Monday, April 23, 2018

ನಾ ಮೊಗಸಾಲೆಯವರ ‘ಧಾತು’ ಕಾದಂಬರಿ

ಅನೇಕ ಲೇಖಕರು ನಾನೇಕೆ ಬರೆಯುತ್ತೇನೆ, ಯಾರು ನನ್ನ ಓದುಗ ಎಂದೆಲ್ಲ ಪ್ರಶ್ನೆ ಹಾಕಿಕೊಂಡು ಅದಕ್ಕೆ ಉತ್ತರಿಸುತ್ತ ತಮ್ಮ ತಮ್ಮ ಸಾಹಿತ್ಯಿಕ ಉದ್ದೇಶ, ತುಡಿತಗಳ ಬಗ್ಗೆ ಬರೆದಿರುವುದುಂಟು. ಓದುಗನು ಕೂಡ ನಾನೇಕೆ ಓದುತ್ತೇನೆ, ಓದಿನಿಂದ ನನ್ನ ನಿರ್ದಿಷ್ಟ ನಿರೀಕ್ಷೆಗಳೇನಾದರೂ ಇವೆಯೆ, ಯಾವ ಬಗೆಯ ಪುಸ್ತಕ/ಲೇಖಕ ಮಾತ್ರ ನನ್ನ ಆದ್ಯತೆ ಎಂದೆಲ್ಲ ಯೋಚಿಸುವ ಒಂದು ಹಂತ ಬಂದೇ ಬರುತ್ತದೆ. ಹಾಗೆ ನಾ ಮೊಗಸಾಲೆಯವರ ಧಾತು ಕಾದಂಬರಿಯನ್ನು ಓದುತ್ತ ಸ್ವತಃ ಲೇಖಕರೇ ತಮ್ಮ ಕಾದಂಬರಿಯ ಪ್ರಸ್ತಾವನೆಯಲ್ಲಿ ಆಡಿರುವ ಕೆಲವು ಮಾತುಗಳು ಮತ್ತು ನಾಡಿನ ಖ್ಯಾತ ವಿಮರ್ಶಕರಾದ ಎಂ ಎಸ್ ಆಶಾದೇವಿಯವರು ಬರೆದಿರುವ ಮುನ್ನುಡಿಯ ಮಾತುಗಳು ಸೇರಿದಂತೆ ಅಲ್ಲಿ ಇಲ್ಲಿ ಪ್ರಕಟವಾದ ಕೆಲವೊಂದು ವಿಮರ್ಶೆಯನ್ನೂ ಮನಸ್ಸಿನಲ್ಲಿರಿಸಿಕೊಂಡು ಈ ಕಾದಂಬರಿಯನ್ನು ಓದಿದ ಬಳಿಕ ನನಗೆ ಅನಿಸಿದ್ದೇ ಬೇರೆ, ನನಗೆ ಮುಖ್ಯ ಎನಿಸಿದ್ದೇ ಬೇರೆ. ಇದು ನಿಜಕ್ಕೂ ನನಗೇ ಕೊಂಚ ಅಚ್ಚರಿಯನ್ನುಂಟು ಮಾಡಿದ ವಿದ್ಯಮಾನವಾದರೂ ನಾನು ಈ ಕಾದಂಬರಿಯನ್ನು ನೋಡುವ ಬಗೆ ಹೀಗೆ, ನನಗೆ ಈ ಕಾದಂಬರಿ ತಟ್ಟಿದ್ದು, ಮುಖ್ಯ ಎನಿಸಿದ್ದು ಈ ಬಗೆಯಲ್ಲಿ ಎನ್ನುವುದನ್ನು ಒಪ್ಪಿಕೊಳ್ಳಬೇಕೇ ಹೊರತು ಬೇರೆ ಬಗೆ ನನಗೆ ಸಾಧ್ಯವಿಲ್ಲ. ಹಾಗೆಯೇ ಪ್ರತಿಯೊಬ್ಬರಿಗೂ, ಪ್ರತಿಯೊಬ್ಬರ ಓದು, ಪ್ರತಿಸ್ಪಂದನ ಕೂಡ ಮೊದಲಿಗೆ ವೈಯಕ್ತಿಕವೇ ಎನಿಸುತ್ತದೆ ನನಗೆ. ವಿಮರ್ಶಕರು ಬಹುಶಃ ಸಾಮಾಜಿಕ, ತಾತ್ವಿಕ, ಸಾಹಿತ್ಯಿಕ ಮಾನದಂಡಗಳಿಂದಲೇ ನಿರ್ಲಿಪ್ತವಾಗಿ ನೋಡಿ ಬರೆಯುತ್ತಾರೇನೊ, ನಾನು ಅದಲ್ಲ.


ಈ ಒಂದು ಪೂರ್ವಭಾವಿ ‘ನಿರೀಕ್ಷಣಾ ಜಾಮೀನಿ’ಗೆ ಅರ್ಜಿ ಹಾಕಿಕೊಂಡೇ ನಾನು ಬರೆಯುತ್ತೇನೆ. ಜೊತೆಜೊತೆಗೇನೆ ನನಗೆ ಕಾದಂಬರಿ ಪ್ರಕಾರಕ್ಕೆ ಸೇರಿದ ಒಂದು ಕೃತಿಯಿಂದ ಇವತ್ತು ನಾವು ಏನನ್ನು ನಿರೀಕ್ಷಿಸುತ್ತೇವೆ ಎನ್ನುವುದರ ಹಿನ್ನೆಲೆಯಲ್ಲಿ ಹಾಗೂ ನಾ ಮೊಗಸಾಲೆಯವರಂಥ ನುರಿತ ಹಿರಿಯ ಕಾದಂಬರಿಕಾರರು ಬರೆಯುವಾಗ ಸ್ವಲ್ಪ ಹೆಚ್ಚೇ ನಿರೀಕ್ಷಿಸುವ ನನ್ನಂಥವರು ಅಂಥ ಹಿನ್ನೆಲೆಯಲ್ಲಿ ಈ ಕೃತಿಯ ಬಗ್ಗೆ ಆಡಬೇಕಾದ ಮಾತುಗಳಿವೆ. ಒಂದು ಕೃತಿಯನ್ನು ಅದರ ಸೂಕ್ಷ್ಮ ತಂತುಗಳ ಜೊತೆ ನಿಲ್ಲದೆ ಸಮಗ್ರವಾಗಿ (ಮ್ಯಾಕ್ರೊ ಎನ್ನುತ್ತೇವಲ್ಲ ಹಾಗೆ) ಗಮನಿಸಿ ಆಡುವ ಮಾತುಗಳು ಹೇಗೆ ಹಾದಿತಪ್ಪಿಸುತ್ತವೆ ಎನ್ನುವುದನ್ನು ಕೂಡ ಎತ್ತಿ ಆಡಬೇಕಾದ ಅಗತ್ಯ ಕಾಣುತ್ತಿದೆ. ಇದರಾಚೆ ನಾನು ಈ ಕೃತಿಯನ್ನು ವೈಯಕ್ತಿಕ ನೆಲೆಯಲ್ಲೇ ತಡಕುವುದರಿಂದ ಕೊಂಚ ಎಚ್ಚರದಿಂದ ಮಾತನಾಡುವ ತಾಪತ್ರಯವನ್ನು ಮೈಮೇಲೆಳೆದುಕೊಳ್ಳುತ್ತಿದ್ದೇನೆಂಬ ಪ್ರಜ್ಞೆಯೂ ನನ್ನನ್ನು ಕಾಡುತ್ತಿದೆ.

ಮೊದಲಿಗೆ ಮೊಗಸಾಲೆಯವರು ಚತುರ್ವಿಧ ಪುಣ್ಯಪುರುಷಾರ್ಥದ ಪ್ರಸ್ತಾಪ ಮಾಡುತ್ತಾರೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ನಾನಿದನ್ನು ಮೊದಲು ಕೇಳಿದ್ದು ಮತ್ತು ಈಗಲೂ ಕೇಳುತ್ತಿರುವುದು ನಮ್ಮ ಪುರೋಹಿತರ ಬಾಯಲ್ಲಿ. ನನ್ನ ಕೈಲಿ ಗಣಹೋಮ ಮಾಡಿಸುತ್ತ ಅವರು ಪ್ರತಿಬಾರಿ ನನಗೆ ಈ ನಾಲ್ಕು ಸಿದ್ಧಿಸಲಿ ಎಂದು ನಾನಿದನ್ನು ಮಾಡುತ್ತಿದ್ದೇನೆ ಎಂದು ಬಲವಂತವಾಗಿ ಹೇಳಿಸುತ್ತ ಬಂದಿದ್ದಾರೆ. ಬಹುಶಃ ವೇದಗಳಲ್ಲಿ ಇದು ಇದ್ದಿರಬೇಕು, ನಾನು ಸಂಸ್ಕೃತ ಬಲ್ಲವನಲ್ಲ. ನಾನು ಧರ್ಮದ ಹಾದಿಯಲ್ಲಿ ನಡೆಯುತ್ತ ಸಂಪಾದಿಸುವ ಅರ್ಥ (ಸಂಪತ್ತು) ನನಗೆ ನನ್ನ ಕಾಮನೆಗಳನ್ನು ಈಡೇರಿಸಿಕೊಳ್ಳುವ ಅವಕಾಶ ತೆರೆಯುತ್ತದೆ ಮತ್ತು ಕಾಮನೆಗಳು ಸಂತೃಪ್ತಗೊಂಡಿದ್ದೇ ಆದರೆ ಮನುಷ್ಯ ಭೂತದ ಹಂಬಲ, ಭವಿಷ್ಯದ ನಿರೀಕ್ಷೆಗಳಿಂದ ಮುಕ್ತನಾಗಿ ವರ್ತಮಾನದಲ್ಲಿ ಮೋಕ್ಷ ಕಾಣುತ್ತಾನೆ ಎನ್ನುವುದು ನಾನು ಇದಕ್ಕೆ ಕೊಟ್ಟುಕೊಂಡ ಅರ್ಥ. ಆದರೆ ಇದಕ್ಕಿನ್ನೊಂದು ಜನಪ್ರಿಯ ಮುಖದ ಅರ್ಥವಿದೆ. ಧರ್ಮಪತ್ನಿಯ ಮೂಲಕ ಪುತ್ರ ಸಂತಾನ ಹೊಂದಿದಲ್ಲಿ ಆತ ಪಿಂಡಪ್ರದಾನಾದಿ ಅಪರಕರ್ಮಗಳನ್ನು ನಡೆಸುತ್ತಾನಾದ್ದರಿಂದ ಪಿತೃವಿಗೆ ಸ್ವರ್ಗಪ್ರಾಪ್ತಿಯಾಗುವ ಅವಕಾಶವಿದ್ದು ಮೋಕ್ಷ ಲಭಿಸುತ್ತದೆ ಎನ್ನುವುದೇ ಆ ಇನ್ನೊಂದು. ನಮ್ಮ ಪುರೋಹಿತರು ಹೇಳುವುದು, ಅವರ ಮನಸ್ಸಲ್ಲಿರುವುದು ಇದು. ನಾರಿ ಸ್ವರ್ಗಕ್ಕೆ ದಾರಿ (ಬರಿಯ ದಾರಿ ಮಾತ್ರ, ಅವಳೇ ಸ್ವರ್ಗವಲ್ಲ!) ಎಂದು ಅಚ್ಚಕನ್ನಡದಲ್ಲಿ ಹೇಳುವಾಗಲೂ ನನ್ನ ಕಿವಿಗೆ ಕೇಳುವ ಅರ್ಥ ಅದೇ. ಐವತ್ತರ ಸಮೀಪ ಇರುವ, ಧರ್ಮದ ಪತ್ನಿಯಿಲ್ಲದ ನನಗೆ ಈಗ ದೈಹಿಕ ಭೋಗದ ಕಾಮನೆಗಳಿಲ್ಲ ಮತ್ತು ಸದ್ಯ ನಾನಿರುವ ಸ್ಥಿತಿಯೇ ಮೋಕ್ಷದ್ದು ಎನ್ನುವ ಬಗ್ಗೆ ಗೊಂದಲಗಳಿಲ್ಲ. ಆದರೆ ನನ್ನ ಈ ವಯಸ್ಸಿನಲ್ಲೇ ಹೆಣ್ಣಿನ ಸ್ನೇಹ, ಸಂಗ, ಸಹವಾಸ, ಸಾನ್ನಿಧ್ಯ ಮತ್ತು ರಿಸ್ಕ್ ಇಲ್ಲದೇ ಸಿಗುವಂತಿದ್ದರೆ ಭೋಗ ಕೂಡ ಬಯಸುವ ವಿವಾಹಿತರೂ (ಧರ್ಮದ ಪತ್ನಿ ಇರುವವರೂ), ಅವಿವಾಹಿತರೂ ನನಗೆ ಗೊತ್ತು. ಇವರಲ್ಲಿ ಅನೇಕರಿಗೆ ಆ ಹೆಣ್ಣಿನ ಬಗ್ಗೆ ವಿಪರೀತ ಮಡಿವಂತಿಕೆ, ಅಂದರೆ ಆಕೆಯ ಜಾತಿ, ಧರ್ಮ, ವೈವಾಹಿಕ ಸ್ಥಿತಿಗತಿ, ವಯಸ್ಸು ಇತ್ಯಾದಿಗಳ ಕುರಿತಾದ ಮಡಿವಂತಿಕೆ ಇಲ್ಲ. ಅಷ್ಟೇಕೆ, ಒಂದಷ್ಟು ವರ್ಷಗಳ ಹಿಂದೆ ನಾನು ಅವರ ಕೆಟಗರಿಯಲ್ಲೇ ಇದ್ದವನು. ಹಾಗಾಗಿ, ಇಲ್ಲಿ ಮೊಗಸಾಲೆಯವರು ಹೇಳುತ್ತಿರುವುದೆಲ್ಲ ನನಗೆ ಅರ್ಥವಾಗುತ್ತದೆ ಮಾತ್ರವಲ್ಲ ಏನಿಲ್ಲವೆಂದರೂ ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಹೆಮ್ಮಕ್ಕಳ ಬದುಕು, ಬವಣೆ, ಆಸೆ, ನಿರೀಕ್ಷೆಗಳಿಗೆ ಹತ್ತಿರದಿಂದ, ದೂರದಿಂದ ಸ್ಪಂದಿಸಿ ಸಾಕಷ್ಟು ಎನ್ನಬಹುದಾದ ಅನುಭವ ಪಡೆದಿರುವವನಾಗಿ ಬಹುಶಃ ಈ ಕಾದಂಬರಿಗೂ ಅತ್ಯಂತ ಸೂಕ್ತ ಸ್ಪಂದನ ನೀಡಬಲ್ಲ ಅರ್ಹತೆ ನನಗಿದ್ದೇ ಇದೆ ಎಂದು ನಂಬುತ್ತೇನೆ ಕೂಡ. 


ಮೊಗಸಾಲೆಯವರು ಬಹುಮುಖ್ಯವಾದ ಮಾತೊಂದನ್ನಾಡುತ್ತಾರೆ. ನಾವು ಆಚರಿಸಿದ್ದು ಕಡಿಮೆ, ಉಪದೇಶಿಸಿದ್ದು ಹೆಚ್ಚು ಎನ್ನುವ ಮಾತದು. ಇದು ಅವರು ಹೇಳಿರುವ ಅರ್ಥಲ್ಲೂ ನಿಜ, ಇನ್ನೊಂದು ಅರ್ಥದಲ್ಲೂ ನಿಜ. ಹೆಣ್ಣುಗಂಡು ಸಂಬಂಧದ ವಿಚಾರಕ್ಕೆ ಬಂದರೆ ನಾವು ಆಡುವುದೆಲ್ಲಾ ಬೊಗಳೆಯೇ. ನಿಜವಾದ ಅಗ್ನಿಪರೀಕ್ಷೆ ಎದುರಾಗುವುದು ವಿಷಮ ಸಂಬಂಧವೊಂದು (ವೈವಾಹಿಕ ಚೌಕಟ್ಟಿನಾಚೆಯ ಎಲ್ಲಾ ಬಗೆಯ ಗಂಡು-ಹೆಣ್ಣು ಸಂಬಂಧಗಳು, ಲೈಂಗಿಕತೆ ಇರಲಿ ಇಲ್ಲದಿರಲಿ, ಅದು ಅಷ್ಟು ಮುಖ್ಯವಲ್ಲ) ಏರ್ಪಟ್ಟು ನಾವು ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಸಂದರ್ಭ ಎದುರಾದಾಗಲೇ. ಆಗ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದು ಮಾತ್ರ ನಿಜ. ಉಳಿದಿದ್ದೆಲ್ಲಾ ಬೊಗಳೆ. ಎಷ್ಟು ಚಂದನ್ನ ಮಾತುಗಳಲ್ಲಿ, ಕ್ವಟೇಶನ್ನುಗಳಲ್ಲಿ, ಎಸ್ಸೆಮ್ಮೆಸ್ಸು, ಡಯ್ಲಾಗುಗಳಲ್ಲಿ ಉದ್ಘೋಷಿಸಿದರೂ ಮೂಲಭೂತವಾಗಿ ಒಂದು ಜೀವ ಇನ್ನೊಂದು ಜೀವದಿಂದ ನಿಜಕ್ಕೂ ಬಯಸಿದ್ದು ದೇಹದ ಸಂಸರ್ಗವೇ, ಬೌದ್ಧಿಕ ಸಂಸರ್ಗವೇ, ಭಾವನಾತ್ಮಕ ಅನುಬಂಧವೇ, ಒಳಗಿನ ಟೊಳ್ಳನ್ನು ತುಂಬಿಕೊಳ್ಳುವುದಕ್ಕೆ ಒಂದಿಷ್ಟು ಸದ್ದು, ಚ್ಯಾಟು, ಮಾತುಕತೆ ಮತ್ತು ಹರಟೆಯ ಗದ್ದಲವೇ ಎನ್ನುವುದು ಸ್ಪಷ್ಟವಾಗಲು ಎರಡು ಮೂರು ವರ್ಷ ಹಿಡಿಯುತ್ತದೆ. ಈ ಕಾದಂಬರಿಯಲ್ಲಿ ಕೊತಕೊತ ಅಂತ ಸುಡುವ ಬಾಯ್ಲಿಂಗ್ ಪಾಯಿಂಟ್ ಎಲ್ಲಿದೆ ಅಂದರೆ, ನನ್ನ ಪ್ರಕಾರ, ರಾಯರು ಕಾರವಾರಕ್ಕೆ ಹೋಗಿ ಶಶಿ ಉಡುಪರಿಗೂ ತಮಗೂ ಅಕ್ಕಪಕ್ಕದ ರೂಮು ಬುಕ್ ಮಾಡಿಕೊಂಡು ನಿಂತ ಬಳಿಕ ಕಳೆಯುವ ಮೊದಲ ರಾತ್ರಿಯ ಗೊಂದಲಗಳಲ್ಲೇ ಇದೆ ಅದು. ಇಬ್ಬರಿಗೂ ಪರಸ್ಪರ ಸಾನ್ನಿಧ್ಯದಲ್ಲಿ ತಮ್ಮ ಸ್ನೇಹ ಇದುವರೆಗೂ ಮೌಕಿಕವಾಗಿದ್ದಿದ್ದು ದೈಹಿಕವಾಗಿ ಹೊರಳುವುದೇ ಎನ್ನುವ ಆತಂಕ, ನಿರೀಕ್ಷೆ, ಉದ್ವೇಗ ಹುಟ್ಟಿಕೊಂಡಾಗಲೇ ಇದು ಪಬ್ಲಿಕ್ ಆದರೆ ಎನ್ನುವ ಒಂದು ಆತಂಕವೂ ಜಾಗೃತಗೊಳ್ಳುತ್ತದೆ. ಸಂಬಂಧಿಕರು ಅಂದರೆ ಸಂಸಾರ, ಕುಟುಂಬ, ಸಮಾಜ ಎಂಬ ಮೂರೂ ಹಂತದ ವಲಯ ಇಲ್ಲಿ ಶಶಿ ಉಡುಪರಿಗೆ ಇಲ್ಲ. ಆದರೆ ರಾಯರಿಗೆ ಇದೆ. ಹಾಗಾಗಿ ಈ ಎರಡನೆಯ ಆತಂಕ ರಾಯರಿಗಿದ್ದಷ್ಟು ಉಡುಪರಿಗೆ ಇಲ್ಲ ಎನ್ನುವುದು ನಿಜ. ಹಾಗಾಗಿ ರಾಯರ ಆತಂಕವನ್ನು ಶಶಿ ಉಡುಪರು ಕೊಂಕು ಆಡಿ ತಿವಿಯುವುದಕ್ಕೆ ಸಾಧ್ಯವಿದೆ ಎನ್ನುವುದನ್ನು ಗಮನಿಸಿ. ಆಗ, ಅಂಥ ಸಂದರ್ಭಗಳಲ್ಲೆಲ್ಲ ರಾಯರು ತಲೆ ಕೆಳಗೆ ಹಾಕುವುದಷ್ಟೇ ಸಾಧ್ಯ! ತಮ್ಮ ಮಗ ಮತ್ತು ಸೊಸೆಯನ್ನು ರಾಯರು ಶಶಿ ಉಡುಪರ ಜೊತೆ ಕಾರವಾರದ ರೂಮಿನಲ್ಲಿ ಎದುರಿಸಲಾರರು ಎನ್ನುವುದೇ ಸತ್ಯ ಮತ್ತು ನಿಜವಾದ ಅಗ್ನಿಪರೀಕ್ಷೆಯೇ ಹೊರತು ಇಲ್ಲಿ ಪುರುಷಾರ್ಥದ ಈಡೇರಿಕೆಯ ಪ್ರಶ್ನೆಗಳಾಗಲೀ, ಸ್ತ್ರೀಮತದ ಪ್ರಶ್ನೆಗಳಾಗಲೀ ಇಲ್ಲ. ಇದೆ ಎಂದು ನಾವು ನಂಬಿಸಲು ಪ್ರಯತ್ನಿಸಬೇಕೇ ಹೊರತು ಅವು ಸಹಜ ಸ್ಫೂರ್ತ ಅಲ್ಲ. 

ಇಲ್ಲಿಯೇ ಸ್ಪಷ್ಟಪಡಿಸಿಕೊಳ್ಳಬೇಕಾದ ಇನ್ನೆರಡು ಪ್ರಶ್ನೆಗಳಿವೆ. ಒಂದು, ಇಲ್ಲಿ ರಾಯರು ಮತ್ತು ಉಡುಪರು ಒಂದೇ ತಲೆಮಾರಿಗೆ ಸಲ್ಲುವವರಾಗಿರುವುದು. ಅಕಸ್ಮಾತ್ ರಾಯರು ಮೊದಮೊದಲು ನಿರೀಕ್ಷಿಸಿದ್ದಂತೆ ರಾಧೆ (ಶಶಿ ಉಡುಪ) ತೀರ ಎಳೆವಯಸ್ಸಿನ ಹುಡುಗಿಯಾಗಿರುತ್ತಿದ್ದಲ್ಲಿ ಇದೆಲ್ಲ ಹೇಗಿರುತ್ತಿತ್ತು ಎನ್ನುವುದು. ನಾನು ಮೊದಲಿಗೆ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ತಾವು ಕಲ್ಪಿಸಿದ ಹೆಣ್ಣು ತನ್ನದೇ ತಲೆಮಾರಿಗೆ ಸಲ್ಲುವ ಶಶಿ ಉಡುಪ ಎಂದು ತಿಳಿದಿದ್ದೇ ರಾಯರು ಭ್ರಮನಿರಸನಗೊಂಡು ಆಕೆಯ ಆಕರ್ಷಣೆಯಿಂದ ದೂರವಾಗುತ್ತಾರೆ ಎಂದೇ ನಿರೀಕ್ಷಿಸಿದ್ದೆ! ಆದರೆ ಆಮೇಲೆ ರಾಯರು ನನಗಿಂತ ಹೆಚ್ಚು ಉದಾರವಾಗಿದ್ದಾರೆ ಎನಿಸಿತು. ಅವರು ವಯಸ್ಸಾದ ರಾಧೆಯನ್ನು ಕೂಡ ಸ್ವೀಕರಿಸುತ್ತಾರೆ. ಹಾಗಾಗಿ ಬಹುದೊಡ್ಡ ಸವಾಲೊಂದು ಮುಖಾಮುಖಿಯಾಗುವುದು ತಪ್ಪುತ್ತದೆ. 

ಇಲ್ಲಿಯೇ ಹೇಳಬಹುದಾದ ಇನ್ನೊಂದು ಆಯಾಮದ ಕುರಿತ ಮಾತಿದೆ. ಕಾದಂಬರಿಯಲ್ಲಿ ರಂಗಪ್ಪಯ್ಯ-ಯಶೋದಾರ ಸಂಬಂಧದ ಕುರಿತು ಒಂದು ಉಲ್ಲೇಖವಷ್ಟೇ ಎನ್ನಬಹುದಾದ ಎಳೆ ಬರುತ್ತದೆ. ಆದರೆ ಇದು ಬೆಳೆಯುವುದಿಲ್ಲ. ಅಲ್ಲದೆ, ಧಾತು ಎತ್ತಿಕೊಂಡ ವಸ್ತು ವಿಧುರ, ಅವಿವಾಹಿತ/ತೆ, ವಿಚ್ಛೇದಿತೆ, ವಿಧವೆ ಮುಂತಾದ ಗಂಡು-ಹೆಣ್ಣುಗಳ ನಡುವೆಯೇ ಸಂಭವಿಸಬೇಕಾದ್ದಿಲ್ಲ. ವಿವಾಹಿತರಾಗಿ ಬದುಕು ಸಾಗಿಸುತ್ತಿರುವ ಮತ್ತು ಹೊರಜಗತ್ತಿಗೆ ಸುಖೀಸಂಸಾರ ಎನಿಸುವಲ್ಲಿಯೂ ಇಂಥವು ಸಂಭವಿಸುತ್ತಿರುತ್ತವೆ. ರಂಗಪ್ಪಯ್ಯ-ಯಶೋದಾ ಮತ್ತು ಮೊಗಸಾಲೆಯವರ ಸಣ್ಣಕತೆ ಮನದ ಮುಂದಣ ಮಾಯೆಯ ಕಾಮತ್-ಗೀತಾ ಪ್ರಕರಣದಲ್ಲೇ ಇದು ನಡೆಯುತ್ತದೆ. ಆದರೆ ಎರಡೂ ಪ್ರಕರಣಗಳು ರಾಯರು ಮತ್ತು ಶಶಿ ಉಡುಪರ ಪ್ರಕರಣದಂತೆ ಬೆಳೆಯುವುದಿಲ್ಲ. ಮಾತ್ರವಲ್ಲ, ಮೊಗಸಾಲೆಯವರು ಒನ್ ಇಸ್ ಟು ಒನ್ ಸಂಬಂಧಕ್ಕೇ ಕಟ್ಟುಬಿದ್ದು ಕಥಾನಕವನ್ನು ಬೆಳೆಸುತ್ತಾರೆ ಎನ್ನುವುದು ಕೂಡ ಇಲ್ಲಿ ಮುಖ್ಯ. ಉದಾಹರಣೆಗೆ ರಾಯರಿಗೆ ಏಕಕಾಲಕ್ಕೆ ಇಬ್ಬರು ಅಥವಾ ಮೂವರು ಸ್ತ್ರೀಯರು, ವಿಭಿನ್ನ ವಯೋಮಾನದವರು ಮತ್ತು ರಾಯರ ಸಾಹಿತ್ಯದಲ್ಲಿ ವಿಭಿನ್ನ ಸ್ತರದ ಅಭಿಮಾನ ಹೊಂದಿದ್ದವರು ತಗುಲಿಕೊಂಡಿದ್ದರೆ ಹೇಗಿರುತ್ತಿತ್ತು ಎನ್ನುವ ಒಂದು ಸಾಧ್ಯತೆಯೂ ಕಾದಂಬರಿಯ ಚೌಕಟ್ಟಿನ ಹೊರಗಿನದೇ ಆಗಿ ಉಳಿಯುತ್ತದೆ. ರಾಯರ ಪತ್ನಿ ಬದುಕಿದ್ದು ಇದೆಲ್ಲ ನಡೆದಿದ್ದರೆ ಹೇಗಿರುತ್ತಿತ್ತು, ಅಥವಾ ಪರಸ್ಪರ ಗೆಳತಿಯರಿಗೆ ರಾಯರು ಹೇಗೆ ಸಮಯ ಹಂಚುತ್ತಿದ್ದರು ಮತ್ತು ಅವರೊಳಗಿನ ಕಲಹಗಳನ್ನು ಹೇಗೆ ನಿರ್ವಹಿಸುತ್ತಿದ್ದರು ಎನ್ನುವುದೆಲ್ಲ ಕುತೂಹಲಕರ ಮಾತ್ರವಲ್ಲ ಮೂಲತಃ ಮನುಷ್ಯನ ಈ ಹಪಹಪಿ ದೇಹದ್ದೆ, ಮನಸ್ಸಿನದ್ದೆ ಅಥವಾ ಬೇರೆಯೇ ಒಂದು ಸಂಚಾರೀ ಲಹರಿಯದ್ದೇ ಎನ್ನುವುದನ್ನೆಲ್ಲ ಇಂಥ ಸಂಕೀರ್ಣ ಸನ್ನಿವೇಶಗಳೇ ಒರೆಗೆ ಹಚ್ಚಿ ತೋರಿಸುತ್ತವೆ ಕೂಡ. 

ಆದರೆ ಮೊಗಸಾಲೆಯವರು ಕಥನ ಕೇಂದ್ರಿತವಾಗಿ ಈ ಕೃತಿಯನ್ನು ಕಟ್ಟುತ್ತ ಹೋಗುತ್ತಾರೆಯೇ ವಿನಃ ಆರಿಸಿಕೊಂಡ ವಸ್ತು ಕೇಂದ್ರಿತವಾಗಿ, ವಸ್ತುವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಕೃತಿಕಟ್ಟುವ ಸಾಹಸಕ್ಕೆ ಕೈಹಾಕುವುದೇ ಇಲ್ಲ. ಉದಾಹರಣೆಗೆ ಕಾದಂಬರಿಯ ಒಂಬತ್ತನೆಯ ಪುಟದಲ್ಲೇ ಎದುರಾಗುವ ಡಾ.ಪ್ರದೀಪರ ಪ್ರಶ್ನೆ, ‘ನಿನಗೆ ಈಗ ಹೆಣ್ಣು ಬೇಕಾಗಿರುವುದು ಲೈಂಗಿಕ ಅವಶ್ಯಕತೆಗಾಗಿಯೇ ಅಥವಾ ಮಾನಸಿಕ ಅವಶ್ಯಕತೆಗಾಗಿಯೇ?’ ಎನ್ನುವುದಕ್ಕೆ ಹೇಗೆ ರಾಯರು ಉತ್ತರಿಸದೇ ನುಣುಚಿಕೊಳ್ಳುತ್ತಾರೋ ಹಾಗೆಯೇ ಇಡೀ ಕಾದಂಬರಿ ಬಹುಮುಖ್ಯ ಪ್ರಶ್ನೆಗಳನ್ನು, ಸಂಕೀರ್ಣ ಸಂದರ್ಭಗಳನ್ನು ಎದುರಿಸದೇ ನುಣುಚಿಕೊಂಡೇ ಸಾಗುತ್ತದೆ.

ಒಂದು ವಯಸ್ಸು ದಾಟಿದ ಬಳಿಕ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳ ವೈವಿಧ್ಯತೆ ಭಿನ್ನಗೊಳ್ಳುತ್ತದೆ. ಹದಿಹರೆಯದ ಹುಚ್ಚು ಪ್ರೇಮ ಬೇಕೆಂದರೂ ಸಾಧ್ಯವಾಗುವುದಿಲ್ಲ ಹೇಗೋ ಹಾಗೆಯೇ ದೇಹದಲ್ಲೂ ಯೌವನದ ಕೆಲವೊಂದು ಪ್ರಕ್ರಿಯೆಗಳು ಸಹಜ-ಸುಲಭ ಆಗಿ ಉಳಿದಿರುವುದೇ ಇಲ್ಲ. ಲೈಂಗಿಕ ಉದ್ರೇಕ ಒಂದು ವ್ಯಾಯಾಮದಂತಾಗಿ ಬ್ಲೂಫಿಲಮ್ಮಿನ ಹೊಸ ಹೊಸ ತುಣುಕುಗಳನ್ನು ಅಷ್ಟಿಷ್ಟು ಹೊತ್ತು ಕಂಡು ಅದನ್ನು ಸಾಧಿಸಿಕೊಳ್ಳಬೇಕಾಗುತ್ತದೆ. ಸ್ಖಲನವೆಂಬುದು ಬೆನ್ನಹುರಿಯ ಬಿಲ್ಲನ್ನು ಮೀಟಿ ನಡುಗಿಸದೆ ಕೇವಲ ವಿಸರ್ಜನೆಯಷ್ಟೇ ಆಗಿ ಮುಗಿದುಬಿಡುತ್ತದೆ. ಇಂಥ ದೇಹವನ್ನಿಟ್ಟುಕೊಂಡು ಒಬ್ಬ ಯುವತಿಯ ಜೊತೆ ಅವಳನ್ನು ಸಂತೋಷವಾಗಿಡುವ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತ, ಖರ್ಚುಮಾಡಿ, ಪ್ರೀತಿ ತೋರಿಸಿ ಗಂಡು ಪ್ಯಾದೆ ತರ ಆಗುವುದು ನಮಗೆ ಗೊತ್ತು. ನಡುವಯಸ್ಸಿನ ಇಬ್ಬರು ಪರಸ್ಪರ ಸಂಬಂಧ ಬೆಳೆಸಿಕೊಂಡಾಗಲೂ ಅದು ದೇಹದ ನೆಲೆಗೆ ಏರುವುದೇ, ಮಾನಸಿಕ ನೆಲೆಯಲ್ಲಷ್ಟೇ ತೃಪ್ತವಾಗಿರುವುದೇ ಎನ್ನುವ ಪ್ರಶ್ನೆಯನ್ನು ಕೂಡ ಮೊಗಸಾಲೆಯವರು ಪೂರ್ತಿಯಾಗಿ ಎದುರಿಸುವುದಿಲ್ಲ. ಕೆ ಎಸ್ ನರಸಿಂಹಮೂರ್ತಿಯವರು ಕೂಡ ತಮ್ಮ ಒಂದು ಕವನದಲ್ಲಿ ಕಾಮವೇ ಮೊದಲು ಬರಲಿ, ಅದು ತೃಪ್ತಗೊಂಡ ಬಳಿಕ ಬರುವ ಪ್ರೇಮವೇ ನಮಗುಳಿಯಲಿ ಎನ್ನುತ್ತಾರೆ. ಇಲ್ಲಿ ನಾನು ಮೇಲೆ ಹೇಳಿದ ಕುದಿಬಿಂದುವಿನಾಚೆ ಕಾದಂಬರಿಯನ್ನು ಮೊಗಸಾಲೆಯವರು ವಿಸ್ತರಿಸಿದ್ದರೆ ಬಹುಶಃ ಅಂಥ ಒಂದು ಸ್ಥಿತಿಯನ್ನು ಕೂಡ ಕಾಣಬಹುದಿತ್ತೇ ಅಥವಾ ಇನ್ನೇನೋ ಬೇರೆಯೇ ಆಗುವುದಿತ್ತೇ ಎನ್ನುವ ಬಹುಮುಖ್ಯ ಪ್ರಶ್ನೆ ಕೊನೆಗೂ ಪ್ರಶ್ನೆಯಾಗಿಯೇ ಉಳಿಯುತ್ತದೆ. 

ಇಲ್ಲಿ ನಮಗೆ 2002ರಲ್ಲಿಯೇ ಬಂದಿದ್ದ ನಟಿ ರೇವತಿ ನಿರ್ದೇಶನದ, 2003ರಲ್ಲಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡ ಮಿತ್ರ್ ಮೈ ಫ್ರೆಂಡ್ ಎಂಬ ಸಿನಿಮಾ, 2003ರಲ್ಲಿ ಬಂದ ಕವಿತಾ ಲಂಕೇಶ್ ನಿರ್ದೇಶನದ ಸಿನಿಮಾ, ಪ್ರೀತಿ ಪ್ರೇಮ ಪ್ರಣಯ, 2007ರಲ್ಲಿ ಬಂದ ಚೀನೀ ಕಮ್ ಸಿನಿಮಾ ಮತ್ತು 2014ರಲ್ಲಿ ಬಂದ ನಮ್ಮ ಪ್ರಕಾಶ್ ರೈ ನಿರ್ದೇಶನದ ಒಗ್ಗರಣೆ ಎಂಬ ಸಿನಿಮಾ ಗಮನದಲ್ಲಿದ್ದರೆ ಚೆನ್ನಾಗಿರುತ್ತದೆ. ಮೊಗಸಾಲೆಯವರು ಕೈಗೆತ್ತಿಕೊಂಡ ವಸ್ತುವಿಗೂ ತಕ್ಷಣಕ್ಕೆ ನೆನಪಾಗುವ ಈ ನಾಲ್ಕೂ ಸಿನಿಮಾ ಕತೆಗಳಿಗೂ ತುಂಬ ಸಂಬಂಧವಿದೆ. ವಸ್ತುವಿನ ಸಂಕೀರ್ಣತೆ, ಅದನ್ನು ಕೃತಿಯೊಳಕ್ಕೆ ತರಲು ಬೇಕಾದ ಕೆಲವೊಂದು ಆಯಾಮಗಳು ನಮಗೆ ಈ ಸಿನಿಮಾಗಳಲ್ಲಿ ಕಾಣಲು ಸಿಗುವುದರಿಂದ ಬಹುಶಃ ಮೊಗಸಾಲೆಯವರು ಕೂಡ ಈ ಸಿನಿಮಾಗಳನ್ನು ಗಮನಿಸಿದ್ದರೆ, ನೆನಪಿಸಿಕೊಂಡಿದ್ದರೆ ಆಗ ಅವರು ಕಥನ ಕೇಂದ್ರಿತ ಕೃತಿಯೊಂದನ್ನು ಕಟ್ಟುವುದರ ಜೊತೆ ಜೊತೆಗೇ ವಸ್ತು ಕೇಂದ್ರಿತ ಕಥನವನ್ನೂ ಕಟ್ಟುತ್ತ ಹೆಚ್ಚು ಸಂಕೀರ್ಣವೂ ಸಮಗ್ರವೂ ಆದ ಒಂದು ಕಾದಂಬರಿಯನ್ನು ಕೊಡುವುದು ಸಾಧ್ಯವಾಗುತ್ತಿತ್ತು ಎನ್ನುವುದು ನನ್ನ ನಂಬಿಕೆ. 

ಇನ್ನೊಂದು ಈ ವಸ್ತು, ಅದನ್ನು ಮೊಗಸಾಲೆಯವರ ಪರಿಕಲ್ಪನೆಯ ಚೌಕಟ್ಟಿನಲ್ಲೇ ಇಟ್ಟು ನೋಡುವುದಾದರೆ ಅದು ಅಷ್ಟೊಂದು ಸಮಕಾಲೀನವಲ್ಲ ಎನ್ನುವುದರತ್ತ ಕೂಡ ನಮ್ಮ ಗಮನ ಇರಬೇಕಾದ್ದು ಅಗತ್ಯವಿದೆ, ಕಾದಂಬರಿಯ ಗುರುತ್ವವನ್ನು ಮಹತ್ವವನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೆ ಈ ಅಂಶವನ್ನು ಪರಿಗಣಿಸಿಯೂ ಅವಕಾಶವಿದ್ದೇ ಇದೆ ಎನ್ನುವ ಕಾರಣಕ್ಕೇ ಇದು ಮುಖ್ಯವಾಗುತ್ತದೆ. ಅಂದರೆ, ಸ್ಪಷ್ಟವಾಗಿ ಮೊಗಸಾಲೆಯವರ ಪರಿಕಲ್ಪನೆಯ ಚೌಕಟ್ಟಿನೊಳಗೆ ಕಥಾನಕದ ವಸ್ತು ಬಂಧಿಯಾಗಿಲ್ಲ, ಅದು ಅವರು ಅಂದುಕೊಂಡಿದ್ದಕ್ಕಿಂತ ಹೆಚ್ಚು ಆಧುನಿಕವಾಗಿದೆ ಎಂದು ಹೇಳುವುದೇ ನನ್ನ ಉದ್ದೇಶವೇ ಹೊರತು ಇನ್ನೇನಲ್ಲ.

ಮೊಗಸಾಲೆಯವರ ತಲೆಮಾರಿಗೆ ಹೆಚ್ಚು ನಿಜವಾಗಿದ್ದ ಈ ಒಂದು ಸ್ಥಿತಿ ನನ್ನ ತಲೆಮಾರಿಗೆ ಕೊಂಚ ಸುಧಾರಿಸಿತ್ತು. ನಮಗೆ ಇದೆಲ್ಲ ಪತ್ರಮೈತ್ರಿ, ಇಂಟರ್ನೆಟ್, ಆರ್ಕುಟ್, ಯಾಹೂ/ರೀಡಿಫ್ ಬೋಲ್‌ಗಳ ಚ್ಯಾಟ್‌ರೂಮುಗಳಲ್ಲಿ ಅಷ್ಟಿಷ್ಟು ಪರಿಹಾರವಾದರೆ ನಂತರದ ತಲೆಮಾರಿಗೆ ವ್ಯಾಟ್ಸಪ್, ಫೇಸ್‌ಬುಕ್, ಸ್ಕೈಪ್, ಸ್ನ್ಯಾಪ್ ಚ್ಯಾಟುಗಳಂಥ ವೈವಿಧ್ಯಮಯ ಅವಕಾಶಗಳು ತೆರೆದುಕೊಂಡವು. ಸದ್ಯದ ತಲೆಮಾರಿಗೆ ಯಾವುದೇ ಫಿಲ್ಟರುಗಳಿಲ್ಲ. ಇವತ್ತು ಸ್ವಲ್ಪ ಮಜಾ ತಗೊಳ್ಳೋಣವೇ ಮಟ್ಟಕ್ಕೆ ಅದು ಬಂದಿದೆ ಮತ್ತು ವಿದ್ಯಾರ್ಥಿಗಳ ನಡುವೆ ಬಂದಿದೆ. ಹಾಗಾಗಿ, ಮೊಗಸಾಲೆಯವರು ಹೇಳುತ್ತಿರುವ ಚತುರ್ವಿಧ ಪುಣ್ಯಪುರುಷಾರ್ಥಗಳಲ್ಲಿ ಕಾಮ ಒಂದು ಸಮಸ್ಯೆ, ಗುಟ್ಟು, ರಹಸ್ಯ ಇತ್ಯಾದಿಯಾಗಿ ಉಳಿದಿಲ್ಲ, ಗಂಡಿಗೂ ಹೆಣ್ಣಿಗೂ. ದಶಕಗಳಷ್ಟು ಹಿಂದೆಯೇ "ಇಣುಕಿ ನೋಡುವ" ಚಪಲದ ದಿನಗಳು ಕಳೆದು ಹೋದವು ಎಂದು ಹದಿಹರಯದ ತಲೆಮಾರು ಘೋಷಿಸಿದ್ದು ನನಗೆ ನೆನಪಿದೆ. ಅಷ್ಟೇಕೆ, ಸುಮಾರು 1998 ರ ಸುಮಾರಿಗೆ ಮಂಗಳೂರಿನಲ್ಲೇ ನಡೆಯುತ್ತಿದ್ದ ಒಂದು ವಿದ್ಯಮಾನದ ಬಗ್ಗೆ ಹೇಳಿದರೆ ನಿಮಗೆ ಅಚ್ಚರಿಯಾದೀತು. ಇಲ್ಲಿ ಒಂದು ಹೈಕ್ಲಾಸ್ ಸೊಸೈಟಿಯ ಕ್ಲಬ್ಬಿನ ಸದಸ್ಯರು ಸಪತ್ನೀಕರಾಗಿ ರಾತ್ರಿಯ ಡಿನ್ನರಿಗೆ ಬಂದು ಒಂದು ಆಟ ಆಡುತ್ತಿದ್ದರಂತೆ. ಆಟ ಏನೆಂದರೆ, ಪ್ರತಿಯೊಬ್ಬರೂ ತಮ್ಮ ತಮ್ಮ ಕಾರಿನ ಕೀಯನ್ನು ಟೀಪಾಯಿಯ ಮೇಲೆಸೆಯಬೇಕು. ಬಳಿಕ ಪ್ರತಿಯೊಬ್ಬರೂ ತಮ್ಮದಲ್ಲದ ಒಂದು ಕೀಯನ್ನು ಎತ್ತಿಕೊಳ್ಳಬೇಕು. ಆ ಕೀ ಯಾರದೋ ಆತನ ಮಡದಿ ಆವತ್ತಿನ ಮಟ್ಟಿಗೆ ಕೀ ಆರಿಸಿಕೊಂಡವನ ಸಂಗಾತಿಯಾಗುತ್ತಾಳೆ. ಇದನ್ನು ನನಗೆ ಹೇಳಿದ ವಯೋವೃದ್ಧರು ಗೌರವಾನ್ವಿತ ವ್ಯಕ್ತಿಯಾಗಿದ್ದವರು, ಸ್ವತಃ ಈ ವಿದ್ಯಮಾನದ ಬಗ್ಗೆ ತಮ್ಮದೇ ಕುಟುಂಬದ ಸದಸ್ಯರಿಂದ ವಿಷಯ ತಿಳಿದುಕೊಂಡವರು. 2009ರಲ್ಲಿ ಬಂದ ನಾಗರಾಜ ವಸ್ತಾರೆಯವರ ಒಂದು ನೀಳ್ಗತೆ ಮಡಿಲು (ಇದು ಪುಟ್ಟ ಪುಸ್ತಕವಾಗಿಯೇ ಪ್ರಕಟವಾಗಿತ್ತು) ಕೂಡ ಇಲ್ಲಿ ಉಲ್ಲೇಖನಾರ್ಹ. ಈ ಕತೆಯಲ್ಲಿ ಯುವಕನೊಬ್ಬ ತನ್ನ ತಾಯಿಯ ಬಳಿಯೇ ತಾನು ಈಚೆಗೆ ತೀರ ಆಧುನಿಕ ವರಸೆಯ ಹುಡುಗಿಯೊಬ್ಬಳ ಜೊತೆ ಓಡಿಯಾಡಿ ಮಾಡುತ್ತಿರುವುದರ ಹಿಂದೆ ಒಂದು ಘನ ಉದ್ದೇಶವಿದೆಯೆಂದೂ, ನಾಳೆ ತಾನು ಮದುವೆಯಾಗುವ ಹುಡುಗಿ ತನ್ನ ಲೈಂಗಿಕ ಸಾಮರ್ಥ್ಯವನ್ನು ಪ್ರಶ್ನಿಸುವ ಸಂಭವನೀಯ ಸಾಧ್ಯತೆಗೆ ತಾನು ಈಗಿನಿಂದಲೇ ತಯಾರಾಗಬೇಕಿದ್ದು ಒಂದು ವೇಳೆ ತಾನು ಮದುವೆಯಾದ ಹುಡುಗಿಯೆದುರು ಲೈಂಗಿಕವಾಗಿ ಅಷ್ಟೇನೂ ಆವ್‌ಸಮ್ ಅಲ್ಲ ಅನ್ನಿಸಿಕೊಂಡರೆ ಅದು ತನ್ನ ಬದುಕನ್ನೇ ಸರ್ವನಾಶಗೊಳಿಸಬಹುದಾಗಿದೆ ಎನ್ನುವುದು ತನ್ನ ವಿಚಾರ ಎನ್ನುತ್ತಾನೆ! ಮೊಗಸಾಲೆಯವರ ಕಾದಂಬರಿಯಲ್ಲೇ ಒಂದೆಡೆ ಸವಿತಾ ತನ್ನ ಬದುಕು ಹಾಳಾದ ಕತೆಯನ್ನು ಹೇಳುತ್ತಾ ಗಂಡಸರಲ್ಲೂ ಯಾರು ನಪುಂಸಕ, ಯಾರು ಅಲ್ಲ ಎಂದು ನಮಗೆ ಗೊತ್ತಾಗುವುದು ಹೇಗೆ ಎಂದು ನಿಡುಸುಯ್ಯುತ್ತಾಳೆ. ಒಂದು ಕಾಲಕ್ಕೆ ಆರೋಗ್ಯಕ್ಕಾಗಿ ಯೋಗ, ವ್ಯಾಯಾಮ ಎಲ್ಲ ಮಾಡುತ್ತಿದ್ದ ಪುರುಷ ಇವತ್ತು ದೇಹದ ಆಕೃತಿ, ಸೌಂದರ್ಯವನ್ನು ಹೆಚ್ಚಿಸುವುದಕ್ಕೆ, ಸಿಕ್ಸ್ ಪ್ಯಾಕು, ಫಿಗರು ಸರಿಪಡಿಸಿಕೊಳ್ಳುವುದಕ್ಕೆ ಹೊರಟಿರುವುದರಿಂದಲೇ ಅಲ್ಲವೆ ಗಲ್ಲಿಗಲ್ಲಿಯಲ್ಲಿ ಜಿಮ್ಮುಗಳು ಸುರುವಾಗಿರುವುದು? ಇದನ್ನೆಲ್ಲ ಗಮನಿಸಿದರೆ, ಮೊಗಸಾಲೆಯವರು ನಿಂತು ಬರೆಯುತ್ತಿರುವ ವಿದ್ಯಮಾನ ಅವರ ತಲೆಮಾರಿಗೆ ಸಂದು ಹೋದ ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಯಲ್ಲ. ಇವತ್ತಿಗೆ ಸಂಬಂಧಿಸಿದ, ಅಥವಾ ಕನಿಷ್ಠ ಎಸ್ಸೆಮ್ಮೆಸ್ ಜಮಾನಕ್ಕೆ ಸಂಬಂಧಿಸಿದ ವಿದ್ಯಮಾನವೇ. 

ಇದೆಲ್ಲ ಹೋಗಲಿ ಎಂದರೆ, ಮೊಗಸಾಲೆಯವರ ಕಾದಂಬರಿಯಲ್ಲಿ ವಾತ್ಸಾಯನನ ಕಾಮಸೂತ್ರವನ್ನು ಓದಿಕೊಂಡು ರತಿಸುಖವನ್ನು ಪರಿಪೂರ್ಣವಾಗಿ ಅನುಭವಿಸುವಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಕೊಡುವ ಮತ್ತು ಪಡೆದುಕೊಳ್ಳುವ ಮನೋಧರ್ಮದಿಂದ ಒಂದಾಗುವುದು ಅಗತ್ಯ,ಆದರೆ ಹೆಚ್ಚಿನ ಸಂದರ್ಭದಲ್ಲಿ ಗಂಡು ಅದು ತನ್ನ ಹಕ್ಕು ಎಂಬಂತೆ ಪಡೆದುಕೊಳ್ಳುತ್ತಿದ್ದ, ಹೆಣ್ಣು ಅದನ್ನು ವೈವಾಹಿಕ ಕರ್ತವ್ಯವೆಂಬಂತೆ ಇಷ್ಟವಿರಲಿ ಇಲ್ಲದಿರಲಿ, ದೇಹ-ಮನಸ್ಸು ಸ್ಪಂದಿಸುತ್ತಿರಲಿ ಇಲ್ಲದಿರಲಿ ಕೊಡಬೇಕಾಗಿತ್ತು ಎನ್ನುವಂತೆ ಬರೆದಿದ್ದಾರೆ. ಇದರಲ್ಲಿ ಎಂ ಎಸ್ ಆಶಾದೇವಿಯವರು ಸ್ತ್ರೀಮತದ ಅಂಶಗಳನ್ನು ಕಂಡಿದ್ದಾರೆ. ಆದರೆ ಮೊಗಸಾಲೆಯವರು ಉಲ್ಲೇಖಿಸುತ್ತಿರುವ ತಲೆಮಾರಿನಲ್ಲಿ ಹೆಚ್ಚಿನ ಸಂದರ್ಭಗಳು ಹೇಗಿರುತ್ತಿದ್ದವು ಎನ್ನುವ ಕಡೆಗೂ ನಮ್ಮ ಗಮನ ಹರಿಯುವ ಅಗತ್ಯವಿದೆ. ತೀರ ಇಲೈಟ್ ಎನ್ನಬಹುದಾದ ವಕೀಲರು, ವೈದ್ಯರು, ಇಂಜಿನಿಯರುಗಳು ಮುಂತಾದ ವರ್ಗದ ವಿದ್ಯಾವಂತರನ್ನು ಬಿಟ್ಟರೆ ಖಾಸಗಿತನದ ಬೆಡ್‌ರೂಮ್ ಪರಿಕಲ್ಪನೆ ಎಲ್ಲಿತ್ತು! ಹಜಾರದಲ್ಲಿ ಎಲ್ಲರೊಳಗೊಂದಾಗಿ ಬಿದ್ದುಕೊಂಡ ಬಳಿಕ ಎಲ್ಲರೂ ಮಲಗಿದ್ದನ್ನು ಖಾತ್ರಿಪಡಿಸಿಕೊಂಡು, ಎಲ್ಲಿ ಯಾರು ಎದ್ದು ಬಿಡುತ್ತಾರೋ ಎಂಬ ಆತಂಕದಲ್ಲಿ ಗಡಿಬಿಡಿಯಲ್ಲೇ ಮುಗಿದು ಹೋಗುತ್ತಿದ್ದ ಒಂದು ‘ಕೆಲಸ’ಕ್ಕೆ ವಾತ್ಸಾಯನನ ಅಗತ್ಯವೇ ಇರಲಿಲ್ಲ ಅಲ್ಲವೆ! ಪಡೆದುಕೊಳ್ಳುವ, ಕೊಟ್ಟುಕೊಳ್ಳುವ ಪರಿಕಲ್ಪನೆಗಳೆಲ್ಲ ಈ ಹೆಚ್ಚಿನ ಸಂದರ್ಭಗಳಲ್ಲಿ ಇರಲೇ ಇಲ್ಲ ಎಂದ ಮೇಲೆ ಇಲ್ಲಿ ಸ್ತ್ರೀಮತವೆಲ್ಲಿ ಬಂತು. ಮೇಲಾಗಿ, ನಾವೆಲ್ಲರೂ ಬಲ್ಲಂತೆ ಪುರುಷ ಒಂದಿಷ್ಟಾದರೂ ಹೆಣ್ಣಿನ ತೆಕ್ಕೆಗೆ ಬಿದ್ದು ಬಾಗಿದ್ದು, ಅವಳ ಕೆಲವು ಆಶೋತ್ತರಗಳಿಗೆ ಸ್ಪಂದಿಸಿದ್ದು, ಅವಳ ಪರವಹಿಸಲು ಒಪ್ಪಿದ್ದು ಇದ್ದರೆ ಅದು ಈ ಕೊಟ್ಟು-ಕೊಳ್ಳುವ ಸಂದರ್ಭದಲ್ಲೇ, ಅದರ ಅಗತ್ಯಕ್ಕೆ ಬಿದ್ದೇ ಎನ್ನುವುದು ಕೂಡ ಸತ್ಯವಲ್ಲವೆ! ಸದ್ಯ ಮೊಗಸಾಲೆಯವರು ಚಿತ್ರಿಸುತ್ತಿರುವ ದಾಂಪತ್ಯ ಅಥವಾ ಸಾಂಗತ್ಯದ ಕತೆಯಂತೂ ಆ ತಲೆಮಾರಿಗೆ ಸಂಬಂಧಿಸಿದ್ದಲ್ಲವೇ ಅಲ್ಲ ಎನ್ನುವುದು ಕೂಡ ಇಲ್ಲಿ ಹೀಗೆ ಮುಖ್ಯವಾಗುತ್ತದೆ.

ತಮ್ಮ ಕಾದಂಬರಿಯ ಮುನ್ನುಡಿಯಲ್ಲಿ ನಾ ಮೊಗಸಾಲೆಯವರು ಕೆಲವೊಂದು ಕಾದಂಬರಿಗಳನ್ನು ಉಲ್ಲೇಖಿಸುತ್ತಾರೆ. ಅನಕೃ ಅವರ ಶನಿಸಂತಾನ, ಭೈರಪ್ಪನವರ ಜಲಪಾತ, ವಂಶವೃಕ್ಷ ಮತ್ತು ಮಂದ್ರ, ಅನಂತಮೂರ್ತಿಯವರ ಸಂಸ್ಕಾರ, ಆಲನಹಳ್ಳಿಯವರ ಕಾಡು ಮತ್ತು ಕಾರಂತರ ಮೈಮನಗಳ ಸುಳಿಯಲ್ಲಿ. ಕಾದಂಬರಿಯ ಒಳಗೆ ಒಂದು ಪಾತ್ರ ಉಲ್ಲೇಖಿಸುವ ಕಾದಂಬರಿ ಭಾರತೀಸುತರ ಗಿಳಿಯು ಪಂಜರದೊಳಿಲ್ಲ. ಮೊಗಸಾಲೆಯವರ ಕಾದಂಬರಿಯೊಳಗೇ ಮನದ ಮುಂದಣ ಮಾಯೆ ಎನ್ನುವ ಒಂದು ಸಣ್ಣಕತೆಯೂ ಬರುತ್ತದೆ. ಈ ಸಣ್ಣಕತೆಗೆ ಬಂದ ಪ್ರತಿಸ್ಪಂದನವೇ ತಮ್ಮ ಕಾದಂಬರಿಗೆ ಸ್ಫೂರ್ತಿ ಎಂಬುದಾಗಿ ಮೊಗಸಾಲೆಯವರೂ ಹೇಳಿಕೊಂಡಿದ್ದಾರೆ. ಈ ಸಣ್ಣಕತೆಯಲ್ಲಿ ಬರುವ ಗಂಡು ಹೆಣ್ಣು ಮಾತ್ರ ವಯಸ್ಸು ಮೀರಿದ ಗಂಡು ಮತ್ತು ಅವಿವಾಹಿತಳಾದ ಯುವತಿ ಎನ್ನುವುದನ್ನು ಗಮನಿಸಬೇಕು. ಹಾಗೆಯೇ ಈ ಕತೆಯಲ್ಲಿ ವಿಶೇಷತಃ ಈ ಗಂಡು-ಹೆಣ್ಣು ಇಬ್ಬರ ನಡೆಯನ್ನು ನಿರ್ಮಮವಾಗಿ ಕಾಣಬಲ್ಲ ಒಂದು ಪಾತ್ರವಿದೆ. ಅದರ ಟೀಕೆ ಟಿಪ್ಪಣಿಗಳು ಕೂಡ ಬಹುಮುಖ್ಯವಾದ ಕೆಲವೊಂದು ಸತ್ಯಗಳಿಗೆ ನಮ್ಮನ್ನು ಒಡ್ಡುತ್ತದೆ. ಆದರೆ ಕಾದಂಬರಿ ಆಶ್ಚರ್ಯಕರವಾಗಿ ಇಂಥ ಮುಖಾಮುಖಿಗಳನ್ನು ತಪ್ಪಿಸಿಕೊಂಡಿದೆ.

ನನಗೆ ಚಂದ್ರಶೇಖರ ಕಂಬಾರರ "ಜೀಕೆ ಮಾಸ್ತರರ ಪ್ರಣಯ ಪ್ರಸಂಗ" ಎಂಬ ಕಿರುಕಾದಂಬರಿಯ ನೆನಪಾಗುತ್ತದೆ. ನಡುವಯಸ್ಸಿನ ಮಾಸ್ತರರನ್ನು ಸೆಳೆಯುವ ಬಾಲೆ, ಇನ್ಯಾವುದೋ ತರುಣನ ಜೊತೆ ಮಾತನಾಡುವುದು ಕಣ್ಣಿಗೆ ಬಿದ್ದರೂ ತಲ್ಲಣಿಸುವ ಮಾಸ್ತರರ ಪ್ರೇಮದ ಉತ್ಕಟತೆ, ಆ ತರುಣನ ತಲೆ ಕಂಡರೇ ಕೆರಳುವ ದ್ವೇಷ, ಸಿಟ್ಟು...ಕೊನೆಯಲ್ಲಿ ತಮ್ಮದೇ ಹುಚ್ಚಿನೆದುರು ತಾವೇ ಪೆಚ್ಚಾಗುವ ಮಾಸ್ತರರಿಗೆ ಪ್ರೇಮ ವಯಸ್ಸಿನ ಪಾಠ ಕಲಿಸುತ್ತದೆ, ಬದುಕಿನ ಸತ್ಯ ಕಾಣಿಸುತ್ತದೆ.

ಇನ್ನೊಂದು ಕತೆ ನೆನಪಾಗುತ್ತದೆ. ಇದೂ ನೀಳ್ಗತೆ ಅಥವಾ ಕಿರುಕಾದಂಬರಿ. ಅದರ ಹೆಸರಾಗಲೀ, ಅದನ್ನು ಬರೆದವರ ಹೆಸರಾಗಲೀ (ಎಂ.ಎನ್.ವ್ಯಾಸರಾವ್ ಇರಬಹುದೆ?) ಈಗ ನೆನಪಾಗುತ್ತಿಲ್ಲ. ತುಂಬ ಹಿಂದೆ ಮಯೂರದಲ್ಲಿ ಅದನ್ನು ಓದಿದ್ದು. ಬಟ್ಟೆಯಂಗಡಿಯಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದ ನಾಯಕನಿಗೆ ನಡುವಯಸ್ಸು. ಅಕ್ಕತಂಗಿಯರ ಮದುವೆ, ಬಾಣಂತನ, ವರೋಪಚಾರದ ಬಾಕಿಚುಕ್ತಾ, ವಯಸ್ಸಾದ ಹೆತ್ತವರ ಪಾಲನೆ ಪೋಷಣೆ ಎಂದೆಲ್ಲ ಎಂದೂ ಮುಗಿಯದ ಸಂಸಾರ ತಾಪತ್ರಯಗಳಲ್ಲಿ ಇವನು ಮದುವೆಯಾಗದೇ ಉಳಿದುಬಿಟ್ಟಿರುತ್ತಾನೆ. ನಡುವಯಸ್ಸಿನ ಮನಸ್ಥಿತಿಯಲ್ಲಿ ಇದೆಲ್ಲ ಹೆಚ್ಚು ಸೂಕ್ಷ್ಮವಾಗಿ ಬಿಡುತ್ತದೇನೋ. ಇವನನ್ನು ಬಟ್ಟೆಯಂಗಡಿಗೆ ಹೊಸದಾಗಿ ಸೇರಿದ ಹುಡುಗಿಯೊಬ್ಬಳು ಸೆಳೆಯುತ್ತಾಳೆ. ಅದು ಅನುಕಂಪವೋ, ಕರುಣೆಯೋ, ಪ್ರೇಮವೋ, ಮೋಹವೋ ತಿಳಿಯದ ಗೊಂದಲ ಒಂದುಕಡೆಗಿರುತ್ತ ನಿಜಕ್ಕೂ ಅವಳಿಗೆ ತನ್ನಲ್ಲಿ ಮನಸ್ಸಿರಬಹುದೇ ಎಂಬ ತಳಮಳ ಇನ್ನೊಂದೆಡೆ. ಮನೆಯ ಒಡಕು ದೋಣಿಯಲ್ಲಿ ಅವಳ ಸೇರ್ಪಡೆ ಉಂಟು ಮಾಡಬಹುದಾದ ತಲ್ಲಣಗಳ ಕುರಿತ ನಿರಂತರ ಚಿಂತೆ. ಪ್ರೇಮ ಅವನನ್ನು ಹೀಗೆಲ್ಲ ದಹಿಸುತ್ತ ಖುಶಿಯ ಝಲಕ್ ಕೊಡುತ್ತಿರುವಾಗಲೇ ಪ್ರೇಮದ ನಾಟಕ ದುರಂತದಲ್ಲಿ ಕೊನೆಯಾಗುತ್ತದೆ. ಹೌದು, ನಾಟಕವೇ. ಹುಡುಗಿ ಬಟ್ಟೆಯಂಗಡಿಯನ್ನು ಸಾಕಷ್ಟು ದೋಚಿ, ಅದರ ಹೊಣೆ ಇವನದಾಗುವಂತೆ ಮಾಡಿ ತನ್ನ ಪ್ರಿಯಕರನೊಂದಿಗೆ ಕಣ್ಮರೆಯಾಗುತ್ತಾಳೆ. ಈತನ ಪಾಡು ನಾಯಿಪಾಡೇ.

ಮುಖ್ಯವಾಗಿ ಈ ಕೆಲವು ಅಂಶಗಳನ್ನು ಸ್ಪಷ್ಟಪಡಿಸಿದ್ದೇಕೆಂದರೆ, ಧಾತು ಕಾದಂಬರಿಯ ಕೇಂದ್ರ ವಿದ್ಯಮಾನ ಯಾವುದು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ. ಅದು ಮೊಗಸಾಲೆಯವರದೇ ಸಣ್ಣಕತೆ ಮನದ ಮುಂದಣ ಮಾಯೆಯ ಎದುರು ಸ್ಪಷ್ಟವಾದರೂ ಅದನ್ನು ಮತ್ತಷ್ಟು ಹೆಚ್ಚಿನ ಕೃತಿಗಳೆದುರು, ಕೆಲವೊಂದು ಸಿನಿಮಾಗಳೆದುರು ಇರಿಸಿದ್ದು ಕೂಡ ಈ ಕಾದಂಬರಿಯನ್ನು ಹೆಚ್ಚು ಸ್ಪಷ್ಟವಾಗಿ ಕಾಣುವ ಉದ್ದೇಶದಿಂದಲೇ. ಅದು ಲೈಂಗಿಕ ಸಮಸ್ಯೆಯೋ, ಗಂಡು-ಹೆಣ್ಣು ಸಂಬಂಧದಲ್ಲಿ ಪ್ರಧಾನಪಾತ್ರವಹಿಸುವ ದೇಹ-ಮನಸ್ಸಿನ ಕುರಿತ ಗೊಂದಲವೋ ಆಗಿರದೆ ಕೊಂಚ ಬೇರೆಯೇ ಆದದ್ದು ಎನ್ನುವುದು ನನ್ನ ಅಭಿಪ್ರಾಯ. ವಸ್ತುವನ್ನು ಸರಿಯಾಗಿ ಗುರುತಿಸಿದ್ದೇ ಅದನ್ನು ನಿರ್ವಹಿಸಿದ ಬಗೆ ಕೂಡ ನಮಗೆ ಸ್ಪಷ್ಟವಾಗುತ್ತದೆ.

ಅದು ನಡುವಯಸ್ಸಿನ, ಹೆಚ್ಚಿನ ದೈಹಿಕ ಮಾನಸಿಕ ಚಟುವಟಿಕೆಗಳು ನಿವೃತ್ತಿಯಿಂದಲೋ ಅತಿಯಾದ ವಿರಾಮದಿಂದಲೋ ಕುಂಠಿತಗೊಂಡಿರುವ ಮತ್ತು ಸಾಮಾನ್ಯವಾಗಿ ಮನೆಗೆ ಅಂಟಿಕೊಂಡಿರುವ ಹಾಗೂ ಸಮಾನವಾಗಿ ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಕಂಡುಬರುವ ಆಫ್ಟರ್‌ನೂನ್ ಸಿಂಡ್ರೋಮ್‌‍ನಲ್ಲಿ. ನಗರಪ್ರಜ್ಞೆಯನ್ನು ದುಡಿಸಿಕೊಂಡು ಬಂದಿರುವ ಕೆಲವು ನಾಟಕಗಳು, ಕಾದಂಬರಿಗಳು ಇದನ್ನು ಬಳಸಿಕೊಂಡಿವೆ ಕೂಡ. ಧಾತು ಕಾದಂಬರಿಯ ರಾಯರು ಎಸ್ಸೆಮ್ಮೆಸ್ಸುಗಳಿಗಾಗಿ ಕಾಯುವ, ಹೆಣ್ಣಿನ ಮಾತು, ನಗು, ಸಂದೇಶ ಅವರಲ್ಲಿ ಜೀವ ಚೈತನ್ಯವನ್ನು ತುಂಬುವ ಪರಿಯಲ್ಲೇ ನಾವಿದನ್ನು ಕಾಣಬಹುದಾಗಿದೆ. ಆದರೆ ಈ ಹಂತದಲ್ಲಾಗಲಿ, ಈ ಸಂಬಂಧ ಮುಂದುವರಿದ ಹಂತದಲ್ಲಾಗಲಿ ಆರಂಭದಲ್ಲೇ ಡಾ.ಪ್ರದೀಪ್ ಎತ್ತಿದ ದೇಹ ಅಥವಾ ಮನಸ್ಸಿನ ಅವಶ್ಯಕತೆಗಳ ಪ್ರಶ್ನೆಯ ಎದುರು ನಿಲ್ಲುವ ಮೂಲಕ ಸ್ಪಷ್ಟಪಡಿಸಿಕೊಳ್ಳಲು ರಾಯರು ಪ್ರಯತ್ನಿಸುವುದಿಲ್ಲ. ಹಾಗಾಗಿ ಇದನ್ನು ಇನ್ನೂ ಸ್ಪಷ್ಟಪಡಿಸುವುದಾದರೆ, ಅಪರಿಚಿತರೊಂದಿಗೆ ಅಪರಿಚಿತರಾಗಿಯೇ ಇದ್ದುಕೊಂಡು ನಡೆಸುವ ಮೌಕಿಕ ಸಂಭಾಷಣೆಯಿಂದಲೇ ಒಂಥರಾ ಲೈಂಗಿಕ ತೃಪ್ತಿಯನ್ನು ಕಂಡುಕೊಳ್ಳುವ ಗೀಳು ಇದು, ಮನೋರೋಗ. 

ವಿವೇಕ್ ಶಾನಭಾಗ್ ಅವರ ಊರುಭಂಗ ಕಾದಂಬರಿಯಲ್ಲಿ ಕೂಡ ವಿವಾಹೇತರ ಸಂಬಂಧವೊಂದು ಚಿಗುರೊಡೆಯುವ ಹಂತದ ಹಪಹಪಿ ಮತ್ತು ಗೊಂದಲಗಳಿವೆ. ಅವರದೇ ನಾಟಕ ಬಹುಮುಖಿಯಲ್ಲಿ ಈ ಬಗೆಯ ಪ್ರಸಂಗಗಳ ಉಲ್ಲೇಖವಿದೆ. ಗಿರೀಶ್ ಕಾರ್ನಾಡರ ನಾಟಕ ಮದುವೆಯ ಆಲ್ಬಮ್ ಹಾಗೂ ಅಕ್ಷರ ಕೆ ವಿ ಅವರ ಸ್ವಯಂವರ ಲೋಕ ನಾಟಕಗಳು ಇತ್ತೀಚಿನ ವಿದ್ಯಮಾನಗಳಿಗೆ ಹತ್ತಿರದ ಚಿತ್ರವನ್ನು ನಮಗೆ ಕೊಡುತ್ತಿವೆ. 

ಒಂದು ಚರ್ಚಾಕೂಟದಲ್ಲಿ ಕತೆಗಾರ ಅಶೋಕ್ ಹೆಗಡೆ ಅವರು ದಾಂಪತ್ಯದ ನಿಷ್ಠೆ, ದಾಂಪತ್ಯ ಎನ್ನುವ ಸಂಬಂಧಕ್ಕಿರುವ ಮೌಲ್ಯ ಇವನ್ನೆಲ್ಲ ವಿವೇಕ್ ಶಾನಭಾಗರ ಊರುಭಂಗ ಕಾದಂಬರಿ ಪರೀಕ್ಷೆಗೆ ಒಡ್ಡುತ್ತಿದೆ ಅಂತ ಹೇಳಿದ್ದರು. ಅದು ನಿಜ. ಆದರೆ, ವೈವಾಹಿಕ ಚೌಕಟ್ಟಿನ ಹೊರಗೆ ಒಂದು ಸಂಬಂಧ ನಿಷಿದ್ಧ ಅಥವಾ ತಪ್ಪು ಅಂತ ತಿಳಿಯಬೇಕಾದ್ದಿಲ್ಲ. ಇಲ್ಲಿ ನನಗೆ ಹಶಾಂಬಿಯಂಥ ಪಾತ್ರಗಳನ್ನು ಚಿತ್ರಿಸಿದ ಕೇಶವ ಮಳಗಿ ಅವರು puritan concept ಬಗ್ಗೆ ಆಡಿದ ಮಾತುಗಳು ನೆನಪಾಗುತ್ತವೆ. ನಾವು ಕೇವಲ ಭಾರತೀಯ ಸಂಸ್ಕೃತಿಯ ನೆರಳಿಗೆ ಬದ್ಧರಾಗಿ ನಾವು ದಾಂಪತ್ಯ ನಿಷ್ಠೆಯನ್ನು ನೋಡಬೇಕಾಗಿಲ್ಲ ಅಲ್ಲವೆ? ಎಲ್ಲಿಯ ವರೆಗೆ ಬದ್ಧತೆಗಳನ್ನು ಬಿಟ್ಟುಕೊಡದೆ, ಬೇಜವಾಬ್ದಾರಿತನ ತೋರಿಸದೇ ಸಂಬಂಧಗಳನ್ನು ನಿರ್ವಹಿಸಬಹುದೋ ಅಲ್ಲಿಯ ತನಕ ಅದು ಸಮಾಜ ವಿರೋಧಿಯಾಗುತ್ತದೆ ಅಂತ ತಿಳಿಯಬೇಕೇಕೆ? ಊರುಭಂಗ ಕಾದಂಬರಿಯ ಶಮಿಯನ್ನೇ ಗಮನಿಸಿ. ಅವಳು ಯಾವತ್ತೂ ಮನಮೋಹನನ ಬಳಿ ನಿನ್ನ ಹೆಂಡತಿಯನ್ನು ಬಿಟ್ಟು ಬಾ, ತನಗೆ ಬೇರೆ ಮನೆ ಮಾಡಿ ನಿಲ್ಲಿಸು, ತನ್ನನ್ನೇ ಮದುವೆಯಾಗು ಎಂದೆಲ್ಲ ಕೇಳಿಕೊಳ್ಳುವುದಿಲ್ಲ. ತನ್ನ ನಿನ್ನ ಸಂಬಂಧವನ್ನು dis-own ಮಾಡಬೇಡ ಎಂಬುದಷ್ಟೇ ಬಹುಶಃ ಅವಳ ನಿರೀಕ್ಷೆಯಿತ್ತು ಅನಿಸುತ್ತದೆ. ಹಾಗಾಗಿ ಪಾರ್ಕಿನಲ್ಲಿ ಸಿಕ್ಕಿದ ಯಾರಿಗೋ ಮನಮೋಹನ ತನ್ನ ಕುರಿತು, ಈ ಹುಡುಗಿ ಯಾರು ಎಂದು ವಿವರಿಸಿ ಹೇಳುವ ರೀತಿಗೇ ಅವಳು ಬೇಸತ್ತು ದೂರವಾದಂತಿದೆ. ಹೀಗೆ ದಾಂಪತ್ಯಕ್ಕೆ, ನನ್ನ ಹೆಂಡತಿಗೆ ನಾನು ನಿಷ್ಠೆಯಿಂದ ಇದ್ದರೆ ಅದು ದಾಂಪತ್ಯದ ಸಹಜ ಧರ್ಮ, ನಾನು ಹಾಗಿರುವುದು ಸರಿಯಾದ ರೀತಿ ಅಷ್ಟೆ. ನಾನು ನನ್ನ ಹೆಂಡತಿಗೆ ನಿಷ್ಠನಾಗಿದ್ದೇನೆ ಎನ್ನುವುದೇ ಒಂದು ಅಹಂಕಾರಕ್ಕೆ ಕಾರಣವಾಗಬಹುದಾದ ಸಂಗತಿ ಆಗುವುದಾದರೆ, ಲೈಂಗಿಕ ಪಾವಿತ್ರ್ಯವನ್ನು ದೇಹದ ಸ್ತರದಲ್ಲಿ ನಿರ್ವಹಿಸುತ್ತಾ ಮಾನಸಿಕವಾಗಿ ವ್ಯಭಿಚಾರವನ್ನೇ ಮಾಡಿಕೊಂಡಿದ್ದೂ ತನ್ನ ದೈಹಿಕ ಪಾವಿತ್ರ್ಯದ ಕುರಿತು ಅಹಂಕಾರವಿರುವುದಾದರೆ ಅದರ ಗರ್ವಭಂಗ ಕೂಡ ಅನಿವಾರ್ಯವೇ. ಯಾಕೆಂದರೆ, ಆದರ್ಶಗಳ ನಿಜವಾದ ಸ್ವರೂಪ ನಮಗೆ ಹೊಳೆಯುವುದೇ ನಾವು ಅದನ್ನು ಮೀರಿದಾಗ, ನಾವು ವಾಯ್ಡ್ ಆದಾಗ. ವ್ಯಕ್ತಿತ್ವದ ಅಗ್ನಿಪರೀಕ್ಷೆ ಆಗ ನಡೆಯುತ್ತದೆ.

ವಿವೇಕ ಶಾನಭಾಗರ ನಾಟಕ ಬಹುಮುಖಿಯ ಈ ಭಾಗ ಗಮನಿಸಿ:

"ಬೆಳಗಿನ ಹತ್ತು ಗಂಟೆಯಿಂದ ಮಧ್ಯಾಹ್ನ ನಾಲ್ಕರವರೆಗೆ ತೆರೆದುಕೊಳ್ಳುವ ಜಗತ್ತು. ಗಂಡಸರು ಕೆಲಸಕ್ಕೆ, ಮಕ್ಕಳು ಶಾಲೆಗೆ ಹೋದ ಮೇಲೆ ಉಳ್ಳವರ ಮನೆಯ ಹೆಂಗಸರ ಖಾಲಿ ಜಗತ್ತು. ಇಲ್ಲೊಂದು ಬಗೆಯ ಬೇಸರ ಇದೆ. ಬರೀ ಬೇಸರ. ಅದು ಹಾಗೆ ಕಣ್ಣಿಗೆ ಕಾಣುವಂಥದ್ದಲ್ಲ. ಮಧ್ಯವಯಸ್ಸಿಗೂ ಬಹಳ ಮುಂಚೆಯೇ ಹುಟ್ಟಿದ ಬೇಸರ. ಬೋರ್. ನಿರಾಳತೆಯಿಂದ ಹುಟ್ಟಿದ ಬೇಸರ. ಏನನ್ನಾದರೂ ಮನಸ್ಸು ಅಟ್ಟಿಸಿಕೊಂಡು ಹೋಗದೇ ಇದ್ದರೆ ಅದಕ್ಕೆ ಸಮಾಧಾನ ಇದೆಯೇನು? ಮಧ್ಯಾಹ್ನ ಪಾರ್ಟಿಗೆ ಸೇರಿದ ಕಡೆಯೂ ಗಂಡಂದಿರ ಕೆಲಸವನ್ನೇ ಚರ್ಚಿಸ್ತಾ ಇದ್ದರು. ಇವರಿಗೇನು ಸ್ವಂತ ಮಾತೇ, ಸ್ವಂತ ಕತೆಯೇ ಇಲ್ಲವೇ ಎಂದುಕೊಳ್ಳುತ್ತಿದ್ದೆ. ಇತ್ತು - ಆದರೆ ಅದನ್ನು ಕೇಳುವವರು ಯಾರೂ ಇರಲಿಲ್ಲ. ಅಲ್ಲಿ ಹೇಳಿಕೊಂಡರೆ ಅಂತಸ್ತಿಗೆ ಕುಂದು. ಮಕ್ಕಳು ಕೇಳಲು ತಯಾರಿಲ್ಲ. ಗಂಡನಿಗೆ ಪುರಸತ್ತಿಲ್ಲ. ಇವರಿಗೆ ಬೇರೆ ಯಾವ ಅಭಿರುಚಿಯೂ ಇಲ್ಲ. ಪುಸ್ತಕ ತಗೋತಾರೆ ಓದಲ್ಲ. ಕೊಳ್ಳೋದನ್ನೇ ಅನುಭವಿಸೋದು ಅಂದ್ಕೋತಾರೆ. ಮಾತಿಗೆ ಜನ ಇಲ್ಲ. ನಾನು ಒಬ್ಬೊಬ್ಬರಿಗೇ ನನ್ನ ಕಿವಿ ಕೊಟ್ಟೆ. ಬರೀ ಇಷ್ಟೇ ಆದರೆ ಯಾವನು ಕೇಳುತ್ತಾನೆ? ಹಾಗಾಗಿ ಅದಕ್ಕೆ ಯೋಗ ಧ್ಯಾನ ಸೇರಿಸಿ ಸಾತ್ವಿಕ ಕಳೆ ಕೊಟ್ಟೆ. ಅವರಿಗೂ ನನ್ನ ಫೀಸು ಕೊಡಲೊಂದು ದಾರಿ ಇರಬೇಕಲ್ಲ. ವ್ಯಾಲ್ಯೂ ಫಾರ್ ಮನಿ ಅಂತ ಗಂಡಂದಿರಿಗೆ ಕಾಣಿಸಬೇಕಲ್ಲ. ಜಗನ್ನಾಥನಿದ್ದವನು ಗುರು ಜಕ್ಕೂಜಿ ಆದೆ." (ಪುಟ 35)

ಮೊದಲೇ ಹೇಳಿರುವಂತೆ ಇದು ಬರೀ ಹೆಂಗಸರ ಗೋಳು ಅಂದುಕೊಳ್ಳಬೇಕಿಲ್ಲ.

ಗಿರೀಶ್ ಕಾರ್ನಾಡರ ನಾಟಕ ಮದುವೆಯ ಆಲ್ಬಮ್‌ನ ದೃಶ್ಯ ಐದು ಗಮನಿಸಿದರೆ ನಿಮಗೆ ಇದರ ತೀವ್ರತೆ ಅರ್ಥವಾಗುತ್ತದೆ. ಈ ದೃಶ್ಯದಲ್ಲಿ ಇಂಟರ್ನೆಟ್ ಚ್ಯಾಟ್ ಇದೆ. ಇಂಟರ್ನೆಟ್ ಕೆಫೆಯೊಂದರಲ್ಲಿ ವಿಮಲಾ ಎಂಬ ಪಾತ್ರ ಕಂಪ್ಯೂಟರಿನೆದುರು ಕುಳಿತು ಪ್ರೇಕ್ಷರಿಗೆ ಧ್ವನಿ ಮಾತ್ರ ಕೇಳಿಸುವ ಒಂದು ಪಾತ್ರದೊಂದಿಗೆ ರೋಲ್‌ಪ್ಲೇ ಮಾಡುವ ದೃಶ್ಯವಿದು. ಈ ದೃಶ್ಯದಲ್ಲಿ ಸಾಕಷ್ಟು ಢಾಳಾಗಿಯೇ ಮೌಕಿಕ ರತಿಕ್ರೀಡೆ ಇದೆ. ಇದು ಮೊಗಸಾಲೆಯವರು ಕೆಲವೊಂದು ಐಡಿಯಲ್ಸ್‌ನಡಿ ಸಭ್ಯತೆ, ಶಿಷ್ಟಾಚಾರ ಮತ್ತು ಸಾಮಾಜಿಕ ಕಟ್ಟುಪಾಡಿನ ಚೌಕಟ್ಟಿನೊಳಗೇ ಚಿತ್ರಿಸುತ್ತಿರುವ ಆದರೆ ಸಮಕಾಲೀನ ವಾಸ್ತವದಲ್ಲಿ ಹಾಗಿಲ್ಲದೇ ಇರುವ ಒಂದು ವಿದ್ಯಮಾನದ ಅತ್ಯಂತ ಹತ್ತಿರದ, ನೈಜ ಚಿತ್ರವನ್ನು ಕಾಣಿಸುತ್ತಿದೆ ಎಂಬ ಕಾರಣಕ್ಕೆ ಬಹಳ ಮಹತ್ವದ್ದು.

ಕಾದಂಬರಿಯ ಎರಡನೆಯ ಭಾಗದಲ್ಲಿ ಶಶಿ ಉಡುಪ ಅವರದೇ ಮಾತುಗಳಲ್ಲಿ ಅವರ ಇಡೀ ಬದುಕಿನ ಕತೆ ತೆರೆದುಕೊಳ್ಳುತ್ತದೆ. ದೂರದ ಕೇರಳದಲ್ಲಿ ದುಡಿಯುವ ಚೆನ್ನಿಗರಾಯನಂಥ ಆಕೆಯ ತಂದೆ, ಆತನಿಗೆ ಅಲ್ಲಿಯೇ ಇರಬಹುದಾದ ಸಂಬಂಧಗಳು, ಇಲ್ಲಿ ಆ ತಂದೆಯ ತಮ್ಮನೇ ತನ್ನಣ್ಣನ ಮಡದಿಯ (ಶಶಿ ಉಡುಪ ಅವರ ತಾಯಿ) ಮೇಲೆ ಹಾಕುವ ಕೆಟ್ಟ ದೃಷ್ಟಿ, ಆಕೆಯ ಆತ್ಮಹತ್ಯೆ, ಅಪ್ಪ ಮತ್ತು ಚಿಕ್ಕಪ್ಪನ ಬೇಜವಾಬ್ದಾರಿಯಿಂದಾಗಿ ತಾಯಿಯ ತವರಲ್ಲಿ ಬೆಳೆಯುವ ಶಶಿ ಉಡುಪ, ಅಲ್ಲಿ ಸಹಪಾಠಿ ಹುಡುಗನೊಬ್ಬನ ಪಿಪಾಸೆ, ಮುಂದೆ ಮಂಡ್ಯದ ವಾಸ, ಮಾವನ ಆಸರೆ, ಅತ್ತೆಯ ಅರೆಮನಸ್ಸಿನ ಸಹಕಾರ, ನೌಕರಿಯ ಗೋಳುಗಳು, ಬದುಕಿನ ಹೊಸ್ತಿಲ ತನಕ ಬಂದು ವಾಪಾಸಾಗುವ ಸಹವರ್ತಿಗಳ ಲೈಂಗಿಕ ಬದುಕುಗಳ ಸಮಾಚಾರ, ಕತೆಗಳು ಇಲ್ಲಿ ತುಂಬಿವೆ. ಆದರೆ ಅಜ್ಜಿ, ಚಿಕ್ಕಪ್ಪ, ತಾಯಿ ಕಡೆಯ ಅಜ್ಜಿ, ಮಾವಂದಿರು ಯಾರೂ ಕೂಡ ವಯಸ್ಸಿಗನುಗುಣವಾಗಿ ಶಶಿ ಉಡುಪರ ಮದುವೆಗೆ ಪ್ರಯತ್ನಿಸುವುದಿಲ್ಲ ಎನ್ನುವುದು ಮತ್ತು ಈ ಯಾವುದೇ ಹಂತದಲ್ಲಿ ಶಶಿ ಉಡುಪ ಅವರಲ್ಲಿ ದೈಹಿಕ ಕಾಮನೆಗಳು ಹೊತ್ತಿ ಉರಿದ ವಿವರಗಳಿಲ್ಲದಿರುವುದು ಕೊಂಚ ಅಸಹಜವಾದ ನಿರೂಪಣೆ ಅನಿಸುತ್ತದೆ. ಅಲ್ಲದೆ, ಕಾದಂಬರಿಯಲ್ಲಿ ತಾಂತ್ರಿಕವಾಗಿ ಇದು ಶಶಿ ಉಡುಪರ ನಿರೂಪಣೆಯಾಗಿದ್ದರೂ ಕಾದಂಬರಿಕಾರ ಮೊಗಸಾಲೆಯವರ ನಿರೂಪಣೆಯ ಹದ, ವಿವರಗಳ ಶ್ರೀಮಂತಿಕೆ, ಸಾಮಾನ್ಯವಾಗಿ ಅವರು ಸಾಕಷ್ಟು ಗಮನ, ಪೋಷಣೆ ನೀಡುತ್ತಿದ್ದ ದೈನಿಕದ, ಬದುಕಿನ ಮನೆವಾರ್ತೆ ವಿವರಗಳು ಪೂರ್ತಿಯಾಗಿ ನಾಪತ್ತೆಯಾಗಿವೆ. ಹೆಣ್ಣಾಗಿ ಶಶಿ ಉಡುಪರ ಬದುಕಿನ ವಿವರಗಳಲ್ಲಿ ಹೆಣ್ಣಿನ ಬದುಕಿನ ಯಾವ ವಿವರಗಳೂ ಇಲ್ಲಿ ಬರುವುದೇ ಇಲ್ಲ. ಅವು ಅಲಂಕಾರದ, ಸೀರೆ ಒಡವೆಗಳ, ಅಡುಗೆ, ಹಬ್ಬ ಹರಿದಿನಗಳ ಅಥವಾ ಇಂಥ ಯಾವ ಸ್ತರದವೂ ಆಗಿರಬಹುದಿತ್ತು. ಎಂಥಾ ಬದುಕಿನಲ್ಲೂ ಇಂಥವು ಇಣುಕುವುದೇ ಇಲ್ಲ ಎಂದರೆ ನಂಬುವ ಮಾತೆ? ಹಾಗಿದ್ದೂ ಶಶಿ ಉಡುಪರ ಬದುಕಿನ ನಡೆ, ಅಲ್ಲಿ ಬರುವ ಸಂಬಂಧಿಕರ ನಡೆನುಡಿಯ ವಿವರ ಎಲ್ಲವೂ ಅತ್ಯಂತ ವಾಸ್ತವಿಕ ನೆಲೆಗಟ್ಟಿನದ್ದು ಅನಿಸುವಂತಿದ್ದು ಆ ಭಾಗ ಇಷ್ಟವಾಗುತ್ತದೆ. ಅಲ್ಲದೆ ಒಂದಷ್ಟು ಕಾಲ ಇದು ಇಡೀ ಕಾದಂಬರಿಯ ಮೂಲ ಎಳೆಯಿಂದ ಸರಿದು ಕಾದಂಬರಿಯ ಒಡಲನ್ನು ತುಂಬಿಕೊಡುವುದರಿಂದಾಗಿ ಇವೆಲ್ಲ ಚೆನ್ನಾಗಿವೆ. ಇಂಥ ಹಿನ್ನೆಲೆಯ ಶಶಿ ಉಡುಪ ಅವರಿಗೆ ರಾಯರ ಕತೆ, ಮನದ ಮುಂದಣ ಮಾಯೆ ಒಡ್ಡುವ ಆಕರ್ಷಣೆ ಸಹಜವಾದದ್ದು ಎಂಬಂತೆ ಈ ಭಾಗ ರೂಪುಗೊಂಡಿರುವುದು ನಿಜ. ಆದರೆ ಗಂಡಿನ ಬಗ್ಗೆ ಶಶಿ ಉಡುಪರ ನಿರೀಕ್ಷೆಗಳೇನಿದ್ದವು, ಆಕೆಯ ಮಾನಸಿಕ ದೈಹಿಕ ಅಗತ್ಯಗಳೇನಿದ್ದವು ಎನ್ನುವ ಕುರಿತು ಈ ಭಾಗ ಗಾಢ ಮೌನವಹಿಸುತ್ತದೆ. 

ಧಾತು ಎಂದರೆ ಕೊಂಕಣಿಯಲ್ಲಿ ಎಚ್ಚರ, ಪ್ರಜ್ಞೆ, ಸ್ವಯ ಎನ್ನುವ ಅರ್ಥವೂ ಇದೆ. ಹೆಣ್ಣು ಗಂಡಿನ ಸಂಬಂಧ ಒಂದು ಹಂತದಲ್ಲಿ ಮುದ ನೀಡುವಂಥದ್ದು. ಇನ್ನೊಂದು ಹಂತದಲ್ಲಿ ಎಚ್ಚರಿಕೆ, ಪ್ರಜ್ಞಾವಂತ ನಿರ್ಧಾರವನ್ನು ಬಯಸುವಂಥಾದ್ದು ಕೂಡ. ಇನ್ನೊಂದು ಜೀವದ ಬದುಕು-ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಮುಖಾಮುಖಿಯಾಗಲು ಹೊರಟ ವ್ಯಕ್ತಿ ಅದರ ಉತ್ತರದಾಯಿತ್ವಕ್ಕೆ ಬದ್ಧನಾಗಿರಬೇಕಾಗುತ್ತದೆ. ಹಾಗಾಗಿ ಅದು ಜವಾಬ್ದಾರಿಯ, ಆತಂಕದ ಪ್ರಶ್ನೆ ಕೂಡ. ನಾವು ಒಂದು ಕಾರು ಕೊಂಡರೆ, ಆಸ್ತಿ ಕೊಂಡುಕೊಂಡರೆ ನಾಳೆ ದಿನ ಅದಕ್ಕೂ ನಮಗೂ ಹೊಂದಾಣಿಕೆಯಾಗಲಿಲ್ಲ ಎಂದರೆ ಅದನ್ನು ಮಾರಿ ಕಳಚಿಕೊಳ್ಳಬಹುದು. ಆದರೆ ಬದುಕಿನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ತೊಡಗುವ ಸಂಬಂಧ ಆ ಬಗೆಯದ್ದಲ್ಲ. ಸಂಬಂಧಗಳಿಗೆ ಸುರುವಾತು ಎನ್ನಬಹುದಾದ ಒಂದು ಬಿಂದು ಮಾತ್ರ ಇರುತ್ತದೆ, ಅಂತ್ಯ ಎನ್ನುವುದಿಲ್ಲ. ಯಾವ ಸಂಬಂಧವೂ ನೀವೇನೇ ಮಾಡಿದರೂ ಮುಗಿಯಿತು ಎನ್ನುವುದಿಲ್ಲವೇ ಇಲ್ಲ. ಹಾಗಾಗಿ ಎಚ್ಚರದ ಹೆಜ್ಜೆ ಎರಡು ಬದುಕು-ಭವಿಷ್ಯಗಳನ್ನು ಹೊಸ ಅಪಾಯ, ಸಾಹಸಕ್ಕೊಡ್ಡುವಂಥವು. ಮೊಗಸಾಲೆಯವರ ಕಾದಂಬರಿ ನಮ್ಮೆದುರು ತೆರೆದಿಡುವ ಸಂಕೀರ್ಣ ಪ್ರಶ್ನೆಗಳು ಈ ನಿಟ್ಟಿನವು. ಕಾಮದ ಸಮಸ್ಯೆಯಾಗಲಿ, ಸ್ತ್ರೀ ಪುರುಷ ಸಮಾನತೆಯ ಪ್ರಶ್ನೆಗಳಾಗಲೀ ಈ ಕಾದಂಬರಿಯ ಪ್ರಧಾನ ಎಳೆಯಾಗಿ ನನಗಂತೂ ಕಂಡಿಲ್ಲ. ಆದರೆ ಅದೇನಿದ್ದರೂ ಕಾದಂಬರಿ ಸ್ವಲ್ಪ ಮಟ್ಟಿನ ನಿರಾಸೆ ಹುಟ್ಟಿಸುವುದಕ್ಕೆ ಕಾರಣ ಮೊಗಸಾಲೆಯವರು ಈ ಕಾದಂಬರಿಯ ವಸ್ತುವಿಗೆ ಸಾಕಷ್ಟು ಪೋಷಣೆ ನೀಡದೆ, ಒಂದು ನಿರ್ದಿಷ್ಟ ಕಥಾನಕದ ನಿರೂಪಣೆಯಾಚೆ ಬೆಳೆಸುವುದಿಲ್ಲ ಎನ್ನುವುದೇ. 

ಇಷ್ಟೆಲ್ಲ ಚರ್ಚಿಸಿ ವಸ್ತುವಿನ ಬಗೆ ಸ್ಪಷ್ಟವಾಗುತ್ತ ಮೊಗಸಾಲೆಯವರು ಅದನ್ನು ನಿರ್ವಹಿಸಿದ ಬಗೆಯನ್ನು ಕುರಿತು ಹೇಳುತ್ತ ಬಂದ ಮುಖ್ಯ ಉದ್ದೇಶವೇನೆಂದರೆ ಈ ಕಾದಂಬರಿ ನನ್ನ ಸಮಕಾಲೀನ ಬದುಕಿಗೆ ಹೇಗೆ ಮುಖ್ಯ, ಎಷ್ಟು ರಿಲವಂಟ್ ಮತ್ತು ನನ್ನ ಸಮಕಾಲೀನ ತಲೆಮಾರು (ಅಂದರೆ ನನ್ನೊಂದಿಗೇ ಬದುಕುತ್ತಿರುವ ಎಲ್ಲ ಹಳೆಯ ಮತ್ತು ಹೊಚ್ಚಹೊಸ ತಲೆಮಾರು ಕೂಡ) ಇದನ್ನು ಯಾಕೆ ಗಂಭೀರವಾಗಿ ಪರಿಗಣಿಸಬೇಕು ಎನ್ನುವುದನ್ನು ಹೇಳುವುದು. ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ, ಅಂದರೆ ಸುಮಾರು 1986-89ರ ಅವಧಿಯಲ್ಲಿ ಒಂದು ದಿನ ಅಪರಾಹ್ನ ನಾನು ಊಟ ಮುಗಿಸಿ ಕಾಲೇಜಿಗೆ ಬರುತ್ತಿರುವಾಗ ಬಸ್ಸಿನಲ್ಲಿ ಒಬ್ಬ ವ್ಯಕ್ತಿ ತಮ್ಮ ವಿಳಾಸ ಕೊಟ್ಟು ತಮ್ಮೊಂದಿಗೆ ಸ್ನೇಹ ಬೆಳೆಸಬಹುದೇ, ತಮಗೆ ನಿಯಮಿತವಾಗಿ ಪತ್ರ ಬರೆಯಬಹುದೇ ಎಂದು ಕೇಳಿಕೊಂಡರು. ನಾನು ಸ್ವಲ್ಪ ಸಾಹಿತ್ಯ ಮತ್ತೊಂದು ಓದಿಕೊಂಡಿದ್ದೆನಾದ್ದರಿಂದ ಒಂದು ಸ್ನೇಹ, ಒಂದಿಷ್ಟು ಪ್ರೀತಿಗೆ ಹಾತೊರೆವ ಮನುಷ್ಯನ ಆಳದ ಹಂಬಲವನ್ನು ಇಷ್ಟು ನೇರವಾಗಿ ಕಂಡು ಅವಾಕ್ಕಾದೆ. ಮುಂದೆ ಪತ್ರಮೈತ್ರಿಯ ಹಲವಾರು ಆವೃತ್ತಿಗಳು ನನಗೆದುರಾಗಿದ್ದವು. ನನ್ನ ಹತ್ತು ಹದಿನೈದು ಮಂದಿ ಕಾಲೇಜು ಗೆಳೆಯರೊಂದಿಗೆ ನಾನು ತುಂಬ ವರ್ಷ ಪತ್ರ ವ್ಯವಹಾರ ಇರಿಸಿಕೊಂಡಿದ್ದೆ. ಆ ಪತ್ರಗಳು ತುಂಬ ವಿಭಿನ್ನವಾಗಿರುತ್ತಿದ್ದವು ಮತ್ತು ಆ ಹತ್ತು ಹದಿನೈದು ಮಂದಿಯಲ್ಲಿ ಒಬ್ಬಿಬ್ಬರಾದರೂ ಅವುಗಳನ್ನು ತುಂಬ ಪ್ರೀತಿ ಗೌರವದಿಂದ ಕಾಣುವವರಿದ್ದರು. ಹೊಸಳ್ಳಿ ದಾಳೇಗೌಡ ಎನ್ನುವವರು ಪತ್ರ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿಯೇ ಹುಟ್ಟುಹಾಕಿದ ಪತ್ರಮೈತ್ರಿಯಲ್ಲೂ ನಾನು ಹಲವಾರು ವರ್ಷಕಾಲ ಸದಸ್ಯನಾಗಿದ್ದೆ. ಬಹುಶಃ ನನಗೆ ಹಾಲಾಡಿ ಮಾರುತಿರಾಯರು ಸಿಕ್ಕಿದ್ದು ಇಲ್ಲೇ. (ಹಾಲಾಡಿ ಮಾರುತಿರಾಯರ ಬಗ್ಗೆ ನಿಮ್ಮಲ್ಲಿ ಹೆಚ್ಚಿನವರಿಗೆ ಗೊತ್ತು. ಇವರು ಹರೆಯದಲ್ಲಿ ಒಬ್ಬಾಕೆಯನ್ನು ಪ್ರೀತಿಸಿದ್ದರು. ಆದರೆ ಕಾರಣಾಂತರದಿಂದ ಆಕೆಯನ್ನೇ ಮದುವೆಯಾಗುವುದು ಸಾಧ್ಯವಾಗುವುದಿಲ್ಲ. ಮುಂದೆ ಇಳಿವಯಸ್ಸಿನಲ್ಲಿ ಆಕೆ ಅಮೆರಿಕೆಯಲ್ಲಿರುವುದು ತಿಳಿದು ಸಂಪರ್ಕ ಏರ್ಪಡುತ್ತದೆ. ಆ ಹೊತ್ತಿಗಾಗಲೇ ಹಾಲಾಡಿಯವರು ವಿಧುರರಾಗಿದ್ದರು. ಆಕೆಯೂ ಪತಿಯನ್ನು ಕಳೆದುಕೊಂಡಾಗ ಹಾಲಾಡಿಯವರಿಗೆ ಹೊಸದೊಂದು ಯೋಚನೆ ಬರುತ್ತದೆ. ಈಗ ತಮ್ಮ ಪ್ರೇಯಸಿಯನ್ನು ಏಕೆ ವಿವಾಹವಾಗಬಾರದು ಎನ್ನುವುದೇ ಆ ಯೋಚನೆ. ಆದರೆ ಅಮೆರಿಕೆಯಲ್ಲಿದ್ದರೇನು, ಎಷ್ಟು ವಿದ್ಯಾವಂತರಾದರೇನು, ಎರಡೂ ಕಡೆ ಮಕ್ಕಳು ಮರಿಮಕ್ಕಳು ಈ ಮದುವೆಗೆ ಒಪ್ಪಿಗೆ ಕೊಡುವುದೇ ಇಲ್ಲ. ಹಾಗಾಗಿ ಹಾಲಾಡಿಯವರು ಆಕೆಯನ್ನು ಮದುವೆಯಾಗುವುದು ಸಾಧ್ಯವಾಗಲಿಲ್ಲ. ಆದರೆ ಮುಂದೆ ಅವರು ತಮಗಿಂತ ಕಿರಿಯ ವಯಸ್ಸಿನ ಒಬ್ಬರನ್ನು ಮದುವೆಯಾಗಿ ತಮ್ಮ ಕೊನೆಗಾಲದ ತನಕ ಸಹಬಾಳ್ವೆ ನಡೆಸಿ ಒಂದು ಮಾದರಿ ನಿರ್ಮಿಸಿದವರು.) ನಿವೃತ್ತ ಅರಣ್ಯಾಧಿಕಾರಿ ನಾರಾವಿ ಗೋಪಾಲಶೆಟ್ರು ಕೂಡ ನನ್ನ ಇನ್ನೊಬ್ಬ ಆಪ್ತ ಗೆಳೆಯರಾಗಿದ್ದರು. ಇವರನ್ನೆಲ್ಲ ಯಾವತ್ತೂ ಭೇಟಿಯಾಗಿದ್ದಿಲ್ಲ. ಫೋನಿನಲ್ಲಿ ಮಾತನಾಡಿದ್ದು ಕೂಡ ಇಲ್ಲ. ಅದೆಲ್ಲ ಬೇಕು ಅನಿಸಿರಲೂ ಇಲ್ಲವೆನ್ನಿ. ಆದರೆ ಮುಂದೆ ಕೆಲಸ ಮಾಡುತ್ತಿದ್ದಲ್ಲಿ (ನಾನು ನನ್ನ ಮುವ್ವತ್ತೈದನೆಯ ವಯಸ್ಸಿಗೆ ತಲುಪುವಷ್ಟರಲ್ಲಿ ಸುಮಾರು ಹನ್ನೊಂದು ಕಡೆ ಕೆಲಸ ಮಾಡಿ-ಬಿಟ್ಟು ಮಾಡಿದವ) ಹುಡುಗಿಯರ ವಿಚಾರವಾಗಿ ಎದುರಿಸಿದ ಬಿಕ್ಕಟ್ಟುಗಳಿವೆ. ಕತೆ ಇತ್ಯಾದಿ ಬರೆಯತೊಡಗಿದ ಬಳಿಕ ವಿಳಾಸ ಹಿಡಿದು ಪತ್ರ ಬರೆದು ಹುಟ್ಟಿಕೊಂಡ ಬಿಕ್ಕಟ್ಟುಗಳಿವೆ. ಫೇಸ್‍ಬುಕ್ಕು, ವ್ಯಾಟ್ಸಪ್ಪು ಇತ್ಯಾದಿ ಮುಖಾಮುಖಿಯಾಗಿಸಿದ ಬಿಕ್ಕಟ್ಟುಗಳೂ ಇವೆ. ಒಂದು ವಯಸ್ಸಿನಾಚೆ ಮತ್ತು ಆಗಲೇ ಸಾಕಷ್ಟು ಅನುಭವಿಸಿದ ಬಳಿಕ ಇವೆಲ್ಲವೂ ತಲೆ ತಿನ್ನುವ, ಕಿರಿಕಿರಿ ಹುಟ್ಟಿಸುವ, ಸುಮ್ಮನೇ ನಮ್ಮ ಸಮಯ ಮತ್ತು ನೆಮ್ಮದಿ ಹಾಳುಗೆಡಹುವ ಪ್ರಕರಣಗಳಷ್ಟೇ ಆಗಿ ನಿಲ್ಲುತ್ತವೆಯೇ ಹೊರತು ದೀರ್ಘಾವಧಿ ನೆಮ್ಮದಿ, ಸುಖ ಇಂಥ ಸಂಬಂಧಗಳಿಂದ ಸಿಗುವುದಿಲ್ಲ, ಅದೇನಿದ್ದರೂ ನಮ್ಮೊಳಗಿನಿಂದಲೇ ಸಿಗಬೇಕಾದ್ದು ಎಂದು ಸ್ಪಷ್ಟವಾದ ಮೇಲಷ್ಟೇ ನನಗೆ ಇವತ್ತು ನನಗಿಂತ ಕಿರಿಯ ತಲೆಮಾರು ಮತ್ತು ಕೆಲವೊಮ್ಮೆ ಹಿರಿಯ ತಲೆಮಾರು ಕೂಡ ಮುಗ್ಗರಿಸುತ್ತಿರುವುದು ಎಲ್ಲಿ, ಏಕೆ ಮತ್ತು ಹೇಗೆ ಎನ್ನುವುದೆಲ್ಲ ಕಾಣತೊಡಗಿದೆ. ಇವತ್ತು ಅವಿಭಕ್ತ ಕುಟುಂಬಗಳಿಲ್ಲ. ಫ್ಲ್ಯಾಟು ಅಪಾರ್ಟ್‌ಮೆಂಟುಗಳಲ್ಲಿ ವೃದ್ಧ ದಂಪತಿಗಳು, ವಿಧುರ ವಿಧವೆಯರೇ ಕಾಣಿಸುತ್ತಾರೆ. ಇವೆಲ್ಲ ಒಂಥರಾ ವೃದ್ಧಾಶ್ರಮದಂತಿವೆ. ಇವರಿಗೆ ಆಸರೆ ಯಾರು? ಒಂದು ದಿನ ಅಕಸ್ಮಾತ್ ಸತ್ತು ಬಿಡುವ ಇವರ ಶವದ ವಿಲೇವಾರಿಯಾದರೂ ಹೇಗೆ ನಡೆಯುತ್ತದೆ ಎನ್ನುವ ಚಿಂತೆ ಅದೇ ಹಾದಿಯಲ್ಲಿರುವ ಪ್ರತಿಯೊಬ್ಬರದೂ ಅಲ್ಲವೆ? 
ಹಾಗಂತ ಕೌನ್ಸೆಲಿಂಗ್ ಸುರುಮಾಡಲಾರೆ. ಎಲ್ಲರೂ ಅವರವರ ಶಿಲುಬೆಯನ್ನು ಅವರವರೇ ಹೊರಬೇಕು. ತಮ್ಮ ತಮ್ಮ ತನುವನ್ನು, ಮನವನ್ನು ತಾವೇ ಸಂತೈಸಿಕೊಳ್ಳಬೇಕು. 

ಅದೇ ಆಧಾರದ ಮೇಲೆ ಮೊಗಸಾಲೆಯವರ ಕಾದಂಬರಿಯ ನಿಜವಾದ ಮುದ್ದೆ ಏನು ಎನ್ನುವುದು ಕೂಡ ಕಾಣುತ್ತಿದೆ. ಕತೆಯೇನು, ಕಾದಂಬರಿಯೇನು, ನನಗೆ ಕಾಣುತ್ತಿರುವುದು ಹಿರಿಯ ಜೀವ ಮೊಗಸಾಲೆಯವರ ಜೀವನ ಪ್ರೀತಿ, ಜೀವಪರ ಕಾಳಜಿ. ಅದು ಎಲ್ಲ ಸಾಹಿತ್ಯಿಕ ಸಾಧನೆಯನ್ನು ಮೀರಿ ನಿಲ್ಲುವುದಲ್ಲವೇ? ಅದಕ್ಕೆ ನಾಲ್ಕು ಮೆಚ್ಚುಮಾತಿನ ಹಾರ ಬೇಕೆ? ಆ ಹೃದಯದ ಔದಾರ್ಯ ಭೂಮಿತೂಕವಲ್ಲವೆ? Bodies are separate, Minds overlap and Soul is one ಎನ್ನುವ ಮಾತಿದೆ. ಇನ್ನೊಬ್ಬರ ಮಾತು, ನಗು, ಸ್ನೇಹ, ಸಂಬಂಧ, ಸಾನ್ನಿಧ್ಯ, ಸಾಂಗತ್ಯ, ಸಹವಾಸ, ಜೊತೆಗಾರಿಕೆ ಬದುಕಿಗೆ ಏನನ್ನೋ ತುಂಬಿಕೊಡುತ್ತದೆ ಎನ್ನುವ ಭರವಸೆ ನಿಮಗಿದ್ದರೆ ಅದಕ್ಕಾಗಿ ಕೈಚಾಚಿ, ನೀವು ಕೈ ಚಾಚಿದ್ದು ನಿಮಗೆ ಸಿಗುತ್ತದೆ. ಅಂಥ ಯಾವುದೂ ಮನುಷ್ಯನಿಗೆ ಇನ್ನೊಬ್ಬರಿಂದ ಸಿಗುವುದಕ್ಕಿಲ್ಲ, ಒಳಗಿನ ಟೊಳ್ಳನ್ನು ಹೊರಗಿನಿಂದ ತುಂಬುವುದಕ್ಕೆ ಬರುವುದಿಲ್ಲ ಎನಿಸಿದರೆ ಅದನ್ನು ಒಳಗಿನಿಂದಲೇ ತುಂಬಿಕೊಳ್ಳುವ ಹಾದಿ ಹಿಡಿಯಿರಿ. ಎರಡೂ ಸಂಘರ್ಷದ್ದೇ, ಕಾಲು ಜಾರುವಂಥಾದ್ದೇ. ಆದರೆ ಕೊನೆಗೂ ಪಮುಕ್ ಹೇಳಿದಂತೆ ಬದುಕಿನಲ್ಲಿ ಮನುಷ್ಯ ಸಂತೋಷವಾಗಿರುವುದೇ ಮುಖ್ಯ. ಪ್ರೀತಿಯ ವ್ಯಕ್ತಿಯ ಜೊತೆಗಿದ್ದಾಗ ಮನುಷ್ಯ ಸಂತೋಷವಾಗಿರುತ್ತಾನಂತೆ. ಇದನ್ನು ಕಂಡುಕೊಂಡಾಗ ಕೆಮಾಲ್ ಜೊತೆ ಅವನ ಪ್ರೀತಿಯ ವ್ಯಕ್ತಿ ಇರಲಿಲ್ಲ. ಅವಳು ಇಹಲೋಕ ತ್ಯಜಿಸಿ ವರ್ಷಗಳೇ ಕಳೆದಿರುತ್ತವೆ. ಆದರೆ, ಅವನು ನೆನಪುಗಳಲ್ಲಿ, ನೆನಪುಗಳನ್ನು ಉದ್ದೀಪಿಸುವ, ಜೀವಂತಗೊಳಿಸುವ ವಿಶಿಷ್ಟ ಬಗೆಯಲ್ಲಿ ಒಂದು ಮ್ಯೂಸಿಯಂ ಸ್ಥಾಪಿಸಿ ಅವಳನ್ನು ಮತ್ತೆ ಬದುಕುತ್ತಿರುತ್ತಾನೆ ಮತ್ತು ತನ್ಮೂಲಕ ಜಗತ್ತಿನಲ್ಲೇ ಅತ್ಯಂತ ಸಂತೋಷವಾಗಿರುವ ವ್ಯಕ್ತಿ ತಾನೇ ಎನ್ನುತ್ತಾನೆ. ಆ ಕಾದಂಬರಿಯ ಹೆಸರು ಮ್ಯೂಸಿಯಂ ಆಫ್ ಇನ್ನೊಸೆನ್ಸ್. ಇದು ಒಂದು ವಾಸ್ತವವಾಗಿಯೂ ಇಸ್ತಾಂಬುಲ್‌ನಲ್ಲಿದೆ. ಇಲ್ಲಿ ಪಮುಕ್ ಹೇಳಿದ ವಿಚಾರ ನಾವಂದುಕೊಂಡಷ್ಟು ಸರಳವಾಗಿಲ್ಲ, ಆ ಬಗ್ಗೆ ಸ್ವಲ್ಪ ಹೆಚ್ಚೇ ಧ್ಯಾನಿಸಿ ನೋಡಿ. ಮನುಷ್ಯ ನಿಜವಾಗಿಯೂ ಬದುಕಿರುವುದೇ ಯೋಚನೆಗಳಲ್ಲಿ, ನೆನಪುಗಳಲ್ಲಿ ಎಂದು ನನಗಂತೂ ತೀವ್ರವಾಗಿ ಅನಿಸತೊಡಗಿದೆ. ಅವನ ದೈಹಿಕ ಮತ್ತು ಇಂಟೆಲೆಕ್ಚುವಲ್ ಅಸ್ಮಿತೆಯ ಭ್ರಮೆಯನ್ನು ತೊಲಗಿಸುವಂಥ ಒಂದು ನಿಲುವು ಇದು. ಇದು ಕೂಡ ಸರಳವಿಲ್ಲ. ಆದರೆ ನಾನು ಹೇಳಬೇಕಾದುದನ್ನು ಹೇಳಿದ್ದೇನೆ ಎಂದುಕೊಂಡಿದ್ದೇನೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, April 2, 2018

ಚೌಕಟ್ಟಿಲ್ಲದ ಕನ್ನಡಿಗಳು, ಕಿಟಕಿಗಳು...

ಎಸ್. ಎಫ್. ಯೋಗಪ್ಪನವರ್ ಅವರ ಹೊಸ ಕಾದಂಬರಿ ‘ಶೋಧ’ ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತಿರುವ ಬಗೆಯಲ್ಲೇ ಒಂದು ವಿಶೇಷವಿದೆ. ತೀರ ಎಚ್ಚರದ ಭಾಷೆಯಲ್ಲಿ, ತೀರ ಜಾಗರೂಕ ಕಥಾಜಗತ್ತನ್ನು ಕಟ್ಟಿಕೊಂಡು, ಹಾಗೆಂದರೆ ಹಾಗೆ - ಹೀಗೆಂದರೆ ಹೀಗೆ ಎನ್ನುವಂತೆ ಎಷ್ಟು ಬೇಕೋ ಅಷ್ಟೇ ಮಾತನಾಡುತ್ತ, ಆಡಿದ ಮಾತಲ್ಲೇ ಆಡದಿರುವುದನ್ನು ಕಟ್ಟುತ್ತ ಸಾಗುವ ಹಾದಿ ಅಕ್ಷರಶಃ ಕತ್ತಿಯ ಮೇಲಿನ ನಡಿಗೆ ಎನ್ನುವುದನ್ನು ಯಾರಾದರೂ ಒಪ್ಪಲೇ ಬೇಕು. ಹೀಗೆ ಮಾಡುತ್ತ ಯೋಗಪ್ಪನವರ್ ಒಂದು ಹೊಸ ಶೋಧಕ್ಕೆ ತೊಡಗುತ್ತಾರೆಯೇ ಹೊರತು ಯಾವುದೇ ಹೊಳಹು, ಸತ್ಯ, ತೀರ್ಮಾನ, ದರ್ಶನ ಕೊಡುವ ದುಡುಕು ತೋರಿಸದೇ ಇರುವುದರಿಂದ ಈ ಕೃತಿಯ ಜೊತೆ, ಕೃತಿಕಾರನ ಜೊತೆ, ಈ ಕೃತಿಯ ಜಗತ್ತಿನ ಜೊತೆ ಮಾತ್ರವಲ್ಲ, ಈ ಕೃತಿಗೆ ಬೆನ್ನುಡಿ ಬರೆದಿರುವ ಮಾನ್ಯ ಲಕ್ಷ್ಮೀಶ ತೋಳ್ಪಾಡಿಯವರ ಜೊತೆ ಕೂಡ ಅವರವರದೇ ಅಂತಃಪ್ರಜ್ಞೆಯ ಧ್ವನಿಯಲ್ಲಿ ಮಾತನಾಡಬಹುದು, ಜಗಳ ಮಾಡಬಹುದು, ಪ್ರಶ್ನಿಸಬಹುದು. ಇವತ್ತಿನ ದಿನ ಕಷ್ಟದ್ದಾದ ಒಂದು ಸ್ಪೇಸ್ ಇಲ್ಲಿ ಸಾಧ್ಯವಾಗಿದೆ, ಅದಕ್ಕಾಗಿ ಮೊದಲ ನಮನ ಸಲ್ಲಬೇಕು. ಹಾಗೆ ನಾನಿಲ್ಲಿ ಮಾಡಿರುವುದು ಒಂದು ಸಂವಾದ, ನನ್ನೊಳಗಿನ ಸ್ವಗತ. ಇದರಿಂದ ಕೃತಿ ಪರಿಚಯವಾದಲ್ಲಿ ಅದು ಉಪ ಉತ್ಪನ್ನ. ಆದರೆ ಇಲ್ಲಿ ಆಡಿರುವುದೆಲ್ಲ ಕೃತಿಯ ಮೂಲ ಉತ್ಪನ್ನವೇ. ಹಾಗಾಗಿ ಕೃತಿಯ ಜಾಣ್ಮೆಯೆಲ್ಲದರ ಜೊತೆಗೂ ಈ ಸಂವಾದಕ್ಕೆ ಕೂಡ ನಂಟು ಅನಿವಾರ್ಯ.


ಎಷ್ಟೋ ಬಾರಿ ಅರ್ಥಹೀನವೂ, ನಿರರ್ಥಕವೂ, ನಿರುಪಯುಕ್ತವೂ ಎನಿಸುವ ನಮ್ಮ ಈ ಬದುಕಿಗೆ ಒಂದು ಅರ್ಥವಿದೆ ಎನ್ನುವುದು ಒಂದು ಊಹೆ, ಮನುಷ್ಯನಿಗೆ ಬಹಳ ಇಷ್ಟವಾಗುವ ನಂಬಿಕೆ. ಅದನ್ನು ಮತ್ತೆ ಮತ್ತೆ ದೃಢೀಕರಿಸುವುದು ಸಾಹಿತ್ಯ. ಆರಂಭ, ಅಂತ್ಯ ಎನ್ನುವುದು ಹುಟ್ಟು ಮತ್ತು ಸಾವೇ ಆಗಿರುವ ಬದುಕಿನ ವ್ಯಕ್ತಮಧ್ಯದ (ಅಡಿಗ) ಹೋಳುಗಳನ್ನು ಆಯ್ದು ಅದಕ್ಕೊಂದು ಆಕೃತಿಯನ್ನೂ, ಅರ್ಥವನ್ನೂ ದಕ್ಕಿಸಿ ಏನನ್ನೋ ಕಾಣಿಸಲು ಒಂದು ಸಾಹಿತ್ಯ ಕೃತಿ ಪ್ರಯತ್ನಿಸುತ್ತದೆ. ವಾಸ್ತವದಲ್ಲಿ ಅಂಥ ಒಂದು ಹೋಳು ಇಲ್ಲ. ಇದ್ದರೆ ಅದಕ್ಕೆ ಅದರಷ್ಟಕ್ಕೇ ಪ್ರಾಪ್ತವಾಗುವ ಅರ್ಥವೇನೂ ಇಲ್ಲ. ಆದರೆ ಸಾಹಿತ್ಯಕ್ಕೆ ಅರ್ಥವತ್ತಾದ ಹೋಳನ್ನು ಗುರುತಿಸುವ ಅಗತ್ಯವಿದೆ ಮತ್ತು ಆ ಅಗತ್ಯ ನಮಗೆ ಕೊಟ್ಟಿರುವ ಒಂದು ಚಿತ್ರವೇನಿದೆ, ಅದು ಕೇವಲ ಸಾಪೇಕ್ಷವಾದ ಒಂದು ಸತ್ಯ. ಪರಿಪ್ರೇಕ್ಷ್ಯಗಳಿಲ್ಲದೇ ಹೋದಲ್ಲಿ ಬಿದ್ದು ಹೋಗುವ ಸತ್ಯ. 


ಅತ್ಯಂತ ನಿಖರವೂ ನಿರ್ದಿಷ್ಟವೂ ಆದದ್ದು ಎಂದು ನಾವೆಲ್ಲ ತಿಳಿಯುವ ಗಣಿತ ಕೂಡ ಒಂದು ಸತ್ಯವನ್ನು ಸಮರ್ಥಿಸಿಕೊಳ್ಳಲು ಹೊರಡುವಾಗ ಎಷ್ಟೋ ಬಾರಿ ಸಾಪೇಕ್ಷ ಸುಳ್ಳನ್ನು ಸದ್ಯಕ್ಕೆ ಸತ್ಯ ಎಂದಿಟ್ಟುಕೊಳ್ಳಿ ಎನ್ನುವಲ್ಲಿಂದಲೇ ತೊಡಗುತ್ತದೆ. ಗಣಿತದ್ದು ಕಲ್ಪಿತ ಸತ್ಯವೇ ಎನ್ನುವ ಪ್ರಶ್ನೆಯನ್ನು ಸದ್ಯ ಬದಿಗಿಟ್ಟು ಇದನ್ನು ನೋಡಬೇಕಿದೆ! ಹೀಗೆ ಬದಿಗಿಡುವುದು ಕೂಡ ಸಾಪೇಕ್ಷ ಸಿದ್ಧಾಂತಕ್ಕೆ ನಮ್ಮನ್ನು ಒಡ್ಡಿಕೊಳ್ಳುವ ಪರಿ. ಒಂದು ಅನಿರ್ದಿಷ್ಟ ಸಂಖ್ಯೆಯನ್ನು ಅದು ಎಕ್ಸ್ ಎಂದಿಟ್ಟುಕೊಳ್ಳಿ ಎಂತಲೋ, ಮೂಲ ಬೆಲೆ ನೂರು ರೂಪಾಯಿ ಎಂದಿಟ್ಟುಕೊಂಡರೆ ಇನ್ನೊಂದು ಇಂತಿಷ್ಟು ಎಂತಲೊ ಇಲ್ಲದ್ದರ ಮೇಲೆ ಇರುವುದನ್ನು ಕಟ್ಟುತ್ತ ಹೋಗುತ್ತದೆ. ಸಾಹಿತ್ಯ ಕೂಡ ಹಾಗೆಯೇ ಕೆಲವೊಂದು ಚಲನಶೀಲ ಸಂಗತಿಗಳನ್ನು ಕಲ್ಪಿಸಿಕೊಂಡು, (ಸ್ಥಿರ)ಸ್ತಬ್ಧಗೊಳಿಸಿ, ತನಗೆ ಬೇಕಾದ ಉಳಿದ ವಾಸ್ತವವನ್ನು ಮಾತ್ರ ಜೀವಂತವಾಗಿಟ್ಟುಕೊಂಡು ತನ್ನ ಕಥಾಜಗತ್ತನ್ನು ಕಟ್ಟುತ್ತದೆ. ಇದನ್ನೇ ಕೊಂಚ ಬೇರೆ ಸಂದರ್ಭದಲ್ಲಿ ಜೇಮ್ಸ್ ಜಾಯ್ಸ್ ಸಿಗ್ನಿಫಿಕೆಂಟ್ ಡೀಟೇಲ್ಸ್ ಎನ್ನುತ್ತಾನೆ. ಇದರ ಬಗ್ಗೆ ಮುಂದೆ ನೋಡೋಣ. ಎರಡೂ ಕಲ್ಪನೆಯಾಗಿದ್ದರೂ ಒಂದು ವಾಸ್ತವದ ಯಥಾವತ್ ಚಿತ್ರಕ್ಕೆ ತುಡಿಯುತ್ತಿದ್ದರೆ ಇನ್ನೊಂದು ವಾಸ್ತವದ ಚೌಕಟ್ಟುಗಳನ್ನು ಕೃತಕವಾಗಿ ನಿರ್ದೇಶಿಸಿ ಕಲ್ಪಿತ ವಾಸ್ತವದ ಚಿತ್ರವನ್ನು ನಿರ್ದಿಷ್ಟಗೊಳಿಸುತ್ತಿರುತ್ತದೆ. ಹೀಗೆ ಮಾಡಿರುವುದನ್ನು ನೀವು ಪ್ರಜ್ಞಾಪೂರ್ವಕ ಗಮನಿಸದೆ, ಭಾವನಾತ್ಮಕವಾಗಿ ಇದೇ ನಿಜ ಎಂದು ಒಪ್ಪಿಕೊಳ್ಳುವಂತೆ ನೋಡಿಕೊಳ್ಳುತ್ತದೆ. ಇಷ್ಟೆಲ್ಲ ಮಾಡಿ ನಿಮಗೆ ಅತ್ಯಂತ ವಾಸ್ತವಿಕವಾದ ಒಂದು ಚಿತ್ರವನ್ನು ಕಟ್ಟಿಕೊಟ್ಟು ಬದುಕಿನ ಸತ್ಯವನ್ನು ಕಾಣಿಸುವ ಸಾಹಸಕ್ಕೆ ಕೈಯಿಕ್ಕುತ್ತದೆ. ಸಾಹಿತ್ಯ ಬದುಕಿನ ಪ್ರತಿಬಿಂಬ ಎಂದು ನಾವು ನಂಬುತ್ತೇವೆ. ಆದರೆ ಪ್ರತಿಬಿಂಬದ ಮೂಲ ಬಿಂಬವಾದ ಬದುಕು ನಮಗೆ ಕೊನೆಗೂ ಅನೂಹ್ಯವಾಗಿಯೇ ಉಳಿಯುತ್ತದೆ. ಇಲ್ಲ, ಅಷ್ಟಿಷ್ಟು ಅರ್ಥವಾಗಿದೆ ಎಂದುಕೊಳ್ಳುತ್ತೇವೆ. ಇನ್ನೂ ಪೂರ್ಣವಾಗಿಯೇ ಇಲ್ಲದ ಒಂದು ಆಗಲೇ ಅರ್ಥವಾಗಿದೆ ಎಂದಾದರೆ ನಿಜಕ್ಕೂ ನಮಗೆ ಅರ್ಥವಾಗಿರುವುದು ಯಾವುದು, ಏನು?

ಇಲ್ಲಿಯೇ ಗಮನಿಸಬೇಕಾದ ಇನ್ನೆರಡು ತಂತ್ರಗಳು ರೂಪಕಗಳದ್ದು ಮತ್ತು ಕಾವ್ಯಾತ್ಮಕ ಭಾಷೆಯದ್ದು. ರೂಪಕಗಳು ಕೂಡ ಸರಿಸುಮಾರು ಮೇಲೆ ಹೇಳಿದ, ಯಾವುದು ಅಲ್ಲವೋ ಅದನ್ನು, ಯಾವುದು ಹೌದೋ ಅದಕ್ಕೆ - ಹೋಲಿಸುವುದರ ಮೂಲಕ ಹೌದಾಗಿರುವುದನ್ನು ಹೆಚ್ಚು ನಿಜಗೊಳಿಸುವ, ಪುನರ್-ಸೃಷ್ಟಿಗೊಳಿಸುವ, ‘ಹೌದು’ ಎನ್ನಿಸುವ, ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ. ಯಾರಿಗೂ ನಿಜವಾದ ಚಂದ್ರನ ಮೇಲ್ಮೈ ಹೇಗಿದೆಯೋ ಅಂಥ ಮುಖವುಳ್ಳ ಹುಡುಗಿ ಇಷ್ಟವಿಲ್ಲ. ಆದರೆ ಚಂದ್ರವದನೆ ಎಂದಾಗ ಎಲ್ಲರ ಮುಖವೂ ಅರಳುತ್ತದೆ. ಇದು ರೂಪಕ ಸಾಧ್ಯವಾಗಿಸುವ ಒಂದು ಭ್ರಾಂತಿ. ಕಾವ್ಯಾತ್ಮಕ ಭಾಷೆಯಾದರೂ ಮಾಡುವುದೇನನ್ನು? ಹೇಳುವುದರ ಮೂಲಕ ಹೇಳದೇ ಇರುವುದನ್ನು ಕಾಣಿಸುವುದು ಕಾವ್ಯ (ಜಯಂತ್ ಕಾಯ್ಕಿಣಿ). ಒಂದು ಬಿಂದುವನ್ನು ಮೂಡಿಸುವುದರ ಮೂಲಕ ಇಡೀ ವೃತ್ತವನ್ನು ನೀವು ಕಾಣುವಂತೆ ಮಾಡುವುದು ಕಾವ್ಯ (ಪ್ರಸೂನ್ ಜೋಶಿ). ಭಾಷೆಯನ್ನು ಅರ್ಥದ ಹಂಗಿನಿಂದ ಪಾರು ಮಾಡುವುದು ಕಾವ್ಯ (ಕೀರಂ ನಾಗರಾಜ್). ಜಾಯ್ಸ್ ಹೇಳುವ ಸಿಗ್ನಿಫಿಕೆಂಟ್ ಡೀಟೇಲ್ಸ್ ಕೂಡ ಇದೇ ನಿಟ್ಟಿನದು. ಕವಿ ಭಾವ ಪ್ರತಿಮಾ ಪುನರ್-ಸೃಷ್ಟಿಯ ಉದ್ದೇಶದಿಂದಲೇ ಯಾವುದನ್ನು ಹೇಳಬೇಕು/ಬಾರದು, ಯಾವುದನ್ನು ಎಷ್ಟು ಹೇಳಬೇಕು/ಬಾರದು, ಯಾವುದನ್ನು ಹೇಗೆ ಹೇಳಬೇಕು/ಬಾರದು, ಯಾವುದನ್ನು ಎಲ್ಲಿ ಹೇಳಬೇಕು/ಬಾರದು ಎನ್ನುವುದರ ಮೂಲಕ ಸಾಹಿತ್ಯ, ಕತ್ತಲೆ ಬೆಳಕಿನಾಟ ಆಡುತ್ತದೆ. ಒಬ್ಬ ನುರಿತ ಛಾಯಾಗ್ರಾಹಕ (ಈ ಶಬ್ದದ ಮಾಯೆಯೇ ಒಂದು ರೂಪಕವಲ್ಲವೆ!) ಮಾಡುವುದೂ ಇದನ್ನೇ. ಬಹುಶಃ ಇದು ಎಲ್ಲ ಕಲೆಗಳಿಗೂ ಅನ್ವಯಿಸುತ್ತದೆ.

ಇದಿಷ್ಟು ಆಗುತ್ತಲೇ ಇವೆಲ್ಲವನ್ನೂ ಮೀರಿದ ಒಂದು ಸಂದಿಗ್ಧವನ್ನು ಕೂಡ ನಾವು ಗಮನಿಸುವುದಿದೆ. ಬಹುಶಃ ಇದು ಭಾರತೀಯರಿಗೆ ಅನಿವಾರ್ಯವಾದದ್ದು. ಡಾ||ಯು ಆರ್ ಅನಂತಮೂರ್ತಿಯವರು ಒಂದೆಡೆ ಭಾರತೀಯ ಮನಸ್ಸು ಏಕಕಾಲಕ್ಕೆ ಹಲವು ತಲೆಮಾರುಗಳನ್ನು ಬದುಕುತ್ತಿರುತ್ತದೆ ಎಂದಿದ್ದರು. ಅವನಿಗೆ ರಾಮಾಯಣ, ಮಹಾಭಾರತಗಳು ನಿಜ. ತನ್ನ ತಂದೆ, ತಾತ ಕೂಡ ನಿಜ. ತನ್ನ ವರ್ತಮಾನವಂತೂ ಹೇಗಿದ್ದರೂ ನಿಜ. ಜೊತೆಗೆ ಮುಂದಿನ ಸಂತತಿ ಕೂಡ ನಿಜ. ಅವನು ಏಕಕಾಲಕ್ಕೆ ಇಹಕ್ಕೂ ಪರಕ್ಕೂ ಸಲ್ಲುವಂತೆ ಬದುಕುವ ಮನೋಧರ್ಮವನ್ನು ಸಹ ಒಪ್ಪಿಕೊಂಡಿದ್ದಾನೆ. ಅಳೆದು ನೋಡಿದರೆ ಬಹುಶಃ ಅವನ ಇಹದಲ್ಲಿ ಪರದ ಪಾಲೇ ಹೆಚ್ಚು. ಆದರೆ ನಮ್ಮ ದರ್ಶನಗಳು, ವೇದೋಪನಿಷತ್ತು, ಗೀತೆ ಮತ್ತು ಬ್ರಹ್ಮಸೂತ್ರಗಳು, ಎಲ್ಲಾ ಸೇರಿ ಕೊಟ್ಟಿರುವ ಒಂದು ಅರಿವು, ಜ್ಞಾನ ಏನಿದೆ ಅದನ್ನು ಪ್ರಮಾಣ ಎಂದು ನಂಬಿ ನಮ್ಮ ಆಧ್ಯಾತ್ಮ ನಿಂತಿದೆ. ಉದಾಹರಣೆಗೆ, ಯೋಗಪ್ಪನವರ್ ಅವರ ಕಾದಂಬರಿಗೆ ಬೆನ್ನುಡಿ ಬರೆದಿರುವ ಲಕ್ಷ್ಮೀಶ ತೋಳ್ಪಾಡಿಯವರಿಗೆ ಭಗವದ್ಗೀತೆ ಒಂದು ಪ್ರಮಾಣ. ಅವರು ಅಲ್ಲಿಂದ ಉಳಿದಿದ್ದನ್ನು ಅಳೆಯಬಲ್ಲವರು, ಜಿಜ್ಞಾಸೆಗೊಡ್ಡಬಲ್ಲವರು, ಪ್ರಶ್ನಿಸಿ, ಉತ್ತರಿಸಿ ಸಂಶಯಗಳನ್ನು ನಿವಾರಿಸಬಲ್ಲವರು, ಅಸ್ಪಷ್ಟವನ್ನು ಸ್ಪಷ್ಟಗೊಳಿಸಬಲ್ಲವರು ಮತ್ತು ಸ್ಪಷ್ಟವಾದುದನ್ನು ಕಾಣಬಲ್ಲವರು.

ಆದರೆ ನಾವು ಭಗವದ್ಗೀತೆಗೆ ಪ್ರಮಾಣ ಹುಡುಕುವವರು. ಯುದ್ಧಭೂಮಿಯಲ್ಲಿ ಅಷ್ಟು ದೀರ್ಘವಾದ ಒಂದು ಉಪನ್ಯಾಸಕ್ಕೆ ಎಷ್ಟು ಕಾಲ ತಗುಲಿದ್ದೀತು, ಅಷ್ಟು ಹೊತ್ತು ಉಳಿದವರೆಲ್ಲ ಏನು ಮಾಡುತ್ತಿದ್ದರು ಇತ್ಯಾದಿ ನಮ್ಮ ಶಂಕೆ. ಸಂಶಯಾತ್ಮಾ ವಿನಶ್ಶತಿ ಎನ್ನುವ ವಾಕ್ಯ ನಮ್ಮ ಸಂಶಯವನ್ನಂತೂ ನಾಶ ಮಾಡುವುದಿಲ್ಲ. ಏಕೆಂದರೆ, ನಮ್ಮ ಸುಡುಸುಡು ವರ್ತಮಾನದಲ್ಲಿ ಏನೋ ಆಗಬಹುದಾಗಿದ್ದ ಇವೇ ಪ್ರಮಾಣಗಳನ್ನು ಕೆಲವೇ ಕೆಲವು ಮಂದಿ ತಮ್ಮದೇ ಆದ ಕಾರಣಗಳಿಗಾಗಿ ಇನ್ನೇನೋ ಮಾಡಿರುವುದು, ಉಪಯೋಗಿಸಿಕೊಳ್ಳುತ್ತಿರುವುದು ನಮಗೆ ಕಾಣುತ್ತಿದೆ. ನಮ್ಮ ನಿಜವಾದ ಇಹ-ಪರದ ಸಂಘರ್ಷದ ರೂಪುರೇಷೆಗಳನ್ನೇ ಈ ಬೆಳವಣಿಗೆ ಪುನರ್-ವ್ಯಾಖ್ಯಾನಕ್ಕೆ ಒಡ್ಡಿರುವುದು ನಿಜ. ಆದರೆ, ಕೆಲವೇ ದಶಕಗಳ ಹಿಂದಿನ ತಲೆಮಾರಿಗೆ ಇದ್ದ ಇಹ-ಪರದ ಸಂಘರ್ಷ ಬೇರೆಯೇ ನೆಲೆಯದ್ದಾಗಿತ್ತು ಎನ್ನುವುದು ಕೂಡ ಅಷ್ಟೇ ನಿಜ. ಇದು ಕಾಲದ ಮಹಿಮೆ. ನಾವು ಆ ತಲೆಮಾರಿನ ಸಂಘರ್ಷದ ಮೌಲ್ಯವನ್ನು ಅರ್ಥಮಾಡಿಕೊಂಡೇ ಇಂದಿನ ಗತಿ-ಸ್ಥಿತಿಯನ್ನೂ ಅರ್ಥಮಾಡಿಕೊಳ್ಳಬಲ್ಲ ಸಾಧ್ಯತೆ ಅಥವಾ ದೌರ್ಭಾಗ್ಯ ಪಡೆದವರಾಗಿದ್ದು, ಪ್ರಶ್ನಿಸುವ ನೆಲೆಗಟ್ಟು ತೀರ ಬೇರೆಯಾಗಿದೆ. ಇದು ಕೇವಲ ಶ್ರದ್ಧೆಯನ್ನು ಪ್ರಶ್ನಿಸುವ ನೆಲೆಯಲ್ಲ, ಕಥನದ ಕಲ್ಪಿತ ವಾಸ್ತವವನ್ನು ಚಿಂದಿ ಮಾಡುವ ಉದ್ದೇಶವೂ ಅಲ್ಲ. ಒಂದು ಅರಿವು/ಜ್ಞಾನದ ಶಾಖೆಯನ್ನು ಬಳಸಿಕೊಂಡ ಮತ್ತು ಅದರ ಮೂಲ ಉದ್ದೇಶದಿಂದ ಅದನ್ನು ರಿಕ್ತಗೊಳಿಸಿದ, ಪ್ರಕ್ಷಿಪ್ತವನ್ನು ಮೂಲವಾಗಿಸಿದ ಫಲಾನುಭವಿಗಳ ಭ್ರಷ್ಟ ಉದ್ದೇಶವನ್ನೇ ಪ್ರಶ್ನಿಸುವ ನೆಲೆಯೂ ಇದರಲ್ಲಿ ಸೇರಿಕೊಂಡಿದೆ. ಇದರಿಂದ ಲಕ್ಷ್ಮೀಶ ತೋಳ್ಪಾಡಿಯವರಿಗಾಗಲಿ, ಎಸ್ ಎಫ್ ಯೋಗಪ್ಪನವರ್ ಅವರಿಗಾಗಲಿ ಮುಕ್ತಿ, ವಿನಾಯಿತಿ ಇಲ್ಲ. 

****

ಸಾಹಿತ್ಯ, ಕಾವ್ಯ ಎಲ್ಲ ಒಳನೋಟಗಳನ್ನು ಹೊಂದಿರುತ್ತದೆ, ಓದಿನಿಂದ ದರ್ಶನ ದಕ್ಕಬಹುದು ಎಂದೆಲ್ಲ ನಾವು ನಂಬುತ್ತೇವೆ. ಅದು ಒಂದು ಸೀಮಿತ ನೆಲೆಯಲ್ಲಿ ನಿಜ.

ಮನುಷ್ಯನ ಕಣ್ಣು ತುಂಬ ಇತಿಮಿತಿಗಳಿರುವ ಕಣ್ಣು. ಬೆಕ್ಕಿನ ಕಣ್ಣಿಗೆ ಬಣ್ಣಗಳ ವಿವೇಚನೆ ಇರುವುದಿಲ್ಲ, ಅದಕ್ಕೆ ಎಲ್ಲವೂ ಕಪ್ಪು-ಬಿಳುಪು ವರ್ಣಗಳಲ್ಲಿ ಮಾತ್ರವೇ ಕಾಣುತ್ತದೆ ಎನ್ನುತ್ತಾರೆ. ಯಾರಿಗೆ ಗೊತ್ತು! ಆಕಾಶ ನೋಡಿ ಊಳಿಡುವ ನಾಯಿಗೆ ಅಪರಲೋಕದ ಜೀವಿಗಳು, ಅಂದರೆ ಯಮದೂತರು, ಪ್ರೇತ-ಭೂತ-ಪಿಶಾಚಾದಿ ಬ್ರಹ್ಮರಾಕ್ಷಸರೆಲ್ಲ ಕಾಣಿಸುತ್ತಾರೆ ಎನ್ನುತ್ತಾರೆ. ಯಾರಿಗೆ ಗೊತ್ತು!! ಮಾನವ ಮಾತ್ರನ ಬರಿಗಣ್ಣಿಗೆ ಕಾಣಲಾಗದ ವಿಶ್ವರೂಪ ಪ್ರದರ್ಶನದ ಸಂದರ್ಭದಲ್ಲಿ ಶ್ರೀಕೃಷ್ಣ ತನ್ನ ಮಿತ್ರ ಅರ್ಜುನನಿಗೆ ದಿವ್ಯದೃಷ್ಟಿ ಪ್ರದಾನ ಮಾಡುತ್ತಾನಲ್ಲ, ಅದನ್ನು ಸಂಜಯನಿಗೂ ನೀಡುತ್ತಾನಂತೆ. ಟೆಕ್ನಿಕಲಿ ಅದು ನಿರೂಪಣೆಯ ತಂತ್ರವಷ್ಟೇ ಇರಬಹುದು. ಸಂಜಯನಲ್ಲವೆ ನಮಗೂ ಧೃತರಾಷ್ಟ್ರನಿಗೆ ಹೇಳಿದಂತೆಯೇ ಅಲ್ಲಿ ಏನೇನಾಯ್ತು ಎನ್ನುವುದನ್ನು ಹೇಳುವವ? ಇಡೀ ಭಗವದ್ಗೀತೆಯನ್ನು ಮೊದಲು ನಿರೂಪಿಸಿದವ ಅವನೇ! ಇದನ್ನು ಹೊರತು ಪಡಿಸಿ ದಿವ್ಯದೃಷ್ಟಿಗೆ ಅವನು ಹೇಗೆ ಅರ್ಹನೊ, ಅದಕ್ಕೇನು ಕತೆಯಿದೆಯೊ (ಇದ್ದೇ ಇರುತ್ತದೆ ಬಿಡಿ, ಮಹಾಭಾರತದಲ್ಲಿ ಕಾರ್ಯ-ಕಾರಣ ಸಂಬಂಧ ಇಲ್ಲದ್ದು ಏನೂ ಇಲ್ಲವಲ್ಲ!) ಗೊತ್ತಿಲ್ಲ.

ಹೇಳಲು ಹೊರಟಿದ್ದು, ಮನುಷ್ಯನ ಕಣ್ಣಿಗೆ ಎಲ್ಲವೂ ಕಾಣಿಸುತ್ತಾ ಇಲ್ಲ, ಅವನು ಕಾಣಲು ಅಸಮರ್ಥನಾಗಿರುವ ಸಾಕಷ್ಟು ಸಂಗತಿಗಳು ಈ ಜಗತ್ತಿನಲ್ಲಿ, ನಮ್ಮ ಆಸುಪಾಸಿನಲ್ಲೇ, ಮೊಬೈಲ್ ಮತ್ತು ರೇಡಿಯೋ ತರಂಗಾಂತರಗಳಂತೆಯೇ ಸಾಕಷ್ಟಿವೆ ಎನ್ನುವುದನ್ನ. (2015ರ ಪುಲಿಟ್ಜರ್ ಪ್ರೈಜ್ ಪಡೆದ ಕೃತಿಯ ಹೆಸರು All the Light We Cannot See! (Anthony Doerr)) ಅಂದರೆ, We are virtually blind to many things. May be more so than what we can actually see!!
ಇದು ಪೂರ್ತಿ ನಿಜವಾದಲ್ಲಿ, ಎಲ್ಲವನ್ನೂ ಸ್ಪಷ್ಟವಾಗಿ ಕಾಣಬಲ್ಲ ಹೊರಗಿನ ವ್ಯಕ್ತಿ ಯಾ ಪ್ರಜ್ಞೆಗೆ ನಾವೆಲ್ಲ ಕತ್ತಲಲ್ಲಿ ತಡಕಾಡುತ್ತಾ ಇರುವ ಪೆದ್ದುಗಳಂತೆ ಕಾಣಿಸುತ್ತಾ ಇರುತ್ತೇವೆ. ಒಂಥರಾ ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಹಾಗೆ ಅನ್ನಿ. ಟೀವಿ ನೋಡುತ್ತಾ ಇರುವ ನಿಮಗೆ ಅವರಿಗಿಂತ ಹೆಚ್ಚು ಗೊತ್ತು. ನಿಮ್ಮನ್ನೂ ಎಷ್ಟು ಬೇಕೋ ಅಷ್ಟೇ ಬೆಳಕಿನಲ್ಲಿರಿಸುತ್ತಾ ಬರುವ ಬಿಗ್‌ಬಾಸ್‌ಗೆ, ಚಾನೆಲ್‌ನವರಿಗೆ ನಿಮಗಿಂತ ಹೆಚ್ಚು ಗೊತ್ತು. ಮೊನ್ನೆ ಮೊನ್ನೆ ಬಯಲಾದ ಸೀಕ್ರೆಟ್ ರೂಮಿನ ಗೋಟಾಳೆ ಕೆಲವರಿಗೆ ಗೊತ್ತಿದ್ದೂ ಹಲವರಿಗೆ ಗುಟ್ಟಾಗಿಯೇ ಉಳಿದಿದ್ದ ಹಾಗೆ.

So to say, ನಾವು ತಿಳಿಯದೇ ಇರುವ ಭಾಗ ಹೆಚ್ಚು, ತಿಳಿದಿರುವುದು ಕಡಿಮೆ. ತಿಳಿದಿದೆ ಅಂದುಕೊಂಡಿರುವ ಭಾಗವನ್ನೂ ಸರಿಯಾಗಿ ಗ್ರಹಿಸಿರುವುದಿಲ್ಲ, ತಿಳಿದುಕೊಂಡಿರುವುದಿಲ್ಲ. ಮತ್ತೆ ಮತ್ತೆ ನೋಡಿದರೆ, ಓದಿದರೆ ಹೆಚ್ಚು ಹೆಚ್ಚು ತಿಳಿಯುವ, ಹಿಂದಿನ ಬಾರಿಯ ತಪ್ಪು ಅರಿವಿಗೆ ಬರುವ ಹಾಗೆ ನಮ್ಮದೇ ಬದುಕಿನ ಘಟನೆಗಳನ್ನು ಮಾಡಲು ಬರುವುದಿಲ್ಲವಲ್ಲ! ಅವು ನೆನಪು-ಮರೆವುಗಳ ಭೂತಕಾಲಕ್ಕೆ ಸಂದಿರುತ್ತವೆ ಮತ್ತು ಹಾಗಾಗಿ, ಕಾಂಕ್ರೀಟ್ ಎವಿಡೆನ್ಸ್ ಇಲ್ಲದ, ನೆನಪು-ಕಲ್ಪನೆ-ಕನಸು-ಭ್ರಮೆ-ಸತ್ಯ ಎಲ್ಲವೂ ಕಲಸುಮೇಲೋಗರವಾಗಿರುವ ಅವುಗಳ ಪೋಸ್ಟ್ ಮಾರ್ಟೆಮ್ ಕೂಡಾ ಮತ್ತಷ್ಟು ತಪ್ಪುಗಳಿಗೆ, ತಪ್ಪುಗ್ರಹಿಕೆಗಳಿಗೆ ಕಾರಣವಾಗುವ ಸಾಧ್ಯತೆಗಳೇ ಹೆಚ್ಚು. We are guided by our own known and unknown prejudice.

ಇಂಥ ಕುರುಡುಗಣ್ಣ, ಮೊಂಡು ಗ್ರಹಿಕೆಯ ಮನುಷ್ಯ ಬದುಕುತ್ತಿರುವ ಬಗ್ಗೆ ಎಲ್ಲವನ್ನೂ ಕಾಣಬಲ್ಲ ಮತ್ತು OUTSIDER ಆಗಿರುವುದರಿಂದ ಸಾಕಷ್ಟು ನಿರಪೇಕ್ಷ ಗ್ರಹಿಕೆಗಳಿರುವ ಪ್ರಜ್ಞೆಯಿಂದ ಗ್ರಹಿಸಬಲ್ಲ ಒಂದು ವಸ್ತು - ಅಂಥದ್ದೊಂದು ಇರುವುದೇ ಆದಲ್ಲಿ - ಮಾತ್ರ ಒಳನೋಟಗಳನ್ನು, ದರ್ಶನಗಳನ್ನು ಕೊಡಬಹುದೇ ಹೊರತು, ಇಲ್ಲಿಯೇ ಇರುವ, INSIDERS ಸೃಷ್ಟಿಸುವ ಸಾಹಿತ್ಯ ಅಲ್ಲ ಅಲ್ಲವೆ? ನಿನಗೇ ಪೂರ್ಣದೃಷ್ಟಿಯಿಲ್ಲದೇ ಇರುವಾಗ ಇನ್ನೊಬ್ಬರಿಗೆ ಯಾವುದರ ದರ್ಶನ ದಕ್ಕಿಸುವ ಶಕ್ತಿ ನಿನಗಿದೆ! ಅದೇನಿದ್ದರೂ ಕುರುಡ ಬಣ್ಣಿಸುವ ಆನೆಯಾಗದೇ? ಧೃತರಾಷ್ಟ್ರನಂತೆಯೇ ಕುರುಡರು ನಾವು! ನಮಗೊಬ್ಬ ಸಂಜಯ ಬೇಕು ಮತ್ತು ಅವನಿಗೆ ಆ ದಿವ್ಯದೃಷ್ಟಿಯೂ ಇರಬೇಕು. ಇದೆ ಎಂದು ನಾವು ಕುರುಡಾಗಿ ನಂಬಬೇಕು ಎನ್ನುವುದೇ ಭರತವಾಕ್ಯ! ಧೃತರಾಷ್ಟ್ರನಿಗೇನು ಗೊತ್ತು ನಿಜಕ್ಕೂ ಏನು ನಡೆಯುತ್ತಾ ಇತ್ತು ಅಂತ? ಸಂಜಯ ಹೇಳಿದ, ಅವನು ನಂಬಿದ! ಹಾಗೆಯೇ ನಾವೂ ನಂಬಿದೆವು.

ಬಟ್, ನಾವು ಈ ಇತಿಮಿತಿಗಳನ್ನು ಮರೆತು ಎಲ್ಲವನ್ನೂ ಬಲ್ಲವರಂತೆ ವರ್ತಿಸುತ್ತೇವೆ, ಬದುಕುತ್ತೇವೆ ಮತ್ತು ಬರೆಯುತ್ತೇವೆ. ಇದು ಸಹಜ ಮತ್ತು ಸರಿ, ಅದರಲ್ಲಿ ODD ಅನಿಸುವಂಥದ್ದೇನಿದೆಯಪ್ಪಾ ಎನ್ನುತ್ತೇವೆ.

ಇಷ್ಟಿದ್ದೂ ನಮಗೆ ಆಗಾಗ ಒದಗುವ ಆರನೇ ಇಂದ್ರಿಯದ ಹೊಳಹುಗಳ ಬಗ್ಗೆ ಕುತೂಹಲ ಉಳಿದೇ ಉಳಿಯುತ್ತದೆ.

ಮನುಷ್ಯ ಆಡುವುದನ್ನು, ಬರೆಯುವುದನ್ನು ಅದರ ಒಳಪದರ ಕಾಣಬಲ್ಲ ಎಕ್ಸ್‌ರೇ ದೃಷ್ಟಿಯಿಂದ ಗ್ರಹಿಸುವ ಸಾಮರ್ಥ್ಯ ಇದ್ದರೆ ಒಳ್ಳೆಯದು. ಬೇಕು ಅದು. ಬಹುಶಃ ನಾವು ಸ್ವಲ್ಪ ಸೂಕ್ಷ್ಮವಾಗಿದ್ದರೆ ಅದು ಅಷ್ಟಿಷ್ಟು ಸಾಧ್ಯವಾಗುತ್ತದೆ. ಉದ್ವೇಗದಿಂದ, ಸಿಟ್ಟು-ದ್ವೇಷ-ಈರ್ಷ್ಯೆಯಿಂದ, ಅತಿಯಾದ ಸಂತೋಷ, ಮಿತಿ ಮೀರಿದ ಅಭಿಮಾನದಿಂದ ವ್ಯಕ್ತಿ ಮತ್ತು ವಿಷಯವನ್ನು ಗ್ರಹಿಸುವಾಗ ಮಾತ್ರ ಒಳಗಣ್ಣಿಗೆ ಮಬ್ಬು ಕವಿಯುತ್ತದೆ.

ಸಾಹಿತ್ಯದಲ್ಲಿ ನಾವು ‘ಕಲ್ಪಿತ ನಡವಳಿಕೆ’ ಯನ್ನಷ್ಟೇ ಕಾಣುತ್ತೇವೆ. ಕಲ್ಪಿತ ಪಾತ್ರಗಳು, ಅವರವರ ಕಲ್ಪಿತ ವ್ಯಕ್ತಿತ್ವದೊಂದಿಗೆ, ಕಲ್ಪಿತ ಸನ್ನಿವೇಶವನ್ನು, ಕಲ್ಪಿತ ಉದ್ದೇಶಪೂರೈಕೆಗೆ ಬೇಕಾದಂತೆ ಕಲ್ಪಿತ ಮಾರ್ಗದಲ್ಲಿಯೇ ನಡೆದುಕೊಂಡು ಸಹಕರಿಸುತ್ತವೆ. ಮತ್ತಿಲ್ಲಿ ನೀವು ಒಬ್ಬ ಕಲ್ಪಿತ ಓದುಗ, ಬರಹಗಾರನಿಗೆ. ನಿಮಗೆ, ನೀವು ಕಲ್ಪಿತ ಕಥಾನಕದ ಹೊರಗಿದ್ದು ನೋಡಬಲ್ಲವರಾಗಿರುವುದರಿಂದ, ನಿಮಗೆ ಎಲ್ಲವೂ ಅರ್ಥವಾಗುತ್ತದೆ, ಎಲ್ಲವೂ ಕಾಣಿಸುತ್ತದೆ. ಆದರೆ ನೀವು ಇರುವ ಈ ಜಗತ್ತನ್ನು ಕಲ್ಪಿಸಿದ ಹೊರಗಿನ ಒಂದು ಆವರಣ ಇದ್ದಲ್ಲಿ ನೀವು ಆ ವ್ಯಾಪ್ತಿಗೆ ಆತನ ಪರಿಕಲ್ಪನೆಯ ಒಳಗೇ ಬಂಧಿಯಾಗಿರುವ ವ್ಯಕ್ತಿ. ನಿಜಕ್ಕೂ ಹೊರಗಿನದ್ದು ಎಂದು ಹೇಳಬಹುದಾದ ಒಂದು ಹೊರವ್ಯಾಪ್ತಿ ಇರುವುದೇ ಆದಲ್ಲಿ ನಿಮ್ಮನ್ನು ಮೀರಿದ ಹೊರಗಿನ ವ್ಯಕ್ತಿ ಅಥವಾ ಪ್ರಜ್ಞೆ ಇರುವುದು ಕೂಡ ಸಾಧ್ಯವಿದೆ. ಆ ಪ್ರಜ್ಞೆ ನಿಮ್ಮ ಪ್ರಜ್ಞೆಗೆ ದಕ್ಕದ್ದು ಎನ್ನುವುದನ್ನು ಪರಿಗಣಿಸಿದರೆ ನೀವು ಕಲ್ಪಿತ ವಾಸ್ತವಕ್ಕೇ ಸೇರಿದ ವ್ಯಕ್ತಿ, ಅದನ್ನು ಮೀರಿದವರಲ್ಲ ಮತ್ತು ಹಾಗಿರುತ್ತ ನೀವು ಆ ಮಿತಿಯೊಳಗೇ ಇದ್ದು ಇದನ್ನು ಮೀರಿದ ಒಂದು ಪ್ರಜ್ಞೆ ಅಥವಾ ವ್ಯಕ್ತಿ ಇರಬಹುದು ಎಂದು ಕಲ್ಪಿಸುತ್ತಿದ್ದೀರಿ ಅಷ್ಟೇ, ಇದು ಕಲ್ಪಿತ ಸಾಧ್ಯತೆಯೇ ಹೊರತು ‘ಸತ್ಯ’ ಅಲ್ಲ.

"ರಾಮಾಯಣದಲ್ಲಿ ಒಂದು ಪಾತ್ರ ಇನ್ನೊಂದಕ್ಕೆ ಗುಟ್ಟಿನಲ್ಲಿ ಹೇಳಿದ್ದೂ, ತಾನು ತನಗೇ ಅಂದುಕೊಂಡಿದ್ದೂ ನಿನಗೆ ಗೊತ್ತಾಗಲಿ" - ಇದು ಬ್ರಹ್ಮ ಕೊಟ್ಟ ವರವಂತೆ ವಾಲ್ಮೀಕಿಗೆ. ಡಾ||ಯು ಆರ್ ಅನಂತಮೂರ್ತಿಯವರು ಬರೆಯುತ್ತಾರೆ, ‘ಇದು ಸಾಲದು!’

"ಪರಕಾಯ ಪ್ರವೇಶದ ಒಳ-ನೋಟಗಳ ತನ್ಮಯತೆ ತತ್ಪರತೆಗಳ ಜೊತೆಯಲ್ಲೇ ವಾಲ್ಮೀಕಿ ಈ ವಾಕ್ ಸಿದ್ಧಿಯ - ಅಂದ ಮಾತು ತತ್‌ಕ್ಷಣವೇ ನಿಜವೆನ್ನಿಸುವ - ವರವನ್ನು ಬ್ರಹ್ಮನಿಂದ ಪಡೆಯುತ್ತಾನೆ.

"ಕಾವ್ಯದ ಮಾಂತ್ರಿಕತೆ ಎಂದರೆ ಇದೇ."

- ಕೊನೆಗೂ ಅದು ಮಾಂತ್ರಿಕತೆ. ಸತ್ಯದ ಬಳಿಗೆ ನಮ್ಮನ್ನು ತಲುಪಿಸಬಲ್ಲ. ಸತ್ಯದರ್ಶನ ಮಾಡಿಸಬಲ್ಲ, ಸತ್ಯದೊಂದಿಗೆ ನಿಲ್ಲಿಸಬಲ್ಲ ಮಾಂತ್ರಿಕತೆಯೆ? ಹಾಗಂದುಕೊಳ್ಳಬಹುದು. ‘ಲಿಂಗ ಮೆಚ್ಚಿ ಅಹುದು ಅಹುದು ಎನಿಸುವಂಥ’ - ಯಾರಿಗೆ ಅನಿಸುವಂಥ?! ಲಿಂಗದಲ್ಲಿ ಕೂತು ಅಹುದು ಅಹುದು ಎಂದು ತಲೆಯಾಡಿಸುತ್ತಿರುವವರು ಇಲ್ಲಿ ನಿಜಕ್ಕೂ ಯಾರು!!!

****

ಯೋಗಪ್ಪನವರ್ ಅವರ ಶೋಧ ತೊಡಗುವುದು, ಮುಂದುವರಿಯುವುದು ಒಬ್ಬ ಪೋಲಿಸ್ ಪೇದೆಯೊಂದಿಗೆ. ಮೊದಲು ದೇವರು,ಧರ್ಮ ಬಂತು. ಅದು ನಮಗೆ ಸ್ವರ್ಗ ನರಕಗಳ ಆಮಿಷ ಮತ್ತು ಭಯ ಒಡ್ಡಿ ಸಾಮಾಜಿಕ ನ್ಯಾಯಕ್ಕೆ ಚೌಕಟ್ಟು ಒದಗಿಸಿತು. ನಂತರ ಕಾನೂನು, ಕೋರ್ಟು ಬಂತು. ಪೋಲೀಸು,ಜೈಲುಗಳ ಭಯವೊಡ್ಡಿ ಸಾಮಾಜಿಕ ನ್ಯಾಯಕ್ಕೆ ಚೌಕಟ್ಟು ಒದಗಿಸಿತು. ತದನಂತರ ಒಂದು ಲಾಜಿಕ್ ಹುಟ್ಟಿಕೊಂಡಿತು. ಈ ಬದುಕು ಯಾವ ಲಾಜಿಕ್ಕಿಗೆ ಒಳಪಟ್ಟು ನಡೆಯುತ್ತಿದೆಯೊ, ಅದು ಯಾರಿಗೂ ಗೊತ್ತಿಲ್ಲ. ಆದರೆ ಗುರುತ್ವಾಕರ್ಷಣ ನಿಯಮವನ್ನು ನಾವೆಲ್ಲರೂ ಒಪ್ಪುತ್ತೇವೆ. ಸರ್ ಐಸಾಕ್ ನ್ಯೂಟನ್ ಹೇಳಿದ, ಪ್ರತಿಯೊಂದು ಕ್ರಿಯೆಗೂ ತದ್ವಿರುದ್ಧವಾದ ಮತ್ತು ಸಮನಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎನ್ನುವ ನಿಯಮವನ್ನೇ ಆಧ್ಯಾತ್ಮವನ್ನಾಗಿಸಿಕೊಂಡ ಲಾಜಿಕ್ಕು ಅದು. ಸರಳವಾಗಿ ಕರ್ಮ ಸಿದ್ಧಾಂತ. ಇದಕ್ಕೆ ದೇವರು ತೀರ ಅಗತ್ಯವೇನಲ್ಲ. ಪೋಲೀಸೂ ಅನಿವಾರ್ಯನಲ್ಲ. ಆದರೆ ಅವರಿಬ್ಬರೂ ಈ ಲಾಜಿಕ್ಕಿನ ಭಾಗವಾಗಿರುತ್ತಾರೆ, ಅಷ್ಟೆ. ಹಾಗಾಗಿ ಇಲ್ಲಿ ಯೋಗಪ್ಪನವರ್ ಆರಿಸಿಕೊಂಡ ಪೋಲೀಸು, ಅವನು ಕೇಂದ್ರ ಪಾತ್ರದೊಂದಿಗೆ ಅದರ ಅವಳಿಯಂತೆ, ನೆರಳಿನಂತೆ, ಎರಡೂ ಎರಡಲ್ಲ, ಒಂದೇ ಎನ್ನುವಂತೆ ಇರುವುದು, ಸಂಯೋಜಿಸಿರುವುದು ಗಮನಾರ್ಹವಾದ ಒಂದು ತಂತ್ರ.

ಇಲ್ಲೊಂದು ಶೋಧವಿದೆ. ಅಪರಾಧಿಯನ್ನು ಹುಡುಕುತ್ತಿದ್ದೇನೆ ಎಂದುಕೊಂಡಿರುವ ಪೇದೆ, ತೀರ ಆಪ್ಯಾಯಮಾನವಾದ ಒಂದು ಸನ್ನಿಧಿಯನ್ನು ಹುಡುಕುತ್ತಿದ್ದೇನೆಂದು ನಂಬುವ ನಿರೂಪಕ ಇಬ್ಬರೂ ಹುಡುಕುತ್ತಿರುವುದು ಒಬ್ಬನನ್ನೇ ಎನ್ನುವುದರ ಬಗ್ಗೆ ನಿರಂತರವಾದ ಅನುಮಾನವೂ ಖಾತ್ರಿಯೂ ಇದೆ. ಹುಡುಕುತ್ತಿರುವ ವ್ಯಕ್ತಿಯ ರೇಖಾಚಿತ್ರ ಅಸ್ಪಷ್ಟವಿದೆ. ಕಂಡಿದ್ದೇನೆಂದುಕೊಂಡ ರೂಪು ಮನದ ಭಿತ್ತಿಯಲ್ಲಿ ಅಷ್ಟೇನೂ ಸ್ಥಿರವಾಗಿ ನಿಂತಿಲ್ಲ. ಪ್ರತಿ ಬಾರಿಯೂ ಅವನ ಗುರುತು ಹತ್ತುವುದು ಅವನು ಕಣ್ಮರೆಯಾದ ಬಳಿಕ ಎನ್ನುವುದನ್ನು ಕೂಡ ಗಮನಿಸಬೇಕು. ಅಲ್ಲದೆ, ಅವನು ಬಿಳಿಯ ಎತ್ತಾಗಿ, ಬಿಳಿ ದಿರಿಸಿನ ಶಲ್ಯಹೊದ್ದ ಶಾಂತಮೂರ್ತಿಯಾಗಿ, ಹೊಲಸಿನಲ್ಲಿ ಅದ್ದಿತೆಗೆದಂತಿದ್ದ ವ್ಯಕ್ತಿಯನ್ನು ಸ್ವಚ್ಛಗೊಳಿಸುವ ಸೇವಕನಾಗಿ, ಕಣ್ಣುಗಳಲ್ಲಿ ಧಗಧಗಿಸುವ ಬೆಂಕಿಯನ್ನೇ ಉಗುಳುತ್ತಿರುವ ಹೆಣ್ಣಾಗಿಯೂ, ಎದೆ ಹಾಲ ಎರೆವ, ಹಸಿವು ನೀಗಿಸಿ ಪೊರೆವ ತಾಯಾಗಿಯೂ ಕಾಣಿಸಿಕೊಳ್ಳುವುದರಿಂದ ಜೀವ-ಜೀವಿ, ಲಿಂಗಿ-ನಿರ್ಲಿಂಗಿ, ಗುಣಿ-ಅವಗುಣಿ ಎಲ್ಲದಕ್ಕೂ ಅತೀತವಾಗಿ ಉಳಿಯುವಂತೆ ಚಿತ್ರಿಸಿರುವುದು ಕೂಡ ಗಮನಿಸಬೇಕಾದ ವಿಶೇಷವೇ. 

ಇಲ್ಲಿ ಶೋಧ, ಹುಡುಕಾಟ ಅಷ್ಟು ಮಾತ್ರ ನಿಜ, ಯಾವತ್ತೂ ಅದು ಮುಗಿಯುವುದಿಲ್ಲ, ಅದಕ್ಕೊಂದು ಅಂತ್ಯವಾಗಲಿ ಉತ್ತರವಾಗಲಿ ಇಲ್ಲ ಎನ್ನುವ ನೆಲೆಯಲ್ಲಿ ಇಲ್ಲಿನ ಶೋಧ ಮುಗಿದೂ ಮುಗಿಯದಂತೆ ಕಥಾನಕ ಮುಗಿಯುತ್ತದೆ. ಇದನ್ನು ಯೋಗಪ್ಪನವರ್ ಕಟ್ಟಿರುವ ರೀತಿ ಹಲವು ಸಾಧ್ಯತೆಗಳಿಗೆ ಮುಕ್ತವಾಗಿಯೇ ಉಳಿಯುವುದರಿಂದ ಅದನ್ನು ವಿಭಿನ್ನವಾಗಿ ಚರ್ಚಿಸುವುದಕ್ಕೆ, ವಿಭಿನ್ನವಾಗಿ ರಂಗಕ್ಕೆ ತರುವುದಕ್ಕೆ ಅಥವಾ ಕಲ್ಪಿಸುವುದಕ್ಕೆ ಮುಕ್ತವಾಗಿಯೇ ಅವಕಾಶವಿದೆ. ಫ್ಯಾಂಟಸಿ, ರೂಪಕ, ಕಾವ್ಯ ಎಲ್ಲವನ್ನೂ ಯೋಗಪ್ಪನವರು ಸಮರ್ಥವಾಗಿಯೂ ಸಮೃದ್ಧವಾಗಿಯೂ ಬಳಸಿಕೊಳ್ಳುತ್ತಾರೆ. ಆಧ್ಯಾತ್ಮ ಕೂಡ ಕಥಾನಕದ ಮೂಲ ಎಳೆಯಲ್ಲಿ ಕಂಡೂ ಕಾಣದಂತೆ ಹರಿಯುತ್ತಿದೆ. ಅವನು ಶಿವನೆ, ಅದು ನಂದಿಯೆ, ಅವಳು ಕಾಳಿಯೆ ಎಂದೂ ನೀವು ನೋಡಬಹುದು. ಅವನೊಬ್ಬ ರಾಬಿನ್‌ಹುಡ್ ಇರಬಹುದೇ, ಸಿದ್ಧಾಂತ, ಆದರ್ಶ ಇತ್ಯಾದಿಗಳನ್ನು ಮನಸ್ಸಲ್ಲಿ ತುಂಬಿಕೊಂಡ ನಕ್ಸಲ್ ಇರಬಹುದೇ, ಅಲ್ಲಿ ಬಂದಾತ ಮದರ್ ಥೆರೆಸಾ, ಕ್ರಿಸ್ತ ಇರಬಹುದೇ ಎಂದೂ ನೀವು ನೋಡಬಹುದು. ಅವನು ಸಂತೆಯಲ್ಲಿ ಕಂಡ ಪವಾಡಪುರುಷನಂತೆಯೂ, ಇವನು ಅಲೆಮಾರಿ ವಿಭ್ರಾಂತನಂತೆಯೂ ಕಂಡರೆ ತಪ್ಪೇನಿಲ್ಲ. 

ಈ ಕೃತಿಯ ಪ್ರತಿಯೊಂದು ಪುಟವೂ ಸುಟ್ಟ ಬೆರಳಿನಂತೆ ಓದುಗನ ಎದೆಯ ಮೇಲಾಡಲಿ ಹಾಗೂ ನಿರ್ಗಮಿಸುವವನ ಕೊನೆಯ ಕೂಗಿನಂತೆ ಕೇಳಲಿ ಎಂದು ಆಶಿಸುವ ಕೃತಿಕಾರರ ಆಶಯ, ಬೆನ್ನುಡಿಯಲ್ಲಿ ಲಕ್ಷ್ಮೀಶ ತೋಳ್ಪಾಡಿಯವರು ತಮ್ಮ ಅದ್ಭುತ ವಾಕ್ಚಾತುರ್ಯದಿಂದ ಮತ್ತು ಉಲ್ಲೇಖಿಸುವ ರಿಲ್ಕೆ-ವ್ಹಿಟ್‌ಮನ್ನರ ನುಡಿಗಳಿಂದ ಒದಗಿಸಿದ ತೇಜಃಪೂರ್ಣ ಪ್ರಭಾವಳಿಯ ಆಶಯ ಎರಡನ್ನೂ ಒಪ್ಪಿಕೊಳ್ಳುವ ಓದುಗರು ಹೆಚ್ಚು ಹೆಚ್ಚು ಸಿಗಲಿ ಈ ಕೃತಿಗೆ ಎನ್ನುವುದು ನನ್ನ ಹಾರೈಕೆ. ಅಂಥ ಪ್ರತೀ ಓದುಗನಲ್ಲೂ ಪ್ರಶ್ನಿಸುವ ಜಿಜ್ಞಾಸುವೊಬ್ಬ ನಿರಂತರ ಹುಟ್ಟುತ್ತಿರಲಿ ಎನ್ನುವುದು ನನ್ನೆದೆಯ ಹಂಬಲ.
(ಈ ಲೇಖನ ಟಿ ಎಸ್ ಗೊರವರ ಅವರ ಸಂಪಾದಕತ್ವದ ‘ಸಂಗಾತ’ ಸಾಹಿತ್ಯ ಪತ್ರಿಕೆಯ ಚೊಚ್ಚಲ ಸಂಚಿಕೆಯಲ್ಲಿ ಪ್ರಕಟಿತ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ