Wednesday, September 19, 2018

ನನ್ನ ಹಿಂದೆಯೂ ಯಾರಿಲ್ಲ, ಮುಂದೆಯೂ ಯಾರಿಲ್ಲ.

ಅದಷ್ಟೇ ಜರ್ಮನಿಯ ಏಕೀಕರಣ ನಡೆದಿದೆ, ಪೂರ್ವ ಪಶ್ಚಿಮಗಳ ನಡುವೆ ಎದ್ದಿದ್ದ ಬರ್ಲಿನ್ನಿನ ಗೋಡೆಯನ್ನು ಕೆಡವಲಾಗಿದೆ. ಹಾಗಿದ್ದೂ ನಾವು ಉತ್ತರದವರು, ನೀವು ದಕ್ಷಿಣದವರು ಎಂಬ ಬಿರುಕು ಮನಸ್ಸಿಗಿಳಿವಂತೆ ಮಾಡಿದ ಸಂದರ್ಭಗಳು ಎದುರಾಗಿವೆ. ಮನುಷ್ಯ ಮನುಷ್ಯರ ನಡುವೆ ಎದ್ದಿರುವ ಹೊಸ ಗೋಡೆಯಂತೆ ಅವು ಕಂಡಿವೆ. ಈ ನಿವೃತ್ತ ಪ್ರೊಫೆಸರ್ ವಿಧುರ. ಯೂನಿವರ್ಸಿಟಿಯಲ್ಲಿ ರಾಜಕೀಯ ಇಲ್ಲದೇ ಇದ್ದಿದ್ದರೆ ಇನ್ನೂ ಸ್ವಲ್ಪ ಕಾಲ ದುಡಿಯುವ ಅವಕಾಶ ಸಿಗುವುದಿತ್ತು. ಈಗ ಒಂಟಿಯಾಗಿ ದೊಡ್ಡ ಮನೆಯಲ್ಲಿ ಕೆಲಸವಿಲ್ಲದೆ ಕೂತರೆ ಎದುರಿಗೇ ಕಾಣುವ ವಿಶಾಲ ಕೊಳದಲ್ಲಿ ಮುಳುಗಿದ ಯುವಕ ಕಾಡತೊಡಗುತ್ತಾನೆ. ಬೇರೆ ಬೇರೆ ಕಾರಣಗಳಿಂದ ಅವನ ಶವವನ್ನು ಕೊನೆಗೂ ಮೇಲೆತ್ತುವುದು ಸಾಧ್ಯವಾಗಿಲ್ಲ. ನೆನಪುಗಳಲ್ಲಿ ಹೆಂಡತಿ ಇನ್ನೂ ಜೀವಂತವಾಗಿದ್ದಾಳೆ. ಇಡೀ ವಿಶ್ವದ ಸ್ಮೃತಿಯಲ್ಲಿ ಹಿಟ್ಲರ್‌ನ ಕರಾಳ ಛಾಯೆ ಜರ್ಮನಿ ಎಂಬ ತಮ್ಮದೇ ದೇಶದ ಮೇಲೆ ಬೇಡವೆಂದರೂ ಚಾಚಿಕೊಂಡೇ ಇದೆ ಎನ್ನುವ ಅರಿವು ಎಲ್ಲರಲ್ಲೂ ಹಸಿಹಸಿಯಾಗಿಯೇ ಉಳಿದಿದೆ.
ಆದರೆ ದೇಶದೊಳಗೆ ಲಿಬಿಯ, ಈಜಿಪ್ಟ್, ಇಟೆಲಿ, ಗಾಜಾಗಳಿಂದೆಲ್ಲ ಬೇರೆ ಬೇರೆ ಕಾರಣಗಳಿಂದ ಒಳಬಂದ ನಿರಾಶ್ರಿತರು ನೆಲೆಯಿಲ್ಲದೆ ಕಂಗಾಲಾಗಿದ್ದಾರೆ. ತನ್ನವರನ್ನೆಲ್ಲಾ ಕಳೆದುಕೊಂಡು, ಅಥವಾ ಅವರಿಗೆ ಏನಾಯಿತು ಎನ್ನುವುದೇ ಗೊತ್ತಿಲ್ಲದ, ಗೊತ್ತು ಮಾಡಿಕೊಳ್ಳುವ ಸಾಧ್ಯತೆ ಕೂಡ ಇಲ್ಲದ ಒಂದು ಕಂಗಾಲಿನ ಸ್ಥಿತಿಯಲ್ಲಿ ಉಟ್ಟಬಟ್ಟೆಯಲ್ಲೇ ಓಡಿಬಂದಂತೆ ಗಡಿಯೊಳಗೆ ತೂರಿಕೊಂಡ ಈವಿದೇಶಿಗಳು ನಿರಾಶ್ರಿತರು. ಇವರಲ್ಲಿ ಕೆಲವರ ಹೆತ್ತವರನ್ನು ಕಣ್ಣೆದುರೇ ಕಡಿದು ಕೊಲ್ಲಲಾಗಿದೆ. ಕೆಲವರ ಪತ್ನಿಯಂದಿರು ಇನ್ನೆಲ್ಲೊ ಸಿಕ್ಕಿಕೊಂಡಿರುವುದು ಗೊತ್ತು, ಅಲ್ಲಿಂದ ಏನಾದರೂ ಗೊತ್ತಿಲ್ಲ. ಕೆಲವರು ತಮ್ಮ ಹಸುಗೂಸುಗಳು ಕಾಲ್ತುಳಿತಕ್ಕೆ ಸಿಲುಕಿಯೊ, ಮುಳುಗುವ ಹಡಗಿನಿಂದ ಬಚಾವಾಗಲಾರದೆಯೊ ಕಣ್ಣೆದುರೇ ಸತ್ತಿದ್ದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಇನ್ನು ಕೆಲವರಿಗೆ ಎಲ್ಲೆಲ್ಲೊ ಇದ್ದತಮ್ಮ ಹೆತ್ತವರೊ, ಸಂಗಾತಿಗಳೊ ಈಗ ಏನಾಗಿದ್ದಾರೆಂಬುದು ಗೊತ್ತೇ ಇಲ್ಲ. ಇಲ್ಲಿ ಈದೇಶದಲ್ಲಿ ರೆಕ್ಕೆಕಡಿದ ಹಕ್ಕಿಗಳಂತೆ ತುಪತುಪನೆ ಉದುರಿ ಬಿದ್ದಿದ್ದಾರೆ. ಈಗ ಈ ದೇಶದ ರಾಜಸತ್ತೆ, ಆಡಳಿತ, ಅಧಿಕಾರ, ಪೋಲೀಸು, ಸೇನೆ ಎಲ್ಲವೂ ಇವರಿಗೆ ಅನ್ನ ಕೊಡಬೇಕೆ, ಇರಗೊಡಬೇಕೆ, ಕೊಲ್ಲಬೇಕೆ, ಅಂಥ ಸಭ್ಯ ಮಾರ್ಗ ಯಾವುದಾದರೂ ಇದೆಯೆ, ಅನಾಗರಿಕ ಮಾರ್ಗವೇ ಗತಿಯಾದಲ್ಲಿ ಅದಕ್ಕೆ ತಕ್ಕ ಸಮರ್ಥನೆ ಒದಗಿಸಿಕೊಳ್ಳುವುದು ಹೇಗೆ, ದೇಶದಿಂದ ಆಚೆದಬ್ಬುವುದು ಹೇಗೆ ಎಂದೆಲ್ಲ ಮಂತ್ರಾಲೋಚನೆಯಲ್ಲಿ ತೊಡಗಿದೆ. ಇವರೆಲ್ಲ ತಮ್ಮಂತೆಯೇ ಇರುವುದನ್ನು ಕಂಡು, ಇವರೂ ಮನುಷ್ಯರೇ ಎನ್ನುವುದನ್ನು ಕಂಡು ಆಶ್ಚರ್ಯಚಕಿತರಾಗಿರುವ ಸಾಮಾನ್ಯ ಮಂದಿ ಇವರನ್ನು ನಿರಾಕರಿಸಲಾರದೆ, ಸ್ವೀಕರಿಸುವ ಧೈರ್ಯ, ಔದಾರ್ಯ, ಮಾನವೀಯತೆ ಎಲ್ಲಿ ದೇಶದ್ರೋಹಿ, ದೇಶವಿರೋಧಿ ಎಂದು ಪರಿಗಣಿಸಲ್ಪಡುವುದೋ ಎಂಬ ಭಯದಲ್ಲಿ ಸ್ವೀಕರಿಸಲಾರದೆ ಒದ್ದಾಡುತ್ತಿರುವಂತಿದೆ.

ನಡುರಾತ್ರಿ ಎಚ್ಚರವಾದರೆ ಇಡೀ ಮನೆಯನ್ನು ಒಂಟಿಯಾಗಿ ಸುತ್ತು ಬರುವ ರಿಚರ್ಡ್ ಮನುಷ್ಯನ ಆಳದ ಒಂಟಿತನವನ್ನು, ಸಹಜೀವಿಯನ್ನು ನಂಬಲಾರದ ಅವನ ಸ್ಥಿತಿಯನ್ನು ಬಿಂಬಿಸುತ್ತಾನೆ. ಇದು ಮೇಲ್ನೋಟಕ್ಕೆ ನಿರಾಶ್ರಿತರ ಕುರಿತಾಗಿಯೇ ಇರುವ ಕಾದಂಬರಿ ಎಂಬುದು ನಿಜ. ಆದರೆ ಅಷ್ಟೇ ಅಲ್ಲ ಎನ್ನುವುದು ಇದರ ವಿಶೇಷ. ಅಂಥ ವಿಶೇಷವನ್ನು ಸೂಚಿಸುವಂತೆ ಈ ಒಂದು ಅಧ್ಯಾಯವಿದೆ. ನಮ್ಮ ಬದುಕು ಚರ್ಮದ ಬಣ್ಣ, ಜಾತಿ, ಧರ್ಮ, ಭಾಷೆ, ದೇಶ, ಬಡತನ ಎಲ್ಲವನ್ನೂ ಮೀರಿದ್ದು ಎನ್ನುವ ಸರಳ ಸಂಗತಿಯಿಂದ ಮನುಷ್ಯ ಸಾಕಷ್ಟು ದೂರ ಸರಿದಿದ್ದಾನೆ, ಸರಿಯುತ್ತಲೇ ಇದ್ದಾನೆ. ಸರಳ ಸಂಗತಿಗಳನ್ನು ಕೆಲವೊಮ್ಮೆ ಅವನು ನೆನಪು ಮಾಡಿಕೊಂಡು ಮನುಷ್ಯತ್ವವನ್ನು ಮರಳಿ ಪಡೆಯಬೇಕಾದ ಸ್ಥಿತಿ ಇದೆ. ಹಾಗೆ ಈ ಅಧ್ಯಾಯ ತೀರ ಸಾಮಾನ್ಯವಾದದ್ದು, ಸರಳವಾದದ್ದು ಮತ್ತು ಓದುತ್ತ ಮಹತ್ವದ್ದು ಎಂದೂ ಅನಿಸುವಂಥದ್ದು.


ನನ್ನ ಹಿಂದೆಯೂ ಯಾರಿಲ್ಲ, ಮುಂದೆಯೂ ಯಾರಿಲ್ಲ.
ಆವತ್ತು ಸಂಜೆ ಮನೆಗೆ ಬಂದ ರಿಚರ್ಡ್‌ಗೆ ಆ ಎಲ್ಲ ಮಾತುಕತೆ ಹೇಗೆ ಸುರುವಾಯಿತೆಂಬುದೇ ಸರಿಯಾಗಿ ನೆನಪಾಗಲಿಲ್ಲ. ಮುಚ್ಚಿದ ಬಾಗಿಲುಗಳನ್ನು ತಟ್ಟುತ್ತ ಹೋಗುವುದು ಅವನಿಗೆ ಸಾಕೆನಿಸಿತ್ತು. ಒಳಗೆ ಹುಡುಗರು ಅಡ್ಡಾತಿಡ್ಡ ಮಲಗಿಕೊಂಡಿರುತ್ತಾರೆ. ಯಾರು ಸಿಗುತ್ತಾರೆ ಇವತ್ತಿನ ಮಾತಿಗೆ ಎಂದು ಹುಡುಕುತ್ತಲೇ ಇರಬೇಕು. ರಿಚರ್ಡ್ ಮೆಟ್ಟಿಲಿಳಿದು ಕೆಳಕ್ಕೆ ಹೊರಟಿದ್ದ. ಆಗ ಅವನು ಕಣ್ಣಿಗೆ ಬಿದ್ದ. ಕೈಯಲ್ಲಿ ಪೊರಕೆ ಹಿಡಿದಿದ್ದ. ಜನವಸತಿಯಿಲ್ಲದ ಎರಡನೆಯ ಅಂತಸ್ತಿನ ನೆಲ ಗುಡಿಸುತ್ತಿದ್ದ ಅವನು. ಅದೆಷ್ಟು ನಿಧಾನಗತಿಯಲ್ಲಿ ಗುಡಿಸುತ್ತಿದ್ದನೆಂದರೆ, ಅದೊಂದು ತುಂಡು ಜಾಗ ಗುಡಿಸಿ ಮುಗಿಸಲು ಇಡೀ ದಿನ ತೆಗೆದುಕೊಳ್ಳುವ ಅಂದಾಜಿನಲ್ಲಿದ್ದಂತಿತ್ತು. ಅದು ಹೇಗೆ ಅವನ ಜೊತೆ ಅಷ್ಟೊಂದು ಹೊತ್ತು ಮಾತನಾಡುತ್ತ ಕಳೆದನೊ, ರಿಚರ್ಡ್‌ಗೇ ನಂಬಲಾಗುತ್ತಿಲ್ಲ. ಅವನು ಅಲ್ಲಿ ಯಾರೊಂದಿಗೂ ಅಷ್ಟೊಂದು ಹೊತ್ತು ಮಾತನಾಡಿ ನಿಂತಿದ್ದಿಲ್ಲ.
ಗೊತ್ತು ನನಗಿದೆಲ್ಲ ಯಾಕಾಗ್ತಿದೆ ಅಂತ, ಆ ಧ್ವನಿ ಮೆತ್ತಗೆ ಗುನುಗುತ್ತದೆ. ತೆಳ್ಳನೆಯ ಕೃಶಕಾಯದ ಮನುಷ್ಯ ಇನ್ನೂ ಅಲ್ಲಲ್ಲಿ ಹರಿದ ಹಳದಿಬಣ್ಣದ ಯೂನಿಫಾರಮ್ ತೊಟ್ಟುಕೊಂಡೇ ಇದ್ದಾನೆ. ಕೈಯಲ್ಲಿನ್ನೂ ಅದೇ ಪೊರಕೆಯಿದೆ. ನಡುನಡುವೆ ಕೆಲಸ ನಿಲ್ಲಿಸಿ ಅದೇ ಪೊರಕೆಯ ಬೊಡ್ಡೆಗೆ ತನ್ನ ಸುಸ್ತಾದ ದೇಹವನ್ನು ಆತುಕೊಂಡಂತೆ ಎರಡೂ ಕೈಗಳನ್ನೂರಿ ನಿಲ್ಲುತ್ತಾನೆ. ನಂತರ ಮತ್ತೆ ಒಂದೆರಡು ಬಾರಿ ಪೊರಕೆ ಆಡುತ್ತದೆ.
ಅಥವಾ ಇದೆಲ್ಲ ಇನ್ನೂ ಮುಗಿಯುವ ಇಶಾರೆ ಇಲ್ಲವೋ ಏನೊ.
ನಾನು ಬಿಟ್ಟ ಕಣ್ಣು ಬಿಟ್ಟ ಹಾಗೇ ನನ್ನೆದುರಿನ ಅಷ್ಟೂ ದೂರ ದೃಷ್ಟಿ ಹಾಯಿಸಿ ನೋಡಿದೆ. ಅದೇ ರೀತಿ ನಾನು ಹಾದು ಬಂದ ಹಾದಿಯುದ್ದಕ್ಕೂ ಹಿಂದಿರುಗಿ ದಿಟ್ಟಿಸಿದೆ. ಏನೂ ಕಾಣಿಸಲಿಲ್ಲ ನನಗೆ.
ನಿರ್ಜನವಾಗಿದ್ದ ಆ ಎರಡನೆಯ ಅಂತಸ್ತಿನ ಮನುಷ್ಯ ಆಡಿದ ಮೊತ್ತಮೊದಲ ಮಾತು ಅದು. ಮತ್ತೆಲ್ಲಾ ಮಾತುಗಳು ಇವೇ ಮಾತುಗಳ ಸುತ್ತ ಗಿರಕಿ ಹೊಡೆದಂತೆ ಪುಂಖಾನುಪುಂಖವಾಗಿ ಬರತೊಡಗಿದ್ದವು. ಈಗ ರಿಚರ್ಡ್ ತನ್ನದೇ ಮನೆಯೊಳಗೆ ಸೇರಿಕೊಂಡಿದ್ದಾನೆ, ಆದರೂ ಅವನ ಕಿವಿಯಲ್ಲಿ ಆ ಮನುಷ್ಯನ ಮೆತ್ತಗಿನ ಧ್ವನಿ ಇಲ್ಲಿಯೇ, ಈಗಷ್ಟೇ ಆಡಿದಂತೆ ಗುಂಯ್ ಗುಡುತ್ತಲೇ ಇದೆ.
ನನಗೆ ಎಂಟೋ ಒಂಭತ್ತೋ ವರ್ಷ ವಯಸ್ಸಾದಾಗ ನನ್ನ ಹೆತ್ತವರು ನನ್ನನ್ನು ನನ್ನ ಮಲತಾಯಿಯ ಜೊತೆ, ಅಂದರೆ ನನ್ನ ತಂದೆಯ ಮೊದಲ ಪತ್ನಿಯ ಜೊತೆ, ಬಿಟ್ಟು ಅವರೆಲ್ಲ ನನ್ನ ಇಬ್ಬರು ಸಹೋದರರು ಮತ್ತು ತಂಗಿಯ ಜೊತೆ ಬೇರೊಂದು ಹಳ್ಳಿಗೆ ಹೊರಟು ಹೋದರು. ನನಗೆ ಹನ್ನೊಂದು ತುಂಬಿದಾಗ ನನ್ನ ಮೊದಲು ಕುಡುಗೋಲು ಸಂಪಾದಿಸಿದ್ದೆ. ಹೊಲದಲ್ಲಿ ಗಂಟೆಗೆ ಮುವ್ವತ್ತು ಸೆಂಟ್ಸ್ ದುಡಿಯಲು ಇದೇ ನನಗಿದ್ದ ಏಕೈಕ ಬಂಡವಾಳವಾಗಿತ್ತು. ನನಗೆ ಹದಿನೆಂಟು ತುಂಬಿದಾಗ ನನ್ನ ಬಳಿ ಸಣ್ಣ ಗೂಡಂಗಡಿ ತೆರೆಯಲು ಬೇಕಾದಷ್ಟು ಹಣ ಕೂಡಿತ್ತು. ಹತ್ತೊಂಬತ್ತು ವರ್ಷವಾದಾಗ ನಾನು ನನ್ನ ಗೂಡಂಗಡಿಯನ್ನು ಮಾರಿ ಘಾನಾದ ಕುಮಾಸಿಗೆ ಹೋದೆ. 
ಪ್ರತಿದಿನ ರಾತ್ರಿ ಮನೆಗೆ ಮರಳಿದ್ದೇ ಮಾಡುವ ಹಾಗೆ ರಿಚರ್ಡ್ ಲಿವಿಂಗ್ ರೂಮು, ಓದುವ ಕೋಣೆ, ಕಿಚನ್‌ನ ಲೈಟ್ಸ್ ಹಾಕಿದ. 
ನಾನು ನನ್ನ ಹೆತ್ತವರನ್ನು, ನನ್ನ ಸಹೋದರರು ಮತ್ತು ಸಹೋದರಿಯನ್ನು ನೋಡಲು ಹೋದೆ. ಅವರಿಗೆ ಶುಭವಿದಾಯ ಕೋರಿದೆ. ಅವರೊಂದಿಗೆ ನಾನು ಒಂದೇ ಒಂದು ರಾತ್ರಿ ಕಳೆಯುವುದು ಸಾಧ್ಯವಿತ್ತು. ಅವರಿದ್ದ ಮನೆ ತೀರಾ ಚಿಕ್ಕದಾಗಿತ್ತು.
ನಾನು ಕುಮಾಸಿಗೆ ಹೋಗಿ ಬೀದಿ ಬದಿ ಶೂಸ್ ಮಾರುತ್ತಿದ್ದ ಇಬ್ಬರು ವ್ಯಾಪಾರಿಗಳಿಗೆ ಸಹಾಯಕನಾಗಿ ನಿಂತು ದುಡಿಯತೊಡಗಿದೆ. ಇಲ್ಲಿ ನಾನೊಬ್ಬಳು ಹುಡುಗಿಯನ್ನು ಭೇಟಿಯಾದೆ. ಆದರೆ ನಾನು ತೀರಾ ದರಿದ್ರ ಎಂಬ ಕಾರಣಕ್ಕೆ ಅವಳ ಹೆತ್ತವರು ನಮಗೆ ಮದುವೆಯಾಗಲು ಅನುಮತಿ ಕೊಡಲಿಲ್ಲ. ಆಮೇಲೆ ನಾನು ಕೆಲಸ ಮಾಡುತ್ತಿದ್ದ ವ್ಯಾಪಾರಿಗಳೂ ನಷ್ಟದಿಂದ ದಿವಾಳಿಯಾಗಿಬಿಟ್ಟರು.
ಮತ್ತೆ ನಾನು ನನ್ನ ಹೆತ್ತವರ ಬಳಿಗೆ ಹೋದೆ. ನನ್ನ ತಂದೆ ತಾಯಿ, ಇಬ್ಬರು ಸಹೋದರರು ಮತ್ತು ನನ್ನ ತಂಗಿಯನ್ನು ಮರಳಿ ಭೇಟಿಯಾದೆ. ಆದರೆ ಅವರೊಂದಿಗೆ ನಾನು ಒಂದು ರಾತ್ರಿ ಮಾತ್ರ ಕಳೆಯುವುದು ಸಾಧ್ಯವಿತ್ತು. ಅವರಿದ್ದ ಮನೆ ತೀರಾ ಚಿಕ್ಕದಾಗಿತ್ತು.
ಆ ದಿನಗಳಲ್ಲಿ ನನ್ನ ದೇಹಾರೋಗ್ಯ ಕೂಡ ಚೆನ್ನಾಗಿರಲಿಲ್ಲ.
ರಿಚರ್ಡ್ ಕಿಚನ್ನಿಗೆ ಹೋಗುತ್ತಾನೆ. ಗಾರ್ಡನ್ ಕಡೆಗಿದ್ದ ಕಿಟಕಿಯನ್ನು ತೆರೆಯುತ್ತಾನೆ. ರಾತ್ರಿಯ ಕತ್ತಲಿನಲ್ಲೇ ಹೊರಗಡೆ ದೃಷ್ಟಿ ನೆಟ್ಟು ದಿಟ್ಟಿಸುತ್ತಾನೆ. ಎಲ್ಲವೂ ಸ್ತಬ್ಧವಾದಂತೆ ಆ ನೀರವ ವಾತಾವರಣದ ಮೌನವನ್ನೇ ಕ್ಷಣಕಾಲ ಧೇನಿಸುತ್ತ ನಿಲ್ಲುತ್ತಾನೆ. ಆಗ ಹಿಂಬಂದಿಯಿಂದ ನಿಧಾನವಾಗಿ ಪೊರಕೆ ನೆಲವನ್ನು ಗುಡಿಸುವ ಆ ಶಬ್ದ ಕೇಳಿಸತೊಡಗುತ್ತದೆ.
ಏನೋ ಬದಲಾವಣೆ. ಆದರೆ ಅದು ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಎನ್ನುವುದು ಕೂಡ ನನಗೆ ಅರ್ಥವಾಗಿರಲಿಲ್ಲ. ನಾನು ಒಂದು ಹೊಲದಲ್ಲಿ ದುಡಿಯುವುದಕ್ಕೆ ಸುರುಮಾಡಿದೆ. ಪಶುಗಳನ್ನು, ಆಡು, ಕುರಿ ಮತ್ತು ಹಂದಿಗಳನ್ನು ನೋಡಿಕೊಳ್ಳುವುದು ನನ್ನ ಕೆಲಸವಾಗಿತ್ತು. ನಾನು ಅವುಗಳಿಗಾಗಿ ಹುಲ್ಲು ಕತ್ತರಿಸಿ, ಚಿಗುರು, ಸೊಪ್ಪು ಸದೆ ಕಡಿದು ತರುತ್ತಿದ್ದೆ. ಆದರೆ ನನ್ನ ಯಜಮಾನ ನನ್ನ ಸಂಬಳವನ್ನು ಹಿಡಿದುಕೊಂಡಿದ್ದ. ಕೇಳಿದರೆ, ನನ್ನ ಗಳಿಕೆಯೆಲ್ಲವೂ ನನ್ನ ಹೊಟ್ಟೆ ಹೊರೆಯುವುದಕ್ಕೇ ಖರ್ಚಾಗುತ್ತಿದೆ ಎಂದು ಹೇಳುತ್ತಿದ್ದ. 
ರಿಚರ್ಡ್ ಕಿಟಕಿ ಮುಚ್ಚಿ ಹಿಂದಿರುಗುತ್ತಾನೆ. ಕಸ ಗುಡಿಸುವ ಮನುಷ್ಯ ಮತ್ತೆ ತನ್ನ ಕೋಲಿಗೆ ಆತುಕೊಂಡು ನಿಲ್ಲುತ್ತಾನೆ, ಒಂದು ಮುಗುಳ್ನಗು ಚೆಲ್ಲುತ್ತಾನೆ. ಮಾತು ಸುರು.
ಒಮ್ಮೆ ನನಗೊಂದು ಕನಸು ಬಿತ್ತು. ನನ್ನ ತಂದೆ ಒಂದು ಕಡೆ ಮಲಗಿದ್ದರು. ನಾನವರನ್ನು ಹಿಡಿಯಬೇಕೆಂದುಕೊಂಡರೂ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ. ನನ್ನ ತೋಳುಗಳ ಕೆಳಗೆ ಅವನು ಅಂಗಾತ ಬಿದ್ದುಕೊಂಡಿದ್ದರು ಮತ್ತು ನೋಡ ನೋಡುತ್ತಿದ್ದಂತೆಯೇ ಮಲಗಿದ್ದಲ್ಲೇ ನೆಲದಲ್ಲಿ ಇಂಗತೊಡಗಿದರು.
ಮರುದಿನ ರಾತ್ರಿ ಮತ್ತೆ ಅಂಥದೇ ಕನಸು ಬಿತ್ತು. ಮೂವರು ಹೆಂಗಸರು ನನ್ನ ಅಪ್ಪನ ದೇಹಕ್ಕೆ ಸ್ನಾನ ಮಾಡಿಸುತ್ತಿದ್ದರು. ನಾನು ಅವರಿಗೆ ಸಹಾಯ ಮಾಡಬೇಕಾಗಿತ್ತು. ಆದರೆ ನನಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. 
ಮೂರನೆಯ ರಾತ್ರಿ ಬಿದ್ದ ಕನಸಿನಲ್ಲಿ ನನ್ನ ತಾಯಿ ತಂದೆಯ ದೇಹದ ಪಕ್ಕ ಸುಮ್ಮನೇ ಅದನ್ನು ನೋಡಿಕೊಂಡಿರುವವಳ ಹಾಗೆ ನಿಂತಿರುವುದು ಕಂಡೆ.
ಒಂದು ದಿನದ ನಂತರ ಹಳ್ಳಿಯಲ್ಲೆ ನನ್ನ ತಂದೆ ತೀರಿಕೊಂಡಿರುವ ಸುದ್ದಿ ನನ್ನನ್ನು ತಲುಪಿತು.
ಅದೆಲ್ಲ ಹೋಗಲಿ, ಅವನಿಗೆ ಈ ಪೊರಕೆ ಸಿಕ್ಕಿದ್ದಾದರೂ ಎಲ್ಲಿ?
ಎಂಟು ವಾರಗಳ ಬಳಿಕ ಮೃತನ ಸ್ಮರಣಾರ್ಥ ನಡೆಸಬೇಕಾದ ಆಚರಣೆಗಳಿಗೆ ಹೋಗಲು ಬೇಕಾದಷ್ಟು ಹಣ ನನ್ನ ಬಳಿ ಇಲ್ಲ ಎನ್ನುವುದು ನನಗೆ ಗೊತ್ತಿತ್ತು. ಆದರೆ ಒಬ್ಬ ಮಗ ಅದಕ್ಕೆ ಹಾಜರಿರಲೇ ಬೇಕು, ಶೋಕಾಚರಣೆ ನಡೆಸಲೇ ಬೇಕು. 
ಈಗವನು ಶಾಂತಚಿತ್ತನಾಗಿ ಕಸಗುಡಿಸತೊಡಗುತ್ತಾನೆ. ದೀರ್ಘವಾಗಿ ಪೊರಕೆಯನ್ನು ಎಳೆದೆಳೆದು ಗುಡಿಸುತ್ತಿದ್ದಾನೆ. ಒಳ್ಳೆಯದು, ಇದೇ ಸರಿ ಎಂದುಕೊಳ್ಳುತ್ತಾನೆ ರಿಚರ್ಡ್.
ಮೊದಲನೇ ವಾರ ನಾನು ಕೆಲಸ ಮಾಡಿದೆ.
ನಂತರ ಎರಡನೆಯ ವಾರ.
ಆಮೇಲೆ ಮೂರನೆಯ ವಾರ.
ಮತ್ತು ನಾಲ್ಕನೆಯದು.
ನಾಲ್ಕನೆಯ ವಾರ ಮುಗಿಯುತ್ತಲೇ ನನ್ನ ಯಜಮಾನ ಇದುವರೆಗೂ ಮಾಡಿದ್ದೆಲ್ಲವೂ ತರಬೇತಿಯಾಗಿತ್ತು, ಹಾಗಾಗಿ ಅದಕ್ಕೆ ಹಣವನನ್ನೇನೂ ಕೊಡುವ ಕ್ರಮವಿಲ್ಲ ಎಂದುಬಿಟ್ಟ. 
ನಾನು ಬೇರೊಂದು ಹೊಲದಲ್ಲಿ ಕೆಲಸ ಹುಡುಕಿಕೊಂಡೆ. ಗಡ್ಡೆ ನೆಡುವುದಕ್ಕಾಗಿ ಕುಳಿ ತೋಡುವ ಕೆಲಸ. ಮೊದಲ ವಾರ ನಾನು ದುಡಿದೇ ದುಡಿದೆ. ಮುಂಜಾನೆ ನಾಲ್ಕರಿಂದ ಮುಸ್ಸಂಜೆ ಆರೂವರೆಯ ತನಕ ದುಡಿತ.
ಆಮೇಲೆ ಎರಡನೆಯ ವಾರ.
ಮತ್ತೆ ಮೂರನೆಯ ವಾರ.
ನಂತರ ನಾಲ್ಕನೆಯದು.
ಆದರೆ, ಒಬ್ಬಾಕೆ ನನಗೆ ಪುಕ್ಕಟೆಯಾಗಿ ತಿನ್ನಲು ಕೊಡದೇ ಇರುತ್ತಿದ್ದರೆ ಮೃತನ ಸ್ಮರಣಾರ್ಥ ಕಡಿಯಲು ಬೇಕಿದ್ದ ಆಡು ಮತ್ತು ನನ್ನ ಪ್ರಯಾಣದ ವೆಚ್ಚ ಎರಡನ್ನೂ ಭರಿಸುವಷ್ಟು ಹಣ ಕೂಡ ನನ್ನ ಈ ಸಂಪಾದನೆಯಿಂದ ಹುಟ್ಟುತ್ತಿರಲಿಲ್ಲ. 
ರಿಚರ್ಡ್ ತನ್ನಷ್ಟಕ್ಕೆ ತಾನು ಇಂಥ ಸಂಜೆ ಹೊತ್ತಿನಲ್ಲಿ ತಣ್ಣಗಿನ ಬಿಯರ್ ಕುಡಿಯುವುದು ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಾನೆ. ಅಲ್ಲಿಂದೆದ್ದು ಬೇಸ್‌ಮೆಂಟ್ ಕಡೆಗೆ ಹೆಜ್ಜೆ ಹಾಕತೊಡಗುತ್ತಾನೆ.
ನಾನು ಆಡಿನೊಂದಿಗೆ ಒಂದು ಬಾಡಿಗೆ ಕಾರಿನಲ್ಲಿ ಹೇಗೋ ಜಾಗ ಮಾಡಿಕೊಂಡು ಕ್ವಾಕ್ವಾ ತನಕ ತಲುಪಿದೆ.
ಅಲ್ಲಿಂದ ಬಸ್ಸಿನಲ್ಲಿ ಆಡು ಹತ್ತಿಸಿಕೊಂಡು ಕುಮಾಸಿ ತಲುಪಿದೆ.
ಮತ್ತೆ ಕುಮಾಸಿಯಿಂದ ತೇಪಾ ತನಕ ಬಾಡಿಗೆ ಕಾರಿನಲ್ಲೇ ಆಡಿನೊಂದಿಗೆ ತುರುಕಿಕೊಂಡೆ. ಅಲ್ಲಿಂದ ಆಡು ಮತ್ತು ನಾನು ಮಿಮ್ ತಲುಪಿದೆವು.
ಅಷ್ಟೊಂದು ಜನರ ನಡುವೆ ಒಂದು ಜೀವಂತ ಆಡನ್ನು ಮುದುರಿ ಒತ್ತಿ ಹಿಡಿದುಕೊಂಡು, ತಾನೂ ತುರುಕಿಕೊಂಡು ಪ್ರಯಾಣಿಸುವ ಪಾಡು ವಿವರಿಸುತ್ತಿದ್ದಂತೆ ತಾನು ನಕ್ಕುಬಿಟ್ಟಿದ್ದು ನೆನಪಾಗುತ್ತದೆ ರಿಚರ್ಡ್‌ಗೆ.
ಅಪ್ಪನ ಶೋಕಾರ್ಥ ನಡೆದ ಆಚರಣೆಯ ದಿನವೇ ನಾನು ಅಲ್ಲಿಗೆ ತಲುಪಿದೆ. ಸಾಂಪ್ರದಾಯಿಕ ಪದ್ಧತಿಯಲ್ಲೇ ಆಡನ್ನು ಸಮರ್ಪಿಸಲಾಯಿತು. ನಾನು ನನ್ನ ಸಂಸಾರದೊಂದಿಗೆ ಆ ಒಂದು ರಾತ್ರಿ ಮಾತ್ರ ಉಳಿದುಕೊಳ್ಳುವುದು ಸಾಧ್ಯವಿತ್ತು. ಅವರಿದ್ದ ಮನೆ ತೀರ ಚಿಕ್ಕದಾಗಿತ್ತು. ಅಲ್ಲಿಂದ ಮುಂದೆ ನನ್ನ ತಾಯಿ ಮತ್ತು ಮೂವರು ಒಡಹುಟ್ಟಿದವರ ಖರ್ಚುವೆಚ್ಚ ನೋಡಿಕೊಳ್ಳುವ ಹೊಣೆ ನನ್ನೊಬ್ಬನದೇ ಆಗಿತ್ತು.
ಹತ್ತಿರದ ಹಳ್ಳಿಯೊಂದರಲ್ಲಿ ನನಗೆ ಕೋಕಾ ತೋಟದಲ್ಲಿ ಕೆಲಸ ಸಿಕ್ಕಿತು.
ಒಂದು ವರ್ಷದ ನಂತರ ಕೈಯಲ್ಲಿದ್ದ ಹಣದೊಂದಿಗೆ ನಾನು ಅಕ್ರಾಕ್ಕೆ ಹೋಗಲು ನಿರ್ಧರಿಸಿದೆ.
ನಾನು ನನ್ನ ತಾಯಿ, ಇಬ್ಬರು ಸಹೋದರರು ಮತ್ತು ತಂಗಿಗೆ ವಿದಾಯ ಹೇಳುವುದಕ್ಕಾಗಿ ಅವರಲ್ಲಿಗೆ ಹೋದೆ. ಅಲ್ಲಿ ನಾನು ಒಂದು ರಾತ್ರಿ ಮಾತ್ರ ತಂಗುವುದಕ್ಕೆ ಸಾಧ್ಯವಿತ್ತು. ಅವರಿದ್ದ ಮನೆ ಅಷ್ಟು ಚಿಕ್ಕದಾಗಿತ್ತು.
ರಿಚರ್ಡ್ ಕೈಯಲ್ಲಿ ಬಿಯರ್ ಹಿಡಿದು ಸೋಫಾದ ಮೇಲೆ ಕುಳಿತಿದ್ದಾಗ, ಚಿಂದಿಯಾದ ಹಳದಿ ಯೂನಿಫಾರ್ಮ್ ತೊಟ್ಟ ಆ ಮನುಷ್ಯ ಲಿವಿಂಗ್ ರೂಮಿನ ರಗ್ಗು ಗುಡಿಸುತ್ತಿದ್ದ.
ನಾನು ಅಕ್ರಾಕ್ಕೆ ಹೋಗಿ ನನ್ನ ಸ್ವಂತ ಬಿಸಿನೆಸ್‌ಗಾಗಿ ನಾಲ್ಕು ಜೊತೆ ಶೂಸ್ ಖರೀದಿಸಿದೆ. ಅಪರಾಹ್ನದೊಳಗೆ ನಾನು ಎರಡು ಜೊತೆ ಮಾರಿದ್ದೆ. ಎರಡು ಹೊಸ ಜೊತೆಗಳನ್ನು ಕೊಂಡೆ ಮತ್ತು ಆ ಸಂಜೆ ಇನ್ನೂ ಒಂದು ಜೊತೆ ಶೂಸ್ ಮಾರಿದೆ. ಮೂರು ಜೊತೆ ಶೂಸ್ ಮಾರಿ ಬಂದ ಲಾಭದಿಂದ ನಾನು ತಿನ್ನುವುದಕ್ಕೆ ಕೊಂಡೆ. ಮಲಗಲು ಬೇಕಾದ ಒಂದು ಚಾಪೆ ಮತ್ತು ಬೀದಿ ಬದಿ ಮಲಗುವಾಗ ಹೊದೆಯಲು ಬೇಕಾದ ಒಂದು ಪ್ಲಾಸ್ಟಿಕ್ ಚಾದರ ಕೊಂಡೆ. ರಾತ್ರಿ ಯಾರೋ ಆ ಚಾದರ ಕದ್ದೊಯ್ದರು.
ಐದು ವರ್ಷಗಳಿಂದಲೂ ಲಿವಿಂಗ್ ರೂಮಿನ ಟೇಬಲ್ಲಿನ ಮೇಲೆಯೇ ಉಳಿದುಬಿಟ್ಟ ಆಡ್ವೆಂಟ್‌ಗಾಗಿ ತಂದ ರೀಥ್ ಮೇಲೆಯೇ ರಿಚರ್ಡ್ ದೃಷ್ಟಿ ಕೀಲಿಸಿತ್ತು.
ಅದೇ ತಾನೆ ಮಳೆಗಾಲ ಆರಂಭವಾಗಿತ್ತು. ನಾನು ನಗರದ ಸುತ್ತೆಲ್ಲಾ ಓಡಾಡಿದೆ. ಈಗ ನನ್ನ ಬಳಿ ಹನ್ನೊಂದು ಜೊತೆ ಶೂಸುಗಳಿದ್ದವು. ನಾನು ಯಾವಾಗಲೂ ಒಂದೇ ಶೂವನ್ನು ತೋರಿಸುತ್ತಿದ್ದೆ. ಇನ್ನೊಂದು ನನ್ನ ಬೆನ್ನಿನ ಚೀಲದಲ್ಲೇ ಇರುತ್ತಿತ್ತು. ರಾತ್ರಿ ಕೆಲವೊಮ್ಮೆ ಮಳೆಯಾದರೆ ನನ್ನ ಹೊಸ ಚಾದರ ಅತ್ತಿತ್ತ ಸರಿದಿದ್ದರೆ ಅಷ್ಟಿಷ್ಟು ಒದ್ದೆಯಾಗುತ್ತಿದ್ದೆ. ಹಗಲು ಹೊತ್ತಿನಲ್ಲಿ ನನಗೆ ಎಂಥಾ ಸುಸ್ತು ಆವರಿಸುತ್ತಿತ್ತೆಂದರೆ ಕೆಲವೊಮ್ಮೆ ನಾನು ಕುಳಿತಲ್ಲೇ ನಿದ್ದೆ ಹೋಗಿರುತ್ತಿದ್ದೆ. ಕೊನೆಗೂ ನನಗೆ ಒಂದು ಮರದ ಪಟ್ಟಿಗಳ ಕೌಂಟರ್ ಮಾಡಿಕೊಳ್ಳಲು ಸಾಧ್ಯವಾಯಿತು. ರಾತ್ರಿ ಹೊತ್ತಿನಲ್ಲಿ ನನ್ನ ಶೂಗಳಿದ್ದ ಚೀಲವನ್ನು ಒಂದೆಡೆ ಭದ್ರವಾಗಿ ಇರಿಸಲು ಬಾಗಿಲು, ಬೀಗ ಇದ್ದ ಒಬ್ಬರು ಒಪ್ಪಿಕೊಂಡರು. ಆದರೂ ನಾನು ಆಗಲೂ ಕಿಸೆಯಲ್ಲಿ ಹಣವಿರಿಸಿಕೊಂಡು ಬೀದಿ ಬದಿಯಲ್ಲೇ ಮಲಗಬೇಕಾಗಿತ್ತು ಮತ್ತು ಸದಾ ಕಾಲ ಯಾರಾದರೂ ನನ್ನನ್ನು ಕೊಳ್ಳೆ ಹೊಡೆಯಬಹುದಾದ ಭೀತಿಯಲ್ಲೇ ನಾನು ಮಲಗುತ್ತಿದ್ದೆ. ಕಮಿಷನ್ ಮೇಲೆ ಐದು ಜೊತೆ ಶೂಸ್ ಮಾರಿಕೊಡುತ್ತೇನೆಂದು ಸಹಾಯ ಮಾಡುವವನಂತೆ ಒಬ್ಬ ಬಂದ. ಹಾಗೆ ಶೂಸ್ ತೆಗೆದುಕೊಂಡು ಹೋದವನು ಮರಳಿ ಬರಲೇ ಇಲ್ಲ. 
ಈಗ ಚಿಂದಿಯಾದ ಹಳದಿ ಯೂನಿಫಾರ್ಮ್ ತೊಟ್ಟ ಮನುಷ್ಯ ತನ್ನ ಕಸಬರಿಗೆಯನ್ನು ತಲೆಕೆಳಕು ಮಾಡಿ ಹಿಡಿದು ಅದಕ್ಕೆ ಅಂಟಿಕೊಂಡ ಕಸವನ್ನೆಲ್ಲ ತೆಗೆದು ಹಿಂದಕ್ಕೆಸೆಯ ತೊಡಗಿದ. ಅದು ಅಲ್ಲೇ ನೆಲದ ಮೇಲೆಲ್ಲ ಬೀಳುತ್ತಿತ್ತು. ಈ ಮನುಷ್ಯನಿಗೆ ತಾನೇನು ಮಾಡುತ್ತಿದ್ದೇನೆಂದು ಗೊತ್ತಿದೆಯೇ ಎಂದು ರಿಚರ್ಡ್ ಆಶ್ಚರ್ಯಪಟ್ಟ. ಬಳಿಕ ಅವನಿಗೆ ಹೇಗೆ ಬೇಕೋ ಹಾಗೆ ಮಾಡಿಕೊಳ್ಳಲಿ ಎಂದು ಸುಮ್ಮನಾದ.
ನಾನು ನನ್ನ ತಾಯಿ ಮತ್ತು ಒಡಹುಟ್ಟಿದವರನ್ನು ಕಾಣಲು ಹೋದೆ. ಅಲ್ಲಿ ನನಗೆ ಕೇವಲ ಒಂದೇ ರಾತ್ರಿ ಉಳಿದುಕೊಳ್ಳಲು ಸಾಧ್ಯವಾಯಿತು. ಅವರಿದ್ದ ಮನೆ ತೀರಾ ಚಿಕ್ಕದಾಗಿತ್ತು.
ನಾನು ನನ್ನ ಬಳಿಯೇ ಕೇಳಿಕೊಂಡೆ: ನಾನು ಮಾಡಿದ ತಪ್ಪಾದರೂ ಏನು?
ನಾನು ನನ್ನನ್ನೇ ನಾನು ಪ್ರಶ್ನಿಸಿಕೊಂಡೆ. ನಂತರ ದೇವರನ್ನು ಕೇಳಿದೆ.
ಸರಿ, ಕೆಟ್ಟ ಕಾಲ ಎನ್ನುವುದು ಬರುತ್ತದೆ, ಅದು ಸಹಜವೇ. ಆದರೆ ನಿಮಗೆ ನೀವೆಲ್ಲಿ ಮಲಗಲಿದ್ದೀರಿ, ಏನನ್ನು ತಿನ್ನಲಿದ್ದೀರಿ ಎನ್ನುವುದು ಸಹ ಗೊತ್ತಿಲ್ಲದ ಸ್ಥಿತಿಯಲ್ಲಿ ಬದುಕುವುದೆಂದರೆ? ಇಡೀ ಜಗತ್ತಿನಲ್ಲಿ ನಾನು ನೆಮ್ಮದಿಯಿಂದ ಮಲಗಬಹುದಾದ ಒಂದೇ ಒಂದು ಜಾಗವೂ ಇಲ್ಲವೆ, ನಿಜಕ್ಕೂ?
ನಾನು ನನ್ನೆದುರಿನ ಹಾದಿಯನ್ನು ಅಷ್ಟೂ ದೂರ ದೃಷ್ಟಿ ಹಾಯಿಸಿ ನೋಡಿದೆ. ಅದೇ ರೀತಿ ನಾನು ಹಾದು ಬಂದ ಹಾದಿಯುದ್ದಕ್ಕೂ ಹಿಂದಿರುಗಿ ದಿಟ್ಟಿಸಿದೆ. ಏನೂ ಕಾಣಿಸಲಿಲ್ಲ ನನಗೆ. ಆದರೆ ನಾನು ಅಮ್ಮನ ಬಳಿ ಎಲ್ಲವೂ ಚೆನ್ನಾಗಿ ನಡೀತಿದೆ ಎಂದೇ ಹೇಳಿದೆ.
ಮತ್ತು ನನ್ನಮ್ಮನೂ ನನ್ನ ಹತ್ತಿರ ಅಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದಳು.
ಆದರೆ ನನಗೆ ಗೊತ್ತಿತ್ತು: ನಮಗೆ ಯಾವುದೇ ಭೂಮಿ ಕಾಣಿ ಇರಲಿಲ್ಲ. ನಾನು ಅವಳಿಗೆ ಹಣ ಕಳಿಸದೇ ಇದ್ದರೆ ಮತ್ತು ಯಾರೂ ಅವಳಿಗೆ ಏನೂ ಕೊಡದೇ ಇದ್ದರೆ ಅವಳಿಗಾಗಲೀ, ನನ್ನ ಒಡಹುಟ್ಟಿದವರಿಗಾಗಲೀ ಒಪ್ಪತ್ತಿನ ಗಂಜಿಗೂ ಗತಿಯಿರಲಿಲ್ಲ.
ನಾವಿಬ್ಬರೂ ಮುಖ ಮುಖ ನೋಡಿಕೊಂಡಾಗ ನನ್ನದೇ ಮೌನವು ಅಮ್ಮನ ಮೌನದೊಂದಿಗೆ ಬಡಿದು ಎಡವಿತು.
ಆಮೇಲೆ ನಾನು ತೋಟವೊಂದರಲ್ಲಿ ಕುಯಿಲಿನ ಕೆಲಸಕ್ಕೆ ಸಹಾಯಕನಾಗಿ ದುಡಿದೆ.
ಮೊದಲನೆಯ ವಾರ.
ಎರಡನೆಯ ವಾರ.
ಮೂರನೆಯ ವಾರ.
ಅವನು ಕಸಬರಿಗೆಯನ್ನು ತಿರುಗಿಸಿ ತಿರುಗಿಸಿ ಸುತ್ತಲೂ ಗುಡಿಸುತ್ತಾನಾದರೂ ನಿಂತಲ್ಲಿಯೇ ನಿಂತು ಉಳಿಯುತ್ತಾನೆ.
ನಾನು ಯೋಚಿಸಿದೆ: ನಾನೇ ಇಲ್ಲ ಎಂದಾದರೆ, ಯಾರೂ ನನ್ನ ಹತ್ತಿರ ಏನನ್ನೂ ಕೇಳುವುದಿಲ್ಲ. ಹೊಲದ ಒಂದು ಮೂಲೆಯಲ್ಲಿ ಒಬ್ಬನೇ ಕೂತು ಬಳಬಳನೆ ಅತ್ತುಬಿಟ್ಟೆ.
ಪರಿಸ್ಥಿತಿ ಹೀಗೆಯೇ ಇದೆ. ಘಾನಾದಲ್ಲಿ ಮಂದಿ ಹತಾಶರಾಗಿದ್ದಾರೆ.
ಕೆಲವರು ಸುಮ್ಮನೇ ನೇಣು ಹಾಕಿಕೊಳ್ಳುತ್ತಿದ್ದಾರೆ.
ಇನ್ನು ಕೆಲವರು ಡಿಡಿಟಿ ತೆಗೆದುಕೊಳ್ಳುತ್ತಾರೆ. ನಂತರ ನೀರು ಕುಡಿದು, ಮನೆಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾರೆ ಮತ್ತು ಸಾಯುತ್ತಾರೆ.
ನಾನು ಡಿಡಿಟಿ ಮಾರುವ ಒಂದು ಅಂಗಡಿಗೆ ಪುಟ್ಟ ಹುಡುಗನೊಬ್ಬನ್ನ ಕಳಿಸಿದೆ. ಆದರೆ ಅಂಗಡಿಯವ ಹುಡುಗನ ಹತ್ತಿರ ಯಾರು ನಿನ್ನನ್ನು ಕಳಿಸಿದವರು ಎಂದು ಕೇಳಿದ. ನನ್ನನ್ನು ಹುಡುಕಿಕೊಂಡು ಬಂದು ತುಂಬ ಹೊತ್ತು ನನ್ನ ಜೊತೆ ಕುಳಿತು ಮಾತನಾಡಿದ. ಚೆನ್ನಾಗಿ ಯೋಚಿಸಿ ನೋಡು, ದುಡುಕಬೇಡ ಎಂದ. ಈ ಮಾತುಕತೆಯ ನಂತರದ ಮೂರು ದಿನಗಳ ಕಾಲ ನಾನು ಮಸೀದಿಯಲ್ಲಿ ಕುಳಿತು ಯೋಚಿಸಿದೆ. 
ಆ ಬಳಿಕ ನನ್ನಲ್ಲಿ ಮತ್ತೊಮ್ಮೆ ಅದನ್ನೇ ಮಾಡುವಷ್ಟು ತ್ರಾಣ ಉಳಿದಿರಲಿಲ್ಲ.
ಅದರ ನಂತರ ನಾನು ಕಾಯಿಲೆಬಿದ್ದೆ.
ರಿಚರ್ಡ್ ಎದ್ದು ಹಾಲ್‌ನ ಉದ್ದಕ್ಕೂ ನಡೆದು ತನ್ನ ಓದುವ ಕೋಣೆ ಸೇರಿಕೊಂಡ. ಅಲ್ಲಿ ಅವನು ಕೆಲವೊಮ್ಮೆ ಆರಾಮ ಕುರ್ಚಿಯ ಮೇಲೆ ಕುಳಿತು ಫೋನಿನಲ್ಲಿ ಮಾತನಾಡುವುದಿದೆ. ನಿದ್ದೆ ಹೋಗುವುದಕ್ಕೂ ಮುನ್ನ ತಲೆತುಂಬ ತುಂಬಿಕೊಂಡ ಯೋಚನೆಗಳಿಂದ ಮುಕ್ತನಾಗುವುದಕ್ಕೆ ಏನಾದರೂ ಸ್ವಲ್ಪ ಓದುವುದು ಅಗತ್ಯವಾಗುತ್ತದೆ.
ಡಿಡಿಟಿ ವ್ಯಾಪಾರಿ ನನ್ನೊಂದಿಗೆ ಮಾತನಾಡದೇ ಇದ್ದರೆ ನಾನು ತುಂಬ ಹಿಂದೆಯೇ ಸತ್ತಿರುತ್ತಿದ್ದೆ.
ಓದುವ ಕೋಣೆಯಲ್ಲೂ ಸಿಕ್ಕಾಪಟ್ಟೆ ಧೂಳು ತುಂಬಿಕೊಂಡಿದೆ. ಗುಂಡಗಿನ ಟೇಬಲ್ ಸುತ್ತ ಇರುವ ಕುರ್ಚಿಗಳನ್ನೆಲ್ಲ ಎತ್ತಿ ಟೇಬಲ್ಲಿನ ಮೇಲ್ಗಡೆ ತಲೆಕೆಳಗಾಗಿ ಕೂರಿಸುವಾಗ ರಿಚರ್ಡ್ ಆ ತೆಳ್ಳನೆಯ ಮನುಷ್ಯನನ್ನೇ ಒಂದಷ್ಟು ಹೊತ್ತು ಗಮನಿಸುತ್ತಾನೆ. ಅವನು ತನ್ನ ಪೊರಕೆಯನ್ನು ಪಕ್ಕದ ಪುಸ್ತಕದ ಶೆಲ್ಫ್‌ಗೆ ಆನಿಸಿ ಇರಿಸಿದ್ದಾನೆ. ಅದು ಜರ್ಮನ್ ಕ್ಲಾಸಿಸಿಸಮ್‌ ಕುರಿತ ಕೃತಿಗಳಿಗೆಂದೇ ಮೀಸಲಿರಿಸಿದ ಶೆಲ್ಫ್.
ಬಳಿಕ ನಾನು ಮತ್ತೆ ಅಕ್ರಾಗೆ ಹಿಂದಿರುಗಿದೆ. ಒಬ್ಬ ಸಹಾಯಕನನ್ನು ಗೊತ್ತು ಮಾಡಿಕೊಂಡೆ. ಒಂದು ಕಾಲಘಟ್ಟದಲ್ಲಿ ನನ್ನ ಬಳಿ ಎರಡೂವರೆ ಗೋಣಿಚೀಲದಷ್ಟು ಶೂಸುಗಳಿದ್ದವು, ಸುಮಾರು ಮುನ್ನೂರು ಜೊತೆ ಶೂಸುಗಳು. ಈಗ ನನ್ನ ಬಳಿ ಒಂದು ಕೋಣೆ ಹೊಂದುವುದಕ್ಕೆ ಅಗತ್ಯವಾದಷ್ಟು ಹಣವಿತ್ತು.
ಆದರೆ ಇದ್ದಕ್ಕಿದ್ದಂತೆ ಬೀದಿಬದಿ ಮಾರಾಟವನ್ನು ಅಕ್ರಮ ಎಂದು ನಿಷೇಧಿಸಲಾಯಿತು.
ನಾನು ನನ್ನೆದುರಿನ ಹಾದಿಯನ್ನು ಅಷ್ಟೂ ದೂರ ದೃಷ್ಟಿ ಹಾಯಿಸಿ ನೋಡಿದೆ. ಅದೇ ರೀತಿ ನಾನು ಹಾದು ಬಂದ ಹಾದಿಯುದ್ದಕ್ಕೂ ಹಿಂದಿರುಗಿ ದಿಟ್ಟಿಸಿದೆ. ಏನೂ ದಾರಿ ಕಾಣಿಸಲಿಲ್ಲ ನನಗೆ.
ನಾನು ಐದು ಜೊತೆ ಶೂಸ್ ಹೊತ್ತು ಗುಟ್ಟಾಗಿ ಅದನ್ನು ಮಾರಿದೆ. ಇಡೀ ದಿನದುದ್ದಕ್ಕೂ ನಾನು ನಗರದ ಮೂಲೆ ಮೂಲೆ ಸುತ್ತಿದೆ. ಕೊನೆಯ ಇಪ್ಪತ್ತೋ ಮುವ್ವತ್ತೋ ಜೊತೆ ಶೂಸುಗಳನ್ನು ನಾನು ತೀರ ಕಡಿಮೆ ಬೆಲೆಗೆ ನನ್ನ ಸಹಾಯಕನಿಗೆ ಬಿಟ್ಟುಕೊಟ್ಟೆ. ಬಂದ ಲಾಭದಲ್ಲಿ ನಾನು ಅಥ್‌ಫಿದೈ ತುಂಬಿದ ಗೋಣೆಚೀಲ ಕೊಂಡುಕೊಂಡೆ. ಯುರೋಪಿನಲ್ಲಿ ಅದನ್ನು ಔಷಧಿ ತಯಾರಿಯಲ್ಲಿ ಬಳಸುತ್ತಾರೆ ಎಂದು ಯಾರೋ ಹೇಳಿದರು. ಪ್ಯಾರಾಸಿಟಾಮಲ್.
ರಿಚರ್ಡ್ ತಲೆನೋವು ಬಂದಾಗಲೆಲ್ಲ ಪೂರ್ವ ಜರ್ಮನಿಯಲ್ಲೆಲ್ಲ ಜನಪ್ರಿಯವಾಗಿರುವ ಆಸ್ಪಿರಿನ್ ಮಾತ್ರೆ ಏ.ಎಸ್.ಎಸ್. ತೆಗೆದುಕೊಳ್ಳುತ್ತಾನೆ. ಅದರಲ್ಲಿಯೂ ಪ್ಯಾರಾಸಿಟಾಮಲ್ ಇದ್ದು ಅದು ಕೆಲಸ ಮಾಡುತ್ತದಾ ಎನ್ನುವ ಬಗ್ಗೆ ಅವನಿಗೆ ತಿಳಿಯದು.
ಆಮೇಲೆ ನಾನು ನನ್ನ ತಾಯಿ ಮತ್ತು ಒಡಹುಟ್ಟಿದವರು ಇರುವ ಮನೆಗೆ ಹೋದೆ. ನಾನು ಅಲ್ಲಿ ಅವರೊಂದಿಗೆ ಕೇವಲ ಒಂದು ರಾತ್ರಿ ಮಾತ್ರ ಉಳಿದೆ ಮತ್ತು ಅವರು ನನಗೆ ಯಾವ ರೀತಿ ಸಹಾಯ ಮಾಡಬೇಕೆಂಬುದನ್ನು ವಿವರಿಸಿ ಹೇಳಿದೆ. ಅವರು ನಾಲ್ಕೂ ಮಂದಿ ಈ ಒಂದು ಸೇಬಿನ ತರ ಇರುವ ಹಣ್ಣನ್ನು ಸಂಗ್ರಹಿಸಲು ಪೊದೆಗಳನ್ನು ಹುಡುಕಿಕೊಂಡು ಹೊರಟರು. ಅದನ್ನು ನೀವು ಚೆನ್ನಾಗಿ ಒಣಗಿಸಬೇಕು. ಆಗ ಅದು ಸೀಳಿಕೊಂಡು ತೆರೆದುಕೊಳ್ಳುತ್ತದೆ. ಅದರಲ್ಲಿರುವ ಬೀಜಗಳನ್ನೆಲ್ಲ ಒಟ್ಟು ಮಾಡಿ ಅದನ್ನು ಎರಡರಿಂದ ಮೂರು ದಿನಗಳ ಕಾಲ ಬಿಸಿಲಿಗೆ ಒಣಗಿಸಬೇಕು. ಆಮೇಲೆ ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಬೇಕು. ಕೊನೆಯಲ್ಲಿ ಕಪ್ಪು ಹುಡಿ ತಯಾರಾಗುತ್ತದೆ. ಹಣ್ಣು ಸಿಗುವುದು ಕಷ್ಟ. ಆಮೇಲೆ ಹುಡಿ ತಯಾರಿಸುವುದು ತುಂಬ ಕಷ್ಟದ ಕೆಲಸವೇ. ಆದರೂ ಎಲ್ಲ ಸೇರಿ ಕೊನೆಗೂ ಎರಡನೆ ಚೀಲವನ್ನೂ ತುಂಬಿ ನನ್ನಮ್ಮ ಅದನ್ನು ಅಕ್ರಾಗೆ ಕಳಿಸಿಕೊಟ್ಟಳು. 
ರಿಚರ್ಡ್ ದೀಪ ಆರಿಸಿ ಮಲಗಲು ಬಯಸುತ್ತಾನೆ. ಆದರೂ ಅವನಿನ್ನೂ ಕುಳಿತೇ ಇದ್ದಾನೆ. ಆ ತೆಳ್ಳನೆಯ ಮನುಷ್ಯ ಸೋಫಾ ಮತ್ತು ಸುತ್ತಮುತ್ತ ಎಲ್ಲ ಗುಡಿಸಿ ಮುಗಿಸುವ ತನಕ, ಟೇಬಲ್ ಮೇಲಿನಿಂದ ಕುರ್ಚಿಗಳನ್ನೆಲ್ಲ ಇಳಿಸಿ ನೀಟಾಗಿ ಜೋಡಿಸಿಡುವ ತನಕ ಅವನು ಕಾಯುತ್ತ ಉಳಿಯುತ್ತಾನೆ.
ನಾನು ಎರಡೂ ಚೀಲಗಳೊಂದಿಗೆ ಸಂತೆಗೆ ಹೊರಟೆ.
ಮೊದಲನೆಯ ದಿನ ಯಾರೊಬ್ಬರೂ ಹುಡಿ ಖರೀದಿಸಲು ಬರಲಿಲ್ಲ.
ಎರಡನೆಯ ದಿನ ಕೂಡ ಇಲ್ಲ.
ಮೂರನೆಯ ದಿನವೂ ಇಲ್ಲ.
ಆನಂತರ, ಕಳೆದ ವರ್ಷ ಯಾರೋ ಕೆಲವರು ಅದೇ ತರ ಕಾಣುವ ಬೇರಾವುದೋ ಹುಡಿಯನ್ನು ಚೀಲದಲ್ಲಿ ತುಂಬಿ ಕೊಂಡವರಿಗೆ ಮೋಸ ಮಾಡಿದ್ದರು ಎನ್ನುವ ವಿಷಯ ಕಿವಿಗೆ ಬಿತ್ತು.
ಈಗ ರಿಚರ್ಡ್ ದೀಪವಾರಿಸುತ್ತಾನೆ. ಹಾಲ್‌ನ ಹಾದಿಯಲ್ಲಿ ಧ್ವನಿ ಅವನಿಗಾಗಿ ಕಾಯುತ್ತಿತ್ತು.
ನಾನು ನನ್ನೊಬ್ಬ ಗೆಳೆಯನ ಹತ್ತಿರ ಆ ಚೀಲಗಳನ್ನು ತೆಗೆದಿರಿಸಲು ಹೇಳಿ ನನ್ನಮ್ಮ ಮತ್ತು ಒಡಹುಟ್ಟಿದವರಿಗೆ ವಿದಾಯ ಹೇಳಲು ಹೋದೆ. ಅಲ್ಲಿ ನಾನು ಕೇವಲ ಒಂದು ರಾತ್ರಿ ಮಾತ್ರ ತಂಗುವುದು ಸಾಧ್ಯವಾಯ್ತು ಅಷ್ಟೆ. ಯಾಕೆಂದರೆ ಅವರಿದ್ದ ಮನೆ ತೀರಾ ಚಿಕ್ಕದಾಗಿತ್ತು.
ನನ್ನಲ್ಲಿದ್ದ ಹಣದಲ್ಲಿ ಅರ್ಧದಷ್ಟನ್ನು ನಾನು ನನ್ನಮ್ಮನಿಗೆ ಕೊಟ್ಟೆ. ಮತ್ತು ಉಳಿದರ್ಧವನ್ನು ಇನ್ನೊಬ್ಬನಿಗೆ, ನನ್ನನ್ನು ಕದ್ದು ಲಿಬಿಯಾಕ್ಕೆ ಸಾಗಹಾಕುವ ಕೆಲಸಕ್ಕಾಗಿ ಕೊಟ್ಟುಬಿಟ್ಟೆ. ಅದು 2010ರಲ್ಲಿ.
ಹೀಗೆ ಕಸ ಗುಡಿಸುವುದು ಚೆನ್ನಾಗಿರುತ್ತದೆ ಎನಿಸಿತು ರಿಚರ್ಡ್‌ಗೆ. ಸದ್ದೇ ಇಲ್ಲದ ಕೆಲಸ. ಆಶ್ಚರ್ಯವಾಗುತ್ತದೆ ರಿಚರ್ಡ್‌ಗೆ. ಅಪರೂಪಕ್ಕೆ ಮನೆ ಚೊಕ್ಕ ಮಾಡಲು ಹೊರಟಾಗಲೆಲ್ಲ ರಿಚರ್ಡ್ ತಪ್ಪದೇ ವ್ಯಾಕ್ಯೂಂ ಕ್ಲೀನರ್ ಬಳಸುತ್ತಾನೆ. 
ನಾನು ಕೊಟ್ಟ ಹಣ ನೈಜರ್‌ನ ದಾಕೊರೊ ತನಕ ಹೋಗಲು ಮಾತ್ರವೇ ಸಾಕಾಗುವಷ್ಟಿಟ್ಟು. ಉಳಿದ ಹಣವನ್ನು ಆ ಕದ್ದು ಸಾಗಿಸುವ ವ್ಯಕ್ತಿಯೇ ನನಗೆ ಸಾಲ ರೂಪದಲ್ಲಿ ಒದಗಿಸಿದ. ಉಳಿದ ಕೆಲವರೊಂದಿಗೆ ನಾನೂ ಆ ಪಿಕಪ್ ಟ್ರಕ್ಕಿನ ಕೆಳಗೆ ಜೋಡಿಸಿದ ಕಳ್ಳ ಅಟ್ಟಣಿಕೆ ಸೇರಿಕೊಂಡು ಅಲ್ಲಾಡಲೂ ಸಾಧ್ಯವಿಲ್ಲದಂತೆ ಬಿಗಿಯಾಗಿ ಹಿಡಿದುಕೊಂಡೇ ಪ್ರಯಾಣಿಸಿದೆ. ಆ ಕದ್ದು ಸಾಗಿಸುವ ವ್ಯಕ್ತಿ ಆಗೊಮ್ಮೆ ಈಗೊಮ್ಮೆ ಕೆಳಕ್ಕೆ ಆ ಕಳ್ಳಜಾಗಕ್ಕೆ ತಳ್ಳಿಬಿಡುತ್ತಿದ್ದ ಕಲ್ಲಂಗಡಿ ಹಣ್ಣಿನ ಚೂರುಗಳನ್ನೇ ತಿಂದುಕೊಂಡು ಜೀವ ಸಹಿತ ತಲುಪಿದೆವೆನ್ನಬೇಕು. 
ಟ್ರಿಪೋಲಿಯಲ್ಲಿ ಮೊದಲ ಎಂಟು ತಿಂಗಳ ಕಾಲ ಆ ಮನುಷ್ಯನ ಸಾಲ ತೀರಿಸುವುದಕ್ಕಾಗಿಯೇ ಒಂದು ಕಟ್ಟಡ ನಿರ್ಮಾಣದ ಸೈಟಿನಲ್ಲಿ ದುಡಿಯಬೇಕಾಯಿತು. ನನ್ನ ಸಾಲ ಪೂರ್ತಿಯಾಗಿ ತೀರಿತು ಎನ್ನುವಷ್ಟರಲ್ಲಿ ಯುದ್ಧ ತೊಡಗಿತು. ಕಟ್ಟಡ ನಿರ್ಮಾಣದ ಸೈಟಿನಿಂದ ಹೊರಗೆ ತಲೆ ಹಾಕುವಂತೆಯೇ ಇರಲಿಲ್ಲ. ನಮ್ಮ ಸುತ್ತಮುತ್ತಲೆಲ್ಲ ಗುಂಡು ಹಾರಿಸುವ ಸದ್ದೇ ತುಂಬಿತ್ತು. ಕೆಲವೇ ದಿನಗಳಲ್ಲಿ ನಮಗೆ ತಿನ್ನುವುದಕ್ಕೂ ಕುಡಿಯುವುದಕ್ಕೂ ತರುತ್ತಿದ್ದ ವ್ಯಕ್ತಿ ಬರುವುದು ನಿಂತೇ ಹೋಯಿತು. ಮೂರು ದಿನಗಳ ಕಾಲ ಹೇಗೋ ತಡೆದುಕೊಂಡು ಒಳಗೇ ಉಳಿದೆವು. ಆದರೆ ನಾಲ್ಕನೆಯ ದಿನ ಹೊರಗೆ ಬರಲೇ ಬೇಕಾಯಿತು. ಹಾದಿ ಬೀದಿಗಳೆಲ್ಲ ಪೂರ್ತಿ ಎಂದರೆ ಪೂರ್ತಿಯಾಗಿ ನಿರ್ಜನವಾಗಿದ್ದವು. ವಿದೇಶಿಗರು ಬಿಡಿ ಲಿಬಿಯನ್ನರು ಕೂಡಾ ಕಣ್ಣಿಗೆ ಬೀಳುತ್ತಿರಲಿಲ್ಲ. ಜನರೇ ಇಲ್ಲ ಎಲ್ಲಿಯೂ. ಕೊನೆಗೆ ಅಂತೂ ಇಂತೂ ನಾವೆಲ್ಲ ರಾತ್ರಿ ಹೊತ್ತು ಯಾವುದೋ ಒಂದು ದೋಣಿಯನ್ನು ಹತ್ತಿದೆವು. ಸ್ನೇಹಿತನೊಬ್ಬ ನನಗೆ ಇನ್ನೂರು ಯೂರೋಸ್ ಸಾಲವಾಗಿ ನೀಡಿದ. ಯುರೋಪ್ ಪಾರು ಮಾಡಲು ಅದು ಅನಿವಾರ್ಯವಾಗಿತ್ತು.
ಸಿಸಿಲಿಯ ಕ್ಯಾಂಪಿನಿಂದ ಅಕ್ರಾಗೆ ಕಾಲ್ ಮಾಡಿ ವಿಚಾರಿಸಿದಾಗ, ನಾನು ಎರಡು ಚೀಲ ಹುಡಿ ಒಪ್ಪಿಸಿದ್ದ ವ್ಯಕ್ತಿ ಅದೆಲ್ಲವೂ ಹಳೆಯದಾಗಿ ಬಿಟ್ಟಿದೆ ಎಂದ. 
ಹೌದು, ಅದನ್ನೆಲ್ಲ ಎಸೆದು ಬಿಡು ಎಂದುಬಿಟ್ಟೆ.
ಈಗ ಆ ತೆಳ್ಳನೆಯ ಮನುಷ್ಯ ಕೆಳಗಡೆಯಿಂದ ಮೇಲ್ಗಡೆಗೆ ಸಾಗುತ್ತ ಗುಡಿಸಲು ಸುರುಮಾಡುತ್ತಾನೆ. ರಿಚರ್ಡ್‌ಗೆ ಇದು ತನ್ನ ತಾಯಿ ಗುಡಿಸುತ್ತಿದ್ದ ಕ್ರಮದ ಸಂಪೂರ್ಣ ತದ್ವಿರುದ್ಧ ಬಗೆಯೆಂಬುದು ಗೊತ್ತಾಗುತ್ತದೆ. ಕೆಳಗಿನ ಮೆಟ್ಟಿಲನ್ನು ಗುಡಿಸಿ ಚೊಕ್ಕಗೊಳಿಸಿದ ಮೇಲೆ ಅದಕ್ಕೂ ಮೇಲಿನ ಮೆಟ್ಟಿಲನ್ನು ಗುಡಿಸಿ ಅದರ ಕಸವನ್ನೆಲ್ಲ ಆಗಷ್ಟೇ ಚೊಕ್ಕಗೊಳಿಸಿದ ಕೆಳಗಿನ ಮೆಟ್ಟಿಲ ಮೇಲೆ ಹಾಕುವುದು. 
ಇಟೆಲಿಯ ಕ್ಯಾಂಪಿನಲ್ಲಿದ್ದಷ್ಟೂ ಕಾಲ ನನಗೆ ತಿಂಗಳಿಗೆ ಎಪ್ಪತ್ತೈದು ಯೂರೋ ಕೊಡುತ್ತಿದ್ದರು. ನಾನು ಅದರಲ್ಲಿ ಇಪ್ಪತ್ತು ಅಥವಾ ಮುವ್ವತ್ತು ನನ್ನಮ್ಮನಿಗೆ ಕಳಿಸುತ್ತಾ ಇದ್ದೆ.
ಆದರೆ ಒಂದು ವರ್ಷದ ಬಳಿಕ ಕ್ಯಾಂಪನ್ನು ಮುಚ್ಚಲಾಯಿತು. ನಮಗಾಗ ಐನೂರು ಯೂರೋ ಕೊಟ್ಟರು. ಅದನ್ನು ಹಿಡಿದುಕೊಂಡು ನಾನು ಬೀದಿಯಲ್ಲಿ ನಿಂತಿದ್ದೆ. ನಾನು ಮಲಗುವುದಕ್ಕೆ ರೈಲ್ವೇ ಸ್ಟೇಶನ್ನಿಗೆ ಹೋಗುತ್ತಿದ್ದೆ. ಆದರೆ ಅಲ್ಲಿ ಕೊನೆಗೂ ಪೋಲೀಸಿನವ ಬಂದು ನನ್ನ ಬಳಿ ರೈಲಿನ ಟಿಕೆಟ್ ಇಲ್ಲದಿರುವುದನ್ನು ಕಂಡು ನನ್ನನ್ನು ಓಡಿಸಿದ.
ಹೊರಗೆ ಕ್ಯಾಮರೂನಿನ ಒಬ್ಬ ಮನುಷ್ಯ ಇದ್ದ. ಅವನು ನನಗೆ ತನ್ನ ಸಹೋದರನೊಬ್ಬ ಫಿನ್‌ಲ್ಯಾಂಡಿನಲ್ಲಿರುವುದಾಗಿ ಹೇಳಿದ. ನಾವು ಅವನಿಗೆ ಕಾಲ್ ಮಾಡಿದೆವು. ಸರಿ, ನಾನು ಫಿನ್‌ಲ್ಯಾಂಡಿಗೆ ಹೋಗಿ ಅವನ ಜೊತೆ ಉಳಿದುಕೊಳ್ಳುವುದು ಎಂದಾಯಿತು. ಆ ಪ್ರಕಾರ ನಾನು ಫಿನ್‌ಲ್ಯಾಂಡಿಗೆ ಹೋದೆ. ಆದರೆ ಅಲ್ಲಿಗೆ ಹೋದ ಮೇಲೆ ಕ್ಯಾಮರೂನಿನ ಆ ಮನುಷ್ಯನ ಸಹೋದರ ನನ್ನ ಫೋನ್ ತೆಗೆಯಲೇ ಇಲ್ಲ.
ಎರಡು ವಾರ ನಾನು ಫಿನ್‌ಲ್ಯಾಂಡಿನ ಬೀದಿ ಬದಿ ಮಲಗಿದೆ. ಭಯಂಕರ ಎಂದರೆ ಭಯಂಕರವಾದ ಚಳಿ ಅಲ್ಲಿ. ಆಮೇಲೆ ನಾನು ಮತ್ತೆ ಇಟೆಲಿಗೇ ವಾಪಾಸ್ಸಾದೆ. ನಾನು ನನ್ನ ಬೆನ್ನಿನ ಮೇಲೊಂದು ಚೀಲ ಹಾಕಿಕೊಂಡು ಸುತ್ತುತ್ತಿದ್ದೆ. ಒಂದು ದಿನ ನಾನು ಒಂದು ಜೊತೆ ಶೂಸ್ ಮತ್ತು ಕೆಲವು ಪ್ಯಾಂಟುಗಳನ್ನು ಭಾರ ಹೊರಲಾರದ ಕಾರಣಕ್ಕೆ ಎಸೆದು ಬಿಡಬೇಕಾಯಿತು. 
ಒಟ್ಟು ನಾನು ಒಂದು ವರ್ಷ ಎಂಟು ತಿಂಗಳು ಹೀಗೆ ಇಟೆಲಿಯಲ್ಲಿದ್ದೆ.
ಆಮೇಲೆ ನಾನು ಜರ್ಮನಿಗೆ ಹೋದೆ.
ನನ್ನ ಬಳಿ ಇದ್ದ ಎಲ್ಲಾ ಹಣ, ಐನೂರು ಯೂರೋ, ಹೋಯ್ತು.
ನಾನು ನನ್ನೆದುರಿನ ಹಾದಿಯನ್ನು ಅಷ್ಟೂ ದೂರ ದೃಷ್ಟಿ ಹಾಯಿಸಿ ನೋಡಿದೆ. ಅದೇ ರೀತಿ ನಾನು ಹಾದು ಬಂದ ಹಾದಿಯುದ್ದಕ್ಕೂ ಹಿಂದಿರುಗಿ ದಿಟ್ಟಿಸಿದೆ. ಏನೂ ಕಾಣಿಸಲಿಲ್ಲ ನನಗೆ.
ಈಗ ಆ ತೆಳ್ಳನೆಯ ಮನುಷ್ಯ ಎಲ್ಲಾ ಮೆಟ್ಟಿಲು ಮುಗಿಸಿ ತುತ್ತ ತುದಿ ತಲುಪಿದ್ದ. ಇನ್ನೀಗ ಅವನು ಅತಿಥಿಗಳ ಮಲಗುವ ಕೋಣೆಗಳತ್ತ ಹೆಜ್ಜೆ ಹಾಕಬಹುದು ಅಂದುಕೊಳ್ಳುತ್ತಾನೆ ರಿಚರ್ಡ್. ಆದರೆ ರಿಚರ್ಡ್ ತನ್ನ ಕೈಯಲ್ಲಿ ಎಡ್ಗರ್ ಲೀ ಮಾಸ್ಟರ್ಸ್‌ನ ಸಂಪುಟವನ್ನು ಹಿಡಿದುಕೊಂಡು ಹಿಂಬಾಲಿಸಿ ಹೋಗಿ ನೋಡಿದರೆ ಮೇಲ್ಗಡೆ ಅಂತಸ್ತಿನಲ್ಲಿ ಯಾರೆಂದರೆ ಯಾರೂ ಇರಲಿಲ್ಲ.
(Jenny Erpenbeck ಅವರ ಕಾದಂಬರಿ "Go, Went, Gone" ಕಾದಂಬರಿಯ 23ನೆಯ ಅಧ್ಯಾಯ. ಇದು Granta Publications ಕೃತಿ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, September 13, 2018

ಎಲ್ಲಿಂದಲೋ ಬಂದವರು

ನಿರಾಶ್ರಿತರ ಸಮಸ್ಯೆ ಎಂಬ ಕೇಂದ್ರವನ್ನು ಬೇಕಾಗಿಯೊ ಬೇಡವಾಗಿಯೊ ಒಂದು ಲೇಬಲ್ಲಿನಂತೆ ಪಡೆದುಕೊಂಡೇ ಬಂದಿರುವ ಕಾದಂಬರಿಯಿದು, ಜರ್ಮನ್ ಕಾದಂಬರಿಕಾರ್ತಿ Jenny Erpenbeck ಅವರ Go Went Gone. ಸ್ವಲ್ಪ ಹದ ತಪ್ಪಿದರೆ ಡಾಕ್ಯುಮೆಂಟರಿಯಾಗಿ ಬಿಡಬಹುದಾಗಿದ್ದ ಕಾದಂಬರಿಯನ್ನು ಹಾಗಾಗದಂತೆ ಪೊರೆದು ನಿಲ್ಲಿಸಿರುವ ನಿರೂಪಣೆ, ಕಥಾನಕ, ಅದರ ವಿಭಿನ್ನ ಮಜಲುಗಳ ಪೋಷಣೆ ಹಾಗೂ ವಿವರಗಳನ್ನು ನೇಯುವಾಗ ಸಂತುಲಿತವಾಗಿ ಸೇರಿಸಿಕೊಡುವ ಪರ್ಯಾಯ ಜಗತ್ತಿನ ವಿದ್ಯಮಾನಗಳು ಇಲ್ಲಿ ಗಮನ ಸೆಳೆಯುತ್ತವೆ. ಹಾಗಾಗಿ ಇದು ನಿರಾಶ್ರಿತ ಸಮಸ್ಯೆಯೇ ಅಥವಾ ಪ್ರತಿಯೊಬ್ಬ ವ್ಯಕ್ತಿಯೊಳಗೂ ಇದ್ದು ಕಾಡುವ ಬೇರೆಯೇ ಒಂದು ಅಳಲಿನ ಒಂದಾನೊಂದು ಮುಖ ಈ ಸಮಸ್ಯೆಯಲ್ಲಿ ಕಾಣುತ್ತಿದ್ದೇವೆಯೆ ಎನ್ನುವ ಕೊಂಚ ಆಳವಾದ ಪ್ರಶ್ನೆಯನ್ನು ಈ ಕಾದಂಬರಿ ಉದ್ದೀಪಿಸುವುದು ಸಾಧ್ಯವಾಗಿರುವುದು.

ಈಗಷ್ಟೇ ನಿವೃತ್ತನಾಗಿರುವ ಪ್ರೊಫೆಸರ್ ಇನ್ನೂ ಕೆಲಕಾಲ ನಿವೃತ್ತಿ ನಂತರದ ಸೇವೆಯಡಿ ಅದೇ ಯೂನಿವರ್ಸಿಟಿಯಲ್ಲಿ ಮುಂದುವರಿಯುವುದು ಸಾಧ್ಯವಿತ್ತು, ಕೆಲವರ ರಾಜಕೀಯ ಇಲ್ಲದೇ ಇರುತ್ತಿದ್ದರೆ. ನಿವೃತ್ತ ಪ್ರೊಫೆಸರ್ ಕುಳಿತಲ್ಲಿಂದ ನೇರವಾಗಿ ಕಾಣುವ ವಿಶಾಲ ಕೊಳದಲ್ಲಿ ಇತ್ತೀಚೆಗಷ್ಟೇ ಮುಳುಗಿದ ಯುವಕನೊಬ್ಬನ ಶವವನ್ನು ಬೇರೆ ಬೇರೆ ಕಾರಣಗಳಿಂದಾಗಿ ಮೇಲೆತ್ತುವುದಕ್ಕೆ ಸಾಧ್ಯವೇ ಆಗಲಿಲ್ಲ. ಮೇಲ್ಪದರದಲ್ಲಿ ಮಡುಗಟ್ಟಿದ ಮಂಜುಗಡ್ಡೆಯ ಆಳದ ನೀರಿನಲ್ಲಿ ಅವನು ಇದ್ದಾನೆ ಎನ್ನುವ ಒಂದು ಪ್ರಜ್ಞೆ, ಅಸ್ತಿತ್ವದ ಪ್ರಜ್ಞೆ ಇಡೀ ಕಾದಂಬರಿಯಲ್ಲಿ ಆಗಾಗ, ತಪ್ಪದೇ ಬರುವ ಸ್ಥಾಯೀ ಪ್ರತಿಮೆಯಾಗಿದೆ.

ಪ್ರೊಫೆಸರ್ ವಿಧುರ. ಪತ್ನಿ Christel ಅವನ ನೆನಪುಗಳಲ್ಲಿ ಜೀವಂತ. ಹಾಗಾಗಿ, ಒಂದರ್ಥದಲ್ಲಿ ಆಕೆ ಸತ್ತೇ ಇಲ್ಲ. ಅಥವಾ, ಸಾವು ಎನ್ನುವ ಒಂದು ಗಡಿರೇಖೆಯಾಚೆ ಸರಿದು ಹೋದ ವ್ಯಕ್ತಿಗಳೂ ಕೂಡ ನೆನಪುಗಳಲ್ಲಿ ಜೀವಂತವಾಗಿಯೇ ಇರುತ್ತಾರೆ ಎನ್ನುವುದು ನಿಜ. ಇವತ್ತಿಗೂ ಒಬ್ಬ ನಟನ ಸಿನಿಮಾ ನೋಡುತ್ತಿರುವಾಗ, ಒಬ್ಬ ಸಾಹಿತಿಯ ಕೃತಿಯನ್ನು ಓದುತ್ತಿರುವಾಗ, ಒಬ್ಬ ಸಂಗೀತಗಾರನ ಹಾಡನ್ನು ಕೇಳುತ್ತಿರುವಾಗ ಆತನ ದೈಹಿಕ ಅಸ್ತಿತ್ವ ಅಥವಾ ಸಾವು ಒಂದು ಪ್ರಶ್ನೆಯೇ ಆಗುವುದಿಲ್ಲ ಅಲ್ಲವೆ? ಈ ಅರ್ಥದಲ್ಲಿ, ಡಾ||ರಾಜ್‌ಕುಮಾರ್, ಶಿವರಾಮ ಕಾರಂತ ಅಥವಾ ಭೀಮಸೇನ ಜೋಶಿಯವರ ಸಾವು ನಿಜವೆ ಅಥವಾ ಅಸ್ತಿತ್ವ ನಿಜವೆ? ಒಬ್ಬ ಸಾಮಾನ್ಯ ಸಿನಿಮಾ ನೋಡುಗನಿಗೆ ನಟ ಎಂದರೆ ತೆರೆಯ ಮೇಲಿನ ನಟ. ಸಾಹಿತಿ ಎಂದರೆ ಕೃತಿಯ ಕರ್ತೃ, ಹಾಡುಗಾರ ಎಂದರೆ ಸುಶ್ರಾವ್ಯವಾದ ಕಂಠ. ಅದರಾಚೆಯ ಭೇಟಿ, ಮಾತುಕತೆ, ಸಂಬಂಧ ಎಲ್ಲ ಇದ್ದರೆ ಅದು ಬೇರೆಯೇ ಪ್ರಶ್ನೆ. ಹಾಗೆಯೇ, ಉದ್ಯೋಗ, ಶಿಕ್ಷಣ ಅಥವಾ ಇನ್ಯಾವುದೋ ಕಾರಣಕ್ಕೆ ದೂರದಲ್ಲೆಲ್ಲೊ ಇರುವ ನಮ್ಮ ಸ್ನೇಹಿತ, ಸಂಬಂಧಿ - ಈ ಕ್ಷಣ ಇದ್ದಾರೆ ಎನ್ನುವುದಕ್ಕೆ ನಮ್ಮ ಬಳಿ ಪುರಾವೆಯೇನೂ ಇರುವುದಿಲ್ಲ. ಹಿಂದೆಲ್ಲ ಆಗಾಗ ಬರುತ್ತಿದ್ದ ಪತ್ರ, ಈಗ ಡಿಜಿಟಲ್ ಸಂದೇಶಗಳು, ಫೋನ್ ಕರೆ ಇತ್ಯಾದಿ ಅಂಥ ಅಸ್ತಿತ್ವದ ಪುರಾವೆ. ಅದನ್ನು ನಂಬಿ ಅವರೆಲ್ಲ ಇದ್ದಾರೆ ಎನ್ನುವ ಭರವಸೆಯನ್ನು ನಾವು ತಳೆಯುತ್ತೇವೆ. ಕಚೇರಿಯಲ್ಲಿರುವಷ್ಟು ಹೊತ್ತು ನಾವು ಮನೆಯಲ್ಲಿ ಬಿಟ್ಟು ಬಂದಿರುವ ನಮ್ಮ ಸಂಗಾತಿ, ಮಕ್ಕಳು ಸೇಫ್ ಮತ್ತು ಜೀವಂತ ಎನ್ನುವುದು ಕೂಡ ನಮ್ಮದೊಂದು ಭರವಸೆ. ಹಾಗೆಯೇ ಅವರ ಮಟ್ಟಿಗೆ ಕಚೇರಿಗೆ ಎಂದು ತೆರಳಿದ ನಾವೂ. ಎಲ್ಲವೂ ವರ್ಚ್ಯುಯಲ್ ಟ್ರುಥ್ ಅಷ್ಟೇ. ಉಲ್ಟಾ ಹೊಡೆಯಬಹುದಾದ ಸಾಧ್ಯತೆಯೊಂದು ತೆರೆದೇ ಇರುತ್ತದೆ. ಇದೇ ಅರ್ಥದಲ್ಲಿ ಸಾವು ಎನ್ನುವ ಗಡಿಯನ್ನು ದಾಟಿ ಕಣ್ಮರೆಯಾದವರನ್ನೂ ನೆನಪುಗಳಲ್ಲಿ ಸದಾ ಜೀವಂತವಾಗಿಟ್ಟುಕೊಳ್ಳಲು ಒಂದು ಸೀಮಿತ ನೆಲೆಯಲ್ಲಿ ಸಾಧ್ಯವಿದೆ.

ಇಂಥ ಒಂದು ವಿಶಾಲ ನೆಲೆಯಲ್ಲಿ ಒಂದು ಸಂಸ್ಥೆಯ ಒಳಗೆ ಅಥವಾ ಹೊರಗೆ, ಕೊಳದ ತಳದಲ್ಲಿ ಅಥವಾ ಹೊರಗೆ, ಸಾವಿನಾಚೆ ಅಥವಾ ಈಚೆ, ದೇಹದ ಒಳಗೆ ಅಥವಾ ಹೊರಗೆ, ಮನಸ್ಸಿನ ಒಳಗೆ ಅಥವಾ ಹೊರಗೆ, ಆ ದೇಶದ ಗಡಿಯೊಳಗೆ ಅಥವಾ ಹೊರಗೆ, ಈ ದೇಶದ ಆ ಭಾಗದಲ್ಲಿ ಅಥವಾ ಈ ಭಾಗದಲ್ಲಿ....... ಎಂದೆಲ್ಲ ಗಡಿಗಳನ್ನು, ಗೋಡೆಗಳನ್ನು ಕಾಣುತ್ತಲೊ, ಕಾಣದಂತಿರಲು ಕಲಿಯುತ್ತಲೊ ಇರುವುದು ಸಾಧ್ಯವೇ ಇದೆ. ಅದು ಅಸಾಧ್ಯವೇನೂ ಅಲ್ಲ. ಆದರೆ ಕಷ್ಟ. ತುಂಬ ಕಷ್ಟ. ಹೀಗೆ ಕಷ್ಟವಾಗಿರುವುದು ಮನುಷ್ಯನಿಂದ, ಅವನ ಕಾನೂನು, ನೀತಿ, ನಿಯಮ ಮುಂತಾದ ಹೆಸರುಗಳಲ್ಲಿ ಅವನ ಮೇಲೆ ಅವನೇ ಹೇರಿಕೊಂಡಿರುವ ಗಡಿ/ಗೋಡೆಗಳಿಂದ. ಇವುಗಳನ್ನೆಲ್ಲ ಕುಟ್ಟಿ ಕೆಡವಿ ಬತ್ತಲು ನಿಂತರೆ ಅವನು ಮತ್ತೆ ಮನುಷ್ಯನಾಗಲು ಸಾಧ್ಯವಿದೆಯೇನೋ ಎನಿಸಿದರೂ ಅದು ಪೂರ್ತಿ ನಿಜವೇನಲ್ಲ. ಬರ್ಲಿನ್ನಿನ ಗೋಡೆ ಕೆಡವಿದರೂ ಅದರಿಂದ ಅಂಥ ಪವಾಡವೇನೂ ಆಗಲಿಲ್ಲ ಎನ್ನುವುದನ್ನು ಪ್ರೊಫೆಸರ್ ಗಮನಿಸಿದ್ದಾನೆ.

ಒಮ್ಮೆ ನಡುರಾತ್ರಿ ಎಚ್ಚರಗೊಂಡ ಪ್ರೊಫೆಸರ್, ಉಚ್ಚೆಹೊಯ್ಯುವುದಕ್ಕೂ ಹೋಗದೆ, ಕತ್ತಲಲ್ಲಿ ಅದ್ದಿದಂತಿದ್ದ ತನ್ನದೇ ವಿಶಾಲವಾದ, ಜನವಾಸ್ತವ್ಯವಿಲ್ಲದೆ ಬಣಬಣಗುಡುವ ಖಾಲಿ ಮನೆಯ ತುಂಬ ಒಬ್ಬನೇ ಸುತ್ತುತ್ತಾನೆ. ಕೋಣೆಯಿಂದ ಕೋಣೆಗೆ ಹೋದಂತೆಲ್ಲ ಅವನಿಗೆ ‘ಇಲ್ಲದವರ’ ನೆನಪುಗಳು ಕಾಡತೊಡಗುತ್ತವೆ. ಅಂದರೆ, ಆ ಇಲ್ಲದವರೆಲ್ಲ ಅವನ ಬದುಕಿನಲ್ಲಿ, ಮನಸ್ಸಿನಲ್ಲಿ, ನೆನಪುಗಳಲ್ಲಿ ಅಸ್ತಿತ್ವ ಪಡೆದುಕೊಳ್ಳುತ್ತಾರೆ. ಭಾವುಕ ಹಂಬಲವಾಗಿ ಇದು ತೀವ್ರವಾದ ಸಂವೇದನೆಗಳಿಗೆ ಕಾರಣವಾಗಬಹುದಾದ, ಕಾಡಬಹುದಾದ, ಬದುಕಿನ ನಿರರ್ಥಕತೆ, ಅರ್ಥಹೀನ, ಉದ್ದೇಶ ಹೀನ ನಡೆಯ ಬಗ್ಗೆ ಕಂಗಾಲಾಗಿಸಬಹುದಾದ ಒಂದು ಅನುಭವವೇ. ಬಾಳ ಸಂಗಾತಿಯೊಂದಿಗೆ, ಮಕ್ಕಳು ಮರಿಗಳೊಂದಿಗೆ ಬಾಳಿ ಬದುಕಿದ ಮನೆಯಲ್ಲಿ ರಾತ್ರಿ ಹೊತ್ತಿನ ನೀರವದಲ್ಲಿ, ಕಗ್ಗತ್ತಲಲ್ಲಿ ಒಂಟಿಯಾಗಿ ಎದ್ದು ಕೂತು ಹಂಬಲಿಸಿದ ಅನುಭವ ನಿಮಗಿದ್ದರೆ, ಅದು ಸ್ಮಶಾನದಲ್ಲಿ ಒಂಟಿಯಾಗಿ ಕೂತಂತಿರುತ್ತದೆ ಎಂದು ಬಲ್ಲಿರಿ. ಇದು ಈ ಕಾದಂಬರಿಯ ಅತ್ಯಂತ ಪ್ರಮುಖ ಮತ್ತು ಕೇಂದ್ರ ಪ್ರತಿಮೆ ಎಂದು ನನಗನಿಸಿದೆ.

Last night—he now remembers—he woke up and instead of going to pee, he walked through every room in the house for no particular reason, not looking for anything. He walked through his house in the dark for no reason at all, as if strolling through a museum, as if he himself no longer belonged to it. As he passed among these pieces of furniture, some of which he’s known since childhood, his own life, room after room, suddenly appeared to him utterly foreign, utterly unknown, as if from a far-off galaxy. His tour ended in the kitchen. Ashamed, he remembers how he sat down on a kitchen chair and, without knowing why, began sobbing like a man condemned to exile. (ಪುಟ 91)

ತನ್ನವರನ್ನೆಲ್ಲಾ ಕಳೆದುಕೊಂಡು, ಅಥವಾ ಅವರಿಗೆ ಏನಾಯಿತು ಎನ್ನುವುದೇ ಗೊತ್ತಿಲ್ಲದ, ಗೊತ್ತು ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲದ ಒಂದು ಕಂಗಾಲಿನ ಸ್ಥಿತಿಯಲ್ಲಿ ಉಟ್ಟಬಟ್ಟೆಯಲ್ಲೇ ಓಡಿಬಂದಂತೆ ಗಡಿಯೊಳಗೆ ತೂರಿಕೊಂಡ ಈ ವಿದೇಶಿಗಳು ನಿರಾಶ್ರಿತರು. ಇವರಲ್ಲಿ ಕೆಲವರ ಹೆತ್ತವರನ್ನು ಕಣ್ಣೆದುರೇ ಕಡಿದು ಕೊಲ್ಲಲಾಗಿದೆ. ಕೆಲವರ ಪತ್ನಿಯಂದಿರು ಇನ್ನೆಲ್ಲೊ ಸಿಕ್ಕಿ ಕೊಂಡಿರುವುದು ಗೊತ್ತು, ಅಲ್ಲಿಂದ ಏನಾದರೂ ಗೊತ್ತಿಲ್ಲ. ಕೆಲವರು ತಮ್ಮ ಹಸುಗೂಸುಗಳು ಕಾಲ್ತುಳಿತಕ್ಕೆ ಸಿಲುಕಿಯೊ, ಮುಳುಗುವ ಹಡಗಿನಿಂದ ಬಚಾವಾಗಲಾರದೆಯೊ ಕಣ್ಣೆದುರೇ ಸತ್ತಿದ್ದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಇನ್ನು ಕೆಲವರಿಗೆ ಎಲ್ಲೆಲ್ಲೊ ಇದ್ದ ತಮ್ಮ ಹೆತ್ತವರೊ, ಸಂಗಾತಿಗಳೊ ಈಗ ಏನಾಗಿದ್ದಾರೆಂಬುದು ಗೊತ್ತೇ ಇಲ್ಲ. ಇಲ್ಲಿ ಈ ದೇಶದಲ್ಲಿ ರೆಕ್ಕೆ ಕಡಿದ ಹಕ್ಕಿಗಳಂತೆ ತುಪತುಪನೆ ಉದುರಿ ಬಿದ್ದಿದ್ದಾರೆ. ಈಗ ಈ ದೇಶದ ರಾಜಸತ್ತೆ, ಆಡಳಿತ, ಅಧಿಕಾರ, ಪೋಲೀಸು, ಸೇನೆ ಎಲ್ಲವೂ ಇವರಿಗೆ ಅನ್ನ ಕೊಡಬೇಕೆ, ಇರಗೊಡಬೇಕೆ, ಕೊಲ್ಲಬೇಕೆ, ಅಂಥ ಸಭ್ಯ ಮಾರ್ಗ ಯಾವುದಾದರೂ ಇದೆಯೆ, ಅನಾಗರಿಕ ಮಾರ್ಗವೇ ಗತಿಯಾದಲ್ಲಿ ಅದಕ್ಕೆ ತಕ್ಕ ಸಮರ್ಥನೆ ಒದಗಿಸಿಕೊಳ್ಳುವುದು ಹೇಗೆ, ದೇಶದಿಂದ ಆಚೆ ದಬ್ಬುವುದು ಹೇಗೆ ಎಂದೆಲ್ಲ ಮಂತ್ರಾಲೋಚನೆಯಲ್ಲಿ ತೊಡಗಿದೆ. ಇವರೆಲ್ಲ ತಮ್ಮಂತೆಯೇ ಇರುವುದನ್ನು ಕಂಡು, ಇವರೂ ಮನುಷ್ಯರೇ ಎನ್ನುವುದನ್ನು ಕಂಡು ಆಶ್ಚರ್ಯಚಕಿತರಾಗಿರುವ ಸಾಮಾನ್ಯ ಮಂದಿ ಇವರನ್ನು ನಿರಾಕರಿಸಲಾರದೆ, ಸ್ವೀಕರಿಸುವ ಧೈರ್ಯ, ಔದಾರ್ಯ, ಮಾನವೀಯತೆ ಎಲ್ಲಿ ದೇಶದ್ರೋಹಿ, ದೇಶ ವಿರೋಧಿ ಎಂದು ಪರಿಗಣಿಸಲ್ಪಡುವುದೋ ಎಂಬ ಭಯದಲ್ಲಿ ಸ್ವೀಕರಿಸಲಾರದೆ ಒದ್ದಾಡುತ್ತಿರುವಂತಿದೆ.

ಇವತ್ತಿನ ಮನುಷ್ಯ ನಿಜಕ್ಕೂ ಸ್ಮಶಾನದಲ್ಲಿ ಕುಳಿತು ತನ್ನಾಳದಲ್ಲಿ ಯಾವುದೋ ಒಂದು ಅಂತ್ಯವಿಲ್ಲದ ಅಳಲು, ತಳಮಳ ಹೊಯ್ದಾಡುತ್ತಿರುವುದನ್ನು ಕಂಡು ವಿಹ್ವಲಗೊಂಡಂತಿರುವುದು ಈ ಕಾರಣಕ್ಕೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಪ್ರತಿಯೊಂದಕ್ಕೂ ನಾವು ಕೂಡ ಜವಾಬ್ದಾರಿ. ಈ ಜಗತ್ತಿನ ಯಾವುದೋ ಒಂದು ಮೂಲೆಯಲ್ಲೆಲ್ಲೊ ಈ ಕ್ಷಣ ನಡೆಯುತ್ತಿರುವ ಯಾವುದೋ ಒಂದು ಪುಟ್ಟ ಸಂಗತಿಗೆ ಕೂಡ ಇಲ್ಲಿ ಕುಳಿತ ನನ್ನ ಅಸ್ತಿತ್ವದ ಋಣವಿದೆ. ಮತ್ತು ಈ ಅಸ್ತಿತ್ವ ಎನ್ನುವುದರ ಬಗ್ಗೆ ಹೇಳಿಯಾಗಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ