Monday, May 14, 2018

ಅಗಸರವಳು

ತೀರ ಮುದಿಯಾಗಿ ಮುರುಟಿಕೊಂಡಂತಿದ್ದ ಮುದುಕಿಯಾಕೆ. ಅವಳು ನಮ್ಮ ಮನೆಯ ಬಟ್ಟೆ ಒಗೆಯುವ ಕೆಲಸಕ್ಕೆ ಬರತೊಡಗಿದಾಗಲೇ ಆಕೆಗೆ ಎಪ್ಪತ್ತರ ಗಡಿ ದಾಟಿತ್ತು. ಅವಳ ವಯಸ್ಸಿಗೆ ಹೆಚ್ಚಿನವರು ಕಾಯಿಲೆಯಿಂದ, ನಿತ್ರಾಣದಿಂದ, ದೇಹ ಶಿಥಿಲಗೊಂಡು ಹಾಸಿಗೆ ಹಿಡಿದಿರುತ್ತಾರೆ. ನಮ್ಮದೇ ಬೀದಿಯಲ್ಲಿದ್ದ ಎಲ್ಲಾ ಮುದುಕಿಯರಿಗೂ ಬೆನ್ನು ಬಾಗಿ ಊರುಗೋಲು ಬಂದಿತ್ತು. ಆದರೆ ಈ ಮುದುಕಿ ರೈತ ಕುಟುಂಬದಿಂದ ಬಂದಿದ್ದರಿಂದಲೋ ಏನೋ ವಯಸ್ಸಾಗಿದ್ದರೂ ಗಟ್ಟಿಮುಟ್ಟಾಗಿದ್ದಳು. ಹಲವಾರು ವಾರಗಳಿಂದ ಒಗೆಯದೇ ಬಿದ್ದಿದ್ದ ಬಟ್ಟೆಬರೆಗಳ ಒಂದು ದೊಡ್ಡ ಮೂಟೆಯನ್ನು ನನ್ನಮ್ಮ ಪಟ್ಟಿ ಮಾಡಿ ಈ ಮುದುಕಿಗೆ ವಹಿಸುತ್ತಿದ್ದಳು. ಮುದುಕಿ ಆ ಇಡೀ ಮೂಟೆಯನ್ನು ಎತ್ತಿ ತನ್ನ ಪುಟ್ಟ ಭುಜಗಳ ಮೇಲೆ ಹೊತ್ತು ನಡೆಯುತ್ತಿದ್ದಳು. ನಮ್ಮ ಮನೆಯಿಂದ ಅವಳ ಮನೆಗೆ ಸುಮಾರು ಒಂದೂವರೆ ಗಂಟೆಯ ಕಾಲ್ನಡಿಗೆಯ ದಾರಿಯಿತ್ತು.
ಸಾಮಾನ್ಯವಾಗಿ ಎರಡು ವಾರಗಳ ಬಳಿಕ ಅವಳು ಪ್ರತಿಯೊಂದು ಬಟ್ಟೆಯನ್ನೂ ಸ್ಫಟಿಕ ಶುಭ್ರವಾಗಿ ಒಗೆದು, ಇಸ್ತ್ರಿ ಹಾಕಿ, ಶುಚಿಯಾಗಿ ಮಡಚಿ ಮೂಟೆಕಟ್ಟೆ ತಂದೊಪ್ಪಿಸುತ್ತಿದ್ದಳು. ನನ್ನಮ್ಮನಿಗೆ ಬೇರೆ ಯಾವ ಹೆಂಗಸಿನ ಕೆಲಸವೂ ಇಷ್ಟೊಂದು ತೃಪ್ತಿ ತರುತ್ತಿರಲಿಲ್ಲ, ಅಷ್ಟು ಅಚ್ಚುಕಟ್ಟು ಆಕೆಯ ಕೆಲಸ. ಹಾಗಿದ್ದೂ ಅವಳು ಬೇರೆಯವರಿಗಿಂತ ಹೆಚ್ಚಿನ ಮಜೂರಿ ಕೇಳುತ್ತಿರಲಿಲ್ಲ. ನನ್ನಮ್ಮ ಸದಾ ಅವಳ ಮಜೂರಿಯನ್ನು ಸಿದ್ಧವಾಗಿಟ್ಟಿರುತ್ತಿದ್ದಳು. ಅದಕ್ಕಾಗಿ ಅವಳು ಮತ್ತೊಮ್ಮೆ ಅಷ್ಟೊಂದು ದೂರದಿಂದ ಬರುವಂತೆ ಮಾಡಬಾರದು ಎನ್ನುವುದು ಅವಳ ಕಾಳಜಿಯಾಗಿತ್ತು.

ಆ ದಿನಗಳಲ್ಲಿ ಬಟ್ಟೆ ಒಗೆಯುವುದು ಎಂದರೆ ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ. ಮುದುಕಿ ವಾಸವಿದ್ದಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ. ಅವಳು ಸ್ವಲ್ಪ ದೂರದಿಂದ ಪಂಪ್ ಮಾಡಿ ನೀರನ್ನು ಹೊತ್ತು ತರಬೇಕಿತ್ತು. ಲಿನನ್ ಬಟ್ಟೆಗಳು ಅಷ್ಟು ಸ್ಫಟಿಕ ಶುಭ್ರವಾಗಬೇಕಾದರೆ ಅವನ್ನು ಹಲವು ಬಾರಿ ತಿಕ್ಕಿ ತೊಳೆಯುವುದು ಅನಿವಾರ್ಯವಾಗಿತ್ತು. ಆಮೇಲೆ ಅವುಗಳನ್ನೆಲ್ಲ ಭಾರೀದೊಡ್ಡ ಪಾತ್ರೆಯೊಂದರಲ್ಲಿ ಕುದಿಸಿ, ಗಂಜಿ ಹಾಕಿ, ಬಳಿಕ ಇಸ್ತ್ರಿ ಹಾಕಬೇಕಿತ್ತು. ಒಂದೊಂದು ಬಟ್ಟೆಯನ್ನೂ ಏನಿಲ್ಲವೆಂದರೆ ಹತ್ತು ಬಾರಿ ಅವಳು ಗಮನಿಸಿಕೊಳ್ಳಬೇಕಾಗುತ್ತಿತ್ತು. ಇನ್ನು ಒಣಗಿಸುವುದೋ, ಅದರದ್ದೇ ಒಂದು ದೊಡ್ಡ ಕತೆ! ಹೊರಗಡೆ ಒಣಹಾಕಿದರೆ ಕಳ್ಳರ ಕಾಟ ಹೇಳಿತೀರದ್ದು. ಇದಕ್ಕಾಗಿಯೇ ಅಟ್ಟದಲ್ಲಿ ಬಟ್ಟೆ ಒಣಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಅಂದರೆ ಈ ಬಟ್ಟೆಯ ದೊಡ್ಡ ರಾಶಿಯನ್ನು ಅವಳು ಅಟ್ಟಕ್ಕೆ ಹೊತ್ತೊಯ್ಯಬೇಕಿತ್ತು. ಚಳಿಗಾಲದಲ್ಲಿ ಬಟ್ಟೆಗಳು ಹೇಗೆ ಗಾಜಿನ ಹಾಳೆಯಂತೆ ಸೆಟೆದುಕೊಳ್ಳುತ್ತಿದ್ದವೆಂದರೆ ಮುಟ್ಟಿದರೆ ಅವು ಹರಿದೇ ಹೋಗುತ್ತಿದ್ದವು. ಇದರ ನಡುವೆ ಅವರು ಅವರವರ ಕೆಲಸ ಕಾರ್ಯಗಳಿಗೂ ಅದೇ ಅಟ್ಟವನ್ನು ಅವಲಂಬಿಸಿದ್ದರು. ಈ ಮುದುಕಿ ಅದು ಹೇಗೆ ಎಲ್ಲವನ್ನೂ ನಿಭಾಯಿಸುತ್ತಿತ್ತೋ ದೇವರೇ ಬಲ್ಲ.

ಮುದುಕಿಗೆ ಸುಮ್ಮನೆ ಚರ್ಚಿನೆದುರು ಭಿಕ್ಷೆಗೆ ಕೂರಬಹುದಿತ್ತು. ಆದರೆ ಆಕೆ ಸ್ವಾಭಿಮಾನಿ. ದುಡಿದು ತಿನ್ನಬೇಕು ಎನ್ನುವ ನಿಲುವಿನವಳು. ಮುದುಕಿಗೆ ಒಬ್ಬ ಮಗನಿದ್ದ ಮತ್ತು ಅವನು ತುಂಬ ಶ್ರೀಮಂತನೂ ಆಗಿದ್ದ. ಅವನು ಅದೇನು ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದನೋ ನನಗೀಗ ನೆನಪಾಗುತ್ತಿಲ್ಲ. ಅವನಿಗೆ ತನ್ನ ತಾಯಿ ಎಂದರೆ ಅಸಹ್ಯವಿತ್ತು. ಅವಳೊಬ್ಬ ಅಗಸರ ಹೆಂಗಸಲ್ಲವೆ. ಅವನು ಯಾವತ್ತೂ ಅವಳನ್ನು ಕಾಣಲು ಬರಲಿಲ್ಲ. ಅವಳಿಗೆ ಒಂದು ನಯಾಪೈಸೆ ಸಹಾಯವನ್ನೂ ಮಾಡುತ್ತಿರಲಿಲ್ಲ. ಇದನ್ನೆಲ್ಲ ಯಾವುದೇ ಕಹಿ, ಬೇಸರವಿಲ್ಲದೆ ಆ ಮುದುಕಿ ಹೇಳುತ್ತಿದ್ದಳು. ಒಂದು ದಿನ ಆ ಮಗನಿಗೆ ಮದುವೆಯೂ ಆಯಿತು. ಅವನೇನೂ ತಾಯಿಯನ್ನು ಮದುವೆಗೆ ಕರೆದಿರಲಿಲ್ಲ. ಆದರೂ ಈ ಮುದುಕಿ ಚರ್ಚಿನ ಗೇಟಿನ ಪಕ್ಕದ ಮೆಟ್ಟಿಲಲ್ಲಿ ನಿಂತು ಮದುವಣಿಗರನ್ನು ಕಂಡು ಕಣ್ತುಂಬಿಕೊಂಡಿದ್ದಳು. ತುಂಬ ಚಂದದ ಹೆಣ್ಣು, ಹೇಳಿ ಮಾಡಿಸಿದಂತಿದ್ದ ಜೋಡಿ ಎಂದಿದ್ದಳು.

ಹೀಗಿರುವಾಗ ಒಮ್ಮೆ ಭೀಕರವಾದ ಚಳಿಗಾಲ ಬಂತು. ಬೀದಿಗಳಲ್ಲಿ ನಡೆಯುವುದೇ ದುಸ್ಸಾಧ್ಯವಾಯಿತು. ನಾವೆಷ್ಟೇ ದೊಡ್ಡದಾಗಿ ಬೆಂಕಿಯುರಿಸಿದರೂ ಕಿಟಕಿ ಗಾಜುಗಳ ಮೇಲಿನ ಮಂಜು ಕರಗುತ್ತಿರಲಿಲ್ಲ ಮತ್ತು ಅಂಚುಗಳಲ್ಲಿ ಮಂಜುಗಡ್ಡೆಯ ಪಟ್ಟಿ ಅಂಟಿಕೊಂಡೇ ಇರುತ್ತಿತ್ತು. ಪತ್ರಿಕೆಗಳಲ್ಲಿ ಜನ ಚಳಿಯಿಂದಾಗಿ ಸಾಯುತ್ತಿದ್ದ ಸುದ್ದಿಗಳು ಬರತೊಡಗಿದವು. ಉರುವಲು ವಿಪರೀತ ದುಬಾರಿಯಾಯಿತು. ಹೆತ್ತವರು ತಮ್ಮ ತಮ್ಮ ಮಕ್ಕಳನ್ನು ಪ್ರವಚನ ಮಂದಿರಗಳಿಗೆ ಕಳಿಸುವುದನ್ನು ನಿಲ್ಲಿಸಿದರು, ಶಾಲೆಗಳನ್ನು ಮುಚ್ಚಲಾಯಿತು.

ಅಂಥ ಒಂದು ದಿನ, ನಮ್ಮ ಬಟ್ಟೆ ಒಗೆಯುವ ಮುದುಕಿ, ಆಗ ಅವಳಿಗೆ ಸುಮಾರು ಎಂಬತ್ತು ವಯಸ್ಸು, ನಮ್ಮ ಮನೆಗೆ ಬಂದಳು. ಕಳೆದ ಹಲವಾರು ವಾರಗಳ ಬಟ್ಟೆಯ ದೊಡ್ಡ ರಾಶಿಯೇ ಬಿದ್ದಿತ್ತು ಮನೆಯಲ್ಲಿ. ನನ್ನಮ್ಮ ಅವಳಿಗೆ ಬಿಸಿಬಿಸಿ ಚಹ ಮತ್ತು ಬ್ರೆಡ್ ಕೊಟ್ಟು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಲು ಹೇಳಿದಳು. ಮುದುರಿ ಕೂತ ಮುದುಕಿ ಚಳಿಯಿಂದ ಗಡಗಡ ನಡುಗುತ್ತಲೇ ಇತ್ತು. ಮುದುಕಿ ಬಿಸಿಯಾದ ಟೀ ಕಪ್ ಹಿಡಿದು ತನ್ನ ಅಂಗೈಯನ್ನು ಬೆಚ್ಚಗೆ ಮಾಡಿಕೊಳ್ಳುತ್ತಿತ್ತು. ಅವಳ ಬೆರಳುಗಳೆಲ್ಲ ನಿರಂತರ ಕೆಲಸದಿಂದಲೋ, ಮೂಳೆ ಸವೆತದಿಂದಲೋ ಬಿಳಿಚಿ ಕಡ್ಡಿಕಡ್ಡಿಯಂತಾಗಿದ್ದವು. ಆ ಕೈಗಳು ದುಡಿಯುವ ಶಕ್ತಿಯನ್ನು ಮೀರಿ ದುಡಿಯುವ ಅವಳ ಕೆಲಸದ ಮಜಕೂರನ್ನೂ, ಜಗದ ಮಾನವೀಯತೆಯ ನಿಷ್ಠುರ ಮುಖಗಳನ್ನೂ ಪ್ರತಿನಿಧಿಸುವಂತಿದ್ದವು. ನನ್ನಮ್ಮ ಬಟ್ಟೆಯನ್ನೆಲ್ಲ ಲೆಕ್ಕ ಮಾಡಿ ಪಟ್ಟಿ ಸಿದ್ಧಪಡಿಸಿದಳು. ಗಂಡಸರ ಒಳ ಅಂಗಿಗಳು, ಹೆಂಗಸರ ಒಳಬಟ್ಟೆಗಳು, ಉದ್ದ ಕಾಲಿನ ಪೈಜಾಮಗಳು, ಮನೆವಾರ್ತೆ ಬಟ್ಟೆಗಳು, ಪೆಟಿಕೋಟುಗಳು, ಶರ್ಟುಗಳು, ತುಪ್ಪಳದ ಕೋಟುಗಳು, ದಿಂಬಿನ ಕವರುಗಳು, ಬೆಡ್ಶೀಟುಗಳು, ಟವಲುಗಳು ಇತ್ಯಾದಿ ಇತ್ಯಾದಿ.

ಒಟ್ಟಾರೆ ಮೂಟೆ ಭಾರೀ ದೊಡ್ಡದಾಯಿತು, ಯಾವತ್ತಿಗಿಂತಲೂ ದೊಡ್ಡದು. ಮುದುಕಿ ಅದನ್ನು ತನ್ನ ಹೆಗಲಿಗೇರಿಸಿಕೊಂಡಾಗ ಅವಳೇ ಕಣ್ಣಿಗೆ ಕಾಣುತ್ತಿರಲಿಲ್ಲ. ಮೊದಲಿಗೆ ಅವಳು ಸ್ವಲ್ಪ ಜೋಲಿದಳು, ಇನ್ನೇನು ಆ ಮೂಟೆಯಡಿ ಬಿದ್ದೇ ಹೋಗುತ್ತಾಳೋ ಎನ್ನುವಂತೆ. ಆದರೆ ಅಷ್ಟರಲ್ಲೇ ಒಳಗಿನಿಂದ ಅದೊಂದು ಶಕ್ತಿ ಎದ್ದು ಬಂತು. ಇಲ್ಲ, ನೀನು ಕುಸಿಯಬಾರದು. ಒಂದು ಕತ್ತೆ ತನ್ನ ಭಾರ ಹೊರಲಾರದೇ ಕುಸಿದು ಹೋಗಬಹುದು, ಆದರೆ ನೀನಲ್ಲ!

ನಾನು ಭಯಭೀತನಾಗಿ ಆ ಹಾದಿಗುಂಟ ಆ ದೊಡ್ಡ ಮೂಟೆಯನ್ನೆತ್ತಿಕೊಂಡು ನಿಧಾನಕ್ಕೆ ಸಾಗುತ್ತಿದ್ದ ಮುದುಕಿಯನ್ನು ನೋಡುತ್ತಲೇ ಇದ್ದೆ. ಹೊರಗೆ ಹಾದಿಯುದ್ದಕ್ಕೂ ಮಂಜು ಒಣ ಉಪ್ಪಿನಂತೆ ಹರಡಿತ್ತು. ಗಾಳಿಯಲ್ಲಿ ಶೀತ ತುಂಬಿಕೊಂಡು ಮಂಜು ಮಿಶ್ರಿತ ಚಳಿಗಾಳಿ ಬೀಸುತ್ತಲೇ ಇತ್ತು. ಈ ಮುದುಕಿ ನಿಜವಾಗಿಯೂ ತನ್ನ ಮನೆತನಕ ತಲುಪುವಳೇ?!

ಕೊನೆಗವಳು ಕ್ರಮೇಣ ಕಾಣದಾದಳು. ನನ್ನಮ್ಮ ನಿಟ್ಟುಸಿರು ಬಿಟ್ಟು ಅವಳಿಗಾಗಿ ಪ್ರಾರ್ಥಿಸಿದಳು.

ಸಾಮಾನ್ಯವಾಗಿ ಮುದುಕಿ ಎರಡು, ಹೆಚ್ಚೆಂದರೆ ಮೂರು ವಾರಗಳಲ್ಲಿ ಮರಳಿ ಬರುತ್ತಿದ್ದಳು. ಆದರೆ ಮೂರು ವಾರಗಳು ಸರಿದು ಹೋದವು, ನಾಲ್ಕು, ಆಮೇಲೆ ಐದು. ಮುದುಕಿಯ ಸುದ್ದಿಯೇ ಇಲ್ಲ. ಈಗ ನಮ್ಮ ಬಳಿ ತೊಡಲು ಬೇರೆ ಬಟ್ಟೆಗಳೇ ಇರಲಿಲ್ಲ. ಶೀತಗಾಳಿ ಮತ್ತಷ್ಟು ಭೀಕರವಾಗಿತ್ತು. ದೂರವಾಣಿ ತಂತಿಗಳೆಲ್ಲ ಹಗ್ಗದಂತೆ ಬಾತಿದ್ದವು. ಮರದ ರೆಂಬೆಕೊಂಬೆಗಳು ಗಾಜಿನಂತೆ ಕಾಣುತ್ತಿದ್ದವು. ರಸ್ತೆಗಳೆಲ್ಲ ಮಂಜಿನಿಂದ ಮುಚ್ಚಿಯೇ ಹೋಗಿದ್ದವು. ದಯಾಳುಗಳು ಅಲ್ಲಲ್ಲಿ ಬೆಂಕಿಯ ವ್ಯವಸ್ಥೆ ಮಾಡಿ ಹಾದಿ ಹೋಕರು ಚಳಿಯಿಂದ ಸಾಯದಂತೆ ಮೈ ಬೆಚ್ಚಗಿರಿಸಿಕೊಳ್ಳಲು ಸಹಕರಿಸುತ್ತಿದ್ದರು.

ಮನೆಯಲ್ಲಿ ಬಟ್ಟೆಒಗೆಯುವ ಹೆಂಗಸಿನ ಕಣ್ಮರೆ ಒಂದು ದೊಡ್ಡ ಸಮಸ್ಯೆಯನ್ನೇ ಹುಟ್ಟು ಹಾಕಿತ್ತು. ನಮಗೆಲ್ಲ ತೊಡಲು ಒಗೆದ ಬಟ್ಟೆಬರೆಗಳ ಅಗತ್ಯ ಹೇಳತೀರದಾಗಿತ್ತು. ತೊಟ್ಟಿದ್ದನ್ನೇ ಮತ್ತೆ ಮತ್ತೆ ತೊಡಬೇಕಾಗಿ ಬಂದಿತ್ತು. ನಮಗೆ ಯಾರಿಗೂ ಆಕೆಯ ಮನೆ ಎಲ್ಲಿದೆ ಎನ್ನುವುದು ಸರಿಯಾಗಿ ಗೊತ್ತಿರಲಿಲ್ಲ. ಮುದುಕಿಯಂತೂ ಈ ಚಳಿಗಾಳಿಗೆ ಬದುಕುಳಿದಿರುವ ಸಾಧ್ಯತೆಯಿಲ್ಲ ಎನ್ನುವುದು ನಮಗೆ ಮನವರಿಕೆಯಾಗಿತ್ತು. ನನ್ನಮ್ಮನಂತೂ ತನಗೆ ಆಕೆ ಕೊನೆಯದಾಗಿ ಬಂದಾಗಲೇ ಆಕೆ ಇನ್ನು ಬರುವುದಿಲ್ಲ, ಇದೇ ನಾವು ಅವಳನ್ನು ಕೊನೆಯ ಬಾರಿ ನೋಡುವುದು ಎನ್ನುವ ಬಲವಾದ ಭಾವನೆ ಬಂದಿತ್ತು, ಅದೇ ನಿಜವಾಯಿತು ಎಂದಳು. ನಾವೆಲ್ಲರೂ ತುಂಬಾ ಮರುಗಿದೆವು, ಕಳೆದುಕೊಂಡ ನಮ್ಮ ಬಟ್ಟೆಬರೆಗಳಿಗಾಗಿಯೂ, ಅಷ್ಟೆಲ್ಲ ದೀರ್ಘ ಕಾಲ ಅತ್ಯಂತ ನಿಷ್ಠೆಯಿಂದ ನಮ್ಮ ಸೇವೆ ಮಾಡಿದ ಆ ಶಿಥಿಲಗೊಂಡ ಜೀವದ ಮುದುಕಿಗಾಗಿಯೂ.

ಎರಡು ತಿಂಗಳಿಗೂ ಹೆಚ್ಚು ಕಾಲ ಸರಿದು ಹೋಯಿತು. ಮಂಜು ಒಮ್ಮೆ ಕರಗಿ, ಮತ್ತೆ ಹೊಸ ಹಿಮ ಬೀಳುವುದಕ್ಕೆ ಆರಂಭವಾಗಿತ್ತು. ಹೊಸ ಚಳಿಗಾಳಿ ಬೀಸುವುದು ಸುರುವಾಯಿತು. ಅಂಥ ಒಂದು ಮುಸ್ಸಂಜೆ, ನನ್ನಮ್ಮ ಚಿಮಣಿ ದೀಪದ ಬೆಳಕಿನಲ್ಲಿ ಯಾವುದೋ ಹಳೆಯ ಬಟ್ಟೆಯನ್ನು ತಿಕ್ಕಿ ಚೊಕ್ಕ ಮಾಡುತ್ತಿರುವಾಗ ಬಾಗಿಲು ತೆರೆದುಕೊಂಡಿತು, ಒಂದಿಷ್ಟು ಹಬೆಯಾಡಿದಂತೆ ಗಾಳಿ ನುಗ್ಗಿತು ಮತ್ತು ಅದರ ಬೆನ್ನಿಗೇ ಒಂದು ಭಾರೀ ದೊಡ್ಡ ಮೂಟೆ ಮನೆಯನ್ನು ಪ್ರವೇಶಿಸಿತು. ಮೂಟೆಯ ಅಡಿಯಲ್ಲೆಲ್ಲೋ ಕಂಡೂ ಕಾಣದಂತೆ ಮುದುಕಿಯ ಆಕೃತಿಯೂ ಕಂಡಿತು. ಮುದುಕಿ ಬಿಳಿಯ ಬಟ್ಟೆಯಂತಾಗಿದ್ದಳು. ನನ್ನಮ್ಮ ಆಘಾತದಿಂದ ಹಾ! ಎಂದು ಬಾಯ್ತೆರೆದು ಬಿಟ್ಟಳು. ನಾನು ತಕ್ಷಣವೇ ಮುದುಕಿಯತ್ತ ಓಡಿ ಆಕೆಗೆ ಮೂಟೆ ಕೆಳಗಿಳಿಸಲು ಸಹಾಯ ಮಾಡಿದೆ. ಅವಳು ಮತ್ತಷ್ಟು ಕೃಶಳಾಗಿದ್ದಳು, ಮತ್ತಷ್ಟು ಬಾಗಿದ್ದಳು. ಆಕೆಯ ಮುಖ ನಿಸ್ತೇಜವಾಗಿತ್ತು ಮತ್ತು ತಲೆ ಎಡಕ್ಕೂ ಬಲಕ್ಕೂ ಇಲ್ಲ ಇಲ್ಲ ಎನ್ನುತ್ತಿರುವಂತೆ ಗಲಗಲ ಅಲುಗುತ್ತಲೇ ಇತ್ತು. ಮುದುಕಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆದರೂ ಬಾಗಿದ ಮುಖದಲ್ಲೇ ತನ್ನ ಒಣಗಿದ ತುಟಿಗಳಿಂದ ಏನನ್ನೋ ಮಣಮಣಿಸಿದಳು.

ಸ್ವಲ್ಪ ಸುಧಾರಿಸಿಕೊಂಡ ಬಳಿಕ ತನಗೆ ಸಿಕ್ಕಾಪಟ್ಟೆ ಜ್ವರ ಬಂದು ಬಿಟ್ಟಿತ್ತು ಎಂದಳಾಕೆ. ಅವಳಿಗದೇನು ಕಾಯಿಲೆಯಾಗಿತ್ತೋ, ಅದರ ಹೆಸರು ನನಗೀಗ ಮರೆತಿದೆ. ಅವಳಿಗದೆಷ್ಟು ಕಾಯಿಲೆಯಾಗಿತ್ತೆಂದರೆ ಯಾರೋ ಪಾಪ ವೈದ್ಯರನ್ನು ಕರೆಸಿದರಂತೆ. ಆ ವೈದ್ಯರು ಅವಳ ದಿನಗಳು ಮುಗಿದವು ಎಂದು ಪಾದ್ರಿಗಳಿಗೆ ಬರಹೇಳಿದ್ದರಂತೆ. ಇನ್ಯಾರೋ ಅವಳ ಮಗನಿಗೆ ಸುದ್ದಿ ಮುಟ್ಟಿಸಿದರಂತೆ. ಮಗನು ಅವಳ ಅಂತ್ಯಕ್ರಿಯೆಗೆ ಬೇಕಾಗುವ ಹಣವನ್ನಷ್ಟೇ ಕಳಿಸಿದನಂತೆ. ಆದರೆ ಆ ಭಗವಂತನಿಗೆ ಈ ನೋವುಂಡ ತಾಯ ಸಹವಾಸ ಇಷ್ಟು ಬೇಗನೇ ಬೇಕೆನಿಸಲಿಲ್ಲ ಎಂದು ಕಾಣುತ್ತದೆ, ಅವಳು ಚೇತರಿಸಿಕೊಳ್ಳ ತೊಡಗಿದಳು. ಒಮ್ಮೆ ಸ್ವಸ್ಥಳಾಗಿದ್ದೇ ಅವಳು ಮತ್ತೆ ತನ್ನ ಕಾಯಕದಲ್ಲಿ ತೊಡಗಿದಳು. ನಮ್ಮದಷ್ಟೇ ಅಲ್ಲ, ಇನ್ನೂ ಎಷ್ಟೋ ಮನೆಗಳ ಬಟ್ಟೆಬರೆಗಳ ಹೊರೆ ಅವಳಿಗಾಗಿಯೇ ಕಾದು ಕೂತಿದ್ದವು. "ವಹಿಸಿಕೊಂಡಿದ್ದ ಕೆಲಸದಿಂದಾಗಿ ನನಗೆ ಹಾಸಿಗೆಯ ಮೇಲೆ ಆರಾಮಾಗಿ ಮಲಗುವುದು ಸಾಧ್ಯವಾಗುತ್ತಿರಲಿಲ್ಲ. ಈ ಕೆಲಸವೇ ನನ್ನನ್ನು ಸಾಯದಂತೆ ತಡೆದು ನಿಲ್ಲಿಸಿದ್ದು" ಎನ್ನುತ್ತಾಳೆ ಮುದುಕಿ.

"ಭಗವಂತನ ದಯೆಯಿಂದ ನೀನು ನೂರಿಪ್ಪತ್ತು ವರ್ಷ ಬದುಕುವಂತಾಗಲಿ" ಎಂದಳು ನನ್ನಮ್ಮ, ಅರ್ಧ ಬೆರಗು, ಅರ್ಧ ಕೃತಜ್ಞತೆ ಬೆರೆತ ಪ್ರವಾದಿಯಂತೆ. 

"ದೇವರು ಕ್ಷಮಿಸಲಿ! ಅಷ್ಟು ಕಾಲ ಬದುಕುವುದು ಯಾರಿಗೆ ಬೇಕಾಗಿದೆ? ದಿನದಿಂದ ದಿನಕ್ಕೆ ನನ್ನ ಕೈಸೋಲುತ್ತಿದೆ. ಕೆಲಸ ಮಾಡುವುದು ನನ್ನ ಕೈಲಾಗುತ್ತಿಲ್ಲ. ಹಾಗಂತ ಇನ್ನೊಬ್ಬರಿಗೆ ಹೊರೆಯಾಗಿ ಇರುವುದೂ ನನಗೆ ಬೇಡ" ಮುದುಕಿ ಮಣಮಣಿಸಿ ಆಕಾಶದತ್ತ ಅಲ್ಲಿ ಸ್ವರ್ಗವಿದೆಯೋ ಎಂಬಂತೆ ದೃಷ್ಟಿ ಹಾಯಿಸಿದಳು.

ಪುಣ್ಯಕ್ಕೆ ಮನೆಯಲ್ಲಿ ನಾಲ್ಕು ಕಾಸಿತ್ತು. ಅಮ್ಮ ಅದನ್ನು ಲೆಕ್ಕ ಮಾಡಿ ಮುದುಕಿಯ ಕೈಗಿಟ್ಟಳು. ಬಟ್ಟೆ ಒಗೆದೂ ಒಗೆದೂ ಬೆಳ್ಳಗಾಗಿದ್ದ ಅವಳ ಆ ಅಂಗೈಯಲ್ಲಿ ಆ ನಾಣ್ಯಗಳು ಕೂಡ ಸ್ಫಟಿಕಶುಭ್ರ ಮಣಿಗಳಂತೆ, ಒಮ್ಮೆಗೇ ಅವಳಷ್ಟೇ ಪವಿತ್ರಗೊಂಡಂತೆ ನನಗೆ ಭಾಸವಾಯಿತು. ಅವಳು ನಾಣ್ಯಗಳನ್ನು ಕಣ್ಣಿಗೊತ್ತಿಕೊಂಡು ತನ್ನ ಕರವಸ್ತ್ರದಲ್ಲಿ ಕಟ್ಟಿಕೊಂಡಳು. ಬಳಿಕ ಕೆಲಕಾಲದ ನಂತರ ಮರಳಿ ಬರುವುದಾಗಿ ಹೇಳಿ ಆಕೆ ಹೊರಟು ಹೋದಳು.

ಆದರೆ ಅವಳೆಂದೂ ಮರಳಿ ಬರಲಿಲ್ಲ. ಆವತ್ತು ಅವಳು ನಮಗೆ ತಂದುಕೊಟ್ಟ ಒಗೆದ ಬಟ್ಟೆಗಳೇ ಈ ಭುವಿಯ ಮೇಲೆ ಆಕೆಯ ಕೊನೆಯ ಶ್ರಮದಾನವಾಯಿತು. ಬೇರೆಯವರಿಗೆ ಸೇರಿದ ವಸ್ತುವನ್ನು ಅವರವರಿಗೇ ತಲುಪಿಸಬೇಕೆಂಬ ಒಂದೇ ಒಂದು ತುಡಿತ ಅವಳ ಜೀವವನ್ನು ಹಿಡಿದಿಟ್ಟಿತ್ತು ಎಂದು ಕಾಣುತ್ತದೆ. ವಹಿಸಿಕೊಂಡ ಕೆಲಸವನ್ನು ಪೂರ್ಣಗೊಳಿಸಿಯೇ ಅವಳು ಕೃತಾರ್ಥಳಾದಳು. ಈ ಮುದುಕಿ ಇಲ್ಲದ ಒಂದು ಸ್ವರ್ಗವನ್ನು ಕಲ್ಪಿಸಿಕೊಳ್ಳುವುದಕ್ಕೂ ನನ್ನಿಂದ ಸಾಧ್ಯವಿಲ್ಲ. ಇಂಥ ಶ್ರಮಜೀವಿಗೆ ತಕ್ಕ ಪ್ರತಿಫಲ ಒದಗಿಸದ ಒಂದು ಜಗತ್ತನ್ನೂ ಒಪ್ಪಿಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ.

(ಐಸಾಕ್ ಬಾಲ್ಷೆವಿಕ್ ಸಿಂಗರ್ ಕೃತಿ "ಇನ್ ಮೈ ಫಾದರ್ಸ್ ಕೋರ್ಟ್" (ಮೊದಲ ಭಾಗ) ನಿಂದ ಆಯ್ದ ಒಂದು ಬರಹದ ಸಂಗ್ರಹಾನುವಾದ)

No comments: