Friday, May 25, 2018

ಅನಕ್ಷರ ಲೋಕದ ಕಾವ್ಯ

ನೀವು ಮುಂಜಾನೆ ಇನ್ನೂ ಕತ್ತಲಿರುವಾಗ ಹಾಸಿಗೆ ಬಿಟ್ಟೇಳುತ್ತೀರಿ. ಕೋಣೆಯಲ್ಲಿ ಎರಡು ಹೆಜ್ಜೆ ಇಡುವಷ್ಟರಲ್ಲಿ ಮೇಲ್ಛಾವಣಿಯಿಂದ ತನ್ನ ಎಂಜಲಿನ ದಾರ ಬಿಟ್ಟು ಇಳಿಯುತ್ತಿದ್ದ ಪುಟ್ಟ ಜೇಡದ ಮರಿಯ ಅಂಟು ಎಳೆ ನಿಮ್ಮ ಮುಖ ಮೂತಿಗೆಲ್ಲ ಅಂಟಿಕೊಳ್ಳುತ್ತದೆ. ತಡವಿದರೆ ಕೈಗೆ ಸಿಗದ, ತೆಗೆದು ಎಸೆಯಲಾರದ ದಾರ ಅದು. ಬಲೆಯನ್ನೇನೂ ಕಟ್ಟಿಲ್ಲ ಅದು. ಆದರೆ ನಿಮ್ಮ ಮೈಗಂಟಿದ ಅದನ್ನು ಈಗ ತೊಡೆಯುವುದು ಅಗತ್ಯ. ಆಗುವುದಿಲ್ಲ. ಎಂಥ ಅಸಹಾಯಕತೆ ನಿಮ್ಮದು. ಕವಿತೆಯ ಹೆಸರು ಅದು; ಕಟ್ಟದ ಬಲೆಯ ಅಂಟಿನಂಟು.

ಕವಿ, ಅಜಿತನ್ ಜಿ ಕುರುಪ್. 2015ರಲ್ಲಿ, ತಮ್ಮ 58ನೆಯ ವಯಸ್ಸಿನಲ್ಲಿ ಕೊನೆಯುಸಿರೆಳೆದ ಈ ಕವಿ ಬರೆದಿದ್ದು ತೀರ ಕಡಿಮೆ. ಅದರಲ್ಲೂ ಬದುಕಿದ್ದಾಗ ಪ್ರಕಟವಾಗಿದ್ದು ಕೇವಲ ಒಂದೇ ಒಂದು ಸಂಕಲನ. ಮೊನ್ನೆ ಮೊನ್ನೆಯಷ್ಟೇ ಪೋಯೆಟ್ರಿವಾಲ್ ಮೀಡಿಯಾದವರು 1980-1987ರ ಅವಧಿಯಲ್ಲಿ ಇವರು ಬರೆದ ಕೆಲವು ಕವನಗಳನ್ನು ಆಯ್ದು ಎರಡನೇ ಸಂಕಲನ ಹೊರತಂದಿದ್ದಾರೆ. (A Fistful Of Twilight ಮತ್ತು The Metaphysics Of The Tree-Frog's Silence). ಆದರೆ ಭಾರತೀಯ ಇಂಗ್ಲೀಷ್ ಕಾವ್ಯದ ದಿಗ್ಗಜರೆಲ್ಲ ಇವರ ಕವಿತೆಗಳೆದುರು ಬೆರಗಾಗಿದ್ದಾರೆಂದರೆ ಅದು ಅತಿಶಯೋಕ್ತಿಯಂತೂ ಅಲ್ಲ. ಬದುಕಿದ್ದಾಗ ಇವರ ಕವಿತೆಗಳನ್ನು ಓದಿ ಸಂಭ್ರಮಿಸಲಿಲ್ಲ ಎಂದು ಕಂಬನಿ ಮಿಡಿಯುತ್ತ ಜೀತ್ ಥಾಯಿಲ್ ಬರೆಯುತ್ತಾರೆ, ‘ಯಾವುದನ್ನು ಭಾಷೆಯಲ್ಲಿ ಹಿಡಿಯಲಾಗದೋ ಅದನ್ನು ಬರೆದ ಈ ಕವಿಯನ್ನು ಅನುಕರಿಸಲಾಗದು; ಬಿಟ್ಟು ಹೋದ ಶೂನ್ಯವನ್ನು ಇನ್ಯಾರೂ ತುಂಬಲಾಗದು. ಅವರನ್ನು ಕೇವಲ ಮೆಚ್ಚಿಕೊಳ್ಳುವುದಷ್ಟೇ ಈಗ ನಮ್ಮಿಂದ ಸಾಧ್ಯ.’

ಭಾರತೀಯ ಇಂಗ್ಲೀಷ್ ಕಾವ್ಯದ ಅಧ್ವರ್ಯು ಆದಿಲ್ ಜಸ್ವಾಲ್ ಅವರಂತೂ ಬದುಕಿದ್ದಾಗ ಇವರ ಕವನ ಸಂಕಲನವನ್ನು ಪ್ರಕಟಿಸಲಾಗದೇ ಹೋದ ಬಗ್ಗೆ ಮರುಗಿದ್ದಾರೆ. ತಾವು ಯಾರೊಬ್ಬ ಕವಿಯ ಕವಿತೆಗಳನ್ನು ಓದುವಾಗ ಕೂಡ ಇಷ್ಟೊಂದು ಡಿಕ್ಷನರಿಯ ಬಳಕೆ ಮಾಡಿರಲಿಲ್ಲ ಎನ್ನುವ ಜಸ್ವಾಲ್, ತೀರ ತೀರ ತಡವಾಗಿ ತಾವು ಕುರುಪ್ ಅವರಿಗೆ ತಮ್ಮ ಪ್ರಾಸ್ತಾವಿಕ ಮಾತುಗಳ ಕಾಣಿಕೆ ಸಲ್ಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕುರುಪ್ ಅವರ ವಿಶಿಷ್ಟ ಪ್ರೌಢಿಮೆ ಮತ್ತು ಭಾಷೆಯ ಸೊಗಡನ್ನು ತಾವು ಸವಿಯುವುದಕ್ಕೆ ಅಗತ್ಯವಿರುವಷ್ಟು ಪಕ್ವರಾಗುವ ಮೊದಲೇ ಅವರು ತಮ್ಮ ಅಸ್ತಿತ್ವವನ್ನು ಪ್ರಕಟಪಡಿಸಿದರೇನೋ, ತಮ್ಮ ಕಾಣಿಕೆಯೂ ಅಷ್ಟೇ ತಡವಾಗಿ ಬಿಟ್ಟಿತು ಎಂದಿರುವ ಅವರ ಮಾತು ಕುರುಪ್ ಅವರ ಕವಿತೆಗಳ ಗುರುತ್ವವನ್ನಷ್ಟೇ ಸೂಚಿಸುತ್ತಿದೆ.

ಬಸವನಗುಡಿಯ ನ್ಯಾಶನಲ್ ಕಾಲೇಜಿನಲ್ಲೇ ಇಂಗ್ಲೀಷ್ ಮತ್ತು ಇಕನಾಮಿಕ್ಸಿನಲ್ಲಿ ಪದವಿ ಪಡೆದ ಕುರುಪ್‌ಗೆ ಬೆಂಗಳೂರಿನ ನಂಟೂ ಇರುವುದು ಕುತೂಹಲಕರ. ಪತ್ರಕರ್ತರಾಗಿ, ರಂಗಭೂಮಿ ಕಲಾವಿದರಾಗಿ, ಕಾಪಿರೈಟರಾಗಿ, ಸಾಕ್ಷ್ಯಚಿತ್ರ ಮತ್ತು ಜಾಹೀರಾತುಗಳ ಚಿತ್ರನಿರ್ದೇಶಕರಾಗಿ ದುಡಿದ ಕುರುಪ್ ಆಂಧ್ರಪ್ರದೇಶ ಸರಕಾರದ ಸಲಹೆಗಾರ ಕೂಡ ಆಗಿದ್ದರು. ಜರ್ಮನಿಯಲ್ಲಿದ್ದಾಗ ಚಾಕ್ಲೇಟ್ ಮಾಡುವುದನ್ನೂ ಕಲಿತಿದ್ದ ಇವರು ಪುಣೆಯಲ್ಲಿ ಭಾಷಾಧ್ಯಯನದಲ್ಲಿ ಎಂಎ ಕಲಿಯುವಾಗ ಫಿಲ್ಮ್ ಇನ್ಸ್‌ಟಿಟ್ಯೂಟಿನಲ್ಲಿ ಸಮಯ ಕಳೆದಿದ್ದೇ ಹೆಚ್ಚು ಎನ್ನುತ್ತಾರೆ.

ವಿಲಕ್ಷಣ ಒಂಟಿತನ, ಮೃತ್ಯು ಪ್ರಜ್ಞೆ, ಅಲೌಕಿಕದ ಜೊತೆಗೆ ಅದೇನೋ ನಂಟು - ಇವು ಇವರ ಕಾವ್ಯದ ಸ್ಥಾಯೀ ಭಾವ. ಇವರ ಕವಿತೆಗಳು ಪರಸ್ಪರ ಸಂಬಂಧವೇ ಇಲ್ಲದ ಚಿತ್ರಗಳನ್ನು, ಪ್ರತಿಮೆಗಳನ್ನು, ಸನ್ನಿವೇಶವನ್ನು ಮಾತ್ರವಲ್ಲ, ಕ್ಷೇತ್ರದ ಮಾತುಗಳನ್ನು ಕೂಡ ಒಟ್ಟಿಗಿರಿಸಿ ಕಟ್ಟಿಕೊಡುವ ತೀರ ಹೊಸತನದ ಲೇಪವುಳ್ಳ ಪ್ರಜ್ಞೆ ಓದುಗನಲ್ಲಿ ಉದ್ದೀಪಿಸುವ ಅನುಭವದಲ್ಲಿ ಮೌನದ ಪಾತ್ರವೇ ಹೆಚ್ಚು, ಹೇಳಿಯೂ ಹೇಳದುಳಿಸುವ ಭಾವ ಮಣಭಾರ. ಕಾವ್ಯಕ್ಕೆ ಸಾಧ್ಯ ಎನ್ನುವ, ಎಲ್ಲರಿಗೂ ನೆಲ ತಟ್ಟಿ ಇಟ್ಟ ಶಾಪ ಇದು, ಕವಿಗೆ. ಉದಾಹರಣೆಗೆ ಇದು ಹೊಟ್ಟೆ ತೊಳಸಿದಾಗ ಏನೂ ವಾಂತಿಯಾಗದಿದ್ದರೂ ಮತ್ತೆ ಮತ್ತೆ ಏನೋ ಬರುವಂತೆ ಅನಿಸುವ ವಾಕರಿಕೆ, ಕನಸಲ್ಲಿ ಕಂಡಿದ್ದು ನಿಜವಾಗಿ ನಡೆಯಿತೆನ್ನಿಸುವಂತೆ ಮಾಡುವ ಚಿತ್ತಭ್ರಮೆ, ಎಲ್ಲೋ ಏನೋ ಯೋಚಿಸುವಾಗ ಇನ್ನೇನನ್ನೋ ನಿಶ್ಚಿತವಾಗಿ ಮರೆತು ಬಿಟ್ಟ ಕುರಿತ ಗೊಂದಲ, ಕಾರಣವೇ ಇಲ್ಲದೆ ಉಮ್ಮಳಿಸಿ ಬರುವ ದುಃಖ....ಈ ತರದ್ದು. ಇದನ್ನು ಬೇರೆ ಹೇಗೆ ಹೇಳಲಿ!


ಕೇವಲ `Unraveling an unspun web ಎನ್ನುವುದರಲ್ಲೇ ಒಂದು ಕತೆ ಹೇಳಬಲ್ಲ ಕವಿ ಇಲ್ಲಿ ಆಡುತ್ತಿರುವುದು ಅವಳು ಬರೆಯಬೇಕಿದ್ದ, ಬರೆಯದೇ ಉಳಿಸಿ ಹೋದ ಒಂದು ಕವಿತೆಯ ಬಗ್ಗೆ. ಇಲ್ಲಿ ಬರೆಯದೇ ಇರುವ ಕವಿತೆಯ ಅಮೂರ್ತ ಪರಿಕಲ್ಪನೆ ಹೇಗೆ ಮೈತಳೆದಿದೆ ನೋಡಿ. ‘ಅವಳು’ ಅದನ್ನು ಬರೆಯಬೇಕಿತ್ತು. ನೆನಪುಗಳಿಂದ ಅದನ್ನು ಮೂರ್ತಗೊಳಿಸಬೇಕಿತ್ತು. ಆದರೆ ಆ ನೆನಪುಗಳು ಬರ್ಬರ ಇವೆ. ನೆನೆದಿದ್ದೇ ಅವು ಮನದ ಕಿಟಕಿಯ ಬಾಗಿಲುಗಳನ್ನು ಫಟಾರೆಂದು ಒದ್ದು ಕುರುಡು ಹಕ್ಕಿಗಳಂತೆ ಹಾರಿ ಹೋಗುತ್ತವೆ. ಆ ಕುರುಡು ಹಕ್ಕಿಗಳ ರಕ್ತ ಕವಿಯ ಕಣ್ಣುಗಳ ಕೆಂಪಾಗಿ ಮೂಡಿದೆ. ಕವಿ ಕತ್ತಲೆಯ ಮೌನದಲ್ಲಿ, ನೆನಪುಗಳ ಭಾರದೊಂದಿಗೆ ಕೂತು ರೋದಿಸುತ್ತಿದ್ದಾನೆ. ವೀಣೆಯ ಮೇಲೆ ಆತುರಾತುರವಾಗಿ ಕೈಯಾಡಿಸುವ ವೈಣಿಕನಂತೆ ಕೈಗೆ ಹತ್ತದ ಒಂದು ರಾಗಕ್ಕಾಗಿ ಆಕೆ ಒದ್ದಾಡುತ್ತಿದ್ದಾಳೆ. ಅವಳಲ್ಲಿ ಅದಮ್ಯ ಮೋಹದ, ಪ್ರೀತಿಯ ಕನಸಿದೆ. ಆದರೆ ದಕ್ಕುವುದಿಲ್ಲ. ಬರೆಯದೇ ಉಳಿದ ಕವಿತೆ ಈಗ ನಿಂದ್ಯ ನೆರಳಿನಲ್ಲಿ ಪಿಶಾಚಿಯಂತೆ ಮುಕ್ತಿಯನ್ನರಸಬೇಕಾಗಿದೆ. ಅದನ್ನು ಬರೆಯಲಾಗದು ಯಾವತ್ತೂ. ಅವಳು ಸತ್ತ ನೆನಪುಗಳನ್ನೇ ಒಂದೊಂದಾಗಿ ಕೂಗಿ ಕರೆದು ಮತ್ತೊಮ್ಮೆ ಕೊಲ್ಲುವ ಹಾಗೆ ಬರೆಯಬೇಕಿದ್ದ ಕವಿತೆಗಳನ್ನು ಬರೆಯಲಾರದೇ ಮತ್ತೊಮ್ಮೆ ಕೊಲ್ಲುತ್ತಿದ್ದಾಳೆ. ಕೊನೆಗೂ ಅವಳಿಗೆ ಕವಿತೆಗಳು ಮಾಡಿದ್ದು ಸರಿಯೆನಿಸಿದೆ. ಇಲ್ಲಿ ಕವಿ ಅವನೂ ಹೌದು, ಅವಳೂ ಹೌದು!

ಇನ್ನೊಂದು ಪುಟ್ಟ ಕವಿತೆಯ ಹೆಸರು ಟ್ವಿಲೈಟ್ ಲೆಟರ್. ಇಲ್ಲಿಯೂ ಕವಿ ಕೇಳಲಾಗದ ಸ್ವರ, ಆಡಲಾರದ ಮಾತು, ನಾಲಗೆಗೂ ದಕ್ಕಲಾರದ ರುಚಿ, ಕಣ್ಣಿಗೆ ಕಾಣದ ನೋಟ, ಅನುಭವಕ್ಕೆ ಬಾರದೇ ಹೋದ ಸ್ಪರ್ಶ ಮುಂತಾದ ಪ್ರತಿಮೆಗಳನ್ನೇ ಮತ್ತೆ ಮತ್ತೆ ಬಳಸುವುದು ಕಾಣಿಸುತ್ತದೆ. ಈ ಕವಿತೆಗಳಿಗೆ ಆಗಸದ ನಕ್ಷತ್ರಗಳೊಂದಿಗೆ ಇರುವ ನಂಟು, ರಾತ್ರಿಯ ಕತ್ತಲೆಯೊಂದಿಗೆ ಇರುವ ಸಖ್ಯ, ಮೌನದ ಪಿಸುಗುಡುವಿಕೆಯಲ್ಲಿ ಸಿಗುವ ಸಾಂತ್ವನ, ಗಾಳಿ ನೀಡುವ ನೇವರಿಕೆ ನೆಲದ ಮಣ್ಣಿನಲ್ಲಿ ಕಾಣುತ್ತಿಲ್ಲ, ಸುತ್ತಲಿನ ಮನುಷ್ಯರೊಂದಿಗೆ ಸಿಗುತ್ತಿಲ್ಲ. ಕಾವ್ಯಕ್ಕೆ ಸಾಧ್ಯ ಎನ್ನುವ, ಎಲ್ಲರಿಗೂ ನೆಲ ತಟ್ಟಿ ಇಟ್ಟ ಶಾಪ ಇದು, ಕವಿಗೆ. ಅವನಿಗೆ ಮೇಲೆ ಹೇಳಿದ ಎಲ್ಲವೂ ನಿಲುಕುತ್ತಿದೆ, ಆಗಸದ ನಕ್ಷತ್ರಗಳಷ್ಟೇ ಸಲೀಸಾಗಿ. ಅದೇ ಅವನ ಶಾಪವಾಗಿ ಕಾಡುತ್ತಿದೆ, ಅವನು ಕವಿಯಾಗಿದ್ದಾನೆ. ಇನ್ನೊಂದು ಕವಿತೆಯಲ್ಲಿ ಕುರುಪ್ ಹೇಳುತ್ತಾರೆ, ನಿಜವಾದ ಕವಿತೆಯೊಂದು ಇರುವುದೇ ಆದರೆ ಅದು ಸಾವಿನಲ್ಲಿ ಸಂಧಿಸುತ್ತದೆ ಎಂದು!

ಮತ್ತೊಂದು ಕವಿತೆ ಸ್ವರದ ಸ್ವರ ಕೇಳಲು ಹಾತೊರೆವ ಕಿವಿಯ ತಹತಹದ್ದು. ಹಾವಿನಂತೆ ನಾಲಗೆ ಚಾಚಿ ಸ್ವರವನ್ನು ಕೇಳಬಯಸುವ ಕವಿಗೆ ಕಿವಿಯಿಲ್ಲ ಇಲ್ಲಿ! ನಾಲಗೆಯೇ ಕಿವಿ! ಹಾಗಾಗಿ ಇಲ್ಲೊಂದು ಹಾವಿದೆ, ಅದು ಒಮ್ಮೆ ಬಲಿಯ ನುಂಗಿ ವಿಷವಿಹೀನವಾಗಿದೆ. ಮತ್ತು ಹಾಗಾಗಿ ಅದು ಬಾಯ್ತೆರೆಯಲಾರದೆ ಕಟವಾಯಲ್ಲಿ ರಕ್ತ ಜಿನುಗಿಸುತ್ತ ಬಿದ್ದಿದೆ. ನಾಲಗೆ ಚಾಚಿ ಪಂಚಮದ ಸ್ವರದ ಸ್ವರವನ್ನು ಎಂದೂ ಕೇಳಲಾರದ ಸ್ಥಿತಿಯಲ್ಲಿದೆ. ಇನ್ನೊಮ್ಮೆ ವ್ಯರ್ಥವಾಗದುಳಿದ ವಿಷದಿಂದಾಗಿ ಉಳಿದುಕೊಂಡ ಕವಿಗೂ ನಾಲಗೆ ಚಾಚಿ ಪಂಚಮದ ಸ್ವರದ ಸ್ವರ ಕೇಳಿಸಿಕೊಳ್ಳುವ ಅವಕಾಶವನ್ನು ತೆರೆದಿದೆ. ಆದರೆ ಅವನೋ, ಬೆಳಕೇ ಇಲ್ಲದ ಕಾಂತಿ ಸುರಿಸುವ ನಕ್ಷತ್ರಗಳ ಮೊರೆ ಹೊಕ್ಕಿದ್ದಾನೆ, ಸುರಿವ ಮಳೆಯ ನಾದಕ್ಕೆ ನಾಲಗೆ ಚಾಚಿ ಸ್ವರದ ಸ್ವರ ಕೇಳುವ ಹೊಸರುಚಿಗೆ ಸಜ್ಜಾಗಿದ್ದಾನೆ!

ಅಜಿತನ್ ಜಿ ಕುರುಪ್ ಅವರ ಕವಿತೆಗಳಿಗೂ ನಾವು ಹೀಗೆಯೇ ಪಂಚೇಂದ್ರಿಯಗಳ ರೂಢಿಗತ ಅಭ್ಯಾಸ ಬದಲಿಸಿ ಕಿವಿಯಿಂದ ಓದುವ, ಕಣ್ಣಿಂದ ಆಘ್ರಾಣಿಸಿ ನಾಲಗೆ ಚಾಚಿ ಕೇಳಿಸಿಕೊಳ್ಳುವ, ಇತ್ಯಾದಿ ಇತ್ಯಾದಿ ಹೊಸ ಬಗೆಗೆ ಸಜ್ಜಾಗಬೇಕಿದೆ. ಅಜಿತನ್ ಅವರ ಸದ್ಯ ಲಭ್ಯವಿರುವ ಎಲ್ಲ ಎಪ್ಪತ್ತೆರಡು ಕವಿತೆಯೂ ಇಂಥ ಸವಾಲು.ಕವಿತೆ ಒಂದು
ಕಟ್ಟದ ಬಲೆಯ ಅಂಟಿನಂಟು

ಕುರುಡು ಹಕ್ಕಿಗಳ ರಕ್ತದಿಂದ
ನನ್ನ ಕಣ್ಣುಗಳು ಕೆಂಪಡರಿವೆ
ಆತುರದಿ ಬೆರಳುಗಳು ಅರಸಿವೆ
ಗೊತ್ತುಗುರಿಯಿಲ್ಲದೇ ಒಂದು ರಾಗವ

ರಾತ್ರಿಯ ಕಣ್ಣಲ್ಲಿ ಕಣ್ಣಿಟ್ಟು ನಿಟ್ಟಿಸಿದೆ ದಿನ
ಮತ್ತು ರಾತ್ರಿಯೂ ಮರಳಿಸಿದೆ ಆ ನೋಟವ
ಕನ್ನೆಹೆಣ್ಣ ರತಿನೋಟದಂತೆ
ಕಾಲವೇನೂ ದೇಹದ ಕುಲುಕಾಟವಲ್ಲ
ಸೆಳೆವ ಚುಂಬಕವ ಒಲಿದು ಹಿಂಬಾಲಿಸುವುದಿಲ್ಲ

ಮುಂಗಾರಿನ ತುಂಟ ಮೋಡ ನಲಿದಿದೆ
ಅಪರಾಹ್ನದ ಆಗಸದಲ್ಲಿ ಒಪ್ಪತ್ತು ಹೊತ್ತು
ತಿರುಗಿ, ತಿರುವಿ ಗಿರ್ರೆಂದು ಜಾರಿ
ಹಗಲಿಂದ ಇರುಳಿಗೆ ಹೊತ್ತು
ಬೊಗಸೆಯಲ್ಲಿ ತಾರೆಗಳ ತೋಟ
ಗೋಧೂಳಿ ನೋಟ

ಅಟ್ಟಿದಂತೆ ಥಟ್ಟನೆದ್ದು ಮನದ ಕಿಟಕಿಯ
ಕದವೊದ್ದು ಹಾರಿ ಹೋದ ಕವಿತೆಗಳೇ
ಸೂತಕದ ಮೌನ ಹೊದ್ದ ಗಾಳಿಗೆ
ಫಟಫಟನೆ ಬಡಿಯುತಿವೆ ನೋಡಿ
ಕಿಂಡಿ ಬಾಗಿಲು

ಆವರಿಸಿ ಕವಿದ ಕರಿ ಪಿಶಾಚಿಯೋ ಎಂಬಂತೆ
ಕಂಡ ಪರಿತ್ಯಕ್ತ ನಾನು
ನಿಂದ್ಯ ನೆರಳುಗಳಲ್ಲಿ ನನಗೆ ಅರ್ಥಹೀನ ಮುಕ್ತಿ...

ಆಗೊಮ್ಮೆ ಜಗದ ನಿರಾಕರಣ
ಉಳಿದಿದ್ದೆಲ್ಲವೂ ನಿರ್ಜೀವ, ನಿಸ್ಸತ್ವ, ನಿಸ್ಸಾರ
ಸಿಂಬಿ ಸುತ್ತಿದ ಡಿಎನ್ನೇ, ಅಸಂಖ್ಯ ಜೀವಕೋಶ
ಜೀವರಕ್ಷಕ ಅಂಗ
ಅನಂತ ಬಯಕೆಗಳ ಹೊತ್ತ ಜೀವ
ಧಾತುವಿನನಂಗ ಚಲನೆ...

ಆಗಲೂ ಕಾಲವೆಂಬುದು ಈ ದೇಹ ನುಲಿದಂತಲ್ಲ
ಮತ್ತು ಮುತ್ತಿನಂಥ ಮಾತುಗಳು
ಸತ್ತ ಕವಿತೆಗಳ ದೇಹದ ಅವಶೇಷದಿಂದಾಯ್ದ
ನೆನಪುಗಳ ಒಂದೊಂದಾಗಿ ಕರೆದು ಕೂಗಿ
ಮತ್ತೊಮ್ಮೆ ಕೊಂದಂತೆ...

ಎಂಥೆಂಥಾ ತಿರುವುಗಳು, ಏನನಿರೀಕ್ಷಿತ ಸುಳಿವು ಹೊಳಹುಗಳು
ಬೆಳಕಿನ ಕೊನೆಯ ಮಬ್ಬು ಬೆಳಕು ಮರೆಯಾಗುವ ಕ್ಷಣವೊಂದು
ಹಿಡಿದೀತೆ ಬೊಗಸೆಯಲ್ಲಿ ಇಷ್ಟನ್ನೂ?

ನನಗಿದು ಗೊತ್ತು,
ಸತ್ತ ಮೋಹದ ಪುಷ್ಟ ತೊಡೆಗಳ ಮೇಲಾಡುವ ಕೈಗಳು
ಸುಡುವ ನಿಗಿನಿಗಿ ಕೆಂಡ
ದ ಮೇಲೆ ಹೊರಳಿಸಿ, ಹಿಂಡಿ, ತಿರುಪಿ....

ಹಾರಿ ಹೋದ ಕವಿತೆಗಳೇ,
ಸರಿಯಾಗಿತ್ತು ಅದು
ನೀವು ಮಾಡಿದ್ದು.

ಮತ್ತು ನಾನು
ನಾನೆಂಬೋ ನಾನು
ಕವಿತೆಯಾಗುವ ಪರಿ.ಕವಿತೆ ಎರಡು
ಗೋಧೂಳಿ ಲಗ್ನ
 

"ಪತ್ರಕ್ಕಾಗಿ ಧನ್ಯವಾದಗಳು. ಬಹುಕಾಲದ ನಂತರ ಅಂತೂ ಅಂಚೆಯಲ್ಲಿ ಏನೋ ಬಂತು. ಆದರೆ ನೀನ್ಯಾರೆಂದು ನನಗೆ ನೆನಪಾಗುತ್ತಿಲ್ಲ.
ಬಹುಶಃ ನಿನ್ನ ಈ ಪ್ರೇಮಾರ್ಪಣೆಯನ್ನು ಬಟವಾಡೆಯಾಗದ ಪತ್ರಗಳ ಖಾನೆಗೆ ರವಾನಿಸಬೇಕಿತ್ತು ನೀನು."

ಸುಮ್ಮನೇ ಹೇಳುವುದಾದರೆ, ನನಗೆ ಗೊತ್ತು
ನಾನು ಯಾವತ್ತೂ ಹುಟ್ಟಲೇ ಇಲ್ಲ.

ಅದೊಂದು ಹುಚ್ಚು ಸುಳಿ, ಶುದ್ಧ ಶಿವರಂಜಿನಿಯ ಪಾತಾಳಗರಡಿ
ಮೂರನೇ ಸ್ಥಾಯಿಯ ತಾಂಡವ ಗೀತ
ಮತ್ತು ನೀನು ಕುಸಿಯುತ್ತಾ ಕೃಶನಾಗಿ
ಕರಗುತ್ತಾ ನಾಶವಾಗಿ ಹೋದ ಬಗೆ
ಅಸಹನೀಯ ತಾರಕಸ್ಥಾಯಿ
ಸ್ವರಗಿವುಡು ಆತ್ಮಕ್ಕೆ ಅಪಸ್ವರದ ಗುರುತೂ ಹತ್ತದು

ಪ್ರೀತಿಯಿಲ್ಲದ ಅಕ್ಷರದ ಮುದ್ದೆಗಳ ಗಾಢ ನೆನಪುಗಳು
ರತಿಯುದ್ವೇಗದುಸಿರಿನ ಸದ್ದು ಅನಂಗನಾತುರದ ನೆಕ್ಕು
ಸತ್ಯದುಸಿರಿನ ಪ್ರತಿಮೆಗಳಂತೆ ರಿಂಗಣಿಸುತಿವೆ ಇಲ್ಲಿ
ಕಣ್ತಪ್ಪಿಸಿದ್ದು, ವಾದ ಹೂಡಿದ್ದು, ಕಾದಾಟ, ತಿರಸ್ಕಾರ ಮತ್ತು ಬಿಕ್ಕು....

ಗೋಧೂಳಿ ಲಗ್ನದ ಈ ಪತ್ರದ ತುಂಬ ಜೇಡದಂತೆ ಹರಿದಾಡುತ್ತಿವೆ
ಕಾವ್ಯಕ್ಕೆ ಸಾಧ್ಯ ಎನ್ನುವ ಎಲ್ಲರಿಗೂ ನೆಲ ತಟ್ಟಿ ಇಟ್ಟ ಶಾಪ....

ಬಸವಳಿದ ನನ್ನ ನರಗಳಿಂದ ಎಲ್ಲ ನೆನಪುಗಳು ಸೋರಿ ಹೋಗಿವೆ ಈಗ
ಅಸಹಾಯ ಚಲನೆ ನರಳಿದೆ ನರಳಿ ಹೊರಳಿದೆ

ಚೈತನ್ಯವರಸಿ....

ಕವಿತೆ ಮೂರು
ಸ್ವರದ ಪಂಚಮದ ಸ್ವರದ…

ಮತ್ತೆ ಮತ್ತೆ ತಪ್ಪಿಬಿಡುವ ಆ ಪಂಚಮದ ಸ್ವರ
ಹಿಡಿದಿಟ್ಟು ಕೇಳಲಾರದೇ ನನ್ನ ಕಿವಿ ಗುಂಯ್ ಎನ್ನುತಿದೆ
ಹಾತೆಗಳಷ್ಟೇ ಕಾಣಬಲ್ಲ ಅದ ಕಾಣ ಹಾತೊರೆದು ನನ್ನ
ಕಣ್ಣುಗಳು ಬಿರಿದು ಒಡೆದಿವೆ
ಇದೇ ಇಲ್ಲಿದೆ ಇಲ್ಲೇ ಇದೆಯೆನಿಸುವ ಅದ ಒಮ್ಮೆ ಮುಟ್ಟುವ
ತವಕದಿಂದೆನ್ನ ಬೆರಳುಗಳೊದ್ದೊದ್ದೆ ಗೈರುಹೊಡೆದಿವೆ

ಓ! ಎನ್ನಿಂದ್ರಿಯಗಳಿಗದೆಷ್ಟು ಪ್ರೀತಿ ನಾನು ನಾನು ಎಂದರೆ!
ಏಳೇಳು ಜನ್ಮದನುಬಂಧವಿದು
ನಾನು ನನ್ನೊಂದಿಗೇ ಸುರತನಿರತ ರತಿಲೋಲನಾದರೆ
ಕುಸಿದು ಬಸಿದು ಸೀದು ಹೋಗುವುದೇನು!

ಆಮೇಲೆ ಅಲ್ಲಿತ್ತು ಆ ಫಳಫಳ ಹೊಳೆವ ವಿಷಜಂತು
ಹೊಲದ ಬದುವಿನ ಉದ್ದಕ್ಕೂ ನಾನು ಓಡಾಡಿಕೊಂಡಿರಲು
ಹೊಟ್ಟೆಯುಬ್ಬರಿಸಿ ಬಿದ್ದುಕೊಂಡಿದ್ದ ಆ ಕಟ್ಟುಕಟ್ಟಿನ...ಬಲಿಯ
ನುಂಗಿದ ಬಳಿಕ ವಿಷವಿಹೀನ, ರಕ್ತಸಿಕ್ತ ಕಟವಾಯಿ ಹೊಲಿದಂತೆ ಸ್ತಬ್ಧ
ರಕ್ತ ಸುರಿಸುತ್ತ ವಿಷವ ನೀಗುತ್ತ ಅಸ್ಪೃಶ್ಯಗೊಂಡ
ಅದು ನನ್ನ ಹೋಗಗೊಟ್ಟು ನಾ ಉಳಿದೆ.
ಉಳಿದ ನಾನೀಗ ವ್ಯರ್ಥವಾಗದುಳಿದ ವಿಷದ
ಕತೆಗೊಂದು ಸುಖದ ಅಂತ್ಯವ
ಹೇಳಬೇಕಿದೆ, ಹುಡುಕುತ್ತಿದ್ದೇನೆ.

ಬೆಳಕು ಇದನ್ನು ಹಿಡಿದುಕೊಟ್ಟೀತೆ ನೋಡೋಣ.

ಮಗುವಿನ ಮುಗ್ಧತೆಯಲ್ಲೆ ಹರಿತ ಹುಲ್ಲ ಭರ್ಜಿ ಹಿಡಿದು
ನೊಣವ ಚುಚ್ಚುತ ಬಜ್ಜಿ ಮಾಡಿದ
ಸಂತ ತನ್ನ ವಿಧಿಯ ಹಳಿಯುತ್ತ ಮರುಗಿದ ಕತೆ ಹೇಳಲೆ
ಅಥವಾ ನಾನೇ ಸ್ವತಃ ಹುಟ್ಟಿದ ಯೋನೀದ್ವಾರದ
ಕೊಳಕು ನೆನೆಯುತ್ತ ಹೇವರಿಸಿ....

ಉಬ್ಬು ತಗ್ಗುಗಳಿಲ್ಲದ ದೇಹದ ಮಾಂಸ ಭೋಗಿಸುತ್ತ
ಎಂದೂ ಪ್ರೀತಿ ಮಾತನುಸುರದಂತೆ ತುಟಿ ಹೊಲಿದು
ಅಥವಾ ತನ್ನದೇ ಚಿತೆಯ ಸುಡುವಗ್ನಿಯಲ್ಲಿ ಸ್ವತಃ ಬೇಯುತ್ತ
ಪರರ ಚಿತಾಭಸ್ಮವ ಅರಸುತ್ತ ಕಲಸುತ್ತ ಸುತ್ತ ಸತ್ತ...

ತಾರೆಗಳುತ್ತರಿಸಿಯಾವೆ ತಮ್ಮ ಬೆಳಕಿಲ್ಲದ
ಕಾಂತಿಯಲ್ಲಿ?

ಬಣ್ಣವಿಲ್ಲದ ಪೇಲವ ಕ್ರೌರ್ಯದ ಹಗಲೆದುರು
ಒಂದಿರುಳ ಕಾಣಿಕೆಯ ವಚನವಿತ್ತಿದ್ದ ತಾರೆಗಳು
ಬೆಚ್ಚಿ ಬಿಳುಚಿ ಕಾಲ್ಕಿತ್ತಿವೆಯಲ್ಲಾ....

ಈಗ ಅದು ಬಯಲಾಗಲಿ
ಹೇಗೆ ನಾನು ಗುಟ್ಟಿನಲ್ಲಿ ಸುರಿವ ಮಳೆಯ
ಗಾನಕ್ಕೆ ಬತ್ತಲಾದೆ, ಬಯಲಾದೆ
ಮತ್ತು
ಹುಡುಕಿದೆ
ಚಾಚಿ ಜಗದಗಲ
ಎಂದೂ ಯಾತರ ರುಚಿಗೂ ಮೈಯೊಡ್ಡದ
ನಾಲಗೆಯಿಂದ
ಸದಾ ಹಿಡಿಯ ಸಿಗದೆ ಜಾರಿಬಿಡುವ
ಆ ಪಂಚಮಸ್ವರದ ಸ್ವರದ
ಸ್ವರದ ಸ್ವರದ....

(ಮಯೂರ ಮಾಸಪತ್ರಿಕೆಯ ಮೇ 2018ರ ಸಂಚಿಕೆಯಲ್ಲಿ ಪ್ರಕಟಿತ)

2 comments:

ಅರವಿಂದ said...

ಆತ್ಮೀಯ ನರೇಂದ್ರ ಪೈ,

ಬಹಳ ಒಳ್ಳೆಯ ಲೇಖನ. ಬಹಳ ಇಷ್ಟವಾಯಿತು. ಅದ್ಬುತ ವಾಕ್ಯ "ನಿಜವಾದ ಕವಿತೆಯೊಂದು ಇರುವುದೇ ಆದರೆ ಅದು ಸಾವಿನಲ್ಲಿ ಸಂಧಿಸುತ್ತದೆ". ತಮಗೆ ಬಹಳ ಧನ್ಯವಾದಗಳು ----

ಇಂತಿ
ಅರವಿಂದ

ನರೇಂದ್ರ ಪೈ said...

ಥ್ಯಾಂಕ್ಯೂ ಅರವಿಂದ್.