಹುಡುಕಾಟ ಅರ್ಥಪೂರ್ಣ ಎನಿಸುತ್ತಾ ಅರ್ಥಹೀನ ಅನಿಸುತ್ತಾ? ಅಡಿಗರೇಕೆ ಆ ಚಿಂತಾಮಣಿಯಲ್ಲಿ ಕಂಡ ಮುಖದ ಜೊತೆ ಒಂದು ಸೆಲ್ಫೀ ತೆಗೆಯುವ ಬಗ್ಗೆ ಯೋಚಿಸುತ್ತಿಲ್ಲ! ಮಾತಿಲ್ಲದೇ ಇಂಗಿತವನ್ನರಿವ ಸಹಭಾಗಿನಿ ಸಿಕ್ಕಿಬಿಟ್ಟರೆ ವ್ಯಾಟ್ಸಪ್ ಏನು ಮಣ್ಣು ತಿನ್ನಬೇಕ! ನಾವು ಭಾಷಣಮಗ್ನರಾಗಿ ವೇದಿಕೆಯಲ್ಲಿದ್ದರೆ ವೈಫೈ ಇದೆಯಾ ಸಿಗ್ನಲ್ ಸಿಗುತ್ತಾ ಎಂದು ಯೋಚಿಸುತ್ತೇವೆಯೇ ಹೊರತು ರೇವುಳ್ಳ ನಡುಗುಡ್ಡೆಯ ಬಗ್ಗೆ ಅಲ್ಲ. ಒಂದು ಲೈವ್ ಸೆಶನ್ ಅರೇಂಜ್ ಮಾಡುವ ಬಗ್ಗೆ ಅಥವಾ ಲೊಕೇಶನ್ ಅಪ್ಡೇಟ್ ಮಾಡುವ ಬಗ್ಗೆ ಯೋಚಿಸಬೇಕಾದ ಹೊತ್ತಲ್ಲಿ ರೇವುಳ್ಳ ನಡುಗುಡ್ಡೆ ಯಾಕೆ! ಹಾಗೆ ತೀರ ಬೇಕೇ ಎಂದಾದರೆ ಅದಕ್ಕೆ ಯಾರಾದರೂ ಫಕಿಂಗ್ ಕವಿತೆ ಬರೆಯುತ್ತಾ ಕೂಡ್ರಬೇಕ! ದಟ್ಸ್ ಇಟ್!

ಇಷ್ಟಿದ್ದೂ ‘ನಾಟ್ ಎವೆರಿಥಿಂಗ್ ಈಸ್ ಲಾಸ್ಟ್’ ಯಾರ್! ಪ್ರತಿಯೋರ್ವನಿಗೂ ತನ್ನೊಳಗಿನ ಖಾಲಿ ಏನಿದೆ, ಅದರ ಬಗ್ಗೆ ಗೊತ್ತು. ಇಲ್ಲಿ ದಾಂಪತ್ಯಗಳು ನೀರಸವಾಗಿವೆ. ಸ್ನೇಹ ಮುಕ್ಕಾಗಿದೆ. ಹಣ, ಯಶಸ್ಸು, ವಶೀಲಿ, ಅಡ್ಡದಾರಿ, ಕಾಲೆಳೆಯುವುದು, ಪ್ರತಿಭೆ ಕೆಲಸ ಮಾಡಬೇಕಾದಲ್ಲಿ ಬೇರೇನೇನೆಲ್ಲ ಉಪಯೋಗಕ್ಕೆ ಬರುತ್ತಿರುವುದು ಗೊತ್ತು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಿರುವುದರ ಸ್ಪಷ್ಟ ಗುರುತು ಹತ್ತಿದೆ ಈ ತಲೆಮಾರಿಗೆ. ಆದರೆ ಸೊ ವಾಟ್ ಎನ್ನುವ ಧಿಮಾಕು ಇದ್ದೇ ಇದೆ. ಮೊಳೆಯದಲೆಗಳ ಮೂಕ ಮರ್ಮರ ಅವರಿಗೂ ಅಷ್ಟಿಷ್ಟು ಕೇಳಿಸಿದೆ. ನಿದ್ದೆ ಮಂಪರಿನಲ್ಲಿ, ಕುಡಿದ ಮತ್ತಿನಲ್ಲಿ ಮತ್ತು ವಿಸ್ಮೃತಿಯ ಜಾಗರಣೆಯಲ್ಲಿ ಅದು ಅವರಿಗೆ ಕಂಡಿದೆ. ತಾವೇ ಹಿಡಿದ ಸೆಲ್ಫೀಗಳಲ್ಲಿ, ಸೆಲ್ಫೀಯಲ್ಲಿ ಕನ್ನಡಿಯೊ ಕಿಟಕಿಯೊ ಕಾಣದೆ ತಾವಿರುವ ಅಷ್ಟೂ ಜಾಗ ಕತ್ತರಿಸಿ ತೆಗೆದ ಹಾಗೆ ಕಂಡಿದ್ದಿದೆ. ಆಸುಪಾಸಿನ ಮುಖಗಳಲ್ಲಿ ಕಾಣುತ್ತಿರುವುದೆಲ್ಲ ಸುಳ್ಳೆನಿಸಿದ್ದಿದೆ. 

ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,
ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ
ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು
ಬದುಕಿಗೂ ಈ ಕರೀ ನೀರಲ್ಲಿ
ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ
ಅತ್ತಿತ್ತ ದೋಣಿ ಸಂಚಾರ. ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ
ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ
ರಿದ್ದರೂ ಸಿಕ್ಕುವುದೆಲ್ಲ ಪರಕೀಯ. ಅಕಸ್ಮಾತ್ತಾಗಿ
ತನ್ನ ಇನ್ನೊಂದರ್ಧ ಎಲ್ಲಾದರೂ ಕ್ಷಣಾರ್ಧ
ಸಿಕ್ಕಿದವನೆ ಕೃತಾರ್ಥ, ಭಾಗ್ಯವಂತ.

ಎಚ್ಚರವಾಗಬಾರದ ಕೆಟ್ಟ ಕ್ಷಣದಲ್ಲಿ ಹಾಸಿಗೆಯ ಮೇಲೆಯೇ ನಡುರಾತ್ರಿ ಎದ್ದು ಕುಳಿತವಳ ಕೈ ಸೆಲ್‌ಫೋನ್‌ಗಾಗಿ ತಡಕಾಡುತ್ತದೆ. ಇಲ್ಲ, ಯಾರ ಯಾವ ಮೆಸೇಜೂ ಇಲ್ಲ ಇವತ್ತು. ಎಲ್ಲ ಸತ್ತು ಹೋದರಾ ಅನಿಸುವಾಗಲೇ ಮಂದ ಬೆಳಕಿನಲ್ಲಿ ಇದೆಲ್ಲದರ ಅರ್ಥವಾದರೂ ಏನು ದೇವರೇ ಎಂದು ಅವಳದೇ ‘ನಾನು’ ಮೊರೆಯಿಟ್ಟಂತೆ ಕೇಳಿಸಿ ಆ ಆರ್ತನಾದವನ್ನು ಸಹಿಸಲಾರೆ ಎಂಬಂತೆ ಒಮ್ಮೆ ತಲೆಗೂದಲಲ್ಲಿ ಕೈಯನ್ನು ಸೀಳಿ ಕತ್ತಲನ್ನೆ ಪಿಳಿಪಿಳಿ ನೋಡುತ್ತಾಳೆ. ದೇವರು ಅರ್ಥ ಬಿಡಿಸಿ ಹೇಳಲು ಬರುವ ಮುನ್ನವೇ ಅವಳು ಮತ್ತೆ ಅಲ್ಲೇ ಬಿದ್ದುಕೊಂಡು ನಿದ್ದೆಗೆ ಜಾರುತ್ತಾಳೆ. ಕೈಯಲ್ಲಿನ ಮೊಬೈಲು ತಾನೂ ಜಾರಲೇ ಬೇಡವೇ ಎಂದು ಅನುಮಾನಿಸುತ್ತಿರುವಾಗಲೇ ಅದರ ಬಲತುದಿಯಲ್ಲಿ ಸೂಜಿಮೊನೆಯಷ್ಟು ಬೆಳಕು ಮಿನುಗತೊಡಗುತ್ತದೆ. ಕ್ಷಣಾರ್ಧ ಎಲ್ಲವೂ ಅರ್ಧರ್ಧವಾಗಿಯೇ ಪೂರ್ತಿಯ ಕನಸು ಕೂಡಾ ಅರ್ಧ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ