Sunday, December 30, 2018

ಮುತ್ತಿನಂಥ ಕತೆಗಾರ ಮುತ್ತುಸ್ವಾಮಿ

ಎನ್ ಮುತ್ತುಸ್ವಾಮಿಯವರ ಕತೆಗಳನ್ನು ಓದಬೇಕೆಂದರೆ ಲಭ್ಯವಿರುವುದು "ಕಥಾ" ಹೊರತಂದ "ವಾಟರ್‌ನೆಸ್" (ನೀರ್ಮಯಿ) ಮತ್ತು ಅವರು ತೀರಿಕೊಳ್ಳುವ ಕೆಲವೇ ಕಾಲದ ಮೊದಲು ವೆಸ್ಟ್‌ಲ್ಯಾಂಡ್ ಬುಕ್ಸ್ ಹೊರತಂದ "ಬುಲ್ಲಕ್ಸ್ ಫ್ರಮ್‌ ದ ವೆಸ್ಟ್" ಎಂಬ ಎರಡೇ ಎರಡು ಕಥಾಸಂಕಲನಗಳು ಮಾತ್ರ. ಇಷ್ಟೊಂದು ಚೆನ್ನಾದ ಕತೆಗಳನ್ನು ಬರೆಯುತ್ತಿದ್ದ ಕತೆಗಾರನನ್ನು ಕಾಲ ಹೇಗೆ ಮರೆತು ಬಿಟ್ಟಿತು ಎಂದು ಅಚ್ಚರಿ ಪಟ್ಟರೆ, ಅವರ ಸಂದರ್ಶನಕ್ಕೆಂದು ಹೋದ ಕಿರಣ್ ಕೇಶವಮೂರ್ತಿಯವರಿಗೇ ಅಚ್ಚರಿಯಾಗುವಂತೆ ತಮಗೆ ತಾವು ಬರೆದ ಕತೆಗಳ ನೆನಪೇ ಇಲ್ಲ, ಅವುಗಳನ್ನೆಲ್ಲ ತೀರ ಹಿಂದೆ ಬರೆದೆ, ಈಗ ಅವುಗಳ ನೆನಪು ಆಗುತ್ತಿಲ್ಲ ಎಂದು ಬಿಟ್ಟರಂತೆ ಸ್ವತಃ ಕತೆಗಾರ ಮುತ್ತುಸ್ವಾಮಿ! ಸಿನಿಮಾ, ರಂಗಭೂಮಿ ಎಂದೆಲ್ಲ ತಮ್ಮ ಕಾರ್ಯಕ್ಷೇತ್ರ ಬದಲಾದಂತೆ ಮುತ್ತುಸ್ವಾಮಿ ಕತೆಗಳನ್ನು ಬರೆಯುವುದನ್ನು ಬಿಟ್ಟು ಬಿಟ್ಟರು. ಆದರೆ ಮೊನ್ನೆ ಮೊನ್ನೆ ಅಕ್ಟೋಬರ್ 24, 2018ರಂದು ತಮ್ಮ 82ನೆಯ ವಯಸ್ಸಿನಲ್ಲಿ ಕಣ್ಮರೆಯಾದ ಎನ್ ಮುತ್ತುಸ್ವಾಮಿ ಒಬ್ಬ ಅದ್ಭುತ ಕತೆಗಾರ ಎನ್ನುವುದನ್ನು ತಿಳಿದೂ ಅವರ ಲಭ್ಯ ಕತೆಗಳನ್ನು ಗಮನಿಸದೇ ಹೋದರೆ ಅದು ನಮಗಾಗುವ ಅತಿದೊಡ್ಡ ನಷ್ಟ.

ಮುತ್ತುಸ್ವಾಮಿಯವರ ಕತೆಗಳಲ್ಲಿ ಥಟ್ಟನೇ ಗಮನ ಸೆಳೆವ ಆಕರ್ಷಕ ವಿಚಾರವೆಂದರೆ ಅವರು ಸಮೃದ್ಧವಾಗಿ ತರುವ, ತರುವಾಗ ಕುಸುರಿ ಕಲೆಯಷ್ಟೇ ಕೌಶಲ ಮತ್ತು ಸೂಕ್ಷ್ಮ ನಿರ್ವಹಿಸುವ ಹಳ್ಳಿ ಬದುಕಿನ ವಿವರಗಳು. ಈ ವಿಷಯದಲ್ಲಿ ಅವರ ನೆನಪಿನ ಶಕ್ತಿ ಮತ್ತು ಹಳ್ಳಿ ಬದುಕಿನ ಕುರಿತ ಪ್ರೀತಿ ಎರಡೂ ಅಚ್ಚರಿ ಹುಟ್ಟಿಸುತ್ತವೆ. ನಾವು ನೀವು ಸ್ವತಃ ಕಂಡಿರಬಹುದಾದ, ಬದುಕಿದ ಒಂದು ಬದುಕಿನದ್ದೇ ಅನಿಸುವ, ಓದುತ್ತ ಥಟ್ಟನೆ ನನ್ನ ಬಾಲ್ಯದಲ್ಲೂ ಇದನ್ನೆಲ್ಲ ಅನುಭವಿಸಿದ್ದೆನಲ್ಲಾ ಎಂಬ ಹಳಹಳಿಕೆ ಹುಟ್ಟುವಂಥ, ನಾವೆಂದೂ ಇಷ್ಟು ಸಮೃದ್ಧವಾಗಿ ನೆನಪಿಸಿಕೊಳ್ಳಲು ಸಾಧ್ಯವೆಂದೇ ನಂಬದಿದ್ದ ವಿವರಗಳು ಇನ್ನಷ್ಟು ಮತ್ತಷ್ಟು ಬರಲಿ ಅನಿಸುವಷ್ಟು ಈ ವಿವರಗಳು ಆಕರ್ಷಕ, ಜೀವಂತ ಮತ್ತು ಸೂಕ್ಷ್ಮ.

ಎರಡನೆಯದಾಗಿ ಮುತ್ತುಸ್ವಾಮಿಯವರು ಕಟ್ಟಿದ ಕತೆಗಳ ವೈವಿಧ್ಯತೆ. ಅದು ವಸ್ತು, ತಂತ್ರ ಮತ್ತು ಹೊಸತನ ಮೂರೂ ನೆಲೆಯಲ್ಲಿ ಸಲ್ಲುವ ಮಾತು. "ವಾಟರ್‌ನೆಸ್" ಸಂಕಲನದಲ್ಲಿ ಒಟ್ಟು ಹತ್ತು ಕತೆಗಳಿವೆ. "ಬುಲ್ಲಕ್ಸ್ ಫ್ರಮ್ ದ ವೆಸ್ಟ್" ಸಂಕಲನದಲ್ಲಿರುವುದು ಐದು ಕತೆಗಳು ಮತ್ತು ಒಂದು ನಾಟಕ. ಐದು ಕತೆಗಳಲ್ಲಿ ವಾಟರ್‌ನೆಸ್ ಕತೆ ಮರುಕಳಿಸಿದೆಯಾದರೂ ಎರಡೂ ಸಂಕಲನಗಳ ಅನುವಾದಕರು ಬೇರೆ ಬೇರೆಯವರಾದ್ದರಿಂದ ಮತ್ತೊಮ್ಮೆ ಓದಬಹುದು. ನಾನಿಲ್ಲಿ ಪ್ರಸ್ತಾಪಿಸುತ್ತಿರುವುದು "ಕಥಾ" ದವರು ಪ್ರಕಟಿಸಿದ ಸಂಕಲನದ ಕತೆಗಳ ಬಗ್ಗೆ ಮಾತ್ರ.

ಮುತ್ತುಸ್ವಾಮಿಯವರ ಕತೆಗಳನ್ನು ಕತೆಗಾಗಿ ಓದುವುದು ಸಾಧ್ಯವಿಲ್ಲ. ಅವರ ಹಲವಾರು ಕತೆಗಳಲ್ಲಿ ಏನೂ ನಡೆಯುವುದಿಲ್ಲ. ಉದಾಹರಣೆಗೆ "ಚೆಂಬನರ್ಕೋಲಿಗೆ ಹೋಗುವುದಾದರೂ ಹೇಗೆ?" ಎಂಬ ಕತೆಯಲ್ಲಿ ಬರೇ ಚೆಂಬನರ್ಕೋಲಿಗೆ ಹೊರಟ ಒಬ್ಬ ಎತ್ತಿನ ಗಾಡಿಗಾಗಿ ಪ್ರಯತ್ನಿಸುವುದರ ಚಡಪಡಿಕೆಯಷ್ಟೇ ಇದೆ. "ಯಾರಾದಾರು ನನ್ನ ಆಶ್ರಯದಾತರು", "ಜೇನುಗೂಡು ಮತ್ತು ಹಾವು" ಮುಂತಾದ ಕತೆಗಳೂ ಇದೇ ಸಾಲಿಗೆ ಸೇರುತ್ತವೆ. ಹಾಗಿದ್ದೂ ಈ ಕತೆಗಳ ರಂಜಕತೆ ಕಿಂಚಿತ್ತೂ ಕಡಿಮೆಯಿಲ್ಲ. ಅದಕ್ಕೆ ಇಲ್ಲಿನ ಸಮೃದ್ಧ ವಿವರಗಳು, ಹಳ್ಳಿ ಬದುಕಿನ ದೈನಂದಿನ, ಅಲ್ಲಿ ಸಮಯ ಸಾಗುವ ಒಂದು ನಿಧಾನಗತಿ, ಜನರ ಪರಸ್ಪರ ಅವಲಂಬನ-ಸಂಬಂಧ-ಪ್ರೀತಿ ಹೊರಹೊಮ್ಮುವ ಮಾತುಕತೆಗಳು ಎಲ್ಲ ನಮ್ಮನ್ನು ಸದಾ ಮುಗುಳ್ನಗುತ್ತಲೇ ಇವನ್ನೆಲ್ಲ ಓದುವಂತೆ ಮಾಡುತ್ತವೆ, ಓದು ಮುದ ನೀಡುತ್ತದೆ, ಮುಗಿಯುತ್ತಲೇ ‘ಅಯ್ಯೊ, ಮುಗಿದೇ ಹೋಯ್ತಲ್ಲ’ ಅನಿಸುವಂತೆ ಮಾಡುತ್ತದೆ.

ಹಾಗೆ ನೋಡಿದರೆ "ಪುಂಜಾಯಿಯಲ್ಲಿ ಸಮಯ ಕೊಲ್ಲುವುದು" ಎಂಬ ಹೆಸರಿನ ಕತೆಯಲ್ಲೇ ಗಟ್ಟಿಯಾದ ಕಥಾನಕ, ಇಡೀ ಕತೆಗೆ ರೂಪಕವಾಗಬಲ್ಲ ಪ್ರತಿಮೆಗಳ ಬಳಕೆ ಎಲ್ಲ ಇದೆ! ಅಲ್ಲದೆ ಬಾಲ್ಯಕಾಲದ ಸಖಿಯೊಬ್ಬಳಿಗಾಗಿ ಕಾಯುವ ಪ್ರಬುದ್ಧ ಗ್ರಹಸ್ಥನಿದ್ದಾನಿಲ್ಲಿ. ಅವಳಿಗೀಗ ಮದುವೆಯಾಗಿದೆ, ಮಗನಿದ್ದಾನೆ. ಸಂಸಾರದಲ್ಲಿ ಸಮಸ್ಯೆಯೂ ಇದೆ. ವಿಪರೀತವೆನಿಸುವ ಏನೂ ಇಲ್ಲದಿದ್ದರೂ ಇವನು ಊರಿಗೆ ಬಂದಾಗಲೇ ಅವಳೂ ಊರಲ್ಲಿರುತ್ತ ಅವಳು ಮನೆಗೆ ಬರುವುದನ್ನು ಕಾಯುತ್ತ ಇರುವಾಗಲೇ ನಡೆಯುವ ಹಳ್ಳಿ ಬದುಕಿನ ವಿದ್ಯಮಾನಗಳು ಕತೆಯ ಕಾಯುವಿಕೆಯನ್ನು ಜೀವಂತವಾಗಿಡುತ್ತದೆ ಮಾತ್ರವಲ್ಲ, ಗಂಡು ಹೆಣ್ಣು ಸಂಬಂಧಕ್ಕೆ ಪೂರಕವಾದ ಮತ್ತಷ್ಟು ವಿವರಗಳನ್ನು ಕಲೆಹಾಕುತ್ತ ಸಾಗುತ್ತದೆ. ಈ ಸಾವಿತ್ರಿ ಎಂಥ ಜೀವಂತಿಕೆಯ, ಚೈತನ್ಯದ ಬುಗ್ಗೆ ಎಂದರೆ ಕತೆ ಮುಗಿಯುವಾಗ ಅದು ಮುಗಿಯಬಾರದಿತ್ತು ಎಂದು ಅನಿಸಿಯೇ ಅನಿಸುತ್ತದೆ!

ಹಲವಾರು ಬಾರಿ ಬಾವಿಗೆ ಬಿದ್ದು ಅನುಭವವಿರುವ ಹುಡುಗನೊಬ್ಬ ತಾನು ಮೂರು ವರ್ಷದವನಿರುವಾಗ ಮೊತ್ತ ಮೊದಲ ಬಾರಿ ಬಾವಿಗೆ ಬಿದ್ದ ಕತೆ ಹೇಳುವ "ಒಂದು ಘಟನೆ" ಎಂಬ ಕತೆಯಂತೂ ಎಷ್ಟೊಂದು ಖುಶಿ ಕೊಡುತ್ತದೆ ಎಂದರೆ ಅದನ್ನು ನೀವು ಓದಿಯೇ ಅನುಭವಿಸಬೇಕು! "ಅವನ ಅಪ್ಪನ ಶಾಲೆ", "ಮೃತ್ಯು" ಕತೆಗಳಲ್ಲಿಯೂ ಕಥಾನಕ ಮೇಲ್ಗೈ ಸಾಧಿಸಿದೆ ಮತ್ತು ಇವೆರಡೂ ಕತೆಗಳು ಉಳಿದ ಕತೆಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕವೂ ಆಗಿವೆ. ಅದೇ "ಎತ್ತಿನಗಾಡಿ" ಕತೆ ಸುಮ್ಮನೇ ಗಾಡಿ ಸಾಗುವ ವಿವರಗಳು ಅನಿಸುವಾಗಲೂ ಅದನ್ನು ಮೀರಿದ ಇನ್ನೇನೋ ಇದೆ ಅದರಲ್ಲಿ ಎಂಬಂತೆ ನಿಗೂಢವಾದ ಸ್ತರವೊಂದನ್ನು ಕೊನೆತನಕ ಕಾಪಿಟ್ಟುಕೊಳ್ಳುತ್ತದೆ. "ಜೇನುಗೂಡು ಮತ್ತು ಹಾವು" ಕತೆಯಂತೂ ಅಸಂಗತ ನಾಟಕದಂತೆ ಅರ್ಥವಾಗದ ಲಯ, ಗುಟ್ಟು ಕಾಪಾಡಿಕೊಂಡೇ ಮುಗಿಯುತ್ತದೆ.

ಎರಡೂ ಸಂಕಲನಗಳಲ್ಲಿ ಅವಕಾಶ ಪಡೆದುಕೊಂಡ ಮತ್ತು ಮೊದಲ ಸಂಕಲನಕ್ಕೆ ಹೆಸರು ಕೊಟ್ಟ ಕತೆ "ವಾಟರ್‌ನೆಸ್" (ನೀರ್ಮಯಿ) ಒಬ್ಬ ಬಾಲವಿಧವೆಯ ಕುರಿತಾಗಿದೆ. ಇಡೀ ಹಳ್ಳಿಯ ಕೇಂದ್ರವೆಂಬಂತಿರುವ ಈ ಬಾಲವಿಧವೆ ತನ್ನ ಹತ್ತನೇ ವಯಸ್ಸಿಗೆ ವಿಧವೆಯಾದಾಕೆ. ಮುಂದೆ ಮುವ್ವತ್ತು ವರ್ಷ, ತನ್ನ ತಂದೆ ಸತ್ತ ದಿನದ ವರೆಗೆ ಹೊರಗೆ ತಲೆ ಹಾಕದೆ ಗೃಹಬಂಧಿಯಂತೆ ಬದುಕು ಕಳೆದ ಈಕೆಗೆ ತನ್ನ ನಲವತ್ತನೆಯ ವಯಸ್ಸಿನಲ್ಲಿ ಹೊರಬಂದಾಗ ಬದಲಾದ ಊರು, ಬೀದಿ, ಮನೆಗಳು, ಕಾಲದೊಂದಿಗೆ ಬೆಳೆದ ಬಾಲ್ಯದ ಗೆಳೆಯರು, ಸಹವರ್ತಿಗಳು, ಊರ ಗಣ್ಯರು ಯಾವುದೂ ತನ್ನದೇ ಬಾಲ್ಯದ ಸ್ಮೃತಿಯೊಂದಿಗೆ ತಾಳೆಯಾಗದ ಗೊಂದಲ ಉಂಟು ಮಾಡುವ ತಲ್ಲಣ ಬಹುಶಃ ಯಾರಿಗೂ ಅರ್ಥವಾಗದ್ದು. ಅವಳ ಕಾಲದ ಗಡಿಯಾರ ಎಲ್ಲೋ ನಿಂತು ಬಿಟ್ಟಿದೆ. ಕತೆಗಾರನಾಗಿ ಮುತ್ತುಸ್ವಾಮಿ ಅದನ್ನು ಗಮನಿಸುವ, ಕತೆಯಲ್ಲಿ ತರುವ ವಿಧಾನ ಅದ್ಭುತವಾದದ್ದು. ಕುರುಡಿಯಂತೆ, ಕಿವುಡಿಯಂತೆ ಬದುಕುವ ಈಕೆ ತಿಳಿದೋ ತಿಳಿಯದೆಯೊ ಊರ ಕೇಂದ್ರವಾಗಿದ್ದಾಳೆ. ಅಂದರೆ, ಮುಟ್ಟಿನ ಸ್ತ್ರೀಯರು ನೀರು ಎರೆದುಕೊಳ್ಳುವ ದಿನ ಸ್ನಾನಕ್ಕೆ ಹೋಗುವ ಕೊಳ್ಳದ ಬಳಿ ಅವರ ನೆರವಿಗೆ ಬರುವ ಮುದುಕಿ ಈಕೆ. ಅಲ್ಲಿ ಭೂತವಿದೆ, ಅದು ಮುಟ್ಟಾದ ಹುಡುಗಿಯರ ಆಪ್ತಗೆಳತಿಯ ರೂಪ ಧರಿಸಿ ಜೊತೆಗೇ ಬರುತ್ತದೆ, ಗೊತ್ತೇ ಆಗುವುದಿಲ್ಲ - ಮುಂತಾದ ವದಂತಿಗಳಿರುತ್ತವೆ. ಹಾಗಿದ್ದೂ ಇಡೀ ಊರು ಇವಳನ್ನು ನಿರ್ಲಕ್ಷಿಸುತ್ತದೆ, ಅವಮಾನಿಸುತ್ತದೆ, ಅವಲಕ್ಷಣ ಎಂದು ದೂರವಿಡುತ್ತದೆ, ಅವಳು ಒಂದು ಪ್ರೇತವೋ ಎಂಬಂತೆ ಕಾಣುತ್ತದೆ. ಆದರೆ ಮುತ್ತುಸ್ವಾಮಿಯವರ ನಿರೂಪಣೆಯಲ್ಲಿ ಇದ್ಯಾವುದೂ ಕಾಣಿಸುವುದೇ ಇಲ್ಲ. ಬರೀ ಅನುಭವಕ್ಕೆ ಬರುವಂತೆ ಮಾತ್ರ ಇರುವ, ನಿರೂಪಣೆಯಲ್ಲಿ ಒಂದು ಹಳ್ಳಿಯ ಸಹಜ ದೈನಂದಿನ ಸಾಗುತ್ತಿದೆ ಎಂಬಂತೆ ಬರುವ ವಿವರಗಳು ಕತೆಯ ಅಂತ್ಯಕ್ಕೆ ಬರುವಷ್ಟರಲ್ಲಿ ನಿಮ್ಮನ್ನು ಆರ್ದ್ರಗೊಳಿಸಿರುತ್ತವೆ. ಇದು ಮುತ್ತುಸ್ವಾಮಿಯವರ ಕಥನ ಕೌಶಲದ ಶ್ರೇಷ್ಠತೆ.

ಮುತ್ತುಸ್ವಾಮಿಯವರ ನಿರೂಪಣಾ ಶೈಲಿ ಎಂಥದ್ದೆಂದರೆ ಅವರು ಎಲ್ಲಿಯೂ ಕತೆ ಹೇಳುತ್ತಿದ್ದಾರೆ ಅನಿಸುವುದಿಲ್ಲ. ಕತೆ ಬರೆಯುತ್ತಿದ್ದಾರೆಂದು ಅನಿಸುವುದಂತೂ ಇಲ್ಲವೇ ಇಲ್ಲ. ನೀವು ಸ್ವತಃ ನಿಮ್ಮ ಕಣ್ಣೆದುರು ಕಾಣುತ್ತಿರುವ ವಿದ್ಯಮಾನಗಳಂತೆ ಇವರ ನಿರೂಪಣೆ ಇದೆ. ಪ್ರಜ್ಞಾಪೂರ್ವಕವಾದ ಏನೊಂದೂ ಇಲ್ಲದ ಸಹಜ ಸುಂದರ ಕಥಾನಕಗಳು ಇವು. ಮಿಸ್ ಮಾಡಿಕೊಳ್ಳದೇ ಓದ ಬೇಕಾದ ಕತೆಗಳು.

ಮುತ್ತುಸ್ವಾಮಿಯವರ ಕತೆಗಳಿಗೆ ಬಹುಶಃ ಸಿಗಬೇಕಾದ ಮಾನ್ಯತೆ ಅಂದೂ ಸಿಕ್ಕಿರಲಿಕ್ಕಿಲ್ಲ. ಹಾಗಾಗಿಯೋ ಏನೋ ಅವರು ರಂಗಭೂಮಿ, ಸಿನಿಮಾ ಎಂದು ಬೇರೆ ಕ್ಷೇತ್ರಕ್ಕೆ ಹೊರಳಿಕೊಂಡಿರಬೇಕು. ಈಗಲೂ ಅವರ ಕತೆಗಳಿಗೆ ಸಿಗಬೇಕಾದ ಮಾನ್ಯತೆ ಸಿಕ್ಕಿದಂತಿಲ್ಲ. ಮೊನ್ನೆ ಮೊನ್ನೆ ಅವರು ತೀರಿಕೊಂಡಾಗಲೇ ಅವರೊಬ್ಬ ಅಪ್ರತಿಮ ಪ್ರತಿಭೆಯ ಕತೆಗಾರ ಆಗಿದ್ದರು ಎನ್ನುವುದನ್ನು ಸಾಹಿತ್ಯದ ಜಗತ್ತು ನೆನೆಯಿತು. ಈ ಕತೆಗಳೆಲ್ಲ ಕನ್ನಡಕ್ಕೆ ಬಂದರೆ ಚೆನ್ನ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, December 26, 2018

ಕೇಶವ ಮಳಗಿಯವರ ‘ಒಂದೇ ಗುರಿ ಬೇರೆ ದಾರಿ’


ಸಮಾಜದ ಅತಿ ಕೆಳಸ್ತರದ ವ್ಯಕ್ತಿಗೆ ಕನೆಕ್ಟ್ ಆಗದ, ರಿಲೆವಂಟ್ ಅನಿಸದ ಯಾವುದೇ ಸಮಾಜಮುಖಿ ಚಿಂತನೆ ಬರೆದವನಿಗೆ ಖ್ಯಾತಿ, ಪ್ರಶಸ್ತಿ ತಂದುಕೊಡಬಹುದೇ ಹೊರತು ಬೇರೆ ಯಾರಿಗೂ ಅದರಿಂದ ಕಿಂಚಿತ್ತು ಉಪಯೋಗವಿಲ್ಲ. ಅಲ್ಲದೆ ಇಂಥ ಸಂಶೋಧನಾ ಗ್ರಂಥಗಳಲ್ಲಿ ಹೆಚ್ಚಾಗಿ ಕಂಡುಬರುವ ಇನ್ನೊಂದು ಸಮಸ್ಯೆಯಿದೆ. ಅದೆಂದರೆ ಇಂಥ ಕೃತಿಯಲ್ಲಿ ಕಂಡುಬರುವ ಕಾರಕೂನಿ ಅನುವಾದದ ಹೊರೆ. ಎಷ್ಟೋ ಬಾರಿ ಮಾಧ್ಯಮಿಕ ತರಗತಿಗಳಲ್ಲಿ ಇಂಗ್ಲೀಷ್ ಕಲಿತವನಿಗೂ ಈ ಅನುವಾದಕ್ಕಿಂತ ಮೂಲದ ಇಂಗ್ಲೀಷು ಸುಲಭ ಎನಿಸುವಂತಿರುತ್ತದೆ! ಇಂಥ ಕೆಲವು ಪೂರ್ವಾಗ್ರಹಗಳನ್ನು ಇಟ್ಟುಕೊಂಡೇ ಇಂಥ ಪುಸ್ತಕಗಳನ್ನು ಕೈಗೆತ್ತಿಕೊಳ್ಳುವ ನನಗೆ ಕೇಶವ ಮಳಗಿಯವರ ಹೊಸ ಪುಸ್ತಕ "ಒಂದೇ ಗುರಿ ಬೇರೆ ದಾರಿ: ಭಾರತೀಯ ಸಂವಾದ ಪರಂಪರೆ" ತುಂಬ ಮಹತ್ವದ್ದು ಎನಿಸುವುದು ಇದು ಇವತ್ತಿನ ನಮ್ಮ ಸಮಾಜ ಸಂವಾದ, ಮಾತುಕತೆ, ಚರ್ಚೆಗೆ ಒಂದು ಹೊಸ, ಸರಳ ಮತ್ತು ಮುಕ್ತವಾದ ವೇದಿಕೆಯನ್ನು ನಿರ್ಮಿಸಿಕೊಳ್ಳಲು ಇದು ಸಕಾಲ ಎಂಬ ಅರಿವನ್ನು ತುಂಬ ಸಾಂದ್ರವಾಗಿ, ಸಕಾಲಿಕವೂ ಸತ್ವಶಾಲಿಯೂ ಆದ ಮಾದರಿಗಳ ಮೂಲಕ ಮಂಡಿಸುತ್ತಿದೆ ಎಂಬ ಕಾರಣಕ್ಕೆ. ಇಂಥ ಸರಳ ತಾತ್ವಿಕ ಸತ್ಯದರ್ಶನ ಮಳಗಿಯವರಿಗಷ್ಟೇ ಸಾಧ್ಯ ಎನ್ನುವ ಕಾರಣಕ್ಕೂ ನನಗಿದು ಇಷ್ಟವಾದ ಹೆಜ್ಜೆ.

ಆದರೆ ಮಳಗಿಯವರ ಮಾದರಿ ಅನಿವಾರ್ಯವಾಗಿಯೋ ಅಥವಾ ಬೇರೆ ಇತಿಮಿತಿಗಳಿಂದಾಗಿಯೋ ಗಾಂಧಿ, ಅಂಬೇಡ್ಕರ್, ಬೋಸ್, ಠಾಕೂರ್ ಮುಂತಾದವರಿಗೆ ಸೀಮಿತವಾಗಿದೆ. ಮೇಲ್ನೋಟಕ್ಕೇ ಕಾಣುವಂತೆ ಈ ಮಂದಿಯ ನಡುವೆ ಇದ್ದ ಯಾವತ್ತೂ ಭಿನ್ನಾಭಿಪ್ರಾಯಗಳು ‘ಒಂದೇ ಗುರಿ’ ಗೆ ಸೇರಿದವೇ ಆಗಿವೆ. ‘ಭಿನ್ನ ಗುರಿ’ಯ ವ್ಯಕ್ತಿಗಳ ನಡುವೆ ಸಂವಾದ ನಡೆಯುವುದು ಬೇಡವೆ? ಅದು ನಡೆಯಬೇಕಿರುವುದೇ ಅಂಥವರ ನಡುವೆಯಲ್ಲವೆ? ಬಹುಶಃ ಗಾರ್ಗಿ, ರಾಹುಲ ಸಾಂಕೃತ್ಯಾಯನ, ಜಿನ್ನಾ, ಸಾವರ್ಕರ್, ಗೋಳ್ವಾಲ್ಕರ್ ವಿಚಾರಗಳೊಂದಿಗೆ ಇಂಥದ್ದೇ ಸಂವಾದದ ದಾಖಲೆ, ಚರ್ಚೆ ಇಲ್ಲಿ ಸಿಗುವಂತಿದ್ದರೆ ಅದು ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತಿತ್ತೇನೊ. ಹಾಗೆಯೇ ರಾಣೀ ನರಸಿಂಹ ಶಾಸ್ತ್ರಿಯವರ "ಕೊನೆಯ ಬ್ರಾಹ್ಮಣ" ಎತ್ತುವ ಕೆಲವು ಜಿಜ್ಞಾಸೆಗಳಿಗೂ ಹೊರಳಿದ್ದರೆ ಒಟ್ಟಾರೆ ಚಿತ್ರ ಹೆಚ್ಚು ಸಮೃದ್ಧವಾಗುತ್ತಿತ್ತು.

ಇಲ್ಲಿ ಚರ್ಚೆಗೆ ಬರುವ ವಿಚಾರಗಳು ಕೂಡ ತುಂಬ ಸೀಮಿತ ನೆಲೆಯಲ್ಲಿವೆ. ಸಾಂಸ್ಥಿಕವಾಗಿ ಕಾಂಗ್ರೆಸ್ಸು ಅಂದಿನ ಬ್ರಿಟಿಷ್ ಸರಕಾರ/ಆಡಳಿತಶಾಹಿಯ ಜೊತೆ ವ್ಯವಹರಿಸುವಾಗ ಎದುರಾದ ತೊಡಕುಗಳು, ಮಾತುಕತೆಗಳಲ್ಲಿ ಎತ್ತಿಕೊಳ್ಳಬೇಕಾದ ವಿಚಾರಗಳಲ್ಲಿ ಆದ್ಯತೆ ಯಾವುದಕ್ಕಿರಬೇಕು ಎಂಬ ಚರ್ಚೆ, ಸ್ವಾತಂತ್ರ್ಯ- ಸ್ವಾಭಿಮಾನ ಮತ್ತು ಚರಕ ಮುಂತಾದ ಸಂಗತಿಗಳ ಕುರಿತ ವ್ಯಾಖ್ಯಾನ-ಜಿಜ್ಞಾಸೆಗಳು, ಗ್ರಾಮೀಣ ಗುಡಿಕೈಗಾರಿಕೆ ಮತ್ತು ಆಧುನಿಕ-ಬೃಹತ್ ಕೈಗಾರಿಕೆಗಳ ಬೇಕು ಬೇಡ ಕುರಿತ ಚರ್ಚೆ ಹಾಗೂ ಅಂಬೇಡ್ಕರ್ ಜೊತೆ ನಡೆಯುವ ಜಾತಿ-ಧರ್ಮ ಕುರಿತ ಚರ್ಚೆ ಇಲ್ಲಿನ ಸಂವಾದಗಳಲ್ಲಿ ಮಹತ್ವ ಪಡೆದಿವೆ. ಆರ್ಷೇಯ ವಿಚಾರಗಳಿಗೆ ಬಂದರೆ ಯಮ-ನಚಿಕೇತ, ಯಾಜ್ಞವಲ್ಕ್ಯ-ಮೈತ್ರೇಯಿ, ಬುದ್ಧ - ಅಜಾತಶತ್ರು ಮುಂತಾದವರ ನಡುವೆ ನಡೆಯುವುದು ನಿಜಕ್ಕೂ ಸಂವಾದವೆ ಎನ್ನುವ ಪ್ರಶ್ನೆಯಿದೆ. ಇವರಲ್ಲಿ ಭಿನ್ನಾಭಿಪ್ರಾಯಗಳಿದ್ದವೆ, ಖಚಿತ ಸೈದ್ಧಾಂತಿಕ ನಿಲುವಿನ ಮೇಲೆ ನಿಂತ ವಾದವಿತ್ತೆ? ಜಿಜ್ಞಾಸುಗಳ ಅರಿವಿನ ಹಸಿವು ಮತ್ತು ಕೇಳಿಸಿಕೊಳ್ಳುವ ವಿನಯ, ತಾಳ್ಮೆಗಳಿಂದ ಮಿಳಿತವಾದ ವಿದ್ಯಾರ್ಥಿದೆಸೆಯೊಂದು ನಮಗಿಲ್ಲಿ ಕಾಣಿಸುತ್ತದೆ. ಆದರೆ ವರ್ತಮಾನದ ಸಂವಾದದ ಸವಾಲುಗಳು ಬೇರೆಯೇ ಜಗತ್ತಿಗೆ ಸೇರಿದಂತೆ ಕಾಣುತ್ತಿಲ್ಲವೆ?


ಇವತ್ತಿನ ಸಮಾಜದಲ್ಲಿ ಅಸಮಾನತೆ, ಶೋಷಣೆ, ಭ್ರಷ್ಟಾಚಾರ, ಹಿಂಸೆ ಮತ್ತು ಒಡಕುಗಳಿಗೆ ಮೂಲಭೂತ ಕಾರಣವಾಗಿರುವ ಕೆಲವು ಪೀಡೆಗಳನ್ನು ಗುರುತಿಸುವ ಸಂದರ್ಭದಲ್ಲೆಲ್ಲ ಜಾತಿ ಮಾತ್ರ ಮಹತ್ವ ಪಡೆಯುತ್ತದೆ. ಬದಲಿಗೆ ಆರ್ಥಿಕ, ರಾಜಕೀಯ, ಧಾರ್ಮಿಕ, ಲಿಂಗಾಧಾರಿತ ನೆಲೆಗಟ್ಟುಗಳಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ವರ್ಗಸಂಘರ್ಷಗಳು ಚರ್ಚೆಗೆ ಬರುವುದಿಲ್ಲ. ಇವತ್ತು, ಇಲ್ಲಿ ದೇವಸ್ಥಾನದ ಪ್ರವೇಶ ಕೋರುವ ಮೇಲ್ಜಾತಿಯ ಹೆಣ್ಣುಮಕ್ಕಳಿಗೆ ಎದುರಾಗಿ ಕೇಸರಿ ಧ್ವಜ ಹಿಡಿದ ದಲಿತನಿದ್ದಾನೆ! ನಿಮಗೆ ನ್ಯಾಯವಾಗಿ ಸಿಗಬೇಕಾದ ಸರ್ಕಾರಿ ಸವಲತ್ತು ಒದಗಿಸುವ ಮುನ್ನ ನಿಮ್ಮ ರಾಜಕೀಯ ಒಲವನ್ನು ಕುರಿತು ಗಮನಿಸಿಕೊಳ್ಳುವ ಕಾರ್ಯಕರ್ತರು, ಎಮ್ಮೆಲ್ಲೆಗಳಿದ್ದಾರೆ. ನಿಮ್ಮ ಬಳಿ ಕಾರಿದೆಯೇ, ಮಾಧ್ಯಮಗಳಲ್ಲಿ ನಿಮಗೆ ಸಾಕಷ್ಟು ಪ್ರಭಾವ ಇದೆಯೇ ಎಂಬುದರ ಮೇಲೆ ನಿಮಗೆ ಸಾಂಸ್ಕೃತಿಕ ವಲಯದಲ್ಲಿ ಅವಕಾಶ ಒದಗುತ್ತದೆ, ಮನ್ನಣೆ, ಪ್ರಶಸ್ತಿ ಇತ್ಯಾದಿ ದೊರಕುತ್ತದೆ. ನಾನು ಗಮನಿಸಿದಂತೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಇವತ್ತು ತನ್ನ ದೈನಂದಿನ ವ್ಯವಹಾರದಲ್ಲಿ ಎದುರಾಗುವ ಮಹತ್ವದ ಸವಾಲುಗಳಲ್ಲಿ ಜಾತಿಯನ್ನು ಮೀರಿದ ಅಂಶಗಳೇ ಹೆಚ್ಚಿವೆ. ಹಾಗಿದ್ದೂ ನಾವು ಜಾತಿ ಸಮಸ್ಯೆಯ ಬಗ್ಗೆಯೇ ಚರ್ಚಿಸುತ್ತ ಕೂರುವುದು ತಮಾಶೆಯಾಗಿ ಕಾಣುತ್ತದೆ. ಇನ್ನು ಆರ್ಷೇಯ ವಿಚಾರಧಾರೆಯತ್ತ ನೋಡಿದರೆ ಯಾವತ್ತೋ ಪೂಜೆ, ಹೋಮ, ಜಾತ್ರೆ, ಲೌಡ್‌ಸ್ಪೀಕರ್ ಭಜನೆ, ದೇವಾಲಯ ನಿರ್ಮಾಣ ಮತ್ತು ವ್ರತಧಾರಿಗಳ ಅಭಿಯಾನಗಳಂಥ ಬಹಿರಂಗದ ಆಚರಣೆಯ ಮಟ್ಟಕ್ಕೆ ಇಳಿದು ಬಿಟ್ಟಿರುವ ಧರ್ಮದ ವೈಚಾರಿಕ, ಸೈದ್ಧಾಂತಿಕ, ತಾತ್ವಿಕ ನೆಲೆಗಳೇ ಜನಮಾನಸದಿಂದ ಮರೆಯಾಗಿ ಹೋಗಿರುವುದು ವಾಸ್ತವವಾಗಿರುತ್ತ ಸಂವಾದ ಯಾವುದರ ಬಗ್ಗೆ, ಯಾವ ನೆಲೆಗಟ್ಟಿನಲ್ಲಿ ನಡೆಯಬೇಕಿದೆ ಎನ್ನುವುದೇ ಮುಖ್ಯ ಪ್ರಶ್ನೆಯಾಗಿದೆ. ಈಗ ನಡೆಯುತ್ತಿರುವ ಚರ್ಚೆಗಳೆಲ್ಲ ಅಕ್ರಮ ಗೋಸಾಗಾಟ, ಬಾಬ್ರಿ ಮಸೀದಿ, ತಾಜ್ ಮಹಲ್, ಟಿಪ್ಪು ಜನ್ಮದಿನಾಚರಣೆ, ದತ್ತ ಜಯಂತಿಯ ಗಲಭೆಗಳು, ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ, ಲವ್ ಜೆಹಾದು, ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವುದು ಇತ್ಯಾದಿಗಳು. ಇವುಗಳೊಂದಿಗೆ ಧರ್ಮಕ್ಕಿರುವ ಸಂಬಂಧ ಏನು!


ಹಾಗೆಯೇ ಮಳಗಿಯವರು ಎತ್ತಿಕೊಂಡ ಸಮಾಜದ ನಾಯಕರುಗಳಿಗೆ ಜನಸಾಮಾನ್ಯನ ಬದುಕು, ಬವಣೆಗಳ ಅರಿವು ಎಷ್ಟರಮಟ್ಟಿಗಿತ್ತು ಎನ್ನುವ ಪ್ರಶ್ನೆಯೂ ಇದೆ. ಕಾರಂತರು ‘ಈ ಮನುಷ್ಯನಿಗೆ ಜೀವನ ಹೇಗೆ ನಡೆಯುತ್ತದೆ ಎನ್ನುವುದರ ಅರಿವಿಲ್ಲ’ ಎಂದು ಕಂಡುಕೊಂಡ ಘಟನೆ ನೆನಪಾಗುತ್ತದೆ. ಹೌದು, ಅದು ಮಹಾತ್ಮನ ಬಗ್ಗೆ. ಡಾ||ಅಂಬೇಡ್ಕರ್ ಒಬ್ಬರನ್ನು ಬಿಟ್ಟರೆ ಉಳಿದವರು ಸಮಾಜದ ಅತ್ಯಂತ ಕೆಳಸ್ತರದಿಂದ ಬಂದವರೇನಲ್ಲ. ಇವರಿಗೆಲ್ಲ ದೇಶ, ರಾಷ್ಟ್ರ, ಐಕ್ಯಮತ್ಯ, ಅಭಿವೃದ್ಧಿ ಮುಂತಾದ ಮ್ಯಾಕ್ರೊ ಲೆವೆಲ್ಲಿನ ವಿಚಾರಗಳಿದ್ದವೇ ಹೊರತು ತೀರ ಕೆಳಮಟ್ಟದ ವ್ಯಕ್ತಿಯ ಹಸಿವು, ರೋಗ ಮತ್ತು ‘ಉಳ್ಳವರ’ ಕರಾಳ ಹಿಡಿತದ ಹಿಂಸೆಗಳನ್ನು ನೀಗುವ ವಿಚಾರಗಳು ‘ಸದ್ಯದ’ ತುರ್ತುಗಳಾಗಿರಲಿಲ್ಲ. ದೇಶದ ಪರಿಸ್ಥಿತಿ ಹಾಗಿತ್ತು ಎನ್ನುವ ಸಮರ್ಥನೆ ಕೊಡಬಹುದೆಂದಾದರೆ ಆ ಪರಿಸ್ಥಿತಿಯ ಸಂವಾದಗಳು ಇಂದಿಗೆ ಪ್ರಸ್ತುತವಾಗುವ ಹೊಸಬಗೆಯನ್ನು ವ್ಯಾಖ್ಯಾನಿಸುವುದು ಕೂಡ ಅಗತ್ಯವಾಗುತ್ತದೆ.


ಅಲ್ಲದೆ ಮಳಗಿಯವರು ಸ್ವತಃ ಮುನ್ನುಡಿಯಲ್ಲಿ ತಮ್ಮ ಕೃತಿಯ ಕೆಲವು ಇತಿಮಿತಿಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ಇತಿಮಿತಿಗಳನ್ನು ಮೀರಿ ಈ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆಯನ್ನು ಅವರು ಮುಂದಿನ ತಲೆಮಾರಿಗೆ, ಇತರರಿಗೆ ವರ್ಗಾಯಿಸಿದ್ದಾರೆ ಕೂಡ. ಅಷ್ಟರ ಮಟ್ಟಿಗೆ ಕಿಡಿ ಹಚ್ಚುವ ಮಹತ್ವದ ಕೆಲಸವನ್ನಂತೂ ಅವರು ಮಾಡಿಯೇ ಮಾಡಿದ್ದಾರೆ. ಸಮಯೋಚಿತವಾಗಿ ಮತ್ತು ಮುತ್ಸದ್ಧಿತನದಿಂದಲೇ ಒಂದು ತಲೆಮಾರನ್ನು ಸೂಚ್ಯವಾಗಿ ಮತ್ತು ವಿವಾದಗಳಿಗೆ ಎಡೆಯಿಲ್ಲದ ನಿಟ್ಟಿನಿಂದ ಚರ್ಚೆಯಲ್ಲಿ ತೊಡಗಿಸುತ್ತ, ಸದ್ಯದ ಒಂದು ಮಹತ್ವದ ಅವಶ್ಯಕತೆಯನ್ನು ಎತ್ತಿ ತೋರಿಸಿದ್ದಾರೆ. ಮಳಗಿಯವರು ನಮ್ಮ ಕಾಲದ ಹಲವು ವಿಚಾರವಾದಿಗಳಿಗಿಂತ ಸೂಕ್ಷ್ಮವಾಗಿ ಯೋಚಿಸಬಲ್ಲ, ವರ್ತಮಾನದ ಹೈಪ್‌ಗಳಿಂದ ಕಳಚಿಕೊಂಡು ನಿಂತ ಬರಹಗಾರ. ಕೊಂಚ ಸಿನಿಕತನ ಬೆರೆತರೂ ಅದನ್ನು ಸೇರಿಸಿಯೇ ತನ್ನನ್ನು ತಾನು ಕಾಣಬಲ್ಲ ಮತ್ತು ಅಷ್ಟೇ ಮುಕ್ತ ಮನಸ್ಸಿನಿಂದ ಪರರ ಕುರಿತು ಯೋಚಿಸಬಲ್ಲ ಸೂಕ್ಷ್ಮಸಂವೇದಿ. ಚಿಂತಕ-ಬುದ್ಧಿಜೀವಿ-ವಿಚಾರವಾದಿಗಳ ತೆವಲು, ಪೂರ್ವಾಗ್ರಹ ಮತ್ತು ಭಂಗಿಗಳಿಲ್ಲದ ಅಪರೂಪದ ವ್ಯಕ್ತಿ. ಅವರೊಂದಿಗೆ ನಡೆಸಿದ ವಿಸ್ತೃತ ಸಂದರ್ಶನ ಮತ್ತು ಒಡನಾಟದಿಂದಲೇ ಈ ರೀತಿ ಕಾಣುವುದನ್ನು ಕಲಿತ ನನ್ನಂಥವರು ಅವರಿಂದ ನಿರೀಕ್ಷಿಸುವುದು ಇದಕ್ಕಿಂತ ಹೆಚ್ಚಿನದನ್ನೇ.

ಹಾಗಿದ್ದೂ ಅವರು ತಾತ್ವಿಕವಾಗಿಯೂ ಪ್ರಾಯೋಗಿಕವಾಗಿಯೂ ತೋರಿಸಿಕೊಟ್ಟಿರುವುದು ಸಣ್ಣದೇನಲ್ಲ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಬೇಕಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ